ಮಹಿಳಾ ಹಕ್ಕು, ಸಮಾನತೆ, ಸ್ವಾತಂತ್ರ್ಯ..ದ ಬಗ್ಗೆ ಧಾರಾಳ ಭಾಷಣಗಳನ್ನು ಮಾಡಿದ ಮತ್ತು ಮಾಡುತ್ತಿರುವ ರಾಷ್ಟ್ರಗಳಲ್ಲಿ ಫ್ರಾನ್ಸ್ ಕೂಡ ಒಂದು. ಮುಸ್ಲಿಮ್ ಮಹಿಳೆಯರು ಧರಿಸುವ ಬುರ್ಖಾವನ್ನು ಅದು ಸ್ವಾತಂತ್ರ್ಯ ವಿರೋಧಿಯಂತೆ ಕಂಡದ್ದಿದೆ. ಅವರು ಧರಿಸುವ ಕಣ್ಣಿನ ಪರದೆಯನ್ನು (Eye scarf) ಅದು ಕಾನೂನು ಬಾಹಿರವೆಂದು ಸಾರಿದೆ. ಮಹಿಳೆಯರಿಗೆ ಪುರುಷರಷ್ಟೇ ಸ್ವಾತಂತ್ರ್ಯವಿದೆ ಮತ್ತು ಆ ಸ್ವಾತಂತ್ರ್ಯವನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ ಎಂಬಂತಹ ಹೇಳಿಕೆಗಳನ್ನು ಕೊಡಲು ಸಿಗುವ ಅವಕಾಶದಿಂದ ಫ್ರಾನ್ಸ್ ತಪ್ಪಿಸಿಕೊಂಡದ್ದು ತೀರಾ ಕಡಿಮೆ. ಇಂತಹ ಫ್ರಾನ್ಸ್ ನಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಚಿತ್ರೋತ್ಸವ (ಕ್ಯಾನೆ ಫಿಲ್ಮ್ ಫೆಸ್ಟಿವಲ್) ನಡೆಯಿತು. ವಿಶೇಷ ಏನೆಂದರೆ, ಈ ಚಿತ್ರೋತ್ಸವ ಸುದ್ದಿಗೀಡಾದದ್ದೇ ಮಹಿಳಾ ಸ್ವಾತಂತ್ರ್ಯದ ದಮನದ ಕಾರಣಕ್ಕಾಗಿ. ಅಲ್ಲಿ ಪ್ರದರ್ಶಿತವಾದ ಸಿನಿಮಾಗಳಿಗಿಂತ ಅಲ್ಲಿನ ಮಹಿಳಾ ವಿರೋಧಿಯಾದ ನೀತಿಗಳೇ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗೀಡಾದುವು. ಈ ಚಿತ್ರೋತ್ಸವಕ್ಕೆ ಹೈಹೀಲ್ಡ್ ಚಪ್ಪಲಿ ಧರಿಸದೇ ಆಗಮಿಸಿದ್ದಕ್ಕಾಗಿ ಮಹಿಳಾ ಅತಿಥಿಗೆ (ಸಿನಿಮಾ ನಟಿ) ಅಧಿಕಾರಿಗಳು ಪ್ರವೇಶ ನಿರಾಕರಿಸಿದರು. ಫ್ಲಾಟ್ ಚಪ್ಪಲಿ ಧರಿಸಿದ್ದ ಆ ಅತಿಥಿಯನ್ನು ಪ್ರವೇಶ ದ್ವಾರದಲ್ಲೇ ತಡೆಹಿಡಿಯಲಾಯಿತು. ಈ ಪ್ರಕರಣ ಬಹಿರಂಗಕ್ಕೆ ಬಂದದ್ದೇ ತಡ, ಮಾಧ್ಯಮಗಳಲ್ಲಿ ತೀವ್ರ ಪ್ರತಿಭಟನೆಗಳು ವ್ಯಕ್ತವಾದುವು. ಸೋಶಿಯಲ್ ವಿೂಡಿಯಾಗಳಂತೂ ಸರಣಿ ಟ್ವೀಟ್‍ಗಳ ಮೂಲಕ ಫ್ರಾನ್ಸ್ ನ ಮಹಿಳಾ ಸ್ವಾತಂತ್ರ್ಯದ ಬದ್ಧತೆಯನ್ನೇ ಪ್ರಶ್ನಿಸಿದುವು. ಚಿತ್ರೋತ್ಸವದಲ್ಲಿ ಭಾಗವಹಿಸಬೇಕಾಗಿದ್ದ ಎಮಿಲೆ ಬ್ಲಂಟ್ ಎಂಬವರು ಈ ಘಟನೆಗೆ ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ‘ಮಹಿಳೆಯರು ಹೈ ಹೀಲ್ಡ್ ಧರಿಸುವುದು ಸೂಕ್ತವಲ್ಲ, ಅವರು ಫ್ಲಾಟ್ ಚಪ್ಪಲಿಯನ್ನೇ ಧರಿಸಬೇಕು..’ ಎಂದು ಟ್ವೀಟ್ ಮಾಡಿದರು.
ನಿಜವಾಗಿ, ಸ್ವಾತಂತ್ರ್ಯ ಎಂಬ ಪದವನ್ನು ಸಿನಿಮಾ ಕ್ಷೇತ್ರ ವ್ಯಾಖ್ಯಾನಿಸಿದಷ್ಟು ಬಹುಶಃ ಇನ್ನಾವ ಕ್ಷೇತ್ರವೂ ವ್ಯಾಖ್ಯಾನಿಸಿಲ್ಲ. ತಾಯಿಯಾಗಿ, ಮಡದಿಯಾಗಿ, ತಂಗಿಯಾಗಿ, ಮಗಳು, ಸೊಸೆ, ಅಜ್ಜಿಯಾಗಿ.. ಹೀಗೆ ಮಹಿಳೆಯರ ಪಾತ್ರವನ್ನು ಹೃದಯಂಗಮವಾಗಿ ಕಟ್ಟಿ ಕೊಟ್ಟು ಮಹಿಳೆಯ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಈ ಕ್ಷೇತ್ರವು ಧಾರಾಳ ಕೊಡುಗೆಗಳನ್ನು ನೀಡಿದೆ. ಅದು ಮಹಿಳೆಗೆ ಧ್ವನಿ ಕೊಟ್ಟಿದೆ. ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದೆ. ಪ್ರತಿಭಟನಾ ಮನಸ್ಥಿತಿಯನ್ನು ಬೆಳೆಸಿದೆ. ಹಕ್ಕು ವಂಚಿತ ಮಹಿಳೆಯನ್ನು ಎತ್ತಿಕೊಂಡು ಸಮಾಜದ ಎದೆಗೆ ನಯವಾಗಿ ಮೀಟಿದೆ ಮತ್ತು ಮೀಟುತ್ತಿದೆ. ಅದರ ಜೊತೆಜೊತೆಗೇ ‘ಮೈ ಚಾಯ್ಸ್’ನಂತಹ ಅತಿರೇಕದ ಸ್ವಾತಂತ್ರ್ಯವನ್ನೂ ಹೇಳಿಕೊಡುತ್ತಿದೆ. ನೈತಿಕ-ಅನೈತಿಕಗಳ ಬಗ್ಗೆ ತೀರಾ ಉಡಾಫೆಯಿಂದ ಮಾತಾಡಬಹುದಾದ ವಾತಾವರಣಕ್ಕೂ ಅದು ಬೀಜವನ್ನು ಬಿತ್ತಿದೆ. ಹೆಣ್ಣು-ಗಂಡಿನ ನಡುವಿನ ಸಹಜ ಆಕರ್ಷಣೆಯನ್ನು ವೈಭವೀಕರಣಗೊಳಿಸಿ ಹರೆಯದ ಮನಸುಗಳನ್ನು ಚಂಚಲಗೊಳಿಸುವಲ್ಲೂ ಅದು ಯಶಸ್ವಿಯಾಗಿದೆ. ಹಾಗಂತ, ಸಿನಿಮಾ ಕ್ಷೇತ್ರವೆಂಬುದು ಸರಕಾರ ಅಲ್ಲ, ನಿಜ. ಅದಕ್ಕೆ ಕಾನೂನನ್ನು ನಿರ್ಮಿಸುವ ಅಥವಾ ಹೇರುವ ಸ್ವಾತಂತ್ರ್ಯವಿಲ್ಲ. ಅದೊಂದು ಆಲೋಚನೆಗಳ ಗೂಡು. ಆ ಆಲೋಚನೆಗಳಲ್ಲಿ ವಿಕ್ಷಿಪ್ತವೂ ಇರಬಹುದು, ಅಪ್ರಾಯೋಗಿಕವೂ ಇರಬಹುದು. ಒಂದು ಸಿನಿಮಾ ತಯಾರಾದ ಮೇಲೆ ಅದು ವೀಕ್ಷಣೆಗೆ ಯೋಗ್ಯವೋ ಅಲ್ಲವೋ ಎಂಬುದನ್ನು ತೀರ್ಮಾನಿಸುವುದು ಸಿನಿಮಾ ನಿರ್ದೇಶಕರೋ ನಿರ್ಮಾಪಕರೋ ಅಲ್ಲ, ಸರಕಾರ. ಈ ಹಿನ್ನೆಲೆಯಲ್ಲಿ ನೋಡಿದರೆ ಸಿನಿಮಾ ಕ್ಷೇತ್ರಕ್ಕೆ ಮಿತಿಗಳಿವೆ. ಕಾನೂನು ನಿರ್ಮಿಸುವ ಸ್ವಾತಂತ್ರ್ಯವಿಲ್ಲದ ಮತ್ತು ಜನರ ಮುಂದೆ ಬರೇ ಹಲವು ಸಾಧ್ಯತೆಗಳನ್ನು ತೆರೆದಿಡಬಹುದಾದ ಒಂದು ಕ್ಷೇತ್ರವಾಗಿಯಷ್ಟೇ ನಾವು ಈ ಕ್ಷೇತ್ರವನ್ನು ಎತ್ತಿಕೊಳ್ಳಬಹುದು. ಆದರೆ ವಾಸ್ತವ ಇಷ್ಟೇ ಅಲ್ಲ. ಸರಕಾರದ ನಿಲುವನ್ನು ಬದಲಿಸುವಷ್ಟು, ಹೊಸ ಹೊಸ ಕಾನೂನುಗಳನ್ನು ರೂಪಿಸುವುದಕ್ಕೆ ಪ್ರೇರಣೆ ಆಗುವಷ್ಟು ಮತ್ತು ಸರಕಾರದ ವಿರುದ್ಧವೇ ಜನರನ್ನು ಪ್ರಚೋದಿಸುವಷ್ಟು ಈ ಕ್ಷೇತ್ರ ಇವತ್ತು ವಿಸ್ತಾರವಾಗಿ ಬೆಳೆದು ನಿಂತಿದೆ. ಆ ಕ್ಷೇತ್ರಕ್ಕೆ ತನ್ನ ಆಲೋಚನೆಯನ್ನು ಬಲವಾಗಿ ಮತ್ತು ಸಮರ್ಥವಾಗಿ ಪ್ರತಿಪಾದಿಸುವ ಕಲೆ ಗೊತ್ತಿದೆ. ಲೆಸ್ಲಿ ವುಡ್‍ವಿನ್‍ರ ‘ಇಂಡಿಯಾಸ್ ಡಾಟರ್’ ಅನ್ನು ಸರಕಾರ ನಿಷೇಧಿಸಿದರೂ ಅದರ ವಿರುದ್ಧ ಸಾರ್ವಜನಿಕ ಆಕ್ರೋಶ ಉಂಟಾಗಲು ಸಿನಿಮಾ ಕ್ಷೇತ್ರವು ಜನರ ಮೇಲೆ ಬೀರಿರುವ ಈ ದಟ್ಟ ಪ್ರಭಾವವೇ ಕಾರಣ. ಸರಕಾರವನ್ನು ವಿೂರಿದ ಜನಪ್ರಿಯತೆಯೊಂದು ಈ ಕ್ಷೇತ್ರಕ್ಕೆ ಇವತ್ತು ದಕ್ಕಿಬಿಟ್ಟಿದೆ. ಆದ್ದರಿಂದಲೇ ಈ ಕ್ಷೇತ್ರ ಪ್ರತಿಪಾದಿಸುವ ಹಕ್ಕು, ಸ್ವಾತಂತ್ರ್ಯಗಳು ಜನರ ಹಕ್ಕು, ಸ್ವಾತಂತ್ರ್ಯಗಳೂ ಆಗುತ್ತಿವೆ. ಆ ಕ್ಷೇತ್ರದಲ್ಲಿ ಸಂಭವಿಸುವ ಪ್ರತಿಯೊಂದನ್ನೂ ಜನರು ತಮ್ಮವುಗಳಾಗಿ ಸ್ವೀಕರಿಸಿಕೊಳ್ಳುವುದಕ್ಕೆ ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಕ್ಯಾನೇ ಚಿತ್ರೋತ್ಸವದ ಹೈ ಹೀಲ್ಡ್ ಚಪ್ಪಲಿ ಮುಖ್ಯವಾಗುತ್ತದೆ. ಅದರಲ್ಲೂ ಈ ಘಟನೆ ನಡೆದಿರುವುದು ಮಹಿಳಾ ಹಕ್ಕುಗಳ ಬಗ್ಗೆ ಅದ್ಭುತವಾಗಿ ಮಾತಾಡುವ ಫ್ರಾನ್ಸ್ ನಲ್ಲಿ ಎಂಬುದು ಅದರ ಪ್ರಾಮುಖ್ಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಯಾಕೆ ಚಿತ್ರೋತ್ಸವಕ್ಕೆ ಆಗಮಿಸಿದ ಪುರುಷರನ್ನು ಅಧಿಕಾರಿಗಳು ತಡೆಹಿಡಿಯಲಿಲ್ಲ? ಅವರಿಗೇಕೆ ಇಂಥದ್ದೇ ಶೂ ಧರಿಸಬೇಕೆಂದು ಆದೇಶ ಹೊರಡಿಸಲಿಲ್ಲ? ಪುರುಷನ ಆಯ್ಕೆ ಮುಕ್ತವಾಗಿರುವಾಗ ಮಹಿಳೆಯರ ಆಯ್ಕೆಯೂ ಮುಕ್ತವಾಗಿರಬೇಕಾದುದು ಸಮಾನ ಸ್ವಾತಂತ್ರ್ಯದ ಬೇಡಿಕೆಯಲ್ಲವೇ? ಇಂಥದ್ದೇ ಚಪ್ಪಲಿ, ಇಂಥದ್ದೇ ಡ್ರೆಸ್ಸು, ಇಂಥದ್ದೇ ಆಭರಣ, ಹೀಗೆಯೇ ಹೆಜ್ಜೆ ಇಡಬೇಕು.. ಎಂದೆಲ್ಲಾ ಮಹಿಳೆಯೊಂದಿಗೆ ಮಾತ್ರ ಕೇಳಿಕೊಳ್ಳುವುದೇಕೆ? ಫ್ಲಾಟ್ ಚಪ್ಪಲಿ ಧರಿಸುವುದರಿಂದ ತೊಂದರೆಯಾಗುವುದು ಯಾರಿಗೆ? ಹೈ ಹೀಲ್ಡ್ ಯಾರ ಬಯಕೆ? ಆರೋಗ್ಯದ ದೃಷ್ಟಿಯಿಂದ ಹೈಹೀಲ್ಡ್ ಚಪ್ಪಲಿ ಅಸೂಕ್ತ ಎಂದು ಹೇಳಲಾಗುತ್ತದೆ. ಅಷ್ಟಕ್ಕೂ, ಸೂಕ್ತವೋ ಅಸೂಕ್ತವೋ ಅದನ್ನು ನಿರ್ಧರಿಸಬೇಕಾದದ್ದು ಯಾರು, ಧರಿಸುವವರೋ ಸಂಘಟಕರೋ? ಪುರುಷರಿಗಿಲ್ಲದ ಈ ನಿಯಮಗಳನ್ನೆಲ್ಲ ಮಹಿಳೆಯರಿಗೆ ಅಳವಡಿಸುವುದರ ಉದ್ದೇಶವೇನು? ಒಂದು ಕಡೆ, ಮಹಿಳಾ ಸ್ವಾತಂತ್ರ್ಯದ ಬಗ್ಗೆ ರಾಶಿ ರಾಶಿ ಸಿನಿಮಾಗಳನ್ನು ತಯಾರಿಸುವ ಸಿನಿಮಾ ಕ್ಷೇತ್ರ ಮತ್ತು ಇನ್ನೊಂದು ಕಡೆ, ಅದೇ ಮಹಿಳೆಗೆ ತಮ್ಮ ಆಯ್ಕೆಯ ಚಪ್ಪಲಿಯನ್ನು ಧರಿಸಲೂ ಬಿಡದ ಚಿತ್ರೋತ್ಸವ.. ಈ ದ್ವಂದ್ವಕ್ಕೆ ಏನೆನ್ನಬೇಕು? ಹೆಣ್ಣು ಹೀಗೆಯೇ ಹೆಜ್ಜೆ ಇಡಬೇಕು ಎಂದು ಆದೇಶಿಸುವುದು ಹಕ್ಕು ಹರಣವೋ ಸ್ವಾತಂತ್ರ್ಯವೋ?
ನಿಜವಾಗಿ, ಹೆಣ್ಣನ್ನು ಅತ್ಯಾಚಾರಿಯೋರ್ವ ನೋಡುವ ರೀತಿಗಿಂತ ಇದು ತುಂಬಾ ಭಿನ್ನವಾದುದೇನೂ ಅಲ್ಲ. ಹೈಹೀಲ್ಡ್ ಚಪ್ಪಲಿಯ ಹೇರುವಿಕೆಯಲ್ಲೂ ಒಂದು ಬಗೆಯ ಅತ್ಯಾಚಾರದ ಮನಸ್ಥಿತಿಯಿದೆ. ಅಲ್ಲಿ ಪುರುಷ ಭಾವನೆಯನ್ನು ನವಿರಾಗಿ ತಣಿಸಿಕೊಳ್ಳುವ ತುಡಿತವಿದೆ. ಅತ್ಯಾಚಾರಿ ತುಸು ಒರಟಾಗಿ ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವಾಗ ನಾಗರಿಕ ವೇಷದಲ್ಲಿರುವ ಮತ್ತು ಮಹಿಳಾ ಸ್ವಾತಂತ್ರ್ಯದ ಪ್ರತಿಪಾದಕರ ಪಟ್ಟಿಯಲ್ಲಿರುವ ಮಂದಿ ಅದನ್ನೇ ತುಸು ಮೃದುವಾಗಿ ಈಡೇರಿಸಿಕೊಳ್ಳುತ್ತಿದ್ದಾರೆ. ಹೆಣ್ಣನ್ನು ನೋಡುವ ದೃಷ್ಟಿಕೋನ ಬಹುತೇಕ ಸಿನಿಮಾ ಕ್ಷೇತ್ರದ ಹೊರಗೂ ಒಳಗೂ ಒಂದೇ. ಆದರೆ ಒಂದರಲ್ಲಿ ಒರಟುತನವಿದೆ ಮತ್ತು ಇನ್ನೊಂದರಲ್ಲಿ ಮೃದುತನವಿದೆ ಎಂಬುದಷ್ಟೇ ವ್ಯತ್ಯಾಸ. ದುರಂತ ಏನೆಂದರೆ, ಹೊರಗಿನ ದೃಷ್ಟಿಕೋನವನ್ನು ಮಹಿಳಾ ದೌರ್ಜನ್ಯವಾಗಿ ಬಿಂಬಿಸುವವರೇ ಒಳಗೆ ಅದೇ ಮನಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಮಾತ್ರವಲ್ಲ, ಸ್ವಾತಂತ್ರ್ಯದ ಹೆಸರಲ್ಲಿ ಹೆಣ್ಣಿನ ಬಟ್ಟೆ, ಚಪ್ಪಲಿ, ದೈಹಿಕ ವಿನ್ಯಾಸ, ತೂಕ.. ಎಲ್ಲವನ್ನೂ ತಮ್ಮ ಇಚ್ಛೆಗೆ ಪೂರಕವಾಗಿ ನಿಯಂತ್ರಿಸುತ್ತಿದ್ದಾರೆ. ಜೊತೆಗೇ, ಇದುವೇ ಮಹಿಳಾ ಸ್ವಾತಂತ್ರ್ಯ ಎಂಬ ಹುಸಿ ವಾತಾವರಣವನ್ನೂ ನಿರ್ಮಿಸುತ್ತಿದ್ದಾರೆ. ಆದರೆ, ಆಂತರಿಕವಾಗಿ ಅವರು ಮಹಿಳಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಿಲ್ಲ. ಅವರಿಗೆ ಹೆಣ್ಣೆಂಬ ಗುಲಾಮಳು ಬೇಕು ಮತ್ತು ಪುರುಷರನ್ನು ತಣಿಸುವ ಭಂಗಿಯಲ್ಲಿ ಆಕೆ ಕಾಣಬೇಕು. ಕ್ಯಾನೇ ಚಿತ್ರೋತ್ಸವದ ಹೈಹೀಲ್ಡ್ ಪ್ರಕರಣದಲ್ಲಿ ಸ್ಪಷ್ಟವಾಗುವುದೂ ಇದುವೇ.