Tuesday, 20 June 2023

ಸ್ವಾಮೀಜಿಗಳೇ, ಮಠಾಧೀಶರೇ, ನೀವೇಕೆ ಸುಮ್ಮನಿದ್ದೀರಿ?

 18-1-2023

ಒಂದುಕಡೆ, ಸ್ವಾಮೀಜಿಗಳು ಮತ್ತು ಮಠಗಳ ಮೇಲೆ ಅಪಾರ ಭಯ-ಭಕ್ತಿಯನ್ನು ಪ್ರದರ್ಶಿಸುವುದು ಮತ್ತು ಇನ್ನೊಂದು ಕಡೆ, ಮದ್ಯವನ್ನು ಯಥೇಚ್ಛವಾಗಿ ಮಾರಾಟ ಮಾಡುವುದು- ಇವೆರಡೂ ಜೊತೆಜೊತೆಯಾಗಿ ಸಾಗುವುದೆಂದರೆ ಏನರ್ಥ? ಇದು ಕೊಡುವ ಸಂದೇಶವೇನು? ಈವರೆಗೆ 21 ವರ್ಷದೊಳಗಿನ ಯಾರೇ ಆಗಲಿ ಮದ್ಯ ಖರೀದಿಗೆ ನಿರ್ಬಂಧವಿತ್ತು. ಇದೀಗ ರಾಜ್ಯ ಸರ್ಕಾರ ಈ ನಿರ್ಬಂಧವನ್ನು 18 ವರ್ಷಕ್ಕೆ ಇಳಿಸಿದೆ. ಇನ್ನು ಮುಂದೆ 18ವರ್ಷ ತುಂಬಿದವರು ಮದ್ಯ ಖರೀದಿಸಬಹುದು. ಮಾತೆತ್ತಿದರೆ ಧರ್ಮ, ಕರ್ಮ, ವೇದ, ಉಪನಿಷತ್, ಸ್ವಾಮೀಜಿಗಳು, ಮಠಗಳು, ಮೌಲ್ಯಗಳು... ಎಂದೆಲ್ಲ ಪಾಠ ಮಾಡುವ ಮತ್ತು ಭಕ್ತಿ ಪ್ರದರ್ಶಿಸುವ ಸರ್ಕಾರವೊಂದು ಜನರಿಗೆ ಮದ್ಯವನ್ನು ಹಂಚುವುದಕ್ಕೆ ತುದಿಗಾಲಲ್ಲಿ ನಿಂತಿರುವುದೇಕೆ? ಅಷ್ಟಕ್ಕೂ, ಯಾವ ಮಠಗಳೂ ಇಲ್ಲವೇ ಸ್ವಾಮೀಜಿಗಳೂ ಮದ್ಯದ ಪರ ಮಾತಾಡಿಲ್ಲ. ರ‍್ಯಾಲಿ ನಡೆಸಿಲ್ಲ. 21 ವಯಸ್ಸನ್ನು 18ಕ್ಕೆ ಇಳಿಸಿ ಎಂದು ಒತ್ತಾಯಿಸಿಲ್ಲ. ಆದರೆ ಸಂಪೂರ್ಣ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಹಲವು ಸ್ವಾಮೀಜಿಗಳು ಕರೆ ಕೊಟ್ಟಿದ್ದಿದೆ. ಚಿತ್ರದುರ್ಗಾದಿಂದ ಬೆಂಗಳೂರಿನವರೆಗೆ ಈ ಹಿಂದೆ ಮಹಿಳೆಯರು ಕಾಲ್ನಡಿಗೆಯಲ್ಲಿ ತೆರಳಿ ಮದ್ಯಪಾನ ನಿಷೇಧಕ್ಕೆ ಸರ್ಕಾರವನ್ನು ಒತ್ತಾಯಿಸಿದ್ದಿದೆ. ಪತಿಯ ಕುಡಿತದಿಂದ ತಾವನುಭವಿಸುತ್ತಾ ಬಂದಿರುವ ಸಂಕಟಗಳನ್ನು ಈ ಹೋರಾಟಗಾರರು ಮಾಧ್ಯಮದ ಮುಂದೆ ಹಂಚಿಕೊಂಡೂ ಇದ್ದಾರೆ. ಇಷ್ಟಿದ್ದೂ, ಸರ್ಕಾರ ವಯಸ್ಸಿನ ಮಿತಿಯನ್ನು ಇಳಿಸುವ ನಿರ್ಧಾರ ಕೈಗೊಂಡಿರುವುದು ಏನನ್ನು ಸೂಚಿಸುತ್ತದೆ? ಮಠಾಧೀಶರಿಗೆ ಗೌರವ ಸಲ್ಲಿಸುವ ಯಾವುದೇ ಸರ್ಕಾರ ಇಷ್ಟು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವೇ? ಹಾಗಂತ,

ಪ್ರಶ್ನಿಸಬೇಕಾದುದು ಸರಕಾರವೊಂದನ್ನೇ ಅಲ್ಲ. ಇತ್ತೀಚೆಗೆ ಮೌಲ್ಯ ಶಿಕ್ಷಣದ ವಿಷಯದಲ್ಲಿ ಮಠಾಧೀಶರನ್ನೆಲ್ಲಾ ಸೇರಿಸಿ ಸರ್ಕಾರ ಅಭಿ ಪ್ರಾಯವನ್ನು ಕೇಳಿತ್ತು. ಅದಕ್ಕಿಂತ ಮೊದಲು ಎರಡ್ಮೂರು ವರ್ಷಗಳ ಹಿಂದೆ ಲಿಂಗಾಯಿತ ಸ್ವಾಮೀಜಿಗಳೆಲ್ಲ ಒಂದೆಡೆ ಸೇರಿ ಮುಖ್ಯಮಂತ್ರಿ ಅಭ್ಯರ್ಥಿಗಾಗಿ ಬಿಜೆಪಿ ಮೇಲೆ ಒತ್ತಡ ಹೇರಿದ್ದರು. ಆ ಒತ್ತಡದಿಂದಾಗಿಯೇ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು ಎಂಬುದು ಬಹಿರಂಗ ರಹಸ್ಯ. ಪಂಚಮಸಾಲಿ ಸಮುದಾಯದ ಮೀಸಲಾತಿಗಾಗಿ ಸ್ವಾಮೀಜಿಯವರ ನೇತೃತ್ವದಲ್ಲಿ ಹೋರಾಟ ನಡೆ ದಿರುವುದು ಮತ್ತು ಸರ್ಕಾರ ಅದಕ್ಕೆ ಸ್ಪಂದಿಸಿರುವುದು ಕೂಡ ನಡೆದಿದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಒದಗಿಸುವ ಇದ್ದೇಶಕ್ಕಾಗಿಯೇ 2ಬಿ ಮೀಸಲಾತಿಯನ್ನು ಒಡೆದು ವಿಶೇಷ ವ್ಯವಸ್ಥೆ ಮಾಡುವುದಕ್ಕೂ ಸರ್ಕಾರ ಮುಂದಾದ ಅಭೂತಪೂರ್ವ ಘಟನೆಯೂ ನಡೆದಿದೆ. ಅಲ್ಲದೇ, ಮಾಂಸವನ್ನು ಎಲ್ಲರೆದುರು ತೂಗು ಹಾಕಬಾರದು ಎಂದು ಪೇಜಾವರಶ್ರೀಗಳು ಹಂಚಿಕೊಂಡ ಅಭಿಪ್ರಾಯದ ಕುರಿತಾಗಲಿ, ಆಹಾರವನ್ನು ಸಾತ್ವಿಕ ಮತ್ತು ತಾಮಸ ಎಂದು ವರ್ಗೀಕರಿಸಿ, ತಾಮಸ ಆಹಾರದಿಂದ ಹಿಂಸಾ ಪ್ರಚೋದ ನೆಯಾಗುತ್ತದೆ ಎಂಬರ್ಥದಲ್ಲಿ ಹೇಳಿಕೆ ನೀಡಿರುವುದರ ಬಗ್ಗೆಯಾಗಲಿ, ಸರ್ಕಾರದ ಯಾವುದೇ ವ್ಯಕ್ತಿ ಈವರೆಗೂ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಹಾಗಂತ,

ಈ ಸರ್ಕಾರದಲ್ಲಿ ಸಾತ್ವಿಕ ಅಥವಾ ಸಸ್ಯಾಹಾರ ಸೇವಿಸುವವರು ಮಾತ್ರ ಇದ್ದಾರೆ ಎಂದಲ್ಲ. ಆದರೂ ಸ್ವಾಮೀಜಿಯವರಿಗೆ ಗೌರವ ಕೊಟ್ಟು ಅವರೆಲ್ಲ ಸುಮ್ಮನಾಗಿದ್ದಾರೆ. ಸ್ವಾಮೀಜಿಗಳ ಬಗ್ಗೆ ಈ ಸರ್ಕಾರಕ್ಕೆ ಇಷ್ಟು ಗೌರವ ಇದ್ದಾಗ್ಯೂ ಮತ್ತು ತಮ್ಮ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಯಶಸ್ವಿಯಾಗಿರುವ ಚರಿತ್ರೆ ಗೊತ್ತಿದ್ದೂ ಯಾಕೆ ಸರ್ಕಾರದ ಮದ್ಯ ನೀತಿಯ ವಿಷಯದಲ್ಲಿ ಈ ಸ್ವಾಮೀಜಿಗಳು ಏನನ್ನೂ ಮಾತಾಡುತ್ತಿಲ್ಲ? ಮೀಸಲಾತಿಗೆ ಒತ್ತಡ ಹೇರಿದಂತೆ ಅಥವಾ ಮುಖ್ಯಮಂತ್ರಿ ತಮ್ಮವರೇ ಆಗಬೇಕೆಂದು ಒತ್ತಡ ಹೇರಿದಂತೆ ಸಂಪೂರ್ಣ ಮದ್ಯ ನಿಷೇಧ ಜಾರಿಯಾಗಲಿ ಎಂದು ಯಾಕೆ ಸಾಮೂಹಿಕವಾಗಿ ದನಿಯೆತ್ತುವುದಿಲ್ಲ? ಸ್ವಾಮೀಜಿಗಳೆಲ್ಲ ಜೊತೆಗೂಡಿ ಪಾದಯಾತ್ರೆ ನಡೆಸಿದರೆ ಅಥವಾ ಒತ್ತಡವನ್ನು ಹೇರಿದರೆ, ಈ ಸರ್ಕಾರ ಕೇಳಬಾರದೇನು? ಮತದಾರರಿಗಿಂತ ಮಠಾಧೀಶರನ್ನೇ ಹೆಚ್ಚು ನಂಬಿರುವ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ಇವರೆಲ್ಲ ಹಿಂದೇಟು ಹಾಕುತ್ತಿರುವುದೇಕೆ? ಒಂದುಕಡೆ, ಧರ್ಮವನ್ನು ಪ್ರತಿಪಾದಿಸುವುದು ಮತ್ತು ಇನ್ನೊಂದು ಕಡೆ ಅಧರ್ಮದ ಬಗ್ಗೆ ಮೌನವಿರುವುದು ಯಾವ ಸಂದೇಶವನ್ನು ನೀಡಬಲ್ಲದು?

ಗಾಂಜಾ-ಮದ್ಯ-ದ್ವೇಷ- ಇವು ಮೂರೂ ಈ ರಾಜ್ಯದ ನೆಮ್ಮದಿಯನ್ನು ಕೆಡಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿವೆ. ದ.ಕ. ಜಿಲ್ಲೆಯಲ್ಲಿ ಕಳೆದವಾರ ಸುಮಾರು 15 ಮಂದಿ ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳನ್ನು ಗಾಂಜಾ ಬಳಕೆ-ಮಾರಾಟ ಪ್ರಯತ್ನಕ್ಕೆ ಸಂಬಂಧಿಸಿದಂತೆ ಬಂಧಿಸಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ವೈದ್ಯರೇ ಹೀಗಾದರೆ ಇನ್ನು ಇವರ ಕೈಯಲ್ಲಿ ರೋಗಿಗಳ ಪರಿಸ್ಥಿತಿ ಏನು ಎಂದು ಜನಸಾಮಾನ್ಯರು ಆತಂಕಪಡುವಂತಾಗಿದೆ. ಇದರ ಜೊತೆಗೇ ಮದ್ಯವೂ ಅಗ್ಗವಾದರೆ ಅದು ಇನ್ನೆಂಥ ಪರಿಸ್ಥಿತಿಗೆ ಕಾರಣವಾಗಬಹುದು?

ಯಾವುದೇ ಹತ್ಯೆ, ಅತ್ಯಾಚಾರಗಳ ಹಿಂದೆ ಮಾದಕ ಪದಾರ್ಥ ಮತ್ತು ಮದ್ಯದ ಪಾತ್ರವಿರುವುದು ಎಲ್ಲರಿಗೂ ಗೊತ್ತು. ನಿರ್ಭಯಾ ಪ್ರಕರಣದಿಂದ ಹಿಡಿದು ಇವತ್ತಿನ ವರೆಗಿನ ಯಾವುದೇ ಅತ್ಯಾಚಾರ ಪ್ರಕರಣವನ್ನು ಪರಿಶೀಲಿಸಿದರೂ ಇದು ಸ್ಪಷ್ಟವಾಗುತ್ತದೆ. ಮೈಸೂರಿನ ಪ್ರಕರಣದಲ್ಲೂ ಮದ್ಯವೇ ಖಳನಾಯಕ. ಹೈದರಾಬಾದ್ ಪ್ರಕರಣದಲ್ಲೂ ಮದ್ಯವೇ ಮುಖ್ಯ ಆರೋಪಿ. ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುವ ಹೈಪ್ರೊಫೈಲ್ ಅತ್ಯಾಚಾರ ಪ್ರಕರಣವಾಗಲಿ, ಸ್ಥಳೀಯವಾಗಿ ಸುದ್ದಿಗೀಡಾಗಿ ಸತ್ತು ಹೋಗುವ ಅತ್ಯಾಚಾರ ಪ್ರಕರಣಗಳಲ್ಲಾಗಲಿ ಮದ್ಯಕ್ಕೊಂದು ಪಾತ್ರ ಇದೇ ಇರುತ್ತದೆ. ಇದರ ಜೊತೆಗೇ ಕೋಮುಗಲಭೆ ಮತ್ತು ಧರ್ಮದ್ವೇಷದ ಹತ್ಯೆಗಳಲ್ಲೂ ಮದ್ಯಕ್ಕೆ ಬಹುಮುಖ್ಯ ಪಾತ್ರವಿರುತ್ತದೆ. ಇತ್ತೀಚೆಗೆ ಸುರತ್ಕಲ್ ಬಳಿ ನಡೆದ ಜಲೀಲ್ ಹತ್ಯಾ ಪ್ರಕರಣದಲ್ಲೂ ಈ ಮದ್ಯಕ್ಕೆ ಸ್ಥಾನವಿತ್ತು.
ಓರ್ವ ವ್ಯಕ್ತಿಯ ಒಳಗಿನ ಅಪರಾಧಿ ಮನಸ್ಥಿತಿಯನ್ನು ಪ್ರಚೋದಿಸಿ ಧೈರ್ಯ ತುಂಬುವ ಕೆಲಸವನ್ನು ಮಾದಕ ಪದಾರ್ಥಗಳು ಮಾಡುತ್ತವೆ ಎಂಬುದು ಸಂಶೋಧನೆಗಳಿಂದಲೂ ಪ್ರಾಯೋಗಿಕವಾಗಿಯೂ ದೃಢಪಟ್ಟಿದೆ. ಜನರಲ್ಲಿ ಆಕ್ರೋಶ, ಸಿಟ್ಟು, ಪ್ರತೀಕಾರ ಮನೋಭಾವ, ಕ್ರಿಮಿನಲ್ ಕೃತ್ಯದ ಬಯಕೆ ಸಂದರ್ಭಾನುಸಾರ ಹುಟ್ಟಿಕೊಳ್ಳುವುದಕ್ಕೆ ಅವಕಾಶ ಇದೆ. ತನಗೆ ಅವಮಾನವೋ ಅನ್ಯಾಯವೋ ವಂಚ ನೆಯೋ ಇನ್ನೇನೋ ಆದಾಗ ವಿವಿಧ ಭಾವಗಳು ವ್ಯಕ್ತಿಯೊಳಗೆ ಉಂಟಾಗುವುದು ಅಸಹಜ ಅಲ್ಲ. ಆದರೆ, ಈ ಭಾವಗಳು ಪ್ರಾಯೋಗಿಕಗೊಳ್ಳದಂತೆ ಬುದ್ಧಿಯು ತಡೆಯುತ್ತದೆ. ಪ್ರಾಯೋಗಿಕಗೊಂಡರೆ ಆಗಬಹುದಾದ ಅಪಾಯಗಳು ಮತ್ತು ಕಾನೂನಿನ ಕುರಿತ ಪ್ರಜ್ಞೆಯನ್ನು ಬುದ್ಧಿಯು ಮೂಡಿಸುತ್ತದೆ. ಆದ್ದರಿಂದ ಆಕ್ರೋಶಿತ ವ್ಯಕ್ತಿ ಆ ಬಳಿಕ ತಣ್ಣಗಾಗುತ್ತಾನೆ/ಳೆ. ತನಗಾದ ಅನ್ಯಾಯವನ್ನು ಕಾನೂನು ಪ್ರಕಾರ ಪ್ರಶ್ನಿಸುವುದನ್ನೇ ಆಯ್ಕೆ ಮಾಡಿಕೊಳ್ಳುತ್ತಾನೆ. ಆದರೆ, ಅಮಲು ಪದಾರ್ಥ ಮತ್ತು ಮದ್ಯಪಾನ ಈ ಪ್ರಜ್ಞೆಯನ್ನೇ ಸಾಯಿಸಿ ಬಿಡುತ್ತದೆ. ತನ್ನಲ್ಲಿ ಉಂಟಾಗುವ ಆಕ್ರೋಶಕ್ಕೆ ಉಪ್ಪು-ಖಾರ ಸೇರಿಸಿ ಅದು ಪ್ರಚೋದಿಸುತ್ತದೆ. ಭಂಡ ಧೈರ್ಯವನ್ನೂ ತುಂಬುತ್ತದೆ. ಕಾ ನೂನನ್ನು ಕೈಗೆತ್ತಿಕೊಳ್ಳುವುದರಿಂದ ಆಗಬಹುದಾದ ಪರಿಣಾಮಗಳ ಕುರಿತೂ ಅದು ಚಿಂತಿಸದಂತೆ ಮಾಡುತ್ತದೆ. ಮದ್ಯ ಮತ್ತು ಮಾದಕ ವಸ್ತುವನ್ನು ಸೇವಿಸಿದ ವ್ಯಕ್ತಿ ಎಂಥಲ್ಲಾ ಅನಾಹುತಕಾರಿ ಕೃತ್ಯ ಎಸಗುವುದಕ್ಕೂ ಮುಂದಾಗುತ್ತಾನೆ/ಳೆ. ಅವರು ಅತ್ಯಾಚಾರಕ್ಕೂ ಹೇಸುವು ದಿಲ್ಲ. ಹತ್ಯೆಗೂ ಹೇಸುವುದಿಲ್ಲ. ಹಾಗಂತ,

ಇವೆಲ್ಲ ಸರ್ಕಾರಕ್ಕಾಗಲಿ, ಧಾರ್ಮಿಕ ನೇತಾರರಿಗಾಗಲಿ ಗೊತ್ತಿಲ್ಲ ಎಂದಲ್ಲ. ಗೊತ್ತಿದೆ. ಆದರೆ ಸರ್ಕಾರಕ್ಕೆ ಈ ಮದ್ಯ ಮಾರಾಟದಿಂದ ಎರಡ್ಮೂರು ಲಾಭ ಇದೆ. ಒಂದು, ಖಜಾನೆ ತುಂಬುತ್ತದೆ. ಎರಡು, ವೈಯಕ್ತಿಕವಾಗಿ ಜನಪ್ರತಿನಿಧಿಗಳಿಗೆ ಮಾಮೂಲಿ ಸಂಗ್ರಹಿಸುವುದಕ್ಕೆ ಬೇಕಾಗುತ್ತದೆ. ಮೂರು, ಚುನಾವಣೆಯನ್ನು ಗೆಲ್ಲುವುದಕ್ಕೂ ಮದ್ಯ ಬೇಕಾಗುತ್ತದೆ. ಆದ್ದರಿಂದ, ಸರ್ಕಾರವೊಂದು ಮದ್ಯಪಾನ ನಿಷೇಧಕ್ಕೆ ಮುಂದಾಗುವುದು ಸುಲಭ ಅಲ್ಲ. ತಮ್ಮ ಆದಾಯ ಮೂಲವನ್ನೇ ಬಿಟ್ಟುಕೊಡಲು ಯಾವ ಸರ್ಕಾರವೂ ಒಪ್ಪಿಕೊಳ್ಳುವುದು ಕಷ್ಟ. ಆದರೆ,
ಧಾರ್ಮಿಕ ಗುರುಗಳು ಹಾಗಲ್ಲವಲ್ಲ. ಅವರು ಮದ್ಯ-ಮಾದಕ ವಸ್ತುಗಳನ್ನು ಕೆಡುಕುಗಳೆಂದು ಪರಿಗಣಿಸುತ್ತಾರೆ. ಮದ್ಯ ಸಾಮಾಜಿಕವಾಗಿ ಬೀರುತ್ತಿರುವ ಪರಿಣಾಮಗಳ ಬಗ್ಗೆ ಅವರಿಗೆ ಚೆನ್ನಾಗಿ ಅರಿವಿದೆ ಮತ್ತು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಾದ ಹೊಣೆಗಾರಿಕೆಯೂ ಅವರ ಮೇಲಿದೆ. ಅಲ್ಲದೇ, ಮಠಾಧೀಶರಿಗಂತೂ ಸರ್ಕಾರದ ನಿರ್ಧಾರಗಳನ್ನೇ ಬದಲಿಸುವಷ್ಟು ಶಕ್ತಿ ಈ ಕರ್ನಾಟಕದಲ್ಲಿದೆ. ಹೀಗಿದ್ದೂ, ಸರ್ಕಾರದ ಮದ್ಯ ನೀತಿಯ ಬಗ್ಗೆ ಒಂದೇ ಒಂದು ಮಾತನ್ನೂ ಆಡದಿರುವುದನ್ನು ಸಾರ್ವಜನಿಕರು ಏನೆಂದು ತಿಳಿದುಕೊಳ್ಳಬೇಕು? ಸರ್ಕಾರದ ಉಳಿದೆಲ್ಲ ನೀತಿಗಳ ಬಗ್ಗೆ ಆಗಾಗ ಪ್ರತಿಕ್ರಿಯೆ ವ್ಯಕ್ತಪಡಿಸುವ ಸ್ವಾಮೀಜಿಗಳು ಸಂಪೂರ್ಣ ಪಾನ ನಿಷೇಧದ ವಿಷಯದಲ್ಲಿ ಮೌನಿಗಳಾಗುತ್ತಿರುವುದು ಏಕೆ? ಕನಿಷ್ಠ 21ರಿಂದ 18 ವರ್ಷಕ್ಕೆ ವಯಸ್ಸಿನ ಮಿತಿಯನ್ನು ಇಳಿಸಿರುವುದರ ಕುರಿತಾದರೂ ವಿರೋಧ ವ್ಯಕ್ತ ಪಡಿಸಬಹುದಲ್ಲವೇ? ಈ ಮೌನದ ಅರ್ಥವೇನು?

ಅಸುರಕ್ಷಿತತೆಯಲ್ಲಿ ಹೆಣ್ಣು ಜಗತ್ತು

 25-1-2023

ದೇಶದಲ್ಲಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳು ಎಗ್ಗಿಲ್ಲದೇ ವರದಿಯಾಗುತ್ತಿದೆ. ಖ್ಯಾತ ಕುಸ್ತಿಪಟು ವಿನೇಶ್ ಪೊಗಾಟ್ ಅವರು ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್‌ರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿರುವುದು ಇದರ ಒಂದು ತುದಿಯಾದರೆ, ಅತ್ಯಾಚಾರ ಮತ್ತು ಹತ್ಯೆಯ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಗೀಡಾಗಿದ್ದ 11 ಮಂದಿಯನ್ನು ಸನ್ನಡತೆಯ ಆಧಾರದಲ್ಲಿ ಗುಜರಾತ್ ಸರ್ಕಾರ ಬಿಡುಗಡೆಗೊಳಿಸಿರುವುದು ಇದರ ಇನ್ನೊಂದು ತುದಿ. ಈ ಎರಡರ ನಡುವೆ ಪ್ರತಿದಿನ ಹೆಣ್ಣು ಲೈಂಗಿಕ ಹಿಂಸೆ, ಅತ್ಯಾಚಾರ ಮತ್ತು ಹತ್ಯೆಗಳಿಗೆ ಗುರಿಯಾಗುತ್ತಲೇ ಇದ್ದಾಳೆ. 2021ರಲ್ಲಿ 31,677 ಅತ್ಯಾಚಾರ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ (NCRB) ಹೇಳಿದೆ. ಅಂದರೆ ಪ್ರತಿದಿನ 86 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಇವೆಲ್ಲ ಪೊಲೀಸು ಠಾಣೆಯಲ್ಲಿ ದಾಖಲಾದ ಪ್ರಕರಣಗಳು. ಇದೇ ವೇಳೆ, ಹೀಗೆ ಕೇಸು ದಾಖಲಾಗದೇ ಮತ್ತು ಹೊರ ಜಗತ್ತಿಗೆ ಗೊತ್ತೂ ಆಗದೇ ನಡೆದು ಹೋಗುತ್ತಿರುವ ಅತ್ಯಾಚಾರ ಪ್ರಕರಣಗಳು ಈ ದಾಖಲಾದ ಪ್ರಕರಣಕ್ಕಿಂತ ಐದಾರು ಪಟ್ಟು ಹೆಚ್ಚಿವೆ ಎಂದು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತಜ್ಞರೇ ಹೇಳುತ್ತಾರೆ. ಹಾಗೆಯೇ, ಪ್ರತಿ ಗಂಟೆಗೆ 49 ಅಪರಾಧ ಪ್ರಕರಣಗಳು ಹೆಣ್ಣಿನ ಮೇಲೆ ನಡೆಯುತ್ತಿವೆ ಎಂದೂ ಕೂಡಾ NCRB ಹೇಳಿದೆ. 2021ರಲ್ಲಿ ಹೆಣ್ಣಿನ ಮೇಲೆ 4,28,278 ಅಪರಾಧ ಪ್ರಕರಣಗಳು ದಾಖಲಾಗಿವೆ. ಇವೆಲ್ಲ ಅಧಿಕೃತ ಲೆಕ್ಕಗಳು. ಅನಧಿಕೃತ ಲೆಕ್ಕಗಳು ಇದಕ್ಕಿಂತ ಎಷ್ಟೋ ಪಟ್ಟು ಅಧಿಕವಿದೆ. 2020ರಲ್ಲಿ ಈ ಅಪರಾಧ ಪ್ರಕರಣಗಳ ಸಂಖ್ಯೆ 3,71,503 ಆದರೆ, 2019ರಲ್ಲಿ ಇವುಗಳ ಸಂಖ್ಯೆ 4,05,326. ಅತ್ಯಾಚಾರ, ಅತ್ಯಾಚಾರ ಮತ್ತು ಹತ್ಯೆ, ವರದಕ್ಷಿಣೆ, ಆ್ಯಸಿಡ್ ಆಕ್ರಮಣ, ಆತ್ಮಹತ್ಯೆಗೆ ಪ್ರಚೋದನೆ, ಅಪಹರಣ, ಬಲವಂತದ ಮದುವೆ, ಮಾನವ ಕಳ್ಳ ಸಾಗಾಣಿಕೆ, ಆನ್‌ಲೈನ್ ಹಿಂಸೆ... ಇತ್ಯಾದಿಗಳು ಹೆಣ್ಣಿನ ಮೇಲಿನ ಅಪರಾಧ ಪ್ರಕರಣಗಳಲ್ಲಿ ಸೇರುತ್ತವೆ. ಇದೇವೇಳೆ, 2020ರಲ್ಲಿ 28,046 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 2019ರಲ್ಲಿ 32,033 ಪ್ರಕರಣಗಳು ದಾಖಲಾಗಿವೆ. ಹಾಗಂತ, 2022ರ ವರದಿ ಇನ್ನೂ ಬಿಡುಗಡೆಗೊಂಡಿಲ್ಲ. ಅಂದಹಾಗೆ,

ಹೆಣ್ಣಿನ ಮೇಲೆ 2005ರಿಂದ 2021ರ ವರೆಗಿನ ಅಪರಾಧ ಪ್ರಕರಣಗಳನ್ನು ಪರಿಶೀಲಿಸಿದರೆ ಆತಂಕ ಮತ್ತು ಭಯಪಡಬೇಕಾದ ಫ ಲಿತಾಂಶಗಳು ದೊರಕುತ್ತವೆಯೇ ಹೊರತು ಇನ್ನೇನಲ್ಲ. ವರ್ಷದಿಂದ ವರ್ಷಕ್ಕೆ ಹೆಣ್ಣಿನ ಮೇಲಿನ ಅಪರಾಧ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಅತ್ಯಾಚಾರ ಪ್ರಕರಣಗಳೂ ಮಾಮೂಲಿ ಅನ್ನಿಸತೊಡಗಿವೆ. ಸಂಸದರು ಮತ್ತು ಶಾಸಕರೇ ಇಂಥ ಹೀನ ಕೃತ್ಯಗಳ ಆರೋಪಿಗಳಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಮತ್ತು ಅವರು ಸ್ವತಃ ರಾಜೀನಾಮೆ ನೀಡುವುದು ಬಿಡಿ, ಯಾವ ಪಶ್ಚಾತ್ತಾಪಭಾವವೂ ಇಲ್ಲದೇ ತಿರುಗಾಡುತ್ತಿರುತ್ತಾರೆ. ಅವರ ಪಕ್ಷವೂ ಅವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ‘ರಾಜಕೀಯ ಸಂಚು’ ಎಂಬ ಹೇಳಿಕೆಯನ್ನು ಕೊಟ್ಟು ಹೆಣ್ಣನ್ನೇ ಕಟಕಟೆಯಲ್ಲಿ ನಿಲ್ಲಿಸುವ ಕಲೆಯನ್ನೂ ಅವರು ಕಲಿತಿದ್ದಾರೆ. ಗುಜರಾತ್‌ನಲ್ಲಂತೂ ಇಡೀ ಸರ್ಕಾರವೇ ಅತ್ಯಾಚಾರಿಗಳ ಬೆನ್ನಿಗೆ ನಿಂತ ಆಘಾತಕಾರಿ ಘಟನೆಯೇ 2022ರ ಆಗಸ್ಟ್ನಲ್ಲಿ ನಡೆಯಿತು. ಬಿಲ್ಕಿಸ್ ಬಾನು ಸಹಿತ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಹತ್ಯೆಗೈದ ಅಪರಾಧಕ್ಕಾಗಿ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಮಂದಿಯನ್ನು ಸ್ವತಃ ಸರ್ಕಾರವೇ ಮುಂದೆ ನಿಂತು ಬಿಡುಗಡೆಗೊಳಿಸಿತು. ಈ ಬಿಡುಗಡೆಗೆ ಅನುಮತಿ ನೀಡಿದ್ದು ಕೇಂದ್ರ ಸರ್ಕಾರ. ಹೀಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟು ಸೇರಿಕೊಂಡು ಅತ್ಯಾಚಾರಿ ಅಪರಾಧಿಗಳನ್ನು ಬಿಡುಗಡೆಗೊಳಿಸುವುದೆಂದರೆ, ಅದು ಇತರ ಅತ್ಯಾ ಚಾರಿ ಮನಸ್ಥಿತಿಯವರಿಗೆ ನೀಡುವ ಸಂದೇಶವೇನು? ಅತ್ಯಾಚಾರ ಮತ್ತು ಹೆಣ್ಣಿನ ಮೇಲೆ ಅಪರಾಧ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬುದನ್ನೇ ಅಲ್ಲವೇ? ನಿಜವಾಗಿ,

ಸ್ಮಾರ್ಟ್‌ ಫೋನ್‌ಗಳ ಈ ಯುಗದಲ್ಲಿ ಯುವಸಮೂಹವನ್ನು ಪ್ರಚೋದನೆಗೊಳಿಸುವುದಕ್ಕೆ ಬೇಕಾದ ಎಲ್ಲವೂ ಬೆರಳ ತುದಿಯಲ್ಲೇ ಲಭ್ಯವಾಗುತ್ತಿವೆ. ದಿನವಿಡೀ ವೀಕ್ಷಿಸಿಯೂ ಮುಗಿಯದಷ್ಟು ರೀಲ್ಸ್ಗಳು, ವೀಡಿಯೋಗಳು, ಸಿನಿಮಾಗಳು, ಸೈಟ್‌ಗಳು, ಬರಹಗಳು ಸಿಗುತ್ತಿವೆ. ದೈಹಿಕವಾಗಿ ಬೆಳೆದಿದ್ದರೂ ಮಾನಸಿಕವಾಗಿ ಇನ್ನೂ ಪ್ರಬುದ್ಧರಾಗದ ಯುವ ಪೀಳಿಗೆಯನ್ನು ಲೈಂಗಿಕವಾಗಿ ಪ್ರಚೋದಿಸುವುದಕ್ಕೆ ಬೇಕಾದುದೆಲ್ಲವನ್ನೂ ಸ್ಮಾರ್ಟ್ ಫೋನ್‌ಗಳು ಲಭ್ಯಗೊಳಿಸುತ್ತಲೂ ಇವೆ. ಹೆತ್ತವರ ಗಮನಕ್ಕೆ ಬಾರದಂತೆ ಮಕ್ಕಳು ಈ ಸ್ಮಾರ್ಟ್ ಜಗತ್ತಿನಲ್ಲಿ ಸುತ್ತಾಡುತ್ತಲೂ ಇರುತ್ತಾರೆ. ಸದ್ಯದ ಜಗತ್ತು ಇದು. ಆದ್ದರಿಂದ,

ಈ ಜಗತ್ತಿನಲ್ಲಿರುವ ಮಕ್ಕಳ ಮನಸ್ಸನ್ನು ಅರಿತುಕೊಳ್ಳುವ ಮತ್ತು ಅವರು ದಾರಿ ತಪ್ಪದಂತೆ ಕಾವಲು ನಿಲ್ಲಬೇಕಾದ ಶ್ರಮ ಹೆತ್ತವರಿಂದ ತೊಡಗಿ ಶಿಕ್ಷಕರವರೆಗೆ ಸಮರೋಪಾದಿಯಲ್ಲಿ ನಡೆಯಬೇಕಾಗಿದೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಸ್ಮಾರ್ಟ್ ಜಗತ್ತಿನ ಅಪಾಯಗಳನ್ನು ವಿವರಿಸುವ ತರಗತಿಗಳು ಆಗಾಗ್ಗೆ ನಡೆಯುತ್ತಿರಬೇಕಾದ ಅನಿವಾರ್ಯತೆಯಿದೆ. ತಜ್ಞರಿಂದ ಇಂಥ ಕ್ಲಾಸ್‌ಗಳನ್ನು ಮಕ್ಕಳಿಗೆ ನೀಡುವುದರ ಜೊತೆಗೇ ಹೆತ್ತವರನ್ನೂ ಎಜುಕೇಟ್ ಮಾಡುವ ಪ್ರಯತ್ನಗಳೂ ನಡೆಯಬೇಕು. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡಬೇಕಾದ ರೀತಿ-ನೀತಿಗಳನ್ನು ಹೆತ್ತವರು ಕಲಿತುಕೊಳ್ಳಬೇಕಾದ ಅಗತ್ಯವಿದೆ. ಹೆತ್ತವರು ತಮ್ಮನ್ನು ನೋಡುತ್ತಿದ್ದಾರೆ ಮತ್ತು ಪ್ರಶ್ನಿಸುತ್ತಾರೆ ಎಂಬ ಪ್ರಜ್ಞೆಯೊಂದು ಮಕ್ಕಳಲ್ಲಿ ಸದಾ ಇರುವ ವಾತಾವರಣವನ್ನು ಹೆತ್ತವರು ಮನೆಯಲ್ಲಿ ಬೆಳೆಸಬೇಕು. ಶಿಕ್ಷಕರಿಗೂ ಇಲ್ಲಿ ಜವಾಬ್ದಾರಿಯಿದೆ. ಶಾಲೆ-ಕಾಲೇಜುಗಳಿಗೆ ಮೊಬೈಲ್ ತರಬಾರದು ಎಂಬ ನಿಯಮ ಮಾಡುವಲ್ಲಿಗೆ ತಮ್ಮ ಹೊಣೆಗಾರಿಕೆ ಮುಗಿಯಿತು ಎಂದು ಅವರು ಭಾವಿಸಬಾರದು. ಅದರಾಚೆಗೆ ಮಕ್ಕಳನ್ನು ಒಳ್ಳೆಯ ಪ್ರಜೆಗಳಾಗಿ ಪರಿವರ್ತಿಸುವ ಜವಾಬ್ದಾರಿಯೂ ಅವರ ಮೇಲಿದೆ. ಸಾಕಷ್ಟು ಮಕ್ಕಳು ತಮ್ಮ ಮೊಬೈಲನ್ನು ಕಾಲೇಜಿನ ಹತ್ತಿರದ ಶಾಪ್‌ನಲ್ಲಿಟ್ಟು ತರಗತಿಗೆ ತೆರಳಿ ಮರಳಿ ಹೋಗುವಾಗ ಕೊಂಡು ಹೋಗುವುದಿದೆ. ಮಕ್ಕಳು ನಿಧಾನಕ್ಕೆ ಮೊಬೈಲ್ ಚಟಕ್ಕೆ ಬೀಳುತ್ತಿರುವುದರ ಲಕ್ಷಣ ಇದು. ಶಿಕ್ಷಕರು ಈ ಬಗ್ಗೆ ಎಚ್ಚರಿಕೆ ವಹಿಸಿದರೆ ಇಂಥ ಬೆಳವಣಿಗೆಯನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಮಾತ್ರವಲ್ಲ, ಈ ಬಗ್ಗೆ ಆಯಾ ಪೋಷಕರ ಗಮನಕ್ಕೆ ತರುವುದಕ್ಕೂ ಸಾಧ್ಯವಿದೆ. ಮಕ್ಕಳನ್ನು ಸಾಧ್ಯವಾದಷ್ಟು ಮಟ್ಟಿಗೆ ಮೊಬೈಲ್ ಗೀಳಿಗೆ ಬೀಳದಂತೆ ನೋಡಿಕೊಳ್ಳಬೇಕಾದ ಅಗತ್ಯ ಹೆತ್ತವರು ಮತ್ತು ಶಿಕ್ಷಕರ ಮೇಲಿದೆ. ಆರಂಭದಲ್ಲೇ ಈ ಬಗ್ಗೆ ನಿಗಾ ವಹಿಸಿದರೆ, ದೊಡ್ಡ ಫಲಿತಾಂಶ ಲಭ್ಯವಾದೀತು.

ಹೆಣ್ಣನ್ನು ದೈವತ್ಯಕ್ಕೆ ಏರಿಸಿರುವ ದೇಶದಲ್ಲಿ ಹೆಣ್ಣನ್ನು ಅತ್ಯಂತ ಅಪಾಯಕಾರಿಯಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬುದು ನಾಚಿಕೆ ಪಟ್ಟುಕೊಳ್ಳಬೇಕಾದ ಸಂಗತಿ. ಡಿಜಿಟಲ್ ಜಗತ್ತೊಂದೇ ಇದಕ್ಕೆ ಕಾರಣವಲ್ಲ, ಪುರುಷ ಜಗತ್ತಿನ ಅಹಂಕಾರ, ಮೇಲರಿಮೆ ಮತ್ತು ತೋಳುಬಲವೂ ಇದಕ್ಕೆ ಕಾರಣ. ಉನ್ನತ ಶಿಕ್ಷಣ ಪಡೆದವರೇ ಹೆಣ್ಣಿನ ಮೇಲೆ ಹಿಂಸೆಯೆಸಗುತ್ತಿದ್ದಾರೆ. ಶಿಕ್ಷಿತ ಮಂದಿಯೇ ಅತ್ಯಾಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಧರ್ಮವನ್ನು ಅರೆದು ಕುಡಿದವರು ಮತ್ತು ನೆಲದ ಕಾನೂನನ್ನು ಬಲ್ಲವರೇ ಹೆಣ್ಣನ್ನು ಇನ್ನಿಲ್ಲದಂತೆ ಕಾಡಿಸಿ ಪೀಡಿಸುತ್ತಾರೆ. ಶಿಕ್ಷಕರೇ ಶಿಕ್ಷಕಿಯ ಮೇಲೆ ಹಿಂಸೆ-ದೌರ್ಜನ್ಯ ಮತ್ತು ಅತ್ಯಾಚಾರ ಎಸಗುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲೇ ಮಹಿಳಾ ಪೊಲೀಸರ ಮೇಲೆ ಲೈಂಗಿಕ ಹಿಂಸೆಯಾಗುತ್ತಿದೆ. ಕ್ರೀಡಾರಂಗವನ್ನೂ ಈ ಕ್ರೌರ್ಯ ಬಿಟ್ಟಿಲ್ಲ. ವೈದ್ಯಕೀಯ ರಂಗದಲ್ಲೂ ಹೆಣ್ಣು ಸುರಕ್ಷಿತಳಲ್ಲ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹೆಣ್ಣು ಸವಾಲುಗಳನ್ನು ಎದುರಿಸುತ್ತಾ ಅಸುರಕ್ಷಿತ ಭಾವದಲ್ಲೇ ಬದುಕುತ್ತಿದ್ದಾಳೆ. ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶರ ಮೇಲೆಯೇ ವರ್ಷಗಳ ಹಿಂದೆ ಲೈಂಗಿಕ ಹಿಂಸೆಯ ಆರೋಪ ಕೇಳಿಬಂದಿತ್ತು.

ಹೆಣ್ಣನ್ನು ಅಸುರಕ್ಷಿತಾವಸ್ಥೆಯಲ್ಲಿಟ್ಟು ಯಾವ ದೇಶವೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಜನಸಂಖ್ಯೆಯ ಸುಮಾರು ಅರ್ಧದಷ್ಟಿರುವ ಮಹಿಳೆಯರನ್ನು ದ್ವಿತೀಯ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುವ ದೇಶದಲ್ಲಿ ಸುಖ-ನೆಮ್ಮದಿ ನೆಲೆಸಲೂ ಸಾಧ್ಯವಿಲ್ಲ. ಯಾವುದೇ ದೇಶ ಮಹಿಳಾ ಸ್ನೇಹಿಯಾದರೆ ಅದು ಸರ್ವರಿಗೂ ಸುರಕ್ಷಿತ ಎಂದು ಗುರುತಿಸಿಕೊಳ್ಳುತ್ತದೆ. ಈ ದೇಶವನ್ನು ಸದ್ಯ ಮಹಿಳಾ ಸ್ನೇಹಿಯಾಗಿ ಪರಿವರ್ತಿಸುವ ಅಗತ್ಯವಿದೆ. ಅದಕ್ಕೆ ಬೇಕಾದ ತುರ್ತು ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿದೆ. ಯಾವುದೇ ಪುರುಷನ ಹುಟ್ಟಿನಲ್ಲಿ ಓರ್ವ ಹೆಣ್ಣಿನ ಪಾತ್ರವಿದೆ. ಈ ಭೂಮಿಯಲ್ಲಿ ನಾವಿರುವುದು ಓರ್ವ ಹೆಣ್ಣಿನ ಔದಾರ್ಯದಿಂದಾಗಿ. ಆಕೆ ಬಯಸದೆ ಇದ್ದರೆ ಒಂದು ನರಪಿಳ್ಳೆಯೂ ಈ ಭೂಮಿಯಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. ಈ ಭೂಮಿಯನ್ನು ಮನುಷ್ಯರಿಂದ ತುಂಬಿಸುವ ಹೆಣ್ಣಿನ ಬಗ್ಗೆ ನಿಷ್ಕಾಳಜಿ ಮತ್ತು ಅಗೌರವ ಎಂದೂ ಸಲ್ಲದು. ಹೆಣ್ಣು ಎಷ್ಟು ಅಮೂಲ್ಯ ಎಂಬ ಪಾಠವನ್ನು ಎಳವೆಯಲ್ಲೇ ಮಕ್ಕಳಿಗೆ ಮನೆ ಮತ್ತು ಶಾಲೆಯಲ್ಲಿ ವಿವರಿಸುವ ಕೆಲಸಗಳಾಗಬೇಕು. ಹೆಣ್ಣಿನ ಮೇಲೆ ಹಿಂಸೆಯೆಸಗುವುದರನ್ನು ಅಪರಾಧವಾಗಿ ಮತ್ತು ಧರ್ಮ ವಿರೋಧಿಯಾಗಿ ಮಕ್ಕಳ ಮನಸ್ಸಲ್ಲಿ ದೃಢವಾಗಿ ಮೂಡಿಸಬೇಕು. ಜೊತೆಗೇ ಸ್ಮಾರ್ಟ್ ಫೋನ್‌ಗಳನ್ನು ಬಳಸುವ ಬಗ್ಗೆಯೂ ಮಕ್ಕಳಲ್ಲಿ ತಿಳುವಳಿಕೆಯನ್ನು ಉಂಟು ಮಾಡಬೇಕು. ಪ್ರೀತಿ-ಪ್ರೇಮಗಳ ಇತಿ-ಮಿತಿ, ಅಗತ್ಯ-ಅನಗತ್ಯಗಳನ್ನು ತಿಳಿಹೇಳುವ ಕೆಲಸಗಳೂ ಆಗಬೇಕು.

ಅಮೃತ್ ಗಾರ್ಡನ್ಸ್ ಆದದ್ದೇಕೆ ಮೊಗಲ್ ಗಾರ್ಡನ್ಸ್?

 3-2-2023

ದೆಹಲಿಯ ಮೊಗಲ್ ಗಾರ್ಡನ್ಸ್‌ನ ಹೆಸರನ್ನು ಕೇಂದ್ರ ಸರಕಾರ ಅಮೃತ್ ಗಾರ್ಡನ್ಸ್ ಎಂದು ಬದಲಾಯಿಸಿದೆ. ಇದನ್ನು ರೈಲಿನಿಂದ ಇತ್ತೀಚೆಗಷ್ಟೇ ಟಿಪ್ಪು ಹೆಸರನ್ನು ಕಿತ್ತು ಹಾಕಿದ್ದರ ಮುಂದುವರಿದ ಭಾಗವಾಗಿ ಪರಿಗಣಿಸಬಹುದು. ಅಂದಹಾಗೆ, ಹೀಗೆ ಮೊಗಲ್ ಗಾರ್ಡನ್ಸನ್ನು ಅಮೃತ್ ಗಾರ್ಡನ್ಸ್ ಎಂದು ಬದಲಾಯಿಸಿದ ದಿನವೇ ಕೇಂದ್ರ ಸರಕಾರ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನೂ ಘೋಷಿಸಿದೆ. ತಮಾಷೆ ಏನೆಂದರೆ, ಬಹುಮನೀ ಮತ್ತು ಬರೀದಶಾಹಿ ದೊರೆಗಳ ಕಾಲದಲ್ಲಿ ಕರ್ನಾಟಕದಲ್ಲಿ ಹುಟ್ಟಿಕೊಂಡ ಬಿದರಿ ಕಲೆಯಲ್ಲಿ ಪರಿಣತಿ ಪಡೆದ ವ್ಯಕ್ತಿಯೊಬ್ಬರಿಗೆ ಪದ್ಮಶ್ರೀಯನ್ನು ನೀಡಲಾಗಿದೆ. ಒಂದುಕಡೆ ಮೊಗಲ್ ಹೆಸರನ್ನು ಕಿತ್ತು ಹಾಕುತ್ತಲೇ ಇನ್ನೊಂದು ಕಡೆ ಬಹುಮನಿ ಸುಲ್ತಾನರ ಕೊಡುಗೆಯಾಗಿ ಪರಿಗಣಿಸಿರುವ ಬಿದರಿ ಕಲೆಯನ್ನು ಗೌರವಿಸುವ ದ್ವಂದ್ವವನ್ನೂ ಈ ಸರ್ಕಾರ ತೋರ್ಪಡಿಸಿದೆ.

ಈ ದೇಶವು ಯಾವುದಾದರೊಂದು ಧರ್ಮ, ಜಾತಿ, ಬುಡಕಟ್ಟುಗಳಿಂದ ರಚನೆಯಾದುದಲ್ಲ. ಈ 2023ರಲ್ಲಿ ಭಾರತ ಹೇಗಿದೆಯೋಹಾಗೆಯೇ ಸಾವಿರ ವರ್ಷಗಳ ಹಿಂದೆ ಇರಲಿಲ್ಲ. ಬೇರೆ ಬೇರೆ ಸಂಸ್ಕೃತಿ, ಕಲೆ, ಕೌಶಲ್ಯಗಳು ಒಗ್ಗೂಡಿ ನಿರ್ಮಾಣವಾದ ದೇಶ ಇದು. ಈ ದೇಶವನ್ನು ಈ ಹಿಂದೆ ಮುಸ್ಲಿಮ್ ದೊರೆಗಳೂ ಆಳಿದ್ದಾರೆ, ಹಿಂದೂ-ಕ್ರೈಸ್ತ ದೊರೆಗಳೂ ಆಳಿದ್ದಾರೆ. ಇದರಲ್ಲಿ ಮುಸ್ಲಿಮ್ ಮತ್ತು ಕ್ರೈಸ್ತರು(ಬ್ರಿಟಿಷರು) ಬರೇ ಕೆಡುಕನ್ನು ಮಾತ್ರ ಮಾಡಿದ್ದಾರೆ ಮತ್ತು ಹಿಂದೂ ದೊರೆಗಳು ಒಳಿತನ್ನಲ್ಲದೇ ಇನ್ನೇನನ್ನೂ ಮಾಡಿಲ್ಲ ಎಂದು ಈಗ ಅಮೃತ್ ಗಾರ್ಡನ್ಸ್ ಎಂದು ಹೆಸರು ಬದಲಾಯಿಸಿದವರೂ ಒಪ್ಪಿಕೊಳ್ಳಲಾರರು. ಸ್ವಾತಂತ್ರ‍್ಯ ಪೂರ್ವಕ್ಕಿಂತ ಬಿಡಿ ಸ್ವಾತಂತ್ರ‍್ಯಾ ನಂತರ ಈ ದೇಶದಲ್ಲಿ ಆಗಿ ಹೋದ ಮಂತ್ರಿಗಳು, ಮುಖ್ಯಮಂತ್ರಿಗಳು, ಪ್ರಧಾನಿಗಳು ಮತ್ತು ಜಿಲ್ಲಾಧಿಕಾರಿಗಳೆಲ್ಲ ಬರೇ ಒಳಿತನ್ನಷ್ಟೇ ಮಾಡಿದ್ದಾರೆಯೇ? ಪೊಲೀಸಧಿಕಾರಿಗಳು, ರಾಜಕಾರಣಿಗಳು, ರಾಜ್ಯಪಾಲರುಗಳೆಲ್ಲ ಯಾವ ಕೆಡುಕನ್ನೂ ಮಾಡಿಲ್ಲವೇ? ಯಾವುದೇ ದೊರೆಗಳು ಬರೇ ಒಳಿತನ್ನಷ್ಟೇ ಮಾಡಿಲ್ಲ. ಒಳಿತು ಮತ್ತು ಕೆಡುಕು ಮಿಳಿತವಾಗದ ಯಾವೊಂದು ಚರಿತ್ರೆಯೂ ಕಳೆದು ಹೋಗಿಲ್ಲ.  ಇತಿಹಾಸದಲ್ಲಾಗಲಿ, ವರ್ತಮಾನದಲ್ಲಾಗಲಿ ಎಲ್ಲ ಸಮುದಾಯಗಳ ಕೊಡುಗೆ ಒಂದು ದೇಶದ ಪಾಲಿಗೆ ಇದ್ದೇ ಇರುತ್ತದೆ. ಅಮೀರ್ ಖುಸ್ರು ಇಲ್ಲದ ಹಿಂದೂಸ್ತಾನಿ ಸಂಗೀತವನ್ನು ಊಹಿಸಲು ಸಾಧ್ಯವಿದೆಯೇ? ದಾಗರ್ ಮನೆತನ ಇವತ್ತಿಗೂ ದೃಪದ್ ಪರಂಪರೆಯನ್ನು ಕಾಪಾಡಿಕೊಂಡು ಬಂದಿದೆ. ಸಂಗೀತ ಜಗತ್ತು ಹಿಂದೂ ಮುಸ್ಲಿಮರಿಂದ ಎಷ್ಟು ಮಿಳಿತಗೊಂಡಿದೆಯೆಂದರೆ, ಇದು ಹಿಂದೂ- ಇದು ಮುಸ್ಲಿಮ್ ಎಂದು ವಿಭಜಿಸಲೂ ಸಾಧ್ಯವಾಗದಷ್ಟು. ಈಗ ಅಮೃತ್ ಗಾರ್ಡನ್ಸ್ ಎಂದು ಬದಲಾಯಿಸಲಾದ ರಾಷ್ಟ್ರಪತಿ ಭವನದ ವಿನ್ಯಾಸವನ್ನೇ ಎತ್ತಿಕೊಳ್ಳಿ. ಅದರ ಉದ್ದಕ್ಕೂ ಮೊಗಲ್ ಶೈಲಿಯ ವಿನ್ಯಾಸವೇ ಇದೆ. ಹೆಸರು ಬದಲಿಸಿದ ತಕ್ಷಣ ವಿನ್ಯಾಸವೇನೂ ಬದಲಾಗುವುದಿಲ್ಲವಲ್ಲ. ಅದರಲ್ಲೂ ಈ ಮೊಗಲ್ ಗಾರ್ಡನ್ಸ್‌ಗೆ ಪ್ರೇರಣೆ ಪರ್ಶಿಯನ್ ಗಾರ್ಡನ್ಸ್ ಎಂದು ಹೇಳಲಾಗುತ್ತದೆ. ಈ ಮೊಗಲ್ ಗಾರ್ಡನ್ಸ್‌ನಲ್ಲಿರುವ ಕೊಳ, ಚಿಲುಮೆ, ವಿನ್ಯಾಸ ಎಲ್ಲವೂ ಪರ್ಷಿಯನ್ ಗಾರ್ಡನ್ಸ್‌ನ ಪಡಿಯಚ್ಚು ಎಂಬ ಮಾತಿದೆ. ಮೊಗಲರಲ್ಲಿ ಇಂಥ ಗಾರ್ಡನ್ಸ್‌ಗಳ ಪರಿಕಲ್ಪನೆಯೇ ಇರಲಿಲ್ಲ ಎಂದೂ ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಹೆಸರು ಬದಲಾವಣೆಗೆ ಜನಸಾಮಾನ್ಯರು ಪ್ರತಿಕ್ರಿಯಿಸುವುದು ಕಡಿಮೆ. ಅಲ್ಲದೇ ಮುಸ್ಲಿಮ್ ಗುರುತಿನ ಹೆಸರುಗಳನ್ನು ಬದಲಾಯಿಸುವುದನ್ನು ಇತ್ತೀಚಿನ ವರ್ಷಗಳಲ್ಲಿ ಒಂದು ಟ್ರೆಂಡ್ ಆಗಿ ಸರಕಾರಗಳು ಸ್ವೀಕರಿಸಿರುವಾಗ, ಈ ಅಮೃತ್ ಗಾರ್ಡನ್ಸ್‌ಗೆ ಆಘಾತಕಾರಿ ಪ್ರತಿಕ್ರಿಯೆಯೇನೂ ಸಾರ್ವಜನಿಕವಾಗಿ ವ್ಯಕ್ತಗೊಂಡಿಲ್ಲ. ಈ ದೇಶವನ್ನು ಸುಮಾರು 800 ವರ್ಷಗಳ ಕಾಲ ಮುಸ್ಲಿಮ್ ದೊರೆಗಳು ಆಳಿದ್ದಾರೆ. ಎಲ್ಲ ದೊರೆಗಳಂತೆ ಅವರ ಆಳ್ವಿಕೆಯಲ್ಲೂ ಒಳಿತು-ಕೆಡುಕುಗಳು ಸಹಜವಾಗಿಯೇ ಇದ್ದುವು. ತಾಜ್‌ಮಹಲ್ ಮತ್ತು ಗೋಲಗುಂಬಜ್‌ಗಳೂ ಅವರ ಕೊಡುಗೆಯೇ. ಮೊಗಲ್ ಗಾರ್ಡನ್ಸ್ ಕೂಡಾ ಅವರ ಕೊಡುಗೆಯೇ. 800 ವರ್ಷಗಳ ದೀರ್ಘ ಕಾಲ ಆಳಿದ ದೊರೆಗಳ ಯಾವ ಕುರುಹುಗಳೂ ಈ ದೇಶದಲ್ಲಿ ಇರಬಾರದೆಂಬಂತೆ ನಡಕೊಳ್ಳುವುದು ಮುಠ್ಠಾಳತನ ಮತ್ತು ಬೇಜವಾಬ್ದಾರಿ ವರ್ತನೆ. ಇಂಥ ನಿಲುವು ಇತಿಹಾಸದ ಒಳಿತುಗಳ ಮೇಲೆ ಸಾಧಿಸುವ ದ್ವೇಷವಾಗಬಹುದೇ ಹೊರತು ಇನ್ನೇನಲ್ಲ. ಆದರೂ, ಇಂಥ ಹೆಸರು ಬದಲಾವಣೆಯಿಂದ ಈ ದೇಶದ ಮೇಲೆ ದೂರಗಾಮಿ ಪರಿಣಾಮ ಉಂಟಾಗಲಾರದು ಎಂದು ಹೇಳುವಂತಿಲ್ಲ. ಈ ದೇಶದ ಸ್ಮೃತಿಯಿಂದ ಚರಿತ್ರೆಯನ್ನು ಒಗೆದು ಹಾಕುವಲ್ಲಿ ಇಂಥ ಬದಲಾವಣೆಗಳು ಪರಿಣಾಮ ಬೀರಬಹುದು. ಮೊಗಲ್ ಗಾರ್ಡನ್ಸ್ ಅಂದ ತPಕ್ಷಣ ಮೊಗಲರ ಆಡಳಿತ, ಅವರ ಕೊಡುಗೆಗಳು, ಪ್ರಮಾದಗಳು, ಕಲೆ-ಸಾಹಿತ್ಯ, ಸಂಗೀತಕ್ಕೆ ಅವರು ನೀಡಿರುವ ಕಾಣಿಕೆಗಳು ಚರ್ಚೆಗೋ ಸ್ಮರಣೆಗೋ ಬರುವುದಕ್ಕೆ ಅವಕಾಶವಿದೆ. ಅಮೃತ್ ಗಾರ್ಡನ್ಸ‌ನಿಂದಾಗಿ ಇಂಥ ಸ್ಮರಣೆಗಳ ಪ್ರಕ್ರಿಯೆ ನಡೆಯಲಾರದು. ಹೆಸರು ಬದಲಾವಣೆಗೆ ಹೊರಟವರು ಇಂಥದ್ದೊಂದು ಗುರಿಯನ್ನು ಖಂಡಿತ ಇಟ್ಟುಕೊಂಡಿರಬಹುದು. ಆದರೆ, ಜನಸಾಮಾನ್ಯರಿಗೆ ಫಕ್ಕನೆ ಇದು ಹೊಳೆಯುವುದಿಲ್ಲ. ದುಡಿದುಣ್ಣುವ ವರ್ಗ ಹೀಗೆ ತಲೆ ಕೆಡಿಸಿಕೊಂಡು ಬದುಕುವುದೂ ಇಲ್ಲ. ಅವರ ನಿತ್ಯದ ಅಕ್ಕಿ-ಬೇಳೆ, ಹಾಲು, ಉಪ್ಪು-ಸಕ್ಕರೆಯ ಬೆಲೆಯ ಮೇಲೆ ಇಂಥ ಹೆಸರು ಬದಲಾವಣೆ ಪರಿಣಾಮ ಬೀರುವುದೂ ಇಲ್ಲ. ಆದ್ದರಿಂದ, ಪ್ರಭುತ್ವಕ್ಕೆ ಹೆಸರು ಬದಲಾಯಿಸಿ ದಕ್ಕಿಸಿಕೊಳ್ಳುವುದು ಸುಲಭ.

ಪ್ರಭುತ್ವವೊಂದು ಸಮುದಾಯ ದ್ವೇಷವನ್ನೇ ಉಸಿರಾಗಿಸಿಕೊಂಡಾಗ ಮಾತ್ರ ಇಂಥ ಬೆಳವಣಿಗೆ ನಡೆಯಬಹುದು. ಮುಸ್ಲಿಮರ ಚಾರಿತ್ರಿಕ ಗುರುತುಗಳನ್ನೇ ಹುಡುಕಿ ಹುಡುಕಿ ಈಗಿನ ಪ್ರಭುತ್ವ ಬದಲಿಸುತ್ತಿರುವುದನ್ನು ನೋಡಿದರೆ, ಇದು ಮನದಟ್ಟಾಗುತ್ತದೆ. ತೀರದ ಮುಸ್ಲಿಮ್ ದ್ವೇಷವೇ ಈಗಿನ ಪ್ರಭುತ್ವದ ರಾಜಕೀಯ ಯಶಸ್ಸಿನ ತಾಯಿಬೇರು. ಇತಿಹಾಸದ ಮುಸ್ಲಿಮ್ ದೊರೆಗಳನ್ನು ಹಿಂದೂ ದ್ವೇಷಿಗಳನ್ನಾಗಿ ಬಿಂಬಿಸುವುದು ಇದರ ಒಂದು ತುದಿಯಾದರೆ, ಅದರ ಆಧಾರದಲ್ಲಿ ಈ ವರ್ತಮಾನದಲ್ಲಿ ಬದುಕುತ್ತಿರುವ ಮುಸ್ಲಿಮರ ವಿರುದ್ಧ ದ್ವೇಷವನ್ನು ಪ್ರಚೋದಿಸುವುದು ಇದರ ಇನ್ನೊಂದು ತುದಿ. ಅತ್ಯಾಚಾರಗೈದದ್ದಲ್ಲದೇ ಮೂರು ವರ್ಷದ ಮಗು ಸಹಿತ ಒಂದು ಡಝನ್ ಮುಸ್ಲಿಮರನ್ನು ಬಡಿದು ಕೊಂದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿದ್ದು ಇದರ ಮತ್ತೊಂದು ತುದಿ. ಮುಸ್ಲಿಮರು ಈ ದೇಶಕ್ಕೆ ಏನನ್ನೂ ಕೊಟ್ಟಿಲ್ಲ, ಅವರ ಉಪಸ್ಥಿತಿಯೇ ಅಪಾಯಕಾರಿ, ಅವರ ವಿರುದ್ಧ ಯಾವ ಕ್ರೌರ್ಯವೆಸಗಿದರೂ ಸಹ್ಯ... ಎಂಬಂಥ ಭಾವವನ್ನು ಸೃಷ್ಟಿಸುವ ಯೋಜನಾಬದ್ಧ ಪ್ರಯತ್ನಗಳ ಭಾಗವಾಗಿಯೇ ಇವೆಲ್ಲ ನಡೆಯುತ್ತಿರುವಂತೆ ಕಾಣಿಸುತ್ತಿದೆ. ಅಂದಹಾಗೆ,

ಬದಲಿಸುವುದಿದ್ದರೆ ಈ ದೇಶದಲ್ಲಿ ಮುಸ್ಲಿಮ್ ಹೆಸರಿನ ಸಾವಿರಾರು ಗುರುತುಗಳಿವೆ. ಕಲೆ-ಸಾಹಿತ್ಯ, ಸಂಗೀತ, ಆಡಳಿತ, ಭಾಷೆ, ವಿನ್ಯಾಸಗಳಿಗೆ ಮುಸ್ಲಿಮ್ ದೊರೆಗಳು ಕೊಟ್ಟ ಕೊಡುಗೆ ಗಳೇನೂ ಸಣ್ಣದಲ್ಲ. ಇಂಡೋ-ಅರೇಬಿಕ್, ಇಂಡೋ-ಪರ್ಶಿಯನ್ ಎಂಬ ಹೆಸರುಗಳೇ ಸೃಷ್ಟಿ ಯಾಗುವಷ್ಟು ಈ ದೇಶದ ಕಲಾ ಪ್ರಕಾರ ಮುಸ್ಲಿಮ್ ದೊರೆಗಳಿಂದ ಸಂಪದ್ಭರಿತವಾಗಿದೆ. ಅಷ್ಟಕ್ಕೂ, ಇತಿಹಾಸದ ಗುರುತುಗಳನ್ನು ಮತ್ತು ದೊರೆಗಳನ್ನು ಹೀನಾಯವಾಗಿ ಕಾಣುವುದರಿಂದ ಮತ್ತು ಅವರನ್ನು ತಿರಸ್ಕರಿಸಿ ಬದುಕುವುದರಿಂದ ಈ ವರ್ತಮಾನಕ್ಕಾಗುವ ಲಾಭ ಏನು? ಆ ದೊರೆಗಳಾರೂ ಈ ವರ್ತಮಾನದಲ್ಲಿ ಬದುಕುತ್ತಿಲ್ಲ. ಅವರು ಏನೆಲ್ಲಾ ಒಳಿತು ಮತ್ತು ಕೆಡುಕುಗಳನ್ನು ಮಾಡಿದ್ದಾರೋ ಅವು ಐತಿಹಾಸಿಕವಾಗಿ ದಾಖಲೂ ಆಗಿವೆ. ಹೆಸರು ಬದಲಾವಣೆಯಿಂದ ಈ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಸುಳ್ಳು ಇತಿಹಾಸವನ್ನು ಮರುಕಟ್ಟುವ ಮೂಲಕ ಒಂದು ಹಂತದವರೆಗೆ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಮತ್ತು ಭವಿಷ್ಯದ ಪೀಳಿಗೆಯನ್ನು ದ್ವೇಷಿಗಳನ್ನಾಗಿ ಪರಿವರ್ತಿಸಲು ಅವಕಾಶವಿದೆ. ಆದ್ದರಿಂದಲೇ, ಈ ಹೆಸರು ಬದಲಾವಣೆಯ ಪರ್ವಕ್ಕೆ ಆತಂಕಪಡಬೇಕಾಗಿದೆ. ನಿಜವಾಗಿ, ಇಲ್ಲಿ ನಡೆಯುತ್ತಿರುವುದು ಬರೇ ಹೆಸರು ಬದಲಾವಣೆಯಲ್ಲ. ಇತಿಹಾಸದ ಬದಲಾವಣೆ. ಒಂದುಕಡೆ ಹೆಸರನ್ನು ಬದಲಾಯಿಸುತ್ತಲೇ ಇನ್ನೊಂದು ಕಡೆ ಮುಸ್ಲಿಮ್ ದೊರೆಗಳ ಕುರಿತಂತೆ ಸುಳ್ಳಿನ ಮತ್ತು ಕಪೋಲಕಲ್ಪಿತ ಸಂಗತಿಗಳನ್ನು ಸಾರ್ವಜನಿಕ ವೇದಿಕೆ ಮತ್ತು ಪುಸ್ತಕಗಳ ಮೂಲಕ ಬಿತ್ತುತ್ತಾ ಹೋಗುವುದು. ನಿಧಾನಕ್ಕೆ ಈ ಹೊಸ ಇತಿಹಾಸವೇ ಜನಜನಿತವಾಗುವಂತೆ ನೋಡಿಕೊಳ್ಳುವುದು. ಪಠ್ಯಗಳನ್ನು ಬದಲಾಯಿಸುತ್ತಾ ಹೊಸ ಇತಿಹಾಸದ ಪಾಠಗಳನ್ನು ತುರುಕುವುದು.

ಅಮೃತ್ ಗಾರ್ಡನ್ಸ್ ಆಗಿ ಬದಲಾದ ಮೊಗಲ್ ಗಾರ್ಡನ್ಸ್‌ಗೆ ಆತಂಕ ಪಡಬೇಕಾದದ್ದು ಈ ಎಲ್ಲ ಕಾರಣಗಳಿಗಾಗಿ.

ವಾಟ್ಸಾಪ್‌ನಲ್ಲಿ ಬರುವ ಪಕ್ಕದ ಮನೆಯ ಸಾವಿನ ಸುದ್ದಿ

 

8- 2-2023

ಕಳೆದ ವಾರ ರಾಜ್ಯದಲ್ಲಿ ಮೂರು ಆತ್ಮಹತ್ಯೆ ಪ್ರಕರಣಗಳು ನಡೆದುವು. ಬಾಗಲಕೋಟೆಯಲ್ಲಿ ತನ್ನ ಮೂವರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಳ್ಯದಲ್ಲಿ 26ರ ಗೃಹಿಣಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ, ಸಾಲದ ಕಾರಣಕ್ಕಾಗಿ ಒಂದೇ ಕುಟುಂಬದ 7 ಮಂದಿ ಇಲಿ ಪಾಷಾಣ ಸೇವಿಸಿದ್ದು, ಓರ್ವರು ಸಾವಿಗೀಡಾಗಿ ಉಳಿದವರು ಗಂಭೀರ ಸ್ಥಿತಿಗೆ ತಲುಪಿದ ಘಟನೆ ರಾಮನಗರದಲ್ಲಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿರುವವರಲ್ಲಿ 4 ಮಂದಿ ಮಕ್ಕಳು.

ವಿಷಾದ ಏನೆಂದರೆ, ಇಂಥ ಸಾಮೂಹಿಕ ಆತ್ಮಹತ್ಯೆಗಳ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದರೂ ಓರ್ವ ರಾಜಕೀಯ ಪುಡಾರಿಯ ಹೇಳಿಕೆಯಷ್ಟೂ ಇವುಗಳಿಗೆ ನಾಗರಿಕ ಸಮಾಜದಲ್ಲಿ ಮಹತ್ವ ಲಭ್ಯವಾಗುತ್ತಿಲ್ಲ ಎಂಬುದು. ಆತ್ಮಹತ್ಯೆಯ ಸುದ್ದಿಯನ್ನು ಓದಿಯೋ ಕೇಳಿಯೋ ಛೆ, ತ್ಚು..ಎಂದು ಬೇಸಪಟ್ಟುಕೊಂಡು ಮರುಕ್ಷಣವೇ ರಾಜಕಾರಣಿಯ ಹೇಳಿಕೆಯ ಮೇಲೆ ಗಂಟೆಗಟ್ಟಲೆ ಮಾತಾಡುವಷ್ಟು ಸಾರ್ವಜನಿಕ ಸಂವೇದನೆ ನಶಿಸಿ ಹೋಗುತ್ತಿದೆ. ಜೀವ ಅಮೂಲ್ಯ ಎಂದು ನಂಬಿಕೊಂಡು ಬಂದ ಸಮಾಜವೊಂದು ತೀರಾ ಸಂವೇದ ನಾರಹಿತವಾಗಿ ಮತ್ತು ಅಸಹಜವಾಗಿ ಬದುಕುವ ಹಂತಕ್ಕೆ ತಲುಪಿದ್ದು ಹೇಗೆ? ಯಾಕೆ?

ತನ್ನ ಪಕ್ಕದ ಮನೆಯಲ್ಲೋ ಫ್ಲಾಟಿನಲ್ಲೋ ಜೀವವೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತದೆ ಎಂದರೆ, ಅದು ಆತ್ಮಹತ್ಯೆ ಮಾಡಿಕೊಂಡ ಮನೆಯ ಖಾಸಗಿ ಸಂಗತಿಯಷ್ಟೇ ಆಗಬೇಕಿಲ್ಲ ಅಥವಾ ಪಕ್ಕದ ಮನೆಯಿಂದ ಆಚೆಗೆ ಅದು ಚರ್ಚೆಗೆ ತೆರೆದುಕೊಳ್ಳಬಾರದ ವಿಷಯವೂ ಆಗಬೇಕಿಲ್ಲ. ಆತ್ಮಹತ್ಯೆ ಎಂಬುದು ಚಾರಣದಂಥ ಸಾಹಸ ಪ್ರವೃತ್ತಿ ಅಲ್ಲವಲ್ಲ. ಅದು ಬದುಕಿನ ಕೊನೆ. ಓರ್ವ ವ್ಯಕ್ತಿ ಸುಖಾಸುಮ್ಮನೆ ಬದುಕನ್ನು ಮುಗಿಸಿ ಬಿಡುವ ಆಲೋಚನೆ ಮಾಡುವುದಕ್ಕೆ ಸಾಧ್ಯವಿಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಇಂಥ ಆತ್ಮಹತ್ಯೆಗಳಲ್ಲಿ ಹೊರಗೆ ಕಾಣುವ ಕಾರಣಗಳಿಗಿಂತಲೂ ಕಾಣದ ಕಾರಣಗಳಿರುತ್ತವೆ. ಸಾಲ, ಕಾಯಿಲೆ, ಖಿನ್ನತೆ, ಸಿಟ್ಟು, ಅವಮಾನ, ಅವಮರ್ಯಾದೆ, ಜೀವಭಯ... ಮುಂತಾದ ಕಾರಣಗಳು ಸಾಮಾನ್ಯವಾಗಿ ಯಾವುದೇ ಆತ್ಮಹತ್ಯೆಗಳ ಜೊತೆ ತೇಲಿ ಬರುವುದಿದೆ. ಇರಬಹುದು. ಆದರೆ,

ಈ ಎಲ್ಲ ಕಾರಣಗಳಲ್ಲೂ ಒಂದು ಪ್ರಧಾನ ಅಂಶ ಎದ್ದು ಕಾಣುತ್ತದೆ. ಅದುವೇ, ಸಮಾಜದ ಸ್ಪಂದನೆಯ ಕೊರತೆ. ಸಾಲ, ಕಾಯಿಲೆ, ಜಿಗುಪ್ಸೆ, ಅವಮರ್ಯಾದೆ.. ಇತ್ಯಾದಿಗಳೆಲ್ಲ ಈ 21ನೇ ಶತಮಾನದ ಮಹಾನ್ ಸಂಶೋಧನೆಗಳೇನಲ್ಲ. ನಮ್ಮ ಹಿರಿಯರ ಕಾಲದಲ್ಲೂ ಇದ್ದುವು. ಮುಂದೆಯೂ ಇರಲಿದೆ. ಆದರೆ, ಹಿರಿಯದ ಕಾಲದಲ್ಲಿ ಆತ್ಮಹತ್ಯೆಗಳು ಅಪರೂಪದಲ್ಲಿ ಅಪರೂಪ ಎನ್ನುವಷ್ಟು ಕಡಿಮೆಯಿತ್ತು. ಒಂದುವೇಳೆ, ಆತ್ಮಹತ್ಯೆಯೊಂದು ನಡೆಯಿತೆಂದರೆ, ಅದು ವಾರಗಟ್ಟಲೆ ಸಾರ್ವಜನಿಕ ಚರ್ಚೆಯ ವಸ್ತುವೂ ಆಗುತ್ತಿತ್ತು. ಹೊಟೇಲು, ಅಂಗಡಿ, ಉದ್ಯೋಗದ ಸ್ಥಳ, ಬಸ್ಸಿನಲ್ಲಿ ಪ್ರಯಾಣದ ವೇಳೆ, ಮದುವೆ-ಮುಂಜಿ ಕಾರ್ಯಕ್ರಮಗಳಲ್ಲಿ ಆ ಆತ್ಮಹತ್ಯೆಯೇ ಪ್ರಧಾನ ಚರ್ಚಾ ವಿಷಯವಾಗುತ್ತಿತ್ತು.

ಯಾವಾಗ ಒಂದು ಆಘಾತಕಾರಿ ಸಂಗತಿ ಸಾರ್ವಜನಿಕ ಚರ್ಚೆಗೆ ತೆರೆದುಕೊಳ್ಳುತ್ತದೋ ಆವಾಗ ಅದರ ಸರಿ-ತಪ್ಪುಗಳ ವಿಮರ್ಶೆಯೂ ನಡೆಯುತ್ತದೆ. ಆತ್ಮಹತ್ಯೆಯ ಹೊರತಾದ ದಾರಿಗಳು ಮತ್ತು ಆತ್ಮಹತ್ಯೆಯ ಸುಳಿವನ್ನು ಪತ್ತೆಹಚ್ಚುವ ವಿಧಾನಗಳ ಬಗ್ಗೆಯೂ ಅಂಥ ಚರ್ಚೆಯಲ್ಲಿ ಪ್ರಸ್ತಾಪವಾಗುತ್ತದೆ. ಆತ್ಮಹತ್ಯೆಯನ್ನು ಹೇಗೆ ತಡೆಯಬಹುದಿತ್ತು, ಸಾಲವನ್ನು ಹೇಗೆ ತೀರಿಸಬಹುದಿತ್ತು, ಆತ್ಮಹತ್ಯೆಯ ಸುಳಿವನ್ನು ಹೇಗೆ ಪತ್ತೆ ಹಚ್ಚಬಹುದಿತ್ತು ಮತ್ತು ವ್ಯಕ್ತಿಯನ್ನು ಆತ್ಮಹತ್ಯೆಯಿಂದ ಹೇಗೆ ಹಿಂಜರಿಯುವಂತೆ ಮಾಡಬಹುದಿತ್ತು ಎಂಬ ಚರ್ಚೆಯು ದೊಡ್ಡವರ ಮಧ್ಯೆ ನಡೆಯುವಾಗ ಅದನ್ನು ಚಿಕ್ಕವರೂ ಕೇಳಿಸಿಕೊಳ್ಳುತ್ತಿದ್ದರು. ಆ ಮೂಲಕ ಸಾಮಾಜಿಕ ಮತ್ತು ನೈತಿಕ ಪಾಠವೊಂದು ದೊಡ್ಡವರಿಂದ ಚಿಕ್ಕವರಿಗೆ ಸಹಜವಾಗಿ ರವಾನೆಯಾಗುತ್ತಿತ್ತು. ಅಂಥ ಆತ್ಮಹತ್ಯೆ ಸುದ್ದಿಗಳು ಪ್ರತಿ ಮನೆ ಮನೆಯ ಬ್ರೇಕಿಂಗ್ ಸುದ್ದಿಯಾಗಿ, ಮನೆಯ ಪ್ರಧಾನ ಚರ್ಚಾವಿಷಯವಾಗಿ ಮಾರ್ಪಾಡೂ ಆಗುತ್ತಿದ್ದುವು. ಇದೊಂದು ಸಹಜ ಜಾಗೃತಿ ಕಾರ್ಯಕ್ರಮ. ಸರ್ಕಾರದ ಯಾವುದೇ ಒತ್ತಾಸೆಯಿಲ್ಲದೆ ಮತ್ತು ಸರ್ಕಾರ ಯಾವುದೇ ಫಂಡ್ ಬಿಡುಗಡೆಗೊಳಿಸದೆಯೇ ಹಾಗೂ ಯಾವುದೇ ನಿರ್ದಿಷ್ಟ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸದೆಯೇ ಸಮಾಜವೇ ಅನಧಿಕೃತವಾಗಿ ನಡೆಸುವ ಅಭಿಯಾನ. ಆದರೆ

ಇವತ್ತು ಬದುಕಿನ ಚಿತ್ರಣ ಬದಲಾಗಿದೆ. ಪಕ್ಕದ ಫ್ಲಾಟಿನಲ್ಲಿ ಆತ್ಮಹತ್ಯೆ ಘಟನೆ ನಡೆದಿದೆ ಎಂಬುದು ಗೊತ್ತೇ ಇಲ್ಲದಷ್ಟು ಬದುಕು ಬದಲಾಗಿ ಬಿಟ್ಟಿದೆ. ಪಕ್ಕದ ಮನೆಯವರ ಬದುಕು ಹೇಗಿದೆ, ಉದ್ಯೋಗ ಏನು, ಕಾಯಿಲೆ ಪೀಡಿತರಿದ್ದಾರೆಯೇ, ವಿದ್ಯಾರ್ಥಿಗಳಿದ್ದಾರೆಯೇ, ಹಣಕಾಸು ತಾಪತ್ರಯಗಳಿವೆಯೇ, ನಿರುದ್ಯೋಗದ ಸಮಸ್ಯೆಯಿದೆಯೇ ಇತ್ಯಾದಿಗಳ ಬಗ್ಗೆ ಏನೊಂದೂ ಅರಿವಿಲ್ಲದೆಯೇ ನಿಶ್ಚಿಂತೆಯಿಂದ ಬದುಕುವ ಮನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ, ಸಮಸ್ಯೆಗಳಲ್ಲಿ ಬಂಧಿಯಾದವ ಯಾರೊಂದಿಗೂ ಹೇಳಲಾಗದೇ ಒಳಗೊಳಗೇ ಕುಸಿಯತೊಡಗುತ್ತಾನೆ. ಇನ್ನೊಬ್ಬರೊಂದಿಗೆ ಹಂಚಿ ಹಗುರ ಮಾಡಿಕೊಳ್ಳುವ ಹಳೆಯ ಸಾಮಾಜಿಕ ವ್ಯವಸ್ಥೆಯು ಶಿಥಿಲಗೊಂಡು ತಾನಾಯಿತು, ತನ್ನ ಪಾಡಾಯಿತು ಎಂಬ ಹೊಸ ಸ್ಥಿತಿಯ ಉದಯವಾಗಿರುವುದರಿಂದ ಆತನನ್ನು ಆಲಿಸುವ ಮತ್ತು ಸಾಂತ್ವನಿಸುವ ಕಿವಿ-ಬಾಯಿಗಳ ನಿರೀಕ್ಷೆ ಹುಸಿಯಾಗತೊಡಗುತ್ತವೆ. ಅಂತಿಮವಾಗಿ ಪತ್ರಿಕೆಗಳಲ್ಲಿ ಒಂದು ಕಾಲಮ್ ಸುದ್ದಿಯೊಂದಿಗೆ ಆತ ಮತ್ತು ಆತನ ಕುಟುಂಬ ಶಾಶ್ವತ ಕಣ್ಮರೆಯಾಗುತ್ತವೆ. ಹಾಗಂತ,

ಈಗಿನ ಸಾಮಾಜಿಕ ಜೀವನ ಕ್ರಮ, ಫ್ಲ್ಯಾಟ್ ಸಂಸ್ಕೃತಿಯನ್ನು ಹಳೆಯ ಕಾಲಕ್ಕೆ ಮರಳಿಸಲು ಸಾಧ್ಯವಿಲ್ಲ ಎಂಬುದು ನಿಜ. ಆದರೆ, ಇಂಥ ಆತ್ಮಹತ್ಯೆಗಳನ್ನು ಸಾಕಷ್ಟು ತಡೆಯುವ ಸಾಮರ್ಥ್ಯ ಈಗಿನ ಸಮಾಜಕ್ಕಿದೆ ಎಂಬುದನ್ನು ನಿರಾಕರಿಸಬೇಕಿಲ್ಲ. ಅಣು ಕುಟುಂಬದ ಇವತ್ತಿನ ದಿನಗಳಲ್ಲಿ ಪತಿ-ಪತ್ನಿ ಇಬ್ಬರೂ ಉದ್ಯೋಗದಲ್ಲಿರುವುದು ಅನಿವಾರ್ಯವಾಗಿರುವಾಗ ಈ ಹಿಂದಿನಂಥ ಸಾಮಾಜಿಕ ಬೆರೆಯುವಿಕೆ ಸುಲಭವಲ್ಲ. ಸಮಯದ ಮಿತಿ, ಉದ್ಯೋಗದ ಸಮಯ ಮತ್ತು ಉದ್ಯೋಗದ ರೀತಿಯು ಇಂಥ ಬೆರೆಯುವಿಕೆಗೆ ಅಡ್ಡಿಯನ್ನುಂಟು ಮಾಡುತ್ತವೆ. ಆದರೆ, ಈ ಮಿತಿಗಳನ್ನು ಮೀರಿಯೂ ಪ್ರತಿಯೋರ್ವರೂ ಪಕ್ಕದ ನಾಲ್ಕೈದು ಮನೆಗಳೊಂದಿಗೆ ಸುಖ-ದುಃಖ ಹಂಚಿಕೊಳ್ಳುವ ಸಹಜ ಸಂಬಂಧವನ್ನು ಇಟ್ಟುಕೊಳ್ಳುವ ಸಾಧ್ಯತೆಗಳನ್ನು ಹುಡುಕಲೇಬೇಕಿದೆ. ವಾರದಲ್ಲಿ ಒಂದಷ್ಟು ಸಮಯವನ್ನು ಇಂಥ ಮಾತುಕತೆಗಳಿಗೆ ಮೀಸಲಿಡುವುದರಿಂದ ಭಿನ್ನ ಅನುಭವವೂ ದಕ್ಕುತ್ತದೆ ಮತ್ತು ಮಾಧ್ಯಮಗಳು ಹುಟ್ಟು ಹಾಕಿರುವ ಚರ್ಚಾವಿಷಯಗಳ ಏಕತಾನತೆಯಿಂದ ಆಚೆಗೆ ಬದುಕು-ಭಾವಗಳನ್ನು ವಿನಿಮಯ ಮಾಡಿಕೊಳ್ಳುವ ಸೌಖ್ಯವೂ ಲಭ್ಯವಾಗುತ್ತದೆ. ರಾಜಕೀಯ, ಭ್ರಷ್ಟಾಚಾರ, ಮಾಧ್ಯಮ ಗೌಜಿ-ಗದ್ದಲಗಳು...ಇವೆಲ್ಲ ಇದ್ದದ್ದೇ. ಇವನ್ನೇ ಇಂಥ ಮಾತುಕತೆಗಳಲ್ಲಿ ತಂದು ಮನಸು ಹಾಳು ಮಾಡಿಕೊಳ್ಳುವುದಕ್ಕಿಂತ ಬದುಕಿನ ಕುರಿತಾದ ವಿಷಯಗಳತ್ತ ಗಮನ ಹರಿಸುವುದರಿಂದ ಸುಖ-ದುಃಖಗಳ ಪ್ರಸ್ತಾಪವೂ ಆಗಬಲ್ಲುದು.

ಸಂಕಷ್ಟಕ್ಕೆ ಒಳಗಾದ ಯಾವುದೇ ವ್ಯಕ್ತಿ ತಕ್ಷಣ ತನ್ನ ಮನಸ್ಸನ್ನು ಇನ್ನೊಬ್ಬನ ಎದುರು ತೆರೆದುಕೊಳ್ಳಲಾರ. ತೀರಾ ಸಲುಗೆಯ ವ್ಯಕ್ತಿಯ ಜೊತೆಗೂ ಈ ವಿಷಯದಲ್ಲಿ ಒಂದು ಮುಜುಗರ ಇದ್ದೇ ಇರುತ್ತದೆ. ಒಂದಷ್ಟು ಹೊತ್ತು ಮಾತುಕತೆ ನಡೆದಾಗ ನಿಧಾನವಾಗಿ ಒಳಗಿನ ಬೇಗುದಿ, ಸಂಕಟಗಳು ಹೊರಬರುತ್ತವೆ. ಇದೊಂದು ರೀತಿಯಲ್ಲಿ ತನ್ನನ್ನು ತಾನು ಹಗುರ ಮಾಡಿಕೊಳ್ಳುವ ವಿಧಾನ. ಸದ್ಯದ ಸಾಮಾಜಿಕ ವ್ಯವಸ್ಥೆಯಲ್ಲಿ ಹೀಗೆ ಹೇಳಿಕೊಳ್ಳುವುದಕ್ಕೂ ಬೇಕಾದ ಸಂದರ್ಭಗಳು ಸಿಗುತ್ತಿಲ್ಲ. ಯಾವಾಗ ವ್ಯಕ್ತಿಯೋರ್ವರಿಗೆ ತನ್ನೊಳಗಿನ ಸಂಕಟವನ್ನು ಹಂಚಿಕೊಳ್ಳುವುದಕ್ಕೆ ವಿಶ್ವಾಸಾರ್ಹವಾದ ವೇದಿಕೆಗಳು ಸಿಗುತ್ತವೋ ಆಗ ಆತ ಅರ್ಧದಷ್ಟು ಗೆಲುವಾಗುತ್ತಾನೆ/ಳೆ. ಅಂಥ ಸನ್ನಿವೇಶಗಳಲ್ಲಿ ಕೇಳುಗರು ಸಾಂತ್ವನಿಸುತ್ತಾರೆ. ಭರವಸೆ ತುಂಬುತ್ತಾರೆ. ಕೇಳುವವ ಸಮರ್ಥನಾಗಿದ್ದರೆ ನೆರವಾಗಬಹುದು ಅಥವಾ ಪರಿಹಾರದ ಬೇರೆ ದಾರಿಗಳನ್ನು ತೋರಿಸಬಹುದು. ಅಂತೂ ಸಮಸ್ಯೆಯಿಂದ ಬಿಡುಗಡೆಗೊಳ್ಳುವ ದಾರಿಯೊಂದರ ಪುಟ್ಟ ಹುಡುಕಾಟಕ್ಕೆ ಇಂಥ ಸಂದರ್ಭಗಳು ಅವಕಾಶ ಮಾಡಿಕೊಡುತ್ತವೆ.

ಸದ್ಯ, ಈ ಕುರಿತಂತೆ ಸಾಮಾಜಿಕ ಜಾಗೃತಿಯೊಂದು ದೊಡ್ಡಮಟ್ಟದಲ್ಲಿ ನಡೆಯಬೇಕಿದೆ. ಮಾಧ್ಯಮಗಳು ಮನಸ್ಸು ಮಾಡಿದರೆ ಇದು ಅಸಾಧ್ಯವಲ್ಲ. ಪಕ್ಕದ ನಾಲ್ಕೈದು ಮನೆಗಳೊಂದಿಗೆ ಸುಖ-ದುಃಖಗಳನ್ನು ಹಂಚಿಕೊಳ್ಳುವಷ್ಟು ಸಲುಗೆಯನ್ನು ಬೆಳೆಸಿಕೊಳ್ಳುವ ಮತ್ತು ಅದಕ್ಕಾಗಿ ಸಮಯವನ್ನು ಮೀಸಲಿಡುವ ಸಂದರ್ಭಗಳು ಸೃಷ್ಟಿಯಾಗಲೇಬೇಕು. ಪಕ್ಕದ ಮನೆಯ ಸಾವಿನ ಸುದ್ದಿಯನ್ನು ವಾಟ್ಸಪ್ ಮೂಲಕ ತಿಳಿದುಕೊಳ್ಳುವ ಸ್ಥಿತಿಯತ್ತ ಸಮಾಜ ಹೊರಳುತ್ತಿರುವ ಈ ದಿನಗಳಲ್ಲಿ, ಜೀವನ ಕ್ರಮದ ಬಗ್ಗೆ ಮರು ಆಲೋಚಿಸುವ ತುರ್ತು ಅಗತ್ಯವಿದೆ

ಸಕಾರಾತ್ಮಕ ಚರ್ಚೆಗಳು ಪ್ರತಿ ಮನೆಯಲ್ಲೂ ನಡೆಯಲಿ...

 

15-2-2023

ಕೊರಗ ಸಮುದಾಯದ ದಿನಕರ ಕೆಂಜೂರು ಅವರ ಡಾಕ್ಟರೇಟ್ ಪದವಿ ನಿಜಕ್ಕೂ ಈ ಸಮಾಜ ಸಂಭ್ರಮಿಸಬೇಕಾದ ಮತ್ತು ವಿಶೇಷವಾಗಿ ಮುಸ್ಲಿಮ್ ಸಮುದಾಯದ ಪ್ರತಿ ಮನೆಗಳಲ್ಲೂ ಉಲ್ಲೇಖಕ್ಕೆ ಒಳಗಾಗಿ ಚರ್ಚೆಯ ಹಂತಕ್ಕೆ ಬರಬೇಕಾದ ಬಹುಮುಖ್ಯ ಸಂಗತಿಯಾಗಿದೆ.

ಕಾಡಂಚಿನಲ್ಲಿ ಬದುಕುತ್ತಿರುವ ಮತ್ತು ಕಾಡುತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಸಮುದಾಯವಾಗಿ ಕೊರಗ ಸಮುದಾಯ ಪರಿಚಿತವಾಗಿದೆ. ಕರಾವಳಿ ಭಾಗದ ಮೂಲ ನಿವಾಸಿಗಳಾಗಿ ಮತ್ತು ಅಳಿವಿನ ಅಂಚಿನಲ್ಲಿರುವ ಸಮುದಾಯವಾಗಿಯೂ ಕೊರಗ ಸಮುದಾಯ ಗುರುತಿಸಿಕೊಂಡಿದೆ. ದೇಶದ ಜನಸಂಖ್ಯೆಯ ಸರಾಸರಿ ಜೀವಿತಾವಧಿಗೆ ಹೋಲಿಸಿದರೆ ಕೊರಗ ಸಮುದಾಯದ ಜೀವಿತಾವಧಿ ಅರ್ಧಕ್ಕರ್ಧ ಎಂಬಂತಿದೆ. ದುಶ್ಚಟ, ಕಾಯಿಲೆ, ಪೌಷ್ಟಿಕ ಆಹಾರದ ಕೊರತೆ ಇತ್ಯಾದಿಗಳು ಇವರ ಜೀವಿತಾವಧಿಯನ್ನು ಕಡಿಮೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದೂ ಹೇಳಲಾಗುತ್ತಿದೆ. ಇಂಥ ಸಮುದಾಯದ ದಿನಕರ ಕೆಂಜೂರು ಅವರು ಇದೀಗ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ, ‘ನಾಲೇಜ್ ಮ್ಯಾನೇಜ್‌ಮೆಂಟ್ ಪಾಲಿಸೀಸ್ ಆಂಡ್ ಪ್ರಾಕ್ಟೀಸಸ್: ಎ ಸ್ಟಡಿ ವಿದ್ ರೆಫರೆನ್ಸ್ ಟು ಕಂಪ್ಯೂಟರ್ ಸಾಫ್ಟ್ವೇರ್ ಆಂಡ್ ಸರ್ವಿಸಸ್ ಕಂಪನೀಸ್ ಇನ್ ಕರ್ನಾಟಕ’ ಎಂಬ ವಿಷಯದ ಮೇಲೆ ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ದಿನಕರ ಕೆಂಜೂರು ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ವಿಶೇಷ ಏನೆಂದರೆ,

ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೂರನೇ ವ್ಯಕ್ತಿ ಈ ದಿನಕರ ಕೆಂಜೂರು. 2022ರಲ್ಲಿ ಡಾಕ್ಟರೇಟ್ ಪಡೆದ ಸವಿತಾ ಗುಂಡ್ಮಿ ಮಹಿಳೆಯರಲ್ಲಿ ಮೊದಲಿಗರು. ಅಲ್ಲದೇ, ಬಾಲ್ಯದಲ್ಲೇ ಎಡಗಾಲು ಪೋಲಿಯೋ ಕಾಯಿಲೆಗೆ ತುತ್ತಾದ್ದರಿಂದ ಈ ದಿನಕರ ಕ್ಲಚಸ್‌ನ ಸಹಾಯದಿಂದಲೇ ನಡೆಯುತ್ತಿದ್ದಾರೆ. ಮಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿರುವ ಇವರು ವಿವಿಯ ಬಹುಮಹಡಿ ಮೆಟ್ಟಿಲುಗಳನ್ನು ಈ ಕ್ಲಚಸ್ ಮೂಲಕವೇ ಹತ್ತಿಳಿಯುತ್ತಿದ್ದಾರೆ. 4 ಮತ್ತು 10ನೇ ತರಗತಿಯಲ್ಲಿ ಡ್ರಾಪ್ ಔಟ್ ಆದವರು ಈ ದಿನಕರ. ಕಿತ್ತು ತಿನ್ನುವ ಬಡತನ, ಅಸ್ಪೃಶ್ಯತೆ ಮತ್ತು ಅತಿ ಕ್ರೂರ ಅಜಲು ಪದ್ಧತಿಯಿಂದಲೂ ಧೃತಿಗೆಡದೇ ಸತತ ಏಳು ವರ್ಷಗಳ ಅಧ್ಯಯನ ಮತ್ತು ಸಂಶೋಧನೆಯನ್ನು ನಡೆಸಿ ಮಹಾ ಪ್ರಬಂಧವನ್ನು ಮಂಡಿಸಿದ್ದಾರೆ‌.

ಸಾಧಿಸುವ ಛಲ ಇದ್ದರೆ ಕಿತ್ತು ತಿನ್ನುವ ಬಡತನವಿದ್ದರೂ ಅಸ್ಪೃಶ್ಯತೆಗೆ ಗುರಿಯಾಗಿಯೂ, ಮೇಲ್ಜಾತಿಗಳು ಅತಿ ಹೀನಾಯವಾಗಿ ನಡೆಸಿಕೊಳ್ಳುವ ಅಜಲು ಪದ್ಧತಿಯ ಶೋಷಣೆಗೊಳಪಟ್ಟೂ ಮತ್ತು ಪೊಲಿಯೋ ಪೀಡಿತರಾಗಿ ಕ್ಲಚಸನ್ನು ಆಶ್ರಯಿಸಿ ಬದುಕಬೇಕಾಗಿ ಬಂದರೂ ಸಾಧ್ಯವಿದೆ ಎಂಬುದಕ್ಕೆ ಈ ದಿನಕರ ಕೆಂಜೂರು ಒಂದು ಅದ್ಭುತ ಉದಾಹರಣೆ. ಉಡುಪಿಯ ಬ್ರಹ್ಮಾವರ ತಾಲೂಕಿನ ಕೆಂಜಾರು ಕಲ್ಲುಗುಡ್ಡೆಯ 40 ವರ್ಷದ ಈ ದಿನಕರ, ಕೊರಗ ಸಮುದಾಯದ ಹೆಮ್ಮೆ ಮಾತ್ರ ಅಲ್ಲ, ಸಾಧನೆಯ ಹಸಿವುಳ್ಳ ಎಲ್ಲರ ಹೆಮ್ಮೆ. ನಿಜವಾಗಿ,

ಸಾಧನೆಗೆ ಅಡ್ಡಿಯಾಗಿರುವ ಸಂಗತಿಗಳನ್ನು ಪಟ್ಟಿ ಮಾಡುತ್ತಾ ನಕಾರಾತ್ಮಕವಾಗಿ ಯೋಚಿಸುವುದು ಒಂದು ರೀತಿಯಾದರೆ, ಸರ್ವ ಅಡ್ಡಿಗಳನ್ನೂ ಸವಾಲಾಗಿ ಸ್ವೀಕರಿಸಿ ಸಕಾರಾತ್ಮಕವಾಗಿ ಯೋಚಿಸುವುದು ಇನ್ನೊಂದು ರೀತಿ. ದಿನಕರ ಈ ಸಕಾರಾತ್ಮಕತೆಯ ಪ್ರತೀಕ. ಅವರಿಗೆ ಡಾಕ್ಟರೇಟ್ ಪದವಿ ಪಡೆಯುವುದು ಬಿಡಿ, ಶಾಲೆಗೇ ಹೋಗದಿರುವುದಕ್ಕೆ ಬೇಕಾದ ಬಲವಾದ ಕಾರಣ ಇತ್ತು. ದೈಹಿಕವಾಗಿ ಸಮರ್ಥವಾಗಿ ಇರುವವರೇ ಶಾಲೆಗೆ ಹೋಗದಿರುವ ಈ ಕಾಲದಲ್ಲಿ ತಾನು ಹೋಗದಿದ್ದರೇನು ಎಂದು ಅಂದುಕೊಂಡು ಸುಮ್ಮ ನಿರಬಹುದಿತ್ತು. ಅಲ್ಲದೇ, ಕೊರಗ ಸಮುದಾಯದಲ್ಲಿ ಶೈಕ್ಷಣಿಕ ಮಟ್ಟವೂ ಅತ್ಯಂತ ಕಡಿಮೆ. ಇದರ ಜೊತೆಗೇ ನಾಲ್ಕನೇ ತರಗತಿಯಲ್ಲಿ ಡ್ರಾಪ್‌ಔಟ್ ಆದ ಬಳಿಕವಂತೂ ಮರಳಿ ಹೋಗದಿರುವುದಕ್ಕೆ ಬೇರೆ ಕಾರಣಗಳೇ ಬೇಕಿರಲಿಲ್ಲ. ಅವರ ಸಮುದಾಯದಲ್ಲಿ ಶಿಕ್ಷಿತರು, ಉನ್ನತ ಹುದ್ದೆಯಲ್ಲಿರುವವರ ಸಂಖ್ಯೆಯೂ ತೀರಾ ತೀರಾ ಕಡಿಮೆ. ಇನ್ನು 10ನೇ ತರಗತಿಯಲ್ಲಿ ಡ್ರಾಪ್‌ಔಟ್ ಆದ ಬಳಿಕವಂತೂ ಶಾಲೆ ಕಡೆಗೆ ತಿರುಗಿ ನೋಡಬೇಕಾದ ಅಗತ್ಯವೇ ಇರಲಿಲ್ಲ. ಆದರೆ, ನಕಾರಾತ್ಮಕ ಸಂಗತಿಗಳು ಮತ್ತು ಸವಾಲುಗಳನ್ನೆಲ್ಲ ಬದಿಗಿಟ್ಟು ಇವರು ಎಂಬಿಎ ಪದವಿ ಮುಗಿಸಿದರಲ್ಲದೇ ಬಳಿಕ ಎಂ.ಕಾಮ್. ಕೂಡಾ ಮಾಡಿದರು.
ಒಂದುರೀತಿಯಲ್ಲಿ, ಛಲ ಮತ್ತು ಸಾಧನೆಯ ಹಸಿವಿದ್ದರೆ ಯಾವ ವ್ಯಕ್ತಿಗೂ ಸಾಧಕರಾಗಿ ಮಾರ್ಪಡಬಹುದು ಎಂಬುದನ್ನು ಇವು ಸಾರಿ ಹೇಳುತ್ತವೆ.

ಕೊರಗ ಸಮುದಾಯಕ್ಕೆ ಹೋಲಿಸಿದರೆ ಮುಸ್ಲಿಮ್ ಸಮುದಾಯಕ್ಕೆ ಅನುಕೂಲಕರವಾದ ಹಲವು ಸಂಗತಿಗಳಿವೆ. ಈ ಸಮುದಾಯದೊಳಗೆ ಅಸ್ಪೃಶ್ಯತೆಯ ಆಚರಣೆಯಿಲ್ಲ. ದುಶ್ಚಟಗಳಿಗೆ ಧಾರ್ಮಿಕ ನಿಷೇಧವಿದೆ. ಸ್ಥಿತಿವಂತರಿದ್ದಾರೆ. ತಮ್ಮದೇ ಆದ ಶೈಕ್ಷಣಿಕ ಸಂಸ್ಥೆಗಳನ್ನೂ ಈ ಸಮುದಾಯ ಹೊಂದಿದೆ. ಸಮುದಾಯವನ್ನು ಒಂದೇಕಡೆ ಸೇರಿಸುವ ಮಸೀದಿ-ಮದ್ರಸಾಗಳಂಥ ಪ್ರಬಲ ಕೊಂಡಿ ಕೇಂದ್ರಗಳಿವೆ. ಉನ್ನತ ಹುದ್ದೆಯಲ್ಲಿದವರೂ ಇದ್ದಾರೆ. ಈ ದೇಶದ ಜಿಡಿಪಿಗೆ ಕೊಡುಗೆ ನೀಡುತ್ತಿರುವ ಅನಿವಾಸಿಗಳೂ ಇದ್ದಾರೆ‌. ಹುಡುಕಿದರೆ ಇಂಥ ಪಾಸಿಟಿವ್ ಸಂಗತಿಗಳು ರಾಶಿರಾಶಿ ಸಿಗಬಹುದು. ಹಾಗಿದ್ದೂ ಮುಸ್ಲಿಮ್ ಸಮುದಾಯ ಶೈಕ್ಷಣಿಕವಾಗಿ ಪ್ರಬಲವಾಗಿದೆಯೇ? ಏರಬೇಕಾದ ಎತ್ತರಕ್ಕೆ ಏರಿದೆಯೇ? ಸಾಮಾಜಿಕವಾಗಿ ಪ್ರಭಾವಶಾಲಿಯಾಗಿದೆಯೇ? ಆರ್ಥಿಕವಾಗಿ ಎಷ್ಟು ಬಲಶಾಲಿಯಾಗಿದೆ?

ಒಂದು ಸಮುದಾಯ ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಲಶಾಲಿಯಾಗುವುದನ್ನು ಆ ಸಮುದಾಯದ ಶೈಕ್ಷಣಿಕ ಮಟ್ಟ ನಿರ್ಧರಿಸುತ್ತದೆ. ಶೈಕ್ಷಣಿಕವಾಗಿ ತೀರಾ ಕಳಪೆ ಸಾಧನೆಗೈಯುವ ಸಮುದಾಯವೊಂದು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವುದು ಅಸಾಧ್ಯ. ಮುಸ್ಲಿಮ್ ಸಮುದಾಯದ ಮಟ್ಟಿಗೆ ಕಲಿಕೆಗೆ ಅಂಥ ಅಡ್ಡಿಗಳೇನಿಲ್ಲ. ಆರ್ಥಿಕ ಚೈತನ್ಯ ವಿಲ್ಲದಿದ್ದರೂ ಕಲಿಕೆಯ ದಾಹವಿದ್ದರೆ ನೆರವಾಗುವ ಕೈಗಳೂ ಸಮುದಾಯದಲ್ಲಿ ಸಾಕಷ್ಟಿದೆ. ಆದರೂ, ಮುಸ್ಲಿಮ್ ಸಮುದಾಯದ ಶೈಕ್ಷಣಿಕ ಮಟ್ಟ ಸಮಾಧಾನಕರವಾಗಿಲ್ಲ. ಈ ಸಮುದಾಯದಿಂದ ವೈದ್ಯರು, ಇಂಜಿನಿಯರ್‌ಗಳು, ಪ್ರೊಫೆಸರ್, ವಿಜ್ಞಾನಿಗಳು, ಉಪನ್ಯಾಸಕರು, ಸರಕಾರಿ ಉದ್ಯೋಗಿಗಳು, ನಾಗರಿಕ ಸೇವಾ ಕ್ಷೇತ್ರದಲ್ಲಿ ದುಡಿಯುವವರು, ಐಎಎಸ್, ಐಪಿಎಸ್‌ಗಳು, ಡಾಕ್ಟರೇಟರ್‌ಗಳು ನಿರೀಕ್ಷಿತ ಮಟ್ಟದಲ್ಲಿ ತಯಾರಾಗಿಲ್ಲ. ಉನ್ನತ ವ್ಯಾಸಂಗ ಪಡೆದು ದೇಶಸೇವೆ ಮಾಡುವವರ ಸಂಖ್ಯೆ ತೃಪ್ತಿಕರವಾಗಿಲ್ಲ. ಪ್ರಾಥಮಿಕ-ಪ್ರೌಢ ಶಿಕ್ಷಣಗಳ ಆಚೆಗೆ ಉನ್ನತ ಹಂತದ ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆಯಿದೆ. ಸೇನೆ ಮತ್ತು ಪೊಲೀಸು ವಿಭಾಗದಲ್ಲಿ ಮುಸ್ಲಿಮರ ಸೇರ್ಪಡೆಯೂ ತೀರಾ ಕಡಿಮೆ ಸಂಖ್ಯೆಯಲ್ಲಿದೆ. ಯಾವುದೇ ಸಮುದಾಯ ಆ ದೇಶದ ಎಲ್ಲ ಕ್ಷೇತ್ರದಲ್ಲೂ ಸಕ್ರಿಯವಾಗಿರುವಾಗ ಮತ್ತು ಪ್ರಾತಿನಿಧ್ಯ ಪಡೆದಾಗ ಮಾತ್ರ ಆದೇಶ ಸುಖವಾಗಿರುತ್ತದೆ. ಈ ಪ್ರಾತಿನಿಧ್ಯ ಸಿಗಬೇಕಾದರೆ ಅದಕ್ಕೆ ಬೇಕಾದ ಅರ್ಹತೆಯನ್ನು ಆ ಸಮುದಾಯ ಸ್ವಯಂ ಪಡೆದುಕೊಳ್ಳಬೇಕು. ಕೌಶಲ್ಯಭರಿತ ಪೀಳಿಗೆಯನ್ನು ಅದು ತಯಾರಿಸಬೇಕು. ಉನ್ನತ ಚಿಂತನೆ ಮತ್ತು ಸಕಾರಾತ್ಮಕ ವಿಚಾರಗಳುಳ್ಳ ಪೀಳಿಗೆಯ ನಿರ್ಮಾಣವಾಗಬೇಕು. ಈ ಪ್ರಕ್ರಿಯೆ ನಿರಂತರವಾದಾಗ ತನ್ನಿಂತಾನೇ ವ್ಯವಸ್ಥೆಯಲ್ಲಿ ಬದಲಾವಣೆಗಳಾಗುತ್ತಲೇ ಹೋಗುತ್ತದೆ. ಪ್ರತಿಭೆಗೆ ಯಾವತ್ತೂ ಮೋಸವಾಗುವುದಿಲ್ಲ. ಶಿಕ್ಷಣ ಯಾರಿಗೂ ಕೈ ಕೊಡುವುದಿಲ್ಲ. ಶಿಕ್ಷಿತ ಸಮುದಾಯವೊಂದು ಎಲ್ಲಿಯವರೆಗೆ ಮೌಲ್ಯಗಳಿಗೆ ಬದ್ಧವಾಗಿತ್ತೋ ಅಲ್ಲಿಯ ವರೆಗೆ ಸಮಾಜದ ಅತಿ ಗೌರವಾನ್ವಿತ ಸಮುದಾಯವಾಗಿ ಅದು ಗುರುತಿಸಿಕೊಂಡಿದೆ ಎಂಬುದಕ್ಕೆ ಇತಿಹಾಸದಲ್ಲಿ ಸಾಕ್ಷ್ಯವಿದೆ. ಅಂದಹಾಗೆ,

ಮುಸ್ಲಿಮ್ ಸಮುದಾಯಕ್ಕೆ ಇರುವ ಅನುಕೂಲತೆಗಳನ್ನು ಪರಿಗಣಿಸಿದರೆ ಅದು ಇವತ್ತು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಸಾಕಷ್ಟು ಉನ್ನತ ಮಟ್ಟದಲ್ಲಿ ಇರಬೇಕಿತ್ತು. ಆದರೆ ಯಾಕೆ ಇದು ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ರಾಜಕೀಯ ಅನನುಕೂಲತೆ ಮತ್ತು ಪ್ರಭುತ್ವದ ತಾರತಮ್ಯ ನೀತಿಯನ್ನು ಬೊಟ್ಟು ಮಾಡಲಾಗುತ್ತದೆ. ನಿಜವಾಗಿ, ಇದುವೇ ಪ್ರಮುಖ ಕಾರಣವಲ್ಲ. ಕಾರಣಗಳ ಪಟ್ಟಿಯಲ್ಲಿ ಇದಕ್ಕೆ ಕೊನೆಯ ಸ್ಥಾನವನ್ನಷ್ಟೇ ನೀಡಬಹುದು. ಅದರಾಚೆಗೆ ಸಾಮುದಾಯಿಕ ವೈಫಲ್ಯದ ಪಾತ್ರ ಬಹುಮುಖ್ಯವಾಗಿದೆ. ಪ್ರತಿ ಮಸೀದಿಗಳನ್ನು ಕೇಂದ್ರವಾಗಿಟ್ಟುಕೊಂಡು ಆಯಾ ಮಸೀದಿ ವ್ಯಾಪ್ತಿಯ ಯುವ ಪೀಳಿಗೆಯಲ್ಲಿ ಐಎಎಸ್, ಐಪಿಎಸ್, ವೈದ್ಯರು, ಯೋಧರು, ಪೊಲೀಸರು, ಇಂಜಿನಿಯರ್‌ಗಳು, ಪ್ರೊಫೆಸರ್‌ಗಳು ಇತ್ಯಾದಿ ಕನಸುಗಳನ್ನು ನಿರಂತರ ಬಿತ್ತತೊಡಗಿದರೆ ಒಂದು ದಿನ ಆ ಕನಸು ನನಸಾಗುವುದಕ್ಕೆ ಖಂಡಿತ ಸಾಧ್ಯವಿದೆ. ನಕಾರಾತ್ಮಕ ಸಂಗತಿಗಳನ್ನೇ ಚರ್ಚಿಸುತ್ತಾ ಕುಳಿತುಕೊಳ್ಳುವುದರಿಂದ ನಕಾರಾತ್ಮಕ ಫಲಿತಾಂಶಗಳೇ ಲಭ್ಯವಾಗುತ್ತಿರುತ್ತವೆ. ನಕಾರಾತ್ಮಕ ಚರ್ಚೆಗಳು ಮನೆಯೊಳಗೆ ನಿರಂತರ ನಡೆಯುತ್ತಿದ್ದರೆ ಆ ಮನೆಯ ಮಕ್ಕಳೂ ನಕಾರಾತ್ಮಕವಾಗಿಯೇ ಯೋಚಿಸಲು ಆರಂಭಿಸುತ್ತಾರೆ. ಅದು ಅಂತಿಮವಾಗಿ ಪ್ರತಿಭೆಯನ್ನೇ ಚಿವುಟಿ ಹಾಕುತ್ತದೆ. ಈ ಹಿನ್ನೆಲೆಯಲ್ಲಿ ದಿನಕರ ಕೆಂಜೂರು ಅವರ ಸಾಧನೆ ಸಮುದಾಯಕ್ಕೆ ಪ್ರೇರಣೆಯಾಗಲಿ. ಸಕಾರಾತ್ಮಕ ವಿಷಯಗಳು ಪ್ರತಿ ಮನೆಯಲ್ಲೂ ಚರ್ಚೆಗೊಳಗಾಗಲಿ.

ಮೀಸಲಾತಿ: ಸಾಮಾಜಿಕ ನ್ಯಾಯಕ್ಕೆ ಎಳ್ಳುನೀರು ಬಿಟ್ಟ ಬೊಮ್ಮಾಯಿ

 

27-3-2023

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಇತರೆಲ್ಲ ಸಮುದಾಯಗಳಿಗಿಂತ ಮುಂದಿರುವ ಬ್ರಾಹ್ಮಣ, ಜೈನ, ಆರ್ಯವೈಶ್ಯ, ನಗರ್ತರು ಮತ್ತು ಮೊದಲಿಯಾರ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆಂದೇ ನೀಡಲಾಗುತ್ತಿರುವ 10% ಮೀಸಲಾತಿ ಗುಂಪಿಗೆ ಆರ್ಥಿಕವಾಗಿಯೂ ಶೈಕ್ಷಣಿಕವಾಗಿಯೂ ಸಾಮಾಜಿಕವಾಗಿಯೂ ಹಿಂದುಳಿದಿರುವ ಮುಸ್ಲಿಮ್ ಸಮುದಾಯವನ್ನು ಸೇರಿಸುವುದು ಮತ್ತು ನೀವು ಆ ಮುಂದುವರಿದ ಸಮುದಾಯದ ಜೊತೆ ಸೆಣಸಿ ಮೀಸಲಾತಿ ದಕ್ಕಿಸಿಕೊಳ್ಳಿ ಎನ್ನುವುದು ಕ್ರೌರ್ಯವಲ್ಲದೇ ಇನ್ನೇನು? ಹಾಗಂತ,


ಈ 10% ಮೀಸಲಾತಿಯಲ್ಲಿ ಮುಸ್ಲಿಮರಿಗಿಷ್ಟು, ಬ್ರಾಹ್ಮಣರಿಗಿಷ್ಟು, ಜೈನರಿಗಿಷ್ಟು ಎಂಬ ವಿಭಜನೆಯೇ ಇಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆಂದು (ಇಡಬ್ಲ್ಯೂಎಸ್) ಈ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಮುಸ್ಲಿಮ್ ಸಮುದಾಯವನ್ನು ಹೊರತುಪಡಿಸಿ ಉಳಿದಂತೆ ಈ ಮೀಸಲಾತಿ ಗುಂಪಿನಲ್ಲಿ ಸೇರ್ಪಡೆಗೊಂಡಿರುವ ಸಮುದಾಯಗಳಿಗೆ ಉತ್ತಮ ಓದಿನ ಅವಕಾಶವಷ್ಟೇ ಅಲ್ಲ, ಅತೀ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳೂ ಆ ಸಮುದಾಯಗಳಲ್ಲೇ ಇದ್ದಾರೆ. ಇಂಥ ಸಮುದಾಯದ ಜೊತೆ ಸ್ಲಂನಲ್ಲಿ ಬದುಕುವ ಬಡ ಮುಸ್ಲಿಮ್ ಸಮುದಾಯದ ಮಕ್ಕಳು ಸ್ಪರ್ಧಿಸಿಯಾರೇ? ಸ್ಪರ್ಧಿಸಿ ಉದ್ಯೋಗಾವಕಾಶ ಮತ್ತು ಶೈಕ್ಷಣಿಕ ಮೀಸಲಾತಿಯನ್ನು ಪಡೆದಾರೇ?


1994ರಲ್ಲಿ ಪ್ರವರ್ಗ 2ಬಿಯನ್ನು ಜಾರಿಗೆ ತರುವ ಮೊದಲು ಹಲವು ವರದಿಗಳ ಪರಾಮರ್ಶೆ ನಡೆಸಲಾಗಿತ್ತು. ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿಯವರು ಈ ಕುರಿತಂತೆ ಸಾಕಷ್ಟು ಬೆವರು ಸುರಿಸಿದ್ದರು. ಮುಸ್ಲಿಮ್ ಪ್ರದೇಶಗಳಿಗೆ ಭೇಟಿ ನೀಡಿ ಸಮುದಾಯದ ಜೀವನ ಮಟ್ಟವನ್ನು ಅವಲೋಕಿಸಿದ್ದರು. ಶ್ರೀಮಂತರು ಮತ್ತು ಬಡವರ ನಡುವೆ ಇರುವ ಅಗಾಧ ಪ್ರಮಾಣದ ಆರ್ಥಿಕ-ಸಾಮಾಜಿಕ ಮತ್ತು ಶೈಕ್ಷಣಿಕ ಅಂತರವನ್ನು ದಾಖಲಿಸಿದ್ದರು. ಉದ್ಯೋಗ ರಂಗದಲ್ಲಿ ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯ ತಳಮಟ್ಟದಲ್ಲಿರುವುದನ್ನು ಕಂಡಿದ್ದರು. ಹಾಗೆಯೇ, ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಕೆ. ರೆಹ್ಮಾನ್ ಖಾನ್ ನೇತೃತ್ವದಲ್ಲಿ ವರದಿಯನ್ನು ತರಿಸಿಕೊಳ್ಳಲಾಗಿತ್ತು. ಆ ವರದಿಯಲ್ಲಿ ಮುಸ್ಲಿಮ್ ಸಮುದಾಯದ ದಯನೀಯ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ದಾಖಲಿಸಲಾಗಿತ್ತು. ಆ ಕಾರಣದಿಂದಲೇ ಮುಸ್ಲಿಮ್ ಸಮುದಾಯಕ್ಕೆ 6% ಮೀಸಲಾತಿಯನ್ನು ಘೋಷಿಸಲಾಗಿತ್ತು. ಆದರೆ,


ಯಾವುದೇ ಮೀಸಲಾತಿ ಪ್ರಮಾಣವು 50%ಕ್ಕಿಂತ ಹೆಚ್ಚಾಗಬಾರದು ಎಂಬ ಸುಪ್ರೀಮ್ ಕೋರ್ಟಿನ ತೀರ್ಪಿನಿಂದಾಗಿ 6% ಅನ್ನು 4% ಆಗಿ ಪರಿವರ್ತಿಸಲಾಗಿತ್ತು. ಇದೀಗ ಈ 2ಬಿ ಕೆಟಗರಿಯನ್ನೇ ರದ್ದುಪಡಿಸಲಾಗಿದೆ. ಮುಸ್ಲಿಮ್ ಸಮುದಾಯಕ್ಕೆ ನೀಡಲಾಗಿದ್ದ 4% ಮೀಸಲಾತಿಯನ್ನು ಒಕ್ಕಲಿಗರು ಮತ್ತು ವೀರಶೈವ ಲಿಂಗಾಯಿತ ಸಮುದಾಯಕ್ಕೆ ತಲಾ 2%ಗಳಂತೆ ಹಂಚಲಾಗಿದೆ. ಆ ಸಮುದಾಯವಾದರೋ ಮುಸ್ಲಿಮರಿಂದ ಕಿತ್ತು ಕೊಡಲಾದ ಈ ಮೀಸಲಾತಿಯನ್ನು ಪ್ರಶ್ನೆ ಮಾಡದೇ ಸ್ವೀಕರಿಸಿಕೊಂಡಿದೆ. ತಮ್ಮ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಎಂದು ಈ ಸಮುದಾಯಗಳು ಒತ್ತಾಯಿಸುವಾಗ, ಎಲ್ಲೂ ಕೂಡ ಮುಸ್ಲಿಮ್ ಸಮುದಾಯದಿಂದ ಕಿತ್ತು ಕೊಡಿ ಎಂದು ಆಗ್ರಹಿಸಿಯೇ ಇರಲಿಲ್ಲ. ಆದರೆ, ಸರ್ಕಾರ ಈ ರೀತಿಯ ಆಘಾತಕಾರಿ ಮೀಸಲಾತಿ ಹಂಚುವಿಕೆಯ ಮೂಲಕ ಮುಸ್ಲಿಮ್ ಸಮುದಾಯದ ಅಸಹನೆಗೆ ಒಕ್ಕಲಿಗ ಮತ್ತು ವೀರಶೈವ ಲಿಂಗಾಯಿತ ಸಮುದಾಯ ಗುರಿಯಾಗುವಂತೆ ಮಾಡಿದೆ. ನಿಜವಾಗಿ,


ಹಿಂದುಳಿದ ವರ್ಗಗಳ ಅಭಿಪ್ರಾಯವನ್ನೇ ಕೇಳದೇ ಮತ್ತು ಸಾರ್ವಜನಿಕವಾಗಿ ಯಾವ ಸೂಚನೆಯನ್ನೂ ಕೊಡದೇ ಏಕಾಏಕಿ ಮುಸ್ಲಿಮರಿಂದ ಮೀಸಲಾತಿಯನ್ನು ಕಿತ್ತು ಇತರರಿಗೆ ನೀಡಿರುವುದು- ಯಾವ ರೀತಿಯಲ್ಲಿ ಲೆಕ್ಕ ಹಾಕಿದರೂ ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿಲ್ಲ. ಧಾರ್ಮಿಕ ಆಧಾರದಲ್ಲಿ ಮೀಸಲಾತಿ ಕೊಡಲಾಗದು ಎಂಬುದು ಸರ್ಕಾರದ ವಾದ. ಇಲ್ಲೂ ಸರ್ಕಾರ ಪೂರ್ಣವಾಗಿ ಎಡವಿದೆ. ಲಿಂಗಾಯಿತ ಮತ್ತು ಒಕ್ಕಲಿಗರನ್ನು ಸಮುದಾಯವಾಗಿ ನೋಡುವಂತೆಯೇ ಸರ್ಕಾರ ಮುಸ್ಲಿಮರನ್ನೂ ಸಮುದಾಯವಾಗಿಯೇ ನೋಡಬೇಕು. ಇಸ್ಲಾಮ್ ಎಂಬುದು ಧರ್ಮವೇ ಹೊರತು ಮುಸ್ಲಿಮ್ ಎಂಬುದು ಸಮುದಾಯ. ಇಸ್ಲಾಮ್‌ನಲ್ಲಿ ಪಿಂಜಾರ, ನದಾಫ್, ಭಾಗವಾನ್ ಎಂಬ ನೇರ ವಿಭಜನೆಗಳಿಲ್ಲ. ಆದರೆ ಒಂದು ಸಮುದಾಯವಾಗಿ ಮುಸ್ಲಿಮರಲ್ಲಿ ಪಂಗಡ, ಪಂಥಗಳಿವೆ. ಇವು ಜಾತಿಗಳಂತೆ ಅಲ್ಲವಾದರೂ ವೃತ್ತಿ ಮತ್ತು ಇನ್ನಿತರ ಸ್ಥಳೀಯ ಕಾರಣಕ್ಕಾಗಿ ಗುರುತಿನ ಬೇರೆ ಬೇರೆ ಐಡೆಂಟಿಟಿಗಳಿವೆ. ಆದ್ದರಿಂದ ಇಸ್ಲಾಮನ್ನು ಒಂದು ಧರ್ಮವಾಗಿ ಮತ್ತು ಮುಸ್ಲಿಮ್ ಅನ್ನು ಒಂದು ಸಮುದಾಯವಾಗಿ ಪರಿಗಣಿಸಬೇಕೇ ಹೊರತು ಧರ್ಮವಾಗಿ ಅಲ್ಲ. ಈ ವಿಷಯದಲ್ಲಿ ಆಂಧ್ರ ಮತ್ತು ತೆಲಂಗಾಣದ ಮೀಸಲಾತಿ ವಿಷಯದಲ್ಲಿ ಸುಪ್ರೀಮ್ ಕೋರ್ಟಿನ ತೀರ್ಪನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ಚುನಾವಣೆಯ ಸಂದರ್ಭದಲ್ಲಿ ಒಕ್ಕಲಿಕ ಮತ್ತು ವೀರಶೈವ ಲಿಂಗಾಯಿತ ಸಮುದಾಯವನ್ನು ಒಲಿಸಿಕೊಳ್ಳುವುದಕ್ಕಾಗಿ ಮುಸ್ಲಿಮರ ಮೇಲೆ ಪ್ರಹಾರ ನಡೆಸಿದೆ. ಅಂದಹಾಗೆ,


ಪ್ರವರ್ಗ 2ಬಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಮೀಸಲಾತಿಯಿಂದ ಸಮುದಾಯಕ್ಕೆ ಸಾಕಷ್ಟು ಲಾಭವಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಮುಸ್ಲಿಮರು ಈ ಮೀಸಲಾತಿಯ ಲಾಭ ಪಡೆದು ಉನ್ನತ ಹಂತಕ್ಕೂ ಹೋಗಿದ್ದಾರೆ. ಪೊಲೀಸ್, ಡಿವೈಎಸ್ಪಿ, ಶಿಕ್ಷಕರು ಇನ್ನಿತರ ಹಲವು ಉದ್ಯೋಗಗಳು ಈ ಮೀಸಲಾತಿಯಿಂದಾಗಿ ಮುಸ್ಲಿಮರಿಗೆ ಲಭ್ಯವಾಗಿದೆ. ಶೈಕ್ಷಣಿಕವಾಗಿಯೂ 2ಬಿಯಿಂದ ಮುಸ್ಲಿಮ್ ಸಮುದಾಯ ಲಾಭ ಪಡೆದಿದೆ. ಹಾಗಂತ, ದಲಿತರಿಗಿಂತಲೂ ಮುಸ್ಲಿಮ್ ಸಮುದಾಯದ ಸ್ಥಿತಿ ಹೀನಾಯ ಎಂದು ಸಾಚಾರ್ ಸಮಿತಿ ನೀಡಿರುವ ವರದಿಯನ್ನು ಪರಿಗಣಿಸಿದರೆ ಮುಸ್ಲಿಮ್ ಸಮುದಾಯ 2ಬಿಯಲ್ಲಿ ಇರುವುದಕ್ಕೆ ಸೂಕ್ತವೇ ಹೊರತು ಇಡಬ್ಲ್ಯುಎಸ್‌ನಲ್ಲಲ್ಲ ಎಂಬುದು ಸ್ಪಷ್ಟ. ಅಷ್ಟಕ್ಕೂ,


ಮುಸ್ಲಿಮ್ ಎಂಬುದು ಸಮುದಾಯ ಸೂಚಕ ಮತ್ತು ಇಸ್ಲಾಮ್ ಎಂಬುದು ಧರ್ಮ ಸೂಚಕ ಎಂಬ ಅರಿವು ಇಲ್ಲದೇ ಬೊಮ್ಮಾಯಿ ಸರ್ಕಾರ ಹೀಗೆ ನಡಕೊಂಡಿದೆ ಎಂದು ಅಂದುಕೊಳ್ಳುವುದು ಬೋಳೆತನವಾದೀತು. ಕಳೆದ ಮೂರೂವರೆ ವರ್ಷಗಳಲ್ಲಿ ಬಿಜೆಪಿ ಸರ್ಕಾರ ನಡಕೊಂಡಿರುವುದು ಅದರಲ್ಲೂ ಬೊಮ್ಮಾಯಿ ಸರ್ಕಾರ ನಡಕೊಂಡಿರುವುದೇ ಮುಸ್ಲಿಮ್ ವಿರೋಧಿಯಾಗಿ. ಮುಸ್ಲಿಮರ ಓಟು ಬೇಡ ಅನ್ನುವವರು ಬಿಜೆಪಿಯಲ್ಲೇ ಇದ್ದಾರೆ ಮತ್ತು ಬಹಿರಂಗವಾಗಿ ಹಾಗೆ ಹೇಳಿದ ಬಳಿಕವೂ ಅವರು ಯಾವ ಶಿಸ್ತು ಕ್ರಮಕ್ಕೂ ಒಳಗಾಗುವುದಿಲ್ಲ. ಮುಸ್ಲಿಮರನ್ನು ನಿಂದಿಸುವ, ಅವರ ಆರಾಧನಾ ಕ್ರಮಗಳನ್ನು ಲೇವಡಿ ಮಾಡುವ, ಅವರ ಧಾರ್ಮಿಕ ಉಡುಪನ್ನು ನಿಷೇಧಿಸುವ, ಜಾತ್ರೆಯಲ್ಲಿ ಮುಸ್ಲಿಮ್ ಸಮುದಾಯದ ವ್ಯಕ್ತಿಗಳಿಗೆ ಬಹಿಷ್ಕಾರ ಹೇರುವ, ಹಲಾಲ್ ಆಹಾರ ಕ್ರಮಕ್ಕೆ ಪ್ರತಿಯಾಗಿ ಜಟ್ಕಾ ಕಟ್ ಎಂಬ ಅಭಿಯಾನ ಆರಂಭಿಸುವ, ಮುಸ್ಲಿಮರ ಮೇಲಿನ ಹತ್ಯೆಯನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂದು ಸಮರ್ಥಿಸುವವರು ಇದೇ ಸರ್ಕಾರದ ಭಾಗವಾಗಿಯೇ ಇದ್ದಾರೆ. ದ.ಕ. ಜಿಲ್ಲೆಯಲ್ಲಿ ನಡೆದ 3 ಹತ್ಯೆಗಳ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ನಡಕೊಂಡ ರೀತಿಯೇ ಅವರ ಮನಸ್ಥಿತಿ ಏನೆಂಬುದನ್ನು ಸ್ಪಷ್ಟಪಡಿಸುತ್ತದೆ. ಪ್ರವೀಣ್ ನೆಟ್ಟಾರು ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಗಳು 25 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಲ್ಲದೇ, ನೆಟ್ಟಾರು ಪತ್ನಿಗೆ ಉದ್ಯೋಗವನ್ನೂ ದೊರಕಿಸಿಕೊಟ್ಟರು. ಅಲ್ಲದೇ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ಕೊಟ್ಟು ಸಾಂತ್ವನವನ್ನೂ ಹೇಳಿದರು. ಆದರೆ,


ಇದೇ ನೆಟ್ಟಾರು ಮನೆಯ ಅನತಿ ದೂರದಲ್ಲಿರುವ ಮಸೂದ್ ಮನೆಗೆ ಅವರು ಭೇಟಿ ಕೊಡಲಿಲ್ಲ. ಹತ್ಯೆಗೀಡಾದ ಆ 19 ವರ್ಷದ ತರುಣನ ತಾಯಿಯನ್ನು ಸಾಂತ್ವನಿಸಬೇಕೆಂದೋ ಪರಿಹಾರ ನೀಡಬೇಕೆಂದೋ ಅವರಿಗೆ ಅನಿಸಲೇ ಇಲ್ಲ. ಆ ಬಳಿಕ ನಡೆದ ಫಾಝಿಲ್ ಎಂಬ ಯುವಕನ ಹತ್ಯೆಗೂ ಅವರು ಮರುಗಲಿಲ್ಲ. ಪರಿಹಾರ ನೀಡಲಿಲ್ಲ. ಆ ಮನೆಗೆ ಭೇಟಿಯನ್ನೂ ಕೊಡಲಿಲ್ಲ. ಅಲ್ಲದೇ, ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ ಹೇರುವ ಪ್ರಕ್ರಿಯೆ ರಾಜ್ಯಾದ್ಯಂತ ನಡೆದಾಗಲೂ ಅವರು ಮಾತಾಡಲಿಲ್ಲ. ಮುಸ್ಲಿಮ್ ನಿಂದನೆಯ ಮಾತುಗಳನ್ನು ಅವರದೇ ಸಹೋದ್ಯೋಗಿಗಳು ಮತ್ತು ಜನಪ್ರತಿನಿಧಿಗಳು ಪದೇಪದೇ ನೀಡುತ್ತಿದ್ದರೂ ಅವರು ವಿರೋಧಿಸಲಿಲ್ಲ. ಟಿಪ್ಪುವನ್ನು ಮರೆ ಮಾಡಿಕೊಂಡು ಅವರ ಸಂಪುಟದ ಸಚಿವರು ಮುಸ್ಲಿಮರನ್ನು ತಿವಿಯುವ ಮಾತುಗಳನ್ನಾಡುತ್ತಿದ್ದರೂ ಅವರ ಮೌನ ಮುರಿಯಲಿಲ್ಲ. ಬೊಮ್ಮಾಯಿ ಉದ್ದೇಶಪೂರ್ವಕವಾಗಿಯೇ ಹೀಗೆ ವರ್ತಿಸಿದ್ದಾರೆ ಎಂಬುದಕ್ಕೆ ಈ ಮೀಸಲಾತಿ ಪ್ರಕರಣ ಮತ್ತಷ್ಟು ಸಾಕ್ಷ್ಯವನ್ನು ಒದಗಿಸಿದೆ. ಅವರು ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರ ಮುಖ್ಯಮಂತ್ರಿಯಾಗಿದ್ದಾರೆ. ಅವರ ಒಳಿತನ್ನಷ್ಟೇ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಒಂದುವೇಳೆ,


ಇಡಬ್ಲ್ಯುಎಸ್ ಗುಂಪಿನಲ್ಲಿರುವ ಸಮುದಾಯಗಳು ಮುಸ್ಲಿಮರ ಸೇರ್ಪಡೆಯನ್ನು ವಿರೋಧಿಸಿದರೆ ಮುಸ್ಲಿಮರನ್ನು ಅಲ್ಲಿಂದಲೂ ಕಿತ್ತು ಹಾಕುವುದಕ್ಕೆ ಈ ಸರ್ಕಾರ ಹಿಂದೇಟು ಹಾಕಲಾರದು ಎಂದೇ ಹೇಳಬೇಕಾಗುತ್ತದೆ. ಸರ್ಕಾರದ ಈ ಮೀಸಲಾತಿ ನೀತಿ ಅತ್ಯಂತ ಅಮಾನವೀಯ, ಅತಾರ್ಕಿಕ, ಏಕಮುಖ ಮತ್ತು ಪಕ್ಷಪಾತಿತನದ್ದು ಅನ್ನುವುದರಲ್ಲಿ ಅನುಮಾನವಿಲ್ಲ.

ಗೋವು: ಮುಖ್ಯಮಂತ್ರಿಯನ್ನು ನಗೆಪಾಟಲು ಮಾಡುತ್ತಿರುವ ದುಷ್ಕರ್ಮಿಗಳು

 

3-4-2023

ಮಂಡ್ಯದ ಸಾತನೂರು ಬಳಿ ವಾಹನ ಚಾಲಕ ಇದ್ರೀಸ್ ಪಾಶಾ ಎಂಬವರ ಹತ್ಯೆಯಾಗಿದೆ. ವಾಹನದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಪುನೀತ್ ಕೆರೆಹಳ್ಳಿ ಎಂಬವನ ನೇತೃತ್ವದ ತಂಡ ಇದ್ರೀಸ್ ಪಾಶಾರನ್ನು ಹತ್ಯೆ ನಡೆಸಿದೆ ಎಂಬ ಆರೋಪ ಇದೆ. ಇದ್ರೀಸ್ ಪಾಶಾ ಜೊತೆ ಇದ್ದ ಇನ್ನಿಬ್ಬರು ಈ ದರೋಡೆ ತಂಡದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಇದ್ರೀಸ್ ಪಾಶಾರಿಗೆ ವಿದ್ಯುತ್ ಶಾಕ್ ಕೊಟ್ಟು, ಥಳಿಸಿ ಹತ್ಯೆ ನಡೆಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರತಿಭಟನೆಯನ್ನೂ ನಡೆಸಿದ್ದಾರೆ. ಇದೇವೇಳೆ, ಇದ್ರೀಸ್ ಪಾಶಾ ಅವರಿದ್ದ ವಾಹನವನ್ನು ಜಾನುವಾರು ಸಮೇತ ಪೊಲೀಸ್ ಠಾಣೆಯ ಮುಂಭಾಗಕ್ಕೆ ತರುತ್ತಿರುವ ವೀಡಿಯೋವನ್ನು ಸ್ವತಃ ಪುನೀತ್ ಕೆರೆಹಳ್ಳಿಯೇ ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾನೆ. ವಾಹನದಲ್ಲಿದ್ದವರು ತಪ್ಪಿಸಿಕೊಂಡಿದ್ದಾರೆ ಮತ್ತು ನಮ್ಮ ತಂಡದ ಮಂದಿ ಬೆನ್ನಟ್ಟಿದ್ದಾರೆ ಎಂದೂ ಆ ವೀಡಿಯೋದಲ್ಲಿ ಆತ ಹೇಳಿದ್ದಾನೆ. ಅಲ್ಲದೇ, ಕಾನೂನನ್ನು ಕೈಗೆತ್ತಿಕೊಂಡು ಜಾನುವಾರು ಸಾಗಾಟಗಾರರಿಗೆ ಹಿಂಸೆ ನೀಡಿದ, ಬ್ಯಾಟು-ವಿಕೆಟ್ ಹಿಡಿದುಕೊಂಡು ರಸ್ತೆಯಲ್ಲಿ ಗುಂಪಾಗಿ ಗಸ್ತು ತಿರುಗುತ್ತಿರುವ ವೀಡಿಯೋಗಳೂ ಆತನ ಫೇಸ್ ಬುಕ್ ಪುಟದಲ್ಲಿ ಧಾರಾಳ ಇವೆ. ಇದ್ರೀಸ್ ಪಾಶಾ ಹತ್ಯೆಯ ಬಳಿಕ ಅದನ್ನು ಡಿಲೀಟ್ ಮಾಡಿರು ವುದೇ ಆತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯವಾಗಿದೆ. ಅಂದಹಾಗೆ,

ಈ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಅದೇವೇಳೆ, ಕಸಾಯಿಖಾನೆಗಳನ್ನು ಏಲಂ ಮಾಡಿ ಇದೇ ಸರಕಾರ ಹಂಚುತ್ತಲೂ ಇದೆ. ಈ ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ಸಾಗಿಸಲು ಬೇಕಾದ ವ್ಯವಸ್ಥೆಯನ್ನೂ ಇದೇ ಸರಕಾರ ಮಾಡಿದೆ. ಅದಕ್ಕಾಗಿ ಪರವಾನಿಗೆಯನ್ನೂ ನೀಡುತ್ತಿದೆ. ಅಲ್ಲದೇ, ರಾಜ್ಯದಿಂದ ಗೋವಾ ಸಹಿತ ಇತರ ರಾಜ್ಯಗಳಿಗೆ ಮಾಂಸ ರಫ್ತನ್ನೂ ಮಾಡುತ್ತಿದೆ. ಜೊತೆಗೇ ರಾಜ್ಯದಲ್ಲಿ ಗೋಮಾಂಸ ಸೇವನೆಗೂ ನಿಷೇಧವನ್ನು ವಿಧಿಸಲಾಗಿಲ್ಲ. ಈ ಯಾವ ಪ್ರಕ್ರಿಯೆಯಲ್ಲೂ ಮುಸ್ಲಿಮರ ಒಂದು ಶೇಕಡಾ ಪಾತ್ರ ಕೂಡಾ ಇಲ್ಲ. ಮುಖ್ಯಮಂತ್ರಿ ಬೊಮ್ಮಾಯಿಯಿಂದ ಹಿಡಿದು ಪಶುಸಂಗೋಪನಾ ಸಚಿವ ಪ್ರಭು ಚವ್ವಾಣ್ ವರೆಗೆ ಈ ಸರ್ಕಾರದ ಸಚಿವ ಸಂಪುಟದಲ್ಲಿ ಯಾರೊಬ್ಬರೂ ಮುಸ್ಲಿಮರಿಲ್ಲ. ಗೋಹತ್ಯಾ ನಿಷೇಧ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸುವಲ್ಲಿಂದ ಹಿಡಿದು ಕಸಾಯಿಖಾನೆಗಳಿಗೆ ಪರವಾನಿಗೆ ನೀಡುವಲ್ಲಿವರೆಗೆ ಮತ್ತು ಜಾನುವಾರು ಸಾಗಾಟಕ್ಕೆ ಲೈಸನ್ಸ್ ನೀಡುವಲ್ಲಿಂದ ಹಿಡಿದು ಮಾಂಸ ರಫ್ತು ಮತ್ತು ರಾಜ್ಯದಲ್ಲಿ ಗೋಮಾಂಸ ಲಭ್ಯಗೊಳಿಸುವಲ್ಲಿ ವರೆಗೆ ಎಲ್ಲ ಪ್ರಕ್ರಿಯೆಯೂ ಈ ಬೊಮ್ಮಾಯಿ ಸರ್ಕಾರದ ಪೂರ್ತಿ ಕಣ್ಗಾವಲಲ್ಲಿ ನಡೆದಿದೆ. ಹೀಗಿರುವಾಗ, ಗೋರಕ್ಷಕರು ನಿಜಕ್ಕೂ ಪ್ರಶ್ನಿಸಬೇಕಾದದ್ದು ಯಾರನ್ನು? ಸರ್ಕಾರ ವಿತರಿಸಿದ ಪರವಾನಿಗೆಯನ್ನು ಪಡೆದುಕೊಂಡು ಜಾನುವಾರು ವ್ಯಾಪಾರ ಮಾಡುವ ಬಡ ಮುಸ್ಲಿಮರನ್ನೋ ಅಥವಾ ಬೊಮ್ಮಾಯಿ ಸರ್ಕಾರವನ್ನೋ?

ಕಳೆದ ಮೂರೂವರೆ ವರ್ಷಗಳಿಂದ ಮುಖ್ಯಮಂತ್ರಿ ಬೊಮ್ಮಾಯಿ ರಾಜ್ಯದ ವಿವಿಧ ಭಾಗಗಳಿಗೆ ಅನೇಕ ಬಾರಿ ಭೇಟಿ ನೀಡಿದ್ದಾರೆ. ಅಲ್ಲದೇ ತನ್ನದೇ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯರೂ ಇದ್ದಾರೆ. ಹಾಗೆಯೇ ಪ್ರಭು ಚವ್ವಾಣ್ ಕೂಡ ಎಲ್ಲೂ ಅಡಗಿಕೊಂಡಿಲ್ಲ. ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಆದರೆ, ಗೋರಕ್ಷಣೆಯ ಹೆಸರಲ್ಲಿ ಬಡಪಾಯಿ ಮುಸ್ಲಿಮರನ್ನು ಥಳಿಸಿ ಹತ್ಯೆ ನಡೆಸುವ ಗುಂಪು ಒಂದೇ ಒಂದು ಬಾರಿ ಮುಖ್ಯಮಂತ್ರಿ ಬೊಮ್ಮಾಯಿಯವರಲ್ಲಿ ಕಸಾಯಿಖಾನೆ ಮುಚ್ಚಿಸಿ ಎಂದು ಒತ್ತಾಯಿಸಿದ್ದಿದೆಯೇ? ಜಾನು ವಾರು ಸಾಗಾಟದ ವೇಳೆ ಅಕ್ರಮಗಳಾಗುತ್ತಿವೆ ಎಂಬ ದೂರನ್ನು ಮುಖ್ಯಮಂತ್ರಿಗಳಿಗೆ ಕೊಟ್ಟಿದ್ದಿದೆಯೇ? ಹೊರ ರಾಜ್ಯಗಳಿಗೆ ಮಾಂಸ ರಫ್ತು ಮಾಡಿ ಆದಾಯ ಗಳಿಸುವುದು ಪಾಪಕರ್ಮ ಎಂದು ಹೇಳಿದ್ದಿದೆಯೇ? ಗೋಹತ್ಯಾ ನಿಷೇಧ ಕಾನೂನು ಜಾರಿ ಮಾಡಿದ ಬಳಿಕವೂ ರಾಜ್ಯದಲ್ಲಿ ಗೋಮಾಂಸ ಲಭ್ಯಗೊಳಿಸಿರುವುದು ದ್ವಂದ್ವ ಎಂದು ನೆನಪಿಸಿದ್ದಿದೆಯೇ? ಮುಖ್ಯಮಂತ್ರಿಗಳನ್ನು ಬಿಡಿ, ಪ್ರಭು ಚವ್ವಾಣ್ರಲ್ಲಿ ಇಂಥದ್ದೊಂದು ಅರಿಕೆ ಮಾಡಿದ್ದಿದೆಯೇ? ಅವರು ಸಾಗುತ್ತಿರುವ ವಾಹನವನ್ನು ಅಡ್ಡಗಟ್ಟಿ ಅವರಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಿದೆಯೇ? ಗೋರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದೆವೆಂದು ಹೇಳುತ್ತಿರುವ ಯಾವ ಗುಂಪೂ ಇಂಥದ್ದೊಂದು ಮನವಿ ಸಲ್ಲಿಸಿದ್ದೇ ಇಲ್ಲ.


ನಿಜವಾಗಿ, ಈ ಗುಂಪಿಗೆ ಬೇಕಾಗಿರುವುದು ಗೋವುಗಳ ರಕ್ಷಣೆಯೋ ಅಕ್ರಮ ಜಾನುವಾರು ಸಾಗಾಟ ತಡೆಯೋ ಅಲ್ಲ. ಇದೊಂದು ದಂಧೆ. ಹಾಗೆಯೇ ಜನರ ಕಣ್ಣಲ್ಲಿ ಧರ್ಮರಕ್ಷಕರು ಮತ್ತು ಹೀರೋಗಳಾಗುವ ಕಡು ಕೆಟ್ಟ ವಾಂಛೆ. ಜಾನುವಾರು ಸಾಗಾಟದ ವಾಹನಗಳನ್ನು ತಡೆದು ಹಣ ವಸೂಲಿ ಮಾಡುವುದು ಮತ್ತು ಹಾಗೆ ಹಣ ನೀಡದಿದ್ದರೆ ಅಂಥವರನ್ನು ಥಳಿಸಿ ವೀಡಿಯೋ ಮಾಡಿ ಹಂಚಿಕೊಂಡು ಗೋರಕ್ಷಣೆಯ ಪೋಸು ಕೊಡುವುದು ಇವರ ಉದ್ದೇಶ. ಅಲ್ಲದೇ, ಪೊಲೀಸರು ಗೋರಕ್ಷಣೆಗಾಗಿ ಏನನ್ನೂ ಮಾಡುತ್ತಿಲ್ಲ ಎಂಬ ಸಂದೇಶವೂ ಇದರ ಜೊತೆಜೊತೆಗೇ ರವಾನೆಯಾಗುತ್ತದೆ ಮತ್ತು ತಮ್ಮ ಕಾನೂನುಬಾಹಿರ ಕೃತ್ಯಕ್ಕೆ ಜನರಿಂದ ಮೌನ ಸಮ್ಮತಿಯನ್ನು ಪಡಕೊಳ್ಳುವುದೂ ಸುಲಭವಾಗುತ್ತದೆ. ಇಂಥ ಆರೋಪಗಳು ಅನೇಕ ಬಂದಿವೆ. ವಾರಗಳ ಹಿಂದೆ ದ.ಕ.ಜಿಲ್ಲೆಯ ಮೂಡಬಿದಿರೆಯಲ್ಲಿ ಸಂಶುದ್ದೀನ್ ಎಂಬವರ ಮನೆಗೆ ದಾಳಿ ನಡೆಸಲಾಗಿತ್ತು. ಹೈನುಗಾರರಾದ ಅವರಲ್ಲಿ ಗೋವುಗಳಿದ್ದುವು. ಹಾಲನ್ನು ಡಿಪೋ ಮತ್ತು ಹತ್ತಿರದ ಮನೆಗಳಿಗೆ ಅವರು ಮಾರಾಟವನ್ನೂ ಮಾಡುತ್ತಿದ್ದರು. ಆದರೆ, ಅವರ ಮನೆಗೆ ದಾಳಿ ನಡೆಸಿದ ಗುಂಪು 2 ಲಕ್ಷ ರೂಪಾಯಿ ಬೇಡಿಕೆಯನ್ನಿಟ್ಟಿತು. ಅವರು ನಿರಾಕರಿಸಿದಾಗ ಪೊಲೀಸರಿಗೆ ದೂರು ನೀಡಿ ಅವರ ಗೋವುಗಳನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲಾಯಿತು. ಈ ಎಲ್ಲವನ್ನೂ ಕ್ಯಾಮರಾದ ಮುಂದೆಯೇ ಸಂಶುದ್ದೀನ್ ಹೇಳಿಕೊಂಡಿದ್ದಾರೆ. ಅಂದಹಾಗೆ,

ಎಲ್ಲೆಲ್ಲ ಸಕ್ರಮ ವ್ಯಾಪಾರ-ವ್ಯವಹಾರ ನಡೆಯುತ್ತೋ ಅಲ್ಲೆಲ್ಲ ಅಕ್ರಮಕ್ಕೂ ಅವಕಾಶ ತೆರೆದೇ ಇರುತ್ತದೆ. ಅಕ್ರಮವಾಗಿ ಅಕ್ಕಿಯೂ ಸಾಗಾಟವಾಗುತ್ತದೆ. ತರಕಾರಿಯೂ ಆಗುತ್ತದೆ. ಮರಳೂ ಆಗುತ್ತದೆ. ಜಾನುವಾರು ಸಾಗಾಟವನ್ನೂ ಈ ಪಟ್ಟಿಯಿಂದ ಹೊರಗಿಟ್ಟು ನೋಡಬೇಕಿಲ್ಲ. ಆದರೆ, ಇವನ್ನು ತಡೆಯಬೇಕಾದವರು ಯಾರು? ನಾಗರಿಕರ ಕರ್ತವ್ಯವೇನು? ಸಕ್ರಮ ಗುತ್ತಿಗೆ ಹಂಚಿಕೆ ಮಾಡಬೇಕಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅಕ್ರಮ ದಾರಿ ಹಿಡಿದಿರುವುದನ್ನು ಪೊಲೀಸರ ಗಮನಕ್ಕೆ ತಂದದ್ದು ಓರ್ವ ನಾಗರಿಕ. ಆತನೇನೂ ಗುಂಪು ಕಟ್ಟಿಕೊಂಡು ಬ್ಯಾಟು-ವಿಕೆಟ್ ಎತ್ತಿಕೊಂಡು ಈ ಕೆಲಸ ಮಾಡಿದ್ದಲ್ಲ. ಯಾರಿಗೆ ಸುದ್ದಿ ಮುಟ್ಟಿಸಬೇಕೋ ಅವರಿಗೆ ಮುಟ್ಟಿಸಿದರು. ಆ ಮೂಲಕ ಬಹುದೊಡ್ಡ ಹಗರಣವೊಂದು ಬಯಲಿಗೆ ಬಂತು. ಜವಾಬ್ದಾರಿಯುತ ನಾಗರಿಕರು ಮಾಡಬೇಕಾಗಿರುವುದು ಇದನ್ನು. ಅಕ್ರಮವಾಗಿ ಜಾನುವಾರು ಸಾಗಾಟ ನಡೆಯುತ್ತಿದೆ ಎಂಬ ಅನುಮಾನ ಬಂದರೆ ಆ ಬಗ್ಗೆ ಪೊಲೀಸರಿಗೆ ತಿಳಿಸುವುದನ್ನು ಬಿಟ್ಟು ಸ್ವಯಂ ಕಾರ್ಯಾಚರಣೆಗೆ ಇಳಿಯುವುದು ಅರಾಜಕರೆಯ ಸಂಕೇತವೇ ಹೊರತು ಅದು ಗೋರಕ್ಷಣೆಯೂ ಅಲ್ಲ, ಧರ್ಮ ಪ್ರೇಮವೂ ಅಲ್ಲ. ಹೀಗೆ ಮಾಡಬಯಸುವವರು ಗೋರಕ್ಷಣೆಯ ಹೊರತಾದ ಇತರ ಉದ್ದೇಶಗಳನ್ನು ಹೊಂದಿರುತ್ತಾರೆ. ಒಂದೋ ಮಾಡಾಳ್ ವಿರೂಪಾಕ್ಷಪ್ಪರಂತೆ ಅಕ್ರಮವಾಗಿ ಹಣ ಮಾಡುವ ದುರುದ್ದೇಶ ಅವರಲ್ಲಿ ಇರುವಂತಿದೆ ಅಥವಾ ಸಾರ್ವಜನಿಕವಾಗಿ ಐಡೆಂಟಿಟಿಯ ಹಪಾಹಪಿ ಇರುವಂತಿದೆ. ಇವು ಏನೇ ಇದ್ದರೂ ಅಂತಿಮವಾಗಿ ಇಂಥವರು ಒಂದಿಷ್ಟು ಕೇಸುಗಳನ್ನು ಜಡಿಸಿಕೊಂಡು ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ. ಇವರ ಈ ದುಷ್ಕೃತ್ಯವನ್ನು ರಾಜಕೀಯ ಲಾಭವನ್ನಾಗಿ ಪರಿವರ್ತಿಸಿಕೊಳ್ಳುವ ಇನ್ನಾವುದೋ ಪುಡಾರಿ ಆರಾಮವಾಗಿ ಅದ್ದೂರಿ ಕಾರಲ್ಲಿ ಓಡಾಡುತ್ತಾ ಸುಖವಾಗಿರುತ್ತಾರೆ. ಅವರ ಮಕ್ಕಳಾಗಲಿ ಅಥವಾ ಇಂಥ ಕ್ರೌರ್ಯಗಳನ್ನು ಬೆಂಬಲಿಸುವವರ ಮಕ್ಕಳಾಗಲಿ ಯಾರೂ ಇಂಥ ತಂಡಗಳಲ್ಲಿ ಇರುವುದೇ ಇಲ್ಲ. ಎಲ್ಲೋ ದೂರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಓದುತ್ತಾ ಅವರು ಸುರಕ್ಷಿತವಾಗಿರುತ್ತಾರೆ ಮತ್ತು ಈ ಬಗ್ಗೆ ಪ್ರಶ್ನೆಗಳೇಳದಂತೆ ಇವರೆಲ್ಲ ಜಾಣತನದಿಂದ ತಪ್ಪಿಸಿಕೊಳ್ಳುತ್ತಲೂ ಇರುತ್ತಾರೆ.

ಇದ್ರಿಸ್ ಪಾಶಾ ಹತ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಇದು ಸರ್ಕಾರದ ಕಾನೂನು ಸುವ್ಯವಸ್ಥೆಗೆ ಸಾರಿದ ಸವಾಲು. ಬೀದಿಯಲ್ಲಿ ನಿಂತ ದುಷ್ಕರ್ಮಿಗಳ ಗುಂಪು ಈ ಸರಕಾರವನ್ನು ಅಸಮರ್ಥ ಎಂದು ರಾಜಾರೋಷವಾಗಿ ಸಾರಿದೆ. ಇದು ಸರಕಾರಕ್ಕೆ ಅವಮಾನ. ಮೃತ ಇದ್ರೀಸ್ ಕುಟುಂಬಕ್ಕೆ ಪರಿಹಾರವನ್ನು ನೀಡುವ ಮೂಲಕ ಮತ್ತು ದುಷ್ಕರ್ಮಿಗಳ ವಿರುದ್ಧ ಕಠಿಣ ಸೆಕ್ಷನ್‌ಗಳಡಿ ಕಾನೂನು ಕ್ರಮ ಜರುಗಿಸುವ ಮೂಲಕ ತಾನು ನ್ಯಾಯದ ಜೊತೆಗಿದ್ದೇನೆ ಎಂದು ರಾಜ್ಯ ಸರಕಾರ ಘೋಷಿಸಬೇಕು. ಬೊಮ್ಮಾಯಿಯವರಿಗೆ ಕಡೆಯ ಅವಕಾಶ ಇದು.