ಈ ದೇಶದ ಜನತೆ ಮತ್ತು ಮಾಧ್ಯಮಗಳ ವರ್ತನೆಗಳಲ್ಲಿ ಸ್ಟಾಕ್‍ಹೋಮ್ ಸಿಂಡ್ರೋಮ್‍ನ ಲಕ್ಷಣಗಳಿವೆ ಎಂದು ತಜ್ಞರು ಅಂದಾಜಿಸುತ್ತಿರುವ ಹೊತ್ತಿನಲ್ಲಿಯೇ ಈ ಅಂದಾಜನ್ನು ಮೀರುವ ಬೆಳವಣಿಗೆಗಳು ದಕ್ಷಿಣ ಭಾರತದಲ್ಲಿ ಕಾಣಿಸತೊಡಗಿವೆ. ದೌರ್ಜನ್ಯಕ್ಕೆ ಒಳಗಾದವರು ತಮ್ಮ ಮೇಲೆ ದೌರ್ಜನ್ಯ ಎಸಗಿದವರನ್ನೇ ಬೆಂಬಲಿಸುವ ಮತ್ತು ಅವರಿಗೆ ಪ್ರಾಮಾಣಿಕವಾಗಿ ನಿಷ್ಠೆ ತೋರುವ ಸ್ಥಿತಿಯನ್ನು ಸ್ಟಾಕ್‍ಹೋಮ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ವೀರಪ್ಪನ್‍ನಿಂದ ಅಪಹರಣಕ್ಕೊಳಗಾಗಿ ಸುಮಾರು 108 ದಿನಗಳ ಕಾಲ ಕಾಡಿನಲ್ಲಿ ಒತ್ತೆ ಸೆರೆಯಿದ್ದು, ಬಿಡುಗಡೆಗೊಂಡ ಡಾ| ರಾಜ್‍ಕುಮಾರ್ ಹೇಳಿಕೆಯಲ್ಲಿ ಈ ಸಿಂಡ್ರೋಮ್‍ನ ಲಕ್ಷಣಗಳನ್ನು ತಜ್ಞರು ಗುರುತಿಸಿದ್ದರು. ಕೇಂದ್ರ ಸರಕಾರದ ಆಡಳಿತ ನೀತಿಯ ವಿಷಯದಲ್ಲಿ ಈ ದೇಶದ ಮಾಧ್ಯಮ ಮತ್ತು ಜನರು ಇಂಥದ್ದೇ ಸ್ಟಾಕ್‍ಹೋಮ್ ಸಿಂಡ್ರೋಮ್‍ಗೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಕೇಂದ್ರ ಸರಕಾರದ ಪ್ರತಿಯೊಂದು ನೀತಿಯನ್ನೂ ಬೆಂಬಲಿಸುವ ಮಾಧ್ಯಮ ನೀತಿಯನ್ನು ಇದಕ್ಕೆ ಉದಾಹರಣೆಯಾಗಿ ನೀಡಲಾಗುತ್ತಿತ್ತು. ಪ್ರಧಾನಿ ಮೋದಿಯವರ ಕಳೆದ 100 ದಿನಗಳ ಆಡಳಿತದಲ್ಲಿ 38 ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಇದರಲ್ಲಿ 28 ಮಸೂದೆಯನ್ನೂ ಬಿಜೆಪಿ ಪಾಸು ಮಾಡಿಕೊಂಡಿದೆ ಮತ್ತು ಇವೆಲ್ಲವೂ ತನ್ನ ಬಹುಮತವನ್ನು ಬಳಸಿಕೊಂಡು ಮಾಡಿಕೊಳ್ಳಲಾದ ಪಾಸುಗಳು ಎಂಬುದು ಗೊತ್ತಿದ್ದೂ ಹೆಚ್ಚಿನ ಮಾಧ್ಯಮಗಳಿಂದ ವಿರೋಧ ವ್ಯಕ್ತವಾಗಿರಲಿಲ್ಲ. ಹಲವು ವಿರೋಧಾಭಾಸಗಳಿಂದ ಕೂಡಿರುವ ಮತ್ತು ಮುಸ್ಲಿಮ್ ಮಹಿಳೆಯ ಸಬಲೀಕರಣಕ್ಕೆ ಯಾವ ರೀತಿಯಲ್ಲೂ ಪೂರಕ ಆಗದ ‘ತ್ರಿವಳಿ ತಲಾಕ್ ಮಸೂದೆ’ಯಿಂದ ಹಿಡಿದು ಕಾಶ್ಮೀರಿಗಳಿಗೆ ಸ್ವಾಯತ್ತತೆಯನ್ನು ಅನುಮತಿಸುವ ‘370 ವಿಧಿ ರದ್ದತಿ’ ವರೆಗೆ; ‘ಯುಎಪಿಎ’ ತಿದ್ದುಪಡಿ ಮಸೂದೆಯಿಂದ ಹಿಡಿದು ನಾಗರಿಕರನ್ನು ದೋಚುವ ‘ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆ’ಯ ವರೆಗೆ ಕೇಂದ್ರ ಸರಕಾರ ಸಾಲು ಸಾಲು ಜನವಿರೋಧಿ ನೀತಿಯನ್ನು ಜಾರಿಗೊಳಿಸುತ್ತಿದ್ದರೂ ಹೆಚ್ಚಿನ ಮಾಧ್ಯಮಗಳು ‘ದಿಟ್ಟ ನಿರ್ಧಾರ, ಪರಿವರ್ತನೆಯ ಪರ್ವ’ ಎಂದು ಮುಂತಾದ ಹೊಗಳುಭಟ ಪದಗಳೊಂದಿಗೆ ಅವನ್ನು ಸಮರ್ಥಿಸಿಕೊಳ್ಳುವ ಹಂತಕ್ಕೆ ತಲುಪಿದ್ದುವು. ಇದೀಗ,
ದಕ್ಷಿಣ ಭಾರತವು ಈ ಸಿಂಡ್ರೋಮ್‍ನಿಂದ ಹೊರಬರುವ ಸೂಚನೆಗಳನ್ನು ನೀಡತೊಡಗಿದೆ. ಗೃಹಸಚಿವ ಅಮಿತ್ ಶಾ ಅವರ ಹೇಳಿಕೆ ಇದಕ್ಕೆ ಮುನ್ನುಡಿ ಬರೆದಂತಿದೆ. ‘ಹಿಂದಿ ಇಡೀ ದೇಶದ ಭಾಷೆ ಆಗಬೇಕು’ ಎಂದು ಹಿಂದಿ ದಿವಸದ ಅಂಗವಾಗಿ ಅವರು ಮಾಡಿರುವ ಟ್ವೀಟ್‍ಗೆ ದಕ್ಷಿಣ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಒಂದುರೀತಿಯಲ್ಲಿ ದಕ್ಷಿಣ ಭಾರತೀಯರನ್ನು ಒಂದೇ ದಾರದಲ್ಲಿ ಪೋಣಿಸಲು ಅವಕಾಶ ಒದಗಿಸಿಕೊಟ್ಟ ಹೇಳಿಕೆ ಇದು. ಗೃಹ ಸಚಿವರ ಈ ಹೇಳಿಕೆಗಿಂತ ಎರಡು ದಿನಗಳ ಮೊದಲು ರಾಜ್ಯದಲ್ಲಿ ಕನ್ನಡ ಅಸ್ಮಿತೆಯ ಕುರಿತಾದ ಚರ್ಚೆ ದೊಡ್ಡದಾಗಿ ಎದ್ದಿತ್ತು. ಇದಕ್ಕೆ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಡೆಯೇ ಕಾರಣ. ‘ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಕ್ಲರ್ಕ್ ಹುದ್ದೆಗೆ ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಇದೆ’ ಎಂದವರು ಹೇಳಿದ್ದರು. ಆಶ್ಚರ್ಯದ ಸಂಗತಿ ಏನೆಂದರೆ, ಹೀಗೆ ನಡೆಯುತ್ತಿರುವ ಕ್ಲರ್ಕ್ ಹುದ್ದೆಗಳಲ್ಲಿ 953 ಹುದ್ದೆಗಳು ರಾಜ್ಯದ್ದಾಗಿದ್ದು, ಅದರಲ್ಲೂ 699 ಹುದ್ದೆಗಳು ಕರಾವಳಿಯ ಎರಡು ಬ್ಯಾಂಕ್‍ಗಳಿಗೆ ಸಂಬಂಧಿಸಿದ್ದಾಗಿದೆ.
ಹಿಂದಿ ಕರ್ನಾಟಕದ ಭಾಷೆಯಲ್ಲ. ಹಿಂದಿಯಲ್ಲಿ ಉತ್ತರ ಭಾರತೀಯರು ಹೇಗೆ ಸುಲಲಿತವಾಗಿ ವ್ಯವಹರಿಸಬಲ್ಲರೋ ಹಾಗೆಯೇ ಕನ್ನಡಿಗರು ಕನ್ನಡದಲ್ಲಿ ವ್ಯವಹರಿಸಬಲ್ಲರು. ಆದ್ದರಿಂದ ಕನ್ನಡ ನೆಲಕ್ಕೆ ಅನ್ಯವಾದ ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ಮಾತ್ರ ಪರೀಕ್ಷೆಯನ್ನು ಎದುರಿಸುವಾಗ ಭಾಷಾ ಸವಾಲು ಎದುರಾಗುತ್ತದೆ. ಆದರೆ ಉತ್ತರ ಭಾರತೀಯರಿಗೆ ಈ ಸಮಸ್ಯೆ ಇಲ್ಲ. ಇದು ಉತ್ತರ ಭಾರತೀಯರು ಸುಲಭವಾಗಿ ಈ ಪರೀಕ್ಷೆಗಳಲ್ಲಿ ಮೇಲುಗೈ ಪಡೆಯಲು ನೆರವಾಗುತ್ತದೆ. ಕನ್ನಡಿಗರೇ ಕಟ್ಟಿ ಬೆಳೆಸಿದ ಬ್ಯಾಂಕುಗಳಲ್ಲಿ ಉತ್ತರ ಭಾರತೀಯರು ತುಂಬಿಕೊಳ್ಳುವುದಕ್ಕೆ ಮತ್ತು ಬ್ಯಾಂಕ್ ವ್ಯವಹಾರಗಳು ಹಿಂದಿಮಯವಾಗುವುದಕ್ಕೆ ಕಾರಣವಾಗುತ್ತದೆ. ಈಗಾಗಲೇ ಬ್ಯಾಂಕುಗಳಲ್ಲಿ ಉತ್ತರ ಭಾರತೀಯರನ್ನು ತುಂಬಿಸಿಕೊಳ್ಳುವ ತಂತ್ರ ಒಂದು ಹಂತದವರೆಗೆ ಜಾರಿಯಾಗಿದೆ. ‘ಬ್ಯಾಂಕಿಂಗ್ ಸಿಬಂದಿ ಆಯ್ಕೆ ಸಂಸ್ಥೆ’ಯು (ಐಬಿಪಿಎಸ್) ನಡೆಸುವ ಪರೀಕ್ಷೆ ಬರೆಯಬೇಕಿದ್ದರೆ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯರ್ಥಿ ಓದಿರಬೇಕಾದುದು 2014ರ ತನಕ ಕಡ್ಡಾಯವಾಗಿತ್ತು. ಆದರೆ,
ಈ ನಿಯಮವನ್ನು 2014ರಲ್ಲಿ ಬದಲಾಯಿಸಲಾಯಿತಲ್ಲದೇ ‘ನೇಮಕಾತಿ ನಡೆದ 6 ತಿಂಗಳಲ್ಲಿ ಪ್ರಾದೇಶಿಕ ಭಾಷೆ ಕಲಿತರೆ ಸಾಕು’ ಎಂದು ಮೃದುಗೊಳಿಸಲಾಯಿತು. ಇದರಿಂದಾಗಿ ಆದ ಬದಲಾವಣೆ ಏನೆಂದರೆ, ರಾಜ್ಯದ ಬ್ಯಾಂಕುಗಳಲ್ಲಿ ಉತ್ತರ ಭಾರತೀಯರ ಹೆಚ್ಚಳ. 6 ತಿಂಗಳಲ್ಲಿ ಅವರು ಭಾಷೆ ಕಲಿಯುತ್ತಾರೋ ಇಲ್ಲವೋ, ಆದರೆ, ಬ್ಯಾಂಕ್ ವ್ಯವಹಾರಗಳಲ್ಲಂತೂ ಕನ್ನಡಿಗರಿಗೆ ಭಾಷಾ ಸಮಸ್ಯೆ ಎದುರಾಗತೊಡಗಿತು. ಇದನ್ನು ಮನಗಂಡೇ ಬ್ಯಾಂಕುಗಳ ಹುದ್ದೆಗಳಿಗೆ ನಡೆಯುವ ನೇಮಕಾತಿ ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವುದಾಗಿ ಕೇಂದ್ರದ ವಿತ್ತ ಸಚಿವರು ಭರವಸೆ ನೀಡಿದ್ದರು. ಇದೀಗ ಅವರು ತಮ್ಮ ಮಾತಿನಿಂದ ನುಣುಚಿಕೊಂಡಿದ್ದಾರೆ. ‘ಕರ್ನಾಟಕದ ಬ್ಯಾಂಕುಗಳಲ್ಲಿ ಹುದ್ದೆ ಪಡೆಯಲು ಹಿಂದಿಯಲ್ಲಿ ಪರೀಕ್ಷೆ ಬರೆಯಬೇಕು’ ಎಂಬ ಅಸಂಗತ ಫರ್ಮಾನು ಹೊರಡಿಸಿದ್ದಾರೆ. ಇದು ಕನ್ನಡಿಗರನ್ನು ಕೆರಳಿಸಿದೆ. ಬ್ಯಾಂಕಿಂಗ್ ಪರೀಕ್ಷೆಗೆ ಕನ್ನಡದಲ್ಲಿ ಬರೆಯಲು ಅವಕಾಶ ಇರಬೇಕೆಂದು ಒತ್ತಾಯಿಸಿ ರೂಪುಗೊಂಡ ಹೋರಾಟಕ್ಕೆ ಇದು ಕಿಚ್ಚು ಹಚ್ಚಿದೆ. ಕನ್ನಡ ಪತ್ರಿಕೆಗಳು ಈ ನೀತಿಯನ್ನು ಖಂಡಿಸಿವೆ. ‘ಹಿಂದಿ ಹೇರಿಕೆ’ ಎಂದು ಅವು ಹೇಳಬೇಕಾದ ಒತ್ತಡಕ್ಕೆ ಸಿಲುಕಿವೆ. ಈ ಬೆಳವಣಿಗೆಯ ಎರಡು ದಿನಗಳ ಬಳಿಕ ಬಂದ ಅಮಿತ್ ಶಾರ ಹೇಳಿಕೆಯು ಕರ್ನಾಟಕದ ಜೊತೆ ದಕ್ಷಿಣದ ಇತರ ರಾಜ್ಯಗಳನ್ನೂ ಸೇರಿಸುವುದಕ್ಕೆ ಸೇತುವೆಯಾದಂತಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಕ್ಕ ಜನಾದೇಶವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ದುರುಪಯೋಗಿಸುತ್ತಿದೆ ಅನ್ನುವ ಅಭಿಪ್ರಾಯಕ್ಕೆ ಇಂಬು ನೀಡುವ ಎರಡು ಬೆಳವಣಿಗೆಗಳಿವು. ಭಾಷೆ ಎಂಬುದು ಬರೇ ಸಂವಹನ ಮಾಧ್ಯಮವಷ್ಟೇ ಅಲ್ಲ, ಅದು ಒಂದು ಸಂಸ್ಕøತಿಯನ್ನು ಪ್ರತಿನಿಧಿಸುತ್ತದೆ. ಜನರ ಬದುಕು-ಭಾವದೊಂದಿಗೆ ಅದಕ್ಕೆ ಸಂಬಂಧವಿರುತ್ತದೆ. ಭಾಷೆಯೊಂದು ಆ ಭಾಷೆಯನ್ನಾಡುವ ಮಂದಿಯ ಪುರಾತನ ಕಾಲದ ಬದುಕಿನಿಂದ ಹಿಡಿದು ಆಧುನಿಕ ಜನರ ಬದುಕಿನ ತನಕ ಪ್ರತಿ ವೈಶಿಷ್ಟ್ಯಕ್ಕೂ ಆಚಾರ-ವಿಚಾರಕ್ಕೂ ಸಾಕ್ಷ್ಯ ವಹಿಸುತ್ತಾ, ಅದನ್ನು ಕಾಪಿಡುತ್ತಾ ಬಂದಿರುತ್ತದೆ.
ಹಿಂದಿಯು ಉತ್ತರ ಭಾರತದ ಒಂದೆರಡು ರಾಜ್ಯಗಳ ಭಾಷೆ. ಅದು ರಾಷ್ಟ್ರಭಾಷೆಯಲ್ಲ. ಈ ದೇಶಕ್ಕೆ ರಾಷ್ಟ್ರಭಾಷೆ ಎಂಬುದಿಲ್ಲ. ಹಿಂದಿಗೆ ಸಾಂವಿಧಾನಿಕವಾಗಿ ಏನು ಸ್ಥಾನವಿದೆಯೋ ಅದೇ ಸ್ಥಾನ-ಮಾನ ಕನ್ನಡಕ್ಕೂ ಇದೆ. ಹಿಂದಿಯನ್ನು ಪ್ರೀತಿಸುವುದು ಬೇರೆ ಮತ್ತು ಹೇರುವುದು ಬೇರೆ. ಕನ್ನಡಿಗರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದೇ ಇರುವುದು ದಬ್ಬಾಳಿಕೆಯ ನೀತಿ. ಹಾಗಂತ, ಈ ದಬ್ಬಾಳಿಕೆ ಕೇವಲ ಭಾಷೆಗೆ ಸಂಬಂಧಿಸಿ ಮಾತ್ರ ವ್ಯಕ್ತಗೊಂಡ ನೀತಿಯಲ್ಲ. ಕೇಂದ್ರದ ಕಳೆದ 100 ದಿಂಗಳ ಆಡಳಿತದ ಪ್ರತಿ ಹೆಜ್ಜೆಯಲ್ಲೂ ಈ ಆಗ್ರಹ ವ್ಯಕ್ತಗೊಂಡಿದೆ. 38 ಮಸೂದೆಗಳ ಪೈಕಿ 28 ಮಸೂದೆಗಳನ್ನು ಪಾಸು ಮಾಡಿಕೊಂಡ ರೀತಿಯಲ್ಲೂ ಈ ನೀತಿ ವ್ಯಕ್ತವಾಗಿದೆ. ಯಾವುದೇ ಸಮಸ್ಯೆಯನ್ನು ಪರಿಹರಿಸುವುದಕ್ಕಿಂತ ದಂಡ ನೀತಿ, ದಮನ ನೀತಿಗೆ ಆದ್ಯತೆ ಕೊಡುತ್ತಿರುವ ಅತ್ಯಂತ ಅಪಾಯಕಾರಿ ನಡೆಯೊಂದು ಈ ಕಳೆದ 100 ದಿನಗಳಲ್ಲಿ ಕಾಣಿಸಿಕೊಂಡಿದೆ. ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುತ್ತಿರುವ ರೀತಿಯೂ ಇದಕ್ಕಿಂತ ಭಿನ್ನವಲ್ಲ. ಇಂಥದ್ದೊಂದು ದಂಡನಾ ಕ್ರಮ ಎಷ್ಟು ಜನಪರ ಮತ್ತು ಪ್ರಾಯೋಗಿಕ ಎಂಬುದನ್ನು ಲೆಕ್ಕಿಸದೆಯೇ ಜಾರಿಗೊಳಿಸಿದ ಕ್ರಮವು ಎಂಥ ಸಮಸ್ಯೆಯನ್ನು ಸೃಷ್ಟಿಸಿತು ಅನ್ನುವುದಕ್ಕೆ ಪ್ರತಿದಿನದ ವರದಿಗಳೇ ಸಾಕ್ಷಿ. ‘ಹಿಂದಿ ದೇಶ ಭಾಷೆ ಆಗಬೇಕು’ ಎಂಬ ಮಾತಿನಲ್ಲೂ ಮತ್ತು ‘ಕನ್ನಡಿಗರಿಗೆ ಕನ್ನಡದಲ್ಲಿ ಬ್ಯಾಂಕ್ ನೇಮಕಾತಿ ಪರೀಕ್ಷೆ ಬರೆಯಲು ಅವಕಾಶವಿಲ್ಲ’ ಎಂಬ ನೀತಿಯಲ್ಲೂ ಧ್ವನಿಸುತ್ತಿರುವುದು ಈ ದಬ್ಬಾಳಿಕೆ ನೀತಿಯೇ.
ಸದ್ಯ ದಕ್ಷಿಣ ಭಾರತದಲ್ಲಿ ದೊಡ್ಡಮಟ್ಟದಲ್ಲಿ ಕಾಣಿಸಿಕೊಂಡಿರುವ ಹಿಂದಿ ಹೇರಿಕೆ ವಿರೋಧಿ ಧ್ವನಿಯು ಈ ದಬ್ಬಾಳಿಕೆಗೆ ಕಡಿವಾಣ ಹಾಕಲು ಯಶಸ್ವಿಯಾಗುತ್ತೋ ನೋಡಬೇಕು. ಅಂತೂ ಸ್ಟಾಕ್‍ಹೋಮ್ ಸಿಂಡ್ರೋಮ್‍ನಿಂದ ಮಾಧ್ಯಮ ಮತ್ತು ಜನತೆ ಹೊರಬರುತ್ತಿರುವ ಲಕ್ಷಣಗಳನ್ನು ಈ ಬೆಳವಣಿಗೆಯು ಸೂಚಿಸುತ್ತಿದೆ.