Monday, 6 October 2025

ಐ ಲವ್ ಮುಹಮ್ಮದ್‌ಗೆ ವಿರೋಧವೇಕೆ?




ಮುಸ್ಲಿಮ್ ಸಮುದಾಯವನ್ನು ಧಮನಿಸುವ ಪ್ರಕ್ರಿಯೆ ಎಷ್ಟು ಬಹಿರಂಗವಾಗಿ ಮತ್ತು ನಿರ್ಲಜ್ಜವಾಗಿ ನಡೆಯುತ್ತಿದೆ ಅನ್ನುವುದಕ್ಕೆ ಐ ಲವ್ ಮುಹಮ್ಮದ್ ವಿವಾದವೇ ಅತ್ಯುತ್ತಮ ಉದಾಹರಣೆ. ನಾನು ಮುಹಮ್ಮದ್‌ರನ್ನು ಪ್ರೀತಿಸುತ್ತೇನೆ ಎಂಬುದು ನಿಷೇಧಿತ ಪದ ಅಲ್ಲ. ಪ್ರಚೋದನಾತ್ಮಕ ಪದವೂ ಅಲ್ಲ. ಸಮುದಾಯಗಳ ನಡುವೆ ಘರ್ಷಣೆಗೆ ಪ್ರೇರಣೆ ನೀಡುವ ಪದವೂ ಅಲ್ಲ. ಪ್ರವಾದಿ ಮುಹಮ್ಮದ್(ಸ)ರ ಮೇಲೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸುವ ನಿರುಪದ್ರವಿ ಘೋಷಣೆ ಅದು. ಇಂಥ ಘೋಷಣೆಗಳು ಈ ದೇಶಕ್ಕೆ ಹೊಸತೂ ಅಲ್ಲ. ಇಲ್ಲಿ ಜೈ ಶ್ರೀರಾಮ್ ಎಂದು ಕೂಗಲಾಗುತ್ತದೆ. ಜೈ ಹನುಮಾನ್ ಎಂದೂ ಕೂಗಲಾಗುತ್ತದೆ. ಹರಹರ ಮಹಾದೇವ್ ಎಂಬ ಘೋಷಣೆಯನ್ನೂ ಮಾಡಲಾಗುತ್ತದೆ. ಐ ಲವ್ ಮೋದಿ, ಐ ಲವ್ ಯೋಗಿ ಎಂಬಿತ್ಯಾದಿ ಘೋಷಣೆಗಳೂ ಆಗಾಗ ಕೇಳಿ ಬರುತ್ತಿರುತ್ತವೆ. ಈ ಯಾವುದಕ್ಕೂ ಈ ದೇಶದಲ್ಲಿ ವಿರೋಧವೂ ವ್ಯಕ್ತವಾಗಿಲ್ಲ. ಹೀಗಿರುವಾಗ ಐ ಲವ್ ಮುಹಮ್ಮದ್ ಎಂಬ ಘೋಷಣೆಗೆ ಮತ್ತು ಬ್ಯಾನರ್‌ಗಳಿಗೆ ಯಾಕೆ ವಿರೋಧ ವ್ಯಕ್ತವಾಗುತ್ತಿದೆ? ಈ ಘೋಷಣೆಯಿಂದ ಯಾರಿಗೆ ತೊಂದರೆ ಇದೆ? ಯಾಕೆ ತೊಂದರೆಯಿದೆ?

ಮಿಲಾದುನ್ನಬಿ ಪ್ರಯುಕ್ತ ಸೆಪ್ಟೆಂಬರ್ 4ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಸ್ಥಳೀಯ ಮುಸ್ಲಿಮರು ಐ ಲವ್ ಮುಹಮ್ಮದ್ ಎಂಬ ಬ್ಯಾನರನ್ನು ತಾವು ಮೆರವಣಿಗೆಯಲ್ಲಿ ಸಾಗುವ ದಾರಿಯಲ್ಲಿ ತೂಗು ಹಾಕಿದರು. ಇದರ ವಿರುದ್ಧ ಸಂಘಪರಿವಾರ ಆಕ್ಷೇಪ ಎತ್ತಿತು. ಇದು ಹೊಸ ಪದ್ಧತಿ ಎಂಬುದೇ ಅವರ ತಕರಾರಿಗೆ ಕಾರಣವಾಗಿತ್ತು. ಅವರು ಆಕ್ಷೇಪಿಸಿದ್ದಷ್ಟೇ ಅಲ್ಲ, ಬ್ಯಾನರುಗಳನ್ನು ಕಿತ್ತು ಬಿಸಾಕಿದರು. ಪೊಲೀಸರು ಹೀಗೆ ಕಾನೂನುಬಾಹಿರವಾಗಿ ವರ್ತಿಸಿದವರ ಬದಲು ಬ್ಯಾನರು ತೂಗು ಹಾಕಿದ ಮುಸ್ಲಿಮರ ಮೇಲೆಯೇ ಪ್ರಕರಣ ದಾಖಲಿಸಿದರು. ಆ ಬಳಿಕ ಉತ್ತರ ಪ್ರದೇಶದ ಉನ್ನಾವೋದಲ್ಲೂ ಐ ಲವ್ ಮುಹಮ್ಮದ್ ಬ್ಯಾನರನ್ನು ಮುಸ್ಲಿಮರು ಪ್ರದರ್ಶಿಸಿದರು. ಪೊಲೀಸರು 5 ಮಂದಿಯನ್ನು ಬಂಧಿಸಿದರು. ಆ ಬಳಿಕ ಉತ್ತರ ಪ್ರದೇಶದ ಮಹಾರಾಜ್ ಗಂಜ್‌ನಲ್ಲಿ ಮುಸ್ಲಿಮರು ಮೆರವಣಿಗೆಯಲ್ಲಿ ಸಾಗಲು ಯತ್ನಿಸಿದಾಗ ಅದನ್ನು ಪೊಲೀಸರು ತಡೆದರು. ಬಳಿಕ ವಿಧಾನ ಭವನದ ಎದುರು ಮುಸ್ಲಿಮ್ ಮಹಿಳೆಯರು ಪ್ರತಿಭಟನೆ ನಡೆಸಿದರು. ಇದಾದ ಬಳಿಕ ಬರೇಲ್ವಿಯಲ್ಲಿ ಪ್ರತಿಭಟನೆ ನಡೆಸಲು ಸೇರಿದ್ದ ಮುಸ್ಲಿಮರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದರು. ಮೌಲಾನಾ ತೌಕೀರ್ ರಝಾ ಖಾನ್ ಸಹಿತ ಹಲವರನ್ನು ಬಂಧಿಸಿದರು. ಆ ಬಳಿಕ ಈ ಐ ಲವ್ ಮುಹಮ್ಮದ್ ಪ್ರತಿಭಟನೆಯು ಉತ್ತರಾಖಂಡ, ಗುಜರಾತ್, ತೆಲಂಗಾಣ, ಕರ್ನಾಟಕದ ದಾವಣಗೆರೆ ಸಹಿತ ವಿವಿಧ ಕಡೆಗಳಿಗೆ ಹರಡಿತು. ಈ ವರೆಗೆ ಪೊಲೀಸರು 40ಕ್ಕಿಂತಲೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. 1340ಕ್ಕಿಂತಲೂ ಅಧಿಕ ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ. 20ಕ್ಕಿಂತಲೂ ಅಧಿಕ ಎಫ್‌ಐಆರ್‌ಗಳು ದಾಖಲಾಗಿವೆ. ಇವುಗಳಲ್ಲಿ ಹೆಚ್ಚಿನವು ಉತ್ತರ ಪ್ರದೇಶವೊಂದರಲ್ಲೇ ನಡೆದಿವೆ. ನಿಜವಾಗಿ,

ಐ ಲವ್ ಮುಹಮ್ಮದ್ ಬ್ಯಾನರನ್ನು ಕಿತ್ತು ಹಾಕಿದವರ ಬದಲು ಮುಸ್ಲಿಮರ ವಿರುದ್ಧವೇ ಪ್ರಕರಣ ದಾಖಲಿಸುವ ಮೂಲಕ ಕಾನ್ಪುರದ ಪೊಲೀಸರು ತಪ್ಪು ಮಾಡಿದ್ದರು. ಅವರನ್ನು ಮೇಲಿನ ಅಧಿಕಾರಿಗಳು ತಿದ್ದಬೇಕಿತ್ತು. ಆದರೆ, ಮಾಡಿದ ತಪ್ಪನ್ನು ತಿದ್ದುವ ಬದಲು ಆ ತಪ್ಪನ್ನೇ ಸಮರ್ಥಿಸುವುದಕ್ಕಾಗಿ ಪೊಲೀಸರು ಇನ್ನಷ್ಟು ತಪ್ಪುಗಳನ್ನು ಎಸಗುತ್ತಾ ಹೋದರು. ಆ ಬಳಿಕ ಅದು ಪ್ರತಿಷ್ಠೆಯ ಸಂಗತಿಯಾಗಿ ಮಾರ್ಪಟ್ಟಿತು. ಇದನ್ನು ಬಿಟ್ಟರೆ, ಅದರಾಚೆಗೆ ಐ ಲವ್ ಮುಹಮ್ಮದ್ ಬ್ಯಾನರ್‌ಗೆ ವಿರೋಧವನ್ನು ವ್ಯಕ್ತಪಡಿಸುವುದಕ್ಕೆ ಬೇಕಾದ ಕಾರಣಗಳೇ ಕಾಣಿಸುತ್ತಿಲ್ಲ. ಹಾಗಂತ, ಸಂಘಪರಿವಾರದ ವಿರೋಧವನ್ನು ಗಂಭೀರವಾಗಿ ಪರಿಗಣಿಸಬೇಕಿರಲಿಲ್ಲ. ಮುಸ್ಲಿಮ್ ದ್ವೇಷವನ್ನೇ ಪೂರ್ಣಕಾಲಿಕ ಉದ್ಯೋಗವನ್ನಾಗಿ ಮಾಡಿಕೊಂಡಿರುವವರೇ ಅದರಲ್ಲಿz್ದÁರೆ. ಆದರೆ, ಪ್ರಭುತ್ವ ಹಾಗಲ್ಲವಲ್ಲ. ಅದು ವಿವೇಚನೆಯಿಂದ ವರ್ತಿಸಬೇಕಾಗುತ್ತದೆ. ಧಾರ್ಮಿಕ ತಾರತಮ್ಯದ ಹೊರಗೆ ನಿಂತು ಆಲೋಚಿಸಬೇಕಾಗುತ್ತದೆ. ಆದರೆ, ಪ್ರಭುತ್ವವೇ ಸಂಘಪರಿವಾರದ ವಕ್ತಾರನಂತೆ ವರ್ತಿಸತೊಡಗಿದರೆ ಅದನ್ನು ಏನೆಂದು ಕರೆಯಬೇಕು?

ಸಬ್‌ಕಾ ಸಾಥ್, ಸಬ್‌ಕಾ ವಿಶ್ವಾಸ್ ಎಂಬ ಘೋಷವಾಕ್ಯವನ್ನು ಬಹಿರಂಗದಲ್ಲಿ ಪ್ರದರ್ಶಿಸುತ್ತಾ ಆಂತರಿಕವಾಗಿ ಇದಕ್ಕೆ ವಿರುದ್ಧವಾಗಿ ಬಿಜೆಪಿ ನಡಕೊಳ್ಳುತ್ತಿರುವುದಕ್ಕೆ ಈ ಐ ಲವ್ ಮುಹಮ್ಮದ್ ಮತ್ತೊಂದು ಸಾಕ್ಷ್ಯವಾಗಿ ದೇಶದ ಮುಂದಿದೆ. ಕನಿಷ್ಠ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ತಿದ್ದುವ ಪ್ರಯತ್ನವನ್ನು ಬಿಜೆಪಿ ಹೈಕಮಾಂಡ್ ಈವರೆಗೂ ಮಾಡಿಲ್ಲ. ಅಲ್ಲದೇ, ಐ ಲವ್ ಮುಹಮ್ಮದ್ ಬ್ಯಾನರ್‌ನಿಂದ ದೇಶದ ಏಕತೆ, ಸಮಗ್ರತೆ ಮತ್ತು ಕೋಮು ಸೌಹಾರ್ದಕ್ಕೆ ಏನು ತೊಂದರೆ ಇದೆ ಎಂದೂ ಹೇಳುತ್ತಿಲ್ಲ. ಏನಿದರ ಅರ್ಥ? ಒಂದುಕಡೆ, ಕೇಂದ್ರದ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಸಚಿವನಿಲ್ಲ. ಬಿಜೆಪಿಯ ಹಲವು ನಾಯಕರು ಮುಸ್ಲಿಮ್ ವಿರೋಧಿ ಹೇಳಿಕೆಯನ್ನು ಬಹಿರಂಗವಾಗಿಯೇ ನೀಡುತ್ತಿದ್ದಾರೆ. ಇವನ್ನು ಸಮರ್ಥಿಸುವಂತೆ ಕೇಂದ್ರ ಸರಕಾರವೂ ನಡಕೊಳ್ಳುತ್ತಿದೆ. ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ ಇರುವ ಹಲವಾರು ಅಂಶಗಳು ಈ ಬಗ್ಗೆ ಸಮರ್ಥನೆಯನ್ನು ನೀಡುತ್ತಿದೆ. ಈ ಬಗ್ಗೆ ಮುಸ್ಲಿಮ್ ಸಮುದಾಯ ವಿವರವಾಗಿ ಕೇಂದ್ರ ಸರಕಾರಕ್ಕೆ ತಿಳಿಸಿದರೂ ಅದು ಕೇಳಿಸಿಕೊಂಡಿಲ್ಲ. ಬರೇ ಮುಸ್ಲಿಮ್ ದ್ವೇಷವನ್ನೇ ಆಡಳಿತ ನೀತಿಯಾಗಿಸಿರುವಂತೆ ವರ್ತಿಸುತ್ತಿದೆ. ಅಂದಹಾಗೆ,

ಅನ್ಯಾಯ ಹೆಚ್ಚು ಸಮಯ ಬಾಳಿಕೆ ಬರುವುದಿಲ್ಲ. ಅಸತ್ಯ ಹೆಚ್ಚು ಸಮಯ ಎಲ್ಲರನ್ನೂ ಮರುಳುಗೊಳಿಸಲು ಶಕ್ತವಾಗುವುದೂ ಇಲ್ಲ. ಅಂತಿಮ ಗೆಲುವು ನ್ಯಾಯದ್ದೇ  ಆಗಿರುತ್ತದೆ. ಸತ್ಯವೇ ಅಂತಿಮ ಜಯ ದಾಖಲಿಸುತ್ತದೆ. ಸತ್ಯವಂತರ ಪಾಲಿಗೆ ಎಂದೆಂದಿಗೂ ಆತ್ಮವಿಶ್ವಾಸವನ್ನು ತಂದುಕೊಡುವುದು ಈ ಭರವಸೆಯೇ ಆಗಿದೆ. ತಪ್ಪೇ ಮಾಡದವರನ್ನು ಅಪರಾಧಿಗಳಂತೆ ಬಿಂಬಿಸುವುದಕ್ಕೆ ಮತ್ತು ಒಂದು ಹಂತದವರೆಗೆ ದಂಡಿಸುವುದಕ್ಕೆ ಪ್ರಭುತ್ವಕ್ಕೆ ಸಾಧ್ಯವಿದೆ. ಮಾತ್ರವಲ್ಲ, ತನ್ನೆಲ್ಲಾ ಪ್ರಚಾರ ಮಾಧ್ಯಮವನ್ನು ಬಳಸಿ ಸತ್ಯವನ್ನೇ ಸುಳ್ಳು ಎಂದು ನಂಬಿಸಲೂ ಸಾಧ್ಯವಿದೆ. ಆದರೆ ಇಂಥವುಗಳ ಆಯುಷ್ಯ ದೀರ್ಘವಾಗಿರುವುದಿಲ್ಲ. ದಮನಿತರು ಸದಾಕಾಲ ದಮನಿತರೇ ಆಗಿರುವುದಿಲ್ಲ. ಅವರ ನೆರವಿಗೆ ಸತ್ಯ ಬಂದೇ ಬರುತ್ತದೆ ಮತ್ತು ಅಸತ್ಯವು ಬೆತ್ತಲಾಗಿ ತೆರೆಮರೆಗೆ ಸರಿದೇ ಸರಿಯುತ್ತದೆ. ಇಂಥ ಘಟನಾವಳಿಗಳಿಗೆ ಇತಿಹಾಸವು ಅದೆಷ್ಟೋ ಬಾರಿ ಸಾಕ್ಷ್ಯ ವಹಿಸಿದೆ. ಈ ಐತಿಹಾಸಿಕ ಸತ್ಯಕ್ಕೆ ಬೆನ್ನು ಹಾಕಿದವರೇ ಅನ್ಯಾಯದಲ್ಲಿ ನಿರತರಾಗಿz್ದÁರೆ. ಅಧಿಕಾರದ ಬಲದಲ್ಲಿ ನ್ಯಾಯವನ್ನೇ ಅನ್ಯಾಯವೆಂದು ಮುದ್ರೆಯೊತ್ತಿ ಪ್ರಚಾರ ಮಾಡುತ್ತಿದ್ದಾರೆ. ಪ್ರಶ್ನಿಸಿದವರನ್ನು ದಮನಿಸುತ್ತಿದ್ದಾರೆ. ನಿಜವಾಗಿ,

ಐ ಲವ್ ಮುಹಮ್ಮದ್ ಬ್ಯಾನರನ್ನು ಮತ್ತು ಘೋಷಣೆಯನ್ನು ಪ್ರಭುತ್ವ ಬೆಂಬಲಿಸಬೇಕಿತ್ತು. ಅದರಲ್ಲಿ ಆಕ್ಷೇಪ ವ್ಯಕ್ತಪಡಿಸುವಂಥದ್ದು ಏನೂ ಇರಲಿಲ್ಲ. ಅದು ಪ್ರವಾದಿ ಮುಹಮ್ಮದ್(ಸ)ರ ಮೇಲಿನ ಅದಮ್ಯ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಸನ್ನಿವೇಶವೇ ಹೊರತು ಬೇರೇನೂ ಅಲ್ಲ. ಪ್ರವಾದಿ ನುಡಿದಂತೆ ನಡೆಯುವುದರಿಂದ ಈ ದೇಶಕ್ಕೆ ಯಾವ ತೊಂದರೆಯೂ ಇಲ್ಲ. `ಘೋಷಣೆ ಮಾತ್ರ ಸಾಲದು, ಅದರಂತೆ ನಡೆಯಿರಿ' ಎಂದು ಹೇಳಿ ಹರಸಬೇಕಾದ ಮತ್ತು ಪೊಲೀಸ್ ರಕ್ಷಣೆ ನೀಡಿ ಬೆನ್ನಿಗೆ ನಿಲ್ಲಬೇಕಾದ ಪ್ರಭುತ್ವವೊಂದು ಹಾಗೆ ಮಾಡದೇ ಆ ವಿಚಾರವನ್ನೇ ದಮನಿಸುವುದೆಂದರೆ ಅದರಲ್ಲಿ ಧರ್ಮದ್ವೇಷವನ್ನಲ್ಲದೇ ಬೇರೇನನ್ನೂ ಕಾಣಲು ಸಾಧ್ಯವಿಲ್ಲ. ಪ್ರವಾದಿ ಮುಹಮ್ಮದ್(ಸ) ಅವರಿಗೆ ಈ ದೇಶದಲ್ಲಿ ಸುಮಾರು 20 ಕೋಟಿ ಅನುಯಾಯಿಗಳಿದ್ದಾರೆ. ಉತ್ತರ ಪ್ರದೇಶದಲ್ಲಿ ದೇಶದಲ್ಲೇ  ಪ್ರಸಿದ್ಧವಾದ ದಾರುಲ್ ಉಲೂಮ್ ದೇವ್‌ಬಂದ್ ಮತ್ತು ಬರೇಲ್ವಿಯಂಥ ಪ್ರಮುಖ ಧಾರ್ಮಿಕ ವಿದ್ಯಾಭ್ಯಾಸ ಕೇಂದ್ರಗಳಿವೆ. ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರೂ ಅಲ್ಲಿದ್ದಾರೆ. ಇವರೆಲ್ಲರ ವಿಶ್ವಾಸವನ್ನು ಪಡಕೊಳ್ಳುವ ಮತ್ತು ಒಳ್ಳೆಯ ಅಭಿಯಾನಕ್ಕಾಗಿ ಮುಸ್ಲಿಮರನ್ನು ಅಭಿನಂದಿಸುವ ಬದಲು ಅದನ್ನು ತಡೆಯುವುದಕ್ಕೆ ಪ್ರಭುತ್ವ ಹೊರಟಿರುವುದು ನಿಜಕ್ಕೂ ಆಘಾತಕಾರಿ. ಪ್ರವಾದಿಯ ಸ್ಮರಣೆಯಲ್ಲಿ ಸಾಗುವ ಮೆರವಣಿಗೆಯನ್ನು ಮತ್ತು ತೀರಾ ಸಹಜ ಘೋಷಣೆಯನ್ನು ಅಪಾಯಕಾರಿಯಂತೆ ಮತ್ತು ದೇಶದ್ರೋಹಿಯಂತೆ ನಡೆಸಿಕೊಂಡ ಉತ್ತರ ಪ್ರದೇಶದ ಸರಕರಾದ ನಿಲುವು ಖಂಡನಾರ್ಹ. ಧರ್ಮದ್ವೇಷದ ಈ ನಡೆಗೆ ಮೌನ ಬೆಂಬಲ ನೀಡುತ್ತಿರುವ ಕೇಂದ್ರ ಸರಕಾರದ ನಿಲುವೂ ಅಷ್ಟೇ ಪ್ರಶ್ನಾರ್ಹ.

Monday, 22 September 2025

ಜಾತಿ ಸಮೀಕ್ಷೆಗೆ ಮುಸ್ಲಿಮರು ಹೇಗೆ ಪ್ರತಿಕ್ರಿಯಿಸಬೇಕು?





ಜಾತಿಯೇ ಇಲ್ಲದ ಧರ್ಮದ ಅನುಯಾಯಿಗಳು ಜಾತಿಯಾಧಾರಿತವಾಗಿ ಗುರುತಿಸಿಕೊಂಡರೆ ಅದು ಧರ್ಮದ್ರೋಹ ಆಗದೇ? ಇಸ್ಲಾಮ್‌ನಲ್ಲಿ ಜಾತಿಯೇ ಇಲ್ಲ ಎಂದ ಮೇಲೆ ಉಪಜಾತಿ ಯಾವುದು? ಸರಕಾರ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಥವಾ ಜಾತಿ ಸಮೀಕ್ಷೆಗೆ ಮುಸ್ಲಿಮರು ಹೇಗೆ ಪ್ರತಿಕ್ರಿಯಿಸಬೇಕು? ನಿಮ್ಮ ಧರ್ಮ ಯಾವುದು, ಜಾತಿ ಯಾವುದು ಮತ್ತು ಉಪಜಾತಿ ಯಾವುದು ಎಂದು ಸಮೀಕ್ಷೆಯವರು ಮನೆಗೆ ಬಂದು ಪ್ರಶ್ನಿಸಿದರೆ, ಜಾತಿ ಎಂಬ ಕಾಲಂನಲ್ಲಿ ಮುಸ್ಲಿಮ್ ಎಂದು ಬರೆಯಬಹುದೇ? ಮುಸ್ಲಿಮ್ ಅನ್ನುವುದು ಜಾತಿ ಅಲ್ಲವಲ್ಲ. ಇಸ್ಲಾಮನ್ನು ಅನುಸರಿಸುವವ ಎಂಬ ಅರ್ಥದಲ್ಲಿರುವ ಮುಸ್ಲಿಮ್ ಅನ್ನು ಜಾತಿ ಎಂದು ಒಪ್ಪಿಕೊಂಡರೆ ಇಸ್ಲಾಮಿನ ‘ಜಾತಿರಹಿತ’ ಬೋಧನೆಗೆ ವಿರುದ್ಧವಾಗಿ ನಡಕೊಂಡಂತಲ್ಲವೇ? ಒಂದುವೇಳೆ, ಜಾತಿ ಎಂಬ ಕಾಲಂನಲ್ಲಿ ಮುಸ್ಲಿಮ್ ಎಂದು ಎಲ್ಲರೂ ತುಂಬಿಸಿದರೂ ಅದರ ನಂತರದ ಉಪಜಾತಿಗೆ ಏನುತ್ತರಿಸಬೇಕು? ಅದನ್ನು ಖಾಲಿ ಬಿಟ್ಟರೆ ಏನು? ತುಂಬಿಸುವುದರಿಂದ  ಪ್ರಯೋಜನವೇನು? ಉಪಜಾತಿ ಕಾಲಂನಲ್ಲಿ ನದಾಫ್, ಪಿಂಜಾರ, ಕಸಾಬ್, ಬ್ಯಾರಿ, ದಖ್ಖನಿ, ಬಾಗ್ಬಾನ್, ಅಟ್ಟಾರಿ, ಚಪ್ಪರ್‌ಬಂದರ್, ದರ್ಜಿ, ಧೋಬಿ, ಜೋಹಾರಿ, ಪಟ್ಟೆಗಾರ್, ಫೂಲ್‌ಮಾಲಿ, ರಂಗ್ರೆಜ್, ತೇಲಿ... ಇತ್ಯಾದಿ ಇತ್ಯಾದಿಯಾಗಿ ದಾಖಲಿಸುವುದರಿಂದ ಇಸ್ಲಾಮಿನ ಸಮಾನತೆ ಮತ್ತು ಜಾತಿರಹಿತ ಪರಿಕಲ್ಪನೆಗೆ ಬೀಳುವ ಹೊಡೆತವೇನು?

ಜಾತಿ ಸಮೀಕ್ಷೆ ಈಗಾಗಲೇ ಆರಂಭಗೊಂಡಿರುವುದರ ನಡುವೆಯೇ ಮುಸ್ಲಿಮ್ ಸಮುದಾಯದಲ್ಲಿ ಈ ಬಗೆಯ ಚರ್ಚೆಯೂ ಮುಂದುವರಿದಿದೆ. ನಿಜವಾಗಿ, ಈ ಚರ್ಚೆ ಸ್ವಾಗತಾರ್ಹ ಮತ್ತು ಮುಸ್ಲಿಮರಿಗೆ ಒಂದು ಸಮುದಾಯವಾಗಿ ಆತ್ಮಾವಲೋಕನ ನಡೆಸುವುದಕ್ಕೂ ಅತ್ಯುತ್ತಮ ಸಂದರ್ಭ. 2015ರಲ್ಲಿ ನಡೆಸಲಾದ ಜಾತಿ ಸಮೀಕ್ಷೆಯ ಪ್ರಕಾರ ರಾಜ್ಯದ ಒಟ್ಟು ಸುಮಾರು 80 ಲಕ್ಷ ಮುಸ್ಲಿಮರಲ್ಲಿ 99 ಉಪಜಾತಿಗಳಿವೆ ಎಂದು ಪಟ್ಟಿ ಮಾಡಲಾಗಿದೆ. ಇದರಲ್ಲಿ ಶೇಖ್ ಎಂಬುದು ಅತೀ ಹೆಚ್ಚು ಜನಸಂಖ್ಯೆಯಿರುವ ಉಪಜಾತಿ ಎಂದೂ ದಾಖಲಾಗಿದೆ. ಇವರ ಸಂಖ್ಯೆ 5 ಲಕ್ಷದ 50 ಸಾವಿರ. ಅಲ್ಲದೇ ಒಟ್ಟು 80 ಲಕ್ಷ ಜನರಲ್ಲಿ 59 ಲಕ್ಷ ಮಂದಿ ತಮ್ಮನ್ನು ಕೇವಲ ಮುಸ್ಲಿಮ್ ಎಂದು ಗುರುತಿಸಿರುವುದೂ ಗೊತ್ತಾಗಿದೆ. 2025 ಫೆಬ್ರವರಿ 29ರಂದು ಹಿಂದುಳಿದ ಆಯೋಗಗಳ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆಯವರು ಸರಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು. ಆ ವರದಿಯ ಬಗ್ಗೆ ಕೇಳಿಬಂದ ಆಕ್ಷೇಪಗಳ ಹಿನ್ನೆಲೆಯಲ್ಲಿ ಹೊಸ ಸಮೀಕ್ಷೆಗೆ ಸರಕಾರ ಕೈಹಾಕಿದೆ. ಅಂದಹಾಗೆ,

ಸರಕಾರವೇ ಹೇಳಿಕೊಂಡಿರುವಂತೆ  ಇದು ಜಾತಿ ಸಮೀಕ್ಷೆ ಅಲ್ಲ. ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಅತ್ಯಂತ ಪಾರದರ್ಶಕವಾಗಿ ಅರಿತುಕೊಳ್ಳುವುದಕ್ಕೆ ಮಾಡಲಾಗುವ ಯತ್ನ. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಒಂದು ನಿರಾಕರಿಸಲಾಗದ ಸತ್ಯವಾಗಿರುವುದರಿಂದ ಮತ್ತು ಬಹುಸಂಖ್ಯಾತ ಜನರು ಜಾತಿಯಾಧಾರಿತವಾಗಿಯೇ ವಿಭಜನೆಗೊಂಡಿರುವುದರಿಂದ  ಸಮೀಕ್ಷೆಯ ಕಾಲಂನಲ್ಲಿ ಜಾತಿ ಮತ್ತು ಉಪಜಾತಿಗಳು ಇರಬೇಕಾದುದು ಅನಿವಾರ್ಯ. ಈ ಕಾಲಂಗಳನ್ನು ತುಂಬುವುದು ಐಚ್ಛಿಕವೇ ಹೊರತು ಕಡ್ಡಾಯ ಅಲ್ಲ. ಒಂದುವೇಳೆ, ಧರ್ಮ ಎಂಬ ಕಾಲಂನ್ನು ತುಂಬಿ ಉಳಿದ ಜಾತಿ ಮತ್ತು ಉಪಜಾತಿ ಕಾಲಂಗಳನ್ನು ತುಂಬದೇ ಇದ್ದರೂ ಅಪರಾಧ ಆಗುವುದಿಲ್ಲ. ಆದರೆ,

ಈ ಸಮೀಕ್ಷೆಯ ಉದ್ದೇಶ ಪೂರ್ಣಗೊಳ್ಳಬೇಕಾದರೆ ಪೂರ್ಣ ಪ್ರಮಾಣದಲ್ಲಿ ಈ ಸಮೀಕ್ಷೆಯೊಂದಿಗೆ ಸಹಕರಿಸುವುದು ಅಗತ್ಯ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರಿ ದಾಖಲೆಗಳಲ್ಲಿ ಮುಸ್ಲಿಮ್ ಸಮುದಾಯದ ಉಪಜಾತಿಗಳು ಉಲ್ಲೇಖಗೊಂಡಿವೆ. ಮಾತ್ರವಲ್ಲ, ವಿವಿಧ ಸರಕಾರಿ ಖೋಟಾಗಳನ್ನೂ ಮೀಸಲಾತಿಗಳನ್ನೂ ಈ ಉಪಜಾತಿಗಳು ಪಡೆಯುತ್ತಲೂ ಇವೆ. ಈ ಉಪಜಾತಿ ಗುರುತುಗಳೆಲ್ಲ ಬಹುತೇಕ ವೃತ್ತಿಯಾಧಾರಿತ ಗುರುತುಗಳು. ನದಾಫ, ಪಿಂಜಾರ, ಕಸಾಬ್, ಅಟ್ಟಾರಿ, ಬಾಗ್ಬಾನ್, ಚಪ್ಪರ್‌ಬಂದ್ ಸಹಿತ ಜಯಪ್ರಕಾಶ್ ಆಯೋಗ ಪಟ್ಟಿ ಮಾಡಿರುವ ಉಪಜಾತಿಗಳೆಲ್ಲ ವೃತ್ತಿಯ ಹಿನ್ನೆಲೆಯಲ್ಲೇ  ಗುರುತಿಸಿಕೊಂಡಿವೆ. ಹೂಮಾರುವ ವೃತ್ತಿಯಲ್ಲಿರುವವರು, ಕಸಾಯಿ ವೃತ್ತಿ ಮಾಡುವವರು, ಧೋಬಿ ವೃತ್ತಿ, ದರ್ಜಿ ವೃತ್ತಿ, ಚಪ್ಪಲಿ ಹೊಲಿಯುವ ವೃತ್ತಿ.. ಇತ್ಯಾದಿ ವೃತ್ತಿಗಳನ್ನು ಪರಂಪರಾಗತವಾಗಿ ಮಾಡುತ್ತಾ ಬಂದಿರುವವರು ಒಂದು ಗುಂಪಾಗಿ ಗುರುತಿಸಿಕೊಂಡು ಕೊನೆಗೆ ಅವುಗಳೇ ಒಂದು ಉಪಜಾತಿಯಾಗಿ ಮಾರ್ಪಟ್ಟಿವೆ. ವ್ಯಾಪಾರವನ್ನೇ ನೆಚ್ಚಿಕೊಂಡಿದ್ದರಿAದ ಕರಾವಳಿ ಮತ್ತು ಇನ್ನಿತರ ಪ್ರದೇಶದ ಮುಸ್ಲಿಮರು ‘ಬ್ಯಾರಿ’ಯಾಗಿ ಗುರುತಿಸಿಕೊಂಡರು ಎಂಬ ವಾದವನ್ನೂ ಈ ಹಿನ್ನೆಲೆಯಲ್ಲಿಯೇ ನೋಡಬಹುದು. ನಿಜವಾಗಿ,

ಇವೆಲ್ಲ ಹಿಂದೂ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಜಾತಿಗಳಂಥಲ್ಲ. ಇವು ವೃತ್ತಿಯಾಧಾರಿತ ಕುಲನಾಮಗಳು. ಇಲ್ಲಿ ಬ್ಯಾರಿ, ದಖ್ಖನಿ, ಕಸಾಬ್, ಪಿಂಜಾರ ಸಹಿತ ಎಲ್ಲರೂ ಒಂದೇರೀತಿಯ ಆರಾಧನಾ ಕ್ರಮಗಳನ್ನು ಅನುಸರಿಸುತ್ತಾರೆ. ಐದು ಬಾರಿ ನಮಾಝï ಮಾಡುತ್ತಾರೆ. ಉಪವಾಸ ಆಚರಿಸುತ್ತಾರೆ. ಏಕದೇವನನ್ನು ಮತ್ತು ಪ್ರವಾದಿ ಮುಹಮ್ಮದ್‌ರನ್ನು ಅನುಸರಿಸುತ್ತಾರೆ. ಈ ಎಲ್ಲರೂ ಕುರ್‌ಆನನ್ನೇ ಪವಿತ್ರ ಗ್ರಂಥ ಎಂದು ಅಂಗೀಕರಿಸುತ್ತಾರೆ ಮತ್ತು ಅದರಂತೆ ನಡೆಯುತ್ತಾರೆ. ಪರಸ್ಪರ ವೈವಾಹಿಕ ಸಂಬAಧಗಳನ್ನು ಇಟ್ಟುಕೊಂಡಿದ್ದಾರೆ. ಮಸೀದಿಯಲ್ಲಿ ಭುಜಕ್ಕೆ ಭುಜ ತಾಗಿಸಿ ನಮಾಜ್  ಮಾಡುತ್ತಾರೆ. ಹಜ್ಜ್ಗೆಂದು ಮಕ್ಕಾಕ್ಕೆ ಹೋಗುತ್ತಾರೆ. ಅಂದರೆ, ಇಲ್ಲಿ ಉಪಜಾತಿ ಎಂಬ ಕಾಲಂನಲ್ಲಿ ದಾಖಲಿಸಲಾಗುವ ಬ್ಯಾರಿ, ನದಾಫ್, ಪಿಂಜಾರ...ಗಳೆಲ್ಲ ವೃತ್ತಿಯಾಧಾರಿತ ಕುಲನಾಮಗಳೇ ಹೊರತು ಧರ್ಮಾಧಾರಿತ ಜಾತಿಗಳಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ಆದರೆ,

ಹಿಂದೂ ಸಮಾಜದಲ್ಲಿರುವ ಜಾತಿ ಮತ್ತು ಉಪಜಾತಿಗಳ ಸ್ವರೂಪ ಹೀಗಲ್ಲ. ಅದು ಧರ್ಮಾಧಾರಿತವಾಗಿಯೇ ಗುರುತಿಸಿಕೊಂಡಿವೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳು ಮತ್ತು ಇವುಗಳ ಪರಿಧಿಗೆ ಒಳಪಡದವರು ದಲಿತರು ಎಂಬ ನೆಲೆಯಲ್ಲಿ ಗುರುತಿಸಿಕೊಂಡಿರುವುದು ಮಾತ್ರವಲ್ಲ, ಈ ಸಮುದಾಯಗಳು ಬೇರೆ ಬೇರೆ ರೀತಿಯ ಆರಾಧನಾ ಕ್ರಮಗಳನ್ನು ಅನುಸರಿಸುತ್ತವೆ. ಇವುಗಳ ನಡುವೆ ನಂಬಿಕೆಗೆ ಸಂಬAಧಿಸಿಯೇ ವ್ಯತ್ಯಾಸಗಳಿವೆ. ವೈರುಧ್ಯಗಳಿವೆ. ದೇಗುಲ ಪ್ರವೇಶ ನಿಷೇಧಕ್ಕಾಗಿ ಇವತ್ತೂ ದಲಿತರು ಸುದ್ದಿಗೆ ಒಳಗಾಗುತ್ತಿದ್ದಾರೆ. ಅಸ್ಪೃಶ್ಯತೆ  ಇದೆ. ಈ ನಾಲ್ಕು ವರ್ಣಗಳ ಒಳಗೆ ಮತ್ತು ಜಾತಿ-ಉಪಜಾತಿಗಳ ನಡುವೆ ವೈವಾಹಿಕ ಸಂಬಂಧಗಳಿಲ್ಲ. ಅನೇಕ ಬಾರಿ ಇಂಥ ಬೇಲಿಯನ್ನು ಮುರಿದ ಕಾರಣಕ್ಕಾಗಿಯೇ ಮರ್ಯಾದಾ ಹತ್ಯೆಗಳಾಗುತ್ತಿರುವುದೂ ಸುದ್ದಿಗೊಳಗಾಗುತ್ತಿದೆ. ಆದ್ದರಿಂದಲೇ,

ಜಾತಿ-ಉಪಜಾತಿ ಎಂಬ ಕಾಲಂ ಕಂಡಾಗಲೇ ಮುಸ್ಲಿಮರಿಗೆ ಈ ಜಾತಿ ಸಂಘರ್ಷಗಳೇ ಕಣ್ಣೆದುರು ಬರುತ್ತದೆ. ನಾವು ಜಾತಿ-ಉಪಜಾತಿ ಕಾಲಂ ಅನ್ನು ತುಂಬಿಸಿದರೆ ಎಲ್ಲಿ ಹಿಂದೂ ಸಮಾಜದಲ್ಲಿರುವ ಜಾತಿಗಳಾಗಿ ಬಿಡುತ್ತೇವೋ ಎಂಬ ಅವ್ಯಕ್ತ ಭಯ ಮುಸ್ಲಿಮರಲ್ಲಿ ಕಾಣಿಸುತ್ತಿದೆ. ಇದು ಅಸಹಜ ಭಯ ಅಲ್ಲ. ಮುಸ್ಲಿಮ್ ಸಮುದಾಯದೊಳಗೆ ಇಂಥದ್ದೊಂದು ಜಾತಿ ವಿಭಜನೆಗೆ ಈ ಸಮೀಕ್ಷೆ ವೇದಿಕೆ ಒದಗಿಸುತ್ತದೋ ಎಂಬ ಭೀತಿಯಲ್ಲಿರುವ ಈ ಕಳಕಳಿಯನ್ನು ತಿರಸ್ಕರಿಸಬೇಕಾಗಿಯೂ ಇಲ್ಲ. ಆದರೆ, 

ಸಾಮಾಜಿಕವಾಗಿ ಹಿಂದುಳಿದಿರುವ ಮುಸ್ಲಿಮ್ ಸಮುದಾಯವನ್ನು ಮೇಲೆತ್ತುವುದಕ್ಕೆ ಸರಕಾರದ ಆಶ್ರಯವೂ ಬೇಕಾಗಿದ್ದು, ವೃತ್ತಿಯಾಧಾರಿತ ಕುಲನಾಮಗಳನ್ನು ನಮೂದಿಸುವುದರಿಂದ ಆಯಾ ಕುಲನಾಮಗಳಲ್ಲಿರುವವರ ಒಟ್ಟು ಸಂಖ್ಯೆ ಮತ್ತು ಅವರ ಬದುಕಿನ ಸ್ಥಿತಿ ಸರಕಾರಕ್ಕೆ ಸರಿಯಾಗಿ ಸಿಗುತ್ತದೆ. ಇದರಿಂದ ಅತೀ ಹಿಂದುಳಿದಿರುವ ನಿರ್ದಿಷ್ಟ ಕುಲನಾಮದ ಮುಸ್ಲಿಮ್ ಗುಂಪಿಗೆ ಪ್ರತ್ಯೇಕವಾಗಿ ಅಭಿವೃದ್ಧಿ ಯೋಜನೆಗಳನ್ನು ಘೋಷಿಸುವುದಕ್ಕೆ ಮತ್ತು ಮೀಸಲಾತಿಯನ್ನು ಒದಗಿಸುವುದಕ್ಕೂ ಅವಕಾಶ ಸಿಗುತ್ತದೆ. ರಾಜ್ಯದ ಒಟ್ಟು 80 ಲಕ್ಷ  ಮುಸ್ಲಿಮರಿಗೆ ಮೀಸಲಾತಿ ಒದಗಿಸುವುದಕ್ಕೂ ನಿರ್ದಿಷ್ಟ ಕುಲನಾಮಗಳಿಗೆ ಮಾತ್ರ ವಿಶೇಷ ಮೀಸಲಾತಿ, ಅನುದಾನವನ್ನು ಒದಗಿಸಿ ಅವರನ್ನು ಮೇಲೆತ್ತುವುದಕ್ಕೂ ವ್ಯತ್ಯಾಸ ಇದೆ. 80 ಲಕ್ಷ  ಮಂದಿಗೆ ಮೀಸಲಾತಿ ಘೋಷಿಸಿದಾಗ ಆ 80 ಲಕ್ಷದಲ್ಲಿರುವ ಶ್ರೀಮಂತರು ಅದನ್ನು ಪಕ್ಕನೇ ಪಡಕೊಳ್ಳುವುದಕ್ಕೂ ದುರ್ಬಲರು ವಂಚಿತರಾಗುವುದಕ್ಕೂ ಅವಕಾಶ ಇದೆ. ಆದರೆ, ನಿರ್ದಿಷ್ಟ ಕುಲನಾಮದಲ್ಲಿ ಗುರುತಿಸಿಕೊಂಡ ಹಿಂದುಳಿದ ಮುಸ್ಲಿಮರಿಗೆ ವಿಶೇಷ ಮೀಸಲಾತಿ ಒದಗಿಸುವುದರಿಂದ ಆ ಸಮುದಾಯ ಪೂರ್ಣ ಪ್ರಮಾಣದ ಪ್ರಯೋಜನವನ್ನು ಪಡಕೊಳ್ಳುವುದಕ್ಕೆ ದಾರಿ ಸುಗಮವಾಗುತ್ತದೆ. ಆದ್ದರಿಂದ,

ಸರಕಾರದ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ಮುಸ್ಲಿಮ್ ಎಂದೂ ಉಪಜಾತಿ ಕಾಲಂನಲ್ಲಿ ನದಾಫ್, ಪಿಂಜಾರ.. ಎಂದು ಮುಂತಾಗಿಯೂ ನಮೂದಿಸುವುದು ಬಹಳ ಅಗತ್ಯ. ಈ ಬಗ್ಗೆ ಗೊಂದಲ ಬೇಡ. ಪ್ರವಾದಿ(ಸ) ಕಾಲದಲ್ಲಿ ನದೀರ್, ಕುರೈಶ್ ಖಝ್ರಜ್ ಸಹಿತ ಹಲವು ಬುಡಕಟ್ಟು ಗುರುತಿನೊಂದಿಗೆ ಮುಸ್ಲಿಮರು ಗುರುತಿಸಿಕೊಂಡಿದ್ದರು ಎಂಬುದೂ ಇಲ್ಲಿ ಗಮನಾರ್ಹ.

Wednesday, 17 September 2025

ಚಾಲಕನ ಧರ್ಮ ಹುಡುಕಿದವರು ಯಾವ ಧರ್ಮದ ರಕ್ಷಕರು?





ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಮೇಲೆ ಲಾರಿಯೊಂದು ಹರಿದ ಪ್ರಕರಣ ಕರ್ನಾಟಕದ ಹಾಸನವನ್ನು ಮಾತ್ರವಲ್ಲ, ರಾಜ್ಯವನ್ನೇ ಆಘಾತಕ್ಕೆ ಸಿಲುಕಿಸಿದೆ. ಈ ಅಪಘಾತದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಎರಡು ಡಜನ್‌ನಷ್ಟು ಮಂದಿ ಗಾಯಗೊಂಡಿದ್ದಾರೆ. ಸಾವಿಗೀಡಾದವರಲ್ಲಿ ಪ್ರವೀಣ್ ಕುಮಾರ್, ಮಿಥುನ್ ಮತ್ತು ಸುರೇಶ್ ಎಂಬವರು ಹಾಸನದ ಎಂಜಿನಿಯರಿಂಗ್  ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು. ಗಾಯಗೊಂಡವರಲ್ಲೂ ವಿದ್ಯಾರ್ಥಿಗಳಿದ್ದಾರೆ. ದುರಂತ ಏನೆಂದರೆ,

ಈ ಅಪಘಾತ ನಡೆದ ಬೆನ್ನಿಗೇ ಲಾರಿ ಚಾಲಕನ ಧರ್ಮವನ್ನು ಹುಡುಕಾಡಲಾಗಿದೆ. ಆತನನ್ನು ಮುಸ್ಲಿಮ್ ಎಂದು ಪ್ರಚಾರ ಮಾಡಲಾಗಿದೆ. ಈ ಅಪಪ್ರಚಾರ ಎಷ್ಟು ಅಪಾಯಕಾರಿ ಹಂತಕ್ಕೆ ತಲುಪಿತ್ತೆಂದರೆ, ಸ್ವತಃ ಸಚಿವ ಕೃಷ್ಣ ಭೈರೇಗೌಡರೇ ಎಚ್ಚರಿಕೆ ನೀಡಬೇಕಾಯಿತು. ಚಾಲಕನ ಹೆಸರು ಭುವನೇಶ್ ಎಂಬುದನ್ನು ಅಡಗಿಸಿಟ್ಟು, ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು. ನಿಜವಾಗಿ,

ಈ ಅಪಘಾತ ನಮ್ಮಲ್ಲಿ ಯಾವ ಬಗೆಯ ಚರ್ಚೆಯನ್ನು ಹುಟ್ಟು ಹಾಕಬೇಕಿತ್ತು? ಚಾಲಕನ ಧರ್ಮ ಇಲ್ಲಿ ಮುಖ್ಯವಾಗಬೇಕಿತ್ತೋ ಅಥವಾ ಚಾಲಕ ಸೇವಿಸಿದ ಮದ್ಯ ಮುಖ್ಯವಾಗಬೇಕಿತ್ತೋ? ಅಪಘಾತದಲ್ಲೂ ಚಾಲಕನ ಧರ್ಮವನ್ನು ಹುಡುಕುವ ಮನಸ್ಥಿತಿ ಯಾವುದು? ಇದು ಯಾರ ಅಗತ್ಯ? ಇಂಥದ್ದೊಂದು  ಹುಡುಕಾಟ ನಡೆಸಿದವರ ಉದ್ದೇಶ ಏನು? ಅಪಘಾತದಲ್ಲಿ ತಮ್ಮವರನ್ನು ಕಳಕೊಂಡವರಾಗಲಿ, ಗಾಯಗೊಂಡವರಾಗಲಿ ಯಾರೂ ಚಾಲಕನ ಧರ್ಮದ ಬಗ್ಗೆ ಪ್ರಶ್ನೆಯನ್ನೇ ಎತ್ತಿಲ್ಲ. ಅದರ ಬದಲು ಈ ಸಂತ್ರಸ್ತ ಕುಟುಂಬದ ಒಂದಕ್ಕಿಂತ ಹೆಚ್ಚು ಮಂದಿ ಈ ಬಗೆಯ ಮೆರವಣಿಗೆಯನ್ನೇ ವಿರೋಧಿಸಿದ್ದಾರೆ. ಹೀಗಿರುವಾಗ, ಸಂತ್ರಸ್ತರಿಗೆ ಮತ್ತು ಅವರ ಕುಟುಂಬಕ್ಕೆ ಇಲ್ಲದ ತಕರಾರೊಂದನ್ನು ಅವರಿಗೆ ಸಂಬಂಧಿಸಿಯೇ ಇಲ್ಲದ ಇನ್ನಾರೋ ಎತ್ತಿರುವುದು ಏಕೆ? ಒಂದುವೇಳೆ,

ಹೀಗೆ ಚಾಲಕನ ಧರ್ಮವನ್ನು ಹುಡುಕಿದವರ ಬೆನ್ನು ಹತ್ತುತ್ತಾ ಹೋದರೆ ಅವರು ನಿರ್ದಿಷ್ಟ ರಾಜಕೀಯ ಪಕ್ಷದ ಮತ್ತು ಕೆಲವು ಸಂಘಟನೆಗಳ ವ್ಯಕ್ತಿಗಳಾಗಿ ಪತ್ತೆಯಾಗಬಲ್ಲರು. ಧರ್ಮದ್ವೇಷವನ್ನೇ ಉಸಿರಾಗಿಸಿಕೊಂಡಿರುವ ಮತ್ತು ಹಿಂದೂ ಹಾಗೂ ಮುಸ್ಲಿಮರನ್ನು ವೈರಿಗಳಂತೆ ಬಿಂಬಿಸುವುದನ್ನೇ ಖಾಯಂ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಇವರಿಗೆ ರಾಜಕೀಯ ಅಧಿಕಾರ ಪಡೆಯುವುದನ್ನು ಬಿಟ್ಟರೆ ಬೇರೆ ಯಾವ ಗುರಿಗಳೂ ಇಲ್ಲ. ಮುಸ್ಲಿಮರನ್ನು ಸದಾ ದ್ವೇಷಿಸುವುದರಿಂದ ಅಧಿಕಾರ ಸದಾ ತಮ್ಮ ಸುಪರ್ದಿಯಲ್ಲೇ  ಉಳಿಯಲಿದೆ ಎಂದು ಬಲವಾಗಿ ನಂಬಿರುವ ಸಮುದಾಯ ಇದು. ಇದಕ್ಕಾಗಿ ಹಿಂದೂ ಮತ್ತು ಮುಸ್ಲಿಮರ ನಡುವೆ ಎಷ್ಟು ಸಾಧ್ಯವೋ ಅಷ್ಟು ವಿಷವನ್ನು ಇವರು ಹರಡುತ್ತಿರುತ್ತಾರೆ. ಪರಸ್ಪರರು ಸೌಹಾರ್ದವಾಗಿ ಬೆರೆಯದಂತೆ ಶ್ರಮಿಸುತ್ತಿರುತ್ತಾರೆ. ಎಲ್ಲೋ  ನಡೆದ ಒಂಟಿ ಘಟನೆಯನ್ನು ಎತ್ತಿಕೊಂಡು ಇಡೀ ಮುಸ್ಲಿಮ್ ಸಮುದಾಯವೇ ಹೀಗೆ ಎಂದು ಬಿಂಬಿಸುತ್ತಿರುತ್ತಾರೆ. ಈ ಎಲ್ಲದರ ಉದ್ದೇಶ ರಾಜಕೀಯ ಅಧಿಕಾರ ಒಂದೇ ಆಗಿರುತ್ತದೆ. ಇದೇವೇಳೆ,

ಅಪರಾಧಿ ತನ್ನ ಸಮುದಾಯದವನೇ ಎಂದು ಗೊತ್ತಾದ ಕೂಡಲೇ ಇವರು ಬಾಯಿ ಮುಚ್ಚಿಕೊಳ್ಳುತ್ತಾರೆ. ಹಾಸನ ಘಟನೆಯಲ್ಲೂ ನಡೆದಿರುವುದು ಇದುವೇ. ಯಾವಾಗ ಸಚಿವರು ಎಚ್ಚರಿಕೆ ನೀಡಿದರೋ ಮತ್ತು ಭುವನೇಶ್ ಎಂಬವನೇ ಚಾಲಕ ಎಂಬುದು ಸಾರ್ವಜನಿಕವಾಗಿ ಬಹಿರಂಗವಾಯಿತೋ ಈ ಗುಂಪು ಮೌನವಾಗಿದೆ. ಕನಿಷ್ಠ ಸತ್ತವರು ಮತ್ತು ಗಾಯಗೊಂಡವರ ಬಗ್ಗೆ ಸಾಂತ್ವನದ ಮಾತುಗಳನ್ನೂ ಆಡಿಲ್ಲ. ಭುವನೇಶ್‌ನನ್ನು ಗಲ್ಲಿಗೇರಿಸಿ ಎಂದು ಆಗ್ರಹಿಸಿಯೂ ಇಲ್ಲ. ಆತನ ವಿರುದ್ಧ ಒಂದೇ ಒಂದು ಪ್ರತಿಭಟನೆಯನ್ನೂ ಮಾಡಿಲ್ಲ. ಮೆರವಣಿಗೆಯ ಮೇಲೆ ಉದ್ದೇಶಪೂರ್ವಕವಾಗಿಯೇ ಲಾರಿ ಹತ್ತಿಸಲಾಗಿದೆ ಎಂದೂ ಹೇಳಿಲ್ಲ. ಒಂದುವೇಳೆ, ಚಾಲಕ ಮುಸ್ಲಿಮ್ ಆಗಿರುತ್ತಿದ್ದರೆ ಪ್ರತಿಭಟನೆಯ ಮೇಲೆ ಪ್ರತಿಭಟನೆ ನಡೆಯುತ್ತಿತ್ತು. ಆತನನ್ನು ಗಲ್ಲಿಗೇರಿಸುವಂತೆ ಒತ್ತಾಯ ಕೇಳಿಬರುತ್ತಿತ್ತು. ಘಟನೆಯನ್ನು ಉದ್ದೇಶಪೂರ್ವಕ ಕೃತ್ಯ, ದ್ವೇಷದ ಕೃತ್ಯ ಎಂದೆಲ್ಲಾ ಪ್ರಚಾರ ಮಾಡಲಾಗುತ್ತಿತ್ತು. ನಿಜ ಏನೆಂದರೆ,

ಈ ಘಟನೆಯು ಮದ್ಯಪಾನದ ವಿರುದ್ಧ ಸಾರ್ವಜನಿಕ ಆಕ್ರೋಶ ಭುಗಿಲೇಳುವುದಕ್ಕೆ ಕಾರಣ ಆಗಬೇಕಿತ್ತು. ಮದ್ಯ ಮಾರಾಟದ ಆದಾಯದಿಂದ ಸರಕಾರ ನಡೆಯಬೇಕಿಲ್ಲ ಎಂದು ಕೂಗಬೇಕಿತ್ತು. ಮದ್ಯ ಮುಕ್ತ ಕರ್ನಾಟಕ ಮಾಡುವ ಸಂಕಲ್ಪದ ಜನಜಾಗೃತಿ ಅಭಿಯಾನಕ್ಕೆ ಕಾರಣ ಆಗಬೇಕಿತ್ತು. ಸರಕಾರದ ಮದ್ಯನೀತಿಯನ್ನು ಪ್ರಶ್ನಿಸಿ ಸರಣಿ ಕಾರ್ಯಕ್ರಮಗಳಿಗೆ ನಾಂದಿ ಹಾಡುವ ಘಟನೆ ಆಗಬೇಕಿತ್ತು. ಆದರೆ ಇಷ್ಟೊಂದು ದೊಡ್ಡಮಟ್ಟದಲ್ಲಿ ಸಾವು-ನೋವು ಉಂಟಾದ ಬಳಿಕವೂ ಯಾರೊಬ್ಬರಿಂದಲೂ ಸರಕಾರದ ಮದ್ಯ ನೀತಿಯನ್ನು ಪ್ರಶ್ನಿಸುವ ಪ್ರಯತ್ನವೇ ನಡೆದಿಲ್ಲ. ಚಾಲಕನ ಧರ್ಮ ನೋಡಿದವರಲ್ಲಿ ಯಾರೂ ಮದ್ಯಮುಕ್ತ ಕರ್ನಾಟಕಕ್ಕಾಗಿ ಒತ್ತಾಯಿಸಿಲ್ಲ. ಮದ್ಯ ನಿಷೇಧಿಸುವಂತೆ ಒತ್ತಾಯ ಕೇಳಿ ಬಂದಿಲ್ಲ. 2022ರಲ್ಲಿ ಕೇವಲ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಕಾರಣಕ್ಕಾಗಿಯೇ 3268 ಅಪಘಾತಗಳು ಸಂಭವಿಸಿವೆ. 150ಕ್ಕಿಂತಲೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. 2024ರಲ್ಲಿ ಈ ಅಂಕಿ-ಅಂಶದಲ್ಲಿ ಇನ್ನಷ್ಟು ಏರಿಕೆ ಉಂಟಾಗಿದೆ. ಅಂದಹಾಗೆ,

ಮದ್ಯಪಾನವು ಕೇವಲ ವಾಹನ ಚಾಲಕರನ್ನು ಮಾತ್ರ ದಾರಿ ತಪ್ಪಿಸುವುದಲ್ಲ, ಸಮಾಜದ ನೆಮ್ಮದಿಯನ್ನೇ ಅದು ಭಂಗಗೊಳಿಸುತ್ತದೆ. ಈ ದೇಶದ ಕೋಟ್ಯಂತರ ಮನೆಗಳನ್ನು ಈ ಮದ್ಯವು ನರಕಮಯಗೊಳಿಸಿದೆ. ಮದ್ಯಪಾನಿಯಾದ ಪುರುಷರು ಮನೆಯ ಮಹಿಳೆಯರ ಮೇಲೆ ಹಲ್ಲೆ  ನಡೆಸುವುದು ಮತ್ತು ಹತ್ಯೆ ನಡೆಸುವುದೆಲ್ಲ ಪ್ರತಿದಿನವೆಂಬಂತೆ  ವರದಿಯಾಗುತ್ತಿದೆ. ರಾತ್ರಿಯಾಗುವುದಕ್ಕೆ ಹೆದರುವ ಕೋಟ್ಯಂತರ ಮಹಿಳೆಯರು ಈ ದೇಶದಲ್ಲಿದ್ದಾರೆ. ಹೆಚ್ಚಿನ ಮನೆಯ ಪುರುಷರು ರಾತ್ರಿ ಮನೆಗೆ ಮರಳುವಾಗ ಮದ್ಯ ಸೇವಿಸುತ್ತಾರೆ. ಕೂಲಿ ಕಾರ್ಮಿಕರಲ್ಲಿ ಈ ಅಭ್ಯಾಸ ಹೆಚ್ಚಿದೆ. ದುಡಿದ ಹಣವನ್ನು ಮದ್ಯದಂಗಡಿಗೆ ಕೊಡುವುದಲ್ಲದೇ ಮನೆಗೆ ಬಂದು ಪತ್ನಿ-ಮಕ್ಕಳ ಮೇಲೆ ಕೈ ಮಾಡುವ ಕ್ರೌರ್ಯಗಳು ಈ ದೇಶದಲ್ಲಿ ಸಾಮಾನ್ಯವಾಗಿದೆ. ಈ ಕ್ರೌರ್ಯವನ್ನು ಮನೆಯ ಮಹಿಳೆಯರು ಮತ್ತು ಮಕ್ಕಳು ಸಹಿಸಿಕೊಳ್ಳುತ್ತಾರೆ. ಮರ್ಯಾದೆಗೆ ಅಂಜಿ ಯಾರಲ್ಲೂ ಹೇಳುವುದಿಲ್ಲ. ಈ ಗುಣವನ್ನೇ ಮದ್ಯಪಾನಿಗಳು ದುರುಯೋಗಿಸಿಕೊಳ್ಳುತ್ತಾರೆ. ಆದರೂ,

ಈ ಬಗ್ಗೆ ಯಾವ ತಕರಾರನ್ನೂ ವ್ಯಕ್ತಪಡಿಸದ ಗುಂಪೊಂದು  ಮುಸ್ಲಿಮರೇ ಇಲ್ಲಿನ ಸಮಸ್ಯೆ ಎಂದು ಬಿಂಬಿಸುವುದಕ್ಕೆ ಶಕ್ತಿಮೀರಿ ಯತ್ನಿಸುತ್ತಿವೆ. ಒಂದುವೇಳೆ, ಇವರಿಗೆ ಹಿಂದೂ ಧರ್ಮೀಯರ ಏಳಿಗೆಯೇ ಮುಖ್ಯ ಎಂದಾಗಿದ್ದರೆ, ಸಂಪೂರ್ಣ ಪಾನ ನಿಷೇಧಕ್ಕಾಗಿ ಒತ್ತಾಯಿಸಬೇಕಿತ್ತು. ಈ ದೇಶದಲ್ಲಿ ಮದ್ಯಪಾನದ ಅಡ್ಡಪರಿಣಾಮಕ್ಕೆ ಅತ್ಯಂತ ಹೆಚ್ಚು ತುತ್ತಾಗುತ್ತಿರುವುದು ಮುಸ್ಲಿಮರಲ್ಲ. ಮದ್ಯಪಾನದ ವಿರುದ್ಧ ಇಸ್ಲಾಮ್‌ನಲ್ಲಿ ಕಟ್ಟುನಿಟ್ಟಿನ ಆದೇಶ ಇರುವುದರಿಂದ ಮುಸ್ಲಿಮರಲ್ಲಿ ಮದ್ಯಪಾನಿಗಳು ತೀರಾತೀರಾ ಕಡಿಮೆಯಿದ್ದಾರೆ. ಆದರೆ,

ಹಿಂದೂ ಸಮುದಾಯ ಇದರಿಂದ ತೀವ್ರ ತೊಂದರೆಯನ್ನು ಎದುರಿಸುತ್ತಿದೆ. ದುಡಿದ ಹಣವನ್ನು ಕುಟುಂಬದ ಖರ್ಚಿಗೆ ಬಳಸುವ ಬದಲು ಮದ್ಯದಂಗಡಿಗೆ ಸುರಿಯುವ ಪುರುಷರು ಧಾರಾಳ ಇದ್ದಾರೆ. ಇವರನ್ನು ಇದರಿಂದ ಮುಕ್ತಗೊಳಿಸಿದರೆ ಕೋಟ್ಯಂತರ ಮನೆಗಳಿಗೆ ನೆಮ್ಮದಿ ಸಿಗಬಹುದು. ಕೋಟ್ಯಂತರ ಮಹಿಳೆಯರು ಮತ್ತು ಮಕ್ಕಳು ಗೃಹಹಿಂಸೆಯಿಂದ  ರಕ್ಷಣೆ ಹೊಂದಬಹುದು. ಇವೆಲ್ಲ ಎಲ್ಲರಿಗೂ ಗೊತ್ತು. ಮದ್ಯಪಾನದಿಂದಾಗಿ ಈ ದೇಶದಲ್ಲಿ ಆಗುತ್ತಿರುವ ಸಾವುಗಳು, ಹಿಂಸೆಗಳು ಮತ್ತು ಕಾಯಿಲೆಗಳ ಅಂಕಿ-ಅAಶಗಳನ್ನು ಪ್ರತಿವರ್ಷ ಕೇಂದ್ರ ಸರಕಾರ ಬಿಡುಗಡೆಗೊಳಿಸುತ್ತಿರುತ್ತದೆ. ಇಷ್ಟಿದ್ದೂ ಇದರ ವಿರುದ್ಧ ಏನೊಂದೂ ಮಾತಾಡದೇ ಬರೇ ಹಿಂದೂ-ಮುಸ್ಲಿಮ್ ಎಂದು ಹೇಳುತ್ತಾ ದ್ವೇಷ ಬಿತ್ತುವವರನ್ನು ಏನೆಂದು ಕರೆಯಬೇಕು? ಇವರು ಯಾವ ಧರ್ಮದ ರಕ್ಷಕರು? ಇವರು ಯಾರ ಹಿತೈಷಿಗಳು? ಇವರಿಗೆ ಹಿಂದೂ ಸಮುದಾಯದ ಕಲ್ಯಾಣವೇ ಮುಖ್ಯ ಎಂದಾಗಿದ್ದರೆ ಧರ್ಮದ್ವೇಷವನ್ನು ಕೈಬಿಟ್ಟು ಸಂಪೂರ್ಣ ಪಾನ ನಿಷೇಧಕ್ಕೆ ಒತ್ತಾಯಿಸುತ್ತಿದ್ದರು. ಅವರ ಗುರಿ ಬರೇ ರಾಜಕೀಯ ಅಧಿಕಾರ ಅನ್ನುವುದನ್ನು ಹಾಸನದ ಘಟನೆ ಸ್ಪಷ್ಟಪಡಿಸಿದೆ.

Tuesday, 16 September 2025

ಬಾನು ಮುಶ್ತಾಕ್‌ರನ್ನು ಬಿಜೆಪಿ ವಿರೋಧಿಸಿರುವುದಕ್ಕೆ ಧರ್ಮ ಕಾರಣವೇ?


ಸನ್ಮಾರ್ಗ ಸಂಪಾದಕೀಯ 

ನಾಡಹಬ್ಬ ದಸರಾವನ್ನು ಸಾಹಿತಿ ಬಾನು ಮುಶ್ತಾಕ್ ಅವರು ಉದ್ಘಾಟಿಸುವುದು ಸರಿಯೋ ತಪ್ಪೋ ಎಂಬ ಚರ್ಚೆಯೊಂದನ್ನು ಬಿಜೆಪಿ ಕನ್ನಡಿಗರ ಮೇಲೆ ಎತ್ತಿ ಹಾಕಿದೆ. ಮಾಜಿ ಸಂಸದ ಪ್ರತಾಪಸಿಂಹ, ಶಾಸಕ ಯತ್ನಾಳ್ ಅವರು ಬಹಿರಂಗವಾಗಿಯೇ ಬಾನು ಮುಶ್ತಾಕ್ ಅವರ ಉದ್ಘಾಟನೆಯನ್ನು ವಿರೋಧಿಸಿದ್ದಾರೆ. ಬಾನು ಮುಶ್ತಾಕ್ ಅವರ ಧಾರ್ಮಿಕ ನಂಬಿಕೆಯೇ  ಈ ವಿರೋಧಕ್ಕೆ ಕಾರಣ ಎಂದೂ ಹೇಳಿದ್ದಾರೆ. ಬಾನು ಮುಶ್ತಾಕ್ ಅವರ ಧರ್ಮ ಈ ಉದ್ಘಾಟನಾ ವಿಧಾನವನ್ನು ಒಪ್ಪುವುದಿಲ್ಲ ಎಂಬುದು ಈ ಇಬ್ಬರ ವಾದ. ನಿಜವಾಗಿ,

ಈ ಪ್ರತಾಪಸಿಂಹ ಆಗಲಿ, ಯತ್ನಾಳ್ ಆಗಲಿ ನಿನ್ನೆ ಮೊನ್ನೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದವರಲ್ಲ. 2017ರಲ್ಲಿ ಈ ದಸರಾವನ್ನು ಉದ್ಘಾಟಿಸಿದ್ದು ಕವಿ ನಿಸಾರ್ ಅಹ್ಮದ್. ಆಗ ಪ್ರತಾಪಸಿಂಹ ಸಂಸದರಾಗಿದ್ದರು. ಯತ್ನಾಳ್ ಶಾಸಕರಾಗಿದ್ದರು. ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೆ ರಾಜ್ಯದಲ್ಲಿ ಪ್ರಧಾನ ವಿರೋಧ ಪಕ್ಷವಾಗಿ ಬಿಜೆಪಿ ಚಟುವಟಿಕೆಯಲ್ಲಿತ್ತು. ಅಂದೂ ಮುಖ್ಯಮಂತ್ರಿಯಾಗಿದ್ದುದು ಸಿದ್ದರಾಮಯ್ಯ. ಇಂದೂ ಮುಖ್ಯಮಂತ್ರಿಯಾಗಿರುವುದು ಸಿದ್ದರಾಮಯ್ಯರೇ. ಆದರೆ,

2017ರಲ್ಲಿ ನಿಸಾರ್ ಅಹ್ಮದ್‌ರ ಧರ್ಮವನ್ನು ಉಲ್ಲೇಖಿಸಿ ಯಾವ ವಿರೋಧವನ್ನೂ ವ್ಯಕ್ತಪಡಿಸದ ಬಿಜೆಪಿ, 2025ರಲ್ಲಿ ಬಾನು ಮುಶ್ತಾಕ್‌ಗೆ ಧರ್ಮದ ಆಧಾರದಲ್ಲಿ ವಿರೋಧ ವ್ಯಕ್ತಪಡಿಸಲು ಕಾರಣವೇನು? ನಿಸಾರ್ ಅಹ್ಮದ್‌ರಿಗೆ ಹೋಲಿಸಿದರೆ ಬಾನು ಮುಶ್ತಾಕ್ ಅವರ ಆಯ್ಕೆಗೆ ಇನ್ನೂ ಹೆಚ್ಚು ತೂಕವಿದೆ. ಇವರು ಬೂಕರ್ ಪ್ರಶಸ್ತಿ ವಿಜೇತ ಮೊದಲ ಕನ್ನಡ ಸಾಹಿತಿ. ಅರ್ಹತೆ ಮತ್ತು ಆಯ್ಕೆಗೆ ಸಂಬಂಧಿಸಿ ಒಂದಿನಿತೂ ಅನುಮಾನ ಇಲ್ಲದಷ್ಟು ಸೂಕ್ತ ವ್ಯಕ್ತಿತ್ವ ಬಾನು ಮುಶ್ತಾಕ್‌ರದ್ದು. ಇಷ್ಟಿದ್ದೂ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? ಬಾನು ಮುಶ್ತಾಕ್‌ರ ಧರ್ಮವನ್ನು ಎತ್ತಿಕೊಂಡು ಮತ್ತು ಅವರ ಧರ್ಮದಲ್ಲಿರುವ ಏಕದೇವಾರಾಧನೆಯನ್ನು ಮುಂದು ಮಾಡಿಕೊಂಡು ಬಿಜೆಪಿ ವ್ಯಕ್ತಪಡಿಸುತ್ತಿರುವ ಈ ವಿರೋಧದ ಹಿಂದೆ ನಿಜಕ್ಕೂ ಕೆಲಸ ಮಾಡುತ್ತಿರುವುದು ಅವರ ಧರ್ಮವೋ ಅಥವಾ ಅವರ ನಿಲುವುಗಳೋ?

ಬಾನು ಮುಶ್ತಾಕ್ ಅಂದರೆ ಬಿಜೆಪಿಗೆ ಬಿಸಿ ತುಪ್ಪ. ಯಾಕೆಂದರೆ, ಬಾನು ಮುಶ್ತಾಕ್ ಬರೇ ಓರ್ವ ಸಾಹಿತಿಯಲ್ಲ. ಅವರು ವಕೀಲರು. ಅದಕ್ಕಿಂತಲೂ ಮುಖ್ಯವಾಗಿ ತಾಯಿ ಹೃದಯದ ಹೋರಾಟಗಾರರು. ಬಿಜೆಪಿಯ ಕೋಮುವಾದವನ್ನು ಸದಾ ಎದುರಿಸುತ್ತಲೇ ಬಂದ ಲಂಕೇಶ್ ಅವರ ಶೋಧನೆಯೇ ಈ ಬಾನು ಮುಶ್ತಾಕ್. ಲಂಕೇಶ್ ಪತ್ರಿಕೆಯಲ್ಲಿ ವರದಿಗಾರರಾಗಿ ಇವರು ಬರಹ ಜಗತ್ತಿನಲ್ಲಿ ಗುರುತಿಸಿಕೊಂಡರು. ಅವರು ಬರೇ ತನ್ನನ್ನು ಬರಹಕ್ಕೆ ಮತ್ತು ವಕೀಲಗಾರಿಕೆಗೆ ಮಾತ್ರ ಸೀಮಿತಗೊಳಿಸಲಿಲ್ಲ. ಚಳವಳಿಗಳಲ್ಲೂ ಸಕ್ರಿಯವಾಗಿ ಭಾಗಿಯಾದರು. ಅದರಲ್ಲಿ ಬಾಬಾ ಬುಡನ್‌ಗಿರಿ ಚಳವಳಿಯೂ ಒಂದು.

ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಹೊರಟ ಕೋಮುವಾದಿಗಳ ವಿರುದ್ಧ 2000 ಇಸವಿಯಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹೋರಾಟವನ್ನು ಹುಟ್ಟು ಹಾಕಿತ್ತು. ಬುಡನ್‌ಗಿರಿಗೆ ಭೇಟಿ ನೀಡುವುದರಿಂದ ಮುಸ್ಲಿಮರನ್ನು ಕೋಮುವಾದಿಗಳು ತಡೆದಿದ್ದರು. ‘ದತ್ತಪೀಠವನ್ನು ಸಂಪೂರ್ಣವಾಗಿ ಹಿಂದೂಗಳಿಗೆ ಹಸ್ತಾಂತರಿಸಬೇಕು, ಅಲ್ಲಿನ ಗೋರಿಗಳನ್ನು ಸ್ಥಳಾಂತರಿಸಬೇಕು, ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು, ದತ್ತಾತ್ರೇಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕು...’ ಇತ್ಯಾದಿ ಬೇಡಿಕೆಯೊಂದಿಗೆ ಸಂಘಪರಿವಾರ ಬಲವಂತದ ಹೋರಾಟಕ್ಕೆ ಮುಂದಾದಾಗ ಅದಕ್ಕೆ ವಿರೋಧವನ್ನು ಒಡ್ಡಿ ಕೋಮು ಸೌಹಾರ್ದ ವೇದಿಕೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿತು. 1999ರ ವರೆಗೆ ಸಹಜವಾಗಿದ್ದ ಮತ್ತು ಶಾಂತವಾಗಿದ್ದ ಬಾಬಾ ಬುಡನ್‌ಗಿರಿಯನ್ನು ದಿಢೀರ್ ಆಗಿ ಅಶಾಂತಿಯ ತಾಣವಾಗಿಸಿದುದರ ಹಿಂದೆ ರಾಜಕೀಯ ಕಾರಣ ಇದೆ ಎಂಬುದನ್ನು ಅರಿತುಕೊಂಡ ಕೋಮುಸೌಹಾರ್ದ ವೇದಿಕೆಯು ಬುಡನ್‌ಗಿರಿಯಲ್ಲಿ 1975ಕ್ಕಿಂತ ಮೊದಲಿದ್ದ ಪದ್ಧತಿಗಳನ್ನೇ ಮುಂದುವರಿಸಬೇಕು ಮತ್ತು ದರ್ಗಾದಲ್ಲಿ ಕೋಮುವಾದಿಗಳ ಆಚರಣೆಗಳನ್ನು ತಡೆಯಬೇಕು ಎಂದು ಆಗ್ರಹಿಸಿ ಬೀದಿಗಿಳಿಯಿತು. ಅದರಲ್ಲಿ ಭಾಗಿಯಾದವರೇ ಈ ಬಾನು ಮುಶ್ತಾಕ್.

ಶಿವಮೊಗ್ಗದವರಾದ ಮತ್ತು ಹೋರಾಟ ಮನೋಭಾವದ ಬಾನು ಮುಶ್ತಾಕ್‌ರು ವಕೀಲ ವೃತ್ತಿಯ ಅನುಭವದೊಂದಿಗೆ ಹೋರಾಟಕ್ಕೆ ಮಹತ್ವದ ಕೊಡುಗೆಯನ್ನು ಸಲ್ಲಿಸಿದರು. ಕೋಮುವಾದಿ ಚಟುವಟಿಕೆಗಳಿಗೆ ವಿರೋಧವನ್ನು ವ್ಯಕ್ತಪಡಿಸಿದರು. ಮುಸ್ಲಿಮ್ ಸಮುದಾಯದಲ್ಲಿದ್ದ ಮಡಿವಂತರು ಮಹಿಳೆಗೆ ಮಸೀದಿ ಪ್ರವೇಶವನ್ನು ನಿರಾಕರಿಸಿದಾಗ ಅವರು ಹೇಗೆ ವಿರೋಧಿಸಿ ಹೋರಾಟಕ್ಕಿಳಿದಿದ್ದರೋ ಅದೇ ರೀತಿಯ ಮನೋಭಾವವನ್ನು ಅವರು ಇಲ್ಲೂ ಪ್ರದರ್ಶಿಸಿದರು. ಈ ಕಾರಣದಿಂದಲೇ ಕೋಮುವಾದಿಗಳಿಗೆ ಬಾನು ಮುಶ್ತಾಕ್ ನುಂಗಲಾರದ ತುತ್ತಾಗಿ ಬಿಟ್ಟರು. ಬರೇ ಕತೆ, ಕವನ, ಬರಹಕ್ಕೆ ಸೀಮಿತವಾಗದೇ ನಾಡಿನ ಸಮಸ್ಯೆಗಳಿಗೆ ದನಿಯಾಗುವ ಬಾನು ಮುಶ್ತಾಕ್ ಅವರಿಗೆ ಬೇಕಾಗಿರಲಿಲ್ಲ. ಧರ್ಮದ್ವೇಷವನ್ನು ಪ್ರಶ್ನಿಸುವ ಬಾನು ಅವರಿಗೆ ಬೇಕಾಗಿರಲಿಲ್ಲ. ಆದ್ದರಿಂದಲೇ, ಬಾನು ಮುಶ್ತಾಕ್‌ರನ್ನು ಗಡಿಯಲ್ಲಿಟ್ಟೇ ಅವರು ನೋಡತೊಡಗಿದರು. ಆದರೆ,

ಬಾನು ಮುಶ್ತಾಕ್ ಇವುಗಳಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಮುಸ್ಲಿಮ್ ದ್ವೇಷಿ ಮತ್ತು ಕೋಮುವಾದಿ ವಿಚಾರಧಾರೆಯನ್ನು ಪ್ರಶ್ನಿಸುವುದನ್ನು ಮುಂದುವರಿಸುತ್ತಲೇ ಬಂದ ಬಾನು ಮುಶ್ತಾಕ್ ಅವರು ಹಿಜಾಬ್ ವಿವಾದದ ಸಂದರ್ಭದಲ್ಲಿ ಮತ್ತೆ ತನ್ನ ಖಚಿತ ನಿಲುವಿನ ಮೂಲಕ ಬಿಜೆಪಿಯ ಕೆಂಗಣ್ಣಿಗೆ ಗುರಿಯಾದರು. ಶಾಲೆಗಳಲ್ಲಿ ಹಿಜಾಬ್ ಧರಿಸುವ ಹೆಣ್ಣು ಮಕ್ಕಳ ಹಕ್ಕನ್ನು ಅವರು ಬೆಂಬಲಿಸಿದರು. ಸಾಮಾನ್ಯವಾಗಿ,

ಸರಕಾರದ ನಿರ್ಧಾರಕ್ಕೆ ವಿರುದ್ಧವಾಗಿ ಸಾಹಿತಿಗಳು ಧ್ವನಿಯೆತ್ತುವುದು ಕಡಿಮೆ ಎಂಬ ಮಾತಿದೆ. ಅದರಲ್ಲೂ ಬಿಜೆಪಿ ಸರಕಾರದ ಅವಧಿಯಲ್ಲಂತೂ ಇಂಥ ನಡವಳಿಕೆ ಹೆಚ್ಚು. ಮನ್‌ಮೋಹನ್ ಸಿಂಗ್ ಸರಕಾರವಿದ್ದಾಗ ಸಿನಿಮಾ ತಾರೆಯರಿಂದ ಹಿಡಿದು ಸಾಹಿತಿಗಳ ವರೆಗೆ ಎಲ್ಲರೂ ಸರಕಾರದ ನೀತಿ-ಧೋರಣೆಗಳನ್ನು ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ನಿಲುವನ್ನು ಸ್ವಚ್ಛಂದವಾಗಿ ವ್ಯಕ್ತಪಡಿಸುತ್ತಿದ್ದರು. ಆದರೆ, ಮೋದಿ ಸರಕಾರದ ಕಳೆದ 11 ವರ್ಷಗಳ ಅವಧಿಯಲ್ಲಿ ಈ ಪ್ರಕ್ರಿಯೆಯೇ ನಿಂತು ಹೋಗಿದೆ. ಆದರೆ, ಬಾನು ಮುಶ್ತಾಕ್ ಹಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿದಾಗ ಬಾನು ಮುಶ್ತಾಕ್ ತನ್ನ ನಿಲುವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದರು. ‘ಹಿಂದೆ ಸರಿದ ಮುಸ್ಲಿಮ್ ಹುಡುಗಿಯರ ಶಿಕ್ಷಣ’ ಎಂಬ ಶೀರ್ಷಿಕೆಯಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ 2022 ಫೆಬ್ರವರಿ 26ರಂದು ದೀರ್ಘ ಲೇಖನ ಬರೆದರು. ಹಿಜಾಬ್ ನಿಷೇಧದ ರಾಜಕೀಯ ಒಳಸುಳಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಉಲ್ಲೇಖಿಸಿ ವಿರೋಧ ವ್ಯಕ್ತಪಡಿಸಿದ್ದ ಅವರು, ಇದರಿಂದಾಗಿ ಮುಸ್ಲಿಮ್ ಹೆಣ್ಣು ಮಕ್ಕಳ ಶಿಕ್ಷಣದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಎಚ್ಚರಿಸಿ ಆತಂಕವನ್ನೂ ವ್ಯಕ್ತಪಡಿಸಿದ್ದರು. ನಿಜವಾಗಿ,

ಬಿಜೆಪಿಗೆ ತಕರಾರಿರುವುದೇ ಇಲ್ಲಿ. ತನಗೆ ವಿನೀತವಾಗಿರದ ಬಾನು ಮುಶ್ತಾಕ್‌ರ ಮೇಲೆ ಬಿಜೆಪಿಗೆ ದ್ವೇಷವಿದೆ. ಅದರಲ್ಲೂ ತನ್ನ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವ ಅವರ ಬಂಡಾಯ ಮತ್ತು ಧರ್ಮದ್ವೇಷ ವಿರೋಧಿ ನೀತಿಯ ಬಗ್ಗೆ ಆಕ್ರೋಶವಿದೆ. ಬೂಕರ್ ಪ್ರಶಸ್ತಿ ಪಡೆದಾಗಲೂ ಬಾನು ಮುಶ್ತಾಕ್‌ರನ್ನು ಬಿಜೆಪಿ ಪೂರ್ಣ ಮನಸ್ಸಿನಿಂದ ಅಭಿನಂದಿಸದೇ ಇರಲೂ ಇದುವೇ ಕಾರಣ. ಇಡೀ ರಾಜ್ಯವೇ ಬಾನು ಮುಶ್ತಾಕ್‌ರನ್ನು ಬೂಕರ್ ಮುಶ್ತಾಕ್ ಎಂದು ಸಂಭ್ರಮಿಸುತ್ತಿದ್ದಾಗಲೂ ಬಿಜೆಪಿ ಮನೆಯನ್ನು ಮೌನ ಹೊದ್ದುಕೊಂಡಿತ್ತು. ಇದೀಗ ಬಿಜೆಪಿ ತನ್ನ ಅಸಲು ಮುಖವನ್ನು ಬಹಿರಂಗಕ್ಕೆ ತಂದಿದೆ. ಧರ್ಮದ ನೆಪವನ್ನು ಮುಂದಿಟ್ಟುಕೊಂಡು  ನಾಡಹಬ್ಬವನ್ನು ಉದ್ಘಾಟಿಸುವುದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಒಂದುವೇಳೆ,

ದಸರಾ ಉದ್ಘಾಟಿಸುವುದಕ್ಕೆ ತನ್ನ ಧಾರ್ಮಿಕ ವಿಶ್ವಾಸ ಅಡ್ಡಿ ಬರುತ್ತದೆಂದಾದರೆ ಅದನ್ನು ಹೇಳಬೇಕಾಗಿರುವುದು ಬಾನು ಮುಶ್ತಾಕ್‌ರೇ ಹೊರತು ಬಿಜೆಪಿ ಅಲ್ಲ. ಆದರೆ ಬಾನು ಮುಶ್ತಾಕ್ ದಸರಾ ಉದ್ಘಾಟನೆಗೆ ಒಪ್ಪಿಕೊಂಡಿದ್ದಾರೆ. ತನ್ನನ್ನು ಆಯ್ಕೆ ಮಾಡಿರುವುದಕ್ಕೆ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹೀಗಿರುವಾಗ, ಬಿಜೆಪಿಗೇನು ತೊಂದರೆ? ಬಾನು ಮುಶ್ತಾಕ್‌ರಿಗೇ ಇಲ್ಲದ ವಿರೋಧವನ್ನು ಬಿಜೆಪಿ ಹುಡುಕುತ್ತಿರುವುದೇಕೆ? ತನ್ನ ನಂಬಿಕೆಗೆ ಚ್ಯುತಿ ಬಾರದಂತೆ ನಾಡಹಬ್ಬವನ್ನು ಹೇಗೆ ಉದ್ಘಾಟಿಸಬೇಕು ಎಂಬುದನ್ನು ಬಾನು ಮುಶ್ತಾಕ್‌ರಿಗೆ ಬಿಜೆಪಿ ಹೇಳಿಕೊಡಬೇಕಾಗಿಲ್ಲ. ಅದನ್ನು ಅವರೇ ನಿರ್ಧರಿಸಿಕೊಳ್ಳಲಿ.

Monday, 11 August 2025

ಧರ್ಮಸ್ಥಳ: ಮುಸ್ಲಿಮರೇ ಪ್ರಚೋದನೆಗೆ ಮರುಳಾಗಬೇಡಿ





ಕಳೆದೆರಡು ತಿಂಗಳುಗಳಿಂದ  ತಣ್ಣಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಧರ್ಮಸ್ಥಳದ ನೆಪದಲ್ಲಿ ಮತ್ತೆ ಬೆಂಕಿ ಹಚ್ಚುವ ಸಂಚುಗಳು ನಡೆಯತೊಡಗಿವೆ. ಇದಕ್ಕೆ ಬಿಜೆಪಿಯೇ ಚಾಲನೆಯನ್ನು ಕೊಟ್ಟಿದೆ.

ಧರ್ಮಸ್ಥಳ ಪ್ರಕರಣದ ಹಿಂದೆ ಮುಸ್ಲಿಮರಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಬಿಜೆಪಿಯ ಇನ್ನೋರ್ವ ನಾಯಕ ಅಶ್ವತ್ಥ ನಾರಾಯಣ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ‘ನಿಷೇಧಿತ ಪಿಎಫ್‌ಐ ಸಂಘಟನೆ ಇದರ ಹಿಂದಿದೆ’ ಎಂದು ಹೇಳಿದ್ದಾರೆ. ಇದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಮುಸ್ಲಿಮರನ್ನು ಕೇಂದ್ರೀಕರಿಸಿ ಧರ್ಮಸ್ಥಳ ‘ಶವ’ ಪ್ರಕರಣಕ್ಕೆ ಮುಸ್ಲಿಮ್ ಬಣ್ಣವನ್ನು ಕೊಡುವ ಪ್ರಯತ್ನಗಳು ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ‘ಅಜ್ಞಾತ ದೂರುದಾರನ ಹಿಂದೆ ಮುಸ್ಲಿಮರಿದ್ದಾರೆ’, ‘ಧರ್ಮಸ್ಥಳ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳುವ ಸಂಚು ನಡೆಸಿದ್ದಾರೆ’, ‘ಧರ್ಮಸ್ಥಳ ಕ್ಷೇತ್ರವೊಂದನ್ನು ಬಿಟ್ಟರೆ ಉಳಿದಂತೆ ಅದರ ಸುತ್ತಮುತ್ತಲೆಲ್ಲ ಮಸೀದಿಗಳು ಮಾತ್ರ ಇವೆ..’ ಎಂಬೆಲ್ಲಾ ಅಭಿಪ್ರಾಯಗಳನ್ನು ಹಂಚಿಕೊಳ್ಳುವವರು ಭಾರೀ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ,

ಇನ್ನಿಬ್ಬರು ನಾಯಕರೂ ಧರ್ಮಸ್ಥಳ ಪ್ರಕರಣವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದಕ್ಕೆ ಉತ್ತೇಜನ ನೀಡಿದ್ದಾರೆ. ಅವರಲ್ಲಿ ಓರ್ವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ‘ಅನ್ಯಧರ್ಮದ ಜಾಗದಲ್ಲಿ ಶವ ಹೂತಿದ್ದೇವೆ ಎಂದು ಯಾರಾದರೂ ದೂರು ಕೊಟ್ಟರೆ ಧರ್ಮಸ್ಥಳ ಮಾದರಿಯ ಕಾರ್ಯಾಚರಣೆ ಮಾಡುತ್ತೀರಾ..’ ಎಂದು ರಾಜ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿಯವರೂ ಇಂಥದ್ದೇ  ಮಾತನ್ನಾಡಿದ್ದಾರೆ. ‘ಮಸೀದಿಯಲ್ಲಿ ಶವಗಳನ್ನು ಹೂತಿಡಲ್ವಾ..’ ಎಂದವರು ಪ್ರಶ್ನಿಸಿದ್ದಾರೆ. ಈ ಮೂಲಕ ಸ್ಮಶಾನವೇ ಅಲ್ಲದ ಜಾಗಗಳಲ್ಲಿ ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪವಿರುವ ಧರ್ಮಸ್ಥಳ ಪ್ರಕರಣವನ್ನು ಮಸೀದಿ ವಠಾರದ ದಫನ ಭೂಮಿಗೆ ಹೋಲಿಸಿದ್ದಾರೆ. ಮಸೀದಿ ಪಕ್ಕದ ದಫನ ಭೂಮಿಯನ್ನು ಅವರು ಅಕ್ರಮ ಎಂದು ಪರೋಕ್ಷವಾಗಿ ಬಿಂಬಿಸುವುದಕ್ಕೆ ಯತ್ನಿಸಿದ್ದಾರೆ. ಅಂದಹಾಗೆ,

ಮುಸ್ಲಿಮರಿಗೂ ಧರ್ಮಸ್ಥಳ ಪ್ರಕರಣಕ್ಕೂ ಏನು ಸಂಬಂಧ ಇದೆ? 13 ವರ್ಷಗಳ ಹಿಂದೆ ಸೌಜನ್ಯ ಕಾಣೆಯಾದಂದಿನಿಂದ  ಈ ಅಜ್ಞಾತ ದೂರುದಾರನ ವರೆಗೆ ಯಾವುದರಲ್ಲೂ ಮುಸ್ಲಿಮರು ಕಾಣಿಸಿಕೊಂಡೇ ಇಲ್ಲ. ಸೌಜನ್ಯ ಪರ ಹೋರಾಟಗಾರರ ಗುಂಪಿನಲ್ಲೂ ಮತ್ತು ಈ ಹೋರಾಟಗಾರರನ್ನು ಪ್ರಶ್ನಿಸುತ್ತಾ ಹುಟ್ಟಿಕೊಂಡ ಗುಂಪಿನಲ್ಲೂ ಇರುವವರೆಲ್ಲಾ  ಹಿಂದೂಗಳೇ. ಧರ್ಮಸ್ಥಳ ಹೋರಾಟದಲ್ಲಿ ಕಾಣಿಸಿಕೊಂಡ ಎರಡೂ ಗುಂಪುಗಳ ಮುಂಚೂಣಿ ನಾಯಕರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರವರೆಗೆ ಎಲ್ಲರೂ ಹಿಂದೂ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಮುಸ್ಲಿಮ್ ಸಮುದಾಯದ ಯಾವೊಬ್ಬ ಮೌಲ್ವಿಯೂ ಈ ವಿಷಯದಲ್ಲಿ ಹೇಳಿಕೆಯನ್ನು ಕೊಟ್ಟಿಲ್ಲ. ಮುಸ್ಲಿಮ್ ಸಮುದಾಯದ ಅಧಿಕೃತ ಧ್ವನಿ ಎಂದು ಗುರುತಿಸಲಾಗುವ ಖಾಝಿಯವರೂ ಈ ಬಗ್ಗೆ ಏನನ್ನೂ ಹೇಳಿಲ್ಲ. ಮುಸ್ಲಿಮ್ ಸಮುದಾಯದ ಪ್ರಮುಖ ಧಾರ್ಮಿಕ ಸಂಘಟನೆಗಳ ಯಾವೊಬ್ಬ ನಾಯಕರೂ ಈ ವಿಷಯದಲ್ಲಿ ಮಧ್ಯಪ್ರವೇಶಿಸಿಲ್ಲ. ವಿದ್ವಾಂಸರಾಗಲಿ, ಪಂಡಿತರಾಗಲಿ ಧರ್ಮಸ್ಥಳಕ್ಕೆ ಸಂಬಂಧಿಸಿ ಯಾವ ಮಾತನ್ನೂ ಆಡಿಲ್ಲ. ಅಜ್ಞಾತ ದೂರುದಾರನ ಪರ ವಹಿಸುವುದಾಗಲಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಿಲ್ಲುವುದಾಗಲಿ ಮಾಡಿಯೇ ಇಲ್ಲ. ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎಂದು ಆರೋಪಿಸಲಾಗುತ್ತಿರುವ ಹೆಣ್ಣು ಮಕ್ಕಳ ಪೈಕಿ ಯಾರೂ ಮುಸ್ಲಿಮರಿಲ್ಲ. ಅಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗುತ್ತಿರುವವರಲ್ಲೂ ಮುಸ್ಲಿಮರಿಲ್ಲ. ಈ ಇಡೀ ಪ್ರಕರಣ ಮುಸ್ಲಿಮರಿಂದ ಮುಕ್ತವಾಗಿದೆ. ಮುಸ್ಲಿಮರ ಭಾಗೀದಾರಿಕೆಯಿಂದಲೂ ಮುಕ್ತವಾಗಿದೆ. ಇಷ್ಟೆಲ್ಲಾ ಇದ್ದೂ,

ಪದೇಪದೇ ಮುಸ್ಲಿಮರನ್ನು ಈ ವಿಷಯಕ್ಕೆ ಸಂಬಂಧಿಸಿ ಎಳೆದು ತರುತ್ತಿರುವುದೇಕೆ? ಮುಸ್ಲಿಮರನ್ನು ಸಂಚುಕೋರರಂತೆ  ಬಿಂಬಿಸಿ ಹಿಂದೂಗಳನ್ನು ಪ್ರಚೋದಿಸುವುದು ಇದರ ಹಿಂದಿರುವ ಉದ್ದೇಶವೇ? ತಣ್ಣಗಿರುವ ಜಿಲ್ಲೆಗೆ ಮತ್ತೆ ಬೆಂಕಿಯನ್ನು ಕೊಟ್ಟು ಕಾರ್ಯಕರ್ತರನ್ನು ಮತ್ತೆ ಧರ್ಮದ ಅಮಲಿನಲ್ಲಿ ಬೀದಿಗಿಳಿಸುವ ತಂತ್ರವೇ? ಅಥವಾ ಹೇಗಾದರೂ ಮಾಡಿ ಮುಸ್ಲಿಮರನ್ನು ಪ್ರಚೋದಿಸಿ ಅನಗತ್ಯ ಹೇಳಿಕೆಯನ್ನು ಕೊಡುವಂತೆ ಪ್ರೇರೇಪಿಸಿ ಬಲೆಗೆ ಬೀಳಿಸುವ ಕುತಂತ್ರವೇ? ನಿಜವಾಗಿ,

ಈ ದೇಶದಲ್ಲಿ ಹಿಂದೂಗಳಿಗೂ ಮತ್ತು ಮುಸ್ಲಿಮರಿಗೂ ಇರೋದು ಒಂದೇ ಸಂವಿಧಾನ. ಈ ಸಂವಿಧಾನ ನ್ಯಾಯವನ್ನು ಹಿಂದೂ-ಮುಸ್ಲಿಮ್ ಎಂದು ವರ್ಗೀಕರಿಸಿಲ್ಲ. ಹಿಂದೂಗಳಿಗೆ ಅನ್ಯಾಯವಾದಾಗ ಮುಸ್ಲಿಮರು ಮಾತಾಡಬಾರದು ಮತ್ತು ಮುಸ್ಲಿಮರಿಗೆ ಅನ್ಯಾಯವಾದಾಗ ಹಿಂದೂಗಳು ಮಾತಾಡಬಾರದು ಎಂದೂ ಅದು ಹೇಳಿಲ್ಲ. ಅನ್ಯಾಯದ ವಿರುದ್ಧ ಹಿಂದೂ-ಮುಸ್ಲಿಮ್ ಇಬ್ಬರೂ ಜೊತೆಗೂಡಿ ಹೋರಾಡಬೇಕಾದುದು ಸಾಂವಿಧಾನಿಕ ಅಗತ್ಯ. ಆದರೆ ಸಂವಿಧಾನ ಜಾರಿಯಾಗಿ 7 ದಶಕಗಳೇ ಕಳೆದ ಬಳಿಕದ ಭಾರತದ ಪರಿಸ್ಥಿತಿ ಹೇಗಿದೆಯೆಂದರೆ, ಹಿಂದೂಗಳ ವಿಷಯದಲ್ಲಿ ಮುಸ್ಲಿಮರು ಮಾತಾಡಬಾರದು ಎಂಬಲ್ಲಿಗೆ ತಲುಪಿದೆ. ಮುಸ್ಲಿಮರನ್ನು ಬೈದರೆ ಓಟು ಸಿಗುತ್ತದೆ ಎಂಬ ಸ್ಥಿತಿಗೆ ಬಂದು ನಿಂತಿದೆ. ಮುಸ್ಲಿಮರನ್ನು ಅಪರಾಧಿಗಳಂತೆ, ಹಿಂದೂ ವಿರೋಧಿಗಳಂತೆ, ದೇಶದ್ರೋಹಿಗಳಂತೆ, ಭಯೋತ್ಪಾದಕರಂತೆ.. ಬಿಂಬಿಸಿದರೆ ಹಿಂದೂಗಳು ತೃಪ್ತರಾಗುತ್ತಾರೆ ಎಂಬಂಥ  ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ. ಇದು ಸಂವಿಧಾನದ ಬಯಕೆ ಅಲ್ಲವಾದರೂ ಪರಿಸ್ಥಿತಿ ಆ ಮಟ್ಟಕ್ಕೆ ಕೆಟ್ಟು ಹೋಗಿರುವುದರಿಂದ ಮುಸ್ಲಿಮರು ಪ್ರತಿಕ್ರಿಯಿಸುವಾಗ ಜಾಗರೂಕತೆಯನ್ನು ಪಾಲಿಸುವ ಅನಿವಾರ್ಯತೆ ಇದೆ. ಧರ್ಮಸ್ಥಳ ವಿಷಯಕ್ಕೂ ಈ ಎಚ್ಚರಿಕೆ ಅನ್ವಯವಾಗುತ್ತದೆ.

ಮುಸ್ಲಿಮರನ್ನು ಪ್ರಚೋದಿಸಿ ಧರ್ಮಸ್ಥಳ ಪ್ರಕರಣದಲ್ಲಿ ಭಾಗಿಯಾಗುವಂತೆ ಮಾಡುವ ಹುನ್ನಾರವೊಂದು ನಡೆಯುತ್ತಿದೆ. ಒಂದುವೇಳೆ, ಪ್ರಚೋದನೆಗೆ ಬಲಿಯಾಗಿ ಮುಸ್ಲಿಮ್ ಸಮುದಾಯದ ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಭಾಗಿಯಾದರೆ ಆ ಬಳಿಕ ಈ ಇಡೀ ಪ್ರಕರಣವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಿ ಮುಖ್ಯ ವಿಷಯದಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸರಿಸುವ ದುರುದ್ದೇಶವೂ ಇದರ ಹಿಂದಿರಬಹುದು. ಮತ್ತೆ ದಕ್ಷಿಣ ಕನ್ನಡವನ್ನು ಧರ್ಮದ್ವೇಷದ ಸಂಘರ್ಷಕ್ಕೆ ದೂಡುವುದೂ ಇದರ ಹಿಂದಿನ ಉದ್ದೇಶವಾಗಿರಬಹುದು. ಅಂದಹಾಗೆ,

ಧರ್ಮಸ್ಥಳದ ಬಗ್ಗೆ ಅಜ್ಞಾತ ದೂರುದಾರ ನೀಡಿರುವ ದೂರಿನ ಮೇಲೆ ಸಿಟ್ ರಚಿಸಿರುವುದು ಸರಕಾರ. ಶವಗಳಿಗೆ ಹುಡುಕಾಡುತ್ತಿರುವುದೂ ಸರಕಾರವೇ ರಚಿಸಿದ ಪ್ರಮುಖ ಪೊಲೀಸ್ ಅಧಿಕಾರಿಗಳು ಮತ್ತು ಅವರ ತಂಡ. ಈ ಸರಕಾರವೂ ಅಷ್ಟೇ, ಸ್ವಯಂ ಘೋಷಿತ ಅಲ್ಲ. ನಾವೇ ಚುನಾಯಿಸಿದ ಸರಕಾರ. ಹೀಗಿರುತ್ತಾ, ಅಜ್ಞಾತ ದೂರುದಾರನನ್ನು, ಆತ ತೋರಿಸಿರುವ ಜಾಗಗಳನ್ನು ಮತ್ತು ಅದರ ಮೇಲೆ ತನಿಖೆಗಿಳಿದಿರುವ ಪೊಲೀಸ್ ಅಧಿಕಾರಿಗಳನ್ನು ನೆಪ ಮಾಡಿಕೊಂಡು ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಯಾವ ಅರ್ಥವೂ ಇಲ್ಲ. ಸದ್ಯ ನಾಗರಿಕರಾದ ನಾವು ಮಾಡಬಹುದಾದದ್ದು ಏನೆಂದರೆ,
ತನಿಖೆಯ ಫಲಿತಾಂಶಕ್ಕಾಗಿ ಕಾಯುವುದು. ದೂರುದಾರ ಸುಳ್ಳು ಹೇಳಿದ್ದರೆ ಆತನಿಗೆ ಶಿಕ್ಷೆಯಾಗಲಿ. ಆತನ ದೂರಿನಲ್ಲಿ ನಿಜ ಇದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಈ ಬಗ್ಗೆ ಸ್ಪಷ್ಟವಾಗಬೇಕಾದರೆ ತನಿಖೆ ಮುಕ್ತಾಯಗೊಳ್ಳಬೇಕು. ಅದು ಬಿಟ್ಟು ತನಿಖಾ ಹಂತದಲ್ಲೇ  ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಇಡೀ ತನಿಖಾ ಪ್ರಕ್ರಿಯೆಯನ್ನೇ ಬುಡಮೇಲುಗೊಳಿಸುವ ರೀತಿಯ ಹೇಳಿಕೆಗಳು ಸಮಾಜದ ಶಾಂತಿ-ಸುವ್ಯವಸ್ಥೆಯ ಮೇಲೆ ಪರಿಣಾಮ ಉಂಟು ಮಾಡಬಲ್ಲುದು. ಜನಸಾಮಾನ್ಯರು ಇಂಥ ಅಪಪ್ರಚಾರಗಳಿಂದ ಪ್ರಭಾವಿತರಾಗಿ ಮುಸ್ಲಿಮರನ್ನು ತಪ್ಪಿತಸ್ಥರಂತೆ ಮತ್ತು ಸಂಚುಕೋರರಂತೆ  ಕಾಣಲು ಪ್ರಾರಂಭಿಸಬಹುದು. ಅಲ್ಲದೇ, ಇದು ಅಪಪ್ರಚಾರ ಮಾಡುವವರ ಉದ್ದೇಶವೂ ಆಗಿರಬಹುದು. ಆದ್ದರಿಂದ,

 ಸರಕಾರ ಈ ಬಗ್ಗೆ ಜಾಗೃತವಾಗಬೇಕು. ಅಪಪ್ರಚಾರದಲ್ಲಿ ತೊಡಗಿರುವವರ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಸೋಶಿಯಲ್ ಮೀಡಿಯಾದ ಮೇಲೆ ಹದ್ದಿನ ಕಣ್ಣಿಡಬೇಕು. ಪ್ರಚೋದನಾತ್ಮಕ ಬರಹ ಮತ್ತು ವೀಡಿಯೋಗಳನ್ನು ಪತ್ತೆ ಹಚ್ಚಿ, ಅದರ ಹಿಂದಿರುವವರಿಗೆ ಕಾನೂನಿನ ಪಾಠ ಮಾಡಬೇಕು.

Saturday, 9 August 2025

ಕಲಬುರಗಿಯ ಗೋರಿ, ಛತ್ತೀಸ್‌ಗಢದ ನನ್‌ಗಳು ಮತ್ತು ಕುಕ್ಕರಿನಲ್ಲಿರುವ ಜನಸಾಮಾನ್ಯರು





ಸುಳ್ಳುಗಳನ್ನು ಹೇಗೆ ಉತ್ಪಾದಿಸಲಾಗುತ್ತದೆ ಮತ್ತು ದ್ವೇಷವನ್ನು ಹರಡುವುದಕ್ಕೆ ಈ ಸುಳ್ಳುಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದಕ್ಕೆ ನಮ್ಮದೇ ರಾಜ್ಯದ ಕಲಬುರಗಿ ಮತ್ತು ಛತ್ತೀಸ್‌ಗಢದ ಘಟನೆಗಳನ್ನು ತಾಜಾ ಉದಾಹರಣೆಯಾಗಿ ಎತ್ತಿಕೊಳ್ಳಬಹುದು.

‘ಕಲಬುರಗಿಯ ಅಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿರುವ ಕರ್ನಾಟಕ ಕೇಂದ್ರೀಯ ವಿವಿ ಕ್ಯಾಂಪಸ್‌ನಲ್ಲಿ ರಾತೋರಾತ್ರಿ ಅಕ್ರಮವಾಗಿ ಗೋರಿಗಳ ನಿರ್ಮಾಣ ಮಾಡಲಾಗಿದೆ, ಕಾಂಪೌಂಡ್  ಕಟ್ಟಲಾಗುತ್ತಾ ಇದೆ ಮತ್ತು ಬಣ್ಣವನ್ನೂ ಬಳಿಯಲಾಗುತ್ತಾ ಇದೆ..’ ಎಂಬಂತಹ ಸುದ್ದಿಗಳು ಕನ್ನಡದ ಪ್ರಮುಖ ಟಿವಿ ಚಾನೆಲ್‌ಗಳಲ್ಲಿ ದಿನದ ಹಿಂದೆ ಪ್ರಸಾರವಾಗಿತ್ತು. ವಕ್ಫ್ನ ಹೆಸರಲ್ಲಿ ಈಗಾಗಲೇ ಮುಸ್ಲಿಮ್ ದ್ವೇಷಿ ವಾತಾವರಣವನ್ನು ಸೃಷ್ಟಿ ಮಾಡಲು ಮಾಧ್ಯಮಗಳು ಯಶಸ್ವಿಯಾಗಿರುವುದರಿಂದ ಈ ‘ಗೋರಿ’ಯು ಈಗಾಗಲೇ ಆಗಿರುವ ಗಾಯಕ್ಕೆ ಉಪ್ಪು ಸವರಿದಂತಾಗುವುದು ಸಹಜ. ವಕ್ಫ್ ಎಂದರೆ ಹಿಂದೂಗಳ ಭೂಮಿಯನ್ನು ಕಬಳಿಸುವುದರ ಹೆಸರು ಎಂದು ನಂಬಿರುವವರಿಗೆ ಈ ‘ಗೋರಿ’ ಸುದ್ದಿ ಅವರ ನಂಬಿಕೆಗೆ ಇನ್ನಷ್ಟು ಪುಷ್ಠಿಯನ್ನು ಕೊಡುವ ಕೆಲಸ ಮಾಡುತ್ತದೆ. ಅಂದಹಾಗೆ,

650 ಎಕರೆಗಿಂತಲೂ ವಿಸ್ತಾರ ಪ್ರದೇಶವನ್ನು ಹೊಂದಿರುವ ವಿವಿ ಕ್ಯಾಂಪಸ್‌ನಲ್ಲಿ ಗೋರಿಗಳಿಲ್ಲವೇ ಎಂಬ ಪ್ರಶ್ನೆಗೆ, ಇದೆ ಎಂಬುದೇ ಸರಿಯಾದ ಉತ್ತರ. ಕೇವಲ ಗೋರಿಗಳು ಮಾತ್ರವಲ್ಲ, ದೇವಸ್ಥಾನಗಳೂ ಇವೆ. ಇಲ್ಲಿ ಬಂದೇ ನವಾಝï ದರ್ಗಾ ಮತ್ತು ಗೈಬ್‌ಪೀರ್ ದರ್ಗಾಗಳು ಇರುವಂತೆಯೇ, ಬೀರಲಿಂಗೇಶ್ವರ ದೇವಸ್ಥಾನ ಮತ್ತು ಲಕ್ಷ್ಮೀ ದೇವಸ್ಥಾನಗಳೂ ಇವೆ. ಮಾತ್ರವಲ್ಲ, ಈ ಎರಡೂ ಗೋರಿಗಳು ರಾತೋರಾತ್ರಿ ಹುಟ್ಟಿಕೊಂಡವುಗಳಲ್ಲ. ಇವುಗಳಿಗೆ ನೂರಾರು ವರ್ಷಗಳ ಇತಿಹಾಸ ಇದೆ. ದೇವಸ್ಥಾನಗಳಿಗೂ ಇಂಥz್ದೆÃ ಪುರಾತನ ಹಿನ್ನೆಲೆ ಇದೆ ಎಂಬುದೇ ನಿಜ.

ಛತ್ತೀಸ್‌ಗಢ ಪ್ರಕರಣವಂತೂ ಇದಕ್ಕಿಂತಲೂ ಘೋರವಾಗಿದೆ. ಜಾರ್ಖಂಡಿನ ಮೂರು ಬುಡಕಟ್ಟು ಯುವತಿಯರು ಮತ್ತು ಓರ್ವ ಯುವಕನೊಂದಿಗೆ ಛತ್ತೀಸ್‌ಗಢದ ರೈಲ್ವೇ ನಿಲ್ದಾಣಕ್ಕೆ ಬಂದ ಕ್ರೈಸ್ತ ಭಗಿನಿಯರಾದ ವಂದನಾ ಫ್ರಾನ್ಸಿಸ್ ಮತ್ತು ಸಿಸ್ಟರ್ ಪ್ರೀತಿ ಅವರನ್ನು ರೈಲ್ವೇ ಅಧಿಕಾರಿ ನೋಡುತ್ತಾರೆ. ಇದನ್ನು ಮತಾಂತರದ ಹುನ್ನಾರ ಎಂದು ಅಂದುಕೊAಡ ಅವರು ನೇರ ಸಂಘಪರಿವಾರಕ್ಕೆ ಮಾಹಿತಿ ಕೊಡುತ್ತಾರೆ. ಅದರ ಸ್ಥಳೀಯ ನಾಯಕ ಜ್ಯೋತಿ ಶರ್ಮಾ ತನ್ನ ತಂಡದೊಂದಿಗೆ ಬರುತ್ತಾನೆ. ಪೊಲೀಸರ ಎದುರೇ ಆತ ಆ ಬುಡಕಟ್ಟು ವ್ಯಕ್ತಿಗಳ ಮೇಲೆ ಏರಿ ಹೋಗುತ್ತಾನೆ. ಆತನ ಆದೇಶದಂತೆ ಪೊಲೀಸರು ಮತಾಂತರ ಮತ್ತು ಮಾನವ ಕಳ್ಳಸಾಗಾಣಿಕೆಯ ಕೇಸು ದಾಖಲಿಸುತ್ತಾರೆ. ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಬಂದಿರುವ ಇವರುಗಳು ಇದೀಗ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಆಘಾತಕಾರಿ ಸಂಗತಿಗಳಿವೆ. ತಮ್ಮ ಮೇಲಾದ ದೌರ್ಜನ್ಯವನ್ನು ವಿವರಿಸಿ ಈ ಯುವತಿಯರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಜ್ಯೋತಿ ಶರ್ಮಾನ ಸೂಚನೆಯಂತೆ ಪೊಲೀಸರು ಕಸ್ಟಡಿಯಲ್ಲಿಟ್ಟು ತಮ್ಮನ್ನು ಥಳಿಸಿದ್ದಾರೆ, ತನ್ನ ಬೆಂಬಲಿಗರಿಂದ  ಅತ್ಯಾಚಾರ ಮಾಡಿಸುವುದಾಗಿ ಆತ ಬೆದರಿಸಿದ್ದಾನೆ. ಆತನ ವಿರುದ್ಧ ನಾವು ಕೊಟ್ಟ ದೂರನ್ನೂ ಪೊಲೀಸರು ದಾಖಲಿಸಿಲ್ಲ, ನಾವು ಮತಾಂತರವಾಗಿಲ್ಲ, ಇದು ಮಾನವ ಕಳ್ಳಸಾಗಾಣಿಕೆಯೂ ಅಲ್ಲ... ಎಂದೆಲ್ಲಾ  ಅವರು ಕ್ಯಾಮರಾಗಳ ಮುಂದೆಯೇ ಮತ್ತು ಅಷ್ಟೂ ಪತ್ರಕರ್ತರ ಎದುರೇ ಹೇಳಿದ್ದಾರೆ.

ಈ ಎರಡೂ ಘಟನೆಗಳಲ್ಲಿ ಕೆಲವು ಮೂಲಭೂತ ಪ್ರಶ್ನೆಗಳಿವೆ. ರೈಲ್ವೇ ಅಧಿಕಾರಿಗೆ ಅನುಮಾನ ಬಂದರೆ ಆತ ಮೊದಲು ತಿಳಿಸಬೇಕಾದದ್ದು ಯಾರಿಗೆ? ಪೊಲೀಸರಿಗೋ ಅಲ್ಲ, ಸಂಘಪರಿವಾರಕ್ಕೋ? ಒಂದುವೇಳೆ, ರಾತೋರಾತ್ರಿ ಅಕ್ರಮವಾಗಿ ಗೋರಿ ಕಟ್ಟಲಾಗುತ್ತಿದೆ ಎಂಬ ಸುದ್ದಿ ಓರ್ವ ಪತ್ರಕರ್ತನಿಗೆ ಸಿಕ್ಕರೆ ಮೊದಲಾಗಿ ಆತ ಮಾಡಬೇಕಾದದ್ದೇನು? ಮಾಧ್ಯಮ ಮುಖ್ಯಸ್ಥರಿಗೆ ತಿಳಿಸುವುದು. ಆ ಮುಖ್ಯಸ್ಥ ಮಾಡಬೇಕಾದದ್ದೇನು? ಹಿಂದೆ ಮುಂದೆ ನೋಡದೇ ಬ್ರೇಕಿಂಗ್ ನ್ಯೂಸ್ ಕೊಡೋದೋ ಅಥವಾ ಸತ್ಯ ಏನೆಂದು ಸ್ಪಷ್ಟಪಡಿಸಿ ಮಾಹಿತಿ ಕೊಡುವಂತೆ ಪತ್ರಕರ್ತನಿಗೆ ಸೂಚಿಸುವುದೋ? ಆದರೆ ಈ ವಿವೇಚನೆಯೇ ಇವತ್ತು ಮಾಧ್ಯಮ ಹೊಣೆಗಾರರಿಂದಲೂ ಮತ್ತು ಸರಕಾರಿ ಅಧಿಕಾರಿಗಳಿಂದಲೂ ಕಾಣೆಯಾಗುತ್ತಿದೆ ಎಂಬುದನ್ನೇ ಈ ಎರಡೂ ಘಟನೆಗಳು ಎತ್ತಿ ಹೇಳುತ್ತಿವೆ. ಹಾಗಂತ,

ಇದೊAದು ಪ್ರಮಾದ, ಗೊತ್ತಿಲ್ಲದೇ ಆಗಿರುವಂಥ ಸಹಜ ತಪ್ಪುಗಳು ಎಂದೆಲ್ಲಾ ಸಮರ್ಥಿಸುವ ಹಾಗಿಲ್ಲ. ತಾನು ಯಾರಿಗೆ ದೂರು ಕೊಡಬೇಕು ಎಂಬುದು ಓರ್ವ ರೈಲ್ವೇ ಅಧಿಕಾರಿಗೆ ಗೊತ್ತೇ ಇರುತ್ತದೆ. ತನಗೆ ಸಿಕ್ಕ ಸುದ್ದಿಯನ್ನು ನಿಕಷಕ್ಕೆ ಒಡ್ಡಿ ಪ್ರಸಾರ ಮಾಡಬೇಕು ಎಂಬ ವಿವೇಕ ಪತ್ರಿಕಾ ಮುಖ್ಯಸ್ಥನಿಗೂ ಇರುತ್ತದೆ. ಹಾಗಿದ್ದರೆ ಮತ್ತೇಕೆ ಈ ಬಗೆಯ ನಿರ್ಲಕ್ಷ್ಯಗಳು ನಡೆಯುತ್ತಿವೆ ಎಂಬ ಪ್ರಶ್ನೆ ಇರಬಹುದು. ನಿಜವಾಗಿ, ಇವು ನಿರ್ಲಕ್ಷ್ಯವೂ ಅಲ್ಲ, ಅವಿವೇಕವೂ ಅಲ್ಲ. ಪ್ರಮಾದವೂ ಅಲ್ಲ. ಉದ್ದೇಶಪೂರ್ವಕವಾಗಿಯೇ ಇಂಥವುಗಳು ನಡೆಯುತ್ತಿವೆ ಎಂದೇ ಹೇಳಬೇಕಾಗಿದೆ. ಇದೊಂದು ಸಂಚು. ಯೋಜನಾಬದ್ಧವಾಗಿಯೇ ನಡೆಯುತ್ತಿರುವ ಸಂಚು.

ಮುಸ್ಲಿಮರನ್ನು ಖಳರಂತೆ, ಹಿಂದೂ ವಿರೋಧಿಗಳಂತೆ, ಜನಸಂಖ್ಯಾ ಸ್ಫೋಟ ಮಾಡುವವರಂತೆ, ಹಿಂದೂಗಳ ಭೂಮಿಯನ್ನು ಕಬಳಿಸುವವರಂತೆ, ದೇಶದ್ರೋಹಿಗಳಂತೆ, ಪಾಕಿಸ್ತಾನ ಪ್ರೇಮಿಗಳಂತೆ.. ಇತ್ಯಾದಿ ಇತ್ಯಾದಿಯಾಗಿ ದಿನಾ ಸುದ್ದಿಗಳನ್ನು ಉತ್ಪಾದಿಸುವುದನ್ನೇ ಪೂರ್ಣಕಾಲಿಕ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಒಂದು ಬೃಹತ್ ಜಾಲ ಈ ದೇಶದಲ್ಲಿದೆ. ಮುಸ್ಲಿಮ್ ಯುವಕ ಹಿಂದೂ ಯುವತಿಯನ್ನು ಪ್ರೀತಿಸಿದರೆ ಅದನ್ನು ಲವ್ ಜಿಹಾದ್ ಅನ್ನುವ ಈ ಗುಂಪು, ಮುಸ್ಲಿಮ್ ಯುವತಿ ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದರೆ ಸೌಹಾರ್ದ ಎಂದು ಸುದ್ದಿ ಮಾಡುತ್ತವೆ. ಜಾನುವಾರು ಸಾಗಾಟದಲ್ಲಿ ಮುಸ್ಲಿಮ್ ವ್ಯಕ್ತಿ ಇದ್ದರೆ ತಕ್ಷಣ ಅದನ್ನು ‘ಅಕ್ರಮ ಗೋಸಾಗಾಟ’ ಎಂದು ಸುದ್ದಿ ಬರುತ್ತದೆ. ಮುಸ್ಲಿಮ್ ವ್ಯಕ್ತಿಯೋರ್ವ ತಪ್ಪು ಮಾಡುವುದನ್ನು ‘ಧರ್ಮ ಕಲಿಸಿದ ಅಪರಾಧ’ ಎಂದು ಹೇಳುತ್ತಲೇ ಅದೇ ತಪ್ಪನ್ನು ಹಿಂದೂ ವ್ಯಕ್ತಿ ಮಾಡಿದರೆ ಅದನ್ನು ವೈಯಕ್ತಿಕ ತಪ್ಪು ಎಂದು ಸದ್ದಿಲ್ಲದೇ ಸರಿಸಿ ಬಿಡುತ್ತವೆ. ಯಾವುದೇ ಅಪರಾಧ ಕೃತ್ಯಕ್ಕೂ ಧರ್ಮದ ಬಣ್ಣ ಕೊಡುವುದು ಮತ್ತು ಇಸ್ಲಾಮನ್ನು ಕಟಕಟೆಯಲ್ಲಿ ನಿಲ್ಲಿಸುವುದು ಈ ಗುಂಪಿನ ತಂತ್ರವಾಗಿದೆ. ಇಸ್ಲಾಮಿನ ಕುರಿತಂತೆ ಭೀತಿಯನ್ನು ಅಥವಾ ಫೋಬಿಯಾವನ್ನು ಹಬ್ಬಿಸುವುದು ಮತ್ತು ಸಾರ್ವಜನಿಕರಲ್ಲಿ ಮುಸ್ಲಿಮರ ಬಗ್ಗೆ ಅಸಹನೆಯನ್ನು ಸೃಷ್ಟಿಸುವುದಕ್ಕೂ ಈ ಗುಂಪು ಹೇಸುತ್ತಿಲ್ಲ. ಇಂಥ ಸುಳ್ಳುಗಳನ್ನು ದಿನಾ ಓದುತ್ತಾ ಮತ್ತು ವೀಕ್ಷಿಸುತ್ತಾ ಬರುವ ಜನಸಾಮಾನ್ಯರಿಗೆ ನಿಧಾನವಾಗಿ ಇದು ನಿಜ ಇರಬಹುದು ಎಂದೇ ಅನಿಸತೊಡಗುತ್ತದೆ. ಮುಸ್ಲಿಮರೇ ದೇಶದ ಬಹುದೊಡ್ಡ ಸಮಸ್ಯೆ ಎಂದು ಅವರು ಅಂದುಕೊಳ್ಳತೊಡಗುತ್ತಾರೆ. ಹೀಗೆ ಜನಸಾಮಾನ್ಯರು ಭಾವಿಸತೊಡಗಿದ ದಿನದಿಂದ ರಾಜಕಾರಣಿಗಳು ಸುರಕ್ಷಿತರಾಗುತ್ತಾರೆ. ಈ ಜನಸಾಮಾನ್ಯರಿಗೆ ಅವರ ಭ್ರಷ್ಟಾಚಾರಕ್ಕಿಂತ ಮುಸ್ಲಿಮರೇ ಮುಖ್ಯವಾಗುತ್ತಾರೆ. ಅಭಿವೃದ್ಧಿಗಿಂತಲೂ ಮುಸ್ಲಿಮ್ ಇಶ್ಯುಗಳೇ ಜನಸಾಮಾನ್ಯರಿಗೆ ಮುಖ್ಯವಾಗುತ್ತದೆ. ಮುಸ್ಲಿಮರ ಬಗ್ಗೆ ಹೀಗೆ ಸುಳ್ಳು ಸುಳ್ಳೇ ಬಿತ್ತಲಾದ ಭೀತಿಯು ಇದರ ಹಿಂದಿರುವ ರಾಜಕೀಯ ಶಕ್ತಿಗಳಿಗೆ ಮತ ಚಲಾಯಿಸಲೇಬೇಕಾದ ಒತ್ತಡವನ್ನು ಜನಸಾಮಾನ್ಯರ ಮೇಲೆ ಹಾಕುತ್ತಲೇ ಇರುತ್ತದೆ. ಇವರು ಮತ ಚಲಾಯಿಸುತ್ತಾ ಹೋಗುತ್ತಾರೆ. ಮತ ಪಡೆದವರು ಮುಸ್ಲಿಮ್ ಭೀತಿಯನ್ನು ಮಾಧ್ಯಮಗಳ ಮೂಲಕ ಹಂಚುತ್ತಲೇ ಇರುತ್ತಾರೆ.

ಕಲಬುರಗಿಯ ಗೋರಿಗಳಾಗಲಿ ಛತ್ತೀಸ್‌ಗಢದ ನನ್ ಪ್ರಕರಣವಾಗಲಿ ಈ ಎರಡನ್ನೂ ನೋಡಬೇಕಾದದ್ದು ಕಾನೂನಿನ ದೃಷ್ಟಿಯಿಂದಲೇ ಹೊರತು ಮುಸ್ಲಿಮ್ ಮತ್ತು ಕ್ರೈಸ್ತ ಎಂಬ ಕನ್ನಡಿಯಲ್ಲಲ್ಲ. ಓರ್ವ ಪತ್ರಕರ್ತ ಮತ್ತು ಅಧಿಕಾರಿ ಈ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದರೆ ಗೋರಿ ಬ್ರೇಕಿಂಗ್ ನ್ಯೂಸ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ, ಅದೊಂದು ಸುದ್ದಿಯೇ ಅಲ್ಲ. ನೂರಾರು ವರ್ಷಗಳಿಂದ ಅಲ್ಲಿರುವ ಗೋರಿಗಳ ಬಗ್ಗೆ ಯಾರು ಸುಳ್ಳುಗಳನ್ನು ಹರಡಿದ್ದಾರೋ ಅವರನ್ನೇ ಪತ್ರಕರ್ತ ಹುಡುಕಿಕೊಂಡು ಹೋಗುತ್ತಾನೆ. ಅವರನ್ನೇ ಸಮಾಜದ ಮುಂದೆ ಬ್ರೇಕ್ ಮಾಡುತ್ತಾನೆ. ರೈಲ್ವೇ ಅಧಿಕಾರಿಯೂ ಇಂಥದ್ದೇ  ವಿವೇಚನೆಯನ್ನು ಪ್ರದರ್ಶಿಸುತ್ತಾನೆ. ತನ್ನ ಅನುಮಾನವನ್ನು ಪೊಲೀಸರಿಗೆ ತಿಳಿಸಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಾನೆ. ಸಾರ್ವಜನಿಕರನ್ನು ಅನಗತ್ಯ ಆತಂಕಕ್ಕೆ ತಳ್ಳದೇ ಕಾನೂನಿನಡಿ ಪರಿಹಾರ ಕಂಡುಕೊಳ್ಳುತ್ತಾನೆ. ಆದರೆ, ಫೋಬಿಯಾದ ಈ ಕಾಲದಲ್ಲಿ ಮಾಧ್ಯಮಗಳೂ ವಿವೇಚನೆಯನ್ನು ಕಳಕೊಂಡು ಬಿಟ್ಟಿವೆ. ಅಧಿಕಾರಿಗಳೂ ಸೂಕ್ಷ್ಮತೆಯನ್ನು ಕಳಕೊಳ್ಳುತ್ತಿದ್ದಾರೆ. ಜನಸಾಮಾನ್ಯರಂತೂ ಸತ್ಯ-ಸುಳ್ಳಿನ ಕುಕ್ಕರಿನಲ್ಲಿ ದಿನಾ ಬೇಯುತ್ತಿದ್ದಾರೆ.

Monday, 28 July 2025

ಗಾಝಾ ನರಮೇಧಕ್ಕೆ ಪ್ರತಿಭಟನೆ ವ್ಯಕ್ತಪಡಿಸಬಾರದೇ?



ಸನ್ಮಾರ್ಗ ಸಂಪಾದಕೀಯ 

ಜುಲೈ 25ರಂದು ಬಾಂಬೆ ಹೈಕೋರ್ಟು ವ್ಯಕ್ತಪಡಿಸಿದ ಪರಾಮರ್ಶೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಈ ಪರಾಮರ್ಶೆಗೆ ಕಾರಣವಾದ ಘಟನೆ ಹೀಗಿದೆ-

ಗಾಝಾದಲ್ಲಿ ನಡೆಯುತ್ತಿರುವ ಜನಾಂಗ ನಿರ್ಮೂಲನೆಯ ವಿರುದ್ಧ ಪ್ರತಿಭಟನೆ ನಡೆಸಲು ಆಲ್ ಇಂಡಿಯಾ ಪೀಸ್ ಆಂಡ್ ಸಾಲಿಡಾರಿಟಿ ಫೌಂಡೇಶನ್ (AIPSF) ಎಂಬ ಸಂಘಟನೆಯು ಜೂನ್ 13ರಂದು ಮುಂಬೈಯ ಆಝಾದ್ ಪೊಲೀಸ್ ಠಾಣೆಯಿಂದ ಅನುಮತಿಯನ್ನು ಕೋರಿತ್ತು. ಗಾಝಾದಲ್ಲಿ ನಡೆಯುತ್ತಿರುವ ಜನಾಂಗ ಹತ್ಯೆ ಕೊನೆಗೊಳ್ಳಬೇಕು ಮತ್ತು ಕದನ ವಿರಾಮ ಏರ್ಪಡಬೇಕು ಎಂಬ ಆಗ್ರಹದೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಕೋರಿಕೆ ಪತ್ರದಲ್ಲಿ ಪೊಲೀಸರಿಗೆ ತಿಳಿಸಿತ್ತು. ಇದಾಗಿ ನಾಲ್ಕು ದಿನಗಳ ಬಳಿಕ ಜೂನ್ 17ರಂದು ಅನುಮತಿ ನಿರಾಕರಿಸಿ ಪೊಲೀಸರು ಸೂಚನೆ ಹೊರಡಿಸಿದರು. ಆಝಾದ್ ಮೈದಾನದಲ್ಲಿ ಅಂಥ ದ್ದೊಂದು ಪ್ರತಿಭಟನೆಯು ಕಾನೂನು ಸುವ್ಯವಸ್ಥೆಗೆ ತೊಂದರೆಯನ್ನು ಉಂಟು ಮಾಡಬಹುದು ಎಂದು ಅವರು ಕಾರಣವನ್ನು ನೀಡಿದರು. ಇದನ್ನು ಪ್ರಶ್ನಿಸಿ ಸಿಪಿಐಎಂ ಪಕ್ಷವು ಬಾಂಬೆ ಹೈಕೋರ್ಟಿನ ಬಾಗಿಲು ಬಡಿಯಿತು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಾಧೀಶರಾದ ರವೀಂದ್ರ ಘುಗೆ ಮತ್ತು ಗೌತಮ್ ಅಂಖದ್ ಅವರು ವ್ಯಕ್ತಪಡಿಸಿದ ಅಭಿಪ್ರಾಯವೇ ಈಗ ಪ್ರಶ್ನೆಗೆ ಮತ್ತು ಟೀಕೆಗೆ ಒಳಗಾಗಿದೆ.

"ನಮ್ಮ ದೇಶದಲ್ಲೇ  ಬೇಕಾದಷ್ಟು ಸಮಸ್ಯೆಗಳಿವೆ, ಆದರೆ ನಮ್ಮ ದೇಶದ ಸಮಸ್ಯೆಗಳನ್ನು ನಿರ್ಲಕ್ಷಿಸಿ ನೀವು ಗಾಝಾ ಮತ್ತು ಫೆಲೆಸ್ತೀನ್ ಕಡೆ ನೋಡುತ್ತಿದ್ದೀರಿ, ಇದು ಸಂಕುಚಿತ ದೃಷ್ಟಿಕೋನ. ನೀವು ನಿಮ್ಮ ದೇಶದೊಳಗೆ ನೋಡಿ. ದೇಶಪ್ರೇಮಿಗಳಾಗಿ. ಈ ದೇಶದ ನಾಗರಿಕರಿಗಾಗಿ ಕೆಲಸ ಮಾಡಿ ದೇಶಪ್ರೇಮವನ್ನು ಪ್ರಕಟಿಸಿ. ಆದರೆ ನೀವು ಇದರ ಬದಲು ಸಾವಿರಾರು ಮೈಲು ದೂರ ಇರುವ ಫೆಲೆಸ್ತೀನ್ ಮತ್ತು ಗಾಝಾದ ಬಗ್ಗೆ ಗಮನ ಹರಿಸಿದ್ದೀರಿ. ಫೆಲೆಸ್ತೀನ್ ಪರ ನಿಲ್ಲಬೇಕೋ ಇಸ್ರೇಲ್ ಪರ ನಿಲ್ಲಬೇಕೋ ಎಂಬುದು ಭಾರತ ಸರಕಾರದ ಕೆಲಸ. ಇಂಥ ಸ್ಥಿತಿಯಲ್ಲಿ, ಭಾರತ ಸರಕಾರವು ಈ ಎರಡರಲ್ಲಿ ಯಾವುದಾದರೊಂದು ರಾಷ್ಟ್ರದ ಪರ ನಿಲುವು ತೆಗೆದುಕೊಳ್ಳಬೇಕಾದಂಥ ಪರಿಸ್ಥಿತಿಯನ್ನು ನೀವೇಕೆ ನಿರ್ಮಿಸುತ್ತಿದ್ದೀರಿ? ಇದು ದೇಶದ ವಿದೇಶಾಂಗ ನೀತಿಯ ಮೇಲೆ ಪರಿಣಾಮ ಬೀರಬಹುದು ಎಂಬುದು ನಿಮಗೆ ಗೊತ್ತಿರಲಿ..’ ಎಂದು ಸಿಪಿಎಂ ಪಕ್ಷದ ನ್ಯಾಯವಾದಿ ಮಿಹಿರ್ ದೇಸಾಯಿ ಅವರಿಗೆ ನ್ಯಾಯಾಧೀಶರು ಹೇಳಿದ್ದಾರೆ. ಅಂದಹಾಗೆ,

ಅಭಿಪ್ರಾಯ ಸ್ವಾತಂತ್ರ‍್ಯ ಮತ್ತು ಪ್ರಜಾತಂತ್ರವನ್ನು ಅತಿಶ್ರೇಷ್ಠವೆಂದು ಬಗೆಯುವ ಸಂವಿಧಾನ ಈ ದೇಶದಲ್ಲಿದೆ. ನ್ಯಾಯಾಲಯ ಅದರ ಅಧೀನದಲ್ಲೇ  ಕೆಲಸ ಮಾಡುತ್ತದೆ. ಈ ದೇಶದಲ್ಲಿ ಪೊಲೀಸರು ಸ್ವತಂತ್ರರಲ್ಲ. ಅದನ್ನು ಸರಕಾರ ನಿಯಂತ್ರಿಸುತ್ತದೆ. ಸರಕಾರ ಯಾವ ಪಕ್ಷದ್ದೋ  ಆ ಪಕ್ಷದ ನಿಲುವುಗಳನ್ನೇ ಪೊಲೀಸರು ವ್ಯಕ್ತಪಡಿಸುತ್ತಾರೆ. ಇಂಥ ಸ್ಥಿತಿಯಲ್ಲಿ, ಪಕ್ಷಾತೀತ ನ್ಯಾಯವನ್ನು ನಾಗರಿಕರು ನಿರೀಕ್ಷಿಸಬೇಕಾದದ್ದು ನ್ಯಾಯಾಲಯಗಳಿಂದ ಮಾತ್ರ. ಆದರೆ ಬಾಂಬೇ ನ್ಯಾಯಾಲಯದ ಪರಾಮರ್ಶೆಯು ಈ ನಿರೀಕ್ಷೆಗೆ ತಕ್ಕುದಾಗಿಲ್ಲ ಮತ್ತು ದೇಶ ಒಪ್ಪಿಕೊಂಡಿರುವ ಪರಂಪರಾಗತ ವಿದೇಶಾಂಗ ನೀತಿಗೂ ಹೊಂದಿಕೊಳ್ಳುತ್ತಿಲ್ಲ.

ಫೆಲೆಸ್ತೀನನ್ನು ಒಂದು ರಾಷ್ಟ್ರವೆಂದು ತನ್ನ ವಿದೇಶಾಂಗ ನೀತಿಯಾಗಿಯೇ ಒಪ್ಪಿ ಘೋಷಿಸಿದ ರಾಷ್ಟ್ರ ಭಾರತ. ಫೆಲೆಸ್ತೀನಿ ಜನತೆಯನ್ನು ಪ್ರತಿನಿಧಿಸುವ ಅಧಿಕೃತ ಸಂಘಟನೆ ಎಂದು ಫೆಲೆಸ್ತೀನ್ ಲಿಬರೇಶನ್ ಆರ್ಗನೈಝೇಶನ(PLO)ನ್ನು 1974ರಲ್ಲೇ  ಅಂಗೀಕರಿಸಿದ ರಾಷ್ಟ್ರವೂ ಭಾರತವೇ. ಆ ಕಾಲದಲ್ಲಿ ಅರಬ್ ರಾಷ್ಟ್ರಗಳನ್ನು ಬಿಟ್ಟರೆ ಪಿಎಲ್‌ಓವನ್ನು ಹೀಗೆ ಘಂಟಾಘೋಷವಾಗಿ ಅಂಗೀಕರಿಸಿದ ಮೊತ್ತಮೊದಲ ಅರಬೇತರ ರಾಷ್ಟçವಾಗಿ ಪ್ರಶಂಸೆಗೆ ಒಳಗಾಗಿರುವುದೂ ಭಾರತವೇ. ಫೆಲೆಸ್ತೀನನ್ನು ಒಂದು ರಾಷ್ಟ್ರವೆಂದು 1988ರಲ್ಲೇ  ಭಾರತ ಅಂಗೀಕರಿಸಿದೆ. 2024ರ ಮೋದಿ ಸರಕಾರದ ಅವಧಿಯಲ್ಲಿ ಭಾರತ ಇನ್ನೂ ಒಂದು ಹೆಜ್ಜೆಯನ್ನು ಮುಂದಿಟ್ಟಿತು. ಫೆಲೆಸ್ತೀನಿಯರಿಗೆ ತಮ್ಮದೇ ದೇಶವನ್ನು ಹೊಂದುವ ಮತ್ತು ಸ್ವನಿರ್ಧಾರವನ್ನು ಹೊಂದುವ ಹಕ್ಕೂ ಇದೆ ಎಂದು ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕು ಆಯೋಗದ ಮಂಡಿಸಿದ ಪ್ರಸ್ತಾಪದ ಪರ ಭಾರತ ಮತವನ್ನೂ ಚಲಾಯಿಸಿತು. ಅಲ್ಲದೇ, 1948ರ ನರಮೇಧ ವಿರೋಧಿ ನಿರ್ಣಯಕ್ಕೆ ಸಹಿ ಹಾಕಿದ ದೇಶವೂ ಭಾರತವೇ. ಜೊತೆಗೇ, ಗಾಝಾದಲ್ಲಿ ನಡೆಯುತ್ತಿರುವ ನರಮೇಧಕ್ಕೆ ಭಾರತ ಸರಕಾರ ಈಗಾಗಲೇ ವಿರೋಧವನ್ನೂ ವ್ಯಕ್ತಪಡಿಸಿದೆ. ಮಹಾತ್ಮಾ ಗಾಂಧಿಯಿಂದ ಹಿಡಿದು ಪ್ರಧಾನಿ ಇಂದಿರಾ ಗಾಂಧಿ, ವಾಜಪೇಯಿ ಮತ್ತು ನರೇಂದ್ರ ಮೋದಿಯವರ ವರೆಗೆ ಫೆಲೆಸ್ತೀನ್ ವಿಷಯದಲ್ಲಿ ಭಾರತದ ನಿಲುವು ಬದಲಾಗಿಲ್ಲ. ದಕ್ಷಿಣ ಆಫ್ರಿಕಾದ ವರ್ಣಬೇಧ ನೀತಿಯ ವಿರುದ್ಧ ಭಾರತ ಹೇಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿ ಎತ್ತುತ್ತಾ ಬಂದಿತ್ತೋ ಅದೇರೀತಿಯಲ್ಲಿ ಫೆಲೆಸ್ತೀನ್ ಪರ ನಿಲುವನ್ನೂ ಭಾರತ ತನ್ನ ವಿದೇಶಾಂಗ ನೀತಿಯಾಗಿಯೇ ಘೋಷಿಸುತ್ತಾ ಬಂದಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿತ್ವದಿಂದ 200 ವರ್ಷಗಳ ಕಾಲ ಎದುರಿಸಿದ ದೌರ್ಜನ್ಯದ ಸ್ವಯಂ ಅನುಭವವೇ ಇವತ್ತು ಇಸ್ರೇಲ್‌ನ ಹಿಡಿತದಲ್ಲಿರುವ ಫೆಲೆಸ್ತೀನಿಯರ ನೋವುಗಳನ್ನು ತಿಳಿದುಕೊಳ್ಳಲು ಭಾರತಕ್ಕೆ ಧಾರಾಳ ಸಾಕು. ಸಾಮ್ರಾಜ್ಯಶಾಹಿತ್ವದ ಪ್ರಬಲ ವಿರೋಧಿಯಾಗಿ ಭಾರತ ಮಾರ್ಪಟ್ಟಿರುವುದು ಮತ್ತು ಅದನ್ನೇ ತನ್ನ ವಿದೇಶಾಂಗ ನೀತಿಯಾಗಿ 1947ರಿಂದಲೇ ಪಾಲಿಸುತ್ತಿರುವುದೂ ಈ ಕಾರಣದಿಂದಲೇ. ಆದರೆ,

ಬಾಂಬೆ ಹೈಕೋರ್ಟಿನ ಪರಾಮರ್ಶೆ ಈ ಕುರಿತಂತೆ ತೀರಾ ನಿರಾಶೆಯನ್ನು ಉಂಟು ಮಾಡುವಂಥದ್ದಾಗಿದೆ. ಕೇಂದ್ರ ಸರಕಾರದ ವಿದೇಶಾಂಗ ನೀತಿಯೂ ಸೇರಿದಂತೆ ಯಾವುದೇ ನಿರ್ಧಾರವನ್ನು ಪ್ರಶ್ನಿಸುವ ಮತ್ತು ಬೆಂಬಲಿಸುವ ಸ್ವಾತಂತ್ರ‍್ಯವನ್ನು ಈ ದೇಶದ ಸಂವಿಧಾನವೇ ನಾಗರಿಕರಿಗೆ ನೀಡುತ್ತದೆ. ಸರಕಾರ ಪ್ರಶ್ನಾತೀತವಲ್ಲ. ಅಲ್ಲದೇ ಗಾಝಾ ವಿಷಯದಲ್ಲಿ ಕೇಂದ್ರ ಸರಕಾರದ ನಿಲುವು ಗಾಝಾದ ವಿರುದ್ಧವೂ ಇಲ್ಲ. ಗಾಝಾಕ್ಕೆ ಔಷಧ ಮತ್ತು ಇನ್ನಿತರ ನೆರವುಗಳನ್ನು ಭಾರತ ಸರಕಾರವೇ ರವಾನಿಸಿದೆ. ಭಾರತೀಯರು ಸ್ವಯಂಪ್ರೇರಿತವಾಗಿ ಗಾಝಾಕ್ಕೆ ನೆರವಾಗುವುದನ್ನು ಸರಕಾರ ನಿಷೇಧಿಸಿಯೂ ಇಲ್ಲ. ಒಂದುವೇಳೆ, ಗಾಝಾದ ನರಮೇಧವನ್ನು ಪ್ರತಿಭಟಿಸುವುದು ದೇಶದ ವಿದೇಶಾಂಗ ನೀತಿಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದಾಗಿದ್ದರೆ ಗಾಝಾಕ್ಕೆ ನೆರವಾಗುವ ಮೂಲಕ ಕೇಂದ್ರ ಸರಕಾರವೇ ಅದನ್ನು ಉಲ್ಲಂಘಿಸಿದೆ ಎಂದೇ ಹೇಳಬೇಕಾಗುತ್ತದೆ. ಅಂದಹಾಗೆ,

ಯಾವುದೇ ದೇಶದ ನಾಗರಿಕರು ಒಂದುಕಡೆ ಸೇರಿ ವ್ಯಕ್ತಪಡಿಸುವ ಅಭಿಪ್ರಾಯವು ಅಲ್ಲಿನ ಸರಕಾರದ ಅಭಿಪ್ರಾಯವಾಗಬೇಕೆಂದಿಲ್ಲ. ಸರಕಾರದ ಅಭಿಪ್ರಾಯವನ್ನು ಒಪ್ಪುವ ಮತ್ತು ಒಪ್ಪದೇ ಇರುವ ಸ್ವಾತಂತ್ರ‍್ಯಕ್ಕೆ ಆ ದೇಶದಲ್ಲಿ ಮನ್ನಣೆ ಇದೆ ಎಂಬುದೇ ಅದರ ಅರ್ಥ. ಅಮೇರಿಕದ ಅಧ್ಯಕ್ಷ ಟ್ರಂಪ್ ಅವರು ನೇತನ್ಯಾಹು ಪರ ಬಲವಾಗಿ ನಿಂತಿರುವಾಗ ಅಲ್ಲಿನ ನಾಗರಿಕರು ಟ್ರಂಪ್ ವಿರುದ್ಧ ನಿಂತಿದ್ದಾರೆ. ಗಾಝಾದ ನರಮೇಧದ ವಿರುದ್ಧ ರ‍್ಯಾಲಿ ನಡೆಸುತ್ತಿದ್ದಾರೆ. ಪ್ರತಿದಿನವೆಂಬಂತೆ  ಪ್ರತಿಭಟಿಸುತ್ತಿದ್ದಾರೆ. ಯುರೋಪಿನ ಅನೇಕ ರಾಷ್ಟçಗಳಲ್ಲಿ ಆ ರಾಷ್ಟ್ರಗಳ ಅಧಿಕೃತ ವಿದೇಶಾಂಗ ನೀತಿಯ ವಿರುದ್ಧ ಇವತ್ತೂ ಪ್ರತಿಭಟನೆಗಳಾಗುತ್ತಿವೆ. ಇಸ್ರೇಲ್ ನರಮೇಧವನ್ನು ಖಂಡಿಸಿ ಮತ್ತು ಗಾಝಾದ ಜನರ ಪರವಾಗಿ ಅಲ್ಲೆಲ್ಲಾ  ಜನರು ಬೀದಿಗಿಳಿದಿದ್ದಾರೆ. ಇದು ಆ ದೇಶಗಳಲ್ಲಿರುವ ಪ್ರಜಾತಂತ್ರವನ್ನು ಮತ್ತು ನಾಗರಿಕ ಸ್ವಾತಂತ್ರ‍್ಯಕ್ಕಿರುವ ಮಹತ್ವವನ್ನು ಹೇಳುತ್ತದೆ. ಆದರೆ,

ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ವಿದೇಶಾಂಗ ನೀತಿ ತೀರಾ ಸ್ಪಷ್ಟವಿದೆ. ಅದು ಸ್ವತಂತ್ರ ಫೆಲೆಸ್ತೀನ್ ರಾಷ್ಟçದ ಪರ ಮತ್ತು ಸಾಮ್ರಾಜ್ಯಶಾಹಿತ್ವದ ವಿರುದ್ಧವಿದೆ. ಅಲ್ಲದೇ, ವಸುದೈವ ಕುಟುಂಬಕಂ  ಎಂಬ ಉದಾತ್ತ ಪರಿಕಲ್ಪನೆಯಲ್ಲಿ ವಿಶ್ವಾಸ ಇಟ್ಟ ಮತ್ತು ಅದನ್ನು ಪ್ರತಿಪಾದಿಸುವ ರಾಷ್ಟç ನಮ್ಮದು. ಜಗತ್ತಿನ ಎಲ್ಲರೂ ಒಂದು ಕುಟುಂಬವಾಗಿದ್ದಾರೆ ಎಂಬ ನೀತಿಯಲ್ಲಿ ಇಸ್ರೇಲೂ ಬರುತ್ತದೆ, ಫೆಲೆಸ್ತೀನೂ ಬರುತ್ತದೆ. ಈ ಕುಟುಂಬದಲ್ಲಿ ಓರ್ವನ ಮೇಲೆ ದೌರ್ಜನ್ಯವಾಗುತ್ತಿದೆ ಎಂದಾದರೆ ಕುಟುಂಬದ ಸದಸ್ಯನಾಗಿ ಅದನ್ನು ಪ್ರಶ್ನಿಸಬೇಕಾದ ಹೊಣೆಗಾರಿಕೆ ನಮಗಿದೆ. ಆ ದೌರ್ಜನ್ಯವನ್ನು ಬಲವಂತದಿಂದ  ತಡೆಯುವ ಸಾಮರ್ಥ್ಯವಿದ್ದರೆ ಅದನ್ನು ತಡೆಯಬೇಕು. ಒಂದುವೇಳೆ, ಆ ಅವಕಾಶ ಇಲ್ಲವೆಂದಾದರೆ ಅದನ್ನು ಪ್ರಶ್ನಿಸುವ ಸ್ವಾತಂತ್ರ‍್ಯವನ್ನು ಬಳಸಿಕೊಳ್ಳಬೇಕು. ಆ ಮೂಲಕ ದೌರ್ಜನ್ಯ ನಡೆಸುವ ವ್ಯಕ್ತಿಯ ವಿರುದ್ಧ ಉಳಿದ ಸದಸ್ಯರನ್ನು ಒಟ್ಟುಗೂಡಿಸಬೇಕು. ದೌರ್ಜನ್ಯಕೋರನನ್ನು ಶಿಕ್ಷಿಸುವ ಮತ್ತು ಸಂತ್ರಸ್ತನನ್ನು ರಕ್ಷಿಸುವ ಪ್ರಯತ್ನವನ್ನು ಮಾಡಬೇಕು. ಸದ್ಯ ಫೆಲೆಸ್ತೀನ್ ದೌರ್ಜನ್ಯವನ್ನು ಎದುರಿಸುತ್ತಿದೆ. ಇಸ್ರೇಲ್ ಅಪರಾಧಿ ಸ್ಥಾನದಲ್ಲಿದೆ. ಇದನ್ನು ಪ್ರಶ್ನಿಸುವುದನ್ನು ದೇಶಪ್ರೇಮದ ಕೊರತೆ ಎಂಬಂತೆ  ನ್ಯಾಯಾಲಯವೇ ಹೇಳುವುದು ದುರದೃಷ್ಟಕರ.

Saturday, 12 July 2025

ಇಸ್ರೇಲ್-ಇರಾನ್ ಯುದ್ಧದಲ್ಲಿ ಕಾಣಿಸಿ ಕೊಂಡ ಈ ಕ್ಯಾಥರಿನ್ ಯಾರು?




1. ಎಲಿ ಕೋಹೆನ್

2. ಕ್ಯಾಥರಿನ್

ಜಗತ್ತನ್ನೇ ತಬ್ಬಿಬ್ಬುಗೊಳಿಸಿದ ಅತ್ಯಂತ ಶಕ್ತಿಶಾಲಿ ಗೂಢಚರ ಈ ಎಲಿ ಕೋಹೆನ್. ಇಸ್ರೇಲ್‌ನ ಯಹೂದಿ ವ್ಯಕ್ತಿಯಾದ ಈತನನ್ನು 1965ರಲ್ಲಿ ಸಿರಿಯಾ ಗಲ್ಲಿಗೇರಿಸಿತು. ಆದರೆ, ಅದಕ್ಕಿಂತ ಮೊದಲೇ ಸಿರಿಯಾಕ್ಕೆ ಏನೆಲ್ಲ ಅನಾಹುತಗಳನ್ನು ಮಾಡಿ ಬಿಡಬಹುದೋಅವೆಲ್ಲವನ್ನೂ ಈತ ಮಾಡಿಬಿಟ್ಟಿದ್ದ.

1967ರ ಅರಬ್-ಇಸ್ರೇಲ್ ಯುದ್ಧದ ಸಮಯದಲ್ಲಿ ಸಿರಿಯಾದ ಭಾಗವಾಗಿದ್ದ ಗೋಲಾನ್ ಬೆಟ್ಟವನ್ನು ಕೇವಲ ಎರಡೇ ದಿನಗಳೊ ಳಗೆ ಇಸ್ರೇಲ್ ವಶಪಡಿಸಿಕೊಂಡಿದ್ದರೆ ಅದರ ಸಂಪೂರ್ಣ ಯಶಸ್ಸು ಈ ಎಲಿ ಕೋಹೆನ್‌ಗೆ ಸಲ್ಲಬೇಕು. ಸಿರಿಯಾದ ನಾಗರಿಕನೇ ಅಲ್ಲದ ಈತ ಇಡೀ ವ್ಯವಸ್ಥೆಯನ್ನೇ ಮರುಳುಗೊಳಿಸಿ ಸಿರಿಯಾದ ರP್ಷÀಣಾ ಸಚಿವನಾಗುವ ಹಂತಕ್ಕೆ ಬೆಳೆದ ರೀತಿಯೇ ರೋಚಕ.

1924ರಲ್ಲಿ ಈಜಿಪ್ಟ್ ನ   ಯಹೂದಿ ಕುಟುಂಬದಲ್ಲಿ ಹುಟ್ಟಿದ ಈತ ಆರಂಭದಲ್ಲಿ ರಬ್ಬಿ (ಯಹೂದಿ ಧರ್ಮಗುರು)ಯಾಗಲು ಬಯಸಿದ್ದ. ಅದಕ್ಕಾಗಿ ಅಲೆಕ್ಸಾಂಡ್ರಿಯಾದ ಮುಖ್ಯ ರಬ್ಬಿಯಿಂದ ತರಬೇತಿಯನ್ನೂ ಪಡೆದಿದ್ದ. ಆಗಿನ್ನೂ ಇಸ್ರೇಲ್ ರಾಷ್ಟ್ರ  ಸ್ಥಾಪನೆ ಯಾಗಿರಲಿಲ್ಲ. ಆದರೆ ಇಸ್ರೇಲ್ ರಾಷ್ಟç ಸ್ಥಾಪನೆಗೆ ಬೇಕಾದ ತಯಾರಿಗಳು ಗುಪ್ತವಾಗಿ ನಡೆಯುತ್ತಿದ್ದುವು. ಆಗ ಈಜಿಪ್ಟ್ ನಲ್ಲಿ  ಧಾರಾಳ ಸಂಖ್ಯೆಯಲ್ಲಿ ಯಹೂದಿಯರಿದ್ದರು. ಅವರನ್ನು ಗುಪ್ತವಾಗಿ ಭೇಟಿಯಾಗುವುದು ಮತ್ತು ಸಂಭಾವ್ಯ ಇಸ್ರೇಲ್ ರಾಷ್ಟ್ರದೊಳಗೆ ಕಳುಹಿಸುವುದಕ್ಕೆ ನೇತೃತ್ವವನ್ನು ನೀಡಿದ್ದ. ಕೈರೋ ಯುನಿವರ್ಸಿಟಿಯಲ್ಲಿ ಕಲಿಯುತ್ತಿದ್ದಾಗಲೇ ಆತ ಇಸ್ರೇಲಿ ರಾಷ್ಟçದ ಪ್ರಬಲ ಬೆಂಬಲಿಗನಾಗಿ ಪರಿವರ್ತಿತವಾಗಿದ್ದ. ಅರೇಬಿಕ್, ಹಿಬ್ರೂ, ಇಂಗ್ಲಿಷ್, ಫ್ರೆಂಚ್, ಸ್ಪಾನಿಶ್ ಭಾಷೆಗಳಲ್ಲಿ ನಿರರ್ಗಳವಾಗಿ ಸಂವಾದ ನಡೆಸುವ ಸಾಮರ್ಥ್ಯವೂ ಈತನಿಗಿತ್ತು.

1949ರಲ್ಲಿ ಈ ಕೋಹೆನ್‌ನ ಹೆತ್ತವರು ಮತ್ತು ಅವನ ಮೂವರು ಸಹೋದರರು ಇಸ್ರೇಲ್‌ಗೆ ವಲಸೆ ಹೋದರು. ಆದರೆ ತನ್ನ ಡಿಗ್ರಿ ಪೂರ್ತಿಗೊಳಿಸುವ ಉದ್ದೇಶದಿಂದ ಈತ ಈಜಿಪ್ಟ್ ನಲ್ಲೇ  ಉಳಿದ. 1952ರಲ್ಲಿ ಮಿಲಿಟರಿ ಮುಖಂಡರಾದ ಮುಹಮ್ಮದ್ ನಜೀಬ್  ಮತ್ತು ಜಮಾಲ್ ಅಬ್ದುಲ್ ನಾಸಿರ್ ನೇತೃತ್ವದಲ್ಲಿ ದೊರೆ ಫಾರೂಖ್‌ರ ವಿರುದ್ಧ ಬಂಡಾಯ ಕಾಣಿಸಿಕೊಂಡಿತು. ಈ ಬಂಡಾಯಕ್ಕೆ ಬೆಂಬಲ ಸಾರಿದ ಆರೋಪದಲ್ಲಿ ಈಜಿಪ್ಟ್ ಅಧಿಕಾರಿಗಳು ಈ ಕೋಹೆನ್‌ನನ್ನು ಬಂಧಿಸಿ ವಿಚಾರಣೆ ನಡೆಸಿ ದ್ದರು. ಆದರೆ ಪೂರಕ ಸಾಕ್ಷ್ಯ  ಸಿಗದ ಕಾರಣ ಬಿಟ್ಟುಬಿಟ್ಟಿದ್ದರು. ಈ ನಡುವೆ 1954ರಲ್ಲಿ ‘ಲ್ಯಾವನ್ ಅಫೇರ್’ ಎಂಬ ಹೆಸರಲ್ಲಿ ಗುರುತಿಸಿಕೊಂಡಿರುವ ಕುಖ್ಯಾತ ಕಾರ್ಯಾಚರಣೆಗೆ ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಮುಂದಾಯಿತು. ಈಜಿಪ್ಟ್, ಬ್ರಿಟಿಷ್ ಮತ್ತು ಅಮೇರಿಕನ್ನರ ಮಾಲಕತ್ವದಲ್ಲಿರುವ ಸಿನಿಮಾ ಮಂದಿರಗಳು, ಲೈಬ್ರರಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಬಾಂಬಿಟ್ಟು ನಾಗರಿಕರನ್ನು ಹತ್ಯೆ ಮಾಡುವುದುಮತ್ತು ಇದರ ಹೊಣೆಯನ್ನು ಮುಸ್ಲಿಮ್ ಬ್ರದರ್‌ಹುಡ್ ಮೇಲೆ ಆರೋಪಿಸುವುದು ಈ ಕಾರ್ಯಾಚರಣೆಯ ಗುರಿಯಾಗಿತ್ತು. ಇದಕ್ಕಾಗಿ ಈಜಿಪ್ಟ್ ನಲ್ಲಿರುವ   ಯಹೂದಿಯರನ್ನು ತಯಾರುಗೊಳಿಸಲಾಯಿತು. ಯೋಜನೆಯಂತೆ ಬಾಂಬನ್ನೂ ಇಡಲಾಯಿತು. ಆದರೆ, ಕಾರ್ಯತಂತ್ರದಲ್ಲಿ ಆದ ಸಣ್ಣ ಎಡವಟ್ಟಿನಿಂದಾಗಿ ಈ ಎಲ್ಲ ಕಚೇರಿಗಳೂ ಬಾಗಿಲು ಮುಚ್ಚಿದ ಬಳಿಕ ಈ ಬಾಂಬ್‌ಗಳು ಸ್ಫೋಟಗೊಂಡವು. ಅದರಿಂದಾಗಿ ಭಾರೀ ಅನಾಹುತ ತಪ್ಪಿ ಹೋಯಿತು. ಈ ಕಾರ್ಯಾಚರಣೆಯ ಆರೋಪದಲ್ಲಿ ಇಬ್ಬರು ಯಹೂದಿಯರನ್ನು ಈಜಿಪ್ಟ್ ಸರಕಾರ ಗಲ್ಲಿಗೇರಿಸಿತಾದರೂ ಈ ಕೋಹೆನ್ ಶಿಕ್ಷೆಯಿಂದ ತಪ್ಪಿಸಿಕೊಂಡ. ಆತನನ್ನು ಅಪರಾಧಿ ಎಂದು ಸಾರುವುದಕ್ಕೆ ಬೇಕಾದ ದಾಖಲೆ ಸಿಗದೇ ಇರುವುದು ಇದಕ್ಕೆ ಕಾರಣವಾಗಿತ್ತು. 1956ರಲ್ಲಿ ನಡೆದ ಎರಡನೇ ಇಸ್ರೇಲ್-ಅರಬ್ ಯುದ್ಧದ ಬಳಿಕ ಈತನನ್ನು ಈಜಿಪ್ಟ್ ಬಲವಂತದಿಂದ  ಇಸ್ರೇಲ್‌ಗೆ ಗಡೀಪಾರು ಮಾಡಿತು. ಇಲ್ಲಿಂದ ಈತನ ಎರಡನೇ ಹಂತದ ಮತ್ತು ಅತ್ಯಂತ ಅಪಾಯ ಕಾರಿಯಾದ ಕಾರ್ಯಾಚರಣೆ ಆರಂಭಗೊಂಡಿತು. ಇಸ್ರೇಲ್‌ಗೆ ಬಂದವನೇ ಮೊಸಾದ್‌ನಲ್ಲಿ ಈತ ತರಬೇತಿಗೆ ಸೇರಿಕೊಂಡ.

 ಅಂದಹಾಗೆ,

ಅರಬ್ ರಾಷ್ಟ್ರಗಳೊಂದಿಗೆ ಎರಡೆರಡು ಯುದ್ಧಗಳನ್ನು ನಡೆ ಸಿದ್ದ ಇಸ್ರೇಲ್‌ಗೆ ತಾನು ಯಾವತ್ತೂ ಅಸುರಕ್ಷಿತ ರಾಷ್ಟ್ರ  ಅನ್ನು ವುದು ತಿಳಿದಿತ್ತು. ಅರಬ್ ರಾಷ್ಟ್ರಗಳು ಜೊತೆ ಸೇರಿ ತನ್ನ ವಿರುದ್ಧ ಮೂರನೇ ಯುದ್ಧ ನಡೆಸುವುದನ್ನು ಅದು ನಿರೀಕ್ಷಿಸಿಯೇ ಇತ್ತು. ಫೆಲೆಸ್ತೀನಿಯರನ್ನು ಒಕ್ಕಲೆಬ್ಬಿಸುವುದು ಮತ್ತು ಅಲ್ಲಿನ ಭೂಭಾಗವನ್ನು ಕಬಳಿಸುತ್ತಾ ಗಡಿ ವಿಸ್ತರಣೆಯಲ್ಲಿ ತೊಡಗುವುದನ್ನು ಅರಬ್ ಜನತೆ ಒಪ್ಪಲ್ಲ ಎಂದೂ ಇಸ್ರೇಲ್‌ಗೆ ತಿಳಿದಿತ್ತು. ಈ ಎಲ್ಲ ದೂರ ದೃಷ್ಟಿಯನ್ನು ಇಟ್ಟುಕೊಂಡೇ ಅದು ಕಾರ್ಯತಂತ್ರಗಳನ್ನು ರೂಪಿಸುತ್ತಿತ್ತು. ಇದರ ಭಾಗವಾಗಿಯೇ ಈ ಕೋಹೆನ್‌ನನ್ನು ಗೂಢಚರನಾಗಿ ಸಿರಿಯಾಕ್ಕೆ ಕಳುಹಿಸಲು ತೀರ್ಮಾನಿಸಿತು. ಅರ್ಜೆಂಟೀನಾದಿಂದ  ಮರಳುತ್ತಿರುವ ಸಿರಿಯಾದ ಬ್ಯುಸಿನೆಸ್‌ಮ್ಯಾನ್ ಎಂಬ ನಕಲಿ ದಾಖಲೆಯನ್ನು ಮೊಸಾದ್ ಈತನಿಗಾಗಿ ಸೃಷ್ಟಿಸಿತು. ಈತನ ಹೆಸರನ್ನು ಕಮಾಲ್ ಅಮೀನ್ ಥಾಬೆಟ್ ಎಂದು ಮರುನಾಮ ಕರಣ ಮಾಡಿತು. ಈತ ಅರ್ಜೆಂಟೀನಾದಲ್ಲಿದ್ದ ಎಂಬುದನ್ನು ಸಾಬೀತುಪಡಿಸುವುದಕ್ಕಾಗಿ 1961ರಲ್ಲಿ ಅರ್ಜೆಂಟೀನಾಕ್ಕೂ ಕಳುಹಿಸಿಕೊಟ್ಟಿತು. 

ಹೀಗೆ,

1962ರಲ್ಲಿ ಸಿರಿಯಾ ಪ್ರವೇಶಿಸಿದ ಈತ, ಅಲ್ಲಿನ ರಾಜಕಾರಣಿ ಗಳು, ರಾಯಭಾರ ಕಚೇರಿಗಳು, ಗುಪ್ತಚರ ಸಂಸ್ಥೆಯ ಕಚೇರಿ, ಸರಕಾರಿ ಕಟ್ಟಡಗಳು ಇರುವ ಮೆಹ್ದಿ ಇಬ್ನು ಸ್ಟ್ರೀಟ್‌ನಲ್ಲಿ ಮನೆ ಯನ್ನೂ ಮಾಡಿಕೊಂಡ. ಈ ಮನೆ ಮಾಡಿರುವುದೂ ತಂತ್ರದ ಭಾಗವಾಗಿತ್ತು. ಈಜಿಪ್ಟ್ನ ಉನ್ನತ ಅಧಿಕಾರಿಗಳು, ರಾಜಕಾರಣಿಗಳು, ಗುಪ್ತಚರ ಸಂಸ್ಥೆಯ ಅಧಿಕಾರಿಗಳ ಜೊತೆ ಗೆಳೆತನ ಬೆಳೆಸಿ ಅವರಿಂದ ಮಾಹಿತಿಗಳನ್ನು ಪಡೆದು ಇಸ್ರೇಲ್‌ಗೆ ರವಾನಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು.

ಮಾತ್ರವಲ್ಲ, ಆತ ಇದರಲ್ಲಿ ಯಶಸ್ಸನ್ನೂ ಸಾಧಿಸಿದ.

ಸಿರಿಯಾದ ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿಗಳ ಜೊತೆ ಬಹಳ ಬೇಗ ಗೆಳೆತನ ಬೆಳೆಸಿಕೊಂಡ ಈತ, ತನ್ನ ಅದ್ದೂರಿ ಮನೆಯಲ್ಲಿ ಅವರಿಗಾಗಿ ಪಾರ್ಟಿಯನ್ನೂ ಮಾಡತೊಡಗಿದ. ಮದ್ಯ ಮತ್ತು ಮಾನಿನಿಯರನ್ನೂ ಒದಗಿಸತೊಡಗಿದ. ಅವರನ್ನು ಅಮಲಿನಲ್ಲಿ ತೂಗಾಡುವಂತೆ ಮಾಡಿ ಸರಕಾರಿ ಗೌಪ್ಯ ಮಾಹಿತಿ ಗಳನ್ನು ಸಂಗ್ರಹಿಸತೊಡಗಿದ. ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಿ ಗುಪ್ತ ದಾಖಲೆಗಳನ್ನು ಸಂಗ್ರಹಿಸತೊಡಗಿದ. ಈತ ಎಲ್ಲಿಯ ವರೆಗೆ ಸಿರಿಯನ್ ಪ್ರಭುತ್ವಕ್ಕೆ ಹತ್ತಿರವಾದನೆಂದರೆ, ರಕ್ಷಣಾ ಸಚಿವನಾಗಿ ಈತನನ್ನು ಸಂಪುಟಕ್ಕೆ ಸೇರಿಸುವುದಕ್ಕೂ ಸಂಪುಟದಲ್ಲಿ ಚರ್ಚೆ ನಡೆಯಿತು. ಹೀಗೆ 1962ರಿಂದ 65ರ ನಡುವೆ ಸಾವಿರಾರು ರಹಸ್ಯ ಮಾಹಿತಿಯನ್ನು ಈತ ಇಸ್ರೇಲ್‌ಗೆ ರವಾನಿಸಿದ. ಮುಖ್ಯ ವಾಗಿ, ರೇಡಿಯೋ, ರಹಸ್ಯ ಪತ್ರಗಳು ಮತ್ತು ರಹಸ್ಯ ಭೇಟಿ ಮೂಲಕ ಈ ಎಲ್ಲ ಮಾಹಿತಿಯನ್ನು ಇಸ್ರೇಲ್‌ಗೆ ತಲುಪಿಸುತ್ತಿದ್ದ. ಈತನ ಅತಿ ಮಹತ್ವಪೂರ್ಣ ಯಶಸ್ಸು ಏನೆಂದರೆ, ಗೋಲಾನ್ ಬೆಟ್ಟಕ್ಕೆ ಭೇಟಿ ಕೊಟ್ಟಿರುವುದು. ಒಟ್ಟು 3 ಬಾರಿ ಆತ ಈ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದ. ಅಲ್ಲಿ ಬಿಸಿಲಿಗೆ ಬೇಯುತ್ತಿರುವ ಸಿರಿಯನ್ ಸೈನಿಕರ ಬಗ್ಗೆ ಮರುಕಪಟ್ಟು ಅವರಿಗೆ ನೆರಳು ಒದಗಿಸುವ ಉದ್ದೇಶದಿಂದ ಸಸಿಗಳನ್ನು ನೆಟ್ಟಿದ್ದ. ಇದು ಸೈನಿಕರ ಮನವನ್ನೂ ಗೆದ್ದಿತ್ತು. 

ಆದರೆ,

1967ರ ಮೂರನೇ ಇಸ್ರೇಲ್-ಅರಬ್ ಯುದ್ಧದ ಸಮಯದಲ್ಲಿ ಕೇವಲ ಎರಡೇ ದಿನಗಳಲ್ಲಿ ಇಸ್ರೇಲ್ ಈ ಗೋಲಾನ್ ಬೆಟ್ಟವನ್ನು ಸಿರಿಯಾದಿಂದ ವಶಪಡಿಸಿಕೊಳ್ಳುವುದಕ್ಕೆ ಈ ಮರಗಳೇ ನೆರವಾಗಿತ್ತು ಎಂದು ಹೇಳಲಾಗುತ್ತಿದೆ. ಆ ಮರಗಳಿಗೆ ಹಾಕಲಾಗಿದ್ದ ಗುರುತು ಗಳು ಇಸ್ರೇಲ್ ಕಾರ್ಯಾಚರಣೆಗೆ ನೆರವನ್ನೂ ಒದಗಿಸಿತ್ತು ಅನ್ನುವುದು ಆ ಬಳಿಕ ಬಹಿರಂಗವಾಗಿತ್ತು. ಆದರೆ, 1963ರಲ್ಲಿ ಸಿರಿಯಾದಲ್ಲಿ ಸೈನಿಕ ಬಂಡಾಯ ಉಂಟಾಯಿತು. ಸಿರಿಯಾದ ಗುಪ್ತಚರ ಸಂಸ್ಥೆಯ ಹೊಸ ಮುಖ್ಯಸ್ಥರಾಗಿ ನೇಮಕ ವಾದ ಅಹ್ಮದ್ ಸುಯಿದಾನಿಯು ಈ ಎಲಿ ಕೋಹೆನ್ ಜೊತೆ ಸಂಬಂಧವನ್ನು ಇಟ್ಟುಕೊಳ್ಳಲಿಲ್ಲ. ಇದರಿಂದ ಕೋಹೆನ್‌ಗೂ ಭಯವಾಯಿತು. ಎಲ್ಲಿ ತನ್ನ ಗೂಢಚಾರಿಕೆ ಬಹಿರಂಗವಾಗುತ್ತೋ ಎಂಬ ಅನುಮಾನದಿಂದ 1964ರಲ್ಲಿ ಆತ ಇಸ್ರೇಲ್‌ಗೆ ಪ್ರಯಾಣಿಸಿದ ಮತ್ತು ಸಿರಿಯಾಕ್ಕೆ ಮರಳುವುದಿಲ್ಲವೆಂದೂ ತೀರ್ಮಾನಿಸಿದ್ದ. ಆದರೆ, ಮೊಸಾದ್‌ನ ಒತ್ತಡಕ್ಕೆ ಮಣಿದು ಕೊನೆಯ ಬಾರಿ ಎಂಬಂತೆ  ಸಿರಿಯಕ್ಕೆ ಮರಳಿದ. 

ಅದುವೇ ಆತನ ಅಂತ್ಯಕ್ಕೂ ಕಾರಣವಾಯಿತು.

ತಮ್ಮ ದೇಶದ ರಹಸ್ಯ ಮಾಹಿತಿಗಳು ಸೋರಿಕೆಯಾಗುತ್ತಿವೆ ಎಂಬ ಅನುಮಾನವನ್ನು ಹೊಂದಿದ್ದ ಸಿರಿಯನ್ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಅಹ್ಮದ್ ಸುಯಿದಾನಿಯು, ಇದನ್ನು ಪತ್ತೆ ಹಚ್ಚುವುದಕ್ಕಾಗಿ ರಶ್ಯದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ತಂತ್ರಜ್ಞ ರನ್ನು ಬಳಸಿದರು. ಆಗ ಅವರಿಗೆ ರೇಡಿಯೋ ತರಂಗಾಂತರಗಳ ಮೂಲಕ ಮಾಹಿತಿ ರವಾನೆಯಾಗುತ್ತಿರುವುದು ಗೊತ್ತಾಯಿತು. ಅದರ ಜಾಡು ಹಿಡಿದು ಹೋದ ಅವರು ತಲುಪಿದ್ದು ಇದೇ ಕೋಹೆನ್ ಇದ್ದ ಅಪಾರ್ಟ್ಮೆಂಟ್‌ಗೆ. ಜುಲೈ 24, 1965ರಂದು ಅವರು ಕೋಹೆನ್ಮ ನೆ ಬಾಗಿಲು ತಟ್ಟುವಾಗ, ಆತ ರೇಡಿಯೇ ಮೂಲಕ ರಹಸ್ಯ ಮಾಹಿತಿಯನ್ನು ಇಸ್ರೇಲ್‌ಗೆ ರವಾನಿಸುತ್ತಿದ್ದ.

ಮಿಲಿಟರಿ ನ್ಯಾಯಾಲಯ ಈ ಕೋಹೆನ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿತು.

ಈ ಶಿಕ್ಷೆಯನ್ನು ಜಾರಿಗೊಳಿಸದಂತೆ ತಡೆಯುವುದಕ್ಕಾಗಿ ಇಸ್ರೇಲ್ ಇನ್ನಿಲ್ಲದಂತೆ ಪ್ರಯತ್ನಿಸಿತು. ಈತನಿಗೆ ಮರಣ ದಂಡನೆ ಯಿಂದ ರಿಯಾಯಿತಿ ಕೊಡುವಂತೆ ಒತ್ತಾಯಿಸಿ ಇಸ್ರೇಲ್ ವಿದೇಶಾಂಗ ಸಚಿವ ಗೋಲ್ಡನ್ ಮೇರ್ ನೇತೃತ್ವದಲ್ಲಿ ಅಭಿಯಾನವೇ ನಡೆಯಿತು. ಪೋಪ್ ಜಾನ್ ಪೌಲ್‌ರಿಂದ ಹಿಡಿದು ಬೆಲ್ಜಿಯಂ, ಕೆನಡಾ, ಫ್ರಾನ್ಸ್ ಗಳು  ಮರಣ ದಂಡನೆ ನೀಡದಂತೆ ಸಿರಿಯನ್ ಆಡಳಿತದ ಮೇಲೆ ಒತ್ತಡ ಹೇರಿದುವು. ಸಿರಿಯನ್ ಸರಕಾರಕ್ಕೆ ಆತನ ಪತ್ನಿ ನಾದಿಯಾ ಭಾವನಾತ್ಮಕ ಪತ್ರ ಬರೆದರು. ಆದರೆ,

ಸಿರಿಯಾ ಮಣಿಯಲಿಲ್ಲ.

1965 ಮೇ 18ರಂದು ಡಮಾಸ್ಕಸ್‌ನ ಮರ್ಜಾ ವೃತ್ತದಲ್ಲಿ ಸಾರ್ವಜನಿಕವಾಗಿ ಈ ಕೋಹೆನ್‌ನನ್ನು ನೇಣಿಗೇರಿಸಲಾಯಿತು. ಈತನನ್ನು ಇಸ್ರೇಲ್ ರಾಷ್ಟ್ರೀಯ ಹೀರೋವಾಗಿ ಗೌರವಿಸಿತು. ಗೋಲಾನ್ ಬೆಟ್ಟದಲ್ಲಿರುವ ಇಲ್ಲಿಹಾದ್ ಯಹೂದಿ ವಸತಿಗಳಿಗೆ ಈತನ ಹೆಸರನ್ನು ಇಟ್ಟಿತು. ಅಲ್ಲದೇ ಇಸ್ರೇಲ್‌ನ ಅನೇಕ ರಸ್ತೆಗಳು ಮತ್ತು ಕೆಲವು ಪ್ರದೇಶಗಳನ್ನು ಈತನ ಹೆಸರಿನಿಂದ ಕರೆಯಲಾಗುತ್ತಿದೆ. ಅಂದಹಾಗೆ,

ಈ ಎಲ್ಲವನ್ನೂ ಈಗ ಇಲ್ಲಿ ಹಂಚಿಕೊಳ್ಳುವುದಕ್ಕೆ ಒಂದು ಕಾರಣವಿದೆ. ಅದುವೇ ಕ್ಯಾಥರಿನ್.

ಈಕೆ ಓರ್ವ ಯಮನ್ ಮುಸ್ಲಿಮನನ್ನು ಮದುವೆಯಾಗಿ ಫ್ರೆಂಚ್ ಪಾಸ್‌ಪೋರ್ಟ್ನೊಂದಿಗೆ ಇರಾನ್ ಪ್ರವೇಶಿಸಿದಳು. ಪಾಸ್‌ಪೋರ್ಟ್ನಲ್ಲಿ ಕ್ಯಾಥರಿನ್ ಪೆರಸ್ ಶಕ್ದಂ ಎಂಬ ಹೆಸರಿತ್ತು. ಇಸ್ರೇಲ್ ನಾಗರಿಕರಿಗೆ ಇರಾನ್ ಪ್ರವೇಶಕ್ಕೆ ನಿಷೇಧವಿದೆ ಅನ್ನುವುದು ಇಲ್ಲಿ ಗಮನಾರ್ಹ. ಈ ಕ್ಯಾಥರಿನ್ ಬುದ್ಧಿವಂತೆ. ನಿರರ್ಗಳವಾಗಿ ಮಾತಾಡಬಲ್ಲವಳು. ಈಕೆ ಶ್ರದ್ಧಾವಂತ ಮುಸ್ಲಿಮಳಂತೆ ತನ್ನನ್ನು ಬಿಂಬಿಸಿಕೊಂಡಳು. ಕ್ರಾಂತಿಯ ಭಾಷೆಯಲ್ಲಿ ಇಸ್ಲಾಮೀ ಆದರ್ಶವನ್ನು ಆಕರ್ಷಕವಾಗಿ ವ್ಯಕ್ತಪಡಿಸತೊಡಗಿದಳು. ಬಹಳ ಬೇಗ ಇರಾನ್ ನಲ್ಲಿ ಈಕೆಗೊಂದು ಐಡೆಂಟಿಟಿ ಪ್ರಾಪ್ತವಾಯಿತು. ವಿದೇಶಿಯರು ಅದರಲ್ಲೂ ಮಹಿಳೆಯರು ಪ್ರವೇಶಿಸಲೂ ಸಾಧ್ಯವಿಲ್ಲದಂಥ ಹಲವು ಪ್ರದೇಶಗಳಿಗೆ ಈಕೆ ಭೇಟಿ ನೀಡಿದಳು. ಇರಾನಿನ ಟಿವಿಯಲ್ಲಿ ಕಾರ್ಯಕ್ರಮವನ್ನು ನೀಡಿದಳು. ಸರ್ವೋಚ್ಛ ಧಾರ್ಮಿಕ ನಾಯಕ ಅಲಿ ಖಾಮಿನೈ  ಅವರ ಇಂಗ್ಲಿಷ್ ವೆಬ್ ಸೈಟ್‌ನಲ್ಲಿ ಲೇಖನವನ್ನೂ ಬರೆಯುವಷ್ಟರ ಮಟ್ಟಿಗೆ ಈಕೆ ಎತ್ತರಕ್ಕೆ ಬೆಳೆದಳು. 2017ರಲ್ಲಿ ಇಬ್ರಾಹೀಮ್ ರಈಸಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಿದಳು. ಅವರು ಆ ಬಳಿಕ ಅಧ್ಯಕ್ಷ ರಾಗಿಯೂ ಆಯ್ಕೆಯಾದರು. ಈಕೆ ಈ ಎಲ್ಲ ಪ್ರಭಾವವನ್ನು ಬಳಸಿ ಇರಾನಿನ ಉನ್ನತ ಸೇನಾ ನಾಯಕರು ಮತ್ತು ರಾಜಕಾರಣಿಗಳನ್ನು ಭೇಟಿಯಾಗಿರುವ ಮತ್ತು ಅವರೊಂದಿಗೆ ಹತ್ತಿರದ ಸಂಬಂಧವನ್ನು ಬೆಳೆಸಿಕೊಂಡಿರುವ ಸಾಧ್ಯತೆ ಇದೆ ಎಂದು ಇರಾನಿನ ಮಾಜಿ ಅಧ್ಯಕ್ಷ  ಅಹ್ಮದಿ ನೆಜಾದ್ ಕೂಡಾ ಹೇಳಿದ್ದಾರೆ.

ಸದ್ಯ ಈಕೆ ಇರಾನಿನಿಂದ ತಪ್ಪಿಸಿಕೊಂಡಿದ್ದಾದ್ದಾಳೆ ಎಂಬ ವರದಿಯೂ ಇದೆ. ಈಕೆ ಇಸ್ರೇಲ್‌ನ ಗೂಢಚಾರಿಣಿ ಎಂದು ಇರಾನಿನ ಮಾಧ್ಯಮಗಳೂ ಬರೆದಿವೆ. ತಿಂಗಳುಗಳ ಹಿಂದೆ ಇಸ್ರೇಲ್‌ನ ವಾಯಿಸ್ ಆಫ್ ಇಸ್ರೇಲ್ ಪತ್ರಿಕೆಯಲ್ಲಿ ಈಕೆ ಲೇಖನ ಬರೆದಿರುವುದೂ ಇದೀಗ ಪತ್ತೆಯಾಗಿದೆ. ಅಂದಹಾಗೆ,

ಜೂನ್ 13ರಂದು ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ ಹಲವು ಅಣು ವಿಜ್ಞಾನಿಗಳು ಮತ್ತು ಸೇನಾ ಮುಖಂಡರನ್ನು ಹತ್ಯೆ ಮಾಡಲು  ಇಸ್ರೇಲ್ ಯಶಸ್ವಿಯಾದದ್ದು ಹೇಗೆ ಎಂಬ ಪ್ರಶ್ನೆಯ ಬೆನ್ನು ಬಿದ್ದು ಹೋದಾಗ ಸಿಕ್ಕವರೇ ಈ ಕ್ಯಾಥರಿನ್. ಮತ್ತಷ್ಟು ಒಳಹೊಕ್ಕು ಹುಡುಕಿದಾಗ ಈ ಎಲಿ ಕೋಹೆನ್ ಪತ್ತೆಯಾದ.

ಕೈಕೈ ಹಿಸುಕಿಕೊಳ್ಳುವ ಸಂಕಟ ಇರಾನಿನದು.

Thursday, 26 June 2025

11 ವರ್ಷಗಳ ಮೋದಿ ಆಡಳಿತಕ್ಕೆ ಕನ್ನಡಿ ಹಿಡಿದ ಟ್ರಂಪ್ ಮತ್ತು ಎಪಿಸಿಆರ್




ಒಂದೇ ವಾರದೊಳಗೆ ಒಂದು ವರದಿ, ಒಂದು ತನಿಖಾ ವರದಿ ಮತ್ತು ಒಂದು ಹೇಳಿಕೆ ಬಿಡುಗಡೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ೧೧ ವರ್ಷಗಳ ಆಡಳಿತವನ್ನು ಅವಲೋಕನಕ್ಕೆ ಒಡ್ಡಬಹುದಾದ ಅತ್ಯಂತ ಮಹತ್ವದ ಬೆಳವಣಿಗೆಯಾಗಿ ಇದನ್ನು ಪರಿಗಣಿಸಬಹುದಾಗಿದೆ.

1. ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ದುಡ್ಡು ಹಿಂದಿನ ವರ್ಷಗಳಿಗಿಂತ 3 ಪಟ್ಟು ಹೆಚ್ಚಳವಾಗಿದೆ. ೨೦೨೩ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು 9771 ಕೋಟಿ ರೂಪಾಯಿಯನ್ನು ಠೇವಣಿಯಾಗಿ ಇಟ್ಟಿದ್ದರು. 2024ರಲ್ಲಿ ಇದು 37600 ಕೋಟಿ ರೂಪಾಯಿಯಾಗಿ ಏರಿಕೆಯಾಗಿದೆ.

2. ಎ.ಪಿ.ಸಿ.ಆರ್. ಅಥವಾ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಸಿವಿಲ್ ರೈಟ್ಸ್ ಮತ್ತು ಕ್ವಿಲ್ ಫೌಂಡೇಶನ್ ಜಂಟಿಯಾಗಿ ಸಂಗ್ರಹಿಸಿದ ವರದಿಯ ಪ್ರಕಾರ, 2024 ಜೂನ್ 7ರಿಂದ 2025 ಜೂನ್ 7 ವರೆಗಿನ ಈ ಒಂದು ವರ್ಷದಲ್ಲಿ ದೇಶದಲ್ಲಿ 947 ರಷ್ಟು ದ್ವೇಷಾಧಾರಿತ ಘಟನೆಗಳು ನಡೆದಿವೆ. ಇದರಲ್ಲಿ 602ರಷ್ಟು ಅಪರಾಧ ಪ್ರಕರಣಗಳಾದರೆ ೩೪೫ ದ್ವೇಷಭಾಷಣಗಳು ನಡೆದಿವೆ.

3. ಭಾರತದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಅಪರಾಧ ಪ್ರಕರಣಗಳು ಹೆಚ್ಚಾಗುತ್ತಾ ಇದೆ. ಅದರಲ್ಲೂ ಲೈಂಗಿಕ ದೌರ್ಜನ್ಯಗಳು ಆತಂಕಕಾರಿ ಮಟ್ಟಕ್ಕೆ ಏರಿದೆ. ಆದ್ದರಿಂದ ಮಹಿಳೆಯರು ಒಂಟಿಯಾಗಿ ಪ್ರಯಾಣಿಸಬಾರದು. ಪ್ರವಾಸದ ಸಮಯದಲ್ಲಿ ಎಲ್ಲರೂ ಜಾಗರೂಕರಾಗಿ ಇರಬೇಕು ಎಂದು ಅಮೇರಿಕ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ.

ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರುತ್ತೇನೆ ಎಂಬ ವಾಗ್ದಾನದೊಂದಿಗೆ ನರೇಂದ್ರ ಮೋದಿಯವರು 2014ರ ಚುನಾವಣೆಯನ್ನು ಎದುರಿಸಿದ್ದರು. ದೇಶದ ಪ್ರತಿ ರಸ್ತೆಯನ್ನೂ ಚಿನ್ನದ ರಸ್ತೆಯಾಗಿ ಮಾರ್ಪಡಿಸುವಷ್ಟು ದುಡ್ಡು ಸ್ವಿಸ್ ಬ್ಯಾಂಕ್‌ನಲ್ಲಿದೆ ಎಂದು ಅವರ ಬೆಂಬಲಿಗರು ಭಾಷಣ ಮಾಡಿದ್ದರು. ದೇಶ ಮೋದಿಯ ಕೈಗೆ ಚುಕ್ಕಾಣಿಯನ್ನು ಕೊಟ್ಟಿತು. ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‌ ನಿಂದ  ತಂದು ಭಾರತದ ಪ್ರತಿ ನಾಗರಿಕರಿಗೂ ಹಂಚುತ್ತಾರೆ ಎಂಬ ನಿರೀಕ್ಷೆಯಿಂದ ಕಾಯತೊಡಗಿತು. ಮುಂದಿನ 2 ವರ್ಷಗಳ ವರೆಗೆ ಮೌನವಾದ ಅವರು 2016ರಲ್ಲಿ ಮತ್ತೊಮ್ಮೆ ಕಪ್ಪು ಹಣದ ಬಗ್ಗೆ ಮಾತನಾಡಿದರು. ನೋಟ್ ಬ್ಯಾನ್ ಮಾಡುವ ಮೂಲಕ ದೇಶದೊಳಗಿರುವ ಎಲ್ಲ ಕಪ್ಪು ಹಣವನ್ನೂ ನಿರ್ನಾಮ ಮಾಡುತ್ತಿರುವುದಾಗಿ ಘೋಷಿಸಿದರು. ಇದೀಗ 11 ವರ್ಷಗಳೇ ಕಳೆದು ಹೋಗಿವೆ. 2010ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿದ್ದುದು ಬರೇ 8500  ಕೋಟಿ ರೂಪಾಯಿ. ಆದರೆ ಈಗ ಅದು 37600  ಕೋಟಿ ರೂಪಾಯಿಯಾಗಿ ಏರಿಕೆಯಾಗಿದೆ. ಇನ್ನೊಂದು ಕಡೆ ಬ್ಯಾನ್ ಮಾಡಲಾದ ನೋಟುಗಳ ಪೈಕಿ 99% ನೋಟುಗಳೂ ಮರಳಿ ಬ್ಯಾಂಕ್‌ಗೆ ಸೇರಿವೆ ಎಂದು ಆರ್‌ಬಿಐ ವರದಿಗಳೇ ಹೇಳುತ್ತವೆ. ಅಂದರೆ ನೋಟ್ ಬ್ಯಾನ್‌ನಿಂದ ಯಾವ ಪ್ರಯೋಜನವೂ ಆಗಿಲ್ಲ ಎಂದೇ ಅರ್ಥ. ಹಾಗಿದ್ದರೆ,

ಕಪ್ಪು ಹಣದ ಹೆಸರಲ್ಲಿ ದೇಶದ ನಾಗರಿಕರನ್ನು ನರೇಂದ್ರ ಮೋದಿ ವಂಚಿಸಿದ್ದಾರೆ ಎಂದೇ ಅರ್ಥವಲ್ಲವೇ? ಮನ್‌ಮೋಹನ್ ಸಿಂಗ್ ಅವಧಿಯಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ 8500 ಕೋಟಿಯಷ್ಟಿದ್ದ ದುಡ್ಡು ಈ 11  ವರ್ಷಗಳ ಅವಧಿಯಲ್ಲಿ 37600  ಕೋಟಿ ರೂಪಾಯಿಯಷ್ಟು ಏರಿಕೆಯಾಗಿದೆ ಎಂದಾದರೆ ಅದಕ್ಕೆ ಯಾರು ಹೊಣೆ? ಕನಿಷ್ಠ ಸ್ವಿಸ್ ಬ್ಯಾಂಕ್‌ನಿAದ ಹಣವನ್ನು ಹಿಂದಕ್ಕೆ ತರುವುದು ಬಿಡಿ, ಅಲ್ಲಿ ಭಾರತೀಯರು ಹಣ ಠೇವಣಿಯಾಗಿ ಇರಿಸದಂತೆ ಈ 11 ವರ್ಷಗಳಲ್ಲಿ ತಡೆಯಲೂ ನರೇಂದ್ರ ಮೋದಿಗೆ ಆಗಿಲ್ಲ ಎಂದಾದರೆ ಇವರು ದುರ್ಬಲರು ಎಂದೇ ಅರ್ಥ ಅಲ್ಲವೇ? ಕಪ್ಪು ಹಣದ ಹೆಸರಲ್ಲಿ ಈ ದೇಶದ ನಾಗರಿಕರನ್ನು ವಂಚಿಸಿದ ಮೋದಿಯವರು ಭಾರತೀಯರ ಕ್ಷಮೆ ಯಾಚಿಸಬೇಡವೇ? ಇದೇವೇಳೆ,

ತನ್ನ ನಾಗರಿಕರಿಗೆ ಅಮೇರಿಕ ನೀಡಿರುವ ಸೂಚನೆಯು ನರೇಂದ್ರ ಮೋದಿ ಸರಕಾರದ 11 ವರ್ಷಗಳ ಆಡಳಿತಕ್ಕೆ ನೀಡಿರುವ ಸರ್ಟಿಫಿಕೇಟ್ ಎಂದೇ ಹೇಳಬಹುದು. ಭಾರತದಲ್ಲಿ ಮಹಿಳೆಯರು ಒಂಟಿಯಾಗಿ ಪ್ರಯಾಣಿಸುವುದು ಅಪಾಯಕಾರಿ, ಇಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳು ಆತಂಕಕಾರಿ ಮಟ್ಟದಲ್ಲಿದೆ ಎಂದು ಅದು ಬಹಿರಂಗ ಘೋಷಣೆ ಮಾಡಿದೆ. ಒಂದುಕಡೆ ನರೇಂದ್ರ ಮೋದಿ ಬೆಂಬಲಿಗರು ಇಸ್ರೇಲ್ ಮತ್ತು ಅಮೇರಿಕವನ್ನು ಬೆಂಬಲಿಸುತ್ತಾ ಮತ್ತು ಇರಾನನ್ನು ನಾಶವಾಗಬೇಕಾದ ರಾಷ್ಟ್ರ  ಎನ್ನುತ್ತಾ ವಾದಿಸುತ್ತಿರುವಾಗಲೇ ಅಮೇರಿಕದಿಂದ ಈ ಸರ್ಟಿಫಿಕೇಟ್ ಲಭ್ಯವಾಗಿದೆ. ಮಹಿಳೆಯರಿಗೆ ಸುರಕ್ಷಿತತೆಯನ್ನು ಖಾತರಿಪಡಿಸದ ಆಡಳಿತ ಮೋದಿಯವರದ್ದು ಎಂದು ಅಮೇರಿಕ ಪರೋಕ್ಷವಾಗಿ ಹೇಳಿಕೆ ನೀಡಿದಂತಾಗಿದೆ. ಇದೇ ಸಂದರ್ಭದಲ್ಲಿ,

ಎಪಿಸಿಆರ್ ಮತ್ತು ಕ್ವಿಲ್ ಫೌಂಡೇಶನ್ ಜಂಟಿಯಾಗಿ ಬಿಡುಗಡೆಗೊಳಿಸಿರುವ ವರದಿಯಲ್ಲೂ ಆತಂಕಕಾರಿ ಸಂಗತಿಗಳಿವೆ. ಕೇವಲ ಒಂದೇ ವರ್ಷದೊಳಗೆ ದ್ವೇಷಾಧಾರಿತ 947 ರಷ್ಟು ಪ್ರಕರಣಗಳು ಈ ದೇಶದಲ್ಲಿ ನಡೆದಿವೆ ಎಂಬುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಮುಸ್ಲಿಮ್ ದ್ವೇಷವನ್ನೇ ರಾಜಕೀಯ ಅಧಿಕಾರದ ಮೆಟ್ಟಿಲನ್ನಾಗಿ ಮಾಡಿಕೊಂಡಿರುವ ಬಿಜೆಪಿಯು ಈ ದೇಶಕ್ಕೆ ನೀಡಿರುವ ಕೊಡುಗೆ ಇದು ಎಂದೇ ಹೇಳಬೇಕು. ಅತ್ಯಾಚಾರಗಳಾಗಲಿ, ಅಪರಾಧ ಪ್ರಕರಣಗಳಾಗಲಿ ಎಲ್ಲವೂ ದ್ವೇಷ ಪ್ರಚಾರದ ಫಲಿತಾಂಶಗಳಾಗಿವೆ. ಮುಸ್ಲಿಮರನ್ನು ಹಿಂದೂ ಧರ್ಮದ ಶತ್ರುಗಳಂತೆ ಬಿಂಬಿಸುವುದರಿಂದ  ಬಿಜೆಪಿ ರಾಜಕೀಯ ಲಾಭವನ್ನೇನೋ ಪಡೆಯುತ್ತಿದೆ. ಆದರೆ, ಬಿಜೆಪಿಯ ಪ್ರಚೋದನೆಯಿಂದ ಪ್ರೇರಣೆ ಪಡೆದ ಬಿಸಿರಕ್ತದ ಯುವ ತಲೆಮಾರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿ ಯಶಸ್ವಿಯಾದ ಧೈರ್ಯದಿಂದ ಇನ್ನಿತರ ಕ್ರಿಮಿನಲ್ ಕೃತ್ಯಗಳಿಗೂ ಧೈರ್ಯ ತೋರುತ್ತಾರೆ. ಆರಂಭದಲ್ಲಿ ಇಂಥ ಯುವಕರ ಗುರಿ ಮುಸ್ಲಿಮರೇ ಆಗಿದ್ದರೂ ಆ ಬಳಿಕ ಅವರು ತಮ್ಮ ಗಮನವನ್ನು ಇನ್ನಿತರ ಕಡೆಗಳಿಗೂ ಹರಿಸುತ್ತಾರೆ. ರಾಜಕಾರಣಿಗಳ ಪ್ರಭಾವ ಬಳಸಿ ಮುಸ್ಲಿಮ್ ಹಿಂಸೆಯ ಆರೋಪದಿಂದ ಸುಲಭದಲ್ಲೇ  ಹೊರಬರುವ ಸನ್ನಿವೇಶವು ಅವರನ್ನು ಹಫ್ತಾ ವಸೂಲಿ, ಬೆದರಿಕೆ, ಸುಪಾರಿ ಹತ್ಯೆಗಳಂಥ ಕ್ರಿಮಿನಲ್ ಕೃತ್ಯಗಳಲ್ಲೂ ಭಾಗಿಯಾಗುವಂತೆ ಮಾಡುತ್ತಿದೆ. ನಿಧಾನಕ್ಕೆ ಇಂಥವರು ಆಯಾ ಊರಿನ ಡಾನ್‌ಗಳಂತೆ ವರ್ತಿಸತೊಡಗುತ್ತಾರೆ. ಅಪರಾಧ ಕೃತ್ಯಗಳಲ್ಲಿ ಸಹಜವೆಂಬAತೆ ಭಾಗಿಯಾಗತೊಡಗುತ್ತಾರೆ. ಹೆಣ್ಣಿನ ಅಪಹರಣ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಕೃತ್ಯಗಳಲ್ಲೂ ಇವರು ಭಾಗಿಯಾಗುತ್ತಾರೆ. ಅಂದಹಾಗೆ,

ನಿರ್ದಿಷ್ಟ ಉದ್ಯೋಗ ಇಲ್ಲದ ಇವರಿಗೆ ಆದಾಯ ಮೂಲವಾಗಿ ಇವುಗಳಲ್ಲಿ ಭಾಗಿಯಾಗಲೇಬೇಕಾದ ಅನಿವಾರ್ಯತೆಯೂ ಎದುರಾಗುತ್ತದೆ. ಇಂಥವರನ್ನೇ ಈ ದ್ವೇಷ ರಾಜಕೀಯದ ಮಂದಿ ತಮ್ಮ ಲಾಭಕ್ಕಾಗಿ ಆಗಾಗ್ಗೆ ಬಳಸಿಕೊಳ್ಳುತ್ತಾ ಇರುತ್ತಾರೆ. ಮಾತ್ರವಲ್ಲ, ಇವರನ್ನು ಸಾಕುವುದು ಕಷ್ಟ ಎಂದು ಅನಿಸಿದಾಗ ಕೈ ಕೊಡುತ್ತಾರೆ. ನಿಜವಾಗಿ,

ಒಂಟಿ ಮಹಿಳೆಯರು ಪ್ರಯಾಣಿಸಲಾಗದ ದೇಶ ಎಂದು ಟ್ರಂಪ್ ಸರಕಾರ ಭಾರತವನ್ನು ಅವಮಾನಿಸಿರುವುದರ ಸಂಪೂರ್ಣ ಹೊಣೆಯನ್ನು ಮೋದಿ ಸರಕಾರವೇ ಹೊತ್ತುಕೊಳ್ಳಬೇಕು. ಹೆಣ್ಣನ್ನು ದೇವತೆ ಎಂದು ಗುರುತಿಸುವ ದೇಶದಲ್ಲಿ ಹೆಣ್ಣು ಸುರಕ್ಷಿತವಲ್ಲ ಎಂದು ಟ್ರಂಪ್ ಸರಕಾರ ಘೋಷಿಸಿರುವುದು 140 ಕೋಟಿ ಭಾರತೀಯರಿಗೆ ಮಾಡಲಾದ ಅವಮಾನ. ಇಂಥದ್ದೊಂದು  ಅವಮಾನಕರ ಪರಿಸ್ಥಿತಿ ದೇಶದಲ್ಲಿ ಯಾಕಿದೆ ಎಂಬುದನ್ನು ದೇಶದ ನಾಗರಿಕರು ಅವಲೋಕನ ನಡೆಸಬೇಕು. ಬಿಜೆಪಿ ತನ್ನ ರಾಜಕೀಯ ಅಧಿಕಾರಕ್ಕೆ ನೆಟ್ಟು ಬೆಳೆಸಿದ ಮುಸ್ಲಿಮ್ ದ್ವೇಷಕ್ಕೆ ಇದರಲ್ಲಿ ಎಷ್ಟು ಪಾತ್ರ ಇದೆ ಎಂಬುದಾಗಿಯೂ ವಿಶ್ಲೇಷಣೆ ನಡೆಸಬೇಕು.

ನೀವು ಒಂದು ಬಾರಿ ಜನರಿಗೆ ದ್ವೇಷಿಸಲು ಕಲಿಸಿದರೆ ಆ ಬಳಿಕ ಅವರು ನೀವು ಸೂಚಿಸಿದವರನ್ನೇ ದ್ವೇಷಿಸುವುದಲ್ಲ, ನೀವು ಪ್ರೀತಿಸಬೇಕು ಎಂದವರನ್ನೂ ದ್ವೇಷಿಸತೊಡಗುತ್ತಾರೆ. ದ್ವೇಷ ಎಂಬುದು ಜನರನ್ನು ಕ್ರಿಮಿನಲ್ ಕೃತ್ಯದತ್ತ ಕೊಂಡೊಯ್ಯುವ ಅಫೀಮು. ಒಮ್ಮೆ ಈ ಅಫೀಮನ್ನು ತಿನ್ನಿಸಿದರೆ ಆ ಬಳಿಕ ಅದರ ಅಡ್ಡಪರಿಣಾಮದಿಂದ ಹೆಣ್ಣೂ ಸುರಕ್ಷಿತಳಲ್ಲ. ದೇಶವೂ ಸುರಕ್ಷಿತವಲ್ಲ. ಎಪಿಸಿಆರ್ ವರದಿಗೆ ಮತ್ತು ಅಮೇರಿಕದ ಘೋಷಣೆಗೆ ಈ ಅಫೀಮು ತಿಂದವರು ಮತ್ತು ತಿನ್ನಿಸಿದವರೇ ನೇರ ಹೊಣೆ.

Wednesday, 18 June 2025

ಶರೀಫ್ ಸಾಬ್‌ರನ್ನು ಸ್ಮರಿಸುತ್ತಾ...




ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಘಟಕದ ಸಲಹಾ ಸಮಿತಿಯ ಸದಸ್ಯರಾಗಿ, ಸನ್ಮಾರ್ಗ, ಅನುಪಮ ಮತ್ತು ಶಾಂತಿ ಪ್ರಕಾಶನಗಳ ಸ್ಥಾಪನೆಯಲ್ಲಿ ಬಹುಮುಖ್ಯ ಪಾತ್ರಧಾರಿಯಾಗಿ, ಹಿರಾ ಸಹಿತ ವಿವಿಧ ಶಿಕ್ಷಣ ಸಂಸ್ಥೆಗಳ ರೂವಾರಿಯಾಗಿ, ಜಮಾಅತ್ ಮಂಗಳೂರು ಸ್ಥಾನೀಯ ಘಟಕವನ್ನು 2 ದಶಕಗಳ ಕಾಲ ಮುನ್ನಡೆಸಿ, ಬಡ್ಡಿರಹಿತ ಬ್ಯಾಂಕಿಂಗ್  ವ್ಯವಸ್ಥೆಯಾದ ಕಾರುಣ್ಯದ ಬೆನ್ನೆಲುಬಾಗಿ ಮತ್ತು ಹತ್ತು ಹಲವು ಬಡವರು ಮತ್ತು ದುರ್ಬಲರಿಗೆ ಆಸರೆಯಾಗಿದ್ದ ಶರೀಫ್ ಸಾಬ್ ಅವರು ಪತ್ರಕರ್ತರೂ ಆಗಿರಲಿಲ್ಲ. ಪದವಿಗಳ ಮೇಲೆ ಪದವಿಗಳನ್ನು ಪಡೆದ ಶಿಕ್ಷಣ ತಜ್ಞರೂ ಆಗಿರಲಿಲ್ಲ. ಹಲವು ಕೃತಿಗಳನ್ನು ರಚಿಸಿದ ಸಾಹಿತಿಯೂ ಆಗಿರಲಿಲ್ಲ. ಬಿರುದಾಂಕಿತ ಆರ್ಥಿಕ ತಜ್ಞರೂ ಆಗಿರಲಿಲ್ಲ. ಆದ್ದರಿಂದಲೇ ಅವರ ಸಾಧನೆ ಮಹತ್ವದ್ದಾಗುತ್ತದೆ. 85 ವರ್ಷಗಳ ತುಂಬು ಜೀವನವನ್ನು ಸವೆಸಿ ಅವರು ಇಹಲೋಕಕ್ಕೆ ವಿದಾಯ ಕೋರಿ ಹೊರಟು ಹೋಗುವಾಗ ಈ ಮೇಲೆ ಉಲ್ಲೇಖಿತವಾದವುಗಳ ಹೊರತಾಗಿ ಅವರ ಖಾತೆಗೆ ಸೇರಿಸುವುದಕ್ಕೆ ಇನ್ನೂ ಅನೇಕ ಸಂಗತಿಗಳಿವೆ.

ಒಮ್ಮೆ ಅವರು ಸನ್ಮಾರ್ಗ ಕಚೇರಿಯಾದ ಹಿದಾಯತ್ ಸೆಂಟರ್‌ನ ಕೂಗಳತೆಯ ದೂರದಲ್ಲಿರುವ ಕಚ್ಚೀ ಮೇಮನ್ ಮಸೀದಿಯಲ್ಲಿ ನಮಾಜ್  ನಿರ್ವಹಿಸಿ ಕಚೇರಿಗೆ ಬಂದು ಸಿಬಂದಿಯನ್ನು ಕರೆದರು. ನಾನು ಮಸೀದಿ ಪಕ್ಕದ ಬಾಂಬೆ ಹೊಟೇಲ್‌ಗೆ ಹೋಗಿದ್ದೆ. ಹೊರ ಬರುವಾಗ ಒಬ್ಬರು ಹೊಟೇಲ್ ಹೊರಗಡೆ ನಿಂತಿದ್ರು. ಹಸಿವಾಗ್ತಾ ಇದೆ ಎಂದರು. ನಾನು ಅನುಮಾನದಿಂದ ಸೀದಾ ಬಂದೆ. ಆದರೆ, ನನಗೀಗ ಆ ವ್ಯಕ್ತಿಯ ಹಸಿವು ನಿಜವೂ ಆಗಿರಬಹುದು ಎಂದು ಅನಿಸ್ತಾ ಇದೆ. ಆದ್ದರಿಂದ ನೀವೊಂದು ಕೆಲಸ ಮಾಡಬೇಕು. ಆ ವ್ಯಕ್ತಿಗೆ ಊಟ ಕೊಟ್ಟು ಮತ್ತು ಕಿಸೆಗೊಂದಿಷ್ಟು ಹಣ ಹಾಕಿ ಬರಬೇಕು ಎಂದು ಹೇಳಿ ದುಡ್ಡು ಕೊಟ್ಟರು. ವ್ಯಕ್ತಿ ಇಂತಿಂಥ  ಬಣ್ಣದ ಶರ್ಟ್ ಮತ್ತು ಲುಂಗಿ ಉಟ್ಟಿದ್ದಾರೆ ಎಂದೂ ಹೇಳಿದರು. ನಿಜವಾಗಿ,

ಹಸಿದವರಿಗೆ ಉಣಿಸುವವರಿಗೇನೂ ನಮ್ಮಲ್ಲಿ ಕಡಿಮೆ ಇಲ್ಲ. ಆದರೆ ಹಸಿದವನನ್ನು ಆ ಹೊಟೇಲ್‌ನಿಂದ ಕಚೇರಿಯವರೆಗೆ ಮನಸೊಳಗೆ ತುಂಬಿಕೊಂಡು  ಪಾಪಭಾವದಿಂದ ತಳಮಳಗೊಳ್ಳುವವರು ಕಡಿಮೆ. ಇದಕ್ಕೆ ತಾಯಿ ಹೃದಯ ಅನ್ನುತ್ತೇವೆ. ಆ ವ್ಯಕ್ತಿಗೆ ಇವರು ಉಣಿಸದೇ ಇರುತ್ತಿದ್ದರೆ ಅಪರಾಧಿಯೇನೂ ಆಗುತ್ತಿರಲಿಲ್ಲ. ಯಾಕೆಂದರೆ, ಹೀಗೆ ಹಸಿವು ಎಂದು ಹೇಳಿ ಯಾಮಾರಿಸುವವರೇ ಇವತ್ತು ಹೆಚ್ಚಿದ್ದಾರೆ ಮತ್ತು ಆ ವ್ಯಕ್ತಿ ಶರೀಫ್ ಸಾಬ್‌ರಿಗೆ ಪರಿಚಿತರೂ ಅಲ್ಲ. ಕುಟುಂಬಸ್ತರೂ ಅಲ್ಲ. ಆದ್ದರಿಂದ ಆ ವ್ಯಕ್ತಿಯನ್ನು ಅಲ್ಲೇ  ಮರೆತು ಮುಂದೆ ಹೋಗಬಹುದಿತ್ತು. ಆದರೆ ತಾಯಿ ಮನಸ್ಸು ಅದನ್ನು ಒಪ್ಪಿಕೊಳ್ಳಲಿಲ್ಲ. ಅಂದಹಾಗೆ,

ಸನ್ಮಾರ್ಗ ಟ್ರಸ್ಟ್ ಗೆ  ದೀರ್ಘಕಾಲ ಚೇರ್ಮನ್ ಆಗಿದ್ದವರು ಶರೀಫ್ ಸಾಬ್. 1978 ಎಪ್ರಿಲ್ 23ರಂದು ಸನ್ಮಾರ್ಗ ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಗೊಳ್ಳುವಾಗ ಇಬ್ರಾಹೀಮ್ ಸಈದ್ ಸಂಪಾದಕರಾಗಿದ್ದರೆ, ಈ ಶರೀಫ್ ಸಾಬ್ ಅದರ ಬೆವರಾಗಿದ್ದರು. ಮುಸ್ಲಿಮರಲ್ಲಿ ಮುಖ್ಯವಾಗಿ ಕರಾವಳಿಯ ಮುಸ್ಲಿಮರಲ್ಲಿ ಕನ್ನಡ ಎಂಬುದು ‘ಅನ್ಯ’ ಭಾಷೆಯಾಗಿ ಮತ್ತು ಒಂದು ರೀತಿಯಲ್ಲಿ ಅಲಿಖಿತ ಬಹಿಷ್ಕಾರಕ್ಕೆ ಒಳಗಾದ ಭಾಷೆಯಾಗಿ ಮಾರ್ಪಟ್ಟಿದ್ದ ವೇಳೆ ಅದೇ ಕನ್ನಡದಲ್ಲಿ ಪತ್ರಿಕೆಯನ್ನು ಪ್ರಾರಂಭಿಸುವುದೆಂದರೆ ಆಕಾಶಕ್ಕೆ ಏಣಿ ಇಟ್ಟಷ್ಟೇ ಸವಾಲಿನದ್ದು. ಒಂದು ಕಡೆ ಆರ್ಥಿಕ ಸವಾಲು ಎದುರಿದ್ದರೆ, ಕನ್ನಡದ ಬಗ್ಗೆ ಮುಸ್ಲಿಮರಲ್ಲಿರುವ ನಕಾರಾತ್ಮಕ ಭಾವ ಇನ್ನೊಂದು ಕಡೆಯಿತ್ತು. ಇದರ ಜೊತೆಗೆ ಕರಾವಳಿಯಿಂದ ಹೊರಬಂದು ರಾಜ್ಯದಾದ್ಯಂತ ಕನ್ನಡಿಗರಿಗೆ ಈ ಪತ್ರಿಕೆಯನ್ನು ತಲುಪಿಸಬೇಕಿತ್ತು. ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಜನರಲ್ಲಿದ್ದ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಅವರಲ್ಲಿರುವ ತಪ್ಪು ಭಾವನೆಗಳನ್ನು ಹೋಗಲಾಡಿಸುವುದು ಪತ್ರಿಕೆಯ ಗುರಿಯಾಗಿತ್ತು. ಇದರ ಜೊತೆಗೇ ಇಸ್ಲಾಮ್‌ನ ಹೆಸರಲ್ಲಿ ನಡೆಯುತ್ತಿದ್ದ ಹತ್ತು-ಹಲವು ತಪ್ಪು ಆಚರಣೆಗಳನ್ನು ತಿದ್ದುವುದೂ ಪತ್ರಿಕೆಯ ಉದ್ದೇಶವಾಗಿತ್ತು. ಆದರೆ,

ಶರೀಫ್ ಸಾಬ್‌ರ ನೇತೃತ್ವದಲ್ಲಿದ್ದ ಉತ್ಸಾಹಿ ತಂಡ ಬರಹದ ಹೊಣೆಯನ್ನು ಸಂಪಾದಕೀಯ ಮಂಡಳಿಗೆ ವಹಿಸಿಕೊಟ್ಟು ಪತ್ರಿಕೆಯ ಪ್ರಸಾರ ಮತ್ತು ಆರ್ಥಿಕ ಹೊಣೆಗಾರಿಕೆಯನ್ನು ಸ್ವಯಂ ವಹಿಸಿಕೊಂಡಿತು. ಈ ಪತ್ರಿಕೆಯನ್ನು ರಾಜ್ಯದ ಮೂಲೆಮೂಲೆಗೂ ತಲುಪಿಸುವುದಕ್ಕಾಗಿ ಊರೂರು ಸುತ್ತಿತು. ಒಂದು ಕಡೆ ಆರ್ಥಿಕ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳುವುದು ಮತ್ತು ಇನ್ನೊಂದು ಕಡೆ ಪತ್ರಿಕೆ ನಿರಂತರ ಪ್ರಕಟವಾಗುವಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ನೀಡಿತು. ಸನ್ಮಾರ್ಗ ಕಳೆದ 48 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಾ ಬಂದಿದ್ದರೆ ಅದರ ಹಿಂದೆ ಶರೀಫ್ ಸಾಬ್‌ರ ದೂರದೃಷ್ಟಿ, ಬುದ್ಧಿವಂತಿಕೆ, ತಂತ್ರಗಾರಿಕೆ ಮತ್ತು ಪ್ರಾಮಾಣಿಕತೆಗೆ ಬಹುದೊಡ್ಡ ಪಾತ್ರವಿದೆ. ಅವರು ಹಿದಾಯತ್ ಸೆಂಟರನ್ನು ಅತಿಯಾಗಿ ಪ್ರೀತಿಸಿದ್ದರು. ವೇತನ ಆಗಿದೆಯೇ ಎಂದು ಸಿಬಂದಿಗಳಲ್ಲಿ ವಿಚಾರಿಸುವುದು ರೂಢಿಯಾಗಿತ್ತು. ಯಾವುದೇ ಸಂಸ್ಥೆ ನಿಂತ ನೀರಾಗಬಾರದು ಎಂಬುದು ಅವರ ನೀತಿಯಾಗಿತ್ತು. ಆದ್ದರಿಂದಲೇ,

ಆಧುನಿಕ ತಂತ್ರಜ್ಞಾನಗಳನ್ನು ಬಳಸುವಲ್ಲೂ ಮತ್ತು ಅದರ ಉಪಯೋಗದಿಂದ ಸಂಸ್ಥೆಯನ್ನು ವಿಸ್ತರಿಸುವಲ್ಲೂ ಅವರು ಮುಂಚೂಣಿ ವಕ್ತಾರರಾದರು. ಶಾಂತಿ ಪ್ರಕಾಶನದ ಪುಸ್ತಕಗಳನ್ನು ಊರೂರು ತಲುಪಿಸುವುದಕ್ಕಾಗಿ ಮೊಬೈಲ್ ಪುಸ್ತಕಾಲಯದ ಪರ ನಿಂತರು. ಸಣ್ಣದೊಂದು ಕಚೇರಿಗೆ ಸೀಮಿತಗೊಂಡಿದ್ದ ಬಡ್ಡಿರಹಿತ ಬ್ಯಾಂಕಿಂಗ್  ವ್ಯವಸ್ಥೆಗೆ ವಿಸ್ಟ್ರತ ರೂಪವನ್ನು ಕೊಟ್ಟು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುವುದರ ಪರ ನಿಂತರು. ಸಣ್ಣ ಕಟ್ಟಡದಲ್ಲಿ ಆರಂಭವಾಗಿದ್ದ ಹಿರಾ ಕಾಲೇಜನ್ನು ದ.ಕ. ಜಿಲ್ಲೆಯಲ್ಲೇ  ಮಹತ್ವದ ಹಿರಾ ಸಮೂಹ ಶಿಕ್ಷಣ ಸಂಸ್ಥೆಯಾಗಿ ಮಾರ್ಪಡಿಸುವಲ್ಲಿ ಅವರ ದೂರದೃಷ್ಟಿ ಮತ್ತು ತಂತ್ರಗಾರಿಕೆಯ ಪಾತ್ರ ಬಹಳ ಹಿರಿದು. 

2019ರವರೆಗೆ ಬರೇ ಮುದ್ರಣ ಮಾಧ್ಯಮವಾಗಿಯಷ್ಟೇ ಗುರುತಿಸಿಕೊಂಡಿದ್ದ ಸನ್ಮಾರ್ಗವನ್ನು ಡಿಜಿಟಲ್ ಯುಗಕ್ಕೆ ಪರಿವರ್ತಿಸುವಲ್ಲೂ ಶರೀಫ್ ಸಾಬ್ ಮುಂಚೂಣಿ ಪಾತ್ರ ನಿರ್ವಹಿಸಿದರು. 2019ರಲ್ಲಿ ಸನ್ಮಾರ್ಗ ವೆಬ್‌ಪೋರ್ಟಲ್ ಪ್ರಾರಂಭಿಸಿದ್ದಲ್ಲದೇ, 2020ರಲ್ಲಿ ಸನ್ಮಾರ್ಗ ನ್ಯೂಸ್ ಚಾನೆಲನ್ನೂ ಆರಂಭಿಸಲಾಯಿತು. ಎರಡು ವರ್ಷಗಳಲ್ಲಿ ತೆಗೆದುಕೊಳ್ಳಲಾದ ಈ ಎರಡು ಮಹತ್ವದ ನಿರ್ಧಾರಗಳ ಹಿಂದೆ ಶರೀಫ್ ಸಾಬ್ ಇದ್ದರು. ನಿರಂತರ ಸಲಹೆ ಮತ್ತು ಮಾರ್ಗದರ್ಶನಗಳ ಮೂಲಕ ಈ ಎರಡನ್ನೂ ಬೆಳೆಸುವಲ್ಲಿ ಅವರು ಕೊಡುಗೆಯನ್ನು ನೀಡಿದರು. ಇದರ ಜೊತೆಗೇ ಜಿಲ್ಲೆಯಲ್ಲಿ ಹತ್ತಕ್ಕಿಂತಲೂ ಅಧಿಕ ಶಿಕ್ಷಣ ಸಂಸ್ಥೆಗಳ ಪ್ರಾರಂಭಕ್ಕೂ ಮತ್ತು ಯಶಸ್ವಿ ನಿರ್ವಹಣೆಗೂ ಮಾರ್ಗದರ್ಶಕರಾದರು. ಅಂದಹಾಗೆ,

ಮುಹಮ್ಮದ್ ಷರೀಫ್  ಎಂಬ ಸಾಮಾನ್ಯ ವ್ಯಕ್ತಿ ಈ ಮಟ್ಟದಲ್ಲಿ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದಿರುವುದರ ಹಿಂದೆ ಅವರ ಓದಿನ ಪಾತ್ರ ಇದೆ. ಬಡತನ ಕಲಿಸಿದ ಪಾಠ ಇದೆ. ಉದ್ಯಮಕ್ಕೆ ಕೈ ಹಾಕುವ ಮೂಲಕ ಪಡೆದ ಸಾಹಸ ಪ್ರವೃತ್ತಿಯ ಅನುಭವವಿದೆ. ಮಗನನ್ನೇ ಕಳೆದುಕೊಳ್ಳುವಷ್ಟು ಅತೀವ ದುಃಖದ ಮತ್ತು ಮಕ್ಕಳು ಸ್ಥಿತಿವಂತರಾಗಿ ಪಡೆದ ಸುಖದ ಅನುಭವವೂ ಇದೆ. ಅವರು ಬಡತನದಲ್ಲಿ ಪಡೆದ ಪಾಠ ಅವರನ್ನು ಎಷ್ಟು ಉದಾರಿಯಾಗಿಸಿತೆಂದರೆ, ಬಳಿಕ ಅವರಿಂದ ಆರ್ಥಿಕ ಲಾಭ ಪಡೆದವರ ಸಂಖ್ಯೆ ಸಾಕಷ್ಟಿದೆ. ಅವರು ಕಿರಿಯರೊಂದಿಗೆ ಕಿರಿಯರಾಗಿ ಅಭಿಪ್ರಾಯಗಳನ್ನು ಆಲಿಸುತ್ತಿದ್ದರು. ಹಿರಿಯ ಗುಂಪಿನಲ್ಲಿ ಅಷ್ಟೇ ಗಂಭೀರವಾಗಿಯೂ ನಡಕೊಳ್ಳುತ್ತಿದ್ದರು ಮತ್ತು ವ್ಯಕ್ತವಾದ ಅಭಿಪ್ರಾಯಗಳಲ್ಲಿ ಅತ್ಯುತ್ತಮವಾದುದನ್ನು ಹೆಕ್ಕಿಕೊಳ್ಳುವ ಮತ್ತು ಅದರ ಜಾರಿಗಾಗಿ ಕೊನೆತನಕವೂ ಶ್ರಮಪಡುವ ವಿಶೇಷ ಪ್ರತಿಭೆ ಅವರಲ್ಲಿತ್ತು. ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್ ನ  ಚೇರ್ಮನ್ ಆಗಿದ್ದ ಕಾಲದಲ್ಲೂ ಮತ್ತು ಆ ಬಳಿಕವೂ ತನ್ನ ನಿಲುವನ್ನು ಸಂಪಾದಕೀಯ ಮಂಡಳಿಯ ಮೇಲೆ ಹೇರಿದವರಲ್ಲ. ಅದೇವೇಳೆ, ಸನ್ಮಾರ್ಗದ ಮೇಲೆ ಪ್ರಕರಣಗಳು ದಾಖಲಾದಾಗ ವಕೀಲರನ್ನು ನಿಯುಕ್ತಿಗೊಳಿಸುವುದರಿಂದ ಹಿಡಿದು ನ್ಯಾಯಾಲಯದ ವರೆಗೆ ಪ್ರತಿ ಹಂತದಲ್ಲೂ ಸಂಪಾದಕೀಯ ಮಂಡಳಿಯ ಜೊತೆಗೇ ಇದ್ದರು.

 ಅವರೋರ್ವ ಅತ್ಯುತ್ತಮ ನಾಯಕ, ಅತ್ಯುತ್ತಮ ಸಂಘಟಕ, ಅತ್ಯುತ್ತಮ ಪ್ರತಿಭಾ ಪೋಷಕರಾಗಿದ್ದರು. 85 ವರ್ಷಗಳ ತುಂಬು ಜೀವನವನ್ನು ನಡೆಸಿ ವಿದಾಯ ಕೋರಿದಾಗ ನೆನಪಿಸಿಕೊಳ್ಳುವುದಕ್ಕೆ ಅವರು ಧಾರಾಳ ಒಳಿತುಗಳನ್ನು ಉಳಿಸಿ ಹೋಗಿದ್ದಾರೆ.  ಅಲ್ಲಾಹನು ಶರೀಫ್ ಸಾಬ್‌ರಿಗೆ ಸ್ವರ್ಗವನ್ನು ದಯಪಾಲಿಸಲಿ. ಆಮೀನ್.

Monday, 26 May 2025

ಸಂಪುಟಕ್ಕೆ ಬೇಡದ ಮುಸ್ಲಿಮರು ನಿಯೋಗಕ್ಕೆ ಏಕೆ ಬೇಕಾದರು?




ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಕ್ರೌರ್ಯವು ಭಯೋತ್ಪಾದನೆಯ ಅಪಾಯವನ್ನು ಜಗತ್ತಿನೆದುರು ತೆರೆದಿಟ್ಟರೆ, ಆ ಬಳಿಕದ ಬೆಳವಣಿಗೆಯು ಕೇಂದ್ರ ಸರಕಾರದ ಬೂಟಾಟಿಕೆಯನ್ನೂ ಬೆತ್ತಲೆ ಮಾಡಿದೆ. ಪಾಕಿಸ್ತಾನಿ ಪ್ರೇರಿತ ಭಯೋತ್ಪಾದನೆಯನ್ನು ಜಾಗತಿಕ ರಾಷ್ಟ್ರಗಳಿಗೆ ಮನವರಿಕೆ ಮಾಡುವುದಕ್ಕಾಗಿ ಮೋದಿ ಸರಕಾರ ಸರ್ವ ಪಕ್ಷಗಳ 7 ನಿಯೋಗಗಳನ್ನು ರಚಿಸಿದೆ. ಇದರಲ್ಲಿ ಕಾಂಗ್ರೆಸ್, ಎಡಪಕ್ಷಗಳು, ಎನ್‌ಸಿಪಿ, ಶಿವಸೇನೆ, ಟಿಎಂಸಿ, ಡಿಎಂಕೆ, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ 59 ಸದಸ್ಯರಿದ್ದಾರೆ. ಈ ನಿಯೋಗಗಳು ಅಮೇರಿಕ, ಯುರೋಪಿಯನ್ ರಾಷ್ಟ್ರಗಳು, ಆಫ್ರಿಕಾ, ಗಲ್ಫ್ ರಾಷ್ಟ್ರಗಳು, ವಿಶ್ವಸಂಸ್ಥೆಗೆ ಭೇಟಿ ನೀಡಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ಮನವರಿಕೆ ಮಾಡಿಸುವುದು ಮತ್ತು ಜಾಗತಿಕ ರಾಷ್ಟ್ರಗಳನ್ನು ಭಾರತದ ಪರ ಒಲಿಸುವ ಕೆಲಸವನ್ನು ಮಾಡಲಿದೆ. ಈ ನಿಯೋಗಗಳಲ್ಲಿರುವ ಸದಸ್ಯರನ್ನು ನೋಡಿದರೆ ಮೋದಿ ಸರಕಾರವು ಅತ್ಯಂತ ಬುದ್ಧಿವಂತಿಕೆಯಿಂದ  ಈ ತಂಡ ರಚಿಸಿದೆ ಅನ್ನುವುದು ಗೊತ್ತಾಗುತ್ತದೆ. ಬಹುತ್ವದಲ್ಲಿ ಏಕತೆಯನ್ನು ಸಾರುವ ಮತ್ತು ಸಬ್‌ಕಾ ಸಾಥ್ ಘೋಷಣೆಯನ್ನು ಸಮರ್ಥಿಸುವ ರೂಪದಲ್ಲಿ ಈ ತಂಡವನ್ನು ರಚಿಸಲಾಗಿದೆ. ಈ 59 ಸದಸ್ಯರಲ್ಲಿ ಗುಲಾಮ್ ನಬಿ ಆಝಾದ್, ಸಲ್ಮಾನ್ ಖುರ್ಷಿದ್, ಇ.ಬಿ. ಮುಹಮ್ಮದ್ ಬಶೀರ್, ಮಿಯಾ ಅಲ್ತಾಫ್ ಅಹ್ಮದ್, ಎಂ.ಜೆ. ಅಕ್ಬರ್, ಅಸದುದ್ದೀನ್ ಓವೈಸಿ ಸಹಿತ 10 ಮಂದಿ ಮುಸ್ಲಿಮರಿದ್ದಾರೆ. ಪ್ರಶ್ನೆ ಇರೋದೇ ಇಲ್ಲಿ.

ಕೇಂದ್ರ ಸಚಿವ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮರನ್ನು ಸೇರಿಸಿಕೊಳ್ಳದ ಮೋದಿ ಸರಕಾರವು ವಿದೇಶಿ ರಾಷ್ಟ್ರಗಳಲ್ಲಿ ಭಾರತದ ವರ್ಚಸ್ಸನ್ನು ಹೆಚ್ಚಿಸುವ ತಂಡಕ್ಕೆ ಮುಸ್ಲಿಮರನ್ನು ಆರಿಸಿದ್ದೇಕೆ? ವಿದೇಶಿಯರನ್ನು ಪ್ರಭಾವಿತಗೊಳಿಸಬಲ್ಲಷ್ಟು ತಜ್ಞರು ಮತ್ತು ನಿಪುಣ ನಾಯಕರು ಮುಸ್ಲಿಮ್ ಸಮುದಾಯದಲ್ಲಿ ಇದ್ದಾರೆ ಎಂದಾದರೆ, ಅವರನ್ನೇಕೆ ಸಚಿವ ಸಂಪುಟದಿಂದ ಹೊರಗಿಡಲಾಗಿದೆ? ಹಾಗಂತ,

ಬಿಜೆಪಿಯ 240ರಷ್ಟು ಸಂಸದರಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಸಂಸದ ಇಲ್ಲದೇ ಇರುವುದರಿಂದ ಸಂಪುಟಕ್ಕೆ ಅವರನ್ನು ಆಯ್ಕೆ ಮಾಡಲಾಗಿಲ್ಲ ಎಂದು ವಾದಿಸುವ ಹಾಗೆಯೂ ಇಲ್ಲ. ನಿರ್ಮಲಾ ಸೀತಾರಾಮನ್ ಕೂಡಾ ಪಾರ್ಲಿಮೆಂಟ್‌ಗೆ ಆಯ್ಕೆಯಾಗಿಲ್ಲ. ಜೆಪಿ ನಡ್ಡಾ ಕೂಡಾ ಪಾರ್ಲಿಮೆಂಟ್‌ಗೆ ಚುನಾಯಿತರಾಗಿಲ್ಲ. ಎಸ್. ಜೈಶಂಕರ್, ಅಶ್ವಿನಿ ವೈಷ್ಣವ್, ಹರ್‌ದೀಪ್ ಸಿಂಗ್ ಪುರಿ ಕೂಡಾ ಚುನಾವಣಾ ರಾಜಕೀಯದಲ್ಲಿ ಆಯ್ಕೆಯಾಗಿ ಬಂದವರಲ್ಲ. ಇವರನ್ನೆಲ್ಲ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಆ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿದೆ. ಹೀಗಿರುವಾಗ ಮುಸ್ಲಿಮರನ್ನು ಮಾತ್ರ ಇಂಥ ಪ್ರಕ್ರಿಯೆಯಿಂದ ಹೊರಗಿಟ್ಟಿರುವುದೇಕೆ? ಸಮರ್ಥ ಮುಸ್ಲಿಮ್ ನಾಯಕರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಬಳಿಕ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಹುದಿತ್ತಲ್ಲವೇ? ಇಂಥ ಅವಕಾಶ ಇದ್ದೂ ಮುಸ್ಲಿಮರನ್ನು ಸೇರಿಸಿಕೊಳ್ಳದ ಮೋದಿ ಸರಕಾರವು ವಿದೇಶಕ್ಕೆ ಕಳುಹಿಸುವ ತಂಡದಲ್ಲಿ ಮುಸ್ಲಿಮರನ್ನು ಸೇರಿಸಿಕೊಂಡಿರುವುದರ ಅರ್ಥ ಏನು? ಜಗತ್ತನ್ನು ಮೂರ್ಖಗೊಳಿಸುವುದೇ? ತನ್ನ ಸರಕಾರವು ಬಹುತ್ವದಲ್ಲಿ ಏಕತೆಯನ್ನು, ಸಾಮಾಜಿಕ ನ್ಯಾಯವನ್ನು, ಸಮಾನ ಪ್ರಾತಿನಿಧ್ಯವನ್ನು ಭಾರತದಲ್ಲಿ ನೀಡುತ್ತಿದೆ ಮತ್ತು ಎಲ್ಲರನ್ನೂ ಒಳಗೊಳಿಸಿಕೊಂಡು ಹೋಗುತ್ತಿದೆ ಎಂಬ ಸಂದೇಶವನ್ನು ಸಾರುವುದೇ? ಇದು ಬೂಟಾಟಿಕೆ ಅಲ್ಲವೇ? ದೇಶದಲ್ಲಿ ಅಂಥದ್ದೊಂದು  ಪರಿಸ್ಥಿತಿ ಇದೆಯೇ? 20 ಕೋಟಿ ಬೃಹತ್ ಜನಸಂಖ್ಯೆಯ ಮುಸ್ಲಿಮ್ ಸಮುದಾಯವನ್ನು ಎಲ್ಲ ರೀತಿಯಿಂದಲೂ ದಬ್ಬಾಳಿಕೆ ಮತ್ತು ಅಂಚಿಗೆ ತಳ್ಳುವ ನೀತಿಯನ್ನು ಪಾಲಿಸುತ್ತಾ ವಿದೇಶಕ್ಕೆ ತೆರಳುವ ತಂಡದಲ್ಲಿ ಮುಸ್ಲಿಮರನ್ನು ಸೇರಿಸಿಕೊಳ್ಳುವುದು ಕಣ್ಣೊರೆಸುವ ತಂತ್ರವಲ್ಲವೇ? ನಿಜವಾಗಿ,

ವಿದೇಶಕ್ಕೆ ತೆರಳುವ ತಂಡದಲ್ಲಿ 10 ಮಂದಿ ಮುಸ್ಲಿಮರನ್ನು ಸೇರಿಸಿಕೊಳ್ಳುವ ಮೂಲಕ ಮೋದಿ ಸರಕಾರ ಮತ್ತು ಬಿಜೆಪಿ ಒಂದನ್ನಂತೂ  ಒಪ್ಪಿಕೊಂಡಂತಾಗಿದೆ. ಅದೇನೆಂದರೆ, ಭಾರತೀಯ ಮುಸ್ಲಿಮರನ್ನು ದೇಶದ್ರೋಹಿಗಳು, ಪಾಕಿಸ್ತಾನಿ ಬೆಂಬಲಿಗರು ಎಂದೆಲ್ಲಾ  ತಾವೇ ಪ್ರಚಾರ ಮಾಡುತ್ತಾ ಬಂದಿರುವುದೆಲ್ಲ ಸುಳ್ಳು ಎಂದು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ. ಅದರಲ್ಲೂ ಹೈದರಾಬಾದ್ ಸಂಸದ ಅಸದುದ್ದೀನ್ ಓವೈಸಿಯನ್ನು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಎಂದೂ ದೇಶಪ್ರೇಮಿಯಾಗಿ ಕಂಡದ್ದೇ  ಇಲ್ಲ. ಅವರನ್ನು ಸದಾ ಹಿಂದೂ ವಿರೋಧಿಯಾಗಿ ಮತ್ತು ದೇಶದ್ರೋಹಿಯಾಗಿ ಅದು ಪ್ರತಿಬಿಂಬಿಸಿದೆ. ಹಾಗೆಯೇ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಪಕ್ಷವನ್ನು ಅದು ಭಾರತೀಯ ಎಂದು ಒಪ್ಪಿಕೊಂಡದ್ದೇ  ಕಡಿಮೆ. ಈ ಪಕ್ಷದ ನಿಷ್ಠೆಯನ್ನು ಪಾಕಿಸ್ತಾನದೊಂದಿಗೆ ಜೋಡಿಸಿ ಸದಾ ಅದು ಮಾತಾಡುತ್ತಲೇ ಬಂದಿದೆ. ಅದರ ಹಸಿರು ಧ್ವಜವನ್ನು ಎತ್ತಿಕೊಂಡು ಹಲವು ಬಾರಿ ಪಾಕಿಸ್ತಾನದ ಧ್ವಜ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರವನ್ನು ನಡೆಸಿದೆ. ಲೀಗ್‌ನ ಜೊತೆ ರಾಜಕೀಯ ಮೈತ್ರಿ ಮಾಡಿಕೊಂಡಿರುವುದಕ್ಕಾಗಿ ಅದು ಕಾಂಗ್ರೆಸನ್ನು ಟೀಕಿಸುತ್ತಲೂ ಇದೆ. ಆದರೆ ವಿದೇಶಕ್ಕೆ ತೆರಳುವ ನಿಯೋಗದಲ್ಲಿ ಅದೇ ಮುಸ್ಲಿಮ್ ಲೀಗ್‌ನ ಇ.ಟಿ. ಮುಹಮ್ಮದ್ ಬಶೀರ್‌ರನ್ನು ಇದೇ ಮೋದಿ ಸರಕಾರ ಸೇರಿಸಿಕೊಂಡಿದೆ. ಒಂದುರೀತಿಯಲ್ಲಿ,

ಬಿಜೆಪಿಗೆ ಮುಸ್ಲಿಮರೆಂದರೆ, ಬಕೆಟ್ ತುಂಬಾ ಹಾಲು ಕೊಡುವ ಕಾಮದೇನು. ಅವರನ್ನು ಬೈದು ದೂರ ಇಟ್ಟರೆ ಓಟು ಸಿಗುತ್ತದೆ. ಸೇರಿಸಿಕೊಂಡರೆ ಅಂತಾರಾಷ್ಟ್ರೀಯವಾಗಿ ಅದರ ವರ್ಚಸ್ಸು ವೃದ್ಧಿಯಾಗುತ್ತದೆ. ಮೋದಿ ಸರಕಾರ ಕಳೆದ 11 ವರ್ಷಗಳಿಂದ ದೇಶವನ್ನು ಆಳುತ್ತಿದೆ. ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಧಾನಿ ಮೋದಿಯವರು 173 ಚುನಾವಣಾ ಭಾಷಣ ಮಾಡಿದ್ದರು. ಇದರಲ್ಲಿ 110 ಭಾಷಣಗಳೂ ಇಸ್ಲಾಂಫೋಬಿಕ್  (ಇಸ್ಲಾಮ್      ಭೀತಿಯನ್ನು) ಹರಡುವಂಥದ್ದಾಗಿತ್ತು ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿರುವುದನ್ನು 2024 ಆಗಸ್ಟ್ 14ರಂದು ದಿ ಹಿಂದೂ ಪತ್ರಿಕೆ ಪ್ರಕಟಿಸಿತ್ತು. ಇದು ಓರ್ವ ಪ್ರಧಾನಿಯ ಸ್ಥಿತಿಯಾದರೆ, ಇನ್ನು ಅದರ ಬೆಂಬಲಿಗರ ಸ್ಥಿತಿ ಏನಿರಬಹುದು? ಈ ದೇಶದ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೋ ಬಿಜೆಪಿ ಸರಕಾರವಿದೆ ಅಥವಾ ಸರಕಾರದ ಪಾಲುದಾರ ಪಕ್ಷವಾಗಿ ಅಧಿಕಾರದಲ್ಲಿದೆ. ಈ ಸರಕಾರಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಶೂನ್ಯ ಅನ್ನುವಷ್ಟು ಕಡಿಮೆಯಿದೆ. ಮುಸ್ಲಿಮರಿಗೆ ಮಾತ್ರ ಸಂಬಂಧಿಸಿರುವ ಹಜ್ಜ್ ಮತ್ತು ವಕ್ಫ್ ಇತ್ಯಾದಿ ಖಾತೆಗಳನ್ನೂ ಮುಸ್ಲಿಮರಿಗೆ ನೀಡದೇ ಬಹಿರಂಗ ಉದ್ಧಟತನವನ್ನು ಬಿಜೆಪಿ ಸರಕಾರಗಳು ಪ್ರದರ್ಶಿಸುತ್ತಿವೆ. ಇವತ್ತು ಕೇಂದ್ರ ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತ ಖಾತೆಯನ್ನು ನಿಭಾಯಿಸುವುದೂ ಅಲ್ಪಸಂಖ್ಯಾತರೇ ಅಲ್ಲದ ಕಿರಣ್ ರಿಜಿಜು. ಈ ಹಿಂದಿನ ಸರಕಾರದಲ್ಲಿ ಇದೇ ಖಾತೆಯನ್ನು ಸ್ಮೃತಿ ಇರಾನಿ ನಿಭಾಯಿಸಿದ್ದರು. ಹೀಗಿರುವಾಗ ವಿದೇಶಕ್ಕೆ ತೆರಳುವ ನಿಯೋಗಗಳಲ್ಲಿ ಮಾತ್ರ 10 ಮಂದಿ ಮುಸ್ಲಿಮರನ್ನು ಸೇರಿಸಿಕೊಂಡಿರುವುದರ ಅರ್ಥವೇನು? ಕನಿಷ್ಠ ಮುಸ್ಲಿಮರಿಗೆ ಮಾತ್ರ ಸಂಬಂಧೋಇಸಿರುವ ಖಾತೆಗಳಿಗೂ ಮುಸ್ಲಿಮರನ್ನು ನೇಮಿಸಿದ ಮೋದಿ ಸರಕಾರದ ಈ ನಡೆಯಲ್ಲಿ ಪ್ರಾಮಾಣಿಕತೆಯನ್ನು ಹುಡುಕುವುದು ಹೇಗೆ? ನಿಜ ಏನೆಂದರೆ,

ಬಿಜೆಪಿಗೆ ಅಧಿಕಾರ ಬೇಕು. ಅದು ಕೈಗೂಡಬೇಕಾದರೆ ಮುಸ್ಲಿಮರನ್ನು ದ್ವೇಷಿಸಬೇಕು. ಅವರನ್ನು ಹಿಂದೂ ವಿರೋಧಿಗಳಂತೆ, ಪಾಕಿಸ್ತಾನಿಗಳಂತೆ, ದೇಶದ್ರೋಹಿಗಳಂತೆ ಸದಾ ಬಿಂಬಿಸುತ್ತಾ ಅದನ್ನೇ ಚರ್ಚಾ ವಿಷಯವಾಗಿ ಬಳಸಿಕೊಳ್ಳಬೇಕು. ತನ್ನ ಬೆಂಬಲಿಗರನ್ನು ಮುಸ್ಲಿಮರ ವಿರುದ್ಧ ಛೂ ಬಿಡುವುದು ಮತ್ತು ಮುಸ್ಲಿಮರ ಮೇಲಿನ ಹಲ್ಲೆ -ಹತ್ಯೆಗಳಿಗೆ ಪರೋಕ್ಷ ಬೆಂಬಲ ಸಾರುವುದನ್ನೂ ಮಾಡುತ್ತಿರಬೇಕು. ತನ್ನದೇ ಬೆಂಬಲಿಗರ ಒಂದು ತಂಡದಿಂದ  ಮುಸ್ಲಿಮ್ ದ್ವೇಷಭಾಷಣ ಮಾಡಿಸುತ್ತಿರಬೇಕು. ಗೋಹತ್ಯೆ, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ವ್ಯಾಪಾರ ಬಹಿಷ್ಕಾರ ಇತ್ಯಾದಿ ಇತ್ಯಾದಿಗಳನ್ನು ಆಗಾಗ ಪ್ರಚಾರಕ್ಕೆ ತರುತ್ತಿರಬೇಕು. ಇಂಥ ಅಪಪ್ರಚಾರಗಳನ್ನು ಚಾಲ್ತಿಯಲ್ಲಿಟ್ಟರೆ ತನ್ನ ಬೆಂಬಲಿಗರು ಇತರ ವಿಷಯಗಳತ್ತ ಗಮನ ಹರಿಸುವುದನ್ನು ನಿಲ್ಲಿಸುತ್ತಾರೆ ಎಂಬ ತಂತ್ರ ಅದರದು. ಆದರೆ,

ಆಂತರಿಕವಾಗಿ ಬಿಜೆಪಿ ನಾಯಕತ್ವಕ್ಕೆ ಇವೆಲ್ಲ ಸುಳ್ಳು ಅನ್ನುವುದು ಗೊತ್ತಿದೆ. ಮುಸ್ಲಿಮರು ದೇಶಪ್ರೇಮಿಗಳು, ಹಿಂದೂ ವಿರೋಧಿಗಳಲ್ಲ ಅನ್ನುವುದೂ ತಿಳಿದಿದೆ. ಆದರೆ ಇದನ್ನೆಲ್ಲ ಬಹಿರಂಗವಾಗಿ ಹೇಳಿದರೆ ಎಲ್ಲಿ ತನ್ನ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೋ ಎಂಬ ಭೀತಿ ಅದರದು. ಆದ್ದರಿಂದಲೇ, ದೇಶದೊಳಗೆ ಮುಸ್ಲಿಮರನ್ನು ದ್ವೇಷಿಸುತ್ತಾ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಮರನ್ನು ಒಳಗೊಳಿಸುತ್ತಾ ಬೂಟಾಟಿಕೆಯಿಂದ ಅದು ನಡೆದುಕೊಳ್ಳುತ್ತಿದೆ. ದುರಂತ ಏನೆಂದರೆ, ಬಿಜೆಪಿಯ ತಳಮಟ್ಟದ ಕಾರ್ಯಕರ್ತರಿಗೆ ಈ ಬೂಟಾಟಿಕೆ ಅರ್ಥವೇ ಆಗಿಲ್ಲ. ಅವರು ಸೋಶಿಯಲ್ ಮೀಡಿಯಾದಲ್ಲೂ ಬಹಿರಂಗವಾಗಿಯೂ ಮುಸ್ಲಿಮ್ ದ್ವೇಷವನ್ನು ಹಂಚುತ್ತಾ ತಿರುಗುತ್ತಿದ್ದಾರೆ.

Monday, 5 May 2025

ಧರ್ಮರಾಜಕಾರಣದ ಅಪಾಯವನ್ನು ಬಿಚ್ಚಿಟ್ಟ ದ.ಕ. ಜಿಲ್ಲೆ




ದಕ್ಷಿಣ ಕನ್ನಡ ಜಿಲ್ಲೆ  ಒಂದೇ ವಾರದಲ್ಲಿ ಎರಡು ಕಾರಣಗಳಿಗಾಗಿ ರಾಜ್ಯಮಟ್ಟದಲ್ಲಿ ಸುದ್ದಿಗೀಡಾಗಿದೆ. ಒಂದು- ಹಿಂಸೆಯ ಕಾರಣಕ್ಕಾದರೆ, ಇನ್ನೊಂದು- ಶೈಕ್ಷಣಿಕ ಸಾಧನೆಯ ಕಾರಣಕ್ಕೆ.

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ದ.ಕ. ಜಿಲ್ಲೆ  ರಾಜ್ಯದಲ್ಲೇ  ಮೊದಲ ಸ್ಥಾನ ಪಡೆದಿದೆ. ಸಾಧಕ ವಿದ್ಯಾರ್ಥಿಗಳ ಶೇಕಡಾವಾರು ಅಂಕಗಳು ಮತ್ತು ಫೋಟೋಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಇನ್ನೊಂದು ಕಡೆ, ಹೆತ್ತವರು ತಮ್ಮ ಮಕ್ಕಳ ಭವಿಷ್ಯ ರೂಪಿಸುವ ಕಾಲೇಜುಗಳ ಹುಡುಕಾಟದಲ್ಲಿದ್ದಾರೆ. ಈ ಫಲಿತಾಂಶಕ್ಕಿಂತ  ನಾಲ್ಕೈದು  ದಿನಗಳ ಮೊದಲು ಇದೇ ಜಿಲ್ಲೆಯಲ್ಲಿ ಎರಡು ಹತ್ಯೆಗಳು ನಡೆದುವು. ಮಾನಸಿಕ ಅಸ್ವಸ್ಥನಾದ ಕೇರಳದ ಅಶ್ರಫ್ ಎಂಬವರನ್ನು ಕ್ರಿಕೆಟ್ ಆಡುತ್ತಿದ್ದ ಗುಂಪು ಥಳಿಸಿ ಹತ್ಯೆ ಮಾಡಿತು. ಈ ದುಷ್ಕರ್ಮಿಗಳಿಗೆ ಈ ಅಶ್ರಫ್‌ನ ಪರಿಚಯವೇ ಇರಲಿಲ್ಲ. ಈ ಅಶ್ರಫ್‌ಗೂ ಈ ಕ್ರಿಕೆಟಿಗರ ಪರಿಚಯವೇ ಇರಲಿಲ್ಲ. ಹೀಗೆ ಪರಸ್ಪರ ಪರಿಚಯವೇ ಇಲ್ಲದ ಮತ್ತು ದ್ವೇಷಭಾವ ಹೊಂದುವುದಕ್ಕೆ ಕಾರಣಗಳೇ ಇಲ್ಲದ ವ್ಯಕ್ತಿಯನ್ನು ಕೊಲೆ ಮಾಡುವುದಕ್ಕೆ ಅಶ್ರಫ್‌ನ ಧರ್ಮದ ಹೊರತಾಗಿ ಬೇರೆ ಯಾವ ಕಾರಣವೂ ಇರಲಿಲ್ಲ. ಈ ಹತ್ಯೆಗಿಂತ ವಾರ ಮೊದಲು ಕಾಶ್ಮೀರದಲ್ಲಿ ಭಯೋತ್ಪಾದಕರು 26 ಮಂದಿಯನ್ನು ಕೊಂದಿದ್ದರು. ಈ ಕ್ರೌರ್ಯದ ಬಳಿಕ ಮುಸ್ಲಿಮ್ ದ್ವೇಷದ ಪ್ರಚಾರವೊಂದು ಸೋಶಿಯಲ್ ಮೀಡಿಯಾದಲ್ಲಿ ಎಗ್ಗಿಲ್ಲದೇ ಹರಿದಾಡಿತ್ತು. ಟಿವಿ. ಚಾನೆಲ್‌ಗಳೂ ಈ ದ್ವೇಷ ಹರಡುವುದರಲ್ಲಿ ಹಿಂದೆ ಬಿದ್ದಿರಲಿಲ್ಲ. ಭಯೋತ್ಪಾದಕರ ಕೃತ್ಯಕ್ಕೆ 20 ಕೋಟಿ ಭಾರತೀಯ ಮುಸ್ಲಿಮರು ಹೊಣೆ ಹೊರಬೇಕು ಎಂಬ ರೀತಿಯ ಅತೀ ಅಪಾಯಕಾರಿ ವಾದವೊಂದನ್ನು ಕೋಮುವಾದಿಗಳು ತೇಲಿಬಿಟ್ಟಿದ್ದರು. ಈ ದ್ವೇಷದ ಪರಿಣಾಮವಾಗಿ ದೇಶದಾದ್ಯಂತ ಕಾಶ್ಮೀರಿಗಳು ಮತ್ತು ಇತರ ಮುಸ್ಲಿಮರು ಹಲ್ಲೆ, ನಿಂದನೆ, ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾಗಲೇ ಜಿಲ್ಲೆಯಲ್ಲಿ ಈ ಗುಂಪು ಹತ್ಯೆ ನಡೆದಿತ್ತು. ಆದರೆ,

ಜಿಲ್ಲೆಯಲ್ಲಿ ನಡೆದ ಈ ಮೊಟ್ಟಮೊದಲ ಗುಂಪು ಹತ್ಯೆಯನ್ನು ಮುಸ್ಲಿಮರು ಅತ್ಯಂತ ತಾಳ್ಮೆಂಯಿಂದ  ನಿಭಾಯಿಸಿದರು. ಅವರು ಜಿಲ್ಲಾ  ಬಂದ್‌ಗೆ ಕರೆ ಕೊಡಲಿಲ್ಲ. ಅಶ್ರಫ್ ಹತ್ಯೆಗೆ ಪ್ರತೀಕಾರವಾಗಿ ಹಿಂದೂಗಳ ಮೇಲೆ ಹಲ್ಲೆ  ನಡೆಸಿರಲಿಲ್ಲ. ಶವ ಮೆರವಣಿಗೆ ಮಾಡಲಿಲ್ಲ. ಒಂದೇ ಒಂದು ಪ್ರಚೋದನಕಾರಿ ಭಾಷಣ ಮಾಡಲಿಲ್ಲ. ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಿದ ಕಾರಣಕ್ಕಾಗಿ ಈ ಹತ್ಯೆ ನಡೆಸಲಾಗಿದೆ ಎಂಬ ಅರ್ಥ ಬರುವಂತೆ ಗೃಹಸಚಿವ ಪರಮೇಶ್ವರ್ ಹೇಳಿಕೆ ಕೊಟ್ಟು ಸಮರ್ಥನೆಗಿಳಿದಾಗಲೂ ಮುಸ್ಲಿಮರು ಪ್ರಚೋದನೆಗೆ ಒಳಗಾಗಲಿಲ್ಲ. ಸ್ಥಳೀಯ ಶಾಸಕರಾಗಲಿ ಉಸ್ತುವಾರಿ ಸಚಿವರಾಗಲಿ ಸ್ಥಳಕ್ಕೆ ಆಗಮಿಸದೇ ಇದ್ದಾಗಲೂ ಮುಸ್ಲಿಮರು ಆಕ್ರೋಶದಿಂದ ಕಾನೂನು ಕೈಗೆತ್ತಿಕೊಳ್ಳಲಿಲ್ಲ. ಈ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಸ್ಥಳೀಯ ಠಾಣಾಧಿಕಾರಿ ಪ್ರಯತ್ನಿಸಿದಾಗಲೂ ಮುಸ್ಲಿಮರು ಅಶಾಂತಿಗೆ ಕಾರಣವಾಗುವ ಏನನ್ನೂ ಮಾಡಲಿಲ್ಲ. ಆದರೆ,

ಈ ಹತ್ಯೆ ನಡೆದ ನಾಲ್ಕೈದು  ದಿನಗಳ ಬಳಿಕ ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಹತ್ಯೆ ಇದೇ ಜಿಲ್ಲೆಯಲ್ಲಿ ನಡೆದಾಗ ಇಡೀ ಚಿತ್ರಣವೇ ಬದಲಾಯಿತು. ಈತ ಫಾಝಿಲ್ ಎಂಬ ಅಮಾಯಕ ಯುವಕನ ಕೊಲೆಯ ನಂಬರ್ ವನ್ ಆರೋಪಿ. ಕೀರ್ತಿ ಎಂಬ ಯುವಕನ ಹತ್ಯೆಯ ಆರೋಪಿ. ಅಲ್ಲದೇ ಐದರಷ್ಟು ಕ್ರಿಮಿನಲ್ ಪ್ರಕರಣಗಳ ಆರೋಪಿ. ಈತನ ವಿರುದ್ಧ ಬಿಜೆಪಿ ಸರಕಾರವೇ ರೌಡಿಶೀಟರ್ ಪಟ್ಟಿ ತೆರೆದಿತ್ತು. ಈಗಿನ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರೇ ಆಗ ಗೃಹಸಚಿವರಾಗಿದ್ದರು. ಆದರೆ, ಸುಹಾಸ್ ಶೆಟ್ಟಿಯ ಹತ್ಯೆಯ ಬೆನ್ನಿಗೇ ಇದೇ ಅಶೋಕ್ ಜಿಲ್ಲೆಗೆ ದೌಡಾಯಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗಮಿಸಿದರು. ಈತ ಇನ್ನೊಂದು ಗ್ಯಾಂಗ್‌ನಿಂದ  ಹತ್ಯೆಗೆ ಒಳಗಾಗಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷರಿಂದ ಹಿಡಿದು ಸ್ಥಳೀಯ ಬಿಜೆಪಿ ಶಾಸಕರವರೆಗೆ ಎಲ್ಲರೂ ಇದನ್ನು ಜಿಹಾದಿ ಕೃತ್ಯ, ಇಸ್ಲಾಮಿಕ್ ಆತಂಕವಾದ ಎಂದೆಲ್ಲಾ ಹೇಳಿಕೆ ಕೊಟ್ಟರು. ಸಂಘಪರಿವಾರ ಜಿಲ್ಲಾ ಬಂದ್‌ಗೆ ಕರೆ ಕೊಟ್ಟಿತು. ಜಿಲ್ಲೆಯ ನಾಲ್ಕೈದು  ಕಡೆ ಮುಸ್ಲಿಮರನ್ನು ಚೂರಿಯಿಂದ ಇರಿಯಲಾಯಿತು. ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅಂತೂ ಅತ್ಯಂತ ಪ್ರಚೋದನಕಾರಿಯಾಗಿ ಭಾಷಣ ಮಾಡಿದರು. ಮುಸ್ಲಿಮರನ್ನು ಹೀನಾಯವಾಗಿ ನಿಂದಿಸಿದರು.

ನಿಜವಾಗಿ, ಈ ಎರಡೂ ಘಟನೆಗಳಲ್ಲಿ ಒಂದಂತೂ  ಸ್ಪಷ್ಟವಾಗಿದೆ. ಮುಸ್ಲಿಮರು ಶಾಂತಿಭಂಗ  ಮಾಡುವವರು, ಕಾನೂನು ಭಂಜಕರು, ಹಿಂದೂ ವಿರೋಧಿಗಳು ಎಂಬ ಬಿಜೆಪಿ ಮತ್ತು ಅವರ ಬೆಂಬಲಿಗರ ವಾದ ಅಪ್ಪಟ ಸುಳ್ಳು ಅನ್ನುವುದನ್ನು ಈ ಘಟನೆಗಳು ತೋರಿಸಿವೆ. ಸರಕಾರದಿಂದ ಹಿಡಿದು ಸ್ಥಳೀಯ ಪೊಲೀಸರ ವರೆಗೆ ಎಲ್ಲರೂ ನ್ಯಾಯಯುತವಾಗಿ ನಡಕೊಳ್ಳದಿರುವಾಗಲೂ ಮುಸ್ಲಿಮರು ಕಾನೂನನ್ನು ಕೈಗೆತ್ತಿಕೊಳ್ಳಲೇ ಇಲ್ಲ. ಹಿಂಸೆಗೂ ಇಳಿಯಲಿಲ್ಲ. ಇದೇವೇಳೆ, ಸುಹಾಸ್ ಶೆಟ್ಟಿಯ ವಿಷಯದಲ್ಲಿ ಬಿಜೆಪಿ ಮತ್ತು ಅದರ ಬೆಂಬಲಿಗರು ಕಾನೂನುಬಾಹಿರವಾಗಿ ನಡಕೊಂಡರು. ಪ್ರಚೋದನಕಾರಿ ಭಾಷಣ ಮಾಡಿದರು. ಮುಸ್ಲಿಮರು ಇರಿತಕ್ಕೂ ಒಳಗಾದರು. ಆದ್ದರಿಂದ,

ನಾಗರಿಕ ಸಮಾಜ ಈ ಎರಡನ್ನೂ ತಾಳ್ಮೆಯಿಂದ ಅವಲೋಕನಕ್ಕೆ ಒಳಪಡಿಸಬೇಕು. ಸಮಾಜದ ಶಾಂತಿಯನ್ನು ಕದಡಲು ಯಾರು ಶ್ರಮಿಸುತ್ತಿದ್ದಾರೆ ಮತ್ತು ಅವರ ಗುರಿ ಯಾವುದು ಎಂಬುದರ ಬಗ್ಗೆ ನಿಷ್ಪಕ್ಷ ಪಾತವಾಗಿ ಚಿಂತನೆ ನಡೆಸಬೇಕು. ತಮ್ಮ ರಾಜಕೀಯ ದುರುದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿ ಮತ್ತು ತಮ್ಮ ಕಾನೂನುಬಾಹಿರ ದಂಧೆಗಳನ್ನು ಅಡಗಿಸುವುದಕ್ಕಾಗಿ ಮುಸ್ಲಿಮರನ್ನು ಸದಾ ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬುದಾಗಿ ಆಲೋಚಿಸಬೇಕು. ಯಾಕೆಂದರೆ,

ಸುಸಜ್ಜಿತ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಮತ್ತು ಬಂದರು ನಿಲ್ದಾಣವನ್ನು ಹೊಂದಿರುವ ಹೊರತಾಗಿಯೂ ದ ಕ ಜಿಲ್ಲೆ   ಉದ್ಯೋಗವನ್ನು ಸೃಷ್ಟಿಸುತ್ತಿಲ್ಲ. ಕಂಪೆನಿಗಳು ಜಿಲ್ಲೆಗೆ ಬರುತ್ತಿಲ್ಲ. ಎಂಜಿನಿಯರಿಂಗ್  ಮತ್ತು ಮೆಡಿಕಲ್ ಕಾಲೇಜುಗಳು ಧಾರಾಳ ಇದ್ದರೂ ಇಲ್ಲಿ ಕಲಿತ ಮಕ್ಕಳು ಉದ್ಯೋಗಕ್ಕಾಗಿ ಹೊರದೇಶಕ್ಕೋ ಹೊರ ರಾಜ್ಯಗಳಿಗೋ ಹೋಗಬೇಕಾದ ಅನಿವಾರ್ಯತೆ ಇದೆ. ವಿದೇಶದಲ್ಲಿ ದುಡಿಯುತ್ತಿರುವ ಮಗ ಅಥವಾ ಮಗಳೊಂದಿಗೆ ದಿನಾ ವೀಡಿಯೋ ಕರೆ ಮೂಲಕ ಮಾತಾಡಿ ತೃಪ್ತಿಪಟ್ಟುಕೊಳ್ಳಬೇಕಾದಂಥ ಹಿರಿಯ ಹೆತ್ತವರು ಜಿಲ್ಲೆಯಲ್ಲಿದ್ದಾರೆ. ಇದಕ್ಕೆ ಧರ್ಮದ ಮುಖವಾಡ ತೊಟ್ಟು ರಾಜಕೀಯ ಗುರಿ ಈಡೇರಿಸಿಕೊಳ್ಳುತ್ತಿರುವ ರಾಜಕಾರಣಿಗಳೇ ಕಾರಣ. ಅವರ ಮಕ್ಕಳಾರೂ ಈ ಹಿಂಸಾಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ. ತಮ್ಮ ಮಕ್ಕಳನ್ನು ವಿದೇಶದಲ್ಲೋ  ಹೊರರಾಜ್ಯದಲ್ಲೋ  ಓದಿಸುತ್ತಾ ಮತ್ತು ನೌಕರಿಗಾಗಿ ವಿದೇಶಕ್ಕೆ ಕಳುಹಿಸಿಕೊಡುತ್ತಾ ಜಿಲ್ಲೆಯ ಬಡಪಾಯಿ ಯುವಕರನ್ನು ಅಪರಾಧ ಕೃತ್ಯಗಳಿಗೆ ಈ ರಾಜಕಾರಣಿಗಳು ಬಳಸಿಕೊಳ್ಳುತ್ತಿದ್ದಾರೆ. ಹತ್ಯೆಗೀಡಾದ ಸುಹಾಸ್ ಶೆಟ್ಟಿಯ ಬದುಕಿನಲ್ಲೂ ಇದಕ್ಕೆ ಆಧಾರವಿದೆ. 31 ವರ್ಷವಾಗಿಯೂ ಮದುವೆಯಾಗಿಲ್ಲದ, ಅನಾರೋಗ್ಯ ಪೀಡಿತ ಹೆತ್ತವರೊಂದಿಗೆ ಬಡತನದ ಬದುಕನ್ನೇ ಬದುಕುತ್ತಿದ್ದ ಸುಹಾಸ್ ಶೆಟ್ಟಿಯನ್ನು ಒಂದು ಕಡೆ ತಮ್ಮ ರಾಜಕೀಯ ಗುರಿ ಸಾಧನೆಗಾಗಿ ಬಳಸಿಕೊಳ್ಳುತ್ತಲೇ ಇನ್ನೊಂದು ಕಡೆ ರೌಡಿಶೀಟರ್ ಖಾತೆಯನ್ನೂ ಇವೇ ರಾಜಕಾರಣಿಗಳು ತೆರೆದರು. ಅಪರಾಧ ಜಗತ್ತಿಗೆ ಇಳಿದ ಸುಹಾಸ್ ಶೆಟ್ಟಿಗೆ ಸಹಜವಾಗಿಯೇ ವೈರಿಗಳೂ ಹುಟ್ಟಿಕೊಂಡರು. ರಾಜಕಾರಣಿಗಳ ಮಕ್ಕಳಂತೆ ಚೆನ್ನಾಗಿ ಓದದೆ, ಕೈತುಂಬಾ ಸಂಬಳ ಪಡೆಯುವ ಉದ್ಯೋಗವನ್ನೂ ಮಾಡಲಾಗದೇ ಮತ್ತು ವೃದ್ಧ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಲಾಗದೇ ಕೊನೆಗೆ ಎದುರಾಳಿ ಗ್ಯಾಂಗ್‌ನಿಂದ  ಆತ ಹತ್ಯೆಗೀಡಾದ. ಸದ್ಯ,

ಜಿಲ್ಲೆಯ ನಾಗರಿಕರು ಪ್ರಜ್ಞಾವಂತರಾಗಬೇಕಿದೆ. ಧರ್ಮದ ಹೆಸರಲ್ಲಿ ಯುವಕರನ್ನು ಅಪರಾಧ ಜಗತ್ತಿಗೆ ತಳ್ಳುವ ರಾಜಕಾರಣಿಗಳ ಕುತಂತ್ರವನ್ನು ಬಹಿರಂಗವಾಗಿ ಪ್ರಶ್ನಿಸುವ ಧೈರ್ಯವನ್ನು ತೋರಿಸಬೇಕಿದೆ. ನಿಮ್ಮ ಮಕ್ಕಳ ನೇತೃತ್ವದಲ್ಲೇ  ಈ ಧರ್ಮರಕ್ಷಣೆಯ ಕೆಲಸ ಪ್ರಾರಂಭವಾಗಲಿ ಎಂದು ಯಾವಾಗ ನಾಗರಿಕರು ಧ್ವನಿ ಎತ್ತರಿಸಿ ರಾಜಕಾರಣಿಗಳಲ್ಲಿ ಹೇಳಲು ಪ್ರಾರಂಭಿಸುತ್ತಾರೋ ಅಂದಿನಿಂದ  ಜಿಲ್ಲೆಯಲ್ಲಿ ಶಾಂತಿಯ ಪರ್ವ ಆರಂಭವಾಗಬಹುದು. ಮಾತ್ರವಲ್ಲ, ಯಾವಾಗ ಧರ್ಮದ್ವೇಷಿಗಳನ್ನು ಮತ್ತು ಪ್ರಚೋದನಕಾರಿ ಭಾಷಣಗಾರರನ್ನು ಸ್ಥಳದಲ್ಲೇ  ಪ್ರಶ್ನಿಸುವ ಧೈರ್ಯವನ್ನು ಜನರು ತೋರುತ್ತಾರೋ ನಿಧಾನಕ್ಕೆ ಧರ್ಮ ರಾಜಕಾರಣ ಬದಿಗೆ ಸರಿದು ಅಭಿವೃದ್ಧಿ ರಾಜಕಾರಣ ಮುನ್ನೆಲೆಗೆ ಬರಬಹುದು. ಬಡಪಾಯಿ ಯುವಕರ ಜೀವದೊಂದಿಗೆ ಚೆಲ್ಲಾಟ ನಡೆಸುವ ಧರ್ಮ ರಾಜಕಾರಣಕ್ಕೆ ಜನರು ಬೆನ್ನು ತಿರುಗಿಸದ ಹೊರತು ಜಿಲ್ಲೆಯಲ್ಲಿ ಶಾಂತಿ ಸಾಧ್ಯವಿಲ್ಲ. ಶಾಂತಿಯೇ ಇಲ್ಲದ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯೂ ಸಾಧ್ಯವಿಲ್ಲ.

Tuesday, 22 April 2025

ಧರ್ಮದ್ವೇಷಿಗಳಿಗೆ ಪಾಠ ಹೇಳಿದ ಜನಿವಾರ




ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರವನ್ನು ಕಳಚಿದ ಪ್ರಕರಣಕ್ಕೆ ಸಂಬಂಧಿಸಿ ಬೀದರ್ ಮತ್ತು ಶಿವಮೊಗ್ಗದ ನಾಲ್ವರು ಅಧಿಕಾರಿಗಳ ಮೇಲೆ ಒಂದೇ ದಿನದೊಳಗೆ ಕ್ರಮ ಕೈಗೊಳ್ಳಲಾಗಿದೆ. ಜನಿವಾರ ತೆಗೆದು ಸಿಇಟಿ ಪರೀಕ್ಷೆ ಬರೆಯಲು ಒಪ್ಪಿಕೊಳ್ಳದ ಸುಚಿವೃತ ಕುಲಕರ್ಣಿ ಎಂಬ ವಿದ್ಯಾರ್ಥಿಗೆ ಉಚಿತ ಇಂಜಿನಿಯರಿಂಗ್  ಸೀಟ್ ಕೊಡಿಸುವುದಾಗಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ. ಈ ಪ್ರಕರಣವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಂಡಿಸಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದ್ದಲ್ಲದೇ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬೀದರ್‌ನ ಸಾಯಿ ಸ್ಫೂರ್ತಿ ಕಾಲೇಜಿನ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮ ತಕ್ಷಣ ನೋಟೀಸು ಜಾರಿ ಮಾಡಿದ್ದಾರೆ. ಶಿವಮೊಗ್ಗ ಸಾಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿರುದ್ಧ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತನಿಖೆಗೆ ಆದೇಶಿಸಿದ್ದಾರೆ. ಈ ಎಲ್ಲದರ ನಡುವೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕರಾವಳಿಯ ಶಾಸಕ ಭರತ್ ಶೆಟ್ಟಿ ಸಹಿತ ಹತ್ತು-ಹಲವು ಜನಪ್ರತಿನಿಧಿಗಳು ಘಟನೆಯನ್ನು ಖಂಡಿಸಿ ಹೇಳಿಕೆಗಳನ್ನು ನೀಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಬ್ರಾಹ್ಮಣರ ಶಾಪ ತಟ್ಟಲಿದೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ. ಈ ನಡುವೆ ಬೆಂಗಳೂರು, ಬೀದರ್ ಮತ್ತು ಕಲಬುರ್ಗಿಯಲ್ಲಿ ಬ್ರಾಹ್ಮಣ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆದಿದೆ. ಕಲಬುರ್ಗಿಯಲ್ಲಿ ಬೈಕ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

2022 ಜನವರಿಯಲ್ಲಿ ಉಡುಪಿಯ ಹೆಣ್ಣು ಮಕ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇದಕ್ಕೆ ಸಮಾನವಾದ ಘಟನೆ ನಡೆದಿತ್ತು. ಶಿರವಸ್ಟ್ರ  ಧರಿಸಿದ ಕಾರಣಕ್ಕಾಗಿ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸಲಾಯಿತು. ಹಾಗಂತ, ಆಗ ರಾಜ್ಯಾದ್ಯಂತ ಹಿಜಾಬ್‌ಗೆ ನಿಷೇಧವೇನೂ ಇರಲಿಲ್ಲ. ಸರಕಾರಿ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಹೋಗುವವರಿಗೂ ಅನುಮತಿ ಇತ್ತು. ಕೈನೂಲು, ಹಣೆಗೆ ಕುಂಕುಮ, ಮೂಗುತಿ, ಹಣೆಬೊಟ್ಟು, ಸಿಕ್ಖರ ಪೇಟ ಇತ್ಯಾದಿ ಧಾರ್ಮಿಕ-ಸಾಂಸ್ಕೃತಿಕ ಅಸ್ಮಿತೆಗಳನ್ನು ಧರಿಸುವವರಿಗೂ ತರಗತಿಗೆ ಪ್ರವೇಶವಿತ್ತು. ಆದರೆ,

ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ಅವರ ಅಧ್ಯಕ್ಷತೆಯಲ್ಲಿದ್ದ ಹೆಣ್ಣು ಮಕ್ಕಳ ಸರಕಾರಿ ಕಾಲೇಜು ಹಿಜಾಬ್ ನಿಷೇಧದ ಪರವಾಗಿ ನಿಂತಿತು. ವಿದ್ಯಾರ್ಥಿನಿಯರು ಪರಿಪರಿಯಾಗಿ ವಿನಂತಿಸಿದರೂ ಜಗ್ಗಲಿಲ್ಲ. ಸುಮಾರು ಒಂದು ತಿಂಗಳ ಕಾಲ ಈ ವಿದ್ಯಾರ್ಥಿನಿಯರು ಕಾಲೇಜಿನ ಮೆಟ್ಟಿಲಲ್ಲಿ ಮತ್ತು ವರಾಂಡದಲ್ಲಿ ಕುಳಿತು ಅಭ್ಯಾಸ ಮಾಡಿದರು. ಆಡಳಿತ ಮಂಡಳಿಯ ಒಪ್ಪಿಗೆಗಾಗಿ ಕಾದರು. ಈಗ ಜನಿವಾರ ಪ್ರಕರಣವನ್ನು ಖಂಡಿಸಿರುವ ಇದೇ ಬಸವರಾಜ್ ಬೊಮ್ಮಾಯಿಯವರು ಆಗ ಮುಖ್ಯಮಂತ್ರಿಯಾಗಿದ್ದರೆ, ಇದೇ ಆರಗ ಜ್ಞಾನೇಂದ್ರ ಗೃಹಸಚಿವರಾಗಿದ್ದರು. ಪ್ರಹ್ಲಾದ ಜೋಶಿ ಆಗಲೂ ಕೇಂದ್ರ ಸಚಿವರಾಗಿದ್ದರು. ಆದರೆ, ಇವರೆಲ್ಲ ಆಗ ಈ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸಿದುದನ್ನು ಸಮರ್ಥಿಸಿಕೊಂಡಿದ್ದರು. ಸರಕಾರಕ್ಕೆ ಬ್ರಾಹ್ಮಣರ ಶಾಪ ತಟ್ಟಲಿದೆ ಎಂದು ಈಗ ಹೇಳುತ್ತಿರುವ ಭರತ್ ಶೆಟ್ಟಿಯವರು ಆಗ ಹಿಜಾಬ್ ನಿಷೇಧಕ್ಕೆ ಬೆಂಬಲ ಸೂಚಿಸಿದ್ದರು. ಹೀಗೆ ತಿಂಗಳ ಕಾಲ ಕಾದ ಬಳಿಕ ಸಾರ್ವಜನಿಕ ಆಕ್ರೋಶ ವ್ಯಕ್ತವಾಯಿತು. ಪ್ರತಿಭಟನೆಗಳು ನಡೆದುವು. ಆ ವಿದ್ಯಾರ್ಥಿನಿಯರು ನ್ಯಾಯವನ್ನು ಅಪೇಕ್ಷಿಸಿ ನ್ಯಾಯಾಲಯದ ಬಾಗಿಲು ಬಡಿದರು. ಆಗಲೂ ಬೊಮ್ಮಾಯಿ ಸರಕಾರ ಹಿಜಾಬ್ ನಿಷೇಧದ ಪರ ನ್ಯಾಯಾಲಯದಲ್ಲಿ ವಾದಿಸಿತು. ನಿಜವಾಗಿ,

ಹಿಜಾಬ್ ಆಗಲಿ, ಜನಿವಾರ, ಬಿಂದಿ, ಕರಿಮಣಿ, ಪೇಟ ಇತ್ಯಾದಿ ಯಾವುವೂ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿ ಎಂದೋ ಅವರ ಬುದ್ಧಿಮತ್ತೆಯನ್ನು ಕುಗ್ಗಿಸುವ ಅಪಾಯಕಾರಿ ಅಸ್ಮಿತೆಗಳೆಂದೋ ಯಾವ ಸಂಶೋಧಕರೂ ಹೇಳಿಲ್ಲ. ಅಂಥದ್ದೊಂದು  ವೈಜ್ಞಾನಿಕ ವರದಿಯೂ ಬಂದಿಲ್ಲ. ತಲೆತಲಾಂತರಗಳಿಂದ  ವಿವಿಧ ಸಮುದಾಯಗಳು ಪಾಲಿಸಿಕೊಂಡು ಬರುತ್ತಿರುವ ಈ ಬಗೆಯ ಧಾರ್ಮಿಕ ಸಂಕೇತಗಳನ್ನು ಆಧುನಿಕತೆಗೆ ಅನ್ಯವಾಗಿಯೋ ವಿದ್ಯಾರ್ಥಿ ಸಮಾನತೆಯ ವಿರೋಧಿಯಾಗಿಯೋ ನೋಡಬೇಕಾಗಿಯೂ ಇಲ್ಲ. ಇವೆಲ್ಲ ಸಾಮಾಜಿಕವಾಗಿ ಅತಿ ಶಕ್ತಿಯುತವಾಗಿ ಬಳಕೆಯಾಗುತ್ತಿರುವಾಗ, ತರಗತಿಯಲ್ಲಿ ಮಾತ್ರ ನಿಷೇಧಿಸುವುದರಿಂದ ಸಮಾನತೆಯನ್ನು ತಂದಂತೆಯೂ ಆಗುವುದಿಲ್ಲ. ನಿಜವಾಗಿ,

ಅಸ್ಮಿತೆಗಳನ್ನು ಸಮಾನತೆಯ ವಿರೋಧಿ ಎಂಬ ದೃಷ್ಟಿಯಲ್ಲಿ ನೋಡುವುದಕ್ಕಿಂತ ವೈವಿಧ್ಯತೆಯ ಸೊಗಸು ಎಂಬ ನೆಲೆಯಲ್ಲೇ  ನೋಡಬೇಕಾಗಿದೆ. ಸಮಾನತೆಯನ್ನು ವಿದೇಶಿ ಕಣ್ಣಲ್ಲಿ ವ್ಯಾಖ್ಯಾನಿಸದೇ ದೇಶಿ ಜೀವನ ಕ್ರಮದ ಆಧಾರದಲ್ಲಿ ನೋಡದೇ ಇರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ಹೇಳಬೇಕಾಗುತ್ತದೆ. ಒಂದುವೇಳೆ, ಹಿಜಾಬ್ ಆಗಲಿ, ಬಿಂದಿ, ಪೇಟ, ಜನಿವಾರವೇ ಆಗಲಿ ಸಾಮಾಜಿಕ ನ್ಯಾಯ, ಏಕತೆ, ಸಮಾನತೆ ಇತ್ಯಾದಿ ಸಾಂವಿಧಾನಿಕ ಮೌಲ್ಯಗಳನ್ನು ಉಲ್ಲಂಘಿಸುತ್ತದೆ ಎಂದಾಗಿದ್ದರೆ, ತರಗತಿಯಿಂದಷ್ಟೇ ಅಲ್ಲ, ಇಡೀ ಸಾರ್ವಜನಿಕ ಜೀವನ ಕ್ರಮದಿಂದಲೇ ಅದಕ್ಕೆ ನಿಷೇಧ ಹೇರಬೇಕಾಗುತ್ತದೆ. ಆದರೆ, ಈ ಯಾವ ಧಾರ್ಮಿಕ ಅಸ್ಮಿತೆಗಳಿಗೂ ಸಂವಿಧಾನ ವಿರೋಧಿ ಎಂಬ ಹಣೆಪಟ್ಟಿ ಇಲ್ಲ ಮತ್ತು ಸಾರ್ವಜನಿಕವಾಗಿ ನಿಷೇಧವೂ ಇಲ್ಲ. ಹೀಗಿರುವಾಗ ಬರೇ ತರಗತಿಯಲ್ಲಿ ಅಥವಾ ಪರೀಕ್ಷೆಯ ವೇಳೆ ಮಾತ್ರ ಇದನ್ನು ಅಪಾಯಕಾರಿಯಂತೆ ಕಾಣುವುದಕ್ಕೆ ಅರ್ಥವೂ ಇಲ್ಲ. ಅಂದಹಾಗೆ,

ಜನಿವಾರ ವಿವಾದವು ಮತ್ತೊಮ್ಮೆ ನಮ್ಮನ್ನು ಹಿಜಾಬ್ ವಿವಾದದ ಕಡೆಗೆ ಕೊಂಡೊಯ್ಯಬೇಕಿದೆ. ನಿಜಕ್ಕೂ, ಹಿಜಾಬನ್ನು ವಿವಾದವನ್ನಾಗಿ ಮಾಡಬೇಕಿತ್ತೇ? ಅದು ತರಗತಿಯಲ್ಲಾಗಲಿ, ಶಾಲಾ ಕ್ಯಾಂಪಸ್‌ನಲ್ಲಾಗಲಿ ಯಾರಿಗಾದರೂ ತೊಂದರೆ ಮಾಡಿತ್ತೇ? ತರಗತಿಯೊಳಗೆ ಹಿಜಾಬ್ ನಿಷೇಧಿಸಿದ ಉಪನ್ಯಾಸಕರನ್ನು ಕರೆದು ವಿಚಾರಿಸಿ, ಅಗತ್ಯ ಬಿದ್ದರೆ ಶಿಸ್ತು ಕ್ರಮ ಕೈಗೊಂಡು ಅಲ್ಲಿಗೇ ಮುಗಿಸ ಬಹುದಾಗಿದ್ದ ಪ್ರಕರಣವನ್ನು ವಾರಗಟ್ಟಲೆ ಜೀವಂತ ಉಳಿಸಿಕೊಂಡದ್ದು ಏಕೆ? ಜನಿವಾರ ಪ್ರಕರಣವನ್ನು ತಕ್ಷಣ ನಿರ್ವಹಿಸಿದಂತೆ ಹಿಜಾಬ್ ಪ್ರಕರಣವನ್ನು ನಿಭಾಯಿಸದೇ ಇದ್ದುದು ಯಾವ ಕಾರಣಕ್ಕೆ? ಅವರ ಉದ್ದೇಶ ಏನಾಗಿತ್ತು? ಸಾರ್ವಜನಿಕರಿಗೆ ಸಮಸ್ಯೆಯೇ ಅಲ್ಲದ ಒಂದು ತುಂಡು ಬಟ್ಟೆಯು ರಾಜ್ಯದ 6 ಕೋಟಿ ಕನ್ನಡಿಗರ ಸಮಸ್ಯೆಯಾಗಿ ಪರಿವರ್ತನೆಯಾದುದು ಹೇಗೆ? ಏಕೆ? ಇಂಥದ್ದೊಂದು  ಅವಲೋಕನ ಸಾರ್ವಜನಿಕವಾಗಿ ನಡೆಯಬೇಕಿದೆ. ನಿಜವಾಗಿ,

ಹಿಜಾಬ್ ಪ್ರಕರಣವನ್ನು ರಾಜ್ಯ ಸರಕಾರವು ಆ ಕಾಲೇಜಿನ ಸಮಸ್ಯೆ ಮಾತ್ರವಾಗಿ ಕಂಡು ಅಲ್ಲಿಯೇ ಪರಿಹರಿಸಿ ಬಿಡದೇ ಇದ್ದುದರ ಹಿಂದೆ ರಾಜಕೀಯ ದುರುದ್ದೇಶ ಇತ್ತು ಅನ್ನುವುದನ್ನು ಆ ಬಳಿಕದ ಬೆಳವಣಿಗೆಗಳು ಸಾರಿ ಸಾರಿ ಹೇಳಿವೆ. ಹಿಜಾಬ್ ಹೆಸರಲ್ಲಿ ಮುಸ್ಲಿಮ್ ದ್ವೇಷ ಭಾವನೆಯನ್ನು ಕೆರಳಿಸುವುದು ಮತ್ತು ಆ ಮೂಲಕ ಹಿಂದೂಗಳನ್ನು ಧ್ರುವೀಕರಿಸುವುದು ಉದ್ದೇಶವಾಗಿತ್ತು. ಅದಕ್ಕಾಗಿ ಉಡುಪಿಯ ವಿದ್ಯಾರ್ಥಿನಿಯರನ್ನು ಬಲಿ ನೀಡಲು ಸರಕಾರ ಮುಂದಾಯಿತು. ಹಿಜಾಬ್ ವಿರುದ್ಧ ರಾಜ್ಯದಾದ್ಯಂತ ವಿದ್ಯಾರ್ಥಿಗಳನ್ನು ಸರಕಾರ ಪ್ರಚೋದಿಸಿತು. ಬೀದಿಗಿಳಿಸಿತು. 6 ಕೋಟಿ ಕನ್ನಡಿಗರನ್ನು ಹಿಂದೂ-ಮುಸ್ಲಿಮ್ ಎಂಬುದಾಗಿ ವಿಭಜಿಸಿತು.

ಆದರೆ ಇವತ್ತು ಅದೇ ಮಂದಿ ಜನಿವಾರ ನಿರಾಕರಣೆಯನ್ನು ಪ್ರಶ್ನಿಸುತ್ತಿದ್ದಾರೆ. ಪರೀಕ್ಷೆಗೂ ಜನಿವಾರಕ್ಕೂ ಏನು ಸಂಬಂಧ  ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ, ಯುನಿಫಾರ್ಮ್ ನ  ಭಾಗಿವಾಗಿ ಭುಜದಲ್ಲಿರುವ ಶಾಲನ್ನು ತಲೆಗೆ ಹಾಕಿಕೊಂಡರೆ ಏನು ತೊಂದರೆ ಎಂದು ಮೂರು ವರ್ಷಗಳ ಹಿಂದೆ ವಿದ್ಯಾರ್ಥಿನಿಯರು ಪ್ರಶ್ನಿಸಿದಾಗ ಇದೇ ಮಂದಿ ಈ ಪ್ರಶ್ನೆಯನ್ನೇ ಕಟಕಟೆಯಲ್ಲಿ ನಿಲ್ಲಿಸಿದ್ದರು. ಸಮಾನತೆಯ ವಿರೋಧಿ ಎಂದಿದ್ದರು. ಅಂದಹಾಗೆ,

ದ್ವೇಷದ ಆಧಾರದಲ್ಲಿ ನ್ಯಾಯವನ್ನು ವಿತರಿಸಲು ಹೊರಟರೆ ಅಂತಿಮವಾಗಿ ದ್ವೇಷಕ್ಕೇ ಮುಖಭಂಗವಾಗುತ್ತದೆ ಅನ್ನುವುದನ್ನು ಈ ಜನಿವಾರ ಪ್ರಕರಣ ಎತ್ತಿ ತೋರಿಸಿದೆ.