Friday 27 March 2020

ಎಚ್ಚರ ಇರಲಿ, ಪ್ರಶ್ನಿಸುವುದೇ ಪರಿಹಾರ ಅಲ್ಲ



ಕೊರೋನಾದ ವಿರುದ್ಧ ರಾಜ್ಯ ಸರಕಾರ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ನಮ್ಮಲ್ಲಿ ಪರ-ವಿರುದ್ಧ ಚರ್ಚೆ ನಡೆಯುತ್ತಿದ್ದರೆ, ಅತ್ತ ಬ್ರೆಝಿಲ್‍ನಲ್ಲಿ ಅದು ಆರಂಭದಲ್ಲಿ ಜೋಕ್ ಆಗಿ ಪರಿವರ್ತನೆಗೊಂಡು ಈಗ ಆಘಾತವಾಗಿ ಮಾರ್ಪಟ್ಟಿದೆ. ಕಳೆದವಾರ ಬ್ರೆಝಿಲ್‍ನ ಅಧ್ಯಕ್ಷ  ಜೈರ್ ಬೋಲ್ಸನಾರೋ ಅವರು ಅಮೇರಿಕಕ್ಕೆ ಭೇಟಿ ನೀಡಿದರು. ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಡಿನ್ನರ್ ನಲ್ಲಿ ಭಾಗವಹಿಸುವುದಷ್ಟೇ ಆ ಭೇಟಿಯ ಉದ್ದೇಶ ಆಗಿರಲಿಲ್ಲ. ಪಕ್ಕದ ವೆನೆಝುವೇಲಾದ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಉಚ್ಛಾಟಿಸುವುದು ಮತ್ತು ಅವರ ಸ್ಥಾನದಲ್ಲಿ ತಮ್ಮದೇ ಬೆಂಬಲಿಗನನ್ನು ಕೂರಿಸುವುದೇ ಆ ಡಿನ್ನರ್ ಪಾರ್ಟಿಯ ಮುಖ್ಯ ಉದ್ದೇಶವಾಗಿತ್ತು. ಆದ್ದರಿಂದಲೇ,

ಬೋಲ್ಸನಾರೋ ಅವರು ಅಮೇರಿಕಕ್ಕೆ ಪ್ರಯಾಣಿಸುವ ಮೊದಲು ವೆನೆಝುವೇಲಾದಲ್ಲಿರುವ ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನೆಲ್ಲ ಹಿಂದಕ್ಕೆ ಕರೆಸಿಕೊಂಡರು. ಮಾತ್ರವಲ್ಲ, ಬ್ರೆಝಿಲ್‍ನಲ್ಲಿರುವ ವೆನೆಝುವೇಲಾದ ರಾಜತಾಂತ್ರಿಕರನ್ನೆಲ್ಲ ಹಿಂದಕ್ಕೆ ಕಳುಹಿಸಿದರು. ಈ ಕ್ರಮಕ್ಕೆ ಬಹುಮುಖ್ಯ ಕಾರಣ- ಮಡುರೋ ಅವರು ಎಡಪಂಥೀಯ ಮತ್ತು ಅಮೇರಿಕನ್ ಸಾಮ್ರಾಜ್ಯಶಾಹಿತ್ವದ ವಿರೋಧಿ ಎಂಬುದು. ವೆನೆಝುವೇಲಾದ ಅಧ್ಯಕ್ಷ ಹ್ಯೂಗೋ ಚಾವೇಝರ ನಿಧನದ ಬಳಿಕ ಮಡುರೋ ಅಧಿಕಾರಕ್ಕೇರಿದ್ದಾರೆ. ಚಾವೇಝರ ಅಮೇರಿಕನ್ ವಿರೋಧೀ ನೀತಿಯಂತೂ ಜನಜನಿತ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವದ ಎಲ್ಲ ನಾಯಕರ ಮುಂದೆಯೇ ಅಮೇರಿಕವನ್ನು ಪಿಶಾಚಿ ಎಂದು ಅವರು ಕರೆದಿದ್ದರು. ಅವರಿಗೆ ಬಾಧಿಸಿದ ಕ್ಯಾನ್ಸರ್ ನ ಹಿಂದೆ ಅಮೇರಿಕದ ಕೈವಾಡ ಇದೆ ಎಂಬ ನಂಬಿಕೆ ವೆನೆಝುವೇಲಾದಲ್ಲಿ ಈಗಲೂ ಇದೆ. ಮಡುರೋ ಅವರು ಚಾವೇಝರ ನೆರಳಿನಲ್ಲಿಯೇ ಬೆಳೆದು ಬಂದವರು. ಆದರೆ ಬೋಲ್ಸನಾರೋ ಇದಕ್ಕೆ ತದ್ವಿರುದ್ಧ. ಅವರು ಕಟು ಬಲಪಂಥೀಯರಾಗಿ ಗುರುತಿಸಿಕೊಂಡವರು. ಬಲಪಂಥೀಯ ವಿಚಾರಧಾರೆಯಲ್ಲಿ ಅವರು ಟ್ರಂಪ್‍ಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ  ಅನ್ನುವುದೂ ರಹಸ್ಯವಲ್ಲ. ಕಳೆದ ಜನವರಿ 26ರಂದು ಭಾರತದಲ್ಲಿ ನಡೆದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಮಂತ್ರಿತರಾದವರು ಇದೇ ಬೋಲ್ಸನಾರೋ. ತಾನು ಮತ್ತು ಟ್ರಂಪ್ ಅತೀ ಹತ್ತಿರದ ಗೆಳೆಯರು ಎಂದು ಅವರು ಹೇಳಿಕೊಳ್ಳುತ್ತಾರೆ. ಆದ್ದರಿಂದಲೇ,

ಕಳೆದವಾರ ಟ್ರಂಪ್ ಜೊತೆ ಬೋಲ್ಸನಾರೋ ಅವರ ಭೇಟಿಯು ಡಿನ್ನರ್ ಗಿಂತ  ಹೊರತಾದ ಕಾರಣಕ್ಕಾಗಿ ಮುಖ್ಯವಾಗಿತ್ತು. ನಿಕೋಲಸ್ ಮಡುರೋ ಅವರ ಸರಕಾರವನ್ನು ಬುಡಮೇಲುಗೊಳಿಸಿ ತಮಗೆ ತಲೆಬಾಗುವ ಸರಕಾರವೊಂದನ್ನು ವೆನೆಝುವೇಲಾದಲ್ಲಿ ಸ್ಥಾಪಿಸುವುದು ಆ ಡಿನ್ನರ್ ನ ಮುಖ್ಯ ಉದ್ದೇಶವೂ ಆಗಿತ್ತು. ಟ್ರಂಪ್‍ರನ್ನು ಬೋಲ್ಸನಾರೋ ಆಲಿಂಗಿಸಿದರು. ಹಸ್ತಲಾಘವ ಮಾಡಿದರು. ತಮ್ಮ ಮಾತುಕತೆ ಭಾರೀ ಯಶಸ್ವಿಯಾಗಿದೆ ಎಂದೂ ಹೇಳಿಕೊಂಡರು. ಇದಾಗಿ ಬ್ರೆಝಿಲ್‍ಗೆ ಮರಳಿದ ಅವರು ಕೊರೋನಾವನ್ನು ಮಾಧ್ಯಮ ಭ್ರಮೆ ಎಂದು ತಳ್ಳಿಹಾಕಿದರು. ಎರಡು ವಾರಗಳ ಮೊದಲೂ ಅವರು ಕೊರೋನಾವನ್ನು ಹೀಗೆಯೇ ತಮಾಷೆ ಮಾಡಿದ್ದರು. ಅದೊಂದು ದೊಡ್ಡ ಜೋಕ್ ಎಂದಿದ್ದರು. ಆದರೆ,

ಇದಾಗಿ ಗಂಟೆಗಳ ಬಳಿಕ ಬ್ರೆಝಿಲ್‍ನ ಒಟ್ಟು ವಾತಾವರಣವೇ ಬದಲಾಯಿತು. ಬೋಲ್ಸನಾರೋ ಅವರ ಜೊತೆಗೆ ಡಿನ್ನರ್ ಪಾರ್ಟಿಗೆ ತೆರಳಿದ್ದ ಸಂಪರ್ಕ ಸಚಿವ ಫ್ಯಾಬಿಯೋ ಅವರಿಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿತು. ಇವರು ಅಮೇರಿಕದ ಅಧ್ಯಕ್ಷ ಟ್ರಂಪ್ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇದು ಬಹಿರಂಗವಾಗುತ್ತಿರುವಂತೆಯೇ ಬೋಲ್ಸನಾರೋ ಅವರೂ ಕೊರೋನಾ ಪರೀಕ್ಷೆಗೆ ಒಳಗಾದರು. ಅವರಿಗೂ ಕೊರೋನಾ ಬಾಧಿಸಿದೆ ಎಂಬ ಸುದ್ದಿ ಹೊರಬಂತು. ಸ್ಥಳೀಯ ಸುದ್ದಿ ಮಾಧ್ಯಮಗಳು ಮತ್ತು ಅಮೇರಿಕ ಖ್ಯಾತ ಫಾಕ್ಸ್ ನ್ಯೂಸ್ ಈ ಸುದ್ದಿಯನ್ನು ದೃಢಪಡಿಸಿದುವು. ಆ ಬಳಿಕ ಬೋಲ್ಸನಾರೋ ಅದನ್ನು ಅಲ್ಲಗಳೆದರೂ ಅವರನ್ನು ನಿಗಾದಲ್ಲಿ ಇರಿಸಲಾಗಿದೆ ಮತ್ತು ಇನ್ನೊಮ್ಮೆ ಪರೀಕ್ಷೆಗೆ ಗುರಿಪಡಿಸಲು ತಯಾರಿ ನಡೆದಿದೆ ಎಂದೂ ಹೇಳಲಾಗುತ್ತಿದೆ. ಇತ್ತ ಟ್ರಂಪ್ ಅವರಿಗೂ ಕೊರೋನಾ ಭೀತಿ ಎದುರಾಯಿತು. ಅವರೂ ಪರೀಕ್ಷೆಗೆ ಒಳಪಟ್ಟರು. ಬಿಡುಬೀಸು ಹೇಳಿಕೆಗಳನ್ನೇ ಜನಪ್ರಿಯತೆಯ ಅಸ್ತ್ರವಾಗಿಸಿಕೊಂಡು ಬಂದಿದ್ದ ಬೋಲ್ಸನಾರೋ ಮತ್ತು ಟ್ರಂಪ್ ಇಬ್ಬರೂ ಈಗ ವೆನೆಝುವೇಲಾವನ್ನು ಮರೆತು ಕೊರೋನಾದ ಬಗ್ಗೆ ಚಿಂತಿತರಾಗಿದ್ದಾರೆ. ಅಮೇರಿಕದಲ್ಲಿ ಕೊರೋನಾ ವಿರುದ್ಧ ತುರ್ತು ಪರಿಸ್ಥಿತಿ ಹೇರಲಾಗಿದೆ. ಬ್ರೆಝಿಲ್‍ನಲ್ಲಂತೂ ನಾಗರಿಕರು ತೀವ್ರ ಭೀತಿಯಲ್ಲಿದ್ದಾರೆ. ಇದಕ್ಕೆ ಕೊರೋನಾ ಬಗ್ಗೆ ಬೋಲ್ಸನಾರೋ ಅವರ ಜವಾಬ್ದಾರಿ ರಹಿತ ನೀತಿಯೂ ಒಂದು ಕಾರಣ. ಈಗಾಗಲೇ ಕೊರೋನಾ ಪೀಡಿತರ ಸಂಖ್ಯೆ ನೂರರ ಗಡಿ ದಾಟಿದೆ. ಇದು ಹೀಗೆಯೇ ಮುಂದುವರಿದರೆ ಕೇವಲ ಸ್ಯಾನ್‍ಪೌಲೋ ಪಟ್ಟಣವೊಂದರಲ್ಲೇ  ಮುಂದಿನ ನಾಲ್ಕು ವಾರಗಳೊಳಗೆ ಪೀಡಿತರ ಸಂಖ್ಯೆ 45 ಸಾವಿರವನ್ನು ದಾಟಬಹುದು ಎಂದು ಆರೋಗ್ಯಾಧಿಕಾರಿಗಳು ಆತಂಕದಲ್ಲಿದ್ದಾರೆ. ಟ್ರಂಪ್ ಜೊತೆ ಡಿನ್ನರ್ ನಲ್ಲಿ ಭಾಗವಹಿಸಲೆಂದು ಬ್ರೆಝಿಲ್‍ನಿಂದ ಹೊರಡುವಾಗ ವೆನೆಝುವೇಲಾವನ್ನು ತಲೆ ತುಂಬಾ ತುಂಬಿಕೊಂಡಿದ್ದ ಮತ್ತು ಕೊರೋನಾವನ್ನು ಜೋಕ್ ಮಾಡಿದ್ದ ಬೋಲ್ಸನಾರೋ ಅವರು ಅಮೇರಿಕಾದಿಂದ ಹಿಂತಿರುಗಿದ ಬಳಿಕ ವೆನೆಝುವೇಲಾವನ್ನು ಕೈಬಿಟ್ಟು ಕೊರೋನಾವನ್ನು ತಲೆ ಮೇಲೆ ಹೊತ್ತುಕೊಂಡಿದ್ದಾರೆ.

ಕೊರೋನಾ ವಿರುದ್ಧ ರಾಜ್ಯ ಸರಕಾರ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಪರ-ವಿರುದ್ಧ ಚರ್ಚಿಸುವವರಲ್ಲಿ ಇರಬೇಕಾದ ಎಚ್ಚರಿಕೆಗಳು ಏನೇನು ಅನ್ನುವುದಕ್ಕೆ ಬೋಲ್ಸನಾರೋ ಒಂದು ಉತ್ತಮ ಉದಾಹರಣೆ. ಕೊರೋನಾ ಜೋಕ್ ಅಲ್ಲ. ಅಮೇರಿಕ, ಫ್ರಾನ್ಸ್, ಇಟಲಿ, ಜಪಾನ್, ಚೀನಾ, ದಕ್ಷಿಣ ಕೊರಿಯಾ ಮುಂತಾದ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡಿರುವ ರಾಷ್ಟ್ರಗಳನ್ನೂ ಕಂಗಾಲಾಗಿಸಿರುವ ವೈರಸ್ ಇದು. ಇಟಲಿ ಬಹುತೇಕ ಬಾಗಿಲು ಮುಚ್ಚಿದೆ. ಬೀದಿಗಳು ನಿರ್ಜನವಾಗಿವೆ. ಈ ಮೊದಲು ಚೀನಾದಲ್ಲೂ ಇದೇ ಪರಿಸ್ಥಿತಿ ಇತ್ತು. ವೈಜ್ಞಾನಿಕ ಸಂಶೋಧನೆಗಳು ಉಚ್ಛ್ರಾಯ ಸ್ಥಿತಿಯಲ್ಲಿರುವ ಈ ಕಾಲದಲ್ಲೂ ವೈರಸ್ ಒಂದು ಈ ಮಟ್ಟದ ತುರ್ತು ಸ್ಥಿತಿಯನ್ನು ಜಾಗತಿಕವಾಗಿ ಉಂಟು ಮಾಡುತ್ತದೆಂದಾದರೆ, ಭಾರತದಂತಹ ಕಿಕ್ಕಿರಿದ ಜನಸಂದಣಿಯ ರಾಷ್ಟ್ರವೊಂದು ಪೂರ್ವ ತಯಾರಿಯ ಭಾಗವಾಗಿ ಕಠಿಣ ನಿರ್ಬಂಧಗಳನ್ನು ತನ್ನ ಮೇಲೆ ಹೇರಿಕೊಳ್ಳುವುದು ಅಪರಾಧ ಆಗಬೇಕಿಲ್ಲ. ಸಾಮಾನ್ಯವಾಗಿ

ಕೊರೋನಾ ವೈರಸ್ 10-12 ದಿನಗಳ ಕಾಲ ಬದುಕಿರುತ್ತಿದೆ. ಆದ್ದರಿಂದ ನಿರ್ದಿಷ್ಟ ಅವಧಿವರೆಗೆ ಜನಸಂದಣಿಯನ್ನು ನಿಯಂತ್ರಿಸುವುದರಿಂದ ಕೊರೋನಾ ವಿರೋಧಿ ಹೋರಾಟಕ್ಕೆ ದೊಡ್ಡ ಬಲವನ್ನು ನೀಡಬಲ್ಲುದು. ಆದರೆ, ಜನರನ್ನು ಹೀಗೆ ನಿಯಂತ್ರಿಸುವುದೊಂದೇ ಕೊರೋನಾ ತಡೆಗಟ್ಟುವಿಕೆಗೆ ಏಕೈಕ ಪರಿಹಾರ ಅಲ್ಲ. ಕೊರೋನಾ ಶಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರುಗಳೇ ಭಯಪಡುತ್ತಿರುವುದು, ಪೀಡಿತರನ್ನು ಅಸ್ಪೃಶ್ಯರಂತೆ ಕಾಣುವುದು, ದಾಖಲಿಸಿಕೊಳ್ಳಲು ಆಸ್ಪತ್ರೆಗಳು ಹಿಂದೇಟು ಹಾಕುವುದು ಇತ್ಯಾದಿಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಪ್ರತಿ ತಾಲೂಕುಗಳಲ್ಲೂ ಕೊರೋನಾ ಚಿಕಿತ್ಸೆಗೆ ಬೇಕಾದ ಏರ್ಪಾಟುಗಳನ್ನು ಮಾಡಬೇಕಿದೆ. ಜೊತೆಗೇ ಜನರು ಭೀತಿಗೊಳಗಾಗದಂತೆಯೂ ನೋಡಬೇಕಾಗಿದೆ.

ಟೀಕೆ ಮತ್ತು ಪ್ರಶ್ನೆಗಳಿಗೆ ನಿಂದನೆಯ ಮೂಲಕ ಉತ್ತರಿಸುವ ಮತ್ತು ನಿರ್ಲಕ್ಷಿಸುವ ಬೋಲ್ಸನಾರೋ ಹಾಗೂ ಟ್ರಂಪ್ ಅವರ ನೀತಿ ಎಷ್ಟು ಅಪಾಯಕಾರಿ ಅನ್ನುವುದಕ್ಕೆ ಬ್ರೆಝಿಲ್ ಮತ್ತು ಅಮೇರಿಕ ಇವತ್ತು ಎದುರಿಸುತ್ತಿರುವ ಪರಿಸ್ಥಿತಿಯೇ ಪುರಾವೆ. ಸೂಕ್ತ ಔಷಧಿಯೇ ಇಲ್ಲದ ಮತ್ತು ಅತೀ ಸುಲಭವಾಗಿ ಮಾನವ ದೇಹವನ್ನು ಪ್ರವೇಶಿಸಬಲ್ಲ ವೈರಾಣುವೊಂದನ್ನು ಎದುರಿಸುವುದಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದುದು ಜನಸಾಮಾನ್ಯರ ಹಿತದೃಷ್ಟಿಯಿಂದ ಬಹಳ ಅಗತ್ಯ. ಭಾರತದಲ್ಲಂತೂ ಆರೋಗ್ಯ ಸಂಬಂಧಿ ವಿಷಯಗಳ ಬಗ್ಗೆ ನಿಷ್ಕಾಲಜಿಯೇ ಹೆಚ್ಚು. ಅರ್ಧ ಭಾರತವೇ ಬಡತನ ರೇಖೆಗಿಂತ ಕೆಳಗಿದೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆಯಂತೂ ಕೋಟ್ಯಂತರವಿದೆ. ಒಂದುವೇಳೆ, ಈ ಬಡ ಜನಸಂಖ್ಯೆಯ ಮೇಲೆ ಕೊರೋನಾ ದಾಳಿ ಮಾಡಿದರೆ ಆಗಬಹುದಾದ ಅನಾಹುತವನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ.  ಅಂದಹಾಗೆ,

ಭಾರತದ ವೈದ್ಯ ಮತ್ತು ರೋಗಿಯ ನಡುವಿನ  ಅನುಪಾತ 1:1,457 (ಅಲೋಪತಿ, ಹೋಮಿಯೋಪತಿ, ಆಯುರ್ವೇದಿಕ್ ಮುಂತಾದವರು ಸೇರಿ). ಅಂದರೆ, 1,457 ರೋಗಿಗಳಿಗೆ ಓರ್ವ ವೈದ್ಯರಿದ್ದಾರೆ.  2013ರಲ್ಲಿ ಈ ಅನುಪಾತ 1:1,167 ಇತ್ತು. ಇನ್ನು ಪ್ರತೀ 55,591 ರೋಗಿಗಳಿಗೆ ಬರೀ ಒಂದು ಸರಕಾರಿ ಆಸ್ಪತ್ರೆಯಷ್ಟೇ ಈ ದೇಶದಲ್ಲಿದೆ.   ಪ್ರತೀ 11,082 ರೋಗಿಗಳಿಗೆ ಕೇವಲಓರ್ವ  ಸರಕಾರಿ ವೈದ್ಯರಿದ್ದರೆ, 1,844 ರೋಗಿಗಳಿಗೆ ಒಂದೇ ಒಂದು  ಹಾಸಿಗೆ ಮಾತ್ರ ಈ ದೇಶದಲ್ಲಿದೆ. ಅಲ್ಲದೆ, ದೇಶದಲ್ಲಿ ಈಗ ಇಪ್ಪತ್ತು ಲಕ್ಷ ದಾದಿಯರ ಕೊರತೆಯಿದೆ.  ಏಳು ಲಕ್ಷ ವೈದ್ಯರ ಕೊರತೆಯಿದೆ ಎಂಬುದು ಅಧಿಕೃತ ಲೆಕ್ಕಾಚಾರ. ಹೀಗಿರುವಾಗ, ಮುನ್ನೆಚ್ಚರಿಕೆಯ ಭಾಗವಾಗಿ ಕೈಗೊಳ್ಳುವ ಕ್ರಮಗಳು ತುಸು ಅತಿ ಅನ್ನಿಸಿದರೂ ಅದನ್ನು ಸಾರಾಸಗಟು ವಿರೋಧಿಸಬೇಕಿಲ್ಲ.

Wednesday 18 March 2020

48 ಗಂಟೆಗಳ ನಿರ್ಬಂಧವನ್ನು 14 ಗಂಟೆಗಳಲ್ಲೇ ಹಿಂಪಡೆದದ್ದೇಕೆ?



ಕಳೆದವಾರ ಎರಡು ಟಿ.ವಿ. ಚಾನೆಲ್‍ಗಳ ಮೇಲೆ ಕೇಂದ್ರ ಸರಕಾರವು ದಿಢೀರನೆ ಹೇರಿದ ನಿರ್ಬಂಧವು ಎರಡು ಮಹತ್ವಪೂರ್ಣ ಪ್ರಶ್ನೆಗಳನ್ನು ಎತ್ತುತ್ತದೆ.
1. ಎರಡೂ ಚಾನೆಲ್‍ಗಳು ಕೇರಳದ್ದಾಗಿರುವುದು ಕಾಕತಾಳೀಯವೋ ಅಲ್ಲ ಉದ್ದೇಶಪೂರ್ವಕವೋ?
2. ದೆಹಲಿ ಹಿಂಸಾಚಾರದ ಬಗ್ಗೆ ಎನ್‍ಡಿಟಿವಿ ಸೇರಿದಂತೆ ಕೆಲವು ಇಂಗ್ಲಿಷ್ ಮತ್ತು ಹಿಂದಿ ಚಾನೆಲ್‍ಗಳು ದಿಟ್ಟವಾಗಿ ವರದಿ ಮಾಡಿರುವಾಗ ಹಾಗೂ ಇವುಗಳೆಲ್ಲವನ್ನೂ ಮೀರಿಸುವಂತೆ ವೆಬ್ ಪತ್ರಿಕೆಗಳು ವರದಿ ಪ್ರಕಟಿಸಿರುವಾಗ ಕೇಂದ್ರ ಸರಕಾರ ತನ್ನ ಗಮನವನ್ನು ಕೇರಳ ಮೇಲೆ ಮಾತ್ರ ಕೇಂದ್ರೀಕರಿಸಲು ಕಾರಣವೇನು?
ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಒಡೆತನದ ಏಷ್ಯಾನೆಟ್ ನ್ಯೂಸ್ ಮತ್ತು ಸ್ವತಂತ್ರ ಪತ್ರಿಕೋದ್ಯಮಕ್ಕೆ ಹೆಸರಾದ ಮೀಡಿಯಾ ವನ್ ಎಂಬೆರಡು ಮಲಯಾಳಂ ಭಾಷೆಯ ಟಿ.ವಿ. ಚಾನೆಲ್‍ಗಳ ಮೇಲೆ ಕಳೆದ ಶುಕ್ರವಾರ (ಮಾರ್ಚ್ 6) ಸಂಜೆ 7.30ರಿಂದ 48 ಗಂಟೆಗಳ ಕಾಲ ಪ್ರಸಾರ ನಿರ್ಬಂಧವನ್ನು ಹೇರಿದ ಕೇಂದ್ರ ಸರಕಾರವು ಅದಕ್ಕೆ ಕೊಟ್ಟ ಕಾರಣ ಹೀಗಿತ್ತು:
‘ದೆಹಲಿ ಹಿಂಸಾಚಾರದ ಕುರಿತಂತೆ ಈ ಎರಡೂ ಚಾನೆಲ್‍ಗಳು ಪ್ರಚೋದನಕಾರಿ ಮತ್ತು ಪಕ್ಷಪಾತದಿಂದ ಕೂಡಿದ ವರದಿಯನ್ನು ಪ್ರಸಾರ ಮಾಡಿವೆ. ಅಲ್ಲದೇ, ಸಿಎಎ ಬೆಂಬಲಿಗ ಪ್ರತಿಭಟನಾಕಾರರನ್ನು ಕೆಟ್ಟದಾಗಿ ಬಿಂಬಿಸಿವೆ ಮತ್ತು ಆರೆಸ್ಸೆಸ್ ಹಾಗೂ ದಿಲ್ಲಿ ಪೊಲೀಸರನ್ನು ಟೀಕಿಸಿವೆ’.
ಅಚ್ಚರಿಯ ಸಂಗತಿ ಏನೆಂದರೆ, ಹೀಗೆ ನಿರ್ಬಂಧ ಹೇರಿದ 5 ಗಂಟೆಯೊಳಗಡೆಯೇ ಏಷ್ಯಾನೆಟ್ ನ್ಯೂಸ್ ಚಾನೆಲ್ ಮೇಲಿನ ನಿರ್ಬಂಧವನ್ನು ಕೇಂದ್ರ ಸರಕಾರ ಹಿಂಪಡೆಯಿತು. 14 ಗಂಟೆಗಳ ಬಳಿಕ ಮೀಡಿಯಾ ವನ್ ಚಾನೆಲ್ ಮೇಲಿನ ನಿರ್ಬಂಧವನ್ನೂ ಹಿಂತೆಗೆದುಕೊಂಡಿತು. ಏಷ್ಯಾನೆಟ್ ನ್ಯೂಸ್ ಕ್ಷಮೆ ಯಾಚಿಸಿದೆ ಎಂಬ ಕಾರಣವನ್ನು ಕೊಟ್ಟ ಕೇಂದ್ರ ಸರಕಾರವು ಮೀಡಿಯಾ ವನ್ ನಿರ್ಬಂಧವನ್ನು ಅಕಾಲಿಕವಾಗಿ ಹಿಂಪಡೆದುದಕ್ಕೆ ಸ್ಪಷ್ಟವಾದ ಯಾವ ಕಾರಣವನ್ನೂ ಕೊಡಲಿಲ್ಲ. ಆದರೆ, ಈ ನಿರ್ಬಂಧದ ವಿರುದ್ಧ ಮೀಡಿಯಾ ವನ್ ಸ್ಪಷ್ಟ ಭಾಷೆಯಲ್ಲಿ ಮಾತಾಡಿತು. ನಿರ್ಬಂಧವನ್ನು ಕಾನೂನು ಪ್ರಕಾರ ಎದುರಿಸುವುದಾಗಿ ಹೇಳುವ ಮೂಲಕ ವ್ಯವಸ್ಥೆಯೊಂದಿಗೆ ರಾಜಿಗೆ ಸಿದ್ಧವಿಲ್ಲ ಎಂಬ ಪ್ರಬಲ ಸಂದೇಶವನ್ನು ರವಾನಿಸಿತು. ಇದಾದ ಬೆನ್ನಿಗೇ ನಿರ್ಬಂಧವನ್ನು ಹಿಂಪಡೆಯಲಾಗಿದೆ. ಮಾತ್ರವಲ್ಲ, ಈ ಬಗ್ಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಜಾವಡೇಕರ್ ಅವರ ಹೇಳಿಕೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಅವರ ಗಮನಕ್ಕೆ ತಾರದೆಯೇ ಇಲಾಖೆಯ ಅಧಿಕಾರಿಗಳು ಈ ನಿರ್ಬಂಧವನ್ನು ಹೇರಿರುವರೇ ಅನ್ನುವ ಶಂಕೆಯನ್ನು ಅವರ ಹೇಳಿಕೆಗಳು ಹುಟ್ಟುಹಾಕಿವೆ. ಅಷ್ಟಕ್ಕೂ,
ಹೇರಲಾದ ನಿರ್ಬಂಧವನ್ನು ಎಷ್ಟು ಗಂಟೆಯೊಳಗೆ ಹಿಂಪಡೆಯಲಾಗಿದೆ ಮತ್ತು ಯಾವ ಕಾರಣಕ್ಕಾಗಿ ಹಿಂಪಡೆಯಲಾಗಿದೆ ಎಂಬುದೆಲ್ಲ ಮುಖ್ಯವಲ್ಲ. ಇಲ್ಲಿ ನಿರ್ಬಂಧವೇ ಮುಖ್ಯ ಮತ್ತು ಅದಕ್ಕೆ ನೀಡಲಾದ ಕಾರಣಗಳು ಮತ್ತು ನಿರ್ಬಂಧಕ್ಕೆ ಆಯ್ಕೆ ಮಾಡಲಾದ ಚಾನೆಲ್‍ಗಳೇ ಮುಖ್ಯ. ದಿಲ್ಲಿ ಹಿಂಸಾಚಾರದ ಕುರಿತು ಈ ಎರಡೂ ಚಾನೆಲ್‍ಗಳ ವರದಿಯು ಮಾಧ್ಯಮ ನಿಯಮಾವಳಿಗಳನ್ನು ಮುರಿದಿವೆ ಎಂಬ ಬಗ್ಗೆ ಕೇಂದ್ರ ಸರಕಾರಕ್ಕೆ ಖಚಿತವಿದ್ದಲ್ಲಿ ತನ್ನ ಹೇಳಿಕೆಗಳಲ್ಲೂ ಆ ಖಚಿತತೆ ಇರಬೇಕು. ಆದರೆ ಈ ನಿಷೇಧ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿಯವರು ವಿಷಾದ ಸೂಚಿಸಿದ್ದಾರೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಮಾತ್ರವಲ್ಲ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ. ಇದು ಆಘಾತಕಾರೀ ಹೇಳಿಕೆ. ಕೋಟ್ಯಂತರ ವೀಕ್ಷಕರಿರುವ ಎರಡು ಚಾನೆಲ್‍ಗಳ ಮೇಲೆ ಸಚಿವರ ಗಮನಕ್ಕೆ ತಾರದೆಯೇ ನಿಷೇಧ ಹೇರಲು ಸಾಧ್ಯವೇ? ನಿಷೇಧ ಎಂಬುದು ಮಕ್ಕಳಾಟಿಕೆಯಲ್ಲ. ಅದು ಸ್ವತಂತ್ರ ಮಾಧ್ಯಮವೊಂದರ ಸ್ವಾಭಿಮಾನದ ಪ್ರಶ್ನೆ. ಅದರ ಸಂವಿಧಾನ ಬದ್ಧತೆಯ ಪ್ರಶ್ನೆ. ವಿಶ್ವಾಸಾರ್ಹತೆಯ ಪ್ರಶ್ನೆ. ಇಂಥ ನಿರ್ಬಂಧಗಳಿಂದ ವೀಕ್ಷಕರು ಕಳವಳಗೊಳ್ಳುತ್ತಾರೆ. ತಾವು ವೀಕ್ಷಿಸುತ್ತಿರುವ ಚಾನೆಲ್ ನ್ಯಾಯನಿಷ್ಠವಾಗಿಲ್ಲವೇ ಮತ್ತು ಪೂರ್ವಾಗ್ರಹ ಪೀಡಿತವಾಗಿ ಮತ್ತು ಉದ್ದೇಶಪೂರ್ವಕ ಪ್ರಭುತ್ವ ವಿರೋಧಿ ನೀತಿಯನ್ನು ಅಳವಡಿಸಿಕೊಂಡಿದೆಯೇ ಎಂದು ಸಂಶಯಗೊಳ್ಳುತ್ತಾರೆ. ಅಲ್ಲದೇ, ಈ ನಿರ್ಬಂಧಕ್ಕೆ ನೀಡಲಾದ ಕಾರಣಗಳಂತೂ ಇಂಥ ಶಂಕೆಗೆ ಪೂರಕವಾಗಿಯೇ ಇದೆ. ಈ ಎರಡೂ ಚಾನೆಲ್‍ಗಳು ದೆಹಲಿ ಪೊಲೀಸರನ್ನು, ಆರೆಸ್ಸೆಸ್ಸನ್ನು ಮತ್ತು ಸಿಎಎ ಬೆಂಬಲಿಗರನ್ನು ಕೆಟ್ಟದಾಗಿ ಚಿತ್ರಿಸಿವೆ ಅಂದರೆ ಏನರ್ಥ? ನಿರ್ದಿಷ್ಟ ಗುಂಪು ಮತ್ತು ವಿಚಾರಧಾರೆಯ ವಿರುದ್ಧ ಈ ಚಾನೆಲ್‍ಗಳು ಹಗೆ ಸಾಧಿಸುತ್ತಿವೆ ಎಂದೇ ಅಲ್ಲವೇ? ಇಷ್ಟೊಂದು ಗಂಭೀರ ಆರೋಪವನ್ನು ಸಚಿವರ ಗಮನಕ್ಕೆ ತಾರದೆಯೇ ಕೇವಲ ಇಲಾಖೆಯ ಅಧಿಕಾರಿಗಳೇ ಹೊರಿಸುತ್ತಾರೆಂಬುದು ಎಷ್ಟರ ಮಟ್ಟಿಗೆ ನಿಜ? ಒಂದುವೇಳೆ,
ಇಷ್ಟೊಂದು ಕ್ರಿಯಾಶೀಲ ಅಧಿಕಾರಿಗಳು ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲಿ ಇರುವುದು ನಿಜವೇ ಆಗಿದ್ದಲ್ಲಿ, ಡಿ. 19ರ ಮಂಗಳೂರು ಗೋಲಿಬಾರ್ ಘಟನೆಯ ಕುರಿತಂತೆ ಕನ್ನಡ ನ್ಯೂಸ್ ಚಾನೆಲ್‍ಗಳು ವರದಿ, ವಿಶ್ಲೇಷಣೆ ಮಾಡುತ್ತಿದ್ದಾಗ ಇವರೆಲ್ಲ ಎಲ್ಲಿದ್ದರು? ಜಾಮಿಯಾ ಮಿಲ್ಲಿಯಾ ವಿವಿಯ ಒಳನುಗ್ಗಿ ಪೊಲೀಸರು ನಡೆಸಿದ ದಾಂಧಲೆಯನ್ನು ಹೆಚ್ಚಿನ ಇಂಗ್ಲಿಷ್ ಮತ್ತು ಹಿಂದಿ ನ್ಯೂಸ್ ಚಾನೆಲ್‍ಗಳು ಮಾಡಿದ ವರದಿ-ವಿಶ್ಲೇಷಣೆಗಳಿದ್ದುವಲ್ಲ, ಅವೆಲ್ಲ ಹೇಗಿದ್ದುವು? ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ಕತ್ತಲೆಯಲ್ಲಿ ಮಾಡಿದ ಆಕ್ರಮಣವನ್ನು ಯಾವೆಲ್ಲ ಚಾನೆಲ್‍ಗಳು ಹೇಗೆಲ್ಲ ವಿಶ್ಲೇಷಣೆಗೊಡ್ಡಿವೆ ಎಂಬ ಬಗ್ಗೆ ಈ ಅಧಿಕಾರಿಗಳಲ್ಲಿ ಯಾವ ಮಾಹಿತಿಯೂ ಇಲ್ಲವೇ? ಇಂಥ ಇನ್ನೂ ಅನೇಕಾರು ಪ್ರಶ್ನೆಗಳಿವೆ. ಅಲ್ಲದೇ, ಪುಟ್ಟ ರಾಜ್ಯವಾದ ಕೇರಳದ ಎರಡು ಚಾನೆಲ್‍ಗಳನ್ನು ಮಾತ್ರ ನಿರ್ಬಂಧಕ್ಕೆ ಆಯ್ದುಕೊಂಡಿರುವುದೇಕೆ ಎಂಬ ಪ್ರಶ್ನೆಯೂ ಮುಖ್ಯವೇ. ಬಿಜೆಪಿಯ ಪಾಲಿಗೆ ಗಂಟಲ ಮುಳ್ಳಾಗಿರುವ ರಾಜ್ಯಗಳ ಪೈಕಿ ಕೇರಳವೇ ಮುಂಚೂಣಿಯಲ್ಲಿದೆ. ಅಲ್ಲಿ ರಾಜಕೀಯ ಹಿಂಸಾಚಾರ ನಡೆಯುತ್ತಿದೆಯೇ ಹೊರತು ಕೋಮು ಹಿಂಸಾಚಾರದ ಇತಿಹಾಸ ಶೂನ್ಯ ಅನ್ನುವಷ್ಟು ಕಡಿಮೆ. ಬಿಜೆಪಿ ಪ್ರಣೀತ ಆಹಾರ ಕ್ರಮಕ್ಕೆ ಪ್ರಬಲ ಪ್ರತಿರೋಧ ಎದುರಾಗಿರುವುದು ಕೇರಳದಲ್ಲೇ. ಸಿಎಎ ವಿರುದ್ಧ ವಿಧಾನ ಸಭೆಯಲ್ಲಿ ಪ್ರಸ್ತಾಪ ಅಂಗೀಕರಿಸಿದ ಮೊದಲ ರಾಜ್ಯ ಕೇರಳ. ಎನ್‍ಪಿಆರ್ ಅನ್ನು ತಿರಸ್ಕರಿಸಿರುವ ರಾಜ್ಯಗಳ ಪಟ್ಟಿಯಲ್ಲೂ ಕೇರಳಕ್ಕೆ ಅಗ್ರಸ್ಥಾನವಿದೆ. ಬಿಜೆಪಿಯ ವಿಚಾರಧಾರೆಗೆ ಪ್ರಬಲ ಪ್ರತಿರೋಧವನ್ನು ಒಡ್ಡುವ ಚಳವಳಿಯೊಂದು ಕೇರಳದಲ್ಲಿ ಯಶಸ್ವಿಯಾಗಿ ಬೆಳೆದಿದ್ದರೆ ಅದಕ್ಕೆ ಮಲಯಾಳಂ ಭಾಷೆಯ ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳಿಗೆ ಬಹುಮುಖ್ಯ ಪಾತ್ರವಿದೆ. ಅವು ಕೋಮು ಪಕ್ಷಪಾತ ಮತ್ತು ಪ್ರಭುತ್ವ ಗುಲಾಮತ್ವದಿಂದ ಮುಕ್ತವಾಗಿ ವರ್ತಿಸಿದ್ದೇ ಹೆಚ್ಚು. ಹಿಂದೂ-ಮುಸ್ಲಿಮ್ ಎಂದು ಸಮಾಜವನ್ನು ವಿಭಜಿಸುವ ಬದಲು ಸಮಾಜವಾದ, ಬಂಡವಾಳಶಾಹಿತ್ವ, ಫ್ಯಾಸಿಸಂ ಇತ್ಯಾದಿ ಸಿದ್ಧಾಂತ ಆಧಾರಿತ ಚರ್ಚೆಗಳಿಗೆ ಅವು ಹೆಚ್ಚು ಮಹತ್ವ ಕೊಟ್ಟವು ಮತ್ತು ಈಗಲೂ ಆ ಪರಂಪರೆಯನ್ನು ಉಳಿಸಿಕೊಂಡಿವೆ. ರಾಜಕೀಯವಾಗಿ ಬಿಜೆಪಿ ಕೇರಳದಲ್ಲಿ ಈವರೆಗೂ ಮಹತ್ವಪೂರ್ಣ ಸಾಧನೆಯನ್ನು ಮಾಡಿಲ್ಲದೇ ಇರುವುದಕ್ಕೆ ಅಲ್ಲಿನ ಮಾಧ್ಯಮ ಕ್ಷೇತ್ರದಲ್ಲಿರುವ ಈ ಪ್ರಜ್ಞಾವಂತಿಕೆಯೂ ಬಹುಮುಖ್ಯ ಕಾರಣ ಎಂದೂ ಹೇಳಬೇಕಾಗುತ್ತದೆ. ಬಹುಶಃ, ಪುಟ್ಟ ರಾಜ್ಯದಿಂದ ಎದುರಾಗಿರುವ ಈ ಪ್ರತಿರೋಧವನ್ನು ಸಹಿಸಿಕೊಳ್ಳಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗಿಲ್ಲ. ಅಲ್ಲಿನ ಮಾಧ್ಯಮಗಳನ್ನು ನಿಯಂತ್ರಿಸದೇ ಹೋದರೆ ಕೇರಳ ಎಂದೆಂದೂ ಮರೀಚಿಕೆಯಾಗಿಯೇ ಉಳಿಯಲಿದೆ ಎಂಬುದು ಬಿಜೆಪಿಗೆ ಖಚಿತವಾಗಿ ಮನವರಿಕೆಯಾಗಿದೆ. ಇದರ ಭಾಗವಾಗಿಯೇ ನಿರ್ಬಂಧವನ್ನು ಹೇರಲಾಗಿದೆ. ಇದೊಂದು ಬೆದರಿಕೆಯ ತಂತ್ರ. ನಿಷೇಧಕ್ಕೆ ಎರಡೂ ಚಾನೆಲ್‍ಗಳ ಪ್ರತಿಕ್ರಿಯೆ ಹೇಗಿರುತ್ತದೆ ಮತ್ತು ಕೇರಳದ ನಾಗರಿಕರು ಹೇಗೆ ಇದನ್ನು ಸ್ವೀಕರಿಸುತ್ತಾರೆ ಎಂಬುದನ್ನು ನೋಡುವ ಉದ್ದೇಶವೂ ಕೇಂದ್ರ ಸರಕಾರಕ್ಕಿತ್ತು. ಪಕ್ಕದ ಕರ್ನಾಟಕದ ಪ್ರಮುಖ ಸುದ್ದಿವಾಹಿನಿಗಳು ಮತ್ತು ಹೆಚ್ಚಿನ ಪತ್ರಿಕೆಗಳು ಕೇಂದ್ರ ಸರಕಾರದ ಮುಂದೆ ತೆವಳುವುದನ್ನು ಗೌರವವೆಂದು ಬಗೆದಿರುವ ಈ ಹೊತ್ತಿನಲ್ಲಿ ಕೇರಳದ ಮಾಧ್ಯಮಗಳಿಂದ ಸಣ್ಣಮಟ್ಟದ ಜಿ ಹುಜೂರ್ ನೀತಿಯನ್ನು ಬಯಸುವುದೂ ಇದರ ಉದ್ದೇಶವಾಗಿತ್ತು. ಆದರೆ ಕೇರಳೀಯ ನಾಗರಿಕರು ಪಕ್ಷ  ಭೇದವಿಲ್ಲದೇ ಮತ್ತು ವಿಚಾರ ಭೇದವಿಲ್ಲದೇ ದೊಡ್ಡ ದನಿಯಲ್ಲಿ ಈ ನಿರ್ಬಂಧವನ್ನು ವಿರೋಧಿಸಿದರು. ಮೀಡಿಯಾ ವನ್ ಚಾನೆಲ್ ಅಂತೂ ಕಾನೂನು ಹೋರಾಟಕ್ಕೆ ಮುಂದಾಯಿತೇ ಹೊರತು ತೆವಳಲು ಸಿದ್ಧವಾಗಲಿಲ್ಲ. ಕೊನೆಗೆ ವಾರ್ತಾ ಇಲಾಖೆಯ ಅಧಿಕಾರಿಗಳನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಿ ನಿರ್ಬಂಧವನ್ನು ಹಿಂತೆಗೆದುಕೊಳ್ಳುವ ಮೂಲಕ ಕೇಂದ್ರ ಸರಕಾರ ಕೈ ತೊಳೆದುಕೊಂಡಿತು.
ನಿಜಕ್ಕೂ, ಇದು ತೆವಳಲು ಸಿದ್ಧವಾಗಿರುವ ಮಾಧ್ಯಮ ಮಂದಿಗಾದ ಸೋಲು ಮತ್ತು ಉಳಿದವರ ಗೆಲುವು.

Thursday 12 March 2020

ಸತ್ಯದ ರುಚಿ ಹಚ್ಚುವ ಹಾದಿಯಲ್ಲಿ 42 ವರ್ಷಗಳು: ಖುಷಿ ಮತ್ತು ಸಂಕಟ



ಜಾಹೀರಾತನ್ನು ಅವಲಂಬಿಸಿಕೊಳ್ಳದೇ ಕೇವಲ ಮೌಲ್ಯಕ್ಕೆ ಮಾತ್ರ ನಿಷ್ಠವಾಗಿದ್ದುಕೊಂಡು 42 ವರ್ಷಗಳಿಂದ ಪತ್ರಿಕೆಯೊಂದು ನಿರಂತರ ಪ್ರಕಟವಾಗುತ್ತಿದೆಯೆಂದರೆ, ಆ ಪತ್ರಿಕೆಯ ಪಾಲಿಗೆ ಅದುವೇ ಬಹುದೊಡ್ಡ ಸಾಧನೆ. ಸನ್ಮಾರ್ಗ ಪತ್ರಿಕೆಗೆ 42 ವರ್ಷಗಳು ತುಂಬಿವೆ. 8 ಪುಟಗಳು ಮತ್ತು 40 ಪೈಸೆಯ ಬೆಲೆಯೊಂದಿಗೆ 1978 ಎಪ್ರಿಲ್ 23ರಂದು ಆರಂಭವಾದ ಪತ್ರಿಕೆಯು ಈಗ 16 ಪುಟಗಳು ಮತ್ತು 15 ರೂಪಾಯಿಗೆ ಓದುಗರ ಕೈ ಸೇರುತ್ತಿದೆ. ಮಾತ್ರವಲ್ಲ, ಸನ್ಮಾರ್ಗ ವೆಬ್‍ಸೈಟ್‍ನ ಮೂಲಕ ಕ್ಷಣಕ್ಷಣದ ಸುದ್ದಿಗಳನ್ನೂ ಓದುಗರಿಗೆ ತಲುಪಿಸಲಾಗುತ್ತಿದೆ. ಇದೇವೇಳೆ, ಸನ್ಮಾರ್ಗ ಆರಂಭವಾಗುವಾಗ ಇದರ ಬೆನ್ನಿಗೇ ನಿಂತವರು, ವಿವಿಧ ರೀತಿಯಲ್ಲಿ ಬೆಂಬಲ ನೀಡಿದವರು, ಪತ್ರಿಕೆಯನ್ನು ಜನಪ್ರಿಯಗೊಳಿಸಲು ರಾಜ್ಯದುದ್ದಕ್ಕೂ ಪ್ರವಾಸ ಮಾಡಿದವರಲ್ಲಿ ಅನೇಕರು ಇವತ್ತು ಪತ್ರಿಕೆಯ 43ನೇ ಸಂಭ್ರಮವನ್ನು ಕಣ್ತುಂಬಿಕೊಳ್ಳುವುದಕ್ಕೆ ನಮ್ಮ ಜೊತೆ ಇಲ್ಲ. ಪತ್ರಿಕೆಯನ್ನು ಪ್ರತಿವಾರ ಚಾತಕ ಪಕ್ಷಿಯಂತೆ ಕಾಯುತ್ತಿದ್ದವರು ಮತ್ತು ಪತ್ರಿಕೆ ತಲುಪಲು ಒಂದುದಿನ ತಡವಾದರೂ ಕರೆ ಮಾಡಿ ಬೇಸರ ತೋಡಿಕೊಳ್ಳುತ್ತಿದ್ದ ಓದುಗರಲ್ಲಿ ಅನೇಕರು ಇವತ್ತು ನಮ್ಮ ಜೊತೆ ಇಲ್ಲ. ಪತ್ರಿಕೆಯ ಪ್ರಧಾನ ಸಂಪಾದಕರುಗಳಾದ ಇಬ್ರಾಹೀಮ್ ಸಈದ್ ಮತ್ತು ನೂರ್ ಮುಹಮ್ಮದ್ ಕೂಡಾ ಪತ್ರಿಕೆಯ ಸಂಭ್ರಮವನ್ನು ಹಂಚಿಕೊಳ್ಳುವುದಕ್ಕೆ ನಮ್ಮ ಜೊತೆ ಇಲ್ಲ. 42 ವರ್ಷಗಳ ದೀರ್ಘ ಪಯಣದ ಹಾದಿಯಲ್ಲಿ ಇವೆಲ್ಲ ಸಹಜ ಮತ್ತು ಅನಿವಾರ್ಯ ಎಂಬುದು ನಿಜವೇ ಆಗಿದ್ದರೂ ಅವರಿಲ್ಲ ಅನ್ನುವ ಸಂಕಟವೂ ಅಷ್ಟೇ ಸಹಜ ಅನ್ನಬೇಕಾಗುತ್ತದೆ.
ಪತ್ರಿಕಾ ವೃತ್ತಿಯು ಉದ್ಯಮವಾಗಿ ಮಾರ್ಪಾಟುಗೊಂಡು ಪತ್ರಿಕೋದ್ಯಮ ಎಂಬ ನೇಮ್ ಪ್ಲೇಟನ್ನು ಅಂಟಿಸಿಕೊಂಡು ತಿರುಗುತ್ತಿರುವ ಈ ಕಾಲದಲ್ಲಿ ಸತ್ಯ, ನ್ಯಾಯ, ಮೌಲ್ಯ, ಮಾನವ ಏಕತೆ, ಸಮಾನತೆ, ಭ್ರಾತೃತ್ವ, ಸೇವೆ ಇತ್ಯಾದಿ ಇತ್ಯಾದಿ ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಪಾದಿಸಿಕೊಂಡು ಮತ್ತು ಅದಕ್ಕೆ ಮಾತ್ರ ನಿಷ್ಠವಾಗಿದ್ದುಕೊಂಡು ಪ್ರಕಟವಾಗುತ್ತಿರುವ ಪತ್ರಿಕೆಯ ಪಾಲಿಗೆ 42 ವರ್ಷಗಳು ಬಿಡಿ, ಪ್ರತಿದಿನವೂ ಸಾಧನೆಯ ಹೆಜ್ಜೆಗಳೇ. ಮುದ್ರಣ ಮಾಧ್ಯಮ ಇವತ್ತು ಈ ಹಿಂದೆಂದೂ ಕಂಡಿರದಷ್ಟು ತೀವ್ರ ಸವಾಲುಗಳನ್ನು ಎದುರಿಸುತ್ತಿವೆ. ಸನ್ಮಾರ್ಗವೂ ಇದಕ್ಕೆ ಹೊರತಲ್ಲ. ಸುದ್ದಿಮೂಲಗಳಾಗಿ ಬರೇ ಪತ್ರಿಕೆಗಳು ಮಾತ್ರ ಇದ್ದ ಕಾಲದಲ್ಲಿ, ಪತ್ರಿಕೆಗಳು ಓದುಗರ ಪಾಲಿಗೆ ಅನಿವಾರ್ಯವಾಗಿತ್ತು ಮತ್ತು ಮಾಹಿತಿ ಜಾಲವಾಗಿ ಪತ್ರಿಕೆಯನ್ನು ಬಿಟ್ಟು ಇನ್ನಾವುದೂ ಇರಲಿಲ್ಲ. ಅವತ್ತು ರೇಡಿಯೋ ಮತ್ತು ದೂರದರ್ಶನ ಇವು ಇನ್ನೆರಡು ಅವಲಂಬನೀಯ ಮಾಹಿತಿ ಜಾಲಗಳಾಗಿದ್ದುವು. ಆ ಬಳಿಕ ಈ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳಾದುವು. ಆದರೆ, ಈ ಬದಲಾವಣೆಗಳು ಓದುಗರಿಗೆ ಸುದ್ದಿಯನ್ನು ಒದಗಿಸುವುದರಲ್ಲಿ ಮಾತ್ರ ಕ್ರಾಂತಿಯನ್ನು ಉಂಟು ಮಾಡಿದುದಲ್ಲ, ಅಸತ್ಯ, ಕೋಮು ಪ್ರಚೋದಕ ಮತ್ತು ಏಕಪಕ್ಷೀಯ ಸುದ್ದಿಗಳನ್ನು ಒದಗಿಸುವುದರಲ್ಲೂ ಕ್ರಾಂತಿಯನ್ನು ಮಾಡಿದುವು. ಯಾವುದೇ ಸುದ್ದಿಯನ್ನು ಅಳೆದೂ ತೂಗಿ, ಅದರ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಂಡು ಮತ್ತು ಯಾವುದೇ ಧಾರ್ಮಿಕ, ರಾಜಕೀಯ ಹಾಗೂ ಉದ್ಯಮ ಪಕ್ಷಪಾತಿತ್ವದಿಂದ ಹೊರಗಿದ್ದುಕೊಂಡು ಪ್ರಕಟಿಸಲಾಗುತ್ತಿದ್ದ ಸುದ್ದಿಗಳಿಗೂ ಮತ್ತು ಪತ್ರಿಕೆಗಳು ಔದ್ಯಮೀಕರಣಗೊಂಡ ಬಳಿಕ ಪ್ರಕಟವಾಗುತ್ತಿರುವ ಸುದ್ದಿಗಳಿಗೂ ಭಾರೀ ವ್ಯತ್ಯಾಸವಿದೆ. ಇವತ್ತಂತೂ ಕ್ಷಣಕ್ಷಣದ ಸುದ್ದಿಗಳೂ ಜನರ ಸ್ಮಾರ್ಟ್‍ಫೋನ್‍ನಲ್ಲಿ ಪ್ರತಿದಿನ ರಾಶಿ ಬೀಳುತ್ತಿವೆ. ದೇಶದಾದ್ಯಂತ ನೂರಾರು ವೆಬ್‍ಸೈಟ್‍ಗಳು ಅಸಂಖ್ಯ ಸಂಖ್ಯೆಯಲ್ಲಿ ಸುದ್ದಿಯನ್ನು ಮೊಗೆದು ಕೊಡುತ್ತಿವೆ. ಈ ಎಲ್ಲ ಸುದ್ದಿಗಳ ವಿಶ್ವಾಸಾರ್ಹತೆ ಮತ್ತು ಸಾಮಾಜಿಕ ಬದ್ಧತೆಯ ಬಗ್ಗೆ ಪ್ರಶ್ನೆಗಳೇನೇ ಇದ್ದರೂ ಇವುಗಳಿಂದಾಗಿ ಮುದ್ರಣ ಮಾಧ್ಯಮಗಳ ಮೇಲೆ ಕರಿಛಾಯೆ ಆವರಿಸಿರುವುದು ಸುಳ್ಳಲ್ಲ. ಸುದ್ದಿಗಾಗಿ ಇವತ್ತು ಬರೇ ಪತ್ರಿಕೆಗಳನ್ನೇ ಯಾರೂ ಅವಲಂಬಿಸಿ ಕೂರಬೇಕಿಲ್ಲ. ಮಾತ್ರವಲ್ಲ, ಸುದ್ದಿ ವಿಶ್ಲೇಷಣೆಯೆಂಬ ಒಂದಿಷ್ಟು ದೀರ್ಘ ಬರಹವನ್ನು ಓದುವ ಸಹನೆಯನ್ನು ವೆಬ್‍ಸೈಟ್‍ನ ಪುಟ್ಟ ಪುಟ್ಟ ಸುದ್ದಿಗಳು ಓದುಗರಿಂದ ನಿಧಾನಕ್ಕೆ ಕಸಿದುಕೊಳ್ಳುತ್ತಲೂ ಇವೆ. ದಿನಪತ್ರಿಕೆಗಳ ಪಾಲಿಗೆ ಇದು ಖಂಡಿತ ಸವಾಲು. ಆದರೆ,
ಸನ್ಮಾರ್ಗ ಪತ್ರಿಕೆ ಈ ಮಾದರಿಯದ್ದಲ್ಲ. ಸುದ್ದಿ ವಿಶ್ಲೇಷಣೆಯೇ ಇದರ ಪ್ರಮುಖ ಆಯುಧ. ಸಾಮಾಜಿಕ ನ್ಯಾಯವನ್ನು ಮತ್ತು ಮಾನವ ಏಕತೆಯನ್ನು ಸಾರುವುದು ಹಾಗೂ ಓದುಗರನ್ನು ಸತ್ಯದ ಬೆನ್ನತ್ತಿಕೊಂಡು ಹೋಗುವಂತೆ ಮಾಡುವುದೇ ಇದರ ಮುಖ್ಯ ಗುರಿ. ಧರ್ಮಗಳ ತುಲನಾತ್ಮಕ ಅಧ್ಯಯನ ನಡೆಸುವುದು ಮತ್ತು ಇಸ್ಲಾಮಿನ ಬಗ್ಗೆ ಪವಿತ್ರ ಕುರ್‍ಆನನ್ನು ಆಧರಿಸಿಕೊಂಡು ನಿಜವನ್ನು ಸಾರುವುದೇ ಸನ್ಮಾರ್ಗ ಈ ವರೆಗೂ ಅಳವಡಿಸಿಕೊಂಡು ಬಂದಿರುವ ಮಾಧ್ಯಮ ನೀತಿ. ಸುದ್ದಿಗಳನ್ನು ಒದಗಿಸುವುದಕ್ಕೆ ವೆಬ್‍ ಪೋರ್ಟಲ್‍ಗಳಿರಬಹುದು ಮತ್ತು ರಾಜಕೀಯ, ಸಾಮಾಜಿಕ ಸುದ್ದಿ ವಿಶ್ಲೇಷಣೆಯನ್ನು ಒದಗಿಸುವುದಕ್ಕೆ ಪತ್ರಿಕೆಗಳಿರಬಹುದು. ಆದರೆ, ಇವತ್ತು ಅತ್ಯಂತ ಅಗತ್ಯವಾಗಿರುವ ಧಾರ್ಮಿಕ ಸೌಹಾರ್ದ, ಭ್ರಾತೃತ್ವ ಮತ್ತು ಧರ್ಮಗಳ ಕುರಿತಾಗಿ ನಿಜವನ್ನು ಹೇಳುವ ಹಾಗೂ ಸುಳ್ಳುಗಳನ್ನು ತಡೆಯುವ ಉದ್ದೇಶದಿಂದ ಕಾರ್ಯಪ್ರವೃತ್ತವಾಗಿರುವ ಪತ್ರಿಕೆಯಿದ್ದರೆ ಅದು ಸನ್ಮಾರ್ಗ ಅನ್ನುವುದಕ್ಕೆ ಕಳೆದ 42 ವರ್ಷಗಳಲ್ಲಿ ಪ್ರಕಟವಾಗಿರುವ ಅದರ ಪ್ರತಿ ಪುಟಗಳೇ ಸಾಕ್ಷಿ. ಅಂದಹಾಗೆ,
ಸುಳ್ಳುಗಳನ್ನು ಮುದ್ರಿಸಿ ಹಂಚುವುದಕ್ಕೆ ಸುಲಭ. ಅದಕ್ಕೆ ಶ್ರಮದ ಅಗತ್ಯ ಕಡಿಮೆ. ಸುಳ್ಳನ್ನು ಉತ್ಪಾದಿಸಲು ಗೊತ್ತಿದ್ದರಷ್ಟೇ ಇದಕ್ಕೆ ಸಾಕಾಗುತ್ತದೆ. ಸುಳ್ಳನ್ನು ರಸವತ್ತಾಗಿ ಹೇಳುವ ಸಾಮರ್ಥ್ಯ  ಇದ್ದರೆ, ಓದುಗರು ಸಿಗುತ್ತಾರೆ. ಆದರೆ, ಸತ್ಯ ಹಾಗಲ್ಲ. ಅದನ್ನು ಉತ್ಪಾದಿಸಲು ಆಗುವುದಿಲ್ಲ. ಅದು ಸಹಜವಾದುದು. ಸುಳ್ಳು ಸುದ್ದಿಯೊಂದನ್ನು ಕ್ಷಣಮಾತ್ರದಲ್ಲಿ ಉತ್ಪಾದಿಸಿ ಹಂಚಬಹುದು. ಆದರೆ, ಆ ಸುದ್ದಿ ಸುಳ್ಳು ಎಂಬುದನ್ನು ಸಾಬೀತುಪಡಿಸಬೇಕಾದರೆ ವಾರ ಅಥವಾ ತಿಂಗಳುಗಟ್ಟಲೆ ಶ್ರಮಿಸಬೇಕಾದ ಅಗತ್ಯ ಇರುತ್ತದೆ. ಸುದ್ದಿಯ ಬೆನ್ನತ್ತಿ ಹೋಗಬೇಕಾಗುತ್ತದೆ. ಆ ಸುದ್ದಿಯಲ್ಲಿ ಹೇಳಲಾದ ಸಂಗತಿಯನ್ನು ಮತ್ತು ಅದು ನಡೆದಿರಬಹುದಾದ ಸ್ಥಳವನ್ನು ಸಂದರ್ಶಿಸಬೇಕಾಗುತ್ತದೆ. ಪತ್ತೆಕಾರ್ಯ ಕೈಗೊಳ್ಳಬೇಕಾಗುತ್ತದೆ. ಐತಿಹಾಸಿಕ ಘಟನೆಗಳ ಸುತ್ತ ಸುಳ್ಳು ಸುದ್ದಿಯನ್ನು ಉತ್ಪಾದಿಸಲಾಗಿದೆಯೆಂದಾದರೆ, ಆ ಇತಿಹಾಸವನ್ನು ಮರು ಓದಿಗೆ ಒಳಪಡಿಸಬೇಕಾಗುತ್ತದೆ. ಸಾಕ್ಷ್ಯ  ಸಮೇತ ಸುಳ್ಳನ್ನು ಜನರ ಮುಂದಿಡಬೇಕಾಗುತ್ತದೆ. ಪವಿತ್ರ ಕುರ್‍ಆನ್ ಆಗಲಿ, ಪ್ರವಾದಿ ಮುಹಮ್ಮದರ ಕುರಿತಾದ ಸಂಗತಿಗಳಿಗಾಗಲಿ ಅಥವಾ ಇಸ್ಲಾಮಿನ ಐತಿಹಾಸಿಕ ಘಟನೆಗಳು, ಮುಸ್ಲಿಮ್ ರಾಜರ ಕಾಲದ ಚರಿತ್ರೆಗಳು ಮತ್ತು ಇನ್ನಿತರ ರಾಜಕೀಯ, ಆರ್ಥಿಕ, ಶೈಕ್ಷಣಿಕ ವಿಷಯಗಳಲ್ಲೂ ಭರಪೂರ ಸುಳ್ಳು ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತಿರುವ ಇಂದಿನ ದಿನಗಳಲ್ಲಿ ಅದನ್ನು ಅಷ್ಟೇ ಪ್ರಖರವಾಗಿ ನಿರಾಕರಿಸುವುದಕ್ಕೆ ಸುಳ್ಳನ್ನು ಬೆನ್ನತ್ತಿಕೊಂಡು ಹೋಗಿ ಸತ್ಯವನ್ನು ಸಾಬೀತುಪಡಿಸುವ ಕೆಲಸ ನಡೆಯಬೇಕು. ಅದಕ್ಕೆ ಶ್ರಮದ ಅಗತ್ಯವಿದೆ. ಪತ್ರಿಕೆಯ ಅಗತ್ಯವೂ ಇದೆ. ಸನ್ಮಾರ್ಗ ಕಳೆದ 42 ವರ್ಷಗಳಿಂದ ಅಸ್ತಿತ್ವ ಉಳಿಸಿಕೊಂಡಿದ್ದರೆ ಅದು ಇದೇ ಕಾರಣಕ್ಕೆ. ಮುಂದೆ ಅದು ಉಳಿದುಕೊಳ್ಳುವುದಾದರೂ ಇದೇ ಕಾರಣಕ್ಕೆ. ಸನ್ಮಾರ್ಗವನ್ನು ಖರೀದಿಸಿ ಓದದ ಹೊರತು ಈ ಪತ್ರಿಕೆ ಉಳಿದುಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಓದುಗರಾದ ನಿಮ್ಮ ಬೆಂಬಲವನ್ನು ಸನ್ಮಾರ್ಗ ಈ ಹಿಂದಿಗಿಂತಲೂ ಹೆಚ್ಚಾಗಿ ಇವತ್ತು ಬಯಸುತ್ತಿದೆ. ಸನ್ಮಾರ್ಗ ವೆಬ್‍ಸೈಟ್ ಸುದ್ದಿಗಳನ್ನು ತಪ್ಪದೇ ಓದುವ ಮತ್ತು ಪತ್ರಿಕೆಯನ್ನು ಖರೀದಿಸುವ ಮೂಲಕ ನೀವು ಸದಾ ಬೆಂಬಲಿಸುತ್ತಿರಿ ಎಂದು ವಿನಂತಿಸುತ್ತೇವೆ.


Friday 6 March 2020

ಅದೇ ಪಾಕಿಸ್ತಾನವನ್ನು ತನಕ ಪರಮಾಪ್ತ ರಾಷ್ಟ್ರವೆಂದು ಗೌರವಿಸಿದ್ದು ಇದೇ ಸರಕಾರ



ದೇಶಪ್ರೇಮ ಎಂದರೇನು, ಯಾವುದು ದೇಶದ್ರೋಹ ಎಂಬ ಪ್ರಶ್ನೆಗೆ ಬಿಜೆಪಿ ಪ್ರಣೀತ ಉತ್ತರಗಳು ಎಷ್ಟು ಅಪ್ರಾಯೋಗಿಕ ಮತ್ತು ಅಪಾಯಕಾರಿ ಎಂಬುದಕ್ಕೆ ದೇಶದಲ್ಲಿ ಸದ್ಯ ನಡೆಯುತ್ತಿರುವ ವಿವಿಧ ಬೆಳವಣಿಗೆಗಳು ಸ್ಪಷ್ಟ ಉದಾಹರಣೆಗಳಾಗಿವೆ. ಪಾಕಿಸ್ತಾನವನ್ನು ದ್ವೇಷಿಸುವುದೇ ದೇಶಪ್ರೇಮ ಎಂಬುದಾಗಿ ದೊಡ್ಡ ದನಿಯಲ್ಲಿ ಹೇಳಲು ಪ್ರಾರಂಭಿಸಿದ್ದೇ ಬಿಜೆಪಿ. 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಪಾಕಿಸ್ತಾನವನ್ನೇ ಮುಖ್ಯ ಚುನಾವಣಾ ವಸ್ತುವಾಗಿಸಿದ್ದರು. ಮನ್‍ಮೋಹನ್ ಸಿಂಗ್ ಅವರು ಪಾಕ್‍ಗೆ ಲವ್ ಲೆಟರ್ ಬರೆಯುತ್ತಿದ್ದಾರೆ ಎಂದು ಅಣಕಿಸಿದ್ದರು. ಗಡಿಯಲ್ಲಿ ಉರುಳಿದ ನಮ್ಮ ಓರ್ವ ಯೋಧನ ತಲೆಯ ಬದಲಿಗೆ ಪಾಕ್ ಯೋಧರ ಹತ್ತು ತಲೆಗಳನ್ನು ಉರುಳಿಸಲಾಗುವುದು ಎಂಬ ಹೇಳಿಕೆಯನ್ನೂ ಬಿಜೆಪಿ ನಾಯಕರು ನೀಡಿದ್ದರು. ಮುಂಬೈ ದಾಳಿಯ ರೂವಾರಿ ಅಜ್ಮಲ್ ಕಸಬ್‍ನನ್ನು ಜೈಲಲ್ಲಿರಿಸಿ ಕಾಂಗ್ರೆಸ್ ಬಿರಿಯಾನಿ ತಿನ್ನಿಸುತ್ತಿದೆ ಎಂದೂ ಹೇಳಿದ್ದರು. ಆದರೆ ಯಾವಾಗ ನರೇಂದ್ರ ಮೋದಿಯವರು ಪ್ರಧಾನಿಯಾದರೋ ಅವರು ಅದೇ ಪಾಕಿಸ್ತಾನಕ್ಕೆ ಆಹ್ವಾನವಿಲ್ಲದೆಯೇ ಭೇಟಿಕೊಟ್ಟು ಅಚ್ಚರಿ ಮೂಡಿಸಿದರು. ಮಾತ್ರವಲ್ಲ, ಪಾಕ್‍ಗೆ ನೀಡಲಾಗಿದ್ದ ಪರಮಾಪ್ತ ರಾಷ್ಟ್ರದ ಗೌರವವನ್ನು 2019ರ ಪುಲ್ವಾಮಾ ದಾಳಿಯ ವರೆಗೂ ಹಾಗೆಯೇ ಉಳಿಸಿಕೊಂಡರು. ಪುಲ್ವಾಮಕ್ಕಿಂತ ಮೊದಲು ಪಠಾಣ್‍ಕೋಟ್‍ನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಕಾಶ್ಮೀರದ ಗಡಿಯಲ್ಲಿ ಪ್ರತಿನಿತ್ಯ ಗುಂಡಿನ ಚಕಮಕಿ ನಡೆಯುತ್ತಿತ್ತು. ಆದರೂ ಪರಮಾಪ್ತ ರಾಷ್ಟ್ರದ ಸ್ಥಾನಮಾನವನ್ನು ಪ್ರಧಾನಿ ಮೋದಿಯವರು ರದ್ದುಪಡಿಸಿರಲಿಲ್ಲ. ಪುಲ್ವಾಮ ದಾಳಿಯ ಬಳಿಕ ಈ ಗೌರವವನ್ನು ರದ್ದುಪಡಿಸಿದರಾದರೂ ಪಾಕ್ ಜೊತೆಗಿನ ವ್ಯಾಪಾರ ಸಂಬಂಧವನ್ನು ಕಡಿದುಕೊಳ್ಳದೇ ಉಳಿಸಿಕೊಂಡರು. 2020ರ ಪ್ರಥಮ ತ್ರೈಮಾಸಿಕದಲ್ಲಿ ಭಾರತವು 7.13 ಮಿಲಿಯನ್ ಡಾಲರ್ ಮೊತ್ತದ ಉತ್ಪನ್ನಗಳನ್ನು ಪಾಕ್‍ನಿಂದ ಆಮದು ಮಾಡಿಕೊಂಡಿದೆ. 2019ರಲ್ಲಿ (ಫಿಸ್ಕಲ್ ಇಯರ್) ಒಟ್ಟು 495 ಮಿಲಿಯನ್ ಡಾಲರ್ ಮೊತ್ತದ ಉತ್ಪನ್ನಗಳನ್ನು ಪಾಕ್‍ನಿಂದ ಭಾರತ ಆಮದು ಮಾಡಿಕೊಂಡಿದೆ. ಪಾಕ್ ದ್ವೇಷವನ್ನೇ ಚುನಾವಣಾ ವಸ್ತುವಾಗಿಸಿಕೊಂಡ ಪಕ್ಷದ ಸ್ಥಿತಿ ಇದು. ಹಾಗಂತ,

ಪುಲ್ವಾಮಾ ದಾಳಿ ನಡೆದು ಒಂದುವರ್ಷ ಕಳೆದರೂ ಕನಿಷ್ಠ ಚಾರ್ಜ್‍ಶೀಟನ್ನೇ ಈ ವರೆಗೂ ಸಲ್ಲಿಸಲಾಗಿಲ್ಲ. ಪುಲ್ವಾಮಾ ದಾಳಿಯ ತನಿಖೆ ನಡೆಸುತ್ತಿರುವುದು- ಕೇಂದ್ರ ಸರಕಾರದ ಅಧೀನದಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ). 2019 ಫೆಬ್ರವರಿ 14ರಂದು ಜಮ್ಮು-ಶ್ರೀನಗರದ ಹೆದ್ದಾರಿಯ ಪುಲ್ವಾಮ ಎಂಬಲ್ಲಿ ಸಿಆರ್‍ಪಿಎಫ್ ವಾಹನದ ಮೇಲೆ ಕಾರನ್ನು ನುಗ್ಗಿಸಿ ಸ್ಫೋಟಿಸಿದುದರ ಪರಿಣಾಮ 40 ಯೋಧರು ಹುತಾತ್ಮರಾದರು. ಅಚ್ಚರಿ ಏನೆಂದರೆ, ಕಠಿಣ ಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿರುವ ಈ ರಾಷ್ಟ್ರೀಯ ಹೆದ್ದಾರಿಗೆ ಭಾರೀ ಸ್ಫೋಟಕಗಳನ್ನು ತುಂಬಿರುವ ಕಾರು ಹೇಗೆ ಪ್ರವೇಶಿಸಿತು ಎಂಬುದು. ಆ ಕಾರಲ್ಲಿದ್ದ ಸ್ಫೋಟಕಗಳಂತೂ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಾಗುವಂಥದ್ದಾಗಿರಲಿಲ್ಲ. ಅವು ಮಿಲಿಟರಿ ಮದ್ದುಗುಂಡುಗಳ ಸಂಗ್ರಹಾರದಲ್ಲಿ ಇರುವ ಮತ್ತು ಯುದ್ಧ ಸಂದರ್ಭದಲ್ಲಿ ಬಳಸಲಾಗುವ ಉನ್ನತ ದರ್ಜೆಯ ಸ್ಫೋಟಕಗಳಾಗಿದ್ದುವು. ಈ ಸ್ಫೋಟಕಗಳನ್ನು ಅಮೋನಿಯಂ ನೈಟ್ರೇಟ್, ನೈಟ್ರೋ ಗ್ಲಿಸರಿನ್ ಮತ್ತು ಆರ್ ಡಿ ಎಕ್ಸ್ ನಿಂದ ಪ್ಯಾಕ್ ಮಾಡಲಾಗಿತ್ತು. ಇವೆಲ್ಲ ಮಾಹಿತಿಯನ್ನು ತನಿಖಾಧಿಕಾರಿಗಳೇ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೇ ಕಾರಿನ ಎಂಜಿನ್ ಬ್ಲಾಕ್ ಈವರೆಗೂ ಪತ್ತೆಯಾಗಿಲ್ಲ. ಕಾರನ್ನು ಚಲಾಯಿಸಿದ ಆದಿಲ್ ಅಹ್ಮದ್ ಧಾರ್ ಸಹಿತ ಆರೋಪಿಗಳೆಂದು ನಂಬಲಾಗಿರುವ ಎಲ್ಲ ಐವರೂ ವಿವಿಧ ಸಂದರ್ಭಗಳಲ್ಲಿ ಹತ್ಯೆಗೀಡಾಗಿದ್ದಾರೆ ಎಂದೂ ಅಧಿಕಾರಿಗಳು ಹೇಳುತ್ತಿದ್ದಾರೆ. ದಾಳಿಗೆ ಬಳಸಲಾದ ಕಾರನ್ನು ಗೊತ್ತುಪಡಿಸಿದ್ದು ಯಾರು, ಸ್ಫೋಟಕಗಳನ್ನು ಎಲ್ಲಿಂದ ಪಡೆದುಕೊಳ್ಳಲಾಯಿತು ಮತ್ತು ಇದಕ್ಕೆ ಹಣಕಾಸಿನ ನೆರವು ಲಭ್ಯವಾದುದು ಎಲ್ಲಿಂದ ಇತ್ಯಾದಿ ಬಹುಮುಖ್ಯ ಪ್ರಶ್ನೆಗಳೂ ಉತ್ತರವಿಲ್ಲದೇ ಹಾಗೆಯೇ ಬಿದ್ದುಕೊಂಡಿದೆ. ನಿಜಕ್ಕೂ ಅಚ್ಚರಿಯ ಬೆಳವಣಿಗೆ ಇದು. ಈ ಭಯಾನಕ ಕೃತ್ಯದ ಹಿಂದೆ ಪಾಕಿಸ್ತಾನ ಇದೆ ಎಂದು ಹೇಳಿದ ಕೇಂದ್ರ ಸರಕಾರ, ಅದರಾಚೆಗೆ ತನಿಖಾ ವರದಿಯನ್ನು ಬಿಡುಗಡೆಗೊಳಿಸುವುದಕ್ಕಾಗಲಿ, ಚಾರ್ಜ್‍ಶೀಟ್ ಸಲ್ಲಿಸುವುದಕ್ಕಾಗಲಿ ಯಾಕೆ ಆಸಕ್ತಿಯನ್ನು ತೋರಿಸುತ್ತಿಲ್ಲ? ಇದೇವೇಳೆ, ಹುತಾತ್ಮ ಯೋಧರ ಕುಟುಂಬಕ್ಕೆ ಸೂಕ್ತ ಪರಿಹಾರದ ಮೊತ್ತ ಇನ್ನೂ ತಲುಪಿಲ್ಲ ಎಂಬ ತನಿಖಾ ವರದಿಯನ್ನು ದಿ ಕ್ವಿಂಟ್, ದಿ ವೈರ್ ಇತ್ಯಾದಿ ವೆಬ್ ಪತ್ರಿಕೆಗಳು ಪ್ರಕಟಿಸಿವೆ. ಸಂತ್ರಸ್ತ ಯೋಧರ ಕುಟುಂಬಗಳ ಸಂದರ್ಶನವನ್ನೂ ಅವು ಬಿಡುಗಡೆಗೊಳಿಸಿವೆ. ಇವೆಲ್ಲ ಏನು? ಇನ್ನೊಂದು ಕಡೆ,
ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿರುವುದಾಗಿ ಆರೋಪಿಸಿ ಹುಬ್ಬಳ್ಳಿಯ ಕೆಎಲ್‍ಇ ಕಾಲೇಜಿನ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ದೇಶದ್ರೋಹದಡಿ ಬಂಧಿಸಿದ್ದ ಪೋಲೀಸರು ಒಂದೇ ದಿನದೊಳಗೆ ಸ್ಟೇಷನ್ ಜಾಮೀನಿನ ಮೂಲಕ ಬಿಡುಗಡೆಗೊಳಿಸಿದ್ದಾರೆ. ಇದೇವೇಳೆ, ಬೀದರ್ ನ ಶಾಹೀನ್ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ ನಾಟಕದ ನೆಪದಲ್ಲಿ ಶಿಕ್ಷಕಿ ಮತ್ತು ಓರ್ವ ತಾಯಿಯ ಮೇಲೆ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿದೆ. ಇದಕ್ಕಿಂತ ಮೊದಲು ಕಲ್ಲಡ್ಕದ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳು ಬಾಬರಿ ಮಸೀದಿಯ ಧ್ವಂಸವನ್ನು ಮರು ಪ್ರದರ್ಶಿಸಿದ್ದರು. ಬಾಬರಿ ಮಸೀದಿಯ ಧ್ವಂಸ ಕಾನೂನುಬಾಹಿರ ಮತ್ತು ತಪ್ಪು ಎಂದು ಸುಪ್ರೀಮ್ ಕೋರ್ಟ್ ಹೇಳಿದ್ದರೂ ಈ ಶಾಲೆಯಲ್ಲಿ ಬಾಬರಿ ಮಸೀದಿಯ ಪ್ರಾತ್ಯಕ್ಷಿಕೆಯನ್ನು ತಯಾರಿಸಿ ಧ್ವಂಸಗೊಳಿಸಲಾಗಿತ್ತು. ಆದರೆ, ಇದನ್ನು ನ್ಯಾಯಾಂಗ ನಿಂದನೆಯಾಗಿಯೋ ಅಥವಾ ದೇಶದ್ರೋಹವಾಗಿಯೋ ಪೊಲೀಸ್ ಇಲಾಖೆ ಪರಿಗಣಿಸಲೇ ಇಲ್ಲ. ವಿಷಾದ ಏನೆಂದರೆ,
ಇವೆಲ್ಲವೂ ಬಿಜೆಪಿ ಆಡಳಿತದಲ್ಲೇ  ನಡೆದಿದೆ ಮತ್ತು ನಡೆಯುತ್ತಿದೆ ಎಂಬುದು. ಒಂದುಕಡೆ, ಪಾಕಿಸ್ತಾನವನ್ನು ದ್ವೇಷಿಸುವುದು ಮತ್ತು ಅದನ್ನೇ ದೇಶಪ್ರೇಮದ ಮಾನದಂಡವಾಗಿ ಬಿಂಬಿಸುವುದು ಹಾಗೂ ಇನ್ನೊಂದು ಕಡೆ,  ಅದೇ ಪಾಕ್‍ನೊಂದಿಗೆ ವ್ಯಾಪಾರ ಸಂಬಂಧಗಳನ್ನು ಇಟ್ಟುಕೊಳ್ಳುವುದು, ಅದೇ ಪಾಕ್‍ನ ಕೃತ್ಯವೆಂದು ನಂಬಲಾಗಿರುವ ಪುಲ್ವಾಮ ಘಟನೆಯ ತನಿಖಾ ವರದಿಯನ್ನೇ ಬಿಡುಗಡೆಗೊಳಿಸದಿರುವುದು, ಚಾರ್ಜ್ ಸಲ್ಲಿಸದಿರುವುದು... ಇವೆಲ್ಲ ಏನು? ನಿಜವಾಗಿ,
ಪಾಕಿಸ್ತಾನ್ ದ್ವೇಷ ಎಂಬುದು ಬಿಜೆಪಿಯ ರಾಜಕೀಯ ತಂತ್ರವೇ ಹೊರತು ಇನ್ನೇನೂ ಅಲ್ಲ. ಎಲ್ಲಿಯವರೆಗೆ ಪಾಕಿಸ್ತಾನ ದ್ವೇಷದಿಂದ ಓಟುಗಳು ಹುಟ್ಟುತ್ತೋ ಅಲ್ಲಿಯವರೆಗೆ ಈ ದೇಶದಲ್ಲಿ ದೇಶಪ್ರೇಮದ ಪರ್ಯಾಯ ಪದವಾಗಿ ಪಾಕಿಸ್ತಾನ ಇದ್ದೇ  ಇರುತ್ತದೆ. ಪಾಕಿಸ್ತಾನದ ವಿರುದ್ಧ ಭಾರತ ಮಾತಾಡುವುದರಿಂದ ರಾಜಕೀಯ ಕ್ಷೇತ್ರದ ಹೊರತಾಗಿ ಇನ್ನಾವ ಕ್ಷೇತ್ರಕ್ಕೂ ಯಾವ ಲಾಭವೂ ಇಲ್ಲ. ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನ ದುರ್ಬಲ ರಾಷ್ಟ್ರ. ಅದು ಭಾರತದ ವಿರುದ್ಧ ಯುದ್ಧ ಮಾಡಿ ಜಯಿಸುವ ಸ್ಥಿತಿಯಲ್ಲೇ  ಇಲ್ಲ. ಇಂಥದ್ದೊಂದು  ದುರ್ಬಲ ರಾಷ್ಟ್ರವನ್ನು ಹಗಲೂ ರಾತ್ರಿ ಭಾರತದಲ್ಲಿ ಗುಮ್ಮನಂತೆ ಬಿಂಬಿಸುವುದು ಬಾಲಿಶತನ. ಅಂದಹಾಗೆ,
124ಂ ಕಲಂನಡಿ ಬರುವ ದೇಶದ್ರೋಹವೆಂಬ ಅಪಾಯಕಾರಿ ತೂಗುಗತ್ತಿಯ ಬಗ್ಗೆ ದೇಶದಲ್ಲಿ ಚರ್ಚೆಯಾಗಬೇಕಾದ ಅಗತ್ಯ ಇದೆ. ದೇಶದ್ರೋಹ ಕಲಂನಡಿ ಯಾವೆಲ್ಲ ಚಟುವಟಿಕೆಗಳು ಬರುತ್ತವೆ, ಪಾಕಿಸ್ತಾನ್ ಜಿಂದಾಬಾದ್ ಎಂಬ ಬರೇ ಘೋಷಣೆಯು (ಅದರ ಅಗತ್ಯವಿದೆಯೇ ಎಂಬುದು ಬೇರೆ ಚರ್ಚೆ) ದೇಶದ್ರೋಹವೆನಿಸುತ್ತದೆಯೇ, ದೇಶದ್ರೋಹದ ವ್ಯಾಖ್ಯಾನ ಏನು, ಇದೇ ರೀತಿ, ನೇಪಾಳ, ಶ್ರೀಲಂಕಾ, ಅಮೇರಿಕ ಜಿಂದಾಬಾದ್ ಎನ್ನಬಹುದೇ ಇತ್ಯಾದಿ ಇತ್ಯಾದಿ ಪ್ರಶ್ನೆಗಳ ಮೇಲೂ ಸೂಕ್ತ ಪರಾಮರ್ಶೆ ನಡೆಯಬೇಕಿದೆ. ಪ್ರಜಾತಂತ್ರ ರಾಷ್ಟ್ರವೊಂದರಲ್ಲಿ ಒಂದು ಘೋಷಣೆ, ಒಂದು ನಾಟಕದ ಸಂಭಾಷಣೆ, ಒಂದು ಭಿತ್ತಿಪತ್ರ, ಒಂದು ಕವನದ ಸಾಲು ದೇಶದ್ರೋಹವಾಗುವುದು ಅಪಾಯಕಾರಿ ಬೆಳವಣಿಗೆ. ಇದು ಪ್ರಜಾತಂತ್ರ ಸರ್ವಾಧಿಕಾರದತ್ತ ಹೊರಳಿರುವುದರ ಲಕ್ಷಣ.