Tuesday, 21 August 2018

ಈ ಮುಖಾಮುಖಿಯಲ್ಲಿ ಮಾನವ ಗೆಲ್ಲಲಾರ



ಮಳೆಗೂ ಅನಾಹುತಕ್ಕೂ ನಡುವೆ ಏನು ಸಂಬಂಧ ಇದೆ? 2 ದಶಕಗಳ ಹಿಂದೆ ಕೇರಳ ಮತ್ತು ಕೊಡಗಿನ ಮೇಲೆ ಇಂದಿನಂತೆ ಮಳೆ ಸುರಿದಿರುತ್ತಿದ್ದರೆ, ಈ ಪರಿ ಗುಡ್ಡಗಳು ಕುಸಿಯುತ್ತಿತ್ತೇ? ಊರೇ ಮಾಯವಾಗುತ್ತಿತ್ತೇ? ಗ್ರಾಮಕ್ಕೆ ಗ್ರಾಮವೇ ಮುಳುಗಿ ಬಿಡುತ್ತಿತ್ತೇ?
ಇಲ್ಲ ಎಂಬುದೇ ಉತ್ತರ. ಯಾಕೆಂದರೆ, ಈ ಬಾರಿ ಮಳೆಯ ಪ್ರಮಾಣದಲ್ಲಿ ಏರಿಕೆ ಆಗಿದ್ದರೂ ಅನಾಹುತ ತಂದೊಡ್ಡಬಲ್ಲಷ್ಟು ಮಳೆ ಸುರಿದಿಲ್ಲ ಎಂದೇ ತಜ್ಞರು ಅಭಿಪ್ರಾಯ ಪಡುತ್ತಾರೆ. ಭೂಮಿಯ ಮೇಲೆ ಮಾನವನ ಮಿತಿ ಮೀರಿದ ಚಟುವಟಿಕೆಯೇ ಅನಾಹುತಗಳ ಮೂಲ ಅನ್ನುತ್ತವೆ ಬೇರೆ ಬೇರೆ ವರದಿಗಳು.

ಪಶ್ಚಿಮ ಘಟ್ಟಗಳನ್ನು ಬಿಟ್ಟು ಕೊಡಗು ಜಿಲ್ಲೆಯನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇಲ್ಲಿನ ಭೂಪದರದಲ್ಲಿ ವಿಶೇಷ ಗುಣವಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕಲ್ಲು ಮಣ್ಣಾಗುವ ಪ್ರಕ್ರಿಯೆ ಪಶ್ಚಿಮಘಟ್ಟಗಳಲ್ಲಿ ಹೆಚ್ಚು. ಆದ್ದರಿಂದ ಇಲ್ಲಿ ಮಣ್ಣಿನ ಪದರ ಹೆಚ್ಚು ದಟ್ಟವಾಗಿರುತ್ತದೆ. ಉಳಿದ ಕಡೆಗಳಿಗೆ ಹೋಲಿಸಿದರೆ, ಹೆಚ್ಚು ಆಳವಾಗಿ ಮಣ್ಣು ನೆಲೆಗೊಂಡಿರುತ್ತದೆ. ಸಾಮಾನ್ಯ ಮಳೆಯನ್ನು ತಾಳಿಕೊಳ್ಳಬಲ್ಲಷ್ಟು ಸಾಮಥ್ರ್ಯವಿರುವ ಈ ಮಣ್ಣಿಗೆ, ಭಾರೀ ಮಳೆಯು ಒತ್ತಡವನ್ನು ಹೇರುತ್ತದೆ. ಈ ಬಾರಿ ಕೊಡಗಿನ ಮೇಲೆ ಮಾಮೂಲಿಗಿಂತ ಮೂರು ಪಟ್ಟು ಅಧಿಕ ಮಳೆ ಬಿದ್ದಿದೆ ಎಂದು ಅಂದಾಜಿಸಲಾಗಿದೆ. ಒಂದು ಕಡೆ ತುಂಬಾ ಆಳದವರೆಗೆ ಬರೇ ಮಣ್ಣಿನ ಪದರವೇ ಇರುವುದು ಮತ್ತು ಇನ್ನೊಂದು ಕಡೆ ವಾಡಿಕೆಗಿಂತ ಹೆಚ್ಚಾಗಿ ಮಳೆ ಸುರಿದಿರುವುದು-ಇವೆರಡೂ ಜೊತೆಗೂಡಿದಾಗ ಉಂಟಾದ ಫಲಿತಾಂಶವೇ ಈಗಿನ ಅನಾಹುತ ಎಂಬುದೇ ಸರಿ.

ಭೂಮಿಯ ಮೇಲೆ ವಿವಿಧ ನಿರ್ಮಾಣ ಕಾಮಗಾರಿಗಳು ನಡೆಯುವುದೆಂದರೆ ಅದರರ್ಥ ಅಭಿವೃದ್ಧಿ ಎಂದಷ್ಟೇ ಅಲ್ಲ, ಭೂಮಿಯ ಹೊರ ಕವಚವನ್ನು ನಾಶಪಡಿಸಲಾಗುತ್ತಿದೆ ಎಂದೂ ಅರ್ಥವಿದೆ. ಅಭಿವೃದ್ಧಿಯ ಅತಿ ದೊಡ್ಡ ವಿರೋಧಿಗಳು ಯಾರೆಂದರೆ, ಅರಣ್ಯ-ಪೆÇದೆ, ಮರ, ಹುಲ್ಲು ಹಾಸುಗಳು, ಕಲ್ಲು-ಬಂಡೆಗಳು ಇತ್ಯಾದಿ. ವಿಶೇಷ ಏನೆಂದರೆ, ಇವ್ಯಾವುದಕ್ಕೂ ಪ್ರತಿಭಟಿಸುವ ಸಾಮಥ್ರ್ಯವಾಗಲಿ, ಮಾತಾಡುವ ಶಕ್ತಿಯಾಗಲಿ ಇಲ್ಲ. ಈ ದೌರ್ಬಲ್ಯವನ್ನು ಮಾನವ ಪದೇ ಪದೇ ದುರುಪಯೋಗಿಸುತ್ತಲೇ ಇದ್ದಾನೆ. ರಸ್ತೆ ನಿರ್ಮಾಣ, ಕಟ್ಟಡ, ತೋಟಗಳ ನಿರ್ಮಾಣಕ್ಕೆಂದು ಭೂಮಿಯ ಹೊರ ಕವಚದಲ್ಲಿರುವ ಇವುಗಳನ್ನು ಕತ್ತರಿಸುತ್ತಾನೆ. ಗುಡ್ಡಗಳನ್ನು ಸಮತಟ್ಟುಗೊಳಿಸುತ್ತಾನೆ. ಕಲ್ಲು ಕ್ವಾರಿಗಳಿಗಾಗಿ ಭೂಗರ್ಭವನ್ನೇ ಕೊರೆಯುತ್ತಾನೆ. ಕಾಡು ಕಡಿಯುತ್ತಾನೆ.

ಮಳೆಯಿಂದ ಅತ್ಯಂತ ಹೆಚ್ಚು ಹಾನಿ ಸಂಭವಿಸಿರುವ ಮಡಿಕೇರಿ ಮತ್ತು ಕೊಡಗು ಜಿಲ್ಲೆಯ ಇನ್ನಿತರ ಪ್ರದೇಶಗಳಲ್ಲಿ ಅಧಿಕೃತ ಹೋಮ್‍ಸ್ಟೇಗಳ ಸಂಖ್ಯೆಯೇ ಮೂರು ಸಾವಿರದಷ್ಟಿದೆ. ಈ ಹೋಮ್‍ಸ್ಟೇಗಳು ತಲೆ ಎತ್ತಿರುವುದೇ ಪ್ರವಾಸಿಗಳನ್ನು ಗುರಿಯಾಗಿಸಿಕೊಂಡು ಆರಂಭದಲ್ಲಿ ಗುಡ್ಡಗಳ ಅಡಿಯಲ್ಲಿ ವಿರಳವಾಗಿ ಅಲ್ಲೊಂದು ಇಲ್ಲೊಂದು ಇದ್ದಿದ್ದ ರೆಸಾರ್ಟ್‍ಗಳು ಮತ್ತು ಹೋಮ್‍ಸ್ಟೇಗಳು ಬಳಿಕ ವಿಪರೀತವಾಗಿ ಹೆಚ್ಚಾದುವು. ಗುಡ್ಡಗಳನ್ನು ಕೊರೆದು ಅದರ ಮಧ್ಯ ಭಾಗದಲ್ಲೂ ರೆಸಾರ್ಟುಗಳು ತಲೆ ಎತ್ತಿದುವು. ನಿಜವಾಗಿ, ಮಳೆಯ ನೀರು ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ಭೂಮಿಯ ಒಳಗೆ ಸೇರದಂತೆ ತಡೆಯುವುದೇ ಭೂಮಿಯ ಮೇಲಿನ ಮರ-ಗಿಡಗಳು, ಹಲ್ಲು ಪೊದೆಗಳು. ಅಭಿವೃದ್ಧಿಯ ಹೆಸರಲ್ಲಿ ಇವುಗಳನ್ನು ನಾಶ ಮಾಡುವಾಗ ಭೂಮಿಯ ಒಳಗೆ ಸೇರಿಕೊಂಡಿರುವ ಬೇರುಗಳೂ ಅದುರುತ್ತವೆ ಮತ್ತು ಮಣ್ಣು ಸಡಿಲಗೊಳ್ಳುತ್ತದೆ. ಇದರಿಂದಾಗಿ ಭೂಮಿಯ ಒಳಗಡೆಗೆ ನೀರು ಸೇರಿಕೊಳ್ಳುವುದಕ್ಕೆ ಸುಲಭ ದಾರಿಯನ್ನು ಮಾಡಿಕೊಟ್ಟಂತಾಗುತ್ತದೆ. ಹೀಗೆ ಒಳ ಸೇರುವ ನೀರು ಭೂಮಿಯ ಒಳಗಡೆಗೆ ಒತ್ತಡವೊಂದನ್ನು ಸೃಷ್ಟಿಸುತ್ತದೆ. ಈ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಹೋದಾಗ ಕುಸಿತ ಉಂಟಾಗುತ್ತದೆ.

      ಮಳೆಗೂ ಮನುಷ್ಯನಿಗೂ ನಡುವೆ ಎಷ್ಟೊಂದು ಆಪ್ತವಾದ ಸಂಬಂಧವೆಂದರೆ ಮಳೆಯಿಲ್ಲದೆ ಮನುಷ್ಯನೇ ಇಲ್ಲ ಅನ್ನುವಷ್ಟು. ವರ್ಷದ 12 ತಿಂಗಳಲ್ಲಿ ಮೂರ್ನಾಲ್ಕು ತಿಂಗಳನ್ನು ಮನುಷ್ಯ ಮಳೆಗೆಂದೇ ಮೀಸಲಿಟ್ಟಿದ್ದಾನೆ. ಮಳೆ ಬರುವುದಕ್ಕಿಂತ ಮೊದಲೇ ಅದರ ಸ್ವಾಗತಕ್ಕಾಗಿ ತಯಾರಿಯನ್ನೂ ನಡೆಸುತ್ತಾನೆ. ನಿರೀಕ್ಷೆಗಿಂತ ಕಡಿಮೆ ಮಳೆ ಬಿದ್ದರೆ ಆತಂಕ ಪಡುತ್ತಾನೆ. ಹೆಚ್ಚಾದರೂ ಆತಂಕ ಪಡುತ್ತಾನೆ. ಹಾಗಂತ, ಪ್ರತಿ ವರ್ಷವೂ ಏಕ ಪ್ರಕಾರವಾಗಿಯೇ ಮಳೆ ಬರುತ್ತದೆ ಎಂದಲ್ಲ. ಹೆಚ್ಚು- ಕಡಿಮೆ ಆಗುತ್ತಲೇ ಇರುತ್ತದೆ. ಈಗ ಸುರಿದಿರುವ ಮಳೆಯು ಎರಡು ದಶಕಗಳ ಹಿಂದೆ ಹೆಚ್ಚು ಎಂದು ಹೇಳುವ ಸಾಧ್ಯತೆಯೇ ಇಲ್ಲ. ಅಂದು ಮಳೆ ಅಧಿಕ ಸುರಿದರೂ ಅದು ಭೂಮಿಯೊಳಗಡೆ ಸೇರದಂತೆ ಮರ-ಗಿಡ, ಪೊದೆಗಳು ತಡೆದಿಟ್ಟುಕೊಳ್ಳುತ್ತಿದ್ದುದರಿಂದ ಭೂಕುಸಿತ, ಗ್ರಾಮಗಳ ಕಣ್ಮರೆಗೆ ಅಂದು ಅವಕಾಶ ಇದ್ದಿರಲಿಲ್ಲ. ಇವತ್ತು ಹಾಗಲ್ಲ. ಅಭಿವೃದ್ಧಿ ಎಲ್ಲವನ್ನೂ ನಾಶ ಮಾಡುತ್ತಿದೆ. ಅಭಿವೃದ್ಧಿ ಎಂಬ ನಾಲ್ಕಕ್ಷರ ಚಿಗುರುವುದೇ ಭೂಮಿಯ ಮೇಲೆ ಭೂಮಿಯಿಲ್ಲದೇ ಅಭಿವೃದ್ಧಿ ಸಾಧ್ಯವೂ ಇಲ್ಲ ಅನ್ನುವ ಸ್ಥಿತಿ ನಿರ್ಮಾಣವಾಗಿದೆ. ಅಭಿವೃದ್ಧಿ ಎಂದರೆ ಭೂಮಿಯ ಮೇಲ್ಪದರವನ್ನು ನಾಶ ಮಾಡುವುದು ಎಂದೇ ಅರ್ಥ. ಕಲ್ಲು ಕ್ವಾರೆಗಳ ಹೆಸರಲ್ಲಿ ಗಣಿಯ ಹೆಸರಲ್ಲಿ ಭೂಮಿಯ ಒಡಲನ್ನು ಪ್ರತಿನಿತ್ಯ ಅಗೆಯುತ್ತಲೇ ಇದ್ದೇವೆ. ಭಾರೀ ಸ್ಫೋಟಕಗಳನ್ನು ಸಿಡಿಸಿ ಭೂಮಿಯ ಒಳಪದರವನ್ನು ಸಡಿಲಗೊಳಿಸುತ್ತಿದ್ದೇವೆ. ಬಹುಶಃ, ಭೂಮಿಯು ಇದರ ಪ್ರತೀಕಾರಕ್ಕಾಗಿ ಕಾಯುತ್ತಿರುವಂತೆ ಕಾಣಿಸುತ್ತಿದೆ.

ಮಳೆ ಮತ್ತು ಇಳೆ ಎರಡರ ನಡುವೆಯೂ ಆಪ್ತವಾದ ಸಂಬಂಧ ಇದೆ. ಮಳೆ ಮುನಿದರೆ ಇಳೆ ಬಾಡುತ್ತದೆ. ಇಳೆಯ ಹಚ್ಚಹಸುರಿನಲ್ಲಿ ಮಳೆಯ ಪಾತ್ರವೇ ದೊಡ್ಡದು. ಆದರೆ ಒಂದು ಹನಿ ಮಳೆ ಸೃಷ್ಟಿಸಲಾಗದ ಮನುಷ್ಯ ಇಳೆಯ ಮೇಲಂತೂ ದೌರ್ಜನ್ಯ ನಡೆಸುತ್ತಲೇ ಬಂದಿz್ದÁನೆ. ಇವತ್ತು ಭೂಮಿಯ ತಾಪಮಾನದಲ್ಲಿ ಭಾರೀ ಏರಿಕೆ ಉಂಟಾಗಿದೆ. ಭೂಮಿಯ ತಾಪಮಾನದಲ್ಲಿ ಹೆಚ್ಚಳವಾಗುವುದೆಂದರೆ, ಮಳೆಯ ಸುರಿಯುವಿಕೆಯಲ್ಲಿ ಅನಿಶ್ಚಿತತೆ ನಿರ್ಮಾಣವಾಗುವುದು ಎಂದರ್ಥ. ಯಾವ ಭೂಭಾಗದಲ್ಲಿ ಮಳೆ ಬೀಳಬೇಕೋ ಆ ಭಾಗದಲ್ಲಿ ಮಳೆ ಬೀಳದೇ ಇರುವುದು ಮತ್ತು ಎಲ್ಲಿ ಬೀಳಬಾರದೋ ಅಲ್ಲಿ ಮಳೆ ಬೀಳುವುದು- ಭೂತಾಪಮಾನದಿಂದ ಹೀಗಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಸಮುದ್ರ ಬಿಸಿಯಾಗುವುದು ಭೂತಾಪಮಾನದ ಲಕ್ಷಣ. ಸಮುದ್ರದ ಒಳಗಡೆ ನಡೆಯುವ ಕ್ರಿಯೆಗಳಲ್ಲಿ ಏರುಪೇರಾದಾಗ ಮಳೆಯ ಮಾರುತಗಳಲ್ಲಿ ಏರುಪೇರಾಗುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿಯೇ ಬೀಳಬೇಕಾದ ಕಡೆ ಮಳೆ ಬೀಳುವುದಿಲ್ಲ ಎಂಬ ಅಭಿಪ್ರಾಯವೂ ಇದೆ. ಏನೇ ಇದ್ದರೂ, ಅಂತಿಮವಾಗಿ ಇವೆಲ್ಲದರ ಪರಿಣಾಮವನ್ನು ಎದುರಿಸಬೇಕಾಗಿರುವುದು ಮನುಷ್ಯ. ಭೂಮಿ ಬಾಯಿ ಬಿಟ್ಟರೂ ಗುಡ್ಡ ಕುಸಿದರೂ ನದಿ ಉಕ್ಕಿ ಹರಿದರೂ ಆತ ಒಗ್ಗಿಕೊಳ್ಳಲೇ ಬೇಕು. ಇದೀಗ ಅಂಥದ್ದೊಂದು ಸಂದರ್ಭ ಎದುರಾಗಿದೆ. ಮಾನವನಿಗೆ ಮಳೆ ಮುಖಾಮುಖಿ ನಿಂತಿದೆ. ಭೂಮಿಯು ಮಳೆಯ ಜೊತೆ ಸೇರಿಕೊಂಡಿದೆ. ಮಳೆ ಮತ್ತು ಭೂಮಿ ಎರಡೂ ಜೊತೆ ಸೇರಿಕೊಂಡರೆ ಮಾನವ ಎಲ್ಲಿ ಅನ್ನುವ ಪ್ರಶ್ನೆಯನ್ನು ಈಗನ ನೆರೆ ಹುಟ್ಟಿಹಾಕಿದೆ. ಪ್ರಕೃತಿಯೇ ಹುಟ್ಟುಹಾಕಿರುವ ಪ್ರಶ್ನೆಯಿದು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ವಿವೇಕವನ್ನು ಮನುಷ್ಯ ಪ್ರದರ್ಶಿಸಬೇಕು. ತಾನು ಏನು ಮತ್ತು ಪ್ರಕೃತಿಯ ಮೇಲೆ ತನಗೆ ಎಷ್ಟು ಹಕ್ಕು, ಕರ್ತವ್ಯವಿದೆ ಎಂಬ ಬಗ್ಗೆ ಅವಲೋಕನ ನಡೆಸಲು ಪ್ರತಿಯೊಬ್ಬರಿಗೂ ಈ ಮಳೆ ನೆಪವಾಗಿ ಬಳಕೆಯಾಗಬೇಕು.

ಪ್ರಕೃತಿಗೆ ಮುಖಾಮುಖಿ ನಿಂತು ಮಾನವ ಗೆಲ್ಲಲಾರ. ಕೇವಲ ಒಂದು ವಾರಗಳ ಕಾಲ ಸುರಿದ ಮಳೆಗೆ ಮಾನವ ತಬ್ಬಿಬ್ಬಾಗಿರುವುದೇ ಇದಕ್ಕೆ ಸಾಕ್ಷಿ. ಪ್ರಕೃತಿ ಮತ್ತು ಮನುಷ್ಯರ ನಡುವೆ ಗೆಳೆತನ ಬೆಳೆಯುವುದೇ ಇದಕ್ಕಿರುವ ಪರಿಹಾರ. ಮಾನವನು ಭೋಗ ಭಾವನೆಯನ್ನು ಕಳಚಿಟ್ಟು ಪ್ರಕೃತಿಯನ್ನು ನೋಡುವ ದಿನ ಬಂದಾಗ ಮಳೆಯೂ ಅನುಗ್ರಹವಾಗಬಹುದು. ಭೂಮಿಯೂ ಸುರಕ್ಷಿತವಾಗಬಹುದು.

Tuesday, 14 August 2018

ಹಾಜಿರಾರ ಜಾಗದಲ್ಲಿ ನಾವಿರುತ್ತಿದ್ದರೆ..

     ಒಂದು ತುದಿಯಲ್ಲಿ ಹಾಜಿರಾ. ಇನ್ನೊಂದು ತುದಿಯಲ್ಲಿ ಉಳಿದ ಜಗತ್ತು. ಇದು ಹಜ್ಜ್. ಒಂದು ವೇಳೆ, ಮಕ್ಕಾದ ಮರುಭೂಮಿಯಲ್ಲಿ  ತಂಗಲು ಹಾಜಿರಾ ಒಪ್ಪಿಕೊಳ್ಳದೇ ಇರುತ್ತಿದ್ದರೆ ಏನಾಗುತ್ತಿತ್ತು? ಮುಸ್ಲಿಮ್ ಜಗತ್ತು ಮತ್ತೆ ಮತ್ತೆ ಕೇಳಿಕೊಳ್ಳಬೇಕಾದ ಪ್ರಶ್ನೆ ಇದು. ಮಕ್ಕಾಕ್ಕೆ  ಹಾಜಿರಾ ಬರುವಾಗ ಅವರ ಜೊತೆಗಿದ್ದುದು ಪತಿ ಇಬ್ರಾಹೀಮ್(ಅ) ಮತ್ತು ಹಾಲುಗಲ್ಲದ ಶಿಶು ಇಸ್ಮಾಈಲ್(ಅ). ಮಕ್ಕಾ ಎಂಬುದು ನಿರ್ಜನ ಮರುಭೂಮಿ. ಜಲವೂ ಇಲ್ಲ. ಆಹಾರ ವಸ್ತುಗಳ ಲಭ್ಯತೆಯ ಕುರುಹೂ ಇಲ್ಲ. ಇಂಥದ್ದೊಂದು ಸ್ಥಿತಿಯಲ್ಲಿ ಓರ್ವ ಹೆಣ್ಣುಮಗಳು  ಗಂಡಿನ ಉಪಸ್ಥಿತಿಯನ್ನು ಬಯಸುವುದು ಸಹಜ. ಆದರೆ ಇಬ್ರಾಹೀಮ್(ಅ) ಹೊರಟು ನಿಲ್ಲುತ್ತಾರೆ. ಅದೊಂದು ಸವಾಲಿನ ಸನ್ನಿವೇಶ.  ಧೈರ್ಯಶಾಲಿ ಪುರುಷನೇ ಎದೆಗುಂದುವಂಥ ವಾತಾವರಣ. ಹೀಗಿರುವಾಗ ಹಾಜಿರಾ ತನ್ನ ಪತಿ ಇಬ್ರಾಹೀಮ್‍ರ ಜೊತೆ ಹೊರಟು ನಿ ಲ್ಲುತ್ತಿದ್ದರೆ ಅದು ಅಪರಾಧವೋ ವಿಶ್ವಾಸದ ಕೊರತೆಯೋ ಆಗುತ್ತಿರಲಿಲ್ಲ. ಮಾನವ ಸಹಜ ಪ್ರತಿಕ್ರಿಯೆ ಅದು. ಆದರೆ ಹಾಜಿರಾ ವ್ಯತಿರಿಕ್ತ  ತೀರ್ಮಾನ ಕೈಗೊಳ್ಳುತ್ತಾರೆ. ಆದ್ದರಿಂದಲೇ, ಆ ವರೆಗೆ ಪ್ರವಾದಿ ಇಬ್ರಾಹೀಮ್‍ರ ಪತ್ನಿ ಮತ್ತು ಶಿಶು ಇಸ್ಮಾಈಲ್‍ರ ತಾಯಿಯಷ್ಟೇ ಆಗಿದ್ದ  ಹಾಜಿರಾ, ತನ್ನ ಆ ಧೈರ್ಯದ ನಿರ್ಧಾರದಿಂದಾಗಿ ಜಗತ್ತಿನ ಸರ್ವ ಸ್ತ್ರೀ-ಪುರುಷರ ಸ್ಮರಣಾರ್ಹ ವ್ಯಕ್ತಿತ್ವವಾಗುತ್ತಾರೆ.
ಈ ಜಗತ್ತಿಗೆ ಒಂದು ಲಕ್ಷಕ್ಕಿಂತ ಅಧಿಕ ಪ್ರವಾದಿಗಳು ಆಗಮಿಸಿರುವುದಾಗಿ ಇತಿಹಾಸ ಹೇಳುತ್ತದೆ. ಬಹುತೇಕ ಅವರೆಲ್ಲರೂ ಸಂಸಾರಸ್ಥರೇ.  ಆದರೆ ಯಾವ ಪ್ರವಾದಿಯ ಪತ್ನಿಯೂ ಹಾಜಿರಾ ಆಗಲಿಲ್ಲ. ಪ್ರವಾದಿ ಮುಹಮ್ಮದ್‍ರ(ಸ) ಸಂಗಾತಿಗಳಾದ ಖದೀಜಾ ಮತ್ತು ಆಯಿಶಾರಿಗೆ  ಸಂಬಂಧಿಸಿಯೂ ಇದೇ ಮಾತನ್ನು ಹೇಳಬಹುದು. ಹಾಜಿರಾ ಇವರೆಲ್ಲರಿಗಿಂತ ಭಿನ್ನ.

   ಸುಲಭ ಮತ್ತು ಕಷ್ಟ- ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭ ಎದುರಾದಾಗ ಸಾಮಾನ್ಯವಾಗಿ ಸುಲಭವನ್ನೇ ಆಯ್ಕೆ  ಮಾಡಿಕೊಳ್ಳುತ್ತೇವೆ. ಇದು ಮಾನವ ಸಹಜ ಪ್ರಕೃತಿ. ನೀವು ಹಾಜಿರಾ ಆಗಬೇಕಾದರೆ ಈ ಸಹಜ ಪ್ರಕೃತಿಯಿಂದ ಹೊರಬರಬೇಕು.  ಯಾವುದು ಸವಾಲಿನದ್ದೋ ಅದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಜಗತ್ತಿನ ಯಾವುದೇ ಧರ್ಮದ ಇತಿಹಾಸದಲ್ಲಿ ಮಹಿಳೆಯೋರ್ವರು  ತುತ್ತತುದಿಯಲ್ಲಿ ನಿಲ್ಲುವುದು ಮತ್ತು ಆಕೆಯ ಚಟುವಟಿಕೆಯನ್ನು ಆರಾಧನೆಯಾಗಿ ಸ್ತ್ರೀಯರು ಮತ್ತು ಪುರುಷರು ಅನುಸರಿಸುವುದನ್ನು ಬ ಹುಶಃ ಇಸ್ಲಾಮಿನಲ್ಲಿ ಮಾತ್ರ ವೀಕ್ಷಿಸಲು ಸಾಧ್ಯ. ಮಹಿಳೆ ಸವಾಲನ್ನು ಮೆಟ್ಟಿ ನಿಲ್ಲಬಲ್ಲ ಗಟ್ಟಿಗಿತ್ತಿ. ಆಕೆ ಛಲವಂತೆ. ಧೈರ್ಯವಂತೆ. ದೇವನ  ಮೇಲೆ ಆಕೆ ಎಂತಹ ವಿಶ್ವಾಸ ತಾಳಬಲ್ಲಳೆಂದರೆ, ನಿರ್ಜನ, ನಿರ್ಜಲ, ನಿರ್ವಾತ, ನಿರಾಹಾರದಂಥ ವಾತಾವರಣವಿದ್ದಾಗ್ಯೂ ಆಕೆ  ಎದೆಗುಂದಲಾರಳು... ಹಾಜಿರಾ ಎತ್ತಿ ಹಿಡಿದ ಸಂದೇಶ ಇದು. ಇಸ್ಲಾಮಿನಲ್ಲಿ ಮಹಿಳೆ ಏನು ಎಂದು ಯಾರಾದರೂ ಪ್ರಶ್ನಿಸಿದರೆ,  ಉತ್ತರವಾಗಿ ಹಾಜಿರಾ ಒಬ್ಬರೇ ಸಾಕು. ಕೇವಲ ಒಬ್ಬರೇ.
   ಕನ್ನಡಿಯಿಲ್ಲದ ಕಾಲದಿಂದ ಹಿಡಿದು ಸೆಲ್ಫಿಯ ಈ ಕಾಲದವರೆಗೆ ಹಾಜಿರಾ ಅಂದು ತಂಗಿದ ಮಕ್ಕಾಕ್ಕೆ ಅಸಂಖ್ಯಾತ ಮಂದಿ ಹೋಗಿದ್ದಾರೆ.  ಹೋಗುತ್ತಿದ್ದಾರೆ. ಮುಂದೆಯೂ ಹೋಗಲಿದ್ದಾರೆ. ಇದೊಂದು ನಿರಂತರ ಕ್ರಿಯೆ. ಸದ್ಯದ ಅಗತ್ಯ ಏನೆಂದರೆ, ಈ ಕ್ರಿಯೆಯನ್ನು ¸ ಸಂಪ್ರದಾಯದ ಚೌಕಟ್ಟಿನಿಂದ ಹೊರತಂದು ಪರಿಶೀಲಿಸುವುದು. ಹಾಜಿರಾ ಎದುರಿಸಿದಂತಹ ಪರಿಸ್ಥಿತಿ ತನ್ನೆದುರು ಬರುತ್ತಿದ್ದರೆ ತಾನೇನು  ಮಾಡುತ್ತಿದ್ದೆ ಎಂದು ಪ್ರತಿಯೊಬ್ಬರೂ ಸ್ವತಃ ಪ್ರಶ್ನಿಸಿಕೊಳ್ಳುವುದು. ಉತ್ತರ ಅಷ್ಟು ಸರಳ ಅಲ್ಲ ಅನ್ನುವುದು ಎಲ್ಲರಿಗೂ ಗೊತ್ತು. ಆದ್ದರಿಂದಲೇ,  ಮಕ್ಕಾದಲ್ಲಿ ತಂಗಲು ಹಾಜಿರಾ ಒಪ್ಪಿಕೊಳ್ಳದಿರುತ್ತಿದ್ದರೆ ಏನಾಗುತ್ತಿತ್ತು ಅನ್ನುವ ಪ್ರಶ್ನೆ ಮುಖ್ಯವಾಗುವುದು.
ಈ ಪ್ರಶ್ನೆಯನ್ನು ಹಾಜಿಗಳು ಮತ್ತು ಹಾಜಿಗಳಲ್ಲದ ಎಲ್ಲರೂ ತಮ್ಮ ತಮ್ಮೊಳಗೆ ಕೇಳಿಕೊಳ್ಳಬೇಕು. ಅದಕ್ಕೆ ಸಿಗುವ ಉತ್ತರವೇ ನಾವು. ಇವತ್ತಿನ  ಸೆಲ್ಫಿ ಜಗತ್ತಿಗೆ ಹೋಲಿಸಿದರೆ ಸಂಪರ್ಕ ಕ್ಷೇತ್ರ ಶೂನ್ಯವಾಗಿದ್ದ ಕಾಲದ ಹಾಜಿರಾ, ನಮ್ಮೊಳಗೆ ಬರೇ ಒಂದು ಬೆರಗು ಆಗಿ ಮಾತ್ರ ಉಳಿಯಬೇಕಾದವರಲ್ಲ. ಅವರೊಂದು ವಾಸ್ತವ. ಆ ವಾಸ್ತವಕ್ಕೆ ಮುಖಾಮುಖಿಯಾಗುವ ಸಂದರ್ಭವೇ ಹಜ್ಜ್. ವಿಷಾದ ಏನೆಂದರೆ,
    ಅವರು ನಮ್ಮ ನಡುವೆ ಬರೇ ಬೆರಗಾಗಿಯಷ್ಟೇ ಉಳಿದುಕೊಂಡಿದ್ದಾರೆ. ಈ ಸ್ಥಿತಿ ಬದಲಾಗಬೇಕು.

Thursday, 9 August 2018

ಗೋವು, ಹೆಣ್ಣು ಮತ್ತು ನಾವು...


ಅತ್ಯಾಚಾರವನ್ನು ತಡೆಗಟ್ಟುವುದು ಹೇಗೆ ಎಂಬ ಪ್ರಶ್ನೆ ಅತ್ಯಂತ ಗಂಭೀರ ಸ್ವರೂಪವನ್ನು ಪಡೆದುಕೊಂಡದ್ದು ನಿರ್ಭಯ ಪ್ರಕರಣದ ಬಳಿಕ. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕು ಎಂಬ ಕೂಗು ಬಲ ಪಡೆದದ್ದೂ ಆ ಬಳಿಕವೇ. ಮನ್‍ಮೋಹನ್ ಸಿಂಗ್ ಸರಕಾರವು ಈ ಕುರಿತಂತೆ ಕೆಲವು ಕ್ರಮಗಳನ್ನು ಕೈಗೊಂಡಿತು. ಕಾನೂನಿಗೆ ಬಲ ತುಂಬುವ ಕೆಲಸವನ್ನು ಮಾಡಿತು. ನಿರ್ಭಯ ನಿಧಿಯ ಸ್ಥಾಪನೆಯೂ ಆಯಿತು. ಇದು 5 ವರ್ಷಗಳ ಹಿಂದಿನ ಬೆಳವಣಿಗೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಸರಕಾರವು ವಿಧೇಯಕವೊಂದನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ಈ ವಿಧೇಯಕವೂ ಅತ್ಯಾಚಾರಕ್ಕೆ ಸಂಬಂಧಿಸಿದ್ದೇ. ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಲು ಈ ವಿಧೇಯಕ ಅವಕಾಶ ಮಾಡಿಕೊಡುತ್ತದೆ. ಈ ವಿಧೇಯಕಕ್ಕಿಂತ ಮೊದಲು ಇನ್ನೊಂದು ವಿಧೇಯಕಕ್ಕೂ ನಮ್ಮ ದೇಶದ ಸಂಸತ್ತು ಅನುಮೋದನೆ ನೀಡಿತ್ತು. ಅದೂ ಅತ್ಯಾಚಾರಕ್ಕೆ ಸಂಬಂಧಿಸಿದ ವಿಧೇಯಕವೇ. ಅತ್ಯಾಚಾರದಲ್ಲಿ ಭಾಗಿಯಾದ ಅಪ್ರಾಪ್ತ ವಯಸ್ಕನನ್ನು ಪ್ರಾಪ್ತನಂತೆ ಪರಿಗಣಿಸಿ ವಿಚಾರಣೆಗೆ ಒಳಪಡಿಸಲು ಅನುವು ಮಾಡಿಕೊಡುವ ವಿಧೇಯಕ ಅದಾಗಿತ್ತು. ವಿಷಾದ ಏನೆಂದರೆ,
     
     ಸಂಸತ್ತಿನಲ್ಲಿ ವಿಧೇಯಕಗಳು ಒಂದರ ಮೇಲೊಂದರಂತೆ ಮಂಡನೆಯಾಗುತ್ತಲೇ ಇದೆ. ಅಲ್ಲದೇ, ಅಂಗೀಕಾರವನ್ನೂ ಪಡೆದುಕೊಳ್ಳುತ್ತಿದೆ. ಆದರೆ, ಅತ್ಯಾಚಾರದ ಪ್ರಕರಣಗಳಲ್ಲಿ ಇಳಿಕೆ ಆಗುತ್ತಲೇ ಇಲ್ಲ. ಮಾತ್ರವಲ್ಲ, ಅತ್ಯಾಚಾರ ಪ್ರಕರಣಗಳ ಭೀಭತ್ಸಕತೆಯಲ್ಲಿ ಮೊನ್ನೆಯಿಂದ, ನಿನ್ನೆಗೆ, ನಿನ್ನೆಯಿಂದ ಇವತ್ತಿಗೆ ಏರಿಕೆ ಆಗುತ್ತಲೇ ಇದೆ. ಇದು ಹೇಗೆ ಸಾಧ್ಯ? ಒಂದು ಕಡೆ, ಬಲ ಪಡೆಯುತ್ತಿರುವ ಕಾನೂನು ಮತ್ತು ಇನ್ನೊಂದು ಕಡೆ, ಅತ್ಯಾಚಾರ ಮತ್ತು ಅದರ ಭೀಕರತೆಯಲ್ಲಿ ಹೆಚ್ಚಳವಾಗುತ್ತಿರುವುದು- ಇವೆಲ್ಲ ಏನು ಮತ್ತು ಏಕೆ? 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣ ದಂಡನೆ ವಿಧಿಸುವ ವಿಧೇಯಕ ಸಂಸತ್ತಿನಲ್ಲಿ ಮಂಡನೆಯಾಗುತ್ತಿರುವ ಹೊತ್ತಿಲ್ಲೇ  ತೆಲಂಗಾಣದಿಂದ ಭೀಕರ ಸುದ್ದಿಯೊಂದು ಹೊರಬಿತ್ತು. 10 ವರ್ಷಕ್ಕಿಂತ ಕಿರಿಯ ವಯಸ್ಸಿನ ಬಾಲಕಿಯರಿಗೆ ಹಾರ್ಮೋನ್ ಇಂಜಕ್ಷನ್ ಚುಚ್ಚಿ ಸೆಕ್ಸ್ ದಂಧೆಗೆ ಬಳಸಿಕೊಳ್ಳುವ ಜಾಲ ಅಲ್ಲಿ ಪತ್ತೆಯಾಯಿತು. 12ರಷ್ಟು ಬಾಲಕಿಯರನ್ನು ಆ ಕ್ರೌರ್ಯದಿಂದ ರಕ್ಷಿಸಲಾಯಿತು. ಇದಕ್ಕಿಂತ ಎರಡು ವಾರಗಳ ಮೊದಲು ಬಿಹಾರದ ಮುಝಫ್ಫರ್‍ಪುರ ನಗರದಲ್ಲಿ ಸರಕಾರದ ಅನುದಾನದಿಂದ ‘ಸೇವಾ ಸಂಕಲ್ಪ ಏವಂ ವಿಕಾಸ್ ಸಮಿತಿ’ಯು ನಡೆಸುತ್ತಿದ್ದ ಬಾಲಿಕಾಗೃಹದಲ್ಲಿ 24ರಷ್ಟು ಹೆಣ್ಮಕ್ಕಳು ಮೇಲೆ ನಿರಂತರ ಅತ್ಯಾಚಾರಕ್ಕೊಳಗಾದ ಘಟನೆ ಬಹಿರಂಗಕ್ಕೆ ಬಂತು. ಇದನ್ನು ನಡೆಸುತ್ತಿದ್ದವ ಬೃಜೇಶ್ ಠಾಕೂರ್ ಎಂಬ ಅರೆಕಾಲಿಕ ಪತ್ರಕರ್ತ. ಕಳೆದವಾರ ನಮ್ಮದೇ ರಾಜ್ಯದ ಮಾಲೂರಿನಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು ಕೊಲೆ ಮಾಡಲಾಯಿತು. ಹಾಗಂತ, ಇಲ್ಲಿ ಉಲ್ಲೇಖಗೊಂಡ ಕೃತ್ಯಗಳನ್ನು ಬಿಡಿಬಿಡಿಯಾಗಿ ಓದಬೇಕಿಲ್ಲ. ಈ ದೇಶದಲ್ಲಿ ನಿರಂತರ ನಡೆಯುತ್ತಿರುವ ಪ್ರಕರಣಗಳಿಂದ ಹೆಕ್ಕಿಕೊಂಡ ಘಟನೆಗಳಷ್ಟೇ ಇವು.
   
       ಹೆಣ್ಣು ಪದೇ ಪದೇ ಈ ದೇಶದಲ್ಲಿ ಅಸುರಕ್ಷಿತೆಯಾಗಿ ಗುರುತಿಸಿಕೊಳ್ಳುವುದಕ್ಕೆ ಕಾರಣಗಳು ಏನು? ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಾಚ್‍ನ ವರದಿಯ ಪ್ರಕಾರ, ಭಾರತದ ಸುಮಾರು ಒಂದು ಲP್ಷÀದ 50 ಸಾವಿರಕ್ಕಿಂತಲೂ ಅಧಿಕ ಹೆಣ್ಣು ಮಕ್ಕಳು ದೇಶ-ವಿದೇಶಗಳಲ್ಲಿ ವೇಶ್ಯಾವಾಟಿಕೆಯ ದಂಧೆಗೆ ಸಿಲುಕಿ ಬಿಟ್ಟಿದ್ದಾರೆ. ಭಯಾನಕ ಏನೆಂದರೆ, ಇವರಲ್ಲಿ ಶೇ. 40ರಷ್ಟು ಹೆಣ್ಣು ಮಕ್ಕಳೂ ಅಪ್ರಾಪ್ತರು. ಅವರ ಬಾಲ್ಯವೇ ನಾಶವಾಗಿ ಹೋಗಿದೆ. ಈ ದೇಶದಲ್ಲಿ ಪ್ರತಿವರ್ಷ 6 ಲಕ್ಷ ಹೆಣ್ಣು ಭ್ರೂಣದ ಹತ್ಯೆಯಾಗುತ್ತಿದೆ. ವರ್ಷಕ್ಕೆ 5 ಲಕ್ಷ ಮಕ್ಕಳನ್ನು ಲೈಂಗಿಕ ವ್ಯಾಪಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ದೇಶದ ಒಟ್ಟು ಮಕ್ಕಳ ಜನಸಂಖ್ಯೆಯಲ್ಲಿ ಶೇ. 53ರಷ್ಟು ಮಕ್ಕಳು ಯಾವುದಾದರೊಂದು ರೀತಿಯಲ್ಲಿ ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಯುನಿಸೆಫ್‍ನ ವರದಿಯೂ ಹೇಳುತ್ತಿದೆ. ಅಲ್ಲದೇ, ಪ್ರತಿ 155 ನಿಮಿಷಕ್ಕೊಮ್ಮೆ ದೇಶದಲ್ಲಿ 16 ವರ್ಷದೊಳಗಿನ ಒಂದು ಹೆಣ್ಣು ಮಗು ಅತ್ಯಾಚಾರಕ್ಕೆ ಒಳಗಾಗುತ್ತಿದೆ. ಪ್ರತಿ 13 ಗಂಟೆಗೊಮ್ಮೆ 10 ವರ್ಷಕ್ಕಿಂತ ಕೆಳಗಿನ ಒಂದು ಹೆಣ್ಣು ಮಗು ಲೈಂಗಿಕ ಕಿರುಕುಳವನ್ನು ಎದುರಿಸುತ್ತಿದೆ.


     ಹೀಗೆ ಪಟ್ಟಿ ಮಾಡುತ್ತಾ ಹೋದರೆ ಪುಟ ತುಂಬುವಷ್ಟು ಅಂಕಿ-ಅಂಶಗಳಿವೆ. ಈ ಅಂಕಿ-ಅಂಶಗಳ ಆಚೆಗೆ ಈ ದೇಶವನ್ನು ಹೆಣ್ಣಿನ ಪಾಲಿಗೆ ಸುರಕ್ಷಿತಗೊಳಿಸುವುದು ಹೇಗೆ? ತಮಾಷೆ ಏನೆಂದರೆ, ಗೋವುಗಳ ಸುರಕ್ಷಿತತೆಯ ಬಗ್ಗೆ ಆತಂಕ ತೋಡಿಕೊಳ್ಳುವ ರಾಜಕಾರಣಿಗಳು ಈ ದೇಶದಲ್ಲಿದ್ದಾರೆ. ಗೋವುಗಳಿಗೆ ಸಂಬಂಧಿಸಿ ಪ್ರತಿ ದಿನ ಒಂದು ಹೇಳಿಕೆಯಾದರೂ ಮಾಧ್ಯಮಗಳಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳುವ ಜಾಣತನವೂ ಅವರಿಗೆ ಗೊತ್ತಿದೆ. ಗೋಸಾಗಾಟದ ಹೆಸರಲ್ಲಿ ಹಲ್ಲೆ-ಹತ್ಯೆಗಳು ನಡೆದಾಗಲೆಲ್ಲ ಈ ಮಂದಿ ತಾರಕ ದನಿಯಲ್ಲಿ ಮಾತಾಡುತ್ತಾರೆ. ಗೋಸಂತತಿಯನ್ನು ಉಳಿಸುವ ಬಗ್ಗೆ, ಅಳಿವಿನಂಚಿನಲ್ಲಿರುವ ಗೋ ಸಂತತಿಗಳ ಬಗ್ಗೆ, ಗೋಮಾಂಸ ಸೇವಕರ ಬಗ್ಗೆ, ಗೋಹತ್ಯಾ ಮುಕ್ತ ದೇಶ ಕಟ್ಟುವ ಬಗ್ಗೆ, ಗೋಗ್ರಾಮ-ಗೋ ಅರಣ್ಯ ಸ್ಥಾಪಿಸುವ ಬಗ್ಗೆ.. ಹೀಗೆ ಹೇಳಿಕೆಗಳು ಬರುತ್ತಲೇ ಇರುತ್ತವೆ. ಅದೇವೇಳೆ, ಪ್ರತಿವರ್ಷ ಸುಮಾರು 40 ಸಾವಿರದಷ್ಟು (2014ರಲ್ಲಿ 37,681) ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಈ ಬಗ್ಗೆ ಗಂಭೀರ ಹೇಳಿಕೆಗಳು ಮತ್ತು ಆವೇಶದ ಮಾತುಗಳು ಕೇಳಿ ಬರುತ್ತಲೇ ಇಲ್ಲ. ಗೋಸಂತತಿಯನ್ನು ಉಳಿಸಬೇಕೆನ್ನುವ ಅದೇ ಕಾಳಜಿಯಲ್ಲಿ ಹೆಣ್ಣು ಸಂತತಿಯನ್ನು ಉಳಿಸಿಕೊಳ್ಳಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿಲ್ಲ. ಹೆಣ್ಣಿನ ಮೇಲಿನ ಅತ್ಯಾಚಾರವು ಗೋಹತ್ಯೆಯ ಮುಂದೆ ಜುಜುಬಿ ಅನ್ನಿಸಿಕೊಂಡದ್ದು ಯಾಕಾಗಿ?
    
     ಅತ್ಯಾಚಾರವೆಂದರೆ, ಒಂದು ಮನಸ್ಸಿನ ಸಾವು. 'ಅತ್ಯಾಚಾರ'ವೆಂಬುದು ಬಾಹ್ಯನೋಟಕ್ಕೆ ನಾಲ್ಕು ಶಬ್ದಗಳಾದರೂ ಅದರ ಅರ್ಥ ಅತ್ಯಂತ ಆಳವಾದದ್ದು. ಹೆಣ್ಣಿನ ಮೇಲೆ ಗಂಡು ತನ್ನ ಬಲವನ್ನು ತೋರ್ಪಡಿಸುವ ಕ್ರಿಯೆಯಷ್ಟೇ ಅಲ್ಲ ಅದು. ಆಕೆಯ ಸಂವೇದನೆಯನ್ನು ಕೊಲೆಗೈದ ಕ್ರಿಯೆ ಕೂಡ. ಆದರೂ ಗೋವಿಗಾಗಿ ಮಾತಾಡುವ ಯಾವ ರಾಜಕೀಯದ ಬಾಯಿಗಳೂ ಅದೇ ಉಗ್ರತಮ ಭಾಷೆಯಲ್ಲಿ ಹೆಣ್ಣಿಗಾಗಿ ಮಾತಾಡುವುದಿಲ್ಲ. ಅತ್ಯಾಚಾರವನ್ನು ಸಹಜವೂ ಗೋಮಾಂಸವನ್ನು ಅಸಹಜವೂ ಆಗಿ ನಮ್ಮ ರಾಜಕಾರಣಿಗಳು ಪರಿಗಣಿಸಿದ್ದಾರೆಯೇ? ಅಥವಾ ರಾಜಕೀಯ ದೃಷ್ಟಿಯಲ್ಲಿ ಹೆಣ್ಣಿಗಿಂತ ಗೋವು ಹೆಚ್ಚು ಮತ ತಂದುಕೊಡುತ್ತದೆ ಎಂಬ ನಂಬಿಕೆಯೇ? ಅತ್ಯಾಚಾರದ ವಿರುದ್ಧ ಆಡುವ ಮಾತಿಗಿಂತ ಗೋವಿಗಾಗಿ ಆಡುವ ಮಾತು ಯಾಕೆ ತೂಕವುಳ್ಳದ್ದಾಗಿ ಈ ದೇಶದಲ್ಲಿ ಗುರುತಿಸಿಕೊಂಡಿದೆ? ಹೆಣ್ಣನ್ನು ಮಾತೆ, ದೇವಿ ಎಂದೆಲ್ಲಾ ಕರೆದು ಗೌರವಿಸುವ ದೇಶದಲ್ಲಿ ಹೆಣ್ಣಿನ ಮಾನ ಮತ್ತು ಪ್ರಾಣಕ್ಕಿಂತ ಗೋವಿನ ಪ್ರಾಣ ಹೆಚ್ಚು ತೂಗುವಂತಾದುದು ಯಾವುದರ ಸೂಚನೆ?

      ಬರೇ ಕಾನೂನು-ಕಾಯ್ದೆಗಳಷ್ಟೇ ಹೆಣ್ಣಿಗೆ ಈ ಭೂಮಿಯನ್ನು ಸುರಕ್ಷಿತಗೊಳಿಸಲಾರದು. ಹೆಣ್ಣನ್ನು ಗೌರವಾರ್ಹವಾಗಿ ಕಾಣುವ ಮನಸ್ಥಿತಿಯೊಂದರ ನಿರ್ಮಾಣವೇ ಇದರ ಪ್ರಥಮ ಬೇಡಿಕೆ. ಇದು ಒಂದು ರಾತ್ರಿಯಿಂದ ಬೆಳಗಾಗುವುದರ ನಡುವೆ ಸಾಧ್ಯವಾಗುವಂಥದ್ದಲ್ಲ. ಇದೊಂದು ನಿರಂತರ ಪ್ರಕ್ರಿಯೆ. ಪುರುಷರನ್ನು ನಿರಂತರವಾಗಿ ತರಬೇತುಗೊಳಿಸುವ ಕ್ರಿಯೆ. ಮಕ್ಕಳಿಂದಲೇ ಈ ತರಬೇತಿ ಪ್ರಾರಂಭವಾಗಬೇಕು. ಹೆಣ್ಣಿನ ಬಗ್ಗೆ ಗೌರವ ಮೂಡುವಂಥ ಮಾತು-ಕೃತಿಗಳನ್ನು ಹೆತ್ತವರು ಮಕ್ಕಳಿಗೆ ನೀಡುತ್ತಲಿರಬೇಕು. ಹೆಣ್ಣನ್ನು ನಕಾರಾತ್ಮಕವಾಗಿ ನೋಡುವ ಎಲ್ಲದರಿಂದಲೂ ದೂರ ನಿಲ್ಲಬೇಕು.

        ಈ ಜಗತ್ತು ನಡೆಯುವುದೇ ಹೆಣ್ಣು ಮತ್ತು ಗಂಡು ಎಂಬ ಜೀವಿಯಿಂದ. ಇವೆರಡೂ ಜಗತ್ತನ್ನು ಮುಂದಕ್ಕೊಯ್ಯುವ ಗಾಲಿಗಳು. ಈ ಗಾಲಿಗಳಲ್ಲಿ ಒಂದರ ಮೇಲೆ ನಿರಂತರ ದಾಳಿ ನಡೆಯುತ್ತಿರುವುದು ಅಪಾಯಕಾರಿ.

ಮನುಷ್ಯರಿಗೇ ಗಾಳ 'ಹಾಕಿದ' ಮೀನು

    ನೀರಿನಿಂದ ಹೊರತೆಗೆದ ತಕ್ಷಣ ಮೀನುಗಳು ವಿಲವಿಲನೆ ಒದ್ದಾಡುತ್ತವೆ. ಮಾತ್ರವಲ್ಲ, ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ ಅವು ಸಾವನ್ನೂ ಅಪ್ಪುತ್ತವೆ. ಸದ್ಯ ಮೀನುಪ್ರಿಯರಲ್ಲಿ ಇಂಥದ್ದೊಂದು ಒದ್ದಾಟ ಪ್ರಾರಂಭವಾಗಿದೆ. ನೀರಿನಿಂದ ಮೀನುಗಳನ್ನು ಹೊರತೆಗೆದು ಒದ್ದಾಡಿಸುವ ಮನುಷ್ಯರನ್ನು ಮೀನುಗಳು ಒದ್ದಾಡಿಸಲಿದೆಯೇ ಎಂಬ ಆತಂಕ ಕಾಡತೊಡಗಿದೆ. ಆದರೆ ಈ ಆತಂಕಕ್ಕೆ ಯಾವ ನೆಲೆಯಲ್ಲೂ ಮೀನುಗಳು ಕಾರಣವಲ್ಲ. ಮೀನುಗಳು ಈಗಲೂ ಕೂಡ ಪರಮ ಶುದ್ಧ ಮತ್ತು ಅತ್ಯಂತ ವಿಶ್ವಾಸಾರ್ಹ. ಪುರಾತನ ಕಾಲದಿಂದಲೂ ಮತ್ಸ್ಯವರ್ಗದ ಮೇಲೆ ಮನುಷ್ಯ ದಾಳಿ ಮಾಡುತ್ತಿದ್ದರೂ ಮತ್ತು ವಿವಿಧ ಸಂಚುಗಳ ಮೂಲಕ ಅವನ್ನು ನೀರಿನಿಂದೆತ್ತಿ ಜೇಬು ತುಂಬಿಸುತ್ತಿದ್ದರೂ ಅವು ಎಂದೂ ಮನುಷ್ಯರಿಗೆ ದ್ರೋಹ ಬಗೆದಿಲ್ಲ. ತನ್ನನ್ನು ಸಾಯಿಸುವ ಮನುಷ್ಯರನ್ನು ಸಾಯಿಸಬೇಕೆಂಬ ಉದ್ದೇಶದಿಂದ ಅವೆಂದೂ ಷಡ್ಯಂತ್ರ ರಚಿಸಿಲ್ಲ. ಆದರೆ, ಈ ನಿಷ್ಪಾಪಿ ಮೀನುಗಳ ವಿಷಯದಲ್ಲೂ ಮನುಷ್ಯ ಪರಮ ಭ್ರಷ್ಟನಾಗುತ್ತಿದ್ದಾನೆ. ಮೀನುಗಳನ್ನು ನೀರಿನಿಂದೆತ್ತಿ ಒದ್ದಾಡಿಸುವ ಆತ ಇದೀಗ ಅವುಗಳಿಗೆ ರಾಸಾಯನಿಕಗಳನ್ನು ಸೇರಿಸಿ ಮನುಷ್ಯರನ್ನೂ ಒದ್ದಾಡಿಸುವ ಮತ್ತು ಸಾವಿನೆಡೆಗೆ ದೂಡುವ ಪರಮ ಕ್ರೌರ್ಯಕ್ಕೆ ಇಳಿದಿದ್ದಾನೆ. ಮೀನುಗಳನ್ನು ಬಹುಕಾಲ ಕೆಡದಂತೆ ರಕ್ಷಿಸುವುದಕ್ಕಾಗಿ ಸೋಡಿಯಂ ಬೆಂಝೋಟ್, ಅಮೋನಿಯಾ ಮತ್ತು ಫಾರ್ಮಾಲಿನ್‍ನಂಥ ಮಾರಕ ರಾಸಾಯನಿಕಗಳನ್ನು ಬಳಸಲಾಗುತ್ತಿದೆ ಅನ್ನುವ ಅಧಿಕೃತ ವರದಿಗಳು ಹೊರಬಿದ್ದಿವೆ. ಹೈದರಾಬಾದ್‍ನಿಂದ ಕಂಟೈನರ್ ನಲ್ಲಿ ಸಾಗಿಸುತ್ತಿದ್ದ ಮೀನುಗಳನ್ನು ಕಳೆದವಾರ ತಿರುವನಂತಪುರದ ಪಾಲಕ್ಕಾಡ್ ಜಿಲ್ಲೆಯ ಚೆಕ್ ಪೋಸ್ಟ್ ನಲ್ಲಿ ತಡೆದು ತಪಾಸಿಸಲಾದ ಬಳಿಕ ಈ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ. ಕೇರಳದ ಆಹಾರ ಸುರಕ್ಷತಾ ಆಯುಕ್ತರ ನೇತೃತ್ವದಲ್ಲಿ ನಡೆದ ಈ ದಾಳಿಗಿಂತ ವಾರ ಮೊದಲು ಇಂಥದ್ದೇ ಇನ್ನೊಂದು ದಾಳಿಯಾಗಿತ್ತು. ಆ ದಾಳಿಯಲ್ಲಿ 12 ಕ್ವಿಂಟಾಲ್ ಮೀನುಗಳಲ್ಲಿ ವಿಷಕಾರಿ ಅಂಶಗಳನ್ನು ಪತ್ತೆ ಹಚ್ಚಲಾಗಿತ್ತು. ದಿನದ ಹಿಂದೆ  ಕೊಲ್ಲಮ್ ಜಿಲ್ಲೆಯ ಆರ್ಯನ್ ಕಾವು ಚೆಕ್ ಪೋಸ್ಟ್ ನಲ್ಲಿ ಫಾರ್ಮಾಲಿನ್ ವಿಷ ಲೇಪಿತ ಹತ್ತು ಟನ್ ಮೀನುಗಳನ್ನು ವಶಪಡಿಸಲಾಗಿದೆ. ಫಾರ್ಮಾಲಿನ್ ಅನ್ನುವುದು ಹೆಣಗಳನ್ನು ಕೆಡದಂತೆ ಕಾಪಾಡಲು ಬಳಸುವ ರಾಸಾಯನಿಕ. ಸಾಮಾನ್ಯವಾಗಿ ಆಸ್ಪತ್ರೆಯ ಶವಾಗಾರಗಳಲ್ಲಿ ಈ ರಾಸಾಯನಿಕವನ್ನು ಬಳಸಿ ಹೆಣಗಳು ದೀರ್ಘಕಾಲ ಕೆಡದಂತೆ ಉಳಿಸಿಕೊಳ್ಳುವ ಕ್ರಮ ಇದೆ. ಈ ರಾಸಾಯನಿಕವು ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ. ಅಮೋನಿಯ ಮತ್ತು ಸೋಡಿಯಂ ಬೆಂಝೋಟ್‍ಗಳ ಮಿಶ್ರಣವೂ ಮನುಷ್ಯರ ದೇಹಕ್ಕೆ ಅತ್ಯಂತ ಅಪಾಯಕಾರಿ. ಮೀನುಗಳಿಗೆ ಈ ರಾಸಾಯನಿಕಗಳನ್ನು ಸಿಂಪಡಿಸಿದರೆ ಮೀನುಗಳು ತಾಜಾವಾಗಿ ಉಳಿಯುತ್ತವೆಯಷ್ಟೇ ಅಲ್ಲ, ಅವುಗಳು ತಮ್ಮ ಪ್ರಕೃತಿದತ್ತವಾದ ವಾಸನೆ, ಮೃದುತ್ವ ಮತ್ತು ಮಾಂಸದಲ್ಲಿನ ಹದವನ್ನು ಕಳಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.
      ಒಂದು ರೀತಿಯಲ್ಲಿ, ನಾವು ಸೇವಿಸುವ ಆಹಾರ ವಸ್ತುಗಳಲ್ಲಿ ಹೆಚ್ಚಿನವು ರಾಸಾಯನಿಕ ಲೇಪಿತವೇ. ಮನುಷ್ಯರ ಬಟ್ಟಲಿನಲ್ಲಿ ಕಡ್ಡಾಯ ಸ್ಥಾನ ಪಡೆದಿರುವ ಅಕ್ಕಿಯೂ ಈ ರಾಸಾಯನಿಕದಿಂದ ಹೊರತಾಗಿಲ್ಲ. ಅಕ್ಕಿಗೆ ಹೊಳಪು ಕೊಡುವುದಕ್ಕಾಗಿ ರಾಸಾಯನಿಕವನ್ನು ಸಿಂಪಡಿಸಲಾಗುವುದು ಇವತ್ತು ರಹಸ್ಯವಾಗಿ ಉಳಿದಿಲ್ಲ. ತರಕಾರಿಗಳನ್ನು ತಾಜಾವಾಗಿಸುವುದಕ್ಕೆ ಮತ್ತು ಹಣ್ಣುಹಂಪಲುಗಳನ್ನು ಕೆಡದಂತೆ ರಕ್ಷಿಸುವುದಕ್ಕೆ ಒಂದಲ್ಲ ಒಂದು ಬಗೆಯ ರಾಸಾಯನಿಕಗಳನ್ನು ಬಳಸಲಾಗುತ್ತಿರುವುದೂ ನಿಜ. ಹಣ್ಣು-ಹಂಪಲುಗಳು ಬೇಗನೇ ಮಾಗುವಂತೆ ಮಾಡುವುದಕ್ಕೂ ರಾಸಾಯನಿಕದ ಮೊರೆ ಹೋಗಲಾಗುತ್ತಿದೆ. ಅಂದಹಾಗೆ, ಇಂಥ ಸಂಗತಿಗಳು ಬೆಳಕಿಗೆ ಬಂದ ಆರಂಭದಲ್ಲಿ ಸಾರ್ವಜನಿಕವಾಗಿ ವಿರೋಧಗಳು ವ್ಯಕ್ತವಾದರೂ ನಿಧಾನಕ್ಕೆ ಅವು ತಣ್ಣಗಾಗುತ್ತಾ ಹೋಗುತ್ತವೆ. ಇವತ್ತು ಅಕ್ಕಿ, ಹಣ್ಣು-ಹಂಪಲು, ತರಕಾರಿಗಳಿಗೆ ಸಿಂಪಡಿಸುವ ರಾಸಾಯನಿಕಗಳ ಬಗ್ಗೆ ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳಲ್ಲಿ ಗಂಭೀರ ಚರ್ಚೆಗಳಾಗುತ್ತಿಲ್ಲ ಎಂಬುದಕ್ಕೆ ಅವೆಲ್ಲ ಈಗ ರಾಸಾಯನಿಕ ಮುಕ್ತವಾಗಿ ಮಾರುಕಟ್ಟೆಗೆ ಬರುತ್ತಿವೆ ಎಂಬುದು ಕಾರಣವಲ್ಲ. ಆ ಕುರಿತಾದ ಚರ್ಚೆ ಈಗ ಪ್ರಸ್ತುತತೆಯನ್ನು ಕಳಕೊಳ್ಳತೊಡಗಿದೆ. ರಾಸಾಯನಿಕವಿಲ್ಲದ ಯಾವುದೂ ಮಾರುಕಟ್ಟೆಯಲ್ಲಿಲ್ಲ ಅನ್ನುವ ನಿರಾಶವಾದವೊಂದು ಸಾರ್ವಜನಿಕರಲ್ಲಿ ಮನೆ ಮಾಡಿಬಿಟ್ಟಿದೆ. ಆದ್ದರಿಂದ, ಒಂದು ವೇಳೆ ಮೀನಿನ ಬಗೆಗೂ ಸಾರ್ವಜನಿಕವಾಗಿ ಇಂಥದ್ದೇ  ಉದಾಸೀನಭಾವ ಕಾಣಿಸಿಕೊಂಡು ಬಿಟ್ಟರೆ ಮುಂದಿನ ದಿನಗಳಲ್ಲಿ ಮನುಷ್ಯರೂ ಮೀನಿನಂತೆ ವಿಲವಿಲನೆ ಒದ್ದಾಡಬೇಕಾದೀತು.
      ಬಸಳೆ, ತೊಂಡೆಕಾಯಿ, ಸೌತೆಕಾಯಿ, ಬೀಟ್ರೋಟ್, ಬಟಾಟೆ ಇತ್ಯಾದಿ ತರಕಾರಿಗಳಿಗೆ ಹೋಲಿಸಿದರೆ ಮೀನು ತೀರಾ ಭಿನ್ನ. ಬಸಳೆ, ತೊಂಡೆಕಾಯಿ ಇತ್ಯಾದಿಗಳು  ಸಸ್ಯಾಹಾರ ಮತ್ತು ಮೀನು ಮಾಂಸಾಹಾರ ಅನ್ನುವುದು ಈ ಭಿನ್ನತೆಗೆ ಕಾರಣವಲ್ಲ. ಬಸಳೆ, ಬೆಂಡೆಕಾಯಿ, ಸೌತೆ.. ಇತ್ಯಾದಿ ಯಾವುದೇ ಗಿಡ ಅಥವಾ ಬಳ್ಳಿಗಳು ಫಲವನ್ನು ಕೊಡುವ ಹಂತಕ್ಕೆ ಬೆಳೆಯಬೇಕಾದರೆ ಅದಕ್ಕೆ ಪೋಷಣೆ ಬೇಕೇ ಬೇಕು. ಮನುಷ್ಯನಿಂದ ಗೊಬ್ಬರ, ನೀರು, ಆರೈಕೆಗಳನ್ನು ಪಡೆದುಕೊಂಡ ಬಳಿಕವೇ ಇವು ಪ್ರತಿಯಾಗಿ ಫಲಗಳನ್ನು ನೀಡುತ್ತವೆ. ಆರೈಕೆಯಲ್ಲಿ ವ್ಯತ್ಯಾಸವಾದರೆ ಫಲಗಳಲ್ಲೂ ವ್ಯತ್ಯಾಸವಾಗುತ್ತದೆ. ಆದರೆ ಮೀನು ಹಾಗಲ್ಲ. ಮನುಷ್ಯನ ಆರೈಕೆಯಿಲ್ಲದೆ ಫಲ ಕೊಡುವ ಜೀವಿಯದು. ಮೀನಿನ ಹೊಟ್ಟೆ ತುಂಬಿಸುವುದಕ್ಕಾಗಿ ಮನುಷ್ಯ ಸಮುದ್ರಕ್ಕೆ ಅಕ್ಕಿ ಸುರಿಯುವುದಿಲ್ಲ. ಔಷಧ ಸಿಂಪಡಿಸುವುದಿಲ್ಲ. ಇಷ್ಟಿದ್ದೂ, ಮನುಷ್ಯ ತೃಪ್ತನಾಗಿಲ್ಲವೆಂದರೆ ಏನನ್ನಬೇಕು? ಪುಕ್ಕಟೆ ಸಿಗುವ ಮೀನಿಗೆ ಅಪಾಯಕಾರಿ ರಾಸಾಯನಿಕವನ್ನು ಸೇರಿಸಿ ಮಾರಾಟ ಮಾಡುವ ಆತನ ದಂಧಾಮನಸ್ಸನ್ನು ಯಾವ ಹೆಸರಿಟ್ಟು ಕರೆಯಬೇಕು? ಹಾಗಂತ, ಈ ದಂಧೆಯನ್ನು ದೂರದ ತಮಿಳುನಾಡು, ಹೈದರಾಬಾದ್‍ಗೆ ಅಥವಾ ಕೇರಳಕ್ಕೆ ಸೀಮಿತಗೊಳಿಸಿ ನೋಡಬೇಕಿಲ್ಲ. ಕರಾವಳಿ ಭಾಗದಲ್ಲಿ ಈಗಾಗಲೇ ಈ ಕ್ರಿಯೆ ಚಾಲ್ತಿಯಲ್ಲಿದೆ ಎಂದು ನಂಬಲರ್ಹ ಮೂಲಗಳು ಖಚಿತಪಡಿಸಿವೆ. ಇಲ್ಲಿ ಸುಮಾರು 25% ದಿಂದ 30% ದಷ್ಟು ಮೀನುಗಳು ಈ ರಾಸಾಯನಿಕ ಲೇಪನಕ್ಕೆ ಒಳಗಾಗುತ್ತಿವೆ ಎಂಬುದನ್ನೂ ಆ ಮೂಲಗಳು ಸ್ಪಷ್ಟಪಡಿಸಿವೆ. ಆದ್ದರಿಂದ,  ಮೀನು ಪ್ರಿಯರೆಲ್ಲ ಈಗಾಗಲೇ ಒಂದಷ್ಟು ವಿಷವನ್ನು ತಮ್ಮೊಳಗೆ ಇಳಿಸಿಕೊಂಡಿದ್ದಾರೆ. ಇನ್ನಿರುವ ಮಾರ್ಗ ಏನೆಂದರೆ, ಇನ್ನಷ್ಟು ವಿಷಗಳು ನಮ್ಮ ದೇಹ ಸೇರದಂತೆ ನೋಡಿಕೊಳ್ಳುವುದು. ಅದಕ್ಕಾಗಿ ವ್ಯವಸ್ಥೆಯ ಮೇಲೆ ಒತ್ತಡ ತರುವ ಪ್ರಯತ್ನಗಳು ಸಾರ್ವಜನಿಕರಿಂದ ನಡೆಯಬೇಕು. ಮೀನುಗಳು ಮಾರುಕಟ್ಟೆಗೆ ಬರುವುದಕ್ಕಿಂತ ಮೊದಲು ತಪಾಸಣೆಗೆ ಒಳಗಾಗುವ ಏರ್ಪಾಟುಗಳು ಆಗಬೇಕು. ಮೀನು ಕೇಂದ್ರಗಳಿಗೆ ದಿಢೀರ್ ದಾಳಿ ನಡೆಸಿ ತಪಾಸಿಸುವ ಪ್ರಾಮಾಣಿಕ ಅಧಿಕಾರಿಗಳನ್ನು ಆಹಾರ ಇಲಾಖೆಗೆ ಸೇರಿಸಬೇಕು. ಮುಖ್ಯವಾಗಿ ಕೇರಳದಿಂದ ಕರ್ನಾಟಕಕ್ಕೆ ತರಿಸಿಕೊಳ್ಳಲಾಗುವ ಮೀನುಗಳು ಮತ್ತು ರಾಜ್ಯದ ಕರಾವಳಿ ಭಾಗದಲ್ಲಿ ಹಿಡಿಯಲಾಗುವ ಮೀನುಗಳ ಮೇಲೆ ನಿಗಾ ಇಡುವ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಈ ರಾಜ್ಯದ ನಾನಾ ಭಾಗಗಳಿಗೆ ಮತ್ತು ಹೊರ ರಾಜ್ಯಗಳಿಗೆ ಮೀನುಗಳನ್ನು ಸಾಗಿಸುವ ದೊಡ್ಡ ಮೀನುಗಾರಿಕ ಪ್ರದೇಶಗಳಲ್ಲಿ ಮಂಗಳೂರೂ ಒಂದಾಗಿದ್ದು, ಇಲ್ಲಿ ಸುಸಜ್ಜಿತ ತಪಾಸಣಾ ಕೇಂದ್ರ ಮತ್ತು ಲ್ಯಾಬ್‍ಗಳ ನಿರ್ಮಾಣವಾಗಬೇಕು.
     ಭ್ರಷ್ಟ ಮನಸ್ಸು ಹೇಗೆ ಇಡೀ ಮಾನವ ಕುಲಕ್ಕೇ ಅಪಾಯಕಾರಿ ಅನ್ನುವುದಕ್ಕೆ ಮೀನು ಒಂದು ತಾಜಾ ಉದಾಹರಣೆ. ‘ಅತಿ ಬಯಕೆ’ ಯಾವಾಗಲೂ ಅಪಾಯಕಾರಿ. ಅವು ಅಕ್ಕಿಯನ್ನೂ ಕೆಡಿಸುತ್ತದೆ. ತರಕಾರಿಯನ್ನೂ ಕೆಡಿಸುತ್ತದೆ. ಮೀನನ್ನೂ ಕೆಡಿಸುತ್ತದೆ. ಕೊನೆಗೆ ಸ್ವತಃ ತನ್ನನ್ನೇ ಬಲಿ ಪಡೆಯುತ್ತದೆ. ಮೀನಿನ ಮೂಲಕ ಈ ಸತ್ಯ ಮತ್ತೊಮ್ಮೆ ಸಾಬೀತಾಗಿದೆ. ಈ ಭ್ರಷ್ಟರನ್ನು ತಡೆಯುವ ಶ್ರಮ ನಡೆಯದಿದ್ದರೆ ಸಮುದ್ರ ದಂಡೆಯಲ್ಲಾಗುವ ಒದ್ದಾಟವು ಸಮುದ್ರದ ಹೊರಗಿನ ಭೂಮಿಯಲ್ಲೂ ಆಗಬಹುದು. ಅಲ್ಲಿ ಮೀನಿದ್ದರೆ ಇಲ್ಲಿ ಮನುಷ್ಯ. ಅಷ್ಟೇ ವ್ಯತ್ಯಾಸ.

ಉದ್ರಿಕ್ತ ಗುಂಪು: ಹತ್ಯೆಗೆ ಧೈರ್ಯ ತುಂಬುವ ನಾಮಕರಣ

  
 ಈ ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ‘ಆಡಳಿತ ನಡೆಸುತ್ತಿರುವ’ ‘ಉದ್ರಿಕ್ತ ಗುಂಪಿನ’ ಬಗ್ಗೆ ಚರ್ಚೆ ನಡೆಸುವುದಕ್ಕೆ ತ್ರಿಪುರದ ಸುಕಾಂತ ಚಕ್ರವರ್ತಿ ಎಂಬ ಬಡಪಾಯಿ ಜಾಗತಿಕ ಮಾಧ್ಯಮಗಳಿಗೆ ಸಂದರ್ಭ ಒದಗಿಸಿದ್ದಾನೆ. ಈತನನ್ನು ತ್ರಿಪುರದ ಹಳ್ಳಿಯೊಂದರ ‘ಉದ್ರಿಕ್ತ ಗುಂಪು’ ಥಳಿಸಿ ಕೊಂದಿದೆ. ಆತ ಆ ಹಳ್ಳಿಗೆ ಹೋದದ್ದು ಏಕೆಂದರೆ, ವದಂತಿಗಳನ್ನು ನಂಬಿ ಯಾರನ್ನೂ ಥಳಿಸಿ ಕೊಲ್ಲಬೇಡಿ ಎಂದು ಜನರನ್ನು ಎಚ್ಚರಿಸುವುದಕ್ಕೆ. ಸುಕಾಂತ ಚಕ್ರವರ್ತಿಗೆ ಈ ಹೊಣೆಯನ್ನು ಅಲ್ಲಿನ ಸರಕಾರವೇ ನೀಡಿತ್ತು. ಇದಾದ ಒಂದೇ ವಾರದೊಳಗೆ ಮಹಾರಾಷ್ಟ್ರದ ದುಳೆ ಜಿಲ್ಲೆಯ ರೈನ್‍ಪಾಡ ಎಂಬಲ್ಲಿ 5 ಮಂದಿಯನ್ನು ‘ಉದ್ರಿಕ್ತ ಗುಂಪು’ ಥಳಿಸಿ ಕೊಂದಿದೆ. ಕಳೆದ ಒಂದು ತಿಂಗಳಲ್ಲಿ ಉದ್ರಿಕ್ತ ಗುಂಪಿನಿಂದ ಥಳಿತಕ್ಕೊಳಗಾಗಿ ಸಾವಿಗೀಡಾದವರ ಸಂಖ್ಯೆ 20ನ್ನು ದಾಟಿದೆ. ಇದು ಅಧಿಕೃತ ಲೆಕ್ಕಾಚಾರ. ಕೇವಲ ಒಡಿಸ್ಸಾ ರಾಜ್ಯವೊಂದರಲ್ಲೇ  28 ಥಳಿತ ಪ್ರಕರಣಗಳು ನಡೆದಿರುವುದು ಅಧಿಕೃತ ವರದಿ. ಹೀಗಿರುವಾಗ, ವರದಿಯಾಗದೇ ಸತ್ತು ಹೋದ ಪ್ರಕರಣಗಳು ಈ ಅಧಿಕೃತ ವರದಿಗಳ ದುಪ್ಪಟ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಈ ‘ಉದ್ರಿಕ್ತ ಗುಂಪನ್ನು’ ತೋರಿಸಿಯೇ ಬ್ಯಾಂಕ್ ಹಗರಣದ ಆರೋಪಿ ಚೋಕ್ಸಿಯು ಭಾರತಕ್ಕೆ ಬರುವುದರಿಂದ ವಿನಾಯಿತಿ ಕೋರಿದ್ದ. ಭಾರತಕ್ಕೆ ಬಂದರೆ ಥಳಿತಕ್ಕೊಳಗಾಗಿ ಹತ್ಯೆಗೀಡಾಗಬಹುದು ಎಂಬ ಭಯವನ್ನು ಬ್ರಿಟನ್ನಿನಲ್ಲಿರುವ ಆತ ವ್ಯಕ್ತಪಡಿಸಿದ್ದ. ಭಾರತದ ಈ ಉದ್ರಿಕ್ತ ಗುಂಪಿನ ಬಗ್ಗೆ ಕಳೆದ ವಾರ ಲಂಡನ್ನಿನ ಪ್ರಸಿದ್ಧ ಪತ್ರಿಕೆ ದಿ ಗಾರ್ಡಿಯನ್ ವಿಸ್ತೃತ ವರದಿಯನ್ನೇ ಮಾಡಿತ್ತು. ಅಷ್ಟಕ್ಕೂ, ಈ ಉದ್ರಿಕ್ತ ಗುಂಪು ತಯಾರಾಗುವುದು ಹೇಗೆ? ಯಾಕೆ? ಪ್ರತಿರೋಧ ವ್ಯಕ್ತಪಡಿಸಲೂ ಆಗದ ಒಂದು ಮನುಷ್ಯ ಜೀವವನ್ನು ಮನುಷ್ಯರೇ ಆಗಿರುವ ಕೆಲವರು ಥಳಿಸಿ ಕೊಲ್ಲುವಷ್ಟು ಕ್ರೂರಿಗಳಾಗುವುದು ಹೇಗೆ?
ನಿಜವಾಗಿ, ಥಳಿಸಿ ಕೊಲ್ಲುವವರನ್ನು ‘ಉದ್ರಿಕ್ತ ಗುಂಪು’ ಎಂಬ ಅನಾಮಿಕ ನಾಮದಲ್ಲಿ ಗುರುತಿಸುವುದೇ ಮೊದಲ ತಪ್ಪು. ‘ಉದ್ರಿಕ್ತ ಗುಂಪು’ ಎಂಬ ನಾಮಕರಣವು ಅಪರಾಧಿಗಳಿಗೆ ತಪ್ಪಿಸಿಕೊಳ್ಳಲು ಸುಲಭ ಅವಕಾಶವನ್ನು ನೀಡುವುದಷ್ಟೇ ಅಲ್ಲ, ಆ ಕ್ರೌರ್ಯದ ತೀವ್ರತೆಯನ್ನು ತಗ್ಗಿಸುತ್ತದೆ. ಒಂದು ಸಮಾಜವೇ ಭಾಗಿಯಾದ ಪ್ರಕರಣವಾಗಿ ಅಂಥದ್ದೊಂದು ನಾಮಕರಣವು ಆ ಕ್ರೌರ್ಯವನ್ನು ಮಾರ್ಪಡಿಸಿ ಬಿಡುತ್ತದೆ. ‘ಉದ್ರಿಕ್ತ ಗುಂಪು’ ಎಂಬ ಪದವು ಸ್ಥಳೀಯವಾದ ಮತ್ತು ಕ್ಪಣದ ಆವೇಶದಿಂದ ಪ್ರಚೋದಿತವಾದ ನಾಗರಿಕ ಸಮೂಹ ಎಂಬರ್ಥದಲ್ಲಿ ಇವತ್ತು ಬಳಸಲ್ಪಡುತ್ತದೆ. ಈ ಗುಂಪಿಗೆ ಅಪರಾಧ ಹಿನ್ನೆಲೆ ಇರಬೇಕೆಂದಿಲ್ಲ. ಸಾಂದರ್ಭಿಕ ಬೆಳವಣಿಗೆಗಳಿಂದ ಪ್ರಚೋದಿತಗೊಂಡು ಪ್ರತಿಕ್ರಿಯೆ ವ್ಯಕ್ತಪಡಿಸುವ ಸ್ಥಳೀಯ ನಾಗರಿಕರ ಗುಂಪೆಂಬುದಾಗಿ ಈ ಉದ್ರಿಕ್ತ ಗುಂಪು ಎಂಬ ಪದಪ್ರಯೋಗವು ಸಾಮಾನ್ಯವಾಗಿ ನಮ್ಮನ್ನು ನಂಬಿಸುತ್ತದೆ. ಇವತ್ತು ಥಳಿತ, ಹತ್ಯೆ, ಹಲ್ಲೆಗಳಲ್ಲಿ ನಿರತವಾಗಿರುವ ಉದ್ರಿಕ್ತ ಗುಂಪು ನಿಜಕ್ಕೂ ಇಷ್ಟು ಮುಗ್ಧವೇ? ಮಕ್ಕಳ ಕಳ್ಳತನದ ಹೆಸರಲ್ಲಿ ಮಾತ್ರ ಇವತ್ತು ಈ ದೇಶದಲ್ಲಿ ಉದ್ರಿಕ್ತ ಗುಂಪು ಸುದ್ದಿ ಮಾಡುತ್ತಿರುವುದಲ್ಲ. ಗೋಮಾಂಸ ಸಾಗಾಟದ ಹೆಸರಲ್ಲಿ, ದನಗಳ್ಳತನದ ಹೆಸರಲ್ಲಿ ಮತ್ತು ಭಿನ್ನ ಧರ್ಮದ ಜೋಡಿಗಳ ಹೆಸರಲ್ಲೂ ಈ ಗುಂಪು ಉದ್ರಿಕ್ತವಾಗುತ್ತಿದೆ. ಮಕ್ಕಳ ಕಳ್ಳತನವನ್ನು ತಡೆಯುವ ಹೆಸರಲ್ಲಿ ಹುಟ್ಟಿಕೊಂಡ ಗುಂಪು ಈ ಉದ್ರಿಕ್ತ ಗುಂಪಿನ ಪಟ್ಟಿಯಲ್ಲಿ ತೀರಾ ಇತ್ತೀಚಿನದು. ಬಹುಶಃ, ಈ ಹಿಂದಿನ ಉದ್ರಿಕ್ತ ಗುಂಪುಗಳ ಪ್ರಭಾವದಿಂದಾಗಿ ಹುಟ್ಟಿಕೊಂಡಿರುವ ಗುಂಪು ಇದಾಗಿರುವ ಸಾಧ್ಯತೆಯೇ ಹೆಚ್ಚು. ಕೋಮುಗಲಭೆಯ ಸಂದರ್ಭದಲ್ಲಿ ಈ ‘ಉದ್ರಿಕ್ತ ಗುಂಪು’ ಅತ್ಯಂತ ಹೆಚ್ಚು ಪ್ರಾಣಹಾನಿ ಮತ್ತು ಮಾನಹಾನಿಗೆ ಕಾರಣವಾಗಿದೆ. ಗುಜರಾತ್ ಹತ್ಯಾಕಾಂಡದಲ್ಲಿ ಈ ಉದ್ರಿಕ್ತ ಗುಂಪಿನ ಪಾತ್ರ ಬಹಳ ದೊಡ್ಡದು.
ಅಪರಾಧ ಕೃತ್ಯಗಳನ್ನು ನಿರ್ದಿಷ್ಟ ವ್ಯಕ್ತಿಗಳ ಮೇಲೆ ಹೊರಿಸುವುದಕ್ಕೂ ಅನಾಮಿಕರಾದ ಒಂದು ಗುಂಪಿನ ಮೇಲೆ ಹೊರಿಸುವುದಕ್ಕೂ ಬಹುದೊಡ್ಡ ವ್ಯತ್ಯಾಸವಿದೆ. ಒಂದಿಬ್ಬರು ವ್ಯಕ್ತಿಗಳು ಒಂದು ಹತ್ಯೆಯಲ್ಲಿ ಭಾಗಿಯಾದರೆ ಅದು ನಿರ್ದಿಷ್ಟ ವ್ಯಕ್ತಿಗಳ ಅಪರಾಧವಾಗಿ ಗುರುತಿಗೀಡಾಗುತ್ತದೆ. ಸಮಾಜ ಅವರನ್ನು ತಪ್ಪಿತಸ್ಥರಂತೆ ನೋಡುತ್ತದೆ. ಮಾಧ್ಯಮಗಳು ಅವರ ಹೆಸರನ್ನು ಉಲ್ಲೇಖಿಸಿಯೇ ಕೃತ್ಯವನ್ನು ವರದಿ ಮಾಡುತ್ತದೆ. ಆದರೆ ‘ಉದ್ರಿಕ್ತ ಗುಂಪಿಗೆ’ ಈ ಭೀತಿ ಎದುರಾಗುವುದು ಕಡಿಮೆ. ಉದ್ರಿಕ್ತ ಗುಂಪಿನ ಹತ್ಯೆಯಲ್ಲಿ ಸತ್ತವರು ಅಪರಾಧಿಗಳಾಗಿಯೂ ಸಾಯಿಸಿದವರು ನ್ಯಾಯಪಾಲಕರಾಗಿಯೂ ಸಾಮಾಜಿಕ ಮನ್ನಣೆಗೆ ಒಳಗಾಗುವ ಸಾಧ್ಯತೆಗಳೇ ಅಧಿಕ. ಈ ಹತ್ಯೆಯಲ್ಲಿ ಅಪರಾಧಿ ಇರುವುದಿಲ್ಲ. ಪಾಠ ಕಲಿಸಿದವರಷ್ಟೇ ಇರುತ್ತಾರೆ. ಗುಜರಾತ್ ಹತ್ಯಾಕಾಂಡದ ಸಮಯದಲ್ಲಿ ಅತ್ಯಾಚಾರ ಮತ್ತು ಹತ್ಯೆಯಲ್ಲಿ ನಿರತವಾದ ಉದ್ರಿಕ್ತ ಗುಂಪನ್ನು ಇವತ್ತು ಸಾಮಾನ್ಯರಷ್ಟೇ ಅಲ್ಲ ಕೆಲವು ಮಾಧ್ಯಮದ ಮಂದಿಯೇ ಅಭಿಮಾನದಿಂದ ನೋಡುತ್ತಾರೆ. ಆ ಗುಂಪನ್ನು ಅಪರಾಧಿ ಎನ್ನುವ ಬದಲು ಪಾಠ ಕಲಿಸಿದ ಗುಂಪಾಗಿ ಪರೋP್ಷÀವಾಗಿ ವ್ಯಾಖ್ಯಾನಿಸುವ ಶ್ರಮ ನಡೆಸುತ್ತಾರೆ. ಮಕ್ಕಳ ಕಳ್ಳತನದ ಹೆಸರಲ್ಲಿ ಇತ್ತೀಚೆಗೆ ಸುದ್ದಿ ಮಾಡುತ್ತಿರುವ ಉದ್ರಿಕ್ತ ಗುಂಪನ್ನು ಪಕ್ಕಕ್ಕಿಟ್ಟು ಈ ಹಿಂದೆ ಸುದ್ದಿಯಲ್ಲಿದ್ದ ಮತ್ತು ಈಗಲೂ ಇರುವ ಉದ್ರಿಕ್ತ ಗುಂಪನ್ನೊಮ್ಮೆ ಸ್ಮರಿಸಿಕೊಳ್ಳಿ. ಅದು ಮಾಡಿರುವ ಮತ್ತು ಮಾಡುತ್ತಿರುವ ಅನಾಹುತಗಳನ್ನೊಮ್ಮೆ ಮೆಲುಕು ಹಾಕಿ. ಈ ಗುಂಪು ಉದ್ರಿಕ್ತವಾಗುವುದು ಯಾವಾಗಲೂ ಒಂದು ನಿರ್ದಿಷ್ಟ ಧರ್ಮದೊಂದಿಗೆ ಗುರುತಿಸಿಕೊಂಡ ಜನರ ಮೇಲೆ. ದನ ಸಾಗಾಟದ ಹೆಸರಲ್ಲಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಮತ್ತು ಉತ್ತಮ ಭಾರತದಲ್ಲಿ ಈ ಉದ್ರಿಕ್ತ ಗುಂಪು ಸಾಯಿಸಿರುವ ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ಈಡು ಮಾಡಿರುವ ಹೆಸರುಗಳೆಲ್ಲ ಏನೇನು? ಯಾಕೆ ಒಂದೇ ಸಮುದಾಯಕ್ಕೆ ಸೇರಿದವರ ಮೇಲೆ ಈ ಗುಂಪು ಉದ್ರೇಕಗೊಳ್ಳುತ್ತದೆ? ದನ ಮಾರಾಟ ಮಾಡಿದವರು, ಅದನ್ನು ಕಸಾಯಿ ಮಾಡುವವರು, ಕಸಾಯಿಖಾನೆಯನ್ನು ಏಲಂ ಮಾಡುವವರು ಮತ್ತು ಗೋಮಾಂಸದ ಕಾರ್ಖಾನೆಯನ್ನು ಸ್ಥಾಪಿಸಿ, ಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವವರ ಮೇಲೆ ಈ ಗುಂಪು ಉದ್ರಿಕ್ತವಾಗದೇ ಇರುವುದಕ್ಕೆ ಕಾರಣಗಳೇನು? ಉದ್ರಿಕ್ತ ಗುಂಪು ನಿಜಕ್ಕೂ ಪ್ರಾಮಾಣಿಕವಾಗಿದ್ದರೆ ಅದು ಗೋಮಾರಾಟದಿಂದ ತೊಡಗಿ ಮಾಂಸವಾಗಿ ರಫ್ತಾಗುವವರೆಗಿನ ಉದ್ದದ ರೈಲಿನಂಥ ಬೋಗಿಯಿಂದ ಮಧ್ಯದ ಒಂದು ಬೋಗಿಯನ್ನು ಮಾತ್ರ ಕಿತ್ತು ಉಳಿದ ಬೋಗಿಗಳ ಸಾಗಾಟಕ್ಕೆ ಅನುಮತಿ ಕೊಡುವುದಕ್ಕೆ ಸಾಧ್ಯವೇ ಇಲ್ಲ. ಆ ಇಡೀ ರೈಲನ್ನು ತಡೆದು ನಿಲ್ಲಿಸುವುದೇ ನಿಜವಾದ ಪ್ರಾಮಾಣಿಕತೆ. ಆದರೆ ಹಾಗೆ ಆಗುವುದೇ ಇಲ್ಲವಲ್ಲ ಯಾಕೆ?
   ಮಕ್ಕಳ ಕಳ್ಳರನ್ನು ಶಿಕ್ಷಿಸುವ ಹೆಸರಲ್ಲಿ ಇದೀಗ ಸುದ್ದಿಯಲ್ಲಿರುವ ಉದ್ರಿಕ್ತ ಗುಂಪಿಗೆ ನಿಜವಾಗಿ ಈಗಾಗಲೇ ಚಟುವಟಿಕೆಯಲ್ಲಿರುವ ಮತ್ತು ನಿರ್ದಿಷ್ಟ ಸಮುದಾಯವನ್ನೇ ಗುರಿ ಮಾಡಿಕೊಂಡು ಉದ್ರಿಕ್ತವಾಗುವ ಗುಂಪೇ ಮೂಲ ಪ್ರಚೋದನೆ ಎಂದೇ ಹೇಳಬೇಕು. ಈ ಗುಂಪನ್ನು ಮಟ್ಟ ಹಾಕಲು ವ್ಯವಸ್ಥೆಗೆ ಸಾಧ್ಯವಾಗಿರುತ್ತಿದ್ದರೆ ಮಕ್ಕಳ ಕಳ್ಳತನದ ಹೆಸರಲ್ಲಿ ಉದ್ರಿಕ್ತ ಗುಂಪು ತಯಾರಾಗುವುದನ್ನು ತಪ್ಪಿಸುವುದಕ್ಕೆ ಸಾಧ್ಯವಾಗುತ್ತಿತ್ತು. ಯಾರೇ ಆಗಲಿ, ಥಳಿಸಿ ಕೊಲ್ಲುವವರನ್ನು ಎಂದೂ ಉದ್ರಿಕ್ತ ಗುಂಪಿಗೆ ಸೇರಿಸಲೇಬಾರದು. ಆ ಗುಂಪು ಎಷ್ಟೇ ದೊಡ್ಡದಿದ್ದರೂ ಅದನ್ನು ಬಿಡಿಬಿಡಿಯಾಗಿಸಿ ಪ್ರತಿಯೊಬ್ಬರ ಮೇಲೂ ಪೊಲೀಸರು ಕಠಿಣ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಪೂರಕ ಸಾಕ್ಷ್ಯಗಳನ್ನೂ ಕಲೆ ಹಾಕಬೇಕು. ಗುಂಪಾಗಿ ಸೇರಿಕೊಂಡು ಮಾಡುವ ಹತ್ಯೆಯು ನ್ಯಾಯಾಂಗದಲ್ಲಿ ಸಾಬೀತಾಗುವುದಿಲ್ಲ ಎಂಬ ಧೈರ್ಯವೇ ಇಂಥ ಕ್ರೌರ್ಯಕ್ಕೆ ಜನರನ್ನು ಪ್ರೇರೇಪಿಸುತ್ತದೆ. ಇಂಥ ಗುಂಪಿನಲ್ಲಿ ಸಾಮಾನ್ಯವಾಗಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರೇ ಅಧಿಕವಿರುತ್ತಾರೆ. ಹೆಸರಿಗೆ ಉದ್ರಿಕ್ತ ಗುಂಪಾದರೂ ಅಲ್ಲಿರುವುದೆಲ್ಲ ಬಹುತೇಕ ಕ್ರಿಮಿನಲ್ ಹಿನ್ನೆಲೆ ಇರುವವರೇ. ಆದರೆ ಉದ್ರಿಕ್ತ ಗುಂಪು ಎಂಬ ನಾಮಕರಣವು ಅವರ ನಿಜ ಮುಖವನ್ನು ಸಮಾಜದಿಂದ ಅಡಗಿಸಿಡುತ್ತದೆ. ಇದು ನಡೆಯಬಾರದು.


ಚರ್ಚೆ: ಒಂದು-ಹೆಣ್ಣು; ಎರಡೂ- ಹೆಣ್ಣು ಮತ್ತು...

    ಯಾವುದೇ ಕಾಲ, ಪರಿಸ್ಥಿತಿ, ಸಮಯದ ಹಂಗಿಲ್ಲದೇ ಎರಡು ವಿಷಯಗಳು ಮಾಧ್ಯಮಗಳಲ್ಲಿ ಆಗಾಗ ಚರ್ಚೆಗೆ ಒಳಗಾಗುತ್ತಲೇ ಇರುತ್ತವೆ. 1. ಹೆಣ್ಣು. 2. ಹೆಣ್ಣು. ಮಹಿಳಾ ಸುರಕ್ಷಿತತೆಯ ವಿಷಯ ಇದರಲ್ಲಿ ಒಂದಾದರೆ, ಇನ್ನೊಂದು ಲಿಂಗಾನುಪಾತದ ಸಮಸ್ಯೆ. ಎರಡೂ ಹೆಣ್ಣಿಗೇ ಸಂಬಂಧಿಸಿದ್ದು. ಈ ದೇಶವನ್ನು ಹೆಣ್ಣಿನ ಪಾಲಿಗೆ ಸುರಕ್ಷಿತಗೊಳಿಸುವ ಉದ್ದೇಶದಿಂದ ರಚಿಸಲಾದ ಕಾನೂನುಗಳ ಸಂಖ್ಯೆ ಸಣ್ಣದೇನಲ್ಲ. 2012ರ ನಿರ್ಭಯ ಘಟನೆಯ ಬಳಿಕವಂತೂ ಹೆಣ್ಣು ಈ ದೇಶದಲ್ಲಿ ಬಹುಮುಖ್ಯ ಚರ್ಚಾವಸ್ತುವಾದಳು. 2013ರಲ್ಲಿ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ ವಿಧಿಸುವಷ್ಟು ಕಾನೂನನ್ನು ಬಲಪಡಿಸಲಾಯಿತು. ಆದರೂ ಹೆಣ್ಣು ಸುರಕ್ಷಿತಳಲ್ಲ ಅನ್ನುವುದಕ್ಕೆ ಆ ಬಳಿಕದ ಹಲವು ಭಯಾನಕ ಅತ್ಯಾಚಾರ-ಹತ್ಯೆ ಪ್ರಕರಣಗಳು ಸಾಕ್ಷಿಯಾದವು. ಕಥುವಾ ಮತ್ತು ಉನ್ನಾವೋ ಈ ಪಟ್ಟಿಯಲ್ಲಿ ಇತ್ತೀಚೆಗೆ ಸ್ಥಾನ ಪಡೆದುಕೊಂಡ ಪ್ರಕರಣಗಳಾದರೆ ಕಳೆದವಾರ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ರಾಜ್‍ಪುರ ಗ್ರಾಮದಲ್ಲಿ 35 ವರ್ಷದ ವಿವಾಹಿತ ಮಹಿಳೆಯನ್ನು ಐದು ಮಂದಿಯ ಗುಂಪು ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಿ ಬಳಿಕ ದೇವಸ್ಥಾನದ ಯಾಗ ಶಾಲೆಯ ಹೋಮಕುಂಡದಲ್ಲಿ ದಹಿಸಿದ ಘಟನೆ ನಡೆಯಿತು. ಇದರ ಜೊತೆಜೊತೆಗೇ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿ ಒಂದು ಆಘಾತಕಾರಿ ಅಂಕಿ-ಸಂಖ್ಯೆ ಬಿಡುಗಡೆಯಾಗಿದೆ. ಶೈಕ್ಷಣಿಕ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ಜಿಲ್ಲೆಯಲ್ಲಿ ಹೆಣ್ಮಕ್ಕಳ ಬಗ್ಗೆ ತಾತ್ಸಾರ ಭಾವನೆಯಿದೆ ಎಂಬ ಮಾಹಿತಿಯನ್ನು ಈ ಅಂಕಿಅಂಶಗಳು ರುಜುವಾತುಪಡಿಸುತ್ತಿವೆ. 2011ರ ಜನಗಣತಿಯ ಪ್ರಕಾರ ಈ ಜಿಲ್ಲೆಯಲ್ಲಿ 6 ವರ್ಷದೊಳಗಿನ ಪ್ರತಿಸಾವಿರ ಗಂಡು ಮಕ್ಕಳಿಗೆ 945 ರಷ್ಟು ಹೆಣ್ಣು ಮಕ್ಕಳಷ್ಟೇ ಇದ್ದಾರೆ. 2001ರಲ್ಲಿ 1000 ಗಂಡು ಮಕ್ಕಳಿಗೆ 951 ಹೆಣ್ಣು ಮಕ್ಕಳಿದ್ದರು. ಅಂದರೆ, ಕಳೆದ 16 ವರ್ಷಗಳ ಅವಧಿಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಇದಕ್ಕೆ ಕಾರಣಗಳೇನು?
   ಸಾವಿರ ಗಂಡು ಮಕ್ಕಳಿಗೆ ಸಾವಿರದ ಒಂದು ಹೆಣ್ಣು ಮಕ್ಕಳಿರುವ ಜಿಲ್ಲೆ ಈ ದೇಶದಲ್ಲಿ ಬಹುಶಃ ಹುಡುಕಿದರೂ ಸಿಗುವ ಸಾಧ್ಯತೆ ಇಲ್ಲ. ದೇಶದ ಒಟ್ಟಾರೆ ಗಂಡು-ಹೆಣ್ಣು ಲಿಂಗಾನುಪಾತವು 1000-938ರ ಆಸುಪಾಸಿನಲ್ಲಿದೆ. ಇದಕ್ಕೆ ಎರಡು ಕಾರಣಗಳನ್ನು ಅಂದಾಜಿಸಬಹುದು. ಒಂದು- ಪ್ರಕೃತಿಯೇ ಈ ಅಸಮತೋಲನಕ್ಕೆ ಕಾರಣವಾಗಿದೆ. ಗಂಡು ಮಕ್ಕಳು ಹುಟ್ಟುವಷ್ಟು ಪ್ರಮಾಣದಲ್ಲಿ ಹೆಣ್ಣು ಮಕ್ಕಳ ಜನನವಾಗುತ್ತಿಲ್ಲ. ಇದು ಪ್ರಕೃತಿ ಸಹಜ ಕ್ರಿಯೆಯಾಗಿದ್ದು, ಮಾನವನ ಹಸ್ತಕ್ಷೇಪವನ್ನು ಇದರಲ್ಲಿ ಶಂಕಿಸಬೇಕಾಗಿಲ್ಲ. ಎರಡು- ಮಾನವನ ಹಸ್ತಕ್ಷೇಪದಿಂದಾಗಿಯೇ ಈ ಏರಿಳಿಕೆ ಉಂಟಾಗಿದೆ. ಹೆಣ್ಣು ಮಗುವಿನ ಬಗ್ಗೆ ಹೆತ್ತವರಲ್ಲಿ ತಾತ್ಸಾರಭಾವವಿದೆ.
   ನಿಜವಾಗಿ, ಈ ಎರಡು ಕಾರಣಗಳಲ್ಲಿ ಎರಡನೇ ಕಾರಣವನ್ನೇ ಹೆಚ್ಚಿನೆಲ್ಲ ಸಂಶೋಧನೆಗಳು ಅಂಗೀಕರಿಸಿವೆ. ಹೆಣ್ಣು ಯಾವ್ಯಾವುದೋ ಕಾರಣಕ್ಕೆ ಸಮಾಜದ ಪಾಲಿಗೆ ಭಾರವೆಂದು ಪರಿಗಣಿಸಲ್ಪಡುತ್ತಿದ್ದಾಳೆ. ಅತ್ಯಾಚಾರವೂ ಈ ಭಾರಕ್ಕೆ ಒಂದು ಕಾರಣವಾಗಿರಬಹುದು. ವರದಕ್ಷಿಣೆಯೂ ಒಂದು ಕಾರಣವಾಗಿರಬಹುದು. ಹೆತ್ತವರ ಲಾಭ-ನಷ್ಟದ ಲೆಕ್ಕಾಚಾರಕ್ಕೂ ಈ ಕಾರಣಗಳಲ್ಲಿ ಪಾಲು ಇರಬಹುದು. ಪ್ರದೇಶದಿಂದ ಪ್ರದೇಶಕ್ಕೆ, ನಗರದಿಂದ ನಗರಕ್ಕೆ ಈ ಕಾರಣಗಳಲ್ಲಿ ವ್ಯತ್ಯಾಸ ಇರಬಹುದಾದರೂ ಅದರ ಪರಿಣಾಮ ಮಾತ್ರ ಹೆಣ್ಣಿನ ಮೇಲೆಯೇ. ದಕ್ಷಿಣ ಕನ್ನಡ ಜಿಲ್ಲೆಯನ್ನು ಎಜುಕೇಶನಲ್ ಹಬ್ ಎಂದು ಕರೆಯಲಾಗುತ್ತದೆ. ರಾಜ್ಯದ ಬೇರೆ ಬೇರೆ ಕಡೆಯಿಂದ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿಗಳು ಜಿಲ್ಲೆಗೆ ಬರುತ್ತಾರೆ. ಶಿಕ್ಷಣದ ಬಗ್ಗೆ ಅತ್ಯಂತ ಹೆಚ್ಚು ಜಾಗೃತಿಯುಳ್ಳ ಮತ್ತು ಶೈಕ್ಷಣಿಕವಾಗಿ ಅತ್ಯಂತ ಮುಂದುವರಿದ ಜಿಲ್ಲೆ ಇದು. ಹಾಗಿದ್ದರೂ ಕಳೆದ 16 ವರ್ಷಗಳಿಂದ ಜಿಲ್ಲೆಯಲ್ಲಿ ಹೆಣ್ಣು ಮಗು ನಿಧಾನಕ್ಕೆ ನಾಪತ್ತೆಯಾಗುತ್ತಿದೆ ಎಂದರೆ ಅದು ಕೊಡುವ ಸೂಚನೆ ಏನು? ಹೆಣ್ಣಿನ ಕುರಿತಾದ ನಕಾರಾತ್ಮಕ ಭಾವನೆಯನ್ನು ಬದಲಿಸಲು ಶಿಕ್ಷಣ ವಿಫಲವಾಗುತ್ತಿದೆ ಎಂಬುದನ್ನೇ ಅಲ್ಲವೇ? ಹಾಗಿದ್ದರೆ, ಶೈಕ್ಷಣಿಕ ಪ್ರಗತಿಗೂ ಹೆಣ್ಣಿನ ಕುರಿತಾದ ಸಕಾರಾತ್ಮಕ ಭಾವನೆಗೂ ನಡುವೆ ಹೇಗೆ ಸಂಬಂಧವನ್ನು ಕಲ್ಪಿಸಬಹುದು? ಹೆಣ್ಣಿನ ಬಗ್ಗೆ ಗೌರವಾರ್ಹ ಭಾವನೆ ಹುಟ್ಟಿಸಲು ನಮ್ಮ ಶಿಕ್ಪಣ ಪದ್ಧತಿಗೆ ಸಾಧ್ಯವಾಗುತ್ತಿಲ್ಲವೇ? ಕಳೆದವಾರ ದೆಹಲಿಯ ಸಾಕೇತ್ ಕೋರ್ಟ್ ಆವರಣದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆಯಿತು. ಹಿರಿಯ ನ್ಯಾಯವಾದಿಯೊಬ್ಬರು ಕಿರಿಯ ನ್ಯಾಯವಾದಿಯ ಮೇಲೆ ಅತ್ಯಾಚಾರ ಎಸಗಿದರು. ಆ ಬಗ್ಗೆ ದೂರೂ ದಾಖಲಾಯಿತು. ಇದೊಂದು ಬಿಡಿ ಉದಾಹರಣೆ ಅಷ್ಟೇ. ಹೆಣ್ಣು ಯಾರಿಂದ ಅಸುರಕ್ಷಿತಳಾಗಿದ್ದಾಳೆ? ವಿದ್ಯಾವಂತ ಪುರುಷ ವರ್ಗ ಆಕೆಯನ್ನು ಹೇಗೆ ನೋಡುತ್ತಿದೆ? ಹೆಣ್ಣನ್ನು ಅತ್ಯಾಚಾರಕ್ಕೆ ಒಳಪಡಿಸುವ, ವರದಕ್ಷಿಣೆಗೆ ಪೀಡಿಸುವ, ಉದ್ಯೋಗ, ಭಡ್ತಿಗಾಗಿ ಹಾಸಿಗೆ ಸುಖ ಬಯಸುವ ಪುರುಷರೆಲ್ಲ ಅಶಿಕ್ಷಿತರೇ? ಅವಿದ್ಯಾವಂತರೇ? ಸಮಾಜ ಶಿಕ್ಷಿತವಾದಂತೆಯೇ ಹೆಣ್ಣು ಸುರಕ್ಷಿತಗೊಳ್ಳುತ್ತಾ ಹೋಗುತ್ತಾಳೆ ಎಂಬ ನಂಬಿಕೆ ಎಲ್ಲಿಯ ವರೆಗೆ ಸರಿ? ಅಮೇರಿಕ, ಬ್ರಿಟನ್ ಸೇರಿದಂತೆ ಮುಂದುವರಿದ ದೇಶಗಳಲ್ಲಿ ‘MeToo’ ಅನ್ನುವ ಹ್ಯಾಶ್‍ಟ್ಯಾಗ್ ಚಳವಳಿ ಪ್ರಾರಂಭವಾಗಿದೆ. ಅತ್ಯಂತ ಪ್ರಗತಿಪರ ಮತ್ತು ವಿದ್ಯಾವಂತ ಸಮಾಜವಾಗಿ ಗುರುತಿಗೀಡಾಗಿರುವ ಅಲ್ಲೆಲ್ಲ ಹೆಣ್ಣು ಹೇಗೆ ಶೋಷಣೆಗೆ ಒಳಗಾಗಿದ್ದಾಳೆ ಅನ್ನುವುದನ್ನು ಹೇಳುವ ಚಳವಳಿ ಇದು. ಸಿನಿಮಾ ರಂಗದ ಖ್ಯಾತನಾಮ ನಟಿಯರಲ್ಲಿ ಅನೇಕರು ತಮ್ಮ ಒಡಲ ನೋವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಅವಕಾಶಕ್ಕಾಗಿ ಹೇಗೆ ಪುರುಷ ನಿರ್ದೇಶಕರು ಮತ್ತು ನಿರ್ಮಾಪಕರು ತಮ್ಮನ್ನು ಲೈಂಗಿಕವಾಗಿ ಬಳಸಿಕೊಂಡರು ಎಂಬುದನ್ನು MeToo ನಲ್ಲಿ ಅವರು ಹಂಚಿಕೊಳ್ಳುತ್ತಿದ್ದಾರೆ. ಭಾರತೀಯ ಸಿನಿಮಾ ರಂಗದ ನಟಿಯರೂ ಈ ಬಗ್ಗೆ ಧ್ವನಿಯೆತ್ತಿದ್ದಾರೆ. ರಾಜಕೀಯ ಕ್ಷೇತ್ರವೂ ಹೆಣ್ಣಿನ ಪಾಲಿಗೆ ಸುರಕ್ಷಿತವಾಗಿಲ್ಲ ಎಂಬುದನ್ನು ರೇಣುಕಾ ಚೌಧರಿಯಂಥ ಒಂದಕ್ಕಿಂತ ಹೆಚ್ಚು ರಾಜಕೀಯ ನಾಯಕಿಯರು ಬಹಿರಂಗಪಡಿಸಿದ್ದಾರೆ. ಈ ಶೋಷಣೆಯ ವ್ಯಾಪ್ತಿ ಬಹಳ ದೊಡ್ಡದು. ಹೆಚ್ಚಿನೆಲ್ಲ ಕ್ಷೇತ್ರಗಳು ಮಹಿಳಾ ಶೋಷಣೆಯ ಕಪ್ಪು ಕಲೆಯನ್ನು ಅಚಿಟಿಸಿಕೊಂಡೇ ಮುಂದೆ ಸಾಗುತ್ತಿವೆ. ಹೀಗಿರುವಾಗ, ಶೈಕ್ಷಣಿಕ ಪ್ರಗತಿಯೇ ಹೆಣ್ಣಿಗೆ ಈ ಭೂಮಿಯನ್ನು ಸುರಕ್ಷಿತವಾಗಿಡಬಲ್ಲದು ಎಂಬ ಅಭಿಪ್ರಾಯ ಸಂಪೂರ್ಣ ಸರಿಯಲ್ಲ. ಇವತ್ತು ಹೆಣ್ಣನ್ನು ಲೈಂಗಿಕವಾಗಿ ಬಳಸಿಕೊಳ್ಳುವವರಲ್ಲಿ ವಿದ್ಯಾವಂತ ಪುರುಷರ ಸಂಖ್ಯೆಯೇ ಅತ್ಯಧಿಕ. ಆದ್ದರಿಂದ ಹೆಣ್ಣಿಗೆ ಸುರಕ್ಷಿತ ವಾತಾವರಣವೊಂದನ್ನು ಒದಗಿಸಿಕೊಡುವ ಬಗ್ಗೆ ಪರ್ಯಾಯ ಚಿಂತನೆಗಳೂ ನಡೆಯಬೇಕು. ಭಾರತದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯಕ್ಕೆ ಹೋಲಿಸಿದರೆ ಅಮೇರಿಕದಲ್ಲಿ ಇದರ ಪ್ರಮಾಣ 15% ಹೆಚ್ಚು ಇದೆ ಎಂಬ ವರದಿಗಳಿವೆ. ಇಲ್ಲೂ ಶಿಕ್ಷಣವೇ ಕಟಕಟೆಯಲ್ಲಿ ನಿಲ್ಲುತ್ತದೆ. ಆದ್ದರಿಂದ ವಿದ್ಯಾವಂತ ಸಮಾಜದಲ್ಲಿ ಹೆಣ್ಣು ಸುರಕ್ಷಿತಳು ಎಂದು ಭಾವಿಸಬೇಕಿಲ್ಲ. ಹೆಣ್ಣಿನ ಸುರಕ್ಷಿತತೆ ಮತ್ತು ಅಸುರಕ್ಷಿತತೆ ಗಂಡಿನ ಮನಃಸ್ಥಿತಿಯನ್ನು ಹೊಂದಿಕೊಂಡಿದೆ. ಆ ಒಳ್ಳೆಯ ಮನಸ್ಥಿತಿಯನ್ನು ಹುಟ್ಟು ಹಾಕುವ ಶಿಕ್ಷಣ ಯಾವುದು? ಅನಾದಿ ಕಾಲದಿಂದಲೂ ಹೆಣ್ಣು ದುರ್ಬಳಕೆಗೆ ಒಳಗಾಗುತ್ತಲೇ ಬಂದಿದ್ದಾಳೆ. ಪ್ರವಾದಿ ಮುಹಮ್ಮದ್(ಸ)ರ ಕಾಲದಲ್ಲಿ ಹೆಣ್ಣು ಮಗುವನ್ನು ಜೀವಂತವಾಗಿ ಹೂಳಲಾಗುತ್ತಿತ್ತು. ಇವತ್ತು ಆಸ್ಪತ್ರೆಯೆಂಬ ನಾಲ್ಕು ಗೋಡೆಗಳ ಒಳಗಡೆ ಅದೇ ಕ್ರೌರ್ಯವನ್ನು ಅತ್ಯಂತ ಉನ್ನತ ತಂತ್ರಜ್ಞಾನದ ಮೂಲಕ ಎಸಗಲಾಗುತ್ತಿದೆ. ಶತಮಾನಗಳು ಸಂದರೂ ಮಾನವನ ಮನಃಸ್ಥಿತಿಯಲ್ಲಿ ಬಹುದೊಡ್ಡ ಬದಲಾವಣೆ ಆಗಿಲ್ಲ ಅನ್ನುವುದನ್ನು ಸೂಚಿಸುವ ಮಾಹಿತಿಗಳಿವು. ಹೆಣ್ಣಿನ ಬಗ್ಗೆ ಒಂದು ಬಗೆಯ ಕೀಳರಿಮೆ, ಅನಾದರ, ಅತೃಪ್ತಿಯ ಭಾವ ಅಂದಿನಿಂದ ಇಂದಿನ ತನಕ ಮುಂದುವರಿಯುತ್ತಲೇ ಬಂದಿದೆ. ಪವಿತ್ರ ಕುರ್‍ಆನ್ ಈ ಭಾವವನ್ನು ಎಷ್ಟು ಪ್ರಬಲವಾಗಿ ಖಂಡಿಸಿತೆಂದರೆ, ಹೆಣ್ಣು ಮಕ್ಕಳನ್ನು ಹೂಳುತ್ತಿದ್ದ ಕೈಗಳೇ ಅಂದು ಹೆಣ್ಣು ಶಿಶುವಿಗಾಗಿ ಆಸೆ ಪಟ್ಟವು. ಹೆಣ್ಣು ಮಕ್ಕಳಿಗಾಗಿ ಹೆಮ್ಮೆ ಪಡುವ ಸಮಾಜವೊಂದನ್ನು ಪ್ರವಾದಿ ಮುಹಮ್ಮದ್(ಸ) ನಿರ್ಮಿಸಿ ತೋರಿಸಿದರು. ನಾಲ್ಕು ಹೆಣ್ಣು ಮಕ್ಕಳನ್ನು ಪೋಷಿಸಿ ಬೆಳೆಸಿದರು. ಹೆಣ್ಣು ಅಸುರಕ್ಷಿತವಾಗಿರುವ ಇಂದಿನ ದಿನಗಳಲ್ಲಿ ಅವರ ಬಗ್ಗೆ ಮತ್ತು ಅವರು ಸಾಧಿಸಿರುವ ಸಾಧನೆಯ ಬಗ್ಗೆ ಅಧ್ಯಯನ ನಡೆಯುವ ಅಗತ್ಯ ಇದೆ. ದಕ್ಷಿಣ ಕನ್ನಡ ಜಿಲ್ಲೆಗೂ ಇದು ಅನ್ವಯಿಸಲಿ.


ಹೂ ಮಾಲೆ ಹಾಕುವ ಕೈಗೂ ಗೊತ್ತಿದೆ, ಒಡ್ಡುವ ಕೊರಳಿಗೂ ಗೊತ್ತಿದೆ

    ಜೀವಾವಧಿ ಶಿಕ್ಷೆಯ ಬಳಿಕದ ಶಿಕ್ಷೆಯೆಂದರೆ ಮರಣ ದಂಡನೆ. ಮರಣ ದಂಡನೆ ಶಿಕ್ಷೆಗೆ ಗುರಿಯಾಗಿ ನೇಣನ್ನು ನಿರೀಕ್ಷಿಸುತ್ತಾ ಜೈಲಿನೊಳಗೆ ಬದುಕುತ್ತಿರುವವರ ಸಂಖ್ಯೆ ಈ ದೇಶದಲ್ಲಿ ನೂರರ ಒಳಗಷ್ಟೇ ಇದೆ. ಇವರಿಗೆ ಹೋಲಿಸಿದರೆ ಜೀವಾವಧಿ ಶಿಕ್ಷೆಗೆ ಗುರಿಯಾದವರ ಸಂಖ್ಯೆ ಇದಕ್ಕಿಂತ ಕೆಲವು ಪಟ್ಟು ಅಧಿಕ ಇರಬಹುದು. ಅಂದರೆ, ವ್ಯಕ್ತಿಯೋರ್ವ ಜೀವಾವಧಿ ಶಿಕ್ಷೆಗೆ ಗುರಿಯಾಗುವುದೆಂದರೆ, ಅದು ಕಿಸೆಗಳ್ಳತನ, ಅಡಿಕೆ ಕಳ್ಳತನ, ಚಪ್ಪಲಿ ಕಳ್ಳತನದಂತೆ ಅಲ್ಲ. ಅದೊಂದು ಅಪರೂಪವಾದ ಮತ್ತು ಗಂಭೀರವಾದ ಪ್ರಕರಣ. ಇಂಥವರನ್ನು ಓರ್ವ ಜನಪ್ರತಿನಿಧಿ ಸನ್ಮಾನಿಸುವುದೆಂದರೆ ಅದು ರವಾನಿಸುವ ಸಂದೇಶವೇನು? ಕೇಂದ್ರ ಸಚಿವ ಜಯಂತ್ ಸಿನ್ಹ ಇಂಥದ್ದೊಂದು  ಪ್ರಶ್ನೆಗೆ ಚಾಲನೆಯನ್ನು ನೀಡಿದ್ದಾರೆ. ಗೋಮಾಂಸ ಸಾಗಾಟದ ಹೆಸರಲ್ಲಿ 2017 ಜೂನ್‍ನಲ್ಲಿ ಜಾರ್ಖಂಡ್‍ನ ರಾಮ್‍ಗಢದಲ್ಲಿ ಅಲೀಮುದ್ದೀನ್ ಅನ್ಸಾರಿಯನ್ನು ಥಳಿಸಿ ಕೊಂದ ಅಪರಾಧಿಗಳನ್ನು ಹೂಮಾಲೆ ಹಾಕಿ ಸ್ವಾಗತಿಸುವ ವೇಳೆ ಅವರಿಗೆ ಈ ಮಂದಿಯ ಮೇಲಿರುವ ಆರೋಪ, ತ್ವರಿತಗತಿ ನ್ಯಾಯಾಲಯ ಅವರ ಮೇಲಿನ ಆರೋಪವನ್ನು ಎತ್ತಿ ಹಿಡಿದಿರುವುದು ಮತ್ತು ‘ಗೋರಕ್ಷಣೆಯ ಹೆಸರಲ್ಲಿ ಹಲ್ಲೆ, ಹತ್ಯೆಗಳನ್ನು ಒಪ್ಪಲಾಗದು’ ಎಂದು ಸುಪ್ರೀಮ್ ಕೋರ್ಟು ಹೇಳಿರುವುದೆಲ್ಲ ಅರಿವಿಗೆ ಬಂದಿರಲಾರದು ಎಂದು ಭಾವಿಸುವುದು ಕಟು ಮೂರ್ಖತನವಾದೀತು. ತನ್ನ ಹೂಮಾಲೆಗೆ ಕೊರಳೊಡ್ಡುತ್ತಿರುವ 8 ಮಂದಿಯೂ ಅಪರಾಧಿಗಳು ಅನ್ನುವುದು ಅವರಿಗೆ ಗೊತ್ತಿದೆ. ತ್ವರಿತಗತಿ ನ್ಯಾಯಾಲಯವು ಅಪರಾಧಿಗಳೆಂದು ಘೋಷಿಸಿದವರಿಗೆ ಹೈಕೋರ್ಟು ಜಾಮೀನು ನೀಡುವುದರ ಅರ್ಥ ಅಪರಾಧ ಮುಕ್ತತೆಯಲ್ಲ ಅನ್ನುವುದೂ ಅವರಿಗೆ ಗೊತ್ತಿದೆ. ಗೋರಕ್ಷಣೆಯ ಹೆಸರಲ್ಲಿ ಹಲ್ಲೆ, ಹತ್ಯೆಯನ್ನು ಈ ಹೂಮಾಲೆ ಹಾಕುವ ಎರಡು ದಿನಗಳ ಮೊದಲು ಸುಪ್ರೀಮ್ ಕೋರ್ಟು ಖಂಡಿಸಿರುವುದನ್ನೂ ಅವರು ಬಲ್ಲರು. ಹಾಗಿದ್ದರೆ ಜಯಂತ್ ಸಿನ್ಹ ಹೀಗೇಕೆ ಮಾಡಿದರು? ಮನುಷ್ಯ ಸಹಜ ಭಾವನೆಗಳು ಒಪ್ಪದ ಮತ್ತು ಕಾನೂನು ಪುರಸ್ಕರಿಸದ ಕೃತ್ಯವೊಂದಕ್ಕೆ ಅವರೇಕೆ ನೇತೃತ್ವ ನೀಡಿದರು? ಈ ಬಗ್ಗೆ ಅವರ ಪP್ಷÀದ ಅಭಿಪ್ರಾಯವೇನು? ಅದು ಈ ಹೂಮಾಲೆ ಸಮಾರಂಭವನ್ನು ಸಮರ್ಥಿಸುತ್ತದೆಯೇ? ತನ್ನ ಪಕ್ಪದಿಂದ ಆರಿಸಿ ಬಂದ ಜನಪ್ರತಿನಿಧಿಯೊಬ್ಬ ಅಪರಾಧಿಗಳನ್ನು ಗೌರವಿಸುವುದು ಅದಕ್ಕೆ ಒಪ್ಪಿಗೆಯೇ? ಅದು ಸಮಾಜಕ್ಕೆ ಗುಣಾತ್ಮಕ ಸಂದೇಶವನ್ನು ರವಾನಿಸುತ್ತದೆಂಬ ನಿಲುವೇ ಬಿಜೆಪಿಯದು? ಕನಿಷ್ಠ ಒಂದು ಗೆರೆಯ ಅಧಿಕೃತ ಹೇಳಿಕೆಯನ್ನಾದರೂ ಬಿಡುಗಡೆಗೊಳಿಸದೇ ಬಿಜೆಪಿ ಮೌನವಾಗಿರುವುದರ ಹಿನ್ನೆಲೆ ಏನು?
   ಗೋಸಾಗಾಟದ ವಿಷಯದಲ್ಲಿ ಸಾಮಾನ್ಯವಾಗಿ ಎರಡು ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ.
1. ಗೋಸಾಗಾಟ ಕಾನೂನುಬದ್ಧವೋ ಅಲ್ಲವೋ?
2. ಕಾನೂನು ಬದ್ಧವಾದರೂ ಅಲ್ಲವಾದರೂ ಅಂಥ ಸಾಗಾಟಗಾರರ ಮೇಲೆ ಓರ್ವ ವ್ಯಕ್ತಿಗೆ ಅಥವಾ ಒಂದು ಗುಂಪಿಗೆ ದಾಳಿ ನಡೆಸುವ ಅಧಿಕಾರ ಇದೆಯೇ ಇಲ್ಲವೇ?
ಸಾಮಾನ್ಯವಾಗಿ, ಜಯಂತ್ ಸಿನ್ಹಾರ ಪಕ್ಷ ಇಂಥ ಪ್ರಶ್ನೆಗಳಿಗೆ ಮುಖಾಮುಖಿಯಾಗುವುದು ಕಡಿಮೆ. ಅದು ನೇರವಾಗಿ ಮೂರನೆಯದಾದ ವಾದವೊಂದಕ್ಕೆ ನೆಗೆಯುತ್ತದೆ. ಅದು ಗೋವಿನ ಸುತ್ತ ಹೆಣೆಯಲಾದ ಭಾವನಾತ್ಮಕ ವಾದ. ಈ ವಾದವನ್ನು ಬಹುವಿಧ ಆಯಾಮಗಳೊಂದಿಗೆ ಚರ್ಚೆಯ ಮುನ್ನೆಲೆಗೆ ತಂದು ಹತ್ಯೆಯಂಥ ಅತಿ ಗಂಭೀರ ಕಾನೂನು ಭಂಗ ಕೃತ್ಯಗಳ ಕಾವನ್ನು ಅದು ತಗ್ಗಿಸುವ ಶ್ರಮ ನಡೆಸುತ್ತದೆ. ಶತಮಾನದ ವ್ಯಂಗ್ಯ ಏನೆಂದರೆ, ಗೋವಿನ ಸುತ್ತ ಇಂಥದ್ದೊಂದು ಭಾವನಾತ್ಮಕ ಚರ್ಚೆಯನ್ನು ಸಾರ್ವಜನಿಕವಾಗಿ ಜೀವಂತವಿಡುತ್ತಲೇ ಇನ್ನೊಂದು ಕಡೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಅದು ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡುತ್ತಲೇ ಇದೆ. ನಿಜವಾಗಿ, ಪರಮ ದ್ವಂದ್ವ ಇದು. ಬಿಜೆಪಿ ಆಡಳಿತದ ಕಳೆದ ನಾಲ್ಕು ವರ್ಷಗಳಿಂದ ಈ ದ್ವಂದ್ವ ನಡೆಯುತ್ತಿದ್ದರೂ ಜಯಂತ್ ಸಿನ್ಹರ ಪಕ್ಪದ ನಾಯಕರು, ಕಾರ್ಯಕರ್ತರು ಮತ್ತು ಹಿತೈಷಿಗಳು ಈ ಬಗ್ಗೆ ವಿರೋಧದ ಒಂದು ಮಾತನ್ನೂ ಆಡಿಲ್ಲ. ಬಹುಶಃ ಬಿಜೆಪಿಯ ಗೋಪ್ರೇಮ ಅಪ್ಪಟ ರಾಜಕೀಯ ಪ್ರೇರಿತ ಅನ್ನುವುದಕ್ಕೆ ಬಲವಾದ ಆಧಾರ ಇದು. ಆ ಪಕ್ಪಕ್ಕೆ ಅಲೀಮುದ್ದೀನ್ ಅನ್ಸಾರಿಯಂಥವರು ಮತ್ತೆ ಮತ್ತೆ ಒದಗುತ್ತಲೇ ಇರಬೇಕು. ಮಾತ್ರವಲ್ಲ, ಅಂಥವರನ್ನು ಥಳಿಸಿ ಕೊಂದು ಜೈಲು ಪಾಲಾಗುವ ಯುವಕರೂ ಬೇಕು. ಇಂಥದ್ದೊಂದು ವಾತಾವರಣವನ್ನು ನಿರಂತರ ಪ್ರಕ್ರಿಯೆಯಾಗಿ ಕಾಪಿಟ್ಟುಕೊಳ್ಳುವ ಅಪಾಯಕಾರಿ ತಂತ್ರವೊಂದನ್ನು ಅದು ಹೆಣೆದಿಟ್ಟುಕೊಂಡಿದೆ. ಈ ತಂತ್ರಕ್ಕೆ ತಿರುಗೇಟು ಕೊಡಬಲ್ಲವರು ಯಾರೆಂದರೆ, ಜಯಂತ್ ಸಿನ್ಹಾರ ಹೂಮಾಲೆಗೆ ಕೊರಳೊಡ್ಡಿದ ಯುವಕರು, ಇಂಥ ಆರೋಪದೊಂದಿಗೆ ಪ್ರತಿದಿನ ಕೋರ್ಟು ಮೆಟ್ಟಲು ಹತ್ತುತ್ತಿರುವವರು ಮತ್ತು ಗೋವಿನ ಮೇಲೆ ನಿಜಕ್ಕೂ ಭಾವನಾತ್ಮಕ ಸಂಬಂಧ ಇರುವ ಈ ದೇಶದ ಅಸಂಖ್ಯ ಜನಸಾಮಾನ್ಯರು. ‘ನೀವೇಕೆ ವಿದೇಶಕ್ಕೆ ಗೋಮಾಂಸ ರಫ್ತು ಮಾಡುತ್ತೀರಿ’ ಎಂಬ ಒಂದು ಗೆರೆಯ ಪ್ರಶ್ನೆಯನ್ನು ಜಯಂತ್ ಸಿನ್ಹರಂಥವರ ಮುಂದೆ ಈ ಮಂದಿ ಎಸೆದರೂ ಸಾಕು, ಅದು ಬಹುದೊಡ್ಡ ಫಲಿತಾಂಶವೊಂದಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲ, ಆ ಪ್ರಶ್ನೆಯಿಂದ ನಿಜಕ್ಕೂ ಲಾಭವಾಗುವುದಾದರೆ ಅದು ಗೋವುಗಳಿಗೆ ಮಾತ್ರ. ಮಾಂಸದ ಉದ್ದೇಶದಿಂದ ದೇಶದೊಳಗೆ ಎಷ್ಟು ಜಾನುವಾರುಗಳ ವಧೆ ನಡೆಯುತ್ತದೋ ಅದರ ಎಷ್ಟೋ ಪಟ್ಟು ಅಧಿಕ ಪ್ರಮಾಣದಲ್ಲಿ ವಿದೇಶಿಯರ ಬಾಯಿ ರುಚಿಯನ್ನು ತಣಿಸುವುದಕ್ಕಾಗಿ ಜಾನುವಾರುಗಳ ವಧೆ ನಡೆಯುತ್ತದೆ. ಹೀಗಿರುವಾಗ, ಒಂದು ವಧೆ ಸಹ್ಯವೂ ಇನ್ನೊಂದು ವಧೆ ಅಸಹ್ಯವೂ ಆಗುವುದಕ್ಕೆ ಸಾಧ್ಯವೇ ಇಲ್ಲ. ಗೋವಿನ ಹೆಸರಲ್ಲಿ ಅಲೀಮುದ್ದೀನ್ ಅನ್ಸಾರಿಯನ್ನು ಹತ್ಯೆ ನಡೆಸಿರುವುದು ಹೂಮಾಲೆ ಹಾಕಿ ಸ್ವಾಗತಿಸುವಷ್ಟು ಗೌರವಾರ್ಹ ಕೃತ್ಯವೆಂದಾದರೆ, ಹೀಗೆ ಹತ್ಯೆ ನಡೆಸಬೇಕಾದವರ ದೊಡ್ಡದೊಂದು ಪಟ್ಟಿ ಜಯಂತ್ ಸಿನ್ಹರ ಕೈಯಲ್ಲೇ  ಇದೆ. ಆ ಪಟ್ಟಿಯಲ್ಲಿ ಅಲೀಮುದ್ದೀನ್ ಅನ್ಸಾರಿಯಂಥ ಬಡ ವ್ಯಾಪಾರಿ ಖಂಡಿತ ಇದ್ದಿರಲಾರ. ಆ ಪಟ್ಟಿಯಲ್ಲಿರುವವರೆಲ್ಲ ಕಾರು, ಹೆಲಿಕಾಪ್ಟರ್, ವಿಮಾನಗಳಲ್ಲಿ ಸುತ್ತಾಡುವವರು. ಅವರ ಒಡೆತನದ ಕಾರ್ಖಾನೆಗಳಲ್ಲಿ ದಿನನಿತ್ಯ ಅಸಂಖ್ಯ ಜಾನುವಾರುಗಳು ಹತ್ಯೆಗೊಳಗಾಗುತ್ತಿವೆ. ಅಲ್ಲಿಂದಲೇ ಅವು ವಿದೇಶಗಳಿಗೆ ರಫ್ತಾಗುತ್ತಿವೆ. ಹೀಗೆ ಮಾಡುವವರ ಪಟ್ಟಿಯಲ್ಲಿ ರಾಜಕಾರಣಿಗಳಿದ್ದಾರೆ. ಮಾಂಸ ರಫ್ತಿನ ಬಗ್ಗೆ ವಿದೇಶಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಕೋಟು-ಬೂಟಿನ ವ್ಯಕ್ತಿಗಳಿದ್ದಾರೆ. ಒಪ್ಪಂದಕ್ಕೆ ಸಹಿ ಹಾಕುವ ಸರಕಾರಿ ಅಧಿಕಾರಿಗಳಿದ್ದಾರೆ. ಅಲ್ಲದೇ, ದೇಶೀಯವಾಗಿ ಸರಕಾರವೇ ಅನುಮತಿಸಿರುವ ಸಾವಿರಾರು ವಧಾಗೃಹಗಳಿವೆ. ಅವುಗಳಿಗೆ ಅನುಮತಿ ಪತ್ರವನ್ನು ಕೊಡುವವರೂ ಈ ಪಟ್ಟಿಯಲ್ಲಿದ್ದಾರೆ. ವಧಾಗೃಹಗಳನ್ನು ವರ್ಷಂಪ್ರತಿ ನಗರ ಸಭೆಗಳ ಅಧಿಕಾರಿಗಳೇ ಏಲಂ ಮಾಡುತ್ತಾರೆ. ಜನಪ್ರತಿನಿಧಿಗಳ ಸಮ್ಮತಿಯಿಂದಲೇ ಆ ಏಲಂ ನಡೆಯುತ್ತದೆ. ಈ ವಧಾಗೃಹಗಳಿಗೆ ಜಾನುವಾರು ಸಾಗಾಟ ಮಾಡಲು ಈ ನಗರ ಪಾಲಿಕೆಗಳೇ ಅನುಮತಿ ಪತ್ರವನ್ನು ಮಂಜೂರು ಮಾಡುತ್ತವೆ. ಇವೆಲ್ಲ ನಡೆಯುವುದು ಅಧಿಕಾರಿಗಳು, ಜನಪ್ರತಿನಿಧಿಗಳೆಂಬ ಮನುಷ್ಯ ವರ್ಗದಿಂದಲೇ ಆಗಿರುತ್ತದೆ. ಆದರೆ ಇವರಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಗೋರಕ್ಷಕರಿಂದ ಹಲ್ಲೆಗೆ ಒಳಗಾದ ಒಂದೇ ಒಂದು ಘಟನೆ ಈವರೆಗೂ ನಡೆದಿಲ್ಲ. ಅವರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿಲ್ಲ. ಯಾಕೆ ಹೀಗೆ| ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಸ್ಥಾಪಿಸಿ ಮಾಂಸೋದ್ಯಮದಲ್ಲಿ ತೊಡಗಿರುವವರು ಸುರಕ್ಷಿತರಾಗಿರುವುದೂ ಜುಜುಬಿ ಸಾಗಾಟ-ಮಾರಾಟ ಮಾಡುವವರು ಹತ್ಯೆಗೊಳಗಾಗುವುದೂ ಏಕೆ? ಮಾಂಸೋದ್ಯಮದಲ್ಲಿ ತೊಡಗಿರುವ ಮತ್ತು ವಿದೇಶಕ್ಕೆ ರಫ್ತು ಮಾಡಿ ದುಡ್ಡು ಮಾಡುತ್ತಿರುವವರಿಗಿಂತ ಅಲೀಮುದ್ದೀನ್ ಅನ್ಸಾರಿಯಂಥವರು ಪರಮ ದ್ರೋಹಿಗಳಾಗಿ ಕಾಣಿಸುತ್ತಿರುವುದು ಯಾಕಾಗಿ?
    ನಿಜ ಏನು ಅನ್ನುವುದು ಹೂಮಾಲೆ ಹಾಕುವ ಜಯಂತ್ ಸಿನ್ಹಗೂ ಗೊತ್ತಿದೆ. ಕೊರಳೊಡ್ಡಿದ ಅಪರಾಧಿಗಳಿಗೂ ಗೊತ್ತಿದೆ. ಗೊತ್ತಿಲ್ಲದಿರುವುದು ಬಡಪಾಯಿ ಗೋವುಗಳಿಗೆ ಮಾತ್ರ.


ಮಾನವ ದೇವನಾಗಲಾರ..

 
  ಮಾನವ ಯಾಕೆ ದೇವನಾಗಲಾರ ಮತ್ತು ದೇವನು ಮಾನವನಿಗಿಂತ ಹೇಗೆ ಭಿನ್ನ ಅನ್ನುವುದಕ್ಕೆ ಮತ್ತೊಂದು ಸಾಕ್ಷ್ಯ ಲಭ್ಯವಾಗಿದೆ. ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಅನುಮಾನಾಸ್ಪದ ಸಾವು- ಮಾನವ ಮತ್ತು ದೇವನ ನಡುವಿನ ಅಂತರ, ವ್ಯತ್ಯಾಸ ಮತ್ತು ವೈಶಿಷ್ಟ್ಯಗಳ ಕುರಿತಂತೆ ಈಗಾಗಲೇ ಇರುವ ಚರ್ಚೆಗೆ ಇನ್ನೊಂದಷ್ಟನ್ನು ಸೇರ್ಪಡೆಗೊಳಿಸಿದೆ. ಶಿರೂರು ಸ್ವಾಮೀಜಿಗಳು ತಮ್ಮನ್ನು ದೇವಮಾನವ ಎಂದು ಘೋಷಿಸಿಕೊಂಡಿಲ್ಲ, ನಿಜ. ಅವರು, ಮೈಲಿಗೆ ಭಾವವಿಲ್ಲದೇ ಜನರೊಂದಿಗೆ ಬೆರೆಯುತ್ತಿದ್ದವರು ಮತ್ತು ಮನುಷ್ಯ ಸಹಜ ಬಯಕೆಗಳನ್ನು ಮುಕ್ತವಾಗಿ ಸಮಾಜದೊಂದಿಗೆ ಹಂಚಿಕೊಂಡವರು ಎಂಬ ಶ್ಲಾಘನೆಯೂ ಇದೆ. ಆದರೆ, ಭಕ್ತ ಸಮೂಹ ಅವರನ್ನು ಇಷ್ಟೇ ಸಹಜವಾಗಿ ಸ್ವೀಕರಿಸಿಕೊಂಡಿದೆ ಎಂದು ಹೇಳುವ ಹಾಗಿಲ್ಲ. ಅವರ ಮೇಲಿನ ಪ್ರೀತಿಯು ಭಕ್ತಿಯಾಗಿ, ಆ ಭಕ್ತಿಯು ಆರಾಧನೆಯಾಗಿ ಮತ್ತು ಆ ಆರಾಧನೆಯು ಅವರಿಗೆ ಅತೀಂದ್ರಿಯ ಶಕ್ತಿ-ಸಾಮರ್ಥ್ಯ ವನ್ನು ಕೊಟ್ಟುಕೊಂಡು ದೇವ ಮಾನವನಂತೆ ಪೂಜೆಗೊಂಡಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಈ ಊಹೆಗೆ ಆಧಾರ ಏನೆಂದರೆ, ಈ ದೇಶದಲ್ಲಿ ಈಗಾಗಲೇ ಇರುವ ದೇವ ಮಾನವರುಗಳು. ಸ್ವಘೋಷಿತ ದೇವ ಮಾನವರುಗಳ ದೊಡ್ಡದೊಂದು ಪಟ್ಟಿಯೇ ಈ ದೇಶದಲ್ಲಿದೆ. ಶಿರ್ಡಿಯ ಸತ್ಯ ಸಾಯಿ ಬಾಬರ ಸಾವು- ಮಾನವ ದೇವನಾಗಲಾರ ಎಂಬ ಸಂದೇಶವನ್ನು ಈ ಹಿಂದೆ ಬಹಳ ಬಲವಾಗಿ ಈ ದೇಶದಲ್ಲಿ ಸಾರಿತ್ತು. ದೇವನಿಗೆ ನಾವು ಕೆಲವು ಗುಣಗಳನ್ನು ಕೊಟ್ಟುಕೊಂಡಿದ್ದೇವೆ ಅಥವಾ ದೇವ ಎಂಬವ ಮಾನವ ದೌರ್ಬಲ್ಯಗಳಿಗಿಂತ ಅತೀತನಾದವ ಎಂಬ ನಂಬಿಕೆ ಸಾಮಾಜಿಕವಾಗಿ ಇದೆ. ಆದರೂ ದೇವಮಾನವರು ಮತ್ತೆ ಮತ್ತೆ ಉದ್ಭವವಾಗುತ್ತಲೇ ಇರುತ್ತಾರೆ. ಶೂನ್ಯದಿಂದ ವಿವಿಧ ವಸ್ತುಗಳನ್ನು ಸೃಷ್ಟಿಸುತ್ತಿರುವರೆಂಬ ನಂಬಿಕೆಯೊಂದು ಶಿರ್ಡಿ ಸತ್ಯ ಸಾಯಿಬಾಬರ ಸುತ್ತ ನಿರ್ಮಾಣವಾಗಿತ್ತು. ಅವರು ಪವಾಡ ಪುರುಷರಾಗಿ ಜನರ ಆದರ ಮತ್ತು ಪೂಜೆಗೆ ಒಳಗಾಗಿದ್ದರು. ಆದರೂ ಅವರಿಗೆ ಮೃತ್ಯುವನ್ನು ಜಯಿಸಲು ಸಾಧ್ಯವಾಗಲಿಲ್ಲ. ಅವರನ್ನು ದೇವರೆಂದು ಪೂಜಿಸುತ್ತಿದ್ದ ಜನರಂತೆಯೇ  ಸಾಯಿಬಾಬರಲ್ಲೂ ಮಾನವ ಸಹಜ ದೌರ್ಬಲ್ಯಗಳಿದ್ದುವು. ಅವರಿಗೆ ಕಾಯಿಲೆ ಬರುತ್ತಿತ್ತು. ನಿದ್ದೆ ಮಾಡುತ್ತಿದ್ದರು. ಹಸಿವು, ಬಾಯಾರಿಕೆ, ದಣಿವು, ಬೆವರು ಇತ್ಯಾದಿಗಳಿಂದ ಅವರು ಮುಕ್ತರಾಗಿರಲಿಲ್ಲ. ಅವರು ದೇಹವನ್ನು ಮುಚ್ಚುವುದಕ್ಕಾಗಿ ಉಡುಪು ಧರಿಸುತ್ತಿದ್ದರು. ಚಪ್ಪಲಿ ಧರಿಸುತ್ತಿದ್ದರು. ಅವರ ಕೂದಲು, ಉಗುರು ಬೆಳೆಯುತ್ತಿತ್ತು. ಒಂದು ರೀತಿಯಲ್ಲಿ, ಅವರಿಗೂ ಅವರನ್ನು ದೇವರೆಂದು ಪೂಜಿಸುವ ಭಕ್ತ ವೃಂದಕ್ಕೂ ಬಾಹ್ಯನೋಟಕ್ಕೆ ಯಾವ ವ್ಯತ್ಯಾಸವೂ ಇರಲಿಲ್ಲ. ಹಾಗಂತ, ಇದು ಸಾಯಿಬಾಬರಿಗೆ ಸಂಬಂಧಿಸಿ ಮಾತ್ರ ಹೇಳುವಂಥದ್ದಲ್ಲ. ಶಿರೂರು ಸ್ವಾಮಿಜಿಯವರಿಗೂ ಇದು ಅನ್ವಯ. ಪೇಜಾವರ ಸ್ವಾಮೀಜಿಗಳಿಗೂ ಇದು ಅನ್ವಯ ಮತ್ತು ಈ ದೇಶದಲ್ಲಿರುವ ಎಲ್ಲ ಮಠ-ಮಂದಿರ, ಚರ್ಚ್, ಮಸೀದಿಯೊಳಗಿನ ಸ್ವಾಮೀಜಿ, ಫಾದರ್, ಮೌಲಾನರಿಗೂ  ಅನ್ವಯ. ಹಾಗಿದ್ದರೆ ದೇವನೆಂದರೆ ಯಾರು? ಆತ ಹೇಗಿರಬೇಕು? ಮಾನವ ಸಹಜ ರೀತಿ-ನೀತಿಗಳಿಂದ ದೇವನೂ ಮುಕ್ತನಲ್ಲದಿದ್ದರೆ ಮತ್ತೆ ದೇವನಾದರೂ ಯಾಕೆ ಬೇಕು? ಸತ್ಯ ಸಾಯಿಬಾಬರಂಥ ದೇವ ಮಾನವರುಗಳ ಸಾವು ಈ ಬಗೆಯ ಪ್ರಶ್ನೆಯನ್ನು ಅವರ ಭಕ್ತ ವೃಂದದಲ್ಲಿ ಹುಟ್ಟಿಸಿರುವ ಸಾಧ್ಯತೆ ಖಂಡಿತ ಇದೆ.

ನಿಜವಾಗಿ, ದೇವನು ಮಾನವ ಆಗಿರುವುದಕ್ಕೆ ಸಾಧ್ಯವಿಲ್ಲ. ಮಾನವನಂತಿರುವವ ದೇವನಾಗಲಾರ. ಮಾನವನನ್ನು ಸೃಷ್ಟಿಸಿದವನೆಂದು ಹೇಳಲಾಗುವ ಮತ್ತು  ಜಗತ್ತಿನ ಸರ್ವ ಕ್ರಿಯೆ-ಪ್ರಕ್ರಿಯೆಗಳ ಮೇಲೂ ನಿಯಂತ್ರಣವನ್ನು ಹೊಂದಿರುವನೆಂದು ಅಂದುಕೊಳ್ಳಲಾಗುವ ದೇವನಿಗೆ ಸಾವು ಇರಬಾರದು. ನಿದ್ದೆ ಬಾದಿಸಬಾರದು. ಆತ ಕಾಯಿಲೆ ಬೀಳಬಾರದು. ದಣಿವು ಬಾಯಾರಿಕೆ, ಹಸಿವುಗಳು ಆತನಲ್ಲಿ ಕಾಣಿಸಬಾರದು. ಆತ ಸಾವಿಲ್ಲದ, ಪತ್ನಿ-ಮಕ್ಕಳು, ಕುಟುಂಬವನ್ನು ಹೊಂದಿಲ್ಲದ ಮತ್ತು ಮಾನವ ಸಹಜ ಬಯಕೆ-ಬೇಡಿಕೆಗಳನ್ನು ಮೀರಿ ನಿಂತ ವಿಶೇಷ ಶಕ್ತಿಯಾಗಿರಬೇಕು. ಇಂಥ ಶಕ್ತಿಗೆ ಮಾತ್ರ ಜಗತ್ತಿನ ಸರ್ವದರ ಮೇಲೆ ಸದಾ ಗಮನವಿಡುವುದಕ್ಕೆ ಮತ್ತು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೆ ಸಾಧ್ಯ. ದುರಂತ ಏನೆಂದರೆ, ತಮ್ಮನ್ನು ದೇವ ಮಾನವರೆಂದು ಕರೆಸಿಕೊಂಡಿರುವ ಯಾರಲ್ಲೂ ಈ ಸಾಮರ್ಥ್ಯ  ಇಲ್ಲವೇ ಇಲ್ಲ. ಅದರ ಬದಲು ಈ ದೇವ ಮಾನವರಲ್ಲಿ ಹೆಚ್ಚಿನವರು ದೇವನಿಗೆ ಸಹ್ಯವಲ್ಲದ ಮತ್ತು ದೇವನು ನಿಷೇಧಿಸಿರುವ ಹತ್ತು-ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪವನ್ನು ಹೊತ್ತುಕೊಂಡಿದ್ದಾರೆ. ಹಲವರು ಜೈಲಲ್ಲಿದ್ದಾರೆ. ಒಂದು ವೇಳೆ, ಮನುಷ್ಯರ ಪೈಕಿ ಕೆಲವರಲ್ಲಿ ದೇವರ ಸಾಮಥ್ರ್ಯ ಇದ್ದಿದ್ದೇ ಆಗಿದ್ದರೆ, ಅವರ ಮೇಲೆ ಆರೋಪಗಳು ಇರುವುದು ಬಿಡಿ, ಬರೇ ದೇವ ಗುಣಗಳನ್ನೇ ಅವರು ಪ್ರದರ್ಶಿಸಬೇಕಿತ್ತು. ಮುಪ್ಪಿಲ್ಲದ, ಸಾವಿಲ್ಲದ ಪವಾಡವನ್ನು ಅವರು ಪ್ರದರ್ಶಿಸಬೇಕಿತ್ತು. ಈ ಪವಾಡವನ್ನು ಈವರೆಗೂ ಯಾವ ದೇವ ಮಾನವರೂ ಪ್ರದರ್ಶಿಸಿಲ್ಲ ಅನ್ನುವುದೇ ಅವರ ಮಿತಿಯಲ್ಲಿ ಹೇಳುತ್ತದೆ.

ಅಂದಹಾಗೆ, ಮನುಷ್ಯನಿಗೂ ದೇವನಿಗೂ ನಡುವೆ ವ್ಯತ್ಯಾಸ ಇದೆ ಮತ್ತು ಇರಬೇಕು. ದೇವನ ಕುರಿತಂತೆ ಖಚಿತವಾದ ಪರಿಕಲ್ಪನೆ ಇರುವ ಸಮಾಜದಲ್ಲಿ ದೇವಮಾನವರಿಗೆ ಜಾಗ ಇರಲು ಸಾಧ್ಯವೇ ಇಲ್ಲ. ದೇವನ ಬಗ್ಗೆ ಸ್ಪಷ್ಟ ಪರಿಚಯ ಇಲ್ಲದ ಜನರು ಕೆಲವೊಮ್ಮೆ ತಮ್ಮಂತೆಯೇ ಇರುವ ಮನುಷ್ಯನನ್ನೇ ದೇವರನ್ನಾಗಿಸುತ್ತಾರೆ. ತಮ್ಮಲ್ಲಿಲ್ಲ ಯಾವುದೋ ಒಂದನ್ನು ಇನ್ನೊಬ್ಬರಲ್ಲಿ ಕಂಡಾಗ ಅದನ್ನು ಪವಾಡವೆಂಬಂತೆ ಭ್ರಮಿಸುತ್ತಾರೆ. ಸಾಮಾನ್ಯವಾಗಿ ಮನುಷ್ಯರ ನಡುವೆ ಪ್ರತಿಭೆಯ ಆಧಾರದಲ್ಲಿ ವ್ಯತ್ಯಾಸವಿದೆಯೇ ಹೊರತು ಸಮಾನತೆಯ ಆಧಾರದಲ್ಲಿ ವ್ಯತ್ಯಾಸ ಇಲ್ಲ. ಎಲ್ಲ ಮನುಷ್ಯರೂ ಸಮಾನರು. ಒಬ್ಬ ದೇವನಾಗುವುದು ಮತ್ತು ಇನ್ನೊಬ್ಬ ಭಕ್ತನಾಗುವುದು ದೇವನ ನಿಜ ಗುಣಕ್ಕೆ ವಿರುದ್ಧವಾದುದು. ಅಚ್ಚರಿ ಏನೆಂದರೆ, ಈ ದೇಶದಲ್ಲಿ ಅದ್ಭುತ ಪ್ರತಿಭೆಗಳನ್ನು ಪ್ರದರ್ಶಿಸಿದ ಅನೇಕರಿದ್ದಾರೆ. ಜುಜುಬಿ ಬಂಡವಾಳವನ್ನು ಹೂಡಿ ಕೋಟ್ಯಾಧಿಪತಿಯಾದವರಿದ್ದಾರೆ. ಬಡ ಗುಡಿಸಲಿನ ಮಗುವೊಂದು ಅಂತಾರಾಷ್ಟ್ರೀಯ ಮನ್ನಣೆ ಪಡೆದ ವೈದ್ಯ, ಅಥ್ಲೀಟ್, ಪಾಕ ಶಾಸ್ತ್ರ ಪ್ರವೀಣ ಆದದ್ದಿದೆ. ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡಿದ ಅನೇಕ ಪ್ರತಿಭಾವಂತರು ಈ ದೇಶದಲ್ಲಿದ್ದಾರೆ. ಆದರೆ, ಅವರಾರೂ ದೇವರಾಗಿಲ್ಲ ಅಥವಾ ಅವರನ್ನು ದೇವ ಮಾನವರೆಂದು ಪೂಜಿಸುವ ವಾತಾವರಣ ನಿರ್ಮಾಣವಾಗಿಲ್ಲ. ಅದರ ಬದಲು ಈ ಬಗೆಯ ಯಾವ ಪ್ರತಿಭೆಯನ್ನೂ ಪ್ರದರ್ಶಿಸದ ಅನೇಕರು ದೇವಮಾನವರಾಗಿ ಪೂಜೆಗೆ ಒಳಗಾದ ಮತ್ತು ಒಳಗಾಗುತ್ತಿರುವ ವಿಚಿತ್ರ ಸ್ಥಿತಿಯೊಂದು ನಮ್ಮ ನಡುವೆಯಿದೆ. ದೇವನ ಸ್ಪಷ್ಟ ಪರಿಚಯ ಇಲ್ಲದ ಮುಗ್ಧರೇ ಈ ಮಂದಿಯ ಬಂಡವಾಳ. ಅವರ ಮುಗ್ಧತನವು ಈ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ದುರುಪಯೋಗಕ್ಕೆ ಒಳಗಾಗುತ್ತಿದೆ. ಜನರು ಮತ್ತೆ ಮತ್ತೆ ವಂಚನೆಗೆ ಒಳಗಾಗುತ್ತಲೂ ಇದ್ದಾರೆ ಮತ್ತು ಹೊಸ ಹೊಸ ದೇವ ಮಾನವರು ಹುಟ್ಟುತ್ತಲೂ ಇದ್ದಾರೆ.

ಶಿರೂರು ಸ್ವಾಮೀಜಿಗಳು ತನ್ನನ್ನು ಸ್ವತಃ ದೇವ ಮಾನವರಾಗಿ ಘೋಷಿಸಿರಲಿಲ್ಲ ಎಂಬುದು ಸ್ಪಷ್ಟವೇ ಆಗಿದ್ದರೂ ಭಕ್ತ ವೃಂದರಿಂದ ಅವರಿಗೆ ಸಲ್ಲುತ್ತಿದ್ದ ಗೌರವಾದಾರಗಳಲ್ಲಿ ಪೂಜಾ ಭಾವವೂ ಇತ್ತು ಅನ್ನುವ ಅಭಿಪ್ರಾಯವೂ ಇದೆ. ಶಿರೂರು ಸ್ವಾಮೀಜಿಗಳು ಇದಕ್ಕೆ ಕಾರಣ ಅಲ್ಲದೇ ಇರಬಹುದು. ಆದರೆ, ಸಾಮಾಜಿಕವಾಗಿ ಇವತ್ತು ಇಂಥದ್ದೊಂದು ವಾತಾವರಣ ಬೆಳೆದು ನಿಂತಿದೆ. ಮನುಷ್ಯರನ್ನೇ ದೇವರೆಂದು ಪೂಜಿಸುವ ಮತ್ತು ಷರತ್ತುರಹಿತವಾಗಿ ಅವರನ್ನು ನಂಬುವ ಸ್ಥಿತಿಯೊಂದು ನಿರ್ಮಾಣವಾಗಿ ಬಿಟ್ಟಿದೆ. ಇದು ಅತ್ಯಂತ ಅಪಾಯಕಾರಿ ಸ್ಥಿತಿ. ಈ ಸ್ಥಿತಿಯಿಂದ ಸಮಾಜವನ್ನು ಮುಕ್ತಗೊಳಿಸಬೇಕಾದ ತುರ್ತು ಅಗತ್ಯ ಇದೆ. ನಿಜವಾದ ದೇವನನ್ನು ಜನರಿಗೆ ಪರಿಚಯಿಸುವುದೇ ಇದಕ್ಕಿರುವ ಉತ್ತಮ ಪರಿಹಾರ. ಶಿರೂರು ಸ್ವಾಮೀಜಿಯವರಾಗಲಿ, ಫಾದರ್ ಆಗಲಿ, ಮೌಲಾನವಾಗಲಿ ಯಾರೂ ದೇವರಾಗಲು ಸಾಧ್ಯವಿಲ್ಲ. ದೇವನು ಮಾನವನಲ್ಲ, ಮಾನವ ದೇವನೂ ಅಲ್ಲ. ದೇವ ಈ ಎರಡರ ಆಚೆಗಿದ್ದಾನೆ.

ಶಿರೂರು ಸ್ವಾಮಿಜಿಗಳ ಸಾವು ಈ ಸತ್ಯವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ ಅಷ್ಟೇ.


ಮಲ ಪ್ರತಿಭಟನೆಯ ಔಚಿತ್ಯ ಮತ್ತು ಹಸಿವಿನ ಪ್ರಶ್ನೆ..

      ಕಳೆದವಾರ ಎರಡು ಹೃದಯ ವಿದ್ರಾವಕ ಘಟನೆಗಳು ನಡೆದುವು. ಎರಡರ ಕೇಂದ್ರ ಬಿಂದುವೂ ಹಸಿವೇ. ಒಂದು- ದೆಹಲಿಯಲ್ಲಿ ನಡೆದರೆ, ಇನ್ನೊಂದು ನಮ್ಮ ರಾಜ್ಯದ ಹುಬ್ಬಳಿಯಲ್ಲಿ ನಡೆಯಿತು. 8 ವರ್ಷದ ಮಾನ್ಸಿ, 4 ವರ್ಷದ ಶಿಖಾ ಮತ್ತು ಎರಡು ವರ್ಷದ ಪರೂಲ್ ಎಂಬ ಮೂವರು ಮಕ್ಕಳು ದೆಹಲಿಯಲ್ಲಿ ಹಸಿವಿನಿಂದ ಕಂಗೆಟ್ಟು ಸಾವಿಗೀಡಾದರು. ಅಪ್ಪ ಕುಡುಕ. ಅಮ್ಮ ಬುದ್ಧಿಮಾಂದ್ಯೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಘಟನೆ ಎಂಬ ನೆಲೆಯಲ್ಲಿ ಇದಕ್ಕೆ ಮಾಧ್ಯಮಗಳು ಸಾಕಷ್ಟು ಜಾಗ ಕೊಟ್ಟವು. ಆದರೆ, ರಾಜ್ಯದ ಹುಬ್ಬಳ್ಳಿಯಲ್ಲಿ ನಡೆದ ಘಟನೆಗೆ ಈ ಭಾಗ್ಯ ಲಭಿಸಲಿಲ್ಲ. ಹುಬ್ಬಳಿ-ಧಾರಾವಾಡ ಮಹಾನಗರ ಪಾಲಿಕೆಯ ಕಚೇರಿ ಎದುರು ಸುಮಾರು ಒಂದು ಸಾವಿರದಷ್ಟು ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಇವರಲ್ಲಿ ಇಬ್ಬರು ಕಾರ್ಮಿಕರು ತಮ್ಮ ಮೈ ಮೇಲೆ ಮಲವನ್ನು ಸುರಿದು ಆಕ್ರೋಶ ವ್ಯಕ್ತಪಡಿಸಿದರು. ನಾಲ್ಕು ತಿಂಗಳಿನಿಂದ ಬಾಕಿ ಇರಿಸಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ಇನ್ನಿತರ ಕೆಲವು ಬೇಡಿಕೆಗಳನ್ನೂ ಅವರು ಮುಂದಿಟ್ಟರು. ಮೇಲಿನ ಈ ಎರಡೂ ಘಟನೆಗಳು ಮಾಧ್ಯಮಗಳಲ್ಲಿ ಒಂದೇ ದಿನ ಪ್ರಕಟವಾದುವು.
      ಬಾಹ್ಯ ನೋಟಕ್ಕೆ ಹಸಿವಿನಿಂದಾದ ಸಾವು ಮತ್ತು ಮಲ ಸುರಿದು ಮಾಡಿದ ಪ್ರತಿಭಟನೆ ಸಮಾನವಾಗಿ ಕಾಣುವುದಿಲ್ಲ. ಮಲವನ್ನು ಮೈ ಮೇಲೆ ಸುರಿದು ಪ್ರತಿಭಟಿಸುವುದು ಎಷ್ಟು ಸಮರ್ಥನೀಯ ಎಂಬ ಪ್ರಶ್ನೆಯೂ ಇದೆ. ನಿಜ, ಪ್ರತಿಭಟನೆ ಎಂಬುದೂ ಒಂದು ಮಾಧ್ಯಮ. ತಮ್ಮ ಬೇಡಿಕೆಗಳನ್ನೋ ತಮ್ಮ ಮೇಲಾದ ಅನ್ಯಾಯವನ್ನೋ ತೆರೆದಿಡುವುದಕ್ಕೆ ಈ ಮಾಧ್ಯಮವನ್ನು ಜನರು ಬಳಸಿಕೊಳ್ಳುತ್ತಾರೆ. ಪುರಾತನ ಕಾಲದಿಂದಲೂ ಇದು ನಡೆದು ಬಂದ ಕ್ರಮ. ಪುರಾತನ ಕಾಲದಲ್ಲಿ ಈಗಿನಂಥ ವ್ಯವಸ್ಥೆ ಇದ್ದಿರಲಿಲ್ಲ. ಮೇಲ್ವರ್ಗ-ಕೆಳವರ್ಗ, ಕರಿಯ-ಬಿಳಿಯ, ಮಾಲಿಕ-ಕಾರ್ಮಿಕ, ದಣಿ-ಒಕ್ಕಲು, ಯಜಮಾನ-ಗುಲಾಮ.. ಇತ್ಯಾದಿ ಭೇದಗಳಿಗೆ ತಕ್ಕಂತೆ ಪ್ರತಿಭಟನಾ ವಿಧಾನದಲ್ಲೂ ವ್ಯತ್ಯಾಸಗಳಿದ್ದುವು. ಯಜಮಾನನ ಎದುರು ಗುಲಾಮನೋರ್ವ ಧ್ವನಿ ಎತ್ತರಿಸಿ ಪ್ರತಿಭಟನೆ ಮಾಡುವುದು ಹಿಂದಿನ ಕಾಲದಲ್ಲಿ ಅತ್ಯಂತ ಅಪಾಯಕಾರಿ. ಆತನ ಜೀವಕ್ಕೇ ಕುತ್ತು ತಂದುಕೊಳ್ಳುವ ಪ್ರತಿಭಟನಾ ವಿಧಾನ ಅದು. ಆದ್ದರಿಂದ ಗುಲಾಮ ತನ್ನ ಪ್ರತಿಭಟನೆಯನ್ನು ಮೌನವಾಗಿಯೋ, ಕಣ್ಣೀರಿಳಿಸಿಯೋ ವ್ಯಕ್ತಪಡಿಸಿರಬಲ್ಲ. ಕೆಳವರ್ಗದ ವ್ಯಕ್ತಿಯೋರ್ವ ಮೇಲ್ವರ್ಗದ ವಿರುದ್ಧ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುವಾಗಲೂ ಇಂಥ ಸುರಕ್ಷತಾ ವಿಧಾನಕ್ಕೆ ಮೊರೆ ಹೋಗಿರಬಲ್ಲ. ಆದರೆ ಆಧುನಿಕ ಕಾಲದಲ್ಲಿ ಕಾರ್ಮಿಕರು, ಅಧಿಕಾರಿಗಳು ಎಲ್ಲರೂ ತಂತಮ್ಮ ಹಕ್ಕುಗಳ ರಕ್ಷಣೆಗಾಗಿ ಸಂಘಟನೆಗಳನ್ನು ಕಟ್ಟಿಕೊಂಡಿದ್ದಾರೆ. ಸಂಘಟಿತವಾಗಿಯೇ ತಮ್ಮ ಬೇಡಿಕೆಗಳನ್ನು ವ್ಯವಸ್ಥೆಯ ಮುಂದಿಡುತ್ತಿದ್ದಾರೆ. ಇದು ಆಕ್ಷೇಪಾರ್ಹವೂ ಅಲ್ಲ. ಆದರೆ ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸುವುದು ಒಂದು ರೀತಿಯಲ್ಲಿ ವಿಲಕ್ಷಣವಾದ ಮತ್ತು ವಿಪರೀತವಾದ ಕ್ರಮ ಎಂದೇ ಹೇಳಬೇಕು. ಕೆಲವೊಮ್ಮೆ ಪ್ರತಿಭಟನೆಗಳು ಸುದ್ದಿಗೀಡಾಗುವುದೇ ಅದರ ವಿಲಕ್ಷಣತೆಯಿಂದ. ಸಾಮಾನ್ಯ ಪ್ರತಿಭಟನೆಗೆ ಸಿಗುವ ಪ್ರಚಾರಕ್ಕಿಂತ ಹೆಚ್ಚಿನ ಪ್ರಚಾರವನ್ನು ಮಾಧ್ಯಮಗಳು ವಿಲಕ್ಷಣ  ಪ್ರತಿಭಟನೆಗಳಿಗೆ ನೀಡುತ್ತವೆ ಎಂಬ ನಂಬಿಕೆಯೂ ಮೈ ಮೇಲೆ ಮಲ ಸುರಿದವರಲ್ಲಿ ಇದ್ದಿರಬಹುದು. ಈ ಬಗೆಯ ಪ್ರತಿಭಟನೆಯನ್ನು ನಿರುತ್ತೇಜಿಸುತ್ತಲೇ ಆ ಪ್ರತಿಭಟನಾಕಾರರು ಎತ್ತಿರುವ ಪ್ರಶ್ನೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಪೌರ ಕಾರ್ಮಿಕರೆಂದರೆ, ಅತ್ಯಂತ ಕಟ್ಟಕಡೆಯಲ್ಲಿ ನಿಲ್ಲುವ ಮನುಷ್ಯರು. ಅವರಿಗಿಂತ ಕೆಳಗೆ ಕಾರ್ಮಿಕ ವರ್ಗವೊಂದು ಇಲ್ಲ. ಆದರೆ ಇವರಿಗಿಂತ ಮೇಲೆ ಬೇರೆ ಬೇರೆ ಅಧಿಕಾರಿಗಳಿದ್ದಾರೆ. ಅವರೆಲ್ಲರ ವೇತನಗಳೂ ಪೌರ ಕಾರ್ಮಿಕರಿಗೆ ಹೋಲಿಸಿದರೆ ದುಪ್ಪಟ್ಟೋ ಮೂರ್ಪಟ್ಟೋ ಆಗಿರುತ್ತದೆ. ವಿಷಾದ ಏನೆಂದರೆ,

      ದುಬಾರಿ ವೇತನ ಪಡೆಯುವ ಅಧಿಕಾರಿಗಳಿಗೆ ಕ್ಲಪ್ತ ಸಮಯದಲ್ಲಿ ವೇತನ ಪಾವತಿಸುವ ನಮ್ಮ ವ್ಯವಸ್ಥೆಯು ಜುಜುಬಿ ವೇತನ ಪಡೆಯುವ ಪೌರ ಕಾರ್ಮಿಕರನ್ನು ಸತಾಯಿಸುತ್ತದೆ. ಉನ್ನತ ಅಧಿಕಾರಿಗಳಿಗೆ ಸಮಾಜದಲ್ಲಿ ವಿಶ್ವಾಸಾರ್ಹ ಗುರುತು ಇರುತ್ತದೆ. ಆ ಗುರುತೇ ಅವರಿಗೆ ಸಾಲವನ್ನೂ ಲಭ್ಯವಾಗಿಸುತ್ತದೆ. ಆಹಾರ ವಸ್ತುಗಳ ಖರೀದಿ ಸಹಿತ ಎಲ್ಲ ಸಂದರ್ಭಗಳಲ್ಲೂ ಈ ಗುರುತು ಅವರ ನೆರವಿಗೆ ಬರುತ್ತದೆ. ಆದರೆ ಪೌರ ಕಾರ್ಮಿಕರು ಹಾಗಲ್ಲ. ಜುಜುಬಿ ವೇತನವು ಅವರ ಮೊದಲ ಶತ್ರು. ಗುತ್ತಿಗೆ ಕಾರ್ಮಿಕರು ಎಂಬುದು ಇನ್ನೊಂದು ಶತ್ರು. ಈ ಗುರುತು ಅವರಿಗೆ ಸಾಲ ಲಭ್ಯವಾಗಿಸುವಾಗಲೂ ಅಡ್ಡ ಬರುತ್ತದೆ. ಆಹಾರ ವಸ್ತುಗಳ ಖರೀದಿಯ ವೇಳೆಯಲ್ಲೂ ಸಾಲ ಸಿಗದಂತೆ ತಡೆಯುತ್ತದೆ. ಆದ್ದರಿಂದ, ವ್ಯವಸ್ಥೆಯ ಪಟ್ಟಿಯಲ್ಲಿ ಕಟ್ಟಕಡೆಯ ಉದ್ಯೋಗಿಗಳಾಗಿ ಗುರುತಿಸಿಕೊಂಡಿರುವ ಕಾರ್ಮಿಕರಿಗೆ ಸಕಾಲದಲ್ಲಿ ವೇತನ ಪಾವತಿಸಬೇಕಾದ ಜರೂರತ್ತು ವ್ಯವಸ್ಥೆಯ ಮೇಲಿದೆ. ಮೈಮೇಲೆ ಮಲ ಸುರಿದ ಕ್ರಮವನ್ನು ಪ್ರಶ್ನಿಸುವ ಭರದಲ್ಲಿ ಅವರೆತ್ತಿದ ಪ್ರಶ್ನೆಯನ್ನು ನಾವು ಲಘುವಾಗಿಸಿ ಪರಿಗಣಿಸಬಾರದು. ಪ್ರತಿಭಟನಾ ವಿಧಾನ ಆಕ್ಷೇಪಾರ್ಹವೇ ಆಗಿರಬಹುದು. ಆದರೆ, ಅಂಥದ್ದೊಂದು  ಆಕ್ಷೇಪಾರ್ಹ ಪ್ರತಿಭಟನೆಗೆ ಅವರನ್ನು ಒತ್ತಾಯಿಸಿದ್ದು ನಮ್ಮ ವ್ಯವಸ್ಥೆಯೇ ಎಂಬುದು ನಮ್ಮ ಗಮನದಲ್ಲಿರಬೇಕು. ಸಾಮಾನ್ಯವಾಗಿ, ಪ್ರತಿಭಟನಾಕಾರರ ಇಂಥ ಅತಿರೇಕದ ವಿಧಾನವನ್ನೇ ಮುಖ್ಯವಾಗಿಸಿ ಅವರು ಎತ್ತಿರುವ ಪ್ರಶ್ನೆಯನ್ನು ವ್ಯವಸ್ಥೆ ನಗಣ್ಯವಾಗಿಸುವುದಿದೆ. ದೆಹಲಿಯಲ್ಲಿ, ಸಾವಿಗೀಡಾದ ಮೂರು ಮಕ್ಕಳ ಪ್ರಕರಣದಲ್ಲೂ ಇಂಥದ್ದೊಂದು ಅಡ್ಡ ಸಮರ್ಥನೆಯನ್ನು ಮಾಡಲಾಗುತ್ತಿದೆ. ಅಪ್ಪ ಕುಡುಕ ಮತ್ತು ಅಮ್ಮ ಮನೋರೋಗಿ ಅನ್ನುವುದು ಮೂರು ಮಕ್ಕಳ ಹಸಿವನ್ನು ಸಮರ್ಥಿಸಿಕೊಳ್ಳುವುದಕ್ಕೆ ಕಾರಣ ಆಗಬಹುದೇ? ಹಾಗಂತ, ಆ ಕುಟುಂಬ ನಿರ್ಜನ ಪ್ರದೇಶದಲ್ಲೋ  ಕಾಡಲ್ಲೋ ಇರಲಿಲ್ಲ. ಅಕ್ಕ-ಪಕ್ಕ ಮನೆಗಳಿದ್ದುವು. ಆ ಮನೆಗಳಿಗೆ ಆ ಮಕ್ಕಳ ಅಳು ಕೇಳಿಸಿಯೇ ಇರಲಿಲ್ಲ ಎಂದು ನಂಬುವುದು ದಡ್ಡತನವಾದೀತು. ನಿಜವಾಗಿ, ಜವಾಬ್ದಾರಿ ಎಂಬುದು ಸರಕಾರಕ್ಕೆ ಮಾತ್ರ ಇರುವುದಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಇರುತ್ತದೆ. ತನ್ನ ಅಕ್ಕ-ಪಕ್ಕದ ಮನೆಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಕಾಳಜಿ ಮತ್ತು ಕಳಕಳಿ ಇರಲೇಬೇಕು. ತಾನಾಯಿತು, ತನ್ನ ಮನೆಯಾಯಿತು ಅನ್ನುವ ರೀತಿಯಲ್ಲಿ ಬದುಕುವುದು ಜವಾಬ್ದಾರಿಯುತ ನಾಗರಿಕನ ಗುರುತಲ್ಲ. ತನ್ನ ಅಕ್ಕಪಕ್ಕದಲ್ಲಿ ಏನಾಗುತ್ತಿದೆ ಅನ್ನುವ ಬಗ್ಗೆ ಗಮನವಿಟ್ಟುಕೊಳ್ಳಬೇಕಾದ ಅಗತ್ಯ ಪ್ರತಿಯೊಬ್ಬ ನಾಗರಿಕನ ಮೇಲಿದೆ.
    ನಿಜವಾಗಿ, ದೌರ್ಜನ್ಯ, ಅನ್ಯಾಯ, ಅತ್ಯಾಚಾರ ಮತ್ತು ಹಸಿವುಗಳು ತುಂಬಿರುವ ಸಾಮಾಜಿಕ ವಾತಾವರಣದಲ್ಲಿ ನಾವು ಹೇಗೆ ಬದುಕಬೇಕು ಎಂಬುದನ್ನು ಪ್ರಾಣತ್ಯಾಗದ ಮೂಲಕ  ಆ ಮೂವರು ಕಂದಮ್ಮಗಳು ನಮ್ಮನ್ನು ಎಚ್ಚರಿಸಿ ಹೋಗಿವೆ. ನಿಮ್ಮ ಹೊಟ್ಟೆಯನ್ನಷ್ಟೇ ತಣಿಸಿದರೆ ಸಾಲದು, ಉಳಿದವರ ಹೊಟ್ಟೆಯ ಬಗೆಗೂ ಕಾಳಜಿ ವಹಿಸಿ ಎಂಬ ಮಾರ್ಮಿಕ ಸಂದೇಶವನ್ನು ಆ ಕಂದಮ್ಮಗಳು ಸಾರಿಹೋಗಿವೆ. ಹಸಿವು ಯಾರೊಬ್ಬನ ಸೊತ್ತೂ ಅಲ್ಲ. ಅದು ಎಲ್ಲರದು ಮತ್ತು ಎಲ್ಲರೂ ಹಸಿವಿನಿಂದ ಮುಕ್ತರಾಗಿ ಬದುಕಬೇಕಾದವರು. ಆದರೆ ಮಕ್ಕಳು ದೊಡ್ಡವರಷ್ಟು ಜಾಣರಲ್ಲವಲ್ಲ. ಅವುಗಳಿಗೆ ದೊಡ್ಡವರಂತೆ ಬೇಡಲು ಬರಲ್ಲ. ಗೊತ್ತಿರುವುದು ಅಳು ಒಂದೇ. ಆ ಮಕ್ಕಳು ಅಳುತ್ತಲೇ ಪ್ರಾಣ ಬಿಟ್ಟಿವೆ. ಆ ಅಳು ನಮ್ಮೊಳಗಿನ ನಿರ್ಲಕ್ಷ್ಯ ವೆಂಬ ಕ್ರೌರ್ಯಕ್ಕೆ ಬಿದ್ದ ಏಟು ಆಗಬೇಕು. ಆ ಮಕ್ಕಳಂಥ ಮಕ್ಕಳು ಪೌರ ಕಾರ್ಮಿಕರಿಗೂ ಇದ್ದಾವು. ನಮ್ಮ ಅಕ್ಕ-ಪಕ್ಕ ಕಟ್ಟಡ ಕಾಮಗಾರಿಗಾಗಿ ಬಂದ ಕುಟುಂಬಗಳಲ್ಲೂ ಇರಬಹುದು. ಅವು ಹಸಿವಿಗೆ ಬೀಳದಂತೆ ನೋಡಿಕೊಳ್ಳಬೇಕಾದುದು ವ್ಯವಸ್ಥೆಯ ಮತ್ತು ನಮ್ಮ ಆದ್ಯತೆಯಾಗಬೇಕು. ಹಸಿವು ರೋಗವಲ್ಲ. ಸಾವೂ ಅಲ್ಲ. ಆ ಮೂರು ಮಕ್ಕಳ ಸಾವಿಗೆ ಕಾರಣ ಹಸಿವಲ್ಲ, ನಾವು.