Tuesday, 20 June 2023

ವಾಟ್ಸಾಪ್‌ನಲ್ಲಿ ಬರುವ ಪಕ್ಕದ ಮನೆಯ ಸಾವಿನ ಸುದ್ದಿ

 

8- 2-2023

ಕಳೆದ ವಾರ ರಾಜ್ಯದಲ್ಲಿ ಮೂರು ಆತ್ಮಹತ್ಯೆ ಪ್ರಕರಣಗಳು ನಡೆದುವು. ಬಾಗಲಕೋಟೆಯಲ್ಲಿ ತನ್ನ ಮೂವರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಳ್ಯದಲ್ಲಿ 26ರ ಗೃಹಿಣಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ, ಸಾಲದ ಕಾರಣಕ್ಕಾಗಿ ಒಂದೇ ಕುಟುಂಬದ 7 ಮಂದಿ ಇಲಿ ಪಾಷಾಣ ಸೇವಿಸಿದ್ದು, ಓರ್ವರು ಸಾವಿಗೀಡಾಗಿ ಉಳಿದವರು ಗಂಭೀರ ಸ್ಥಿತಿಗೆ ತಲುಪಿದ ಘಟನೆ ರಾಮನಗರದಲ್ಲಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿರುವವರಲ್ಲಿ 4 ಮಂದಿ ಮಕ್ಕಳು.

ವಿಷಾದ ಏನೆಂದರೆ, ಇಂಥ ಸಾಮೂಹಿಕ ಆತ್ಮಹತ್ಯೆಗಳ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದರೂ ಓರ್ವ ರಾಜಕೀಯ ಪುಡಾರಿಯ ಹೇಳಿಕೆಯಷ್ಟೂ ಇವುಗಳಿಗೆ ನಾಗರಿಕ ಸಮಾಜದಲ್ಲಿ ಮಹತ್ವ ಲಭ್ಯವಾಗುತ್ತಿಲ್ಲ ಎಂಬುದು. ಆತ್ಮಹತ್ಯೆಯ ಸುದ್ದಿಯನ್ನು ಓದಿಯೋ ಕೇಳಿಯೋ ಛೆ, ತ್ಚು..ಎಂದು ಬೇಸಪಟ್ಟುಕೊಂಡು ಮರುಕ್ಷಣವೇ ರಾಜಕಾರಣಿಯ ಹೇಳಿಕೆಯ ಮೇಲೆ ಗಂಟೆಗಟ್ಟಲೆ ಮಾತಾಡುವಷ್ಟು ಸಾರ್ವಜನಿಕ ಸಂವೇದನೆ ನಶಿಸಿ ಹೋಗುತ್ತಿದೆ. ಜೀವ ಅಮೂಲ್ಯ ಎಂದು ನಂಬಿಕೊಂಡು ಬಂದ ಸಮಾಜವೊಂದು ತೀರಾ ಸಂವೇದ ನಾರಹಿತವಾಗಿ ಮತ್ತು ಅಸಹಜವಾಗಿ ಬದುಕುವ ಹಂತಕ್ಕೆ ತಲುಪಿದ್ದು ಹೇಗೆ? ಯಾಕೆ?

ತನ್ನ ಪಕ್ಕದ ಮನೆಯಲ್ಲೋ ಫ್ಲಾಟಿನಲ್ಲೋ ಜೀವವೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತದೆ ಎಂದರೆ, ಅದು ಆತ್ಮಹತ್ಯೆ ಮಾಡಿಕೊಂಡ ಮನೆಯ ಖಾಸಗಿ ಸಂಗತಿಯಷ್ಟೇ ಆಗಬೇಕಿಲ್ಲ ಅಥವಾ ಪಕ್ಕದ ಮನೆಯಿಂದ ಆಚೆಗೆ ಅದು ಚರ್ಚೆಗೆ ತೆರೆದುಕೊಳ್ಳಬಾರದ ವಿಷಯವೂ ಆಗಬೇಕಿಲ್ಲ. ಆತ್ಮಹತ್ಯೆ ಎಂಬುದು ಚಾರಣದಂಥ ಸಾಹಸ ಪ್ರವೃತ್ತಿ ಅಲ್ಲವಲ್ಲ. ಅದು ಬದುಕಿನ ಕೊನೆ. ಓರ್ವ ವ್ಯಕ್ತಿ ಸುಖಾಸುಮ್ಮನೆ ಬದುಕನ್ನು ಮುಗಿಸಿ ಬಿಡುವ ಆಲೋಚನೆ ಮಾಡುವುದಕ್ಕೆ ಸಾಧ್ಯವಿಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಇಂಥ ಆತ್ಮಹತ್ಯೆಗಳಲ್ಲಿ ಹೊರಗೆ ಕಾಣುವ ಕಾರಣಗಳಿಗಿಂತಲೂ ಕಾಣದ ಕಾರಣಗಳಿರುತ್ತವೆ. ಸಾಲ, ಕಾಯಿಲೆ, ಖಿನ್ನತೆ, ಸಿಟ್ಟು, ಅವಮಾನ, ಅವಮರ್ಯಾದೆ, ಜೀವಭಯ... ಮುಂತಾದ ಕಾರಣಗಳು ಸಾಮಾನ್ಯವಾಗಿ ಯಾವುದೇ ಆತ್ಮಹತ್ಯೆಗಳ ಜೊತೆ ತೇಲಿ ಬರುವುದಿದೆ. ಇರಬಹುದು. ಆದರೆ,

ಈ ಎಲ್ಲ ಕಾರಣಗಳಲ್ಲೂ ಒಂದು ಪ್ರಧಾನ ಅಂಶ ಎದ್ದು ಕಾಣುತ್ತದೆ. ಅದುವೇ, ಸಮಾಜದ ಸ್ಪಂದನೆಯ ಕೊರತೆ. ಸಾಲ, ಕಾಯಿಲೆ, ಜಿಗುಪ್ಸೆ, ಅವಮರ್ಯಾದೆ.. ಇತ್ಯಾದಿಗಳೆಲ್ಲ ಈ 21ನೇ ಶತಮಾನದ ಮಹಾನ್ ಸಂಶೋಧನೆಗಳೇನಲ್ಲ. ನಮ್ಮ ಹಿರಿಯರ ಕಾಲದಲ್ಲೂ ಇದ್ದುವು. ಮುಂದೆಯೂ ಇರಲಿದೆ. ಆದರೆ, ಹಿರಿಯದ ಕಾಲದಲ್ಲಿ ಆತ್ಮಹತ್ಯೆಗಳು ಅಪರೂಪದಲ್ಲಿ ಅಪರೂಪ ಎನ್ನುವಷ್ಟು ಕಡಿಮೆಯಿತ್ತು. ಒಂದುವೇಳೆ, ಆತ್ಮಹತ್ಯೆಯೊಂದು ನಡೆಯಿತೆಂದರೆ, ಅದು ವಾರಗಟ್ಟಲೆ ಸಾರ್ವಜನಿಕ ಚರ್ಚೆಯ ವಸ್ತುವೂ ಆಗುತ್ತಿತ್ತು. ಹೊಟೇಲು, ಅಂಗಡಿ, ಉದ್ಯೋಗದ ಸ್ಥಳ, ಬಸ್ಸಿನಲ್ಲಿ ಪ್ರಯಾಣದ ವೇಳೆ, ಮದುವೆ-ಮುಂಜಿ ಕಾರ್ಯಕ್ರಮಗಳಲ್ಲಿ ಆ ಆತ್ಮಹತ್ಯೆಯೇ ಪ್ರಧಾನ ಚರ್ಚಾ ವಿಷಯವಾಗುತ್ತಿತ್ತು.

ಯಾವಾಗ ಒಂದು ಆಘಾತಕಾರಿ ಸಂಗತಿ ಸಾರ್ವಜನಿಕ ಚರ್ಚೆಗೆ ತೆರೆದುಕೊಳ್ಳುತ್ತದೋ ಆವಾಗ ಅದರ ಸರಿ-ತಪ್ಪುಗಳ ವಿಮರ್ಶೆಯೂ ನಡೆಯುತ್ತದೆ. ಆತ್ಮಹತ್ಯೆಯ ಹೊರತಾದ ದಾರಿಗಳು ಮತ್ತು ಆತ್ಮಹತ್ಯೆಯ ಸುಳಿವನ್ನು ಪತ್ತೆಹಚ್ಚುವ ವಿಧಾನಗಳ ಬಗ್ಗೆಯೂ ಅಂಥ ಚರ್ಚೆಯಲ್ಲಿ ಪ್ರಸ್ತಾಪವಾಗುತ್ತದೆ. ಆತ್ಮಹತ್ಯೆಯನ್ನು ಹೇಗೆ ತಡೆಯಬಹುದಿತ್ತು, ಸಾಲವನ್ನು ಹೇಗೆ ತೀರಿಸಬಹುದಿತ್ತು, ಆತ್ಮಹತ್ಯೆಯ ಸುಳಿವನ್ನು ಹೇಗೆ ಪತ್ತೆ ಹಚ್ಚಬಹುದಿತ್ತು ಮತ್ತು ವ್ಯಕ್ತಿಯನ್ನು ಆತ್ಮಹತ್ಯೆಯಿಂದ ಹೇಗೆ ಹಿಂಜರಿಯುವಂತೆ ಮಾಡಬಹುದಿತ್ತು ಎಂಬ ಚರ್ಚೆಯು ದೊಡ್ಡವರ ಮಧ್ಯೆ ನಡೆಯುವಾಗ ಅದನ್ನು ಚಿಕ್ಕವರೂ ಕೇಳಿಸಿಕೊಳ್ಳುತ್ತಿದ್ದರು. ಆ ಮೂಲಕ ಸಾಮಾಜಿಕ ಮತ್ತು ನೈತಿಕ ಪಾಠವೊಂದು ದೊಡ್ಡವರಿಂದ ಚಿಕ್ಕವರಿಗೆ ಸಹಜವಾಗಿ ರವಾನೆಯಾಗುತ್ತಿತ್ತು. ಅಂಥ ಆತ್ಮಹತ್ಯೆ ಸುದ್ದಿಗಳು ಪ್ರತಿ ಮನೆ ಮನೆಯ ಬ್ರೇಕಿಂಗ್ ಸುದ್ದಿಯಾಗಿ, ಮನೆಯ ಪ್ರಧಾನ ಚರ್ಚಾವಿಷಯವಾಗಿ ಮಾರ್ಪಾಡೂ ಆಗುತ್ತಿದ್ದುವು. ಇದೊಂದು ಸಹಜ ಜಾಗೃತಿ ಕಾರ್ಯಕ್ರಮ. ಸರ್ಕಾರದ ಯಾವುದೇ ಒತ್ತಾಸೆಯಿಲ್ಲದೆ ಮತ್ತು ಸರ್ಕಾರ ಯಾವುದೇ ಫಂಡ್ ಬಿಡುಗಡೆಗೊಳಿಸದೆಯೇ ಹಾಗೂ ಯಾವುದೇ ನಿರ್ದಿಷ್ಟ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸದೆಯೇ ಸಮಾಜವೇ ಅನಧಿಕೃತವಾಗಿ ನಡೆಸುವ ಅಭಿಯಾನ. ಆದರೆ

ಇವತ್ತು ಬದುಕಿನ ಚಿತ್ರಣ ಬದಲಾಗಿದೆ. ಪಕ್ಕದ ಫ್ಲಾಟಿನಲ್ಲಿ ಆತ್ಮಹತ್ಯೆ ಘಟನೆ ನಡೆದಿದೆ ಎಂಬುದು ಗೊತ್ತೇ ಇಲ್ಲದಷ್ಟು ಬದುಕು ಬದಲಾಗಿ ಬಿಟ್ಟಿದೆ. ಪಕ್ಕದ ಮನೆಯವರ ಬದುಕು ಹೇಗಿದೆ, ಉದ್ಯೋಗ ಏನು, ಕಾಯಿಲೆ ಪೀಡಿತರಿದ್ದಾರೆಯೇ, ವಿದ್ಯಾರ್ಥಿಗಳಿದ್ದಾರೆಯೇ, ಹಣಕಾಸು ತಾಪತ್ರಯಗಳಿವೆಯೇ, ನಿರುದ್ಯೋಗದ ಸಮಸ್ಯೆಯಿದೆಯೇ ಇತ್ಯಾದಿಗಳ ಬಗ್ಗೆ ಏನೊಂದೂ ಅರಿವಿಲ್ಲದೆಯೇ ನಿಶ್ಚಿಂತೆಯಿಂದ ಬದುಕುವ ಮನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ, ಸಮಸ್ಯೆಗಳಲ್ಲಿ ಬಂಧಿಯಾದವ ಯಾರೊಂದಿಗೂ ಹೇಳಲಾಗದೇ ಒಳಗೊಳಗೇ ಕುಸಿಯತೊಡಗುತ್ತಾನೆ. ಇನ್ನೊಬ್ಬರೊಂದಿಗೆ ಹಂಚಿ ಹಗುರ ಮಾಡಿಕೊಳ್ಳುವ ಹಳೆಯ ಸಾಮಾಜಿಕ ವ್ಯವಸ್ಥೆಯು ಶಿಥಿಲಗೊಂಡು ತಾನಾಯಿತು, ತನ್ನ ಪಾಡಾಯಿತು ಎಂಬ ಹೊಸ ಸ್ಥಿತಿಯ ಉದಯವಾಗಿರುವುದರಿಂದ ಆತನನ್ನು ಆಲಿಸುವ ಮತ್ತು ಸಾಂತ್ವನಿಸುವ ಕಿವಿ-ಬಾಯಿಗಳ ನಿರೀಕ್ಷೆ ಹುಸಿಯಾಗತೊಡಗುತ್ತವೆ. ಅಂತಿಮವಾಗಿ ಪತ್ರಿಕೆಗಳಲ್ಲಿ ಒಂದು ಕಾಲಮ್ ಸುದ್ದಿಯೊಂದಿಗೆ ಆತ ಮತ್ತು ಆತನ ಕುಟುಂಬ ಶಾಶ್ವತ ಕಣ್ಮರೆಯಾಗುತ್ತವೆ. ಹಾಗಂತ,

ಈಗಿನ ಸಾಮಾಜಿಕ ಜೀವನ ಕ್ರಮ, ಫ್ಲ್ಯಾಟ್ ಸಂಸ್ಕೃತಿಯನ್ನು ಹಳೆಯ ಕಾಲಕ್ಕೆ ಮರಳಿಸಲು ಸಾಧ್ಯವಿಲ್ಲ ಎಂಬುದು ನಿಜ. ಆದರೆ, ಇಂಥ ಆತ್ಮಹತ್ಯೆಗಳನ್ನು ಸಾಕಷ್ಟು ತಡೆಯುವ ಸಾಮರ್ಥ್ಯ ಈಗಿನ ಸಮಾಜಕ್ಕಿದೆ ಎಂಬುದನ್ನು ನಿರಾಕರಿಸಬೇಕಿಲ್ಲ. ಅಣು ಕುಟುಂಬದ ಇವತ್ತಿನ ದಿನಗಳಲ್ಲಿ ಪತಿ-ಪತ್ನಿ ಇಬ್ಬರೂ ಉದ್ಯೋಗದಲ್ಲಿರುವುದು ಅನಿವಾರ್ಯವಾಗಿರುವಾಗ ಈ ಹಿಂದಿನಂಥ ಸಾಮಾಜಿಕ ಬೆರೆಯುವಿಕೆ ಸುಲಭವಲ್ಲ. ಸಮಯದ ಮಿತಿ, ಉದ್ಯೋಗದ ಸಮಯ ಮತ್ತು ಉದ್ಯೋಗದ ರೀತಿಯು ಇಂಥ ಬೆರೆಯುವಿಕೆಗೆ ಅಡ್ಡಿಯನ್ನುಂಟು ಮಾಡುತ್ತವೆ. ಆದರೆ, ಈ ಮಿತಿಗಳನ್ನು ಮೀರಿಯೂ ಪ್ರತಿಯೋರ್ವರೂ ಪಕ್ಕದ ನಾಲ್ಕೈದು ಮನೆಗಳೊಂದಿಗೆ ಸುಖ-ದುಃಖ ಹಂಚಿಕೊಳ್ಳುವ ಸಹಜ ಸಂಬಂಧವನ್ನು ಇಟ್ಟುಕೊಳ್ಳುವ ಸಾಧ್ಯತೆಗಳನ್ನು ಹುಡುಕಲೇಬೇಕಿದೆ. ವಾರದಲ್ಲಿ ಒಂದಷ್ಟು ಸಮಯವನ್ನು ಇಂಥ ಮಾತುಕತೆಗಳಿಗೆ ಮೀಸಲಿಡುವುದರಿಂದ ಭಿನ್ನ ಅನುಭವವೂ ದಕ್ಕುತ್ತದೆ ಮತ್ತು ಮಾಧ್ಯಮಗಳು ಹುಟ್ಟು ಹಾಕಿರುವ ಚರ್ಚಾವಿಷಯಗಳ ಏಕತಾನತೆಯಿಂದ ಆಚೆಗೆ ಬದುಕು-ಭಾವಗಳನ್ನು ವಿನಿಮಯ ಮಾಡಿಕೊಳ್ಳುವ ಸೌಖ್ಯವೂ ಲಭ್ಯವಾಗುತ್ತದೆ. ರಾಜಕೀಯ, ಭ್ರಷ್ಟಾಚಾರ, ಮಾಧ್ಯಮ ಗೌಜಿ-ಗದ್ದಲಗಳು...ಇವೆಲ್ಲ ಇದ್ದದ್ದೇ. ಇವನ್ನೇ ಇಂಥ ಮಾತುಕತೆಗಳಲ್ಲಿ ತಂದು ಮನಸು ಹಾಳು ಮಾಡಿಕೊಳ್ಳುವುದಕ್ಕಿಂತ ಬದುಕಿನ ಕುರಿತಾದ ವಿಷಯಗಳತ್ತ ಗಮನ ಹರಿಸುವುದರಿಂದ ಸುಖ-ದುಃಖಗಳ ಪ್ರಸ್ತಾಪವೂ ಆಗಬಲ್ಲುದು.

ಸಂಕಷ್ಟಕ್ಕೆ ಒಳಗಾದ ಯಾವುದೇ ವ್ಯಕ್ತಿ ತಕ್ಷಣ ತನ್ನ ಮನಸ್ಸನ್ನು ಇನ್ನೊಬ್ಬನ ಎದುರು ತೆರೆದುಕೊಳ್ಳಲಾರ. ತೀರಾ ಸಲುಗೆಯ ವ್ಯಕ್ತಿಯ ಜೊತೆಗೂ ಈ ವಿಷಯದಲ್ಲಿ ಒಂದು ಮುಜುಗರ ಇದ್ದೇ ಇರುತ್ತದೆ. ಒಂದಷ್ಟು ಹೊತ್ತು ಮಾತುಕತೆ ನಡೆದಾಗ ನಿಧಾನವಾಗಿ ಒಳಗಿನ ಬೇಗುದಿ, ಸಂಕಟಗಳು ಹೊರಬರುತ್ತವೆ. ಇದೊಂದು ರೀತಿಯಲ್ಲಿ ತನ್ನನ್ನು ತಾನು ಹಗುರ ಮಾಡಿಕೊಳ್ಳುವ ವಿಧಾನ. ಸದ್ಯದ ಸಾಮಾಜಿಕ ವ್ಯವಸ್ಥೆಯಲ್ಲಿ ಹೀಗೆ ಹೇಳಿಕೊಳ್ಳುವುದಕ್ಕೂ ಬೇಕಾದ ಸಂದರ್ಭಗಳು ಸಿಗುತ್ತಿಲ್ಲ. ಯಾವಾಗ ವ್ಯಕ್ತಿಯೋರ್ವರಿಗೆ ತನ್ನೊಳಗಿನ ಸಂಕಟವನ್ನು ಹಂಚಿಕೊಳ್ಳುವುದಕ್ಕೆ ವಿಶ್ವಾಸಾರ್ಹವಾದ ವೇದಿಕೆಗಳು ಸಿಗುತ್ತವೋ ಆಗ ಆತ ಅರ್ಧದಷ್ಟು ಗೆಲುವಾಗುತ್ತಾನೆ/ಳೆ. ಅಂಥ ಸನ್ನಿವೇಶಗಳಲ್ಲಿ ಕೇಳುಗರು ಸಾಂತ್ವನಿಸುತ್ತಾರೆ. ಭರವಸೆ ತುಂಬುತ್ತಾರೆ. ಕೇಳುವವ ಸಮರ್ಥನಾಗಿದ್ದರೆ ನೆರವಾಗಬಹುದು ಅಥವಾ ಪರಿಹಾರದ ಬೇರೆ ದಾರಿಗಳನ್ನು ತೋರಿಸಬಹುದು. ಅಂತೂ ಸಮಸ್ಯೆಯಿಂದ ಬಿಡುಗಡೆಗೊಳ್ಳುವ ದಾರಿಯೊಂದರ ಪುಟ್ಟ ಹುಡುಕಾಟಕ್ಕೆ ಇಂಥ ಸಂದರ್ಭಗಳು ಅವಕಾಶ ಮಾಡಿಕೊಡುತ್ತವೆ.

ಸದ್ಯ, ಈ ಕುರಿತಂತೆ ಸಾಮಾಜಿಕ ಜಾಗೃತಿಯೊಂದು ದೊಡ್ಡಮಟ್ಟದಲ್ಲಿ ನಡೆಯಬೇಕಿದೆ. ಮಾಧ್ಯಮಗಳು ಮನಸ್ಸು ಮಾಡಿದರೆ ಇದು ಅಸಾಧ್ಯವಲ್ಲ. ಪಕ್ಕದ ನಾಲ್ಕೈದು ಮನೆಗಳೊಂದಿಗೆ ಸುಖ-ದುಃಖಗಳನ್ನು ಹಂಚಿಕೊಳ್ಳುವಷ್ಟು ಸಲುಗೆಯನ್ನು ಬೆಳೆಸಿಕೊಳ್ಳುವ ಮತ್ತು ಅದಕ್ಕಾಗಿ ಸಮಯವನ್ನು ಮೀಸಲಿಡುವ ಸಂದರ್ಭಗಳು ಸೃಷ್ಟಿಯಾಗಲೇಬೇಕು. ಪಕ್ಕದ ಮನೆಯ ಸಾವಿನ ಸುದ್ದಿಯನ್ನು ವಾಟ್ಸಪ್ ಮೂಲಕ ತಿಳಿದುಕೊಳ್ಳುವ ಸ್ಥಿತಿಯತ್ತ ಸಮಾಜ ಹೊರಳುತ್ತಿರುವ ಈ ದಿನಗಳಲ್ಲಿ, ಜೀವನ ಕ್ರಮದ ಬಗ್ಗೆ ಮರು ಆಲೋಚಿಸುವ ತುರ್ತು ಅಗತ್ಯವಿದೆ

ಸಕಾರಾತ್ಮಕ ಚರ್ಚೆಗಳು ಪ್ರತಿ ಮನೆಯಲ್ಲೂ ನಡೆಯಲಿ...

 

15-2-2023

ಕೊರಗ ಸಮುದಾಯದ ದಿನಕರ ಕೆಂಜೂರು ಅವರ ಡಾಕ್ಟರೇಟ್ ಪದವಿ ನಿಜಕ್ಕೂ ಈ ಸಮಾಜ ಸಂಭ್ರಮಿಸಬೇಕಾದ ಮತ್ತು ವಿಶೇಷವಾಗಿ ಮುಸ್ಲಿಮ್ ಸಮುದಾಯದ ಪ್ರತಿ ಮನೆಗಳಲ್ಲೂ ಉಲ್ಲೇಖಕ್ಕೆ ಒಳಗಾಗಿ ಚರ್ಚೆಯ ಹಂತಕ್ಕೆ ಬರಬೇಕಾದ ಬಹುಮುಖ್ಯ ಸಂಗತಿಯಾಗಿದೆ.

ಕಾಡಂಚಿನಲ್ಲಿ ಬದುಕುತ್ತಿರುವ ಮತ್ತು ಕಾಡುತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಸಮುದಾಯವಾಗಿ ಕೊರಗ ಸಮುದಾಯ ಪರಿಚಿತವಾಗಿದೆ. ಕರಾವಳಿ ಭಾಗದ ಮೂಲ ನಿವಾಸಿಗಳಾಗಿ ಮತ್ತು ಅಳಿವಿನ ಅಂಚಿನಲ್ಲಿರುವ ಸಮುದಾಯವಾಗಿಯೂ ಕೊರಗ ಸಮುದಾಯ ಗುರುತಿಸಿಕೊಂಡಿದೆ. ದೇಶದ ಜನಸಂಖ್ಯೆಯ ಸರಾಸರಿ ಜೀವಿತಾವಧಿಗೆ ಹೋಲಿಸಿದರೆ ಕೊರಗ ಸಮುದಾಯದ ಜೀವಿತಾವಧಿ ಅರ್ಧಕ್ಕರ್ಧ ಎಂಬಂತಿದೆ. ದುಶ್ಚಟ, ಕಾಯಿಲೆ, ಪೌಷ್ಟಿಕ ಆಹಾರದ ಕೊರತೆ ಇತ್ಯಾದಿಗಳು ಇವರ ಜೀವಿತಾವಧಿಯನ್ನು ಕಡಿಮೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದೂ ಹೇಳಲಾಗುತ್ತಿದೆ. ಇಂಥ ಸಮುದಾಯದ ದಿನಕರ ಕೆಂಜೂರು ಅವರು ಇದೀಗ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ, ‘ನಾಲೇಜ್ ಮ್ಯಾನೇಜ್‌ಮೆಂಟ್ ಪಾಲಿಸೀಸ್ ಆಂಡ್ ಪ್ರಾಕ್ಟೀಸಸ್: ಎ ಸ್ಟಡಿ ವಿದ್ ರೆಫರೆನ್ಸ್ ಟು ಕಂಪ್ಯೂಟರ್ ಸಾಫ್ಟ್ವೇರ್ ಆಂಡ್ ಸರ್ವಿಸಸ್ ಕಂಪನೀಸ್ ಇನ್ ಕರ್ನಾಟಕ’ ಎಂಬ ವಿಷಯದ ಮೇಲೆ ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ದಿನಕರ ಕೆಂಜೂರು ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ವಿಶೇಷ ಏನೆಂದರೆ,

ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೂರನೇ ವ್ಯಕ್ತಿ ಈ ದಿನಕರ ಕೆಂಜೂರು. 2022ರಲ್ಲಿ ಡಾಕ್ಟರೇಟ್ ಪಡೆದ ಸವಿತಾ ಗುಂಡ್ಮಿ ಮಹಿಳೆಯರಲ್ಲಿ ಮೊದಲಿಗರು. ಅಲ್ಲದೇ, ಬಾಲ್ಯದಲ್ಲೇ ಎಡಗಾಲು ಪೋಲಿಯೋ ಕಾಯಿಲೆಗೆ ತುತ್ತಾದ್ದರಿಂದ ಈ ದಿನಕರ ಕ್ಲಚಸ್‌ನ ಸಹಾಯದಿಂದಲೇ ನಡೆಯುತ್ತಿದ್ದಾರೆ. ಮಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿರುವ ಇವರು ವಿವಿಯ ಬಹುಮಹಡಿ ಮೆಟ್ಟಿಲುಗಳನ್ನು ಈ ಕ್ಲಚಸ್ ಮೂಲಕವೇ ಹತ್ತಿಳಿಯುತ್ತಿದ್ದಾರೆ. 4 ಮತ್ತು 10ನೇ ತರಗತಿಯಲ್ಲಿ ಡ್ರಾಪ್ ಔಟ್ ಆದವರು ಈ ದಿನಕರ. ಕಿತ್ತು ತಿನ್ನುವ ಬಡತನ, ಅಸ್ಪೃಶ್ಯತೆ ಮತ್ತು ಅತಿ ಕ್ರೂರ ಅಜಲು ಪದ್ಧತಿಯಿಂದಲೂ ಧೃತಿಗೆಡದೇ ಸತತ ಏಳು ವರ್ಷಗಳ ಅಧ್ಯಯನ ಮತ್ತು ಸಂಶೋಧನೆಯನ್ನು ನಡೆಸಿ ಮಹಾ ಪ್ರಬಂಧವನ್ನು ಮಂಡಿಸಿದ್ದಾರೆ‌.

ಸಾಧಿಸುವ ಛಲ ಇದ್ದರೆ ಕಿತ್ತು ತಿನ್ನುವ ಬಡತನವಿದ್ದರೂ ಅಸ್ಪೃಶ್ಯತೆಗೆ ಗುರಿಯಾಗಿಯೂ, ಮೇಲ್ಜಾತಿಗಳು ಅತಿ ಹೀನಾಯವಾಗಿ ನಡೆಸಿಕೊಳ್ಳುವ ಅಜಲು ಪದ್ಧತಿಯ ಶೋಷಣೆಗೊಳಪಟ್ಟೂ ಮತ್ತು ಪೊಲಿಯೋ ಪೀಡಿತರಾಗಿ ಕ್ಲಚಸನ್ನು ಆಶ್ರಯಿಸಿ ಬದುಕಬೇಕಾಗಿ ಬಂದರೂ ಸಾಧ್ಯವಿದೆ ಎಂಬುದಕ್ಕೆ ಈ ದಿನಕರ ಕೆಂಜೂರು ಒಂದು ಅದ್ಭುತ ಉದಾಹರಣೆ. ಉಡುಪಿಯ ಬ್ರಹ್ಮಾವರ ತಾಲೂಕಿನ ಕೆಂಜಾರು ಕಲ್ಲುಗುಡ್ಡೆಯ 40 ವರ್ಷದ ಈ ದಿನಕರ, ಕೊರಗ ಸಮುದಾಯದ ಹೆಮ್ಮೆ ಮಾತ್ರ ಅಲ್ಲ, ಸಾಧನೆಯ ಹಸಿವುಳ್ಳ ಎಲ್ಲರ ಹೆಮ್ಮೆ. ನಿಜವಾಗಿ,

ಸಾಧನೆಗೆ ಅಡ್ಡಿಯಾಗಿರುವ ಸಂಗತಿಗಳನ್ನು ಪಟ್ಟಿ ಮಾಡುತ್ತಾ ನಕಾರಾತ್ಮಕವಾಗಿ ಯೋಚಿಸುವುದು ಒಂದು ರೀತಿಯಾದರೆ, ಸರ್ವ ಅಡ್ಡಿಗಳನ್ನೂ ಸವಾಲಾಗಿ ಸ್ವೀಕರಿಸಿ ಸಕಾರಾತ್ಮಕವಾಗಿ ಯೋಚಿಸುವುದು ಇನ್ನೊಂದು ರೀತಿ. ದಿನಕರ ಈ ಸಕಾರಾತ್ಮಕತೆಯ ಪ್ರತೀಕ. ಅವರಿಗೆ ಡಾಕ್ಟರೇಟ್ ಪದವಿ ಪಡೆಯುವುದು ಬಿಡಿ, ಶಾಲೆಗೇ ಹೋಗದಿರುವುದಕ್ಕೆ ಬೇಕಾದ ಬಲವಾದ ಕಾರಣ ಇತ್ತು. ದೈಹಿಕವಾಗಿ ಸಮರ್ಥವಾಗಿ ಇರುವವರೇ ಶಾಲೆಗೆ ಹೋಗದಿರುವ ಈ ಕಾಲದಲ್ಲಿ ತಾನು ಹೋಗದಿದ್ದರೇನು ಎಂದು ಅಂದುಕೊಂಡು ಸುಮ್ಮ ನಿರಬಹುದಿತ್ತು. ಅಲ್ಲದೇ, ಕೊರಗ ಸಮುದಾಯದಲ್ಲಿ ಶೈಕ್ಷಣಿಕ ಮಟ್ಟವೂ ಅತ್ಯಂತ ಕಡಿಮೆ. ಇದರ ಜೊತೆಗೇ ನಾಲ್ಕನೇ ತರಗತಿಯಲ್ಲಿ ಡ್ರಾಪ್‌ಔಟ್ ಆದ ಬಳಿಕವಂತೂ ಮರಳಿ ಹೋಗದಿರುವುದಕ್ಕೆ ಬೇರೆ ಕಾರಣಗಳೇ ಬೇಕಿರಲಿಲ್ಲ. ಅವರ ಸಮುದಾಯದಲ್ಲಿ ಶಿಕ್ಷಿತರು, ಉನ್ನತ ಹುದ್ದೆಯಲ್ಲಿರುವವರ ಸಂಖ್ಯೆಯೂ ತೀರಾ ತೀರಾ ಕಡಿಮೆ. ಇನ್ನು 10ನೇ ತರಗತಿಯಲ್ಲಿ ಡ್ರಾಪ್‌ಔಟ್ ಆದ ಬಳಿಕವಂತೂ ಶಾಲೆ ಕಡೆಗೆ ತಿರುಗಿ ನೋಡಬೇಕಾದ ಅಗತ್ಯವೇ ಇರಲಿಲ್ಲ. ಆದರೆ, ನಕಾರಾತ್ಮಕ ಸಂಗತಿಗಳು ಮತ್ತು ಸವಾಲುಗಳನ್ನೆಲ್ಲ ಬದಿಗಿಟ್ಟು ಇವರು ಎಂಬಿಎ ಪದವಿ ಮುಗಿಸಿದರಲ್ಲದೇ ಬಳಿಕ ಎಂ.ಕಾಮ್. ಕೂಡಾ ಮಾಡಿದರು.
ಒಂದುರೀತಿಯಲ್ಲಿ, ಛಲ ಮತ್ತು ಸಾಧನೆಯ ಹಸಿವಿದ್ದರೆ ಯಾವ ವ್ಯಕ್ತಿಗೂ ಸಾಧಕರಾಗಿ ಮಾರ್ಪಡಬಹುದು ಎಂಬುದನ್ನು ಇವು ಸಾರಿ ಹೇಳುತ್ತವೆ.

ಕೊರಗ ಸಮುದಾಯಕ್ಕೆ ಹೋಲಿಸಿದರೆ ಮುಸ್ಲಿಮ್ ಸಮುದಾಯಕ್ಕೆ ಅನುಕೂಲಕರವಾದ ಹಲವು ಸಂಗತಿಗಳಿವೆ. ಈ ಸಮುದಾಯದೊಳಗೆ ಅಸ್ಪೃಶ್ಯತೆಯ ಆಚರಣೆಯಿಲ್ಲ. ದುಶ್ಚಟಗಳಿಗೆ ಧಾರ್ಮಿಕ ನಿಷೇಧವಿದೆ. ಸ್ಥಿತಿವಂತರಿದ್ದಾರೆ. ತಮ್ಮದೇ ಆದ ಶೈಕ್ಷಣಿಕ ಸಂಸ್ಥೆಗಳನ್ನೂ ಈ ಸಮುದಾಯ ಹೊಂದಿದೆ. ಸಮುದಾಯವನ್ನು ಒಂದೇಕಡೆ ಸೇರಿಸುವ ಮಸೀದಿ-ಮದ್ರಸಾಗಳಂಥ ಪ್ರಬಲ ಕೊಂಡಿ ಕೇಂದ್ರಗಳಿವೆ. ಉನ್ನತ ಹುದ್ದೆಯಲ್ಲಿದವರೂ ಇದ್ದಾರೆ. ಈ ದೇಶದ ಜಿಡಿಪಿಗೆ ಕೊಡುಗೆ ನೀಡುತ್ತಿರುವ ಅನಿವಾಸಿಗಳೂ ಇದ್ದಾರೆ‌. ಹುಡುಕಿದರೆ ಇಂಥ ಪಾಸಿಟಿವ್ ಸಂಗತಿಗಳು ರಾಶಿರಾಶಿ ಸಿಗಬಹುದು. ಹಾಗಿದ್ದೂ ಮುಸ್ಲಿಮ್ ಸಮುದಾಯ ಶೈಕ್ಷಣಿಕವಾಗಿ ಪ್ರಬಲವಾಗಿದೆಯೇ? ಏರಬೇಕಾದ ಎತ್ತರಕ್ಕೆ ಏರಿದೆಯೇ? ಸಾಮಾಜಿಕವಾಗಿ ಪ್ರಭಾವಶಾಲಿಯಾಗಿದೆಯೇ? ಆರ್ಥಿಕವಾಗಿ ಎಷ್ಟು ಬಲಶಾಲಿಯಾಗಿದೆ?

ಒಂದು ಸಮುದಾಯ ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಲಶಾಲಿಯಾಗುವುದನ್ನು ಆ ಸಮುದಾಯದ ಶೈಕ್ಷಣಿಕ ಮಟ್ಟ ನಿರ್ಧರಿಸುತ್ತದೆ. ಶೈಕ್ಷಣಿಕವಾಗಿ ತೀರಾ ಕಳಪೆ ಸಾಧನೆಗೈಯುವ ಸಮುದಾಯವೊಂದು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವುದು ಅಸಾಧ್ಯ. ಮುಸ್ಲಿಮ್ ಸಮುದಾಯದ ಮಟ್ಟಿಗೆ ಕಲಿಕೆಗೆ ಅಂಥ ಅಡ್ಡಿಗಳೇನಿಲ್ಲ. ಆರ್ಥಿಕ ಚೈತನ್ಯ ವಿಲ್ಲದಿದ್ದರೂ ಕಲಿಕೆಯ ದಾಹವಿದ್ದರೆ ನೆರವಾಗುವ ಕೈಗಳೂ ಸಮುದಾಯದಲ್ಲಿ ಸಾಕಷ್ಟಿದೆ. ಆದರೂ, ಮುಸ್ಲಿಮ್ ಸಮುದಾಯದ ಶೈಕ್ಷಣಿಕ ಮಟ್ಟ ಸಮಾಧಾನಕರವಾಗಿಲ್ಲ. ಈ ಸಮುದಾಯದಿಂದ ವೈದ್ಯರು, ಇಂಜಿನಿಯರ್‌ಗಳು, ಪ್ರೊಫೆಸರ್, ವಿಜ್ಞಾನಿಗಳು, ಉಪನ್ಯಾಸಕರು, ಸರಕಾರಿ ಉದ್ಯೋಗಿಗಳು, ನಾಗರಿಕ ಸೇವಾ ಕ್ಷೇತ್ರದಲ್ಲಿ ದುಡಿಯುವವರು, ಐಎಎಸ್, ಐಪಿಎಸ್‌ಗಳು, ಡಾಕ್ಟರೇಟರ್‌ಗಳು ನಿರೀಕ್ಷಿತ ಮಟ್ಟದಲ್ಲಿ ತಯಾರಾಗಿಲ್ಲ. ಉನ್ನತ ವ್ಯಾಸಂಗ ಪಡೆದು ದೇಶಸೇವೆ ಮಾಡುವವರ ಸಂಖ್ಯೆ ತೃಪ್ತಿಕರವಾಗಿಲ್ಲ. ಪ್ರಾಥಮಿಕ-ಪ್ರೌಢ ಶಿಕ್ಷಣಗಳ ಆಚೆಗೆ ಉನ್ನತ ಹಂತದ ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆಯಿದೆ. ಸೇನೆ ಮತ್ತು ಪೊಲೀಸು ವಿಭಾಗದಲ್ಲಿ ಮುಸ್ಲಿಮರ ಸೇರ್ಪಡೆಯೂ ತೀರಾ ಕಡಿಮೆ ಸಂಖ್ಯೆಯಲ್ಲಿದೆ. ಯಾವುದೇ ಸಮುದಾಯ ಆ ದೇಶದ ಎಲ್ಲ ಕ್ಷೇತ್ರದಲ್ಲೂ ಸಕ್ರಿಯವಾಗಿರುವಾಗ ಮತ್ತು ಪ್ರಾತಿನಿಧ್ಯ ಪಡೆದಾಗ ಮಾತ್ರ ಆದೇಶ ಸುಖವಾಗಿರುತ್ತದೆ. ಈ ಪ್ರಾತಿನಿಧ್ಯ ಸಿಗಬೇಕಾದರೆ ಅದಕ್ಕೆ ಬೇಕಾದ ಅರ್ಹತೆಯನ್ನು ಆ ಸಮುದಾಯ ಸ್ವಯಂ ಪಡೆದುಕೊಳ್ಳಬೇಕು. ಕೌಶಲ್ಯಭರಿತ ಪೀಳಿಗೆಯನ್ನು ಅದು ತಯಾರಿಸಬೇಕು. ಉನ್ನತ ಚಿಂತನೆ ಮತ್ತು ಸಕಾರಾತ್ಮಕ ವಿಚಾರಗಳುಳ್ಳ ಪೀಳಿಗೆಯ ನಿರ್ಮಾಣವಾಗಬೇಕು. ಈ ಪ್ರಕ್ರಿಯೆ ನಿರಂತರವಾದಾಗ ತನ್ನಿಂತಾನೇ ವ್ಯವಸ್ಥೆಯಲ್ಲಿ ಬದಲಾವಣೆಗಳಾಗುತ್ತಲೇ ಹೋಗುತ್ತದೆ. ಪ್ರತಿಭೆಗೆ ಯಾವತ್ತೂ ಮೋಸವಾಗುವುದಿಲ್ಲ. ಶಿಕ್ಷಣ ಯಾರಿಗೂ ಕೈ ಕೊಡುವುದಿಲ್ಲ. ಶಿಕ್ಷಿತ ಸಮುದಾಯವೊಂದು ಎಲ್ಲಿಯವರೆಗೆ ಮೌಲ್ಯಗಳಿಗೆ ಬದ್ಧವಾಗಿತ್ತೋ ಅಲ್ಲಿಯ ವರೆಗೆ ಸಮಾಜದ ಅತಿ ಗೌರವಾನ್ವಿತ ಸಮುದಾಯವಾಗಿ ಅದು ಗುರುತಿಸಿಕೊಂಡಿದೆ ಎಂಬುದಕ್ಕೆ ಇತಿಹಾಸದಲ್ಲಿ ಸಾಕ್ಷ್ಯವಿದೆ. ಅಂದಹಾಗೆ,

ಮುಸ್ಲಿಮ್ ಸಮುದಾಯಕ್ಕೆ ಇರುವ ಅನುಕೂಲತೆಗಳನ್ನು ಪರಿಗಣಿಸಿದರೆ ಅದು ಇವತ್ತು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಸಾಕಷ್ಟು ಉನ್ನತ ಮಟ್ಟದಲ್ಲಿ ಇರಬೇಕಿತ್ತು. ಆದರೆ ಯಾಕೆ ಇದು ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ರಾಜಕೀಯ ಅನನುಕೂಲತೆ ಮತ್ತು ಪ್ರಭುತ್ವದ ತಾರತಮ್ಯ ನೀತಿಯನ್ನು ಬೊಟ್ಟು ಮಾಡಲಾಗುತ್ತದೆ. ನಿಜವಾಗಿ, ಇದುವೇ ಪ್ರಮುಖ ಕಾರಣವಲ್ಲ. ಕಾರಣಗಳ ಪಟ್ಟಿಯಲ್ಲಿ ಇದಕ್ಕೆ ಕೊನೆಯ ಸ್ಥಾನವನ್ನಷ್ಟೇ ನೀಡಬಹುದು. ಅದರಾಚೆಗೆ ಸಾಮುದಾಯಿಕ ವೈಫಲ್ಯದ ಪಾತ್ರ ಬಹುಮುಖ್ಯವಾಗಿದೆ. ಪ್ರತಿ ಮಸೀದಿಗಳನ್ನು ಕೇಂದ್ರವಾಗಿಟ್ಟುಕೊಂಡು ಆಯಾ ಮಸೀದಿ ವ್ಯಾಪ್ತಿಯ ಯುವ ಪೀಳಿಗೆಯಲ್ಲಿ ಐಎಎಸ್, ಐಪಿಎಸ್, ವೈದ್ಯರು, ಯೋಧರು, ಪೊಲೀಸರು, ಇಂಜಿನಿಯರ್‌ಗಳು, ಪ್ರೊಫೆಸರ್‌ಗಳು ಇತ್ಯಾದಿ ಕನಸುಗಳನ್ನು ನಿರಂತರ ಬಿತ್ತತೊಡಗಿದರೆ ಒಂದು ದಿನ ಆ ಕನಸು ನನಸಾಗುವುದಕ್ಕೆ ಖಂಡಿತ ಸಾಧ್ಯವಿದೆ. ನಕಾರಾತ್ಮಕ ಸಂಗತಿಗಳನ್ನೇ ಚರ್ಚಿಸುತ್ತಾ ಕುಳಿತುಕೊಳ್ಳುವುದರಿಂದ ನಕಾರಾತ್ಮಕ ಫಲಿತಾಂಶಗಳೇ ಲಭ್ಯವಾಗುತ್ತಿರುತ್ತವೆ. ನಕಾರಾತ್ಮಕ ಚರ್ಚೆಗಳು ಮನೆಯೊಳಗೆ ನಿರಂತರ ನಡೆಯುತ್ತಿದ್ದರೆ ಆ ಮನೆಯ ಮಕ್ಕಳೂ ನಕಾರಾತ್ಮಕವಾಗಿಯೇ ಯೋಚಿಸಲು ಆರಂಭಿಸುತ್ತಾರೆ. ಅದು ಅಂತಿಮವಾಗಿ ಪ್ರತಿಭೆಯನ್ನೇ ಚಿವುಟಿ ಹಾಕುತ್ತದೆ. ಈ ಹಿನ್ನೆಲೆಯಲ್ಲಿ ದಿನಕರ ಕೆಂಜೂರು ಅವರ ಸಾಧನೆ ಸಮುದಾಯಕ್ಕೆ ಪ್ರೇರಣೆಯಾಗಲಿ. ಸಕಾರಾತ್ಮಕ ವಿಷಯಗಳು ಪ್ರತಿ ಮನೆಯಲ್ಲೂ ಚರ್ಚೆಗೊಳಗಾಗಲಿ.

ಮೀಸಲಾತಿ: ಸಾಮಾಜಿಕ ನ್ಯಾಯಕ್ಕೆ ಎಳ್ಳುನೀರು ಬಿಟ್ಟ ಬೊಮ್ಮಾಯಿ

 

27-3-2023

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಇತರೆಲ್ಲ ಸಮುದಾಯಗಳಿಗಿಂತ ಮುಂದಿರುವ ಬ್ರಾಹ್ಮಣ, ಜೈನ, ಆರ್ಯವೈಶ್ಯ, ನಗರ್ತರು ಮತ್ತು ಮೊದಲಿಯಾರ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆಂದೇ ನೀಡಲಾಗುತ್ತಿರುವ 10% ಮೀಸಲಾತಿ ಗುಂಪಿಗೆ ಆರ್ಥಿಕವಾಗಿಯೂ ಶೈಕ್ಷಣಿಕವಾಗಿಯೂ ಸಾಮಾಜಿಕವಾಗಿಯೂ ಹಿಂದುಳಿದಿರುವ ಮುಸ್ಲಿಮ್ ಸಮುದಾಯವನ್ನು ಸೇರಿಸುವುದು ಮತ್ತು ನೀವು ಆ ಮುಂದುವರಿದ ಸಮುದಾಯದ ಜೊತೆ ಸೆಣಸಿ ಮೀಸಲಾತಿ ದಕ್ಕಿಸಿಕೊಳ್ಳಿ ಎನ್ನುವುದು ಕ್ರೌರ್ಯವಲ್ಲದೇ ಇನ್ನೇನು? ಹಾಗಂತ,


ಈ 10% ಮೀಸಲಾತಿಯಲ್ಲಿ ಮುಸ್ಲಿಮರಿಗಿಷ್ಟು, ಬ್ರಾಹ್ಮಣರಿಗಿಷ್ಟು, ಜೈನರಿಗಿಷ್ಟು ಎಂಬ ವಿಭಜನೆಯೇ ಇಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆಂದು (ಇಡಬ್ಲ್ಯೂಎಸ್) ಈ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಮುಸ್ಲಿಮ್ ಸಮುದಾಯವನ್ನು ಹೊರತುಪಡಿಸಿ ಉಳಿದಂತೆ ಈ ಮೀಸಲಾತಿ ಗುಂಪಿನಲ್ಲಿ ಸೇರ್ಪಡೆಗೊಂಡಿರುವ ಸಮುದಾಯಗಳಿಗೆ ಉತ್ತಮ ಓದಿನ ಅವಕಾಶವಷ್ಟೇ ಅಲ್ಲ, ಅತೀ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳೂ ಆ ಸಮುದಾಯಗಳಲ್ಲೇ ಇದ್ದಾರೆ. ಇಂಥ ಸಮುದಾಯದ ಜೊತೆ ಸ್ಲಂನಲ್ಲಿ ಬದುಕುವ ಬಡ ಮುಸ್ಲಿಮ್ ಸಮುದಾಯದ ಮಕ್ಕಳು ಸ್ಪರ್ಧಿಸಿಯಾರೇ? ಸ್ಪರ್ಧಿಸಿ ಉದ್ಯೋಗಾವಕಾಶ ಮತ್ತು ಶೈಕ್ಷಣಿಕ ಮೀಸಲಾತಿಯನ್ನು ಪಡೆದಾರೇ?


1994ರಲ್ಲಿ ಪ್ರವರ್ಗ 2ಬಿಯನ್ನು ಜಾರಿಗೆ ತರುವ ಮೊದಲು ಹಲವು ವರದಿಗಳ ಪರಾಮರ್ಶೆ ನಡೆಸಲಾಗಿತ್ತು. ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿಯವರು ಈ ಕುರಿತಂತೆ ಸಾಕಷ್ಟು ಬೆವರು ಸುರಿಸಿದ್ದರು. ಮುಸ್ಲಿಮ್ ಪ್ರದೇಶಗಳಿಗೆ ಭೇಟಿ ನೀಡಿ ಸಮುದಾಯದ ಜೀವನ ಮಟ್ಟವನ್ನು ಅವಲೋಕಿಸಿದ್ದರು. ಶ್ರೀಮಂತರು ಮತ್ತು ಬಡವರ ನಡುವೆ ಇರುವ ಅಗಾಧ ಪ್ರಮಾಣದ ಆರ್ಥಿಕ-ಸಾಮಾಜಿಕ ಮತ್ತು ಶೈಕ್ಷಣಿಕ ಅಂತರವನ್ನು ದಾಖಲಿಸಿದ್ದರು. ಉದ್ಯೋಗ ರಂಗದಲ್ಲಿ ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯ ತಳಮಟ್ಟದಲ್ಲಿರುವುದನ್ನು ಕಂಡಿದ್ದರು. ಹಾಗೆಯೇ, ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಕೆ. ರೆಹ್ಮಾನ್ ಖಾನ್ ನೇತೃತ್ವದಲ್ಲಿ ವರದಿಯನ್ನು ತರಿಸಿಕೊಳ್ಳಲಾಗಿತ್ತು. ಆ ವರದಿಯಲ್ಲಿ ಮುಸ್ಲಿಮ್ ಸಮುದಾಯದ ದಯನೀಯ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ದಾಖಲಿಸಲಾಗಿತ್ತು. ಆ ಕಾರಣದಿಂದಲೇ ಮುಸ್ಲಿಮ್ ಸಮುದಾಯಕ್ಕೆ 6% ಮೀಸಲಾತಿಯನ್ನು ಘೋಷಿಸಲಾಗಿತ್ತು. ಆದರೆ,


ಯಾವುದೇ ಮೀಸಲಾತಿ ಪ್ರಮಾಣವು 50%ಕ್ಕಿಂತ ಹೆಚ್ಚಾಗಬಾರದು ಎಂಬ ಸುಪ್ರೀಮ್ ಕೋರ್ಟಿನ ತೀರ್ಪಿನಿಂದಾಗಿ 6% ಅನ್ನು 4% ಆಗಿ ಪರಿವರ್ತಿಸಲಾಗಿತ್ತು. ಇದೀಗ ಈ 2ಬಿ ಕೆಟಗರಿಯನ್ನೇ ರದ್ದುಪಡಿಸಲಾಗಿದೆ. ಮುಸ್ಲಿಮ್ ಸಮುದಾಯಕ್ಕೆ ನೀಡಲಾಗಿದ್ದ 4% ಮೀಸಲಾತಿಯನ್ನು ಒಕ್ಕಲಿಗರು ಮತ್ತು ವೀರಶೈವ ಲಿಂಗಾಯಿತ ಸಮುದಾಯಕ್ಕೆ ತಲಾ 2%ಗಳಂತೆ ಹಂಚಲಾಗಿದೆ. ಆ ಸಮುದಾಯವಾದರೋ ಮುಸ್ಲಿಮರಿಂದ ಕಿತ್ತು ಕೊಡಲಾದ ಈ ಮೀಸಲಾತಿಯನ್ನು ಪ್ರಶ್ನೆ ಮಾಡದೇ ಸ್ವೀಕರಿಸಿಕೊಂಡಿದೆ. ತಮ್ಮ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಎಂದು ಈ ಸಮುದಾಯಗಳು ಒತ್ತಾಯಿಸುವಾಗ, ಎಲ್ಲೂ ಕೂಡ ಮುಸ್ಲಿಮ್ ಸಮುದಾಯದಿಂದ ಕಿತ್ತು ಕೊಡಿ ಎಂದು ಆಗ್ರಹಿಸಿಯೇ ಇರಲಿಲ್ಲ. ಆದರೆ, ಸರ್ಕಾರ ಈ ರೀತಿಯ ಆಘಾತಕಾರಿ ಮೀಸಲಾತಿ ಹಂಚುವಿಕೆಯ ಮೂಲಕ ಮುಸ್ಲಿಮ್ ಸಮುದಾಯದ ಅಸಹನೆಗೆ ಒಕ್ಕಲಿಗ ಮತ್ತು ವೀರಶೈವ ಲಿಂಗಾಯಿತ ಸಮುದಾಯ ಗುರಿಯಾಗುವಂತೆ ಮಾಡಿದೆ. ನಿಜವಾಗಿ,


ಹಿಂದುಳಿದ ವರ್ಗಗಳ ಅಭಿಪ್ರಾಯವನ್ನೇ ಕೇಳದೇ ಮತ್ತು ಸಾರ್ವಜನಿಕವಾಗಿ ಯಾವ ಸೂಚನೆಯನ್ನೂ ಕೊಡದೇ ಏಕಾಏಕಿ ಮುಸ್ಲಿಮರಿಂದ ಮೀಸಲಾತಿಯನ್ನು ಕಿತ್ತು ಇತರರಿಗೆ ನೀಡಿರುವುದು- ಯಾವ ರೀತಿಯಲ್ಲಿ ಲೆಕ್ಕ ಹಾಕಿದರೂ ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿಲ್ಲ. ಧಾರ್ಮಿಕ ಆಧಾರದಲ್ಲಿ ಮೀಸಲಾತಿ ಕೊಡಲಾಗದು ಎಂಬುದು ಸರ್ಕಾರದ ವಾದ. ಇಲ್ಲೂ ಸರ್ಕಾರ ಪೂರ್ಣವಾಗಿ ಎಡವಿದೆ. ಲಿಂಗಾಯಿತ ಮತ್ತು ಒಕ್ಕಲಿಗರನ್ನು ಸಮುದಾಯವಾಗಿ ನೋಡುವಂತೆಯೇ ಸರ್ಕಾರ ಮುಸ್ಲಿಮರನ್ನೂ ಸಮುದಾಯವಾಗಿಯೇ ನೋಡಬೇಕು. ಇಸ್ಲಾಮ್ ಎಂಬುದು ಧರ್ಮವೇ ಹೊರತು ಮುಸ್ಲಿಮ್ ಎಂಬುದು ಸಮುದಾಯ. ಇಸ್ಲಾಮ್‌ನಲ್ಲಿ ಪಿಂಜಾರ, ನದಾಫ್, ಭಾಗವಾನ್ ಎಂಬ ನೇರ ವಿಭಜನೆಗಳಿಲ್ಲ. ಆದರೆ ಒಂದು ಸಮುದಾಯವಾಗಿ ಮುಸ್ಲಿಮರಲ್ಲಿ ಪಂಗಡ, ಪಂಥಗಳಿವೆ. ಇವು ಜಾತಿಗಳಂತೆ ಅಲ್ಲವಾದರೂ ವೃತ್ತಿ ಮತ್ತು ಇನ್ನಿತರ ಸ್ಥಳೀಯ ಕಾರಣಕ್ಕಾಗಿ ಗುರುತಿನ ಬೇರೆ ಬೇರೆ ಐಡೆಂಟಿಟಿಗಳಿವೆ. ಆದ್ದರಿಂದ ಇಸ್ಲಾಮನ್ನು ಒಂದು ಧರ್ಮವಾಗಿ ಮತ್ತು ಮುಸ್ಲಿಮ್ ಅನ್ನು ಒಂದು ಸಮುದಾಯವಾಗಿ ಪರಿಗಣಿಸಬೇಕೇ ಹೊರತು ಧರ್ಮವಾಗಿ ಅಲ್ಲ. ಈ ವಿಷಯದಲ್ಲಿ ಆಂಧ್ರ ಮತ್ತು ತೆಲಂಗಾಣದ ಮೀಸಲಾತಿ ವಿಷಯದಲ್ಲಿ ಸುಪ್ರೀಮ್ ಕೋರ್ಟಿನ ತೀರ್ಪನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ಚುನಾವಣೆಯ ಸಂದರ್ಭದಲ್ಲಿ ಒಕ್ಕಲಿಕ ಮತ್ತು ವೀರಶೈವ ಲಿಂಗಾಯಿತ ಸಮುದಾಯವನ್ನು ಒಲಿಸಿಕೊಳ್ಳುವುದಕ್ಕಾಗಿ ಮುಸ್ಲಿಮರ ಮೇಲೆ ಪ್ರಹಾರ ನಡೆಸಿದೆ. ಅಂದಹಾಗೆ,


ಪ್ರವರ್ಗ 2ಬಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಮೀಸಲಾತಿಯಿಂದ ಸಮುದಾಯಕ್ಕೆ ಸಾಕಷ್ಟು ಲಾಭವಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಮುಸ್ಲಿಮರು ಈ ಮೀಸಲಾತಿಯ ಲಾಭ ಪಡೆದು ಉನ್ನತ ಹಂತಕ್ಕೂ ಹೋಗಿದ್ದಾರೆ. ಪೊಲೀಸ್, ಡಿವೈಎಸ್ಪಿ, ಶಿಕ್ಷಕರು ಇನ್ನಿತರ ಹಲವು ಉದ್ಯೋಗಗಳು ಈ ಮೀಸಲಾತಿಯಿಂದಾಗಿ ಮುಸ್ಲಿಮರಿಗೆ ಲಭ್ಯವಾಗಿದೆ. ಶೈಕ್ಷಣಿಕವಾಗಿಯೂ 2ಬಿಯಿಂದ ಮುಸ್ಲಿಮ್ ಸಮುದಾಯ ಲಾಭ ಪಡೆದಿದೆ. ಹಾಗಂತ, ದಲಿತರಿಗಿಂತಲೂ ಮುಸ್ಲಿಮ್ ಸಮುದಾಯದ ಸ್ಥಿತಿ ಹೀನಾಯ ಎಂದು ಸಾಚಾರ್ ಸಮಿತಿ ನೀಡಿರುವ ವರದಿಯನ್ನು ಪರಿಗಣಿಸಿದರೆ ಮುಸ್ಲಿಮ್ ಸಮುದಾಯ 2ಬಿಯಲ್ಲಿ ಇರುವುದಕ್ಕೆ ಸೂಕ್ತವೇ ಹೊರತು ಇಡಬ್ಲ್ಯುಎಸ್‌ನಲ್ಲಲ್ಲ ಎಂಬುದು ಸ್ಪಷ್ಟ. ಅಷ್ಟಕ್ಕೂ,


ಮುಸ್ಲಿಮ್ ಎಂಬುದು ಸಮುದಾಯ ಸೂಚಕ ಮತ್ತು ಇಸ್ಲಾಮ್ ಎಂಬುದು ಧರ್ಮ ಸೂಚಕ ಎಂಬ ಅರಿವು ಇಲ್ಲದೇ ಬೊಮ್ಮಾಯಿ ಸರ್ಕಾರ ಹೀಗೆ ನಡಕೊಂಡಿದೆ ಎಂದು ಅಂದುಕೊಳ್ಳುವುದು ಬೋಳೆತನವಾದೀತು. ಕಳೆದ ಮೂರೂವರೆ ವರ್ಷಗಳಲ್ಲಿ ಬಿಜೆಪಿ ಸರ್ಕಾರ ನಡಕೊಂಡಿರುವುದು ಅದರಲ್ಲೂ ಬೊಮ್ಮಾಯಿ ಸರ್ಕಾರ ನಡಕೊಂಡಿರುವುದೇ ಮುಸ್ಲಿಮ್ ವಿರೋಧಿಯಾಗಿ. ಮುಸ್ಲಿಮರ ಓಟು ಬೇಡ ಅನ್ನುವವರು ಬಿಜೆಪಿಯಲ್ಲೇ ಇದ್ದಾರೆ ಮತ್ತು ಬಹಿರಂಗವಾಗಿ ಹಾಗೆ ಹೇಳಿದ ಬಳಿಕವೂ ಅವರು ಯಾವ ಶಿಸ್ತು ಕ್ರಮಕ್ಕೂ ಒಳಗಾಗುವುದಿಲ್ಲ. ಮುಸ್ಲಿಮರನ್ನು ನಿಂದಿಸುವ, ಅವರ ಆರಾಧನಾ ಕ್ರಮಗಳನ್ನು ಲೇವಡಿ ಮಾಡುವ, ಅವರ ಧಾರ್ಮಿಕ ಉಡುಪನ್ನು ನಿಷೇಧಿಸುವ, ಜಾತ್ರೆಯಲ್ಲಿ ಮುಸ್ಲಿಮ್ ಸಮುದಾಯದ ವ್ಯಕ್ತಿಗಳಿಗೆ ಬಹಿಷ್ಕಾರ ಹೇರುವ, ಹಲಾಲ್ ಆಹಾರ ಕ್ರಮಕ್ಕೆ ಪ್ರತಿಯಾಗಿ ಜಟ್ಕಾ ಕಟ್ ಎಂಬ ಅಭಿಯಾನ ಆರಂಭಿಸುವ, ಮುಸ್ಲಿಮರ ಮೇಲಿನ ಹತ್ಯೆಯನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂದು ಸಮರ್ಥಿಸುವವರು ಇದೇ ಸರ್ಕಾರದ ಭಾಗವಾಗಿಯೇ ಇದ್ದಾರೆ. ದ.ಕ. ಜಿಲ್ಲೆಯಲ್ಲಿ ನಡೆದ 3 ಹತ್ಯೆಗಳ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ನಡಕೊಂಡ ರೀತಿಯೇ ಅವರ ಮನಸ್ಥಿತಿ ಏನೆಂಬುದನ್ನು ಸ್ಪಷ್ಟಪಡಿಸುತ್ತದೆ. ಪ್ರವೀಣ್ ನೆಟ್ಟಾರು ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಗಳು 25 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಲ್ಲದೇ, ನೆಟ್ಟಾರು ಪತ್ನಿಗೆ ಉದ್ಯೋಗವನ್ನೂ ದೊರಕಿಸಿಕೊಟ್ಟರು. ಅಲ್ಲದೇ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ಕೊಟ್ಟು ಸಾಂತ್ವನವನ್ನೂ ಹೇಳಿದರು. ಆದರೆ,


ಇದೇ ನೆಟ್ಟಾರು ಮನೆಯ ಅನತಿ ದೂರದಲ್ಲಿರುವ ಮಸೂದ್ ಮನೆಗೆ ಅವರು ಭೇಟಿ ಕೊಡಲಿಲ್ಲ. ಹತ್ಯೆಗೀಡಾದ ಆ 19 ವರ್ಷದ ತರುಣನ ತಾಯಿಯನ್ನು ಸಾಂತ್ವನಿಸಬೇಕೆಂದೋ ಪರಿಹಾರ ನೀಡಬೇಕೆಂದೋ ಅವರಿಗೆ ಅನಿಸಲೇ ಇಲ್ಲ. ಆ ಬಳಿಕ ನಡೆದ ಫಾಝಿಲ್ ಎಂಬ ಯುವಕನ ಹತ್ಯೆಗೂ ಅವರು ಮರುಗಲಿಲ್ಲ. ಪರಿಹಾರ ನೀಡಲಿಲ್ಲ. ಆ ಮನೆಗೆ ಭೇಟಿಯನ್ನೂ ಕೊಡಲಿಲ್ಲ. ಅಲ್ಲದೇ, ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ ಹೇರುವ ಪ್ರಕ್ರಿಯೆ ರಾಜ್ಯಾದ್ಯಂತ ನಡೆದಾಗಲೂ ಅವರು ಮಾತಾಡಲಿಲ್ಲ. ಮುಸ್ಲಿಮ್ ನಿಂದನೆಯ ಮಾತುಗಳನ್ನು ಅವರದೇ ಸಹೋದ್ಯೋಗಿಗಳು ಮತ್ತು ಜನಪ್ರತಿನಿಧಿಗಳು ಪದೇಪದೇ ನೀಡುತ್ತಿದ್ದರೂ ಅವರು ವಿರೋಧಿಸಲಿಲ್ಲ. ಟಿಪ್ಪುವನ್ನು ಮರೆ ಮಾಡಿಕೊಂಡು ಅವರ ಸಂಪುಟದ ಸಚಿವರು ಮುಸ್ಲಿಮರನ್ನು ತಿವಿಯುವ ಮಾತುಗಳನ್ನಾಡುತ್ತಿದ್ದರೂ ಅವರ ಮೌನ ಮುರಿಯಲಿಲ್ಲ. ಬೊಮ್ಮಾಯಿ ಉದ್ದೇಶಪೂರ್ವಕವಾಗಿಯೇ ಹೀಗೆ ವರ್ತಿಸಿದ್ದಾರೆ ಎಂಬುದಕ್ಕೆ ಈ ಮೀಸಲಾತಿ ಪ್ರಕರಣ ಮತ್ತಷ್ಟು ಸಾಕ್ಷ್ಯವನ್ನು ಒದಗಿಸಿದೆ. ಅವರು ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರ ಮುಖ್ಯಮಂತ್ರಿಯಾಗಿದ್ದಾರೆ. ಅವರ ಒಳಿತನ್ನಷ್ಟೇ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಒಂದುವೇಳೆ,


ಇಡಬ್ಲ್ಯುಎಸ್ ಗುಂಪಿನಲ್ಲಿರುವ ಸಮುದಾಯಗಳು ಮುಸ್ಲಿಮರ ಸೇರ್ಪಡೆಯನ್ನು ವಿರೋಧಿಸಿದರೆ ಮುಸ್ಲಿಮರನ್ನು ಅಲ್ಲಿಂದಲೂ ಕಿತ್ತು ಹಾಕುವುದಕ್ಕೆ ಈ ಸರ್ಕಾರ ಹಿಂದೇಟು ಹಾಕಲಾರದು ಎಂದೇ ಹೇಳಬೇಕಾಗುತ್ತದೆ. ಸರ್ಕಾರದ ಈ ಮೀಸಲಾತಿ ನೀತಿ ಅತ್ಯಂತ ಅಮಾನವೀಯ, ಅತಾರ್ಕಿಕ, ಏಕಮುಖ ಮತ್ತು ಪಕ್ಷಪಾತಿತನದ್ದು ಅನ್ನುವುದರಲ್ಲಿ ಅನುಮಾನವಿಲ್ಲ.

ಗೋವು: ಮುಖ್ಯಮಂತ್ರಿಯನ್ನು ನಗೆಪಾಟಲು ಮಾಡುತ್ತಿರುವ ದುಷ್ಕರ್ಮಿಗಳು

 

3-4-2023

ಮಂಡ್ಯದ ಸಾತನೂರು ಬಳಿ ವಾಹನ ಚಾಲಕ ಇದ್ರೀಸ್ ಪಾಶಾ ಎಂಬವರ ಹತ್ಯೆಯಾಗಿದೆ. ವಾಹನದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಪುನೀತ್ ಕೆರೆಹಳ್ಳಿ ಎಂಬವನ ನೇತೃತ್ವದ ತಂಡ ಇದ್ರೀಸ್ ಪಾಶಾರನ್ನು ಹತ್ಯೆ ನಡೆಸಿದೆ ಎಂಬ ಆರೋಪ ಇದೆ. ಇದ್ರೀಸ್ ಪಾಶಾ ಜೊತೆ ಇದ್ದ ಇನ್ನಿಬ್ಬರು ಈ ದರೋಡೆ ತಂಡದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಇದ್ರೀಸ್ ಪಾಶಾರಿಗೆ ವಿದ್ಯುತ್ ಶಾಕ್ ಕೊಟ್ಟು, ಥಳಿಸಿ ಹತ್ಯೆ ನಡೆಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರತಿಭಟನೆಯನ್ನೂ ನಡೆಸಿದ್ದಾರೆ. ಇದೇವೇಳೆ, ಇದ್ರೀಸ್ ಪಾಶಾ ಅವರಿದ್ದ ವಾಹನವನ್ನು ಜಾನುವಾರು ಸಮೇತ ಪೊಲೀಸ್ ಠಾಣೆಯ ಮುಂಭಾಗಕ್ಕೆ ತರುತ್ತಿರುವ ವೀಡಿಯೋವನ್ನು ಸ್ವತಃ ಪುನೀತ್ ಕೆರೆಹಳ್ಳಿಯೇ ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾನೆ. ವಾಹನದಲ್ಲಿದ್ದವರು ತಪ್ಪಿಸಿಕೊಂಡಿದ್ದಾರೆ ಮತ್ತು ನಮ್ಮ ತಂಡದ ಮಂದಿ ಬೆನ್ನಟ್ಟಿದ್ದಾರೆ ಎಂದೂ ಆ ವೀಡಿಯೋದಲ್ಲಿ ಆತ ಹೇಳಿದ್ದಾನೆ. ಅಲ್ಲದೇ, ಕಾನೂನನ್ನು ಕೈಗೆತ್ತಿಕೊಂಡು ಜಾನುವಾರು ಸಾಗಾಟಗಾರರಿಗೆ ಹಿಂಸೆ ನೀಡಿದ, ಬ್ಯಾಟು-ವಿಕೆಟ್ ಹಿಡಿದುಕೊಂಡು ರಸ್ತೆಯಲ್ಲಿ ಗುಂಪಾಗಿ ಗಸ್ತು ತಿರುಗುತ್ತಿರುವ ವೀಡಿಯೋಗಳೂ ಆತನ ಫೇಸ್ ಬುಕ್ ಪುಟದಲ್ಲಿ ಧಾರಾಳ ಇವೆ. ಇದ್ರೀಸ್ ಪಾಶಾ ಹತ್ಯೆಯ ಬಳಿಕ ಅದನ್ನು ಡಿಲೀಟ್ ಮಾಡಿರು ವುದೇ ಆತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯವಾಗಿದೆ. ಅಂದಹಾಗೆ,

ಈ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಅದೇವೇಳೆ, ಕಸಾಯಿಖಾನೆಗಳನ್ನು ಏಲಂ ಮಾಡಿ ಇದೇ ಸರಕಾರ ಹಂಚುತ್ತಲೂ ಇದೆ. ಈ ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ಸಾಗಿಸಲು ಬೇಕಾದ ವ್ಯವಸ್ಥೆಯನ್ನೂ ಇದೇ ಸರಕಾರ ಮಾಡಿದೆ. ಅದಕ್ಕಾಗಿ ಪರವಾನಿಗೆಯನ್ನೂ ನೀಡುತ್ತಿದೆ. ಅಲ್ಲದೇ, ರಾಜ್ಯದಿಂದ ಗೋವಾ ಸಹಿತ ಇತರ ರಾಜ್ಯಗಳಿಗೆ ಮಾಂಸ ರಫ್ತನ್ನೂ ಮಾಡುತ್ತಿದೆ. ಜೊತೆಗೇ ರಾಜ್ಯದಲ್ಲಿ ಗೋಮಾಂಸ ಸೇವನೆಗೂ ನಿಷೇಧವನ್ನು ವಿಧಿಸಲಾಗಿಲ್ಲ. ಈ ಯಾವ ಪ್ರಕ್ರಿಯೆಯಲ್ಲೂ ಮುಸ್ಲಿಮರ ಒಂದು ಶೇಕಡಾ ಪಾತ್ರ ಕೂಡಾ ಇಲ್ಲ. ಮುಖ್ಯಮಂತ್ರಿ ಬೊಮ್ಮಾಯಿಯಿಂದ ಹಿಡಿದು ಪಶುಸಂಗೋಪನಾ ಸಚಿವ ಪ್ರಭು ಚವ್ವಾಣ್ ವರೆಗೆ ಈ ಸರ್ಕಾರದ ಸಚಿವ ಸಂಪುಟದಲ್ಲಿ ಯಾರೊಬ್ಬರೂ ಮುಸ್ಲಿಮರಿಲ್ಲ. ಗೋಹತ್ಯಾ ನಿಷೇಧ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸುವಲ್ಲಿಂದ ಹಿಡಿದು ಕಸಾಯಿಖಾನೆಗಳಿಗೆ ಪರವಾನಿಗೆ ನೀಡುವಲ್ಲಿವರೆಗೆ ಮತ್ತು ಜಾನುವಾರು ಸಾಗಾಟಕ್ಕೆ ಲೈಸನ್ಸ್ ನೀಡುವಲ್ಲಿಂದ ಹಿಡಿದು ಮಾಂಸ ರಫ್ತು ಮತ್ತು ರಾಜ್ಯದಲ್ಲಿ ಗೋಮಾಂಸ ಲಭ್ಯಗೊಳಿಸುವಲ್ಲಿ ವರೆಗೆ ಎಲ್ಲ ಪ್ರಕ್ರಿಯೆಯೂ ಈ ಬೊಮ್ಮಾಯಿ ಸರ್ಕಾರದ ಪೂರ್ತಿ ಕಣ್ಗಾವಲಲ್ಲಿ ನಡೆದಿದೆ. ಹೀಗಿರುವಾಗ, ಗೋರಕ್ಷಕರು ನಿಜಕ್ಕೂ ಪ್ರಶ್ನಿಸಬೇಕಾದದ್ದು ಯಾರನ್ನು? ಸರ್ಕಾರ ವಿತರಿಸಿದ ಪರವಾನಿಗೆಯನ್ನು ಪಡೆದುಕೊಂಡು ಜಾನುವಾರು ವ್ಯಾಪಾರ ಮಾಡುವ ಬಡ ಮುಸ್ಲಿಮರನ್ನೋ ಅಥವಾ ಬೊಮ್ಮಾಯಿ ಸರ್ಕಾರವನ್ನೋ?

ಕಳೆದ ಮೂರೂವರೆ ವರ್ಷಗಳಿಂದ ಮುಖ್ಯಮಂತ್ರಿ ಬೊಮ್ಮಾಯಿ ರಾಜ್ಯದ ವಿವಿಧ ಭಾಗಗಳಿಗೆ ಅನೇಕ ಬಾರಿ ಭೇಟಿ ನೀಡಿದ್ದಾರೆ. ಅಲ್ಲದೇ ತನ್ನದೇ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯರೂ ಇದ್ದಾರೆ. ಹಾಗೆಯೇ ಪ್ರಭು ಚವ್ವಾಣ್ ಕೂಡ ಎಲ್ಲೂ ಅಡಗಿಕೊಂಡಿಲ್ಲ. ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಆದರೆ, ಗೋರಕ್ಷಣೆಯ ಹೆಸರಲ್ಲಿ ಬಡಪಾಯಿ ಮುಸ್ಲಿಮರನ್ನು ಥಳಿಸಿ ಹತ್ಯೆ ನಡೆಸುವ ಗುಂಪು ಒಂದೇ ಒಂದು ಬಾರಿ ಮುಖ್ಯಮಂತ್ರಿ ಬೊಮ್ಮಾಯಿಯವರಲ್ಲಿ ಕಸಾಯಿಖಾನೆ ಮುಚ್ಚಿಸಿ ಎಂದು ಒತ್ತಾಯಿಸಿದ್ದಿದೆಯೇ? ಜಾನು ವಾರು ಸಾಗಾಟದ ವೇಳೆ ಅಕ್ರಮಗಳಾಗುತ್ತಿವೆ ಎಂಬ ದೂರನ್ನು ಮುಖ್ಯಮಂತ್ರಿಗಳಿಗೆ ಕೊಟ್ಟಿದ್ದಿದೆಯೇ? ಹೊರ ರಾಜ್ಯಗಳಿಗೆ ಮಾಂಸ ರಫ್ತು ಮಾಡಿ ಆದಾಯ ಗಳಿಸುವುದು ಪಾಪಕರ್ಮ ಎಂದು ಹೇಳಿದ್ದಿದೆಯೇ? ಗೋಹತ್ಯಾ ನಿಷೇಧ ಕಾನೂನು ಜಾರಿ ಮಾಡಿದ ಬಳಿಕವೂ ರಾಜ್ಯದಲ್ಲಿ ಗೋಮಾಂಸ ಲಭ್ಯಗೊಳಿಸಿರುವುದು ದ್ವಂದ್ವ ಎಂದು ನೆನಪಿಸಿದ್ದಿದೆಯೇ? ಮುಖ್ಯಮಂತ್ರಿಗಳನ್ನು ಬಿಡಿ, ಪ್ರಭು ಚವ್ವಾಣ್ರಲ್ಲಿ ಇಂಥದ್ದೊಂದು ಅರಿಕೆ ಮಾಡಿದ್ದಿದೆಯೇ? ಅವರು ಸಾಗುತ್ತಿರುವ ವಾಹನವನ್ನು ಅಡ್ಡಗಟ್ಟಿ ಅವರಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಿದೆಯೇ? ಗೋರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದೆವೆಂದು ಹೇಳುತ್ತಿರುವ ಯಾವ ಗುಂಪೂ ಇಂಥದ್ದೊಂದು ಮನವಿ ಸಲ್ಲಿಸಿದ್ದೇ ಇಲ್ಲ.


ನಿಜವಾಗಿ, ಈ ಗುಂಪಿಗೆ ಬೇಕಾಗಿರುವುದು ಗೋವುಗಳ ರಕ್ಷಣೆಯೋ ಅಕ್ರಮ ಜಾನುವಾರು ಸಾಗಾಟ ತಡೆಯೋ ಅಲ್ಲ. ಇದೊಂದು ದಂಧೆ. ಹಾಗೆಯೇ ಜನರ ಕಣ್ಣಲ್ಲಿ ಧರ್ಮರಕ್ಷಕರು ಮತ್ತು ಹೀರೋಗಳಾಗುವ ಕಡು ಕೆಟ್ಟ ವಾಂಛೆ. ಜಾನುವಾರು ಸಾಗಾಟದ ವಾಹನಗಳನ್ನು ತಡೆದು ಹಣ ವಸೂಲಿ ಮಾಡುವುದು ಮತ್ತು ಹಾಗೆ ಹಣ ನೀಡದಿದ್ದರೆ ಅಂಥವರನ್ನು ಥಳಿಸಿ ವೀಡಿಯೋ ಮಾಡಿ ಹಂಚಿಕೊಂಡು ಗೋರಕ್ಷಣೆಯ ಪೋಸು ಕೊಡುವುದು ಇವರ ಉದ್ದೇಶ. ಅಲ್ಲದೇ, ಪೊಲೀಸರು ಗೋರಕ್ಷಣೆಗಾಗಿ ಏನನ್ನೂ ಮಾಡುತ್ತಿಲ್ಲ ಎಂಬ ಸಂದೇಶವೂ ಇದರ ಜೊತೆಜೊತೆಗೇ ರವಾನೆಯಾಗುತ್ತದೆ ಮತ್ತು ತಮ್ಮ ಕಾನೂನುಬಾಹಿರ ಕೃತ್ಯಕ್ಕೆ ಜನರಿಂದ ಮೌನ ಸಮ್ಮತಿಯನ್ನು ಪಡಕೊಳ್ಳುವುದೂ ಸುಲಭವಾಗುತ್ತದೆ. ಇಂಥ ಆರೋಪಗಳು ಅನೇಕ ಬಂದಿವೆ. ವಾರಗಳ ಹಿಂದೆ ದ.ಕ.ಜಿಲ್ಲೆಯ ಮೂಡಬಿದಿರೆಯಲ್ಲಿ ಸಂಶುದ್ದೀನ್ ಎಂಬವರ ಮನೆಗೆ ದಾಳಿ ನಡೆಸಲಾಗಿತ್ತು. ಹೈನುಗಾರರಾದ ಅವರಲ್ಲಿ ಗೋವುಗಳಿದ್ದುವು. ಹಾಲನ್ನು ಡಿಪೋ ಮತ್ತು ಹತ್ತಿರದ ಮನೆಗಳಿಗೆ ಅವರು ಮಾರಾಟವನ್ನೂ ಮಾಡುತ್ತಿದ್ದರು. ಆದರೆ, ಅವರ ಮನೆಗೆ ದಾಳಿ ನಡೆಸಿದ ಗುಂಪು 2 ಲಕ್ಷ ರೂಪಾಯಿ ಬೇಡಿಕೆಯನ್ನಿಟ್ಟಿತು. ಅವರು ನಿರಾಕರಿಸಿದಾಗ ಪೊಲೀಸರಿಗೆ ದೂರು ನೀಡಿ ಅವರ ಗೋವುಗಳನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲಾಯಿತು. ಈ ಎಲ್ಲವನ್ನೂ ಕ್ಯಾಮರಾದ ಮುಂದೆಯೇ ಸಂಶುದ್ದೀನ್ ಹೇಳಿಕೊಂಡಿದ್ದಾರೆ. ಅಂದಹಾಗೆ,

ಎಲ್ಲೆಲ್ಲ ಸಕ್ರಮ ವ್ಯಾಪಾರ-ವ್ಯವಹಾರ ನಡೆಯುತ್ತೋ ಅಲ್ಲೆಲ್ಲ ಅಕ್ರಮಕ್ಕೂ ಅವಕಾಶ ತೆರೆದೇ ಇರುತ್ತದೆ. ಅಕ್ರಮವಾಗಿ ಅಕ್ಕಿಯೂ ಸಾಗಾಟವಾಗುತ್ತದೆ. ತರಕಾರಿಯೂ ಆಗುತ್ತದೆ. ಮರಳೂ ಆಗುತ್ತದೆ. ಜಾನುವಾರು ಸಾಗಾಟವನ್ನೂ ಈ ಪಟ್ಟಿಯಿಂದ ಹೊರಗಿಟ್ಟು ನೋಡಬೇಕಿಲ್ಲ. ಆದರೆ, ಇವನ್ನು ತಡೆಯಬೇಕಾದವರು ಯಾರು? ನಾಗರಿಕರ ಕರ್ತವ್ಯವೇನು? ಸಕ್ರಮ ಗುತ್ತಿಗೆ ಹಂಚಿಕೆ ಮಾಡಬೇಕಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅಕ್ರಮ ದಾರಿ ಹಿಡಿದಿರುವುದನ್ನು ಪೊಲೀಸರ ಗಮನಕ್ಕೆ ತಂದದ್ದು ಓರ್ವ ನಾಗರಿಕ. ಆತನೇನೂ ಗುಂಪು ಕಟ್ಟಿಕೊಂಡು ಬ್ಯಾಟು-ವಿಕೆಟ್ ಎತ್ತಿಕೊಂಡು ಈ ಕೆಲಸ ಮಾಡಿದ್ದಲ್ಲ. ಯಾರಿಗೆ ಸುದ್ದಿ ಮುಟ್ಟಿಸಬೇಕೋ ಅವರಿಗೆ ಮುಟ್ಟಿಸಿದರು. ಆ ಮೂಲಕ ಬಹುದೊಡ್ಡ ಹಗರಣವೊಂದು ಬಯಲಿಗೆ ಬಂತು. ಜವಾಬ್ದಾರಿಯುತ ನಾಗರಿಕರು ಮಾಡಬೇಕಾಗಿರುವುದು ಇದನ್ನು. ಅಕ್ರಮವಾಗಿ ಜಾನುವಾರು ಸಾಗಾಟ ನಡೆಯುತ್ತಿದೆ ಎಂಬ ಅನುಮಾನ ಬಂದರೆ ಆ ಬಗ್ಗೆ ಪೊಲೀಸರಿಗೆ ತಿಳಿಸುವುದನ್ನು ಬಿಟ್ಟು ಸ್ವಯಂ ಕಾರ್ಯಾಚರಣೆಗೆ ಇಳಿಯುವುದು ಅರಾಜಕರೆಯ ಸಂಕೇತವೇ ಹೊರತು ಅದು ಗೋರಕ್ಷಣೆಯೂ ಅಲ್ಲ, ಧರ್ಮ ಪ್ರೇಮವೂ ಅಲ್ಲ. ಹೀಗೆ ಮಾಡಬಯಸುವವರು ಗೋರಕ್ಷಣೆಯ ಹೊರತಾದ ಇತರ ಉದ್ದೇಶಗಳನ್ನು ಹೊಂದಿರುತ್ತಾರೆ. ಒಂದೋ ಮಾಡಾಳ್ ವಿರೂಪಾಕ್ಷಪ್ಪರಂತೆ ಅಕ್ರಮವಾಗಿ ಹಣ ಮಾಡುವ ದುರುದ್ದೇಶ ಅವರಲ್ಲಿ ಇರುವಂತಿದೆ ಅಥವಾ ಸಾರ್ವಜನಿಕವಾಗಿ ಐಡೆಂಟಿಟಿಯ ಹಪಾಹಪಿ ಇರುವಂತಿದೆ. ಇವು ಏನೇ ಇದ್ದರೂ ಅಂತಿಮವಾಗಿ ಇಂಥವರು ಒಂದಿಷ್ಟು ಕೇಸುಗಳನ್ನು ಜಡಿಸಿಕೊಂಡು ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ. ಇವರ ಈ ದುಷ್ಕೃತ್ಯವನ್ನು ರಾಜಕೀಯ ಲಾಭವನ್ನಾಗಿ ಪರಿವರ್ತಿಸಿಕೊಳ್ಳುವ ಇನ್ನಾವುದೋ ಪುಡಾರಿ ಆರಾಮವಾಗಿ ಅದ್ದೂರಿ ಕಾರಲ್ಲಿ ಓಡಾಡುತ್ತಾ ಸುಖವಾಗಿರುತ್ತಾರೆ. ಅವರ ಮಕ್ಕಳಾಗಲಿ ಅಥವಾ ಇಂಥ ಕ್ರೌರ್ಯಗಳನ್ನು ಬೆಂಬಲಿಸುವವರ ಮಕ್ಕಳಾಗಲಿ ಯಾರೂ ಇಂಥ ತಂಡಗಳಲ್ಲಿ ಇರುವುದೇ ಇಲ್ಲ. ಎಲ್ಲೋ ದೂರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಓದುತ್ತಾ ಅವರು ಸುರಕ್ಷಿತವಾಗಿರುತ್ತಾರೆ ಮತ್ತು ಈ ಬಗ್ಗೆ ಪ್ರಶ್ನೆಗಳೇಳದಂತೆ ಇವರೆಲ್ಲ ಜಾಣತನದಿಂದ ತಪ್ಪಿಸಿಕೊಳ್ಳುತ್ತಲೂ ಇರುತ್ತಾರೆ.

ಇದ್ರಿಸ್ ಪಾಶಾ ಹತ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಇದು ಸರ್ಕಾರದ ಕಾನೂನು ಸುವ್ಯವಸ್ಥೆಗೆ ಸಾರಿದ ಸವಾಲು. ಬೀದಿಯಲ್ಲಿ ನಿಂತ ದುಷ್ಕರ್ಮಿಗಳ ಗುಂಪು ಈ ಸರಕಾರವನ್ನು ಅಸಮರ್ಥ ಎಂದು ರಾಜಾರೋಷವಾಗಿ ಸಾರಿದೆ. ಇದು ಸರಕಾರಕ್ಕೆ ಅವಮಾನ. ಮೃತ ಇದ್ರೀಸ್ ಕುಟುಂಬಕ್ಕೆ ಪರಿಹಾರವನ್ನು ನೀಡುವ ಮೂಲಕ ಮತ್ತು ದುಷ್ಕರ್ಮಿಗಳ ವಿರುದ್ಧ ಕಠಿಣ ಸೆಕ್ಷನ್‌ಗಳಡಿ ಕಾನೂನು ಕ್ರಮ ಜರುಗಿಸುವ ಮೂಲಕ ತಾನು ನ್ಯಾಯದ ಜೊತೆಗಿದ್ದೇನೆ ಎಂದು ರಾಜ್ಯ ಸರಕಾರ ಘೋಷಿಸಬೇಕು. ಬೊಮ್ಮಾಯಿಯವರಿಗೆ ಕಡೆಯ ಅವಕಾಶ ಇದು.

ಮುಚ್ಚಿದ ಲಕೋಟೆಯನ್ನು ಬಿಡಿಸಿ ಕೇಂದ್ರಕ್ಕೆ ಪಾಠ ಹೇಳಿದ ಸುಪ್ರೀಮ್

 

11-4-2023

ಮೀಡಿಯಾ ವನ್ ಚಾನೆಲ್ ಮೇಲಿನ ನಿಷೇಧವನ್ನು ತೆರವುಗೊಳಿಸುತ್ತಾ ಸುಪ್ರೀಮ್ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಮತ್ತು ಹಿಮಾ ಖುರೇಶಿ ಅವರಿದ್ದ ಪೀಠ ಉಲ್ಲೇಖಿಸಿರುವ ಅಂಶಗಳು ಕೇಂದ್ರ ಸರಕಾರಕ್ಕೆ ನಡುಬೀದಿಯಲ್ಲಿ ಬಾರಿಸಿದ  ತಪರಾಕಿಯಂತಿದೆ. ತಾನೇಕೆ ಮೀಡಿಯಾ ವನ್ ಚಾನೆಲನ್ನು 2022 ಜನವರಿ 31ರಂದು ನಿಷೇಧಿಸಿರುವೆ ಎಂಬ ಬಗ್ಗೆ ಮುಚ್ಚಿದ  ಲಕೋಟೆಯಲ್ಲಿ ಕೇಂದ್ರ ಸರ್ಕಾರ ಸುಪ್ರೀಮ್ ಕೋರ್ಟ್‌ಗೆ ಕಾರಣಗಳನ್ನು ತಿಳಿಸಿತ್ತು. ಸುಪ್ರೀಮ್ ಕೋರ್ಟ್ ಈ ಮುಚ್ಚಿದ ಲಕೋಟೆ  ನೀತಿಯನ್ನೇ ಪ್ರಶ್ನಿಸಿದೆ. ಈ ನೀತಿ ಸಹಜ ನ್ಯಾಯದ ಉಲ್ಲಂಘನೆ ಮತ್ತು ಮೀಡಿಯಾ ವನ್ ಸಂಸ್ಥೆಯನ್ನು ಕತ್ತಲಿಗೆ ದೂಡುವ ಶ್ರಮ  ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದೆ.

ತನ್ನ ಮೇಲಿನ ನಿಷೇಧವನ್ನು ಪ್ರಶ್ನಿಸಿ ಮೀಡಿಯಾ ವನ್ ಚಾನೆಲ್ ಮೊದಲು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ ಕೇಂದ್ರ  ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಕಾರಣಗಳನ್ನು ನೀಡಿ ಮೀಡಿಯಾ ವನ್ ಚಾನೆಲನ್ನು ಕತ್ತಲಲ್ಲಿಡುವ ಪ್ರಯತ್ನ ಮಾಡಿತ್ತು. ಕೇರಳ  ಹೈಕೋರ್ಟ್ ಕೇಂದ್ರದ ನಿಷೇಧವನ್ನು ಎತ್ತಿ ಹಿಡಿದ ಕಾರಣದಿಂದ ಮೀಡಿಯಾ ವನ್ ಸುಪ್ರೀಮ್ ಕೋರ್ಟಿನ ಬಾಗಿಲು ತಟ್ಟಿತು. ಕೇಂದ್ರ  ಸರ್ಕಾರ ಅಲ್ಲೂ ಕೂಡ ಮುಚ್ಚಿದ ಲಕೋಟೆ ನೀತಿಯನ್ನು ಮುಂದುವರಿಸಿತು ಮತ್ತು ಇದೊಂದು ರಾಷ್ಟ್ರೀಯ ಭದ್ರತೆಯ ವಿಷಯ  ಎಂಬಂತೆ ಪೀಠವನ್ನು ಪ್ರಭಾವಿಸಲು ಶ್ರಮಿಸಿತು. ಎನ್‌ಆರ್‌ಸಿ, ಸಿಎಎ ಮತ್ತು ನ್ಯಾಯಾಲಯದ ತೀರ್ಪುಗಳಿಗೆ ಸಂಬಂಧಿಸಿದ ವಿಮರ್ಶೆಗಳನ್ನೇ ತನ್ನ ನಿಷೇಧಕ್ಕೆ ಕೇಂದ್ರ ಕಾರಣವಾಗಿ ನೀಡಿತ್ತು. ಈ ಬಗ್ಗೆ ಚಾನೆಲ್ ಪ್ರಸಾರ ಮಾಡಿರುವ ಕಾರ್ಯಕ್ರಮಗಳನ್ನು ರಾಷ್ಟ್ರೀಯ  ಭದ್ರತೆಗೆ ಅಪಾಯಕಾರಿ ಎಂದು ಕೇಂದ್ರ ಗುಪ್ತಚರ ಸಂಸ್ಥೆ ಪಟ್ಟಿ ಮಾಡಿರುವುದನ್ನೇ ಕೇಂದ್ರ ತನ್ನ ಮುಚ್ಚಿದ ಲಕೋಟೆಯಲ್ಲಿ ಆಧಾರವಾಗಿ  ನೀಡಿತ್ತು. ಆದರೆ,

ಸುಪ್ರೀಮ್ ಕೋರ್ಟ್ ಈ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆಯಲ್ಲದೇ, ಈ ಕಾರ್ಯಕ್ರಮಗಳಲ್ಲಿ ಭದ್ರತೆಗೆ ಬೆದರಿಕೆಯೋ  ಭಯೋತ್ಪಾದನೆಗೆ ಪೂರಕವೋ ಆಗಿರುವ ಏನೇನೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿತು ಮತ್ತು ಸರ್ಕಾರದ ನೀತಿಯ ವಿರುದ್ಧ  ಮಾಧ್ಯಮಗಳು ವಿಮರ್ಶಾತ್ಮಕ ನಿಲುವನ್ನು ಹೊಂದುವುದು ವ್ಯವಸ್ಥೆಗೆ ಸಾರುವ ಬಂಡಾಯವಾಗುವುದಿಲ್ಲ ಎಂದೂ ಕಟುವಾಗಿಯೇ  ನುಡಿಯಿತು. ಅಲ್ಲದೇ, ಹೀಗೇನಾದರೂ ನಾವು ವಾದಿಸಿದರೆ ಆ ಬಳಿಕ ಮಾಧ್ಯಮಗಳು ಸರ್ಕಾರದ ಪರ ಮಾತ್ರ ಕೆಲಸ ಮಾಡಬೇಕು  ಎಂದು ಹೇಳಿದಂತಾಗುತ್ತದೆ ಎಂದೂ ಪಾಠ ಮಾಡಿತು. ಅಷ್ಟಕ್ಕೂ,

ಮೀಡಿಯಾ ವನ್ ಟಿ.ವಿ. ಚಾನೆಲ್ ಮೇಲೆ ಕೇಂದ್ರ ಸರಕಾರದ ಕಾಕದೃಷ್ಟಿ ಬೀಳಲು ಕಾರಣವೇನು ಎಂಬ ಪ್ರಶ್ನೆ ಸಹಜವಾದುದು. ಇದು  ಮಲಯಾಳಂ ಭಾಷೆಯ ಚಾನೆಲ್. ಈ ದೇಶದ ಪ್ರಮುಖ ಹಿಂದಿ ಮತ್ತು ಇಂಗ್ಲಿಷ್ ಚಾನೆಲ್‌ಗಳು ರಾಜಧಾನಿ ದೆಹಲಿಯಿಂದ  ಪ್ರಸಾರವಾಗುತ್ತಿರುವಾಗ ಮತ್ತು ಅಲ್ಲೇ ಮುಖ್ಯ ಕಚೇರಿಯನ್ನು ಹೊಂದಿರುವಾಗ, ಮೀಡಿಯಾ ವನ್ ಕೇಂದ್ರ ಕಚೇರಿಯಿರುವುದು  ಕೇರಳದಲ್ಲಿ. ಕೇರಳ ಬಹಳ ಚಿಕ್ಕ ರಾಜ್ಯ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಿರುವ ವೀಕ್ಷಕರಿಗೆ ಹೋಲಿಸಿದರೆ ಮಲಯಾಳಂ ಭಾಷೆಯ  ವೀಕ್ಷಕರು ಅವಕ್ಕೆ ಸ್ಪರ್ಧೆ ಕೊಡುವಷ್ಟೇನೂ ಇಲ್ಲ. ಹೀಗೆ ತೀರಾ ಸ್ಥಳೀಯವಾಗಿರುವ ಚಾನೆಲ್ ಒಂದರ ಮೇಲೆ ಕೇಂದ್ರ ಸರಕಾರ ಇಷ್ಟು  ಹಗೆತನದ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣವೇ ಅದರ ಕಂಟೆಂಟ್. ಮುಖ್ಯವಾಹಿನಿಯ ಚಾನೆಲ್‌ಗಳು ಕೇಂದ್ರ ಸರಕಾರದ  ತುತ್ತೂರಿಯಂತೆ ವರ್ತಿಸುತ್ತಿರುವಾಗ ಅದಕ್ಕೆ ತೀರಾ ಭಿನ್ನವಾಗಿ ಕೆಂಡದುಂಡೆಯಂಥ ಪ್ರಶ್ನೆಗಳೊಂದಿಗೆ ಕೇಂದ್ರ ಸರಕಾರವನ್ನು  ಕಟಕಟೆಯಲ್ಲಿ ನಿಲ್ಲಿಸುತ್ತಿದ್ದುದು ಇದೇ ಮೀಡಿಯಾ ವನ್. ಅದು ಪ್ರಭುತ್ವದೊಂದಿಗೆ ಕೇಳದ ಪ್ರಶ್ನೆಗಳಿಲ್ಲ. ಪ್ರಸಾರ ಮಾಡದ  ಕಾರ್ಯಕ್ರಮಗಳಿಲ್ಲ. ಅದರ ಡಿಬೇಟ್ ಅತ್ಯಂತ ಸಹಜವಾಗಿರುತ್ತಿತ್ತು. ಬಿಜೆಪಿ ಮತ್ತು ಸಂಘಪರಿವಾರದ ಅತಿಥಿಗಳು ವಿಷಯದ ಮೇಲೆ  ಚರ್ಚಿಸುವುದಕ್ಕಿಂತ ಆ್ಯಂಕರ್‌ಗಳ ಮೇಲೆಯೇ ಉರಿದು ಬೀಳುವುದು ಆಗಾಗ ನಡೆಯುತ್ತಿತ್ತು. ತೀಕ್ಷ್ಣ ದಾಖಲೆ ಸಹಿತ  ವಾದಗಳು ಮತ್ತು ಮುಖ ನೋಡದೇ ಮಾಡುವ ವಿಶ್ಲೇಷಣೆಗಳು ಪ್ರಭುತ್ವಕ್ಕೆ ಸವಾಲುಗಳಾಗಿ ಪರಿಣಮಿಸಿತ್ತು. ಈ ಬಗ್ಗೆ ಕೇರಳ ಬಿಜೆಪಿ  ಕೇಂದ್ರ ಸರಕಾರಕ್ಕೆ ಮಾಹಿತಿಗಳನ್ನು ಒದಗಿಸುತ್ತಿದ್ದಿರಬಹುದು. ಆ ಕಾರಣದಿಂದಲೇ,

ದೆಹಲಿ ಹಿಂಸಾಚಾರದ ಸಮಯದಲ್ಲಿ ಮಾಡಿದ ವರದಿಯನ್ನು ಎತ್ತಿಕೊಂಡು ಇದೇ ಚಾನೆಲನ್ನು 2020 ಮಾರ್ಚ್ ನಲ್ಲಿ 48 ಗಂಟೆಗಳ  ಕಾಲ ಕೇಂದ್ರ ಸರಕಾರ ನಿಷೇಧಿಸಿತ್ತು. ಇದಕ್ಕೆ ದೇಶದಾದ್ಯಂತ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ನಿಷೇಧಕ್ಕೆ ಕೇಂದ್ರ ಸರಕಾರ ಯಾವ  ಕಾರಣವನ್ನು ಕೊಟ್ಟಿತ್ತೋ ಅದು ಎಷ್ಟು ಬಾಲಿಶವಾಗಿತ್ತೆಂದರೆ, ಆ ವರದಿಯಲ್ಲಿ ದೇಶವಿರೋಧಿಯಂಥ ಮತ್ತು ಭದ್ರತೆಗೆ ಸವಾಲಾಗುವಂಥ  ಏನೊಂದು ಇರಲಿಲ್ಲ. ಸಿಎಎ ಬೆಂಬಲಿಗರ ವಿರುದ್ಧ ನಡೆದಿರುವ ದೌರ್ಜನ್ಯವನ್ನು ಚಾನೆಲ್ ಪದೇಪದೇ ತೋರಿಸಿದೆ, ಆರೆಸ್ಸೆಸನ್ನು  ಪ್ರಶ್ನಿಸಿದೆ ಮತ್ತು ದೆಹಲಿ ಪೊಲೀಸರ ನಿಷ್ಕ್ರೀಯತೆಯನ್ನು ಪ್ರಶ್ನೆ ಮಾಡಿದೆ ಎಂದು ನಿಷೇಧಕ್ಕೆ ಕೇಂದ್ರ ಕಾರಣವನ್ನಾಗಿ ಕೊಟ್ಟಿತ್ತು. ಅಲ್ಲದೇ,  ಮುಸ್ಲಿಮರೇ ಹೆಚ್ಚಿರುವ ಚಾಂದ್‌ಬಾಗ್‌ಗೆ ತನ್ನ ಕ್ಯಾಮರಾವನ್ನು ಮೀಡಿಯಾ ವನ್ ಕೇಂದ್ರೀಕರಿಸಿತ್ತು ಮತ್ತು ಆ ಪ್ರದೇಶದಲ್ಲಿ ಆಗಿರುವ  ಹಿಂಸೆ, ಅನ್ಯಾಯ ಮತ್ತು ನಾಶ-ನಷ್ಟಗಳನ್ನು ಆದ್ಯತೆಯಾಗಿ ಪ್ರಸಾರ ಮಾಡಿತ್ತು ಎಂಬು ದಾಗಿ ಈ 48 ಗಂಟೆಗಳ ಪ್ರಸಾರ ನಿಷೇಧಕ್ಕೆ  ಕಾರಣವನ್ನಾಗಿ ನೀಡಿತ್ತು. ಆದರೆ,

ಈ ನಿಷೇಧವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ಕೂಡಲೇ ಅವಧಿಗಿಂತ ಮೊದಲೇ ಕೇಂದ್ರ ಸರಕಾರ ನಿಷೇಧವನ್ನು ವಾಪಾಸು ಪಡೆದಿತ್ತು.  ಆ ಬಳಿಕ 2022 ಜನವರಿ 31ರಂದು ಕೇಂದ್ರ ಸರ್ಕಾರ ಚಾನೆಲ್‌ನ ಪರವಾನಿಗೆಯನ್ನು ನವೀಕರಣ ಮಾಡಲು ಒಪ್ಪಲಿಲ್ಲ. ದೇಶದ  ಭದ್ರತೆಗೆ ಅಪಾಯವಿದೆ ಎಂಬ ಕಾರಣವನ್ನು ಕೊಟ್ಟು ನವೀಕರಣಕ್ಕೆ ತಡೆ ಹೇರಿತ್ತು. ಆ ಮೂಲಕ ಚಾನೆಲ್‌ಗೆ ನಿಷೇಧ ಹೇರಲಾಯಿತು.  ಅಂದಹಾಗೆ,
ಇಲ್ಲಿ ಎರಡು ಸಂಗತಿಗಳಿವೆ. ನಿರ್ಭಿಡೆಯ ವರದಿಗಾರಿಕೆ ಮತ್ತು ರಾಜಿರಹಿತ ಪತ್ರಿಕೋದ್ಯಮಕ್ಕೆ ಪ್ರಭುತ್ವ ಎಷ್ಟು ಭಯಪಡುತ್ತದೆ ಎಂಬುದು  ಇದರಲ್ಲಿ ಒಂದಾದರೆ, ಸರ್ವಾಧಿಕಾರಿ ಮನಸ್ಥಿತಿಯ ಪ್ರಭುತ್ವ ಅಂಥ ಮಾಧ್ಯಮದ ಕತ್ತು ಹಿಸುಕಲು ಏನೆಲ್ಲ ತಂತ್ರಗಳನ್ನು ಹೆಣೆಯುತ್ತದೆ  ಎಂಬುದು ಇನ್ನೊಂದು. ರಾಷ್ಟ್ರೀಯ ಭದ್ರತೆ ಎಂಬುದು ಬೆದರು ಬೊಂಬೆ ಅಷ್ಟೇ. ನಿಜವಾದ ಉದ್ದೇಶ ತನ್ನ ವಿರುದ್ಧದ ಟೀಕೆಯನ್ನು  ತಡೆಯುವುದು. 48 ಗಂಟೆಗಳ ನಿಷೇಧದೊಂದಿಗೆ ಕೇಂದ್ರ ಸರಕಾರ ಮೀಡಿಯಾ ವನ್‌ಗೆ ಪ್ರಥಮ ಎಚ್ಚರಿಕೆಯನ್ನು ನೀಡಿತ್ತು. ಆದರೆ, ಆ  ಬಳಿಕವೂ ತನ್ನ ಪತ್ರಿಕೋದ್ಯಮದಲ್ಲಿ ರಾಜಿ ಮಾಡಲು ಮೀಡಿಯಾ ವನ್ ಒಪ್ಪದೇ ಹೋದಾಗ, ಪೂರ್ಣ ಪ್ರಮಾಣದ ನಿಷೇಧಕ್ಕೂ ಕೇಂದ್ರ  ಸರಕಾರ ಧೈರ್ಯ ತೋರಿತು. ರಾಷ್ಟ್ರೀಯ ಭದ್ರತೆ ಎಂಬ ಅಸ್ತ್ರದ ಮೂಲಕ ತನ್ನ ಕ್ರಮವನ್ನು ಸಮರ್ಥಿಸುವ ಹುಂಬ ಧೈರ್ಯವನ್ನೂ  ಮಾಡಿತು. ಮೊದಲ ಹಂತದಲ್ಲಿ ಈ ತಂತ್ರ ಯಶಸ್ವಿಯೂ ಆಯಿತು. ಕೇರಳ ಹೈಕೋರ್ಟ್ ಈ ನಿಷೇಧವನ್ನು ಎತ್ತಿ ಹಿಡಿಯಿತು. ಮುಚ್ಚಿದ  ಲಕೋಟೆಯಲ್ಲಿ ಕೇಂದ್ರ ಸರಕಾರ ಸಲ್ಲಿಸಿದ ಕಾರಣಗಳನ್ನು ಅದು ಒಪ್ಪಿಕೊಂಡಿತು. ನಿಜವಾಗಿ, ಪ್ರಭುತ್ವ ಹೇಗೆ ನ್ಯಾಯಾಲಯಗಳನ್ನೇ ಯಾಮಾರಿಸಿಬಿಡುತ್ತವೆ ಎಂಬುದಕ್ಕೆ ಕೇರಳ ಹೈಕೋರ್ಟಿಈ ತೀರ್ಪೇ ಒಂದು ಉದಾಹರಣೆ. ಗಟ್ಟಿಯಾದ ಯಾವ ಆಧಾರಗಳನ್ನು  ಕೊಡಲು ಕೇಂದ್ರ ವಿಫಲವಾಗಿದ್ದರೂ ಕೇರಳ ಹೈಕೋರ್ಟ್ ಅವನ್ನೇ ನಿಷೇಧಕ್ಕೆ ತಕ್ಕುದಾದ ಆಧಾರಗಳು ಎಂದು ಒಪ್ಪಿಕೊಂಡು  ನಿಷೇಧವನ್ನು ಎತ್ತಿ ಹಿಡಿದಿರುವುದು ಅಪಾಯದ ಸೂಚನೆಯೂ ಹೌದು. ಇದೇವೇಳೆ,

ಚಂದ್ರಚೂಡ್ ಮತ್ತು ಹಿಮಾ ಖುರೇಶಿ ಅವರಿದ್ದ ಪೀಠ ಈ ಪ್ರಕರಣದಲ್ಲಿ ತೀರ್ಪು ನೀಡುತ್ತಾ ಹೇಳಿರುವ ಸಂಗತಿಗಳೂ ಗಮನಾರ್ಹ.  ಅದು ಪ್ರಭುತ್ವಕ್ಕೆ ನೀಡಿದ ಚಾಟಿಯೇಟಿನಂತಿತ್ತು. ರಾಷ್ಟ್ರೀಯ ಭದ್ರತೆಯ ಮರೆಯಲ್ಲಿ ಪತ್ರಿಕಾ ಸ್ವಾತಂತ್ರ‍್ಯವನ್ನು ದಮನಿಸುವ ಯತ್ನಕ್ಕೆ ಅದು  ಅಸಂತೋಷವನ್ನು ವ್ಯಕ್ತಪಡಿಸಿತು. ಇದುವೇ ಭರವಸೆ. ಸುಪ್ರೀಮ್ ಕೋರ್ಟ್‌ನ ತೀರ್ಪುಗಳ ಬಗ್ಗೆ ಸಾರ್ವಜನಿಕ ವಿಶ್ವಾಸ  ದುರ್ಬಲವಾಗುತ್ತಿರುವ ಹೊತ್ತಿನಲ್ಲೇ ಪ್ರಕಟವಾಗಿರುವ ಈ ತೀರ್ಪು ಪತ್ರಿಕಾ ಸ್ವಾತಂತ್ರ‍್ಯ ಮತ್ತು ನ್ಯಾಯಾ ಲಯಗಳ ಮೇಲಿನ ನಂಬಿಕೆಯ  ದೃಷ್ಟಿಯಿಂದ ಬಹಳ ಮಹತ್ವದ್ದು. ಸುಪ್ರೀಮ್‌ಗೆ ಧನ್ಯವಾದಗಳು.

ಸನ್ಮಾರ್ಗ: ರಾಜಿ ಮಾಡಿಕೊಳ್ಳದ 45 ವರ್ಷಗಳು

17-4-2023

1978 ಎಪ್ರಿಲ್ 23ರಂದು ಸನ್ಮಾರ್ಗ ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಗೊಳ್ಳುವಾಗ ಎರಡು ರೀತಿಯ ಸವಾಲುಗಳಿದ್ದುವು-

1. ಕನ್ನಡ ಭಾಷೆಯಲ್ಲಿರುವ ಇಂಥದ್ದೊಂದು ಪತ್ರಿಕೆಗೆ ಆ ಕಾಲದಲ್ಲಿ ಮಾರುಕಟ್ಟೆ ಇರಲಿಲ್ಲ. ಆದ್ದರಿಂದ ಈ ಪತ್ರಿಕೆ ದೀರ್ಘಕಾಲ ಬದುಕಿ ಉಳಿಯಲಿದೆ ಎಂಬ ಆತ್ಮವಿಶ್ವಾಸ ಸಾರ್ವಜನಿಕರಲ್ಲಿರುವುದಕ್ಕೆ ಸಾಧ್ಯವೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತ್ಮವಿಶ್ವಾಸವನ್ನು ತುಂಬುವುದರ ಜೊತೆಗೇ ಸ್ವಯಂ ಆತ್ಮವಿಶ್ವಾಸವನ್ನು ಹೊಂದುವುದೂ ಪತ್ರಿಕೆ ನಡೆಸುವವರ ಮೇಲಿನ ಆನೆಭಾರದ ಸವಾಲಾಗಿತ್ತು. ಹಾಗೆಯೇ, ಅಕ್ಷರ ಬಲ್ಲವರ ಸಂಖ್ಯೆ ಆ ಕಾಲದಲ್ಲಿ ತೃಪ್ತಿಪಡುವ ರೀತಿಯಲ್ಲೇನೂ ಇರಲಿಲ್ಲ. ಅದರಲ್ಲೂ ಮುಸ್ಲಿಮ್ ಸಮುದಾಯದಲ್ಲಂತೂ ಓದು-ಬರಹ ಬಲ್ಲವರ ಸಂಖ್ಯೆ ಶೋಚನೀಯ ಸ್ಥಿತಿಯಲ್ಲಿತ್ತು. ಅಕ್ಷರ ಬಲ್ಲವರೇ ಕಡಿಮೆ ಇರುವ ಸಮಾಜದಲ್ಲಿ ಆಗತಾನೇ ಹುಟ್ಟಿಕೊಂಡ ಪತ್ರಿಕೆಯನ್ನು ಮಾರಾಟ ಮಾಡುವುದೆಂದರೆ, ಅದು ಪ್ರವಾಹದ ವಿರುದ್ಧ ಈಜಲು ಹೊರಟಂತೆ. ಬಡವರೇ ತುಂಬಿರುವ ಮತ್ತು ನಕ್ಷತ್ರದಂತೆ ಅಲ್ಲೊಂದು ಇಲ್ಲೊಂದು ಶ್ರೀಮಂತರಿದ್ದ ಸಮಾಜದಲ್ಲಿ ಪತ್ರಿಕೆಯನ್ನು ಖರೀದಿಸಿ ಓದುವುದಕ್ಕೆ ಪ್ರೇರೇಪಿಸುವುದು ಸುಲಭವಾಗಿರಲಿಲ್ಲ. ಇಂದಿನಂತೆ ಡಿಜಿಟಲ್ ಜಮಾನ ಅಲ್ಲದಿದ್ದ ಮತ್ತು ಸಾರಿಗೆ ಸಂಪರ್ಕಗಳೂ ವಿರಳವಾಗಿದ್ದ ಕಾಲದಲ್ಲಿ ಸನ್ಮಾರ್ಗವನ್ನು ಜನರ ನಡುವೆ ಜನಪ್ರಿಯ ಗೊಳಿಸುವುದಕ್ಕೆ ಅಪಾರ ಶ್ರಮ, ಸಹನೆ ಮತ್ತು ಆತ್ಮವಿಶ್ವಾಸದ ಪರ್ವತವೇ ಬೇಕಿತ್ತು. ಮುಖ್ಯವಾಗಿ,‘ನಾವು ದೀರ್ಘಕಾಲ ಬಾಳುವೆವು ಮತ್ತು ಅದಕ್ಕೆ ಬೇಕಾದ ಸಿದ್ಧತೆ ನಮ್ಮಲ್ಲಿದೆ..’ ಎಂಬ ಸಕಾರಾತ್ಮಕ ಸಂದೇಶವನ್ನು ಸಾರ್ವಜನಿಕರಲ್ಲಿ ತುಂಬುವ ಕಠಿಣ ಸವಾಲೂ ಇತ್ತು.

2. ಸಂಪಾದಕೀಯ ಬಳಗ ತೀರಾ ಅನನುಭವಿಯಾಗಿತ್ತು. ಆವರೆಗೆ ಯಾವ ಪತ್ರಿಕೆಯಲ್ಲಿ ದುಡಿದೂ ಅನುಭವವಿರದ ಇಬ್ರಾಹೀಮ್ ಸಈದ್ ಸನ್ಮಾರ್ಗದ ಸಂಪಾದಕರಾಗಿದ್ದರು. ಅವರಿಗೆ ಜೊತೆಗಾರರಾಗಿ ಸಂಪಾದಕೀಯ ಬಳಗ ಸೇರಿಕೊಂಡ ನೂರ್ ಮುಹಮ್ಮದ್ ಮತ್ತು ಸಾದುಲ್ಲಾರಲ್ಲೂ ಜರ್ನಲಿಸಂ ಸರ್ಟಿಫಿಕೇಟೋ ಅಥವಾ ಪತ್ರಿಕಾ ವೃತ್ತಿಯಲ್ಲಿದ್ದ ಅನುಭವವೋ ಯಾವುದೂ ಇರಲಿಲ್ಲ.

ಪತ್ರಿಕೆಗೆ 45 ವರ್ಷಗಳು ತುಂಬಿದ ಈ ಹೊತ್ತಿನಲ್ಲಿ ಆ ಚೊಚ್ಚಲ ಸಂಪಾದಕೀಯ ಬಳಗವನ್ನು ಕಣ್ಣೆದುರು ತರುವಾಗ ಅಚ್ಚರಿ ಉಂಟಾಗುತ್ತದೆ. ಶೂನ್ಯ ಅನುಭವ ಇರುವ ತಂಡವೊಂದು ವಾರಪತ್ರಿಕೆ ತಯಾರಿಸುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವುದೆಂದರೆ, ಅದಕ್ಕೆ ಅಪಾರ ಧೈರ್ಯ, ಛಲ, ಆತ್ಮವಿಶ್ವಾಸದ ಅಗತ್ಯ ಇರುತ್ತದೆ. ಪತ್ರಿಕೆಯ ಅಷ್ಟೂ ಪುಟಗಳಲ್ಲಿ ವೈವಿಧ್ಯತೆಯನ್ನು ತುಂಬುವುದು, ಓದುಗರ ಗಮನ ಸೆಳೆಯುವಂತೆ ಲೇಔಟ್ ತಯಾರಿಸುವುದು, ಇಂಗ್ಲಿಷ್-ಹಿಂದಿ -ಉರ್ದು-ಮಲಯಾಳಂ ಭಾಷೆಯಲ್ಲಿರುವ ಅತ್ಯುತ್ತಮ ಬರಹಗಳನ್ನು ಕನ್ನಡಕ್ಕೆ ತರ್ಜುಮೆಗೊಳಿಸುವುದು, ಪ್ರತಿವಾರವೂ ಈ ವೈವಿಧ್ಯತೆಯನ್ನು ಕಾಪಾಡಿಕೊಂಡು ಬರುವುದು, ಪ್ರೂಫ್ ರೀಡಿಂಗ್‌ನಿಂದ ಹಿಡಿದು ಮುದ್ರಣವಾಗುವಲ್ಲಿವರೆಗೆ ಪ್ರತಿಯೊಂದನ್ನೂ ಕಣ್ಣಿಗೆ ಎಣ್ಣೆ ಹಚ್ಚಿಕೊಂಡು ಪರಿಶೀಲಿಸುವುದೆಲ್ಲ ಅನನುಭವಿ ತಂಡದ ನಿದ್ದೆಗೆಡಿಸುವುದಕ್ಕೆ ಧಾರಾಳ ಸಾಕಿತ್ತು. ಆದರೆ,

ಇಬ್ರಾಹೀಮ್ ಸಈದ್ ನೇತೃತ್ವದ ಈ ತಂಡ ಎಷ್ಟು ಅದ್ಭುತವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿತೆಂದರೆ, ಪತ್ರಿಕೆಯ ಆಯುಷ್ಯದ ಬಗ್ಗೆ ಅನುಮಾನಿಸಿದ್ದವರೆಲ್ಲ ಅಭಿಮಾನಿಗಳಾಗಿ ಮಾರ್ಪಟ್ಟರು.

ಮಂಗಳೂರಿನಲ್ಲಿ ಹುಟ್ಟಿಕೊಂಡ ಸನ್ಮಾರ್ಗ ಬೆಂಗಳೂರನ್ನು ತಲುಪಿತು ಮತ್ತು ರಾಜ್ಯದ ಉದ್ದಗಲದಿಂದಲೂ ಬೇಡಿಕೆ ಬರತೊಡಗಿತು. ಸ್ವತಃ ಸಂಪಾದಕರೇ ಪತ್ರಿಕೆಯ ಪ್ರಚಾರ ರಾಯಭಾರಿಯಾದರು. ಚಂದಾದಾರಿಕೆ ಮಾಡುವುದಕ್ಕಾಗಿ ರಾಜ್ಯ ಸುತ್ತಿದರು. ಅವರ ಜೊತೆಗೇ ಉತ್ಸಾಹಿ ಯುವಕರೂ ಸೇರಿಕೊಂಡರು. ತಂಡಗಳಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ಹಂಚಿಹೊದ ಇವರು, ಮನೆಮನೆಗೆ ಭೇಟಿ ಕೊಟ್ಟರು. ಸನ್ಮಾರ್ಗವನ್ನು ಪರಿಚಯಿಸಿದರು. ಸನ್ಮಾರ್ಗ ಯಾವೆಲ್ಲ ಮೌಲ್ಯಗಳನ್ನು ಪ್ರತಿಪಾದಿಸುತ್ತಿತ್ತೋ ಅವುಗಳನ್ನು ದರ್ಶಿಸುವಷ್ಟು ಅವರ ಬದುಕು ಪಾರದರ್ಶಕವಾಗಿತ್ತು. ಜನರು ಮೊದಲು ಅವರನ್ನು ಅಳೆದರು. ಮೆಚ್ಚಿಕೊಂಡರು. ಬಳಿಕ ಪತ್ರಿಕೆಯ ಚಂದಾದಾರರಾದರು. ಅಂದಹಾಗೆ,

ಧರ್ಮದ ಭಾಗವೆಂದೇ ನಂಬಿ ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದ ಕಂದಾಚಾರಗಳ ಬಗ್ಗೆ ಸನ್ಮಾರ್ಗ ಪ್ರತಿವಾರ ಜಾಗೃತಿ ಬರಹಗಳನ್ನು ಪ್ರಕಟಿಸುತ್ತಲೇ ಇತ್ತು. ಮುಸ್ಸಿಮ್ ಸಮಾಜದಲ್ಲಿ ವರದಕ್ಷಿಣೆ ಇತ್ತು. ಮಾಟ, ಮಂತ್ರ, ತಾಯಿತ, ಜ್ಯೋತಿಷ್ಯ, ಬಡ್ಡಿ, ಧೂಮಪಾನ ಇತ್ಯಾದಿಗಳ ಜೊತೆಗೇ ಶಿಕ್ಷಣದ ಬಗ್ಗೆ ಅಪಾಯಕಾರಿ ಅಸಡ್ಡೆ ಕೂಡ ಇತ್ತು. ಮುಸ್ಲಿಮ್ ಹೆಸರಿನ ಹೊರತಾಗಿ ಇಸ್ಲಾಮ್ ಬಯಸುವ ಮೌಲ್ಯಗಳ ಕೊರತೆ ಸಮುದಾಯದಲ್ಲಿತ್ತು. ಅರಬಿ ಭಾಷೆಯ ಕುರ್‌ಆನನ್ನು ಅರ್ಥವರಿತು ಓದುವ ಅಭ್ಯಾಸವಾಗಲಿ, ಓದಬೇಕೆನ್ನುವ ಪರಿಕಲ್ಪನೆಯಾಗಲಿ ಶೂನ್ಯ ಅನ್ನುವಷ್ಟು ಕಡಿಮೆಯಿತ್ತು. ಹದೀಸ್ ಎಂದರೆ ಏನು ಮತ್ತು ಅದಕ್ಕೂ ಕುರ್‌ಆನಿಗೂ ನಡುವೆ ಇರುವ ಸಂಬಂಧ ಏನು ಮತ್ತು ಪ್ರಾಮುಖ್ಯತೆ ಏನು ಎಂಬ ಬಗ್ಗೆ ಸಾರ್ವಜನಿಕವಾಗಿ ಭಾರೀ ಅನ್ನಬಹುದಾದ ತಿಳುವಳಿಕೆಯೇನೂ ಇರಲಿಲ್ಲ. ಮಾಧ್ಯಮಗಳಿಗಂತೂ ಇಸ್ಲಾಮೀ ಪಾರಿಭಾಷಿಕ ಪದಗಳ ಅರ್ಥವಾಗಲಿ ವಿವರಣೆಯಾಗಲಿ ಗೊತ್ತೂ ಇರಲಿಲ್ಲ. ಮುಸ್ಲಿಮ್ ಪತ್ರಕರ್ತರು ಪತ್ರಿಕೆಗಳಲ್ಲಿ ವಿರಳವಾಗಿರುವುದು ಇದಕ್ಕೆ ಒಂದು ಕಾರಣವಾದರೆ, ಇರುವವರಿಗೂ ಇಸ್ಲಾಮಿನ ಸಮಗ್ರ ಪರಿಚಯ ಇಲ್ಲದಿದ್ದುದೂ ಇದಕ್ಕೆ ಇನ್ನೊಂದು ಕಾರಣವಾಗಿತ್ತು. ಮುಸ್ಲಿಮೇತರರಿಗೆ ಇಸ್ಲಾಮನ್ನು ಅರಿತುಕೊಳ್ಳುವುದಕ್ಕೆ ಬೇಕಾದ ಬರಹಗಳು ಸಾರ್ವಜನಿಕವಾಗಿ ಲಭ್ಯವಿಲ್ಲದಿದ್ದುದೂ ಇದಕ್ಕೆ ಮತ್ತೊಂದು ಕಾರಣವಾಗಿತ್ತು.

ಸನ್ಮಾರ್ಗ ಈ ಎಲ್ಲ ಕೊರತೆಗೂ ಉತ್ತರ ನೀಡುವ ಗುರಿಯೊಂದಿಗೆ ತನ್ನನ್ನು ತೊಡಗಿಸಿಕೊಂಡಿತು. ಪ್ರತೀವಾರ ಅರ್ಥಸಹಿತ ಕುರ್‌ಆನನ್ನು ಪ್ರಕಟಿಸತೊಡಗಿತು. ಕನ್ನಡದಲ್ಲಿ ಪತ್ರಿಕೆಯೊಂದು ಕುರ್‌ಆನನ್ನು ಕನ್ನಡ ಅರ್ಥ ಸಹಿತ ಪ್ರಕಟಿಸಲು ಪ್ರಾರಂಭಿಸಿದ್ದು ಅದೇ ಮೊದಲು. ಹದೀಸನ್ನೂ ಪ್ರಕಟಿಸತೊಡಗಿತು. ಜೊತೆಗೇ ಮಹಿಳೆಯರ ಕುರಿತಂತೆ ಕುರ್‌ಆನ್‌ನ ನಿಲುವು, ಮದ್ಯಪಾನ, ಬಡ್ಡಿ ವ್ಯವಹಾರ, ಮದುವೆ, ವಿಚ್ಛೇದನ, ವಿವಾಹ ಧನ, ಮುಂಜಿ, ಜಿಹಾದ್, ಕಾಫಿರ್, ಉಪವಾಸ, ಹಜ್ಜ್, ಔಲಿಯಾಗಳು, ಗೋರಿ, ದರ್ಗಾಗಳು, ಪ್ರವಾದಿ ಪ್ರೇಮ, ಪ್ರವಾದಿ ಇತಿಹಾಸ, ಬಹುಸಂಸ್ಕೃತಿಯ ಸಮಾಜದಲ್ಲಿ ಮುಸ್ಲಿಮರ ಜವಾಬ್ದಾರಿ, ಮಾದರಿ ಮುಸ್ಲಿಮ್‌ನ ಪರಿಚಯ, ಶಿಶುವಿನಿಂದ ಮರಣದ ವರೆಗೆ ಮುಸ್ಲಿಮ್ ವ್ಯಕ್ತಿಯ ಬದುಕು-ಭಾವ, ಆಚಾರ-ಕರ್ಮಗಳು… ಇತ್ಯಾದಿ ಎಲ್ಲವನ್ನೂ ಪ್ರತೀವಾರ ಪತ್ರಿಕೆ ತನ್ನ ಒಡಲಲ್ಲಿ ತುಂಬಿಸಿಕೊಂಡು ಜನರ ಬಳಿಗೆ ತೆರಳಿತು. ಜೊತೆಗೇ ‘ಕೇಳಿದಿರಾ ಕೇಳಿ’ ಎಂಬ ಅಂಕಣವನ್ನು ಪ್ರಾರಂಭಿಸಿ ಓದುಗರ ಪ್ರಶ್ನೆಗೆ ಉತ್ತರವನ್ನು ಕೊಡುವ ವಿನೂತನ ಪ್ರಯತ್ನಕ್ಕೂ ಇಳಿಯಿತು. ಹಾಗೆಯೇ ಮುಂದೆ ಸನ್ಮಾರ್ಗದ ಅಷ್ಟೂ ಪುಟಗಳಲ್ಲಿ ಅತೀ ಜನಪ್ರಿಯ ಕಾಲಂ ಆಗಿ ಇದು ಮಾರ್ಪಟ್ಟಿತು. ಹಾಗಂತ,

ಕಳೆದ 45 ವರ್ಷಗಳಲ್ಲಿ ಅಸಂಖ್ಯ ಮಂದಿಗೆ ಕುರ್‌ಆನನ್ನು ಕಲಿಸಿಕೊಟ್ಟ, ಅಸಂಖ್ಯ ಮಂದಿಯನ್ನು ಕಂದಾಚಾರಗಳಿಂದ ಬಿಡುಗಡೆಗೊಳಿಸಿದ, ಅಸಂಖ್ಯ ಮಂದಿಯನ್ನು ಇಸ್ಲಾಮಿನ ಮಾದರಿ ವ್ಯಕ್ತಿತ್ವಗಳಾಗಿ ಮಾರ್ಪಡಿಸಿದ ಮತ್ತು ಪತ್ರಕರ್ತರು, ಸಾಹಿತಿಗಳಿಂದ ಹಿಡಿದು ಸಾರ್ವಜನಿಕ ವೇದಿಕೆಗಳಲ್ಲಿ ಭಾಷಣ ಮಾಡುವವರ ವರೆಗೆ ಇಸ್ಲಾಮಿನ ಉದಾರವಾದಿ ನಿಲುವುಗಳನ್ನು ದಿಟ್ಟವಾಗಿ ಮತ್ತು ಸ್ಪಷ್ಟವಾಗಿ ಹೇಳಬಲ್ಲ ಅಸಂಖ್ಯ ಮಂದಿಯನ್ನು ತಯಾರಿಸಿದ ಸನ್ಮಾರ್ಗ; 45 ವರ್ಷಗಳ ಹಿಂದೆ ಯಾವೆಲ್ಲ ನಿಯಮಗಳನ್ನು ತನ್ನ ಮೇಲೆ ಹೇರಿಕೊಂಡಿತ್ತೋ ಅವೆಲ್ಲವನ್ನೂ ಈಗಲೂ ಚಾಚೂ ತಪ್ಪದೇ ಪಾಲಿಸಿಕೊಂಡೂ ಬರುತ್ತಿದೆ. ಆದ್ದರಿಂದಲೇ,

45 ವರ್ಷಗಳ ಹಿಂದೆ ಸನ್ಮಾರ್ಗದ ಬ್ಯಾಂಕ್ ಬ್ಯಾಲೆನ್ಸ್ ಏನಿತ್ತೋ ಬಹುತೇಕ ಇವತ್ತೂ ಹಾಗೆಯೇ ಇದೆ. ತನ್ನ ನಿಲುವಿನಲ್ಲಿ ಒಂದಿಷ್ಟು ಸಡಿಲಿಕೆ ಮಾಡಿಕೊಂಡು ಮದ್ಯ, ಬ್ಯಾಂಕು, ಫೈನಾನ್ಸು, ಜ್ಯೋತಿಷ್ಯ, ಸಿನಿಮಾ, ಜೂಜು, ಹುಟ್ಟುಹಬ್ಬ, ತಂಬಾಕು ಇತ್ಯಾದಿಗಳ ಜಾಹೀರಾತುಗಳನ್ನು ಪ್ರಕಟಿಸಿರುತ್ತಿದ್ದರೆ ಮತ್ತು ರಾಜಕಾರಣಿಗಳ ಜಾಹೀರಾತು ರೂಪದ ಸುದ್ದಿಗಳನ್ನು ಪ್ರಕಟಿಸಿರುತ್ತಿದ್ದರೆ ಪತ್ರಿಕೆಯಂತೂ ಲಾಭದಲ್ಲೇ ನಡೆಯುತ್ತಿತ್ತು. ಆದರೆ ಜನರ ದೃಷ್ಟಿಯಲ್ಲಿ ಮಾತ್ರ ಕುಬ್ಜವಾಗುತ್ತಿತ್ತು. ಇವತ್ತಿಗೂ ಸನ್ಮಾರ್ಗ ಅಪಾರ ಪ್ರಮಾಣದ ಓದುಗರನ್ನು ಗಳಿಸಿಕೊಂಡಿದ್ದರೆ ಮತ್ತು ಬಹುದೊಡ್ಡ ಅಭಿಮಾನಿ ಬಳಗವನ್ನು ದೇಶ-ವಿದೇಶಗಳಲ್ಲಿ ಉಳಿಸಿಕೊಂಡಿದ್ದರೆ ಅದಕ್ಕೆ ಪತ್ರಿಕೆ ತನ್ನ ನಿಲುವಿನಲ್ಲಿ ಒಂದಿಷ್ಟೂ ರಾಜಿ ಮಾಡಿಕೊಳ್ಳದಿರುವುದೇ ಬಹುಮುಖ್ಯ ಕಾರಣ. ಹಾಗಂತ,

ಈ 45 ವರ್ಷಗಳ ಪಯಣದಲ್ಲಿ ಪತ್ರಿಕೆ ಏಳು-ಬೀಳುಗಳನ್ನು ಎದುರಿಸುತ್ತಲೇ ಬೆಳೆದಿದೆ. ಒಂದಕ್ಕಿಂತ ಹೆಚ್ಚು ಕೇಸುಗಳೂ ದಾಖಲಾಗಿವೆ. ಸಂಪಾದಕೀಯ ಬಳಗ ನ್ಯಾಯಾಲಯದ ಕಟಕಟೆಯಲ್ಲೂ ನಿಂತಿದೆ. ಹಣಕಾಸಿನ ಸವಾಲಂತೂ ಸ್ಥಾಪನೆಯ ದಿನದಿಂದ ಇಂದಿನವರೆಗೂ ಮುಂದುವರಿದೇ ಇದೆ. ಅದರ ಜೊತೆಗೇ ಸನ್ಮಾರ್ಗ ಡಿಜಿಟಲ್ ಯುಗಕ್ಕೆ ಅತ್ಯಂತ ಯಶಸ್ವಿಯಾಗಿ ಕಾಲಿರಿಸಿದೆ. ಸನ್ಮಾರ್ಗ ವೆಬ್‌ಪೋರ್ಟಲ್ ಮತ್ತು ಸನ್ಮಾರ್ಗ ನ್ಯೂಸ್ ಚಾನೆಲ್- ಎರಡೂ ಭಿನ್ನ ಸ್ವರೂಪ, ವಿಭಿನ್ನ ದೃಷ್ಟಿಕೋನ ಮತ್ತು ಪ್ರಸ್ತುತಿಯೊಂದಿಗೆ ಜನರನ್ನು ಅತ್ಯಂತ ವೇಗವಾಗಿ ತಲುಪುವಲ್ಲಿ ಯಶಸ್ವಿಯೂ ಆಗಿದೆ. ಜೊತೆಗೇ ಅನುಪಮ ಎಂಬ ಸಹೋದರಿಯನ್ನೂ ಸನ್ಮಾರ್ಗ ಪೋಷಿಸಿ ಬೆಳೆಸಿದೆ.
ಅಂದಹಾಗೆ,

ಸನ್ಮಾರ್ಗದ ಪಯಣ ಸರಾಗ ಮತ್ತು ಯಶಸ್ವಿ ಆಗಬೇಕಾದರೆ ಓದುಗರಾದ ನಿಮ್ಮ ನೆರವಿನ ಅಗತ್ಯವಿದೆ. ಪತ್ರಿಕೆಯನ್ನು ಖರೀದಿಸುವುದು ಮತ್ತು ಇತರರನ್ನು ಚಂದಾದಾರರನ್ನಾಗಿ ಮಾಡುವುದರ ಜೊತೆಗೇ ಹಣಕಾಸಿನ ನೆರವನ್ನೂ ನೀಡಬೇಕಾದ ತುರ್ತು ಅಗತ್ಯವಿದೆ. ಸನ್ಮಾರ್ಗ ಜಾಹೀರಾತು ಆಧಾರಿತ ಪತ್ರಿಕೆ ಅಲ್ಲವಾದ್ದರಿಂದ ಓದುಗರು ಮತ್ತು ಹಿತೈಷಿಗಳೇ ಜಾಹೀರಾತು ಸ್ಥಾನವನ್ನು ತುಂಬಬೇಕಾದುದು ಅನಿವಾರ್ಯ. ಅಲ್ಲಾಹನ ಮೇಲೆ ಅಪಾರವಾದ ಭರವಸೆ ಮತ್ತು ಓದುಗರ ಮೇಲಿನ ನಿರೀಕ್ಷೆಯೇ ಸನ್ಮಾರ್ಗದ ಶಕ್ತಿ. ಅಲ್ಲಾಹನಿಗೆ ಸ್ತುತಿ. ಎಲ್ಲರಿಗೂ ಕೃತಜ್ಞತೆಗಳು.

`ದಿ ಕೇರಳ ಸ್ಟೋರಿ’ ಹೇಳದ ಸತ್ಯ...

9- 5-2023

 'ದಿ ಕೇರಳ ಸ್ಟೋರಿ' ಸಿನಿಮಾ ಮೇ 5 ಶುಕ್ರವಾರದಂದು ಬಿಡುಗಡೆಯಾಗಿದ್ದು, ಅದೇ ದಿನ ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಹೊಗಳಿದ್ದಾರೆ. ಭಯೋತ್ಪಾದನಾ ವಿರೋಧಿ ಹೋರಾಟದ ಭಾಗವಾಗಿ ಅವರು ಅದನ್ನು ಪರಿಭಾವಿಸಿದ್ದಾರೆ. ಇದಾಗಿ ದಿನಗಳ ಬಳಿಕ  ಮಧ್ಯಪ್ರದೇಶದ ಬಿಜೆಪಿ ಸರಕಾರವು ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿಯನ್ನು ಘೋಷಿಸಿದೆ. ಅಂದಹಾಗೆ, ಈ ಸಿನಿಮಾ ಬಿಡುಗಡೆಯಾದ  ದಿನವೇ ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಮೆಚ್ಚಿಕೊಂಡು ಮಾತನಾಡುವುದು ಮತ್ತು ಮಧ್ಯಪ್ರದೇಶ ಸರ್ಕಾರ ಅದಕ್ಕೆ ತೆರಿಗೆ  ವಿನಾಯಿತಿಯನ್ನು ಘೋಷಿಸುವುದರಲ್ಲೇ ಆ ಸಿನಿಮಾದ ತಿರುಳು ಸ್ಪಷ್ಟವಾಗುತ್ತದೆ.


ಈ ದೇಶದಲ್ಲಿ ಪ್ರತಿವಾರ ಸುಮಾರು 100ಕ್ಕಿಂತಲೂ ಅಧಿಕ ಸಿನಿಮಾ ಬಿಡುಗಡೆಯಾಗುತ್ತದೆ. ಆದರೆ ಪ್ರಧಾನಿ ಅವುಗಳ ಬಗ್ಗೆ ಮಾತನಾಡಿದ್ದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಬಿಜೆಪಿ ಸರಕಾರ ತೆರಿಗೆ ವಿನಾಯಿತಿ ಘೋಷಿಸಿದ್ದೂ ಇಲ್ಲ. ಆದರೆ, 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ ಬಿಜೆಪಿ ಸರಕಾರಗಳು ತೆರಿಗೆ ವಿನಾಯಿತಿ ಘೋಷಿಸಿದ್ದುವು. ಮಾತ್ರವಲ್ಲ, ಸಾರ್ವಜನಿಕ ವೀಕ್ಷಣೆಗಾಗಿ ಉಚಿತ ವ್ಯವಸ್ಥೆಯನ್ನೂ  ಮಾಡಿದ್ದುವು. ಇದೀಗ 'ದಿ ಕೇರಳ ಸ್ಟೋರಿ' ಸಿನಿಮಾದ ಬಗ್ಗೆ ಪ್ರಧಾನಿ ಮತ್ತು ಅವರ ಪಕ್ಷಕ್ಕೆ ವಿಶೇಷ ಮಮಕಾರ ಬಂದಿದೆ. ವಿಶೇಷ ಏ ನೆಂದರೆ, 'ದಿ ಕಾಶ್ಮೀರ್ ಫೈಲ್ಸ್' ಆಗಲಿ, 'ದಿ ಕೇರಳ ಸ್ಟೋರಿ' ಆಗಲಿ ಎರಡರ ಕೇಂದ್ರ ಬಿಂದುವೂ ಮುಸ್ಲಿಮರೇ. ಇವೆರಡೂ ಪ್ರೊಪಗಂಡಾ  ಸಿನಿಮಾಗಳು. ಇಸ್ಲಾಮ್ ಭೀತಿಯನ್ನು ಜನರಲ್ಲಿ ತುಂಬುವುದು ಮತ್ತು ಹಿಂದೂ ಧರ್ಮ ಅಪಾಯದಲ್ಲಿದೆ ಎಂಬ ಸಂದೇಶವನ್ನು  ಹರಡುವುದೇ ಇವುಗಳ ಒಳ ಉದ್ದೇಶ.


ದಿ ಕೇರಳ ಸ್ಟೋರಿಯನ್ನೇ ತೆಗೆದುಕೊಳ್ಳಿ. ಕೇರಳದಿಂದ 32 ಸಾವಿರ ಮಂದಿ ಇಸ್ಲಾಮ್‌ಗೆ ಮತಾಂತರವಾಗಿ ಐಸಿಸ್ ಸೇರಿಕೊಂಡಿದ್ದಾರೆ  ಎಂದು ಈ ಸಿನಿಮಾದ ಟೀಸರಲ್ಲಿ ಹೇಳಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾದಾಗ ಮತ್ತು ಪುರಾವೆಯನ್ನು ಕೇಳಿದಾಗ ನಿರ್ದೇಶಕ ಸುದಿಪ್ತೋ ಸೇನ್ ಆರಂಭದಲ್ಲಿ ಸಮರ್ಥಿಸಿಕೊಂಡರು. ತನ್ನಲ್ಲಿ ದಾಖಲೆ ಇದೆ ಅಂದರು. ಕೇರಳದ ಮುಖ್ಯಮಂತ್ರಿಯಾಗಿದ್ದ ಉಮ್ಮನ್  ಚಾಂಡಿಯವರ ಹೇಳಿಕೆಯೇ ಆಧಾರ ಎಂದು ಅವರು ಹೇಳಿಕೊಂಡರು. ಆದರೆ ಉಮ್ಮನ್ ಚಾಂಡಿ ಎಂದೂ ಕೂಡ ಹಾಗೆ ಹೇಳಿಯೇ ಇರಲಿಲ್ಲ. 2006ರಿಂದ 2012ರ ನಡುವೆ 2800 ರಿಂದ 3200ರಷ್ಟು ಮಂದಿ ಕೇರಳದಲ್ಲಿ ಇಸ್ಲಾಮ್‌ಗೆ ಮತಾಂತರವಾಗಿದ್ದಾರೆ ಎಂದವರು  ಹೇಳಿದ್ದರು. ಆದರೆ ಈ ಮತಾಂತರಕ್ಕೂ ಐಸಿಸ್‌ಗೂ ಸಂಬಂಧ ಕಲ್ಪಿಸಿರಲಿಲ್ಲ. ಮತಾಂತರವಾದವರೆಲ್ಲ ಐಸಿಸ್ ಸೇರಿಕೊಳ್ಳುತ್ತಿದ್ದಾರೆ  ಎಂದೂ ಹೇಳಿರಲಿಲ್ಲ.

ಆದರೆ, ಈ ಹೇಳಿಕೆಯನ್ನೇ ತಿರುಚಿದ ಸುದಿಪ್ತೋ ಸೇನ್ ಅವರು, ಕೇರಳದಲ್ಲಿ ಪ್ರತಿವರ್ಷ 2800 ಮಂದಿ ಮತಾಂತರವಾಗುತ್ತಿದ್ದಾರೆ ಮತ್ತು  ಇದನ್ನು ಈ 2022ರ ವರೆಗೆ ಗುಣಿಸುತ್ತಾ ಹೋದರೆ 32 ಸಾವಿರವಾಗುತ್ತದೆ ಎಂದು ಹೇಳಿ ನಗೆಪಾಟಲಿಗೀಡಾದರು. ಮಾತ್ರವಲ್ಲ, ಬಳಿಕ  ತನ್ನ ಟೀಸರ್‌ನಿಂದ 32 ಸಾವಿರವನ್ನು ಅಳಿಸಿ 3 ಮಂದಿಯ ಕತೆ ಇದು ಎಂದು ಬದಲಿಸಿಕೊಂಡರು. ಆದರೆ ಸಿನಿಮಾದ ಪಾತ್ರವೊಂದು  ಕೇರಳದಿಂದ 50 ಸಾವಿರದವರೆಗೆ ಮತಾಂತರವಾಗಿ ಐಸಿಸ್ ಸೇರಿಕೊಂಡಿದ್ದಾರೆ ಎಂದು ಹೇಳುತ್ತದೆ. ಇದೇವೇಳೆ,


2019ರಲ್ಲಿ ಕೇಂದ್ರ ಗೃಹ ಇಲಾಖೆ ಸಂಸತ್ತಿಗೆ ನೀಡಿದ ಮಾಹಿತಿಯಂತೆ, ಭಾರತದಲ್ಲಿ ಐಸಿಸ್ ಪರ ಒಲವು ಇರುವ ಅಥವಾ ಅದರಲ್ಲಿ  ತೊಡಗಿಸಿಕೊಂಡಿರುವವರ ಸಂಖ್ಯೆ 155 ಎಂದು ಹೇಳಿದೆ. 2020ರಲ್ಲಿ ಅಮೇರಿಕದ ವಿದೇಶಾಂಗ ಇಲಾಖೆ ಬಿಡುಗಡೆಗೊಳಿಸಿರುವ  ಮಾಹಿತಿ ಪ್ರಕಾರ, ಭಾರತದಿಂದ ಐಸಿಸ್ ಸೇರಿಕೊಂಡಿರುವವರ ಸಂಖ್ಯೆ 66. ಒಂದುವೇಳೆ, 32 ಸಾವಿರ ಮಂದಿ ಭಾರತೀಯರು ಐಸಿಸ್  ಸೇರಿಕೊಂಡಿದ್ದರೆ ಅದು ಭಾರತ ಸರಕಾರಕ್ಕೆ, ಗೃಹ ಇಲಾಖೆಗೆ ಮತ್ತು ಗುಪ್ತಚರ ಸಂಸ್ಥೆಗೆ ತಿಳಿಯದಿರಲೇ ಬೇಕಿತ್ತು ಅಥವಾ ಭಾರತದ  ಸರಕಾರದ ಬಹುದೊಡ್ಡ ಆಡಳಿತಾತ್ಮಕ ವೈಫಲ್ಯವಾಗಿ ಇದನ್ನು ಪರಿಗಣಿಸಬೇಕಾಗುತ್ತದೆ. ಆದ್ದರಿಂದ ಪ್ರಧಾನಿಯವರು ಈ ಸಿನಿಮಾವನ್ನು  ಹೊಗಳುತ್ತಾರೆಂದರೆ, ತನ್ನದೇ ಸರಕಾರದ ವೈಫಲ್ಯವನ್ನು ಸಾರುತ್ತಿದ್ದಾರೆ ಎಂದೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅಂದಹಾಗೆ,


ವಿಶ್ವಸಂಸ್ಥೆಯ ಬಂಧನದಲ್ಲಿರುವ ಭಾರತದ ಐಸಿಸ್ ಮಹಿಳೆ ತನ್ನ ಸ್ಟೋರಿಯನ್ನು ಹೇಳುವ ಮೂಲಕ ಈ ಸಿನಿಮಾ ಆರಂಭಗೊಳ್ಳುತ್ತದೆ.  ತಾನು ಇಸ್ಲಾಮ್‌ಗೆ ಮತಾಂತರವಾದದ್ದು ಮತ್ತು ಐಸಿಸ್‌ಗೆ ಸೇರ್ಪಡೆಗೊಂಡ ಹಿನ್ನೆಲೆಯನ್ನು ಈ ಪಾತ್ರ ಹೇಳುತ್ತಾ ಹೋಗುವುದು ಕತೆಯ  ಆರಂಭ. ಕೇರಳದಲ್ಲಿ ಇಸ್ಲಾಮೀಕರಣ ಆಗುತ್ತಾ ಇದೆ ಮತ್ತು ಹೀಗಾದರೆ ಅಲ್ಲಿ ಹಿಂದೂಗಳೇ ಉಳಿಯಲ್ಲ ಎಂದು ಸಿನಿಮಾದ  ಆರಂಭದಲ್ಲಿಯೇ ಹೇಳುವ ಮೂಲಕ ಈ ಸಿನಿಮಾದ ಉದ್ದೇಶವನ್ನೂ ನಿರ್ದೇಶಕ ಸ್ಪಷ್ಟವಾಗಿ ಹೇಳಿಬಿಡುತ್ತಾರೆ. ಶಾಲಿನಿ ಉಣ್ಣಿಕೃಷ್ಣನ್  ಎಂಬ ಹೆಣ್ಣುಮಗಳು ಉನ್ನತ ಶಿಕ್ಷಣಕ್ಕಾಗಿ ಕಾಸರಗೋಡಿಗೆ ಬರುತ್ತಾರೆ. ಅಲ್ಲಿ ಹಾಸ್ಟೆಲ್‌ನಲ್ಲಿ ತಂಗುತ್ತಾಳೆ. ಆ ಸಂದರ್ಭದಲ್ಲಿ ಗೀತಾಂಜಲಿ  ಎಂಬ ನಾಸ್ತಿಕ ವಿದ್ಯಾರ್ಥಿನಿ, ಸೀಮಾ ಎಂಬ ಕ್ರೈಸ್ತ ವಿದ್ಯಾರ್ಥಿನಿ ಮತ್ತು ಆಸಿಫಾ ಎಂಬವರನ್ನು ಭೇಟಿಯಾಗುತ್ತಾರೆ. ಈ ಆಸಿಫಾ ಐಸಿಸ್‌ಗೆ  ಜನರನ್ನು ಸೇರಿಸುವ ಕೆಲಸ ಮಾಡುವವಳು. ಹೀಗೆ ಈ ನಾಲ್ಕು ಮಂದಿಯ ಸುತ್ತ ಸಿನಿಮಾ ತಯಾರಾಗಿದೆ. ಈ ಶಾಲಿನಿ ಉಣ್ಣಿಕೃಷ್ಣನ್  ಇಸ್ಲಾಮ್‌ಗೆ ಮತಾಂತರವಾಗಿ ಫಾತಿಮಾ ಆಗುತ್ತಾಳೆ ಮತ್ತು ಅಫ್ಘಾನ್‌ಗೆ ತೆರಳಿ ಅಲ್ಲಿಂದ ಸಿರಿಯಾ ಗಡಿಗೆ ಹೋಗಿ ಅಲ್ಲಿ ಪಟ್ಟ ಪಾಡಿನ  ಬಗ್ಗೆ ಸಿನಿಮಾದಲ್ಲಿ ಹೇಳಲಾಗಿದೆ. ನಿಜವಾಗಿ,


ಈ ಸಿನಿಮಾದ ಉದ್ದೇಶ ಸಿನಿಮಾ ಅಲ್ಲ, ಪ್ರೊಪಗಾಂಡಾ ಅನ್ನುವುದಕ್ಕೆ 32 ಸಾವಿರದಿಂದ 3ಕ್ಕೆ ಇಳಿದಿರುವುದೇ ಒಂದು ಉದಾಹರಣೆ.  ಇನ್ನೊಂದು, ಪ್ರಧಾನಿ ಮತ್ತು ಅವರ ಬೆಂಬಲಿಗರ ನಡವಳಿಕೆ. ತನ್ನದೇ ಸರಕಾರದ ವೈಫಲ್ಯವನ್ನು ಹೇಳುವ ಸಿನಿಮಾವನ್ನು ಪ್ರಧಾನಿ ಮತ್ತು  ಅವರ ಬೆಂಬಲಿಗರು ಮೆಚ್ಚಿಕೊಳ್ಳುತ್ತಾರೆಂದರೆ, ಅವರು ಯಾವ ಸಂದೇಶವನ್ನು ಕೊಡಲು ಬಯಸುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ.  ಇಂಥದ್ದೇ ಡಾಕ್ಯುಮೆಂಟರಿಯೊಂದು ಇತ್ತೀಚೆಗೆ ಬಿಬಿಸಿ ಬಿಡುಗಡೆಗೊಳಿಸಿತ್ತು. ಗುಜರಾತ್ ಹತ್ಯಾಕಾಂಡದಲ್ಲಿ ಪ್ರಧಾನಿಯವರ ಪಾತ್ರವನ್ನು  ಹೇಳುವ ಆ ಡಾಕ್ಯುಮೆಂಟರಿಯನ್ನು ಕೇಂದ್ರ ಸರಕಾರ ನಿಷೇಧಿಸಿತ್ತೇ ಹೊರತು ಮೆಚ್ಚಿಕೊಂಡಿರಲಿಲ್ಲ. ಈ ಹಿಂದೆ ಫರ್ಝಾನಿಯಾ ಎಂಬ  ಸಿನಿಮಾ ಬಿಡುಗಡೆಗೊಂಡಾಗಲೂ ಬಿಜೆಪಿ ಸರಕಾರಗಳು ಇವೇ ನಿಷೇಧ ನಿಲುವನ್ನು ಪ್ರಕಟಿಸಿತ್ತು. ಗುಜರಾತ್ ಹತ್ಯಾಕಾಂಡದ ಸುತ್ತ  ಹೆಣೆದ ಈ ಸಿನಿಮಾದ ಪ್ರದರ್ಶನಕ್ಕೆ ಗುಜರಾತ್‌ನಲ್ಲಿ ಅವಕಾಶವನ್ನೇ ನೀಡಲಾಗಿರಲಿಲ್ಲ. ಅಲ್ಲದೇ, ಬಿಜೆಪಿ ಆಡಳಿತವಿರುವ ಯಾವುದೇ  ರಾಜ್ಯ ಸರಕಾರಗಳೂ ಇದಕ್ಕೆ ತೆರಿಗೆ ವಿನಾಯಿತಿಯನ್ನು ನೀಡಿರಲಿಲ್ಲ. ಪ್ರಧಾನಿ ಮೋದಿಯಿಂದ ಹಿಡಿದು ಅವರ ಬೆಂಬಲಿಗರ ಉದ್ದೇಶ  ಶುದ್ಧಿಯನ್ನು ಅನುಮಾನಿಸುವುದಕ್ಕೆ ಮತ್ತು ಇಸ್ಲಾಮ್‌ನ ಬಗ್ಗೆ ಅವರ ನಿಲುವನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಈ ದ್ವಂದ್ವಗಳೇ ಧಾರಾಳ  ಸಾಕು. ಅಂದಹಾಗೆ,


ನೈಜ ಘಟನೆಗಳ ಆಧಾರಿತ ಸಿನಿಮಾ ಎಂದು ದಿ ಕೇರಳ ಸ್ಟೋರಿ ತನ್ನನ್ನು ಪರಿಚಯಿಸಿಕೊಳ್ಳುತ್ತದೆ. ನೈಜ ಘಟನೆ ಎಂದ ಮೇಲೆ 32  ಸಾವಿರವು 3ಕ್ಕೆ ಇಳಿಯಬೇಕಿರಲಿಲ್ಲ ಮತ್ತು ಉಮ್ಮನ್ ಚಾಂಡಿ ಹೇಳಿಕೆಯನ್ನು ತಿರುಚಿ ಲೆಕ್ಕ ಕೊಡಬೇಕಿರಲಿಲ್ಲ. ಕೇಂದ್ರ ಗೃಹ  ಇಲಾಖೆಯಾಗಲಿ, ಎನ್‌ಐಎ ಆಗಲಿ ಅಥವಾ ಭಯೋತ್ಪಾದನಾ ವಿರೋಧಿ ಹೋರಾಟದ ನೇತೃತ್ವ ವಹಿಸಿಕೊಂಡಿರುವ ಅಮೇರಿಕವೇ  ಆಗಲಿ ಹೇಳದೇ ಇರುವ ಸಂಖ್ಯೆಯನ್ನು ದಿ ಕೇರಳ ಸ್ಟೋರಿ ಹೇಳಿಕೊಳ್ಳಬೇಕಿರಲಿಲ್ಲ. ಆದ್ದರಿಂದ ಇಸ್ಲಾಮ್ ಭೀತಿಯನ್ನು ಹರಡುವುದು  ಮತ್ತು ಹಿಂದೂ ಧ್ರುವೀಕರಣ ಮಾಡುವುದೇ ಈ ಸಿನಿಮಾದ ಮುಖ್ಯ ಗುರಿ. ಒಂದುವೇಳೆ, ಈ ಸಿನಿಮಾ ಬಿಂಬಿಸಿದಂತೆ ಕೇರಳದಲ್ಲಿ ಈ  ರೀತಿಯಾಗಿ ಮತಾಂತರ ಪ್ರಕರಣಗಳು ನಡೆಯುತ್ತಿದ್ದರೆ, ಇದಕ್ಕಿಂತ ಎಷ್ಟೋ ಶತಮಾನಗಳ ಮೊದಲೇ ಕೇರಳ ಮುಸ್ಲಿಮ್ ರಾಜ್ಯ  ಆಗಿರಬೇಕಿತ್ತು. ಇಸ್ಲಾಮ್ ಮೊದಲು ಆಗಮಿಸಿದ್ದು ಕೇರಳಕ್ಕೆ. ಕೇರಳ ಇಸ್ಲಾಮ್‌ಗೆ ಸುಮಾರು 1400 ವರ್ಷಕ್ಕಿಂತಲೂ ಮೊದಲಿನ  ಇತಿಹಾಸವಿದೆ. ಹೀಗಿದ್ದೂ, 2011ರ ಜನಗಣತಿ ಪ್ರಕಾರ ಕೇರಳದಲ್ಲಿ ಮುಸ್ಲಿಮರ ಜನಸಂಖ್ಯೆ 27%. ಅದೇವೇಳೆ, ಹಿಂದೂಗಳು ಶೇ.  54ರಷ್ಟಿದ್ದರೆ, 18% ಕ್ರೈಸ್ತರಿದ್ದಾರೆ. 'ದಿ ಕೇರಳ ಸ್ಟೋರಿ' ನಿರ್ದೇಶಕರ ಲೆಕ್ಕಾಚಾರದಂತೆ ಪ್ರತಿವರ್ಷ 2800ರಿಂದ 3200 ಮಂದಿ ಇಸ್ಲಾಮ್‌ಗೆ  ಮತಾಂತರವಾಗಿರುತ್ತಿದ್ದರೆ ಈಗ ಕೇರಳ ಹೇಗಿರಬೇಕಿತ್ತು! ಒಬ್ಬನೇ ಒಬ್ಬ ಮುಸ್ಲಿಮೇತರ ವ್ಯಕ್ತಿ ಅಲ್ಲಿ ಇರಲು ಸಾಧ್ಯವಿತ್ತೇ?

ಹಾಗಂತ, ಮತಾಂತರಕ್ಕೆ ಸಂಬಂಧಿಸಿ ಈ ದೇಶದಲ್ಲಿ ಕಾನೂನಿದೆ. ಯಾವುದು ಮತಾಂತರ ಮತ್ತು ಯಾವುದು ಅಲ್ಲ ಎಂಬ ಬಗ್ಗೆಯೂ  ಇಲ್ಲಿಯ ಕಾನೂನಿನಲ್ಲಿ ಸ್ಪಷ್ಟತೆಯಿದೆ. ನಿಜವಾಗಿ, ತನಗಿಷ್ಟ ಬಂದ ವಿಚಾರಧಾರೆ ಸ್ವೀಕರಿಸುವುದಕ್ಕೆ ಈ ದೇಶದ ಪ್ರತಿಯೋರ್ವರಿಗೂ  ಸಾಂವಿಧಾನಿಕ ಹಕ್ಕಿದೆ. ಉಳಿದದ್ದೆಲ್ಲವೂ ಪ್ರೊಪಗಾಂಡಾ ಅಷ್ಟೇ.