Monday, 31 December 2018

ಬಿಜೆಪಿ ಮತ್ತು ಮಾಧ್ಯಮ ಹೆಣೆದ ಸಂಚೇ ಲೋಕಪಾಲ?




ನಾ ಖಾವೂಂಗಾ ನಾ ಖಾನೆದೂಂಗ ಎಂಬ ಪದೋಕ್ತಿಯನ್ನು ಉರುಳಿಸಿ ಅಧಿಕಾರಕ್ಕೇರಿದ ನರೇಂದ್ರ ಮೋದಿಯವರು ಆ ಬಳಿಕ ಆ ಮಾತನ್ನು ಎಷ್ಟರ ವರೆಗೆ ನಿರ್ಲಕ್ಷಿಸಿದರು ಅನ್ನುವುದಕ್ಕೆ ಆರ್.ಟಿ.ಐ. (ಮಾಹಿತಿ ಹಕ್ಕು ಕಾಯಿದೆ) ಉತ್ತರ ನೀಡಿದೆ. ಈ ಉತ್ತರ ಆಘಾತಕಾರಿಯಾದುದು. ಭ್ರಷ್ಟಾಚಾರವನ್ನು ಖಂಡಿಸಿ ಮತ್ತು ಅದಕ್ಕಾಗಿ ಮನ್‍ಮೋಹನ್ ಸಿಂಗ್‍ರನ್ನು ತಮಾಷೆ ಮಾಡಿ ಅಧಿಕಾರಕ್ಕೇರಿದ ಪಕ್ಷವೊಂದು ಆ ಬಳಿಕ ಆ ಇಡೀ ಪ್ರಕ್ರಿಯೆಯನ್ನು ಹೇಗೆ ಮರೆತಿದೆ ಎಂಬುದನ್ನು ಆರ್‍ ಟಿ ಐ ಮೂಲಕ ಲಭ್ಯವಾದ ಮಾಹಿತಿಗಳು ದೇಶದ ಮುಂದಿಟ್ಟಿದೆ.
2013-14ರಲ್ಲಿ ಈ ದೇಶದಲ್ಲಿ ಅಭೂತಪೂರ್ವವಾದ ಬೆಳವಣಿಗೆಗಳು ನಡೆದುವು. ಅದರಲ್ಲಿ ಒಂದು- ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟವಾದರೆ, ಇನ್ನೊಂದು- ಬಾಬಾ ರಾಮ್‍ದೇವ್ ಅವರ ಕಪ್ಪು ಹಣ ವಾಪಸಾತಿ ಪ್ರತಿಭಟನೆ. ಈ ಸಂದರ್ಭದಲ್ಲಿ ಮಸೀಹನಂತೆ ಫೋಸು ಕೊಟ್ಟದ್ದು ಬಿಜೆಪಿ. ಅದು ಅಣ್ಣಾ ಹಜಾರೆಯನ್ನು ಬೆಂಬಲಿಸಿತು. ಲೋಕ್‍ಪಾಲ್ ಅನ್ನು ಜಾರಿಗೊಳಿಸಬೇಕೆಂಬ ಹಜಾರೆಯವರ ಬೇಡಿಕೆಗೆ ಬೆಂಬಲ ಸೂಚಿಸಿತು. ಕಪ್ಪು ಹಣ ವಾಪಸಾತಿಯ ಬಗೆಗಂತೂ ಅದು ಕೊಟ್ಟ ಭರವಸೆ ಮತ್ತು ನೀಡಿದ ಮಾಹಿತಿಗಳು ರೋಮಾಂಚನಕಾರಿಯಾದುದು. 2009ರ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿಯವರು ಕಪ್ಪು ಹಣದ ಬಗ್ಗೆ ಏನೆಲ್ಲ ಮಾಹಿತಿಗಳನ್ನು ದೇಶದ ಮುಂದೆ ಇಟ್ಟಿದ್ದರೋ ಅದನ್ನು ಎಲ್ಲ ರೀತಿಯಲ್ಲೂ ಮೀರಿಸುವ ಮಾಹಿತಿಯನ್ನು ನರೇಂದ್ರ ಮೋದಿಯವರು ದೇಶದ ಮುಂದಿಟ್ಟರು. ಅಧಿಕಾರಕ್ಕೆ ಬಂದ 100 ದಿನದೊಳಗೆ ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ತುಂಬುವುದಾಗಿ ಅವರು ಭರವಸೆ ನೀಡಿದರು. ಅಡ್ವಾಣಿಯವರಿಗೆ ಇಷ್ಟು ಧೈರ್ಯವಿರಲಿಲ್ಲ. ಅವರು ಕಪ್ಪು ಹಣದಿಂದ ಒಂದೊಂದು ಗ್ರಾಮಕ್ಕೆ ಎಷ್ಟೆಷ್ಟು ಅನುದಾನವನ್ನು ಒದಗಿಸಬಹುದು ಎಂದಷ್ಟೇ ಹೇಳಿದ್ದರು. ಮೋದಿ ನೇತೃತ್ವದ ಬಿಜೆಪಿ ಬಾಬಾ ರಾಮ್‍ದೇವ್‍ರನ್ನೂ ಬೆಂಬಲಿಸಿತು. ಹೀಗೆ ಲೋಕಪಾಲವನ್ನು ಜಾರಿಗೆ ತರುವ ಮತ್ತು ಪ್ರತಿ ಭಾರತೀಯರ ಖಾತೆಗೆ 15 ಲಕ್ಷ ರೂಪಾಯಿಯನ್ನು ತುಂಬುವ ಭರವಸೆಯೊಂದಿಗೆ ಅಧಿಕಾರಕ್ಕೇರಿದ ಬಿಜೆಪಿಯು ಸದ್ಯ ಅವೆರಡನ್ನೂ ಹೇಗೆ ನಿರ್ಲಕ್ಷಿಸಿದೆ ಎಂದರೆ, ಲೋಕಪಾಲಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ರಚಿಸಲಾದ ಸಮಿತಿಯು ಈವರೆಗೆ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ. ತಮಾಷೆ ಏನೆಂದರೆ, ಈ ಸಮಿತಿಯ ರಚನೆಯಾದದ್ದೇ  2018 ಮಾರ್ಚ್‍ನಲ್ಲಿ. ಇದಕ್ಕೂ ಒಂದು ಕಾರಣ ಇದೆ. ಈ ಬಗ್ಗೆ ಸುಪ್ರೀಮ್ ಕೋರ್ಟಿಗೆ ವ್ಯಕ್ತಿಯೋರ್ವರು ತಕರಾರು ಅರ್ಜಿ ಸಲ್ಲಿಸಿದುದನ್ನು ಪರಿಗಣಿಸಿ ಇಂಥದ್ದೊಂದು ಸಮಿತಿಯನ್ನು ತರಾತುರಿಯಿಂದ ರಚಿಸಲಾಗಿತ್ತು. ಇದರರ್ಥ ಏನು? ಭ್ರಷ್ಟಾಚಾರವನ್ನು ಚುನಾವಣಾ ಅಜೆಂಡಾ ಆಗಿಸಿಕೊಂಡೇ ಅಧಿಕಾರ ಪಡೆದ ಪಕ್ಷವೊಂದು ಆ ಬಳಿಕ ಆ ಇಡೀ ಪ್ರಕ್ರಿಯೆಯನ್ನೇ ನಿರ್ಲಕ್ಷಿಸಿತು ಎಂದಲ್ಲವೇ? ಯಾಕೆ ಈ ದೇಶದ ಮಾಧ್ಯಮಗಳು ಈ ಬಗ್ಗೆ ಒತ್ತಡವನ್ನು ಹೇರಲಿಲ್ಲ? ಅಣ್ಣಾ ಹಜಾರೆಯವರು ಯಾಕೆ ಪರಿಣಾಮಕಾರಿ ಚಳವಳಿಯನ್ನು ನಡೆಸಲಿಲ್ಲ ಮತ್ತು ಮಾಧ್ಯಮಗಳೇಕೆ ಅಣ್ಣಾ ಅವರ ಆ ಬಳಿಕದ ಸತ್ಯಾಗ್ರಹಕ್ಕೆ ಬೆಂಗಾವಲಾಗಿ ನಿಲ್ಲಲಿಲ್ಲ? ಹಾಗಿದ್ದರೆ, 2013-14ರ ಭ್ರಷ್ಟಾಚಾರ ವಿರೋಧಿ ಹೋರಾಟವೆಂಬುದು ಒಂದು ಸಂಚಾಗಿತ್ತೇ? ಮನಮೋಹನ್ ಸಿಂಗ್ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ಬಿಜೆಪಿ-ಹಜಾರೆ-ರಾಮ್‍ದೇವ್ ಮತ್ತು ಮಾಧ್ಯಮದ ಒಂದು ವರ್ಗ ಈ ಸಂಚಿನ ಹಿಂದಿತ್ತೇ? ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯಕ್ಕೆ ಯಾಕೆ ಮನವಿ ಸಲ್ಲಿಸಬಾರದು?
2ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆಯನ್ನೇ ಮುಖ್ಯ ಕೇಂದ್ರವಾಗಿಟ್ಟುಕೊಂಡು ಮನ್‍ಮೋಹನ್ ಸಿಂಗ್ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದ ಬಿಜೆಪಿ, ಇವತ್ತು ಆ ಪ್ರಕರಣವನ್ನು ಹೇಗೆ ನಿಭಾಯಿಸಿದೆ ಅನ್ನುವುದೂ ದೇಶಕ್ಕೆ ಗೊತ್ತು. ಆರೋಪಿಗಳೆಲ್ಲ ಒಬ್ಬೊಬ್ಬರಾಗಿ ಬಿಡುಗಡೆಗೊಳ್ಳುತ್ತಿದ್ದಾರೆ. ಕಾಂಗ್ರೆಸ್‍ನ ಮೇಲೆ ಮತದಾರರು 2014ರ ಚುನಾವಣೆಯಲ್ಲಿ ಮುನಿಸಿಕೊಳ್ಳುವುದಕ್ಕೆ 1 ಲಕ್ಷ ಕೋಟಿ ರೂಪಾಯಿ ಹಗರಣವಾಗಿ ಬಿಂಬಿತವಾದ 2ಜಿ ಸ್ಪೆಕ್ಟ್ರಂಗೆ ಬಹುಮುಖ್ಯ ಪಾತ್ರ ಇದೆ. ಆದರೆ, ಇವತ್ತು ಅದೊಂದು ಹಗರಣವೇ ಅಲ್ಲವೇನೋ ಅನ್ನುವ ಭಾವನೆ ಮೂಡುವಂತೆ ಬೆಳವಣಿಗೆಗಳು ನಡೆಯುತ್ತಿವೆ. ಹಾಗಿದ್ದರೆ, 2ಜಿ ಸ್ಪೆಕ್ಟ್ರಂನ ಬಗ್ಗೆ 2013-14ರಲ್ಲಿ ಹೇಳಲಾಗಿರುವುದೆಲ್ಲ ಸುಳ್ಳೇ? ಸುದ್ದಿ ಮನೆಯ ಡೆಸ್ಕ್ ರೂಂನಲ್ಲಿ ಕುಳಿತು ಕಟ್ಟಿದ ಕತೆಗಳೇ ಅವೆಲ್ಲ? ಬಿಜೆಪಿ ಜೊತೆ ಮಾಧ್ಯಮದ ಒಂದು ವರ್ಗವೂ ಸೇರಿಕೊಂಡು ಇಂಥದ್ದೊಂದು ಸುಳ್ಳು ಕತೆಯನ್ನು ಹೆಣೆದವೇ? ಯಾಕೆ ಇವತ್ತು ಮಾಧ್ಯಮಗಳು ಮಾತಾಡುತ್ತಿಲ್ಲ? ಟಿವಿಯಲ್ಲಿ ಚರ್ಚೆ, ವಿಶ್ಲೇಷಣೆ, ಎಕ್ಸ್‍ಕ್ಲೂಸಿವ್ ನ್ಯೂಸ್‍ಗಳು ಪ್ರಸಾರವಾಗುತ್ತಿಲ್ಲ? ಹಾಗಿದ್ದರೆ 2ಜಿ ಸ್ಪೆಕ್ಟ್ರಂ ಅನ್ನುವುದೂ ಚುನಾವಣಾ ಗಿಮಿಕ್ಕೇ? ಲೋಕಪಾಲ ಅನ್ನುವುದೂ ಚುನಾವಣಾ ತಂತ್ರವೇ? ಕಪ್ಪು ಹಣ ಅನ್ನುವುದೂ ಜುಮ್ಲಾವೇ?
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ನರೇಂದ್ರ ಮೋದಿಯವರು ಈ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ವಿಧಾನಸಭಾ ಚುನಾವಣೆಗಳ ಸಮಯದಲ್ಲಂತೂ ಸರಣಿ ಭಾಷಣಗಳನ್ನು ನೀಡಿದ್ದಾರೆ. ಈ ಎಲ್ಲ ಸಂದರ್ಭಗಳಲ್ಲಿ ಭ್ರಷ್ಟಾಚಾರವನ್ನು ಒಂದು ಇಶ್ಯೂ ಆಗಿ ಅವರು ಎತ್ತಿಕೊಂಡದ್ದು ಎಲ್ಲರಿಗೂ ಗೊತ್ತು. ಸಿದ್ದರಾಮಯ್ಯ ಸರಕಾರವನ್ನು ಅವರು 10 ಪರ್ಸೆಂಟ್ ಸರಕಾರ ಎಂದು ಮೂದಲಿಸಿದ್ದರು. ವ್ಯಂಗ್ಯ ಏನೆಂದರೆ, ಆಗಲೂ ಕೇಂದ್ರದಲ್ಲಿ ಲೋಕಪಾಲ ಖಾಲಿ ಬಿದ್ದಿತ್ತು. ಕನಿಷ್ಠ ಲೋಕಪಾಲಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿಕ್ಕಾಗಿ ಒಂದು ಸಮಿತಿಯನ್ನೂ ಆ ಸಮಯದಲ್ಲಿ ಅವರು ರಚಿಸಿರಲಿಲ್ಲ. ಆದರೂ ಅವರು ಭ್ರಷ್ಟಾಚಾರ ನಿರ್ಮೂಲನೆಯ ಕುರಿತಂತೆ ಮಾತಾಡುತ್ತಿದ್ದಾರೆ. ಮಾಧ್ಯಮಗಳು ಅದನ್ನು ವರದಿ ಮಾಡುತ್ತಲೂ ಇವೆ. ಒಂದುವೇಳೆ, ಭ್ರಷ್ಟಾಚಾರದ ನಿರ್ಮೂಲನೆಗೆ ಲೋಕಪಾಲದ ಅಗತ್ಯ ಇಲ್ಲವೆಂದಾದರೆ, ಅದು ಮನಮೋಹನ್ ಸಿಂಗ್‍ರ ಕಾಲದಲ್ಲೂ ಅನಗತ್ಯ ಆಗಬೇಕಿತ್ತಲ್ಲವೇ? ಲೋಕಪಾಲ ಇಲ್ಲದೆಯೇ ಭ್ರಷ್ಟಾಚಾರವನ್ನು ನಿಗ್ರಹಿಸಬಹುದು ಎಂದು ಬಿಜೆಪಿ ಹೇಳಬೇಕಿತ್ತಲ್ಲವೇ? ಧರಣಿ ನಡೆಸಬೇಡಿ ಎಂದು ಅಣ್ಣಾ ಹಜಾರೆಯವರಲ್ಲೂ ಅದು ಕೋರಬೇಕಿತ್ತಲ್ಲವೇ? ಆದರೆ ಆ ಸಂದರ್ಭದಲ್ಲಿ ಲೋಕಪಾಲವೇ ಪರಿಹಾರ ಎಂಬ ರೀತಿಯಲ್ಲಿ ಮಾತಾಡಿದ ಬಿಜೆಪಿಯು ಈಗ ಆ ಬಗ್ಗೆ ಗಮನವನ್ನೇ ಹರಿಸಿಲ್ಲ ಅಂದರೆ ಏನರ್ಥ? ಅಧಿಕಾರಕ್ಕೇರಿದ ನಾಲ್ಕೂವರೆ ವರ್ಷಗಳ ಬಳಿಕವೂ ಲೋಕಪಾಲಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಮಿತಿಯ ಸಭೆಯೇ ನಡೆದಿಲ್ಲವೆಂದರೆ ಏನರ್ಥ?
2014ರ ಲೋಕಸಭಾ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದ ಲೋಕಪಾಲ ಮಸೂದೆ ಮತ್ತು ಕಪ್ಪು ಹಣ- ಈ ಎರಡರಲ್ಲೂ ಬಿಜೆಪಿ ಇವತ್ತು ಗಾಢ ವೈಫಲ್ಯವನ್ನು ಕಂಡಿದೆ. ಈ ದೇಶದ ಮತದಾರರು ಬಿಜೆಪಿಯನ್ನು ಬೆಂಬಲಿಸುವುದಕ್ಕೆ ಮುಖ್ಯ ಕಾರಣಗಳಲ್ಲಿ ಈ ಎರಡಕ್ಕೂ ಪಾತ್ರ ಇದೆ. ಆದರೆ, ಮೋದಿಯವರ ಅಧಿಕಾರದ ಅವಧಿ ಕೊನೆಗೊಳ್ಳುತ್ತಾ ಬರುತ್ತಿರುವ ಈ ಹೊತ್ತಿನಲ್ಲಿ ಈ ಎರಡನ್ನೂ ಪರಿಶೀಲನೆಗೆ ಒಡ್ಡಿದರೆ, ನಿರಾಶೆಯ ಜೊತೆಗೇ ಪ್ರಶ್ನೆಗಳೂ ಕಾಡುತ್ತವೆ. ಭ್ರಷ್ಟಾಚಾರ ನಿರ್ಮೂಲನೆಗೂ ಬಿಜೆಪಿಗೂ ಸಂಬಂಧ ಏನು? ಬಿಜೆಪಿ ಅಧಿಕಾರದಲ್ಲಿರುವ ಯಾವೆಲ್ಲ ರಾಜ್ಯಗಳು ಭ್ರಷ್ಟಾಚಾರ ಮುಕ್ತವಾಗಿವೆ? ಬಿಜೆಪಿಯ ಯಾವೆಲ್ಲ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ? ಯಾರಿಗೆಲ್ಲ ಶಿಕ್ಷೆಯಾಗಿದೆ? ವ್ಯಾಪಂ ಹಗರಣ ಎಷ್ಟು ಕೋಟಿಯದು? ಅದರಲ್ಲಿ ಭಾಗಿಯಾದ ಬಿಜೆಪಿಯ ನಾಯಕರುಗಳೆಲ್ಲ ಯಾರ್ಯಾರು? ಶವಪೆಟ್ಟಿಗೆ ಹಗರಣ ಯಾರ ಅಧಿಕಾರಾವಧಿಯಲ್ಲಿ ನಡೆದಿದೆ? ಪ್ರಶ್ನೆಗಾಗಿ ಲಂಚ ಹಗರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ? ನೋಟಿನ ಕಂತೆಯೊಂದಿಗೆ ಕಾಣಿಸಿಕೊಂಡ ಬಂಗಾರು ಲಕ್ಷ್ಮಣ್ ಯಾವ ಪಕ್ಷದವರು? ಈ ಪಟ್ಟಿ ಇನ್ನೂ ಉದ್ದ ಇದೆ.
ಭ್ರಷ್ಟಾಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‍ನ ಮೇಲೆ ಏನೆಲ್ಲ ಆರೋಪಗಳಿವೆಯೋ ಆ ಎಲ್ಲ ಆರೋಪಗಳೂ ಇವತ್ತು ಬಿಜೆಪಿಯ ಮೇಲೂ ಇದೆ. ಬಹುದೀರ್ಘಕಾಲ ಆಳಿದ ಪಕ್ಷವೆಂಬ ನೆಲೆಯಲ್ಲಿ ಕಾಂಗ್ರೆಸ್‍ನಿಂದಾದ ಹಗರಣಗಳ ಪಟ್ಟಿ ಉದ್ದ ಇದೆ ಮತ್ತು ಬಿಜೆಪಿಯ ಆಡಳಿತಾವಧಿ ಹೃಸ್ವವಾಗಿದ್ದರೂ ಹಗರಣಗಳ ವ್ಯಾಪ್ತಿಯಲ್ಲಿ ಆ ಹೃಸ್ವತನವೇನೂ ಕಾಣಿಸುತ್ತಿಲ್ಲ. ಸಣ್ಣ ಅವಧಿಯಲ್ಲಿ ಹಗರಣಗಳ ಮಟ್ಟಿಗೆ ದೊಡ್ಡದೊಂದು ಸಾಧನೆಯನ್ನು ಮಾಡಿದ ಕೀರ್ತಿ ಬಿಜೆಪಿಗಿದೆ. ಹೀಗಿರುವಾಗ, ಲೋಕಪಾಲರನ್ನು ಅದು ನೇಮಿಸುತ್ತದೆ ಮತ್ತು ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ತನ್ನ ಬದ್ಧತೆಯನ್ನು ವ್ಯಕ್ತಪಡಿಸುತ್ತದೆ ಎಂದು ನಾವು ನಿರೀಕ್ಷಿಸುವುದು ಹೇಗೆ? ನಿಜವಾಗಿ,
ಬಿಜೆಪಿ ಏನು ಅನ್ನುವುದಕ್ಕೆ ಲೋಕಪಾಲವೇ ಅತ್ಯುತ್ತಮ ಉದಾಹರಣೆ.

Friday, 21 December 2018

ಕಿಚ್ಚುಗತ್ತಿ ಮಾರಮ್ಮ, ಗಂಗೆ ಮತ್ತು ಗೋಪಾಲದಾಸ



ಚಾಮರಾಜನಗರದ ಕಿಚ್ಚುಗತ್ತಿ ಮಾರಮ್ಮ ದೇವಾಲಯಕ್ಕೂ ಉತ್ತರ ಭಾರತದ ಗಂಗಾ ನದಿಗೂ ನೇರವಾಗಿಯೋ ಪರೋಕ್ಷವಾಗಿಯೋ ಆಧ್ಯಾತ್ಮಿಕವಾದ ಸಂಬಂಧ ಇದೆ. ವಿಷಾದ ಏನೆಂದರೆ, ಮಾರಮ್ಮ ಗುಡಿಯಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿ ಸಾವಿಗೀಡಾಗುವಾಗ ಅತ್ತ ಗಂಗೆಯ ತಟದಲ್ಲಿ ಸತ್ಯಾಗ್ರಹ ನಿರತ ಸಾಧುಗಳು ನಾಪತ್ತೆಯಾಗುತ್ತಿದ್ದಾರೆ.
ಗಂಗೆಗೂ ಸಾಧುಗಳಿಗೂ ಅವಿನಾಭಾವ ನಂಟು ಇದೆ. ಗಂಗೆ ಪವಿತ್ರಳು ಅನ್ನುವ ನಂಬಿಕೆ ಹಿಂದೂಗಳದ್ದು. ಆದ್ದರಿಂದಲೇ, ಗಂಗೆಯ ಪಾವಿತ್ರ್ಯಕ್ಕೆ ಧಕ್ಕೆ ತರಬಹುದಾದ ಯೋಜನೆಗಳ ವಿರುದ್ಧ ಅವರು ಪ್ರತಿಭಟಿಸುತ್ತಲೇ ಬಂದಿದ್ದಾರೆ. ಪರಿಸರ ತಜ್ಞನಾಗಿ ಗುರುತಿಸಿಕೊಂಡಿದ್ದ ಮತ್ತು ಆ ಬಳಿಕ ಸನ್ಯಾಸಿಯಾಗಿ ಪರಿವರ್ತಿತರಾದ ಜಿ.ಡಿ. ಅಗರ್ವಾಲ್ ಎಂಬವರು ಉಪವಾಸ ಸತ್ಯಾಗ್ರಹ ನಿರತರಾಗಿರುತ್ತಾ ಕಳೆದ ವರ್ಷದ ಅಕ್ಟೋಬರ್ 11 ರಂದು ಸಾವಿಗೀಡಾದರು. ಗಂಗಾ ನದಿಯ ವಿವಿಧ ಉಪನದಿಗಳ ಮೇಲೆ ಸರಕಾರಿ ಯೋಜನೆಗಳು ಜಾರಿಯಾಗುವುದನ್ನು ಮತ್ತು ಮರಳು ಹಾಗೂ ಗಣಿಗಾರಿಕೆಯನ್ನು ವಿರೋಧಿಸಿ ಅವರು ಸಾವಿಗಿಂತ 5 ತಿಂಗಳ ಮೊದಲೇ ಉತ್ತರಾಖಂಡದ ಮತ್ರಿ ಸದನ್ ಆಶ್ರಮದಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಗಂಗೆ ಕಲುಷಿತಗೊಂಡಿರುವುದಕ್ಕೆ ಗಂಗೆಯ ಉಪನದಿಗಳಾದ ಅಲಕ್‍ನಂದಾ, ಭಾಗೀರಥಿ, ಮಂದಾಕಿನಿ, ಪಿಂದಾಕ ಇತ್ಯಾದಿಗಳ ಮೇಲೆ ಮರಳುಗಾರಿಕೆ, ಗಣಿಗಾರಿಕೆ ಮತ್ತು ಅಣೆಕಟ್ಟುಗಳ ನಿರ್ಮಾಣದಂಥ ಸರಕಾರಿ ಯೋಜನೆಗಳೇ ಕಾರಣ ಅನ್ನುವುದು ಅಗರ್ವಾಲ್‍ರೂ ಸೇರಿದಂತೆ ಅನೇಕ ಸಾಧುಗಳ ವಾದ. ಪರಿಸರ ತಜ್ಞರೂ ಇವರ ಜೊತೆ ನಿಂತಿದ್ದಾರೆ. ಅಣೆಕಟ್ಟುಗಳನ್ನು ಕಟ್ಟಿ ಹೈಡ್ರೋ ಪವರ್ ಯೋಜನೆಯನ್ನು ಸರಕಾರ ಜಾರಿಗೊಳಿಸುವುದಕ್ಕೆ ಮುಂದಾಗಿರುವುದನ್ನು ಅಪಾಯಕಾರಿ ಎಂದು ಅವರು ಹೇಳುತ್ತಿದ್ದಾರೆ. ಪರಿಸರ ತಜ್ಞರಾಗಿದ್ದ ಅಗರ್ವಾಲ್ ಅವರು ಸಾಧುವಾಗಿ ಪರಿವರ್ತಿತವಾದದ್ದರ ಹಿಂದೆ ಇದರ ಪ್ರಭಾವವೂ ಇದೆ. ಅವರನ್ನು ಉತ್ತರಾಖಂಡ್ ಸರಕಾರ ಸಾಯಲು ಬಿಟ್ಟಿತು. ಇದೀಗ ಗೋಪಾಲ ದಾಸ್ ಎನ್ನುವ ಇನ್ನೋರ್ವ ಸಾಧುವೂ ನಾಪತ್ತೆಯಾಗಿದ್ದಾರೆ. ಗಂಗೆಯ ನದೀ ಪಾತ್ರದಲ್ಲಿ ಹೈಡ್ರೋಪವರ್ ಯೋಜನೆಯನ್ನು ಸರಕಾರ ಕೈಗೆತ್ತಿಕೊಂಡಿರುವುದನ್ನು ಪ್ರತಿಭಟಿಸಿ ಜೂನ್ 24 ರಿಂದ ಹರಿದ್ವಾರದ ಮತ್ರಿ ಸದನ್ ಆಶ್ರಮದಲ್ಲಿ ಅವರು ಉಪವಾಸ ಪ್ರಾರಂಭಿಸಿದ್ದರು. ಡಿಸೆಂಬರ್ 4 ರಂದು ಅವರನ್ನು ಪೋಲೀಸರು ಬಲವಂತದಿಂದ ಎತ್ತಿಕೊಂಡು ಹೋಗಿ ಡೆಹ್ರಾಡೂನಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಡಿ. 6 ರ ಬಳಿಕ ಅವರು ನಾಪತ್ತೆಯಾಗಿದ್ದಾರೆ. ಅವರನ್ನು ಕೊಲ್ಲಲಾಗಿದೆ ಎಂದು ಮತ್ರಿ ಸದನ್ ಆಶ್ರಮದ ಸ್ವಾಮಿ ಶಿವಾನಂದ್ ಹೇಳುತ್ತಾರೆ. ಇದೀಗ ತನ್ನ ಮಗನನ್ನು ಪತ್ತೆ ಹಚ್ಚಿ ಕೊಡಿ ಎಂದು ಗೋಪಾಲ್ ದಾಸ್ ಅವರ ತಾಯಿ ಶಕುಂತಲಾ ದೇವಿ ಉಪವಾಸ ಕೂತಿದ್ದಾರೆ.
ಗಂಗೆ ಮತ್ತು ಮಾರಮ್ಮ ಗುಡಿ ಇವು ಎರಡೂ ಬೇರೆ ಬೇರೆ ರಾಜ್ಯಗಳಲ್ಲಿರುವ ಮತ್ತು ಬೇರೆ ಬೇರೆ ಭಕ್ತರನ್ನು ಹೊಂದಿರುವ ಎರಡು ಶಕ್ತಿ ಕೇಂದ್ರಗಳು. ಎರಡಕ್ಕೂ ಮಹತ್ವ ಲಭಿಸಿರುವುದು ಆಧ್ಯಾತ್ಮಿಕ ಕಾರಣದಿಂದ. ನಿಜವಾಗಿ, ಆಧ್ಯಾತ್ಮಿಕತೆಯಲ್ಲಿ ಎರಡು ಬಗೆಯಿದೆ. ಒಂದು: ಮುಗ್ಧ ಭಕ್ತರು. ಇನ್ನೊಂದು ಆಧ್ಯಾತ್ಮಿಕ ಕೇಂದ್ರವನ್ನು ನಿಯಂತ್ರಿಸುವವರು. ಮಚ್ಚುಗತ್ತಿ ದೇವಾಲಯಕ್ಕೂ ಇದು ಅನ್ವಯಿಸುತ್ತದೆ. ಒಂದು ಕಡೆ ಮುಗ್ಧ ಭಕ್ತರಿದ್ದರೆ, ಇನ್ನೊಂದು ಕಡೆ ಈ ದೇವಾಲಯವನ್ನು ನಿಯಂತ್ರಿಸುವವರ ಮೇಲೆ ಭೂ ಅತಿಕ್ರಮಣ, ಸರಕಾರಿ ಜಮೀನು ಒತ್ತುವರಿ ಇತ್ಯಾದಿ  ಆರೋಪಗಳಿವೆ. ಭಕ್ತರ ಹರಿವು ಹೆಚ್ಚಾದಂತೆಯೇ ಕಾಣಿಕೆಗಳ ಸಂಗ್ರಹವೂ ಅಧಿಕವಾಗುತ್ತದೆ. ಭಕ್ತರನ್ನು ಆಕರ್ಷಿಸುವುದಕ್ಕಾಗಿ ಮೌಡ್ಯಗಳನ್ನು ಪ್ರಚಾರ ಮಾಡಬೇಕಾಗುತ್ತದೆ. ಕಾಣಿಕೆಗಳ ಸಂಗ್ರಹದಲ್ಲಿ ಹೆಚ್ಚಳವಾಗುತ್ತದೆಂದರೆ ಆಡಳಿತಾತ್ಮಕವಾಗಿ ದುರಾಸೆಗಳೂ ಜಾಗೃತಗೊಳ್ಳುತ್ತವೆ. ಭಕ್ತರಿಗೆ ಇದು ಗೊತ್ತಿರುವುದಿಲ್ಲ. ಆದಾಯವನ್ನು ಹೆಚ್ಚುಗೊಳಿಸುವುದಕ್ಕಾಗಿ ಹೊಸ ಹೊಸ ಪವಾಡಗಳನ್ನು ಹುಟ್ಟು ಹಾಕುತ್ತಿರುವುದರ ಬಗ್ಗೆಯೂ ಅರಿವಿರುವುದಿಲ್ಲ. ತಾವು ಕಣ್ಣಾರೆ ಕಾಣದಿದ್ದರೂ ಯಾರೋ ಹೇಳಿದ್ದನ್ನು, ಕೇಳಿದ್ದನ್ನು ಮನಸಾರೆ ನಂಬಿ ಭಾವುಕತೆಯನ್ನು ಅವರು ಬೆಳೆಸಿಕೊಂಡಿರುತ್ತಾರೆ. ಇವರ ಕಿವಿಗೆ ಪವಾಡದ ಸಂಗತಿಯನ್ನು ಯಾರು ತುಂಬಿಸಿರುತ್ತಾರೋ ಅವರಿಗೂ ಪವಾಡದ ಅನುಭವ ಆಗಿರುವುದಿಲ್ಲ. ಗಂಗೆಗೆ ಸಂಬಂಧಿಸಿಯೂ ಇವತ್ತು ಬಹುತೇಕ ಅಸ್ತಿತ್ವದಲ್ಲಿರುವುದು ಇದುವೇ. ಪವಿತ್ರವೆಂದು ನಂಬಿರುವ ಗಂಗೆಯನ್ನು ಅಪವಿತ್ರ ಮಾಡಿರುವುದು ಯಾವುದೋ ಕಂಪೆನಿಗಳು, ಇನ್ನಾರದೋ ಶವಗಳು, ಮಾಲಿನ್ಯಗಳು ಕಾರಣ ಎಂದೇ ಜನರನ್ನು ನಂಬಿಸಿಕೊಂಡು ಬರಲಾಗಿದೆ. ಸರಕಾರ ಅಂಥದ್ದೊಂದು ಜಾಹೀರಾತನ್ನು ಕೊಟ್ಟು ಅಪವಿತ್ರ ಗಂಗೆಯನ್ನು ಶುದ್ಧಗೊಳಿಸುವುದಕ್ಕೆ ಕೋಟ್ಯಾಂತರ ರೂಪಾಯಿಯನ್ನು ಘೋಷಿಸುತ್ತದೆ. ಜನರಿಗೆ ಸರಕಾರದ ಮೇಲೆ ಪ್ರೀತಿಯೂ ಉಕ್ಕುತ್ತದೆ. ಸರಕಾರಗಳ ಗುರಿಯೂ ಇದುವೇ. ಜನರನ್ನು ನಂಬಿಸುವುದು. ಹೀಗೆ ಜನರಿಗೆ ಸರಕಾರದ ಮೇಲೆ ಒಮ್ಮೆ ನಂಬಿಕೆ ಬಂದು ಬಿಟ್ಟರೆ ಸಾಕು ಆ ಬಳಿಕ ಹಿಂದಿನ ಕ್ರಮವನ್ನೇ ಮುಂದುವರಿಸಿಕೊಂಡು ಹೋಗುವುದಕ್ಕೆ ಸರಕಾರಕ್ಕೆ ದಾರಿ ಸುಲಭವಾಗುತ್ತದೆ. ನಿಜವಾಗಿ, ಹರಿದ್ವಾರದ ಮತ್ರಿ ಸದನ್ ಆಶ್ರಮದಲ್ಲಿ ಸತ್ಯಾಗ್ರಹ ನಿರತ ಸನ್ಯಾಸಿಗಳು ಸರಕಾರದ ಈ ಧೋರಣೆಯ ವಿರೋಧಿಗಳು. ಒಂದು ಕಡೆ ಗಂಗಾ ಶುದ್ಧೀಕರಣಕ್ಕೆ ಕೋಟ್ಯಾಂತರ ಹಣವನ್ನು ಘೋಷಿಸುವ ಕೇಂದ್ರ ಮತ್ತು ಉತ್ತರಾ ಖಂಡ ಸರಕಾರಗಳು ಇನ್ನೊಂದು ಕಡೆ ಗಂಗೆಯ ಮೇಲೆ ವಿವಿಧ ಕಾರ್ಪೋರೇಟ್ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅತ್ಯಾಚಾರ ನಡೆಸುತ್ತಿದೆ ಎಂಬುದು ಅವರ ದೂರು.
ಸರಕಾರಗಳಿಗೆ ಗಂಗೆಯನ್ನು ಪವಿತ್ರಳು ಎಂದು ನಂಬುವ ಮುಗ್ಧರ ಅಗತ್ಯವಿದೆಯೇ ಹೊರತು ಗೋಪಾಲ ದಾಸ್‍ರಂತಹ ಸನ್ಯಾಸಿಗಳ ಅಗತ್ಯವಿಲ್ಲ. ಇಂಥವರನ್ನು ಸರಕಾರ ಮುಳ್ಳುಗಳಂತೆ ಪರಿಗಣಿಸುತ್ತದೆ ಮತ್ತು ಅವರನ್ನು ದಾರಿಯಿಂದ ಸರಿಸಿ ಬಿಡುವುದಕ್ಕೆ ಯತ್ನಿಸುತ್ತದೆ. ಹರಿದ್ವಾರದಲ್ಲಿ ನಡೆಯುತ್ತಿರುವುದೂ ಇದುವೇ. ಸತ್ಯಾಗ್ರ ನಿರತ ಅಗರ್ವಾಲ್‍ರ ಸಾವಿನ ಬಳಿಕವೂ ಉತ್ತರಾಖಂಡ ಸರಕಾರ ತನ್ನ ಹೈಡ್ರೋಪವರ್ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದಾದರೆ ಮತ್ತು ನದಿ ಪಾತ್ರದ ವಿವಿಧ ಚಟುವಟಿಕೆಗಳಿಗೆ ತಡೆ ಒಡ್ಡುವುದಿಲ್ಲ ಎಂದಾದರೆ ಏನಿದರ ಅರ್ಥ? ಗಂಗೆಯ ಶುದ್ಧೀಕರಣವನ್ನು ಸರಕಾರ ಲಾಭ-ನಷ್ಟದ ಕನ್ನಡಕದಿಂದ ನೋಡುತ್ತಿದೆ ಎಂದೇ ಅಲ್ಲವೇ? ಗಂಗೆಯನ್ನು ಶುದ್ಧೀಕರಣಗೊಳಿಸುವುದಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಅದಕ್ಕಿಂತ ಕಾರ್ಪೋರೇಟ್ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿದರೆ ಬೊಕ್ಕಸಕ್ಕೂ ಹಣ ಲಭಿಸುತ್ತದೆ ಮತ್ತು ಪಾರ್ಟಿ ಪಂಡೂ ಸಿಗುತ್ತದೆ ಎಂಬುದರ ಹೊರತು ಇದಕ್ಕೆ ಬೇರೆ ಏನು ಕಾರಣವಿದೆ?
ಆಧ್ಯಾತ್ಮಿಕತೆ ಎಂಬುದು ಇವತ್ತು ಶೋಷಣೆಯ ಅತಿ ದೊಡ್ಡ ಮಾರುಕಟ್ಟೆಯಾಗಿ ರೂಪಾಂತರಗೊಂಡಿದೆ. ಮಾರಮ್ಮ ಗುಡಿಯೂ ಗಂಗೆಯೂ ಇದಕ್ಕಿಂತ ಭಿನ್ನವಲ್ಲ. ಸದ್ಯದ ತುರ್ತು ಅಗತ್ಯ ಏನೆಂದರೆ, ಆಧ್ಯಾತ್ಮಿಕ ಕೇಂದ್ರಗಳನ್ನು ಮಧ್ಯವರ್ತಿಗಳಿಂದ ರಕ್ಷಿಸಿ, ಭಕ್ತರಿಗೆ ಮುಕ್ತವಾಗಿಡುವುದು. ಆದಾಯಕ್ಕಿಂತ ಭಕ್ತಿಗೆ ಪ್ರಾಮುಖ್ಯತೆಯನ್ನು ಕಲ್ಪಿಸುವುದು. ಅದಾಯವೇ ಸಕಲ ಶೋಷಣೆಗಳ ಮೂಲ. ಆದಾಯದ ಗುರಿ ಇಲ್ಲದೇ ಇರುತ್ತಿದ್ದರೆ ನಿರ್ಜನ ಮತ್ತು ಅರಣ್ಯ ಪ್ರದೇಶದಲ್ಲಿ ಮಾರಮ್ಮ ಗುಡಿ ತಲೆ ಎತ್ತುತ್ತಿತ್ತೇ ಅನ್ನುವ ಪ್ರಶ್ನೆ ಅತ್ಯಂತ ಸೂಕ್ತ. ಆಧ್ಯಾತ್ಮಿಕ ಕೇಂದ್ರಗಳನ್ನು ದಲ್ಲಾಲಿಗಳ ಹಿಡಿತದಿಂದ ಹೊರತಂದು ಜನರಿಗೆ ಮುಕ್ತವಾಗಿಸಿ ಬಿಟ್ಟರೆ ಇವತ್ತಿನ ಬಹುತೇಕ ಶಕ್ತಿ ಕೇಂದ್ರಗಳೂ ಭಕ್ತರ ಬರವನ್ನು ಎದುರಿಸಬಹುದು ಎಂಬುದು ಸುಳ್ಳಲ್ಲ. ಯಾಕೆಂದರೆ, ದಲ್ಲಾಳಿಗಳೇ ಅವುಗಳನ್ನು ಸೃಷ್ಟಿಸಿರುವುದು ಮತ್ತು ಅವುಗಳ ಸುತ್ತ ಪವಾಡಗಳ ಕಟ್ಟಕತೆಗಳನ್ನು ಹುಟ್ಟು ಹಾಕಿರುವುದು. ಹೆಚ್ಚಿನ ಭಕ್ತರು ಮುಗ್ಧರು. ಅವರು ಪವಾಡಗಳನ್ನು ನಂಬುತ್ತಾರೆ. ಶಕ್ತಿ ಕೇಂದ್ರಗಳ ಮೇಲೆ ಭರವಸೆಯಿಡುತ್ತಾರೆ. ಕೊನೆಗೆ ಅನಾಹುತಕ್ಕೂ ತುತ್ತಾಗುತ್ತಾರೆ. ಪವಾಡಗಳನ್ನು ಸೃಷ್ಟಿಸಿದವರು ಅದಾಯವನ್ನು ಲೆಕ್ಕ ಹಾಕುತ್ತಾ ಆರಾಮವಾಗಿರುತ್ತಾರೆ.
ಮಾರುಕಟ್ಟೆ ಆಧಾರಿತ ಆಧ್ಯಾತ್ಮಿಕತೆಯ ಬದಲು ದೇವ ಕೇಂದ್ರಿತ ಮತ್ತು ದಲ್ಲಾಳಿ ರಹಿತ ಆಧ್ಯಾತ್ಮಿಕತೆಯನ್ನು ಪ್ರಚುರ ಪಡಿಸುವ ಮೂಲಕ ಇದಕ್ಕೆ ಉತ್ತರವನ್ನು ನೀಡಬೇಕಾದ ಅಗತ್ಯವಿದೆ. ದೇವನನ್ನು ತಲುಪುದಕ್ಕೆ ಮಾನವನ ಮಧ್ಯಸ್ಥಿತಿಕೆಯ ಅಗತ್ಯವಿಲ್ಲ. ಮಾನವನನ್ನು ಸೃಷ್ಟಿಸಿರುವುದು ದೇವನೆಂದಾದರೆ, ಆ ದೇವನಲ್ಲಿ ಇಷ್ಟಾರ್ಥವನ್ನು ಬೇಡುವುದಕ್ಕೆ ಪೂಜಾರಿಗಳು, ಮುಜಾವರುಗಳ ಅಗತ್ಯ ಏಕಿದೆ? ಪವಾಡಗಳ ಹೆಸರಲ್ಲಿ ವಿವಿಧ ಶಕ್ತಿ ಕೇಂದ್ರಗಳ ಅಗತ್ಯ ಏನಿದೆ?
ನಾಪತ್ತೆಯಾಗಿರುವ ಗೋಪಾಲ ದಾಸ್ ಮತ್ತು ಮಾರಮ್ಮ ಗುಡಿ ಪ್ರಸಾದ ದುರಂತವು ಆಧ್ಯಾತ್ಮಿಕ ಶೋಷಣೆಯ ವಿರುದ್ಧ ಜನಜಾಗೃತಿಯನ್ನು ಹುಟ್ಟು ಹಾಕುವುದಕ್ಕೆ ಕಾರಣವಾಗಲಿ.

Saturday, 15 December 2018

ಐನ್‍ಸ್ಟೀನ್‍ರ ದೇವ ಮತ್ತು ಕೆಲವು ಪ್ರಶ್ನೆಗಳು


   
ದೇವನ ಕುರಿತಾದ ಜಿಜ್ಞಾಸೆ ಹೊಸತಲ್ಲ. ಗಾಡ್, ಪರಮಾತ್ಮ, ಅಲ್ಲಾಹ್, ಖುದಾ... ಹೀಗೆ ಜಗತ್ತಿನ ವಿವಿಧ ಭಾಷೆಗಳಲ್ಲಿ ವಿವಿಧ ರೂಪದಲ್ಲಿ ಕರೆಯಿಸಿಕೊಳ್ಳುವ ದೇವ, ಈ ಗೋಲದ ಅತಿ ಬಳಕೆಯ ಹೆಸರು. ದೇವನ ಹೆಸರಲ್ಲಿ ಒಂದು ಕಡೆ ಪೂಜೆ-ಪ್ರಾರ್ಥನೆಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ಹತ್ಯೆ, ಮಾರಣ ಹೋಮಗಳೂ ನಡೆಯುತ್ತಿವೆ. ದೇವನನ್ನು ಒಪ್ಪುವ ಮತ್ತು ಒಪ್ಪದಿರುವವರು ಇರುವಂತೆಯೇ, ದೇವನನ್ನು ಭಯ ಪಡುವವರೂ ಮತ್ತು ಪ್ರೀತಿಸುವವರೂ ಇದ್ದಾರೆ. ಮಾನವರೇ ದೇವನಾಗಿ ಪರಿವರ್ತಿತಗೊಳ್ಳುವ ಪ್ರಸಂಗಗಳೂ ನಡೆಯುತ್ತಿವೆ. ಅವರಿಗೆ ಒಂದಷ್ಟು ಭಕ್ತರೂ ಲಭ್ಯವಾಗುತ್ತಾರೆ. ದೇವನೆಂದರೆ ಯಾರು, ಆತನ ರೂಪ, ಆಕಾರ, ಬಣ್ಣಗಳಿಂದ ಹಿಡಿದು ಏಕನೋ ಅನೇಕನೋ, ಪತ್ನಿ-ಮಕ್ಕಳಿರುವವನೋ, ಒಂಟಿಯೋ, ಜಗತ್ತನ್ನು ಸೃಷ್ಟಿಸಿದ್ದು ಆತನೆಂದಾದರೆ ಆತನನ್ನು ಸೃಷ್ಟಿಸಿದ್ದು ಯಾರು, ಆತ ಎಲ್ಲಿದ್ದಾನೆ ಇತ್ಯಾದಿ ಪ್ರಶ್ನೆಗಳು ಈ ಜಗತ್ತಿಗೆ ಹೊಸತಲ್ಲ. ಇಂಥ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕಾಗಿಯೇ ಅಸಂಖ್ಯ ವೇದಿಕೆಗಳು ನಿರ್ಮಾಣವಾಗಿವೆ. ಬರಹಗಳು ಖರ್ಚಾಗಿವೆ. ಹಾಗಂತ,
     ಇದು ಈ 21ನೇ ಶತಮಾನದಲ್ಲಿ ದಿಢೀರ್ ಆಗಿ ಹುಟ್ಟಿಕೊಂಡ ಜಿಜ್ಞಾಸೆ ಏನಲ್ಲ. ಪುರಾತನ ಕಾಲದಿಂದಲೂ ದೇವ ಒಂದು ಚೋದ್ಯದ ವಸ್ತು. ದೇವನ ಬಗ್ಗೆ ಪ್ರಸಿದ್ಧ ವಿಜ್ಞಾನಿ ಅಲ್ಬರ್ಟ್ ಐನ್‍ಸ್ಟೀನ್‍ರಿಗೂ ಕುತೂಹಲ ಇತ್ತು. ಜರ್ಮನಿಯ ತತ್ವಜ್ಞಾನಿ ಎರಿಕ್ ಗಟ್‍ಕೈಂಡ್‍ಗೆ 1954ರಲ್ಲಿ ಅವರು ಬರೆದಿದ್ದ ಒಂದೂವರೆ ಪುಟದ ಪತ್ರವನ್ನು ಕಳೆದವಾರ ಏಲಂಗೆ ಇಡಲಾಗಿತ್ತು. ಆ ಒಂದು ಪತ್ರ ಸುಮಾರು 3 ಬಿಲಿಯನ್ ಡಾಲರ್ ಗೆ ಮಾರಾಟವಾಗಬಹುದೆಂಬ ಅಂದಾಜನ್ನು ಮಾಡಲಾಗಿದೆ. ಐನ್‍ಸ್ಟೀನ್‍ರಿಗೆ ದೇವನ ಮೇಲೆ ಭಾರೀ ಭರವಸೆಯೇನೂ ಇದ್ದಿರಲಿಲ್ಲ. ದೇವ ಎಂಬುದು ಮಾನವರ ದೌರ್ಬಲ್ಯ ಎಂಬ ರೀತಿಯಲ್ಲಿ ಅವರು ವ್ಯಾಖ್ಯಾನಿಸಿದ್ದರು. ಅದೇವೇಳೆ, ತಾನು ಗುರುತಿಸಿಕೊಂಡಿರುವ ಯಹೂದಿ ಧರ್ಮದ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಲೂ ಇದ್ದರು. ಎರಿಕ್ ಗಟ್‍ಕೈಂಡ್‍ರ Choose life: The biblical call to revolt ಎಂಬ ಕೃತಿಯನ್ನು ಓದಿ, ಆ ಬಳಿಕ ಬರೆದ ಈ ಒಂದೂವರೆ ಪುಟದ ಪತ್ರದಲ್ಲಿ ‘The word God is for me nothing but the expression of and product of human weaknesses’ ಎಂದು ಅವರು ಹೇಳಿದ್ದರು.
    ದೇವಾಸ್ತಿತ್ವದ ಕುರಿತಂತೆ ಐನ್‍ಸ್ಟೀನ್‍ನ ನಿಲುವನ್ನು ಎಷ್ಟು ಮಂದಿ ಒಪ್ಪುತ್ತಾರೋ ಇಲ್ಲವೋ, ಆದರೆ ಈ ಜಗತ್ತಿನ ಜನಸಂಖ್ಯೆಯನ್ನು ಆಸ್ತಿಕರು ಮತ್ತು ನಾಸ್ತಿಕರು ಎಂದು ವಿಭಜಿಸಿದರೆ ಆಸ್ತಿಕರ ಸಂಖ್ಯೆಯೇ ಹೆಚ್ಚಿದ್ದೀತು. ದೇವನನ್ನು ನಿರಾಕರಿಸುವವರಲ್ಲಿ ಈ ಜಗತ್ತಿನ ಹುಟ್ಟಿನ ಬಗ್ಗೆ ಇವತ್ತಿಗೂ ಪ್ರಬಲವಾದ ವಾದಗಳಿಲ್ಲ. ಮಾನವ ಸಂತತಿಯ ಪ್ರಾರಂಭವನ್ನು ನಿಖರವಾಗಿ ಹೇಳಿ ಬಿಡುವುದಕ್ಕೆ ಬೇಕಾದ ದಾಖಲೆಗಳಿಲ್ಲ. ಮಾನವ ವಿಕಾಸವಾದದ ತಳಿ ಎಂದು ಹೇಳಿದರೆ ಮತ್ತು ಆತ ಮೊದಲು ಮಂಗನಾಗಿದ್ದ ಎಂದು ವಾದಿಸಿದರೆ ಆ ವಾದವನ್ನು ಅಲುಗಾಡಿಸುವ ಪ್ರತಿ ಪ್ರಶ್ನೆಗಳೂ ಅಷ್ಟೇ ಪ್ರಬಲವಾಗಿ ಎದುರ್ಗೊಳ್ಳುತ್ತವೆ. ಈ ಜಗತ್ತಿನಲ್ಲಿ ಮನುಷ್ಯ ಜೀವಿ ಮಾತ್ರ ಇರುವುದಲ್ಲ. ಅಸಂಖ್ಯ ವಿಧದ ಕೀಟಗಳಿವೆ. ನದಿ ತೊರೆಗಳಿವೆ. ಸಮುದ್ರಗಳಿವೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹೇಳಿ ಮುಗಿಸಲಾಗದಷ್ಟು ಈ ಜಗತ್ತಿನಲ್ಲಿ ಜೀವ ವೈವಿಧ್ಯ ಮತ್ತು ಸೃಷ್ಟಿ ವೈಶಿಷ್ಟ್ಯಗಳಿವೆ. ಇವೆಲ್ಲವೂ ಓರ್ವ ಎಂಜಿನಿಯರ್‍ ನ  ನಿಯಂತ್ರಣದಲ್ಲಿರುವಂತೆ ಯಾಕೆ ವರ್ತಿಸುತ್ತಿವೆ ಎಂಬ ಪ್ರಶ್ನೆಯನ್ನು ಆಸ್ತಿಕರು ಕೇಳುತ್ತಲೇ ಇದ್ದಾರೆ. ಬಿಗ್‍ಬ್ಯಾಂಗ್ ಥಿಯರಿಯಲ್ಲೂ ಇಂಥದ್ದೊಂದು ಪ್ರಶ್ನೆಯನ್ನು ಎತ್ತಲಾಗಿತ್ತು. ಈ ಜಗತ್ತನ್ನು ನಿಯಂತ್ರಿಸುವ ಒಂದು ಅದ್ವಿತೀಯ ಶಕ್ತಿ ಇದೆ ಎಂಬ ರೀತಿಯಲ್ಲಿ ಹೇಳಿಕೆಯನ್ನು ನೀಡಲಾಗಿತ್ತು. ಆದ್ದರಿಂದಲೇ,
      ವಿಜ್ಞಾನಿಗಳೆಲ್ಲರೂ ನಾಸ್ತಿಕರಾಗದೇ ಇದ್ದಿರುವುದು. ಹೆಚ್ಚಿನ ವಿಜ್ಞಾನಿಗಳು ದೇವ ಎಂಬ ಅಜ್ಞಾತ ಶಕ್ತಿಯ ಮೇಲೆ ವಿಶ್ವಾಸವನ್ನು ತಾಳಿದವರೇ ಆಗಿದ್ದಾರೆ. ಇಲ್ಲಿರುವ ಸಮಸ್ಯೆ ಏನೆಂದರೆ, ದೇವನನ್ನು ಹೇಗೆ ಪರಿಭಾವಿಸಬೇಕು ಎಂಬುದರಲ್ಲಿ. ದೇಶದಲ್ಲಿ 120 ಕೋಟಿಗಿಂತಲೂ ಅಧಿಕ ಜನರಿದ್ದಾರೆ. ಇವರಲ್ಲಿ ಬಹುಸಂಖ್ಯಾತ ಮಂದಿ ದೇವನನ್ನು ನಿರಾಕಾರವೆಂದು ಭಾವಿಸುತ್ತಿಲ್ಲ. ಮಾತ್ರವಲ್ಲ, ದೇವನನ್ನು ಪರಿಭಾವಿಸುವಲ್ಲಿ ಈ ಗುಂಪು ಎಷ್ಟು ವಿಭಜಿಸಿ ಬಿಟ್ಟಿವೆಯೆಂದರೆ ನೂರಾರು ರೂಪದಲ್ಲಿ ದೇವನನ್ನು ಇವರೆಲ್ಲ ಕಲ್ಪಿಸಿಕೊಂಡಿದ್ದಾರೆ. ಯಾರು ಹೇಗೆಲ್ಲ ಕಲ್ಪಿಸಿಕೊಂಡಿz್ದÁರೋ ಅದಕ್ಕೆ ತಕ್ಕಂತೆ ಆ ದೇವನಿಗೆ ರೂಪವನ್ನೂ ಕೊಟ್ಟಿದ್ದಾರೆ. ಒಂದು ಕಡೆ ದೇವನೊಬ್ಬನೇ ಎನ್ನುವ ಜನರಿದ್ದರೆ, ಇನ್ನೊಂದು ಕಡೆ ಅದೇ ದೇವನಿಗೆ ಅನೇಕ ರೂಪಗಳನ್ನು ಕೊಟ್ಟು ಆರಾಧಿಸುವ ಕ್ರಮವೂ ಇಲ್ಲಿದೆ. ಪವಿತ್ರ ಕುರ್‍ಆನ್ ದೇವನನ್ನು ಪರಿಚಯಿಸಿರುವುದು ಹೀಗೆ;
      ದೇವನು ಏಕೈಕನು. ಆತ ಯಾರ ಅವಲಂಬಿತನೂ ಅಲ್ಲ. ಆದರೆ ಎಲ್ಲರೂ ಆತನ ಅವಲಂಬಿತರು. ದೇವನಿಗೆ ಯಾವುದೇ ಸಂತಾನವಿಲ್ಲ. ಅವನು ಯಾರ ಸಂತಾನವೂ ಅಲ್ಲ. ಅವನಿಗೆ ಸಮಾನರು ಯಾರೂ ಇಲ್ಲ. (ಅಧ್ಯಾಯ 112, ವಚನ 1-4)
     ದೇವ ನಿಜಕ್ಕೂ ಹೇಗಿರಬೇಕು, ಆತ ಹೇಗೆ ಪೂಜೆಗೊಳ್ಳಬೇಕು, ಆತನ ಸಂದೇಶ ಏನು, ಮನುಷ್ಯರನ್ನು ಆತ ಸೃಷ್ಟಿಸಿರುವುದು ನಿಜವೇ ಎಂದಾದರೆ, ಯಾಕೆ ಸೃಷ್ಟಿಸಿದ್ದಾನೆ, ಬರಿದೇ ಸೃಷ್ಟಿಸಿ ಜಗಳಾಡಿಸುವುದು ಆತನ ಉದ್ದೇಶವೇ? ಅಲ್ಲ ಎಂದಾದರೆ, ಆ ಉದ್ದೇಶ ಏನು? ಆತ ಏನನ್ನು ಜನರಿಂದ ಬಯಸುತ್ತಿದ್ದಾನೆ ಇತ್ಯಾದಿಗಳು ಖಂಡಿತ ಉದ್ಧಟತನ ಪ್ರಶ್ನೆಗಳಾಗಲಾರದು. ಈ ಜಗತ್ತು ತನ್ನಿಂತಾನೇ ಸೃಷ್ಟಿಯಾಗಿದೆ ಮತ್ತು ಇದಕ್ಕೆ ಸೃಷ್ಟಿಕರ್ತನೋರ್ವನಿಲ್ಲ ಎಂಬ ವಾದವನ್ನು ಒಪ್ಪದವರೇ ಈ ಜಗತ್ತಿನಲ್ಲಿ ಅಧಿಕ ಇರುವಾಗ ಇವರೆಲ್ಲ ಇಂಥದ್ದೊಂದು ಪ್ರಶ್ನೆಯನ್ನು ತಮ್ಮೊಳಗೆ ಕೇಳಿಕೊಳ್ಳಬೇಕು. ನಾವೇಕೆ ಬದುಕುತ್ತಿದ್ದೇವೆ ಮತ್ತು ತಿಂದುಂಡು ಕೊನೆಗೊಂದು ದಿನ ಸಾಯುವುದೇ ತಮ್ಮ ಬದುಕಿನ ಉದ್ದೇಶವೇ ಎಂದೊಮ್ಮೆ ಪ್ರಶ್ನಿಸಿಕೊಳ್ಳಬೇಕು. ಇಂಥದ್ದೊಂದು ಬದುಕಿಗಾಗಿ ದೇವನು ನಮ್ಮನ್ನು ಸೃಷ್ಟಿಸಬೇಕಿತ್ತೇ?
    ಹುಟ್ಟಿದ ತಪ್ಪಿಗೆ ಬದುಕುವ ಮತ್ತು ಬದುಕಿದ ತಪ್ಪಿಗೆ ಸಾಯುವ ಪ್ರಕ್ರಿಯೆಯೊಂದು ಪ್ರಾಣಿವರ್ಗದಲ್ಲಿದೆ. ಅವು ಹುಟ್ಟುತ್ತವೆ, ಬದುಕುತ್ತವೆ ಮತ್ತು ಒಂದು ದಿನ ಸಾಯುತ್ತವೆ. ಅವುಗಳ ಮಿತಿ ಅದು. ಆದರೆ ಮನುಷ್ಯನೂ ಹಾಗೆಯೇ? ಪ್ರಾಣಿ ವರ್ಗವನ್ನು ಮೀರಿದ ಮತ್ತು ಅವುಗಳನ್ನು ತನಗೆ ಬೇಕಾದಂತೆ ಪಳಗಿಸುವ ಸಾಮಥ್ರ್ಯವನ್ನು ಪಡೆದಿರುವ ಆತನ ಬದುಕೂ ಅದರಂತೆಯೇ ಆಗಬೇಕೇ? ಓರ್ವ ವ್ಯಕ್ತಿ ಇನ್ನೋರ್ವ ವ್ಯಕ್ತಿಯ ಜೊತೆ ಯಾವ ಬಗೆಯ ಸಂಬಂಧವನ್ನು ಬೆಳೆಸಬೇಕು? ಹೇಗೆ ವರ್ತಿಸಬೇಕು? ನೆರೆಕರೆಯಲ್ಲಿ ವಾಸಿಸುವವರ ದಿನಚರಿಗಳು ಹೇಗಿರಬೇಕು? ನಿಜಕ್ಕೂ ದೇವನು ಹೇಗಿರಬೇಕು ಮತ್ತು ನಾವು ಪೂಜಿಸುವ ದೇವನು ಹೇಗಿದ್ದಾನೆ? ನಾವು ದೇವನನ್ನು ಗ್ರಹಿಸಿಕೊಂಡದ್ದು ಯಾವ ಮೂಲದಿಂದ? ನನ್ನ ಗ್ರಹಿಕೆ ಸರಿಯೇ? ಇತ್ಯಾದಿ ಪ್ರಶ್ನೆಗಳು ಮಾನವರಲ್ಲಿ ಮೂಡಬೇಕಾಗಿರುವುದು ಪ್ರಕೃತಿ ಸಹಜ ಬೇಡಿಕೆ.
   ನಮ್ಮೆದುರೇ ಮಂಗಗಳ ಹುಟ್ಟು, ಬೆಳವಣಿಗೆ, ಸಾವು ಸಂಭವಿಸುತ್ತಿರುತ್ತವೆ. ಮಂಗಚೇಷ್ಟೆಯ ನೂರಾರು ವರದಿಗಳನ್ನು ಪತ್ರಿಕೆ, ಟಿ.ವಿ. ಮಾಧ್ಯಮಗಳಲ್ಲಿ ನಾವು ಓದಿ ಆನಂದಿಸುತ್ತಲೂ ಇರುತ್ತೇವೆ. ಮಂಗನಿಂದ ಮಾನವ ಅನ್ನುವ ವಾದವನ್ನು ಮತ್ತೆ ಮತ್ತೆ ನಮ್ಮೊಳಗೆ ಕೆದಕಿ ಕೆದಕಿ ಜಿಜ್ಞಾಸೆಗೆ ಒಡ್ಡುವ ಮತ್ತು ಆ ವಾದಕ್ಕೆ ಪ್ರತಿ ವಾದವನ್ನು ಹುಟ್ಟು ಹಾಕುವುದಕ್ಕೆ ಪ್ರೇರಣೆ ಕೊಡುವ ಪ್ರಕೃತಿ ವೈಚಿತ್ರ್ಯಗಳಿವು. ನಿಜವಾಗಿ, ಮನುಷ್ಯ ಮಂಗನಿಂದಲ್ಲ ಮತ್ತು ಮನುಷ್ಯನ ಹುಟ್ಟಿನ ಹಿಂದೆ ಉದ್ದೇಶ ಮತ್ತು ಕಾರಣಗಳಿವೆ ಎಂಬುದು ನಮ್ಮ ವಾದವೆಂದಾದರೆ ಆ ಉದ್ದೇಶ ಮತ್ತು ಗುರಿಗಳನ್ನೊಮ್ಮೆ ಹುಡುಕುವ ಪ್ರಯತ್ನವನ್ನು ನಾವು ಮಾಡಬೇಕು. ಬದುಕು-ಸಾವು ಮತ್ತು ಸಾವಿನಾಚೆಯ ಬದುಕಿನ ಕುರಿತಾಗಿ ನಮ್ಮನ್ನು ನಾವು ಚಿಂತನೆಗೆ ಹಚ್ಚಿಕೊಳ್ಳಬೇಕು. ಇಂಥ ಚಿಂತನೆಗೆ ದೇವನು ಸಿಕ್ಕಾನು ಮತ್ತು ಆತನೇ ನಿಜವಾದ ದೇವ.
ಐನ್‍ಸ್ಟೀನ್ ಈ ಬಗೆಯ ಹುಡುಕಾಟ ನಡೆಸಿಲ್ಲವೇನೋ.

Wednesday, 28 November 2018

ಸೌದಿ ಸಂತ್ರಸ್ತರು: ರಾಜ್ಯ ಸರಕಾರ ತೂಗುಹಾಕಬೇಕಾದ ಬೋರ್ಡು


    
    ವಿದೇಶಿಯರ ಪಾಲಿಗೆ ಚಿನ್ನದ ಮೊಟ್ಟೆಯಾಗಿದ್ದ ಸೌದಿ ಅರೇಬಿಯಾವು ಇದೀಗ ಆ ಮೊಟ್ಟೆಯನ್ನೆಲ್ಲ ತಾನೇ ಕಸಿದುಕೊಳ್ಳುವ ಧಾವಂತದಲ್ಲಿದೆ. ಈ ಕಸಿಯುವಿಕೆಯ ಪ್ರಕ್ರಿಯೆಗೆ ಸಿಲುಕಿ ಕನ್ನಡಿಗರು ನಜ್ಜುಗುಜ್ಜಾಗುತ್ತಿದ್ದಾರೆ. ತಮ್ಮ ಬದುಕಿನ ದೊಡ್ಡದೊಂದು ಪ್ರಾಯವನ್ನು ಸೌದಿಯಲ್ಲಿ ದುಡಿದು ಕಳೆದ ಕನ್ನಡಿಗರು ಇದೀಗ ಮುಂದೇನು ಎಂಬ ಆತಂಕದಲ್ಲಿದ್ದಾರೆ. ಈ ಆತಂಕಕ್ಕೆ ಇರುವ ಪ್ರಮುಖ ಕಾರಣ ಏನೆಂದರೆ, ಸೌದಿ ಅರೇಬಿಯಾ ಆರಂಭಿಸಿರುವ ಸೌದೀಕರಣ ಯೋಜನೆ.

     ಸೌದಿ ಬದಲಾಗುತ್ತಿದೆ. ತೈಲದ ಮೇಲಿನ ಅತಿ ಅವಲಂಬನೆಯನ್ನು ಕೈಬಿಟ್ಟು ಅದು ಆದಾಯದ ಇತರ ಮೂಲಗಳನ್ನು ಹುಡುಕುವ ಉಮೇದಿನಲ್ಲಿದೆ. ಅದರ ಭಾಗವಾಗಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ, ವಲಸಿಗರಿಗೆ ಅಧಿಕ ಕರ ವಿಧಿಸುವ ಮತ್ತು ‘ಸೌದಿ ಪ್ರಥಮ’ ಎಂಬ ಕಟು ಕಾಯ್ದೆಯನ್ನು ನಿಷ್ಠುರವಾಗಿ ಜಾರಿಗೊಳಿಸುವುದಕ್ಕೆ ಹೊರಟಿದೆ. ಇದರ ನೇರ ಪರಿಣಾಮವನ್ನು ಎದುರಿಸಬೇಕಾಗಿರುವುದು ವಲಸಿಗರು. ಸೌದಿಯಲ್ಲಿ ಸುಮಾರು 5 ಲಕ್ಷದಷ್ಟು ಕನ್ನಡಿಗರಿದ್ದಾರೆ ಎಂದು ಹೇಳಲಾಗುತ್ತದೆ. ಸೌದೀಕರಣದ ಬಹುದೊಡ್ಡ ಆಘಾತವನ್ನು ಅನುಭವಿಸಿದವರು ಮತ್ತು ಅನುಭವಿಸಬೇಕಾದವರು ಇವರೇ. ಸೌದೀಕರಣ ಎಂಬ ಕಾಯ್ದೆಯ ಪ್ರಕಾರ- ಎಲ್ಲ ಅಂಗಡಿ-ಮಳಿಗೆಗಳಲ್ಲಿ ಸೌದಿ ಪ್ರಜೆಗಳನ್ನು ಕಡ್ಡಾಯವಾಗಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಅದರ ಪ್ರಮಾಣ ಎಷ್ಟೆಂದರೆ ಶೇ. 70! ಒಂದು ಅಂಗಡಿಯಲ್ಲಿ 10 ಮಂದಿ ಕೆಲಸಗಾರರಿದ್ದರೆ ಅವರಲ್ಲಿ 7 ಮಂದಿಯೂ ಸೌದಿ ಪ್ರಜೆಗಳಾಗಿರಬೇಕು. ಹಾಗಂತ, ಅವರಲ್ಲಿ ಕೌಶಲ್ಯ ಎಷ್ಟಿದೆ, ಕೆಲಸ ಮಾಡುವ ಕ್ಷಮತೆ ಏನು ಅನ್ನುವುದನ್ನು ಪ್ರಶ್ನಿಸಿ ಕೆಲಸ ನಿರಾಕರಿಸುವ ಹಾಗಿಲ್ಲ. ನ್ಯಾಯಾಲಯದ ಕದ ತಟ್ಟಿ ಈ ಕಾಯ್ದೆಯನ್ನು ಬದಲಿಸಿಕೊಳ್ಳುವ ಭರವಸೆಯೂ ಇಲ್ಲ.

     ಈಗಾಗಲೇ ಎರಡು ಹಂತದ ಸೌದೀಕರಣ ಪ್ರಕ್ರಿಯೆ ಮುಗಿದಿದೆ. 2018 ಸೆ. 11ರೊಳಗೆ ಮುಗಿದಿರುವ ಪ್ರಥಮ ಸೌದೀಕರಣ ಪ್ರಕ್ರಿಯೆಯಲ್ಲಿ- ವಾಹನಗಳು, ಶೋರೂಂ, ಅಟೋಮೊಬೈಲ್, ಸಿದ್ಧ ಉಡುಪು, ಪೀಠೋಪಕರಣಗಳು, ಮನೆಬಳಕೆ ವಸ್ತು ಇತ್ಯಾದಿ ಮಳಿಗೆಗಳು ಸೌದಿಗಳ ಪಾಲಾಗಿವೆ. ಇಲ್ಲೆಲ್ಲಾ ಶೇ. 70ರಷ್ಟು ಸೌದಿಗಳನ್ನು ಕೆಲಸಗಾರರಾಗಿ ನೇಮಿಸಿಕೊಳ್ಳಲಾಗಿದೆ. ನವೆಂಬರ್ 9ರೊಳಗೆ ಮುಗಿದ ಎರಡನೇ ಸೌದೀಕರಣದಲ್ಲಿ- ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ಸ್, ವಾಚ್ ಅಂಗಡಿ, ಕನ್ನಡಕ, ಔಷಧ ಅಂಗಡಿಗಳು ಸೌದಿಗಳ ವಶವಾಗಿವೆ. ಇಲ್ಲೆಲ್ಲಾ  ಶೇ. 70ರಷ್ಟು ಸೌದಿಗಳನ್ನು ತುಂಬಿಸುವಲ್ಲಿ ಸೌದಿ ಆಡಳಿತವು ಯಶಸ್ವಿಯಾಗಿದೆ. ಇನ್ನೀಗ ಮೂರನೇ ಹಂತದ ಸೌದೀಕರಣ ಪ್ರಕ್ರಿಯೆಯಲ್ಲಿ ಸೌದಿ ತೊಡಗಿಸಿಕೊಂಡಿದೆ. 2019 ಜನವರಿ 7ರೊಳಗೆ ಮುಗಿಯಬೇಕಾದ ಈ ಪ್ರಕ್ರಿಯೆಯಲ್ಲಿ- ಕಟ್ಟಡ ಕಾಮಗಾರಿ ವಸ್ತುಗಳ ಮಾರಾಟ, ವಾಹನಗಳ ಬಿಡಿ ಭಾಗಗಳ ಮಾರಾಟ ಮಳಿಗೆ, ಚಾಕಲೇಟ್ ಅಂಗಡಿಗಳು ಇತ್ಯಾದಿಗಳು ಸೇರಿವೆ. ಈ ಕ್ರಮವೂ ಕೊನೆಗೊಂಡ ಬಳಿಕ ಸೌದಿಯಲ್ಲಿ ವಿದೇಶಿಯರ ಸಂಖ್ಯೆ ದೊಡ್ಡಮಟ್ಟದಲ್ಲಿ ಕಡಿಮೆಯಾಗುತ್ತದೆ. ಹೀಗೆ ಕಡಿಮೆಯಾಗುವುದೆಂದರೆ,

     ಅವರೆಲ್ಲ ಅವರವರ ರಾಷ್ಟ್ರಕ್ಕೆ ಮರಳುವುದು ಎಂದರ್ಥ. ಈಗಾಗಲೇ ಹೀಗೆ ಮರಳಿದವರಲ್ಲಿ ಕನ್ನಡಿಗರು ಬಹುಸಂಖ್ಯೆಯಲ್ಲಿದ್ದಾರೆ. ಇನ್ನು ಮರಳಲು ಸಿದ್ಧವಾಗಿರುವ ಗುಂಪಂತೂ ಇದಕ್ಕಿಂತಲೂ ದೊಡ್ಡದಿದೆ. ಇವರು ನುಸುಳುಕೋರರಲ್ಲ. ವಂಚಕರೂ ಅಲ್ಲ. ವಿದೇಶಿ ನೆಲದಲ್ಲಿ ದೀರ್ಘ ಕಾಲದಿಂದ ಬೆವರು ಸುರಿಸಿ ನಮ್ಮ ರಾಜ್ಯಕ್ಕೆ ದೊಡ್ಡಮಟ್ಟದ ವಿದೇಶಿ ವಿನಿಮಯ ಆದಾಯವನ್ನು ದೊರಕಿಸಿಕೊಟ್ಟವರು. ಕರಾವಳಿ ಕರ್ನಾಟಕವೂ ಸೇರಿದಂತೆ ರಾಜ್ಯದ ಅಭಿವೃದ್ಧಿಯಲ್ಲಿ ಇವರ ಪಾತ್ರ ಬಹಳ ದೊಡ್ಡದಿದೆ. ನಿಜವಾಗಿ,
 
       ಸೌದಿಗೆ ತೆರಳಿ ಇವರು ರಾಜ್ಯ ಸರಕಾರದ ಪಾಲಿಗೆ ಎರಡು ರೀತಿಯಲ್ಲಿ ಪ್ರಯೋಜನಕ್ಕೆ ಬಂದರು. ಒಂದು- ಉದ್ಯೋಗ ಕೊಡಿಸುವ ಹೊಣೆಯಿಂದ ರಾಜ್ಯ ಸರಕಾರವನ್ನು ಇವರು ಪಾರುಗೊಳಿಸಿದರು ಮತ್ತು ಎರಡನೆಯದಾಗಿ- ರಾಜ್ಯ ಸರಕಾರಕ್ಕೆ ಆದಾಯ ಮೂಲವಾದರು. ಇದೀಗ ಅವರು ಸಂಕಷ್ಟಕ್ಕೆ ಈಡಾಗಿದ್ದಾರೆ. ಹಾಗಂತ, ಇವರು ಬರೇ ನಮ್ಮ ರಾಜ್ಯದ ಸಮಸ್ಯೆ ಮಾತ್ರ ಅಲ್ಲ. ಕೇರಳವಂತೂ ಸೌದಿಯಿಂದ ಮರಳಿದವರ ದೊಡ್ಡ ದಂಡನ್ನೇ ನಿಭಾಯಿಸಬೇಕಾದ ಸ್ಥಿತಿಯಲ್ಲಿದೆ. ಈಗಾಗಲೇ ಅದು ‘ಅನಿವಾಸಿ ಭಾರತೀಯ ಸಮಿತಿ’ ಎಂಬ ಹೆಸರಿನಲ್ಲಿ ಸಮಿತಿಯೊಂದನ್ನು ರಚಿಸಿದೆ. ಮಂಗಳೂರು ದಕ್ಷಿಣ ವಿಭಾಗದ ಶಾಸಕರಾಗಿದ್ದ ಜೆ.ಆರ್. ಲೋಬೋ ಅವರು ಇದೇ ಮಾದರಿಯ ಸಮಿತಿಯೊಂದನ್ನು ರಚಿಸುವ ಬಗ್ಗೆ 2017ರಲ್ಲಿ ರಾಜ್ಯ ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು ಎಂದು ಹೇಳಲಾಗುತ್ತದೆ. ಆದರೆ ಆ ವರದಿ ಯಾವ ಕಪಾಟಿನಲ್ಲಿದೆ ಅನ್ನುವುದು ಆ ವರದಿಯನ್ನು ಸ್ವೀಕರಿಸಿದವರಿಗೆ ಗೊತ್ತಿದೆಯೋ ಇಲ್ಲವೋ ಎಂದು ಅನುಮಾನ ಪಡುವ ಸ್ಥಿತಿ ಈಗಿನದು.

     ಸೌದಿಯಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ಎಷ್ಟು ಮಂದಿ ಇದ್ದಾರೆ ಮತ್ತು ಅವರ ಸ್ಥಿತಿ-ಗತಿಗಳು ಏನೇನು ಅನ್ನುವ ಬಗ್ಗೆ ವರದಿಯೊಂದನ್ನು ತಯಾರಿಸುವ ಹೊಣೆಗಾರಿಕೆ ರಾಜ್ಯ ಸರಕಾರದ ಮೇಲಿದ್ದರೂ ಅದು ಈವರೆಗೂ ನಡೆದಿಲ್ಲ. ಸೌದಿಯಿಂದ ಹಿಂತಿರುಗುತ್ತಿರುವವರನ್ನು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣೆ ಕೇಂದ್ರವೊಂದನ್ನು ತೆರೆದು ಮರಳಿದವರನ್ನು ಪ್ರೀತಿಸುವುದು ಮತ್ತು ಅವರಲ್ಲಿ ಭರವಸೆ ತುಂಬುವುದು ಅತೀ ಜರೂರಾಗಿತ್ತು. ಮರಳುವವರೇನೂ ಖುಷಿಯಿಂದ ಮರಳುತ್ತಿಲ್ಲವಲ್ಲ. ಅವರಲ್ಲೊಂದು ಆತಂಕವಿದೆ. ಮುಂದೇನು ಅನ್ನುವ ಅಳುಕು ಇದೆ. ಈ ಅಳುಕು ಮತ್ತು ಆತಂಕವನ್ನು ಕಡಿಮೆಗೊಳಿಸುವಲ್ಲಿ ನೋಂದಣಿ ಪ್ರಕ್ರಿಯೆ ಮಹತ್ವದ ಪಾತ್ರ ವಹಿಸಬಹುದು. ಇನ್ನು, ಹೀಗೆ ಮರಳಿದವರಿಗೆ ಸಾಲ ಕೊಡುವ ಸ್ವಾಗತಾರ್ಹ ಯೋಜನೆಯನ್ನು ರಾಜ್ಯ ಸರಕಾರ ಕೈಗೊಂಡಿದ್ದರೂ ಇದು ಸಾಲಮನ್ನ ಯೋಜನೆಯ ಅಡ್ಡಪರಿಣಾಮಕ್ಕೆ ತುತ್ತಾಗಲಿದೆಯೇ ಅನ್ನುವ ಆತಂಕ ಇದೆ. ಒಂದು ಕಡೆ,

      2018 ಜೂನ್‍ನಿಂದ ಸೆಪ್ಟೆಂಬರ್ 21ರ ವರೆಗೆ ಆನ್‍ಲೈನ್‍ನಲ್ಲಿ ಹೀಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಈ ಸೌದೀಕರಣ ಸಂತ್ರಸ್ತರ ಸಂಖ್ಯೆಯೇ 47 ಸಾವಿರ. ಜೂನ್‍ನಿಂದ ಸೆಪ್ಟೆಂಬರ್ ವರೆಗಿನ ಈ ನಾಲ್ಕು ತಿಂಗಳ ಅವಧಿಯಲ್ಲಿ ಸಲ್ಲಿಸಲಾದ ಅರ್ಜಿಗಳ ಈ ಬೃಹತ್ ಸಂಖ್ಯೆಯೇ ಸಮಸ್ಯೆಯ ಆಳವನ್ನು ಹೇಳುತ್ತದೆ. ಮುಂದಿನ ದಿನಗಳಲ್ಲಿ ಇಂಥ ಅರ್ಜಿಗಳ ಸಂಖ್ಯೆ ಲಕ್ಷವನ್ನು ದಾಟಬಹುದು. ಹೀಗೆ ಅರ್ಜಿ ಸಲ್ಲಿಸಿದವರಲ್ಲಿ ಮುಸ್ಲಿಮರು, ಕೈಸ್ತರು, ಜೈನರು ಎಲ್ಲರೂ ಇದ್ದಾರೆ. ಆದರೆ, ಹರಿದು ಬರುತ್ತಿರುವ ಅರ್ಜಿಗಳನ್ನು ನಿಭಾಯಿಸುವಷ್ಟು ಮೊತ್ತವನ್ನು ರಾಜ್ಯ ಸರಕಾರ ನಿಗಮಕ್ಕೆ ಒದಗಿಸಲು ಸಿದ್ಧವಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಯಾಕೆಂದರೆ, ಸಾಲ ಮನ್ನಾದ ಮೊತ್ತವನ್ನು ತುಂಬಿಸುವುದಕ್ಕಾಗಿ ಇತರೆಲ್ಲ ನಿಗಮ-ಮಂಡಳಿಗಳಿಗೆ ನೀಡುವ ಮೊತ್ತದಲ್ಲಿ ಸರಕಾರ ಈಗಾಗಲೇ ಕಡಿತ ಮಾಡಿದೆ. ಕಳೆದ ವರ್ಷ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 45 ಕೋಟಿ ರೂಪಾಯಿಯನ್ನು ಕೊಟ್ಟಿದ್ದ ಸರಕಾರವು ಈ ವರ್ಷ ಬರೇ 13 ಕೋಟಿ ರೂಪಾಯಿಯಷ್ಟೇ ಒದಗಿಸಿದೆ. ಇದೊಂದು ಉದಾಹರಣೆ ಅಷ್ಟೇ. ಸೌದಿಯಿಂದ ಹಿಂತಿರುಗಿದವರಿಗೆಂದು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮವು ತಯಾರಿಸಿರುವ ಸ್ವಯಂ ಉದ್ಯೋಗ ಯೋಜನೆ, ಕಿರುಸಾಲ ಮತ್ತು ಶ್ರಮಶಕ್ತಿ ಯೋಜನೆಗಳು ಜಾರಿಯಾಗಬೇಕಾದರೆ ನಿಗಮದಲ್ಲಿ ಹಣ ಇರಬೇಕಾಗುತ್ತದೆ. ಹಾಗಂತ, ನಿಗಮದಲ್ಲಿ ಹಣ ತಾನೇ ತಾನಾಗಿ ತುಂಬುವುದಿಲ್ಲವಲ್ಲ. ಅದನ್ನು ತುಂಬಿಸಬೇಕಾದುದು ಸರಕಾರ. ಈ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಬೇಕು.

      ಹರಿದು ಬರುತ್ತಿರುವ ಅರ್ಜಿಯನ್ನು ಎಣಿಸುತ್ತಾ ದಿನ ಕಳೆಯುವುದು ಸಮಸ್ಯೆಗೆ ಪರಿಹಾರ ಆಗುವುದಿಲ್ಲ. ಒಂದು ದೀರ್ಘ ಕಾಲ ಸರಕಾರದ ಆದಾಯ ಮೂಲವಾದವರು ಮತ್ತು ರಾಜ್ಯದ ಅಭಿವೃದ್ಧಿಯಲ್ಲಿ ಪಾತ್ರ ವಹಿಸಿದವರು ‘ಇನ್ನು ಸಾಧ್ಯವಿಲ್ಲ’ ಎಂದು ಹೊರಟು ನಿಂತವರನ್ನು ನಾವು ಅಭಿಮಾನದಿಂದ ಸ್ವೀಕರಿಸಬೇಕು. ‘ನಾವಿದ್ದೇವೆ’ ಎಂಬ ಭರವಸೆಯನ್ನು ತುಂಬಬೇಕು. ‘ನೀವು ನಮ್ಮನ್ನು ಪೊರೆದವರು’ ಎಂಬ ಅಭಿಮಾನವನ್ನು ಅವರಲ್ಲಿ ತುಂಬಿದರೆ ಅವರು ಎದುರಿಸಲಿರುವ ಸವಾಲಿನ ಅರ್ಧಭಾಗವನ್ನು ಕ್ರಮಿಸಿದಂತೆಯೇ. ಇದೀಗ ರಾಜ್ಯ ಸರಕಾರ ಈ ಹೊಣೆಗಾರಿಕೆಯಲ್ಲಿ ನಿಭಾಯಿಸಬೇಕಾಗಿದೆ. ‘ಮರಳುವ ಕನ್ನಡಿಗರಿಗೆ ಸ್ವಾಗತ’ ಎಂಬ ಬೋರ್ಡನ್ನು ಪ್ರತಿ ವಿಮಾನ ನಿಲ್ದಾಣಗಳಲ್ಲಿ ನಿಲ್ಲಿಸುವ ಧೈರ್ಯ ಮತ್ತು ಅವರಿಗೆ ಉದ್ಯೋಗ ದೊರಕಿಸಿ ಕೊಡುವ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕಾಗಿದೆ. ‘ನಾವು ಹೊರೆಯಲ್ಲ, ಸಂಪನ್ಮೂಲ’ ಎಂಬ ಭಾವನೆಯನ್ನೂ ಅವರಲ್ಲಿ ತುಂಬಬೇಕಾಗಿದೆ. ಬಡ್ಡಿರಹಿತವಾಗಿ ಸಾಲವನ್ನು ಒದಗಿಸಬೇಕಾಗಿದೆ.

   ಇದು ಅಸಾಧ್ಯವಲ್ಲ. ಬದ್ಧತೆ ಬೇಕಷ್ಟೇ.

Thursday, 25 October 2018

ರಾವಣನನ್ನು ಸುಡುವ ಮೊದಲು...



     ಅಮೃತಸರದಲ್ಲಿ ದಹನಕ್ರಿಯೆಯೊಂದು ನಡೆದಿದೆ. ದಹನಕ್ಕೆ ಒಳಗಾದವ ರಾವಣ. ಆದರೆ ಈ ದಹನ ಕ್ರಿಯೆಗೆ 60ರಷ್ಟು ಮಂದಿ ಪ್ರಾಣ ತೆತ್ತಿದ್ದಾರೆ. ರಾವಣನು ದಹನಕ್ಕೆ ಅರ್ಹನೋ ಅನ್ನುವ ಪ್ರಶ್ನೆ ವರ್ಷದಿಂದ ವರ್ಷಕ್ಕೆ ಬಲ ಪಡೆಯುತ್ತಿರುವ ಹೊತ್ತಿನಲ್ಲೇ ನಡೆದ ಈ ದಹನ ಮತ್ತು ದುರಂತವು ನಮ್ಮೊಳಗನ್ನು ತೀವ್ರವಾಗಿ ತಟ್ಟಬೇಕು ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ಗಂಭೀರ ಅವಲೋಕನವೊಂದಕ್ಕೆ ಇದು ಪ್ರೇರೇಪಿಸಬೇಕು. ಸದ್ಯ, ದುರಂತದ ಸುತ್ತ ಆರೋಪ-ಪ್ರತ್ಯಾರೋಪಗಳು ಚಾಲ್ತಿಯಲ್ಲಿವೆ. ಆರೋಪಿಗಳ ಪಟ್ಟಿಯಲ್ಲಿ ರೈಲು ಚಾಲಕನಿಂದ ಹಿಡಿದು ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟ ಪೊಲೀಸರು, ರೈಲ್ವೆ ಇಲಾಖೆ, ರಾಜ್ಯ ಸರಕಾರ, ರಾಜಕಾರಣಿಗಳು, ಕಾರ್ಯಕ್ರಮ ಆಯೋಜಕರು ಮುಂತಾದ ಅನೇಕರಿದ್ದಾರೆ. ಆದರೆ, ಇಂಥ ಬೀಸು ಆರೋಪಗಳಿಂದ ಏನನ್ನೂ ಸಾಧಿಸಲಾಗದು ಅನ್ನುವುದು ಆರೋಪ ಹೊತ್ತವರಿಗೂ ಗೊತ್ತು. ಆರೋಪಿಸುವವರಿಗೂ ಗೊತ್ತು. ಇನ್ನು, ಒಂದೆರಡು ವಾರಗಳೊಳಗೆ ಈ ಇಡೀ ಘಟನೆ ತಣ್ಣಗಾಗಿರುತ್ತದೆ. ದೇಶ ಮರೆಯುತ್ತದೆ. ಮಾಧ್ಯಮಗಳು ಮೀಟೂವನ್ನೋ ರಾಜಕಾರಣಿಗಳ ರಾಜಕೀಯವನ್ನೋ ಮುಖಪುಟದಲ್ಲಿಟ್ಟು ಆಟ ಆಡತೊಡಗಿರುತ್ತವೆ. ಕೊನೆಗೆ ಈ ದುರಂತವು ಸಂತ್ರಸ್ತರಲ್ಲಿ ಮತ್ತು ಅವರ ಕುಟುಂಬದವರಲ್ಲಿ ಮಾತ್ರ ನೆನಪಾಗಿ ಉಳಿದಿರುತ್ತದೆ. ನಿಜವಾಗಿ, ರಾವಣ ದಹನದ ಸಂದರ್ಭದಲ್ಲಾದ ದುರಂತಕ್ಕಿಂತ ದೊಡ್ಡ ದುರಂತ ಇದು.

      ಈ ದೇಶದಲ್ಲಿ ಪ್ರತಿದಿನವೆಂಬಂತೆ ಹಬ್ಬಗಳು ಅಥವಾ ಧಾರ್ಮಿಕ ಆಚರಣೆಗಳು ಆಚರಿಸಲ್ಪಡುತ್ತಿರುತ್ತವೆ. ಪಟ್ಟಣ, ಕೇರಿ, ಹಳ್ಳಿ, ತಾಲೂಕು, ಗ್ರಾಮ ಇತ್ಯಾದಿ ಯಾವುದೂ ಈ ಆಚರಣೆಯ ಗೌಜು-ಗದ್ದಲದಿಂದ ಮುಕ್ತವಲ್ಲ. ಕೆಲವು ಕಡೆ ಪಟಾಕಿ, ಕೆಲವು ಕಡೆ ದಹನ, ಕೆಲವು ಕಡೆ ಮೆರವಣಿಗೆ, ದೇಹ ದಂಡನೆ, ಅಪಾಯಕಾರಿ ಸ್ಪರ್ಧಾ ಕೂಟಗಳು.. ಹೀಗೆ ನೂರಾರು ರೀತಿಯಲ್ಲಿ ಆಚರಿಸಲ್ಪಡುತ್ತವೆ. ನಾವು ರೈಲನ್ನು ದೂರುವ ಮೊದಲು ನಮ್ಮ ನಡುವೆ ಚಾಲ್ತಿಯಲ್ಲಿರುವ ಈ ಆಚರಣಾ ವಿಧಾನಗಳನ್ನೊಮ್ಮೆ ಅವಲೋಕಿಸಿಕೊಂಡರೇನು? ಅಂದಹಾಗೆ,

      ದಹನಕ್ರಿಯೆ ಏಕೆ ಬೇಕು? ದೀಪಾವಳಿಯ ಸಮಯದಲ್ಲಿ ನಾವು ಸುಡುವ ಪಟಾಕಿಗಳು ಎಷ್ಟು ಸುರಕ್ಷಿತ, ಎಷ್ಟು ನಿರುಪದ್ರವಿ? ಮುಹರ್ರಂನ ವೇಳೆ ದೇಹ ದಂಡಿಸುವ ಆಚರಣೆಯೂ ನಮ್ಮ ನಡುವೆ ಇದೆ. ಇಂಥದ್ದು ಇನ್ನಷ್ಟು ಇರಲೂಬಹುದು. ಇವುಗಳ ಬಗ್ಗೆ ಆಯಾ ಧರ್ಮಗಳ ಒಳಗೆ ಜಾಗೃತಿ ಅಭಿಯಾನಗಳು ನಡೆದರೆ ಹೇಗೆ? ನಿಜವಾಗಿ, ದಹನ ಕ್ರಿಯೆ ಎಂಬುದೇ ನಕಾರಾತ್ಮಕವಾದುದು. ಸುಡುವುದು ಸಹಜ ಕ್ರಿಯೆ ಅಲ್ಲ. ‘ಸುಟ್ಟ ವಾಸನೆ’ ಎಂಬ ಪದ ಬಳಕೆ ನಮ್ಮ ನಡುವೆ ಇದೆ. ಸುಟ್ಟ ಸುವಾಸನೆ ಎಂದು ನಾವು ಕರೆಯುವುದಿಲ್ಲ. ಸುಡುವಿಕೆಯಿಂದ ಹೊರಬರುವುದು ಕೆಟ್ಟ ವಾಸನೆ ಅನ್ನುವ ಭಾವನೆ ಸಾರ್ವಜನಿಕವಾಗಿ ಇದೆ. ಹಾಗಂತ, ರಾವಣನ ಪ್ರತಿಕೃತಿಯಷ್ಟೇ ಇಲ್ಲಿ ದಹನವಾಗುವುದಲ್ಲ. ತಮಗಾಗದವರ ಪ್ರತಿಕೃತಿ ರಚಿಸಿ ದಹಿಸುವ ಕ್ರಮವೊಂದು ಚಾಲ್ತಿಯಲ್ಲಿದೆ. ರಾಜಕೀಯ ಪಕ್ಷವು ಇನ್ನೊಂದು ಪಕ್ಷದವರ ಪ್ರತಿಕೃತಿಯನ್ನು ದಹಿಸುತ್ತದೆ. ವಿದ್ಯಾರ್ಥಿಗಳು ಕಾಲೇಜಿನದ್ದೋ  ಪ್ರಾಂಶುಪಾಲರದ್ದೋ ಅಥವಾ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಚಿವರು ಅಥವಾ ಅಧಿಕಾರಿಗಳದ್ದೋ ಪ್ರತಿಕೃತಿಯನ್ನು ದಹಿಸುತ್ತಾರೆ. ಪೊಲೀಸರ ಪ್ರತಿಕೃತಿಯನ್ನು ದಹಿಸುವ ಪ್ರತಿಭಟನಾಕಾರರಿದ್ದಾರೆ. ಜನಪ್ರತಿನಿಧಿಗಳ ಪ್ರತಿಕೃತಿ, ಬಂಡವಾಳಶಾಹಿ ನೀತಿಯ ಪ್ರತಿಕೃತಿ, ಅತ್ಯಾಚಾರಿಗಳ ಪ್ರತಿಕೃತಿ.. ಹೀಗೆ ದಹನಗಳು ನಡೆಯುತ್ತಲೇ ಇರುತ್ತವೆ. ಅಷ್ಟಕ್ಕೂ,

       ಪ್ರತಿಭಟನೆಯ ಮಾದರಿಯಾಗಿ ದಹನಗಳೇ ಏಕೆ ಬೇಕು? ಸುಡುಮದ್ದು ಮತ್ತು ಪಟಾಕಿಗಳನ್ನು ಹೊರತುಪಡಿಸಿ ಹಬ್ಬಗಳನ್ನು ಆಚರಿಸಲು ಸಾಧ್ಯವಿಲ್ಲವೇ? ಅಮೃತ್‍ಸರದ ದುರಂತಕ್ಕೆ ಬಹುದೊಡ್ಡ ಕಾರಣವಾದುದು ರಾವಣನ ಪ್ರತಿಕೃತಿಯ ಒಳಗೆ ಸುಡುಮದ್ದುಗಳನ್ನು ತುಂಬಿಸಿಟ್ಟಿದುದು. ಪ್ರತಿಕೃತಿಗೆ ಬೆಂಕಿ ಕೊಟ್ಟಾಗ ಒಳಗಿದ್ದ ಸುಡುಮದ್ದು ಸ್ಫೋಟಿಸಿತು. ಸದ್ದಿನ ಭೀಕರತೆಗೆ ಜನ ದಿಕ್ಕಾಪಾಲಾದರು. ಹಾಗೆ ರೈಲ್ವೆ ಹಳಿಯ ಮೇಲೂ ಓಡಿದರು.

    ವರ್ಷಂಪ್ರತಿ ಪಟಾಕಿಯೂ ಇಂಥದ್ದೇ  ದುರಂತ ಸುದ್ದಿಯನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಪುಟ್ಟ ಪುಟ್ಟ ಮಕ್ಕಳು ಕಣ್ಣು ಕಳೆದುಕೊಳ್ಳುವ ದಾರುಣ ಸುದ್ದಿಯನ್ನು ನಾವು ಓದುತ್ತಲೂ ಇರುತ್ತೇವೆ. ಇದು ಇನ್ನೂ ಯಾಕೆ ಮುಂದುವರಿಯಬೇಕು? ಹಬ್ಬಗಳನ್ನು ಬೆಂಕಿರಹಿತವಾಗಿ ಮಾಡುವ ಬಗ್ಗೆ ಗಂಭೀರ ಚರ್ಚೆಗಳೇಕೆ ನಡೆಯುತ್ತಿಲ್ಲ?

      ರಾವಣ ಕೆಟ್ಟವನೋ ಒಳ್ಳೆಯವನೋ, ಅಸುರನೋ ರಾಜನೋ ಇತ್ಯಾದಿ ಚರ್ಚೆಗಳಾಚೆಗೆ ಕೆಟ್ಟವರನ್ನು ಸುಡುವುದರ ನೈತಿಕ ಸರಿ-ತಪ್ಪುಗಳ ಬಗ್ಗೆ ಧಾರ್ಮಿಕ ವಲಯಗಳಲ್ಲಿ ಚರ್ಚೆ ಆರಂಭವಾಗಬೇಕು. ಸುಡದೆಯೇ ಪ್ರತಿಭಟನೆ ನಡೆಸುವ, ಸುಡದೆಯೇ ಹಬ್ಬ ಆಚರಿಸುವ, ಬೆಂಕಿ ರಹಿತವಾಗಿಯೇ ಸಂತೋಷ ಕೂಟಗಳನ್ನು ಏರ್ಪಡಿಸುವ ಸಂದರ್ಭಗಳು ಹೆಚ್ಚೆಚ್ಚು ಸೃಷ್ಟಿಯಾಗಬೇಕು. ರಾವಣನನ್ನು ದಹಿಸದೆಯೇ ರಾವಣನ ಸರಿ-ತಪ್ಪುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಸಲು ಸಾಧ್ಯವಿದೆ. ದೇಹವನ್ನು ದಂಡಿಸದೆಯೇ ಇಮಾಮ್ ಹುಸೇನ್‍ರ ತ್ಯಾಗಮಯ ಬದುಕನ್ನು ಜನರ ಮುಂದಿಡುವುದಕ್ಕೆ ಅವಕಾಶವಿದೆ. ದೀಪಾವಳಿಯೆಂದರೆ ಸಿಡಿಮದ್ದು ಸುಡುವುದು ಎಂಬ ಭಾವನೆಯಿಂದ ಹೊರಬಂದು ಆಚರಿಸುವುದಕ್ಕೂ ಸಾಧ್ಯವಿದೆ. ಆದರೆ ಇದು ಸಾಧ್ಯವಾಗಬೇಕಾದರೆ ಧಾರ್ಮಿಕ ನೇತಾರರು ಮನಸ್ಸು ಮಾಡಬೇಕು. ‘ಸುಡುವ ಸಂತೋಷ ಕೂಟದಿಂದ ದೂರ ನಿಲ್ಲೋಣ’ ಎಂದು ಅವರು ಸಾರಿಬಿಟ್ಟರೆ ಅದರಿಂದ ಅಸಂಖ್ಯ ಮಕ್ಕಳು, ಭಕ್ತರು ಸುರಕ್ಷಿತರಾದಾರು. ಮಾತ್ರವಲ್ಲ, ಅಂಥದ್ದೊಂದು  ಕರೆ ಹಬ್ಬಗಳಾಚೆಗೂ ಪ್ರಭಾವ ಬೀರುವ ಸಾಧ್ಯತೆಯಿದೆ.

     ನಮ್ಮ ಹಬ್ಬ-ಹರಿದಿನಗಳಲ್ಲಿ ಬೆಂಕಿಗಿಂತ ಬೆಳಕಿಗೆ ಪ್ರಾಮುಖ್ಯತೆ ಲಭ್ಯವಾಗಬೇಕು. ಆ ಬೆಳಕು ಬೆಂಕಿಯದ್ದೇ  ಆಗಬೇಕಿಲ್ಲ. ಧಾರ್ಮಿಕ ಉಪದೇಶವೂ ಬೆಳಕೇ. ಸದ್ಯದ ದಿನಗಳಲ್ಲಿ ಧಾರ್ಮಿಕ ಉಪದೇಶ ತೆರೆಮರೆಗೆ ಸರಿಯುತ್ತಿದೆ. ದ್ವೇಷ ಮುನ್ನೆಲೆಗೆ ಬರುತ್ತಿದೆ. ಬೆಂಕಿ ದ್ವೇಷದ ಸಂಕೇತ. ಸುಡುವುದೇ ಅದರ ಗುಣ. ಕೆಟ್ಟವರನ್ನೂ ಒಳ್ಳೆಯವರನ್ನೂ ಅದು ಸುಡುತ್ತದೆ. ಆದರೆ ಉಪದೇಶ ಹಾಗಲ್ಲ, ಅದು ಕೆಟ್ಟವರನ್ನೂ ಒಳ್ಳೆಯವರನ್ನಾಗಿಸುತ್ತದೆ. ಒಳ್ಳೆಯವರನ್ನು ಇನ್ನಷ್ಟು ಒಳಿತಿನೆಡೆಗೆ ಕೊಂಡೊಯ್ಯುತ್ತದೆ. ಸದ್ಯದ ಅಗತ್ಯ ಇದು. ಯಾವಾಗಲೋ ಆಗಿ ಹೋದ ರಾವಣನಿಗೆ ದಹನದಿಂದ ಏನೂ ಆಗಲಾರದು. ಆದರೆ ಆ ದಹನವನ್ನು ವೀಕ್ಷಿಸುವವರ ಮೇಲೆ ಆ ಸುಡುವ ಕ್ರಿಯೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಸ್ವಸ್ಥ ಸಮಾಜದ ದೃಷ್ಟಿಯಿಂದ ಇದು ಅಪಾಯಕಾರಿ.

Friday, 19 October 2018

ದಿ ಕ್ವಿಂಟ್, ದಿ ನ್ಯೂಸ್ ಮಿನಿಟ್‍ಗಳು ಎತ್ತಿರುವ ಪ್ರಶ್ನೆ


     ಶವಪೆಟ್ಟಿಗೆ ಹಗರಣವನ್ನು ಬಯಲಿಗೆಳೆಯುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ತೆಹಲ್ಕಾ ಪತ್ರಿಕೆಯು ಆ ಬಳಿಕ ಎದುರಿಸಿದ ಸವಾಲುಗಳೇನು ಮತ್ತು ಆ ಸವಾಲುಗಳು ಯಾರಿಂದ ಎದುರಾದುವು ಅನ್ನುವುದು ಈ ದೇಶಕ್ಕೆ ಚೆನ್ನಾಗಿ ಗೊತ್ತು. ಕುಟುಕು ಕಾರ್ಯಾಚರಣೆಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಒದಗಿಸಿದ್ದು ಇದೇ ತೆಹಲ್ಕಾ. ಕೇಂದ್ರದಲ್ಲಿ ಆಗ ವಾಜಪೇಯಿ ನೇತೃತ್ವದ
ಸರಕಾರವಿತ್ತು. ಶವಪೆಟ್ಟಿಗೆ ಹಗರಣವು ಕೇಂದ್ರ ಸರಕಾರದ ವರ್ಚಸ್ಸಿಗೆ ಧಕ್ಕೆ ತರಲು ಪ್ರಾರಂಭಿಸಿದಾಗ ಅದು ತೆಹಲ್ಕಾದ ವಿರುದ್ಧ ನಿಂತಿತು. ವಿವಿಧ ಕೇಸುಗಳನ್ನು ಜಡಿಯುವ ಮೂಲಕ ಪತ್ರಿಕೆಯ ಸಂಪಾದಕರು ಮತ್ತು ಇತರರನ್ನು ಕೋರ್ಟು-ಕಚೇರಿ ಎಂದು ಅಲೆಯುವಂತೆ ಮಾಡಿತು. ಪತ್ರಿಕಾ ಕಚೇರಿಯ ಮೇಲೆ ದಾಳಿ ನಡೆಸಿತು. ವ್ಯವಸ್ಥೆಯ ಕಿರುಕುಳ ಮತ್ತು ಒತ್ತಡವನ್ನು ಎದುರಿಸಲು ಸಾಧ್ಯವಾಗದೇ ತೆಹಲ್ಕಾ ಒದ್ದಾಡಿದ್ದು ಈಗ ಇತಿಹಾಸ. ಇದೀಗ
  
    ಅಂಥದ್ದೇ  ಒತ್ತಡ ತಂತ್ರವನ್ನು ಮಾಧ್ಯಮಗಳ ಮೇಲೆ ಹೇರಲು ಮೋದಿ ನೇತೃತ್ವದ ಕೇಂದ್ರ ಸರಕಾರ ಹೊರಟಂತಿದೆ. ದಿ ಕ್ವಿಂಟ್ ಮತ್ತು ದಿ ನ್ಯೂಸ್ ಮಿನಿಟ್ ಎಂಬೆರಡು ಇಂಟರ್ ನೆಟ್ ಪತ್ರಿಕೆ (ನ್ಯೂಸ್ ಪೋರ್ಟಲ್)ಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದೆ. ದಿ ಕ್ವಿಂಟ್ ಮತ್ತು ನೆಟ್‍ವರ್ಕ್ 18 ಗ್ರೂಪ್‍ನ ಸ್ಥಾಪಕ ರಾಘವ್ ಬಹಲ್‍ರ ಮನೆಯ ಮೇಲೂ ದಾಳಿ ನಡೆದಿದೆ. ಈ ಮೊದಲು ಎನ್‍ಡಿಟಿವಿಯ ಮೇಲೂ ಇಂಥದ್ದೇ  ದಾಳಿ ನಡೆದಿತ್ತು. ಅಂದಹಾಗೆ, ಈ ದಾಳಿಗಳ ಉದ್ದೇಶ ತೆರಿಗೆ ತಪಾಸಣೆಯಲ್ಲ ಎಂದು ವಾದಿಸುವುದಕ್ಕೆ ಬೇಕಾದ ಸಾಕ್ಷ್ಯಗಳು ದಾಳಿಯ ಸ್ವರೂಪದಲ್ಲೇ ಇದೆ. ದಿ ಕ್ವಿಂಟ್, ದಿ ನ್ಯೂಸ್ ಮಿನಿಟ್ ಮತ್ತು ಎನ್‍ಡಿಟಿವಿ ಈ ಮೂರೂ ಸರಕಾರದ ಹೊಗಳುಭಟ ಪಟ್ಟಿಯಿಂದ ಹೊರಗಿರುವವು. ಕಾವಲು ನಾಯಿಯ ಸ್ವಭಾವವನ್ನು ಇನ್ನೂ ಉಳಿಸಿಕೊಂಡ ಕೀರ್ತಿ ಇವಕ್ಕಿದೆ. ಕೇಂದ್ರ ಸರಕಾರದ ಧೋರಣೆಗಳನ್ನು ಆಗಾಗ ಪ್ರಶ್ನಿಸುತ್ತಾ, ಟೀಕಿಸುತ್ತಾ ಮತ್ತು ವಿಮರ್ಶಿಸುತ್ತಾ ಇವು ನಿರಂತರ ಕಾರ್ಯಕ್ರಮಗಳನ್ನು ನೀಡುತ್ತಿವೆ ಮತ್ತು ಪ್ರಕಟಿಸುತ್ತಿವೆ. ಒಂದುವೇಳೆ, ಆದಾಯ ತೆರಿಗೆ ಇಲಾಖೆಯ ದಾಳಿಗೂ ಕೇಂದ್ರ ಸರಕಾರಕ್ಕೂ ಸಂಬಂಧ ಇಲ್ಲ ಎಂದಾಗಿದ್ದರೆ ಕೇಂದ್ರ ಸರಕಾರದ ಪ್ರಬಲ ಟೀಕಾಕಾರನಾಗಿ ಗುರುತಿಸಿಕೊಂಡಿರುವ ನಿರ್ದಿಷ್ಟ ಮಾಧ್ಯಮ ಸಂಸ್ಥೆಗಳೇ ಯಾಕೆ ದಾಳಿಗೆ ಈಡಾಗುತ್ತಿವೆ? ಬಿಜೆಪಿಯನ್ನು ವಿರೋಧಿಸುವ ಮಾಧ್ಯಮ ಸಂಸ್ಥೆಗಳನ್ನು ದುರ್ಬಲಗೊಳಿಸುವುದು ಮತ್ತು ಸಾರ್ವಜನಿಕವಾಗಿ ಅವುಗಳ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆ ತರುವುದು ಇಂಥ ದಾಳಿಗಳ ಉದ್ದೇಶ ಎಂದಲ್ಲದೇ ಇದನ್ನು ಬೇರೆ ಹೇಗೆ ವ್ಯಾಖ್ಯಾನಿಸಬಹುದು? ಇತ್ತೀಚೆಗೆ,

     ತ್ರಿಪುರದಲ್ಲಿ ಇಂಥದ್ದೇ  ಇನ್ನೊಂದು ಕ್ರೌರ್ಯ ನಡೆಯಿತು. ಸಿಪಿಎಂ ಮುಖವಾಣಿಯಾದ ದೇಶೆರ್ ಕಥಾ ಎಂಬ ದೈನಿಕದ ಪರವಾನಿಗೆಯನ್ನು ರದ್ದುಪಡಿಸಲಾಯಿತು. ತಾಂತ್ರಿಕ ಕಾರಣವನ್ನು ಮುಂದಿಟ್ಟು ಈ ಸಾಯಿಸುವ ಆಟ ನಡೆಯಿತು. ನಿಜವಾಗಿ, ಈ ಸಾವಿನಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ಕೈವಾಡವಿದೆ ಎಂದು ಹೇಳುವುದಕ್ಕೆ ಸಾಕ್ಷ್ಯಗಳ ಅಗತ್ಯವೇ ಇಲ್ಲ.
ಇತ್ತೀಚೆಗೆ ಈ ಪತ್ರಿಕೆಯ ಸಂಪಾದಕರನ್ನು ಬದಲಾಯಿಸಲಾಗಿತ್ತು. ಮಾತ್ರವಲ್ಲ, ಈ ಬದಲಾವಣೆಯನ್ನು ಭಾರತೀಯ ಸುದ್ದಿ ಮಾಧ್ಯಮಗಳ ನೋಂದಣಿ ವಿಭಾಗದ ಗಮನಕ್ಕೂ ತರಲಾಗಿತ್ತು. ಆದರೆ, ಅಲ್ಲಿನ ಸಿಬ್ಬಂದಿಗಳು ಜಿಲ್ಲಾಧಿಕಾರಿಗೆ ಈ ವಿವರಗಳನ್ನು ವರ್ಗಾಯಿಸುವಲ್ಲಿ ಉದಾಸೀನ ತೋರಿದರು. ಅದರಿಂದಾಗಿ ಪತ್ರಿಕೆಯ ಆಡಳಿತ ಮಂಡಳಿ ಮಾಡಿದ ಬದಲಾವಣೆಯು ಜಿಲ್ಲಾಧಿಕಾರಿ ಕಚೇರಿಗೆ ತಲುಪಬೇಕಾದ ಸಮಯದಲ್ಲಿ ತಲುಪಲಿಲ್ಲ. ಇದರಿಂದಾಗಿ ಪತ್ರಿಕೆಯಲ್ಲಿ ಒಂದು ವಿವರ ಮತ್ತು ನೋಂದಣಿ ಕಚೇರಿಯಲ್ಲಿ ಇನ್ನೊಂದು ವಿವರ ಎಂಬಂತಾಯಿತು. ಇದೇ ಕಾರಣವನ್ನು ಮುಂದಿಟ್ಟು ಪತ್ರಿಕೆಯ ಪರವಾನಿಗೆಯನ್ನೇ ರದ್ದುಪಡಿಸಲಾಯಿತು. ನಿಜವಾಗಿ, ಇಲ್ಲಿ ಎರಡು ಸಂಗತಿಗಳಿವೆ. ಪ್ರಮಾದ ಆಗಿರುವುದು ಸಿಬಂದಿಗಳಿಂದ. ಇದಕ್ಕಾಗಿ ಪತ್ರಿಕೆಗೆ ಶಿಕ್ಷೆ ನೀಡುವುದು ತಪ್ಪು. ಎರಡನೆಯ ಸಂಗತಿ ಏನೆಂದರೆ, ಸರಿಪಡಿಸಿಕೊಳ್ಳುವುದಕ್ಕೆ ಅವಕಾಶ ನೀಡದೇ ಇರುವುದು. ಪತ್ರಿಕೆಯೊಂದು ತನ್ನ ಸಂಪಾದಕನನ್ನು ಬದಲಿಸಿಕೊಳ್ಳುವುದು ಅಭೂತಪೂರ್ವ ಬೆಳವಣಿಗೆ ಏನಲ್ಲ. ಮಾಧ್ಯಮ ಜಗತ್ತಿನಲ್ಲಿ ಇದು ಸಾಮಾನ್ಯ. ಅದನ್ನು ಸಂದರ್ಭಕ್ಕೆ ತಕ್ಕಂತೆ ಸಂಬಂಧಿತ ಕಚೇರಿಗೆ ತಿಳಿಸಿ ಆ ಬದಲಾವಣೆಯನ್ನು ಪತ್ರಿಕೆಯಲ್ಲಿ ಮುದ್ರಿಸುವ ಮೂಲಕ ಜಾಹೀರುಗೊಳಿಸುವುದು ರೂಢಿ. ಒಂದು ವೇಳೆ, ದಶೇರ್ ಕಥಾ ಪತ್ರಿಕೆಯು ಈ ವಿಷಯದಲ್ಲಿ ವಿಫಲವಾಗಿದೆ ಎಂದೇ ವಾದಿಸಿದರೂ ತಿದ್ದಿಕೊಳ್ಳುವುದಕ್ಕೆ ಅವಕಾಶವನ್ನು ನೀಡಬಹುದಲ್ಲವೇ?

    ಲೋಕಸಭಾ ಚುನಾವಣೆಯು ಹತ್ತಿರವಾಗುತ್ತಿರುವಂತೆಯೇ ತನಗೆ ಶರಣಾಗದ ಮಾಧ್ಯಮ ಸಂಸ್ಥೆಗಳನ್ನು ಬಲವಂತದಿಂದ ಶರಣಾಗಿಸುವ ಕೃತ್ಯಕ್ಕೆ ಬಿಜೆಪಿ ಮುಂದಾಗಿದೆಯೇ ಅನ್ನುವ ಪ್ರಶ್ನೆಯನ್ನು ಈ ಬೆಳವಣಿಗೆಗಳು ಮತ್ತೊಮ್ಮೆ ಬಲವಾಗಿ ಎತ್ತಿವೆ. ಈ ದೇಶದ ಮುಖ್ಯವಾಹಿನಿಯ ಹಿಂದಿ ಮತ್ತು ಇಂಗ್ಲಿಷ್ ನ್ಯೂಸ್ ಚಾನೆಲ್‍ಗಳನ್ನು ಕೇಂದ್ರ ಸರಕಾರ ಈಗಾಗಲೇ ಕೊಂಡುಕೊಂಡಿದೆ ಎಂಬ ಮಾತು ಸಾರ್ವಜನಿಕವಾಗಿ ಕೇಳಿಬರುತ್ತಿದೆ. ಇತ್ತೀಚೆಗಷ್ಟೇ ಎ.ಬಿ.ಪಿ. ಎಂಬ ಪ್ರಮುಖ ಹಿಂದಿ ನ್ಯೂಸ್ ಚಾನೆಲ್‍ನ ಹಿರಿಯ ಪತ್ರಕರ್ತರು ಇಂಥದ್ದೇ ಆರೋಪವನ್ನು ಹೊರಿಸಿ ಚಾನೆಲ್‍ನಿಂದ ಹೊರಬಂದರು. ಪ್ರಜಾತಂತ್ರದ ಅಳಿವು-ಉಳಿವು ಮಾಧ್ಯಮವನ್ನು ಅವಲಂಬಿಸಿದೆ ಎಂಬುದನ್ನು ಆಧಾರವಾಗಿಟ್ಟುಕೊಂಡು ಇವತ್ತಿನ ಭಾರತದಲ್ಲಾಗುತ್ತಿರುವ ಬೆಳವಣಿಗೆಗಳನ್ನು ನೋಡುವಾಗ ದಿಗಿಲಾಗುತ್ತದೆ. ನಿಜವಾಗಿ,

ಬೋಫೋರ್ಸ್ ಹಗರಣವನ್ನು ಜನರ ಇಶ್ಯೂವಾಗಿ ಪರಿವರ್ತಿಸಿದ್ದೇ  ಮಾಧ್ಯಮಗಳು. ಬೋಫೋರ್ಸ್ ಹಗರಣದ ಇಂಚು ಇಂಚನ್ನೂ ಅವು ಜನರ ಎದುರಿಟ್ಟವು. ಪರಿಣಾಮ ಏನಾಯಿತೆಂದರೆ, ಆಡಳಿತ ಪಕ್ಷವನ್ನೇ ಜನರು ತಿರಸ್ಕರಿಸಿದರು. 3 ದಶಕಗಳ ಹಿಂದೆಯೇ ಭಾರತೀಯ ಮಾಧ್ಯಮಗಳು ಇಷ್ಟು ಜಾಗೃತ ಮನೋಭಾವವನ್ನು ತೋರಿಸಿವೆಯೆಂದರೆ, ಇವತ್ತು ಹೇಗಿರಬೇಕಿತ್ತು? ಅಂದಿಗಿಂತ ಎಲ್ಲ ರೀತಿಯಲ್ಲೂ ಇವತ್ತು ದೇಶ ಮುಂದುವರಿದಿದೆ. ಮಾಧ್ಯಮ ಕ್ಷೇತ್ರದಲ್ಲಿ ಅಭೂತಪೂರ್ವ ಬದಲಾವಣೆಗಳು ಉಂಟಾಗಿವೆ. ಮಾಧ್ಯಮ ಕ್ಷೇತ್ರದ ಹೊಣೆಗಾರಿಕೆಗಳು ಏನೇನು ಅನ್ನುವುದನ್ನು ಅಂದಿಗಿಂತ ಹೆಚ್ಚು ಇಂದು ಅರಿತುಕೊಳ್ಳುವುದಕ್ಕೆ ಸಾಧ್ಯವಾಗುತ್ತಿದೆ. ಆದರೂ ರಫೇಲ್‍ನ ಬಗ್ಗೆ ಯಾವ ಪ್ರಮುಖ ಮಾಧ್ಯಮಗಳೂ ಬೋಫೋರ್ಸ್‍ನ ರೀತಿಯಲ್ಲಿ ಆಳಕ್ಕಿಳಿದು ಚರ್ಚಿಸಿಲ್ಲ. ಟಿ.ವಿ. ಚಾನೆಲ್‍ಗಳು ಆ ಬಗ್ಗೆ ಕುತೂಹಲವನ್ನೇ ವ್ಯಕ್ತಪಡಿಸುತ್ತಿಲ್ಲ. ಒಂದು ರೀತಿಯಲ್ಲಿ, ಮೂರು ದಶಕಗಳ ಹಿಂದೆ ಮಾಧ್ಯಮ ಕ್ಷೇತ್ರದಲ್ಲಿ ಯಾವ ಜಾಗೃತಿ ಮನೋಭಾವವಿತ್ತೋ ಅದು ಇವತ್ತು ವ್ಯಕ್ತವಾಗುತ್ತಿಲ್ಲ. ಬರಬರುತ್ತಾ ಭಾರತೀಯ ಮಾಧ್ಯಮ ರಂಗವು ಪ್ರಭುತ್ವದ ಅಡಿಯಾಳಾಗುವುದಕ್ಕೆ ಒಗ್ಗಿಕೊಳ್ಳುತ್ತಾ ಹೋಗತೊಡಗಿತೇ? ಕಾವಲು ನಾಯಿಯ ಹೊಣೆಗಾರಿಕೆಯಿಂದ ಜಿ ಹುಜೂರ್ ಮನಸ್ಥಿತಿಗೆ ಹೊರಳಿಕೊಂಡಿತೇ? ಪ್ರಭುತ್ವ ಮತ್ತು ಮಾಧ್ಯಮ ಕ್ಷೇತ್ರದ ನಡುವೆ ರಾಜಿ ಮನೋಭಾವ ಸೃಷ್ಟಿಯಾಯಿತೇ?

     ದೇಶದ ಮಾಧ್ಯಮ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳು ಈ ಬಗೆಯ ಪ್ರಶ್ನೆಗಳಿಗೆ ಪ್ರತಿದಿನ ಇಂಬು ನೀಡುತ್ತಲೇ ಇವೆ. ಪ್ರಭುತ್ವವು ಮಾಧ್ಯಮ ರಂಗವನ್ನು ಕೊಂಡುಕೊಳ್ಳುವುದಕ್ಕೆ ಮತ್ತು ಒಪ್ಪದವುಗಳನ್ನು ದಮನಿಸುವುದಕ್ಕೆ ಮುಂದಾಗುತ್ತಿದೆ ಎಂಬುದು ದಿನೇ ದಿನೇ ನಿಚ್ಚಳವಾಗುತ್ತಿದೆ. ದಿ ಕ್ವಿಂಟ್, ದಿ ನ್ಯೂಸ್ ಮಿನಿಟ್‍ಗಳು ಇದಕ್ಕೆ ತಾಜಾ ಉದಾಹರಣೆ ಅಷ್ಟೇ.


Thursday, 11 October 2018

ತ್ರಿವಳಿ ತಲಾಕ್ ಮತ್ತು ಶಬರಿಮಲೆ: ಬಿಜೆಪಿಯ ಎರಡು ಮುಖ


     ತ್ರಿವಳಿ ತಲಾಕನ್ನು ಅಸಾಂವಿಧಾನಿಕವೆಂದು ಕರೆದು ಅದರ ಮೇಲೆ ನಿಷೇಧ ಹೇರಿದ ಸುಪ್ರೀಮ್ ಕೋರ್ಟು, ಅದೇ ರೀತಿಯಲ್ಲಿ ಮತ್ತು ಅಷ್ಟೇ ಬಲಯುತವಾದ ಪದಗಳಲ್ಲಿ ಶಬರಿಮಲೆಯಲ್ಲಿರುವ ಆಚರಣೆಯನ್ನು ಪ್ರಶ್ನಿಸಿತು. 50 ವರ್ಷಕ್ಕಿಂತ ಕೆಳಗಿನ ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲವನ್ನು ಪ್ರವೇಶಿಸದಂತೆ ಹೇರಲಾಗಿದ್ದ ಶತಮಾನಗಳಷ್ಟು ಹಳೆಯದಾದ ನಿಷೇಧವನ್ನು ಅದು ರದ್ದುಪಡಿಸಿತಲ್ಲದೇ ಎಲ್ಲ ವಯೋಮಾನದ ಮಹಿಳೆಯರಿಗೂ ಅದು ದೇಗುಲವನ್ನು ಮುಕ್ತವಾಗಿರಿಸಿತು. ತಮಾಷೆ ಏನೆಂದರೆ, ಈ ಎರಡೂ ತೀರ್ಪುಗಳ ವಿಷಯದಲ್ಲಿ ಬಿಜೆಪಿ ತಳೆದಿರುವ ನಿಲುವು.

     ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪನ್ನು ಬಿಜೆಪಿ ಜಯ ಘೋಷದೊಂದಿಗೆ ಸ್ವಾಗತಿಸಿತ್ತು. ತೀರ್ಪು ಬಂದ ಮರುಕ್ಷಣವೇ ಅದು ತಲಾಕ್ ಕಾನೂನನ್ನು (ಮುಸ್ಲಿಮ್ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣಾ ಕಾಯ್ದೆ 2017) ರಚಿಸಿತು. ಈ ವಿಷಯದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಕೋರುವಷ್ಟು ವ್ಯವಧಾನವೂ ಅದಕ್ಕಿರಲಿಲ್ಲ. ಅವಸರವಸರವಾಗಿಯೇ ರಚಿಸಲಾದ ಕಾನೂನನ್ನು ಅವಸರವಸರವಾಗಿಯೇ ಲೋಕಸಭೆಯಲ್ಲಿ ಮಂಡಿಸಿತು. ಪಾಸೂ ಮಾಡಿಸಿಕೊಂಡಿತು. ‘ತ್ರಿವಳಿ ತಲಾಕ್ ಹೇಳಿದ ಪುರುಷನನ್ನು ಮೂರು ವರ್ಷಗಳ ಕಾಲ ಜಾಮೀನಿಲ್ಲದೆ ಜೈಲಲ್ಲಿಡಲು ಅವಕಾಶ ಇರುವುದೂ’ ಸೇರಿ ಪ್ರಸ್ತಾವಿತ ಕಾನೂನಿನಲ್ಲಿರುವ ದೋಷಗಳ ಬಗ್ಗೆ ಪ್ರತಿಪಕ್ಷಗಳೂ ಸೇರಿದಂತೆ ದೇಶದಾದ್ಯಂತ ಅನೇಕಾರು ಸಂಘಟನೆಗಳು, ತಜ್ಞರು ಮತ್ತು ಮುಸ್ಲಿಮ್ ಮಹಿಳೆಯರೂ ಇದೇ ಸಂದರ್ಭದಲ್ಲಿ ಪ್ರಶ್ನೆಗಳನ್ನೆತ್ತಿದ್ದರು. ದೇಶದ ಅನೇಕಾರು ಕಡೆ ಮುಸ್ಲಿಮ್ ಮಹಿಳೆಯರ ನೇತೃತ್ವದಲ್ಲಿ ಪ್ರಸ್ತಾವಿತ ಕಾನೂನಿನ ವಿರುದ್ಧ ಪ್ರತಿಭಟನೆಗಳೂ ನಡೆದುವು. ಆದರೆ

     ಬಿಜೆಪಿ ಈ ಎಲ್ಲ ಪ್ರತಿಕ್ರಿಯೆಗಳನ್ನು ಸಾರಾಸಗಟು ತಿರಸ್ಕರಿಸಿತು. ಮಾತ್ರವಲ್ಲ, ಅದೇ ದೋಷಪೂರ್ಣ ಮಸೂದೆಯನ್ನು ರಾಜ್ಯಸಭೆಯಲ್ಲೂ ಮಂಡಿಸಿತು. ರಾಜ್ಯಸಭೆ ಈ ಮಸೂದೆಯನ್ನು ಒಪ್ಪಿಕೊಳ್ಳದೇ ಹೋದಾಗ ಅಧ್ಯಾದೇಶದ ಮೂಲಕ ಬಲವಂತವಾಗಿ ಆ ಕಾನೂನನ್ನು ಜಾರಿಮಾಡಿತು. ಪ್ರಧಾನಿ ನರೇಂದ್ರ ಮೋದಿಯವರು ತನ್ನನ್ನು ‘ಮುಸ್ಲಿಮ್ ಮಹಿಳಾ ವಿಮೋಚಕ’ ಎಂದು ಘೋಷಿಸಿಕೊಂಡರು. ಕಾಂಗ್ರೆಸನ್ನು ‘ಮುಸ್ಲಿಮ್ ಪುರುಷರ ಪಕ್ಷ’ ಎಂದು ಲೇವಡಿ ಮಾಡಿದರು. ತ್ರಿವಳಿ ತಲಾಕ್ ಕಾಯ್ದೆಯನ್ನು ಬಿಜೆಪಿಯು ತನ್ನ ಸಾಧನೆಯ ಪಟ್ಟಿಯಲ್ಲಿ ಸೇರಿಸಿಕೊಂಡಿತು. ಇದೇ ಬಿಜೆಪಿ ಇವತ್ತು ಕೇರಳದಲ್ಲಿ ಬೀದಿಗಿಳಿದಿದೆ. ಬೀದಿಗಿಳಿಯುವಂತೆ ಜನರನ್ನು ಪ್ರಚೋದಿಸುತ್ತಿದೆ. ಸುಪ್ರೀಮ್ ಕೋರ್ಟ್‍ನ ಶಬರಿಮಲೆ ತೀರ್ಪಿನ ವಿರುದ್ಧ ಅಧ್ಯಾದೇಶವನ್ನು ತನ್ನಿ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೆ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. 50 ವರ್ಷಕ್ಕಿಂತ ಕೆಳಗಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಅವರು ಧಾರ್ಮಿಕ ನಂಬಿಕೆ ಮತ್ತು ವಿಶ್ವಾಸದ ಭಾಗ ಎಂದು ಕರೆದಿದ್ದಾರೆ. ಅಕ್ಟೋಬರ್ 7ರಂದು ಬಿಜೆಪಿಯ ಯುವ ಮೋರ್ಚಾವು ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಮುಷ್ಕರಕ್ಕೆ ಕರೆಕೊಟ್ಟಿತ್ತು. ಸುಪ್ರೀಮ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದೇ ಇರುವ ತಿರುವಾಂಕೂರು ದೇವಸ್ಯಂ ಬೋರ್ಡ್‍ನ ನಿಲುವನ್ನು ಖಂಡಿಸಿ ಬೋರ್ಡ್‍ನ ಅಧ್ಯಕ್ಷ ಪದ್ಮಕುಮಾರ್ ರ ಮನೆಗೆ ಯುವಮೋರ್ಚಾವು ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಯುವಮೋರ್ಚಾದ ಅಧ್ಯಕ್ಷ  ಪ್ರಕಾಶ್ ಬಾಬು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ಇದನ್ನೇ ನೆಪ ಮಾಡಿಕೊಂಡ ಯುವಮೋರ್ಚಾ ಮುಷ್ಕರಕ್ಕೆ ಕರೆಕೊಟ್ಟಿತ್ತು. ಬಿಜೆಪಿಯ ಮಹಿಳಾ ಘಟಕವಾದ ಮಹಿಳಾ ಮೋರ್ಚಾವು ರಾಜ್ಯದ ಬೇರೆ ಬೇರೆ ಕಡೆ ಪ್ರತಿಭಟನೆ ನಡೆಸುತ್ತಿದೆ. ಸುಪ್ರೀರ್ಮ್ ಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಬೇಕು ಮತ್ತು ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಮಹಿಳೆಯರಿಗಿರುವ ನಿರ್ಬಂಧವನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂಬುದು ಬಿಜೆಪಿಯ ಬೇಡಿಕೆ. ಇದು ಏನು?

ಈ ದ್ವಂದ್ವವನ್ನು ಯಾವ ಹೆಸರಿನಿಂದ ಕರೆಯಬೇಕು? ಬೂಟಾಟಿಕೆ, ಇಬ್ಬಂದಿತನ, ಹಿಪಾಕ್ರಸಿ, ಮಹಿಳಾ ವಿರೋಧಿ, ಧರ್ಮ ವಿರೋಧಿ? ನಿಜವಾಗಿ,

    ತ್ರಿವಳಿ ತಲಾಕ್ ಮತ್ತು ಶಬರಿಮಲೆ ತೀರ್ಪುಗಳು ಸರ್ವಾನುಮತದ್ದೇನೂ ಅಲ್ಲ. ತ್ರಿವಳಿ ತಲಾಕ್ ವಿವಾದವನ್ನು ಬಗೆಹರಿಸಲು ಸುಪ್ರೀಮ್ ಕೋರ್ಟು ಐವರು ನ್ಯಾಯಾಧೀಶರ ಪೀಠವನ್ನು ರಚಿಸಿತ್ತು. ಈ ಐವರಲ್ಲಿ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರು ಇತರ ಮೂವರಿಗಿಂತ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ತ್ರಿವಳಿ ತಲಾಕನ್ನು ಅಸಾಂವಿಧಾನಿಕವೆಂದು ಕರೆಯಲು ಇವರಿಬ್ಬರೂ ನಿರಾಕರಿಸಿದರೆ, ಉಳಿದ ಮೂವರು ಅಸಾಂವಿಧಾನಿಕವೆಂದು ಕರೆದರು. ಶಬರಿಮಲೆ ತೀರ್ಪೂ ಇದಕ್ಕಿಂತ ಭಿನ್ನವಲ್ಲ. ಈ ವಿವಾದವನ್ನು ಪರಿಶೀಲಿಸಲು ಐವರು ನ್ಯಾಯಾಧೀಶರ ಪೀಠವನ್ನು ರಚಿಸಲಾಗಿತ್ತು. ಮಹಿಳಾ ಪ್ರವೇಶಕ್ಕಿರುವ ನಿರ್ಬಂಧಕ್ಕೆ ನಾಲ್ಕು ಮಂದಿ ನ್ಯಾಯಾಧೀಶರು ಅಸಮ್ಮತಿ ಸೂಚಿಸಿದರೆ, ನ್ಯಾಯಮೂರ್ತಿ ಇಂದೂ ಮಲ್ಹೋತ್ರ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನಿರ್ಬಂಧವನ್ನು ಅಸಮಾನತೆ ಎಂಬುದಕ್ಕಿಂತ ಧಾರ್ಮಿಕ ಆಚರಣಾ ವಿಧಾನವಾಗಿ ಅವರು ವ್ಯಾಖ್ಯಾನಿಸಿದರು. ಆದ್ದರಿಂದ, ಈ ಎರಡೂ ತೀರ್ಪುಗಳ ಪರ ಮತ್ತು ವಿರುದ್ಧ ಅಭಿಪ್ರಾಯಗಳನ್ನು ಅಸಹಜವೆಂದೋ ಅಸೂಕ್ಷ್ಮವೆಂದೋ ಭಾವಿಸಬೇಕಿಲ್ಲ. ಆದರೆ, ಅದಕ್ಕೆ ವ್ಯಕ್ತವಾಗುವ ಅಭಿಪ್ರಾಯಗಳಲ್ಲಿ ಪ್ರಾಮಾಣಿಕತೆ ಇರಬೇಕು ಅಷ್ಟೇ.

    ತ್ರಿವಳಿ ತಲಾಕ್ ಮತ್ತು ಶಬರಿಮಲೆ ಎರಡೂ ಮಹಿಳೆಯರಿಗೆ ಸಂಬಂಧಿಸಿದ್ದು. ತ್ರಿವಳಿ ತಲಾಕ್‍ನಿಂದ ಮುಸ್ಲಿಮ್ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದು ವಾದಿಸುವಂತೆಯೇ ಶಬರಿಮಲೆಯ ನಿರ್ಬಂಧದಿಂದ ಹಿಂದೂ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದೂ ವಾದಿಸಬಹುದು ಅಥವಾ ಈ ಎರಡನ್ನೂ ಧರ್ಮಸೂಕ್ಷ್ಮ ವಿಷಯವಾಗಿ ಪರಿಗಣಿಸಬಹುದು. ಮಾತ್ರವಲ್ಲ, ಆಯಾ ಧರ್ಮಗಳು ಆಂತರಿಕವಾಗಿ ಇವನ್ನು ಬಗೆಹರಿಸಿಕೊಳ್ಳಲಿ ಎಂದೂ ಹೇಳಬಹುದು. ಆದರೆ, ಈ ವಿಷಯದಲ್ಲಿ ಬಿಜೆಪಿಯ ನಿಲುವು ಸೋಗಲಾಡಿತನದ್ದು, ಕೋಮು ಪಕ್ಷಪಾತಿತನದ್ದು. ಮುಸ್ಲಿಮ್ ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆಯ ವಿಷಯದಲ್ಲಿ ಬಿಡುಬೀಸಾಗಿ ಮಾತಾಡುವ ಹಾಗೂ ಅವರ ಪಾಲಿನ ಮಸೀಹನಂತೆ ಫೋಸು ಕೊಡುವ ಇದೇ ಬಿಜೆಪಿ ಹಿಂದೂ ಮಹಿಳೆಯರಿಗೆ ಸಂಬಂಧಿಸಿ ಅಂಥದ್ದೇ  ಪ್ರಶ್ನೆ ಎದುರಾದಾಗ ಹಿಂದೂ ಪುರುಷರ ಪಕ್ಷದಂತೆ ವರ್ತಿಸುತ್ತಿದೆ. ಧರ್ಮಸೂಕ್ಷ್ಮದ ಮಾತಾಡುತ್ತಿದೆ. ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಮುಸ್ಲಿಮ್ ಪುರುಷರನ್ನು 3 ವರ್ಷ ಜೈಲಿಗಟ್ಟುವುದಕ್ಕಾಗಿ ಅಧ್ಯಾದೇಶದ ಮೊರೆ ಹೋದ ಇದೇ ಪಕ್ಷವು ಶಬರಿಮಲೆಯಲ್ಲಿ ಮಹಿಳೆಗಿರುವ ನಿರ್ಬಂಧವನ್ನು ಹಾಗೆಯೇ ಉಳಿಸಿಕೊಳ್ಳುವುದಕ್ಕಾಗಿ ಅಧ್ಯಾದೇಶವನ್ನು ಹೊರಡಿಸುವಂತೆ ಒತ್ತಾಯಿಸುತ್ತಿದೆ. ಮುಸ್ಲಿಮ್ ಮಹಿಳೆಯರ ಬಗ್ಗೆ ಇಷ್ಟೊಂದು ಕಾಳಜಿ ಮತ್ತು ಮುತುವರ್ಜಿಯನ್ನು ತೋರುವ ಬಿಜೆಪಿಯು ಹಿಂದೂ ಮಹಿಳೆಯರ ಬಗ್ಗೆ ಯಾಕೆ ಹಿಮ್ಮುಖವಾಗಿ ಚಲಿಸುತ್ತಿದೆ? ಮುಸ್ಲಿಮ್ ಮಹಿಳೆಯರ ವಿಮೋಚನೆಯಂತೆಯೇ ಹಿಂದೂ ಮಹಿಳೆಯರ ವಿಮೋಚನೆಯೂ ಆಗಬೇಡವೇ? ಮಹಿಳೆಯರಿಗೆ ಸಂಬಂಧಿಸಿ ಬಿಜೆಪಿಯ ಈ ದ್ವಂದ್ವಕ್ಕೆ ಕಾರಣವೇನು?

ಮುಸ್ಲಿಮರನ್ನು ಹೇಗಾದರೂ ಮಾಡಿ ಸತಾಯಿಸುವುದು ಮತ್ತು ಅವರ ಆಚರಣಾ ಪದ್ಧತಿಯನ್ನು ನಾಲಾಯಕ್ಕು ಎಂದು ಬಿಂಬಿಸುವುದು ಅದರ ಏಕಮಾತ್ರ ಗುರಿಯೇ? ಆ ಕಾರಣದಿಂದಲೇ ಅದು ತ್ರಿವಳಿ ತಲಾಕನ್ನು ಎತ್ತಿಕೊಂಡಿತೇ? ಅಧ್ಯಾದೇಶ ಹೊರಡಿಸುವುದಕ್ಕೂ ಇದುವೇ ಕಾರಣವೇ? ಮುಸ್ಲಿಮರನ್ನು ತರಾಟೆಗೆತ್ತಿಕೊಂಡಷ್ಟೂ ಮತಗಳು ಹೆಚ್ಚಾಗುತ್ತವೆ ಎಂಬ ನೀತಿಯ ಭಾಗವೇ ಈ ಅಧ್ಯಾದೇಶ? ಒಂದುವೇಳೆ, ಇದಲ್ಲ ಎಂದಾದರೆ, ತ್ರಿವಳಿ ಮತ್ತು ಶಬರಿಮಲೆ ಎರಡನ್ನೂ ಆಯಾ ಧರ್ಮಗಳ ಆಂತರಿಕ ವಿಷಯವಾಗಿ ಅದಕ್ಕೆ ಪರಿಗಣಿಸಬಹುದಿತ್ತಲ್ಲವೇ? ಅದನ್ನು ಇತ್ಯರ್ಥಪಡಿಸುವುದಕ್ಕೆ ಆಯಾ ಧರ್ಮಗಳಿಗೆ ಅವಕಾಶ ಒದಗಿಸಬಹುದಿತ್ತಲ್ಲವೇ? ಧರ್ಮಸೂಕ್ಷ್ಮವೆಂಬುದು ತ್ರಿವಳಿಗೂ ಶಬರಿಮಲೆಗೂ ಏಕಪ್ರಕಾರವಾಗಿ ಅನ್ವಯಿಸಬಹುದಿತ್ತಲ್ಲವೇ? ಯಾಕೆ ಬೆಣ್ಣೆ ಮತ್ತು ಸುಣ್ಣ ನೀತಿ?

ಬಿಜೆಪಿಗೆ ಮುಸ್ಲಿಮ್ ಮಹಿಳೆಯರ ಹಿತ ಮುಖ್ಯವಲ್ಲ ಎಂಬುದಕ್ಕೆ ಶಬರಿಮಲೆ ಅತ್ಯುತ್ತಮ ಉದಾಹರಣೆ.

Thursday, 4 October 2018

ಮಸೀದಿ ತೀರ್ಪು: ಫ್ರೀಜರ್ ನಲಿಟ್ಟ ಮಾಂಸದ ಜಾತಿ ಯಾವುದು ಎಂದು ಪ್ರಶ್ನಿಸಿದಂತೆ..


   
ಬಾಬರೀ ಮಸೀದಿ ಧ್ವಂಸ ಪ್ರಕರಣವನ್ನು ಲೋಕಸಭಾ ಚುನಾವಣೆಗಿಂತ ಮೊದಲೇ ಇತ್ಯರ್ಥಪಡಿಸಬೇಕೆಂಬ ಆತುರವು ಸುಪ್ರೀಮ್ ಕೋರ್ಟಿಗಿದೆಯೇ?

     ಸೆ. 27ರಂದು ಸುಪ್ರೀಮ್ ಕೋರ್ಟು ವ್ಯಕ್ತಪಡಿಸಿರುವ ಅಭಿಪ್ರಾಯವು ಇಂಥದ್ದೊಂದು ಸಂದೇಹಕ್ಕೆ ಇಂಬು ನೀಡಿದೆ. ಬಾಬರಿ ಮಸೀದಿಯ ಧ್ವಂಸದ ತರುವಾಯ ಬಾಬರೀ ಮಸೀದಿಯಿದ್ದ ಜಾಗವೂ ಸೇರಿದಂತೆ ಸುತ್ತ-ಮುತ್ತಲಿನ ಜಾಗವನ್ನು ಅಂದಿನ ಕೇಂದ್ರ ಸರಕಾರವು ಅಧ್ಯಾದೇಶದ ಮೂಲಕ ವಶಪಡಿಸಿಕೊಂಡಿತ್ತು. ಇದನ್ನು ಇಸ್ಮಾಈಲ್ ಫಾರೂಖಿ ಎಂಬವರು ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಈ ಕೇಸಿಗೆ ಸಂಬಂಧಿಸಿ 1994ರಲ್ಲಿ ನೀಡಲಾದ ತೀರ್ಪಿನಲ್ಲಿ, ‘ಮಸೀದಿಯು ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ, ನಮಾಝನ್ನು ಎಲ್ಲಿ ಬೇಕಾದರೂ ಬಯಲಲ್ಲೂ ನಿರ್ವಹಿಸಬಹುದು’ ಎಂದು ಹೇಳಲಾಗಿತ್ತು. ಖ್ಯಾತ ನ್ಯಾಯವಾದಿ ರಾಜೀವ್ ಧವನ್‍ರ ಮೂಲಕ ಸುನ್ನಿ ವಕ್ಫ್ ಬೋರ್ಡ್ ಪ್ರಶ್ನಿಸಿದ್ದು ಇದೇ ತೀರ್ಪನ್ನು. ‘1994ರಲ್ಲಿ ಸುಪ್ರೀಮ್ ಕೋರ್ಟು ವ್ಯಕ್ತಪಡಿಸಿದ ಈ ಅಭಿಪ್ರಾಯವು ಅಯೋಧ್ಯ ಪ್ರಕರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ತೀರ್ಪಿನ ಮೇಲೆ ವಿಸ್ತೃತ ಚರ್ಚೆ ನಡೆಸುವುದಕ್ಕಾಗಿ 7 ಮಂದಿ ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಈ ವಿಷಯವನ್ನು ವಹಿಸಿಕೊಡಬೇಕೆಂದು’ ಸುನ್ನಿ ವಕ್ಫ್ ಬೋರ್ಡ್ ಕೋರಿಕೊಂಡಿತ್ತು. ಆದರೆ ಸೆ. 27ರ ಬಹುಮತದ ತೀರ್ಪಿನಲ್ಲಿ ಈ ಕೋರಿಕೆಯನ್ನು ತಿರಸ್ಕರಿಸಲಾಗಿದೆ. ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಝೀರ್ ಅವರಿದ್ದ ಪೀಠದಲ್ಲಿ ಅಬ್ದುಲ್ ನಝೀರ್‍ರನ್ನು ಹೊರತು ಪಡಿಸಿ ಉಳಿದಿಬ್ಬರು ನ್ಯಾಯಾಧೀಶರು ವಕ್ಫ್ ಬೋರ್ಡ್‍ನ ಕೋರಿಕೆಯನ್ನು ತಿರಸ್ಕರಿಸುವುದರ ಪರ ನಿಂತರು. ಆದರೆ ಕೋರಿಕೆಯನ್ನು ಮನ್ನಿಸಬೇಕು ಎಂದು ಅಬ್ದುಲ್ ನಝೀರ್ ಅಭಿಪ್ರಾಯಪಟ್ಟರು. ‘ಧರ್ಮದ ವಿಷಯಗಳಿಗೆ ಸಂಬಂಧಿಸಿದ ಪ್ರಕರಣವನ್ನು ಇತ್ಯರ್ಥಪಡಿಸಲು ತ್ವರೆ ಮಾಡಬೇಕಿಲ್ಲ. ಈ ವಿಷಯದ ಮೇಲೆ ವಿಸ್ತೃತ  ಚರ್ಚೆ ನಡೆಸುವುದಕ್ಕಾಗಿ ಹೆಚ್ಚು ಸದಸ್ಯರಿರುವ ಸಂವಿಧಾನ ಪೀಠಕ್ಕೆ ಪ್ರಕರಣವನ್ನು ವಹಿಸಿಕೊಡಬಹುದೆಂದು’ ಅವರು ವಾದಿಸಿದರು. ಇದನ್ನು ಉಳಿದಿಬ್ಬರು ಒಪ್ಪಿಕೊಳ್ಳದೇ ಇದ್ದುದರಿಂದ ವಕ್ಫ್ ಬೋರ್ಡ್‍ನ ಮನವಿಯು ತಿರಸ್ಕ್ರತಗೊಂಡಿತು. ತಿರಸ್ಕಾರಕ್ಕೆ ಉಳಿದ ಇಬ್ಬರು ನ್ಯಾಯಾಧೀಶರು ಕೊಟ್ಟ ಕಾರಣ ಏನೆಂದರೆ, ‘ಫಾರೂಖಿ ಕೇಸಿಗೆ ಸಂಬಂಧಿಸಿ 1994ರಲ್ಲಿ ನೀಡಲಾದ ತೀರ್ಪು ಕೇಂದ್ರದ ಅಧ್ಯಾದೇಶಕ್ಕೆ ಮಾತ್ರ ಸೀಮಿತವಾಗಿದ್ದು, ಇತರ ಪ್ರಕರಣಗಳಿಗೆ ಆ ತೀರ್ಪು ಅನ್ವಯಿಸುವುದಿಲ್ಲ’ವೆಂಬುದಾಗಿದೆ.

     ಸುಪ್ರೀಮ್ ಕೋರ್ಟಿನ ಈ ನಿಲುವಿಗೆ ಬಿಜೆಪಿ ಮತ್ತು ಸಂಘಪರಿವಾರದ ಗುಂಪಿನಿಂದ ಸಂಭ್ರಮ ವ್ಯಕ್ತವಾಗಿದೆ. ಇದು ಮುಸ್ಲಿಮರಿಗಾದ ಹಿನ್ನಡೆ ಎಂಬ ರೀತಿಯಲ್ಲಿ ವ್ಯಾಖ್ಯಾನಗಳೂ ನಡೆದಿವೆ. ನಿಜವಾಗಿ, ಈ ಹಿನ್ನಡೆ-ಮುನ್ನಡೆಯ ಆಚೆಗೆ ಒಂದು ವಾಸ್ತವವಿದೆ. ಒಂದುವೇಳೆ, ಸುನ್ನಿ ವಕ್ಫ್ ಬೋರ್ಡ್‍ನ ಕೋರಿಕೆಗೆ ಮನ್ನಣೆ ಸಿಗುತ್ತಿದ್ದರೆ, ಬಾಬರಿ ವಿವಾದದ ಇತ್ಯರ್ಥಕ್ಕೆ ಇನ್ನಷ್ಟು ಸಮಯ ತಗಲುತ್ತಿತ್ತು. ‘ಬಾಬರಿ ಮಸೀದಿಯಿದ್ದ ಭೂಮಿ ಯಾರದು’ ಎಂಬ ಮೂಲ ಪ್ರಶ್ನೆಯನ್ನು ವಿಚಾರಣೆಗೆ ಎತ್ತಿಕೊಳ್ಳುವುದಕ್ಕಿಂತ ಮೊದಲು ‘ನಮಾಝïಗೆ ಮಸೀದಿ ಅನಿವಾರ್ಯವಲ್ಲ’ ಎಂಬ 1994ರ ತೀರ್ಪು ಮರುಪರಿಶೀಲನೆಗೊಂಡು ಇತ್ಯರ್ಥವಾಗಬೇಕಾದ ಅಗತ್ಯ ಇತ್ತು. ಹಾಗೆ ಅಗಿರುತ್ತಿದ್ದರೆ, ‘ಬಾಬರಿ ಮಸೀದಿಯಿದ್ದ ಜಾಗ ಯಾರದು’ ಎಂಬ ಮೂಲ ಮತ್ತು ನಿರ್ಣಾಯಕ ಪ್ರಶ್ನೆಯ ಮೇಲಿನ ವಿಚಾರಣೆಯು ಈಗ ನಿಗದಿಯಾಗಿರುವಂತೆ ಅಕ್ಟೋಬರ್ 29ರಂದು ಪ್ರಾರಂಭವಾಗುವುದಕ್ಕೆ ಸಾಧ್ಯವೇ ಇರಲಿಲ್ಲ. ಒಂದು ರೀತಿಯಲ್ಲಿ, ಲೋಕಸಭಾ ಚುನಾವಣೆಗಿಂತ ಮೊದಲು ಬಾಬರಿ ವಿವಾದ ಇತ್ಯರ್ಥವಾಗುವುದನ್ನು ತಡೆಯುವ ಸಾಮರ್ಥ್ಯ  ವಕ್ಫ್ ಬೋರ್ಡ್‍ನ ಕೋರಿಕೆಗಿತ್ತು. ಆದ್ದರಿಂದಲೇ,

   ಈ ಕೋರಿಕೆ ತಿರಸ್ಕ್ರತಗೊಳ್ಳುವುದನ್ನು ಬಿಜೆಪಿ ಬಯಸುತ್ತಿತ್ತು. ಮುಂದಿನ ಲೋಕಸಭಾ ಚುನಾವಣೆಯನ್ನು ನೋಟು ಬ್ಯಾನ್, ಜಿಎಸ್‍ಟಿ, ಕಪ್ಪು ಹಣದ ವೈಫಲ್ಯ, ರಫೇಲ್ ಹಗರಣ, ತೈಲ ಬೆಲೆ ಏರಿಕೆ, ನಿರುದ್ಯೋಗ ಇತ್ಯಾದಿಗಳ ಮೂಲಕ ಎದುರಿಸಲಾಗದೆಂಬುದು ಅದಕ್ಕೆ ಚೆನ್ನಾಗಿ ಗೊತ್ತು. ಆದ್ದರಿಂದ, ರಾಮಮಂದಿರ ಅದರ ಇಂದಿನ ತುರ್ತು ಅಗತ್ಯ. ಕೋರ್ಟಿನ ತೀರ್ಪು ಪರವಾಗಿ ಬಂದರೂ ವಿರುದ್ಧವಾಗಿ ಬಂದರೂ ಲಾಭ ಕೊಯ್ಯುವ ಕಾರ್ಯತಂತ್ರವನ್ನು ಅದು ಈಗಾಗಲೇ ಹೆಣೆದಿದೆ ಎಂದು ಹೇಳಲಾಗುತ್ತದೆ. ತೀರ್ಪು ಪರವಾಗಿ ಬಂದರೆ ಅದನ್ನೇ ಸಾಧನೆಯಾಗಿ ಬಿಂಬಿಸಿ ಮತ ಯಾಚಿಸುವುದಕ್ಕೆ ಅದು ಮುಂದಾಗಬಹುದು. ತೀರ್ಪು ವಿರುದ್ಧವಾಗಿ ಬಂದರೆ, ಉಗ್ರ ಭಾಷಣ ಮತ್ತಿತರವುಗಳ ಮೂಲಕ ದೇಶದಾದ್ಯಂತ ಉದ್ವಿಘ್ನ ವಾತಾವರಣವೊಂದನ್ನು ನಿರ್ಮಿಸುವುದು ಮತ್ತು ಚುನಾವಣೆಯನ್ನು ಹಿಂದೂ v/s ಮುಸ್ಲಿಮ್ ಆಗಿ ವಿಭಜಿಸುವುದಕ್ಕೂ ಅದು ಪ್ರಯತ್ನಿಸಬಹುದು. ‘ಅಧ್ಯಾದೇಶ ತಂದು ಕೋಟು ತೀರ್ಪನ್ನು ಅಮಾನ್ಯಗೊಳಿಸುತ್ತೇವೆ, ಮಂದಿರ ಕಟ್ಟುತ್ತೇವೆ, ಬಹುಮತ ಕೊಡಿ’ ಎಂದೂ ಜನರಲ್ಲಿ ಅದು ಮನವಿ ಮಾಡಿಕೊಳ್ಳಬಹುದು. ಇವು ಏನಿದ್ದರೂ ಲಾಭ ಬಿಜೆಪಿಗೇ. ಅಂದಹಾಗೆ, ಕಪಿಲ್ ಸಿಬಲ್ ಅವರು ಇದನ್ನು ಈ ಹಿಂದೆಯೇ ಅಂದಾಜಿಸಿದ್ದರು. ಬಾಬರಿ ವಿವಾದ ಲೋಕಸಭಾ ಚುನಾವಣೆಯ ಬಳಿಕ ಇತ್ಯರ್ಥವಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಸುಪ್ರೀಮ್ ಕೋರ್ಟ್‍ನಲ್ಲಿ ವಾದಿಸಿದ್ದರು. ಅವರ ಈ ಬೇಡಿಕೆಯನ್ನು ಬಿಜೆಪಿ ಪ್ರಬಲವಾಗಿ ವಿರೋಧಿಸಿತ್ತು. ವಿಷಾದ ಏನೆಂದರೆ,

     ಕಾನೂನನ್ನು ಗೌರವಿಸದ ಗುಂಪೊಂದು  1992ರಲ್ಲಿ ಮಸೀದಿಯನ್ನು ಉರುಳಿಸಿದ ಬಳಿಕ, ‘ಮಸೀದಿ ಅನಿವಾರ್ಯವೋ’ ಎಂಬ ಪ್ರಶ್ನೆಯನ್ನು ಮುನ್ನೆಲೆಗೆ ತಂದು ಚರ್ಚಿಸಲಾಗುತ್ತಿದೆ ಎಂಬುದು. ಉರುಳಿಸಿದವರು ಇನ್ನೂ ಶಿಕ್ಷೆಗೆ ಒಳಗಾಗಿಲ್ಲ. ಆ ಕುರಿತಾದ ವಿಚಾರಣೆಯು ಈಗ ಯಾವ ಹಂತದಲ್ಲಿ ಇದೆ ಎಂಬುದು ಈಗ ಉರುಳಿಸಿದವರಿಗೇ ಗೊತ್ತಿಲ್ಲ. ಇಂಥದ್ದೊಂದು  ಸ್ಥಿತಿಯಲ್ಲಿ, ಮಸೀದಿ ಅನಿವಾರ್ಯವೇ ಎಂದು ಕೋರ್ಟೇ ಪ್ರಶ್ನಿಸುತ್ತಿರುವುದನ್ನು ಏನೆಂದು ಪರಿಗಣಿಸಬೇಕು? ಈ ಹಿಂದೆ ಉತ್ತರ ಪ್ರದೇಶದಲ್ಲಿ ಅಖ್ಲಾಕ್ ಎಂಬ ವೃದ್ಧರನ್ನು ಗುಂಪೊಂದು  ಥಳಿಸಿ ಕೊಂದುಹಾಕಿತ್ತು. ಆಗ ಹುಟ್ಟಿಕೊಂಡ ಪ್ರಶ್ನೆ ಏನೆಂದರೆ, ಆ ವೃದ್ಧರ ಮನೆಯ ಫ್ರೀಜರ್ ನಲ್ಲಿರುವುದು ಗೋಮಾಂಸವೋ ಅಲ್ಲ ಮೇಕೆ ಮಾಂಸವೋ ಎಂಬುದಾಗಿತ್ತು. ಥಳಿಸಿ ಕೊಂದ ಗುಂಪೇ ಹುಟ್ಟು ಹಾಕಿದ ಈ ಪ್ರಶ್ನೆಗೆ ಎಷ್ಟು ಮಹತ್ವ ಲಭಿಸಿತೆಂದರೆ, ಸರಕಾರವೇ ಅದಕ್ಕೆ ಕಿವಿಗೊಟ್ಟಿತು. ಫ್ರೀಜರ್ ನಲ್ಲಿದ್ದ ಮಾಂಸವನ್ನು ಪ್ರಯೋಗಾಲಯಕ್ಕೆ ರವಾನಿಸಿತು. ಒಂದಲ್ಲ, ಎರಡೆರಡು ಬಾರಿ ಮಾಂಸ ಪರೀಕ್ಷೆ ನಡೆಯಿತು. ಥಳಿಸಿ ಕೊಂದ ಕೃತ್ಯಕ್ಕಿಂತ ಫ್ರೀಜರ್ ನಲ್ಲಿದ್ದ ಮಾಂಸದ ಜಾತಿಯೇ ಪ್ರಾಮುಖ್ಯತೆಯನ್ನು ಪಡೆದ ಕ್ರೂರ ವ್ಯಂಗ್ಯವೂ ನಡೆಯಿತು. ಇದೀಗ ಬಾಬರಿ ಮಸೀದಿ ಪ್ರಕರಣವೂ ಅಂಥದ್ದೇ  ಒಂದು ಚರ್ಚೆಗೆ ತಿರುಗಿಕೊಂಡಿರುವುದು ವ್ಯಂಗ್ಯವೋ ಕುಚೋದ್ಯವೋ ಗೊತ್ತಾಗುತ್ತಿಲ್ಲ. ಅಂದಹಾಗೆ,

ನಮಾಝಗೆ ಮಸೀದಿಯೇ ಬೇಕೆಂದಿಲ್ಲ ನಿಜ. ಆದರೆ, ಮಸೀದಿ ಮುಸ್ಲಿಮರ ಅವಿಭಾಜ್ಯ ಅಂಗ. ಅದು ಅವರ ಸಾಂಸ್ಕ್ರತಿಕ, ರಾಜಕೀಯ, ಭಾವನಾತ್ಮಕ ಕೇಂದ್ರ. ಐದು ಹೊತ್ತಿನ ನಮಾಝನ್ನು ಸಾಮೂಹಿಕವಾಗಿ ನಿರ್ವಹಿಸಬೇಕಾದುದು ಮಸೀದಿಯಲ್ಲೇ.  ಮಸೀದಿಯಲ್ಲಿ ಮಾಡುವ ನಮಾಝಗೆ ಇತರೆಡೆ ಮಾಡುವ ನಮಾಝïಗಿಂತ ಹಲವು ಪಟ್ಟು ಹೆಚ್ಚು ಪುಣ್ಯವಿದೆ ಎಂಬ ಪ್ರವಾದಿ ವಚನ ಇದೆ. ಪ್ರವಾದಿಯವರು ಮದೀನಕ್ಕೆ ಹೋದ ಕೂಡಲೇ ಮಸೀದಿ ನಿರ್ಮಿಸಿದರು. ಮುಸ್ಲಿಮ್ ಸಮುದಾಯದ ಸರ್ವ ಸಮಸ್ಯೆಗಳ ಪರಿಹಾರ ಕೇಂದ್ರವಾಗಿ ಅವರು ಮಸೀದಿಯನ್ನು ಪ್ರಸ್ತುತಪಡಿಸಿದರು. ಶುಕ್ರವಾರದ ನಮಾಝ ಮತ್ತು ಪ್ರವಚನವನ್ನು ಮಸೀದಿಯಲ್ಲೇ  ನಿರ್ವಹಿಸಬೇಕಾಗಿದೆ. ಹಾಗಂತ, ಇದು ಈ ದೇಶದ ಮುಸ್ಲಿಮರ ಹೊಸ ವಾದವೇನೂ ಅಲ್ಲ. ಪ್ರವಾದಿಯವರ ವಚನಗಳೇ ಇದಕ್ಕೆ ಆಧಾರ. ಜಾಗತಿಕವಾಗಿ ಇರುವ ಮಸೀದಿಗಳು ಇದಕ್ಕೆ ಇನ್ನೊಂದು ಆಧಾರ. ಬಹುಶಃ,

    1994ರಲ್ಲಿ ತೀರ್ಪು ನೀಡುವಾಗ ಈ ವಿಷಯದ ಮೇಲೆ ಗಂಭೀರ ಅವಲೋಕನ ಮತ್ತು ಆಳ ಅಧ್ಯಯನ ನಡೆದಿಲ್ಲವೇನೋ ಎಂದು ತೋರುತ್ತದೆ. ಆದ್ದರಿಂದಲೇ, ಸುನ್ನಿ ವಕ್ಫ್ ಬೋರ್ಡ್‍ನ ಕೋರಿಕೆಯನ್ನು ಕೋರ್ಟು ಮಾನ್ಯ ಮಾಡಬೇಕಿತ್ತು ಎಂಬ ವಾದಕ್ಕೆ ಬಲ ಬರುವುದು. ಆದರೆ,

     ಸುಪ್ರೀಮ್ ಕೋರ್ಟು ಇನ್ನಾವುದೋ ತುರ್ತಿನಲ್ಲಿ ಇದ್ದಂತಿದೆ.



Monday, 1 October 2018

ಮದುವೆ ಮಾರುಕಟ್ಟೆಯಲ್ಲಿ ಹೆಣ್ಣು ಮತ್ತು ಗಂಡು



18 ಮತ್ತು 21- ಇದು ಹೆಣ್ಣು ಮತ್ತು ಗಂಡಿನ ಮದುವೆಗೆ ಬಾಲ್ಯವಿವಾಹ ತಡೆ ಕಾಯ್ದೆಯು (PCMA) ನಿಗದಿಪಡಿಸಿರುವ ಪ್ರಾಯ. 18 ವರ್ಷಕ್ಕಿಂತ ಒಳಗಿನ ಹೆಣ್ಣು ಅಥವಾ 21 ವರ್ಷಕ್ಕಿಂತ ಒಳಗಿನ ಗಂಡು ವಿವಾಹ ಬಂಧನದಲ್ಲಿ ಏರ್ಪಟ್ಟರೆ ಆ ವಿವಾಹ ಕಾನೂನು ಪ್ರಕಾರ ಅಸಿಂಧು ಮತ್ತು ಅಪರಾಧ. ಆದರೆ ಭಾರತೀಯ ದಂಡಸಂಹಿತೆ(ಐಪಿಸಿ)ಯು ಈ ವಿಷಯದಲ್ಲಿ ಬೇರೆಯದೇ ಆದ ನಿಲುವನ್ನು ಹೊಂದಿದೆ. ಇದರ 375ನೇ ವಿಧಿ ಹೇಳುವುದೇನೆಂದರೆ, ಪತ್ನಿಯು 15 ರಿಂದ 18 ವರ್ಷದ ಒಳಗಿನ ಪ್ರಾಯದವಳಾಗಿದ್ದರೆ ಆಕೆಯ ಸಮ್ಮತಿ ಪಡೆದು ಪತಿಯು ದೈಹಿಕ ಸಂಪರ್ಕವನ್ನು ಬೆಳೆಸಿದರೆ, ಅದು ಅತ್ಯಾಚಾರವಾಗುವುದಿಲ್ಲ. ಅಂದರೆ, ವಿವಾಹ ಸಿಂಧು ಎಂದರ್ಥ. ಇದು ಸ್ಪಷ್ಟ ವಿರೋಧಾಭಾಸ. ಒಂದು ಕಾನೂನು 18 ವರ್ಷದೊಳಗಿನ ವಿವಾಹವನ್ನು ಅಪರಾಧ ಎಂದು ಹೇಳುವಾಗ, ಇನ್ನೊಂದು ಕಾನೂನು, ಸಿಂಧು ಎಂದು ಪುರಸ್ಕರಿಸುತ್ತದೆ. ಇದೇವೇಳೆ, ತನ್ನ ಜನಪ್ರತಿನಿಧಿ ಯಾರಾಗಬೇಕು ಮತ್ತು ಈ ದೇಶವನ್ನು ಮುನ್ನಡೆಸುವುದಕ್ಕೆ ಯಾರು ಅರ್ಹರು ಎಂಬ ಅತಿ ಗಂಭೀರ ತೀರ್ಮಾನವನ್ನು ಕೈಗೊಳ್ಳುವುದಕ್ಕೆ 18 ವರ್ಷ ಸಾಕು ಎಂಬುದಾಗಿಯೂ ಇಲ್ಲಿನ ಕಾನೂನೇ ಒಪ್ಪಿಕೊಳ್ಳುತ್ತದೆ. 18 ವರ್ಷ ತುಂಬಿದ ಹೆಣ್ಣು-ಗಂಡು ಇಬ್ಬರಿಗೂ ಮತದಾನದ ಹಕ್ಕು ಲಭ್ಯವಾಗಿರುವುದು ಇದೇ ಕಾರಣದಿಂದ. ಹೀಗಿರುತ್ತಾ,

ಗಂಡಿನ ಮದುವೆಗೆ ಈ ಮಾನದಂಡ ಅನ್ವಯವಾಗುವುದಿಲ್ಲ ಅಂದರೆ ಏನರ್ಥ? 18 ವರ್ಷ ತುಂಬಿದ ಹೆಣ್ಣಿನಲ್ಲಿ ಮದುವೆಯ ಕುರಿತಾದ ತಿಳುವಳಿಕೆ, ಪ್ರಬುದ್ಧತೆ ಮತ್ತು ಪಕ್ವತೆ ಇರಬಹುದಾದರೆ, ಆ ಪ್ರಾಯದ ಗಂಡಿನಲ್ಲಿ ಇವು ಇರಲ್ಲ ಎಂದು ತೀರ್ಮಾನಿಸಿರುವುದಕ್ಕೆ ಆಧಾರ ಏನು? 18 ವರ್ಷದ ಹೆಣ್ಣಿನಲ್ಲಿರುವ ಪಕ್ವತೆಯನ್ನು ಗಳಿಸಲು ಗಂಡಿಗೆ 21 ವರ್ಷಗಳು ಬೇಕಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆಯೇ ಅಥವಾ ಇದು ಗಂಡಿನೊಂದಿಗೆ ಮಾಡಲಾಗುವ ತಾರತಮ್ಯವೇ? ಒಂದು ವೇಳೆ, ಗಂಡಿನ ಸ್ಥಾನದಲ್ಲಿ ಹೆಣ್ಣು ಇರುತ್ತಿದ್ದರೆ ಇದು ಅಸಮಾನತೆ ಎನಿಸಿಕೊಳ್ಳುತ್ತಿರಲಿಲ್ಲವೇ? ಸ್ತ್ರೀ ಶೋಷಣೆ, ಪುರುಷ ಪ್ರಧಾನ ನಿಲುವು ಎಂಬ ಟೀಕೆಗಳು ವ್ಯಕ್ತವಾಗುತ್ತಿರಲಿಲ್ಲವೇ? ಅಂದಹಾಗೆ,

ಈ ದೇಶದ ಕಾನೂನು ಆಯೋಗವು ಈ ವಿರೋಧಾಭಾಸದ ಕಾನೂನುಗಳು ಮತ್ತು ಈ ಪ್ರಾಯ ವ್ಯತ್ಯಾಸಗಳ ಕುರಿತಂತೆ ತಲೆ ಕೆಡಿಸಿಕೊಂಡಿದೆ. ಹೆಣ್ಣು ಮತ್ತು ಗಂಡಿನ ಮದುವೆ ಪ್ರಾಯವನ್ನು 18 ವರ್ಷಕ್ಕೆ ನಿಗದಿಗೊಳಿಸುವಂತೆ ಅದು ಕೇಂದ್ರ ಸರಕಾರಕ್ಕೆ ಕಳೆದವಾರ ಸಲಹೆ ನೀಡಿದೆ.

ಮದುವೆ ಎಂಬುದು ಹರೆಯದ ಹೆಣ್ಣು ಮತ್ತು ಗಂಡು ಜೋಡಿಗಳಾಗುವುದರ ಹೆಸರಾಗಿಯಷ್ಟೇ ಇವತ್ತು ಉಳಿದುಕೊಂಡಿಲ್ಲ. ಅದೊಂದು ಮಾರುಕಟ್ಟೆ. ಈ ಮಾರುಕಟ್ಟೆಯ ವ್ಯಾಪ್ತಿ ಎಷ್ಟು ದೊಡ್ಡದೆಂದರೆ, ಜಾಗತಿಕವಾಗಿ ಹಲವು ಲಕ್ಷ  ಕೋಟಿ ರೂಪಾಯಿಗಳು ಪ್ರತಿದಿನ ಈ ಮಾರುಕಟ್ಟೆಯಲ್ಲಿ ಚಲಾವಣೆಯಾಗುತ್ತದೆ. ಇವತ್ತಿನ ಮದುವೆಯ ಸ್ವರೂಪವನ್ನು ತೀರ್ಮಾನಿಸುವುದು ವಧು ಮತ್ತು ವರ ಅಲ್ಲ ಅಥವಾ ಆ ಎರಡೂ ಕುಟುಂಬಗಳ ಸದಸ್ಯರೂ ಅಲ್ಲ. ಕಂಪೆನಿಗಳು ಅದನ್ನು ಇವತ್ತು ನಿರ್ಧರಿಸುತ್ತವೆ. ಆಭರಣ ಕಂಪೆನಿಗಳು, ಉಡುಪು ವಿನ್ಯಾಸಕಾರರು, ಈವೆಂಟ್ ಮ್ಯಾನೇಜ್‍ಮೆಂಟ್ ಸಂಸ್ಥೆಗಳು ಮುಂತಾದುವು ಮದುವೆಯನ್ನು ಬಹುತೇಕ ಹೈಜಾಕ್ ಮಾಡಿವೆ. ಇಂಥ ಕಂಪೆನಿಗಳೇ ನೇರವಾಗಿಯೋ ಪರೋಕ್ಷವಾಗಿಯೇ ಧಾರಾವಾಹಿಗಳನ್ನು ನಿರ್ಮಿಸುತ್ತವೆ. ಸಿನಿಮಾಗಳನ್ನು ತಯಾರಿಸುತ್ತವೆ ಅಥವಾ ಪಾಲು ಬಂಡವಾಳ ಹೂಡುತ್ತವೆ. ತಮ್ಮ ಉತ್ಪನ್ನಗಳ ಮಾರಾಟಕ್ಕೆ ಪೂರಕವಾದ ಸನ್ನಿವೇಶ ಮತ್ತು ಕಥಾಹಂದರವನ್ನು ಧಾರಾವಾಹಿ-ಸಿನಿಮಾಗಳಲ್ಲಿ ಅವು ತುರುಕುತ್ತವೆ. ಮದುವೆಗಿಂತ ಮೊದಲು ಗಂಡು-ಹೆಣ್ಣು ಭೇಟಿಯಾಗುವುದು, ಪರಸ್ಪರ ಅನುರಾಗ ಉಂಟಾಗುವುದು ಮತ್ತು ವಿವಿಧ ತಿರುವುಗಳ ಮೂಲಕ ಈ ಗೆಳೆತನ ಮದುವೆಯ ಹಂತಕ್ಕೆ ಬಂದು ಮುಟ್ಟುವುದು ಇತ್ಯಾದಿಗಳು ನಡೆಯುತ್ತವೆ. ಈ ಎಲ್ಲ ಸಂದರ್ಭಗಳಲ್ಲಿ ಅವರು ಧರಿಸಿರುವ ಉಡುಪು, ತೊಟ್ಟಿರುವ ಆಭರಣ, ಮೊಬೈಲು, ವಾಹನ, ಪಾದರಕ್ಷೆ, ಕೈ ಗಡಿಯಾರ, ಕನ್ನಡಕ ಇತ್ಯಾದಿಗಳು ವೀಕ್ಷಕರ ಮೇಲೆ ಪ್ರಭಾವ ಬೀರುವಂತೆ ನೋಡಿಕೊಳ್ಳಲಾಗುತ್ತದೆ. ಗಂಡನ್ನು ಹೆಣ್ಣು ಆಕರ್ಷಿಸುವುದಕ್ಕೆ ಅಥವಾ ಹೆಣ್ಣಿನ ಮೇಲೆ ಗಂಡು ಪ್ರಭಾವ ಬೀರುವುದಕ್ಕೆ ಯಾವ ಬಣ್ಣದ, ಯಾವ ವಿನ್ಯಾಸದ ಡ್ರೆಸ್ ಧರಿಸಬೇಕು ಮತ್ತು ಯಾವೆಲ್ಲ ಸೌಂದರ್ಯ ಸಾಧನಗಳನ್ನು ಬಳಸಬೇಕು ಎಂಬುದನ್ನು ಬಾಯಿ ಮೂಲಕ ಹೇಳದೆಯೇ ಮನಸ್ಸಿಗೆ ನಾಟಿಸುವ ಪ್ರಯತ್ನ ಮಾಡಲಾಗುತ್ತದೆ. ಮದುವೆಗಿಂತ ಮೊದಲು ಪ್ರೇಮ, ಪ್ರಣಯ, ಅನುರಾಗಗಳು ಅಗತ್ಯವೆಂದೋ ಅನಿವಾರ್ಯವೆಂದೋ ಸಹಜವೆಂದೋ ಭಾವಿಸುವುದಕ್ಕೆ ಪೂರಕವಾದ ದೃಶ್ಯಗಳನ್ನು ಸೃಷ್ಟಿಸಲಾಗುತ್ತದೆ. ವಿವಾಹಪೂರ್ವದಲ್ಲಿ ನಡೆಯುವ ಈ ಪ್ರೇಮವನ್ನು ಉತ್ತೇಜಿಸುವುದರ ಜೊತೆಜೊತೆಗೇ ಅದಕ್ಕೆ ಬೇಕಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವುದೂ ನಡೆಯುತ್ತದೆ. ನಿಜವಾಗಿ,

ಪ್ರೇಮವೆಂಬುದೇ ಒಂದು ಅಮಲು. ಈ ಅಮಲು ಹೇಗಿರುತ್ತದೆಂದರೆ, ಏನನ್ನು ಬೇಕಾದರೂ ಖರೀದಿಸುವುದಕ್ಕೆ ಪ್ರೇಮಿಗಳು ಹಿಂಜರಿಯದಂತೆ ಮಾಡುವಷ್ಟು. ಆದ್ದರಿಂದ, ವಿವಾಹಪೂರ್ವ ಪ್ರೇಮ ಪ್ರಸಂಗಗಳಿಲ್ಲದ ಬರೇ, ಸಾಂಪ್ರದಾಯಿಕ ವಿವಾಹಗಳನ್ನು ಕಾರ್ಪೋರೇಟ್ ಕಂಪೆನಿಗಳು ಉತ್ತೇಜಿಸುವುದಕ್ಕೆ ಸಾಧ್ಯವೇ ಇಲ್ಲ. ಹಾಗೆ ಮಾಡುವುದರಿಂದ ಉತ್ಪನ್ನಗಳ ದೊಡ್ಡಮಟ್ಟದ ಖರೀದಿ ಸಾಧ್ಯತೆಯು ಕಮರಿ ಹೋಗುತ್ತದೆ. ಅಷ್ಟಕ್ಕೂ,

ವಿವಾಹವೇ ಮಾರುಕಟ್ಟೆಯ ಸರಕಾಗಿ ಪರಿವರ್ತಿತವಾಗಿರುವ ಈ ಹೊತ್ತಿನಲ್ಲಿ ವಿವಾಹಕ್ಕೆ ಸಂಬಂಧಿಸಿ ಹೆಣ್ಣು-ಗಂಡಿನ ಪ್ರಾಯದಲ್ಲಿ ಏಕರೂಪತೆ ಇರಬೇಕೋ ಬೇಡವೋ ಎಂಬುದು ಬಹುಗಂಭೀರ ಪ್ರಶ್ನೆಯಾಗಿ ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದರೂ, ಈ ಅಸಮಾನತೆ ಏಕೆ ಎಂಬ ಪ್ರಶ್ನೆಯಲ್ಲಿ ತೂಕವಿದೆ. ಇನ್ನು, ವಿವಾಹ ಪ್ರಾಯವಾಗಿ ಹೆಣ್ಣು-ಗಂಡು ಇಬ್ಬರಿಗೂ 18 ವರ್ಷವನ್ನೇ ನಿಗದಿಪಡಿಸಿದೆವು ಎಂದೇ ಇಟ್ಟುಕೊಳ್ಳೋಣ. ಇದರಿಂದ ಈ ದೇಶದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹವನ್ನು ಕೊನೆಗಾಣಿಸುವುದಕ್ಕೆ ಏನಾದರೂ ಪ್ರಯೋಜನವಾಗಬಹುದೇ? ಬಾಲ್ಯ ವಿವಾಹಕ್ಕೆ ಬಹುಮುಖ್ಯ ಕಾರಣ ಏನೆಂದರೆ, ಬಡತನ, ವರದಕ್ಷಿಣೆ, ಅಜ್ಞಾನ ಮತ್ತು ಮದುವೆಯ ಖರ್ಚು ವೆಚ್ಚಗಳ ಭಾರ ಮತ್ತಿತರ ಅಂಶಗಳು. ವಿವಾಹ ಪ್ರಾಯವನ್ನು 18ಕ್ಕೆ ನಿಗದಿಗೊಳಿಸುವುದರಿಂದ ಈ ಸಮಸ್ಯೆಗಳು ಪರಿಹಾರ ಆಗಲಾರವು. ಸದ್ಯ ಭಾರತದಲ್ಲಿ ನಡೆಯುವ ಮದುವೆಗಳಲ್ಲಿ 47% ಹುಡುಗಿಯರು 18 ವರ್ಷಕ್ಕಿಂತ ಕೆಳಗಿನವರಾದರೆ, 18% ಹುಡುಗಿಯರು 15 ವರ್ಷಕ್ಕಿಂತ ಕೆಳಗಿನವರು ಎಂದು ಯುನಿಸೆಫ್‍ನ ವರದಿಯೇ ಹೇಳುತ್ತದೆ. ಇದನ್ನು ಬದಲಿಸಬೇಕೆಂದರೆ ಬಡತನ-ಅನಕ್ಷರತೆಯನ್ನು ಹೋಗಲಾಡಿಸುವುದಕ್ಕೆ ಗಂಭೀರ ಪ್ರಯತ್ನಗಳಾಗಬೇಕು. ಪರಂಪರಾಗತ ತಪ್ಪು ರೂಢಿಯನ್ನು ತಿದ್ದುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಹಾಗಂತ, ಕಾನೂನು ರಚಿಸಿದಷ್ಟು ಇದು ಸುಲಭ ಅಲ್ಲ. ಒಂದುವೇಳೆ, ಈ ನಿಟ್ಟಿನಲ್ಲಿ ನಾವು ಯಶಸ್ವಿಯಾದರೂ ಆ ಯಶಸ್ಸಿಗೂ ಒಂದು ಮಿತಿಯಿದೆ ಎಂಬುದನ್ನೂ ನಾವು ಒಪ್ಪಿಕೊಳ್ಳಬೇಕು. ಅದೇನೆಂದರೆ, ಮದುವೆ ಪ್ರಾಯದ ಬಗ್ಗೆ ಅವರು ಜಾಗೃತರಾಗುವುದೆಂದರೆ, ಕಂಪೆನಿಗಳು ಬೀಸಿರುವ ಮದುವೆ ಮಾರುಕಟ್ಟೆಯೊಳಗೆ ಅವರನ್ನು ಪ್ರವೇಶಗೊಳಿಸುವುದು ಎಂದೂ ಆಗುತ್ತದೆ. ಹಳ್ಳಿಯ ಮೂಲೆಯಲ್ಲಿ ಕೆಲವೇ ಮಂದಿ ಸೇರಿಕೊಂಡು ಮಾಡಿ ಮುಗಿಸುವ (ಕಾನೂನು ಬದ್ಧವಲ್ಲದಿದ್ದರೂ) ಮದುವೆಯು ಈ ಮೂಲಕ ರದ್ದುಗೊಳ್ಳುತ್ತದೆ ಮತ್ತು ಕಂಪೆನಿಗಳು ಪ್ರಸ್ತುತಪಡಿಸುವ ಮದುವೆಯ ಚೌಕಟ್ಟಿನೊಳಗೆ ಈ ಮದುವೆಗಳು ಸೇರ್ಪಡೆಗೊಳ್ಳುತ್ತವೆ. ಆದ್ದರಿಂದ,

ಪ್ರಾಯ ನಿಗದಿಯೊಂದೇ ಉತ್ತರ ಅಲ್ಲ. ಮದುವೆಯು ಮಾರುಕಟ್ಟೆಯ ಸರಕಾಗದಂತೆ ನೋಡಿಕೊಳ್ಳುವುದೂ ಮುಖ್ಯ.

ಏಲಂ ಆದ ಗಾಂಧೀಜಿ


  
 ಅಮೇರಿಕದ ಬೋಸ್ಟನ್‍ನಲ್ಲಿ ಕಳೆದವಾರ ಅಪರೂಪದ ಏಲಂ ಒಂದು ನಡೆದಿದೆ. ಏಲಂಗೆ ಒಳಗಾದವರು ಗಾಂಧೀಜಿ. ಏಲಂ ಮಾಡಿದವರು ಆರ್.ಆರ್. ಏಲಂ ಸಂಸ್ಥೆ. 1976ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಗೆ ಏಲಂ ಹೊಸತಲ್ಲ. ಈಗಾಗಲೇ ಅದು 500ಕ್ಕಿಂತಲೂ ಅಧಿಕ ಅಪರೂಪದ ವಸ್ತುಗಳನ್ನು ಏಲಂ ಮಾಡಿದೆ. ಗಗನಯಾತ್ರಿ ಡೇವ್ ಸ್ಕಾಟ್‍ರಿಂದ ಹಿಡಿದು ಅಮೇರಿಕದ ಅಧ್ಯಕ್ಷ ಕೆನಡಿಯವರೆಗೆ, ಕಾದಂಬರಿಕಾರ ಮಾರಿಯೋ ಪುಝೋರಿಂದ ಹಿಡಿದು ಗಾಂಧೀಜಿಯವರ ವರೆಗೆ ಅದು ಯಾರನ್ನೂ ಏಲಂ ಮಾಡದೇ ಬಿಟ್ಟಿಲ್ಲ. ಜಗತ್ತಿನ ಪ್ರಭಾವಶಾಲಿ ವ್ಯಕ್ತಿಗಳಿಗೆ ಸಂಬಂಧಿಸಿ ಬಟ್ಟೆ, ಪೆನ್ನು, ಡೈರಿ, ಚಪ್ಪಲಿ.. ಇತ್ಯಾದಿ ಅಮೂಲ್ಯವಾದವುಗಳನ್ನು ಏಲಂ ಮಾಡುವುದು ಅದರ ಗುರಿ. ಮಾತ್ರವಲ್ಲ, ಅದು ಹುಟ್ಟಿಕೊಂಡದ್ದೇ  ಏಲಂ ಮಾಡುವುದಕ್ಕೆ. ಆದ್ದರಿಂದ ಕಳೆದವಾರ ಬೋಸ್ಟನ್‍ನಲ್ಲಿ ಗಾಂಧೀಜಿಯವರ ಪತ್ರವೊಂದನ್ನು 6,358 ಡಾಲರ್ ಗೆ  ಅದು ಏಲಂ ಮಾಡಿರುವುದರಲ್ಲಿ ಅಚ್ಚರಿ ಏನಿಲ್ಲ. ಈ ಪತ್ರದಲ್ಲಿ ಗಾಂಧೀಜಿಯವರು  ಚರಕದ ಮಹತ್ವದ ಬಗ್ಗೆ ಹೇಳಿದ್ದರು. ಯಶ್ವಂತ್ ಪ್ರಸಾದ್ ಎಂಬವರನ್ನು ಉದ್ದೇಶಿಸಿ ಬರೆಯಲಾದ ಮತ್ತು ದಿನಾಂಕ ನಮೂದಿಸದ ಆ ಪತ್ರ ಗುಜರಾತಿ ಭಾಷೆಯಲ್ಲಿತ್ತು. ಗಾಂಧೀಜಿಯವರು ಪುಣೆಯ ಯರವಾಡ ಜೈಲಿನಲ್ಲಿದ್ದಾಗ ಚರಕದಿಂದ ನೂಲು ತೆಗೆಯುವ ಶಿಕ್ಷೆಗೆ ಗುರಿಯಾಗಿದ್ದರು. ಜೈಲಿನಿಂದ ಹೊರಗೆ ಬಂದ ಮೇಲೆ ಅದೇ ಚರಕವನ್ನು ಬ್ರಿಟಿಷ್ ದಬ್ಬಾಳಿಕೆಯ ವಿರುದ್ಧದ ಪ್ರತಿ ಅಸ್ತ್ರವಾಗಿ ಅವರು ಬಳಸಿಕೊಂಡರು. ಚರಕದಿಂದ ನೂಲು ತೆಗೆಯುವ ಮೂಲಕ ಖಾದಿಯನ್ನು ಉತ್ತೇಜಿಸುವುದು ಅವರ ಉದ್ದೇಶವಾಗಿತ್ತು. ದಿನದಲ್ಲಿ ಸ್ವಲ್ಪ ಸಮಯವನ್ನು ಚರಕಕ್ಕೆ ನೀಡುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡಿ ಎಂದವರು ದೇಶದ ಜನರಿಗೆ ಕರೆಕೊಟ್ಟಿದ್ದರು. ಚರಕವನ್ನು ಅವರು ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿ ಪ್ರಸ್ತುತಪಡಿಸಿದ್ದರು. ಇದೇ ಗಾಂಧೀಜಿಯನ್ನು ಈ ದೇಶ ಕಳಕೊಂಡು 7 ದಶಕಗಳಾದ ಬಳಿಕದ ಈಗಿನ ಸ್ಥಿತಿ ಹೇಗಿದೆಯೆಂದರೆ, ಅವರನ್ನು ಕೊಂದವನೇ ಈ ದೇಶದಲ್ಲಿ ಗೌರವಕ್ಕೆ ಅರ್ಹವಾಗುತ್ತಿದ್ದಾನೆ. ಆತನ ಪುತ್ಥಳಿ ಸ್ಥಾಪಿಸಲಾಗುತ್ತಾ ಇದೆ. ಇನ್ನೊಂದೆಡೆ, ವಿದೇಶದಲ್ಲಿ ಆ ಗಾಂಧೀಜಿಯೇ ಮಾರಾಟವಾಗುತ್ತಿದ್ದಾರೆ. ಬಹುಶಃ, ಗಾಂಧೀಜಿಯ ಒಂದೊಂದೇ ಕುರುಹುಗಳು ಮತ್ತು ಅವರು ಈ ದೇಶಕ್ಕೆ ನೀಡಿದ ಕೊಡುಗೆಗಳು ಮಾರಾಟವಾಗುತ್ತಲೋ ಅವಹೇಳನಕ್ಕೆ ಗುರಿಯಾಗುತ್ತಲೋ ಅಂತಿಮವಾಗಿ ನಾಮಾವಶೇಷವಾಗಿ ಬಿಡುತ್ತೇನೋ ಅನ್ನುವ ಸಂದೇಹ ಕಾಡತೊಡಗಿದೆ.

ಸದ್ಯ ಈ ದೇಶವನ್ನು ಆಳುವ ಪ್ರಭುತ್ವದ ಮಾತು-ಕೃತಿಗಳು ಹೇಗಿವೆಯೆಂದರೆ, ನಾಲ್ಕು ವರ್ಷಗಳ ಹಿಂದೆ ಈ ದೇಶ ಬಹುತೇಕ ಶೂನ್ಯವಾಗಿತ್ತು ಎಂಬ ರೀತಿಯಲ್ಲಿದೆ. ಗಾಂಧೀಜಿ ದೇಶ ವಿಭಜಕ, ನೆಹರೂ ಮೋಸಗಾರ, ದೇಶವನ್ನಾಳಿದ ಕಾಂಗ್ರೆಸ್ ಭ್ರಷ್ಟ, ಪಟೇಲ್ ದೇಶಪ್ರೇಮಿ, ಬೋಸ್ ನಿಜ ನಾಯಕ.. ಹೀಗೆ ಕಳೆದುಹೋದ ವ್ಯಕ್ತಿತ್ವವನ್ನು ಪರಸ್ಪರ ಎತ್ತಿ ಕಟ್ಟುವ ಪ್ರಯತ್ನಗಳು ನಡೆಯುತ್ತಿವೆ. ಗಾಂಧೀಜಿಯ ವಿರುದ್ಧ ಗೋಡ್ಸೆಯನ್ನು ತಂದು ನಿಲ್ಲಿಸುವುದು. ಗಾಂಧೀಜಿಗೆ ಅಂಬೇಡ್ಕರ್ ರನ್ನು ಮುಖಾಮುಖಿಸುವುದು, ಪಟೇಲ್‍ರನ್ನು ವೈಭವೀಕರಿಸಿ ನೆಹರೂರನ್ನು ಹೀಗಳೆಯುವುದು, ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟದ ಮಾದರಿಗಿಂತ ಬೋಸ್‍ರ ಹಿಂಸಾತ್ಮಕ ಹೋರಾಟ ಮಾದರಿಯು ಉತ್ತಮ ಎಂಬ ರೀತಿಯಲ್ಲಿ ವರ್ಣಿಸುವುದು, ಇತಿಹಾಸದಲ್ಲಿ ಆಗಿ ಹೋದ ರಾಜರುಗಳನ್ನು ಹಿಂದೂ ಮತ್ತು ಮುಸ್ಲಿಮ್ ಎಂದು ವರ್ಗೀಕರಿಸಿ ಮುಸ್ಲಿಮ್ ದೊರೆಗಳೆಲ್ಲ ಹೇಗೆ ಕ್ರೂರಿಗಳು ಮತ್ತು ಹಿಂದೂ ದೊರೆಗಳು ಹೇಗೆ ಸಂತ್ರಸ್ತರು ಎಂಬುದನ್ನು ಭಾವುಕತೆಯಿಂದ ವಿವರಿಸುವುದು.. ಇತ್ಯಾದಿಗಳು ಬಹು ಜೋರಾಗಿ ನಡೆಯುತ್ತಿವೆ. ಇದೊಂದು ಬಗೆಯ ತಂತ್ರ. ಈ ದೇಶದ ಪಠ್ಯಪುಸ್ತಕಗಳು, ಸಾಹಿತ್ಯ ಗ್ರಂಥಗಳು, ಇತಿಹಾಸ ಪುಸ್ತಕಗಳು ಯಾರನ್ನು ಐಕಾನ್‍ಗಳಾಗಿ ಪ್ರಸ್ತುತಪಡಿಸಿದೆಯೋ ಅವರ ವರ್ಚಸ್ಸನ್ನು ತಗ್ಗಿಸಿ ಪ್ರತಿ ವ್ಯಕ್ತಿತ್ವಗಳನ್ನು ಜನರ ಮನಸ್ಸಿನಲ್ಲಿ ನಾಟುವುದು ಇದರ ಹಿಂದಿರುವ ಉದ್ದೇಶ. ಹಾಗಂತ, ದೀರ್ಘ ಸಮಯದಿಂದ ಜನರು ಗೌರವಿಸಿಕೊಂಡು ಬಂದಿರುವ ವ್ಯಕ್ತಿತ್ವಗಳನ್ನು ಮತ್ತು ಒಪ್ಪಿಕೊಂಡು ಬಂದಿರುವ ಇತಿಹಾಸವನ್ನು ಸುಲಭದಲ್ಲಿ ಬದಲಿಸಿ ಬಿಡಲು ಸಾಧ್ಯವಿಲ್ಲ ಎಂಬುದು ಈ ಜನರಿಗೆ ಗೊತ್ತು. ಆದ್ದರಿಂದಲೇ, ಆ ವ್ಯಕ್ತಿತ್ವಗಳ ಬಗ್ಗೆ ಗೊಂದಲಕಾರಿ ವಿವರಗಳನ್ನು ಹರಿಯಬಿಡಲಾಗುತ್ತಿದೆ. ವ್ಯಂಗ್ಯ, ತಮಾಷೆ, ಕುಚೋದ್ಯಗಳ ಹೇಳಿಕೆಗಳನ್ನು ಅವರ ಬಗ್ಗೆ ನೀಡಲಾಗುತ್ತಿದೆ. ತಮಾಷೆ ಏನೆಂದರೆ,

ಗಾಂಧೀಜಿಯವರು ಚರಕ ಮತ್ತು ಉಪ್ಪನ್ನು ಸ್ವಾಭಿಮಾನದ ಸಂಕೇತವಾಗಿ ಬಳಸಿಕೊಂಡಿದ್ದರು. ಬ್ರಿಟಿಷರ ದೊಡ್ಡಣ್ಣ ನೀತಿಯನ್ನು ಪ್ರತಿರೋಧಿಸಿ ಚಾಲ್ತಿಗೆ ತಂದ ಎರಡು ಪ್ರತಿ ಏಟುಗಳು ಇವಾಗಿದ್ದುವು. ‘ನಿಮ್ಮ ಉಡುಪು ನಮಗೆ ಬೇಡ’ ಎಂದರು. ‘ನಮ್ಮ ಉಡುಪಿನ ಆಯ್ಕೆ ನಮ್ಮದು’ ಅಂದರು. ‘ಭಾರತೀಯರು ಏನನ್ನು ಉಡಬೇಕು ಮತ್ತು ಏನನ್ನು ಉಣ್ಣಬೇಕು ಎಂಬುದು ಬ್ರಿಟಿಷರ ಮರ್ಜಿಯನ್ನು ಅವಲಂಬಿಸಿಕೊಂಡಿಲ್ಲ’ ಎಂದು ಸಾರಿದರು. ನಿಜವಾಗಿ, ಇದೊಂದು ಕೆಚ್ಚೆದೆಯ ನಡೆ. ಇನ್ನೂ ಸ್ವತಂತ್ರವಾಗಿಲ್ಲದ, ಭಾರತೀಯರ ಸರಕಾರವೂ ಇಲ್ಲದ ಮತ್ತು ಬ್ರಿಟಿಷರ ಅಣತಿಯಂತೆ ಬದುಕಬೇಕಾದಂತಹ ಸನ್ನಿವೇಶದಲ್ಲೂ ಓರ್ವ ಸಣಕಲು ವ್ಯಕ್ತಿ ತೋರಿದ ಧೈರ್ಯಶಾಲಿ ಪ್ರತಿರೋಧ ಇದು. ಇವತ್ತು ಭಾರತ ಸಾರ್ವಭೌಮ ರಾಷ್ಟ್ರ. ಮೌಂಟ್ ಬ್ಯಾಟನ್‍ನ ಕೈಯಲ್ಲಿ ಈ ದೇಶ ಇಲ್ಲ. ನಮಗೊಂದು ಗಡಿಯಿದೆ. ನಮ್ಮದೇ ಆದ ಸಂವಿಧಾನವಿದೆ. ಭಾರತೀಯರೇ ಆರಿಸಿದ ಸರಕಾರವೂ ಇದೆ. ಆದರೂ, ಈಗಿನ ಸರಕಾರದ ದೈನೇಸಿ ಸ್ಥಿತಿ ಹೇಗಿದೆಯೆಂದರೆ, ಸ್ವಾಭಿಮಾನವನ್ನೆಲ್ಲ ಅಡವಿಟ್ಟುಕೊಂಡು ತಲೆ ತಗ್ಗಿಸಿ ನಿಂತಿದೆ. ಭಾರತ ಇವತ್ತು ಯಾರಿಂದ ಪೆಟ್ರೋಲ್ ಖರೀದಿಸಬೇಕು ಎಂಬುದನ್ನು ತೀರ್ಮಾನಿಸುವುದು ಅಮೇರಿಕ. ರಶ್ಯದಿಂದ ರಕ್ಷಣಾ ಸಾಮಗ್ರಿಗಳನ್ನು ಖರೀದಿಸುವುದಕ್ಕೆ ಅನುಮತಿ ಕೊಡಬೇಕೆಂದು ಅಮೇರಿಕದೊಂದಿಗೆ ಇವತ್ತಿನ ಸರಕಾರ ಮನವಿ ಮಾಡಿಕೊಳ್ಳುತ್ತಿದೆ. ಇಲ್ಲಿಂದ ರಫ್ತಾಗುವ ಉತ್ಪನ್ನಗಳ ಮೇಲೆ ಅಮೇರಿಕ ಹೆಚ್ಚುವರಿ ಸುಂಕ ಹಾಕಿದಾಗ ನಮ್ಮ ಪ್ರಭುತ್ವ ತೋರಿದ ಪ್ರತಿಕ್ರಿಯೆ ತೀರಾ ಮೃದುವಾದುದು. ಅಮೇರಿಕದ ಉತ್ಪನ್ನಗಳಿಗೆ ಭಾರೀ ಮಟ್ಟದಲ್ಲಿ ಸುಂಕ ವಿಧಿಸುವ ಚೀನಾದ ಧೈರ್ಯವನ್ನು ಇಲ್ಲಿನ ಪ್ರಭುತ್ವ ಪ್ರದರ್ಶಿಸುತ್ತಿಲ್ಲ. ಒಂದುಕಡೆ, ಚರಕ ಮತ್ತು ಉಪ್ಪಿನ ಮೂಲಕ ಬಹುದೊಡ್ಡ ಸಾಮ್ರಾಜ್ಯವೊಂದನ್ನೇ ಎದುರು ಹಾಕಿಕೊಂಡು ಸ್ವಾಭಿಮಾನ ಪ್ರದರ್ಶಿಸಿದ್ದ ಗಾಂಧೀಜಿ ಇದ್ದರೆ ಇನ್ನೊಂದು ಕಡೆ, ಸ್ವಾಭಿಮಾನಿ ಭಾರತದ ಬಗ್ಗೆ ಮಾರುದ್ಧ ಭಾಷಣಗಳನ್ನು ಬಿಗಿಯುತ್ತಲೇ ಅಮೇರಿಕದ ಮುಂದೆ ಸ್ವಾಭಿಮಾನವನ್ನು ಕಳಚಿಟ್ಟು ದೈನೇಸಿಯಾಗಿ ನಿಂತಿರುವ ಈಗಿನ ಪ್ರಭುತ್ವ ಇದೆ. ‘ಅಮೇರಿಕ ಬಗ್ಗಲು ಹೇಳಿದರೆ ತೆವಳಲೂ ಸಿದ್ಧ’ ಎಂಬ ಸಂದೇಶ ಸಾರುವ ಆಡಳಿತ ನೀತಿ ಈಗಿನದು. ದುರಂತ ಏನೆಂದರೆ, ಇದೇ ಪ್ರಭುತ್ವವೇ ಗಾಂಧೀಜಿಯನ್ನು ಮತ್ತು ಅವರು ಪ್ರತಿಪಾದಿಸಿದ ಸಿದ್ಧಾಂತವನ್ನು ತಮಾಷೆ ಮಾಡುತ್ತಿದೆ. ಈ ಪ್ರಭುತ್ವದ ಜೊತೆ ಗುರುತಿಸಿಕೊಂಡವರು ಸ್ವಾಭಿಮಾನಿ ಭಾರತದ ನಿರ್ಮಾಣದ ಬಗ್ಗೆ ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಅಮೇರಿಕಕ್ಕೆ ಕನಿಷ್ಠಪಕ್ಷ ಟರ್ಕಿ ತೋರಿದ ಪ್ರತಿರೋಧವನ್ನು ತೋರಲೂ ಈ ಪ್ರಭುತ್ವಕ್ಕೆ ಸಾಧ್ಯವಾಗುತ್ತಿಲ್ಲ. ಅಮೇರಿಕ ಒಡ್ಡುವ ಷರತ್ತುಗಳನ್ನೆಲ್ಲ ಒಪ್ಪಿಕೊಂಡು ತಲೆ ತಗ್ಗಿಸಿ ನಡೆಯುವುದೇ ಸ್ವಾಭಿಮಾನ ಎಂದು ಈ ಸರಕಾರ ಭಾವಿಸಿರುವಂತಿದೆ. ನಿಜವಾಗಿ,

ಅಮೇರಿಕದಲ್ಲಿ ಮಾರಾಟವಾದದ್ದು ಗಾಂಧೀಜಿಯ ಪತ್ರವಲ್ಲ, ಈ ದೇಶದ ಸ್ವಾಭಿಮಾನ. ಆದರೆ ದೈನೇಸಿತನವನ್ನೇ ಸ್ವಾಭಿಮಾನ ಅಂದುಕೊಂಡಿರುವ ಈ ಸರಕಾರಕ್ಕೆ ಅದು ಅರ್ಥವಾಗಿಲ್ಲ, ಅಷ್ಟೇ.


Friday, 14 September 2018

ಮೌನದ ಎದುರು ಸೋಲೊಪ್ಪಿಕೊಂಡ ವಾಚಾಳಿತನ


   
 ಬಟಾಟೆ, ಬೆಂಡೆಕಾಯಿ, ಹಸಿ ಮೆಣಸು, ಟೊಮೆಟೊ, ನೀರುಳ್ಳಿ ಇತ್ಯಾದಿಗಳನ್ನು ದಾರದಿಂದ ಪರಸ್ಪರ ಪೋಣಿಸಿ, ಮಾಲೆಯಂತೆ ಕೊರಳಿಗೆ ಧರಿಸಿದ ಸುಶ್ಮಾ ಸ್ವರಾಜ್‍ರ ಫೋಟೋವನ್ನು 2009 ಆಗಸ್ಟ್ 3ರಂದು ಇಂಡಿಯಾ ಟುಡೇ ಪತ್ರಿಕೆಯು ಪ್ರಕಟಿಸಿತ್ತು. ಫೋಟೋ ಕ್ಲಿಕ್ಕಿಸಿದ್ದು ಸುಬೀರ್ ಹೈದರ್ ಎಂದೂ ಅದು ನಮೂದಿಸಿತ್ತು. ದೆಹಲಿಯ ಜಂತರ್ ಮಂತರ್ ನಲ್ಲಿ ಸುಶ್ಮಾ ಸ್ವರಾಜ್‍ರು ಈ ರೀತಿ ಕಾಣಿಸಿಕೊಂಡಿದ್ದರು. ‘ಮನ್‍ಮೋಹನ್ ಸಿಂಗ್ ಸರಕಾರವು ಬೆಲೆ ಏರಿಕೆಯನ್ನು ತಡೆಯಲು ವಿಫಲವಾಗಿದೆ’ ಎಂದು ಆರೋಪಿಸಿ ಬಿಜೆಪಿಯು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಹೀಗೆ ಕಾಣಿಸಿಕೊಂಡಿದ್ದರು. ಇದೇ ಸುಶ್ಮಾ ಸ್ವರಾಜ್ ಮತ್ತು ನಿತಿನ್ ಗಡ್ಕರಿಯವರೂ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಪರಸ್ಪರ ಕೈ ಪೋಣಿಸಿ ಎತ್ತಿ ಹಿಡಿದ ದೃಶ್ಯವನ್ನು 2010 ಫೆಬ್ರವರಿ 10ರಂದು ಓಆಖಿಗಿ ಪ್ರಸಾರ ಮಾಡಿತ್ತು. ಈ ಪ್ರತಿಭಟನೆ ನಡೆದದ್ದೂ ಪ್ರಧಾನಿ ಮನ್‍ಮೋಹನ್ ಸಿಂಗ್ ಸರಕಾರದ ವಿರುದ್ಧ. ಸ್ಥಳ: ಅದೇ ಜಂತರ್ ಮಂತರ್. ಆ ಪ್ರತಿಭಟನಾ ಸಭೆಯಲ್ಲಿ ಗಡ್ಕರಿಯವರು ಕ್ರಿಕೆಟ್ ಭಾಷೆಯಲ್ಲಿ ಕೇಂದ್ರ ಸರಕಾರವನ್ನು ಟೀಕಿಸಿದ್ದರು. ‘ಸಕ್ಕರೆಯ ಬೆಲೆಯು ಅರ್ಧಶತಕವನ್ನು ದಾಟಿದೆ ಮತ್ತು ಬೇಳೆಯು ಶತಕ ಸಿಡಿಸಿದೆ. ಈ ತಂಡದ ಕೋಚ್ ಆಗಿ ಶರದ್ ಪವಾರ್ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ತಮಾಷೆ ಮಾಡಿದ್ದರು. ಅಲ್ಲಿ ಸೇರಿದ್ದ ಪ್ರತಿಭಟನಾಕಾರರಂತೂ ವಿವಿಧ ಹಣ್ಣು-ಹಂಪಲು ಮತ್ತು ತರಕಾರಿಗಳನ್ನು ದಾರದಲ್ಲಿ ಪೋಣಿಸಿ ಕೊರಳಿಗೆ ಹಾಕಿಕೊಂಡಿದ್ದರು. ಬೆಲೆ ಏರಿಕೆಯನ್ನು ಖಂಡಿಸಿ ಮನ್‍ಮೋಹನ್ ಸಿಂಗ್ ಸರಕಾರದ ವಿರುದ್ಧ 2010 ಡಿಸೆಂಬರ್ 15ರಂದು ಜಂತರ್ ಮಂತರ್‍ನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿರುವ ಚಿತ್ರ ಮತ್ತು ಸುದ್ದಿಯು ಬಿಜೆಪಿ ವೆಬ್‍ಸೈಟ್‍ನಲ್ಲಿ ಈಗಲೂ ಇದೆ. ಇದೇ ಬೆಲೆ ಏರಿಕೆಯ ಕಾರಣವನ್ನು ಮುಂದಿಟ್ಟು 2011, ಸೆಪ್ಟೆಂಬರ್ 17 ಮತ್ತು 2012 ಅಕ್ಟೋಬರ್ 12ರಂದು ಬಿಜೆಪಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿರುವುದನ್ನು ದಿ ಹಿಂದೂ ಮತ್ತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳು ಪ್ರಕಟಿಸಿವೆ. ಇದರ ಜೊತೆಗೇ, ಪ್ರಧಾನಿಯಾಗುವುದಕ್ಕಿಂತ ಮೊದಲು ನರೇಂದ್ರ ಮೋದಿಯವರು ಮಾಡಿರುವ ಭಾಷಣಗಳನ್ನೂ ಇಟ್ಟು ನೋಡಬೇಕು.

2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ನರೇಂದ್ರ ಮೋದಿಯವರ ಭಾಷಣವು ಪೆಟ್ರೋಲ್ ಮತ್ತು ಡೀಸೆಲ್‍ಗಳಿಲ್ಲದೇ ಕೊನೆಗೊಳ್ಳುತ್ತಲೇ ಇರಲಿಲ್ಲ. ತೈಲ ಬೆಲೆ ಏರಿಕೆಯನ್ನು ಅವರು ಮನ್‍ಮೋಹನ್ ಆಡಳಿತದ ವೈಫಲ್ಯಕ್ಕೆ ಸಾಕ್ಷ್ಯವಾಗಿ ದೇಶದ ಮುಂದಿಟ್ಟಿದ್ದರು. 2012 ಆಗಸ್ಟ್ 10ರಂದು ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ಕಾಣಿಸಿಕೊಂಡ ಬಾಬಾ ರಾಮ್‍ದೇವ್‍ರಂತೂ ಲೋಕಪಾಲ ಕಾಯ್ದೆಯನ್ನು ಜಾರಿ ಮಾಡಿ ಕಪ್ಪು ಹಣವನ್ನು ಮರಳಿ ತಂದರೆ 35 ರೂಪಾಯಿಗೆ ಪೆಟ್ರೋಲ್ ಸಿಗಲಿದೆ ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ರಾಮ್‍ದೇವ್‍ರ ಜೊತೆಗಿದ್ದುದು ಇದೇ ಬಿಜೆಪಿ. ಅವರ ಮಾತನ್ನು ತನ್ನದೇ ಮಾತು ಎಂಬಂತೆ ಅದು ಆಡಿಕೊಂಡಿತ್ತು. ಇದೀಗ ಮನ್‍ಮೋಹನ್ ಸಿಂಗ್ ಹೊರಟು ಹೋಗಿದ್ದಾರೆ. ಲೋಕ್‍ಪಾಲ್ ಮಸೂದೆಯನ್ನು ಜಾರಿಗೊಳಿಸುತ್ತೇನೆಂದು ಹೇಳಿದ, 100 ದಿನದೊಳಗೆ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತಂದು ಪ್ರತಿಯೋರ್ವ ಪ್ರಜೆಯ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಜಮೆ ಮಾಡುವೆನೆಂದು ಭರವಸೆ ಕೊಟ್ಟ ಮತ್ತು ಪೆಟ್ರೋಲ್-ಡೀಸೆಲ್ ಬೆಲೆಯನ್ನು ಇಳಿಸಿ, ಬೆಲೆ ಏರಿಕೆಯನ್ನು ತಡೆದು,  ಡಾಲರ್ ನ ಎದುರು ರೂಪಾಯಿ ಮೌಲ್ಯವನ್ನು ಏರಿಸುವೆನೆಂದು ಮಾತು ಕೊಟ್ಟ ಬಿಜೆಪಿ ಪಕ್ಷವು ಅಧಿಕಾರದಲ್ಲಿದೆ. 2014ರ ಲೋಕಸಭಾ ಚುನಾವಣೆಗಿಂತ ಮೊದಲು ನರೇಂದ್ರ ಮೋದಿಯವರು ಮಾಡಿದ ಭಾಷಣಗಳನ್ನು ಗಣನೆಗೆ ತೆಗೆದುಕೊಂಡರೆ ಈ ಭರವಸೆಯ ಪಟ್ಟಿ ಇನ್ನಷ್ಟು ಬದ್ಧವಾಗಬಹುದು.

ಕಾಶ್ಮೀರದ 371ನೇ ವಿಧಿಯ ಬಗ್ಗೆ, ಸಮಾನ ನಾಗರಿಕ ಸಂಹಿತೆಯ ಬಗ್ಗೆ, ಪಾಕಿಸ್ತಾನಕ್ಕೆ ಪಾಠ ಕಲಿಸುವ ಬಗ್ಗೆ, ಕಾಶ್ಮೀರದ ಪ್ರತ್ಯೇಕತಾವಾದವನ್ನು ಹುಟ್ಟಡಗಿಸುವ ಬಗ್ಗೆ ಅವರು ಪುಂಖಾನುಪುಂಖ ಮಾತುಗಳನ್ನು ಆಡಿದ್ದರು. ಈಗ ಅವೇ ಪ್ರಶ್ನೆಗಳು ಬಿಜೆಪಿಯ ಎದುರು ನಿಂತಿವೆ. ಪ್ರತಿದಿನ ಡಾಲರ್ ನ ಎದುರು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ರೂಪಾಯಿಯನ್ನು ಮೇಲೆತ್ತಲು ಬಿಜೆಪಿ ಸರಕಾರ ಯಾಕೆ ವಿಫಲವಾಗುತ್ತಿದೆ? ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಸತತ ಇಳಿಕೆಯಾಗುತ್ತಿರುವುದರ ಹೊರತಾಗಿಯೂ ಭಾರತದಲ್ಲೇಕೆ ತೈಲ ಬೆಲೆಯಲ್ಲಿ ಪ್ರತಿದಿನ ಏರಿಕೆಯಾಗುತ್ತಲೇ ಇದೆ? 100 ದಿನಗಳೊಳಗೆ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರುತ್ತೇನೆಂದು ಭರವಸೆ ನೀಡಿದ ನರೇಂದ್ರ ಮೋದಿಯವರು ಯಾಕೆ ಆ ಬಗ್ಗೆ ಮಾತನ್ನೇ ಆಡುತ್ತಿಲ್ಲ? ಮನ್‍ಮೋಹನ್ ಸಿಂಗ್ ಸರಕಾರಕ್ಕೆ ಹೋಲಿಸಿದರೆ, ಇವತ್ತು ಗ್ಯಾಸ್‍ನ ಬೆಲೆ ದುಪ್ಪಟ್ಟಾಗಿದೆ. ದಿನಬಳಕೆಯ ವಸ್ತುಗಳ ಬೆಲೆಯಲ್ಲಂತೂ ತೀವ್ರ ಏರಿಕೆಯಾಗಿದೆ. ಸಮಾನ ನಾಗರಿಕ ಸಂಹಿತೆಯ ಪ್ರಸ್ತಾಪವನ್ನಂತೂ ಕೇಂದ್ರದ ಕಾನೂನು ಆಯೋಗವೇ ಅಪ್ರಾಯೋಗಿಕ ಎಂದು ತಿರಸ್ಕರಿಸಿದೆ. ಕಾಶ್ಮೀರದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದಾಗಲಿ, 371ನೇ ವಿಧಿಯನ್ನು ರದ್ದುಪಡಿಸುವ ವಿಷಯದಲ್ಲಾಗಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ.

ಮನ್‍ಮೋಹನ್ ಸಿಂಗ್ ಸರಕಾರವನ್ನು ಖಂಡಿಸುವುದಕ್ಕೆ ಹಣ್ಣು-ಹಂಪಲು ಮತ್ತು ತರಕಾರಿಗಳ ಮಾಲೆಯನ್ನು ಕೊರಳಿಗೆ ಹಾಕಿ ಪ್ರತಿಭಟಿಸಿದ ಸುಶ್ಮಾ, ಗಡ್ಕರಿ ಸಹಿತ ಬಿಜೆಪಿಯ ಯಾವ ನಾಯಕರೂ ಈಗ ಮಾತಾಡುತ್ತಿಲ್ಲ? ಐದಾರು ವರ್ಷಗಳ ಹಿಂದೆ ಅವರು ಕೊರಳಿಗೆ ಹಾಕಿಕೊಂಡಿದ್ದ ಮಾಲೆಗಳ ಉದ್ದೇಶ ಪ್ರಾಮಾಣಿಕವೇ ಆಗಿದ್ದಿದ್ದರೆ, ಈಗಲೂ ಅವೇ ಜನರಿದ್ದಾರಲ್ಲ ಮತ್ತು ಅಂದಿಗಿಂತಲೂ ದುರ್ದಿನಗಳಿವೆಯಲ್ಲ, ಯಾಕೆ ಅವರು ಬೀದಿಗಿಳಿಯುತ್ತಿಲ್ಲ? ಶತಕ ದಾಖಲಿಸುವ ಹಂತದಲ್ಲಿ ತೈಲಬೆಲೆ ಇದ್ದಾಗ್ಯೂ ನರೇಂದ್ರ ಮೋದಿಯವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸುವುದನ್ನೇ ಆದ್ಯತೆಯಾಗಿಟ್ಟುಕೊಂಡಿದ್ದಾರೆ. 2+2 ಮಾತುಕತೆಗಿಂತ 100 ಕೋಟಿ ಭಾರತೀಯರ ಬವಣೆಗಳು ಸುಶ್ಮಾರಿಗೆ ಮುಖ್ಯವಾಗಲಿಲ್ಲವೆಂದರೆ ಏನರ್ಥ?

2014ರ ಲೋಕಸಭಾ ಚುನಾವಣೆಗಿಂತ ಮೊದಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಯಾವ ಭರವಸೆಯನ್ನು ಹುಟ್ಟು ಹಾಕಿತ್ತೋ ಆ ಭರವಸೆಗಳೆಲ್ಲ ಇವತ್ತು ಹತಾಶೆಯಾಗಿ ಮಾರ್ಪಟ್ಟು ಬಿಟ್ಟಿದೆ. ವಿಶೇಷವಾಗಿ, ನರೇಂದ್ರ ಮೋದಿಯವರನ್ನು ಪರಿವರ್ತನೆಯ ಹರಿಕಾರ ಎಂದೇ ಮಾಧ್ಯಮಗಳು ಬಿಂಬಿಸಿದ್ದುವು. ಅಳೆದೂ ತೂಗಿ ಮಾತಾಡುವ ಮನ್‍ಮೋಹನ್ ಸಿಂಗ್‍ರಿಗಿಂತ ವಾಚಾಳಿ ನರೇಂದ್ರ ಮೋದಿಯವರಲ್ಲಿ ಈ ದೇಶದ ಜನರು ಏನೋ ಹೊಸತನ್ನು ನಿರೀಕ್ಷಿಸಿದರು. ಮಾತುಗಳಲ್ಲಿ ಅವರು ಕಟ್ಟಿಕೊಟ್ಟ ಅರಮನೆಯನ್ನು ನಿಜವೆಂದೇ ನಂಬಿದ್ದರು. ಆದರೆ ಆ ಮಾತುಗಳ ಆಚೆಗೆ ನರೇಂದ್ರ ಮೋದಿಯವರು ಅತ್ಯಂತ ದುರ್ಬಲ ಮತ್ತು ವಿಫಲ ನಾಯಕ ಎಂಬುದನ್ನು ಕಳೆದ ನಾಲ್ಕು ವರ್ಷಗಳು ಸ್ಪಷ್ಟಪಡಿಸಿದೆ. ಈಗಲೂ ಮೋದಿಯವರು ಬರೇ ಮಾತುಗಳನ್ನಷ್ಟೇ ಆಡುತ್ತಿದ್ದಾರೆ. ಆಡಿದ ಮಾತಿನ ಮೇಲೆ ಯಾವ ಹೊಣೆಗಾರಿಕೆಯನ್ನೂ ಹೊರದೇ ಅಡಗಿಕೊಳ್ಳುತ್ತಾರೆ. ಈಗ ಹಿಂತಿರುಗಿ ನೋಡಿದರೆ ಮನ್‍ಮೋಹನ್ ಸಿಂಗ್ ಎಷ್ಟೋ ಮಿಗಿಲು ಅನ್ನಿಸುತ್ತದೆ. ಅವರು ಆಡುವ ಮಾತುಗಳಲ್ಲಿ ತೂಕವಿತ್ತು. ಕೊಡುವ ಭರವಸೆಗಳಿಗೆ ಬದ್ಧತೆಯೂ ಇತ್ತು.

ಮಾತುಗಾರಿಕೆ ಮತ್ತು ಹೊಣೆಗಾರಿಕೆ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಮಾತು ಹೊಣೆಗಾರಿಕೆಯನ್ನು ಬಯಸುತ್ತದೆ. ಹೊಣೆ ಹೊರದ ಮಾತು ಹೊಣೆಗೇಡಿಯಾದುದು, ನಿಷ್ಫಲವಾದುದು. ಈ ದೇಶದ ಮಂದಿ ಪ್ರಧಾನಿಯನ್ನು ಹೊಣೆಗಾರನ ಸ್ಥಾನದಲ್ಲಿರಿಸಿ ನೋಡುತ್ತಾರೆ. ಮಾತು ತಪ್ಪುವುದು ಮತ್ತು ವಚನಭಂಗ ಮಾಡುವುದನ್ನು ಈ ದೇಶದ ಸಂಸ್ಕೃತಿಯು ಗಂಭೀರ ಅಪರಾಧವಾಗಿ ಪರಿಗಣಿಸುತ್ತದೆ. ಪ್ರಧಾನಿ ಮೋದಿಯವರು ಸದ್ಯ ಅಂಥದ್ದೊಂದು ಸ್ಥಿತಿಯಲ್ಲಿದ್ದಾರೆ ಎಂದೇ ಹೇಳಬೇಕಾಗುತ್ತದೆ.

ನಾಲ್ಕು ವರ್ಷಗಳ ಹಿಂದೆ ಅವರು ಕಟ್ಟಿಕೊಟ್ಟ ಕನಸಿನ ಮನೆ ಇಷ್ಟು ಬೇಗ ಸೋರಬಹುದೆಂದು ಯಾರೂ ನಿರೀಕ್ಷಿಸಿರಲಾರರು.

Friday, 7 September 2018

ಅನ್ಯರನ್ನು ಹತ್ಯೆಗೈದು ರಕ್ಷಿಸಿಕೊಳ್ಳಬೇಕಾದ ವಿಚಾರಧಾರೆಯಾದರೂ ಯಾವುದು?


        ಯಾಸೀನ್ ಭಟ್ಕಳ್ ಯಾರು ಮತ್ತು ಇಂಡಿಯನ್ ಮುಜಾಹಿದೀನ್ ಏನು ಅನ್ನುವ ಪ್ರಶ್ನೆಯನ್ನು ಏಳೆಂಟು ವರ್ಷಗಳ ಹಿಂದೆ ಈ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಎತ್ತಲಾಗಿತ್ತು. ಇಂಡಿಯನ್ ಎಂಬ ಆಂಗ್ಲ ಪದ ಹಾಗೂ ಮುಜಾಹಿದೀನ್ ಎಂಬ ಅರೇಬಿಕ್ ಪದಗಳು ಜೊತೆ ಸೇರಿಕೊಂಡು ಉಂಟಾದ ಇಂಡಿಯನ್ ಮುಜಾಹಿದೀನ್ ಎಂಬ ಸಂಘಟನೆಯ ಫಲಾನುಭವಿಗಳು ಯಾರು, ಮೂಲ ಕೇಂದ್ರ ಎಲ್ಲಿ, ಅದರ ಕಾರ್ಯಚಟುವಟಿಕೆ ಹೇಗೆ, ಯಾವ ಉದ್ದೇಶದಿಂದ ಅದನ್ನು ಹುಟ್ಟು ಹಾಕಲಾಗಿದೆ.. ಎಂಬೆಲ್ಲ ಪ್ರಶ್ನೆಗಳು ಆಗ ಮುಂಚೂಣಿಯಲ್ಲಿತ್ತು. ಬಳಿಕ ಸ್ಪಷ್ಟಗೊಂಡ ಸಂಗತಿ ಏನೆಂದರೆ, ಅದು ದೇಶದಲ್ಲಿ ಯಾವ ಸಮಾಜಸೇವಾ ಕಾರ್ಯವನ್ನೂ ಮಾಡುತ್ತಿಲ್ಲ, ಯಾರ ಪರವಾಗಿಯೂ ಅದು ಹೋರಾಡು(ಮುಜಾಹಿದ್)ತ್ತಿಲ್ಲ ಮತ್ತು ಅದಕ್ಕೊಂದು ನಿಶ್ಚಿತವಾದ ಮೂಲ ನೆಲೆಯೂ ಇಲ್ಲ. ಭಾರತದಲ್ಲಿ ಅಸ್ಥಿರತೆಯನ್ನು ಹುಟ್ಟು ಹಾಕುವುದೇ ಅದರ ಮೂಲ ಗುರಿ ಎಂಬ ಮಾಹಿತಿಯನ್ನು ಈ ದೇಶದ ತನಿಖಾ ಸಂಸ್ಥೆಗಳು ಹೇಳಿಕೊಂಡವು.

ಸದ್ಯ ಈ ಮೇಲಿನ ಪ್ರಶ್ನೆಗಳಿಗೆ ಮತ್ತೊಮ್ಮೆ ಮಹತ್ವ ಲಭ್ಯವಾಗಿದೆ. ಈ ಬಾರಿ ಪ್ರಶ್ನೆಯ ಮೊನೆಗೆ ಸಿಲುಕಿಕೊಂಡಿರುವುದು- ಅಭಿನವ ಭಾರತ, ಸನಾತನ ಸಂಸ್ಥಾ, ಹಿಂದೂ ಜನಜಾಗೃತಿ ಸಮಿತಿ, ಹಿಂದೂ ಮಹಾಸಭಾ ಇತ್ಯಾದಿ ಸಂಘಟನೆಗಳು. ನಿಜಕ್ಕೂ, ಈ ಸಂಘಟನೆಗಳ ಕಾರ್ಯವೈಖರಿ ಏನು, ಸದಸ್ಯತನದ ಬಗೆ ಹೇಗೆ, ಈ ಸಂಘಟನೆಗಳ ಉದ್ದೇಶ, ಗುರಿ, ಬೋಧನೆಗಳು ಏನೇನು ಇತ್ಯಾದಿಗಳು ಈಗ ಪ್ರಶ್ನೆಗೆ ಒಳಗಾಗಿವೆ. ಮೊಟ್ಟಮೊದಲು ಈ ಸಂಘಟನೆಗಳ ಕುರಿತಂತೆ ಇಂಥದ್ದೊಂದು ಪ್ರಶ್ನೆಯನ್ನೆತ್ತಿದ್ದು ಮುಂಬೈಯ ಪೊಲೀಸ್ ಮುಖ್ಯಸ್ಥ ಹೇಮಂತ್ ಕರ್ಕರೆ. ಇಂಡಿಯನ್ ಮುಜಾಹಿದೀನ್‍ನ ಉದ್ದೇಶ ಏನೇನೋ ಅದಕ್ಕೆ ಸಮಾನವಾದ ಉದ್ದೇಶವನ್ನೇ ಈ ಸಂಘಟನೆಗಳು ಹೊಂದಿವೆ ಎಂಬುದನ್ನು ಅವರು ಪತ್ತೆ ಹಚ್ಚಿದ್ದರು. ಸಂಜೋತಾ ಎಕ್ಸ್‍ಪ್ರೆಸ್, ಮಾಲೆಗಾಂವ್ ಸ್ಫೋಟ ಮತ್ತು ಮಕ್ಕಾ ಮಸೀದಿ ಸ್ಫೋಟಗಳ ಆರೋಪದಲ್ಲಿ ಅಭಿನವ್ ಭಾರತ್‍ನೊಂದಿಗೆ ಸಂಬಂಧ ಹೊಂದಿದ್ದ ಸಾಧ್ವಿ ಪ್ರಜ್ಞಾಸಿಂಗ್, ಪುರೋಹಿತ್, ಅಸೀಮಾನಂದ ಸಹಿತ ಹಲವರನ್ನು ಅವರು ಬಂಧಿಸಿದ್ದರು. ಇಂಡಿಯನ್ ಮುಜಾಹಿದೀನ್‍ನ ಇನ್ನೊಂದು ಮುಖವಾಗಿ ಅಭಿನವ್ ಭಾರತ್ ಅನ್ನು ಅವರು ಈ ದೇಶದ ಮುಂದೆ ಅನಾವರಣಗೊಳಿಸಿದ್ದರು. ಈ ನಡುವೆ ಮುಂಬೈ ದಾಳಿಯ ವೇಳೆ ಅವರ ಹತ್ಯೆ ನಡೆಯಿತು. ಆ ಬಳಿಕ ಅವರ ತನಿಖೆಯಲ್ಲೇ ತಪ್ಪುಗಳನ್ನು ಹುಡುಕುವ ಪ್ರಯತ್ನಗಳು ಅತ್ಯಂತ ಯೋಜಿತವಾಗಿ ನಡೆದುವು. ಅವರನ್ನೇ ತಪ್ಪಿತಸ್ಥ ಎಂದು ಘೋಷಿಸುವ ಮಟ್ಟಕ್ಕೆ ವಾದಗಳು ಬೆಳೆದುವು.

ಇದೀಗ ಕರ್ಕರೆಯವರ ಅದೇ ಮಹಾರಾಷ್ಟ್ರದಲ್ಲಿ ಬಂಧನ ಸತ್ರ ನಡೆಯುತ್ತಿದೆ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಸಿಬಿಐ ಮತ್ತು ಕರ್ನಾಟಕದ ಸಿಟ್ ಈ ಮೂರೂ ಸಂಸ್ಥೆಗಳು ಉಭಯ ರಾಜ್ಯಗಳಲ್ಲಿ ಹಲವರನ್ನು ಬಂಧಿಸಿವೆ. ವಿಶೇಷ ಏನೆಂದರೆ, ಬಂಧಿತರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಸನಾತನ ಸಂಸ್ಥಾ, ಅಭಿನವ್ ಭಾರತ್, ಶ್ರೀರಾಮ ಸೇನೆ, ಹಿಂದೂ ಜನಜಾಗೃತಿ ಸಮಿತಿ ಇತ್ಯಾದಿಗಳೊಂದಿಗೆ ಗಾಢ ಸಂಬಂಧವನ್ನು ಹೊಂದಿದವರಾಗಿದ್ದಾರೆ. ಇಂಡಿಯನ್ ಮುಜಾಹಿದೀನ್‍ನ ಸ್ಥಾಪಕ ಎಂದು ಹೇಳಲಾದ ಯಾಸೀನ್ ಭಟ್ಕಳ್‍ನ ಹೆಸರು ಅರಬಿ ಮೂಲವಾಗಿದ್ದರೆ ವೈಭವ್ ರಾವತ್, ವಾಘ್ಮೋರೆ ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ, ಅಮೋಳ್ ಕಾಳೆ, ಭರತ್ ಕುರ್ನೆ, ಶರದ್ ಕಳಾಸ್ಕರ್, ಸಚಿನ್ ಅಂಧುರೆ ಮತ್ತು ಇನ್ನಿತರ ಆರೋಪಿಗಳ ಹೆಸರುಗಳು ಅಚ್ಚ ಭಾರತೀಯ ಮೂಲದವು. ಹೆಸರುಗಳ ಮೂಲದಲ್ಲಿ ಯಾಸೀನ್ ಮತ್ತು ಇವರ ನಡುವೆ ವ್ಯತ್ಯಾಸ ಇದೆಯೇ ಹೊರತು ಮನೋಭಾವದಲ್ಲಿ ಇವರೆಲ್ಲ ಸಮಾನರೇ ಅನ್ನುವುದನ್ನು ತನಿಖಾ ವರದಿಗಳು ಪ್ರತಿದಿನ ಬಹಿರಂಗಪಡಿಸುತ್ತಿವೆ. ದೇಶದ ಹಲವು ಕಡೆ ಬಾಂಬ್ ಸ್ಫೋಟಿಸಿದ ಆರೋಪ ಯಾಸೀನ್ ಭಟ್ಕಳ್‍ನ ಮೇಲಿದ್ದರೆ, ಸನಾತನ ಸಂಸ್ಥಾದೊಂದಿಗೆ ಗುರುತಿಸಿಕೊಂಡಿರುವ ವೈಭವ್ ರಾವತ್‍ನಿಂದ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಬಿಐ ಮತ್ತು ಕರ್ನಾಟಕದ ಸಿಟ್‍ನಿಂದ ಬಂಧನಕ್ಕೊಳಗಾದವರ ಮೇಲಿರುವ ಆರೋಪವಂತೂ ಇದಕ್ಕಿಂತಲೂ ಗಂಭೀರ. ದಾಬೋಲ್ಕರ್, ಪನ್ಸಾರ್, ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಯಲ್ಲಿ ಇವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.


ನಿಜವಾಗಿ, ಸಮಸ್ಯೆ ಇರುವುದು ಹೆಸರುಗಳಲ್ಲಲ್ಲ, ಮನಃಸ್ಥಿತಿಯಲ್ಲಿ. ಯಾಸೀನ್ ಕೆಟ್ಟ ಹೆಸರಲ್ಲ. ಪರಶುರಾಮ ವಾಘ್ಮೋರೆ ಕೂಡಾ ಹಾಗೆಯೇ. ಆದರೆ ಈ ಇಬ್ಬರ ಮನಃಸ್ಥಿತಿಯಿಂದಾಗಿ ಈ ಎರಡೂ ಹೆಸರುಗಳಿಗೆ ಕಳಂಕ ಅಂಟಿಕೊಂಡವು. ಸನಾತನ ಸಂಸ್ಥಾ ಅಥವಾ ಅಭಿನವ್ ಭಾರತ್ ಎಂಬ ಹೆಸರುಗಳು ಕೆಟ್ಟದ್ದೇನಲ್ಲ. ಆದರೆ ಈ ಹೆಸರಿನ ಅಡಿಯಲ್ಲಿ ಒಂದಾಗುವ ವ್ಯಕ್ತಿಗಳು ಯಾವ ಮನಃಸ್ಥಿತಿಯನ್ನು ಹೊಂದಿರುತ್ತಾರೋ ಆ ಮನಃಸ್ಥಿತಿ ಅವಕ್ಕೆ ಕೆಟ್ಟದಾದ ಅಥವಾ ಒಳ್ಳೆಯದಾದ ಹೆಸರುಗಳನ್ನು ಕೊಡಿಸುತ್ತವೆ. ಹಿಂದೂ ಜನಜಾಗೃತಿ ಸಮಿತಿ ಎಂಬ ಹೆಸರು ಬಾಹ್ಯನೋಟಕ್ಕೆ ಅತ್ಯಂತ ಅಂದವಾದುದು ಮತ್ತು ಹಿಂದೂಗಳೇ ಬಹುಸಂಖ್ಯಾತವಾಗಿರುವ ಭಾರತದ ಮಟ್ಟಿಗೆ ಅತ್ಯಂತ ಸೂಕ್ತವಾದುದು. ಆದರೆ ಸಮಸ್ಯೆ ಇರುವುದು ಈ ಸಂಘಟನೆಯ ಉದ್ದೇಶ ಮತ್ತು ಗುರಿಗಳಲ್ಲಿ.
  
 ಕ್ರೌರ್ಯ ಯಾವುದಾದರೊಂದು ನಿರ್ದಿಷ್ಟ ಧರ್ಮದ ಸೊತ್ತಲ್ಲ. ಅದು ಧರ್ಮಾತೀತ ಮತ್ತು ರಾಷ್ಟ್ರಾತೀತ ಮನಃಸ್ಥಿತಿ. ಅದು ಯಾಸೀನ್ ಎಂಬ ಹೆಸರಿನವನಲ್ಲೂ ಇರಬಹುದು ಅಥವಾ ವಾಘ್ಮೋರೆ ಎಂಬ ಹೆಸರಿನವನಲ್ಲೂ ಇರಬಹುದು. ವೈಭವ್ ರಾವತ್ ಎಂಬ ಹೆಸರು, ಆತನ ಹಣೆಯಲ್ಲಿರುವ ನಾಮ, ಹಿಂದೂ ಧರ್ಮದ ಬಗ್ಗೆ ಆತನಿಗಿರುವ ಜ್ಞಾನ ಮತ್ತು ನಿಷ್ಠೆ ಹಾಗೂ ಆತನಲ್ಲಿರುವ ಇನ್ನಿತರ ಧಾರ್ಮಿಕ ಸಂಕೇತಗಳು ಆತನನ್ನು ನಿಷ್ಠಾವಂತ ಹಿಂದೂ ಎನ್ನುವುದಕ್ಕೋ ಅಥವಾ ಹಿಂದೂ ಧರ್ಮದ ನೈಜ ಪ್ರತಿನಿಧಿ ಎಂದು ಸಾರುವುದಕ್ಕೋ ಪುರಾವೆ ಆಗಲಾರದು ಮತ್ತು ಆಗಬಾರದು ಕೂಡಾ. ದಾವೂದ್ ಇಬ್ರಾಹೀಮ್‍ನ ಬಗ್ಗೆ ಅಥವಾ ಕಸಬ್‍ನ ಬಗ್ಗೆಯೂ ಇವೇ ಮಾತುಗಳನ್ನು ಹೇಳಬೇಕು. ವ್ಯಕ್ತಿಯೋರ್ವನ ಬಾಹ್ಯ ಗುರುತುಗಳನ್ನು ನೋಡಿಕೊಂಡು ಆತನ ಧರ್ಮವನ್ನು ವ್ಯಾಖ್ಯಾನಿಸುವುದು ತಪ್ಪು. ಅವರ ತಪ್ಪುಗಳನ್ನು ಅವರ ಖಾತೆಗೆ ಸೇರಿಸುವುದೇ ನಿಜವಾದ ಧರ್ಮ. ಕ್ರೌರ್ಯ ಮನಃಸ್ಥಿತಿ ಯಾವ ಧರ್ಮದವನಲ್ಲೂ ಇರಬಹುದು. ಅಷ್ಟಕ್ಕೂ,

ಕ್ರೌರ್ಯ ಎಂಬುದು ಹತ್ಯೆಯಲ್ಲಿ ಭಾಗಿಯಾಗುವುದೋ ಬಾಂಬ್ ಸ್ಫೋಟಿಸುವುದೋ ಮಾತ್ರವಲ್ಲ, ಅದೊಂದು ಮನಃಸ್ಥಿತಿ. ದ್ವೇಷಿಸುವುದೇ ಅದರ ಪರಮ ನೀತಿ. ಭಾಷಣಗಳಲ್ಲಿ, ಬರಹಗಳಲ್ಲಿ ಕೂಡಾ ಇದು ವ್ಯಕ್ತವಾಗುತ್ತಿರುತ್ತದೆ. ಕೆಲವರು ಶಸ್ತ್ರಾಸ್ತ್ರಗಳ ಮೂಲಕ ಇದನ್ನು ವ್ಯಕ್ತಪಡಿಸುತ್ತಾರೆ. ಸದ್ಯದ ತುರ್ತು ಏನೆಂದರೆ, ಇಂತಹ ಮನಃಸ್ಥಿತಿಯನ್ನು ಪೋಷಿಸುವ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂಘಟನೆಗಳ ಮೇಲೆ ನಿಗಾ ವಹಿಸುವುದು. ಅಂಥ ವಿಚಾರಧಾರೆಯೆಡೆಗೆ ಯುವಕರು ಆಕರ್ಷಿತರಾಗದಂತೆ ಕಾರ್ಯಕ್ರಮಗಳನ್ನು ಸ್ಥಳೀಯ ಮಟ್ಟದಲ್ಲಿ ಸರಕಾರದ ನೇತೃತ್ವದಲ್ಲೇ  ಹಮ್ಮಿಕೊಳ್ಳುವುದು. ಸಾಧ್ಯವಾದರೆ ಎಲ್ಲ ಧಾರ್ಮಿಕ ಕೇಂದ್ರಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುವ ಮತ್ತು ನಿಜ ಧರ್ಮವನ್ನು ವಿವರಿಸುವ ಸಂದರ್ಭಗಳನ್ನು ಹುಟ್ಟು ಹಾಕುವುದು. ಧರ್ಮ ಮತ್ತು ಅಧರ್ಮದ ವ್ಯತ್ಯಾಸಗಳನ್ನು ಜನರಿಗೆ ಮನದಟ್ಟು ಮಾಡಿಸುವುದು.

ಯಾರನ್ನಾದರೂ ಹತ್ಯೆಗೈಯುವುದರಿಂದ ಮತ್ತು ಬಾಂಬ್ ಸ್ಫೋಟಿಸಿ ಸಾಯಿಸುವುದರಿಂದ ಧರ್ಮರಕ್ಷಣೆಯಾಗುತ್ತದೆ ಎಂದು ನಂಬುವುದೇ ಅಧರ್ಮ. ಇತರರನ್ನು ಸಾಯಿಸುವ ಮೂಲಕ ಬದುಕಿಕೊಳ್ಳಬೇಕಾದಷ್ಟು ಯಾವ ಧರ್ಮವೂ ದುರ್ಬಲ ಅಲ್ಲ. ಅದು ಸಾಯಿಸುವವರ ದೌರ್ಬಲ್ಯ. ಅವರ ದೌರ್ಬಲ್ಯವನ್ನು ಧರ್ಮದ ಮೇಲೆ ಹೊರಿಸುವುದು ಅತಿದೊಡ್ಡ ಅನ್ಯಾಯ. ಇದರ ವಿರುದ್ಧ ಧರ್ಮಾತೀತ ಜಾಗೃತಿ ಅತ್ಯಗತ್ಯ. ಹಿಂಸೆಯಲ್ಲಿ ನಂಬಿಕೆಯಿಟ್ಟಿರುವವರು ಇಂಡಿಯನ್ ಮುಜಾಹಿದೀನ್‍ನಲ್ಲಿರಲಿ ಅಥವಾ ಅಭಿನವ್ ಭಾರತ್, ಸನಾತನ್ ಸಂಸ್ಥಾದಲ್ಲಿರಲಿ, ಅವರು ಅಧರ್ಮಿಗಳು. ಅವರನ್ನು ಸಮರ್ಥಿಸದಿರುವುದೇ ನಾವು ಧರ್ಮಕ್ಕೆ ನೀಡಬಹುದಾದ ನಿಜವಾದ ಗೌರವ.

ಪ್ರಧಾನಿಯ ಕೊರಳಿನ ಉರುಳನ್ನು ಬಿಗಿಗೊಳಿಸುತ್ತಿರುವ ನೋಟು ಮತ್ತು ರಫೇಲ್




ಭ್ರಷ್ಟಾಚಾರವನ್ನು ಪ್ರಶ್ನಿಸಿ, ಖಂಡಿಸಿ ಮತ್ತು ಈ ಕಾರಣಕ್ಕಾಗಿ ಪ್ರಧಾನಿ ಮನ್‍ಮೋಹನ್ ಸಿಂಗ್‍ರನ್ನು ತಮಾಷೆ ಮಾಡಿ 2014ರ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದ ಬಿಜೆಪಿಯು ಸದ್ಯ ಮನ್‍ಮೋಹನ್ ಸಿಂಗ್‍ರ ಸ್ಥಿತಿಯನ್ನೇ ಎದುರಿಸುತ್ತಿದೆ. ಅಧಿಕಾರದ ಕೇವಲ ನಾಲ್ಕು ವರ್ಷಗಳೊಳಗೆ ಎರಡು ಬೃಹತ್ ಹಗರಣಗಳು ಬಿಜೆಪಿಯ ಕೊರಳನ್ನು ಸುತ್ತಿಕೊಂಡಿದೆ. ಮಾತ್ರವಲ್ಲ, ದಿನೇ ದಿನೇ ಈ ಉರುಳು ಬಿಗಿಯಾಗುತ್ತಲೂ ಇದೆ. ಇದರಲ್ಲಿ ಒಂದು: ರಫೇಲ್ ಯುದ್ಧ ವಿಮಾನಗಳ ಖರೀದಿಯದ್ದಾದರೆ, ಇನ್ನೊಂದು: ನೋಟು ನಿಷೇಧ. ‘Refale talks were on when, Reliance Entertainment helped produce film for Francois Hollande’s partner’ ಎಂಬ ಶೀರ್ಷಿಕೆಯಲ್ಲಿ ‘ದ ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಯು ಆಗಸ್ಟ್ 31ರಂದು ದೀರ್ಘ ಲೇಖನವನ್ನೇ ಪ್ರಕಟಿಸಿತ್ತು.

 ರಫೇಲ್ ಒಡಂಬಡಿಕೆಯ ಸಮಯದಲ್ಲಿ ಫ್ರಾನ್ಸ್ ನ ಅಧ್ಯಕ್ಷರಾಗಿದ್ದವರು ಫ್ರಾಂಕೋಯಿಸ್ ಹೊಲ್ಲಾಂಡೆ. ಇವರ ಗೆಳತಿ  ಮತ್ತು ನಟಿಯಾಗಿರುವ ಜೂಲಿ ಗಯೆಟೆ ಅವರ ‘ರಗ್ ಇಂಟರ್ ನಾಶನಲ್ ಸಂಸ್ಥೆ’ಯೊಂದಿಗೆ ಸೇರಿಕೊಂಡು ಫ್ರೆಂಚ್ ಸಿನಿಮಾ ತಯಾರಿಸುವುದಾಗಿ 2016 ಜನವರಿ 24ರಂದು ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಎಂಟರ್ ಟೈನ್ ಮೆಂಟ್ ಸಂಸ್ಥೆಯು ಘೋಷಿಸುತ್ತದೆ. ಇದಾಗಿ ಎರಡು ದಿನಗಳ ಬಳಿಕ- ಜನವರಿ 26ರಂದು -ಗಣರಾಜ್ಯೋತ್ಸವ ಅತಿಥಿಯಾಗಿ ಭಾರತಕ್ಕೆ ಬಂದ ಫ್ರಾನ್ಸ್ ಅಧ್ಯಕ್ಷ ಹೊಲ್ಲಾಂಡೆಯವರು ರಫೇಲ್ ಖರೀದಿಯ ತಿಳುವಳಿಕಾ ಪತ್ರಕ್ಕೆ ಸಹಿ ಹಾಕುತ್ತಾರೆ. ವಿಶೇಷ ಏನೆಂದರೆ, ರಫೇಲ್ ವಿಮಾನಗಳ ಉತ್ಪಾದನೆಯನ್ನು ಫ್ರಾನ್ಸ್ ನ ಡಸಲ್ಟ್ ಏವಿಯೇಶನ್ ಮತ್ತು ಅನಿಲ್ ಅಂಬಾನಿಯವರ ಒಡೆತನ ರಕ್ಷಣಾ ಸಂಸ್ಥೆಯು ಜೊತೆಯಾಗಿ ಮಾಡಲಿದ್ದು, ಗಯೆಟೆಯ ಸಿನಿಮಾದ ಸಹ ನಿರ್ಮಾಪಕನಾಗಿ ಇದೇ ಡಸಲ್ಟ್ ಸಂಸ್ಥೆಯು ಭಾಗಿಯಾಗಿದೆ. ಅಂದರೆ, ಫ್ರಾನ್ಸ್ ಅಧ್ಯಕ್ಷ ಹೊಲ್ಲಾಂಡೆಯವರ ಗೆಳತಿಯ ಸಿನಿಮಾದಲ್ಲಿ ರಿಲಯನ್ಸ್ ಮತ್ತು ಡಸಲ್ಡ್ ಎರಡೂ ಸಂಸ್ಥೆಗಳು ಭಾಗಿಯಾಗಿವೆ ಮತ್ತು ಇವೆರಡೂ ಜೊತೆ ಸೇರಿಕೊಂಡೇ ರಫೇಲ್ ಯುದ್ಧ ವಿಮಾನಗಳನ್ನು ಉತ್ಪಾದಿಸಲಿವೆ. ಗಯೆಟೆ ಅವರ ಸಿನಿಮಾವನ್ನು ತಯಾರಿಸಲು ತೀರ್ಮಾನಿಸಿರುವುದಾಗಿ ಘೋಷಿಸಿದ ಎರಡು ದಿನಗಳ ಬಳಿಕ ರಫೇಲ್ ಖರೀದಿಯ ಬಗೆಗಿನ ತಿಳುವಳಿಕಾ ಪತ್ರಕ್ಕೆ ಫ್ರಾನ್ಸ್ ಅಧ್ಯಕ್ಷರು ಸಹಿ ಹಾಕುತ್ತಾರೆ. ಬಾಹ್ಯನೋಟಕ್ಕೆ ಕಾಕತಾಳೀಯವೆಂಬಂತೆ ಕಾಣುವ ಈ ಬೆಳವಣಿಗೆಯು ಕಾಕತಾಳೀಯಕ್ಕಿಂತಲೂ ಹೊರತಾದ ಇನ್ನಾವುದನ್ನೋ ಅಡಗಿಸಿಕೊಂಡಿದೆ ಅನ್ನುವ ಅನುಮಾನಕ್ಕೆ ಇದುವೇ ಕಾರಣ. ಬೋಫೋರ್ಸ್‍ಗಿಂತಲೂ ದೊಡ್ಡ ಹಗರಣ ಇದು ಎಂದು ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್ ಮತ್ತು ಬಿಜೆಪಿ ಮುಖಂಡ ಯಶವಂತ್ ಸಿನ್ಹ ಅವರು ಆರೋಪಿಸಿದ್ದಾರೆ.

ದಶಕದ ಹಿಂದೆ ಮನ್‍ಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಸುಮಾರು 126 ರಫೇಲ್ ವಿಮಾನಗಳ ಖರೀದಿಗೆ ಫ್ರಾನ್ಸ್‍ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆಗ ಒಂದು ವಿಮಾನಕ್ಕೆ ಸುಮಾರು 560 ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಗಿತ್ತು. ಅಲ್ಲದೇ ಈ ವಿಮಾನಗಳ ಉತ್ಪಾದನೆಯು ಕರ್ನಾಟಕದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ಮಾಡಲಾಗುವುದೆಂದು ಘೋಷಿಸಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಈ ಒಪ್ಪಂದಕ್ಕೆ ಮರುರೂಪವನ್ನು ಕೊಟ್ಟರಲ್ಲದೇ ಸರಕಾರಿ ಸಂಸ್ಥೆಯಾದ HAL  ಅನ್ನು ಕೈಬಿಟ್ಟು ರಿಲಯನ್ಸ್ ಸಂಸ್ಥೆಯನ್ನು ಸೇರಿಸಿಕೊಂಡರು. ಮಾತ್ರವಲ್ಲ, ಪ್ರತಿ ಯುದ್ಧ ವಿಮಾನಕ್ಕೆ ಮನ್‍ಮೋಹನ್ ಸಿಂಗ್ ಸರಕಾರ ತೀರ್ಮಾನಿಸಿದ್ದ 560 ಕೋಟಿ ರೂಪಾಯಿಯ ಬದಲು 1,660 ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಯಿತು. ಈ ನಿಗದಿಯಲ್ಲೂ ಒಂದು ಗೊಂದಲ ಇದೆ. ಪ್ರಶಾಂತ್ ಭೂಷಣ್ ಅವರ ಪ್ರಕಾರ, ಪ್ರತಿ ವಿಮಾನಕ್ಕೆ 670 ಕೋಟಿ ರೂಪಾಯಿ ತಗಲುತ್ತದೆ ಎಂದು ಇದೇ ಸರಕಾರ ನವೆಂಬರ್ 2016ರಲ್ಲಿ ಹೇಳಿತ್ತು. ಆದರೆ ಆ ಬಳಿಕ ಪ್ರತಿ ವಿಮಾನಕ್ಕೆ 1,660 ಕೋಟಿ ರೂಪಾಯಿ ಖರ್ಚಾಗುತ್ತದೆಂದು ರಿಲಯನ್ಸ್ ಮತ್ತು ಡಸಲ್ಡ್ ಸಂಸ್ಥೆಯು ಘೋಷಿಸಿತು.


ಒಂದು ರೀತಿಯಲ್ಲಿ, ಈ ಇಡೀ ಒಪ್ಪಂದವು ತರಾತುರಿಯಿಂದ ನಡೆದಿದೆ. ಬೃಹತ್ ಹಗರಣವೊಂದರ ಸರ್ವಸಾಧ್ಯತೆಯನ್ನು ತೆರೆದಿಟ್ಟ ಈ ಒಪ್ಪಂದದ ಬಗ್ಗೆ ಹೆಚ್ಚಿನ ವಿವರವನ್ನು ಹಂಚಿಕೊಳ್ಳಲು ಕೇಂದ್ರ ಸರಕಾರ ನಿರಾಕರಿಸುತ್ತಿದೆ. ಸರಕಾರದ ಕೈ ಸ್ವಚ್ಛವಾಗಿದ್ದರೆ ಅಳುಕು ಏಕೆ? ಪ್ರಶ್ನೆಗಳಿಗೆ ಉತ್ತರಿಸದೇ ಸರಕಾರ ಮರೆಯಲ್ಲಿ ಅಡಗುವುದೇಕೆ? ಸರಕಾರಿ ಸಂಸ್ಥೆಯಾದ ಊಂಐ ಅನ್ನು ಕೈಬಿಟ್ಟು ಅನನುಭವಿ ರಿಲಯನ್ಸ್ ಅನ್ನು ಈ ಉತ್ಪಾದನಾ ರಂಗದಲ್ಲಿ ಸಹಭಾಗಿಗೊಳಿಸಿದ್ದು ಯಾವ ಉದ್ದೇಶದಿಂದ? ಈ ರಫೇಲ್ ಇನ್ನೊಂದು ಬೋಫೋರ್ಸ್ ಹಗರಣವೇ ಎಂಬ ಪ್ರಶ್ನೆ ವಿವಿಧೆಡೆಗಳಿಂದ ಕೇಳಿಬರತೊಡಗಿದೆ. ಇದರ ಜೊತೆಗೇ ನಾವು ನೋಟು ನಿಷೇಧವನ್ನೂ ಇಟ್ಟು ನೋಡಬೇಕು.

2016 ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದಿಢೀರ್ ಆಗಿ 500 ಮತ್ತು 1 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಅಮಾನ್ಯಗೊಳಿಸಿದರು. ಕಪ್ಪುಹಣವನ್ನು ನಿರ್ಮೂಲನಗೊಳಿಸುವುದು ಇದರ ಮುಖ್ಯ ಗುರಿ ಎಂದವರು ಆಗ ಸಾರಿದ್ದರು. ಕಾಶ್ಮೀರದ ಘರ್ಷಣೆಗೆ ಮತ್ತು ನಕ್ಸಲ್ ಹಿಂಸಾಚಾರಕ್ಕೆ ಕಪ್ಪು ಹಣದ ಪ್ರಭಾವವೇ ಕಾರಣ ಎಂದೂ ಅವರು ಹೇಳಿದ್ದರು. ಇದೀಗ ಆರ್‍ ಬಿ ಐ ಕಳೆದವಾರ ನೋಟು ಅಮಾನ್ಯದ ಫಲಿತಾಂಶವನ್ನು ಪ್ರಕಟಿಸಿದೆ. ನಿಷೇಧಿತ ನೋಟುಗಳ ಪೈಕಿ 99.3% ನೋಟುಗಳೂ ಮರಳಿ ಬಂದಿವೆ ಎಂದೂ ಅದು ಹೇಳಿದೆ. ಇದರರ್ಥ, ನೋಟಿನ ರೂಪದಲ್ಲಿ ಕಪ್ಪುಹಣದ ಚಲಾವಣೆ ಶೂನ್ಯ ಅನ್ನುವಷ್ಟು ಕಡಿಮೆ ಇತ್ತು ಎಂದೇ.

ನಿಜವಾಗಿ, ನೋಟು ಅಮಾನ್ಯ ಅನ್ನುವುದು ಬಹುದೊಡ್ಡ ವೈಫಲ್ಯ. ಸಾಮಾನ್ಯ ಮಂದಿ ತಮ್ಮ ಬಳಿ ಇರುವ ನೋಟುಗಳನ್ನು ಬದಲಿಸಿಕೊಳ್ಳಲು ಬ್ಯಾಂಕುಗಳೆದುರು ಕ್ಯೂ ನಿಂತು ಬಸವಳಿದು ಹೋದರು. ಶ್ರೀಮಂತರು ಪ್ರಭಾವವನ್ನು ಬಳಸಿ ತಮ್ಮ ಬಳಿಯಿರುವ ನೋಟುಗಳನ್ನು ಬಿಳಿಯಾಗಿಸಿಕೊಂಡರು. ಈ ನೋಟು ಅಮಾನ್ಯದಿಂದ ಕಾಶ್ಮೀರದ ಹಿಂಸಾಚಾರವೂ ತಗ್ಗಲಿಲ್ಲ. ನಕ್ಸಲರೂ ಸುಮ್ಮನಾಗಲಿಲ್ಲ. ಆದರೆ ಕೋಟ್ಯಂತರ ಉದ್ಯೋಗಗಳು ನಾಶಗೊಂಡವು. ಸಣ್ಣ-ಪುಟ್ಟ ಉದ್ದಿಮೆಗಳು ನೆಲ ಕಚ್ಚಿದುವು. ಉದ್ಯೋಗ ಮತ್ತು ಕೃಷಿ ಕ್ಷೇತ್ರದ ಮೇಲೆ ಬಲವಾದ ಹೊಡೆತಗಳು ಬಿದ್ದುವು. ಜನಸಾಮಾನ್ಯರ ಕೈಯಲ್ಲಿದ್ದ ಹಣವನ್ನೆಲ್ಲ ಬ್ಯಾಂಕುಗಳು ವಶಪಡಿಸಿಕೊಂಡವಲ್ಲದೇ ಬೃಹತ್ ಉದ್ಯಮಿಗಳ ಕೋಟ್ಯಂತರ ರೂಪಾಯಿ ಸಾಲವನ್ನು ಮನ್ನಾ ಮಾಡಲಾಯಿತು. ಕೆಲವು ಶ್ರೀಮಂತ ಉದ್ಯಮಿಗಳು ಬ್ಯಾಂಕುಗಳನ್ನು ದೋಚಿ ಪಲಾಯನ ಮಾಡಿದರು. ಉದ್ಯಮಿಗಳಿಗೆ ಕೊಟ್ಟ ಕೋಟ್ಯಂತರ ರೂಪಾಯಿ ಸಾಲವನ್ನು ವಸೂಲು ಮಾಡಲಾಗದೆ ಖಜಾನೆ ಖಾಲಿ ಮಾಡಿಕೊಂಡಿದ್ದ ಬ್ಯಾಂಕುಗಳು ಆ ನಷ್ಟವನ್ನು ತುಂಬಿಸಿಕೊಳ್ಳುವುದಕ್ಕಾಗಿ ನೋಟು ನಿಷೇಧದ ದಂಧೆಗಿಳಿದವೋ ಅನ್ನುವ ಅನುಮಾನವೂ ಇದೆ. ಸಾಲ ಎತ್ತಿರುವ ಉದ್ಯಮಿಗಳೇ ಇಂಥದ್ದೊಂದು ತಂತ್ರವನ್ನು ಸರಕಾರಕ್ಕೆ ನೀಡಿದರೋ ಎಂದೂ ಪ್ರಶ್ನಿಸಬೇಕಾಗಿದೆ.

ನೋಟು ನಿಷೇಧ ಮತ್ತು ರಫೇಲ್ - ಇವೆರಡೂ ಇವತ್ತು ಸಾಕಷ್ಟು ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಇವೆರಡರಿಂದಲೂ ಈ ದೇಶಕ್ಕಾದ ಲಾಭ ಏನು ಅನ್ನುವ ಪ್ರಶ್ನೆಗೆ ಸಮರ್ಪಕ ಉತ್ತರವನ್ನು ನೀಡಲು ಈ ಸರಕಾರ ಹಿಂದೇಟು ಹಾಕುತ್ತಿದೆ. ಅದೇವೇಳೆ, ‘ಕೋಟ್ಯಂತರ ರೂಪಾಯಿಗಳ ಎರಡು ಬೃಹತ್ ಹಗರಣಗಳ ಹೆಸರುಗಳಿವು’ ಎಂಬ ವಾದಕ್ಕೆ ದಿನೇ ದಿನೇ ಆಧಾರಗಳು ಲಭ್ಯವಾಗುತ್ತಿವೆ.

ಅಂದಹಾಗೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೋಟು ಮತ್ತು ರಫೇಲ್ ಎರಡೂ ಸೇರಿಕೊಂಡು ಮೋದಿಯವರನ್ನು ಕೆಳಗಿಳಿಸಿದರೂ ಅಚ್ಚರಿಯಿಲ್ಲ.

Tuesday, 21 August 2018

ಈ ಮುಖಾಮುಖಿಯಲ್ಲಿ ಮಾನವ ಗೆಲ್ಲಲಾರ



ಮಳೆಗೂ ಅನಾಹುತಕ್ಕೂ ನಡುವೆ ಏನು ಸಂಬಂಧ ಇದೆ? 2 ದಶಕಗಳ ಹಿಂದೆ ಕೇರಳ ಮತ್ತು ಕೊಡಗಿನ ಮೇಲೆ ಇಂದಿನಂತೆ ಮಳೆ ಸುರಿದಿರುತ್ತಿದ್ದರೆ, ಈ ಪರಿ ಗುಡ್ಡಗಳು ಕುಸಿಯುತ್ತಿತ್ತೇ? ಊರೇ ಮಾಯವಾಗುತ್ತಿತ್ತೇ? ಗ್ರಾಮಕ್ಕೆ ಗ್ರಾಮವೇ ಮುಳುಗಿ ಬಿಡುತ್ತಿತ್ತೇ?
ಇಲ್ಲ ಎಂಬುದೇ ಉತ್ತರ. ಯಾಕೆಂದರೆ, ಈ ಬಾರಿ ಮಳೆಯ ಪ್ರಮಾಣದಲ್ಲಿ ಏರಿಕೆ ಆಗಿದ್ದರೂ ಅನಾಹುತ ತಂದೊಡ್ಡಬಲ್ಲಷ್ಟು ಮಳೆ ಸುರಿದಿಲ್ಲ ಎಂದೇ ತಜ್ಞರು ಅಭಿಪ್ರಾಯ ಪಡುತ್ತಾರೆ. ಭೂಮಿಯ ಮೇಲೆ ಮಾನವನ ಮಿತಿ ಮೀರಿದ ಚಟುವಟಿಕೆಯೇ ಅನಾಹುತಗಳ ಮೂಲ ಅನ್ನುತ್ತವೆ ಬೇರೆ ಬೇರೆ ವರದಿಗಳು.

ಪಶ್ಚಿಮ ಘಟ್ಟಗಳನ್ನು ಬಿಟ್ಟು ಕೊಡಗು ಜಿಲ್ಲೆಯನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇಲ್ಲಿನ ಭೂಪದರದಲ್ಲಿ ವಿಶೇಷ ಗುಣವಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕಲ್ಲು ಮಣ್ಣಾಗುವ ಪ್ರಕ್ರಿಯೆ ಪಶ್ಚಿಮಘಟ್ಟಗಳಲ್ಲಿ ಹೆಚ್ಚು. ಆದ್ದರಿಂದ ಇಲ್ಲಿ ಮಣ್ಣಿನ ಪದರ ಹೆಚ್ಚು ದಟ್ಟವಾಗಿರುತ್ತದೆ. ಉಳಿದ ಕಡೆಗಳಿಗೆ ಹೋಲಿಸಿದರೆ, ಹೆಚ್ಚು ಆಳವಾಗಿ ಮಣ್ಣು ನೆಲೆಗೊಂಡಿರುತ್ತದೆ. ಸಾಮಾನ್ಯ ಮಳೆಯನ್ನು ತಾಳಿಕೊಳ್ಳಬಲ್ಲಷ್ಟು ಸಾಮಥ್ರ್ಯವಿರುವ ಈ ಮಣ್ಣಿಗೆ, ಭಾರೀ ಮಳೆಯು ಒತ್ತಡವನ್ನು ಹೇರುತ್ತದೆ. ಈ ಬಾರಿ ಕೊಡಗಿನ ಮೇಲೆ ಮಾಮೂಲಿಗಿಂತ ಮೂರು ಪಟ್ಟು ಅಧಿಕ ಮಳೆ ಬಿದ್ದಿದೆ ಎಂದು ಅಂದಾಜಿಸಲಾಗಿದೆ. ಒಂದು ಕಡೆ ತುಂಬಾ ಆಳದವರೆಗೆ ಬರೇ ಮಣ್ಣಿನ ಪದರವೇ ಇರುವುದು ಮತ್ತು ಇನ್ನೊಂದು ಕಡೆ ವಾಡಿಕೆಗಿಂತ ಹೆಚ್ಚಾಗಿ ಮಳೆ ಸುರಿದಿರುವುದು-ಇವೆರಡೂ ಜೊತೆಗೂಡಿದಾಗ ಉಂಟಾದ ಫಲಿತಾಂಶವೇ ಈಗಿನ ಅನಾಹುತ ಎಂಬುದೇ ಸರಿ.

ಭೂಮಿಯ ಮೇಲೆ ವಿವಿಧ ನಿರ್ಮಾಣ ಕಾಮಗಾರಿಗಳು ನಡೆಯುವುದೆಂದರೆ ಅದರರ್ಥ ಅಭಿವೃದ್ಧಿ ಎಂದಷ್ಟೇ ಅಲ್ಲ, ಭೂಮಿಯ ಹೊರ ಕವಚವನ್ನು ನಾಶಪಡಿಸಲಾಗುತ್ತಿದೆ ಎಂದೂ ಅರ್ಥವಿದೆ. ಅಭಿವೃದ್ಧಿಯ ಅತಿ ದೊಡ್ಡ ವಿರೋಧಿಗಳು ಯಾರೆಂದರೆ, ಅರಣ್ಯ-ಪೆÇದೆ, ಮರ, ಹುಲ್ಲು ಹಾಸುಗಳು, ಕಲ್ಲು-ಬಂಡೆಗಳು ಇತ್ಯಾದಿ. ವಿಶೇಷ ಏನೆಂದರೆ, ಇವ್ಯಾವುದಕ್ಕೂ ಪ್ರತಿಭಟಿಸುವ ಸಾಮಥ್ರ್ಯವಾಗಲಿ, ಮಾತಾಡುವ ಶಕ್ತಿಯಾಗಲಿ ಇಲ್ಲ. ಈ ದೌರ್ಬಲ್ಯವನ್ನು ಮಾನವ ಪದೇ ಪದೇ ದುರುಪಯೋಗಿಸುತ್ತಲೇ ಇದ್ದಾನೆ. ರಸ್ತೆ ನಿರ್ಮಾಣ, ಕಟ್ಟಡ, ತೋಟಗಳ ನಿರ್ಮಾಣಕ್ಕೆಂದು ಭೂಮಿಯ ಹೊರ ಕವಚದಲ್ಲಿರುವ ಇವುಗಳನ್ನು ಕತ್ತರಿಸುತ್ತಾನೆ. ಗುಡ್ಡಗಳನ್ನು ಸಮತಟ್ಟುಗೊಳಿಸುತ್ತಾನೆ. ಕಲ್ಲು ಕ್ವಾರಿಗಳಿಗಾಗಿ ಭೂಗರ್ಭವನ್ನೇ ಕೊರೆಯುತ್ತಾನೆ. ಕಾಡು ಕಡಿಯುತ್ತಾನೆ.

ಮಳೆಯಿಂದ ಅತ್ಯಂತ ಹೆಚ್ಚು ಹಾನಿ ಸಂಭವಿಸಿರುವ ಮಡಿಕೇರಿ ಮತ್ತು ಕೊಡಗು ಜಿಲ್ಲೆಯ ಇನ್ನಿತರ ಪ್ರದೇಶಗಳಲ್ಲಿ ಅಧಿಕೃತ ಹೋಮ್‍ಸ್ಟೇಗಳ ಸಂಖ್ಯೆಯೇ ಮೂರು ಸಾವಿರದಷ್ಟಿದೆ. ಈ ಹೋಮ್‍ಸ್ಟೇಗಳು ತಲೆ ಎತ್ತಿರುವುದೇ ಪ್ರವಾಸಿಗಳನ್ನು ಗುರಿಯಾಗಿಸಿಕೊಂಡು ಆರಂಭದಲ್ಲಿ ಗುಡ್ಡಗಳ ಅಡಿಯಲ್ಲಿ ವಿರಳವಾಗಿ ಅಲ್ಲೊಂದು ಇಲ್ಲೊಂದು ಇದ್ದಿದ್ದ ರೆಸಾರ್ಟ್‍ಗಳು ಮತ್ತು ಹೋಮ್‍ಸ್ಟೇಗಳು ಬಳಿಕ ವಿಪರೀತವಾಗಿ ಹೆಚ್ಚಾದುವು. ಗುಡ್ಡಗಳನ್ನು ಕೊರೆದು ಅದರ ಮಧ್ಯ ಭಾಗದಲ್ಲೂ ರೆಸಾರ್ಟುಗಳು ತಲೆ ಎತ್ತಿದುವು. ನಿಜವಾಗಿ, ಮಳೆಯ ನೀರು ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ಭೂಮಿಯ ಒಳಗೆ ಸೇರದಂತೆ ತಡೆಯುವುದೇ ಭೂಮಿಯ ಮೇಲಿನ ಮರ-ಗಿಡಗಳು, ಹಲ್ಲು ಪೊದೆಗಳು. ಅಭಿವೃದ್ಧಿಯ ಹೆಸರಲ್ಲಿ ಇವುಗಳನ್ನು ನಾಶ ಮಾಡುವಾಗ ಭೂಮಿಯ ಒಳಗೆ ಸೇರಿಕೊಂಡಿರುವ ಬೇರುಗಳೂ ಅದುರುತ್ತವೆ ಮತ್ತು ಮಣ್ಣು ಸಡಿಲಗೊಳ್ಳುತ್ತದೆ. ಇದರಿಂದಾಗಿ ಭೂಮಿಯ ಒಳಗಡೆಗೆ ನೀರು ಸೇರಿಕೊಳ್ಳುವುದಕ್ಕೆ ಸುಲಭ ದಾರಿಯನ್ನು ಮಾಡಿಕೊಟ್ಟಂತಾಗುತ್ತದೆ. ಹೀಗೆ ಒಳ ಸೇರುವ ನೀರು ಭೂಮಿಯ ಒಳಗಡೆಗೆ ಒತ್ತಡವೊಂದನ್ನು ಸೃಷ್ಟಿಸುತ್ತದೆ. ಈ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಹೋದಾಗ ಕುಸಿತ ಉಂಟಾಗುತ್ತದೆ.

      ಮಳೆಗೂ ಮನುಷ್ಯನಿಗೂ ನಡುವೆ ಎಷ್ಟೊಂದು ಆಪ್ತವಾದ ಸಂಬಂಧವೆಂದರೆ ಮಳೆಯಿಲ್ಲದೆ ಮನುಷ್ಯನೇ ಇಲ್ಲ ಅನ್ನುವಷ್ಟು. ವರ್ಷದ 12 ತಿಂಗಳಲ್ಲಿ ಮೂರ್ನಾಲ್ಕು ತಿಂಗಳನ್ನು ಮನುಷ್ಯ ಮಳೆಗೆಂದೇ ಮೀಸಲಿಟ್ಟಿದ್ದಾನೆ. ಮಳೆ ಬರುವುದಕ್ಕಿಂತ ಮೊದಲೇ ಅದರ ಸ್ವಾಗತಕ್ಕಾಗಿ ತಯಾರಿಯನ್ನೂ ನಡೆಸುತ್ತಾನೆ. ನಿರೀಕ್ಷೆಗಿಂತ ಕಡಿಮೆ ಮಳೆ ಬಿದ್ದರೆ ಆತಂಕ ಪಡುತ್ತಾನೆ. ಹೆಚ್ಚಾದರೂ ಆತಂಕ ಪಡುತ್ತಾನೆ. ಹಾಗಂತ, ಪ್ರತಿ ವರ್ಷವೂ ಏಕ ಪ್ರಕಾರವಾಗಿಯೇ ಮಳೆ ಬರುತ್ತದೆ ಎಂದಲ್ಲ. ಹೆಚ್ಚು- ಕಡಿಮೆ ಆಗುತ್ತಲೇ ಇರುತ್ತದೆ. ಈಗ ಸುರಿದಿರುವ ಮಳೆಯು ಎರಡು ದಶಕಗಳ ಹಿಂದೆ ಹೆಚ್ಚು ಎಂದು ಹೇಳುವ ಸಾಧ್ಯತೆಯೇ ಇಲ್ಲ. ಅಂದು ಮಳೆ ಅಧಿಕ ಸುರಿದರೂ ಅದು ಭೂಮಿಯೊಳಗಡೆ ಸೇರದಂತೆ ಮರ-ಗಿಡ, ಪೊದೆಗಳು ತಡೆದಿಟ್ಟುಕೊಳ್ಳುತ್ತಿದ್ದುದರಿಂದ ಭೂಕುಸಿತ, ಗ್ರಾಮಗಳ ಕಣ್ಮರೆಗೆ ಅಂದು ಅವಕಾಶ ಇದ್ದಿರಲಿಲ್ಲ. ಇವತ್ತು ಹಾಗಲ್ಲ. ಅಭಿವೃದ್ಧಿ ಎಲ್ಲವನ್ನೂ ನಾಶ ಮಾಡುತ್ತಿದೆ. ಅಭಿವೃದ್ಧಿ ಎಂಬ ನಾಲ್ಕಕ್ಷರ ಚಿಗುರುವುದೇ ಭೂಮಿಯ ಮೇಲೆ ಭೂಮಿಯಿಲ್ಲದೇ ಅಭಿವೃದ್ಧಿ ಸಾಧ್ಯವೂ ಇಲ್ಲ ಅನ್ನುವ ಸ್ಥಿತಿ ನಿರ್ಮಾಣವಾಗಿದೆ. ಅಭಿವೃದ್ಧಿ ಎಂದರೆ ಭೂಮಿಯ ಮೇಲ್ಪದರವನ್ನು ನಾಶ ಮಾಡುವುದು ಎಂದೇ ಅರ್ಥ. ಕಲ್ಲು ಕ್ವಾರೆಗಳ ಹೆಸರಲ್ಲಿ ಗಣಿಯ ಹೆಸರಲ್ಲಿ ಭೂಮಿಯ ಒಡಲನ್ನು ಪ್ರತಿನಿತ್ಯ ಅಗೆಯುತ್ತಲೇ ಇದ್ದೇವೆ. ಭಾರೀ ಸ್ಫೋಟಕಗಳನ್ನು ಸಿಡಿಸಿ ಭೂಮಿಯ ಒಳಪದರವನ್ನು ಸಡಿಲಗೊಳಿಸುತ್ತಿದ್ದೇವೆ. ಬಹುಶಃ, ಭೂಮಿಯು ಇದರ ಪ್ರತೀಕಾರಕ್ಕಾಗಿ ಕಾಯುತ್ತಿರುವಂತೆ ಕಾಣಿಸುತ್ತಿದೆ.

ಮಳೆ ಮತ್ತು ಇಳೆ ಎರಡರ ನಡುವೆಯೂ ಆಪ್ತವಾದ ಸಂಬಂಧ ಇದೆ. ಮಳೆ ಮುನಿದರೆ ಇಳೆ ಬಾಡುತ್ತದೆ. ಇಳೆಯ ಹಚ್ಚಹಸುರಿನಲ್ಲಿ ಮಳೆಯ ಪಾತ್ರವೇ ದೊಡ್ಡದು. ಆದರೆ ಒಂದು ಹನಿ ಮಳೆ ಸೃಷ್ಟಿಸಲಾಗದ ಮನುಷ್ಯ ಇಳೆಯ ಮೇಲಂತೂ ದೌರ್ಜನ್ಯ ನಡೆಸುತ್ತಲೇ ಬಂದಿz್ದÁನೆ. ಇವತ್ತು ಭೂಮಿಯ ತಾಪಮಾನದಲ್ಲಿ ಭಾರೀ ಏರಿಕೆ ಉಂಟಾಗಿದೆ. ಭೂಮಿಯ ತಾಪಮಾನದಲ್ಲಿ ಹೆಚ್ಚಳವಾಗುವುದೆಂದರೆ, ಮಳೆಯ ಸುರಿಯುವಿಕೆಯಲ್ಲಿ ಅನಿಶ್ಚಿತತೆ ನಿರ್ಮಾಣವಾಗುವುದು ಎಂದರ್ಥ. ಯಾವ ಭೂಭಾಗದಲ್ಲಿ ಮಳೆ ಬೀಳಬೇಕೋ ಆ ಭಾಗದಲ್ಲಿ ಮಳೆ ಬೀಳದೇ ಇರುವುದು ಮತ್ತು ಎಲ್ಲಿ ಬೀಳಬಾರದೋ ಅಲ್ಲಿ ಮಳೆ ಬೀಳುವುದು- ಭೂತಾಪಮಾನದಿಂದ ಹೀಗಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಸಮುದ್ರ ಬಿಸಿಯಾಗುವುದು ಭೂತಾಪಮಾನದ ಲಕ್ಷಣ. ಸಮುದ್ರದ ಒಳಗಡೆ ನಡೆಯುವ ಕ್ರಿಯೆಗಳಲ್ಲಿ ಏರುಪೇರಾದಾಗ ಮಳೆಯ ಮಾರುತಗಳಲ್ಲಿ ಏರುಪೇರಾಗುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿಯೇ ಬೀಳಬೇಕಾದ ಕಡೆ ಮಳೆ ಬೀಳುವುದಿಲ್ಲ ಎಂಬ ಅಭಿಪ್ರಾಯವೂ ಇದೆ. ಏನೇ ಇದ್ದರೂ, ಅಂತಿಮವಾಗಿ ಇವೆಲ್ಲದರ ಪರಿಣಾಮವನ್ನು ಎದುರಿಸಬೇಕಾಗಿರುವುದು ಮನುಷ್ಯ. ಭೂಮಿ ಬಾಯಿ ಬಿಟ್ಟರೂ ಗುಡ್ಡ ಕುಸಿದರೂ ನದಿ ಉಕ್ಕಿ ಹರಿದರೂ ಆತ ಒಗ್ಗಿಕೊಳ್ಳಲೇ ಬೇಕು. ಇದೀಗ ಅಂಥದ್ದೊಂದು ಸಂದರ್ಭ ಎದುರಾಗಿದೆ. ಮಾನವನಿಗೆ ಮಳೆ ಮುಖಾಮುಖಿ ನಿಂತಿದೆ. ಭೂಮಿಯು ಮಳೆಯ ಜೊತೆ ಸೇರಿಕೊಂಡಿದೆ. ಮಳೆ ಮತ್ತು ಭೂಮಿ ಎರಡೂ ಜೊತೆ ಸೇರಿಕೊಂಡರೆ ಮಾನವ ಎಲ್ಲಿ ಅನ್ನುವ ಪ್ರಶ್ನೆಯನ್ನು ಈಗನ ನೆರೆ ಹುಟ್ಟಿಹಾಕಿದೆ. ಪ್ರಕೃತಿಯೇ ಹುಟ್ಟುಹಾಕಿರುವ ಪ್ರಶ್ನೆಯಿದು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ವಿವೇಕವನ್ನು ಮನುಷ್ಯ ಪ್ರದರ್ಶಿಸಬೇಕು. ತಾನು ಏನು ಮತ್ತು ಪ್ರಕೃತಿಯ ಮೇಲೆ ತನಗೆ ಎಷ್ಟು ಹಕ್ಕು, ಕರ್ತವ್ಯವಿದೆ ಎಂಬ ಬಗ್ಗೆ ಅವಲೋಕನ ನಡೆಸಲು ಪ್ರತಿಯೊಬ್ಬರಿಗೂ ಈ ಮಳೆ ನೆಪವಾಗಿ ಬಳಕೆಯಾಗಬೇಕು.

ಪ್ರಕೃತಿಗೆ ಮುಖಾಮುಖಿ ನಿಂತು ಮಾನವ ಗೆಲ್ಲಲಾರ. ಕೇವಲ ಒಂದು ವಾರಗಳ ಕಾಲ ಸುರಿದ ಮಳೆಗೆ ಮಾನವ ತಬ್ಬಿಬ್ಬಾಗಿರುವುದೇ ಇದಕ್ಕೆ ಸಾಕ್ಷಿ. ಪ್ರಕೃತಿ ಮತ್ತು ಮನುಷ್ಯರ ನಡುವೆ ಗೆಳೆತನ ಬೆಳೆಯುವುದೇ ಇದಕ್ಕಿರುವ ಪರಿಹಾರ. ಮಾನವನು ಭೋಗ ಭಾವನೆಯನ್ನು ಕಳಚಿಟ್ಟು ಪ್ರಕೃತಿಯನ್ನು ನೋಡುವ ದಿನ ಬಂದಾಗ ಮಳೆಯೂ ಅನುಗ್ರಹವಾಗಬಹುದು. ಭೂಮಿಯೂ ಸುರಕ್ಷಿತವಾಗಬಹುದು.

Tuesday, 14 August 2018

ಹಾಜಿರಾರ ಜಾಗದಲ್ಲಿ ನಾವಿರುತ್ತಿದ್ದರೆ..

     ಒಂದು ತುದಿಯಲ್ಲಿ ಹಾಜಿರಾ. ಇನ್ನೊಂದು ತುದಿಯಲ್ಲಿ ಉಳಿದ ಜಗತ್ತು. ಇದು ಹಜ್ಜ್. ಒಂದು ವೇಳೆ, ಮಕ್ಕಾದ ಮರುಭೂಮಿಯಲ್ಲಿ  ತಂಗಲು ಹಾಜಿರಾ ಒಪ್ಪಿಕೊಳ್ಳದೇ ಇರುತ್ತಿದ್ದರೆ ಏನಾಗುತ್ತಿತ್ತು? ಮುಸ್ಲಿಮ್ ಜಗತ್ತು ಮತ್ತೆ ಮತ್ತೆ ಕೇಳಿಕೊಳ್ಳಬೇಕಾದ ಪ್ರಶ್ನೆ ಇದು. ಮಕ್ಕಾಕ್ಕೆ  ಹಾಜಿರಾ ಬರುವಾಗ ಅವರ ಜೊತೆಗಿದ್ದುದು ಪತಿ ಇಬ್ರಾಹೀಮ್(ಅ) ಮತ್ತು ಹಾಲುಗಲ್ಲದ ಶಿಶು ಇಸ್ಮಾಈಲ್(ಅ). ಮಕ್ಕಾ ಎಂಬುದು ನಿರ್ಜನ ಮರುಭೂಮಿ. ಜಲವೂ ಇಲ್ಲ. ಆಹಾರ ವಸ್ತುಗಳ ಲಭ್ಯತೆಯ ಕುರುಹೂ ಇಲ್ಲ. ಇಂಥದ್ದೊಂದು ಸ್ಥಿತಿಯಲ್ಲಿ ಓರ್ವ ಹೆಣ್ಣುಮಗಳು  ಗಂಡಿನ ಉಪಸ್ಥಿತಿಯನ್ನು ಬಯಸುವುದು ಸಹಜ. ಆದರೆ ಇಬ್ರಾಹೀಮ್(ಅ) ಹೊರಟು ನಿಲ್ಲುತ್ತಾರೆ. ಅದೊಂದು ಸವಾಲಿನ ಸನ್ನಿವೇಶ.  ಧೈರ್ಯಶಾಲಿ ಪುರುಷನೇ ಎದೆಗುಂದುವಂಥ ವಾತಾವರಣ. ಹೀಗಿರುವಾಗ ಹಾಜಿರಾ ತನ್ನ ಪತಿ ಇಬ್ರಾಹೀಮ್‍ರ ಜೊತೆ ಹೊರಟು ನಿ ಲ್ಲುತ್ತಿದ್ದರೆ ಅದು ಅಪರಾಧವೋ ವಿಶ್ವಾಸದ ಕೊರತೆಯೋ ಆಗುತ್ತಿರಲಿಲ್ಲ. ಮಾನವ ಸಹಜ ಪ್ರತಿಕ್ರಿಯೆ ಅದು. ಆದರೆ ಹಾಜಿರಾ ವ್ಯತಿರಿಕ್ತ  ತೀರ್ಮಾನ ಕೈಗೊಳ್ಳುತ್ತಾರೆ. ಆದ್ದರಿಂದಲೇ, ಆ ವರೆಗೆ ಪ್ರವಾದಿ ಇಬ್ರಾಹೀಮ್‍ರ ಪತ್ನಿ ಮತ್ತು ಶಿಶು ಇಸ್ಮಾಈಲ್‍ರ ತಾಯಿಯಷ್ಟೇ ಆಗಿದ್ದ  ಹಾಜಿರಾ, ತನ್ನ ಆ ಧೈರ್ಯದ ನಿರ್ಧಾರದಿಂದಾಗಿ ಜಗತ್ತಿನ ಸರ್ವ ಸ್ತ್ರೀ-ಪುರುಷರ ಸ್ಮರಣಾರ್ಹ ವ್ಯಕ್ತಿತ್ವವಾಗುತ್ತಾರೆ.
ಈ ಜಗತ್ತಿಗೆ ಒಂದು ಲಕ್ಷಕ್ಕಿಂತ ಅಧಿಕ ಪ್ರವಾದಿಗಳು ಆಗಮಿಸಿರುವುದಾಗಿ ಇತಿಹಾಸ ಹೇಳುತ್ತದೆ. ಬಹುತೇಕ ಅವರೆಲ್ಲರೂ ಸಂಸಾರಸ್ಥರೇ.  ಆದರೆ ಯಾವ ಪ್ರವಾದಿಯ ಪತ್ನಿಯೂ ಹಾಜಿರಾ ಆಗಲಿಲ್ಲ. ಪ್ರವಾದಿ ಮುಹಮ್ಮದ್‍ರ(ಸ) ಸಂಗಾತಿಗಳಾದ ಖದೀಜಾ ಮತ್ತು ಆಯಿಶಾರಿಗೆ  ಸಂಬಂಧಿಸಿಯೂ ಇದೇ ಮಾತನ್ನು ಹೇಳಬಹುದು. ಹಾಜಿರಾ ಇವರೆಲ್ಲರಿಗಿಂತ ಭಿನ್ನ.

   ಸುಲಭ ಮತ್ತು ಕಷ್ಟ- ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭ ಎದುರಾದಾಗ ಸಾಮಾನ್ಯವಾಗಿ ಸುಲಭವನ್ನೇ ಆಯ್ಕೆ  ಮಾಡಿಕೊಳ್ಳುತ್ತೇವೆ. ಇದು ಮಾನವ ಸಹಜ ಪ್ರಕೃತಿ. ನೀವು ಹಾಜಿರಾ ಆಗಬೇಕಾದರೆ ಈ ಸಹಜ ಪ್ರಕೃತಿಯಿಂದ ಹೊರಬರಬೇಕು.  ಯಾವುದು ಸವಾಲಿನದ್ದೋ ಅದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಜಗತ್ತಿನ ಯಾವುದೇ ಧರ್ಮದ ಇತಿಹಾಸದಲ್ಲಿ ಮಹಿಳೆಯೋರ್ವರು  ತುತ್ತತುದಿಯಲ್ಲಿ ನಿಲ್ಲುವುದು ಮತ್ತು ಆಕೆಯ ಚಟುವಟಿಕೆಯನ್ನು ಆರಾಧನೆಯಾಗಿ ಸ್ತ್ರೀಯರು ಮತ್ತು ಪುರುಷರು ಅನುಸರಿಸುವುದನ್ನು ಬ ಹುಶಃ ಇಸ್ಲಾಮಿನಲ್ಲಿ ಮಾತ್ರ ವೀಕ್ಷಿಸಲು ಸಾಧ್ಯ. ಮಹಿಳೆ ಸವಾಲನ್ನು ಮೆಟ್ಟಿ ನಿಲ್ಲಬಲ್ಲ ಗಟ್ಟಿಗಿತ್ತಿ. ಆಕೆ ಛಲವಂತೆ. ಧೈರ್ಯವಂತೆ. ದೇವನ  ಮೇಲೆ ಆಕೆ ಎಂತಹ ವಿಶ್ವಾಸ ತಾಳಬಲ್ಲಳೆಂದರೆ, ನಿರ್ಜನ, ನಿರ್ಜಲ, ನಿರ್ವಾತ, ನಿರಾಹಾರದಂಥ ವಾತಾವರಣವಿದ್ದಾಗ್ಯೂ ಆಕೆ  ಎದೆಗುಂದಲಾರಳು... ಹಾಜಿರಾ ಎತ್ತಿ ಹಿಡಿದ ಸಂದೇಶ ಇದು. ಇಸ್ಲಾಮಿನಲ್ಲಿ ಮಹಿಳೆ ಏನು ಎಂದು ಯಾರಾದರೂ ಪ್ರಶ್ನಿಸಿದರೆ,  ಉತ್ತರವಾಗಿ ಹಾಜಿರಾ ಒಬ್ಬರೇ ಸಾಕು. ಕೇವಲ ಒಬ್ಬರೇ.
   ಕನ್ನಡಿಯಿಲ್ಲದ ಕಾಲದಿಂದ ಹಿಡಿದು ಸೆಲ್ಫಿಯ ಈ ಕಾಲದವರೆಗೆ ಹಾಜಿರಾ ಅಂದು ತಂಗಿದ ಮಕ್ಕಾಕ್ಕೆ ಅಸಂಖ್ಯಾತ ಮಂದಿ ಹೋಗಿದ್ದಾರೆ.  ಹೋಗುತ್ತಿದ್ದಾರೆ. ಮುಂದೆಯೂ ಹೋಗಲಿದ್ದಾರೆ. ಇದೊಂದು ನಿರಂತರ ಕ್ರಿಯೆ. ಸದ್ಯದ ಅಗತ್ಯ ಏನೆಂದರೆ, ಈ ಕ್ರಿಯೆಯನ್ನು ¸ ಸಂಪ್ರದಾಯದ ಚೌಕಟ್ಟಿನಿಂದ ಹೊರತಂದು ಪರಿಶೀಲಿಸುವುದು. ಹಾಜಿರಾ ಎದುರಿಸಿದಂತಹ ಪರಿಸ್ಥಿತಿ ತನ್ನೆದುರು ಬರುತ್ತಿದ್ದರೆ ತಾನೇನು  ಮಾಡುತ್ತಿದ್ದೆ ಎಂದು ಪ್ರತಿಯೊಬ್ಬರೂ ಸ್ವತಃ ಪ್ರಶ್ನಿಸಿಕೊಳ್ಳುವುದು. ಉತ್ತರ ಅಷ್ಟು ಸರಳ ಅಲ್ಲ ಅನ್ನುವುದು ಎಲ್ಲರಿಗೂ ಗೊತ್ತು. ಆದ್ದರಿಂದಲೇ,  ಮಕ್ಕಾದಲ್ಲಿ ತಂಗಲು ಹಾಜಿರಾ ಒಪ್ಪಿಕೊಳ್ಳದಿರುತ್ತಿದ್ದರೆ ಏನಾಗುತ್ತಿತ್ತು ಅನ್ನುವ ಪ್ರಶ್ನೆ ಮುಖ್ಯವಾಗುವುದು.
ಈ ಪ್ರಶ್ನೆಯನ್ನು ಹಾಜಿಗಳು ಮತ್ತು ಹಾಜಿಗಳಲ್ಲದ ಎಲ್ಲರೂ ತಮ್ಮ ತಮ್ಮೊಳಗೆ ಕೇಳಿಕೊಳ್ಳಬೇಕು. ಅದಕ್ಕೆ ಸಿಗುವ ಉತ್ತರವೇ ನಾವು. ಇವತ್ತಿನ  ಸೆಲ್ಫಿ ಜಗತ್ತಿಗೆ ಹೋಲಿಸಿದರೆ ಸಂಪರ್ಕ ಕ್ಷೇತ್ರ ಶೂನ್ಯವಾಗಿದ್ದ ಕಾಲದ ಹಾಜಿರಾ, ನಮ್ಮೊಳಗೆ ಬರೇ ಒಂದು ಬೆರಗು ಆಗಿ ಮಾತ್ರ ಉಳಿಯಬೇಕಾದವರಲ್ಲ. ಅವರೊಂದು ವಾಸ್ತವ. ಆ ವಾಸ್ತವಕ್ಕೆ ಮುಖಾಮುಖಿಯಾಗುವ ಸಂದರ್ಭವೇ ಹಜ್ಜ್. ವಿಷಾದ ಏನೆಂದರೆ,
    ಅವರು ನಮ್ಮ ನಡುವೆ ಬರೇ ಬೆರಗಾಗಿಯಷ್ಟೇ ಉಳಿದುಕೊಂಡಿದ್ದಾರೆ. ಈ ಸ್ಥಿತಿ ಬದಲಾಗಬೇಕು.

Thursday, 9 August 2018

ಗೋವು, ಹೆಣ್ಣು ಮತ್ತು ನಾವು...


ಅತ್ಯಾಚಾರವನ್ನು ತಡೆಗಟ್ಟುವುದು ಹೇಗೆ ಎಂಬ ಪ್ರಶ್ನೆ ಅತ್ಯಂತ ಗಂಭೀರ ಸ್ವರೂಪವನ್ನು ಪಡೆದುಕೊಂಡದ್ದು ನಿರ್ಭಯ ಪ್ರಕರಣದ ಬಳಿಕ. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕು ಎಂಬ ಕೂಗು ಬಲ ಪಡೆದದ್ದೂ ಆ ಬಳಿಕವೇ. ಮನ್‍ಮೋಹನ್ ಸಿಂಗ್ ಸರಕಾರವು ಈ ಕುರಿತಂತೆ ಕೆಲವು ಕ್ರಮಗಳನ್ನು ಕೈಗೊಂಡಿತು. ಕಾನೂನಿಗೆ ಬಲ ತುಂಬುವ ಕೆಲಸವನ್ನು ಮಾಡಿತು. ನಿರ್ಭಯ ನಿಧಿಯ ಸ್ಥಾಪನೆಯೂ ಆಯಿತು. ಇದು 5 ವರ್ಷಗಳ ಹಿಂದಿನ ಬೆಳವಣಿಗೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಸರಕಾರವು ವಿಧೇಯಕವೊಂದನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ಈ ವಿಧೇಯಕವೂ ಅತ್ಯಾಚಾರಕ್ಕೆ ಸಂಬಂಧಿಸಿದ್ದೇ. ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಲು ಈ ವಿಧೇಯಕ ಅವಕಾಶ ಮಾಡಿಕೊಡುತ್ತದೆ. ಈ ವಿಧೇಯಕಕ್ಕಿಂತ ಮೊದಲು ಇನ್ನೊಂದು ವಿಧೇಯಕಕ್ಕೂ ನಮ್ಮ ದೇಶದ ಸಂಸತ್ತು ಅನುಮೋದನೆ ನೀಡಿತ್ತು. ಅದೂ ಅತ್ಯಾಚಾರಕ್ಕೆ ಸಂಬಂಧಿಸಿದ ವಿಧೇಯಕವೇ. ಅತ್ಯಾಚಾರದಲ್ಲಿ ಭಾಗಿಯಾದ ಅಪ್ರಾಪ್ತ ವಯಸ್ಕನನ್ನು ಪ್ರಾಪ್ತನಂತೆ ಪರಿಗಣಿಸಿ ವಿಚಾರಣೆಗೆ ಒಳಪಡಿಸಲು ಅನುವು ಮಾಡಿಕೊಡುವ ವಿಧೇಯಕ ಅದಾಗಿತ್ತು. ವಿಷಾದ ಏನೆಂದರೆ,
     
     ಸಂಸತ್ತಿನಲ್ಲಿ ವಿಧೇಯಕಗಳು ಒಂದರ ಮೇಲೊಂದರಂತೆ ಮಂಡನೆಯಾಗುತ್ತಲೇ ಇದೆ. ಅಲ್ಲದೇ, ಅಂಗೀಕಾರವನ್ನೂ ಪಡೆದುಕೊಳ್ಳುತ್ತಿದೆ. ಆದರೆ, ಅತ್ಯಾಚಾರದ ಪ್ರಕರಣಗಳಲ್ಲಿ ಇಳಿಕೆ ಆಗುತ್ತಲೇ ಇಲ್ಲ. ಮಾತ್ರವಲ್ಲ, ಅತ್ಯಾಚಾರ ಪ್ರಕರಣಗಳ ಭೀಭತ್ಸಕತೆಯಲ್ಲಿ ಮೊನ್ನೆಯಿಂದ, ನಿನ್ನೆಗೆ, ನಿನ್ನೆಯಿಂದ ಇವತ್ತಿಗೆ ಏರಿಕೆ ಆಗುತ್ತಲೇ ಇದೆ. ಇದು ಹೇಗೆ ಸಾಧ್ಯ? ಒಂದು ಕಡೆ, ಬಲ ಪಡೆಯುತ್ತಿರುವ ಕಾನೂನು ಮತ್ತು ಇನ್ನೊಂದು ಕಡೆ, ಅತ್ಯಾಚಾರ ಮತ್ತು ಅದರ ಭೀಕರತೆಯಲ್ಲಿ ಹೆಚ್ಚಳವಾಗುತ್ತಿರುವುದು- ಇವೆಲ್ಲ ಏನು ಮತ್ತು ಏಕೆ? 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣ ದಂಡನೆ ವಿಧಿಸುವ ವಿಧೇಯಕ ಸಂಸತ್ತಿನಲ್ಲಿ ಮಂಡನೆಯಾಗುತ್ತಿರುವ ಹೊತ್ತಿಲ್ಲೇ  ತೆಲಂಗಾಣದಿಂದ ಭೀಕರ ಸುದ್ದಿಯೊಂದು ಹೊರಬಿತ್ತು. 10 ವರ್ಷಕ್ಕಿಂತ ಕಿರಿಯ ವಯಸ್ಸಿನ ಬಾಲಕಿಯರಿಗೆ ಹಾರ್ಮೋನ್ ಇಂಜಕ್ಷನ್ ಚುಚ್ಚಿ ಸೆಕ್ಸ್ ದಂಧೆಗೆ ಬಳಸಿಕೊಳ್ಳುವ ಜಾಲ ಅಲ್ಲಿ ಪತ್ತೆಯಾಯಿತು. 12ರಷ್ಟು ಬಾಲಕಿಯರನ್ನು ಆ ಕ್ರೌರ್ಯದಿಂದ ರಕ್ಷಿಸಲಾಯಿತು. ಇದಕ್ಕಿಂತ ಎರಡು ವಾರಗಳ ಮೊದಲು ಬಿಹಾರದ ಮುಝಫ್ಫರ್‍ಪುರ ನಗರದಲ್ಲಿ ಸರಕಾರದ ಅನುದಾನದಿಂದ ‘ಸೇವಾ ಸಂಕಲ್ಪ ಏವಂ ವಿಕಾಸ್ ಸಮಿತಿ’ಯು ನಡೆಸುತ್ತಿದ್ದ ಬಾಲಿಕಾಗೃಹದಲ್ಲಿ 24ರಷ್ಟು ಹೆಣ್ಮಕ್ಕಳು ಮೇಲೆ ನಿರಂತರ ಅತ್ಯಾಚಾರಕ್ಕೊಳಗಾದ ಘಟನೆ ಬಹಿರಂಗಕ್ಕೆ ಬಂತು. ಇದನ್ನು ನಡೆಸುತ್ತಿದ್ದವ ಬೃಜೇಶ್ ಠಾಕೂರ್ ಎಂಬ ಅರೆಕಾಲಿಕ ಪತ್ರಕರ್ತ. ಕಳೆದವಾರ ನಮ್ಮದೇ ರಾಜ್ಯದ ಮಾಲೂರಿನಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು ಕೊಲೆ ಮಾಡಲಾಯಿತು. ಹಾಗಂತ, ಇಲ್ಲಿ ಉಲ್ಲೇಖಗೊಂಡ ಕೃತ್ಯಗಳನ್ನು ಬಿಡಿಬಿಡಿಯಾಗಿ ಓದಬೇಕಿಲ್ಲ. ಈ ದೇಶದಲ್ಲಿ ನಿರಂತರ ನಡೆಯುತ್ತಿರುವ ಪ್ರಕರಣಗಳಿಂದ ಹೆಕ್ಕಿಕೊಂಡ ಘಟನೆಗಳಷ್ಟೇ ಇವು.
   
       ಹೆಣ್ಣು ಪದೇ ಪದೇ ಈ ದೇಶದಲ್ಲಿ ಅಸುರಕ್ಷಿತೆಯಾಗಿ ಗುರುತಿಸಿಕೊಳ್ಳುವುದಕ್ಕೆ ಕಾರಣಗಳು ಏನು? ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಾಚ್‍ನ ವರದಿಯ ಪ್ರಕಾರ, ಭಾರತದ ಸುಮಾರು ಒಂದು ಲP್ಷÀದ 50 ಸಾವಿರಕ್ಕಿಂತಲೂ ಅಧಿಕ ಹೆಣ್ಣು ಮಕ್ಕಳು ದೇಶ-ವಿದೇಶಗಳಲ್ಲಿ ವೇಶ್ಯಾವಾಟಿಕೆಯ ದಂಧೆಗೆ ಸಿಲುಕಿ ಬಿಟ್ಟಿದ್ದಾರೆ. ಭಯಾನಕ ಏನೆಂದರೆ, ಇವರಲ್ಲಿ ಶೇ. 40ರಷ್ಟು ಹೆಣ್ಣು ಮಕ್ಕಳೂ ಅಪ್ರಾಪ್ತರು. ಅವರ ಬಾಲ್ಯವೇ ನಾಶವಾಗಿ ಹೋಗಿದೆ. ಈ ದೇಶದಲ್ಲಿ ಪ್ರತಿವರ್ಷ 6 ಲಕ್ಷ ಹೆಣ್ಣು ಭ್ರೂಣದ ಹತ್ಯೆಯಾಗುತ್ತಿದೆ. ವರ್ಷಕ್ಕೆ 5 ಲಕ್ಷ ಮಕ್ಕಳನ್ನು ಲೈಂಗಿಕ ವ್ಯಾಪಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ದೇಶದ ಒಟ್ಟು ಮಕ್ಕಳ ಜನಸಂಖ್ಯೆಯಲ್ಲಿ ಶೇ. 53ರಷ್ಟು ಮಕ್ಕಳು ಯಾವುದಾದರೊಂದು ರೀತಿಯಲ್ಲಿ ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಯುನಿಸೆಫ್‍ನ ವರದಿಯೂ ಹೇಳುತ್ತಿದೆ. ಅಲ್ಲದೇ, ಪ್ರತಿ 155 ನಿಮಿಷಕ್ಕೊಮ್ಮೆ ದೇಶದಲ್ಲಿ 16 ವರ್ಷದೊಳಗಿನ ಒಂದು ಹೆಣ್ಣು ಮಗು ಅತ್ಯಾಚಾರಕ್ಕೆ ಒಳಗಾಗುತ್ತಿದೆ. ಪ್ರತಿ 13 ಗಂಟೆಗೊಮ್ಮೆ 10 ವರ್ಷಕ್ಕಿಂತ ಕೆಳಗಿನ ಒಂದು ಹೆಣ್ಣು ಮಗು ಲೈಂಗಿಕ ಕಿರುಕುಳವನ್ನು ಎದುರಿಸುತ್ತಿದೆ.


     ಹೀಗೆ ಪಟ್ಟಿ ಮಾಡುತ್ತಾ ಹೋದರೆ ಪುಟ ತುಂಬುವಷ್ಟು ಅಂಕಿ-ಅಂಶಗಳಿವೆ. ಈ ಅಂಕಿ-ಅಂಶಗಳ ಆಚೆಗೆ ಈ ದೇಶವನ್ನು ಹೆಣ್ಣಿನ ಪಾಲಿಗೆ ಸುರಕ್ಷಿತಗೊಳಿಸುವುದು ಹೇಗೆ? ತಮಾಷೆ ಏನೆಂದರೆ, ಗೋವುಗಳ ಸುರಕ್ಷಿತತೆಯ ಬಗ್ಗೆ ಆತಂಕ ತೋಡಿಕೊಳ್ಳುವ ರಾಜಕಾರಣಿಗಳು ಈ ದೇಶದಲ್ಲಿದ್ದಾರೆ. ಗೋವುಗಳಿಗೆ ಸಂಬಂಧಿಸಿ ಪ್ರತಿ ದಿನ ಒಂದು ಹೇಳಿಕೆಯಾದರೂ ಮಾಧ್ಯಮಗಳಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳುವ ಜಾಣತನವೂ ಅವರಿಗೆ ಗೊತ್ತಿದೆ. ಗೋಸಾಗಾಟದ ಹೆಸರಲ್ಲಿ ಹಲ್ಲೆ-ಹತ್ಯೆಗಳು ನಡೆದಾಗಲೆಲ್ಲ ಈ ಮಂದಿ ತಾರಕ ದನಿಯಲ್ಲಿ ಮಾತಾಡುತ್ತಾರೆ. ಗೋಸಂತತಿಯನ್ನು ಉಳಿಸುವ ಬಗ್ಗೆ, ಅಳಿವಿನಂಚಿನಲ್ಲಿರುವ ಗೋ ಸಂತತಿಗಳ ಬಗ್ಗೆ, ಗೋಮಾಂಸ ಸೇವಕರ ಬಗ್ಗೆ, ಗೋಹತ್ಯಾ ಮುಕ್ತ ದೇಶ ಕಟ್ಟುವ ಬಗ್ಗೆ, ಗೋಗ್ರಾಮ-ಗೋ ಅರಣ್ಯ ಸ್ಥಾಪಿಸುವ ಬಗ್ಗೆ.. ಹೀಗೆ ಹೇಳಿಕೆಗಳು ಬರುತ್ತಲೇ ಇರುತ್ತವೆ. ಅದೇವೇಳೆ, ಪ್ರತಿವರ್ಷ ಸುಮಾರು 40 ಸಾವಿರದಷ್ಟು (2014ರಲ್ಲಿ 37,681) ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಈ ಬಗ್ಗೆ ಗಂಭೀರ ಹೇಳಿಕೆಗಳು ಮತ್ತು ಆವೇಶದ ಮಾತುಗಳು ಕೇಳಿ ಬರುತ್ತಲೇ ಇಲ್ಲ. ಗೋಸಂತತಿಯನ್ನು ಉಳಿಸಬೇಕೆನ್ನುವ ಅದೇ ಕಾಳಜಿಯಲ್ಲಿ ಹೆಣ್ಣು ಸಂತತಿಯನ್ನು ಉಳಿಸಿಕೊಳ್ಳಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿಲ್ಲ. ಹೆಣ್ಣಿನ ಮೇಲಿನ ಅತ್ಯಾಚಾರವು ಗೋಹತ್ಯೆಯ ಮುಂದೆ ಜುಜುಬಿ ಅನ್ನಿಸಿಕೊಂಡದ್ದು ಯಾಕಾಗಿ?
    
     ಅತ್ಯಾಚಾರವೆಂದರೆ, ಒಂದು ಮನಸ್ಸಿನ ಸಾವು. 'ಅತ್ಯಾಚಾರ'ವೆಂಬುದು ಬಾಹ್ಯನೋಟಕ್ಕೆ ನಾಲ್ಕು ಶಬ್ದಗಳಾದರೂ ಅದರ ಅರ್ಥ ಅತ್ಯಂತ ಆಳವಾದದ್ದು. ಹೆಣ್ಣಿನ ಮೇಲೆ ಗಂಡು ತನ್ನ ಬಲವನ್ನು ತೋರ್ಪಡಿಸುವ ಕ್ರಿಯೆಯಷ್ಟೇ ಅಲ್ಲ ಅದು. ಆಕೆಯ ಸಂವೇದನೆಯನ್ನು ಕೊಲೆಗೈದ ಕ್ರಿಯೆ ಕೂಡ. ಆದರೂ ಗೋವಿಗಾಗಿ ಮಾತಾಡುವ ಯಾವ ರಾಜಕೀಯದ ಬಾಯಿಗಳೂ ಅದೇ ಉಗ್ರತಮ ಭಾಷೆಯಲ್ಲಿ ಹೆಣ್ಣಿಗಾಗಿ ಮಾತಾಡುವುದಿಲ್ಲ. ಅತ್ಯಾಚಾರವನ್ನು ಸಹಜವೂ ಗೋಮಾಂಸವನ್ನು ಅಸಹಜವೂ ಆಗಿ ನಮ್ಮ ರಾಜಕಾರಣಿಗಳು ಪರಿಗಣಿಸಿದ್ದಾರೆಯೇ? ಅಥವಾ ರಾಜಕೀಯ ದೃಷ್ಟಿಯಲ್ಲಿ ಹೆಣ್ಣಿಗಿಂತ ಗೋವು ಹೆಚ್ಚು ಮತ ತಂದುಕೊಡುತ್ತದೆ ಎಂಬ ನಂಬಿಕೆಯೇ? ಅತ್ಯಾಚಾರದ ವಿರುದ್ಧ ಆಡುವ ಮಾತಿಗಿಂತ ಗೋವಿಗಾಗಿ ಆಡುವ ಮಾತು ಯಾಕೆ ತೂಕವುಳ್ಳದ್ದಾಗಿ ಈ ದೇಶದಲ್ಲಿ ಗುರುತಿಸಿಕೊಂಡಿದೆ? ಹೆಣ್ಣನ್ನು ಮಾತೆ, ದೇವಿ ಎಂದೆಲ್ಲಾ ಕರೆದು ಗೌರವಿಸುವ ದೇಶದಲ್ಲಿ ಹೆಣ್ಣಿನ ಮಾನ ಮತ್ತು ಪ್ರಾಣಕ್ಕಿಂತ ಗೋವಿನ ಪ್ರಾಣ ಹೆಚ್ಚು ತೂಗುವಂತಾದುದು ಯಾವುದರ ಸೂಚನೆ?

      ಬರೇ ಕಾನೂನು-ಕಾಯ್ದೆಗಳಷ್ಟೇ ಹೆಣ್ಣಿಗೆ ಈ ಭೂಮಿಯನ್ನು ಸುರಕ್ಷಿತಗೊಳಿಸಲಾರದು. ಹೆಣ್ಣನ್ನು ಗೌರವಾರ್ಹವಾಗಿ ಕಾಣುವ ಮನಸ್ಥಿತಿಯೊಂದರ ನಿರ್ಮಾಣವೇ ಇದರ ಪ್ರಥಮ ಬೇಡಿಕೆ. ಇದು ಒಂದು ರಾತ್ರಿಯಿಂದ ಬೆಳಗಾಗುವುದರ ನಡುವೆ ಸಾಧ್ಯವಾಗುವಂಥದ್ದಲ್ಲ. ಇದೊಂದು ನಿರಂತರ ಪ್ರಕ್ರಿಯೆ. ಪುರುಷರನ್ನು ನಿರಂತರವಾಗಿ ತರಬೇತುಗೊಳಿಸುವ ಕ್ರಿಯೆ. ಮಕ್ಕಳಿಂದಲೇ ಈ ತರಬೇತಿ ಪ್ರಾರಂಭವಾಗಬೇಕು. ಹೆಣ್ಣಿನ ಬಗ್ಗೆ ಗೌರವ ಮೂಡುವಂಥ ಮಾತು-ಕೃತಿಗಳನ್ನು ಹೆತ್ತವರು ಮಕ್ಕಳಿಗೆ ನೀಡುತ್ತಲಿರಬೇಕು. ಹೆಣ್ಣನ್ನು ನಕಾರಾತ್ಮಕವಾಗಿ ನೋಡುವ ಎಲ್ಲದರಿಂದಲೂ ದೂರ ನಿಲ್ಲಬೇಕು.

        ಈ ಜಗತ್ತು ನಡೆಯುವುದೇ ಹೆಣ್ಣು ಮತ್ತು ಗಂಡು ಎಂಬ ಜೀವಿಯಿಂದ. ಇವೆರಡೂ ಜಗತ್ತನ್ನು ಮುಂದಕ್ಕೊಯ್ಯುವ ಗಾಲಿಗಳು. ಈ ಗಾಲಿಗಳಲ್ಲಿ ಒಂದರ ಮೇಲೆ ನಿರಂತರ ದಾಳಿ ನಡೆಯುತ್ತಿರುವುದು ಅಪಾಯಕಾರಿ.

ಮನುಷ್ಯರಿಗೇ ಗಾಳ 'ಹಾಕಿದ' ಮೀನು

    ನೀರಿನಿಂದ ಹೊರತೆಗೆದ ತಕ್ಷಣ ಮೀನುಗಳು ವಿಲವಿಲನೆ ಒದ್ದಾಡುತ್ತವೆ. ಮಾತ್ರವಲ್ಲ, ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ ಅವು ಸಾವನ್ನೂ ಅಪ್ಪುತ್ತವೆ. ಸದ್ಯ ಮೀನುಪ್ರಿಯರಲ್ಲಿ ಇಂಥದ್ದೊಂದು ಒದ್ದಾಟ ಪ್ರಾರಂಭವಾಗಿದೆ. ನೀರಿನಿಂದ ಮೀನುಗಳನ್ನು ಹೊರತೆಗೆದು ಒದ್ದಾಡಿಸುವ ಮನುಷ್ಯರನ್ನು ಮೀನುಗಳು ಒದ್ದಾಡಿಸಲಿದೆಯೇ ಎಂಬ ಆತಂಕ ಕಾಡತೊಡಗಿದೆ. ಆದರೆ ಈ ಆತಂಕಕ್ಕೆ ಯಾವ ನೆಲೆಯಲ್ಲೂ ಮೀನುಗಳು ಕಾರಣವಲ್ಲ. ಮೀನುಗಳು ಈಗಲೂ ಕೂಡ ಪರಮ ಶುದ್ಧ ಮತ್ತು ಅತ್ಯಂತ ವಿಶ್ವಾಸಾರ್ಹ. ಪುರಾತನ ಕಾಲದಿಂದಲೂ ಮತ್ಸ್ಯವರ್ಗದ ಮೇಲೆ ಮನುಷ್ಯ ದಾಳಿ ಮಾಡುತ್ತಿದ್ದರೂ ಮತ್ತು ವಿವಿಧ ಸಂಚುಗಳ ಮೂಲಕ ಅವನ್ನು ನೀರಿನಿಂದೆತ್ತಿ ಜೇಬು ತುಂಬಿಸುತ್ತಿದ್ದರೂ ಅವು ಎಂದೂ ಮನುಷ್ಯರಿಗೆ ದ್ರೋಹ ಬಗೆದಿಲ್ಲ. ತನ್ನನ್ನು ಸಾಯಿಸುವ ಮನುಷ್ಯರನ್ನು ಸಾಯಿಸಬೇಕೆಂಬ ಉದ್ದೇಶದಿಂದ ಅವೆಂದೂ ಷಡ್ಯಂತ್ರ ರಚಿಸಿಲ್ಲ. ಆದರೆ, ಈ ನಿಷ್ಪಾಪಿ ಮೀನುಗಳ ವಿಷಯದಲ್ಲೂ ಮನುಷ್ಯ ಪರಮ ಭ್ರಷ್ಟನಾಗುತ್ತಿದ್ದಾನೆ. ಮೀನುಗಳನ್ನು ನೀರಿನಿಂದೆತ್ತಿ ಒದ್ದಾಡಿಸುವ ಆತ ಇದೀಗ ಅವುಗಳಿಗೆ ರಾಸಾಯನಿಕಗಳನ್ನು ಸೇರಿಸಿ ಮನುಷ್ಯರನ್ನೂ ಒದ್ದಾಡಿಸುವ ಮತ್ತು ಸಾವಿನೆಡೆಗೆ ದೂಡುವ ಪರಮ ಕ್ರೌರ್ಯಕ್ಕೆ ಇಳಿದಿದ್ದಾನೆ. ಮೀನುಗಳನ್ನು ಬಹುಕಾಲ ಕೆಡದಂತೆ ರಕ್ಷಿಸುವುದಕ್ಕಾಗಿ ಸೋಡಿಯಂ ಬೆಂಝೋಟ್, ಅಮೋನಿಯಾ ಮತ್ತು ಫಾರ್ಮಾಲಿನ್‍ನಂಥ ಮಾರಕ ರಾಸಾಯನಿಕಗಳನ್ನು ಬಳಸಲಾಗುತ್ತಿದೆ ಅನ್ನುವ ಅಧಿಕೃತ ವರದಿಗಳು ಹೊರಬಿದ್ದಿವೆ. ಹೈದರಾಬಾದ್‍ನಿಂದ ಕಂಟೈನರ್ ನಲ್ಲಿ ಸಾಗಿಸುತ್ತಿದ್ದ ಮೀನುಗಳನ್ನು ಕಳೆದವಾರ ತಿರುವನಂತಪುರದ ಪಾಲಕ್ಕಾಡ್ ಜಿಲ್ಲೆಯ ಚೆಕ್ ಪೋಸ್ಟ್ ನಲ್ಲಿ ತಡೆದು ತಪಾಸಿಸಲಾದ ಬಳಿಕ ಈ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ. ಕೇರಳದ ಆಹಾರ ಸುರಕ್ಷತಾ ಆಯುಕ್ತರ ನೇತೃತ್ವದಲ್ಲಿ ನಡೆದ ಈ ದಾಳಿಗಿಂತ ವಾರ ಮೊದಲು ಇಂಥದ್ದೇ ಇನ್ನೊಂದು ದಾಳಿಯಾಗಿತ್ತು. ಆ ದಾಳಿಯಲ್ಲಿ 12 ಕ್ವಿಂಟಾಲ್ ಮೀನುಗಳಲ್ಲಿ ವಿಷಕಾರಿ ಅಂಶಗಳನ್ನು ಪತ್ತೆ ಹಚ್ಚಲಾಗಿತ್ತು. ದಿನದ ಹಿಂದೆ  ಕೊಲ್ಲಮ್ ಜಿಲ್ಲೆಯ ಆರ್ಯನ್ ಕಾವು ಚೆಕ್ ಪೋಸ್ಟ್ ನಲ್ಲಿ ಫಾರ್ಮಾಲಿನ್ ವಿಷ ಲೇಪಿತ ಹತ್ತು ಟನ್ ಮೀನುಗಳನ್ನು ವಶಪಡಿಸಲಾಗಿದೆ. ಫಾರ್ಮಾಲಿನ್ ಅನ್ನುವುದು ಹೆಣಗಳನ್ನು ಕೆಡದಂತೆ ಕಾಪಾಡಲು ಬಳಸುವ ರಾಸಾಯನಿಕ. ಸಾಮಾನ್ಯವಾಗಿ ಆಸ್ಪತ್ರೆಯ ಶವಾಗಾರಗಳಲ್ಲಿ ಈ ರಾಸಾಯನಿಕವನ್ನು ಬಳಸಿ ಹೆಣಗಳು ದೀರ್ಘಕಾಲ ಕೆಡದಂತೆ ಉಳಿಸಿಕೊಳ್ಳುವ ಕ್ರಮ ಇದೆ. ಈ ರಾಸಾಯನಿಕವು ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ. ಅಮೋನಿಯ ಮತ್ತು ಸೋಡಿಯಂ ಬೆಂಝೋಟ್‍ಗಳ ಮಿಶ್ರಣವೂ ಮನುಷ್ಯರ ದೇಹಕ್ಕೆ ಅತ್ಯಂತ ಅಪಾಯಕಾರಿ. ಮೀನುಗಳಿಗೆ ಈ ರಾಸಾಯನಿಕಗಳನ್ನು ಸಿಂಪಡಿಸಿದರೆ ಮೀನುಗಳು ತಾಜಾವಾಗಿ ಉಳಿಯುತ್ತವೆಯಷ್ಟೇ ಅಲ್ಲ, ಅವುಗಳು ತಮ್ಮ ಪ್ರಕೃತಿದತ್ತವಾದ ವಾಸನೆ, ಮೃದುತ್ವ ಮತ್ತು ಮಾಂಸದಲ್ಲಿನ ಹದವನ್ನು ಕಳಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.
      ಒಂದು ರೀತಿಯಲ್ಲಿ, ನಾವು ಸೇವಿಸುವ ಆಹಾರ ವಸ್ತುಗಳಲ್ಲಿ ಹೆಚ್ಚಿನವು ರಾಸಾಯನಿಕ ಲೇಪಿತವೇ. ಮನುಷ್ಯರ ಬಟ್ಟಲಿನಲ್ಲಿ ಕಡ್ಡಾಯ ಸ್ಥಾನ ಪಡೆದಿರುವ ಅಕ್ಕಿಯೂ ಈ ರಾಸಾಯನಿಕದಿಂದ ಹೊರತಾಗಿಲ್ಲ. ಅಕ್ಕಿಗೆ ಹೊಳಪು ಕೊಡುವುದಕ್ಕಾಗಿ ರಾಸಾಯನಿಕವನ್ನು ಸಿಂಪಡಿಸಲಾಗುವುದು ಇವತ್ತು ರಹಸ್ಯವಾಗಿ ಉಳಿದಿಲ್ಲ. ತರಕಾರಿಗಳನ್ನು ತಾಜಾವಾಗಿಸುವುದಕ್ಕೆ ಮತ್ತು ಹಣ್ಣುಹಂಪಲುಗಳನ್ನು ಕೆಡದಂತೆ ರಕ್ಷಿಸುವುದಕ್ಕೆ ಒಂದಲ್ಲ ಒಂದು ಬಗೆಯ ರಾಸಾಯನಿಕಗಳನ್ನು ಬಳಸಲಾಗುತ್ತಿರುವುದೂ ನಿಜ. ಹಣ್ಣು-ಹಂಪಲುಗಳು ಬೇಗನೇ ಮಾಗುವಂತೆ ಮಾಡುವುದಕ್ಕೂ ರಾಸಾಯನಿಕದ ಮೊರೆ ಹೋಗಲಾಗುತ್ತಿದೆ. ಅಂದಹಾಗೆ, ಇಂಥ ಸಂಗತಿಗಳು ಬೆಳಕಿಗೆ ಬಂದ ಆರಂಭದಲ್ಲಿ ಸಾರ್ವಜನಿಕವಾಗಿ ವಿರೋಧಗಳು ವ್ಯಕ್ತವಾದರೂ ನಿಧಾನಕ್ಕೆ ಅವು ತಣ್ಣಗಾಗುತ್ತಾ ಹೋಗುತ್ತವೆ. ಇವತ್ತು ಅಕ್ಕಿ, ಹಣ್ಣು-ಹಂಪಲು, ತರಕಾರಿಗಳಿಗೆ ಸಿಂಪಡಿಸುವ ರಾಸಾಯನಿಕಗಳ ಬಗ್ಗೆ ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳಲ್ಲಿ ಗಂಭೀರ ಚರ್ಚೆಗಳಾಗುತ್ತಿಲ್ಲ ಎಂಬುದಕ್ಕೆ ಅವೆಲ್ಲ ಈಗ ರಾಸಾಯನಿಕ ಮುಕ್ತವಾಗಿ ಮಾರುಕಟ್ಟೆಗೆ ಬರುತ್ತಿವೆ ಎಂಬುದು ಕಾರಣವಲ್ಲ. ಆ ಕುರಿತಾದ ಚರ್ಚೆ ಈಗ ಪ್ರಸ್ತುತತೆಯನ್ನು ಕಳಕೊಳ್ಳತೊಡಗಿದೆ. ರಾಸಾಯನಿಕವಿಲ್ಲದ ಯಾವುದೂ ಮಾರುಕಟ್ಟೆಯಲ್ಲಿಲ್ಲ ಅನ್ನುವ ನಿರಾಶವಾದವೊಂದು ಸಾರ್ವಜನಿಕರಲ್ಲಿ ಮನೆ ಮಾಡಿಬಿಟ್ಟಿದೆ. ಆದ್ದರಿಂದ, ಒಂದು ವೇಳೆ ಮೀನಿನ ಬಗೆಗೂ ಸಾರ್ವಜನಿಕವಾಗಿ ಇಂಥದ್ದೇ  ಉದಾಸೀನಭಾವ ಕಾಣಿಸಿಕೊಂಡು ಬಿಟ್ಟರೆ ಮುಂದಿನ ದಿನಗಳಲ್ಲಿ ಮನುಷ್ಯರೂ ಮೀನಿನಂತೆ ವಿಲವಿಲನೆ ಒದ್ದಾಡಬೇಕಾದೀತು.
      ಬಸಳೆ, ತೊಂಡೆಕಾಯಿ, ಸೌತೆಕಾಯಿ, ಬೀಟ್ರೋಟ್, ಬಟಾಟೆ ಇತ್ಯಾದಿ ತರಕಾರಿಗಳಿಗೆ ಹೋಲಿಸಿದರೆ ಮೀನು ತೀರಾ ಭಿನ್ನ. ಬಸಳೆ, ತೊಂಡೆಕಾಯಿ ಇತ್ಯಾದಿಗಳು  ಸಸ್ಯಾಹಾರ ಮತ್ತು ಮೀನು ಮಾಂಸಾಹಾರ ಅನ್ನುವುದು ಈ ಭಿನ್ನತೆಗೆ ಕಾರಣವಲ್ಲ. ಬಸಳೆ, ಬೆಂಡೆಕಾಯಿ, ಸೌತೆ.. ಇತ್ಯಾದಿ ಯಾವುದೇ ಗಿಡ ಅಥವಾ ಬಳ್ಳಿಗಳು ಫಲವನ್ನು ಕೊಡುವ ಹಂತಕ್ಕೆ ಬೆಳೆಯಬೇಕಾದರೆ ಅದಕ್ಕೆ ಪೋಷಣೆ ಬೇಕೇ ಬೇಕು. ಮನುಷ್ಯನಿಂದ ಗೊಬ್ಬರ, ನೀರು, ಆರೈಕೆಗಳನ್ನು ಪಡೆದುಕೊಂಡ ಬಳಿಕವೇ ಇವು ಪ್ರತಿಯಾಗಿ ಫಲಗಳನ್ನು ನೀಡುತ್ತವೆ. ಆರೈಕೆಯಲ್ಲಿ ವ್ಯತ್ಯಾಸವಾದರೆ ಫಲಗಳಲ್ಲೂ ವ್ಯತ್ಯಾಸವಾಗುತ್ತದೆ. ಆದರೆ ಮೀನು ಹಾಗಲ್ಲ. ಮನುಷ್ಯನ ಆರೈಕೆಯಿಲ್ಲದೆ ಫಲ ಕೊಡುವ ಜೀವಿಯದು. ಮೀನಿನ ಹೊಟ್ಟೆ ತುಂಬಿಸುವುದಕ್ಕಾಗಿ ಮನುಷ್ಯ ಸಮುದ್ರಕ್ಕೆ ಅಕ್ಕಿ ಸುರಿಯುವುದಿಲ್ಲ. ಔಷಧ ಸಿಂಪಡಿಸುವುದಿಲ್ಲ. ಇಷ್ಟಿದ್ದೂ, ಮನುಷ್ಯ ತೃಪ್ತನಾಗಿಲ್ಲವೆಂದರೆ ಏನನ್ನಬೇಕು? ಪುಕ್ಕಟೆ ಸಿಗುವ ಮೀನಿಗೆ ಅಪಾಯಕಾರಿ ರಾಸಾಯನಿಕವನ್ನು ಸೇರಿಸಿ ಮಾರಾಟ ಮಾಡುವ ಆತನ ದಂಧಾಮನಸ್ಸನ್ನು ಯಾವ ಹೆಸರಿಟ್ಟು ಕರೆಯಬೇಕು? ಹಾಗಂತ, ಈ ದಂಧೆಯನ್ನು ದೂರದ ತಮಿಳುನಾಡು, ಹೈದರಾಬಾದ್‍ಗೆ ಅಥವಾ ಕೇರಳಕ್ಕೆ ಸೀಮಿತಗೊಳಿಸಿ ನೋಡಬೇಕಿಲ್ಲ. ಕರಾವಳಿ ಭಾಗದಲ್ಲಿ ಈಗಾಗಲೇ ಈ ಕ್ರಿಯೆ ಚಾಲ್ತಿಯಲ್ಲಿದೆ ಎಂದು ನಂಬಲರ್ಹ ಮೂಲಗಳು ಖಚಿತಪಡಿಸಿವೆ. ಇಲ್ಲಿ ಸುಮಾರು 25% ದಿಂದ 30% ದಷ್ಟು ಮೀನುಗಳು ಈ ರಾಸಾಯನಿಕ ಲೇಪನಕ್ಕೆ ಒಳಗಾಗುತ್ತಿವೆ ಎಂಬುದನ್ನೂ ಆ ಮೂಲಗಳು ಸ್ಪಷ್ಟಪಡಿಸಿವೆ. ಆದ್ದರಿಂದ,  ಮೀನು ಪ್ರಿಯರೆಲ್ಲ ಈಗಾಗಲೇ ಒಂದಷ್ಟು ವಿಷವನ್ನು ತಮ್ಮೊಳಗೆ ಇಳಿಸಿಕೊಂಡಿದ್ದಾರೆ. ಇನ್ನಿರುವ ಮಾರ್ಗ ಏನೆಂದರೆ, ಇನ್ನಷ್ಟು ವಿಷಗಳು ನಮ್ಮ ದೇಹ ಸೇರದಂತೆ ನೋಡಿಕೊಳ್ಳುವುದು. ಅದಕ್ಕಾಗಿ ವ್ಯವಸ್ಥೆಯ ಮೇಲೆ ಒತ್ತಡ ತರುವ ಪ್ರಯತ್ನಗಳು ಸಾರ್ವಜನಿಕರಿಂದ ನಡೆಯಬೇಕು. ಮೀನುಗಳು ಮಾರುಕಟ್ಟೆಗೆ ಬರುವುದಕ್ಕಿಂತ ಮೊದಲು ತಪಾಸಣೆಗೆ ಒಳಗಾಗುವ ಏರ್ಪಾಟುಗಳು ಆಗಬೇಕು. ಮೀನು ಕೇಂದ್ರಗಳಿಗೆ ದಿಢೀರ್ ದಾಳಿ ನಡೆಸಿ ತಪಾಸಿಸುವ ಪ್ರಾಮಾಣಿಕ ಅಧಿಕಾರಿಗಳನ್ನು ಆಹಾರ ಇಲಾಖೆಗೆ ಸೇರಿಸಬೇಕು. ಮುಖ್ಯವಾಗಿ ಕೇರಳದಿಂದ ಕರ್ನಾಟಕಕ್ಕೆ ತರಿಸಿಕೊಳ್ಳಲಾಗುವ ಮೀನುಗಳು ಮತ್ತು ರಾಜ್ಯದ ಕರಾವಳಿ ಭಾಗದಲ್ಲಿ ಹಿಡಿಯಲಾಗುವ ಮೀನುಗಳ ಮೇಲೆ ನಿಗಾ ಇಡುವ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಈ ರಾಜ್ಯದ ನಾನಾ ಭಾಗಗಳಿಗೆ ಮತ್ತು ಹೊರ ರಾಜ್ಯಗಳಿಗೆ ಮೀನುಗಳನ್ನು ಸಾಗಿಸುವ ದೊಡ್ಡ ಮೀನುಗಾರಿಕ ಪ್ರದೇಶಗಳಲ್ಲಿ ಮಂಗಳೂರೂ ಒಂದಾಗಿದ್ದು, ಇಲ್ಲಿ ಸುಸಜ್ಜಿತ ತಪಾಸಣಾ ಕೇಂದ್ರ ಮತ್ತು ಲ್ಯಾಬ್‍ಗಳ ನಿರ್ಮಾಣವಾಗಬೇಕು.
     ಭ್ರಷ್ಟ ಮನಸ್ಸು ಹೇಗೆ ಇಡೀ ಮಾನವ ಕುಲಕ್ಕೇ ಅಪಾಯಕಾರಿ ಅನ್ನುವುದಕ್ಕೆ ಮೀನು ಒಂದು ತಾಜಾ ಉದಾಹರಣೆ. ‘ಅತಿ ಬಯಕೆ’ ಯಾವಾಗಲೂ ಅಪಾಯಕಾರಿ. ಅವು ಅಕ್ಕಿಯನ್ನೂ ಕೆಡಿಸುತ್ತದೆ. ತರಕಾರಿಯನ್ನೂ ಕೆಡಿಸುತ್ತದೆ. ಮೀನನ್ನೂ ಕೆಡಿಸುತ್ತದೆ. ಕೊನೆಗೆ ಸ್ವತಃ ತನ್ನನ್ನೇ ಬಲಿ ಪಡೆಯುತ್ತದೆ. ಮೀನಿನ ಮೂಲಕ ಈ ಸತ್ಯ ಮತ್ತೊಮ್ಮೆ ಸಾಬೀತಾಗಿದೆ. ಈ ಭ್ರಷ್ಟರನ್ನು ತಡೆಯುವ ಶ್ರಮ ನಡೆಯದಿದ್ದರೆ ಸಮುದ್ರ ದಂಡೆಯಲ್ಲಾಗುವ ಒದ್ದಾಟವು ಸಮುದ್ರದ ಹೊರಗಿನ ಭೂಮಿಯಲ್ಲೂ ಆಗಬಹುದು. ಅಲ್ಲಿ ಮೀನಿದ್ದರೆ ಇಲ್ಲಿ ಮನುಷ್ಯ. ಅಷ್ಟೇ ವ್ಯತ್ಯಾಸ.