Tuesday, 9 March 2021

ಜನಾಕ್ರೋಶಕ್ಕೆ ಕೊಚ್ಚಿ ಹೋಗಿರುವ ಕತೆಗಳ ನಡುವೆ...



ಸನ್ಮಾರ್ಗ ವಾರ್ತೆ 

ಸನ್ಮಾರ್ಗ ಸಂಪಾದಕೀಯ 

ಮಾರಾಟಕ್ಕೆಂದು ಸಂತೆಗೆ ತಂದಿದ್ದ ಹೋರಿಗಳನ್ನು ಯಾರೂ ಖರೀದಿಸದಿರುವುದರಿಂದ ಹತಾಶರಾದ ರೈತರು ಅವುಗಳನ್ನು  ಸಂತೆಯಲ್ಲೇ  ಬಿಟ್ಟು ಹೋದ ಸುದ್ದಿಯನ್ನು ಜನವರಿ 23ರ ಪ್ರಜಾವಾಣಿ ವೆಬ್ ಆವೃತ್ತಿಯಲ್ಲಿ ಚಿತ್ರಸಹಿತ ಪ್ರಕಟಿಸಲಾಗಿತ್ತು. ಘಟನೆ  ನಡೆದುದು ಹಾಸನದ ಸಮೀಪ. ಜನವರಿ 24ರಂದು ವಾರ್ತಾಭಾರತಿ ಪತ್ರಿಕೆಯಲ್ಲಿ ಮಾಹಿತಿಪೂರ್ಣ ಬರಹವೊಂದು ಪ್ರಕಟವಾಗಿತ್ತು.  ಬೆಂಗಳೂರಿನಲ್ಲಿರುವ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯಲ್ಲಿ ದಾಖಲೀಕರಣ ಮಾಡುವ ಶ್ರೀನಿವಾಸ್  ಕೆ. ಎಂಬವರು ಈ ಬರಹವನ್ನು ಬರೆದಿದ್ದರು. ಅವರ ಪ್ರಕಾರ,
ಗೋಹತ್ಯೆ ನಿಷೇಧದಿಂದ ಮೃಗಾಲಯಗಳಿಗೆ ಆಹಾರದ ಅಭಾವ ತೀವ್ರ ರೂಪದಲ್ಲಿ ತಟ್ಟಲಿದೆ. ರಾಜ್ಯದಲ್ಲಿ 10ಕ್ಕೂ ಅಧಿಕ  ಮೃಗಾಲಯಗಳಿವೆ. ರಾಜ್ಯದಲ್ಲಿ 1,783 ಚಿರತೆಗಳಿವೆ. ಚಾಮರಾಜೇಂದ್ರ ಮೃಗಾಲಯ ಮತ್ತು ಬನ್ನೇರುಘಟ್ಟ ಮೃಗಾಲಯಗಳು ದೇಶದಲ್ಲೇ  ಪ್ರಸಿದ್ಧವಾಗಿದ್ದು, ರಾಜ್ಯದ ಬೊಕ್ಕಸಕ್ಕೆ ಪ್ರವಾಸೋದ್ಯಮದ ಮೂಲಕ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.  ಚಾಮರಾಜೇಂದ್ರ ಮೃಗಾಲಯಕ್ಕೆ ಪ್ರತಿದಿನ 350 ಕೆಜಿಯಷ್ಟು ಗೋಮಾಂಸ ಸರಬರಾಜಾಗುತ್ತಿದ್ದು ಬನ್ನೇರುಘಟ್ಟ ಉದ್ಯಾನವನಕ್ಕೆ  1300 ಕೆಜಿ ಗೋಮಾಂಸ ಸರಬರಾಜಾಗುತ್ತಿದೆ. ಬನ್ನೇರುಘಟ್ಟ ಉದ್ಯಾನವನದಲ್ಲಿ 100 ಸಿಂಹಗಳು, 41 ಹುಲಿಗಳು ಮತ್ತು 30  ಚಿರತೆಗಳಿವೆ. ಚಾಮರಾಜೇಂದ್ರ ಮೃಗಾಲಯದಲ್ಲಿ 25 ಸಿಂಹ, 50 ಹುಲಿ ಮತ್ತು 100 ಚಿರತೆಗಳಿವೆ. ಹಾಗೆಯೇ ಗೊಡ್ಡು ಮೇಕೆ,  ಕುರಿಗಳ ಮಾಂಸವನ್ನು ಅಥವಾ ಕೋಳಿ ಮಾಂಸವನ್ನು ಈ ಪ್ರಾಣಿಗಳಿಗೆ ನೀಡಿದರೆ ಕಾಲು-ಬಾಯಿ ರೋಗಕ್ಕೆ ಕಾರಣವಾಗಬಹುದು  ಎನ್ನಲಾಗಿದೆ. ಒಂದುವೇಳೆ,
ಈ ಗೋಹತ್ಯೆ ನಿಷೇಧ ಕ್ರಮವನ್ನು ಇಡೀ ದೇಶಕ್ಕೆ ಅನ್ವಯಿಸಿದರೆ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ದೇಶದಲ್ಲಿ 190ರಷ್ಟು  ಮೃಗಾಲಯಗಳಿವೆ. ಹಾಗೆಯೇ 2019ರ ಗಣತಿಯಂತೆ ಈ ದೇಶದಲ್ಲಿ 2,967 ಹುಲಿಗಳಿವೆ. ಚಿರತೆಗಳ ಸಂಖ್ಯೆ 12,852. ಸಿಂಹಗಳು  674ರಷ್ಟಿವೆ. ಇನ್ನು, ಗೋವನ್ನು ವಧಿಸುವುದು ಕೇವಲ ಆಹಾರಕ್ಕಾಗಿ ಮಾತ್ರ ಎಂದು ಭಾವಿಸಬೇಡಿ. ವಧಿಸುವ ಗೋವು ಸಹಿತ ಜಾ ನುವಾರುಗಳ ಪೈಕಿ 50%ದಷ್ಟು ಅಂಶವು ಆಹಾರಕ್ಕಾಗಿ ಬಳಕೆಯಾದರೆ, ಇನ್ನರ್ಧ ಅಂಶವು ಸಕ್ಕರೆ ತಯಾರಿಸಲು, ಐಷಾರಾಮಿ  ಕಾರುಗಳ ಸೀಟು ತಯಾರಿಸಲು, ಚಪ್ಪಲಿಗಳು, ಬ್ಯಾಗುಗಳು, ಬೆಲ್ಟ್ ಸಹಿತ ಅನೇಕಾರು ವಸ್ತುಗಳ ತಯಾರಿಕೆಗೆ ಬಳಕೆಯಾಗುತ್ತದೆ.  ರಾಜ್ಯದಲ್ಲಿ ಇದೀಗ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದಿರುವುದರಿAದ ಇದನ್ನೇ ವೃತ್ತಿಯಾಗಿಸಿಕೊಂಡ ಸುಮಾರು 40  ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಸಮಸ್ಯೆಯಾಗಲಿದೆ. ಅಂದಹಾಗೆ,
ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಗೆ ಬಂದಿರುವುದು ಇದು ಮೊದಲೇನಲ್ಲ. ಈಗಿನ ಕಾಯ್ದೆಯು ಈಗಾಗಲೇ ಇದ್ದ  1964ರ ಕಾಯ್ದೆಗೆ ಬೇರೆಯದೇ ಸ್ವರೂಪವನ್ನಷ್ಟೇ ನೀಡಿದೆ. ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ 1964ರಂತೆ ಎತ್ತು ಮತ್ತು  ಕೋಣಗಳನ್ನು ವಧಿಸುವುದಕ್ಕೆ ನಿರ್ಬಂಧ ಇರಲಿಲ್ಲ. ಅಲ್ಲದೇ 12 ವರ್ಷಕ್ಕಿಂತ ಮೇಲಿನ ಗೊಡ್ಡು ಹಸುಗಳನ್ನು ವಧಿಸುವುದಕ್ಕೆ ಅ ನುಮತಿ ಇತ್ತು. ಆದರೆ 2020ರ ಗೋಹತ್ಯೆ ನಿಷೇಧ ಕಾಯ್ದೆಯು ಈ ಎಲ್ಲ ಅವಕಾಶಕ್ಕೂ ತೆರೆ ಎಳೆದಿದೆ. ಯಾರಾದರೂ ಈ  ಕಾಯ್ದೆಯನ್ನು ಉಲ್ಲಂಘಿಸಿದರೆ 7 ವರ್ಷಗಳ ವರೆಗೆ ಜೈಲುವಾಸ ಮತ್ತು 5 ಲಕ್ಷ ರೂಪಾಯಿಯಷ್ಟು ದಂಡ ವಿಧಿಸುವುದಕ್ಕೆ ಅವಕಾಶ  ಇದೆ. ಗೋರಕ್ಷಕರಿಗೆ ರಕ್ಷಣೆಯನ್ನು ಕೊಡುವ ಸೂಚನೆ ಇದೆ. ಈ ಕಾಯ್ದೆಯನ್ನು ಜಾರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವ  ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ‍್ಯವನ್ನು ನೀಡಲಾಗಿದೆ. ನಿಜವಾಗಿ,
ಗೋಹತ್ಯೆ ನಿಷೇಧ ಕಾಯ್ದೆಯನ್ನು ಮೊದಲಾಗಿ ಜಾರಿಗೆ ತಂದಿರುವುದು ಯಡಿಯೂರಪ್ಪ ಸರ್ಕಾರ ಅಲ್ಲ. ಈ ಮೊದಲೇ  ಅಂಥದ್ದೊಂದು ಕಾಯ್ದೆಯೊಂದಿತ್ತು. ಆ ಕಾಯ್ದೆಯು ರೈತರಿಗೆ, ಹೈನುದ್ಯಮಿಗಳಿಗೆ ಮತ್ತು ಮೃಗಾಲಯದ ಪ್ರಾಣಿಗಳಿಗೆ  ಪೂರಕವಾಗಿತ್ತು. ಉಳುಮೆಗೆ ಬಾರದ ಎತ್ತುಗಳು ಮತ್ತು ಹಾಲು ನೀಡದ ಹಸುಗಳನ್ನು ಮಾರಿ, ಆ ಮೂಲಕ ಬರುವ ಆದಾಯ ದಿಂದ ಎಳೆಕರುಗಳನ್ನು ಮತ್ತು ಉಳುಮೆಗೆ ಸಾಮರ್ಥ್ಯವಿರುವ ಎತ್ತುಗಳನ್ನು ಖರೀದಿಸುವುದಕ್ಕೆ ಅವಕಾಶವಿತ್ತು. ನಿಜಕ್ಕೂ ಇದು  ರೈತಸ್ನೇಹಿ ಕಾಯ್ದೆ. ಆದ್ದರಿಂದಲೇ, ಈ ಕಾಯ್ದೆಯ ಹೊರತಾಗಿಯೂ ಗೋವು, ಎತ್ತುಗಳ ಕೊರತೆ ರಾಜ್ಯದಲ್ಲಿ ಕಂಡು ಬಂದಿಲ್ಲ.  ಹಾಲುತ್ಪಾದನೆಯಲ್ಲಿ ಇಳಿಕೆಯಾಗಿಲ್ಲ. ಒಂದುವೇಳೆ,
1964ರ ಜಾನುವಾರು ಕಾಯ್ದೆಯು ಗೋಸಂರಕ್ಷಣಾ ವಿರೋಧಿಯಾಗಿರುತ್ತಿದ್ದರೆ ಈ 5 ದಶಕಗಳಲ್ಲಿ ಗೋಸಂತತಿಯ ನಾಶಕ್ಕೆ ಈ  ರಾಜ್ಯ ಸಾಕ್ಷಿಯಾಗಬೇಕಿತ್ತು. ಹಾಲುತ್ಪಾದನೆಯಲ್ಲಿ ತೀವ್ರ ಇಳಿಕೆ ಕಂಡುಬರಬೇಕಿತ್ತು. ಆದರೆ ಹೀಗೇನೂ ಆಗಿಲ್ಲ. ಅಂದರೆ, ಗೋಹತ್ಯೆ  ನಿಷೇಧ 2020ರ ಕಾಯ್ದೆಗಿಂತ ಮೊದಲಿನ 1964ರ ಕಾಯ್ದೆಯು ರೈತಸ್ನೇಹಿ ಮತ್ತು ಜಾನುವಾರು ಸ್ನೇಹಿಯಾಗಿತ್ತು ಎಂದೇ ಅರ್ಥ.  ಅಷ್ಟಕ್ಕೂ,
1964ರ ಕಾಯ್ದೆಯನ್ನು ರದ್ದುಗೊಳಿಸಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತನ್ನಿ ಎಂದು ರಾಜ್ಯದಲ್ಲಿ ರೈತರಾಗಲಿ  ಹೈನುದ್ಯಮದಲ್ಲಿ ತೊಡಗಿಸಿಕೊಂಡವರಾಗಲಿ ಬೇಡಿಕೆಯನ್ನಿಟ್ಟಿರುವುದೋ ವಿಧಾನಸೌಧ ಚಲೋ ನಡೆಸಿರುವುದೋ ಈವರೆಗೂ ನಡೆ ದಿಲ್ಲ. ಅಲ್ಲದೇ, ಈ ಬಗ್ಗೆ ಜನಾಭಿಪ್ರಾಯವನ್ನೂ ಸಂಗ್ರಹಿಸಲಾಗಿಲ್ಲ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಈ ಅಂಶ ಇತ್ತು ನಿಜ.  ಆದರೆ, ಬಿಜೆಪಿಗೆ ರಾಜ್ಯದ ಜನತೆ ಓಟು ಹಾಕಿರುವುದಕ್ಕೆ ಆ ಒಂದೇ ಭರವಸೆ ಕಾರಣ ಆಗಿತ್ತೇ? ಒಂದುವೇಳೆ,
ಗೋಹತ್ಯೆ ನಿಷೇಧ ಕಾಯ್ದೆಯ ಏಕ ಭರವಸೆಯೊಂದನ್ನೇ ಪ್ರಣಾಳಿಕೆಯನ್ನಾಗಿಸಿ ಮತ್ತು ಇನ್ನಾವುದೂ ಪ್ರಣಾಳಿಕೆಯಲ್ಲಿ ಇಲ್ಲದೇ  ಇರುತ್ತಿದ್ದರೆ ಜನರು ಆ ಕಾರಣಕ್ಕಾಗಿ ಮಾತ್ರ ಮತ ನೀಡಿದ್ದಾರೆ ಎಂದು ಹೇಳಬಹುದಿತ್ತು. ಆದರೆ ಹಾಗೆ ನಡೆದಿಲ್ಲ ಮತ್ತು  ನಡೆಯುವದಕ್ಕೆ ಸಾಧ್ಯವೂ ಇಲ್ಲ. ಜನರು ಯಾವುದೇ ರಾಜಕೀಯ ಪಕ್ಷಕ್ಕೆ ಮತ ಹಾಕುವುದಕ್ಕೂ ಬೇರೆ ಬೇರೆ ಸಂಗತಿಗಳು  ಕಾರಣವಾಗಿರುತ್ತವೆ. ಹೆಚ್ಚಿನ ಬಾರಿ ಪ್ರಣಾಳಿಕೆಗೂ ಜನರ ಮತ ಚಲಾವಣೆಗೂ ಸಂಬಂಧವೇ ಇರುವುದಿಲ್ಲ. ಗೆದ್ದ ಬಳಿಕ ರಾಜಕೀಯ  ಪಕ್ಷಗಳೂ ಹೆಚ್ಚಿನ ಬಾರಿ ಪ್ರಣಾಳಿಕೆಯತ್ತ ಮುಖವೆತ್ತಿ ನೋಡುವುದೂ ಇಲ್ಲ. ಪಕ್ಷವೊಂದಕ್ಕೆ ಬೀಳುವ ಮತಗಳಿಗೂ ಪ್ರಣಾಳಿಕೆಯಲ್ಲಿ  ಹೇಳಲಾಗುವ ಭರವಸೆಗಳಿಗೂ ಹೆಚ್ಚಿನ ಬಾರಿ ಯಾವ ಹೋಲಿಕೆಯೂ ಇರುವುದಿಲ್ಲ. ಆದ್ದರಿಂದ ಪ್ರಣಾಳಿಕೆಯನ್ನು ತೋರಿಸಿ ಬಿಜೆಪಿ  ಗೋಹತ್ಯಾ ನಿಷೇಧ ಕಾಯ್ದೆಯನ್ನು ಸಮರ್ಥಿಸಿಕೊಳ್ಳುವುದು ಸಂದರ್ಭ ಸಾಧಕತನವೇ ಹೊರತು ಪ್ರಾಮಾಣಿಕತೆಯಲ್ಲ.
ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆಯಂತೆ ಈಗಾಗಲೇ ಪ್ರಥಮ ಕೇಸು ದಾಖಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾಯ್ದೆಯ  ನೇರ ಪರಿಣಾಮವನ್ನು ರೈತರು ಎದುರಿಸಬೇಕಿರುವುದರಿಂದ ರಾಜ್ಯ ಎರಡು ಸವಾಲುಗಳಿಗೆ ಸಾಕ್ಷಿಯಾಗಗಬಹುದು. 
1. ರೈತರು  ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರ ಪ್ರತಿಭಟನೆ.
 2. ಹೈನುಗಾರಿಕೆಯಿಂದ ರೈತರು ನಿಧಾನವಾಗಿ ದೂರ  ಸರಿಯುವುದು. ಹಾಗಂತ,
ಇವು ಏನೇ ಆದರೂ ಅದರಿಂದ ಆಯಾ ಕುಟುಂಬಗಳು ಮಾತ್ರ ಸಂಕಷ್ಟಕ್ಕೆ ಒಳಗಾಗುವುದಲ್ಲ. ಹಾಲುತ್ಪಾದನೆಯಲ್ಲಿ ಕೊರತೆಯಿಂದ  ಹಿಡಿದು ಮಾಂಸದ ಅಲಭ್ಯತೆ ಮತ್ತು ಮಾಂಸದಿಂದ  ಉತ್ಪತ್ತಿಯಾಗುವ ವಿವಿಧ ವಸ್ತುಗಳ ಬೆಲೆ ಏರಿಕೆಗೂ ಈ ಕಾಯ್ದೆಯು  ಕಾರಣವಾಗಲಿದೆ. ಮೃಗಾಲಯದ ಪ್ರಾಣಿಗಳ ಆಹಾರ ಬೇಡಿಕೆಗೂ ಪರ್ಯಾಯ ದಾರಿಗಳನ್ನು ಹುಡುಕಬೇಕಾಗುತ್ತದೆ. ಗೋಮಾಂಸ  ಹೊರತಾದ ಮಾಂಸಗಳು ದುಬಾರಿಯಾಗಿರುವುದರಿಂದ ಅದರ ಹೊರೆಯನ್ನು ಸರಕಾರ ಹೊತ್ತುಕೊಳ್ಳಬೇಕಾಗುತ್ತದೆ. ಬೀಡಾಡಿ ಜಾ ನುವಾರುಗಳ ಸಂಖ್ಯೆ ಹೆಚ್ಚಾಗಲಿದ್ದು, ಗೋಶಾಲೆಗಳ ನಿರ್ವಹಣೆಯೂ ಸವಾಲಾಗಲಿದೆ. ಈಗಿನ ಕಾಯ್ದೆಯನ್ನು ನೇರಾತಿನೇರ ಜಾರಿ  ಮಾಡಬೇಕಾದರೆ ಗ್ರಾಮಕ್ಕೆ ನಾಲ್ಕೈದು  ಗೋಶಾಲೆಗಳನ್ನಾದರೂ ತೆರೆಯಬೇಕಾಗಬಹುದು. ಮೇವು, ಹಿಂಡಿ ಸಹಿತ ಅದರ  ನಿರ್ವಹಣೆಗೆ ಬೇಕಾಗುವ ಹಣಕ್ಕೆ ಏನು ದಾರಿ? ಈ ಸವಾಲಿಗೆ ಒಂದು ನಯಾಪೈಸೆಯನ್ನೂ ತೆಗೆದಿಡದ ಸರಕಾರವೂ ಕೇವಲ  ಕಾಯ್ದೆ ತಂದು ಮಾಡುವುದೇನು? ಅಂದಹಾಗೆ,
ಜನಮರುಳು ಕಾಯ್ದೆಗಳು ಜನಾಕ್ರೋಶದ ಪ್ರವಾಹದಲ್ಲಿ ಕೋಚ್ಚಿಹೋದ ಕತೆಗಳು ಇತಿಹಾಸದಲ್ಲಿ ಧಾರಾಳ ಇವೆ.

Saturday, 13 February 2021

ಅವರು ಮಕ್ಕಳು, ಅಷ್ಟೇ



ಕಳೆದವಾರ ಪ್ರಕಟವಾದ ಈ ಮೂರು ಸುದ್ದಿಗಳನ್ನು ಓದಿ.
1. ಓದುತ್ತಿಲ್ಲವೆಂಬ ಕಾರಣಕ್ಕೆ ಎಂಟರ ಹರೆಯದ ಬಾಲಕನಿಗೆ ಹೆತ್ತ ತಂದೆಯೇ ಕಾದ ಸಟ್ಟುಗರಿಂದ ಬರೆ ಎಳೆದಿದ್ದಾರೆ. ಘಟನೆ  ನಡೆದಿರುವುದು ಕೇರಳದ ಪಟ್ಟಣಂತಿಟ್ಟದಲ್ಲಿ. ತೋಳುಗಳು ಮತ್ತು ಕಾಲುಗಳಿಗೆ ಸುಟ್ಟ ಗಾಯಗಳಾಗಿರುವ ಮಗುವನ್ನು ಆಸ್ಪತ್ರೆಗೆ  ದಾಖಲಿಸಲಾಗಿದೆ. ಮಗುವಿನ ತಂದೆಗೆ ಮದ್ಯ ಸೇವನೆಯ ಚಟವಿದೆ.
2. ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಸಮಯದಲ್ಲಿ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಕಾಪ್ಸಿಕೋಫ್ರಿ ಗ್ರಾಮದ ಭಾ ನ್‌ಬೋರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 12 ಮಕ್ಕಳಿಗೆ ಪೊಲೀಯೋ ಹನಿ ನೀಡುವ ಬದಲು ಸ್ಯಾನಿಟೈಸರ್ ಹನಿ  ನೀಡಲಾಗಿದೆ. ಎಲ್ಲವೂ 5 ವರ್ಷಕ್ಕಿಂತ ಕೆಳಗಿನ ಮಕ್ಕಳು. ಮಕ್ಕಳನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
3. 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆ ನಡೆಸಲಾದ ಘಟನೆ ಮಧ್ಯಪ್ರದೇಶದ ಬೊನೆರಾ ಜಿಲ್ಲೆಯಲ್ಲಿ ನಡೆದಿದೆ.  ಅತ್ಯಾಚಾರಿಯ ಮೇಲೆ ಈಗಾಗಲೇ ಅತ್ಯಾಚಾರಗೈದ ಆರೋಪ ಇದ್ದು ಜಾಮೀನಿನ ಮೇಲೆ ಜೈಲಿನಿಂದ ಇತ್ತೀಚೆಗಷ್ಟೇ  ಬಿಡುಗಡೆಗೊಂಡಿದ್ದ.
ಅಂದಹಾಗೆ, ಛೆ, ಅಯ್ಯೋ, ಎಂಥ ಕ್ರೂರಿಗಳು... ಇತ್ಯಾದಿ ಉದ್ಗಾರಗಳೊಂದಿಗೆ ಸುದ್ದಿಯನ್ನು ಓದಿ ಮುಗಿಸುವುದರ ಆಚೆಗೆ ಮಕ್ಕಳ  ಸುರಕ್ಷಿತೆಗಾಗಿ ನಾವೇನು ಮಾಡಬಹುದು? ಈ ಬಗೆಯ ಪ್ರಶ್ನೆಯೊಂದನ್ನು ಪ್ರತಿಯೋರ್ವರೂ ಸ್ವಯಂ ಕೇಳಿಕೊಳ್ಳಬೇಕು.  ದೊಡ್ಡವರಿಗೆ ಪ್ರಶ್ನಿಸುವುದಕ್ಕೆ ಬರುತ್ತದೆ. ಅನ್ಯಾಯವಾದಾಗ ಅದನ್ನು ವೀಡಿಯೋ ಮಾಡಿ ಹಂಚಿಕೊಳ್ಳುವುದಕ್ಕೂ ಬರುತ್ತದೆ. ಕಷ್ಟದ ಲ್ಲಿದ್ದರೂ, ಕಾಯಿಲೆ ಬಿದ್ದರೂ ಮನೆ ಇಲ್ಲದಿದ್ದರೂ, ಅನ್ಯಾಯವಾಗಿ ಪೊಲೀಸರೋ, ಇನ್ನಾರೋ ಥಳಿಸಿದರೂ ಅವೆಲ್ಲವನ್ನೂ  ನಾಗರಿಕ ಜಗತ್ತಿಗೆ ತಿಳಿಸುವ ಕಲೆ ದೊಡ್ಡವರಲ್ಲಿರುತ್ತದೆ. ಅದಕ್ಕೆ ಬೇಕಾದ ಅಧುನಿಕ ಉಪಕರಣಗಳಿರುವುದೂ ದೊಡ್ಡವರಲ್ಲೇ. ಆದರೆ,  ಎಳೆ ಪ್ರಾಯದ ಮಕ್ಕಳ ಪಾಲಿಗೆ ಇವ್ಯಾವೂ ಲಭ್ಯವಿಲ್ಲ. ಎಲ್ಲಿಯವರೆಗೆಂದರೆ, ತಮ್ಮ ಮೇಲಿನ ಅನ್ಯಾಯ, ಹಲ್ಲೆ, ಬೈಗುಳ, ಥಳಿತ  ಇತ್ಯಾದಿ ಎಸಗಿದವರನ್ನು ದಂಡಿಸುವುದಕ್ಕೆ ಕಾನೂನುಗಳಿವೆ ಎಂಬುದೂ ಅವರಿಗೆ ಗೊತ್ತಿರುವುದಿಲ್ಲ.
ದೊಡ್ಡವರಲ್ಲಿ ಏನೇನೆಲ್ಲ ಆಧುನಿಕ ಸೌಲಭ್ಯಗಳು ಇವೆ ಎಂದು ನಾವು ಹೇಳುತ್ತೇವೆಯೋ ಅವ್ಯಾವುವೂ ಲಭ್ಯವಿಲ್ಲದ ಬಹುದೊಡ್ಡ  ಸಮೂಹವೆಂದರೆ ಮಕ್ಕಳು. ಅವರಿಗೆ ಕಣ್ಣೀರು ಇಳಿಸಲು ಬರುತ್ತದೆ. ಆದರೆ ಅದನ್ನು ವೀಡಿಯೋ ಮಾಡಿ ಹಂಚಿಕೊಳ್ಳುವ  ಮೊಬೈಲು ಅವರ ಕೈಯಲ್ಲಿಲ್ಲ. ಹೆತ್ತವರಲ್ಲಿ ಹಲವು ವಿಧ. ಕೆಲವು ಮನೆಗಳಲ್ಲಿ ಹೆತ್ತವರಿಬ್ಬರೂ ಉದ್ಯೋಗಕ್ಕೆ ಹೋಗುತ್ತಾರೆ. ಕೆಲವು  ಮನೆಗಳಲ್ಲಿ ತಂದೆ ಮಾತ್ರ ಕೆಲಸಕ್ಕೆ ಹೋಗುತ್ತಾರೆ. ಈ ಕೆಲಸದಲ್ಲೂ ಹತ್ತಾರು ವಿಧ. ಪ್ಯಾಂಟು, ಬೂಟು, ಟೈ, ಕೋಟು ಧರಿಸಿ  ಕೆಲಸಕ್ಕೆ ಹೋಗುವ ಅಪ್ಪ ಇರುವಂತೆಯೇ ಇಸ್ತ್ರಿ  ಹಾಕದ, ದೊರಗು ಉಡುಪನ್ನು ಧರಿಸಿ ಕೆಲಸಕ್ಕೆ ಹೋಗುವ ಅಪ್ಪನೂ ಇದ್ದಾನೆ.  ಅಮ್ಮಂದಿರಲ್ಲೂ ಇಂಥ ವೈವಿಧ್ಯವಿದೆ. ಮನೆಯಲ್ಲೇ  ಇರುವ ಅಮ್ಮ ಇರುವಂತೆಯೇ ಮುಂಜಾನೆಯಿಂದ  ಸಂಜೆವರೆಗೆ ದುಡಿಯುವ  ಅಮ್ಮನೂ ಇದ್ದಾಳೆ. ಇವರೆಲ್ಲರೂ ಉದ್ಯೋಗದಲ್ಲಿ ಒಬ್ಬರಿಗಿಂತ ಒಬ್ಬರ ನಡುವೆ ವ್ಯತ್ಯಾಸ ಇರುವಂತೆಯೇ, ಉದ್ಯೋಗ ಸ್ಥಳದ  ವಾತಾವರಣದಲ್ಲೂ ವ್ಯತ್ಯಾಸ ಇರುತ್ತದೆ. ಶಾಂತ ವಾತಾವರಣ, ಸದಾ ಒತ್ತಡದ ಸ್ಥಿತಿ, ಮೇಲಧಿಕಾರಿಗಳಿಂದ ಯಾವಾಗಲೂ ಬೈಗುಳ;  ಅತೀವ ಕಠಿಣ ಕೆಲಸ, ಬಿರು ಬಿಸಿಲಿನಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ದುಡಿಯಬೇಕಾದ ಸ್ಥಿತಿಯೂ ಇರುತ್ತದೆ. ಸಾಮಾನ್ಯವಾಗಿ  ಉದ್ಯೋಗ ಸ್ಥಳದ ವಾತಾವರಣಕ್ಕೆ ಹೊಂದಿಕೊಂಡು ಅವರ ವರ್ತನೆಯಲ್ಲೂ ವ್ಯತ್ಯಾಸ ಇರುತ್ತದೆ. ಸದಾ ಒತ್ತಡದ ಸನ್ನಿವೇಶದಲ್ಲಿ  ಕೆಲಸ ಮಾಡುವ ವ್ಯಕ್ತಿ, ಆ ಒತ್ತಡದ ಪರಿಣಾಮವನ್ನು ಮನೆವರೆಗೂ ಕೊಂಡು ಹೋಗುವುದಿದೆ ಮತ್ತು ಅದರ ಭಾರವನ್ನು ಮಕ್ಕಳ  ಮೇಲೆ ಹೇರಿ ಹಗುರವಾಗುವುದಿದೆ. ಮಕ್ಕಳನ್ನು ಥಳಿಸುವ, ಬೈಯುವ, ನಿಂದಿಸುವ ಮತ್ತು ಗದರಿಸುವ ಹೆತ್ತವರು ಮನಃ ಪೂರ್ವಕವಾಗಿ ಹಾಗೆ ಮಾಡುತ್ತಾರೆಂದು ಹೇಳಲಾಗದು. ಇನ್ನೆಲ್ಲೋ  ಆದ ಅವಮಾನಕ್ಕೆ, ನಿಂದನೆಗೆ ಆ ಕ್ಷಣದಲ್ಲಿ ತಕ್ಕ ಉತ್ತರ  ನೀಡಲಾಗದೇ ಅಥವಾ ಆ ಸಾಮರ್ಥ್ಯ ಇಲ್ಲದೇ ಒಳಗೊಳಗೇ ಕುದಿಯುತ್ತಾ ಸಿಟ್ಟನ್ನು ಮಕ್ಕಳ ಮೇಲೆ ಅಕಾರಣವಾಗಿ  ತೀರಿಸಿಕೊಳ್ಳುವುದಿದೆ. ಇವು ಏನೇ ಇದ್ದರೂ ಬಲಿಪಶುಗಳು ಮಾತ್ರ ಮಕ್ಕಳೇ. ಅಷ್ಟಕ್ಕೂ,
ತಪ್ಪೇ ಮಾಡದ ಮಗುವಿನ ಮೇಲೆ ಅಪ್ಪ ಏನೇನೋ ಕಾರಣ ಕೊಟ್ಟು ಬಾರಿಸಿದರೆ ಆ ಮಗುವಿನ ಮನಸ್ಸು ಏನಂದೀತು? ಆ  ಕ್ಷಣದಲ್ಲಿ ಆ ಮಗುವಿನ ಮನಸ್ಸಲ್ಲಿ ಏನೆಲ್ಲ ಪ್ರಶ್ನೆಗಳು ಹುಟ್ಟಿಕೊಂಡೀತು? ತೀರಾ ಪುಟ್ಟ ಪ್ರಮಾದಕ್ಕೂ ಕೆಂಡಾಮAಡಲವಾಗುವ ಅಪ್ಪ  ಅಥವಾ ಅಮ್ಮನ ಬಗ್ಗೆ ಒಂದು ಮಗು ಏನೇನು ಭಾವಿಸಿಕೊಂಡೀತು? ಮದ್ಯ ಸೇವಿಸಿ ಬಂದು ಮನೆಯಲ್ಲಿ ಅಮ್ಮನಿಗೋ ತನಗೋ  ಬಾರಿಸುವ ಅಪ್ಪನನ್ನು ಕಂಡು ಮಗುವಿನಲ್ಲಿ ಏಳುವ ಪ್ರಶ್ನೆಗಳೇನಿರಬಹುದು?
ಮನೆಯ ನಾಲ್ಕು ಗೋಡೆಗಳ ಒಳಗೆ ಅತ್ಯಂತ ಅಸಹಾಯಕರು ಯಾರೆಂದರೆ, ಮಕ್ಕಳು. ಅಪ್ಪ-ಅಮ್ಮನ ಮೂಡ್ ಯಾವಾಗ ಚೆ ನ್ನಾಗಿರುತ್ತೋ ಆವಾಗೆಲ್ಲ ಅವರಲ್ಲಿ ಖುಷಿ. ಅವರು ತಪ್ಪು ಮಾಡಿದರೂ ಮಾಡದಿದ್ದರೂ ಹೆತ್ತವರನ್ನು ಹೊಂದಿಕೊಂಡು ಅವರ  ಸುಖ-ದುಃಖ ನಿರ್ಣಯವಾಗುತ್ತದೆ. ಇನ್ನು, ಅವರ ಜಗತ್ತು ಕೂಡ ಬಹಳ ಸಣ್ಣದು. ಅವರ ಭಾವನೆಗಳನ್ನು ಜಗತ್ತಿನ ಮುಂ ದಿಡುವುದಕ್ಕೆ ಯಾವ ಮಾಧ್ಯಮವೂ ಇಲ್ಲ. ಅಥವಾ ದೊಡ್ಡವರಂತೆ ಮಾಧ್ಯಮವನ್ನು ಬಳಸಿ ಹೇಳಿಕೊಳ್ಳುವ ಸಾಮರ್ಥ್ಯವೂ ಅವರಲ್ಲಿಲ್ಲ. ಆದ್ದರಿಂದಲೇ, ಈ ಜಗತ್ತಿನಲ್ಲಿ ದೊಡ್ಡವರ ಸಂಕಟ, ಭಾವನೆ, ಅಭಿಪ್ರಾಯಗಳು ಸುದ್ದಿಗೊಳಗಾಗುವಂತೆ ಮಕ್ಕಳು ಸು ದ್ದಿಗೊಳಗಾಗುವುದಿಲ್ಲ. ಅವರ ಅಭಿಪ್ರಾಯಗಳಿಗೆ ವೇದಿಕೆಗಳಿಲ್ಲ. ಅವರ ಮೇಲಿನ ಹಲ್ಲೆಯನ್ನು, ನಿಂದನೆಯನ್ನು ಅಥವಾ  ಶೋಷಣೆಯನ್ನು ಹೊರ ಜಗತ್ತಿಗೆ ತಿಳಿಸುವ ದಾರಿಗಳಿಲ್ಲ. ಈ ಎಲ್ಲ ಕಾರಣಗಳಿಂದ ಬಾಹ್ಯ ಜಗತ್ತಿನ ಪಾಲಿಗೆ ಮಕ್ಕಳೆಲ್ಲ  ಸುಖವಾಗಿದ್ದಾರೆ ಎಂಬ ವಾತಾವರಣ ಇದೆ. ಅಲ್ಲೊಂದು  ಇಲ್ಲೊಂದು  ಪ್ರಕರಣಗಳಷ್ಟೇ ಮಾಧ್ಯಮಗಳ ಒಳಗಿನ ಪುಟಗಳಲ್ಲಿ  ಕಾಣಿಸಿಕೊಳ್ಳುತ್ತವೆ. ಅಷ್ಟಕ್ಕೂ, ಅಂಥ ಸುದ್ದಿಯನ್ನು ಹೊರ ಜಗತ್ತಿಗೆ ಹೇಳುವುದೂ ಮಕ್ಕಳಲ್ಲ, ದೊಡ್ಡವರು. ಅಂದಹಾಗೆ,
ಮಕ್ಕಳ ಈ ಎಲ್ಲ ಅಸಹಾಯಕತೆಯನ್ನು ದೊಡ್ಡವರಾದ ನಾವು ಶಾಂತಚಿತ್ತದಿಂದ ಅರ್ಥೈಸಬೇಕು ಮತ್ತು ಸ್ಪಂದಿಸಬೇಕು. ನಾವು  ಥಳಿಸಿದರೆ ತಿರುಗಿ ಥಳಿಸುವ ಸಾಮರ್ಥ್ಯವಿಲ್ಲದ, ಬೈದರೆ ತಿರುಗಿ ಬೈಯಲು ಬಾರದ, ಊಟ ಕೊಡದಿದ್ದರೆ ಊಟ ತಯಾರಿಸಿ ತಿ ನ್ನಲು ತಿಳಿಯದ ಮಕ್ಕಳ ಮೇಲೆ ಪ್ರತಾಪ ತೋರಿಸುವುದು ಅತಿ ದೊಡ್ಡ ಕ್ರೌರ್ಯ ಮತ್ತು ಅತಿ ಹೀನ ಕಾರ್ಯ. ನಮ್ಮ ಪಕ್ಕದ ಮ ನೆಯಲ್ಲಿ, ಆಸು-ಪಾಸಿನಲ್ಲಿ ಮಕ್ಕಳ ಮೇಲೆ ಹೆತ್ತವರಿಂದ ದೌರ್ಜನ್ಯ ನಡೆಯುತ್ತಿದ್ದರೆ ಅವರನ್ನು ತಿದ್ದುವ ಅಥವಾ ತಿದ್ದುವ ಸಾಮರ್ಥ್ಯ  ಉಳ್ಳವರಲ್ಲಿ ಹೇಳಿಸುವ ಪ್ರಯತ್ನಗಳು ನಡೆಯಬೇಕು. ಸ್ವತಃ ನಾವೂ ಮಕ್ಕಳ ಜೊತೆ ಕರುಣೆಯಿಂದ ವರ್ತಿಸಬೇಕು. ತಪ್ಪು ಮಾಡುವ  ಪ್ರಾಯವೇ ಮಕ್ಕಳದು. ಅದಕ್ಕೆ ಕಠಿಣ ದಂಡನೆ ಉತ್ತರವಲ್ಲ. ಹೂ ಮನಸ್ಸಿನ ಮಕ್ಕಳನ್ನು ಹೂವಿನಂತೆ ಪ್ರೀತಿಸಬೇಕಾದುದು ನಮ್ಮೆಲ್ಲರ  ಜವಾಬ್ದಾರಿ.
ಆರಂಭದ ಮೂರು ಘಟನೆಗಳಲ್ಲಿ ಮಕ್ಕಳ ಅಸಹಾಯಕತೆಯ ದಟ್ಟ ಛಾಯೆಯಿದೆ ಮತ್ತು ದೊಡ್ಡವರ ದೊಡ್ಡಸ್ತಿಕೆಯ ಅಹಂಭಾವ  ಮತ್ತು ನಿರ್ಲಕ್ಷ್ಯವಿದೆ. ಇದು ಕೊನೆಯಾಗಲಿ. ಮಕ್ಕಳ ಬಾಳು ಸುಂದರವಾಗಲಿ. 

Friday, 12 February 2021

ಹೆಣ್ಣು ಮತ್ತು ಕೇಡಿನ ಕಣ್ಣುಳ್ಳ ಸಮಾಜ

ಸನ್ಮಾರ್ಗ ಸಂಪಾದಕೀಯ 

ಪತ್ರಿಕೆಗಳಲ್ಲಿ ಅತ್ಯಾಚಾರದ ವಿರುದ್ಧ ಸಂಪಾದಕೀಯವೋ ಮುಖ್ಯ ಬರಹವೋ ಪ್ರಕಟವಾಗಬೇಕಾದರೆ ಬರೇ ಅತ್ಯಾಚಾರವಷ್ಟೇ ಆದರೆ  ಸಾಲದು, ಅದು ಬರ್ಬರವಾಗಿರಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ, ಅತ್ಯಾಚಾರ ಎಂಬ ಪದಕ್ಕೆ ಹೌಹಾರುವ ಸ್ಥಿತಿ  ಈಗಿಲ್ಲ. ಅದನ್ನೊಂದು ಸಹಜ ಕ್ರಿಯೆಯಾಗಿ ದೇಶ ಒಪ್ಪಿಕೊಂಡು ಬಿಟ್ಟಿದೆ. ಈಗ ಅಸಹಜವಾಗುವುದು ಯಾವುದೆಂದರೆ, ಬರ್ಬರ  ಅತ್ಯಾಚಾರ. ಅತ್ಯಾಚಾರಿಗಳು ಹೆಣ್ಣಿನ ಮರ್ಮಾಂಗವನ್ನು ಛಿದ್ರಗೊಳಿಸಿದರೆ ಮತ್ತು ಹೆಣ್ಣಿನೊಂದಿಗೆ ಅತ್ಯಂತ ಪೈಶಾಚಿಕವಾಗಿ  ನಡೆಸಿಕೊಂಡರೆ ಆ ಸುದ್ದಿ ಪತ್ರಿಕೆಗಳ ತೀರಾ ಒಳಪುಟಕ್ಕೆ ಹೋಗುವುದು ತಪ್ಪುತ್ತದೆ. ಉಳಿದಂತೆ ಕೇವಲ ಅತ್ಯಾಚಾರ ಪ್ರಕರಣವೊಂದು  ಒಳಪುಟದ ಬದಲು ಮುಖಪುಟಕ್ಕೆ ಬರಬೇಕಾದರೆ ಹಲವು ರಾಜಕೀಯ ಸುದ್ದಿಗಳ ಜೊತೆ ಗುದ್ದಾಡಬೇಕಾಗುತ್ತದೆ. ಸದ್ಯ ಬರ್ಬರ  ಅಥವಾ ಅತಿ ಬರ್ಬರ ಅನ್ನಬಹುದಾದ ಅತ್ಯಾಚಾರಗಳು ಕಳೆದ ಒಂದೇ ವಾರದಲ್ಲಿ ಒಂದಕ್ಕಿಂತ ಹೆಚ್ಚು ನಡೆದಿವೆ. ಜಾರ್ಖಂಡ್‌ನ  ಚತರಾ ಎಂಬ ಜಿಲ್ಲೆಯಲ್ಲಿ 50 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಆ ಮಹಿಳೆಯ ಮರ್ಮಾಂಗಕ್ಕೆ ಲೋಹದ  ವಸ್ತುವನ್ನು ತುರುಕಲಾಗಿದೆ. ಉತ್ತರ ಪ್ರದೇಶದ ಬದೌನ್‌ನಲ್ಲಿ 50 ವರ್ಷದ ಮಹಿಳೆಯನ್ನು ಅತ್ಯಾಚಾರ ಮಾಡಿ ಸಾಯಿಸಿದವರಲ್ಲಿ  ಪ್ರಧಾನ ಆರೋಪಿ ದೇವಾಲಯವೊಂದರ ಅರ್ಚಕ. ತೀವ್ರ ರಕ್ತಸ್ರಾವದಿಂದಾಗಿ ಈ ಮಹಿಳೆ ಸಾವಿಗೀಡಾದರು. ತಮಿಳುನಾಡಿನ  ನಾಗಪಟ್ಟಣಂನಲ್ಲಿರುವ ದೇವಾಲಯದ ಆವರಣದಲ್ಲಿ 40 ವರ್ಷದ ಮಹಿಳೆಯನ್ನು ಅತ್ಯಾಚಾರಗೈಯಲಾಗಿದೆ. ನಿಜವಾಗಿ,
ಅರ್ಚಕ, ದೇವಾಲಯ ಎಂಬಿವುಗಳು ಸಾಮಾಜಿಕ ಗೌರವವನ್ನು ಪಡಕೊಂಡವುಗಳು. ಆದ್ದರಿಂದಲೇ ಪತ್ರಿಕೆಗಳು ಸುದ್ದಿಗಳಲ್ಲಿ  ದೇವಾಲಯದ ಆವರಣದಲ್ಲಿ ಅತ್ಯಾಚಾರ ಎಂದೂ ಅತ್ಯಾಚಾರ ಎಸಗಿದವರಲ್ಲಿ ಅರ್ಚಕನೇ ಪ್ರಧಾನ ಆರೋಪಿ ಎಂದೂ ಒತ್ತು  ಕೊಡಲಾಗಿದೆ. ಓರ್ವ ಸಾಮಾನ್ಯ ವ್ಯಕ್ತಿ ಅತ್ಯಾಚಾರಿ ಎನಿಸಿಕೊಳ್ಳುವುದಕ್ಕೂ ಅರ್ಚಕನೋ ಧರ್ಮಗುರುವೋ ಅತ್ಯಾಚಾರಿ ಎ ನಿಸಿಕೊಳ್ಳುವುದಕ್ಕೂ ಬಹಳ ವ್ಯತ್ಯಾಸ ಇದೆ. ಇಬ್ಬರೂ ಪೀಡಿಸಿರುವುದು ಹೆಣ್ಣನ್ನೇ ಆಗಿರಬಹುದು ಮತ್ತು ಕ್ರೌರ್ಯದಲ್ಲೂ ಸಮಾನತೆ  ಇರಬಹುದು. ಆದರೆ, ಸಮಾಜದಲ್ಲಿ ಕಾರ್ಮಿಕನಿಗೆ ಇಲ್ಲದ ವಿಶೇಷ ಮಾನ್ಯತೆ, ಗೌರವ ಅರ್ಚಕನಿಗೆ ಇದೆ. ಆತ ಧರ್ಮದ  ಅಂತಃಸತ್ವವನ್ನು ತಿಳಿದವ. ಸಮಾಜಕ್ಕೆ ಬೋಧಿಸುವವ. ಹೆಣ್ಣಿಗೆ ಧರ್ಮ ನೀಡಿರುವ ಮಾನ್ಯತೆಯನ್ನು ತಿಳಿದವ. ಆದರೆ ಆತನೇ ಹೆಣ್ಣ ನ್ನು ಕ್ರೂರವಾಗಿ ನಡೆಸಿಕೊಳ್ಳುವುದೆಂದರೆ, ಅದು ಒಟ್ಟು ಆಸ್ತಿಕ ಭಾವನೆಯನ್ನೇ ಘಾಸಿಗೊಳಿಸುತ್ತದೆ. ಹಾಗಂತ, ಈ ಮಾತು  ಅರ್ಚಕರಿಗೆ ಮಾತ್ರ ಅನ್ವಯವಲ್ಲ. ಎಲ್ಲ ಧರ್ಮದ ಧಾರ್ಮಿಕ ಗುರುಗಳಿಗೂ ಅನ್ವಯ. ವಿಷಾದ ಏನೆಂದರೆ,
ಹೆಣ್ಣಿನ ಸುರಕ್ಷಿತತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾನೂನಿನ ಮೇಲೆ ಕಾನೂನು ರಚಿತವಾಗುತ್ತಿದ್ದರೂ ಮತ್ತು ಶೈಕ್ಷಣಿಕ ಅನುಪಾತವು  ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದರೂ ಹೆಣ್ಣು ದಿನದಿಂದ ದಿನಕ್ಕೆ ಅಸುರಕ್ಷಿತ ವಲಯಕ್ಕೆ ಜಾರುತ್ತಿದ್ದಾಳೆ. ಮೇಲೆ  ಉಲ್ಲೇಖಿಸಲಾದ ಮೂರೂ ಪ್ರಕರಣಗಳ ಮಹಿಳೆಯರೂ ಯೌವನ ಪ್ರಾಯವನ್ನು ದಾಟಿದವರು. ಬದೌನ್ ಪ್ರಕರಣದಲ್ಲಂತೂ ಪೊಲೀಸ್ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ಕೇಸು ದಾಖಲಿಸುವುದಾಗಲಿ, ದೇಹವನ್ನು ಮರಣೋತ್ತರ  ಪರೀಕ್ಷೆಗೆ ಕಳುಹಿಸುವುದಾಗಲಿ ಮಾಡಿಲ್ಲ. ಅಂದರೆ, ಇದು ಶಿಕ್ಷಣದ ಕೊರತೆಯಿಂದಾಗುವ ಕ್ರೌರ್ಯ ಅಲ್ಲ. ಇದೊಂದು ಮನಸ್ಥಿತಿ. ಆ  ಮನಸ್ಥಿತಿ ಅರ್ಚಕರಲ್ಲೂ ಇದೆ, ಪೊಲೀಸ್ ಅಧಿಕಾರಿಗಳಲ್ಲೂ ಇದೆ, ಕಾರ್ಮಿಕನಲ್ಲೂ ಇದೆ, ರಾಜಕಾರಣಿಗಳಲ್ಲೂ ಇದೆ. ಶಿಕ್ಷಣವೊಂದೇ  ಇಂಥ ಮನಸ್ಥಿತಿಯನ್ನು ಬದಲಿಸಲಾರದು ಎಂಬುದಕ್ಕೆ ಜಮ್ಮುವಿನ ಕಥುವಾದಿಂದ ತೊಡಗಿ ಉತ್ತರ ಪ್ರದೇಶದ ಬದೌನ್‌ವರೆಗೆ ಸಾಲು  ಸಾಲು ಪುರಾವೆಗಳು ಲಭಿಸುತ್ತಲೂ ಇವೆ.
ಹೆಣ್ಣು ಮತ್ತು ಗಂಡು ವೈರಿಗಳಲ್ಲ. ಬಹುತೇಕ ಪ್ರತಿ ಮನೆಯಲ್ಲೂ ಹೆಣ್ಣು ಇದ್ದಾಳೆ, ಗಂಡೂ ಇದ್ದಾನೆ. ಆದ್ದರಿಂದ, ಹೆಣ್ಣಿನ  ಪರಿಚಯವೇ ಇಲ್ಲದ, ಹೆಣ್ಣಿನ ಭಾವನೆಗಳನ್ನು ಅರಿತೇ ಇಲ್ಲದ ಗಂಡುಗಳ ಒಂದು ಪ್ರತ್ಯೇಕ ದ್ವೀಪ ಎಲ್ಲೂ ಇಲ್ಲ. ಹೀಗಿರುವಾಗ  ಹೆಣ್ಣೆಂದರೆ ಹೇಗೆ ಬೇಕಾದರೂ ಬಳಸಿ ಎಸೆಯಬಹುದಾದಷ್ಟು ಅಗ್ಗದ ಮತ್ತು ದುರ್ಬಲ ವಸ್ತು ಎಂದು ಗಂಡು ಭಾವಿಸುವುದಾದರೆ  ಅದಕ್ಕೆ ಹೆಣ್ಣಿನ ಒಡನಾಟ ಇಲ್ಲದೇ ಇರುವುದು ಕಾರಣವೇ ಅಲ್ಲ. ಹಾಗಿದ್ದರೆ, ಯಾವುದು ಕಾರಣ? ಕಾನೂನುಗಳ ಬಗ್ಗೆ  ನಿರ್ಲಕ್ಷ್ಯವೋ, ಭಯ ರಹಿತ ಭಾವವೋ? ಮನೆಯಲ್ಲಿ ಪೋಷಕರಿಂದ ಸೂಕ್ತ ತರಬೇತಿ ಸಿಗದೇ ಇರುವುದರ ಪರಿಣಾಮವೋ,  ಮದ್ಯದ ಅಮಲೋ, ಸಿನಿಮಾಗಳ ಪ್ರಭಾವವೋ, ಇಂಟರ್‌ನೆಟ್ ಮೂಲಕ ಸುಲಭವಾಗಿ ಲಭ್ಯವಾಗುತ್ತಿರುವ ನೀಲಿಚಿತ್ರಗಳ  ಹಾವಳಿಯೋ? ಯಾವುದು ಕಾರಣ? ಹಾಗಂತ,
ಇಂಥ ಪ್ರಶ್ನೆಗಳು ಮತ್ತು ಚರ್ಚೆಗಳು ಈ ಮೊದಲು ಟನ್ನುಗಟ್ಟಲೆ ನಡೆದಿವೆ. ಆದರೆ, ಆ ಚರ್ಚೆಗಳಿಗೆ ಹೆಣ್ಣನ್ನು ಸುರಕ್ಷಿತಗೊಳಿಸಲು  ಸಾಧ್ಯವಾಗಿಲ್ಲ. ಬಹಳ ಮುಖ್ಯವಾಗಿ, ಹೆಚ್ಚಿನೆಲ್ಲ ಅತ್ಯಾಚಾರ ಪ್ರಕರಣಗಳಲ್ಲಿ ಮದ್ಯ ಪ್ರಮುಖ ಆರೋಪಿಯಾಗಿರುವುದನ್ನು ಗಮ ನಿಸಬಹುದಾಗಿದೆ. 2012ರ ನಿರ್ಭಯ ಪ್ರಕರಣದಿಂದ ಹಿಡಿದು ಹೈದರಾಬಾದ್ ಪ್ರಕರಣದ ವರೆಗೆ ಅಥವಾ ಪ್ರತಿದಿನದ ಅತ್ಯಾಚಾರ  ಪ್ರಕರಣಗಳ ವರೆಗೆ ಇದನ್ನು ಕಾಣಬಹುದು. ಮದ್ಯವು ವ್ಯಕ್ತಿಯ ಚಿತ್ತಸ್ವಾಸ್ಥ್ಯವನ್ನು ಕೆಡಿಸುತ್ತದೆ. ಸ್ವಾಸ್ಥ್ಯ ಕೆಟ್ಟ ಬಳಿಕ ಕೆಡುಕು  ಸಂಭವಿಸುವುದು ಅಸಹಜ ಅಲ್ಲ. ಆದ್ದರಿಂದ ಅತ್ಯಾಚಾರವನ್ನು ತಡೆಯಬೇಕೆಂದು ಬಯಸಿ ಕಾನೂನಿನ ಮೇಲೆ ಕಾನೂನು  ಮಾಡುವುದರ ಜೊತೆ ಜೊತೆಗೇ ಮದ್ಯವನ್ನು ಅಲಭ್ಯಗೊಳಿಸಬೇಕು. ಅಮಲಿನಲ್ಲಿರುವ ವ್ಯಕ್ತಿಗೆ ತಾನೇನು ಮಾಡುತ್ತಿದ್ದೇನೆ ಅಥವಾ  ತಾನು ಮಾಡುತ್ತಿರುವ ಕೃತ್ಯ ಎಷ್ಟು ಅಪಾಯಕಾರಿ ಎಂಬುದರ ಪೂರ್ಣ ತಿಳುವಳಿಕೆ ಇರುವ ಸಾಧ್ಯತೆ ಕಡಿಮೆ. ಇದ್ದರೂ  ಇರಬೇಕಾದಷ್ಟು ಗಂಭೀರತೆ ಇರುವುದಿಲ್ಲ. ಏನನ್ನೂ ಮಾಡುವ ಹುಂಬ ಧೈರ್ಯವನ್ನು ಅಮಲು ಕೊಟ್ಟು ಬಿಡುತ್ತದೆ. ಈ  ಹಿನ್ನೆಲೆಯಲ್ಲಿ ಅತ್ಯಾಚಾರವನ್ನು ತಡೆಯುವುದಕ್ಕೆ ಕೇವಲ ಕಾನೂನೊಂದೇ ಪರಿಹಾರವಾಗಿ ಕಾಣುತ್ತಿಲ್ಲ. ಅದರ ಜೊತೆಗೇ ಈ ಕಾನೂ ನುಗಳನ್ನೆಲ್ಲಾ ಮುರಿಯುವುದಕ್ಕೆ ಪ್ರಚೋದನೆ ಕೊಡುವ ಮದ್ಯವನ್ನು ನಿಷೇಧಿಸಬೇಕು. ಅದರ ಜೊತೆಗೇ, ಈಗಾಗಲೇ ನಿಷೇಧಕ್ಕೆ  ಒಳಗಾಗಿರುವ ಗಾಂಜಾದಂತಹ ಅಮಲು ಪದಾರ್ಥಗಳು ಯಾವ ಕಾರಣಕ್ಕೂ ಸಾರ್ವಜನಿಕರಿಗೆ ಲಭ್ಯವಾಗದಂತೆ  ನೋಡಿಕೊಳ್ಳಬೇಕು.
ಈ ದೇಶದ ಕಾವ್ಯ, ಕವಿತೆ, ಕತೆ, ಕಾದಂಬರಿ, ನಾಟಕ.. ಎಲ್ಲದರಲ್ಲೂ ಹೆಣ್ಣಿದ್ದಾಳೆ. ಜನಪದಗಳಲ್ಲಿ, ಲಾವಣಿಗಳಲ್ಲಿ ಆಕೆಯನ್ನು  ಕೊಂಡಾಡಲಾಗಿದೆ. ಈ ಭೂಮಿಯನ್ನೇ ತಾಯಿಯೆಂದು ಗೌರವಿಸಲಾಗುತ್ತಿದೆ. ಇಷ್ಟೆಲ್ಲಾ
 ಇದ್ದೂ ಹೆಣ್ಣು ನಿತ್ಯ ಅತ್ಯಾಚಾರದ ಭಯದಲ್ಲಿ  ಬದುಕಬೇಕಾದ ಸ್ಥಿತಿ ಎದುರಾಗಿರುವುದು ಅತ್ಯಂತ ವಿಷಾದನೀಯ ಮತ್ತು ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಸಂಗತಿ.  ನಾಲಗೆಯಲ್ಲಿ ಹೆಣ್ಣನ್ನು ಕೊಂಡಾಡುತ್ತಾ ವರ್ತನೆಯಲ್ಲಿ ಹೆಣ್ಣನ್ನು ಚೆಂಡಾಡುವ ಮಾನಸಿಕ ಸ್ಥಿತಿಗೆ ಅಂತ್ಯ ಹಾಡಲೇಬೇಕು. ಹೆಣ್ಣು ಈ  ಸಮಾಜದ ಕಣ್ಣು. ಆ ಕಣ್ಣಿಗೆ ಕೇಡು ಬರುವುದೆಂದರೆ ಅದು ಸಮಾಜ ದೃಷ್ಟಿಗೆ ಕೇಡು ಬಂದAತೆ. ಕೇಡಿನ ಕಣ್ಣುಳ್ಳ ಸಮಾಜ ಎಂದೂ  ಸ್ವಸ್ಥವಿರಲಾರದು.

Saturday, 16 January 2021

ಬಾಬರಿ: ರಚನಾತ್ಮಕ ಪ್ರತಿಕ್ರಿಯೆಯ ಸಂಕೇತ- ಧನ್ನಿಪುರ

 



ಅಯೋಧ್ಯೆಯ ಧನ್ನಿಪುರದಲ್ಲಿ ನಿರ್ಮಾಣವಾಗಲಿರುವ ಮಸೀದಿಯು ಹಲವು ಕಾರಣಗಳಿಗಾಗಿ ಗಮನ ಸೆಳೆದಿದೆ. ಬಾಬರಿ ಮಸೀದಿ  ಇದ್ದ ಜಾಗವನ್ನು ರಾಮಮಂದಿರ ನಿರ್ಮಾಣಕ್ಕೆ ಬಿಟ್ಟುಕೊಟ್ಟ ಸುಪ್ರೀಮ್ ಕೋರ್ಟು, ಅದಕ್ಕೆ ಬದಲಿಯಾಗಿ 5 ಎಕರೆ ಭೂಮಿಯನ್ನು  ಮಸೀದಿ ನಿರ್ಮಾಣಕ್ಕೆ ನೀಡುವ ಪ್ರಸ್ತಾಪ ಮುಂದಿಟ್ಟಿತು. ಈ ಪ್ರಸ್ತಾಪಕ್ಕೆ ಪರ-ವಿರೋಧ ಅಭಿಪ್ರಾಯಗಳೂ ವ್ಯಕ್ತವಾಗಿದ್ದುವು.  ಕೋರ್ಟು ಮುಂದಿರಿಸಿರುವ ಈ ಪ್ರಸ್ತಾಪವನ್ನು ತಿರಸ್ಕರಿಸಬೇಕು ಎಂದು ಒಂದು ಬಣ ವಾದಿಸಿದರೆ, ಇನ್ನೊಂದು ಬಣ ಅದನ್ನು  ಸ್ವೀಕರಿಸುವ ಇರಾದೆ ವ್ಯಕ್ತಪಡಿಸಿತು. ಅದರಂತೆ ಧನ್ನಿಪುರದಲ್ಲಿ ಸರಕಾರ ಕೊಡಮಾಡಿದ 5 ಎಕರೆ ಭೂಮಿಯನ್ನು ಸ್ವೀಕರಿಸಿತು. ಇ ದೀಗ ಆ ಕುರಿತಂತೆ ಇನ್ನಷ್ಟು ವಿವರಗಳನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಲಾಗಿದೆ. ಈ ವಿವರಗಳು ಬಹಳ ಚೇತೋಹಾರಿ.  ಸಾಮಾನ್ಯವಾಗಿ,

ಬಾಬರಿ ಮಸೀದಿಗೆ ಪರ್ಯಾಯವಾಗಿ ಅಂಥದ್ದೇ  ಇನ್ನೊಂದು ಮಸೀದಿ ನಿರ್ಮಾಣವಾಗುತ್ತದೆ ಎಂದು ಅನೇಕರು ಭಾವಿಸಿದ್ದರು.  ಸುಪ್ರೀಮ್ ಕೊಡಮಾಡಿರುವ 5 ಎಕರೆ ಭೂಮಿಯನ್ನು ಸ್ವೀಕರಿಸಬಾರದು ಎಂದು ವಾದಿಸುತ್ತಿದ್ದುದಕ್ಕೆ ಈ ಭಾವನೆಯೂ ಒಂದು  ಕಾರಣವಾಗಿತ್ತು.

ಧ್ವಂಸಗೊಳಿಸಲಾದ ಬಾಬರಿ ಮಸೀದಿಯನ್ನು ಮತ್ತೆ ಅಲ್ಲೇ  ನಿರ್ಮಾಣ ಮಾಡಬೇಕು ಎಂಬ ವಾದದ ಹಿಂದಿದ್ದುದು ಕೇವಲ ಮಸೀ ದಿಯೊಂದರ ನಿರ್ಮಾಣದ ಆಗ್ರಹವಲ್ಲ, ತೋಳುಬಲದ ಮೂಲಕ ಸಂವಿಧಾವನ್ನು ಹಾಡುಹಗಲೇ ಅವಮಾನಿಸಲಾದ ಘಟನೆಗೆ  ನ್ಯಾಯ ಸಲ್ಲಬೇಕು ಎಂಬ ಕಾರಣದಿಂದಾಗಿತ್ತು. ಈ ದೇಶದ ನ್ಯಾಯವ್ಯವಸ್ಥೆಯನ್ನು ಒಪ್ಪುವ ಯಾರೂ 1992 ಡಿಸೆಂಬರ್ 6ರಂದು  ನಡೆಸಲಾದ ಕೃತ್ಯವನ್ನು ಸಮರ್ಥಿಸುವುದಕ್ಕೆ ಸಾಧ್ಯವಿಲ್ಲ. ಅದು ನ್ಯಾಯದ ಅಣಕ. ನ್ಯಾಯಾಂಗಕ್ಕೆ ಮಾಡಲಾದ ಅಗೌರವ. ಸ್ವಾತಂತ್ರ‍್ಯ  ಲಭ್ಯವಾಗಿ 6 ದಶಕಗಳು ಕಳೆದ ಬಳಿಕವೂ ಸಂವಿಧಾನವನ್ನು ಯಥಾರೂಪದಲ್ಲಿ ಜಾರಿಗೆ ತರಲು ನಮ್ಮ ಆಡಳಿತ ವ್ಯವಸ್ಥೆಗಳು ಹೇಗೆ  ವಿಫಲವಾಗುತ್ತಿವೆ ಎಂಬುದಕ್ಕೆ ಸಾಕ್ಷ್ಯ  ಒದಗಿಸಿದ ಘಟನೆ.

ಯಾವುದೇ ಮಸೀದಿ ಅಥವಾ ಮಂದಿರ ವಿವಾದಕ್ಕೆ ಒಳಗಾಗುವುದು ಬೇರೆ, ಆ ವಿವಾದವನ್ನು ತೋಳುಬಲದಿಂದ ಬಗೆಹರಿಸುವೆವು  ಎಂದು ಸಾರುವುದು ಬೇರೆ. ಈ ದೇಶ ಸಂವಿಧಾನವನ್ನು ಒಪ್ಪಿಕೊಂಡ ಮೇಲೆ ವಿವಾದ ಪರಿಹರಿಸುವುದಕ್ಕೆ ನ್ಯಾಯಾಲಯವನ್ನು ಆ ಶ್ರಯಿಸಬೇಕಾದುದು ಪ್ರತಿಯೋರ್ವ ಪ್ರಜೆಯ ಹೊಣೆಗಾರಿಕೆ. ಆದ್ದರಿಂದ ನ್ಯಾಯಾಲಯವೆಂಬುದು ದುರ್ಬಲರು ಎಡತಾಕುವ ಜಾಗ  ಮತ್ತು ಪ್ರಬಲರಿಗೆ ಅದರ ಅಗತ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗುವುದು ಸಂವಿಧಾನಕ್ಕೆ ಅವಮಾನ ಮಾಡಿದಂತೆ. ಬಾಬರಿ  ಮಸೀದಿ ವಿವಾದವು ನ್ಯಾಯಾಲಯದಲ್ಲಿತ್ತು ಮತ್ತು ವಿಚಾರಣೆಯ ಹಂತದಲ್ಲೂ ಇತ್ತು. ಈ ನಡುವೆಯೇ ತೋಳುಬಲದ ಮೂಲಕ  ಅದನ್ನು ಉರುಳಿಸಲಾಯಿತು. ವಿರೋಧ ಎದುರಾದದ್ದು ಈ ಧ್ವಂಸಕಾರ್ಯದ ಬಗ್ಗೆ. ಬಾಬರಿ ಮಸೀದಿ ವಿವಾದದ ಅಂತಿಮ ತೀರ್ಪು  ಬರೆದ ಸುಪ್ರೀಮ್ ಕೋರ್ಟು ಕೂಡ ಈ ಧ್ವಂಸವನ್ನು ತಪ್ಪು ಎಂದಿತ್ತು. ಇದೀಗ ಸುಪ್ರೀಮ್ ನೀಡಿರುವ 5 ಎಕರೆ ಭೂಮಿಯು ಮತ್ತೆ  ದೇಶದ ಗಮನ ಸೆಳೆದಿದೆ. ನಿಜವಾಗಿ,

ಆ ಭೂಮಿಯಲ್ಲಿ ಒಂದು ಭವ್ಯ ಮಸೀದಿಯೊಂದನ್ನು ಮಾತ್ರ ಕಟ್ಟಿರುತ್ತಿದ್ದರೆ ಅದು ಸುದ್ದಿಯ ಕೇಂದ್ರವಾಗುವ ಸಾಧ್ಯತೆ ಕಡಿಮೆಯಿತ್ತು.  ಆದರೆ ಭೂಮಿಯನ್ನು ಸ್ವೀಕರಿಸಿದವರು ಬಿಡುಗಡೆಗೊಳಿಸಿರುವ ನೀಲನಕ್ಷೆಯ ವಿವರಗಳು ಕುತೂಹಲಕಾರಿಯಾಗಿವೆ. ಇಲ್ಲಿ 2000  ಮಂದಿ ಒಮ್ಮೆಗೇ ನಮಾಝï ಮಾಡಬಹುದಾದಷ್ಟು ವಿಸ್ತಾರವುಳ್ಳ ಮಸೀದಿಯ ನಿರ್ಮಾಣದ ಜೊತೆಜೊತೆಗೇ 300 ಹಾಸಿಗೆಗಳುಳ್ಳ  ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯ ಪಾಕಶಾಲೆ ಮತ್ತು ಮ್ಯೂಸಿಯಂ ಕೂಡ ನಿರ್ಮಾಣವಾಗಲಿದೆ. ಒಂದುರೀತಿಯಲ್ಲಿ, 1992  ಡಿಸೆಂಬರ್ 6ರಂದು ನಡೆದ ಐತಿಹಾಸಿಕ ಅನ್ಯಾಯಕ್ಕೆ ನೀಡಲಾದ ರಚನಾತ್ಮಕ ತಿರುಗೇಟು ಇದು. ಅಂದಹಾಗೆ,

ಮುಸ್ಲಿಮರಿಗೆ ಮಸೀದಿಯ ಕೊರತೆಯಿಲ್ಲ. ಹಾಗೆಯೇ ಮಸೀದಿಗಳೆಂದರೆ ಮುಸ್ಲಿಮರು ಮಾತ್ರ ಆರಾಧಿಸುವ ಜಾಗವೂ ಹೌದು.  ಆದ್ದರಿಂದ ಮಸೀದಿಗಳು ಹೆಚ್ಚೆಚ್ಚು ನಿರ್ಮಾಣವಾಗುವುದರಿಂದ ನಮಾಝï‌ನ ಸ್ಥಳಗಳು ಹೆಚ್ಚಾಗಬಹುದೇ ಹೊರತು ಅದರಿಂದ  ಮುಸ್ಲಿಮೇತರರಿಗೆ ಪ್ರಯೋಜನವಾಗುವುದಕ್ಕೆ ಸಾಧ್ಯವಿಲ್ಲ. ಇದು ಮಂದಿರ, ಚರ್ಚ್, ಗುರುದ್ವಾರಗಳಿಗೂ ಅನ್ವಯಿಸುತ್ತದೆ. ಆದ್ದರಿಂದ  ಉರುಳಿದ ಬಾಬರಿ ಮಸೀದಿಗೆ ಬದಲಾಗಿ ಒಂದು ಮಸೀದಿ ಕಟ್ಟುವುದು ಮುಸ್ಲಿಮ್ ಸಮುದಾಯದ ತುರ್ತು ಅಗತ್ಯವೇನೂ  ಆಗಿರಲಿಲ್ಲ. ಆದರೆ, ಆಸ್ಪತ್ರೆ, ಮ್ಯೂಸಿಯಂಗಳು ಹಾಗಲ್ಲ. ಆಸ್ಪತ್ರೆಯೆಂಬುದು ಧರ್ಮಾತೀತ. ಬಾಬರಿ ಮಸೀದಿಯನ್ನು  ಉರುಳಿಸಿದವರನ್ನೂ ಅದನ್ನು ಬೆಂಬಲಿಸಿದವರನ್ನೂ ಬೆಂಬಲಿಸದವರನ್ನೂ ಸಮಾನವಾಗಿ ಸ್ವೀಕರಿಸಿಕೊಳ್ಳುವ ಜಾಗ. ಮುಂದೊಂದು  ದಿನ ಅಂಥದ್ದೊಂದು ವಾತಾವರಣ ನಿರ್ಮಾಣವಾಗಲೂ ಬಹುದು. ಉರುಳಿಸಿದುದನ್ನು ಬೆಂಬಲಿಸಿದವರು ಅಥವಾ ಉರುಳಿಸಿದವರ  ಪೀಳಿಗೆಯೇ ಮುಂದೊಂದು ದಿನ ಈ ಆಸ್ಪತ್ರೆಯನ್ನು ಪ್ರವೇಶಿಸುವಾಗ ಹಳತು ನೆನಪಾಗಲೂಬಹುದು. ರಚನಾತ್ಮಕ ಪ್ರತಿಕ್ರಿಯೆ ಅ ನ್ನುವುದು ಇದಕ್ಕೆ. ಅವರನ್ನು ಮರು ಅವಲೋಕನಕ್ಕೆ ಮತ್ತು ಪಶ್ಚಾತ್ತಾಪಕ್ಕೆ ಇಂಥ ಬೆಳವಣಿಗೆಗಳು ಪ್ರೇರಣೆಯನ್ನು ನೀಡುತ್ತವೆ. ಇದರ  ಜೊತೆಜೊತೆಗೇ ಮ್ಯೂಸಿಯಂ ನಿರ್ಮಾಣವನ್ನೂ ಇಟ್ಟು ನೋಡಬೇಕು. ಮ್ಯೂಸಿಯಂನಲ್ಲಿ ಏನೆಲ್ಲ ಇರಲಿವೆ ಎಂಬುದು ಇನ್ನೂ  ಸ್ಪಷ್ಟವಾಗಿಲ್ಲವಾದರೂ ಆ ಮ್ಯೂಸಿಯಂ ಧ್ವಂಸಗೊಳಿಸಲಾದ ಬಾಬರಿ ಮಸೀದಿ ವಿವರಗಳನ್ನು ಒಳಗೊಂಡಿರುವ ಎಲ್ಲ ಸಾಧ್ಯತೆಗಳಿವೆ  ಮತ್ತು ಅದು ಅತೀ ಅಗತ್ಯ ಕೂಡ. ಅಷ್ಟಕ್ಕೂ,

ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದವರಿಗೆ ಮತ್ತು ಅದರ ಸಂಚು ಹೆಣೆದವರಿಗೆ ಶಿಕ್ಷೆ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಕೋರ್ಟು  ತೀರ್ಪು ಬರುವಾಗ ಅವರೆಲ್ಲ ಜೀವಂತ ಇರುತ್ತಾರೋ ಎಂಬುದರ ಬಗ್ಗೆಯೂ ಸ್ಪಷ್ಟತೆಯಿಲ್ಲ. ಈಗಾಗಲೇ ಆ ಧ್ವಂಸ ಘಟನೆಗೆ 3 ದ ಶಕಗಳಾಗುತ್ತಾ ಬಂದಿವೆ. ಆರೋಪಿಗಳಲ್ಲಿ ಹಲವರು ಸಹಜ ಸಾವಿಗೂ ಒಳಗಾಗಿದ್ದಾರೆ. ಮಾತ್ರವಲ್ಲ, ಒಂದೆರಡು ತಲೆಮಾರುಗಳ  ಬಳಿಕ ಆ ಧ್ವಂಸ ಘಟನೆಯ ನೆನಪೇ ಅಳಿದು ಹೋಗುವುದಕ್ಕೂ ಅವಕಾಶ ಇದೆ. ಆದ್ದರಿಂದ ಮ್ಯೂಸಿಯಂ ನಿರ್ಮಾಣ ಬಹಳ  ಪ್ರಾಮುಖ್ಯವಾದದ್ದು ಅನ್ನಿಸುತ್ತದೆ. ಬಾಬರಿ ಮಸೀದಿಯ ಆರಂಭದಿಂದ ಹಿಡಿದು 1992 ಡಿಸೆಂಬರ್ 6ರಂದು ಧ್ವಂಸಗೈಯಲಾದ  ಘಟನೆಯವರೆಗೆ ಎಲ್ಲ ವಿವರಗಳನ್ನೂ ವೀಕ್ಷಕರಿಗೆ ಒದಗಿಸುವ ಮ್ಯೂಸಿಯಂ ರಚನೆಯಾದರೆ ಅದರಿಂದ ಭವಿಷ್ಯದ ಪೀಳಿಗೆಯು  ವಿಸ್ಮೃತಿಗೆ ಹೋಗುವುದನ್ನು ತಪ್ಪಿಸಬಹುದಾಗಿದೆ.

ಯಾವುದೇ ಒಂದು ಸಮುದಾಯ ಸಶಕ್ತವಾಗಿ ಬೆಳೆಯಬೇಕೆಂದರೆ ಅದಕ್ಕೆ ಗತ ಇತಿಹಾಸದ ಅರಿವು ಇರಬೇಕಾಗುತ್ತದೆ. ಗತ  ತಲೆಮಾರು ಎದುರಿಸಿದ ಸವಾಲು, ಸಂಘಟಿಸಿದ ಹೋರಾಟ ಮತ್ತು ಮಾಡಿದ ತ್ಯಾಗವನ್ನು ತಿಳಿದುಕೊಂಡಿರಬೇಕಾಗುತ್ತದೆ. ಬೈತುಲ್  ಮಕ್ದಿಸ್‌ನ ಪ್ರಸ್ತಾಪ ಆದಾಗಲೆಲ್ಲ ಸಲಾಹುದ್ದೀನ್ ಅಯ್ಯೂಬಿಯವರು ನೆನಪಿಗೆ ಬರುವುದಕ್ಕೆ ಕಾರಣ ಈ ಇತಿಹಾಸದ ಅರಿವು. ಅವರ  ಹೋರಾಟದ ಯಾವ ಮಗ್ಗುಲೂ ದಾಖಲುಗೊಳ್ಳದೇ ಇರುತ್ತಿದ್ದರೆ ಇವತ್ತು ಬೈತುಲ್ ಮಕ್ದಿಸ್‌ನ ಜೊತೆ ಅವರ ನೆನಪು ಆಗುವುದಕ್ಕೆ  ಸಾಧ್ಯವಿರಲಿಲ್ಲ. ಆದ್ದರಿಂದ ಹೊಸ ತಲೆಮಾರಿಗೆ ಹಳೆ ಇತಿಹಾಸವನ್ನು ತಿಳಿಸಬೇಕಾದುದು ಅವರ ಸಶಕ್ತ ಬೆಳವಣಿಗೆಯ ದೃಷ್ಟಿಯಿಂದ  ತುಂಬಾ ಅಗತ್ಯ. ಈ ಹಿನ್ನೆಲೆಯಲ್ಲಿ ಧನ್ನಿಪುರದಲ್ಲಿ ನಿರ್ಮಾಣವಾಗುವ ಮ್ಯೂಸಿಯಂ ಮತ್ತು ಆಸ್ಪತ್ರೆ ಅತ್ಯಂತ ಬುದ್ಧಿವಂತಿಕೆಯ ನಡೆ.  ಇದು ಸ್ವಾಗತಾರ್ಹ.

ಆ ಬಿ.ಎಡ್. ವಿದ್ಯಾರ್ಥಿ ಹಾಗೇಕೆ ಮಾಡಿದ?




ಪ್ರೀತಿ, ಪ್ರೇಮವೆಂಬ ಹರೆಯದ ತಲ್ಲಣಗಳಿಗೆ ಈ ದೇಶದಲ್ಲಿ ಬಲಿಯಾಗುತ್ತಿರುವ ಜೀವಗಳ ಸಂಖ್ಯೆ ಸಣ್ಣದಲ್ಲ. ‘ಪ್ರೇಮ ನಿರಾಕರಣೆ:  ಪ್ರೇಮಿಯಿಂದ ಚೂರಿ ಇರಿತ’, ‘ಯುವತಿಗೆ ಆ್ಯಸಿಡ್ ಎರಚಿದ ಯುವಕ’, ‘ಹೆತ್ತವರ ವಿರೋಧ: ಪ್ರೇಮಿಗಳ ಆತ್ಮಹತ್ಯೆ’,  ‘ಪ್ರೇಮಿಗಳಿಬ್ಬರೂ ಪರಾರಿ..’ ಇತ್ಯಾದಿ ಶೀರ್ಷಿಕೆಗಳಲ್ಲಿ ಪ್ರತಿದಿನ ವಾರ್ತೆಗಳನ್ನು ನಾವು ಓದುತ್ತಿರುತ್ತೇವೆ. ನಮ್ಮದೇ ಕಣ್ಣೆದುರು ಬೆಳೆದ  ಯುವಕ-ಯುವತಿಯರು ಹತ್ಯೆ, ಆತ್ಮಹತ್ಯೆ, ಪರಾರಿಯಂಥ ತೀವ್ರ ನಿರ್ಧಾರಕ್ಕೆ ಹೇಗೆ ಬಂದರು ಎಂಬುದಾಗಿ ಸ್ವಲ್ಪ ದಿನ ಚರ್ಚಿಸಿ  ಬಳಿಕ ಮರೆತು ಬಿಡುತ್ತೇವೆ. ಆದರೂ ಇಂಥ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯೇನೂ ಆಗುತ್ತಿಲ್ಲ. ಕಳೆದವಾರ ಇಂಥದ್ದೇ  ಒಂದು  ಪ್ರಕರಣದ ಬಗ್ಗೆ ರಾಜ್ಯ ಹೈಕೋರ್ಟು ವಿಶ್ಲೇಷಣೆ ನಡೆಸಿದೆ. 2009ರಲ್ಲಿ ಕಲಬುರ್ಗಿ ಜಿಲ್ಲೆಯ ಅಲಂದ ತಾಲೂಕಿನಲ್ಲಿ ನಡೆದ ದುರಂತ  ಪ್ರೇಮಕತೆಯನ್ನು ವಿಚಾರಣೆ ನಡೆಸುತ್ತಾ ಪ್ರೇಮ ನಿವೇದನೆಯನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಹೆಣ್ಣಿನ ಸ್ವಾತಂತ್ರ್ಯದ ಸುತ್ತ  ಚರ್ಚೆ ನಡೆಸಿದೆ.

ಅಳಂದ ತಾಲೂಕಿನ ನವಲಗದಲ್ಲಿ ವಾಸಿಸುತ್ತಿದ್ದ ಬಿಎಡ್ ವಿದ್ಯಾರ್ಥಿ ವಿಜೇಂದ್ರ ಎಂಬವನು ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡು  18 ವರ್ಷದ ಪುಷ್ಪಾ ಎಂಬ ಯುವತಿಯ ಮನೆ ಪ್ರವೇಶಿಸಿದ್ದ. ಆ ಸಂದರ್ಭದಲ್ಲಿ ಓರ್ವ ಮಹಿಳೆಯೂ ಅಲ್ಲಿದ್ದರು. ತನ್ನನ್ನು  ಮದುವೆಯಾಗು ಎಂದು ಆತ ಪುಷ್ಪಾಳನ್ನು ಒತ್ತಾಯಿಸಿದ. ಆಕೆ ನಿರಾಕರಿಸಿದಳು. ಆತ ಚೂರಿಯಿಂದ ಪುಷ್ಪಾಳನ್ನು ಇರಿದ. ಆಕೆ  ಸಾವಿಗೀಡಾದಳು.

ತನ್ನ ಮೇಲೆ ಕರುಣೆ ತೋರಬೇಕು ಎಂದು ಅಪರಾಧಿ ಇದೀಗ ಕೋರ್ಟಿನ ಮುಂದೆ ಕೋರಿಕೊಂಡಿದ್ದ. ತಕ್ಷಣದ ಪ್ರಚೋದನೆಯು  ತನ್ನನ್ನು ಆ ರೀತಿ ವರ್ತಿಸುವಂತೆ ಪ್ರೇರೇಪಿಸಿತು. ಆಕೆಯ ನಿರಾಕರಣೆಯಿಂದ ಅಚಾನಕ್ಕಾಗಿ ಆ ಅಪರಾಧ ಸಂಭವಿಸಿಬಿಟ್ಟಿತು ಎಂಬ  ಆತನ ಕೋರಿಕೆಯನ್ನು ಕೋರ್ಟು ವಿವಿಧ ರೂಪದಲ್ಲಿ ವಿಮರ್ಶೆಗೆ ಒಡ್ಡಿತು. ವಿಜೇಂದ್ರನ ಕೋರಿಕೆ ಯಾಕೆ ತಪ್ಪು ಅಂದರೆ, ಅದು  ಸಂತ್ರಸ್ತೆಗೆ ಆಯ್ಕೆಯ ಸ್ವಾತಂತ್ರ್ಯವನ್ನೇ ನಿರಾಕರಿಸುತ್ತದೆ. ತಾನು ಯಾರನ್ನು ಮದುವೆಯಾಗಬೇಕು, ಮದುವೆಯಾಗಬಾರದು ಎಂಬುದು  ವೈಯಕ್ತಿಕ ಸ್ವಾತಂತ್ರ್ಯ. ತಕ್ಷಣದ ಪ್ರಚೋದನೆಯ ಹೆಸರಲ್ಲಿ ಪುಷ್ಪಾಳಿಗೆ ಆ ಸ್ವಾತಂತ್ರ್ಯವನ್ನು ನಿರಾಕರಿಸಲಾಗದು. ಈ ಕೃತ್ಯದಲ್ಲಿ ಇ ನ್ನೊಂದು ಭಾವವೂ ಇದೆ. ಅದೇನೆಂದರೆ, ತಾನು ಗಂಡು ಎಂಬ ಅಹಮಿಕೆ. ಈ ಭಾವಕ್ಕೂ ಆ ಕ್ರೌರ್ಯದಲ್ಲಿ ಪಾಲು ಇದೆ.  ಒಂದುವೇಳೆ, ಪುಷ್ಪಾಳ ಹೆತ್ತವರು ಒಪ್ಪಿಕೊಳ್ಳದಿದ್ದರೂ ಆಕೆಯ ಪತಿ ಯಾರಾಗಬೇಕೆಂಬ ನಿರ್ಧಾರ ಸ್ವಾತಂತ್ರ್ಯವನ್ನು ಆಕೆಯಿಂದ  ನಿರಾಕರಿಸಲಾಗದು. ಆದ್ದರಿಂದ ತಕ್ಷಣದ ಪ್ರಚೋದನೆ ಎಂಬುದು ಇಲ್ಲಿ ಪರಿಗಣನೆಗೆ ಬರುವುದಿಲ್ಲ...’ ಎಂಬ ರೀತಿಯಲ್ಲಿ ಅಭಿಪ್ರಾಯ  ಹಂಚಿಕೊಂಡ ಕೋರ್ಟು, ಅಪರಾಧಿ ವಿಜೇಂದ್ರನಿಗೆ ಜೀವಾವಧಿ ಶಿಕ್ಷೆಯನ್ನು ನೀಡಿದೆ.

ಹೆಣ್ಣು ಮತ್ತು ಗಂಡಿನ ನಡುವೆ ಆಕರ್ಷಣೆ ಹೊಸತಲ್ಲ ಮತ್ತು ತನ್ನ ಮಗ ಅಥವಾ ಮಗಳಿಗೆ ಅತ್ಯುತ್ತಮ ಸಂಗಾತಿ ಸಿಗಲಿ ಎಂದು  ಪ್ರತಿ ಹೆತ್ತವರು ಬಯಸುವುದೂ ಹೊಸತಲ್ಲ. ಹೊಸತು ಏನೆಂದರೆ, ಹರೆಯದ ಆಕರ್ಷಣೆಯೇ ಎಲ್ಲವೂ ಅಲ್ಲ ಮತ್ತು ಈ  ಆಕರ್ಷಣೆಯ ಆಚೆಗೂ ಬದುಕು ಇದೆ ಎಂಬುದನ್ನು ವಿವಿಧ ಆಧುನಿಕ ಮಾಧ್ಯಮಗಳ ಮೂಲಕ ಪ್ರತಿ ಸೆಕೆಂಡೂ ಸಾರುತ್ತಿರುವುದರ  ಹೊರತಾಗಿಯೂ ಪ್ರೇಮದ ಹೆಸರಲ್ಲಿ ಹತ್ಯೆ ಮತ್ತು ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿಲ್ಲ ಎಂಬುದು. 5 ದಶಕಗಳ ಹಿಂದಿಗೂ ಇಂದಿಗೂ ತಂತ್ರಜ್ಞಾನಗಳಿಗೆ ಸಂಬಂಧಿಸಿ ಬಹುದೊಡ್ಡ ಅಂತರವಿದೆ. ಸಿನಿಮಾ, ನಾಟಕ, ಕಾದಂಬರಿ, ಕತೆ, ಟಿ.ವಿ.  ಧಾರಾವಾಹಿ, ರಿಯಾಲಿಟಿ ಶೋಗಳು, ಧಾರ್ಮಿಕ ಬೋಧನಗೆಳೆಲ್ಲ ಶರವೇಗದಲ್ಲಿ ಜನರನ್ನು ತಲುಪುವ ಕಾಲ ಇದು. ಇವತ್ತಿನ ಯುವ  ಸಮೂಹವೂ ಹಿಂದಿನಂತಲ್ಲ. ಕೆರಿಯರ್, ಅದೂ-ಇದೂ ಎಂದು ಚಿಕ್ಕಂದಿನಿಂದಲೇ ಗುರಿ ನಿಗದಿಪಡಿಸಿಕೊಂಡು ಓಡಾಡುತ್ತಿರುತ್ತವೆ.  ವಯಸ್ಸಿಗಿಂತ ಹೆಚ್ಚು ಪ್ರೌಢತೆಯನ್ನು ಆಧುನಿಕ ತಂತ್ರಜ್ಞಾನಗಳು ಯುವ ಸಮೂಹಕ್ಕೆ ತುಂಬಿಸುತ್ತಲೂ ಇವೆ. ಹಾಗಿದ್ದೂ ಪ್ರೇಮದ  ವಿಷಯದಲ್ಲಿ ಯುವ ಸಮೂಹ ಅಪ್ರಬುದ್ಧತೆಯಿಂದ ವರ್ತಿಸಲು ಕಾರಣವೇನು?

ವಿಜೇಂದ್ರ ಬಿಎಡ್ ವಿದ್ಯಾರ್ಥಿ. ಆದ್ದರಿಂದ ಶಿಕ್ಷಣ ಕೊರತೆ ಇದಕ್ಕೆ ಕಾರಣ ಎಂದು ಹೇಳುವಂತಿಲ್ಲ. ಬಹುಶಃ ಪ್ರೇಮದ ಕುರಿತಂತೆ  ಅಥವಾ ಮಕ್ಕಳ ಮನಸ್ಸಿನಲ್ಲಾಗುವ ಪರಿವರ್ತಿನೆಯ ಸುತ್ತ ಹೆತ್ತವರು ಸೂಕ್ಷ್ಮವಾಗಿ ಗಮನಿಸದಿರುವುದಕ್ಕೂ ಇದರಲ್ಲಿ ಪಾತ್ರ  ಇರಬಹುದು ಎಂದು ತೋರುತ್ತದೆ. ಸುಮಾರು 17ರಿಂದ 22ರ ವರೆಗಿನ ಪ್ರಾಯ ಬಹಳ ನಾಜೂಕಿನದ್ದು. ದೈಹಿಕವಾಗಿ ಮಕ್ಕಳು ಇನ್ನೊಂದು ಮಜಲಿಗೆ ಪ್ರವೇಶಿಸುತ್ತಿರುವ ಮತ್ತು ವಿರುದ್ಧ ಲಿಂಗಗಳ ಬಗ್ಗೆ ಆಕರ್ಷಣೆಗೆ ಒಳಗಾಗುತ್ತಿರುವ ವಯಸ್ಸು. ಆ ಸಂದರ್ಭದಲ್ಲಿ  ಹೆತ್ತವರು ಮಕ್ಕಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರಬೇಕಾದ ಅಗತ್ಯ ಇದೆ. ಅವರಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿ,  ಅವರು ಅಮ್ಮನಲ್ಲೋ  ಅಪ್ಪನಲ್ಲೋ  ಎಲ್ಲವನ್ನೂ ಹೇಳಿಕೊಳ್ಳುವಂತಹ ವಾತಾವರಣವನ್ನು ನಿರ್ಮಿಸಬೇಕಾದ ಅಗತ್ಯ ಇದೆ. ಮಕ್ಕಳು  ಹಾಗೆ ಹೆತ್ತವರಲ್ಲಿ ಹೇಳಿಕೊಳ್ಳಬೇಕೆಂದರೆ, ಮೊದಲು ಹೆತ್ತವರು ಸ್ವತಃ ಮಾನಸಿಕವಾಗಿ ಸಜ್ಜುಗೊಳ್ಳಬೇಕು. ಮಗ ಅಥವಾ ಮಗಳು  ಆಕರ್ಷಣೆಗೆ ಒಳಗಾಗಿರುವುದನ್ನು ಹೇಳಿಕೊಂಡಾಗ ಅವರು ಆ ಸಂಗತಿಯನ್ನು ಸಹಜವಾಗಿ ಸ್ವೀಕರಿಸಿ ಪ್ರಬುದ್ಧವಾಗಿ ವರ್ತಿಸುವುದಕ್ಕೆ  ತನ್ನನ್ನು ತಾನು ಸಜ್ಜುಗೊಳಿಸಬೇಕು. ಮಕ್ಕಳು ಆ ಕ್ಷಣದಲ್ಲಿ ತಾವೇ ಸರಿ ಎಂಬ ಭಾವದಲ್ಲಿರುತ್ತಾರೆ. ಹೆತ್ತವರು ತಮ್ಮ ಸರಿಯನ್ನು  ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಸಿಟ್ಟಲ್ಲಿರುತ್ತಾರೆ. ಅದು ಆ ಹರೆಯದ ಸಮಸ್ಯೆ. ಅದಕ್ಕೆ ನಾಜೂಕಿನಿಂದ ಸ್ಪಂದಿಸಬೇಕೇ ಹೊರತು  ಕಡ್ಡಿಮುರಿದಂತೆ ಉತ್ತರಿಸುವುದರಿಂದ ಕೆಲವೊಮ್ಮೆ ಅನಾಹುತಕ್ಕೂ ಅದು ಕಾರಣವಾದೀತು.

ಸಾಮಾನ್ಯವಾಗಿ ಪ್ರೇಮದ ಕಾರಣಕ್ಕಾಗಿ ಆತ್ಮಹತ್ಯೆಯೋ ಹತ್ಯೆಯೋ ನಡೆದಾಗ ಅದಕ್ಕೆ ಯುವ ಸಮೂಹದಲ್ಲಿ ವ್ಯಕ್ತವಾಗುವ ಪ್ರತಿಕ್ರಿಯೆ  ಮತ್ತು ಹಿರಿಯರಿಂದ ವ್ಯಕ್ತವಾಗುವ ಪ್ರತಿಕ್ರಿಯೆಗಳಲ್ಲಿ ಯಾವಾಗಲೂ ವ್ಯತ್ಯಾಸ ಇರುತ್ತದೆ. ಯುವಸಮೂಹದ ಪ್ರತಿಕ್ರಿಯೆಯಲ್ಲಿ ಆವೇಶ  ಇದ್ದರೆ ಹಿರಿಯ ತಲೆಮಾರಿನ ಪ್ರತಿಕ್ರಿಯೆಯಲ್ಲಿ ಸಹನೆ ಮತ್ತು ಕಾಳಜಿ ವ್ಯಕ್ತವಾಗುತ್ತದೆ. ಹಿರಿಯರು ಮತ್ತು ಕಿರಿಯರ ನಡುವಿನ  ಪ್ರಾಯದ ವ್ಯತ್ಯಾಸ ಮತ್ತು ಅನುಭವದ ವ್ಯತ್ಯಾಸವೇ ಈ ಪ್ರತಿಕ್ರಿಯೆಗಳ ವ್ಯತ್ಯಾಸಕ್ಕೆ ಕಾರಣ. ಸದ್ಯ ಹಿರಿಯರ ಈ ಅನುಭವದ ಪಾಠವು  ಕಿರಿಯ ತಲೆಮಾರಿಗೆ ಪರಿಣಾಮಕಾರಿಯಾಗಿ ವರ್ಗಾವಣೆಯಾಗುವುದಕ್ಕೆ ರಂಗ ಸಜ್ಜುಗೊಳ್ಳಬೇಕಿದೆ. ಪ್ರೇಮದ ವಿಷಯದಲ್ಲಿ  ಕಿರಿಯರಿಗೆ ತರಬೇತಿ ಕೊಡುವುದಕ್ಕಿಂತಲೂ ಹಿರಿಯರಿಗೆ ತರಬೇತಿ ಕೊಡುವ ಅಗತ್ಯವಿದೆ. ತಮ್ಮ ಮನೆಯ ಮಕ್ಕಳನ್ನು ಹೇಗೆ  ವಿಶ್ವಾಸಕ್ಕೆ ಪಡೆದುಕೊಳ್ಳಬೇಕು, ಅವರು ಎಲ್ಲವನ್ನೂ ಮನೆಯಲ್ಲಿ ಹಂಚಿಕೊಳ್ಳುವಂತಹ ವಾತಾವರಣವನ್ನು ಹೇಗೆ ನಿರ್ಮಿಸಬೇಕು  ಮತ್ತು ಅಂಥ ಸಂದರ್ಭದಲ್ಲಿ ಹೆತ್ತವರಾಗಿ ತಾವು ಹೇಗೆ ವರ್ತಿಸಬೇಕು ಎಂಬ ಬಗ್ಗೆ ಹಿರಿಯರಿಗೆ ತರಬೇತಿ ನೀಡಬೇಕಾದ  ಅಗತ್ಯವಿದೆ. 

ಹಿರಿಯರಲ್ಲಿ ಅನುಭವವಿದೆ. ಆದರೆ ಅದರ ಸಂಪೂರ್ಣ ಲಾಭವು ಕಿರಿಯರಿಗೆ ಲಭ್ಯವಾಗುತ್ತಿಲ್ಲ. ಅನುಭವದ ಪಾಠವನ್ನು  ಕಿರಿಯರಿಗೆ ತಲುಪಿಸುವುದಕ್ಕೆ ಪೂರಕವಾಗಿ ಮನೆಯ ವಾತಾವರಣವನ್ನು ಸಜ್ಜುಗೊಳಿಸುವುದಕ್ಕೆ ಹೆಚ್ಚಿನ ಬಾರಿ ಹಿರಿಯರು  ವಿಫಲವಾಗುತ್ತಲೂ ಇದ್ದಾರೆ. ಈ ದಿಸೆಯಲ್ಲಿ ಗಂಭೀರ ಪ್ರಯತ್ನಗಳಾಗಬೇಕಿದೆ. ಯುವಸಮೂಹ ಅಪಾಯಕಾರಿ ನಿರ್ಧಾರಗಳನ್ನು  ತೆಗೆದುಕೊಳ್ಳದಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಪ್ರೇಮವೇ ಬದುಕಲ್ಲ ಎಂಬುದನ್ನು ಯುವಸಮೂಹಕ್ಕೆ ಅರ್ಥ  ಮಾಡಿಸಬೇಕಿದೆ.

ಕಾಂಗ್ರೆಸ್: ಬಿಜೆಪಿಯ ಬಿ ಪಕ್ಷವಾಗುವುದು ಪರಿಹಾರವಲ್ಲ



ತಾನು ಹೇಗೆ ಗುರುತಿಸಿಕೊಳ್ಳಬೇಕು ಎಂಬ ಸೈದ್ಧಾಂತಿಕ ಗೊಂದಲವೊಂದನ್ನು ಕಾಂಗ್ರೆಸ್‍ನೊಳಗೆ ಹುಟ್ಟು ಹಾಕಲು ಬಿಜೆಪಿ ಯಶಸ್ವಿಯಾಗಿದೆ ಎಂಬುದಕ್ಕೆ ಆಗಾಗ್ಗೆ ಸಾಕ್ಷ್ಯಗಳು ಲಭ್ಯವಾಗುತ್ತಲೇ ಇವೆ. ಇಂಥದ್ದೊಂದು  ಸಾಕ್ಷ್ಯ ಇದೀಗ ಉತ್ತರ ಪ್ರದೇಶದಿಂದ  ಲಭ್ಯವಾಗಿದೆ. ಉತ್ತರ ಪ್ರದೇಶದಾದ್ಯಂತ ಕಾಂಗ್ರೆಸ್ ಪಕ್ಷವು ಗಾಯಿ ಬಚಾವೋ, ಕಿಸಾನ್ ಬಚಾವೊ ಪಾದಯಾತ್ರೆಯನ್ನು  ಕೈಗೊಂಡಿದೆಯಲ್ಲದೇ ತಿರಂಗಾ ಯಾತ್ರೆಗೂ ಚಾಲನೆ ನೀಡಿದೆ. ಹಾಗೆಯೇ ರಾಷ್ಟ್ರಧ್ವಜದೊಂದಿಗೆ ಸೆಲ್ಫಿ ಎಂಬ ಆನ್‍ಲೈನ್ ಅಭಿಯಾನವನ್ನೂ ಆರಂಭಿಸಿದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲದ ವಿರೋಧ ಪಕ್ಷ. ಅಖಿಲೇಶ್ ಯಾದವ್ ಮತ್ತು ಮಾಯಾವತಿಯಧ್ವಯರ ನಡುವೆ  ನಜ್ಜುಗುಜ್ಜಾಗಿರುವ ಕಾಂಗ್ರೆಸ್‍ಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ವಿಶಿಷ್ಟ ತಂತ್ರಗಳ ಅಗತ್ಯವಿದೆಯೆಂಬುದು ಒಪ್ಪತಕ್ಕ ಮಾತು.  ಅಂದಹಾಗೆ, ಹಾಥರಸ್ ಪ್ರಕರಣದಲ್ಲಿ ಕಾಂಗ್ರೆಸ್‍ನ ನಡೆ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲ, ದೇಶದಲ್ಲೇ  ಮೆಚ್ಚುಗೆಯನ್ನು ಪಡೆಯಿತು.  ಉತ್ತರ ಪ್ರದೇಶದ ಪೊಲೀಸ್ ಪಡೆಯನ್ನು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರು ಎದುರಿಸಿ ನಿಂತ ರೀತಿ ಸರ್ವರ ಗಮನವನ್ನೂ ಸೆಳೆದಿತ್ತು. ಮೊದಲ ಬಾರಿ ಯೋಗಿ ಸರಕಾರ ಕಾಂಗ್ರೆಸ್‍ನ ಮುಂದೆ ಶರಣಾಗಿತ್ತು. ನಿಜವಾಗಿ, ಕಾಂಗ್ರೆಸ್ ಈ ದೇಶದಲ್ಲಿ  ಗುರುತಿಸಿಕೊಳ್ಳಬೇಕಾದದ್ದೇ  ಹೀಗೆ. ಪ್ರಭುತ್ವದ ಜನವಿರೋಧಿ ನೀತಿಗಳನ್ನು ಎತ್ತಿಕೊಂಡು ಜನ ಚಳವಳಿ ಕಟ್ಟುವುದು ಅನುಭವಿ  ರಾಜಕೀಯ ಪಕ್ಷವೆಂಬ ನೆಲೆಯಲ್ಲಿ ಅದರ ಹೊಣೆಗಾರಿಕೆ. ಆದರೆ,
2014ರ ಬಳಿಕ ದೇಶದಲ್ಲಾದ ರಾಜಕೀಯ ಬದಲಾವಣೆಯು ಮಿಕ್ಕೆಲ್ಲ ಪಕ್ಷಗಳಿಗಿಂತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದ್ದು  ಕಾಂಗ್ರೆಸ್ ಪಕ್ಷದ ಮೇಲೆ. ಮನ್‍ಮೋಹನ್ ಸಿಂಗ್ ಪರದೆಯ ಹಿಂದೆ ಸರಿದರು. ಮಾರ್ಗದರ್ಶನ ಮಾಡಬೇಕಿದ್ದ ಪ್ರಣವ್  ಮುಖರ್ಜಿ ರಾಷ್ಟ್ರಪತಿಯಾದರು. ಮಾತ್ರವಲ್ಲ, ಕಾಂಗ್ರೆಸ್‍ನೊಂದಿಗೆ ಅಂತರವನ್ನು ಕಾಯ್ದುಕೊಂಡರು. ಚಿದಂಬರಂ, ಶಶಿ  ತರೂರ್‍ರಂತಹವರನ್ನು ಕಾನೂನು ಬೆನ್ನಟ್ಟಿತು. ಸೋನಿಯಾ ಗಾಂಧಿಯವರನ್ನು ಅನಾರೋಗ್ಯ ಇನ್ನಿಲ್ಲದಂತೆ ಕಾಡತೊಡಗಿತು.  ರಾಹುಲ್ ಗಾಂಧಿಯವರು ಪಕ್ಷದ ಚುಕ್ಕಾಣಿ ಹಿಡಿದರಾದರೂ ಅವರ ಬೆನ್ನಿಗೆ ನಿಲ್ಲುವಲ್ಲಿ ಉಳಿದ ಹಿರಿಯ ನಾಯಕರು ಹಿಂಜರಿಕೆ  ತೋರಿದರು. ರಾಹುಲ್ ಮೇಲೆ ಬಿಜೆಪಿಯ ಹಿರಿ ನಾಯಕರಿಂದ ಹಿಡಿದು ಮರಿ ನಾಯಕರ ವರೆಗೆ ಎಲ್ಲರೂ ಪ್ರತಿದಿನ ವ್ಯಂಗ್ಯ,  ಟೀಕೆ, ಭತ್ರ್ಸನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾಗ್ಯೂ ಈ ನಾಯಕರು ಅವರ ರಕ್ಷಣೆಗೆ ನಿಲ್ಲುವ ಬದಲು ತಮ್ಮದೇ  ವಿಚಾರಧಾರೆಯನ್ನು ಟ್ವೀಟ್ ಮಾಡುತ್ತಾ, ಅವಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸಿದರು. ಒಂದೋ ರಾಹುಲ್ ಗಾಂಧಿ  ಪಕ್ಷಾಧ್ಯಕ್ಷ ಹುದ್ದೆ ವಹಿಸಿಕೊಳ್ಳುವುದನ್ನು ಇವರು ಒಪ್ಪಬಾರದಿತ್ತು ಅಥವಾ ಒಪ್ಪಿಕೊಂಡ ಮೇಲೆ ಬೆಂಬಲಿಸಬೇಕಿತ್ತು. ಆದರೆ,
ಇವಾವುವೂ ನಡೆಯಲಿಲ್ಲ. ಕಾಶ್ಮೀರದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಪಡಿಸಿದಾಗ ಅಥವಾ ತ್ರಿವಳಿ ತಲಾಕ್‍ಗೆ ಅತ್ಯಂತ  ಅಸಮರ್ಪಕ ಮತ್ತು ಮಹಿಳಾ ವಿರೋಧಿಯಾದ ಕಾನೂನನ್ನು ಜಾರಿಗೆ ತಂದಾಗ ಅಥವಾ ಬಾಬರಿ ಮಸೀದಿ ಪ್ರಕರಣದಲ್ಲಿ  ಸುಪ್ರೀಮ್ ತೀರ್ಪು ಬಂದಾಗ... ಈ ಎಲ್ಲ ಸಂದರ್ಭಗಳಲ್ಲಿ ಕಾಂಗ್ರೆಸ್ ನಾಯಕರು ತಮ್ಮದೇ ಆದ ಬೇರೆ ಬೇರೆ ಅಭಿಪ್ರಾಯಗಳನ್ನು  ವ್ಯಕ್ತಪಡಿಸಿದರೇ ಹೊರತು ಒಂದು ಪಕ್ಷವಾಗಿ ಭಾರತೀಯರ ಮುಂದೆ ಕಾಣಿಸಿಕೊಳ್ಳಲಿಲ್ಲ. ಒಬ್ಬೊಬ್ಬ ನಾಯಕರು ಒಂದೊಂದು  ಅಭಿಪ್ರಾಯ ಹಂಚಿಕೊಂಡರು. ಅದೇವೇಳೆ, ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತನಿಂದ ಹಿಡಿದು ಪ್ರಧಾನಿಯವರೆಗೆ ಎಲ್ಲರ  ಅಭಿಪ್ರಾಯಗಳಲ್ಲೂ ಎಷ್ಟು ಸಾಮ್ಯತೆ ಇತ್ತೆಂದರೆ,
ಗೊಂದಲದ ಸಣ್ಣ ಎಳೆಯೂ ಅಲ್ಲಿರಲಿಲ್ಲ. ಕಾಂಗ್ರೆಸ್‍ನ ವೈಚಾರಿಕ ಸ್ವಾತಂತ್ರ್ಯವನ್ನು ಈ ಭಿನ್ನ ಅಭಿಪ್ರಾಯ ಸ್ಪಷ್ಟಪಡಿಸುತ್ತದೆ ಮತ್ತು  ಇದು ಪ್ರಜಾತಂತ್ರದ ಸೌಂದರ್ಯ ಎಂದು ಸಮರ್ಥಿಸಿಕೊಳ್ಳಬಹುದಾದರೂ ಮುಖ್ಯ ವಿಷಯಗಳಲ್ಲಿ ಈ ಮಟ್ಟದ ಭಿನ್ನಾಭಿಪ್ರಾಯವು  ಪಕ್ಷವನ್ನು ಎಲ್ಲಿಗೆ ತಲುಪಿಸೀತು ಎಂಬ ಪ್ರಶ್ನೆಗೂ ಕಾರಣವಾಗುತ್ತದೆ. ಜನರಲ್ಲೂ ಈ ಭಿನ್ನ ಅಭಿಪ್ರಾಯಗಳು ಗೊಂದಲವನ್ನು ಹುಟ್ಟು  ಹಾಕುತ್ತದೆ. ಕಾಂಗ್ರೆಸ್‍ನ ಇಂದಿನ ದಯನೀಯ ಸ್ಥಿತಿಯಲ್ಲಿ ಈ ವೈಚಾರಿಕ ಅಸ್ಪಷ್ಟತೆಗೂ ಬಹುದೊಡ್ಡ ಪಾಲಿದೆ. ಈ ಗೊಂದಲದಿಂದ  ಲಾಭವಾದದ್ದು ಬಿಜೆಪಿಗೆ. ಅದು ರಾಹುಲ್ ಗಾಂಧಿಯನ್ನೇ ಪ್ರಶ್ನೆಯ ಮೊನೆಯಲ್ಲಿಟ್ಟು ಪ್ರತಿದಿನ ಚುಚ್ಚತೊಡಗಿತು. ಅವರನ್ನು  ನಾಲಾಯಕ್ ಎಂಬಂತೆ ಪದೇ ಪದೇ ಬಿಂಬಿಸಿತು. ಈ ನಡುವೆ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಬಿಜೆಪಿ ಪದೇ ಪದೇ ಜಾರಿಗೆ  ತರುತ್ತಿರುವ ಕಾಯಿದೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬ ಗೊಂದಲ ಕಾಂಗ್ರೆಸ್‍ನಲ್ಲಿ ದಿನೇದಿನೇ ಜಟಿಲವಾಗತೊಡಗಿತು. ಎಲ್ಲಾದರೂ  ಕಾಯಿದೆಯನ್ನು ವಿರೋಧಿಸಿದರೆ ಬಿಜೆಪಿಯಿಂದ ಎಲ್ಲಿ ಮುಸ್ಲಿಮ್ ಓಲೈಕೆಯ ಪಟ್ಟ ದಕ್ಕುವುದೋ ಎಂಬ ಭಯ. ಹಾಗಂತ,  ವಿರೋಧಿಸದಿದ್ದರೆ ತನ್ನ ಅಗತ್ಯವೇನು ಎಂಬ ಪ್ರಶ್ನೆ. 2014ರಲ್ಲಿ ಆರಂಭವಾದ ಈ ಗೊಂದಲವು ಬರಬರುತ್ತಾ ತೀವ್ರ ರೂಪವನ್ನು  ಪಡೆದುಕೊಳ್ಳತೊಡಗಿತು. ಈ ಕಾರಣದಿಂದಾಗಿ ತೀವ್ರ ಟೀಕೆಗೂ ಗುರಿಯಾಯಿತು.
ಇದೀಗ ಉತ್ತರ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿರುವ ಗಾಯಿ ಬಚಾವೋ ಅಭಿಯಾನವು ಇಂಥದ್ದೇ  ಒಂದು ಗೊಂದಲದ ಕೂಸು  ಎಂದೇ ಹೇಳಬೇಕಾಗುತ್ತದೆ. ಉತ್ತರ ಪ್ರದೇಶದಲ್ಲಿ ಗೋವುಗಳು ಬೀದಿಗೆ ಬಿದ್ದಿವೆ ಮತ್ತು ಅವುಗಳ ಪೋಷಣೆಯಲ್ಲಿ ಗೋಶಾಲೆಗಳು  ವಿಫಲವಾಗಿವೆ ಎಂಬುದು ಈ ಗಾಯಿ ಬಚಾವೋ ಅಭಿಯಾನಕ್ಕೆ ಕಾರಣವೆಂದು ಹೇಳಬಹುದಾದರೂ ಈ ಕಾರಣವನ್ನು ಮೀರಿ  ನಿಲ್ಲುವುದಕ್ಕೆ ಬಿಜೆಪಿಗೆ ಸಾಧ್ಯವಿದೆ. ಗೋವನ್ನು ಮುಂದಿಟ್ಟು ರಾಜಕೀಯ ಪ್ರಾರಂಭಿಸಿದ್ದು ಬಿಜೆಪಿ. ಗೋಹತ್ಯಾ ನಿಷೇಧ ಕಾಯ್ದೆಯನ್ನು  ಉತ್ತರ ಪ್ರದೇಶದಲ್ಲಿ ಕಠಿಣವಾಗಿ ಜಾರಿಗೊಳಿಸುತ್ತಿರುವುದಾಗಿ ಹೇಳುತ್ತಿರುವುದೂ ಬಿಜೆಪಿ. ಆದ್ದರಿಂದ ಕಾಂಗ್ರೆಸ್‍ನ ಗಾಯಿ  ಬಚಾವೋದಿಂದ ಜನರು ಪ್ರಭಾವಿತರಾಗಿ ಬಿಜೆಪಿ ವಿರೋಧಿಯಾಗುತ್ತಾರೆಂದು ನಂಬುವುದು ಅಸೂಕ್ತ. ಗೋವಿಗೆ ಸಂಬಂಧಿಸಿ  ಈಗಾಗಲೇ ಓಟು ಪೇಟೆಂಟ್ ಪಡೆದುಕೊಂಡಿರುವ ಬಿಜೆಪಿಯನ್ನು ಗಾಯಿ ಬಚಾವೋದಿಂದ ಅಲುಗಾಡಿಸಲು ಕಾಂಗ್ರೆಸ್‍ಗೆ ಸಾಧ್ಯವಿಲ್ಲ.  ಅಲ್ಲದೇ ಜನರಿಗೆ ಇನ್ನೊಂದು ಬಿಜೆಪಿಯ ಅಗತ್ಯವೂ ಇಲ್ಲ. ಕಾಂಗ್ರೆಸನ್ನು ಇನ್ನೊಂದು ಬಿಜೆಪಿಯಾಗಿ ಜನರು ಸ್ವೀಕರಿಸುವುದಕ್ಕೂ  ಸಾಧ್ಯವಿಲ್ಲ. ಸದ್ಯದ ಅಗತ್ಯ ಏನೆಂದರೆ,
ಗೋವಿನ ಹೆಸರಿನಲ್ಲಿ ನಡೆಯುತ್ತಿರುವ ಸುಳ್ಳುಗಳನ್ನು ಜನರಿಗೆ ತಿಳಿಸುವ ಅಭಿಯಾನ ಕೈಗೊಳ್ಳುವುದು. ವಿದೇಶಕ್ಕೆ ಗೋಮಾಂಸ ರಫ್ತು  ಮಾಡುವುದರಲ್ಲಿ ಭಾರತ ಜಾಗತಿಕವಾಗಿಯೇ ಈಗಲೂ ಪ್ರಥಮ ಅಥವಾ ದ್ವಿತೀಯ ಸ್ಥಾನಗಳಲ್ಲಿ ಸ್ಥಿರವಾಗಿರುವುದನ್ನು  ಪರಿಣಾಮಕಾರಿಯಾಗಿ ಜನರ ಮನಸ್ಸಿಗೆ ಮುಟ್ಟಿಸುವುದು. ಹಾಗೆಯೇ ಉತ್ತರ ಪ್ರದೇಶದ ಸರಕಾರ ಜಾರಿಗೆ ತರುತ್ತಿರುವ ಸಂವಿಧಾನ  ವಿರೋಧಿ ಕಾಯ್ದೆಗಳ ಬಗ್ಗೆ ಜನಜಾಗೃತಿ ಮೂಡಿಸುವುದು. ಹಾಥರಸ್ ಪ್ರಕರಣದಲ್ಲಿ ತೋರಿದಂಥ ನಿರ್ಭೀತಿ ಚಳವಳಿಯನ್ನು  ಹಮ್ಮಿಕೊಳ್ಳುವುದು. ಹಾಗಂತ,
ಇದು ಉತ್ತರ ಪ್ರದೇಶಕ್ಕೆ ಮಾತ್ರ ಅನ್ವಯವಾಗುವ ಮಾತಲ್ಲ. ಕಾಂಗ್ರೆಸ್ ಮೊಟ್ಟಮೊದಲು ಬಿಜೆಪಿಯ ಬಿ ಪಕ್ಷವಾಗುವ ಇರಾದೆಯನ್ನು  ಕೈಬಿಡಬೇಕು. ಸಂವಿಧಾನವನ್ನು ಎತ್ತಿ ಹಿಡಿಯುವ ವೇಳೆ, ಬಿಜೆಪಿ ಏನು ಹೇಳುತ್ತೋ ಎಂಬ ಅಳುಕು ಅದನ್ನು ಕಾಡಬಾರದು. ಈ  ದೇಶಕ್ಕೆ ಈಗ ಪ್ರಬಲ ಜಾತ್ಯತೀತ ಮತ್ತು ಸರ್ವರನ್ನೂ ಜೊತೆಗೆ ಕೊಂಡೊಯ್ಯುವ ಪಕ್ಷವೊಂದರ ಅಗತ್ಯವಿದೆ. ರೈತ ಪ್ರತಿಭಟನೆ  ಇವತ್ತು ಇಷ್ಟು ದೀರ್ಘ ಅವಧಿವರೆಗೆ ಸಾಗಿಯೂ ಪರಿಹಾರಗೊಳ್ಳದೇ ಹೋಗಿದ್ದರೆ ಮತ್ತು ಕೇಂದ್ರ ಸರಕಾರ ರೈತರನ್ನು  ಸತಾಯಿಸುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ದುರ್ಬಲವಾಗಿರುವುದೂ ಒಂದು ಕಾರಣವಾಗಿದೆ. ರೈತರ ಪರ ದೇಶದಾದ್ಯಂತ ಜನಬೆಂಬಲವ ನ್ನು ಹುಟ್ಟು ಹಾಕುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಕಾಂಗ್ರೆಸ್ ವೈಚಾರಿಕ ಅಸ್ಪಷ್ಟತೆಯನ್ನು ಮೊದಲು ಸರಿಪಡಿಸಿಕೊಳ್ಳಲಿ. ಬಿಜೆಪಿಯ  ಪ್ರಭಾವಳಿಯಿಂದ ಹೊರಬರಲಿ. 

ಪಾಕ್‌ನಲ್ಲಿ ದೇಗುಲ ಒಡೆದರು...




ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಪರಮ ಸುಖಿಗಳಾಗಿ ಮತ್ತು ಸಂಪೂರ್ಣ ಹಕ್ಕು ಸ್ವಾತಂತ್ರ್ಯದೊಂದಿಗೆ ಬದುಕುತ್ತಿದ್ದಾರೆ ಎಂದು ಯಾರೂ ಹೇಳುತ್ತಿಲ್ಲ. ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಬಹುಸಂಖ್ಯಾತರ ಅಹಂ ಸವಾರಿ ಮಾಡುತ್ತಿರುವ ಸುದ್ದಿಗಳನ್ನು ನಾವು ಆಗಾಗ ಓದುತ್ತಿರುತ್ತೇವೆ. ಆದರೆ ಕಳೆದವಾರ ನಡೆದ ಘಟನೆಯೊಂದು ಪಾಕ್ ಟೀಕಾಕಾರರನ್ನೇ ನಿಬ್ಬೆರಗುಗೊಳಿಸಿದೆ. ಪಾಕ್‌ನ ಖೈಬರ್ ಫಖ್ತೂನ್ ಪ್ರಾಂತದ ತರ‍್ರಿ ಎಂಬಲ್ಲಿಯ ಸಂತ ಪರಮ ಹಂಸಜೀ ಮಹಾರಾಜ್‌ರ ಮಂದಿರವನ್ನು ಭಾರೀ ಸಂಖ್ಯೆಯಲ್ಲಿದ್ದ ದುಷ್ಕರ್ಮಿಗಳು ಬೆಂಕಿಕೊಟ್ಟು ಸುಟ್ಟು ಹಾಕಿದ್ದರು. ಈ ಮಂದಿರ ಬಹಳ ಹಳೆಯದು. ಸ್ವಾತಂತ್ರ್ಯ  ಪೂರ್ವದ್ದು. 1947ರಲ್ಲಿ ಭಾರತವು ವಿಭಜನೆಯಾದಾಗ ಈ ಮಂದಿರದೊಂದಿಗೆ ಧಾರ್ಮಿಕ ಸಂಬಂಧ  ಇಟ್ಟುಕೊಂಡಿದ್ದ ಹಿಂದೂಗಳೆಲ್ಲ ಭಾರತಕ್ಕೆ ಓಡಿ ಬಂದರು. ಈ ಕಾರಣದಿಂದಾಗಿ ಈ ಮಂದಿರ 1947ರ ಬಳಿಕ ಪೂಜೆ-ಪುರಸ್ಕಾರಗಳಿಲ್ಲದೇ ಅನಾಥವಾಗಿತ್ತು. 4 ವರ್ಷಗಳ ಹಿಂದಷ್ಟೇ ಈ ಮಂದಿರವನ್ನು ಪಾಕ್ ಸುಪ್ರೀಮ್ ಕೋರ್ಟು ಹಿಂದೂಗಳಿಗೆ ಒಪ್ಪಿಸಿತ್ತು. ಆ ಬಳಿಕ ಈ ಮಂದಿರವು ಯಾತ್ರಾ ಸ್ಥಳವಾಗಿ ಮಾರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಈ ಮಂದಿರದ ಜೀರ್ಣೋದ್ದಾರ ಮತ್ತು ವಿಸ್ತರಣಾ ಕಾರ್ಯವೂ ಇತ್ತೀಚೆಗೆ ನಡೆಯುತ್ತಿತ್ತು. ಇದನ್ನು ಸಹಿಸದ ಮುಸ್ಲಿಮರ ದೊಡ್ಡದೊಂದು ಗುಂಪು ಮಂದಿರಕ್ಕೆ ದಾಳಿ ಮಾಡಿ ಸುಟ್ಟು ಹಾಕಿತು. ಆದರೆ ಈ ಘಟನೆಯ ಮೂರೇ ದಿನಗಳೊಳಗೆ ಪಾಕ್ ಸುಪ್ರೀಮ್ ಕೋರ್ಟ್ ಮತ್ತು ಖೈಬರ್ ಫಖ್ತೂನ್‌ನ ಸರಕಾರ ತೆಗೆದುಕೊಂಡ ಕ್ರಮ ಸರ್ವರ ಪ್ರಶಂಸೆಗೂ ಪಾತ್ರವಾಗಿದೆ. ಸುಪ್ರೀಮ್ ಕೋರ್ಟು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತಲ್ಲದೇ, ತನಿಖೆ ನಡೆಸುವುದಕ್ಕಾಗಿ ಏಕ ಸದಸ್ಯ ಆಯೋಗವನ್ನು ನೇಮಿಸಿತು. ಪಾಕ್ ಪಾರ್ಲಿಮೆಂಟ್ ಸದಸ್ಯ ಡಾ| ರಮೇಶ್ ಕುಮಾರ್ ಜೊತೆ ಪಾಕ್ ಸುಪ್ರೀಮ್‌ನ ಮುಖ್ಯ ನ್ಯಾಯಾಧೀಶ ಗುಲ್ಝಾರ್ ಅಹ್ಮದ್ ಮಾತುಕತೆ ನಡೆಸುವ ಮೂಲಕ ಅಭೂತಪೂರ್ವ ಕಾಳಜಿ ಪ್ರಕಟಿಸಿದರು. ಪಾಕ್ ಸರಕಾರವು 100 ಮಂದಿಯನ್ನು ಬಂಧಿಸಿತಲ್ಲದೇ ಎಫ್‌ಐಆರ್‌ನಲ್ಲಿ 350 ಮಂದಿಯನ್ನು ಹೆಸರಿಸಿತು. ಅಲ್ಲದೆ ಸರಕಾರಿ ವೆಚ್ಚದಲ್ಲಿ ಸಂತ ಪರಮ ಹಂಸಜೀ ಮಹಾರಾಜ್ ಅವರ ಮಂದಿರವನ್ನು ಪುನರ್ ನಿರ್ಮಿಸಿಕೊಡುವುದಾಗಿ ವಾಗ್ದಾನ ಮಾಡಿತು. ಹಾಗಂತ,
ಇದು ಮೊದಲ ಪ್ರಕರಣ ಅಲ್ಲ.
2016 ರಲ್ಲೂ ಇಂಥದ್ದೇ ಧ್ವಂಸ ಕಾರ್ಯ ನಡೆದಿತ್ತು. ಕಮರ್ಷಿಯಲ್ ಕಟ್ಟಡ ಕಟ್ಟುವ ಉದ್ದೇಶದಿಂದ ರಹಸ್ಯವಾಗಿ ಮಂದಿರವೊಂದನ್ನು ಉರುಳಿಸಲಾಗಿದೆ ಎಂದು ಪೇಶಾವರದ ಹೈಕೋರ್ಟ್ ಗೆ  ಮುಜೀಬರ‍್ರಹ್ಮಾನ್ ಮತ್ತು ವಾಕಿಫ್ ಅಹ್ಮದ್‌ರು ದೂರು ಕೊಟ್ಟಿದ್ದರು. ಅಲ್ಪಸಂಖ್ಯಾತರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವುದಾಗಿ ಈ ಸಂದರ್ಭದಲ್ಲಿ ಖೈಬರ್ ಫಖ್ತೂನ್‌ನ ಸರಕಾರವು ವಾಗ್ದಾನ ಮಾಡಿತ್ತು. ನಿಜವಾಗಿ,
ಪ್ರಜಾತಂತ್ರ ಗಣರಾಜ್ಯವಾಗಿ ಗುರುತಿಸಿಕೊಂಡಿರುವ ಭಾರತ ಮತ್ತು ಇಸ್ಲಾಮಿಕ್ ರಾಷ್ಟçವಾಗಿ ಗುರುತಿಸಿಕೊಂಡಿರುವ ಪಾಕಿಸ್ತಾನವು ಅಲ್ಪಸಂಖ್ಯಾತರಿಗೆ ನ್ಯಾಯವನ್ನು ಕೊಡುವಲ್ಲಿ ಪದೇ ಪದೇ ವಿಫಲವಾಗುತ್ತಿವೆ ಎಂಬುದಕ್ಕೆ 1947ರ ಬಳಿಕದ ಹತ್ತು ಹಲವು ಘಟನೆಗಳೇ ಸಾಕ್ಷಿ. ಭಾರತವು ವಿಭಜನೆಯಾದಾಗ ಸಾವಿರಾರು ಹಿಂದೂಗಳು ಪಾಕ್‌ನಿಂದ ಭಾರತಕ್ಕೆ ಓಡೋಡಿ ಬಂದರು. ಭಾರತದಿಂದ ಅತ್ತ ಪಾಕಿಸ್ತಾನಕ್ಕೆ ಅಂಥದ್ದೇ ಒಂದು ಪಲಾಯನ ಮುಸ್ಲಿಮರಿಂದಲೂ ನಡೆಯಿತು. ಈ ಎರಡೂ ಪಲಾಯನಗಳ ಹಿಂದೆ ಇದ್ದುದೂ ಭೀತಿ. ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳು ನಮ್ಮನ್ನು ಕ್ಷೇಮದಿಂದ ಇರಲು ಬಿಡಲಾರರು ಎಂದು ಮುಸ್ಲಿಮರೂ, ಪಾಕಿಸ್ತಾನದಲ್ಲಿ ಬಹುಸಂಖ್ಯಾತ ಮುಸ್ಲಿಮರು ತಮ್ಮ ಸುಖಕ್ಕೆ ಅಡ್ಡಿಯಾದಾರು ಎಂದು ಹಿಂದೂಗಳೂ ಭಾವಿಸಿದರು. ಹಾಗಂತ, ಇಂಥದ್ದೊಂದು  ಭೀತಿ ಅಕಾರಣವಾಗಿ ಹುಟ್ಟಿಕೊಂಡಿತು ಎಂದು ಹೇಳುವಂತಿಲ್ಲ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲೇ ಭಾರತದಲ್ಲಿ ಹಿಂದೂ-ಮುಸ್ಲಿಮರ ನಡುವೆ ತಕರಾರುಗಳಿದ್ದುವು. ಕೋಮುಸಂಘರ್ಷಗಳಾಗಿದ್ದುವು. ಭಾರತವನ್ನು ತುಂಡರಿಸಿ ಪಾಕ್ ಎಂಬ ಭೂಪ್ರದೇಶ ಹುಟ್ಟಿಕೊಂಡದ್ದೇ  ಈ ಹಿನ್ನೆಲೆಯಲ್ಲಿ. ಆದರೆ ಮುಸ್ಲಿಮರ ಪೈಕಿ ದೊಡ್ಡದೊಂದು ಗುಂಪು ಭಆರತದ ಹಿಂದೂಗಳ ಮೇಲೆ ಭರವಸೆ ಇಟ್ಟಿತು. ಭಾರತವು ತಮ್ಮ ಜನ್ಮ ಮತ್ತು ಕರ್ಮಭೂಮಿ ಎಂದು ಘೋಷಿಸಿತು. ಧರ್ಮದ ಆಧಾರದಲ್ಲಿ ರಚನೆಯಾದ ಪಾಕ್‌ಗಿಂತ ಜಾತ್ಯಾತೀತತೆಯ ಆಧಾರದಲ್ಲಿ ರಚನೆಯಾಗುವ ಭಾರತದಲ್ಲೇ  ಇರಬಯಸಿತು. ಅತ್ತ ಪಾಕ್‌ನಲ್ಲೂ ಇಂಥದ್ದೇ  ಬೆಳವಣಿಗೆ ನಡೆಯಿತು. ಹಿಂದೂಗಳು ಪಾಕ್ ಮುಸ್ಲಿಮರ ಮೇಲೆ ಭರವಸೆ ಇರಿಸಿದರು. ತಾವು ಹುಟ್ಟಿದ ನೆಲದಲ್ಲೇ  ಬದುಕಲು ಪಣ ತೊಟ್ಟರು. ನಿಜವಾಗಿ,
ಈ ಎರಡೂ ದೇಶಗಳ ಬಹುಸಂಖ್ಯಾತರ ಬಹುದೊಡ್ಡ ಜವಾಬ್ದಾರಿ ಏನೆಂದರೆ, ತಮ್ಮ ಮೇಲೆ ಭರವಸೆ ಇಟ್ಟ ಈ ಜುಜುಬಿ ಸಂಖ್ಯೆಯ ಜನರ ರಕ್ಷಕರಾಗಿ ಪರಿವರ್ತಿತವಾಗುವುದು. ಅವರ ಹಕ್ಕು, ಸ್ವಾತಂತ್ರ‍್ಯಕ್ಕೆ ಕಾವಲು ನಿಲ್ಲುವುದು, ಯಾವ ಕಾರಣಕ್ಕೂ ಅವರ ಆರಾಧನಾ ಕೇಂದ್ರಗಳು, ಧಾರ್ಮಿಕ ವಿಧಿ-ವಿಧಾನಗಳು. ಹಕ್ಕುಗಳಿಗೆ ಭಂಗ ಬಾರದಂತೆ ನೋಡಿಕೊಳ್ಳುವುದು. ಇಸ್ಲಾಮಿಕ್ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಪಾಕ್‌ನ ಮೇಲಂತೂ ಈ ಜವಾಬ್ದಾರಿ ಇನ್ನಷ್ಟು ಹೆಚ್ಚು. ಯಾಕೆಂದರೆ, ಇಸ್ಲಾಮಿಕ್ ದೇಶವೊಂದರಲ್ಲಿ ನಡೆಯುವ ಪ್ರತಿ ಬೆಳವಣಿಗೆಯನ್ನೂ ಇಸ್ಲಾಮಿಕ್ ಕನ್ನಡಕದೊಂದಿಗೆ ನೋಡಲಾಗುತ್ತದೆ. ಆ ದೇಶದಲ್ಲಿ ನಡೆಯುವ ತಪ್ಪುಗಳನ್ನು ಇಸ್ಲಾಮಿಕ್ ತಪ್ಪುಗಳಾಗಿ ಪರಿಗಣಿಸಲಾಗುತ್ತದೆ. ಹಿಂದೂಗಳನ್ನು ನ್ಯಾಯಯುತವಾಗಿ ನಡೆಸಿಕೊಳ್ಳದಿದ್ದರೆ ಅದು ಇಸ್ಲಾಮಿನ ನೀತಿ ನಿಯಮಗಳಾಗಿ ವ್ಯಾಖ್ಯಾನಕ್ಕೆ ಒಳಗಾಗುತ್ತದೆ. ಪಾಕ್‌ನ ಹೆಸರು ಈಗಾಗಲೇ ಈ ದಿಶೆಯಲ್ಲಿ ಸಾಕಷ್ಟು ಹಾಳಾಗಿದೆ. ವಿಷಾದ ಏನೆಂದರೆ,
ಯಾವುದೇ ಧರ್ಮದ ರಾಷ್ಟ್ರವಾಗಿ ಗುರುತಿಸಿಕೊಳ್ಳದ ಮತ್ತು ಸರ್ವರನ್ನೂ ಒಳಗೊಳ್ಳುವ ಸಂವಿಧಾನವನ್ನೇ ರಾಷ್ಟ್ರ  ಧರ್ಮವಾಗಿ ಅಂಗೀಕರಿಸಿಕೊಂಡ  ಈ ದೇಶದಲ್ಲೂ ಅಲ್ಪಸಂಖ್ಯಾತರನ್ನು ಭೀತಿಗೆ ತಳ್ಳುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ ಎಂಬುದು. ಅಲ್ಪಸಂಖ್ಯಾತರನ್ನು ದೇಶದ್ರೋಹಿಗಳಂತೆ, ವಂಚಕರಂತೆ, ಮತಾಂತರಿಗಳಂತೆ ಬಿಂಬಿಸುವ ಮತ್ತು ಅಪಪ್ರಚಾರ ನಡೆಸುವ ಪ್ರಯತ್ನಗಳು ಎಗ್ಗಿಲ್ಲದೇ ನಡೆಯುತ್ತಿವೆ. ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಹತ್ಯೆ, ಅವರ ಆರಾಧನಾ ಕೇಂದ್ರಗಳ ಮೇಲೆ ದಾಳಿಯೂ ನಡೆಯುತ್ತಿದೆ. ಹಾಗಂತ,
ಅಲ್ಪಸಂಖ್ಯಾತರ ರಕ್ಷಣೆಗೆ ಇಲ್ಲಿನ ಹಿಂದೂಗಳು ನಿಂತೇ ಇಲ್ಲ ಎಂದಲ್ಲ. ಇಂಥ ಬೆಳವಣಿಗೆಗಳು ಸಾವಿರಾರು ನಡೆದಿವೆ. ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡು ಬಂದವರಿಗೆ ಹಿಂದೂಗಳು ಆಶ್ರಯ ಕೊಟ್ಟಿದ್ದಾರೆ. ಆರ್ಥಿಕ ಸಹಾಯ ಮಾಡಿದ್ದಾರೆ. ಮುಸ್ಲಿಮರ ಹಕ್ಕು, ಸ್ವಾತಂತ್ರ‍್ಯದ ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟ ಹಿಂದೂಗಳು ಅಸಂಖ್ಯ ಇದ್ದಾರೆ. ಅಂಥ ಬೆಳವಣಿಗೆಗಳು ಈಗಲೂ ನಡೆಯುತ್ತಿವೆ. ಆದರೆ, ಅದರ ಜೊತೆಜೊತೆಗೇ ಇಂಥ ಪ್ರೇಮಮಯಿ ಸಂಬಂಧಕ್ಕೆ ಕನ್ನ ಕೊರೆಯುವ ಪ್ರಯತ್ನವೂ ಬಿರುಸಾಗಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಅಲ್ಪಸಂಖ್ಯಾತರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಾ, ದ್ವೇಷ ಭಾವವನ್ನು ಹುಟ್ಟು ಹಾಕುತ್ತಾ ನಡೆಯುವ ಗುಂಪೂ ಇದೆ. ಈ ಬಗ್ಗೆ ಜನರು ಜಾಗೃತರಾಗಬೇಕು. ಸರಕಾರ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪಾಕ್‌ನ ಸುಪ್ರೀಮ್ ಕೋರ್ಟ್ ತಳೆದ ನಿಲುವು ಶ್ಲಾಘನಾರ್ಹ. ನ್ಯಾಯದ ಮುಂದೆ ಎಲ್ಲರೂ ಸಮಾನರಾದಾಗಲೇ ಶಾಂತಿಪೂರ್ಣ ಸಮಾಜ ನಿರ್ಮಾಣವಾಗಬಲ್ಲುದು.
ನ್ಯಾಯ ನಿಮ್ಮ ಹೆತ್ತವರ ವಿರುದ್ಧವಿದ್ದರೆ ನೀವು ನ್ಯಾಯಪರ ನಿಲ್ಲಬೇಕು ಎಂದು ಪವಿತ್ರ ಕುರ್‌ಆನ್ (4:135) ಹೇಳಿರುವುದನ್ನೂ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.