ಚಂದ್ರಯಾನ-2 ಕೊನೆಕ್ಷಣದಲ್ಲಿ ವಿಫಲಗೊಂಡು ನೊಂದುಕೊಂಡ ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರನ್ನು ಸಂತೈಸಿ, ಹುರಿದುಂಬಿಸಿದ ರೀತಿಯಲ್ಲೇ ಈ ದೇಶದ ಅರ್ಥವ್ಯವಸ್ಥೆಯು ಪ್ರಧಾನಿ ನರೇಂದ್ರ ಮೋದಿಯವರಿಂದ ಚೇತೋಹಾರಿ ಕ್ರಮಗಳನ್ನು ನಿರೀಕ್ಷಿಸುತ್ತಿದೆ. ಅರ್ಥವ್ಯವಸ್ಥೆಯ ಕುಸಿತದಿಂದ ಬಿಜೆಪಿಯ ಮೇಲೆ ರಾಜಕೀಯವಾಗಿ ಪರಿಣಾಮ ಬೀಳುತ್ತೋ ಇಲ್ಲವೋ ಆದರೆ, ಬಡವರ ಮೇಲೆ, ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗದ ಮೇಲೆ ಈಗಾಗಲೇ ಪರಿಣಾಮ ಬೀರತೊಡಗಿದೆ. ಡಾಲರ್ ನ ಎದುರು ರೂಪಾಯಿಯ ಮೌಲ್ಯ ಕುಸಿಯತೊಡಗಿದೆ. ಇದೇ ಮೊದಲ ಬಾರಿ 10 ಗ್ರಾಂ ಚಿನ್ನಕ್ಕೆ 40 ಸಾವಿರ ರೂಪಾಯಿಗಿಂತಲೂ ಅಧಿಕ ಬೆಲೆ ಏರಿಕೆಯಾಗಿದೆ. ಮಾಧ್ಯಮಗಳಲ್ಲಿ ಪ್ರತಿದಿನ ಅರ್ಥವ್ಯವಸ್ಥೆಯ ಕುಸಿತ ಮತ್ತು ಅದು ಉದ್ಯಮಗಳ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ಸುದ್ದಿಗಳು ಪ್ರಕಟವಾಗುತ್ತಿವೆ. ಜಿಡಿಪಿಯಂತೂ ಹಿಂದೆಂದೂ ಕಾಣದಷ್ಟು ಪಾತಾಳಕ್ಕೆ ಕುಸಿದಿದೆ.
2018ರವರೆಗೆ ಈ ದೇಶದಲ್ಲಿ ಜಿಡಿಪಿಯನ್ನು ಲೆಕ್ಕಾಚಾರ ಮಾಡುವ ಒಂದು ಪದ್ಧತಿಯಿತ್ತು. ಕೇಂದ್ರ ಸರಕಾರವು 2018ರಲ್ಲಿ ಅದನ್ನು ಬದಲಿಸಿತು. ಈ ಬದಲಾವಣೆಗೊಂಡ ಲೆಕ್ಕಾಚಾರದ ಪ್ರಕಾರ ಸದ್ಯ ಭಾರತದ ಜಿಡಿಪಿ 5%. ಒಂದುವೇಳೆ, ಮನ್‍ಮೋಹನ್ ಸಿಂಗ್ ಕಾಲದ ಅಥವಾ 2018ಕ್ಕಿಂತ ಮೊದಲಿನ ಲೆಕ್ಕಾಚಾರ ಪದ್ಧತಿಯಂತೆ ಲೆಕ್ಕ ಹಾಕುವುದಾದರೆ ಈಗಿನದು 3.5% ಜಿಡಿಪಿ. ಇದು ಆತಂಕಕಾರಿ ಕುಸಿತ ಎಂದು ಅರ್ಥತಜ್ಞರೇ ಹೇಳುತ್ತಿದ್ದಾರೆ. ಸದ್ಯದ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಸತತ ಮೂರು ತ್ರೈಮಾಸಿಕಗಳಲ್ಲಿ ಜಿಡಿಪಿ ತಗ್ಗಿದರೆ ಅದನ್ನು ಆರ್ಥಿಕ ಹಿಂಜರಿತವಾಗಿ ಲೆಕ್ಕ ಹಾಕಲಾಗುತ್ತದೆ. ಆದರೆ, ಇದೀಗ ಸತತ 5 ತ್ರೈಮಾಸಿಕದಲ್ಲೂ ಜಿಡಿಪಿ ಕುಸಿತವನ್ನೇ ತೋರಿಸುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಿಂದ ತೊಡಗಿ ಅಟೋಮೊಬೈಲ್, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಣ್ಣ ಉದ್ದಿಮೆಗಳು ಭಾರೀ ಕುಸಿತಕ್ಕೆ ಒಳಗಾಗಿವೆ. ಕಾರ್ಪೋರೇಟ್ ಕಂಪೆನಿಗಳು ಹೂಡಿಕೆ ಮಾಡುವುದಕ್ಕೆ ಹಿಂಜರಿಯುತ್ತಿರುವುದಷ್ಟೇ ಅಲ್ಲ, ಭಾರೀ ಪ್ರಮಾಣದಲ್ಲಿ ಷೇರುಗಳನ್ನು ಹಿಂತೆಗೆದುಕೊಳ್ಳುತ್ತಲೂ ಇವೆ. ಕೇಂದ್ರ ಸರಕಾರವು ಆರ್ ಬಿಐನಲ್ಲಿದ್ದ ಮೀಸಲು ನಿಧಿಯಿಂದ 1.76 ಲಕ್ಷ ಕೋಟಿ ರೂಪಾಯಿಯನ್ನು ಪಡೆದುಕೊಂಡ ಬಳಿಕವೂ ಆರ್ಥಿಕ ಕ್ಷೇತ್ರದ ಕುಸಿತದಲ್ಲಿ ಏರಿಕೆ ಕಂಡುಬರುತ್ತಿಲ್ಲ. ಇನ್ನೊಂದೆಡೆ,
ವಾಹನ ಉತ್ಪಾದನೆ ಮತ್ತು ಬಟ್ಟೆ ತಯಾರಿಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಟಾಟಾ, ಅಶೋಕ್ ಲೈಲ್ಯಾಂಡ್, ಮಾರುತಿ ಸುಝುಕಿ, ಹೋಂಡಾ ಸಹಿತ ದೇಶೀಯ ಮತ್ತು ಬಹುರಾಷ್ಟ್ರೀಯ ವಾಹನ ತಯಾರಿಕಾ ಕಂಪೆನಿಗಳು ಭಾರೀ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಕೈ ಬಿಡುತ್ತಿವೆ. ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿವೆ. ಉತ್ಪಾದನಾ ರಹಿತ ದಿನಗಳು ಎಂಬ ಹೊಸ ಪರಂಪರೆಯನ್ನೇ ಈ ಕಂಪೆನಿಗಳು ಆರಂಭ ಮಾಡಿವೆ. ಬಟ್ಟೆ ತಯಾರಿಕಾ ಕ್ಷೇತ್ರದಲ್ಲೂ ಕಂಪನ ಸೃಷ್ಟಿಯಾಗಿವೆ. ಬಟ್ಟೆಗಳು ಮಾರಾಟವಾಗುತ್ತಿಲ್ಲ. ಉದ್ಯೋಗ ಸೃಷ್ಟಿಯಲ್ಲಿ ಎರಡನೇ ಅತಿ ದೊಡ್ಡ ಕ್ಷೇತ್ರವಾಗಿರುವ ಈ ರಂಗವನ್ನು ಬಾಧಿಸಿರುವ ಈ ಮುಗ್ಗಟ್ಟಿನಿಂದಾಗಿ ಲಕ್ಷಾಂತರ ಮಂದಿ ನೇರವಾಗಿ ಉದ್ಯೋಗ ಕಳಕೊಳ್ಳುವಂತಾಗಿದೆ. ಇನ್ನು, ಪರೋಕ್ಷ ಸಂತ್ರಸ್ತರ ಸಂಖ್ಯೆಯಂತೂ ಅಗಣಿತ. ಬಟ್ಟೆ ತಯಾರಿಯಿಂದ ತೊಡಗಿ, ಅದರ ದಾಸ್ತಾನು, ಸಾಗಾಣಿಕೆ ಮತ್ತು ವಿವಿಧ ಅಂಗಡಿಗಳಲ್ಲಿ ಅದರ ಮಾರಾಟ ಮತ್ತು ಈ ಎಲ್ಲವುಗಳಿಗೂ ಹಣಕಾಸಿನ ನೆರವು ನೀಡುವ ಬ್ಯಾಂಕುಗಳು ಹಾಗೂ ಆ ಕಾರಣದಿಂದಾಗಿ ಹಣದ ಚಲಾವಣೆ ಇತ್ಯಾದಿ ಒಂದು ದೊಡ್ಡ ಸರಪಣಿಯನ್ನೇ ಈ ಕುಸಿತ ತೊಂದರೆಗೀಡು ಮಾಡಿದೆ.
ಜನರು ಉಡುಪು ಖರೀದಿಗೆ ಆಸಕ್ತಿ ತೋರುವುದಿಲ್ಲ ಅಂದರೆ ಅದು ಉಡುಪು ಮಾರಾಟ ಮಾಡುವ ಅಂಗಡಿಯ ಸಮಸ್ಯೆ ಮಾತ್ರ ಆಗುವುದಲ್ಲ. ಅದು ಆ ಅಂಗಡಿಯಿಂದ ಆರಂಭವಾಗಿ ಬಟ್ಟೆ ತಯಾರಿಸುವ ಕಂಪೆನಿಯವರೆಗೆ ಎಲ್ಲವನ್ನೂ ಎಲ್ಲರನ್ನೂ ಬಾಧಿಸುತ್ತದೆ. ಬಟ್ಟೆ ಮಾರಾಟವಾಗದಿದ್ದರೆ ಬ್ಯಾಂಕ್‍ನಿಂದ ಸಾಲ ಎತ್ತುವ ಪ್ರಶ್ನೆ ಬರುವುದಿಲ್ಲ. ಈ ಮೊದಲು ಎತ್ತಿದ ಸಾಲದ ತೀರುವಳಿಯೂ ಆಗುವುದಿಲ್ಲ. ಇದರಿಂದಾಗಿ ಬ್ಯಾಂಕಿಂಗ್ ಕ್ಷೇತ್ರವು ಹಣದ ಚಲಾವಣೆಯ ಅಭಾವದಿಂದಾಗಿ ಕುಸಿಯತೊಡಗುತ್ತದೆ. ಅಲ್ಲಿನ ಉಗ್ಯೋಗಿಗಳನ್ನು ಕೈಬಿಡುವ ಪರಿಸ್ಥಿತಿ ಎದುರಾಗುತ್ತದೆ. ಬ್ಯಾಂಕುಗಳ ನಡುವಿನ ವಿಲೀನದಿಂದ ಬಂಡವಾಳದಲ್ಲಿ ವೃದ್ಧಿಯಾಗಬಹುದು. ಎರಡು ಬ್ಯಾಂಕ್‍ಗಳ ಹಣ ಒಂದೇ ಕಡೆ ಜಮೆಯಾಗುವುದಕ್ಕೆ ಈ ವಿಲೀನ ಕಾರಣವಾಗಬಹುದು. ಆದರೆ, ಅದರಿಂದ ಬ್ಯಾಂಕಿಂಗ್ ಕ್ಷೇತ್ರ ಚೇತರಿಸಿಕೊಳ್ಳಲಿದೆ ಎಂದು ಹೇಳಲಾಗದು. ಬ್ಯಾಂಕಿಂಗ್ ಕ್ಷೇತ್ರದ ಚೇತರಿಕೆ ಇತರ ಕ್ಷೇತ್ರಗಳ ಚೇತರಿಕೆಯನ್ನು ಹೊಂದಿಕೊಂಡಿದೆ.
ಭಾರೀ ಪ್ರಮಾಣದಲ್ಲಿ ವಾಹನಗಳು ಮಾರಾಟವಾಗುವುದೆಂದರೆ ಅದು ವಾಹನ ತಯಾರಿಕಾ ಕಂಪೆನಿಗಳಿಗಷ್ಟೇ ಖುಷಿಯ ಸಂಗತಿ ಅಲ್ಲ. ಬ್ಯಾಂಕಿಗೂ ಸಿಹಿಸುದ್ದಿ. ಬ್ಯಾಂಕಿನಿಂದ ಸಾಲವನ್ನು ಎತ್ತಿಕೊಂಡೇ ವಾಹನವನ್ನು ಖರೀದಿಸಲಾಗುತ್ತದೆ. ಹೀಗೆ ಮಾರಾಟವಾಗುವಾಗ ವಾಹನಗಳ ಬಿಡಿಭಾಗಗಳನ್ನು ತಯಾರಿಸುವ ಕಂಪೆನಿಗಳಿಗೂ ಅದನ್ನು ಮಾರುವ ಅಂಗಡಿಗಳಿಗೂ ಪ್ರಯೋಜನವಾಗುತ್ತದೆ. ಅವೂ ಬ್ಯಾಂಕ್‍ನಿಂದ ಸಾಲವನ್ನು ಎತ್ತಿಕೊಂಡಿರುತ್ತದೆ. ಅಸಂಖ್ಯಾತ ಗ್ಯಾರೇಜುಗಳಿಗೆ ಕೆಲಸ ಸಿಗುತ್ತದೆ. ವಿಮಾ ಕಂಪೆನಿಗಳೂ ಚಟುವಟಿಕೆಯಿಂದಿರುತ್ತವೆ. ಇದೊಂದು ರೀತಿಯಲ್ಲಿ ಸರಪಣಿ ಇದ್ದ ಹಾಗೆ. ಒಂದನ್ನು ಇನ್ನೊಂದು, ಅದನ್ನು ಮತ್ತೊಂದು, ಮಗದೊಂದು.. ಹೀಗೆ ಅವಲಂಬಿಸಿಕೊಂಡು ಬದುಕುತ್ತಿರುತ್ತವೆ. ಆದ್ದರಿಂದ, ವಾಹನ ಉತ್ಪಾದನೆಯಲ್ಲಿ ಮತ್ತು ಮಾರಾಟದಲ್ಲಿ ಭಾರೀ ಕುಸಿತ ಆಗಿದೆ ಎಂಬುದು ಪರಿಣಾಮದ ದೃಷ್ಟಿಯಿಂದ ಆಘಾತಕಾರಿಯಾದುದು. ಇದನ್ನು ನಾವು ಕೇವಲ ವಾಹನ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಿ ನೋಡಬೇಕಿಲ್ಲ. ಬಟ್ಟೆ, ಎಲೆಕ್ಟ್ರಾನಿಕ್ ಸಾಧನಗಳು, ಕೃಷಿ ಕ್ಷೇತ್ರ ಸಹಿತ ಎಲ್ಲವುಗಳ ಪರಿಸ್ಥಿತಿಯೂ ಇದುವೇ. ಜನರಲ್ಲಿ ಖರೀದಿ ಸಾಮರ್ಥ್ಯ ಕುಸಿದರೆ ಅದು ಉದ್ಯಮ ಕ್ಷೇತ್ರದ ಕೋಟ್ಯಂತರ ಮಂದಿಯನ್ನು ನೇರವಾಗಿಯೋ ಪರೋಕ್ಷವಾಗಿಯೋ ಕಾಡುತ್ತದೆ. ಅಂದಹಾಗೆ,
2008ರಲ್ಲೂ ಈಗಿನಂಥದ್ದೇ ಆರ್ಥಿಕ ಹಿಂಜರಿತ ಎದುರಾಗಿತ್ತು ಎಂದು ಹೇಳಲಾಗುತ್ತಿದೆ. ಅಮೇರಿಕದ ಲೆಹ್ಮನ್ ಬ್ರದರ್ಸ್ ಬ್ಯಾಂಕು ದಿವಾಳಿತನವನ್ನು ಘೋಷಿಸಿದ ಬಳಿಕ ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಂಡ ಆರ್ಥಿಕ ಹಿಂಜರಿತದ ಬಿಸಿ ಆಗ ಭಾರತವನ್ನೂ ತಟ್ಟಿತ್ತು. ಆದರೆ ಮನ್‍ಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರವು ಆ ಕುಸಿತದ ಅಡ್ಡ ಪರಿಣಾಮವನ್ನು ಕರಾರುವಕ್ಕಾಗಿ ಊಹಿಸಿ ತಕ್ಷಣ ಕ್ರಮಗಳನ್ನು ಕೈಗೊಂಡಿತ್ತು. ಆರ್ಥಿಕ ನೆರವಿನ ಪ್ಯಾಕೇಜ್ ಮತ್ತಿತರ ಕ್ರಮಗಳ ಮೂಲಕ ತಕ್ಷಣ ಸ್ಪಂದಿಸಿತ್ತು. ಜೊತೆಗೇ ಆಗಿನ ಸರಕಾರದಲ್ಲಿ ಪ್ರಣವ್ ಮುಖರ್ಜಿ, ಚಿದಂಬರಮ್ ಮತ್ತು ಪ್ರಧಾನಿ ಮನ್‍ಮೋಹನ್ ಸಿಂಗ್‍ರಂಥ ನಿಪುಣ ಅರ್ಥತಜ್ಞರಿದ್ದರು. ಆದರೆ, ಪ್ರಧಾನಿ ಮೋದಿ ನೇತೃತ್ವದ ಸರಕಾರದಲ್ಲಿ ಅರ್ಥ ತಜ್ಞರ ದೊಡ್ಡ ಕೊರತೆಯಿದೆ. ನಿರ್ಮಲ ಸೀತಾರಾಮನ್ ಅನನುಭವಿ. ಸತತ 5 ತ್ರೈಮಾಸಿಕದಲ್ಲಿ ಜಿಡಿಪಿಯ ಕುಸಿತ ಉಂಟಾದ ಬಳಿಕವೂ ಕ್ಷೀಪ್ರ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಈ ಸರಕಾರ ವಿಫಲವಾಗುತ್ತಿದೆ. ಈ ವೈಫಲ್ಯಕ್ಕೆ ಇಂಬು ನೀಡುವಂತೆ ಸರಕಾರದ ಮೌನವೂ ಸೇರಿಕೊಂಡಿದೆ. ಆರ್ಥಿಕ ಹಿಂಜರಿತಕ್ಕೆ ಪ್ರತಿ ಕ್ಷೇತ್ರವೂ ಸಾಕ್ಷ್ಯ ವಹಿಸುತ್ತಿದ್ದರೂ ಪ್ರಧಾನಿಯಾಗಲಿ, ಹಣಕಾಸು ಸಚಿವರಾಗಲಿ ಅದನ್ನು ಒಪ್ಪಿಕೊಂಡು ಬಹಿರಂಗ ಹೇಳಿಕೆಗಳನ್ನು ನೀಡುತ್ತಿಲ್ಲ. ಹಿಂಜರಿತವನ್ನು ಒಪ್ಪಿಕೊಳ್ಳದೇ ಇರುವುದರಿಂದ ಪರಿಹಾರ ಕ್ರಮಗಳನ್ನು ಘೋಷಿಸುತ್ತಲೂ ಇಲ್ಲ. ಸರಕಾರದ ಈ ಹಿಂಜರಿಕೆಯು ಉದ್ಯಮ ಹೂಡಿಕೆ ಕ್ಷೇತ್ರವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮೋಡ ಕವಿಯುವಂತೆ ಮಾಡಿದೆ. ಅವುಗಳ ಆತ್ಮವಿಶ್ವಾಸ ಕುಸಿದಿದೆ.
ಡಿಮಾನಿಟೈಸೇಷನನ್ನು ಆರ್ಥಿಕ ಕ್ರಾಂತಿ ಎಂದು ಕರೆದು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗರು 2016ರಲ್ಲಿ ಸಂಭ್ರಮಿಸುತ್ತಿದ್ದಾಗ ಅದರ ದೂರಗಾಮಿ ಪರಿಣಾಮ ಏನು ಅನ್ನುವುದನ್ನು ಮನ್‍ಮೋಹನ್ ಸಿಂಗ್ ಅವರು ಅಂದು ವಿವರಿಸಿದ್ದರು. ಅವರು ಅಂದು ಏನು ಊಹಿಸಿದ್ದರೋ ಅದು ಈಗ ನಿಜವಾಗುತ್ತಿದೆ. ಅದರ ಮೇಲೆ ಜಿಎಸ್‍ಟಿಯೂ ಸೇರಿಕೊಂಡು ಈಗ ದೇಶದ ಆರ್ಥಿಕ ಸ್ಥಿತಿಯೇ ಅಲ್ಲೋಲ ಕಲ್ಲೋಲಗೊಂಡಿದೆ. ಇದು ಕೇಂದ್ರ ಸರಕಾರದ ಸ್ವಯಂಕೃತ ಅಪರಾಧ. ದೂರದೃಷ್ಟಿಯಿಲ್ಲದೇ ಕೈಗೊಳ್ಳುವ ‘ಜನಪ್ರಿಯ’ ತೀರ್ಮಾನಗಳು ಯಾಕೆ ಅಪಾಯಕಾರಿ ಅನ್ನುವುದನ್ನು ಇದು ಸೂಚಿಸುತ್ತದೆ.
No comments:
Post a Comment