Saturday, 26 September 2015

ಪ್ರಧಾನಿಯವರೇ, ಆಂಡರ್ಸನ್‍ಗಾಗಿ ಮಾತೆತ್ತಿದ ನೀವು ರಾಯಭಾರಿಯನ್ನು ಕಳುಹಿಸಿಕೊಟ್ಟದ್ದೇಕೆ?

     ಕೇಂದ್ರ ಸರಕಾರದ ಕಾರ್ಯಶುದ್ಧಿಯ ಮೇಲೆ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿ ಸೌದಿ ರಾಜತಾಂತ್ರಿಕ ಅಧಿಕಾರಿಯೋರ್ವರು ಭಾರತ ಬಿಟ್ಟು ಹೊರಟು ಹೋಗಿದ್ದಾರೆ. ಗುರ್ಗಾಂವ್‍ನಲ್ಲಿರುವ ಸೌದಿ ರಾಜತಾಂತ್ರಿಕ ಕಚೇರಿಯಲ್ಲಿ ಕೆಲಸಕ್ಕಿದ್ದ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯವೆಸಗಿದ ಆರೋಪವು ಮಜೀದ್ ಹಸನ್ ಅಶೂರ್ ಎಂಬ ಈ ಅಧಿಕಾರಿಯ ಮೇಲಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಈ ಆರೋಪಗಳು ಸಾಬೀತುಗೊಂಡಿರುವ ವರದಿಯೂ ಬಂದಿದೆ. ಇಷ್ಟಿದ್ದೂ, ಯಾವೊಂದು ತನಿಖೆಗೂ ಒಳಪಡಿಸದೇ ಈ ಅಧಿಕಾರಿಯನ್ನು ದೇಶಬಿಟ್ಟು ತೆರಳಲು ಕೇಂದ್ರ ಸರಕಾರ ಅನುವು ಮಾಡಿಕೊಟ್ಟದ್ದು ಹೇಗೆ ಮತ್ತು ಯಾಕೆ? ಭಾರತ ಮತ್ತು ಸೌದಿ ಸರಕಾರಗಳ ನಡುವೆ ಈ ಕುರಿತಂತೆ ಮಾತುಕತೆಗಳು ನಡೆದಿವೆಯೇ? ಅದರ ವಿವರಗಳು ಏನೆಲ್ಲ? ಗೃಹಸಚಿವಾಲಯ ಯಾಕೆ ಯಾವ ಮಾಹಿತಿಯನ್ನೂ ಸಾರ್ವಜನಿಕರಿಗೆ ಬಿಟ್ಟುಕೊಡುತ್ತಿಲ್ಲ? ಆರ್ಥಿಕ ಲೆಕ್ಕಾಚಾರಗಳು ಇದರ ಹಿಂದೆ ಕೆಲಸ ಮಾಡಿವೆಯೇ? ಜಿನೇವಾ ಒಡಂಬಡಿಕೆಯ ಕಟ್ಟಳೆಗಳೇನೇ ಇರಲಿ, ಮಹಿಳೆಯರ ಬಗ್ಗೆ ಅಪಾರ ಕಕ್ಕುಲಾತಿಯನ್ನು ತೋರ್ಪಡಿಸುವ ಸರಕಾರವೊಂದು ಈ ಮಟ್ಟದಲ್ಲಿ ತಗ್ಗಿ-ಬಗ್ಗಿ ನಡೆದದ್ದೇಕೆ? ಕೇರಳದ ಮೀನುಗಾರರನ್ನು ಹತ್ಯೆಗೈದ ಇಟಲಿಯ ನಾವಿಕರ ವಿಷಯದಲ್ಲಿ ಮನಮೋಹನ್ ಸಿಂಗ್ ಸರಕಾರವನ್ನು ಈ ಹಿಂದೆ ಬಿಜೆಪಿ ತೀವ್ರ ತರಾಟೆಗೆ ಎತ್ತಿಕೊಂಡಿತ್ತು. ಆ ನಾವಿಕರನ್ನು ಇಟಲಿಗೆ ಬಿಟ್ಟು ಕೊಡಬಾರದೆಂದು ಪ್ರಬಲವಾಗಿ ವಾದಿಸಿತ್ತು. ಮನಮೋಹನ್ ಸಿಂಗ್ ಸರಕಾರವು ಈ ಕುರಿತಂತೆ ಮೃದು ನೀತಿಯನ್ನು ಹೊಂದಿದೆ ಎಂದು ಬಾರಿಬಾರಿಗೂ ಟೀಕಿಸಿತ್ತು. ಭೋಪಾಲ್ ಅನಿಲ ದುರಂತದ ಆರೋಪಿ ವಾರೆನ್ ಆಂಡರ್ಸನ್‍ನನ್ನು ಯಾವ ತನಿಖೆಗೂ ಒಳಪಡಿಸದೇ ಅಮೇರಿಕಕ್ಕೆ ತೆರಳಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷವನ್ನು ಅದು ಈಗಲೂ ಟೀಕಿಸುತ್ತಿದೆ. ಪಾಕಿಸ್ತಾನವು ಭಾರತೀಯ ಸೈನಿಕರ ಒಂದು ತಲೆಯನ್ನು ಉರುಳಿಸಿದರೆ ಪಾಕ್‍ನ ಹತ್ತು ತಲೆಯನ್ನು ಉರುಳಿಸುವೆವು ಎಂದು ಸಾರಿದ ಮತ್ತು ಸಾರುತ್ತಿರುವ ಪಕ್ಷ ಬಿಜೆಪಿ. ಇಂಥ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‍ನಂತೆಯೇ ಆಡುತ್ತಿರುವುದೇಕೆ? ಅತ್ಯಾಚಾರದ ವಿರುದ್ಧ ಈ ದೇಶದಲ್ಲಿ 3 ವರ್ಷಗಳ ಹಿಂದೆ ದೊಡ್ಡದೊಂದು ಚಳವಳಿ ನಡೆದಿದೆ. ಆ ಚಳವಳಿ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಅತ್ಯಾಚಾರದ ವಿರುದ್ಧ ಪ್ರಬಲ ಕಾನೂನನ್ನೇ ರಚಿಸುವಷ್ಟು. ಆ ಬಳಿಕ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗಳ ಸರಣಿ ಘೋಷಣೆಗಳು ನ್ಯಾಯಾಲಯಗಳಿಂದ ಪ್ರಕಟವಾದುವು. ಬಿಜೆಪಿಯನ್ನು ಬೆಂಬಲಿಸುವ ಸಂಘಪರಿವಾರವಂತೂ ಅತ್ಯಾಚಾರ ಬಿಡಿ, ಹೆಣ್ಣು-ಗಂಡು ಪರಸ್ಪರ ಮಾತಾಡುವುದನ್ನೇ ಅಪರಾಧ ಎಂದು ಹೇಳುವಷ್ಟು ನಿಷ್ಠುರತೆಯನ್ನು ಪ್ರದರ್ಶಿಸುತ್ತಿದೆ. ಹೆಣ್ಣನ್ನು ರಕ್ಷಿಸುವ ಹೆಸರಲ್ಲಿ ಥಳಿತ, ಹಲ್ಲೆ, ಹತ್ಯೆಗಳಂತಹ ಕೃತ್ಯಕ್ಕೂ ಕೈ ಹಾಕುತ್ತಿದೆ. ಹೀಗಿರುವಾಗ, ಕೇಂದ್ರ ಸರಕಾರದ ಈ ನಡೆಗೆ ಏನೆನ್ನಬೇಕು? ಹಾಗಾದರೆ ಹೆಣ್ಣಿನ ಬಗ್ಗೆ ಬಿಜೆಪಿ ಮತ್ತು ಅದರ ಪರಿವಾರಗಳು ವ್ಯಕ್ತಪಡಿಸುತ್ತಿರುವ ಗೌರವಾದರದ ಮಾತುಗಳು ನಕಲಿಯೇ? ಕನಿಷ್ಠ ಅಮೇರಿಕದಲ್ಲಿ ಭಾರತದ ರಾಜತಾಂತ್ರಿಕೆಯಾಗಿದ್ದ ದೇವಯಾನಿ ಖೋಬ್ರಗದೆಯವರ ಬಗ್ಗೆ ಅಮೇರಿಕ ವರ್ಷಗಳ ಹಿಂದೆ ನಡೆದುಕೊಂಡಷ್ಟಾದರೂ ನಿಷ್ಠುರತೆಯನ್ನು ಭಾರತಕ್ಕೆ ತೋರಬಹುದಿಲ್ಲವೇ? ರಾಯಭಾರ ಕಚೇರಿಯ ಅಧಿಕಾರಿಯಾಗಿದ್ದರೂ ಖೋಬ್ರಗದೆಯವರನ್ನು ಅಮೇರಿಕ ಸುಲಭದಲ್ಲಿ ಬಿಟ್ಟುಕೊಡಲಿಲ್ಲ. ಜಿನೇವಾ ಒಡಂಬಡಿಕೆಯಲ್ಲಿ ಅಷ್ಟರ ಮಟ್ಟಿಗೆ ಅವಕಾಶ ಇದೆಯೆಂದಾದರೆ ಮೋದಿಯವರು ಅದನ್ನೇಕೆ ಬಳಸಿಕೊಳ್ಳಲಿಲ್ಲ? ಹಾಗಂತ, ಇದನ್ನು ಕೇಂದ್ರದ ರಾಜತಾಂತ್ರಿಕ ವೈಫಲ್ಯ ಎಂಬ ಷರಾದೊಂದಿಗೆ ಮುಚ್ಚಿಹಾಕಬಹುದು. ದಿ ಹಿಂದೂ ಸಹಿತ ಹೆಚ್ಚಿನೆಲ್ಲಾ ಪತ್ರಿಕೆಗಳು ತಮ್ಮ ಸಂಪಾದಕೀಯಕ್ಕೆ ಕೊಟ್ಟ ಶೀರ್ಷಿಕೆಯೂ ಇದುವೇ. ಆದರೆ ವಾರನ್ ಆಂಡರ್ಸನ್‍, ಇಟಲಿಯ ನಾವಿಕರು ಅಥವಾ ಖೋಬ್ರಗದೆಯ ವಿಷಯದಲ್ಲಿ ಧಾರಾಳ ಮಾತಾಡಿದ್ದ ಬಿಜೆಪಿಯು ಸೌದಿ ಅಧಿಕಾರಿಯ ಕುರಿತಂತೆ ಒಂದು ವಾಕ್ಯದ ಸ್ಪಷ್ಟೀಕರಣವನ್ನೂ ಕೊಡದಷ್ಟು ಮೌನಿಯಾಗಿರುವುದೇಕೆ? ಈ ಮೌನದ ಹಿಂದಿರುವುದು ಅಸಹಾಯಕೆಯೋ ಅನಿವಾರ್ಯತೆಯೋ?
  ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮನಮೋಹನ್ ಸಿಂಗ್‍ರನ್ನು ದುರ್ಬಲ ಪ್ರಧಾನಿ ಎಂದು ಕರೆದಿದ್ದ ಬಿಜೆಪಿಯು ಆಗ ಸ್ವಯಂ ತನಗೆ ತಾನೇ ಪೌರುಷದ ಇಮೇಜನ್ನು ಕೊಟ್ಟುಕೊಂಡಿತ್ತು. ಭಾರತದ ಒಂದು ತಲೆಗೆ ಪಾಕಿಸ್ತಾನದ ಹತ್ತು ತಲೆಗಳ ಸ್ಲೋಗನ್ ಉದುರಿದ್ದೂ ಆವಾಗಲೇ. ಮನಮೋಹನ್ ಸಿಂಗ್‍ರ ಮೃದುತನದ ಎದುರು ಮೋದಿಯವರು ಖಡಕ್ ವ್ಯಕ್ತಿಯಾಗಿ ಕಂಗೊಳಿಸಿದ್ದರು. ಅವರು ಸಕಲ ಸಮಸ್ಯೆಗಳಿಗೂ ಪರಿಹಾರವಾಗಿ ಕಂಡರು. ಅವರ ಮಾತುಗಾರಿಕೆ, ಬಾಡಿ ಲಾಂಗ್ವೇಜ್, ಪ್ರಾಸಬದ್ಧ ಪದಗಳು ಮತ್ತು ಮಾತಿನ ಅಬ್ಬರಗಳೆಲ್ಲ ನಿಷ್ಠುರತೆಯ ಸಂಕೇತಗಳಾಗಿ ಕಂಡವು. ಮುಸ್ಲಿಮ್ ಧರ್ಮಗುರುಗಳು ನೀಡಿದ ಟೋಪಿಯನ್ನು ನಿರಾಕರಿಸಿದ್ದು, ‘ಹಮ್ ಪಾಂಚ್, ಹಮಾರೆ ಪಚ್ಚೀಸ್’ ಎಂದು ಹೇಳಿದ್ದು, ತಾನು ‘ಸ್ವಯಂ ಸೇವಕ' ಎಂದು ಬಹಿರಂಗವಾಗಿಯೇ ಘೋಷಿಸಿದ್ದು.. ಎಲ್ಲವೂ ಅವರ ಸುತ್ತ ನಿಷ್ಠುರತೆಯ ಪ್ರಭಾವಳಿಯೊಂದನ್ನು ಸೃಷ್ಟಿಸಿತ್ತು. ‘ಮೋದಿಯವರು ಪ್ರಧಾನಿಯಾದರೆ ಪಾಕ್‍ಗೆ ಅಣುಬಾಂಬ್ ಹಾಕುತ್ತಾರೆ..' ಎಂದು ಅವರ ಅನುಯಾಯಿಗಳು ಹೇಳುವಷ್ಟು ಅವರ ಗಡಸು ಇಮೇಜು ಜನಪ್ರಿಯವಾಯಿತು. ಆದರೆ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯಾದ ಬಳಿಕ ಪೌರುಷದ ಪ್ರಭಾವಳಿ ನಿಧಾನಕ್ಕೆ ದೂರ ಸರಿಯುತ್ತಿದೆ. ಅವರು ಇನ್ನೋರ್ವ ಮನಮೋಹನ್ ಸಿಂಗ್ ಆಗುತ್ತಿದ್ದಾರೆಯೇ ಹೊರತು ನಿಷ್ಠುರ ನರೇಂದ್ರ ಮೋದಿಯಲ್ಲ ಎಂಬುದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ಅವರು ಪ್ರಧಾನಿಯಾದ ಒಂದು ವರ್ಷದಲ್ಲಿ ಪಾಕ್‍ನಿಂದ ಗಡಿ ಉಲ್ಲಂಘನೆಯ ಪ್ರಕರಣಗಳು ಈ ಹಿಂದೆಂದೂ ಆಗದಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ. ಪಾಕ್ ಸೈನಿಕರ ಗುಂಡಿನ ದಾಳಿಯಿಂದ ಭಾರತೀಯ ಸೈನಿಕರು ಆಗಾಗ ಸಾವನ್ನಪ್ಪುತ್ತಲೂ ಇದ್ದಾರೆ. ಮಾಧ್ಯಮಗಳು ಈ ಕುರಿತಂತೆ ಅಂಕಿ-ಅಂಶಗಳನ್ನೂ ಬಹಿರಂಗಪಡಿಸುತ್ತಲೂ ಇದೆ. ಆದರೆ ಮನಮೋಹನ್ ಸಿಂಗ್‍ರನ್ನು ಇದೇ ಗಡಿ ಪ್ರಶ್ನೆಯನ್ನು ಮುಂದಿಟ್ಟು ನಿಷ್ಕ್ರಿಯ ಸರಕಾರ ಎಂದು ಕರೆದಿದ್ದ ಬಿಜೆಪಿಯು ಇದೀಗ ಅದೇ ನಿಷ್ಕ್ರಿಯ ಪ್ರತಿಕ್ರಿಯೆಯನ್ನಷ್ಟೇ ತೋರುತ್ತಿದೆ. ಪೌರುಷದ ಮಾತುಗಳಾಚೆಗೆ ಪ್ರಾಯೋಗಿಕವಾಗಿ ಅದು ಏನನ್ನೂ ಮಾಡುತ್ತಿಲ್ಲ. ಸೌದಿ ರಾಜತಾಂತ್ರಿಕ ಪ್ರಕರಣವು ಇದಕ್ಕೆ ಇನ್ನೊಂದು ಉದಾಹರಣೆ ಅಷ್ಟೇ.
  ಹಾಗಂತ, ಸಾಮಾನ್ಯ ನಾಗರಿಕರನ್ನು ಹಿಡಿದು ಜೈಲಿಗಟ್ಟುವಂತೆ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಶಿಕ್ಷಿಸಲು ಸಾಧ್ಯವಿಲ್ಲ ನಿಜ. ಜಿನೇವಾ ಒಡಂಬಡಿಕೆಯ ಪ್ರಕಾರವೇ ‘ರಾಜತಾಂತ್ರಿಕ' ಪ್ರಕರಣ ಗಳನ್ನು ಇತ್ಯರ್ಥಪಡಿಸಬೇಕಾಗುತ್ತದೆ. ಆದರೆ ಕದ್ದು ಮುಚ್ಚಿ ವಿಮಾನದಲ್ಲಿ ಕಳುಹಿಸಿಕೊಡುವಷ್ಟು ಜಿನೇವಾ ಒಡಂಬಡಿಕೆ ಕ್ರೂರವೇ? ಹಾಗಿದ್ದರೆ ದೇವಯಾನಿ ಖೋಬ್ರಗದೆ ಪ್ರಕರಣದಲ್ಲಿ ಅಮೇರಿಕ ಅಷ್ಟು ನಿಷ್ಠುರವಾಗಿ ನಡೆದುಕೊಂಡದ್ದು ಹೇಗೆ? ಅವರನ್ನು ಅಮೇರಿಕದ ಪೊಲೀಸರು ಕೈಕೋಳ ತೊಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆಗೂ ಒಳಪಡಿಸಿದ್ದರು. ಆದರೆ ಮೋದಿಯವರ ಸರಕಾರವು ಕನಿಷ್ಠ ತನಿಖೆಗೂ ಒಳಪಡಿಸದೇ ರಹಸ್ಯವಾಗಿ ಸೌದಿ ರಾಜತಾಂತ್ರಿಕರನ್ನು ಕಳುಹಿಸಿಕೊಟ್ಟಿದೆ. ಇದು ಯಾವುದರ ಸೂಚನೆ? ಮೋದಿಯವರು ಮಾತಿನಲ್ಲಿ ಮಾತ್ರ ನಿಷ್ಠುರವೇ, ಕೃತಿಯಲ್ಲಿ ಅವರೂ ಮನಮೋಹನ್ ಸಿಂಗೇ ಆಗಿರುವರೇ?

Tuesday, 15 September 2015

ವರ್ತಮಾನದ ತಲ್ಲಣಗಳು ಮತ್ತು ಹಾಜಿ..

     ವರ್ತಮಾನದ ತಲ್ಲಣಗಳ ನಡುವಿನಿಂದ ಮಕ್ಕಾಕ್ಕೆ ಹೊರಟು ಹೋಗುವ ಹಾಜಿ ಅಲ್ಲಿ  ಮುಖಾಮುಖಿಗೊಳ್ಳುವುದು ಯಾರನ್ನು, ಯಾವುದನ್ನು ಮತ್ತು ಯಾತಕ್ಕಾಗಿ? ಸಫಾ-ಮರ್ವಾ, ಅರಫಾ, ಹಜರುಲ್ ಅಸ್ವದ್, ಜಮರಾತ್, ಮುಝ್ದಲಿಫಾ.. ಇತ್ಯಾದಿಗಳನ್ನು ಹಾಜಿ ಮಕ್ಕಾದಲ್ಲಿ ಮುಖಾಮುಖಿಯಾಗುತ್ತಾನೆ/ಳೆ. ಆತ ಅಲ್ಲಿ ಕಣ್ಣೀರಾಗಬಲ್ಲ, ಪ್ರಾರ್ಥಿಸಬಲ್ಲ, ತನ್ಮಯತೆಯಿಂದ ಜಗವನ್ನೇ ಮರೆಯಬಲ್ಲ. ಅಷ್ಟಕ್ಕೂ, ಈ ಬಗೆಯ ಭಾವತೀವ್ರತೆಯನ್ನು ಹಾಜಿಯೊಳಗೆ ಹುಟ್ಟುಹಾಕಲು ಈ ಸಂಕೇತಗಳಿಗೆ ಹೇಗೆ ಸಾಧ್ಯವಾಗುತ್ತದೆ? ಒಂದು ವೇಳೆ, ಈ ಸಂಕೇತಗಳಗೆ ಭೂತಕಾಲವೊಂದು ಇಲ್ಲ ಎಂದಿಟ್ಟುಕೊಳ್ಳಿ. ಹಾಗಾದರೆ, ಜಮರಾತ್ ಅನ್ನು, ಸಫಾ-ಮರ್ವಾವನ್ನು, ಮುಝ್ದಲಿಫಾವನ್ನು.. ಆತ/ಕೆ ಯಾವ ರೀತಿಯಲ್ಲಿ ಮುಖಾಮುಖಿಯಾಗಬಹುದು? ನಿಜವಾಗಿ, ಭೂತಕಾಲವೊಂದು ಇಲ್ಲದೇ ಇರುತ್ತಿದ್ದರೆ ಸಫಾ-ಮರ್ವಾಕ್ಕೆ ಈ ವರ್ತಮಾನ ಕಾಲದಲ್ಲಿ ಯಾವ ಮಹತ್ವವೂ ಲಭಿಸುತ್ತಿರಲಿಲ್ಲ. ಜಮಾರಾತ್‍ಗೂ ಮುಝ್ದಲಿಫಾಕ್ಕೂ ಅರಫಾ ಮೈದಾನಕ್ಕೂ ಒಂದು ಭೂತಕಾಲವಿದೆ. ಈ ಭೂತಕಾಲದಿಂದಾಗಿಯೇ ಈ ವರ್ತಮಾನದಲ್ಲೂ ಇವುಗಳು ಮತ್ತು ಇಬ್ರಾಹೀಮ್(ಅ), ಇಸ್ಮಾಈಲ್(ಅ), ಹಾಜಿರಾ.. ನಮ್ಮನ್ನು ಕಾಡುವುದು. ಗತ ಇತಿಹಾಸವನ್ನು ಪಕ್ಕಕ್ಕಿಟ್ಟು ನೋಡಿದರೆ ನಮ್ರೂದ್ ಎಂಬುದು ಈ ವರ್ತಮಾನದಲ್ಲಿ ಬರೇ ಒಂದು ಹೆಸರು ಮಾತ್ರ. ಆದರೆ ನಮ್ರೂದ್‍ಗೊಂದು ಇತಿಹಾಸವಿದೆ. ಆ ಇತಿಹಾಸವೇ ಇವತ್ತು ನಮ್ರೂದ್‍ನನ್ನು ಪ್ರಸ್ತುತಗೊಳಿಸುತ್ತದೆ. ಬಹುಶಃ, ಈ ಮೇಲೆ ಉಲ್ಲೇಖಿಸಲಾದ ಸಂಕೇತಗಳನ್ನು ಮುಖಾಮುಖಿಗೊಳ್ಳುವಾಗ ಹಾಜಿಯು ಭಾವುಕವಾಗುವುದಿದ್ದರೆ, ಅವುಗಳ ಗತ ಇತಿಹಾಸವನ್ನು ಸ್ಮರಿಸಿಯೇ ಹೊರತು ವರ್ತಮಾನದ ಬರೇ ಸ್ಥಳಗಳಾಗಿ ಅಲ್ಲ. ಇಂಥ ಬೆಟ್ಟಗಳು, ಮೈದಾನಗಳು ಜಗತ್ತಿನಲ್ಲಿ ನೂರಾರು ಇವೆ. ಇಬ್ರಾಹೀಮ್, ಇಸ್ಮಾಈಲ್, ಹಾಜಿರಾ.. ಮುಂತಾದ ಹೆಸರುಗಳು ಜಗತ್ತಿನಲ್ಲಿ ಕೋಟ್ಯಂತರ ಇರಬಹುದು. ಆದರೆ ಅವಾವುವೂ ಹಾಜಿಯನ್ನು ಭಾವುಕಗೊಳಿಸುವುದೋ ಉನ್ಮಾದಗೊಳಿಸುವುದೋ ಮಾಡುತ್ತಿಲ್ಲ. ನಿಜವಾಗಿ, ಹಾಜಿ ವರ್ತಮಾನದಲ್ಲಷ್ಟೇ ಬದುಕುತ್ತಿಲ್ಲ. ಆತನ ಎದುರು ಭೂತ(ಗತ)ಕಾಲವೊಂದಿದೆ. ಆ ಕಾಲದ ದಟ್ಟ ಪ್ರಭಾವವೇ ಈ ವರ್ತಮಾನದಲ್ಲೂ ಆತನನ್ನು ಹಾಜಿಯನ್ನಾಗಿಸುತ್ತದೆ. ಗತದ ಸ್ಮರಣೆಯು ಆತ/ಕೆಯನ್ನು ತಲ್ಲಣಗೊಳಿಸುತ್ತದೆ. ಜಮಾರಾತ್‍ನಲ್ಲಿ ಕಂಭಗಳಿಗೆ ಕಲ್ಲೆಸೆಯುವ ಹಾಜಿಯನ್ನು ಗತ ಇತಿಹಾಸ ಗೊತ್ತಿಲ್ಲದ ಪ್ರವಾಸಿಯೋರ್ವ ನೋಡಿದರೆ ಅಚ್ಚರಿ ಪಡಬಲ್ಲ. ಯಾಕೆಂದರೆ, ಬರೇ ವರ್ತಮಾನದಲ್ಲಷ್ಟೇ ಬದುಕುವ ವ್ಯಕ್ತಿಗೆ ಅದು ಬರೇ ಕಂಬ ಮಾತ್ರ. ಆದರೆ ಹಾಜಿ ಗತ ಕಾಲದಲ್ಲೂ ಬದುಕುತ್ತಾನೆ. ಆದ್ದರಿಂದಲೇ ಆತ ಎಸೆಯುವುದು ಕಲ್ಲುಗಳನ್ನಲ್ಲ, ಆತನ ಗುರಿಯಲ್ಲಿರುವುದು ಕಂಬಗಳೂ ಅಲ್ಲ. ಹೀಗೆ ಹಾಜಿಯು ವರ್ತಮಾನ ಮತ್ತು ಭೂತಕಾಲವನ್ನು ಸಮನ್ವಯಗೊಳಿಸಿದ ಒಂದು ಅಪೂರ್ವ ಮಾದರಿಯಾಗಿ ಕಾಣಿಸಿಕೊಳ್ಳುತ್ತಾನೆ. ಆದರೆ, ಹಾಜಿ ಇಲ್ಲಿ ಉತ್ತರಿಸಬೇಕಾದ ಒಂದು ಪ್ರಶ್ನೆಯಿದೆ. ಈ ಸಮನ್ವಯತೆ ಕೇವಲ ಹಜ್ಜ್ ಗೆ ಮಾತ್ರ ಯಾಕೆ ಸೀಮಿತಗೊಳ್ಳಬೇಕು? ಬದುಕಿನ ಇತರ ಸಂದರ್ಭಗಳಲ್ಲೂ ಯಾಕೆ ಅದು ಕಾಣಿಸಿಕೊಳ್ಳಬಾರದು? ಅಂದಹಾಗೆ, ಹಾಜಿ ಬದುಕುವ ಈ ವರ್ತಮಾನ ಕಾಲದಲ್ಲಿ ನೂರಾರು ತಲ್ಲಣಗಳಿವೆ. ಬಡ್ಡಿಯಿದೆ, ವರದಕ್ಷಿಣೆಯಿದೆ, ವಂಚನೆಯಿದೆ, ಕೋಮುವಾದ, ಅನೈತಿಕತೆ, ಅಪನಂಬಿಕೆ, ಅನಾಚಾರ, ಅನೈಕ್ಯತೆ, ಶೋಷಣೆ.. ಇದೆ. ಹಸಿವು, ಕಣ್ಣೀರು ಇದೆ. ನಿಜವಾಗಿ, ಇವು ಮತ್ತು ಇನ್ನಿತರ ವರ್ತಮಾನದ ತಲ್ಲಣಗಳು ಹಾಜಿಯನ್ನು ತಟ್ಟಲೇ ಬೇಕು. ಸಫಾ-ಮರ್ವಾಗಳು ಅವುಗಳ ಗತ ಇತಿಹಾಸದಿಂದಾಗಿ ಹಾಜಿಯನ್ನು ಭಾವುಕಗೊಳಿಸುವುದಾದರೆ, ವರ್ತಮಾನದ ಈ ತಲ್ಲಣಗಳನ್ನು ಕೂಡ ಹಾಜಿಯು ಇತಿಹಾಸದ ಬೆಳಕಿನಲ್ಲಿ ಇಟ್ಟು ನೋಡಬೇಕು. ಹಾಗಾದಾಗ ಸಮಾಜದ ಬಡ್ಡಿಯಾಧಾರಿತ ಬದುಕು ಹಾಜಿಯೊಳಗೆ ತಲ್ಲಣಗಳನ್ನು ಹುಟ್ಟಿಸಬಹುದು. ಹಸಿವು, ಸೋರುವ ಮಾಡು, ವರದಕ್ಷಿಣೆ, ವಂಚನೆ.. ಎಲ್ಲವೂ ಹಾಜಿಯನ್ನು ಭಿನ್ನ ಭಾವದಲ್ಲಿ ತಟ್ಟಬಹುದು. ಇಬ್ರಾಹೀಮರ(ಅ) ಆಲೋಚನೆಗಳನ್ನು ಸಮಾಜಕ್ಕೆ ತಿಳಿಸಲು ಮತ್ತು ಅವರು ಕಟ್ಟಬಯಸಿದ ಸಮಾಜವನ್ನು ಸ್ಥಾಪಿಸಲು ಹಾಜಿ ಪಣತೊಡಬಹುದು.
     ಓರ್ವ ವ್ಯಕ್ತಿ ಹಜ್ಜ್ ಗೆ ಕಡ್ಡಾಯವಾಗಿ ತೆರಳಬೇಕಾದುದು ಒಮ್ಮೆ ಮಾತ್ರ. ಹಾಗಂತ, ಆ ಬಳಿಕವೂ ಆತನಲ್ಲಿ ದುಡ್ಡು, ಆರೋಗ್ಯ, ಪ್ರತಿಭೆ ಎಲ್ಲವೂ ಇರಬಹುದು. ಆದರೂ ಆತ ಕಡ್ಡಾಯವಾಗಿ ಮತ್ತೊಮ್ಮೆ ಮಕ್ಕಾಕ್ಕೆ ತೆರಳಬೇಕಿಲ್ಲ. ಇದುವೇ ಓರ್ವ ಹಾಜಿಯ ಗುರಿಯನ್ನು ಸ್ಪಷ್ಟಪಡಿಸುತ್ತದೆ. ಹಾಜಿಯ ಚಟುವಟಿಕೆಯ ಕೇಂದ್ರ ಮಕ್ಕಾ ಅಲ್ಲ, ಆತನ ಊರು. ಆ ಊರನ್ನು ಮಕ್ಕಾ (ಶಾಂತಿಯ ಕೇಂದ್ರ) ಆಗಿಸುವುದೇ ಹಾಜಿಯ ಗುರಿ. ಅದಕ್ಕಾಗಿ ಪ್ರತಿಜ್ಞೆ ಕೈಗೊಳ್ಳುವ ಸಂದರ್ಭವೇ ಹಜ್ಜ್ ಯಾತ್ರೆ. ಒಂದು ವೇಳೆ, ಈ ಅರ್ಥದಲ್ಲಿ ನಮ್ಮ ಹಜ್ಜ್ ನಿರ್ವಹಣೆಯಾಗುವುದಾದರೆ ಒಂದು ದಿನ ಜಗತ್ತೇ `ಶಾಂತಿಯ ಕೇಂದ್ರ' ಆಗಬಹುದು. ಹಾಗಾಗಲಿ ಎಂದು ಹಾರೈಸೋಣ.

Tuesday, 8 September 2015

‘ದೊಡ್ಡವರ’ ಹೃದಯ ಹೀನತೆಯನ್ನು ಪ್ರತಿಭಟಿಸಿ ಹೊರಟು ಹೋದ ಮಗು

ಅಯ್ಲಾನ್ ಕುರ್ದಿ
     ನಿಲೋಫರ್ ಡೆಮಿಕ್ ಎಂಬ ಪತ್ರಕರ್ತ ಕ್ಲಿಕ್ಕಿಸಿದ ಪೋಟೋವೊಂದು ಜಗತ್ತಿನ ಕಣ್ಣನ್ನೇ ಮಂಜಾಗಿಸಿದೆ. ಕೆಂಪು ಟೀ ಶರ್ಟ್, ನೀಲಿ ಚಡ್ಡಿ, ಶೂಸ್ ಧರಿಸಿರುವ 3 ವರ್ಷದ ಪುಟ್ಟ ಮಗುವೊಂದು ಟರ್ಕಿಯ ಬೋರ್ಡಮ್ ಸಮುದ್ರ ದಂಡೆಯಲ್ಲಿ ಬೋರಲಾಗಿ ಬಿದ್ದಿರುವ ಪೋಟೋವನ್ನು ನೋಡಿ ಫ್ರಾನ್ಸಿನ ಅಧ್ಯಕ್ಷ ಫ್ರಾಂಕೊಯಿಸ್ ಹಾಲೆಂಡ್‍ರು ಟರ್ಕಿಯ ಅಧ್ಯಕ್ಷ ಉರ್ದುಗಾನ್‍ರಿಗೆ ದೂರವಾಣಿ ಕರೆ ಮಾಡಿದ್ದಾರೆ. ಆ ಪೋಟೋವು ನಿರಾಶ್ರಿತರ ಬಗ್ಗೆ ಜಗತ್ತಿನ ಹೊಣೆಗಾರಿಕೆಯನ್ನು ನೆನಪಿಸಿತು ಎಂದು ಹೇಳಿದ್ದಾರೆ. ಬ್ರಿಟನ್ನಿನ ಪ್ರಧಾನಿ ಡೇವಿಡ್ ಕ್ಯಾಮರೂನ್, ಐರಿಶ್ ಪ್ರಧಾನಿ ಎಂಡಾ ಕೆನ್ನಿ ಸಹಿತ ಎಲ್ಲರೂ ಸಹಿತ ಆ ಪೋಟೋಗೆ ಮರುಗಿದ್ದಾರೆ. ನಿರಾಶ್ರಿತರಿಗಾಗಿ ತನ್ನ ಎರಡನೇ ಮನೆಯನ್ನೇ ಬಿಟ್ಟು ಕೊಡುವುದಾಗಿ ಐರಿಶ್ ಪ್ರಧಾನಿಯವರು ಹೇಳಿಕೊಂಡಿದ್ದಾರೆ. ದಿ ಸ್ಪೆಕ್ಟೇಟರ್, ದಿ ಗಾರ್ಡಿಯನ್ ಸಹಿತ ಜಗತ್ತಿನ ಪ್ರಸಿದ್ಧ ಪತ್ರಿಕೆಗಳಿಂದ ಹಿಡಿದು ಸ್ಥಳೀಯ ಪತ್ರಿಕೆಗಳ ವರೆಗೆ ಎಲ್ಲವೂ ಅಯ್ಲಾನ್ ಕುರ್ದಿ ಎಂಬ ಆ ಮಗುವಿನ ಬಗ್ಗೆ ಬರೆದಿವೆ. ‘ಮೈಗ್ರಾಂಟ್ ಆಫ್‍ಶೋರ್ ಏಡ್ ಸ್ಟೇಷನ್’ (Migrant Offshore Aid Station) ಎಂಬ ಹೆಸರಲ್ಲಿ ನಿರಾಶ್ರಿತರಿಗೆ ನೆರವು ಸಂಗ್ರಹಿಸುವ ಪ್ರಯತ್ನಕ್ಕೆ ಈ ಪೋಟೋ ಕಾರಣವಾಗಿದೆ. ಒಂದು ರೀತಿಯಲ್ಲಿ, 2014ರಲ್ಲಿ ಪ್ರಕಟವಾಗಿದ್ದ ಪುಟ್ಟ ಫೆಲೆಸ್ತೀನಿ ಬಾಲಕನ ಪೋಟೋದ ಬಳಿಕ ಜಗತ್ತನ್ನು ತೀವ್ರವಾಗಿ ಕಾಡಿದ ಪೋಟೋ ಇದು. ಗುಂಡಿನ ದಾಳಿಯಿಂದ ತೂತು ತೂತಾಗಿದ್ದ ಕಪ್ಪು ಬೋರ್ಡಿನಲ್ಲಿಫೆಲೆಸ್ತೀನಿನ ಆ ಬಾಲಕ ತದೇಕಚಿತ್ತದಿಂದ ಏನನ್ನೋ ಬರೆಯುತ್ತಿದ್ದ ದೃಶ್ಯ ಅದು. ಇಸ್ರೇಲ್‍ನ ದಾಳಿಯಿಂದ ಜರ್ಝರಿತಗೊಂಡ ಗಾಝಾದ ಬಗ್ಗೆ ಜಗತ್ತಿನ ಗಮನ ಸೆಳೆಯುವುದಕ್ಕೆ ಅಂದು ಆ ಬಾಲಕ ಕಾರಣವಾಗಿದ್ದರೆ ಇಂದು ಈ ಮಗು ಸಿರಿಯನ್ ನಿರಾಶ್ರಿತರ ಬಗ್ಗೆ ಜಾಗತಿಕ ಚರ್ಚೆ ನಡೆಯುವುದಕ್ಕೆ ಕಾರಣವಾಗಿದೆ. ಎರಡನೇ ಜಾಗತಿಕ ಯುದ್ಧದ ಬಳಿಕ ಜಗತ್ತು ಎದುರಿಸುತ್ತಿರುವ ಅತಿ ದೊಡ್ಡ ವಲಸೆ ಸಮಸ್ಯೆ ಇದು. ತಮ್ಮ ಗಡಿಗಳಲ್ಲಿ ತುಂಬಿಕೊಂಡಿರುವ ನಿರಾಶ್ರಿತರನ್ನು ಒಳಗೆ ಸೇರಿಸಲು ನಿರಾಕರಿಸುತ್ತಿದ್ದ ಹಂಗರಿ, ಬ್ರಿಟನ್, ಇಟಲಿ, ಪೋರ್ಚುಗೀಸ್, ಸ್ಪೈನ್‍ಗಳು ಈ ಮಗುವನ್ನು ನೋಡಿ ಬೆಚ್ಚಿ ಬಿದ್ದಿವೆ. ಮಾತ್ರವಲ್ಲ, ಈ ಎಲ್ಲ ರಾಷ್ಟ್ರಗಳು ನಿರಾಶ್ರಿತರಿಗೆ ತಂತಮ್ಮ ಗಡಿಯನ್ನು ತೆರೆದು ಬಿಡುವಷ್ಟು ಆ ಪೋಟೋ ಒತ್ತಡವನ್ನು ಹೇರಿದೆ. ನಿಜವಾಗಿ, ನಮ್ಮ ಕಣ್ಣನ್ನು ಮಂಜಾಗಿಸಬೇಕಾದ ಮತ್ತು ಹೃದಯವನ್ನು ಗಾಢವಾಗಿ ತಟ್ಟಬೇಕಾದ ಪೋಟೋ ಅದು. ದೊಡ್ಡವರ ಅಹಂಕಾರ, ಸ್ವಾರ್ಥಗಳಿಗೆ ಎಂದೂ ಬಲಿಯಾಗುವುದು ಮಕ್ಕಳೇ. ಕತ್ತಿ, ಚೂರಿ, ಬಾಂಬು, ಬಂದೂಕು.. ಎಲ್ಲವೂ ದೊಡ್ಡವರ ಅಸ್ತ್ರಗಳು. ಅದನ್ನು ಮಕ್ಕಳು ತಯಾರಿಸಿರುವುದಿಲ್ಲ. ಬಳಸುವುದೂ ಇಲ್ಲ. ದುರಂತ ಏನೆಂದರೆ, ಅಧಿಕಾರಕ್ಕೋ ಸಂಪತ್ತಿಗೋ ಅಥವಾ ಇನ್ನಾವುದಾದರೂ ಸ್ವಾರ್ಥ ಉದ್ದೇಶಕ್ಕೋ 'ದೊಡ್ಡವರು' ಈ ಅಸ್ತ್ರಗಳನ್ನೆಲ್ಲ ಹಿಡಿದು ಕಾದಾಡುವಾಗ ಮಕ್ಕಳು ಅದರ ಎಲ್ಲ ನೋವುಗಳನ್ನೂ ಅನುಭವಿಸುತ್ತಾ ಬದುಕಬೇಕಾಗುತ್ತದೆ. ಏನೆನ್ನಬೇಕು ಇದಕ್ಕೆ? ದೊಡ್ಡವರ ಉದ್ದೇಶಕ್ಕಾಗಿ ಮಕ್ಕಳನ್ನು ಬಲಿ ನೀಡುವುದು ಎಷ್ಟು ಸರಿ? ಮಕ್ಕಳಿಗೆ ಅಧಿಕಾರ ಬೇಕಿಲ್ಲ, ಸಂಪತ್ತು ಬೇಕಿಲ್ಲ, ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೂ ಅವಕ್ಕಿಲ್ಲ. ಅವುಗಳಿಗೆ ಬಾಲ್ಯವಷ್ಟೇ ಬೇಕು. ಅಮ್ಮ-ಅಪ್ಪನ ಬೆಚ್ಚನೆಯ ಪ್ರೀತಿ ಬೇಕು. ಶಾಲೆ ಬೇಕು, ಅಕ್ಷರ ಬೇಕು. ಅಪಾಯ ಮುಕ್ತ ಬಯಲು ಬೇಕು. ಆದರೆ ಇವೆಲ್ಲವನ್ನೂ ನಿರಾಕರಿಸಿದ ದೊಡ್ಡವರ ವರ್ತನೆಗೆ ಮುನಿಸಿಕೊಂಡು ಸಮುದ್ರ ದಂಡೆಯಲ್ಲಿ ಆ ಮಗು ಬೋರಲಾಗಿ ಮಲಗಿರುವಂತೆ ಅನಿಸುತ್ತಿದೆ. ಮರಳಿನಲ್ಲಿ ಆಟವಾಡಲು ಬಿಡದ ಹೆತ್ತವರೊಂದಿಗೆ ಮುನಿಸಿಕೊಳ್ಳುವಂತಹ ಹಠ. ಅಷ್ಟಕ್ಕೂ, ಪುಟ್ಟ ಅಯ್ಲಾನ್ ಕುರ್ದಿ ತನ್ನ ಹುಟ್ಟೂರು ಸಿರಿಯಾದಿಂದ ಟರ್ಕಿಗೆ ವಲಸೆ ಹೋಗಬೇಕೆಂದು ಬಯಸಿರುವ ಸಾಧ್ಯತೆ ಇಲ್ಲವೇ ಇಲ್ಲ. ಆದರೆ ‘ದೊಡ್ಡವರು’ ಸಿರಿಯಾದಲ್ಲಿ ಅಂಥದ್ದೊಂದು ವಾತಾವರಣವನ್ನು ನಿರ್ಮಿಸಿದ್ದರು. ಆದ್ದರಿಂದಲೇ, ಆತನ ತಂದೆ ಮತ್ತು ತಾಯಿ ಆತನನ್ನೂ ಆತನ ಅಣ್ಣ 5 ವರ್ಷದ ಗಾಲಿಬ್‍ನನ್ನೂ ಎತ್ತಿಕೊಂಡು ವರ್ಷಗಳ ಹಿಂದೆ ಸಿರಿಯದಿಂದ ಟರ್ಕಿಗೆ ಆಗಮಿಸಿದ್ದರು. ಅಲ್ಲಿ ಅಯ್ಲಾನ್ ಸುಖವಾಗಿರಲಿಲ್ಲ. ಎಲ್ಲೆಲ್ಲೂ ನಿರಾಶ್ರಿತರು. ಕೊನೆಗೆ ಅಲ್ಲಿಂದ 3 ಮೈಲುಗಳಷ್ಟು ದೂರ ಇರುವ ಗ್ರೀಸ್‍ಗೆ ತೆರಳಿ ಅಲ್ಲಿಂದ ಕೆನಡದಲ್ಲಿರುವ ಸಂಬಂಧಿಕರನ್ನು ಸೇರಲು  ಮಗುವಿನ ಹೆತ್ತವರು ತೀರ್ಮಾನಿಸಿದರು. ಪಾಸ್‍ಪೋರ್ಟ್, ನಿರ್ಗಮನ ವಿಸಾ ಮತ್ತು ದುಡ್ಡು ಇಲ್ಲದ ಕುಟುಂಬವು ವಿಮಾನ ಹತ್ತುವುದು ಸಾಧ್ಯವಿರಲಿಲ್ಲ. ಹಾಗಂತ, ಇದು ಕೇವಲ ಈ ಕುಟುಂಬವೊಂದರ ಸಮಸ್ಯೆ ಅಲ್ಲ, ಸಂಘರ್ಷ ಪೀಡಿತ ಪಶ್ಚಿಮೇಶ್ಯಾದ ಲಕ್ಷಾಂತರ ಕುಟುಂಬಗಳು ಇವೇ ಸಮಸ್ಯೆಯನ್ನು ಎದುರಿಸುತ್ತಿವೆ. ಆದ್ದರಿಂದಲೇ, ಕಳೆದ ವಾರ ಅಯ್ಲಾನ್‍ನ ಹೆತ್ತವರು 3 ಮೈಲಿನ ಸಮುದ್ರ ಪ್ರಯಾಣಕ್ಕಾಗಿ ರಬ್ಬರ್ ದೋಣಿಯನ್ನು ಏರಿದರು. 8 ಮಂದಿ ಪ್ರಯಾಣಿಸಬಹುದಾದ ದೋಣಿಯಲ್ಲಿ 15 ಮಂದಿ ಇದ್ದುದರಿಂದಲೇ ಏನೋ ಸಮುದ್ರದಲೆಗೆ ದೋಣಿ ಮಗುಚಿ ಬಿತ್ತು. ಅಯ್ಲಾನ್‍ನ ತಂದೆಯ ಹೊರತು ಉಳಿದವರೆಲ್ಲರೂ ಸಾವಿಗೀಡಾದರು. ಅದೇ ದಿನ ಆ ಮಗುವಿನ ಮೃತದೇಹ ಬೋರ್ಡಮ್ ಸಮುದ್ರ ಕಿನಾರೆಯಲ್ಲಿ ಬೋರಲಾಗಿ ಬಿದ್ದಿರುವ ರೀತಿಯಲ್ಲಿ ಪತ್ತೆಯಾಯಿತು.
ಫೆಲೆಸ್ತೀನಿನ  ಬಾಲಕ
    ಅಷ್ಟಕ್ಕೂ, ಸಂಘರ್ಷ ಪೀಡಿತ ಪಶ್ಚಿಮೇಶ್ಯಕ್ಕೆ ಈ ಸಾವು ಹೊಸತಲ್ಲ. ಹೀಗೆ ಅನಧಿಕೃತವಾಗಿ ಸಮುದ್ರ ಮಾರ್ಗವಾಗಿ ಪ್ರಯಾಣಿಸಿದ 26 ಸಾವಿರಕ್ಕಿಂತಲೂ ಅಧಿಕ ನಿರಾಶ್ರಿತರು ಈಗಾಗಲೇ ಸಾವಿಗೀಡಾಗಿದ್ದಾರೆ. ಇದರಲ್ಲಿ ದೊಡ್ಡದೊಂದು ಭಾಗ ಮಕ್ಕಳದ್ದು. ಸಿರಿಯದಲ್ಲಿ ಪ್ರತಿ 4ರಲ್ಲಿ ಒಂದು ಶಾಲೆ ನಿರಾಶ್ರಿತರ ಶಿಬಿರವಾಗಿ ಮಾರ್ಪಟ್ಟಿವೆ. ಇರಾಕ್‍ನಲ್ಲಿ 3 ಮಿಲಿಯನ್ ಜನರು ಶಾಲೆಗಳಲ್ಲಿ ನಿರಾಶ್ರಿತರಾಗಿ ಉಳಿದುಕೊಂಡಿದ್ದಾರೆ. ಸಿರಿಯ, ಇರಾಕ್, ಯಮನ್, ಲಿಬಿಯಗಳಲ್ಲಿ 13.4 ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. 8,850 ಶಾಲೆಗಳು ಉಪಯೋಗಶೂನ್ಯವಾಗಿ ಭಣಗುಟ್ಟುತ್ತಿದೆ. ಲಿಬಿಯದ ಶೇ. 73 ಶಾಲೆಗಳಲ್ಲಿ ತರಗತಿಗಳೇ ನಡೆಯುತ್ತಿಲ್ಲ. ಸಿರಿಯದ ಸುಮಾರು 56 ಸಾವಿರ ಶಿಕ್ಷಕರು ಮತ್ತು ಅಧಿಕಾರಿಗಳು ಕೆಲಸ ತೊರೆದಿದ್ದಾರೆ... ಮಕ್ಕಳ ಜಗತ್ತಿನ ಪುಟ್ಟ ಚಿತ್ರಣ ಇದು. ದೊಡ್ಡವರೇಕೆ ಇಷ್ಟು ಕ್ರೂರಿಗಳಾಗುತ್ತಿದ್ದಾರೆ? ಹೃದಯವೇ ಇಲ್ಲದಂತೆ ಮತ್ತು ಸಂವೇದನೆಯೇ ಸತ್ತಂತೆ ವರ್ತಿಸುತ್ತಿದ್ದಾರೆ? ಶಾಲೆ ಮಕ್ಕಳದ್ದು. ಬಯಲು ಮಕ್ಕಳದ್ದು. ಬಾಲ್ಯವೂ ಮಕ್ಕಳದ್ದೇ. ಅದನ್ನು ಆ ಮಕ್ಕಳಿಗೆ ಒದಗಿಸಬೇಕಾದ ದೊಡ್ಡವರು ಬಾಂಬು, ಬಂದೂಕುಗಳ ಮೂಲಕ ಅವನ್ನು ನಿರಾಕರಿಸುತ್ತಿರುವುದಕ್ಕೆ ಏನೆನ್ನಬೇಕು? ಅಂದಹಾಗೆ, ಜಗತ್ತಿನ ಸರ್ವ ಆಂತರಿಕ ಸಮಸ್ಯೆಗಳಲ್ಲೂ ಸುದ್ದಿಗೀಡಾಗದೇ ಇರುವುದು ಮಕ್ಕಳು ಮಾತ್ರ. ಯಾಕೆಂದರೆ, ಅವಕ್ಕೆ ಪ್ರತಿಭಟಿಸಲು ಬರುವುದಿಲ್ಲ. ಹುದುಗಿಸಿಟ್ಟ ಬಾಂಬುಗಳ ಪರಿಜ್ಞಾನ ಇರುವುದಿಲ್ಲ. ಐಸಿಸ್‍ನ ಉದ್ದೇಶ, ಅಮೇರಿಕದ ಗುರಿ, ಇಸ್ರೇಲ್ ಬಯಕೆ ಅಥವಾ ಇನ್ನಾರೋ ದೊಡ್ಡವರ ಹುನ್ನಾರಗಳು ಅರ್ಥವಾಗಿರುವುದಿಲ್ಲ. ಹೆತ್ತವರು ಓಡುವಾಗ ಅವೂ ಓಡುತ್ತವೆ. ಅವರು ಅಳುವಾಗ ಅವೂ ಅಳುತ್ತವೆ. ಹಸಿವಾದರೂ ಅಮ್ಮ ಯಾಕೆ ಊಟ ಕೊಡಲ್ಲ ಎಂದು ಕೊರಗುತ್ತವೆ. ಹೀಗೆ ಇತರರನ್ನೇ ಆಶ್ರಯಿಸಿ ಬದುಕುವ ಪೀಳಿಗೆ ಅದು. ಆದ್ದರಿಂದಲೇ, ಅಪ್ಪನೊಂದಿಗೆ ಅಯ್ಲಾನ್ ಕುರ್ದಿ ರಬ್ಬರ್ ದೋಣಿ ಏರಿದ್ದಾನೆ. ಒಂದು ರೀತಿಯಲ್ಲಿ, ದೊಡ್ಡವರೆಲ್ಲ ಸೇರಿ ಮಾಡಿದ ಅಮಾನುಷ ಹತ್ಯೆ ಇದು. ನಿರಾಶ್ರಿತರಾಗಿ ಬದುಕುವುದು, ದೋಣಿ ಏರುವುದು, ಗ್ರೀಸ್‍ಗೆ ತೆರಳುವುದೆಲ್ಲ ಆ ಮಗುವಿನ ಅನಿವಾರ್ಯತೆಗಳಲ್ಲವಲ್ಲ. ಅದನ್ನು ಅನಿವಾರ್ಯಗೊಳಿಸಿದ್ದು ಸಿರಿಯ, ಐಸಿಸ್, ಅಮೇರಿಕ... ಮುಂತಾದ ದೊಡ್ಡವರು. ಆದ್ದರಿಂದ ಈ ಸಾವಿನ ಹೊಣೆಯನ್ನು ಅವರೆಲ್ಲ ಹೊತ್ತುಕೊಳ್ಳಲಿ. ಇನ್ನಾದರೂ ಈ ಜಗತ್ತನ್ನು ಮಕ್ಕಳಿಂದ  ಕಸಿಯದಿರಲಿ.

Tuesday, 1 September 2015

ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಉಳಿಸಿಕೊಳ್ಳುತ್ತಲೇ ಕಲಬುರ್ಗಿಯವರ ಹತ್ಯೆಯನ್ನು ಖಂಡಿಸೋಣ

    ವೈಚಾರಿಕ ಭಿನ್ನಾಭಿಪ್ರಾಯಗಳ ನೆಲೆ-ಬೆಲೆ ಮತ್ತು ಭವಿಷ್ಯವನ್ನು ಡಾ| ಕಲಬುರ್ಗಿಯವರ ಸಾವು ಮತ್ತೊಮ್ಮೆ ಪ್ರಶ್ನಾರ್ಹಗೊಳಿಸಿದೆ. ಈ ಪ್ರಶ್ನೆ ಮೊದಲಾಗಿ ಕಾಣಿಸಿಕೊಂಡದ್ದು ಅನಂತಮೂರ್ತಿಯವರ ಸಾವಿನೊಂದಿಗೆ. ಅವರ ಸಾವನ್ನು ಇಲ್ಲಿಯ ಒಂದು ವರ್ಗ ಪಟಾಕಿ ಸಿಡಿಸಿ ಸಂಭ್ರಮಿಸಿತ್ತು. ಅವರ ಸಾವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ ವ್ಯಕ್ತಪಡಿಸಲಾಗಿತ್ತು. ಇದೀಗ ಕಲಬುರ್ಗಿಯವರನ್ನೂ ಅದೇ ರೀತಿಯಲ್ಲಿ ಸ್ವಾಗತಿಸಲಾಗಿದೆ. ವಿಶೇಷ ಏನೆಂದರೆ, ಅನಂತಮೂರ್ತಿಯವರ ಸಾವು ಸಹಜವಾಗಿದ್ದರೆ ಕಲಬುರ್ಗಿಯವರದ್ದು ಅಸಹಜ ಮತ್ತು ಅಮಾನುಷ. ಅವರಿಗೆ ಗುಂಡಿಕ್ಕಿದವರು ಯಾರು ಮತ್ತು ಅದಕ್ಕೆ ಕಾರಣಗಳೇನು ಎಂಬುದು ಇನ್ನೂ ಗೊತ್ತಾಗುವ ಮೊದಲೇ ಈ ಸಂಭ್ರಮಾಚರಣೆ ನಡೆದಿದೆ. ಆದ್ದರಿಂದಲೇ ಈ ಬೆಳವಣಿಗೆಯನ್ನು ನಾವು ಆತಂಕದಿಂದಲೇ ನೋಡಬೇಕಾಗುತ್ತದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಪ್ರಗತಿಪರ ಬ್ಲಾಗರುಗಳ (ಬರಹಗಾರರು) ಹತ್ಯೆ ನಡೆದಾಗ ‘ಶಂಕಿತ ಮುಸ್ಲಿಮ್ ಮೂಲಭೂತವಾದಿಗಳಿಂದ' ಎಂಬ ವಾಕ್ಯದ ಜೊತೆಗೇ ಆ ಸುದ್ದಿಯನ್ನು ಹೆಚ್ಚಿನ ಮಾಧ್ಯಮಗಳು ಪ್ರಕಟಿಸಿದ್ದುವು. ಕಲಬುರ್ಗಿಯವರ ಹತ್ಯೆಗೆ ಸಂಬಂಧಿಸಿ ಅಂತಹ ಯಾವ ‘ಶಂಕಿತ ಮೂಲಭೂತವಾದಿ’ ಪದಗಳೂ ಕನ್ನಡ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿಲ್ಲ. ಅವರ ಹತ್ಯೆಯನ್ನು ಬೆಂಬಲಿಸಿ ಬಹಿರಂಗವಾಗಿಯೇ ಸಂತಸ ಹಂಚಿಕೊಂಡ ಘಟನೆಗಳು ಜರುಗಿದ ಹೊರತಾಗಿಯೂ ಹೀಗಾಗಿದೆ ಎಂಬುದು ಸ್ಪಷ್ಟ. ಹಾಗಂತ, ಇದು ಆರೋಪ ಅಲ್ಲ. ಮಾಧ್ಯಮಗಳ ಈ ಸಹನೆಯನ್ನು ನಾವು ಸದುದ್ದೇಶದಿಂದಲೇ ಸ್ವೀಕರಿಸೋಣ. ಹತ್ಯೆಕೋರರನ್ನೂ ಮತ್ತು ಹತ್ಯೆಗೆ ಸಂತೋಷ ವ್ಯಕ್ತಪಡಿಸಿದವರನ್ನೂ ಪ್ರತ್ಯೇಕವಾಗಿಯೇ ನೋಡುವ ಮಾಧ್ಯಮ ಎಚ್ಚರವನ್ನು ಗೌರವಿಸೋಣ ಮತ್ತು ಈ ಎಚ್ಚರ ಸದಾ ಇರುತ್ತದೆ ಎಂದು ನಿರೀಕ್ಷಿಸೋಣ.
   ಅಷ್ಟಕ್ಕೂ, ಕಲಬುರ್ಗಿಯವರ ಸಾವು ಮತ್ತು ಬದುಕನ್ನು ನಾವು ಈ ವಿಘ್ನ ಸಂತೋಷಿಗಳ ಗುಂಪಿನಿಂದ ಹೊರಗಿಟ್ಟು ನೋಡಬೇಕಾಗಿದೆ. ಅವರು ಬದುಕಿರುವಷ್ಟೂ ದಿನ ಪ್ರಶ್ನೆಗಳೊಂದಿಗೇ ಬದುಕಿದರು. ಆ ಪ್ರಶ್ನೆಗಳು ಎಷ್ಟು ಪ್ರಖರವಾಗಿದ್ದುವು ಎಂಬುದನ್ನು ನೂರಕ್ಕಿಂತಲೂ ಅಧಿಕಾರವಾಗಿರುವ ಅವರ ಸಾಹಿತ್ಯ ಕೃತಿಗಳೇ ಹೇಳುತ್ತವೆ. ಈ ಸಾಹಿತ್ಯ ಭಂಡಾರದಲ್ಲಿ ಇರುವುದೆಲ್ಲ ಸಂಶೋಧನಾತ್ಮಕ ಬರಹಗಳು ಮತ್ತು ಸಂಪಾದನೆಗಳೇ. ಬಹುಶಃ, ಅವರು ಕಾದಂಬರಿಯನ್ನು ಬರೆದೇ ಇಲ್ಲ. ಒಂದು ಕವನ, ಒಂದು ನಾಟಕ, ಒಂದು ಸಣ್ಣಾಟವನ್ನು ಬಿಟ್ಟರೆ ಉಳಿದಂತೆ ಕಲಬುರ್ಗಿಯವರ ಜೋಳಿಗೆಯ ತುಂಬ ಸಂಶೋಧನಾತ್ಮಕ ಬರಹಗಳೇ ತುಂಬಿಕೊಂಡಿದ್ದುವು. ಅವರೋರ್ವ ಪ್ರಶ್ನೆಗಳ ಸರದಾರ. ಅವರು ಮೂರ್ತಿಪೂಜೆಯನ್ನು ಪ್ರಶ್ನಿಸಿದರು. ನಾಗರ ಕಲ್ಲಿನ ಸುತ್ತ ಹರಡಿರುವ ಭಯವನ್ನು ದುರ್ಬಲಗೊಳಿಸಿದರು. ಚನ್ನ ಬಸವಣ್ಣನ ಹುಟ್ಟಿನ ಬಗ್ಗೆ ಬರೆದು ವೀರಶೈವರಿಂದ ವಿರೋಧ ಕಟ್ಟಿಕೊಂಡರು. ಹಿಂದೂ ಧರ್ಮದ ಅಸ್ತಿತ್ವವನ್ನೇ ಪ್ರಶ್ನೆಗೀಡು ಮಾಡಿದರು. ಭಗವದ್ಗೀತೆಯನ್ನು ಧರ್ಮಗ್ರಂಥವೇ ಅಲ್ಲ ಎಂದರು. ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಹೇಳಿದ ಅವರು, ವೀರಶೈವ ಧರ್ಮವನ್ನು ಧರ್ಮವೆಂದು ಒಪ್ಪಿಕೊಳ್ಳಲೇ ಇಲ್ಲ. ಅದೊಂದು ಆಚರಣೆ ಎಂದರು. ಸ್ಪಷ್ಟ ಮತ್ತು ನಂಬಲರ್ಹ ಇತಿಹಾಸವಿಲ್ಲದ ರೇಣುಕಾಚಾರ್ಯರು ಅದರ ಸ್ಥಾಪಕರೆನ್ನುವುದಕ್ಕೆ ಪುರಾವೆಯಿಲ್ಲ ಎಂದರು. ಅವರು ಪ್ರಶ್ನೆಯೊಂದಿಗೆ ಬೆಳೆದರು. 80ರ ದಶಕದಲ್ಲೇ ಅವರ ಮೇಲೆ ದಾಳಿಗಳಾಗಿದ್ದುವು. ಬೆದರಿಕೆಗಳಿದ್ದುವು. ಪೊಲೀಸರ ರಕ್ಷಣೆಯಲ್ಲೇ ಅವರು ಪಾಠ ಮಾಡಿದ್ದಿದೆ. ಕಳೆದ ವರ್ಷ ಅವರು ತೀವ್ರ ವಿವಾದಕ್ಕೆ ಒಳಗಾಗಿದ್ದರು. ನಾಗರಕಲ್ಲಿಗೆ ಮೂತ್ರ ವಿಸರ್ಜಿಸುವ ಬಗ್ಗೆ ಅವರು ವ್ಯಕ್ತಪಡಿಸಿದ ಅಭಿಪ್ರಾಯವು ಒಂದು ವರ್ಗದ ತೀವ್ರ ಸಿಟ್ಟಿಗೆ ಕಾರಣವಾಗಿತ್ತು. ಅವರಿಗೆ ಸರಕಾರ ರಕ್ಷಣೆಯನ್ನೂ ಒದಗಿಸಿತ್ತು. ಇತ್ತೀಚೆಗಷ್ಟೇ ಅವರ ಕೋರಿಕೆಯ ಮೇರೆಗೆ ಸರಕಾರ ಭದ್ರತೆಯನ್ನು ಹಿಂದಕ್ಕೆ ಪಡೆದಿತ್ತು. ಅವರು ಸ್ವತಂತ್ರವಾಗಿಯೇ ಬದುಕಿದರು. ಸ್ವತಂತ್ರವಾಗಿಯೇ ಆಲೋಚಿಸಿದರು. ಸ್ವತಂತ್ರವಾಗಿಯೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಹೊರಟು ಹೋಗುವಾಗಲೂ ಭದ್ರತಾ ಪಡೆಗಳಿಂದ ಮುಕ್ತವಾಗಿ ಸ್ವಂತಿಕೆಯೊಂದಿಗೇ ಹೊರಟು ಹೋದರು.
  ನಿಜವಾಗಿ, ವೈಚಾರಿಕತೆ ಮತ್ತು ಸಾಂಪ್ರದಾಯಿಕತೆಯ ಮಧ್ಯೆ ಘರ್ಷಣೆ ಮೊದಲಿನಿಂದಲೂ ನಡೆಯುತ್ತಲೇ ಇದೆ. ವೈಚಾರಿಕತೆಯನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಸಮಾಜದಲ್ಲಿ ಒಂದು ಬಗೆಯ ಗೊಂದಲ ಇದೆ. ಸಹನೆ, ಅಸಹನೆ, ಸ್ಪಷ್ಟ-ಅಸ್ಪಷ್ಟ ಅಭಿಪ್ರಾಯಗಳಿವೆ. ವೈಚಾರಿಕ ಭಿನ್ನಾಭಿಪ್ರಾಯಕ್ಕೆ ಹಿಂಸಾತ್ಮಕ ಪ್ರತಿಕ್ರಿಯೆಯೇ ಉತ್ತರವೆಂದು ವಾದಿಸುವ ಒಂದು ಗುಂಪೂ ಇವತ್ತಿನ ಸಮಾಜದಲ್ಲಿದೆ. ರುಶ್ದಿ, ತಸ್ಲೀಮಾ ಮುಂತಾದವರು ‘ಹೀರೋ'ಗಳಾದದ್ದು ಸಮಾಜದ ಈ ವೈಫಲ್ಯಗಳಿಂದಲೇ. ಕ್ರುದ್ಧಗೊಂಡ ಸಮಾಜದ ಅಪ್ರಬುದ್ಧ ಪ್ರತಿಕ್ರಿಯೆಗಳು ಅನೇಕ ಕೃತಿಗಳನ್ನು ವಿಶ್ವಮಾನ್ಯ ಮಾಡಿವೆ. ಅವುಗಳಿಗೆ ಪ್ರಸಿದ್ಧಿಯನ್ನೂ ತಂದುಕೊಟ್ಟಿವೆ. ಅಂದಹಾಗೆ, ವೈಚಾರಿಕತೆ, ಪ್ರಗತಿಪರ ಚಿಂತನೆ ಎಂಬುದೆಲ್ಲ ಯಾವ ಸಮಾಜದ ವೈರಿಯೂ ಅಲ್ಲ. ಸಮಾಜ ಎಂದ ಮೇಲೆ ಅಲ್ಲಿ ಒಂದಕ್ಕಿಂತ ಹೆಚ್ಚು ಅಭಿಪ್ರಾಯಗಳಿರಲೇಬೇಕು. ಹತ್ತು ಮಂದಿಯ ಗುಂಪನ್ನೇ ಎತ್ತಿಕೊಳ್ಳಿ. ಹತ್ತು ಮಂದಿಯೂ ಒಂದೇ ರೀತಿಯಲ್ಲಿರುವುದಕ್ಕೆ ಸಾಧ್ಯವೇ ಇಲ್ಲ. ರೂಪ, ಎತ್ತರ, ಉದ್ದ, ಅಗಲ, ಬಣ್ಣ, ನಗು, ಮಾತು, ಪ್ರತಿಭೆ, ಹವ್ಯಾಸ, ಅಭಿರುಚಿ.. ಎಲ್ಲದರಲ್ಲೂ ಹತ್ತು ಮಂದಿಯ ಮಧ್ಯೆಯೂ ವ್ಯತ್ಯಾಸ ಇರುತ್ತದೆ. ಪ್ರತಿಯೊಬ್ಬರಿಗೂ ಅವರವರದ್ದೇ ಆದ ಐಡೆಂಟಿಟಿಯಿರುತ್ತದೆ. ಅಂದಹಾಗೆ, ಒಂದೇ ಮನೆಯ ಒಂದೇ ರಕ್ತವನ್ನು ಹಂಚಿಕೊಂಡವರಲ್ಲೂ ಒಂದೇ ಅಭಿಪ್ರಾಯವನ್ನು ಕಾಣಲು ಸಾಧ್ಯವಿಲ್ಲದಿರುವಾಗ, ಸಮಾಜದಲ್ಲಿ ಅದು ಕಾಣಿಸಿಕೊಳ್ಳುವುದು ಹೇಗೆ? ಅನಂತಮೂರ್ತಿಯವರಿಗೆ ಧರ್ಮದ ಕುರಿತಂತೆ ಅವರದ್ದೇ ಆದ ಅಭಿಪ್ರಾಯಗಳಿವೆ. ನರೇಂದ್ರ ದಾಬೋಲ್ಕರ್‍ರಿಗೆ ಮೂಢನಂಬಿಕೆಗಳ ಬಗ್ಗೆ ತನ್ನದೇ ಆದ ನಿಲುವುಗಳಿವೆ. ಕಲಬುರ್ಗಿಯವರಾಗಲಿ, ತಸ್ಲೀಮಾ ಆಗಲಿ ಎಲ್ಲರಿಗೂ ಧರ್ಮ, ಸಂಸ್ಕ್ರಿತಿ, ಪುರಾಣ, ಇತಿಹಾಸ.. ಎಲ್ಲವುಗಳ ಬಗ್ಗೆಯೂ ಅವರವರದೇ ಆದ ಅಭಿಪ್ರಾಯಗಳಿರುವುದಕ್ಕೆ ಖಂಡಿತ ಸಾಧ್ಯವಿದೆ. ಆ ಅಭಿಪ್ರಾಯವನ್ನು ಪ್ರಶ್ನಿಸುವುದಕ್ಕೆ ಸಂಪ್ರದಾಯವಾದಿ ಸಮಾಜ ಯಾವುದನ್ನು ಆಯುಧವಾಗಿ ಎತ್ತಿಕೊಳ್ಳಬೇಕು ಎಂಬುದೇ ಇಲ್ಲಿನ ಮುಖ್ಯ ಪ್ರಶ್ನೆ. ಬಂದೂಕಂತೂ ಮನುಷ್ಯ ವಿರೋಧಿ. ತಲವಾರು, ಬಾಂಬು, ಕತ್ತಿ, ದೊಣ್ಣೆ ಮುಂತಾದ ಹಿಂಸಾ ಪ್ರತೀಕಗಳೆಲ್ಲ ವೈಚಾರಿಕ ಹೋರಾಟಕ್ಕೆ ಸೂಕ್ತ ಅಸ್ತ್ರಗಳಲ್ಲ. ಅವು ಜೀವಭಂಜಕ, ಕ್ರೌರ್ಯದ ಪ್ರತೀಕ ಮಾತ್ರವಲ್ಲ, ವೈಚಾರಿಕತೆಯನ್ನು ವೈಚಾರಿಕತೆಯಿಂದಲೇ ಎದುರಿಸಲಾಗದವರ ಅಸ್ತ್ರ. ಪ್ರಶ್ನೆ ಪತ್ರಿಕೆಗೆ ಉತ್ತರ ಪತ್ರಿಕೆಗಳ ಮೂಲಕ ಹೇಗೆ ಉತ್ತರಿಸಲಾಗುವುದೋ ಹಾಗೆಯೇ ವೈಚಾರಿಕತೆಯನ್ನು ವಿಚಾರಗಳ ಮೂಲಕವೇ ಎದುರಿಸಬೇಕು. ಹಾಡಿಗೆ ಹಾಡುಗಳ ಮೂಲಕ, ಲೇಖನಕ್ಕೆ ಲೇಖನಗಳ ಮೂಲಕ, ಭಾಷಣಕ್ಕೆ ಭಾಷಣಗಳ ಮೂಲಕ, ಸಾಕ್ಷ್ಯ ಚಿತ್ರಕ್ಕೆ ಸಾಕ್ಷ್ಯ ಚಿತ್ರಗಳ ಮೂಲಕ, ಸಿನಿಮಾಕ್ಕೆ ಸಿನಿಮಾಗಳ ಮೂಲಕ.. ಹೀಗೆ ಪ್ರತಿಯೊಂದನ್ನೂ ಅತ್ಯಂತ ಸಭ್ಯ ಮತ್ತು ಕಾನೂನುಬದ್ಧ ದಾರಿಗಳ ಮೂಲಕ ಎದುರಿಸಬೇಕೇ ಹೊರತು ಅಸ್ತ್ರಗಳಿಂದ ಅಲ್ಲ. ಬಂದೂಕಿಗೆ ಆತ್ಮವಿಲ್ಲ. ಜೀವವೂ ಇಲ್ಲ. ಒಂದು ವೇಳೆ ಇಂಥ ಜೀವರಹಿತ ಅಸ್ತ್ರಗಳು ಜೀವಂತ ವ್ಯಕ್ತಿಯನ್ನು ಬಲಿ ಪಡೆಯಬಹುದಾದರೂ ಆತನ ಅಭಿಪ್ರಾಯವನ್ನು ಬಲಿ ಪಡೆಯುವುದಕ್ಕೆ ಸಾಧ್ಯವೇ ಇಲ್ಲ. ಕಲಬುರ್ಗಿಯವರ ಮೇಲೆ ಗುಂಡು ಹಾರಿಸಿದವರು ಈ ಸತ್ಯವನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿದ್ದಾರೆಂದೇ ಹೇಳಬೇಕಾಗಿದೆ.
  ಏನೇ ಆಗಲಿ, ವೈಚಾರಿಕ ಭಿನ್ನಾಭಿಪ್ರಾಯಗಳಿಗೆ ಹಿಂಸೆ ಎಂದೂ ಉತ್ತರವಲ್ಲ, ಆಗಬಾರದು ಕೂಡ. ಆದ್ದರಿಂದಲೇ, ಕಲಬುರ್ಗಿಯವರೊಂದಿಗೆ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಳ್ಳುತ್ತಲೇ ಅವರ ಹತ್ಯೆಯನ್ನು ಪ್ರಬಲ ದನಿಯಲ್ಲಿ ಖಂಡಿಸುವುದಕ್ಕೆ ಸಮಾಜಕ್ಕೆ ಸಾಧ್ಯವಾಗಬೇಕಿದೆ.

Friday, 28 August 2015

ನಮ್ಮ ಅಭಿವೃದ್ಧಿ ಮಾದರಿಯನ್ನು ಪ್ರಶ್ನಿಸುತ್ತಿರುವ ಕಪ್ಪು ಕತ್ತಿನ ಕೊಕ್ಕರೆ

     ಪರಿಸರ ಸಂರಕ್ಷಣೆ, ಪರಿಸರ ಹೋರಾಟಗಾರರು, ಪರಿಸರ ಇಲಾಖೆ.. ಮುಂತಾದುವುಗಳೆಲ್ಲ ಇವತ್ತು ಈ ದೇಶದಲ್ಲಿ ಯಾವ ಬಗೆಯ ತಿರಸ್ಕಾರಕ್ಕೆ ಈಡಾಗಿದೆಯೆಂಬುದು ಎಲ್ಲರಿಗೂ ಗೊತ್ತು. ಮೇಧಾ ಪಾಟ್ಕರ್, ವಿನಯಕುಮಾರ್, ಪದ್ಮನಾಭನ್, ಗೋಪಾಲ್ ದುಕಾಂಡೆ, ದೇಸರದ.. ಮುಂತಾದವರೆಲ್ಲ ಇವತ್ತು ಈ ದೇಶದಲ್ಲಿ ತಲೆ ತಪ್ಪಿಸಿಕೊಂಡು ಓಡಾಡಬೇಕಾದಂತಹ ಸ್ಥಿತಿಯಿದೆ. ಅವರನ್ನು ದೇಶದ್ರೋಹಿ ಎನ್ನಲಾಗುತ್ತಿದೆ. ಅಭಿವೃದ್ಧಿ ವಿರೋಧಿಗಳೆಂದು ಬಿಂಬಿಸಲಾಗುತ್ತಿದೆ. ‘ಬೃಹತ್ ಯೋಜನೆಗಳ ಹೊರತು ಅಭಿವೃದ್ಧಿ ಸಾಧ್ಯವಿಲ್ಲ..’ ಎಂಬೊಂದು ಪ್ರಚಾರದ ಮಧ್ಯೆ ಸಾಮಾಜಿಕ ಹೋರಾಟಗಾರರು, ಪರಿಸರ ಸ್ನೇಹಿಗಳೆಲ್ಲ ವಿಲನ್‍ಗಳಾಗಿ ಚಿತ್ರಿತರಾಗುತ್ತಿದ್ದಾರೆ. ಇಂಥದ್ದೊಂದು ಸ್ಥಿತಿಯಲ್ಲಿ, ವಿರಳ ಜಾತಿಯ ಹಲ್ಲಿ ಮತ್ತು ಹಾವುಗಳು ವಿಶ್ವದಲ್ಲಿಯೇ ಅತಿ ದೊಡ್ಡದಾದ ಅಭಿವೃದ್ಧಿ ಯೋಜನೆಯೊಂದನ್ನು ತಡೆದ ಸುದ್ದಿಯು ಹೊರಬಿದ್ದಿದೆ. ಇದು ಸಾಧ್ಯವಾದುದು ಆಸ್ಟ್ರೇಲಿಯಾದಲ್ಲಿ. 16.5 ಬಿಲಿಯನ್ ಡಾಲರ್ ಮೊತ್ತದ ಬೃಹತ್ ಕಲ್ಲಿದ್ದಲು ಗಣಿಗಾರಿಕೆಯನ್ನು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್‍ನಲ್ಲಿ ಪ್ರಾರಂಭಿಸಲು ಭಾರತದ ಅದಾನಿಯವರು ಮುಂದಾಗಿದ್ದರು. ಎರಡ್ಮೂರು ವರ್ಷಗಳ ಮೊದಲೇ ಅವರು ಈ ಯೋಜನೆಗಾಗಿ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆಸ್ಟ್ರೇಲಿಯಾದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡಕ್ಕೂ ‘ಪಾರ್ಟಿ ಫಂಡ್' ಅನ್ನೂ ನೀಡಿದ್ದರು. ಮಾತ್ರವಲ್ಲ, ಅವರು ನಿರೀಕ್ಷಿಸಿದಂತೆಯೇ ಸರಕಾರ ಅನುಮತಿಯನ್ನೂ ನೀಡಿತ್ತು. ಆದರೆ ಅಲ್ಲಿನ ನ್ಯಾಯಾಲಯ ಇದೀಗ ಸರಕಾರದ ಈ ಅನುಮತಿಯನ್ನು ರದ್ದುಪಡಿಸಿದೆ. ‘ಈ ಯೋಜನೆಯಿಂದಾಗಿ ಕ್ವೀನ್ಸ್ ಲ್ಯಾಂಡ್‍ನಲ್ಲಿರುವ ಅಪರೂಪದ ಹಲ್ಲಿ ಮತ್ತು ಹಾವುಗಳ ಪ್ರಬೇಧಗಳು ನಾಶವಾಗುವ ಸಾಧ್ಯತೆಯಿದ್ದು, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಯೋಜನೆ ಸೂಕ್ತವಲ್ಲ’ ಎಂದು ಅದು ಅಭಿಪ್ರಾಯಪಟ್ಟಿದೆ. ವಿಶೇಷ ಏನೆಂದರೆ, ಹಾವು, ಹಲ್ಲಿ, ಪಾರಿವಾಳ, ಜಿಂಕೆಗಳೆಲ್ಲ ಬರೇ ಆಸ್ಟ್ರೇಲಿಯಾದಲ್ಲಿ ಮಾತ್ರ ಇರುವುದಲ್ಲ. ಜಗತ್ತಿನೆಲ್ಲೆಡೆ ಇದೆ. ಭಾರತದ ಅರುಣಾಚಲ ಪ್ರದೇಶದಲ್ಲೂ ಇಂಥದ್ದೇ ಒಂದು ವಾತಾವರಣ ಇದೆ. ಝೆುಮಿತಾಂಗ್ ಎಂಬಲ್ಲಿ 780 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಯೋಜನೆಯೊಂದನ್ನು ಸರಕಾರ ಹಮ್ಮಿಕೊಂಡಿದೆ. ತ್ಯಾಮ್‍ಜಂಗ್ ಚ್ಚು ಅಣೆಕಟ್ಟಿನ ಮೂಲಕ ಈ ವಿದ್ಯುತ್ ಅನ್ನು ಉತ್ಪಾದಿಸುವ ಗುರಿ ಸರಕಾರದ್ದಾದರೆ, ಪುಟ್ಟ ಕೊಕ್ಕರೆಗಳು ಇದನ್ನು ಪ್ರಶ್ನಿಸುತ್ತಿವೆ. ಚೀನಾ, ಭೂತಾನ್ ಮತ್ತು ಅರುಣಾಚಲ ಪ್ರದೇಶದಲ್ಲಿ ಮಾತ್ರ ಕಾಣಸಿಗುವ ಕಪ್ಪು ಕತ್ತಿನ ಅಪರೂಪದ ಕೊಕ್ಕರೆಗಳು ಇವು. ಚಳಿಗಾಲದಲ್ಲಿ ಹೆಚ್ಚಾಗಿ ಅವು ಈ ಪ್ರದೇಶದಲ್ಲಿ ಠಿಕಾಣಿ ಹೂಡುತ್ತವೆ. ಒಂದು ವೇಳೆ, ಈ ಅಣೆಕಟ್ಟು ನಿರ್ಮಾಣಗೊಂಡರೆ ಕೊಕ್ಕರೆ ತನ್ನ ಅಸ್ತಿತ್ವವನ್ನು ಕಳಕೊಳ್ಳಬೇಕಾಗುತ್ತದೆ. ಅಷ್ಟಕ್ಕೂ, ಇದು ಕೇವಲ ಕೊಕ್ಕರೆಯ ಪ್ರಶ್ನೆಯಲ್ಲ. ಒಂದು ಜೀವಿಯ ಅಸ್ತಿತ್ವದ ಪ್ರಶ್ನೆ. ಮನುಷ್ಯರಂತೆ ಮಾತಾಡುವ, ಬಂದೂಕು ಎತ್ತುವ ಅಥವಾ ಪ್ರತಿಭಟನೆ ಹಮ್ಮಿಕೊಳ್ಳುವ ಸಾಮರ್ಥ್ಯ ಇಲ್ಲ ಎಂಬ ಏಕೈಕ ಕಾರಣಕ್ಕಾಗಿ ಒಂದು ಪಕ್ಷಿಯ ಜೀವಿಸುವ ಹಕ್ಕನ್ನು ಕಬಳಿಸುವ ಸ್ವಾತಂತ್ರ್ಯ ಮನುಷ್ಯರಿಗಿದೆಯೇ? ಅಣೆಕಟ್ಟು ಮನುಷ್ಯರ ಅಗತ್ಯ. ವಿದ್ಯುತ್ತೂ ಮನುಷ್ಯರದ್ದೇ ಬೇಡಿಕೆ. ಹೀಗೆ ಬರೇ ಮನುಷ್ಯರ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಕಾಲ ಕಾಲಗಳಿಂದ ವಾಸಿಸುತ್ತಿರುವ ಕೊಕ್ಕರೆಯ ಮನೆಯನ್ನು ನಾಶಪಡಿಸುವುದು ನೈತಿಕವೇ? ವಿದ್ಯುತ್ ಅನ್ನು ಕೊಕ್ಕರೆ ಉಪಯೋಗಿಸುವುದಿಲ್ಲ. ಪಕ್ಷಿಗಳು ನೀರಿಗಾಗಿ ಅಣೆಕಟ್ಟನ್ನು ಆಶ್ರಯಿಸುತ್ತಲೂ ಇಲ್ಲ. ಅವು ತಮ್ಮ ಪಾಡಿಗೆ ಮನುಷ್ಯರಿಂದ ದೂರ ಇದ್ದುಕೊಂಡು ಬದುಕುತ್ತವೆ. ಮನುಷ್ಯ ಮಾತ್ರ ತನ್ನ ಬದುಕನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಅವುಗಳ ಬದುಕನ್ನು ನಾಶ ಮಾಡುತ್ತಾನೆ. ಪ್ರತಿಭಟಿಸುವ ಸಾಮರ್ಥ್ಯ ಇಲ್ಲದ ಅವು ಕ್ರಮೇಣ ಕಣ್ಮರೆಯಾಗುತ್ತವೆ. ಅಷ್ಟಕ್ಕೂ, ಅಭಿವೃದ್ಧಿಯ ಬೆನ್ನು ಹತ್ತಿರುವ ವ್ಯವಸ್ಥೆಯು ಈ ಕಣ್ಮರೆಯನ್ನು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ಅಭಿವೃದ್ಧಿಯ ಹೆಸರಲ್ಲಿ ಮನುಷ್ಯರನ್ನೇ ನಿರ್ಗತಿಕರನ್ನಾಗಿಸಲು ಹಿಂಜರಿಯದ ವ್ಯವಸ್ಥೆಯಲ್ಲಿ ಮನುಷ್ಯರೆದುರು ಏನೇನೂ ಅಲ್ಲದ ಪಕ್ಷಿಗಳು ಪ್ರಾಮುಖ್ಯತೆ ಪಡಕೊಳ್ಳುವುದಾದರೂ ಹೇಗೆ? ಅಧಿಕಾರದ ಬದಲಾವಣೆಯಲ್ಲಿ ಕೊಕ್ಕರೆಗಳ ಪಾತ್ರ ಶೂನ್ಯ. ಅವು ಓಟು ಹಾಕಲ್ಲ. ಧರಣಿ ಕೂರಲ್ಲ. ಪ್ರತಿಭಟಿಸಲ್ಲ. ಹೀಗಿರುವಾಗ ತ್ಯಾಮ್‍ಜಂಗ್ ಚ್ಚು ಅಣೆಕಟ್ಟಿನ ಕುರಿತಾದ ಅವುಗಳ ಕಳವಳ ವ್ಯವಸ್ಥೆಗೆ ಅರ್ಥವಾಗುವುದು ಹೇಗೆ?
 ಅಭಿವೃದ್ಧಿಯ ಕುರಿತಂತೆ ನಮ್ಮಲ್ಲೊಂದು ಭ್ರಮೆಯಿದೆ. ಈ ಭ್ರಮೆ ಎಷ್ಟು ಅತಿರೇಕ ಮಟ್ಟದಲ್ಲಿ ಇದೆಯೆಂದರೆ, ಇದರ ಕುರಿತು ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವವರೆಲ್ಲ ದೇಶದ್ರೋಹಿಗಳು ಎಂಬಷ್ಟು. ನರ್ಮದಾ ಯೋಜನೆಯಿಂದಾಗಿ ಮುಳುಗುವ ಪ್ರದೇಶಗಳು, ನಿರ್ಗತಿಕರಾಗುವ ಮನುಷ್ಯರು, ಗದ್ದೆಗಳು, ಅರಣ್ಯಗಳು ಮತ್ತು ಪ್ರಾಣಿ-ಪಕ್ಷಿಗಳ ಕುರಿತಂತೆ ದನಿಯೆತ್ತಿದ ಮೇಧಾ ಪಾಟ್ಕರ್ ಇವತ್ತು ಗೊಂದಲಕಾರಿ ಎಂಬ ಹಣೆಪಟ್ಟಿಯೊಂದಿಗೆ ಓಡಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ನಿರ್ಮಾಣವಾಗುತ್ತಿರುವ ಕುಡಂಕುಲಮ್ ಅಣುಸ್ಥಾವರವು ಪರಿಸರ ಮತ್ತು ನಾಗರಿಕರ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುತ್ತಿದ್ದ ವಿನಯಕುಮಾರ್ ಇವತ್ತು ‘ದೇಶದ್ರೋಹಿ' ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಜೈತಾಪುರ್ ಅಣುಸ್ಥಾವರವನ್ನು ವಿರೋಧಿಸುತ್ತಿರುವ ಪದ್ಮನಾಭನ್, ಗೋಪಾಲ್ ದುಕಾಂಡೆ ಇವತ್ತು ವ್ಯವಸ್ಥೆ ದಾಖಲಿಸಿದ ವಿವಿಧ ಕೇಸುಗಳಿಗಾಗಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಅರುಂಧತಿ ರಾಯ್ ಕೂಡ ಈ ಪಟ್ಟಿಯಿಂದ ಹೊರತಾಗಿಲ್ಲ. ಅಂದಹಾಗೆ, ‘ಬೃಹತ್ ಉದ್ಯಮಗಳಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ’ ಎಂಬ ಪ್ರಚಾರವೊಂದು ನಮ್ಮ ನಡುವೆಯಿದೆ. ಈ ಪ್ರಚಾರ ಎಷ್ಟು ಪ್ರಬಲವಾಗಿದೆಯೆಂದರೆ, ಆ ‘ಅಭಿವೃದ್ಧಿ'ಗಾಗಿ ರೈತನಲ್ಲಿ ಕೇಳದೆಯೇ ಆತನ ಭೂಮಿಯನ್ನು ವಶಪಡಿಸಬಹುದು (ಭೂ ಮಸೂದೆ) ಎಂದು 65% ರೈತರೇ ಇರುವ ದೇಶವೊಂದರ ಸರಕಾರವೇ ವಾದಿಸುತ್ತಿದೆ. ಅದಕ್ಕಾಗಿ ಕಾನೂನನ್ನು ರಚಿಸಲೂ ಪ್ರಯತ್ನಿಸುತ್ತಿದೆ. ಉದ್ಯಮಿಗಳಿಗೆ ಜುಜುಬಿ ಮೊತ್ತಕ್ಕೆ ಭೂಮಿಯನ್ನು ಕೊಡುತ್ತಿದೆ. ನೀರು, ವಿದ್ಯುತ್, ಸಾಲ, ತೆರಿಗೆ ಮನ್ನಾ ಮುಂತಾದ ಸೌಲಭ್ಯಗಳನ್ನು ತರಾತುರಿಯಿಂದ ನೀಡುತ್ತಿದೆ. ಹೀಗೆ ಕಾಂಕ್ರೀಟು ನಾಡನ್ನು ಕಟ್ಟುವ ಧಾವಂತ ನಮ್ಮದು. ಕಬ್ಬಿಣ, ಸಿಮೆಂಟು,  ಹೊೈಗೆ, ಜಲ್ಲಿಕಲ್ಲು.. ಮುಂತಾದುವುಗಳೇ ಸದ್ದು ಮಾಡುವ ಜಗತ್ತು. 24 ತಾಸು ವಿದ್ಯುತ್, 24 ತಾಸು ನೀರು, ಗ್ಯಾಸು, ನ್ಯೂಸುಗಳ ಆರಾಮದಾಯಕ ಜಗತ್ತನ್ನು ಕಟ್ಟುವ ಓಟದಲ್ಲಿ ನಾವಿದ್ದೇವೆ. ಈ ಓಟದ ಹಾದಿಯಲ್ಲಿ ನಾವು ಕಾಡು, ನದಿ, ಗದ್ದೆ, ಪ್ರಾಣಿ, ಪಕ್ಷಿ ಮತ್ತು ಕೆಲವೊಮ್ಮೆ ಮನುಷ್ಯರನ್ನೇ ತಡೆಯೆಂದು ಭಾವಿಸುತ್ತೇವೆ. ಈ ತಡೆಯನ್ನು ದಾಟುವುದಕ್ಕಾಗಿ ರೋಮಾಂಚನಕಾರಿ ಕತೆಗಳನ್ನು ಕಟ್ಟುತ್ತೇವೆ. ಆ ಕತೆಗಳ ತುಂಬ ದೇಶಪ್ರೇಮ ಇರುತ್ತದೆ. ಸಂತಸದಿಂದ ತುಂಬಿ ತುಳುಕುತ್ತಿರುವ ಜನಸಮೂಹವಿರುತ್ತದೆ. ಎಲ್ಲ ಸೌಲಭ್ಯಗಳೂ 24 ತಾಸೂ ಲಭ್ಯವಿರುವ ಅಭಿವೃದ್ಧಿಯಿರುತ್ತದೆ. ಇದನ್ನು ತಡೆಯುವ ಪಾತ್ರಧಾರಿಗಳಾಗಿ ಅರುಂಧತಿ, ಮೇಧಾ, ವಿನಯ್, ಗೋಪಾಲ್ ಕಾಣಿಸಿಕೊಳ್ಳುತ್ತಾರೆ. ಇವರನ್ನು ದೇಶದ್ರೋಹಿಗಳು ಎನ್ನಲಾಗುತ್ತದೆ. ಇವರ ವಿರುದ್ಧ ಮೊಕದ್ದಮೆಯನ್ನು ಹೂಡಲಾಗುತ್ತದೆ.
 ನಿಜವಾಗಿ, ಅದಾನಿಯ ವಿರುದ್ಧ ಆಸ್ಟ್ರೇಲಿಯಾದಲ್ಲಿ ಯಕಶ್ಚಿತ್ ಪುಟ್ಟ ಹಲ್ಲಿಗಳು ಸಾಧಿಸಿದ ವಿಜಯವು ನಮ್ಮ ಅಭಿವೃದ್ಧಿ (ಆDevelopment) ಕಲ್ಪನೆಯ ಸುತ್ತ ಮರು ಚರ್ಚೆಯೊಂದನ್ನು ಹುಟ್ಟು ಹಾಕಬೇಕಿದೆ. ‘ಬೃಹತ್ ಯೋಜನೆಗಳು ಎಲ್ಲಿಯ ವರೆಗೆ, ಯಾಕೆ ಮತ್ತು ಹೇಗೆ..’ ಎಂಬ ಗಂಭೀರ ಚಿಂತನೆಗೆ ಸಮಾಜ ತನ್ನನ್ನು ತೆರೆದುಕೊಳ್ಳಲು ಈ ಪ್ರಕರಣವನ್ನು ಕಾರಣವಾಗಿ ಬಳಸಿಕೊಳ್ಳಬೇಕಿದೆ. ಆಸ್ಟ್ರೇಲಿಯಾದ ಹಲ್ಲಿಯಂತೆ ಭಾರತದ ಕೊಕ್ಕರೆಗೂ ಜೀವಿಸುವ ಹಕ್ಕಿದೆ, ಅದು ಸದಾ ಇರಲಿ. ಅದರ 'ಮನೆ' ಯಾರ ಪಾಲೂ ಆಗದಿರಲಿ.

Thursday, 20 August 2015

ದೇವಮಾನವರ ನಡುವೆ ರಾಧೆ ಮಾ ಎಂಬ ದೇವ

    ಮನುಷ್ಯ ದೇವನಾಗಲು ಸಾಧ್ಯವಿಲ್ಲ ಎಂಬುದು ರಾಧೆ ಮಾ ಮೂಲಕ ಮತ್ತೊಮ್ಮೆ ಸಾಬೀತುಗೊಂಡಿದೆ. ನಿಜವಾಗಿ, ದೇವರಾಗಲು ಹೊರಟು ವಿಫಲರಾದ ಮನುಷ್ಯರ ಪಟ್ಟಿಯಲ್ಲಿ ರಾಧೆ ಮಾರ ಹೆಸರು ಮೊದಲಿನದ್ದೇನೂ ಅಲ್ಲ. ಕೊನೆಯದ್ದಾಗುವ ಸಾಧ್ಯತೆಯೂ ಇಲ್ಲ. ಈ ಹಿಂದೆ ಪುಟ್ಟಪರ್ತಿಯ ಸಾಯಿಬಾಬ ಅವರು ದೇವನ ಜಿಜ್ಞಾಸೆಯೊಂದನ್ನು ಹುಟ್ಟುಹಾಕಿದ್ದರು. ಅವರು ಜೀವಂತ ಇದ್ದಾಗ ಅನೇಕರ ಪಾಲಿಗೆ ದೇವರಾಗಿದ್ದರು. ಅವರ ವ್ಯಕ್ತಿತ್ವ, ಸಮಾಜ ಸೇವೆ, ಪವಾಡವನ್ನು ನೋಡಿದ ಇಲ್ಲವೇ ಆಲಿಸಿದ ಮಂದಿ ಸಾಯಿಬಾಬ ಮನುಷ್ಯರಲ್ಲ ಎಂದು ತೀರ್ಮಾನಿಸಿದರು. ಅವರ ಫೆÇೀಟೋ ಇಟ್ಟು ಪೂಜಿಸತೊಡಗಿದರು. ಆದರೆ ಅವರು ಯಾವಾಗ ಅನಾರೋಗ್ಯಪೀಡಿತರಾದರೋ ಅದೇ ಜನ ಆಸ್ಪತ್ರೆಯ ಹೊರಗೆ ನಿಂತು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸತೊಡಗಿದರು. ಒಂದು ರೀತಿಯಲ್ಲಿ, ಜೀವಂತವಿದ್ದಾಗ ಅವರ ಸುತ್ತ ಯಾವೆಲ್ಲ ಭ್ರಮೆಗಳು ಹರಡಿಕೊಂಡಿದ್ದುವೋ ಅವೆಲ್ಲವೂ ಆಸ್ಪತ್ರೆಯ ತುರ್ತು ನಿಗಾ ಕೋಣೆಯಲ್ಲಿ ಅವರು ಉಸಿರಾಟಕ್ಕೆ ಸಂಕಟಪಡುತ್ತಿದ್ದಾಗಲೇ ಬಹುತೇಕ ಕಳಚಿ ಬಿದ್ದಿದ್ದುವು. ಹಾಗೆಯೇ ಆಸ್ಪತ್ರೆಯ ಹೊರಗೆ ನಿಂತು ದೇವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದ ಭಕ್ತರ ದೃಶ್ಯವು ‘ಮನುಷ್ಯ ದೇವನಾಗಲು ಸಾಧ್ಯವಿಲ್ಲ' ಎಂದು ನಂಬಿಕೊಂಡವರನ್ನು ಅಪಾರ ಜಿಜ್ಞಾಸೆಗೆ ಒಳಪಡಿಸಿತ್ತು. ಕಾಯಿಲೆಯನ್ನು ಗುಣಪಡಿಸಬೇಕಾದವರೇ ಕಾಯಿಲೆಪೀಡಿತರಾಗಿ ಆಸ್ಪತ್ರೆ ಸೇರುವುದಾದರೆ ಅವರು ದೇವರಾಗುವುದಾದರೂ ಹೇಗೆ? 85 ವರ್ಷದ ಸಾಮಾನ್ಯ ವ್ಯಕ್ತಿಗೆ ಬಾಧಿಸುವ ಸಹಜ ಕಾಯಿಲೆಗಳು ಬಾಬಾರನ್ನೂ ಆಕ್ರಮಿಸಿದ್ದುವು. ಕೊನೆಗೆ ಬಾಬಾ ಸಾವಿಗೀಡಾದಾಗ ಅವರ ಬಗ್ಗೆ ಇದ್ದ ದೇವ ಕಲ್ಪನೆಯ ಪ್ರಭಾವಳಿ ಇನ್ನಷ್ಟು ಚಿಕ್ಕದಾಯಿತು. 2011ರಲ್ಲಿ ಸಾಯಿಬಾಬ ಬಿಟ್ಟು ಹೋದ ಈ ದೇವ ಪ್ರಶ್ನೆಯನ್ನು ರಾಧೆ ಮಾ ಮತ್ತೆ ಜೀವಂತಗೊಳಿಸಿದ್ದಾರೆ. 8 ವರ್ಷದವಳಿದ್ದಾಗಲೇ ತಾಯಿಯನ್ನು ಕಳಕೊಂಡ, 10ನೇ ತರಗತಿ ವರೆಗೆ ಓದಿದ ಮತ್ತು 18 ವರ್ಷದಲ್ಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ ಸುಖ್ವಿಂದರ್ ಕೌರ್ ಆ ಬಳಿಕ ರಾಧೆ ಮಾ ಆದರು. ಸಿನಿಮಾ ನಿರ್ದೇಶಕ ಸುಭಾಷ್ ಘಾಯ್, ಬಿಜೆಪಿ ಸಂಸದ ಮನೋಜ್ ತಿವಾರಿ, ಪ್ರಹ್ಲಾದ್ ಕಕ್ಕರ್ ಸೇರಿದಂತೆ ದೊಡ್ಡದೊಂದು ಭಕ್ತಗಣವನ್ನು ಸಂಪಾದಿಸಿದರು. ಮುಂಬೈಯ ಪ್ರಸಿದ್ಧ ಜಾಹೀರಾತು ನಿರ್ವಾಹಕ ಸಂಜೀವ್ ಗುಪ್ತಾರು ಮುಂಬೈ ಉದ್ದಕ್ಕೂ ರಾಧೆ ಮಾರ ಬೃಹತ್ ಕಟೌಟ್‍ಗಳನ್ನು ನಿಲ್ಲಿಸಿದರು. ಬಂಗಲೆಯನ್ನು ನಿರ್ಮಿಸಿಕೊಟ್ಟರು. ತನ್ನ ಎಡಗೈಗೆ ಮಾರ ಟ್ಯಾಟೂವನ್ನು ಹಾಕಿಸಿಕೊಂಡರು. ಹೀಗೆ ರಾಧೆ ಮಾ ದೇವರಾಗುತ್ತಾ ಬೆಳೆದರು. ಇತ್ತೀಚೆಗೆ ತನ್ನ ಸಂದರ್ಶನ ನಡೆಸುತ್ತಿದ್ದಾಗಲೇ ಸಂದರ್ಶಕನನ್ನು ಅವರು ಚುಂಬಿಸಿದ್ದು ಸುದ್ದಿಯಾಗಿತ್ತು. ಅಷ್ಟಕ್ಕೂ, ರಾಧೆ ಮಾರ ಆಶೀರ್ವಾದದ ವಿಧಾನವೇ ಆಲಿಂಗನ ಮತ್ತು ಚುಂಬನ. ಇದೀಗ ಈ ದೇವರು ವಿವಿಧ ಆರೋಪಗಳನ್ನು ಎದುರಿಸುತ್ತಿದ್ದಾರೆ. ವರದಕ್ಷಿಣೆ ಹಿಂಸೆ, ರೈತರನ್ನು ಆತ್ಮಹತ್ಯೆಗೆ ಪ್ರಚೋದನೆ, ಭಕ್ತರಿಗೆ ವಂಚನೆ ಸಹಿತ ಹಲವಾರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದೀಗ ರಾಧೆ ಮಾರು ತನ್ನ ಭಕ್ತರ ಮುಂದೆ ಕೆಲವು ಪ್ರಶ್ನೆಗಳೊಂದಿಗೆ ಹಾಜರಾಗಿದ್ದಾರೆ. ದೇವ ಮತ್ತು ಮನುಷ್ಯರ ನಡುವಿನ ವ್ಯತ್ಯಾಸಗಳೇನು? ತಿನ್ನುವ, ಕುಡಿಯುವ, ಅನಾರೋಗ್ಯಕ್ಕೆ ಒಳಗಾಗುವ, ನಿದ್ದೆ ಮಾಡುವ, ಪತಿ ಮತ್ತು ಮಕ್ಕಳನ್ನು ಹೊಂದುವ, ಸಾಯುವ.. ಹೀಗೆ ಒಂದು ಮಿತಿಯೊಳಗೆ ಬದುಕುವ ಮನುಷ್ಯನಿಗೂ ದೇವನಿಗೂ ಇರಬೇಕಾದ ಅಂತರಗಳೇನು? ದೇವನು ಈ ಕ್ರಿಯೆಗೆ ಅತೀತನಲ್ಲವೇ? ಮನುಷ್ಯನಿಗಿರುವಂತಹ ದೌರ್ಬಲ್ಯಗಳು ದೇವನಿಗೂ ಇರುವುದಾದರೆ ದೇವ ಯಾಕಿರಬೇಕು? ನಿದ್ದೆಯಿಲ್ಲದ, ಮಕ್ಕಳು, ಕುಟುಂಬ ಇಲ್ಲದ, ತಿನ್ನದ, ಬದುಕಿಸುವ ಮತ್ತು ಸಾಯಿಸುವ ಸಾಮರ್ಥ್ಯ ಇರುವ ಕಾಲಜ್ಞಾನಿಯಾಗಿರಬೇಡವೇ ದೇವ? ರಾಧೆ ಮಾರ ಮೂಲಕ ಈ ಪ್ರಶ್ನೆಯನ್ನು ನಾವು ಗಂಭೀರ ಚರ್ಚೆಗೆ ಎತ್ತಿಕೊಳ್ಳಬೇಕಾಗಿದೆ.
  
 
ನಿಜವಾಗಿ, ಭ್ರಷ್ಟ ರಾಜಕಾರಣಿಗಳು ಈ ಸಮಾಜದ ಪಾಲಿಗೆ ಎಷ್ಟು ಅಪಾಯಕಾರಿಗಳೋ ಅದಕ್ಕಿಂತಲೂ ಮನುಷ್ಯ ದೇವರುಗಳು ಹೆಚ್ಚು ಅಪಾಯಕಾರಿಗಳಾಗಿದ್ದಾರೆ. ರಾಜಕಾರಣಿಗಳನ್ನು ಭ್ರಷ್ಟರು ಎಂದು ಕರೆಯುವುದಕ್ಕೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಒಂದು ಹಂತದವರೆಗೆ ಸ್ವಾತಂತ್ರ್ಯ ಇದೆ. ಭ್ರಷ್ಟರನ್ನು ವೇದಿಕೆಯಲ್ಲಿ ನಿಂತು ಟೀಕಿಸುವುದಕ್ಕೂ ಇಲ್ಲಿ ಅವಕಾಶ ಇದೆ. ಆದರೆ ಮನುಷ್ಯ ದೇವರುಗಳು ಹಾಗಲ್ಲ. ಅವರು ತಮ್ಮ ಸುತ್ತ ಒಂದು ಪ್ರಭಾವಳಿಯನ್ನು ಬೆಳೆಸಿಕೊಂಡಿರುತ್ತಾರೆ. ಪ್ರಶ್ನಿಸದೇ ಒಪ್ಪಿಕೊಳ್ಳುವಂತಹ ಮುಗ್ಧ ಭಕ್ತ ಸಮೂಹವನ್ನು ಸೃಷ್ಟಿಸಿರುತ್ತಾರೆ. ಆದ್ದರಿಂದಲೇ, ಕೆಲವರಿಗೆ ದೇವರಾಗಲು ವಿಪರೀತ ಆಸಕ್ತಿಯಿರುವುದು. ರಾಜಕಾರಣಿಗಳನ್ನೂ ಕಾಲಬುಡಕ್ಕೆ ಬರುವಂತೆ ಮಾಡುವ ಸಾಮಥ್ರ್ಯವಿರುವುದು ಮನುಷ್ಯ ದೇವರುಗಳಿಗೆ ಮಾತ್ರ. ಹಾಗಂತ, ಇವರಿಗೆ ನಿರ್ದಿಷ್ಟ ಧರ್ಮದ ಚೌಕಟ್ಟನ್ನು ನಾವು ಹಾಕಬೇಕಿಲ್ಲ. ಎಲ್ಲ ಧರ್ಮಗಳಲ್ಲೂ ದೇವ ಮಾನವರಾಗಲು ತವಕಿಸುವ ಮಂದಿ ಇದ್ದಾರೆ. ಕಾಯಿಲೆ ಪೀಡಿತ ಭಕ್ತರಿಗೆ ತಾಯಿತ, ನೂಲು, ಕುಂಕುಮಗಳನ್ನು ಕೊಟ್ಟು ಆಶೀರ್ವಾದ ಮಾಡುತ್ತಲೇ ತಮ್ಮ ಕಾಯಿಲೆಗೆ ದುಬಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರಿದ್ದಾರೆ. ಆದ್ದರಿಂದಲೇ, ದೇವನ ನಿಜವಾದ ಪರಿಚಯ ಸಮಾಜಕ್ಕೆ ಆಗಬೇಕಾದ ಅಗತ್ಯ ಇದೆ. ಮನುಷ್ಯನಿಗೂ ದೇವನಂತೆ ಹಸಿವಾಗುತ್ತದೆಂದಾದರೆ, ಅದು ದೇವನಾಗಲು ಸಾಧ್ಯವಿಲ್ಲ. ನಿದ್ದೆ ಮಾಡುವುದು ಮಾನವ ಸ್ವಭಾವ. ದುಡ್ಡು ಮಾಡುವುದೂ ಮನುಷ್ಯ ಗುಣ. ತಪ್ಪುಗಳನ್ನು ಮಾಡುವವನೇ ಮನುಷ್ಯ. ಕಾಯಿಲೆ ಬಾಧಿಸುವುದು, ಸಾಯುವುದು, ಆಸ್ತಿ-ಪಾಸ್ತಿಗಳ ಹಸಿವು ಇರುವುದು, ನಾಳೆ ಏನಾಗುತ್ತದೆಂಬುದರ ಅರಿವು ಇರದಿರುವುದು.. ಎಲ್ಲವೂ ಮನುಷ್ಯ ದೌರ್ಬಲ್ಯಗಳು. ಇವು ದೇವನಿಗೂ ಇದ್ದರೆ ಮತ್ತೆ ದೇವನ ಅಗತ್ಯವಾದರೂ ಏನಿರುತ್ತದೆ? ವಿಶೇಷ ಏನೆಂದರೆ, ರಾಧೆ ಮಾ ಸಹಿತ ಇವತ್ತು ನಮ್ಮ ನಡುವೆ ಯಾರೆಲ್ಲ ದೇವರಾಗಿ ಗುರುತಿಗೀಡಾಗಿದ್ದಾರೋ ಅವರೆಲ್ಲರಿಗೂ ಈ ದೌರ್ಬಲ್ಯಗಳಿವೆ ಎಂಬುದು. ನಿಜವಾಗಿ, ನಮ್ಮ ನಡುವೆ ಮನುಷ್ಯರಾಗಿ ಗುರುತಿಸಿಕೊಂಡು ಆ ಬಳಿಕ ದೇವರಾದವರೆಲ್ಲ ಆ ಪಟ್ಟಕ್ಕೆ ಏರಿದ ಬಳಿಕವೂ ಮೊದಲಿನ ಅಭ್ಯಾಸವನ್ನು ಬಿಟ್ಟಿದ್ದೇನೂ ಇಲ್ಲ. ಅವರು ದೇವರಾದ ಬಳಿಕವೂ ನಿದ್ದೆ ಮಾಡುತ್ತಾರೆ, ತಿನ್ನುತ್ತಾರೆ, ಕುಡಿಯುತ್ತಾರೆ, ಆರೋಪಗಳನ್ನು ಎದುರಿಸುತ್ತಾರೆ.. ಇದುವೇ ಅವರು ದೇವರಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.
      ಅಂದಹಾಗೆ, ದೇವನ ಫೋಸು ಕೊಟ್ಟು ಜನರನ್ನು ವಂಚಿಸುತ್ತಿರುವ ಕಪಟ ದೇವರುಗಳನ್ನೆಲ್ಲ ತಿರಸ್ಕರಿಸಿ, ‘ಮನುಷ್ಯ ದೇವನಾಗಲು ಸಾಧ್ಯವಿಲ್ಲ’ ಎಂದು ಬಲವಾಗಿ ಘೋಷಿಸಬೇಕಾದ ಅಗತ್ಯ ಇವತ್ತು ಸಾಕಷ್ಟಿದೆ. ಯಾಕೆಂದರೆ, ಧರ್ಮ ಇಲ್ಲವೇ ದೇವರ ಹೆಸರಲ್ಲಿ ಜನಸಾಮಾನ್ಯರನ್ನು ವಂಚಿಸುವಷ್ಟು ಸುಲಭದಲ್ಲಿ ಇನ್ನಾವುದರಿಂದಲೂ ವಂಚಿಸಲು ಸಾಧ್ಯವಿಲ್ಲ ಎಂಬುದು ದೇವರಾಗಬಯಸುವ ಎಲ್ಲರಿಗೂ ಗೊತ್ತು. ದೇವರ ಬಗ್ಗೆ ದುರ್ಬಲ ಕಲ್ಪನೆಗಳನ್ನು ಇಟ್ಟುಕೊಂಡಿರುವ ಮಂದಿಯನ್ನು ಇಂಥವರು ಸುಲಭದಲ್ಲಿ ಬಲೆಗೆ ಬೀಳಿಸುತ್ತಲೂ ಇರುತ್ತಾರೆ. ರಾಧೆ ಮಾ ದೇವರಾದುದರ ಹಿಂದೆ ಇಂಥ ದೌರ್ಬಲ್ಯಗಳ ಪಾತ್ರ ಖಂಡಿತಕ್ಕೂ ಇರಬಹುದು. ಇಂಥವರನ್ನು ಸೋಲಿಸಬೇಕಾದರೆ ದೇವನ ಅಸಲಿ ರೂಪದ ಬಗ್ಗೆ ಸಮಾಜಕ್ಕೆ ಗೊತ್ತಿರಬೇಕಾದುದು ಅತೀ ಅಗತ್ಯ. ಈ ಅಸಲಿ ದೇವನನ್ನು ಪತ್ತೆ ಹಚ್ಚುವಲ್ಲಿ ಜನರು ಯಶಸ್ವಿಯಾದರೆ ಆ ಬಳಿಕ ಮಾನವ ದೇವನಾಗಲು ಸಾಧ್ಯವಿಲ್ಲ ಮತ್ತು ಹಾಗೆ ಘೋಷಿಸಿಕೊಂಡವರಿಗೆ ಭಕ್ತ ಸಮೂಹ ಸೃಷ್ಟಿಯಾಗಲೂ ಸಾಧ್ಯವಿಲ್ಲ.


Wednesday, 12 August 2015

ಬಿಜೆಪಿಯ ಗೋ ಪ್ರೇಮವನ್ನು ಪ್ರಶ್ನಿಸಿದ ಗೊಡ್ಡು ಹಸು

    ‘ಗೊಡ್ಡು (ಹಾಲು ನೀಡುವುದನ್ನು ನಿಲ್ಲಿಸಿದ) ಹಸುಗಳಿಗೆ ಉಚಿತ ಮೇವು' ಯೋಜನೆಯನ್ನು ರೂಪಿಸುವುದಾಗಿ ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್‍ರು ಭರವಸೆ ನೀಡಿದ ಮರುದಿನವೇ, ‘ಮಾಂಸ ರಫ್ತಿನಲ್ಲಿ ಭಾರತ ಜಗತ್ತಿನಲ್ಲಿಯೇ ಪ್ರಥಮ ಸ್ಥಾನಿಯಾಗಿರುವ ಸುದ್ದಿಯನ್ನು ಮಾಧ್ಯಮಗಳು ಪ್ರಕಟಿಸಿವೆ. ಬಹುಶಃ ಕೇಂದ್ರದ ದ್ವಂದ್ವ ನೀತಿಗೆ ಮತ್ತೊಂದು ಪುರಾವೆ ಇದು. ಕಳೆದೊಂದು ವರ್ಷದಲ್ಲಿ ಭಾರತವು 2.4 ಮಿಲಿಯನ್ ಟನ್ ಮಾಂಸ (ಗೋ ಮತ್ತು ಎಮ್ಮೆ)ವನ್ನು ರಫ್ತು ಮಾಡಿದ್ದು ಇದು ಜಗತ್ತಿನಲ್ಲಿಯೇ ಅತ್ಯಧಿಕ. ಎರಡನೇ ಸ್ಥಾನದಲ್ಲಿರುವ ಬ್ರಝಿಲ್ 2 ಮಿಲಿಯನ್ ಟನ್ ಮಾಂಸವನ್ನು ರಫ್ತು ಮಾಡಿದ್ದರೆ 1.5 ಮಿಲಿಯನ್ ಟನ್ ರಫ್ತು ಮಾಡಿರುವ ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿದೆ. ಜಗತ್ತಿನಲ್ಲಿಯೇ ರಪಾs್ತಗುವ ಒಟ್ಟು ಮಾಂಸದ ಪ್ರಮಾಣದಲ್ಲಿ 23.5% ಭಾರತದಿಂದಲೇ ರಫ್ತಾಗುತ್ತಿದೆ. ಅದರಲ್ಲೂ ಈ ಹಿಂದಿನ ವರ್ಷ ಈ ರಫ್ತಿನ ಪ್ರಮಾಣ 20.8% ಇತ್ತು. ಅಂದರೆ, ಸುಮಾರು 3%ದಷ್ಟು ಹೆಚ್ಚುವರಿ ಮಾಂಸವು ಈ ವರ್ಷ ರಫ್ತಾಗಿದೆ. ವಿಶೇಷ ಏನೆಂದರೆ, ಬಾಸುಮತಿ ಅಕ್ಕಿಯ ರಫ್ತಿನಿಂದ ಪಡೆಯುವ ವಿದೇಶಿ ವರಮಾನಕ್ಕಿಂತ ಹೆಚ್ಚಿನ ವರಮಾನವನ್ನು ಭಾರತವು ಮಾಂಸ ರಫ್ತಿನಿಂದ ಪಡೆದಿದೆ ಎಂಬುದು. ಅಮೇರಿಕದ ಕೃಷಿ ಇಲಾಖೆಯು ಬಿಡುಗಡೆ ಮಾಡಿರುವ ಈ ಅಂಕಿ-ಅಂಶಗಳಿಗಿಂತ ಒಂದು ದಿನ ಮೊದಲು ಗೋರಕ್ಷಣೆಯನ್ನು ಕೇಂದ್ರೀಕರಿಸಿ ದೆಹಲಿಯಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಭಾರತದ ಕೃಷಿ ಸಂಶೋಧನಾ ಸಂಸ್ಥೆ (IACR), ರಾಷ್ಟ್ರೀಯ ಗೋಧಾನ್ ಮಹಾಸಂಘ ಮತ್ತು ಪ್ರಾಣಿಗಳ ರಕ್ಷಣೆ ಹಾಗೂ ಕೃಷಿ ಸಂಶೋಧನಾ ಸಂಸ್ಥೆಗಳು ಸೇರಿಕೊಂಡು ಏರ್ಪಡಿಸಿದ್ದ ಈ ಸಭೆಯಲ್ಲಿ ಕೇಂದ್ರ ಮಂತ್ರಿಗಳು, ಸಂಘಪರಿವಾರದ ನಾಯಕರು, ವೈದ್ಯರು, ವಿಜ್ಞಾನಿಗಳೂ ಸೇರಿದಂತೆ ಸುಮಾರು ಸಾವಿರ ಮಂದಿ ಭಾಗವಹಿಸಿದ್ದರು. ಆ ಸಭೆಯ ಉದ್ದೇಶವೇ ಗೋವು. ಅದರ ಸೆಗಣಿ, ಮೂತ್ರ, ದೈಹಿಕ ಸಾಮರ್ಥ್ಯ, ಹಾಲು.. ಸಹಿತ ಎಲ್ಲದರ ಬಗ್ಗೆಯೂ ವಿಸ್ತೃತ ಚರ್ಚೆಯೊಂದನ್ನು ನಡೆಸುವುದು ಮತ್ತು ಗೋರಕ್ಷಣೆಯ ಉದ್ದೇಶದ ಈಡೇರಿಕೆಗಾಗಿ ಅಗತ್ಯ ವಾತಾವರಣವನ್ನು ನಿರ್ಮಿಸುವುದು ಕಾರ್ಯಕ್ರಮದ ಗುರಿಯಾಗಿತ್ತು. ಅಲೋಪತಿಗಿಂತ ‘ಕೌ’(Cow)ಪತಿಯೇ ಹೆಚ್ಚು ಲಾಭಕರ ಎಂದು ಬಿರ್ಲಾ ಗ್ರೂಪ್ ಆಸ್ಪತ್ರೆಗಳ ನಿರ್ದೇಶಕ ಸಂಜಯ್ ಮಹೇಶ್ವರಿ ಹೇಳಿದರು. ಲೈಂಗಿಕ ರೋಗಗಳಿಗೆ ಮತ್ತು ಕ್ಯಾನ್ಸರ್‍ಗೂ ಗೋವಿನಲ್ಲಿ ಮದ್ದಿದೆ ಎಂದೂ ಅವರು ಅಭಿಪ್ರಾಯಪಟ್ಟರು. ಗೊಡ್ಡು ಹಸುಗಳಿಗೆ ಉಚಿತ ಮೇವು ಎಂಬ ಭರವಸೆಯನ್ನು ರಾಜನಾಥ್ ಸಿಂಗ್ ನೀಡಿದ್ದು ಈ ಸಭೆಯಲ್ಲಿಯೇ. ನಿಜವಾಗಿ, ಈ ಹೇಳಿಕೆಯ ಮೂಲಕ ಬಿಜೆಪಿಯು ಇದೇ ಮೊದಲ ಬಾರಿಗೆ ಗೋ ಮಾರಾಟಕ್ಕೂ ಅದರ ಸಾಕುವಿಕೆಗೂ ಸಂಬಂಧ ಇದೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ. ಸಾಮಾನ್ಯವಾಗಿ, ಗೋವು ಮತ್ತು ಎತ್ತನ್ನು ಸಾಕುವುದು ರೈತರು. ಅದವರ ಬದುಕು. ಗದ್ದೆಯ ಉಳುಮೆಗೆ, ಗೊಬ್ಬರಕ್ಕೆ, ಹಾಲು ಮತ್ತಿತರ ಉತ್ಪನ್ನಗಳಿಗೆ ಅವರು ಗೋವನ್ನೇ ಆಶ್ರಯಿಸಿಕೊಂಡಿದ್ದಾರೆ. ಗೋವು ಅವರಿಗೆ ಎಷ್ಟು ಗೌರವಾರ್ಹವೋ ಅಷ್ಟೇ ಆಧಾರಸ್ತಂಭ ಕೂಡ. ಬರೇ ಶ್ರದ್ಧೆಗಾಗಿ ಗೋವು ಸಾಕುವವರು ಈ ದೇಶದಲ್ಲಿ ಎಷ್ಟಿರಬಹುದೆಂದು ಪ್ರಶ್ನಿಸಿದರೆ ರಾಜನಾಥ್ ಆಗಲಿ, ಸಂಘಪರಿವಾರದ ನಾಯಕರಾಗಲಿ ಉತ್ತರಿಸಲಾರರು. ಯಾಕೆಂದರೆ, ಗೋವಿನ ಸುತ್ತ ಅತಿಮಾನುಷ ಪ್ರಭಾವಳಿಯೊಂದನ್ನು ಸೃಷ್ಟಿಸಿದ್ದು ರಾಜಕೀಯವೇ ಹೊರತು ಅದನ್ನು ಸಾಕುವವರಲ್ಲ. ಬಿಜೆಪಿ ಹುಟ್ಟುವುದಕ್ಕಿಂತ ಮೊದಲೇ ಈ ದೇಶದಲ್ಲಿ ಗೋವು ಇತ್ತು. ಅದರ ಸೆಗಣಿ, ಮೂತ್ರ, ಹಾಲು, ಗೊಬ್ಬರ.. ಎಲ್ಲವೂ ಇತ್ತು. ಜೊತೆಗೇ ಶ್ರದ್ಧೆ ಮತ್ತು ಗೌರವವೂ ಇತ್ತು. ಅಲ್ಲದೇ ಆಹಾರ ಕ್ರಮವಾಗಿಯೂ ಅದು ಬಳಕೆಯಲ್ಲಿತ್ತು. ಆದರೆ, ಬಿಜೆಪಿ ಮಾಡಿದ್ದೇನೆಂದರೆ, ಗೋವಿಗೆ ಭಾವನಾತ್ಮಕ ಚೌಕಟ್ಟೊಂದನ್ನು ಕೊಟ್ಟು ಈ ದೇಶದ ಜನರನ್ನು ನಾವು ಮತ್ತು ಅವರು ಎಂದು ವಿಭಜಿಸಿದ್ದು. ಗೋವುಗಳ ಸಾಗಾಟದಲ್ಲಿ ಮತ್ತು ಮಾಂಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ಮುಸ್ಲಿಮರನ್ನು ತೋರಿಸಿ, ಮುಸ್ಲಿಮರನ್ನು ಹಿಂದೂ ವಿರೋಧಿಗಳಾಗಿ ಚಿತ್ರಿಸಿದ್ದು. ಗೋಮಾಂಸವನ್ನು ಸೇವಿಸುವುದು ಮತ್ತು ಮಾಂಸೋದ್ಯಮದಲ್ಲಿ ತೊಡಗಿಸಿಕೊಂಡಿರುವುದು ಕೇವಲ ಮುಸ್ಲಿಮರು ಮಾತ್ರ ಎಂಬ ಅಪ್ಪಟ ಸುಳ್ಳನ್ನು ಪ್ರಸಾರ ಮಾಡಿದ್ದು. ಆದರೆ ಈ ಎಲ್ಲ ಸಂದರ್ಭಗಳಲ್ಲಿ ಒಂದು ಬಹುಮುಖ್ಯ ಪ್ರಶ್ನೆಯಿಂದ ಅದು ತಪ್ಪಿಸಿಕೊಳ್ಳುತ್ತಲೇ ಇತ್ತು. ಅದೆಂದರೆ, ಈ ಗೋವುಗಳನ್ನು ಮಾರಾಟ ಮಾಡುವವರು ಯಾರು ಮತ್ತು ಅವರೇಕೆ ಅದನ್ನು ಮಾರಾಟ ಮಾಡುತ್ತಾರೆ ಎಂಬ ಪ್ರಶ್ನೆ. ಬರೇ ಶ್ರದ್ಧೆಯೊಂದೇ ಗೋಸಾಕಾಣಿಕೆಗೆ ಕಾರಣ ಎಂದಾದರೆ ಅದರ ಮಾರಾಟದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬರೇ ಶ್ರದ್ಧೆ ಮತ್ತು ಭಕ್ತಿಯ ಕಾರಣಕ್ಕಾಗಿ ಸಾಕಲಾಗುವ ಪ್ರಾಣಿಯು ಹಾಲು ಕೊಡದಿದ್ದರೂ ಉಳುಮೆಗೆ ಬಾರದಿದ್ದರೂ ಶ್ರದ್ಧಾಭಕ್ತಿ ಕಡಿಮೆಕೊಳ್ಳಲು ಸಾಧ್ಯವೂ ಇಲ್ಲ. ಗೋವನ್ನು ಬರೇ ಭಕ್ತಿ ಮತ್ತು ಶ್ರದ್ಧೆಯ ರೂಪಕವಾಗಿ ಪ್ರಸ್ತುತಪಡಿಸುತ್ತಿರುವ ಬಿಜೆಪಿಯ ಮುಂದೆ ಈ ಮಾರಾಟದ ಪ್ರಶ್ನೆಯನ್ನು ಸದಾ ಎಸೆಯಲಾಗುತ್ತಿತ್ತು. ಗೋವನ್ನು ಸಾಕುವವರು ಹಾಲು ಬತ್ತಿದ ಕೂಡಲೇ ಅದನ್ನೇಕೆ ಮಾರಾಟ ಮಾಡುತ್ತಾರೆ ಎಂದು ಪ್ರಶ್ನಿಸಲಾಗುತ್ತಿತ್ತು. ಬಿಜೆಪಿ ಈ ಬಹುಮುಖ್ಯ ಪ್ರಶ್ನೆಗೆ ಉತ್ತರಿಸುವ ಬದಲು ಆಗೊಮ್ಮೆ ಈಗೊಮ್ಮೆ ನಡೆಯುವ ಗೋಕಳ್ಳತನವನ್ನು ಬೊಟ್ಟು ಮಾಡಿ ವಿಷಯಾಂತರ ಮಾಡುತ್ತಿತ್ತು. ಆದರೆ, ಇದೀಗ ರಾಜನಾಥ್ ಸಿಂಗ್‍ರ ಮೂಲಕ ಬಿಜೆಪಿಯು ನಿಜವನ್ನು ಒಪ್ಪಿಕೊಂಡಿದೆ. ಸಾಕಾಣಿಕೆಗೂ ಮಾರಾಟಕ್ಕೂ ಮತ್ತು ಆರ್ಥಿಕತೆಗೂ ಸಂಬಂಧ ಇದೆ ಎಂಬುದನ್ನು ಅದು ಸಮರ್ಥಿಸಿದೆ.
  ನಿಜವಾಗಿ, ಗೋವನ್ನು ಬರೇ ಶ್ರದ್ಧಾ ದೃಷ್ಟಿಯಿಂದ ಮಾತ್ರ ಯಾರೂ ಸಾಕುತ್ತಿಲ್ಲ. ಬೆಳಿಗ್ಗೆ ಮತ್ತು ಸಂಜೆ ಅದರಿಂದ ಹಾಲು ಪಡೆಯುವುದು ಹಾಗೂ ಒಂದು ದಿನ ಹಾಲು ತುಸು ಕಡಿಮೆಯಾದರೂ ಮಾಲಕನ ಹಣೆಯಲ್ಲಿ ನೆರಿಗೆಗಳು ಮೂಡುವುದೇ ಇದನ್ನು ಸಾಬೀತುಪಡಿಸುತ್ತದೆ. ಹಾಗಂತ, ಗೋವನ್ನು ಸಾಕುವವರು ಅದನ್ನು ಇತರ ಪ್ರಾಣಿಗಳಂತೆ ನೋಡದೇ ಇರಬಹುದು. ಆಡು, ಕುರಿ, ಕೋಳಿಗಳ ಸ್ಥಾನದಲ್ಲಿ ಅದನ್ನು ನಿಲ್ಲಿಸದೇ ಇರಬಹುದು. ಆದರೆ ಗೋವು ಒಂದು ಆರ್ಥಿಕ ಪ್ರಾಣಿ. ಲಾಭ ಮತ್ತು ನಷ್ಟಗಳನ್ನು ಲೆಕ್ಕ ಹಾಕಿಕೊಂಡೇ ಓರ್ವ ಗೋವನ್ನು ಸಾಕುತ್ತಾನೆ/ಳೆ. ಅದರ ಹಾಲು, ಸೆಗಣಿ, ಸಂತಾನ ಸಾಮಥ್ರ್ಯ ಮತ್ತು ಅದರ ದೇಹ.. ಎಲ್ಲದಕ್ಕೂ ಆರ್ಥಿಕ ಲೆಕ್ಕಾಚಾರವೊಂದು ಇದ್ದೇ ಇದೆ. ಗೋವನ್ನು ಗೌರವಿಸುತ್ತಲೇ ಅಗತ್ಯ ಬಂದಾಗ ಅದನ್ನು ಮಾಂಸಕ್ಕಾಗಿ ಮಾರಾಟ ಮಾಡುವುದನ್ನು ಶ್ರದ್ಧಾಭಂಗ ವಿಷಯವಾಗಿ ಆತ ಕಾಣದಿರುವುದು ಈ ಕಾರಣದಿಂದಲೇ. ಹಸು ಗೊಡ್ಡಾದಾಗ ಮಾಲಿಕ ಮಾರುತ್ತಾನೆ ಮತ್ತು ಇನ್ನೊಂದನ್ನು ಖರೀದಿಸುತ್ತಾನೆ ಅಥವಾ ಗೊಡ್ಡು ಹಸುವಿನ ಮರಿಗಳ ಮೇಲೆ ಆಶ್ರಯ ಪಡೆಯುತ್ತಾನೆ. ಸಾಮಾನ್ಯವಾಗಿ, ಗದ್ದೆ ಇಲ್ಲದವರ ಹಟ್ಟಿಯಲ್ಲಿ ಗಂಡು ಕರುಗಳು ಅಥವಾ ಎತ್ತುಗಳು ಇರುವುದೇ ಇಲ್ಲ. ಹಾಗಂತ, ಹಸುಗಳೆಲ್ಲ ಹೆಣ್ಣು ಕರುಗಳನ್ನು ಮಾತ್ರ ಹಡೆಯುತ್ತವೆ ಎಂದಲ್ಲ. ಗಂಡು ಕರು ಗದ್ದೆಯಿಲ್ಲದವರಿಗೆ ಉಪಯೋಗಶೂನ್ಯ. ಅದಕ್ಕೆ ಮೇವು, ಹಿಂಡಿ ನೀಡುವುದರಿಂದ ಯಾವ ಲಾಭವೂ ಇರುವುದಿಲ್ಲ. ಗೊಡ್ಡು ಹಸುವಿನ ಕುರಿತಾದ ಲೆಕ್ಕಾಚಾರವೂ ಇದುವೇ. ಅದನ್ನು ಸಾಕುವುದು ಆರ್ಥಿಕ ಲೆಕ್ಕಾಚಾರದ ದೃಷ್ಟಿಯಿಂದ ಖಂಡಿತವಾಗಿಯೂ ನಷ್ಟ. ರಾಜನಾಥ್ ಸಿಂಗ್‍ರ ‘ಉಚಿತ ಮೇವು’ ಹೇಳಿಕೆಯು ಈ ವಾಸ್ತವವನ್ನು ಒಪ್ಪಿಕೊಂಡಂತಾಗಿದೆ. ಶ್ರದ್ಧೆಗಿಂತ ಹೊರತಾದ ಮುಖವೊಂದು ಗೋವಿಗಿದೆ ಎಂಬುದನ್ನು ಅವರ ಈ ಹೇಳಿಕೆಯು ಸಮರ್ಥಿಸುತ್ತದೆ. ಇದು ಬಿಜೆಪಿಯ ಈ ವರೆಗಿನ ಘೋಷಿತ ನಿಲುವಿಗೆ ವಿರುದ್ಧವಾದುದು. ಅಂದಹಾಗೆ, ಇದು ಅಧಿಕಾರ ಸಿಕ್ಕ ಬಳಿಕದ ಬಿಜೆಪಿ. ಅಧಿಕಾರವಿಲ್ಲದಿದ್ದಾಗ ಅದರ ನಿಲುವು ಬೇರೆಯೇ ಆಗಿತ್ತು. ಅಷ್ಟಕ್ಕೂ, ಈ ಎರಡರಲ್ಲಿ ಅಸಲು ಬಿಜೆಪಿ ಯಾವುದೋ?