Friday, 21 June 2024

ಹಾಜಿ ಯಾರು?





ಹಾಜಿ ಯಾರು? ಈ ಪ್ರಶ್ನೆಗೆ ಉತ್ತರ ಸುಲಭ ಇದೆ. ಯಾರು ಹಜ್ಜ್ ನಿರ್ವಹಣೆಗಾಗಿ ಮಕ್ಕಾದಲ್ಲಿ ಸೇರುತ್ತಾರೋ ಅವರೇ ಹಾಜಿಗಳು. ಆದರೆ,  ಹಾಜಿ ಎಂದರೆ ಇಷ್ಟು ಮಾತ್ರವೇ? ಹೀಗೆ ಒಂದು ವಾಕ್ಯದಲ್ಲಿ ಹೇಳಿ ಮುಗಿಸಬಹುದಾದ ಒಂದು ಪರಿಕಲ್ಪನೆಯೇ ಹಾಜಿ? ಓರ್ವ ವ್ಯಕ್ತಿ  ಇರುವುದೆಲ್ಲವ ಬಿಟ್ಟು ಯಾಕೆ ಹಜ್ಜ್ ಗೆ  ಹೋಗಬೇಕು?

ಭಾರತದಿಂದ ಮಕ್ಕಾಕ್ಕೆ ಬಹಳ ದೂರವೇನೂ ಇಲ್ಲ. ವಿಮಾನದಲ್ಲಿ ಕುಳಿತು ಒಂದು ಪುಟ್ಟ ನಿದ್ದೆ  ಮಾಡಿ ಎಚ್ಚರಗೊಳ್ಳುವಷ್ಟೇ ದೂರ. ಆದರೆ ಈ  ಸಣ್ಣ ಪ್ರಯಾಣಕ್ಕೆ ಓರ್ವ ಹಾಜಿ ಮಾಡಿಕೊಳ್ಳುವ ತಯಾರಿಗಳು ಏನೇನು? ವರ್ಷಗಳ ಮೊದಲೇ ಇಂಥದ್ದೊಂದು  ಪ್ರಯಾಣದ ಕನಸು  ಕಾಣುತ್ತಾರೆ. ಅರ್ಜಿ ಹಾಕುವ ಪ್ರಕ್ರಿಯೆಯೂ ಆರಂಭಗೊಳ್ಳುತ್ತದೆ. ಒಮ್ಮೆ ಅರ್ಜಿ ಸ್ವೀಕೃತವಾಗಿ ಹಜ್ಜ್ ನಿರ್ವಹಿಸುವವರ ಪಟ್ಟಿಯಲ್ಲಿ ತನ್ನ ಹೆಸರೂ  ಬರಲಿ ಎಂದು ಆಶೆಯಿಂದ ಕಾಯುತ್ತಾರೆ. ಒಮ್ಮೆ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿತೆಂದರೆ ಅತೀವ ಖುಷಿ ಪಡುತ್ತಾರೆ. ಆಗಿನಿಂದಲೇ ಅವರ  ಮಕ್ಕಾ ಯಾತ್ರೆ ಮಾನಸಿಕವಾಗಿ ಆರಂಭಗೊಳ್ಳುತ್ತದೆ. ತಾನು ಯಾರೊಂದಿಗೆಲ್ಲ ಒರಟಾಗಿ ನಡಕೊಂಡಿದ್ದೇನೆ, ಯಾರಲ್ಲಿ ಸಾಲ ಮಾಡಿದ್ದೇನೆ,  ಯಾರ ಮನಸ್ಸನ್ನು ನೋಡಿಯಿಸಿದ್ದೇನೆ.. ಎಂದೆಲ್ಲ ಅವಲೋಕನ ನಡೆಯತೊಡಗುತ್ತದೆ. ಅಂಥವರನ್ನು ಖುದ್ದಾಗಿ ಕಂಡೋ ಇತರ ಸೌಲಭ್ಯಗಳ  ಮೂಲಕವೋ ಸಂಪರ್ಕಿಸಿಯೋ ಕ್ಷಮಿಸುವಂತೆ ಮನವಿ ಮಾಡಿಕೊಳ್ಳುತ್ತಾರೆ. ಹಜ್ಜ್ ಗಾಗಿ  ತೆರಳುವ ದಿನಾಂಕ ಹತ್ತಿರ ಬರುತ್ತಿರುವಂತೆಯೇ ಮನಸ್ಸು  ಭಾರವಾಗತೊಡಗುತ್ತದೆ. ಸಾಲದಿಂದ ಮುಕ್ತವಾಗುವುದು ಮತ್ತು ತನ್ನ ಅನುಪಸ್ಥಿತಿಯಲ್ಲಿ ಮನೆ ನಿರ್ವಹಣೆಗಾಗಿ ಬೇಕಾದ ಏರ್ಪಾಡು  ಮಾಡುವುದೂ ನಡೆಯುತ್ತದೆ. ಹಜ್ಜ್ ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾರೆ. ಆ ಮೂಲಕ ತನ್ನ ಈ ಇಡೀ ಪ್ರಕ್ರಿಯೆಯಲ್ಲಿ ಸಣ್ಣ  ದೋಷವೂ ಉಂಟಾಗಬಾರದೆಂಬ ಎಚ್ಚರಿಕೆ ವಹಿಸತೊಡಗುತ್ತಾರೆ. ಇವೆಲ್ಲ ಹಜ್ಜ್ ಗೆ  ತೆರಳುವುದಕ್ಕಿಂತ ಮೊದಲಿನ ಸಿದ್ಧತೆಗಳಾದರೆ ತೆರಳಿದ  ಬಳಿಕವಂತೂ ವ್ಯಕ್ತಿ ಸಂಪೂರ್ಣ ಬದಲಾಗುತ್ತಾರೆ. ಎಲ್ಲಿಯ ವರೆಗೆಂದರೆ, ತಾನು ಆವರೆಗೆ ಇಷ್ಟಪಟ್ಟು ಧರಿಸುತ್ತಿದ್ದ ಬಟ್ಟೆಗಳಿಂದಲೇ  ಮುಕ್ತವಾಗುವಷ್ಟು. ಹೊಲಿಗೆ ಇಲ್ಲದ ಎರಡು ತುಂಡು ಬಿಳಿ ಬಟ್ಟೆಯ ಹೊರತು ಪುರುಷನ ಮೈಮೇಲೆ ಇನ್ನಾವುದೂ ಇರುವುದಿಲ್ಲ.  ಒಂದುರೀತಿಯಲ್ಲಿ, ಐಡೆಂಟಿಟಿ ಇಲ್ಲದ ವ್ಯಕ್ತಿ. ಎರಡು ತುಂಡು ಬಟ್ಟೆ ಧರಿಸಿದ ಲಕ್ಷಾಂತರ ಜನರ ನಡುವೆ ಆತ ಒಂದು ಬಿಂದು ಮಾತ್ರ. ಸೌದಿಯ  ರಾಜಕುಮಾರನಾದರೂ ಇರಾನಿನ ಖೊಮೇನಿ ಆದರೂ ಅಥವಾ ದೆಹಲಿ ಶಾಹಿ ಇಮಾಮೇ ಆದರೂ ಎಲ್ಲರೂ ಒಂದು ಬಿಂದು ಮಾತ್ರ.  ನಿಜವಾಗಿ,

ಹಜ್ಜ್ ನಿರ್ವಹಣೆಗಾಗಿ ಭಾರತದಿಂದ ಮಕ್ಕಾಕ್ಕೆ ತೆರಳುವ ವ್ಯಕ್ತಿ ಈ ಪ್ರಯಾಣಕ್ಕಿಂತ ಮೊದಲು ಇದಕ್ಕಿಂತ ಸಾವಿರ ಕಿಲೋಮೀಟರ್ ದೂರದ  ರಾಷ್ಟ್ರಕ್ಕೆ ಪ್ರಯಾಣಿಸಿರಬಹುದು. ಆದರೆ, ಮಕ್ಕಾ ಪ್ರಯಾಣಕ್ಕಾಗಿ ಮಾಡಿದ ಸಿದ್ಧತೆಯ ಒಂದು ಶೇಕಡಾ ಸಿದ್ಧತೆಯನ್ನೂ ಅದಕ್ಕೆ ಮಾಡಿರುವ ಸಾಧ್ಯತೆ  ಕಡಿಮೆ. ಆದ್ದರಿಂದಲೇ, ಹಾಜಿ ಯಾರು ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ಹಾಜಿ ಎಂಬುದು ಒಂದು ವಾಕ್ಯದಲ್ಲಿ ಮುಗಿಸುವ ವಿಷಯವಲ್ಲ.  ಅದೊಂದು ಮಾಡೆಲ್. ಹಜ್ಜ್ ನಿರ್ವಹಿಸುವ ವ್ಯಕ್ತಿಯ ಎಲ್ಲ ಪಾಪಗಳನ್ನೂ ಅಲ್ಲಾಹನು ಕ್ಷಮಿಸುತ್ತಾನೆ ಮತ್ತು ಆಗಷ್ಟೇ ಭೂಮಿಗೆ ಬಂದ ಶಿಶುವನಷ್ಟೇ ಅವರು ಶುಭ್ರವಾಗಿರುತ್ತಾರೆ ಎಂದು ಪ್ರವಾದಿ(ಸ) ಹೇಳಿದ್ದಾರೆ. ಆದ್ದರಿಂದ ಹಜ್ಜ್ ನಿರ್ವಹಣೆಗಾಗಿ ತೆರಳುವ ಹಾಜಿ ಮತ್ತು ಹಜ್ಜ್  ನಿರ್ವಹಿಸಿ ಮರಳುವ ಹಾಜಿ- ಇಬ್ಬರೂ ಒಂದೇ ಅಲ್ಲ. ತೆರಳುವ ಹಾಜಿ ತನ್ನ ಐಡೆಂಟಿಟಿಯಿಂದ  ಕಳಚಿಕೊಂಡಿರುವುದಿಲ್ಲ. ಆದರೆ, ಮರಳುವ  ಹಾಜಿಗೆ ಐಡೆಂಟಿಟಿಯನ್ನೇ ಕಳಚಿಕೊಂಡ ಮತ್ತು ಆ ಕ್ಷಣದ ರೋಮಾಂಚನ, ಭಾವುಕತೆ, ಒಂಟಿತನ ಮತ್ತು ಆಧ್ಯಾತ್ಮಿಕತೆಯ ಪರಾಕಾಷ್ಟೆಯ ಅನುಭವವಾಗಿರುತ್ತದೆ. ಅಲ್ಲದೇ, ಹೀಗೆ ತೆರಳುವುದು ಒಂದು ಬಾರಿ ಮಾತ್ರ ಕಡ್ಡಾಯ ಎಂಬುದೂ ಬಹಳ ಮುಖ್ಯ. ಹಾಗಂತ,

ಹಜ್ ನಿಂದ  ಮರಳಿದ ಬಳಿಕವೂ ಮತ್ತೊಂದು ಹಜ್ಜ್ ನಿರ್ವಹಿಸುವುದಕ್ಕೆ ಬೇಕಾಗುವಷ್ಟು ಅವರಲ್ಲಿ ಹಣ ಇರಬಹುದು, ಆರೋಗ್ಯವೂ  ಇರಬಹುದು. ಆದರೂ ಮತ್ತೊಂದು ಬಾರಿ ಹೋಗಿ ವಿನೀತವಾಗುವುದು ಅವರ ಮೇಲೆ ಕಡ್ಡಾಯವಲ್ಲ. ಅಂದರೆ, ಹಾಜಿಯ ಚಟುವಟಿಕೆಯ  ಕೇಂದ್ರ ಮಕ್ಕಾ ಅಲ್ಲ ಎಂದೇ ಇದರರ್ಥ. ಹಜ್ಜ್ ನಿರ್ವಹಿಸಿ ಸಕಲ ಆಧ್ಯಾತ್ಮಿಕ ಚೈತನ್ಯವನ್ನೂ ಪಡೆದು ಮರಳಿದ ಬಳಿಕ ಹಾಜಿ ತಾನಿರುವ ಪ್ರದೇಶವನ್ನು ಮಕ್ಕಾ ಮಾಡಬೇಕು ಅಥವಾ ಶಾಂತಿಯ ಕೇಂದ್ರ ಮಾಡಬೇಕು. ಲಕ್ಷಾಂತರ ಹೆಣ್ಣು ಮತ್ತು ಗಂಡು ಒಂದೇ ಕಡೆ ಸೇರಿಯೂ ಯಾವ  ಕೆಡುಕೂ ನಡೆಯದ, ಕಳ್ಳತನ, ಮೋಸ, ಅನ್ಯಾಯ, ಹಲ್ಲೆ, ಹತ್ಯೆಗಳಂತಹ ಸರ್ವ ಕೆಡುಕುಗಳಿಂದಲೂ ಮುಕ್ತವಾದ ಆ ಮಕ್ಕಾದ ವಾತಾವರಣವನ್ನು ತನ್ನೂರಲ್ಲೂ ‘ಹಾಜಿ’ ಸಾಧ್ಯವಾಗಿಸಬೇಕು. ಅದಕ್ಕಾಗಿ ಮುಂದಿನ ಜೀವನದಲ್ಲಿ ಸರ್ವಸಾಧ್ಯ ಪ್ರಯತ್ನ ನಡೆಸಬೇಕು.

ಇವರೇ ಹಾಜಿ.



7 ಲಕ್ಷ ಯಹೂದಿಯರನ್ನು ಅವಲಂಬಿಸಿದೆಯೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ?


ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯ ಕುರಿತಂತೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆ ಮತ್ತು ಪರಾಮರ್ಶೆಗಳು ನಡೆಯುತ್ತಿವೆ. ಇಸ್ರೇಲ್ ಮತ್ತು  ಫೆಲೆಸ್ತೀನ್ ನಡುವಿನ ಸಂಘರ್ಷವನ್ನು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ  ಸ್ಥಾಪನೆಯಿಂದ ಮಾತ್ರ ಪರಿಹರಿಸಲು ಸಾಧ್ಯ ಎಂಬ ಅಭಿಪ್ರಾಯಕ್ಕೆ ದಿನೇ ದಿ ನೇ ಬಲ ಬರುತ್ತಿದೆ. ಫೆಲೆಸ್ತೀನನ್ನು ಸ್ವತಂತ್ರ ರಾಷ್ಟ್ರವಾಗಿ ಅಂಗೀಕರಿಸುವ ರಾಷ್ಟ್ರಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮೊನ್ನೆ ಮೊನ್ನೆಯಂತೆ  ಐರ್ಲ್ಯಾಂಡ್, ನಾರ್ವೆ ಮತ್ತು ಸ್ಪೈನ್‌ಗಳು ಫೆಲೆಸ್ತೀನ್‌ಗೆ ಸ್ವತಂತ್ರ ರಾಷ್ಟ್ರದ ಮಾನ್ಯತೆ ನೀಡಿವೆ. ಫೆಲೆಸ್ತೀನ್ ಎಂಬ ವಿಶಾಲ ಭೂಭಾಗದಲ್ಲಿ 1948ರಲ್ಲಿ  ಇಸ್ರೇಲ್ ಎಂಬ ಸ್ವತಂತ್ರ ರಾಷ್ಟ್ರ ಸ್ಥಾಪನೆಯಾಗುವಾಗ ಅದರ ವ್ಯಾಪ್ತಿ ತೀರಾ ಕಿರಿದಾಗಿತ್ತು ಮತ್ತು ಜನಸಂಖ್ಯೆಯೂ ಕಡಿಮೆ ಇತ್ತು. ಆದರೆ ಇವತ್ತು  ಇಡೀ ಫೆಲೆಸ್ತೀನನ್ನು ಇಸ್ರೇಲ್ ಆಳುತ್ತಿದೆ ಮತ್ತು ಜಗತ್ತಿನಾದ್ಯಂತ ಇರುವ ಯಹೂದಿಯರನ್ನು ತನ್ನಲ್ಲಿಗೆ ಕರೆಸಿಕೊಂಡು ಜನಸಂಖ್ಯೆಯನ್ನು ಅ ಪಾರ ಪ್ರಮಾಣದಲ್ಲಿ ವೃದ್ಧಿಸಿಕೊಂಡಿದೆ. ನಿಜವಾಗಿ,


ಇಸ್ರೇಲ್ ಮತ್ತು ಫೆಲೆಸ್ತೀನ್ ಎಂಬ ಎರಡು ರಾಷ್ಟ್ರಗಳ ಪರಿಕಲ್ಪನೆ 1948ರಿಂದ ಆರಂಭವಾದುದಲ್ಲ. ಫೆಲೆಸ್ತೀನನ್ನು ಆಳುತ್ತಿದ್ದ ಬ್ರಿಟಿಷರು  1936ರಲ್ಲೇ  ಈ ಕುರಿತಂತೆ ಲಾರ್ಡ್ ವಿಲಿಯಂ ರಾಬರ್ಟ್ ಪೀಲ್ ಎಂಬವರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿದ್ದರು. ಆ ಆಯೋಗವು  ಸ್ವತಂತ್ರ ಫೆಲೆಸ್ತೀನ್ ಮತ್ತು ಇಸ್ರೇಲ್ ರಾಷ್ಟ್ರದ ಸ್ಥಾಪನೆಯ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು. ಪಶ್ಚಿಮ ದಂಡೆ, ಗಾಝಾ ಮತ್ತು ಸೆರೇವ್  ಮರುಭೂಮಿಯನ್ನು ಒಳಗೊಂಡ ಫೆಲೆಸ್ತೀನ್ ರಾಷ್ಟ್ರ ನಿರ್ಮಿಸುವುದು ಈ ಪ್ರಸ್ತಾವನೆಯಲ್ಲಿ ಸೇರಿತ್ತು. ಎರಡನೇ ವಿಶ್ವಯುದ್ಧದ ಬಳಿಕ ಫೆಲೆಸ್ತೀನ್  ವಿಷಯದಲ್ಲಿ ವಿಶೇಷ ಆಯೋಗವನ್ನು ವಿಶ್ವಸಂಸ್ಥೆ ರೂಪಿಸಿತು. ಇದೂ ಕೂಡಾ ಫೆಲೆಸ್ತೀನ್ ಭೂಭಾಗವನ್ನು ಎರಡಾಗಿ ವಿಂಗಡಿ ಸುವ ಉದ್ದೇಶವನ್ನೇ ಹೊಂದಿತ್ತು. ಈ ಆಯೋಗದ ಪ್ರಸ್ತಾವನೆಗೆ ಅರಬ್ ರಾಷ್ಟ್ರಗಳಷ್ಟೇ ಅಲ್ಲ, ಭಾರತವೂ ವಿರೋಧವನ್ನು ವ್ಯಕ್ತಪಡಿಸಿತ್ತು. ಈ ಪ್ರಸ್ತಾವನೆಯ  ಪ್ರಕಾರ ಒಟ್ಟು ಫೆಲೆಸ್ತೀನ್ ಭೂಭಾಗದ 32% ಭೂಮಿಯಲ್ಲಿ ಇಸ್ರೇಲ್ ರಾಷ್ಟ್ರ ಸ್ಥಾಪನೆಯಾಗಬೇಕಿತ್ತು. ಈ ನಡುವೆ 1948 ಮೇ 14ರಂದು  ಏಕಾಏಕಿ ಸ್ವತಂತ್ರ ಇಸ್ರೇಲ್ ರಾಷ್ಟ್ರ ಸ್ಥಾಪನೆಯ ಘೋಷಣೆಯಾಯಿತು. ಇದರ ವಿರುದ್ಧ ಅರಬ್ ರಾಷ್ಟ್ರಗಳು ಸಿಡಿದು ನಿಂತವು. 1949ರಲ್ಲಿ ಪ್ರಥಮ  ಇಸ್ರೇಲ್-ಅರಬ್ ಯುದ್ಧ ನಡೆಯಿತು ಮತ್ತು ಅಮೇರಿಕ ಮತ್ತು ಅದರ ಬೆಂಬಲಿಗರ ನೆರವಿನಿಂದ ಇಸ್ರೇಲ್ ಆ ಯುದ್ಧದಲ್ಲಿ ಜಯಶಾಲಿಯಾಯಿತು. ಮಾತ್ರವಲ್ಲ, ವಿಶ್ವಸಂಸ್ಥೆ ಪ್ರಸ್ತಾಪ ಮಾಡಿದ್ದ 32% ಭೂಮಿಯ ಬದಲಾಗಿ ಇನ್ನೂ 22% ಹೆಚ್ಚುವರಿ ಭೂಮಿಯನ್ನು ಅದು ವಶ ಪಡಿಸಿಕೊಂಡಿತು. 1967ರ ಎರಡನೇ ಇಸ್ರೇಲ್-ಅರಬ್ ಯುದ್ಧವಂತೂ ಫೆಲೆಸ್ತೀನ್‌ಗೆ ಇನ್ನಷ್ಟು ಹಾನಿಯನ್ನು ಉಂಟು ಮಾಡಿತು. ಆರು ದಿನಗಳ  ಕಾಲ ನಡೆದ ಈ ಯುದ್ಧದಲ್ಲಿ ಪಶ್ಚಿಮ ದಂಡೆ, ಪಶ್ಚಿಮ ಜೆರುಸಲೇಮ್, ಗಾಝಾ ಪಟ್ಟಿ ಮತ್ತು ಸಿರಿಯದ ವಶದಲ್ಲಿದ್ದ ಗೋಲಾನ್ ಬೆಟ್ಟವನ್ನೂ ವಶಪಡಿಸಿಕೊಂಡು ಇಸ್ರೇಲ್ ವಿಶಾಲ ರಾಷ್ಟ್ರವಾಗಿ ಮಾರ್ಪಟ್ಟಿತು. ಈ ಯುದ್ಧವನ್ನು ಗೆಲ್ಲಿಸಿಕೊಟ್ಟದ್ದೂ ಅಮೇರಿಕ ಮತ್ತು ಅದರ  ಮಿತ್ರ ರಾಷ್ಟ್ರಗಳೇ.

 1993 ಮತ್ತು 1995ರಲ್ಲಿ ಇಸ್ರೇಲ್ ಪ್ರಧಾನಿ ಇಝಾಕ್ ರಬಿನ್ ಮತ್ತು ಫೆಲೆಸ್ತೀನ್ ಲಿಬರೇಶನ್ ಆರ್ಗನೈಝೇಶನ್‌ನ ಮುಖ್ಯಸ್ಥ  ಯಾಸಿರ್ ಅರಫಾತ್‌ರ ನಡುವೆ ಐತಿಹಾಸಿಕ ಓಸ್ಲೋ ಒಪ್ಪಂದ ನಡೆಯಿತು. ಎರಡು ಸ್ವತಂತ್ರ ರಾಷ್ಟ್ರಗಳ ಸ್ಥಾಪನೆಯನ್ನು ಅನುಮೋದಿಸಿದ ಒಪ್ಪಂದ ಎಂಬ ನೆಲೆಯಲ್ಲಿ ಇದಕ್ಕೆ ಬಹಳ ಪ್ರಾಮುಖ್ಯತೆ ಲಭಿಸಿತು. ದುರಂತ ಏನೆಂದರೆ,

ಈ ಒಪ್ಪಂದವನ್ನು ಪ್ರಬಲವಾಗಿ ವಿರೋಧಿಸಿದ್ದು ಯಹೂದಿ ಉಗ್ರವಾದಿಗಳು. ಈ ಒಪ್ಪಂದಕ್ಕೆ ಸಹಿ ಹಾಕಿದ ಪ್ರಧಾನಿ ಇಝಾಕ್ ರಬಿನ್‌ರನ್ನು  1995ರಲ್ಲಿ ಈ ಉಗ್ರವಾದಿಗಳು ಹತ್ಯೆ ಮಾಡಿದರು. ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಅವರ ಲೇಬರ್ ಪಾರ್ಟಿಯನ್ನು ಇಸ್ರೇಲಿನ  ಮತದಾರರು ಸೋಲಿಸಿದರಲ್ಲದೇ ಬಲಪಂಥೀಯ ತೀವ್ರವಾದಿ ನಿಲುವಿನ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷವನ್ನು ಗೆಲ್ಲಿಸಿದರು.  ಆದರೆ, ಓಸ್ಲೋ ಒಪ್ಪಂದಕ್ಕೆ ಸಹಿ ಹಾಕಿದ ಯಾಸಿರ್ ಅರಫಾತ್‌ರ ಬಗ್ಗೆ ಫೆಲೆಸ್ತೀನ್‌ನಲ್ಲಿ ವಿರೋಧ ಇತ್ತಾದರೂ ಮತ್ತು ವಿಶೇಷವಾಗಿ ಹಮಾಸ್  ಈ ಒಪ್ಪಂದವನ್ನು ತಿರಸ್ಕರಿಸಿತ್ತಾದರೂ ಅದು ಎಂದೂ ಯಾಸಿರ್ ಅರಫಾತ್‌ರನ್ನು ಹತ್ಯೆ ಮಾಡುವುದು ಬಿಡಿ, ಅವರಿಗೆ ಸಣ್ಣ ಮಟ್ಟದ ಹಲ್ಲೆ   ಮಾಡುವುದಕ್ಕೂ ಮುಂದಾಗಲಿಲ್ಲ. ಒಂದುರೀತಿಯಲ್ಲಿ, ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯಾಗಲೇಬಾರದೆಂಬ ಉಗ್ರ ನಿಲುವಿನ ಯಹೂದಿಗಳಿಗೆ  ಹೋಲಿಸಿದರೆ ಫೆಲೆಸ್ತೀನಿಯರು ಉದಾರವಾದಿಗಳಾಗಿದ್ದರು. 1967ಕ್ಕಿಂತ ಮೊದಲಿನ ಗಡಿ ರೇಖೆಯ ಆಧಾರದಲ್ಲಿ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ  ಸ್ಥಾಪನೆಗೆ ಅವರು ಸಿದ್ಧವಾಗಿದ್ದರು. ಆದರೆ ಇಸ್ರೇಲ್‌ನಲ್ಲಿ ಇಂಥ ವಾತಾವರಣವೇ ಇದ್ದಿರಲಿಲ್ಲ. ಫೆಲೆಸ್ತೀನ್ ಭೂಮಿಯಲ್ಲಿ ಇಸ್ರೇಲ್ ರಾಷ್ಟ್ರವೊಂದೇ  ಇರಬೇಕು ಮತ್ತು ಫೆಲೆಸ್ತೀನಿಯರು ತಮ್ಮಿಂದ ಆಳಿಸಿಕೊಂಡಿರಬೇಕು ಎಂಬ ಮನಸ್ಥಿತಿ ನೇತನ್ಯಾಹು ಮತ್ತು ಅವರನ್ನು ಬೆಂಬಲಿಸುವವರದ್ದಾಗಿದೆ.  ಆದ್ದರಿಂದ, ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣಕ್ಕೆ ಅಡ್ಡಿಯಾಗಿರುವುದು ಹಮಾಸೂ ಅಲ್ಲ ಅಥವಾ ಗಾಝಾದ ಸಶಸ್ತ್ರ  ಹೋರಾಟಗಾರರೂ  ಅಲ್ಲ, ತನ್ನ ಪಕ್ಕ ಇನ್ನೊಂದು ರಾಷ್ಟ್ರವನ್ನು ಇಸ್ರೇಲ್‌ನ ರಾಜಕೀಯ ನಾಯಕರು ಬಯಸುತ್ತಿಲ್ಲ. ಒಂದುವೇಳೆ, ಅವರು ಒಪ್ಪಿಕೊಂಡರೆ ಉಗ್ರವಾದಿಗಳ ಬೆದರಿಕೆಯಡಿ ಅವರು ಬದುಕಬೇಕಾಗುತ್ತದೆ. ಇನ್ನೊಂದು ಸಂಗತಿ ಏನೆಂದರೆ,

ಇಸ್ರೇಲ್‌ಗೆ ನಿರ್ದಿಷ್ಟ ಗಡಿಯೆಂಬುದೇ ಇಲ್ಲ. ಅದು ವಿಸ್ತರಣಾವಾದಿ ದೇಶ. 1948ರಲ್ಲಿ ಸ್ಥಾಪನೆಯಾಗುವಾಗಲೇ ಅದು ವಿಶ್ವಸಂಸ್ಥೆಯ ಭೂ ನಕ್ಷೆಯನ್ನು ಉಲ್ಲಂಘಿಸಿತ್ತು. ವಿಶ್ವಸಂಸ್ಥೆ ಹೇಳಿದುದಕ್ಕಿಂತ ಹೆಚ್ಚಿನ ಭೂಮಿಯನ್ನು ಆಗಲೇ ಅದು ವಶಪಡಿಸಿಕೊಂಡಿತ್ತು. 1967ರಲ್ಲಂತೂ ಫೆಲೆಸ್ತೀ ನಿನ ಐತಿಹಾಸಿಕ ಭೂಪ್ರದೇಶವನ್ನೆಲ್ಲ ವಶಪಡಿಸಿಕೊಂಡಿತು. 1970ರಿಂದ ಫೆಲೆಸ್ತೀನಿ ಭೂಭಾಗದಲ್ಲಿ ಅದು ಯಹೂದಿಯರಿಗಾಗಿ ಅಕ್ರಮ  ವಸತಿಯನ್ನು ನಿರ್ಮಿಸುತ್ತಲೇ ಬಂದಿದೆ. ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರವು 1967ರ ಮೊದಲಿನ ಗಡಿ ಗುರುತಿನಂತೆ ಆಗಬೇಕು ಎಂದು ಫೆಲೆಸ್ತೀನಿಯರು ಆಗ್ರಹಿಸುತ್ತಿದ್ದರೂ ಇಸ್ರೇಲ್ ಅದಕ್ಕೆ ಒಪ್ಪಿಕೊಳ್ಳು ತ್ತಿಲ್ಲ. ಯಾಕೆಂದರೆ, 1970ರಿಂದ ಅದು ಫೆಲೆಸ್ತೀನ್ ಭೂಭಾಗವಾದ ಪಶ್ಚಿಮ ದಂಡೆ  ಮತ್ತು ಪಶ್ಚಿಮ ಜೆರುಸಲೇಮ್‌ನಲ್ಲಿ 7 ಲಕ್ಷ ಯಹೂದಿಯರನ್ನು ಅಕ್ರಮವಾಗಿ ತಂದು ಕೂರಿಸಿದೆ. ಒಂದುವೇಳೆ, 1967ರ ಮೊದಲಿನ ಸ್ಥಿತಿಗೆ  ಇಸ್ರೇಲ್ ಮರಳಬೇಕಾದರೆ ಮತ್ತು ಅದೇ ಗಡಿ ಗುರುತಿನೊಂದಿಗೆ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಗೆ ಒಪ್ಪಿಕೊಳ್ಳಬೇಕಾದರೆ ಈ 7 ಲಕ್ಷ ಯಹೂದಿಯರನ್ನು ಹೊರದಬ್ಬಬೇಕಾಗುತ್ತದೆ ಅಥವಾ 1967ರ ಮೊದಲಿದ್ದ ಇಸ್ರೇಲ್ ಎಂಬ ಭೂಭಾಗದೊಳಗೆ ಇವರನ್ನೆಲ್ಲಾ ಕರೆಸಿಕೊಳ್ಳಬೇಕಾಗುತ್ತದೆ.  ಆದರೆ, ಇದು ಸುಲಭ ಅಲ್ಲ. ಈ 7 ಲಕ್ಷ ಜನಸಂಖ್ಯೆ ಎಂಬುದು ಇಸ್ರೇಲ್ ರಾಜಕೀಯದ ಮಟ್ಟಿಗೆ ಅತ್ಯಂತ ಪ್ರಭಾವಶಾಲಿ ಸಂಖ್ಯೆಯಾಗಿದೆ.  ಇವರ ವಿರೋಧವನ್ನು ಕಟ್ಟಿಕೊಳ್ಳಲು ಇಸ್ರೇಲಿನ ಯಾವುದೇ ರಾಜಕೀಯ ಪಕ್ಷ ಸಿದ್ಧವಾಗಲಾರದು. ಹಾಗೆಯೇ,

1948ರಲ್ಲಿ ಇಸ್ರೇಲ್ ಸ್ಥಾಪನೆಯ ಸಂದರ್ಭದಲ್ಲಿ ಯಹೂದಿ ಸಶಸ್ತ್ರ  ದಳವು ವ್ಯಾಪಕ ಹಿಂಸಾಚಾರ ನಡೆಸಿತ್ತಲ್ಲದೇ, ಲಕ್ಷಾಂತರ ಫೆಲೆಸ್ತೀನಿಯರನ್ನು  ತಮ್ಮ ನೆಲದಿಂದ ಓಡಿಸಿ ವಿಶ್ವಸಂಸ್ಥೆ ನಿಗದಿಪಡಿಸಿದ ಭೂಮಿಗಿಂತಲೂ ನೂರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು. ಹೀಗೆ ಸುಮಾರು  7 ಲಕ್ಷ ಫೆಲೆಸ್ತೀನಿಯರು ನಿರಾಶ್ರಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಅವರೆಲ್ಲರಿಗೂ ಮರಳುವ ಅವಕಾಶ ಸಿಗಬೇಕು ಎಂಬುದು ಅಂತಾರಾಷ್ಟ್ರೀಯ  ಕಾನೂನು ಹೇಳುತ್ತದೆ. ಆದರೆ, ಫೆಲೆಸ್ತೀನಿ ನಿರಾಶ್ರಿತರು ತಾಯ್ನಾಡಿಗೆ ಮರಳುವುದಕ್ಕೆ ಇಸ್ರೇಲ್ ಒಪ್ಪಿಕೊಳ್ಳುತ್ತಿಲ್ಲ. ಹಾಗೆಯೇ, ಅಲ್ ಅಕ್ಸಾ  ಮಸೀದಿ ಒಳಗೊಂಡ ಜೆರುಸಲೇಮ್ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ದ ರಾಜಧಾನಿಯಾಗಬೇಕು ಎಂಬುದು ಫೆಲೆಸ್ತೀನಿಯರ ವಾದವಾಗಿದೆ. ಆದರೆ,  ಇಸ್ರೇಲ್ ಅದಕ್ಕೂ ಸಮ್ಮತಿಸುತ್ತಿಲ್ಲ.

2023 ನವೆಂಬರ್‌ನಲ್ಲಿ ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದ ಬಳಿಕದಿಂದ ಗಾಝಾದಲ್ಲಿ ಆಗಿರುವ ಜೀವಹಾನಿ ಮತ್ತು ಆರ್ಥಿಕ ನಷ್ಟದ  ಚರ್ಚೆಗಳ ನಡುವೆಯೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯ ಕುರಿತೂ ಬಲವಾದ ಕೂಗು ಕೇಳಿಬರುತ್ತಿದೆ. ಒಂದಲ್ಲ ಒಂದು ದಿನ ತಮ್ಮ ಕ ನಸಿನ ರಾಷ್ಟ್ರ ಸ್ಥಾಪನೆಯ ಬಗ್ಗೆ ಫೆಲೆಸ್ತೀನಿಯರು ಆಶಾವಾದಿಗಳಾಗಿದ್ದಾರೆ. ಅಮೇರಿಕ ಸಹಿತ ಬಲಾಢ್ಯ ರಾಷ್ಟ್ರಗಳೆಲ್ಲ ಇಸ್ರೇಲ್‌ನ ಬೆನ್ನಿಗಿದ್ದೂ  ಫೆಲೆಸ್ತೀನಿಯರು ತಮ್ಮ ಹೋರಾಟ ಮನೋಭಾವದಲ್ಲಿ ರಾಜಿ ಮಾಡಿಕೊಳ್ಳುತ್ತಿಲ್ಲ. ಜೊತೆಜೊತೆಗೇ ಫೆಲೆಸ್ತೀನ್ ಅಕ್ಕಪಕ್ಕದ ರಾಷ್ಟ್ರಗಳ ಸಹಿತ  ಅರಬ್ ರಾಷ್ಟ್ರಗಳ ಗಾಢ ಮೌನವೂ ಆಯಾ ರಾಷ್ಟ್ರಗಳ ನಾಗರಿಕರಲ್ಲಿ ಆಕ್ರೋಶವನ್ನು ಉಂಟು ಮಾಡುತ್ತಿದೆ. 2023 ನವೆಂಬರ್‌ನಲ್ಲಿ ಹಮಾಸ್  ನಡೆಸಿರುವ ದಾಳಿಯನ್ನು ಯಾರೂ ಬೆಂಬಲಿಸುತ್ತಿಲ್ಲವಾದರೂ ಆ ದಾಳಿಯು ಜಾಗತಿಕವಾಗಿಯೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣದ ಬಗ್ಗೆ  ಗಂಭೀರ ಚರ್ಚೆಯೊಂದಕ್ಕೆ ಕಾರಣವಾಗಿದೆ ಎಂಬುದಂತೂ  ಸ್ಪಷ್ಟ.

Monday, 3 June 2024

ಮರ್ದಕರೇ, ಮರ್ದಿತರ ಪ್ರಾರ್ಥನೆಯನ್ನು ಕಡೆಗಣಿಸದಿರಿ...

 




ಮರ್ದಿತರಿಗೂ ದೇವನಿಗೂ ನಡುವೆ ಪರದೆಗಳಿಲ್ಲ ಎಂಬುದು ಇಸ್ಲಾಮಿನ ನಿಲುವು. ಅಧಿಕಾರದ ಮದದಿಂದಲೋ ಧರ್ಮದ್ವೇಷದ ವ್ಯಸನದಿಂದಲೋ ಅಥವಾ ಹಣಬಲ, ತೋಳ್ಬಲ, ಜಾತಿಬಲದ ಮೇಲ್ಮೆಯಿಂದಲೋ ದುರ್ಬಲರ ಮೇಲೆ ಅನ್ಯಾಯ ಎಸಗುವವರನ್ನು ಎಚ್ಚರಿಸುವುದಕ್ಕಾಗಿಯೇ ಬಂದಿರುವ ಸೂಚನೆ ಇದು. ಮರ್ದಿತರು ದೇವನಲ್ಲಿ ಪ್ರಾರ್ಥಿಸಿದರೆ ತಕ್ಷಣ ಅವರ ಪ್ರಾರ್ಥನೆಯನ್ನು ದೇವನು ಆಲಿಸುತ್ತಾನೆ, ಅಲ್ಲಿ ಪರದೆಯೇ ಇರುವುದಿಲ್ಲ ಎಂಬುದಾಗಿ ಇಲ್ಲಿ ಮರ್ದಕರಿಗೆ ಎಚ್ಚರಿಕೆ ನೀಡಲಾಗಿದೆ. ಹಾಗಂತ, ಮರ್ದಿತರು ಎಂಬ ಪದಕ್ಕೆ  ಇಸ್ಲಾಮ್ ಯಾವುದೇ ಜಾತಿ, ಧರ್ಮ, ಭಾಷೆ, ಲಿಂಗವನ್ನು ಅಂಟಿಸಿಲ್ಲ. ಅದು ಧರ್ಮಾತೀತ, ದೇಶಾತೀತ, ಭಾಷಾತೀತ ಪದ. ಅನ್ಯಾಯಕ್ಕೆ  ಒಳಗಾಗುವ ಸರ್ವರೂ ಆ ಚೌಕಟ್ಟಿನೊಳಗೆ ಬರುತ್ತಾರೆ. ಇಂಥವರ ಸಂಖ್ಯೆಯೇ ಜಗತ್ತಿನಲ್ಲಿ ಅತ್ಯಧಿಕವಿದೆ ಎಂಬುದೂ ಗಮನಾರ್ಹ. ಇದೀಗ  ಇಂಥದ್ದೇ  ಒಂದು ಚರ್ಚೆಗೆ ಉಡುಪಿ ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಚಾಲನೆ ನೀಡಿದ್ದಾರೆ. ಹಿಜಾಬ್ ವಿವಾದ ನನ್ನ ಸೃಷ್ಟಿಯಲ್ಲ  ಎಂದವರು ಹೇಳಿದ್ದಾರೆ. ಅದರಲ್ಲಿ ತನ್ನ ಪಾತ್ರವಿಲ್ಲ ಎಂಬಂತೆ ಹೇಳಿಕೆ ನೀಡಿದ್ದಾರೆ. ಆದರೆ,

ಹಿಜಾಬ್ ವಿವಾದದ ಸಮಯದಲ್ಲಿ ಉಡುಪಿಯ ಶಾಸಕರಾಗಿದ್ದವರು ಇದೇ ರಘುಪತಿ ಭಟ್. ಹಿಜಾಬ್ ವಿವಾದಕ್ಕೆ ಕಾರಣವಾದ ಉಡುಪಿ  ಮಹಿಳಾ ಕಾಲೇಜಿನ ಆಡಳಿತ ಸಮಿತಿಯ ಚೇರ್ಮನ್ಗಿ ಆಗಿದ್ದವರೂ ಇದೇ ರಘುಪತಿ ಭಟ್. ಹಿಜಾಬ್ ವಿವಾದ ಎಂಬ ಹೆಸರಲ್ಲಿ ಖಳರಂತೆ  ಬಿಂಬಿಸಲಾದ ಆ ಹೆಣ್ಮಕ್ಕಳು ಬುರ್ಖಾ ಹಾಕುತ್ತೇವೆಂದೋ ಮುಖ ಮುಚ್ಚುವ ನಕಾಬ್ ಧರಿಸುತ್ತೇವೆಂದೋ ಹೇಳಿರಲಿಲ್ಲ. ಸಮವಸ್ತ್ರದ  ಭಾಗವಾಗಿ ಕುತ್ತಿಗೆಯಲ್ಲಿರುವ ಶಾಲನ್ನು ತಲೆಗೆ ಹಾಕುವುದಕ್ಕೆ ಅನುಮತಿ ಕೊಡಿ ಎಂದಷ್ಟೇ ವಿನಂತಿಸಿದ್ದರು. ‘ಸರಿ ಹಾಕ್ಕೊಳ್ಳಿ’ ಎಂದು ಹೇಳಿ  ಮುಗಿಸಬಹುದಾಗಿದ್ದ ತೀರಾತೀರಾ ಸಾಮಾನ್ಯ ಸಂಗತಿಯೊಂದು ರಾಜ್ಯದ ಶಾಲಾ-ಕಾಲೇಜುಗಳನ್ನೇ ಬಂದ್ ಮಾಡಿಡಬೇಕಾದಷ್ಟು ತೀವ್ರರೂಪಕ್ಕೆ  ಯಾಕೆ ಹೊರಳಿತು ಎಂಬುದನ್ನು ಅವರು ವಿವರಿಸಿಲ್ಲ. ‘ಹಿಜಾಬ್ ವಿವಾದ ತನ್ನ ಸೃಷ್ಟಿಯಲ್ಲ ಮತ್ತು ಅದರಲ್ಲಿ ತಾನಿಲ್ಲ’ ಎಂಬ ಅವರ ಮಾತು  ಇನ್ನಾರದೋ ಕಡೆಗೆ ಕೈ ತೋರಿಸುತ್ತದೆ. ಅವರು ಯಾರು? ಶಾಸಕನನ್ನೂ ಮೀರಿ ಅಲ್ಲಿ ಅಧಿಕಾರ ಚಲಾಯಿಸಿದವರು ಯಾರು? ಆ ಹೆಣ್ಮಕ್ಕಳ  ಬೇಡಿಕೆಯನ್ನು ತಿರಸ್ಕರಿಸುವುದರಿಂದ ಯಾರಿಗೆ ಲಾಭ ಇತ್ತು? ಆ ಲಾಭ ಏನು? ಶಾಸಕನಾಗಿಯೂ ರಘುಪತಿ ಭಟ್ ಇವೆಲ್ಲವನ್ನೂ ನೋಡಿ  ಸುಮ್ಮನಿರಲು ಕಾರಣವೇನು? ರಾಜಕೀಯ ಲೆಕ್ಕಾಚಾರವೇ? ಅಸಾಮರ್ಥ್ಯವೇ? ನಿಜವಾಗಿ,

ಹಿಜಾಬ್ ವಿವಾದದಿಂದ ಕಳಚಿಕೊಳ್ಳಲು ಪ್ರಯತ್ನಿಸುತ್ತಿರುವ ರಘುಪತಿ ಭಟ್ರು, ವಿವಾದದ ಸಮಯದಲ್ಲಿ ಶಾಸಕರಾಗಿ ಕರ್ತವ್ಯ ನಿಭಾಯಿಸಿರಲಿಲ್ಲ  ಎಂಬುದಕ್ಕೆ ಆಧಾರಗಳೇ ಬೇಕಿಲ್ಲ. ಆ ವಿವಾದವನ್ನು ಅಲ್ಲಿಗೇ ಮುಗಿಸುವ ಮತ್ತು ಆ ಹೆಣ್ಮಕ್ಕಳ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಲ್ಲುವ ಎಲ್ಲ ಅವಕಾಶಗಳೂ ಅವರಿಗಿದ್ದುವು. ಆದರೆ, ಅವರು ಹಾಗೆ ಮಾಡಲಿಲ್ಲ. ಅದಕ್ಕೆ ರಾಜಕೀಯ ಕಾರಣಗಳಿದ್ದುವು. ಅದನ್ನು ಎದುರಿಸಿ ನಿಲ್ಲುವ ನಿಷ್ಠುರತೆಯನ್ನು  ಅವರು ಪ್ರದರ್ಶಿಸಲಿಲ್ಲ. ಅದಕ್ಕೂ ರಾಜಕೀಯ ಲೆಕ್ಕಾಚಾರವೇ ಕಾರಣವಾಗಿತ್ತು. ಮುಂದಿನ ಚುನಾವಣೆಯಲ್ಲಿ ತನ್ನ ಗೆಲುವಿಗೆ ಈ ವಿವಾದ  ಮೆಟ್ಟಿಲಾದೀತು ಎಂದವರು ಭಾವಿಸಿರುವ ಸಾಧ್ಯತೆಯೂ ಇದೆ. ಅಥವಾ ಅವರನ್ನು ಹಾಗೆ ಮನವೊಲಿಸಿರಲೂ ಬಹುದು. ಅಥವಾ ಪಕ್ಷದ ಉನ್ನತ  ನಾಯಕರು ಅವರಿಗೆ ಅಂಥ ಆದೇಶ ನೀಡಿರಲೂ ಬಹುದು. ಆದರೆ, ಆ ಬಳಿಕದ ಪರಿಸ್ಥಿತಿ ಎಷ್ಟು ಬದಲಾಯಿತೆಂದರೆ, ಪಕ್ಷ ಅವರನ್ನೇ  ಕಡೆಗಣಿಸಿತು. ಅವರಿಗೆ ಪಕ್ಷ ವಿಧಾನಸಭಾ ಟಿಕೇಟನ್ನೇ ನಿರಾಕರಿಸಿತು. ಒಂದುಕಡೆ, ಅವರನ್ನು ಭರಪೂರ ಬಳಸಿಕೊಂಡ ಅವರ ಪಕ್ಷ ಇನ್ನೊಂದು  ಕಡೆ ಅವರನ್ನು ತಿಪ್ಪೆಗೆಸೆಯಿತು. ಆದರೆ, ಆಗಲೂ ಅವರು ಹಿಜಾಬ್‌ನಲ್ಲಿ ತನ್ನ ಪಾತ್ರವಿಲ್ಲ ಎಂಬ ಹೇಳಿಕೆಯನ್ನು ಕೊಡಲಿಲ್ಲ. ಯಾಕೆಂದರೆ,  ಹಿಜಾಬ್ ವಿವಾದದಲ್ಲಿ ಅವರನ್ನು ಪಕ್ಷ ಹೇಗೆ ದುರುಪ ಯೋಗಪಡಿಸಿಕೊಂಡಿತೋ ಈ ಟಿಕೆಟ್ ನಿರಾಕರಣೆಯ ಬಳಿಕವೂ ಅವರಿಗೆ ಉನ್ನತ  ಹುದ್ದೆಯ ಆಮಿಷ ವನ್ನು ಒಡ್ಡಿತು. ಅದನ್ನು ಅವರು ನಂಬಿದರು ಮತ್ತು ಹಿಜಾಬ್ ವಿವಾದದಲ್ಲಿ ಅವರ ಪಾತ್ರದ ಬಗ್ಗೆ ಇರುವ ಆರೋಪಗಳಿಗೆ  ಉತ್ತರಿಸುವುದರಿಂದ ನುಣುಚಿಕೊಂಡರು. ಇದಾಗಿ ಎರಡು ವರ್ಷಗಳ ಬಳಿಕ ಇದೀಗ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಗಿದೆ. ಪದವೀಧರ  ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದಕ್ಕಾಗಿ ಈ ಶಿಕ್ಷೆ ನೀಡಲಾಗಿದೆ. ಇದೀಗ ಅವರು  ಎರಡು ವರ್ಷಗಳ ಹಿಂದಿನ ವಿವಾದದ ಅಸಲಿ ಕತೆಯನ್ನು ಹೇಳಿಕೊಂಡಿದ್ದಾರೆ. ಒಂದುರೀತಿಯಲ್ಲಿ,

ಇದೊಂದು ಬಗೆಯ ಆತ್ಮಾವಲೋಕನ. ರಾಜಕೀಯದಲ್ಲಿ ಸಕ್ರಿಯರಾಗಿದ್ದೂ ಮತ್ತು ಗೆಲ್ಲುವ ಎಲ್ಲ ಅವಕಾಶಗಳಿದ್ದೂ ಅನಿರೀಕ್ಷಿತವಾಗಿ ಟಿಕೆಟ್ ಕೈ  ತಪ್ಪುವುದು ಮತ್ತು ತನ್ನ ಸುತ್ತಲಿದ್ದವರೆಲ್ಲ ಮಾಯವಾಗಿ ತಾನು ಒಂಟಿಯಾಗುವುದನ್ನೆಲ್ಲ ಜೀರ್ಣಿಸಿಕೊಳ್ಳುವುದು ರಘುಪತಿ ಭಟ್ ಸಹಿತ ಯಾವ  ರಾಜಕಾರಣಿಗಳಿಗೂ ಸುಲಭ ಅಲ್ಲ. ಇಂಥ ಸ್ಥಿತಿ ಅವರನ್ನು ದಿನೇ ದಿನೇ ಸುಡುತ್ತಿರುತ್ತದೆ. ಇದೀಗ ಪಕ್ಷದಿಂದಲೇ ಉಚ್ಛಾಟಿಸಲಾದ  ಬಳಿಕವಂತೂ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿರಬಹುದು. ಹಾಗಂತ, ಇದು ರಘುಪತಿ ಭಟ್ ಒಬ್ಬರ ಸಮಸ್ಯೆಯಲ್ಲ. ಈಶ್ವರಪ್ಪ ಕೂಡ ಇವರದ್ದೇ   ಸ್ಥಿತಿಯಲ್ಲಿದ್ದಾರೆ. ಅವರನ್ನು ಪಕ್ಷದಿಂದ ಉಚ್ಛಾಟಿಸ ಲಾಗಿದೆ. ಅವರದ್ದು ಉರಿನಾಲಗೆ. ಮುಸ್ಲಿಮ್ ಸಮುದಾಯವನ್ನು ಮತ್ತು ಅವರ ಅಸ್ಮಿತೆಯ ನ್ನು ಸಂದರ್ಭ ಸೃಷ್ಟಿಸಿಕೊಂಡೇ ಪ್ರಶ್ನಿಸುತ್ತಿದ್ದವರು ಈಶ್ವರಪ್ಪ. ಬಹಿರಂಗ ಭಾಷಣದಲ್ಲಿ ಅವರು ಅದಾನನ್ನು ತಮಾಷೆ ಮಾಡಿದ್ದರು. ಮುಸ್ಲಿಮರನ್ನು  ವಿನಾ ಕಾರಣ ಆಡಿಕೊಳ್ಳುವುದು ಮತ್ತು ಸಭಿಕರಲ್ಲಿ ಆವೇಶವನ್ನು ಹುಟ್ಟಿಸುವುದು ಅವರ ಚಾಳಿಯಾಗಿತ್ತು. ಅವರಿಗೂ ಕಳೆದ ವಿಧಾನಸಭಾ ಚು ನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ. ಬಳಿಕ ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರು ಮತ್ತು ಪಕ್ಷದಿಂದಲೇ  ಉಚ್ಚಾಟನೆಗೊಂಡರು. ಇದೀಗ ಅವರೂ ಒಂಟಿ. ರಸ್ತೆಗಿಳಿದರೆ ಸಾಕು ಅಭಿಮಾನಿಗಳ ದಂಡೇ ಸೇರುತ್ತಿದ್ದ ಅವರನ್ನು ಈಗ ಯಾರೂ ಹತ್ತಿರ  ಸೇರಿಸಿಕೊಳ್ಳುತ್ತಿಲ್ಲ. ಅವರ ಹೇಳಿಕೆಗಳಿಗೆ ಮಾಧ್ಯಮಗಳಲ್ಲಿ ಕವರೇಜೂ ಸಿಗುತ್ತಿಲ್ಲ. ಇಂಥ ದಯನೀಯ ಸ್ಥಿತಿಯನ್ನು ಇವತ್ತು ಎದುರಿಸುತ್ತಿರುವರಲ್ಲಿ  ಅನಂತ್ ಕುಮಾರ್ ಹೆಗಡೆ, ನಳಿನ್ ಕುಮಾರ್ ಕಟೀಲ್, ಸಿಟಿ ರವಿಯಂಥ ಹಲವು ರಾಜ್ಯ ನಾಯಕರಿದ್ದಾರೆ. ರಾಷ್ಟçಮಟ್ಟದಲ್ಲಿ ಇನ್ನೂ ಅ ನೇಕರಿದ್ದಾರೆ. ಕಾರಣವೇ ಇಲ್ಲದೇ ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಮತ್ತು ಮುಸ್ಲಿಮರ ಆಚಾರ-ಸಂಸ್ಕೃತಿಯನ್ನು ವ್ಯಂಗ್ಯವಾಗಿ ಆಡಿಕೊಳ್ಳುವ  ಇವರೆಲ್ಲ ಇವತ್ತು ಬಹುತೇಕ ಒಂಟಿಯಾಗಿದ್ದಾರೆ. ಅಧಿಕಾರ ಬಲ ಇದ್ದಾಗ ಅಮಲೇರಿಸಿಕೊಂಡವರು ಅಧಿಕಾರ ನಷ್ಟವಾದಾಗ ಅದನ್ನು  ಜೀರ್ಣಿಸಿಕೊಳ್ಳಲೂ ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ. ಅಂದಹಾಗೆ,

ಅನ್ಯಾಯಕ್ಕೆ ಒಳಗಾದವರು ಬೇರೆ ದಾರಿಯೇ  ಕಾಣದಾದಾಗ ಮತ್ತು ತಮಗಾರೂ ಇಲ್ಲ ಎಂಬ ಭಾವುಕತೆಗೆ ಒಳಗಾದಾಗ ಮಾಡುವ ಪ್ರಾರ್ಥನೆ  ಅತ್ಯಂತ ಅಪಾಯಕಾರಿ ಎಂಬುದು ಐತಿಹಾಸಿಕವಾಗಿ ಅನೇಕ ಬಾರಿ ರುಜುವಾತಾಗಿದೆ. ದೇವರು ಅಂಥ ಪ್ರಾರ್ಥನೆಯನ್ನು ಆಲಿಸುತ್ತಾನೆ  ಎಂಬುದು ಇಸ್ಲಾಮಿನ ಬೋಧನೆಯೂ ಆಗಿದೆ. ಸಂತ್ರಸ್ತರ ಪಾಲಿನ ಕೊನೆಯ ಆಯುಧವೇ ಪ್ರಾರ್ಥನೆ. ಹಾಗಂತ, ಅನ್ಯಾಯ ಎಸಗಿದವರು  ಮತ್ತು ಪರಮ ಕ್ರೂರಿಗಳು ಯಾವ ಶಿಕ್ಷೆಗೂ ಒಳಗಾಗದೇ ತುಂಬು ಬಾಳುವೆ ನಡೆಸಿ ಹೊರಟು ಹೋಗಿಲ್ಲವೇ ಎಂಬ ಪ್ರಶ್ನೆ ಇರಬಹುದು.  ಬಾಹ್ಯನೋಟಕ್ಕೆ ನಮಗೆ ಅವರು ಚೆನ್ನಾಗಿದ್ದಾರೆಂದು ಕಂಡರೂ ಆಂತರಿಕವಾಗಿ ಅವರ ಸ್ಥಿತಿ ಏನು ಅನ್ನುವುದು ನಮಗೆ ಗೊತ್ತಿರುವುದಿಲ್ಲ. ಅವರ  ಶಾರೀರಿಕ ಹಾಗೂ ಮಾನಸಿಕ ತೊಂದರೆಗಳು ಹೊರಜಗತ್ತಿಗೆ ಗೊತ್ತಾಗಬೇಕೆಂದೇನೂ ಇಲ್ಲ. ಅದರಾಚೆಗೆ, ಮರ್ದಕರನ್ನು ಪರಲೋಕದಲ್ಲಿ  ವಿಚಾರಣೆಗೊಳಪಡಿಸಿ ಕಠಿಣ ಶಿಕ್ಷೆ ನೀಡಲಾಗುವುದು ಎಂಬ ಸಂದೇಶವನ್ನೂ ಇಸ್ಲಾಮ್ ನೀಡುತ್ತದೆ. ಇಹಲೋಕದಲ್ಲಿ ಮರ್ದಕರು ತಕ್ಕ ಶಿಕ್ಷೆ ಅನುಭವಿಸುತ್ತಾರೋ ಇಲ್ಲವೋ ಆದರೆ ಪರಲೋಕದಲ್ಲಂತೂ ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾರರು ಎಂಬುದೇ ಇಸ್ಲಾಮಿನ ಪ್ರಬಲ ನಿಲುವು.  ಆದ್ದರಿಂದ, ‘ದುರ್ಬಲರ ಮೇಲೆ ಸವಾರಿ ಮಾಡದಿರಿ, ಅವರ ಪ್ರಾರ್ಥನೆಗೆ ಅಪಾರ ಶಕ್ತಿಯಿದೆ..’ ಎಂದು ಇಸ್ಲಾಮ್ ಹೇಳುತ್ತದೆ. ರಘುಪತಿ ಭಟ್  ಮತ್ತು ಇನ್ನಿತರರ ಇಂದಿನ ಸ್ಥಿತಿಯು ಮರ್ದಕರ ಕಣ್ಣು ತೆರೆಸಲು ಧಾರಾಳ ಸಾಕು. ಹಾಗಂತ,

‘ಮರ್ದಕರು’ ಎಂಬ ಗುಂಪು ರಾಜಕೀಯದಲ್ಲಿ ಮಾತ್ರ ಇರುವುದಲ್ಲ ಮತ್ತು ಅವರು ನಿರ್ದಿಷ್ಟ ಧರ್ಮ, ಲಿಂಗ, ದೇಶಕ್ಕೆ ಸೀಮಿತರೂ ಅಲ್ಲ.  ಮರ್ದಕರು ಮತ್ತು ಮರ್ದಿತರು ಎಂಬ ಈ ಎರಡು ಗುಂಪಿನಲ್ಲಿ ಬಾಹ್ಯನೋಟಕ್ಕೆ ಮರ್ದಕರೇ ಮೇಲುಗೈ ಪಡೆದಂತೆ ಕಾಣಿಸುತ್ತಾರೆ. ಆದರೆ  ಮರ್ದಿತರ ಪ್ರಾರ್ಥನೆಗೆ ಮರ್ದಕರನ್ನು ಪಶ್ಚಾತ್ತಾಪಕ್ಕೆ ದೂಡುವ ಸಾಮರ್ಥ್ಯವಿದೆ ಎಂಬುದನ್ನು ಮರೆಯಬಾರದು.

Thursday, 30 May 2024

598 ದಿನಗಳ ಕಾಲ ಜೈಲಲ್ಲಿದ್ದು ಹೊರಬಂದವರು ಎತ್ತಿರುವ ಪ್ರಶ್ನೆ...



ಉಗ್ರರೆಂಬ ಹಣೆಪಟ್ಟಿ ಹಚ್ಚಿಕೊಂಡು 598 ದಿನಗಳ ಕಾಲ ಜೈಲಲ್ಲಿದ್ದ 11 ಮಂದಿ ಮುಸ್ಲಿಮರು ಕಳೆದವಾರ ಬಿಡುಗಡೆಗೊಂಡಿದ್ದಾರೆ. ಉತ್ತರ ಪ್ರದೇಶದ ಭಯೋತ್ಪಾದನಾ ವಿರೋಧಿ ದಳವು (ATS) ಸೆ. 26, 2022ರಂದು ಇವರನ್ನು ಬಂಧಿಸಿತ್ತು. ಅಲ್‌ಕಾಯ್ದಾ ಸಂಘಟನೆಯೊಂದಿಗೆ ಸಂಬಂಧ  ಹೊಂದಿದ್ದಾರೆಂದು ಎಟಿಎಸ್ ಆರೋಪಿಸಿತ್ತಲ್ಲದೇ, ಇವರಿಂದ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಪುಸ್ತಿಕೆಗಳನ್ನು ವಶಪಡಿಸಿಕೊಂಡಿತ್ತು. ಆದರೆ, ಅಲಹಾಬಾದ್ ಹೈಕೋರ್ಟ್ ನ  ಲಕ್ನೋ ಪೀಠವು ಇವರಿಗೆ ಜಾಮೀನು ಮಂಜೂರು ಮಾಡಿದೆಯಲ್ಲದೇ, ಇವರ ಮೇಲಿನ ಆರೋಪಕ್ಕೆ ಪೂರಕ ಸಾಕ್ಷ್ಯಾಧಾರ ಗಳನ್ನು ಸಲ್ಲಿಸಲು ಎಟಿಎಸ್ ವಿಫಲವಾಗಿದೆ ಎಂದು ಹೇಳಿದೆ. ಹಾಗಂತ, ಇದು ಒಂಟಿ ಪ್ರಕರಣ ಅಲ್ಲ.

ದೆಹಲಿ ಕೇಂದ್ರಿತ ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (CSDS) ಅಧೀನದ ಲೋಕನೀತಿ ಸಂಸ್ಥೆಯು 2018ರಲ್ಲಿ ಬಿಡುಗಡೆಗೊಳಿಸಿದ ವರದಿಯು ಭಯೋತ್ಪಾದನೆಯ  ಹೆಸರಲ್ಲಿ ಮುಸ್ಲಿಮ್ ಸಮುದಾಯವನ್ನು ಬೇಟೆಯಾಡುತ್ತಿರುವ ಆಘಾತಕಾರಿ ಸಂಗತಿಯನ್ನು ವಿವರಿಸಿತ್ತು. ತಮ್ಮನ್ನು ಭಯೋತ್ಪಾದನೆಯ ಸುಳ್ಳು ಕೇಸಿನಲ್ಲಿ ಬಂಧಿಸಬಹುದು ಎಂದು 47% ಭಾರತೀಯ ಮುಸ್ಲಿಮರು ಭಯಪಡುತ್ತಾರೆ ಎಂದು ಆ ವರದಿಯಲ್ಲಿ ಹೇಳಲಾಗಿತ್ತು. 2006ರಿಂದ 2008ರ ನಡುವೆ ನಡೆದ ಸಮ್‌ಜೋತಾ ಎಕ್ಸ್ಪ್ರೆಸ್ ಸ್ಫೋಟ, ಅಜ್ಮೀರ್ ಶರೀಫ್ ಸ್ಫೋಟ, ಮಾಲೆಗಾಂವ್ ಮಸೀದಿ ಸ್ಫೋಟ, ಹೈದರಾಬಾದ್ ಮಕ್ಕಾ ಮಸೀದಿ ಸ್ಫೋಟ ಇತ್ಯಾದಿಗಳು ದೇಶವನ್ನು ನಡುಗಿಸಿದ್ದಷ್ಟೇ ಅಲ್ಲ, ಮುಸ್ಲಿಮ್ ಸಮುದಾಯದಲ್ಲೂ ಭೀತಿಯನ್ನು ಹುಟ್ಟು ಹಾಕಿತ್ತು. ಸ್ಫೋಟಗಳು ನಡೆದ ಬೆನ್ನಿಗೇ ಮುಸ್ಲಿಮ್ ಯುವಕರನ್ನು ಬಂಧಿಸುವುದು ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಬಂಧ ಕಲ್ಪಿಸುವುದು ಮಾಮೂಲಾಯಿತು. ಮಕ್ಕಾ ಮಸೀದಿ ಸ್ಫೋಟದ ಬೆನ್ನಿಗೇ ಸುಮಾರು 200ರಷ್ಟು ಮಂದಿಯನ್ನು ವಶಕ್ಕೆ ಪಡೆಯಲಾಯಿತು. ಇದರಲ್ಲಿ ಹೆಚ್ಚಿನವರೂ ಮುಸ್ಲಿಮರು. ಸುಮಾರು 61 ಮುಸ್ಲಿಮ್ ಯುವಕರು ತೀವ್ರ ದೌರ್ಜನ್ಯಕ್ಕೆ ಒಳಗಾದರು. ಜೈಲು ಪಾಲಾದರು. ಭಯೋತ್ಪಾದಕರೆಂಬ ಹಣೆಪಟ್ಟಿಯನ್ನು ಹಚ್ಚಿಕೊಂಡರು. ತಾವು ನಮಾಝï ಮಾಡುವ ಮಸೀದಿಗೇ ಬಾಂಬಿಟ್ಟವರು ಎಂಬ ಅತಿಕ್ರೂರ ಆರೋಪವನ್ನು ಹೊತ್ತುಕೊಂಡರು. ಮಾಧ್ಯಮಗಳು ಅತಿರಂಜಿತ ಕತೆಗಳನ್ನು ಕಟ್ಟಿದುವು. ಕೊನೆಗೆ 2012ರಲ್ಲಿ ಆಂಧ್ರಪ್ರದೇಶ ಸರಕಾರವೇ ಇವರನ್ನು ನಿರಪರಾಧಿಗಳು ಎಂದಿತು. ಬಂಧನಕ್ಕೀಡಾಗಿ ಕಸ್ಟಡಿಯಲ್ಲಿ ಅತೀ ಹೀನ ದೌರ್ಜನ್ಯಕ್ಕೆ ತುತ್ತಾದ 15 ಮಂದಿ ಮುಸ್ಲಿಮ್ ಯುವಕರಿಗೆ ತಲಾ 3 ಲಕ್ಷ ರೂಪಾಯಿಯನ್ನು ಪರಿಹಾರವಾಗಿ ನೀಡಿತು. ಹಾಗೆಯೇ, ಇತರ 46 ಮಂದಿ ಯುವಕರಿಗೆ ತಲಾ 20 ಸಾವಿರ ರೂಪಾಯಿಯನ್ನು ನೀಡಿ ಪಾಪಮುಕ್ತವಾಯಿತು. ಮಾಲೆಗಾಂವ್ ಮಸೀದಿ ಸ್ಫೋಟದ ನೆಪದಲ್ಲಿ ಮಹಾರಾಷ್ಟ್ರ  ಭಯೋತ್ಪಾದನಾ ನಿಗ್ರಹ ದಳವು 8 ಮಂದಿ ಮುಸ್ಲಿಮರನ್ನು 2006ರಲ್ಲಿ ಅಧಿಕೃತವಾಗಿ ಬಂಧಿಸಿತು. 5 ವರ್ಷಗಳನ್ನು ಜೈಲಲ್ಲಿ ಕಳೆದ ಬಳಿಕ 2011ರಲ್ಲಿ ಇವರೆಲ್ಲ ಜಾಮೀನಿನ ಮೂಲಕ ಹೊರಬಂದರು. 2013ರಲ್ಲಿ ಇವರ ವಿರುದ್ಧ ಚಾರ್ಜ್ ಶೀಟನ್ನು  ಸಲ್ಲಿಸಲಾಯಿತು. ಆದರೆ 2016ರಲ್ಲಿ ಇವರನ್ನೆಲ್ಲ ಮೊಕಾ ನ್ಯಾಯಾಲಯ ಆರೋಪದಿಂದ ಮುಕ್ತಗೊಳಿಸಿತು. ಇದಕ್ಕಿಂತಲೂ ಮೊದಲು 2001ರಲ್ಲಿ ಇವೆಲ್ಲಕ್ಕಿಂತಲೂ ಆಘಾತಕಾರಿಯಾದ ಬಂಧನ ನಡೆಯಿತು.

ಅಮೇರಿಕದ ಅವಳಿ ಗೋಪುರ ಉರುಳಿದ ತಿಂಗಳ ಬಳಿಕ ಗುಜರಾತ್‌ನ ಸೂರತ್‌ನಲ್ಲಿ ‘ಆಲ್ ಇಂಡಿಯಾ ಮೈನಾರಿಟಿ ಎಜುಕೇಶನ್ ಬೋರ್ಡ್’ ಮೂರು ದಿನಗಳ ಶೈಕ್ಷಣಿಕ ಸೆಮಿನಾರನ್ನು ಆಯೋಜಿಸಿತ್ತು. ದೇಶದ ವಿವಿಧೆಡೆಗಳಿಂದ ತಜ್ಞರು, ಆ್ಯಕ್ಟಿವಿಸ್ಟ್ ಗಳು, ಸಮುದಾಯ ನಾಯಕರು ಸೇರಿದಂತೆ ಸುಮಾರು 400 ಮಂದಿ ಇದರಲ್ಲಿ ಭಾಗವಹಿಸಿದ್ದರು. ಇವರಲ್ಲಿ ರಾಜಸ್ತಾನದ ನಾರಾಯಣ ವ್ಯಾಸ್ ಯುನಿವರ್ಸಿಟಿಯ ಸಹಾಯಕ ಪ್ರೊಫೆಸರ್ ಮುಹಮ್ಮದ್ ಅಬ್ದುಲ್ ಹೈ, ಸೂರತ್ ಮುನ್ಸಿಪಲ್ ಕಾರ್ಪೊರೇಶನ್ನಿನಲ್ಲಿ ಆರೋಗ್ಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಆಸಿಫ್ ಇಕ್ಬಾಲ್ ಕೂಡ ಸೇರಿದ್ದರು. ಪೊಲೀಸರು ಇವರನ್ನೂ ಸೇರಿದಂತೆ 127 ಮಂದಿಯನ್ನು ಸಿಮಿ ಕಾರ್ಯಕರ್ತರೆಂದು ಹೇಳಿ ಬಂಧಿಸಿದರು. ಕೊಡಬಾರದ ಹಿಂಸೆಯನ್ನು ಕೊಟ್ಟರು. ವರ್ಷಗಳ ಕಾಲ ಜೈಲಲ್ಲಿಟ್ಟರು. ಇದಾಗಿ 19 ವರ್ಷಗಳ ನಂತರ 2018ರಲ್ಲಿ ಸೂರತ್ ನ್ಯಾಯಾಲಯ ಇವರನ್ನೆಲ್ಲ ಆರೋಪಮುಕ್ತಗೊಳಿಸಿತು. ಆದರೆ, ಜೈಲು ಪಾಲಾದ ಸಮಯದಲ್ಲಿ ಮತ್ತು ಜಾಮೀನು ಮೂಲಕ ಬಿಡುಗಡೆಗೊಂಡ ನಂತರದಲ್ಲಿ ಇವರೆಲ್ಲ ಅನುಭವಿಸಿದ ನರಕಯಾತನೆ ಅತ್ಯಂತ ಆಘಾತಕಾರಿ. ಮುಹಮ್ಮದ್ ಅಬ್ದುಲ್ ಹೈಯವರು ಜಾಮೀನಿನಿಂದ ಹೊರಬಂದ ಬಳಿಕ ನಾರಾಯಣ್‌ವ್ಯಾಸ್ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿ ಮುಂದುವರಿದರಾದರೂ ನಿಮಗೆ ಭಡ್ತಿ ಕೊಡುವುದಿಲ್ಲ ಎಂದು ಯುನಿವರ್ಸಿಟಿ ಹೇಳಿತು. ಹೀಗೆ ಯಾವ ಭಡ್ತಿಯೂ ಇಲ್ಲದೇ 2015ರಲ್ಲಿ ಅವರು ನಿವೃತ್ತರಾದರು. ಈ ನಡುವೆ ಜಾಮೀನಿನ ಮೇಲೆ ಹೊರಗಿದ್ದ ಸಮಯದುದ್ದಕ್ಕೂ ಅವರು ಅನುಭವಿಸಿದ ಎಡರು-ತೊಡರುಗಳು ಗುರುತರವಾದುದು. ಪ್ರತಿವಾರ ರಾಜಸ್ತಾನದ ಜೋಧ್‌ಪುರದಿಂದ 430 ಕಿ.ಮೀಟರ್ ದೂರದ ಸೂರತ್ ಪೊಲೀಸ್ ಠಾಣೆಗೆ ಬಂದು ಸಹಿ ಹಾಕಬೇಕಿತ್ತು. ತಿಂಗಳಲ್ಲಿ ಎರಡು ಬಾರಿ ಗುಜರಾತ್ ನಗರದ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಬೇಕಿತ್ತು. ಇಂಥ ಷರತ್ತು ಇವರೊಬ್ಬರಿಗಷ್ಟೇ ಅಲ್ಲ ಮತ್ತು 2018ರಲ್ಲಿ ಇವರೆಲ್ಲ ಆರೋಪಮುಕ್ತರಾಗುವವರೆಗೆ ಅನುಭವಿಸಿದ ಮಾನಸಿಕ ಮತ್ತು ಕೌಟುಂಬಿಕ ಸವಾಲುಗಳೂ ಅಷ್ಟಿಷ್ಟಲ್ಲ. ಹಾಗೆಯೇ, 2020 ಅಕ್ಟೋಬರ್‌ನಲ್ಲಿ ಬಂಧನಕ್ಕೀಡಾಗಿ ಸುಮಾರು ಎರಡೂವರೆ ವರ್ಷಗಳ ಕಾಲ ಜೈಲಲ್ಲಿದ್ದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಕತೆ ಬೇರೆಯಲ್ಲ.

ಹತ್ರಾಸ್ ಘಟನೆಯ ಬಗ್ಗೆ ವರದಿ ಮಾಡಲೆಂದು ಹೊರಟ ಸಿದ್ದೀಕ್ ಮತ್ತು ಇತರರನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿ ಯುಎಪಿಎ ಪ್ರಕರಣ ದಾಖಲಿಸಿದರು. 2022 ಸೆಪ್ಟೆಂಬರ್‌ನಲ್ಲಿ ಸುಪ್ರೀಮ್ ಕೋರ್ಟು ಸಿದ್ದೀಕ್ ಕಾಪ್ಪನ್‌ಗೆ ಜಾಮೀನು ನೀಡಿದರೂ ಬಿಡುಗಡೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ತಡೆಯಾಯಿತು. ಬಳಿಕ 2023 ಫೆಬ್ರವರಿಯಲ್ಲಿ ಜಾಮೀನು ಲಭ್ಯವಾಯಿತು. ಸತಾಯಿಸುವ ಉದ್ದೇಶದಿಂದಲೇ ಕಾಪ್ಪನ್ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂಬ ಅಭಿಪ್ರಾಯ ಅಂದೂ ಇಂದೂ ವ್ಯಾಪಕವಾಗಿಯೇ ಇದೆ. ಅಂದಹಾಗೆ,

ಸರಣಿ ಸ್ಫೋಟಗಳು, ಮುಸ್ಲಿಮ್ ಯುವಕರ ಸರಣಿ ಬಂಧನಗಳು ಹಾಗೂ ವರ್ಷಗಳ ಕಾಲ ಸತಾಯಿಸಿದ ಬಳಿಕ ಆಗುವ ಬಿಡುಗಡೆಗಳೆಲ್ಲ ಅನುಮಾನಗಳನ್ನಂತೂ ಹುಟ್ಟು ಹಾಕುತ್ತಿವೆ. ಮುಸ್ಲಿಮ್ ಸಮೂಹವನ್ನು ವ್ಯವಸ್ಥಿತವಾಗಿ ಗುರಿ ಮಾಡಲಾಗಿತ್ತೇ? ಮುಸ್ಲಿಮರೆಂದರೆ ಭಯೋತ್ಪಾದಕರು, ದೇಶ ದ್ರೋಹಿಗಳು, ರಕ್ತಪಿಪಾಸುಗಳು ಎಂಬ ಭಾವ ಮೂಡುವಂತೆ ಮಾಡುವ ಉದ್ದೇಶವನ್ನು ಹೊಂದಲಾಗಿತ್ತೇ? ಮುಸ್ಲಿಮರನ್ನು ಪಾಕಿಸ್ತಾನಿ ಹಿತೈಷಿಗಳಂತೆ ಬಿಂಬಿಸುವ ಪ್ರಯತ್ನಗಳು ನಡೆದಿದ್ದುವೇ? ಇಂಥ ಸಂಚಿನ ಅಗತ್ಯ ಯಾರಿಗಿತ್ತು, ಯಾಕಿತ್ತು? ಈ ದೇಶದಲ್ಲಿ ಬಾಂಬ್ ಸ್ಫೋಟ ಮತ್ತು ಜೀವಹಾನಿ ಆಗಿದ್ದಂತೂ ನಿಜ. ಅದನ್ನು ನಡೆಸಿರುವುದು ಯಾರೇ ಆಗಿದ್ದರೂ ಅವರು ಮಾನವ ದ್ರೋಹಿಗಳು, ದೇಶದ್ರೋಹಿಗಳು, ಧರ್ಮದ್ರೋಹಿಗಳು ಮತ್ತು ಈ ಜಗತ್ತಿನಲ್ಲಿ ಜೀವಿಸಿರಲು ಯಾವ ಕಾರಣಕ್ಕೂ ಅರ್ಹರಲ್ಲದವರು. ಈ ನಿಲುವಿನಲ್ಲಿ ಯಾವ ರಾಜಿಯೂ ಇಲ್ಲ. ಆದರೆ, ಬಾಂಬ್ ಸ್ಫೋಟಗೊಳ್ಳುವುದು ಮತ್ತು ಮುಸ್ಲಿಮ್ ಯುವಕರನ್ನು ಬಂಧಿಸುವುದು ಎಂಬುದರ ಹಿಂದೆ ಅಸಹಜವಾದುದು ಇತ್ತೇ? ಸಂಚುಗಳಿದ್ದುವೇ? ಮಾಲೆಗಾಂವ್ ಮತ್ತು ಮಕ್ಕಾ ಮಸೀದಿ ಸ್ಫೋಟದ ಆರೋಪದಿಂದ ಬಂಧಿತ ಮುಸ್ಲಿಮ್ ಯುವಕರು ಬಿಡುಗಡೆಯಾದರಲ್ಲ, ಹಾಗಿದ್ದರೆ ನಿಜವಾದ ಅಪರಾಧಿಗಳು ಯಾರು? ಅವರ ಉದ್ದೇಶ ಏನು? ಬಾಂಬ್ ಸ್ಫೋಟಗೊಂಡ ತಕ್ಷಣ ಪೊಲೀಸರು ಮುಸ್ಲಿಮ್ ಯುವಕರನ್ನೇ ಬಂಧಿಸಲು ಕಾರಣವೇನು? ಅನುಮಾನವೇ ಅಥವಾ ದುರುದ್ದೇಶವೇ? ಅಂದಹಾಗೆ,

ಮುಸ್ಲಿಮರೆಲ್ಲ ನೂರು ಶೇಕಡಾ ಪ್ರಾಮಾಣಿಕರು ಎಂದಲ್ಲ. ಅಪರಾಧ ಪ್ರವೃತ್ತಿ ಎಲ್ಲ ಸಮುದಾಯಗಳಂತೆ ಮುಸ್ಲಿಮ್ ಸಮುದಾಯದಲ್ಲೂ ಇದೆ. ಆದರೆ ಭಯೋತ್ಪಾದನೆಯ ಹೆಸರಲ್ಲಿ ಈವರೆಗೆ ಆಗಿರುವ ಬಂಧನಗಳು, ವೈಭವೀಕೃತ ಮಾಧ್ಯಮ ವರದಿಗಳು, ಟಿವಿ ತನಿಖಾ ವರದಿಗಳು ಮತ್ತು ಇನ್ನಿತರ ಬೆಳವಣಿಗಳೆಲ್ಲ ಒಂದು ಸಮುದಾಯವನ್ನು ಮಾತ್ರ ಗುರಿಯಾಗಿಸಿಕೊಂಡಿರುವುದು ಅನುಮಾನವನ್ನು ಹುಟ್ಟು ಹಾಕುತ್ತಿದೆ. ಬಂಧಿಸಿ ವರ್ಷಗಳ ಕಾಲ ಜೈಲಲ್ಲಿಡುವುದು ಮತ್ತು ಜಾಮೀನು ದೊರೆತು ವರ್ಷಗಳ ಬಳಿಕ ಆರೋಪಮುಕ್ತರಾಗುವುದು ಹಲವು ಪ್ರಶ್ನೆಗಳಿಗೂ ಕಾರಣವಾಗುತ್ತಿದೆ. ಬಂಧನಕ್ಕೀಡಾದವರು ಆರೋಪಮುಕ್ತರಾಗುವುದೆಂದರೆ, ಅಸಲಿಗೆ ಭಯೋತ್ಪಾದಕರು ಯಾರು ಎಂಬ ಪ್ರಶ್ನೆ ಮಹತ್ವವನ್ನು ಪಡೆಯುತ್ತದೆ. ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹನೆ ಇರಬೇಕೆಂಬುದರಲ್ಲಿ ಎರಡು ಮಾತಿಲ್ಲ. ಭಯೋತ್ಪಾದನೆ ಮಾನವ ವಿರೋಧಿ. ಅದರಾಚೆಗೆ, ಈ ಭಯೋತ್ಪಾದನೆಯ ಹೆಸರಲ್ಲಿ ಮುಸ್ಲಿಮ್ ಯುವಕರನ್ನು ಉದ್ದೇಶಪೂರ್ವಕ ಗುರಿ ಮಾಡಲಾಗಿದೆಯೇ ಎಂಬುದೂ ಮುಖ್ಯ. ಈ ಬಗ್ಗೆ ಪ್ರಾಮಾಣಿಕ ತನಿಖೆ ನಡೆಯಲಿ.

Monday, 13 May 2024

ಧರ್ಮದ್ವೇಷದ ಮನಸ್ಥಿತಿಯನ್ನು ಬೆತ್ತಲೆಗೊಳಿಸಿದ ಓಂಕಾರಪ್ಪ

 




ಧರ್ಮದ್ವೇಷದ  ಕರಾಳ ಮುಖವನ್ನು ಮೀನಾ ಎಂಬ ಅಪ್ರಾಪ್ತೆ ಸಮಾಜದ ಮುಂದಿಟ್ಟಿದ್ದಾಳೆ. ಇದಕ್ಕಾಗಿ ಆಕೆ ತನ್ನ ರುಂಡವನ್ನೇ ತ್ಯಾಗ  ಮಾಡಿದ್ದಾಳೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಖುಷಿಯಲ್ಲಿ ಬೆಳಿಗ್ಗೆ ಲವಲವಿಕೆಯಿಂದಿದ್ದ ಈಕೆಯನ್ನು ಸಂಜೆಯ ವೇಳೆ ಓಂಕಾರಪ್ಪ  ಎಂಬವ ರುಂಡ ಕಡಿದು ಹತ್ಯೆ ಮಾಡಿದ್ದಾನೆ. ಮದುವೆಗೆ ನಿರಾಕರಿಸಿದ್ದೇ  ಈ ಹತ್ಯೆಗೆ ಕಾರಣ. 18 ವರ್ಷಕ್ಕಿಂತ ಮೊದಲು ಮದುವೆಯಾಗುವುದು  ಕಾನೂನಿನ ಪ್ರಕಾರ ಅಪರಾಧ ಎಂಬುದನ್ನು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟ ಕಾರಣ ಮೀನಾ ಮತ್ತು ಓಂಕಾರಪ್ಪ ನಡುವಿನ ಮದುವೆ  ಸ್ಥಗಿತಗೊಂಡಿತ್ತು. ಇದೀಗ ಮೀನಾಳ ರುಂಡ ಪತ್ತೆಯಾಗಿದೆ. ಓಂಕಾರಪ್ಪನ ಬಂಧನವಾಗಿದೆ. ಆದರೆ,

ಈ ಪ್ರಕರಣ ನಡೆದ ಕೊಡಗಿನ ಸೋಮವಾರಪೇಟೆ ತಣ್ಣಗಿದೆ. ಸಾರ್ವಜನಿಕರ ಬಾಯಲ್ಲಿ ಈ ಕ್ರೌರ್ಯ ಚರ್ಚೆಯ ವಸ್ತುವಾಗಿದ್ದನ್ನು ಬಿಟ್ಟರೆ  ಉಳಿದಂತೆ ಹುಬ್ಬಳ್ಳಿಯ ನೇಹಾಳ ಹತ್ಯೆಗೆ ಸಿಕ್ಕ ಆಕ್ರೋಶದ ಒಂದು ಶೇಕಡಾ ಪ್ರತಿಕ್ರಿಯೆಯೂ ಈ ಹತ್ಯೆಗೆ ಸಿಕ್ಕಿಲ್ಲ. ಕ್ರೌರ್ಯದ ಪ್ರಮಾಣಕ್ಕೆ  ಹೋಲಿಸಿದರೆ ಈ ಎರಡೂ ಪ್ರಕರಣಗಳು ಒಂದನ್ನೊಂದು  ಮೀರಿಸುವಂಥವು. ಒಂದು ಹಂತದಲ್ಲಿ ಮೀನಾ ಹತ್ಯೆಯು ನೇಹಾ ಹತ್ಯೆಗಿಂತಲೂ  ಹೆಚ್ಚು ಭೀಕರ ಮತ್ತು ಭಯಾನಕವಾದುದು. ಓಂಕಾರಪ್ಪ ತನ್ನ ಪ್ರಿಯತಮೆಯ ರುಂಡವನ್ನೇ ಕತ್ತರಿಸಿದ್ದಾನೆ. ಫಯಾಝï ತನ್ನ ಪ್ರಿಯತಮೆಯನ್ನು  ಚೂರಿಯಿಂದ ಇರಿದು ಇರಿದು ಹತ್ಯೆ ಮಾಡಿದ್ದಾನೆ. ಹತ್ಯೆಗೆ ಇಬ್ಬರು ನೀಡಿರುವ ಕಾರಣಗಳೂ ಒಂದೇ- ಪ್ರೇಮ. ಆದರೆ,

ಈ ಎರಡೂ ಪ್ರಕರಣಗಳಿಗೆ ನಾಗರಿಕ ಸಮಾಜ ವ್ಯಕ್ತಪಡಿಸಿದ ಪ್ರತಿಕ್ರಿಯೆಯಲ್ಲಿ ಮಾತ್ರ ಭೂಮಿ-ಆಕಾಶದಷ್ಟು ವ್ಯತ್ಯಾಸವಿದೆ. ನೇಹ ಹತ್ಯೆಯ ಬೆನ್ನಿಗೇ ಟಿ.ವಿ. ಚಾನೆಲ್‌ಗಳು ಚುರುಕಾದವು. ಹತ್ಯೆ ನಡೆದ ಕಾಲೇಜು ಕ್ಯಾಂಪಸ್‌ನಲ್ಲಿ ನಿಂತು ಲೈವ್ ವರದಿಗಾರಿಕೆ ಮಾಡಿದುವು. ಕಾಲೇಜಿನ  ಅಧ್ಯಾಪಕರನ್ನು ಮಾತಾಡಿಸಿ ಅಭಿಪ್ರಾಯವನ್ನು ಪ್ರಸಾರ ಮಾಡಿದವು. ನೇಹಾ ಸಹಪಾಠಿಗಳ ಬಾಯಿಗೆ ಮೈಕ್ ಇಟ್ಟವು. ನಾಗರಿಕರನ್ನು ಮಾತಾಡಿಸಿ  ಅಭಿಪ್ರಾಯ ಪಡಕೊಂಡವು. ನೇಹಾ ತಾಯಿ ಮತ್ತು ತಂದೆ ಹಾಗೂ ಫಯಾಝï‌ನ ತಂದೆ ಮತ್ತು ತಾಯಿಯ ಅಭಿಪ್ರಾಯಗಳನ್ನು  ಸಮಾಜಕ್ಕೆ ತಲುಪಿಸಿದುವು. ಒಂದು ವಾರಕ್ಕಿಂತಲೂ ಅಧಿಕ ಸಮಯ ಈ ಹತ್ಯೆಯನ್ನು ರಾಜ್ಯದ ಅತಿ ಪ್ರಮುಖ ಚರ್ಚಾವಸ್ತುವಾಗಿ ಇವು  ಜೀವಂತ ಇಟ್ಟವು. ಚಾನೆಲ್‌ನಲ್ಲಿ ಸಂವಾದ, ಚರ್ಚೆ, ಸ್ಟೋರಿ ಇತ್ಯಾದಿಗಳನ್ನು ನಿರಂತರ ಪ್ರಸಾರ ಮಾಡಿ ಈ ಕ್ರೌರ್ಯದ ಕಾವು ಆರದಂತೆ  ನೋಡಿಕೊಂಡವು. ಕೇವಲ ಕನ್ನಡ ಚಾನೆಲ್‌ಗಳಷ್ಟೇ ಅಲ್ಲ, ರಾಷ್ಟ್ರ ಮಟ್ಟದ ಹಿಂದಿ ಮತ್ತು ಇಂಗ್ಲಿಷ್ ಚಾನೆಲ್‌ಗಳಲ್ಲೂ ನೇಹಾ ಹತ್ಯೆ ಸುದ್ದಿಗೆ  ಒಳಗಾಯಿತು. ಇದರ ಜೊತೆಜೊತೆಗೇ, ಬಿಜೆಪಿ ರಂಗಕ್ಕಿಳಿಯಿತು. ರಾಷ್ಟ್ರಾಧ್ಯಕ್ಷ ನಡ್ಡಾ ಅವರು ನೇರವಾಗಿ ದೆಹಲಿಯಿಂದ ಹುಬ್ಬಳ್ಳಿಗೆ ಬಂದರು.  ನೇಹಾ ಮನೆಗೆ ಭೇಟಿ ಕೊಟ್ಟದ್ದಲ್ಲದೇ ಮಾಧ್ಯಮಗಳಿಗೂ ಹೇಳಿಕೆಯನ್ನು ಕೊಟ್ಟರು. ಅಮಿತ್ ಶಾ ಅವರ ಚುನಾವಣಾ ರ‍್ಯಾಲಿಯಲ್ಲಿ ನೇಹಾ  ಹೆತ್ತವರರನ್ನು ತಂದು ಕೂರಿಸಿದರು. ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ಫಯಾಝï‌ನನ್ನು ಗಲ್ಲಿಗೇರಿಸಿ ಎಂಬ ಕೂಗನ್ನು ಎಬ್ಬಿಸಿತು.  ನೇಹಾ ಓದಿನಲ್ಲಿ ಹೇಗಿದ್ದಳು, ಕ್ರೀಡೆಯಲ್ಲಿ ಎಷ್ಟು ಆಸಕ್ತಿ ಹೊಂದಿದ್ದಳು, ಭವಿಷ್ಯದಲ್ಲಿ ಏನಾಗಬೇಕೆಂಬ ಗುರಿ ಇಟ್ಟುಕೊಂಡಿದ್ದಳು ಎಂಬಲ್ಲಿಂದ   ತೊಡಗಿ ಫಯಾಝï ಎಂಥ ಕ್ರೂರಿಯಾಗಿದ್ದ, ಆತನ ಹಿನ್ನೆಲೆ ಏನು, ಆತ ಧರ್ಮಾಂಧನೇ, ಡ್ರಗ್ಸ್ ಚಟ ಹೊಂದಿದ್ದನೇ, ಕ್ರಿಮಿನಲ್ ಕೃತ್ಯಗಳ  ಪೂರ್ವ ಇತಿಹಾಸ ಆತನಿಗಿತ್ತೇ, ಕ್ರೌರ್ಯದ ಬಳಿಕ ಆತನ ಮುಖಭಾವದಲ್ಲಿ ಪಶ್ಚಾತ್ತಾಪ ಭಾವ ಇತ್ತೇ, ಆತ ಎಷ್ಟು ಸಮಯದಿಂದ ಈ ಹತ್ಯೆಗೆ  ಸಂಚು ನಡೆಸಿದ್ದ, ಹತ್ಯೆಗೆ ಬಳಸಿದ ಚೂರಿಯನ್ನು ಎಲ್ಲಿಂದ, ಯಾವಾಗ ಖರೀದಿಸಿದ್ದ, ಆತನ ಜೊತೆ ಆತನ ಹೆತ್ತವರು ಭಾಗಿಯಾಗಿದ್ದಾರಾ,  ತಂದೆಯನ್ನೇ ಆತ ಹತ್ಯೆ ಮಾಡಲು ಯತ್ನಿಸಿದ್ದನಾ... ಇತ್ಯಾದಿ ಇತ್ಯಾದಿ ಪ್ರಶ್ನೆಗಳೊಂದಿಗೆ ಮಾಧ್ಯಮಗಳು ತನಿಖೆಗಿಳಿದುವು. ಇದೇವೇಳೆ, ಸಿನಿಮಾ  ನಟ-ನಟಿಯರೂ ರಂಗಕ್ಕಿಳಿದರು. ಹೆಣ್ಮಕ್ಕಳ ಸುರಕ್ಷಿತತೆಯ ಕುರಿತು ಆತಂಕ ತೋಡಿಕೊಂಡರು. ಆದರೆ,

ಇವರೆಲ್ಲರ ಈ ಆಕ್ರೋಶ, ಪ್ರತಿಭಟನೆ, ಕಣ್ಣೀರು ಬರೇ ಬೂಟಾಟಿಕೆ ಎಂಬುದನ್ನು ಇದೀಗ ಈ ಓಂಕಾರಪ್ಪ ಸಾಬೀತುಪಡಿಸಿದ್ದಾನೆ. ಈತ ಮೀನಾಳ ರುಂಡ ಕಡಿದು ದಿನಗಳೇ ಕಳೆದಿವೆ. ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಬಿಡಿ ಬಿಜೆಪಿಯ ಒಬ್ಬನೇ ಒಬ್ಬ ರಾಜ್ಯ ಮುಖಂಡ ಈ ಮೀನಾಳ ಮನೆಗೆ  ಭೇಟಿ ಕೊಟ್ಟಿಲ್ಲ. ಹೇಳಿಕೆ ನೀಡಿಲ್ಲ. ನೇಹಾಳ ಹತ್ಯೆಯನ್ನು ಖಂಡಿಸಿ ರಾಜ್ಯಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಬಿಜೆಪಿ, ಮೀನಾಳಿಗಾಗಿ ಕನಿಷ್ಠ  ಸೋಮವಾರಪೇಟೆಯಲ್ಲಾದರೂ ಒಂದು ಖಂಡನಾ ಮೆರವಣಿಗೆ ನಡೆಸಿಲ್ಲ. ಓಂಕಾರಪ್ಪನನ್ನು ನೇಣಿಗೇರಿಸಿ ಎಂದು ಕೂಗು ಹಾಕಿಲ್ಲ. ಅದರ  ವಿದ್ಯಾರ್ಥಿ ಘಟಕವಾದ ಎಬಿವಿಪಿಯೂ ಮೌನವಾಗಿದೆ. ನೇಹಾ ಹತ್ಯೆಯನ್ನು ಖಂಡಿಸಿ ಬೀದಿಗಿಳಿದಿದ್ದ ಮತ್ತು ಪ್ಲಕಾರ್ಡ್ ಹಿಡಿದು ಪ್ರತಿಭಟಿಸಿದ್ದ  ಎಬಿವಿಪಿಯು ಮೀನಾ ಹತ್ಯೆಯನ್ನು ಕಂಡೇ ಇಲ್ಲದಂತೆ ವರ್ತಿಸುತ್ತಿದೆ. ಸಿನಿಮಾ ನಟ-ನಟಿಯರೂ ಕಾಣೆಯಾಗಿದ್ದಾರೆ. ನೇಹಾಳ ಹತ್ಯೆಯಲ್ಲಿ  ಹೆಣ್ಣು ಮಕ್ಕಳ ಅಸುರಕ್ಷಿತತೆಯನ್ನು ಕಂಡಿದ್ದ ಅವರೆಲ್ಲ ಈಗ ಮೀನಾ ಹತ್ಯೆಗೆ ಒಂದಕ್ಷರ ಪ್ರತಿಕ್ರಿಯಿಸಲೂ ಪುರುಸೊತ್ತು ಇಲ್ಲದವರಂತೆ  ಬ್ಯುಝಿಯಾಗಿದ್ದಾರೆ. ಮಾಧ್ಯಮಗಳಂತೂ ಸೋಮವಾರಪೇಟೆಯನ್ನೇ ಮರೆತಿವೆ. ಓಂಕಾರಪ್ಪನ ವ್ಯಕ್ತಿತ್ವ, ರುಂಡ ಕತ್ತರಿಸುವುದಕ್ಕೆ ಬಳಸಿದ  ಮಚ್ಚುನ ಹಿನ್ನೆಲೆ, ಅದನ್ನು ತಯಾರಿಸಿದ ವ್ಯಕ್ತಿಯ ಪೂರ್ವಾಪರ, ಓಂಕಾರಪ್ಪನ ತಂದೆ-ತಾಯಿಯ ಅಭಿಪ್ರಾಯ, ಅವರ ವೃತ್ತಿ, ಈ ಹತ್ಯೆಗೆ ಓಂಕಾರಪ್ಪ  ನಡೆಸಿರುವ ಸಂಚು, ಈ ಹತ್ಯೆಯಲ್ಲಿ ಭಾಗಿಯಾಗಿರಬಹುದಾದ ಇನ್ನಿತರರ ಮಾಹಿತಿ, ಈತ ಕುಡುಕನೇ, ಡ್ರಗ್ಸ್ ಹಿನ್ನೆಲೆ ಇದೆಯೇ, ಮೀನಾಳ  ಮನೆಯಿಂದ ಆತ ಬಂದೂಕು ಏಕೆ ಅಪಹರಿಸಿದ, ಆತ ದರೋಡೆಕೋರನೇ, ಆತನ ವಿಚಾರಧಾರೆ ಏನು, ಆತ ಓದಿರುವ ಗ್ರಂಥ ಯಾವುದು,  ಆತ ಮಂದಿರಕ್ಕೆ ಹೋಗುತ್ತಿದ್ದನೇ, ಪ್ರಾರ್ಥನೆ ಮಾಡುತ್ತಿದ್ದನೇ, ಮನೆಯಲ್ಲಿ ದೇವರ ಮೂರ್ತಿಗಳು ಇವೆಯೇ, ಯಾವ ಧರ್ಮಗ್ರಂಥವನ್ನು ಆತ  ಅನುಸರಿಸುತ್ತಿದ್ದ, ಬಂಧನ ವೇಳೆ ಆತನ ಮುಖಭಾವ ಹೇಗಿತ್ತು, ಆತನಿಗೆ ಮೀನಾಳ ಕುಟುಂಬವನ್ನೇ ಹತ್ಯೆ ಮಾಡುವ ಉದ್ದೇಶ ಇತ್ತಾ, ಆತ  ಎಷ್ಟು ಓದಿದ್ದಾನೆ, ಸ್ವಂತ ಹೆತ್ತವರನ್ನೇ ಹತ್ಯೆ ಮಾಡಲು ಈ ಹಿಂದೆ ಪ್ರಯತ್ನಿಸಿದ್ದನಾ, ಈ ಮೀನಾ ಹೇಗಿದ್ದಳು, ಕಲಿಕೆಯಲ್ಲಿ ಎಷ್ಟು ಮುಂದಿದ್ದಳು,  ಕ್ರೀಡೆಯಲ್ಲಿ ಎಷ್ಟು ಚುರುಕಾಗಿದ್ದಳು, ಆಕೆಯ ಕನಸುಗಳೇನಿತ್ತು, ಎಸೆಸ್ಸೆಲ್ಸಿ ನಂತರ ಆಕೆ ವೈದ್ಯೆಯಾಗುವ ಹಂಬಲ ಹೊಂದಿದ್ದಳೇ, ಅದನ್ನು ಆಕೆ  ಯಾರೊಂದಿಗೆ ತೋಡಿಕೊಂಡಿದ್ದಳು, ಆಕೆಗೆ ಕಲಿಸಿದ ಶಿಕ್ಷಕರ ಅಭಿಪ್ರಾಯವೇನು, ಗೆಳತಿಯರು ಏನು ಹೇಳುತ್ತಾರೆ, ಪರೀಕ್ಷೆಯಲ್ಲಿ  ತೇರ್ಗಡೆಯಾದ ವಿಷಯವನ್ನು ಹಂಚುವುದಕ್ಕಾಗಿ ತಂದ ಲಾಡು ಹಾಗೆಯೇ ಅನಾಥವಾಗಿ ಬಿದ್ದಿದೆಯಾ... ಎಂಬಿತ್ಯಾದಿ ತನಿಖಾ ವರದಿಗಾರಿಕೆ  ಮಾಡಿ ಕ್ರೌರ್ಯವನ್ನು ಜೀವಂತವಾಗಿ ಇಡಬೇಕಿದ್ದ ಮಾಧ್ಯಮಗಳು ಸಂಪೂರ್ಣ ಮೌನವಾಗಿವೆ. ಮಾತ್ರವಲ್ಲ, ಒಂದು ಸಾಮಾನ್ಯ ಕ್ರಿಮಿನಲ್ ಕೃತ್ಯ  ಎಂಬ ಭಾವದಿಂದ ಈ ಕ್ರೌರ್ಯ ಮೇಲೆದ್ದೇ  ಇಲ್ಲ. ರಾಜಕಾರಣಿಗಳಿಗೂ ಸೆಲೆಬ್ರಿಟಿಗಳಿಗೂ ಮತ್ತು ಮಾಧ್ಯಮ ಮಂದಿಗೂ ಇದೊಂದು  ಚರ್ಚಿಸಬೇಕಾದ ಮತ್ತು ಪ್ರಶ್ನಿಸಬೇಕಾದ ಕೃತ್ಯ ಎಂದು ಅನಿಸಿಯೇ ಇಲ್ಲ. ನಿಜವಾಗಿ,

ನೇಹಾ ಹತ್ಯೆಯ ವಿರುದ್ಧ ಕಾಣಿಸಿಕೊಂಡ ಆಕ್ರೋಶದ ಹಿಂದೆ ಹತ್ಯೆಗಿಂತ ಹತ್ಯೆ ಮಾಡಿದವನ ಧರ್ಮವೇ ಕಾರಣವಾಗಿತ್ತು ಎಂಬುದನ್ನು ಇವೆಲ್ಲ  ಸಾಬೀತುಪಡಿಸುತ್ತದೆ. ಸಮಾಜದ ಮನಸ್ಥಿತಿ ಇಷ್ಟೊಂದು ಗಬ್ಬೆದ್ದು ಹೋಗಲು ಕಾರಣ ಏನು? ಹತ್ಯೆಯನ್ನು ಖಂಡಿಸುವುದಕ್ಕಿಂತ  ಮೊದಲು  ಹತ್ಯೆಗೈದವನ ಧರ್ಮ ನೋಡುವಂಥ ಹೀನಾಯ ಮತ್ತು ಕಡು ಕೆಟ್ಟ ಮನಸ್ಸನ್ನು ನಾವೇಕೆ ಹೊಂದಿದ್ದೇವೆ? ನಾವು ಕಳಕೊಂಡದ್ದು ಇಬ್ಬರು  ಹೆಣ್ಣು ಮಕ್ಕಳನ್ನು. ಇವರಿಗೆ ಬದುಕುವ ಪೂರ್ಣ ಹಕ್ಕನ್ನು ಖಾತರಿಪಡಿಸಬೇಕಿದ್ದುದು ಇಲ್ಲಿನ ವ್ಯವಸ್ಥೆ. ಸಮಾಜ ಪ್ರಶ್ನಿಸಬೇಕಾದದ್ದು ಮತ್ತು  ಪ್ರತಿಭಟಿಸಬೇಕಾದದ್ದು ಈ ಖಾತರಿಯಲ್ಲಿ ಲೋಪವಾಗಿರುವುದನ್ನು. ಆದರೆ, ಈ ವಿವೇಕವನ್ನು ಪ್ರದರ್ಶಿಸುವ ಬದಲು ಧರ್ಮವನ್ನು ನೋಡಿ  ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುವ ವಾತಾವರಣ ಯಾಕೆ ನಿರ್ಮಾಣವಾಯಿತು? ರಾಜಕಾರಣಿಗಳ ಅಧಿಕಾರ ದಾಹದ ದಾಳವಾಗಿ  ನಾಗರಿಕ ಸಮಾಜ ಯಾಕೆ ಮಾರ್ಪಾಟಾಗಿದೆ? ನೇಹಾಳ ಹತ್ಯೆಯನ್ನು ತನಿಖಿಸುವುದಕ್ಕೆ ತ್ವರಿತಗತಿ ನ್ಯಾಯಾಲಯದ ಸ್ಥಾಪನೆಯಾಗುವುದಾದರೆ  ಅಂಥದ್ದೇ ನ್ಯಾಯ ಮೀನಾಳಿಗೂ ಸಿಗಬೇಡವೇ? ಫಯಾಝï‌ನನ್ನು ಗಲ್ಲಿಗೇರಿಸಲು ಸಮಾಜ ತೋರಿದ ಉತ್ಸಾಹವನ್ನು ಓಂಕಾರಪ್ಪನ  ವಿಷಯದಲ್ಲೂ ತೋರಬೇಡವೇ?

ಅಪರಾಧವನ್ನು ಧರ್ಮಾಧಾರಿತವಾಗಿ ವಿಭಜಿಸುವುದರಿಂದ ಅಂತಿಮವಾಗಿ ರಾಜಕೀಯ ಅಧಿಕಾರದಾಹಿಗಳಿಗೆ ಲಾಭವಾಗಬಹುದೇ ಹೊರತು  ಅಪರಾಧ ಕೃತ್ಯಗಳನ್ನು ಮಟ್ಟ ಹಾಕುವುದಕ್ಕೆ ಅದು ಯಾವ ಕೊಡುಗೆಯನ್ನೂ ನೀಡದು. ಹೆಣ್ಣು ಮಕ್ಕಳ ಪ್ರಾಣಕ್ಕೂ ಮಾನಕ್ಕೂ ಈ ವಿಭಜನೆಯಿಂದ ಯಾವ ರಕ್ಷಣೆಯನ್ನೂ ನೀಡಲಾಗದು. 

Saturday, 11 May 2024

ಸನ್ಮಾರ್ಗಕ್ಕೆ 46 ವರ್ಷ: ಸಾಗಿ ಬಂದ ಹಾದಿ ಮತ್ತು ಸಾಗಬೇಕಾದ ಹಾದಿ





ಸನ್ಮಾರ್ಗಕ್ಕೆ 46 ವರ್ಷಗಳು ತುಂಬಿವೆ. 47ನೇ ವರ್ಷದ ಈ ಮೊದಲ ಸಂಚಿಕೆಯನ್ನು ಓದುವವರಲ್ಲಿ 1978 ಎಪ್ರಿಲ್ 23ರ ಚೊಚ್ಚಲ  ಸಂಚಿಕೆಯನ್ನು ಓದಿದವರೂ ಇರಬಹುದು. ಅವರ ಭಾವನೆಗಳು ಏನಿರಬಹುದು ಅನ್ನುವ ಕುತೂಹಲ ಈಗಿನದು. ಯಾಕೆಂದರೆ,

46 ವರ್ಷಗಳ ಹಿಂದೆ ಪತ್ರಿಕೆಯೊಂದನ್ನು ಪ್ರಾರಂಭಿಸುವುದೇ ಬಹುದೊಡ್ಡ ಸಾಹಸದ ಕೆಲಸವಾಗಿತ್ತು. ಶೈಕ್ಷಣಿಕವಾಗಿ ಹಿಂದುಳಿದಿದ್ದ, ಅದರಲ್ಲೂ  ಮುಸ್ಲಿಮ್ ಸಮುದಾಯವಂತೂ ಇನ್ನಷ್ಟು ಪ್ರಪಾತದಲ್ಲಿದ್ದ ಕಾಲ. ಅಕ್ಷರ ಬಲ್ಲವರೂ ಪತ್ರಿಕೆಯನ್ನು ಖರೀದಿಸಿ ಓದುವ ಉಮೇದು ತೋರದಿದ್ದ  ಕಾಲ ಅದು. ಹಾಗಾದರೆ, ಇಂಥ ಸ್ಥಿತಿಯಲ್ಲಿ ಸನ್ಮಾರ್ಗ ಪತ್ರಿಕೆಯನ್ನು ಪ್ರಾರಂಭಿಸುವ ಸಾಹಸಕ್ಕೆ ಯಾಕೆ ಕೈ ಹಾಕಲಾಯಿತು ಎಂಬ ಪ್ರಶ್ನೆ  ಸಹಜವಾದುದು. ಸನ್ಮಾರ್ಗ ಆ ಕಾಲದ ಅಗತ್ಯವಾಗಿತ್ತು. ಮುಖ್ಯ ವಾಹಿನಿಯ ಕನ್ನಡ ದಿನಪತ್ರಿಕೆಗಳು ಮತ್ತು ಕೆಲವೊಂದು ಸಾಪ್ತಾಹಿಕಗಳು ಸುದ್ದಿ  ಮತ್ತು ವಿಶ್ಲೇಷಣೆಯ ಹೆಸರಲ್ಲಿ ತೀರಾ ಏಕಮುಖವಾದ ಅಭಿಪ್ರಾಯಗಳನ್ನು ಪ್ರಕಟಿಸುತ್ತಿದ್ದುವು. ಮುಖ್ಯವಾಗಿ, ಇಸ್ಲಾಮ್‌ಗೆ ಸಂಬಂಧಿಸಿ ಅವು  ಪ್ರಕಟಿಸುತ್ತಿದ್ದ ಸುದ್ದಿಗಳಲ್ಲಿ ಸತ್ಯವನ್ನು ದುರ್ಬೀನು ಹಿಡಿದು ಹುಡುಕಬೇಕಾಗಿತ್ತು. ಮುಸ್ಲಿಮರ ವಿರುದ್ಧ ಮತ್ತು ಇಸ್ಲಾಮ್ ವಿರುದ್ಧ  ಬಹುಸಂಖ್ಯಾತರ ಭಾವನೆಗಳನ್ನು ಬಡಿದೆಬ್ಬಿಸಿ ಎತ್ತಿಕಟ್ಟುವ ಪ್ರಯತ್ನಗಳನ್ನು ನಿರ್ದಿಷ್ಟ ಪತ್ರಿಕೆಗಳು ಯೋಜಿತವಾಗಿ ಮಾಡುತ್ತಿದ್ದುವು. ಯಾವುದೋ  ಘಟನೆಯನ್ನು ಎತ್ತಿಕೊಂಡು ಮುಸ್ಲಿಮ್ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುವುದು ಮಾಮೂಲು ಎಂಬಂತಾಗಿತ್ತು. ಭಾರತವನ್ನಾಳಿದ  ವಿವಿಧ ಮುಸ್ಲಿಮ್ ದೊರೆಗಳನ್ನು ನೆಪ ಮಾಡಿಕೊಂಡು ಭಾರತೀಯ ಮುಸ್ಲಿಮ್ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಬುದ್ಧಿವಂತಿಕೆಯ ಬರಹಗಳೂ ಪ್ರಕಟವಾಗುತ್ತಿದ್ದುವು. ಇವನ್ನು ಪ್ರತಿಭಟಿಸಿ ಪ್ರತಿಕ್ರಿಯಿಸಿದರೆ ಅವು ಪ್ರಕಟಣೆಯ ಭಾಗ್ಯ ವನ್ನೂ ಕಾಣುತ್ತಿರಲಿಲ್ಲ. ‘ಆನೆ  ನಡೆದದ್ದೇ  ದಾರಿ’ ಎಂಬ ರೀತಿಯಲ್ಲಿ ನಡಕೊಳ್ಳುತ್ತಿದ್ದ ಈ ಪತ್ರಿಕೆಗಳ ಬಣ್ಣ ಬಯಲುಗೊಳಿಸುವ ಮತ್ತು ಸಾರ್ವಜನಿಕರಿಗೆ ಸತ್ಯ ಮಾಹಿತಿಯನ್ನು  ತಿಳಿಸುವ ಜರೂರತ್ತು ಆಗಿನ ಕಾಲದಲ್ಲಿ ಬಹಳವೇ ಇತ್ತು. ಹಾಗೆಯೇ,

ಮುಸ್ಲಿಮ್ ಸಮುದಾಯಲ್ಲಿ ಬರಹಗಾರರನ್ನು ತಯಾರಿಸುವ ಅಗತ್ಯವೂ ಇತ್ತು. ಜೊತೆಗೇ, ಇಸ್ಲಾಮಿನ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳನ್ನು  ನೀಗಿಸುವ ಹಾಗೂ ಸಮಾಜಕ್ಕೆ ಇಸ್ಲಾಮ್‌ನ ಸಮಗ್ರ ಪರಿಚಯ ಮಾಡಿಸುವ ಅನಿವಾರ್ಯತೆಯೂ ಇತ್ತು. ಈ ಎಲ್ಲವನ್ನೂ ಮನಗಂಡು 1978  ಎಪ್ರಿಲ್ 23ರಂದು ಸನ್ಮಾರ್ಗ ಪತ್ರಿಕೆಯನ್ನು ಪ್ರಾರಂಭಿಸಲಾಯಿತು. ಹಾಗಂತ,
ಸ್ಥಾಪಕ ಸಂಪಾದಕ ಇಬ್ರಾಹೀಮ್ ಸಈದ್‌ರಿಂದ ಹಿಡಿದು ನೂರ್ ಮುಹಮ್ಮದ್, ಸಾದುಲ್ಲಾ, ಕೆ.ಎಂ. ಶರೀಫ್ ಮತ್ತು ಇನ್ನಿತರ ಕನಸುಗಾರ  ಯುವಕರಲ್ಲಿ ಬತ್ತದ ಉತ್ಸಾಹ ಮತ್ತು ಮಹತ್ವಾಕಾಂಕ್ಷೆಯನ್ನು ಬಿಟ್ಟರೆ ಇನ್ನಾವ ಪತ್ರಿಕಾ ಅನುಭವವೂ ಇರಲಿಲ್ಲ. ಕನ್ನಡ, ಉರ್ದು, ಇಂಗ್ಲಿಷ್,  ಮಲಯಾಳಂ, ಅರಬಿ, ಹಿಂದಿ ಭಾಷೆ ತಿಳಿದಿದ್ದ ಈ ತಂಡ ಸನ್ಮಾರ್ಗ ಪತ್ರಿಕೆಯನ್ನು ಕಟ್ಟುವ ಕೆಲಸದಲ್ಲಿ ತೊಡಗಿದಾಗ ಕರಾವಳಿಯಲ್ಲಿ ಅದಾಗಲೇ  ಇಂಥ ಒಂದೆರಡು ಪತ್ರಿಕೆಗಳು ಹುಟ್ಟಿ ತೆವಲುತ್ತಿದ್ದುವು. ಅವುಗಳ ಆರ್ಥಿಕ ಪರಿಸ್ಥಿತಿಯನ್ನು ಬಲ್ಲ ಯಾರೂ ಇನ್ನೊಂದು ಪತ್ರಿಕೆಯನ್ನು  ಆರಂಭಿಸುವ ಸಾಹಸ ಮಾಡಲಾರರು ಎಂಬಷ್ಟು ಅವು ದಯನೀಯ ಸ್ಥಿತಿಯಲ್ಲಿದ್ದುವು. ಬುದ್ಧಿವಂತರಾದ ಯಾರೂ ಕೂಡಾ ಪತ್ರಿಕೆಗೆ ಬಂಡವಾಳ ಹೂಡಲಾರರು ಎಂಬ ವಾತಾವರಣ ಎಷ್ಟು ಸಹಜವಾಗಿತ್ತೆಂದರೆ, ಅದನ್ನು ತಿರಸ್ಕರಿಸಿ ವಾದ ಮಂಡಿಸುವುದಕ್ಕೆ ಪೂರಕವಾದ ಏನೂ ಇರಲಿಲ್ಲ. ಅಲ್ಲದೇ,

ಇಬ್ರಾಹೀಮ್ ಸಈದ್ ಮತ್ತು ಅವರ ಬೆಂಬಲಿಗ ತಂಡದಲ್ಲಿ ಉತ್ಸಾಹ ಇತ್ತೇ ಹೊರತು ಆರ್ಥಿಕವಾಗಿ ಯಾವ ಶಕ್ತಿಯೂ ಇರಲಿಲ್ಲ. ಒಂದೈದು  ವರ್ಷಗಳ ವರೆಗೆ ಪತ್ರಿಕೆಯನ್ನು ಆರ್ಥಿಕವಾಗಿ ತಾಳಿಕೊಳ್ಳಬಲ್ಲಷ್ಟು ಬಂಡವಾಳ ಸಿದ್ಧಪಡಿಸಿಕೊಂಡೂ ಇರಲಿಲ್ಲ. ಈ ಎಲ್ಲ ‘ಇಲ್ಲ’ಗಳ ನಡುವೆಯೂ  ಈ ತಂಡ ಪತ್ರಿಕೆಯನ್ನು ಪ್ರಾರಂಭಿಸುವ ಧೈರ್ಯ ತೋರಿರುವುದಕ್ಕೆ ‘ಸತ್ಯವನ್ನು ಹೇಳಲೇಬೇಕು ಮತ್ತು ಸುಳ್ಳಿನ ಬಣ್ಣ ಬಯಲುಗೊಳಿಸಲೇ  ಬೇಕು’ ಎಂಬ ಹಠವೊಂದೇ ಕಾರಣವಾಗಿತ್ತು. ‘ಎಷ್ಟು ವರ್ಷ ಈ ಪತ್ರಿಕೆ ಉಳಿಯುತ್ತದೆ ಎಂದಲ್ಲ, ಉಳಿದಷ್ಟು ವರ್ಷ ಈ ಪತ್ರಿಕೆ ಏನನ್ನು  ಮಾಡಿದೆ ಎಂಬುದೇ ಮುಖ್ಯ...’ ಅನ್ನುವ ನಿಲುವು ಪತ್ರಿಕೆಯದ್ದಾಗಿತ್ತು. ಹೀಗೆ ಪ್ರಾರಂಭವಾದ ಪತ್ರಿಕೆ ಹತ್ತು-ಹಲವು ಸವಾಲುಗಳನ್ನು  ಎದುರಿಸಿಯೂ 46 ವರ್ಷಗಳನ್ನು ಪೂರೈಸಿದೆ. ಮಾತ್ರವಲ್ಲ, ಈ ಪತ್ರಿಕೆಯ ಮೊದಲು ಮತ್ತು ನಂತರ ಹುಟ್ಟಿಕೊಂಡ ಅನೇಕ ಪತ್ರಿಕೆಗಳ ಸಾವಿಗೂ  ಸನ್ಮಾರ್ಗ ಸಾಕ್ಷಿಯಾಗಿದೆ. ಆದರೆ, ಓದುಗರು ಈವರೆಗೂ ಸನ್ಮಾರ್ಗವನ್ನು ಉಳಿಸಿ ಬೆಳೆಸಿದ್ದಾರೆ. ಆರ್ಥಿಕವಾಗಿ ನೆರವಾಗಿದ್ದಾರೆ. ಓದುಗರು ಮತ್ತು  ಹಿತೈಷಿಗಳೇ ಸನ್ಮಾರ್ಗದ ಶಕ್ತಿ ಎಂಬುದಕ್ಕೆ ಈ 46 ವರ್ಷಗಳೇ ಅತೀ ಪ್ರಮುಖ ಸಾಕ್ಷಿ.

ಕಳೆದ 46 ವರ್ಷಗಳ ಜರ್ನಿಯನ್ನು ಪರಿಶೀಲಿಸಿದರೆ, ಸನ್ಮಾರ್ಗ ಹೆಮ್ಮೆಪಟ್ಟುಕೊಳ್ಳುವುದಕ್ಕೆ ಹತ್ತು-ಹಲವು ಕಾರಣಗಳಿವೆ. ಮುಸ್ಲಿಮ್  ಸಮುದಾಯದಲ್ಲಿ ಅಕ್ಷರ ಪ್ರೀತಿಯನ್ನು ಹುಟ್ಟಿಸಿದ ಶ್ರೇಯಸ್ಸು ಸನ್ಮಾರ್ಗಕ್ಕೆ ಸಲ್ಲಬೇಕು. ಮುಸ್ಲಿಮ್ ಸಮುದಾಯದ ಬರಹಗಾರರನ್ನು ಸಂಪಾದಕರ  ಪತ್ರ ವಿಭಾಗಕ್ಕೆ ಸೀಮಿತಗೊಳಿಸಿದ್ದ ಮುಖ್ಯವಾಹಿನಿಯ ಪತ್ರಿಕೆಗಳು ಬೆರಗುಗೊಳ್ಳುವಂತೆ ಸಮುದಾಯದಲ್ಲಿ ಬರಹಗಾರರನ್ನು, ಜರ್ನಲಿಸ್ಟ್ಗಳನ್ನು  ಮತ್ತು ಸಾಹಿತಿಗಳನ್ನು ತಯಾರಿಸಿದ ಹೆಗ್ಗಳಿಕೆಯೂ ಸನ್ಮಾರ್ಗದ್ದು. ಮಹಿಳಾ ಬರಹಗಾರರನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ ಕೀರ್ತಿಯೂ ಸ ನ್ಮಾರ್ಗದ್ದೇ. ಮಹಿಳಾ ಬರಹಗಾರರನ್ನು ಪ್ರತಿವಾರ ತನ್ನ ಪುಟದಲ್ಲಿಟ್ಟು ಗೌರವಿಸಿದ ಸನ್ಮಾರ್ಗವು ಅಂತಿಮವಾಗಿ ‘ಅನುಪಮ’ ಎಂಬ ಮಹಿಳಾ  ಮಾಸಿಕದ ಪ್ರಾರಂಭಕ್ಕೂ ನೇತೃತ್ವ ನೀಡಿತು. ಸಂಪಾದಕರಿಂದ  ಹಿಡಿದು ಸಂಪಾದಕೀಯ ಬಳಗದ ವರೆಗೆ ಪ್ರತಿಯೊಂದನ್ನೂ ಮಹಿಳೆಯರೇ  ನಿರ್ವಹಿಸುತ್ತಿರುವ ಈ ಪತ್ರಿಕೆಯ ಯಶಸ್ಸು ಕನ್ನಡ ಪತ್ರಿಕಾ ರಂಗದಲ್ಲೇ  ವಿಶಿಷ್ಟ ಪ್ರಯೋಗ. 2 ದಶಕಗಳನ್ನು ದಾಟಿ ಅನುಪಮ  ಮುಂದುವರಿಯುತ್ತಿರುವಾಗಲೇ, 2019ರಲ್ಲಿ ಸನ್ಮಾರ್ಗ ಇನ್ನೂ ಒಂದು ಸಾಹಸಕ್ಕೆ ಕೈ ಹಾಕಿತು. ಇಂಟರ್‌ನೆಟ್ ಯುಗದ ಬೇಡಿಕೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಸನ್ಮಾರ್ಗ ನ್ಯೂಸ್‌ಪೋರ್ಟಲನ್ನು ಆರಂಭಿಸಿತು. ಸುಳ್ಳು ಸುದ್ದಿಗಳೇ ಪಾರಮ್ಯ ಸಾಧಿಸಿರುವ ಡಿಜಿಟಲ್ ಲೋಕದಲ್ಲಿ ‘ಸತ್ಯ  ಸುದ್ದಿ’ಯನ್ನು ತಲುಪಿಸುವ ಗುರಿ ಇದರ ಹಿಂದಿತ್ತು. ಇದರ ಬೆನ್ನಿಗೇ 2020ರಲ್ಲಿ ಸನ್ಮಾರ್ಗ ನ್ಯೂಸ್ ಚಾನೆಲನ್ನೂ ಆರಂಭಿಸಿತು. ಟಿ.ವಿ. ಚಾ ನೆಲ್‌ಗಳು ಮಂಕಾಗುತ್ತಿರುವ ಮತ್ತು ಡಿಜಿಟಲ್ ಚಾನೆಲ್‌ಗಳೇ ಜನರ ಪಾಲಿಗೆ ಅಚ್ಚುಮೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಸನ್ಮಾರ್ಗ ನ್ಯೂಸ್  ಚಾನೆಲ್ ತೀರಾ ಸಣ್ಣ ಅವಧಿಯಲ್ಲೇ  ಭಾರೀ ಜನಪ್ರೀತಿಗೂ ಒಳಗಾಗಿದೆ. ಲಕ್ಷವನ್ನೂ ದಾಟಿದ ಚಂದಾದಾರರು ಮತ್ತು ರಾಜ್ಯದಾದ್ಯಂತದಿಂದ  ಜನರು ವ್ಯಕ್ತಪಡಿಸುತ್ತಿರುವ ಪ್ರತಿಕ್ರಿಯೆ ಹಾಗೂ ಬೆಂಬಲಗಳೇ ಈ ಚಾನೆಲ್ ಕಾಲದ ಅಗತ್ಯವಾಗಿತ್ತು ಅನ್ನುವುದನ್ನು ಹೇಳುತ್ತದೆ. ಹಾಗಂತ,

ಎಲ್ಲವೂ ಸರಾಗವಾಗಿದೆ ಎಂದಲ್ಲ. ಸನ್ಮಾರ್ಗ ಪತ್ರಿಕೆ, ಅನುಪಮ ಪತ್ರಿಕೆ, ಸನ್ಮಾರ್ಗ ವೆಬ್ ಪೋರ್ಟಲ್ ಮತ್ತು ಸನ್ಮಾರ್ಗ ನ್ಯೂಸ್ ಚಾನೆಲ್-  ಇವೆಲ್ಲವನ್ನೂ ನಿರ್ವಹಿಸುವುದಕ್ಕೆ ಅಪಾರ ಹಣಕಾಸಿನ ಅಗತ್ಯ ಇದೆ. ಸಿಬಂದಿಗಳು, ಅವರ ವೇತನ, ಪತ್ರಿಕೆಯ ಮುದ್ರಣ ವೆಚ್ಚ, ಸಾಗಾಟದ  ವೆಚ್ಚ, ಚಾನೆಲ್‌ಗೆ ಬೇಕಾದ ಉಪಕರಣಗಳು.. ಇತ್ಯಾದಿಗಳನ್ನೆಲ್ಲ ಭರಿಸುವುದು ಸುಲಭ ಅಲ್ಲ. ಪ್ರತಿ ತಿಂಗಳು ಇವುಗಳಿಗೆಂದೇ ಬಹುದೊಡ್ಡ  ಮೊತ್ತವನ್ನು ಎತ್ತಿ ಇಡಬೇಕಾಗುತ್ತದೆ. ಕೇವಲ ಪತ್ರಿಕೆಯ ಚಂದಾದಾರಿಕೆಯಿಂದ  ಈ ಎಲ್ಲ ವೆಚ್ಚಗಳನ್ನು ಸರಿದೂಗಿಸುವುದಕ್ಕೆ ಸಾಧ್ಯವೂ ಇಲ್ಲ.  ಅಲ್ಲದೇ, ಜಾಹೀರಾತುಗಳನ್ನು ಅಳೆದೂ ತೂಗಿ ಸ್ವೀಕರಿಸುವ ನಿಯಮವನ್ನು ಸನ್ಮಾರ್ಗ ತನಗೆ ತಾನೇ ವಿಧಿಸಿಕೊಂಡಿದೆ. ಮದ್ಯ, ಬ್ಯಾಂಕ್,  ಜೂಜು, ಜ್ಯೋತಿಷ್ಯ, ಸಿನಿಮಾ ಇತ್ಯಾದಿ ಇತ್ಯಾದಿ ಜಾಹೀರಾತುಗಳನ್ನು ಸನ್ಮಾರ್ಗ ಪ್ರಕಟಿಸುವುದೂ ಇಲ್ಲ. ಹೆಚ್ಚಿನ ಜಾಹೀರಾತುಗಳು ಒಂದಲ್ಲ  ಒಂದು ರೀತಿಯಲ್ಲಿ ‘ಪ್ರಕಟಿಸಬಾರದ ಕೆಟಗರಿಯಲ್ಲೇ ’ ಇರುತ್ತವಾದ್ದರಿಂದ ಜಾಹೀರಾತುಗಳ ಮೂಲಕ ಆದಾಯ ಗಳಿಸುವ ಅವಕಾಶಗಳೂ  ಕಡಿಮೆ. ಆದ್ದರಿಂದ, ಸನ್ಮಾರ್ಗ ದಾನಿಗಳನ್ನೇ ಅವಲಂಬಿಸಿದೆ. ಅಂದಹಾಗೆ,

ಸನ್ಮಾರ್ಗದ ಪಾಲಿಗೆ ಓದುಗರು ಮತ್ತು ಹಿತೈಷಿಗಳ ದೊಡ್ಡದೊಂದು ಅಭಿಮಾನಿ ಬಳಗವಿದೆ. ಈ ಅಭಿಮಾನಿಗಳೇ ಸನ್ಮಾರ್ಗದ ಪಾಲಿಗೆ  ಆಮ್ಲಜನಕ. ಸನ್ಮಾರ್ಗ ಈ ವರೆಗೆ ಉಳಿದಿರುವುದು ಮತ್ತು ಕಾಲದ ಅಗತ್ಯಕ್ಕೆ ಅನುಸಾರವಾಗಿ ಅನುಪಮ, ವೆಬ್ ಪೋರ್ಟಲ್ ಮತ್ತು ನ್ಯೂಸ್  ಚಾನೆಲ್ ಆರಂಭಿಸಿರುವುದೆಲ್ಲ ಅಲ್ಲಾಹನ ಅನುಗ್ರಹ ಮತ್ತು ಈ ಅಭಿಮಾನಿ ಬಳಗದ ಆರ್ಥಿಕ ಬೆಂಬಲ, ಪ್ರೋತ್ಸಾಹದಿಂದಾಗಿದೆ. ಈ ಬೆಂಬಲ  ಇನ್ನು ಮುಂದಕ್ಕೂ ಸದಾ ಇರಲಿ ಎಂದು ಸನ್ಮಾರ್ಗ ಬಯಸುತ್ತದೆ. ಮಾತ್ರವಲ್ಲ, ಸನ್ಮಾರ್ಗ ಎಂಬ ಮಾಧ್ಯಮ ಪ್ಯಾಕೇಜನ್ನು ಇನ್ನಷ್ಟು  ಪ್ರಬಲವಾಗಿ ಕಟ್ಟುವುದಕ್ಕೆ ಆರ್ಥಿಕವಾಗಿ ಸದಾ ನೆರವಾಗುತ್ತಲಿರಿ ಎಂದು ವಿನಂತಿಸುತ್ತದೆ.

Thursday, 9 May 2024

ಅನ್ಯಾಯದ ಬುಡದಲ್ಲೇ ಸ್ಫೋಟಿಸಿದ ನ್ಯಾಯಪರ ಘರ್ಜನೆ




ಗಾಝಾದ ಮೇಲೆ ಇಸ್ರೇಲ್ ದಾಳಿಯನ್ನು ಖಂಡಿಸಿ ಅಮೇರಿಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಇದೀಗ  ಯುರೋಪ್‌ಗೂ ಹರಡಿದೆ. ಆಸ್ಟ್ರೇಲಿಯಾ ಮತ್ತು ಕೆನಡಾದ ವಿಶ್ವವಿದ್ಯಾಲಯಗಳಲ್ಲೂ ಪ್ರತಿಭಟನೆ ನಡೆಯತೊಡಗಿದೆ. ಅಮೇರಿಕದ ಅಟ್ಲಾಂಟಾದ  ಎಮೊರಿ ವಿವಿ ಆವರಣದಲ್ಲಿ ನಡೆದ ಪ್ರತಿಭಟನೆ ಘರ್ಷಣೆಗೆ ತಿರುಗಿದೆ. ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವಿನ ಈ ಘರ್ಷಣೆಯನ್ನು  ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ರಬ್ಬರ್ ಗುಂಡುಗಳನ್ನು ಸಿಡಿಸಿದ್ದಾರೆ. ಬ್ಲೂಮಿಂಗ್ಟನ್‌ನ ಇಂಡಿಯಾ ವಿವಿಯ ಕ್ಯಾಂಪಸ್  ಆವರಣದಲ್ಲಿ ಟೆಂಟ್ ಸ್ಥಾಪಿಸಿ ಧರಣಿ ನಡೆಸುತ್ತಿದ್ದ 20ಕ್ಕಿಂತಲೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಅರಿರೇನ ರಾಜ್ಯದ ವಿವಿ  ಆವಣರದಲ್ಲೂ ಪ್ರತಿಭಟನೆ ನಡೆದಿದೆ. ಟೆಂಟ್ ಹಾಕಿ ಪ್ರತಿಭಟಿಸುತ್ತಿದ್ದ 70ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಸೈಂಟ್  ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಅಮೇರಿಕದ ಅಧ್ಯಕ್ಷೀಯ ಅಭ್ಯರ್ಥಿ ಜೆಲ್ ಸ್ಟೆಯಿನ್ ಅವರೇ ಪ್ರತಿಭಟನೆಗೆ ನೇತೃತ್ವ  ನೀಡಿದ್ದಾರೆ. ಇಲ್ಲಿ 80ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದೊಂದು ವಾರದಿಂದ ಅಮೇರಿಕದ ಯೇಲ್  ವಿಶ್ವವಿದ್ಯಾಲಯ, ದಕ್ಷಿಣ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯ, ವಾಂಡರ್ ಬಿಟ್ ವಿಶ್ವವಿದ್ಯಾಲಯ, ಮಿನ್ನಿಸೋಟಾ ವಿವಿಯೂ ಸೇರಿದಂತೆ  ಅಮೇರಿಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಎಲ್ಲಿಯ ವರೆಗೆಂದರೆ ಪ್ರತಿಭಟನೆಯ ತೀವ್ರತೆಗೆ ಭಯಪಟ್ಟು ಕೆಲವು  ವಿಶ್ವವಿದ್ಯಾಲಯಗಳಿಗೆ ರಜೆ ಸಾರಲಾಗಿದೆ. ಕೆಲವು ವಿದ್ಯಾರ್ಥಿಗಳನ್ನು ಈಗಾಗಲೇ ವಿವಿಯಿಂದ ಅಮಾನತುಗೊಳಿಸಲಾಗಿದೆ. ಇವರಲ್ಲಿ ತಮಿಳು ನಾಡಿನವರಾದ ಅಚಿಂತ್ಯ ಶಿವಲಿಂಗA ಕೂಡಾ ಒಬ್ಬರು. ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಇವರು ಇತರ 100ಕ್ಕಿಂತಲೂ  ಅಧಿಕ ವಿದ್ಯಾರ್ಥಿಗಳ ಜೊತೆ ಸೇರಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇವರನ್ನು ಮತ್ತು ಹಸನ್ ಝೈದಿ ಎಂಬ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದರು. ಇದನ್ನು ಖಂಡಿಸಿ ಪ್ರತಿಭಟನಾಕಾರರೊಂದಿಗೆ ಇನ್ನೂ 200ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ  ಸೇರಿಕೊಂಡರು. ಇದೇವೇಳೆ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಇನ್ನೂ ಒಂದು ವಿಶೇಷ ಘಟನೆ ನಡೆದಿದೆ. ಇಸ್ರೇಲ್ ವಿರುದ್ಧ ಪ್ರತಿಭಟನಾ  ರ‍್ಯಾಲಿಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿ, ಆತನ ಎರಡೂ ಕೈಗಳನ್ನು ಬೆನ್ನಿಗೆ ಕಟ್ಟಿ ಕರೆದೊಯ್ಯಲು ಸಿದ್ಧವಾಗಿದ್ದರು.  ಈ ಸಂದರ್ಭದಲ್ಲಿ ಆ ವಿದ್ಯಾರ್ಥಿ ನಮಾಝï‌ಗೆ ಸಿದ್ಧವಾದದ್ದು ಮತ್ತು ಅದೇ ಸ್ಥಿತಿಯಲ್ಲಿ ನಮಾಝï ನಿರ್ವಹಿಸಿದ ವೀಡಿಯೋ ಸೋಶಿಯಲ್  ಮೀಡಿಯಾದಲ್ಲಿ ಭಾರೀ ಹಂಚಿಕೆಯಾಯಿತು. ಇದೇವೇಳೆ, ಕೆನಡಾದ ಮಾಂಟ್ರಿಯಲ್‌ನಲ್ಲಿರುವ ಮ್ಯಾಕ್‌ಗಿಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು  ಪ್ರತಿಭಟನಾ ಟೆಂಟ್ ನಿರ್ಮಿಸಿz್ದÁರೆ. ಇಸ್ರೇಲ್‌ನ ಜೊತೆಗಿರುವ ಎಲ್ಲ ಶೈಕ್ಷಣಿಕ ಸಂಬಂಧಗಳನ್ನು ಕೆನಡಾ ಕಡಿದುಕೊಳ್ಳಬೇಕು ಎಂದು ಈ  ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಒಂದುಕಡೆ, ಅಮೇರಿಕ ಮತ್ತು ಮಿತ್ರ ರಾಷ್ಟ್ರಗಳು ಇಸ್ರೇಲ್ ಪರ ನಿಲ್ಲುವಾಗ, ಅಲ್ಲಿನ ನಾಗರಿಕರು ಗಾಝಾದ ಜೊತೆ ನಿಲ್ಲುವ ಕೌತುಕ ಇನ್ನೊಂದು ಕಡೆಯಿದೆ. ಅಮೇರಿಕದ ಅಧ್ಯಕ್ಷ  ಜೋ ಬೈಡನ್ ಇಸ್ರೇಲನ್ನು ಎಷ್ಟೇ ಸಮರ್ಥಿಸಿಕೊಂಡರೂ ಮತ್ತು ಏನೇ ನೆರವು ಒದಗಿಸಿದರೂ ಅ ಲ್ಲಿಯದೇ ನಾಗರಿಕರು ದಿನೇ ದಿನೇ ಅವರನ್ನು ಬೆತ್ತಲಾಗಿಸುತ್ತಿದ್ದಾರೆ. ಬೈಡನ್ ಕರೆದ ಇಫ್ತಾರ್ ಕೂಟವನ್ನು ಅಲ್ಲಿನ ಮುಸ್ಲಿ ಮರು ಬಹಿಷ್ಕರಿಸಿದ  ಅಪರೂಪದ ಘಟನೆಯೂ ಇದರಲ್ಲಿ ಒಂದು. ಸಾಮಾನ್ಯವಾಗಿ ದೇಶದ ಅಧ್ಯಕ್ಷರ ಜೊತೆ ನಾಗರಿಕರು ಹೀಗೆ ನಡಕೊಳ್ಳುವುದಿಲ್ಲ. ಏನೇ ಭಿನ್ನಾಭಿ ಪ್ರಾಯ ಇದ್ದರೂ ಅಧ್ಯಕ್ಷರು ಕರೆದ ಔತಣ ಕೂಟದಲ್ಲಿ ನಾಗರಿಕರು ಭಾಗವಹಿಸುತ್ತಾರೆ. ಅದು ಅವರ ಹುದ್ದೆಗಿರುವ ಘನತೆಯ ದ್ಯೋತ ಕವೂ  ಹೌದು. ಆದರೆ ಬೈಡನ್ ಅವರ ಇಸ್ರೇಲ್ ಪರ ಏಕಮುಖ ಧೋರಣೆ ಅಲ್ಲಿನ ನಾಗರಿಕರಲ್ಲಿ ಎಂಥ ಅಸಮಾಧಾನ ಹುಟ್ಟುಹಾಕಿದೆಯೆಂದರೆ,  ಅವರ ಆಹ್ವಾನವನ್ನೇ ತಿರಸ್ಕರಿಸುವಷ್ಟು. ಅಮೇರಿಕದ ಘನತೆಯನ್ನು ಮತ್ತು ಅಧ್ಯಕ್ಷೀಯ ಹುದ್ದೆಯ ಗೌರವವನ್ನು ಬೈಡನ್ ಮಣ್ಣುಪಾಲು  ಮಾಡಿದ್ದಾರೆ ಎಂಬ ಭಾವನೆ ಅಮೇರಿಕದಾದ್ಯಂತ ವ್ಯಾಪಕವಾಗುತ್ತಿದೆ. ಇಸ್ರೇಲ್‌ನ ಪ್ರತಿ ಕ್ರೌರ್ಯಕ್ಕೂ ಅಧ್ಯಕ್ಷ ಬೈಡನ್ ಕಣ್ಣು ಮುಚ್ಚಿ ಬೆಂಬಲ  ಸಾರುತ್ತಿದ್ದಾರೆ. ವಿಶ್ವಸಂಸ್ಥೆಯಲ್ಲಿ ಮಂಡನೆಯಾಗುವ ಇಸ್ರೇಲ್ ವಿರುದ್ಧದ ಯಾವುದೇ ಮಸೂದೆಗೂ ಅಮೇರಿಕ ವಿಟೋ ಪ್ರಯೋಗಿಸುತ್ತಿದೆ. 34  ಸಾವಿರಕ್ಕಿಂತಲೂ ಅಧಿಕ ನಾಗರಿಕರನ್ನು ಹತ್ಯೆಗೈದಿರುವ ಮತ್ತು ಅದರ ಹಲವು ಪಟ್ಟು ನಾಗರಿಕರನ್ನು ಹಸಿವೆಗೆ ದೂಡಿರುವ ಹಾಗೂ ಲಕ್ಷಾಂತರ  ಮಂದಿಯನ್ನು ನಿರ್ವಸಿತರನ್ನಾಗಿಸಿರುವ ರಾಷ್ಟ್ರವೊಂದಕ್ಕೆ ಬೈಡನ್ ಕಾವಲುಗಾರನಾಗಿ ನಿಂತಿರುವುದು ಈ ಶತಮಾನದ ಅತಿದೊಡ್ಡ ಕ್ರೌರ್ಯ.

ಒಂದುಕಡೆ ರಶ್ಯಾದ ದಾಳಿಗೊಳಗಾಗಿರುವ ಉಕ್ರೇನ್‌ಗೆ ಬೆಂಬಲವಾಗಿ ನಿಂತಿರುವ ಅಮೇರಿಕವು ಇನ್ನೊಂದು ದಾಳಿಕೋರ ಇಸ್ರೇಲನ್ನೂ ಬೆಂಬಲಿಸುತ್ತಿದೆ. ಸಂತ್ರಸ್ತ ರಾಷ್ಟ್ರ ಎಂಬ ನೆಲೆಯಲ್ಲಿ ಉಕ್ರೇನ್ ಪರ ಅಮೇರಿಕ ನಿಂತಿದೆ ಎಂಬುದೇ ನಿಜವಾಗಿದ್ದರೆ, ಯಾವ ಕಾರಣಕ್ಕೂ ಇಸ್ರೇಲ್ ಪರ  ಅಮೇರಿಕ ನಿಲ್ಲುವುದಕ್ಕೆ ಅರ್ಥವೇ ಇಲ್ಲ. ಅದು ನಿಲ್ಲಬೇಕಾದುದು ಗಾಝಾ ಅಥವಾ ಫೆಲೆಸ್ತೀನ್ ಪರ. ಉಕ್ರೇನ್ ಹೇಗಿದ್ದರೂ ಒಂದು  ಸಾರ್ವಭೌಮ ರಾಷ್ಟ್ರ. ಅದಕ್ಕೆ ಅದರದ್ದೇ  ಆದ ಸುಸಜ್ಜಿತ ಸೇನೆ, ಪೊಲೀಸ್ ವ್ಯವಸ್ಥೆ, ಗಡಿ ಇತ್ಯಾದಿ ಎಲ್ಲವೂ ಇದೆ. ವಿಶ್ವಸಂಸ್ಥೆ ಮಾನ್ಯ ಮಾಡಿರುವ  ರಾಷ್ಟ್ರಗಳ ಪಟ್ಟಿಯಲ್ಲಿ ಉಕ್ರೇನ್ ಇದೆ. ಆದರೆ, ಫೆಲೆಸ್ತೀನ್ ಕಳೆದ 70 ವರ್ಷಗಳಿಂದ ರಾಷ್ಟçದ ಮಾನ್ಯತೆಗಾಗಿ ವಿಶ್ವಸಂಸ್ಥೆಯಲ್ಲಿ ಹೋರಾಡುತ್ತಿದೆ.  ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರವನ್ನು ಬಯಸುತ್ತಿದೆ. ಆದರೆ, ವಿಶ್ವಸಂಸ್ಥೆಯಲ್ಲಿ ಈ ಕುರಿತಂತೆ ಮಂಡನೆಯಾಗುವ ಯಾವುದೇ ಮಸೂದೆಗೂ ಅಮೇರಿಕ  ಅಡ್ಡಗಾಲು ಹಾಕುತ್ತಲೇ ಬಂದಿದೆ. ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕೆ ಅನುಮತಿಸಲಾರೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಬಹಿರಂಗವಾಗಿ ಹೇಳಿಕೆ  ನೀಡಿರುವ ಹೊರತಾಗಿಯೂ ಅಮೇರಿಕದ ನಿಲುವಿನಲ್ಲಿ ಬದಲಾವಣೆ ಆಗುತ್ತಿಲ್ಲ. ವಿಶಾಲ ಫೆಲೆಸ್ತೀನ್ ಮಣ್ಣಿನಲ್ಲಿ ಇಸ್ರೇಲ್ ರಾಷ್ಟ್ರವನ್ನು   1948ರಲ್ಲೇ  ಸ್ಥಾಪಿಸಲು ವಿಶ್ವಸಂಸ್ಥೆಗೆ ಸಾಧ್ಯವಾಗಿದೆ ಎಂದಾದರೆ 70 ವರ್ಷಗಳ ನಂತರವೂ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರವನ್ನು ಸ್ಥಾಪಿಸಲು  ವಿಶ್ವಸಂಸ್ಥೆಗೆ ಯಾಕೆ ಸಾಧ್ಯವಾಗಿಲ್ಲ? 70 ವರ್ಷಗಳ ಹಿಂದೆ ಇಸ್ರೇಲ್ ರಾಷ್ಟ್ರಸ್ಥಾಪನೆಗೆ ಬೆಂಬಲಿಸಿರುವ ರಾಷ್ಟçಗಳು ಯಾಕೆ ಆ ಬಳಿಕ ಸ್ವತಂತ್ರ  ಫೆಲೆಸ್ತೀನ್ ರಾಷ್ಟç ನಿರ್ಮಾಣಕ್ಕೆ ಬೆಂಬಲಿಸುತ್ತಿಲ್ಲ? ಫೆಲೆಸ್ತೀನ್ ಎಂಬುದು ಫೆಲೆಸ್ತೀನಿಯರದ್ದು. ಹೇಗೆ ಅಮೇರಿಕ ಅಮೇರಿಕನ್ನರದ್ದೋ  ಹಾಗೆಯೇ.  ಆದರೆ, ಇದೇ ಫೆಲೆಸ್ತೀನಿಯರು ಇವತ್ತು ಆ ಮಣ್ಣಿನಲ್ಲಿ ಹೊರಗಿನಿಂದ ಬಂದು ಕುಳಿತವರ ಜೊತೆ ರಾಷ್ಟ್ರಕ್ಕಾಗಿ ಅಂಗಲಾಚುವಂಥ ಪರಿಸ್ಥಿತಿಯನ್ನು  ತಂದವರು ಯಾರು? ಯಾಕೆ? ಇಸ್ರೇಲ್ ರಾಷ್ಟ್ರ ಸ್ಥಾಪಿಸಿದ ವಿಶ್ವಸಂಸ್ಥೆಗೆ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪಿಸುವ ಸಾಮರ್ಥ್ಯ ಇಲ್ಲ ಎಂದಾದರೆ,  ಅದು ಅಸ್ತಿತ್ವದಲ್ಲಿರಬೇಕಾದ ಅಗತ್ಯವಾದರೂ ಏನಿದೆ?

ನ್ಯಾಯ ಎಂಬ ಎರಡಕ್ಷರದ ಆರಂಭದಲ್ಲಿ ಅ ಎಂಬ ಒಂದಕ್ಷರವನ್ನು ಸೇರಿಸಿದರೆ, ಜಗತ್ತೇ ಇಷ್ಟಪಡದ ಪದವಾಗಿ ಅದು ಮಾರ್ಪಡುತ್ತದೆ.  ನ್ಯಾಯ ಈ ಜಗತ್ತಿನ ಬಯಕೆ. ಈ ಜಗತ್ತಿನಲ್ಲಿ ಮಾನವರ ಬದುಕು ನ್ಯಾಯ ಎಂಬ ನಿರೀಕ್ಷೆಯನ್ನು ಆಧರಿಸಿದೆ. ನ್ಯಾಯದ ನಿರೀಕ್ಷೆಯೇ ಇಲ್ಲದ  ಭೂಮಿಯಲ್ಲಿ ಅನ್ಯಾಯವೇ ರಾಜನಾಗಿರುತ್ತದೆ. ಅನ್ಯಾಯಕ್ಕೆ ದೀರ್ಘ ಆಯುಷ್ಯ ಇರುವುದಿಲ್ಲ. ಪ್ರಕೃತಿಯ ಗುಣವೇ ನ್ಯಾಯದ್ದಾಗಿದೆ. ‘ನ್ಯಾಯ  ನಿಮ್ಮ ಹೆತ್ತವರ ವಿರುದ್ಧವಿದ್ದರೂ ನೀವು ನ್ಯಾಯದ ಜೊತೆ ನಿಲ್ಲಬೇಕೇ ಹೊರತು ಹೆತ್ತವರ ಜೊತೆ ಅಲ್ಲ..’ ಎಂದು ಪವಿತ್ರ ಕುರ್‌ಆನ್ ಬೋಧಿಸುತ್ತದೆ. ‘ಓರ್ವ ವ್ಯಕ್ತಿಯನ್ನು ಅನ್ಯಾಯವಾಗಿ ಕೊಂದವ ಸಕಲ ಮಾನವ ಕೋಟಿಯನ್ನು ಕೊಂದ ಪಾತಕಿಯಾಗುತ್ತಾನೆ..’ ಎಂದೂ ಪವಿತ್ರ ಕುರ್‌ಆ ನ್ ಎಚ್ಚರಿಸುತ್ತದೆ. ಜಗತ್ತು ಉಸಿರಾಡುತ್ತಿರುವುದೇ ನ್ಯಾಯ ಮತ್ತು ಅನ್ಯಾಯಗಳ ನಡುವೆ. ನ್ಯಾಯವನ್ನು ನೆಲೆ ನಿಲ್ಲಿಸುವುದು ಮತ್ತು ಅ ನ್ಯಾಯವನ್ನು ತೊಲಗಿಸುವುದೇ ಸಕಲ ಪ್ರವಾದಿಗಳ ಮತ್ತು ಅನುಭಾವಿಗಳ ಗುರಿಯಾಗಿತ್ತು. ಬಹುಶಃ, ನ್ಯಾಯ ಮೇಲುಗೈ ಪಡೆದೇ ತೀರುತ್ತದೆ  ಎಂಬ ಅಪಾರ ನಿರೀಕ್ಷೆಯೇ ಇವತ್ತು ಫೆಲೆಸ್ತೀನಿಯರನ್ನು ಹೋರಾಟದ ಕಣದಲ್ಲಿ ನಿಲ್ಲಿಸಿದೆ ಎಂದೇ ಹೇಳಬಹುದು. ಅಮೇರಿಕ ಇರಲಿ, ಇಸ್ರೇಲ್  ಇರಲಿ ಅಥವಾ ವಿಶ್ವಸಂಸ್ಥೆಯೇ ಇರಲಿ, ಅನ್ಯಾಯದ ನೊಗ ಹೊತ್ತವರಿಗೆ ಕೊನೆ ಎಂಬುದಿರುತ್ತದೆ. ಅನ್ಯಾಯ ಪ್ರಕೃತಿ ವಿರೋಧಿ  ಆಗಿರುವುದರಿಂದ ಅಂತಿಮ ಗೆಲುವು ಅನ್ಯಾಯದ್ದಾಗಿರಲು ಸಾಧ್ಯವೇ ಇಲ್ಲ. ಒಂದು ದಿನ ಅನ್ಯಾಯದ ವಿರುದ್ಧ ನ್ಯಾಯ ಗೆಲುವು ಸಾಧಿಸಲಿದೆ. ಆ  ಶುಭ ದಿನಕ್ಕಾಗಿ ಫೆಲೆಸ್ತೀನಿಯರು ಕಾಯುತ್ತಿದ್ದಾರೆ.