Saturday, 19 October 2019

49 ಮಂದಿ ‘ದೇಶದ್ರೋಹಿ’ಗಳ ಕತೆ: ತಿಲಕರೂ ದೇಶದ್ರೋಹಿಯಾಗಿದ್ದರು...


ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ತರುವಾಯ ಪಂಜಾಬ್‍ನ ಸಿನಿಮಾ ಮಂದಿರದ ಹೊರಗಡೆ ಕೆಲವು ಸಿಕ್ಖ್ ಯುವಕರು ‘ಖಲಿಸ್ತಾನ್ ಜಿಂದಾಬಾದ್’ ಮತ್ತು ‘ರಾಜ್ ಕರೇಗಾ ಖಾಲ್ಸಾ’ ಎಂಬಂತಹ ಘೋಷಣೆಗಳನ್ನು ಕೂಗಿದ್ದರು. ಪಂಜಾಬ್ ಸರಕಾರ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿತ್ತು. 1995ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಮ್ ಕೋರ್ಟು ಪ್ರಕರಣವನ್ನು ವಜಾಗೊಳಿಸಿ ಯುವಕರನ್ನು ದೋಷಮುಕ್ತಗೊಳಿಸಿತ್ತು. ‘ಬರೇ ಘೋಷಣೆಯನ್ನು ದೇಶದ್ರೋಹವಾಗಿ ಪರಿಗಣಿಸಲಾಗದು’ ಎಂದು ಕೋರ್ಟು ಅಭಿಪ್ರಾಯಪಟ್ಟಿತ್ತು. ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಹುಟ್ಟು ಹಾಕದ ಮತ್ತು ಸಾರ್ವಜನಿಕರನ್ನು ಹಿಂಸೆಗೆ ಪ್ರಚೋದಿಸದ ಘೋಷಣೆಯು ದೇಶದ್ರೋಹವಲ್ಲ ಎಂದು ಕೋರ್ಟು ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತ್ತು.
2013ರಲ್ಲೂ ಇಂಥದ್ದೇ ಒಂದು ಬೆಳವಣಿಗೆ ನಡೆಯಿತು. ಲಲಿತ್ ಕುಮಾರಿ ವಿರುದ್ಧ ದಾಖಲಿಸಲಾಗಿದ್ದ ದೇಶದ್ರೋಹದ ಪ್ರಕರಣವನ್ನು ಸುಪ್ರೀಮ್ ಕೋರ್ಟು ವಜಾಗೊಳಿಸಿತ್ತು. ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ಕೊಡುವ ಮೊದಲು ಮ್ಯಾಜಿಸ್ಟ್ರೇಟರಿಗೆ ಆ ಬಗ್ಗೆ ಮನವರಿಕೆಯಾಗಬಹುದಾದ ಮಾಹಿತಿಗಳು ಪೊಲೀಸ್ ತನಿಖೆಯ ಮೂಲಕ ಲಭ್ಯವಾಗಿರಬೇಕು ಎಂದು ಅದಕ್ಕೆ ಕಾರಣವನ್ನು ಕೊಟ್ಟಿತ್ತು. ಕೇವಲ ದೂರಿನ ಆಧಾರದಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಮ್ಯಾಜಿಸ್ಟ್ರೇಟ್ ಸೂಚಿಸುವಂತಿಲ್ಲ ಎಂಬ ಸಂದೇಶ ಆ ತೀರ್ಪಿನಲ್ಲಿತ್ತು. ಇದೀಗ ದೇಶದ್ರೋಹ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಓರ್ವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವುದಕ್ಕೆ ಏನೆಲ್ಲ ಆಧಾರಗಳು ಬೇಕು, ಬರೇ ಹೇಳಿಕೆಯೊಂದು ದೇಶದ್ರೋಹವಾಗುತ್ತದೆಯೇ ಎಂಬಲ್ಲಿಂದ ಹಿಡಿದು ರಾಜಪ್ರಭುತ್ವವನ್ನು ಉಳಿಸಿಕೊಳ್ಳುವ ಉದ್ದೇಶದಿಂದ  17ನೇ ಶತಮಾನದಲ್ಲಿ ಬ್ರಿಟಿಷರು ರಚಿಸಿದ ದೇಶದ್ರೋಹದ ಕಾನೂನನ್ನು ನಾವು ಇನ್ನೂ ಉಳಿಸಿಕೊಳ್ಳುವುದು ಎಷ್ಟು ಸರಿ ಎಂಬಲ್ಲಿವರೆಗೆ ಚರ್ಚೆ ತೀವ್ರಗತಿಯನ್ನು ಪಡೆದುಕೊಂಡಿದೆ. ಅಂದಹಾಗೆ,
ಈ ಎಲ್ಲ ಬೆಳವಣಿಗೆಗಳಿಗೆ ಕಾರಣವಾಗಿರುವುದು ಬಿಹಾರದ ಮುಝಫ್ಪರ್‍ಪುರ್ ನ  ಪೊಲೀಸ್ ಠಾಣೆಯೊಂದಕ್ಕೆ ಚೀಫ್ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ನೀಡಿರುವ ಸೂಚನೆ. ದೇಶದ ಪ್ರಸಿದ್ಧ ವ್ಯಕ್ತಿತ್ವಗಳಾದ ಶ್ಯಾಮ್ ಬೆನಗಲ್, ಅಡೂರು ಗೋಪಾಲ ಕೃಷ್ಣನ್, ಅಪರ್ಣಾ ಸೇನ್, ರಾಮಚಂದ್ರ ಗುಹಾ ಸೇರಿದಂತೆ 49 ಮಂದಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಕೋರಿ ಸ್ಥಳೀಯ ನ್ಯಾಯವಾದಿ ಸುಧೀರ್ ಕುಮಾರ್ ಓಜಾ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಗುಂಪು ಹತ್ಯೆ ಮತ್ತು ಧರ್ಮದ ಹೆಸರಲ್ಲಿ ನಡೆಯುತ್ತಿರುವ ಹಿಂಸೆಯನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳೆದ ಜುಲೈಯಲ್ಲಿ ಈ ಪ್ರಮುಖರು ಬರೆದ ಬಹಿರಂಗ ಪತ್ರವನ್ನು ಈ ನ್ಯಾಯವಾದಿ ದೇಶದ್ರೋಹದ ಕೃತ್ಯ ಎಂದು ಕೋರ್ಟ್‍ನಲ್ಲಿ ಹೇಳಿಕೊಂಡಿದ್ದರು. ಇವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಕೋರಿದ್ದರು. ಅದನ್ನು ಪರಿಗಣಿಸಿ ಎಫ್.ಐ.ಆರ್. ದಾಖಲಿಸುವಂತೆ ಮುಝಫ್ಫರ್ ನಗರ್ ಪೊಲೀಸ್ ಠಾಣೆಗೆ ಮ್ಯಾಜಿಸ್ಟ್ರೇಟ್ ಸೂಚನೆಯನ್ನು ನೀಡಿದರು. ಇದೀಗ ಈ ಇಡೀ ಪ್ರಕ್ರಿಯೆಯ ಕುರಿತೇ ಪ್ರಶ್ನೆಗಳೆದ್ದಿವೆ. ಸುಪ್ರೀಮ್ ಕೋರ್ಟ್‍ನ ಈ ಹಿಂದಿನ ಎರಡು ತೀರ್ಪುಗಳನ್ನು ಈ ಪ್ರಕರಣದಲ್ಲಿ ಪಾಲಿಸಲಾಗಿದೆಯೇ ಎಂಬ ಚರ್ಚೆಗೆ ಇದು ಚಾಲನೆಯನ್ನು ನೀಡಿದೆ. ಸಾರ್ವಜನಿಕ ಶಾಂತಿಗೆ ಭಂಗ ತಾರದ ಮತ್ತು ಸಾರ್ವಜನಿಕರನ್ನು ಹಿಂಸೆಗೆ ಪ್ರಚೋದಿಸದ ಪತ್ರವೊಂದನ್ನು ದೇಶದ್ರೋಹದ ಕೃತ್ಯವೆಂದು ವ್ಯಾಖ್ಯಾನಿಸುವುದನ್ನು ಒಪ್ಪಲಾಗದು ಎಂದು ಸಂವಿಧಾನ ತಜ್ಞರು ವಾದಿಸುತ್ತಿದ್ದಾರೆ. (ಇದೀಗ ಪೊಲೀಸರು ಈ ಪ್ರಕರಣವನ್ನು ಮುಕ್ತಾಯಗೊಳಿಸಲು ತೀರ್ಮಾನಿಸಿದ್ದರೂ ಅದನ್ನು ಪ್ರತಿಭಟಿಸಿ ಓಜಾ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.) ನಿಜವಾಗಿ,
ಇದೊಂದು ದಮನ ತಂತ್ರ. ಪ್ರಜಾತಂತ್ರದ ಅತಿದೊಡ್ಡ ಗುಣ ಏನೆಂದರೆ, ಟೀಕೆ, ಪ್ರಶ್ನೆ, ಪ್ರತಿಭಟನೆಗೆ ಸದಾ ತನ್ನನ್ನು ತೆರೆದಿಟ್ಟಿರುವುದು. ರಾಜಪ್ರಭುತ್ವಕ್ಕೂ ಪ್ರಜಾಪ್ರಭುತ್ವಕ್ಕೂ ನಡುವೆ ಇರುವ ವ್ಯತ್ಯಾಸ ಇದು. 17ನೇ ಶತಮಾನದಲ್ಲಿ ಬ್ರಿಟನ್‍ನಲ್ಲಿ ರಾಜಪ್ರಭುತ್ವ ಇತ್ತು. ಪ್ರಶ್ನೆ ಮಾಡುವ ಸ್ವಾತಂತ್ರ್ಯವನ್ನು ಸಾರ್ವಜನಿಕರಿಗೆ ಬಿಟ್ಟುಕೊಟ್ಟರೆ ಅಧಿಕಾರಕ್ಕೆ ಸಂಚಕಾರ ಬರಬಹುದು ಎಂಬುದನ್ನು ಮನಗಂಡು ಟೀಕೆಯನ್ನು ದೇಶದ್ರೋಹವಾಗಿ ಕಾಣುವ ಕಾನೂನನ್ನು ರಚಿಸಲಾಯಿತು. 1870ರಲ್ಲಿ ಅದೇ ಕಾನೂನನ್ನು ಬ್ರಿಟಿಷರು ಭಾರತಕ್ಕೂ ತಂದರು. ಅದೇ ಕಾನೂನಿನಡಿಯಲ್ಲೇ 1897ರಲ್ಲಿ ಬಾಲಗಂಗಾಧರ ತಿಲಕ್‍ರನ್ನು ಬಂಧಿಸಿದರು. ದುರಂತ ಏನೆಂದರೆ, ಈ ಪ್ರಕರಣ ನಡೆದು ನೂರು ವರ್ಷಗಳೇ ಕಳೆದುಹೋಗಿವೆ. ಭಾರತದಲ್ಲಿ ಬ್ರಿಟಿಷ್ ರಾಜಪ್ರಭುತ್ವ ಹೊರಟು ಹೋಗಿ ಪ್ರಜಾತಂತ್ರ ನೆಲೆಗೊಂಡಿದೆ. ಆದರೂ ಈ ಪುರಾತನ ಕಾನೂನಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಅಷ್ಟಕ್ಕೂ,
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕವಂತೂ ದೇಶದ್ರೋಹ ಎಂಬ ಪದ ಹೇಗೆಲ್ಲ ಮತ್ತು ಎಷ್ಟೆಲ್ಲ ಬಾರಿ ದುರುಪಯೋಗಕ್ಕೆ ಈಡಾಗಿದೆಯೆಂದರೆ, ಪ್ರತಿದಿನ ಒಬ್ಬರ ಮೇಲಾದರೂ ಈ ಹಣೆಪಟ್ಟಿಯನ್ನು ಅಂಟಿಸಲಾಗುತ್ತಿದೆ. ಬಿಜೆಪಿ ನಾಯಕರು ಅಥವಾ ಆ ಪಕ್ಷದ ಬೆಂಬಲಿಗರು ಟೀಕೆಯನ್ನೇ ಸಹಿಸುತ್ತಿಲ್ಲ. ಪ್ರಧಾನಿ ಮೋದಿಯವರ ವಿರುದ್ಧದ ಯಾವುದೇ ದನಿಯನ್ನು ದೇಶದ್ರೋಹದ ಹೇಳಿಕೆಯಾಗಿ ವ್ಯಾಖ್ಯಾನಿಸಿ ಬೆದರಿಸುವ ಶ್ರಮಗಳು ನಡೆಯುತ್ತಿವೆ. ಇದು ಅತ್ಯಂತ ಅಪಾಯಕಾರಿ ಸ್ಥಿತಿ.
ಪ್ರಜಾತಂತ್ರದಲ್ಲಿ ಯಾರೂ ಪ್ರಶ್ನಾತೀತರಲ್ಲ. ಪ್ರಧಾನಿ ಮೋದಿಯವರೂ ಅವರಲ್ಲಿ ಒಬ್ಬರು. ನಾಳೆ ರಾಹುಲ್ ಗಾಂಧಿಯೋ ಅಥವಾ ಇನ್ನಾರೋ ಪ್ರಧಾನಿಯಾದರೂ ಅವರಿಗೂ ಈ ನಿಯಮ ಅನ್ವಯಿಸುತ್ತದೆ. ಪ್ರಶ್ನಾತೀತ ಅನ್ನುವುದು ಸರ್ವಾಧಿಕಾರಿ ಪ್ರಭುತ್ವದ ಮನಸ್ಥಿತಿಯೇ ಹೊರತು ಪ್ರಜಾತಂತ್ರದ ಭಾಗವಲ್ಲ. ಅಡೂರ್ ಗೋಪಾಲಕೃಷ್ಣನ್ ಸೇರಿದಂತೆ 49 ಮಂದಿ ಪ್ರಮುಖರು ಬರೆದ ಪತ್ರದಲ್ಲಿ ಈ ದೇಶದ ಸ್ಥಿತಿಗತಿಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಲಾಗಿದೆ. ಗುಂಪು ಥಳಿತ ಮತ್ತು ಧರ್ಮದ ಹೆಸರಿನಲ್ಲಿ ಆಗುತ್ತಿರುವ ಹಿಂಸೆಗಳನ್ನು ತಡೆಯುವಂತೆ ಪ್ರಧಾನಿಯವರನ್ನು ಆಗ್ರಹಿಸಲಾಗಿದೆ. ಅಂದಹಾಗೆ, ಹೀಗೆ ಪತ್ರ ಬರೆಯುವುದೇ ಅಪರಾಧ ಎಂದಾದರೆ, ಪ್ರಜಾತಂತ್ರಕ್ಕೆ ಅರ್ಥವಾದರೂ ಏನು? ನಿಜವಾಗಿ,
ದೇಶದ ರಾಜಕೀಯ ವಾತಾವರಣವು ಹೊಸ ಆಯಾಮದೆಡೆಗೆ ಹೊರಳುತ್ತಿದೆ. ಪ್ರಧಾನಿ ಮೋದಿ ಮತ್ತು ಅವರ ತಂಡದ ಆಡಳಿತವನ್ನು ಪ್ರಶ್ನಿಸದಂತೆ ಅತ್ಯಂತ ಯೋಜನಾಬದ್ಧವಾಗಿ ತಂತ್ರಗಳನ್ನು ಹೆಣೆಯಲಾಗುತ್ತಿದೆ. ಟೀಕೆಯನ್ನು ದೇಶವಿರೋಧಿಯಾಗಿ ಪರಿವರ್ತಿಸಲಾಗುತ್ತಿದೆ. ಟೀಕಾಕಾರರ ವಿರುದ್ಧ ಮಾತು ಮತ್ತು ಬರಹಗಳ ಮೂಲಕ ಮುಗಿಬಿದ್ದು ದಾಳಿ ನಡೆಸಲಾಗುತ್ತಿದೆ. ಪ್ರಧಾನಿ ಮೋದಿಯವರು ಪ್ರಶ್ನಾತೀತರು ಎಂಬ ಭಾವನೆಯನ್ನು ಸಾರ್ವಜನಿಕವಾಗಿ ಬಿಂಬಿಸುವ ಶ್ರಮದ ಭಾಗವಿದು. ಇನ್ನೊಂದೆಡೆ,
ಅರ್ಥವ್ಯವಸ್ಥೆ ತೀವ್ರಗತಿಯಲ್ಲಿ ಕುಸಿತವನ್ನು ಕಾಣುತ್ತಿದೆ. ನಿರುದ್ಯೋಗದ ಪ್ರಮಾಣವಂತೂ ಕಳೆದ 45 ವರ್ಷಗಳಲ್ಲೇ ಅತೀ ದಾರುಣ ಹಂತಕ್ಕೆ ಕುಸಿದು ಹೋಗಿದೆ. ‘ಉದ್ಯೋಗ ನಷ್ಟ ಮತ್ತು ಆರ್ಥಿಕ ಕುಸಿತವು ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ’ ಎಂದು ಆರ್‍ಬಿಐ ಬಿಡುಗಡೆಗೊಳಿಸಿದ ಸಮೀಕ್ಷೆಗಳೇ ಹೇಳುತ್ತಿವೆ. ನೋಟು ಅಮಾನ್ಯೀಕರಣದ ದುಷ್ಪರಿಣಾಮದಿಂದ ದೇಶ ಇನ್ನೂ ಮೇಲೆದ್ದಿಲ್ಲ. ಜನರಲ್ಲಿ ಖರೀದಿಸುವ ಸಾಮಥ್ರ್ಯ ಕಡಿಮೆಯಾಗಿದೆ. ವಾಹನ ಉದ್ಯಮದಲ್ಲಿ ಚೇತರಿಕೆ ಕಾಣಿಸುತ್ತಿಲ್ಲ. ಬ್ಯಾಂಕುಗಳು ಜನಸಾಮಾನ್ಯರ ವಿಶ್ವಾಸವನ್ನು ಕಳಕೊಳ್ಳತೊಡಗಿದೆ. ಜನರಲ್ಲಿ ಒಂದು ಬಗೆಯ ಹತಾಶೆ, ಸಿಟ್ಟು, ಅಸಹನೆ ರೂಪುಪಡೆಯತೊಡಗಿದೆ. ಇಂಥ ಸ್ಥಿತಿಯಲ್ಲಿ ವಿರೋಧದ ದನಿಗೆ ಬೇರು ಮಟ್ಟದಲ್ಲೇ ಕಡಿವಾಣ ಹಾಕದಿದ್ದರೆ ಅದು ಸ್ಫೋಟಗೊಂಡು ಅಧಿಕಾರವನ್ನೇ ಕಿತ್ತುಕೊಳ್ಳಬಹುದು ಎಂಬ ಭಯ ಕೇಂದ್ರ ಸರಕಾರದ ಬೆಂಬಲಿಗರನ್ನು ಕಾಡತೊಡಗಿರುವಂತಿದೆ. ಅದರ ಭಾಗವಾಗಿ ಇಂಥ ಬೆಳವಣಿಗೆಗಳು ನಡೆಯುತ್ತಿವೆ ಎಂದೇ ಹೇಳಬೇಕಾಗಿದೆ. ಆದ್ದರಿಂದ,
ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಬೇಕು. ಆ ಮೂಲಕ ದೇಶಕ್ಕೆ ಪ್ರಬಲ ಸಂದೇಶವನ್ನು ರವಾನಿಸಬೇಕು.

Thursday, 10 October 2019

ಕಂಜೂಸಿ ಮಾಧ್ಯಮಗಳು ಮತ್ತು ಕಾಶ್ಮೀರದ ಸಂಕಟಗಳು


ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್‍ನಲ್ಲಿ ಸೆ. 24ರಂದು 78 ಕೇಸುಗಳನ್ನು ವಿಚಾರಣೆಗೆಂದು ನಿಗದಿಯಾಗಿದ್ದುವು. ಆದರೆ ಬರೇ 11 ವಕೀಲರಷ್ಟೇ ಹೈಕೋರ್ಟ್‍ನಲ್ಲಿ ಹಾಜರಿದ್ದರು. ಜಮ್ಮು-ಕಾಶ್ಮೀರದ 370ನೇ ವಿಧಿಯನ್ನು ರದ್ದುಪಡಿಸಲಾದ ಆಗಸ್ಟ್ 5ರಂದು ಹೈಕೋರ್ಟ್‍ನಲ್ಲಿ 31 ಕೇಸುಗಳು ವಿಚಾರಣೆಗೆ ಬಂದಿದ್ದುವು. ಆದರೆ, ಯಾವೊಬ್ಬ ವಕೀಲನೂ ಕೋರ್ಟ್‍ಗೆ ಹಾಜರಾಗದಿದ್ದುದರಿಂದ ಎಲ್ಲ ಪ್ರಕರಣಗಳೂ ಮುಂದೂಡಲ್ಪಟ್ಟವು. ಸದ್ಯ ಜಮ್ಮು ಮತ್ತು ಕಾಶ್ಮೀರದ ವಿವಿಧ ಕೋರ್ಟ್‍ಗಳಲ್ಲಿ ಸಕ್ರಿಯರಾಗಿರುವ ಸುಮಾರು 1050 ವಕೀಲರುಗಳ ಪೈಕಿ ಹೆಚ್ಚಿನವರೂ ಮುಷ್ಕರದಲ್ಲಿದ್ದಾರೆ. ಸಾರ್ವಜನಿಕ ಸುರಕ್ಷ ತಾ ಕಾಯ್ದೆ(PSA)ಯಡಿಯಲ್ಲಿ ಜಮ್ಮು-ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಶನ್‍ನ ಅಧ್ಯಕ್ಷರಾದ ಮಿಯಾಂ ಅಬ್ದುಲ್ ಕಯ್ಯೂಮ್, ಅನಂತ್‍ನಾಗ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ಫಯಾಝï ಅಹ್ಮದ್ ಸೌದಾಗರ್, ಬಾರಮುಲ್ಲಾ ಬಾರ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಸಲಾಮ್ ರಥರ್ ನ್ನು ಬಂಧಿಸಿರುವುದನ್ನು ಖಂಡಿಸಿ ವಕೀಲರು ಪ್ರತಿಭಟಿಸುತ್ತಿದ್ದಾರೆ. ವಿಚಾರಣೆಯಿಲ್ಲದೆ ಎರಡು ವರ್ಷಗಳ ಕಾಲ ಜೈಲಲ್ಲಿರಿಸುವುದಕ್ಕೆ ಅವಕಾಶ ಒದಗಿಸುವ ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ನು ಬಾರ್ ಅಸೋಸಿಯೇಶನ್ ಅಧ್ಯಕ್ಷರುಗಳ ವಿರುದ್ಧ ಹೇರಿರುವುದಕ್ಕೆ ವಕೀಲರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇನ್ನೊಂದು ಕಡೆ, ತಮ್ಮವರನ್ನು ಹುಡುಕಿ ಕೊಡಿ ಎಂದು ಆಗ್ರಹಿಸಿ 200ಕ್ಕಿಂತಲೂ ಹೆಚ್ಚು ಹೇಬಿಯಸ್ ಕಾರ್ಪಸ್ ಅರ್ಜಿಗಳು ಕೋರ್ಟ್‍ನಲ್ಲಿ ಸಲ್ಲಿಕೆಯಾಗಿದೆ. ಆದರೆ ಈ ಹೇಬಿಯಸ್ ಕಾರ್ಪಸ್ ಅರ್ಜಿಗೆ ಉತ್ತರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಲಾದ ನೋಟೀಸು ಅಂಚೆ ಕಚೇರಿಯಲ್ಲೇ  ಬಿದ್ದುಕೊಂಡಿದೆ. ಯಾಕೆಂದರೆ, ಅಂಚೆ ಕಚೇರಿ ಮುಚ್ಚಿಕೊಂಡಿದ್ದು ಕಾರ್ಯಾಚರಿಸುತ್ತಿಲ್ಲ...
370ನೇ ವಿಧಿಯನ್ನು ರದ್ದುಗೊಳಿಸಿ ಎರಡು ತಿಂಗಳಾಗಿರುವ ಈ ಹೊತ್ತಿನಲ್ಲಿ ಕಾಶ್ಮೀರದ ಸ್ಥಿತಿಗತಿ ಹೇಗಿದೆ ಅನ್ನುವ ಪ್ರಶ್ನೆಗೆ ಲಭ್ಯವಾಗುವ ಉತ್ತರಗಳ ಪೈಕಿ ಸಣ್ಣ ಅಂಶ ಇದು. ಮುಖ್ಯವಾಹಿನಿಯ ಮಾಧ್ಯಮಗಳ ಪೈಕಿ ಹೆಚ್ಚಿನವೂ ಇವತ್ತು ಕಾಶ್ಮೀರದ ಬಗ್ಗೆ ಗಾಢ ಮೌನಕ್ಕೆ ಜಾರಿವೆ. ಕಾಶ್ಮೀರದಲ್ಲಿ ಎಲ್ಲವೂ ಶಾಂತವಾಗಿದೆ ಅನ್ನುವುದನ್ನು ನಂಬಿಸುವ ಹತಾಶ ಯತ್ನದಲ್ಲಿ ಮುಖ್ಯವಾಹಿನಿಯ ಹಲವು ಮಾಧ್ಯಮಗಳೇ ತೊಡಗಿಸಿಕೊಂಡಿವೆ. ಪತ್ರಿಕೆಗಳಲ್ಲಿ ಕಾಶ್ಮೀರದ ಕುರಿತಾಗಿ ಕಾಲಂಗಳು ನಿಂತು ಹೋಗಿವೆ. ಸುದ್ದಿಗಳು ಕಾಣೆಯಾಗುತ್ತಿವೆ. ನಿರಂತರ ಎರಡು ತಿಂಗಳ ದಿಗ್ಬಂಧನ ಸ್ಥಿತಿಯು ಸಾಮಾನ್ಯ ಕಾಶ್ಮೀರಿಗಳ ಬದುಕಿನ ಮೇಲೆ ಏನೇನು ಪರಿಣಾಮ ಬೀರಿರಬಹುದು ಅನ್ನುವ ಪುಟ್ಟ ಕುತೂಹಲ ಮತ್ತು ಸಂಕಟದ ಯಾವ ಕುರುಹೂ ಇಲ್ಲದೇ ಪತ್ರಿಕೆಗಳು ಪ್ರಕಟವಾಗುತ್ತಿವೆ. ಕಾಶ್ಮೀರದಲ್ಲಿ ಭಯೋತ್ಪಾದಕರ ಹತ್ಯೆ ಅನ್ನುವ ಸುದ್ದಿಗೆ ಕೊಡುವ ಜಾಗ ಮತ್ತು ಖರ್ಚು ಮಾಡುವ ಪದಗಳ ಅರ್ಧಾಂಶವನ್ನೂ ಕಾಶ್ಮೀರಿಗಳ ಬವಣೆಗಾಗಿ ಖರ್ಚು ಮಾಡದ ಕಂಜೂಸಿ ಪತ್ರಿಕೆಗಳೂ ನಮ್ಮ ನಡುವೆ ಇವೆ. ಈ ನಡುವೆ ಕೆಲವು ಧೈರ್ಯಶಾಲಿ ಪತ್ರಿಕೆ ಮತ್ತು ಜಾಲತಾಣಗಳ ಕೃಪೆಯಿಂದಾಗಿ ಅಷ್ಟಿಷ್ಟು ಮಾಹಿತಿಗಳು ಬಹಿರಂಗವಾಗುತ್ತಿವೆ. ಈ ಮಾಹಿತಿಗಳೇ ಸದ್ಯದ ಕಾಶ್ಮೀರದ ಸ್ಥಿತಿ ಎಷ್ಟು ಆತಂಕಕಾರಿ ಅನ್ನುವುದನ್ನು ಸ್ಪಷ್ಟಪಡಿಸುತ್ತದೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸುವ 370ನೇ ವಿಧಿ ರದ್ದತಿಗಿಂತ ಮೊದಲೂ ಕಾಶ್ಮೀರಿಗಳೇನೂ ಭಾರೀ ಸುಖದಲ್ಲಿರಲಿಲ್ಲ. ಆದರೂ ಒಂದು ಬಗೆಯ ಆಶಾವಾದ ಅವರಲ್ಲಿತ್ತು. ಆದರೆ 370ನೇ ವಿಧಿಯ ರದ್ದತಿಯ ಬಳಿಕವಂತೂ ಕಾಶ್ಮೀರದಲ್ಲಿ ಭಯವಷ್ಟೇ ಉಳಿದುಕೊಂಡಿದೆ. ಈ ವರ್ಷದ ಆರಂಭದಲ್ಲಿ ಕಮ್ಯುನಿಟಿ ಮೆಂಟಲ್ ಹೆಲ್ತ್ ಪತ್ರಿಕೆಯು ಕಾಶ್ಮೀರಕ್ಕೆ ಸಂಬಂಧಿಸಿ ಸರ್ವೇ ಆಧಾರಿತ ವರದಿಯೊಂದನ್ನು ಪ್ರಕಟಿಸಿತ್ತು. ಅದರ ಪ್ರಕಾರ, ಶೋಪಿಯಾನ ಜಿಲ್ಲೆಯ ಪ್ರತಿ ಮೂರರಲ್ಲಿ ಒಂದು ಮಗು ಮಾನಸಿಕ ಆರೋಗ್ಯ ತಪಾಸಣೆಗೆ ಅರ್ಹ ಎನ್ನಲಾಗಿದೆ. ಕಾಶ್ಮೀರ ಕಣಿವೆಯ ಒಟ್ಟು ಜನಸಂಖ್ಯೆಯ ಪೈಕಿ 18 ಲಕ್ಷ (43%) ವಯಸ್ಕರು ಮಾನಸಿಕ ಕಾಯಿಲೆಯ ಲಕ್ಷಣಗಳನ್ನು ಹೊಂದಿದ್ದಾರೆ ಎಂದು 2015ರಲ್ಲಿ ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ ಸಂಸ್ಥೆಯು ಬಿಡುಗಡೆಗೊಳಿಸಿದ ವರದಿಯಲ್ಲಿ ಹೇಳಲಾಗಿತ್ತು. ಕಾನೂನು ಬಾಹಿರವಾಗಿ ಬಂಧಿಸುವುದು, ದೌರ್ಜನ್ಯವೆಸಗುವುದು, ಹಿಂಸಿಸುವುದು ಇತ್ಯಾದಿಗಳು ಕಾಶ್ಮೀರಿ ಮಕ್ಕಳನ್ನು ತೀವ್ರ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಗುರಿಯಾಗಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ. 2018ರಲ್ಲಿ ಆರ್‍ಟಿಐ ಮೂಲಕ ಜಮ್ಮು-ಕಾಶ್ಮೀರ ನಾಗರಿಕ ಸಮಿತಿ ಒಕ್ಕೂಟವು (JKCCS) ಪಡೆದುಕೊಂಡ ಮಾಹಿತಿಯಂತೂ ಭಯಾನಕ. 1990ರಿಂದ 2013ರ ನಡುವೆ ನೂರಾರು ಮಕ್ಕಳು ಸಾರ್ವಜನಿಕ ಸುರಕ್ಷತಾ ಕಾಯ್ದೆ(PSA)ಯಡಿ ಬಂಧನದಲ್ಲಿದ್ದರು. ಅವರನ್ನು ಎಷ್ಟು ಅನಾಗರಿಕವಾಗಿ ನಡೆಸಿಕೊಳ್ಳಲಾಗಿತ್ತೆಂದರೆ, ಕ್ರಿಮಿನಲ್‍ಗಳು ಮತ್ತು ವಯಸ್ಕರ ಜೊತೆ ಅವರನ್ನು ಕೂಡಿ ಹಾಕಲಾಗಿತ್ತು. ಅವರ ವಯಸ್ಸನ್ನು ಅರಿತುಕೊಳ್ಳುವ ವ್ಯವಸ್ಥೆಯೂ ಇರಲಿಲ್ಲ. ನ್ಯಾಯಾಲಯದ ಮಧ್ಯಪ್ರವೇಶದಿಂದ ಇವರನ್ನು ಬಿಡುಗಡೆಗೊಳಿಸಲಾಯಿತಲ್ಲದೇ, ಇವರ ಪೈಕಿ 80% ಮಂದಿಯನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ನ್ಯಾಯಾಲಯವೇ ಹೇಳಿತ್ತು. ಇದರ ಜೊತೆಗೇ ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡ ಮಾನವ ಹಕ್ಕುಗಳಿಗಾಗಿರುವ ವಿಶ್ವಸಂಸ್ಥೆಯ ವರದಿಯನ್ನೂ ಪರಿಶೀಲಿಸುವುದು ಉತ್ತಮ. ವಿಚಾರಣೆ ಇಲ್ಲದೇ ಎರಡು ವರ್ಷಗಳ ಕಾಲ ಜೈಲಲ್ಲಿಡಬಹುದಾದ ಸಾರ್ವಜನಿಕ ಸುರP್ಷÀತಾ ಕಾಯ್ದೆಯ ಅಡಿಯಲ್ಲಿ ಕಾಶ್ಮೀರದ ಅನೇಕ ಮಕ್ಕಳನ್ನು ಲಾಕಪ್‍ನಲ್ಲಿ ಇರಿಸಲಾಗಿದೆ ಮತ್ತು ಅವರೊಂದಿಗೆ ಅತ್ಯಂತ ದುರ್ವರ್ತನೆಯಿಂದ ನಡೆದುಕೊಳ್ಳಲಾಗಿದೆ ಎಂದಿರುವ ವರದಿಯು, ಅವರ ವಯಸ್ಸನ್ನೂ ತಪ್ಪಾಗಿ ನಮೂದಿಸಲಾಗಿದೆ ಎಂದೂ ಹೇಳಿದೆ. ಸೇನಾ ಪಡೆಯ ವಿಶೇಷಾಧಿಕಾರ ಕಾಯ್ದೆ (AFSPA)ಯು ತಪ್ಪಿತಸ್ಥರಿಗೆ ಶಿಕ್ಷೆಯಾಗದಂತೆ ರಕ್ಷಣೆ ಒದಗಿಸುತ್ತಿದೆ ಎಂದೂ ಹೇಳಲಾಗಿದೆ. ನಿಜವಾಗಿ,
ದೊಡ್ಡವರ ಜಗಳದಲ್ಲಿ ಅತ್ಯಂತ ಹೆಚ್ಚು ಅನ್ಯಾಯಕ್ಕೆ ಒಳಗಾಗಿರುವುದು ಕಾಶ್ಮೀರದ ಮಕ್ಕಳು. ಕಾಶ್ಮೀರದ ಸ್ಥಿತಿಯನ್ನು ಅರಗಿಸಿಕೊಳ್ಳುವುದಕ್ಕೆ ಅವರ ಪುಟ್ಟ ಪ್ರಾಯಕ್ಕೆ ಸಾಧ್ಯವಾಗುತ್ತಿಲ್ಲ. 1990 ಮತ್ತು 2005ರ ನಡುವೆ ಕಾಶ್ಮೀರದ 46 ಶಾಲೆಗಳನ್ನು ಸೇನಾಪಡೆ ವಶಪಡಿಸಿಕೊಂಡಿದೆ ಮತ್ತು ಸುಮಾರು 400 ಶಾಲೆಗಳು ಬೆಂಕಿಗೆ ಆಹುತಿಯಾಗಿವೆ ಎಂದು 2006ರಲ್ಲಿ ಬಿಡುಗಡೆಗೊಂಡ ಮಾನವ ಹಕ್ಕುಗಳಿಗಾಗಿರುವ ಸಾರ್ವಜನಿಕ ಆಯೋಗದ ವರದಿಯು ಹೇಳಿತ್ತು. ಇದು ಮಕ್ಕಳ ಶೈಕ್ಷಣಿಕ ಸ್ಥಿತಿಗತಿಯ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲ, ತಮ್ಮ ಹೆತ್ತವರು, ಸಹೋದರರು, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಕಾನೂನುಬಾಹಿರ ಬಂಧನಗಳು ಮಕ್ಕಳನ್ನು ಇಂಚಿಂಚಾಗಿ ತಿವಿಯುತ್ತಿವೆ. ಅವರನ್ನು ಮಾನಸಿಕವಾಗಿ ಕೊಲ್ಲುತ್ತಿವೆ. ಇದರ ಜೊತೆ ಜೊತೆಗೇ ಆಗಸ್ಟ್ 5ರಂದು 370ನೇ ವಿಧಿಯನ್ನು ರದ್ದುಗೊಳಿಸಿದುದು ಮತ್ತು ಅದರ ಬಳಿಕದ ಕಠಿಣ ನಿರ್ಬಂಧಗಳು ಮಕ್ಕಳು ಮತ್ತು ವಯಸ್ಕರೆನ್ನದೇ ಪ್ರತಿಯೊಬ್ಬರ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ. ಇಂಡಿಯನ್ ಫೆಡರೇಶನ್ ಆಫ್ ಇಂಡಿಯನ್ ವುಮೆನ್ಸ್ ಮತ್ತು ಇತರ ಸಂಘಟನೆಗಳು 370ನೇ ವಿಧಿ ರದ್ದಿನ ಬಳಿಕದ ಕಾಶ್ಮೀರದ ಬಗ್ಗೆ ಇತ್ತೀಚೆಗೆ ವರದಿ ಬಿಡುಗಡೆಗೊಳಿಸಿತ್ತು. ತಮ್ಮ ಮಕ್ಕಳ ಬರುವಿಕೆಯನ್ನು ಕಾಯುತ್ತಾ ಕಾಶ್ಮೀರದ ತಾಯಂದಿರು ಬಾಗಿಲಲ್ಲಿ ನಿಂತಿರುವ ದಯನೀಯ ಸ್ಥಿತಿಯನ್ನು ಅದು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ವಿಷಾದ ಏನೆಂದರೆ, ತಮ್ಮ ಮಕ್ಕಳು ಎಲ್ಲಿದ್ದಾರೆಂದೇ ಈ ತಾಯಂದಿರಿಗೆ ಗೊತ್ತಿಲ್ಲ. ಅದನ್ನು ಅರಿತುಕೊಳ್ಳುವುದಕ್ಕೆ ಪೂರಕವಾದ ಸಂವಹನ ವ್ಯವಸ್ಥೆಯೂ ಇಲ್ಲ. ಅಂದಹಾಗೆ,
370ನೇ ವಿಧಿಯನ್ನು ಕಾಶ್ಮೀರಿಗಳ ಒಳಿತಿನ ದೃಷ್ಟಿಯಿಂದ ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸರಕಾರ ಪದೇ ಪದೇ ಹೇಳಿಕೊಳ್ಳುತ್ತಿದ್ದರೂ ಈ ಹೇಳಿಕೆಯನ್ನು ಸಮರ್ಥಿಸುವ ಬೆಳವಣಿಗೆಗಳು ಕಾಶ್ಮೀರದಲ್ಲಿ ಕಾಣಿಸುತ್ತಿಲ್ಲ. ಕಾಶ್ಮೀರದ ಸ್ಥಿತಿಗತಿಯನ್ನು ಹೊರಗಿನವರು ತಿಳಿದುಕೊಳ್ಳಲಾಗದಂಥ ಕಠಿಣ ಮಾಧ್ಯಮ ನಿರ್ಬಂಧವೊಂದು ಸದ್ಯ ಜಾರಿಯಲ್ಲಿದೆ. ಹೈಕೋರ್ಟ್ ಬಾರ್ ಅಸೋಸಿಯೇಶನ್‍ನ ಅಧ್ಯಕ್ಷರನ್ನೇ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟುವಂಥ ದಮನ ನೀತಿ ಅಲ್ಲಿದೆ. ಹೇಬಿಯಸ್ ಕಾರ್ಪಸ್ ಅರ್ಜಿಗಳ ವಿಲೇವಾರಿ ಆಗದಂಥ ಸ್ಥಿತಿಯಿದೆ. ಪ್ರಜಾತಂತ್ರ ದೇಶವು ತನ್ನದೇ ಭೂಪ್ರದೇಶದ ಜನರ ಮೇಲೆ ಇಷ್ಟು ಕಠಿಣವಾಗಿ ವರ್ತಿಸುವುದು ಅನ್ಯಾಯ. ಇದು ಅಪ್ರಜಾಸತ್ತಾತ್ಮಕ ಧೋರಣೆ. ಇದನ್ನು ಬೆಂಬಲಿಸಲಾಗದು. 

Friday, 4 October 2019

ಹೌಡಿ ಮೋದಿಗೆ ಉತ್ತರವಾದ ಆ ವೀಡಿಯೋಗಳು





ಅಮೇರಿಕದ ಹ್ಯೂಸ್ಟನ್‍ನಲ್ಲಿ ಸೇರಿದ್ದ ಅನಿವಾಸಿ ಭಾರತೀಯರು ಹೌಡಿ ಮೋದಿ (ಹೇಗಿದ್ದೀರಾ ಮೋದಿ) ಎಂದು ಕುಶಲ ವಿಚಾರಿಸುತ್ತಿರುವಾಗ ಅದಕ್ಕೆ ಉತ್ತರವೆಂಬಂತೆ ಗುಜರಾತ್‍ನ ನರ್ಮದಾ ತಟ ಪ್ರದೇಶದಿಂದ ನೂರಾರು ವೀಡಿಯೋಗಳು ಹೊರಬಿದ್ದುವು. ಎಲ್ಲವೂ ನೋವು-ಸಂಕಟ-ದುರ್ದೆಸೆಗಳನ್ನು ಹೇಳಿಕೊಳ್ಳುವ ವೀಡಿಯೋಗಳು. ಭಾವುಕತೆ ಮತ್ತು ಕಣ್ಣೀರಿನ ಹೊರತಾದ ಯಾವುದೂ ಆ ವೀಡಿಯೋಗಳಲ್ಲಿಲ್ಲ. ನರ್ಮದಾ ಅಣೆಕಟ್ಟಿನ ನೀರು ತನ್ನ ಮನೆಯನ್ನು ಅರ್ಧ ಮುಳುಗಿಸಿದ್ದರೂ ಅದರಿಂದ ಹೊರಬರಲೊಪ್ಪದ ಮಹಿಳೆಯ ವೀಡಿಯೋ ಇದರಲ್ಲಿ ಒಂದಾದರೆ ಇನ್ನೊಂದು- ಗೆಳೆಯರಾದ ಇಬ್ಬರು ಮಕ್ಕಳು ಪರಸ್ಪರ ಸಾಂತ್ವನಪಡಿಸುತ್ತಿರುವ ವೀಡಿಯೋ. ತಂತಮ್ಮ ಮನೆಗಳು ಮುಳುಗಡೆಯಾಗಿರುವುದರಿಂದ ಸ್ಥಳಾಂತರಗೊಂಡು ಪರಸ್ಪರ ಬೇರ್ಪಡಲೇಬೇಕಾದ ಸಂಕಟ ಈ ಮಕ್ಕಳದು. ಅಂದಹಾಗೆ, ನರ್ಮದಾ ನದಿಗೆ ಕಟ್ಟಲಾದ ಸರ್ದಾರ್ ಸರೋವರ್ ಅಣೆಕಟ್ಟಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ತನ್ನ 69ನೇ ಜನ್ಮದಿನವನ್ನು ಆಚರಿಸಿದುದನ್ನು ಮಾಧ್ಯಮಗಳು ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿದುವು. ಇದೇವೇಳೆ, ಈ ಅಣೆಕಟ್ಟನ್ನು ತುಂಬಿಸುವುದಕ್ಕಾಗಿ ನರ್ಮದಾ ನದಿಗೆ ಸಾಬರ್ಮತಿ ನದಿಯಿಂದ ನೀರು ಹರಿಸಿದುದನ್ನು ಮತ್ತು ಇದರಿಂದಾಗಿ ಸಂತ್ರಸ್ತರಾದವರನ್ನು ಪ್ರತಿನಿಧಿಸಲು ಮಾಧ್ಯಮಗಳು ವಿಫಲವಾದುವು. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ಪತ್ರಿಕೆಗಳಲ್ಲಿ ಕಾಣಿಸಿಕೊಂಡ ವೀಡಿಯೋ ಮತ್ತು ಬರಹಗಳ ಹೊರತಾಗಿ ಈ ಸಂತ್ರಸ್ತರ ಗೋಳನ್ನು ಅರಿತುಕೊಳ್ಳುವುದಕ್ಕೆ ಬೇಕಾದ ಮಾರ್ಗಗಳು ಹೊರ ಪ್ರಪಂಚಕ್ಕೆ ಇರಲಿಲ್ಲ.
ಸರ್ದಾರ್ ಸರೋವರ್ ಅಣೆಕಟ್ಟು ಯೋಜನೆಗೆ ದೀರ್ಘ ಇತಿಹಾಸವಿದೆ. ಈ ಇತಿಹಾಸದ ಪ್ರತಿ ಪುಟದಲ್ಲೂ ಮೇಧಾಪಾಟ್ಕರ್ ರಿಂದ ಹಿಡಿದು ನರ್ಮದಾ ತಟ ಪ್ರದೇಶದ ಅಸಂಖ್ಯ ರೈತರ, ಹೋರಾಟಗಾರರ ಹೆಸರಿದೆ. ಎಲ್ಲ ರೀತಿಯ ಪ್ರತಿರೋಧ-ಪ್ರತಿಭಟನೆಯನ್ನು ಗುಜರಾತ್ ಸರಕಾರವು ತನ್ನ ತೋಳ್ಬಲದಿಂದ ಮಟ್ಟ ಹಾಕಿದ ಕತೆ ಒಂದು ಕಡೆಯಾದರೆ, ಈ ಅಣೆಕಟ್ಟು ನಿರ್ಮಾಣಕ್ಕೆ ಸುಪ್ರೀಮ್ ಕೋರ್ಟೇ ಕಾವಲು ನಿಂತ ಕತೆ ಇನ್ನೊಂದು ಕಡೆಯಿದೆ. ಸರಕಾರ ಜನರನ್ನು ಎಲ್ಲಿಯ ವರೆಗೆ ದಾರಿ ತಪ್ಪಿಸಿತ್ತೆಂದರೆ, ಮೇಧಾ ಪಾಟ್ಕರ್ ಮತ್ತು ಅವರ ತಂಡದ ಅಣೆಕಟ್ಟು ವಿರೋಧಿ ಚಳವಳಿಯ ವಿರುದ್ಧ ಸ್ಥಳೀಯರನ್ನೇ ಎತ್ತಿ ಕಟ್ಟಿತ್ತು. ಅಣೆಕಟ್ಟಿನಿಂದಾಗಿ ತಮ್ಮ ಜಮೀನಿಗೆ ಭರಪೂರ ನೀರು ಹರಿಯಲಿದೆ ಮತ್ತು ವರ್ಷಪೂರ್ತಿ ಬೆಳೆ ಬೆಳೆಯಬಹುದು ಎಂದು ನಂಬಿದ್ದ ಧೊಲೇರಾದ ರೈತರು ಅಣೆಕಟ್ಟು ವಿರೋಧಿ ಹೋರಾಟವನ್ನು ರೈತ ವಿರೋಧಿ ಎಂದು ಕರೆದಿದ್ದರು. ಇದೀಗ ಅವರ ಕನಸು ಭಗ್ನವಾಗಿದೆ. ಅವರ ಗದ್ದೆಗಳಿಗೆ ನರ್ಮದಾ ನೀರು ಇನ್ನೂ ತಲುಪಿಲ್ಲ. ಸದ್ಯೋ ಭವಿಷ್ಯದಲ್ಲಿ ತಲುಪುವ ಭರವಸೆಯೂ ಇಲ್ಲ. ಅದಲ್ಲದೇ, ಅಣೆಕಟ್ಟಿನಿಂದಾಗಿ ಸಮುದ್ರದ ಉಪ್ಪು ನೀರು ಹಲವು ಕಿಲೋಮೀಟರ್ ತನಕ ಒಳಪ್ರವೇಶಿಸಿದ್ದು ಧಲೇರಾದ ಕೃಷಿ ಭೂಮಿಯನ್ನು ಲವಣಯುಕ್ತಗೊಳಿಸಿಬಿಟ್ಟಿದೆ. ಇದರಿಂದಾಗಿ ಇಡೀ ಕೃಷಿ ಭೂಮಿಯೇ ನಿರುಪಯುಕ್ತಗೊಂಡಿದೆ. ಕ್ರೂರ ವ್ಯಂಗ್ಯ ಏನೆಂದರೆ, ಗುಜರಾತ್ ಸರಕಾರ ಈ ಸಮಸ್ಯೆಗೆ ಕಂಡುಕೊಂಡ ಅಸಂಗತ ಪರಿಹಾರ ರೂಪ. ಈ ಪ್ರದೇಶವನ್ನು ವಿಶೇಷ ಆರ್ಥಿಕ ವಲಯವೆಂದು ಘೋಷಿಸಿ ರೈತರನ್ನು ಬೇರೆಡೆಗೆ ಸ್ಥಳಾಂತರಿಸಲು ಅದು ನಿರ್ಧರಿಸಿದೆ. ಪ್ರತಿಭಟನೆಯನ್ನು ಬಲವಂತದಿಂದ ದಮನಿಸುತ್ತಿದೆ. ಒಂದು ಕಾಲದಲ್ಲಿ ಸರಕಾರದ ಅಣೆಕಟ್ಟು ನೀತಿಗೆ ಬೆಂಗಾವಲಾಗಿ ನಿಂತವರು ಇವತ್ತು ಒಂಟಿಯಾಗಿ ನಿಲ್ಲಬೇಕಾದ ಸ್ಥಿತಿಗೆ ತಲುಪಿದ್ದಾರೆ. ಇದೇವೇಳೆ, ನರ್ಮದಾ ಅಣೆಕಟ್ಟಿನಿಂದ ಯಥೇಚ್ಛವಾಗಿ ಬೃಹತ್ ಕೈಗಾರಿಕೆಗಳಿಗೆ ನೀರು ಸರಬರಾಜಾಗುತ್ತಿದೆ. ವಿಶೇಷವಾಗಿ ಟಾಟಾ ಮತ್ತು ಕೋಕಾಕೋಲ ಕಂಪೆನಿಗಳ ಕಾರ್ಖಾನೆಗಳಿಗೆ. ಪಶ್ಚಿಮ ಬಂಗಾಳದಿಂದ ಹೊರಹಾಕಲ್ಪಟ್ಟ ಟಾಟಾ ಮೋಟಾರ್ಸ್ ಕಂಪೆನಿಯು ಇಲ್ಲಿನ ಸನಂದ್‍ನಲ್ಲಿ ಬಂದು ತಳವೂರಿಕೊಂಡಿತು. ಅದಕ್ಕೆ ಜಲಮೂಲವಿದ್ದುದು ಸರ್ದಾರ್ ಸರೋವರ್ ಅಣೆಕಟ್ಟು ಒಂದೇ. ಹಾಗೆಯೇ ಕೇರಳದ ಪ್ಲಾಚಿಮಾಡ ಮತ್ತು ಉತ್ತರ ಪ್ರದೇಶದ ವಾರಣಾಸಿಯಿಂದ ಹೊರಬಿದ್ದ ಕೋಕಾಕೋಲಕ್ಕೂ ಆಶ್ರಯ ಒದಗಿಸಿದ್ದು ಇದೇ ಗುಜರಾತ್. ಅದಕ್ಕೂ ಜಲಮೂಲ ಇದೇ ಅಣೆಕಟ್ಟು. ಸದ್ಯ ಇವೆರಡೂ ಕಂಪೆನಿಗಳು ಅಣೆಕಟ್ಟಿನ ಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಿದ್ದರೆ ತಮ್ಮ ಜಮೀನು, ಮನೆ, ಜೀವನೋಪಾಯ ಎಲ್ಲವನ್ನೂ ಅಣೆಕಟ್ಟಿಗಾಗಿ ಕಳಕೊಂಡ ಸ್ಥಳೀಯರು ಬೀದಿಪಾಲಾಗಿದ್ದಾರೆ. ನಿಜವಾಗಿ, ಸುಮಾರು 28 ಸಾವಿರ ಕುಟುಂಬಗಳು ಮುಳುಗಡೆ ಪ್ರದೇಶದಲ್ಲಿವೆ ಎಂಬುದೇ ಅಣೆಕಟ್ಟಿನ ಇನ್ನೊಂದು ಮುಖವನ್ನು ಹೇಳುತ್ತದೆ. ಇವರಿಗೆ ಪುನರ್ವಸತಿಯಾಗಲಿ, ಪರಿಹಾರವಾಗಲಿ ಇನ್ನೂ ಲಭಿಸಿಲ್ಲ. ಮೊನ್ನೆ ಪ್ರಧಾನಿಯವರ ಜನ್ಮ ದಿನಾಚರಣೆಯ ಸಮಯದಲ್ಲಿ ಕಾಣಿಸಿಕೊಂಡ ವೀಡಿಯೋಗಳು ಈ ಸಂತ್ರಸ್ತ ಕುಟುಂಬಗಳಿಗೆ ಸಂಬಂಧಿಸಿದುವು. ಅವರ ಬೆಳೆಗಳು ನಾಶವಾಗಿವೆ. ಕನಸುಗಳು ಭಗ್ನವಾಗಿವೆ. ಇಲ್ಲಿಂದ ಎದ್ದು ಹೋಗೋಣವೆಂದರೆ, ಪರ್ಯಾಯ ದಾರಿಗಳೂ ಸ್ಪಷ್ಟವಾಗಿಲ್ಲ. ಇದರ ಜೊತೆಗೇ ಸುಮಾರು 13,500 ಹೆಕ್ಟೇರ್ ಕಾಡು ಪ್ರದೇಶಗಳೂ ಮುಳುಗಡೆಯಾಗಲಿವೆ. ಆದರೆ, ಅಲ್ಲಿ ಪ್ರಾಣಿ, ಪಕ್ಷಿ ಜೀವಸಂಕುಲಗಳಿಗೆ ಪ್ರತಿಭಟನೆಯ ಮಾರ್ಗ ಗೊತ್ತಿಲ್ಲದಿರುವುದರಿಂದ ಅವು ಸುದ್ದಿಯಾಗಿಲ್ಲ. ಹೀಗೆ ಸುದ್ದಿಯಾಗದ ಸಂಗತಿಗಳಲ್ಲಿ ಭರೂಚ್ ಪ್ರದೇಶದ ಸಮಸ್ಯೆಯೂ ಒಂದು. ಮೀನುಗಾರರ ಕುಟುಂಬಗಳೇ ವಾಸವಿರುವ ಈ ಪ್ರದೇಶದ ಮಂದಿ ಇವತ್ತು ಜೀವನಾಧಾರವನ್ನೇ ಕಳಕೊಂಡಿದ್ದಾರೆ. ಇವರ ಸಂಖ್ಯೆ 30 ಸಾವಿರ. ಸರ್ದಾರ್ ಸರೋವರ್ ನಿರ್ಮಾಣದ ವೇಳೆ ಅಣೆಕಟ್ಟಿನ ಅಡ್ಡ ಪರಿಣಾಮಗಳ ಬಗ್ಗೆ ಸರಕಾರ ಯಾವ ಸೂಚನೆಗಳನ್ನೂ ಜನರಿಗೆ ನೀಡಿರಲಿಲ್ಲ. ಭರೂಚ್‍ನ ಜನರು ಕೂಡ ಅಣೆಕಟ್ಟನ್ನು ಆನಂದಿಸಿದರು. ಕಛ್ ಪ್ರದೇಶದ ರೈತರಲ್ಲೂ ಈ ಅಣೆಕಟ್ಟಿನ ಬಗ್ಗೆ ವಿಶೇಷ ಒಲವಿತ್ತು. ನೀರಿನ ಕೊರತೆಯನ್ನು ಎದುರಿಸುತ್ತಿರುವ ಕಛ್ ಪ್ರದೇಶಕ್ಕೆ ಸರ್ದಾರ್ ಸರೋವರ್ ಯೋಜನೆಯಿಂದ ಭಾರೀ ಪ್ರಮಾಣದ ಲಾಭವಾಗಲಿದೆ ಎಂದು ನಂಬಲಾಗಿತ್ತು. ಕಾಲುವೆಗಳ ಮೂಲಕ ಕಛ್‍ಗೆ ನೀರು ಹರಿಸುವ ಭರವಸೆಯನ್ನು ಸರಕಾರವೂ ನೀಡಿತ್ತು. ಅಲ್ಲದೇ, ಗುಜರಾತ್‍ನ ಒಣ ಪ್ರದೇಶಕ್ಕೆ ನೀರು ಹರಿಸಲು ಸರ್ದಾರ್ ಸರೋವರ್ ಯೋಜನೆಯ ಹೊರತು ಅನ್ಯ ದಾರಿಗಳಿಲ್ಲ’ ಎಂದು 2000 ಇಸವಿಯಲ್ಲಿ ಸುಪ್ರೀಮ್ ಕೋರ್ಟು ಹೇಳಿತ್ತು ಮತ್ತು ಅಣೆಕಟ್ಟನ್ನು ಎತ್ತರಿಸುವುದಕ್ಕೆ ಅನುಮತಿಯನ್ನೂ ನೀಡಿತ್ತು. ಇದೀಗ ಕಛ್ ಪ್ರದೇಶ ಈ ಹಿಂದಿನಂತೆ ಒಣಗಿಯೇ ಇದೆ. ನೀರು ಹರಿಸಬೇಕಾದ ಕಾಲುವೆಗಳ ಪತ್ತೆಯೇ ಇಲ್ಲ. ಬೃಹತ್ ಅಣೆಕಟ್ಟೆಗಿಂತ ಚಿಕ್ಕ ಚಿಕ್ಕ ಅಣೆಕಟ್ಟುಗಳನ್ನು ಕಟ್ಟುವುದೇ ಉಪಯುಕ್ತ ಮತ್ತು ಇದುವೇ ಪರಿಸರ ಪ್ರೇಮಿ ಯೋಜನೆ ಎಂದು ಮೇಧಾ ಪಾಟ್ಕರ್ ಮತ್ತು ತಂಡವು ವಾದಿಸುವುದನ್ನು ತಮಾಷೆ ಮಾಡಿದವರು ಇವತ್ತು ಪಶ್ಚಾತ್ತಾಪ ಪಡತೊಡಗಿದ್ದಾರೆ. ಅಂದು ಮೇಧಾ ಪಾಟ್ಕರ್‍ರನ್ನು ವಿರೋಧಿಸಿದ ಸ್ಥಳೀಯರು ಇಂದು ಅಸಹಾಯಕರಾಗಿ ನಿಂತಿದ್ದಾರೆ. ಅಣೆಕಟ್ಟು ನಿರ್ಮಾಣದಿಂದಾಗಿ ಸಮುದ್ರದ ಉಪ್ಪು ನೀರಿನ ಒಳಹರಿವು ಉಂಟಾಗಿ 10 ಸಾವಿರ ಹೆಕ್ಟೇರ್ ಕೃಷಿಭೂಮಿ ಹಾಳಾಗಿದೆ. ಹಾಗಂತ,
ಗುಜರಾತಿನವರೇ ಆದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇವೆಲ್ಲ ಗೊತ್ತಿಲ್ಲ ಎಂದಲ್ಲ. ಇವೆಲ್ಲದರ ಅರಿವಿದ್ದೇ ಮೊನ್ನೆ ಸರ್ದಾರ್ ಸರೋವರ್ ಗೆ  ಅವರು ಪೂಜೆ ಸಲ್ಲಿಸಿದ್ದಾರೆ. ಹ್ಯೂಸ್ಟನ್‍ನಲ್ಲಿ ಸೇರಿರುವ ಭಾರತೀಯರು ಹೌಡಿ ಮೋದಿ ಎಂದು ಕುಶಲ ವಿಚಾರಿಸುವಾಗಲೂ ಅವರಿಗೆ ನರ್ಮದೆಯ ಈ ಸಂಕಟ ನೆನಪಿಗೆ ಬಂದಿರಬಹುದು. ಆದರೆ ಕಾರ್ಪೋರೇಟ್ ದಣಿಗಳ ಬಿಗಿ ಮುಷ್ಠಿಯು ಈ ಬಡಪಾಯಿ ರೈತರ ಹಿತವನ್ನು ಕಡೆಗಣಿಸುವಷ್ಟು ಪ್ರಬಲವಾದುದು. ಉದ್ಯಮಿಗಳ ಹಿತ ಕಾಪಾಡದಿದ್ದರೆ ಜಿಡಿಪಿ ಕುಸಿಯುತ್ತದೆ. ಷೇರು ಮಾರುಕಟ್ಟೆ ಅಲುಗಾಡುತ್ತದೆ. ವಿದೇಶಿ ಹೂಡಿಕೆಗಳನ್ನು ಹಿಂಪಡೆಯಲಾಗುತ್ತದೆ. ಕಾರ್ಮಿಕರು ಲಕ್ಷಾಂತರ ಸಂಖ್ಯೆಯಲ್ಲಿ ಕೆಲಸ ಕಳಕೊಳ್ಳುವ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೆ. ಇದನ್ನು ನಿರ್ಲಕ್ಷಿಸಿಕೊಂಡು ಹೆಚ್ಚು ಸಮಯ ಅಧಿಕಾರದಲ್ಲುಳಿಯಲು ಸಾಧ್ಯವಿಲ್ಲ ಎಂಬುದು ಪ್ರಧಾನಿಯವರಿಗೆ ಗೊತ್ತು. ಮಾತ್ರವಲ್ಲ,
ರೈತರು ಮತ್ತು ಜನಸಾಮಾನ್ಯರಿಗೆ ಹೀಗೆ ಸುದ್ದಿಯಾಗುವ ಸಾಮರ್ಥ್ಯ ಇಲ್ಲ ಅನ್ನುವುದೂ ಅವರಿಗೆ ಗೊತ್ತು.

Monday, 30 September 2019

ಸ್ಟಾಕ್‍ಹೋಮ್ ಸಿಂಡ್ರೋಮ್‍ನಿಂದ ಹೊರಬರಲು ವೇದಿಕೆ ಒದಗಿಸಿದ ಹಿಂದಿ



ಈ ದೇಶದ ಜನತೆ ಮತ್ತು ಮಾಧ್ಯಮಗಳ ವರ್ತನೆಗಳಲ್ಲಿ ಸ್ಟಾಕ್‍ಹೋಮ್ ಸಿಂಡ್ರೋಮ್‍ನ ಲಕ್ಷಣಗಳಿವೆ ಎಂದು ತಜ್ಞರು ಅಂದಾಜಿಸುತ್ತಿರುವ ಹೊತ್ತಿನಲ್ಲಿಯೇ ಈ ಅಂದಾಜನ್ನು ಮೀರುವ ಬೆಳವಣಿಗೆಗಳು ದಕ್ಷಿಣ ಭಾರತದಲ್ಲಿ ಕಾಣಿಸತೊಡಗಿವೆ. ದೌರ್ಜನ್ಯಕ್ಕೆ ಒಳಗಾದವರು ತಮ್ಮ ಮೇಲೆ ದೌರ್ಜನ್ಯ ಎಸಗಿದವರನ್ನೇ ಬೆಂಬಲಿಸುವ ಮತ್ತು ಅವರಿಗೆ ಪ್ರಾಮಾಣಿಕವಾಗಿ ನಿಷ್ಠೆ ತೋರುವ ಸ್ಥಿತಿಯನ್ನು ಸ್ಟಾಕ್‍ಹೋಮ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ವೀರಪ್ಪನ್‍ನಿಂದ ಅಪಹರಣಕ್ಕೊಳಗಾಗಿ ಸುಮಾರು 108 ದಿನಗಳ ಕಾಲ ಕಾಡಿನಲ್ಲಿ ಒತ್ತೆ ಸೆರೆಯಿದ್ದು, ಬಿಡುಗಡೆಗೊಂಡ ಡಾ| ರಾಜ್‍ಕುಮಾರ್ ಹೇಳಿಕೆಯಲ್ಲಿ ಈ ಸಿಂಡ್ರೋಮ್‍ನ ಲಕ್ಷಣಗಳನ್ನು ತಜ್ಞರು ಗುರುತಿಸಿದ್ದರು. ಕೇಂದ್ರ ಸರಕಾರದ ಆಡಳಿತ ನೀತಿಯ ವಿಷಯದಲ್ಲಿ ಈ ದೇಶದ ಮಾಧ್ಯಮ ಮತ್ತು ಜನರು ಇಂಥದ್ದೇ  ಸ್ಟಾಕ್‍ಹೋಮ್ ಸಿಂಡ್ರೋಮ್‍ಗೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಕೇಂದ್ರ ಸರಕಾರದ ಪ್ರತಿಯೊಂದು ನೀತಿಯನ್ನೂ ಬೆಂಬಲಿಸುವ ಮಾಧ್ಯಮ ನೀತಿಯನ್ನು ಇದಕ್ಕೆ ಉದಾಹರಣೆಯಾಗಿ ನೀಡಲಾಗುತ್ತಿತ್ತು. ಪ್ರಧಾನಿ ಮೋದಿಯವರ ಕಳೆದ 100 ದಿನಗಳ ಆಡಳಿತದಲ್ಲಿ 38 ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಇದರಲ್ಲಿ 28 ಮಸೂದೆಯನ್ನೂ ಬಿಜೆಪಿ ಪಾಸು ಮಾಡಿಕೊಂಡಿದೆ ಮತ್ತು ಇವೆಲ್ಲವೂ ತನ್ನ ಬಹುಮತವನ್ನು ಬಳಸಿಕೊಂಡು ಮಾಡಿಕೊಳ್ಳಲಾದ ಪಾಸುಗಳು ಎಂಬುದು ಗೊತ್ತಿದ್ದೂ ಹೆಚ್ಚಿನ ಮಾಧ್ಯಮಗಳಿಂದ ವಿರೋಧ ವ್ಯಕ್ತವಾಗಿರಲಿಲ್ಲ. ಹಲವು ವಿರೋಧಾಭಾಸಗಳಿಂದ ಕೂಡಿರುವ ಮತ್ತು ಮುಸ್ಲಿಮ್ ಮಹಿಳೆಯ ಸಬಲೀಕರಣಕ್ಕೆ ಯಾವ ರೀತಿಯಲ್ಲೂ ಪೂರಕ ಆಗದ ‘ತ್ರಿವಳಿ ತಲಾಕ್ ಮಸೂದೆ’ಯಿಂದ ಹಿಡಿದು ಕಾಶ್ಮೀರಿಗಳಿಗೆ ಸ್ವಾಯತ್ತತೆಯನ್ನು ಅನುಮತಿಸುವ ‘370 ವಿಧಿ ರದ್ದತಿ’ ವರೆಗೆ; ‘ಯುಎಪಿಎ’ ತಿದ್ದುಪಡಿ ಮಸೂದೆಯಿಂದ ಹಿಡಿದು ನಾಗರಿಕರನ್ನು ದೋಚುವ ‘ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆ’ಯ ವರೆಗೆ ಕೇಂದ್ರ ಸರಕಾರ ಸಾಲು ಸಾಲು ಜನವಿರೋಧಿ ನೀತಿಯನ್ನು ಜಾರಿಗೊಳಿಸುತ್ತಿದ್ದರೂ ಹೆಚ್ಚಿನ ಮಾಧ್ಯಮಗಳು ‘ದಿಟ್ಟ ನಿರ್ಧಾರ, ಪರಿವರ್ತನೆಯ ಪರ್ವ’ ಎಂದು ಮುಂತಾದ ಹೊಗಳುಭಟ ಪದಗಳೊಂದಿಗೆ ಅವನ್ನು ಸಮರ್ಥಿಸಿಕೊಳ್ಳುವ ಹಂತಕ್ಕೆ ತಲುಪಿದ್ದುವು. ಇದೀಗ,
ದಕ್ಷಿಣ ಭಾರತವು ಈ ಸಿಂಡ್ರೋಮ್‍ನಿಂದ ಹೊರಬರುವ ಸೂಚನೆಗಳನ್ನು ನೀಡತೊಡಗಿದೆ. ಗೃಹಸಚಿವ ಅಮಿತ್ ಶಾ ಅವರ ಹೇಳಿಕೆ ಇದಕ್ಕೆ ಮುನ್ನುಡಿ ಬರೆದಂತಿದೆ. ‘ಹಿಂದಿ ಇಡೀ ದೇಶದ ಭಾಷೆ ಆಗಬೇಕು’ ಎಂದು ಹಿಂದಿ ದಿವಸದ ಅಂಗವಾಗಿ ಅವರು ಮಾಡಿರುವ ಟ್ವೀಟ್‍ಗೆ ದಕ್ಷಿಣ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಒಂದುರೀತಿಯಲ್ಲಿ ದಕ್ಷಿಣ ಭಾರತೀಯರನ್ನು ಒಂದೇ ದಾರದಲ್ಲಿ ಪೋಣಿಸಲು ಅವಕಾಶ ಒದಗಿಸಿಕೊಟ್ಟ ಹೇಳಿಕೆ ಇದು. ಗೃಹ ಸಚಿವರ ಈ ಹೇಳಿಕೆಗಿಂತ ಎರಡು ದಿನಗಳ ಮೊದಲು ರಾಜ್ಯದಲ್ಲಿ ಕನ್ನಡ ಅಸ್ಮಿತೆಯ ಕುರಿತಾದ ಚರ್ಚೆ ದೊಡ್ಡದಾಗಿ ಎದ್ದಿತ್ತು. ಇದಕ್ಕೆ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಡೆಯೇ ಕಾರಣ. ‘ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಕ್ಲರ್ಕ್ ಹುದ್ದೆಗೆ ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಇದೆ’ ಎಂದವರು ಹೇಳಿದ್ದರು. ಆಶ್ಚರ್ಯದ ಸಂಗತಿ ಏನೆಂದರೆ, ಹೀಗೆ ನಡೆಯುತ್ತಿರುವ ಕ್ಲರ್ಕ್ ಹುದ್ದೆಗಳಲ್ಲಿ 953 ಹುದ್ದೆಗಳು ರಾಜ್ಯದ್ದಾಗಿದ್ದು, ಅದರಲ್ಲೂ 699 ಹುದ್ದೆಗಳು ಕರಾವಳಿಯ ಎರಡು ಬ್ಯಾಂಕ್‍ಗಳಿಗೆ ಸಂಬಂಧಿಸಿದ್ದಾಗಿದೆ.
ಹಿಂದಿ ಕರ್ನಾಟಕದ ಭಾಷೆಯಲ್ಲ. ಹಿಂದಿಯಲ್ಲಿ ಉತ್ತರ ಭಾರತೀಯರು ಹೇಗೆ ಸುಲಲಿತವಾಗಿ ವ್ಯವಹರಿಸಬಲ್ಲರೋ ಹಾಗೆಯೇ ಕನ್ನಡಿಗರು ಕನ್ನಡದಲ್ಲಿ ವ್ಯವಹರಿಸಬಲ್ಲರು. ಆದ್ದರಿಂದ ಕನ್ನಡ ನೆಲಕ್ಕೆ ಅನ್ಯವಾದ ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ಮಾತ್ರ ಪರೀಕ್ಷೆಯನ್ನು ಎದುರಿಸುವಾಗ ಭಾಷಾ ಸವಾಲು ಎದುರಾಗುತ್ತದೆ. ಆದರೆ ಉತ್ತರ ಭಾರತೀಯರಿಗೆ ಈ ಸಮಸ್ಯೆ ಇಲ್ಲ. ಇದು ಉತ್ತರ ಭಾರತೀಯರು ಸುಲಭವಾಗಿ ಈ ಪರೀಕ್ಷೆಗಳಲ್ಲಿ ಮೇಲುಗೈ ಪಡೆಯಲು ನೆರವಾಗುತ್ತದೆ. ಕನ್ನಡಿಗರೇ ಕಟ್ಟಿ ಬೆಳೆಸಿದ ಬ್ಯಾಂಕುಗಳಲ್ಲಿ ಉತ್ತರ ಭಾರತೀಯರು ತುಂಬಿಕೊಳ್ಳುವುದಕ್ಕೆ ಮತ್ತು ಬ್ಯಾಂಕ್ ವ್ಯವಹಾರಗಳು ಹಿಂದಿಮಯವಾಗುವುದಕ್ಕೆ ಕಾರಣವಾಗುತ್ತದೆ. ಈಗಾಗಲೇ ಬ್ಯಾಂಕುಗಳಲ್ಲಿ ಉತ್ತರ ಭಾರತೀಯರನ್ನು ತುಂಬಿಸಿಕೊಳ್ಳುವ ತಂತ್ರ ಒಂದು ಹಂತದವರೆಗೆ ಜಾರಿಯಾಗಿದೆ. ‘ಬ್ಯಾಂಕಿಂಗ್ ಸಿಬಂದಿ ಆಯ್ಕೆ ಸಂಸ್ಥೆ’ಯು (ಐಬಿಪಿಎಸ್) ನಡೆಸುವ ಪರೀಕ್ಷೆ ಬರೆಯಬೇಕಿದ್ದರೆ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯರ್ಥಿ ಓದಿರಬೇಕಾದುದು 2014ರ ತನಕ ಕಡ್ಡಾಯವಾಗಿತ್ತು. ಆದರೆ,
ಈ ನಿಯಮವನ್ನು 2014ರಲ್ಲಿ ಬದಲಾಯಿಸಲಾಯಿತಲ್ಲದೇ ‘ನೇಮಕಾತಿ ನಡೆದ 6 ತಿಂಗಳಲ್ಲಿ ಪ್ರಾದೇಶಿಕ ಭಾಷೆ ಕಲಿತರೆ ಸಾಕು’ ಎಂದು ಮೃದುಗೊಳಿಸಲಾಯಿತು. ಇದರಿಂದಾಗಿ ಆದ ಬದಲಾವಣೆ ಏನೆಂದರೆ, ರಾಜ್ಯದ ಬ್ಯಾಂಕುಗಳಲ್ಲಿ ಉತ್ತರ ಭಾರತೀಯರ ಹೆಚ್ಚಳ. 6 ತಿಂಗಳಲ್ಲಿ ಅವರು ಭಾಷೆ ಕಲಿಯುತ್ತಾರೋ ಇಲ್ಲವೋ, ಆದರೆ, ಬ್ಯಾಂಕ್ ವ್ಯವಹಾರಗಳಲ್ಲಂತೂ ಕನ್ನಡಿಗರಿಗೆ ಭಾಷಾ ಸಮಸ್ಯೆ ಎದುರಾಗತೊಡಗಿತು. ಇದನ್ನು ಮನಗಂಡೇ ಬ್ಯಾಂಕುಗಳ ಹುದ್ದೆಗಳಿಗೆ ನಡೆಯುವ ನೇಮಕಾತಿ ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವುದಾಗಿ ಕೇಂದ್ರದ ವಿತ್ತ ಸಚಿವರು ಭರವಸೆ ನೀಡಿದ್ದರು. ಇದೀಗ ಅವರು ತಮ್ಮ ಮಾತಿನಿಂದ ನುಣುಚಿಕೊಂಡಿದ್ದಾರೆ. ‘ಕರ್ನಾಟಕದ ಬ್ಯಾಂಕುಗಳಲ್ಲಿ ಹುದ್ದೆ ಪಡೆಯಲು ಹಿಂದಿಯಲ್ಲಿ ಪರೀಕ್ಷೆ ಬರೆಯಬೇಕು’ ಎಂಬ ಅಸಂಗತ ಫರ್ಮಾನು ಹೊರಡಿಸಿದ್ದಾರೆ. ಇದು ಕನ್ನಡಿಗರನ್ನು ಕೆರಳಿಸಿದೆ. ಬ್ಯಾಂಕಿಂಗ್ ಪರೀಕ್ಷೆಗೆ ಕನ್ನಡದಲ್ಲಿ ಬರೆಯಲು ಅವಕಾಶ ಇರಬೇಕೆಂದು ಒತ್ತಾಯಿಸಿ ರೂಪುಗೊಂಡ ಹೋರಾಟಕ್ಕೆ ಇದು ಕಿಚ್ಚು ಹಚ್ಚಿದೆ. ಕನ್ನಡ ಪತ್ರಿಕೆಗಳು ಈ ನೀತಿಯನ್ನು ಖಂಡಿಸಿವೆ. ‘ಹಿಂದಿ ಹೇರಿಕೆ’ ಎಂದು ಅವು ಹೇಳಬೇಕಾದ ಒತ್ತಡಕ್ಕೆ ಸಿಲುಕಿವೆ. ಈ ಬೆಳವಣಿಗೆಯ ಎರಡು ದಿನಗಳ ಬಳಿಕ ಬಂದ ಅಮಿತ್ ಶಾರ ಹೇಳಿಕೆಯು ಕರ್ನಾಟಕದ ಜೊತೆ ದಕ್ಷಿಣದ ಇತರ ರಾಜ್ಯಗಳನ್ನೂ ಸೇರಿಸುವುದಕ್ಕೆ ಸೇತುವೆಯಾದಂತಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಕ್ಕ ಜನಾದೇಶವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ದುರುಪಯೋಗಿಸುತ್ತಿದೆ ಅನ್ನುವ ಅಭಿಪ್ರಾಯಕ್ಕೆ ಇಂಬು ನೀಡುವ ಎರಡು ಬೆಳವಣಿಗೆಗಳಿವು. ಭಾಷೆ ಎಂಬುದು ಬರೇ ಸಂವಹನ ಮಾಧ್ಯಮವಷ್ಟೇ ಅಲ್ಲ, ಅದು ಒಂದು ಸಂಸ್ಕøತಿಯನ್ನು ಪ್ರತಿನಿಧಿಸುತ್ತದೆ. ಜನರ ಬದುಕು-ಭಾವದೊಂದಿಗೆ ಅದಕ್ಕೆ ಸಂಬಂಧವಿರುತ್ತದೆ. ಭಾಷೆಯೊಂದು ಆ ಭಾಷೆಯನ್ನಾಡುವ ಮಂದಿಯ ಪುರಾತನ ಕಾಲದ ಬದುಕಿನಿಂದ ಹಿಡಿದು ಆಧುನಿಕ ಜನರ ಬದುಕಿನ ತನಕ ಪ್ರತಿ ವೈಶಿಷ್ಟ್ಯಕ್ಕೂ ಆಚಾರ-ವಿಚಾರಕ್ಕೂ ಸಾಕ್ಷ್ಯ  ವಹಿಸುತ್ತಾ, ಅದನ್ನು ಕಾಪಿಡುತ್ತಾ ಬಂದಿರುತ್ತದೆ.
ಹಿಂದಿಯು ಉತ್ತರ ಭಾರತದ ಒಂದೆರಡು ರಾಜ್ಯಗಳ ಭಾಷೆ. ಅದು ರಾಷ್ಟ್ರಭಾಷೆಯಲ್ಲ. ಈ ದೇಶಕ್ಕೆ ರಾಷ್ಟ್ರಭಾಷೆ ಎಂಬುದಿಲ್ಲ. ಹಿಂದಿಗೆ ಸಾಂವಿಧಾನಿಕವಾಗಿ ಏನು ಸ್ಥಾನವಿದೆಯೋ ಅದೇ ಸ್ಥಾನ-ಮಾನ ಕನ್ನಡಕ್ಕೂ ಇದೆ. ಹಿಂದಿಯನ್ನು ಪ್ರೀತಿಸುವುದು ಬೇರೆ ಮತ್ತು ಹೇರುವುದು ಬೇರೆ. ಕನ್ನಡಿಗರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದೇ ಇರುವುದು ದಬ್ಬಾಳಿಕೆಯ ನೀತಿ. ಹಾಗಂತ, ಈ ದಬ್ಬಾಳಿಕೆ ಕೇವಲ ಭಾಷೆಗೆ ಸಂಬಂಧಿಸಿ ಮಾತ್ರ ವ್ಯಕ್ತಗೊಂಡ ನೀತಿಯಲ್ಲ. ಕೇಂದ್ರದ ಕಳೆದ 100 ದಿಂಗಳ ಆಡಳಿತದ ಪ್ರತಿ ಹೆಜ್ಜೆಯಲ್ಲೂ ಈ ಆಗ್ರಹ ವ್ಯಕ್ತಗೊಂಡಿದೆ. 38 ಮಸೂದೆಗಳ ಪೈಕಿ 28 ಮಸೂದೆಗಳನ್ನು ಪಾಸು ಮಾಡಿಕೊಂಡ ರೀತಿಯಲ್ಲೂ ಈ ನೀತಿ ವ್ಯಕ್ತವಾಗಿದೆ. ಯಾವುದೇ ಸಮಸ್ಯೆಯನ್ನು ಪರಿಹರಿಸುವುದಕ್ಕಿಂತ ದಂಡ ನೀತಿ, ದಮನ ನೀತಿಗೆ ಆದ್ಯತೆ ಕೊಡುತ್ತಿರುವ ಅತ್ಯಂತ ಅಪಾಯಕಾರಿ ನಡೆಯೊಂದು ಈ ಕಳೆದ 100 ದಿನಗಳಲ್ಲಿ ಕಾಣಿಸಿಕೊಂಡಿದೆ. ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುತ್ತಿರುವ ರೀತಿಯೂ ಇದಕ್ಕಿಂತ ಭಿನ್ನವಲ್ಲ. ಇಂಥದ್ದೊಂದು ದಂಡನಾ ಕ್ರಮ ಎಷ್ಟು ಜನಪರ ಮತ್ತು ಪ್ರಾಯೋಗಿಕ ಎಂಬುದನ್ನು ಲೆಕ್ಕಿಸದೆಯೇ ಜಾರಿಗೊಳಿಸಿದ ಕ್ರಮವು ಎಂಥ ಸಮಸ್ಯೆಯನ್ನು ಸೃಷ್ಟಿಸಿತು ಅನ್ನುವುದಕ್ಕೆ ಪ್ರತಿದಿನದ ವರದಿಗಳೇ ಸಾಕ್ಷಿ. ‘ಹಿಂದಿ ದೇಶ ಭಾಷೆ ಆಗಬೇಕು’ ಎಂಬ ಮಾತಿನಲ್ಲೂ ಮತ್ತು ‘ಕನ್ನಡಿಗರಿಗೆ ಕನ್ನಡದಲ್ಲಿ ಬ್ಯಾಂಕ್ ನೇಮಕಾತಿ ಪರೀಕ್ಷೆ ಬರೆಯಲು ಅವಕಾಶವಿಲ್ಲ’ ಎಂಬ ನೀತಿಯಲ್ಲೂ ಧ್ವನಿಸುತ್ತಿರುವುದು ಈ ದಬ್ಬಾಳಿಕೆ ನೀತಿಯೇ.
ಸದ್ಯ ದಕ್ಷಿಣ ಭಾರತದಲ್ಲಿ ದೊಡ್ಡಮಟ್ಟದಲ್ಲಿ ಕಾಣಿಸಿಕೊಂಡಿರುವ ಹಿಂದಿ ಹೇರಿಕೆ ವಿರೋಧಿ ಧ್ವನಿಯು ಈ ದಬ್ಬಾಳಿಕೆಗೆ ಕಡಿವಾಣ ಹಾಕಲು ಯಶಸ್ವಿಯಾಗುತ್ತೋ ನೋಡಬೇಕು. ಅಂತೂ ಸ್ಟಾಕ್‍ಹೋಮ್ ಸಿಂಡ್ರೋಮ್‍ನಿಂದ ಮಾಧ್ಯಮ ಮತ್ತು ಜನತೆ ಹೊರಬರುತ್ತಿರುವ ಲಕ್ಷಣಗಳನ್ನು ಈ ಬೆಳವಣಿಗೆಯು ಸೂಚಿಸುತ್ತಿದೆ.

Saturday, 21 September 2019

2016ರಲ್ಲಿ ಸಂಭ್ರಮಿಸಿದವರನ್ನು ಪಶ್ಚಾತ್ತಾಪಕ್ಕೆ ತಳ್ಳಿದ ಅರ್ಥವ್ಯವಸ್ಥೆ


ಚಂದ್ರಯಾನ-2 ಕೊನೆಕ್ಷಣದಲ್ಲಿ ವಿಫಲಗೊಂಡು ನೊಂದುಕೊಂಡ ಇಸ್ರೋ ಅಧ್ಯಕ್ಷ  ಕೆ. ಶಿವನ್ ಅವರನ್ನು ಸಂತೈಸಿ, ಹುರಿದುಂಬಿಸಿದ ರೀತಿಯಲ್ಲೇ  ಈ ದೇಶದ ಅರ್ಥವ್ಯವಸ್ಥೆಯು ಪ್ರಧಾನಿ ನರೇಂದ್ರ ಮೋದಿಯವರಿಂದ ಚೇತೋಹಾರಿ ಕ್ರಮಗಳನ್ನು ನಿರೀಕ್ಷಿಸುತ್ತಿದೆ. ಅರ್ಥವ್ಯವಸ್ಥೆಯ ಕುಸಿತದಿಂದ ಬಿಜೆಪಿಯ ಮೇಲೆ ರಾಜಕೀಯವಾಗಿ ಪರಿಣಾಮ ಬೀಳುತ್ತೋ ಇಲ್ಲವೋ ಆದರೆ, ಬಡವರ ಮೇಲೆ, ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗದ ಮೇಲೆ ಈಗಾಗಲೇ ಪರಿಣಾಮ ಬೀರತೊಡಗಿದೆ. ಡಾಲರ್ ನ ಎದುರು ರೂಪಾಯಿಯ ಮೌಲ್ಯ ಕುಸಿಯತೊಡಗಿದೆ. ಇದೇ ಮೊದಲ ಬಾರಿ 10 ಗ್ರಾಂ ಚಿನ್ನಕ್ಕೆ 40 ಸಾವಿರ ರೂಪಾಯಿಗಿಂತಲೂ ಅಧಿಕ ಬೆಲೆ ಏರಿಕೆಯಾಗಿದೆ. ಮಾಧ್ಯಮಗಳಲ್ಲಿ ಪ್ರತಿದಿನ ಅರ್ಥವ್ಯವಸ್ಥೆಯ ಕುಸಿತ ಮತ್ತು ಅದು ಉದ್ಯಮಗಳ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ಸುದ್ದಿಗಳು ಪ್ರಕಟವಾಗುತ್ತಿವೆ. ಜಿಡಿಪಿಯಂತೂ ಹಿಂದೆಂದೂ ಕಾಣದಷ್ಟು ಪಾತಾಳಕ್ಕೆ ಕುಸಿದಿದೆ.
2018ರವರೆಗೆ ಈ ದೇಶದಲ್ಲಿ ಜಿಡಿಪಿಯನ್ನು ಲೆಕ್ಕಾಚಾರ ಮಾಡುವ ಒಂದು ಪದ್ಧತಿಯಿತ್ತು. ಕೇಂದ್ರ ಸರಕಾರವು 2018ರಲ್ಲಿ ಅದನ್ನು ಬದಲಿಸಿತು. ಈ ಬದಲಾವಣೆಗೊಂಡ ಲೆಕ್ಕಾಚಾರದ ಪ್ರಕಾರ ಸದ್ಯ ಭಾರತದ ಜಿಡಿಪಿ 5%. ಒಂದುವೇಳೆ, ಮನ್‍ಮೋಹನ್ ಸಿಂಗ್ ಕಾಲದ ಅಥವಾ 2018ಕ್ಕಿಂತ ಮೊದಲಿನ ಲೆಕ್ಕಾಚಾರ ಪದ್ಧತಿಯಂತೆ ಲೆಕ್ಕ ಹಾಕುವುದಾದರೆ ಈಗಿನದು 3.5% ಜಿಡಿಪಿ. ಇದು ಆತಂಕಕಾರಿ ಕುಸಿತ ಎಂದು ಅರ್ಥತಜ್ಞರೇ ಹೇಳುತ್ತಿದ್ದಾರೆ. ಸದ್ಯದ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಸತತ ಮೂರು ತ್ರೈಮಾಸಿಕಗಳಲ್ಲಿ ಜಿಡಿಪಿ ತಗ್ಗಿದರೆ ಅದನ್ನು ಆರ್ಥಿಕ ಹಿಂಜರಿತವಾಗಿ ಲೆಕ್ಕ ಹಾಕಲಾಗುತ್ತದೆ. ಆದರೆ, ಇದೀಗ ಸತತ 5 ತ್ರೈಮಾಸಿಕದಲ್ಲೂ ಜಿಡಿಪಿ ಕುಸಿತವನ್ನೇ ತೋರಿಸುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಿಂದ ತೊಡಗಿ ಅಟೋಮೊಬೈಲ್, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಣ್ಣ ಉದ್ದಿಮೆಗಳು ಭಾರೀ ಕುಸಿತಕ್ಕೆ ಒಳಗಾಗಿವೆ. ಕಾರ್ಪೋರೇಟ್ ಕಂಪೆನಿಗಳು ಹೂಡಿಕೆ ಮಾಡುವುದಕ್ಕೆ ಹಿಂಜರಿಯುತ್ತಿರುವುದಷ್ಟೇ ಅಲ್ಲ, ಭಾರೀ ಪ್ರಮಾಣದಲ್ಲಿ ಷೇರುಗಳನ್ನು ಹಿಂತೆಗೆದುಕೊಳ್ಳುತ್ತಲೂ ಇವೆ. ಕೇಂದ್ರ ಸರಕಾರವು ಆರ್ ಬಿಐನಲ್ಲಿದ್ದ ಮೀಸಲು ನಿಧಿಯಿಂದ 1.76 ಲಕ್ಷ ಕೋಟಿ ರೂಪಾಯಿಯನ್ನು ಪಡೆದುಕೊಂಡ ಬಳಿಕವೂ ಆರ್ಥಿಕ ಕ್ಷೇತ್ರದ ಕುಸಿತದಲ್ಲಿ ಏರಿಕೆ ಕಂಡುಬರುತ್ತಿಲ್ಲ. ಇನ್ನೊಂದೆಡೆ,
ವಾಹನ ಉತ್ಪಾದನೆ ಮತ್ತು ಬಟ್ಟೆ ತಯಾರಿಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಟಾಟಾ, ಅಶೋಕ್ ಲೈಲ್ಯಾಂಡ್, ಮಾರುತಿ ಸುಝುಕಿ, ಹೋಂಡಾ ಸಹಿತ ದೇಶೀಯ ಮತ್ತು ಬಹುರಾಷ್ಟ್ರೀಯ ವಾಹನ ತಯಾರಿಕಾ ಕಂಪೆನಿಗಳು ಭಾರೀ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಕೈ ಬಿಡುತ್ತಿವೆ. ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿವೆ. ಉತ್ಪಾದನಾ ರಹಿತ ದಿನಗಳು ಎಂಬ ಹೊಸ ಪರಂಪರೆಯನ್ನೇ ಈ ಕಂಪೆನಿಗಳು ಆರಂಭ ಮಾಡಿವೆ. ಬಟ್ಟೆ ತಯಾರಿಕಾ ಕ್ಷೇತ್ರದಲ್ಲೂ ಕಂಪನ ಸೃಷ್ಟಿಯಾಗಿವೆ. ಬಟ್ಟೆಗಳು ಮಾರಾಟವಾಗುತ್ತಿಲ್ಲ. ಉದ್ಯೋಗ ಸೃಷ್ಟಿಯಲ್ಲಿ ಎರಡನೇ ಅತಿ ದೊಡ್ಡ ಕ್ಷೇತ್ರವಾಗಿರುವ ಈ ರಂಗವನ್ನು ಬಾಧಿಸಿರುವ ಈ ಮುಗ್ಗಟ್ಟಿನಿಂದಾಗಿ ಲಕ್ಷಾಂತರ ಮಂದಿ ನೇರವಾಗಿ ಉದ್ಯೋಗ ಕಳಕೊಳ್ಳುವಂತಾಗಿದೆ. ಇನ್ನು, ಪರೋಕ್ಷ ಸಂತ್ರಸ್ತರ ಸಂಖ್ಯೆಯಂತೂ ಅಗಣಿತ. ಬಟ್ಟೆ ತಯಾರಿಯಿಂದ ತೊಡಗಿ, ಅದರ ದಾಸ್ತಾನು, ಸಾಗಾಣಿಕೆ ಮತ್ತು ವಿವಿಧ ಅಂಗಡಿಗಳಲ್ಲಿ ಅದರ ಮಾರಾಟ ಮತ್ತು ಈ ಎಲ್ಲವುಗಳಿಗೂ ಹಣಕಾಸಿನ ನೆರವು ನೀಡುವ ಬ್ಯಾಂಕುಗಳು ಹಾಗೂ ಆ ಕಾರಣದಿಂದಾಗಿ ಹಣದ ಚಲಾವಣೆ ಇತ್ಯಾದಿ ಒಂದು ದೊಡ್ಡ ಸರಪಣಿಯನ್ನೇ ಈ ಕುಸಿತ ತೊಂದರೆಗೀಡು ಮಾಡಿದೆ.
ಜನರು ಉಡುಪು ಖರೀದಿಗೆ ಆಸಕ್ತಿ ತೋರುವುದಿಲ್ಲ ಅಂದರೆ ಅದು ಉಡುಪು ಮಾರಾಟ ಮಾಡುವ ಅಂಗಡಿಯ ಸಮಸ್ಯೆ ಮಾತ್ರ ಆಗುವುದಲ್ಲ. ಅದು ಆ ಅಂಗಡಿಯಿಂದ ಆರಂಭವಾಗಿ ಬಟ್ಟೆ ತಯಾರಿಸುವ ಕಂಪೆನಿಯವರೆಗೆ ಎಲ್ಲವನ್ನೂ ಎಲ್ಲರನ್ನೂ ಬಾಧಿಸುತ್ತದೆ. ಬಟ್ಟೆ ಮಾರಾಟವಾಗದಿದ್ದರೆ ಬ್ಯಾಂಕ್‍ನಿಂದ ಸಾಲ ಎತ್ತುವ ಪ್ರಶ್ನೆ ಬರುವುದಿಲ್ಲ. ಈ ಮೊದಲು ಎತ್ತಿದ ಸಾಲದ ತೀರುವಳಿಯೂ ಆಗುವುದಿಲ್ಲ. ಇದರಿಂದಾಗಿ ಬ್ಯಾಂಕಿಂಗ್ ಕ್ಷೇತ್ರವು ಹಣದ ಚಲಾವಣೆಯ ಅಭಾವದಿಂದಾಗಿ ಕುಸಿಯತೊಡಗುತ್ತದೆ. ಅಲ್ಲಿನ ಉಗ್ಯೋಗಿಗಳನ್ನು ಕೈಬಿಡುವ ಪರಿಸ್ಥಿತಿ ಎದುರಾಗುತ್ತದೆ. ಬ್ಯಾಂಕುಗಳ ನಡುವಿನ ವಿಲೀನದಿಂದ ಬಂಡವಾಳದಲ್ಲಿ ವೃದ್ಧಿಯಾಗಬಹುದು. ಎರಡು ಬ್ಯಾಂಕ್‍ಗಳ ಹಣ ಒಂದೇ ಕಡೆ ಜಮೆಯಾಗುವುದಕ್ಕೆ ಈ ವಿಲೀನ ಕಾರಣವಾಗಬಹುದು. ಆದರೆ, ಅದರಿಂದ ಬ್ಯಾಂಕಿಂಗ್ ಕ್ಷೇತ್ರ ಚೇತರಿಸಿಕೊಳ್ಳಲಿದೆ ಎಂದು ಹೇಳಲಾಗದು. ಬ್ಯಾಂಕಿಂಗ್ ಕ್ಷೇತ್ರದ ಚೇತರಿಕೆ ಇತರ ಕ್ಷೇತ್ರಗಳ ಚೇತರಿಕೆಯನ್ನು ಹೊಂದಿಕೊಂಡಿದೆ.
ಭಾರೀ ಪ್ರಮಾಣದಲ್ಲಿ ವಾಹನಗಳು ಮಾರಾಟವಾಗುವುದೆಂದರೆ ಅದು ವಾಹನ ತಯಾರಿಕಾ ಕಂಪೆನಿಗಳಿಗಷ್ಟೇ ಖುಷಿಯ ಸಂಗತಿ ಅಲ್ಲ. ಬ್ಯಾಂಕಿಗೂ ಸಿಹಿಸುದ್ದಿ. ಬ್ಯಾಂಕಿನಿಂದ ಸಾಲವನ್ನು ಎತ್ತಿಕೊಂಡೇ ವಾಹನವನ್ನು ಖರೀದಿಸಲಾಗುತ್ತದೆ. ಹೀಗೆ ಮಾರಾಟವಾಗುವಾಗ ವಾಹನಗಳ ಬಿಡಿಭಾಗಗಳನ್ನು ತಯಾರಿಸುವ ಕಂಪೆನಿಗಳಿಗೂ ಅದನ್ನು ಮಾರುವ ಅಂಗಡಿಗಳಿಗೂ ಪ್ರಯೋಜನವಾಗುತ್ತದೆ. ಅವೂ ಬ್ಯಾಂಕ್‍ನಿಂದ ಸಾಲವನ್ನು ಎತ್ತಿಕೊಂಡಿರುತ್ತದೆ. ಅಸಂಖ್ಯಾತ ಗ್ಯಾರೇಜುಗಳಿಗೆ ಕೆಲಸ ಸಿಗುತ್ತದೆ. ವಿಮಾ ಕಂಪೆನಿಗಳೂ ಚಟುವಟಿಕೆಯಿಂದಿರುತ್ತವೆ. ಇದೊಂದು ರೀತಿಯಲ್ಲಿ ಸರಪಣಿ ಇದ್ದ ಹಾಗೆ. ಒಂದನ್ನು ಇನ್ನೊಂದು, ಅದನ್ನು ಮತ್ತೊಂದು, ಮಗದೊಂದು.. ಹೀಗೆ ಅವಲಂಬಿಸಿಕೊಂಡು ಬದುಕುತ್ತಿರುತ್ತವೆ. ಆದ್ದರಿಂದ, ವಾಹನ ಉತ್ಪಾದನೆಯಲ್ಲಿ ಮತ್ತು ಮಾರಾಟದಲ್ಲಿ ಭಾರೀ ಕುಸಿತ ಆಗಿದೆ ಎಂಬುದು ಪರಿಣಾಮದ ದೃಷ್ಟಿಯಿಂದ ಆಘಾತಕಾರಿಯಾದುದು. ಇದನ್ನು ನಾವು ಕೇವಲ ವಾಹನ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಿ ನೋಡಬೇಕಿಲ್ಲ. ಬಟ್ಟೆ, ಎಲೆಕ್ಟ್ರಾನಿಕ್ ಸಾಧನಗಳು, ಕೃಷಿ ಕ್ಷೇತ್ರ ಸಹಿತ ಎಲ್ಲವುಗಳ ಪರಿಸ್ಥಿತಿಯೂ ಇದುವೇ. ಜನರಲ್ಲಿ ಖರೀದಿ ಸಾಮರ್ಥ್ಯ ಕುಸಿದರೆ ಅದು ಉದ್ಯಮ ಕ್ಷೇತ್ರದ ಕೋಟ್ಯಂತರ ಮಂದಿಯನ್ನು ನೇರವಾಗಿಯೋ ಪರೋಕ್ಷವಾಗಿಯೋ ಕಾಡುತ್ತದೆ. ಅಂದಹಾಗೆ,
2008ರಲ್ಲೂ ಈಗಿನಂಥದ್ದೇ ಆರ್ಥಿಕ ಹಿಂಜರಿತ ಎದುರಾಗಿತ್ತು ಎಂದು ಹೇಳಲಾಗುತ್ತಿದೆ. ಅಮೇರಿಕದ ಲೆಹ್ಮನ್ ಬ್ರದರ್ಸ್ ಬ್ಯಾಂಕು ದಿವಾಳಿತನವನ್ನು ಘೋಷಿಸಿದ ಬಳಿಕ ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಂಡ ಆರ್ಥಿಕ ಹಿಂಜರಿತದ ಬಿಸಿ ಆಗ ಭಾರತವನ್ನೂ ತಟ್ಟಿತ್ತು. ಆದರೆ ಮನ್‍ಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರವು ಆ ಕುಸಿತದ ಅಡ್ಡ ಪರಿಣಾಮವನ್ನು ಕರಾರುವಕ್ಕಾಗಿ ಊಹಿಸಿ ತಕ್ಷಣ ಕ್ರಮಗಳನ್ನು ಕೈಗೊಂಡಿತ್ತು. ಆರ್ಥಿಕ ನೆರವಿನ ಪ್ಯಾಕೇಜ್ ಮತ್ತಿತರ ಕ್ರಮಗಳ ಮೂಲಕ ತಕ್ಷಣ ಸ್ಪಂದಿಸಿತ್ತು. ಜೊತೆಗೇ ಆಗಿನ ಸರಕಾರದಲ್ಲಿ ಪ್ರಣವ್ ಮುಖರ್ಜಿ, ಚಿದಂಬರಮ್ ಮತ್ತು ಪ್ರಧಾನಿ ಮನ್‍ಮೋಹನ್ ಸಿಂಗ್‍ರಂಥ ನಿಪುಣ ಅರ್ಥತಜ್ಞರಿದ್ದರು. ಆದರೆ, ಪ್ರಧಾನಿ ಮೋದಿ ನೇತೃತ್ವದ ಸರಕಾರದಲ್ಲಿ ಅರ್ಥ ತಜ್ಞರ ದೊಡ್ಡ ಕೊರತೆಯಿದೆ. ನಿರ್ಮಲ ಸೀತಾರಾಮನ್ ಅನನುಭವಿ. ಸತತ 5 ತ್ರೈಮಾಸಿಕದಲ್ಲಿ ಜಿಡಿಪಿಯ ಕುಸಿತ ಉಂಟಾದ ಬಳಿಕವೂ ಕ್ಷೀಪ್ರ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಈ ಸರಕಾರ ವಿಫಲವಾಗುತ್ತಿದೆ. ಈ ವೈಫಲ್ಯಕ್ಕೆ ಇಂಬು ನೀಡುವಂತೆ ಸರಕಾರದ ಮೌನವೂ ಸೇರಿಕೊಂಡಿದೆ. ಆರ್ಥಿಕ ಹಿಂಜರಿತಕ್ಕೆ ಪ್ರತಿ ಕ್ಷೇತ್ರವೂ ಸಾಕ್ಷ್ಯ ವಹಿಸುತ್ತಿದ್ದರೂ ಪ್ರಧಾನಿಯಾಗಲಿ, ಹಣಕಾಸು ಸಚಿವರಾಗಲಿ ಅದನ್ನು ಒಪ್ಪಿಕೊಂಡು ಬಹಿರಂಗ ಹೇಳಿಕೆಗಳನ್ನು ನೀಡುತ್ತಿಲ್ಲ. ಹಿಂಜರಿತವನ್ನು ಒಪ್ಪಿಕೊಳ್ಳದೇ ಇರುವುದರಿಂದ ಪರಿಹಾರ ಕ್ರಮಗಳನ್ನು ಘೋಷಿಸುತ್ತಲೂ ಇಲ್ಲ. ಸರಕಾರದ ಈ ಹಿಂಜರಿಕೆಯು ಉದ್ಯಮ ಹೂಡಿಕೆ ಕ್ಷೇತ್ರವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮೋಡ ಕವಿಯುವಂತೆ ಮಾಡಿದೆ. ಅವುಗಳ ಆತ್ಮವಿಶ್ವಾಸ ಕುಸಿದಿದೆ.
ಡಿಮಾನಿಟೈಸೇಷನನ್ನು ಆರ್ಥಿಕ ಕ್ರಾಂತಿ ಎಂದು ಕರೆದು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗರು 2016ರಲ್ಲಿ ಸಂಭ್ರಮಿಸುತ್ತಿದ್ದಾಗ ಅದರ ದೂರಗಾಮಿ ಪರಿಣಾಮ ಏನು ಅನ್ನುವುದನ್ನು ಮನ್‍ಮೋಹನ್ ಸಿಂಗ್ ಅವರು ಅಂದು ವಿವರಿಸಿದ್ದರು. ಅವರು ಅಂದು ಏನು ಊಹಿಸಿದ್ದರೋ ಅದು ಈಗ ನಿಜವಾಗುತ್ತಿದೆ. ಅದರ ಮೇಲೆ ಜಿಎಸ್‍ಟಿಯೂ ಸೇರಿಕೊಂಡು ಈಗ ದೇಶದ ಆರ್ಥಿಕ ಸ್ಥಿತಿಯೇ ಅಲ್ಲೋಲ ಕಲ್ಲೋಲಗೊಂಡಿದೆ. ಇದು ಕೇಂದ್ರ ಸರಕಾರದ ಸ್ವಯಂಕೃತ ಅಪರಾಧ. ದೂರದೃಷ್ಟಿಯಿಲ್ಲದೇ ಕೈಗೊಳ್ಳುವ ‘ಜನಪ್ರಿಯ’ ತೀರ್ಮಾನಗಳು ಯಾಕೆ ಅಪಾಯಕಾರಿ ಅನ್ನುವುದನ್ನು ಇದು ಸೂಚಿಸುತ್ತದೆ.

Friday, 13 September 2019

ನಮ್ಮ ವಿವೇಕವನ್ನು ತಟ್ಟಿ ಎಚ್ಚರಿಸಬೇಕಾದ ಕುವೈತ್ ಯುವಕರ ವೀಡಿಯೋ




ತಿಂಗಳ ಹಿಂದೆ ವೀಡಿಯೋವೊಂದು ವೈರಲ್ ಆಗಿತ್ತು. ವೀಡಿಯೋದಲ್ಲಿದ್ದುದು ಒಂದಿಷ್ಟು ಯುವಕರು. ಹಿಂದೂ, ಮುಸ್ಲಿಮ್ ಮತ್ತು ಕ್ರೈಸ್ತ ಸಮುದಾಯದವರಾದ ಆ ಯುವಕರ ಬೇಡಿಕೆ ಒಂದೇ ಆಗಿತ್ತು- ‘ಹೇಗಾದರೂ ಮಾಡಿ ತಮ್ಮನ್ನು ತಾಯ್ನಾಡಿಗೆ ಕರೆಸಿಕೊಳ್ಳಿ’ ಎಂಬುದು. ಕರ್ನಾಟಕದ ವಿವಿಧ ಪ್ರದೇಶಗಳಿಂದ ಉದ್ಯೋಗವನ್ನು ಅರಸಿಕೊಂಡು ಕುವೈತ್‍ಗೆ ಆಗಮಿಸಿದ ಯುವಕರ ಗುಂಪು ಇದು. 2019 ಜನವರಿಯ ಆರಂಭದಲ್ಲಿ ಮ್ಯಾನ್‍ಪವರ್ ಕನ್ಸಲ್ಟನ್ಸಿಯವರು ಕಳುಹಿಸಿಕೊಟ್ಟಿದ್ದ ಈ ಯುವಕರೆಲ್ಲ ಕಳೆದ ಐದಾರು ತಿಂಗಳಿಂದ ಅತ್ಯಂತ ಅತಂತ್ರವಾಗಿ ಬದುಕಬೇಕಾಯಿತು. ಸಂದರ್ಶನದ ವೇಳೆ ಉದ್ಯೋಗ ಕೊಡುವುದಾಗಿ ಹೇಳಿದ ಕಂಪೆನಿಯ ಹೆಸರೇ ಬೇರೆ ಮತ್ತು ಕುವೈತ್‍ನಲ್ಲಿ ಕೆಲಸಕ್ಕೆ ಸೇರಿಸಿಕೊಂಡ ಕಂಪೆನಿಯ ಹೆಸರೇ ಬೇರೆ ಎಂಬುದರಿಂದ ತೊಡಗಿ ದೂರುಗಳ ಮೂಟೆಯೇ ಈ 59 ಮಂದಿಯಲ್ಲಿದೆ. ಸಂಬಳವೂ ಸಿಗದೇ ಕೊನೆಗೆ ಊಟ-ಉಪಾಹಾರವೂ ಲಭ್ಯವಿಲ್ಲದೇ ಚಿಂತಾಜನಕ ಸ್ಥಿತಿಗೆ ತಲುಪುವುದರ ಜೊತೆಜೊತೆಗೇ ಸಂವಹನದ ಸಮಸ್ಯೆಯೂ ಇವರನ್ನು ಕಾಡಿತು. ಅಲ್ಲಿನ ಕಾರ್ಮಿಕ ನ್ಯಾಯಾಲಯದ ಕಾರ್ಯವೈಖರಿಯ ಬಗ್ಗೆ ತಿಳುವಳಿಕೆ ಇಲ್ಲದ ಹಾಗೂ ಅರಬಿ ಭಾಷೆಯಲ್ಲಿ ಸಂವಹನ ನಡೆಸಲು ಗೊತ್ತಿಲ್ಲದ ಈ ಮಂದಿ ಒಂದು ರೀತಿಯಲ್ಲಿ ಬೇಡರ ಬಲೆಯೊಳಗೆ ಸಿಲುಕಿಕೊಂಡಂತಾಗಿತ್ತು. ಈ ಸ್ಥಿತಿಯಲ್ಲಿ ಕೊನೆಯ ಅಸ್ತ್ರವೆಂಬಂತೆ ಅವರೆಲ್ಲ ಸೇರಿ ವೀಡಿಯೋವೊಂದನ್ನು ಮಾಡಿ ಸಾರ್ವಜನಿಕವಾಗಿ ಹಂಚಿಕೊಂಡಿದ್ದರು. ಮಂಗಳೂರು ಶಾಸಕ ವೇದವ್ಯಾಸ್ ಕಾಮತ್‍ರಲ್ಲಿ ಅವರು ಆ ವೀಡಿಯೋದ ಮೂಲಕ ನೆರವು ಕೋರಿದರು. ಇದೀಗ ಅವರನ್ನು ಬಿಡಿಸಿಕೊಳ್ಳುವ ಪ್ರಯತ್ನಗಳಿಗೆ ಯಶಸ್ಸು ಸಿಕ್ಕಿದೆ. ಕುವೈತ್‍ನಲ್ಲಿ ಸಿಲುಕಿಕೊಂಡ ಈ ಯುವಕರು ಹಂತಹಂತವಾಗಿ ಈ ದೇಶಕ್ಕೆ ಮರಳುತ್ತಿದ್ದಾರೆ. ನಿಜವಾಗಿ,
ಘಟನೆಯ ನೇರ ಮುಖ ಇದು. ಆದರೆ ಇದರ ಪರೋಕ್ಷ ಮುಖಗಳು ಒಂದಕ್ಕಿಂತ ಹೆಚ್ಚಿವೆ. ಒಂದನೆಯದಾಗಿ, ಬಡತನಕ್ಕೆ ಹಿಂದೂ-ಮುಸ್ಲಿಮ್ ಎಂಬ ಭೇದ ಇಲ್ಲ. ಸಂಕಷ್ಟಕ್ಕೂ ಹಿಂದೂ-ಮುಸ್ಲಿಮ್ ಎಂಬ ವ್ಯತ್ಯಾಸ ಇಲ್ಲ. ಕುವೈತ್ ಎಂಬುದು ಮುಸ್ಲಿಮ್ ರಾಷ್ಟ್ರವಾಗಿರುವುದರಿಂದ ಈ 59 ಮಂದಿಯ ಪೈಕಿ ಮುಸ್ಲಿಮರಿಗೆ ಆದರ ಮತ್ತು ಮುಸ್ಲಿಮೇತರ ಉದ್ಯೋಗಾಕಾಂಕ್ಷಿಗಳಿಗೆ ಅನಾದಾರವೂ ನಡೆದಿಲ್ಲ. ಇವರೆಲ್ಲರಲ್ಲೂ ಇದ್ದಿದ್ದ ಭಯ ಒಂದೇ ಆಗಿತ್ತು. ಬಯಕೆಯೂ ಒಂದೇ ಆಗಿತ್ತು. ಇದ್ದಿದ್ದೂ ಜೊತೆಗೆಯೇ. ಅಬೂಬಕರ್ ಸಿದ್ದೀಕ್, ವರುಣ್, ಪಾಲ್ಟ್ರಿಕ್ ಫರ್ನಾಂಡಿಸ್ ಎಂಬಿತ್ಯಾದಿಯಾಗಿ ಇವರ ಹೆಸರಲ್ಲಿ ಭಿನ್ನತೆಯಿದ್ದರೂ ಈ ಭಿನ್ನತೆಯ ಆಚೆಗೆ ಇವರಲ್ಲಿ ಮತ್ತು ಇವರ ಕುಟುಂಬಿಕರ ಆತಂಕದಲ್ಲಿ ಯಾವ ವ್ಯತ್ಯಾಸವೂ ಇರಲಿಲ್ಲ. ಕುವೈತ್‍ನಲ್ಲಿ ಇವರೆಲ್ಲ- ಭಾರತೀಯರು ಮತ್ತು ಮನುಷ್ಯರೆಂಬ ನೆಲೆಯಲ್ಲಿ ಸಮಾನ ಪರಿಗಣನೆಗೆ ಒಳಪಟ್ಟರು. ಎರಡನೆಯದಾಗಿ,
ವಂಚಿಸುವವರಲ್ಲೂ ಮತ್ತು ವಂಚನೆಗೆ ಒಳಗಾಗುವವರಲ್ಲೂ ಹಿಂದೂ-ಮುಸ್ಲಿಮ್ ಎಂಬ ಬೇಧವಿಲ್ಲ. ಈ 59 ಮಂದಿಯನ್ನು ಕುವೈತ್‍ಗೆ ಕಳುಹಿಸಿದ ಮ್ಯಾನ್‍ಪವರ್ ಕಂಪೆನಿಯಾಗಲಿ, ಸಂದರ್ಶನದ ಸಮಯದಲ್ಲಿ ಉದ್ಯೋಗ ಕೊಡುತ್ತೇನೆಂದು ನಂಬಿಸಿದವರಾಗಲಿ ಮತ್ತು ಕುವೈತ್‍ನಲ್ಲಿ ವಂಚಿಸಿದವರಾಗಲಿ ಎಲ್ಲರೂ ಒಂದೇ ಧರ್ಮಕ್ಕೋ ಒಂದೇ ಜಾತಿಗೋ ಒಂದೇ ಭಾಷೆಗೋ ಸೇರಿದವರಲ್ಲ. ಧರ್ಮ, ಭಾಷೆ, ದೇಶವೆಂಬ ಐಡೆಂಟಿಟಿಯ ಆಚೆಗೆ ಅವರೆಲ್ಲ ಒಂದೇ ಬಿಂದುವಿನಲ್ಲಿ ಸೇರಿಕೊಂಡವರು. ಈ 59 ಮಂದಿಗೆ ನಿರ್ದಿಷ್ಟ ಕಂಪೆನಿಯಲ್ಲಿ ನಿರ್ದಿಷ್ಟ ಉದ್ಯೋಗವನ್ನೇ ಕೊಡಿಸುತ್ತೇವೆ ಎಂದು ನಂಬಿಸಿ ಕೈಕೊಟ್ಟವರಲ್ಲಿ ಹಿಂದೂಗಳೂ ಇದ್ದಾರೆ. ಮುಸ್ಲಿಮರೂ ಇz್ದÁರೆ. ಅವರು ಹಾಗೆ ವಂಚಿಸುವಾಗ ತಂತಮ್ಮ ಧರ್ಮೀಯರ ಮೇಲೆ ವಿಶೇಷ ಮೃದು ಭಾವನೆಯನ್ನೇನೂ ತೋರಿಲ್ಲ. ವಂಚನೆಗೊಳಗಾಗುವವರು ತನ್ನ ಧರ್ಮದವರೋ ಅನ್ಯ ಧರ್ಮದವರೋ ಅನ್ನುವುದು ವಂಚನೆಯ ಸಮಯದಲ್ಲಿ ಅವರಿಗೆ ಮುಖ್ಯವೂ ಆಗಿಲ್ಲ. ವಂಚಿಸುವುದೇ ಅವರ ಉದ್ದೇಶವಾಗಿತ್ತು. ಅದುವೇ ಆ ಸಂದರ್ಭದಲ್ಲಿ ಅವರ ಧರ್ಮ. ಅವರು ಹಿಂದೂ-ಮುಸ್ಲಿಮ್ ಏನೇ ಆಗಿದ್ದರೂ ವಂಚನಾತ್ಮಕ ಮನಸ್ಥಿತಿಯ ಮಟ್ಟಿಗೆ ಅವರೆಲ್ಲರೂ ಸಮಾನರು ಮತ್ತು ಒಂದೇ ಧರ್ಮದವರು. ಮೂರನೆಯದಾಗಿ,
ಈ 59 ಮಂದಿಗೆ ನೆರವಾದವರಲ್ಲೂ ಈ ಧಾರ್ಮಿಕ ವೈವಿಧ್ಯತೆಯಿದೆ. ಮೋಹನ್‍ದಾಸ್ ಕಾಮತ್‍ರಿಂದ ಹಿಡಿದು ಅಹ್ಮದ್ ಬಾವಾರ ವರೆಗೆ ಮಾಧವ್ ನಾಯಕ್‍ರಿಂದ ಹಿಡಿದು ತುಳುಕೂಟದ ವರೆಗೆ ಈ ಪಟ್ಟಿಯಲ್ಲಿ ಬಹುತ್ವದ ಭಾರತವೇ ಕಾಣಸಿಗುತ್ತದೆ. ಇವರಾರೂ ಈ 59 ಮಂದಿಯಲ್ಲಿ ಧರ್ಮವನ್ನು ಹುಡುಕಿಲ್ಲ. ತಂತಮ್ಮ ಧರ್ಮದವರನ್ನು ಪ್ರತ್ಯೇಕಿಸಿ ಅವರ ಸಂಕಷ್ಟಗಳಿಗೆ ಮಾತ್ರ ಮಿಡಿಯುವ ಸಣ್ಣ ಮನಸ್ಸನ್ನೂ ತೋರಿಲ್ಲ. ನೆರವಾಗಲು ಧಾವಿಸಿ ಬಂದ ಎಲ್ಲರಿಗೂ ಈ 59 ಮಂದಿ ಮನುಷ್ಯರಾಗಿ ಕಂಡಿರುವರೇ ಹೊರತು ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬಿತ್ಯಾದಿಯಾಗಿ ಅಲ್ಲ. ಅಂದಹಾಗೆ, ವಂಚಕರು ಹೇಗೆ ಧರ್ಮಾತೀತರೋ ವಂಚನೆಗೊಳಗಾದವರಿಗೆ ಮಿಡಿಯುವ ಮನಸುಗಳೂ ಧರ್ಮಾತೀತವೇ. ಒಳ್ಳೆಯ ಮನಸ್ಸು ಅನ್ನುವುದು ನಿರ್ದಿಷ್ಟ ಧರ್ಮೀಯರಲ್ಲಿ ಮಾತ್ರ ಇರುವ ಒಂದಲ್ಲ. ಅದು ಧರ್ಮಾತೀತ. ಹಿಂದೂ-ಮುಸ್ಲಿಮ್-ಕ್ರೈಸ್ತ ಸಹಿತ ಎಲ್ಲ ಧರ್ಮದಲ್ಲೂ ಒಳ್ಳೆಯವರಿದ್ದಾರೆ. ಕೆಟ್ಟವರೂ ಇದ್ದಾರೆ. ಆಹಾರ, ಉಡುಪು, ಆಕಾರ, ಗಡ್ಡ, ನಾಮ, ಟೋಪಿ, ನಂಬಿಕೆ, ಆಚಾರ, ಸಂಸ್ಕೃತಿ, ಬಿಳಿ, ಹಸಿರು, ಕೇಸರಿ ಇತ್ಯಾದಿ ಇತ್ಯಾದಿ ವೈವಿಧ್ಯತೆಗಳು ಅವನ್ನು ನಿರ್ಧರಿಸುವುದಿಲ್ಲ. ಅಷ್ಟಕ್ಕೂ,
ಮಾಂಸಾಹಾರಿ ಕರುಣಾಮಯಿಯೂ ಆಗಬಲ್ಲ. ಕ್ರೂರನೂ ಆಗಬಲ್ಲ. ಸಸ್ಯಾಹಾರಿಗೂ ಇದು ಅನ್ವಯ. ಗಡ್ಡ ಬಿಡುವುದು, ನಾಮ ಹಾಕುವುದು, ಟೋಪಿ ಧರಿಸುವುದು, ಮಸೀದಿ-ಮಂದಿರಗಳಿಗೆ ಹೋಗುವುದು, ನಿರ್ದಿಷ್ಟ ಉಡುಪು ಧರಿಸುವುದು ಮುಂತಾದುವುಗಳೆಲ್ಲ ಧರ್ಮದ ಗುರುತುಗಳೇ ಹೊರತು ಒಳ್ಳೆಯವರು ಮತ್ತು ಕೆಟ್ಟವರು ಅನ್ನುವುದರ ಗುರುತುಗಳಲ್ಲ. ಕೆಟ್ಟತನಕ್ಕೆ ಸಾಮಾಜಿಕ, ಆರ್ಥಿಕ, ರಾಜಕೀಯ, ಕೌಟುಂಬಿಕ ಮತ್ತು ಪರಿಸರಾತ್ಮಕ ಕಾರಣಗಳಿವೆ. ಒಳ್ಳೆತನದಲ್ಲೂ ಒಂದಕ್ಕಿಂತ ಹೆಚ್ಚು ಕಾರಣಗಳು ಮಿಳಿತವಾಗಿವೆ. ನಾಲ್ಕನೆಯದಾಗಿ,
ಔದ್ಯೋಗಿಕ ಸಮಸ್ಯೆಗಳೂ ಹಿಂದೂ-ಮುಸ್ಲಿಮ್ ಸಹಿತ ಎಲ್ಲರ ಪಾಲಿಗೂ ಸಮಾನವಾಗಿವೆ. ಉದ್ಯೋಗ ಕ್ಷೇತ್ರದಲ್ಲಿ ಕಳೆದ 45 ವರ್ಷಗಳಲ್ಲೇ ಈ ದೇಶ ಇವತ್ತು ಭಾರೀ ವೈಫಲ್ಯವನ್ನು ಕಂಡಿದೆ ಎಂಬ ಸಂಗತಿಗೆ ಆತಂಕ ಪಡಬೇಕಾದುದು ಯಾವುದಾದರೂ ನಿರ್ದಿಷ್ಟ ಧರ್ಮದ ಅಥವಾ ರಾಜಕೀಯ ಪಕ್ಷದ ಜನರಲ್ಲ. ಅದು ಈ ದೇಶದ ಸಮಸ್ಯೆ ಮತ್ತು ಈ ಸಮಸ್ಯೆ ಧರ್ಮಾತೀತವಾಗಿ ಎಲ್ಲರನ್ನೂ ಕಾಡುವಂಥದ್ದು. ಉದ್ಯೋಗಕ್ಕಾಗಿ ಕುವೈತ್‍ಗೆ ತೆರಳಿದ 59 ಮಂದಿಯ ಹೆಸರುಗಳೇ ಇದನ್ನು ಸ್ಪಷ್ಟಪಡಿಸುತ್ತದೆ. ವಿಷಾದ ಏನೆಂದರೆ,
ಈ 59 ಮಂದಿಯ ಸಂಕಟವನ್ನು ವಿವರಿಸುವ ವೀಡಿಯೋ ತಿಂಗಳ ಹಿಂದೆ ವಾಟ್ಸಾಪ್-ಫೇಸ್‍ಬುಕ್‍ಗಳಲ್ಲಿ ವೈರಲ್ ಆಗುವ ಮೊದಲೂ ಮತ್ತು ಆ ಬಳಿಕವೂ ಅನೇಕಾರು ವೀಡಿಯೋಗಳು ವೈರಲ್ ಆಗಿವೆ. ಆದರೆ ಅವುಗಳಲ್ಲಿ ಹೆಚ್ಚಿನೆಲ್ಲ ವೀಡಿಯೋಗಳು ಥಳಿತಕ್ಕೆ ಮತ್ತು ಲೈಂಗಿಕ ಹಿಂಸೆಗೆ ಸಂಬಂಧಿಸಿದ್ದು. ಅದರಲ್ಲಿ ಇತ್ತೀಚಿನದ್ದು ತಬ್ರೇಝï ಅನ್ನುವ ಜಾರ್ಖಂಡಿನ ಯುವಕನಿಗೆ ಸಂಬಂಧಿಸಿದ್ದು. ಇಲ್ಲಿ ಥಳಿಸುವವರದ್ದು ಒಂದು ಧರ್ಮವಾದರೆ ಥಳಿತಕ್ಕೆ ಒಳಗಾಗುವವರದ್ದು ಇನ್ನೊಂದು ಧರ್ಮ. ಧರ್ಮ ಬೇರೆ ಅನ್ನುವುದರ ಹೊರತು ಈ ಥಳಿತಕ್ಕೆ ಮತ್ತು ಹಾಗೆ ಥಳಿಸಿ ಥಳಿಸಿ ಹತ್ಯೆಗೈಯುವುದಕ್ಕೆ ಬಲವಾದ ಇನ್ನಾವ ಕಾರಣಗಳೂ ಕಾಣಿಸುತ್ತಿಲ್ಲ. ಒಂದುವೇಳೆ,
ಕುವೈತ್‍ನಲ್ಲಿ ಸಿಲುಕಿಕೊಂಡ 59 ಮಂದಿಯ ನೋವನ್ನು ಅನುಭವಿಸಲು ವೇದವ್ಯಾಸ್ ಕಾಮತ್‍ರಿಗೂ ಅಹ್ಮದ್ ಬಾವಾರಿಗೂ ವಿಜಯ್ ಫೆರ್ನಾಂಡಿಸ್‍ರಿಗೂ ಮತ್ತು ಇಂಥ ಅನೇಕಾರು ಮಂದಿಗೂ ಸಾಧ್ಯವಾದಂತೆಯೇ ಥಳಿತಕ್ಕೊಳಗಾಗುವ ಮಂದಿಯ ನೋವನ್ನೂ ಹೀಗೆ ಧರ್ಮಾತೀತವಾಗಿ ಅನುಭವಿಸಲು ಈ ದೇಶದ ಎಲ್ಲರಿಗೂ ಸಾಧ್ಯವಾಗುತ್ತಿದ್ದರೆ ಹೇಗಿರುತ್ತಿತ್ತೋ? ಈ ಹಿನ್ನೆಲೆಯಲ್ಲಿ,
ಕುವೈತ್ ಯುವಕರ ವೀಡಿಯೋ ನಮ್ಮೊಳಗನ್ನು ತಟ್ಟಲಿ. ನಮ್ಮನ್ನು ವಿವೇಕವಂತರಾಗಿಸಲಿ.

ತಲಾಕ್ ಮಸೂದೆ: ಸುಪ್ರೀಂ ಕೋರ್ಟಿನ ನೋಟೀಸು ಹುಟ್ಟುಹಾಕಿರುವ ಜಿಜ್ಞಾಸೆ; ಪರಿಹಾರವೋ, ಸಮಸ್ಯೆಯೋ?



ತ್ರಿವಳಿ ತಲಾಕ್ ಮಸೂದೆಯನ್ನು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿ ಸುಪ್ರೀಮ್ ಕೋರ್ಟು ಕೇಂದ್ರ ಸರಕಾರಕ್ಕೆ ನೋಟೀಸು ಜಾರಿಗೊಳಿಸಿದೆ. ನಿಜವಾಗಿ, ಇಂಥದ್ದೊಂದು ನೋಟೀಸು ಅಚ್ಚರಿಯದ್ದೇನೂ ಅಲ್ಲ. ಮುಸ್ಲಿಮರ ಕುರಿತಂತೆ ಬಿಜೆಪಿಗಿರುವ ನಕಾರಾತ್ಮಕ ಧೋರಣೆಯನ್ನು ಈ ತ್ರಿವಳಿ ಮಸೂದೆ ಪ್ರತಿಬಿಂಬಿಸುತ್ತದೆ ಅನ್ನುವ ಆಕ್ಷೇಪ ಈ ಹಿಂದೆಯೇ ವ್ಯಕ್ತವಾಗಿತ್ತು. ಮಸೂದೆಯು ಮುಸ್ಲಿಮ್ ಮಹಿಳೆಯರ ಸಬಲೀಕರಣಕ್ಕಿಂತ ಅವರನ್ನು ಅತಂತ್ರ ಮತ್ತು ಪರತಂತ್ರಗೊಳಿಸುವ ಉದ್ದೇಶವನ್ನಷ್ಟೇ ಹೊಂದಿದಂತಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಇದೀಗ ಜಮೀಯತೆ ಉಲಮಾಯೆ ಹಿಂದ್ ಮತ್ತು ಸಮಸ್ತ ಕೇರಳ ಜಮೀಯತುಲ್ ಉಲಮಾ ಮತ್ತಿತರರು ಸಲ್ಲಿಸಿರುವ ಆಕ್ಷೇಪಾರ್ಹ ಅರ್ಜಿಗೆ ಸ್ಪಂದಿಸಿ ಸುಪ್ರೀಮ್ ಕೋರ್ಟು ಕೇಂದ್ರಕ್ಕೆ ಕಳುಹಿಸಿರುವ ನೋಟೀಸು- ತ್ರಿವಳಿ ತಲಾಕ್ ಮಸೂದೆಯ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಅಷ್ಟಕ್ಕೂ,
ಗಲಭೆ, ಅಪಹರಣ, ನಿರ್ಲಕ್ಷ್ಯದಿಂದಾದ ಸಾವು, ದ್ವಿಪತ್ನಿತ್ವ-ಪತಿತ್ವ, ಲಂಚ, ಆಹಾರದಲ್ಲಿ ಕಲಬೆರಕೆ ಇತ್ಯಾದಿ ಇತ್ಯಾದಿಗಳಿಗೆ ವಿಧಿಸುವ ಶಿಕ್ಷೆಗಿಂತಲೂ ಹೆಚ್ಚಿನ ಶಿಕ್ಷೆಯನ್ನು ತ್ರಿವಳಿ ತಲಾಕ್ ಹೇಳಿದವರಿಗೆ ನೀಡಲು ಕೇಂದ್ರ ಸರಕಾರ ಮುಂದಾಗಿರುವುದು ಏನನ್ನು ಸೂಚಿಸುತ್ತದೆ? ತ್ರಿವಳಿ ತಲಾಕ್ ಹೇಳಿದವರನ್ನು ಮೂರು ವರ್ಷಗಳ ಕಾಲ ಜೈಲಿಗೆ ಕಳುಹಿಸುವುದರಿಂದ ತಲಾಕ್‍ಗೊಳಗಾದ ಪತ್ನಿಗೆ ಸಿಗುವ ಲಾಭ ಏನು? ಈತ ಜೈಲಲ್ಲಿರುವ ಸಮಯದಲ್ಲಿ ಆಕೆಯ ಕೌಟುಂಬಿಕ ಸ್ಥಿತಿಗತಿಯೇನು? ಆಕೆಯ ಮತ್ತು ಮಕ್ಕಳ ಜೀವನೋಪಾಯಕ್ಕೆ ಬೇಕಾದುದನ್ನು ಜೈಲಲ್ಲಿರುವ ಆತ ಒದಗಿಸಲು ಸಾಧ್ಯವೇ? ಆತ ಜೈಲಿನಿಂದ ಮರಳಿ ಬಂದ ಬಳಿಕ ಆಕೆ ಪತ್ನಿಯಾಗಿಯೇ ಉಳಿಯುತ್ತಾಳೆಯೇ? ಈ ಮಸೂದೆಯಂತೆ ಆತ 3 ವರ್ಷ ಜೈಲಲ್ಲಿದ್ದು ಮರಳಿ ಊರಿಗೆ ಬಂದಾಗ ನಡೆಯಬಹುದಾದ ಬೆಳವಣಿಗೆಗಳೇನು? ಆತ ಆಕೆಯನ್ನು ಸ್ವೀಕರಿಸದೇ ಇದ್ದರೆ ಅದು ತಂದೊಡ್ಡುವ ಬಿಕ್ಕಟ್ಟುಗಳೇನು ಎಂಬೆಲ್ಲ ಪ್ರಶ್ನೆಗಳಿಗೆ ಈ ಮಸೂದೆ ಯಾವ ಉತ್ತರವನ್ನೂ ನೀಡುತ್ತಿಲ್ಲ. ತ್ರಿವಳಿ ತಲಾಕ್ ಹೇಳಿದವರನ್ನು ಜೈಲಿಗಟ್ಟುವ ಉದ್ದೇಶವನ್ನಷ್ಟೇ ಹೊಂದಿರುವ ಮತ್ತು ಆನಂತರದ ಬೆಳವಣಿಗೆಗಳಿಗೆ ಯಾವ ಪರಿಹಾರವನ್ನೂ ಹೇಳದ ಮಸೂದೆಯೊಂದು ಮಹಿಳಾ ಪರ ಎಂದು ಬಿಂಬಿಸಿಕೊಳ್ಳುವುದೇ ಅತ್ಯಂತ ಹಾಸ್ಯಾಸ್ಪದ. ತ್ರಿವಳಿ ತಲಾಕನ್ನು ರದ್ದುಗೊಳಿಸುವುದು ಮತ್ತು ಆ ಮೂಲಕ ಮಹಿಳೆಯರ ದಾಂಪತ್ಯ ಬದುಕಿಗೆ ಸುರಕ್ಷಿತತೆಯನ್ನು ಒದಗಿಸುವುದೇ ಕೇಂದ್ರ ಸರಕಾರದ ಉದ್ದೇಶವೆಂದಾದರೆ ಜೈಲು ಶಿಕ್ಷೆ ಅದಕ್ಕೆ ಪರಿಹಾರ ಅಲ್ಲ. ಅದು ಇಡೀ ಉದ್ದೇಶವನ್ನೇ ಹಾಳು ಮಾಡಿ ಬಿಡುತ್ತದೆ.  ಅಂದಹಾಗೆ,
ತಲಾಕ್ ತಲಾಕ್ ತಲಾಕ್ ಎಂದು ಒಂದೇ ಉಸಿರಿಗೆ ಮೂರು ಬಾರಿ ಹೇಳುವ ವಿಚ್ಛೇದನ ಕ್ರಮವನ್ನು ಸುಪ್ರೀಮ್ ಕೋರ್ಟು ರದ್ದುಪಡಿಸಿದೆಯೇ (Null and Void) ಹೊರತು ಅದನ್ನು ಅಪರಾಧ ಎಂದು ಹೇಳಿಲ್ಲ. ತಲಾಕ್ ಎಂದು ಮೂರು ಬಾರಿ ಒಂದೇ ಉಸಿರಿಗೆ ಹೇಳುವುದರಿಂದ ವಿಚ್ಛೇದನ ಆಗುವುದಿಲ್ಲ ಎಂಬುದು ಸುಪ್ರೀಮ್ ಕೋರ್ಟ್‍ನ ನಿಲುವು. ಅದು ಅಪರಾಧ ಅಲ್ಲ. ಆ ದಂಪತಿಗಳು ಹಾಗೆ ತಲಾಕ್ ಹೇಳಿದ ಬಳಿಕವೂ ಪತಿ-ಪತ್ನಿಯಾಗಿಯೇ ಉಳಿಯುತ್ತಾರೆ ಅನ್ನುವ ಧ್ವನಿ ಆ ತೀರ್ಪಿನಲ್ಲಿದೆ. ಆದರೆ ಕೇಂದ್ರ ಸರಕಾರವು ಜಾರಿಗೆ ತಂದ ತಲಾಕ್ ಮಸೂದೆಯಲ್ಲಿ ತಲಾಕ್ ತಲಾಕ್ ತಲಾಕ್ ಎಂದು ಹೇಳುವುದನ್ನೇ ಅಪರಾಧಗೊಳಿಸಿದೆ. ಇದಕ್ಕೆ ಕಾರಣವೇನು? ಇದು ಸುಪ್ರೀಮ್ ಕೋರ್ಟ್‍ನ ಉದ್ದೇಶವಲ್ಲ ಅನ್ನುವುದು ಅದರ ತೀರ್ಪಿನಲ್ಲಿ ಉಲ್ಲೇಖಿಸಲಾಗಿರುವ Null and Void ಎಂಬ ಪದ ಪ್ರಯೋಗವೇ ಸ್ಪಷ್ಟಪಡಿಸುತ್ತಿರುವಾಗ ಕೇಂದ್ರ ಸರಕಾರ ಆ ತೀರ್ಪನ್ನೂ ಮೀರಿ ಕಾನೂನು ರಚಿಸಿರುವುದು ಯಾಕೆ? ನಡೆಯದೇ ಇರುವ ವಿಚ್ಛೇದನಕ್ಕೆ ಜೈಲುಶಿಕ್ಷೆಯ ಅಗತ್ಯವಾದರೂ ಏನು? ಅಲ್ಲದೇ, ಜೈಲುಶಿಕ್ಷೆ ನೀಡುವುದರಿಂದ ಆ ತಲಾಕನ್ನು ಸಿಂಧುಗೊಳಿಸಿದಂತೆ ಆಗುವುದಿಲ್ಲವೇ? ಇದೊಂದು ರೀತಿಯ ದ್ವಂದ್ವ. ಸ್ಪಷ್ಟತೆಯಿಲ್ಲದ ಮಸೂದೆ. ಹಾಗಂತ,
ತ್ರಿವಳಿ ತಲಾಕ್ ಸಮರ್ಥನೀಯ ಎಂದಲ್ಲ. ದಾಂಪತ್ಯ ಸಂಬಂಧವನ್ನು ಒಂದೇ ಉಸಿರಿನ ಹೇಳಿಕೆಯೊಂದು ಮುರಿದು ಬಿಡುವುದು ಸಾಮಾಜಿಕ ಸೌಖ್ಯವನ್ನು ಪ್ರತಿಬಿಂಬಿಸುವುದೂ ಇಲ್ಲ. ಹೆಣ್ಣು ಮತ್ತು ಗಂಡು ದಂಪತಿಗಳಾಗಿ ಮಾರ್ಪಡುವುದರ ಹಿಂದೆ ಉಭಯ ಕುಟುಂಬಗಳ ಶ್ರಮ ಇದೆ. ಸಮಾಲೋಚನೆಯಿದೆ. ಸಮಯದ ವ್ಯಯ ಇದೆ. ಸಂಪತ್ತಿನ ಖರ್ಚು ಇದೆ. ಇಷ್ಟುದ್ದದ ಪ್ರಕ್ರಿಯೆಗೆ ಕಾರಣ ಏನೆಂದರೆ, ಪತಿ-ಪತ್ನಿಯಾಗಲಿರುವ ಯುವಕ-ಯುವತಿಯ ದಾಂಪತ್ಯ ಬದುಕು ಸುಗಮವಾಗಿ ಸಾಗಬೇಕು ಎಂಬುದಾಗಿದೆ. ತ್ರಿವಳಿ ತಲಾಕ್ ಈ ಉದ್ದೇಶವನ್ನು ಪೂರ್ತಿಗೊಳಿಸುವುದಿಲ್ಲ. ಹೆಣ್ಣು ಮತ್ತು ಗಂಡು ರಾತೋರಾತ್ರಿ ತಮ್ಮನ್ನು ದಂಪತಿಗಳು ಎಂದು ದಿಢೀರ್ ಆಗಿ ಘೋಷಿಸುವುದನ್ನು ಸಮಾಜ ಹೇಗೆ ಸಹಜವಾಗಿ ಸ್ವೀಕರಿಸುವುದಿಲ್ಲವೋ ಹಾಗೆಯೇ ಈ ತ್ರಿವಳಿ ತಲಾಕ್ ಕೂಡ. ಇದು ಸಾಮಾಜಿಕ ಮೌಲ್ಯಕ್ಕೆ ವಿರುದ್ಧ. ಆ ಹೆಣ್ಣು ಮತ್ತು ಗಂಡನ್ನು ಪತಿ-ಪತ್ನಿಯಾಗಿಸುವುದಕ್ಕೆ ಯಾರೆಲ್ಲ ಶ್ರಮಿಸಿದ್ದಾರೋ, ಏನೆಲ್ಲ ಖರ್ಚು ಮಾಡಿದ್ದಾರೋ ಮತ್ತು ಎಷ್ಟು ಸಮಯವನ್ನು ವ್ಯಯಿಸಿದ್ದಾರೋ ಆ ಎಲ್ಲವನ್ನೂ ಈ ಬಗೆಯ ವಿಚ್ಛೇದನ ಅವಮಾನಿಸುತ್ತದೆ. ಹೆಣ್ಣು ಮತ್ತು ಗಂಡಿನ ನಡುವೆ ದಾಂಪತ್ಯ ಸಂಬಂಧವನ್ನು ಕುದುರಿಸುವುದಕ್ಕೆ ಹೇಗೆ ಕುಟುಂಬಿಕರ ನಡುವೆ ಸಮಾಲೋಚನೆ ನಡೆಸಲಾಗಿದೆಯೋ ಅದೇ ರೂಪದಲ್ಲಿ ವಿಚ್ಛೇದನಕ್ಕೂ ಎರಡು ಕುಟುಂಬಗಳ ನಡುವೆ ಸಮಾಲೋಚನೆ, ಅವಲೋಕನ, ಮಾತುಕತೆಗಳು ನಡೆಯಬೇಕು ಎಂಬುದು ಸಹಜವಾದ ಬೇಡಿಕೆ. ಇಸ್ಲಾಮ್ ಇದನ್ನೇ ಹೇಳುತ್ತದೆ. ತ್ರಿವಳಿ ತಲಾಕ್ ಈ ಪ್ರಕೃತಿ ಸಹಜ ಬೇಡಿಕೆಯನ್ನು ಪೂರೈಸುವುದಿಲ್ಲ. ಸುಪ್ರೀಮ್ ಕೋರ್ಟು ತ್ರಿವಳಿ ತಲಾಕನ್ನು ಅಮಾನ್ಯಗೊಳಿಸುವುದರ ಹಿಂದೆ ಈ ಉದ್ದೇಶವೂ ಇರಬಹುದು. ಆದರೆ, ಈ ತಲಾಕ್ ಕ್ರಮವನ್ನೇ ಅಪರಾಧಗೊಳಿಸಿ ಬಿಡುವುದೆಂದರೆ, ಪರೋಕ್ಷವಾಗಿ ಆ ತಲಾಕ್ ಕ್ರಮವನ್ನೇ ಸಿಂಧುಗೊಳಿಸಿದಂತೆ. ಇದು ತಲಾಕ್‍ಗೊಳಗಾದ ಮಹಿಳೆಯರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಬಹುದೇ ಹೊರತು ಆಕೆಯನ್ನು ಸಬಲಗೊಳಿಸಲಾರದು. ಅದಕ್ಕಿಂತ ತ್ರಿವಳಿ ತಲಾಕ್ ಪ್ರಕರಣಗಳನ್ನು ಇತ್ಯರ್ಥಪಡಿಸುವುದಕ್ಕೆ ಸರಕಾರ ಮುಸ್ಲಿಮ್ ಸಮುದಾಯದ ಒಳಗಡೆಯೇ ಸೂಕ್ತ ಏರ್ಪಾಡುಗಳನ್ನು ಮಾಡಬಹುದಿತ್ತು. ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಮತ್ತು ಇನ್ನಿತರ ಪ್ರಮುಖ ಮುಸ್ಲಿಮ್ ಸಂಘಟನೆಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು, ತ್ರಿವಳಿ ತಲಾಕ್ ಇತ್ಯರ್ಥ ಮಂಡಳಿಗಳನ್ನು ರೂಪಿಸುವುದಕ್ಕೆ ಅವುಗಳಿಗೆ ಹೊಣೆಗಾರಿಕೆಯನ್ನು ವಹಿಸಿಕೊಟ್ಟು, ಅದಕ್ಕೆ ಕಾನೂನು ಮಾನ್ಯತೆಯೂ ಸೇರಿದಂತೆ ವಿವಿಧ ಅಗತ್ಯಗಳ ಬಗ್ಗೆ ಪರಾಮರ್ಶೆ ನಡೆಸಬಹುದಿತ್ತು. ತ್ರಿವಳಿ ತಲಾಕನ್ನು ಅಸಿಂಧು ಎಂದು ಮಾನ್ಯ ಮಾಡುವುದರ ಜೊತೆಜೊತೆಗೇ ಆ ತಲಾಕನ್ನು ಸಿಂಧುಗೊಳಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ಮತ್ತು ಆ ದಂಪತಿಗಳು ವಿಚ್ಛೇದಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಇತ್ಯರ್ಥ ಮಂಡಳಿಗೆ ವಹಿಸಿಕೊಡಬಹುದಿತ್ತು. ತ್ರಿವಳಿ ತಲಾಕ್‍ನ ಬಗ್ಗೆ ಮುಸ್ಲಿಮ್ ಸಮುದಾಯದಲ್ಲಿ ಜಾಗೃತಿ ಮೂಡಿಸುವುದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬಹುದಿತ್ತು. ಬಹುಮುಖ್ಯವಾಗಿ ಮುಸ್ಲಿಮ್ ಸಂಘಟನೆಗಳು ಈ ಬಗ್ಗೆ ರಾಷ್ಟ್ರವ್ಯಾಪಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೆ ಒತ್ತಡ ಹೇರುವುದು ಮತ್ತು ಅದಕ್ಕೆ ಪೂರಕವಾಗಿ ಧನಸಹಾಯ ಮಾಡುವುದಕ್ಕೆ ಕ್ರಮ ಕೈಗೊಳ್ಳಬಹುದಿತ್ತು. ಮಸೀದಿಗಳನ್ನು ಇದಕ್ಕಾಗಿ ಬಳಸಿಕೊಳ್ಳುವಂತೆ ಒತ್ತಾಯಪಡಿಸಬಹುದಿತ್ತು. ಮುಸ್ಲಿಮ್ ಸಮುದಾಯದೊಳಗೆ ಪ್ರಾದೇಶಿಕವಾಗಿ ಪ್ರಭಾವಿಯಾಗಿರುವ ಅಸಂಖ್ಯ ಸಂಘ-ಸಂಸ್ಥೆಗಳಿವೆ. ಅವುಗಳನ್ನೆಲ್ಲ ಈ ಕಾಯಕದಲ್ಲಿ ಬಳಸಿಕೊಂಡು ತ್ರಿವಳಿ ತಲಾಕ್ ವಿರೋಧಿ ಅಭಿಯಾನ ಮತ್ತು ಜನಜಾಗೃತಿ ಸಭೆಗಳನ್ನು ನಡೆಸಬಹುದಿತ್ತು. ಪ್ರಜೆಗಳ ಕ್ಷೇಮವೇ ಸರಕಾರದ ಅಂತಿಮ ಉದ್ದೇಶವೆಂದಾದರೆ ಇವೆಲ್ಲ ಅಸಾಧ್ಯವಲ್ಲ. ಅಂದಹಾಗೆ,
ಒಂದು ತಪ್ಪಾದ ಕ್ರಮವನ್ನು ಅದಕ್ಕಿಂತಲೂ ದೊಡ್ಡ ತಪ್ಪಿನ ಮೂಲಕ ಎದುರಿಸುವುದು ಕ್ರೌರ್ಯವೇ ಹೊರತು ಮಾನವೀಯವಲ್ಲ. ತ್ರಿವಳಿ ತಲಾಕನ್ನು ಸುಪ್ರೀಮ್ ಕೋರ್ಟು ಅಪರಾಧವೆನ್ನದೇ ಅಮಾನ್ಯಗೊಳಿಸಿರುವುದನ್ನು ಈ ಹಿನ್ನೆಲೆಯಲ್ಲಿಯೇ ನಾವು ನೋಡಬೇಕು ಮತ್ತು ಅವಲೋಕಿಸಬೇಕು. ಅದು ತಪ್ಪಾದ ಆಚರಣೆಯನ್ನು ಸರಿಪಡಿಸುವ ಉದ್ದೇಶವನ್ನು ಹೊಂದಿದ್ದರೆ ಕೇಂದ್ರದ ತಲಾಕ್ ಮಸೂದೆಯು ಅದನ್ನು ಮತ್ತಷ್ಟು ಬಿಗಡಾಯಿಸುವ ಉದ್ದೇಶವನ್ನಷ್ಟೇ ಹೊಂದಿದಂತಿದೆ. ಈ ಮಸೂದೆಯು ತ್ರಿವಳಿ ತಲಾಕ್‍ಗೆ ಪರಿಹಾರ ಅಲ್ಲ, ಮಸೂದೆಯೇ ಒಂದು ಸಮಸ್ಯೆ.