Monday, 31 December 2012

'ನಿರ್ಭಯ'ಳಿಗೆ ಸಲ್ಲಿಸುವ ಸಂತಾಪದಲ್ಲಿ ತೋಮರ್ ಗೂ ಪಾಲಿರಲಿ..


   ಸಾವು ಎಲ್ಲರ ಪಾಲಿಗೆ ಸಹಜವೇ ಆಗಿದ್ದರೂ ಕೆಲವು ಸಾವುಗಳು ಪ್ರತಿಭಟನೆಗೆ, ಇನ್ನೊಬ್ಬರ ಸಾವಿಗೆ ಕಾರಣವಾಗಿ ಸುದ್ದಿಗೊಳಗಾಗುವುದಿದೆ. ದೆಹಲಿಯಲ್ಲಿ ಅತ್ಯಾಚಾರಕ್ಕೀಡಾದ ಯುವತಿ ‘ನಿರ್ಭಯ’ (ಮಾಧ್ಯಮಗಳೇ ಕೊಟ್ಟ ಹೆಸರು) ಡಿ. 29ರಂದು ಸಾವಿಗೀಡಾಗುವುದಕ್ಕಿಂತ 3 ದಿನಗಳ ಮೊದಲೇ ಪ್ರತಿಭಟನಾಕಾರರ ಹಲ್ಲೆಯಿಂದ ಸುಭಾಶ್ಚಂದ್ರ ತೋಮರ್ ಎಂಬ ಪೊಲೀಸ್ ಕಾನ್‍ಸ್ಟೇಬಲ್ ಸಾವಿಗೀಡಾಗಿದ್ದರು. ಹೆಣ್ಣಾಗಿರುವುದೇ ನಿರ್ಭಯಳ ಅಪರಾಧವಾಗಿದ್ದರೆ ಕಾನೂನು ಪಾಲನೆಗೆ ಮುಂದಾದುದೇ ತೋಮರ್‍ರ ಅಪರಾಧವಾಗಿತ್ತು. ನಿರ್ಭಯಳಿಗೆ ತಂದೆ, ತಾಯಿ, ಸಹೋದರಿಯರಿರುವಂತೆಯೇ ತೋಮರ್‍ಗೂ ಪತ್ನಿ, ಮಕ್ಕಳು, ಕುಟುಂಬವಿದೆ. ಒಂದು ರೀತಿಯಲ್ಲಿ ಎರಡೂ ಕುಟುಂಬಗಳು ಸಮಾನ ನೋವಿಗೆ ಒಳಗಾಗಿವೆ. ಕಣ್ಣೀರು ಹರಿಸಿವೆ. ದುರಂತ ಏನೆಂದರೆ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಘೋಷಿಸುವವರ ಮಧ್ಯೆ ತೋಮರ್‍ರ ನೋವು ಎಲ್ಲೂ ಕಾಣಿಸುತ್ತಲೇ ಇಲ್ಲ. ನಿರ್ಭಯಳ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳು ತಪ್ಪನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಆದರೆ ತೋಮರ್‍ರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ತಪ್ಪನ್ನೂ ಒಪ್ಪಿಕೊಳ್ಳುತ್ತಿಲ್ಲ. ತೋಮರ್‍ರ ಸಾವನ್ನು ಸಹಜ ಸಾವೆಂದು ಬಿಂಬಿಸಲು ಅವರು ವಿವಿಧ ನೆಪಗಳನ್ನು ಹುಡುಕುತ್ತಿದ್ದಾರೆ.
  ನಿಜವಾಗಿ, ಪ್ರತಿಭಟನಾಕಾರರಲ್ಲಿ ಕೆಲವು ಮೂಲಭೂತ ಗುಣಗಳು ಇದ್ದಿರಲೇಬೇಕು. ಇಲ್ಲದಿದ್ದರೆ ಪ್ರತಿಭಟನಾಕಾರರ ಪ್ರಾಮಾಣಿಕತೆಯೇ ಪ್ರಶ್ನೆಗೀಡಾಗುತ್ತದೆ. ಇಷ್ಟಕ್ಕೂ ಒಂದು ಅತ್ಯಾಚಾರಕ್ಕೆ ಇನ್ನೊಂದು ಅತ್ಯಾಚಾರ ಪರಿಹಾರವಾಗುತ್ತದೆಯೇ? ಪೊಲೀಸರಲ್ಲಿ ಕೆಟ್ಟವರಿದ್ದಾರೆ ಎಂಬ ಮಾತ್ರಕ್ಕೇ ಎಲ್ಲ ಪೊಲೀಸರನ್ನೂ ಕೆಟ್ಟವರೆಂಬಂತೆ ನೋಡಬೇಕಾದ ಅಗತ್ಯವೂ ಇಲ್ಲವಲ್ಲವೇ? ಸದ್ಯದ ಪರಿಸ್ಥಿತಿ ಹೇಗಿದೆಯೆಂದರೆ, ಪ್ರತಿಭಟನೆಯ ವೇಳೆ ಪೊಲೀಸರು ಹಲ್ಲೆಗೋ ಸಾವಿಗೋ ಒಳಗಾದರೆ ಅದನ್ನು ಗಂಭೀರವಾಗಿ ಪರಿಗಣಿಸುವ ವಾತಾವರಣ ಮಾಧ್ಯಮಗಳಲ್ಲಾಗಲಿ, ಪ್ರತಿಭಟನಾಕಾರರಲ್ಲಾಗಲಿ ಕಾಣಿಸುತ್ತಲೇ ಇಲ್ಲ. ಅಂದಹಾಗೆ, ಎಲ್ಲೇ ಪ್ರತಿಭಟನೆ, ಧರಣಿ, ಕೋಮುಗಲಭೆ, ಏನೇ ಆಗಲಿ ಅಲ್ಲಿಗೆ ಮೊತ್ತಮೊದಲು ತಲುಪುವುದು ಸಾಮಾನ್ಯ ಪೊಲೀಸ್ ಪೇದೆಗಳು. ಆಕ್ರೋಶಿತ ಗುಂಪುಗಳ ಕಲ್ಲಿನೇಟಿಗೆ ಮೊದಲು ಗುರಿಯಾಗುವುದೂ ಅವರೇ. ಪೊಲೀಸ್ ಕಮೀಷನರೋ ಅಥವಾ ಇನ್ನಾರೋ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಾಗ ಆಕ್ರೋಶಿತ ಗುಂಪುಗಳ ಬತ್ತಳಿಕೆಯಲ್ಲಿರುವ ಕಲ್ಲುಗಳು ಖಾಲಿಯಾಗಿರುತ್ತವೆ. ಇಷ್ಟಾದರೂ ಪೊಲೀಸರು ಸಾರ್ವಜನಿಕರ ಅನುಕಂಪಕ್ಕೆ ಒಳಗಾಗುವುದು ಕಡಿಮೆ. ಇದಕ್ಕೆ ಕಾರಣವೂ ಇದೆ. ಈ ದೇಶದ ಅತ್ಯಂತ ಭ್ರಷ್ಟ ಇಲಾಖೆಯಲ್ಲಿ ಪೊಲೀಸ್ ಇಲಾಖೆಯೂ ಒಂದು. ಅತ್ಯಾಚಾರಕ್ಕೀಡಾದ ಯುವತಿ ದೂರು ಕೊಡಲು ಪೊಲೀಸ್ ಠಾಣೆಗೆ ಹೋದರೆ ಆಕೆಯನ್ನೇ ಅತ್ಯಾಚಾರಕ್ಕೊಳಪಡಿಸುವ ಕ್ರೂರಿಗಳೂ ಪೊಲೀಸ್ ಇಲಾಖೆಯಲ್ಲಿದ್ದಾರೆ. 100 ರೂಪಾಯಿ ಪಿಕ್ ಪಾಕೆಟ್ ಮಾಡಿ ಸಿಕ್ಕಿ ಬಿದ್ದವನನ್ನು ಠಾಣೆಯಲ್ಲೇ  ಕೊಲೆ ಮಾಡುವ ಪೊಲೀಸರಿದ್ದಾರೆ. ಕೋಮು ಗಲಭೆಯ ಸಂದರ್ಭದಲ್ಲಿ ನಿರ್ದಿಷ್ಟ ಕೋಮಿನ ಪಕ್ಷಪಾತಿಯಾಗಿ ಇಡೀ ಗಲಭೆಯ ಬಗ್ಗೆ ತಪ್ಪು ವರದಿ ಕೊಡುವ ಖಾಕಿ ಸಮವಸ್ತ್ರಧಾರಿಗಳಿದ್ದಾರೆ. ದುಡ್ಡು ಪಡಕೊಂಡು ನ್ಯಾಯವನ್ನೇ ನಿರಾಕರಿಸುವವರಿದ್ದಾರೆ. ಸಾಮಾನ್ಯ ಕೂಲಿ ಕಾರ್ಮಿಕನೊಬ್ಬ ಠಾಣೆಯನ್ನು ಹತ್ತಬೇಕಾದರೆ ಇನ್‍ಫ್ಲುಯೆನ್ಸ್ ಗೆ ಯಾರನ್ನಾದರೂ ಜೊತೆಗೆ ಠಾಣೆಗೆ ಕೊಂಡೊಯ್ಯಲೇಬೇಕು ಎಂಬ ವಾತಾವರಣವನ್ನು ನಿರ್ಮಿಸಿದವರಿದ್ದಾರೆ. ಆದರೂ ಎಲ್ಲ ಪೊಲೀಸರೂ ಹಾಗಲ್ಲವಲ್ಲ. ನಿರ್ಭಯಳ ಮೇಲೆ ಅತ್ಯಾಚಾರ ಮಾಡಿದವರನ್ನು ಮುಂದಿಟ್ಟುಕೊಂಡು ಎಲ್ಲ ಪುರುಷರೂ ಹೀಗೆಯೇ ಎಂದು ಹೇಳುವುದು ಹೇಗೆ ತಪ್ಪೋ ಹಾಗೆಯೇ ಇದೂ ಅಲ್ಲವೇ?
  ಅತ್ಯಾಚಾರದ ವಿರುದ್ಧ ದೇಶಾದ್ಯಂತ ಸಂಚಲನ ಮೂಡಿಸುವುದಕ್ಕೆ ನಿರ್ಭಯಳ ಸಾವು ಕಾರಣವಾದಂತೆಯೇ, ಪ್ರತಿಭಟನೆಗಳು ಹೇಗಿರಬೇಕು ಎಂಬ ಬಗ್ಗೆ ಒಂದೊಳ್ಳೆಯ ಚರ್ಚೆಗೆ ತೋಮರ್‍ರ ಸಾವೂ ನೆಪವಾಗಬೇಕು. ಪ್ರತಿಭಟನೆ ಅಂದರೆ, ಜನರ ಕೈಯಲ್ಲಿ ಕಲ್ಲು, ಸಲಾಕೆಗಳು ಇರಲೇಬೇಕೆಂದೇನೂ ಇಲ್ಲವಲ್ಲ. ಪ್ರತಿಭಟಿಸುವುದು ಯಾರ ವಿರುದ್ಧ ಮತ್ತು ಯಾವುದರ ವಿರುದ್ಧ ಎಂಬುದರ ಕುರಿತು ಸ್ಪಷ್ಟ ತಿಳುವಳಿಕೆ ಇರುವ ಮಂದಿ ಆಯುಧಗಳನ್ನು ಬಳಸುವುದಕ್ಕೆ ಸಾಧ್ಯವೂ ಇಲ್ಲ. ಹಾಗೆಯೇ, ತೋಮರ್‍ರ ಸಾವಿಗೆ ತಾವೆಷ್ಟು ಕಾರಣರು ಎಂಬ ಬಗ್ಗೆ ಪೊಲೀಸ್ ಇಲಾಖೆಯೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ತಮ್ಮನ್ನು ಜನರೇಕೆ ಅನುಮಾನದಿಂದ ನೋಡುತ್ತಾರೆ ಎಂಬುದಕ್ಕೆ ಅದು ಕಾರಣಗಳನ್ನು ಕಂಡುಕೊಳ್ಳಬೇಕು. ಇವತ್ತು ಯಾವುದೇ ಒಂದು ಪೊಲೀಸ್ ಠಾಣೆಗೆ, ತಾನು ನೂರಕ್ಕೆ ನೂರು ಪ್ರಾಮಾಣಿಕ ಎಂದು ಬೋರ್ಡು ತಗುಲಿಸಿಕೊಳ್ಳಲು ಸಾಧ್ಯವೇ? ಒಂದು ವೇಳೆ ಹಾಗೆ ಬೋರ್ಡು ಹಾಕಿದರೂ ಅದನ್ನು ಜನಸಾಮಾನ್ಯರು ನಂಬಿಯಾರೇ? ಇಂಥದ್ದೊಂದು ಕೆಟ್ಟ ಗುರುತಿನಿಂದ ಹೊರಬರಲು ಎಲ್ಲ ಠಾಣೆಗಳೂ ಸಿದ್ಧವಾಗಬೇಕಾದ ಅಗತ್ಯವಿದೆ. ಜನಸಾಮಾನ್ಯರು ಪೊಲೀಸರನ್ನು ಕಾಣುವಾಗ ಕಲ್ಲಿನ ಬದಲು ಹೂವನ್ನು ಎತ್ತಿಕೊಳ್ಳಬೇಕಾದರೆ ಹೂವಿನಂಥ ಮನಸ್ಸು ಮತ್ತು ವರ್ಚಸ್ಸು ಪೊಲೀಸರಿಗೂ ಇರಬೇಕಾಗುತ್ತದೆ. ಅಂಥ ವರ್ಚಸ್ಸನ್ನು ಪೊಲೀಸ್ ಇಲಾಖೆ ಸದ್ಯ ಕಳ ಕೊಂಡದ್ದರಿಂದಲೇ ತೋಮರ್‍ರಂಥ ಕಾನ್‍ಸ್ಟೇಬಲ್‍ಗಳ ಸಾವು ಜನರನ್ನು ತಲುಪಲು ವಿಫಲವಾಗಿರುವುದು. ಆದ್ದರಿಂದ ಪ್ರಾಮಾಣಿಕ ಪೊಲೀಸರು ತಮ್ಮ ಸಹೋದ್ಯೋಗಿಗಳ ಅಪ್ರಾಮಾಣಿಕತೆ, ಅನ್ಯಾಯ, ಕೋಮುವಾದಿ ಮನಸ್ಥಿತಿಯ ವಿರುದ್ಧ ಧ್ವನಿಯೆತ್ತುವ ಮೂಲಕ ಕಳೆದ ಹೋಗಿರುವ ಗೌರವವನ್ನು ಪೊಲೀಸ್ ಇಲಾಖೆಗೆ ಮರಳಿ ದೊರಕಿಸಲು ಪ್ರಯತ್ನಿಸಬೇಕಾಗಿದೆ. ನಿರ್ಭಯಳ ಜೀವ ಎಷ್ಟು ಅಮೂಲ್ಯವೋ ಅಷ್ಟೇ ತೋಮರ್‍ರ ಜೀವವೂ ಅಮೂಲ್ಯ ಎಂದು ಜನಸಾಮಾನ್ಯರೂ ಘೋಷಿಸುವಂಥ ವಾತಾವರಣವನ್ನು ತಮ್ಮ ವರ್ತನೆಯ ಮುಖಾಂತರ ಪೊಲೀಸರು ಸಾಬೀತುಪಡಿಸಬೇಕಾಗಿದೆ.
  ಏನೇ ಆಗಲಿ, ನಿರ್ಭಯ ಮತ್ತು ತೋಮರ್‍ರ ಸಾವು, ಈ ದೇಶ ಗಮನಹರಿಸಲೇಬೇಕಾದ ಎರಡು ಸಂಗತಿಗಳತ್ತ ಬೊಟ್ಟು ಮಾಡಿವೆ. ನಿರ್ಭಯಳ ಸಾವು ಅತ್ಯಾಚಾರಿಗಳ ವಿರುದ್ಧ ಪ್ರಬಲ ಕಾನೂನಿನ ರಚನೆಗೆ ಕಾರಣವಾಗುವಂತೆಯೇ ತೋಮರ್‍ರ ಸಾವು ಪೊಲೀಸ್ ಇಲಾಖೆಯ ಸುಧಾರಣೆಗೂ ಕಾರಣವಾಗಬೇಕು. ಹಾಗೆಯೇ ಪ್ರತಿಭಟನಾಕಾರರ ಮನಸ್ಥಿತಿಯ ಬದಲಾವಣೆಗೂ ಇದು ಹೇತುವಾಗಬೇಕು. ನಮಗೆ ನಿರ್ಭಯಳೂ ಬೇಕು, ತೋಮರ್‍ರೂ ಬೇಕು. ಯಾರೂ ಅನ್ಯಾಯವಾಗಿ ಸಾವಿಗೀಡಾಗಬಾರದು.

Wednesday, 26 December 2012

ನಮ್ಮೆಲ್ಲರ ಆತ್ಮಸಾಕ್ಷಿಗೆ ಚುಚ್ಚಿ ಹೊರಟುಹೋದ ಉಪನ್ಯಾಸಕ


  ಅನೇಕ ಬಾರಿ, ಓರ್ವರ ಒಂದು ಗೆರೆಯ ಹೇಳಿಕೆ ನೂರಾರು ಪ್ರತಿಕ್ರಿಯೆಗಳಿಗೆ ಕಾರಣವಾಗುವುದಿದೆ. ದೇಶದಲ್ಲಿ ಪ್ರತಿದಿನ ಅನೇಕಾರು ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಒಂದು ಪ್ರಕರಣಕ್ಕೆ ಇತರೆಲ್ಲವುಗಳಿಗಿಂತ ಹೆಚ್ಚು ಪ್ರಚಾರ ಸಿಕ್ಕಿ, ಅಭೂತಪೂರ್ವ ಪ್ರತಿಭಟನೆಗೆ ಕಾರಣವಾಗುವುದಿದೆ. ಆತ್ಮಹತ್ಯೆಯೂ ಹಾಗೆಯೇ. ಪತ್ರಿಕೆಗಳ ತೀರಾ ಒಳಪುಟದಲ್ಲಿ ಸಣ್ಣದೊಂದು ಸುದ್ದಿಯಾಗಿ ಪ್ರಕಟವಾಗುವಷ್ಟು ಮಾಮೂಲು ಎನಿಸಿಬಿಟ್ಟಿರುವ ಆತ್ಮಹತ್ಯೆಯು, ಕೆಲವೊಮ್ಮೆ ತನ್ನ ವಿಶಿಷ್ಟತೆಯಿಂದಾಗಿ ಸಾರ್ವಜನಿಕ ಚರ್ಚೆಗೆ ಒಳಗಾಗುವುದಿದೆ. ಡಾ| ಯು.ಬಿ. ಅಶೋಕ್ ಕುಮಾರ್‍ರ ಆತ್ಮಹತ್ಯೆಯು ಇಂಥದ್ದೊಂದು ಚರ್ಚೆಗೆ ಅವಕಾಶ ಒದಗಿಸಿದೆ. ನಿಜವಾಗಿ, ಮೈಸೂರಿನ ಮಹಾರಾಜ ಸಂಜೆ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರಾದ ಇವರ ಆತ್ಮಹತ್ಯೆಯು ಚರ್ಚೆಗೆ ಒಳಗಾಗಬೇಕಾದದ್ದು ಇವರು ಉಪನ್ಯಾಸಕರು ಎಂಬ ಕಾರಣಕ್ಕಾಗಿ ಖಂಡಿತ ಅಲ್ಲ. ಇವರ ಆತ್ಮಹತ್ಯೆಯಲ್ಲಿ ಒಂದು ವೈಶಿಷ್ಟ್ಯವಿದೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಮೊದಲು ಅದಕ್ಕೆ ಕಾರಣವನ್ನು ಬರೆದಿಟ್ಟು ಹೋಗಿದ್ದಾರೆ. ವ್ಯಾಪಕವಾಗುತ್ತಿರುವ ಭ್ರಷ್ಟಾಚಾರ, ಜಾತೀಯತೆ, ಅತ್ಯಾಚಾರ, ಕೆಟ್ಟ ರಾಜಕಾರಣಗಳನ್ನು ನೋಡಿ ಮನಸ್ಸಿಗೆ ಆಘಾತವಾಗಿದೆ ಎಂದಿದ್ದಾರೆ. ಮುಂದಿನ ಜನಾಂಗವನ್ನು ರೂಪಿಸಬೇಕಾದ ವಿಶ್ವ ವಿದ್ಯಾಲಯಗಳಲ್ಲೇ ಕುಲಪತಿಯಂಥ ಹುದ್ದೆಗಾಗಿ ಲಾಬಿ, ಭ್ರಷ್ಟತನ ನಡೆಯುತ್ತಿದೆ, ಹೀಗಿರುವಾಗ ಹೇಗೆ ನಾನು ಮಕ್ಕಳಿಗೆ ಮೌಲ್ಯವನ್ನು ಬೋಧಿಸಲಿ.. ಎಂದು ಪ್ರಶ್ನಿಸಿದ್ದಾರೆ.
  ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಖಂಡಿತ ಅಲ್ಲ. ಅದರಲ್ಲೂ ಉಪನ್ಯಾಸಕರೋರ್ವರು, ಆತ್ಮಹತ್ಯೆಯನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಆಘಾತಕಾರಿಯಾದದ್ದು. ಆದರೆ, ಓರ್ವ ಪ್ರಾಮಾಣಿಕ ವ್ಯಕ್ತಿಯ ಮೇಲೆ ಈ ದೇಶದ ಸದ್ಯದ ಬೆಳವಣಿಗೆಗಳು ಯಾವ ಬಗೆಯ ಪರಿಣಾಮ ಬೀರುತ್ತವೆಂಬುದಕ್ಕೆ ಈ ಆತ್ಮಹತ್ಯೆ ಒಂದು ಅತ್ಯುತ್ತಮ ಪುರಾವೆ. ಮೌಲ್ಯಗಳನ್ನು ಕಲಿಸಬೇಕಾದ, ಮೌಲ್ಯವಂತ ಪೀಳಿಗೆಯನ್ನು ತಯಾರಿಸಬೇಕಾದ ಶಿಕ್ಷಣ ಸಂಸ್ಥೆಗಳು ಮೌಲ್ಯರಹಿತ ಕಸುಬಿನಲ್ಲಿ ತೊಡಗಿ ಬಿಟ್ಟರೆ ಕೆಡುಕುರಹಿತ ಸಮಾಜ ನಿರ್ಮಾಣವಾಗುವುದಾದರೂ ಹೇಗೆ? ಸಮಾಜದಲ್ಲಿ ಇವತ್ತು ನೂರಾರು ಕೆಡುಕುಗಳಿವೆ. ಆ ಕೆಡುಕುಗಳಿಗೆಲ್ಲ ಕಾರಣವಾಗಿರುವುದು ಅನ್ಯಗೃಹದ ಜೀವಿಗಳೇನೂ ಅಲ್ಲ. ದುರಂತ ಏನೆಂದರೆ, ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕರಿಗೆ ಕಣ್ಣೀರು ಮಿಡಿದು ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗಲಿ ಎಂದು ನಾವು ಆಗ್ರಹಿಸುತ್ತೇವೆಯೇ ಹೊರತು ಭ್ರಷ್ಟಾಚಾರದ ಮೊಲಕ್ಕೆ ಮದ್ದರೆಯುವ ಬಗ್ಗೆ ಆಲೋಚಿಸುವುದೇ ಇಲ್ಲ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಆಗ್ರಹಿಸುತ್ತೇವೆ. ಪ್ರತಿಭಟನೆ ನಡೆಸುತ್ತೇವೆ. ಆದರೆ ಹೀಗೆ ಆಗ್ರಹಿಸುತ್ತಿರುವಾಗಲೂ ಅತ್ಯಾಚಾರದ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇಷ್ಟಕ್ಕೂ ಅತ್ಯಾಚಾರಕ್ಕೆ ಮರಣ ದಂಡನೆಯಾಗಬೇಕು, ನಿಜ. ಆದರೆ ಕೇವಲ ಮರಣದಂಡನೆಯೊಂದೇ ಅತ್ಯಾಚಾರ ಪ್ರಕರಣಕ್ಕೆ ಕಡಿವಾಣ ಹಾಕೀತು ಅಂತ ಹೇಳಲು ಸಾಧ್ಯವೇ? ಅತ್ಯಾಚಾರಕ್ಕೆ ಯಾವುದು ಪ್ರಚೋದಕವಾಗುತ್ತದೋ ಅವುಗಳ ಬಗ್ಗೆ ಕಣ್ಣು ಮುಚ್ಚಿಕೊಳ್ಳುತ್ತಾ ಗಲ್ಲು ಶಿಕ್ಷೆಯ ಬಗ್ಗೆ ಮಾತಾಡುವುದು ಎಷ್ಟು ಪರಿಣಾಮಕಾರಿ? ನಮ್ಮ ಸಿನಿಮಾಗಳು, ಸಾಂಸ್ಕ್ರಿತಿಕ ಕಾರ್ಯಕ್ರಮಗಳು, ಮಾಧ್ಯಮಗಳು ಮತ್ತು ಆಧುನಿಕತೆಯ ಹೆಸರಲ್ಲಿ ಸಮರ್ಥಿಸಲಾಗುತ್ತಿರುವ ಮುಕ್ತ ಸಂಸ್ಕ್ರಿತಿಗಳೆಲ್ಲ ಕಲಿಸುವುದಾದರೂ ಏನನ್ನು? ಸಿನಿಮಾ ಪರದೆಯ ಮೇಲೆ ಹಿರೋಯಿನ್‍ಗಳ ಬಟ್ಟೆಯನ್ನು ಹೀರೋ ಎಲ್ಲರೆದುರೇ ಒಂದು ಹಂತದವರೆಗೆ ಬಿಚ್ಚುತ್ತಾನೆ ಅಥವಾ ಹಿರೋಯಿನ್‍ಳ ಬಟ್ಟೆಯೇ ಅಷ್ಟು ಕನಿಷ್ಠ ಮಟ್ಟದಲ್ಲಿರುತ್ತದೆ. ಅಲ್ಲದೆ ಜಾಹೀರಾತುಗಳಲ್ಲಿ ಬರುವ ಮಾಡೆಲ್‍ಗಳ ಭಂಗಿಯು ಒಂದು ಕುಟುಂಬದ ಎಲ್ಲರೂ ಒಟ್ಟಿಗೆ ಕೂತು ನೋಡುವಂತೆಯೂ ಇರುವುದಿಲ್ಲ. ಇಂತಹ ಸಿನಿಮಾ ಮತ್ತು ಜಾಹೀರಾತುಗಳನ್ನು ವೀಕ್ಷಿಸುವ ಸಾವಿರಾರು ಮಂದಿಯಲ್ಲಿ ಒಬ್ಬರೋ ಇಬ್ಬರೋ ನಕಾರಾತ್ಮಕ ಪ್ರಚೋದನೆಗೆ ಒಳಗಾಗಲಾರರೆಂದು ಹೇಗೆ ಹೇಳುವುದು? ಅಂದ ಹಾಗೆ, ಮದ್ಯಪಾನಕ್ಕೇನೂ ಈ ದೇಶದಲ್ಲಿ ನಿಷೇಧ ಇಲ್ಲವಲ್ಲ. ಒಂದು ಕಡೆ ಲೈಂಗಿಕ ಪ್ರಚೋದನೆಗೆ ಪೂರಕವಾದ ದೃಶ್ಯಗಳು, ಇನ್ನೊಂದು ಕಡೆ ಮನುಷ್ಯರನ್ನು ಭ್ರಮೆಯಲ್ಲಿ ತೇಲಿಸುವ ಮದ್ಯ.. ಇವೆರಡೂ ಒಟ್ಟಾದರೆ ಕೆಡುಕಲ್ಲದೇ ಒಳಿತು ಉಂಟಾಗಲು ಸಾಧ್ಯವೇ? ಕೆಡುಕುಗಳಿಗೆ ಪ್ರಚೋದಕವಾಗುವ ಯಾವೆಲ್ಲ ಪ್ರಕಾರಗಳಿವೆಯೋ ಅವುಗಳಿಗೆಲ್ಲ ಸಮಾಜದಲ್ಲಿ ಮುಕ್ತ ಸ್ವಾತಂತ್ರ್ಯವನ್ನು ನೀಡುತ್ತಾ, ಅದರಿಂದ ಜನರು ಪ್ರಚೋದಿತರಾಗಬಾರದೆಂದು ಬಯಸುವುದು ಎಷ್ಟು ಪ್ರಾಯೋಗಿಕವಾಗಬಹುದು? ಅಂದಹಾಗೆ, ಒಂದು ಊರಿನಲ್ಲಿ ಮಲೇರಿಯದ ಹಾವಳಿ ಇದ್ದರೆ, ಸರಕಾರ ಮಲೇರಿಯಾಕ್ಕೆ ಮದ್ದು ಸರಬರಾಜು ಮಾಡುವ ಕೆಲಸವನ್ನಷ್ಟೇ ಮಾಡುವುದಲ್ಲವಲ್ಲ. ಸೊಳ್ಳೆಗಳ ಮೇಲೆ ರಾಸಾಯನಿಕವನ್ನು ಸಿಂಪಡಿಸುವ ಕೆಲಸವನ್ನೂ ಮಾಡುತ್ತದಲ್ಲವೇ? ಗೆರಟೆ, ಟೈರುಗಳಲ್ಲಿ ನೀರು ನಿಂತು ಕ್ರಿಮಿಗಳು ಉತ್ಪಾದನೆಯಾಗದಂತೆ ನೋಡಿಕೊಳ್ಳಬೇಕೆಂಬ ಮುನ್ನೆಚ್ಚರಿಕೆಯನ್ನೂ ಕೊಡುತ್ತದಲ್ಲವೇ? ಹೀಗಿರುವಾಗ ಅತ್ಯಾಚಾರ ಇಲ್ಲವೇ ಭ್ರಷ್ಟಾಚಾರದಂಥ ಕೆಡುಕುಗಳ ನಿರ್ಮೂಲನವು ಬರೇ ಕಠಿಣ ಶಿಕ್ಷೆಯಿಂದ ಸಾಧ್ಯವಾಗಬಹುದೇ? ಅದಕ್ಕೆ ಪ್ರಚೋದಕವಾಗುವ ಮೂಲ ಅಂಶಗಳಿಗೆ ಕಡಿವಾಣ ಹಾಕದಿದ್ದರೆ, ರೋಗಕಾರಕ ಸೊಳ್ಳೆಗಳು ರೋಗವನ್ನು ಹಂಚುತ್ತಲೇ ಇರಲಾರದೇ?
  ಕಾನೂನು ಮತ್ತು ಪೊಲೀಸರ ಕಣ್ಣು ತಪ್ಪಿಸಿ ಬದುಕಲು ಮನುಷ್ಯನಿಗೆ ಖಂಡಿತ ಸಾಧ್ಯವಿದೆ. ಆದ್ದರಿಂದಲೇ ಭ್ರಷ್ಟ ಮತ್ತು ಅತ್ಯಾಚಾರಿ ಮನಸ್ಥಿತಿಯನ್ನು ಇಲ್ಲವಾಗಿಸಲು ದೇವವಿಶ್ವಾಸದ ಅಗತ್ಯ ಎದ್ದು ಕಾಣುವುದು. ತಾನು ಎಲ್ಲಿದ್ದರೂ ಯಾವ ಆಲೋಚನೆಯನ್ನೇ ಮಾಡಿದರೂ ಅದನ್ನು ದೇವನು ಅರಿಯುತ್ತಾನೆ ಎಂಬ ಪ್ರಜ್ಞೆ ಮತ್ತು ಭೂಮಿಯ ಕಾನೂನು ಶಿಕ್ಷಿಸದಿದ್ದರೂ ನಾಳೆ ದೇವನು ಖಂಡಿತ ಶಿಕ್ಷಿಸುತ್ತಾನೆ ಎಂಬ ಅರಿವು ಮನುಷ್ಯನಲ್ಲಿ ದೃಢವಾಗುತ್ತಾ ಹೋದಂತೆ ಅಪರಾಧ ಕೃತ್ಯಗಳು ಕಡಿಮೆಯಾಗುತ್ತಾ ಹೋಗುತ್ತವೆ. ಈ ಹಿನ್ನೆಲೆಯಲ್ಲಿ ಅಶೋಕ್ ಕುಮಾರ್‍ರ ಆತ್ಮಹತ್ಯೆಯನ್ನು ಕೆಡುಕುಗಳ ವಿರುದ್ಧದ ಒಂದು ಪ್ರತಿಭಟನೆಯಾಗಿ ನಾವು ಪರಿಗಣಿಸಬೇಕು. ಅವರದ್ದು ತಪ್ಪು ಹೆಜ್ಜೆ ನಿಜ. ಆದರೆ ಅವರು ಎತ್ತಿದ ಪ್ರಶ್ನೆ ಅತ್ಯಂತ ಸಕಾಲಿಕವಾದದ್ದು. ಓರ್ವ ಪ್ರಾಮಾಣಿಕ ಉಪನ್ಯಾಸಕನಲ್ಲಿ ಉಂಟಾಗುವ ಮಾನಸಿಕ ಗೊಂದಲದ ಸಂಕೇತವಾಗಿ ಅವರ ಆತ್ಮಹತ್ಯೆಯನ್ನು ನಾವು ಪರಿಗಣಿಸಬೇಕಾಗಿದೆ. ಹಾಗೆಯೇ, ಅವರ ಆತ್ಮಹತ್ಯೆಯನ್ನು ಎದುರಿಟ್ಟುಕೊಂಡು ಅವರೆತ್ತಿದ ಕೆಡುಕುಗಳ ನಿರ್ಮೂಲನೆಯ ಬಗ್ಗೆ ಪ್ರಾಮಾಣಿಕ ಚರ್ಚೆ ನಡೆಸಬೇಕಾಗಿದೆ.

Monday, 17 December 2012

4 ರೂಪಾಯಿಯ `ಶ್ರೀಮಂತರೂ’ ಸಂಸ್ಕೃತಿ ರಕ್ಷಿಸುವ ಪ್ರತಿಭಟನಾಕಾರರೂ...


  ಬಡತನವನ್ನು ವಸ್ತುವಾಗಿಟ್ಟುಕೊಂಡು ಈ ಜಗತ್ತಿನಲ್ಲಿ ಅಸಂಖ್ಯ ಕತೆ, ಕಾದಂಬರಿಗಳು; ನಾಟಕ, ಸಿನಿಮಾಗಳು ಬಂದಿವೆ. ಮನುಷ್ಯರು ಮಾತ್ರವಲ್ಲ, ಪ್ರಾಣಿಗಳ ಹಸಿವನ್ನೂ ಕತೆ-ಕಾದಂಬರಿಗಳಿಗೆ ಬಳಸಿಕೊಳ್ಳಲಾಗಿದೆ. ಆದರೆ ಯಾವ ಕತೆಯಲ್ಲೂ, ಸಿನೆಮಾದಲ್ಲೂ ಬಡತನವನ್ನು ವಿಡಂಬನೆಗೆ ಒಳಪಡಿಸಲಾಗಿಲ್ಲ. ಬಡವರನ್ನು ಜೋಕರ್‍ಗಳಂತೆ ಬಿಂಬಿಸಲಾಗಿಲ್ಲ. ಇಷ್ಟಕ್ಕೂ, ಹಾಗೆ ಮಾಡದಿರುವುದಕ್ಕೆ ಕಾರಣ, ಬಡವರು ಪ್ರತಿಭಟಿಸಿಯಾರು ಎಂದಲ್ಲ. ಹೊಟ್ಟೆ ತುಂಬಿಸಿಕೊಳ್ಳುವುದಕ್ಕೇ ಸಾಮರ್ಥ್ಯ ಇಲ್ಲದವರು ಇನ್ನು, ಪ್ರತಿಭಟಿಸುವುದಾದರೂ ಹೇಗೆ? ನಿಜವಾಗಿ, ಬಡತನವನ್ನು ಮತ್ತು ಹಸಿವನ್ನು ಅವಮಾನಕ್ಕೆ ಒಳಪಡಿಸುವುದು ಅಮಾನವೀಯ ಎಂಬೊಂದು ಕಾಮನ್‍ಸೆನ್ಸು ಕತೆ, ಕಾದಂಬರಿಕಾರರಲ್ಲಿ ಇದ್ದಿರುವುದೇ ಇದಕ್ಕೆ ಕಾರಣ. ಆದರೆ ರಾಜಕಾರಣಿಗಳಿಗೆ ಕನಿಷ್ಠ ಈ ಕಾಮನ್‍ಸೆನ್ಸೂ ಇಲ್ಲ. ಬಹುಶಃ ಬಡತನಕ್ಕೆ ಅವರು 'ವಿರೋಧ ಪಕ್ಷ' ಎಂಬ ಅರ್ಥ ಕೊಟ್ಟಿರಬೇಕು. ಆದ್ದರಿಂದಲೇ, ತಮ್ಮ ವಿರೋಧಿಗಳನ್ನು ಅಗ್ಗದ ಭಾಷೆಯಲ್ಲಿ ಹೀಯಾಳಿಸುವಂತೆಯೇ ಅವರು 'ಬಡತನ'ವನ್ನೂ ಹೀಯಾಳಿಸುತ್ತಿದ್ದಾರೆ. ಇಲ್ಲದಿದ್ದರೆ, ಓರ್ವ ವ್ಯಕ್ತಿಯ ದಿನದ ಖರ್ಚಿಗೆ ನಾಲ್ಕು ರೂಪಾಯಿ ಧಾರಾಳ ಸಾಕು ಎಂದು ದಿಲ್ಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್  ಹೇಳಲು ಸಾಧ್ಯವೇ? ಒಂದು ವೇಳೆ ಶೀಲಾ ದೀಕ್ಷಿತ್‍ರಿಗೆ 120 ರೂಪಾಯಿ ಕೊಟ್ಟು, ‘ನೀವು ಈ ಹಣದಲ್ಲಿ ಒಂದು ತಿಂಗಳು ಬದುಕಿ ತೋರಿಸಿ..’ ಅಂಥ ಹೇಳಿದರೆ ಅವರ ಪ್ರತಿಕ್ರಿಯೆಯಾದರೂ ಹೇಗಿದ್ದೀತು? ಯೋಜನಾ ಆಯೋಗದ ಉಪಾಧ್ಯಕ್ಷ  ಮಾಂಟೆಕ್ ಸಿಂಗ್ ಅಹ್ಲುವಾಲಿಯಾರು ಈ ಮೊದಲು ಶೀಲಾ ದೀಕ್ಷಿತ್‍ರಂತೆಯೇ ಮಾತಾಡಿದ್ದರು. ನಗರ ಪ್ರದೇಶದ ವ್ಯಕ್ತಿ ದಿನವೊಂದರಲ್ಲಿ 32 ರೂಪಾಯಿ ಮತ್ತು ಗ್ರಾಮೀಣ ವ್ಯಕ್ತಿ 26 ರೂಪಾಯಿಯಲ್ಲಿ ಜೀವನ ಸಾಗಿಸಬಹುದು ಎಂದಿದ್ದರು. ಆದರೆ ಈ ಹೇಳಿಕೆಯ ಕೆಲವು ದಿನಗಳಲ್ಲೇ ಅವರು ತಮ್ಮ ಕಚೇರಿಯ ಶೌಚಾಲಯದ ರಿಪೇರಿಗೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದ್ದರು.
  ನಿಜವಾಗಿ, ನಾವು ಸದ್ಯ ಒಪ್ಪಿಕೊಂಡಿರುವ ವ್ಯವಸ್ಥೆಯಲ್ಲೇ ಸಾಕಷ್ಟು ಗೊಂದಲ ಇದೆ. ಅನೇಕ ವೈರುಧ್ಯಗಳಿವೆ. ಬಡತನವನ್ನು ಇಲ್ಲವಾಗಿಸಲು ಯಾರು ವಿಧಾನಸಭೆ ಇಲ್ಲವೇ ಪಾರ್ಲಿಮೆಂಟಲ್ಲಿ ಕಾರ್ಯತಂತ್ರಗಳನ್ನು ರೂಪಿಸಬೇಕೋ ಅವರಿಗೆ ಬಡತನದ ಕಾವು ಬಹುತೇಕ ತಟ್ಟಿರುವುದೇ ಇಲ್ಲ. ಅವರು ಬೆಳೆದಿರುವುದೇ ತುಂಬಿದ ಅನ್ನದ ಬಟ್ಟಲನ್ನು ನೋಡಿಕೊಂಡು. ಬಟ್ಟೆ ಒಗೆಯುವ ಸಾಬೂನನ್ನು ಸ್ನಾನಕ್ಕೆ ಬಳಸಿ ಅವರಿಗೆ ಗೊತ್ತಿರುವುದೇ ಇಲ್ಲ. ಬಿಸಿ ಊಟವಾಗಲಿ, ಹರಿದ ಬಟ್ಟೆ ತೊಟ್ಟು ಬರಿಗಾಲಲ್ಲಿ ನಡೆದ ಅನುಭವವಾಗಲಿ ಅವರಿಗೆ ಇರುವುದೂ ಇಲ್ಲ. ಅವರು ಶಾಲೆಗೆ ಹೋದದ್ದು ಕಾರಲ್ಲಿ. ಧರಿಸಿದ್ದು ಬಹುಬ್ರಾಂಡ್‍ಗಳ ಉಡುಪುಗಳನ್ನು. ಮನೆ ಮನೆಗೆ ಹಾಲು ಹಾಕಿಯೋ, ಪೇಪರ್ ಕೊಟ್ಟೋ ಅಥವಾ ಶಾಲಾ ರಜೆಯ ಸಂದರ್ಭದಲ್ಲಿ ದುಡಿದೋ ಗೊತ್ತಿಲ್ಲದೇ ಬೆಳೆದ ಇಂಥ ಮಂದಿಯೇ ಚುನಾವಣೆಗಳಲ್ಲಿ ಸ್ಪರ್ಧಿಸೋದು. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವ ಸಾಮರ್ಥ್ಯ  ಇದ್ದವರಿಗೆ ಮಾತ್ರ ನಮ್ಮ ರಾಜಕೀಯ ಕ್ಷೇತ್ರವು ಮೀಸಲಾಗಿರುವುದರಿಂದ ಶೀಲಾ ದೀಕ್ಷಿತ್‍ರ '4 ರೂಪಾಯಿಯ ಶ್ರೀಮಂತ' ಸ್ಪರ್ಧಿಸುವುದು ಬಿಡಿ, ಅಭ್ಯರ್ಥಿಯ ಕೈ ಕುಲುಕುವುದಕ್ಕೂ ಅನರ್ಹನಾಗಿರುತ್ತಾನೆ.
  ರಾಜಕಾರಣಿ, ಇಂಜಿನಿಯರ್, ಡಾಕ್ಟರ್ ಏನೇ ಆಗಿದ್ದರೂ ಮನುಷ್ಯ ಎಂಬ ನೆಲೆಯಲ್ಲಿ ಕೆಲವು ಮೂಲಭೂತ ಗುಣಗಳು ನಮ್ಮಲ್ಲಿ ಇದ್ದೇ ಇರುತ್ತವೆ. ಬಡತನವನ್ನು ರೋಗ ಎಂದು ಚಿತ್ರಿಸಿ ಯಾರೂ ನಾಟಕ ರಚಿಸುವುದಿಲ್ಲ. ರೋಗಿಗಳನ್ನು 'ಪೀಡೆ' ಎಂದು ಬಿಂಬಿಸಿ ಯಾರೂ ಸಿನಿಮಾ ಮಾಡುವುದಿಲ್ಲ. ವೃದ್ಧರನ್ನು ದ್ವೇಷಿಸುವ, ಭ್ರಷ್ಟಾಚಾರವನ್ನು ಪ್ರೀತಿಸುವ, ಸಿನಿಮಾ, ಕಾದಂಬರಿಗಳೆಲ್ಲ ರಚನೆ ಆಗುವುದೂ ಇಲ್ಲ. ಭ್ರಷ್ಟಾಚಾರದಿಂದ ಕೋಟಿಗಟ್ಟಲೆ ದುಡ್ಡು ಮಾಡಿದವ ಕೂಡ ವೇದಿಕೆಯೇರಿ ಮಾತಾಡುವ ಪ್ರಸಂಗ ಎದುರಾದರೆ ಭ್ರಷ್ಟಾಚಾರದ ವಿರುದ್ಧವೇ ಮಾತಾಡುತ್ತಾನೆ. ರೋಗಿಯನ್ನು ಸುಲಿಯುವುದೇ ವೈದ್ಯ ಧರ್ಮ ಅಂತ ತಿಳಿದ ವೈದ್ಯನೂ ಮಾತಾಡುವಾಗ ಸುಲಿಗೆ ಧರ್ಮಕ್ಕೆ ವಿರುದ್ಧವಾಗಿಯೇ ಮಾತಾಡುತ್ತಾನೆ. ಯಾಕೆ ಹೀಗೆ ಅಂದರೆ, ಮನುಷ್ಯನ ಪ್ರಕೃತಿಯೇ ಹಾಗೆ. ಸುಳ್ಳು, ವಂಚನೆ, ವ್ಯಂಗ್ಯ, ಬೂಟಾಟಿಕೆಗಳನ್ನೆಲ್ಲ 'ಅಮೌಲ್ಯ'ದ ಪಟ್ಟಿಯಲ್ಲಿಡುವಂತೆ ಪ್ರಕೃತಿಯೇ ಆತನಿಗೆ ಕಲಿಸಿರುತ್ತದೆ. ಆದರೂ ಕೆಲವೊಮ್ಮೆ ರಾಜಕಾರಣಿಗಳ ವರ್ತನೆ ನೋಡಿದರೆ, ಅವರು ಪ್ರಕೃತಿ ಕಲಿಸುವ ಈ ಮೊಲಭೂತ ಪಾಠಗಳಿಂದಲೂ ತಪ್ಪಿಸಿಕೊಂಡಿರಬಹುದೇ ಎಂಬ ಅನುಮಾನ ಮೂಡುತ್ತದೆ. ಹುತಾತ್ಮ ಯೋಧರಿಗಾಗಿ ಸಿದ್ಧಪಡಿಸಲಾದ ಶವ ಮಂಚದಿಂದಲೂ ಅವರು ದುಡ್ಡು ಕಸಿಯುತ್ತಾರೆ. ವರ್ಷಂಪ್ರತಿ ತಮ್ಮ ಭತ್ತೆ, ಸಂಬಳಗಳನ್ನು ತಾವೇ ಏರಿಸಿಕೊಳ್ಳುತ್ತಾರೆ. ಮೊರು ಹೊತ್ತಿನ ಊಟಕ್ಕೂ ಗತಿಯಿಲ್ಲದೇ ಬಡತನ ರೇಖೆಗಿಂತ ಕೆಳಗೆ ಎಂಬ ಪಟ್ಟಿಯಲ್ಲಿ ಗುರುತಿಸಿಕೊಂಡಿರುವವರನ್ನು 4 ರೂಪಾಯಿಯ ಸಿದ್ಧಾಂತ ಮಂಡಿಸಿ ಬಡವರಲ್ಲ ಅಂದುಬಿಡುತ್ತಾರೆ.. ಇಂಥ ವೈರುಧ್ಯಗಳು ನೂರಾರು ಇವೆ. ದುರಂತ ಏನೆಂದರೆ, ಹೆಣ್ಣು ಗಂಡು ಮಾತಾಡಿದ ನೆಪದಲ್ಲಿ, ದನ ಸಾಗಾಟದ ನೆಪದಲ್ಲಿ ಅಥವಾ ಇಂಥ ಇನ್ನೇನೋ ಜನಪ್ರಿಯ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ, ಘೋಷಣೆಗಳನ್ನು ಹಮ್ಮಿಕೊಳ್ಳುವವರೆಲ್ಲ  ಬಡವರ ಇಂಥ ವಿಷಯಗಳ ಬಗ್ಗೆ  ಮಾತೇ ಆಡುವುದಿಲ್ಲ ಅನ್ನುವುದು. ಅಹ್ಲುವಾಲಿಯಾರ 26 ರೂಪಾಯಿ ಅಥವಾ ದೀಕ್ಷಿತ್‍ರ 4 ರೂಪಾಯಿ ಸಿದ್ಧಾಂತವನ್ನು ಖಂಡಿಸಿ ನಮ್ಮಲ್ಲಿ ಎಷ್ಟು ಪ್ರತಿಭಟನೆಗಳಾಗಿವೆ? ಜಿಲ್ಲಾಧಿಕಾರಿಗಳಿಗೆ, ರಾಜ್ಯಪಾಲರಿಗೆಲ್ಲ ಎಷ್ಟು ಮಂದಿ ಮನವಿ ಸಲ್ಲಿಸಿದ್ದಾರೆ? ಸಂಸ್ಕೃತಿ ಅಂದರೆ ದನ ಒಂದೇ ಅಲ್ಲವಲ್ಲ. ಬಡವರೂ ಸಂಸ್ಕೃತಿಯ ಭಾಗವೇ ಅಲ್ಲವೇ? ಆದರೆ ಸಂಸ್ಕೃತಿಯ ಹೆಸರಲ್ಲಿ ಬಡವರನ್ನು ಮತ್ತು ಮಧ್ಯಮ ವರ್ಗವನ್ನು ಪ್ರತಿ ಪ್ರತಿಭಟನೆಗಳಲ್ಲೂ ಬಳಸಿಕೊಳ್ಳುವ ಮಂದಿಯೇ ಬಡವರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಒಂದೇ ಒಂದು ಪ್ರತಿಭಟನೆಯನ್ನೂ ಆಯೋಜಿಸುವುದಿಲ್ಲವಲ್ಲ, ಯಾಕೆ? ರಾಜಕಾರಣಿಗಳಂತೆಯೇ ಈ ವರ್ಗವೂ ಬಡವರ ವಿರೋಧಿಯಾಗಿ ಮಾರ್ಪಟ್ಟಿವೆ ಅನ್ನುವುದಕ್ಕೆ ಇದು ಪುರಾವೆಯಲ್ಲವೇ?
  4 ರೂಪಾಯಿಯ ಸಿದ್ಧಾಂತವನ್ನು ಶೀಲಾ ದೀಕ್ಷಿತ್ ಮಂಡಿಸುವಾಗ ಅವರ ಪಕ್ಕವೇ ಸೋನಿಯಾ ಗಾಂಧಿಯೂ ಇದ್ದರು. ಆದ್ದರಿಂದ ಇದನ್ನು  ಕಾಂಗ್ರೆಸ್ ಪಕ್ಷದ ನಿಲುವು ಎಂದೇ  ಹೇಳಬೇಕಾಗುತ್ತದೆ. ಹೀಗಿರುವಾಗ, ಇಂಥ ಪಕ್ಷ  ಬಡವರಿಂದ ಅಗ್ಗದ ಸಿಲಿಂಡರು, ಡೀಸೆಲ್ಲು, ಸೀಮೆ ಎಣ್ಣೆಯನ್ನು ಕಸಿದುಕೊಂಡದ್ದರಲ್ಲಿ ಅಚ್ಚರಿಯಾದರೂ ಏನಿದೆ? ಅಂದಹಾಗೆ, ಜನಪ್ರಿಯ ವಿಷಯಗಳ ಸುತ್ತ ಪ್ರತಿಭಟನೆಗಳನ್ನು  ಆಯೋಚಿಸುವವರೆಲ್ಲ ಇಂಥ ರಾಜಕೀಯದ ವಿರುದ್ಧ ಜನಜಾಗೃತಿ ಮೊಡಿಸದಿದ್ದರೆ ಭವಿಷ್ಯದಲ್ಲಿ, 'ಬಡತನ' ಎಂಬ ಪದವನ್ನೇ ರಾಜಕಾರಣಿಗಳು  ನಾಪತ್ತೆ ಮಾಡಿಯಾರು.

Monday, 10 December 2012

ದಾದಿಯನ್ನು ಕೊಲೆಗೈದು ಅಡಗಿ ಕೂತ ಮಾಧ್ಯಮ

ಜೆಸಿಂತಾ

  ಮಾಧ್ಯಮ ಕ್ಷೇತ್ರ ಮತ್ತೊಮ್ಮೆ ಚರ್ಚೆಗೆ ಒಳಗಾಗಿದೆ. ಮೇಲ್ ಗ್ರೇಗ್ ಮತ್ತು ಮೈಕೆಲ್ ಕ್ರಿಸ್ಟಿಯನ್ ಎಂಬ ಆಸ್ಟ್ರೇಲಿಯದ ಇಬ್ಬರು ರೇಡಿಯೋ ನಿರೂಪಕರು ನಾಪತ್ತೆಯಾಗಿದ್ದಾರೆ. ‘ಇಂಗ್ಲೆಂಡಿನ ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ದಾದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಜೆಸಿಂತಾರನ್ನು ಕೊಂದ ಪಾಪಿಗಳು ನೀವು..' ಎಂದು ಫೇಸ್‍ಬುಕ್‍ನಲ್ಲಿ ಸಾವಿರಾರು ಮಂದಿ ಇವರನ್ನು ದೂಷಿಸಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಹದಿಮೂರೂವರೆ ಸಾವಿರಕ್ಕಿಂತಲೂ ಅಧಿಕ ಮಂದಿ ಫೇಸ್ ಬುಕ್‍ನಲ್ಲಿ ಇವರ ವಿರುದ್ಧ ಸಿಟ್ಟು ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ, ಮೇಲುನೋಟಕ್ಕೆ ಇವರಿಬ್ಬರು ಕೊಲೆಗಾರರೇ ಅಲ್ಲ. ಆಸ್ಟ್ರೇಲಿಯಾದ ಟುಡೇ ಎಫ್.ಎಂ. ಎಂಬ ರೇಡಿಯೋದ ನಿರೂಪಕರಾದ ಇವರು ಕಿಂಗ್ ಎಡ್ವರ್ಡ್ ಆಸ್ಪತ್ರೆಗೆ ದೂರವಾಣಿ ಕರೆ ಮಾಡಿದರು. ‘ನಿಮ್ಮಲ್ಲಿ ದಾಖಲಾಗಿರುವ ರಾಜಕುಮಾರ ವಿಲಿಯಮ್ಸ್ ರ  ಪತ್ನಿ ಕೇಟ್‍ಳ ಆರೋಗ್ಯ ಮಾಹಿತಿಯನ್ನು ಕೊಡಿ'.. ಅಂತ ವಿನಂತಿಸಿದರು. ತಾವು ಬ್ರಿಟನ್ನಿನ ರಾಣಿ ಎಲಿಜಬೆತ್ ಮತ್ತು ರಾಜಕುಮಾರ ವಿಲಿಯಮ್ಸ್ ರ  ತಂದೆ ಚಾರ್ಲ್ಸ್  ಮಾತಾಡುತ್ತಿರುವುದು ಅಂತಲೂ ಹೇಳಿದರು. ದೂರವಾಣಿ ಕರೆಯನ್ನು ಸ್ವೀಕರಿಸಬೇಕಿದ್ದ ರಿಸೆಪ್ಶನ್ ಕೆಲಸ ಮುಗಿಸಿ ಹೋಗಿದ್ದರಿಂದ ದಾದಿ ಜೆಸಿಂತಾ ಅದನ್ನು ಸ್ವೀಕರಿಸಿ ಕೇಟ್‍ಳನ್ನು ಆರೈಕೆ ಮಾಡುತ್ತಿದ್ದ ದಾದಿಗೆ ವರ್ಗಾಯಿಸಿದಳು. ಆಕೆ ಎಲ್ಲ ಮಾಹಿತಿಯನ್ನೂ ಅವರಿಗೆ ನೀಡಿದಳು. ಇದಾಗಿ ಎರಡು ದಿನಗಳ ಬಳಿಕ ಜೆಸಿಂತಾ ಆತ್ಮಹತ್ಯೆ ಮಾಡಿಕೊಂಡಳು.
  ಮಾಧ್ಯಮಗಳ ಮೇಲೆ ಇವತ್ತು ಇರುವ ಆರೋಪ ಏನೆಂದರೆ, ಅವು ಸುಳ್ಳು ಸುದ್ದಿಯನ್ನು ಬಿತ್ತರಿಸುತ್ತವೆ ಅನ್ನುವುದು. ಪತ್ರಿಕೆಯ ಮಾಲಿಕ, ಸಂಪಾದಕ ಮತ್ತು ವರದಿಗಾರನ ಮರ್ಜಿಗೆ ತಕ್ಕಂತೆ ಸುದ್ದಿಗಳು ತಯಾರಾಗುತ್ತವೆ ಎಂಬುದು. ಇವತ್ತು ಪತ್ರಿಕೆಯೊಂದಕ್ಕೆ ನಿರ್ದಿಷ್ಟ ಪಕ್ಷ  ಇಲ್ಲವೇ ವ್ಯಕ್ತಿಯ ಮೇಲೆ ಒಲವು ಇದ್ದರೆ, ಆ ಪಕ್ಷದ ಪರ ಜನರ ಅಲೆಯಿದೆ ಎಂಬಂತೆ ಸುದ್ದಿಗಳನ್ನು ರಚಿಸುವುದಿದೆ. ವ್ಯಕ್ತಿ ಎಷ್ಟೇ ಭ್ರಷ್ಟನಾಗಿದ್ದರೂ ಜನರ ಮಧ್ಯೆ ಅವು ಚರ್ಚೆಯಾಗದಂತೆ ನೋಡಿಕೊಳ್ಳುತ್ತಾ, ವ್ಯಕ್ತಿಯನ್ನು ಮೆರೆಸುವ, ಅನುಕಂಪ ಪೂರಿತ ಲೇಖನಗಳನ್ನು ಸಂದರ್ಭಕ್ಕೆ ತಕ್ಕಂತೆ ಪ್ರಕಟಿಸುವುದೂ ಇದೆ. ವಿಶೇಷವಾಗಿ, ಬಾಬರಿ ಮಸೀದಿಯನ್ನು ಉರುಳಿಸಿದ ದಿನಗಳಲ್ಲಿ ಮತ್ತು ಆ ಬಳಿಕದ ಕೋಮು ಉದ್ವಿಘ್ನತೆಯ ವೇಳೆಯಲ್ಲೆಲ್ಲಾ ಕೆಲವೊಂದು ಪತ್ರಿಕೆಗಳು ಈ ಗುಣವನ್ನು ಧಾರಾಳ ಪ್ರದರ್ಶಿಸಿವೆ. ಗುಜರಾತ್ ಹತ್ಯಾಕಾಂಡವನ್ನು ಮೃದು ಪದಗಳಲ್ಲಿ ಖಂಡಿಸುವ ಲೇಖನಗಳನ್ನು ಪ್ರಕಟಿಸುತ್ತಲೇ ಕ್ರಿಯೆಗೆ ಪ್ರತಿಕ್ರಿಯೆ ಎಂಬ ಮೋದಿಯ ಸಿದ್ಧಾಂತದಡಿಯಲ್ಲಿ ಹತ್ಯಾಕಾಂಡವನ್ನು ಸಮರ್ಥಿಸುವ ದುಪ್ಪಟ್ಟು ಲೇಖನಗಳನ್ನು ಪ್ರಕಟಿಸಿದ್ದೂ ಇವೆ. ಈ ಮನಃಸ್ಥಿತಿಯನ್ನು ಇನ್ನಷ್ಟು ಚೆನ್ನಾಗಿ ಅರಿತುಕೊಳ್ಳಬೇಕಾದರೆ ಎಲ್ಲಾದರೂ ಬಾಂಬ್ ಸ್ಫೋಟವಾಗಬೇಕು. ಆಗ ಕೆಲವು ಪತ್ರಿಕೆಗಳ ಸುದ್ದಿ ಮತ್ತು ವಿವರಗಳು ಎಷ್ಟು ಅಸಹ್ಯ ಆಗಿರುತ್ತವೆ ಅಂದರೆ, ಇತರ ಯಾವ ಪತ್ರಕರ್ತರಿಗೂ ಸಿಗದ 'ಮೂಲಗಳ ವಿವರಗಳು' ಅವಕ್ಕೆ ಸಿಕ್ಕಿರುತ್ತವೆ. ನಿಜವಾಗಿ, ಮಾಧ್ಯಮಗಳ ಈ ಮನಸ್ಥಿತಿಯು ಸಾರ್ವಜನಿಕವಾಗಿ ಚರ್ಚೆಯಲ್ಲಿರುವಾಗಲೇ ಜೆಸಿಂತಾ ಸಾವಿಗೀಡಾಗಿದ್ದಾಳೆ. ಇದು ಬರೇ ಆತ್ಮಹತ್ಯೆಯಲ್ಲ, ಸುಳ್ಳಿನ ಪತ್ರಿಕೋದ್ಯಮಕ್ಕೆ ಓರ್ವ ದುರ್ಬಲ ದಾದಿ ತೋರಿದ ಪ್ರತಿಭಟನೆ. ಆದ್ದರಿಂದಲೇ ಆತ್ಮಹತ್ಯೆ ಎಂಬ ನಾಲ್ಕಕ್ಷರಗಳಲ್ಲಿ ನಾವು ಈ ಸಾವಿಗೆ ಸಮಾಧಿಯನ್ನು ಕಟ್ಟಬಾರದು. ಅಂದಹಾಗೆ, ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ರಾಜಕುಮಾರಿ ಕೇಟ್ ದಾಖಲಾಗಿದ್ದುದು ಗರ್ಭದ ತಪಾಸಣೆಗಾಗಿ. ದೂರವಾಣಿ ಕರೆಯನ್ನು ದಾದಿಗೆ ವರ್ಗಾಯಿಸುವ ಸ್ವಾತಂತ್ರ್ಯ ಜೆಸಿಂತಾಳಿಗೆ ಇಲ್ಲದಿದ್ದರೂ ಕರೆ ಮಾಡಿದವರ ಸುಳ್ಳನ್ನು ನಂಬಿ ಆಕೆ ವರ್ಗಾಯಿಸಿದ್ದಳು. ಆದ್ದರಿಂದಲೇ ಆಕೆ ಆಸ್ಪತ್ರೆಯ ಅಧಿಕಾರಿಗಳ ತರಾಟೆಗೂ ಒಳಗಾದಳು..
  ಇಷ್ಟಕ್ಕೂ, ಗರ್ಭದಾರಣೆ ಎಂಬುದು ತೀರಾ ಖಾಸಗಿ ವಿಚಾರ. ರಾಜಕುಟುಂಬವಾದರೂ ಕೂಲಿ ಕಾರ್ಮಿಕನ ಕುಟುಂಬವಾದರೂ ಎಲ್ಲದಕ್ಕೂ ಖಾಸಗಿತನ ಎಂಬುದಿದೆ. ಅದಕ್ಕೆ ಕ್ಯಾಮರಾ ಇಡುವುದು ಎಷ್ಟು ಸರಿ?  ಪತ್ರಿಕೋದ್ಯಮಕ್ಕೆ ಸುಳ್ಳು ಅನಿವಾರ್ಯವೇ? ತಾನು ಇಂತಿಂಥ ಸುದ್ದಿಯನ್ನು, ಇಂತಿಂಥವರಲ್ಲಿ ಸುಳ್ಳು ಹೇಳಿ, ವಂಚಿಸಿ ಪಡಕೊಂಡೆ ಎಂದು ಯಾವ ಪತ್ರಕರ್ತರೇ ಆಗಲಿ ಬಹಿರಂಗವಾಗಿ ಹೇಳಿಕೊಳ್ಳಬಲ್ಲರೇ? ಅಂದಹಾಗೆ, ಭ್ರಷ್ಟಾಚಾರಕ್ಕೂ ಗರ್ಭಧಾರಣೆಯಂಥ ಖಾಸಗಿ ಸಂಗತಿಗಳಿಗೂ ಖಂಡಿತ ವ್ಯತ್ಯಾಸ ಇದೆ. ಭ್ರಷ್ಟಾಚಾರ ವ್ಯಕ್ತಿಯ ಖಾಸಗಿ ಸಂಗತಿಯಲ್ಲ. ಅಂತಹವರನ್ನು ಕಾನೂನಿನ ಮುಂದೆ ತರುವುದಕ್ಕಾಗಿ ಕೆಲವೊಮ್ಮೆ ಸ್ಟಿಂಗ್ ಆಪರೇಶನ್‍ನಂಥ ಚಟುವಟಿಕೆ ಅನಿವಾರ್ಯ ಆಗಿರಬಹುದು. ಹಾಗಂತ ತೀರಾ ಖಾಸಗಿ ವಿಚಾರಕ್ಕೂ ಸುಳ್ಳಿನ ಮುಖಾಂತರ ನುಸುಳತೊಡಗಿದರೆ ಅದನ್ನು ಹೇಗೆ ಸಮರ್ಥಿಸುವುದು?
  ಮಾಧ್ಯಮ ಪೈಪೋಟಿಯು ಇವತ್ತು ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ ರೋಚಕ ಸುದ್ದಿಯನ್ನು ಕೊಡುವ ಧಾವಂತದಲ್ಲಿ ಸರಿ-ತಪ್ಪುಗಳನ್ನೇ ಕಡೆಗಣಿಸುವಷ್ಟು. ರೋಚಕ ಸುದ್ದಿ ಸಿಗದೇ ಹೋದರೆ ಅಂಥದ್ದೊಂದು ಸುದ್ದಿಯನ್ನು ಸೃಷ್ಟಿಸುವ ಸಣ್ಣತನ ಕೂಡ ಇವತ್ತು ಪತ್ರಿಕಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿವೆ. ದುಡ್ಡು ಪಡಕೊಂಡು ಸುದ್ದಿ ತಯಾರಿಸುವ ಪತ್ರಿಕೆಗಳೂ ಪತ್ರಕರ್ತರೂ ಇವತ್ತಿದ್ದಾರೆ. ಇಂಥ ಮನಸ್ಥಿತಿಯು ಕ್ರಮೇಣ ಪತ್ರಕರ್ತರು ಮತ್ತು ಪತ್ರಿಕೆಗಳ ಕುರಿತಂತೆ ಸಾರ್ವಜನಿಕರಲ್ಲಿ ಗೌರವವನ್ನು ಕಡಿಮೆಗೊಳಿಸಲಾರದೇ? ಒಂದಷ್ಟು ಕಾಸು ಕೊಟ್ಟರೆ ಆತ/ಕೆ ಯಾವ ಸುಳ್ಳನ್ನೂ ಗೀಚಬಹುದು ಎಂದು ಸಾರ್ವಜನಿಕರು ಪತ್ರಕರ್ತರನ್ನು ನೋಡಿ ಹೇಳುವಂಥ ಸನ್ನಿವೇಶ ಸೃಷ್ಟಿಯಾಗಿ ಬಿಟ್ಟರೆ ಏನಾಗಬಹುದು? ಈಗಾಗಲೇ ಝೀ ಟಿ.ವಿ.ಯ ಸಂಪಾದಕರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನಿಜವಾಗಿ, ಪತ್ರಿಕಾರಂಗ  ಸುದ್ದಿಯಲ್ಲಿರಬೇಕಾದುದು ಕೊಲೆ ಆರೋಪಿಯಾಗಿಯೋ, ಭ್ರಷ್ಟಾಚಾರಿಯಾಗಿಯೋ ಅಲ್ಲ. ಸಮಾಜದ ಅಂಕು-ಡೊಂಕುಗಳಿಗೆ ಕನ್ನಡಿ ಹಿಡಿಯುವವರು ಸ್ವಯಂ ಅಂಕು-ಡೊಂಕಾಗಿದ್ದರೆ ಸಮಾಜ ಅವರ ಬಗ್ಗೆ ಯಾವ ಬಗೆಯ ಅಭಿಪ್ರಾಯವನ್ನು ಇಟ್ಟುಕೊಳ್ಳಬಹುದು?
  ಜೆಸಿಂತಾಳ ಸಾವು ಪ್ರತಿಯೋರ್ವ ಪತ್ರಕರ್ತೆ/ರ್ತನನ್ನೂ ಚಿಂತನೆಗೆ ಒಳಪಡಿಸಬೇಕು. 'ಸುಳ್ಳಿನ ಪತ್ರಿಕೋದ್ಯಮದಲ್ಲಿ ತನ್ನ ಪಾತ್ರ ಏನಿದೆ' ಎಂಬ ಬಗ್ಗೆ ಎದೆಗೆ ಕೈಯಿಟ್ಟು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಯಾಕೆಂದರೆ ಒಂದೇ ಒಂದು ಸುಳ್ಳು ವಾಕ್ಯವು ಸಾವಿರಾರು ಮಂದಿಯ ಸಾವಿಗೆ, ದುಃಖಕ್ಕೆ, ಕಣ್ಣೀರಿಗೆ ಕಾರಣವಾಗಬಹುದು. ಆದ್ದರಿಂದ ಪತ್ರಕರ್ತ/ರ್ತೆ ಸತ್ಯವಂತನಾಗಲಿ. ಜೆಸಿಂತಾಳ ಆತ್ಮಹತ್ಯೆ ಪತ್ರಿಕಾ ರಂಗವನ್ನು ಸ್ವಚ್ಛಗೊಳಿಸುವಲ್ಲಿ ನೆರವಾಗಲಿ.

Monday, 3 December 2012

ದೇವನಾಗುವ ಮಾನವ ಮತ್ತು ಮಾನವನಲ್ಲದ ದೇವ


  ಮನುಷ್ಯ ಮತ್ತು ದೇವರ ನಡುವೆ ಇರುವ ವ್ಯತ್ಯಾಸ ಏನು ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಮನುಷ್ಯನಿಗಿರುವಂತೆ ದೇವನಿಗೆ ದೌರ್ಬಲ್ಯಗಳು ಇರುವುದಿಲ್ಲ. ದೌರ್ಬಲ್ಯಗಳಿರುವವ ದೇವನಾಗಲು ಸಾಧ್ಯವೂ ಇಲ್ಲ. ತಿನ್ನುವ, ಕುಡಿಯುವ, ಅನಾರೋಗ್ಯಕ್ಕೆ ಒಳಗಾಗುವ, ನಿದ್ದೆ ಮಾಡುವ, ಪತ್ನಿ ಮಕ್ಕಳನ್ನು ಹೊಂದುವ, ಸಾಯುವ.. ಹೀಗೆ ಒಂದು ಮಿತಿಯೊಳಗೆ ಮನುಷ್ಯ ಬದುಕುತ್ತಿರುತ್ತಾನೆ. ಆದರೆ ದೇವ ಹಾಗಲ್ಲ. ಅವನಿಗೆ ನಿದ್ದೆಯಿಲ್ಲ. ಮಕ್ಕಳಿಲ್ಲ. ಕುಟುಂಬ ಇಲ್ಲ. ಆತ ತಿನ್ನುವುದಿಲ್ಲ. ಬದುಕಿಸುವ ಮತ್ತು ಸಾಯಿಸುವ ಸಾಮರ್ಥ್ಯ  ಆತನಿಗೆ ಇದೆ. ಆತ ಏಕೈಕ. ಕಾಲಜ್ಞಾನಿ.. ಹೀಗೆ ದೇವನ ಗುರುತು ಮನುಷ್ಯನಿಗಿಂತ ಭಿನ್ನವಾಗಿರುತ್ತದೆ; ಇರಬೇಕು ಕೂಡ. ದುರಂತ ಏನೆಂದರೆ, ಕೆಲವೊಮ್ಮೆ ಮನುಷ್ಯರ ವರ್ತನೆ ಎಷ್ಟು ಬಾಲಿಶ  ಆಗಿರುತ್ತದೆಂದರೆ, ಮನುಷ್ಯರನ್ನೇ ದೇವರಾಗಿಸಿ ಬಿಡುವಷ್ಟು. ದೇವನಿಗೆ ಸಾವಿಲ್ಲ ಎಂದು ಗೊತ್ತಿರುವ ಮನುಷ್ಯರೇ, ಮನುಷ್ಯನನ್ನು ದೇವನ ಸ್ಥಾನದಲ್ಲಿ ಕೂರಿಸಿ ಕೈ ಮುಗಿಯುವಷ್ಟು. ಸದ್ಯ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್‍ರು ದೇವನಾಗುವ ಸಿದ್ಧತೆಯಲ್ಲಿದ್ದಾರೆ.
  ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ನಾಗ್ಲಾಪಾಲಿಯಲ್ಲಿ ನ. 22ರಂದು ಮುಲಾಯಮ್‍ರ ದೇಗುಲಕ್ಕೆ ಶಿಲಾನ್ಯಾಸ ನಡೆದಿದೆ. ಮುಂದಿನ ವರ್ಷದ ಮಾರ್ಚ್ ಗೆ  ಪೂರ್ಣಗೊಳ್ಳಬಹುದೆಂದು ನಿರೀಕ್ಷಿಸಲಾಗಿರುವ ದೇಗುಲಕ್ಕೆ 11 ಲಕ್ಷ ರೂಪಾಯಿಯನ್ನು ಖರ್ಚು ಮಾಡಲಾಗುತ್ತಿದೆ.. ಈ ಸುದ್ದಿಗಿಂತ ಒಂದೆರಡು ವಾರಗಳ ಮೊದಲಷ್ಟೇ ಬಾಳಾ ಠಾಕ್ರೆ ಸಾವಿಗೀಡಾಗಿದ್ದರು. ಅವರ ಅಂತ್ಯ ಸಂಸ್ಕಾರ ನಡೆಸಿದ ಜಾಗ ಅಯೋಧ್ಯಯಷ್ಟೇ ಪವಿತ್ರ ಎಂದು ಅವರ ಮಗ ಘೋಷಿಸಿದ್ದರು. ಇವಷ್ಟೇ ಅಲ್ಲ, ಜಯಲಲಿತಾಗೆ, ನಟಿ ಖುಷ್ಬೂಗೆ.. ಈ ಹಿಂದೆ ದೇಗುಲ ನಿರ್ಮಾಣ ಆಗಿದೆ. ಅವರು ಮನುಷ್ಯರಂತೆ ವರ್ತಿಸಿದಾಗ, ಕಟ್ಟಿದ ಮಂದಿಯೇ ಅದನ್ನು ಒಡೆದದ್ದೂ ಇದೆ. ನಿಜವಾಗಿ, ದೇವನಾಗಲು ಹೊರಟ ಎಲ್ಲ ಮನುಷ್ಯರೂ ಈ ಜಗತ್ತಿನಲ್ಲಿ ತೀವ್ರ ವೈಫಲ್ಯಕ್ಕೆ ಒಳಗಾಗಿದ್ದಾರೆ. ಸಾಯಿಬಾಬ ಜೀವಂತ ಇದ್ದಾಗ, ಅನೇಕರ ಪಾಲಿಗೆ ದೇವರಾಗಿದ್ದರು. ಅವರ ವ್ಯಕ್ತಿತ್ವ, ಸಮಾಜ ಸೇವೆ, ಪವಾಡವನ್ನು ನೋಡಿದ ಇಲ್ಲವೇ ಆಲಿಸಿದ ಮಂದಿ ಸಾಯಿಬಾಬ ಮನುಷ್ಯರಲ್ಲ ಅಂತ ತೀರ್ಮಾನಿಸಿದರು. ಫೋಟೋ ಇಟ್ಟು ಪೂಜಿಸತೊಡಗಿದರು. ಆದರೆ ಯಾವಾಗ ಅವರು ಅನಾರೋಗ್ಯ ಪೀಡಿತರಾದರೋ ಅದೇ ಜನ ಆಸ್ಪತ್ರೆಯ ಹೊರಗೆ ನಿಂತು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸತೊಡಗಿದರು. ಒಂದು ರೀತಿಯಲ್ಲಿ, ಬಾಬಾ ದೇವ ಅಲ್ಲ ಅನ್ನುವುದನ್ನು ಅವರ ಪ್ರಾರ್ಥನೆಯೇ ಸಾಬೀತುಪಡಿಸುತ್ತಿತ್ತು. ಇಲ್ಲದಿದ್ದರೆ ಓರ್ವ ದೇವನಿಗೆ ಇನ್ನಾವುದೋ ದೇವನಲ್ಲಿ ಪ್ರಾರ್ಥಿಸುವುದಕ್ಕೆ ಅರ್ಥವಾದರೂ ಏನು? ಕೊನೆಗೆ ಬಾಬಾ ಸಾವಿಗೀಡಾದಾಗ ಅವರ ಬಗ್ಗೆ ಇದ್ದ 'ದೇವ' ಕಲ್ಪನೆಯ ಪ್ರಭಾವಳಿ ಇನ್ನಷ್ಟು ಚಿಕ್ಕದಾಯಿತು. ಅವರ ಖಾಸಗಿ ಕೋಣೆಯಲ್ಲಿ ಕೋಟಿಗಟ್ಟಲೆ ಸಂಪತ್ತು ಪತ್ತೆಯಾದಾಗ 'ದೇವ' ಮತ್ತೆ ಸಣ್ಣವನಾದ.
  ನಿಜವಾಗಿ, ಭ್ರಷ್ಟ ರಾಜಕಾರಣಿಗಳು ಈ ಸಮಾಜದ ಪಾಲಿಗೆ ಎಷ್ಟು ಅಪಾಯಕಾರಿಯೋ, ಅದಕ್ಕಿಂತಲೂ ಮನುಷ್ಯ ದೇವರುಗಳು ಅಪಾಯಕಾರಿಗಳಾಗಿದ್ದಾರೆ. ರಾಜಕಾರಣಿಗಳನ್ನು ಭ್ರಷ್ಟರು ಎಂದು ಕರೆಯುವುದಕ್ಕೆ, ಸಮಾಜದ ತೀರಾ ಕಟ್ಟಕಡೆಯ ವ್ಯಕ್ತಿಗೂ ಒಂದು ಹಂತದ ವರೆಗೆ ಸ್ವಾತಂತ್ರ್ಯ ಇದೆ. ಭ್ರಷ್ಟರನ್ನು ವೇದಿಕೆಯಲ್ಲಿ ನಿಂತು ತೀವ್ರವಾಗಿ ಟೀಕಿಸುವುದಕ್ಕೂ ಇಲ್ಲಿ ಅವಕಾಶ ಇದೆ. ಆದರೆ ಮನುಷ್ಯ ದೇವರುಗಳು ಹಾಗಲ್ಲ. ಅವರು ತಮ್ಮ ಸುತ್ತ ಒಂದು ಪ್ರಭಾವಳಿಯನ್ನು ಬೆಳೆಸಿಕೊಂಡಿರುತ್ತಾರೆ. ಪ್ರಶ್ನಿಸದೇ ಒಪ್ಪಿಕೊಳ್ಳುವಂಥ ಮುಗ್ಧ ಭಕ್ತಸಮೂಹವನ್ನು ಸೃಷ್ಟಿಸಿರುತ್ತಾರೆ. ಆದ್ದರಿಂದಲೇ ಕೆಲವರಿಗೆ ದೇವರಾಗಲು, ಕಾಲಿಗೆ ಬೀಳಿಸಿಕೊಳ್ಳಲು ವಿಪರೀತ ಆಸಕ್ತಿಯಿರುವುದು. ರಾಜಕಾರಣಿಗಳನ್ನೂ ಕಾಲಬುಡಕ್ಕೆ ಬರುವಂತೆ ಮಾಡುವ ಸಾಮರ್ಥ್ಯವಿರುವುದು ಮನುಷ್ಯ ದೇವರುಗಳಿಗೆ ಮಾತ್ರ. ಮುಲಾಯಂ ಸಿಂಗ್ ದೇವರಾಗುವುದರಿಂದ ಜನರಿಗೆ ಲಾಭ ಇದೆಯೋ ಇಲ್ಲವೋ ಆದರೆ ಅವರ ಪಕ್ಷಕ್ಕಂತೂ ಖಂಡಿತ ಲಾಭ ಇದೆ. ಅವರ ದೇಗುಲ, ಸಮಾಜವಾದಿ ಪಕ್ಷದ ಕಾರ್ಯಕರ್ತರ ಪ್ರತಿಜ್ಞಾ  ಸ್ಥಳವಾಗಿ ಮಾರ್ಪಡಲೂಬಹುದು. ಆದ್ದರಿಂದ ದೇವನ ನಿಜವಾದ ಪರಿಚಯ ಸಮಾಜಕ್ಕೆ ಆಗಬೇಕಾದ ಅಗತ್ಯ ಇದೆ. ಮನುಷ್ಯನಂತೆ ದೇವನಿಗೆ ಹಸಿವಾಗುತ್ತದೆಂದಾದರೆ ಅದು ದೇವನಾಗಲು ಸಾಧ್ಯವಿಲ್ಲ. ನಿದ್ದೆ ಮಾಡುವುದು ಮನುಷ್ಯನ ಸ್ವಭಾವ, ದುಡ್ಡು ಮಾಡುವುದೂ ಮನುಷ್ಯನ ಗುಣ. ಕಾಯಿಲೆ ಬಾಧಿಸುವುದು, ಸಾಯುವುದು, ನಾಳೆ ಏನಾಗುತ್ತದೆಂಬುದರ ಅರಿವಿರದಿರುವುದು.. ಎಲ್ಲವೂ ಮನುಷ್ಯನ ದೌರ್ಬಲ್ಯಗಳು. ಇವು ದೇವನಿಗೂ ಇದ್ದರೆ ಮತ್ತೆ ದೇವನ ಅಗತ್ಯವಾದರೂ ಏನಿರುತ್ತದೆ? ವಿಶೇಷ ಏನೆಂದರೆ, ಮುಲಾಯಮ್‍ರ ಸಹಿತ ನಮ್ಮ ನಡುವೆ ಯಾರೆಲ್ಲ ವಿಗ್ರಹಗಳಲ್ಲಿ ಇವತ್ತು ಬಂಧಿಸಲ್ಪಟ್ಟಿದ್ದಾರೋ ಅಥವಾ ದೇವನ ಫೋಸು ಕೊಟ್ಟು ಭಕ್ತ ಸಮೂಹವನ್ನು ಸೃಷ್ಟಿಸಿಕೊಂಡಿದ್ದಾರೋ ಅವರೆಲ್ಲರಿಗೂ ಈ ದೌರ್ಬಲ್ಯಗಳಿವೆ ಎಂಬುದು. ನಮ್ಮ ನಡುವೆ ಮನುಷ್ಯರಾಗಿ ಗುರುತಿಸಿಕೊಂಡು ಆ ಬಳಿಕ ದೇವರಾದವರೆಲ್ಲ ಆ ಪಟ್ಟಕ್ಕೆ ಏರಿದ ಬಳಿಕವೂ ಮೊದಲಿನ ಅಭ್ಯಾಸವನ್ನು ಬಿಟ್ಟಿದ್ದೇನೂ ಇಲ್ಲ. ಅವರು ದೇವರಾದ ಬಳಿಕವೂ ನಿದ್ದೆ ಮಾಡುತ್ತಾರೆ, ತಿನ್ನುತ್ತಾರೆ, ಕುಡಿಯುತ್ತಾರೆ.. ಇದುವೇ ಅವರು ದೇವರಲ್ಲ ಅನ್ನುವುದನ್ನು ಸಾಬೀತುಪಡಿಸುತ್ತದಲ್ಲವೇ?
  ದೇವನ ಫೋಸು ಕೊಟ್ಟು ಜನರನ್ನು ವಂಚಿಸುತ್ತಿರುವ ಕಪಟ ದೇವರುಗಳನ್ನೆಲ್ಲಾ ತಿರಸ್ಕರಿಸಿ, ಮನುಷ್ಯ ದೇವನಾಗಲು ಸಾಧ್ಯವಿಲ್ಲ ಎಂದು ಬಲವಾಗಿ ಘೋಷಿಸಬೇಕಾದ ಅಗತ್ಯ ಇವತ್ತು ಸಾಕಷ್ಟಿದೆ. ಯಾಕೆಂದರೆ ಧರ್ಮ ಇಲ್ಲವೇ ದೇವರ ಹೆಸರಲ್ಲಿ ಜನಸಾಮಾನ್ಯರನ್ನು ವಂಚಿಸುವಷ್ಟು ಸುಲಭದಲ್ಲಿ ಇನ್ನಾವುದರಿಂದಲೂ ವಂಚಿಸಲು ಸಾಧ್ಯವಿಲ್ಲ ಎಂಬುದು ದೇವರಾಗಬಯಸುವ ಎಲ್ಲರಿಗೂ ಗೊತ್ತು. ದೇವರ ಬಗ್ಗೆ ದುರ್ಬಲ ಕಲ್ಪನೆಗಳನ್ನು ಇಟ್ಟುಕೊಂಡ ಮಂದಿಯನ್ನು ಇಂಥವರು ಸುಲಭದಲ್ಲಿ ಬಲೆಗೆ ಬೀಳಿಸುತ್ತಲೂ ಇರುತ್ತಾರೆ. ಮುಲಾಯಮ್‍ಗೆ ದೇಗುಲ ನಿರ್ಮಾಣವಾಗುವುದರ ಹಿಂದೆ ಇಂಥದ್ದೊಂದು ಉದ್ದೇಶ ಇರಲೂಬಹುದು. ಇಂಥ ನಕಲಿಗಳನ್ನು ಸೋಲಿಸಬೇಕಾದರೆ ದೇವನ ಅಸಲಿ ರೂಪದ ಬಗ್ಗೆ ಗೊತ್ತಿರಬೇಕಾದುದು ಬಹಳ ಅಗತ್ಯ. ಆ ಅಸಲಿ ದೇವನನ್ನು ಪತ್ತೆ ಹಚ್ಚುವಲ್ಲಿ ಜನರು ಯಶಸ್ವಿಯಾದರೆ ಆ ಬಳಿಕ ದೇವಮಾನವರಿಗೆ ಭಕ್ತರಿರುವುದಕ್ಕೆ ಸಾಧ್ಯವೂ ಇಲ್ಲ..