Tuesday 28 April 2015

  ಸುಳ್ಳಿನ ಮುಖವಾಡವನ್ನು ಕಿತ್ತೊಗೆದ ಗೋವು ಮತ್ತು ಹೆಣ್ಣು

    ಕಳೆದವಾರ ಎರಡು ಗಮನಾರ್ಹ ಸುದ್ದಿಗಳು ಪ್ರಕಟವಾದುವು. ಒಂದು ಗೋಮಾಂಸಕ್ಕೆ ಸಂಬಂಧಿಸಿದ್ದಾದರೆ ಇನ್ನೊಂದು ಭ್ರೂಣಹತ್ಯೆಗೆ ಸಂಬಂಧಿಸಿದ್ದು. ಗೋವನ್ನು ಮತ್ತು ಹೆಣ್ಣನ್ನು ಪೂಜನೀಯವಾಗಿ ಕಾಣುವ ದೇಶ ಎಂಬ ನೆಲೆಯಲ್ಲಿ ಈ ಸುದ್ದಿಗಳು ಗಮನಾರ್ಹವಷ್ಟೇ ಅಲ್ಲ, ಮಹತ್ವಪೂರ್ಣ ಮತ್ತು ಅತಿ ಗಂಭೀರವಾದುದು. ಗೋಹತ್ಯೆಯನ್ನು ನಿಷೇಧಿಸಬೇಕೆಂದು ಆಗ್ರಹಿಸುತ್ತಿರುವುದು ಮತ್ತು ಅದನ್ನು ಚುನಾವಣಾ ಅಜೆಂಡಾವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ ಮುಂದಿರಿಸಿದ್ದು ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ. ಅಕ್ರಮ ಗೋ ಸಾಗಾಟದ ಹೆಸರಲ್ಲಿ ಹಲ್ಲೆ ನಡೆಸುವವರಲ್ಲಿ ಬಿಜೆಪಿ ಕಾರ್ಯಕರ್ತರಿದ್ದಾರೆ. ಗೋವಿಗೆ ಹಿಂದೂ ಧರ್ಮದಲ್ಲಿರುವ ಪ್ರಾಮುಖ್ಯತೆಯ ಕುರಿತಂತೆ ಭಾವುಕ ಭಾಷಣ ಮಾಡುವವರಲ್ಲೂ ಆ ಪಕ್ಷದವರಿದ್ದಾರೆ. ಯಾವುದೇ ಪ್ರತಿಭಟನೆ ಅಥವಾ ಅಭಿಯಾನವನ್ನು ಗೋಪೂಜೆಯ ಮೂಲಕ ಆರಂಭಿಸುವ ಕ್ರಮವೂ ಆ ಪಕ್ಷದಲ್ಲಿದೆ. ಆದ್ದರಿಂದಲೇ, ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಈ ದೇಶ ಗೋಮಾಂಸ ರಫ್ತಿನಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನದಿಂದ ಒಂದನೇ ಸ್ಥಾನಕ್ಕೆ ಜಿಗಿದಿದೆ ಎಂಬ ಕಳೆದವಾರದ ಸುದ್ದಿಯು ಆಶ್ಚರ್ಯಕರವಾಗಿ ಕಾಣಿಸುತ್ತದೆ. ಜಾಗತಿಕ ಗೋಮಾಂಸ ರಫ್ತಿನ ಬಗ್ಗೆ ಅಮೇರಿಕದ ಕೃಷಿ ಇಲಾಖೆಯು (USDA) ಕಳೆದವಾರ ವರದಿಯನ್ನು ಪ್ರಕಟಿಸಿದ್ದು, ಅದರ ಪ್ರಕಾರ, ಭಾರತವು ಗೋಮಾಂಸ ರಫ್ತಿನಲ್ಲಿ ಬ್ರೆಝಿಲನ್ನು ಹಿಂದಿಕ್ಕಿದೆ. ಈ ವರ್ಷ ಭಾರತದಿಂದ ಅತೀ ಹೆಚ್ಚು ಗೋಮಾಂಸ ರಫ್ತಾಗಬಹುದೆಂಬ ನಿರೀಕ್ಷೆಯನ್ನೂ ಅದು ವ್ಯಕ್ತಪಡಿಸಿದೆ. ಈ ಬೆಳವಣಿಗೆಗೆ ಏನೆನ್ನಬೇಕು? ಒಂದು ಕಡೆ ಗೋವಿನ ಬಗ್ಗೆ ಅತೀವ ಕಾಳಜಿಯನ್ನು ವ್ಯಕ್ತಪಡಿಸುವ ಸರಕಾರ, ಇನ್ನೊಂದು ಕಡೆ ಗೋಮಾಂಸದ ರಫ್ತಿನಲ್ಲಿ ಸತತ ಏರಿಕೆಯಾಗುತ್ತಿರುವುದು - ಏನಿದರ ಅರ್ಥ? ಮಹಾರಾಷ್ಟ್ರದ ಬಿಜೆಪಿ ಸರಕಾರವು ಜಾನುವಾರು ಹತ್ಯೆಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸಿದೆ. ಹರ್ಯಾಣದ ಬಿಜೆಪಿ ಸರಕಾರವು ಶೀಘ್ರವೇ ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೊಳಿಸಲಿದೆ. ಆದರೂ ಗೋಮಾಂಸದ ರಫ್ತಿನಲ್ಲಿ ಸತತ ಏರಿಕೆಯಾಗುತ್ತಿರುವುದು ಹೇಗೆ ಮತ್ತು ಏಕೆ? ಜನಸಾಮಾನ್ಯನಿಗೂ ಅರ್ಥವಾಗುವ ಒಂದು ಸರಳ ಲೆಕ್ಕಾಚಾರವಿದೆ. ಅದೇನೆಂದರೆ, ನೀವು ಬಟಾಟೆ ಉತ್ಪಾದನೆಗೆ ನಿಷೇಧ ವಿಧಿಸಿದರೆ ಆ ಬಳಿಕ ಬಟಾಟೆ ಮಾರುಕಟ್ಟೆಯಲ್ಲಿ ಲಭ್ಯವಾಗುವುದಿಲ್ಲ. ಬೇರೆಡೆಗೆ ರಫ್ತಾಗುವುದಕ್ಕೆ ಸಾಧ್ಯವೂ ಇಲ್ಲ. ನಿಷೇಧಕ್ಕೆ ಒಳಗಾಗುವ ಎಲ್ಲ ವಸ್ತುಗಳ ಹಣೆಬರಹವೂ ಇದುವೇ. ಆದರೆ ಗೋಮಾಂಸದ ವಿಷಯದಲ್ಲಿ ಈ ಲೆಕ್ಕಾಚಾರ ದಿಕ್ಕು ತಪ್ಪುತ್ತಿರುವುದೇಕೆ? ನಿಷೇಧಕ್ಕೆ ಒಳಗಾದ ಮಾಂಸವೇ ಅತೀ ಹೆಚ್ಚು ರಫ್ತಾಗುತ್ತಿರುವುದರ ಹಿಂದಿನ ಕಾರಣಗಳೇನು? ಅಂದಹಾಗೆ, ಜಾನುವಾರು ಮಾಂಸವನ್ನು ಬೃಹತ್ ಪ್ರಮಾಣದಲ್ಲಿ ರಫ್ತು ಮಾಡುವ ಈ ದೇಶದ ಪ್ರಮುಖ 6 ಕಂಪೆನಿಗಳಲ್ಲಿ ಸತೀಶ್ ಮತ್ತು ಅತುಲ್ ಅಗರ್ವಾಲ್‍ರ ಅಲ್ ಕಬೀರ್ ಎಕ್ಸ್ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ಸುನೀಲ್ ಕಪೂರ್ ಮಾಲಿಕತ್ವದ ಅರೇಬಿಯನ್ ಎಕ್ಸ್ ಪೋರ್ಟ್ಸ್  ಪ್ರೈವೇಟ್ ಲಿಮಿಟೆಡ್, ಮದನ್ ಅಬ್ಬೋಟ್ ಅವರ ಎಂ.ಕೆ.ಆರ್. ಫ್ರೋಝನ್ ಫುಡ್ ಎಕ್ಸ್ ಪೋರ್ಟ್ಸ್  ಪ್ರೈವೇಟ್ ಲಿಮಿಟೆಡ್ ಮತ್ತು ಎ.ಎಸ್. ಬಿಂದ್ರಾ ಅವರ ಪಿ.ಎಂ.ಎಲ್. ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ಗಳಿಗೆ ಜಾನುವಾರು ಎಲ್ಲಿಂದ ಸಾಗಾಟವಾಗುತ್ತಿದೆ? ಇಲ್ಲಿಗೆ ಸಾಗಾಟವಾಗುವ ಜಾನುವಾರುಗಳನ್ನೇಕೆ ತಡೆಹಿಡಿಯಲಾಗುತ್ತಿಲ್ಲ? ಈ ಕಂಪೆನಿಗಳ ಮೇಲೆ ದಾಳಿ ನಡೆಸಿ ಈ ಮಾಂಸೋದ್ಯಮವನ್ನು ತಡೆಯುವ ಪ್ರಯತ್ನಗಳೇಕೆ ನಡೆಯುತ್ತಿಲ್ಲ? ಈ ಕಂಪೆನಿಗಳ ಪರವಾನಿಗೆಯನ್ನು ನವೀಕರಿಸುತ್ತಿರುವವರು ಯಾರು? ಒಂದು ಕಡೆ ಗೋ ಹತ್ಯೆಯ ವಿರುದ್ಧ ಬಿಜೆಪಿ ಕಟು ಭಾಷೆಯಲ್ಲಿ ಮಾತಾಡುತ್ತದೆ. ಅದನ್ನು ಪೂಜನೀಯವೆಂದು ಘೋಷಿಸುತ್ತದೆ. ಆದರಿಸುತ್ತದೆ. ಇದನ್ನು ಗೌರವಿಸೋಣ. ಆದರೆ ಇನ್ನೊಂದು ಕಡೆ ಗೋ ಹತ್ಯೆಯನ್ನು ಬೃಹತ್ ಪ್ರಮಾಣದಲ್ಲಿ ನಡೆಸುವ ಮತ್ತು ವಿದೇಶಗಳಿಗೆ ಮಾಂಸ ರಫ್ತು ಮಾಡುವ ಕಂಪೆನಿಗಳ ಬಗ್ಗೆ ಇದೇ ಪಕ್ಷ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಹಾಗಂತ, ಈ ಕಂಪೆನಿಗಳೆಲ್ಲ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಇರುವುದಲ್ಲವಲ್ಲ. ಮುಂಬಯಿ, ದೆಹಲಿ, ಚಂಡೀಗಢದಲ್ಲೂ ಈ ಕಂಪೆನಿಗಳ ಕಚೇರಿಗಳಿವೆ. ಹೀಗಿದ್ದೂ ಈ ಬಗ್ಗೆ ಯಾವ ಹೇಳಿಕೆಯನ್ನೂ ಬಿಜೆಪಿ ಹೊರಡಿಸುತ್ತಿಲ್ಲವೇಕೆ? ಅಥವಾ ಬಿಜೆಪಿಯ ಉದ್ದೇಶವು ಭಾರತೀಯರನ್ನು ಗೋಮಾಂಸ ಸೇವನೆಯಿಂದ ತಡೆಯುವುದು ಮಾತ್ರವೇ, ವಿದೇಶಗಳಿಗೆ ರಫ್ತು ಮಾಡುವುದರಿಂದ ತೊಂದರೆಯಿಲ್ಲ ಎಂದೇ?
 ದುರಂತ ಏನೆಂದರೆ, ಗೋಮಾಂಸದ ರಫ್ತಿನಲ್ಲಿ ದೇಶ ಬ್ರೆಝಿಲನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ತಲುಪಿದ ಸುದ್ದಿ ಪ್ರಕಟವಾದ ಬೆನ್ನಲ್ಲೇ ಈ ದೇಶದಲ್ಲಿ ಹೆಣ್ಣಿನ ಸಂತತಿ ತೀವ್ರವಾಗಿ ನಶಿಸುತ್ತಿದೆಯೆಂಬ ಸುದ್ದಿ ಪ್ರಕಟವಾಗಿದೆ. 20ರ ಪ್ರಾಯದ 5.63 ಕೋಟಿ ಯುವಕರಿಗೆ ಅದೇ ಪ್ರಾಯದ ಯುವತಿಯರು ಕೇವಲ 2.02 ಕೋಟಿಯಷ್ಟೇ ಈ ದೇಶದಲ್ಲಿದ್ದಾರೆ. 30 ಮತ್ತು 40ರ ಪ್ರಾಯದ ಪುರುಷರಿಗೂ ಮತ್ತು ಅದೇ ಪ್ರಾಯದ ಮಹಿಳೆಯರಿಗೂ ಹೋಲಿಸಿದರೂ ಅಲ್ಲೂ ವಿಪರೀತ ಅಂತರ ಕಂಡುಬರುತ್ತಿದೆ. ಈ ವ್ಯತ್ಯಾಸ ಎಷ್ಟು ಗಂಭೀರ ಮಟ್ಟದಲ್ಲಿದೆಯೆಂದರೆ, ಮದುವೆ ವಯಸ್ಸಿನ 4.12 ಕೋಟಿ ಯುವಕರಿಗೆ ವಧುಗಳೇ ಇಲ್ಲ. 1970ರಿಂದ 1990ರ ನಡುವೆ ವ್ಯಾಪಕ ಪ್ರಮಾಣದಲ್ಲಿ ನಡೆದ ಭ್ರೂಣಹತ್ಯೆಯ ಪರಿಣಾಮ ಇದು. ಇವತ್ತೂ ಹೆಣ್ಣು ಭ್ರೂಣದ ಮೇಲೆ ಅಸಡ್ಡೆಯಿದೆ. ಗಂಡು ಭ್ರೂಣಕ್ಕೆ ವಿಪರೀತ ಮಹತ್ವವಿದೆ. ಅಲ್ಲದೇ ಜಾನುವಾರು ಹತ್ಯೆಗೆ 10 ವರ್ಷಗಳ ಶಿಕ್ಷೆಯಿರುವ ಈ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆಗೆ ಈ ಯಾವ ಬೆದರಿಕೆಯೂ ಇಲ್ಲ. ಅಂದಹಾಗೆ, ಗೋವಿನ ಸಾಗಾಟ ಅಕ್ರಮವೋ ಸಕ್ರಮವೋ ಎಂಬುದನ್ನು ತಪಾಸಿಸುವುದಕ್ಕೆ ಇಲ್ಲಿ ಪೊಲೀಸರಷ್ಟೇ ಅಲ್ಲ, ಖಾಸಗಿ ತಂಡಗಳೂ ಇವೆ. ಅದಕ್ಕಾಗಿ ರಾತ್ರಿ ನಿದ್ದೆಗೆಟ್ಟು ಕಾಯುವವರಿದ್ದಾರೆ. ಹಲ್ಲೆ ನಡೆಸುವವರಿದ್ದಾರೆ. ಕಸಾಯಿಖಾನೆಗಳಿಗೆ ನುಗ್ಗಿ ದಾಂಧಲೆ ನಡೆಸುವವರಿದ್ದಾರೆ. ಆದರೆ ಹೆಣ್ಣು ಭ್ರೂಣಕ್ಕೆ ಈ ಯಾವ ರಕ್ಷಣೆಯೂ ಇಲ್ಲ. ಭ್ರೂಣ ಹತ್ಯೆ ನಡೆಸುವ ತಾಣಗಳ ಮೇಲೆ ದಾಳಿ ನಡೆಸುವವರಿಲ್ಲ. ಎಲ್ಲಿ ಭ್ರೂಣ ಹತ್ಯೆ ನಡೆಯುತ್ತಿದೆ ಎಂದು ನಿದ್ದೆಗೆಟ್ಟು ಕಾಯುವವರಿಲ್ಲ. ಅಷ್ಟಕ್ಕೂ, ಕಾನೂನನ್ನು ಕೈಗೆತ್ತಿಕೊಳ್ಳುವುದು ಗೋವಿನ ವಿಷಯದಲ್ಲೂ ಭ್ರೂಣದ ವಿಷಯದಲ್ಲೂ ಅಪರಾಧವೇ. ಆದರೆ ಗೋವಿನ ವಿಷಯದಲ್ಲಿ ಈ ಅಪರಾಧವನ್ನು ಎಗ್ಗಿಲ್ಲದೇ ನಡೆಸುವವರು ಭ್ರೂಣಹತ್ಯೆಯ ಬಗ್ಗೆ ಯಾವ ಅಜೆಂಡಾವನ್ನೂ ಹೊಂದಿಲ್ಲ ಅನ್ನುವುದು ಏನನ್ನು ಸೂಚಿಸುತ್ತದೆ?
 ಗೋಮಾಂಸದ ರಫ್ತಿನಲ್ಲಿ ವೃದ್ಧಿ ಮತ್ತು ಹೆಣ್ಣಿನ ಸಂಖ್ಯೆಯಲ್ಲಿ ಕುಸಿತ - ನಿಜವಾಗಿ ಇವು ನಮ್ಮನ್ನು ಇವತ್ತು ತೀವ್ರವಾಗಿ ಕಾಡಬೇಕಿದೆ. ಗೋಮಾಂಸದಲ್ಲಿ ವೃದ್ಧಿಯಾಗಬಾರದೆಂಬುದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಬಯಕೆ. ಆದರೆ ಅದರಲ್ಲಿ ವೃದ್ಧಿಯಾಗುತ್ತಿದೆ. ಹೆಣ್ಣು ಭ್ರೂಣದ ಸಂಖ್ಯೆಯಲ್ಲಿ ಕುಸಿತವಾಗಬಾರದೆಂಬುದೂ ಆಡಳಿತದ ಬಯಕೆ. ಆದರೆ ಅದರಲ್ಲಿ ಕುಸಿತವಾಗುತ್ತಿದೆ. ಏನಿದರ ಅರ್ಥ? ಇದು ಸೂಚಿಸುವುದೇನನ್ನು? ಸರಕಾರ ಪ್ರಾಮಾಣಿಕವಾಗಿಲ್ಲ ಎಂಬುದರ ಹೊರತು ಬೇರೆ ಏನೆಂದು ಇದನ್ನು ವಿಶ್ಲೇಷಿಸಬೇಕು?

Wednesday 22 April 2015

  ಘರ್‍ವಾಪಸಿಗೆ ನಿಜ ಮಾದರಿಯನ್ನು ತೋರಿಸಿಕೊಟ್ಟ ಮುಸ್ಲಿಮ್ ವಿದ್ವಾಂಸರು

    ಸಂಘಪರಿವಾರದ ಘರ್‍ವಾಪಸಿ ಮತ್ತು ಕಾಂಗ್ರೆಸ್‍ನ ಜವಿೂನು ವಾಪಸಿಯ ಮಧ್ಯೆ ಒಂದು ಮಾದರಿ ‘ವಾಪಸಿ'ಯನ್ನು ಮುಸ್ಲಿಮ್ ವಿದ್ವಾಂಸರು ಈ ದೇಶಕ್ಕೆ ಪರಿಚಯಿಸಿದ್ದಾರೆ. ಉತ್ತರ ಪ್ರದೇಶದ ರಾಂಪುರದಲ್ಲಿರುವ ವಾಲ್ಮೀಕಿ ಸಮುದಾಯದ ಸುಮಾರು 800 ಕುಟುಂಬಗಳು ಇಸ್ಲಾಮ್‍ಗೆ ಮತಾಂತರವಾಗಿರುವುದಾಗಿ ಕಳೆದ ವಾರ ಘೋಷಿಸಿದುವು. ಸರಕಾರಿ ಜಾಗದಲ್ಲಿ ಅಕ್ರಮವಾಗಿ ಗುಡಿಸಲುಗಳನ್ನು ಕಟ್ಟಿ ಇವರು ವಾಸಿಸುತ್ತಿದ್ದು, ಜಾಗ ತೆರವು ಮಾಡಲು ನಗರ ಪಾಲಿಗೆ ಆದೇಶಿಸಿತ್ತು. ಇಲ್ಲಿ  ಸಚಿವ ಅಝಂಖಾನ್‍ರು ಶಾಪಿಂಗ್‍ಮಾಲ್ ನಿರ್ಮಿಸುತ್ತಾರೆಂಬ ಪುಕಾರೂ ಹಬ್ಬಿತ್ತು. ‘ತಾವು ಇಸ್ಲಾಮ್‍ಗೆ ಮತಾಂತರವಾದರೆ ಅಝಂಖಾನ್‍ರು ತೆರವು ಕಾರ್ಯವನ್ನು ಸ್ಥಗಿತಗೊಳಿಸಬಹುದು’ ಎಂದು ನಂಬಿ ಅವರು ಇಸ್ಲಾಮ್ ಸ್ವೀಕಾರದ ಘೋಷಣೆ ಮಾಡಿದ್ದರು. ವಿಶೇಷ ಏನೆಂದರೆ, ಈ ಕುಟುಂಬಗಳಿಗೆ ಮತಾಂತರದ ವಿಧಿ-ವಿಧಾನಗಳನ್ನು ಹೇಳಿಕೊಡುವುದಕ್ಕೆ ಯಾವೊಬ್ಬ ಮುಸ್ಲಿಮ್ ವಿದ್ವಾಂಸರೂ ಬರಲೇ ಇಲ್ಲ. ಕೊನೆಗೆ ಮುಸ್ಲಿಮರ ಸಾಂಪ್ರದಾಯಿಕ ಟೋಪಿಯನ್ನು ಸ್ವಯಂ ಧರಿಸಿಕೊಳ್ಳುವ ಮೂಲಕ ಅವರೆಲ್ಲ ಮತಾಂತರವಾಗಿರುವುದಾಗಿ ಘೋಷಿಸಿದರು. ನಿಜವಾಗಿ, ಇದೊಂದು ಐತಿಹಾಸಿಕ ಕ್ಷಣ. ಸಂಘಪರಿವಾರದ ಘರ್‍ವಾಪಸಿಗೆ ಎದುರಾದ ಬಹುದೊಡ್ಡ ಮುಖಭಂಗ. ಇದಕ್ಕಿಂತ ಮೊದಲು ಸಂಘಪರಿವಾರವು ಘರ್‍ವಾಪಸಿಯ ಹೆಸರಲ್ಲಿ ಮತಾಂತರದ ಹಲವಾರು ಕಾರ್ಯಕ್ರಮಗಳನ್ನು ಈ ದೇಶದ ವಿವಿಧ ರಾಜ್ಯಗಳಲ್ಲಿ ಹಮ್ಮಿಕೊಂಡಿತ್ತು. ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದ ನೂರಾರು ಮಂದಿ ಹಿಂದೂ ಧರ್ಮಕ್ಕೆ ಮತಾಂತರವಾಗಿರುವುದಾಗಿಯೂ ಅದು ಹೇಳಿಕೊಂಡಿತ್ತು. ಆದರೆ ಆ ಬಳಿಕದ ಸುದ್ದಿಗಳು ಈ ವಾಪಸಿ ಎಷ್ಟು ಧರ್ಮವಿರೋಧಿ ಎಂಬುದನ್ನೂ ಸಾರಿತ್ತು. ಜನರು ರೇಶನ್ ಕಾರ್ಡ್‍ಗಾಗಿ, ಗುಡಿಸಲು ಉಳಿಸುವುದಕ್ಕಾಗಿ, ವಿೂಸಲಾತಿ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದಕ್ಕಾಗಿ.. ಹೀಗೆ ವಿವಿಧ ಷರತ್ತುಗಳನ್ನು ವಿಧಿಸಿ ಇಂಥದ್ದೊಂದು ವಾಪಸಿಗೆ ಒಪ್ಪಿಕೊಂಡಿದ್ದರು ಎಂಬುದೂ ಬಹಿರಂಗವಾಗಿತ್ತು. ಕೂಲಿ ಕೆಲಸ ಮಾಡಿ ಬದುಕುವ ಬಡವರು ತಮ್ಮ ಬದುಕು ಉಜ್ವಲವಾಗುವ ನಿರೀಕ್ಷೆಯಿಂದ ಹಣೆಗೆ ವಿಭೂತಿ ಹಚ್ಚಿಕೊಳ್ಳಲು ಸಿದ್ಧವಾದ ಹೃದಯ ವಿದ್ರಾವಕ ವಾಪಸಿ ಅದು. ಈ ವಾಪಸಿಯಲ್ಲಿ ಭಾಗವಹಿಸಿದವರು ಬಳಿಕ ಮಸೀದಿಗೆ ಹೋಗಿ ನಮಾಝ್ ಮಾಡಿದ ಬಗ್ಗೆಯೂ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗಿದ್ದುವು. ಇದೀಗ ಮುಸ್ಲಿಮ್ ವಿದ್ವಾಂಸರು ಘರ್‍ವಾಪಸಿಯ ಮಾದರಿ ರೂಪವನ್ನು ಸಮಾಜದ ಮುಂದಿಟ್ಟಿದ್ದಾರೆ. ಆಮಿಷ ಅಥವಾ ಸ್ವಾರ್ಥ ಉದ್ದೇಶದಿಂದ ಆಗುವ ವಾಪಸಿಯು ಧರ್ಮವಿರೋಧಿ ಎಂಬುದನ್ನು ಅವರು ಬಹಿರಂಗವಾಗಿಯೇ ಸಾರಿದ್ದಾರೆ. ಅಂದಹಾಗೆ, ಸಂಖ್ಯೆಯನ್ನು ಹೆಚ್ಚುಗೊಳಿಸುವುದು ಮತಾಂತರದ ಉದ್ದೇಶ ಅಲ್ಲ, ಆಗಬಾರದು ಕೂಡ. ಓರ್ವ ವ್ಯಕ್ತಿ ಒಂದು ಸಿದ್ಧಾಂತದಿಂದ ಇನ್ನೊಂದು ಸಿದ್ಧಾಂತಕ್ಕೆ ಆಕರ್ಷಿತಗೊಳ್ಳಬೇಕು. ಅದನ್ನು ಅಧ್ಯಯನ ನಡೆಸಬೇಕು. ಬಳಿಕ ಸ್ವಇಚ್ಛೆಯಿಂದ ಇಷ್ಟದ ಸಿದ್ಧಾಂತವನ್ನು ಸಮಾಜದ ಮುಂದೆಯೋ ವ್ಯವಸ್ಥೆಯ ಮುಂದೆಯೋ ಘೋಷಿಸಬೇಕು. ಆದರೆ, ಸಂಘಪರಿವಾರದ ಘರ್‍ವಾಪಸಿ ಇದಕ್ಕೆ ವಿರುದ್ಧವಾಗಿತ್ತು. ಆ ವಾಪಸಿಯಲ್ಲಿ ಆಮಿಷವಷ್ಟೇ ಇತ್ತು, ಅಧ್ಯಯನಕ್ಕೆ ಮಹತ್ವವೇ ಇರಲಿಲ್ಲ. ಆದ್ದರಿಂದಲೇ ರಾಂಪುರದ ಘಟನೆಯನ್ನು ಘರ್‍ವಾಪಸಿಗೆ ಆದ ಬಹುದೊಡ್ಡ ಹೊಡೆತವೆಂದು ಹೇಳಬೇಕಾಗಿದೆ.
  ಅಷ್ಟಕ್ಕೂ, ಸಂಘಪರಿವಾರವು ಅದ್ದೂರಿಯಾಗಿ ಆರಂಭಿಸಿರುವ ಘರ್ ವಾಪಸಿಯ ಹಿಂದೆ ಇರುವ ನಿಜವಾದ ಉದ್ದೇಶ ಮತಾಂತರ ಎಂದು ಖಚಿತವಾಗಿ ಹೇಳುವಂತಿಲ್ಲ. ಒಂದುಕಡೆ, ದನದ ಮಾಂಸವನ್ನು ಬಹಿರಂಗವಾಗಿಯೇ ಸೇವಿಸುವ ಪ್ರತಿಭಟನಾ ಕಾರ್ಯಕ್ರಮಗಳು ಹಿಂದೂ ಧರ್ಮದಲ್ಲಿ ಗುರುತಿಸಿಕೊಂಡವರಿಂದಲೇ ಏರ್ಪಡುತ್ತಿವೆ. ತಾಳಿ ಕಿತ್ತೊಗೆಯುವ ಪ್ರತಿಭಟನೆಗಳು ನಡೆಯುತ್ತಿವೆ. ಪಂಕ್ತಿಬೇಧ, ಮಡೆಸ್ನಾನ ಸಹಿತ ಅಸ್ಪೃಶ್ಯತಾ ಆಚರಣೆಗಳ ವಿರುದ್ಧ ವಿರೋಧದ ಧ್ವನಿಗಳು ತೀವ್ರವಾಗುತ್ತಿವೆ. ಅಲ್ಲದೇ, ಮೋದಿಯವರ ಆಡಳಿತದಲ್ಲಿ ಹೇಳಿಕೊಳ್ಳಬಹುದಾದ ಸುಖದ ಅನುಭವವೂ ಜನರಿಗೆ ಆಗಿಲ್ಲ. ಕಪ್ಪು ಹಣ ಇನ್ನೂ ವಾಪಸಾಗಿಲ್ಲ. ಅತ್ಯಾಚಾರವೂ ನಿಂತಿಲ್ಲ. ಮಠ, ಮಂದಿರಗಳು ತಪ್ಪಾದ ಕಾರಣಕ್ಕೆ ಸುದ್ದಿಯಾಗುತ್ತಿವೆ. ಇಂಥ ಸಂದರ್ಭದಲ್ಲಿ ಜನರು ವಿಚಲಿತಗೊಳ್ಳದಂತೆ ನೋಡಿಕೊಳ್ಳಬೇಕಾದರೆ ಘರ್‍ವಾಪಸಿ, ಗೋಹತ್ಯೆಯಂಥ ಕಾರ್ಯಕ್ರಮಗಳನ್ನು ಚರ್ಚಾ ವಸ್ತುವಾಗಿ ಮುನ್ನೆಲೆಗೆ ತರಬೇಕಾದ ಅಗತ್ಯ ಬಹಳವೇ ಇದೆ. ಘರ್‍ವಾಪಸಿಯಲ್ಲಿ ಜನರು ಗಮನ ನೆಟ್ಟರೆ ‘ಹಣ ವಾಪಸಿ' ಮರೆತು ಹೋಗುತ್ತದೆ. ಗೋವನ್ನು ಕೇಂದ್ರೀಕರಿಸಿ ಚರ್ಚೆ ಆರಂಭಿಸಿದರೆ ಮುಸ್ಲಿಮ್ ವಿರೋಧಿ ವಾತಾವರಣವೊಂದನ್ನು ಕಟ್ಟಿ ಬೆಳೆಸುವುದಕ್ಕೆ ಸುಲಭವಾಗುತ್ತದೆ. ಬಿಜೆಪಿಯ ಸಂಸದರು ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಾ ಇರುವುದರ ಹಿಂದೆ ಇಂಥದ್ದೊಂದು ರಹಸ್ಯ ಉದ್ದೇಶ ಇರಬಹುದೋ ಎಂಬ ಅನುಮಾನ ಕಾಡುವುದು ಈ ಎಲ್ಲ ಕಾರಣಗಳಿಂದಲೇ. ಈ ರಾಜಕಾರಣಿಗಳು ತಲೆಗೊಂದು ಮಾತಾಡುತ್ತಿರುವಂತೆಯೇ ಮೋದಿ ಸರಕಾರವು ತೈಲ ಮಾರುಕಟ್ಟೆಯನ್ನು ಮುಕ್ತಗೊಳಿಸಿತು. ಅವಸರವಸರವಾಗಿ ಭೂಸ್ವಾಧೀನ ಕಾಯ್ದೆಯನ್ನು ತಯಾರಿಸಿತು. ಭಾರತಕ್ಕೆ ಮಾರಕ ಆಗಬಹುದಾದ ರೀತಿಯಲ್ಲಿ ಅಮೇರಿಕದೊಂದಿಗೆ ಅಣು ಒಪ್ಪಂದಕ್ಕೆ ಸಹಿ ಹಾಕಿತು. ಅಲ್ಲದೇ ಇದೀಗ, ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ನೂರಾರು ವರ್ಷಗಳಿಂದ ಸಂಗ್ರಹವಾಗಿರುವ ಟನ್ನುಗಟ್ಟಲೆ ಚಿನ್ನವನ್ನು ಬ್ಯಾಂಕುಗಳಲ್ಲಿ ಡಿಪಾಸಿಟ್ ಇಟ್ಟು ಅದರ ಬದಲಿಗೆ ದೇವಸ್ಥಾನಗಳಿಗೆ ಸುವರ್ಣ ಸರ್ಟಿಫಿಕೇಟು ಕೊಡುವ ಮತ್ತು ಆ ಭಾರೀ ಚಿನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಚಿನ್ನದ ಆಮದನ್ನು ಕಡಿಮೆ ಮಾಡುವ ಯೋಜನೆಯನ್ನೂ ಅದು ತಯಾರಿಸಿದೆ. ನಿಜವಾಗಿ, ದೇವಸ್ಥಾನಗಳ ಚಿನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಈ ಏಕೈಕ ಯೋಜನೆಯೇ ಬಿಜೆಪಿಯನ್ನು ಹಿಂದೂ ವಿರೋಧಿ ಎಂದು ಘೋಷಿಸುವುದಕ್ಕೆ ಧಾರಾಳ ಸಾಕು. ಒಂದು ವೇಳೆ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಇಂಥದ್ದೊಂದು ಯೋಜನೆ ರೂಪ ಪಡೆಯುತ್ತಿದ್ದರೆ ಈ ದೇಶದ ಸರ್ವ ದೇವಸ್ಥಾನಗಳನ್ನೂ ಬಿಜೆಪಿ ಒಟ್ಟುಗೂಡಿಸುತ್ತಿತ್ತು. ಸಂಘಪರಿವಾರ ಬೀದಿಗಿಳಿಯುತ್ತಿತ್ತು. ಆದರೆ ಈಗ ಹಾಗೆ ಮಾಡುವಂತಿಲ್ಲ. ಮಾತ್ರವಲ್ಲ, ಇವು ದೇಶದ ಗಮನ ಸೆಳೆಯದಂತೆ ನೋಡಿಕೊಳ್ಳಬೇಕಾದ ತುರ್ತೂ ಇದೆ. ಬಹುಶಃ ಘರ್‍ವಾಪಸಿ, ಗೋ ಹತ್ಯೆಯಂಥ ವಿಷಯಗಳು ಭಾರೀ ಸದ್ದಿನೊಂದಿಗೆ ಅಖಾಡಕ್ಕೆ ಇಳಿದಿರುವುದರ ಹಿಂದೆ ಇಂಥ ಸಾಧ್ಯತೆಗಳು ಖಂಡಿತ ಇವೆ.
    ಹಾಗಂತ, ಧರ್ಮದಲ್ಲಿ ಬಲಾತ್ಕಾರವಿಲ್ಲ (2:256) ಎಂಬ ವಚನವನ್ನು ಪವಿತ್ರ ಕುರ್‍ಆನ್‍ಗೆ ಮಾತ್ರ ಸೀಮಿತಗೊಳಿಸಿ ನೋಡಬೇಕಿಲ್ಲ. ಅಂಥದ್ದೊಂದು ಆಶಯ ಸರ್ವ ಧರ್ಮಗಳದ್ದು. ಭಾರತಕ್ಕೆ ಇಸ್ಲಾಮ್ ಖಡ್ಗದೊಂದಿಗೆ ಆಗಮಿಸಿತು ಎಂದು ಹೇಳುವವರಿಗೂ ಖಡ್ಗವೊಂದು ಧರ್ಮವನ್ನು ಪ್ರಸಾರ ಮಾಡಲಾರದೆಂಬ ಸತ್ಯ ಖಂಡಿತ ಗೊತ್ತು. ಖಡ್ಗದೆದುರು ವಿಶ್ವಾಸ ಬದಲಿಸಿದವ ಖಡ್ಗದ ಮೊನೆ ಸರಿದಾಗ ಮತ್ತೆ ತನ್ನ ಸಹಜ ವಿಶ್ವಾಸಕ್ಕೆ ಮರಳುತ್ತಾನೆ. ಖಡ್ಗದ ವಿರುದ್ಧ ಬಂಡಾಯವೇಳುತ್ತಾನೆ. ಇದು ಮನುಷ್ಯ ಪ್ರಕೃತಿ. ಈ ಪ್ರಕೃತಿಗೆ ವಿರುದ್ಧವಾಗಿ ಈ ಹಿಂದಿನ ಭಾರತೀಯರು ಬದುಕಿದ್ದರು ಎಂದು ಹೇಳುವುದು ಅವರಿಗೆ ಮಾಡುವ ಅವಮಾನವಾಗುತ್ತದೆ. ನಿಜವಾಗಿ, ಈ ದೇಶದಲ್ಲಿ ಆಚರಣೆಯಲ್ಲಿದ್ದ ಅಸ್ಪೃಶ್ಯ ಪದ್ಧತಿಯೇ ಇಸ್ಲಾಮನ್ನೋ ಕ್ರೈಸ್ತ ಧರ್ಮವನ್ನೋ ಬೌದ್ಧ, ಬಸವ ಪಥವನ್ನೋ ಜನರು ಆರಿಸಿಕೊಳ್ಳಲು ಕಾರಣವಾಯಿತು.  ಅಸ್ಪೃಶ್ಯತೆಯ ವಿರುದ್ಧ ಜನರು ಪ್ರಕೃತಿ ಸಹಜವಾಗಿಯೇ ಬಂಡೆದ್ದರು. ಈ ಬಂಡಾಯ ಇವತ್ತೂ ಮುಂದುವರಿದಿದೆ. ವಿಧವೆಯರು ತೇರು ಎಳೆದದ್ದು, ಅರ್ಚಕಿಯರಾದದ್ದು, ತಾಳಿ, ದನದ ಮಾಂಸ, ದೇವಸ್ಥಾನ ಬಹಿಷ್ಕಾರ... ಮುಂತಾದ ರೂಪಗಳಲ್ಲಿ ಅದು ಹೊರಹೊಮ್ಮುತ್ತಲೂ ಇವೆ. ಆದರೆ ಈ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಮಂದಿ ಖಡ್ಗ ಮತ್ತು ಬಲಾತ್ಕಾರವನ್ನು ತೋರಿಸುತ್ತಿರುತ್ತಾರೆ. ಆದ್ದರಿಂದಲೇ, ರಾಂಪುರದ ಘಟನೆ ಮುಖ್ಯವಾಗುತ್ತದೆ. ಘರ್‍ವಾಪಸಿಗೆ ಸುಂದರ ಮಾದರಿಯನ್ನು ತೋರಿಸಿಕೊಟ್ಟ ಮುಸ್ಲಿಮ್ ವಿದ್ವಾಂಸರನ್ನು ಅಭಿನಂದಿಸಬೇಕೆನಿಸುತ್ತದೆ.

Tuesday 14 April 2015

ಪಂಡಿತರ ಮನೆ ನಿರ್ಮಾಣದ ಹೊಣೆಯನ್ನು ಮುಸ್ಲಿಮರೇ ವಹಿಸಿಕೊಳ್ಳಲಿ

ಬಲವಂತದ ವಲಸೆ, ಒಕ್ಕಲೆಬ್ಬಿಸುವಿಕೆ, ಬೆದರಿಕೆ.. ಮುಂತಾದ ಪದಗಳಿಗೆ ಮೇಲ್ನೋಟಕ್ಕೆ ಕಾಣುವ ಅರ್ಥಗಳಷ್ಟೇ ಇರುವುದಲ್ಲ. ಅಂಥ ಪದಗಳೊಳಗೆ ಕಣ್ಣೀರಿರುತ್ತದೆ. ಭಾವುಕತೆಯಿರುತ್ತದೆ. ಕರುಳು ಮಿಡಿಯುವ ಹೃದಯ ವಿದ್ರಾವಕ ಕತೆಗಳಿರುತ್ತವೆ. ಆದರೆ ಇವುಗಳಿಗೆ ‘ಪ್ರತ್ಯೇಕ ವಸತಿ ಪ್ರದೇಶ' ನಿರ್ಮಿಸುವುದು ಪರಿಹಾರವೇ? ಹಾಗಂತ ಬಿಜೆಪಿ ವಾದಿಸುತ್ತಿದೆ. 1990ರಲ್ಲಿ ಕಾಶ್ಮೀರದಿಂದ ದೊಡ್ಡ ಪ್ರಮಾಣದಲ್ಲಿ ದೆಹಲಿ ಮತ್ತಿತರೆಡೆಗೆ ಬಲವಂತದಿಂದ ವಲಸೆ ಹೋದ ಪಂಡಿತರಿಗೆ ಕಾಶ್ಮೀರದಲ್ಲಿಯೇ ಪ್ರತ್ಯೇಕ ವಸತಿ ಪ್ರದೇಶವನ್ನು ನಿರ್ಮಾಣ ಮಾಡಬೇಕೆಂದು ಅದು ವಾದಿಸುತ್ತಿದೆ. ಆದರೆ ಕಾಶ್ಮೀರಿಗಳು ಅದನ್ನು ಒಪ್ಪುತ್ತಿಲ್ಲ. ಅದನ್ನು ಇಸ್ರಲ್ ಮಾದರಿ ಎಂದವರು ಖಂಡಿಸಿದ್ದಾರೆ. ಇಸ್ರೇಲನ್ನು ಮಾದರಿಯಾಗಿ ಪರಿಗಣಿಸಿರುವ ಬಿಜೆಪಿಯು ಕಾಶ್ಮೀರಿ ಪಂಡಿತರ ಸಮಸ್ಯೆಗೆ ಇಸ್ರೇಲನ್ನು ಪರಿಹಾರವಾಗಿ ಕಂಡಿರುವುದರಲ್ಲಿ ಅಚ್ಚರಿ ಏನಿಲ್ಲ. ಫೆಲೆಸ್ತೀನಿಯರನ್ನು ಬಲವಂತದಿಂದ ಒಕ್ಕಲೆಬ್ಬಿಸಿ ಅಲ್ಲಿ ಯಹೂದಿಗಳನ್ನು ನೆಲೆಗೊಳಿಸುವ ಅಕ್ರಮ ಕೃತ್ಯದಲ್ಲಿ ಇಸ್ರೇಲ್ ಇವತ್ತು ತೊಡಗಿಸಿಕೊಂಡಿದೆ. ಮಾತ್ರವಲ್ಲ, ಈ ಭಾಗದಲ್ಲಿ ಬೃಹತ್ ಗೋಡೆಯನ್ನೆಬ್ಬಿಸಿ ಫೆಲೆಸ್ತೀನಿ ಮತ್ತು ಇಸ್ರೇಲಿಗರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಶಾಶ್ವತವಾಗಿ ವಿಭಜಿಸಿಬಿಡುತ್ತಿದೆ. ಯಹೂದಿಗಳಿಗೆ ಒದಗಿಸಲಾಗುವ ಸೌಲಭ್ಯಗಳಲ್ಲಿ ಸಣ್ಣ ಪ್ರಮಾಣವನ್ನೂ ವಿಭಜಿತ ಫೆಲೆಸ್ತೀನಿಗಳಿಗೆ ಅದು ಒದಗಿಸುತ್ತಿಲ್ಲ. ಜಾಗತಿಕವಾಗಿಯೇ ಖಂಡನೆಗೆ ಒಳಗಾಗಿರುವ ಈ ವಸತಿ ನಿರ್ಮಾಣ ಯೋಜನೆಯನ್ನು ಬಿಜೆಪಿ ಇದೀಗ ಕಾಶ್ಮೀರಿ ಪಂಡಿತರಿಗಾಗಿ ಜಾರಿ ಮಾಡುವ ಉಮೇದನ್ನು ವ್ಯಕ್ತಪಡಿಸುತ್ತಿದೆ. ಕಾಶ್ಮೀರದ ಹಿಂದೂಗಳು ಮತ್ತು ಮುಸ್ಲಿಮರು ಬೇರೆ ಬೇರೆ ವಸತಿ ಪ್ರದೇಶಗಳಲ್ಲಿ ಅನ್ಯರಂತೆ ಬದುಕುವ ಯೋಜನೆ ಇದು. ಹಿಂದೂಗಳಿಗೆ ಒಂದು ಪ್ರದೇಶ, ಮುಸ್ಲಿಮರಿಗೆ ಒಂದು ಪ್ರದೇಶ. ಆದರೆ ಈ ಯೋಜನೆ ಇಷ್ಟಕ್ಕೇ ನಿಲ್ಲುವ ಸಾಧ್ಯತೆಯಿಲ್ಲ. ಹಿಂದೂಗಳ ಮೇಲೆ ಮುಸ್ಲಿಮರು ದಾಳಿ ಮಾಡಿದರು ಎಂಬ ಆರೋಪ ಹೊರಿಸಿ ಬಳಿಕ ಇಸ್ರೇಲ್ ಎಬ್ಬಿಸಿದಂತೆ ಪ್ರತ್ಯೇಕತೆಯ ಗೋಡೆಯನ್ನು ಎಬ್ಬಿಸುವ ಉದ್ದೇಶವೂ ಇದರಲ್ಲಿರಬಹುದು. ಮುಸ್ಲಿಮ್ ತೀವ್ರವಾದಿಗಳಿಂದ ಹಿಂದೂಗಳನ್ನು ರಕ್ಷಿಸುವುದಕ್ಕೆ ಇದು ಅನಿವಾರ್ಯ ಎಂದೂ ಸಮರ್ಥಿಸಿಕೊಳ್ಳಬಹುದು. ಹೀಗೆ ಹಿಂದೂ-ಮುಸ್ಲಿಮರನ್ನು ಜೊತೆಯಾಗಿ ಬೆಳೆಸಿದ ಕಾಶ್ಮೀರಿವು ದ್ವೇಷದ ಗೋಡೆಯನ್ನೆಬ್ಬಿಸಿ ಶಾಶ್ವತ ವೈರತ್ವಕ್ಕೆ ನಾಂದಿಯನ್ನೂ ಹಾಡಬಹುದು. ಅಷ್ಟಕ್ಕೂ, ಜನರು ಬಲವಂತದಿಂದ ವಲಸೆ ಹೋಗಿರುವುದು ಕಾಶ್ಮೀರದಿಂದ ಮಾತ್ರವಲ್ಲ, ಗುಜರಾತ್, ಅಸ್ಸಾಮ್, ಉತ್ತರ ಪ್ರದೇಶ.. ಸಹಿತ ಈ ದೇಶದ ಹಲವು ರಾಜ್ಯಗಳು ಇಂಥ ವಲಸೆಗಳಿಗೆ ತುತ್ತಾಗಿವೆ. ಗುಜರಾತ್ ಹತ್ಯಾಕಾಂಡದ ಸಮಯದಲ್ಲಿ ಸಾವಿರಾರು ಮಂದಿ ತಮ್ಮ ಹುಟ್ಟಿದೂರಿನಿಂದ ವಲಸೆ ಹೋದರು. ಮನೆ, ಗದ್ದೆ, ಅಂಗಡಿ ಎಲ್ಲವನ್ನೂ ಕಳಕೊಂಡು ನಿರಾಶ್ರಿತ ಶಿಬಿರಗಳಲ್ಲಿ ವಾಸ ಹೂಡಿದರು. ಅವರನ್ನು ಮರಳಿ ಸ್ವೀಕರಿಸುವುದಕ್ಕೆ ಪರಿಸರದ ಮಂದಿ ಅಡ್ಡಿಪಡಿಸುತ್ತಿದ್ದಾರೆ. ಅವರ ಬೆಲೆಬಾಳುವ ಆಸ್ತಿಗಳು ಇತರರ ಪಾಲಾಗಿವೆ. ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ವಸತಿ ಪ್ರದೇಶದ ಯೋಜನೆಯನ್ನು ಮುಂದಿಟ್ಟಿರುವ ಬಿಜೆಪಿಇವರ ಕುರಿತೇಕೆ ಮಾತಾಡುತ್ತಿಲ್ಲ?   ಕಳೆದ 13 ವರ್ಷಗಳಿಂದ ಗುಜರಾತ್ ಮತ್ತಿತರೆಡೆ ವಲಸೆ ಜೀವನ ನಡೆಸುತ್ತಿರುವ ಗುಜರಾತಿ ಮುಸ್ಲಿಮರಿಗೆ ಬಿಜೆಪಿಯೇಕೆ ಇಂಥದ್ದೊಂದು ಯೋಜನೆಯನ್ನು ಪ್ರಕಟಿಸಿಲ್ಲ? ಇವರಿಗೆ ಹಿಂದೂ ಎಂಬ ಗುರುತು ಇಲ್ಲ ಎಂಬ ಕಾರಣಕ್ಕೋ? ಕಾಶ್ಮೀರದಲ್ಲಾದರೋ ಸಮ್ಮಿಶ್ರ ಸರಕಾರವಿದೆ. ಬಿಜೆಪಿಗೆ ಸ್ಪಷ್ಟ ಬಹುಮತವಿಲ್ಲ. ಇಷ್ಟಿದ್ದೂ ಇಂಥದ್ದೊಂದು ಯೋಜನೆಯನ್ನು ಅದು ಪ್ರಸ್ತುತಪಡಿಸುತ್ತದೆಂದಾದರೆ ಸ್ಪಷ್ಟ ಬಹುಮತವಿರುವ ಗುಜರಾತ್‍ನಲ್ಲೇಕೆ ಅದನ್ನು ಜಾರಿಗೊಳಿಸಿ ತೋರಿಸಬಾರದು?
 ನಿಜವಾಗಿ, ಕಾಶ್ಮೀರಿ ಪಂಡಿತರಿಗೆ ಮನೆ ನಿರ್ಮಿಸಿಕೊಡಬೇಕಾದದ್ದು ಸರಕಾರ ಅಲ್ಲ, ಕಾಶ್ಮೀರದ ಮುಸ್ಲಿಮರು. ಎಲ್ಲೆಲ್ಲ ಕಾಶ್ಮೀರಿ ಪಂಡಿತರು 25 ವರ್ಷಗಳ ಹಿಂದೆ ವಾಸವಿದ್ದರೋ ಅಲ್ಲೆಲ್ಲ  ಮುಸ್ಲಿಮರು ಮತ್ತೆ ಹೊಸದಾಗಿ ಪಂಡಿತ ಮನೆಗಳನ್ನು ಕಟ್ಟಿಕೊಡಬೇಕಾಗಿದೆ. ಅದಕ್ಕೆ ಸರಕಾರ ಸರ್ವ ರೀತಿಯ ನೆರವು ಮತ್ತು ಪ್ರೇರಣೆಯನ್ನು ನೀಡಬೇಕಾಗಿದೆ. ಹಾಗಂತ ಯಾರೆಲ್ಲ ಮನೆ ನಿರ್ಮಿಸಿ ಕೊಡುತ್ತಾರೋ ಅವರೆಲ್ಲ ಪಂಡಿತರನ್ನು ಓಡಿಸಿದವರು ಎಂದರ್ಥವಲ್ಲ. ಅದೊಂದು ಸೇವೆ. ತಮ್ಮ ಸಹೋದರರಿಗೆ ಕೊಡುವ ಪ್ರೀತಿಯ ಭರವಸೆ ಮತ್ತು ಕಾಣಿಕೆ. ತಮ್ಮ ಮನೆಯ ಪಕ್ಕ ಈ ಹಿಂದೆ ಪಂಡಿತರ ಮನೆಯಿದ್ದಿದ್ದರೆ ಮತ್ತು ವಲಸೆಯಿಂದಾಗಿ ಆ ಪ್ರದೇಶ ಖಾಲಿ ಬಿದ್ದಿದ್ದರೆ ಅಥವಾ ಅದನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ಮರಳಿ ಪಂಡಿತರಿಗೆ ಒಪ್ಪಿಸುವುದು ಬಹಳ ಅಗತ್ಯ. ಆಗಿರುವ ಪ್ರಮಾದಗಳನ್ನು ಪರಸ್ಪರ ಒಪ್ಪಿಕೊಂಡು ಮರಳಿ ಸೌಹಾರ್ದದ ಸೌಧ ಕಟ್ಟುವ ಕೆಲಸ ಎರಡೂ ಕಡೆಯಿಂದ ಆಗಬೇಕಿದೆ. ಇಂಥದ್ದೊಂದು ಆರಂಭ ಮಾತ್ರ ಕಾಶ್ಮೀರಿ ಪಂಡಿತ ಸಮಸ್ಯೆಗೆ ಪರಿಹಾರವೇ ಹೊರತು ಪ್ರತ್ಯೇಕ ವಸತಿ ಪ್ರದೇಶಗಳಲ್ಲ. ಹಿಂದೂ ಮತ್ತು ಮುಸ್ಲಿಮರು ಕಾಶ್ಮೀರದಲ್ಲಿ ಬಿಜೆಪಿಯೋ ಶಿವಸೇನೆ, ಸಂಘಪರಿವಾರವೋ ಹುಟ್ಟಿಕೊಂಡ ಬಳಿಕ ಕಾಣಿಸಿಕೊಂಡವರಲ್ಲ. ಈ ಪ್ರದೇಶದಲ್ಲಿ ಅವರು ಸ್ವಾತಂತ್ರ್ಯ ಪೂರ್ವದಲ್ಲೇ ಬದುಕುತ್ತಿದ್ದಾರೆ. ಕಾಶ್ಮೀರಿಗಳಿಗೆ ಪಂಡಿತರೂ ಹೊಸಬರಲ್ಲ, ಪಂಡಿತರಿಗೆ ಕಾಶ್ಮೀರಿಗಳೂ ಹೊಸಬರಲ್ಲ. ಈ ಸಹಜತೆಗೆ ಬಿಜೆಪಿಯ ಪ್ರತ್ಯೇಕ ವಸತಿ ಯೋಜನೆಯು ಖಂಡಿತ ಮಸಿ ಬಳಿಯುತ್ತದೆ. ಧಾರ್ಮಿಕ ನೆಲೆಯಲ್ಲಿ ಒಂದು ರಾಜ್ಯದ ಜನತೆಯನ್ನು ಆ ಕಡೆ-ಈ ಕಡೆ ಮಾಡಿಬಿಟ್ಟರೆ ಆ ಬಳಿಕ ಅಲ್ಲಿ ದ್ವೇಷದ ಹೊರತು ಶಾಂತಿ ನೆಲೆಗೊಳ್ಳಲು ಸಾಧ್ಯವೇ ಇಲ್ಲ.
 25 ವರ್ಷಗಳ ಹಿಂದೆ ವಲಸೆ ಹೋದ ಪಂಡಿತರಿಗೂ ಅವರ ಈಗಿನ ಹೊಸ ತಲೆಮಾರಿಗೂ ದೊಡ್ಡದೊಂದು ಅಂತರವಿದೆ. ಈ ಹೊಸ ತಲೆಮಾರು ಕಾಶ್ಮೀರಕ್ಕೆ ಭೇಟಿ ಕೊಟ್ಟಿದೆಯೋ ಅಲ್ಲಿ ನೆಲೆಸಲು ಉತ್ಸುಕವಾಗಿದೆಯೋ ಎಂಬುದೂ ಸ್ಪಷ್ಟವಿಲ್ಲ. ಕಾಶ್ಮೀರಿದಲ್ಲಿ ತಮ್ಮ ಭೂಮಿ, ಮನೆ, ಕೃಷಿ ತೋಟಗಳನ್ನು ಕೈ ಬಿಟ್ಟು ಬಂದ ಹಿರಿಯ ಪಂಡಿತರಂಥಲ್ಲ ಅವರ ಮಕ್ಕಳು. ಅವರು ದೆಹಲಿಯಲ್ಲೋ ಇನ್ನಿತರ ಪ್ರದೇಶಗಳಲ್ಲೋ ಹೊಸ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಕಾಶ್ಮೀರಕ್ಕೆ ಹೋಲಿಸಿದರೆ ಅವರು ಈಗ ಬದುಕುತ್ತಿರುವ ಪ್ರದೇಶಗಳು ಹೆಚ್ಚು ಸುರಕ್ಷಿತ. ಅವರು ತಮ್ಮ ಉದ್ಯೋಗ, ಮನೆಯನ್ನು ಬಿಟ್ಟು ಕಾಶ್ಮೀರಕ್ಕೆ ತೆರಳಬಹುದೇ ಎಂಬ ಅನುಮಾನವೊಂದು ಸಹಜವಾಗಿಯೇ ಇದೆ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಳವಳಿ ಈಗಲೂ ಜೀವಂತವಿದೆ. ಪ್ರವಾಹದ ಭೀತಿಯಿರುತ್ತದೆ. ಮಿಲಿಟರಿ ಮತ್ತು ಜನರ ನಡುವೆ ಆಗಾಗ ಸಂಘರ್ಷದ ವಾತಾವರಣ ನಿರ್ಮಾಣವಾಗುತ್ತದೆ. ಅಲ್ಲಿನ ಅರ್ಥವ್ಯವಸ್ಥೆ ಮತ್ತು ಉದ್ಯೋಗ ಲಭ್ಯತೆಯು ದೆಹಲಿ ಇನ್ನಿತರ ಪ್ರದೇಶಗಳಿಗೆ ಹೋಲಿಸಿದರೆ ಕಡಿಮೆಯೇ. ಇಂಥ ಸ್ಥಿತಿಯಲ್ಲಿ ವಲಸಿಗ ಪಂಡಿತ ಕುಟುಂಬವು ಕಾಶ್ಮೀರಕ್ಕೆ ಮರಳಲು ಮುಂದಾಗಬಹುದೇ? ಪ್ರತ್ಯೇಕ ವಸತಿ ಪ್ರದೇಶದ ಬಗ್ಗೆ ಮಾತಾಡುವವರು ಈ ಬಗ್ಗೆ ಎಷ್ಟಂಶ ಆಲೋಚಿಸಿದ್ದಾರೆ?
 ಕಾಶ್ಮೀರವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದು ಪಂಡಿತ ಸಮಸ್ಯೆಗೆ ಪರಿಹಾರ ಅಲ್ಲ,ಸ್ವತ ಅದುವೇ ಒಂದು ಸಮಸ್ಯೆ. ಮುಸ್ಲಿಮರ ನಡುವೆಯೇ ಹಿಂದೂಗಳ ಮನೆ ನಿರ್ಮಾಣವಾಗಬೇಕು. ಅದರ ನೇತೃತ್ವನ್ನು ಮುಸ್ಲಿಮರೇ ವಹಿಸಿಕೊಳ್ಳಬೇಕು. ಅಂಥದ್ದೊಂದು ಸೌಹಾರ್ದದ ವಾತಾವರಣ ನಿರ್ಮಾಣಕ್ಕಾಗಿ ಪ್ರಯತ್ನಗಳು ನಡೆಯಬೇಕು. ಕಾಶ್ಮೀರ ಹಿಂದೂ ಮತ್ತು ಮುಸ್ಲಿಮರದ್ದು. ಅದು ಹಾಗೆಯೇ ಉಳಿಯಲಿ.

Wednesday 8 April 2015

ದ್ವೇಷದ ಗೋಡೆಗೆ ಕನ್ನ ಕೊರೆದು ಭಗವದ್ಗೀತೆ ಓದಿದ ಮರ್ಯಮ್ ಸಿದ್ದೀಕಿ

     ಧರ್ಮಗಳ ನಡುವೆ ಅಧರ್ಮೀಯರು ಎಬ್ಬಿಸಿರುವ ಅನುಮಾನದ ಗೋಡೆಗೆ ಮುಂಬೈಯ ಮರ್ಯಮ್ ಸಿದ್ದಿಕಿ ಎಂಬ 12ರ ಬಾಲೆ ಪುಟ್ಟದೊಂದು ಕನ್ನ ಕೊರೆದು ಅತ್ತ ಜಿಗಿದಿದ್ದಾಳೆ. ಅಲ್ಲಿಂದ ಭಗವದ್ಗೀತೆಯನ್ನು ಎತ್ತಿಕೊಂಡು ಓದಿದ್ದಾಳೆ. ಇಸ್ಕಾನ್ ಸಂಸ್ಥೆಯು ಏರ್ಪಡಿಸಿದ ‘ಗೀತಾ ಚಾಂಪಿಯನ್ಸ್ ಲೀಗ್’ ಎಂಬ ಭಗವದ್ಗೀತಾ ಸ್ಪರ್ಧೆಯಲ್ಲಿ ಭಾಗವಹಿಸಿ 4 ಸಾವಿರ ಮಂದಿಯನ್ನು ಸೋಲಿಸಿ ಪ್ರಥಮ ಬಹುಮಾನ ಪಡೆದಿದ್ದಾಳೆ. ಈ ಬೆಳವಣಿಗೆ ಸಾರ್ವಜನಿಕವಾಗಿ ಎಷ್ಟು ಅಚ್ಚರಿ ಹುಟ್ಟಿಸಿದೆಯೆಂದರೆ, ಈ ಬಾಲೆ ದಿನದ ಬ್ರೇಕಿಂಗ್ ನ್ಯೂಸ್ ಆಗಿದ್ದಾಳೆ. ಮಾಧ್ಯಮಗಳು ಈಕೆಯನ್ನು ಮುಖಪುಟದಲ್ಲಿ ಕೂರಿಸಿ ಗೌರವಿಸಿವೆ. ‘ಧರ್ಮಗ್ರಂಥಗಳು ಮನುಷ್ಯರಿಗಾಗಿವೆ ಮತ್ತು ಅವುಗಳ ಅಧ್ಯಯನವು ನಮ್ಮನ್ನು ಇನ್ನಷ್ಟು ಉತ್ತಮರನ್ನಾಗಿಸುತ್ತದೆ' ಎಂಬ ಆಕೆಯ ಹೇಳಿಕೆಯನ್ನು ಅವು ಹೊಸ ತತ್ವಜ್ಞಾನವೆಂಬಂತೆ ಮಹತ್ವ ಕೊಟ್ಟು ಪ್ರಕಟಿಸಿವೆ. ನಿಜವಾಗಿ, ಈ ಬಾಲೆ ಕಳೆದು ವಾರದ ಹಿರೋಯಿನ್. ಆಕೆ ಕೆಲವು ಸತ್ಯಗಳನ್ನು ಜಗತ್ತಿನ ಮುಂದಿರಿಸಿದ್ದಾಳೆ. ಆ ಸತ್ಯ ಯಾವುದೆಂದರೆ, ಧರ್ಮಗಳ ನಡುವೆ ಪರಸ್ಪರ ವಿಶ್ವಾಸ ಮತ್ತು ಸ್ನೇಹ ಸಾಧ್ಯ ಎಂಬುದು. ದ್ವೇಷದ ಬೇಲಿಯನ್ನು ಕಿತ್ತೊಗೆದು ಧರ್ಮಗಳ ನಡುವೆ ಸೇತುವೆಯನ್ನು ಸ್ಥಾಪಿಸುವಂಥದ್ದು. ಹಿಂದೂ-ಮುಸ್ಲಿಮರ ನಡುವೆ ಸಹಜ ಸಂಬಂಧ ಅಸಾಧ್ಯ ಎಂದು ಪ್ರಚಾರ ಮಾಡುವವರನ್ನು ತರಾಟೆಗೆ ತೆಗೆದುಕೊಳ್ಳುವಂಥದ್ದು. ಈ ಬಾಲೆಯ ಈ ಪ್ರಯತ್ನಕ್ಕೆ ನಾವು ಅಭಿನಂದನೆಯನ್ನು ಸಲ್ಲಿಸಬೇಕಾಗಿದೆ.
 ದುರಂತ ಏನೆಂದರೆ, ಇವತ್ತು ಧರ್ಮದ ಬಗ್ಗೆ ಜ್ಞಾನಿಗಳಿಗಿಂತ ಅಜ್ಞಾನಿಗಳೇ ಹೆಚ್ಚು ಮಾತಾಡುತ್ತಿದ್ದಾರೆ ಅಥವಾ ಸುದ್ದಿಯಲ್ಲಿದ್ದಾರೆ. ಒಂದು ಧರ್ಮದವರ ಹತ್ಯಾಕಾಂಡವನ್ನು ಸಂಭ್ರಮಿಸುವಷ್ಟರ ಮಟ್ಟಿಗೆ ಈ ಅಜ್ಞಾನ ಮೇಲುಗೈಯನ್ನು ಪಡೆದಿದೆ. ಮುಸ್ಲಿಮರ ಬಾಂಗ್ ಅನ್ನು ನಿಷೇಧಿಸಬೇಕು ಎಂದು ಇವರು ಆಗ್ರಹಿಸುತ್ತಾರೆ. ಮದ್ರಸಗಳಲ್ಲಿ ಹಿಂದೂ ವಿರೋಧಿ ಪಾಠಗಳನ್ನು ಹೇಳಿಕೊಡಲಾಗುತ್ತದೆಂದು ಇವರು ಆರೋಪಿಸುತ್ತಾರೆ. ಮುಸ್ಲಿಮರ ಪ್ರತಿ ಚಟುವಟಿಕೆಗಳೂ ಹಿಂದೂ ಧರ್ಮದ ವೈರಿಯಂತೆ ಇಲ್ಲಿ ಬಿಂಬಿಸಲಾಗುತ್ತದೆ. ಅವರ ಜನನವೂ ಅಪಾಯಕಾರಿ. ಅವರ ಶೈಕ್ಷಣಿಕ ವಿೂಸಲಾತಿಯೂ ಅಪಾಯಕಾರಿ. ಅವರ ಆಹಾರ ಕ್ರಮದಿಂದ ಹಿಂದೂ ಧರ್ಮಕ್ಕೆ ತೊಂದರೆಯಿದೆ. ಅವರ ಕೌಟುಂಬಿಕ ರೀತಿ-ನೀತಿಗಳು ಈ ಮಣ್ಣಿಗೆ ಯೋಗ್ಯವಾಗಿಲ್ಲ. ಅವರು ಹಿಂದೂ ಸಂಸ್ಕøತಿಯನ್ನು ಅಳವಡಿಸಿಕೊಳ್ಳಬೇಕು. ಮುಸ್ಲಿಮ್ ಯುವಕರೊಂದಿಗೆ ಹಿಂದೂ ಯುವತಿಯರು ಮಾತಾಡಬಾರದು. ಮುಸ್ಲಿಮ್ ಮಹಿಳೆಯರ ಬುರ್ಖಾಕ್ಕೆ ನಿಷೇಧ ಹೇರಬೇಕು.. ಇಂತಹ ಆಗ್ರಹಗಳು ಹಿಂದೂ ಧರ್ಮದ ರಕ್ಷಕರೆಂದು ಹೇಳಿಕೊಳ್ಳುತ್ತಿರುವವರಿಂದ ಈ ದೇಶದಲ್ಲಿ ಆಗಾಗ ಕೇಳಿ ಬರುತ್ತಲೇ ಇದೆ. ಇವರ ಆಗ್ರಹ ಮತ್ತು ದೇಹಭಾಷೆಗಳು ಎಷ್ಟು ಏಕಪಕ್ಷೀಯವಾಗಿರುತ್ತವೆಯೆಂದರೆ, ಮುಸ್ಲಿಮರ ಮೇಲಾಗುವ ಪ್ರತಿ ಅನ್ಯಾಯವನ್ನೂ ಅವರು ಸಮರ್ಥಿಸಿಕೊಳ್ಳುತ್ತಾರೆ. ಹಿಂದೂ ನಾಮಧಾರಿಗಳು ಮಸೀದಿಯನ್ನು ಧ್ವಂಸ ಮಾಡಿದರೆ ಅಥವಾ ಮುಸ್ಲಿಮ್ ಹತ್ಯಾಕಾಂಡದಲ್ಲಿ ಭಾಗಿಯಾದರೆ ಅಥವಾ ಲೈಂಗಿಕ ಹಲ್ಲೆಯಲ್ಲಿ ಪಾಲ್ಗೊಂಡರೆ ಪ್ರತಿಭಟನೆ ಬಿಡಿ ಕನಿಷ್ಠ ಖಂಡನಾ ಹೇಳಿಕೆಯನ್ನೂ ಹೊರಡಿಸದ ಇವರು ಇದಕ್ಕೆ ತದ್ವಿರುದ್ಧ ಪ್ರಕರಣಗಳು ನಡೆದರೆ ಸಾಲು ಸಾಲು ಪ್ರತಿಭಟನೆಗಳನ್ನು ನಡೆಸುತ್ತಾರೆ. ದ್ವೇಷ ಭಾಷಣಗಳು ಏರ್ಪಾಡಾಗುತ್ತವೆ. ಹಿಂದೂ ಧರ್ಮ ಅಸ್ತಿತ್ವದಲ್ಲಿರುವುದೇ ಇಸ್ಲಾಮನ್ನು ದ್ವೇಷಿಸಲು ಎಂದು ಹೊಸ ತಲೆಮಾರು ಅಂದುಕೊಳ್ಳುವುದಕ್ಕೆ ಪೂರಕವಾದ ವಾತಾವರಣವೊಂದನ್ನು ನಿರ್ಮಿಸಲು ಕೆಲವು ಮಂತ್ರಿಗಳೂ ಸಾಧುಗಳೂ, ಸಾಧ್ವಿಗಳೂ, ವಿದ್ವಾಂಸರೂ, ಕಾರ್ಯಕರ್ತರೂ ಯಶಸ್ವಿಯಾಗುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಮರ್ಯಮ್ ಸಿದ್ದೀಕಿ ಭಗವದ್ಗೀತೆಯನ್ನು ಎತ್ತಿಕೊಂಡಿದ್ದಾಳೆ. ಅದನ್ನವಳು ಎಷ್ಟು ಸರಾಗವಾಗಿ ಓದಿದಳೆಂದರೆ, ಅದು ಇಸ್ಲಾಮಿನ ವಿರೋಧಿ ಎಂದು ಆಕೆಗೆ ಅನಿಸಿಯೇ ಇಲ್ಲ. ಆಕೆ ಅದನ್ನು ಓದಿದ ಬಳಿಕವೂ ಮುಸ್ಲಿಮಳಾಗಿಯೇ ಉಳಿದಿದ್ದಾಳೆ. ಅಂದರೆ, ಭಗವದ್ಗೀತೆಯು ಮುಸ್ಲಿಮರ ವಿರೋಧಿ ಖಂಡಿತ ಅಲ್ಲ. ಹಾಗಾದರೆ ಭಗವದ್ಗೀತೆಯ ಅನುಯಾಯಿಗಳೆಂದು ಹೇಳಿಕೊಳ್ಳುವವರು ಮುಸ್ಲಿಮರನ್ನು ದ್ವೇಷಿಸುವುದು ಯಾವುದರ ಆಧಾರದಲ್ಲಿ? ಅವರ ಧರ್ಮ ರಕ್ಷಣೆಯ ಅಜೆಂಡಾವನ್ನು ತಯಾರಿಸುವುದು ಯಾರು? ಅವರ ಉದ್ದೇಶವೇನು? ರಾಜಕೀಯ ಅಥವಾ ಇನ್ನಿತರ ಹಿತಾಸಕ್ತಿಗಳು ‘ಹಿಂದೂ ಧರ್ಮದ ರಕ್ಷಣೆ'ಯ ವೇಷದಲ್ಲಿ ಅಡಗಿಕೊಂಡಿವೆಯೇ? ಭಗವದ್ಗೀತೆ ಹೇಳದ ದ್ವೇಷದ ಮಾತುಗಳನ್ನು ಧರ್ಮದ ಹೆಸರಲ್ಲಿ ಹೇಳುತ್ತಾ ಅವರು ತಮ್ಮ ಗುರಿಯೆಡೆಗೆ ಧಾವಿಸುತ್ತಿದ್ದಾರೆಯೇ? ಅವರು ಯಾವ ಧರ್ಮಗ್ರಂಥದ ಪ್ರತಿನಿಧಿಗಳು?
 ‘ಧರ್ಮದಲ್ಲಿ ಬಲಾತ್ಕಾರವಿಲ್ಲ (ಪವಿತ್ರ ಕುರ್‍ಆನ್: 2: 256)’ ಎಂದು ಹೇಳಿದ ಧರ್ಮದಲ್ಲಿ ಗುರುತಿಸಿಕೊಂಡ ಬಾಲೆಯೋರ್ವಳು ಭಗವದ್ಗೀತೆಯನ್ನು ಓದುವ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಅಚ್ಚರಿಯದ್ದೇನೂ ಅಲ್ಲ. ಅದೊಂದು ಸಹಜ ಕ್ರಿಯೆ. ‘ಪವಿತ್ರ ಗ್ರಂಥವನ್ನು ಓದಲು ಬಯಸುವವರಿಗೆ ಅದಕ್ಕೆ ಅವಕಾಶ ಮಾಡಿಕೊಡಬೇಕೆಂದು (ಪವಿತ್ರ ಕುರ್‍ಆನ್ 9:6)’ ಹೇಳುವ ಆಕೆಯ ಧರ್ಮದ ಮಟ್ಟಿಗೆ ಭಗವದ್ಗೀತೆಯು ಅಧ್ಯಯನ ಮಾಡಲೇಬೇಕಾದ ಗ್ರಂಥ. ಅನುಯಾಯಿಗಳು ಸುಳ್ಳು ಹೇಳಬಹುದು, ಭ್ರಷ್ಟಾಚಾರಿ ಆಗಬಹುದು. ಮಸೀದಿ-ಮಂದಿರ, ಚರ್ಚ್‍ಗಳನ್ನು ಧ್ವಂಸಗೊಳಿಸಬಹುದು, ಅತ್ಯಾಚಾರವೆಸಗಬಹುದು. ಆದರೆ ಧರ್ಮಗ್ರಂಥಗಳು ಸುಳ್ಳು ಹೇಳಲಾರವು. ಭ್ರಷ್ಟಾಚಾರವೆಸಗಿದವ ಹಿಂದೂವಾದುದರಿಂದ ಅದು ಸರಿ, ಮುಸ್ಲಿಮ್ ಆದರೆ ತಪ್ಪು ಎಂದು ಭಗವದ್ಗೀತೆ ಹೇಳಲಾರದು. ಅತ್ಯಾಚಾರವೆಸಗಿದವನ ಹೆಸರು ಮುಹಮ್ಮದ್ ಆಗಿರುವುದರಿಂದ ಅದು ಕ್ಷಮಾರ್ಹ, ಗಣೇಶ ಆಗಿರುತ್ತಿದ್ದರೆ ಶಿಕ್ಷಾರ್ಹ ಎಂದು ಪವಿತ್ರ ಕುರ್‍ಆನ್ ಪ್ರತಿಪಾದಿಸದು. ‘ಅನ್ಯರ ಆರಾಧ್ಯರನ್ನು ತೆಗಳಬಾರದು' (ಪವಿತ್ರ ಕುರ್‍ಆನ್ 6:108) ಎಂದು ಹೇಳುವ ಧರ್ಮವು ಭಜನೆಯನ್ನು ವಿರೋಧಿಸಲು ಸಾಧ್ಯವೇ ಇಲ್ಲ. ‘ಧರ್ಮಗ್ರಂಥಗಳು ಬೇರೆ ಬೇರೆಯಾಗಿದ್ದರೂ ಸಮಾನ ವಿಷಯಗಳ ಬಗ್ಗೆ ಕುಳಿತು ಚರ್ಚಿಸೋಣ..’ ಎಂದು ಆಹ್ವಾನಿಸುತ್ತದೆ ಪವಿತ್ರ ಕುರ್‍ಆನ್. ಈ ಆಹ್ವಾನ ಅತ್ಯಂತ ಮುಕ್ತವಾದುದು. ಸಮಾಜದಲ್ಲಿ ಹಿಂದೂ ಮತ್ತು ಮುಸ್ಲಿಮರು ಜೊತೆಯಾಗಿ ವಿರೋಧಿಸಬೇಕಾದ ಅಸಂಖ್ಯ ಕೆಡುಕುಗಳಿವೆ. ಅನಾಚಾರಗಳಿವೆ. ಪವಿತ್ರ ಕುರ್‍ಆನ್ ಮತ್ತು ಭಗವದ್ಗೀತೆ ಸಮಾನವಾಗಿ ಖಂಡಿಸಿದ ಕೃತ್ಯಗಳಿವೆ. ಆದರೆ, ಹಿಂದೂ ಧರ್ಮದ ರಕ್ಷಣೆಯ ಮಾತನ್ನಾಡುವವರಿಗೆ ಇವಾವುವೂ ಕಾಣಿಸುತ್ತಲೇ ಇಲ್ಲ. ಅವರಿಗೆ ಬುರ್ಖಾ, ಗಡ್ಡ, ಮದುವೆ, ಮಕ್ಕಳು, ಮಸೀದಿ, ಆಹಾರ.. ಇವೇ ಕಾಣಿಸುತ್ತಿವೆ. ಇವನ್ನೇ ಹಿಂದೂ ಧರ್ಮದ ಸುರಕ್ಷತೆಗೆ ಅಡ್ಡಿ ಎಂದು ಹೇಳಲಾಗುತ್ತದೆ. ಮುಸ್ಲಿಮರಲ್ಲಿಯೂ ಇದೇ ಬಗೆಯ ತಿಳುವಳಿಕೆಯಿದೆ. ಹಿಂದೂ ಧರ್ಮವನ್ನು ಕೆಲವು ನಿರ್ದಿಷ್ಟ ವಿಷಯಗಳಿಗೆ ಸೀಮಿತಗೊಳಿಸಿ ಅವರು ನೋಡುತ್ತಾರೆ. ನಿಜವಾಗಿ, ಧರ್ಮ ಮತ್ತು ಅದು ಧ್ವನಿಸುವ ಅರ್ಥ ತೀರಾ ವಿಶಾಲವಾದುದು. ಅದು ಅರ್ಥವಾಗಬೇಕಾದರೆ ಧರ್ಮಗ್ರಂಥಗಳನ್ನು ಓದಲೇಬೇಕು. ವಿಷಾದ ಏನೆಂದರೆ, ಧರ್ಮರಕ್ಷಣೆಗಿಳಿದಿರುವ ಹೆಚ್ಚಿನವರು ಧರ್ಮಗ್ರಂಥಗಳನ್ನೇ ಓದಿಲ್ಲ. ಅದರ ವೈಶಾಲ್ಯತೆ ಮತ್ತು ಅದು ಪ್ರತಿಪಾದಿಸುವ ಸಹೋದರತೆ ಅವರಿಗೆ ಅರ್ಥವೂ ಆಗಿಲ್ಲ. ಆದ್ದರಿಂದ ಹಿಂದೂ ಮತ್ತು ಇಸ್ಲಾಮ್ ಧರ್ಮದ ರಕ್ಷಣೆಯೆಂದರೆ ಮಸೀದಿಯನ್ನೋ ಮಂದಿರವನ್ನೋ ಉರುಳಿಸುವುದು ಅಂದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮರ್ಯಮ್ ಸಿದ್ದೀಕಿಯ ಭಗವದ್ಗೀತೆಯನ್ನು ನಾವು ಎತ್ತಿಕೊಳ್ಳಬೇಕು. ಆಕೆ ಈ ಸುಳ್ಳಿನ ಗೋಡೆಗೆ ಕನ್ನ ಕೊರೆದು ಜಿಗಿದಿದ್ದಾಳೆ. ಈ ಕನ್ನದಿಂದ ಆಕೆಯಂತೆ ಇನ್ನಷ್ಟು ಮಂದಿ ಜಿಗಿಯಲಿ. ಕುರ್‍ಆನ್, ಭಗವದ್ಗೀತೆ, ಬೈಬಲ್ ಸಹಿತ ಎಲ್ಲ ಧರ್ಮಗ್ರಂಥಗಳನ್ನೂ ಓದುವ ಸಂದರ್ಭ ಸೃಷ್ಟಿಯಾಗಲಿ. ಮಾತ್ರವಲ್ಲ,  ಧರ್ಮಗಳ ನಡುವೆ ದ್ವೇಷದ ಗೋಡೆಯನ್ನೆಬ್ಬಿಸುವವರಿಗೆ ಸೋಲಾಗಲಿ.

Saturday 4 April 2015

ಅವರಲ್ಲದಿದ್ದರೆ ಇನ್ನಾರು ಯುವರ್ ಆನರ್?

     1987ರಲ್ಲಿ ಉತ್ತರ ಪ್ರದೇಶದ ವಿೂರತ್ ಜಿಲ್ಲೆಯ ಹಶೀಂಪುರ ಮತ್ತು ಪಕ್ಕದ ಮಲಿಯಾನ ಗ್ರಾಮಗಳಲ್ಲಿ ನಡೆದ ಹತ್ಯಾಕಾಂಡಗಳ ಪೈಕಿ ಒಂದರ ತೀರ್ಪು ಹೊರಬಿದ್ದಿದೆ. ಈ ತೀರ್ಪು ಎಷ್ಟು ಆಘಾತಕಾರಿಯಾಗಿದೆಯೆಂದರೆ, ತೀರ್ಪನ್ನು ಆಲಿಸಿದ ಸಂತ್ರಸ್ತರು ಬೀದಿಗಿಳಿದರು. ಕ್ಯಾಂಡಲ್ ಬೆಳಗಿಸಿ ವಿೂರತ್‍ನ ಬೀದಿಯಲ್ಲಿ ಮೌನ ಪ್ರತಿಭಟನೆ ನಡೆಸಿದರು. ಮನೆಯ ಬಾಗಿಲುಗಳಿಗೆ ಕಪ್ಪು ಬಾವುಟವನ್ನು ತೂಗು ಹಾಕಿದರು. ಇನ್ನು, ಮಲಿಯಾನ ಹತ್ಯಾಕಾಂಡದ ವಿಚಾರಣಾ ಪ್ರಕ್ರಿಯೆಯನ್ನು ನೋಡುವಾಗ, ಅಲ್ಲಿಗೂ ಈ ಕ್ಯಾಂಡಲ್‍ನ ಅಗತ್ಯ ಬರಬಹುದೆಂದೆನಿಸುತ್ತದೆ. ಕಪ್ಪು ಬಾವುಟವನ್ನು ತೂಗು ಹಾಕುವ ದಿನಗಳಿಗಾಗಿ ಅಲ್ಲಿನ ಬಾಗಿಲುಗಳು ಕಾಯುತ್ತಿರುವಂತೆ ಕಾಣಿಸುತ್ತಿದೆ. ಅಪರಾಧಿಗಳು ನ್ಯಾಯಾಲಯದಿಂದ ನಗುತ್ತಾ ಹೊರಬಂದ ಮತ್ತು ಸಂತ್ರಸ್ತರು ಕ್ಯಾಂಡಲ್ ಬೆಳಗಿಸಿ ಅಳುತ್ತಾ ಬೀದಿಯಲ್ಲಿ ನಡೆದ ಅಪರೂಪದ ಘಟನೆಯಿದು. ನ್ಯಾಯ ನಿರಾಕರಣೆಯ ಈ ಬೆಳವಣಿಗೆಗೆ ಏನೆನ್ನಬೇಕು? ಯಾರನ್ನು ಹೊಣೆ ಮಾಡಬೇಕು? ನ್ಯಾಯ ಪ್ರಕ್ರಿಯೆಯನ್ನೋ, ಅಧಿಕಾರಿಗಳನ್ನೋ, ರಾಜಕಾರಣಿಗಳನ್ನೋ ಅಥವಾ ಸಂತ್ರಸ್ತರನ್ನೋ?
 1987ರಲ್ಲಿ ಬಿಜೆಪಿಯ ರಾಮ ಜನ್ಮಭೂಮಿ ಆಂದೋಲನವು ಉತ್ತರ ಪ್ರದೇಶವನ್ನು ಸಾಕಷ್ಟು ಆವರಿಸಿತ್ತು. ಸಮಾಜವನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುತ್ತಾ ಧ್ರುವೀಕರಣದ ವಾತಾವರಣವನ್ನು ಹುಟ್ಟು ಹಾಕಿತ್ತು. ಅಲ್ಲಲ್ಲಿ ಸಣ್ಣ-ಪುಟ್ಟ ಕೋಮು ಘರ್ಷಣೆಗಳು ನಡೆಯುತ್ತಿದ್ದುವು. ವಿೂರತ್ ನಗರದಲ್ಲಿ ಈ ಕಾರಣದಿಂದಾಗಿ ಕಫ್ರ್ಯೂವನ್ನು ಹೇರಲಾಗಿತ್ತು. ಇಂಥ ಸ್ಥಿತಿಯಲ್ಲಿ ಮಾರ್ಚ್ 22ರಂದು ಮುಸ್ಲಿಮ್ ಬಾಹುಳ್ಯದ ಹಶೀಂಪುರಕ್ಕೆ ಪೊಲೀಸರು (PAC) ದಾಳಿ ಮಾಡಿ 50ರಷ್ಟು ಮಂದಿಯನ್ನು ಎತ್ತಿಕೊಂಡು ಹೋದರು. ಹಳದಿ ಬಣ್ಣದ ತಮ್ಮದೇ ಟ್ರಕ್‍ನಲ್ಲಿ ಅವರೆಲ್ಲರನ್ನೂ ತುಂಬಿಸಿಕೊಂಡು ನೇರ ಗಾಝಿಯಾಬಾದ್ ಜಿಲ್ಲೆಯ ಗಂಗಾ ಕಾಲುವೆಯ ಬಳಿ ನಿಲ್ಲಿಸಿ ಎಲ್ಲರಿಗೂ ಗುಂಡಿಕ್ಕಿದರು. ಬಳಿಕ ಕಾಲುವೆಗೆಸೆದರು. ಇದರಲ್ಲಿ 42 ಮಂದಿ ಸಾವಿಗೀಡಾದರು. ದುರಂತ ಏನೆಂದರೆ, ಈ ಪ್ರಕರಣದ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇ 9 ವರ್ಷಗಳ ಬಳಿಕ! ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದದ್ದೋ 2000ದಲ್ಲಿ - ಅಂದರೆ 13 ವರ್ಷಗಳ ಬಳಿಕ! ಈ 13 ವರ್ಷಗಳಲ್ಲಿ ಈ ಆರೋಪಿ ಪೊಲೀಸರು ಅವೇ ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಭಡ್ತಿ ಹೊಂದಿದ್ದಾರೆ. ಸರಕಾರವು ಇವರನ್ನು ಆರೋಪದ ಹಿನ್ನೆಲೆಯಲ್ಲಿ ವಜಾ ಮಾಡಿದ್ದೋ ಶಿಸ್ತು ಕ್ರಮ ಕೈಗೊಂಡಿದ್ದೋ ಇಲ್ಲವೇ ಇಲ್ಲ. ಈ ನಡುವೆ ಪ್ರಕರಣದ ವಿಚಾರಣೆಯನ್ನು ವಿೂರತ್‍ನಿಂದ 2002ರಲ್ಲಿ ದೆಹಲಿಯ ಸ್ಥಳೀಯ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಪುನಃ ಆರೋಪಪಟ್ಟಿ ಸಲ್ಲಿಕೆಗೆ 4 ವರ್ಷಗಳು ತಗುಲಿದುವು. ಹೀಗೆ ಘಟನೆ ನಡೆದು 28 ವರ್ಷಗಳಾದ ಬಳಿಕ ಮೊನ್ನೆ ಮಾರ್ಚ್ 23ರಂದು ಎಲ್ಲ 16 ಆರೋಪಿ ಪೊಲೀಸರನ್ನೂ ಬಿಡುಗಡೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. ವಿಚಾರಣಾ ಪ್ರಕ್ರಿಯೆಯು ಎಷ್ಟು ನಾಟಕೀಯವಾಗಿತ್ತೆಂದರೆ, ಪ್ರಮುಖ ಸಾಕ್ಷ್ಯಗಳೇ ದಿಢೀರ್ ಕಾಣೆಯಾಗಿದ್ದುವು. ಅನೇಕ ಪೊಲೀಸ್ ದಾಖಲೆಗಳು, ಹತ್ಯಾಕಾಂಡಕ್ಕೆ ಬಳಸಲಾದ ಶಸ್ತ್ರಾಸ್ತ್ರಗಳು ಮುಂತಾದ ಅನೇಕ ಪ್ರಬಲ ಸಾಕ್ಷ್ಯಗಳು ಕಾಣೆಯಾದ (Missing) ಪಟ್ಟಿಯಲ್ಲಿದ್ದುವು. ಹೀಗಿರುತ್ತಾ ಹಶೀಂಪುರದ ಮಂದಿ ಕ್ಯಾಂಡಲ್ ಹಿಡಿದು ತಲೆ ತಗ್ಗಿಸಿ ನಡೆಯುವುದರ ಹೊರತು ತೀರ್ಪನ್ನು ಸ್ವಾಗತಿಸುವ ಪ್ಲೇಕಾರ್ಡ್ ಹಿಡಿಯುವುದಕ್ಕೆ ಸಾಧ್ಯವೇ ಇರಲಿಲ್ಲ. ಅಂದಹಾಗೆ, ಈ ತೀರ್ಪಿನಿಂದ ತೀವ್ರ ನಿರಾಶೆಗೆ ಒಳಗಾಗಿರುವವರೆಂದರೆ ಮರಿಯಾನ ಗ್ರಾಮದ ಸಂತ್ರಸ್ತರು. ಅವರು ಸದ್ಯ ನ್ಯಾಯದ ಸರ್ವ ನಿರೀಕ್ಷೆಯನ್ನೂ ಕೈಬಿಟ್ಟು ಮಾಧ್ಯಮಗಳೊಂದಿಗೆ ಮಾತಾಡಿದ್ದಾರೆ. ಹಶೀಂಪುರ ಹತ್ಯಾಕಾಂಡದ ಮರುದಿನ ಮಾರ್ಚ್ 23ರ ರಾತ್ರಿ 2ರ ಹೊತ್ತಿಗೆ ಪೊಲೀಸರು ಗಲಭೆಕೋರ ಗುಂಪಿನೊಂದಿಗೆ ಮುಸ್ಲಿಮ್ ಬಾಹುಳ್ಯದ ಮಲಿಯಾನಕ್ಕೆ ದಾಳಿ ಮಾಡಿದರು. ಗ್ರಾಮವನ್ನು ಸಂಪರ್ಕಿಸುವ 5 ದಾರಿಗಳನ್ನೂ ಮುಚ್ಚಿದರು. ಬಳಿಕ ಪೊಲೀಸರು ಗುಂಡೆಸೆಯತೊಡಗಿದರು. ಗುಂಪು ಮನೆಗಳಿಗೆ ಬೆಂಕಿ ಇಕ್ಕಿತು. ಮನೆಯಿಂದ ಹೊರಬಂದವರನ್ನು ಇರಿಯಿತು. ಹೀಗೆ 87 ಮಂದಿ ಸಾವಿಗೀಡಾದರು. ವ್ಯಂಗ್ಯ ಏನೆಂದರೆ, ಈ ಪ್ರಕರಣದ ವಿಚಾರಣಾ ಪ್ರಕ್ರಿಯೆಯು ಇನ್ನೂ ಪ್ರಥಮ ಹಂತವನ್ನೇ ದಾಟಿಲ್ಲ. ಕಳೆದ 28 ವರ್ಷಗಳಲ್ಲಿ 800 ಬಾರಿ ವಿಚಾರಣೆಗಾಗಿ ದಿನಾಂಕವನ್ನು ಗೊತ್ತುಪಡಿಸಲಾಗಿದೆ. ಒಟ್ಟು 35 ಸಾಕ್ಷಿಗಳ ಪೈಕಿ ವಿಚಾರಣೆಗೊಳಗಾದದ್ದು ಮೂವರು ಮಾತ್ರ. ಅಲ್ಲದೇ 2011ರಲ್ಲಿ ಎಫ್.ಐ.ಆರ್. ದಿಢೀರ್ ಆಗಿ ಕಾಣೆಯಾಯಿತು. ಇದು 87 ಮಂದಿಯ ಹತ್ಯಾಕಾಂಡ ಪ್ರಕರಣದ ಸದ್ಯದ ಸ್ಥಿತಿ! ಇದಕ್ಕೆ ಏನೆನ್ನಬೇಕು? ಸಂತ್ರಸ್ತರ ಕೈಗೆ ಕ್ಯಾಂಡಲ್ ಕೊಟ್ಟು ತಲೆ ತಗ್ಗಿಸಿ ನಡೆದಾಡಿಸುವ ಈ ಸ್ಥಿತಿಯಿಂದ ವ್ಯವಸ್ಥೆಯನ್ನು ಯಾರು ಮತ್ತು ಹೇಗೆ ಮೇಲೆತ್ತಬೇಕು?
 ಒಂದು ಕಡೆ ದ್ವೇಷದ ಭಾಷೆಯಲ್ಲಿ ರಾಜಕಾರಣಿಗಳು ಮಾತಾಡುತ್ತಿದ್ದಾರೆ. ಇನ್ನೊಂದು ಕಡೆ ಈ ಭಾಷೆಯಲ್ಲಿ ಮತ್ತು ಅದು ಧ್ವನಿಸುವ ವಿಭಜನಕಾರಿ ಸಿದ್ಧಾಂತದಲ್ಲಿ ನಂಬಿಕೆಯಿಟ್ಟವರು ಪೊಲೀಸು ಠಾಣೆಗಳಲ್ಲಿ ತುಂಬಿಕೊಳ್ಳುತ್ತಿದ್ದಾರೆ. ಸಣ್ಣ-ಪುಟ್ಟ ಘರ್ಷಣೆಗಳಿಂದ ಹಿಡಿದು ಹತ್ಯಾಕಾಂಡಗಳ ವರೆಗೆ ಪೊಲೀಸರ ಪಾತ್ರವೇ ಶಂಕಿತಗೊಳ್ಳುತ್ತದೆ. ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಂತೂ ಇಡೀ ಪೊಲೀಸ್ ಇಲಾಖೆಯೇ ಅನುಮಾನದ ಮೊನೆಯಲ್ಲಿದೆ. ಹಾಗಂತ ಇದು ನಿರ್ದಿಷ್ಟ ರಾಜ್ಯಕ್ಕೆ ಅಂಟಿದ ಕಾಯಿಲೆಯಲ್ಲ. ನಮ್ಮ ರಾಜ್ಯದಲ್ಲಿಯೇ ಗೋಸಾಗಾಟ, ನೈತಿಕ ಪೊಲೀಸ್ ಗಿರಿ, ಕೋಮು ಘರ್ಷಣೆಯಂತಹ ಸಂದರ್ಭಗಳಲ್ಲಿ ಪೊಲೀಸರ ಪಾತ್ರ ಅನೇಕ ಬಾರಿ ಪ್ರಶ್ನೆಗೊಳಗಾಗಿವೆ. ತಮ್ಮ ಹೊಣೆಗಾರಿಕೆಯನ್ನು ಖಾಸಗಿ ಗುಂಪುಗಳಿಗೆ ವಹಿಸಿಕೊಟ್ಟಿರುವರೋ ಎಂದು ಅನುಮಾನಿಸುವ ರೀತಿಯಲ್ಲಿ ಅವರು ವರ್ತಿಸಿದ್ದಾರೆ. ಸಮಾಜ ವಿರೋಧಿ ಗುಂಪುಗಳು ಯಾವ ಭಯವೂ ಇಲ್ಲದೇ ಕಾನೂನು ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಪೊಲೀಸರ ಮೇಲಿನ ಶಂಕೆಯನ್ನು ದಿನೇ ದಿನೇ ಹೆಚ್ಚಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ಹಶೀಂಪುರ ಹತ್ಯಾಕಾಂಡದ ಬಗೆಗಿನ ತೀರ್ಪು ಸಂತ್ರಸ್ತರ ಪರ ಇರಲೇಬೇಕಾದ ಮತ್ತು ಆರೋಪಿ ಪೊಲೀಸರಿಗೆ ಶಿಕ್ಷೆ ಆಗಲೇಬೇಕಾದ ಅಗತ್ಯ ಬಹಳವೇ ಇತ್ತು. ಹಾಗೆ ಆಗಿರುತ್ತಿದ್ದರೆ ಸಂತ್ರಸ್ತರಲ್ಲಿ ನ್ಯಾಯದ ಬಗ್ಗೆ ನಿರೀಕ್ಷೆ ಹುಟ್ಟಿಕೊಳ್ಳುವುದಷ್ಟೇ ಅಲ್ಲ, ಹತ್ಯಾಕಾಂಡ ಮನಸ್ಥಿತಿಯ ಪೊಲೀಸರಲ್ಲಿ ಶಿಕ್ಷೆಯ ಬಗ್ಗೆ ಭಯವೂ ಮೂಡುತ್ತಿತ್ತು. ಆದರೆ ಹಶೀಂಪುರದ ತೀರ್ಪು ಈ ನಿರೀಕ್ಷೆಯನ್ನೇ ಸಾಯಿಸಿಬಿಟ್ಟಿದೆ. ಪೊಲೀಸ್ ಇಲಾಖೆ ಮತ್ತು ರಾಜಕಾರಣಿಗಳು ಮನಸ್ಸು ಮಾಡಿದರೆ ಯಾವ ಭೀಕರ ಕ್ರೌರ್ಯವೂ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂಬ ಅಪಾಯಕಾರಿ ಸಂದೇಶವನ್ನು ರವಾನಿಸಿದೆ. ಹಶೀಂಪುರ ಹತ್ಯಾಕಾಂಡದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದುದು ಕಾಂಗ್ರೆಸ್ ಸರಕಾರ. ಆ ಬಳಿಕ ಉತ್ತರ ಪ್ರದೇಶವನ್ನು ಬಹುಜನ ಸಮಾಜವಾದಿ ಪಕ್ಷ, ಸಮಾಜವಾದಿ ಸಹಿತ ಜಾತ್ಯತೀತರೆಂದು ಘೋಷಿಸಿಕೊಂಡ ಎಲ್ಲರೂ ಆಳಿದ್ದಾರೆ. ಆದರೆ, ಅವರಾರಿಗೂ ಹಶೀಂಪುರದ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. 42 ಮಂದಿಯನ್ನು ಆ ಪೊಲೀಸರು ಕೊಂದಿಲ್ಲವಾದರೆ ಕೊಂದವರಾರು ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಆದ್ದರಿಂದಲೇ, ವಿೂರತ್‍ನ ಬೀದಿಯಲ್ಲಿ ಮಾರ್ಚ್ 23ರಂದು ಕಾಣಿಸಿಕೊಂಡ ಕ್ಯಾಂಡಲ್‍ಗಳು ಮುಖ್ಯವಾಗುತ್ತವೆ ನ್ಯಾಯಾಲಯದ ತೀರ್ಪು ಸಂತ್ರಸ್ತರ ಪಾಲಿಗೆ ಕೆಲವೊಮ್ಮೆ ಹತ್ಯಾಕಾಂಡದಷ್ಟೇ ಬರ್ಬರವಾಗಬಹುದು ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ. ಇದು ಖಂಡಿತ ಆಘಾತಕಾರಿ.