Saturday, 4 January 2025

ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಮತ್ತು ಧರ್ಮ...




ಕಳೆದವಾರ ನಡೆದ ಎರಡು ಘಟನೆಗಳಿಗೆ ಮಾಧ್ಯಮಗಳು ಸಾಕಷ್ಟು ಮಹತ್ವ ಕೊಟ್ಟು ಪ್ರಕಟಿಸಿದುವು. 

1. ಸಾರ್ವಜನಿಕ  ಇಲಾಖೆಯಲ್ಲಿ ಎಂಜಿನಿಯರ್ ಆಗಿ ನಿವೃತ್ತರಾದ ಒಡಿಸ್ಸಾದ ಹಿರಿಯ ನಾಗರಿಕರೊಬ್ಬರು ಪೊಲೀಸರಿಗೆ ದೂರು ನೀಡುವ  ಮೂಲಕ ಮೊದಲ ಘಟನೆ ಬೆಳಕಿಗೆ ಬಂತು. ಇವರಿಗೆ ಬೇರೆ ಬೇರೆ ಸಂಖ್ಯೆಯಿಂದ  ಕರೆ ಬಂತು. ನಿಮ್ಮ ಹೆಸರಲ್ಲಿ ಭಾರೀ ಪ್ರಮಾಣದಲ್ಲಿ ಹಣಕಾಸು ಅವ್ಯವಹಾರ ಆಗಿದೆ  ಮತ್ತು ನಿಮ್ಮ ಆಧಾರ್ ಲಿಂಕನ್ನು ಬಳಸಿಕೊಂಡು ವಂಚಕರು ನಿಮ್ಮನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿಬಿಟ್ಟಿದ್ದಾರೆ ಎಂದು ಕರೆ  ಮಾಡಿದವರು ಹೇಳಿದರು. ಮುಂಬೈ ಕ್ರೈಮ್ ಬ್ರಾಂಚ್ ನಿಂದ ಕರೆ ಮಾಡಲಾಗುತ್ತಿದೆ ಎಂದು ಹೇಳಿದ ಆ ವ್ಯಕ್ತಿ, ಪ್ರಕರಣದಲ್ಲಿ  ನಿಮಗೆ 7 ವರ್ಷಗಳ ವರೆಗೆ ಶಿಕ್ಷೆಯಾಗುತ್ತದೆ ಎಂದೂ ನಂಬಿಸಿದ. ಅವರ ಆಧಾರ್ ಸಂಖ್ಯೆಯನ್ನೂ ಹೇಳಿದ. ಇನ್ನೊಂದು  ಕಡೆ, ಫೆಡೆಕ್ಸ್ ಎಂಬ ಕೊರಿಯರ್ ಸಂಸ್ಥೆಯಿಂದ  ಎಂದು ಹೇಳಿಕೊಂಡು ಕರೆ ಬಂತು. ಅವರ ಹೆಸರಲ್ಲಿ ಮಾದಕ ಪದಾರ್ಥ  ವ್ಯವಹಾರ ನಡೆಯುತ್ತಿರುವುದಾಗಿ ಕರೆ ಮಾಡಿದಾತ ಹೇಳಿದನಲ್ಲದೇ, ಭಾರೀ ಅಪಾಯ ಕಾದಿದೆ ಎಂಬಂತೆ  ಬೆದರಿಸಿದ. ಈ  ಹಿರಿಯರಿಗೆ ಭಯವಾಯಿತು. ಇಂಜಿನಿಯರ್ ಆಗಿ ಕೈತುಂಬಾ ಸಂಬಳ ಪಡೆದು ಆರಾಮವಾಗಿ ಬದುಕಿದ್ದ ಅವರ ಪಾಲಿಗೆ  ಈ ಕರೆಗಳು ಅನಿರೀಕ್ಷಿತವಾಗಿತ್ತು. ನಿವೃತ್ತಿ ವೇತನ ಮತ್ತು ಉದ್ಯೋಗಸ್ಥೆಯಾಗಿದ್ದ ಪತ್ನಿಯ ದುಡಿಮೆಯೊಂದಿಗೆ  ಆರಾಮವಾಗಿ ಬದುಕುವುದನ್ನು ಮಾತ್ರ ಯೋಚಿಸಿದ್ದ ಅವರನ್ನು ಈ ಕರೆಗಳು ಚಿಂತೆಗೆ ಹಚ್ಚಿತು. ಇತರರಿಗೆ ಗೊತ್ತು  ಮಾಡುವುದಕ್ಕಿಂತ ಆದಷ್ಟು ಬೇಗ ಈ ಉರುಳಿನಿಂದ ಪಾರಾದರೆ ಸಾಕು ಎಂದು ಯೋಚಿಸಿದ ಅವರು ಕರೆ ಮಾಡಿದವರ  ತಾಳಕ್ಕೆ ತಕ್ಕಂತೆ ಕುಣಿಯತೊಡಗಿದರು. ತನ್ನ ಮತ್ತು ಪತ್ನಿಯ ಖಾತೆಯಿಂದ ಕರೆ ಮಾಡಿದವರು ನೀಡಿದ ಖಾತೆಗೆ ಒಟ್ಟು  ಒಂದು ಕೋಟಿ 37 ಲಕ್ಪ ರೂಪಾಯಿಯನ್ನು ವರ್ಗಾಯಿಸಿದರು. ಮತ್ತೂ ಅವರು ಪೀಡಿಸಿದಾಗ ಇವರು ಪೊಲೀಸರಿಗೆ  ದೂರು ನೀಡಿದರು. ತನಿಖೆ ಕೈಗೊಂಡ ಪೊಲೀಸರು ಅನಿತಾ ಮಲ್ಹೋತ್ರಾ ಮತ್ತು ಅನುರಾಗ್ ಮಲ್ಹೋತ್ರ ಎಂಬ ತಾಯಿ,  ಮಗನನ್ನು ಬಂಧಿಸಿದರು. ಇವರ ಮೇಲೆ ಅದಾಗಲೇ ಇಂಥ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದನ್ನೂ ಪತ್ತೆ  ಹಚ್ಚಿದರು.

ಇನ್ನೊಂದು ಘಟನೆ, ವಿಜಯ ಕುಮಾರ್ ಎಂಬ 39 ವರ್ಷ ವಯಸ್ಸಿನ ವ್ಯಕ್ತಿಯದ್ದು. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ  ಆಫ್ ಇಂಡಿಯಾ ಅಥವಾ TRAIಯ  ಅಧಿಕಾರಿಗಳೆಂದು ಗುರುತಿಸಿಕೊಂಡ ವ್ಯಕ್ತಿಗಳು ಇವರಿಗೆ ಕರೆ ಮಾಡಿದರು. ನಿಮ್ಮ  ಮೊಬೈಲ್ ಸಿಮ್ ಹಣಕಾಸು ಅವ್ಯವಹಾರಗಳಿಗೆ ಬಳಕೆಯಾಗಿದೆ ಎಂದು ಹೇಳಿದರು. ಬಳಿಕ ವೀಡಿಯೋ ಕರೆಗೆ  ಬರುವಂತೆ ಆಹ್ವಾನಿಸಿದರು. ಇವರು ವೀಡಿಯೋ ಕರೆ ಮಾಡುವ ಆ್ಯಪ್ ಡೌನ್‌ಲೋಡ್ ಮಾಡಿ ಸ್ಪಂದಿಸಿದರು. ಅಲ್ಲಿಂದ  ಭಯ ಹುಟ್ಟಿಸುವ ಪ್ರಕ್ರಿಯೆ ಆರಂಭವಾಯಿತು. ನೀವು ತನಿಖೆಯಲ್ಲಿದ್ದೀರಿ ಮತ್ತು ನಿಮ್ಮ ಆಧಾರ್ ಕಾರ್ಡ್ ಬಳಸಿ  ರಾಷ್ಟ್ರೀಯ ಬ್ಯಾಂಕ್‌ ನಿಂದ  6 ಕೋಟಿ ರೂಪಾಯಿಯ ಅವ್ಯವಹಾರ ಮಾಡಲಾಗಿದೆ ಎಂದು ನಂಬಿಸಿದರು. ಬೆದರಿದ  ವಿಜಯ ಕುಮಾರ್, ಕರೆ ಮಾಡಿದವರು ಹೇಳಿದಂತೆ ನಡಕೊಳ್ಳಲು ಪ್ರಾರಂಭಿಸಿದರು. ಒಟ್ಟು 11 ಖಾತೆಯಿಂದ 12 ಕೋಟಿ  ರೂಪಾಯಿಯಷ್ಟು ಮೊತ್ತವನ್ನು ಅವರ ಖಾತೆಗಳಿಗೆ ವರ್ಗಾಯಿಸಿದರು. ದುರಂತ ಏನೆಂದರೆ, ಈ ಇಡೀ ಪ್ರಕ್ರಿಯೆಯನ್ನು  ಮನೆಯವರಿಂದ ಮತ್ತು ಗೆಳೆಯರಿಂದ ಅವರು ಮುಚ್ಚಿಟ್ಟಿದ್ದರು. ಕೊನೆಗೆ ಗತ್ಯಂತರವಿಲ್ಲದೇ ಪೊಲೀಸರಿಗೆ ದೂರು  ನೀಡಿದಾಗ ಘಟನೆ ಬೆಳಕಿಗೆ ಬಂತು. ಅಂದಹಾಗೆ,

ಡಿಜಿಟಲ್ ಅರೆಸ್ಟ್ ಎಂಬ ಹೊಸ ಪದವೊಂದು ಹುಟ್ಟಿಕೊಂಡದ್ದೇ  ಈ ಬಗೆಯ ವಂಚನೆಗಳ ಹಿನ್ನೆಲೆಯಲ್ಲಿ. ತಾಂತ್ರಿಕವಾಗಿ  ಹೊಸ ಹೊಸ ಸಂಶೋಧನೆಗಳಾದಂತೆಯೇ ವಂಚನೆ, ಮೋಸಗಳಲ್ಲೂ ಹೊಸ ಹೊಸ ಶೋಧನೆಗಳಾಗುತ್ತವೆ ಎಂಬುದನ್ನು  ಇವು ಮತ್ತು ಇಂಥ ಹತ್ತು-ಹಲವು ಬಗೆಯ ವಂಚನಾ ಘಟನೆಗಳು ಹೇಳುತ್ತಿವೆ. ಅಲ್ಲದೇ, ಇದೀಗ ಮೊಬೈಲ್ ಕರೆಗಳ  ಮೊದಲು ಡಿಜಿಟಲ್ ಅರೆಸ್ಟಿನ ಬಗ್ಗೆ ಎಚ್ಚರಿಸುವ ಮಾಹಿತಿಗಳನ್ನು ಕೇಂದ್ರ ಸರಕಾರ ಹಂಚಿಕೊಳ್ಳತೊಡಗಿದೆ. ನೀವು ಯಾರಿಗಾದರೂ ಕರೆ ಮಾಡುವ ಉದ್ದೇಶದಿಂದ ಡಯಲ್ ಮಾಡಿದರೆ ಆ ಕಡೆಯ ವ್ಯಕ್ತಿ ಕರೆ ಸ್ವೀಕರಿಸುವ ವರೆಗೂ ಈ ಮಾಹಿತಿ  ನಿಮ್ಮನ್ನು ಪದೇ ಪದೇ ಎಚ್ಚರಿಸುತ್ತಲೇ ಇರುತ್ತದೆ. ಈ ಹಿಂದೆ ಕೊರೋನಾ ಕಾಲದಲ್ಲಿ ಇಂಥದ್ದೇ  ಎಚ್ಚರಿಕೆಯನ್ನು ಆಲಿಸಿ  ಆಲಿಸಿ ಅದು ಬಾಯಿಪಾಠವೇ ಆಗಿತ್ತು. ಅಂಥದ್ದೇ  ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ ಎಂಬುದನ್ನೇ ಈಗಿನ  ಬೆಳವಣಿಗೆಗಳು ಹೇಳುತ್ತಿವೆ. ನಿಜವಾಗಿ,

ಕಾನೂನಿನ ಭಯ ಮತ್ತು ದೇವಭಯ- ಎರಡೂ ಇಲ್ಲವಾದಾಗ ಮನುಷ್ಯ ಅತ್ಯಂತ ಕ್ರೂರಿಯಾಗಬಲ್ಲ. ಅಪರಾಧ  ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಬಹಳ ಕಡಿಮೆಯಾಗಿರುವುದು ಇಲ್ಲಿನ ಒಂದು ಲೋಪವಾದರೆ, ಸತ್ಯ-ನ್ಯಾಯ- ಪ್ರಾಮಾಣಿಕತೆ ಇತ್ಯಾದಿ ಮೌಲ್ಯಗಳು ಸಾಮಾಜಿಕ ಬದುಕಿನಿಂದ ದೂರವಾಗುತ್ತಿರುವುದು ಇನ್ನೊಂದು ಲೋಪ. ಭಾರತೀಯ  ಕಾನೂನುಗಳು ಎಷ್ಟೇ ಪ್ರಬಲವಾಗಿರಲಿ, ಅದನ್ನು ಜಾರಿ ಮಾಡುವ ವಿವಿಧ ಹಂತದ ಅಧಿಕಾರಿಗಳು ಭ್ರಷ್ಟರಾದರೆ, ಕಾನೂನು  ಹಲ್ಲಿಲ್ಲದ ಹಾವಾಗಬೇಕಾಗುತ್ತದೆ. ಯಾವುದೇ ಅಪರಾಧವನ್ನು ಪರಿಣಾಮಕಾರಿಯಾಗಿ ಸಾಬೀತುಪಡಿಸುವುದು ಪೊಲೀಸರನ್ನು ಹೊಂದಿಕೊಂಡಿರುತ್ತದೆ. ಅವರು ಪ್ರಕರಣ ದಾಖಲು ಮಾಡುವುದು, ಸಾಕ್ಷ್ಯ  ಸಂಗ್ರಹ, ಪೂರಕ ಸಾಕ್ಷ್ಯಗಳು ಮತ್ತು ಪ್ರಬಲ  ಎಫ್‌ಐಆರ್ ಅನ್ನು ದಾಖಲಿಸಿದರೆ ಅಪರಾಧಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಸುಲಭ ಅಲ್ಲ. ಬಳಿಕ  ನ್ಯಾಯಾಧೀಶರ ಪಾತ್ರವೂ ಇಲ್ಲಿ ಮುಖ್ಯವಾಗುತ್ತದೆ. ಆದರೆ, ಅಪರಾಧವನ್ನು ದಾಖಲಿಸುವ ಪ್ರಾಥಮಿಕ ಹಂತವೇ ನಮ್ಮ  ದೇಶದಲ್ಲಿ ತೀರಾ ದುರ್ಬಲವಾಗಿದೆ. ಬಡವರಿಗೊಂದು ನೀತಿ, ಶ್ರೀಮಂತರಿಗೊಂದು, ರಾಜಕಾರಣಿಗಳಿಗೊಂದು,  ಪ್ರಭಾವಿಗಳಿಗೊಂದು ನೀತಿ ಎಂಬಂತೆ ನಮ್ಮಲ್ಲಿನ ಹೆಚ್ಚಿನ ಪೊಲೀಸ್ ಠಾಣೆಗಳು ವರ್ತಿಸುತ್ತವೆ. ನೀವು ಶ್ರೀಮಂತರಾಗಿದ್ದು,  ಹಣ ನೀಡಲು ತಯಾರಿದ್ದೀರೆಂದರೆ ಎಂಥದ್ದೇ  ಅಪರಾಧವನ್ನೂ ಮುಚ್ಚಿ ಹಾಕಲು ಸಾಧ್ಯವಿದೆ ಎಂಬ ವಾತಾವರಣವೊಂದು  ದೇಶದಲ್ಲಿ ನಿರ್ಮಾಣವಾಗಿಬಿಟ್ಟಿದೆ. ಆದ್ದರಿಂದಲೇ, ಮೇಲಿನ ಎರಡೂ ಘಟನೆಗಳ ವ್ಯಕ್ತಿಗಳು ಲಂಚ ಕೊಟ್ಟು ಪ್ರಕರಣದಿಂದ  ಪಾರಾಗುವ ದಾರಿಯನ್ನು ಕಂಡುಕೊಳ್ಳಲು ಯತ್ನಿಸಿದ್ದರು.
ಇನ್ನೊಂದು ಕಡೆ,

 ಧರ್ಮವು ಬಾಹ್ಯ ಸಂಕೇತಗಳಿಗಷ್ಟೇ ಸೀಮಿತಗೊಳ್ಳತೊಡಗಿದೆ. ಧರ್ಮವೆಂದರೆ, ಮೌಲ್ಯಗಳ  ಗೋದಾಮು ಎಂದರ್ಥ. ಪೊಲೀಸರು, ಸಿಸಿಟಿವಿಗಳು, ನ್ಯಾಯಾಲಗಳು ಮತ್ತು ಕಾನೂನುಗಳು ಇಲ್ಲದೇ ಇರುವ  ಸಮಯದಲ್ಲೂ ಅತ್ಯಂತ ಪ್ರಾಮಾಣಿಕ ಮತ್ತು ಸತ್ಯಸಂಧ ಬದುಕನ್ನು ನಡೆಸಲು ಪ್ರೇರಣೆ ನೀಡುವುದಕ್ಕೆ ವ್ಯಕ್ತಿಯನ್ನು  ತರಬೇತುಗೊಳಿಸುವುದೇ ಧರ್ಮ. ಸುಳ್ಳು ಹೇಳಿದರೆ, ವಂಚಿಸಿದರೆ, ಅನ್ಯಾಯ ಎಸಗಿದರೆ, ಅಪರಾಧ ಪ್ರಕರಣಗಳಲ್ಲಿ  ಭಾಗಿಯಾದರೆ... ಇತ್ಯಾದಿ ಸರ್ವ ಕೆಡುಕುಗಳಿಗೂ ದೇವನು ಶಿಕ್ಷೆ ನೀಡುತ್ತಾನೆ ಎಂಬ ಪ್ರಜ್ಞೆಯೊಂದಿಗೆ ಬದುಕುವುದನ್ನೇ  ಧರ್ಮಗಳು ಕಲಿಸಿಕೊಡುತ್ತವೆ. ವಿಶೇಷ ಏನೆಂದರೆ,

ಈ ದೇಶದಲ್ಲಿ ಧರ್ಮಿಷ್ಠರು ದಿನೇ ದಿನೇ ಹೆಚ್ಚುತ್ತಿದ್ದಾರೆ. ಮಸೀದಿಗಳಡಿ ಮಂದಿರವನ್ನು ಹುಡುಕುವಷ್ಟು ಮತ್ತು ಅನಾಥ  ಆರಾಧನಾಲಯಗಳನ್ನು ಪುನರುಜ್ಜೀವನಗೊಳಿಸಿ ಆರಾಧನೆಗೆ ಅರ್ಹ ಮಾಡುವಷ್ಟು ಧಾರ್ಮಿಕತನ ಇಲ್ಲಿ ಕಾಣಿಸುತ್ತಿದೆ. ಹಿಂ ದಿಗಿಂತ ಹೆಚ್ಚಾಗಿ ಇವತ್ತು ಜನರು ಧಾರ್ಮಿಕ ಸಂಕೇತಗಳನ್ನು ಧರಿಸುತ್ತಿದ್ದಾರೆ. ಆದರೆ, ಧರ್ಮ ಕಲಿಸುವ ಮೌಲ್ಯಗಳ  ಪಾಲನೆಯಲ್ಲಿ ಮಾತ್ರ ದಿನೇ ದಿನೇ ಸೋರಿಕೆ ಹೆಚ್ಚಾಗುತ್ತಿದೆ. ಅತೀವ ಧರ್ಮನಿಷ್ಠ ಎಂದು ಗುರುತಿಸಿಕೊಂಡವರೇ ಅಪರಾಧ  ಪ್ರಕರಣಗಳಲ್ಲಿ ಸಿಕ್ಕಿ ಬೀಳುವುದನ್ನೂ ಮತ್ತು ಯಾವ ಅಪರಾಧಿ ಪ್ರಜ್ಞೆಯೂ ಇಲ್ಲದೆ ವರ್ತಿಸುವುದನ್ನೂ ನಾವು  ನೋಡುತ್ತಿದ್ದೇವೆ.

ಇಸ್ಲಾಮ್ ಮನುಷ್ಯ ಸಂಬಂಧವನ್ನು ದೇವನೊಂದಿಗೆ ಜೋಡಿಸುತ್ತದೆ. ಮನುಷ್ಯನ ಪ್ರತಿ ಕ್ರಿಯೆಯೂ ದಾಖಲಿಸಲ್ಪಡುತ್ತದೆ  ಮತ್ತು ಮರಣಾನಂತರ ದೇವನು ಅವನ್ನು ಎದುರಿಟ್ಟು ವಿಚಾರಿಸುತ್ತಾನೆ ಎಂಬು ದಾಗಿ ಇಸ್ಲಾಮ್ ಹೇಳುತ್ತದೆ. ಆದ್ದರಿಂದ  ದೇವ ನೋಡುತ್ತಿದ್ದಾನೆ ಎಂಬ ಪ್ರಜ್ಞೆಯಿಂದಲೇ ಇಹಲೋಕ ದಲ್ಲಿ ಜೀವಿಸಬೇಕು ಎಂದು ಇಸ್ಲಾಮ್ ಆದೇಶಿಸುತ್ತದೆ. ವ್ಯಕ್ತಿ  ಸುಧಾರಣೆಯಲ್ಲಿ ದೇವಭಯವನ್ನು ಪ್ರಬಲ ಅಸ್ತçವಾಗಿ ಪ್ರತಿಪಾದಿಸುವ ಇಸ್ಲಾಮ್, ಅಪರಾಧವನ್ನು ತಡೆಯುವುದಕ್ಕೆ  ಇದನ್ನೇ ಪ್ರಬಲ ಆಯುಧವಾಗಿಯೂ ಪರಿಚಯಿಸುತ್ತದೆ. ಕಾನೂನುಗಳ ದೌರ್ಬಲ್ಯವನ್ನು ದುರುಪಯೋಗಿಸುವವರ ಸಂಖ್ಯೆ  ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ‘ದೇವ ನೋಡುತ್ತಿದ್ದಾನೆ’ ಎಂಬ ಎಚ್ಚರಿಕೆಯ ಪ್ರಜ್ಞೆಯನ್ನು ಜನರಲ್ಲಿ ಮೂಡಿಸಬೇಕಾದ  ಅಗತ್ಯ ಇದೆ.

ಕುವೈಟ್‌ನಿಂದ ಮರಳಿರುವ ಪ್ರಧಾನಿಯ ಕಣ್ಣು ತೆರೆಸಿಯಾನೇ ಅರ್ಮಾನ್ ಖಾನ್?





ಪ್ರಧಾನಿ ನರೇಂದ್ರ ಮೋದಿಯವರು ಕುವೈಟ್ ಅಮೀರ್ ಶೇಖ್ ಮಿಶಲ್ ಅಲ್ ಅಹ್ಮದ್ ಅಲ್ ಜಾಬಿರ್ ಅಲ್ ಸಲಾಹ್  ಅವರಿಂದ ಕುವೈಟ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್ ಪ್ರಶಸ್ತಿಯನ್ನು  ಸ್ವೀಕರಿಸುತ್ತಿರುವಾಗ ಇತ್ತ ಅರ್ಮಾನ್ ಖಾನ್ ಅನ್ನುವ ಬಡ ಟ್ರಕ್ ಚಾಲಕನೊಬ್ಬನ ವೀಡಿಯೋ ಸೋಶಿಯಲ್  ಮೀಡಿಯಾದಲ್ಲಿ ಹರಿದಾಡುತ್ತಾ ಇತ್ತು. ಆತನ ಸುತ್ತ ದುಷ್ಕರ್ಮಿಗಳ ಗುಂಪು ನಿಂತಿತ್ತು. ಹೊಡೆದು ಬಡಿದು ಸತಾಯಿಸಿದ್ದ  ಆ ಗುಂಪು ‘ಗೋವು ನಮ್ಮ ತಾಯಿ, ಎತ್ತು ನಮ್ಮ ತಂದೆ’ (ಗೋ ಹಮಾರಾ ಮಾತಾ ಹೆ, ಬೆಯಿಲ್ ಹಮಾರಾ ಬಾಪ್ ಹೆ)  ಎಂದು ಹೇಳುವಂತೆ ಅರ್ಮಾನ್‌ನನ್ನು ನಿರ್ಬಂಧಿಸಿತು. ಇದು ನಡೆದಿರುವುದು ಹರ್ಯಾಣದ ನೂಹ್ ಪ್ರದೇಶದಲ್ಲಿ.  ಹಾಗಂತ, ಈತ ಗೋವುಗಳ ಸಾಗಾಟ ಮಾಡುತ್ತಾ ಇರಲಿಲ್ಲ. ಆತನ ಟ್ರಕ್‌ನಲ್ಲಿ ಎತ್ತುಗಳೇ ಇದ್ದುವು. ಆ ಕಾರಣದಿಂದಲೇ,  ‘ಎತ್ತು ನಮ್ಮ ತಂದೆ’ ಎಂದು ಆತನಲ್ಲಿ ಈ ಗುಂಪು ಹೇಳಿಸಿತ್ತು.

ಒಂದುಕಡೆ, ಮುಸ್ಲಿಮ್ ರಾಷ್ಟ್ರಗಳೆಂದೇ ಅಧಿಕೃತವಾಗಿ ಗುರುತಿಸಿಕೊಂಡಿರುವ ಮತ್ತು ಮುಸ್ಲಿಮರೇ ಆಡಳಿತ ನಡೆಸುತ್ತಿರುವ  ಗಲ್ಫ್ ರಾಷ್ಟ್ರಗಳೊಂದಿಗೆ ಭಾರತಕ್ಕೆ ಉತ್ತಮ ಸಂಬಂಧ ಇದೆ. ಯುಎಇ, ಸೌದಿ, ಈಜಿಪ್ಟ್, ಬಹರೈನ್ ಸಹಿತ ವಿವಿಧ  ಮುಸ್ಲಿಮ್ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಭೇಟಿಯನ್ನೂ ನೀಡಿದ್ದಾರೆ. ಇವುಗಳಲ್ಲಿ ಒಂದಕ್ಕಿಂತ  ಹೆಚ್ಚು ಭೇಟಿ ನೀಡಿದ  ರಾಷ್ಟçಗಳೂ ಇವೆ. ಕಳೆದ 43 ವರ್ಷಗಳಲ್ಲೇ  ಭಾರತದ ಯಾವೊಬ್ಬ ಪ್ರಧಾನಿಯೂ ಭೇಟಿ ನೀಡದ ಕುವೈಟ್‌ಗೆ ಮೋದಿ  ಭೇಟಿ ನೀಡುವ ಮೂಲಕ ಇತಿಹಾಸವನ್ನೂ ನಿರ್ಮಿಸಿz್ದÁರೆ. ಈ ಹಿಂದೆ ಪ್ರಿನ್ಸ್ ಚಾರ್ಲ್ಸ್, ಕ್ಲಿಂಟನ್, ಜಾರ್ಜ್ ಬುಶ್‌ಗೆ  ನೀಡಲಾಗಿರುವ ಅತ್ಯುನ್ನತ ಪ್ರಶಸ್ತಿಯನ್ನು ಮೋದಿಗೆ ನೀಡುವ ಮೂಲಕ ಕುವೈಟ್ ಉನ್ನತವಾಗಿಯೇ ಗೌರವಿಸಿದೆ. ಇಷ್ಟೇ  ಅಲ್ಲ,

ಬಹುದೊಡ್ಡ ಸಂಖ್ಯೆಯ ಭಾರತೀಯರಿಗೆ ಈ ರಾಷ್ಟ್ರಗಳು ಉದ್ಯೋಗವನ್ನೂ ನೀಡಿ ಪೊರೆದಿವೆ. ಕೇವಲ ಯುಎಇ ಒಂದೇ  ಸುಮಾರು 36 ಲಕ್ಷದಷ್ಟು ಭಾರತೀಯರಿಗೆ ಉದ್ಯೋಗ ನೀಡಿದೆ. ಇವರಲ್ಲಿ 9 ಲಕ್ಷ ಮಂದಿ ಹಿಂದೂಗಳು. 24 ಲಕ್ಷ  ಮಂದಿ ಭಾರತೀಯರಿಗೆ ಉದ್ಯೋಗ ನೀಡಿರುವ ಸೌದಿಯು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ 24 ಲಕ್ಷದಲ್ಲಿ 7  ಲಕ್ಷ ಮಂದಿ ಹಿಂದೂ ಗಳಿದ್ದಾರೆ. ಕುವೈಟ್ 10 ಲಕ್ಷ ಭಾರತೀಯರಿಗೆ ಉದ್ಯೋಗ ನೀಡಿದ್ದರೆ, ಒಮಾನ್ ಸುಮಾರು 7 ಲಕ್ಷ  ಭಾರತೀಯರಿಗೆ ಉದ್ಯೋಗ ನೀಡಿದೆ. ಕತಾರ್ ಸುಮಾರು ಒಂದು ಲಕ್ಷ ಮಂದಿ ಭಾರತೀಯರಿಗೆ ಜೀವನಾಧಾರ ನೀಡಿದ್ದರೆ,  ಬಹರೈನ್ ಸುಮಾರು ಮೂರೂವರೆ ಲಕ್ಷ ಮಂದಿಗೆ ಜೀವನಾಧಾರ ನೀಡಿದೆ. ಇದರಲ್ಲಿ ಒಂದು ಲಕ್ಷಕ್ಕಿಂತಲೂ ಅಧಿಕ  ಹಿಂದೂಗಳಿದ್ದಾರೆ. ಹಾಗಂತ,

ಮುಸ್ಲಿಮ್ ಎಂದೇ ತಮ್ಮನ್ನು ಕರೆಸಿಕೊಳ್ಳುತ್ತಿರುವ ಮತ್ತು ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಈ ರಾಷ್ಟ್ರಗಳಲ್ಲಿ ಧರ್ಮ,  ಆಹಾರ, ಆರಾಧನೆಯ ಕಾರಣಕ್ಕಾಗಿ ಒಬ್ಬನೇ ಒಬ್ಬ ಹಿಂದೂ ದೌರ್ಜನ್ಯಕ್ಕೆ ಒಳಗಾಗುತ್ತಿಲ್ಲ. ಅಲ್ಲಿನ ಹಿಂದೂಗಳ ಮೇಲೆ  ಸಾಮೂಹಿಕ ಥಳಿತ ನಡೆಯುತ್ತಿಲ್ಲ. ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಹಿಂದೂ ವ್ಯಕ್ತಿಯನ್ನು ಎತ್ತಿಕೊಂಡು ಅಲ್ಲಿರುವ ಇಡೀ  ಹಿಂದೂಗಳನ್ನು ಕಟಕಟೆಯಲ್ಲಿ ನಿಲ್ಲಿಸುವ ಸನ್ನಿವೇಶಗಳೂ ನಡೆದಿಲ್ಲ. ಹಿಂದೂಗಳ ವಿರುದ್ಧ ಯಾರೂ ಭಾಷಣ ಮಾಡುವುದಿಲ್ಲ. ಭಗವದ್ಗೀತೆಯನ್ನೋ ಹಿಂದೂ ಪುರಾಣಗಳನ್ನೋ ಎತ್ತಿಕೊಂಡು ಯಾರೂ ಅವಮಾನಕರ ಹೇಳಿಕೆ ನೀಡುವುದಿಲ್ಲ.  ಇವುಗಳ ಇಷ್ಟನೇ ಪುಟದಲ್ಲಿರುವ ಇಂತಿಂಥ  ಶ್ಲೋಕಗಳು ಮತ್ತು ಮಾಹಿತಿಗಳು ಹೇಗೆ ಇಸ್ಲಾಮ್ ವಿರೋಧಿ ಎಂದು  ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದಿಲ್ಲ. ಹಿಂದೂ ವಿರೋಧಿ ಅಭಿಯಾನವನ್ನು ಯಾರೂ ಕೈಗೊಳ್ಳುವುದಿಲ್ಲ.  ಹಿಂದೂಗಳಿಗೆ ಮನೆ ನೀಡುವುದಿಲ್ಲ, ಹಿಂದೂಗಳಿಗೆ ಉದ್ಯೋಗ ನೀಡುವುದಿಲ್ಲ, ಹಿಂದೂಗಳೊಂದಿಗೆ ವ್ಯಾಪಾರ ನಡೆಸುವು ದಿಲ್ಲ.. ಎಂದೆಲ್ಲಾ ಯಾರೂ ಹೇಳುವುದೂ ಇಲ್ಲ. ಅಲ್ಲಿಯ ಧರ್ಮಗುರುಗಳು ಹಿಂದೂ ವಿರೋಧಿ ಭಾಷಣ ಮಾಡುವುದಿಲ್ಲ.  ಶಾಲೆಯಲ್ಲಾಗಲಿ, ಮಾರುಕಟ್ಟೆಯಲ್ಲಾಗಲಿ, ಸರಕಾರಿ ಕಚೇರಿಗಳಲ್ಲಾಗಲಿ ಅಥವಾ ನ್ಯಾಯಾಲಯಗಳಲ್ಲೇ  ಆಗಲಿ,  ಹಿಂದೂ-ಮುಸ್ಲಿಮ್ ಎಂಬ ಬೇಧವನ್ನೂ ಮಾಡುವುದಿಲ್ಲ. ನಿಜವಾಗಿ,

ಇವೆಲ್ಲ ಔದಾರ್ಯವಲ್ಲ. ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸಬೇಕಾದ ಜವಾಬ್ದಾರಿ ಆಯಾ ರಾಷ್ಟ್ರಗಳ ಬಹುಸಂಖ್ಯಾತರದ್ದು.  ಒಂದು ರಾಷ್ಟ್ರದಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತತೆ ಮತ್ತು ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ ಎಂದರೆ, ಅದು ಅಲ್ಲಿನ  ಬಹುಸಂಖ್ಯಾತರ ವೈಫಲ್ಯವಾಗಿ ಮತ್ತು ಅವರ ಪಾಲಿನ ನಾಚಿಕೆಗೇಡಿನ ಸಂಗತಿಯಾಗಿ ಗುರುತಿಸಿಕೊಳ್ಳಬೇಕಾಗುತ್ತದೆ.  ಪಾಕಿಸ್ತಾನ, ಅಫಘಾನಿಸ್ತಾನ, ಬಾಂಗ್ಲಾದೇಶಗಳ ಅಲ್ಪಸಂಖ್ಯಾತ ಹಿಂದೂಗಳಿಗೆ ಸಂಬಂಧಿಸಿಯೂ ಇವೇ ಮಾತು ನೂರು  ಶೇಕಡಾ ಅನ್ವಯವಾಗುತ್ತದೆ. ಆದರೆ, 

ಪಾಕಿಸ್ತಾನ, ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳು ಸುರಕ್ಷಿತವಾಗಿರಬೇಕೆಂದು  ಬಯ ಸುವ ಮತ್ತು ಅದಕ್ಕಾಗಿ ಧ್ವನಿಯೆತ್ತುವ ಮೋದಿ ಸರಕಾರ, ಭಾರತದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಮರ ಬಗ್ಗೆ  ಅಸಹನೆಯಿಂದ ವರ್ತಿಸುತ್ತಿದೆ. ಹರ್ಯಾಣದ ಅರ್ಮಾನ್ ಖಾನ್ ಸೇರಿದಂತೆ, ಈ ದೇಶದಲ್ಲಿ ಮುಸ್ಲಿಮರ ವಿರುದ್ಧ ಪ್ರತಿ ನಿತ್ಯವೆಂಬಂತೆ  ದೌರ್ಜನ್ಯ ನಡೆಸುತ್ತಿರುವ ದುಷ್ಕರ್ಮಿಗಳ ಗುಂಪನ್ನು ಪ್ರಚೋದಿ ಸುತ್ತಿರುವ ಚಿಂತನೆ ಯಾವುದು ಎಂಬುದು  ರಹಸ್ಯವೇನಲ್ಲ. ಈ ದುಷ್ಕರ್ಮಿಗಳು ಯಾವ ರಾಜಕೀಯ ಪಕ್ಷದ ಬೆಂಬಲಿಗರು ಎಂಬುದೂ ರಹಸ್ಯವಲ್ಲ. ದ್ವೇಷ ಭಾಷಣ  ಮಾಡುವ, ಕುರ್‌ಆನನ್ನು ಮತ್ತು ಪ್ರವಾದಿಯನ್ನು(ಸ) ಸಾರ್ವಜನಿಕವಾಗಿಯೇ ಅವಮಾನಿಸುವ ಮತ್ತು ಮಸೀದಿಗಳ  ಅಡಿಯಲ್ಲಿ ಮಂದಿರ ವನ್ನು ಹುಡುಕುವವರಲ್ಲಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನ್ನು ಫಾಲೋ ಮಾಡುವವರು ಎಂಬುದೂ ರಹಸ್ಯವಲ್ಲ. ಸ್ವತಃ ಪ್ರಧಾನಿಯವರೇ ಚುನಾವಣೆಯ ಸಮಯದಲ್ಲಿ ಈ  ದುಷ್ಕರ್ಮಿಗಳ ಭಾಷೆಯಲ್ಲೇ  ಮಾತಾಡಿದ್ದೂ ಇದೆ. ಕುವೈಟ್ ಸರಕಾರದಿಂದ ಅತ್ಯುನ್ನತ ಪ್ರಶಸ್ತಿಯನ್ನು ಸ್ವೀಕರಿಸಿಕೊಂಡ  ಇದೇ ಪ್ರಧಾನಿಯ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಸಚಿವರೂ ಇಲ್ಲ. ಲೋಕಸಭೆಯಲ್ಲಿರುವ ಇವರ ಪಕ್ಷದ 243  ಸದಸ್ಯರ ಪೈಕಿ ಒಬ್ಬನೇ ಒಬ್ಬ ಮುಸ್ಲಿಮ್ ಸಂಸದನೂ ಇಲ್ಲ. ಪೂರ್ಣ ಬಹುಮತದೊಂದಿಗೆ 13 ರಾಜ್ಯಗಳಲ್ಲಿ  ಅಧಿಕಾರದಲ್ಲಿದ್ದರೂ ಒಂದೇ ಒಂದು ರಾಜ್ಯದಲ್ಲಿ ಮುಸ್ಲಿಮರನ್ನು  ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ ಎಂದು ಮಾತ್ರವಲ್ಲ, ಸಂಪುಟಕ್ಕೂ ಸೇರಿಸಿಕೊಂಡಿಲ್ಲ. ಇವೆಲ್ಲ ಕುವೈಟ್‌ಗೆ ಭೇಟಿ ನೀಡಿರುವ  ಪ್ರಧಾನಿ ಮೋದಿಗೆ ಗೊತ್ತಿರಲೇಬೇಕು. ವಿಷಾದ ಏನೆಂದರೆ,

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅನ್ಯಾಯವನ್ನು ಮೋದಿ ಸರಕಾರ ಅಧಿಕೃತವಾಗಿಯೇ ಪ್ರಶ್ನಿಸುತ್ತದೆ. ತನ್ನ  ಪ್ರತಿನಿಧಿಯನ್ನೂ ಬಾಂಗ್ಲಾದೇಶಕ್ಕೆ ಕಳುಹಿಸಿಕೊಟ್ಟು ಪ್ರತಿಭಟನೆ ಸಲ್ಲಿಸುತ್ತದೆ. ಹಾಗಂತ, ಇದು ತಪ್ಪು ಎಂದಲ್ಲ. ಇದು  ಆಗಲೇಬೇಕು. ಆದರೆ, ತನ್ನದೇ ನೆಲದ ಅಲ್ಪಸಂಖ್ಯಾತರನ್ನು ದೌರ್ಜನ್ಯಕ್ಕೆ ತುತ್ತಾಗಲು ಬಿಟ್ಟು ಮತ್ತು ದುಷ್ಕರ್ಮಿಗಳಿಗೆ  ರಾಜಕೀಯ ಆಶ್ರಯವನ್ನು ನೀಡುತ್ತಾ ಇನ್ನೊಂದು ರಾಷ್ಟ್ರದ ಅಲ್ಪಸಂಖ್ಯಾತರಿಗಾಗಿ ಧ್ವನಿಯೆತ್ತುವುದು ಮಾತ್ರ ದ್ವಂದ್ವವಾಗಿ  ಕಾಣುತ್ತದೆ. ಇತರ ರಾಷ್ಟ್ರಗಳು ಮತ್ತು ಅಲ್ಲಿನ ನಾಗರಿಕರು ನ್ಯಾಯದ ಪರ ನಿಲ್ಲಬೇಕು ಮತ್ತು ನ್ಯಾಯಯುತವಾಗಿ  ನಡಕೊಳ್ಳಬೇಕು ಎಂದು ಬಯಸುವ ಪ್ರಭುತ್ವವೊಂದು ಸ್ವಯಂ ಅನ್ಯಾಯವಾಗಿ ನಡಕೊಳ್ಳುತ್ತದೆಂದರೆ ಮತ್ತು ತನ್ನ ಬೆಂಬಲಿಗರನ್ನು ಅನ್ಯಾಯಕ್ಕೆ ಪ್ರಚೋದಿಸುತ್ತದೆಂದರೆ, ಅದನ್ನು ಬೂಟಾಟಿಕೆಯೆಂದಲ್ಲದೇ ಇನ್ನೇನೆಂದು ಕರೆಯಬೇಕು?  ಅಂದಹಾಗೆ,

ಯಾವುದೇ ರಾಷ್ಟ್ರ  ಬಲಾಢ್ಯ ಆರ್ಥಿಕ ಶಕ್ತಿಯಾಗಬೇಕಾದರೆ ಆ ದೇಶದ ನಾಗರಿಕರು ಭಯರಹಿತ ಮತ್ತು ಸುರಕ್ಷಿತ ಭಾವವ ನ್ನು ಹೊಂದಬೇಕಾದುದು ಬಹಳ ಅಗತ್ಯ. ಸದಾ ಘರ್ಷಣೆಯ ವಾತಾವರಣ ಇರುವ ಮತ್ತು ಅಸುರಕ್ಷಿತವಾಗಿರುವ ಯಾವ  ದೇಶದಲ್ಲೂ ಯಾವ ಕಂಪೆನಿಗಳೂ ಹೂಡಿಕೆ ಮಾಡುವುದಿಲ್ಲ. ಯಾವುದೇ ಉದ್ಯಮಿ ಹಣ ಹೂಡುವ ಮೊದಲು ಆ ರಾಷ್ಟ್ರ  ಸುರಕ್ಷಿತವಾಗಿದೆಯೇ ಎಂಬುದಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಯುಎಇ, ಕತಾರ್, ಸೌದಿ, ಕುವೈಟ್‌ಗಳೆಲ್ಲ ಇವತ್ತು ಅತ್ಯಂತ  ವೇಗವಾಗಿ ಬೆಳೆದಿರುವ ಮತ್ತು ಬೆಳೆಯುತ್ತಿರುವ ಆರ್ಥಿಕ ಶಕ್ತಿಯಾಗಿ ಬದಲಾಗಿರುವುದರ ಹಿಂದೆ ಈ ಸುರಕ್ಷಿತ  ವಾತಾವರಣಕ್ಕೆ ಮೊದಲ ಸ್ಥಾನವಿದೆ. ಅಲ್ಲಿ ಧರ್ಮದ ಆಧಾರದಲ್ಲಿ ಪಕ್ಷಪಾತ ನಡೆಸುವುದಿಲ್ಲ. ಕೋಮುಗಲಭೆಗಳಿಗೆ  ಜಾಗವಿಲ್ಲ. ದ್ವೇಷ ಭಾಷಣಕ್ಕೆ ಅವಕಾಶವೇ ಇಲ್ಲ. ಧರ್ಮ ನೋಡದೇ ದುಷ್ಕರ್ಮಿಗಳು ಮತ್ತು ಸಮಾಜ ಘಾತುಕ ಶಕ್ತಿಗಳ  ವಿರುದ್ಧ ಅಲ್ಲಿನ ಪ್ರಭುತ್ವ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತದೆ. ಆ ಕಾರಣದಿಂದಲೇ ಹಿಂದೂಗಳೂ ಮುಸ್ಲಿಮರೂ ಈ  ರಾಷ್ಟçಗಳಲ್ಲಿ ಉದ್ಯೋಗ ಮಾಡುವುದನ್ನು ಬಯಸುತ್ತಾರೆ. ಕಂಪೆನಿಗಳೂ ಇಂಥದ್ದೇ  ವಾತಾವಣವನ್ನು ಬಯಸುತ್ತವೆ.  ಆದ್ದರಿಂದ,

ಬಲಾಢ್ಯ ಆರ್ಥಿಕ ಶಕ್ತಿಯಾಗಬೇಕೆಂದು ಬಯಸುವ ಭಾರತವು ಮೊದಲಾಗಿ ಇಲ್ಲಿನ ಧರ್ಮದ್ವೇಷಿಗಳನ್ನು ಮಟ್ಟ  ಹಾಕಬೇಕಾಗಿದೆ. ದುಷ್ಕಮಿಗಳಿಗೆ ಧರ್ಮ ಇಲ್ಲ ಎಂಬ ಪ್ರಬಲ ಸಂದೇಶವನ್ನು ಸಾರಬೇಕಾಗಿದೆ. ಕುವೈಟ್‌ನಿಂದ ಪ್ರಶಸ್ತಿ  ಸ್ವೀಕರಿಸಿಕೊಂಡು ಮರಳಿರುವ ಪ್ರಧಾನಿ ಮೋದಿಯವರ ಕಣ್ಣು ತೆರೆಸಲು ಅರ್ಮಾನ್ ಖಾನ್ ಯಶಸ್ವಿಯಾಗಲಿ ಎಂದು  ಹಾರೈಸೋಣ.

Monday, 23 December 2024

ವಕ್ಫ್: ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸಲು ಹೋಗಿ ಸ್ವಯಂ ಕಟಕಟೆಗೇರಿದವರ ಕತೆ





ಎರಡ್ಮೂರು ತಿಂಗಳ ಹಿಂದೆ ಭಾರೀ ವಿಜೃಂಭಣೆಯಿಂದ  ಉದ್ಘಾಟನೆಗೊಂಡ ‘ವಕ್ಫ್’ ವಿಷಯ ನಿಧಾನಕ್ಕೆ ತನ್ನೆಲ್ಲಾ  ಆಕರ್ಷಣೆಯನ್ನು ಕಳಕೊಂಡು ಮುಗಿದ ಅಧ್ಯಾಯವಾಗುವ ಹಂತಕ್ಕೆ ಬಂದು ನಿಂತಿದೆ.

ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡುವುದಾಗಿ ಬ್ಯಾಂಡು-ಮದ್ದಳೆಯೊಂದಿಗೆ ಘೋಷಿಸಿದ ಕೇಂದ್ರ ಸರಕಾರ,  ವಕ್ಫ್ ತಿದ್ದುಪಡಿ ಮಸೂದೆಯನ್ನು ಪಾರ್ಲಿಮೆಂಟ್‌ನಲ್ಲೂ ಮಂಡಿಸಿತು. ಆ ಕ್ಷಣದಿಂದ ಮಾಧ್ಯಮಗಳಲ್ಲಿ ಕಟ್ಟುಕತೆಗಳ ಕಂತೆ  ಕಂತೆ ಸುಳ್ಳುಗಳು ಪ್ರಸಾರವಾಗತೊಡಗಿದುವು. ಸ್ವಾತಂತ್ರ‍್ಯ ಲಭಿಸಿ 75 ವರ್ಷಗಳ ವರೆಗೆ ವಿವಾದವೇ ಆಗದಿದ್ದ ಮತ್ತು  ಹಿಂದೂಗಳ ಆಸ್ತಿಗಳಿಗೆ ಸಂಚಕಾರವೆಂದು  ಗುರುತಿಸಿಕೊಳ್ಳದಿದ್ದ ವಕ್ಫ್ ಕಾಯ್ದೆಯು ದಿಢೀರ್ ಆಗಿ ಕೋರೆ ಹಲ್ಲುಗಳುಳ್ಳ,  ಚೂಪು ಉಗುರುಗಳು ಮತ್ತು ರಾಕ್ಷಸ ಗುಣಗಳುಳ್ಳ ಹಿಂದೂ ವಿರೋಧಿ ಕಾಯ್ದೆಯಾಗಿ ಗುರುತಿಸಿಕೊಂಡಿತು. ಟಿವಿ ಚಾನೆಲ್‌ಗಳ ಆ್ಯಂಕರ್‌ಗಳು ಎಲ್ಲಿಯವರೆಗೆ ಭೀತಿಯನ್ನು ಹುಟ್ಟಿಸಿದರೆಂದರೆ, ‘ಓರ್ವ ಮುಸ್ಲಿಮ್ ವ್ಯಕ್ತಿ ಹಿಂದೂ ವ್ಯಕ್ತಿಯ ಮನೆಯ ಅಂಗಳದಲ್ಲಿ ನಿಂತು, ‘ಇದು ವಕ್ಫ್ ಭೂಮಿ’ ಎಂದು ಹೇಳಿದರೆ ಸಾಕು, ಅದು ವಕ್ಫ್ ಆಸ್ತಿಯಾಗಿ ಮಾರ್ಪಡುತ್ತದೆ..’  ಎಂದು ಹೇಳಿದರು. ಇದನ್ನೇ ರಾಜಕಾರಣಿಗಳೂ ಹೇಳತೊಡಗಿದರು. ವಕ್ಫ್ ಟ್ರಿಬ್ಯೂನಲ್ ಅನ್ನು ‘ಖಾಝಿ  ನ್ಯಾಯಾಲಯದಂತೆ’ ಬಿಂಬಿಸಿದರು. ಮುಸ್ಲಿಮರಿಂದ ಮುಸ್ಲಿಮರಿಗೆ ಮತ್ತು ಮುಸ್ಲಿಮರಿಗೋಸ್ಕರ ಇರುವ ನ್ಯಾಯಾಲಯ  ಎಂದು ವಕ್ಫ್ ಟ್ರಿಬ್ಯೂನಲ್ ಅನ್ನು ವ್ಯಾಖ್ಯಾನಿಸಿದರು. ಈ ದೇಶದಲ್ಲಿ ಅತೀ ಹೆಚ್ಚು ಭೂಮಿ ರೈಲ್ವೆ ಇಲಾಖೆಯಲ್ಲಿದ್ದರೆ  ನಂತರದ ಸ್ಥಾನ ವಕ್ಫ್ ಇಲಾಖೆಯದ್ದು ಎಂದೂ ಪ್ರಚಾರ ಮಾಡಿದರು.
ವಕ್ಫ್ ತಿದ್ದುಪಡಿ ಮಸೂದೆಯನ್ನು ಪಾರ್ಲಿಮೆಂಟಲ್ಲಿ ಮಂಡಿಸುವ ಕೇಂದ್ರ ಸರಕಾರದ ಹಿಂದಿನ ಉದ್ದೇಶವೂ ಇಂಥ  ಚರ್ಚೆಗಳನ್ನು ಹುಟ್ಟು ಹಾಕುವುದೇ ಇದ್ದಿರಬೇಕು. ಮುಸ್ಲಿಮರನ್ನು ಹಿಂದೂ ವಿರೋಧಿಗಳಂತೆ ಮತ್ತು ಈ ದೇಶದ ಯಾವ  ಕಾನೂನೂ ಅನ್ವಯವಾಗದ ವಿಶೇಷ ದರ್ಜೆಯ ಸಮುದಾಯದಂತೆ ಬಿಂಬಿಸುವುದನ್ನು ಕೇಂದ್ರ ಬಯಸಿರಬೇಕು.  ಮಸೂದೆಯನ್ನು ಪಾರ್ಲಿಮೆಂಟಲ್ಲಿ ಮಂಡಿಸುವ ಮೂಲಕ ಕೇಂದ್ರ ಸರಕಾರ ಈ ತಂತ್ರದಲ್ಲಿ ಯಶಸ್ಸನ್ನೂ ಪಡೆಯಿತು.  

ಮುಸ್ಲಿಮ್ ಸಮುದಾಯದ ಪಾಲಿಗೆ ಇದು ದಿಢೀರ್ ಸವಾಲಾಗಿತ್ತು. ಮಾಧ್ಯಮಗಳು ಮತ್ತು ರಾಜಕಾರಣಿಗಳು  ಹರಿಯಬಿಡುತ್ತಿರುವ ಮಾಹಿತಿಗಳು ಮತ್ತು ವ್ಯಾಖ್ಯಾನಗಳಿಗೆ ತರ್ಕಬದ್ಧ ಮತ್ತು ಆಧಾರರಹಿತ ಉತ್ತರ ನೀಡುವುದಕ್ಕೆ  ಮಾಹಿತಿಗಳನ್ನು ಕಲೆ ಹಾಕಬೇಕಿತ್ತು. ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಯಲ್ಲಿ ಏನೇನಿದೆ ಮತ್ತು ತಿದ್ದುಪಡಿ ಕಾಯ್ದೆಯಲ್ಲಿ ಏನೇನು  ಇದೆ ಎಂಬುದನ್ನು ಅಧ್ಯಯನ ನಡೆಸಬೇಕಿತ್ತು. ಸೋಶಿಯಲ್ ಮೀಡಿಯಾವೂ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಭಾರೀ  ಬಿರುಸಿನಿಂದ ಹಂಚಿಕೆಯಾಗುತ್ತಿರುವ ಸುದ್ದಿಗಳಲ್ಲಿ ಸತ್ಯವೆಷ್ಟು ಮತ್ತು ಸುಳ್ಳೆಷ್ಟು ಎಂಬುದನ್ನು ಜರಡಿ ಹಿಡಿದು  ವಿಭಜಿಸಬೇಕಿತ್ತು. ಮುಸ್ಲಿಮ್ ಸಮುದಾಯದ ಮುಂದಿದ್ದ ಈ ಸವಾಲಿನ ಸಣ್ಣ ಅವಧಿಯನ್ನು ಮುಸ್ಲಿಮ್ ದ್ವೇಷಿಗಳು ಚೆನ್ನಾಗಿ  ಬಳಸಿಕೊಂಡರು. ಇದೇವೇಳೆ,

ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಮಸೂದೆಯ ಪರಿಶೀಲನೆಗಾಗಿ ಜಂಟಿ ಪಾರ್ಲಿಮೆಂಟರಿ ಸಮಿತಿ(ಜೆಪಿಸಿ)ಯನ್ನು  ರಚಿಸಿತು. ನಿಜವಾಗಿ, ಕೇಂದ್ರ ಸರಕಾರಕ್ಕೆ ಈ ಜೆಪಿಸಿ ರಚನೆ ಇಷ್ಟವಿರಲಿಲ್ಲ. ತರಾತುರಿಯಿಂದ ಕಾಯ್ದೆಯನ್ನು ಅಂಗೀಕರಿಸಿ  ಮುಸ್ಲಿಮ್ ಸಮುದಾಯವನ್ನು ಕೆರಳಿಸುವ ಉದ್ದೇಶ ಇತ್ತೋ ಏನೋ? ಆದರೆ ವಿರೋಧ ಪಕ್ಷಗಳ ಒತ್ತಡ ಮತ್ತು ಮೈತ್ರಿ  ಪಕ್ಷಗಳ ಪರೋಕ್ಷ ಒತ್ತಡಗಳಿಗೆ ಮಣಿದು ಜೆಪಿಸಿಯನ್ನು ರಚಿಸಿತು. ಇದು ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಯನ್ನು ಮತ್ತು  ಮಾಧ್ಯಮಗಳು ಹಾಗೂ ರಾಜಕಾರಣಿಗಳು ಹರಡುತ್ತಿರುವ ಸುಳ್ಳುಗಳನ್ನು ಜನರ ಮುಂದಿಡುವುದಕ್ಕೆ ಮುಸ್ಲಿಮರಿಗೆ ಅವಕಾಶವನ್ನು ಒದಗಿಸಿತು. ಒಂದು ಕಡೆ,
ಜೆಪಿಸಿಯ ಸದಸ್ಯರು ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿರುವ ಲೋಪಗಳನ್ನು ಬಹಿರಂಗಕ್ಕೆ ತಂದರೆ ಇನ್ನೊಂದು ಕಡೆ ವಿವಿಧ  ಮುಸ್ಲಿಮ್ ಸಂಘಟನೆಗಳು ವಕ್ಫ್ ನ  ಹಿನ್ನೆಲೆ ಮತ್ತು ಅದರ ಮಹತ್ವವನ್ನು ಸಾರ್ವಜನಿಕವಾಗಿ ವಿವರಿಸತೊಡಗಿದರು. ಈ  ದೇಶದ ಸಾವಿರಾರು ಮಂದಿ ಸೋಶಿಯಲ್ ಮೀಡಿಯಾದ ಮೂಲಕ ವಕ್ಫ್ ನ  ಸುತ್ತ ಅಧ್ಯಯನ ಆಧಾರಿತ ಮಾಹಿತಿಗಳನ್ನು  ಹಂಚಿಕೊಳ್ಳತೊಡಗಿದರು. ಹೀಗೆ ಸುಳ್ಳಿಗೆ ಸತ್ಯದ ಮೂಲಕ ಒಂದೊಂದೇ  ಏಟುಗಳು ಬೀಳತೊಡಗಿದಂತೆಯೇ ಚರ್ಚೆಯನ್ನು ಹುಟ್ಟು ಹಾಕಿದವರೇ ಮುಕ್ತಾಯಕ್ಕೆ ಅವಸರಿಸತೊಡಗಿದರು. ನಿಜವಾಗಿ,

ವಕ್ಫ್ ಟ್ರಿಬ್ಯೂನಲ್ ಎಂಬುದು ಕುಟುಂಬ ನ್ಯಾಯಾಲಯದಂತೆ ಶೀಘ್ರ ನ್ಯಾಯ ವಿತರಣೆಗಾಗಿ ಮಾಡಿಕೊಂಡ ವ್ಯವಸ್ಥೆಯೇ  ಹೊರತು ಅವೇನೂ ಮುಸ್ಲಿಮರ ನ್ಯಾಯಾಲಯವಲ್ಲ. ಈ ಟ್ರಿಬ್ಯೂನಲ್‌ಗೆ ನ್ಯಾಯಾಧೀಶರನ್ನು ಹೈಕೋರ್ಟ್ ನ  ಮುಖ್ಯ  ನ್ಯಾಯಾಧೀಶರೇ ನೇಮಿಸುತ್ತಾರೆ. ಬೆಂಗಳೂರಿನಲ್ಲಿರುವ ವಕ್ಫ್ ಟ್ರಿಬ್ಯೂನಲ್‌ನ ನ್ಯಾಯಾಧೀಶರಾಗಿ ಸುಧಾ ಸೀತಾರಾಂ  ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ವಕ್ಫ್ ಟ್ರಿಬ್ಯೂನಲ್‌ನ ಗುಲ್ಬರ್ಗಾ ಪೀಠದ ನ್ಯಾಯಾಧೀಶರಾಗಿ ಶ್ರೀನಿವಾಸನ್  ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ. ಕಠಿಯಾಣಿಯವರು ಬೆಂಗಳೂರು ಪೀಠದ ನ್ಯಾಯಾಧೀಶರಾಗಿದ್ದಾರೆ. ಗುರುರಾಜ್  ಅವರು ಮೈಸೂರು ಟ್ರಿಬ್ಯೂನಲ್ ಪೀಠದ ನ್ಯಾಯಾಧೀಶರಾಗಿದ್ದಾರೆ. ಇವರೆಲ್ಲ ಆಯಾ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದಹಾಗೆ,

ಈ ದೇಶದಲ್ಲಿ ಎಲ್ಲೆಲ್ಲ ವಕ್ಫ್ ಭೂಮಿ ಇದೆ ಎಂಬುದನ್ನು ತೀರ್ಮಾನಿಸಿದ್ದು ಮುಸ್ಲಿಮರಲ್ಲ ಅಥವಾ ಯಾವುದೇ ಸಚಿವರೋ  ಶಾಸಕರೋ ಅಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೇ ಮಾಡಿ ಸರಕಾರಿ ಗಜೆಟೆಡ್ ನೋಟಿಫಿಕೇಶನ್ ಬಂದ  ಬಳಿಕ ಅದು ದಾಖಲೀಕರಣಗೊಂಡು ಆಗಿರುವ ಬೆಳವಣಿಗೆ ಇದು. ಈ ಇಡೀ ಪ್ರಕ್ರಿಯೆಯಲ್ಲಿ ಮುಸ್ಲಿಮರ ಪಾತ್ರ ಶೂನ್ಯಾತಿಶೂನ್ಯ. ಹೀಗೆ ಸರಕಾರವೇ ಜಾರಿ ಮಾಡಿದ ಗಜೆಟೆಡ್ ನೋಟಿಫಿಕೇಶನ್‌ನ ಆಧಾರದಲ್ಲಿ ಕಂದಾಯ ಇಲಾಖೆ  ನೋಟೀಸು ಜಾರಿ ಮಾಡುತ್ತದೆಯೇ ಹೊರತು ಯಾವುದೇ ಸಚಿವರು ಅಥವಾ ಶಾಸಕರಿಗೆ ಹಾಗೆ ಮಾಡುವುದಕ್ಕೆ ಅವಕಾಶವೂ ಇಲ್ಲ. ಯಾವ ಭೂಮಿಯನ್ನು ಕಂದಾಯ ಇಲಾಖೆ ವಕ್ಫ್ ಎಂದು ನೋಟೀಸು ಮಾಡಿದೆಯೋ ಅದನ್ನು ರಕ್ಷಿಸುವ  ಜವಾಬ್ದಾರಿ ಮಾತ್ರ ವಕ್ಫ್ ಇಲಾಖೆಯದ್ದು. ಅದರಾಚೆಗೆ ಅದಕ್ಕೆ ಸ್ವಯಂ ನೋಟೀಸು ಕಳುಹಿಸುವ ಅಥವಾ ಆಸ್ತಿ ಕಬಳಿಸುವ  ಯಾವ ಅಧಿಕಾರವೂ ಇಲ್ಲ. ನಮ್ಮದೇ ರಾಜ್ಯದಲ್ಲಿ ಸರಕಾರಿ ಗಜೆಟೆಡ್ ನೋಟಿಫಿಕೇಶನ್‌ನ ಪ್ರಕಾರ ಒಂದು ಲಕ್ಷದ 80  ಸಾವಿರ ಎಕ್ರೆ ವಕ್ಫ್ ಆಸ್ತಿಯಿದೆ. ಆದರೆ, ಈಗ ವಕ್ಫ್ ಬೋರ್ಡಿನ ಅಧೀನದಲ್ಲಿರುವುದು ಕೇವಲ 20 ಸಾವಿರದ 400 ಎಕ್ರೆ  ಆಸ್ತಿ ಮಾತ್ರ. ಉಳಿದ ಅಷ್ಟೂ ಆಸ್ತಿಗಳು ಇನಾಮ್ ಅಬಾಲಿಷನ್ ಕಾಯ್ದೆ, ಭೂ  ಸುಧಾರಣಾ ಕಾಯ್ದೆ, ಸರಕಾರಿ ಒತ್ತುವರಿ  ಮತ್ತು ಖಾಸಗಿ ವ್ಯಕ್ತಿಗಳ ಒತ್ತುವರಿಯಿಂದಾಗಿ ಕಣ್ಮರೆಯಾಗಿದೆ. ಹಾಗಂತ,

ವಕ್ಫ್ ಇಲಾಖೆಯು ಸರಕಾರಿ ಒತ್ತುವರಿಯ ಭೂಮಿಯನ್ನಾಗಲಿ, ಭೂಸುಧಾರಣೆಯಿಂದಾಗಿ ಕಳಕೊಂಡ ಭೂಮಿಯನ್ನಾಗಲಿ  ಅಥವಾ ಇನಾಮ್ ಅಬಾಲಿಷನ್ ಕಾಯ್ದೆಯಿಂದ ಕಳಕೊಂಡ ಭೂಮಿಯನ್ನಾಗಲಿ ಈವರೆಗೂ ಕೇಳಿಲ್ಲ. ಅದು ಈಗ  ನೋಟೀಸು ಕಳುಹಿಸಿರುವುದು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಮಾತ್ರ. ಅದರಲ್ಲೂ ಹೀಗೆ  ಕಂದಾಯ ಇಲಾಖೆ ನೋಟೀಸು ಕಳುಹಿಸುವ ಮೊದಲು ವಕ್ಫ್ ಅದಲಾತ್ ಅನ್ನು ನಡೆಸಲಾಗುತ್ತದೆ. ಈ ಅದಾಲತ್‌ನಲ್ಲಿ  ರಾಜ್ಯದ ಅಲ್ಪಸಂಖ್ಯಾತ ಸಚಿವರು ಮಾತ್ರ ಇರುವುದಲ್ಲ. ಉಪ ಜಿಲ್ಲಾಧಿಕಾರಿ, ಕಂದಾಯ ಅಧಿಕಾರಿಗಳು, ಆಯಾ ಜಿಲ್ಲೆಯ ಎಲ್ಲ  ಶಾಸಕರೂ ಇರುತ್ತಾರೆ. ಅವರೆಲ್ಲರ ಸಮ್ಮುಖದಲ್ಲಿ ಅದಾಲತ್ ನಡೆಸಿದ ಬಳಿಕ ವಕ್ಫ್ ಭೂಮಿಯನ್ನು ಒತ್ತುವರಿ  ಮಾಡಿಕೊಂಡವರಿಗೆ ನೋಟೀಸು ಕಳುಹಿಸಲಾಗುತ್ತದೆ. ಇದರಲ್ಲೂ ಮುಸ್ಲಿಮರ ಪಾತ್ರ ಶೂನ್ಯ ಅನ್ನುವಷ್ಟು ಕಡಿಮೆ.  ಬಸವರಾಜ್ ಬೊಮ್ಮಾಯಿ ಸರಕಾರದ ಅವಧಿಯಲ್ಲಿ ನಡೆಸಲಾದ ವಕ್ಫ್ ಅದಾಲತ್‌ನ ನೇತೃತ್ವವನ್ನು ಸಚಿವೆ ಶಶಿಕಲಾ ಜೊಲ್ಲೆ  ನಿರ್ವಹಿಸಿದ್ದರು. ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿಕೊಂಡವರಿಗೆ 2 ಸಾವಿರಕ್ಕಿಂತಲೂ ಅಧಿಕ ನೋಟೀಸುಗಳನ್ನು ಆ  ಸಮಯದಲ್ಲಿ ಕಳುಹಿಸಲಾಗಿತ್ತು. ಹಾಗಂತ, ಈ ನೋಟೀಸೇ ಅಂತಿಮವಲ್ಲ. ವಕ್ಫ್ ಟ್ರಿಬ್ಯೂನಲ್‌ನಲ್ಲಿ ತೀರ್ಪು ತಮ್ಮ ಪರ  ಬರದೇ ಇದ್ದರೆ ಅದನ್ನು ಪ್ರಶ್ನಿಸಿ ಹೈಕೋರ್ಟು ಮತ್ತು ಸುಪ್ರೀಮ್ ಕೋರ್ಟಿಗೆ ಹೋಗುವ ಎಲ್ಲ ಅವಕಾಶಗಳೂ  ಕಕ್ಷಿದಾರರಿಗೆ ಮುಕ್ತವಾಗಿರುತ್ತದೆ. ಒಂದುರೀತಿಯಲ್ಲಿ,


ಜನಸಾಮಾನ್ಯರ ಪಾಲಿಗೆ ಅಪರಿಚಿತವಾಗಿದ್ದ ವಕ್ಫ್ ವಿಷಯವನ್ನು ಪರಿಚಿತಗೊಳಿಸುವುದಕ್ಕೆ ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಮಸೂದೆ ದೊಡ್ಡದೊಂದು ಕೊಡುಗೆಯನ್ನು ನೀಡಿದೆ. ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸಬೇಕೆಂದು ತಂತ್ರ  ಹೆಣೆದವರು ನಿಧಾನಕ್ಕೆ ಸ್ವಯಂ ಕಟಕಟೆಯಲ್ಲಿ ನಿಲ್ಲ ತೊಡಗಿದ್ದಾರೆ.

Wednesday, 18 December 2024

ಬಲಿಷ್ಠ ಅಸದ್‌ರನ್ನೇ ಪದಚ್ಯುತಗೊಳಿಸಿದ ಈ ಜುಲಾನಿ ಯಾರು?




ಕಳೆದ 24 ವರ್ಷಗಳಿಂದ ಅಧ್ಯಕ್ಷರಾಗಿದ್ದ ಸಿರಿಯದ ಬಶ್ಶಾರುಲ್ ಅಸದ್ ಅವರ ಯುಗ ಕೊನೆಗೊಂಡಿದೆ. ಇರಾಕ್‌ನ ಕುಪ್ರಸಿದ್ಧ ಅಬೂ ಗುರೈಬ್ ಸೇರಿದಂತೆ ಕ್ಯಾಂಪ್ ಬುಕ್, ಕ್ಯಾಂಪ್ ಕ್ರೋಪ್ಟರ್, ಅಲ್ ತಜ್ಜಿ ಮುಂತಾದ ಅತಿಕ್ರೂರ ಜೈಲುಗಳಲ್ಲಿ 5 ವರ್ಷಗಳ ಕಾಲ ಇದ್ದು, ತನ್ನ ತಲೆಗೆ ಅಮೆರಿಕದಿಂದ 10 ಬಿಲಿಯನ್ ಡಾಲರ್ ಘೋಷಿಸಲ್ಪಟ್ಟ ಅಬೂ ಮುಹಮ್ಮದ್ ಅಲ್ ಜುಲಾನಿ ಎಂಬ ಮಧ್ಯ ವಯಸ್ಸಿನ ವ್ಯಕ್ತಿ ಇದೀಗ ಸಿರಿಯದ ಹೀರೋ ಆಗಿ ಹೊರಹೊಮ್ಮಿದ್ದಾರೆ. ಈ ಜುಲಾನಿ ನೇತೃತ್ವದ ಹಯಾತ್ ತಹ್ರೀರ್ ಅಲ್ ಶಾಂ (HTS) ಎಂಬ ಸಶಸ್ತ್ರ  ಹೋರಾಟಗಾರರ ಗುಂಪು ಸಿರಿಯಾದಲ್ಲಿ ವಿಜಯ ಪತಾಕೆ ಹಾರಿಸಿದೆ. ಅಸದ್‌ರಿಂದ ಸಿರಿಯಾವನ್ನು ವಿಮೋಚನೆಗೊಳಿಸಿದೆ. ಈ ಜುಲಾನಿಯನ್ನು ತಾನು ಹತ್ಯೆ ಮಾಡಿರುವುದಾಗಿ ಈ ವಿಮೋಚನೆಗಿಂತ ಎರಡು ವಾರಗಳ ಮೊದಲು ರಷ್ಯಾ ಘೋಷಿಸಿತ್ತು. ಜುಲಾನಿಯ ಚಿತ್ರವನ್ನೂ ಬಿಡುಗಡೆಗೊಳಿಸಿತ್ತು. ಆದರೆ, ಇಂಥ ಹತ್ತು ಹಲವು ಅಡೆತಡೆಗಳು ಮತ್ತು ಸುಳ್ಳುಗಳನ್ನು ದಾಟಿ ಜುಲಾನಿ ಇದೀಗ ಕ್ರಾಂತಿಯೊಂದಕ್ಕೆ ಯಶಸ್ವಿ ನೇತೃತ್ವ ನೀಡಿದ ದಂಡನಾಯಕನಾಗಿ ಗುರುತಿಸಿಕೊಂಡಿದ್ದಾರೆ.

2011ರಲ್ಲಿ ಟುನೀಷ್ಯಾದಲ್ಲಿ ಅರಬ್ ಕ್ರಾಂತಿ ಪ್ರಾರಂಭವಾಯಿತು. ಬಹು ಬೇಗನೇ ಅದು ಈಜಿಪ್ಟಿಗೂ ಕಾಲಿಟ್ಟಿತು. ಸ್ವೇಚ್ಛಾಧಿಪತಿಗಳಿಂದ ತಮ್ಮ ನಾಡನ್ನು ವಿಮೋಚನೆಗೊಳಿಸುವುದು ಈ ಕ್ರಾಂತಿಯ ಗುರಿಯಾಗಿತ್ತು. 23 ವರ್ಷಗಳಿಂದ ಅಧಿಕಾರದಲ್ಲಿದ್ದ ಝೈನುಲ್ ಆಬಿದೀನ್ ವಿರುದ್ಧ ಟುನೀಷ್ಯಾದಲ್ಲಿ 2010 ಡಿ. 17 ರಂದು ಪ್ರತಿಭಟನೆ ಆರಂಭವಾಯಿತು. ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ಜನರು ತೀವ್ರವಾಗಿ ಕಂಗೆಟ್ಟಿದ್ದರು. ಇದೇವೇಳೆ, ರಸ್ತೆ ಬದಿ ಹಣ್ಣು-ಹಂಪಲು ಮಾರುತ್ತಿದ್ದ ಅಬ್ದುಲ್ ಅಝೀಝ್ ಎಂಬ ಪದವೀಧರ ಯುವಕನನ್ನು ಪೊಲೀಸರು ಥಳಿಸಿದರು. ಈ ಥಳಿತವೇ ಪ್ರಭುತ್ವ ವಿರೋಧಿ ಹೋರಾಟಕ್ಕೆ ಕಿಚ್ಚನ್ನು ಹಚ್ಚಿತು. ಕೇವಲ 27 ದಿನಗಳೊಳಗೆ ಅಧ್ಯಕ್ಷ ಝೈನುಲ್ ಆಬಿದೀನ್ ಟುನೀಷ್ಯಾದಿಂದ ಸೌದಿ ಅರೇಬಿಯಾಕ್ಕೆ ಪಲಾಯನ ಮಾಡಿದರು. ಇದೇ ಸಂದರ್ಭದಲ್ಲಿ,

ಸಿರಿಯಾದಲ್ಲಿ 14 ವರ್ಷದ ಮೌವಲಿಯ ಮತ್ತು ಆತನ ಗೆಳೆಯನನ್ನು ಪೊಲೀಸರು ಬಂಧಿಸಿ ತೀವ್ರವಾಗಿ ಹಿಂಸಿಸಿದರು. ಈ ಹುಡುಗರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಬೀದಿಗಿಳಿದ ಹೆತ್ತವರು ಮತ್ತು ಬಂಧುಗಳ ವಿರುದ್ಧ ಪೊಲೀಸರು ಲಾಠಿಚಾರ್ಚ್, ರಬ್ಬರ್ ಗುಂಡು ಮತ್ತು ಅಶ್ರುವಾಯು ಪ್ರಯೋಗಿಸಿದರು. ಹೀಗೆ ಪ್ರತಿಭಟನೆಯನ್ನು ಮಟ್ಟಹಾಕಿದ ಪೊಲೀಸರು ಬಂಧನದ 26 ದಿನಗಳ ಬಳಿಕ ಹುಡುಗರನ್ನು ಬಿಡುಗಡೆಗೊಳಿಸಿದರು. ಈ ಘಟನೆ ನಡೆದಿರುವುದು ಪಶ್ಚಿಮ ಸಿರಿಯದ ದಾರಾ ನಗರದಲ್ಲಿ. ಬಿಡುಗಡೆಗೊಂಡ ಬಳಿಕ ಅಧ್ಯಕ್ಷ ಅಸದ್‌ರನ್ನು ಗುರಿಯಾಗಿಸಿ ದಾರಾ ನಗರದ ಮುಖ್ಯ ಗೋಡೆಯಲ್ಲಿ ಈ ಮೌವಲಿಯ, `ಇದು ನಮ್ಮ ವಿಶ್ವಾಸ (ಈಮಾನ್) ಡಾಕ್ಟರ್...' ಎಂಬ ಬರಹವನ್ನು ಬರೆದ. ಅಧ್ಯಕ್ಷ ಬಶ್ಶಾರುಲ್ ಅಸದ್ ಕಣ್ಣಿನ ವೈದ್ಯರಾಗಿದ್ದರು. `ನಾವು ಹೆದರಲ್ಲ, ಬಗ್ಗಲ್ಲ' ಎಂಬ ಅರ್ಥದ ಈ ಬರಹ ಕ್ಷಣ ಮಾತ್ರದಲ್ಲಿ ವೈರಲ್ ಆಯಿತು. ಮಾಧ್ಯಮಗಳು ಅದನ್ನು ಎತ್ತಿಕೊಂಡವು. ಸೋಶಿಯಲ್ ಮೀಡಿಯದಲ್ಲೂ ಹಂಚಿಕೆಯಾಯಿತು. ಇದುವೇ ಅಸದ್ ರಾಜೀನಾಮೆಯನ್ನು ಒತ್ತಾಯಿಸಿ 2011 ಮಾರ್ಚ್ ನಲ್ಲಿ  ನಡೆದ ಪ್ರಥಮ ಪ್ರತಿಭಟನೆಗೆ ಕಾರಣವೂ ಆಯಿತು. 2011ರ ಜುಲೈಯಲ್ಲಿ `ಫ್ರೀ ಸಿರಿಯನ್ ಆರ್ಮಿ' ಎಂಬ ವಿಮೋಚನಾ ಗುಂಪು ರಚನೆಗೊಂಡಿತು. ಇದೇ ಸಂದರ್ಭದಲ್ಲಿ 5 ವರ್ಷಗಳ ಕಾಲ ಅಮೆರಿಕದ ಜೈಲಲ್ಲಿದ್ದು ಬಿಡುಗಡೆಗೊಂಡು ಇರಾಕ್‌ನಲ್ಲಿದ್ದ ಜುಲಾನಿ ನೇರ ಸಿರಿಯಕ್ಕೆ ಬಂದು ವಿಮೋಚನಾ ಪ್ರತಿಭಟನೆಯಲ್ಲಿ ಸೇರಿಕೊಂಡ.

ಈ ಜುಲಾನಿಗೆ ಒಂದು ಕ್ರಾಂತಿಕಾರಿ ಹಿನ್ನೆಲೆಯಿದೆ. ಈ ಜುಲಾನಿ ಹುಟ್ಟಿದ್ದು 1982ರಲ್ಲಿ, ಸೌದಿ ಅರೇಬಿಯಾದಲ್ಲಿ. ಹಾಗಂತ, ಈತ ಸೌದಿ ಅರೇಬಿಯದವರಲ್ಲ. ಈ ಜುಲಾನಿಯ ತಂದೆಯ ಕುಟುಂಬ ಸಿರಿಯದ ಗೋಲಾನ್ ಬೆಟ್ಟದಲ್ಲಿ ವಾಸವಾಗಿತ್ತು. 1967ರಲ್ಲಿ ಇಸ್ರೇಲ್ ಜೊತೆ ನಡೆದ 6 ದಿನಗಳ ಯುದ್ಧದಲ್ಲಿ ಗೋಲಾನ್ ಬೆಟ್ಟ ಇಸ್ರೇಲ್‌ನ ವಶವಾಯಿತು. ಜುಲಾನಿಯ ತಂದೆಯ ಹೆತ್ತವರು ಈ ಗೋಲಾನ್ಸಿ ಬೆಟ್ಟದಿಂದ ಸಿರಿಯದ ಇತರ ಭಾಗಕ್ಕೆ ವಲಸೆ ಬಂದರು. ಬಳಿಕ ಸರಕಾರದ ವಿರುದ್ಧ ಪ್ರತಿಕ್ರಾಂತಿಗೆ ಪ್ರಚೋದಿಸಿದರೆಂದು ಹೇಳಿ ಆಗಿನ ಬಾತಿಸ್ಟ್ ಪಕ್ಷದ ಆಡಳಿತ ಜುಲಾನಿಯ ತಂದೆ ಅಹ್ಮದ್ ಹುಸೈನ್ ಅಲ್ ಶರಾಂರನ್ನು ಬಂಧಿಸಿತು. ಜೈಲಿನಿಂದ ತಪ್ಪಿಸಿಕೊಂಡ ಅವರು ನೇರ ಇರಾಕಿಗೆ ತೆರಳಿ ಅಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದರು. ಆಗ ಇಸ್ರೇಲ್ ವಿರುದ್ಧ ಯಾಸಿರ್ ಅರಫಾತ್ ನೇತೃತ್ವದ ಪಿಎಲ್‌ಓ ಹೋರಾಟದಲ್ಲಿ ಸಕ್ರಿಯವಾಗಿತ್ತು. ಅದಕ್ಕೆ ಬೆಂಬಲ ಸಾರಿ ಅವರು ಜೋರ್ಡಾನ್‌ಗೆ ಹೋದರು. 1970ರಲ್ಲಿ ಮರಳಿ ಸಿರಿಯಕ್ಕೆ ಬಂದರು. ಇದೀಗ ಪದಚ್ಯುತಗೊಂಡ ಬಶ್ಶಾರುಲ್ ಅಸದ್ ಅವರ ತಂದೆ ಹಾಫಿಝ್ ಅಸದ್‌ರು ಆಗ ಸಿರಿಯದ ಅಧ್ಯಕ್ಷರಾಗಿದ್ದರು. ಅವರ ಆಡಳಿತದ ವಿರುದ್ಧ ಹೋರಾಟ ಸಂಘಟಿಸಿದ ಕಾರಣಕ್ಕಾಗಿ ಬಂಧನಕ್ಕೀಡಾದರು. ಬಿಡುಗಡೆಯ ಬಳಿಕ ನೇರ ಸೌದಿಗೆ ಹೋಗಿ ಅಲ್ಲಿನ ತೈಲ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ದುಡಿಯುತ್ತಿದ್ದ ವೇಳೆ 1982ರಲ್ಲಿ ಈ ಜುಲಾನಿಯ ಜನನವಾಯಿತು. 1989ರಲ್ಲಿ ಈ ಕುಟುಂಬ ಸಿರಿಯಾಕ್ಕೆ ಮರಳಿತು.

`ಇಸ್ರೇಲ್ ವಿರುದ್ಧ ಹಮಾಸ್ ಕೈಗೊಂಡ ಎರಡನೇ ಇಂತಿಫಾದ ಹೋರಾಟದ ವೇಳೆ ತನಗೆ 18 ವರ್ಷವಾಗಿತ್ತು ಮತ್ತು ಫೆಲೆಸ್ತೀನಿನ ಸಂತ್ರಸ್ತರಿಗೆ ತಾನೇನು ಮಾಡಬಲ್ಲೆ ಎಂಬ ಯೋಚನೆ ತನ್ನಲ್ಲಿ ಹುಟ್ಟಿಕೊಂಡಿತ್ತು...' ಎಂದು ಇದೇ ಜುಲಾನಿ ಅಮೆರಿಕ `ಫ್ರಂಟ್ ಲೈನ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ಹಿಂದೆ ಹೇಳಿದ್ದಿದೆ. ಅಮೆರಿಕದ ವಿರುದ್ಧ ಹೋರಾಟ ನಡೆಸುವುದಕ್ಕಾಗಿ 2003ರಲ್ಲಿ ಇರಾಕ್‌ಗೆ ಹೋದ ಈ ಜುಲಾನಿ ಅಲ್ ಕಾಯಿದಾ ಸೇರಿದ. 2006ರಲ್ಲಿ ಅಮೆರಿಕನ್ ಸೇನೆ ಈ ಜುಲಾನಿಯನ್ನು ಬಂಧಿಸಿತಲ್ಲದೇ ಕುಪ್ರಸಿದ್ಧ ಅಬೂ ಗುರೈಬ್ ಸೇರಿದಂತೆ ವಿವಿಧ ಜೈಲಲ್ಲಿಟ್ಟು ಹಿಂಸಿಸಿತು. 2011ರಲ್ಲಿ ಬಿಡುಗಡೆಗೊಂಡಾಗ ಸಿರಿಯದಲ್ಲಿ ಅಸದ್ ಆಡಳಿತದ ವಿರುದ್ಧ ಪ್ರತಿಭಟನೆ ಪ್ರಾರಂಭವಾಗಿತ್ತು. ಇರಾಕ್‌ನಿಂದ ನೇರ ಸಿರಿಯಾದ ಇದ್ಲಿಬ್ ನಗರಕ್ಕೆ ಬಂದ ಈ ಜುಲಾನಿ, ಅಲ್ಲಿ ಅಲ್ ಕಾಯಿದಾವನ್ನು ಗಟ್ಟಿಗೊಳಿಸಿದ. ಐಸಿಸ್‌ನ ಅಬೂಬಕರ್ ಅಲ್ ಬಗ್ದಾದಿ ಜೊತೆ ಸೇರಿ ಕೆಲಸ ಪ್ರಾರಂಭಿಸಿದ. 2013ರಲ್ಲಿ ಅಲ್ ಕಾಯಿದಾದ ಜೊತೆ ಸಂಬಂಧ ಕಡಿದುಕೊಂಡ ಅಲ್ ಬಗ್ದಾದಿಯು ಇನ್ನು  ತನ್ನ ಗಮನ ಕೇವಲ ಸಿರಿಯಕ್ಕೆ ಮಾತ್ರ ಎಂದು ಘೋಷಿಸಿದ. ಐಎಸ್‌ಐಎಲ್ ಎಂಬ ಹೊಸ ಸಂಘಟನೆಯನ್ನೂ  ಸ್ಥಾಪಿಸಿದ. ಜುಲಾನಿ ಇದನ್ನು ಒಪ್ಪಲಿಲ್ಲ. ಬಗ್ದಾದಿಯಿಂದ ದೂರ ನಿಂತ. 

2016ರಲ್ಲಿ ಸಿರಿಯ ಅಧ್ಯಕ್ಷ ಅಸದ್‌ರ ಸೇನೆಯು ಪ್ರಮುಖ ಅಲೆಪ್ಪೋ ನಗರವನ್ನು ಬಂಡಕೋರರಿಂದ  ವಶಪಡಿಸಿಕೊಂಡಿತು. ಆಗ ಅಲ್ಲಿದ್ದ ವಿವಿಧ ಸಂಘಟನೆಗಳ ಸಾವಿರಾರು ಬಂಡುಕೋರರು ಇದ್ಲಿಬ್‌ಗೆ ಪಲಾಯನ ಮಾಡಿದರು. ಇಲ್ಲಿ ಅದಾಗಲೇ ಇದ್ದ ಜುಲಾನಿ ಈ ಎಲ್ಲಾ ಬಂಡುಕೋರ ಗುಂಪುಗಳ ಹೋರಾಟಗಾರರನ್ನು ಒಟ್ಟು ಸೇರಿಸಿ `ಹಯಾತ್ ಅಲ್ ತಹ್ರೀರ್ ಅಲ್ ಶಾಂ' (HTS) ಎಂಬ ಏಕ ಗುಂಪನ್ನು ರಚಿಸಿದ ಮತ್ತು  ಅಲ್ ಕಾಯಿದಾದಿಂದ ಸಂಪೂರ್ಣ ಅಂತರವನ್ನು ಕಾಯ್ದುಕೊಂಡ. 2017ರಲ್ಲಿ ಈ ಇದ್ಲಿಬ್ ನಗರವನ್ನು ಸಂಪೂರ್ಣ ವಶಪಡಿಸಿಕೊಂಡ ಜುಲಾನಿ ಇಲ್ಲಿ ಶಿಕ್ಷಣ, ಆರೋಗ್ಯ, ನಾಗರಿಕ ಸೇವೆ, ನ್ಯಾಯಾಂಗ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಲು ಪ್ರಾರಂಭಿಸಿದ. ಈ HTS ನಿಧಾನಕ್ಕೆ ಬೆಳೆಯುತ್ತಾ ಹೋಯಿತಲ್ಲದೇ, ಅಲ್ ಕಾಯಿದಾವನ್ನು ಮೂಲೆಗುಂಪು ಮಾಡುತ್ತಾ ಸಿರಿಯನ್ ಜನರ ವಿಶ್ವಾಸವನ್ನೂ ಗಳಿಸಿತು. ಇದ್ಲಿಬ್‌ನಲ್ಲಿ ನಡೆಸುತ್ತಿರುವ ಆಡಳಿತವೂ ಜನರ ಗಮನ ಸೆಳೆಯಿತು. 

`ಅಲ್ ಕಾಯಿದಾದ ಜೊತೆಗಿದ್ದ ಕಾಲದಲ್ಲಿಯ ನನ್ನ ನಿಲುವುಗಳಿಂದ ತಾನು ಹಿಂದಕ್ಕೆ ಬಂದಿದ್ದರೂ ಮತ್ತು ತಾನು ಸಿರಿಯಾದ ವಿಮೋಚನೆಯನ್ನಷ್ಟೇ ಗುರಿಯಾಗಿಸಿಕೊಂಡಿದ್ದರೂ ತನ್ನನ್ನು ವಿದೇಶಿ ರಾಷ್ಟ್ರಗಳು ಭಯೋತ್ಪಾದಕ ಎಂದು ಕರೆಯುತ್ತಿರುವುದಕ್ಕೆ ವಿಷಾದವಾಗುತ್ತಿದೆ...' ಎಂದು ಜುಲಾನಿ ಈ ಹಿಂದೆ ಹೇಳಿದ್ದ. ಈ ಜುಲಾನಿಗೆ ಅಮೆರಿಕ, ವಿಶ್ವಸಂಸ್ಥೆ, ಟರ್ಕಿ, ಯುರೋಪ್ಯನ್ ರಾಷ್ಟ್ರಗಳೂ ಸೇರಿ ಹಲವು ದೇಶಗಳು ಭಯೋತ್ಪಾದಕ ಎಂಬ ಹಣೆಪಟ್ಟಿಯನ್ನು ಹಚ್ಚಿವೆ. ಇಂಥ ಜುಲಾನಿ ಕೇವಲ ಎರಡೇ ಎರಡು ವಾರಗಳೊಳಗೆ ಅಸದ್‌ರನ್ನು ಹೇಗೆ ಪದಚ್ಯುತಗೊಳಿಸಿದ ಎಂಬ ಪ್ರಶ್ನೆಯಿದೆ. ನಿಜವಾಗಿ,

ಅಸದ್‌ರ ಶಕ್ತಿಯೇ ಇರಾನ್, ಹಿಝ್ಬುಲ್ಲಾ ಮತ್ತು ರಷ್ಯಾವಾಗಿತ್ತು. ಈ ವರೆಗೆ ಬಂಡುಕೋರ ಪಡೆಗಳನ್ನು ಮಟ್ಟ ಹಾಕಿದ್ದೇ ಈ ಮೂರು ರಾಷ್ಟ್ರಗಳು. ಆದರೆ, ಇದೀಗ ಹಿಝ್ಬುಲ್ಲಾ ಮತ್ತು ಇರಾನ್‌ಗಳು ಇಸ್ರೇಲ್‌ನತ್ತ ಗಮನ ಹರಿಸಿರುವುದು ಮತ್ತು ಯುಕ್ರೇನ್‌ನತ್ತ ರಷ್ಯಾ ಗಂಭೀರವಾಗಿರುವುದು ಈ ಜುಲಾನಿ ಪಡೆಗೆ ವರವಾಗಿ ಪರಿಣಮಿಸಿತು. ತಕ್ಷಣ ನೆರವು ಒದಗಿಸಲು ಈ ಮೂರೂ ಶಕ್ತಿಗಳಿಗೆ ಸಾಧ್ಯವಾಗದಿರುವುದೇ ಜುಲಾನಿಯ ಯಶಸ್ವಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಅಂತೂ, ಅಸದ್ ಕುಟುಂಬದ 53 ವರ್ಷಗಳ ಆಡಳಿತ ಕೊನೆಗೊಂಡಿದೆ. 24 ವರ್ಷಗಳ ಕಾಲ ಈ ಬಶ್ಶಾರುಲ್ ಅಸದ್ ಸಿರಿಯವನ್ನು ಆಳಿದರೆ ಇವರ ತಂದೆ ಹಾಫಿಝ್ ಅಸದ್‌ರು 29 ವರ್ಷಗಳ ಕಾಲ ಆಳಿದ್ದರು. ಬಶ್ಶಾರುಲ್ ಅಸದ್ ಅಂತೂ ಪ್ರತಿಭಟನಾಕಾರರ ವಿರುದ್ಧ ಎಷ್ಟು ಬರ್ಬರವಾಗಿ ನಡಕೊಂಡರೆಂದರೆ, ಐದೂವರೆ ಲಕ್ಷ ಸಿರಿಯನ್ನರು ಪ್ರಾಣತೆತ್ತರು. ಒಂದು ಕೋಟಿ 30 ಲಕ್ಷ ಮಂದಿ ಸಿರಿಯ ಬಿಟ್ಟು ಪಲಾಯನ ಮಾಡಿದರು. ಸಾವಿರಾರು ಮಂದಿಯನ್ನು ಜೈಲಲ್ಲಿಟ್ಟು ಪೀಡಿಸಿದರು. ಇದೀಗ ಅಸದ್ ಯುಗ ಕೊನೆಗೊಂಡಿದೆ. ಆದರೆ ಜುಲಾನಿ ಯುಗ ಹೇಗಿರುತ್ತದೆ ಎಂಬ ಬಗ್ಗೆ ಜಗತ್ತು ಕುತೂಹಲದಲ್ಲಿದೆ.

Monday, 9 December 2024

ದುಶ್ಯಂತ್ ದವೆ ಕಣ್ಣೀರಲ್ಲಿ ಪ್ರತಿಫಲಿಸಿದ ಭಾರತೀಯ ಮುಸ್ಲಿಮರ ನೋವು





ಮುಸ್ಲಿಮರ ಮೇಲಿನ ದಾಳಿ, ಅಪಪ್ರಚಾರ ಮತ್ತು ವ್ಯವಸ್ಥಿತ ದಬ್ಬಾಳಿಕೆಗೆ ಮರುಗಿ ಈ ದೇಶದ ಪ್ರಸಿದ್ಧ ನ್ಯಾಯವಾದಿ ದುಶ್ಯಂತ್ ದವೆ ಕಣ್ಣೀರು ಹಾಕಿದ್ದಾರೆ. ‘ದ ವಯರ್’ ಡಿಜಿಟಲ್ ಚಾನೆಲ್‌ನಲ್ಲಿ ಕರಣ್ ಥಾಪರ್ ನಡೆಸಿಕೊಡುವ  ಕಾರ್ಯಕ್ರಮದಲ್ಲಿ ಭಾವನೆಗಳನ್ನು ಹಂಚಿಕೊಳ್ಳುತ್ತಾ ಹೀಗೆ ಭಾವುಕರಾಗಿದ್ದಾರೆ. ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಐವರು  ಮುಸ್ಲಿಮರ ಸಾವಿಗೆ ಕಾರಣವಾದ ಮಸೀದಿ ಸಮೀಕ್ಷೆಯ ಒಳ-ಹೊರಗನ್ನು ವಿಶ್ಲೇಷಿಸುತ್ತಾ ಇಡೀ ಪ್ರಕ್ರಿಯೆಗೆ ನಿವೃತ್ತ  ಸುಪ್ರೀಮ್ ಮುಖ್ಯ ನ್ಯಾಯಾ ಧೀಶ ಚಂದ್ರಚೂಡ್ ಹೇಗೆ ಹೊಣೆಗಾರರಾಗಿದ್ದಾರೆ ಎಂಬುದನ್ನೂ ವಿವರಿಸಿದ್ದಾರೆ. ಇದೇ  ಸಮಯದಲ್ಲಿ ಇನ್ನೆರಡು ಘಟನೆಗಳೂ ನಡೆದಿವೆ. ಮಾಂಸವನ್ನು ಕೊಂಡೊಯ್ಯುತ್ತಿದ್ದಾರೆಂದು  ಹೇಳಿ ಸುಮಾರು 70  ವರ್ಷದ ಮುಸ್ಲಿಮ್ ವೃದ್ಧರನ್ನು ಮಹಾರಾಷ್ಟ್ರದಲ್ಲಿ ಗುಂಪೊಂದು ಯದ್ವಾತದ್ವಾ ಥಳಿಸಿದೆ. ಇದರ ವೀಡಿಯೋ ಸೋಶಿಯಲ್  ಮೀಡಿಯಾದಲ್ಲಿ ಹಂಚಿಕೆಯಾಗಿದೆ. ಪುಟ್ಟ ಬ್ಯಾಗ್‌ನಲ್ಲಿರುವ ಮಾಂಸವನ್ನೂ ವೀಡಿಯೋದಲ್ಲಿ ತೋರಿಸಲಾಗಿದೆ. ಈ ಘಟನೆಗಿಂತ ದಿನಗಳ ಮೊದಲು ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಸ್ವಾಮೀಜಿಯೋರ್ವರು, ‘ಮುಸ್ಲಿಮರಿಂದ ಮತದಾನದ ಹಕ್ಕ ನ್ನು ಕಸಿದುಕೊಳ್ಳಬೇಕೆಂದು’ ಆಗ್ರಹಿಸಿದ್ದಾರೆ. ಹೀಗೆ ಆಗ್ರಹಿಸಿದ 24 ಗಂಟೆಗಳ ಬಳಿಕ ಅವರು ತಮ್ಮ ಮಾತಿಗೆ ವಿಷಾದ  ಸೂಚಿಸಿದ್ದಾ ರಾದರೂ ಅವರು ಆಡಿರುವ ಮಾತಿನ ವೀಡಿಯೋ ಈ ವಿಷಾದದ ಬಳಿಕವೂ ಸೋಶಿಯಲ್ ಮೀಡಿಯಾದಲ್ಲಿ  ಧಾರಾಳ ಹಂಚಿಕೆಯಾಗುತ್ತಿವೆ.

ನಿಜವಾಗಿ, ದುಶ್ಯಂತ್ ದವೆ ಅವರ ಕಣ್ಣೀರು ಈ ದೇಶದ ಕೋಟ್ಯಂತರ ಮುಸ್ಲಿಮರ ಸಂಕಟವನ್ನು ಪ್ರತಿನಿಧಿಸುತ್ತದೆ ಎಂಬ  ಕಾರಣಕ್ಕಾಗಿಯೇ ಮುಖ್ಯವಾಗುತ್ತದೆ. ದವೆ ಅವರು ಮುಸ್ಲಿಮ್ ಸಮುದಾಯದ ವ್ಯಕ್ತಿಯಲ್ಲ, ರಾಜಕಾರಣಿಯಲ್ಲ ಅಥವಾ  ಪ್ರಭುತ್ವ ವಿರೋಧಿ ಸಂಸ್ಥೆಗಳ ಫಲಾನುಭವಿಯೂ ಅಲ್ಲ. ಅವರೇಕೆ ಮಾತಾಡುತ್ತಾ ಭಾವುಕರಾದರು ಅನ್ನುವುದನ್ನು ಸಮಾಜ  ವಿಶ್ಲೇಷಣೆಗೆ ಒಳಪಡಿಸಬೇಕು.

ಮುಸ್ಲಿಮರ ಮೇಲೆ ದಾಳಿ ಮಾಡುವುದನ್ನೇ ಹಿಂದೂ ಧರ್ಮದ ರಕ್ಪಣೆ ಎಂದು ಅಂದುಕೊಂಡಿರುವ ಒಂದು ಗುಂಪು ಮತ್ತು  ಆ ಗುಂಪನ್ನು ರಕ್ಷಿಸುವ ರಾಜಕೀಯ ಪಕ್ಷ ಇವತ್ತು ಅಧಿಕಾರದಲ್ಲಿದೆ. ದೇಶದಾದ್ಯಂತ ಈ ಗುಂಪು ನಡೆಸುತ್ತಿರುವ ಮುಸ್ಲಿಮ್  ದ್ವೇಷಿ ಚಟುವಟಿಕೆಗಳನ್ನು ಈ ರಾಜಕೀಯ ಪಕ್ಷದ ನೇತಾರರು ವಿವಿಧ ನೆಪಗಳನ್ನೊಡ್ಡಿ ಸಮರ್ಥಿಸುತ್ತಿದ್ದಾರೆ. ಇನ್ನೊಂದು  ಕಡೆ ಇದೇ ಗುಂಪಿನ ಜನರು ನ್ಯಾಯಾಲಯಗಳಿಗೆ ಅರ್ಜಿ ಹಾಕಿ ಮಸೀದಿಗಳ ವೈಜ್ಞಾನಿಕ ಸಮೀಕ್ಷೆಗೆ ಮನವಿ  ಮಾಡುತ್ತಿದ್ದಾರೆ. ಎಲ್ಲ ಅರ್ಜಿಗಳಲ್ಲೂ ಒಂದು ಸಾಮಾನ್ಯ ಉಲ್ಲೇಖ ಇರುತ್ತದೆ. ಅದೇನೆಂದರೆ, ಮಂದಿರವನ್ನು ಒಡೆದು  ಮಸೀದಿಯನ್ನು ನಿರ್ಮಿಸಲಾಗಿದೆ ಎಂದು. ಇದರ ಹೊಚ್ಚ ಹೊಸ ಅವತಾರವಾಗಿ ಅಜ್ಮೀರ್‌ನ ಖ್ವಾಜಾ ಮುಈನುದ್ದೀನ್  ಚಿಶ್ತಿ ದರ್ಗಾ ಗುರುತಿಸಿಕೊಂಡಿದೆ. ಅದು ಪೂರ್ವದಲ್ಲಿ ಶಿವಮಂದಿರವಾಗಿತ್ತು ಮತ್ತು ಅದನ್ನು ಒಡೆದು ದರ್ಗಾ  ಮಾಡಲಾಗಿದೆ ಎಂದು ವಿಷ್ಣುಗುಪ್ತ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ಹಾಗಂತ,

ಇಂಥ ಅರ್ಜಿಗಳ ಕಾನೂನು ಬದ್ಧತೆಯ ಬಗ್ಗೆ ಈ ದೇಶದ ಅಸಂಖ್ಯ ಜನರಲ್ಲಿ ಹಲವು ಗೊಂದಲಗಳಿವೆ. ಬಾಬರಿ ಮಸೀದಿ  ಧ್ವಂಸವಾಗುವುದಕ್ಕಿಂತ  ಎರಡು ತಿಂಗಳ ಮೊದಲು, ‘ಆರಾಧನಾ ಕೇಂದ್ರಗಳ ಸಂರಕ್ಷಣಾ ಕಾಯ್ದೆ 1991’ ಎಂಬ ಕಾನೂನನ್ನು  ಈ ದೇಶದ ಪಾರ್ಲಿಮೆಂಟು ಅಂಗೀಕರಿಸಿತ್ತು. ‘1947 ಆಗಸ್ಟ್ 15ರಂದು ಈ ದೇಶದ ಮಸೀದಿ, ಮಂದಿರ, ಚರ್ಚ್  ಸೇರಿದಂತೆ ಆರಾಧನಾ ಕೇಂದ್ರಗಳು ಯಾವ ಸ್ವರೂಪದಲ್ಲಿತ್ತೋ ಅವುಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು ಮತ್ತು  ಅದರಲ್ಲಿ ಯಾವುದೇ ಮಾರ್ಪಾಡು ಸಲ್ಲ..’ ಎಂಬುದನ್ನು ಈ ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ, ಬಾಬರಿ  ಮಸೀದಿಯನ್ನು ಈ ಕಾಯ್ದೆಯ ವ್ಯಾಪ್ತಿಂಯಿಂದ  ಹೊರಗಿಡಲಾಗಿತ್ತು. ಹಾಗಂತ, ಈ ಕಾನೂನು ಊರ್ಜಿತದಲ್ಲಿದ್ದಾಗ್ಯೂ  2023ರಲ್ಲಿ ಗ್ಯಾನ್‌ವಾಪಿ ಮಸೀದಿಯ ಬಗ್ಗೆ ಸಮೀಕ್ಷೆ ನಡೆಯಿತು. ಆ ಬಳಿಕ ಮಥುರಾದ ಶಾಹಿ ಈದ್ಗಾ ಮಸೀದಿ ಮತ್ತು  ಮಧ್ಯಪ್ರದೇಶದ ಕಮಲ್ ಮೌಲಾ ಮಸೀದಿ, ಸಂಭಾಲ್‌ನ ಜಾಮಾ ಮಸೀದಿಯ ವೈಜ್ಞಾನಿಕ ಸಮೀಕ್ಷೆಗಳೂ ನಡೆದುವು. ಇದು  ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಉತ್ತರವೇ ನಿವೃತ್ತ ಮುಖ್ಯ ನ್ಯಾಯಾಧೀಶ ಚಂದ್ರಚೂಡ್.

ಮಂದಿರವನ್ನು ಒಡೆದು ಗ್ಯಾನ್‌ವಾಪಿ ಮಸೀದಿಯನ್ನು ಕಟ್ಟಲಾಗಿದೆ ಮತ್ತು ಅದರ ದೃಢೀಕರಣಕ್ಕಾಗಿ ಸರ್ವೇ ನಡೆಸಬೇಕು  ಎಂಬ ಅರ್ಜಿಯನ್ನು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟಿಗೆ ಸಲ್ಲಿಸಲಾ ಗಿತ್ತು. ಆ ಬಳಿಕ ಅದು ಸುಪ್ರೀಮ್  ಕೋರ್ಟ್ ಗೆ  ಬಂತು. ಅದನ್ನು ವಿಚಾರಣೆಗೆ ಎತ್ತಿಕೊಂಡದ್ದೇ  ಚಂದ್ರಚೂಡ್ ನೇತೃತ್ವದ ವಿಚಾರಣಾ ಪೀಠ. ಅವರು, ‘1991ರ  ಆರಾಧನಾ ಕೇಂದ್ರಗಳ ಸಂರಕ್ಷಣಾ ಕಾಯ್ದೆ’ಗೆ ವಿಚಿತ್ರ ವ್ಯಾಖ್ಯಾನ ಬರೆದರು. 'ಈ ಕಾಯ್ದೆಯು 1947 ಆಗಸ್ಟ್ 15ರಂದು ಇದ್ದ  ಆರಾಧನಾ ಕೇಂದ್ರಗಳನ್ನು ಯಥಾಸ್ಥಿತಿಯನ್ನು ಕಾಪಾಡಬೇಕು, ಕಟ್ಟಡಗಳ ಸ್ವರೂಪವನ್ನು ಬದಲಿಸಬಾರದೆಂದು ಹೇಳಿದೆಯೇ  ಹೊರತು ಕಟ್ಟಡದ ಸರ್ವೇ ನಡೆಸಬಾರದೆಂದು ಹೇಳಿಲ್ಲ..’ ಎಂದು ತೀರ್ಪಿತ್ತರು. ಆ ಒಂದು ತೀರ್ಪೇ ಆ ಬಳಿಕ ಸರ್ವೇ  ಬಯಸಿ ಸರಣಿ ಅರ್ಜಿಗಳನ್ನು ಸಲ್ಲಿಸುವುದು ಕಾರಣವಾಯಿತು. ನಿಜವಾಗಿ,

ಚಂದ್ರಚೂಡ್ ಅವರು 1991ರ ಕಾಯ್ದೆಯನ್ನು ಅಕ್ಷರಗಳಲ್ಲಿ ಓದಿದ್ದಾರೆ ಎಂದು ಹೇಳಿದರೇನೇ ಸರಿ. ಅಷ್ಟಕ್ಕೂ, ಆರಾಧನಾ  ಕೇಂದ್ರಗಳ ಯಥಾಸ್ಥಿತಿಯನ್ನು ಉಳಿಸಿಕೊಳ್ಳಬೇಕು, ಬದಲಿಸಬಾರದು ಎಂದು ಹೇಳುವುದರ ಉದ್ದೇಶವೇನು? ಬಾಬರಿ  ಮಸೀದಿಯಂತೆ ಇನ್ನಾವುದೇ ಆರಾಧನಾ ಕೇಂದ್ರವನ್ನೂ ವಿವಾದವನ್ನಾಗಿ ಮಾಡಬಾರದು ಎಂದೇ ಅಲ್ಲವೇ? ಹಾಗಿದ್ದ  ಮೇಲೆ ಸರ್ವೇ ಮಾಡುವುದರ ಅಗತ್ಯವೇನಿದೆ? ಪೂರ್ವ ಕಾಲದಲ್ಲಿ ಒಂದು ಆರಾಧನಾ ಕೇಂದ್ರ ಮಸೀದಿಯಾಗಿತ್ತೋ  ಮಂದಿರವಾಗಿತ್ತೋ ಎಂದು ಖಚಿತಪಡಿಸಿಕೊಂಡು ಆಗುವುದಕ್ಕೇನಿದೆ? ಅದರಿಂದ ಲಾಭ ಏನು? ಆರಾಧನಾ ಕೇಂದ್ರಗಳ  ಯಥಾಸ್ಥಿತಿಯನ್ನು ಉಳಿಸಿಕೊಳ್ಳುವುದಕ್ಕಿರುವ ಸರಿಯಾದ ವಿಧಾನ ಏನೆಂದರೆ, ಅವುಗಳ ಸರ್ವೇ ನಡೆಸದೇ ಇರುವುದು.  ಸರ್ವೇಗೆ ಅವಕಾಶ ಕೊಡುವುದೆಂದರೆ, ವಿವಾದಕ್ಕೆ ಅವಕಾಶ ಮಾಡಿಕೊಡುವುದು ಎಂದೇ ಅರ್ಥ. ‘1991ರ ಆರಾಧನಾ  ಕೇಂದ್ರಗಳ ಕಾಯ್ದೆ’ಯ ಆಶಯ ಇದುವೇ ಆಗಿತ್ತು ಅನ್ನುವುದು ಅದನ್ನು ಓದಿದವರಿಗೆ ಖಂಡಿತ ಗೊತ್ತಾಗುತ್ತದೆ. ಆದರೆ  ಅದರ ಮೇಲೆ ಸೂಕ್ಷ್ಮದರ್ಶಕವನ್ನು ಹಿಡಿದು, ಅದರಲ್ಲಿರುವ ಲೋಪವನ್ನು ಹುಡುಕುವುದೇ ಉದ್ದೇಶವಾದರೆ ಏನಾದರೊಂದು  ಲೋಪ ಸಿಕ್ಕೇ ಸಿಗುತ್ತದೆ. ಚಂದ್ರಚೂಡ್ ಅವರು ಕಾನೂನಿನಲ್ಲಿರುವ ಇಂಥ ಲೋಪಗಳನ್ನೇ ಎತ್ತಿಕೊಂಡು ಮಸೀದಿ  ಸಮೀಕ್ಷೆಗೆ ಅನುಮತಿ ನೀಡಿದ್ದಾರೆ. ಗ್ಯಾನ್‌ವಾಪಿಗೆ ಸಂಬಂಧಿಸಿ ಅವರು ನೀಡಿರುವ ಆ ಒಂದು ಆದೇಶವು ಕಂಡ ಕಂಡ  ಮಸೀದಿಯನ್ನು ಮಂದಿರ ಎಂದು ವಾದಿಸುವ ಮತ್ತು ಸರ್ವೇಗೆ ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕುವ ಲ್ಲಿವರೆಗೆ ತಲುಪಿದೆ. ಅಷ್ಟಕ್ಕೂ,

ಈ ಅರ್ಜಿ ಹಾಕುವ ಪ್ರಕ್ರಿಯೆಯ ಹಿಂದೆ ಒಂದು ನಿರ್ದಿಷ್ಟ ಗುಂಪು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಅನ್ನುವುದಕ್ಕೆ ಗ್ಯಾ ನ್‌ವಾಪಿಯಿಂದ ಸಂಭಾಲ್ ಜಾಮಾ ಮಸೀದಿಯ ವರೆಗೆ ಅರ್ಜಿ ಹಾಕಿದವರ ವಿವರವನ್ನು ನೋಡಿದಾಗ ಸ್ಪಷ್ಟವಾಗುತ್ತದೆ.  ಹರಿಶಂಕರ್ ಜೈನ್ ಮತ್ತು ಅವರ ಮಗ ನ್ಯಾಯವಾದಿ ವಿಷ್ಣುಶಂಕರ್ ಜೈನ್ ಎಂಬವರೇ ಈ ಎಲ್ಲ ಮಸೀದಿಗಳ  ಸಮೀಕ್ಷೆಯನ್ನು ಕೋರಿ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಅರ್ಜಿಯನ್ನು ಹಾಕಿದವರಾಗಿದ್ದಾರೆ. ಈ ಎಲ್ಲ ಮಸೀದಿಗಳ  ಪೂರ್ವಾಪರಗಳ ಬಗ್ಗೆ ಈ ಇಬ್ಬರಲ್ಲಿ ಇಷ್ಟೊಂದು ಆಸಕ್ತಿ ಹುಟ್ಟಿದ್ದು ಹೇಗೆ? ಯಾವುದೇ ಕಾನೂನು ಪ್ರಕ್ರಿಯೆಗೂ ದುಬಾರಿ  ಹಣದ ಅಗತ್ಯ ಇರುತ್ತದೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದರಿಂದ ಹಿಡಿದು ಪ್ರಕರಣ ಒಂದು ವೇಳೆ ಸುಪ್ರೀಮ್  ಕೋರ್ಟ್ ವರೆಗೆ ಸಾಗಿದರೆ ಅಲ್ಲಿಯವರೆಗೆ ಅಪಾರ ಹಣ ಖರ್ಚು ಮಾಡಬೇಕಾಗುತ್ತದೆ. ಈ ಇಬ್ಬರು ಇಷ್ಟೊಂದು ಹಣವನ್ನು ಖರ್ಚು ಮಾಡುವುದಕ್ಕೆ ಯಾವ ಕಾರಣಕ್ಕಾಗಿ ಸಿದ್ಧವಾಗಿದ್ದಾರೆ? ಇವರಿಗೆ ಈ ಹಣವನ್ನು ಒದಗಿಸುವ ಬೇರೆ  ಶಕ್ತಿಗಳಿವೆಯೇ? ಅವರು ಯಾರು? ಅವರ ಉದ್ದೇಶ ಏನು? ಅವರೇಕೆ ಮಸೀದಿಗಳ ಹಿಂದೆ ಬಿದ್ದಿದ್ದಾರೆ?... ಇಂಥ ಅನೇಕ  ಪ್ರಶ್ನೆಗಳಿಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಅಂದಹಾಗೆ,

ದುಶ್ಯಂತ್  ದವೆ ಅವರ ಕಣ್ಣೀರು ಚಂದ್ರಚೂಡ್ ಅವರನ್ನು ತಲುಪಿದೆಯೋ ಗೊತ್ತಿಲ್ಲ. ಒಂದುವೇಳೆ ತಲುಪಿದ್ದರೂ ಅವರಲ್ಲಿ  ತಮ್ಮ ತೀರ್ಪಿಗಾಗಿ ಪಶ್ಚಾತ್ತಾಪ ಭಾವ ಮೂಡಿಸಿದೆಯೋ, ಅದೂ ಗೊತ್ತಿಲ್ಲ. ಆದರೆ, ಈ ದೇಶದ ಮುಸ್ಲಿಮರ ಸಹಿತ ಶಾಂತಿ,  ಸಾಮರಸ್ಯವನ್ನು ಬಯಸುವ ದೊಡ್ಡದೊಂದು ಜನಸಮೂಹ ಅವರ ಈ ತೀರ್ಪನ್ನು ಎಂದೂ ಮರೆಯಲಾರದು ಎಂಬುದು  ನಿಜ. ಹಿಂದೂ ಮುಸ್ಲಿಮರನ್ನು ವಿಭಜಿಸಿ, ಧರ್ಮ ದ್ವೇಷವನ್ನು ಸದಾ ಜೀವಂತದಲ್ಲಿಡ ಬಯಸಿರುವ ಗುಂಪಿಗೆ ಅತ್ಯುತ್ತಮ  ಅಸ್ತ್ರವನ್ನು ನೀಡಿದ ಅವರನ್ನು ಇತಿಹಾಸ ಎಂದೂ ಕ್ಷಮಿಸದು.

Monday, 2 December 2024

ಕಡುಕೋಳ: ಮತಾಂಧರ ವಿರುದ್ಧ ಯುಎಪಿಎ ದಾಖಲಿಸಿ



ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡುಕೋಳ ಗ್ರಾಮದಲ್ಲಿ ನಡೆದಿರುವ ಹಿಂಸಾಚಾರದ ಬಗ್ಗೆ ಮಾಧ್ಯಮಗಳು  ಬೆಳಕು ಚೆಲ್ಲಿದ್ದು ಶೂನ್ಯ ಅನ್ನುವಷ್ಟು ಕಡಿಮೆ. ಅಲ್ಲೇನು ನಡೆದಿದೆ ಎಂಬುದು ಕಡುಕೋಳವನ್ನು ಬಿಟ್ಟರೆ ರಾಜ್ಯದ ಉಳಿದ  ಭಾಗಗಳಿಗೆ ಬಹಳ ಕಡಿಮೆಯಷ್ಟೇ ಗೊತ್ತಿದೆ. ಇಲ್ಲಿಯ ಸುಮಾರು 70ರಷ್ಟು ಮುಸ್ಲಿಮ್ ಕುಟುಂಬಗಳು ಊರು ತೊರೆದಿವೆ.  ಘಟನೆ ನಡೆದು ಎರಡು ವಾರಗಳು ಕಳೆದರೂ ಈ ಕುಟುಂಬಗಳು ಮರಳಿ ತಮ್ಮ ಮನೆಗಳಿಗೆ ಮರಳಲು ಹೆದರುತ್ತಿವೆ.  ಎರಡು ವಾರಗಳ ಹಿಂದೆ ರಾತ್ರಿ ಏಕಾಏಕಿ ಮನೆಗೆ ನುಗ್ಗಿ ಥಳಿಸಿದವರು, ದಾಂಧಲೆ ನಡೆಸಿದವರು ಮತ್ತು ಸೊತ್ತುಗಳನ್ನು  ನಾಶ ಮಾಡಿದವರು ಮರಳಿ ಬಂದು ಅದನ್ನೇ ಪುನರಾವರ್ತಿಸಲಾರರು ಎಂದು ಹೇಳುವುದು ಹೇಗೆ ಎಂಬ ಭಯ ಅವರಲ್ಲಿ  ಆವರಿಸಿದೆ. ಸನ್ಮಾರ್ಗ ತಂಡ ಆ ಇಡೀ ಪ್ರದೇಶಕ್ಕೆ ಭೇಟಿ ಕೊಟ್ಟು ಸಂತ್ರಸ್ತರನ್ನು ಮಾತನಾಡಿಸಿದಾಗ ಸಿಕ್ಕ ಮಾಹಿತಿಗಳು  ಆಘಾತಕಾರಿಯಾಗಿವೆ. ತಾವೇಕೆ ದಾಳಿಗೊಳಗಾಗಿದ್ದೇವೆ ಎಂಬ ಸ್ಪಷ್ಟ ತಿಳುವಳಿಕೆಯೇ ಸಂತ್ರಸ್ತರಿಗಿಲ್ಲ. ಯಾವ ತಪ್ಪೂ  ಮಾಡದೇ ದಾಳಿಗೊಳಗಾಗುವುದೆಂದರೆ, ಭವಿಷ್ಯವೇನು ಎಂಬ ಆತಂಕ ಅವರೆಲ್ಲರನ್ನೂ ಕಾಡತೊಡಗಿದೆ. ಮುಸ್ಲಿಮ್  ದ್ವೇಷವನ್ನು ಅಮಲಾಗಿ ಏರಿಸಿಕೊಂಡವರನ್ನು ಮಟ್ಟ ಹಾಕದಿದ್ದರೆ ರಾಜ್ಯ ಎಂಥ ಅನಾಹುತಕಾರಿ ಪರಿಸ್ಥಿತಿಗೆ  ಸಾಕ್ಷಿಯಾಗಬೇಕಾದೀತು ಎಂಬುದಕ್ಕೆ ಈ ಕಡುಕೋಳ ಒಂದು ಪುರಾವೆ ಅನ್ನಬಹುದು.

ವಕ್ಫ್ ಹೆಸರಲ್ಲಿ ರಾಜ್ಯದಲ್ಲಿ ಮೊದಲ ಹಿಂಸಾಚಾರ ನಡೆದ ಗ್ರಾಮ ಕಡುಕೋಳ. ಹಾಗಂತ, ಈ ಗ್ರಾಮದ ರೈತರಿಗಾಗಲಿ  ಜಮೀನುದಾರರಿಗಾಗಲಿ ಕಂದಾಯ ಇಲಾಖೆಯಿಂದ ನೋಟೀಸೇ ಬಂದಿಲ್ಲ. ನಿಮ್ಮ ಜಮೀನು ವಕ್ಫ್ ಗೆ  ಸೇರಿದ್ದಾಗಿದೆ ಎಂದು  ಯಾವ ಮುಸ್ಲಿಂ ರಾಜಕಾರಣಿಯೂ ಕಡುಕೋಳ ಗ್ರಾಮದ ರೈತರಲ್ಲಿ ಹೇಳಿಲ್ಲ. ಯಾವ ಅಧಿಕಾರಿಯೂ ಅಲ್ಲಿ ಸರ್ವೇ ನಡೆಸಿಲ್ಲ.  ನಿಮ್ಮನ್ನು ಒಕ್ಕಲೆಬ್ಬಿಸುವುದಾಗಿ ಯಾವ ಮುಸ್ಲಿಮರೂ ರೈತರಿಗೆ ಹೇಳಿಲ್ಲ. ಮಸೀದಿಯಿಂದ ಅಂಥದ್ದೊಂದು  ಘೋಷಣೆಯೂ  ನಡೆದಿಲ್ಲ. ಹೀಗಿದ್ದ ಮೇಲೂ ಏಕಾಏಕಿ ಮುಸ್ಲಿಮ್ ಮನೆಗಳಿಗೆ ದಾಳಿಯಾಗಲು ಕಾರಣವೇನು? ಬಿಜೆಪಿ ಪ್ರಣೀತ  ವಿಚಾರಧಾರೆ ಎಷ್ಟು ಮನುಷ್ಯ ವಿರೋಧಿ ಅನ್ನುವುದನ್ನೇ ಇಲ್ಲಿಯ ಹಿಂಸಾಚಾರ ಹೇಳುತ್ತದೆ. ನಿಮ್ಮ ಭೂಮಿ ವಕ್ಫ್  ಇಲಾಖೆಯ ಪಾಲಾಗುತ್ತದೆ ಎಂಬ ಭಯವನ್ನು ಬಿಜೆಪಿ ಈ ಕಡುಕೋಳದ ಹಿಂದೂಗಳಲ್ಲಿ ಮೂಡಿಸಿದೆ. ಮುಸ್ಲಿಮರನ್ನು  ಹಿಂದೂಗಳ ವೈರಿಗಳಂತೆ ನಿರಂತರ ಬಿಂಬಿಸತೊಡಗಿದೆ. ವಿಜಯಪುರದಲ್ಲಿ ರೈತರಿಗೆ ನೀಡಲಾದ ನೋಟೀಸನ್ನು  ಎತ್ತಿಕೊಂಡು ಹಿಂದೂಗಳಲ್ಲಿ ಅಸ್ತಿತ್ವದ ಭಯವನ್ನು ಹುಟ್ಟು ಹಾಕಿದೆ. ಮುಸ್ಲಿಮರು ನಿಮ್ಮ ಜಮೀನು ಕಸಿಯಲು ಹೊಂಚು  ಹಾಕುತ್ತಿರುವ ವೈರಿಗಳು ಎಂಬಂತೆ  ಬಿಂಬಿಸಿದೆ. ಈ ಎಲ್ಲದರ ಒಟ್ಟು ಪರಿಣಾಮವೇ ಈ ದಾಳಿ ಎಂಬುದು ಅಲ್ಲಿಯ ಒಟ್ಟು  ಪರಿಸ್ಥಿತಿಯನ್ನು ಅವಲೋಕಿಸಿದಾಗ ಅರಿವಾಗುತ್ತದೆ. ಅಲ್ಲಿನ ಮಸೀದಿಯ ಅಧ್ಯಕ್ಷ ಮೌಲಾಸಾಬ್ ನದಾಫ್ ಎಂಬ ಸರಿಯಾಗಿ  ದೃಷ್ಟಿಯೂ ಕಾಣಿಸದ ವಯೋ ವೃದ್ಧರನ್ನೂ ಅವರ ಮನೆಯ ಮಹಿಳೆಯರು, ಮಕ್ಕಳನ್ನೂ ಕ್ರೂರಿಗಳು ಥಳಿಸಿದ್ದಾರೆ. ಅಪ್ಪಟ  ಕೃಷಿಕರಾದ ಮತ್ತು ಮನೆಯಲ್ಲಿ ಗೋವುಗಳನ್ನು ಸಾಕುತ್ತಿರುವ ಅವರಿಗೆ ಈ ಗಾಯ ಬದುಕನ್ನಿಡೀ ಕಾಡಲಿದೆ ಎಂಬುದಕ್ಕೆ  ಅವರ ನೋವುಭರಿತ ಮಾತುಗಳೇ ಸಾಕ್ಷಿ. ಹಲವು ಮನೆಗಳ ಮೇಲೆ ದಾಳಿಯಾಗಿವೆ. ಧರ್ಮದ್ವೇಷಿ ಅಮಲನ್ನು  ಏರಿಸಿಕೊಂಡವರ ದಾಳಿಗೆ ಒಂದಿಬ್ಬರು ತೀವ್ರ ಗಾಯಗೊಂಡಿದ್ದಾರೆ. ಮನೆ, ಪೀಠೋಪಕರಣಗಳು ನಾಶವಾಗಿವೆ. ಎರಡು  ವಾರಗಳಿಂದ ಇಲ್ಲಿನ ಮಸೀದಿ ಬಾಗಿಲು ಮುಚ್ಚಿದೆ. ಈ ಎಲ್ಲವೂ ಯಾಕೆ ನಡೆಯಿತು ಎಂಬ ಪ್ರಶ್ನೆಗೆ ವಕ್ಫ್ ಅನ್ನು  ತೋರಿಸಲಾಗುತ್ತದೆ. ಅಂದಹಾಗೆ,

ಈ ವಕ್ಫ್ ವಿಷಯಕ್ಕೂ ಮುಸ್ಲಿಮರಿಗೂ ಏನು ಸಂಬಂಧ? ವಿಜಯಪುರದ ರೈತರಿಗಾಗಲಿ ಇತರರಿಗಾಗಲಿ ಮುಸ್ಲಿಮರು  ನೋಟೀಸು ಕಳುಹಿಸಿದ್ದಾರಾ? ಅಥವಾ ನೋಟೀಸು ಕಳುಹಿಸುವಂತೆ ಪ್ರತಿಭಟನೆ ನಡೆಸಿದ್ದಾರಾ? ರೈತರ ಜಮೀನಿನಲ್ಲಿ  ನಿಂತು ಇದು ನಮ್ಮದು ಎಂದು ಹಕ್ಕು ಮಂಡಿಸಿದ್ದಾರಾ? ಮುಸ್ಲಿಮರು ತಮ್ಮ ಪಾಡಿಗೆ ತಾವು ಬದುಕುತ್ತಿರುವಾಗ ವಕ್ಫ್ನ  ಹೆಸರಲ್ಲಿ ಮುಸ್ಲಿಮರ ಮನೆಗಳಿಗೆ ದಾಳಿ ನಡೆಸಿರುವುದೇಕೆ? ಇದನ್ನು ವಕ್ಫ್ ಪ್ರೇರಿತ ದಾಳಿ ಎನ್ನುವುದು ಎಷ್ಟು ಸರಿ? ಇದು  ಶುದ್ಧ ರಾಜಕೀಯ ಪ್ರೇರಿತ ಧರ್ಮದ್ವೇಷದ ದಾಳಿಯಲ್ಲವೇ? ಮುಸ್ಲಿಮರನ್ನು ಹೇಗೆ ನಡೆಸಿಕೊಂಡರೂ ನಡೆಯುತ್ತದೆ ಎಂಬ  ಭಂಡ ಧೈರ್ಯದ ಕೃತ್ಯವಲ್ಲವೇ? ರಾಜ್ಯ ಸರಕಾರ ಯಾಕೆ ಈ ಘಟನೆಯನ್ನು ಕ್ಷುಲ್ಲಕವಾಗಿ ಕಂಡಿದೆ? ದೂರು ಕೊಡಲೂ  ಹಿಂಜರಿಯುವ ಈ ಸಂತ್ರಸ್ತರ ಬೆನ್ನಿಗೆ ನಿಂತು ಮತಾಂಧರನ್ನು ಮಟ್ಟ ಹಾಕಬೇಕಾದ ಸರಕಾರ ಯಾಕೆ ತೇಪೆ ಹಚ್ಚುವ  ಪ್ರಯತ್ನಕ್ಕಿಳಿದಿದೆ? ಸಂತ್ರಸ್ತರಿಗೆ, ಒಮ್ಮೆ ಮನೆಗೆ ಮರಳಿದರೆ ಸಾಕು ಎಂಬ ಅನಿವಾರ್ಯತೆಯಿದೆ. ಯಾಕೆಂದರೆ, ಅವರೆಲ್ಲ  ದುಡಿದು ತಿನ್ನುವ ಬಡಪಾಯಿಗಳು. ಆದರೆ, ಇಂಥ ಅನಿವಾರ್ಯತೆಗಳನ್ನೇ ಮತಾಂಧರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.  ರಾಜಿ ಮಾತುಕತೆಯಲ್ಲಿ ಮುಗಿಸುವ ಒತ್ತಡ ಹೇರತೊಡಗುತ್ತಾರೆ. ನಿರ್ದಿಷ್ಟ ರಾಜಕೀಯ ಚಿಂತನೆಯೇ ಇಂಥ ಕ್ರೌರ್ಯಗಳ  ಹಿಂದಿರುವುದರಿAದ ರಾಜಕೀಯ ಒತ್ತಡಗಳೂ ಬೀಳುತ್ತವೆ. ಅಂತಿಮವಾಗಿ,

ದೂರು ದಾಖಲಾಗಿಲ್ಲ ಎಂಬ ಪಿಳ್ಳೆ ನೆಪ ಇಟ್ಟುಕೊಂಡು ಸರಕಾರ ತಪ್ಪಿಸಿಕೊಂಡರೆ, ಊರಿಗೆ ಮರಳಬೇಕಾದರೆ ದೂರು  ದಾಖಲಿಸಬೇಡಿ ಎಂಬ ಒತ್ತಡ ಹಾಕಿ ಈ ದುರುಳರು ತಪ್ಪಿಸಿಕೊಳ್ಳುತ್ತಾರೆ. ಇದೇ ಧೈರ್ಯದಿಂದ ಮತ್ತೊಂದು ಮತಾಂಧ  ಕೃತ್ಯಕ್ಕೆ ಸಂಚು ನಡೆಸುತ್ತಾರೆ. ಕಾಂಗ್ರೆಸ್ ಬಂದರೂ ಬಿಜೆಪಿ ಬಂದರೂ ಮುಸ್ಲಿಮರ ಕುರಿತಾದ ಧೋರಣೆಯಲ್ಲಿ ಅಂಥ  ವ್ಯತ್ಯಾಸವೇನಿಲ್ಲ ಎಂಬ ಆರೋಪಕ್ಕೆ ಪೂರಕವಾಗಿಯೇ ಸರಕಾರ ನಡಕೊಳ್ಳುತ್ತಿದೆ ಎಂದೇ ಹೇಳಬೇಕಾಗುತ್ತದೆ. ಅಂದಹಾಗೆ,

ರೈತರಿಗೆ ನೋಟೀಸು ಕಳುಹಿಸಿರುವುದು ಸರಕಾರದ ಅಧೀನದಲ್ಲಿರುವ ಕಂದಾಯ ಇಲಾಖೆ. ವಕ್ಫ್ ಸಚಿವಾಲಯ  ಇರುವುದು ಸರಕಾರದ ಅಧೀನದಲ್ಲಿ. ವಕ್ಫ್ ಸಚಿವರ ನೇಮಕದಿಂದ ಹಿಡಿದು ವಕ್ಫ್ ಇಲಾಖೆ, ಕಂದಾಯ ಇಲಾಖೆ ಸಹಿತ  ಈ ಇಡೀ ಪ್ರಕ್ರಿಯೆ ನಡೆಯುವುದೂ ಸರಕಾರದ ಅಧೀನದಲ್ಲೇ. ವಕ್ಫ್ ಇಲಾಖೆಯಲ್ಲಿ ವಕ್ಫ್ ಟ್ರಿಬ್ಯೂನಲ್ ಎಂಬ  ನ್ಯಾಯಾಂಗ ವ್ಯವಸ್ಥೆ ಇದೆ. ಅದನ್ನು ರಚಿಸಿರುವುದೂ ಈ ದೇಶದ್ದೇ  ಸರಕಾರಗಳು. ಹೈಕೋರ್ಟು ನ್ಯಾಯಾಧೀಶರೇ ಈ  ಟ್ರಿಬ್ಯೂನಲ್‌ಗೆ ನ್ಯಾಯಾಧೀಶರನ್ನು ಆಯ್ಕೆ ಮಾಡುತ್ತಾರೆ. ಈ ಟ್ರಿಬ್ಯೂನಲ್ ಕೂಡಾ ಸಂವಿಧಾನದ ಅಡಿಯಲ್ಲೇ  ಇದೆ. ಈ  ದೇಶದಲ್ಲಿ ವಕ್ಫ್ ನಿಯಮಾವಳಿಯನ್ನು ಮುಸ್ಲಿಮರು ರಚಿಸಿಲ್ಲ. ಅದನ್ನು ರಚಿಸಿದ್ದು ಮತ್ತು ಪಾರ್ಲಿಮೆಂಟ್‌ನಲ್ಲಿ  ಅಂಗೀಕರಿಸಿಕೊಂಡದ್ದೂ ಇಲ್ಲಿನ ಸರಕಾರಗಳೇ. ಈವರೆಗಿನ ಕಾಂಗ್ರೆಸ್ ಸರಕಾರ, ಬಿಜೆಪಿ ಸರಕಾರ, ಜನತಾ ಸರಕಾರ ಮತ್ತು  ಇನ್ನಿತರ ಸರಕಾರಗಳು ಈ ವಕ್ಫ್ ನಿಯಮಾವಳಿಗಳನ್ನು ಒಪ್ಪಿಕೊಳ್ಳುತ್ತಾ ಅಗತ್ಯ ಕಂಡಾಗ ತಿದ್ದುಪಡಿ ಮಾಡಿಕೊಳ್ಳುತ್ತಾ ಮತ್ತು  ಜಾರಿಮಾಡಿಕೊಳ್ಳುತ್ತಾ ಬಂದಿವೆ. ಈ ಎಲ್ಲದರಲ್ಲೂ ಮುಸ್ಲಿಮರ ಪಾತ್ರ ತೀರಾತೀರಾ ಅತ್ಯಲ್ಪ. ಶಾಸಕಾಂಗ, ನ್ಯಾಯಾಂಗ  ಮತ್ತು ಕಾರ್ಯಾಂಗಗಳಲ್ಲಿ ಜುಜುಬಿ ಅನ್ನುವಷ್ಟೇ ಪ್ರಾತಿನಿಧ್ಯವಿರುವ ಮತ್ತು ಏನೇನೂ ಪ್ರಭಾವಿಯಾಗಿಲ್ಲದ ಮುಸ್ಲಿಮ್  ಸಮುದಾಯಕ್ಕೆ ಈ ಎಲ್ಲ ಪ್ರಕ್ರಿಯೆಗಳಲ್ಲಿ ಪ್ರಭಾವ ಬೀರುವ ಸಾಮರ್ಥ್ಯವೂ ಇಲ್ಲ. ಇಷ್ಟೆಲ್ಲಾ ಇದ್ದೂ ವಕ್ಫ್ ಹೆಸರಲ್ಲಿ ಬಿಜೆಪಿ  ಮತ್ತು ಅವರ ಬೆಂಬಲಿಗರು ಮುಸ್ಲಿಮರನ್ನೇ ಕಟಕಟೆಯಲ್ಲಿ ನಿಲ್ಲಿಸಿ ದಿನಾ ಪ್ರಚೋದನೆ ಮಾಡುತ್ತಿ ರುವುದೆಂದರೆ ಏನರ್ಥ?  ಮುಸ್ಲಿಮರನ್ನು ತೋರಿಸಿ ಹೊಟ್ಟೆ ಹೊರೆಯುವುದಕ್ಕೆ ಇವರಿಗೆ ನಾಚಿಕೆಯೂ ಆಗುವುದಿಲ್ಲವೇ? ಈ ದರಿದ್ರ ರಾಜಕೀಯಕ್ಕೆ  ಸಾಮಾನ್ಯ ಜನರು ಯಾಕೆ ಇನ್ನೂ ಮರುಳಾಗುತ್ತಿದ್ದಾರೆ?

ಕಡುಕೋಳದಲ್ಲಿ ಏನು ನಡೆದಿದೆಯೋ ಅದು ಈ ರಾಜ್ಯದಲ್ಲಿ ಧರ್ಮದ್ವೇಷಕ್ಕೆ ಇನ್ನೂ ಮಾರುಕಟ್ಟೆಯಿದೆ ಎಂಬುದನ್ನು ಸಾರಿ  ಹೇಳಿದ ಪ್ರಸಂಗವಾಗಿದೆ. ಮುಸ್ಲಿಮರ ಮೇಲೆ ದಾಳಿ ಮಾಡುವುದಕ್ಕೆ ಕಾರಣಗಳೇ ಬೇಕಿಲ್ಲ ಎಂದು ಘಂಟಾಘೋಷವಾಗಿ  ಸಾರಿದ ಸಂದರ್ಭವಾಗಿದೆ. ಮುಸ್ಲಿಮರನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಲ್ಲೆವು, ಅಗತ್ಯ ಕಂಡರೆ ಊರಿಂದಲೇ  ಓಡಿಸಬಲ್ಲೆವು ಎಂಬ ಕಾಡು ನ್ಯಾಯವನ್ನು ಪ್ರಾಮಾಣಿಕವಾಗಿ ಜಾರಿ ಮಾಡಿ ತೋರಿಸಿದ ಘಟನೆಯಾಗಿದೆ. ಇದು  ಮುಂದುವರಿಯಬಾರದು. ಕಡುಕೋಳದ ಸಂತ್ರಸ್ತರು ದೂರು ಕೊಟ್ಟಿದ್ದಾರೋ ಇಲ್ಲವೋ, ಆದರೆ ಮುಸ್ಲಿಮರನ್ನು ಊರಿ ನಿಂದ ಪಲಾಯನ ಮಾಡುವಂತೆ ದಾಳಿ ನಡೆಸಲಾದದ್ದು ನಿಜ. ಅವರು ಸಂತ್ರಸ್ತ ರಾಗಿ ಪಕ್ಕದ ಊರಲ್ಲಿ ನೆಲೆಸಿರುವುದೂ  ನಿಜ. ಆದ್ದರಿಂದ, ಇಂಥ ಸ್ಥಿತಿಗೆ ಕಾರಣರಾದ ಮತಾಂಧರನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟಬೇಕು. ದೇಶದಲ್ಲಿ ಗಲಭೆ ಎಬ್ಬಿಸಲು  ಪ್ರಚೋದಿಸುವ ಯುಎಪಿಎ ಕಾನೂನಿನಡಿ ಕೇಸು ದಾಖಲಿಸಿ ಪಾಠ ಕಲಿಸಬೇಕು.

Monday, 11 November 2024

ಬಿಜೆಪಿ 10 ವರ್ಷಗಳಿಂದ ಅಧಿಕಾರದಲ್ಲಿದ್ದೂ ಹಿಂದೂ ಅಪಾಯದಲ್ಲಿರುವುದೇಕೆ?

 




ಬಿಜೆಪಿ ಮತ್ತು ಅವರ ಬೆಂಬಲಿಗ ಪಡೆ ಹರಡುತ್ತಾ ಇರುವ ಸುಳ್ಳುಗಳು ಸಮಾಜದ ಮೇಲೆ ಯಾವ ರೀತಿಯಲ್ಲಿ ಪ್ರಭಾವ  ಬೀರುತ್ತಿದೆ ಅನ್ನುವುದಕ್ಕೆ ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮವೇ ಸಾಕ್ಷಿ. ಈ ಗ್ರಾಮದ 15 ಸಾವಿರ ಎಕ್ರೆ ಭೂಮಿಯನ್ನು ಸರಕಾರ ವಕ್ಫ್ ಇಲಾಖೆಗೆ ಬರೆದು ಕೊಡಲು ಹೊರಟಿದೆ ಎಂಬ ಸುಳ್ಳನ್ನು ಸಂಸದ ತೇಜಸ್ವಿ ಸೂರ್ಯ, ಶಾಸಕ  ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಇತರರು ಹಬ್ಬಿಸಿದ್ದಾರೆ. ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಈ  ವಿಜಯಪುರಕ್ಕೆ ಭೇಟಿ ಕೊಟ್ಟು ವಕ್ಫ್ ಅದಾಲತ್‌ನಲ್ಲಿ ಭಾಗಿಯಾದುದು ಮತ್ತು ವಕ್ಫ್ ಭೂಮಿಯ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದನ್ನೇ ಬಿಜೆಪಿ ನಾಯಕರು ತಮ್ಮ ಸುಳ್ಳಿನ ಪ್ರಚಾರಕ್ಕಾಗಿ ಬಳಸಿಕೊಂಡಿದ್ದಾರೆ. ಇದನ್ನು  ನಂಬಿದ ಸ್ಥಳೀಯ ರೈತರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕಂದಾಯ ಇಲಾಖೆಯಿಂದ ನೋಟೀಸು ಬಂದಿದ್ದು, ಅದರಲ್ಲಿ ವಕ್ಫ್ ಬೋರ್ಡ್ ಬೆಂಗಳೂರು ಎಂದು ಬರೆದಿರುವುದಾಗಿ ಅವರು ಹೇಳಿದ್ದಾರೆ. ರೈತರನ್ನು ಹೀಗೆ  ಪ್ರಚೋದಿಸಿದ ಬಿಜೆಪಿ, ಸರಣಿ ಹೇಳಿಕೆಗಳನ್ನೂ ನೀಡಿ ರೈತರ ಭೂಮಿ ವಕ್ಫ್ ಪಾಲಾಗಲಿದೆ ಎಂಬ ಭೀತಿಯನ್ನು ಹುಟ್ಟು  ಹಾಕಿದೆ. ಇದಾದ ಬಳಿಕ ಜಿಲ್ಲಾಧಿಕಾರಿ ಸ್ಪಷ್ಟೀಕರಣ ನೀಡಿದ್ದಾರೆ. ‘ಯಾವುದೇ ರೈತರಿಗೆ ಸರಕಾರ ನೋಟೀಸು ನೀಡಿಲ್ಲ’  ಎಂದು ಅವರು ಹೇಳಿದ್ದಾರೆ. ಕಂದಾಯ ಇಲಾಖೆಗೆ ಜಮೀನು ವರ್ಗಾವಣೆ ಮಾಡುವ ಅಧಿಕಾರವೇ ಇಲ್ಲ ಎಂದೂ ಅವರು  ಹೇಳಿದ್ದಾರೆ. ಇನ್ನು, ಯಾರಿಗೇ ಆಗಲಿ ನೋಟೀಸು ಬರುವುದು ಅಪರಾಧ ಅಲ್ಲ, ನಿಮ್ಮಲ್ಲಿರುವ ದಾಖಲೆಯನ್ನು ಮಂಡಿಸಿ  ಭೂಮಿಯ ಒಡೆತನವನ್ನು ಜಾಹೀರುಪಡಿಸಿದರೆ ಎಲ್ಲವೂ ಮುಗಿಯುತ್ತದೆ...  ಎಂದವರು ಹೇಳಿದ್ದಾರೆ. ಇದರ ಬೆನ್ನಿಗೇ ಸಚಿವ  ಎಂ.ಬಿ. ಪಾಟೀಲ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಹೊನವಾಡದಲ್ಲಿ 11 ಎಕ್ರೆ ವಕ್ಫ್ ಭೂಮಿ ಮಾತ್ರವೇ ಇದ್ದು, ಇದರ ಪೈಕಿ 10  ಎಕ್ರೆ ಜಾಗದಲ್ಲಿ ಕಬರಸ್ತಾನ ಮತ್ತು ಮಸೀದಿಗಳಿವೆ ಎಂದೂ ಅವರು ಹೇಳಿದ್ದಾರೆ.

ಅಂದಹಾಗೆ, ಹೊನವಾಡ ಎಂಬ ಗ್ರಾಮದಲ್ಲಿ 15 ಸಾವಿರ ಎಕರೆ ಭೂಮಿ ಇರುವುದೇ ಅನುಮಾನ. ಯಾವುದೇ ಗ್ರಾಮ 15  ಸಾವಿರ ಎಕರೆಯಷ್ಟು ವಿಸ್ತಾರವಾಗುವುದಕ್ಕೆ ಸಾಧ್ಯವೂ ಇಲ್ಲ. ಇನ್ನು, ಅಕ್ಕಪಕ್ಕದ ಪ್ರದೇಶಗಳನ್ನೆಲ್ಲ ಸೇರಿಸಿಕೊಂಡೇ ಈ ಹೊನವಾಡ ಗ್ರಾಮವನ್ನು ಲೆಕ್ಕ ಹಾಕಿದರೂ 15 ಸಾವಿರ ಎಕ್ರೆ ಭೂಮಿ ಇರುವುದು ಕಷ್ಟಸಾಧ್ಯ. ಬಿಜೆಪಿಯ ಆರೋಪಗಳು  ಎಂದೂ ವಾಸ್ತವವನ್ನು ಆಧರಿಸಿ ಇರುವುದಿಲ್ಲ ಅನ್ನುವುದಕ್ಕೆ ಇದೊಂದು ಸಾಕ್ಷ್ಯ  ಅಷ್ಟೇ. ಈಗಿನ ಸಿದ್ದರಾಮಯ್ಯ ಸರಕಾರಕ್ಕಿಂತ  ಮೊದಲು ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು. ಆಗಲೂ ಈ ಹೊನವಾಡ ಗ್ರಾಮ ಇತ್ತು ಮತ್ತು ವಕ್ಫ್ ಇಲಾಖೆ, ಕಂದಾಯ  ಇಲಾಖೆ ಮತ್ತು ಜಿಲ್ಲಾಧಿಕಾರಿ ಕಚೇರಿಯೂ ಇತ್ತು. ಅಲ್ಲದೇ, ಹೊನವಾಡದಲ್ಲಿ ಎಷ್ಟು ವಕ್ಫ್ ಭೂಮಿ ಇದೆ ಎಂಬ ಬಗ್ಗೆ  ಆಗಲೇ ಗಜೆಟೆಡ್ ವರದಿಯೂ ಇತ್ತು. ಒಂದುವೇಳೆ, ರೈತರ ಭೂಮಿಯನ್ನು ವಕ್ಫ್ ಇಲಾಖೆ ಕಬಳಿಸುತ್ತಿದೆ ಎಂದಾದರೆ,  ಅದನ್ನು ಆಗಲೇ ತಡೆಯಬಹುದಿತ್ತಲ್ಲವೇ? ಹೊನವಾಡ ಸಹಿತ ಇಡೀ ವಿಜಯಪುರದಲ್ಲಿ ಎಷ್ಟು ವಕ್ಫ್ ಭೂಮಿಯಿದೆಯೋ  ಅವು ಯಾವುವೂ ಸಿದ್ದರಾಮಯ್ಯ ಸರಕಾರ ಬಂದ ಬಳಿಕ ದಿಢೀರನೇ ಉದ್ಭವವಾಗಿರುವುದೇನಲ್ಲವಲ್ಲ. ರಾತ್ರಿ  ಬೆಳಗಾಗುವುದರೊಳಗಾಗಿ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿಯಾಗಿ ಘೋಷಿಸಲು ಸಾಧ್ಯವೂ ಇಲ್ಲವಲ್ಲ. ಒಂದು ಆಸ್ತಿ  ವಕ್ಫ್ ಆಸ್ತಿಯಾಗಿ ನೋಂದಾಯಿತವಾಗಬೇಕಾದರೆ ನಿರ್ದಿಷ್ಟ ಕಾನೂನು ನಿಯಮಗಳಿವೆ. ಯಾರೇ ಆಗಲಿ, ಒಂದು ಜಮೀನಿನಲ್ಲಿ ನಿಂತು, ಇದು ವಕ್ಫ್ ಜಮೀನು ಅಂದರೆ ಅದು ವಕ್ಫ್ ಆಸ್ತಿ ಆಗುವುದಕ್ಕೆ ಸಾಧ್ಯವೇ ಇಲ್ಲ. ಹೀಗಿರುವಾಗ,

 2019ರಿಂದ  2023ರ ವರೆಗೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗೆ ಹೊನವಾಡದ ಸಂಗತಿ ಗೊತ್ತಿರಲಿಲ್ಲವೇ? ಅಲ್ಲಿ 15 ಸಾವಿರ ಎಕ್ರೆ  ಭೂಮಿಯಿದೆ ಎಂದು ವಕ್ಫ್ ಇಲಾಖೆ ಹೇಳುತ್ತಿದೆಯೆಂದಾಗಿದ್ದರೆ ಮತ್ತು ಈ ಭೂಮಿಯೆಲ್ಲಾ ರೈತರದ್ದು ಎಂದಾಗಿದ್ದರೆ  ಯಾಕೆ ಬೊಮ್ಮಾಯಿ ಆಗಲಿ ಯಡಿಯೂರಪ್ಪರಾಗಲಿ ಕ್ರಮ ಕೈಗೊಳ್ಳಲಿಲ್ಲ? ಆಗ ಇಲ್ಲದೇ ಇರುವ ಸಮಸ್ಯೆ ಈಗ ದಿಢೀರನೇ  ಹುಟ್ಟಿಕೊಂಡದ್ದು ಹೇಗೆ?

ನಿಜವಾಗಿ, ಬಿಜೆಪಿ ಭಾವನಾತ್ಮಕ ವಿಷಯದ ಕೊರತೆಯಿಂದ ಬಳಲುತ್ತಿದೆ. ಈ ಮೊದಲು ಬಾಬರಿ ಮಸೀದಿಯಿತ್ತು. ಅದು  ಮುಕ್ತಾಯಗೊಂಡ ಬಳಿಕ ಇಡೀ ಭಾರತವನ್ನು ಏಕಪ್ರಕಾರವಾಗಿ ಪ್ರಭಾವಿಸಬಲ್ಲ ಭಾವನಾತ್ಮಕ ವಿಷಯದ ಕೊರತೆ ಅದಕ್ಕೆ  ಎದುರಾಯಿತು. ಉತ್ತರ ಭಾರತದಲ್ಲಿ ಒಂದೆರಡು ಮಸೀದಿಗಳನ್ನು ಆ ಬಳಿಕ ಮುನ್ನೆಲೆಗೆ ತರಲಾಯಿತು. ಆದರೆ,  ಅದು ಬಾಬರಿ ಮಸೀದಿ ರೀತಿಯಲ್ಲಿ ದೇಶದ ಜನರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದರಲ್ಲಿ  ಸೋಲುಂಡಿತು.  ಬಹುತೇಕ ಉತ್ತರ ಭಾರತದ ಸ್ಥಳೀಯ ಸಂಗತಿಯಾಗಿ ಅದು ಮಾರ್ಪಟ್ಟ ಕಾರಣ ಬಿಜೆಪಿ ಅನ್ಯ ಸಂಗತಿಗಳತ್ತ ಕೈ  ಹಾಕಲೇಬೇಕಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗಾದ ಹಿನ್ನಡೆಯು, ಇನ್ನು ಮುಂದೆ ಮಂದಿರ  ಮಸೀದಿಗಳು ಮತ ತಂದುಕೊಡಲ್ಲ ಅನ್ನುವುದನ್ನು ಬಿಜೆಪಿಗೆ ಮನವರಿಕೆ ಮಾಡಿಸಿತು. ಆದರೆ, ಹಿಂದೂಗಳನ್ನು ಸದಾ  ಭಯದ ನೆರಳಲ್ಲಿ ಉಳಿಸುವುದರಲ್ಲೇ  ತಮ್ಮ ಅಧಿಕಾರದ ಗುಟ್ಟು ಇದೆ ಎಂಬುದು ಬಿಜೆಪಿಗೆ ಗೊತ್ತು. ಮುಸ್ಲಿಮರನ್ನು  ಹಿಂದೂಗಳ ವೈರಿಗಳು ಎಂದು ಬಿಂಬಿಸುವುದನ್ನೇ ಬಿಜೆಪಿ ರಾಜಕೀಯ ತಂತ್ರವಾಗಿಸಿಕೊಂಡಿದೆ. ಆದ್ದರಿಂದಲೇ, ಈ ವಕ್ಫ್  ವಿಷಯವನ್ನು ಅದು ಮುನ್ನೆಲೆಗೆ ತಂದಿದೆ. ವಕ್ಫ್ ಆಸ್ತಿ ಎಂಬುದು ಮುಸ್ಲಿಮರು ಎಲ್ಲೆಲ್ಲ ಇದ್ದಾರೋ ಅಲ್ಲೆಲ್ಲಾ  ಇರುವುದರಿಂದ ಬಾಬರಿ ಮಸೀದಿಯಂತೆ ಇಡೀ ದೇಶವನ್ನೇ ಈ ವಿಷಯದ ಮೂಲಕ ಪ್ರಭಾವಿಸಬಹುದು ಎಂದು ಅದು  ಭಾವಿಸಿದಂತಿದೆ. ಇದು ಮುಗಿದರೆ ಸಮಾನ ನಾಗರಿಕ ಸಂಹಿತೆಯನ್ನು ಬಿಜೆಪಿ ಎತ್ತಿಕೊಳ್ಳುವ ಸಾಧ್ಯತೆಯೂ ಇದೆ.

ವಕ್ಫ್ ಕಾಯ್ದೆಯ ಬಗ್ಗೆ ಮತ್ತು ವಕ್ಫ್ ಟ್ರಿಬ್ಯೂನಲ್ ಬಗ್ಗೆ ಈಗಾಗಲೇ ಬಿಜೆಪಿ ರಾಷ್ಟ್ರಾದ್ಯಂತ ತನ್ನ ಐಟಿ ಸೆಲ್ ಮೂಲಕ  ಸುಳ್ಳುಗಳನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡುತ್ತಿದೆ. ವಕ್ಫ್ ಟ್ರಿಬ್ಯೂನಲ್‌ನ ಅಗತ್ಯ ಏನು ಎಂದು ಅದು ಪ್ರಶ್ನಿಸುತ್ತಿದೆ. ಜಮೀನು ವಿವಾದವನ್ನು ಸಾಮಾನ್ಯ ಸಿವಿಲ್ ಕೋರ್ಟ್ ಗಳಲ್ಲೇ  ಪರಿಹರಿಸಬಾರದೇ ಎಂದೂ ಜನರನ್ನು ಗೊಂದಲಕ್ಕೆ ದೂಡುತ್ತಿದೆ. 

ಅಂದಹಾಗೆ, ಆರಂಭದಲ್ಲಿ ವಕ್ಫ್ ವಿವಾದವು ಸಾಮಾನ್ಯ ಸಿವಿಲ್ ನ್ಯಾಯಾಲಯಗಳಲ್ಲೇ  ವಿಚಾರಣೆಗೆ ಒಳಗಾಗುತ್ತಿತ್ತು. ಆದರೆ, ನ್ಯಾಯ  ವಿತರಣೆಯಲ್ಲಾಗುವ ವಿಳಂಬವನ್ನು ಪರಿಗಣಿಸಿ ಸರಕಾರಗಳೇ ವಕ್ಫ್ ಟ್ರಿಬ್ಯೂನಲ್ ಅನ್ನು ರಚಿಸಿವೆ. ಇದರ ನ್ಯಾಯಾಧೀಶರು ಮುಸ್ಲಿಂ ಧರ್ಮಗುರುಗಳೋ ಕಾಜಿಗಳೋ ಅಲ್ಲ.  ಹೈಕೋರ್ಟು ಮತ್ತು ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರೇ ಇಲ್ಲೂ ನ್ಯಾಯಾಧೀಶರಾಗಿರುತ್ತಾರೆ. ಹಾಗಂತ, ಈ ಟ್ರಿಬ್ಯೂನಲ್‌ನಲ್ಲಿ  ಯಾವ ತೀರ್ಪು ಬರುತ್ತೋ ಅದುವೇ ಅಂತಿಮವಲ್ಲ. ಅಲ್ಲಿಂದ ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ ಗೆ  ಹೋಗುವ  ಅವಕಾಶ ಕಕ್ಷಿದಾರರಿಗೆ ಇದ್ದೇ  ಇದೆ. ಆದರೆ ಬಿಜೆಪಿ ಈ ಸತ್ಯವನ್ನು ಅಡಗಿಸಿಟ್ಟು ಅಪಪ್ರಚಾರದಲ್ಲಿ ನಿರತವಾಗಿದೆ. ಈ ದೇಶದಲ್ಲಿ ಟ್ರಿಬ್ಯೂನಲ್ ಎಂಬುದು ವಕ್ಫ್ ಗೆ  ಸಂಬಂಧಿಸಿ ಮಾತ್ರವೇ ಇದೆ ಎಂಬಂತೆ  ಬಿಂಬಿಸುತ್ತಿದೆ. ನಿಜವಾಗಿ, ಅಸ್ಸಾಮ್‌ನ ಲ್ಲಿರುವ ಫಾರಿನರ್ಸ್ ಟ್ರಿಬ್ಯೂನಲ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರತ್ಯೇಕ ಟ್ರಿಬ್ಯೂನಲ್‌ಗಳಿವೆ. ಕಾನೂನು ಪ್ರಕ್ರಿಯೆ  ಸುಲಭ ಮತ್ತು ಶೀಘ್ರಗೊಳಿಸುವುದಕ್ಕಾಗಿ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಮಾಡಲಾಗುವ ವ್ಯವಸ್ಥೆ ಇದುವೇ ಹೊರತು  ಮುಸ್ಲಿಮರಿಗೆ ಮಾತ್ರ ರಚಿಸಲಾದ ವ್ಯವಸ್ಥೆ ಇದಲ್ಲ.

ಜನರನ್ನು ಭಾವನಾತ್ಮಕವಾಗಿ ಪೀಡಿಸುವುದೇ ಬಿಜೆಪಿಯ ರಾಜಕೀಯ ಮಂತ್ರ. ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು  ಸದಾ ಬಿಂಬಿಸುತ್ತಾ ಬರುವುದೇ ಅದರ ರಾಜಕೀಯ ತಂತ್ರ. ನಿಜವಾಗಿ, 20%ದಷ್ಟೂ ಇಲ್ಲದ ಸಮುದಾಯವೊಂದು  80%ದಷ್ಟಿರುವ ಬೃಹತ್ ಸಮುದಾಯದ ಪಾಲಿಗೆ ಅಪಾಯಕಾರಿಯಾಗಿದೆ ಎಂದು ಹೇಳುವುದೇ  80%ದಷ್ಟಿರುವ  ಸಮುದಾಯಕ್ಕೆ ಮಾಡುವ ಬಹುದೊಡ್ಡ ಅವಮಾನ. ಹೀಗೆ ಭಯವನ್ನು ಬಿತ್ತಿಯೇ ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ  ಬಿಜೆಪಿ ಅಧಿಕಾರದಲ್ಲಿದೆ. ಆದರೂ ಇನ್ನೂ ಭಯ ಹೊರಟು ಹೋಗಿಲ್ಲ ಎಂದರೆ, ಈ ಭಯ ವಾಸ್ತವವಲ್ಲ ಎಂದೇ ಅರ್ಥ.  ಇದು ರಾಜಕೀಯ ಲಾಭಕ್ಕಾಗಿ ಕೃತಕವಾಗಿ ಸೃಷ್ಟಿ ಮಾಡಲಾದ ಭಯ. ನಿಜಕ್ಕೂ ಈ ದೇಶದಲ್ಲಿ ಭಯದಲ್ಲಿ ಇರಬೇಕಾದವರು  ಮುಸ್ಲಿಮರು. ಯಾಕೆಂದರೆ, ಆಡಳಿತದಲ್ಲಿರುವ ಪಕ್ಷವೇ ಅವರ  ವಿರುದ್ಧ ಬಹಿರಂಗವಾಗಿಯೇ ನಿಂತಿರುವಾಗಲೂ ಅವರು ಭಯವನ್ನು ಹಂಚದೇ ಸುಮ್ಮನಿದ್ದಾರೆ. ಇದು ರಾಜಕೀಯ  ತಂತ್ರವೆಂದು  ಅವರಿಗೆ ಗೊತ್ತಿದೆ. ಆದರೆ ಬಿಜೆಪಿ ಹಿಂದೂಗಳನ್ನು ಪದೇ ಪದೇ ಮೂರ್ಖರನ್ನಾಗಿಸುವ ಪ್ರಯತ್ನ ನಡೆಸುತ್ತಲೇ  ಇದೆ.