ಉಗ್ರರೆಂಬ ಹಣೆಪಟ್ಟಿ ಹಚ್ಚಿಕೊಂಡು 598 ದಿನಗಳ ಕಾಲ ಜೈಲಲ್ಲಿದ್ದ 11 ಮಂದಿ ಮುಸ್ಲಿಮರು ಕಳೆದವಾರ ಬಿಡುಗಡೆಗೊಂಡಿದ್ದಾರೆ. ಉತ್ತರ ಪ್ರದೇಶದ ಭಯೋತ್ಪಾದನಾ ವಿರೋಧಿ ದಳವು (ATS) ಸೆ. 26, 2022ರಂದು ಇವರನ್ನು ಬಂಧಿಸಿತ್ತು. ಅಲ್‌ಕಾಯ್ದಾ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆಂದು ಎಟಿಎಸ್ ಆರೋಪಿಸಿತ್ತಲ್ಲದೇ, ಇವರಿಂದ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಪುಸ್ತಿಕೆಗಳನ್ನು ವಶಪಡಿಸಿಕೊಂಡಿತ್ತು. ಆದರೆ, ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠವು ಇವರಿಗೆ ಜಾಮೀನು ಮಂಜೂರು ಮಾಡಿದೆಯಲ್ಲದೇ, ಇವರ ಮೇಲಿನ ಆರೋಪಕ್ಕೆ ಪೂರಕ ಸಾಕ್ಷ್ಯಾಧಾರ ಗಳನ್ನು ಸಲ್ಲಿಸಲು ಎಟಿಎಸ್ ವಿಫಲವಾಗಿದೆ ಎಂದು ಹೇಳಿದೆ. ಹಾಗಂತ, ಇದು ಒಂಟಿ ಪ್ರಕರಣ ಅಲ್ಲ.
ದೆಹಲಿ ಕೇಂದ್ರಿತ ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (CSDS) ಅಧೀನದ ಲೋಕನೀತಿ ಸಂಸ್ಥೆಯು 2018ರಲ್ಲಿ ಬಿಡುಗಡೆಗೊಳಿಸಿದ ವರದಿಯು ಭಯೋತ್ಪಾದನೆಯ ಹೆಸರಲ್ಲಿ ಮುಸ್ಲಿಮ್ ಸಮುದಾಯವನ್ನು ಬೇಟೆಯಾಡುತ್ತಿರುವ ಆಘಾತಕಾರಿ ಸಂಗತಿಯನ್ನು ವಿವರಿಸಿತ್ತು. ತಮ್ಮನ್ನು ಭಯೋತ್ಪಾದನೆಯ ಸುಳ್ಳು ಕೇಸಿನಲ್ಲಿ ಬಂಧಿಸಬಹುದು ಎಂದು 47% ಭಾರತೀಯ ಮುಸ್ಲಿಮರು ಭಯಪಡುತ್ತಾರೆ ಎಂದು ಆ ವರದಿಯಲ್ಲಿ ಹೇಳಲಾಗಿತ್ತು. 2006ರಿಂದ 2008ರ ನಡುವೆ ನಡೆದ ಸಮ್‌ಜೋತಾ ಎಕ್ಸ್ಪ್ರೆಸ್ ಸ್ಫೋಟ, ಅಜ್ಮೀರ್ ಶರೀಫ್ ಸ್ಫೋಟ, ಮಾಲೆಗಾಂವ್ ಮಸೀದಿ ಸ್ಫೋಟ, ಹೈದರಾಬಾದ್ ಮಕ್ಕಾ ಮಸೀದಿ ಸ್ಫೋಟ ಇತ್ಯಾದಿಗಳು ದೇಶವನ್ನು ನಡುಗಿಸಿದ್ದಷ್ಟೇ ಅಲ್ಲ, ಮುಸ್ಲಿಮ್ ಸಮುದಾಯದಲ್ಲೂ ಭೀತಿಯನ್ನು ಹುಟ್ಟು ಹಾಕಿತ್ತು. ಸ್ಫೋಟಗಳು ನಡೆದ ಬೆನ್ನಿಗೇ ಮುಸ್ಲಿಮ್ ಯುವಕರನ್ನು ಬಂಧಿಸುವುದು ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಬಂಧ ಕಲ್ಪಿಸುವುದು ಮಾಮೂಲಾಯಿತು. ಮಕ್ಕಾ ಮಸೀದಿ ಸ್ಫೋಟದ ಬೆನ್ನಿಗೇ ಸುಮಾರು 200ರಷ್ಟು ಮಂದಿಯನ್ನು ವಶಕ್ಕೆ ಪಡೆಯಲಾಯಿತು. ಇದರಲ್ಲಿ ಹೆಚ್ಚಿನವರೂ ಮುಸ್ಲಿಮರು. ಸುಮಾರು 61 ಮುಸ್ಲಿಮ್ ಯುವಕರು ತೀವ್ರ ದೌರ್ಜನ್ಯಕ್ಕೆ ಒಳಗಾದರು. ಜೈಲು ಪಾಲಾದರು. ಭಯೋತ್ಪಾದಕರೆಂಬ ಹಣೆಪಟ್ಟಿಯನ್ನು ಹಚ್ಚಿಕೊಂಡರು. ತಾವು ನಮಾಝï ಮಾಡುವ ಮಸೀದಿಗೇ ಬಾಂಬಿಟ್ಟವರು ಎಂಬ ಅತಿಕ್ರೂರ ಆರೋಪವನ್ನು ಹೊತ್ತುಕೊಂಡರು. ಮಾಧ್ಯಮಗಳು ಅತಿರಂಜಿತ ಕತೆಗಳನ್ನು ಕಟ್ಟಿದುವು. ಕೊನೆಗೆ 2012ರಲ್ಲಿ ಆಂಧ್ರಪ್ರದೇಶ ಸರಕಾರವೇ ಇವರನ್ನು ನಿರಪರಾಧಿಗಳು ಎಂದಿತು. ಬಂಧನಕ್ಕೀಡಾಗಿ ಕಸ್ಟಡಿಯಲ್ಲಿ ಅತೀ ಹೀನ ದೌರ್ಜನ್ಯಕ್ಕೆ ತುತ್ತಾದ 15 ಮಂದಿ ಮುಸ್ಲಿಮ್ ಯುವಕರಿಗೆ ತಲಾ 3 ಲಕ್ಷ ರೂಪಾಯಿಯನ್ನು ಪರಿಹಾರವಾಗಿ ನೀಡಿತು. ಹಾಗೆಯೇ, ಇತರ 46 ಮಂದಿ ಯುವಕರಿಗೆ ತಲಾ 20 ಸಾವಿರ ರೂಪಾಯಿಯನ್ನು ನೀಡಿ ಪಾಪಮುಕ್ತವಾಯಿತು. ಮಾಲೆಗಾಂವ್ ಮಸೀದಿ ಸ್ಫೋಟದ ನೆಪದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು 8 ಮಂದಿ ಮುಸ್ಲಿಮರನ್ನು 2006ರಲ್ಲಿ ಅಧಿಕೃತವಾಗಿ ಬಂಧಿಸಿತು. 5 ವರ್ಷಗಳನ್ನು ಜೈಲಲ್ಲಿ ಕಳೆದ ಬಳಿಕ 2011ರಲ್ಲಿ ಇವರೆಲ್ಲ ಜಾಮೀನಿನ ಮೂಲಕ ಹೊರಬಂದರು. 2013ರಲ್ಲಿ ಇವರ ವಿರುದ್ಧ ಚಾರ್ಜ್ ಶೀಟನ್ನು ಸಲ್ಲಿಸಲಾಯಿತು. ಆದರೆ 2016ರಲ್ಲಿ ಇವರನ್ನೆಲ್ಲ ಮೊಕಾ ನ್ಯಾಯಾಲಯ ಆರೋಪದಿಂದ ಮುಕ್ತಗೊಳಿಸಿತು. ಇದಕ್ಕಿಂತಲೂ ಮೊದಲು 2001ರಲ್ಲಿ ಇವೆಲ್ಲಕ್ಕಿಂತಲೂ ಆಘಾತಕಾರಿಯಾದ ಬಂಧನ ನಡೆಯಿತು.
ಅಮೇರಿಕದ ಅವಳಿ ಗೋಪುರ ಉರುಳಿದ ತಿಂಗಳ ಬಳಿಕ ಗುಜರಾತ್‌ನ ಸೂರತ್‌ನಲ್ಲಿ ‘ಆಲ್ ಇಂಡಿಯಾ ಮೈನಾರಿಟಿ ಎಜುಕೇಶನ್ ಬೋರ್ಡ್’ ಮೂರು ದಿನಗಳ ಶೈಕ್ಷಣಿಕ ಸೆಮಿನಾರನ್ನು ಆಯೋಜಿಸಿತ್ತು. ದೇಶದ ವಿವಿಧೆಡೆಗಳಿಂದ ತಜ್ಞರು, ಆ್ಯಕ್ಟಿವಿಸ್ಟ್ ಗಳು, ಸಮುದಾಯ ನಾಯಕರು ಸೇರಿದಂತೆ ಸುಮಾರು 400 ಮಂದಿ ಇದರಲ್ಲಿ ಭಾಗವಹಿಸಿದ್ದರು. ಇವರಲ್ಲಿ ರಾಜಸ್ತಾನದ ನಾರಾಯಣ ವ್ಯಾಸ್ ಯುನಿವರ್ಸಿಟಿಯ ಸಹಾಯಕ ಪ್ರೊಫೆಸರ್ ಮುಹಮ್ಮದ್ ಅಬ್ದುಲ್ ಹೈ, ಸೂರತ್ ಮುನ್ಸಿಪಲ್ ಕಾರ್ಪೊರೇಶನ್ನಿನಲ್ಲಿ ಆರೋಗ್ಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಆಸಿಫ್ ಇಕ್ಬಾಲ್ ಕೂಡ ಸೇರಿದ್ದರು. ಪೊಲೀಸರು ಇವರನ್ನೂ ಸೇರಿದಂತೆ 127 ಮಂದಿಯನ್ನು ಸಿಮಿ ಕಾರ್ಯಕರ್ತರೆಂದು ಹೇಳಿ ಬಂಧಿಸಿದರು. ಕೊಡಬಾರದ ಹಿಂಸೆಯನ್ನು ಕೊಟ್ಟರು. ವರ್ಷಗಳ ಕಾಲ ಜೈಲಲ್ಲಿಟ್ಟರು. ಇದಾಗಿ 19 ವರ್ಷಗಳ ನಂತರ 2018ರಲ್ಲಿ ಸೂರತ್ ನ್ಯಾಯಾಲಯ ಇವರನ್ನೆಲ್ಲ ಆರೋಪಮುಕ್ತಗೊಳಿಸಿತು. ಆದರೆ, ಜೈಲು ಪಾಲಾದ ಸಮಯದಲ್ಲಿ ಮತ್ತು ಜಾಮೀನು ಮೂಲಕ ಬಿಡುಗಡೆಗೊಂಡ ನಂತರದಲ್ಲಿ ಇವರೆಲ್ಲ ಅನುಭವಿಸಿದ ನರಕಯಾತನೆ ಅತ್ಯಂತ ಆಘಾತಕಾರಿ. ಮುಹಮ್ಮದ್ ಅಬ್ದುಲ್ ಹೈಯವರು ಜಾಮೀನಿನಿಂದ ಹೊರಬಂದ ಬಳಿಕ ನಾರಾಯಣ್‌ವ್ಯಾಸ್ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿ ಮುಂದುವರಿದರಾದರೂ ನಿಮಗೆ ಭಡ್ತಿ ಕೊಡುವುದಿಲ್ಲ ಎಂದು ಯುನಿವರ್ಸಿಟಿ ಹೇಳಿತು. ಹೀಗೆ ಯಾವ ಭಡ್ತಿಯೂ ಇಲ್ಲದೇ 2015ರಲ್ಲಿ ಅವರು ನಿವೃತ್ತರಾದರು. ಈ ನಡುವೆ ಜಾಮೀನಿನ ಮೇಲೆ ಹೊರಗಿದ್ದ ಸಮಯದುದ್ದಕ್ಕೂ ಅವರು ಅನುಭವಿಸಿದ ಎಡರು-ತೊಡರುಗಳು ಗುರುತರವಾದುದು. ಪ್ರತಿವಾರ ರಾಜಸ್ತಾನದ ಜೋಧ್‌ಪುರದಿಂದ 430 ಕಿ.ಮೀಟರ್ ದೂರದ ಸೂರತ್ ಪೊಲೀಸ್ ಠಾಣೆಗೆ ಬಂದು ಸಹಿ ಹಾಕಬೇಕಿತ್ತು. ತಿಂಗಳಲ್ಲಿ ಎರಡು ಬಾರಿ ಗುಜರಾತ್ ನಗರದ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಬೇಕಿತ್ತು. ಇಂಥ ಷರತ್ತು ಇವರೊಬ್ಬರಿಗಷ್ಟೇ ಅಲ್ಲ ಮತ್ತು 2018ರಲ್ಲಿ ಇವರೆಲ್ಲ ಆರೋಪಮುಕ್ತರಾಗುವವರೆಗೆ ಅನುಭವಿಸಿದ ಮಾನಸಿಕ ಮತ್ತು ಕೌಟುಂಬಿಕ ಸವಾಲುಗಳೂ ಅಷ್ಟಿಷ್ಟಲ್ಲ. ಹಾಗೆಯೇ, 2020 ಅಕ್ಟೋಬರ್‌ನಲ್ಲಿ ಬಂಧನಕ್ಕೀಡಾಗಿ ಸುಮಾರು ಎರಡೂವರೆ ವರ್ಷಗಳ ಕಾಲ ಜೈಲಲ್ಲಿದ್ದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಕತೆ ಬೇರೆಯಲ್ಲ.
ಹತ್ರಾಸ್ ಘಟನೆಯ ಬಗ್ಗೆ ವರದಿ ಮಾಡಲೆಂದು ಹೊರಟ ಸಿದ್ದೀಕ್ ಮತ್ತು ಇತರರನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿ ಯುಎಪಿಎ ಪ್ರಕರಣ ದಾಖಲಿಸಿದರು. 2022 ಸೆಪ್ಟೆಂಬರ್‌ನಲ್ಲಿ ಸುಪ್ರೀಮ್ ಕೋರ್ಟು ಸಿದ್ದೀಕ್ ಕಾಪ್ಪನ್‌ಗೆ ಜಾಮೀನು ನೀಡಿದರೂ ಬಿಡುಗಡೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ತಡೆಯಾಯಿತು. ಬಳಿಕ 2023 ಫೆಬ್ರವರಿಯಲ್ಲಿ ಜಾಮೀನು ಲಭ್ಯವಾಯಿತು. ಸತಾಯಿಸುವ ಉದ್ದೇಶದಿಂದಲೇ ಕಾಪ್ಪನ್ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂಬ ಅಭಿಪ್ರಾಯ ಅಂದೂ ಇಂದೂ ವ್ಯಾಪಕವಾಗಿಯೇ ಇದೆ. ಅಂದಹಾಗೆ,
ಸರಣಿ ಸ್ಫೋಟಗಳು, ಮುಸ್ಲಿಮ್ ಯುವಕರ ಸರಣಿ ಬಂಧನಗಳು ಹಾಗೂ ವರ್ಷಗಳ ಕಾಲ ಸತಾಯಿಸಿದ ಬಳಿಕ ಆಗುವ ಬಿಡುಗಡೆಗಳೆಲ್ಲ ಅನುಮಾನಗಳನ್ನಂತೂ ಹುಟ್ಟು ಹಾಕುತ್ತಿವೆ. ಮುಸ್ಲಿಮ್ ಸಮೂಹವನ್ನು ವ್ಯವಸ್ಥಿತವಾಗಿ ಗುರಿ ಮಾಡಲಾಗಿತ್ತೇ? ಮುಸ್ಲಿಮರೆಂದರೆ ಭಯೋತ್ಪಾದಕರು, ದೇಶ ದ್ರೋಹಿಗಳು, ರಕ್ತಪಿಪಾಸುಗಳು ಎಂಬ ಭಾವ ಮೂಡುವಂತೆ ಮಾಡುವ ಉದ್ದೇಶವನ್ನು ಹೊಂದಲಾಗಿತ್ತೇ? ಮುಸ್ಲಿಮರನ್ನು ಪಾಕಿಸ್ತಾನಿ ಹಿತೈಷಿಗಳಂತೆ ಬಿಂಬಿಸುವ ಪ್ರಯತ್ನಗಳು ನಡೆದಿದ್ದುವೇ? ಇಂಥ ಸಂಚಿನ ಅಗತ್ಯ ಯಾರಿಗಿತ್ತು, ಯಾಕಿತ್ತು? ಈ ದೇಶದಲ್ಲಿ ಬಾಂಬ್ ಸ್ಫೋಟ ಮತ್ತು ಜೀವಹಾನಿ ಆಗಿದ್ದಂತೂ ನಿಜ. ಅದನ್ನು ನಡೆಸಿರುವುದು ಯಾರೇ ಆಗಿದ್ದರೂ ಅವರು ಮಾನವ ದ್ರೋಹಿಗಳು, ದೇಶದ್ರೋಹಿಗಳು, ಧರ್ಮದ್ರೋಹಿಗಳು ಮತ್ತು ಈ ಜಗತ್ತಿನಲ್ಲಿ ಜೀವಿಸಿರಲು ಯಾವ ಕಾರಣಕ್ಕೂ ಅರ್ಹರಲ್ಲದವರು. ಈ ನಿಲುವಿನಲ್ಲಿ ಯಾವ ರಾಜಿಯೂ ಇಲ್ಲ. ಆದರೆ, ಬಾಂಬ್ ಸ್ಫೋಟಗೊಳ್ಳುವುದು ಮತ್ತು ಮುಸ್ಲಿಮ್ ಯುವಕರನ್ನು ಬಂಧಿಸುವುದು ಎಂಬುದರ ಹಿಂದೆ ಅಸಹಜವಾದುದು ಇತ್ತೇ? ಸಂಚುಗಳಿದ್ದುವೇ? ಮಾಲೆಗಾಂವ್ ಮತ್ತು ಮಕ್ಕಾ ಮಸೀದಿ ಸ್ಫೋಟದ ಆರೋಪದಿಂದ ಬಂಧಿತ ಮುಸ್ಲಿಮ್ ಯುವಕರು ಬಿಡುಗಡೆಯಾದರಲ್ಲ, ಹಾಗಿದ್ದರೆ ನಿಜವಾದ ಅಪರಾಧಿಗಳು ಯಾರು? ಅವರ ಉದ್ದೇಶ ಏನು? ಬಾಂಬ್ ಸ್ಫೋಟಗೊಂಡ ತಕ್ಷಣ ಪೊಲೀಸರು ಮುಸ್ಲಿಮ್ ಯುವಕರನ್ನೇ ಬಂಧಿಸಲು ಕಾರಣವೇನು? ಅನುಮಾನವೇ ಅಥವಾ ದುರುದ್ದೇಶವೇ? ಅಂದಹಾಗೆ,
ಮುಸ್ಲಿಮರೆಲ್ಲ ನೂರು ಶೇಕಡಾ ಪ್ರಾಮಾಣಿಕರು ಎಂದಲ್ಲ. ಅಪರಾಧ ಪ್ರವೃತ್ತಿ ಎಲ್ಲ ಸಮುದಾಯಗಳಂತೆ ಮುಸ್ಲಿಮ್ ಸಮುದಾಯದಲ್ಲೂ ಇದೆ. ಆದರೆ ಭಯೋತ್ಪಾದನೆಯ ಹೆಸರಲ್ಲಿ ಈವರೆಗೆ ಆಗಿರುವ ಬಂಧನಗಳು, ವೈಭವೀಕೃತ ಮಾಧ್ಯಮ ವರದಿಗಳು, ಟಿವಿ ತನಿಖಾ ವರದಿಗಳು ಮತ್ತು ಇನ್ನಿತರ ಬೆಳವಣಿಗಳೆಲ್ಲ ಒಂದು ಸಮುದಾಯವನ್ನು ಮಾತ್ರ ಗುರಿಯಾಗಿಸಿಕೊಂಡಿರುವುದು ಅನುಮಾನವನ್ನು ಹುಟ್ಟು ಹಾಕುತ್ತಿದೆ. ಬಂಧಿಸಿ ವರ್ಷಗಳ ಕಾಲ ಜೈಲಲ್ಲಿಡುವುದು ಮತ್ತು ಜಾಮೀನು ದೊರೆತು ವರ್ಷಗಳ ಬಳಿಕ ಆರೋಪಮುಕ್ತರಾಗುವುದು ಹಲವು ಪ್ರಶ್ನೆಗಳಿಗೂ ಕಾರಣವಾಗುತ್ತಿದೆ. ಬಂಧನಕ್ಕೀಡಾದವರು ಆರೋಪಮುಕ್ತರಾಗುವುದೆಂದರೆ, ಅಸಲಿಗೆ ಭಯೋತ್ಪಾದಕರು ಯಾರು ಎಂಬ ಪ್ರಶ್ನೆ ಮಹತ್ವವನ್ನು ಪಡೆಯುತ್ತದೆ. ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹನೆ ಇರಬೇಕೆಂಬುದರಲ್ಲಿ ಎರಡು ಮಾತಿಲ್ಲ. ಭಯೋತ್ಪಾದನೆ ಮಾನವ ವಿರೋಧಿ. ಅದರಾಚೆಗೆ, ಈ ಭಯೋತ್ಪಾದನೆಯ ಹೆಸರಲ್ಲಿ ಮುಸ್ಲಿಮ್ ಯುವಕರನ್ನು ಉದ್ದೇಶಪೂರ್ವಕ ಗುರಿ ಮಾಡಲಾಗಿದೆಯೇ ಎಂಬುದೂ ಮುಖ್ಯ. ಈ ಬಗ್ಗೆ ಪ್ರಾಮಾಣಿಕ ತನಿಖೆ ನಡೆಯಲಿ.