Saturday 5 November 2016

ಟಿಪ್ಪು ಜಯಂತಿ ಯಾರ ಅಗತ್ಯ?

ರೇಷ್ಮೆ
      ಟಿಪ್ಪು ಸುಲ್ತಾನ್ ಏನು ಮತ್ತು ಏನಲ್ಲ ಎಂಬ ಬಗ್ಗೆ ಹುಟ್ಟಿಕೊಂಡಿರುವ ಚರ್ಚೆ ಬಿರುಸನ್ನು ಪಡಕೊಳ್ಳತೊಡಗಿದೆ. ಟಿಪ್ಪು ಪರ ಮತ್ತು ವಿರುದ್ಧ ಮಾಹಿತಿಗಳ ವಿನಿಮಯ ಆಗುತ್ತಿದೆ. ಟಿ.ವಿ. ಚಾನೆಲ್‍ಗಳಲ್ಲಿ ಕಂಠಶೋಷಣೆ ಪ್ರಾರಂಭವಾಗಿದೆ. ಟಿಪ್ಪುವಿನ ಹೆಸರಲ್ಲಿ ನಡೆಯುತ್ತಿರುವ ಭಾಷಣ, ಪ್ರತಿಭಟನೆಗಳು ಸಹಜ ಶಬ್ದಮಾಲಿನ್ಯಕ್ಕೆ ಹೆಚ್ಚುವರಿ ಕೊಡುಗೆಗಳನ್ನೂ ನೀಡತೊಡಗಿದೆ. ಇವೆಲ್ಲದ ನಡುವೆ ನಿಜ ಟಿಪ್ಪು ಕಳೆದು ಹೋಗುತ್ತಿರುವನೇನೋ ಅನ್ನುವ ಆತಂಕವೂ ಕಾಡುತ್ತಿದೆ. ನಿಜಕ್ಕೂ ಟಿಪ್ಪು ಯಾರ ಪ್ರತಿನಿಧಿ? ವೈಯಕ್ತಿಕವಾಗಿ ಆತ ಯಾವ ಧರ್ಮವನ್ನೇ ಅನುಸರಿಸಲಿ, ಓರ್ವ ರಾಜನಾಗಿ ಆತನ ಕಾರ್ಯ ನಿರ್ವಹಣೆ ಹೇಗಿತ್ತು? ಆತನ ಸಚಿವ ಸಂಪುಟದಲ್ಲಿ ಉನ್ನತ ಸ್ಥಾನದಲ್ಲಿದ್ದವರೆಲ್ಲ ಯಾರು? ಅವರು ಯಾವ ಧರ್ಮದ ಪ್ರತಿನಿಧಿಗಳು? ಟಿಪ್ಪು ಭಯಂಕರ ಮತಾಂಧನೇ ಆಗಿರುತ್ತಿದ್ದರೆ ಆತನ ಆಸ್ಥಾನದಲ್ಲಿ ದಿವಾನ್ ಕೃಷ್ಣರಾವ್ ವಿತ್ತಮಂತ್ರಿಯಾಗಿ, ಪೂರ್ಣಯ್ಯ ಕಂದಾಯ ಮಂತ್ರಿಯಾಗಿ, ಶಿವಾಜಿ ಮತ್ತು ರಾಮರಾವ್‍ರು ಅಶ್ವದಳದ ದಂಡನಾಯಕರಾಗಿ ಕಾರ್ಯನಿರ್ವಹಿಸಲು ಸಾಧ್ಯವಿತ್ತೇ? ಲಾಲಾ ಮುಹ್ತಾಬ್ ರಾಯ್, ಹರಿಸಿಂಗ್, ನರಸಿಂಹ ರಾವ್, ಶ್ರೀನಿವಾಸ್ ರಾವ್, ಶ್ರೀಪತಿ ರಾವ್ ಮುಂತಾದವರು ಇಸ್ಲಾಮ್‍ಗೆ ಮತಾಂತರವಾಗದೆಯೇ ಮತ್ತು ಹಿಂದೂಗಳಾಗಿದ್ದುಕೊಂಡೇ ಟಿಪ್ಪುವಿನ ಮಂತ್ರಿಮಂಡಲದಲ್ಲಿ ಉನ್ನತ ಸ್ಥಾನವನ್ನು ಪಡೆದರಲ್ಲ, ಹೇಗೆ? 1791ರಲ್ಲಿ ರಘುನಾಥ ರಾವ್ ನೇತೃತ್ವದ ಮರಾಠಾ ದಾಳಿಕೋರರು ಶೃಂಗೇರಿಯ ಶಾರದಾ ಮಂದಿರಕ್ಕೆ ಹಾನಿ ಮಾಡಿ, ಸ್ವರ್ಣ ಪಲ್ಲಕ್ಕಿಯನ್ನು ಹೊತ್ತೊಯ್ದಾಗ ಮತ್ತು ಶಾರದಾ ಮೂರ್ತಿಯನ್ನು ಗರ್ಭ ಗುಡಿಯಿಂದೆತ್ತಿ ಹೊಸಕ್ಕೆಸೆದಾಗ, ಅದನ್ನು ಮರುಸ್ಥಾಪಿಸಿದ್ದು ಟಿಪ್ಪು. ಮರಾಠರ ದಾಳಿಯ ಸಂದರ್ಭದಲ್ಲಿ ಮಂದಿರದಿಂದ ತಪ್ಪಿಸಿಕೊಂಡು ಕಾರ್ಕಳದಲ್ಲಿ ಆಶ್ರಯ ಪಡೆದಿದ್ದ ಶಂಕರಾಚಾರ್ಯರನ್ನು ಮರಳಿ ಕರೆತಂದದ್ದು ಟಿಪ್ಪು. ಭವಿಷ್ಯದ ಸಂಭಾವ್ಯ ದಾಳಿಯಿಂದ ಮಂದಿರವನ್ನು ರಕ್ಷಿಸುವುದಕ್ಕಾಗಿ ಸೇನೆಯ ಒಂದು ತುಕಡಿಯನ್ನು ಕಾವಲಿಗೆ ನೇಮಿಸಿದ್ದೂ ಟಿಪ್ಪುವೇ. ನಂಜನಗೂಡು ತಾಲೂಕಿನ ಶ್ರೀಲಕ್ಷ್ಮೀಕಾಂತ್ ಮಂದಿರ ಮತ್ತು ಶ್ರೀ ಕಣ್ವೇಶ್ವರ ಮಂದಿರ, ಮೇಲುಕೋಟೆಯ ಶ್ರೀ ನಾರಾಯಣ ಸ್ವಾಮಿ ಮಂದಿರ, ಶ್ರೀರಂಗಪಟ್ಟಣದ ಶ್ರೀ ರಂಗನಾಥ ಮಂದಿರಕ್ಕೂ ಆತ ಸಂದರ್ಭಾನುಸಾರ ನೆರವನ್ನು ನೀಡಿದ್ದಾನೆ. ಕೇರಳದ ಕಲ್ಲಿಕೋಟೆಯ ವೆಂಕಟೇಶ್ವರ ಮಂದಿರಕ್ಕೆ 195 ಹೆಕ್ಟೇರ್ ಜಮೀನು ಕೊಟ್ಟಿದ್ದು ಟಿಪ್ಪುವೇ. ಪೊನ್ನಾಣಿಯ ಗುರುವಾಯೂರ್ ಮಂದಿರಕ್ಕೆ 135 ಹೆಕ್ಟೇರ್ ಜಮೀನು ಮಂಜೂರು ಮಾಡಿರುವುದೂ ಆತನೇ. ಒಂದು ವೇಳೆ ಆತ ದೇಗುಲ ಭಂಜಕನೇ ಆಗಿರುತ್ತಿದ್ದರೆ ಶ್ರೀರಂಗಪಟ್ಟಣದಲ್ಲಿ ಶ್ರೀರಂಗನಾಥ ದೇಗುಲ ಇರುತ್ತಿತ್ತೇ? ಆತನ ಅರಮನೆಯ ಕೂಗಳತೆಯ ದೂರದಲ್ಲಿರುವ ನರಸಿಂಹ ಮತ್ತು ಗಂಗಾಧರ ಮಂದಿರಗಳು ಜೀವಂತ ಇರುವುದಕ್ಕೆ ಸಾಧ್ಯವಿತ್ತೇ?
      ಅಂದಹಾಗೆ, ಟಿಪ್ಪು ಸುಲ್ತಾನ್ ರಾಜ ಮಾತ್ರ ಅಲ್ಲ, ಮನುಷ್ಯ ಕೂಡ. ಆದ್ದರಿಂದ ಓರ್ವ ಮನುಷ್ಯನಲ್ಲಿರಬಹುದಾದ ಸಹಜ ದೌರ್ಬಲ್ಯಗಳಿಂದ ಹೊರತುಪಡಿಸಿ ಆತನನ್ನು ನೋಡಬೇಕಾದ ಯಾವ ಅಗತ್ಯವೂ ಇಲ್ಲ. ರಾಜನೆಂಬ ನೆಲೆಯಲ್ಲಿ ಆತ ಹಿಂದೂಗಳ ವಿರುದ್ಧವೂ ಕ್ರಮ ಕೈಗೊಂಡಿರಬಹುದು. ಕ್ರೈಸ್ತರ ವಿರುದ್ಧವೂ ಕ್ರಮ ಜರುಗಿಸಿರಬಹುದು. ಮುಸ್ಲಿಮರ ಮೊಹರಂ ಮೆರವಣಿಗೆ ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನೂ ಟಿಪ್ಪು ನಿಷೇಧಿಸಿದ್ದ. ಹಾಗಂತ ಆತನನ್ನು ಮುಸ್ಲಿಮ್ ವಿರೋಧಿ ಎಂದು ಕರೆಯಬಹುದೇ? ಆಡಳಿತದ ಭಾಗವಾಗಿ ಆತ ಕೈಗೊಂಡಿರಬಹುದಾದ ಕ್ರಮಗಳನ್ನು ಹಿಂದೂ-ಮುಸ್ಲಿಮ್-ಕ್ರೈಸ್ತ ಎಂದು ವಿಭಜಿಸಿ ವಿಶ್ಲೇಷಿಸುವುದು ಎಷ್ಟರ ಮಟ್ಟಿಗೆ ಸಮರ್ಥನೀಯ? ಅಷ್ಟಕ್ಕೂ, ಈ ಬಗೆಯ ಸೀಳು ವಿಶ್ಲೇಷಣೆಗಳು ಕೇವಲ ಟಿಪ್ಪುವಿಗೆ ಯಾಕೆ ಸೀಮಿತವಾಗಬೇಕು? ಶಿವಾಜಿ ಮತ್ತು ಒಡೆಯರ್‍ಗಳ ಸಹಿತ ಎಲ್ಲ ರಾಜರುಗಳನ್ನೂ ಈ ಬಗೆಯ ವಿಶ್ಲೇಷಣೆಗೆ ಒಳಪಡಿಸಬಹುದಲ್ಲವೇ? ಅದರ ಆಧಾರದಲ್ಲಿ ಅವರನ್ನು ಮತಾಂಧರು, ಮುಸ್ಲಿಮ್, ಹಿಂದೂ, ಕ್ರೈಸ್ತ ವಿರೋಧಿಗಳೆಂದು ಪಟ್ಟ ಕಟ್ಟಬಹುದಲ್ಲವೇ? ನಿಜವಾಗಿ, ಟಿಪ್ಪುವನ್ನು ಮತಾಂಧನೆಂದು ಬಿಂಬಿಸ ಬಯಸುವವರಿಗೆ ಆತನ ಒಂದೇ ಒಂದು ಉತ್ತಮ ಅಂಶವೂ ಕಾಣಿಸುತ್ತಿಲ್ಲ. ಕನ್ನಂಬಾಡಿ ಅಣೆಕಟ್ಟಿಗೆ ನೀಲನಕ್ಷೆಯನ್ನು ರೂಪಿಸಿದ್ದು, ನಾಡಿಗೆ ರೇಷ್ಮೆ ಬೆಳೆಯನ್ನು ಪರಿಚಯಿಸಿ ತಳ ಸಮುದಾಯದ ಮಂದಿಗೆ ಉದ್ಯೋಗ ಗಿಟ್ಟುವಂತೆ ಮಾಡಿದ್ದು, ಬೆಂಗಳೂರಿನಲ್ಲಿ ಲಾಲ್‍ಬಾಗ್ ಸ್ಥಾಪಿಸಿದ್ದು, ಜಮೀನ್ದಾರಿ ಪದ್ಧತಿಯ ನಿರ್ನಾಮಕ್ಕೆ ಕ್ರಮ ಕೈಗೊಂಡಿದ್ದು, ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಕೃಷಿ ನೀತಿಯನ್ನು ಜಾರಿಗೆ ತಂದು ದಲಿತರನ್ನು ಸಬಲರಾಗಿಸಿದ್ದು, ನೀರಾವರಿಗಾಗಿ ಅನೇಕ ಕೆರೆ-ಕಟ್ಟೆಗಳನ್ನು ನಿರ್ಮಿಸಿದ್ದು, ಸಂಪೂರ್ಣ ಪಾನನಿಷೇಧವನ್ನು ಜಾರಿಗೆ ತಂದಿದ್ದು.. ಇವು ಯಾವುದನ್ನೂ ಅವರು ತಪ್ಪಿಯೂ ಉಲ್ಲೇಖಿಸುತ್ತಿಲ್ಲ. ಭಾರತೀಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿ ದಲಿತರಿಗೆ ಕೃಷಿ ಭೂಮಿಯ ಒಡೆತನ ದಕ್ಕಿಸಿ ಕೊಟ್ಟದ್ದು ಟಿಪ್ಪು. ಇವತ್ತಿಗೂ ಉನಾ ಚಳವಳಿ, ಚಲೋ ಉಡುಪಿ ಚಳವಳಿಯ ಬೇಡಿಕೆಗಳಲ್ಲಿ ಇದೂ ಒಂದು. ದಲಿತ ಮಹಿಳೆಯರಿಗೆ ಸೊಂಟದಿಂದ ಮೇಲೆ ಉಡುಪು ಧರಿಸದಂತೆ ಕೊಡಗಿನಲ್ಲಿ ಮೇಲ್ಜಾತಿಯ ಮಂದಿ ವಿಧಿಸಿದ್ದ ನಿಷೇಧವನ್ನು ರದ್ದುಗೊಳಿಸಿದ್ದು ಟಿಪ್ಪು. ಅಂದಿನ ದಮನಿತ ಸಮುದಾಯದ ಮಟ್ಟಿಗೆ ಅದು ಅತಿದೊಡ್ಡ ವಿಮೋಚನೆಯಾಗಿತ್ತು. ಮಾನ ಮುಚ್ಚುವುದು ಮನುಷ್ಯನ ಪ್ರಕೃತಿ ಸಹಜ ಬಯಕೆ. ಕೊಡಗಿನಲ್ಲಿ ಆ ಮೂಲ ಸ್ವಾತಂತ್ರ್ಯವನ್ನೇ ದಲಿತರ ಪಾಲಿಗೆ ನಿಷೇಧಿಸಲಾಗಿತ್ತು. ಟಿಪ್ಪುವಿನ ಮೇಲೆ ಮತಾಂತರದ ಆರೋಪ ಹೊರಿಸುವವರು ಆ ಮತಾಂತರಕ್ಕೆ ಸಾಮಾನ್ಯವಾಗಿ ಕೊಡಗನ್ನು ಪುರಾವೆಯಾಗಿ ತೋರಿಸುವುದಿದೆ. ಆದರೆ, ಅಲ್ಲಿ ಆಚರಣೆಯಲ್ಲಿದ್ದ ಕಟು ಜಾತಿ ವ್ಯವಸ್ಥೆ ಮತ್ತು ತಳ ಸಮುದಾಯದ ಮೇಲಿನ ಶೋಷಣೆಯನ್ನು ಅವರು ಉಲ್ಲೇಖಿಸುವುದೇ ಇಲ್ಲ. ಮಾತ್ರವಲ್ಲ, ಈ ಶೋಷಣೆಗಳಿಂದ ವಿಮೋಚನೆಗೊಳಿಸಿದ ಟಿಪ್ಪುವಿನ ಮೇಲೆ ಆ ಮಂದಿ ಆಕರ್ಷಿತರಾಗಿರಬಹುದೆಂಬ ಸಾಧ್ಯತೆಯ ಕಡೆಗೂ ಅವರು ಗಮನ ಹರಿಸುವುದಿಲ್ಲ. 1782ರ ಎರಡನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ದಕ್ಷಿಣ ಕನ್ನಡದ ಮಂಗಳೂರಿನ ಕ್ರೈಸ್ತರು ಗುಪ್ತವಾಗಿ ಬ್ರಿಟಿಷರಿಗೆ ನೆರವಾಗಿದ್ದರು, ಕರ್ನಲ್ ಮ್ಯಾಥ್ಯೂಸ್ ಮತ್ತು ಕ್ಯಾಂಬೆಲ್‍ಗೆ ಸಹಕರಿಸಿದ್ದರು ಎಂಬ ಶಂಕೆಯಲ್ಲಿ ಕ್ರೈಸ್ತರ ಮೇಲೆ ಆತ ಶಿಸ್ತಿನ ಕ್ರಮ ಕೈಗೊಂಡದ್ದೂ ಇದೆ. ಒಂದು ರೀತಿಯಲ್ಲಿ, ಓರ್ವ ರಾಜನಾಗಿ ಟಿಪ್ಪು ಆ ಕಾಲದಲ್ಲಿ ಏನನ್ನು ಮಾಡಬಹುದೋ ಅದನ್ನು ಮಾಡಿದ್ದಾನೆ. ಅದರಲ್ಲಿ ಸಾಮ್ರಾಜ್ಯ ವಿಸ್ತರಣೆಯ ಉದ್ದೇಶವೂ ಇರಬಹುದು. ಅಧಿಕಾರ ಉಳಿಸುವ ಗುರಿಯೂ ಇರಬಹುದು. ಒಂದು ವೇಳೆ ಮತಾಂತರವೇ ಆತನ ನಿಜ ಉದ್ದೇಶ ಆಗಿರುತ್ತಿದ್ದರೆ, ಆತನ ರಾಜಧಾನಿ ಶ್ರೀರಂಗಪಟ್ಟಣ ಮತ್ತು ಮೈಸೂರುಗಳಲ್ಲಿ ಇವತ್ತು ಮುಸ್ಲಿಮರೇ ತುಂಬಿರಬೇಕಿತ್ತಲ್ಲವೇ? ಇಲ್ಲೆಲ್ಲ ಈಗ ಇರುವ ದೇವಸ್ಥಾನಗಳಿಂದ ಅದಾನ್‍ನ ಕರೆಯೇ ಮೊಳಗುತ್ತಿರಬೇಕಿತ್ತಲ್ಲವೇ?
      ದುರಂತ ಏನೆಂದರೆ, ನಿಜ ಟಿಪ್ಪುವನ್ನು ಓದುವ ಮತ್ತು ಅದನ್ನು ಹೇಳುವ ಸಹನೆ ಇವತ್ತು ಯಾರಲ್ಲೂ ಕಾಣಿಸುತ್ತಿಲ್ಲ. ಟಿಪ್ಪು ಬೆಂಬಲಿಗರಲ್ಲೂ ವಿರೋಧಿಗಳಲ್ಲೂ ಅನಗತ್ಯ ವೈಭವೀಕರಣದ ಮಾತುಗಳಷ್ಟೇ ಕೇಳಿಬರುತ್ತಿವೆ. ನಿಜವಾದ ಟಿಪ್ಪು ಖಂಡಿತ ಇದರಾಚೆಗೆ ಇದ್ದಾನೆ. ಆ ಟಿಪ್ಪುವನ್ನು ಬಣ್ಣದ ಕನ್ನಡಕವನ್ನು ಬಳಸೆದೆಯೇ ಅಧ್ಯಯನ ನಡೆಸುವ ಅಗತ್ಯ ಇದೆ. ಟಿಪ್ಪು ನಿರ್ದಿಷ್ಟ ಧರ್ಮಕ್ಕೆ ಸೇರಿದ ರಾಜನಲ್ಲ. ಆತ ಒಂದು ಸಾಮ್ರಾಜ್ಯದ ಎಲ್ಲರ ರಾಜ. ಆತನ ಸರಿ ಮತ್ತು ತಪ್ಪುಗಳನ್ನು ಓರ್ವ ರಾಜನೆಂಬ ನೆಲೆಯಲ್ಲಿ ಸಹಜವಾಗಿ ಸ್ವೀಕರಿಸುತ್ತಲೇ ಜಯಂತಿ ಆಚರಣೆಯ ಔಚಿತ್ಯ ಚರ್ಚೆಗೊಳಗಾಗಬೇಕಾಗಿದೆ. ಜಯಂತಿ ಆಚರಣೆಯಿಂದ ಮುಸ್ಲಿಮ್ ಸಮುದಾಯಕ್ಕೆ ಆಗುವ ಪ್ರಯೋಜನಗಳೇನು ಎಂಬ ಅವಲೋಕನವೂ ನಡೆಯಬೇಕಾಗಿದೆ. ಇದರೊಳಗಿನ ರಾಜಕೀಯವನ್ನೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಟಿಪ್ಪು ಒಂದು ದಿನದ ‘ಮಹಾನ್' ಆಗುವುದು ಅಥವಾ ಮತಾಂಧ ಆಗುವುದು ಜನರ ಅಗತ್ಯವೋ ರಾಜಕೀಯದ ಅಗತ್ಯವೋ ಎಂಬುದನ್ನು ಜನರು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. 

No comments:

Post a Comment