ತಿಂಗಳ ಹಿಂದೆ ವೀಡಿಯೋವೊಂದು ವೈರಲ್ ಆಗಿತ್ತು. ವೀಡಿಯೋದಲ್ಲಿದ್ದುದು ಒಂದಿಷ್ಟು ಯುವಕರು. ಹಿಂದೂ, ಮುಸ್ಲಿಮ್ ಮತ್ತು ಕ್ರೈಸ್ತ ಸಮುದಾಯದವರಾದ ಆ ಯುವಕರ ಬೇಡಿಕೆ ಒಂದೇ ಆಗಿತ್ತು- ‘ಹೇಗಾದರೂ ಮಾಡಿ ತಮ್ಮನ್ನು ತಾಯ್ನಾಡಿಗೆ ಕರೆಸಿಕೊಳ್ಳಿ’ ಎಂಬುದು. ಕರ್ನಾಟಕದ ವಿವಿಧ ಪ್ರದೇಶಗಳಿಂದ ಉದ್ಯೋಗವನ್ನು ಅರಸಿಕೊಂಡು ಕುವೈತ್‍ಗೆ ಆಗಮಿಸಿದ ಯುವಕರ ಗುಂಪು ಇದು. 2019 ಜನವರಿಯ ಆರಂಭದಲ್ಲಿ ಮ್ಯಾನ್‍ಪವರ್ ಕನ್ಸಲ್ಟನ್ಸಿಯವರು ಕಳುಹಿಸಿಕೊಟ್ಟಿದ್ದ ಈ ಯುವಕರೆಲ್ಲ ಕಳೆದ ಐದಾರು ತಿಂಗಳಿಂದ ಅತ್ಯಂತ ಅತಂತ್ರವಾಗಿ ಬದುಕಬೇಕಾಯಿತು. ಸಂದರ್ಶನದ ವೇಳೆ ಉದ್ಯೋಗ ಕೊಡುವುದಾಗಿ ಹೇಳಿದ ಕಂಪೆನಿಯ ಹೆಸರೇ ಬೇರೆ ಮತ್ತು ಕುವೈತ್‍ನಲ್ಲಿ ಕೆಲಸಕ್ಕೆ ಸೇರಿಸಿಕೊಂಡ ಕಂಪೆನಿಯ ಹೆಸರೇ ಬೇರೆ ಎಂಬುದರಿಂದ ತೊಡಗಿ ದೂರುಗಳ ಮೂಟೆಯೇ ಈ 59 ಮಂದಿಯಲ್ಲಿದೆ. ಸಂಬಳವೂ ಸಿಗದೇ ಕೊನೆಗೆ ಊಟ-ಉಪಾಹಾರವೂ ಲಭ್ಯವಿಲ್ಲದೇ ಚಿಂತಾಜನಕ ಸ್ಥಿತಿಗೆ ತಲುಪುವುದರ ಜೊತೆಜೊತೆಗೇ ಸಂವಹನದ ಸಮಸ್ಯೆಯೂ ಇವರನ್ನು ಕಾಡಿತು. ಅಲ್ಲಿನ ಕಾರ್ಮಿಕ ನ್ಯಾಯಾಲಯದ ಕಾರ್ಯವೈಖರಿಯ ಬಗ್ಗೆ ತಿಳುವಳಿಕೆ ಇಲ್ಲದ ಹಾಗೂ ಅರಬಿ ಭಾಷೆಯಲ್ಲಿ ಸಂವಹನ ನಡೆಸಲು ಗೊತ್ತಿಲ್ಲದ ಈ ಮಂದಿ ಒಂದು ರೀತಿಯಲ್ಲಿ ಬೇಡರ ಬಲೆಯೊಳಗೆ ಸಿಲುಕಿಕೊಂಡಂತಾಗಿತ್ತು. ಈ ಸ್ಥಿತಿಯಲ್ಲಿ ಕೊನೆಯ ಅಸ್ತ್ರವೆಂಬಂತೆ ಅವರೆಲ್ಲ ಸೇರಿ ವೀಡಿಯೋವೊಂದನ್ನು ಮಾಡಿ ಸಾರ್ವಜನಿಕವಾಗಿ ಹಂಚಿಕೊಂಡಿದ್ದರು. ಮಂಗಳೂರು ಶಾಸಕ ವೇದವ್ಯಾಸ್ ಕಾಮತ್‍ರಲ್ಲಿ ಅವರು ಆ ವೀಡಿಯೋದ ಮೂಲಕ ನೆರವು ಕೋರಿದರು. ಇದೀಗ ಅವರನ್ನು ಬಿಡಿಸಿಕೊಳ್ಳುವ ಪ್ರಯತ್ನಗಳಿಗೆ ಯಶಸ್ಸು ಸಿಕ್ಕಿದೆ. ಕುವೈತ್‍ನಲ್ಲಿ ಸಿಲುಕಿಕೊಂಡ ಈ ಯುವಕರು ಹಂತಹಂತವಾಗಿ ಈ ದೇಶಕ್ಕೆ ಮರಳುತ್ತಿದ್ದಾರೆ. ನಿಜವಾಗಿ,
ಘಟನೆಯ ನೇರ ಮುಖ ಇದು. ಆದರೆ ಇದರ ಪರೋಕ್ಷ ಮುಖಗಳು ಒಂದಕ್ಕಿಂತ ಹೆಚ್ಚಿವೆ. ಒಂದನೆಯದಾಗಿ, ಬಡತನಕ್ಕೆ ಹಿಂದೂ-ಮುಸ್ಲಿಮ್ ಎಂಬ ಭೇದ ಇಲ್ಲ. ಸಂಕಷ್ಟಕ್ಕೂ ಹಿಂದೂ-ಮುಸ್ಲಿಮ್ ಎಂಬ ವ್ಯತ್ಯಾಸ ಇಲ್ಲ. ಕುವೈತ್ ಎಂಬುದು ಮುಸ್ಲಿಮ್ ರಾಷ್ಟ್ರವಾಗಿರುವುದರಿಂದ ಈ 59 ಮಂದಿಯ ಪೈಕಿ ಮುಸ್ಲಿಮರಿಗೆ ಆದರ ಮತ್ತು ಮುಸ್ಲಿಮೇತರ ಉದ್ಯೋಗಾಕಾಂಕ್ಷಿಗಳಿಗೆ ಅನಾದಾರವೂ ನಡೆದಿಲ್ಲ. ಇವರೆಲ್ಲರಲ್ಲೂ ಇದ್ದಿದ್ದ ಭಯ ಒಂದೇ ಆಗಿತ್ತು. ಬಯಕೆಯೂ ಒಂದೇ ಆಗಿತ್ತು. ಇದ್ದಿದ್ದೂ ಜೊತೆಗೆಯೇ. ಅಬೂಬಕರ್ ಸಿದ್ದೀಕ್, ವರುಣ್, ಪಾಲ್ಟ್ರಿಕ್ ಫರ್ನಾಂಡಿಸ್ ಎಂಬಿತ್ಯಾದಿಯಾಗಿ ಇವರ ಹೆಸರಲ್ಲಿ ಭಿನ್ನತೆಯಿದ್ದರೂ ಈ ಭಿನ್ನತೆಯ ಆಚೆಗೆ ಇವರಲ್ಲಿ ಮತ್ತು ಇವರ ಕುಟುಂಬಿಕರ ಆತಂಕದಲ್ಲಿ ಯಾವ ವ್ಯತ್ಯಾಸವೂ ಇರಲಿಲ್ಲ. ಕುವೈತ್‍ನಲ್ಲಿ ಇವರೆಲ್ಲ- ಭಾರತೀಯರು ಮತ್ತು ಮನುಷ್ಯರೆಂಬ ನೆಲೆಯಲ್ಲಿ ಸಮಾನ ಪರಿಗಣನೆಗೆ ಒಳಪಟ್ಟರು. ಎರಡನೆಯದಾಗಿ,
ವಂಚಿಸುವವರಲ್ಲೂ ಮತ್ತು ವಂಚನೆಗೆ ಒಳಗಾಗುವವರಲ್ಲೂ ಹಿಂದೂ-ಮುಸ್ಲಿಮ್ ಎಂಬ ಬೇಧವಿಲ್ಲ. ಈ 59 ಮಂದಿಯನ್ನು ಕುವೈತ್‍ಗೆ ಕಳುಹಿಸಿದ ಮ್ಯಾನ್‍ಪವರ್ ಕಂಪೆನಿಯಾಗಲಿ, ಸಂದರ್ಶನದ ಸಮಯದಲ್ಲಿ ಉದ್ಯೋಗ ಕೊಡುತ್ತೇನೆಂದು ನಂಬಿಸಿದವರಾಗಲಿ ಮತ್ತು ಕುವೈತ್‍ನಲ್ಲಿ ವಂಚಿಸಿದವರಾಗಲಿ ಎಲ್ಲರೂ ಒಂದೇ ಧರ್ಮಕ್ಕೋ ಒಂದೇ ಜಾತಿಗೋ ಒಂದೇ ಭಾಷೆಗೋ ಸೇರಿದವರಲ್ಲ. ಧರ್ಮ, ಭಾಷೆ, ದೇಶವೆಂಬ ಐಡೆಂಟಿಟಿಯ ಆಚೆಗೆ ಅವರೆಲ್ಲ ಒಂದೇ ಬಿಂದುವಿನಲ್ಲಿ ಸೇರಿಕೊಂಡವರು. ಈ 59 ಮಂದಿಗೆ ನಿರ್ದಿಷ್ಟ ಕಂಪೆನಿಯಲ್ಲಿ ನಿರ್ದಿಷ್ಟ ಉದ್ಯೋಗವನ್ನೇ ಕೊಡಿಸುತ್ತೇವೆ ಎಂದು ನಂಬಿಸಿ ಕೈಕೊಟ್ಟವರಲ್ಲಿ ಹಿಂದೂಗಳೂ ಇದ್ದಾರೆ. ಮುಸ್ಲಿಮರೂ ಇz್ದÁರೆ. ಅವರು ಹಾಗೆ ವಂಚಿಸುವಾಗ ತಂತಮ್ಮ ಧರ್ಮೀಯರ ಮೇಲೆ ವಿಶೇಷ ಮೃದು ಭಾವನೆಯನ್ನೇನೂ ತೋರಿಲ್ಲ. ವಂಚನೆಗೊಳಗಾಗುವವರು ತನ್ನ ಧರ್ಮದವರೋ ಅನ್ಯ ಧರ್ಮದವರೋ ಅನ್ನುವುದು ವಂಚನೆಯ ಸಮಯದಲ್ಲಿ ಅವರಿಗೆ ಮುಖ್ಯವೂ ಆಗಿಲ್ಲ. ವಂಚಿಸುವುದೇ ಅವರ ಉದ್ದೇಶವಾಗಿತ್ತು. ಅದುವೇ ಆ ಸಂದರ್ಭದಲ್ಲಿ ಅವರ ಧರ್ಮ. ಅವರು ಹಿಂದೂ-ಮುಸ್ಲಿಮ್ ಏನೇ ಆಗಿದ್ದರೂ ವಂಚನಾತ್ಮಕ ಮನಸ್ಥಿತಿಯ ಮಟ್ಟಿಗೆ ಅವರೆಲ್ಲರೂ ಸಮಾನರು ಮತ್ತು ಒಂದೇ ಧರ್ಮದವರು. ಮೂರನೆಯದಾಗಿ,
ಈ 59 ಮಂದಿಗೆ ನೆರವಾದವರಲ್ಲೂ ಈ ಧಾರ್ಮಿಕ ವೈವಿಧ್ಯತೆಯಿದೆ. ಮೋಹನ್‍ದಾಸ್ ಕಾಮತ್‍ರಿಂದ ಹಿಡಿದು ಅಹ್ಮದ್ ಬಾವಾರ ವರೆಗೆ ಮಾಧವ್ ನಾಯಕ್‍ರಿಂದ ಹಿಡಿದು ತುಳುಕೂಟದ ವರೆಗೆ ಈ ಪಟ್ಟಿಯಲ್ಲಿ ಬಹುತ್ವದ ಭಾರತವೇ ಕಾಣಸಿಗುತ್ತದೆ. ಇವರಾರೂ ಈ 59 ಮಂದಿಯಲ್ಲಿ ಧರ್ಮವನ್ನು ಹುಡುಕಿಲ್ಲ. ತಂತಮ್ಮ ಧರ್ಮದವರನ್ನು ಪ್ರತ್ಯೇಕಿಸಿ ಅವರ ಸಂಕಷ್ಟಗಳಿಗೆ ಮಾತ್ರ ಮಿಡಿಯುವ ಸಣ್ಣ ಮನಸ್ಸನ್ನೂ ತೋರಿಲ್ಲ. ನೆರವಾಗಲು ಧಾವಿಸಿ ಬಂದ ಎಲ್ಲರಿಗೂ ಈ 59 ಮಂದಿ ಮನುಷ್ಯರಾಗಿ ಕಂಡಿರುವರೇ ಹೊರತು ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬಿತ್ಯಾದಿಯಾಗಿ ಅಲ್ಲ. ಅಂದಹಾಗೆ, ವಂಚಕರು ಹೇಗೆ ಧರ್ಮಾತೀತರೋ ವಂಚನೆಗೊಳಗಾದವರಿಗೆ ಮಿಡಿಯುವ ಮನಸುಗಳೂ ಧರ್ಮಾತೀತವೇ. ಒಳ್ಳೆಯ ಮನಸ್ಸು ಅನ್ನುವುದು ನಿರ್ದಿಷ್ಟ ಧರ್ಮೀಯರಲ್ಲಿ ಮಾತ್ರ ಇರುವ ಒಂದಲ್ಲ. ಅದು ಧರ್ಮಾತೀತ. ಹಿಂದೂ-ಮುಸ್ಲಿಮ್-ಕ್ರೈಸ್ತ ಸಹಿತ ಎಲ್ಲ ಧರ್ಮದಲ್ಲೂ ಒಳ್ಳೆಯವರಿದ್ದಾರೆ. ಕೆಟ್ಟವರೂ ಇದ್ದಾರೆ. ಆಹಾರ, ಉಡುಪು, ಆಕಾರ, ಗಡ್ಡ, ನಾಮ, ಟೋಪಿ, ನಂಬಿಕೆ, ಆಚಾರ, ಸಂಸ್ಕೃತಿ, ಬಿಳಿ, ಹಸಿರು, ಕೇಸರಿ ಇತ್ಯಾದಿ ಇತ್ಯಾದಿ ವೈವಿಧ್ಯತೆಗಳು ಅವನ್ನು ನಿರ್ಧರಿಸುವುದಿಲ್ಲ. ಅಷ್ಟಕ್ಕೂ,
ಮಾಂಸಾಹಾರಿ ಕರುಣಾಮಯಿಯೂ ಆಗಬಲ್ಲ. ಕ್ರೂರನೂ ಆಗಬಲ್ಲ. ಸಸ್ಯಾಹಾರಿಗೂ ಇದು ಅನ್ವಯ. ಗಡ್ಡ ಬಿಡುವುದು, ನಾಮ ಹಾಕುವುದು, ಟೋಪಿ ಧರಿಸುವುದು, ಮಸೀದಿ-ಮಂದಿರಗಳಿಗೆ ಹೋಗುವುದು, ನಿರ್ದಿಷ್ಟ ಉಡುಪು ಧರಿಸುವುದು ಮುಂತಾದುವುಗಳೆಲ್ಲ ಧರ್ಮದ ಗುರುತುಗಳೇ ಹೊರತು ಒಳ್ಳೆಯವರು ಮತ್ತು ಕೆಟ್ಟವರು ಅನ್ನುವುದರ ಗುರುತುಗಳಲ್ಲ. ಕೆಟ್ಟತನಕ್ಕೆ ಸಾಮಾಜಿಕ, ಆರ್ಥಿಕ, ರಾಜಕೀಯ, ಕೌಟುಂಬಿಕ ಮತ್ತು ಪರಿಸರಾತ್ಮಕ ಕಾರಣಗಳಿವೆ. ಒಳ್ಳೆತನದಲ್ಲೂ ಒಂದಕ್ಕಿಂತ ಹೆಚ್ಚು ಕಾರಣಗಳು ಮಿಳಿತವಾಗಿವೆ. ನಾಲ್ಕನೆಯದಾಗಿ,
ಔದ್ಯೋಗಿಕ ಸಮಸ್ಯೆಗಳೂ ಹಿಂದೂ-ಮುಸ್ಲಿಮ್ ಸಹಿತ ಎಲ್ಲರ ಪಾಲಿಗೂ ಸಮಾನವಾಗಿವೆ. ಉದ್ಯೋಗ ಕ್ಷೇತ್ರದಲ್ಲಿ ಕಳೆದ 45 ವರ್ಷಗಳಲ್ಲೇ ಈ ದೇಶ ಇವತ್ತು ಭಾರೀ ವೈಫಲ್ಯವನ್ನು ಕಂಡಿದೆ ಎಂಬ ಸಂಗತಿಗೆ ಆತಂಕ ಪಡಬೇಕಾದುದು ಯಾವುದಾದರೂ ನಿರ್ದಿಷ್ಟ ಧರ್ಮದ ಅಥವಾ ರಾಜಕೀಯ ಪಕ್ಷದ ಜನರಲ್ಲ. ಅದು ಈ ದೇಶದ ಸಮಸ್ಯೆ ಮತ್ತು ಈ ಸಮಸ್ಯೆ ಧರ್ಮಾತೀತವಾಗಿ ಎಲ್ಲರನ್ನೂ ಕಾಡುವಂಥದ್ದು. ಉದ್ಯೋಗಕ್ಕಾಗಿ ಕುವೈತ್‍ಗೆ ತೆರಳಿದ 59 ಮಂದಿಯ ಹೆಸರುಗಳೇ ಇದನ್ನು ಸ್ಪಷ್ಟಪಡಿಸುತ್ತದೆ. ವಿಷಾದ ಏನೆಂದರೆ,
ಈ 59 ಮಂದಿಯ ಸಂಕಟವನ್ನು ವಿವರಿಸುವ ವೀಡಿಯೋ ತಿಂಗಳ ಹಿಂದೆ ವಾಟ್ಸಾಪ್-ಫೇಸ್‍ಬುಕ್‍ಗಳಲ್ಲಿ ವೈರಲ್ ಆಗುವ ಮೊದಲೂ ಮತ್ತು ಆ ಬಳಿಕವೂ ಅನೇಕಾರು ವೀಡಿಯೋಗಳು ವೈರಲ್ ಆಗಿವೆ. ಆದರೆ ಅವುಗಳಲ್ಲಿ ಹೆಚ್ಚಿನೆಲ್ಲ ವೀಡಿಯೋಗಳು ಥಳಿತಕ್ಕೆ ಮತ್ತು ಲೈಂಗಿಕ ಹಿಂಸೆಗೆ ಸಂಬಂಧಿಸಿದ್ದು. ಅದರಲ್ಲಿ ಇತ್ತೀಚಿನದ್ದು ತಬ್ರೇಝï ಅನ್ನುವ ಜಾರ್ಖಂಡಿನ ಯುವಕನಿಗೆ ಸಂಬಂಧಿಸಿದ್ದು. ಇಲ್ಲಿ ಥಳಿಸುವವರದ್ದು ಒಂದು ಧರ್ಮವಾದರೆ ಥಳಿತಕ್ಕೆ ಒಳಗಾಗುವವರದ್ದು ಇನ್ನೊಂದು ಧರ್ಮ. ಧರ್ಮ ಬೇರೆ ಅನ್ನುವುದರ ಹೊರತು ಈ ಥಳಿತಕ್ಕೆ ಮತ್ತು ಹಾಗೆ ಥಳಿಸಿ ಥಳಿಸಿ ಹತ್ಯೆಗೈಯುವುದಕ್ಕೆ ಬಲವಾದ ಇನ್ನಾವ ಕಾರಣಗಳೂ ಕಾಣಿಸುತ್ತಿಲ್ಲ. ಒಂದುವೇಳೆ,
ಕುವೈತ್‍ನಲ್ಲಿ ಸಿಲುಕಿಕೊಂಡ 59 ಮಂದಿಯ ನೋವನ್ನು ಅನುಭವಿಸಲು ವೇದವ್ಯಾಸ್ ಕಾಮತ್‍ರಿಗೂ ಅಹ್ಮದ್ ಬಾವಾರಿಗೂ ವಿಜಯ್ ಫೆರ್ನಾಂಡಿಸ್‍ರಿಗೂ ಮತ್ತು ಇಂಥ ಅನೇಕಾರು ಮಂದಿಗೂ ಸಾಧ್ಯವಾದಂತೆಯೇ ಥಳಿತಕ್ಕೊಳಗಾಗುವ ಮಂದಿಯ ನೋವನ್ನೂ ಹೀಗೆ ಧರ್ಮಾತೀತವಾಗಿ ಅನುಭವಿಸಲು ಈ ದೇಶದ ಎಲ್ಲರಿಗೂ ಸಾಧ್ಯವಾಗುತ್ತಿದ್ದರೆ ಹೇಗಿರುತ್ತಿತ್ತೋ? ಈ ಹಿನ್ನೆಲೆಯಲ್ಲಿ,
ಕುವೈತ್ ಯುವಕರ ವೀಡಿಯೋ ನಮ್ಮೊಳಗನ್ನು ತಟ್ಟಲಿ. ನಮ್ಮನ್ನು ವಿವೇಕವಂತರಾಗಿಸಲಿ.
No comments:
Post a Comment