ತ್ರಿವಳಿ ತಲಾಕ್ ಮಸೂದೆಯನ್ನು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿ ಸುಪ್ರೀಮ್ ಕೋರ್ಟು ಕೇಂದ್ರ ಸರಕಾರಕ್ಕೆ ನೋಟೀಸು ಜಾರಿಗೊಳಿಸಿದೆ. ನಿಜವಾಗಿ, ಇಂಥದ್ದೊಂದು ನೋಟೀಸು ಅಚ್ಚರಿಯದ್ದೇನೂ ಅಲ್ಲ. ಮುಸ್ಲಿಮರ ಕುರಿತಂತೆ ಬಿಜೆಪಿಗಿರುವ ನಕಾರಾತ್ಮಕ ಧೋರಣೆಯನ್ನು ಈ ತ್ರಿವಳಿ ಮಸೂದೆ ಪ್ರತಿಬಿಂಬಿಸುತ್ತದೆ ಅನ್ನುವ ಆಕ್ಷೇಪ ಈ ಹಿಂದೆಯೇ ವ್ಯಕ್ತವಾಗಿತ್ತು. ಮಸೂದೆಯು ಮುಸ್ಲಿಮ್ ಮಹಿಳೆಯರ ಸಬಲೀಕರಣಕ್ಕಿಂತ ಅವರನ್ನು ಅತಂತ್ರ ಮತ್ತು ಪರತಂತ್ರಗೊಳಿಸುವ ಉದ್ದೇಶವನ್ನಷ್ಟೇ ಹೊಂದಿದಂತಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಇದೀಗ ಜಮೀಯತೆ ಉಲಮಾಯೆ ಹಿಂದ್ ಮತ್ತು ಸಮಸ್ತ ಕೇರಳ ಜಮೀಯತುಲ್ ಉಲಮಾ ಮತ್ತಿತರರು ಸಲ್ಲಿಸಿರುವ ಆಕ್ಷೇಪಾರ್ಹ ಅರ್ಜಿಗೆ ಸ್ಪಂದಿಸಿ ಸುಪ್ರೀಮ್ ಕೋರ್ಟು ಕೇಂದ್ರಕ್ಕೆ ಕಳುಹಿಸಿರುವ ನೋಟೀಸು- ತ್ರಿವಳಿ ತಲಾಕ್ ಮಸೂದೆಯ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಅಷ್ಟಕ್ಕೂ,
ಗಲಭೆ, ಅಪಹರಣ, ನಿರ್ಲಕ್ಷ್ಯದಿಂದಾದ ಸಾವು, ದ್ವಿಪತ್ನಿತ್ವ-ಪತಿತ್ವ, ಲಂಚ, ಆಹಾರದಲ್ಲಿ ಕಲಬೆರಕೆ ಇತ್ಯಾದಿ ಇತ್ಯಾದಿಗಳಿಗೆ ವಿಧಿಸುವ ಶಿಕ್ಷೆಗಿಂತಲೂ ಹೆಚ್ಚಿನ ಶಿಕ್ಷೆಯನ್ನು ತ್ರಿವಳಿ ತಲಾಕ್ ಹೇಳಿದವರಿಗೆ ನೀಡಲು ಕೇಂದ್ರ ಸರಕಾರ ಮುಂದಾಗಿರುವುದು ಏನನ್ನು ಸೂಚಿಸುತ್ತದೆ? ತ್ರಿವಳಿ ತಲಾಕ್ ಹೇಳಿದವರನ್ನು ಮೂರು ವರ್ಷಗಳ ಕಾಲ ಜೈಲಿಗೆ ಕಳುಹಿಸುವುದರಿಂದ ತಲಾಕ್‍ಗೊಳಗಾದ ಪತ್ನಿಗೆ ಸಿಗುವ ಲಾಭ ಏನು? ಈತ ಜೈಲಲ್ಲಿರುವ ಸಮಯದಲ್ಲಿ ಆಕೆಯ ಕೌಟುಂಬಿಕ ಸ್ಥಿತಿಗತಿಯೇನು? ಆಕೆಯ ಮತ್ತು ಮಕ್ಕಳ ಜೀವನೋಪಾಯಕ್ಕೆ ಬೇಕಾದುದನ್ನು ಜೈಲಲ್ಲಿರುವ ಆತ ಒದಗಿಸಲು ಸಾಧ್ಯವೇ? ಆತ ಜೈಲಿನಿಂದ ಮರಳಿ ಬಂದ ಬಳಿಕ ಆಕೆ ಪತ್ನಿಯಾಗಿಯೇ ಉಳಿಯುತ್ತಾಳೆಯೇ? ಈ ಮಸೂದೆಯಂತೆ ಆತ 3 ವರ್ಷ ಜೈಲಲ್ಲಿದ್ದು ಮರಳಿ ಊರಿಗೆ ಬಂದಾಗ ನಡೆಯಬಹುದಾದ ಬೆಳವಣಿಗೆಗಳೇನು? ಆತ ಆಕೆಯನ್ನು ಸ್ವೀಕರಿಸದೇ ಇದ್ದರೆ ಅದು ತಂದೊಡ್ಡುವ ಬಿಕ್ಕಟ್ಟುಗಳೇನು ಎಂಬೆಲ್ಲ ಪ್ರಶ್ನೆಗಳಿಗೆ ಈ ಮಸೂದೆ ಯಾವ ಉತ್ತರವನ್ನೂ ನೀಡುತ್ತಿಲ್ಲ. ತ್ರಿವಳಿ ತಲಾಕ್ ಹೇಳಿದವರನ್ನು ಜೈಲಿಗಟ್ಟುವ ಉದ್ದೇಶವನ್ನಷ್ಟೇ ಹೊಂದಿರುವ ಮತ್ತು ಆನಂತರದ ಬೆಳವಣಿಗೆಗಳಿಗೆ ಯಾವ ಪರಿಹಾರವನ್ನೂ ಹೇಳದ ಮಸೂದೆಯೊಂದು ಮಹಿಳಾ ಪರ ಎಂದು ಬಿಂಬಿಸಿಕೊಳ್ಳುವುದೇ ಅತ್ಯಂತ ಹಾಸ್ಯಾಸ್ಪದ. ತ್ರಿವಳಿ ತಲಾಕನ್ನು ರದ್ದುಗೊಳಿಸುವುದು ಮತ್ತು ಆ ಮೂಲಕ ಮಹಿಳೆಯರ ದಾಂಪತ್ಯ ಬದುಕಿಗೆ ಸುರಕ್ಷಿತತೆಯನ್ನು ಒದಗಿಸುವುದೇ ಕೇಂದ್ರ ಸರಕಾರದ ಉದ್ದೇಶವೆಂದಾದರೆ ಜೈಲು ಶಿಕ್ಷೆ ಅದಕ್ಕೆ ಪರಿಹಾರ ಅಲ್ಲ. ಅದು ಇಡೀ ಉದ್ದೇಶವನ್ನೇ ಹಾಳು ಮಾಡಿ ಬಿಡುತ್ತದೆ. ಅಂದಹಾಗೆ,
ತಲಾಕ್ ತಲಾಕ್ ತಲಾಕ್ ಎಂದು ಒಂದೇ ಉಸಿರಿಗೆ ಮೂರು ಬಾರಿ ಹೇಳುವ ವಿಚ್ಛೇದನ ಕ್ರಮವನ್ನು ಸುಪ್ರೀಮ್ ಕೋರ್ಟು ರದ್ದುಪಡಿಸಿದೆಯೇ (Null and Void) ಹೊರತು ಅದನ್ನು ಅಪರಾಧ ಎಂದು ಹೇಳಿಲ್ಲ. ತಲಾಕ್ ಎಂದು ಮೂರು ಬಾರಿ ಒಂದೇ ಉಸಿರಿಗೆ ಹೇಳುವುದರಿಂದ ವಿಚ್ಛೇದನ ಆಗುವುದಿಲ್ಲ ಎಂಬುದು ಸುಪ್ರೀಮ್ ಕೋರ್ಟ್‍ನ ನಿಲುವು. ಅದು ಅಪರಾಧ ಅಲ್ಲ. ಆ ದಂಪತಿಗಳು ಹಾಗೆ ತಲಾಕ್ ಹೇಳಿದ ಬಳಿಕವೂ ಪತಿ-ಪತ್ನಿಯಾಗಿಯೇ ಉಳಿಯುತ್ತಾರೆ ಅನ್ನುವ ಧ್ವನಿ ಆ ತೀರ್ಪಿನಲ್ಲಿದೆ. ಆದರೆ ಕೇಂದ್ರ ಸರಕಾರವು ಜಾರಿಗೆ ತಂದ ತಲಾಕ್ ಮಸೂದೆಯಲ್ಲಿ ತಲಾಕ್ ತಲಾಕ್ ತಲಾಕ್ ಎಂದು ಹೇಳುವುದನ್ನೇ ಅಪರಾಧಗೊಳಿಸಿದೆ. ಇದಕ್ಕೆ ಕಾರಣವೇನು? ಇದು ಸುಪ್ರೀಮ್ ಕೋರ್ಟ್‍ನ ಉದ್ದೇಶವಲ್ಲ ಅನ್ನುವುದು ಅದರ ತೀರ್ಪಿನಲ್ಲಿ ಉಲ್ಲೇಖಿಸಲಾಗಿರುವ Null and Void ಎಂಬ ಪದ ಪ್ರಯೋಗವೇ ಸ್ಪಷ್ಟಪಡಿಸುತ್ತಿರುವಾಗ ಕೇಂದ್ರ ಸರಕಾರ ಆ ತೀರ್ಪನ್ನೂ ಮೀರಿ ಕಾನೂನು ರಚಿಸಿರುವುದು ಯಾಕೆ? ನಡೆಯದೇ ಇರುವ ವಿಚ್ಛೇದನಕ್ಕೆ ಜೈಲುಶಿಕ್ಷೆಯ ಅಗತ್ಯವಾದರೂ ಏನು? ಅಲ್ಲದೇ, ಜೈಲುಶಿಕ್ಷೆ ನೀಡುವುದರಿಂದ ಆ ತಲಾಕನ್ನು ಸಿಂಧುಗೊಳಿಸಿದಂತೆ ಆಗುವುದಿಲ್ಲವೇ? ಇದೊಂದು ರೀತಿಯ ದ್ವಂದ್ವ. ಸ್ಪಷ್ಟತೆಯಿಲ್ಲದ ಮಸೂದೆ. ಹಾಗಂತ,
ತ್ರಿವಳಿ ತಲಾಕ್ ಸಮರ್ಥನೀಯ ಎಂದಲ್ಲ. ದಾಂಪತ್ಯ ಸಂಬಂಧವನ್ನು ಒಂದೇ ಉಸಿರಿನ ಹೇಳಿಕೆಯೊಂದು ಮುರಿದು ಬಿಡುವುದು ಸಾಮಾಜಿಕ ಸೌಖ್ಯವನ್ನು ಪ್ರತಿಬಿಂಬಿಸುವುದೂ ಇಲ್ಲ. ಹೆಣ್ಣು ಮತ್ತು ಗಂಡು ದಂಪತಿಗಳಾಗಿ ಮಾರ್ಪಡುವುದರ ಹಿಂದೆ ಉಭಯ ಕುಟುಂಬಗಳ ಶ್ರಮ ಇದೆ. ಸಮಾಲೋಚನೆಯಿದೆ. ಸಮಯದ ವ್ಯಯ ಇದೆ. ಸಂಪತ್ತಿನ ಖರ್ಚು ಇದೆ. ಇಷ್ಟುದ್ದದ ಪ್ರಕ್ರಿಯೆಗೆ ಕಾರಣ ಏನೆಂದರೆ, ಪತಿ-ಪತ್ನಿಯಾಗಲಿರುವ ಯುವಕ-ಯುವತಿಯ ದಾಂಪತ್ಯ ಬದುಕು ಸುಗಮವಾಗಿ ಸಾಗಬೇಕು ಎಂಬುದಾಗಿದೆ. ತ್ರಿವಳಿ ತಲಾಕ್ ಈ ಉದ್ದೇಶವನ್ನು ಪೂರ್ತಿಗೊಳಿಸುವುದಿಲ್ಲ. ಹೆಣ್ಣು ಮತ್ತು ಗಂಡು ರಾತೋರಾತ್ರಿ ತಮ್ಮನ್ನು ದಂಪತಿಗಳು ಎಂದು ದಿಢೀರ್ ಆಗಿ ಘೋಷಿಸುವುದನ್ನು ಸಮಾಜ ಹೇಗೆ ಸಹಜವಾಗಿ ಸ್ವೀಕರಿಸುವುದಿಲ್ಲವೋ ಹಾಗೆಯೇ ಈ ತ್ರಿವಳಿ ತಲಾಕ್ ಕೂಡ. ಇದು ಸಾಮಾಜಿಕ ಮೌಲ್ಯಕ್ಕೆ ವಿರುದ್ಧ. ಆ ಹೆಣ್ಣು ಮತ್ತು ಗಂಡನ್ನು ಪತಿ-ಪತ್ನಿಯಾಗಿಸುವುದಕ್ಕೆ ಯಾರೆಲ್ಲ ಶ್ರಮಿಸಿದ್ದಾರೋ, ಏನೆಲ್ಲ ಖರ್ಚು ಮಾಡಿದ್ದಾರೋ ಮತ್ತು ಎಷ್ಟು ಸಮಯವನ್ನು ವ್ಯಯಿಸಿದ್ದಾರೋ ಆ ಎಲ್ಲವನ್ನೂ ಈ ಬಗೆಯ ವಿಚ್ಛೇದನ ಅವಮಾನಿಸುತ್ತದೆ. ಹೆಣ್ಣು ಮತ್ತು ಗಂಡಿನ ನಡುವೆ ದಾಂಪತ್ಯ ಸಂಬಂಧವನ್ನು ಕುದುರಿಸುವುದಕ್ಕೆ ಹೇಗೆ ಕುಟುಂಬಿಕರ ನಡುವೆ ಸಮಾಲೋಚನೆ ನಡೆಸಲಾಗಿದೆಯೋ ಅದೇ ರೂಪದಲ್ಲಿ ವಿಚ್ಛೇದನಕ್ಕೂ ಎರಡು ಕುಟುಂಬಗಳ ನಡುವೆ ಸಮಾಲೋಚನೆ, ಅವಲೋಕನ, ಮಾತುಕತೆಗಳು ನಡೆಯಬೇಕು ಎಂಬುದು ಸಹಜವಾದ ಬೇಡಿಕೆ. ಇಸ್ಲಾಮ್ ಇದನ್ನೇ ಹೇಳುತ್ತದೆ. ತ್ರಿವಳಿ ತಲಾಕ್ ಈ ಪ್ರಕೃತಿ ಸಹಜ ಬೇಡಿಕೆಯನ್ನು ಪೂರೈಸುವುದಿಲ್ಲ. ಸುಪ್ರೀಮ್ ಕೋರ್ಟು ತ್ರಿವಳಿ ತಲಾಕನ್ನು ಅಮಾನ್ಯಗೊಳಿಸುವುದರ ಹಿಂದೆ ಈ ಉದ್ದೇಶವೂ ಇರಬಹುದು. ಆದರೆ, ಈ ತಲಾಕ್ ಕ್ರಮವನ್ನೇ ಅಪರಾಧಗೊಳಿಸಿ ಬಿಡುವುದೆಂದರೆ, ಪರೋಕ್ಷವಾಗಿ ಆ ತಲಾಕ್ ಕ್ರಮವನ್ನೇ ಸಿಂಧುಗೊಳಿಸಿದಂತೆ. ಇದು ತಲಾಕ್‍ಗೊಳಗಾದ ಮಹಿಳೆಯರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಬಹುದೇ ಹೊರತು ಆಕೆಯನ್ನು ಸಬಲಗೊಳಿಸಲಾರದು. ಅದಕ್ಕಿಂತ ತ್ರಿವಳಿ ತಲಾಕ್ ಪ್ರಕರಣಗಳನ್ನು ಇತ್ಯರ್ಥಪಡಿಸುವುದಕ್ಕೆ ಸರಕಾರ ಮುಸ್ಲಿಮ್ ಸಮುದಾಯದ ಒಳಗಡೆಯೇ ಸೂಕ್ತ ಏರ್ಪಾಡುಗಳನ್ನು ಮಾಡಬಹುದಿತ್ತು. ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಮತ್ತು ಇನ್ನಿತರ ಪ್ರಮುಖ ಮುಸ್ಲಿಮ್ ಸಂಘಟನೆಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು, ತ್ರಿವಳಿ ತಲಾಕ್ ಇತ್ಯರ್ಥ ಮಂಡಳಿಗಳನ್ನು ರೂಪಿಸುವುದಕ್ಕೆ ಅವುಗಳಿಗೆ ಹೊಣೆಗಾರಿಕೆಯನ್ನು ವಹಿಸಿಕೊಟ್ಟು, ಅದಕ್ಕೆ ಕಾನೂನು ಮಾನ್ಯತೆಯೂ ಸೇರಿದಂತೆ ವಿವಿಧ ಅಗತ್ಯಗಳ ಬಗ್ಗೆ ಪರಾಮರ್ಶೆ ನಡೆಸಬಹುದಿತ್ತು. ತ್ರಿವಳಿ ತಲಾಕನ್ನು ಅಸಿಂಧು ಎಂದು ಮಾನ್ಯ ಮಾಡುವುದರ ಜೊತೆಜೊತೆಗೇ ಆ ತಲಾಕನ್ನು ಸಿಂಧುಗೊಳಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ಮತ್ತು ಆ ದಂಪತಿಗಳು ವಿಚ್ಛೇದಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಇತ್ಯರ್ಥ ಮಂಡಳಿಗೆ ವಹಿಸಿಕೊಡಬಹುದಿತ್ತು. ತ್ರಿವಳಿ ತಲಾಕ್‍ನ ಬಗ್ಗೆ ಮುಸ್ಲಿಮ್ ಸಮುದಾಯದಲ್ಲಿ ಜಾಗೃತಿ ಮೂಡಿಸುವುದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬಹುದಿತ್ತು. ಬಹುಮುಖ್ಯವಾಗಿ ಮುಸ್ಲಿಮ್ ಸಂಘಟನೆಗಳು ಈ ಬಗ್ಗೆ ರಾಷ್ಟ್ರವ್ಯಾಪಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೆ ಒತ್ತಡ ಹೇರುವುದು ಮತ್ತು ಅದಕ್ಕೆ ಪೂರಕವಾಗಿ ಧನಸಹಾಯ ಮಾಡುವುದಕ್ಕೆ ಕ್ರಮ ಕೈಗೊಳ್ಳಬಹುದಿತ್ತು. ಮಸೀದಿಗಳನ್ನು ಇದಕ್ಕಾಗಿ ಬಳಸಿಕೊಳ್ಳುವಂತೆ ಒತ್ತಾಯಪಡಿಸಬಹುದಿತ್ತು. ಮುಸ್ಲಿಮ್ ಸಮುದಾಯದೊಳಗೆ ಪ್ರಾದೇಶಿಕವಾಗಿ ಪ್ರಭಾವಿಯಾಗಿರುವ ಅಸಂಖ್ಯ ಸಂಘ-ಸಂಸ್ಥೆಗಳಿವೆ. ಅವುಗಳನ್ನೆಲ್ಲ ಈ ಕಾಯಕದಲ್ಲಿ ಬಳಸಿಕೊಂಡು ತ್ರಿವಳಿ ತಲಾಕ್ ವಿರೋಧಿ ಅಭಿಯಾನ ಮತ್ತು ಜನಜಾಗೃತಿ ಸಭೆಗಳನ್ನು ನಡೆಸಬಹುದಿತ್ತು. ಪ್ರಜೆಗಳ ಕ್ಷೇಮವೇ ಸರಕಾರದ ಅಂತಿಮ ಉದ್ದೇಶವೆಂದಾದರೆ ಇವೆಲ್ಲ ಅಸಾಧ್ಯವಲ್ಲ. ಅಂದಹಾಗೆ,
ಒಂದು ತಪ್ಪಾದ ಕ್ರಮವನ್ನು ಅದಕ್ಕಿಂತಲೂ ದೊಡ್ಡ ತಪ್ಪಿನ ಮೂಲಕ ಎದುರಿಸುವುದು ಕ್ರೌರ್ಯವೇ ಹೊರತು ಮಾನವೀಯವಲ್ಲ. ತ್ರಿವಳಿ ತಲಾಕನ್ನು ಸುಪ್ರೀಮ್ ಕೋರ್ಟು ಅಪರಾಧವೆನ್ನದೇ ಅಮಾನ್ಯಗೊಳಿಸಿರುವುದನ್ನು ಈ ಹಿನ್ನೆಲೆಯಲ್ಲಿಯೇ ನಾವು ನೋಡಬೇಕು ಮತ್ತು ಅವಲೋಕಿಸಬೇಕು. ಅದು ತಪ್ಪಾದ ಆಚರಣೆಯನ್ನು ಸರಿಪಡಿಸುವ ಉದ್ದೇಶವನ್ನು ಹೊಂದಿದ್ದರೆ ಕೇಂದ್ರದ ತಲಾಕ್ ಮಸೂದೆಯು ಅದನ್ನು ಮತ್ತಷ್ಟು ಬಿಗಡಾಯಿಸುವ ಉದ್ದೇಶವನ್ನಷ್ಟೇ ಹೊಂದಿದಂತಿದೆ. ಈ ಮಸೂದೆಯು ತ್ರಿವಳಿ ತಲಾಕ್‍ಗೆ ಪರಿಹಾರ ಅಲ್ಲ, ಮಸೂದೆಯೇ ಒಂದು ಸಮಸ್ಯೆ.
No comments:
Post a Comment