Tuesday 20 June 2023

ಸಂತ್ರಸ್ತರ ಪರ ನಿಲ್ಲುವುದಕ್ಕೂ ಭಯ ಪಡಬೇಕಾದ ಕಾಲ..


27-6-2022

 ತೀಸ್ತಾ ಸೆಟಲ್ವಾಡ್ ಅವರ ಬಂಧನವಾಗಿದೆ. ಒಂದುವೇಳೆ, ಅವರಿಲ್ಲದೇ ಇರುತ್ತಿದ್ದರೆ ಗುಜರಾತ್ ನರಮೇಧದ ಸಂತ್ರಸ್ತರು ಹೇಗಿರುತ್ತಿದ್ದರು? ಅವರು ತಮ್ಮ ಕಮ್ಯುನಲಿಸಂ ಕೋಂಬಾಟ್ ಪತ್ರಿಕೆಯನ್ನು ವರ್ಷಗಳ ಕಾಲ ಗುಜರಾತ್ ಸಂತ್ರಸ್ತರ ಸಂಕಟಗಳಿಗೆ ಮೀಸಲಿಡದೇ ಇರುತ್ತಿದ್ದರೆ ಮತ್ತು ನರಮೇಧದ ಒಳಸಂಚುಗಳನ್ನು ಇಂಚಿಂಚಾಗಿ ನಾಗರಿಕ ಸಮಾಜದ ಮುಂದಿಡದೇ ಇರುತ್ತಿದ್ದರೆ, ಏನಾಗಿರುತ್ತಿತ್ತು? ಸಿಟಿಜನ್ಸ್ ಫಾರ್ ಜಸ್ಟಿಸ್ ಎಂಡ್ ಪೀಸ್ ಎಂಬ ಸರಕಾರೇತರ ಸಂಸ್ಥೆಯನ್ನು ಸ್ಥಾಪಿಸಿ ನರಮೇಧದ ಸಂತ್ರಸ್ತರನ್ನು ಕೋರ್ಟಿಗೆ ಹೋಗುವಂತೆ ಧೈರ್ಯ ತುಂಬದೇ ಇರುತ್ತಿದ್ದರೆ, ಒಂದೇ ಒಂದು ಪ್ರಕರಣವಾದರೂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತಿತ್ತೇ?

ತನ್ನವರನ್ನು ಕಳಕೊಂಡದ್ದಲ್ಲದೇ ಭೀಕರ ಅತ್ಯಾಚಾರಕ್ಕೂ ಗುರಿಯಾದ ಬಿಲ್ಕೀಸ್‌ಗೆ 50 ಲಕ್ಷ ರೂಪಾಯಿಯನ್ನು ಪರಿಹಾರವಾಗಿ ನೀಡುವಂತೆ ಸುಪ್ರೀಮ್ ಕೋರ್ಟು ಗುಜರಾತ್ ಸರಕಾರಕ್ಕೆ ಆದೇಶಿಸಿದ್ದರೆ, ಅದಕ್ಕೆ ಕಾರಣ ಇದೇ ಸೆಟಲ್ವಾಡ್. ಗುಜರಾತ್ ನರಮೇಧಕ್ಕೆ ಸಂಬಂಧಿಸಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದರೆ, ಅದರ ಹಿಂದಿನ ರೂವಾರಿ ಇದೇ ಸೆಟಲ್ವಾಡ್.

ಗುಜರಾತ್ ನರಮೇಧಕ್ಕೆ ಸಂಬಂಧಿಸಿ ಸುಮಾರು 50ರಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ. ಇವರಲ್ಲಿ ಗಲ್ಲು ಶಿಕ್ಷೆಗೆ ಒಳಗಾದವರು ಮತ್ತು ಜೀವಾವಧಿ ಶಿಕ್ಷೆಗೆ ಒಳಗಾದವರೂ ಇದ್ದಾರೆ. ಮುಖ್ಯಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವೆಯಾಗಿದ್ದ ಮಾಯಾ ಕೊಡ್ನಾನಿಯ ನ್ನು ಕಟಕಟೆಯಲ್ಲಿ ನಿಲ್ಲಿಸಲು ಸಾಧ್ಯವಾಗಿದ್ದಿದ್ದರೆ ಅದರ ಹಿಂದೆ ಸೆಟಲ್ವಾಡ್‌ರ ಶ್ರಮ ಸಾಕಷ್ಟಿದೆ. ಗುಜರಾತ್ ನರಮೇಧಕ್ಕೆ ಸಂಬಂಧಿಸಿ ತೀಸ್ತಾ ಸಂತ್ರಸ್ತರ ಆಮ್ಲಜನಕವಾಗಿದ್ದರು. ಪ್ರಭುತ್ವದ ಮೌನ ಸಮ್ಮತಿಯೊಂದಿಗೆ ನರಮೇಧವೊಂದು ನಡೆದಾಗ ಸಂತ್ರಸ್ತರ ಮುಂದೆ ಎರಡ್ಮೂರು ಸವಾಲುಗಳಿರುತ್ತವೆ.
1. ಪ್ರಭುತ್ವವೇ ಅವರ ವಿರುದ್ಧ ನಿಂತಿರುವುದು.
2. ಸಂತ್ರಸ್ತರೆಂಬ ನೆಲೆಯಲ್ಲಿನ ಅಸಹಾಯಕತೆ.
3. ನ್ಯಾಯಕ್ಕಾಗಿ ಕೋರ್ಟು ಮೆಟ್ಟಲು ಹತ್ತಬೇಕಾದರೆ ಎದುರಾಗುವ ಹಣಕಾಸಿನ ಅಡಚಣೆ.

ಎಲ್ಲಕ್ಕಿಂತ ದೊಡ್ಡ ಸವಾಲಿನ ಕೆಲಸವೇನೆಂದರೆ, ಪ್ರಭುತ್ವವನ್ನು ಎದುರು ಹಾಕಿಕೊಳ್ಳುವುದು. ಗುಜರಾತ್ ನರಮೇಧದಲ್ಲಿ ಬದುಕುಳಿದ ಸಂತ್ರಸ್ತರು ತಮ್ಮ ಮೇಲಾದ ದೌರ್ಜನ್ಯ ಮತ್ತು ತಾವು ಕಂಡುಂಡ ಭೀಕರ ದೃಶ್ಯದ ವಿವರಗಳನ್ನು ದಾಖಲಿಸಬೇಕಿದ್ದುದು ಪೊಲೀಸ್ ಠಾಣೆಗಳಲ್ಲಿ. ಆದರೆ ಹೆಚ್ಚಿನ ಕ್ರೌರ್ಯಗಳು ಈ ಪೊಲೀಸ್ ಠಾಣೆಗಳ ನಿಷ್ಕ್ರೀಯತೆ ಅಥವಾ ಬೆಂಬಲದಿಂದಲೇ ನಡೆದಿದ್ದುವು. ಆದ್ದರಿಂದ, ಸಂತ್ರಸ್ತರೋರ್ವರು ಠಾಣೆಯೊಂದರ ಮೆಟ್ಟಲೇರುವುದು ಮತ್ತು ದೂರು ದಾಖಲಿಸುವುದು ಸುಲಭ ಅಲ್ಲ. ಅಲ್ಲಿನ ಪೊಲೀಸರು ಬಿಡಿ, ಕಂಭ ಕಂಭಗಳೂ ಆ ಸಂತ್ರಸ್ತರನ್ನು ದುರುಗುಟ್ಟಿ ನೋಡುವುದು ಸಹಜ. ಇಂಥ ಸವಾಲನ್ನು, ಆಗಷ್ಟೇ ತನ್ನವರನ್ನೆಲ್ಲ ಕಳಕೊಂಡು ಬೀದಿ ಪಾಲಾಗಿರುವ ಓರ್ವ ಸಂತ್ರಸ್ತ ಎದುರಿಸುವುದು ಸುಲಭ ಅಲ್ಲ. ತೀಸ್ತಾ ಮುಖ್ಯವಾಗುವುದೇ ಇಲ್ಲಿ. ದೇಶ ಕಂಡ ಪ್ರಪ್ರಥಮ ಅಟಾರ್ನಿ ಜನರಲ್ ಚಿಮನ್‌ಲಾಲ್ ಸೆಟಲ್ವಾಡ್‌ರ ಮೊಮ್ಮಗಳಾದ ಮತ್ತು ನ್ಯಾಯವಾದಿ ಅತುಲ್ ಸೆಟಲ್ವಾಡ್‌ರ ಮಗಳಾದ ತೀಸ್ತಾರಲ್ಲಿ ಸಹಜವಾಗಿಯೇ ಕಾನೂನು ಪರಿಜ್ಞಾನ ಚೆನ್ನಾಗಿತ್ತು. ಜೊತೆಗೆ ಅವರು ಮುಂಬೈಯಲ್ಲಿ ಬೆಳೆದವರಾದರೂ ಹುಟ್ಟಿದ್ದು ಗುಜರಾತ್ ನಲ್ಲಿದುದರಿಂದ ಆ ಮಣ್ಣಿನ ಗುಣವನ್ನು ಅವರು ಚೆನ್ನಾಗಿಯೇ ಬಲ್ಲವರಾಗಿದ್ದರು.

1992ರಲ್ಲಿ ಮುಂಬೈ ಗಲಭೆ ನಡೆದಾಗ, ಅದನ್ನು ಹತ್ತಿರದಿಂದ ಕಂಡು ಮಾಧ್ಯಮಗಳಿಗೆ ವರದಿ ಮಾಡಿದ ಅನುಭವವೂ ಅವರಿಗಿತ್ತು. ಕೋಮು ಘರ್ಷಣೆಯ ಹೆಸರಲ್ಲಿ ನಡೆಯುವ ಜನಾಂಗೀಯ ಹಿಂಸೆ ಮತ್ತು ಏಕಮುಖ ಹತ್ಯಾಕಾಂಡಗಳನ್ನು ಅವರಿಗೆ ಮುಂಬೈ ಗಲಭೆ ಚೆನ್ನಾಗಿ ಪರಿಚಯಿಸಿತ್ತು. ಆದ್ದರಿಂದಲೇ, 2002ರ ಗುಜರಾತ್ ನರಮೇಧ ಕ್ಕಿಂತ 5 ವರ್ಷಗಳ ಮೊದಲೇ ಹತ್ಯಾಕಾಂಡವೊಂದರ ಭೀತಿಯನ್ನು ಅವರು ವ್ಯಕ್ತಪಡಿಸಿದ್ದರು ಮತ್ತು ವಿವಿಧ ದಾಖಲೆ ಹಾಗೂ ವರದಿಗಳನ್ನು ಸಂಗ್ರಹಿಸಿ ನ್ಯಾಯವಾದಿಗಳ ಬಾಗಿಲು ತಟ್ಟಿದ್ದರು. ಅಂದಹಾಗೆ, ತೀಸ್ತಾ ಅವರ ಛಲ ಬಿಡದ ಹೋರಾಟಕ್ಕೆ ಒಂದು ಸಾಕ್ಷ್ಯ ಬೇಕೆಂದರೆ ಅದು ಬಿಲ್ಕೀಸ್ ಬಾನು ಪ್ರಕರಣ. ಬೆಸ್ಟ್ ಬೇಕರಿ ಮತ್ತು ಬಿಲ್ಕೀಸ್ ಬಾನು ಪ್ರಕರಣದ ತನಿಖೆಯನ್ನು ಗುಜರಾತ್ ಪೊಲೀಸರು ಕೈಬಿಟ್ಟಿದ್ದರು. ತೀಸ್ತಾ ಸುಮ್ಮನಾಗಲಿಲ್ಲ. ಬಿಲ್ಕೀಸ್‌ರಲ್ಲಿ ಧೈರ್ಯ ತುಂಬಿದರು. ನ್ಯಾಯವನ್ನು ಪಡೆದೇ ತೀರಬೇಕೆಂಬ ಛಲ ಹುಟ್ಟಿಸಿದರು. ಅವರಿಂದಾಗಿಯೇ ಆ ಪ್ರಕರಣ ಸುಪ್ರೀಮ್ ಮೆಟ್ಟಿಲೇರಿತು ಮತ್ತು ಸುಪ್ರೀಮ್ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿ.ಎನ್.ಖರೆ ಅವರು ಪ್ರಕರಣದ ಮರು ತನಿಖೆಗೆ ಆದೇಶಿಸಿದ್ದರು.

ನಿಜವಾಗಿ, ಪ್ರಭುತ್ವ ಭಾಗಿಯಾದ ಯಾವುದೇ ನರಮೇಧವು ಹೆಚ್ಚು ಸಮಯ ಸಾರ್ವಜನಿಕವಾಗಿ ಚರ್ಚೆಯಲ್ಲಿರುವುದು ಕಡಿಮೆ. ಇದಕ್ಕೆ ಕಾರಣ, ಪ್ರಭುತ್ವದ ಭೀತಿ. ರಾಷ್ಟ್ರೀಯ ಮಾಧ್ಯಮಗಳು ಒಂದಿಷ್ಟು ದಿನ ಇಂಥ ಕ್ರೌರ್ಯಗಳ ಅಷ್ಟಿಷ್ಟು ವರದಿಯನ್ನು ಮಾಡಿ ಬಳಿಕ ಬೆನ್ನು ಹಾಕುವುದು ರೂಢಿ. ಆದರೆ ಗುಜರಾತ್ ನರಮೇಧಕ್ಕೆ ಸಂಬಂಧಿಸಿ ಈ ಮಾತು ಸುಳ್ಳಾಗಿದ್ದರೆ ಅದರ ಪೂರ್ಣ ಶ್ರೇಯಸ್ಸು ತೀಸ್ತಾರಿಗೆ ಸಲ್ಲಬೇಕು. ಗುಜರಾತ್ ನರಮೇಧಕ್ಕೆ ಪೂರ್ವಭಾವಿಯಾಗಿ ನಡೆದಿರಬಹುದಾದ ಸಂಚುಗಳಿಂದ ಹಿಡಿದು, ಇಡೀ ನರಮೇಧಕ್ಕೆ ನೇತೃತ್ವ ನೀಡಿದವರು, ಪ್ರಚೋದನೆ ಕೊಟ್ಟವರು ಮತ್ತು ಮಾಧ್ಯಮಗಳ ಸುಳ್ಳು ಸುದ್ದಿಗಳನ್ನು ತೀಸ್ತಾ ತನ್ನ ಕಮ್ಯುನಲಿಸಂ ಕೊಂಬಾಟ್ ಪತ್ರಿಕೆಯಲ್ಲಿ ಯಾವ ಮುಲಾಜೂ ಇಲ್ಲದೇ ಪ್ರಕಟಿಸತೊಡಗಿದರು. ನಿಜವಾಗಿ,

ತನ್ನ ಪತ್ರಿಕೆಯನ್ನು ಅವರು ಕೇವಲ ಗುಜರಾತ್ ನರಮೇಧದ ಬಲಿಪಶುಗಳಿಗಾಗಿಯೇ ಅರ್ಪಿಸಿದ್ದರು. ಆರಂಭದಿಂದ ಕೊನೆಪುಟದ ವರೆಗೆ ನರಮೇಧದ ಇಂಚಿಂಚು ವಿವರಗಳು ಮತ್ತು ಕಾನೂನು ಪ್ರಕ್ರಿಯೆಗಳ ಮಾಹಿತಿಗಾಗಿ ಮೀಸಲಿಟ್ಟರು. ಸಂತ್ರಸ್ತರನ್ನು ಭೇಟಿಯಾಗಿ ಅವರ ಮಾತುಗಳನ್ನು ಗುಜರಾತ್‌ನಿಂದ ಹೊರಗಿನ ಓದುಗರಿಗೆ ತಲುಪಿಸಿದರು. ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯ ಮಾಹಿತಿಗಳನ್ನು ನೀಡುತ್ತಾ ಬಂದರು. ಎಲ್ಲೆಲ್ಲ ಸಂತ್ರಸ್ತರಿದ್ದರೋ ಅವರೆಲ್ಲರಿಗೂ ಏಕಧ್ವನಿ ಬರುವಂತೆ ಮತ್ತು ಧೈರ್ಯದಿಂದಿರುವಂಥ ವಾತಾವರಣ ಸೃಷ್ಟಿಸಿದರು. ಗುಜರಾತ್‌ನಿಂದ ಹೊರಬಂದು ವಿವಿಧ ರಾಜ್ಯಗಳಲ್ಲಿ ಗುಜರಾತ್ ನರಮೇಧಕ್ಕೆ ಸಂಬಂಧಿಸಿ ಮಾಹಿತಿಗಳನ್ನು ಹಂಚಿಕೊಂಡರು. ಯಾವ ಕಾರಣಕ್ಕೂ ಗುಜರಾತ್ ನರಮೇಧದ ರೂವಾರಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಮತ್ತು ಈ ನರಮೇಧ ಸಾರ್ವಜನಿಕ ಪ್ರಜ್ಞೆಯಿಂದ ಮಾಸಿ ಹೋಗಬಾರದು ಎಂಬ ಪ್ರಾಮಾಣಿಕ ಕಳಕಳಿ ತೀಸ್ತಾರಲ್ಲಿತ್ತು. ಒಂದು ನರಮೇಧದ ಪ್ರಜ್ಞೆ ಸಾರ್ವಜ ನಿಕವಾಗಿ ಇರುವವರೆಗೆ ಇನ್ನೊಂದು ನರಮೇಧ ಸುಲಭ ಅಲ್ಲ. ಯಾಕೆಂದರೆ,

ಜನರು ತಕ್ಷಣಕ್ಕೆ ಎಚ್ಚೆತ್ತುಕೊಳ್ಳುತ್ತಾರೆ. ನರಮೇಧದ ಸಾಧ್ಯತೆಗಳನ್ನು ಗುರುತಿಸಿ ಸಮಾಜಕ್ಕೆ ಎಚ್ಚರಿಕೆಯನ್ನು ರವಾನಿಸುತ್ತಾರೆ. ಕಳೆದ 20 ವರ್ಷಗಳಲ್ಲಿ ತೀಸ್ತಾ ತನ್ನ ಆಯು ಷ್ಯದ ಬಹುತೇಕ ಸಮಯವನ್ನು ಇನ್ನೊಂದು ನರಮೇಧ ನಡೆಯದಂತೆ ತಡೆಯುವುದಕ್ಕಾಗಿ ಮೀಸಲಿ ಟ್ಟರು ಎಂದರೂ ಸರಿ. 2002ರ ಗುಜರಾತ್ ಹತ್ಯಾಕಾಂಡಕ್ಕೆ ಪೂರ್ವಭಾವಿಯಾಗಿ ಅಲ್ಲಿನ ಆದಿವಾಸಿಗಳು, ಕ್ಷತ್ರಿಯ, ಹರಿಜನರಲ್ಲಿ ಹೇಗೆ ಮುಸ್ಲಿಮ್ ದ್ವೇಷವನ್ನು ಗಟ್ಟಿಗೊಳಿಸಲಾಗುತ್ತಾ ಬರಲಾಯಿತು ಎಂಬ ಮಾಹಿತಿ ತೀಸ್ತಾರಲ್ಲಿ ಇದ್ದುದರಿಂದಲೇ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ದೇಶದಾದ್ಯಂತ ಸುತ್ತಿದರು. ಒಂದುಕಡೆ, ತನ್ನ ಸಿಟಿಜನ್ಸ್ ಫಾರ್ ಜಸ್ಟೀಸ್ ಎಂಡ್ ಪೀಸ್ ಎಂಬ ಸಂಸ್ಥೆಯ ಮೂಲಕ ಗುಜರಾತ್ ಸಂತ್ರಸ್ತರಲ್ಲಿ ಧೈರ್ಯ ತುಂಬುತ್ತಾ ಮತ್ತು ಇನ್ನೊಂದು ಕಡೆ, ತನ್ನ ಕಮ್ಯುನಲಿಸಂ ಕೊಂಬಾಟ್ ಮೂಲಕ ದೇಶದ ಉದ್ದಗಲದ ಭಾರತೀಯರಲ್ಲಿ ನರಮೇಧದ ಪೈಶಾಚಿಕತೆಯನ್ನು ವಿವರಿಸುತ್ತಾ ನಡೆದರು. ಇದರಿಂದಾಗಿ ಪ್ರಭುತ್ವ ಮತ್ತು ಅವರ ಬೆಂಬಲಿಗರ ತೀವ್ರ ವಿರೋಧವನ್ನೂ ಕಟ್ಟಿಕೊಂಡರು. ಅವರನ್ನು ಕಾನೂ ನಿನ ಕುಣಿಕೆಯಲ್ಲಿ ಸಿಲುಕಿಸುವುದಕ್ಕೆ ಒಂದಲ್ಲ ಒಂದು ಪ್ರಯತ್ನಗಳು ನಡೆಯುತ್ತಲೇ ಬಂದುವು. ಇದೀಗ, ಕ್ರಿಮಿನಲ್ ಪಿತೂರಿ, ಸುಳ್ಳು ಸಾಕ್ಷ್ಯಾಧಾರ ಸಲ್ಲಿಕೆ ಮತ್ತು ಸಂತ್ರಸ್ತರ ಭಾವುಕತೆಯನ್ನು ದುರುಪಯೋಗಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಈ ಬಂಧನದ ಹಿಂದೆ ಸುಪ್ರೀಮ್ ಕೋರ್ಟ್‌ನ ಪರಾಮರ್ಶೆಗೂ ಪಾತ್ರ ಇದೆ ಎಂಬುದೇ ಅತಿದೊಡ್ಡ ದುರಂತ. ಒಂದುವೇಳೆ,

ಮುಂಬೈ, ಭೀವಂಡಿ, ಭಾಗಲ್ಪುರ್, ನೆಲ್ಲಿ, ದೆಹಲಿ ಅಥವಾ ಇನ್ನಾವುದೇ ಕಡೆ ನಡೆದ ಹತ್ಯಾಕಾಂಡಗಳ ಬಗ್ಗೆ ತೀಸ್ತಾರಂತೆ ಮಾನವ ಹಕ್ಕು ಕಾರ್ಯಕರ್ತರು ಮತ್ತು ಸಂಘಟನೆಗಳು ರಂಗಕ್ಕಿಳಿಯದೇ ಇರುತ್ತಿದ್ದರೆ ಮತ್ತು ಸಂತ್ರಸ್ತರ ಬೆನ್ನಿಗೆ ನಿಲ್ಲದೇ ಇರುತ್ತಿದ್ದರೆ ಆ ಕ್ರೌರ್ಯಕ್ಕೆ ಕಾರಣರಾದವರು ಕಟಕಟೆಯ ವರೆಗೆ ತಲುಪುತ್ತಿದ್ದರೇ? ತೀಸ್ತಾರಂತೆ ಸಂತ್ರಸ್ತರ ಜೊತೆಗೆ ನಿಲ್ಲುವುದನ್ನೇ ಮತ್ತು ಅವರಲ್ಲಿ ನ್ಯಾಯಕ್ಕಾಗಿ ಆಗ್ರಹಿಸುವ ಕಿಚ್ಚು ತುಂಬುವುದನ್ನೇ ಅಪರಾಧ ಎಂದು ಹೇಳುವುದಾದರೆ, ಸಂತ್ರಸ್ತರಿಗೆ ಇನ್ನು ಮುಂದೆ ನೆರವಾಗಲು ಯಾರು ಸಿಗಬಹುದು? ಅಷ್ಟಕ್ಕೂ, ಇನ್ನು ಮುಂದೆ ಯಾವುದೇ ಪ್ರಕರಣ ನ್ಯಾಯಾಲಯದಲ್ಲಿ ಬಿದ್ದು ಹೋದರೆ ಅದರ ಹೆಸರಲ್ಲಿ ನ್ಯಾಯವಾದಿ ಮತ್ತು ಎಫ್‌ಐಆರ್ ದಾಖಲಿಸಿದ ಪೊಲೀಸರನ್ನು ತೀಸ್ತಾರಂತೆ ಬಂಧಿಸಲಾಗುವುದೇ? ಮೋದಿಯವರಿಗೆ ಕ್ಲೀನ್‌ಚಿಟ್ ಕೊಡುವುದು ಬೇರೆ, ಅವರ ಮೇಲೆ ಕೇಸು ದಾಖಲಿಸಲು ನೆರವಾದುದಕ್ಕೆ ತೀಸ್ತಾರನ್ನು ಬಂಧಿಸುವುದು ಬೇರೆ. ಟೀಸ್ತಾ ಗೆದ್ದು ಬರಲಿ.

ಅಗ್ನಿಪಥ್‌ಗೆ ವಿರೋಧವೇಕೆ? ಎಡವಿದ್ದು ಯಾರು?

 


30-6-2022

2013 ಸೆಪ್ಟೆಂಬರ್ 15ರಂದು ಹರ್ಯಾಣದ ರೆವಾರಿಯಲ್ಲಿ ನಿವೃತ್ತ ಯೋಧರು ರ‍್ಯಾಲಿಯನ್ನು ಸಂಘಟಿಸಿದ್ದರು. ವನ್ ರ‍್ಯಾಂಕ್ ವನ್ ಪೆನ್ಶನ್ (ಸಮಾನ ಶ್ರೇಣಿ ಸಮಾನ ಪಿಂಚಣಿ) ಯೋಜನೆಯನ್ನು ಜಾರಿಗೆ ತರಬೇಕು ಎಂಬುದು ಅವರ ಒತ್ತಾಯವಾಗಿತ್ತು. ಅಂದರೆ, ಸೇನೆಯಿಂದ ಈ ಹಿಂದೆ ನಿವೃತ್ತಿಯಾದವರಿಗೂ ಆ ಬಳಿಕ ನಿವೃತ್ತಿಯಾದವರಿಗೂ ಪಿಂಚಣಿಯಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂಬ ಬೇಡಿಕೆ. ಉದಾಹರಣೆಗೆ, ಯೋಧನಾಗಿ 1990ರಲ್ಲಿ ನಿವೃತ್ತಿಯಾದ ವ್ಯಕ್ತಿಗೂ 2020ರಲ್ಲಿ ಯೋಧನಾಗಿ ನಿವೃತ್ತಿಯಾದ ವ್ಯಕ್ತಿಗೂ ಪಿಂಚಣಿಯಲ್ಲಿ ವ್ಯತ್ಯಾಸ ಇರುತ್ತದೆ. ಯಾಕೆಂದರೆ, 1990ರಲ್ಲಿ ಓರ್ವ ಯೋಧನಿಗೆ ವೇತನ ಎಷ್ಟಿರುತ್ತದೋ 2020ರ ಯೋಧನಿಗೆ ವೇತನ ಅಷ್ಟೇ ಇರುವುದಿಲ್ಲ. ಪಿಂಚಣಿಗೆ ವೇತನ ಮಾನದಂಡ ಆಗಿರುವುದರಿಂದ 1990ರಲ್ಲಿ ನಿವೃತ್ತಿಯಾದ ಯೋಧ ಮತ್ತು 2020ರಲ್ಲಿ ನಿವೃತ್ತಿಯಾದ ಯೋಧ ಒಂದೇ ಶ್ರೇಣಿಯವರಾದರೂ ಪಿಂಚಣಿಯಲ್ಲಿ ವ್ಯತ್ಯಾಸ ಇರುತ್ತದೆ. 1990ರ ಯೋಧ ಕಡಿಮೆ ಪಿಂಚಣಿ ಪಡೆಯುವಾಗ 2020ರ ನಿವೃತ್ತ ಯೋಧ ಅಧಿಕ ಪಿಂಚಣಿ ಪಡೆಯುತ್ತಾನೆ. ಇದು ಯೋಧರ ನಡುವೆ ತಾರತಮ್ಯವಾಗಿದ್ದು, ಪಿಂಚಣಿಯಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂಬುದು ರ‍್ಯಾಲಿನಿರತ ಯೋಧರ ಆಗ್ರಹವಾಗಿತ್ತು.

ಆಗ ಮನ್‌ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು ಮತ್ತು 2014ರ ಲೋಕಸಭಾ ಚುನಾವಣೆಗೆ ರಂಗ ಸಜ್ಜುಗೊಳ್ಳುತ್ತಿತ್ತು. ನರೇಂದ್ರ ಮೋದಿಯವರು ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿತವಾಗಿದ್ದರು. ಅವರು ಈ ಯೋಧರ ರ‍್ಯಾಲಿಯಲ್ಲಿ ಭಾಗವಹಿಸಿ ಮಾತ ನಾಡಿದರಲ್ಲದೇ, ಒಂದು ಶ್ರೇಣಿ, ಒಂದು ಪಿಂಚಣಿ ಎಂಬ ಬೇಡಿಕೆಗೆ ಬೆಂಬಲ ಸಾರಿದ್ದರು. ಇದಾಗಿ ಈಗ 9 ವರ್ಷಗಳೇ ಕಳೆದಿವೆ. ಈಗ ಅದೇ ನರೇಂದ್ರ ಮೋದಿಯವರು ಅಗ್ನಿಪಥ್ ಎಂಬ ಯೋಜನೆಯ ಮೂಲಕ ನೋ ರ‍್ಯಾಂಕ್ ನೋ ಪೆನ್ಶನ್ ಎಂದು ಘೋಷಿಸಿದ್ದಾರೆ. ಅಂದು ನಿವೃತ್ತ ಯೋಧರು ಬೀದಿಗಿಳಿದಿದ್ದರೆ ಇಂದು ಸೇನಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಗ್ನಿಪಥ್ ಯೋಜನೆಯ ಬಗ್ಗೆ ನಿವೃತ್ತ ಸೇನಾಧಿಕಾರಿಗಳು ಮತ್ತು ರಕ್ಷಣಾ ತಜ್ಞರೇ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಪ್ರಶ್ನೆಗಳನ್ನೆಲ್ಲ ಬಿಜೆಪಿ ವಿರೋಧಿಯೆಂದೋ ವಿರೋಧ ಪಕ್ಷಗಳ ಪಿತೂರಿಯೆಂದೋ ಸಾರಾಸಗಟಾಗಿ ತಳ್ಳಿ ಹಾಕುವುದು ದೇಶದ ಹಿತದೃಷ್ಟಿಯಿಂದ ಅ ಪಾಯಕಾರಿ. ಒಂದುಕಡೆ, ಈ ದೇಶದ ಮೇಲೆ ಕಣ್ಣಿಟ್ಟಿರುವ ಚೀನಾ ಮತ್ತು ಪಾಕಿಸ್ತಾನವಿದೆ. ನೆರೆಕರೆಯ ದೇಶಗಳ ಜೊತೆಗೂ ಭಾರತದ ಸಂಬಂಧ ಉತ್ತಮವಾಗಿಲ್ಲ. ಚೀನಾ ಯಾವ ಸಂದರ್ಭದಲ್ಲೂ ಈ ರಾಷ್ಟ್ರಗಳನ್ನು ಬಳಸಿಕೊಂಡು ದೇಶದ ಮೇಲೆ ಆಕ್ರಮಣ ನಡೆಸುವುದಕ್ಕೆ ಅವಕಾಶವಿದೆ. ಇನ್ನೊಂದು ಕಡೆ, ಈಶಾನ್ಯ ಭಾರತದಲ್ಲಿ ಬಂಡಾಯ ಚಟುವಟಿಕೆಯಿದೆ. ಕಾಶ್ಮೀರವೂ ಸುಖವಾಗಿಲ್ಲ. ಇಂಥ ಸ್ಥಿತಿಯಲ್ಲಿ, ಅನುಭವಿ ಮತ್ತು ನಿಪುಣ ಯೋಧರ ಅಗತ್ಯ ಬಹಳವೇ ಇದೆ.

ಅಗ್ನಿಪಥ್ ಯೋಜನೆಯಂತೆ, 17ರಿಂದ 25 ವರ್ಷದೊಳಗಿನವರನ್ನು ನಾಲ್ಕು ವರ್ಷಗಳ ಅವಧಿಗೆ ಯೋಧರಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಯೋಧರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಮೊದಲ ವರ್ಷ 46 ಸಾವಿರ ಅಗ್ನಿವೀರರನ್ನು ಆಯ್ಕೆ ಮಾಡಲಿದ್ದು, ಈ ಆಯ್ಕೆ ಪ್ರಕ್ರಿಯೆ 90 ದಿನಗಳಲ್ಲಿ ಮುಗಿಯಲಿದೆ. ಪ್ರತಿ ವರ್ಷದಂತೆ ನಾಲ್ಕು ವರ್ಷಗಳವರೆಗೆ ಈ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಸೇರ್ಪಡೆಯಾಗುವ ಯೋಧರಿಗೆ 12ನೇ ತರಗತಿಯ ಪ್ರಮಾಣ ಪತ್ರ ನೀಡಲಾಗುವುದು. ಮಾತ್ರವಲ್ಲ, ನಾಲ್ಕು ವರ್ಷಗಳ ಬಳಿಕ ನಿವೃತ್ತರಾಗುವ ಯೋಧರು ಪೂರ್ಣಾವಧಿ ಸೇವೆಗಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಇವರಲ್ಲಿ 25% ಮಂದಿಯನ್ನು ಮಾತ್ರ ಪೂರ್ಣಾವಧಿಗೆ ಆಯ್ಕೆ ಮಾಡಲಾಗುತ್ತದೆ.

ಸಮಸ್ಯೆ ಇರುವುದೂ ಇಲ್ಲಿ. ಯೋಧರನ್ನು ದೇಶಸೇವೆ ಮಾಡುವವರು ಎಂದು ಗುರುತಿಸಲಾಗುತ್ತದೆಯೇ ಹೊರತು ವೃತ್ತಿನಿರತರೆಂದಲ್ಲ. ಭಾರತೀಯ ಸೇನೆ ಸೇರುವುದೆಂದರೆ, ಅದೊಂದು ಹೆಮ್ಮೆ. ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ರಾಜಸ್ತಾನ, ಬಿಹಾರ ಮುಂತಾದ ರಾಜ್ಯಗಳು ಯುವಕರನ್ನು ದೊಡ್ಡ ಮಟ್ಟದಲ್ಲಿ ದೇಶಸೇವೆಗೆಂದು ಕಳಿಸುತ್ತಿದೆ. ಯೋಧನ ಕುಟುಂಬವೊಂದು ತಮ್ಮ ಗ್ರಾಮದಲ್ಲಿರುವುದನ್ನುಈ ಊರಿನವರು ಹೆಮ್ಮೆಯೆಂದು ಭಾವಿಸುವ ವಾತಾವರಣವಿದೆ. ದೇಶಸೇವೆಯ ನಡುವೆ ರಜೆಯಲ್ಲಿ ಊರಿಗೆ ಮರಳುವ ಯೋಧನಿಗೆ ಅಪಾರ ಗೌರವವೂ ಲಭ್ಯವಾಗುತ್ತದೆ. ಎಷ್ಟೋ ಬಾರಿ ಯೋಧರ ಸಾಹಸಪೂರ್ಣ ಸೇವೆಗಾಗಿ ಯೋಧರನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಊರೇ ಸಂಭ್ರಮಿಸುತ್ತದೆ. ಆದರೆ, ನಾಲ್ಕು ವರ್ಷಗಳ ಸೇವೆಯ ಬಳಿಕ ಯೋಧ ಎಂಬ ಹಣೆಪಟ್ಟಿಯನ್ನು ಕಳಚಿಟ್ಟು ಸರ್ಕಾರ ಕೊಡುವ 11 ಲಕ್ಷ ರೂಪಾಯಿಯನ್ನು ಪಡೆದುಕೊಂಡು ಮರಳುವವನಿಗೆ/ಳಿಗೆ ಈ ಗೌರವ ಲಭ್ಯವಾದೀತೇ ಎಂಬುದು ಮೊದಲ ಪ್ರಶ್ನೆ. ಹೀಗೆ ನಿವೃತ್ತರಾಗುವ ಯೋಧರಿಗೆ ಪಿಂಚಣಿಯಿಲ್ಲ. ಪೂರ್ಣಾವಧಿ ಯೋಧರಿಗೆ ಸಿಗುವ ಭೂಮಿ, ಶಿಕ್ಷಣ ಮೀಸಲಾತಿ, ಆರೋಗ್ಯ ರಿಯಾಯಿತಿಗಳೂ ಸಿಗಲ್ಲ. ಈ ನಾಲ್ಕು ವರ್ಷಗಳಲ್ಲಿ ಅವರ ಶಿಕ್ಷಣವೂ ಮೊಟಕುಗೊಳ್ಳುತ್ತದೆ. 12ನೇ ತರಗತಿಯ ಸರ್ಟಿಫಿಕೇಟನ್ನು ಮತ್ತು 11 ಲಕ್ಷವನ್ನು ಹಿಡಿದುಕೊಂಡು ಅವರು ತನ್ನೂರಿಗೆ ಮರಳುತ್ತಾರೆ. ಆ ಬಳಿಕ ಅವರು ತಮ್ಮ ಶಿಕ್ಷಣವನ್ನು ಮುಂದುವರಿಸಬೇಕಾಗುತ್ತದೆ. ವೃತ್ತಿಗಾಗಿ ಹುಡುಕಾಟ ನಡೆಸಬೇಕಾಗುತ್ತದೆ. ಅಂದಹಾಗೆ, ದೇಶದಲ್ಲಿ ಇವತ್ತು ನಿರುದ್ಯೋಗದ ಸಮಸ್ಯೆ ಉಚ್ಛ್ರಾಯ ಸ್ಥಿತಿಯಲ್ಲಿದೆ. ಕೊರೋನಾ ನೆಪದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸೇನಾ ಭರ್ತಿ ನಡೆದೂ ಇಲ್ಲ. ಅಲ್ಲದೇ,

ಭಾರತೀಯ ಸೇನೆ ಸದ್ಯ ಒಂದು ಲಕ್ಷ ಯೋಧರ ಕೊರತೆಯನ್ನು ಎದುರಿಸುತ್ತಲೂ ಇದೆ. ಇಂಥ ಸ್ಥಿತಿಯಲ್ಲಿ ಪೂರ್ಣಾವಧಿ ಯೋಧರ ಬದಲು ನಾಲ್ಕು ವರ್ಷಗಳ ಗುತ್ತಿಗೆಯಾಧಾರಿತ ಯೋಧರ ಆಯ್ಕೆಯನ್ನು ದಿಢೀರ್ ಘೋಷಿಸಿದರೆ ಏನಾದೀತು? ಉತ್ತರ ಭಾರತದಲ್ಲಿ ಸೇನಾ ಆಯ್ಕೆಗೆ ತರಬೇತಿ ನೀಡಲೆಂದೇ ಅನೇಕ ಕೋಚಿಂಗ್ ಸೆಂಟರ್‌ಗಳಿವೆ. ಇಲ್ಲಿ ವರ್ಷಗಳಿಂದ ಯುವಕರು ದೈಹಿಕ ಕಸರತ್ತು ನಡೆಸುತ್ತಲೂ ಇದ್ದಾರೆ. ಜೀವನ ಭದ್ರತೆಯ ಜೊತೆಗೇ ಜೀವಿತ ಕಾಲದ ವರೆಗೆ ಯೋಧರೆಂಬ ಗೌರವ ಲಭಿಸುವ ನಿರೀಕ್ಷೆಯೇ ಅವರ ಸೇನಾ ಸೇರ್ಪಡೆಗೆ ಕಾರಣ. ಅಂದಹಾಗೆ,

ಅಗ್ನಿವೀರ್ ವಿಚಲಿತಗೊಳಿಸಿದ್ದು ಇಂಥ ಯುವ ಸಮೂಹವನ್ನು. ಅವರೆಲ್ಲರ ನಿರೀಕ್ಷೆಗಳನ್ನು ಅಗ್ನಿಪಥ್ ಯೋಜನೆ ಮಣ್ಣುಪಾಲು ಮಾಡಿದೆ. ದೇಶಸೇವೆಯೆಂಬ ಹೊಣೆಗಾರಿಕೆಯನ್ನು ಗುತ್ತಿಗೆಯಾಧಾರಿತ ವೃತ್ತಿಮಟ್ಟಕ್ಕೆ ಇಳಿಸಿರುವುದಕ್ಕೆ ಅವರಲ್ಲಿ ಆಕ್ರೋಶ ಇದೆ. 2013ರಲ್ಲಿ ಒಂದೇ ಶ್ರೇಣಿ ಒಂದೇ ಪಿಂಚಣಿಯನ್ನು ಬೆಂಬಲಿಸಿದ ಇದೇ ಮೋದಿಯವರು ಇವತ್ತು ಯೋಧರಿಗೆ ಪಿಂಚಣಿ ಕೊಡುವುದು ರಕ್ಷಣಾ ಇಲಾಖೆಗೆ ಹೊರೆಯಾಗುತ್ತದೆ ಎಂದು ಹೇಳುತ್ತಿರುವುದು ಅವರಲ್ಲಿ ಅಸಮಾಧಾನ ಮೂಡಿಸಿದೆ. ಈಗಿನ ಬಜೆಟ್‌ನಲ್ಲಿ ಕೇವಲ ಯೋಧರ ಪಿಂಚಣಿಗಳಿಗೆ 1,19,696 ಕೋಟಿ ರೂಪಾಯಿಯನ್ನು ಮೀಸಲಿರಿಸಲಾಗಿದ್ದರೆ, 1,63,453 ಕೋಟಿ ರೂಪಾಯಿಯನ್ನು ಯೋಧರ ವೇತ ನಕ್ಕಾಗಿ ಮೀಸಲಿರಿಸಲಾಗಿದೆ. ಇದು ಭಾರೀ ಹೊರೆ ಎಂದು ಸರ್ಕಾರ ವಾದಿಸುತ್ತಿದೆ. ಒಟ್ಟು ರಕ್ಷಣಾ ಬಜೆಟ್‌ನ ಪೈಕಿ 54%ದಷ್ಟು ಹಣವೂ ಕೇವಲ ಪಿಂಚಣಿ ಮತ್ತು ವೇತನಕ್ಕಾಗಿ ಖರ್ಚಾಗುತ್ತಿದೆ ಎಂಬ ಅಂಕಿ-ಅಂಶವನ್ನು ಸರ್ಕಾರ ಮುಂದಿಡುತ್ತಿದೆ. ಈ ಖರ್ಚನ್ನು ತಗ್ಗಿಸುವುದಕ್ಕಾಗಿಯೇ ಯೋಧರನ್ನು ಗುತ್ತಿಗೆಯಾಧಾರಿತ ಕಾರ್ಮಿಕರಂತೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂಬುದು ಸರ್ಕಾರದ ಪರೋಕ್ಷ ಸಮರ್ಥನೆ. ಆದರೆ,

ದೇಶಸೇವೆ ಎಂಬುದು ಗುತ್ತಿಗೆ ಆಧಾರಿತ ವೃತ್ತಿಯಲ್ಲ. ಅದೊಂದು ಗೌರವ, ಹೆಮ್ಮೆ. ಬಿಜೆಪಿ ಈ ಯೋಧರನ್ನೇ ತೋರಿಸಿ ಮತ ಯಾಚಿಸಿದ ಪಕ್ಷ. ದೇಶಪ್ರೇಮ, ದೇಶಭಕ್ತಿ ಎಂಬುದು ಬಿಜೆಪಿಯ ಅನುದಿನದ ಸ್ಲೋಗನ್. ಇಂಥ ಪಕ್ಷವೊಂದು ಯೋಧರ ಪಿಂಚಣಿಯ ನ್ನು ಹೊರೆ ಎಂದು ಪರಿಗಣಿಸುವುದು ಮತ್ತು ಅವರ ಸೇವೆಯನ್ನು ವೃತ್ತಿಯೆಂದು ತೃಣೀಕರಿಸುವುದು ಅಪ್ಪಟ ದೇಶದ್ರೋಹದ ಕೃತ್ಯ. ಶಾಸಕರು, ಸಂಸದರು ಜೀವನಪೂರ್ತಿ ಪಡೆಯುವ ಪಿಂಚಣಿಯನ್ನು ಹೊರೆ ಎಂದು ಪರಿಗಣಿಸದ ಮತ್ತು ಅದಕ್ಕೆ ಯಾವ ವಿರೋಧವ ನ್ನೂ ವ್ಯಕ್ತಪಡಿಸದ ಬಿಜೆಪಿ, ಯೋಧರ ಪಿಂಚಣಿಯನ್ನು ಮಾತ್ರ ಹೊರೆ ಎಂದು ಪರಿಗಣಿಸಿರುವುದು ಅದರ ಯೋಧ ದ್ರೋಹಕ್ಕೆ ಅತ್ಯುತ್ತಮ ಉದಾಹರಣೆ.

ಯೋಧರು ಎಂದೂ ಈ ದೇಶಕ್ಕೆ ಹೊರೆಯಲ್ಲ, ಅವರು ಈ ದೇಶದ ಆಸ್ತಿ. ಕೈಯಲ್ಲಿ 11 ಲಕ್ಷ ರೂಪಾಯಿಯನ್ನು ಕೊಟ್ಟು ನಾಲ್ಕು ವರ್ಷಗಳ ಬಳಿಕ ಮನೆಗೆ ಅಟ್ಟುವುದು ಸಣ್ಣ ಸಂಗತಿಯಲ್ಲ. ಇಂಥ ಬೆಳವಣಿಗೆ ಅವರನ್ನು ವಿಚಲಿತಗೊಳಿಸುವ ಸಾಧ್ಯತೆಯಿದೆ. ಬಳಿಕ ಉದ್ಯೋಗದ ಸಮಸ್ಯೆಯೂ ಅವರನ್ನು ಕಾಡಲಿದೆ. ಇಂಥ ವಿಚಲಿತ ಮತ್ತು ಆಕ್ರೋಶಿತ ನಿರುದ್ಯೋಗಿ ಯುವ ಸಮೂಹವನ್ನು ರಾಜಕೀಯ ಮತ್ತು ಸಮಾಜದ್ರೋಹಿ ಶಕ್ತಿಗಳು ಮುಂದೆ ದುರ್ಬಳಕೆ ಮಾಡಿಕೊಳ್ಳಬಹುದು. ರುವಾಂಡ ಮತ್ತು ಯುಗೋಸ್ಲಾವಿಯಾದಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಾಂಗ ಹತ್ಯೆಯಲ್ಲಿ ಮಿಲಿಟರಿ ಪಡೆಯ ದೊಡ್ಡ ಪಾತ್ರವಿರುವುದು ಎಲ್ಲರಿಗೂ ಗೊತ್ತು. ನಾಲ್ಕು ವರ್ಷಗಳ ವೃತ್ತಿಯ ಬಳಿಕ ಸೇನೆಯಿಂದ ಮನೆಗೆ ಮರಳುವವರಲ್ಲಿ ಇಂಥ ಜನಾಂಗ ದ್ವೇಷವನ್ನು ತುಂಬಿ ಸಮಾಜಘಾತುಕರು ದುರು ಪಯೋಗಪಡಿಸುವುದಕ್ಕೂ ಸಾಧ್ಯವಿದೆ. ಆದ್ದರಿಂದ, ಅಗ್ನಿಪಥ್ ಯೋಜನೆ ಮರುಪರಿಶೀಲನೆ ಬಹಳ ಅಗತ್ಯ. ದೇಶ ಕಾಯುವ ಯೋಧರನ್ನು ದಯವಿಟ್ಟು ಅವಮಾನಿಸಬೇಡಿ.

ಮುಸ್ಲಿಮ್ ಸಮುದಾಯದ ಮೇಲಿನ ಆರೋಪವನ್ನು ಸುಳ್ಳು ಮಾಡಿದ ನೂಪುರ್ ಶರ್ಮಾ

 


7-7-2022

ನೂಪುರ್ ಶರ್ಮಾರ ಬಗ್ಗೆ ಸುಪ್ರೀಮ್ ಕೋರ್ಟ್‌ನ ಪೀಠವೊಂದು ವ್ಯಕ್ತಪಡಿಸಿದ ಅಭಿಪ್ರಾಯವು ಮುಸ್ಲಿಮರಿಗೆ ನ್ಯಾಯಾಂಗ ನಿಷ್ಠೆಯ ಬಗ್ಗೆ ಪಾಠ ಮಾಡುತ್ತಿದ್ದವರ ಬಣ್ಣವನ್ನು ಮತ್ತೊಮ್ಮೆ ಬಯಲುಗೊಳಿಸಿದೆ.‘ನೂಪುರ್ ಶರ್ಮಾರ ಹೇಳಿಕೆಯೇ ಸಮಸ್ಯೆಯ ಮೂಲ, ಅವರು ದೇಶದ ಕ್ಷಮೆ ಯಾಚಿಸಬೇಕು...’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಂಗ ಪೀಠವನ್ನೇ ಈ ಗುಂಪು ತಪ್ಪಿತಸ್ಥ ಸ್ಥಾನದಲ್ಲಿ ಕೂರಿಸಿದೆ. ಹಿಜಾಬ್ ಪ್ರಕರಣದಲ್ಲಿ ಮುಸ್ಲಿಮರು ನ್ಯಾಯಾಂಗಕ್ಕೆ ಗೌರವವನ್ನು ನೀಡಬೇಕು ಎಂದು ಬೋಧನೆ ಮಾಡುತ್ತಿದ್ದವರೇ ಇದೀಗ, ‘ಇದೇನು ಷರಿಯಾ ಕೋರ್ಟಾ...’ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಬಾಬರಿ ಮಸೀದಿ ತೀರ್ಪನ್ನು ಐತಿಹಾಸಿಕ ಎಂದು ಸಂಭ್ರಮಿಸಿದ್ದು ಇದೇ ಗುಂಪು. ಈ ತೀರ್ಪಿಗೆ ಮುಸ್ಲಿಮರು ಎಲ್ಲಾದರೂ ಅಸಮಾಧಾನ ಸೂಚಿಸುತ್ತಾರಾ ಎಂದು ದುರ್ಬೀನು ಹಿಡಿದು ಹುಡುಕುತ್ತಿದ್ದುದು ಇದೇ ಗುಂಪು. ಮುಲ್ಲಾ, ಮೌಲಾನಾಗಳ ಬಾಯಿಗೆ ಮೈಕ್ ಇಟ್ಟು ನ್ಯಾಯಾಂಗದ ತೀರ್ಪನ್ನು ಖಂಡಿಸುವ ಸಣ್ಣ ಹೇಳಿಕೆಯಾದರೂ ಹೊರಬೀಳಲಿ... ಎಂದು ಪೀಡಿಸುತ್ತಿದ್ದ ಮಾಧ್ಯಮ ಗುಂಪನ್ನು ಅಭಿಮಾನದಿಂದ ನೋಡುತ್ತಿದ್ದುದೂ ಇದೇ ಗುಂಪು. ಒಂದುರೀತಿಯಲ್ಲಿ,

ಈ ದೇಶದ ಪ್ರಜಾತಂತ್ರ, ಸಂವಿಧಾನ, ನ್ಯಾಯಾಂಗಗಳ ಮೇಲೆಲ್ಲ ನಂಬಿಕೆ ಇಡಬೇಕಾದ ಮತ್ತು ನಿಷ್ಠೆ ವ್ಯಕ್ತಪಡಿಸಬೇಕಾದ ಹೊಣೆಗಾರಿಕೆ ಮುಸ್ಲಿಮರ ಮೇಲಿದೆಯೇ ಹೊರತು ತಮಗಲ್ಲ ಎಂದು ಈ ಗುಂಪು ಸಾರುತ್ತಿದೆ. ಶಬರಿಮಲೆಗೆ ಸಂಬಂಧಿಸಿ ಸುಪ್ರೀಮ್ ಕೋರ್ಟು ನೀಡಿದ ತೀರ್ಪನ್ನು ಇದೇ ಗುಂಪು ಬಲವಾಗಿ ವಿರೋಧಿಸಿತ್ತು. ವಿರೋಧಿಸಿದ್ದು ಮಾತ್ರವಲ್ಲ, ಕೇರಳದಲ್ಲಿ 7 ಹರತಾಳಗಳು ನಡೆದಿದ್ದುವು. ಒಂದು ರಾಜ್ಯ ಬಂದ್ ಕೂಡಾ ನಡೆದಿತ್ತು. ಶಬರಿಮಲೆ ಪ್ರವೇಶಿಸಲು ಯತ್ನಿಸಿದ ಸುಮಾರು 10ರಷ್ಟು ಮಹಿಳೆಯರನ್ನು ಥಳಿಸಿ ಹಿಂದಕ್ಕೆ ಕಳುಹಿಸಲಾಗಿತ್ತು. ಹರತಾಳ ಎಷ್ಟು ಕಾನೂನು ಬಾಹಿರವಾಗಿತ್ತೆಂದರೆ, ಕೇರಳ ರಸ್ತೆ ಸಾರಿಗೆ ಸಂಸ್ಥೆಯ ನೂರಕ್ಕಿಂತಲೂ ಅಧಿಕ ಬಸ್‌ಗಳಿಗೆ ಹಾನಿ ಎಸಗಲಾಗಿತ್ತು. ಸರ್ಕಾರಿ ಲೈಬ್ರರಿ ಮತ್ತು ಕಟ್ಟಡಗಳನ್ನು ಪುಡಿಗೈಯಲಾಗಿತ್ತು. ಸುಮಾರು 500ರಷ್ಟು ಪ್ರಕರಣಗಳು ದಾಖಲಾಗಿದ್ದುವು. ಸಾವಿರಕ್ಕಿಂತಲೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು. ನಿಜವಾಗಿ,

ಈ ದೇಶದ ಕಾನೂನಿಗೆ ಅತ್ಯಂತ ಹೆಚ್ಚು ನಿಷ್ಠವಾಗಿರುವುದು ಮುಸ್ಲಿಮ್ ಸಮುದಾಯ. ಈ ಸಮುದಾಯದ ನಿರೀಕ್ಷೆಯನ್ನು ಹುಸಿಗೊಳಿಸಿದ ಹಲವು ತೀರ್ಪುಗಳು ಸುಪ್ರೀಮ್‌ನಿಂದ ಬಂದಿದ್ದರೂ ಶಬರಿಮಲೆಯಂಥ ವಿರೋಧವನ್ನು ಅದು ವ್ಯಕ್ತಪಡಿಸಿಯೇ ಇಲ್ಲ. ಶಬಾನೋ ಪ್ರಕರಣವೊಂದನ್ನು ಬಿಟ್ಟರೆ ಉಳಿದಂತೆ ಅತ್ಯಂತ ಸಂಯಮದ ಪ್ರತಿಕ್ರಿಯೆಯನ್ನಷ್ಟೇ ಈ ಸಮುದಾಯ ವ್ಯಕ್ತಪಡಿಸಿದೆ. ಬಾಬರಿ ಮಸೀದಿ ಜಮೀನು ವಿವಾದದ ಬಗ್ಗೆ ಸುಪ್ರೀಮ್ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ನೀಡಿದ ತೀರ್ಪಿನ ಬಗ್ಗೆ ಖ್ಯಾತ ನ್ಯಾಯವಾದಿಗಳೇ ಅಸಮಾಧಾನ ಸೂಚಿಸಿದಾಗಲೂ ಈ ಸಮುದಾಯ ಎಲ್ಲೂ ಕಾನೂನು ಕೈಗೆತ್ತಿಕೊಳ್ಳುವ ಸಾಹಸಕ್ಕೆ ಇಳಿಯಲಿಲ್ಲ. ಹರತಾಳ ನಡೆಸಲಿಲ್ಲ. ಅಷ್ಟಕ್ಕೂ, ಬಾಬರಿ ಮಸೀದಿಯ ಬಗ್ಗೆ ತಕರಾರು ಎತ್ತಿದವರು ಅದನ್ನು ವ್ಯಕ್ತಪಡಿಸುವುದಕ್ಕೆ ಆಯ್ಕೆ ಮಾಡಿಕೊಂಡ ರೀತಿಯೇ ಕಾನೂನು ವಿರೋಧಿಯಾಗಿತ್ತು. ಅವರು ಕಾನೂನನ್ನೇ ಕೈಗೆತ್ತಿಕೊಂಡರು. ಬಾಬರಿ ಮಸೀದಿಗೆ ಯಾವುದೇ ಹಾನಿ ಮಾಡುವು ದಿಲ್ಲ ಎಂಬ ಮುಚ್ಚಳಿಕೆಯನ್ನು ಬರೆದುಕೊಟ್ಟು, ನ್ಯಾಯಾಂಗವನ್ನೇ ವಂಚಿಸಿದರು. ಬಾಬರಿ ಮಸೀದಿಯನ್ನು ಹಾಡುಹಗಲೇ ಬೀಳಿಸಿದರು. ಮಾತ್ರವಲ್ಲ,

ಈ ಕ್ರಿಮಿನಲ್ ಕೃತ್ಯಕ್ಕೆ 30 ವರ್ಷಗಳೇ ಸಂದಿದ್ದರೂ ಇವತ್ತಿಗೂ ಆ ಪ್ರಕರಣ ಸ್ಥಳೀಯ ನ್ಯಾಯಾಲಯದಿಂದ ಮೇಲೆ ಬಂದಿಲ್ಲ. ಆ ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದವರಲ್ಲಿ ಹಲವರು ಈಗಾಗಲೇ ಯಾವ ಶಿಕ್ಷೆಯನ್ನೂ ಎದುರಿಸದೇ ಸಹಜ ಸಾವಿಗೆ ಒಳಗಾಗಿದ್ದಾರೆ. ಇನ್ನು, ಜೀವಂತ ಇರುವವರೂ ಆ ಪ್ರಕರಣದ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ ಎಂದು ಅಂದುಕೊಳ್ಳುವ ಹಾಗಿಲ್ಲ. ಯಾಕೆಂದರೆ, ಆ ಪ್ರಕರಣ ಹಳ್ಳ ಹಿಡಿದಂತಿದೆ. ಈ ದೇಶದ ಮತ್ತು ಜಗತ್ತಿನ ಸರ್ವ ಮಾಧ್ಯಮಗಳ ಮುಂದೆಯೇ ನಡೆದ ಕೃತ್ಯವೊಂದು 30 ವರ್ಷಗಳ ಬಳಿಕವೂ ಸ್ಥಳೀಯ ನ್ಯಾಯಾಲಯದ ವಿಚಾರಣಾ ಹಂತದಲ್ಲಿದೆ ಎಂದರೆ, ಅದರರ್ಥವೇನು? ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಕ್ರಿಮಿನಲ್ ಪ್ರಕರಣಗಳು ಇತ್ಯರ್ಥವಾಗುವುದು ಬೇಗ. ಸಿವಿಲ್ ವ್ಯಾಜ್ಯಗಳ ವಿಚಾರಣೆ ತೆವಳಿಕೊಂಡ ರೀತಿಯಲ್ಲಾಗುವಾಗ, ಕ್ರಿಮಿನಲ್ ಪ್ರಕರಣಗಳ ವಿಚಾರಣೆಯು ಕನಿಷ್ಠ ನಡೆಯುವ ವೇಗದಲ್ಲಾದರೂ ಸಾಗುತ್ತದೆ ಎಂಬುದು ಸಾಮಾನ್ಯ ಹೇಳಿಕೆ. ಆದರೆ,

ಬಾಬರಿ ಮಸೀದಿ ಪ್ರಕರಣದಲ್ಲಿ ಈ ನಂಬಿಕೆಯೇ ಹುಸಿಯಾಗಿದೆ. ಆದರೂ ಮುಸ್ಲಿಮರು ಈ ದೇಶದ ನ್ಯಾಯಾಂಗವನ್ನು ಖಂಡಿಸಿ ವಾಹನಗಳಿಗೆ ಬೆಂಕಿ ಹಚ್ಚಿಲ್ಲ. ದುರಂತ ಏನೆಂದರೆ,

ನ್ಯಾಯಾಲಯದ ತೀರ್ಪು ತಮಗನುಕೂಲವಾಗಿದ್ದರೆ ಮಾತ್ರ ಸ್ವೀಕಾರ, ಇಲ್ಲದಿದ್ದರೆ ತಿರಸ್ಕಾರ ಎಂದು ತಮ್ಮ ಮಾತು-ಕೃತಿಗಳಿಂದ ಪದೇ ಪದೇ ಸಾಬೀತುಪಡಿಸುತ್ತಿರುವ ಅದೇ ಗುಂಪು, ಕಾನೂನು ಪಾಲನೆಯ ಹೆಸರಲ್ಲಿ ಮುಸ್ಲಿಮರನ್ನು ಸದಾ ಕಟಕಟೆಯಲ್ಲಿ ನಿಲ್ಲಿಸುತ್ತಿದೆ. ಹಿಜಾಬ್ ಪ್ರಕರಣದಲ್ಲಿ ಹೈ ಕೋರ್ಟ್ ನೀಡಿದ ತೀರ್ಪಿಗೆ ಮುಸ್ಲಿಮ್ ಸಮುದಾಯ ಅಸಮಾಧಾನ ಸೂಚಿಸಿದ್ದನ್ನು ಇದೇ ಗುಂಪು ಪರ್ವತ ಮಾಡಿತ್ತು. ಬೆಳಗ್ಗಿನಿಂದ ಸಂಜೆವರೆಗೆ ಮುಸ್ಲಿಮ್ ಸಮುದಾಯದ ಮಂದಿ ಸ್ವಯಂ ಪ್ರೇರಿತ ವಾಗಿ ತಮ್ಮ ಅಂಗಡಿಗಳನ್ನು ಮುಚ್ಚಿ ಅಸಮಾಧಾನ ಸೂಚಿಸಿದ್ದನ್ನು ನ್ಯಾಯಾಂಗಕ್ಕೆ ಅಗೌರವ ಎಂದು ಈ ಗುಂಪು ಪ್ರಚಾರ ಮಾಡಿತ್ತು. ಆ ಬಳಿಕ ಜಾತ್ರೋತ್ಸವಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಹೇರುವುದಕ್ಕೆ ಇದನ್ನೇ ಕಾರಣವಾಗಿಯೂ ನೀಡಿತ್ತು. ತಮಾಷೆ ಏನೆಂದರೆ, ಕೋರ್ಟು ತೀರ್ಪಿಗೆ ಮುಸ್ಲಿಮರು ಕನಿಷ್ಠ ಅಸಮಾಧಾನವನ್ನೂ ಸೂಚಿಸಬಾರದು ಎಂದು ಹೇಳುವ ಇದೇ ಗುಂಪು, 2018ರ ಶಬರಿಮಲೆ ತೀರ್ಪಿಗೆ ವ್ಯಕ್ತ ಪಡಿಸಿದ ಹಿಂಸಾತ್ಮಕ ವಿರೋಧವನ್ನೂ ಸಮರ್ಥಿಸುತ್ತಿತ್ತು. ನಿಜವಾಗಿ,

ಈ ಗುಂಪು ನ್ಯಾಯಾಂಗಕ್ಕೂ ನಿಷ್ಠವಾಗಿಲ್ಲ, ಸಂವಿಧಾನಕ್ಕೂ ನಿಷ್ಠವಾಗಿಲ್ಲ. ಅದರ ನಿಷ್ಠಾನಿಷ್ಠ ಎಲ್ಲವೂ ಷರತ್ತಿಗೆ ಒಳಪಟ್ಟಿರುತ್ತದೆ. ನಿರ್ದಿಷ್ಟ ರಾಜಕೀಯ ಪಕ್ಷದ ಹಿತವೇ ಈ ಷರತ್ತು. ಒಂದುವೇಳೆ, ನೂಪುರ್ ಶರ್ಮಾ ಕಾಂಗ್ರೆಸ್‌ನಲ್ಲಿದ್ದು ಈ ಹೇಳಿಕೆ ನೀಡಿರುತ್ತಿದ್ದರೆ ಮತ್ತು ಕಾಂಗ್ರೆಸ್ ಆಕೆಯನ್ನು ಪಕ್ಷದಿಂದ ಅಮಾನತುಗೊಳಿಸಿರುತ್ತಿದ್ದರೆ ಈ ಗುಂಪಿನ ಪ್ರತಿಕ್ರಿಯೆ ಹೇಗಿರುತ್ತಿತ್ತು ಯೋಚಿಸಿ. ಆ ಕ್ರಮವನ್ನು ಮುಸ್ಲಿಮ್ ಓಲೈಕೆ ಎಂದು ಈ ಗುಂಪು ಹಂಗಿಸುತ್ತಿತ್ತು. ಕಾಂಗ್ರೆಸನ್ನು ಹಿಂದೂ ವಿರೋಧಿ ಎಂದು ಪ್ರಚಾರ ಮಾಡಲಾಗುತ್ತಿತ್ತು. ಕಾಂಗ್ರೆಸ್‌ನ ಉನ್ನತ ನಾಯಕರಿಂದ ಹಿಡಿದು ತಳಮಟ್ಟದ ನಾಯಕರ ವರೆಗೆ ಪ್ರತಿಯೊಬ್ಬರನ್ನೂ ಉಲ್ಲೇಖಿಸಿ ಮಾನ ಹರಾಜು ಹಾಕುವ ಪೋಸ್ಟ್‌ಗಳು ಸೋಷಿ ಯಲ್ ಮೀಡಿಯಾಗಳಲ್ಲಿ ತುಂಬಿ ತುಳುಕಿರುತ್ತಿತ್ತು. ಆದರೆ, ನೂಪುರ್ ಶರ್ಮಾ ಬಿಜೆಪಿಯವರಾದ್ದರಿಂದ ಮತ್ತು ಅಮಾ ನತುಗೊಳಿಸಿದ್ದೂ ಬಿಜೆಪಿಯಾದುದರಿಂದ ಈ ಗುಂಪು ಮೌನವಾಗಿದೆ. ಮಾತ್ರವಲ್ಲ, ಪ್ರವಾದಿಯನ್ನು ನಿಂದಿಸಿರುವ ಏಕೈಕ ಕಾರಣಕ್ಕಾಗಿಯೇ ಆಕೆಯನ್ನು ಬೆಂಬಲಿಸುತ್ತಿದೆ. ಒಂದುವೇಳೆ, ಹಿಂದೂ ದೇವ-ದೇವಿಯರ ವಿರುದ್ಧ ಈಕೆ ಇಂಥದ್ದೇ ಹೇಳಿಕೆ ನೀಡಿರುತ್ತಿದ್ದರೆ ಇದೇ ಗುಂಪು ಇಂಥದ್ದೇ ಧೋರಣೆಯನ್ನು ತಳೆಯುತ್ತಿತ್ತೇ? ಕೆಲವು ಸಮಯಗಳ ಹಿಂದೆ ಸಾಹಿತಿ ಭಗವಾನ್ ಅವರಿಗೆ ನ್ಯಾಯವಾದಿಯೊಬ್ಬರು ನ್ಯಾಯಾಲಯದ ಆವರಣದಲ್ಲೇ ಮಸಿ ಬಳಿದಿದ್ದರು. ಆಗ ಇದೇ ಗುಂಪು ಆ ಮಸಿಯನ್ನು ಸಮರ್ಥಿಸಿತ್ತು. ಭಗವಾನ್ ಹಿಂದೂ ಧರ್ಮವನ್ನು ಮತ್ತು ಶ್ರೀರಾಮರನ್ನು ಅವಮಾನಿಸಿದ್ದಾರೆ ಎಂಬುದೇ ಈ ಮಸಿಗೆ ಕಾರಣವಾಗಿತ್ತು. ಈ ಹಿಂದೆ ಕಲಾವಿದ ಎಂ.ಎಫ್. ಹುಸೇನ್ ಅವರು ದೇವ-ದೇವಿಯರ ನಗ್ನ ಚಿತ್ರವನ್ನು ಬಿಡಿಸಿದಾಗ, ಅದನ್ನು ಖಂಡಿಸಿ ಅವರ ಮೇಲೆ ದೇಶದ ವಿವಿಧ ಕಡೆ ಪ್ರಕರಣ ದಾಖಲಿಸಿದ್ದನ್ನು ಬೆಂಬಲಿಸುತ್ತಿರುವುದೂ ಇದೇ ಗುಂಪು. ಒಂದುರೀತಿಯಲ್ಲಿ,

ಈ ದೇಶದ ಮುಂದೆ ಈಗಾಗಲೇ ಸಾಬೀತಾಗಿರುವ ಸತ್ಯವೊಂದನ್ನು ನೂಪುರ್ ಹೇಳಿಕೆ ಮತ್ತೊಮ್ಮೆ ದೃಢಪಡಿಸಿದೆ. ಈ ದೇಶದ ಕಾನೂ ನು ಪಾಲಿಸುವವರಲ್ಲಿ ಮುಂದಿರುವುದು ಮುಸ್ಲಿಮರೇ. ಈ ದೇಶದ ಪ್ರಜಾತಂತ್ರಕ್ಕೆ ಗೌರವ ವ್ಯಕ್ತಪಡಿಸುವವರಲ್ಲಿ ಮುಂಚೂಣಿಯ ಲ್ಲಿರುವುದೂ ಮುಸ್ಲಿಮರೇ. ಮುಸ್ಲಿಮರು ಈ ದೇಶದ ನ್ಯಾಯಾಂಗಕ್ಕೆ ನಿಷ್ಠರಾಗಿದ್ದಾರೆ. ಆದರೆ ಅವರನ್ನು ಯಾರು ಸದಾ ಆರೋಪಿ ಸ್ಥಾ ನದಲ್ಲಿ ನಿಲ್ಲಿಸುತ್ತಿದ್ದರೋ ಅವರ ನ್ಯಾಯಾಂಗ ನಿಷ್ಠೆ ಶಂಕಾಸ್ಪದವಾಗಿದೆ. ಅವರು ನ್ಯಾಯಾಂಗದ ಬದಲು ರಾಜಕೀಯ ಪಕ್ಷಕ್ಕೆ ನಿಷ್ಠವಾಗಿದ್ದಾರೆ. ತೀರ್ಪು ತಮಗನುಕೂಲವಾಗಿದ್ದರೆ ಮಾತ್ರ ನ್ಯಾಯಾಂಗವನ್ನು ಗೌರವಿಸುತ್ತಾರೆ. ಇಲ್ಲದಿದ್ದರೆ ನ್ಯಾಯಾಲಯವನ್ನೇ ಕಟಕಿಯಾಡುತ್ತಾರೆ. ನೂಪುರ್ ಶರ್ಮಾರ ಹೇಳಿಕೆಯು ಈ ಸತ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಬಕ್ರೀದ್ ಸುತ್ತೋಲೆ: ಸರ್ಕಾರದ ಉದ್ದೇಶವೇನು?

 


9-7-2022

ಈದುಲ್ ಅಝ್ಹಾ ಅಥವಾ ಬಕ್ರೀದ್‌ನ ಹಿನ್ನೆಲೆಯಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ರಾಜ್ಯ ಸರಕಾರ 3 ದಿನಗಳ ಮುಂಚಿತವಾಗಿಯೇ ಕೆಲವು ಎಚ್ಚರಿಕೆಗಳನ್ನು ರವಾನಿಸಿದೆ. ಪ್ರಾಣಿ ವಧೆಗೆ ಸಂಬಂಧಿಸಿದಂತೆ ಇರುವ ಕಠಿಣ ಕಾಯ್ದೆಗಳನ್ನು ಅದು ಮುಸ್ಲಿಮರಿಗೆ ನೆನಪಿಸಿದೆ. ‘ಬಕ್ರೀದ್ ಹಬ್ಬದ ಸಮಯದಲ್ಲಿ ಜಾನುವಾರು ಬಲಿ ನೀಡುವ ಬದಲಾಗಿ ಅವುಗಳನ್ನು ನಾವೆಲ್ಲರೂ ಸಂರಕ್ಷಣೆ ಮಾಡೋಣ..’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಮೂರು ದಿನಗಳ ಮೊದಲೇ ಮುಸ್ಲಿಮರಿಗೆ ಹಿತವಚನ ನೀಡಿದ್ದಾರೆ. ಅಲ್ಲದೆ,

‘ಬಕ್ರೀದ್ ವೇಳೆ ಜಾನುವಾರು ಬಲಿ ನೀಡಲು ಅವಕಾಶ ಕೊಡುವುದಿಲ್ಲ ಎಂದೂ ಅವರು ಹೇಳಿದ್ದಾರೆ. ರಾಜ್ಯದ ಎಲ್ಲ ಗಡಿಭಾಗಗಳಲ್ಲಿ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿ ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘ ನೆಯಾಗದಂತೆ ಜಾಗ್ರತೆ ವಹಿಸಬೇಕು, ಅಂಥ ಪ್ರಕರಣ ಎಲ್ಲಾದರೂ ಕಂಡುಬಂದರೆ ಪೊಲೀಸರಿಗೆ ಮಾಹಿತಿ ಕೊಡಬೇಕು, ಗೋವು, ಹಸು, ಎತ್ತು, ಹೋರಿ, ಕರು, ಒಂಟೆ ಮತ್ತು ಹದಿಮೂರು ವರ್ಷದೊಳಗಿನ ಎಮ್ಮೆ-ಕೋಣ ಸೇರಿದಂತೆ ಯಾವುದರ ಬಲಿಯೂ ನಡೆಯಬಾರದು, ಒಂದುವೇಳೆ ಉಲ್ಲಂಘಿಸಿದರೆ ಪ್ರಾಣಿ ಬಲಿ ತಡೆ ಕಾಯ್ದೆಯನ್ವಯ 6 ತಿಂಗಳ ಶಿಕ್ಷೆ ಮತ್ತು ಭಾರತೀಯ ದಂಡಸಂಹಿತೆಯ ಅನ್ವಯ 5 ವರ್ಷಗಳ ಶಿಕ್ಷೆ ವಿಧಿಸಲಾಗುವುದು...’ ಎಂದು ರಾಜ್ಯ ಸರಕಾರ ಎಚ್ಚರಿಕೆಯನ್ನೂ ನೀಡಿದೆ. ಅಲ್ಲದೇ, ಪ್ರಾಣಿವಧೆ ಕಾಯ್ದೆಯನ್ವಯ ಆಹಾರಕ್ಕೆ ಯೋಗ್ಯವಾದ ಪ್ರಾಣಿಗಳನ್ನು ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧಿಸುವಂತೆಯೂ ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅಂದಹಾಗೆ,

ಬಕ್ರೀದ್‌ಗಿಂತ ಮೂರು ದಿನಗಳ ಮೊದಲು ಸಚಿವರು ನೀಡಿದ ಎಚ್ಚರಿಕೆ ಮತ್ತು ಮರುದಿನ ಸರ್ಕಾರ ಹೊರಡಿಸಿದ ಸುತ್ತೋಲೆಯನ್ನು ನೋಡುವಾಗ ಮುಸ್ಲಿಮ್ ಸಮುದಾಯ ಯಾವುದೋ ಕಾನೂನುಬಾಹಿರ ಚಟುವಟಿಕೆಗೆ ಸಿದ್ಧವಾಗುತ್ತಿದೆ ಎಂದೇ ನಂಬಬೇಕು. ಮುಸ್ಲಿಮರನ್ನು ಅಪರಾಧಿಗಳಂತೆ ಬಿಂಬಿಸುವ ಮತ್ತು ಗೋಹತ್ಯೆ ನಡೆಸಲು ಅವರು ಸಂಚು ಹೂಡಿರುವಂತೆ ಸಂದೇಶ ರವಾನಿಸುವ ಪ್ರಯತ್ನ ಸಚಿವರ ಹೇಳಿಕೆ ಮತ್ತು ಸರ್ಕಾರದ ಸುತ್ತೋಲೆಯಲ್ಲಿ ಇರುವಂತಿದೆ. ಪ್ರಾಣಿಬಲಿ ಬಕ್ರೀದ್‌ನ ಭಾಗ. ಜಾನುವಾರುಗಳನ್ನು ಬಲಿ ನೀಡುವುದಕ್ಕೆ ಸರ್ಕಾರದ ಸುತ್ತೋಲೆಯಲ್ಲಿ ಅನುಮತಿ ನಿರಾಕರಿಸಲಾಗಿದೆ. ಆದ್ದರಿಂದ ಬಲಿ ನೀಡಲು ಉಳಿದಿರುವುದು ಆಡು, ಮೇಕೆ ಮತ್ತು ಕುರಿಗಳು ಮಾತ್ರ. ಆದರೆ ಇದಕ್ಕೂ ಷರತ್ತುಗಳನ್ನು ವಿಧಿಸಲಾಗಿದೆ. ಅಧಿಕೃತ ಕಸಾಯಿಖಾನೆಯ ಹೊರತು ಇನ್ನೆಲ್ಲೂ ಇವುಗಳನ್ನು ವಧೆ ಮಾಡಬಾರದೆಂದು ಎಚ್ಚರಿಸಲಾಗಿದೆ. ನಿಜವಾಗಿ,

ಹಬ್ಬದ ಸಂದರ್ಭದಲ್ಲಿ ಪ್ರಾಣಿಬಲಿ ನೀಡುವುದು ಮುಸ್ಲಿಮರು ಮಾತ್ರ ಅಲ್ಲ. ಜಾತ್ರೆ ಅಥವಾ ಊರ ಹಬ್ಬದ ವೇಳೆ ಮುಸ್ಲಿಮೇತರ ಸಮುದಾಯದಲ್ಲೂ ಪ್ರಾಣಿಬಲಿ ಸಂಪ್ರದಾಯವಿದೆ. ಕೋಳಿ, ಕುರಿ, ಮೇಕೆಗಳನ್ನು ಬಲಿ ಕೊಟ್ಟು ಊರ ಹಬ್ಬ ಆಚರಿಸಿದ ಸುದ್ದಿಗಳು ಆಗಾಗ ಮಾಧ್ಯಮಗಳಲ್ಲೂ ವರದಿಯಾಗುತ್ತಿರುತ್ತವೆ. ಆದರೆ ಸರ್ಕಾರ ಎಂದೂ ಕೂಡ ಇಂಥ ಊರ ಹಬ್ಬಗಳ ವೇಳೆ ನಿಯಮಗಳ ಪಟ್ಟಿಯನ್ನು ಜಾರಿಗೊಳಿಸಿದ ಉದಾಹರಣೆಯಿಲ್ಲ. ಕಸಾಯಿಖಾನೆಯ ಹೊರತು ಇನ್ನೆಲ್ಲೂ ಪ್ರಾಣಿವಧೆ ಅಪರಾಧ ಎಂದು ಸರ್ಕಾರ ಬಕ್ರೀದ್‌ನ ಹೊರತಾದ ಬೇರೆ ಯಾವ ಸಂದರ್ಭದಲ್ಲೂ ಘೋಷಿಸಿದ ಉದಾಹರಣೆ ಇದೆಯೇ? ಇದು ಎಷ್ಟು ಪ್ರಾಯೋಗಿಕ? ರಾಜ್ಯದಲ್ಲಿ ಈ ಮೊದಲು ಬಕ್ರೀದ್ ನಡೆದಿಲ್ಲವೇ? ಪ್ರಾಣಿಬಲಿ ಕೊಟ್ಟಿಲ್ಲವೇ? ಆಗೆಲ್ಲ ಜಾರಿಯಾಗದ ಸುತ್ತೋಲೆಗಳು ಈಗ ದಿಢೀರ್ ಆಗಿ ಜಾರಿಯಾಗಿರುವುದಕ್ಕೆ ಕಾರಣಗಳೇನು? ಬಕ್ರೀದ್‌ನ ಸಮಯದಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿಯೋದು ಮತ್ತು ಒಂದು ರೀತಿಯಲ್ಲಿ ಭಯವನ್ನು ಸಮಾಜದಲ್ಲಿ ಸೃಷ್ಟಿಸುವುದರಿಂದ ಸರ್ಕಾರಕ್ಕೆ ಸಿಗುವ ಲಾಭವೇನು? ಅಷ್ಟಕ್ಕೂ,

ಕುರ್ಬಾನಿ (ಪ್ರಾಣಿಬಲಿ) ಎಂಬುದು ಮಾಂಸದ ಉದ್ದೇಶದಿಂದ ಮಾಡುವ ವಧೆ ಅಲ್ಲ. ಮತ್ತು ಬಕ್ರೀದ್ ಹೊರತಾದ ದಿನಗಳಲ್ಲಿ ಮಾಡುವ ವಧೆಯು ಪ್ರಾಣಿಬಲಿ ಆಗುವುದೂ ಇಲ್ಲ. ಕುರ್ಬಾನಿಗೆ ಒಂದು ಹಿನ್ನೆಲೆ ಇದೆ. ಪ್ರವಾದಿ ಇಬ್ರಾಹೀಮ್(ಅ) ಮತ್ತು ಇಸ್ಮಾಈಲ್‌ರ ಮೌಲ್ಯಯುತ ಬದುಕನ್ನು ನೆನಪಿಸುವ ಉದ್ದೇಶದ ಸಾಂಕೇತಿಕ ಕ್ರಮ ಇದು. ಮಾತ್ರವಲ್ಲ, ಆರ್ಥಿಕವಾಗಿ ಸಬಲರ ಮೇಲೆ ಮಾತ್ರ ಇಂಥ ಬಲಿ ನೀಡುವ ಹೊಣೆಗಾರಿಕೆ ಇದೆ. ಬಲಿ ನೀಡಲಾದ ಬಳಿಕ ಮಾಂಸವನ್ನು ಬಡಬಗ್ಗರಿಗೆ ಹಂಚಲಾಗುತ್ತದೆ. ಅಂದಹಾಗೆ, ಇಲ್ಲಿ ಬಲಿ ಎಂಬ ಪದ ಬಳಕೆಯಲ್ಲಿದ್ದರೂ ಸಾಮಾನ್ಯ ವಧಾ ಕ್ರಮವನ್ನೇ ಇಲ್ಲೂ ಅನುಸರಿಸಲಾಗುತ್ತದೆ. ಬಕ್ರೀದ್‌ನ ಸಮಯದಲ್ಲಿ ಮಾಡುವ ಪ್ರಾಣಿವಧೆಗೂ ಇತರ ಸಂದರ್ಭಗಳಲ್ಲಿ ಮಾಡುವ ಪ್ರಾಣಿವಧೆಗೂ ವಧೆ ಎಂಬ ನೆಲೆಯಲ್ಲಿ ಯಾವ ವ್ಯತ್ಯಾಸವೂ ಇಲ್ಲ.
ಆದರೆ, ಸರ್ಕಾರದ ಆದೇಶವು ಈ ಬಲಿಕರ್ಮದ ಸ್ಫೂರ್ತಿಯನ್ನೇ ತಗ್ಗಿಸುವಂತಿದೆ. ಬಡಬಗ್ಗರಲ್ಲಿ ಮಾಂಸ ವನ್ನು ಹಂಚುವ ಈ ಧಾರ್ಮಿಕ ಕ್ರಿಯೆಯ ಕತ್ತು ಹಿಸುಕುವ ಉದ್ದೇಶವನ್ನಷ್ಟೇ ಹೊಂದಿರುವಂತಿದೆ. ಅಷ್ಟಕ್ಕೂ,

ಪ್ರಾಣಿಬಲಿ ನೀಡಬಯಸುವ ವ್ಯಕ್ತಿಯೋರ್ವ ಅದಕ್ಕಾಗಿ ಕಸಾಯಿಖಾನೆಯನ್ನೇ ಆಶ್ರಯಿಸುವುದು ಎಷ್ಟು ಪ್ರಾಯೋಗಿಕ ಎಂದು ಸರ್ಕಾರ ಅಧ್ಯಯನ ನಡೆಸಿದೆಯೇ? ಒಂದು ಜಿಲ್ಲೆಯಲ್ಲಿ ಎಷ್ಟು ಕಸಾಯಿಖಾನೆಗಳಿವೆ? ಇರುವ ಕಸಾಯಿಖಾನೆಗಳಲ್ಲಿ ಬಕ್ರೀದ್‌ನ ಬಲಿಕರ್ಮಕ್ಕೆ ಬೇಕಾದಷ್ಟು ಸೌಲಭ್ಯ ಗಳಿವೆಯೇ? ಕೇವಲ ಮೂರು ದಿನಗಳವರೆಗೆ ಮಾತ್ರ ಬಲಿಕರ್ಮವನ್ನು ನಿಭಾಯಿಸಲು ಅವಕಾಶ ಇದೆ. ಈ ಅವ ಧಿಯೊಳಗೆ ಎಲ್ಲ ಬಲಿಕರ್ಮಗಳೂ ಮುಗಿದಿರಬೇಕು ಎಂದು ಮಾತ್ರವಲ್ಲ, ಚರ್ಮ ಸುಲಿಯುವ ಮತ್ತು ಮಾಂಸ ಮಾಡುವ ಪ್ರಕ್ರಿಯೆಗಳೂ ಅಲ್ಲೇ ನಡೆಯಬೇಕಾಗುತ್ತದೆ. ಇವೆಲ್ಲಕ್ಕೂ ಕಸಾಯಿಖಾನೆಗಳಲ್ಲಿ ಪೂರಕ ವ್ಯವಸ್ಥೆಯಿದೆಯೇ? ಈ ಬಗ್ಗೆ ಸರ್ಕಾರ ವರ ದಿಯನ್ನು ತರಿಸಿಕೊಂಡಿದೆಯೇ?

ದಕ್ಷಿಣ ಕನ್ನಡಕ್ಕೆ ಸಂಬಂಧಿಸಿ ಹೇಳುವುದಾದರೆ, ಸದ್ಯ ಒಂದು ರೀತಿಯ ಮಂಕು ಕವಿದ ವಾತಾವರಣವಿದೆ. ಮಂಗಳೂರು ನಗರದಲ್ಲಿ ಇರುವ ಏಕೈಕ ಕಸಾಯಿಖಾನೆಯನ್ನು ದುರಸ್ತಿಯ ನೆಪದಲ್ಲಿ ಜಿಲ್ಲಾಡಳಿತ ದಿನಗಳ ಹಿಂದೆಯೇ ಮುಚ್ಚಿದೆ. ಅಲ್ಲದೇ, ಕುರ್ಬಾನಿಗಾಗಿ ಪರ್ಯಾಯ ವ್ಯವಸ್ಥೆಯನ್ನೂ ಮಾಡಿದಂತಿಲ್ಲ. ಏನಿದರ ಅರ್ಥ? ಒಂದುಕಡೆ, ಕುರಿ, ಮೇಕೆ ಮತ್ತು ಆಡುಗಳನ್ನು ಕಸಾಯಿಖಾನೆಯಲ್ಲಿ ಬಲಿಗಾಗಿ ವಧೆ ಮಾಡಬೇಕು ಎಂದು ಹೇಳುವ ಸರ್ಕಾರ, ಇನ್ನೊಂದು ಕಡೆ ಇರುವ ಏಕೈಕ ಕಸಾಯಿಖಾನೆಯನ್ನೂ ಮುಚ್ಚಿಸುತ್ತದೆ ಎಂದರೆ, ಮುಸ್ಲಿಮ್ ಸಮುದಾಯವನ್ನು ಕಾನೂನು ಉಲ್ಲಂಘಿಸಲು ಪರೋಕ್ಷವಾಗಿ ಪ್ರೇರೇಪಿಸುತ್ತಿದೆ ಎಂದೇ ಅರ್ಥವಲ್ಲವೇ? ಹಾಗಂತ,

ಮಂಗಳೂರಿನ ಕಸಾಯಿಖಾನೆಗೆ ಬಂದಿರುವ ದುಃಸ್ಥಿತಿ, ರಾಜ್ಯದ ಬೇರೆ ಕಸಾಯಿಖಾನೆಗಳಿಗೆ ಬಂದಿದೆಯೇ ಎಂಬ ವರದಿಯಿಲ್ಲ. ಮುಸ್ಲಿಮ್ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಕಾನೂನು ಉಲ್ಲಂಘನೆಗೆ ಸರ್ಕಾರ ಪ್ರಚೋದಿಸುತ್ತಿದೆಯೇ? ಧಾರ್ಮಿಕ ಕರ್ಮವೊಂದನ್ನು ಸುಲಲಿತವಾಗಿ ನೆರವೇರಿ ಸುವುದಕ್ಕೆ ಅವಕಾಶ ಮಾಡಿಕೊಡಬೇಕಾದ ಸರ್ಕಾರವೊಂದು ಅದಕ್ಕೆ ಅಡ್ಡಗಾಲಿಡುವಂತೆ ವರ್ತಿಸುತ್ತಿರು ವುದೇಕೆ? ಆಡು, ಕುರಿ, ಮೇಕೆಗಳನ್ನು ಮುಸ್ಲಿಮರು ತಂತಮ್ಮ ಮನೆಗಳಲ್ಲಿ ಬಲಿಯರ್ಪಿಸುವುದರಿಂದ ಸರ್ಕಾರಕ್ಕೆ ಆಗುವ ತೊಂದರೆಯೇನು? ಹಾಗಂತ, ಎಲ್ಲ ಮನೆಗಳಲ್ಲೂ ಇಂಥ ಬಲಿಯರ್ಪಣೆ ನಡೆಯುವುದಿಲ್ಲ. ಆರ್ಥಿಕವಾಗಿ ಸಬಲರಾಗಿರುವ ಮುಸ್ಲಿಮರು ಮಾತ್ರ ಬಲಿಯರ್ಪಿಸುತ್ತಾರೆ. ಅಂಥವರನ್ನು ಕಸಾಯಿಖಾನೆಗೆ ಅಟ್ಟುವುದೇಕೆ? ಇಂಥ ನಿಯಮ ಬಲಿಯರ್ಪಿಸಲು ಬಯಸುವವರಿಗಷ್ಟೇ ಅಲ್ಲ, ಕಸಾಯಿಖಾನೆಯನ್ನು ನಿರ್ವಹಿಸುವವರಿಗೂ ಸಮಸ್ಯೆಯನ್ನು ತಂದೊಡ್ಡುತ್ತದೆ. ನಿಜವಾಗಿ,

ಸರ್ಕಾರದ ನಿಯಮದಿಂದ ಸಾತ್ವಿಕ ಮುಸ್ಲಿಮರು ಮತ್ತು ವ್ಯಾಪಾರಸ್ಥರು ಖಂಡಿತ ತೊಂದರೆಯನ್ನು ಎದುರಿಸುತ್ತಾರೆ. ಮಾಂಸ ಮಾರಾಟಗಾರರನ್ನು ದಬಾಯಿಸುವುದಕ್ಕೆ ಮತ್ತು ಕಿರುಕುಳ ಕೊಟ್ಟು ಬಂಧಿಸು ವುದಕ್ಕೆ ಪೊಲೀಸರಿಗೆ ಈ ಸುತ್ತೋಲೆ ಅಪರಿಮಿತ ಅ ಧಿಕಾರವನ್ನು ನೀಡುತ್ತದೆ. ಮುಸ್ಲಿಮರು ಹಬ್ಬದ ಖುಷಿಯನ್ನು ಅನುಭವಿಸದಂತೆ ಮತ್ತು ಭೀತಿಯಲ್ಲಿ ಕಳೆಯುವಂತೆಯೂ ಮಾಡುತ್ತದೆ. ಅಲ್ಲದೇ, ಕುರಿ, ಮೇಕೆ, ಆಡು ಮಾಂಸವನ್ನು ಮಾರಾಟ ಮಾಡುವ ವ್ಯಾಪಾರಸ್ಥರ ಮೇಲೆ ದುಷ್ಕರ್ಮಿಗಳಿಗೆ ಏರಿ ಹೋಗುವುದಕ್ಕೂ ದಾಂಧಲೆ ನಡೆಸುವುದಕ್ಕೂ ಈ ಸುತ್ತೋಲೆ ಪ್ರೇರಣೆ ನೀಡುತ್ತದೆ. ಇದು ಅನ್ಯಾಯ. ಪ್ರಭುತ್ವ ಮತ್ತು ಅದರ ಬೆಂಬಲಿಗರ ವರ್ತನೆಯಿಂದ ಈಗಾಗಲೇ ರೋಸಿ ಹೋಗಿರುವ ಮುಸ್ಲಿಮರಿಗೆ ಕನಿಷ್ಠ ಹಬ್ಬದ ಖುಷಿಯನ್ನು ಅನುಭವಿಸುವುದಕ್ಕೂ ಸರ್ಕಾರ ಅಡ್ಡಿಪಡಿಸುತ್ತಿರುವುದು ಖಂಡನಾರ್ಹ. ಕುರಿ, ಮೇಕೆ, ಆಡುಗಳ ಬಲಿಗೆ ವಿಧಿಸಲಾಗಿರುವ ಷರತ್ತುಗಳನ್ನು ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು. ಜೊತೆಗೇ ಮುಸ್ಲಿಮ್ ಸಮುದಾಯವನ್ನು ಅಪರಾಧಿಗಳಂತೆ ನಡೆಸಿಕೊಳ್ಳುವುದನ್ನು ನಿಲ್ಲಿಸಬೇಕು.

ನಡುವಯಸ್ಸಿನಲ್ಲಿ ಸಲ್ಲಿಸಿದ ವಿಚ್ಛೇದನಾ ಅರ್ಜಿಯನ್ನು ವೃದ್ಧಾಪ್ಯದಲ್ಲಿ ಇತ್ಯರ್ಥ ಪಡಿಸಿದರೆ ಹೇಗೆ?

 


22-7-2022

ಹೆಣ್ಣಿನ ಸುತ್ತ ಈ ಜಗತ್ತಿನಲ್ಲಿ ರಚಿತವಾಗಿರುವಷ್ಟು ಕತೆ, ಕಾದಂಬರಿ, ಹಾಡು, ಸಿನಿಮಾ, ನಾಟಕಗಳು ಇನ್ನಾವ ಜೀವಿಯ ಸುತ್ತವೂ ರಚ ನೆಯಾಗಿರುವ ಸಾಧ್ಯತೆ ಇಲ್ಲ. ಹೆಣ್ಣನ್ನು ಈ ದೇಶದಲ್ಲಿ ಪೂಜಿಸಲಾಗುತ್ತದೆ. ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂದು ಕೊಂಡಾಡಲಾಗುತ್ತದೆ. ಹೆಣ್ಣಿನ ಕೇಶ, ಕಣ್ಣು, ಕಿವಿ, ಮೂಗು, ಬಾಯಿ, ತುಟಿ, ಕೆನ್ನೆ, ಉಗುರು... ಹೀಗೆ ಎಲ್ಲವೂ ಬಣ್ಣನೆಗೆ ಒಳಗಾಗುತ್ತದೆ. ಹಾಗಂತ, ಇದು ಒಂದು ಮುಖವಾದರೆ, ಇದರ ಇನ್ನೊಂದು ಮುಖ ಅತ್ಯಂತ ಕರಾಳ. ಆಕೆಯ ಮೇಲೆ ದೌರ್ಜನ್ಯ ನಡೆಸುವ ಮತ್ತು ಇನ್ನಿಲ್ಲದಂತೆ ಸತಾಯಿಸುವ ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಲೇ ಇರುತ್ತವೆ. ಕಳೆದವಾರ ರಾಜ್ಯ ಹೈಕೋರ್ಟ್ ಇಂಥದ್ದೊಂದು ಪ್ರಕರಣದ ಮೇಲೆ ಬೆಳಕು ಚೆಲ್ಲಿದೆ. ನಿಜವಾಗಿ,

ಈ ಪ್ರಕರಣ ಸಾಮಾನ್ಯವಾಗಿ ವರದಿಯಾಗುವ ಅತ್ಯಾಚಾರ, ಹತ್ಯೆ, ದೌರ್ಜನ್ಯ ಇತ್ಯಾದಿಗಳಿಗಿಂತ ಭಿನ್ನವಾದುದು ಮತ್ತು ಹೆಣ್ಣಿನ ಸಾಮಾಜಿಕ ಭದ್ರತೆಗೆ ಸಂಬಂಧಿಸಿದ್ದು.

ಚಿಕ್ಕಮಗಳೂರಿನ ಓರ್ವ ಮಹಿಳೆ ಪತಿಯಿಂದ ವಿಚ್ಛೇದನ ಕೋರಿ 2012ರಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇವರು ಮದುವೆಯಾದುದು 1999ರಲ್ಲಿ. 2001ರಲ್ಲಿ ಹೆಣ್ಣು ಮಗುವಿನ ಜನನವೂ ಆಯಿತು. ಪತಿ ವ್ಯಾಪಾರಿ. ಸಾಲವೂ ಇತ್ತು. ಸಾಲ ಹೆಚ್ಚುತ್ತಾ ಹೋಯಿತಲ್ಲದೇ ಪತ್ನಿ ಮತ್ತು ಮಗುವಿನ ಬೇಕು-ಬೇಡಗಳಿಗೂ ಸ್ಪಂದಿಸುವುದನ್ನು ಪತಿ ಕಡಿಮೆ ಮಾಡತೊಡಗಿದ. ನಿರ್ವಾಹವಿಲ್ಲದೆ ಆಕೆ 2008ರಲ್ಲಿ ಬ್ಯಾಂಕ್ ಉದ್ಯೋಗಕ್ಕೆ ಸೇರಿಕೊಂಡಳು. ಮಾತ್ರವಲ್ಲ, ಸಾಲದಿಂದ ಪತಿಯನ್ನು ಮೇಲೆತ್ತುವುದಕ್ಕಾಗಿ ಪ್ರತಿ ತಿಂಗಳು ಹಣ ನೀಡುತ್ತಲೂ ಇದ್ದಳು. ಅದುವೇ 60 ಲಕ್ಷ ರೂಪಾಯಿಯಷ್ಟಾಯಿತು. ಆದರೆ ಆತ ಸಾಲ ತೀರಿಸಲಿಲ್ಲ ಎಂದು ಮಾತ್ರವಲ್ಲ, ಪತ್ನಿ ನೀಡುತ್ತಿರುವ ಹಣವನ್ನೇ ಖರ್ಚು ಮಾಡುತ್ತಾ ಆರಾಮವಾಗಿ ಇರತೊಡಗಿದ. ಅಲ್ಲದೇ, ಆತನನ್ನು ವಿದೇಶಕ್ಕೆ ಕಳುಹಿಸಿ ಸೆಲೂನ್ ಅಂಗಡಿಯನ್ನೂ ಹಾಕಿಕೊಟ್ಟಳು. ಆದರೆ ಅದೂ ನಡೆಯಲಿಲ್ಲ. ಆತನ ಬೇಜವಾಬ್ದಾರಿತನವೇ ಸೆಲೂನ್ ಮುಚ್ಚಲು ಕಾರಣ ಎಂಬುದೂ ಆಕೆಗೆ ಮನದಟ್ಟಾಯಿತು. ಆತ ಮರಳಿ ಊರಿಗೆ ಬಂದ ಮತ್ತು ಪತ್ನಿಯನ್ನು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್ ಮಾಡತೊಡಗಿದ. ಇವೆಲ್ಲದರಿಂದಲೂ ರೋಸಿ ಹೋದ ಪತ್ನಿ 2012ರಲ್ಲಿ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದಳು. ಆದರೆ, ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಕೊಡಿಸಲು ನಿರಾಕರಿಸಿತು. ಪತಿಯಿಂದ ಯಾವುದೇ ಕ್ರೌರ್ಯ ನಡೆದಿಲ್ಲ ಎಂದು ತನ್ನ ತೀರ್ಪನ್ನು ಸಮರ್ಥಿಸಿಕೊಂಡಿತು. ಇದನ್ನು ಪ್ರಶ್ನಿಸಿ ಆಕೆ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದಳು. ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ಜೆ.ಎಂ. ಖಾಜಿ ಅವರಿದ್ದ ನ್ಯಾಯಪೀಠ, ಆಕೆಗೆ ವಿಚ್ಛೇದನವನ್ನು ಮಂಜೂರು ಮಾಡಿತು ಮತ್ತು ಪತ್ನಿಯೊಂದಿಗೆ ಆತನಿಗೆ ಯಾವುದೇ ಬಾಂಧವ್ಯವಿಲ್ಲ, ಕೇವಲ ಧನಲಕ್ಷ್ಮಿಯಂತೆ ಆಕೆಯನ್ನು ಪರಿಗಣಿಸಿದ್ದಾನೆ, ಈ ಮೂಲಕ ಪತ್ನಿಗೆ ಆತ ಮಾನಸಿಕ ಆಘಾತ ನೀಡಿದ್ದಾನೆ ಎಂದು ಹೇಳಿತು. ಅಷ್ಟಕ್ಕೂ,
ಆಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು 2012ರಲ್ಲಿ. ಆದರೆ ವಿಚ್ಛೇದನ ದೊರಕಿದ್ದು 2022ರಲ್ಲಿ. ಹಾಗಂತ, ಈ ತೀರ್ಪನ್ನೇ ಅಂತಿಮ ಎಂದು ಹೇಳುವ ಹಾಗಿಲ್ಲ. ಈ ತೀರ್ಪನ್ನು ನಿರಾಕರಿಸಿ ಪತಿ ಸುಪ್ರೀಮ್ ಕೋರ್ಟಿಗೆ ಹೋಗಬಹುದು ಮತ್ತು ಅಲ್ಲಿ ವಿಚಾರಣೆ ಪೂರ್ಣಗೊಂಡು ತೀರ್ಪು ಹೊರಬೀಳುವಾಗ ಇನ್ನಷ್ಟು ವರ್ಷಗಳು ಉರುಳಲೂ ಬಹುದು. ಇದು ಪ್ರಕರಣದ ಒಂದು ಭಾಗವಾದರೆ, ಇನ್ನೊಂದು ಪತಿ ಮತ್ತು ಪತ್ನಿಯ ನಡುವಿನ ಹೊಣೆಗಾರಿಕೆಯದ್ದು.

ವಿಚ್ಛೇದನ ಈ ಸಮಾಜಕ್ಕೆ ಹೊಸತಲ್ಲ ಮತ್ತು ವಿಚ್ಛೇದನಕ್ಕಾಗಿ ಸಲ್ಲಿಸುವ ಅರ್ಜಿಗಳ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವುದೂ ರಹಸ್ಯವಾಗಿಲ್ಲ. ಆದರೆ ಇಂಥ ಅರ್ಜಿಗಳ ವಿಲೇವಾರಿಗೆ ತಗಲುವ ದೀರ್ಘ ಸಮಯವು ಅರ್ಜಿದಾರರ ಮೇಲೆ ಬೀರಬಹುದಾದ ಪರಿಣಾಮಗಳು ಏನೇನು? ಈ ಅರ್ಜಿ ಇತ್ಯರ್ಥವಾಗದೆ ಇನ್ನೊಂದು ಮದುವೆಯಾಗುವಂತಿಲ್ಲ. ವಿದೇಶಕ್ಕೆ ಹೋಗುವುದಕ್ಕೂ ತೊಂದರೆ ಎದುರಾಗುವ ಸಾಧ್ಯತೆಗಳೂ ಇರುತ್ತವೆ ಮತ್ತು ಈ ಪ್ರಕರಣ ಇತ್ಯರ್ಥವಾಗುವವರೆಗೂ ಒಂದಲ್ಲ ಒಂದು ರೀತಿಯಲ್ಲಿ ಒತ್ತಡಗಳು ಇದ್ದೇ ಇರುತ್ತವೆ. ಮದುವೆ ಎಂಬುದು ಹೇಗೆ ಎರಡು ಕುಟುಂಬಗಳ ನಡುವಿನ ಸಡಗರವೋ ಹಾಗೆಯೇ ವಿಚ್ಛೇದನವೂ ಎರಡು ಕುಟುಂಬಗಳ ವಿಷಾದವೂ ಆಗಿರುತ್ತದೆ. ಕೇವಲ ಪತಿ ಅಥವಾ ಪತ್ನಿ ಮಾತ್ರ ವಿಚ್ಛೇದನ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಲ್ಲ. ಎರಡು ಕುಟುಂಬಗಳೂ ಒಂದಲ್ಲ ಒಂದು ರೀತಿಯಲ್ಲಿ ಆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುತ್ತದೆ. ಮಾನಸಿಕ ಒತ್ತಡ, ಸಾಮಾಜಿಕ ಪ್ರತಿಷ್ಠೆಯ ಪ್ರಶ್ನೆಗಳೂ ಇದರಲ್ಲಿ ಅಡಕವಾಗಿರುತ್ತದೆ. ಆದ್ದರಿಂದ ಇಂಥ ಪ್ರಕರಣಗಳು ಆದಷ್ಟು ಶೀಘ್ರ ಇತ್ಯರ್ಥವಾಗಬೇಕಾದುದು ಬಹಳ ಅಗತ್ಯ. ಅಲ್ಲದೇ,

ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಹೆಣ್ಣು ಅಥವಾ ಗಂಡಿನ ಪ್ರಾಯಕ್ಕೂ ನಾವಿಲ್ಲಿ ಮಹತ್ವ ಕಲ್ಪಿಸಬೇಕಾಗುತ್ತದೆ. ವಿಚ್ಛೇದನ ಎಂಬುದು ಆಸ್ತಿ ವಿವಾದದಂತೆ ಅಲ್ಲ. ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ಬಳಿಕದ ಪ್ರತಿದಿನವೂ ಪತಿ ಮತ್ತು ಪತ್ನಿಯ ಪಾಲಿಗೆ ಅಮೂಲ್ಯ. ಉದಾಹರಣೆಗಾಗಿ, ಈ ಮೇಲಿನ ಪ್ರಕರಣವನ್ನೇ ಎತ್ತಿಕೊಳ್ಳಿ. ಇವರಿಬ್ಬರೂ ಮದುವೆಯಾಗಿರುವುದು 1999ರಲ್ಲಿ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು 2012ರಲ್ಲಿ. ಅಂದರೆ, ಮದುವೆಯಾಗಿ 13 ವರ್ಷಗಳ ಬಳಿಕ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ, ವಿಚ್ಛೇದನಕ್ಕಿಂತ ಮೊದಲೇ ಅವರಿಬ್ಬರ ನಡುವೆ ಹೊಣೆಗಾರಿಕೆಯ ಬಗ್ಗೆ ಸಾಕಷ್ಟು ತಿಕ್ಕಾಟಗಳು ನಡೆದಿವೆ. ಮಾನಸಿಕ ಸಂಬಂಧಗಳು ಕಡಿದು ಹೋಗಿವೆ. ಕೊನೆಗೆ 2012ರಲ್ಲಿ ವಿಚ್ಛೇದನಕ್ಕಾಗಿ ಪತ್ನಿ ಅರ್ಜಿ ಸಲ್ಲಿಸಿದ್ದಾಳೆ. ಒಂದುರೀತಿಯಲ್ಲಿ, ಇದು 30-40 ವರ್ಷಗಳ ನಡುಪ್ರಾಯ. ಈ ಅರ್ಜಿ ಕುಟುಂಬ ನ್ಯಾಯಾಲಯದಿಂದ ಹೈಕೋರ್ಟಿಗೆ ತಲುಪಿ ಇತ್ಯರ್ಥವಾಗುವಾಗ 10 ವರ್ಷಗಳೇ ಕಳೆದಿವೆ. ನಿಜವಾಗಿ,

ಈ 10 ವರ್ಷ ಬಹು ಅಮೂಲ್ಯ. ನಡುವಯಸ್ಸಿನಲ್ಲಿ ಹಾಕಿದ ಅರ್ಜಿಯೊಂದು ವೃದ್ಧಾಪ್ಯದಲ್ಲಿ ಇತ್ಯರ್ಥವಾದರೆ ಹೇಗೋ ಹಾಗೆಯೇ ಇದು. ಅವರಿಬ್ಬರ ಬದುಕಿನ ಮಹತ್ವಪೂರ್ಣ 10 ವರ್ಷಗಳು ಬರೇ ಕೋರ್ಟು ತೀರ್ಪನ್ನು ಕಾಯುವುದರ ಕಳೆದಿವೆ. ಬೇಡದ ಮದುವೆಯಿಂದ ಬಿಡುಗಡೆಗೊಂಡು ಹೊಸ ದಾಂಪತ್ಯವೊAದನ್ನು ಪ್ರಾರಂಭಿಸಬೇಕಿದ್ದ ಅವರಿಬ್ಬರೂ ಕೋರ್ಟು ತೀರ್ಪನ್ನು ಕಾಯುತ್ತಾ ಯೌವನದ ಅಮೂಲ್ಯ ಸಮಯವನ್ನು ನಷ್ಟ ಮಾಡಿಕೊಂಡಿದ್ದಾರೆ. ಇದು ನಿಜಕ್ಕೂ ಗಂಭೀರ ಅವಲೋಕನಕ್ಕೆ ಒಳಗಾಗಬೇಕಾದ ಸಂಗತಿ. ವಿಚ್ಛೇದನ ಪ್ರಕರಣವನ್ನು ಇಂತಿಷ್ಟೇ ಅವಧಿಯೊಳಗೆ ಇತ್ಯರ್ಥಪಡಿಸಬೇಕೆಂಬ ನಿಯಮ ಮಾಡಿದರೆ ಹೇಗೆ ಎಂಬ ಬಗ್ಗೆ ಚರ್ಚೆ ನಡೆಯಬೇಕು. ಅದಕ್ಕಿಂತಲೂ ಮೊದಲು ವಿಚ್ಛೇದನ ತಗಾದೆಯನ್ನು ಕೌಟುಂಬಿಕವಾಗಿ ಇತ್ಯರ್ಥಪಡಿಸುವ ವಿಧಾನದ ಬಗ್ಗೆ ಸಾರ್ವ ಜನಿಕ ತಿಳುವಳಿಕೆ ಮೂಡಿಸಬೇಕು. ಯುವಪೀಳಿಗೆಯಲ್ಲಿ ಸಹನೆ ಕಡಿಮೆ. ತಕ್ಷಣಕ್ಕೆ ನಿರ್ಧಾರ ಕೈಗೊಳ್ಳುವ ಅವಸರ ಅವರಲ್ಲಿರುತ್ತದೆ. ಆದ್ದರಿಂದ ವಿವಾಹ ಮಾಡಿಕೊಡುವುದಷ್ಟೇ ಎರಡೂ ಕುಟುಂಬಗಳ ಹೊಣೆಗಾರಿಕೆ ಅಲ್ಲ. ಕೌಟುಂಬಿಕ ಜೀವನದಲ್ಲಿ ಎದುರಾಗುವ ಭಿನ್ನಾಭಿಪ್ರಾಯ, ಬಿಕ್ಕಟ್ಟುಗಳ ಬಗೆಗೂ ಪತಿ-ಪತ್ನಿ ಇಬ್ಬರಿಗೂ ತಿಳಿ ಹೇಳುವ ಪ್ರಯತ್ನಗಳೂ ನಡೆಯಬೇಕು. ಒಂದುವೇಳೆ,

ಅವರಿಬ್ಬರ ನಡುವೆ ಹೊಂದಾಣಿಕೆಯ ಪ್ರಶ್ನೆ ಎದುರಾದರೆ, ಎರಡೂ ಕುಟುಂಬಗಳು ಪ್ರತಿಷ್ಠೆ ಮರೆತು ಒಂದಾಗಬೇಕು. ಮಕ್ಕಳನ್ನು ಕೂರಿಸಿ ಮಾತುಕತೆ ನಡೆಸಬೇಕು. ಇಂಥ ಒಂದಕ್ಕಿಂತ ಹೆಚ್ಚು ಪ್ರಯತ್ನಗಳ ಬಳಿಕವೂ ಹೊಂದಾಣಿಕೆ ಅಸಾಧ್ಯ ಎಂದು ಕಂಡು ಬಂದಾಗ ಮಾತ್ರ ವಿಚ್ಛೇದನ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಅಷ್ಟಕ್ಕೂ, ಮಾತುಕತೆಯ ಮೂಲಕ ಸಹಜ ವಾತಾವರಣದಲ್ಲಿ ಇದು ಇತ್ಯರ್ಥವಾಗುವುದಾದರೆ ಅದುವೇ ಉತ್ತಮ. ಯಾಕೆಂದರೆ, ನ್ಯಾಯಾಲಯಗಳಲ್ಲಿ ಪ್ರಕರಣ ಇತ್ಯರ್ಥ ವಾಗುವಾಗ ವರ್ಷಗಳೇ ದಾಟಿರುತ್ತವೆ ಮತ್ತು ತೀರ್ಪಿನ ಮೇಲೆ ಆಸಕ್ತಿಯೇ ಹೊರಟು ಹೋಗಿರುತ್ತದೆ.

ನಿಜವಾಗಿ, ಹೆಣ್ಣನ್ನು ಪೂಜನೀಯ ಸ್ಥಾನದಲ್ಲಿಟ್ಟು ನೋಡುವ ದೇಶ ಇದು. ಆದರೆ, ಈಗಿನ ಸ್ಥಿತಿ, ಈ ಭಾವನೆಗೂ ಹೆಣ್ಣನ್ನು ಈ ದೇಶದಲ್ಲಿ ನಡೆಸಿಕೊಳ್ಳುತ್ತಿರುವ ರೀತಿಗೂ ಯಾವ ಸಂಬಂಧವೂ ಇಲ್ಲ ಎಂಬಂತಿದೆ. ಈ ಮೇಲಿನ ಪ್ರಕರಣದಲ್ಲೂ ಹೆಣ್ಣನ್ನು ಸತಾಯಿಸಲಾಗಿದೆ. ಆಕೆಯ ದುಡಿಮೆಯ ಹಣವನ್ನು ಪಡೆದುದಲ್ಲದೇ ವಿಚ್ಛೇದನಕ್ಕೂ ಒಪ್ಪಿಕೊಳ್ಳದೇ ಕಿರುಕುಳಕೊಡಲಾಗಿದೆ. ಇಲ್ಲಿನ ನ್ಯಾಯ ವ್ಯವಸ್ಥೆಯಂತೂ ಆಕೆಗೆ ಸ್ಪಂದಿಸುವಾಗ ಅತ್ಯಮೂಲ್ಯ 12 ವರ್ಷಗಳೇ ಕಳೆದು ಹೋಗಿವೆ. ಇದು ಅತ್ಯಂತ ವಿಷಾದನೀಯ. ವಿಚ್ಛೇದನದ ಈ ಪ್ರಕ್ರಿಯೆಯಲ್ಲಿ ಬದಲಾವಣೆಯನ್ನು ತರಲೇಬೇಕು.

ಮದ್ರಸ ಪಠ್ಯ ಪರಿಷ್ಕರಣೆಗೆ ಸಚಿವರನ್ನು ಒತ್ತಾಯಿಸಿದ ಆ ಪೋಷಕರು ಯಾರು?

 ಪಠ್ಯಪುಸ್ತಕ ಪರಿಷ್ಕರಣೆ ವಿವಾದದಿಂದ ಇನ್ನೂ ಮುಕ್ತಿ ಹೊಂದಿಲ್ಲದ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಇದೀಗ ಮದರಸ ಪಠ್ಯಪುಸ್ತಕಗಳ ಪರಿಷ್ಕರಣೆಯ ಬಗ್ಗೆ ಮಾತಾಡಿದ್ದಾರೆ. ಹಾಗಂತ,

ಇಂಥದ್ದೊಂದು ಪರಿಷ್ಕರಣೆಯ ಬೇಡಿಕೆಯನ್ನು ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಾಗಲಿ ಅಥವಾ ರಾಜ್ಯದ ಯಾವುದಾದರೂ ಮದ್ರಸಾವಾಗಲಿ ತಮ್ಮೆದುರು ಇಟ್ಟಿಲ್ಲ ಎಂದೂ ಅವರು ಹೇಳಿದ್ದಾರೆ. ಹಾಗಿದ್ದರೆ ಈ ದಿಢೀರ್ ಪರಿಷ್ಕರಣೆಯ ಚಿಂತನೆ ಮೂಡಲು ಕಾರಣವೇನು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ‘ಮುಸ್ಲಿಮ್ ಸಮುದಾಯದ ಕೆಲವು ಪೋಷಕರು ತಮ್ಮನ್ನು ಭೇಟಿ ಮಾಡಿ ಇಂಥ ಪರಿಷ್ಕರಣೆಯ ಬೇಡಿಕೆ ಇಟ್ಟಿದ್ದಾರೆ...’ ಎಂದವರು ಸಮರ್ಥಿಸಿಕೊಂಡಿದ್ದಾರೆ. ‘ಉಳಿದ ಸಮುದಾಯಗಳಿಗೆ ಸಿಗುವಂಥ ಶಿಕ್ಷಣ ತಮ್ಮ ಮಕ್ಕಳಿಗೂ ಸಿಗಬೇಕೆಂಬುದು ಅವರ ಬೇಡಿಕೆಯಾಗಿದ್ದು, ಇದಕ್ಕಾಗಿ ಮದ್ರಸ ಪಠ್ಯ ಪರಿಷ್ಕರಣೆ ಸಾಧ್ಯತೆಯನ್ನು ಸರ್ಕಾರ ಪರಿಗಣಿಸಲಿದೆ’ ಎಂದವರು ಹೇಳಿಕೊಂಡಿದ್ದಾರೆ. ತಮಾಷೆ ಏನೆಂದರೆ,

ಆ ಪೋಷಕರು ಯಾರು, ಮದ್ರಸಕ್ಕೂ ಅವರಿಗೂ ಏನು ಸಂಬಂಧ, ಅವರ ಮಕ್ಕಳು ಯಾವ ಮದ್ರಸದಲ್ಲಿ ಕಲಿಯುತ್ತಿದ್ದಾರೆ, ಮದ್ರಸದ ಯಾವ್ಯಾವ ಪಠ್ಯಗಳ ಬಗ್ಗೆ ಅವರಿಗೆ ತಕರಾರಿದೆ ಎಂಬಿತ್ಯಾದಿ ಸಂದೇಹಗಳಿಗೆ ಶಿಕ್ಷಣ ಸಚಿವರು ಯಾವ ಉತ್ತರವನ್ನೂ ನೀಡಿಲ್ಲ. ಆ ಪೋಷಕರ ಮಾತನ್ನು ಶಿಕ್ಷಣ ಸಚಿವರು ಇಷ್ಟು ಗಂಭೀರವಾಗಿ ಪರಿಗಣಿಸಲು ಕಾರಣವೇನು, ಅವರು ರಾಜ್ಯ ಮದ್ರಸ ಸಮಿತಿಗಳ ಅಧ್ಯಕ್ಷರಾಗಿರುವರೇ, ಇಲ್ಲ ಯಾವುದಾದರೊಂದು ಧಾರ್ಮಿಕ ಸಂಘಟನೆಯ ಮುಖ್ಯಸ್ಥರಾಗಿರುವರೇ ಅಥವಾ ಕನಿಷ್ಠ ಯಾವುದಾದರೊಂದು ಪ್ರಮುಖ ಮದ್ರಸ ಸಂಸ್ಥೆಯ ಅಧ್ಯಕ್ಷರೇ ಎಂಬ ಬಗ್ಗೆಯೂ ಅವರು ವಿವರಣೆಯನ್ನು ನೀಡಿಲ್ಲ. ಅಲ್ಲದೇ, ಶಿಕ್ಷಣ ಸಚಿವರನ್ನು ಭೇಟಿಯಾಗಿ ಮದ್ರಸ ಪಠ್ಯಪುಸ್ತಕ ಪರಿಷ್ಕರಣೆಗೆ ತಾವು ಮನವಿ ಮಾಡಿಕೊಂಡಿರುವುದಾಗಿ ಯಾವ ಪೋಷಕರೂ ಈವರೆಗೆ ಹೇಳಿಕೆಯನ್ನೂ ನೀಡಿಲ್ಲ. ಆದರೆ, ಮದ್ರಸ ಮತ್ತು ಮದ್ರಸ ಶಿಕ್ಷಣದ ಬಗ್ಗೆ ಬಿಜೆಪಿ ಮುಖಂಡರಾದ ಸಿ.ಟಿ. ರವಿ, ಈಶ್ವರಪ್ಪ, ರೇಣುಕಾಚಾರ್ಯ, ಅನಂತಕುಮಾರ್ ಹೆಗ್ಡೆ ಮತ್ತಿತರರು ಆಗಾಗ ತಕರಾರೆತ್ತುತ್ತಲೇ ಬಂದಿದ್ದಾರೆ. ಆದ್ದರಿಂದ, ಇವರನ್ನೇ ಮುಸ್ಲಿಮ್ ಸಮುದಾಯದ ಕೆಲವು ಪೋಷಕರು ಎಂದು ಬಿ.ಸಿ. ನಾಗೇಶ್ ಉಲ್ಲೇಖಿಸಿದ್ದಾರೋ ಎಂದು ಅನುಮಾನಿಸಬೇಕಾಗುತ್ತದೆ.

ದೇಶದ ಎಲ್ಲೆಡೆ ನಾಯಿಕೊಡೆಗಳಂತೆ ಮದ್ರಸಾಗಳು ತಲೆ ಎತ್ತುತ್ತಿವೆ, ಇವು ತಪ್ಪಾದ ಕ್ರಮದಲ್ಲಿ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿವೆ, ಮಾತ್ರವಲ್ಲ, ಮದ್ರಸಾಗಳಿಂದ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆ- ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಈ ಹಿಂದೆ ಹೇಳಿದ್ದರು. ಹಾಗಂತ, ಇವರು ಯಾವ ಮದ್ರಸದ ವಿದ್ಯಾರ್ಥಿ ಅಥವಾ ಯಾವ ಮದ್ರಸದ ಪಠ್ಯಪುಸ್ತಕವನ್ನು ಅಧ್ಯಯನ ನಡೆಸಿದ್ದಾರೆ ಎಂಬುದನ್ನು ಈವರೆಗೂ ಬಹಿರಂಗಪಡಿಸಿಲ್ಲ. ಇನ್ನೋರ್ವ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರಂತೂ ಮದರಸಗಳನ್ನೇ ಮುಚ್ಚಬೇಕೆಂದು ಕರೆಕೊಟ್ಟಿದ್ದರು.‘ಮದರಸಗಳಲ್ಲಿ ದೇಶವಿರೋಧಿ ಚಟುವಟಿಕೆಗಳಿಗೆ ಪೂರಕವಾದ ಬೋಧನೆಯನ್ನು ಮಾಡಲಾಗುತ್ತಿದೆ’ ಎಂದವರು ತಮ್ಮ ಬೇಡಿಕೆಗೆ ಸಮರ್ಥನೆಯನ್ನು ನೀಡಿದ್ದರು. ಆದರೆ, ದೇಶವಿರೋಧಿ ಚಟುವಟಿಕೆಗೆ ಪೂರಕವಾದ ಬೋಧನೆ ಯಾವುದು ಮತ್ತು ಯಾವ ಮದರಸದಲ್ಲಿ ಅದನ್ನು ಕಲಿಸಲಾಗುತ್ತಿದೆ ಎಂಬ ನಿರ್ದಿಷ್ಟ ಉಲ್ಲೇಖವನ್ನು ಅವರು ಮಾಡಿರಲಿಲ್ಲ. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರೂ ಇಂಥದ್ದೇ ಆರೋಪವನ್ನು ಹೊರಿಸಿದ್ದರು. ಇವರಲ್ಲದೇ ಬಿಜೆಪಿಯ ಇನ್ನಷ್ಟು ಮುಖಂಡರೂ ಸಮಯ-ಸಂದರ್ಭವನ್ನು ನೋಡಿಕೊಂಡು ಇಂಥ ಹೇಳಿಕೆಗಳನ್ನು ನೀಡುತ್ತಲೂ ಬಂದಿದ್ದಾರೆ. ಆದ್ದರಿಂದ ಶಿಕ್ಷಣ ಸಚಿವರ ಹೇಳಿಕೆಯನ್ನು ಲಘುವಾಗಿ ಪರಿಗಣಿಸಲೂ ಸಾಧ್ಯವಿಲ್ಲ. ಮುಸ್ಲಿಮ್ ಸಮುದಾಯ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡುವ ಉದ್ದೇಶದಿಂದ ಅವರು ಈ ಹೇಳಿಕೆಯನ್ನು ಕೊಟ್ಟಿರಬಹುದು ಅಥವಾ ಬಿಜೆಪಿ ಮತದಾರರಲ್ಲಿ ಪುಳಕವನ್ನು ತುಂಬುವ ಉದ್ದೇಶವೂ ಅವರಿಗೆ ಇದ್ದೀತು.

ಮೊದಲನೆಯದಾಗಿ, ತಮ್ಮ ಮಕ್ಕಳಿಗೆ ಮದರಸ ಶಿಕ್ಷಣವನ್ನು ಕೊಡಿಸುವ ಅಥವಾ ಕೊಡಿಸದೇ ಇರುವ ಪೂರ್ಣ ಸ್ವಾತಂತ್ರ‍್ಯ ಈ ರಾಜ್ಯದ ಪ್ರತಿ ಮುಸ್ಲಿಮ್ ಪೋಷಕರಿಗೂ ಇದೆ. ಮುಸ್ಲಿಮ್ ಸಮುದಾಯದ ಪ್ರತಿ ಮಗುವೂ ಮದರಸ ಶಿಕ್ಷಣ ಪಡೆಯಲೇ ಬೇಕು ಎಂಬ ಕಾನೂ ನು ರಾಜ್ಯದಲ್ಲಿ ಇಲ್ಲ. ಆದ್ದರಿಂದ, ಶಿಕ್ಷಣ ಸಚಿವರನ್ನು ಭೇಟಿಯಾಗಿರುವ ಪೋಷಕರು, ‘ಉಳಿದ ಸಮುದಾಯಗಳಿಗೆ ದೊರೆಯುತ್ತಿರುವ ಶಿಕ್ಷಣವನ್ನು ತಮ್ಮ ಮಕ್ಕಳಿಗೂ ನೀಡುವಂತೆ’ ವ್ಯಕ್ತಪಡಿಸಿದ ಕಳಕಳಿಯ ಉದ್ದೇಶಶುದ್ಧಿಯೇ ಪ್ರಶ್ನಾರ್ಹವಾಗುತ್ತದೆ. ಶಾಲಾ ಶಿಕ್ಷಣದಂತೆ ಮದ್ರಸ ಶಿಕ್ಷಣ ಕಡ್ಡಾಯವೇ ಆಗಿಲ್ಲದಿರುವಾಗ, ಯಾರಿಗೇ ಆಗಲಿ ತೊಂದರೆ ಏನಿದೆ? ಹಾಗಂತ,

ಮದ್ರಸ ಪಠ್ಯಪುಸ್ತಕಗಳ ಪರಿಷ್ಕರಣೆ ನಡೆಯಲೇಬಾರದು ಎಂದು ಯಾರೂ ವಾದಿಸುತ್ತಿಲ್ಲ. ಅಲ್ಲದೇ, ಕಾಲಕಾಲಕ್ಕೂ ಮದ್ರಸ ಪಠ್ಯಪುಸ್ತಕ ಮಂಡಳಿಗಳು ಪುಸ್ತಕ ಪರಿಷ್ಕರಣೆ ಮಾಡುತ್ತಲೂ ಬಂದಿವೆ. ತಕರಾರು ಏನೆಂದರೆ, ಮದ್ರಸ ಪಠ್ಯಪುಸ್ತಕಗಳ ಮೇಲೆ ಸರ್ಕಾರದ ಹಸ್ತಕ್ಷೇಪ ಸರಿಯೇ ಎಂಬುದು ಒಂದಾದರೆ ಮದ್ರಸ ಮತ್ತು ಅದರ ಪಠ್ಯಪುಸ್ತಕಗಳ ಬಗ್ಗೆ ವಿರೋಧದ ಮಾತನ್ನಾಡುತ್ತಲೇ ಬಂದಿರುವ ಬಿಜೆಪಿ ಮುಖಂಡರು ಮತ್ತು ಅವರ ನೇತೃತ್ವದ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಗೆ ಇಳಿದರೆ ಏನಾದೀತು ಎಂಬುದು ಇನ್ನೊಂದು.
ಈಗಾಗಲೇ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ತೀವ್ರ ಚರ್ಚೆಯಲ್ಲಿದೆ. ತಮ್ಮ ಪಕ್ಷದ ಅಜೆಂಡಾವನ್ನೇ ಪಠ್ಯಪುಸ್ತಕದಲ್ಲಿ ತುರುಕುವುದಕ್ಕೆ ಈ ಸರ್ಕಾರ ಪ್ರಯತ್ನಿಸಿದೆ ಎಂಬುದು ದಾಖಲೆ ಸಹಿತ ಬಹಿರಂಗವಾಗಿದೆ. ಪಠ್ಯಪುಸ್ತಕಗಳ ಪರಿಶೀಲನೆಗೆಂದು ರಚಿಸಲಾದ ಸಮಿತಿಯು ಈ ಹೊಣೆಗಾರಿಕೆಯನ್ನೂ ಮೀರಿ ಪರಿಷ್ಕರಣೆಯನ್ನೇ ಮಾಡಿರುವ ಕಳವಳಕಾರಿ ಸತ್ಯವೂ ಬಹಿರಂಗವಾಗಿದೆ. ಶಾಲಾ ಪಠ್ಯಪುಸ್ತಕಗಳ ಪರಿಸ್ಥಿತಿಯೇ ಹೀಗಾದರೆ ಇನ್ನು, ಈ ಸರ್ಕಾರ ಪರಿಷ್ಕರಣೆಗೊಳಿಸುವ ಮದ್ರಸ ಪಠ್ಯಪುಸ್ತಕಗಳು ಹೇಗಿದ್ದೀತು? ಪರಿಷ್ಕರಣೆಗೆ ರಚಿಸುವ ತಂಡ ಯಾವುದಿದ್ದೀತು? ನಿಜವಾಗಿ,

ಮದ್ರಸಗಳು ಈ ರಾಜ್ಯದಲ್ಲಿ ದಿಢೀರ್ ಆಗಿ ಹುಟ್ಟಿಕೊಂಡದ್ದಲ್ಲ. ಸ್ವಾತಂತ್ರ‍್ಯಪೂರ್ವದಿಂದಲೇ ಮದರಸ ಪದ್ಧತಿ ಮುಸ್ಲಿಮರಲ್ಲಿ ರೂಢಿಯ ಲ್ಲಿದೆ. ಶಿಕ್ಷಣವನ್ನು ಧಾರ್ಮಿಕ ಮತ್ತು ಲೌಕಿಕ ಎಂದು ವಿಭಜಿಸಿದಂದಿನಿಂದ ಮದರಸಗಳು ಪ್ರತ್ಯೇಕ ಸಾಂಸ್ಥಿಕ ರೂಪವನ್ನು ಪಡಕೊಂಡವು. ಈ ರಾಜ್ಯದ ಯಾವುದೇ ಸರ್ಕಾರಿ ಶಾಲೆಯಲ್ಲಿ ಅರಬಿ ಭಾಷೆಯನ್ನೋ ಅಥವಾ ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳನ್ನೋ ಕಲಿಸುವ ವ್ಯವಸ್ಥೆಯಿಲ್ಲ. ಹಾಗಂತ, ಓರ್ವ ಮುಸ್ಲಿಮ್ ಆಗಬೇಕೆಂದಾದರೆ ಇಸ್ಲಾಮಿನ ಕಡ್ಡಾಯ ಕರ್ಮಗಳನ್ನು ನಿರ್ವಹಿಸಬೇಕಾದುದು ಬಹಳ ಅಗತ್ಯ. ಇದನ್ನು ಕಲಿತುಕೊಳ್ಳುವ ಸೌಲಭ್ಯ ಸರ್ಕಾರಿ ಶಾಲೆಗಳಲ್ಲಿ ಇಲ್ಲ ಎಂದಾದರೆ ಮತ್ತೆ ಅವರು ಅವುಗಳನ್ನು ಎಲ್ಲಿಂದ ಕಲಿತುಕೊಳ್ಳಬೇಕು? ಈ ಅನಿವಾರ್ಯತೆಗಳೇ ಮದ್ರಸಗಳನ್ನು ಹುಟ್ಟು ಹಾಕಿದುವು. ಪವಿತ್ರ ಕುರ್‌ಆನನ್ನು ಕಲಿಸುವ, ನಮಾಝ್ ಇತ್ಯಾದಿ ಕರ್ಮಗಳನ್ನು ಅಭ್ಯಾಸಗೊಳಿಸುವ ಮತ್ತು ಇಸ್ಲಾಮಿನ ಇತಿಹಾಸವನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದಲೇ ಮದ್ರಸಗಳು ತಲೆ ಎತ್ತಿದುವು. ಇವತ್ತೂ ಕೂಡ ಮದ್ರಸಾಗಳು ಕಲಿಸುತ್ತಿರುವುದು ಇವುಗಳನ್ನೇ. ಅಲ್ಲದೇ,


28-7-2022

ಮದ್ರಸಾ ಪಠ್ಯಗಳೇನೂ ರಹಸ್ಯವಾಗಿಲ್ಲ. ಯಾರಿಗೆ ಬೇಕಾದರೂ ಖರೀದಿಸುವಷ್ಟು ಅಗ್ಗದ ದರದಲ್ಲಿ ಮಾರುಕಟ್ಟೆಯಲ್ಲಿ ಮಾರಾಟಕ್ಕಿವೆ. ಸಚಿವರು ಪಠ್ಯಪುಸ್ತಕಗಳ ಮೇಲೆ ಆರೋಪ ಹೊರಿಸುವುದ ಕ್ಕಿಂತ ಮೊದಲು ಇವನ್ನೊಮ್ಮೆ ಪರಿಶೀಲಿಸಬೇಕಿತ್ತು. ಅಥವಾ ಯಾವ ತರಗತಿಯ ಪಠ್ಯಕ್ರಮದಲ್ಲಿ ಲೋಪದೋಷಗಳಿವೆ ಎಂಬುದನ್ನು ನಿರ್ದಿಷ್ಟವಾಗಿ ಉಲ್ಲೇಖಿಸಬೇಕಿತ್ತು. ಆಗ ಅದು ಚರ್ಚೆಯ ಸ್ವರೂಪವನ್ನು ಪಡೆದುಕೊಳ್ಳುತ್ತಿತ್ತಲ್ಲದೇ, ಸಚಿವರ ಉದ್ದೇಶ ಶುದ್ಧಿಯು ಪ್ರಶ್ನಾರ್ಹಗೊಳ್ಳುವುದೂ ತಪ್ಪುತ್ತಿತ್ತು. ಅಷ್ಟಕ್ಕೂ,

ಮದ್ರಸ ಮತ್ತು ಅದರ ಸಾಂಸ್ಥಿಕ ರೂಪವನ್ನೇ ಪ್ರಶ್ನಿಸುವ ಹಾಗೂ ಅದನ್ನು ತಾಲಿಬಾನ್‌ಗಳನ್ನು ಸೃಷ್ಟಿಸುವ ಕೇಂದ್ರವೆಂದು ಜರೆಯುವ ಪಕ್ಷ ಮತ್ತು ಅದರ ನೇತೃತ್ವದ ಸರ್ಕಾರವು ಪಠ್ಯ ಪರಿಷ್ಕರಣೆಯ ಬಗ್ಗೆ ಮಾತಾಡುವುದೇ ಒಂದು ತಮಾಷೆ. ಅಜ್ಞಾತ ಪೋಷಕರ ಭುಜದಲ್ಲಿ ಬಂದೂಕು ಇಟ್ಟು ಮದ್ರಸದ ಮೇಲೆ ಸಿಡಿಸುವ ಈ ತಂತ್ರ ಕೆಟ್ಟದು. ಮದ್ರಸ ಎಂದರೆ, ಹೆಸರು, ಊರು, ಮುಖ ಪರಿಚಯ ಇಲ್ಲದ ಯಾವುದೋ ಪೋಷಕರು ಅಲ್ಲ. ಅದಕ್ಕೊಂದು ಸಮಿತಿ, ಹೊಣೆಗಾರರಿದ್ದಾರೆ. ಅಧಿಕೃತ ಪಠ್ಯಪುಸ್ತಕಗಳೂ ಇವೆ. ಈ ಹೊಣೆಗಾರರಲ್ಲಿ ಯಾರೂ ಸಚಿವರ ಮುಂದೆ ಪಠ್ಯಪರಿಷ್ಕರಣೆಯ ಬೇಡಿಕೆಯನ್ನು ಇಟ್ಟಿಲ್ಲ. ಸಚಿವರು ಅವರ ಜೊತೆ ಮಾತನ್ನೂ ಆಡಿಲ್ಲ. ಅದು ಬಿಟ್ಟು ಯಾರೋ ಪೋಷಕರನ್ನು ತೋರಿಸಿ ತನ್ನ ಪಕ್ಷದ ಅಜೆಂಡಾವನ್ನು ಮದ್ರಸಾಗಳ ಮೇಲೆ ಹೇರುವುದು ಸಲ್ಲ. ಮುಸ್ಲಿಮ್ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮಾಡುವ ಯಾವ ಪರಿಷ್ಕರಣೆಯೂ ಖಂಡನಾರ್ಹ.

ಮಸೂದ್, ಪ್ರವೀಣ್, ಫಾಝಿಲ್: ಸಂತ್ರಸ್ತರು ಹೇಳಿದ ಕಾರಣಗಳು

 


4-8-2022

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಆಧಾರದಲ್ಲಿ ಹತ್ಯೆಗಳು ನಡೆದಿರುವುದು ಇದು ಮೊದಲಲ್ಲ. ಆದರೆ ಅತ್ಯಂತ ನಿರ್ಲಜ್ಜವಾಗಿ ಮತ್ತು ಬಹಿರಂಗವಾಗಿ ಒಂದು ಸರ್ಕಾರ ಒಂದು ಕೋಮಿನ ಪರ ನಿಂತಿದ್ದು ಇದೇ ಮೊದಲು. ಹತ್ಯೆಗೀಡಾದ ಪ್ರವೀಣ್ ಮನೆಗೆ ಮುಖ್ಯಮಂತ್ರಿ ಬೊಮ್ಮಾಯಿಯಿಂದ ಹಿಡಿದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್, ತೇಜಸ್ವಿ ಸೂರ್ಯ, ಸಚಿವರಾದ ಸುನೀಲ್ ಕುಮಾರ್, ಅಂಗಾರ, ಬಿಜೆಪಿ ಶಾಸಕರಾದ ಮಠಂದೂರು, ಪೂಂಜಾ ಸಹಿತ ಸಾಲು ಸಾಲು ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರವನ್ನೂ ಘೋಷಿಸಿದೆ. ಮೃತ ವ್ಯಕ್ತಿಯ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಲಾಗಿದೆ. ಆದರೆ ಪ್ರವೀಣ್ ಹತ್ಯೆಗಿಂತ ಮೊದಲು ಅದೇ ಪರಿಸರದಲ್ಲಿ ಮಸೂದ್ ಎಂಬ ಯುವಕನ ಹತ್ಯೆಯಾಗಿದೆ. ಹಾಗೆಯೇ ಪ್ರವೀಣ್ ಹತ್ಯೆಯ ಎರಡೇ ದಿನದೊಳಗೆ ಫಾಝಿಲ್ ಎಂಬ ಯುವಕನ ಹತ್ಯೆಯಾಗಿದೆ. ಈ ಹತ್ಯೆ ನಡೆಯುವಾಗಲಂತೂ ಮುಖ್ಯಮಂತ್ರಿಯವರು ಜಿಲ್ಲೆಯಲ್ಲೇ ಇದ್ದರು. ಆದರೆ ಪ್ರವೀಣ್ ಮನೆಗೆ ಭೇಟಿ ಕೊಟ್ಟ ಮುಖ್ಯಮಂತ್ರಿಗಳು ಅಲ್ಲೆ ಪಕ್ಕದ ಮಸೂದ್ ಮನೆಗೆ ಭೇಟಿ ಕೊಟ್ಟಿಲ್ಲ. ಅವರು ಬಿಡಿ, ಸ್ಥಳೀಯ ಸಂಸದ ನಳೀನ್ ಕುಮಾರ್ ಕಟೀಲ್ ಆಗಲಿ, ಕ್ಷೇತ್ರದ ಶಾಸಕ ಅಂಗಾರ ಆಗಲಿ ಯಾರೂ ಆ ಮನೆಗೆ ಭೇಟಿ ಕೊಟ್ಟಿಲ್ಲ. ಸರ್ಕಾರ ನಯಾಪೈಸೆ ಪರಿಹಾರ ಘೋಷಿಸಿಲ್ಲ. ಅಲ್ಲದೇ, ಇಂಥದ್ದೆ ನಿರ್ಲಕ್ಷ್ಯ ಫಾಝಿಲ್ ಹತ್ಯೆ ವಿಚಾರದಲ್ಲೂ ನಡೆದಿದೆ. ಜಿಲ್ಲೆಯ ಸಂಸದ ಕಟೀಲ್ ಆಗಲಿ, ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿಯಾಗಲಿ ಫಾಝಿಲ್ ಮನೆಗೆ ಭೇಟಿ ಕೊಟ್ಟಿಲ್ಲ. ಸರ್ಕಾರ ಯಾವ ಪರಿಹಾರವನ್ನೂ ಘೋಷಿಸಿಲ್ಲ. ಇದು ಘಟನೆಯ ಒಂದು ಮುಖವಾದರೆ, ಇನ್ನೊಂದು ಮುಖ ಪಕ್ಷಬೇಧ ಮತ್ತು ಧರ್ಮಬೇಧದ ಹಂಗಿಲ್ಲದೇ ನಮ್ಮೆಲ್ಲರ ಕಣ್ಣನ್ನು ತೆರೆಸುವಂಥದ್ದು. ಅದುವೇ, ಫಾಝಿಲ್, ಮಸೂದ್ ಮತ್ತು ಪ್ರವೀಣ್ ಮನೆಯವರು ಹಂಚಿಕೊಂಡ ಸಂಕಟ.

ಮಸೂದ್, ಪ್ರವೀಣ್ ಮತ್ತು ಫಾಝಿಲ್ ಕುಟುಂಬಗಳು ತಮ್ಮ ಮನಸ್ಸನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ. ರಾಜಕೀಯ ಪಕ್ಷ ಪಾತವನ್ನು ಮಸೂದ್ ತಾಯಿ ನೇರವಾಗಿ ಪ್ರಶ್ನಿಸಿದ್ದಾರೆ. ‘ಪ್ರವೀಣ್ ಮನೆಗೆ ಬಂದ ಮುಖ್ಯಮಂತ್ರಿಗಳು ನನ್ನ ಮನೆಗೇಕೆ ಬಂದಿಲ್ಲ, ಪರಿಹಾರವೇಕೆ ಘೋಷಿಸಿಲ್ಲ, ಪ್ರವೀಣ್ ಮತ್ತು ಮಸೂದ್- ಇಬ್ಬರ ದೇಹದಿಂದ ಹರಿದಿರುವುದು ರಕ್ತವೇ ಅಲ್ಲವೇ...’ ಎಂದವರು ಪ್ರಶ್ನಿಸಿದ್ದಾರೆ. ಪ್ರವೀಣ್ ಪತ್ನಿ ನೂತನ ಅಂತೂ ಬಿಜೆಪಿಯ ನಾಯಕರನ್ನು ತೀವ್ರವಾಗಿ ತರಾಟೆಗೆ ಎತ್ತಿಕೊಂಡಿದ್ದಾರೆ. ‘ನಿಮ್ಮ ಮಕ್ಕಳಿಗೆ ಹೀಗಾಗಿರುತ್ತಿದ್ದರೆ ಏನು ಮಾಡುತ್ತಿದ್ದಿರಿ? ನನ್ನ ಗಂಡನನ್ನು ನನಗೆ ಮರಳಿಸಿ ಕೊಡಲು ನಿಮ್ಮಿಂದ ಸಾಧ್ಯವಾ...’ ಎಂದು ಮುಂತಾಗಿ ಆಕ್ರೋಶ ಹೊರಹಾಕಿದ್ದಾರೆ. ಫಾಝಿಲ್ ತಂದೆಯಂತೂ ಮಾಧ್ಯಮಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ‘ಪ್ರೇಮ ಪ್ರಕರಣಕ್ಕಾಗಿ ಈ ಹತ್ಯೆ ನಡೆದಿದೆ ಎಂದು ನೀವೇಕೆ ಸುಳ್ಳು ಹೇಳಿದಿರಿ...’ ಎಂದವರು ಪ್ರಶ್ನಿಸಿದ್ದಾರೆ ಅಂದಹಾಗೆ,

ಈ ಮೂರೂ ಪ್ರಕರಣಗಳಲ್ಲಿ ಸಂತ್ರಸ್ತ ಕುಟುಂಬದ ಮಾತುಗಳು ಎರಡು ಸಂಗತಿಗಳನ್ನು ಸ್ಪಷ್ಟಪಡಿಸುತ್ತವೆ. 1.ಹೊಲಸು ರಾಜಕೀಯ. 2. ಬೇಜವಾಬ್ದಾರಿ ಮಾಧ್ಯಮ. ಈ ಘಟನೆಯಲ್ಲಿ ಇವೆರಡೂ ಜನರ ಕೆಂಗಣ್ಣಿಗೆ ಗುರಿಯಾಗಿವೆ. ನಿಜವಾಗಿ,

ಇಂಥ ಸಂದರ್ಭಗಳಲ್ಲಿ ಮಾಧ್ಯಮದ ಪಾತ್ರ ಹಿರಿದು. ಯಾವುದೇ ಘಟನೆಯಲ್ಲೂ ಓಟನ್ನು ಹುಡುಕುವ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ, ಮಾಧ್ಯಮ ರಂಗಕ್ಕೆ ಆ ಹಪಾಹಪಿ ಇಲ್ಲ. ಅವು ಜನರ ಓಟಿನಿಂದ ಉಸಿರಾಡುತ್ತಿರುವುದಲ್ಲ. ಅಧಿಕಾರಕ್ಕಾಗಿ ರಾಜಕೀಯ ಮಾಡುವ ರಾಜಕೀಯ ಪಕ್ಷಗಳ ಸಂಚನ್ನು ಬಯಲುಗೊಳಿಸುವುದೇ ಮಾಧ್ಯಮಗಳ ಜವಾಬ್ದಾರಿ. ಆದರೆ ಈ ಮೂರು ಘಟನೆಗಳ ಪೈಕಿ ರಾಜ್ಯದ ಪ್ರಮುಖ ಟಿ.ವಿ. ಚಾನೆಲ್‌ಗಳು ಪ್ರವೀಣ್ ಹತ್ಯೆಯನ್ನು ಮಾತ್ರ ಗಂಭೀರವಾಗಿ ಪರಿಗಣಿಸಿದುವು. ಪ್ರಚೋದನಕಾರಿ ಶೀರ್ಷಿಕೆಗಳೊಂದಿಗೆ ಹತ್ತು-ಹಲವು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದುವು. ಪ್ರವೀಣ್ ಮನೆಯ ತುಸು ದೂರದಲ್ಲಿ ನಾಲ್ಕು ದಿನಗಳ ಮೊದಲು ನಡೆದಿದ್ದ ಮಸೂದ್ ಹತ್ಯೆಯನ್ನು ಕಂಡೇ ಇಲ್ಲದಂತೆ ವರ್ತಿಸಿದ್ದ ಇವೇ ಮಾಧ್ಯಮಗಳು ಪ್ರವೀಣ್ ಹತ್ಯೆಯನ್ನು ಭಿನ್ನವಾಗಿ ಎತ್ತಿಕೊಂಡವು. ಫಾಝಿಲ್ ಸಾವು ದೃಢವಾಗುವುದಕ್ಕಿಂತ ಮೊದಲೇ ಸೋಷಿಯಲ್ ಮೀಡಿಯಾಗಳಲ್ಲಿ ಊಹಾಪೋಹಗಳನ್ನು ಹರಿಯಬಿಡಲಾಯಿತು. ‘ಫಾಝಿಲ್ ಸುನ್ನಿಯಾಗಿದ್ದು, ಶಿಯಾ ಮುಸ್ಲಿಮರು ಈ ಹತ್ಯೆ ನಡೆಸಿದ್ದಾರೆ..’ ಎಂಬ ಅತ್ಯಂತ ಕ್ರೂರ ಸುಳ್ಳು ಪ್ರಚಾರವಾಯಿತು. ಇಂಗ್ಲಿಷ್‌ನ ಜನಪ್ರಿಯ ಪತ್ರಿಕೆಯೊಂದು ಮುಖಪುಟದಲ್ಲಿ ಈ ಸುಳ್ಳು ಸುದ್ದಿಗೆ ಜಾಗ ನೀಡಿತು. ಓಪ್ ಇಂಡಿಯಾ ಅನ್ನುವ ಬಲಪಂಥೀಯ ವೆಬ್‌ಸೈಟ್ ಕೂಡಾ ಈ ಸುಳ್ಳನ್ನು ಭಾರೀ ಮಹತ್ವ ಕೊಟ್ಟು ಪ್ರಕಟಿಸಿತು. ಫಾಝಿಲ್‌ನ ಹತ್ಯೆಯನ್ನು ಸಂಭ್ರಮಿಸಿದವರು ಹುಟ್ಟು ಹಾಕಿದ ಸುಳ್ಳಿದು. ನಿಜವಾಗಿ,

ಹೊಲಸು ರಾಜಕೀಯ ಮತ್ತು ಬೇಜವಾಬ್ದಾರಿ ಮಾಧ್ಯಮಗಳಿಂದಾಗಿಯೇ ರಾಜ್ಯದ ಜನರ ನೆಮ್ಮದಿ ಹಾಳಾಗಿದೆ. ಅಭಿವೃದ್ಧಿಯನ್ನು ಮುಂದಿಟ್ಟು ರಾಜಕಾರಣ ಮಾಡುವ ಧೈರ್ಯ ಆಡಳಿತಗಾರರಿಗೆ ಇಲ್ಲ. ಮಳೆಗಾಲ ಆರಂಭವಾಗಿದೆ. ಆದರೆ, ಮಳೆಗಾಲವನ್ನು ಎದುರಿಸುವಲ್ಲಿ ರಾಜ್ಯ ಸರ್ಕಾರ ಯಾವ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸ್ಮಾರ್ಟ್ ಸಿಟಿಯ ಪಟ್ಟಿಯಲ್ಲಿದೆ. 2000 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ, ಈ ಕಾಮಗಾರಿ ಎಷ್ಟು ಕಳಪೆಯಾಗಿದೆಯೆಂದರೆ, ಮೊದಲ ಮಳೆಗೆ ಇಡೀ ಮಂಗಳೂರೇ ಮುಳುಗಿದೆ. ಅತ್ಯಂತ ಅಸಮರ್ಪಕವಾಗಿ ಈ ಕಾಮಗಾರಿ ನಡೆಸಲಾಗಿದೆ. ಮಂಗಳೂರಿನಲ್ಲಿ ಏರ್‌ಪೋರ್ಟ್, ಬಂದರ್, ರೈಲ್ವೇ ನಿಲ್ದಾಣ, ಮಾಲ್‌ಗಳು, ಹಲವು ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಇದ್ದರೂ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಕಂಪೆನಿಗಳು ಇಲ್ಲಿ ಹೂಡಿಕೆ ಮಾಡಲು ಒಪ್ಪುತ್ತಿಲ್ಲ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉದ್ಯೋಗವನ್ನರಸಿ ಬೆಂಗಳೂರಿಗೋ ವಿದೇಶಕ್ಕೋ ಹೋಗುತ್ತಿದ್ದಾರೆ. ಪ್ರತಿಭಾವಂತರವನ್ನು ತಯಾರಿಸುವ ಆದರೆ ಉದ್ಯೋಗ ಕೊಡದ ಬಹುಶಃ ಏಕೈಕ ಜಿಲ್ಲೆ ದಕ್ಷಿಣ ಕನ್ನಡವೇ ಇರಬೇಕು. ಹೊರಜಿಲ್ಲೆ ಮತ್ತು ರಾಜ್ಯಗಳಿಂದ ಮಂಗಳೂರಿಗೆ ಶಿಕ್ಷಣಕ್ಕಾಗಿ ಮಕ್ಕಳು ಬರುತ್ತಿದ್ದಾರೆ. ಆಸ್ಪತ್ರೆಗಳಿಗೂ ಹೊರ ರಾಜ್ಯಗಳಿಂದ ರೋಗಿಗಳೂ ಬರುತ್ತಿದ್ದಾರೆ. ಮಂಗಳೂರು ಸಮುದ್ರದಿಂದ ಸುತ್ತುವರಿದಿರುವ ಕಾರಣ ಬಂದರು ಪಟ್ಟಣವಾಗಿಯೂ ಪರಿವರ್ತಿತವಾಗಿದೆ. ಹೊರ ರಾಜ್ಯಗಳ ಜೊತೆ ಇಲ್ಲಿನ ಬಂದರಿನಿAದ ವ್ಯವಹಾರಗಳು ನಡೆಯುತ್ತವೆ. ಇಲ್ಲಿನ ರೈಲು ನಿಲ್ದಾಣವೂ ಜನನಿಬಿಡವಾಗಿರುತ್ತದೆ. ಅಂತಾರಾಷ್ಟ್ರೀಯ ವಿಮಾನ ಸಂಪರ್ಕ ಕಲ್ಪಿಸುವ ನಿಲ್ದಾಣವೂ ಇಲ್ಲಿದೆ. ಎರಡು ಬೃಹತ್ ಮಾಲ್‌ಗಳೂ ಸೇರಿದಂತೆ ಹಲವು ಮಾಲ್‌ಗಳೂ ಇಲ್ಲಿವೆ. ಇಷ್ಟೆಲ್ಲ ಇದ್ದೂ ಈ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಆಗದೇ ಇರುವುದಕ್ಕೆ ಏನು ಕಾರಣ? ಯಾಕೆ ಕಂಪೆನಿಗಳು ಇಲ್ಲಿ ಹೂಡಿಕೆ ಮಾಡಲು ಭಯಪಡುತ್ತಿವೆ? ಅಂದಹಾಗೆ, ಈ ಮೂರು ಹತ್ಯೆಗಳ ನಡುವೆಯೇ ಇಲ್ಲಿ ಪಬ್ ದಾಳಿ ನಡೆದಿದೆ. ಕೆಲವು ವರ್ಷಗಳ ಹಿಂದೆ ಇದೇ ಮಂಗಳೂರಿನಲ್ಲಿ ಪಬ್ ದಾಳಿ ನಡೆದಿತ್ತು ಮತ್ತು ಅಲ್ಲಿದ್ದ ಹೆಣ್ಮಕ್ಕಳನ್ನು ಹೀನಾಯವಾಗಿ ನಡೆಸಿಕೊಳ್ಳಲಾಗಿತ್ತು. ಅವರ ಮೇಲೆ ಹಲಗಲೆ ನಡೆಸಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅಂದಹಾಗೆ,

ಬೆAಗಳೂರು ಆಗಿ ಪರಿವರ್ತನೆಯಾಗುವುದಕ್ಕೆ ಸಕಲ ಅವಕಾಶಗಳಿದ್ದೂ ಮಂಗಳೂರು ಯಾಕೆ ಬೆಂಗಳೂರು ಆಗುತ್ತಿಲ್ಲ ಅನ್ನುವುದಕ್ಕೆ ಇಲ್ಲಿನ ಹೊಲಸು ರಾಜಕೀಯವೇ ಮುಖ್ಯ ಕಾರಣ. ಧರ್ಮದ್ವೇಷವನ್ನು ಉತ್ಪಾದಿಸಿ ಮಾರುವ ಕೆಟ್ಟ ರಾಜಕೀಯವೊಂದು ಈ ಜಿಲ್ಲೆಯಲ್ಲಿದೆ. ಇದರ ರೂವಾರಿ ಬಿಜೆಪಿ. ಚುನಾವಣೆ ಹತ್ತಿರ ಬರುವಾಗ ಪ್ರಚೋದನಕಾರಿ ಭಾಷಣ ಮತ್ತು ಹತ್ಯೆಗಳು ಈ ಜಿಲ್ಲೆಗೆ ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಧರ್ಮದ್ವೇಷವನ್ನೇ ಬಿತ್ತಿ ಚುನಾವಣೆಯಲ್ಲಿ ಫಸಲು ಪಡೆಯುವ ಸಂಚಿಗೆ ಇಲ್ಲಿ ದಶಕಗಳಿಂದ ಮಾನ್ಯತೆ ಸಿಗುತ್ತಲೇ ಇದೆ. ಎಲ್ಲಿವರೆಗೆ ಈ ರಾಜಕೀಯ ನೀತಿಗೆ ತಿರುಗೇಟು ಸಿಗುವುದಿಲ್ಲವೋ ಅಲ್ಲಿವರೆಗೆ ಬಡವರು ಬಲಿಯಾಗುತ್ತಲೇ ಹೋಗುತ್ತಿರುತ್ತಾರೆ. ಅಂದಹಾಗೆ,

ದ್ವೇಷದ ಚೂರಿಗೆ ಬಲಿಯಾದ ಮಸೂದ್ ಮತ್ತು ಫಾಝಿಲ್ ಕೂಲಿ ಕಾರ್ಮಿಕರಾದರೆ ಪ್ರವೀಣ್ ಕೋಳಿ ಅಂಗಡಿ ವ್ಯಾಪಾರಿ. ರಾಜಕಾರಣಿಗಳು ಮತ್ತು ಅವರ ಮಕ್ಕಳು ಎಲ್ಲೋ ಹಾಯಾಗಿರುತ್ತಾರೆ. ಪ್ರತಿ ಕೋಮು ಹತ್ಯೆ ಹೇಳುತ್ತಿರುವುದೂ ಈ ಸತ್ಯವನ್ನೇ

ಯಾರನ್ನು ಎನ್‌ಕೌಂಟರ್ ಮಾಡ್ತೀರಿ ಸಚಿವರೇ?

 

10-8-2022


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಮೂರು ಹತ್ಯೆಗಳು ನಡೆದು ಇದೀಗ ವಾರಗಳು ಉರುಳಿವೆ. ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಜನರು ಭಯದಿಂದ ಹೊರಬಂದು ಬದುಕು-ಭಾವದ ಬಗ್ಗೆ ಮಾತನಾಡತೊಡಗಿದ್ದಾರೆ. ಆದರೆ ಮಸೂದ್, ಪ್ರವೀಣ್ ಮತ್ತು ಫಾಝಿಲ್ ಕುಟುಂಬದವರನ್ನು ನಾವು ಈ ‘ಸಹಜಸ್ಥಿತಿ’ ಎಂಬ ವೃತ್ತದೊಳಗೆ ತರುವಂತಿಲ್ಲ. ಸಾರ್ವಜನಿಕವಾಗಿದ್ದ ಭಯ, ಆತಂಕ ಮತ್ತು ದುಃಖಗಳ ಸ್ಥಿತಿ ನಿಧಾನಕ್ಕೆ ಮರೆಯಾಗುತ್ತಿದ್ದು, ಅವು ಈಗ ಮೂರು ಮನೆಗಳ ಮೇಲೆ ನಿಧಾನಕ್ಕೆ ಸೀಮಿತಗೊಳ್ಳತೊಡಗಿದೆ.

ನಿಜವಾಗಿ, ಎಲ್ಲ ಕೋಮು ಹತ್ಯೆಗಳ ಬಳಿಕ ಉಂಟಾಗುವ ಶೂನ್ಯಸ್ಥಿತಿ ಇದು. ಕಳಕೊಂಡವರನ್ನು ಮರಳಿ ಪಡಕೊಳ್ಳಲಾಗದ ಹತಾಶೆ ಮತ್ತು ಬೇಗುದಿಯನ್ನು ಹಂಚಿಕೊಳ್ಳುವುದಕ್ಕೆ ಅಂತಿಮವಾಗಿ ರಾಜಕಾರಣಿಗಳೋ ಪೌರುಷದ ಮಾತಾಡಿದವರೋ ಯಾರೂ ಇರುವುದಿಲ್ಲ. ಅವರೆಲ್ಲ ಸಂತ್ರಸ್ತ ಮನೆಗೆ ಭೇಟಿ ಕೊಟ್ಟು ಮರಳಿ ಹೋದ ಬಳಿಕ ಉಂಟಾಗುವ ಮೌನಸ್ಥಿತಿಗೆ ಯಾವ ಪರಿಹಾರವೂ ಇಲ್ಲ. ಆದರೆ, ಇಂಥ ಸಂಕಟದ ಸ್ಥಿತಿ ಇನ್ನಾವ ಮನೆಗೂ, ಮನುಷ್ಯರಿಗೂ ಬರಬಾರದು ಎಂಬ ಸನ್ಮನಸ್ಸು ನಮ್ಮದೆಂದಾದರೆ, ಈ ಮೂರೂ ಹತ್ಯೆಗಳ ಸಂದರ್ಭದಲ್ಲಿ ಆಳುವವರು ಮತ್ತು ಆಳಿಸಿಕೊಳ್ಳುವವರು ನಡೆದುಕೊಂಡ ರೀತಿಯನ್ನು ವಿಶ್ಲೇಷಣೆಗೆ ಒಡ್ಡುವುದು ಒಳ್ಳೆಯದು. ಅಂದಹಾಗೆ,

ಯಾವುದೇ ಹತ್ಯೆಯನ್ನು ಅಥವಾ ಹತ್ಯೆಗೆ ಕಾರಣವಾಗುವ ಪ್ರಚೋದನೆಗಳನ್ನು ನಿಗ್ರಹಿಸುವ ಸಾಮರ್ಥ್ಯ ಇರುವುದು ಸರ್ಕಾರಕ್ಕೆ. ನಾಗರಿಕರೇನಿದ್ದರೂ ಸರ್ಕಾರದ ಆದೇಶಗಳನ್ನು ಪಾಲಿಸಲು ಬದ್ಧರೇ ಹೊರತು ಅವರೇ ಸರ್ಕಾರ ಅಲ್ಲ. ಆದ್ದರಿಂದ ಹತ್ಯೆ, ದರೋಡೆ, ಅತ್ಯಾಚಾರ, ದೌರ್ಜನ್ಯ ಇತ್ಯಾದಿ ಸಮಾಜ ವಿರೋಧಿ ಕೃತ್ಯಗಳನ್ನು ತಡೆಯುವ ಮತ್ತು ನಾಗರಿಕರಿಗೆ ನೆಮ್ಮದಿಯನ್ನು ಒದಗಿಸಿಕೊಡುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಸರ್ಕಾರ ಯಾವ ಪಕ್ಷದ್ದೇ ಆಗಿದ್ದರೂ ಈ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ. ಈ ಆಧಾರದಲ್ಲೇ ಈ ಮೂರೂ ಹತ್ಯೆಗಳ ವಿಶ್ಲೇಷಣೆ ನಡೆಯಬೇಕಿದೆ. ದುರಂತ ಏನೆಂದರೆ,

ಈ ಮೂರೂ ಹತ್ಯೆಗಳ ಪೈಕಿ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಮಾತ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿತೇ ಹೊರತು ಉಳಿದೆರಡು ಹತ್ಯೆಗಳನ್ನು ಅತ್ಯಂತ ನಿಕೃಷ್ಟವಾಗಿ ಕಂಡಿತು. ಮೊದಲು ನಡೆದುದು ಮಸೂದ್ ಎಂಬ ತರುಣನ ಹತ್ಯೆ. ಆ ಬಳಿಕ ಪ್ರವೀಣ್ ಮತ್ತು ಆ ನಂತರ ಫಾಝಿಲ್. ಆದರೆ ಮಸೂದ್ ಮತ್ತು ಫಾಝಿಲ್‌ಗೆ ಸರ್ಕಾರ ಪರಿಹಾರ ಘೋಷಿಸುವುದು ಬಿಡಿ, ಆಡಳಿತ ಪಕ್ಷದ ಒಬ್ಬನೇ ಒಬ್ಬ ಜನಪ್ರತಿನಿಧಿಯಾಗಲಿ, ಸಚಿವರಾಗಲಿ ಸಂತ್ರಸ್ತರ ಮನೆಗೆ ಭೇಟಿ ಕೊಟ್ಟಿಲ್ಲ. ಈ ಮೂರು ಮನೆಗಳನ್ನು ವಿಧಾನ ಸಭೆಯಲ್ಲಿ ಪ್ರತಿನಿಧಿಸುತ್ತಿರುವುದು ಬಿಜೆಪಿ ಶಾಸಕರೇ. ಆದರೆ ಪ್ರವೀಣ್ ನೆಟ್ಟಾರು ಮನೆಗೆ ಮುಖ್ಯಮಂತ್ರಿಯಿಂದ ಹಿಡಿದು ಸ್ಥಳೀಯರಲ್ಲದ ಬಿಜೆಪಿ ಶಾಸಕರೂ ಭೇಟಿ ಕೊಟ್ಟರು. 25 ಲಕ್ಷ ರೂಪಾಯಿ ಪರಿಹಾರವನ್ನು ಸ್ವತಃ ಮುಖ್ಯಮಂತ್ರಿಯವರೇ ಸರ್ಕಾರದ ಪರವಾಗಿ ಘೋಷಿಸಿದರು. ಮಾತ್ರವಲ್ಲ, ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣರು ಸಮಸ್ತ ಕನ್ನಡಿಗರು ಮತ್ತು ಸಂವಿಧಾನವೇ ನಾಚುವಂಥ ಹೇಳಿಕೆಗಳನ್ನೂ ನೀಡಿದರು. ‘ಅಗತ್ಯ ಬಿದ್ದರೆ ಯೋಗಿ ಮಾದರಿಯನ್ನು ಅನುಸರಿಸಲಾಗುವುದು...’ ಎಂದು ಮುಖ್ಯಮಂತ್ರಿ ಹೇಳಿದ್ದರೆ, ‘ಎನ್‌ಕೌಂಟರ್ ನಡೆಸಲು ಸರ್ಕಾರ ಸಿದ್ಧ’ ಎಂಬ ಹೇಳಿಕೆಯನ್ನು ಸಚಿವ ಅಶ್ವತ್ಥ ನಾರಾಯಣ ನೀಡಿದರು. ಅಷ್ಟಕ್ಕೂ,

ಈ ಯೋಗಿ ಮಾದರಿ ಅಂದರೇನು? ಯಾವ ವಿಷಯದಲ್ಲಿ ಅವರು ಮಾದರಿ ಮತ್ತು ಏಕೆ ಮಾದರಿ? ಈ ಹಿಂದೆ ಗುಜರಾತ್ ಮಾದರಿ ಎಂಬ ಪದ ಚಾಲ್ತಿಯಲ್ಲಿತ್ತು. ಆ ಮಾದರಿಗೆ ಈಗ ಏನಾಗಿದೆ, ಅದೇಕೆ ಈಗ ಮಾರುಕಟ್ಟೆ ಕಳಕೊಂಡಿದೆ? ನಿಜವಾಗಿ,

ಈ ಎರಡೂ ಮಾದರಿಗಳ ಅಂತರಾಳದಲ್ಲಿರುವುದು ಮುಸ್ಲಿಮ್ ದ್ವೇಷ. 2002ರ ಗುಜರಾತ್ ಹತ್ಯಾಕಾಂಡದ ಬಳಿಕ ಠಂಕಿಸಲಾದ ಪದ ಗುಜರಾತ್ ಮಾದರಿಯಾದರೆ, ಮುಸ್ಲಿಮರ ಮನೆಗಳನ್ನು ಬುಲ್ಡೋಜರ್ ಹರಿಸಿ ಧ್ವಂಸಗೊಳಿಸಲಾಗುತ್ತಿರುವುದನ್ನು ಹೇಳುವುದಕ್ಕೆ ಯೋಗಿ ಮಾದರಿ ಎಂದು ಕರೆಯಲಾಗುತ್ತದೆ. ಈ ಎರಡರಲ್ಲೂ ಇರುವುದು ಮುಸ್ಲಿಮ್ ದ್ವೇಷ ಮಾತ್ರ. ಉತ್ತರ ಪ್ರದೇಶದಲ್ಲಿ ಬುಲ್ಡೋಜರ್‌ಗಳು ಯಾಕೆ ಮುಸ್ಲಿಮ್ ಮನೆಗಳನ್ನು ಮಾತ್ರ ಹುಡುಕಿಕೊಂಡು ಹೋಗುತ್ತವೆ ಎಂಬ ಪ್ರಶ್ನೆಗೆ ದಿಲ್ಲಿಯಿಂದ ಹಿಡಿದು ಹಳ್ಳಿವರೆಗೂ ಉತ್ತರ ಗೊತ್ತಿದೆ.

ಆ ಬುಲ್ಡೋಜರ್ ಮುಸ್ಲಿಮರ ಹೊರತಾದ ಮನೆಗಳನ್ನು ಉರುಳಿಸುವುದಿಲ್ಲ. ಅಗ್ನಿಪಥ್ ವಿರೋಧಿ ಪ್ರತಿಭಟನೆಯಲ್ಲಿ 259 ಕೋಟಿ ರೂಪಾಯಿ ಸರ್ಕಾರಿ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟಾಯಿತು. ಉತ್ತರ ಪ್ರದೇಶದ ಏಕೈಕ ವಿದ್ಯುತ್ ಚಾಲಿತ ಬಸ್ಸನ್ನೇ ಬೆಂಕಿಗಾಹುತಿ ಮಾಡಲಾಯಿತು. ಈ ಪ್ರತಿಭಟನೆಯಲ್ಲಿ ಅತ್ಯಂತ ಹೆಚ್ಚು ನಾಶ-ನಷ್ಟ ಅನುಭವಿಸಿದ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಒಂದು. ಆದರೆ, ಯೋಗಿ ಮಾದರಿಯ ಬುಲ್ಡೋಜರ್ ಈ ಪ್ರತಿಭಟನಾಕಾರರಲ್ಲಿ ಒಬ್ಬರ ಮನೆಯನ್ನೂ ಉರುಳಿಸಿಲ್ಲ. ಹತ್ರಾಸ್‌ನಲ್ಲಿ ದಲಿತ ಯುವತಿಯನ್ನು ಅತ್ಯಾಚಾರಗೈದು ಹತ್ಯೆಗೆ ಕಾರಣವಾದವರ ಮನೆಗಳು ಈಗಲೂ ಸುರಕ್ಷಿತವಾಗಿವೆ. ಅಂದರೆ, ಯೋಗಿ ಮಾದರಿಯಲ್ಲಿ ಮುಸ್ಲಿಮರು ಶಿಕ್ಷೆಗೆ ಒಳಗಾಗಬೇಕಾದವರು ಮತ್ತು ಉಳಿದವರು ರಕ್ಷಣೆ ಪಡೆಯಬೇಕಾದವರು ಎಂಬ ಅಲಿಖಿತ ನಿಯಮ ಇದ್ದಂತಿದೆ. ಗಲಭೆಕೋರರು, ಪ್ರತಿಭಟನಾಕಾರರು, ಅಕ್ರಮ ನಿವಾಸಿಗಳು, ಸಮಾಜ ಘಾತುಕ ಶಕ್ತಿಗಳು... ಎಂಬೆಲ್ಲ ಆರೋಪಗಳ ಮೂಲಕ ಅದು ಮುಸ್ಲಿಮರ ಮೇಲಿನ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದೆ. ಅಷ್ಟಕ್ಕೂ,

ಈ ಅನೀತಿಯ ಹೊರತಾಗಿ ಮಾದರಿ ಎನ್ನಬಹುದಾದ ಯಾವ ಹೆಚ್ಚುಗಾರಿಕೆಯೂ ಉತ್ತರ ಪ್ರದೇಶದಲ್ಲಿಲ್ಲ. ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಪ್ರದೇಶ ಒಂದು ಕಳಪೆ ರಾಜ್ಯ. ಆರ್ಥಿಕವಾಗಿ, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತು ಅಭಿವೃದ್ಧಿಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ತಾಂತ್ರಿಕ ಕ್ಷೇತ್ರದಲ್ಲಂತೂ ಬೆಂಗಳೂರು ಇತರೆಲ್ಲ ರಾಜ್ಯಗಳಿಗೆ ಮಾದರಿಯಂತಿದೆ. ಕ್ರೈಮ್ ರಾಜ್ಯವಾಗಿ ಗುರುತಿಸಿಕೊಂಡಿರುವ ಉತ್ತರ ಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕ ಎಷ್ಟೋ ಪಾಲು ಉತ್ತಮ. ಜಾತಿ ದೌರ್ಜನ್ಯ ಮತ್ತು ತಾರತಮ್ಯದ ವಿಷಯದಲ್ಲಂತೂ ಉತ್ತರ ಪ್ರದೇಶವನ್ನು ಮೀರಿಸುವ ಇನ್ನೊಂದು ರಾಜ್ಯ ಇಲ್ಲ ಎಂಬAತಿದೆ. ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿಯಿಂದ ಅತ್ಯುತ್ತಮ ಪರಿಕಲ್ಪನೆಗಳನ್ನು ಗರಿಷ್ಠ ಮಟ್ಟದಲ್ಲಿ ಪ್ರಯೋಗಿಸಿ ಯಶಸ್ವಿಯಾದ ರಾಜ್ಯ ಕರ್ನಾಟಕ. ಆದ್ದರಿಂದ, ಮುಖ್ಯಮಂತ್ರಿಯವರು ಯೋಗಿ ಮಾದರಿಯನ್ನು ಅನುಸರಿಸುತ್ತಾರೆಂದರೆ, ಮುಸ್ಲಿಮ್ ದ್ವೇಷವನ್ನು ನೀತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆಂದೇ ಅರ್ಥ. ಸುದೀರ್ಘ ಸಮಯ ಸಮಾಜವಾದಿಯಾಗಿ ರಾಜಕೀಯ ಆಯುಷ್ಯವನ್ನು ಕಳೆದ ಬೊಮ್ಮಾಯಿಯವರು ಹೀಗೆ ಹೇಳುತ್ತಾರೆಂದರೆ, ಏನರ್ಥ? ಪ್ರವೀಣ್ ನೆಟ್ಟಾರುಗೆ ಸ್ಪಂದಿಸಿದಷ್ಟೇ ತುರ್ತಾಗಿ ಮಸೂದ್ ಮತ್ತು ಫಾಝಿಲ್‌ಗೆ ಸ್ಪಂದಿಸುತ್ತಿಲ್ಲ ಎಂದರೆ ಏನರ್ಥ? ಅದೇವೇಳೆ,

‘ಎನ್‌ಕೌಂಟರ್‌ಗೂ ಸಿದ್ಧ’ ಎಂಬ ಅವರದೇ ಸಂಪುಟದ ಸಚಿವರ ಮಾತಿನ ಅರ್ಥವೇನು? ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಅವರು ನೀಡಿದ ಈ ಹೇಳಿಕೆಯ ಗುರಿ ಯಾರು? ಹತ್ಯೆಕೋರರನ್ನು ಎನ್‌ಕೌಂಟರ್ ನಡೆಸುವುದೇ ಅವರ ಮಾತಿನ ಉದ್ದೇಶವೆಂದಾದರೆ, ಮಸೂದ್ ಪ್ರಕರಣದಲ್ಲಿ ಬಂಧಿಗಳಾದ 8 ಮಂದಿ ಮತ್ತು ಫಾಝಿಲ್ ಪ್ರಕರಣದಲ್ಲಿ ಬಂಧನಕ್ಕೀಡಾದ 6 ಮಂದಿಯನ್ನು ಈಗಾಗಲೇ ಎನ್‌ಕೌಂಟರ್ ಮಾಡಿರಬೇಕಿತ್ತು. ಆದರೆ ಅದು ನಡೆದಿಲ್ಲ. ಮತ್ತೆ ಯಾರ ಎನ್‌ಕೌಂಟರ್‌ನ ಬಗ್ಗೆ ಅವರು ಮಾತಾಡುತ್ತಿದ್ದಾರೆ? ಅಷ್ಟಕ್ಕೂ,
ಅವರು ಬಳಸಿದ ಎನ್‌ಕೌಂಟರ್ ಎಂಬ ಪದ ಸಂವಿಧಾನ ಬದ್ಧವೇ? ಯಾವುದೇ ವ್ಯಕ್ತಿಯನ್ನು ತಪ್ಪಿತಸ್ಥ ಎಂದು ತೀರ್ಮಾನಿಸುವ ಮತ್ತು ಶಿಕ್ಷೆ ವಿಧಿಸುವ ಅಧಿಕಾರ ಇರುವುದು ನ್ಯಾಯಾಲಯಕ್ಕೆ ಮಾತ್ರ. ಅಲ್ಲಿವರೆಗೆ ಬಂಧಿತ ವ್ಯಕ್ತಿ ಆರೋಪಿ ಮಾತ್ರ. ತಾನು ಸಂವಿಧಾನಕ್ಕೆ ಬದ್ಧ ಎಂದು ಪ್ರತಿಜ್ಞೆ ಸ್ವೀಕರಿಸಿರುವ ಸಚಿವರಿಗೆ ಈ ಸತ್ಯ ಗೊತ್ತಿಲ್ಲವೇ? ಅವರು ಎನ್‌ಕೌಂಟರ್ ಮಾಡುವುದು ಯಾರನ್ನು, ಆರೋಪಿಯನ್ನೋ, ಅಪರಾಧಿಯನ್ನೋ ಅಥವಾ ನಿರ್ದಿಷ್ಟ ಧರ್ಮದವರನ್ನೋ? ಇವು ಯಾವುವೇ ಆದರೂ ಇಂಥ ಕ್ರಮ ಕಾನೂನುಬಾಹಿರವಲ್ಲವೇ? ಒಂದುರೀತಿಯಲ್ಲಿ,

ರಾಜ್ಯದಲ್ಲಿ ಅರಾಜಕ ಸ್ಥಿತಿ ಉಂಟಾಗಿರುವುದು ರಾಜಧರ್ಮ ಪಾಲಿಸದ ಸರ್ಕಾರದಿಂದಾಗಿಯೇ ಹೊರತು ನಾಗರಿಕರಿಂದಲ್ಲ. ಹಿಜಾಬ್, ಹಲಾಲ್, ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ, ಮಸೀದಿಗಳ ಧ್ವನಿವರ್ಧಕ ನಿಷೇಧ... ಇತ್ಯಾದಿಗಳನ್ನು ಈ ಸರ್ಕಾರ ಮತ ಧ್ರುವೀಕರಣದ ದೃಷ್ಟಿಯಿಂದ ನೋಡಿತೇ ಹೊರತು ರಾಜಧರ್ಮದ ಆಧಾರದಲ್ಲಿ ಅಲ್ಲ. ಅನೈತಿಕ ಪೊಲೀಸ್‌ಗಿರಿಯನ್ನು ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಸಮರ್ಥಿಸುವಷ್ಟರ ಮಟ್ಟಿಗೆ ರಾಜಧರ್ಮದ ಪಾಲನೆಯಲ್ಲಿ ಮುಖ್ಯಮಂತ್ರಿ ಎಡವಿದರು. ತಾನು ಸಮಾಜವಾದದಿಂದ ಕಳಚಿಕೊಂಡು ಬಿಜೆಪಿ ಧರ್ಮಕ್ಕೆ ನಿಷ್ಠನಾಗಿದ್ದಾನೆ ಎಂಬುದನ್ನು ಸಾಬೀತುಪಡಿಸಲೋ ಏನೋ ಮುಖ್ಯಮಂತ್ರಿ ಬೊಮ್ಮಾಯಿಯವರು ತನ್ನ ಅಧಿಕಾರದ ಉದ್ದಕ್ಕೂ ರಾಜಧರ್ಮಕ್ಕೆ ಬೆನ್ನು ಹಾಕಿದರು. ಇದು ಅತ್ಯಂತ ಆಘಾತಕಾರಿ ನೀತಿ. ಅಂದಹಾಗೆ, ರಾಜಧರ್ಮ ಎಂಬುದು ಪ್ರಕೃತಿ ಧರ್ಮ. ಪ್ರಕೃತಿ ಧರ್ಮವನ್ನು ನಿರ್ಲಕ್ಷಿಸುವುದೆಂದರೆ, ಅರಾಜಕ ಸ್ಥಿತಿಗೆ ಅಡಿಪಾಯ ಹಾಕುವುದೆಂದೇ ಅರ್ಥ.

ಶಾದಿ ಭಾಗ್ಯ: ಸಿದ್ದರಾಮಯ್ಯ ತಪ್ಪಾದರೆ ಯೋಗಿ ಏಕೆ ಸರಿ?

 

20-10-2022

ಸ್ಪಂದನೆ ಮತ್ತು ಓಲೈಕೆ- ಇವೆರಡೂ ರಾಜಕೀಯವಾಗಿ ಸಾಕಷ್ಟು ದುರುಪಯೋಗವಾದ ಪದಗಳು. ಮುಸ್ಲಿಮರ ಅಭಿವೃದ್ಧಿಗಾಗಿ ಕಾಂಗ್ರೆಸ್ ತೆಗೆದುಕೊಳ್ಳುವ ಯಾವುದೇ ನಿರ್ಧಾರವೂ ಬಿಜೆಪಿಗೆ ಓಲೈಕೆಯಾಗಿ ಕಾಣಿಸುತ್ತದೆ. ಓಟ್‌ಬ್ಯಾಂಕನ್ನು ಗಟ್ಟಿಗೊಳಿಸುವುದಕ್ಕಾಗಿ ತೆಗೆದುಕೊಂಡ ಅನೈತಿಕ ನಿರ್ಧಾರ ಎಂದು ಅದು ವ್ಯಾಖ್ಯಾನಿಸುತ್ತದೆ. ಇದೀಗ ಇದೇ ಬಿಜೆಪಿ ಉತ್ತರ ಪ್ರದೇಶದಲ್ಲಿ ತೆಗೆದುಕೊಂಡ ನಿರ್ಧಾರವು ರಾಷ್ಟçಮಟ್ಟದಲ್ಲಿ ಮುಖ್ಯ ಸುದ್ದಿಯಾಗಿದೆ. ಕಳೆದ ಎಪ್ರಿಲ್‌ನಿಂದ ಆಗಸ್ಟ್ ನಡುವೆ 1387ರಷ್ಟು ಬಡ ಮುಸ್ಲಿಮ್ ಜೋಡಿಗಳಿಗೆ ಯೋಗಿ ಸರಕಾರ ಶಾದಿಭಾಗ್ಯವನ್ನು ಕರುಣಿಸಿದೆ. ಪ್ರತಿ ವಧುವಿಗೂ 51 ಸಾವಿರ ರೂಪಾಯಿ ಮೊತ್ತವನ್ನು ವಿವಾಹಧನವಾಗಿಯೂ ನೀಡಿದೆ. ಈ ಸುದ್ದಿಯನ್ನು ಇಂಗ್ಲಿಷ್ ಮತ್ತು ಕನ್ನಡದ ಪ್ರಮುಖ ಪತ್ರಿಕೆಗಳು ಸಾಕಷ್ಟು ಮಹತ್ವ ಕೊಟ್ಟು ಪ್ರಕಟಿಸಿಯೂ ಇವೆ. ಮಾತ್ರವಲ್ಲ, ‘1300 ಮುಸ್ಲಿಮ್ ಜೋಡಿಗಳಿಗೆ ಮದುವೆ ಮಾಡಿಸಿದ ಯೋಗಿ ಆದಿತ್ಯನಾಥ್ ಸರ್ಕಾರ’ ಎಂಬಂತಹ ಶೀರ್ಷಿಕೆಯನ್ನೂ ಕೊಟ್ಟಿವೆ. ಹೀಗಿದ್ದೂ, ಬಿಜೆಪಿಯ ರಾಷ್ಟ್ರೀಯ ನಾಯಕರಿಂದ ಹಿಡಿದು ಪಂಚಾಯತ್ ಸದಸ್ಯರ ವರೆಗೆ ಒಬ್ಬರೇ ಒಬ್ಬರೂ ಈ ನಡೆಯನ್ನು ಪ್ರಶ್ನಿಸಿಲ್ಲ. ಓಲೈಕೆ ಎಂದು ಟೀಕಿಸಿಲ್ಲ. ಅಷ್ಟಕ್ಕೂ,

ಕಳೆದ ಎಪ್ರಿಲ್‌ನಿಂದ ಆಗಸ್ಟ್ ನಡುವೆ ಬಡತನ ರೇಖೆಗಿಂತ ಕೆಳಗಿರುವ 16,033ರಷ್ಟು ಜೋಡಿಗಳ ವಿವಾಹವನ್ನು ಯೋಗಿ ಸರ್ಕಾರ ನಡೆಸಿದೆಯಾದರೂ ಮತ್ತು ಅದರಲ್ಲಿ 9374ರಷ್ಟು ಜೋಡಿಗಳು ದಲಿತ ಸಮುದಾಯಕ್ಕೆ ಸೇರಿದವರಾದರೂ ಮಾಧ್ಯಮಗಳೇಕೆ ಬರೇ 1387ರಷ್ಟು ಸಂಖ್ಯೆಯನ್ನು ಮತ್ತು ಅವರ ಧರ್ಮವನ್ನು ಶೀರ್ಷಿಕೆಗೆ ಆಯ್ಕೆ ಮಾಡಿಕೊಂಡಿದೆ ಎಂಬ ಪ್ರಶ್ನೆಯೂ ಮಹತ್ವ ಪಡೆಯುತ್ತದೆ. ಅಲ್ಲದೇ, ಇತರೇ ಹಿಂದುಳಿತ ಸಮುದಾಯಕ್ಕೆ ಸೇರಿದ 4649ರಷ್ಟು ಜೋಡಿಗಳಿಗೂ ಸರ್ಕಾರ ಇದೇ ಅವಧಿಯಲ್ಲಿ ವಿವಾಹ ನೆರವೇರಿಸಿದೆ. ಈ ಒಟ್ಟು 16,033 ಜೋಡಿ ವಿವಾಹಗಳಿಗೆ ಸರ್ಕಾರ 81 ಕೋಟಿ 76 ಲಕ್ಷ ರೂಪಾಯಿಯನ್ನೂ ಖರ್ಚು ಮಾಡಿದೆ. ಒಂದುರೀತಿಯಲ್ಲಿ,

ಒಟ್ಟು 16033ರಷ್ಟು ಜೋಡಿಗಳಲ್ಲಿ ಬರೇ 1387ರಷ್ಟು ಜೋಡಿಗಳ ವಿವಾಹವನ್ನೇ ಮಾಧ್ಯಮಗಳು ಮುಖ್ಯ ಸುದ್ದಿಯಾಗಿ ಪ್ರಕಟಿಸಿರುವುದರಲ್ಲಿ ಒಂದು ಮಹತ್ವದ ಸೂಚನೆಯಿದೆ. ಬಿಜೆಪಿ ಮುಸ್ಲಿಮರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂಬುದೇ ಈ ಸೂಚನೆ. ಮುಸ್ಲಿಮ್ ವಿರೋಧಿ ನೀತಿಯನ್ನು ಹೊಂದಿರುವ ಬಿಜೆಪಿ ಇಂಥದ್ದೊಂದು ವಿವಾಹವನ್ನು ಮಾಡಿಸಿದೆ ಎಂಬ ಅಚ್ಚರಿಯೊಂದು ಮಾಧ್ಯಮಗಳ ಶೀರ್ಷಿಕೆಯಲ್ಲಿದೆ. ಈ ಶೀರ್ಷಿಕೆಗಳೇ ನಿಜವಾದ ಬಿಜೆಪಿ. 9347ರಷ್ಟು ದಲಿತ ಜೋಡಿಗಳ ವಿವಾಹ ನಡೆಸಿಯೂ ಬರೇ 1387ರಷ್ಟು ಮುಸ್ಲಿಮ್ ಜೋಡಿಗಳೇ ಮಾಧ್ಯಮಗಳ ಶೀರ್ಷಿಕೆಗೆ ವಸ್ತುವಾಗುತ್ತದೆಂದರೆ, ಅದಕ್ಕೆ ಬೇರೆ ಏನು ಕಾರಣವಿದೆ? ಇನ್ನೂ ಒಂದು ಪ್ರಶ್ನೆಯಿದೆ. ಅದು ನೈತಿಕತೆಯದ್ದು. ಮುಖ್ಯಮಂತ್ರಿ ಸಿದ್ಧರಾಮಯ್ಯರು ಶಾದಿಭಾಗ್ಯ ಯೋಜನೆಯನ್ನು ಜಾರಿ ಮಾಡಿದಾಗ ಬೀದಿರಂಪ ಮಾಡಿದ್ದು ಇದೇ ಬಿಜೆಪಿ. ಓಲೈಕೆ ಎಂದು ಹಂಗಿಸಿದ್ದೂ ಇದೇ ಬಿಜೆಪಿ. ಇಂಥ ಪಕ್ಷವೊಂದು ಅದೇ ಶಾದಿಭಾಗ್ಯ ಯೋಜನೆಯನ್ನು ಜಾರಿ ಮಾಡುವುದೆಂದರೆ ಅರ್ಥ ಏನು? ಶಾದಿಭಾಗ್ಯ ಯೋಜನೆಯು ಕರ್ನಾಟಕದಲ್ಲಿ ಮುಸ್ಲಿಮ್ ಓಲೈಕೆಯಾಗುತ್ತದೆಂದಾದರೆ ಉತ್ತರ ಪ್ರದೇಶದಲ್ಲಿ ಯಾಕಾಗದು?

ಬಿಜೆಪಿ ಎಷ್ಟೇ ಸಮರ್ಥನೆ ಮಾಡಿಕೊಳ್ಳಲಿ, ಅದು ಧರ್ಮಾಧಾರಿತ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂಬುದಕ್ಕೆ ಈ ಮಾಧ್ಯಮ ಶೀರ್ಷಿಕೆಗಳೇ ಗಟ್ಟಿ ಪುರಾವೆ. ಈ ವಿಷಯದಲ್ಲಿ ಬಿಜೆಪಿಯೊಂದನ್ನು ಬಿಟ್ಟು ಉಳಿದೆಲ್ಲ ರಾಷ್ಟ್ರೀಯ ಪಕ್ಷಗಳಲ್ಲೂ ಒಮ್ಮತವಿದೆ. ಬಿಜೆಪಿಯ ರಾಜಕೀಯ ಯಶಸ್ಸಿನ ಗುಟ್ಟೇ ಮುಸ್ಲಿಮರು. ಸ್ವಾತಂತ್ರ‍್ಯಪೂರ್ವದಲ್ಲಿ ಈ ಉಪಭೂಖಂಡವನ್ನು ಆಳಿದ ಮುಸ್ಲಿಮ್ ದೊರೆಗಳಿಂದ ಹಿಡಿದು ಈಗಿನ ಮುಸ್ಲಿಮ್ ಜನಸಾಮಾನ್ಯರ ವರೆಗೆ ಬಿಜೆಪಿ ರಾಜಕೀಯ ನೆಲೆ ನಿಂತಿರುವುದೇ ಅವರ ಮೇಲೆ. ಹಿಂದೂ-ಮುಸ್ಲಿಮರ ನಡುವೆ ನಡೆಯುವ ಯಾವುದೇ ವೈಯಕ್ತಿಕ ಜಗಳಕ್ಕೂ ಕೋಮು ಬಣ್ಣವನ್ನು ಲೇಪಿಸುವುದು ಬಿಜೆಪಿಯ ಖಯಾಲಿ. ಕಳೆದವಾರ ದೆಹಲಿಯಲ್ಲಿ ನಿತೇಶ್ ಮತ್ತು ಅಲೋಕ್ ಎಂಬವರ ಮೇಲೆ ಹಲ್ಲೆ ನಡೆಯಿತು. ನಿತೇಶ್ ಆಸ್ಪತ್ರೆಯಲ್ಲಿ ಅಸುನೀಗಿದ. ಆರೋಪಿಗಳು ಹಫೀಝ್, ಅಬ್ಬಾಸ್, ಅದ್ನಾನ್ ಎಂದು ತಿಳಿದದ್ದೇ ತಡ, ಬಿಜೆಪಿ ಇಡೀ ಘಟನೆಗೆ ಹಿಂದೂ-ಮುಸ್ಲಿಮ್ ಬಣ್ಣವನ್ನು ಬಳಿಯಿತು. ರಸ್ತೆ ತಡೆ ನಡೆಸಿತು. ಪಕ್ಕದ ಮಸೀದಿಯಿಂದ ಗುಂಪೊಂದು ಥಳಿಸಲು ಬಂದಿತ್ತು ಎಂಬ ಕತೆ ಕಟ್ಟಿತು. ನಿತೇಶ್ ಬಲಪಂಥೀಯ ಸಂಘಟನೆಯಲ್ಲಿ ಗುರುತಿಸಿಕೊಂಡಿರುವುದೇ ಆತ ಮಾಡಿದ ತಪ್ಪು ಎಂದು ಪ್ರತಿಪಾದಿಸಿತು. ಆದರೆ, ಕೇಂದ್ರ ಗೃಹ ಇಲಾಖೆಯ ಅಧೀನದಲ್ಲಿರುವ ದೆಹಲಿ ಪೊಲೀಸರೇ ಈ ವಾದವನ್ನು ತಿರಸ್ಕರಿಸಿದರು. ಕೋಮುದ್ವೇಷದ ಹತ್ಯೆ ಎಂಬುದನ್ನು ಅವರು ನಿರಾಕರಿಸಿದರಲ್ಲದೇ, ಸಾಮಾನ್ಯ ಜಗಳವೊಂದು ಹತ್ಯೆಯಲ್ಲಿ ಕೊನೆಗೊಂಡಿದೆ ಎಂದು ವಿವರಿಸಿದರು. ಅಲ್ಲದೇ ನಿತೇಶ್ ಮತ್ತು ಗೆಳೆಯ ಅಲೋಕ್ ಮೇಲೆ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿದ್ದು, ಇವರೇ ಮೊದಲು ಆರೋಪಿಗಳ ಮೇಲೆ ಹಲ್ಲೆ ನಡೆಸಿರುವುದು ಸಿಸಿ ಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ ಎಂದೂ ಹೇಳಿದರು. ಇದೊಂದೇ ಅಲ್ಲ,

ಹೊನ್ನಾವರ ಪರೇಶ್ ಮೇಸ್ತಾ ಹತ್ಯೆಯನ್ನು ಬಿಜೆಪಿ ಇದೇ ರೀತಿ ಕೋಮು ದ್ವೇಷಕ್ಕೆ ಬಳಸಿಕೊಂಡಿತ್ತು. ಆಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಈ ಹತ್ಯೆಯ ಹಿಂದೆ ಮುಸ್ಲಿಮರಿದ್ದಾರೆ ಮತ್ತು ಹಿಂದೂ ಎಂಬ ಕಾರಣಕ್ಕಾಗಿಯೇ ಈ ಹತ್ಯೆ ನಡೆಸಲಾಗಿದೆ ಎಂಬ ರೀತಿಯಲ್ಲಿ ಬಿಜೆಪಿ ಹೋರಾಟ ನಡೆಸಿತ್ತು. ಇದೀಗ ಕೇಂದ್ರದ ಅಧೀನದಲ್ಲಿರುವ ಸಿಬಿಐ ಈ ಹತ್ಯೆಯ ಬಗ್ಗೆ ತನಿಖಾ ವರದಿಯನ್ನು ಮಂಡಿಸಿದೆ. ಅದೊಂದು ಆಕಸ್ಮಿಕ ಸಾವು ಮತ್ತು ಅದರಲ್ಲಿ ಯಾರದೇ ಕೈವಾಡವಿಲ್ಲ ಎಂದು ಹೇಳಿದೆ. ಇದಕ್ಕಿಂತ ಮೊದಲು 2017ರಲ್ಲಿ ದ.ಕ. ಜಿಲ್ಲೆಯ ಕೊಣಾಜೆಯಲ್ಲಿ 27 ವರ್ಷದ ಕಾರ್ತಿಕ್ ರಾಜ್ ಎಂಬ ಯುವಕನ ಹತ್ಯೆಯಾಗಿತ್ತು. ಈ ಹತ್ಯೆಯ ಹಿಂದೆ ಜಿಹಾದಿ ಕೈವಾಡವಿದೆ ಎಂದು ಬಿಜೆಪಿ ಹೇಳಿತ್ತಲ್ಲದೇ, ಬಿಜೆಪಿಯ ಈಗಿನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರಿಂದ ಹಿಡಿದು ಸಾಮಾನ್ಯ ಸದಸ್ಯರ ವರೆಗೆ ಆ ಹತ್ಯೆಗೆ ಮುಸ್ಲಿಮರನ್ನೇ ಗುರಿಯಾಗಿಸಿ ಹೇಳಿಕೆಯನ್ನು ನೀಡಿದ್ದರು. ಭಾರೀ ಪ್ರತಿಭಟನೆಯನ್ನೂ ನಡೆಸಿದ್ದರು. ಆದರೆ, ಆ ಹತ್ಯೆಗೂ ಮುಸ್ಲಿಮರಿಗೂ ಸಂಬಂಧವೇ ಇಲ್ಲ ಎಂಬುದನ್ನು ಅಂದಿನ ಪೊಲೀಸ್ ಕಮೀಷನರ್ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆ ಹತ್ಯೆಯನ್ನು ಕಾರ್ತಿಕ್ ರಾಜ್‌ರ ತಂಗಿ ಕಾವ್ಯಶ್ರೀಯೇ ಪ್ರಾಯೋಜಿಸಿದ್ದಳು. ತನ್ನ ಗೆಳೆಯರಾದ ಗೌತಮ್ ಮತ್ತು ಆತನ ಸಹೋದರ ಗೌರವ್‌ರ ಮೂಲಕ ತನ್ನ ಅಣ್ಣನನ್ನೇ ಆಕೆ ಸುಪಾರಿ ನೀಡಿ ಕೊಲ್ಲಿಸಿದ್ದಳು. ಇದಾದ ಬಳಿಕ ಇತ್ತೀಚೆಗಷ್ಟೇ ದ.ಕ. ಜಿಲ್ಲೆಯಲ್ಲಿ ಮೂರು ಹತ್ಯೆಗಳು ನಡೆದುವು. ಆದರೆ ಈ ಹತ್ಯೆಗಳಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಗೆ ಮಾತ್ರ ಮಹತ್ವ ನೀಡಿದ ಬಿಜೆಪಿ ಮಸೂದ್ ಮತ್ತು ಫಾಝಿಲ್ ಹತ್ಯೆಗಳನ್ನು ಕಡೆಗಣಿಸಿತು. ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ 25ಲಕ್ಷ ರೂಪಾಯಿ ಪರಿಹಾರವನ್ನು ವಿತರಿಸಿದ್ದಲ್ಲದೇ ಪ್ರವೀಣ್ ಪತ್ನಿ ನೂತನ ಕುಮಾರಿಗೆ ಸರ್ಕಾರಿ ಉದ್ಯೋಗವನ್ನೂ ನೀಡಿದ ಮುಖ್ಯಮಂತ್ರಿಗಳು ಉಳಿದಿಬ್ಬರ ಮನೆಗೆ ಭೇಟಿ ಕೊಡುವುದಾಗಲಿ, ಪರಿಹಾರ ವಿತರಿಸುವುದಾಗಲಿ, ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವುದಾಗಲಿ ಈವರೆಗೂ ಮಾಡಿಯೇ ಇಲ್ಲ.

ಬಿಜೆಪಿ ಇಂಥ ಬಹಿರಂಗ ತಾರತಮ್ಯವನ್ನು ತನ್ನ ಅಧಿಕೃತ ನೀತಿಯಾಗಿಯೇ ಸ್ವೀಕರಿಸಿಕೊಂಡಂತಿದೆ. ಹಿಂದೂ ಧ್ರುವೀಕರಣವಾಗಬೇಕಾದರೆ ಮುಸ್ಲಿಮರನ್ನು ಹೀಗೆ ನಡೆಸಿಕೊಳ್ಳುತ್ತಲೇ ಬರಬೇಕು ಎಂಬ ನೀತಿಯಲ್ಲಿ ಅದು ಬಲವಾದ ನಂಬಿಕೆ ಇರಿಸಿದಂತಿದೆ. ಈ ಕಾರಣ ದಿಂದಾಗಿಯೇ ಯೋಗಿ ಸರಕಾರದ ಶಾದಿಭಾಗ್ಯಕ್ಕೆ ಮಾಧ್ಯಮಗಳು ಉಳಿದೆಲ್ಲವುಗಳಿಗಿಂತ ಮಹತ್ವ ಕೊಟ್ಟಿದೆ. ಅಚ್ಚರಿ ಏನೆಂದರೆ, ಮುಸ್ಲಿಮರ ಅಭಿವೃದ್ಧಿಗೆಂದು ಬಿಜೆಪಿಯೇತರ ಸರಕಾರಗಳು ಕೈಗೊಳ್ಳುವ ಯಾವುದೇ ನಿರ್ಧಾರವನ್ನು ಓಲೈಕೆ ಎನ್ನುವ ಬಿಜೆಪಿಯೇ ಸ್ವತಃ ಶಾದಿಭಾಗ್ಯ ಯೋಜನೆಯನ್ನು ಜಾರಿ ಮಾಡುತ್ತಿರುವುದು. ಇದೇ ನೀತಿಯನ್ನು ಕಾಂಗ್ರೆಸ್ ಜಾರಿ ಮಾಡಿದಾಗ ಓಲೈಕೆ ಎಂದ ಪಕ್ಷವೇ ಈಗ ಬಾಯಿಯನ್ನು ಹೊಲಿದುಕೊಂಡು ಮೌನ್ಯವಾಗಿರುವುದು. ನಿಜವಾಗಿ, ಇದು ಕಾಪಟ್ಯ. ಅನೈತಿಕ. ನಿಜವಾಗಿ,

ಯಾವುದೇ ಒಂದು ಆಡಳಿತ ನಿರ್ದಿಷ್ಟ ಧರ್ಮ, ಜಾತಿ, ಸಮುದಾಯಗಳನ್ನು ಗುರುತಿಸಿ ಅವರ ಬಗ್ಗೆ ವಿಶೇಷ ಗಮನ ಹರಿಸಬೇಕು. ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಯೋಗಿ ಸರ್ಕಾರ ಕೈಗೊಂಡ ಯೋಜನೆ ಮೆಚ್ಚುವಂತದ್ದೆ. ಬಡತನ ರೇಖೆಗಿಂತ ಕೆಳಗಿರುವ ಮುಸ್ಲಿಮ್ ಸಮುದಾಯದ ಜೋಡಿಗಳನ್ನು ಗುರುತಿಸಿ, ವಧುವಿಗೆ ವಿವಾಹ ಧನವನ್ನು ಕೊಟ್ಟು ವಿವಾಹ ಮಾಡಿಸುವುದನ್ನು ಬೆಂಬಲಿಸಬೇಕು. ಆದರೆ, ಇದೇ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಕೈಗೊಂಡಾಗ ಮುಸ್ಲಿಮ್ ಓಲೈಕೆ ಅಂದರಲ್ಲ, ಪ್ರಶ್ನಿಸಬೇಕಾದದ್ದು ಅವರನ್ನು. ಅವರು ಸಾಮಾಜಿಕ ಸ್ವಾಸ್ಥ್ಯಕ್ಕೆ ಅಪಾಯಕಾರಿ.

ಸನ್ಮಾರ್ಗ ಓದುಗ-ಹಿತೈಷಿಗಳೇ: ಒಂದು ವಿನಂತಿ

 3-11-2022

ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಲ್ಪಡುವ ಈ ಜಗತ್ತಿನ ಏಕೈಕ ವಸ್ತು ಪತ್ರಿಕೆ. ಯಾವುದೇ ಪತ್ರಿಕೆಯ ಮುಖಬೆಲೆಗೂ ಅದರ ಉತ್ಪಾದನಾ ವೆಚ್ಚಕ್ಕೂ ಸಂಬಂಧ ಇರುವುದಿಲ್ಲ. ಮುಖಬೆಲೆಗಿಂತ ಸುಮಾರು ಒಂದು-ಒಂದೂವರೆ ಪಟ್ಟು ಅಧಿಕ ವೆಚ್ಚದಲ್ಲಿ ಒಂದು ಪತ್ರಿಕೆ ತಯಾರಾಗುತ್ತದೆ. ಹಾಗಿದ್ದೂ, ಖರೀದಿದಾರರ ಮೇಲೆ ಈ ಉತ್ಪಾದನಾ ವೆಚ್ಚದ ಭಾರವನ್ನು ಪತ್ರಿಕೆಗಳು ಹೊರಿಸುವುದಿಲ್ಲ. ಇಲ್ಲಿ ಸಹಜವಾಗಿ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ.1. ಯಾಕೆ ಹೀಗೆ? 2. ನಷ್ಟದ ಈ ವ್ಯಾಪಾರದಲ್ಲಿ ಪತ್ರಿಕೆಗಳು ಉಳಿದುಕೊಂಡಿರುವುದು ಹೇಗೆ?

ಯಾವುದೇ ಪತ್ರಿಕೆ ಯಾರಿಗೂ ಊಟ, ನಿದ್ರೆಯಷ್ಟು ಅನಿವಾರ್ಯವಲ್ಲ. ಪತ್ರಿಕೆ ಖರೀದಿಸದಿದ್ದರೆ ಬದುಕಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯೂ ಇಲ್ಲ. ಆದ್ದರಿಂದ ಪತ್ರಿಕೆಯನ್ನು ಜನರು ಖರೀದಿಸಲೇ ಬೇಕಾದರೆ ಅಗ್ಗದ ದರದಲ್ಲಿ ಲಭ್ಯಗೊಳಿಸಲೇಬೇಕಾದ ಒತ್ತಡವೊಂದು ಪತ್ರಿಕಾ ಸಂಸ್ಥೆಗಳನ್ನು ಆರಂಭದಲ್ಲಿ ಕಾಡಿರಲೇಬೇಕು. ಮೊದಲು ಪತ್ರಿಕೆಯನ್ನು ಓದುವ ಹವ್ಯಾಸವನ್ನು ಬೆಳೆಸುವುದು ಅವರ ಉದ್ದೇಶ ಆಗಿರಲೂಬಹುದು. ಆದರೆ ಈ ನಷ್ಟದ ಉದ್ಯಮ ಹೆಚ್ಚು ಸಮಯ ಬಾಳಿಕೆ ಬರದು ಎಂಬುದು ಮನವರಿಕೆಯಾದಾಗ, ಬದುಕಿ ಉಳಿಯುವುದಕ್ಕಾಗಿ ಪರ್ಯಾಯ ದಾರಿಗಳನ್ನು ಕಂಡುಕೊಂಡಿರುವ ಸಾಧ್ಯತೆ ಇದೆ. ಅದುವೇ ಜಾಹೀರಾತು. ಉತ್ಪಾದನಾ ವೆಚ್ಚದ ನಷ್ಟವನ್ನು ಜಾಹೀರಾತಿನ ಮೂಲಕ ತುಂಬಿಕೊಳ್ಳುವ ವಿನೂತನ ಪ್ರಯೋಗವೊಂದು ಹೀಗೆ ಆರಂಭವಾಗಿರಬಹುದು. ಆದರೆ ಬರಬರುತ್ತಾ ಈ ಪ್ರಯೋಗ ಎಷ್ಟು ಹದಗೆಟ್ಟು ಹೋಯಿತೆಂದರೆ, ಜಾಹೀರಾತಿನ ನಡುವೆ ಒಂದಿಷ್ಟು ಸುದ್ದಿ ಎಂಬಲ್ಲಿಗೆ ಬಂದು ನಿಂತಿತು. ಖರೀದಿದಾರರು ಕಡೆಗಣನೆಗೆ ಒಳಗಾದರು. ಜಾಹೀರಾತುದಾರರ ಹಿತಾಸಕ್ತಿಯೇ ಮುಖ್ಯವಾಗತೊಡಗಿತು. ರಾಜಕಾರಣಿಗಳ ಆಸೆಗಣ್ಣು ಪತ್ರಿಕೆಗಳ ಮೇಲೆ ಬೀಳುವುದರೊಂದಿಗೆ ಈ ಕ್ಷೇತ್ರ ಸಂಪೂರ್ಣ ರಾಡಿಯೆದ್ದು ಹೋಯಿತು. ಯಾವುದು ಸುದ್ದಿ ಮತ್ತು ಯಾವುದು ಜಾಹೀರಾತು ಎಂಬುದನ್ನು ಓರ್ವ ಗ್ರಾಹಕ ನಿರ್ಧರಿಸಲು ಹೆಣಗಾಡುವಷ್ಟರ ಮಟ್ಟಿಗೆ ಪತ್ರಿಕೆ ತನ್ನನ್ನು ಆಡಳಿತಗಾರರಿಗೆ ಮಾರಿಕೊಳ್ಳತೊಡಗಿದುವು. ಬಹುತೇಕ ಪತ್ರಿಕೆಗಳು ಇವತ್ತು ಮುಖಪುಟವನ್ನು ಜಾಹೀರಾತಿಗೆ ಬಿಟ್ಟುಕೊಡುತ್ತಿವೆ. ಸುದ್ದಿಗಳನ್ನು ಒಳಪುಟಕ್ಕೆ ತಳ್ಳುತ್ತಿವೆ. ಹಾಗಂತ, ಓರ್ವ ಖರೀದಿದಾರ ಇದನ್ನು ಬಯಸಿರುವ ಸಾಧ್ಯತೆ ಇಲ್ಲವೇ ಇಲ್ಲ. ಆತ ಅಥವಾ ಆಕೆ ಸುದ್ದಿಗಾಗಿ ಪತ್ರಿಕೆಯನ್ನು ಖರೀದಿಸುತ್ತಾನೆಯೇ ಹೊರತು ಜಾಹೀರಾತಿಗಾಗಿ ಅಲ್ಲ. ಆದರೆ, ಸುದ್ದಿ ಬೇಕೆಂದರೆ ಜಾಹೀರಾತನ್ನು ಸಹಿಸಿಕೊಳ್ಳಲೇಬೇಕು ಎಂಬ ಅ ನಿವಾರ್ಯತೆಯೊಂದು ಪ್ರತಿ ಖರೀದಿದಾರರ ಮುಂದೆಯೂ ಇವತ್ತು ತೂಗುಗತ್ತಿಯಂತೆ ನೇತಾಡುತ್ತಿದೆ. ಗ್ರಾಹಕರಿಗಿಂತ ಎರಡು ಪಟ್ಟು ಹೆಚ್ಚು ದುಡ್ಡನ್ನು ಜಾಹೀರಾತುದಾರರೇ ನೀಡುತ್ತಿರುವುದರಿಂದ ಜಾಹೀರಾತುದಾರರ ಮರ್ಜಿಯಂತೆ ಪತ್ರಿಕೆಗಳು ನಡೆಯಬೇಕಾದ ಮತ್ತು ಈ ಸ್ಪರ್ಧೆಯಲ್ಲಿ ಗ್ರಾಹಕ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾದ ವಾತಾವರಣ ಇಂದಿನದ್ದಾಗಿದೆ. ಆದರೆ,

ಸನ್ಮಾರ್ಗ ಪತ್ರಿಕೆಯ ಹಾದಿ ಇಷ್ಟು ಸುಲಭದ್ದಲ್ಲ.
ಮೊದಲನೆಯದಾಗಿ, ಇದು ಸುದ್ದಿ ಪತ್ರಿಕೆ ಅಲ್ಲ. ಎರಡನೆಯದಾಗಿ, ಯಾವುದೇ ಜಾಹೀರಾತನ್ನು ಒಪ್ಪಿಕೊಳ್ಳುವ ಮೊದಲು ನೂರು ಬಾರಿ ಆಲೋಚಿಸಬೇಕಾದ ಕಠಿಣ ಷರತ್ತುಗಳನ್ನು ಅದು ತನ್ನ ಮೇಲೆ ವಿಧಿಸಿಕೊಂಡಿದೆ. ಸನ್ಮಾರ್ಗ- ಮೌಲ್ಯವನ್ನೇ ಉಸಿರಾಗಿಸಿಕೊಂಡಿರುವ ಪತ್ರಿಕೆ. ಸತ್ಯ ಪರವಾದ ಸಾಮಾಜಿಕ ಕ್ರಾಂತಿಯೊಂದಕ್ಕೆ ನೆಲವನ್ನು ಹಸನುಗೊಳಿಸುವುದು ಅದರ ಗುರಿ. ಮದ್ಯ, ಜೂಜು, ಬಡ್ಡಿ, ಅನೈತಿಕತೆ, ಅತ್ಯಾಚಾರ, ಅನ್ಯಾಯ, ಅಸಮಾನತೆ, ಭ್ರಷ್ಟಾಚಾರ, ಕೋಮುವಾದ, ಜ್ಯೋತಿಷ್ಯ... ಇತ್ಯಾದಿ ಸರ್ವ ಕೆಡುಕುಗಳಿಂದಲೂ ಮುಕ್ತವಾದ ಮತ್ತು ಸತ್ಯನಿಷ್ಠವಾದ ಸಮಾಜವೊಂದನ್ನು ಕಟ್ಟುವ ಗುರಿ ಸನ್ಮಾರ್ಗದ್ದು. ದೇವ ಮತ್ತು ಮಾನವನ ನಡುವಿನ ಸಂಬಂಧವನ್ನು ವಿಶ್ಲೇಷಣೆಗೆ ಒಡ್ಡುವ ಹಾಗೂ ಜನರ ವಿವೇಚನಾ ಶಕ್ತಿಗೆ ಬಲ ನೀಡುವುದನ್ನೇ ಸನ್ಮಾರ್ಗ ಧ್ಯೇಯವನ್ನಾಗಿ ಮಾಡಿಕೊಂಡಿದೆ. ಇಂಥ ಧ್ಯೇಯವುಳ್ಳ ಯಾವುದೇ ಪತ್ರಿಕೆ ಮದ್ಯ, ಬಡ್ಡಿ, ಜೂಜು, ಜ್ಯೋತಿಷ್ಯ, ಅನೈತಿಕತೆ, ಕೋಮುವಾದ ಮುಂತಾದುವುಗಳಿಗೆ ಪೂರಕವಾದ ಜಾಹೀರಾತನ್ನು ಪ್ರಕಟಿಸಲು ಸಾಧ್ಯವೇ ಇಲ್ಲ. ಕಳೆದ 44 ವರ್ಷಗಳಿಂದಲೂ ಸನ್ಮಾರ್ಗ ಈ ಮೌಲ್ಯಕ್ಕೆ ಬದ್ಧವಾಗಿಯೇ ಪ್ರಕಟವಾಗುತ್ತಾ ಬಂದಿದೆ. ಆದರೆ, ಈ ಮೌಲ್ಯ ನಿಷ್ಠೆಗಾಗಿ ಅದು ಕಳಕೊಂಡದ್ದು ಮಾತ್ರ ಅಪಾರ. ಸನ್ಮಾರ್ಗ ಪ್ರಕಟಿಸಿದ ಜಾಹೀರಾತಿಗಿಂತಲೂ ಎಷ್ಟೋ ಪಟ್ಟು ಅಧಿಕ ಜಾಹೀರಾತನ್ನು ತಿರಸ್ಕರಿಸುತ್ತಾ ಬಂದಿದೆ. ಇದರಿಂದಾಗಿ ಉತ್ಪಾದನಾ ವೆಚ್ಚವನ್ನು ಸರಿದೂಗಿಸುವ ಸಂಕಟಕ್ಕೂ ಒಳಗಾಗಿದೆ. ಒಂದೋ ರಾಜಿಯಾಗು, ಇಲ್ಲವೇ ಬಾಗಿಲು ಮುಚ್ಚು ಎಂಬ ಇಕ್ಕಟ್ಟಿನ ಸ್ಥಿತಿಯ ನಡುವೆಯೂ ಸನ್ಮಾರ್ಗ ಇವತ್ತು ಉಳಿದುಕೊಂಡಿದ್ದರೆ, ಅದಕ್ಕೆ ಓದುಗರ ಬೆಂಬಲ ಮತ್ತು ಸತ್ಯನಿಷ್ಠೆಗೆ ದಕ್ಕುತ್ತಿರುವ ದೇವಸಹಾಯವೇ ಕಾರಣ. ಹಾಗಂತ,

ಪತ್ರಿಕೆಯ ಬೆಂಬಲಿಗರು ಮತ್ತು ಹಿತೈಷಿಗಳು ಜವಾಬ್ದಾರಿಯಿಂದ ಮುಕ್ತರಾಗುವುದಿಲ್ಲ. ಇದು ಇತರ ಟ್ಯಾಬ್ಲಾಯ್ಡ್ ಪತ್ರಿಕೆಗಳಂತೆ ಮನೋರಂಜನೆಯನ್ನೇ ಗುರಿಯಾಗಿಟ್ಟುಕೊಂಡು ಪ್ರಕಟವಾಗುತ್ತಿಲ್ಲವಾದ್ದರಿಂದ, ಜನರು ಸ್ವಯಂಪ್ರೇರಿತರಾಗಿ ಖರೀದಿಸುವ ಅಥವಾ ಚಂದಾದಾರರಾಗುವ ಸಾಧ್ಯತೆಗಳು ಬಹಳ ಹೆಚ್ಚಿಲ್ಲ. ಆದ್ದರಿಂದ, ಸನ್ಮಾರ್ಗವನ್ನು ಜನರ ಬಳಿಗೆ ತಲುಪಿಸುವ ಮತ್ತು ಅವರನ್ನು ಚಂದಾದಾರರನ್ನಾಗಿಸುವ ಜವಾಬ್ದಾರಿ ಎಲ್ಲ ಓದುಗ ಬೆಂಬಲಿಗರು ಮತ್ತು ಹಿತೈಷಿಗಳು ವಹಿಸಿಕೊಳ್ಳಬೇಕು. ಪ್ರತಿಯೊಬ್ಬ ಓದುಗ ಮತ್ತು ಹಿತೈಷಿ ಕನಿಷ್ಠ ತಮ್ಮ ಪರಿಚಯದ 5 ಮಂದಿಯನ್ನು ಸನ್ಮಾರ್ಗ ಚಂದಾದಾರರನ್ನಾಗಿ ಮಾಡಿದರೆ, ಇದು ಬಹುದೊಡ್ಡ ಮೈಲುಗಲ್ಲಾಗುವುದರಲ್ಲಿ ಅನುಮಾನವಿಲ್ಲ. ಸನ್ಮಾರ್ಗದ ಯಾವುದೇ ಓದುಗ ಅಥವಾ ಹಿತೈಷಿಗೆ ಕನಿಷ್ಠ 25ರಿಂದ 50 ಮಂದಿಯಷ್ಟು ಗೆಳೆಯರು ಇದ್ದೇ ಇರುತ್ತಾರೆ. ಇವರಲ್ಲಿ ಕೇವಲ 5 ಮಂದಿಯನ್ನು ಚಂದಾದಾರರನ್ನಾಗಿಸುವುದು ಕಷ್ಟವೇನೂ ಅಲ್ಲ. ಹೀಗೆ ಪ್ರತಿಯೊಬ್ಬರೂ 5 ಮಂದಿಯನ್ನು ಗುರಿಯಾಗಿಸಿಕೊಂಡು ಈ ಚಂದಾ ಅಭಿಯಾನದಲ್ಲಿ ತೊಡಗಿಸಿಕೊಂಡರೆ, ಇತಿಹಾಸವೇ ನಿರ್ಮಾಣವಾಗಬಹುದು. ಈ ಬಾರಿ ತನ್ನ ತಂಗಿ ಅನುಪಮ ಪತ್ರಿಕೆಯನ್ನು ಜೊತೆ ಸೇರಿಸಿಯೇ ಸನ್ಮಾರ್ಗ ತನ್ನ ಚಂದಾ ಅಭಿಯಾನವನ್ನು ನಡೆಸುತ್ತಿದೆ. ಎರಡೂ ಪತ್ರಿಕೆಗಳ ವಾರ್ಷಿಕ ಚಂದಾದಾರಿಕೆಗೆ 1000 ರೂಪಾಯಿ ಮತ್ತು ಅರ್ಧ ವರ್ಷಕೆ 630ರೂಪಾಯಿಯನ್ನು ನೀಡಿದರೆ ಸಾಕಾಗುತ್ತದೆ. ಹಾಗಂತ, ಒಂದು ಸಾವಿರ ರೂಪಾಯಿ ತೀರಾ ಸಣ್ಣ ಮೊತ್ತ ಅಲ್ಲ ಎಂಬುದು ನಿಜ. ಆದರೆ, ಪ್ರತಿದಿನ ಮೂಲಭೂತ ಅಗತ್ಯಗಳ ಹೊರತಾಗಿ ನಾವು ಮಾಡುತ್ತಿರುವ ಖರ್ಚನ್ನು ಲೆಕ್ಕ ಹಾಕಿದರೆ, ಈ ಮೊತ್ತ ಬಲು ಭಾರದ್ದೇನೂ ಅಲ್ಲ. ಪ್ರತಿದಿ ನದ ಖರ್ಚಿನಲ್ಲಿ ಕನಿಷ್ಠ 3 ರೂಪಾಯಿಯನ್ನು ತೆಗೆದಿಟ್ಟರೂ ಅನುಪಮ ಮತ್ತು ಸನ್ಮಾರ್ಗದ ವಾರ್ಷಿಕ ಚಂದಾದಾರಿಕೆಗೆ ಈ ಮೊತ್ತ ಸಾಕಾಗುತ್ತದೆ. ಇದರ ಜೊತೆಗೆ ಇನ್ನೂ ಒಂದು ಸಂಗತಿಯಿದೆ.

ಸನ್ಮಾರ್ಗ ವೆಬ್‌ಪೋರ್ಟಲ್‌ನ ಮೂಲಕ ಪ್ರತಿದಿನ ಕ್ಷಣಕ್ಷಣದ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ. ಹಾಗೆಯೇ ಸನ್ಮಾರ್ಗ ನ್ಯೂಸ್ ಚಾನೆಲ್ ವಿವಿಧ ಕಾರ್ಯಕ್ರಮಗಳನ್ನು ಪ್ರತಿದಿನ ಪ್ರಸಾರ ಮಾಡುತ್ತಲೂ ಇದೆ. ಇವು ಯಾವುವೂ ಸ್ವಯಂಚಾಲಿತ ಅಲ್ಲ. ಇದರ ಹಿಂದೆ ತಜ್ಞರ ತಂಡ ಕೆಲಸ ಮಾಡುತ್ತಿರುತ್ತದೆ. ಅವರ ವೇತನ, ತಾಂತ್ರಿಕ ಉಪಕರಣಗಳ ಖರೀದಿ ಮತ್ತು ನಿರ್ವಹಣೆ ಇತ್ಯಾದಿಗಳಿಗಾಗಿ ಹಣ ಖರ್ಚು ಮಾಡುತ್ತಲೂ ಇರಬೇಕಾಗುತ್ತದೆ. ಆದ್ದರಿಂದ ನೀವು ಕೊಡುವ ಒಂದು ಸಾವಿರ ರೂಪಾಯಿ ಯನ್ನು ಬರೇ ಸನ್ಮಾರ್ಗ ಮತ್ತು ಅನುಪಮ ಚಂದಾದಾರಿಕೆಗೆ ಮಾತ್ರ ಮಿತಿಗೊಳಿಸಿ ನೋಡಬೇಕಿಲ್ಲ. ಇದೊಂದು ಪ್ಯಾಕೇಜು. ಈ ಪ್ಯಾಕೇಜ್‌ನಲ್ಲಿ ಎರಡು ಪತ್ರಿಕೆಗಳ ಜೊತೆಗೇ ವೆಬ್ ಪೋರ್ಟಲ್ ಮತ್ತು ನ್ಯೂಸ್ ಚಾನೆಲ್ಲೂ ಲಭ್ಯವಾಗುತ್ತದೆ. ನ್ಯೂಸ್ ಚಾನೆಲನ್ನು ಸಬ್‌ಸ್ಕ್ರೈಬ್ ಮಾಡುವ ಮೂಲಕ ನೀವು ಈ ಅಭಿಯಾ ನದಲ್ಲಿ ನಮ್ಮ ಬೆಂಬಲಿಗರಾಗಬಹುದು.

ಅಂದಹಾಗೆ, ಮೌಲ್ಯನಿಷ್ಠೆಗೆ ಕಟ್ಟುಬಿದ್ದು ಜಾಹೀರಾತುಗಳನ್ನು ತಿರಸ್ಕರಿಸುತ್ತಾ ಒಂದು ಪತ್ರಿಕೆ ದೀರ್ಘ ಕಾಲ ಉಳಿಯುವುದೇ ಒಂದು ಸಾಹಸ. ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಲಭ್ಯ ಇರುವ ಜಾಹೀರಾತು ಗಳೆಂದರೆ, ಮದ್ಯ, ಬಡ್ಡಿ, ಸಿನಿಮಾ, ಜೂಜು, ಜ್ಯೋತಿಷ್ಯ ಮತ್ತು ಎದುರಾಳಿಗಳನ್ನು ತೇಜೋವಧೆಗೊಳಿಸುವ ರಾಜಕೀಯ ಇತ್ಯಾದಿಗಳದ್ದು. ಒಂದೋ ಇದನ್ನು ಸ್ವೀಕರಿಸಬೇಕು ಇಲ್ಲವೇ ಓದುಗರು, ಹಿತೈಷಿಗಳು ಮತ್ತು ಬೆಂಬಲಿಗರನ್ನು ನಂಬಿಕೊಂಡು ಇದನ್ನು ತಿರಸ್ಕರಿಸುವ ಧೈರ್ಯ ತೋರಬೇಕು. ಸನ್ಮಾರ್ಗ ಕಳೆದ 4 ದ ಶಕಗಳಿಂದಲೂ ಓದುಗರು ಮತ್ತು ಹಿತೈಷಿಗಳ ಬೆಂಬಲದ ಮೇಲೆ ವಿಶ್ವಾಸ ಇಟ್ಟುಕೊಂಡೇ ಪ್ರಕಟವಾಗುತ್ತಿರುವ ಪತ್ರಿಕೆ. ಬದುಕಿ ಉಳಿಯುವುದಕ್ಕಾಗಿ ಮೌಲ್ಯಕ್ಕೆ ತಿಲಾಂಜಲಿ ಇಡುವುದನ್ನು ಅದು ಕಲ್ಪಿಸಿಕೊಳ್ಳಲೂ ಸಿದ್ಧವಿಲ್ಲ. ಈ ಜಗತ್ತಿನಲ್ಲಿ ಸುಳ್ಳು ವೇಗವಾಗಿ ಚಲಿಸುತ್ತಿದೆ. ಸತ್ಯ ತುಸು ನಿಧಾನ. ಆದರೆ, ಒಂದಲ್ಲ ಒಂದು ದಿನ ಸತ್ಯ ಗೆದ್ದೇ ಗೆಲ್ಲುತ್ತದೆ ಮತ್ತು ಸುಳ್ಳಿಗೆ ಸೋಲಾಗುತ್ತದೆ ಎಂಬ ಪ್ರಾಕೃತಿಕ ಪಾಠದಲ್ಲಿ ಸನ್ಮಾರ್ಗ ದೃಢವಾದ ವಿಶ್ವಾಸವನ್ನು ಹೊಂದಿದೆ. ಓದುಗರು ಮತ್ತು ಹಿತೈಷಿಗಳಾದ ತಮ್ಮ ಬೆಂಬಲವೇ ನಮ್ಮ ಪಾಲಿನ ಆಮ್ಲಜನಕ. ಆದ್ದರಿಂದ ನವೆಂಬರ್ 6 ರಿಂದ 13ರ ವರೆಗೆ ನಡೆಯುವ ಸನ್ಮಾರ್ಗ-ಅನುಪಮ ಜಂಟಿ ಅಭಿಯಾನದಲ್ಲಿ ಮನಸ್ಸಿಟ್ಟು ಭಾಗಿಯಾಗಿ. ಪ್ರತಿಯೊಬ್ಬರೂ ಕನಿಷ್ಠ 5 ಮಂದಿಯನ್ನು ಚಂದಾದಾರಿಕೆ ಮಾಡುವ ಗುರಿ ಇಟ್ಟುಕೊಳ್ಳಿ. ಇದು ಅಸಾಧ್ಯ ಅಲ್ಲ.

ಮೈಸೂರಿನ ಶಿವಮ್ಮ, ಇಂಗ್ಲೆಂಡಿನ ಬಟ್ಲರ್ ಮತ್ತು ಸಂದೇಶ


17-11-2022

ಕಳೆದವಾರ ಎರಡು ಘಟನೆಗಳು ನಡೆದುವು.

1. ಮೈಸೂರಿನ ಮಂಡಿ ಮೊಹಲ್ಲಾದ ಸುನ್ನಿ ಚೌಕ್‌ನಲ್ಲಿ ಶಿವಮ್ಮಾ ಎಂಬವರು ಮೃತಪಟ್ಟರು. 30 ವರ್ಷದಿಂದ ಅದೇ ಪರಿಸರದಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅವರು ಒಂಟಿಯಾಗಿದ್ದರು. ಇಬ್ಬರು ಮಕ್ಕಳಿದ್ದು, ಅವರು ಬೆಂಗಳೂರಿನಲ್ಲಿ ವಾಸವಿದ್ದರು. ಅವರಿಗೆ ಮಾಹಿತಿ ತಿಳಿಸಿದರೂ ಮೃತದೇಹವನ್ನು ಕೊಂಡೊಯ್ಯಲೋ ಸಂಸ್ಕಾರ ನಡೆಸಲೋ ಮುಂದಾಗಲಿಲ್ಲ. ಆಗ ಅಲ್ಲಿನ ಇಸ್ಲಾಮಿಯಾ ನೌಜವಾನ್ ಸಮಿತಿ ಸದಸ್ಯರು ಮೃತದೇಹಕ್ಕೆ ತಾವೇ ಹೆಗಲು ಕೊಟ್ಟು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ. ಸ್ಮಶಾನಕ್ಕೆ 2,500 ರೂಪಾಯಿ ಶುಲ್ಕ ಕಟ್ಟಿ ಹಿಂದೂ ಸಂಪ್ರದಾಯದಂತೆ ಶವಸಂಸ್ಕಾರ ನೆರವೇರಿಸಲು ನೆರವಾಗಿದ್ದಾರೆ.

2. ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ ಮೊಯಿನ್ ಅಲಿಯವರು ಒಂದು ವೀಡಿಯೋ ಹಂಚಿಕೊAಡು ತನ್ನ ತಂಡದ ಕಪ್ತಾನ ಬಟ್ಲರ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. 20-20 ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಜಯ ಗಳಿಸಿದ ಬಳಿಕ ತಂಡ ಸಂಭ್ರಮಾಚಾರಣೆಗೆ ಸಿದ್ಧವಾಗಿದೆ. ಕಪ್ತಾನ ಬಟ್ಲರ್ ಪಕ್ಕವೇ ಇಂಗ್ಲೆಂಡ್ ತಂಡದ ಆಟಗಾರರಾದ ಆದಿಲ್ ರಶೀದ್ ಮತ್ತು ಮೊಯಿನ್ ಅಲಿ ಕುಳಿತಿದ್ದರು. ಶಾಂಪೇನ್ ಎರಚಿ ಸಂಭ್ರಮಾಚಾರಣೆಯನ್ನು ಮಾಡಲು ತಂಡ ಸಿದ್ಧವಾದಾಗ ಬಟ್ಲರ್ ಈ ಇಬ್ಬರು ಆಟಗಾರರಿಗೆ ಈ ಬಗ್ಗೆ ಸೂಚನೆ ಕೊಡುತ್ತಾರೆ. ಈ ಇಬ್ಬರು ಜೊತೆಗಾರರು ಆಲ್ಕೊ ಹಾಲ್ ಇಷ್ಟ ಪಡುವುದಿಲ್ಲ ಎಂದು ಬಟ್ಲರ್‌ಗೆ ಗೊತ್ತು. ತಕ್ಷಣ ಅವರಿಬ್ಬರೂ ಅಲ್ಲಿಂದ ಎದ್ದು ಹೋಗುತ್ತಾರೆ. ಅವರು ಹೋದುದನ್ನು ಖಚಿತಪಡಿಸಿಕೊಂಡ ಬಳಿಕ ಶಾಂಪೇನ್ ಎರಚಿ ತಂಡ ಸಂಭ್ರಮ ಆಚರಿ ಸುತ್ತದೆ. ಇದೇ ವೀಡಿಯೋವನ್ನು ಹಂಚಿಕೊಂಡಿರುವ ಮೊಯಿನ್ ಅಲಿ, ಕಪ್ತಾನನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಎರಡೂ ಘಟನೆಗಳಲ್ಲಿ ಅತಿ ಉದಾತ್ತವಾದ ಮೌಲ್ಯವಿದೆ. ಇಂಗ್ಲೆಂಡ್ ತಂಡದ 11ರ ಬಳಗದಲ್ಲಿ ಆಲ್ಕೊಹಾಲ್ ಇಷ್ಟಪಡದ ಆಟಗಾರರಿರುವುದು ಇಬ್ಬರೇ. ಉಳಿದ 9 ಮಂದಿಗೆ ಈ ಆಲ್ಕೊಹಾಲ್‌ನೊಂದಿಗೆ ಯಾವ ತಕರಾರೂ ಇಲ್ಲ. ಆದ್ದರಿಂದ, ತಂಡದಲ್ಲಿರುವ ಬಹುಸಂಖ್ಯಾತರು ಆಲ್ಕೊಹಾಲನ್ನು ಇಷ್ಟಪಡುವವರಾಗಿರುವುದರಿಂದ ಈ ಇಬ್ಬರೂ ಅವರ ಜೊತೆ ಸೇರಬೇಕು ಎಂಬ ಒತ್ತಾಯವನ್ನು ಬಟ್ಲರ್‌ಗೆ ಮಾಡಬಹುದಿತ್ತು. ಧರ್ಮದ ಆಚರಣೆಯನ್ನು ಮುಂದಿಟ್ಟು ತಂಡವಾಗಿ ಸಂಭ್ರಮಿಸುವುದರಿಂದ ಹಿಂಜರಿಯುವುದು ಸಲ್ಲದು ಎಂದು ಹೇಳಬಹುದಿತ್ತು. ಇಡೀ ತಂಡ ಒಂದು ಕಡೆ ಶಾಂಪೇನ್ ಎರಚಿ ಸಂಭ್ರಮಿಸುವಾಗ ಇಬ್ಬರು ಮಾತ್ರ ಪ್ರತ್ಯೇಕವಾಗಿ ಉಳಿಯುವುದು ಕೆಟ್ಟ ಮಾದರಿಗೆ ಕಾರಣವಾಗುತ್ತದೆ ಎಂದು ಹೇಳಬಹುದಿತ್ತು ಅಥವಾ ಹೀಗೆ ಪ್ರತ್ಯೇಕವಾಗಿ ಉಳಿದರೆ ಮುಂದೆ ನಿಮಗೆ ತಂಡದ ಬಾಗಿಲನ್ನು ಶಾಶ್ವತವಾಗಿ ಮುಚ್ಚಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಕೊಡಬಹುದಿತ್ತು. ಇಂಗ್ಲೆಂಡ್‌ನಲ್ಲಿ ಮುಸ್ಲಿಮರ ಜನಸಂಖ್ಯೆ ತೀರಾ ತೀರಾ ಕಡಿಮೆ. ಕ್ರೈಸ್ತರೇ ಅಲ್ಲಿನ ಬಹುಸಂಖ್ಯಾತರು. ಆದ್ದರಿಂದ ಶಾಂಪೇನ್ ಸಂಭ್ರಮದಲ್ಲಿ ಇಷ್ಟವಿಲ್ಲದಿದ್ದರೂ ಭಾಗವಹಿಸಬೇಕಾದುದು ಅಲ್ಪಸಂಖ್ಯಾತರ ಹೊಣೆಗಾರಿಕೆ, ದೇಶದ ಶಾಂಪೇನ್ ಸಂಸ್ಕೃತಿಯಲ್ಲಿ ಒಳಗೊಳ್ಳದಿರುವುದು ದೇಶದ್ರೋಹಕ್ಕೆ ಸಮನಾದ ಅಪರಾಧವಾಗುತ್ತದೆ ಎಂದೆಲ್ಲ ಹೇಳಿ ಬೆದರಿಸಬಹುದಿತ್ತು. ಆದರೆ, ಹಾಗೆ ಮಾಡುವುದು ಬಿಡಿ, ಶಾಂಪೇನ್ ಎರಚುವುದ ಕ್ಕಿಂತ ಮೊದಲು ತನ್ನಿಬ್ಬರು ಜೊತೆಗಾರರಿಗೆ ಆ ಬಗ್ಗೆ ಸೂಚನೆ ಕೊಡುತ್ತಾರೆ. ಇಲ್ಲಿಂದ ಸರಿದು ನಿಲ್ಲಿ ಎಂದು ಹೇಳುತ್ತಾರೆ. ಅವರು ಸರಿದು ನಿಂತಿದ್ದಾರೆ ಎಂಬುದು ಖಚಿತವಾದ ಬಳಿಕವೇ ಶಾಂಪೇನ್ ಎರಚಿ ಉಳಿದ ಆಟಗಾರರು ಸಂಭ್ರಮ ಪಡುತ್ತಾರೆ.

ಮೈಸೂರಿನ ಘಟನೆಯಲ್ಲೂ ಇದೇ ಉದಾತ್ತ ಮಾದರಿ ವ್ಯಕ್ತವಾಗುತ್ತದೆ. ಶಿವಮ್ಮರಿಗೆ ಹೇಳಿ-ಕೇಳಿ ಯಾರೂ ಇಲ್ಲ. ಮಕ್ಕಳು ಬಹುತೇಕ ತ್ಯಜಿಸಿದ್ದಾರೆ. ಶಿವಮ್ಮ ಹಿಂದೂ ಧರ್ಮಕ್ಕೆ ಸೇರಿದವರಾದುದರಿಂದ ನಮಗೇಕೆ ತಲೆಬಿಸಿ ಎಂದು ಮುಸ್ಲಿಮರು ಸುಮ್ಮನಾಗಬಹುದಿತ್ತು. ಬೇಕಾದರೆ ಹಿಂದೂಗಳೇ ಶವಸಂಸ್ಕಾರ ಮಾಡಲಿ ಎಂದು ತಮ್ಮ ಪಾಡಿಗೆ ತಾವಿರಬಹುದಿತ್ತು. ಇನ್ನು ಶವಸಂಸ್ಕಾರ ಮಾಡುವುದಿದ್ದರೂ ಅದನ್ನು ತಮ್ಮ ಕ್ರಮದಂತೆಯೇ ಮಾಡಬಹುದಿತ್ತು. ಹಾಗೆ ಮಾಡಿದರೆ ಅದನ್ನು ಊರವರಾಗಲಿ, ಆ ಶಿವಮ್ಮರ ಮಕ್ಕಳಾಗಲಿ ಪ್ರಶ್ನಿಸುವ ಯಾವ ಸಾಧ್ಯತೆಯೂ ಇರಲಿಲ್ಲ. ಅದರಲ್ಲೂ ಸ್ಮಶಾನದಲ್ಲಿ 2500 ರೂಪಾಯಿ ಶುಲ್ಕ ಕಟ್ಟಿ ಸಂಸ್ಕಾರ ಮಾಡಿಸುವುದಕ್ಕಿಂತ ಶುಲ್ಕ ತೆರದೇ ತಮಗನುಕೂಲದ ಜಾಗದಲ್ಲಿ ಮಣ್ಣು ಮಾಡಬಹುದಿತ್ತು. ಹಿಂದೂ ಶವಕ್ಕೆ ಮುಸ್ಲಿಮರೇಕೆ ಹೆಗಲು ಕೊಡಬೇಕು ಎಂದು ಮಸೀದಿ ಧರ್ಮಗುರುಗಳು ತಗಾದೆ ತೆಗೆಯಬಹುದಿತ್ತು.. ಹೀಗೆ ಹಿಂದೂ ಶಿವಮ್ಮರ ಶವಸಂಸ್ಕಾರ ಮಾಡದೇ ಇರುವುದಕ್ಕೆ ಹಲವು ಕಾರಣಗಳನ್ನು ಮುಂದೊಡ್ಡಬಹುದಾಗಿ ದ್ದರೂ ಮೈಸೂರಿನ ಮುಸ್ಲಿಮರು ಅವಾವುದನ್ನೂ ಮಾಡದೇ ಶವಕ್ಕೆ ಹೆಗಲು ಕೊಟ್ಟರು. ಗಾಂಧಿ ನಗರದಲ್ಲಿರುವ ಶಿವಮ್ಮರ ಮಕ್ಕಳನ್ನು ಸಂಪರ್ಕಿಸಿದರು. ಮಕ್ಕಳೇ ಅಸಹಕಾರ ತೋರಿದಾಗಲೂ ಹಿಂಜರಿಯದೇ ತಮ್ಮ ಕುಟುಂಬದ ಓರ್ವ ಸದಸ್ಯೆಯಂತೆ ಶಿವಮ್ಮರೊಂದಿಗೆ ನಡೆದುಕೊಂಡರು. ಶವವನ್ನು ಮಣ್ಣು ಮಾಡುವ ಸಂಪ್ರದಾಯ ತಮ್ಮದಾಗಿದ್ದರೂ ಹಿಂದೂ ಸಂಪ್ರದಾಯದಂತೆ ಶವಸಂಸ್ಕಾರಕ್ಕೆ ಬೇಕಾದ ಏರ್ಪಾಟು ಮಾಡಿದರು.

ನಿಜಕ್ಕೂ ಶ್ಲಾಘಿಸಬೇಕಾದ ಘಟನೆಗಳು ಇವು. ಹಾಗಂತ, ಮೈಸೂರಿನಲ್ಲಿ ನಡೆದ ಘಟನೆ ಅಪರೂಪದಲ್ಲಿ ಅಪರೂಪವಾದದ್ದು ಏನಲ್ಲ. ಇಂಥದ್ದು ದೇಶದ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಕೊರೋನಾ ಕಾಲದಲ್ಲಂತೂ ಇಂಥ ಮನುಷ್ಯತ್ವದ ಘಟನೆಗಳು ಅನೇಕ ನಡೆದುವು. ಪರಸ್ಪರ ಹೆಗಲು ಕೊಟ್ಟು ಹಿಂದೂ ಮುಸ್ಲಿಮರು ಬದುಕಿದರು. ಧರ್ಮ, ಜಾತಿ, ಪಕ್ಷವನ್ನು ನೋಡದೇ ಒಬ್ಬರಿಗೊಬ್ಬರು ನೆರವಾದರು. ಧರ್ಮ ಅಂದರೆ ಇದುವೇ. ಆದರೆ ನಮ್ಮ ನಡುವಿನದ್ದೇ ಒಂದು ಗುಂಪು ಇಂಥ ಸಹಕಾರ, ಸಹಬಾಳ್ವೆಯ ಬದುಕನ್ನು ಇಷ್ಟಪಡುತ್ತಿಲ್ಲ. ಹಿಂದೂ-ಮುಸ್ಲಿಮರು ಎರಡು ಧ್ರುವಗಳಾಗಿ ಶತ್ರುಗಳಂತೆ ವರ್ತಿಸುತ್ತಿರಬೇಕು ಎಂಬ ಬಯಕೆಯೊಂದು ಅವರಲ್ಲಿದೆ. ಸಂಸ್ಕೃತಿ, ಸಂಸ್ಕಾರ, ಸಂಪ್ರ ದಾಯ ಬಹುಸಂಖ್ಯಾತ ಆಚರಣೆ.. ಇತ್ಯಾದಿ ನೆಪಗಳನ್ನು ಮುಂದಿಟ್ಟು ಮುಸ್ಲಿಮರನ್ನು ಸತಾಯಿಸುವ ಪ್ರಯತ್ನವನ್ನು ಈ ಗುಂಪು ಮಾಡುತ್ತಿದೆ. ಮುಸ್ಲಿಮರ ಆಚರಣೆ, ಸಂಸ್ಕೃತಿ, ಆರಾಧನೆ, ಆಹಾರ ಕ್ರಮ ಇತ್ಯಾದಿಗಳನ್ನು ಅನುಮಾನಿಸುವ ಮತ್ತು ಬಲವಂತದಿಂದ ತಡೆಯೊಡ್ಡುವ ಪ್ರಯತ್ನಗಳನ್ನು ನಡೆಸುತ್ತಿವೆ. ಆದ್ದರಿಂದಲೇ,

ಮೈಸೂರಿನಂಥ ಘಟನೆಗಳನ್ನು ನಾವು ಮತ್ತೆ ಮತ್ತೆ ಹಂಚಿಕೊಳ್ಳಬೇಕು. ಕೊರೋನಾ ಕಾಲದಲ್ಲಿ ಮುಸ್ಲಿಮರನ್ನು ವೈರಸ್‌ಗಳಂತೆ ಬಿಂಬಿಸಿದವರು ಆ ಬಳಿಕ ಮೌನವಾದರು. ಅದಕ್ಕೆ ಕಾರಣ, ಮುಸ್ಲಿಮರ ಸೇವಾ ಗುಣ. ಸರ್ಕಾರಕ್ಕೂ ತಲುಪಲಾಗದ ಮೂಲೆಮೂಲೆಗಳಿಗೆ ತಲುಪಿದ ಮುಸ್ಲಿಮ್ ಸ್ವಯಂ ಸೇವಕರು, ಅಲ್ಲಿನ ಜನರ ಅನ್ನದ ಬಟ್ಟಲಾದರು. ಆಕ್ಸಿಜನ್ ಖರೀದಿಸಿ ಬಡವರಿಗೆ ದಾನ ಮಾಡಿದರು. ಉಚಿತ ಆ್ಯಂಬುಲೆನ್ಸ್ ಸೇವೆ ನೀಡಿದರು. ಮನೆಮನೆಗೆ ಆಹಾರದ ಕಿಟ್ ವಿತರಿಸಿದರು. ರಾಸಾಯನಿಕ ಸಿಂಪಡಣೆ ಮಾಡಿದರು. ವಲಸೆ ಕಾರ್ಮಿಕರ ಬಳಿಗೆ ತೆರಳಿ ಹಸಿವನ್ನು ಇಂಗಿಸಿದರು. ಪ್ಲಾಸ್ಮಾ ದಾನ ಮಾಡಿದರು. ಯಾರು ಕೊರೋನಾ ವೈರಸ್ ಎಂದು ಕುಹಕವಾಡುತ್ತಿದ್ದರೋ ಅವರೆಲ್ಲ ಬೆರಗಾಗುವಂತೆ ದೇಶದೆಲ್ಲೆಡೆ ಸ್ವಯಂಸೇವಕ ಮುಸ್ಲಿಮರು ಕಾಣಿಸಿಕೊಂಡರು. ಕೊರೋನಾವನ್ನೂ ಅಂಟಿಸಿಕೊಂಡರು. ಕುಟುಂಬಸ್ಥರೇ ತಮ್ಮವರ ಶವವನ್ನು ಮುಟ್ಟಲೂ ಭಯಪಡುತ್ತಿದ್ದ ವೇಳೆ, ತಾವೇ ಮುಂದೆ ನಿಂತು ಶವಸಂಸ್ಕಾರ ಮಾಡುವಷ್ಟು ಈ ಸ್ವಯಂ ಸೇವಕರು ಕಾಳಜಿ ತೋರಿದರು.

ಈಗ ಕೊರೋನಾ ಹೊರಟು ಹೋಗಿದೆ. ಜೊತೆಗೇ ಕೊರೋನಾ ಮಾಡಿಟ್ಟು ಹೋದ ಆವಾಂತರಗಳ ನೆನಪುಗಳೂ ಮರೆಯಾಗಿವೆ. ಅಲ್ಲದೇ, ಪುನಃ ಕೊರೋನಾ ಪೂರ್ವದ ಮನಸ್ಥಿತಿ ವಕ್ಕರಿಸತೊಡಗಿದೆ. ನಾವು-ಅವರು ಎಂಬ ವಿಭಜನೆಗೆ ಈ ಮಣ್ಣನ್ನು ಹಸನುಗೊಳಿಸುವ ತೀವ್ರ ಪ್ರಯತ್ನಗಳು ನಡೆಯುತ್ತಿವೆ. ಹಲಾಲ್, ಜಟ್ಕಾ ಕಟ್, ವ್ಯಾಪಾರ ಬಹಿಷ್ಕಾರ, ಹಿಜಾಬ್, ಬಾಂಗ್‌ಗೆ ಬಹಿಷ್ಕಾರ ಇತ್ಯಾದಿಗಳೆಲ್ಲ ಕಾಣಿಸಿಕೊಂಡದ್ದು ಕೊರೋನಾದ ನಂತರ. ಇಂಥ ವಿಭಜನೆಯನ್ನು ಮತ್ತೆ ಸೋಲಿಸಬೇಕಾಗಿದೆ. ಮತ್ತೊಂದು ಕೊರೋನಾ ಬರಲಿ ಎಂದು ಕಾಯುವುದಕ್ಕಿಂತ ಮನುಷ್ಯ ಪ್ರೇಮದ ಸುದ್ದಿಗಳನ್ನು ಹುಡುಕಿ ಹುಡುಕಿ ಹಂಚಿಕೊಳ್ಳಬೇಕಾಗಿದೆ. ಮುಸ್ಲಿಮರಿಗೆ ಹಿಂದೂಗಳು ಮತ್ತು ಹಿಂದೂಗಳಿಗೆ ಮುಸ್ಲಿಮರು ನೆರವಾದ ಮತ್ತು ಪರಸ್ಪರ ಆಚರಣೆ, ಆರಾಧನೆ, ಸಂಸ್ಕೃತಿಗಳಿಗೆ ಗೌರವ ನೀಡಿದ ಘಟನೆಗಳಿಗೆ ವ್ಯಾಪಕ ಪ್ರಚಾರವನ್ನು ಕೊಡಬೇಕಾಗಿದೆ. ಈ ದೇಶದಲ್ಲಿ ಹಿಂದೂ-ಮುಸ್ಲಿಮರ ಚರಿತ್ರೆ 1947ರಿಂದ ಆರಂಭವಾಗುವುದಲ್ಲ. ಸಾವಿರಕ್ಕಿಂತಲೂ ಅಧಿಕ ವರ್ಷದ ಸೌಹಾರ್ದ ಬದುಕಿನ ಇತಿಹಾಸ ಈ ದೇಶಕ್ಕಿದೆ.

ಅದನ್ನು ಹೇಳಿಕೊಳ್ಳುವ ಮತ್ತು ಸಂಭ್ರಮಿಸಿ ಆಚರಿಸುವ ಕೆಲಸ ಆಗಬೇಕಿದೆ.

ಇಬ್ಬರು ಶೇಖ್‌ಗಳ ಮುಂದೆ ತಲೆ ತಗ್ಗಿಸಿದ ದ್ವೇಷ

 18-11-2022

ಗುಜರಾತ್‌ನಲ್ಲಿ ತೂಗುಸೇತುವೆಯೊಂದು ಕಡಿದು ಉಂಟಾದ ದುರಂತದ ಬಳಿಕ ಹಬೀಬುಲ್ಲಾ ಶೇಖ್ ಮತ್ತು ನಈಮ್ ಶೇಖ್ ಎಂಬಿಬ್ಬರು ವಲಸೆ ಕಾರ್ಮಿಕರು ಸುದ್ದಿಯಲ್ಲಿದ್ದಾರೆ. ಮೊರ್ಬಿ ಸೇತುವೆ ದುರಂತಕ್ಕೀಡಾಗಿ ನೂರಾರು ಮಂದಿ ನದಿಗೆ ಬಿದ್ದಾಗ ಅವರ ರಕ್ಷಣೆಗಾಗಿ ನದಿಗೆ ಧುಮುಕಿದ ಆರು ಮಂದಿಯ ತಂಡದಲ್ಲಿ ಈ ಇಬ್ಬರು ಯುವಕರೂ ಇದ್ದರು. ಹೀಗೆ ಮುಳುಗುತ್ತಿದ್ದವರನ್ನು ನೀರಿ ನಿಂದೆತ್ತಲು ಜೀವದ ಹಂಗು ತೊರೆದು ನದಿಗಿಳಿದ ಈ ಆರು ಮಂದಿಯಲ್ಲಿ ಓರ್ವ ನೀರು ಪಾಲಾಗಿದ್ದಾನೆ. ಈ ಇಬ್ಬರೂ ಸಾಕಷ್ಟು ನೀರು ಕುಡಿದಿದ್ದಾರೆ. ಹೊಟ್ಟೆಪಾಡಿಗಾಗಿ ಕೊಲ್ಕತ್ತಾದಿಂದ ಗುಜರಾತ್‌ಗೆ ಬಂದು ಬಂಗಾರದ ಕೆಲಸಕ್ಕೆ ಸೇರಿಕೊಂಡಿದ್ದ ಈ ಇಬ್ಬರು ಯುವಕರಿಗೆ ನೀರಿಗೆ ಧುಮುಕಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಕಾದ ಯಾವ ಅನಿವಾರ್ಯತೆಯೂ ಇರಲಿಲ್ಲ. ಹಾಗೆಯೇ, ನೀರಿಗಿಳಿದು ಮುಳುಗುತ್ತಿದ್ದವರನ್ನು ರಕ್ಷಿಸುವಂತೆ ಅವರ ಮೇಲೆ ಸರ್ಕಾರವಾಗಲಿ, ಸಾರ್ವಜನಿಕರಾಗಲಿ ಒತ್ತಡ ಹಾಕುವುದಕ್ಕೆ ಸಾಧ್ಯವೂ ಇಲ್ಲ. ಇವರು ಸರ್ಕಾರಿ ನೌಕರರಲ್ಲ. ಮುಳುಗುತಜ್ಞರಾಗಿ ಗುರುತಿಸಿಕೊಂಡವರೂ ಅಲ್ಲ. ಅಲ್ಲದೇ,

ಮುಳುಗುತ್ತಿದ್ದವರನ್ನು ರಕ್ಷಿಸುವುದೆಂದರೆ, ಅದು ಅತೀವ ಅಪಾಯಕಾರಿ ಸಾಹಸ. ಮುಳುಗುತ್ತಿರುವವರನ್ನು ರಕ್ಷಿಸಲು ಹೊರಡುವ ವ್ಯಕ್ತಿ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ರಕ್ಷಿಸಲು ಬಂದವರನ್ನು ಮುಳುಗುತ್ತಿರುವವರು ಅತ್ಯಂತ ಬಲಿಷ್ಠವಾಗಿ ಹಿಡಿದುಕೊಳ್ಳುತ್ತಾರೆ ಮತ್ತು ಕೆಲವೊಮ್ಮೆ ಅವರ ಹಿಡಿತದ ಕಾರಣದಿಂದಾಗಿ ರಕ್ಷಣೆಗಿಳಿದವರೇ ಮುಳುಗುವ ಅಪಾಯವೂ ಇರುತ್ತದೆ. ಈ ಹಬೀಬುಲ್ಲಾ ಮತ್ತು ನಈಮ್ ಶೇಖ್ ಗಳಿಬ್ಬರೂ ಮುಳುಗುತಜ್ಞರಲ್ಲ. ಹವ್ಯಾಸಿ ಜೀವರಕ್ಷಕರಲ್ಲ ಮತ್ತು ಸೇತುವೆಯಿಂದ ಉರುಳಿ ಬಿದ್ದವರಿಗೂ ಇವರಿಗೂ ಕರುಳಬಳ್ಳಿ ಸಂಬಂಧವೂ ಇಲ್ಲ. ಮಾತ್ರವಲ್ಲ, ಅದು ಅವರ ರಾಜ್ಯವೇ ಅಲ್ಲ. ಹಾಗಿದ್ದೂ ಅವರಿಬ್ಬರೂ ನೀರಿಗೆ ಧುಮುಕುತ್ತಾರೆ. ಜೀವ ಪಣಕ್ಕಿಟ್ಟು ಅನೇಕರ ಪ್ರಾಣ ಕಾಪಾಡುತ್ತಾರೆ. ಅಂದಹಾಗೆ,

ರಕ್ತದಾನ ಮಾಡುವುದು, ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ದಾಖಲಿಸುವುದು, ಬಡವರಿಗೆ ನೆರವಾಗುವುದು ಇತ್ಯಾದಿಗಳಿಗೂ ಇಂಥ ಸಾಹಸ ಪ್ರವೃತ್ತಿಗೂ ವ್ಯತ್ಯಾಸ ಇದೆ. ರಕ್ತದಾನ ಮಾಡುವುದೋ ಬಡವರಿಗೆ ನೆರವಾಗುವುದೋ ಅಥವಾ ಇನ್ನಿತರ ಸೇವಾಕಾರ್ಯಗಳೆಲ್ಲ ಸಾಹಸ ಪ್ರವೃತ್ತಿಗಳಲ್ಲ. ಅವುಗಳಲ್ಲಿ ಅಪಾಯ ಸಾಧ್ಯತೆ ಇಲ್ಲ. ವಿಶಾಲ ಮನಸ್ಸು ಮತ್ತು ಮಾನವೀಯ ಗುಣಗಳಷ್ಟೇ ಇವುಗಳಿಗೆ ಸಾಕಾಗುತ್ತದೆ. ಆದರೆ, ಸ್ವತಃ ತನ್ನ ಜೀವವನ್ನೇ ಪಣಕ್ಕಿಟ್ಟು ಇತರರ ನೆರವಿಗೆ ಧಾವಿಸುವುದು ಸುಲಭ ಅಲ್ಲ. ಅದಕ್ಕೆ ಎಂಟೆದೆ ಬೇಕು. ತನ್ನ ನ್ನೂ, ತನ್ನ ತಂದೆ-ತಾಯಿ, ಪತ್ನಿ-ಮಕ್ಕಳು, ಸ್ನೇಹಿತರು ಎಲ್ಲರನ್ನೂ ಕ್ಷಣ ಮರೆತು ಪ್ರಾಣಸಂಕಟದಲ್ಲಿರುವವರ ಬಗ್ಗೆ ಮಾತ್ರ ಆಲೋಚಿ ಸುವುದು ಸುಲಭ ಅಲ್ಲ. ಎರಡು ವರ್ಷಗಳ ಮೊದಲು ಈ ದೇಶ ಕೊರೋನಾದ ಹೆಸರಲ್ಲಿ ಬಾಗಿಲು ಹಾಕಿ ಕುಳಿತುಕೊಂಡಿದ್ದಾಗ ಮುಸ್ಲಿಮ್ ಸಮುದಾಯದ ಸಂಘಟನೆಗಳು ಮತ್ತು ಯುವಕರು ಬೀದಿಯಲ್ಲಿದ್ದರು. ಹಠಾತ್ ಲಾಕ್‌ಡೌನ್ ಘೋಷಿಸಿದ ಕಾರಣ ಅನ್ನ- ಆಹಾರ ಮತ್ತು ಭದ್ರತೆ ಇಲ್ಲದೇ ನಲುಗಿ ಹೋಗಿದ್ದ ವಲಸೆ ಕಾರ್ಮಿಕರನ್ನು ಹುಡುಕಿ ಹುಡುಕಿ ಈ ಯುವಕರು ಆಹಾರ ಹಂಚಿದರು. ಶ್ರೀಮಂತರು ತಮ್ಮಲ್ಲಿರುವ ಹಣವನ್ನು ಈ ಸೇವಾ ಕಾರ್ಯಕ್ಕೆ ಕೈಬಿಚ್ಚಿ ನೀಡಿದರೆ, ಯುವಕರು ಕೊರೊನಾದ ಅಪಾಯವನ್ನು ಲೆಕ್ಕಿಸದೆಯೇ ಜೀವರಕ್ಷಣೆಗೆ ಮುಂದಾದರು. ಜನಪ್ರತಿನಿಧಿಗಳು, ಅಧಿಕಾರಿ ಗಳು, ಪೊಲೀಸರು ಮಾಸ್ಕ್ನಿಂದ ಮೂಗು ಬಾಯಿ ಮುಚ್ಚಿಕೊಂಡು, ಕೈಗೆ ಗ್ಲೌಸ್ ಹಾಕಿಕೊಂಡು, ಆಗಾಗ ಕೈ ಸ್ವಚ್ಛಗೊಳಿಸುತ್ತಾ ಇದ್ದಾಗ ಮತ್ತು ನಾಗರಿಕರು ಅಕ್ಕ-ಪಕ್ಕದವರನ್ನು ಮಾತಾಡಿಸದೇ ಮುಚ್ಚಿದ ಮನೆಯೊಳಗೆ ಕೊರೋನಾ ಭೀತಿಯಲ್ಲಿ ದಿನಗಳೆಣಿಸುತ್ತಿದ್ದಾಗ ಈ ಯುವಕರು ಕೊರೋನಾಕ್ಕೆ ಸವಾಲಾದರು. ಈ ಯುವಕರಿಗೆ ಈ ಸೇವಾಕಾರ್ಯವು ಕೊರೋನಾವನ್ನು ಉಡುಗೊರೆಯಾಗಿ ನೀಡಿತು. ಆಸ್ಪತ್ರೆಗೂ ದಾಖಲಾದರು. ಜೀವನ್ಮರಣ ಸ್ಥಿತಿಯನ್ನೂ ಎದುರಿಸಿದರು.

ಎರಡು ವರ್ಷಗಳ ಹಿಂದೆ ಕೇರಳ ಮತ್ತು ಕರ್ನಾಟಕದ ಕೊಡಗು ಜಿಲ್ಲೆಗೆ ಅಪ್ಪಳಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲೂ ಮುಸ್ಲಿಮ್ ಸಂಘಟನೆಗಳು ಮತ್ತು ಕಾರ್ಯಕರ್ತರ ಸೇವಾ ಮನೋಭಾವವು ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಗೀಡಾಗಿತ್ತು. ಇಲೆಲ್ಲಾ ಅಪಾಯವನ್ನು ನಿರೀಕ್ಷಿಸಿಯೇ ಸೇವಾಕಾರ್ಯಕ್ಕೆ ಧುಮುಕಬೇಕಾಗುತ್ತದೆ. ರಸ್ತೆ ಮತ್ತು ಮನೆ ದುರಸ್ತಿ ಕಾರ್ಯದಲ್ಲಿ ಮಗ್ನವಾಗಿರುವಾಗಲೇ ಅನಿರೀಕ್ಷಿತವಾಗಿ ಗುಡ್ಡ ಕುಸಿಯುವ ಸಾಧ್ಯತೆ ಇರುತ್ತದೆ. ಭೂಮಿ ಒಡೆದು ಧುಮ್ಮೆಂದು ನೀರು ಮೇಲೇಳುವ ಸಂದರ್ಭ ಬರುತ್ತದೆ. ಸಾಹಸ ಪ್ರವೃತ್ತಿಯ ಹೊರತು ಇಂಥ ಸನ್ನಿವೇಶವಗಳಲ್ಲಿ ಕೆಲಸ ಮಾಡುವುದು ಸುಲಭ ಅಲ್ಲ. ನಿಜವಾಗಿ,

ಹಬೀಬುಲ್ಲಾ ಶೇಖ್ ಮತ್ತು ನಈಮ್ ಶೇಖ್ ಎಂಬಿಬ್ಬರು ಯುವಕರು ನಮ್ಮೊಳಗನ್ನು ತಟ್ಟಬೇಕಾದದ್ದು ಈ ಎಲ್ಲ ಕಾರಣಗಳಿಗಾಗಿ. ಮುಳುಗುತ್ತಿರುವವರಲ್ಲಿ ತಾವೂ ಒಬ್ಬರಾಗುವ ಸಾಧ್ಯತೆ ಇದೆ ಎಂಬ ಅರಿವಿದ್ದೇ ಅವರಿಬ್ಬರೂ ನೀರಿಗೆ ಧುಮುಕಿದ್ದಾರೆ. ಅಂಥ ಅ ಪಾಯವನ್ನು ಅವರು ನೀರಿನಲ್ಲಿರುವಾಗ ಎದುರಿಸಿದ್ದಾರೆ.
ಒಂದುವೇಳೆ, ಅವರಿಬ್ಬರೂ ಮುಳುಗಿರುತ್ತಿದ್ದರೆ ಲೆಕ್ಕಕ್ಕೆ ಸಿಗುತ್ತಿದ್ದರೋ, ಗೊತ್ತಿಲ್ಲ. ಸಿಕ್ಕರೂ ಅವರಿಗೆ ಪರಿಹಾರ ಸಿಗುತ್ತಿತ್ತೋ, ಹೇಳಕ್ಕಾಗದು. ಅವರಿಬ್ಬರೂ ಪಶ್ಚಿಮ ಬಂಗಾಳದವರು. ಮೇಲಾಗಿ ಮುಸ್ಲಿಮರು. ವಲಸೆ ಕಾರ್ಮಿಕರು. ಪರಿಹಾರ ನೀಡುವ ವಿಷಯದಲ್ಲಿ ಕರ್ನಾಟಕ ಸರ್ಕಾರದ ಮಾನದಂಡವನ್ನು ಅಳವಡಿಸುವುದಾದರೆ, ಅವರಿಬ್ಬರಿಗೂ ಪರಿಹಾರ ಸಿಗುವುದಕ್ಕೆ ಸಾಧ್ಯವೇ ಇಲ್ಲ. ಹೇಗೆ ಪ್ರಾಣ ತೆತ್ತಿದ್ದಾರೆ ಎಂಬುದು ಮುಖ್ಯ ಅಲ್ಲ, ಪ್ರಾಣ ತೆತ್ತವರು ಯಾವ ಧರ್ಮದವರು ಎಂಬುದೇ ಬೊಮ್ಮಾಯಿ ಸರ್ಕಾರದ ಪರಿಹಾರ ಮಾ ನದಂಡ. ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದ್ದಲ್ಲದೇ, ಅವರ ಪತ್ನಿಗೆ ಸರ್ಕಾರಿ ಹುದ್ದೆಯನ್ನೂ ಕೊಟ್ಟು ಪ್ರಕರಣವನ್ನು ಎನ್‌ಐಎಗೆ ವಹಿಸಿಕೊಟ್ಟ ಮುಖ್ಯಮಂತ್ರಿ ಬೊಮ್ಮಾಯಿಯವರು ಮಸೂದ್ ಮತ್ತು ಫಾಝಿಲ್ ಹತ್ಯೆಗೆ ಯಾವ ಸ್ಪಂದನೆಯನ್ನೂ ವ್ಯಕ್ತಪಡಿಸಿಲ್ಲ. ಪರಿಹಾರವೂ ಇಲ್ಲ, ಉದ್ಯೋಗವೂ ಇಲ್ಲ. ಎನ್‌ಐಎ ತನಿಖೆಯೂ ಇಲ್ಲ. ಸಂತ್ರಸ್ತರ ಮನೆಗೆ ಮುಖ್ಯಮಂತ್ರಿಯವರ ಭೇಟಿಯೋ ಸಾಂತ್ವನವೋ ಏನೂ ಇಲ್ಲ. ಅಷ್ಟಕ್ಕೂ,

ಗುಜರಾತ್‌ನ ಇತಿಹಾಸ ಇದಕ್ಕಿಂತಲೂ ಶೋಚನೀಯವಾದುದು. ಈ ಇಬ್ಬರು ಶೇಖ್‌ಗಳು ನೀರಿಗೆ ಧುಮುಕುವುದಕ್ಕಿಂತ ತಿಂಗಳ ಮೊದಲಷ್ಟೇ 11 ಮಂದಿ ಅತ್ಯಾಚಾರಿ ಅಪರಾಧಿಗಳನ್ನು ಅದೇ ಗುಜರಾತ್ ಸರ್ಕಾರ ಸನ್ನಡತೆಯ ಹೆಸರಲ್ಲಿ ಬಿಡುಗಡೆಗೊಳಿಸಿತ್ತು. ಅತ್ಯಾಚಾರಕ್ಕೆ ಒಳಗಾದವರ ಹೆಸರು ಬಿಲ್ಕಿಸ್ ಬಾನು. ಅತ್ಯಾಚಾರದ ವೇಳೆ ಆಕೆ 21 ವರ್ಷದ ಗರ್ಭಿಣಿ ತರುಣಿ. ಆಕೆಯ 3 ವರ್ಷದ ಮಗಳನ್ನು ಕಣ್ಣೆದುರೇ ಈ ದುರುಳರು ತಲೆ ಒಡೆದು ಹತ್ಯೆ ಮಾಡಿದ್ದರು. ಆ ಸಂದರ್ಭದಲ್ಲಿ ಒಟ್ಟು 14 ಮಂದಿಯ ಹತ್ಯೆ ನಡೆದಿತ್ತು. ಆ ಕರಾಳ ಘಟನೆ ನಡೆದುದು 2002ರಲ್ಲಿ. ಸಾಬರ್ಮತಿ ರೈಲು ಬೆಂಕಿಗಾಹುತಿಯಾಗಿ 59 ಕರಸೇವಕರು ಜೀವಂತ ದಹನವಾದ ಬಳಿಕ ಮುಸ್ಲಿಮರ ಸಾಮೂಹಿಕ ನರಮೇಧ ನಡೆಯಿತು. ಹಾಗಂತ, ರೈಲು ದಹನಕ್ಕೂ ಬಿಲ್ಕಿಸ್‌ನಂಥ ನೂರಾರು ಮಹಿಳೆಯರಿಗೂ ಯಾವ ಸಂಬಂಧವೂ ಇರಲಿಲ್ಲ. ವಾರದ ತನಕ ರಾಜಾರೋಷವಾಗಿ ನಡೆದ ಹಿಂಸಾಚಾರದಲ್ಲಿ ಸಾವಿರಕ್ಕಿಂತಲೂ ಅಧಿಕ ಮಂದಿ ಹತ್ಯೆಗೀಡಾದರು. ಈ ಹತ್ಯೆಗೆ ಅವರು ಮುಸ್ಲಿಮರು ಎಂಬ ಕಾರಣದ ಹೊರತು ಇನ್ನಾವ ಕಾರಣವೂ ಇರಲಿಲ್ಲ. ಹಿಂಸಾಚಾರದಿಂದ ಸಾವಿರಾರು ಮಂದಿ ನಿರ್ವಸಿತರಾದರು. ಅವರದಲ್ಲದ ತಪ್ಪಿಗೆ ಉದ್ಯೋಗ, ವ್ಯಾಪಾರ, ಮನೆ, ಮಠ, ಕೃಷಿ, ಬದುಕು ಎಲ್ಲವನ್ನೂ ಅವರು ಕಳಕೊಂಡರು. ಸರ್ಕಾರವೂ ಅವರೊಂದಿಗೆ ಮುನಿಸಿಕೊಂಡಿತು. ನ್ಯಾಯಾಲಯ ಬಲವೊಂದು ಇಲ್ಲದೇ ಇರುತ್ತಿದ್ದರೆ, ಸನ್ನಡತೆಯ ಹೆಸರಲ್ಲಿ ಬಿಡುಗಡೆಗೊಂಡ ಆ 11 ಮಂದಿ ಅಪರಾಧಿಗಳು ಜೈಲಿಗೆ ಹೋಗುತ್ತಲೇ ಇರಲಿಲ್ಲ. ಅಂದಹಾಗೆ,

ರಾಜಕೀಯ ಅಧಿಕಾರಕ್ಕಾಗಿ ಮುಸ್ಲಿಮರನ್ನು ಎಷ್ಟೇ ಅಂಚಿಗೆ ತಳ್ಳಲು ಯತ್ನಿಸಿದರೂ ಅವರು ತಮ್ಮ ಜೀವಪರ ಚಟುವಟಿಕೆಗಳಿಂದಾಗಿ ಸಮಾಜದ ಗಮನವನ್ನು ಸೆಳೆಯುತ್ತಲೇ ಇರುತ್ತಾರೆ ಮತ್ತು ಅಪಪ್ರಚಾರದಲ್ಲಿ ತೊಡಗಿದವರು ಅವಮಾನದಿಂದ ತಲೆ ತಗ್ಗಿಸುವಂತೆ ಮಾಡುತ್ತಲೇ ಇರುತ್ತಾರೆ ಎಂಬುದಕ್ಕೆ ಈ ಇಬ್ಬರು ಶೇಖ್‌ಗಳೇ ಸಾಕ್ಷಿ. ಮುಸ್ಲಿಮರನ್ನು ಹೊರಗಿಟ್ಟು ಈ ದೇಶವನ್ನು ಕಲ್ಪಿಸುವುದು ಸಾಧ್ಯವೇ ಇಲ್ಲ. ಅವರಿಗೆ ಈ ಮಣ್ಣಿನೊಂದಿಗೆ ಸಾವಿರಕ್ಕಿಂತಲೂ ಅಧಿಕ ವರ್ಷಗಳ ಸಂಬಂಧ ಇದೆ. ಆದರೆ ಹಿಂದೂ-ಮುಸ್ಲಿಮ್ ಎಂದು ವಿಭಜಿಸಿ ಮತ ಕೇಳುವ ರಾಜಕೀಯಕ್ಕೆ ಈ ದೀರ್ಘ ಇತಿಹಾಸವಿಲ್ಲ. ಇದು ನಿನ್ನೆ-ಮೊನ್ನೆ ಹುಟ್ಟಿಕೊಂಡ ಕೂಸು. ಈ ಕೂಸಿನ ಮೇಲಿನ ಆಕರ್ಷಣೆ ಕ್ಷಣಿಕ. ಈಗಾಗಲೇ ಈ ಕೂಸು ಈ ದೇಶದಲ್ಲಿ ಆಕರ್ಷಣೆಯನ್ನು ಕಳಕೊಳ್ಳಲು ಪ್ರಾರಂಭಿಸಿದೆ. ಈ ಮಣ್ಣಿಗೆ ಈ ಕೂಸು ಹೊಂದಿಕೊಳ್ಳುವುದಿಲ್ಲ ಎಂಬುದನ್ನು ಜನರು ಅರಿತುಕೊಳ್ಳತೊಡಗಿದ್ದಾರೆ.

ಹಬೀಬುಲ್ಲಾ ಶೇಖ್ ಮತ್ತು ನಈಮ್ ಶೇಖ್‌ರಂಥವರ ಸಂಖ್ಯೆ ಹೆಚ್ಚಲಿ. ದ್ವೇಷಿಸುವವರಿಗೆ ಸದ್ವಿವೇಕ ಮೂಡಲಿ.

ಕುಕ್ಕರ್ ಬಾಂಬನ್ನೂ ಮೀರಿಸುವ ಪೇಪರ್ ಬಾಂಬ್

29-11-2022

 ಕುಕ್ಕರ್ ಬಾಂಬ್ ಘಟನೆಯ ಬಳಿಕ ಕನ್ನಡ ಪತ್ರಿಕೆಗಳು ಬಹುತೇಕ ಒಂದೂವರೆ ವಾರಗಳ ತನಕ ಪ್ರಕಟಿಸಿದ ವರದಿ-ಸುದ್ದಿಗಳ ಮೂಲ ಯಾವುದು? ಆರೋಪಿ ಶಾರಿಕ್ ಅಂತೂ ಈ ಮಾಹಿತಿಗಳನ್ನು ಒದಗಿಸಿಯೇ ಇಲ್ಲ. ‘ಬಾಂಬ್ ಸ್ಫೋಟದಿಂದಾದ ಗಾಯಗಳಿಂದ ಆತ ಇನ್ನೂ ಚೇತರಿಸಿಕೊಂಡಿಲ್ಲ’ ಎಂದು ಒಂದೂವರೆ ವಾರಗಳ ಬಳಿಕ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಘೋಷಿಸಿದ್ದಾರೆ. ಎಲ್ಲಿಯವರೆಗೆಂದರೆ, ‘ವೈದ್ಯರ ಹೊರತು ಇನ್ನಾರಿಗೂ ಆತ ಚಿಕಿತ್ಸೆ ಪಡೆಯುತ್ತಿರುವ ಐಸಿಯು ಕೋಣೆಗೆ ಪ್ರವೇಶ ಇಲ್ಲ’ ಎಂದೂ ಹೇಳಿದ್ದಾರೆ. ಆದ್ದರಿಂದ, ಆತನ ಹೆಸರಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳೆಲ್ಲ ಕಲ್ಪಿತ, ಊಹಾಪೋಹ ಮತ್ತು ವದಂತಿ ಎಂಬುದಾಗಿ ನೇರವಾಗಿಯೇ ಅವರು ಸಾರಿದಂತಾಗಿದೆ. ಹಾಗಿದ್ದರೆ,

ಮಂಗಳೂರಿನ ಕದ್ರಿ ದೇಗುಲ, ಧರ್ಮಸ್ಥಳ ಮಂಜುನಾಥ ಕ್ಷೇತ್ರ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಉಡುಪಿಯ ಕೃಷ್ಣ ಮಠ, ಮಂಗಳೂರಿನ ಮಂಗಳಾದೇವಿ ದೇವಸ್ಥಾನ.. ಇವೆಲ್ಲ ಆರೋಪಿ ಶಾರಿಕ್‌ನ ಟಾರ್ಗೆಟ್ ಆಗಿತ್ತು ಎಂದು ಕನ್ನಡ ಪತ್ರಿಕೆಗಳು ಮುಖ ಪುಟದಲ್ಲಿ ಸುದ್ದಿ ಪ್ರಕಟಿಸಿದುವಲ್ಲ, ಆ ಮಾಹಿತಿಯನ್ನು ಒದಗಿಸಿದವರು ಯಾರು? ಝಾಕಿರ್ ನಾಯಕ್‌ನಿಂದ ಈತ ಪ್ರಚೋದನೆ ಪಡೆದಿದ್ದ ಎಂಬ ಸುದ್ದಿಯನ್ನು ಪ್ರಕಟಿಸಿದ್ದು ಯಾವ ಆಧಾರದಲ್ಲಿ? ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಕಾಣಿಸಿಕೊಂಡಿದೆ ಎನ್ನಲಾದ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (ಐಆರ್‌ಸಿ) ಎಂಬ ಹೆಸರಿನಲ್ಲಿರುವ ಪತ್ರದ ಮೇಲೆ ಕನ್ನಡ ಮಾಧ್ಯಮಗಳು ನೂರು ಶೇಕಡಾ ವಿಶ್ವಾಸ ತಾಳಿದುದು ಯಾವ ಆಧಾರದಲ್ಲಿ? ಗುರುತು-ವಿಳಾಸ ಇಲ್ಲದ ಮತ್ತು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಪತ್ರವೊಂದಕ್ಕೆ ಮುಖಪುಟದಲ್ಲಿಟ್ಟು ಕನ್ನಡ ಪತ್ರಿಕೆಗಳು ಗೌರವ ಸೂಚಿಸಿದ್ದು ಯಾವ ಕಾರಣಕ್ಕೆ? ಒಂದೋ ಆ ಪತ್ರವನ್ನು ತನಿಖಾ ಸಂಸ್ಥೆಗಳು ದೃಢಪಡಿಸಬೇಕಿತ್ತು ಅಥವಾ ಅದರ ಮೂಲವನ್ನು ಸ್ವತಃ ಪತ್ರಿಕೆಗಳು ತನಿಖಾ ಪತ್ರಿಕೋದ್ಯಮದ ಮೂಲಕ ಕಂಡುಕೊಳ್ಳಬೇಕಿತ್ತು. ಇವಾವುದನ್ನೂ ಮಾಡದೇ ‘ಐಆರ್‌ಸಿ’ ಎಂಬ ಗುಮ್ಮವನ್ನು ತೋರಿಸಿ ಇಡೀ ದ.ಕ. ಜಿಲ್ಲೆಗೆ ಭಯ ಹಬ್ಬಿಸಿ ಬಿಟ್ಟದ್ದು ಯಾಕೆ? ಅಲ್ಲದೇ, ಆ ಪತ್ರದಲ್ಲಿ ಕುಕ್ಕರ್ ಬಾಂಬ್‌ನ ಹೊಣೆಗಾರಿಕೆಯನ್ನು ವಹಿಸಲಾಗಿತ್ತೇ ವಿನಃ ದೇಗುಲದ ಟಾರ್ಗೆಟ್‌ನ ಬಗ್ಗೆ ಮಾಹಿತಿ ಇರುವುದನ್ನು ಈ ಮಾಧ್ಯಮಗಳೇ ಪ್ರಕಟಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಹೆಸರು-ವಿಳಾಸವಿಲ್ಲದ ಬರಹವೊಂದನ್ನು ಈವರೆಗೆ ಯಾವುದೇ ಪತ್ರಿಕೆ ತನ್ನ ಮುಖಪುಟದಲ್ಲಿ ಪ್ರಕಟಿಸಿದ್ದು ಇದೆಯೇ? ಪತ್ರದ ಮೂಲವನ್ನು ಒಂದೋ ಪೊಲೀಸರಿಂದ ಅಥವಾ ಸ್ವಮೂಲದಿಂದ ಖಚಿತಪಡಿಸಿಕೊಳ್ಳದೇ ಹಾಗೇ ಬೇಕಾಬಿಟ್ಟಿಯಾಗಿ ಮುಖಪುಟದಲ್ಲಿ ಪ್ರಕಟಿಸುವುದು ಪತ್ರಿಕೋದ್ಯಮವೇ? ಅಷ್ಟಕ್ಕೂ,

ಇನ್ನೂ ಚೇತರಿಸಿಕೊಳ್ಳದ ಮತ್ತು ಮಾತನಾಡಲು ಶಕ್ತನಲ್ಲದ ಶಾರಿಕ್‌ನ ಬಗ್ಗೆ ಒಂದೂವರೆ ವಾರಗಳ ತನಕ ವಿವಿಧ ಸುದ್ದಿಗಳನ್ನು ಮಾಧ್ಯಮಗಳಿಗೆ ನೀಡಿದವರು ಯಾರು? ಮಂಗಳೂರಿನ ಪಂಪ್‌ವೆಲ್ ಮೇಲ್ಸೇತುವೆ, ರೈಲ್ವೇ ನಿಲ್ದಾಣಗಳು ಆತನ ಟಾರ್ಗೆಟ್ ಆಗಿತ್ತು ಎಂದು ಈ ಮಾಧ್ಯಮಗಳಿಗೆ ತಿಳಿಸಿದವರು ಯಾರು? ದೇವಸ್ಥಾನಗಳಿಗೆ ಆತ ಬಾಂಬಿಡುವ ಯೋಜನೆ ರೂಪಿಸಿದ್ದ ಎಂದು ಮಾಹಿತಿ ಕೊಟ್ಟವರು ಯಾರು? ಶಾರಿಕ್ ಅಲ್ಲ ಎಂದು ಸ್ವತಃ ಕಮಿಷನರ್ ಅವರೇ ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೆ ಮತ್ತ್ಯಾರು? ಪತ್ರಕರ್ತರೇ, ಸಂಪಾದಕರೇ, ಮಾಲಿಕರೇ? ಯಾಕೆ ಈ ಕತೆಗಳಲ್ಲಿ ದೇವಸ್ಥಾನಗಳೇ ಟಾರ್ಗೆಟ್ ಆಗಿವೆ? ಮಸೀದಿಗಳನ್ನು, ಚರ್ಚ್‌ಗಳನ್ನು, ಬಸದಿ, ಬೌದ್ಧ ಸ್ತೂಪಗಳನ್ನೂ ಟಾರ್ಗೆಟ್ ಎಂದು ಯಾಕೆ ಬಿಂಬಿಸಲಾಗಿಲ್ಲ? ಮಂಗಳೂರಿನ ಪ್ರಸಿದ್ಧ ಪಂಪ್‌ವೆಲ್ ಮಸೀದಿ, ಬಂದರ್ ಮಸೀದಿ, ಮಂಗಳೂರಿನ ಚರ್ಚ್, ಕಾರ್ಕಳದ ಜೈನ ಬಸದಿ ಇತ್ಯಾದಿಗಳನ್ನು ಆತನ ಟಾರ್ಗೆಟ್ ಪಟ್ಟಿಯಲ್ಲಿಟ್ಟು ಸುದ್ದಿ ಮಾಡಬಹುದಿತ್ತಲ್ಲವೇ? ಶಾರಿಕ್ ಎಂಬುದು ಮುಸ್ಲಿಮ್ ಹೆಸರು, ಆದ್ದರಿಂದ ಆತನಿಗೆ ಹಿಂದೂಗಳಲ್ಲಿ ದ್ವೇಷವಿದೆ ಎಂಬ ಸಂದೇಶವನ್ನು ರವಾನಿಸುವುದು ಈ ಸುದ್ದಿ ತಯಾರಕರ ಉದ್ದೇಶವೇ? ಮುಸ್ಲಿಮ್ ಏಕೆ ದೇವಸ್ಥಾನಗಳಿಗೆ ಬಾಂಬ್ ಇಡಬೇಕು? ದೇವಸ್ಥಾನದಿಂದ ಮುಸ್ಲಿಮರಿಗೆ ಆಗುವ ತೊಂದರೆಗಳೇನು? ಈ ದೇಶದಲ್ಲಿ ಮಸೀದಿ ಪಕ್ಕವೇ ದೇವಸ್ಥಾನವಿದೆ, ಚರ್ಚ್ ಇದೆ. ಯಾವ ಮುಸ್ಲಿಮರು ದೇವಸ್ಥಾನದ ವಿರುದ್ಧ ಪ್ರತಿಭಟಿಸಿದ್ದಾರೆ ಎಲ್ಲಿ ದೇವಸ್ಥಾನಗಳಿಗೆ ಬಾಂಬ್ ಇಟ್ಟಿದ್ದಾರೆ? ದೇಶದ ಮಣ್ಣಿನೊಂದಿಗೆ ಮುಸ್ಲಿಮರಿಗೆ ಸಾವಿರ ವರ್ಷಗಳ ನಂಟಿದೆ. ಸ್ವಾತಂತ್ರ‍್ಯಾ ನಂತರದ 75 ವರ್ಷಗಳ ಮುಸ್ಲಿಮರ ಬದುಕನ್ನೂ ಈ ದೇಶ ಕಂಡಿದೆ. ಹಿಂದೂ-ಮುಸ್ಲಿಮರು ತಮ್ಮ ಪಾಡಿಗೆ ಅನ್ಯೋ ನ್ಯವಾಗಿ ಬದುಕುತ್ತಿರುವಾಗ, ಇನ್ನೂ ಬಾಯಿ ತೆರೆಯದ ವ್ಯಕ್ತಿಯ ಭುಜದಲ್ಲಿ ಬಂದೂಕಿಟ್ಟು ಮಾಧ್ಯಮಗಳು ಸಿಡಿಸುತ್ತಿರುವ ಗುಂಡುಗಳ ಉದ್ದೇಶವೇನು? ದೇವಸ್ಥಾನಗಳು ಶಾರಿಕ್‌ನ ಟಾರ್ಗೆಟ್ ಎಂದು ಹೇಳಿದ ಅದೇ ವೇಗದಲ್ಲಿ ಮಸೀದಿಗಳೂ ಆತನ ಟಾರ್ಗೆಟ್ ಎಂದೂ ಹೇಳಬಹುದಿತ್ತಲ್ಲ? ಹೀಗೆ ಹೇಳುವುದರಿಂದ ಸಮಾಜದ ಸ್ವಾಸ್ಥ್ಯಕ್ಕೆ ಲಾಭವಿತ್ತಲ್ಲವೇ? ಕತೆ ಬರೆಯುವಾಗ ಕನಿಷ್ಠ ಸಮಾಜದ ಸ್ವಾಸ್ಥ್ಯವನ್ನಾದರೂ ಕಾಪಾಡುವಷ್ಟು ಕಾಳಜಿ ಯಾಕೆ ಈ ಮಾಧ್ಯಮಗಳು ತೋರಿಸಲಿಲ್ಲ?

ಭಯೋತ್ಪಾದನಾ ಕೃತ್ಯವು ದರೋಡೆ, ಹಲ್ಲೆ, ವಂಚನೆಯಂಥ ಪ್ರಕರಣವಲ್ಲ. ಬಾಂಬ್‌ನ ಗುಣವೇ ಸ್ಫೋಟಗೊಳ್ಳುವುದು. ಅದಕ್ಕೆ ಧರ್ಮ-ಬೇಧ ಇಲ್ಲ. ಅದನ್ನು ಎಲ್ಲಿ ಇಡಲಾಗುತ್ತೋ ಅಲ್ಲಿ ಸ್ಫೋಟಗೊಳ್ಳುತ್ತದೆ. ಮಸೀದಿಯಲ್ಲಿಟ್ಟರೂ ದೇವಸ್ಥಾನದಲ್ಲಿಟ್ಟರೂ ಸೇತುವೆಯಲ್ಲಿಟ್ಟರೂ ಅದು ತನ್ನ ಸ್ಫೋಟ ಗುಣವನ್ನು ಕಳಕೊಳ್ಳುವುದಿಲ್ಲ. ಅನಾಹುತವಷ್ಟೇ ಅದರ ಗುರಿ. ಇಂಥ ಅನಾಹುತವನ್ನು ಮಾಡಹೊರಟವ ಹಿಂದೂಗಳದ್ದೋ ಮುಸ್ಲಿಮರದ್ದೋ ಹಿತಾಕಾಂಕ್ಷಿಯಾಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಆತನ ಹೆಸರು ಮತ್ತು ಬಾಹ್ಯ ಚಹರೆಯನ್ನು ನೋಡಿ ಆತ ಇಂತಿಂಥ ಧರ್ಮೀಯರನ್ನೇ ಟಾರ್ಗೆಟ್ ಮಾಡಿದ್ದಾನೆ ಅಥವಾ ನಿರ್ದಿಷ್ಟ ಧರ್ಮೀಯರ ಧಾರ್ಮಿಕ ಕ್ಷೇತ್ರವನ್ನೇ ಉಡಾಯಿಸಲು ಸಂಚು ರೂಪಿಸಿದ್ದಾನೆ ಎಂದು ಆತ ಬಾಯಿ ಬಿಡದೇ ಖಚಿತವಾಗಿ ಹೇಳುವುದು ಅನಾಹುತಕಾರಿ.

ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಎತ್ತಿ ಕಟ್ಟುವುದಕ್ಕಾಗಿ ಮುಸ್ಲಿಮ್ ಹೆಸರಿನ ವ್ಯಕ್ತಿಯೇ ಮಸೀದಿಗಳನ್ನು ಟಾರ್ಗೆಟ್ ಮಾಡಬಹುದು, ಹಿಂದೂ ಹೆಸರಿನ ವ್ಯಕ್ತಿಯಿಂದಲೂ ಇಂಥದ್ದೇ ತಂತ್ರ ನಡೆಯಬಹುದು. ಕ್ರೌರ್ಯಕ್ಕೆ ಧರ್ಮವಿಲ್ಲ. ಇದು ಎಲ್ಲರಿಗೂ ಗೊತ್ತು. ಶ್ರದ್ಧಾ ವಾಲ್ಕರ್‌ಳನ್ನು 35 ತುಂಡುಗಳಾಗಿ ಕತ್ತರಿಸಿ ಎಸೆದಿದ್ದ ಅಫ್ತಾಬ್ ಪೂನಾವಾಲನನ್ನು ಕಳೆದವಾರ ದೆಹಲಿಯಲ್ಲಿ ಮಾಧ್ಯಮಗಳ ಮುಂದೆ ವ್ಯಕ್ತಿಯೋರ್ವ ಸಮರ್ಥಿಸಿಕೊಂಡಿದ್ದ. ತನ್ನನ್ನು ರಶೀದ್ ಖಾನ್ ಎಂದೂ ಪರಿಚಯಿಸಿಕೊಂಡಿದ್ದ. ಆದರೆ, ಆತನ ನಿಜನಾಮ ವಿಕಾಸ್ ಕುಮಾರ್ ಎಂದಾಗಿತ್ತು. ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯವ. ಆತನನ್ನು ಪೊಲೀಸರು ಪತ್ತೆ ಹಚ್ಚುವವರೆಗೆ ಜನರು ಆತನನ್ನು ಮುಸ್ಲಿಮ್ ಎಂದೇ ಭಾವಿಸಿದ್ದರು. ಇಂಥ ಉದಾಹರಣೆಗಳು ನೂರಾರು ಇವೆ. ಮುಸ್ಲಿಮ್ ಹೆಸರು ಹೇಳಿಕೊಂಡು ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಹಾಕಿದ ಮುಸ್ಲಿಮೇತರ ವ್ಯಕ್ತಿಗಳಿಗೆ ಇಲ್ಲಿ ಕೊರತೆಯಿಲ್ಲ. ಕ್ರೌರ್ಯ ಒಂದು ಮನಃಸ್ಥಿತಿ. ಅದು ಯಾರಲ್ಲೂ ಇದ್ದೀತು. ಅಂದಹಾಗೆ,

ಕುಕ್ಕರ್ ಬಾಂಬ್‌ನ ಹಿಂದೆ ಯಾರಿದ್ದಾರೆ, ಶಾರಿಕ್‌ನನ್ನು ಈ ಬಾಂಬ್‌ಗೆ ನಿಯೋಜಿಸಿದ್ದು ಯಾರು, ಅವರ ಗುರಿ ಯಾವುದು, ಏನವರ ಉದ್ದೇಶ, ಯುಎಪಿಎ ಪ್ರಕರಣದಲ್ಲಿ ಜೈಲು ಸೇರಿದ್ದ ವ್ಯಕ್ತಿ ಜಾಮೀನು ಪಡೆದ ಬಳಿಕ ಪೊಲೀಸರ ಕಣ್ಗಾವಲಿನಿಂದ ತಪ್ಪಿಸಿಕೊಂಡದ್ದು ಹೇಗೆ, ಆತನಿಗೆ ಈ ಕುಕ್ಕರ್ ಬಾಂಬ್‌ನಿಂದ ಏನು ಲಭಿಸುತ್ತದೆ... ಇತ್ಯಾದಿ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಉತ್ತರ ಸಿಗಬೇಕಾದರೆ ತ ನಿಖೆ ಪ್ರಾರಂಭವಾಗಬೇಕು. ತನಿಖೆ ಸಾಧ್ಯವಾಗಬೇಕಾದರೆ ಮೊದಲು ಆತ ಗಾಯಗಳಿಂದ ಚೇತರಿಸಿಕೊಳ್ಳಬೇಕು. ಇವಾವುವೂ ಆಗಿಲ್ಲದೇ ಇರುವಾಗ ಮಾಧ್ಯಮಗಳು ಊಹಾಪೋಹವನ್ನು ಬಿತ್ತುವುದು ಎಷ್ಟು ಸರಿ? ಅದರಲ್ಲೂ ಆತನ ಬಾಂಬನ್ನು ಇಸ್ಲಾಮೀಕರಿಸಿ, ದೇವಸ್ಥಾನಗಳನ್ನು ಟಾರ್ಗೆಟ್ ಪಟ್ಟಿಯಲ್ಲಿಟ್ಟು ಸುದ್ದಿ ಹೆಣೆಯುವುದರಿಂದ ರವಾನೆಯಾಗುವ ಸಂದೇಶವೇನು? ಇಂಥ ಸುದ್ದಿಗಳು ಹಿಂದೂ- ಮುಸ್ಲಿಮರ ನಡುವೆ ಅಗೋಚರ ವಿಭಜನೆಗೆ ಕಾಣಿಕೆ ನೀಡುತ್ತವೆ. ಮುಸ್ಲಿಮರನ್ನು ಹಿಂದೂಗಳು ಅನುಮಾನದಿಂದ ನೋಡುವುದಕ್ಕೆ ಕಾರಣಗಳನ್ನು ಒದಗಿಸಿಕೊಡುತ್ತದೆ. ಸಮಾಜದ ಸೌಹಾರ್ದ ಸಂಬಂಧಕ್ಕೆ ತಡೆಯನ್ನು ಒಡ್ಡುತ್ತದೆ. ಅಷ್ಟಕ್ಕೂ,

ಪೊಲೀಸ್ ತನಿಖಾ ವರದಿ ಬರುವವರೆಗೆ ಬಾಂಬ್ ಭಯೋತ್ಪಾದನೆಯಂಥ ಕೃತ್ಯಗಳ ವಿಷಯದಲ್ಲಿ ಮಾಧ್ಯಮಗಳು ಸಂಯಮ ಕಾಯ್ದುಕೊಳ್ಳುವುದಕ್ಕೆ ಏನು ತೊಂದರೆಯಿದೆ? ಊಹೆಯಾಧಾರಿತ ಕಲ್ಪಿತ ಕತೆಗಳನ್ನು ಪ್ರಕಟಿಸುವ ಅಗತ್ಯ ಏನಿದೆ? ಇದು ಪತ್ರಿಕೋದ್ಯಮವಲ್ಲ, ಹಿಂಸೋದ್ಯಮ.

ಇಮ್ರಾನ್ ಖೇಡಾವಾಲಾ ಮುನ್ನೆಲೆಗೆ ತಂದ ಮುಸ್ಲಿಮ್ ಮೀಸಲಾತಿ ಚರ್ಚೆ

16-12-2022

 ಗುಜರಾತ್ ವಿಧಾನ ಸಭೆಯ 182 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇಮ್ರಾನ್ ಖೇಡಾ ವಾಲಾ ಎಂಬ ಏಕೈಕ ಮುಸ್ಲಿಮ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಮೂವರು ಮುಸ್ಲಿಮ್ ಶಾಸಕರಿದ್ದರು. ಮೂವರೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಈ ಬಾರಿ ಈ ಮೂವರು ಶಾಸಕರೂ ಸೇರಿದಂತೆ ಆರು ಮಂದಿ ಮುಸ್ಲಿಮ್ ಅಭ್ಯರ್ಥಿಗಳನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಇವರಲ್ಲಿ ಇಮ್ರಾನ್ ಖೇಡಾವಾಲಾ ಮಾತ್ರ ಆಯ್ಕೆಯಾಗಿದ್ದಾರೆ. ವಿಶೇಷ ಏನೆಂದರೆ,

ಗುಜರಾತ್‌ನಲ್ಲಿ ಮುಸ್ಲಿಮ್ ಬಾಹುಳ್ಯದ 17 ಕ್ಷೇತ್ರಗಳಿವೆ. ಶಾಸಕ ಯಾರಾಗಬೇಕೆಂಬುದನ್ನು ನಿರ್ಧರಿಸುವಷ್ಟು ಸಾಮರ್ಥ್ಯ ಈ ಕ್ಷೇತ್ರಗಳ ಮುಸ್ಲಿಮರಿಗಿದೆ. ಈ 17 ಕ್ಷೇತ್ರಗಳೂ ಸೇರಿದಂತೆ ಗುಜರಾತ್‌ನ ವಿಧಾನಸಭೆಯ ಒಟ್ಟು 182 ಕ್ಷೇತ್ರಗಳ ಪೈಕಿ ಒಂದೇ ಒಂದು ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿಲ್ಲ. 2011ರ ಜನಗಣತಿ ಪ್ರಕಾರ, ಗುಜರಾತ್‌ನಲ್ಲಿ 10% ಮುಸ್ಲಿಮರಿದ್ದಾರೆ. ಸುಮಾರು 59 ಲಕ್ಷ ಮಂದಿ. ಕಳೆದ 11 ವರ್ಷಗಳಲ್ಲಿ ಈ ಸಂಖ್ಯೆಯಲ್ಲಿ ಏನಿಲ್ಲವೆಂದರೂ ಎರಡರಿಂದ ಮೂರು ಶೇಕಡಾ ಹೆಚ್ಚಾಗಿರಬಹುದು. ಇಷ್ಟೊಂದು ಬೃಹತ್ ಸಂಖ್ಯೆಯ ಸಮುದಾಯವನ್ನು ಬಿಜೆಪಿ ಸಾರಾಸಗಟಾಗಿ ತಿರಸ್ಕರಿಸಿ ಚುನಾವಣೆಯನ್ನು ಎದುರಿಸಿತ್ತು. ಅಲ್ಲದೇ, ‘ಗಲಭೆಕೋರರಿಗೆ ನಾವು 2002ರಲ್ಲಿ ಪಾಠ ಕಲಿಸಿದ್ದೇವೆ’ ಎಂದು ಚುನಾವಣಾ ಪ್ರಚಾರದ ವೇಳೆ ಗೃಹಸಚಿವ ಅಮಿತ್ ಶಾ ಹೇಳಿದ್ದರು. ಇದರ ಹೊರತಾಗಿಯೂ ಮುಸ್ಲಿಮ್ ಬಾಹುಳ್ಯದ 17 ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಜಯ ಗಳಿಸಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಹೊರತಾಗಿ ಕೇಜ್ರಿವಾಲ್ ಪಕ್ಷ 16 ಕಡೆ ಸ್ಪರ್ಧಿಸಿತ್ತು ಮತ್ತು 13 ಕ್ಷೇತ್ರಗಳಲ್ಲಿ ಓವೈಸಿ ಪಕ್ಷ ಸ್ಪರ್ಧಿಸಿತ್ತು. ಅಷ್ಟಕ್ಕೂ,

182 ಸ್ಥಾನಗಳ ವಿಧಾನಸಭೆಯಲ್ಲಿ ಏಕೈಕ ಮುಸ್ಲಿಮ್ ಅಭ್ಯರ್ಥಿ ಇರುವುದನ್ನು ಹೇಗೆ ಪರಿಗಣಿಸ ಬಹುದು? ಸುಮಾರು 60 ಲಕ್ಷಕ್ಕಿಂತಲೂ ಅಧಿಕ ಇರುವ ಸಮುದಾಯದಲ್ಲಿ ಶಾಸಕರಾಗುವುದಕ್ಕೆ ಇಮ್ರಾನ್ ಖೇಡಾವಾಲಾರ ಹೊರತು ಇನ್ನಾರೂ ಅರ್ಹರಿಲ್ಲವೇ? 155ಕ್ಕಿಂತಲೂ ಅಧಿಕ ಸ್ಥಾನಗಳನ್ನು ಪಡೆದಿರುವ ಬಿಜೆಪಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಶಾಸಕ ಇಲ್ಲ. ಆಳುವ ಪಕ್ಷದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಶಾಸಕ ಇಲ್ಲ ಎಂಬುದು ಕಾನೂನು ಪ್ರಕಾರ ತಪ್ಪಲ್ಲದೇ ಇರಬಹುದು. ಆದರೆ, ಪ್ರಜಾತಂತ್ರದ ನಿಜವಾದ ಉದ್ದೇಶಕ್ಕೆ ಇದು ಪೂರಕವೇ? ಕರ್ನಾಟಕ ವಿಧಾನಸಭೆಯಲ್ಲಿ ಸದ್ಯ 7 ಮಂದಿ ಮುಸ್ಲಿಮ್ ಶಾಸಕರಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಯೇ ಇರಲಿಲ್ಲ. ಮುಸ್ಲಿಮರಿಗೇ ಸಂಬಂಧಿಸಿದ ವಕ್ಫ್ ಮತ್ತು ಹಜ್ಜ್ ಖಾತೆಯನ್ನು ಈಗ ಶಶಿಕಲಾ ಜೊಲ್ಲೆ ನಿರ್ವಹಿಸುತ್ತಿದ್ದಾರೆ. ಒಂದುವೇಳೆ, ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಮುಜರಾಯಿ ಖಾತೆಯನ್ನು ಮುಸ್ಲಿಮ್ ಶಾಸಕನಿಗೆ ನೀಡಿರುತ್ತಿದ್ದರೆ ಬಿಜೆಪಿಯ ಪ್ರತಿಕ್ರಿಯೆ ಹೇಗಿರುತ್ತಿತ್ತು? ಸದ್ಯ,

ರಾಜ್ಯ ವಿಧಾನಸಭೆಯಲ್ಲಿ 7 ಮಂದಿ ಮುಸ್ಲಿಮ್ ಶಾಸಕರು ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಸೇರಿದವರಾಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಸಂಖ್ಯೆಯಲ್ಲೂ ಇಳಿಕೆಯಾಗುವ ಸಾಧ್ಯತೆಗಳೇ ಹೆಚ್ಚು. ಯಾಕೆಂದರೆ, ಬಿಜೆಪಿಯಂತೂ ಮುಸ್ಲಿಮರಿಗೆ ಟಿಕೆಟ್ ನೀಡುವ ಸಾಧ್ಯತೆ ಇಲ್ಲ. ಅಷ್ಟು ಮಾತ್ರವಲ್ಲ, ಮುಸ್ಲಿಮ್ ವಿರೋಧಿ ಪ್ರಚಾರವನ್ನೇ ಅದು ಮತಬೇಟೆಯ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಎಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ನಿಲ್ಲಿಸಲಾಗುತ್ತದೋ ಅಲ್ಲಿ ಮುಸ್ಲಿಮೇತರ ಮತಗಳ ಧ್ರುವೀಕರಣಕ್ಕೂ ಅದು ಮುಂದಾಗುತ್ತದೆ. ಅಲ್ಲದೇ, ದಿಢೀರ್ ಆಗಿ ಹಲವು ಪಕ್ಷೇತರ ಮುಸ್ಲಿಮ್ ಅಭ್ಯರ್ಥಿಗಳೂ ಕಣಕ್ಕಿಳಿಯುವುದೂ ನಡೆಯುತ್ತದೆ. ಈ ಮೂಲಕ ಮುಸ್ಲಿಮ್ ಮತಗಳ ವಿಭಜನೆಯೂ ನಡೆಯುತ್ತದೆ. ಜಿಗ್ನೇಶ್ ಮೇವಾನಿ ಸ್ಪರ್ಧಿಸಿದ್ದ ಗುಜರಾತ್‌ನ ಮಡ್‌ಗಾಂವ್ ಕ್ಷೇತ್ರದಲ್ಲಿ ಇಂಥದ್ದೇ ಬೆಳವಣಿಗೆ ನಡೆದಿತ್ತು. ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಓವೈಸಿ ಪಕ್ಷ ಮುಸ್ಲಿಮ್ ಅಭ್ಯರ್ಥಿಯನ್ನು ಕಳಕ್ಕಿಳಿಸಿತ್ತು. ಮಾತ್ರವಲ್ಲ, ‘ಮುಸ್ಲಿಮ್ ಅಭ್ಯರ್ಥಿಗೆ ಮತ ಹಾಕಿ ಒಗ್ಗಟ್ಟು ಪ್ರದರ್ಶಿಸುವಂತೆ’ ಮುಸ್ಲಿಮರನ್ನು ಪ್ರಚೋದಿಸುವ ಪ್ರಯತ್ನಗಳು ಬಿಜೆಪಿಯಿಂದಲೇ ನಡೆದಿತ್ತು ಎಂಬ ಮಾತುಗಳೂ ಇವೆ. ಇದೊಂದು ರಾಜಕೀಯ ತಂತ್ರ. ವಿರೋಧಿ ಮತಗಳನ್ನು ವಿಭಜಿಸಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಪ್ರಯತ್ನ. ಅಂದಹಾಗೆ,

ಮುಸ್ಲಿಮರಿಗೆ ಟಿಕೆಟ್ ನೀಡದೇ ಇರುವ ನೀತಿಯನ್ನು ಬಹಿರಂಗವಾಗಿಯೇ ಬಿಜೆಪಿ ಪಾಲಿಸುತ್ತಾ ಬರುತ್ತಿರುವುದು ಇತರ ಪಕ್ಷಗಳ ಪಾಲಿಗೂ ಸವಾಲಾಗಿ ಪರಿಣಮಿಸುವುದಕ್ಕೆ ಅವಕಾಶ ಇದೆ. ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ, ಆ ಕ್ಷೇತ್ರದ ಮುಸ್ಲಿಮೇತರ ಮತಗಳನ್ನು ಧ್ರುವೀಕರಿಸುವ ಕೃತ್ಯಕ್ಕೆ ಬಿಜೆಪಿ ಖಂಡಿತ ಇಳಿಯುತ್ತದೆ. ಮಾತ್ರವಲ್ಲ, ಮುಸ್ಲಿಮ್ ಮತಗಳ ವಿಭಜನೆಗೂ ಅದು ತಂತ್ರ ಹೆಣೆಯುತ್ತದೆ. ಇದರಿಂದಾಗಿ ಅಚ್ಚರಿಯ ಫಲಿತಾಂಶಗಳಿಗೆ ಅವಕಾಶ ತೆರೆದುಕೊಳ್ಳುತ್ತದೆ. ಗುಜರಾತ್‌ನ 17 ಮುಸ್ಲಿಮ್ ಬಾಹುಳ್ಯ ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಗೆದ್ದಿರುವುದು ಇದಕ್ಕೆ ತಾಜಾ ಉದಾಹರಣೆ. ಆದ್ದರಿಂದ, ಬಿಜೆಪಿಯೇತರ ರಾಜಕೀಯ ಪಕ್ಷಗಳೂ ಮುಸ್ಲಿಮರನ್ನು ನಿಧಾನಕ್ಕೆ ನಿರ್ಲಕ್ಷಿಸುವ ಸಾಧ್ಯತೆಯೂ ಹೆಚ್ಚಲಿದೆ. ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡುವ ರಾಜಕೀಯ ಪಕ್ಷವನ್ನು ‘ಮುಸ್ಲಿಮ್ ಓಲೈಕೆಯ’ ಪಟ್ಟಿಯಲ್ಲಿಟ್ಟು ಅಪಪ್ರಚಾರ ಮಾಡುವುದರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೂ ಇಂಥ ನಿರ್ಲಕ್ಷ್ಯವನ್ನು ಮಾಡಬಹುದು. ಅಂತಿಮವಾಗಿ ಮುಸ್ಲಿಮರಿಲ್ಲದ ವಿಧಾನಸಭೆಯಾಗುವತ್ತ ಕರ್ನಾಟಕವೂ ಸಾಗಬಹುದು. ಇಂಥ ಸಾಧ್ಯತೆಯನ್ನು ತಡೆಯುವುದು ಹೇಗೆ? ಕರ್ನಾಟಕದಲ್ಲಿ ಒಂದು ಕೋಟಿಗಿಂತಲೂ ಅಧಿಕ ಮುಸ್ಲಿಮರಿದ್ದಾರೆ. ಆದರೆ, ರಾಜ್ಯವನ್ನಾಳುವ ಪಕ್ಷದಲ್ಲಿ ಮುಸ್ಲಿಮರಿಗೆ ಸ್ಥಾನವಿಲ್ಲ. ಆಡಳಿತ ಪಕ್ಷವೊಂದು ಮುಸ್ಲಿಮ್ ರಹಿತ ನೀತಿಯನ್ನು ಅಳವಡಿಸಿಕೊಳ್ಳುವುದೆಂದರೆ, ಅದು ಆಘಾತಕಾರಿ ಮತ್ತು ಅಪಾಯಕಾರಿ. ಸದ್ಯ,

ಈ ದೇಶದಲ್ಲಿ ದಲಿತರಿಗೆ ಮೀಸಲು ಕ್ಷೇತ್ರವಿದೆ. ಆದ್ದರಿಂದ ಯಾವ ರಾಜಕೀಯ ಪಕ್ಷಕ್ಕೂ ದಲಿತರನ್ನು ನಿರ್ಲಕ್ಷಿಸಿ ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲ. ಉಳಿದ ಕ್ಷೇತ್ರದಲ್ಲಿ ದಲಿತರಿಗೆ ಟಿಕೆಟ್ ನೀಡದಿದ್ದರೂ ಮೀಸಲು ಕ್ಷೇತ್ರದಲ್ಲಿ ನೀಡಲೇಬೇಕಾದ ಅನಿವಾರ್ಯತೆ ಎಲ್ಲ ಪಕ್ಷಗಳಿಗೂ ಇದೆ. ಅಪ್ಪಟ ದಲಿತ ವಿರೋಧಿ ರಾಜಕೀಯ ಪಕ್ಷವೂ ದಲಿತರಿಗೆ ಟಿಕೆಟ್ ನೀಡಲೇಬೇಕಾದ ವ್ಯವಸ್ಥೆಯೊಂದನ್ನು ಸಾಂವಿಧಾನಿಕವಾಗಿಯೇ ಒದಗಿಸಿಕೊಡಲಾಗಿದೆ. ಬಹುಶಃ, ಮುಂದಿನ ದಿನಗಳಲ್ಲಿ ಮುಸ್ಲಿಮರು ಮೀಸಲು ಕ್ಷೇತ್ರಕ್ಕೆ ಒತ್ತಾಯಿಸಬೇಕಾದ ಅಗತ್ಯ ಸೃಷ್ಟಿಯಾಗಿದೆ. ಅಲ್ಪಸಂಖ್ಯಾತ ಎಂಬ ಪರಿಧಿಯೊಳಗೆ ಕ್ರೈಸ್ತ, ಮುಸ್ಲಿಮ್, ಜೈನ, ಸಿಕ್ಖ ಮುಂತಾಗಿ ಎಲ್ಲರೂ ಒಳಗೊಳ್ಳುವುದರಿಂದ ಅಲ್ಲೂ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ಸಿಗುವ ಮತ್ತು ಸಿಕ್ಕರೂ ಗೆಲ್ಲುವ ಸಾಧ್ಯತೆಗಳು ಕಡಿಮೆ ಇವೆ. ಯಾಕೆಂದರೆ, ಮುಸ್ಲಿಮರಿಗೆ ಟಿಕೆಟ್ ಕೊಡುವುದಿಲ್ಲ ಎಂಬ ನೀತಿಯನ್ನು ಅಳವಡಿಸಿಕೊಂಡ ಪಕ್ಷವು ಅಲ್ಲೂ ಸಿಕ್ಖ್, ಜೈನ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಮತ್ತು ಎಂದಿನ ಮತ ವಿಭಜನೆಯ ತಂತ್ರ ಹೆಣೆದು ಯಶಸ್ವಿಯಾಗಲೂ ಬಹುದು. ಆದ್ದರಿಂದ, ನಿರ್ದಿಷ್ಟವಾಗಿ ಮುಸ್ಲಿಮ್ ಮೀಸಲು ಕ್ಷೇತ್ರವನ್ನು ಸೃಷ್ಟಿ ಮಾಡಿ, ನಿರ್ದಿಷ್ಟ ಸಂಖ್ಯೆಯ ಮುಸ್ಲಿಮ್ ಪ್ರತಿನಿಧಿಗಳು ಶಾಸನ ಸಭೆ ಪ್ರವೇಶಿಸುವಂತೆ ಮಾಡುವ ಬಗ್ಗೆ ಚಿಂತನ-ಮಂಥನ ನಡೆಯಬೇಕಿದೆ. ಹಾಗಂತ,

ಇಂಥ ಬೇಡಿಕೆಗೆ ಮುಸ್ಲಿಮ್ ಸಮುದಾಯ ಖಂಡಿತ ಕಾರಣ ಅಲ್ಲ. ಮುಸ್ಲಿಮ್ ಸಮುದಾಯಕ್ಕೆ ಟಿಕೆಟ್ ನೀಡಲ್ಲ ಎಂದು ಘೋಷಿಸುವ ಮತ್ತು ಅದನ್ನು ರಾಜಕೀಯ ನೀತಿಯಾಗಿ ಅಳವಡಿಸಿಕೊಂಡಿರುವ ಪಕ್ಷವೇ ಇದಕ್ಕೆ ಕಾರಣ. ಒಂದು ದೊಡ್ಡ ಸಮುದಾಯವನ್ನು ಸಾರಾಸಗಟು ನಿರ್ಲಕ್ಷಿಸುವ ರಾಜಕೀಯ ನೀತಿಯನ್ನು ಪಕ್ಷವೊಂದು ಕೈಗೊಂಡಾಗ ಆ ಸಮುದಾಯಕ್ಕೆ ಮೀಸಲು ಕ್ಷೇತ್ರದ ಮೊರೆ ಹೋಗದೇ ಬೇರೆ ದಾರಿಯಿಲ್ಲ. ಪ್ರಜಾತಂತ್ರವೆಂಬುದು ನಿರ್ದಿಷ್ಟ ಜಾತಿ, ಧರ್ಮ, ಪಂಗಡಗಳ ಪಗಡೆಯಾಟವಲ್ಲ. ಧರ್ಮ ಮತ್ತು ಜಾತಿರಹಿತವಾಗಿ ಎಲ್ಲರನ್ನೂ ಒಳಗೊಳ್ಳುವ ವ್ಯವಸ್ಥೆ ಇದು. ಈ ವ್ಯವಸ್ಥೆಯಲ್ಲಿ ಪ್ರಮುಖ ರಾಜಕೀಯ ಪಕ್ಷವೊಂದು ಮುಸ್ಲಿಮರಿಗೆ ಪ್ರವೇಶವಿಲ್ಲ ಎಂದು ಘೋಷಿಸುವುದು ಪ್ರಜಾತಂತ್ರದ ನಿಜಸ್ಫೂರ್ತಿಗೆ ವಿರೋಧವಾದುದು. ಇದು ಮುಸ್ಲಿಮ್ ಸಮುದಾಯದ ಮೇಲೆ ಬೀರುವ ಪರಿಣಾಮ ಕೂಡ ಅಗಾಧವಾದುದು. ಈ ವ್ಯವಸ್ಥೆಯಲ್ಲಿ ತಮಗೆ ಭದ್ರತೆ ಇಲ್ಲ ಎಂಬ ಭಾವ ನಿಧಾನಕ್ಕೆ ಅವರೊಳಗೆ ತುಂಬಿಕೊಳ್ಳುವುದಕ್ಕೆ ಇಂಥ ನೀತಿಯಿಂದ ಸಾಧ್ಯವಾಗುತ್ತದೆ. ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿರಿಸುವುದು ಮತ್ತು ನಿರಂತರ ಅಪಪ್ರಚಾರಕ್ಕೆ ಒಳಪಡಿಸುವುದು ದೇಶದ ಹಿತದೃಷ್ಟಿಯಿಂದಲೂ ಕೆಟ್ಟದು. ಇಂಥ ಬೆಳವಣಿಗೆಯು ಆ ಸಮುದಾಯದ ಅಭಿವೃದ್ಧಿಗೂ ತೊಡಕಾಗಬಹುದು ಮತ್ತು ದೇಶದ ಅಭಿವೃದ್ಧಿಯನ್ನೂ ಇದು ತಡೆಯಬಹುದು. ಈ ಹಿನ್ನೆಲೆಯಲ್ಲಿ, ಗಂಭೀರ ಅವಲೋಕನ ಅತ್ಯಗತ್ಯ.

ಬಟ್ಟೆಯ ಬಣ್ಣವೂ ಧರ್ಮ ಜಿಜ್ಞಾಸೆಗೊಳಪಡುವ ದೇಶದಲ್ಲಿ ಅತ್ಯಾಚಾರವೇಕೆ ಧರ್ಮ ವಿರೋಧಿಯಾಗುವುದಿಲ್ಲ?


10-1-2023

ಸಿನಿಮಾದಲ್ಲಿ ನಟಿಯೋರ್ವರು ಧರಿಸಿದ ಬಟ್ಟೆಯ ಬಣ್ಣದಿಂದಾಗಿ ಧರ್ಮಕ್ಕೆ ಅವಮಾನವಾಗಿದೆಯೆಂದು ಪ್ರತಿಭಟನೆ ನಡೆಸುವ, ಕೇಸು ದಾಖಲಿಸುವ ಮತ್ತು ಸಿನಿಮಾದ ಬಹಿಷ್ಕಾರಕ್ಕೆ ಕರೆ ಕೊಡುವ ದೇಶದಲ್ಲಿ; ಅತ್ಯಾಚಾರದ ವಿರುದ್ಧ ಇಂಥ ಆಕ್ರೋಶಗಳು ವ್ಯಕ್ತವಾಗಿರುವುದು ಬಹಳ ಕಡಿಮೆ. ಅಲ್ಲೊಂದು ಇಲ್ಲೊಂದು ವಿಶೇಷ ಪ್ರಕರಣಗಳಲ್ಲಿ ಗಮನಾರ್ಹ ಪ್ರತಿಭಟನೆ ನಡೆದಿರುವುದನ್ನು ಬಿಟ್ಟರೆ ಉಳಿದಂತೆ ಗಾಢ ಮೌನವೊಂದು ಸಾಮಾಜಿಕವಾಗಿ ನೆಲೆಸಿದೆ. ಸಿನಿಮಾ ಎಂಬುದು ಪೂರ್ಣವಾಗಿ ದೃಶ್ಯ ವೈಭವ. ಅಲ್ಲಿ ಕತೆಯನ್ನು ಅಭಿ ನಯಿಸಲಾಗುತ್ತದೆಯೇ ಹೊರತು ವಾಸ್ತವವಾಗಿ ಅವು ನಡೆದಿರುವುದಿಲ್ಲ. ಸಿನಿಮಾದಲ್ಲಿ ನಡೆಯುವ ಹತ್ಯೆ, ಅತ್ಯಾಚಾರ, ಪ್ರೇಮ, ವಿರಹ ಎಲ್ಲವೂ ಅಭಿನಯವೇ ಹೊರತು ನಿಜ ಅಲ್ಲ. ಅಲ್ಲಿ ಧರಿಸಲಾಗುವ ಬಟ್ಟೆ ಮತ್ತು ಅದರ ಬಣ್ಣವೂ ಅಲ್ಲಿಗೆ ಸೀಮಿತ. ಆದರೆ ಇಂಥದ್ದೊಂದು ದೃಶ್ಯ ವೈಭವದಲ್ಲೂ ಧಾರ್ಮಿಕ ಚ್ಯುತಿಯನ್ನು ಕಾಣುವ ದೇಶಕ್ಕೆ ಅತ್ಯಾಚಾರದಲ್ಲಿ ಧರ್ಮದ್ರೋಹತನ ಕಾಣದಿರುವುದು ನಿಜಕ್ಕೂ ಆಶ್ಚರ್ಯಕರ. ಒಂದುವೇಳೆ,

ಅತ್ಯಾಚಾರವನ್ನು ಈ ದೇಶ ಗಂಭೀರವಾಗಿ ಪರಿಗಣಿಸಿರುತ್ತಿದ್ದರೆ, ಪ್ರತಿಭಟನೆಯೇ ಈ ದೇಶದ ಪ್ರತಿದಿನದ ಮುಖ್ಯ ಸುದ್ದಿಯಾಗಿರುತ್ತಿತ್ತು. ಅತ್ಯಾಚಾರಕ್ಕೆ ಸಂಬಂಧಿಸಿ ಕಳೆದವಾರ ಕೇಂದ್ರ ಗೃಹ ಸಚಿವಾಲಯ ಲೋಕಸಭೆಯಲ್ಲಿ ಅಂಕಿಅಂಶಗಳನ್ನು ಮಂಡಿಸಿದೆ. ಅದರ ಪ್ರಕಾರ, ಗುಜರಾತ್‌ನಲ್ಲಿ ಪ್ರತಿ ತಿಂಗಳು 45 ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. 2019 ಮತ್ತು 2021ರ ಅವಧಿಯಲ್ಲಿ ಗುಜರಾತ್‌ನಲ್ಲಿ 2156 ಮಹಿಳೆಯರ ಮೇಲೆ ಅತ್ಯಾಚಾರವಾಗಿದೆ. 2019ರಲ್ಲಿ ರಾಜಸ್ತಾನ ಅತ್ಯಾಚಾರದ ರಾಜ್ಯವಾಗಿ ಗುರುತಿಸಿಕೊಂಡಿತ್ತು. ಒಟ್ಟು 5997 ಪ್ರಕರಣಗಳು ದಾಖಲಾಗಿದ್ದುವು. ಉತ್ತರ ಪ್ರದೇಶದಲ್ಲಿ 3065 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದುವು. 2021ರಲ್ಲಿ ಈ ದೇಶದಲ್ಲಿ ಒಟ್ಟು 31,677 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇವೆಲ್ಲ ಪೊಲೀಸು ಠಾಣೆಯಲ್ಲಿ ಅಧಿಕೃತವಾಗಿ ದಾಖಲಾದ ಪ್ರಕರಣಗಳು. ಇ ನ್ನು, ಪೊಲೀಸ್ ಠಾಣೆ ಹತ್ತದ ಮತ್ತು ಹತ್ತಿದರೂ ಅಲ್ಲೇ ರಾಜಿಯಲ್ಲಿ ಕೊನೆಗೊಳ್ಳುವ ಪ್ರಕರಣಗಳು ಈ ದಾಖಲಾದ ಪ್ರಕರಣಗಳ ಹಲವು ಪಟ್ಟು ಇರಬಹುದು. 31,677 ಪ್ರಕರಣಗಳು ಅಂದರೆ, ದಿನದಲ್ಲಿ ಸರಾಸರಿ 86 ಪ್ರಕರಣಗಳು ಎಂದರ್ಥ. 2020ರಲ್ಲಿ 28,046 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 2019ರಲ್ಲಿ 32,033 ಪ್ರಕರಣಗಳು ದಾಖಲಾಗಿದ್ದುವು. ಅಂದಹಾಗೆ,

ಈ ದೇಶದಲ್ಲಿ ಪ್ರತೀ 15 ನಿಮಿಷಗಳಿಗೊಮ್ಮೆ ಅತ್ಯಾಚಾರ ಪ್ರಕರಣ ಅಧಿಕೃತವಾಗಿ ದಾಖಲಾಗುತ್ತಿದ್ದರೂ ಅದೇಕೆ ಧರ್ಮದ್ರೋಹಿಯಾಗಿ, ಧರ್ಮಕ್ಕೆ ಎಸಗುವ ಅವಮಾನವಾಗಿ ಚರ್ಚಿತವಾಗುತ್ತಿಲ್ಲ? ಜಾತ್ರೋತ್ಸವದ ವೇಳೆ ದೇವಸ್ಥಾನದ ಆವರಣದಲ್ಲಿ ಮುಸ್ಲಿಮರು ವ್ಯಾಪಾರ ಮಾಡುವುದು ತಪ್ಪು, ಹಲಾಲ್ ಆಹಾರ ಕ್ರಮ ತಪ್ಪು, ಹಿಜಾಬ್ ತಪ್ಪು, ಆಝಾನ್ ತಪ್ಪು... ಹೀಗೆ ತಪ್ಪುಗಳ ಪಟ್ಟಿಯನ್ನೇ ಬಿಡುಗಡೆಗೊಳಿಸಿ ಪ್ರತಿಭಟನೆ ನಡೆಯುತ್ತಿರುವ ಈ ದೇಶದಲ್ಲಿ ಅತ್ಯಾಚಾರವೇಕೆ ಇಂಥದ್ದೇ ಪ್ರತಿಭಟನಾ ಬಿಸಿಯನ್ನು ಎದುರಿಸುತ್ತಿಲ್ಲ? ಅತ್ಯಾಚಾರದ ಆರೋ ಪವನ್ನು ಹೊತ್ತು ಧಾರ್ಮಿಕ ನೇತಾರರೇ ಜೈಲು ಪಾಲಾಗುತ್ತಿರುವುದರ ಹೊರತಾಗಿಯೂ ಅವರ ಬಗ್ಗೆ ಸಮಾಜ ಮೌನವಾಗುತ್ತಿರುವುದರ ಉದ್ದೇಶವೇನು? ಅಂದಹಾಗೆ,

ಸಾಮಾನ್ಯ ಕ್ರಿಮಿನಲ್ ಪ್ರಕರಣಗಳಲ್ಲಿ ಅತ್ಯಾಚಾರಕ್ಕೆ ಈ ದೇಶದಲ್ಲಿ ನಾಲ್ಕನೇ ಸ್ಥಾನವಿದೆ. ದರೋಡೆ, ವಂಚನೆ, ಹತ್ಯೆಯಂಥ ಸಾಮಾನ್ಯ ಪ್ರಕರಣವಾಗಿ ಅತ್ಯಾಚಾರವೂ ಈ ದೇಶದಲ್ಲಿ ಪರಿಗಣಿತವಾಗಿದೆ ಎಂಬುದು ಇದರರ್ಥ. ಹೆಣ್ಣನ್ನು ದೈಹಿಕ ಮತ್ತು ಮಾನಸಿಕವಾಗಿ ಇರಿಯುವ ಅತ್ಯಾಚಾರ ಪ್ರಕರಣವು ಹೆಣ್ಣನ್ನು ದೇವತೆ ಎಂದು ಪೂಜಿಸುವ ದೇಶದಲ್ಲಿ ಸಾಮಾನ್ಯವೆಂಬಷ್ಟು ಸಹಜವಾಗಿ ಮಾರ್ಪಡಾಗಲು ಏನು ಕಾರಣ? ಯಾಕೆ ಇದು ಧರ್ಮದ ಮೇಲಿನ ಹಲ್ಲೆಯಾಗಿ, ಧರ್ಮಕ್ಕೆ ಮಾಡುವ ಅಪಚಾರವಾಗಿ ಗುರುತಿಗೀಡಾಗುತ್ತಿಲ್ಲ? ಸಿನಿಮಾವೊಂದರ ಬಟ್ಟೆ ಉಂಟು ಮಾಡುವ ಧಾರ್ಮಿಕ ಆಕ್ರೋಶದ ಒಂದು ಶೇಕಡಾದಷ್ಟೂ ಆಕ್ರೋಶ ಅತ್ಯಾಚಾರದ ವಿರುದ್ಧ ಯಾಕೆ ಉಂಟಾಗುತ್ತಿಲ್ಲ? ನಿಜವಾಗಿ,

ಈ ದೇಶದಲ್ಲಿ ಧರ್ಮದ ಹೆಸರಲ್ಲಿ ಆಗುತ್ತಿರುವ ಪ್ರತಿಭಟನೆ-ಹೇಳಿಕೆ, ಆಕ್ರೋಶಗಳು ಎಷ್ಟು ಪ್ರಾಮಾಣಿಕ ಎಂಬುದನ್ನು ಅಳೆಯುವುದಕ್ಕೆ ಈ ಅತ್ಯಾಚಾರ ಪ್ರಕರಣಗಳೇ ಧಾರಾಳ ಸಾಕು. ಇಲ್ಲಿ ‘ಧರ್ಮಕ್ಕೆ ಅವಮಾನವಾಗಿದೆ’ ಎಂಬ ಹೆಸರಲ್ಲಿ ನಡೆಯುವ ಯಾವುದೇ ಪ್ರತಿಭಟನೆಯು ನಿಜಾರ್ಥದಲ್ಲಿ ಧಾರ್ಮಿಕ ಅವಮಾನದ ಉದ್ದೇಶದಿಂದಾಗಿ ಉಂಟಾಗುವುದಿಲ್ಲ. ರಾಜಕೀಯ ಲಾಭದ ಉದ್ದೇಶವೇ ಅಂಥ ಪ್ರತಿಭಟನೆಗಳಿಗೆ ಪ್ರೇರಣೆಯಾಗಿರುತ್ತದೆ. ಆದರೆ, ಬರೇ ರಾಜಕೀಯ ಉದ್ದೇಶದ ಪ್ರತಿಭಟನೆಗೆ ಒಟ್ಟು ಸಮಾಜವನ್ನು ಒಪ್ಪಿಸುವ ಸಾಮರ್ಥ್ಯ ಇರುವು ದಿಲ್ಲವಲ್ಲ. ಆದರೆ, ಅದೇ ಪ್ರತಿಭಟನೆಯನ್ನು ಧರ್ಮದ ಅಗತ್ಯವಾಗಿ ಬಿಂಬಿಸಿದಾಗ ಅಂಥ ಪ್ರತಿಭಟನೆಯನ್ನು ಸಮಾಜ ತನ್ನದೆಂದು ಭಾವಿಸುತ್ತದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅಂಥ ಪ್ರತಿಭಟನೆಯ ಪರವಹಿಸಿ ಮಾತಾಡುತ್ತದೆ. ಆದ್ದರಿಂದಲೇ, ಸಿನಿಮಾದ ಬಟ್ಟೆ, ಹಲಾಲ್ ಆಹಾರ ಕ್ರಮ, ಆಝಾನ್, ಹಿಜಾಬ್, ಮುಸ್ಲಿಮರ ವ್ಯಾಪಾರ... ಇತ್ಯಾದಿಗಳಿಗೆ ಧಾರ್ಮಿಕ ಬಣ್ಣ ಕೊಟ್ಟು ನಾಗರಿಕ ಮನಸ್ಸನ್ನು ಕಲುಷಿತಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಆದರೆ,
ಅತ್ಯಾಚಾರ ಪ್ರಕರಣ ಹೀಗಲ್ಲ. ಈ ದೇಶದಲ್ಲಿ ಅತ್ಯಂತ ಹೆಚ್ಚು ಅತ್ಯಾಚಾರಿ ಸಂತ್ರಸ್ತರು ಮತ್ತು ಆರೋಪಿಗಳು ಯಾರು ಎಂಬುದು ಹೀಗೆ ಪ್ರತಿಭಟನೆ ಮಾಡುವವರಿಗೆ ಚೆನ್ನಾಗಿ ಗೊತ್ತು. ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಖಂಡರೇ ಅತ್ಯಾಚಾರ ಆರೋಪವನ್ನು ಹೊತ್ತುಕೊಂಡು ತಿರುಗಾಡುತ್ತಿದ್ದಾರೆ. ಕೆಲವರು ಜೈಲಿಗೂ ಹೋಗಿದ್ದಾರೆ. ಒಂದುವೇಳೆ, ಈ ಅತ್ಯಾಚಾರವನ್ನು ಧರ್ಮದ್ರೋಹವಾಗಿಯೋ ಅವಮಾನವಾಗಿಯೋ ಪರಿಗಣಿಸಿ ಪ್ರತಿಭಟನೆಗಿಳಿದರೆ ಅದರಿಂದ ರಾಜಕೀಯ ಲಾಭ ಹುಟ್ಟದು ಎಂಬುದು ಇವರಿಗೆ ಗೊತ್ತು. ಇದರ ಬದಲು ಅತ್ಯಾಚಾರದ ಆರೋಪಿ ಮುಸ್ಲಿಮ್ ಆದರೆ, ತಕ್ಷಣ ಈ ಮಂದಿ ಎದ್ದು ನಿಲ್ಲುತ್ತಾರೆ. ಶ್ರದ್ಧಾ ವಾಲ್ಕರ್ ಹತ್ಯಾ ಪ್ರಕರಣದ ಆರೋಪಿಯ ಹೆಸರು ಅಫ್ತಾಬ್ ಪೂನಾವಾಲ ಎಂದು ಬಹಿರಂಗವಾದ ಕೂಡಲೇ ಹೇಳಿಕೆಗಳ ಮೇಲೆ ಹೇಳಿಕೆಗಳು ಬಿಡುಗಡೆಯಾಗುತ್ತವೆ. ಲವ್ ಜಿಹಾದ್ ಎಂಬ ಚರ್ಚೆ ನಡೆಯುತ್ತದೆ. ಟ್ವಿಟರ್‌ನಲ್ಲಿ ಚರ್ಚೆ ಟ್ರೆಂಡಿಂಗ್ ಆಗುತ್ತದೆ. ಅಲ್ಲಲ್ಲಿ ಲವ್ ಜಿಹಾದ್ ವಿರುದ್ಧ ಪೋಸ್ಟರ್‌ಗಳೂ ಕಾಣಿಸಿಕೊಳ್ಳುತ್ತದೆ. ಆದರೆ, ಆ ಬಳಿಕ ಅಂಥ ಡಝನ್‌ಗಟ್ಟಲೆ ಹತ್ಯಾ ವರದಿಗಳು ಪ್ರಕಟವಾದರೂ ಆ ಬಗ್ಗೆ ಒಂದೇ ಒಂದು ಪೋಸ್ಟರ್ ಆಗಲಿ, ಟ್ವಿಟರ್ ಅಭಿಯಾನವಾಗಲಿ, ಧರ್ಮ ಜಿಜ್ಞಾಸೆಯಾಗಲಿ ನಡೆಯುವುದಿಲ್ಲ. ಇದೀಗ ಸೀರಿಯಲ್ ನಟಿ ತುನಿಷ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಿಗೇ ಪುನಃ ಲವ್ ಜಿಹಾದ್ ಚರ್ಚೆ ಮುನ್ನೆಲೆಗೆ ಬಂದಿದೆ. ಯಾಕೆಂದರೆ, ಆಕೆಯ ಗೆಳೆಯನ ಹೆಸರು ಝೀಶಾನ್ ಖಾನ್. ಅಂದಹಾಗೆ,

ಧರ್ಮದ ಮುಖವಾಡವನ್ನು ಧರಿಸಿಕೊಂಡು ಮಾಡುವ ರಾಜಕೀಯ ಉದ್ದೇಶದ ಯಾವುದೇ ಹೇಳಿಕೆ, ಪ್ರತಿಭಟನೆಗಳು ಅಂತಿಮವಾಗಿ ಧರ್ಮವನ್ನು ದುರ್ಬಲಗೊಳಿಸುತ್ತದೆಯೇ ಹೊರತು ಇನ್ನೇನನ್ನೂ ಅಲ್ಲ. ರಾಜಕಾರಣಿಗಳಿಗೆ ಅಧಿಕಾರ ಮಾತ್ರ ಮುಖ್ಯವಾಗಿರುತ್ತದೆ. ಆ ಅಧಿಕಾರಕ್ಕಾಗಿ ಅವರು ಲಭ್ಯವಿರುವ ಎಲ್ಲ ಆಧಾರಗಳನ್ನೂ ಬಳಸಬಲ್ಲರು. ಅವರಿಗೆ ಕ್ರಿಮಿನಲ್‌ಗಳೂ ಬೇಕು. ಭ್ರಷ್ಟ ಅಧಿಕಾರಿಗಳೂ ಬೇಕು. ಅತ್ಯಾಚಾರಿಗಳೂ ಬೇಕು. ಆದರೆ ಇಂಥ ಸಂದರ್ಭದಲ್ಲಿ ನಾಗರಿಕ ಸಮಾಜ ಅವನ್ನು ಲಘುವಾಗಿ ಪರಿಗಣಿಸಿದರೆ ಕೊನೆಗೆ ಧರ್ಮವನ್ನು ಅವರೇ ವ್ಯಾಖ್ಯಾನ ಮಾಡಲು ಪ್ರಾರಂಭಿಸುತ್ತಾರೆ. ಧರ್ಮದ ಹೆಸರಲ್ಲಿ ಸಮಾಜವನ್ನು ಪ್ರಚೋದಿಸಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುತ್ತಾರೆ. ಇಂದಿನ ಭಾರತ ಈ ಸ್ಥಿತಿಗೆ ಉತ್ತಮ ಉದಾಹರಣೆಯಾಗಿದೆ. ಯಾವುದನ್ನು ಖಂಡಿಸಬೇಕೋ ಮತ್ತು ಪ್ರತಿಭಟಿಸಬೇಕೋ ಆ ವಿಷಯಕ್ಕೆ ಸಂಬಂಧಿಸಿ ದೀರ್ಘ ಮೌನ ಪಾಲಿಸುತ್ತಿರುವವರು, ಬಹುತ್ವದ ಭಾರತದಲ್ಲಿ ತೀರಾ ಸಹಜವಾಗಿರುವ ಆಝಾನ್, ಹಿಜಾಬ್, ಹಲಾಲ್ ಆಹಾರ ಕ್ರಮಗಳ ವಿರುದ್ಧ ದನಿ ಎತ್ತುತ್ತಿದ್ದಾರೆ.

ದರೋಡೆ, ಭ್ರಷ್ಟಾಚಾರ, ಮೋಸ ಇತ್ಯಾದಿಗಳಂತೆ ಅತ್ಯಾಚಾರವೂ ಈ ದೇಶದಲ್ಲಿ ಸಾಮಾನ್ಯವಾಗಿರುವ ಬಗ್ಗೆ ಆತಂಕಪಡಬೇಕಾದ ನಾವೆಲ್ಲ ಏನೂ ಆಗಿಲ್ಲವೆಂಬಂತೆ ಸಹಜವಾಗಿ ಬದುಕುತ್ತಿದ್ದೇವಲ್ಲ, ಅದುವೇ ಬಹುದೊಡ್ಡ ದುರಂತ. ಈ ದೇಶದಲ್ಲಿ ಪ್ರತೀ 15 ನಿಮಿಷಕ್ಕೊಮ್ಮೆ ಅಧಿಕೃತವಾಗಿ ಯಾವನೋ ಓರ್ವ ಕ್ರೂರಿ ಓರ್ವ ಹೆಣ್ಣು ಮಗಳನ್ನು ಹರಿದು ಮುಕ್ಕುತ್ತಾನಲ್ಲ- ಇದು ಧರ್ಮಕ್ಕೆ ಮಾಡುವ ಅತಿದೊಡ್ಡ ಅವಮಾನ. ಆದರೆ ಧರ್ಮದ್ವೇಷದ ಪೊರೆ ಕವಿದಿರುವ ನಾಡಿಗೆ ಇದು ಅರ್ಥವಾಗುವುದು ಹೇಗೆ?

ಪ್ರಧಾನಿಯ ಮೌನವನ್ನು ಪ್ರಶ್ನಿಸುತ್ತಿರುವ ಹಲ್‌ದ್ವಾನಿಯ ಫೋಟೋ

 11-1-2023

ದ್ವೇಷ ಭಾಷಣ, ಸುಳ್ಳು ಪ್ರಚಾರ ಮತ್ತು ಮುಸ್ಲಿಮರನ್ನು ನಿರ್ಲಕ್ಷಿಸುವ ಪ್ರಕ್ರಿಯೆ ಬಿರುಸು ಪಡೆದುಕೊಂಡಿದೆ. ಶಿವಮೊಗ್ಗದಲ್ಲಿ ಡಿಸೆಂಬರ್ 18ರಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಆಡಿರುವ ಮಾತುಗಳು ಈ ದ್ವೇಷ ಭಾಷಣದ ಪಟ್ಟಿಗೆ ಇತ್ತೀಚಿನ ಸೇರ್ಪಡೆ. ಉತ್ತರಾಖಂಡದ ಹಲ್‌ದ್ವಾನಿಯಲ್ಲಿ ಪ್ರತಿಭಟನಾ ನಿರತ ಮುಸ್ಲಿಮರ ಬಗ್ಗೆ ಜನವರಿ 8ರಂದು ಸುಳ್ಳು ಫೋಟೋವೊಂದನ್ನು ಹರಿಯಬಿಟ್ಟು ಅಪಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ಈ ದ್ವೇಷದ ಇನ್ನೊಂದು ತುದಿ. ಈ ಎರಡರ ನಡುವೆ ದ್ವೇಷ ಪ್ರಚಾರದ ಇನ್ನಷ್ಟು ಪ್ರಕರಣಗಳೂ ನಡೆದಿವೆ. ಗೃಹಸಚಿವ ಆರಗ ಜ್ಞಾನೇಂದ್ರ ಸಹಿತ ಹಲವು ಸಚಿವರು ಮತ್ತು ಬಿಜೆಪಿ ಮುಖಂಡರ ಎದುರೇ ಜಗದೀಶ್ ಕಾರಂತ್ ಎಂಬವ ಕಡು ದ್ವೇಷದ ಭಾಷಣ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕರೆಯಂತೂ ಸದ್ಯ ಕುಖ್ಯಾತವಾಗಿದೆ. ‘ರಸ್ತೆ, ಚರಂಡಿ, ಮೂಲಭೂತ ಸೌಲಭ್ಯಗಳ ಬಗ್ಗೆ ಪ್ರಶ್ನಿಸಬೇಡಿ, ಲವ್ ಜಿಹಾದ್‌ನ ಬಗ್ಗೆ ಚರ್ಚಿಸಿ...’ ಎಂದು ಹೇಳುವ ಮೂಲಕ ಮುಸ್ಲಿಮ್ ಸಮುದಾಯದ ಬಗ್ಗೆ ಭೀತಿಯ ಸಂದೇಶವನ್ನು ಹರಡಿದ್ದಾರೆ. ಇದರ ನಡುವೆಯೇ, ಪಿಎಸ್‌ಐ ಹಗರಣದ ಮುಖ್ಯ ರೂವಾರಿಯಾಗಿ 9 ತಿಂಗಳ ಕಾಲ ಜೈಲಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡ ದಿವ್ಯಾ ಹಾಗರಗಿಯನ್ನು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದ್ದಾರೆ.

ಉತ್ತರಾಖಂಡದ ಹಲ್‌ದ್ವಾನಿಯಲ್ಲಿರುವ ಸುಮಾರು 50 ಸಾವಿರ ಮಂದಿಯನ್ನು ತೆರವುಗೊಳಿಸುವಂತೆ ಡಿಸೆಂಬರ್ 20ರಂದು ಉತ್ತರಾಖಂಡ್ ಹೈಕೋರ್ಟ್ ಆದೇಶಿಸಿತ್ತು. ಸುಮಾರು 4 ಸಾವಿರ ಕುಟುಂಬಗಳು ವಾಸವಾಗಿರುವ ಈ ಪ್ರದೇಶವು ರೈಲ್ವೆ ಇಲಾಖೆಯದ್ದು ಎಂಬ ತೀರ್ಪನ್ನೂ ಅದು ನೀಡಿತ್ತು. ಇಲ್ಲಿನ ನಿವಾಸಿಗಳಲ್ಲಿ ಹೆಚ್ಚಿನವರೂ ಮುಸ್ಲಿಮರು. ಇಲ್ಲಿ ಸರ್ಕಾರಿ ಶಾಲೆ, ಕಾಲೇಜು, ಆಸ್ಪತ್ರೆ ಇತ್ಯಾದಿ ಎಲ್ಲವೂ ಇವೆ. ಈ ಆದೇಶದ ವಿರುದ್ಧ ಅಲ್ಲಿನ ನಿವಾಸಿಗಳು ಪ್ರತಿಭಟನೆಗೆ ಇಳಿದರು. ಜೊತೆಗೇ ಸುಪ್ರೀಮ್ ಕೋರ್ಟ್ನ ಬಾಗಿಲು ಬಡಿದರು. ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಮ್ ಕೋರ್ಟು ತಡೆಯಾಜ್ಞೆಯನ್ನೂ ನೀಡಿತು. ಈ ತಡೆಯಾಜ್ಞೆಗೆ ನಿವೃತ್ತ ಮೇಜರ್ ಜನರಲ್ ಸುರೇಂದ್ರ ಪೂನಿಯಾ ಎಂಬವರು ಅತ್ಯಂತ ವ್ಯಂಗ್ಯಾತ್ಮಕವಾಗಿ ಟ್ವೀಟರ್‌ನಲ್ಲಿ ಪ್ರತಿಕ್ರಿಯಿಸಿದರು. ಮಾತ್ರವಲ್ಲ, ‘ಹಲ್‌ದ್ವಾನಿ ಅತಿಕ್ರಮಣ’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ರೈಲ್ವೆ ಹಳಿಯಲ್ಲಿ ತಮ್ಮ ಸಾಮಾನು ಸರಂಜಾಮುಗಳನ್ನು ಇಟ್ಟು ಕುಳಿತಿರುವ ದೊಡ್ಡ ಜನರ ಗುಂಪಿನ ಫೋಟೋವನ್ನು ಹಂಚಿಕೊಂಡರು. ಹಲ್‌ದ್ವಾನಿಯ ಪ್ರತಿಭಟನಾ ನಿರತ ಜನರ ಚಿತ್ರ ಎಂದು ಬಿಂಬಿಸುವುದು ಅವರ ಉದ್ದೇಶ. ಇದೇ ಚಿತ್ರವನ್ನು ಆ ಬಳಿಕ ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಹಂಚಿಕೊಂಡರಲ್ಲದೇ, ‘ಸುಪ್ರೀಮ್ ಕೋರ್ಟು ಸಕ್ರಮ ಮಾಡಿರುವುದು ಇದನ್ನೇ...’ ಎಂಬ ತಲೆಬರಹವನ್ನೂ ಕೊಟ್ಟರು. ಆ ಬಳಿಕ ಉತ್ತರ ಪ್ರದೇಶದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಪ್ರಭಾ ಉಪಾಧ್ಯಾಯ, ತೆಲಂಗಾಣ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರುತಿ ಬಂಗಾರು ಕೂಡಾ ಇದೇ ಚಿತ್ರವನ್ನು ಹಂಚಿಕೊಂಡರು. ಆದರೆ,

ಈ ಚಿತ್ರಕ್ಕೂ ಹಲ್‌ದ್ವಾನಿಯ ಪ್ರತಿಭಟನಾ ನಿರತರಿಗೂ ಯಾವುದೇ ಸಂಬಂಧ ಇಲ್ಲ ಎಂಬುದಾಗಿ ಸತ್ಯಶೋಧನೆ ನಡೆಸುವ ಸಂಸ್ಥೆಯಾದ ಆಲ್ಟ್ ನ್ಯೂಸ್ ಸಾಕ್ಷ್ಯ ಸಮೇತ ಬಹಿರಂಗಪಡಿಸಿತು. ಹಲ್‌ದ್ವಾನಿಯದ್ದೆಂದು ಹೇಳಿ ಇವರೆಲ್ಲ ಹಂಚಿಕೊಂಡ ಚಿತ್ರ 2013 ಡಿಸೆಂಬರ್ 13ರದ್ದು ಮತ್ತು ಕೊಲ್ಕತ್ತಾದ್ದು. ಪ್ರಯಾಣಿಕರ ರೈಲು ಹಾದುಹೋದ ಬಳಿಕ ಈ ಹಳಿಯ ಪಕ್ಕದಲ್ಲಿರುವ ಕೊಳೆಗೇರಿಯ ಜನರು ತಮ್ಮ ನಿತ್ಯದ ಬದುಕಿನಲ್ಲಿ ತೊಡಗಿಸಿಕೊಂಡಿರುವ ಚಿತ್ರ ಅದಾಗಿತ್ತು. ಅಷ್ಟಕ್ಕೂ,

ಇಂಥ ಸುಳ್ಳು ಚಿತ್ರವನ್ನು ಬಿಜೆಪಿ ನಾಯಕರು ಜಿದ್ದಿಗೆ ಬಿದ್ದಂತೆ ಹಂಚಿಕೊಳ್ಳಲು ಕಾರಣವೇನು? ಪ್ರತಿಭಟನಾ ನಿರತರು ಮುಸ್ಲಿಮರು ಎಂಬುದನ್ನು ಹೊರತುಪಡಿಸಿ ಬೇರೆ ಯಾವ ಉದ್ದೇಶ ಅದಕ್ಕಿದೆ? 50 ಸಾವಿರದಷ್ಟು ಬೃಹತ್ ಜನಸಂಖ್ಯೆಯನ್ನು 7 ದಿನಗಳೊಳಗೆ ತೆರವುಗೊಳಿಸುವಂತೆ ಹೈಕೋರ್ಟು ಆದೇಶಿಸಿರುವುದನ್ನು ಪ್ರಶ್ನಿಸದ ಇವರೆಲ್ಲ, ತೆರವುಗೊಳಿಸದಂತೆ ಹೇಳಿದ ಸುಪ್ರೀಮ್‌ನ ಆದೇಶವನ್ನು ವ್ಯಂಗ್ಯ ಮಾಡಿದ್ದೇಕೆ? 50 ಸಾವಿರ ಮಂದಿ ನೆಲೆಸಿರುವ ಈ ಪ್ರದೇಶವು ರೈಲ್ವೆಯದ್ದು ಹೌದೋ ಅಲ್ಲವೋ ಎಂಬ ಪ್ರಶ್ನೆಯ ಆಚೆಗೆ, 7 ದಿನಗಳೊಳಗೆ ಇವರನ್ನೆಲ್ಲ ತೆರವುಗೊಳಿಸಿದರೆ ಉಂಟಾಗುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಯಾಕೆ ಈ ನಾಯಕರು ಒಂದು ಮಾತನ್ನೂ ಆಡಿಲ್ಲ?

ಈ ದ್ವೇಷ ಇಲ್ಲಿಗೇ ನಿಂತಿಲ್ಲ. ಇದು ಸರಣಿ ರೂಪದಲ್ಲಿ ಮುಂದುವರಿಯುತ್ತಾ ಇದೆ-

‘ಮನೆಯಲ್ಲಿ ಹರಿತವಾದ ಚಾಕು-ಚೂರಿಗಳನ್ನು ಇಟ್ಟುಕೊಳ್ಳಿ, ಇವು ತರಕಾರಿಗಳನ್ನು ಕತ್ತರಿಸಿದಂತೆ ನಮ್ಮ ವೈರಿಗಳ ತಲೆಗಳನ್ನು ಕತ್ತರಿಸಬಲ್ಲುದು...’ ಎಂದು ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಕರೆಕೊಟ್ಟಿದ್ದಾರೆ. ಜಗದೀಶ್ ಕಾರಂತ್ ಎಂಬವರ ಮಾತುಗಳಂತೂ ಅತ್ಯಂತ ಪ್ರಚೋದನಕಾರಿಯಾಗಿತ್ತು. ಇವರ ಜೊತೆಗೇ ಬಿಜೆಪಿಯ ಇನ್ನಿತರ ಹಲವು ನಾಯಕರೂ ಆಗಾಗ ದ್ವೇಷಭಾಷಣವನ್ನು ಮಾಡುತ್ತಾ ಚಪ್ಪಾಳೆ ಗಿಟ್ಟಿಸುತ್ತಿದ್ದಾರೆ. ಇದಿಷ್ಟೇ ಅಲ್ಲ, ಅನೈತಿಕ ಪೊಲೀಸ್‌ಗಿರಿಯ ಪ್ರಕರಣಗಳೂ ದಿನದಿಂದ ದಿನಕ್ಕೆ ಹೆಚ್ಚುತ್ತಲೂ ಇವೆ. ಈ ಎಲ್ಲ ಪ್ರಕರಣಗಳಲ್ಲೂ ಬಿಜೆಪಿ ಬೆಂಬಲಿಗರೇ ಆರೋಪಿಗಳಾಗುತ್ತಿದ್ದಾರೆ. ಬಿಜೆಪಿ ಎಂಬುದು ನಿರ್ದಿಷ್ಟ ಧರ್ಮದ ಪರವಾಗಿರುವ ಮತ್ತು ಮುಸ್ಲಿಮ್ ವಿರೋಧಿಯಾಗಿರುವ ರಾಜಕೀಯ ಪಕ್ಷ ಎಂಬುದನ್ನು ದಿನೇದಿನೇ ಇಂಥ ಪ್ರಕರಣಗಳು ಸ್ಪಷ್ಟಪಡಿಸುತ್ತಲೂ ಇವೆ. ಕನಿಷ್ಠ ರಾಜ್ಯದ ಮುಖ್ಯಮಂತ್ರಿಯಾಗಲಿ ಅಥವಾ ಪ್ರಧಾನಿ ನರೇಂದ್ರ ಮೋದಿಯಾಗಲಿ ಇಂಥ ಬೆಳವಣಿಗೆಗಳ ಬಗ್ಗೆ ಒಂದೇ ಒಂದು ಮಾತನ್ನೂ ಆಡುತ್ತಿಲ್ಲ. ತನ್ನದೇ ಸಂಸದರು ಅತ್ಯಂತ ಪ್ರಚೋದನಕಾರಿಯಾಗಿ ಮಾತಾಡಿಯೂ ಪ್ರಧಾನಿ ಗಾಢ ಮೌನಕ್ಕೆ ಜಾರುತ್ತಾರೆ. ಹಲ್‌ದ್ವಾನಿಯ ವಿಷಯದಲ್ಲಿ ಬಿಜೆಪಿಯ ಪ್ರಮುಖ ನಾಯಕರೇ ಸುಳ್ಳು ಫೋಟೋವನ್ನು ಹಂಚಿಕೊಂಡು ಮುಸ್ಲಿಮ್ ತೇಜೋವಧೆಯಲ್ಲಿ ತೊಡಗಿಸಿಕೊಂಡಿರುವುದರ ಹೊರತಾಗಿಯೂ ಪ್ರಧಾನಿಯಾಗಲಿ ಬಿಜೆಪಿ ಅಧ್ಯಕ್ಷ ನಡ್ಡಾ ಅವರಾಗಲಿ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಇದೇವೇಳೆ, ರಾಜ್ಯದಲ್ಲಿ ಮುಸ್ಲಿಮ್ ವ್ಯಾಪಾರಿಗಳನ್ನು ಜಾತ್ರೆಯಿಂದ ಹೊರಗಿಡುವ ಸರಣಿ ಪ್ರಕ್ರಿಯೆಗಳು ನಡೆಯುತ್ತಿವೆ. ಕುಕ್ಕೆ ಸುಬ್ರಹ್ಮಣ್ಯ ಜಾತ್ರೆ ಇದಕ್ಕೆ ಇತ್ತೀಚಿನ ಸೇರ್ಪಡೆ. ಸರ್ವರನ್ನೂ ಪೊರೆಯಬೇಕಾದ ಮುಖ್ಯಮಂತ್ರಿಗಳು ಈ ಬಗ್ಗೆ ಪ್ರಜ್ಞೆಯೇ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ಹಾಗಂತ, ಮುಸ್ಲಿಮ್ ವಿರೋಧಿ ಧೋರಣೆ ಇಲ್ಲಿಗೇ ಸೀಮಿತಗೊಂಡಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಮುಸ್ಲಿಮ್ ನಿರ್ಲಕ್ಷ್ಯ ವ್ಯಾಪಿಸಿರುವುದು ಈ ಬಾರಿ ತೀವ್ರ ಚರ್ಚೆಗೂ ಒಳಗಾಯಿತು. ಬಿಜೆಪಿ ಒಲವಿನ ಮಹೇಶ್ ಜೋಷಿಯು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವುದೇ ಈ ನಿರ್ಲಕ್ಷ್ಯಕ್ಕೆ ಕಾರಣ ಎಂದು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳೂ ನಡೆದುವು. ಕನ್ನಡದ ಪ್ರಮುಖ ಸಾಹಿತಿಗಳೂ ಹೋರಾಟಗಾರರೂ ಈ ಬಗ್ಗೆ ಧನಿಯೆತ್ತಿದರು. ಮಾತ್ರವಲ್ಲ, ಬೆಂಗಳೂರಿನಲ್ಲಿ ಪ್ರತಿರೋಧ ಸಮ್ಮೇಳನವೂ ನಡೆಯಿತು.

ಈ ಎಲ್ಲವನ್ನೂ ನೋಡಿದರೆ, ಮುಸ್ಲಿಮ್ ದ್ವೇಷ ಎಂಬುದು ಆಡಳಿತಾತ್ಮಕ ನೀತಿಯಾಗಿ ಮಾರ್ಪಡುತ್ತಿರುವುದು ಸ್ಪಷ್ಟವಾಗುತ್ತಿದೆ. ಮುಸ್ಲಿಮ್ ದ್ವೇಷ ಎಂಬುದು ಅನುದ್ದೇಶಿತ ಮತ್ತು ಪೂರ್ವ ನಿರ್ಧರಿತವಲ್ಲದ ಬೆಳವಣಿಗೆಯಲ್ಲ. ಈ ಇಡೀ ಪ್ರಕ್ರಿಯೆ ನಿರ್ದಿಷ್ಟ ಧೋರಣೆ ಮತ್ತು ಕಾರ್ಯಕ್ರಮದ ಭಾಗವಾಗಿಯೇ ನಡೆಯುತ್ತಿರುವಂತಿದೆ. ಈ ದ್ವೇಷ ಭಾಷಣ, ಥಳಿತ, ಅನೈತಿಕ ಗೂಂಡಾಗಿರಿಗಳೆಲ್ಲ ಮೊದಲೇ ಬರೆದಿರುವ ಚಿತ್ರಕತೆಯ ಪ್ರಯೋಗ ರೂಪದಂತಿದೆ. ಬಿಜೆಪಿ ಇಂಥ ದ್ವೇಷ, ಅನೈತಿಕ ಗೂಂಡಾಯಿಸಂ ಅನ್ನು ಬಯಸುತ್ತಿರುವಂತಿದೆ. ಮುಸ್ಲಿಮರನ್ನು ಗುರಿ ಮಾಡಿಕೊಂಡು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರಬೇಕು ಎಂದು ಅದು ನಿರ್ಧರಿಸಿದಂತಿದೆ. ಮುಸ್ಲಿಮರನ್ನು ಇರಿದಷ್ಟೂ ತಮ್ಮ ಓಟುಗಳು ಹೆಚ್ಚುತ್ತಿರುತ್ತವೆ ಎಂದು ಅದು ಭಾವಿಸಿದಂತಿದೆ. ನಿಜಕ್ಕೂ ಈ ಬೆಳವಣಿಗೆ ಅತ್ಯಂತ ಖೇದಕರ ಮತ್ತು ಅಪಾಯಕಾರಿ. ಯಾವುದೇ ಸಮುದಾಯವನ್ನು ಹಿಂಸಿಸಿ, ಅವಮಾನಿಸಿ ಮತ್ತು ಅಪಪ್ರಚಾರಕ್ಕೆ ಒಳಪಡಿಸಿ ಶಾಶ್ವತವಾಗಿ ಅಂಚಿಗೆ ತಳ್ಳಲು ಸಾಧ್ಯವಿಲ್ಲ. ಇಂಥ ಹಿಂಸಾತ್ಮಕ ಧೋರಣೆಯ ಆಯುಷ್ಯ ಕಡಿಮೆ. ಕೊನೆಗೆ ಸತ್ಯ, ನ್ಯಾಯ ಮತ್ತು ಸಮಾನತಾ ಧೋರಣೆಗಳೇ ಶಾಶ್ವತ ವಿಜಯವನ್ನು ಹೊಂದುತ್ತವೆ. ಇದಕ್ಕೆ ಜರ್ಮನಿಯೊಂದೇ ಉದಾಹರಣೆಯಲ್ಲ. ಈ ದೇಶದಲ್ಲಿ ದಲಿತ-ದಮನಿತ ಸಮುದಾಯವೂ ಒಂದು ಪ್ರಬಲ ಉದಾಹರಣೆ. 1947ರಲ್ಲಿ ಈ ದೇಶದ ದಲಿತ ಸಮುದಾಯವನ್ನು ಹೇಗೆ ನಡೆಸಿಕೊಳ್ಳಲಾಗಿತ್ತು ಮತ್ತು ಇವತ್ತು ಇದೇ ಸಮುದಾಯ ಹೇಗೆ ಶೋಷಕರ ವಿರುದ್ಧ ಜಯ ಸಾಧಿಸುತ್ತಿದೆ ಎಂಬುದನ್ನು ಅವಲೋಕಿಸಿದರೂ ಇದು ಸ್ಪಷ್ಟವಾಗುತ್ತದೆ. ಶೋಷಕರ ನಗುವಿನ ಆಯುಷ್ಯ ತೀರಾ ಸಣ್ಣದು. ಸಮಾನತಾವಾದಿಗಳು ಮತ್ತು ನ್ಯಾಯ ಪಾಲಕರ ನಗುವೇ ಶಾಶ್ವತ. ಸತ್ಯಕ್ಕೆ ಸೋಲಿಲ್ಲ ಎಂಬ ಮಾತು ಸಾರ್ವಕಾಲಿಕ ಸತ್ಯ. ಈ ಹಿಂದೆ ದಲಿತರನ್ನು ಹಿಂಸಾತ್ಮಕವಾಗಿ ನಡೆಸಿಕೊಂಡವರೇ ಇವತ್ತು ಮುಸ್ಲಿಮರ ವಿರುದ್ಧ ದ್ವೇಷ ಹರಡುತ್ತಿದ್ದಾರೆ. ಸುಳ್ಳು ಸೋಲಲಿದೆ ಮತ್ತು ಸತ್ಯ ಜಯಿಸಲಿದೆ ಎಂಬ ಶಾಶ್ವತ ಸತ್ಯದ ಮೇಲೆ ನಂಬಿಕೆಯಿಡೋಣ.