Monday, 25 June 2012

'ಆನೆಯ' ಎದುರು ಹೋರಾಡಿ ಗೆದ್ದ 'ಆಡಿನ ಮರಿ'..

`ಈಜಿಪ್ಟ್ ನ  ಹುಸ್ನಿ ಮುಬಾರಕ್ ರಿಗೆ ತೀವ್ರ ಮಟ್ಟದ ಮೆದುಳು ಆಘಾತವಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆಯೆಂದು’ ಜೂನ್ 20ರಂದು ಮಾಧ್ಯಮಗಳು ಸುದ್ದಿ ಪ್ರಕಟಿಸಿದ್ದುವು. ಅದಾಗಿ ಎರಡು ದಿನಗಳ ಬಳಿಕ, ಮುಸ್ಲಿಮ್ ಬ್ರದರ್ ಹುಡ್ ನ  ಮುಹಮ್ಮದ್ ಮುರ್ಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆಂದು ಈಜಿಪ್ಟ್ ನ ಚುನಾವಣಾ ಮಂಡಳಿ ಘೋಷಿಸಿತು. ನಿಜವಾಗಿ, ಈ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಅಹ್ಮದ್  ಶಫೀಕ್ ಗೆಲ್ಲಲಿ ಎಂದು ಆಸೆ ಪಟ್ಟದ್ದು ಬರೇ ಮುಬಾರಕೋ ಅವರ ಪತ್ನಿ ಸುಝಾನ್ನೆಯೋ ಅಥವಾ ಅವರ ಮಕ್ಕಳೋ ಮಾತ್ರ ಆಗಿರಲಿಲ್ಲ. ಅವರಿಗೆ ಓಟು ಹಾಕಿದವರಿಗಿಂತಲೂ ಹೆಚ್ಚು ಅವರ ಗೆಲುವಿನ ಅಗತ್ಯವಿದ್ದುದು ಸೇನಾಪಡೆಯ ಸರ್ವೋಚ್ಚ ನ್ಯಾಯಮಂಡಳಿಗೆ, ಅಧಿಕಾರಶಾಹಿಗೆ; ಅಮೇರಿಕ, ಇಸ್ರೇಲ್, ಬ್ರಿಟನ್ ಗೆ . ಆದ್ದರಿಂದಲೇ ಜೂನ್ 21ರಂದು ಘೋಷಣೆಯಾಗಬೇಕಿದ್ದ ಚುನಾವಣಾ ಫಲಿತಾಂಶವನ್ನು ತಡೆ ಹಿಡಿದ ನ್ಯಾಯಮಂಡಳಿ ಜನರ ನಾಡಿಮಿಡಿತವನ್ನು ಪರೀಕ್ಷಿಸಿತು. ಇದನ್ನು ಪ್ರತಿಭಟಿಸಿ ತಹ್ರೀರ್ ಸ್ಕ್ವಾರ್ ನಲ್ಲಿ ಜನರು ಮತ್ತೆ ಸೇರತೊಡಗಿದರು. ಇದಕ್ಕೆ ಪ್ರತಿತಂತ್ರವನ್ನು ಹೆಣೆದ ನ್ಯಾಯಮಂಡಲಿ , ಫಲಿತಾಂಶ ಪ್ರಕಟಣೆಗೆ ಅನುಮತಿ ಕೊಡುವುದಕ್ಕಿಂತಲೂ ಮೊದಲು ಕೆಲವು ಕ್ರೂರ ನಿಯಮಗಳನ್ನು ಜಾರಿಗೊಳಿಸಿತು..
      1. ಹೊಸ ಸರಕಾರವು ರಚಿಸುವ ಸಂವಿಧಾನದ ಮೇಲೆ ಸೇನಾ ನ್ಯಾಯ ಮಂಡಳಿಗೆ ವೀಟೋ ಚಲಾಯಿಸುವ ಅಧಿಕಾರ.
 2. ಆಂತರಿಕ ಬಿಕ್ಕಟ್ಟು ಉದ್ಭವಿಸಿದೆ ಎಂದು ಸೇನೆಗೆ ಮನವರಿಕೆಯಾದರೆ (ಸರಕಾರ ಒಪ್ಪಬೇಕೆಂದಿಲ್ಲ) ಸೇನಾ ನಿಯೋಜನೆ ಮತ್ತು ಜನರನ್ನು ಬಂಧಿಸುವ ಅಧಿಕಾರ.
3. ಸೇನಾ ಪಡೆಯ ಮೇಲೆ ನಿಯಂತ್ರಣದ ಅಧಿಕಾರ.
4. ಯುದ್ಧ ಘೋಷಣೆಯ ಮೇಲೆ ವೀಟೋ ಅಧಿಕಾರ..
      ಇದೀಗ ಮುರ್ಸಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದರೂ ಅವರನ್ನು ಯಾವ ಸಂದರ್ಭದಲ್ಲೂ ಮುಖಭಂಗಕ್ಕೆ ಒಳಗಾಗಿಸುವ ಅಧಿಕಾರವನ್ನು ಮುಬಾರಕ್ ರ  ಸೇನಾ ನ್ಯಾಯ ಮಂಡಳಿ ತಯಾರಿಸಿ ಇಟ್ಟು ಕೊಂಡಿದೆ. ಒಂದು ರೀತಿಯಲ್ಲಿ, ಮುಬಾರಕ್ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಉಸಿರಾಡುತ್ತಿದ್ದರೂ ಅವರ ಮನಸ್ಥಿತಿಯನ್ನೇ ಹೊಂದಿರುವ ಮಂದಿ ಈಜಿಪ್ಟ್ ನ  ಸೇನೆಯಲ್ಲಿ, ನ್ಯಾಯ ಮಂಡಳಿಯಲ್ಲಿ, ಸರಕಾರಿ ಕಚೇರಿಗಳಲ್ಲಿ ಧಾರಾಳ ಇದ್ದಾರೆ. ಮುರ್ಸಿಗೆ 51% ಓಟು ಸಿಕ್ಕಿರುವಾಗ ಶಫೀಕ್ ಗೆ  48.3% ಓಟು ಸಿಕ್ಕಿರುವುದೇ ಇದಕ್ಕೆ ಪುರಾವೆ. ಈಜಿಪ್ಟ್ ನ  ಮಾಜಿ ಅಧ್ಯಕ್ಷ ಅನ್ವರ್ ಸಾದಾತ್ ರ  ಮೇಲೆ ಒತ್ತಡ ಹಾಕಿ ಇಸ್ರೇಲ್ ನ  ಪರವಾಗಿ ಕ್ಯಾಂಪ್ ಡೇವಿಡ್ ಒಪ್ಪಂದವನ್ನು ಮಾಡಿಸಿಕೊಂಡಿದ್ದ ಅಮೇರಿಕವು ಕಳೆದ 55 ವರ್ಷಗಳಿಂದಲೂ ಈಜಿಪ್ಟನ್ನು ಪರೋಕ್ಷವಾಗಿ ಆಳುತ್ತಿದೆ. ಈಜಿಪ್ಟ್ ನ  ಗಡಿಗಳು ಇಸ್ರೇಲ್ ನ  ಜೊತೆ ಹಂಚಿಕೊಂಡಿರುವುದರಿಂದ ಯಾವ ರೀತಿಯಿಂದಲೂ ಇಸ್ರೇಲನ್ನು, ಅದರ ಕ್ರೌರ್ಯವನ್ನು ಪ್ರಶ್ನಿಸುವ ಪಕ್ಷಗಳು ಈಜಿಪ್ಟ್ ನಲ್ಲಿ  ಅಧಿಕಾರಕ್ಕೆ ಬರುವುದನ್ನು ಅಮೇರಿಕ ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ಆದ್ದರಿಂದಲೇ ಟ್ಯುನೀಷ್ಯಾದ ಜೈನುಲ್  ಆಬಿದೀನ್ ರಂತೆ  ಮುಬಾರಕ್ ದೇಶ ಬಿಟ್ಟು ಪಲಾಯನ ಮಾಡಿಲ್ಲ. ಕ್ರಾಂತಿಯ ಸಂದರ್ಭದಲ್ಲಿ ಆದ 800ಕ್ಕಿಂತಲೂ ಅಧಿಕ ಮಂದಿಯ ಹತ್ಯೆಯ ಆರೋಪದಲ್ಲಿ ಅವರನ್ನು ಗಲ್ಲಿಗೇರಿಸಬೇಕೆಂದು ಜನರು ಬಲವಾಗಿ ಒತ್ತಾಯಿಸುತ್ತಿದ್ದರೂ ಸದ್ಯ ಅವರಿಗೆ ಆಗಿರುವುದು ಬರೇ ಜೀವಾವಧಿ. ಆದರೂ ಅವರು  ಜೈಲಲ್ಲಿಲ್ಲ. ಅತ್ಯಾಧುನಿಕ ಆಸ್ಪತ್ರೆಯಲ್ಲಿರುವ ಅವರನ್ನು ನೋಡಿ ಕೊಳ್ಳುವುದಕ್ಕೆ ಭ್ರಷ್ಟಾಚಾರದ ಆರೋಪವಿರುವ ಅವರ ಪತ್ನಿಯನ್ನೇ  ನೇಮಿಸಲಾಗಿದೆ. ಮಕ್ಕಳ ಮೇಲಿದ್ದ ಆರೋಪವನ್ನು ವಜಾಗೊಳಿಸಲಾಗಿದೆ. ಇಷ್ಟಕ್ಕೂ ಈಜಿಪ್ಟ್ ಕ್ರಾಂತಿಯ ಗುರಿ ಇದ್ದುದೇ ಮುಬಾರಕ್ ಆಡಳಿತವನ್ನು ಕೊನೆಗೊಳಿಸುವುದು. ಹೀಗಿರುವಾಗ ಮುಬಾರಕ್ ರ  ಸರ್ವಾಧಿಕಾರವನ್ನು ನೂರು ಶೇಕಡಾ ಬೆಂಬಲಿಸುತ್ತಿದ್ದ ಪ್ರಧಾನಿ ಅಹ್ಮದ್ ಶಫೀಕ್ ರು  ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಯಾದದ್ದಾದರೂ ಹೇಗೆ? ಅವರ ಉಮೇದುವಾರಿಕೆಯು ಕ್ರಾಂತಿಯ ಉದ್ದೇಶವನ್ನೇ ಅವಮಾನಿಸಿದಂತೆ ಆಗಲಿಲ್ಲವೇ? ಈ ಪ್ರಶ್ನೆಯನ್ನು ಚುನಾವಣೆಯಲ್ಲಿ ಭಾಗವಹಿಸಿದ್ದ ರಾಜಕೀಯ ಪಕ್ಷಗಳೂ ಎತ್ತಿದ್ದುವು. ಆದರೆ ಸೇನಾ ನ್ಯಾಯ ಮಂಡಳಿ ಶಫೀಕ್ ರನ್ನು  ಬೆಂಬಲಿಸಿತು. ಮಾತ್ರವಲ್ಲ, ಮುಸ್ಲಿಮ್ ಬ್ರದರ್ ಹುಡ್ ಬಹುಮತ ಪಡೆದಿದ್ದ ಪಾರ್ಲಿಮೆಂಟ್ ಚುನಾವಣೆಯನ್ನೇ ರದ್ದುಪಡಿಸಿತು.
          `ಬಿಟ್ವೀನ್ ಎ ರಾಕ್ ಆಂಡ್  ಎ ಹಾರ್ಡ್ ಪ್ಲೇಸ್’ ಎಂದು ದಿ ಹಿಂದೂ ಪತ್ರಿಕೆ ಜೂನ್ 25ರಂದು ಸಂಪಾದಕೀಯ ಬರೆದಿರುವುದೂ ಇದೇ ಕಾರಣದಿಂದ. ಬ್ರದರ್ ಹುಡ್ ನ  ಎದುರು ಸೇನಾ ನ್ಯಾಯ ಮಂಡಳಿ, ಅಮೇರಿಕ, ಇಸ್ರೇಲ್ ಎಂಬ ಬೃಹತ್ ಬಂಡೆಯೇ ಇದೆ. 80 ವರ್ಷದ ಇತಿಹಾಸವಿರುವ ಬ್ರದರ್ ಹುಡ್ ಗೆ ಈ ಬಂಡೆ ಪರಿಚಿತವೇ ಆಗಿದ್ದರೂ ಮುರ್ಸಿ ಅಧ್ಯಕ್ಷರಾದ ಕೂಡಲೇ ಈ ಬಂಡೆಯನ್ನು ಒಂದೇ ಏಟಿಗೆ ಪುಡಿ ಮಾಡುತ್ತಾರೆ ಎಂದು ನಂಬುವುದಕ್ಕೆ ಸಾಧ್ಯವಿಲ್ಲ. ಮುರ್ಸಿ ಕೈಗೊಳ್ಳುವ ಯಾವುದೇ ತೀರ್ಮಾನವನ್ನು ಸೇನಾ ನ್ಯಾಯಾಲಯ  ವೀಟೋ ಪ್ರಯೋಗಿಸಿ ರದ್ದುಪಡಿಸುವ ಸಾಧ್ಯತೆ ಯಾವ ಸಂದರ್ಭದಲ್ಲೂ ಇದೆ. ಆಂತರಿಕ ಗಲಭೆಯನ್ನು ಸ್ವಯಂ ಹುಟ್ಟು ಹಾಕಿ, ಅಧಿಕಾರವನ್ನೇ ಕೈವಶ ಮಾಡಿಕೊಳ್ಳುವುದನ್ನೂ ತಿರಸ್ಕರಿಸುವ ಹಾಗಿಲ್ಲ. ಹೊಸದಾಗಿ ನಡೆಯಲಿರುವ ಚುನಾವಣೆಯಲ್ಲಿ ಮುಬಾರಕ್ ಕಾಲದ ಅಧಿಕಾರಿಗಳು, ಬೆಂಬಲಿಗರೆಲ್ಲ ಪಾರ್ಲಿಮೆಂಟ್ ಪ್ರವೇಶಿಸುವುದಕ್ಕೆ ಪ್ರಯತ್ನಿಸುವ ಸಾಧ್ಯತೆಯೂ ಇದೆ.
ಏನೇ ಆಗಲಿ, ಸುಳ್ಳು, ಕ್ರೌರ್ಯ, ದಬ್ಬಾಳಿಕೆಗೆ ದೀರ್ಘ ಆಯುಷ್ಯ ಇರುವುದಿಲ್ಲ ಅನ್ನುವುದನ್ನು ಮುರ್ಸಿ ಗೆಲುವು ಸಾಬೀತುಪಡಿಸಿದೆ. ನಿಜವಾಗಿ ಅವರು ಸ್ಪರ್ಧಿಸಿದ್ದುದು ಶಫೀಕ್ ಎಂಬ ಬರೇ ಮಾಜಿ ಪ್ರಧಾನಿಯ ವಿರುದ್ಧವಷ್ಟೇ ಆಗಿರಲಿಲ್ಲ. ಬದಲು, ಮುಬಾರಕ್ ಎಂಬ ಸರ್ವಾಧಿಕಾರಿಯ ವಿರುದ್ಧ, 40 ವರ್ಷಗಳ ವರೆಗೆ ಈಜಿಪ್ಟ್ ನ  ಶಾಲೆ, ಕಾಲೇಜು, ಪತ್ರಿಕೆ, ಟಿ.ವಿ.ಗಳ ಸಹಿತ ಲಭ್ಯ ಇರುವ ಎಲ್ಲ ಮಾಧ್ಯಮಗಳ ಮೂಲಕ ಹರಡಿಬಿಟ್ಟ ಸುಳ್ಳಿನ ವಿರುದ್ಧ, ಸರ್ವೋಚ್ಚ ನ್ಯಾಯ ಮಂಡಳಿಯ ವಿರುದ್ಧ, ವಿದೇಶಿ ರಾಷ್ಟ್ರಗಳ ವಿರುದ್ಧ.. ಆದ್ದರಿಂದಲೇ ಮುರ್ಸಿಯ ಗೆಲುವನ್ನು ಗುಣಾಕಾರ-ಭಾಗಾಕಾರ ಮಾಡಿ, ಅತ್ಯಲ್ಪ ಅಂತರದ್ದೆಂದು ವ್ಯಾಖ್ಯಾ ನಿಸುವುದು ಖಂಡಿತ ತಪ್ಪು. ಆನೆ ಮತ್ತು ಆಡಿನ ಮರಿಯ ನಡುವಿನ ಹೋರಾಟವನ್ನು ಬರೇ ಇಬ್ಬರು ವ್ಯಕ್ತಿಗಳ ನಡುವಿನ ಹೋರಾಟವಾಗಿ ಬಿಂಬಿಸಬೇಕಿಲ್ಲ. ಆಡಿನ ಮರಿಯ ಜೊತೆ ಇದ್ದದ್ದು ಪ್ರಬಲ ಸಿದ್ಧಾಂತ, ಪ್ರಾಮಾಣಿಕತೆ, ಸತ್ಯ ಮತ್ತು ದೇವಭಯ. ಆನೆಯ ಜೊತೆ ಇಲ್ಲದೆ ಇದ್ದದ್ದೂ ಇದುವೇ. ಆದ್ದರಿಂದ ಮುರ್ಸಿಯ ಗೆಲುವನ್ನು ಬ್ರದರ್ ಹುಡ್ ನ  ಗೆಲುವು ಎಂದಷ್ಟೇ ಅಲ್ಲ, ಅದು ಪ್ರತಿಪಾದಿಸುವ ಇಸ್ಲಾಮೀ  ಮೌಲ್ಯದ ಗೆಲುವೆಂದೂ ಹೇಳಬೇಕು. ಆ ಕಾರಣದಿಂದಲೇ ಅವರಿಗೆ ಅಭಿನಂದನೆ ಸಲ್ಲಬೇಕು.

Monday, 18 June 2012

ಶಾರದ ಎಂಬ ತಾಯಿ, ವೆಂಕಟರಮಣ ಭಟ್ ಎಂಬ ಅಪ್ಪ

ಈ ಸುದ್ದಿಗಳನ್ನು ಓದಿ

1. ಕಾಶ್ಮೀರದ ಮಾನವ ಹಕ್ಕು ಕಾರ್ಯಕರ್ತರೋರ್ವರನ್ನು
ಕೊಂದ ಆರೋಪವಿದ್ದ ಮಾಜಿ ಸೇನಾಧಿಕಾರಿ ಅವತಾರ್ ಸಿಂಗ್ ರು ,
ತನ್ನ ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.                                                - ಜೂನ್ 11, 2012
2. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಾರದಾ ಎಂಬ 80 ವರ್ಷದ ಬ್ರಾಹ್ಮಣ ಮಹಿಳೆ ಕಳೆದ 12 ವರ್ಷಗಳಿಂದ ಭಿಕ್ಷೆ ಬೇಡಿ ಬದುಕುತ್ತಿದ್ದಾರೆ. ಅರಮನೆಯಂಥ ಮನೆ ಮತ್ತು ನಾಲ್ವರು ಮಕ್ಕಳಿದ್ದರೂ ¥ಕಿರಿಕಿರಿ¥ಯ ನೆಪವೊಡ್ಡಿ ಮನೆಯಿಂದ ಅವರನ್ನು ಹೊರಹಾಕಲಾಗಿದೆ.                                                                          - ಜೂನ್ 13, 2012
3. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ವೆಂಕಟ್ರಮಣ ಭಟ್ ಎಂಬವರು 18, 16 ಮತ್ತು 12ರ ಹರೆಯದ ತಮ್ಮ ಮೂವರು ಮಕ್ಕಳನ್ನೂ ಪತ್ನಿಯನ್ನೂ ಕೊಂದು ಪರಾರಿಯಾಗಿದ್ದಾರೆ..                                   - ಜೂನ್ 15, 2012

ಕಳೆದ ಒಂದೇ ವಾರದಲ್ಲಿ ಪ್ರಕಟವಾದ ಮೂರು ಸುದ್ದಿಗಳಿವು. ಈ ಸುದ್ದಿಗಳ ವಿಶೇಷತೆ ಏನೆಂದರೆ, ಇವು ಓದುಗರನ್ನು ಒಂದಷ್ಟು ಹೊತ್ತು ಕಟ್ಟಿ ಹಾಕುತ್ತದೆ. ಭಾವುಕಗೊಳಿಸುತ್ತದೆ. ರಾಜಕೀಯದ್ದೋ ಕ್ರೀಡೆಯದ್ದೋ ವರದಿಯನ್ನು ಓದಿದಷ್ಟು ಸಲೀಸಾಗಿ ಇದನ್ನು ಓದುವುದಕ್ಕೆ ಸಾಧ್ಯವೂ ಆಗುವುದಿಲ್ಲ. ಇಷ್ಟಕ್ಕೂ ಇಬ್ಬರು ವ್ಯಕ್ತಿಗಳ ಮಧ್ಯೆ ನಡೆಯುವ ಜಗಳ ಕೊಲೆಯಲ್ಲಿ ಅಂತ್ಯವಾಗುವುದಕ್ಕೂ ಓರ್ವ ಅಪ್ಪ ತಾನೇ ಬೆಳೆಸಿದ ತನ್ನ ಮಕ್ಕಳನ್ನು ಕೊಲ್ಲುವುದಕ್ಕೂ ವ್ಯತ್ಯಾಸ ಇದೆ. ವರ್ಷಗಟ್ಟಲೆ ತನ್ನ ಬಳಿ ಮಲಗಿದ ಪತ್ನಿಯನ್ನು ಕೊಲ್ಲುವುದೆಂದರೆ, ಅದು `ಕೊಲೆ’ ಎಂಬ ಎರಡಕ್ಷರಗಳಲ್ಲಿ ಹೇಳಿ ಮುಗಿಸುವಷ್ಟು ಸಣ್ಣ ಸಂಗತಿಯಲ್ಲ. ಇನ್ನು, 80 ವರ್ಷದ ವೃದ್ಧೆಯನ್ನು ಐವತ್ತೋ ಅರುವತ್ತೋ ವರ್ಷದ ಮಕ್ಕಳು ಮನೆಯಿಂದ ಹೊರಗಟ್ಟುತ್ತಾರೆಂದರೆ, ಅವರು ಬೌದ್ಧಿಕವಾಗಿ ಬೆಳೆದಿಲ್ಲ ಎಂದು ಹೇಳುವಂತೆಯೂ ಇಲ್ಲ. ಹೀಗಿರುವಾಗ ಇಂಥ ಕ್ರೂರ ಮತ್ತು ಹೃದಯ ವಿದ್ರಾವಕ ಘಟನೆಗಳನ್ನು ವ್ಯಾಖ್ಯಾನಿಸುವುದಾದರೂ ಹೇಗೆ?
ಶಾರದಾ
ನಿಜವಾಗಿ, ಅಪ್ಪ, ಅಮ್ಮ, ಮಕ್ಕಳು ಎಂಬ ಒಂದು ಸಣ್ಣ ಗುಂಪು ಒಂದೇ ಮನೆಯಲ್ಲಿದ್ದುಕೊಂಡು ಬದುಕುವುದೆಂದರೆ, ಜೈಲಿನಲ್ಲಿ ಕೆಲವಾರು ಕೈದಿಗಳು ಒಟ್ಟಿಗೆ, ಒಂದೇ ಸೆಲ್ ನಲ್ಲಿ ಬದುಕಿದಂತೆ ಖಂಡಿತ ಅಲ್ಲ. ಜೈಲಿನಲ್ಲಿ ವರ್ಷಗಟ್ಟಲೆ ಕೈದಿಗಳು ಒಟ್ಟಿಗಿದ್ದರೂ ಒಂದು ಬಗೆಯ ಅಂತರವನ್ನು ಕಾಯ್ದುಕೊಂಡೇ ಇರುತ್ತಾರೆ. ಬದುಕಿನಲ್ಲಿ ನಡೆದ ಸರ್ವವನ್ನೂ ಅವರು ಪರಸ್ಪರ ಹಂಚಿಕೊಳ್ಳುವುದೂ ಇಲ್ಲ. ಆದರೆ ಕುಟುಂಬ ಎಂಬುದು ಹಾಗಲ್ಲವಲ್ಲ. ಅಲ್ಲೊಂದು ವಿಶ್ವಾಸ ಇರುತ್ತದೆ. ಪತಿಯ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ಪತ್ನಿ ತವರು ಮನೆಯಿಂದ ಹೊರಟು ಬರುತ್ತಾಳೆ. ಮಕ್ಕಳೂ ಹಾಗೆಯೇ. ಅಪ್ಪನನ್ನು ಹಚ್ಚಿಕೊಂಡೇ ಬೆಳೆಯುತ್ತವೆ. ಒಂದು ರೀತಿಯಲ್ಲಿ ಮನೆಯ ವಾತಾವರಣ ಎಂಬುದು ಪ್ರೀತಿ, ವಿಶ್ವಾಸ, ಅನುಕಂಪದ್ದಾಗಿರುತ್ತದೆ. ಆದ್ದರಿಂದಲೇ ಮನೆಯಲ್ಲಿ 10 ಮಂದಿಯಿದ್ದರೆ ಅವರೆಲ್ಲರನ್ನೂ ಕೊಲ್ಲುವುದಕ್ಕೆ ಓರ್ವ ಅಪ್ಪನಿಗೆ ಸಾಧ್ಯವಿದೆ. ಯಾಕೆಂದರೆ, ಅಪ್ಪ ಕೊಲ್ಲುತ್ತಾನೆ ಅನ್ನುವುದನ್ನು ಮಕ್ಕಳು ಕಲ್ಪಿಸಿಕೊಂಡಿರುವುದೇ ಇಲ್ಲ. ಒಂದು ವೇಳೆ ಅಪ್ಪ ಕತ್ತಿ ಎತ್ತಿದರೂ ಅದನ್ನು ಬೆದರಿಕೆಗೆ ಎಂದು ಮಕ್ಕಳು ತಿಳಿದುಕೊಳ್ಳುತ್ತಾರೆಯೇ ಹೊರತು ಕೊಲೆಗೆ ಎಂದಲ್ಲ. ಅಂಥದ್ದೊಂದು ವಿಶ್ವಾಸದ ವಾತಾವರಣ ಇರುವ ಮನೆಯಲ್ಲೂ ಹತ್ಯೆಗಳಾಗತೊಡಗಿದರೆ, ಹೆತ್ತ, ಸಾಕಿ ಸಲಹಿದ, ಮುತ್ತು ಕೊಟ್ಟ ತಾಯಿಯನ್ನೇ ಮಕ್ಕಳು ಮನೆಯಿಂದ ಹೊರಕ್ಕಟ್ಟುವುದು ನಡೆದರೆ, ಅವುಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು?
    ಇವತ್ತು ಬದುಕಿನ ದೃಷ್ಟಿಕೋನಗಳು ಬದಲಾಗುತ್ತಾ ಇವೆ. ಅಪ್ಪ, ಅಮ್ಮ, ಮಕ್ಕಳು ಎಂಬ ಪವಿತ್ರ ಸಂಬಂಧಕ್ಕೆ ಪ್ರಸಕ್ತ ಜಗತ್ತಿನ ವಾತಾವರಣ ಅಷ್ಟಾಗಿ ಒಗ್ಗುತ್ತಿಲ್ಲ. ಬಿಝಿ ಜಗತ್ತು. ಮನುಷ್ಯನೂ ಬಿಝಿ. ಬೆಳಗ್ಗೆ ತೆರೆದು ರಾತ್ರಿ ಮುಚ್ಚುತ್ತಿದ್ದ ಭಟ್ರದ್ದೋ, ಶೆಟ್ರದ್ದೋ ಅಂಗಡಿಗಳು ಒಂದಾನೊಂದು ಕಾಲಕ್ಕೆ ಸೇರಿ ಆ ಜಾಗಕ್ಕೆ, ದಿನದ 24 ಗಂಟೆಯೂ ಜಗಮಗಿಸುವ ಮಾಲ್ ಗಳು ಬಂದಿವೆ. ಮನುಷ್ಯರನ್ನು ಪ್ರೀತಿ, ವಿಶ್ವಾಸ, ಸಂಬಂಧಗಳು ಆಳುವ ಬದಲು ದುಡ್ಡು, ಅಂತಸ್ತುಗಳು ಆಳತೊಡಗಿವೆ. ಇಂಥ ಹೊತ್ತಲ್ಲಿ ಇಂಥ ಘಟನೆಗಳನ್ನು ನಿರ್ಲಕ್ಷಿಸಿ ಮಾಧ್ಯಮಗಳು ಜನಪ್ರಿಯ ಇಶ್ಯೂಗಳನ್ನೇ ಚರ್ಚೆಗೆತ್ತಿಕೊಂಡರೆ ಖಂಡಿತ ಭವಿಷ್ಯದ ದೃಷ್ಟಿಯಿಂದ ಅದು ದೊಡ್ಡದೊಂದು ಪ್ರಮಾದವಾಗುವ ಸಾಧ್ಯತೆ ಇದೆ. ರಾಜಕೀಯ ಇವತ್ತೂ ಇರುತ್ತದೆ. ನಾಳೆಯೂ ಇರುತ್ತದೆ. ಸಿನಿಮಾ, ಕ್ರೀಡೆಗಳಿಗೆಲ್ಲಾ ಇವತ್ತು ಪ್ರಚಾರದ ಅಗತ್ಯವೂ ಇರುವುದಿಲ್ಲ. ಅದರಲ್ಲಿ ತೊಡಗಿಸಿಕೊಂಡವರು ಏನಾದರೊಂದು ಇಶ್ಯೂ ಸೃಷ್ಟಿಸಿಕೊಂಡು ಸುದ್ದಿಯಲ್ಲೇ ಇರುತ್ತಾರೆ. ಹೀಗಿರುವಾಗ, ಬರೇ ರಾಜಕೀಯ, ಕ್ರೀಡೆ, ಸಿನಿಮಾಗಳು ಮತ್ತು ಒಂದಿಷ್ಟು ಕ್ರೈಮುಗಳ ಸುತ್ತಲೇ ಸುತ್ತುವ ಬದಲು ಇಂಥ ಘಟನೆಗಳನ್ನು ಮಾಧ್ಯಮಗಳು ಚರ್ಚೆಗೆ ಎತ್ತಿಕೊಳ್ಳಬೇಕು. ಸಮಾಜವನ್ನು ಜಾಗೃತಿಗೊಳಿಸುವ ಸಂಪಾದಕೀಯ, ಚರ್ಚೆ, ಅಂಕಣಗಳು ಪ್ರಕಟವಾಗಬೇಕು. ಅಂದಹಾಗೆ ಹೆತ್ತವರು, ಮಕ್ಕಳು ತಂತಮ್ಮ ಹೊಣೆಗಾರಿಕೆಯ ಬಗ್ಗೆ ಆಲೋಚಿಸುವಂತೆ ಮಾಡುವುದಕ್ಕೆ ಇವತ್ತು ಮಾಧ್ಯಮ ಕ್ಷೇತ್ರಕ್ಕೆ ಸಾಧ್ಯ ಇರುವಷ್ಟು ಇನ್ನಾವುದಕ್ಕೂ ಸಾಧ್ಯವಿಲ್ಲ. ಅದರ ಆಧಾರದಲ್ಲಿಯೇ ಜನರ ಅಭಿಪ್ರಾಯಗಳು ರೂಪುಗೊಳ್ಳುತ್ತವೆ. ಅವು ಚರ್ಚಿಸುವುದನ್ನೇ ಸಮಾಜ ಚರ್ಚಿಸುತ್ತದೆ. ಹೀಗಿರುವಾಗ, ಕೌಟುಂಬಿಕ ಸಂಬಂಧ, ಮೌಲ್ಯಗಳ ಬಗ್ಗೆ ಅವು ತುಸು ಗಂಭೀರವಾದರೂ ಸಾಕು, ಸಮಾಜ ಅದರ ದುಪ್ಪಟ್ಟು ಗಂಭೀರವಾಗಬಲ್ಲುದು. ಅಪ್ಪ ವೆಂಕಟ್ರಮಣ ಭಟ್ಟರ ಕೈಯಲ್ಲೇ ಸಾವಿಗೀಡಾದ ಮಕ್ಕಳ ಬಗ್ಗೆ, ಅರಮನೆಯಂಥ ಮನೆಯಿದ್ದೂ ಅಲೆಮಾರಿಯಾಗಿರುವ ಶಾರದಾರ ಬಗ್ಗೆ ಚರ್ಚಿಸುವುದೆಂದರೆ ಅದು ನಮ್ಮೆಲ್ಲರ ಭವಿಷ್ಯದ ಕುರಿತು ಚರ್ಚಿಸಿದಂತೆ.
        ಏನೇ ಆಗಲಿ, ದುರ್ಬಲವಾಗುತ್ತಿರುವ ಮನುಷ್ಯ ಸಂಬಂಧಗಳಿಗೆ ಅವತಾರ್ ಸಿಂಗ್, ಶಾರದಾ ಮತ್ತು ವೆಂಕಟ್ರಮಣ ಭಟ್ರು ಅತ್ಯುತ್ತಮ ಪುರಾವೆಯಾಗಿದ್ದಾರೆ. ಅವರನ್ನು ಎದುರಿಟ್ಟುಕೊಂಡು ನಮ್ಮನ್ನು ನಾವು ತಿಕ್ಕಿ ನೋಡಿಕೊಳ್ಳಬೇಕಾದ ಅಗತ್ಯವಿದೆ. ಅಮ್ಮ, ಅಪ್ಪ, ಮಕ್ಕಳು ಎಂಬ ಸುಂದರ ಗುಂಪು ಪರಸ್ಪರ ಪ್ರೀತಿ, ವಿಶ್ವಾಸದಿಂದ ಎಂದೆಂದೂ ಬಾಳುವಂತಾಗಲು ಅರಿವು ಮೂಡಿಸಬೇಕಿದೆ. ಇಲ್ಲದಿದ್ದರೆ ಶಾರದಾರಂಥ ತಾಯಿ, ವೆಂಕಟ್ರಮಣ ಭಟ್ರಂಥ ಅಪ್ಪಂದಿರ ಸಂಖ್ಯೆ ಹೆಚ್ಚಾದೀತು..

Tuesday, 12 June 2012

- ಅಸಲಿ ಉಗ್ರರಿಗೆ ಬಲಿಯಾಗುತ್ತಿರುವ ಶಂಕಿತ ಉಗ್ರರು..

ಹೆಸರು: ಮುಹಮ್ಮದ್ ಖಲೀಲ್ ಸಿದ್ದೀಖಿ
ಕುಟುಂಬ: 8 ತಿಂಗಳ ಬಸುರಿ ಪತ್ನಿ, 2 ವರ್ಷದ ಮಗಳು
ಆರೋಪ: ಶಂಕಿತ ಭಯೋತ್ಪಾದಕ
ಘಟನೆ: ಜೂನ್ 8ರಂದು ಮಹಾರಾಷ್ಟ್ರದ ಯರವಾಡ ಜೈಲಿನಲ್ಲಿ ಸಿದ್ದೀಖಿಯ ಹತ್ಯೆ

     ಜೈಲಿನಲ್ಲಿರುವ ಕೈದಿಗಳ ಕೈಯಿಂದಲೇ ಕೊಲೆಗೀಡಾಗಿರುವನೆಂದು ಹೇಳಲಾಗಿರುವ ಮುಹಮ್ಮದ್ ಸಿದ್ದೀಖಿಯ ಬಗ್ಗೆ ಈ ವರೆಗೆ (ಜೂನ್ 11) ಯಾವೊಂದು ಕನ್ನಡ ಪತ್ರಿಕೆಯೂ ಸಂಪಾದಕೀಯ ಬರೆದಿಲ್ಲ. ಹಾಗಂತ ಸಂಪಾದಕೀಯಕ್ಕೆ ಎತ್ತಿಕೊಳ್ಳುವಷ್ಟು ಆ ಕೊಲೆ ತೂಕದ್ದಲ್ಲ ಎಂದಲ್ಲ. ಮುಂಬೈಯ ಜರ್ಮನ್ ಬೇಕರಿ ಸ್ಫೋಟ, ಪುಣೆಯ ಗಣಪತಿ ದೇವಸ್ಥಾನದಲ್ಲಿ ಸ್ಫೋಟ ನಡೆಸುವ ಸಂಚು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಫೋಟ, ದೆಹಲಿ ಜಾಮಾ ಮಸೀದಿಯಲ್ಲಿ ಗುಂಡು ಹಾರಾಟ.. ಮುಂತಾದ ಆರೋಪಗಳನ್ನು ಹೊತ್ತುಕೊಂಡ ಶಂಕಿತ ಭಯೋತ್ಪಾದಕನನ್ನು ಸಂಪಾದಕೀಯದಲ್ಲಿಟ್ಟು ಚರ್ಚಿಸಿದರೆ ಎಲ್ಲಿ ಇಮೇಜು ಹಾಳಾಗುತ್ತದೋ ಅನ್ನುವ ಭಯ ಪತ್ರಿಕೆಗಳನ್ನು ಕಾಡುತ್ತಿರುವಂತಿದೆ. ಇಷ್ಟಕ್ಕೂ, ಭಯೋತ್ಪಾದನಾ ಕೃತ್ಯಗಳನ್ನು ಮುಲಾಜಿಲ್ಲದೆ ಖಂಡಿಸಲು ನಮಗೆ ಸಾಧ್ಯವಾಗಿದೆ ಎಂದಾದರೆ, ಶಂಕಿತ ಆರೋಪಿಯ ಕೊಲೆಯನ್ನು ಚರ್ಚಿಸುವುದಕ್ಕೆ ಹಿಂಜರಿಕೆಯೇಕೆ? ಭಯೋತ್ಪಾದನಾ ಕೃತ್ಯಗಳು ಘಟಿಸಿದಾಗಲೆಲ್ಲಾ ಪತ್ರಿಕೆಗಳು ಸಂಪಾದಕೀಯ ಬರೆಯುತ್ತವೆ. ಸುದ್ದಿ ವಿಶ್ಲೇಷಣೆ ನಡೆಸುತ್ತವೆ. ಆ ಕೃತ್ಯದ ಹಿಂದಿರುವ ಸಂಚು, ಸಂಭಾವ್ಯ ತಂಡ, ವ್ಯಕ್ತಿಗಳು.. ಹೀಗೆ ಎಲ್ಲದರ ಬಗ್ಗೆಯೂ ಮಾಹಿತಿಗಳನ್ನು ಕೊಡುತ್ತಿರುತ್ತವೆ. ಇದು ತಪ್ಪು ಎಂದಲ್ಲ. ಮನುಷ್ಯ ವಿರೋಧಿ ಕೃತ್ಯಗಳ ವಿರುದ್ಧ ಸಮಾಜವನ್ನು ಜಾಗೃತಗೊಳಿಸುವುದು ಮಾಧ್ಯಮ ಸಹಿತ ಪ್ರತಿಯೊಬ್ಬರ ಕರ್ತವ್ಯ. ಆದರೆ, ಸಿದ್ದೀಖಿಯ ಕೊಲೆಯನ್ನು ಇಂಥದ್ದೊಂದು ವಿಶ್ಲೇಷಣೆಗೆ ಕನ್ನಡ ಪತ್ರಿಕೆಗಳೇಕೆ ಒಳಪಡಿಸಿಲ್ಲ? ಸಹ ಕೈದಿಗಳು ಉಸಿರುಗಟ್ಟಿಸಿ ಕೊಂದರು ಅನ್ನುವ ಒಂದು ವಾಕ್ಯದ ಕಾರಣದಲ್ಲಿ ಅವೆಲ್ಲ ತೃಪ್ತಿ ಹೊಂದಿದ್ದೇಕೆ? ಸಿದ್ದೀಖಿಯನ್ನು ಹತ್ಯೆಗೈದ ಆರೋಪ ಹೊತ್ತುಕೊಂಡಿರುವ ಶರದ್ ಮೆಹೊಲ್ ಅನ್ನುವ ಕೈದಿಯೂ ಸಿದ್ದೀಖಿಯೂ ಪರಸ್ಪರ ಸ್ನೇಹಿತರಾಗಿದ್ದರು, ಒಂದೇ ಕೋಣೆಯಲ್ಲಿದ್ದ ಅವರು ಚೆಸ್ ಆಡುತ್ತಿದ್ದರು.. ಅನ್ನುವ ಸುದ್ದಿಗಳೆಲ್ಲಾ ನಮ್ಮ ಪತ್ರಿಕೆಗಳಲ್ಲೇಕೆ ಕಾಣಿಸಿಕೊಳ್ಳುತ್ತಿಲ್ಲ? ಅನ್ಹದ್ ಸಹಿತ ಹತ್ತಾರು ಮಾನವ ಹಕ್ಕು ಸಂಘಟನೆಗಳು ಕೊಲೆಯನ್ನು ಅನುಮಾನಿಸಿ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿವೆ, ತನಿಖೆಗೆ ಆಗ್ರಹಿಸಿವೆ. ಅಷ್ಟೇ ಅಲ್ಲ, ನವೆಂಬರ್ 22, 2011ರಂದು ಸಿದ್ದೀಖಿಯನ್ನು ಬಂಧಿಸಿದ ದೆಹಲಿ ಪೊಲೀಸರು ಈತ ಇಂಡಿಯನ್ ಮುಜಾಹಿದೀನ್ ನ  ಸೂತ್ರದಾರ ಎಂದು ಹೇಳಿದ್ದರು. ಆದರೆ ಬಂಧಿಸಿ ಬಹುತೇಕ ಏಳು ತಿಂಗಳುಗಳೇ ಆಗಿದ್ದರೂ ಆತನ ಮೇಲೆ ಈ ವರೆಗೆ ಆರೋಪ ಪಟ್ಟಿಯನ್ನೇ ದಾಖಲಿಸಿಲ್ಲ. ಜೂನ್ 8ರಂದು ಬೆಳಿಗ್ಗೆ ಆತನ ಕೊಲೆಯಾಗಿದೆ. ಆದರೆ ಅದೇ ದಿನ ಸಂಜೆ ಆತನನ್ನು ಕೋರ್ಟಿಗೆ ಹಾಜರುಪಡಿಸಲು ಸಮಯ ನಿಗದಿಯಾಗಿತ್ತು. ಅಲ್ಲದೇ ಅದೇ ದಿನ ತಮ್ಮ ಕಸ್ಟಡಿಯಿಂದ ದೆಹಲಿ ಪೊಲೀಸರಿಗೆ ಒಪ್ಪಿಸಲು ಮುಂಬೈ ಪೊಲೀಸರು ತೀರ್ಮಾನಿಸಿದ್ದರು. ಇವೆಲ್ಲ ಏನು? ಒಂದು ಕೊಲೆಯನ್ನು ಸಾಮಾನ್ಯ ಪ್ರಕರಣಕ್ಕಿಂತ ಭಿನ್ನವಾಗಿ ನೋಡುವುದಕ್ಕೆ ಈ ಮಾಹಿತಿಗಳೆಲ್ಲ ಒತ್ತಾಯಿಸುವುದಿಲ್ಲವೇ? ಅಂದಹಾಗೆ, ಇಂಡಿಯನ್ ಮುಜಾಹಿದೀನ್ ನ  ಮೇಲೆ ಹತ್ತಾರು ಭಯೋತ್ಪಾದನಾ ಕೃತ್ಯಗಳ ಆರೋಪ ಇದೆ. ಅಂಥದ್ದೊಂದು ತಂಡದ ಸೂತ್ರದಾರನ ಕೊಲೆಯು ಸಾಮಾನ್ಯ ಅನ್ನಿಸಿಕೊಂಡದ್ದೇಕೆ? ಅದರ ಹಿಂದೆ ಸಂಚುಗಳು ಇರಬಾರದೆಂದಿದೆಯೇ? ಸತ್ಯ ಹೊರ ಬೀಳಬಹುದು ಅನ್ನುವ ಭೀತಿಯಿಂದ ಜೈಲಿನ ಹೊರಗಿರುವ ನಿಜವಾದ ಭಯೋತ್ಪಾದಕರು ಕೊಲೆ ಮಾಡಿಸಿರುವ ಸಾಧ್ಯತೆ ಇಲ್ಲವೇ?
        `ಶಂಕಿತ ಉಗ್ರ’ ಅನ್ನುವ ಭೀಕರ ಬಿರುದನ್ನು ತಗುಲಿಸಿಕೊಂಡು ಜೈಲಲ್ಲಿ ಕೊಳೆಯುತ್ತಿದ್ದ ಮುಸ್ಲಿಮ್ ಯುವಕರ ಪರ ವಾದಿಸುತ್ತಿದ್ದ ಮುಂಬೈಯ ವಕೀಲ ಶಾಹಿದ್ ಆಝ್ಮಿಯನ್ನು ಎರಡು ವರ್ಷಗಳ ಹಿಂದೆ ಗುಂಡಿಕ್ಕಿ ಕೊಲ್ಲಲಾಯಿತು. ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಕಾಯ್ದೆಯ (ಮೋಕಾ) ಹುಳುಕುಗಳನ್ನು ಮೊತ್ತಮೊದಲು ಎತ್ತಿ ತೋರಿಸಿದ್ದು ಅವರೇ. ಪೊಲೀಸರ ಆರೋಪ ಪಟ್ಟಿಯನ್ನು ಇಂಚಿಂಚೂ  ಪರೀಕ್ಷೆಗೊಡ್ಡಿ ತಪ್ಪುಗಳನ್ನು ಪತ್ತೆ ಹಚ್ಚಿ  ಕೆಲವು 'ಶಂಕಿತ ಉಗ್ರ'ರನ್ನು ಬಿಡುಗಡೆಗೊಳಿಸಲು ನೆರವಾದದ್ದೂ ಅವರೇ. ನಿರಪರಾಧಿ `ಉಗ್ರ’ರ ಪಾಲಿಗೆ ಅವರು ಭರವಸೆಯಾಗಿದ್ದರು. ಫೀಸು ಪಡಕೊಳ್ಳದೇ ಕಕ್ಷಿದಾರರ ಪರ ವಾದಿಸುತ್ತಿದ್ದರು. ಸದ್ಯ ಅವರ ಹತ್ಯೆಯ ಆರೋಪವನ್ನು ಛೋಟಾ ರಾಜನ್ ನ  ಮೇಲೆ ಹೊರಿಸಲಾಗಿದ್ದರೂ ಅದರ ಸೂತ್ರದಾರರು ಮುಂಬೈ ಪೊಲೀಸರೇ ಎಂಬ ಅನುಮಾನ ಈಗಲೂ ಇದೆ. ಹೀಗಿರುವಾಗ ಸಿದ್ದೀಖಿಯ ಕೊಲೆಯನ್ನು ಸಾಮಾನ್ಯ ಕೊಲೆ ಎಂದು ಹೇಗೆ ನಂಬುವುದು? ಅಷ್ಟಕ್ಕೂ ಮಾಲೆಗಾಂವ್, ಸಂಜೋತಾ ಎಕ್ಸ್ ಪ್ರೆಸ್ , ಮಕ್ಕಾ ಮಸೀದಿ ಸಹಿತ ಹತ್ತಾರು ಸ್ಫೋಟ ಪ್ರಕರಣಗಳ ಆರೋಪವನ್ನು ಮೊದಲು ಲಷ್ಕರ್, ಇಂಡಿಯನ್ ಮುಜಾಹಿದೀನ್ ನ  ಮೇಲೆ ಹೊರಿಸಲಾಗಿತ್ತು. ಆ ಬಳಿಕ ಅದು ಅಭಿನವ್ ಭಾರತ್ ಅನ್ನುವ ಸಂಘಟನೆಯೊಂದರ ಕೃತ್ಯ ಅನ್ನುವುದು ಬೆಳಕಿಗೆ ಬಂತು.ಸಾಧ್ವಿ , ಪುರೋಹಿತ್ ರ  ಬಂಧನವಾಯಿತು . ಆದ್ದರಿಂದ, ಸಿದ್ದೀಖಿಯ ಮೇಲೆ ಪೊಲೀಸರು ಯಾವ ಆರೋಪವನ್ನು ಈಗ ಹೊರಿಸಿದ್ದಾರೋ ಅದುವೇ ಅಂತಿಮ ಅನ್ನುವಂತಿಲ್ಲ. ಮಕ್ಕಾ ಮಸೀದಿ ಸ್ಫೋಟದ ಆರೋಪದಲ್ಲಿ 21 ಮುಸ್ಲಿಮ್ ಯುವಕರನ್ನು ಪೊಲೀಸರು ಬಂಧಿಸಿ 3 ವರ್ಷಗಳ ಕಾಲ ಜೈಲಲ್ಲಿಟ್ಟಿದ್ದರು. ಮಸೀದಿಗೆ ಬಾಂಬಿಟ್ಟು ಕೋಮುಗಲಭೆ ಹುಟ್ಟಿಸುವುದು ಇವರ ಉದ್ದೇಶ ಎಂದು ಅವರು ಸಮರ್ಥಿಸಿದ್ದರು. ಆದರೆ ಆ ಬಳಿಕ ಅದು ಅಭಿನವ್ ಭಾರತ್ ನ  ಕೃತ್ಯ ಎಂಬುದು ಸಾಬೀತಾಯಿತು. ಇದೀಗ ಸಿದ್ದೀಖಿಯ ಮೇಲೆ ದೆಹಲಿಯ ಜಾಮಾ ಮಸೀದಿಯಲ್ಲಿ ಗುಂಡು ಹಾರಿಸಿದ ಆರೋಪವಿದೆ. ಬಹುಶಃ ಮಕ್ಕಾ ಮಸೀದಿಯಂತೆ ಈ ಪ್ರಕರಣಕ್ಕೂ ಇನ್ನೊಂದು ಮುಖ ಇರಲಾರದೆಂದು ಹೇಳಲು ಸಾಧ್ಯವಿಲ್ಲ. ಆ ಮುಖ ಬಹಿರಂಗವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದಲೇ ಸಿದ್ದೀಖಿಯ ಕೊಲೆ ನಡೆದಿರಬಹುದೇ? ಆತ ಅಮಾಯಕನೆಂದು ಸಾಬೀತಾದರೆ ಇಂಡಿಯನ್ ಮುಜಾಹಿದೀನ್ ನ  ಸೂತ್ರದಾರ ಅನ್ನುವ ಪೊಲೀಸರ ಹೇಳಿಕೆಯು ಹಾಸ್ಯಾಸ್ಪದವಾಗುತ್ತಾದ್ದರಿಂದ ಆತನನ್ನೇ ಮುಗಿಸುವ ಸಂಚು ನಡೆದಿರಬಹುದೇ?
        ಏನೇ ಆಗಲಿ, ಸಿದ್ದೀಖಿಯ ಸಾವು `ದೇಶಭಕ್ತಿ’ ಮುಖವಾಡದಲ್ಲಿ ಕೊಚ್ಚಿ ಹೋಗಬಾರದು. ಸಿದ್ದೀಖಿ ಎಂಬ ಶಂಕಿತ ಉಗ್ರನನ್ನು ಕೊಂದ ಅಸಲಿ ಉಗ್ರರನ್ನು ಪತ್ತೆ ಹಚ್ಚಲೇಬೇಕು. ಜೈಲಿನ ಹೊರಗಿರುವ ಅಸಲಿ ಉಗ್ರರಿಂದ ಜೈಲಿನೊಳಗಿನ ಶಂಕಿತ ಉಗ್ರರನ್ನು ರಕ್ಷಿಸುವುದು ಸರಕಾರದ ಜವಾಬ್ದಾರಿ.