Thursday, 25 June 2015

  ಮಹಿಳಾ ಸ್ವಾತಂತ್ರ್ಯದ ಮಿತಿಯನ್ನು ತೆರೆದಿಟ್ಟ ಹೈ ಹೀಲ್ಡ್ ಚಪ್ಪಲಿ

     ಮಹಿಳಾ ಹಕ್ಕು, ಸಮಾನತೆ, ಸ್ವಾತಂತ್ರ್ಯ..ದ ಬಗ್ಗೆ ಧಾರಾಳ ಭಾಷಣಗಳನ್ನು ಮಾಡಿದ ಮತ್ತು ಮಾಡುತ್ತಿರುವ ರಾಷ್ಟ್ರಗಳಲ್ಲಿ ಫ್ರಾನ್ಸ್ ಕೂಡ ಒಂದು. ಮುಸ್ಲಿಮ್ ಮಹಿಳೆಯರು ಧರಿಸುವ ಬುರ್ಖಾವನ್ನು ಅದು ಸ್ವಾತಂತ್ರ್ಯ ವಿರೋಧಿಯಂತೆ ಕಂಡದ್ದಿದೆ. ಅವರು ಧರಿಸುವ ಕಣ್ಣಿನ ಪರದೆಯನ್ನು (Eye scarf) ಅದು ಕಾನೂನು ಬಾಹಿರವೆಂದು ಸಾರಿದೆ. ಮಹಿಳೆಯರಿಗೆ ಪುರುಷರಷ್ಟೇ ಸ್ವಾತಂತ್ರ್ಯವಿದೆ ಮತ್ತು ಆ ಸ್ವಾತಂತ್ರ್ಯವನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ ಎಂಬಂತಹ ಹೇಳಿಕೆಗಳನ್ನು ಕೊಡಲು ಸಿಗುವ ಅವಕಾಶದಿಂದ ಫ್ರಾನ್ಸ್ ತಪ್ಪಿಸಿಕೊಂಡದ್ದು ತೀರಾ ಕಡಿಮೆ. ಇಂತಹ ಫ್ರಾನ್ಸ್ ನಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಚಿತ್ರೋತ್ಸವ (ಕ್ಯಾನೆ ಫಿಲ್ಮ್ ಫೆಸ್ಟಿವಲ್) ನಡೆಯಿತು. ವಿಶೇಷ ಏನೆಂದರೆ, ಈ ಚಿತ್ರೋತ್ಸವ ಸುದ್ದಿಗೀಡಾದದ್ದೇ ಮಹಿಳಾ ಸ್ವಾತಂತ್ರ್ಯದ ದಮನದ ಕಾರಣಕ್ಕಾಗಿ. ಅಲ್ಲಿ ಪ್ರದರ್ಶಿತವಾದ ಸಿನಿಮಾಗಳಿಗಿಂತ ಅಲ್ಲಿನ ಮಹಿಳಾ ವಿರೋಧಿಯಾದ ನೀತಿಗಳೇ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗೀಡಾದುವು. ಈ ಚಿತ್ರೋತ್ಸವಕ್ಕೆ ಹೈಹೀಲ್ಡ್ ಚಪ್ಪಲಿ ಧರಿಸದೇ ಆಗಮಿಸಿದ್ದಕ್ಕಾಗಿ ಮಹಿಳಾ ಅತಿಥಿಗೆ (ಸಿನಿಮಾ ನಟಿ) ಅಧಿಕಾರಿಗಳು ಪ್ರವೇಶ ನಿರಾಕರಿಸಿದರು. ಫ್ಲಾಟ್ ಚಪ್ಪಲಿ ಧರಿಸಿದ್ದ ಆ ಅತಿಥಿಯನ್ನು ಪ್ರವೇಶ ದ್ವಾರದಲ್ಲೇ ತಡೆಹಿಡಿಯಲಾಯಿತು. ಈ ಪ್ರಕರಣ ಬಹಿರಂಗಕ್ಕೆ ಬಂದದ್ದೇ ತಡ, ಮಾಧ್ಯಮಗಳಲ್ಲಿ ತೀವ್ರ ಪ್ರತಿಭಟನೆಗಳು ವ್ಯಕ್ತವಾದುವು. ಸೋಶಿಯಲ್ ವಿೂಡಿಯಾಗಳಂತೂ ಸರಣಿ ಟ್ವೀಟ್‍ಗಳ ಮೂಲಕ ಫ್ರಾನ್ಸ್ ನ ಮಹಿಳಾ ಸ್ವಾತಂತ್ರ್ಯದ ಬದ್ಧತೆಯನ್ನೇ ಪ್ರಶ್ನಿಸಿದುವು. ಚಿತ್ರೋತ್ಸವದಲ್ಲಿ ಭಾಗವಹಿಸಬೇಕಾಗಿದ್ದ ಎಮಿಲೆ ಬ್ಲಂಟ್ ಎಂಬವರು ಈ ಘಟನೆಗೆ ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ‘ಮಹಿಳೆಯರು ಹೈ ಹೀಲ್ಡ್ ಧರಿಸುವುದು ಸೂಕ್ತವಲ್ಲ, ಅವರು ಫ್ಲಾಟ್ ಚಪ್ಪಲಿಯನ್ನೇ ಧರಿಸಬೇಕು..’ ಎಂದು ಟ್ವೀಟ್ ಮಾಡಿದರು.
 ನಿಜವಾಗಿ, ಸ್ವಾತಂತ್ರ್ಯ ಎಂಬ ಪದವನ್ನು ಸಿನಿಮಾ ಕ್ಷೇತ್ರ ವ್ಯಾಖ್ಯಾನಿಸಿದಷ್ಟು ಬಹುಶಃ ಇನ್ನಾವ ಕ್ಷೇತ್ರವೂ ವ್ಯಾಖ್ಯಾನಿಸಿಲ್ಲ. ತಾಯಿಯಾಗಿ, ಮಡದಿಯಾಗಿ, ತಂಗಿಯಾಗಿ, ಮಗಳು, ಸೊಸೆ, ಅಜ್ಜಿಯಾಗಿ.. ಹೀಗೆ ಮಹಿಳೆಯರ ಪಾತ್ರವನ್ನು ಹೃದಯಂಗಮವಾಗಿ ಕಟ್ಟಿ ಕೊಟ್ಟು ಮಹಿಳೆಯ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಈ ಕ್ಷೇತ್ರವು ಧಾರಾಳ ಕೊಡುಗೆಗಳನ್ನು ನೀಡಿದೆ. ಅದು ಮಹಿಳೆಗೆ ಧ್ವನಿ ಕೊಟ್ಟಿದೆ. ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದೆ. ಪ್ರತಿಭಟನಾ ಮನಸ್ಥಿತಿಯನ್ನು ಬೆಳೆಸಿದೆ. ಹಕ್ಕು ವಂಚಿತ ಮಹಿಳೆಯನ್ನು ಎತ್ತಿಕೊಂಡು ಸಮಾಜದ ಎದೆಗೆ ನಯವಾಗಿ ಮೀಟಿದೆ ಮತ್ತು ಮೀಟುತ್ತಿದೆ. ಅದರ ಜೊತೆಜೊತೆಗೇ ‘ಮೈ ಚಾಯ್ಸ್’ನಂತಹ ಅತಿರೇಕದ ಸ್ವಾತಂತ್ರ್ಯವನ್ನೂ ಹೇಳಿಕೊಡುತ್ತಿದೆ. ನೈತಿಕ-ಅನೈತಿಕಗಳ ಬಗ್ಗೆ ತೀರಾ ಉಡಾಫೆಯಿಂದ ಮಾತಾಡಬಹುದಾದ ವಾತಾವರಣಕ್ಕೂ ಅದು ಬೀಜವನ್ನು ಬಿತ್ತಿದೆ. ಹೆಣ್ಣು-ಗಂಡಿನ ನಡುವಿನ ಸಹಜ ಆಕರ್ಷಣೆಯನ್ನು ವೈಭವೀಕರಣಗೊಳಿಸಿ ಹರೆಯದ ಮನಸುಗಳನ್ನು ಚಂಚಲಗೊಳಿಸುವಲ್ಲೂ ಅದು ಯಶಸ್ವಿಯಾಗಿದೆ. ಹಾಗಂತ, ಸಿನಿಮಾ ಕ್ಷೇತ್ರವೆಂಬುದು ಸರಕಾರ ಅಲ್ಲ, ನಿಜ. ಅದಕ್ಕೆ ಕಾನೂನನ್ನು ನಿರ್ಮಿಸುವ ಅಥವಾ ಹೇರುವ ಸ್ವಾತಂತ್ರ್ಯವಿಲ್ಲ. ಅದೊಂದು ಆಲೋಚನೆಗಳ ಗೂಡು. ಆ ಆಲೋಚನೆಗಳಲ್ಲಿ ವಿಕ್ಷಿಪ್ತವೂ ಇರಬಹುದು, ಅಪ್ರಾಯೋಗಿಕವೂ ಇರಬಹುದು. ಒಂದು ಸಿನಿಮಾ ತಯಾರಾದ ಮೇಲೆ ಅದು ವೀಕ್ಷಣೆಗೆ ಯೋಗ್ಯವೋ ಅಲ್ಲವೋ ಎಂಬುದನ್ನು ತೀರ್ಮಾನಿಸುವುದು ಸಿನಿಮಾ ನಿರ್ದೇಶಕರೋ ನಿರ್ಮಾಪಕರೋ ಅಲ್ಲ, ಸರಕಾರ. ಈ ಹಿನ್ನೆಲೆಯಲ್ಲಿ ನೋಡಿದರೆ ಸಿನಿಮಾ ಕ್ಷೇತ್ರಕ್ಕೆ ಮಿತಿಗಳಿವೆ. ಕಾನೂನು ನಿರ್ಮಿಸುವ ಸ್ವಾತಂತ್ರ್ಯವಿಲ್ಲದ ಮತ್ತು ಜನರ ಮುಂದೆ ಬರೇ ಹಲವು ಸಾಧ್ಯತೆಗಳನ್ನು ತೆರೆದಿಡಬಹುದಾದ ಒಂದು ಕ್ಷೇತ್ರವಾಗಿಯಷ್ಟೇ ನಾವು ಈ ಕ್ಷೇತ್ರವನ್ನು ಎತ್ತಿಕೊಳ್ಳಬಹುದು. ಆದರೆ ವಾಸ್ತವ ಇಷ್ಟೇ ಅಲ್ಲ. ಸರಕಾರದ ನಿಲುವನ್ನು ಬದಲಿಸುವಷ್ಟು, ಹೊಸ ಹೊಸ ಕಾನೂನುಗಳನ್ನು ರೂಪಿಸುವುದಕ್ಕೆ ಪ್ರೇರಣೆ ಆಗುವಷ್ಟು ಮತ್ತು ಸರಕಾರದ ವಿರುದ್ಧವೇ ಜನರನ್ನು ಪ್ರಚೋದಿಸುವಷ್ಟು ಈ ಕ್ಷೇತ್ರ ಇವತ್ತು ವಿಸ್ತಾರವಾಗಿ ಬೆಳೆದು ನಿಂತಿದೆ. ಆ ಕ್ಷೇತ್ರಕ್ಕೆ ತನ್ನ ಆಲೋಚನೆಯನ್ನು ಬಲವಾಗಿ ಮತ್ತು ಸಮರ್ಥವಾಗಿ ಪ್ರತಿಪಾದಿಸುವ ಕಲೆ ಗೊತ್ತಿದೆ. ಲೆಸ್ಲಿ ವುಡ್‍ವಿನ್‍ರ ‘ಇಂಡಿಯಾಸ್ ಡಾಟರ್’ ಅನ್ನು ಸರಕಾರ ನಿಷೇಧಿಸಿದರೂ ಅದರ ವಿರುದ್ಧ ಸಾರ್ವಜನಿಕ ಆಕ್ರೋಶ ಉಂಟಾಗಲು ಸಿನಿಮಾ ಕ್ಷೇತ್ರವು ಜನರ ಮೇಲೆ ಬೀರಿರುವ ಈ ದಟ್ಟ ಪ್ರಭಾವವೇ ಕಾರಣ. ಸರಕಾರವನ್ನು ವಿೂರಿದ ಜನಪ್ರಿಯತೆಯೊಂದು ಈ ಕ್ಷೇತ್ರಕ್ಕೆ ಇವತ್ತು ದಕ್ಕಿಬಿಟ್ಟಿದೆ. ಆದ್ದರಿಂದಲೇ ಈ ಕ್ಷೇತ್ರ ಪ್ರತಿಪಾದಿಸುವ ಹಕ್ಕು, ಸ್ವಾತಂತ್ರ್ಯಗಳು ಜನರ ಹಕ್ಕು, ಸ್ವಾತಂತ್ರ್ಯಗಳೂ ಆಗುತ್ತಿವೆ. ಆ ಕ್ಷೇತ್ರದಲ್ಲಿ ಸಂಭವಿಸುವ ಪ್ರತಿಯೊಂದನ್ನೂ ಜನರು ತಮ್ಮವುಗಳಾಗಿ ಸ್ವೀಕರಿಸಿಕೊಳ್ಳುವುದಕ್ಕೆ ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಕ್ಯಾನೇ ಚಿತ್ರೋತ್ಸವದ ಹೈ ಹೀಲ್ಡ್ ಚಪ್ಪಲಿ ಮುಖ್ಯವಾಗುತ್ತದೆ. ಅದರಲ್ಲೂ ಈ ಘಟನೆ ನಡೆದಿರುವುದು ಮಹಿಳಾ ಹಕ್ಕುಗಳ ಬಗ್ಗೆ ಅದ್ಭುತವಾಗಿ ಮಾತಾಡುವ ಫ್ರಾನ್ಸ್ ನಲ್ಲಿ ಎಂಬುದು ಅದರ ಪ್ರಾಮುಖ್ಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಯಾಕೆ ಚಿತ್ರೋತ್ಸವಕ್ಕೆ ಆಗಮಿಸಿದ ಪುರುಷರನ್ನು ಅಧಿಕಾರಿಗಳು ತಡೆಹಿಡಿಯಲಿಲ್ಲ? ಅವರಿಗೇಕೆ ಇಂಥದ್ದೇ ಶೂ ಧರಿಸಬೇಕೆಂದು ಆದೇಶ ಹೊರಡಿಸಲಿಲ್ಲ? ಪುರುಷನ ಆಯ್ಕೆ ಮುಕ್ತವಾಗಿರುವಾಗ ಮಹಿಳೆಯರ ಆಯ್ಕೆಯೂ ಮುಕ್ತವಾಗಿರಬೇಕಾದುದು ಸಮಾನ ಸ್ವಾತಂತ್ರ್ಯದ ಬೇಡಿಕೆಯಲ್ಲವೇ? ಇಂಥದ್ದೇ ಚಪ್ಪಲಿ, ಇಂಥದ್ದೇ ಡ್ರೆಸ್ಸು, ಇಂಥದ್ದೇ ಆಭರಣ, ಹೀಗೆಯೇ ಹೆಜ್ಜೆ ಇಡಬೇಕು.. ಎಂದೆಲ್ಲಾ ಮಹಿಳೆಯೊಂದಿಗೆ ಮಾತ್ರ ಕೇಳಿಕೊಳ್ಳುವುದೇಕೆ? ಫ್ಲಾಟ್ ಚಪ್ಪಲಿ ಧರಿಸುವುದರಿಂದ ತೊಂದರೆಯಾಗುವುದು ಯಾರಿಗೆ? ಹೈ ಹೀಲ್ಡ್ ಯಾರ ಬಯಕೆ? ಆರೋಗ್ಯದ ದೃಷ್ಟಿಯಿಂದ ಹೈಹೀಲ್ಡ್ ಚಪ್ಪಲಿ ಅಸೂಕ್ತ ಎಂದು ಹೇಳಲಾಗುತ್ತದೆ. ಅಷ್ಟಕ್ಕೂ, ಸೂಕ್ತವೋ ಅಸೂಕ್ತವೋ ಅದನ್ನು ನಿರ್ಧರಿಸಬೇಕಾದದ್ದು ಯಾರು, ಧರಿಸುವವರೋ ಸಂಘಟಕರೋ? ಪುರುಷರಿಗಿಲ್ಲದ ಈ ನಿಯಮಗಳನ್ನೆಲ್ಲ ಮಹಿಳೆಯರಿಗೆ ಅಳವಡಿಸುವುದರ ಉದ್ದೇಶವೇನು? ಒಂದು ಕಡೆ, ಮಹಿಳಾ ಸ್ವಾತಂತ್ರ್ಯದ ಬಗ್ಗೆ ರಾಶಿ ರಾಶಿ ಸಿನಿಮಾಗಳನ್ನು ತಯಾರಿಸುವ ಸಿನಿಮಾ ಕ್ಷೇತ್ರ ಮತ್ತು ಇನ್ನೊಂದು ಕಡೆ, ಅದೇ ಮಹಿಳೆಗೆ ತಮ್ಮ ಆಯ್ಕೆಯ ಚಪ್ಪಲಿಯನ್ನು ಧರಿಸಲೂ ಬಿಡದ ಚಿತ್ರೋತ್ಸವ.. ಈ ದ್ವಂದ್ವಕ್ಕೆ ಏನೆನ್ನಬೇಕು? ಹೆಣ್ಣು ಹೀಗೆಯೇ ಹೆಜ್ಜೆ ಇಡಬೇಕು ಎಂದು ಆದೇಶಿಸುವುದು ಹಕ್ಕು ಹರಣವೋ ಸ್ವಾತಂತ್ರ್ಯವೋ?
    ನಿಜವಾಗಿ, ಹೆಣ್ಣನ್ನು ಅತ್ಯಾಚಾರಿಯೋರ್ವ ನೋಡುವ ರೀತಿಗಿಂತ ಇದು ತುಂಬಾ ಭಿನ್ನವಾದುದೇನೂ ಅಲ್ಲ. ಹೈಹೀಲ್ಡ್ ಚಪ್ಪಲಿಯ ಹೇರುವಿಕೆಯಲ್ಲೂ ಒಂದು ಬಗೆಯ ಅತ್ಯಾಚಾರದ ಮನಸ್ಥಿತಿಯಿದೆ. ಅಲ್ಲಿ ಪುರುಷ ಭಾವನೆಯನ್ನು ನವಿರಾಗಿ ತಣಿಸಿಕೊಳ್ಳುವ ತುಡಿತವಿದೆ. ಅತ್ಯಾಚಾರಿ ತುಸು ಒರಟಾಗಿ ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವಾಗ ನಾಗರಿಕ ವೇಷದಲ್ಲಿರುವ ಮತ್ತು ಮಹಿಳಾ ಸ್ವಾತಂತ್ರ್ಯದ ಪ್ರತಿಪಾದಕರ ಪಟ್ಟಿಯಲ್ಲಿರುವ ಮಂದಿ ಅದನ್ನೇ ತುಸು ಮೃದುವಾಗಿ ಈಡೇರಿಸಿಕೊಳ್ಳುತ್ತಿದ್ದಾರೆ. ಹೆಣ್ಣನ್ನು ನೋಡುವ ದೃಷ್ಟಿಕೋನ ಬಹುತೇಕ ಸಿನಿಮಾ ಕ್ಷೇತ್ರದ ಹೊರಗೂ ಒಳಗೂ ಒಂದೇ. ಆದರೆ ಒಂದರಲ್ಲಿ ಒರಟುತನವಿದೆ ಮತ್ತು ಇನ್ನೊಂದರಲ್ಲಿ ಮೃದುತನವಿದೆ ಎಂಬುದಷ್ಟೇ ವ್ಯತ್ಯಾಸ. ದುರಂತ ಏನೆಂದರೆ, ಹೊರಗಿನ ದೃಷ್ಟಿಕೋನವನ್ನು ಮಹಿಳಾ ದೌರ್ಜನ್ಯವಾಗಿ ಬಿಂಬಿಸುವವರೇ ಒಳಗೆ ಅದೇ ಮನಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಮಾತ್ರವಲ್ಲ, ಸ್ವಾತಂತ್ರ್ಯದ ಹೆಸರಲ್ಲಿ ಹೆಣ್ಣಿನ ಬಟ್ಟೆ, ಚಪ್ಪಲಿ, ದೈಹಿಕ ವಿನ್ಯಾಸ, ತೂಕ.. ಎಲ್ಲವನ್ನೂ ತಮ್ಮ ಇಚ್ಛೆಗೆ ಪೂರಕವಾಗಿ ನಿಯಂತ್ರಿಸುತ್ತಿದ್ದಾರೆ. ಜೊತೆಗೇ, ಇದುವೇ ಮಹಿಳಾ ಸ್ವಾತಂತ್ರ್ಯ ಎಂಬ ಹುಸಿ ವಾತಾವರಣವನ್ನೂ ನಿರ್ಮಿಸುತ್ತಿದ್ದಾರೆ. ಆದರೆ, ಆಂತರಿಕವಾಗಿ ಅವರು ಮಹಿಳಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಿಲ್ಲ. ಅವರಿಗೆ ಹೆಣ್ಣೆಂಬ ಗುಲಾಮಳು ಬೇಕು ಮತ್ತು ಪುರುಷರನ್ನು ತಣಿಸುವ ಭಂಗಿಯಲ್ಲಿ ಆಕೆ ಕಾಣಬೇಕು. ಕ್ಯಾನೇ ಚಿತ್ರೋತ್ಸವದ ಹೈಹೀಲ್ಡ್ ಪ್ರಕರಣದಲ್ಲಿ ಸ್ಪಷ್ಟವಾಗುವುದೂ ಇದುವೇ.

Thursday, 18 June 2015

ಪ್ರಧಾನಿಯವರೇ, ಈ ಭಾವಚಿತ್ರವನ್ನೊಮ್ಮೆ ನೆನಪಿಸಿಕೊಳ್ಳುವಿರಾ?

    ಲೆಫ್ಟಿನೆಂಟ್ ಸೌರಭ್ ಕಾಲಿಯಾರ ಬಗ್ಗೆ ಈ ದೇಶದಲ್ಲಿ ಅತ್ಯಂತ ಹೆಚ್ಚು ಮಾತಾಡಿದ್ದು ಬಿಜೆಪಿ. ಕಾಲಿಯಾರ ಸುತ್ತ ಭಾವನಾತ್ಮಕ ಸನ್ನಿವೇಶವೊಂದನ್ನು ಅದು ಹುಟ್ಟು ಹಾಕಿತ್ತು. ಕಾಂಗ್ರೆಸ್ ಸರಕಾರದ ಪುಕ್ಕಲು ನೀತಿಯಿಂದಾಗಿ ಭಾರತೀಯ ಯೋಧರು ಪಾಕಿಸ್ತಾನದ ಕೈಯಲ್ಲಿ ಜೀವ ಕಳಕೊಳ್ಳುತ್ತಿದ್ದಾರೆ- ಎಂಬ ರೀತಿಯಲ್ಲಿ ಅದು ಮಾತಾಡಿತ್ತು. 1999ರ ಕಾರ್ಗಿಲ್ ಸಂಘರ್ಷದ ವೇಳೆ ಪಾಕಿಸ್ತಾನ ಸೆರೆ ಹಿಡಿದ ಐವರು ಯೋಧರಲ್ಲಿ ಕಾಲಿಯಾ ಕೂಡ ಒಬ್ಬರು. ಘಟನೆಯ ಮೂರು ವಾರಗಳ ಬಳಿಕ ಕಾಲಿಯಾರ ಜರ್ಝರಿತ ಮೃತದೇಹವನ್ನು ಪಾಕಿಸ್ತಾನ ಭಾರತಕ್ಕೆ ಒಪ್ಪಿಸಿತ್ತು. ಕಾಲಿಯಾ ಸೆರೆ ಸಿಕ್ಕಿಲ್ಲ ಮತ್ತು ಅವರು ವಾತಾವರಣದ ವೈಪರೀತ್ಯದಿಂದಾಗಿ ಸಾವಿಗೀಡಾಗಿದ್ದಾರೆ ಎಂದು ಪಾಕಿಸ್ತಾನ ವಾದಿಸಿದರೂ ಭಾರತ ಅದನ್ನು ಒಪ್ಪಿಕೊಂಡಿರಲಿಲ್ಲ. ಮೃತದೇಹದ ಮೇಲಾದ ಗಾಯಗಳು ಅವರನ್ನು ಚಿತ್ರಹಿಂಸೆಗೊಳಪಡಿಸಿ ಹತ್ಯೆಗೈಯಲಾಗಿದೆಯೆಂಬುದನ್ನು ಸಾಬೀತು ಪಡಿಸುವುದಾಗಿ ಭಾರತ ವಾದಿಸಿತು. ಈ ಸಂದರ್ಭದಲ್ಲಿ ಬಿಜೆಪಿ (NDA) ಈ ದೇಶವನ್ನು ಆಳುತ್ತಿತ್ತು. ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿಗೆ ಈ ಬಗ್ಗೆ ನೋಟೀಸು ಕಳುಹಿಸಲಾಯಿತು. ವಿದೇಶಾಂಗ ಸಚಿವ ಜಸ್ವಂತ್ ಸಿಂಗ್‍ರು ಪಾಕ್ ವಿದೇಶಾಂಗ ಸಚಿವ ಸರ್ತಾಜ್ ಅಝೀಝ್‍ರೊಂದಿಗೆ ಮಾತಾಡಿದರು. ಆ ಬಳಿಕ ಮನಮೋಹನ್ ಸಿಂಗ್‍ರು ಭಾರತದ ಪ್ರಧಾನಿಯಾದರು. ಈ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕೆಂದು ಸೌರಭ್ ಕಾಲಿಯಾರ ಕುಟುಂಬವು ಒತ್ತಾಯಿಸತೊಡಗಿತು. ಕಾಲಿಯಾರ ತಂದೆ ಎನ್.ಕೆ. ಕಾಲಿಯಾ ಅವರು ಈ ಕುರಿತಂತೆ ಆನ್‍ಲೈನ್ ಸಹಿ ಸಂಗ್ರಹಕ್ಕಿಳಿದರು. 2013 ಅಕ್ಟೋಬರ್‍ನಲ್ಲಿ ರಕ್ಷಣಾ ಸಚಿವ ಆ್ಯಂಟನಿಯವರು ಎನ್.ಕೆ. ಕಾಲಿಯಾರಿಗೆ ಪತ್ರ ಬರೆದರು. ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ದೂರು ಸಲ್ಲಿಸುವುದಕ್ಕೆ ಭಾರತ-ಪಾಕ್‍ಗಳ ನಡುವಿನ ಶಿಮ್ಲಾ ಒಪ್ಪಂದ ಮತ್ತು ಇನ್ನಿತರ ತೊಂದರೆಗಳು ತೊಡಕಾಗಿರುವುದಾಗಿ ವಿವರಿಸಿದರು. ಕಾಲಿಯಾ ಅದನ್ನು ಒಪ್ಪಿಕೊಳ್ಳಲಿಲ್ಲ. ಈ ಸಂದರ್ಭದಲ್ಲಿ ಕಾಂಗ್ರೆಸನ್ನು ಬೆನ್ನೆಲುಬಿಲ್ಲದ ಮತ್ತು ಯೋಧರನ್ನು ಪಾಕ್‍ಗೆ ಆಹುತಿ ಕೊಡುವ ಪಕ್ಷವೆಂಬಂತೆ ಟೀಕಿಸಿದ್ದು ಬಿಜೆಪಿ. ಅದು ಕಾಲಿಯಾರ ಪರ ನಿಂತು ಕಾಂಗ್ರೆಸ್ ಸರಕಾರವನ್ನು ಬಲವಾಗಿ ಖಂಡಿಸಿತ್ತು. ಭಾರತದ ಯೋಧರ ಬಗ್ಗೆ ಮತ್ತು ಅವರ ಪಹರೆಯಿಂದಾಗಿ ನಾವು ನೆಮ್ಮದಿಯ ನಿದ್ದೆ ಮಾಡುತ್ತಿರುವ ಬಗ್ಗೆ ಅತ್ಯಂತ ಭಾವುಕ ಪದಗಳೊಂದಿಗೆ ಕಾಂಗ್ರೆಸನ್ನು ಯೋಧ ವಿರೋಧಿಯೆಂಬಂತೆ ಅದು ಬಿಂಬಿಸಿತ್ತು. ಭಾರತೀಯ ಯೋಧರ ಒಂದು ತಲೆಗೆ ಪ್ರತಿಯಾಗಿ 10 ಪಾಕ್ ತಲೆಗಳನ್ನು ಉರುಳಿಸುವ ಭರ್ಜರಿ ಹೇಳಿಕೆಗಳೂ ಬಿಜೆಪಿ ಬೆಂಬಲಿಗರಿಂದ ಕೇಳಿ ಬಂದುವು. ಆದರೆ, ಇದೀಗ ಮೋದಿ ಸರಕಾರವು ಕಾಲಿಯಾ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. ಸರಕಾರದ ಈ ನಿಲುವನ್ನು, ‘ಮೋದಿ ಗವರ್ನ್‍ಮೆಂಟ್ ಶಟ್ಸ್ ಡೋರ್ಸ್ ಆನ್ ಸೌರಭ್ ಕಾಲಿಯಾ..' (ಸೌರಭ್ ಕಾಲಿಯಾಗೆ ಬಾಗಿಲು ಮುಚ್ಚಿದ ಮೋದಿ ಸರಕಾರ) ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಕರೆದಿದೆ. ‘ಮೋದಿ ಗವರ್ನ್‍ಮೆಂಟ್ ಬೆಟ್ರಾಯ್ಸ್ ಕಾಲಿಯಾ' (ಮೋದಿ ಸರಕಾರದಿಂದ ಕಾಲಿಯಾಗೆ ವಿಶ್ವಾಸದ್ರೋಹ), ‘ಸೆಂಟರ್ ಟೇಕ್ಸ್ ಯೂ ಟರ್ನ್' (ಕೇಂದ್ರದಿಂದ ಯೂ ಟರ್ನ್).. ಎಂದೆಲ್ಲಾ ಮುಖ್ಯ ವಾಹಿನಿಯ ಪತ್ರಿಕೆಗಳು ಬರೆದಿವೆ. ಮೋದಿ ಸರಕಾರದ ನಿಲುವಿನ ಬಗ್ಗೆ ಮಾಧ್ಯಮಗಳು ಮತ್ತು ಎನ್.ಕೆ. ಕಾಲಿಯಾ ಅಚ್ಚರಿ ವ್ಯಕ್ತಪಡಿಸಿದ ಬಳಿಕ ಇದೀಗ ಸುಪ್ರೀಮ್ ಕೋರ್ಟ್‍ನ ಅಭಿಪ್ರಾಯ ಪಡೆದು ಮುಂದುವರಿಯುವುದಾಗಿ ಅದು ಜಾರಿಕೊಂಡಿದೆ. ನಿಜವಾಗಿ, ಮೋದಿ ಸರಕಾರದ ಹಲವಾರು ಯು ಟರ್ನ್‍ಗಳಲ್ಲಿ ಕಾಲಿಯಾ ಪ್ರಕರಣವೂ ಒಂದು. ವಿರೋಧ ಪಕ್ಷದಲ್ಲಿದ್ದಾಗ ಆಧಾರ್ ಕಾರ್ಡನ್ನು 'ಜೋಕ್' ಮಾಡಿದ್ದ ಮತ್ತು ಬಾಂಗ್ಲಾ ನುಸುಳುಕೋರರಿಗೂ ಆಧಾರ್ ಕಾರ್ಡ್ ಸಿಗುತ್ತಿವೆಯೆಂದು ಹೇಳಿದ್ದ ಬಿಜೆಪಿಯು, ಅಧಿಕಾರಕ್ಕೆ ಬಂದ ಬಳಿಕ ಅದೇ ಆಧಾರ್ ಕಾರ್ಡನ್ನು ಅಪ್ಪಿಕೊಂಡಿತು. ಗ್ಯಾಸ್ ಸಬ್ಸಿಡಿಯನ್ನು ಬ್ಯಾಂಕ್ ಅಕೌಂಟ್‍ಗೆ ವರ್ಗಾವಣೆ ಮಾಡುವ ಕಾಂಗ್ರೆಸ್ ಸರಕಾರದ ತೀರ್ಮಾನವನ್ನು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದ್ದು ಬಿಜೆಪಿಯೇ. ಆ ಧ್ವನಿ ಎಷ್ಟು ಜೋರಾಗಿತ್ತೆಂದರೆ ತನ್ನ ತೀರ್ಮಾನವನ್ನೇ ಕಾಂಗ್ರೆಸ್ ಹಿಂಪಡೆಯುವಷ್ಟು. ಇದೀಗ ಕಾಂಗ್ರೆಸ್‍ನ ಅದೇ ತೀರ್ಮಾನವನ್ನು ಅದೇ ರೀತಿಯಲ್ಲಿ ಬಿಜೆಪಿ ಜಾರಿಗೊಳಿಸಿದೆ. ಬಾಂಗ್ಲಾಕ್ಕೆ 10 ಸಾವಿರ ಎಕರೆಯಷ್ಟು ಭೂಮಿಯನ್ನು ಕೊಟ್ಟು ಗಡಿ ಒಪ್ಪಂದ ಮಾಡಿಕೊಳ್ಳುವ ಯೋಜನೆಯನ್ನು ಮೊದಲು ಪ್ರಸ್ತಾಪಿಸಿದ್ದು ಮನಮೋಹನ್ ಸಿಂಗ್ ಸರಕಾರ. ಬಿಜೆಪಿ ಇದನ್ನು ಬಲವಾಗಿ ಖಂಡಿಸಿತ್ತು. ಆದರೆ ಇದೀಗ ಖುದ್ದು ಮೋದಿಯವರೇ ಈ ಒಪ್ಪಂದಕ್ಕೆ ಬಾಂಗ್ಲಾದೊಂದಿಗೆ ಸಹಿ ಹಾಕಿದ್ದಾರೆ. ಕಪ್ಪು ಹಣ ವಾಪಸಾತಿಯ ವಿಷಯದಲ್ಲಿ ಮೋದಿಯವರು ಕಾಂಗ್ರೆಸನ್ನು ತೀವ್ರ ತರಾಟೆಗೆ ಎತ್ತಿಕೊಂಡಿದ್ದರು. ಅಧಿಕಾರಕ್ಕೆ ಬಂದ 100 ದಿನಗಳೊಳಗೆ ಕಪ್ಪು ಹಣವನ್ನು ವಾಪಸ್ ತರುವುದಾಗಿಯೂ ಪ್ರತಿ ಭಾರತೀಯ ಖಾತೆಗೂ 15 ಲಕ್ಷ ರೂಪಾಯಿ ಜಮೆಯಾಗಲಿದೆಯೆಂದೂ ಘೋಷಿಸಿದ್ದರು. ಆದರೆ ಅಧಿಕಾರಕ್ಕೆ ಬಂದು 365 ದಿನಗಳು ಕಳೆದ ಬಳಿಕವೂ ಕನಿಷ್ಠ ವಿದೇಶದಲ್ಲಿ ‘ಎಷ್ಟು ಕೋಟಿ ರೂಪಾಯಿ ಕಪ್ಪು ಹಣ ಇದೆ’ ಎಂಬುದನ್ನೇ ಪತ್ತೆ ಹಚ್ಚಲು ಅವರಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಸರಕಾರದ ಬಳಿಯಿದ್ದ ಕಪ್ಪು ಹಣ ಖಾತೆದಾರರ ಪಟ್ಟಿಗೆ ಹೊಸದಾಗಿ 10 ಹೆಸರನ್ನಾದರೂ ಸೇರಿಸಲೂ ಅವರು ಶಕ್ತವಾಗಿಲ್ಲ. ಒಂದು ರೀತಿಯಲ್ಲಿ, ಬಿಜೆಪಿಯು ಗಾಳಿಯಲ್ಲಿ ಹಾರಿಸಿದ್ದ ನಿರೀಕ್ಷೆಯ ಬಲೂನ್‍ಗಳೆಲ್ಲ ಒಂದೊಂದಾಗಿ ಠುಸ್ಸಾಗತೊಡಗಿವೆ. ಸೌರಭ್ ಕಾಲಿಯಾರ ತಂದೆ ಬಿಜೆಪಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿರುವುದೇ ಇದನ್ನು ಪುಷ್ಠೀಕರಿಸುತ್ತದೆ.
 ಯೋಧರನ್ನು ಎತ್ತಿಕೊಂಡು ಭಾವನಾತ್ಮಕ ಸನ್ನಿವೇಶವನ್ನು ಸೃಷ್ಟಿ ಮಾಡುವುದು ಸುಲಭ. ಪಾಕಿಸ್ತಾನವನ್ನೋ ಉಗ್ರರನ್ನೋ ತೋರಿಸಿ ಇಂಥದ್ದೊಂದು ವಾತಾವರಣವನ್ನು ಯಾವ ಸಂದರ್ಭದಲ್ಲೂ ನಿರ್ಮಾಣ ಮಾಡಬಹುದು. ಮ್ಯಾನ್ಮಾರ್‍ನ ಗಡಿ ದಾಟಿ ನಡೆಸಲಾದ ಕಾರ್ಯಾಚರಣೆಯ ಬಗ್ಗೆ ಸರಕಾರ ಈಗ ಇಂಥದ್ದೇ ಭಾಷೆಯಲ್ಲಿ ಮಾತಾಡುತ್ತಿದೆ. ಅದರ ದೂರಗಾಮಿ ಪರಿಣಾಮಗಳ ಬಗ್ಗೆ ಎಚ್ಚರಿಸುವವರ ಬಾಯಿಯನ್ನು ದೇಶಭಕ್ತ ಮಾತುಗಳೊಂದಿಗೆ ಮುಚ್ಚಿಸಲಾಗುತ್ತಿದೆ. ‘ತಾವು ಯೋಧರ ಪರ' ಎಂಬ ಹುಸಿ ಸಂದೇಶವನ್ನು ಹರಡುವ ಧಾವಂತದಲ್ಲಿದೆ ಸರಕಾರ. ಇದೇ ವೇಳೆ, ನಿವೃತ್ತ ಯೋಧರು ಸರಕಾರದ ಈ ಮುಖವನ್ನು ನಕಲಿ ಎಂದು ಸಾರುತ್ತಿದ್ದಾರೆ. ಅವರು ‘ಸಮಾನ ಶ್ರೇಣಿ, ಸಮಾನ ಪಿಂಚಣಿ' ಎಂಬ ಯೋಜನೆಯ ಜಾರಿಯನ್ನು ಆಗ್ರಹಿಸಿ ದೇಶದಾದ್ಯಂತ ಪ್ರತಿಭಟನೆಗಿಳಿದಿದ್ದಾರೆ. ಹಾಗಂತ, ಅವರು ದಿಢೀರ್ ಆಗಿ ಪ್ರತಿಭಟನೆ ಹಮ್ಮಿಕೊಂಡಿಲ್ಲ. ಸರಕಾರಕ್ಕೆ ಮುಂಚಿತವಾಗಿಯೇ ಈ ಬಗ್ಗೆ ತಿಳಿಸಿದ್ದಾರೆ. ಆದರೂ ಚುನಾವಣೆಯ ವೇಳೆ ಸರಕಾರ ನೀಡಿದ್ದ ಈ ಭರವಸೆಯನ್ನು ಈಡೇರಿಸುತ್ತಿಲ್ಲ. ಒಂದು ಕಡೆ, ಮಗನ ಭಾವಚಿತ್ರವನ್ನು ಹಿಡಿದು ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ಕಾಲಿಯಾ; ಇನ್ನೊಂದು ಕಡೆ, ಪಿಂಚಣಿಗೆ ಆಗ್ರಹಿಸಿ ಪ್ರತಿಭಟನೆಗೆ ಇಳಿದಿರುವ ಯೋಧರು ಹಾಗೂ ಮಗದೊಂದು ಕಡೆ, ‘ಬಾಗಿಲು ಮುಚ್ಚಿ’ ಕುಳಿತಿರುವ ಸರಕಾರ.. ಇದು ಮೋದಿ ಸರಕಾರದ ಸದ್ಯದ ಸ್ಥಿತಿ. ಅಷ್ಟಕ್ಕೂ, ಕೇವಲ ಕಿವಿ ತಣಿಸುವ ಮಾತುಗಳಿಂದ ಜನರನ್ನು ಸುಮ್ಮನಾಗಿಸಲು ಸಾಧ್ಯವಿಲ್ಲವಲ್ಲ.


Tuesday, 9 June 2015

`ಕರಗುವ ಮಂಜುಗಡ್ಡೆ'ಯ ಎದುರು ರಮಝಾನ್

   ಪ್ರತಿಯೊಂದಕ್ಕೂ ಸಕಾರಾತ್ಮಕ (Positive) ಮತ್ತು ನಕಾರಾತ್ಮಕ(negetive)ವಾದ ಎರಡು ಮುಖಗಳಿರುತ್ತವೆ. ಗೋವನ್ನೇ ಎತ್ತಿಕೊಳ್ಳಿ. ಅದು ಎಲ್ಲೆಂದರಲ್ಲಿ ಸೆಗಣಿ ಹಾಕುತ್ತದೆ, ಮೂತ್ರ ಮಾಡುತ್ತದೆ, ಹಾಯುತ್ತದೆ, ಸರಿ-ತಪ್ಪುಗಳ ಪರಿವೆಯಿಲ್ಲದೇ ಮೇಯುತ್ತದೆ.. ಇತ್ಯಾದಿ ಇತ್ಯಾದಿ ನಕಾರಾತ್ಮಕ ಅಂಶಗಳನ್ನು ಪಟ್ಟಿ ಮಾಡಬಹುದು. ಹಾಗಂತ, ಸಕಾರಾತ್ಮಕ ಅಂಶಗಳೂ ಗೋವಿನಲ್ಲಿದೆ. ಅದು ಹಾಲು ಕೊಡುತ್ತದೆ, ಆಹಾರವಾಗುತ್ತದೆ, ಹೇಳಿದ್ದನ್ನು ಅನುಸರಿಸುತ್ತದೆ.. ಇತ್ಯಾದಿ. ರಮಝಾನ್‍ಗೂ ಈ ಎರಡು ಮುಖಗಳಿವೆ. ಅದು ಹಸಿವೆ ಮತ್ತು ಬಾಯಾರಿಕೆಯನ್ನು ಕೊಡುತ್ತದೆ. ನಿತ್ರಾಣ ಉಂಟು ಮಾಡುತ್ತದೆ. ದೈಹಿಕ ಸಾಮರ್ಥ್ಯವನ್ನು ಕುಂದಿಸುತ್ತದೆ.. ಇತ್ಯಾದಿ. ಅದರ ಜೊತೆಗೇ ರಮಝಾನ್ ಇನ್ನೊಬ್ಬರ ಹಸಿವೆ, ಬಾಯಾರಿಕೆಯನ್ನು ನಮ್ಮ ಅನುಭವಕ್ಕೆ ತರುತ್ತದೆ, ದುರ್ಬಲರ ಬದುಕನ್ನು ಆಲೋಚನೆಗೆ ಹಚ್ಚುತ್ತದೆ ಎಂದೂ ಹೇಳಬಹುದು. ಇಷ್ಟೇ ಅಲ್ಲ, ರಮಝಾನ್‍ಗೆ ಮೂರನೆಯದಾದ ಇನ್ನೊಂದು ಮುಖವೂ ಇದೆ. ಅದುವೇ ಅಧ್ಯಾತ್ಮದ್ದು. ಅದು ಹಸಿವನ್ನು ಆಧ್ಯಾತ್ಮಿಕತೆಯೊಂದಿಗೆ ಜೋಡಿಸುತ್ತದೆ. ‘ಬಾಯಾರಿಕೆ, ಪ್ರಾರ್ಥನೆ, ಆಯಾಸ ಸಹಿತ ಬದುಕಿನ ಸರ್ವ ಚಟುವಟಿಕೆಗಳಿಗೂ ಅದು ಆಧ್ಯಾತ್ಮಿಕ ಸಂಬಂಧವನ್ನು ಕಟ್ಟಿಕೊಡುತ್ತದೆ. ಇನ್ನೊಬ್ಬನ ಹಸಿವು, ದಾಹವನ್ನು ಸ್ವಯಂ ಅನುಭವಿಸಿಕೊಂಡು ಅವರಿಗಾಗಿ ಮಿಡಿಯುವ ಗುಣವನ್ನು ಮೈಗೂಡಿಸಿಕೊಳ್ಳುವುದು ದೇವನಿಗೆ ಇಷ್ಟ..’ ಎಂಬ ಸೊಗಸಾದ ಮತ್ತು ಮಾನವೀಯವಾದ ಜೀವನ ಪಾಠವನ್ನು ರಮಝಾನ್ ಪ್ರಸ್ತುತಪಡಿಸುತ್ತದೆ. ಆದ್ದರಿಂದಲೇ, ನಮ್ಮ ಸಾಮಾನ್ಯ ನಕಾರಾತ್ಮಕ ಮತ್ತು ಸಕಾರಾತ್ಮಕ ಚರ್ಚೆಗಳಿಗಿಂತ ರಮಝಾನ್ ಭಿನ್ನವಾಗಿ ನಿಲ್ಲುವುದು.
    ಆಧುನಿಕ ತಂತ್ರಜ್ಞಾನಗಳು ಇವತ್ತು ಎಷ್ಟು ಪ್ರಭಾವಶಾಲಿಯಾಗಿ ನಮ್ಮನ್ನು ಆವರಿಸಿಬಿಟ್ಟಿವೆಯೆಂದರೆ, ಅದು ನಮ್ಮ ಎಲ್ಲವನ್ನೂ ನಿಯಂತ್ರಿಸಿ ಬಿಡುವಷ್ಟು. ಹುಡುಕಾಡುವುದಕ್ಕೆ (Search) ಗೂಗಲ್ ಇದೆ. ಸಂದೇಶ ಕಳಿಸುವುದಕ್ಕೆ ವಾಟ್ಸಪ್ ಇದೆ. ಗೆಳೆತನ ಬೆಳೆಸುವುದಕ್ಕೆ ಫೇಸ್‍ಬುಕ್ ಇದೆ. ಜಗತ್ತನ್ನು ಅರಿಯುವುದಕ್ಕೆ ವೆಬ್ ಪೋರ್ಟಲ್‍ಗಳಿವೆ. ಹೇಗೆ ನಗಬೇಕು, ನಡೆಯಬೇಕು, ಮಾತಾಡಬೇಕು, ಯಾವ ಭಂಗಿಯಲ್ಲಿ ಹಾಯ್ ಹೇಳಬೇಕು, ಮಾತಾಡುವಾಗ ದೇಹ ಚಲನೆ ಹೇಗಿರಬೇಕು, ದೃಷ್ಟಿ ಯಾವ ಕಡೆಗಿರಬೇಕು, ಹೇಗೆ ಡ್ರೆಸ್ ಧರಿಸಬೇಕು,ಕಾಲೇಜ್ ಗೆ, ಕಚೇರಿಗೆ, ಮದುವೆಗೆ, ಔತಣಕ್ಕೆ, ಪ್ರಾರ್ಥನೆಗೆ ... ಹೋಗುವಾಗ ಯಾವ ಬಣ್ಣದ ಉಡುಪು ಉತ್ತಮ..  ಎಲ್ಲವನ್ನೂ ‘ಗೂಗಲ್’ ಹೇಳಿಕೊಡುತ್ತದೆ. ಒಂದು ರೀತಿಯಲ್ಲಿ, ತಂತ್ರಜ್ಞಾನಗಳು ಮನುಷ್ಯನ ಹುಡುಕಾಟವನ್ನು ಸುಲಭಗೊಳಿಸಿವೆ. ಆಯ್ಕೆಗಳ ವ್ಯಾಪ್ತಿಯನ್ನು ವಿಸ್ತಾರಗೊಳಿಸಿದೆ. ಆದರೂ ಕೆಲವು ತಕರಾರುಗಳಿವೆ. ಅವು ಮೌಲ್ಯಗಳನ್ನು ಸವಕಲಾಗಿಸಿಬಿಟ್ಟಿವೆ. ಒಬಾಮರ ಬಗ್ಗೆಯೋ, ಸ್ಟೀಪನ್ ಹಾಕಿಂಗ್ ಅಥವಾ ಮಾರ್ಕ್ ಜುಕರ್‍ಬರ್ಗ್‍ರ ಬಗ್ಗೆಯೋ ಧಾರಾಳ ಮಾತಾಡುವ ಇವತ್ತಿನ ‘ತಂತ್ರಜ್ಞಾನದ ಮಗು’, ಚಿಕ್ಕಪ್ಪ, ದೊಡ್ಡಪ್ಪರ ಬಗ್ಗೆ ನಾಲ್ಕು ಮಾತುಗಳನ್ನು ಹೇಳಲಾರದಷ್ಟು ಮಾಹಿತಿ ರಹಿತವಾಗುತ್ತಿದೆ. ಮಾವ, ಅತ್ತೆ, ಸೋದರತ್ತೆ ಎಂಬ ವ್ಯಕ್ತಿತ್ವಗಳ ಮಹತ್ವ, ಕೌಟುಂಬಿಕ ಪರಂಪರೆಗಳು, ಅವುಗಳೊಳಗಿನ ಆರ್ದ್ರತೆ, ಭಾವನಾತ್ಮಕತೆ ಎಲ್ಲದರಿಂದಲೂ ‘ತಂತ್ರಜ್ಞಾನದ ಮಗು' ಮಾಹಿತಿರಹಿತವಾಗಿ ಬದುಕುತ್ತಿದೆ. ಚಿಕ್ಕಮ್ಮನೋ, ದೊಡ್ಡಮ್ಮನೋ, ಅತ್ತೆಯೋ, ಮಾವನೋ.. ಎಲ್ಲರೂ ‘ತಂತ್ರಜ್ಞಾನದ ಮಗುವಿಗೆ’ ಬಹುತೇಕ ಒಂದೇ, ಆಂಟಿ-ಅಂಕಲ್‍ಗಳು. ಒಂದು ಕಡೆ, ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಇನ್ನೊಂದು ಕಡೆ ಮಂಜುಗಡ್ಡೆಯಂತೆ ಕರಗುತ್ತಿರುವ ಸಂಬಂಧಗಳು.. ಇವುಗಳ ನಡುವೆ ಆಧುನಿಕ ಜಗತ್ತು ಸಿಕ್ಕಿ ಒದ್ದಾಡುತ್ತಿರುವಂತಿದೆ. ತಂತ್ರಜ್ಞಾನವನ್ನು ಅನಿವಾರ್ಯವೆಂದು ಒಪ್ಪಿಕೊಂಡಿರುವ ನಾವು ಅದೇ ವೇಳೆ ಕರಗುತ್ತಿರುವ ಜೀವನ ಮೌಲ್ಯ ಮತ್ತು ಸಂಬಂಧಗಳಿಗಾಗಿ ಕರುಬುತ್ತಲೂ ಇದ್ದೇವೆ. ನಿಜವಾಗಿ, ಇಂಥ ಇಕ್ಕಟ್ಟಿಗೆ ರಮಝಾನ್ ಒಂದು ಪರಿಣಾಮಕಾರಿ ಪರಿಹಾರವಾಗಿದೆ. ಅದು ತಂತ್ರಜ್ಞಾನವನ್ನು ಒಪ್ಪಿಕೊಳ್ಳುತ್ತಲೇ ಮಾನವ ಸಂಬಂಧಗಳನ್ನು ಜೋಡಿಸಲು ಮತ್ತು ಗೌರವಿಸಲು ಕರೆ ಕೊಡುತ್ತದೆ. ಕುಟುಂಬ ಸಂಬಂಧವನ್ನು ಅದು ಆಧ್ಯಾತ್ಮಿಕತೆಯೊಂದಿಗೆ ಜೋಡಿಸುತ್ತದೆ. ಗೂಗಲ್‍ನಲ್ಲಿ ಸರ್ಚ್ ಮಾಡುವ ಬೆರಳುಗಳಿಗೆ ನೈತಿಕತೆಯ ಪಾಠವನ್ನು ಹೇಳಿಕೊಡುತ್ತದೆ. ಹುಡುಕಾಟದ ಜಗತ್ತಿನಲ್ಲಿ ಏನನ್ನು ಹುಡುಕಬೇಕು ಮತ್ತು ಯಾಕೆ ಹುಡುಕಬೇಕು ಎಂಬುದನ್ನು ಅದು ಹೇಳಿಕೊಡುತ್ತದೆ. ಆದ್ದರಿಂದಲೇ, ರಮಝಾನ್ ನಮಗೆ ಮುಖ್ಯವಾಗಬೇಕು. ಮಂಜುಗಡ್ಡೆಯಂತೆ ಕರಗುತ್ತಿರುವ ಮೌಲ್ಯಗಳು ಮತ್ತು ಕೌಟುಂಬಿಕ ಸಂಬಂಧಗಳ ಬಗ್ಗೆ ನಮ್ಮನ್ನು ಎಚ್ಚರಿಸುವುದಕ್ಕೆ ಅದು ಕರೆಗಂಟೆಯಾಗಬೇಕು. ಗೂಗಲ್ ಸರ್ಚ್‍ನಲ್ಲಿ ಸಿಗದ ಅತ್ತೆ, ಮಾವ, ಚಿಕ್ಕಪ್ಪ, ದೊಡ್ಡಪ್ಪ ಮತ್ತು ಆಯುಷ್ಯದ ಬಗ್ಗೆ ಆಲೋಚಿಸಲು, ಪರಸ್ಪರ ಮಿಡಿಯಲು ಹಾಗೂ ಬೆರೆಯಲು ರಮಝಾನ್ ನಮಗೆ ಪ್ರೇರಕವಾಗಬೇಕು. ಕರಗುವುದು ಮಂಜುಗಡ್ಡೆಯ ಸಹಜ ಗುಣ. ಆದರೆ ನಮ್ಮ ಗುಣ ಕಟ್ಟುವುದಾಗಿರಲಿ.

Thursday, 4 June 2015

ಸಲಿಂಗ ಮದುವೆ ಎತ್ತುವ ಪ್ರಶ್ನೆಗಳು...

 ಮಗ ಹರೀಶ್ ಐಯ್ಯರ್ ಜೊತೆ ತಾಯಿ ಪದ್ಮ ಐಯ್ಯರ್
    ಕಳೆದ ಮೇ 22ರಂದು ಐರ್ಲೆಂಡಿನ ನಾಗರಿಕರು ಸಲಿಂಗ ಮದುವೆ(Same-sex marriege)ಗೆ ಬೆಂಬಲವನ್ನು ಸೂಚಿಸಿ ಮತದಾನ ಮಾಡಿದುದಕ್ಕಿಂತ ಎರಡು ದಿನಗಳ ಮೊದಲು ಮುಂಬೈಯ ಮಿಡ್‍ ಡೇ ಪತ್ರಿಕೆಯಲ್ಲಿ ಒಂದು ಜಾಹೀರಾತು ಪ್ರಕಟವಾಗಿತ್ತು. ಪದ್ಮ ಐಯ್ಯರ್ ಎಂಬ ತಾಯಿ ಕೊಟ್ಟ ಜಾಹೀರಾತದು. 36 ವರ್ಷದ, 5 ಅಡಿ 11 ಇಂಚು ಎತ್ತರ ಇರುವ, ಸರಕಾರೇತರ ಸಂಸ್ಥೆಯೊಂದರಲ್ಲಿ (NGO) ಕೆಲಸ ಮಾಡುತ್ತಿರುವ  ಎಂಬ ತನ್ನ ಮಗನಿಗೆ ‘25ರಿಂದ 40 ವರ್ಷದೊಳಗಿನವರಾದ, ಪ್ರಾಣಿಯನ್ನು ಪ್ರೀತಿಸುವ, ಉತ್ತಮ ಉದ್ಯೋಗದಲ್ಲಿರುವ ಸಸ್ಯಾಹಾರಿ ‘ವರ' ಬೇಕಾಗಿದ್ದಾರೆ’ ಎಂದು ಜಾಹೀರಾತಿನಲ್ಲಿ ಹೇಳಲಾಗಿತ್ತು. ಅದರಲ್ಲೂ, ‘ಐಯ್ಯರ್ ಜಾತಿಗೆ ಆದ್ಯತೆ’ ಎಂಬ ವಿಶೇಷ ಸೂಚನೆಯೂ ಇತ್ತು. ಸಲಿಂಗ ಹಕ್ಕು ಕಾರ್ಯಕರ್ತನಾಗಿರುವ ತನ್ನ ಮಗನ ಸಲಿಂಗ ಮದುವೆಯನ್ನು ಆ ತಾಯಿ ಮಾಧ್ಯಮಗಳ ಮುಂದೆ ಸಮರ್ಥಿಸಿಕೊಂಡರು. ಈ ಜಾಹೀರಾತನ್ನು ಎರಡು ಪತ್ರಿಕೆಗಳು ಪ್ರಕಟಿಸಲು ಒಪ್ಪಿಕೊಳ್ಳದೇ ಇದ್ದುದನ್ನೂ ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡರು. ಇದಕ್ಕಿಂತ ಒಂದು ತಿಂಗಳ ಹಿಂದಷ್ಟೇ ಭಾರತೀಯ ಕ್ರಿಕೆಟ್ ಸಂಸ್ಥೆಯ (ಬಿಸಿಸಿಐ) ಮುಖ್ಯಸ್ಥ ಶ್ರೀನಿವಾಸನ್‍ರು ತಮ್ಮ ಮಗನ ಸಲಿಂಗ ಪ್ರೇಮದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವುದನ್ನು ಮಾಧ್ಯಮಗಳು ವರದಿ ಮಾಡಿದ್ದುವು.
 ಒಂದು ರೀತಿಯಲ್ಲಿ, ನೈತಿಕ-ಅನೈತಿಕಗಳು ಅನಾದಿ ಕಾಲದಿಂದಲೂ ಚರ್ಚೆಗೊಳಗಾಗುತ್ತಾ ಬಂದಿವೆ. ಜಗತ್ತು ಬೌದ್ಧಿಕವಾಗಿ ಮತ್ತು ತಾಂತ್ರಿಕವಾಗಿ ವಿಕಸಿತವಾದಂತೆಲ್ಲ ಇಂಥ ಚರ್ಚೆಗಳು ಬಿರುಸನ್ನು ಪಡೆಯುತ್ತಲೂ ಇವೆ. ವೇಶ್ಯಾವಾಟಿಕೆ ಕಾನೂನುಬದ್ಧಗೊಳ್ಳಬೇಕೋ ಬೇಡವೋ ಎಂಬುದು ನಮ್ಮ ರಾಜ್ಯದಲ್ಲಿ ಏಳೆಂಟು ತಿಂಗಳುಗಳ ಹಿಂದೆ ಹುಟ್ಟಿಕೊಂಡ ಗಂಭೀರ ಚರ್ಚೆ. ಸಲಿಂಗ ಮದುವೆಗೆ ಅನುಮತಿ ನೀಡಬೇಕೆಂದು ಕೋರಿ ಈಗಾಗಲೇ ಸುಪ್ರೀಮï ಕೋರ್ಟಿಗೆ ಅರ್ಜಿಯನ್ನೂ ಸಲ್ಲಿಸಲಾಗಿದೆ. ಬಹುಶಃ, ಪದ್ಮ ಐಯ್ಯರ್ ಕೊಟ್ಟ ಜಾಹೀರಾತನ್ನು ಪರಿಗಣಿಸಿದರೆ ಮುಂದಿನ ದಿನಗಳಲ್ಲಿ ಇಂಥ ಅರ್ಜಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲೂ ಬಹುದು. ಯಾಕೆಂದರೆ, ಪ್ರಕೃತಿ ನಿಯಮವನ್ನು ವಿೂರುವುದೇ ಬದುಕು ಎಂದು ಆಲೋಚಿಸುವ ಮತ್ತು ಅದನ್ನು ತನ್ನ ಸ್ವಾತಂತ್ರ್ಯವೆಂದು ಪ್ರತಿಪಾದಿಸುವ ಬೆಳವಣಿಗೆಗಳಿಗೆ ಆಧುನಿಕ ಜಗತ್ತಿನಲ್ಲಿ ಮಾನ್ಯತೆ ಲಭ್ಯವಾಗುತ್ತಿದೆ. ತೋಚಿದಂತೆ ಬದುಕುವುದನ್ನೇ ಜೀವನ ಕ್ರಮ ಎಂದು ಹೇಳಿಕೊಡಲಾಗುತ್ತಿದೆ. ಈ ಜೀವನ ಕ್ರಮದಲ್ಲಿ ವೇಶ್ಯಾವಾಟಿಕೆಯೂ ಸ್ವಾತಂತ್ರ್ಯ. ಮದುವೆಗೆ ಮುಂಚೆ ಮತ್ತು ನಂತರ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವುದೂ ಸ್ವಾತಂತ್ರ್ಯ. ಲಿವ್ ಇನ್ ಟುಗೆದರೂ ಸ್ವಾತಂತ್ರ್ಯ. ಆದರೆ ಇವುಗಳ ಜೊತೆಗೇ ಕೆಲವು ಪ್ರಶ್ನೆಗಳೂ ಉದ್ಭವಿಸುತ್ತವೆ. ಇಂಥ ಸ್ವಾತಂತ್ರ್ಯಗಳು ಅಂತಿಮವಾಗಿ ಸಮಾಜವನ್ನು ಎಲ್ಲಿಗೆ ತಲುಪಿಸಬಲ್ಲುದು? ಜನನ ಮತ್ತು ಮರಣ ಎಂಬುದು ಪ್ರಕೃತಿ ನಿಯಮ. ಅದರಲ್ಲೊಂದು  ಸಮತೋಲನದ ಉದ್ದೇಶವಿದೆ. ಆ ಸಮತೋಲನದ ಮೇಲೆ ಮಾನವ ಜಗತ್ತು ಸ್ವಾಮ್ಯವನ್ನು ಪಡಕೊಳ್ಳಲು ಪ್ರಯತ್ನಿಸಿದಾಗಲೆಲ್ಲ ಪ್ರಕೃತಿ ಮುನಿದಿದೆ. ತನ್ನ ಅಸಮಾಧಾನವನ್ನು ವಿವಿಧ ರೂಪದಲ್ಲಿ ಹೊರಗೆಡಹಿದೆ. ಕುಟುಂಬಕ್ಕೊಂದೇ ಮಗು ಎಂಬ ಕಾನೂನನ್ನು ಅತ್ಯಂತ ಕಠಿಣವಾಗಿ ಜಾರಿಗೊಳಿಸಿದ ದೇಶ ಚೀನಾ. ಆ ನಿಯಮವು ಇವತ್ತು ಚೀನಾದ ಲಿಂಗಾನುಪಾತದಲ್ಲಿ ಎಷ್ಟು ಆಳವಾದ ಗಾಯವನ್ನು ಮೂಡಿಸಿಬಿಟ್ಟಿದೆಯೆಂದರೆ, ಇದೀಗ ಆ ನಿಯಮವನ್ನೇ ಸಡಿಲಿಸಬೇಕಾಗಿ ಬಂದಿದೆ. ಒಂದೇ ಮಗು ಎಂದಾಗ ಹೆಚ್ಚಿನ ಕುಟುಂಬಗಳೆಲ್ಲ ಗಂಡು ಮಗುವನ್ನೇ ಬಯಸಿದುವು. ಹೆಣ್ಣು ಮಕ್ಕಳನ್ನು ಹೊಟ್ಟೆಯಲ್ಲೇ ಕೊಲ್ಲುವ ಕ್ರೌರ್ಯಕ್ಕೂ ಅದು ಕಾರಣವಾಯಿತು. ಚೀನಾ ಎಂದಲ್ಲ ನಮ್ಮದೇ ದೇಶದ ಹರ್ಯಾಣ ಮತ್ತಿತರ ರಾಜ್ಯಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ತೀವ್ರ ಕುಸಿತಕ್ಕೆ ಪ್ರಕೃತಿ ವಿರೋಧಿ ಗಂಡು ಪ್ರೇಮವೇ ಕಾರಣವಾಗಿದೆ. ಹರ್ಯಾಣದಲ್ಲಿ ಇವತ್ತು ಹೆಣ್ಣಿನ ಬರ ಎಷ್ಟು ಬಿಗಡಾಯಿಸಿದೆ ಎಂದರೆ ಬಿಹಾರದಿಂದ ವಧುಗಳನ್ನು ಹರ್ಯಾಣಕ್ಕೆ ತಂದು ಮದುವೆ ಮಾಡಿಸಲಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಸಲಿಂಗ ಕಾಮ ಮತ್ತು ಸಲಿಂಗ ಮದುವೆಯ ಕಾನೂನು ಬದ್ಧತೆಯನ್ನೊಮ್ಮೆ ಕಲ್ಪಿಸಿಕೊಳ್ಳಿ. ಈ ಜೀವನ ಕ್ರಮದಲ್ಲಿ ಗಂಡು-ಗಂಡನ್ನು ವಿವಾಹವಾಗುತ್ತಾನೆ ಅಥವಾ ಒಟ್ಟಾಗಿ ಬದುಕುತ್ತಾನೆ. ದೈಹಿಕ ಸುಖವನ್ನು ಪರಸ್ಪರ ಹಂಚಿಕೊಳ್ಳಲಾಗುತ್ತದೆ.
 ನಿಜವಾಗಿ, ಹೆಣ್ಣು ಮತ್ತು ಗಂಡಿನ ನಡುವೆ ಪ್ರಕೃತಿಯೇ ಅನುರಾಗವನ್ನು ಇಟ್ಟಿದೆ. ಆ ಅನುರಾಗದ  ಹಿಂದೆ ಇರುವ ಉದ್ದೇಶವು ಕೇವಲ ದೈಹಿಕ ಸುಖವನ್ನು ಹಂಚಿಕೊಳ್ಳುವುದು ಮಾತ್ರವೇ ಅಲ್ಲ. ಆ ಅನುರಾಗದ ಮೂಲಕ ಜನನ ಪ್ರಕ್ರಿಯೆಗೆ ಒಂದು ವೇದಿಕೆಯನ್ನು ಸಿದ್ಧಪಡಿಸಲಾಗುತ್ತದೆ. ಮದುವೆ ಎಂಬ ಸಾಮಾಜಿಕ ಮಾನ್ಯತೆಯಡಿಯಲ್ಲಿ ಹೆಣ್ಣು-ಗಂಡು ಒಟ್ಟಾಗುತ್ತಾರೆ. ಆ ಮೂಲಕ ಭವಿಷ್ಯದ ಪೀಳಿಗೆಯ ಉದಯವನ್ನೂ ನಿರೀಕ್ಷಿಸಲಾಗುತ್ತದೆ. ಹೀಗೆ ಹೆಣ್ಣು-ಗಂಡು ಪರಸ್ಪರ ಆಕರ್ಷಿತಗೊಳ್ಳುವುದು, ಮದುವೆಯಲ್ಲಿ ಒಂದಾಗುವುದು ಮತ್ತು ಹೊಸ ಪೀಳಿಗೆಗೆ ಜನ್ಮ ಕೊಡುವ ಮೂಲಕ ಮಾನವ ಸಂತತಿಯ ಬೆಳವಣಿಗೆಯು ಮುಂದುವರಿಯುವಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಸಲಿಂಗ ಮದುವೆಯಲ್ಲಿ ಈ ಪ್ರಕ್ರಿಯೆಗೆ ಅವಕಾಶಗಳೇ ಇಲ್ಲ. ಸಲಿಂಗ ಕಾಮ ಎಂಬುದು ಕೇವಲ ದೈಹಿಕ ಸುಖವನ್ನು ಅನುಭವಿಸುವುದಕ್ಕಿರುವ ಒಂದು ವೇದಿಕೆಯೇ ಹೊರತು ಅದರಿಂದ ಮಾನವ ಜಗತ್ತಿಗೆ ಯಾವ ಕೊಡುಗೆಯೂ ಸಿಗುವುದಿಲ್ಲ. ಅದೊಂದು ಒಣ ಬದುಕು. ಅಲ್ಲಿ ಮಕ್ಕಳಿಲ್ಲ. ಆದ್ದರಿಂದಲೇ ಆ ಬದುಕು ಅವರಲ್ಲಿಗೇ ಕೊನೆಗೊಳ್ಳುತ್ತದೆ. ಅಂದಹಾಗೆ, ಸಲಿಂಗ ಕಾಮವು ಸ್ವಾತಂತ್ರ್ಯದ ಹೆಸರಲ್ಲಿ ಕಾನೂನುಬದ್ಧಗೊಂಡರೆ, ಅದು ಬೀರುವ ಪರಿಣಾಮ ಹೇಗಿರಬಹುದು? ಸಲಿಂಗ ಮದುವೆಗಳು ಜನಪ್ರಿಯಗೊಳ್ಳುವುದರಿಂದ ಸಮಾಜದಲ್ಲಿ ಏನೇನು ಬದಲಾವಣೆಗಳಾಗಬಹುದು? ಗದ್ದೆಗಳು, ಕಾರ್ಖಾನೆಗಳು, ಶಾಲೆಗಳು ಸಹಿತ ವಿವಿಧ ಕ್ಷೇತ್ರಗಳ ಪರಿಸ್ಥಿತಿ ಹೇಗಿದ್ದೀತು? ಜನನ ಪ್ರಕ್ರಿಯೆ ನಿಂತು ಹೋದ ಅಥವಾ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಸಮಾಜದಲ್ಲಿ ಗದ್ದೆಯನ್ನು ಉಳುವವರಾದರೂ ಯಾರಿರುತ್ತಾರೆ? ಮಕ್ಕಳು, ಕುಟುಂಬ ಎಂಬೊಂದು ಪರಿಸರವೇ ಓರ್ವರನ್ನು ಗದ್ದೆ ಉಳುವುದಕ್ಕೆ, ಬೆಳೆ ಬೆಳೆಯುವುದಕ್ಕೆ ಅಥವಾ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಹೆಚ್ಚಿನ ಬಾರಿ ಪ್ರೇರೇಪಿಸುತ್ತದೆ. ಮಕ್ಕಳೇ ಇಲ್ಲದ ಕುಟುಂಬದಲ್ಲಿ ಕೃಷಿ ಚಟುವಟಿಕೆ, ಸಂಪಾದನೆಯ ಉತ್ಸಾಹ ಸಹಜವಾಗಿಯೇ ಕಡಿಮೆ. ಹಾಗೆಯೇ, ಯುವ ಪೀಳಿಗೆಯ ಅಭಾವದಿಂದಾಗಿ ಕಾರ್ಖಾನೆಗಳು ಮುಚ್ಚಬಹುದು. ಉತ್ಪಾದನಾ ರಂಗದಲ್ಲಿ ತೀವ್ರ ಕುಸಿತ ಉಂಟಾಗಬಹುದು. ಶಾಲೆಗಳ ಅಗತ್ಯವೇ ಕಂಡುಬರಲಾರದು. ಅಂಥದ್ದೊಂದು ಸಾಧ್ಯಾಸಾಧ್ಯತೆ ಎದುರಿರುವುದರಿಂದಲೇ ಪವಿತ್ರ ಕುರ್‍ಆನ್ ಸಹಿತ ಧಾರ್ಮಿಕ ಗ್ರಂಥಗಳು ಸಲಿಂಗ ಕಾಮವನ್ನು ಕಠಿಣವಾಗಿ ವಿರೋಧಿಸಿವೆ. ಮಾತ್ರವಲ್ಲ, ಈ ಕೃತ್ಯವನ್ನು ಜೀವನ ಕ್ರಮವಾಗಿ ಅಳವಡಿಸಿಕೊಂಡಿದ್ದ ಲೂತ್ ಎಂಬ ಹೆಸರಿನ ಪುರಾತನ ಸಮೂಹವೇ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವುದನ್ನು (ಅಧ್ಯಾಯ 11) ವಿವರಿಸಿದೆ.
 

ಏನೇ ಆಗಲಿ, ಪ್ರಕೃತಿ ಮತ್ತು ವಿಕೃತಿಗಳ ನಡುವೆ ಎಷ್ಟೆಲ್ಲ ಅರ್ಥ ವ್ಯತ್ಯಾಸ ಮತ್ತು ಭಾವ ವ್ಯತ್ಯಾಸಗಳಿವೆಯೋ ಅಷ್ಟೇ ವ್ಯತ್ಯಾಸ ಸಲಿಂಗ ಕಾಮ ಮತ್ತು ವ್ಯಕ್ತಿ ಸ್ವಾತಂತ್ರ್ಯದ ನಡುವೆಯೂ ಇದೆ. ಅವೆರಡರ ನಡುವೆ ಪರಸ್ಪರ ಸಂಧಿಸದಷ್ಟು ಅಂತರವಿದೆ. ಸ್ವಾತಂತ್ರ್ಯವು ಪ್ರಕೃತಿದತ್ತವಾದರೆ ಸಲಿಂಗ ಕಾಮವು ಪ್ರಕೃತಿ ವಿರೋಧಿ. ಅವೆರಡರ ನಡುವೆ ಸಂಘರ್ಷ ಏರ್ಪಡಬಹುದೇ ಹೊರತು ಸಹಮತವಲ್ಲ. ಪದ್ಮ ಐಯ್ಯರ್‍ರ ಜಾಹೀರಾತನ್ನು ಪ್ರಕಟಿಸಲು ಹಿಂಜರಿದ ಎರಡು ಪತ್ರಿಕೆಗಳೇ ಇದಕ್ಕೆ ಅತ್ಯುತ್ತಮ ಪುರಾವೆ.