Friday, 13 September 2019

ಕುಂಞಿ ಅಹ್ಮದ್ ಎಂಬ ತಹಶೀಲ್ದಾರ ಮತ್ತು ಸಂವೇದನಾಶೀಲ ಮಾಧ್ಯಮ



ಸಂವಾದನಾಶೀಲ ಪತ್ರಿಕೋದ್ಯಮ ಅಂದರೆ ಏನು ಅನ್ನುವ ಪ್ರಶ್ನೆಗೆ ಉತ್ತರ - ಮೀನಾಕ್ಷಿ. ಇವತ್ತು ಮೀನಾಕ್ಷಿಯವರ  ಕಣ್ಣಿನಲ್ಲಿ ಭರವಸೆ ತುಂಬಿದ್ದರೆ ಅದರ ದೊಡ್ಡದೊಂದು ಪಾಲು ಪತ್ರಿಕೆಗಳಿಗೆ ಸಲ್ಲಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ತಾಲೂಕಿನ ಪಂಜ ಗ್ರಾಮದ ಪಲ್ಲೋಡಿ ಎಂಬಲ್ಲಿ ಶೆಡ್‍ನಲ್ಲಿ ಬದುಕುತ್ತಿದ್ದ ಮೀನಾಕ್ಷಿಗೆ ಮನೆ ಇರಲಿಲ್ಲ. ಅಲ್ಲದೇ ಅವರು ಅಂಗವಿಕಲೆ. ಇಬ್ಬರು ಮಕ್ಕಳೂ ಇದ್ದಾರೆ. ಸ್ವಂತ ಮನೆಯಿಲ್ಲದ, ಅಂಗವಿಕಲೆಯಾಗಿರುವ ಮತ್ತು ಇಬ್ಬರು ಪುಟ್ಟ ಮಕ್ಕಳನ್ನೂ ಹೊಂದಿರುವ ಮಹಿಳೆಯೊಬ್ಬರು ಇವತ್ತಿನ ಸಾಮಾಜಿಕ ಪರಿಸ್ಥಿತಿಯಲ್ಲಿ ದಿನದೂಡುವುದು ಸುಲಭ ಅಲ್ಲ. ಸುರಕ್ಷಿತತೆಯ ಸವಾಲು ಒಂದು ಕಡೆಯಾದರೆ, ಹೊಟ್ಟೆಪಾಡು ಇನ್ನೊಂದು ಕಡೆ. ಹಾಗಂತ,
ಸರಕಾರಿ ಸೌಲಭ್ಯಗಳು ಸಿಗಬೇಕೆಂದರೆ ದಾಖಲೆ ಪತ್ರಗಳು ಬೇಕು. ಶ್ರೀಮಂತರು ಪಡೆದಷ್ಟು ಸುಲಭವಾಗಿ ಬಡವರು ದಾಖಲೆ ಪತ್ರಗಳನ್ನು ಪಡೆದುಕೊಳ್ಳುವ ವಾತಾವರಣವೂ ಇಲ್ಲಿಲ್ಲ. ಶ್ರೀಮಂತರು ಇರುವಲ್ಲಿಗೆ ಓಡೋಡಿ ಕೊಂಡು ಬರುವ ದಾಖಲೆ ಪತ್ರಗಳು ಬಡವರು ಓಡೋಡಿಕೊಂಡು ಹೋದರೂ ಕೈಗೆ ಸಿಗುವುದು ಕಷ್ಟ. ಮೀನಾಕ್ಷಿಗೂ ಅದರ ಅನುಭವವಾಗಿದೆ. ಅವರು ವಾಸವಿದ್ದ ಶೆಡ್‍ನಿಂದ ಅಧಿಕಾರಿಗಳು ತೆರಿಗೆ ಸಂಗ್ರಹಿಸುತ್ತಿದ್ದರೂ ಹಕ್ಕು ಪತ್ರ ನೀಡಿರಲಿಲ್ಲ. ‘94 ಸಿ’ ಕೆಟಗರಿಯಡಿ ಅವರಿಗೆ ಹಕ್ಕು ಪತ್ರ ನೀಡುವ ಅವಕಾಶವಿದ್ದೂ ಅದನ್ನು ಅವರ ಪಾಲಿಗೆ ನಿರಾಕರಿಸುತ್ತಲೇ ಬರಲಾಗಿತ್ತು. ಮೀನಾಕ್ಷಿಗೆ ಕಾನೂನು ಕಟ್ಟಳೆಗಳ ಬಗ್ಗೆ ಅರಿವೂ ಇಲ್ಲ. ತನಗೆ ಹಕ್ಕುಪತ್ರ ನೀಡಿ ಎಂದು ಆಕೆ ಅರ್ಜಿ ಸಲ್ಲಿಸಿದ್ದರಾದರೂ ಅದನ್ನು ಮಾನ್ಯ ಮಾಡಲಾಗಿರಲಿಲ್ಲ. ಪಕ್ಕದ ಗುತ್ತಿಗಾರಿನ ಹೊಟೇಲೊಂದರಲ್ಲಿ ಕೂಲಿ ಮಾಡಿಕೊಂಡು ಮತ್ತು ಇಬ್ಬರು ಮಕ್ಕಳನ್ನು ಓದಿಸಿಕೊಂಡು ಅಸಹಾಯಕ ಸ್ಥಿತಿಯಲ್ಲಿ ಬದುಕುತ್ತಿದ್ದ ಅವರು ಮಾಧ್ಯಮದ ಕಣ್ಣಿಗೆ ಬಿದ್ದಿದ್ದಾರೆ. ಮೀನಾಕ್ಷಿಯ ಬದುಕನ್ನು ಮಾಧ್ಯಮದ ಮಂದಿ ಸುದ್ದಿ ಮಾಡಿದ್ದಾರೆ. ಈ ಸುದ್ದಿಯನ್ನು ಓದಿದ ಸುಳ್ಯದ ತಹಶೀಲ್ದಾರರಾದ ಕುಂಞಿ ಅಹ್ಮದ್‍ರು ತಕ್ಷಣ ಸ್ಪಂದಿಸಿದ್ದಾರೆ. ಪಂಜ ಗ್ರಾಮದ ಕಂದಾಯ ಇಲಾಖೆಯ ನಿರೀಕ್ಷಕರನ್ನು, ಗ್ರಾಮ ಲೆಕ್ಕಿಗ, ಗ್ರಾಮ ಕರಣಿಕ ಮತ್ತು ನಾಡ ಕಚೇರಿಯ ಅಧಿಕಾರಿಗಳನ್ನು ಸ್ಥಳ ಪರಿಶೀಲನೆಗೆ ಕಳುಹಿಸಿ ವರದಿ ತರಿಸಿಕೊಂಡಿದ್ದಾರೆ. ‘94 ಸಿ’ ಕೆಟಗರಿಯ ಅಡಿಯಲ್ಲಿ ಮೀನಾಕ್ಷಿಗೆ ನಿವೇಶನದ ಹಕ್ಕು ಪತ್ರ ನೀಡಲು ಮುಂದಾಗಿದ್ದಾರೆ.
ಸಾಮಾನ್ಯವಾಗಿ, ರಾಜಕೀಯ ಸುದ್ದಿಗಳಿಗೆ ಕೊಡುವಷ್ಟು ಆದ್ಯತೆಯನ್ನು ಮಾಧ್ಯಮಗಳು ಜನಸಾಮಾನ್ಯರ ಬವಣೆಗಳಿಗೆ ಕೊಡುವುದು ಕಡಿಮೆ. ಪ್ರವಾಹ, ಭೂಕಂಪ, ಭೀಕರ ಅಪಘಾತ, ಸಾಂಕ್ರಾಮಿಕ ರೋಗಗಳು ಇತ್ಯಾದಿ ಅಪರೂಪದ ಸನ್ನಿವೇಶಗಳಲ್ಲಿ ಮಾತ್ರ ಜನಸಾಮಾನ್ಯರು ಪತ್ರಿಕೆಗಳ ಮುಖಪುಟದಲ್ಲಿ ಬರುತ್ತಾರೆಯೇ ಹೊರತು ಉಳಿದಂತೆ ಅವರು ಒಳಪುಟದ ಎಲ್ಲೋ ಮೂಲೆಯಲ್ಲಿ ಅಥವಾ ಪುಟಗಳಲ್ಲಿ ಕಾಣಿಸಿಕೊಳ್ಳದೆಯೇ ತಮ್ಮ ಪಾಡಿಗೆ ಬದುಕುತ್ತಿರುತ್ತಾರೆ. ಅವರು ಸಂಪಾದಕೀಯ ವಸ್ತು ಆಗುವುದಂತೂ ಬಲು ಅಪರೂಪ. ನಿಜವಾಗಿ, ಜನಪ್ರತಿನಿಧಿಗಳೆಂಬ ನೆಲೆಯಲ್ಲಿ ರಾಜಕಾರಣಿಗಳು ಪತ್ರಿಕೆಗಳ ಮುಖಪುಟಕ್ಕೆ ಎಷ್ಟು ಅರ್ಹರೋ ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯಕ್ಕೊಳಗಾದವರೆಂಬ ನೆಲೆಯಲ್ಲಿ ಜನಸಾಮಾನ್ಯರೂ ಅಷ್ಟೇ ಅರ್ಹ. ಜನರ ಪ್ರಾತಿನಿಧ್ಯವನ್ನು ರಾಜಕಾರಣಿ ಸರಿಯಾಗಿ ನಿಭಾಯಿಸದಿದ್ದಾಗ ಅದನ್ನು ಮುಖಪುಟದಲ್ಲಿಟ್ಟು ಪ್ರತಿನಿಧಿಯಲ್ಲಿ ಪ್ರಶ್ನಿಸಬೇಕಾದದ್ದು ಮಾಧ್ಯಮದ ಜವಾಬ್ದಾರಿ. ಮೀನಾಕ್ಷಿ ಇದಕ್ಕೊಂದು ಉದಾಹರಣೆ. ಆಕೆ ಜನಪ್ರತಿನಿಧಿಯ ನಿರ್ಲಕ್ಷ್ಯದ ಸಂಕೇತ. ವ್ಯವಸ್ಥೆ ಸೃಷ್ಟಿಸಿದ ಸಂತ್ರಸ್ತೆ. ಇಂಥ ಸಂದರ್ಭಗಳಲ್ಲಿ ಜನಪ್ರತಿನಿಧಿ ಒಳಪುಟಕ್ಕೂ ಜನಸಾಮಾನ್ಯರು ಮುಖಪುಟಕ್ಕೂ ಬರಬೇಕು. ಜನಪ್ರತಿನಿಧಿಯನ್ನು ಪ್ರಶ್ನಿಸಬೇಕು. ಶೆಡ್‍ನಲ್ಲಿ ಬದುಕುವ ಮೀನಾಕ್ಷಿಯಿಂದ ತೆರಿಗೆ ಸಂಗ್ರಹಿಸುವ ವ್ಯವಸ್ಥೆಗೆ ಆಕೆಗೊಂದು ನಿವೇಶನ ಹಕ್ಕು ಪತ್ರ ನೀಡಲು ಯಾವ ಕಾಯ್ದೆ-ಕಟ್ಟಳೆ ಅಡ್ಡ ಬರುತ್ತದೆ ಅನ್ನುವ ಪ್ರಶ್ನೆಯನ್ನು ಮುನ್ನೆಲೆಗೆ ತರಬೇಕು. ಸಂವೇದನಾಶೀಲ ಪತ್ರಿಕೋದ್ಯಮದ ಅಗತ್ಯ ಇದು.
ಮಾಧ್ಯಮ ಜಗತ್ತು ಇವತ್ತು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅದರಲ್ಲಿ ವಿಶ್ವಾಸಾರ್ಹತೆಯ ಸವಾಲೂ ಒಂದು. ಮಾಧ್ಯಮಗಳು ‘ಜನಪ್ರಿಯ ಸುದ್ದಿ’ಯ ಹಿಂದೆ ಬಿದ್ದಿವೆ ಎಂಬ ಆರೋಪವೂ ಒಂದು. ‘ಜವಾಬ್ದಾರಿರಹಿತ ಜನರ ಬಳಗ’ ಎಂಬ ಆರೋಪವನ್ನೂ ಮಾಧ್ಯಮದ ಮೇಲೆ ಇವತ್ತು ಹೊರಿಸಲಾಗುತ್ತಿದೆ. ಜನಸಾಮಾನ್ಯರ ಧ್ವನಿಯಾಗುವುದಕ್ಕಿಂತ ಆಡಳಿತಗಾರರ ಪರ ನಿಲುವನ್ನು ತಳೆಯುತ್ತಿದೆ ಅನ್ನುವ ಆರೋಪವೂ ಮಾಧ್ಯಮದವರ ಮೇಲಿದೆ. ಪತ್ರಿಕೆಗಳ ಮತ್ತು ಟಿ.ವಿ. ಚಾನೆಲ್‍ಗಳ ದೊಡ್ಡ ಗ್ರಾಹಕರು ಯಾರೆಂದರೆ, ಜನಸಾಮಾನ್ಯರು. ಅವರಿಲ್ಲದೆ ಪತ್ರಿಕೆಗಳೂ ಇಲ್ಲ, ಚಾನೆಲ್‍ಗಳೂ ಇಲ್ಲ. ಪತ್ರಿಕೆಗಳನ್ನು ಜಾಹೀರಾತುಗಳು ಸಾಕುತ್ತಿರಬಹುದು ಮತ್ತು ಜಾಹೀರಾತಿನ ಹೊರತಾಗಿ ಪತ್ರಿಕೆ ಅಥವಾ ಚಾನೆಲ್‍ಗಳನ್ನು ನಡೆಸುವುದೂ ಕಷ್ಟಕರವಾಗಿರಬಹುದು. ಒಂದು ಪತ್ರಿಕೆಯನ್ನು ಖರೀದಿಸುವುದಕ್ಕೆ ಓದುಗನೋರ್ವ ಖರ್ಚು ಮಾಡುವ ಮೊತ್ತದ ಮೂರು ಪಟ್ಟು ಹೆಚ್ಚು ಖರ್ಚು ಪತ್ರಿಕೆಗಳ ಮುದ್ರಣಕ್ಕೆ ತಗಲುತ್ತಿರಬಹುದು. ಆದರೆ ಇವಾವುವೂ ಮಾಧ್ಯಮ ರಂಗವು ಆಡಳಿತ ಪP್ಷÀದ ತುತ್ತೂರಿಯಾಗುವುದಕ್ಕೆ ಮತ್ತು ಜನಸಾಮಾನ್ಯರನ್ನು ಕಡೆಗಣಿಸುವುದಕ್ಕೆ ಸಮರ್ಥನೆಗಳಾಗುವುದಿಲ್ಲ. ದುರಂತ ಏನೆಂದರೆ,
ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಾದ ಮತ್ತು ಪ್ರಶ್ನಿಸುವ ಧ್ವನಿಯಲ್ಲಿ ಮಾತಾಡಬೇಕಾದ ಮಾಧ್ಯಮ ಕ್ಷೇತ್ರವು ಇವತ್ತು ನಿಧಾನಕ್ಕೆ ತನ್ನ ಜವಾಬ್ದಾರಿಯಿಂದಲೇ ನುಣುಚಿಕೊಳ್ಳುತ್ತಿರುವುದು. ಎಣಿಕೆಯ ಪತ್ರಿಕೆಗಳು ಮತ್ತು ಚಾನೆಲ್‍ಗಳನ್ನು ಬಿಟ್ಟರೆ ಹೆಚ್ಚಿನವು ಆಡಳಿತ ಪP್ಷÀದ ಕರಪತ್ರವಾಗಿ ಮತ್ತು ಧ್ವನಿಯಾಗಿ ಮಾರ್ಪಟ್ಟು ಬಿಟ್ಟಿವೆ. ಇಂಥ ಸ್ಥಿತಿಯಲ್ಲಿ, ಮೀನಾಕ್ಷಿಯಂತಹವರು ಸುದ್ದಿ ಕೇಂದ್ರವಾಗುವುದು ಸುಲಭ ಅಲ್ಲ. ಮಾತ್ರವಲ್ಲ, ಮೀನಾಕ್ಷಿ ಈ ಪಟ್ಟಿಯಲ್ಲಿರುವ ಏಕೈಕ ವ್ಯಕ್ತಿಯೂ ಅಲ್ಲ. ಈ ದೇಶದ ಪ್ರತಿ ಹಳ್ಳಿ, ಗ್ರಾಮ, ಪಟ್ಟಣ, ಬೃಹತ್ ನಗರಗಳಲ್ಲಿ ಇಂಥ ಕೋಟ್ಯಾಂತರ ಮಂದಿ ಇದ್ದಾರೆ. ಅವರೆಲ್ಲರ ಅಪರಾಧ ಏನೆಂದರೆ, ಅವರು ಬಡವರಾಗಿರುವುದು. ಮಾಧ್ಯಮದ ಗಮನ ಸೆಳೆಯಬಲ್ಲ ಯಾವುದೂ ಅವರಿಗೆ ಗೊತ್ತಿಲ್ಲದಿರುವುದು. ಜನಪ್ರತಿನಿಧಿಯ ಬಳಿಗೆ ತೆರಳಬಲ್ಲ ಎಲ್ಲ ದಾರಿಗಳೂ ಅವರ ಪಾಲಿಗೆ ಮುಚ್ಚಿರುವುದು.
ಇವತ್ತಿನ ದಿನಗಳಲ್ಲಿ ಜವಾಬ್ದಾರಿಯುತ ಪತ್ರಿಕೋದ್ಯಮ ಅತೀ ಅಗತ್ಯವಾಗಿದೆ. ಅಂದಹಾಗೆ, ಮಾಧ್ಯಮವು ತನ್ನ ಜವಾಬ್ದಾರಿಯನ್ನು ಮರೆತರೆ ಮತ್ತು ಸಂವೇದನಾ ಶೂನ್ಯವಾದರೆ ಏನಾಗಬಹುದು ಅನ್ನುವುದಕ್ಕೆ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಜಾರಿಗೆಬೈಲಿನಲ್ಲಿರುವ (ಗೋವಿಂದೂರು) ಅಬ್ದುರ್ರವೂಫ್ ಮುಸ್ಲಿಯಾರ್ ಉತ್ತಮ ಉದಾಹರಣೆ. ‘ಪಾಕಿಸ್ತಾನಕ್ಕೆ ಸೆಟಲೈಟ್ ಕರೆ ಮಾಡಿದ ಉಗ್ರ’ ಎಂಬ ಧಾಟಿಯಲ್ಲಿ ಸುದ್ದಿ ಸ್ಫೋಟಿಸಿ ಆ ವ್ಯಕ್ತಿಯನ್ನು ಮಾನಸಿಕವಾಗಿ ಹಿಂಸಿಸಿದ್ದು ಜನಸಾಮಾನ್ಯರಲ್ಲ, ಮಾಧ್ಯಮ ರಂಗ. ಒಂದುರೀತಿಯಲ್ಲಿ, ಮೀನಾಕ್ಷಿ ಮತ್ತು ಅಬ್ದುರ್ರವೂಫ್ ಮುಸ್ಲಿಯಾರ್- ಇವರಿಬ್ಬರೂ ಸಂವೇದನಾಶೀಲ ಪತ್ರಿಕೋದ್ಯಮ ಮತ್ತು ಬೇಜವಾಬ್ದಾರಿಯುತ ಪತ್ರಿಕೋದ್ಯಮ ಇವೆರಡರ ಉದಾಹರಣೆಗಳೂ ಹೌದು. ಮಾಧ್ಯಮ ರಂಗದ ಮೇಲಿನ ಭರವಸೆಯನ್ನು ಮೀನಾಕ್ಷಿ ಇನ್ನಷ್ಟು ಬಲಗೊಳಿಸಿದರೆ, ಮಾಧ್ಯಮದ ಬೇಜವಾಬ್ದಾರಿತನಕ್ಕೆ ರವೂಫ್ ಮುಸ್ಲಿಯಾರ್ ಪ್ರಕರಣವು ಮತ್ತಷ್ಟು ಪುಷ್ಠಿಯನ್ನು ಒದಗಿಸಿದೆ. ಆದ್ದರಿಂದ,
ಅಬ್ದುರ್ರವೂಫ್ ಮುಸ್ಲಿಯಾರ್‍ರಂತಹ ಸಂತ್ರಸ್ತರು ಮತ್ತಷ್ಟು ತಯಾರಾಗದಂತೆ ಮತ್ತು ಮೀನಾಕ್ಷಿಯಂತಹವರು ನಿರ್ಲಕ್ಷ್ಯಕ್ಕೆ ಒಳಗಾಗದಂತೆ ನೋಡಿಕೊಳ್ಳುವ ಪ್ರತಿಜ್ಞೆಯನ್ನು ಮಾಧ್ಯಮ ರಂಗವು ಕೈಗೊಳ್ಳಬೇಕು. ಪ್ರಜಾತಂತ್ರದ ನಾಲ್ಕನೇ ಕಂಭವಾದ ಮಾಧ್ಯಮ ರಂಗವು ನಿಜವಾಗಿ ಅತ್ಯಂತ ಬಲಶಾಲಿ. ಪ್ರಭಾವಿ. ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಬಲ್ಲಷ್ಟು ಸಮರ್ಥ. ತನ್ನ ಸಾಮರ್ಥ್ಯವನ್ನು ಅರಿತುಕೊಂಡು ಅದನ್ನು ಶಕ್ತವಾಗಿ ಬಳಸಿಕೊಳ್ಳಲು ಮಾಧ್ಯಮ ರಂಗ ಸಿದ್ಧವಾದರೆ ಮೀನಾಕ್ಷಿಯಂತಹ ಅಸಂಖ್ಯ ಜನಸಾಮಾನ್ಯರ ಮುಖದಲ್ಲಿ ನಗು ಚಿಮ್ಮಬಹುದು. ಹಾಗೆಯೇ ಅಬ್ದುರ್ರವೂಫ್ ಮುಸ್ಲಿಯಾರ್ ರಂತಹ ಸಂತ್ರಸ್ತರ ಸೃಷ್ಟಿಯೂ ಆಗಲಾರದು. ಅಂದಹಾಗೆ,
ಕುಂಞಿ ಅಹ್ಮದ್‍ರಂತಹ ತಹಶೀಲ್ದಾರರ ಸಂಖ್ಯೆ ಇನ್ನಷ್ಟು ಹೆಚ್ಚಲಿ.

No comments:

Post a Comment