Thursday 20 February 2020

ಮಂಗಳೂರು ಗೋಲಿಬಾರ್: ತಿದ್ದಿಕೊಳ್ಳಬೇಕಾದವರು ಮತ್ತೆ ಮತ್ತೆ ತಪ್ಪು ಮಾಡುತ್ತಿರುವುದೇಕೆ?



ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಗೋಲೀಬಾರ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಕಂಡುಬಂದಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸರಕಾರ ಈವರೆಗೂ ಯಾವ ಕ್ರಮವನ್ನೂ ಕೈಗೊಳ್ಳದಿರಲು ಕಾರಣವೇನು? ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‍ರ ನೇತೃತ್ವದ ಮ್ಯಾಜಿಸ್ಟೀರಿಯಲ್ ತನಿಖೆಯ ಬದಲು ನ್ಯಾಯಾಂಗ ತನಿಖೆ ನಡೆಸಬೇಕೆಂಬ ಜಿಲ್ಲೆಯ ಬಹುಜನರ ಬೇಡಿಕೆಯನ್ನು ಸರಕಾರವೇಕೆ ಈವರೆಗೆ ಮಾನ್ಯ ಮಾಡಿಲ್ಲ? ಅದರ ಬದಲು ಪೊಲೀಸರ ಬಂದೂಕಿಗೆ ಬಲಿಯಾದ ಕುಟುಂಬಕ್ಕೆ ಖುದ್ದು ಮುಖ್ಯಮಂತ್ರಿಯವರೇ ಘೋಷಿಸಿದ ಪರಿಹಾರವನ್ನು ಹಿಂಪಡೆಯಲಾಗಿದೆ. ಘಟನೆಯ ಕುರಿತು ಅಧ್ಯಯನ ನಡೆಸಲು ಬಂದ ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಾಧೀಶ ಗೋಪಾಲ ಗೌಡರನ್ನು ಅವಮಾನಕರವಾಗಿ ನಡೆಸಿಕೊಳ್ಳಲಾಗಿದೆ. ವಿಕ್ಟಿಮ್ಸ್ ಜಸ್ಟಿಸ್ ಫೋರಂ ಸಂಸ್ಥೆಯು ಕಳೆದವಾರ ಪತ್ರಿಕಾಗೋಷ್ಠಿ ನಡೆಸುವುದಕ್ಕೂ ಆರಂಭದಲ್ಲಿ ಪೊಲೀಸರು ತಡೆ ಒಡ್ಡಿ ಆತಂಕ ಸೃಷ್ಟಿಸಿದ್ದಾರೆ. ಇನ್ನೊಂದು ಕಡೆ,

ಬೀದರ್ ನ ಶಾಹೀನ್ ಶಾಲೆಯಲ್ಲಿ ಪ್ರದರ್ಶಿಸಲಾದ ನಾಟಕದ ನೆಪದಲ್ಲಿ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿದೆ. ನಾಲ್ಕೈದು ದಿನಗಳ ಕಾಲ ಪ್ರಾಥಮಿಕ ಶಾಲೆಯ ಮಕ್ಕಳನ್ನು ಹೆತ್ತವರ ಅನುಪಸ್ಥಿತಿಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಓರ್ವ ಶಿಕ್ಷಕಿ ಮತ್ತು ಓರ್ವ ತಾಯಿಯನ್ನು ಜೈಲಿಗಟ್ಟಿದ್ದಾರೆ. ಈ ಕ್ರಮಕ್ಕೆ ದೇಶದಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪರಾಗಲಿ, ಗೃಹಸಚಿವ ಬೊಮ್ಮಾಯಿಯಾಗಲಿ ಏನನ್ನೂ ಮಾಡುತ್ತಿಲ್ಲ. ಇವೆಲ್ಲ ಏನು? ಪೊಲೀಸರು ತಪ್ಪನ್ನೇ ಮಾಡಿಲ್ಲ ಅನ್ನುವುದು ಸರಕಾರದ ನಿಲುವೇ? ಅಥವಾ ಸರಕಾರದ ಸೂಚನೆ ಪ್ರಕಾರವೇ ಇವೆಲ್ಲ ನಡೆದಿದೆಯೇ?

ಪ್ರಜಾತಾಂತ್ರಿಕ ರಾಷ್ಟ್ರವಾಗಿದ್ದೂ ಅತ್ಯಂತ ಕನಿಷ್ಠ ಪ್ರಜಾಪ್ರಭುತ್ವ ಅವಕಾಶಗಳನ್ನು ಹೊಂದಿರುವ 165 ರಾಷ್ಟ್ರಗಳ ಪಟ್ಟಿಯನ್ನು ಇತ್ತೀಚೆಗೆ ಬ್ರಿಟನ್ನಿನ ಇಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ ಬಿಡುಗಡೆಗೊಳಿಸಿತ್ತು. ಇದರಲ್ಲಿ ಭಾರತಕ್ಕೆ ದಕ್ಕಿರುವ ಸ್ಥಾನ 51ನೆಯದು. ಇದು ಕಳೆದ ವರ್ಷಕ್ಕಿಂತ 10 ಸ್ಥಾನಗಳಷ್ಟು ಕಡಿಮೆ. ಇದಕ್ಕೆ ಕಾಶ್ಮೀರದ ಪರಿಸ್ಥಿತಿ ಮತ್ತು ಸಿಎಎ ಮತ್ತು ಎನ್‍ಆರ್ ಸಿಗಳೇ  ಕಾರಣವೆಂದು ಅದು ಒತ್ತಿ ಹೇಳಿದೆ. ಈ ಕಾಯ್ದೆಗಳು ಪ್ರಜಾತಾಂತ್ರಿಕ ಗುಣವನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಜನರ ಸಹಜ ಹಕ್ಕುಗಳನ್ನು ಮಾನ್ಯ ಮಾಡುವುದಿಲ್ಲ ಎಂಬ ಅಭಿಪ್ರಾಯವನ್ನು ಈ ಸುದ್ದಿ ಸಂಸ್ಥೆಯು ವ್ಯಕ್ತಪಡಿಸಿದೆ. ನಿಜವಾಗಿ,

ಈ ದೇಶದಲ್ಲಿ ಇವತ್ತು ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಜಗತ್ತಿನ ಯಾವ ರಾಷ್ಟ್ರವೂ ತೃಪ್ತಿಯನ್ನು ಹೊಂದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಸುಮಾರು 100ರಷ್ಟು ವಿದೇಶ ಯಾತ್ರೆ ಮಾಡಿದ್ದರೂ ಇವತ್ತು ಅವುಗಳಲ್ಲಿ ಯಾವೊಂದು ರಾಷ್ಟ್ರವೂ ಸಿಎಎ ಅಥವಾ ಎನ್‍ಆರ್ ಸಿ ಪ್ರಕ್ರಿಯೆಗೆ ಬೆಂಬಲ ಸೂಚಿಸಿಲ್ಲ. ಅದರ ಬದಲು ಯುರೋಪಿಯನ್ ಯೂನಿಯನ್ ಪಾರ್ಲಿಮೆಂಟ್‍ನಲ್ಲಿ ಈ ಬಗ್ಗೆ ಚರ್ಚೆಯಾಗುವಂತಹ ಅತ್ಯಂತ ಅಭೂತಪೂರ್ವ ಘಟನೆ ನಡೆಯಿತು. ಯುರೋಪಿಯನ್ ಯೂನಿಯನ್‍ನ ಬಹುತೇಕ ಎಲ್ಲ ರಾಷ್ಟ್ರಗಳಿಗೂ ಪ್ರಧಾನಿ ಮೋದಿ ಭೇಟಿ ಕೊಟ್ಟ ಬಳಿಕ ನಡೆದಿರುವ ಘಟನೆ ಇದು. ಯುರೋಪಿಯನ್ ಯೂನಿಯನ್‍ನ ಕೆಲವು ಸಂಸದರು ಕಾಶ್ಮೀರಕ್ಕೆ ಭೇಟಿ ಕೊಟ್ಟ ಬಳಿಕದ ಬೆಳವಣಿಗೆ ಇದು ಎಂಬುದೂ ಗಮನಾರ್ಹ.

ಐದು ಟ್ರಿಲಿಯನ್ ಡಾಲರ್ ಮೊತ್ತದ ಅರ್ಥವ್ಯವಸ್ಥೆಯನ್ನು ಹೊಂದುವ ಕನಸಿನೊಂದಿಗೆ ಮರಳಿ ಅಧಿಕಾರಕ್ಕೇರಿದ ಪ್ರಧಾನಿ ಮೋದಿಯವರು ಸದ್ಯ ದೇಶದ ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸಲಾಗದ ಸ್ಥಿತಿಗೆ ತಲುಪಿಸಿದ್ದಾರೆ. ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಅತ್ತ ಪಾರ್ಲಿಮೆಂಟ್‍ನಲ್ಲಿ ಬಜೆಟ್ ಮಂಡಿಸುತ್ತಿದ್ದಾಗ ಇತ್ತ ಶೇರು ಮಾರುಕಟ್ಟೆಯಲ್ಲಿ ಅಚ್ಚರಿದಾಯಕ ಕುಸಿತ ಉಂಟಾಯಿತು. ಯಾವುದೇ ಸರಕಾರದ ಪಾಲಿಗೆ ಇಂಥ ಬೆಳವಣಿಗೆ ಆತಂಕಕಾರಿ. ದೇಶದ ಆರ್ಥಿಕ ಸ್ಥಿತಿಗೆ ಉತ್ತೇಜನವನ್ನು ನೀಡಲು ಬಜೆಟ್ ವಿಫಲವಾಗಿದೆ ಎಂಬುದರ ಸೂಚನೆ ಇದು. ಔದ್ಯೋಗಿಕ ಕ್ಷೇತ್ರ, ಉದ್ಯಮ ಕ್ಷೇತ್ರ, ಕೃಷಿ, ಕೈಗಾರಿಕೆ, ಚಿಲ್ಲರೆ ಮಾರಾಟ ಕ್ಷೇತ್ರ.. ಇತ್ಯಾದಿ ಎಲ್ಲವೂ ಮಂಕು ಕವಿದ ಸ್ಥಿತಿಯಲ್ಲಿರುವಾಗ ಅದಕ್ಕೆ ಗಮನ ಕೊಡುವ ಬದಲು ಆಂತರಿಕ ಕ್ಷೋಭೆಗೆ ಕಾರಣವಾಗುವ ಕಾಯ್ದೆಗಳ ಹಿಂದೆ ಕೇಂದ್ರ ಸರಕಾರ ಬಿದ್ದಿರುವುದೇಕೆ? ಒಂದೋ, ಕೆಟ್ಟು ಹೋಗಿರುವ ಅರ್ಥವ್ಯವಸ್ಥೆಯನ್ನು ಸರಿಪಡಿಸುವುದಕ್ಕೆ ಕೇಂದ್ರ ಸರಕಾರದ ಬಳಿ ಯಾವುದೇ ಯೋಜನೆಗಳಿಲ್ಲ ಅಥವಾ ಸಿಎಎ, ಎನ್‍ಪಿಆರ್ ಮತ್ತು ಎನ್‍ಆರ್ ಸಿಗಳಿಗೆ ಭಾರತೀಯರಿಂದ ಈ ಮಟ್ಟಿಗೆ ಪ್ರತಿರೋಧವನ್ನು ಸರಕಾರ ನಿರೀಕ್ಷಿಸಿರಲಿಲ್ಲ ಎಂದೇ ಇದರ ಅರ್ಥ. ಸಿಎಎ ಮೂಲಕ ಭಾರತೀಯರನ್ನು ಹಿಂದೂ ಮುಸ್ಲಿಮ್ ಆಗಿ ವಿಭಜಿಸಬಹುದು ಮತ್ತು ದೀರ್ಘಕಾಲೀನ ರಾಜಕೀಯ ಫಸಲನ್ನು ಈ ಮೂಲಕ ಪಡೆಯಬಹುದು ಎಂಬ ಭರವಸೆಯಲ್ಲಿದ್ದ ಪ್ರಭುತ್ವಕ್ಕೆ ಇವತ್ತು ದೇಶದ ಬೀದಿ ಬೀದಿಗಳು ಉತ್ತರ ಹೇಳುತ್ತಿವೆ. ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದಿರುವುದೂ ಇಂಥದ್ದೇ  ಒಂದು ನಾಗರಿಕ ಅಸಂತೃಪ್ತಿ.

ಇವತ್ತು ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳೊಂದಿಗೆ ಡಿಸೆಂಬರ್ 19ರ ಮಂಗಳೂರಿನ ಪ್ರತಿಭಟನೆಯನ್ನು ಹೋಲಿಸಿ ನೋಡಿದರೆ ಅದು ಗುಂಡಿಕ್ಕಿ ನಿಯಂತ್ರಿಸಬೇಕಾದ ಪ್ರತಿಭಟನೆಯಾಗಿತ್ತು ಎಂದು ಯಾರೂ ಹೇಳಲಾರರು. ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳ ಜಾಥಾದ ಮೇಲೆ ಪೊಲೀಸರ ಎದುರೇ ನಡುಬೀದಿಯಲ್ಲಿ ನಿಂತು ಗುಂಡು ಹಾರಿಸಿದ ಭಕ್ತ ರಾಮಗೋಪಾಲನನ್ನೇ ಸುರಕ್ಷಿತವಾಗಿ ಬಂಧಿಸಿದ ಮತ್ತು ಆತನ ಮೇಲೆ ಗುಂಡು ಹಾರಿಸದೇ ಸಂಯಮವನ್ನು ಕಾಯ್ದುಕೊಂಡ ಘಟನೆ ರಾಜಧಾನಿ ದೆಹಲಿಯಲ್ಲೇ  ನಡೆದಿರುವಾಗ ಮಂಗಳೂರಿನ ನಿರಾಯುಧ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಬಂದೂಕಿನ ಮೊರೆ ಹೋದದ್ದೇಕೆ ಎಂಬ ಪ್ರಶ್ನೆ ಬಾಲಿಶ ಅಲ್ಲ. ಡಿಸೆಂಬರ್ 19ರ ಬಳಿಕದಿಂದ ಇಂದಿನವರೆಗೆ ದೇಶದ ವಿವಿಧ ಭಾಗಗಳಲ್ಲಿ ಪ್ರತಿದಿನ ನೂರಾರು ಪ್ರತಿಭಟನಾ ಸಭೆಗಳು, ರ್ಯಾಲಿಗಳು ನಡೆಯುತ್ತಿವೆ. ಲಕ್ಷಾಂತರ ಮಂದಿ ಭಾಗವಹಿಸುತ್ತಲೂ ಇದ್ದಾರೆ. ಆದರೆ, ಅಲ್ಲೆಲ್ಲೂ ನಿಯಂತ್ರಣಾತೀತವೆನಿಸದ ಪ್ರತಿಭಟನೆಗಳು ಮಂಗಳೂರಿನ ಜುಜುಬಿ 200ರಷ್ಟು ಪ್ರತಿಭಟನಾಕಾರರೇಕೆ ಅಪಾಯಕಾರಿ ಎನಿಸಿದರು? ಬಂದೂಕಿನ ಹೊರತು ಇವರನ್ನು ನಿಯಂತ್ರಿಸಲು ಸಾಧ್ಯವೇ ಇರಲಿಲ್ಲ ಎಂದು ಹೇಳಿದರೆ, ಅದನ್ನು ಯಾಕಾಗಿ ನಂಬಬೇಕು?

ಈ ಘಟನೆಯ ಬಳಿಕ ಎರಡು ಹಂತಗಳಲ್ಲಿ ಸಿಸಿಟಿವಿ ಫೂಟೇಜ್‍ಗಳು ಬಿಡುಗಡೆಯಾಗಿವೆ. ಪೊಲೀಸರ ಕ್ರಮ ಅತಿರೇಕದ್ದಾಗಿತ್ತು ಮತ್ತು ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರ ಮಾತುಗಳು ತೀವ್ರ ಜನಾಂಗೀಯ ಹಾಗೂ ಹತ್ಯಾ ಮನಸ್ಥಿತಿಯದ್ದಾಗಿತ್ತು ಅನ್ನುವುದನ್ನು ಆ ಫೂಟೇಜ್‍ಗಳು ಸ್ಪಷ್ಟಪಡಿಸಿದ್ದುವು. ಪೊಲೀಸ್ ಆಯುಕ್ತರು ಮಾಧ್ಯಮಗಳ ಮುಂದೆ ಏನೆಲ್ಲ ಸಮರ್ಥನೆಗಳನ್ನು ಕೊಟ್ಟಿದ್ದರೋ ಅವೆಲ್ಲವನ್ನೂ ಸಿಸಿಟಿವಿ ಫೂಟೇಜ್‍ಗಳು ಪ್ರಶ್ನೆಗೊಳಪಡಿಸಿದ್ದುವು. ಪೊಲೀಸರು ಕರ್ತವ್ಯಲೋಪ ಎಸಗಿದ್ದಾರೆ ಅನ್ನುವುದನ್ನು ಸಾಮಾನ್ಯ ನಾಗರಿಕನೂ ಅಂದುಕೊಳ್ಳುವುದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಇವು ಒದಗಿಸಿದ್ದುವು. ಅಲ್ಲದೇ, ಮೇಲ್ನೋಟಕ್ಕೆ ಪೊಲೀಸರ ಕರ್ತವ್ಯಲೋಪ ಮನದಟ್ಟಾದುದರಿಂದಲೇ ಮುಖ್ಯಮಂತ್ರಿಯವರೂ ಸ್ಥಳದಲ್ಲೇ  ಪರಿಹಾರವನ್ನು ಘೋಷಿಸಿದ್ದು. ಆದರೆ ಆ ಬಳಿಕ ಇಡೀ ಪ್ರಕರಣವನ್ನು ರಾಜಕೀಯ ಲಾಭ-ನಷ್ಟದ ದೃಷ್ಟಿಯಿಂದ ನೋಡಲಾಯಿತು. ಪೊಲೀಸರನ್ನು ರಕ್ಷಿಸುವುದಕ್ಕೆ ಷಡ್ಯಂತ್ರ ರೂಪಿಸಲಾಯಿತು. ಎಲ್ಲಿಯವರೆಗೆಂದರೆ, ಪೊಲೀಸ್ ಆಯುಕ್ತರನ್ನು ಮತ್ತು ಹತ್ಯೆಗೆ ಪ್ರಚೋದನೆ ಕೊಟ್ಟ ಪೊಲೀಸರನ್ನು ಕನಿಷ್ಠ ಅಮಾನತುಗೊಳಿಸದೆಯೇ ಉಳಿಸಿಕೊಳ್ಳಲಾಯಿತು. ನಿಜವಾಗಿ,

ತನಿಖೆ ಮುಗಿಯುವವರೆಗೆ ಅವರನ್ನು ಕರ್ತವ್ಯದಿಂದ ಮುಕ್ತಗೊಳಿಸುವುದು ನ್ಯಾಯಯುತ ಬೇಡಿಕೆ ಆಗಿದ್ದರೂ ಅದನ್ನು ಸರಕಾರ ಲೆಕ್ಕಿಸಲಿಲ್ಲ. ಘಟನೆಯ ಕುರಿತಂತೆ ನ್ಯಾಯಾಂಗ ತನಿಖೆ ನಡೆಸಬೇಕೆಂಬ ಬೇಡಿಕೆಯನ್ನೂ ತಳ್ಳಿ ಹಾಕಲಾಯಿತು. ಇದರಿಂದ ಪ್ರೇರಣೆಗೊಂಡ ಪೊಲೀಸರು ವ್ಯವಸ್ಥೆಯು ನಿವೃತ್ತ ಸುಪ್ರೀಮ್ ನ್ಯಾಯಾಧೀಶರನ್ನೇ ಅವಮಾನಿಸುವ ಧೈರ್ಯ ತೋರಿದರು. ಘಟನೆಯ ಕುರಿತು ಅಧ್ಯಯನ ನಡೆಸುವ, ಸಂತ್ರಸ್ತರ ಅಹವಾಲುಗಳನ್ನು ಆಲಿಸುವ ಯಾವುದೇ ಪ್ರಯತ್ನವನ್ನೂ ವಿಫಲಗೊಳಿಸುವುದಕ್ಕೆ ಮುಂದಾದರು. ಪತ್ರಿಕಾಗೋಷ್ಠಿ ನಡೆಸಲು ಅವಕಾಶ ನೀಡದಂತೆ ಹೊಟೇಲುಗಳಿಗೆ ಎಚ್ಚರಿಕೆಗಳನ್ನು ನೀಡಿದರು. ಒಂದು ರೀತಿಯಲ್ಲಿ,

ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಏನು ನಡೆದಿದೆಯೋ ಅದಕ್ಕೆ ಪೊಲೀಸರೇ ನೇರ ಹೊಣೆ ಎಂಬುದಕ್ಕೆ ಇವೆಲ್ಲ ಬಲವಾದ ಸಾಕ್ಷ್ಯಗಳು. ಆದ್ದರಿಂದ, ನ್ಯಾಯಾಂಗ ತನಿಖೆ ಅತ್ಯಂತ ಅಗತ್ಯವಾಗಿದೆ. ತಪ್ಪಿತಸ್ಥರ ಪರ ಪ್ರಭುತ್ವವೇ ನಿಂತರೆ ಅದು ಇನ್ನಷ್ಟು ತಪ್ಪುಗಳನ್ನು ಮಾಡುವುದಕ್ಕಷ್ಟೇ ಪೊಲೀಸರಿಗೆ ಪ್ರಚೋದನೆಯನ್ನು ನೀಡುತ್ತದೆ. ಬೀದರ್ ನ ಶಾಹೀನ್ ಘಟನೆ ಇದನ್ನೇ ಹೇಳುತ್ತಿದೆ.

Wednesday 12 February 2020

ಬೀದರ್ ನ ಶಾಹೀನ್ 'ದೇಶದ್ರೋಹ' ಪ್ರಕರಣ: ನಾಟಕದ ಮರೆಯಲ್ಲಿ ಅವರು ಗುರಿಯಿರಿಸಿದ್ದು ಏನನ್ನು?


ಪ್ರಾಥಮಿಕ ಶಾಲೆಯ ಮಕ್ಕಳು ಪ್ರಸ್ತುತಪಡಿಸಿದ ನಾಟಕದ ಸಂಭಾಷಣೆಯಿಂದ ಒಂದೆರಡು ವಾಕ್ಯಗಳನ್ನು ಪ್ರತ್ಯೇಕಗೊಳಿಸಿ, ಅದರಲ್ಲಿ ದೇಶದ್ರೋಹವನ್ನು ಪತ್ತೆ ಹಚ್ಚುವುದು ಮತ್ತು ತನಿಖೆಯ ಹೆಸರಲ್ಲಿ ಪೊಲೀಸರು ಸುಮಾರು 70ರಷ್ಟು ಮಕ್ಕಳನ್ನು ಮೂರ್ನಾಲ್ಕು ದಿನಗಳ ಕಾಲ ಹಿಂಸಿಸುವುದು ಬಹುಶಃ ದೇಶದಲ್ಲೇ ಮೊದಲು ಇರಬೇಕು. ಬೀದರ್ ನ ಶಾಹೀನ್ ಶಿಕ್ಷಣ ಸಂಸ್ಥೆಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಇಂಥದ್ದೊಂದು ಆಶ್ಚರ್ಯಕರ ಬೆಳವಣಿಗೆ ನಡೆದಿದೆ. ಈ ಪುಟ್ಟ ಮಕ್ಕಳು "ಎನ್‍ಆರ್ ಸಿ ಎವಾರ್ ನೆಸ್" (ಎನ್‍ಆರ್ ಸಿ ಜಾಗೃತಿ) ಎಂಬ ನಾಟಕವನ್ನು ವಾರಗಳ ಹಿಂದೆ ಪ್ರಸ್ತುತಪಡಿಸಿದ್ದರು. ದೇಶದಾದ್ಯಂತ ಎನ್‍ಆರ್ ಸಿ ವಿರುದ್ಧ ಧರಣಿ, ಪ್ರತಿಭಟನೆ, ಭಾಷಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನೋಡಿದರೆ, ನಾಟಕದ ಮೇಲೆ ಈ ಬೆಳವಣಿಗೆಗಳು ಪ್ರಭಾವ ಬೀರುವುದು ಸಹಜ. ಯಾವುದೇ ಚಳವಳಿ ಸ್ವರೂಪದ ಹೋರಾಟಕ್ಕೆ ಬೇರೆ ಬೇರೆ ಆಯಾಮಗಳಿರುತ್ತವೆ. ಸಮಸ್ಯೆಗೆ ಹತ್ತು ಮಂದಿ ಹತ್ತು ರೀತಿಯ ವ್ಯಾಖ್ಯಾನಗಳನ್ನು ಕೊಡುತ್ತಾರೆ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ, ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಮತ್ತು ನಿರ್ಭಯ ಪ್ರಕರಣದಲ್ಲಿ ಬಿಜೆಪಿ ನಾಯಕರು ಮತ್ತು ಮುಖ್ಯವಾಗಿ ನರೇಂದ್ರ ಮೋದಿಯವರು ಆಗಿನ ಪ್ರಧಾನಿ ಮನ್‍ಮೋಹನ್ ಸಿಂಗ್‍ರನ್ನು ಯಾವ ರೀತಿ ತಿವಿದಿದ್ದರು ಅನ್ನುವುದು ದೇಶಕ್ಕೆ ಚೆನ್ನಾಗಿ ಗೊತ್ತು. ಪ್ರಧಾನಿ ಮನ್‍ಮೋಹನ್ ಸಿಂಗ್‍ರನ್ನು ಮೌನಮೋಹನ ಎಂಬ ಅವಮಾನಕರ ಪದ ಪ್ರಯೋಗದಿಂದ ಹಿಡಿದು ಅನೇಕಾರು ರೀತಿಯಲ್ಲಿ ಪ್ರತಿದಿನ ಗೇಲಿಗೆ ಒಳಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಪ್ರಧಾನಿ ಮನ್‍ಮೋಹನ್ ಸಿಂಗ್ ಈ ಎಲ್ಲ ಟೀಕೆಗಳಿಗೆ ಎರಡು ರೀತಿಯಲ್ಲಿ ಉತ್ತರಿಸಬಹುದಿತ್ತು.
1. ಪ್ರಧಾನಿ ಎಂಬ ನೆಲೆಯಲ್ಲಿ ತನ್ನ ಹುದ್ದೆಗೆ ಅವಮಾನವಾಯಿತೆಂದು ಕೇಸು ದಾಖಲಿಸುವುದು.
2. ತನ್ನ ನೀತಿಗಳ ಬಗ್ಗೆ ತನ್ನದೇ ಪ್ರಜೆಗಳು ತೋರುವ ಭಿನ್ನಾಭಿಪ್ರಾಯ ಎಂದು ಅವನ್ನು ಪರಿಗಣಿಸುವುದು.

ಮನ್‍ಮೋಹನ್ ಸಿಂಗ್ ಅವರು ಎರಡನೆಯದನ್ನು ಆಯ್ಕೆ ಮಾಡಿಕೊಂಡರು. ತನ್ನನ್ನು ವೈಯಕ್ತಿಕವಾಗಿ ವಿಮರ್ಶಿಸಿದ ಮತ್ತು ಟೀಕಿಸಿದವರ ವಿರುದ್ಧ ಈ ದೇಶದ ಯಾವ ಪೊಲೀಸು ಠಾಣೆಯಲ್ಲೂ ಪ್ರಕರಣ ದಾಖಲಾಗದಂತೆ ನೋಡಿಕೊಂಡರು.
ಪ್ರಜಾತಂತ್ರದ ನಿಜ ಸೌಂದರ್ಯ ಇದು. ಆದರೆ, ಈಗಿನ ಕೇಂದ್ರ ಸರಕಾರ ಮತ್ತು ಅವರ ಬೆಂಬಲಿಗರು ಪ್ರಜಾತಂತ್ರದ ಈ ಸ್ವಾತಂತ್ರ್ಯವನ್ನೇ ಅಸಹನೆಯಿಂದ ನೋಡುತ್ತಿದ್ದಾರೆ. ದೇಶದ್ರೋಹದ ಪ್ರಕರಣ ದಾಖಲಿಸುತ್ತಿದ್ದಾರೆ. ಮೊನ್ನೆ ಮೊನ್ನೆಯಂತೆ ಕವಿ ಸಿರಾಜ್ ಬಿಸರಳ್ಳಿ ಅವರ ಮೇಲೆ ದೇಶದ್ರೋಹ ಪ್ರಕರಣವನ್ನು ದಾಖಲಿಸಿಕೊಳ್ಳಲಾಯಿತು. ಅವರು ವಾಚಿಸಿದ ಕವನದಲ್ಲಿ ಪ್ರಧಾನಿ ಮೋದಿಯನ್ನು ಅವಮಾನಿಸಲಾಗಿದೆ ಎಂಬ ದೂರನ್ನಾಧರಿಸಿ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದರು. ಎನ್‍ಪಿಆರ್ ಅನ್ನು ಪ್ರಶ್ನಿಸಿ ರಚಿಸಲಾದ ಆ ಕವನವು ಆ ಬಳಿಕ ಸುಮಾರು 13 ಭಾಷೆಗಳಿಗೆ ಅನುವಾದಗೊಂಡು ದೇಶದಾದ್ಯಂತ ಲಕ್ಷಾಂತರ ಮಂದಿಯನ್ನು ತಲುಪಿತು. ಆ ಬಳಿಕ ಮೈಸೂರಿನ ನಳಿನಿ ನಂದಕುಮಾರ್ ಮೇಲೆ ದೇಶದ್ರೋಹ ಪ್ರಕರಣ ದಾಖಲಾಯಿತು. ಇದೀಗ ಶಾಹೀನ್ ಶಿಕ್ಷಣ ಸಂಸ್ಥೆ. ನಿಜಕ್ಕೂ ಈ ದೇಶದ್ರೋಹ ಅಂದರೆ ಏನು? ದೇಶದ್ರೋಹ ಪ್ರಕರಣವನ್ನು ದಾಖಲಿಸುವ ಮೊದಲು ಪೊಲೀಸರು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು? 124 A (ದೇಶದ್ರೋಹ) ಕಲಂನಡಿ ಪ್ರಕರಣ ದಾಖಲಿಸಿ ಎಂದು ವ್ಯಕ್ತಿಯೋರ್ವ ಬಂದು ಪೊಲೀಸು ಠಾಣೆಯಲ್ಲಿ ದೂರು ನೀಡಿದರೆ ಅದನ್ನು ಪರಿಶೀಲಿಸದೆಯೇ ಮತ್ತು ಪ್ರಕರಣ ಆ ಕಲಂನಡಿ ಬರುತ್ತದೆಯೇ ಎಂದು ನೋಡದೆಯೇ ಕ್ರಮ ಜರಗಿಸಬೇಕೆಂಬ ಆದೇಶವನ್ನು ಪೊಲೀಸರಿಗೆ ನೀಡಲಾಗಿದೆಯೇ? ಶಾಹೀನ್ ಶಿಕ್ಷಣ ಸಂಸ್ಥೆಯ ಪುಟ್ಟ ಮಕ್ಕಳು ಪ್ರಸ್ತುತಪಡಿಸಿದ ನಾಟಕದಲ್ಲಿ ಅನಗತ್ಯ ಸಂಭಾಷಣೆಗಳಿದ್ದುವು ಎಂದೇ ಒಪ್ಪಿಕೊಳ್ಳೋಣ. ಆ ಸಂಭಾಷಣೆಯ ಮೂಲಕ ಯಾವ ಸಂದೇಶವನ್ನು ರವಾನಿಸಲು ಉದ್ದೇಶಿಸಲಾಗಿತ್ತೋ ಅದನ್ನು ಇನ್ನಷ್ಟು ಮಾನ್ಯ ರೀತಿಯಲ್ಲಿ ಹೇಳಬಹುದಿತ್ತು ಎಂಬುದನ್ನೂ ಒಪ್ಪೋಣ. ಹಾಗಂತ,

ಹೀಗೆ ವಾದಿಸುವಾಗ, ಆ ನಾಟಕದಲ್ಲಿ ಬಳಸಲಾಗಿರುವ ಗ್ರಾಮೀಣ ಉರ್ದು ಭಾಷೆಯನ್ನೂ ನಾವು ಪರಿಗಣನೆಗೆ ತೆಗೆದುಕೊಳ್ಳಬೇಕು. ಗ್ರಾಮ್ಯ ಭಾಷೆಯ ಆಡುನುಡಿಗಳು ಆ ಭಾಷೆಯ ಪರಿಚಯ ಇಲ್ಲದವರಿಗೆ ಬೇರೆಯದೇ ರೀತಿಯ ಅರ್ಥವನ್ನು ಕೊಡುವುದಿದೆ. ಆಡುನುಡಿಗಳ ಸಹಜ ಸಂಭಾಷಣೆಗಳು ಅವರಿಗೆ ಬೈಗುಳವಾಗಿಯೋ ದೂಷಣೆಯಾಗಿಯೋ ಕಾಣಿಸುವುದಿದೆ. ಅಷ್ಟಕ್ಕೂ,

ದೂರುದಾರರಿಗೆ ಸ್ಥಳೀಯ ಉರ್ದು ಭಾಷೆಯ ಆಡುನುಡಿಗಳ ಪರಿಚಯ ಇದೆಯೋ ಇಲ್ಲವೋ? ಆದರೆ, ದೂರು ದಾಖಲಿಸುವ ಪೊಲೀಸರಲ್ಲಾದರೂ ಈ ಎಚ್ಚರಿಕೆ ಇರಬೇಡವೇ? ದೂರುದಾರ ಅಪೇಕ್ಷಿಸಿದ ಎಂಬುದೇ ದೇಶದ್ರೋಹ ಪ್ರಕರಣ ದಾಖಲಿಸಿಕೊಳ್ಳುವುದಕ್ಕೆ ಆಧಾರವೇ? ಕಳೆದ 3 ದಶಕಗಳಿಂದ ಕಾರ್ಯಾಚರಿಸುತ್ತಿರುವ ಮತ್ತು ದೇಶದಾದ್ಯಂತ ಸುಮಾರು 50ರಷ್ಟು ಶಾಖೆಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ಪೊಲೀಸರಿಗೆ ಅರಿವಿಲ್ಲವೇ ಅಥವಾ ಉದ್ದೇಶಪೂರ್ವಕವಾಗಿಯೇ ಇಂಥದ್ದೊಂದು ಷಡ್ಯಂತ್ರವನ್ನು ಹೆಣೆಯಲಾಗಿದೆಯೇ? ದೇಶದಲ್ಲಿಯೇ ಅತ್ಯಂತ ಹೆಚ್ಚು ಉಚಿತ ಸರಕಾರಿ ಮೆಡಿಕಲ್ ಸೀಟುಗಳನ್ನು ವಿದ್ಯಾರ್ಥಿಗಳಿಗೆ ದೊರಕಿಸಿಕೊಡುತ್ತಿರುವ ಶಿಕ್ಷಣ ಸಂಸ್ಥೆಯಿದು. ಕಳೆದ ವರ್ಷ ಕೇವಲ ಬೀದರ್ ಶಿಕ್ಷಣ ಕೇಂದ್ರವೊಂದರ 327 ವಿದ್ಯಾರ್ಥಿಗಳು ಸರಕಾರದ ಉಚಿತ ಮೆಡಿಕಲ್ ಸೀಟುಗಳನ್ನು ಪಡೆದುಕೊಂಡಿದ್ದಾರೆ. ಎಸ್ಸೆಸ್ಸೆಲ್ಸಿಯ ಬಳಿಕ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಸಂಸ್ಥೆಯನ್ನು ಸೇರುತ್ತಿದ್ದಾರೆ. ಸರಕಾರದ ಉಚಿತ ವೈದ್ಯಕೀಯ ಸೀಟುಗಳಿಗೆ ವಿದ್ಯಾರ್ಥಿಗಳನ್ನು ಅರ್ಹಗೊಳಿಸುವ ತರಬೇತಿಯೊಂದು ಇಲ್ಲಿ ಭಾರೀ ಯಶಸ್ವಿಯಾಗಿ ನಡೆಯುತ್ತಿದೆ. ಅಲ್ಲದೇ, ಒಟ್ಟು ವಿದ್ಯಾರ್ಥಿಗಳ ಪೈಕಿ ಅರ್ಧದಷ್ಟು ಮಂದಿ ಮುಸ್ಲಿಮೇತರ ವಿದ್ಯಾರ್ಥಿಗಳೇ. ಕಳೆದ 3 ದಶಕಗಳಲ್ಲಿ ದೇಶದ್ರೋಹ ಬಿಡಿ, ಒಂದೇ ಒಂದು ಪ್ರಕರಣವನ್ನೂ ತನ್ನ ಮೇಲೆ ಎಳೆದುಕೊಳ್ಳದ ಸಂಸ್ಥೆಯೊಂದರ ಮೇಲೆ ಈಗ ದಿಢೀರ್ ಆಗಿ ದೇಶದ್ರೋಹದ ಪ್ರಕರಣ ದಾಖಲಿಸಿಕೊಳ್ಳುವುದಕ್ಕೆ ಈ ಸಂಸ್ಥೆಯ ಈ ಯಶಸ್ಸೂ ಕಾರಣವಿರಬಹುದೇ? ಶಾಹೀನ್ ವಿರುದ್ಧ ಬೀದರ್ ನಲ್ಲಿ ಎಬಿವಿಪಿ ನಡೆಸಿರುವ ಪ್ರತಿಭಟನೆಗಳು ಮತ್ತು ಆ ಪ್ರತಿಭಟನೆಗೆ ಇತರ ಕಾಲೇಜುಗಳ ಶಾಲಾ ಬಸ್ಸುಗಳಲ್ಲೇ ವಿದ್ಯಾರ್ಥಿಗಳು ಆಗಮಿಸಿರುವುದನ್ನು ಇದಕ್ಕೆ ಪುರಾವೆಯಾಗಿ ನೋಡಬಹುದೇ?

ನಾಟಕ, ಸಿನಿಮಾ, ಕವನ, ಲೇಖನ ಇತ್ಯಾದಿ ಇತ್ಯಾದಿಗಳೆಲ್ಲ ಸೃಜನಶೀಲ ಅಭಿವ್ಯಕ್ತಿ ಮಾದರಿಯೇ ಹೊರತು ಅದು ಚಾಕು, ಚೂರಿ, ಬಂದೂಕು, ತಲವಾರುಗಳಲ್ಲ. ವ್ಯವಸ್ಥೆಯನ್ನು ಪ್ರಶ್ನಿಸುವಾಗ ಈ ಅಭಿವ್ಯಕ್ತಿಯ ಸ್ವರೂಪದಲ್ಲಿ ಎಡವಿಕೆಗಳು ನಡೆಯಬಹುದು. ಪ್ರಭುತ್ವದ ನೀತಿಗಳಲ್ಲಿ ಜನವಿರೋಧಿ ಅಂಶಗಳ ಪ್ರಮಾಣ ಎಷ್ಟು ತೀವ್ರವಾಗಿರುತ್ತದೋ ಈ ಅಭಿವ್ಯಕ್ತಿಯ ರೂಪದಲ್ಲೂ ಆ ಪ್ರಮಾಣದ ತೀವ್ರತೆ ಗೋಚರಿಸಬಹುದು. ಅಂದಹಾಗೆ,

ಎನ್‍ಆರ್ ಸಿಯ ಕುರಿತಂತೆ ದೇಶದಾದ್ಯಂತ ತೀವ್ರಮಟ್ಟದ ಪ್ರತಿಭಟನೆಗಳು ನಡೆಯುತ್ತಿವೆ. ಜನರಲ್ಲಿ ಮಡುಗಟ್ಟಿದ ಆತಂಕ ಇದೆ. ಹೀಗಿರುವಾಗ, ಪುಟ್ಟ ಮಕ್ಕಳು ಪ್ರದರ್ಶಿಸಿದ ನಾಟಕವನ್ನು ಈ ಬೆಳವಣಿಗೆಗಳಿಂದ ಪ್ರತ್ಯೇಕಿಸಿ ನೋಡುವುದು ತಪ್ಪು ಮತ್ತು ಅವಿವೇಕತನ. ದೂರುದಾರನ ಉದ್ದೇಶ ಏನೇ ಇರಬಹುದು ಮತ್ತು ಅವರ ವಿಚಾರಧಾರೆ ಏನೇ ಆಗಿರಬಹುದು, ಆದರೆ ಪೊಲೀಸರು ಪ್ರಕರಣ ದಾಖಲಿಸುವ ಮೊದಲು ಪೂರ್ವಾಪರ ಯೋಚಿಸಬೇಕಿತ್ತು. ನಾಟಕದ ಬಗ್ಗೆ ಪೊಲೀಸರು ತಮ್ಮ ಅಭಿಪ್ರಾಯವನ್ನು ಶಿಕ್ಷಣ ಸಂಸ್ಥೆಯೊಂದಿಗೆ ಹಂಚಿಕೊಂಡು ಎಚ್ಚರಿಕೆ ವಹಿಸಿಕೊಳ್ಳುವಂತೆ ಕೋರಿಕೊಳ್ಳಬಹುದಿತ್ತು. ಅದುಬಿಟ್ಟು ಶಿಕ್ಷಣ ಸಂಸ್ಥೆಯ ಮೇಲೆ ಏಕಾಏಕಿ ದೇಶದ್ರೋಹದ ಪ್ರಕರಣ ದಾಖಲಿಸುವುದು ಮತ್ತು ಮುಖ್ಯೋಪಾಧ್ಯಾಯರಾದ ಫರೀದಾ ಬೇಗಂ ಹಾಗೂ ವಿದ್ಯಾರ್ಥಿಯೋರ್ವನ ತಾಯಿ ನಜ್ಮುನ್ನಿಸಾ ಎಂಬಿಬ್ಬರು ಮಹಿಳೆಯರನ್ನು ಬಂಧಿಸುವುದು ದುರುದ್ದೇಶದ ಕ್ರಮವಾಗಿದೆ. ಆದ್ದರಿಂದಲೇ,

ದೇಶದ್ರೋಹದಡಿ ಪ್ರಕರಣ ದಾಖಲಿಸಿಕೊಂಡಿರುವುದಕ್ಕೆ ಮತ್ತು ಬಂಧನಕ್ಕೆ ನಾಟಕದ ಸಂಭಾಷಣೆಯ ಹೊರತಾದ ಇನ್ನೇನೋ ಕಾರಣ ಇದೆ ಎಂಬ ಅನುಮಾನ ಮೂಡಿರುವುದು. ಇದರ ಹಿಂದೆ ಇನ್ಯಾವುದೋ ಉದ್ದೇಶ, ಷಡ್ಯಂತ್ರವಿರುವಂತೆ ಕಾಣಿಸುತ್ತಿದೆ. ದೇಶದ್ರೋಹ ಪ್ರಕರಣವನ್ನು ದಾಖಲಿಸಿ ಭಿನ್ನ ಧ್ವನಿಯನ್ನು ದಮನಿಸುವುದು ಈ ಷಡ್ಯಂತ್ರದ ಒಂದು ಭಾಗವಾದರೆ, ಶಿಕ್ಷಣ ಸಂಸ್ಥೆಯ ಹೆಸರನ್ನು ಕೆಡಿಸುವುದು ಇನ್ನೊಂದು ಭಾಗವಾಗಿರುವ ಸಾಧ್ಯತೆಯೂ ಇದೆ. ಅಷ್ಟಕ್ಕೂ,

ಬಾಬರಿ ಮಸೀದಿಯ ಧ್ವಂಸವನ್ನು ಕಾನೂನುಬಾಹಿರವೆಂದು ಸುಪ್ರೀಮ್ ಕೋರ್ಟು ಬಹಿರಂಗವಾಗಿ ತೀರ್ಪಿತ್ತ ಬಳಿಕವೂ ಕಲ್ಲಡ್ಕ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳು ಬಾಬರೀ ಮಸೀದಿಯ ಪ್ರತಿಕೃತಿಯನ್ನು ಧ್ವಂಸ ಮಾಡುವ ಪ್ರದರ್ಶನವನ್ನು ನೀಡಿದ್ದರು. ಅದೂ ಉನ್ನತ ಅಧಿಕಾರಿಗಳು ಮತ್ತು ಪುದುಚ್ಚೇರಿ ಗವರ್ನರ್ ಕಿರಣ್ ಬೇಡಿಯವರ ಸಮ್ಮುಖದಲ್ಲೇ. ಆದರೂ ಆ ಶಾಲೆಯ ಮೇಲೆ ದಾಖಲಾಗದ ದೇಶದ್ರೋಹವು ಶಾಹೀನ್ ಸಂಸ್ಥೆಯ ಹಾಲುಗಲ್ಲದ ಮಕ್ಕಳ ನಾಟಕದ ಮೇಲೆ ದಾಖಲಾಗಲು ಕಾರಣವೇನು?

Monday 3 February 2020

ಮ್ಯಾನ್ಮಾರನ್ನು ಮತ್ತೊಮ್ಮೆ ಕಟಕಟೆಯಲ್ಲಿ ನಿಲ್ಲಿಸಿದ ಸೂಕಿ



ಝಾಂಬಿಯ ಎಂಬ ಆಫ್ರಿಕಾದ ಪುಟ್ಟ ರಾಷ್ಟ್ರವೊಂದು ಹೇಗ್‍ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ICJ) ಸಲ್ಲಿಸಿರುವ ದೂರು ಇದೀಗ ಮ್ಯಾನ್ಮಾರನ್ನು ಕಾಡತೊಡಗಿದೆ. ಕಳೆದ ತಿಂಗಳು ಮೂರು ದಿನಗಳ ಕಾಲ ವಿಚಾರಣೆ ನಡೆದಿತ್ತು. ಮ್ಯಾನ್ಮಾರ್ ನ ನಾಯಕಿ ಆಂಗ್ ಸಾನ್ ಸೂಕಿ ಅವರು ವಿಚಾರಣೆಯ ಸಮಯದಲ್ಲಿ ಜಾಗತಿಕವಾಗಿ ಸುದ್ದಿಗೀಡಾಗಿದ್ದರು. ರಾಖೈನ್ ಪ್ರದೇಶದಲ್ಲಿರುವ ರೋಹಿಂಗ್ಯನ್ ಮುಸ್ಲಿಮರ ಜನಾಂಗೀಯ ಹತ್ಯೆಯ ಆರೋಪಕ್ಕೆ ಉತ್ತರ ಕೊಡಲು ಆಂಗ್ ಸಾನ್ ಸೂಕಿಯವರು ಸ್ವತಃ ಹೇಗ್ ನ್ಯಾಯಾಲಯಕ್ಕೆ ಬಂದು ಅಚ್ಚರಿ ಮೂಡಿಸಿದ್ದರು. ಅದು ಮ್ಯಾನ್ಮಾರ್ ನಲ್ಲಿ ಅವರಿಗೆ ಹೀರೋ ಪಟ್ಟ ಒದಗಿಸಿಕೊಟ್ಟರೂ ಅದರಿಂದಾಗಿ ರೋಹಿಂಗ್ಯನ್ ಮುಸ್ಲಿಮರ ದಯನೀಯ ಸ್ಥಿತಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಚರ್ಚೆಗೆ ಒಳಗಾಯಿತು. ಆಂಗ್ ಸಾನ್ ಸೂಕಿಯವರು ಸ್ವತಃ ಅಂತಾರಾಷ್ಟ್ರೀಯ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಮ್ಯಾನ್ಮಾರನ್ನು ಸಮರ್ಥಿಸತೊಡಗಿದಾಗ ಇತ್ತ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು, ಮಾಧ್ಯಮಗಳು ರೋಹಿಂಗ್ಯನ್ ಹತ್ಯಾಕಾಂಡದ ಬರ್ಬರತೆಯನ್ನು ಮತ್ತೊಮ್ಮೆ ಜಗತ್ತಿನ ಮುಂದಿಟ್ಟವು. ಅನೇಕ ಪತ್ರಕರ್ತರು ಬಾಂಗ್ಲಾದೇಶದಲ್ಲಿ ನೆಲೆಸಿರುವ ರೋಹಿಂಗ್ಯನ್ ನಿರಾಶ್ರಿತರನ್ನು ಭೇಟಿಯಾದರು. ವರದಿಗಳನ್ನು ತಯಾರಿಸಿದರು. ಒಂದುವೇಳೆ,

ಆಂಗ್ ಸಾನ್ ಸೂಕಿಯ ಬದಲು ಮ್ಯಾನ್ಮಾರ್ ನ ಯಾವುದಾದರೂ ಅಧಿಕಾರಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಹಾಜರಾಗಿರುತ್ತಿದ್ದರೆ ಆ ವಿಚಾರಣಾ ಪ್ರಕ್ರಿಯೆ ಮತ್ತು ರೋಹಿಂಗ್ಯನ್ ಮುಸ್ಲಿಮರ ದಯನೀಯತೆ ಜಾಗತಿಕವಾಗಿ ಚರ್ಚೆಗೆ ಒಳಗಾಗುತ್ತಿರಲಿಲ್ಲವೇನೋ. ಇದೀಗ ಅಂತಾರಾಷ್ಟ್ರೀಯ ನ್ಯಾಯಾಲಯವು ರೋಹಿಂಗ್ಯನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸೂಚನೆಯನ್ನು ಕೊಟ್ಟಿದೆ. ರೋಹಿಂಗ್ಯನ್ ಮುಸ್ಲಿಮರ ಮೇಲೆ ನಡೆದಿರುವ ದೌರ್ಜನ್ಯ, ಜನಾಂಗೀಯ ಹತ್ಯೆ, ಅತ್ಯಾಚಾರಗಳ ಕುರಿತಂತೆ ಯಾವೆಲ್ಲ ಸಾಕ್ಷ್ಯ ಗಳನ್ನು ಸಂಗ್ರಹಿಸಿದ್ದೀರೋ ಅದನ್ನು ನ್ಯಾಯಾಲಯಕ್ಕೆ ನಾಲ್ಕು ತಿಂಗಳ ಒಳಗಾಗಿ ಸಲ್ಲಿಸಬೇಕೆಂದು ಆದೇಶಿಸಿದೆ. ಒಟ್ಟು ಘಟನೆಯ ಬಗ್ಗೆ 6 ತಿಂಗಳ ಒಳಗಾಗಿ ಸಂಪೂರ್ಣ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿದೆ. 6 ಲಕ್ಷ ರೋಹಿಂಗ್ಯನ್ ಮುಸ್ಲಿಮರು ಪ್ರಭುತ್ವದ ದಮನದ ಭೀತಿಯಲ್ಲಿ ಬದುಕುತ್ತಿದ್ದಾರೆ ಅನ್ನುವ ಅಭಿಪ್ರಾಯವನ್ನೂ ಅದು ವ್ಯಕ್ತಪಡಿಸಿದೆ. ವಿಚಾರಣೆಯ ವೇಳೆ ಜನಾಂಗೀಯ ಹತ್ಯೆಯೆಂಬ ಆರೋಪವನ್ನು ಆಂಗ್ ಸಾನ್ ಸೂಕಿ ನಿರಾಕರಿಸಿದ್ದರು. 2017ರಲ್ಲಿ ರಾಖೈನ್ ಪ್ರಾಂತ್ಯದಲ್ಲಿ ಮುಸ್ಲಿಮರ ಮೇಲೆ ಏನು ನಡೆಯಿತೋ ಅದು ದಂಗೆಗೆ ನೀಡಲಾದ ಪ್ರತಿಕ್ರಿಯೆಯಾಗಿತ್ತು ಎಂದುವರು ಸಮರ್ಥಿಸಿದ್ದರು. ಆದರೆ,

ವಿಶ್ವಸಂಸ್ಥೆಯ ವರದಿ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವರದಿಯು ರಾಖೈನ್ ಪ್ರಾಂತ್ಯದಲ್ಲಿ ನಡೆದ ಬರ್ಬರ ಕ್ರೌರ್ಯದ ಹಿಂದೆ ಯಾರಿದ್ದಾರೆ ಮತ್ತು ಯಾಕಿದ್ದಾರೆ ಅನ್ನುವುದು ಸ್ಪಷ್ಟಪಡಿಸಿತ್ತು. ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯನ್ನು ಪ್ರಭುತ್ವದ ನೇರ ಕಣ್ಗಾವಲಿನೊಂದಿಗೆ ಮಾಡಲಾಯಿತು ಎಂದು ಆ ವರದಿಗಳು ಹೇಳಿದ್ದುವು. ಜನಾಂಗೀಯ ನಿರ್ಮೂಲನದ ಉದ್ದೇಶವನ್ನಿಟ್ಟುಕೊಂಡು ಮಿಲಿಟರಿಯ ಮುಂದಾಳುತ್ವದಲ್ಲಿ ನಡೆದ ಅಮಾನುಷ ಕ್ರೌರ್ಯವಾಗಿ ಹಲವಾರು ವರದಿಗಳು ಸ್ಪಷ್ಟಪಡಿಸಿದ್ದುವು. ಆ ಕ್ರೌರ್ಯದ ಭೀಭತ್ಸತೆಯನ್ನು ವರದಿ ಮಾಡಿದ ತನ್ನಿಬ್ಬರು ಪತ್ರಕರ್ತರನ್ನು ಮ್ಯಾನ್ಮಾರ್ ಎರಡು ವರ್ಷಕ್ಕಿಂತಲೂ ಅಧಿಕ ಸಮಯ ಜೈಲಲ್ಲಿಟ್ಟು ಶಿಕ್ಷಿಸಿದ್ದೂ ಈ ಸಮಯದಲ್ಲಿ ಸುದ್ದಿಯಾಗಿತ್ತು. ಬಾಂಗ್ಲಾದೇಶಕ್ಕೆ ಓಡಿ ಬಂದಿರುವ ಸುಮಾರು 9 ಲಕ್ಷದಷ್ಟು ರೋಹಿಂಗ್ಯನ್ ಮುಸ್ಲಿಮರು ಮ್ಯಾನ್ಮಾರ್ ಸರಕಾರದ ಮನಸ್ಥಿತಿಯ ಕುರಿತಂತೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಮನ ಬಿಚ್ಚಿ ಮಾತಾಡಿದರು. ಸಾವಿರಾರು ಮಂದಿ ಭಾರತಕ್ಕೂ ಬಂದರು. ನೂರಾರು ಮಂದಿ ಪಲಾಯನದ ಹಾದಿಯಲ್ಲಿ ಸಮುದ್ರದಲ್ಲಿ ಮುಳುಗಿ ಸಾವಿಗೀಡಾದರು. ವಿಷಾದ ಏನೆಂದರೆ,

2016ರಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಡೆದ ಕ್ರೌರ್ಯ ಇದು. ಮಿಲಿಟರಿ ವ್ಯವಸ್ಥೆಯ ವಿರುದ್ಧ ದಶಕಗಳಿಂದ ಹೋರಾಡುತ್ತಾ ಬಂದ, ಅದಕ್ಕಾಗಿ ಜೈಲು ಪಾಲಾದ ಮತ್ತು ನೋಬೆಲ್ ಶಾಂತಿ ಪಾರಿತೋಷಕವನ್ನು ಪಡಕೊಂಡ ಆಂಗ್ ಸಾನ್ ಸೂಕಿಯು ಅಧಿಕಾರಕ್ಕೆ ಬಂದ ಬಳಿಕ ಮಿಲಿಟರಿಯನ್ನೂ ನಾಚುವಂತೆ ವರ್ತಿಸಿದ್ದರು. ಇದೀಗ ಮ್ಯಾನ್ಮಾರ್ ಸರಕಾರದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಎದುರಾಗಿದೆ. ಬಲಾಢ್ಯ ರಾಷ್ಟ್ರಗಳು ತನ್ನ ಮೇಲೆ ಕ್ರಮಕ್ಕೆ ಮುಂದಾಗುವ ಭೀತಿ ಅದನ್ನು ಕಾಡತೊಡಗಿದೆ. ಆದ್ದರಿಂದಲೇ, ಅದು ಚೀನಾದ ತೆಕ್ಕೆಗೆ ಜಾರಿದೆ. ಕಳೆದವಾರ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಮ್ಯಾನ್ಮಾರ್‍ಗೆ ಭೇಟಿ ನೀಡಿದರು. ಮಾತ್ರವಲ್ಲ, 33ರಷ್ಟು ಒಪ್ಪಂದಗಳಿಗೆ ಸಹಿಯನ್ನೂ ಹಾಕಿದರು. 2001ರ ಬಳಿಕ ಚೀನಾದ ಅಧ್ಯಕ್ಷರು ಕೊಡುತ್ತಿರುವ ಪ್ರಥಮ ಭೇಟಿ ಇದು. ಮ್ಯಾನ್ಮಾರ್‍ನ ಮುಖ್ಯ ಮೂರು ನಾಯಕರಾದ ಅಧ್ಯಕ್ಷ  ವಿನ್ ಮಿಂಟ್, ಆಡಳಿತ ಮುಖ್ಯಸ್ಥೆ ಆಂಗ್ ಸಾನ್ ಸೂಕಿ ಮತ್ತು ಮಿಲಿಟರಿ ಮುಖ್ಯಸ್ಥ ಮಿನ್ ಹಾಂಗ್ ಲೈಂಗ್‍ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಚೀನಾ ಮತ್ತು ಮ್ಯಾನ್ಮಾರ್ ಗಳ ನಡುವೆ ಮೂರು ವಿಶೇಷ ಆರ್ಥಿಕ ವಲಯಗಳನ್ನು ಸ್ಥಾಪಿಸುವುದೂ ಈ ಒಪ್ಪಂದದಲ್ಲಿ ಸೇರಿದೆ. ಈಗಾಗಲೇ ಪ್ರಗತಿಯಲ್ಲಿರುವ ಚೀನಾ-ಮ್ಯಾನ್ಮಾರ್ ನಡುವಿನ ಆರ್ಥಿಕ ಕಾರಿಡಾರ್ ಗೆ ವೇಗವನ್ನು ತುಂಬುವ ಮಾತುಕತೆಗಳಾಗಿವೆ. ಚೀನಾದ ಮಟ್ಟಿಗೆ ಇದೊಂದು ತಂತ್ರಗಾರಿಕೆ. ಸಂಕಷ್ಟದಲ್ಲಿರುವ ಸಮಯವನ್ನು ನೋಡಿ ಅದು ಮ್ಯಾನ್ಮಾರ್‍ನ ಕಡೆಗೆ ಮುಖ ಮಾಡಿದೆ. ಅಲ್ಲದೇ, ಮ್ಯಾನ್ಮಾರ್ ನ ಮಿಲಿಟರಿ ಸರಕಾರಕ್ಕೂ ಅತ್ಯಂತ ಆಪ್ತ ಸಂಬಂಧ ಇದ್ದುದು ಚೀನಾದ ಜೊತೆಗೇ. ಇದೀಗ ಆ ಸಂಬಂಧವನ್ನು ಇನ್ನಷ್ಟು ಬಲಪಡಿಸುವುದಕ್ಕೆ ಚೀನಾ ಸಂದರ್ಭವನ್ನು ಸೂಕ್ತವಾಗಿ ಬಳಸಿಕೊಂಡಿದೆ. ಇನ್ನೊಂದೆಡೆ,

ಶೀಘ್ರದಲ್ಲೇ  ಚೀನಾ ಅಧ್ಯಕ್ಷರು ನೇಪಾಳ ಮತ್ತು ಶ್ರೀಲಂಕಕ್ಕೆ ಭೇಟಿ ಕೊಡುವ ಕಾರ್ಯಕ್ರಮವಿದೆ. ಈ ಎರಡೂ ಭೇಟಿಗಳನ್ನೂ ಚೀನಾ ಬಹಳ ಯೋಜನಾಬದ್ಧವಾಗಿಯೇ ನಿಗದಿಗೊಳಿಸಿದೆ ಎಂದು ಹೇಳಲಾಗುತ್ತದೆ. ಭಾರತದ ನೆರೆಯ ಈ ರಾಷ್ಟ್ರಗಳನ್ನು ಇನ್ನಷ್ಟು ತನ್ನ ತೆಕ್ಕೆಗೆ ಎಳೆದುಕೊಳ್ಳುವುದು ಇದರ ಉದ್ದೇಶಗಳಲ್ಲಿ ಒಂದು. ಮ್ಯಾನ್ಮಾರ್‍ನಲ್ಲಿ ಇದನ್ನು ಸಾಧಿಸಿಕೊಂಡ ಚೀನಾವು ನೇಪಾಳವನ್ನು ಈಗಾಗಲೇ ತನ್ನ ಪರವಾಗಿ ಒಲಿಸಿಕೊಂಡಿದೆ. ಶ್ರೀಲಂಕಾದ ಹೊಸ ಸರಕಾರವನ್ನು ಒಲಿಸಿಕೊಳ್ಳುವುದೂ ಚೀನಾಕ್ಕೆ ಕಷ್ಟವಲ್ಲ. ಈಗಾಗಲೇ ಅಲ್ಲಿನ ಹಲವು ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದ ಹೂಡಿಕೆಯನ್ನು ಅದು ಮಾಡಿರುವುದರಿಂದ ಶ್ರೀಲಂಕಾವು ಭಾರತದ ಆಪ್ತ ಮಿತ್ರನಾಗುವ ಸಾಧ್ಯತೆ ತೀರಾ ಕಡಿಮೆ. ಒಂದು ರೀತಿಯಲ್ಲಿ,

ಭಾರತ ತನ್ನ ನೆರೆ ರಾಷ್ಟ್ರಗಳನ್ನೆಲ್ಲ  ಒಂದೊಂದಾಗಿ ಕಳೆದುಕೊಂಡು ಒಂಟಿಯಾಗತೊಡಗಿದೆ. ಸಿಎಎಯು ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನವನ್ನು ಭಾರತದಿಂದ ದೂರ ಮಾಡಿತು. ಪಾಕಿಸ್ತಾನವಂತೂ ಈ ಮೊದಲೇ ಚೀನಾಕ್ಕೆ ಆಪ್ತಮಿತ್ರವಾಗಿ ಮಾರ್ಪಟ್ಟಿತು. ಇದೀಗ ನಮ್ಮ ಸುತ್ತಮುತಲಿನ ಇನ್ನಷ್ಟು ರಾಷ್ಟ್ರಗಳ ಮೇಲೆ ಪ್ರಭುತ್ವ ಸ್ಥಾಪಿಸುವಲ್ಲಿ ಚೀನಾ ಯಶಸ್ವಿಯಾಗುತ್ತಿದೆ. ಬಲಶಾಲಿ ಭಾರತ ಎಂಬ ಪರಿಕಲ್ಪನೆಗೆ ತೀರಾ ವಿರುದ್ಧವಾದ ಪರಿಸ್ಥಿತಿ ಇದು. ಏನೇ ಆಗಲಿ,

ರೋಹಿಂಗ್ಯನ್ ಮುಸ್ಲಿಮರನ್ನು ಉಟ್ಟ ಬಟ್ಟೆಯಲ್ಲೇ  ಓಡಿ ಹೋಗುವಂತೆ ಬಲವಂತಪಡಿಸಿದ ಮ್ಯಾನ್ಮಾರ್ ನ ಪ್ರಭುತ್ವವು ಇದೀಗ ಅದರ ಪರಿಣಾಮವನ್ನು ಎದುರಿಸುವ ಭೀತಿಗೆ ಒಳಗಾಗಿದೆ. ಅರಕ್ಕಾನ್ ರೋಹಿಂಗ್ಯ ಸಾಲ್ವೇಷನ್ ಆರ್ಮಿಯ ಹಿಂಸೆಗೆ ಕಾನೂನು ರೀತಿಯಲ್ಲಿ ನೀಡಿದ ಉತ್ತರವನ್ನೇ ಜನಾಂಗೀಯ ನಿರ್ಮೂಲನ ಎಂದು ಮಾಧ್ಯಮಗಳು ತಿರುಚಿ ವರದಿ ಮಾಡಿವೆ ಎಂಬ ಮ್ಯಾನ್ಮಾರ್ ನ ವಾದವನ್ನು ಒಪ್ಪಿಕೊಳ್ಳಲು ಈ ಜಗತ್ತಿನಲ್ಲಿ ಈಗ ಯಾವ ರಾಷ್ಟ್ರಗಳೂ ಇಲ್ಲದಂಥ ಸ್ಥಿತಿ ಎದುರಾಗಿದೆ. ಹೇಗ್‍ನ ಅಂತಾರಾಷ್ಟ್ರೀಯ ನ್ಯಾಯಾಲಯದ ಕಟಕಟೆಯಲ್ಲಿ ನಿಂತ ಆಂಗ್ ಸಾನ್ ಸೂಕಿ, ಆ ಮೂಲಕ ಮ್ಯಾನ್ಮಾರನ್ನೇ ಕಟಕಟೆಯಲ್ಲಿ ನಿಲ್ಲಿಸಿದ್ದಾರೆ. ಝಾಂಬಿಯಾ ಎಂಬ ಪುಟ್ಟ ರಾಷ್ಟ್ರಕ್ಕೆ ಅಭಿನಂದನೆಗಳು.

ಭಾರತದ ತಹ್ರೀರ್ ಚೌಕ್ ಆಗುವ ಹಾದಿಯಲ್ಲಿ ಶಾಹೀನ್‍ ಬಾಗ್





ಸಿಎಎ ಮತ್ತು ಎನ್‍ಆರ್ ಸಿ ವಿರೋಧಿ ಪ್ರತಿಭಟನೆಗೆ ಒಂದು ತಿಂಗಳು ತುಂಬಿದರೂ ಪ್ರತಿಭಟನಾಕಾರರ ಆಕ್ರೋಶ ತಣಿದಿಲ್ಲ. ಮಾತ್ರವಲ್ಲ, ದಿನದಿಂದ ದಿನಕ್ಕೆ ಈ ಪ್ರತಿಭಟನೆ ಬಲಶಾಲಿಯಾಗುತ್ತಲೂ ಇನ್ನಷ್ಟು ಪ್ರದೇಶಗಳಿಗೆ ವ್ಯಾಪಿಸುತ್ತಲೂ ಹೋಗುತ್ತಿದೆ. ಬಹುಶಃ, ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟಿಷರ ವಿರುದ್ಧ ಕಾಣಿಸಿಕೊಂಡ ನಾಗರಿಕ ಆಕ್ರೋಶದ ಮಾದರಿಯೊಂದು ಈ ಬಾರಿ ಕಾಣಿಸಿಕೊಂಡಿದೆ. ಎಲ್ಲೆಡೆಯೂ ಆಕ್ರೋಶ, ಪ್ರಭುತ್ವ ವಿರೋಧಿ ಘೋಷಣೆ. ಡಿಸೆಂಬರ್ 16ರಂದು ದೆಹಲಿಯ ಶಾಹೀನ್‍ ಬಾಗ್‍ನಲ್ಲಿ ಮಹಿಳೆಯರಿಂದ ಆರಂಭವಾದ ಪ್ರತಿಭಟನೆ ನಿರಂತರ ಮುಂದುವರಿದಿದೆ. ದೆಹಲಿಯ ಕಡು ಚಳಿಯನ್ನು ಲೆಕ್ಕಿಸದೇ ಮಹಿಳೆಯರು ದಿನದ 24 ಗಂಟೆಯೂ ಸರದಿಯಲ್ಲಿ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಪ್ರತಿಭಟನಾಕಾರರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇಲ್ಲಿ ಸಂವಿಧಾನ ಪಠಣ, ಭಗವದ್ಗೀತೆ, ಬೈಬಲ್ ಮತ್ತು ಕುರ್‍ಆನ್‍ನ ವಚನಗಳ ಪಠಣ ನಡೆಯುತ್ತಿದೆ. ಹೋಮ-ಹವನಗಳಿಗೂ ಈ ಪ್ರತಿಭಟನಾ ಸಭೆ ಸಾಕ್ಷಿಯಾಗಿದೆ. ಒಂದು ರೀತಿಯಲ್ಲಿ,
ದೆಹಲಿಯ ಶಾಹೀನ್‍ಬಾಗ್ ಅನ್ನುವುದು ಮಿನಿ ಭಾರತವಾಗಿ ಮಾರ್ಪಟ್ಟಿದೆ. ಈ ಪ್ರತಿಭಟನಾಕಾರರನ್ನು ಕೋರ್ಟು ಮೂಲಕ ಅಲ್ಲಿಂದ ತೆರವುಗೊಳಿಸಲು ಪ್ರಯತ್ನಿಸಿದರೂ ಅದು ಯಶಸ್ವಿಯಾಗಲಿಲ್ಲ. ಇದೇ ಮೊದಲ ಬಾರಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‍ಸಿ)ಯು ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿದೆ. ಉತ್ತರ ಭಾರತದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಬಹುಜನ್ ಕ್ರಾಂತಿ ಮಂಚ್ (ಬಿಕೆಎಂ) ಎಂಬ ದಲಿತ, ಹಿಂದುಳಿದ, ಆದಿವಾಸಿ, ಬುಡಕಟ್ಟು ಜನಸಮೂಹವನ್ನು ಪ್ರತಿನಿಧಿಸುವ ಸಂಘಟನೆಯು ಡಿಸೆಂಬರ್ 20ರಿಂದ ಈ ಸಿಎಎ ಮತ್ತು ಎನ್‍ಆರ್ ಸಿಯ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದೆ. ದೇಶದ 550 ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುವ ಗುರಿಯೊಂದಿಗೆ ಪ್ರತಿದಿನ ರ‌್ಯಾಲಿ ಮತ್ತು ಸಭೆಗಳನ್ನು ಏರ್ಪಡಿಸುತ್ತಿದೆ. ಸಾವಿರಾರು ಮಂದಿ ಈ ಪ್ರತಿಭಟನಾ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಜನವರಿ 29ರಂದು ಭಾರತ್ ಬಂದ್‍ಗೆ ಕರೆಕೊಡುವ ಮೂಲಕ ಈ ಪ್ರತಿಭಟನಾ ಸರಣಿ ಕೊನೆಗೊಳ್ಳಲಿದೆ ಎಂದು ಅದು ಹೇಳಿಕೊಂಡಿದೆ. ವಿಶೇಷ ಏನೆಂದರೆ,
ಡಿಎನ್‍ಎ ಆಧಾರಿತ ಪೌರತ್ವ ಸಾಬೀತಿಗಾಗಿ ಅದು ಒತ್ತಾಯಿಸುತ್ತಿದೆ. ಈ ದೇಶದ ಮೂಲ ನಿವಾಸಿಗಳು ಯಾರು ಮತ್ತು ವಲಸಿಗರು ಯಾರು ಎಂಬುದು ಈ ಮೂಲಕ ನಿರ್ಧಾರವಾಗಲಿ ಎಂದು ಅದು ಆಗ್ರಹಿಸುತ್ತಿದೆ. ವಲಸಿಗರಾದ ಆರ್ಯರನ್ನು ಹೊರಹಾಕಿ ಭಾರತವನ್ನು ಅದರ ಮೂಲ ನಿವಾಸಿಗಳಾದ ದಲಿತರು, ಆದಿವಾಸಿಗಳು, ಬುಡಕಟ್ಟುಗಳು ಸಹಿತ ದಮನಿತ ವರ್ಗಕ್ಕೆ ವರ್ಗಾಯಿಸಬೇಕೆಂಬುದು ಅದರ ಗುರಿ. ತ್ರಿಪುರದಲ್ಲಿ ಬಿಜೆಪಿ ಮಿತ್ರಪಕ್ಷವಾದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‍ಟಿ)ವು ಅನಿರ್ದಿಷ್ಟಾವಧಿ ಧರಣಿಯಲ್ಲಿದೆ. ಯಶವಂತ್ ಸಿನ್ಹಾ ಅವರು ಶಾಂತಿಯಾತ್ರೆ ಪ್ರಾರಂಭಿಸಿದ್ದಾರೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶವೂ ಸೇರಿ 5 ರಾಜ್ಯಗಳಲ್ಲಿ ಸಾಗುವ ಈ ಸಿಎಎ-ಎನ್‍ಆರ್ ಸಿ ವಿರೋಧಿ ಶಾಂತಿ ಯಾತ್ರೆಯು ಜನವರಿ 30ರಂದು ದೆಹಲಿಯಲ್ಲಿ ಕೊನೆಗೊಳ್ಳಲಿದೆ. ಸಿಎಎ ಪರ ಪಾರ್ಲಿಮೆಂಟ್‍ನಲ್ಲಿ ಮತ ಚಲಾಯಿಸಿದ ಬಿಜೆಪಿ ಮಿತ್ರ ಪಕ್ಷವಾದ ಅಸ್ಸಾಮ್ ಗಣ ಪರಿಷತ್ ಈಗ ಸಿಎಎ ವಿರೋಧಿ ಪಾಳಯಕ್ಕೆ ಜಿಗಿದಿದೆ. ಸಿಎಎಯನ್ನು ಕಾನೂನು ಬಾಹಿರವೆಂದು ಘೋಷಿಸುವಂತೆ ಕೋರಿ ಅದರ ಅಧ್ಯಕ್ಷ ಪ್ರಫುಲ್ ಕುಮಾರ್ ಮಹಂತ ಅವರು ಸುಪ್ರೀಮ್ ಕೋರ್ಟಿನ ಬಾಗಿಲು ತಟ್ಟಿದ್ದಾರೆ. ನಾಗಾ ಪೀಪಲ್ಸ್ ಫ್ರಂಟ್ (ಎನ್‍ಪಿಎಫ್), ಬೋಡೋ ಪೀಪಲ್ಸ್ ಫ್ರಂಟ್ (ಬಿಪಿಎಫ್), ಮೀಝೋ ನ್ಯಾಶನಲ್ ಫ್ರಂಟ್ (ಎಂಎನ್‍ಎಫ್), ಸಿಕ್ಕಿಂ ಕ್ರಾಂತಿ ಮೋರ್ಚಾ (ಎಸ್‍ಕೆಎಂ) ಇತ್ಯಾದಿ ಈಶಾನ್ಯ ಭಾರತದ ಪ್ರಬಲ ಗುಂಪುಗಳು ಸಿಎಎ-ಎನ್‍ಆರ್‍ಸಿ  ವಿರುದ್ಧ ಹೋರಾಟವನ್ನು ಸಂಘಟಿಸುತ್ತಿವೆ. ಸಿಎಎ ಪರ ಪಾರ್ಲಿಮೆಂಟ್‍ನಲ್ಲಿ ಮತ ಚಲಾಯಿಸಿದುದಕ್ಕಾಗಿ ನಾಗಾ ಪೀಪಲ್ಸ್ ಫ್ರಂಟ್‍ನ ಸದಸ್ಯನಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಲಾಗಿದೆ. ಇದೇ ಪಕ್ಷದ ರಾಜ್ಯಸಭಾ ಸದಸ್ಯ ಕೆ.ಜಿ. ಕೀನೇ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಮಿತ್ರಪಕ್ಷವಾದ ಆಲ್ ಜಾರ್ಖಂಡ್ ಸ್ಟೂಡೆಂಟ್ ಯೂನಿಯನ್ ಕೂಡ ಸಿಎಎ-ಎನ್‍ಆರ್ ಸಿ  ವಿರುದ್ಧ ಬೀದಿಗಿಳಿದಿದೆ. ಪಶ್ಚಿಮ ಬಂಗಾಳವಂತೂ ಕೆಂಡದಂತೆ ಉರಿಯುತ್ತಿದೆ. ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಅಲ್ಲಿಂದ ನೇರವಾಗಿ ಸಿಎಎ-ಎನ್‍ಆರ್ ಸಿ ವಿರೋಧಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು. ಪಶ್ಚಿಮ ಬಂಗಾಳದ ಸ್ಥಿತಿಗತಿ ಹೇಗಿದೆ ಅನ್ನುವುದನ್ನು ಇದು ಸೂಚಿಸುತ್ತದೆ. ಸಿಎಎ ಪರ ಪಾರ್ಲಿಮೆಂಟ್‍ನಲ್ಲಿ ಮತ ಚಲಾಯಿಸಿರುವ ನಿತೀಶ್ ಕುಮಾರ್ ರ ಜೆಡಿಯು, ನವೀನ್ ಪಟ್ನಾಯಕ್‍ರ ಬಿಜೆಡಿ, ಬಿಜೆಪಿ ಮಿತ್ರಪಕ್ಷವಾದ ರಾಮ್ ವಿಲಾಸ್ ಪಾಸ್ವಾನ್‍ರ ಎಲ್‍ಜೆಪಿ, ಅಕಾಲಿ ದಳ, ಎಐಎಡಿಎಂಕೆ ಮುಂತಾದ ರಾಜಕೀಯ ಪಕ್ಷಗಳು ಇದೀಗ ಬಣ್ಣ ಬದಲಾಯಿಸಿ ಹೇಳಿಕೆ ಕೊಡತೊಡಗಿವೆ. ಇವು ಯಾವುವೂ ಸಿಎಎಯ ಪರ ನಿಲ್ಲುತ್ತಿಲ್ಲ. ಅಕಾಲಿದಳವಂತೂ ಪಾಕ್, ಅಫಘಾನ್ ಮತ್ತು ಬಾಂಗ್ಲಾದೇಶಗಳಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಮರಿಗೂ ಪೌರತ್ವ ಕೊಡುವಂತೆ ಆಗ್ರಹಿಸಿದೆ. ಬೆಂಗಳೂರಿನಲ್ಲಿ ದಲಿತ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆದಿದೆ. ನ್ಯಾಯವಾದಿಗಳು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಅಮಥ್ರ್ಯಸೇನ್, ಚೇತನ್ ಭಗತ್, ಅರುಂಧತಿ ರಾಯ್, ದೇವನೂರು ಮಹಾದೇವ, ದೊರೈಸ್ವಾಮಿ, ಬರಗೂರು ರಾಮಚಂದ್ರಪ್ಪ, ಐಎಎಸ್ ಅಧಿಕಾರಿಗಳಾದ ಸಸಿಕಾಂತ್ ಸೆಂಥಿಲ್, ಗೋಪಿನಾಥ್ ಕಣ್ಣನ್, ರಾಮಚಂದ್ರ ಗುಹಾ ಮುಂತಾದ ಸಾವಿರಾರು ಚಿಂತಕರು ಸಿಎಎ ಮತ್ತು ಎನ್‍ಆರ್ ಸಿ ವಿರುದ್ಧ ದನಿಯೆತ್ತಿದ್ದಾರೆ ಮತ್ತು ಬೀದಿಗಿಳಿದು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಐದೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಎದುರಿಸುತ್ತಿರುವ ಅತಿದೊಡ್ಡ ನಾಗರಿಕ ಪ್ರತಿಭಟನೆ ಇದು. ನೋಟು ಅಮಾನ್ಯೀಕರಣ, ಜಿಎಸ್‍ಟಿ ಮತ್ತು ತ್ರಿವಳಿ ತಲಾಕ್ ಕಾನೂನು ಜಾರಿಗೆ ತಂದ ಸಮಯದಲ್ಲೂ ಈ ದೇಶದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆದಿರಲಿಲ್ಲ. ಮಾತ್ರವಲ್ಲ, ಆ ಎಲ್ಲ ಸಂದರ್ಭಗಳಲ್ಲಿ ಪ್ರತಿಭಟನಾಕಾರರು ತಂತಮ್ಮ ಸಂಘಟನೆ, ಪಕ್ಷ, ಗುಂಪುಗಳನ್ನು ಪ್ರತಿನಿಧಿಸುವ ರೀತಿಯಲ್ಲಿ ಪ್ರತ್ಯೇಕ ಬಾವುಟ, ಭಿತ್ತಿ ಚಿತ್ರ, ಘೋಷಣೆ ಮತ್ತು ಬ್ಯಾನರುಗಳ ಮೂಲಕ ಗುರುತಿಸಿಕೊಂಡಿದ್ದರು. ಅವರೆಲ್ಲ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಪ್ರತಿಭಟಿಸುವವರಾದರೂ ಅಲ್ಲೊಂದು ಪ್ರತ್ಯೇಕತೆಯಿತ್ತು. ಆದರೆ, ಸಿಎಎ, ಎನ್‍ಆರ್ ಸಿ, ಎನ್‍ಪಿಆರ್ ವಿರೋಧಿ ಪ್ರತಿಭಟನೆಯಲ್ಲಿ ಈ ಯಾವ ಪ್ರತ್ಯೇಕತೆಯೂ ಕಾಣಿಸುತ್ತಿಲ್ಲ. ಎಲ್ಲರ ಕೈಯಲ್ಲೂ ಭಾರತದ ತ್ರಿವರ್ಣ ಧ್ವಜ. ಬಾಯಲ್ಲಿ ಆಝಾದಿ ಘೋಷಣೆ ಮತ್ತು ಏಕ ಸಂದೇಶವನ್ನು ಸಾರುವ ಭಿತ್ತಿ ಚಿತ್ರಗಳು. ಒಂದು ರೀತಿಯಲ್ಲಿ, ಸಿಎಎ, ಎನ್‍ಆರ್ ಸಿ ಮತ್ತು ಎನ್‍ಪಿಆರ್ ಗಳು ಈ ದೇಶದ ನಾಗರಿಕರನ್ನು ಬೆಸೆದಿದೆ. ಅವರೊಳಗೆ ಕ್ರಾಂತಿಯ ಕಿಡಿಯನ್ನೆಬ್ಬಿಸಿದೆ. ಪೊಲೀಸ್ ವ್ಯವಸ್ಥೆಯನ್ನು ಬಳಸಿ ಪ್ರಭುತ್ವವು ದಮನಿಸಲು ಪ್ರಯತ್ನಿಸಿದಷ್ಟೂ ಅದು ಇನ್ನಷ್ಟು ಶಕ್ತಿಯೊಂದಿಗೆ ಪುಟಿಯುತ್ತಿದೆ. ಜನದನಿಯನ್ನು ಕೀಳಂದಾಜಿಸಿದುದರ ಪರಿಣಾಮ ಇದು. ಇನ್ನೊಂದು ಕಡೆ ಜಿಡಿಪಿ ಸಾರ್ವಕಾಲಿಕ ಕುಸಿತಕ್ಕೆ ತುತ್ತಾಗಿದೆ. ಅಟೋಮೊಬೈಲ್ ಕ್ಷೇತ್ರದಲ್ಲಿ ದಾರುಣ ಮೌನ ಆವರಿಸಿಕೊಂಡಿದೆ. ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ದಾರಿ ಗೊತ್ತಾಗದೇ ಸರಕಾರ ಚಡಪಡಿಸುತ್ತಿದೆ. ಡಿಸೆಂಬರ್ ಕೊನೆಯ ತ್ರೈಮಾಸಿಕದ ವರದಿ ಪ್ರಕಾರ, ಈ ದೇಶದ ಬ್ಯಾಂಕುಗಳಿಗೆ ವಂಚಿಸಲಾದ ಮೊತ್ತದ ಪ್ರಮಾಣ 1.13 ಲಕ್ಷ ಕೋಟಿ ರೂಪಾಯಿಗೇರಿದೆ. ನಿರೀಕ್ಷಿಸಿದಷ್ಟು ಜಿಎಸ್‍ಟಿ ಸಂಗ್ರಹವಾಗುತ್ತಿಲ್ಲ. ರಾಜ್ಯಗಳಿಗೆ ಕೊಡಬೇಕಾದ ಸಂಪತ್ತಿನ ಪಾಲನ್ನು ಕೊಡುವುದಕ್ಕೂ ಕೇಂದ್ರ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅದೇವೇಳೆ, ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ತೈಲವೂ ಉರಿಯುತ್ತಿದೆ. ನಿಜವಾಗಿ,
ಇದು ಕೇಂದ್ರ ಸರಕಾರದ ಸ್ವಯಂಕೃತಾಪರಾಧ. ಅಭಿವೃದ್ಧಿಯ ಮೂಲಕ ಗುರುತಿಸಿಕೊಳ್ಳಬೇಕಾದ ಸರಕಾರವೊಂದು ಜನರನ್ನು ಜಾತಿ-ಧರ್ಮಗಳ ಆಧಾರದಲ್ಲಿ ವಿಭಜಿಸಿ ಆಳುವುದಕ್ಕೆ ಆದ್ಯತೆ ಕೊಟ್ಟುದರ ಪರಿಣಾಮ ಇದು. ಇನ್ನೂ ತಿದ್ದಿಕೊಳ್ಳದೇ ಹೋದರೆ ಕೇಂದ್ರ ಸರಕಾರದ ಅಸ್ತಿತ್ವಕ್ಕೆ ಅಪಾಯವಿದೆ. ಹಾಗಾದರೆ, ಈಜಿಪ್ಟ್‍ನ ತಹ್ರೀರ್ ಚೌಕದ ಪ್ರತಿರೂಪವಾಗಿ ದೆಹಲಿಯ ಶಾಹೀನ್‍ ಬಾಗ್ ಮಾರ್ಪಡುವ ಮತ್ತು ಬದಲಾವಣೆಯೊಂದಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ.