Thursday 27 July 2017

ಸಮಾಜವಾದಿ ಮುಖ್ಯಮಂತ್ರಿಯ ಅಸಮವಾದ

       ಮದ್ಯ ಸೇವನೆಗೂ ಅಪರಾಧ ಜಗತ್ತಿಗೂ ನಡುವೆ ಇರುವ ಸಂಬಂಧ ಯಾವ ಬಗೆಯದು ಎಂಬುದನ್ನು ವಿವರಿಸಿ ಹೇಳಬೇಕಿಲ್ಲ. ಇತ್ತೀಚೆಗೆ ಅಗ್ನಿ ಶ್ರೀಧರ್ ಅವರ ಮನೆಯ ಮೇಲೆ ನಡೆದ ಪೊಲೀಸ್ ದಾಳಿಯ ಸಂದರ್ಭದಲ್ಲಿ ಮದ್ಯದ ಬಾಟಲಿಗಳು ಸದ್ದು ಮಾಡಿದ್ದುವು. ಕೇರಳದ ನಟಿಯ ಮೇಲೆ ಲೈಂಗಿಕ ಹಲ್ಲೆ ನಡೆಸಿದವರು ಮದ್ಯಪಾನಿಗಳಾಗಿದ್ದರು ಎಂಬ ಸುದ್ದಿ ಪ್ರಕಟವಾಗಿದೆ. ದೆಹಲಿಯ ನಿರ್ಭಯಳನ್ನು ಕ್ರೂರವಾಗಿ ಕೊಂದವರೂ ಮದ್ಯಪಾನಿಗಳಾಗಿದ್ದರು. ಅಷ್ಟಕ್ಕೂ, ಮನುಷ್ಯನೋರ್ವ ತನ್ನಂತೆಯೇ ಇರುವ ಇನ್ನೋರ್ವರನ್ನು ಕೊಚ್ಚಿ ಕೊಚ್ಚಿ ಸಾಯಿಸುವುದು ಅಥವಾ ಅತ್ಯಾಚಾರ ನಡೆಸಿ ಕೊಲೆಗೈಯುವುದು ಇಲ್ಲವೇ ನಂಬಿಕೆ ಬೇರೆ ಎಂಬ ಕಾರಣಕ್ಕಾಗಿ ಅಮಾನುಷವಾಗಿ ನಡಕೊಳ್ಳುವುದನ್ನೆಲ್ಲ ಏನೆಂದು ವಿಶ್ಲೇಷಿಸಬೇಕು? ಇದು ಪ್ರಕೃತಿದತ್ತ ಗುಣವೇ? ಸ್ವಸ್ಥ ಮನುಷ್ಯನೋರ್ವ ವಿನಾ ಕಾರಣ ಇನ್ನೋರ್ವರನ್ನು ಇರಿದು ಕೊಲ್ಲುವನೇ? ಹೆಣ್ಣಿನ ಮೇಲೆ ಅತ್ಯಾಚಾರ ಎಸಗುವ ಧೈರ್ಯ ತೋರುವನೇ? ಇವು ಮತ್ತು ಇಂಥ ಇನ್ನಿತರ ಪ್ರಶ್ನೆಗಳಿಗೆಲ್ಲ ಈ ವರೆಗೆ ಉತ್ತರ ಕೊಟ್ಟಿರುವುದು ಮದ್ಯ. ಸ್ವಸ್ಥ ಮನುಷ್ಯರನ್ನು ಮದ್ಯ ಅಸ್ವಸ್ಥಗೊಳಿಸುತ್ತದೆ. ವಿವೇಕವನ್ನು ಅವಿವೇಕವಾಗಿ ಪರಿವರ್ತಿಸುತ್ತದೆ. ಮದ್ಯ ಸೇವಿಸದೇ ಇರುವಾಗ ಯಾವುದರ ಬಗ್ಗೆ ಭಯ ಇರುತ್ತದೋ ಮದ್ಯ ಸೇವನೆಯ ಬಳಿಕ ಆ ಭಯ ಹೊರಟು ಹೋಗುತ್ತದೆ. ಕಳ್ಳತನ, ಕೊಲೆ, ಸುಲಿಗೆ, ಅತ್ಯಾಚಾರ.. ಎಲ್ಲವನ್ನೂ ಮದ್ಯ ಮಾಡಿಸಿಬಿಡುತ್ತದೆ. ದುರಂತ ಏನೆಂದರೆ, ನಮ್ಮಲ್ಲಿರುವ ಕಾನೂನುಗಳು ಎಷ್ಟು ಮುಗ್ಧ ಸ್ವರೂಪಿ ಅಂದರೆ, ಅವು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಮನುಷ್ಯರನ್ನು ಶಿಕ್ಷಿಸಬಲ್ಲವೇ ಹೊರತು ಅದಕ್ಕೆ ಧೈರ್ಯ ಒದಗಿಸಿದ ಬಾಟಲಿಗಳನ್ನಲ್ಲ. ಆದ್ದರಿಂದಲೇ, ಅಪರಾಧ ಜಗತ್ತಿನಲ್ಲಿ ಹೊಸ ಹೊಸ ಸದಸ್ಯರು ಪ್ರತಿದಿನ ತಮ್ಮ ಹೆಸರನ್ನು ನೋಂದಾಯಿಸುತ್ತಲೇ ಇದ್ದಾರೆ. ಒಂದು ವೇಳೆ, ಸರಕಾರವೊಂದಕ್ಕೆ ಅಪರಾಧ ಕೃತ್ಯಗಳ ಪ್ರಮಾಣವನ್ನು ತಗ್ಗಿಸಬೇಕೆಂಬ ಪ್ರಾಮಾಣಿಕ ಕಳಕಳಿ ಇದ್ದಿದ್ದೇ ಆದರೆ ಪ್ರಥಮವಾಗಿ ಅದು ಮದ್ಯದ ಮೇಲೆ ನಿಷೇಧ ಹೇರಬೇಕು. ಬಿಹಾರದಲ್ಲಿ ಇದು ಸಾಬೀತಾಗಿದೆ. 2016 ಎಪ್ರಿಲ್‍ನಿಂದ ಬಿಹಾರದಲ್ಲಿ ಘೋಷಿಸಲಾದ ಸಂಪೂರ್ಣ ಪಾನ ನಿಷೇಧವು ಅಪರಾಧ ಕೃತ್ಯಗಳಲ್ಲಿ ಭಾರೀ ಮಟ್ಟದ ಇಳಿಕೆಗೆ ಕಾರಣವಾಗಿದೆ. ಅದರ ಪ್ರೇರಣೆಯಿಂದಲೇ ಇತ್ತೀಚೆಗೆ ಬಿಹಾರ ಸರಕಾರವು ಮದ್ಯದ ವಿರುದ್ಧ 11,292 ಕಿ.ಮೀಟರ್ ಉದ್ದದ ಮಾನವ ಸರಪಳಿಯನ್ನು ಏರ್ಪಡಿಸಿತು. ವಿರೋಧ ಪಕ್ಷಗಳ ನಾಯಕರು ಮತ್ತು ಬೆಂಬಲಿಗರೂ ಅದರಲ್ಲಿ ಭಾಗವಹಿಸಿದರು. ಭಾಗವಹಿಸಿದರು ಅನ್ನುವುದಕ್ಕಿಂತ ಹಾಗೆ ಭಾಗಿಯಾಗಲೇಬೇಕಾದ ವಾತಾವರಣವೊಂದು ಅಲ್ಲಿ ಈಗಾಗಲೇ ನಿರ್ಮಾಣವಾಗಿದೆ ಎಂದೇ ಹೇಳಬೇಕು. ಇದೀಗ, ಬಿಹಾರದ ಸರಕಾರಿ ಅಧಿಕಾರಿಗಳು, ನ್ಯಾಯಾಧೀಶರುಗಳು ಮುಂತಾದ ಯಾರೂ ದೇಶದಲ್ಲಿ ಬಿಡಿ, ವಿದೇಶಗಳಲ್ಲೂ ಮದ್ಯಪಾನ ಮಾಡುವಂತಿಲ್ಲ ಎಂಬ ಕಾನೂನನ್ನು ಜಾರಿಗೆ ತರಲಾಗಿದೆ. ಮದ್ಯ ಸೇವಿಸಿ ಸಿಕ್ಕಿಬಿದ್ದರೆ ಹುದ್ದೆಯಿಂದಲೇ ಕಿತ್ತು ಹಾಕಬಹುದಾದ ಕಠಿಣ ಕಾನೂನು ಕ್ರಮಗಳ ಎಚ್ಚರಿಕೆಯನ್ನೂ ನೀಡಲಾಗಿದೆ. ವಿಶೇಷ ಏನೆಂದರೆ, ಕರ್ನಾಟಕ ಮತ್ತು ಬಿಹಾರದಲ್ಲಿ ಮುಖ್ಯಮಂತ್ರಿಗಳಾಗಿರುವವರು ಸಮಾಜವಾದಿ ಹಿನ್ನೆಲೆಯ ಸಿದ್ಧರಾಮಯ್ಯ ಮತ್ತು ನಿತೀಶ್ ಕುಮಾರ್. ಸಾಮಾಜಿಕ ನ್ಯಾಯ, ಸಮಾಜ ಕಲ್ಯಾಣ, ಸಮಸಮಾಜ ಮುಂತಾದುವುಗಳಿಗೆ ಸಾಕಷ್ಟು ನಿಷ್ಠವಾಗಿರುವ ವಿಚಾರಧಾರೆ ಎಂಬ ನೆಲೆಯಲ್ಲಿ ಇವರಿಬ್ಬರನ್ನೂ ನಾವು ಮುಖಾಮುಖಿಗೊಳಿಸುವುದು ಉತ್ತಮ ಎನಿಸುತ್ತದೆ. ಕರ್ನಾಟಕಕ್ಕೆ ಹೋಲಿಸಿದರೆ ಬಿಹಾರ ಬಡ ರಾಜ್ಯ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಯಲ್ಲಿ ಬಿಹಾರಕ್ಕಿಂತ ಕರ್ನಾಟಕ ಸಾಕಷ್ಟು ಮುಂದಿದೆ. ಒಂದು ವೇಳೆ, ಮದ್ಯದ ಆದಾಯವಿಲ್ಲದೇ ಸರಕಾರ ನಡೆಸಲು ಸಾಧ್ಯವಿಲ್ಲ ಎಂಬ ವಾದ ಸಂಪೂರ್ಣ ಸರಿ ಎಂದಾದರೆ, ನಿತೀಶ್ ಕುಮಾರ್ ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕಿತ್ತು. ಆದರೆ ಅಲ್ಲಿಯ ಬೆಳವಣಿಗೆ ಇದಕ್ಕೆ ತದ್ವಿರುದ್ಧವಾಗಿದೆ. ಅವರ ಮಧ್ಯ ವಿರೋಧಿ ನಿಲುವು ಎಷ್ಟು ಜನಪ್ರಿಯತೆ ಗಳಿಸಿಕೊಳ್ಳುತ್ತಿದೆಯೆಂದರೆ, ವಿರೋಧ ಪಕ್ಷಗಳೂ ಅವರನ್ನು ಬೆಂಬಲಿಸಲೇಬೇಕಾದ ಅನಿವಾರ್ಯತೆಗೆ ಒಳಗಾಗಿವೆ. ಹೀಗಿರುವಾಗ, ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಮದ್ಯಪರ ನಿಲುವನ್ನು ಎಷ್ಟರವರೆಗೆ ಪ್ರಾಮಾಣಿಕ ಎಂದು ಹೇಳಬಹುದು? ಕಳೆದ ವರ್ಷದ ಬಜೆಟ್‍ನಲ್ಲಿ ಮದ್ಯದಿಂದ 16,510 ಕೋಟಿ ರೂಪಾಯಿ ಆದಾಯವನ್ನು ಅವರು ನಿರೀಕ್ಷಿಸಿದ್ದರು. ಆದರೆ ನೋಟು ಅಮಾನ್ಯ ಮತ್ತಿತರ ಕಾರಣಗಳಿಂದಾಗಿ ಮದ್ಯ ಮಾರಾಟದಲ್ಲಿ ಕುಸಿದ ಉಂಟಾದುದರಿಂದ ಈ ಫೆಬ್ರವರಿ-ಮಾರ್ಚ್‍ನೊಳಗೆ 3,270 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಬೇಕೆಂಬ ಒತ್ತಡವನ್ನು ಸರಕಾರ ಮದ್ಯ ಮಾರಾಟಗಾರರ ಮೇಲೆ ಹಾಕಿದೆ ಎಂಬ ಸುದ್ದಿ ಪ್ರಕಟವಾಗಿದೆ. ಜನರನ್ನು ಹೆಚ್ಚೆಚ್ಚು ಕುಡುಕರನ್ನಾಗಿಸದ ಹೊರತು ಈ ಗುರಿ ಸಾಧನೆ ಸಾಧ್ಯವಿಲ್ಲ. ಜನರ ಕೈಗೆ ಬಾಟಲಿ ಕೊಟ್ಟು ಅವರ ಜೇಬು ಬರಿದು ಮಾಡುವ ಈ ನೀತಿ ನೈತಿಕವೇ? ಸಿದ್ಧರಾಮಯ್ಯನವರ ಸಮಾಜವಾದ ಈ ಅಭಿವೃದ್ಧಿ ಮಾದರಿಯನ್ನು ನಿಜಕ್ಕೂ ಒಪ್ಪುತ್ತದೆಯೇ?   
     ನಿಜವಾಗಿ, ಯಾವುದೇ ಒಂದು ಪಕ್ಷದ ಅಳಿವು-ಉಳಿವು ಹಣವನ್ನು ಹೊಂದಿಕೊಂಡಿದೆ. ಪಕ್ಷದ ಅಭಿವೃದ್ಧಿಯಲ್ಲಿ ಹಣಕ್ಕೆ ಬಹು ಮುಖ್ಯ ಪಾತ್ರ ಇದೆ. ಅದನ್ನು ಒದಗಿಸುವುದರಲ್ಲಿ ಮದ್ಯದ ಮಾಲಕರು ಮುಂಚೂಣಿಯಲ್ಲಿರುತ್ತಾರೆ. ಅವರ ಪ್ರಭಾವ ಪಕ್ಷದೊಳಗೂ ಇರುತ್ತದೆ. ಸಚಿವ ಸಂಪುಟದಲ್ಲೂ ಅವರ ಸ್ಥಾನ ಪಡೆದಿರುತ್ತಾರೆ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಮತ್ತು ಯಾವ ಪಕ್ಷದ ಸದಸ್ಯರೂ ಆಗಿರದ ವಿಜಯ ಮಲ್ಯರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವುದೇ ಇದಕ್ಕೆ ಅತ್ಯುತ್ತಮ ಪುರಾವೆ. ಹಣವೇ ಅವರ ಅರ್ಹತೆ. ಇಂಥವರನ್ನು ಎದುರು ಹಾಕಿಕೊಂಡು ಪಕ್ಷವನ್ನು ಬೆಳೆಸುವುದು ಅಥವಾ ಸರಕಾರವನ್ನು ಮುನ್ನಡೆಸುವುದು ಸುಲಭ ಅಲ್ಲ. ಪಕ್ಷ ಬೆಳೆಯಬೇಕಾದರೆ ಹಣದ ಅಗತ್ಯವಿರುತ್ತದೆ. ಹಣದ ಹೊರತು ಚುನಾವಣೆಯನ್ನು ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇದೆ. ಹೀಗಿರುವಾಗ ಸಂಪೂರ್ಣ ಪಾನ ನಿಷೇಧವನ್ನು ಜಾರಿಗೊಳಿಸುವುದೆಂದರೆ, ಈ ಎಲ್ಲರನ್ನೂ ಎದುರು ಹಾಕಿಕೊಳ್ಳುವುದು ಎಂದೇ ಅರ್ಥ. ಇದಕ್ಕೆ ಎಂಟೆದೆ ಬೇಕು. ಆದರೆ, ಸಿದ್ಧರಾಮಯ್ಯ ಮತ್ತೆ ಮತ್ತೆ ಈ ವಿಷಯದಲ್ಲಿ ಎಡವುತ್ತಿದ್ದಾರೆ. ಆದ್ದರಿಂದ, ನಿತೀಶ್ ಕುಮಾರ್‍ರಿಗೆ ಸಾಧ್ಯವಾದದ್ದು ಸಿದ್ಧರಾಮಯ್ಯನವರಿಗೆ ಯಾಕೆ ಸಾಧ್ಯವಿಲ್ಲ ಎಂಬುದಕ್ಕೆ ಅವರು ಸ್ಪಷ್ಟನೆ ನೀಡಬೇಕು. ಈಗಾಗಲೇ ಸ್ವಾತಂತ್ರ್ಯ ಹೋರಾಟಗಾರ ದೊರೈ ಸ್ವಾಮಿಯವರು ಮದ್ಯ ವಿರೋಧಿ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಜನರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ಸಿದ್ಧರಾಮಯ್ಯನವರು ಈ ಎಲ್ಲವನ್ನೂ ಗಮನಿಸಬೇಕು. ‘ಮದ್ಯದ ಆದಾಯದಿಂದ ಅಭಿವೃದ್ಧಿ’ ಎಂಬ ಘೋಷವಾಕ್ಯದ ಬದಲು ‘ಮದ್ಯ ಮುಕ್ತ ಕರ್ನಾಟಕ’ ಎಂಬ ನೀತಿಯನ್ನು ಅವರು ಅಳವಡಿಸಿಕೊಳ್ಳಬೇಕು. ಸಿದ್ದರಾಮಯ್ಯನವರಿಂದ ಇದು ಸಾಧ್ಯವಿದೆ. ಒಂದು ವೇಳೆ, ಅವರು ಸಂಪೂರ್ಣ ಪಾನ ನಿಷೇಧವನ್ನು ಜಾರಿಗೊಳಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇದುವೇ ಮುಖ್ಯ ಚರ್ಚಾ ವಿಷಯವಾಗಬಹುದು ಮತ್ತು ವಿರೋಧ ಪಕ್ಷಗಳು ಸಿದ್ದರಾಮಯ್ಯನವರಿಗೆ ಶರಣಾಗಲೇ ಬೇಕಾದ ಅನಿವಾರ್ಯತೆಗೂ ಒಳಗಾಗಬಹುದು. ಇಲ್ಲದಿದ್ದರೆ ಸಮಾಜವಾದದ ನಾಮಫಲಕದಲ್ಲಿ ಅಸಮವಾದವನ್ನು ಬೆಳೆಸಿ, ಉಳಿಸಿ ಹೋದ ಮುಖ್ಯಮಂತ್ರಿಯಾಗಿ ಅವರು ಚರಿತ್ರೆಯ ಪುಟದಲ್ಲಿ ಗುರುತಿಸಿಕೊಂಡಾರು.

ದಲಿತ್ ಮೀಸಲಾತಿಗಿರುವ ಬೆಂಬಲ ಮುಸ್ಲಿಮರಿಗೇಕಿಲ್ಲ?

ಅಮಾನತುಗೊಂಡ ಬಿಜೆಪಿ ಶಾಸಕರು
     ಪರಿಶಿಷ್ಟ ಜಾತಿ-ಪಂಗಡಗಳು ಮತ್ತು ದಲಿತರಿಗೆ ಮೀಸಲಾತಿ ಸೌಲಭ್ಯವನ್ನು ಒದಗಿಸುವಾಗ ಕಾಣಿಸಿಕೊಳ್ಳದ ಪ್ರತಿಭಟನೆಯು ಮುಸ್ಲಿಮರಿಗೆ ಸಂಬಂಧಿಸಿ ಮಾತ್ರ ಕಾಣಿಸಿಕೊಳ್ಳುವುದೇಕೆ? ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಎಂಬುದಕ್ಕೆ ‘ಮುಸ್ಲಿಮರನ್ನು ಹೊರತುಪಡಿಸಿ’ ಎಂಬರ್ಥವಿದೆಯೇ? ತೆಲಂಗಾಣ ರಾಜ್ಯದಲ್ಲಿ ಸದ್ಯ ಮೀಸಲಾತಿಗೆ ಸಂಬಂಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಮರಿಗೆ 12% ಮೀಸಲಾತಿ ಕಲ್ಪಿಸುವ ಮಸೂದೆಯನ್ನು ತೆಲಂಗಾಣ ಸರಕಾರ ಜಾರಿಗೊಳಿಸುವ ಇರಾದೆ ವ್ಯಕ್ತಪಡಿಸಿರುವುದೇ ಈ ಪ್ರತಿಭಟನೆಗೆ ಕಾರಣ. ಬಿಜೆಪಿಯ ಎಲ್ಲ ಐವರು ಶಾಸಕರೂ ವಿಧಾನಸಭಾ ಕಲಾಪದಿಂದ ಅಮಾನತುಗೊಂಡಿದ್ದಾರೆ. ಮೀಸಲಾತಿಯು ತೆಲಂಗಾಣದಲ್ಲಿ ಇನ್ನೋರ್ವ ಯೋಗಿ ಆದಿತ್ಯನಾಥ್‍ರನ್ನು ಸೃಷ್ಟಿಸುವುದಕ್ಕೆ ಕಾರಣವಾಗಬಹುದು ಎಂದು ಆ ಪಕ್ಷ ಬೆದರಿಕೆ ಹಾಕಿದೆ. ಹಾಗಂತ, ಮುಸ್ಲಿಮರಿಗೆ ಮೀಸಲಾತಿ ಸೌಲಭ್ಯವನ್ನು ಒದಗಿಸುವ ಯೋಜನೆಯು ದಿಢೀರ್ ಘೋಷಣೆಯಾದುದಲ್ಲ. 3 ವರ್ಷಗಳ ಹಿಂದೆ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (TRS) ಅಧ್ಯಕ್ಷ ಚಂದ್ರಶೇಖರ್ ರಾವ್ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲೇ ಘೋಷಿಸಿದ್ದರು. ನಿಜವಾಗಿ, ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಯನ್ನು ಜಾರಿಗೊಳಿಸಲು ಮೂರು ವರ್ಷ ತಡ ಮಾಡಿದುದಕ್ಕೆ ಬಿಜೆಪಿ ಪ್ರತಿಭಟನೆ ವ್ಯಕ್ತಪಡಿಸಬೇಕಾಗಿತ್ತೇ ಹೊರತು ಜಾರಿಯ ವಿರುದ್ಧ ಅಲ್ಲ. ಒಂದು ಕಡೆ, ಬಿಜೆಪಿ ಸಬ್‍ಕಾ ವಿಕಾಸ್ ಎಂಬ ಮಂತ್ರವನ್ನು ಜಪಿಸುತ್ತಿದೆ. ಸಬಲ ಸಮುದಾಯವಾಗಿ ಗುರುತಿಸಿಕೊಂಡಿರುವ ಜಾಟರಿಗೆ ಮೀಸಲಾತಿ ಒದಗಿಸುವುದಕ್ಕೂ ಉಮೇದು ತೋರಿಸುತ್ತಿದೆ. ಇನ್ನೊಂದು ಕಡೆ, ದೇಶದ ಅತ್ಯಂತ ಹಿಂದುಳಿದ ಸಮುದಾಯವಾಗಿ ಗುರುತಿಸಿಕೊಂಡಿರುವ ಮುಸ್ಲಿಮರಿಗೆ ಮೀಸಲಾತಿ ಒದಗಿಸುವುದನ್ನು ವಿರೋಧಿಸುತ್ತಿದೆ. ಏನಿದರ ಅರ್ಥ? ಶೈಕ್ಷಣಿಕ ಕ್ಷೇತ್ರದಲ್ಲಿ ಮುಸ್ಲಿಮರ ಸ್ಥಿತಿ-ಗತಿ ಹೇಗಿದೆ ಎಂಬುದು ದೇಶವನ್ನಾಳುವ ಪಕ್ಷವಾಗಿ ಬಿಜೆಪಿಗೆ ಚೆನ್ನಾಗಿ ಗೊತ್ತು. ಪರಿಶಿಷ್ಟ ಜಾತಿ-ಪಂಗಡಗಳಿಗೆ ಸರಿಸಮಾನವಾಗಿ ನಿಲ್ಲಲೂ ಸಾಧ್ಯವಾಗದ ಸ್ಥಿತಿ ಮುಸ್ಲಿಮರದ್ದು ಎಂಬುದನ್ನು ಸಾಚಾರ್ ಸಮಿತಿ ಹೇಳಿದೆ. ಸಾಚಾರ್ ಸಮಿತಿ ಕೇಂದ್ರ ಸರಕಾರಕ್ಕೆ ವರದಿಯನ್ನು ಸಲ್ಲಿಸಿ 10 ವರ್ಷಗಳು ಸಂದಿರುವ ಈ ಹೊತ್ತಿನಲ್ಲಿ ಮತ್ತು ಕೇಂದ್ರದಲ್ಲಿ ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಘೋಷಣೆಯಲ್ಲಿ ನಂಬಿಕೆಯಿರಿಸಿರುವ ಸರಕಾರ ಇದೆ ಎಂಬ ನೆಲೆಯಲ್ಲಿ ಮುಸ್ಲಿಮರು ತಮ್ಮ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳನ್ನು ಸರಕಾರಗಳಿಂದ ನಿರೀಕ್ಷಿಸುವುದು ಅಪರಾಧವೇನೂ ಅಲ್ಲ. ಅಂದಹಾಗೆ, ಶೈಕ್ಷಣಿಕವಾಗಿ ತಳಮಟ್ಟದಲ್ಲಿರುವ ಸಮುದಾಯದಿಂದ ಸರಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ. ಪರಿಶಿಷ್ಟ ಜಾತಿ-ಪಂಗಡಗಳಿಗೂ ಈ ಮಾತು ಅನ್ವಯ. ಆದ್ದರಿಂದ, ಯಾವುದೇ ಸರಕಾರ ಈ ಹಿಂದುಳಿದವರ ಅಭಿವೃದ್ಧಿಗೆ ಕಲ್ಯಾಣ ಯೋಜನೆಗಳನ್ನು ಪ್ರಕಟಿಸಿದರೆ ಅದು ಚಪ್ಪಾಳೆ ತಟ್ಟಿ ಸ್ವಾಗತಿಸಬೇಕಾದಷ್ಟು ಮಹತ್ವಪೂರ್ಣವಾಗಬೇಕು. ಆದರೆ, ಬಿಜೆಪಿ ಮಾತ್ರ ಮುಸ್ಲಿಮರನ್ನು ಈ ಅಭಿವೃದ್ಧಿ ಪಥದಿಂದ ಹೊರಗಿಡಲು ಬಯಸುತ್ತಿದೆ. ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವುದರಿಂದ ಯಾಕೆ ಯೋಗಿ ಆದಿತ್ಯನಾಥ್‍ರು ಸೃಷ್ಟಿಯಾಗಬೇಕು? ದಲಿತರಿಗೆ ಮೀಸಲಾತಿ ಕೊಡುವಾಗ ಯಾಕೆ ಅವರು ಹುಟ್ಟುವುದಿಲ್ಲ? ಪರಿಶಿಷ್ಟ ಜಾತಿ-ಪಂಗಡಗಳಿಗೆ ಮೀಸಲಾತಿ ಒದಗಿಸುವುದು ಯಾಕೆ ಬಿಜೆಪಿಯನ್ನು ಕೆರಳಿಸುವುದಿಲ್ಲ? ಇದು ಪಕ್ಷಪಾತಿ ನೀತಿಯಲ್ಲವೇ?
     ಈ ದೇಶದಲ್ಲಿ ಮುಸ್ಲಿಮ್ ಜನಸಂಖ್ಯೆ 20 ಕೋಟಿಯಷ್ಟಿದೆ. ಅವರಲ್ಲಿ ಶಿಕ್ಷಣ ತಜ್ಞರಿದ್ದಾರೆ. ಉದ್ಯಮಿಗಳಿದ್ದಾರೆ. ವಿಜ್ಞಾನಿಗಳಿದ್ದಾರೆ. ಸಾಹಿತಿಗಳಿದ್ದಾರೆ. ಮಂತ್ರಿಗಳಿದ್ದಾರೆ. ಕೃಷಿಕರಿದ್ದಾರೆ. ಈ ದೇಶಕ್ಕೆ ಅತ್ಯಂತ ಹೆಚ್ಚು ವಿದೇಶಿ ವಿನಿಮಯವನ್ನು ಒದಗಿಸುವ ಸಮುದಾಯ ಕೂಡ ಇದುವೇ. ಒಂದು ವೇಳೆ, ಈ 20 ಕೋಟಿ ಜನಸಂಖ್ಯೆಯಲ್ಲಿ ಎಲ್ಲರೂ ಈ ದೇಶದಲ್ಲಿಯೇ ಉದ್ಯೋಗವನ್ನರಸುವ ಸ್ಥಿತಿಗೆ ತಲುಪಿರುತ್ತಿದ್ದರೆ ಅದರ ಪರಿಣಾಮ ಏನಾಗಿರುತ್ತಿತ್ತು? ಒಂದೆಡೆ ಶೈಕ್ಷಣಿಕವಾಗಿ ಈ ಸಮುದಾಯ ಹಿಂದೆ. ಇನ್ನೊಂದೆಡೆ ಈ ಸಮುದಾಯಕ್ಕೆ ಉದ್ಯೋಗವನ್ನು ಒದಗಿಸಿಕೊಡಬೇಕಾದ ಅನಿವಾರ್ಯತೆ.. ಇವೆರಡರಿಂದ ಸರಕಾರದ ಮೇಲೆ ಬೀಳಬಹುದಾದ ಹೊರೆಯನ್ನೊಮ್ಮೆ ಊಹಿಸಿ. ಬಹುಶಃ, ವಿದೇಶಗಳಲ್ಲಿ ಅದರಲ್ಲೂ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವವರಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆ ಮುಸ್ಲಿಮರದ್ದು. ಈ ದೇಶದ 80% ಮಂದಿ ಈ ದೇಶದಲ್ಲೇ ಉದ್ಯೋಗವನ್ನು ಅರಸುವಾಗ ಅಥವಾ ಅವರಿಗೆ ಉದ್ಯೋಗ ಒದಗಿಸಬೇಕಾದ ಒತ್ತಡದಲ್ಲಿ ಸರಕಾರವಿದ್ದಾಗ ಆ ಹೊರೆಯನ್ನು ಕಡಿಮೆಗೊಳಿಸಿದ್ದು ಮುಸ್ಲಿಮರು. ಅವರು ಸರಕಾರಗಳ ಮೇಲೆ ಭಾರವನ್ನು ಹೇರದೇ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಆ ಮೂಲಕ ಸರಕಾರಗಳಿಗೆ ವಿದೇಶಿ ವಿನಿಮಯವನ್ನು ಒದಗಿಸುವ ಆದಾಯ ಮೂಲವೂ ಆದರು. ತಮ್ಮ ಕುಟುಂಬವನ್ನೂ ಸಬಲಗೊಳಿಸಿದರು. ಸರಕಾರಗಳ ಪ್ರೋತ್ಸಾಹದ ಕೊರತೆಯಿಂದಾಗಿ ಶಿಕ್ಷಣವನ್ನು ಮುಂದುವರಿಸಲಾಗದೆ ಹೊಟ್ಟೆಪಾಡಿಗಾಗಿ ಗಲ್ಫ್ ಗೆ ತೆರಳಿ ಸಣ್ಣ-ಪುಟ್ಟ ಉದ್ಯೋಗ ಮಾಡಿಕೊಂಡು ತಮ್ಮನ್ನೂ ತಮ್ಮ ಕುಟುಂಬಿಕರನ್ನೂ ಮಾತ್ರವಲ್ಲ, ಅವರು ದೇಶದ ಆದಾಯ ಮೂಲವೇ ಆಗಿ ಬದಲಾಗಿರುವುದು ಸಣ್ಣ ಸಾಧನೆ ಅಲ್ಲ. ಇಂಥದ್ದೊಂದು ಸಾಧನೆಯನ್ನು ಈ ದೇಶದ ಇನ್ನಾವ ಸಮುದಾಯವೂ ಮಾಡಿಲ್ಲ. ಜಾತಿ ಶ್ರೇಣಿಯಲ್ಲಿ ಉನ್ನತವಾಗಿರುವ ಮತ್ತು ಆರ್ಥಿಕವಾಗಿ ಸಬಲವಾಗಿರುವ ಸಮುದಾಯದ ಮಂದಿ ಉನ್ನತ ಶಿಕ್ಷಣ ಪಡೆದು ಅಮೇರಿಕದಲ್ಲೋ ಬ್ರಿಟನ್-ಕೆನಡದಲ್ಲೋ ಉದ್ಯೋಗಕ್ಕೆ ಸೇರುವುದು ವಿಶೇಷ ಏನಲ್ಲ. ಅಲ್ಲದೇ ಕೊನೆಗೆ ಅವರು ಆ ದೇಶದ ಪೌರತ್ವವನ್ನು ಪಡೆದು ಅಲ್ಲಿಯವರೇ ಆಗುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. ಇದಕ್ಕೆ ಹೋಲಿಸಿದರೆ ಈ ದೇಶದ ಮುಸ್ಲಿಮರು ಅತ್ಯಂತ ದೇಶನಿಷ್ಠೆಯುಳ್ಳವರು. ಸರಕಾರಗಳ ನಿರ್ಲಕ್ಷ್ಯದ ನಡುವೆಯೂ ಅವರು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಲು ಯತ್ನಿಸಿದ್ದಾರೆ. ಈ ದೇಶದ ಅಭಿವೃದ್ಧಿಗೆ ಕೊಡುಗೆಯನ್ನೂ ನೀಡುತ್ತಿದ್ದಾರೆ. ಇಂಥವರ ಅಭಿವೃದ್ಧಿಗೆ ಸರಕಾರ ಯೋಜನೆಯನ್ನು ರೂಪಿಸುವುದೆಂದರೆ ಅದು ವಿರೋಧಕ್ಕೆ ಕಾರಣವಾಗಬೇಕಾದ ಯಾವ ಅಗತ್ಯವೂ ಇಲ್ಲ. ಮುಸ್ಲಿಮ್ ಸಮುದಾಯದ ಮಂದಿ ಇವತ್ತು ಸರಕಾರಿ ಉದ್ಯೋಗ ರಂಗದಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅಂಕಿ-ಅಂಶಗಳ ತುಲನೆ ಮಾಡಿ ನೋಡುವುದಾದರೆ ಅವರ ಸ್ಥಾನ ದಲಿತರಿಗಿಂತಲೂ ಕೆಳಗಡೆ ಇದೆ. 20 ಕೋಟಿಯಲ್ಲಿ ತೀರಾ ತೀರಾ ಸಣ್ಣದೊಂದು ವಿಭಾಗ ಗಲ್ಫ್ ನಲ್ಲಿ ದುಡಿಯುತ್ತಿರುವಾಗ ದೊಡ್ಡ ಭಾಗವು ಈ ದೇಶದಲ್ಲಿ ಅತಿ ಕಡಿಮೆ ಆದಾಯದ ಕೆಲಸಗಳಲ್ಲಿ ದಿನದೂಡುತ್ತಿವೆ. ಇವರನ್ನು ನಿರ್ಲಕ್ಷಿಸಿಕೊಂಡು ದೇಶ ಮುಂದುವರಿಯಲು ಸಾಧ್ಯವಿಲ್ಲ. ಇವರ ಅಭಿವೃದ್ಧಿಗೆ ಕಲ್ಯಾಣ ಯೋಜನೆಗಳು ಪ್ರಕಟವಾಗಬೇಕು. ದಲಿತ-ಹಿಂದುಳಿದ ವರ್ಗಗಳಂತೆಯೇ ಇವರಿಗೂ ಮೀಸಲಾತಿ ಮತ್ತಿತರ ಸೌಲಭ್ಯಗಳು ಲಭ್ಯವಾಗಬೇಕು. ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್‍ನಿಂದ ಮುಸ್ಲಿಮರನ್ನು ಹೊರತಳ್ಳುವುದೆಂದರೆ ಅದು ಅಭಿವೃದ್ಧಿಪಥದಿಂದ ದೇಶವನ್ನೇ ಹೊರತಳ್ಳಿದಂತೆ. ಹಾಗೆ ಒತ್ತಾಯಿಸುವವರು ಯಾರೇ ಆದರೂ ಅವರು ಜನದ್ರೋಹಿಗಳು. ಖಂಡನಾರ್ಹರು.

ಅವರ ಆತ್ಮಹತ್ಯೆಗೆ ಕಾರಣ ವಿಷ ಮಾತ್ರವೇ?

ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ತಂದೆ-ತಾಯಿ ಮತ್ತು ಇಬ್ಬರು ಮಕ್ಕಳು
      ಆತ್ಮಹತ್ಯೆಯ ಬಗ್ಗೆ ಒಂದು ಬಗೆಯ ಉಡಾಫೆತನ ನಮ್ಮಲ್ಲಿದೆ. ಆತ್ಮಹತ್ಯೆಯು ಸಮಸ್ಯೆಯನ್ನು ಪರಿಹರಿಸುವುದಿಲ್ಲ ಎಂಬುದು ಇದಕ್ಕಿರುವ ಕಾರಣಗಳಲ್ಲಿ ಒಂದಾದರೆ, ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮಧ್ಯಮ ವರ್ಗ ಮತ್ತು ಬಡ ವರ್ಗದವರೇ ಹೆಚ್ಚಿರುವುದು ಇನ್ನೊಂದು. ಅತ್ತ 7 ಸಾವಿರ ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತವನ್ನು ಬ್ಯಾಂಕುಗಳಿಗೆ ಬಾಕಿ ಇರಿಸಿಕೊಂಡೂ ವಿಜಯ್ ಮಲ್ಯ ಆರಾಮವಾಗಿ ಲಂಡನ್‍ನಲ್ಲಿ ಜೀವನ ನಡೆಸುತ್ತಿರುವಾಗ ಇತ್ತ, ಜುಜುಬಿ ಸಾವಿರ, ಲಕ್ಷ ರೂಪಾಯಿ ಸಾಲ ಮಾಡಿಕೊಂಡ ರೈತರು ಮತ್ತು ಮಧ್ಯಮ ವರ್ಗದ ಮಂದಿ ಮರ್ಯಾದೆಗೋ ಬೆದರಿಕೆಗೋ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ, ವಿಜಯ್ ಮಲ್ಯಗೆ ಇಲ್ಲದ ಮರ್ಯಾದೆಯ ಭಯ ಜುಜುಬಿ ಮೊತ್ತವನ್ನು ಬಾಕಿ ಉಳಿಸಿಕೊಂಡವರಿಗೆ ಯಾಕೆ ಎದುರಾಗುತ್ತದೆ ಎಂಬ ಪ್ರಶ್ನೆಯ ಜೊತೆಜೊತೆಗೇ ಇಂಥ ಆತ್ಮಹತ್ಯೆಗಳನ್ನು ತಡೆಯುವುದಕ್ಕೆ ಪರಿಣಾಮಕಾರಿ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಪ್ರಶ್ನೆಯನ್ನೂ ನಾವಿಲ್ಲಿ ಎತ್ತಬೇಕಾಗುತ್ತದೆ. ಕಳೆದ ವಾರ ಎರಡು ಸಾಮೂಹಿಕ ಆತ್ಮಹತ್ಯಾ ಪ್ರಕರಣಗಳು ನಡೆದುವು. ಒಂದು ಉಡುಪಿಯ ಪಡುಬೆಳ್ಳೆಯಲ್ಲಿ ನಡೆದರೆ ಇನ್ನೊಂದು ಕಲಬುರ್ಗಿಯಲ್ಲಿ. ಎರಡೂ ಮನೆಗಳು ಇವತ್ತು ಸ್ಮಶಾನವಾಗಿವೆ. ಮನೆಯ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿಯ ಪ್ರಕರಣದಲ್ಲಿ ತಂದೆ-ತಾಯಿ ಮತ್ತು ಇಬ್ಬರು ಮಕ್ಕಳು ಪ್ರಾಣ ಕಳಕೊಂಡಂತೆಯೇ ಕಲಬುರ್ಗಿಯ ಪ್ರಕರಣದಲ್ಲೂ ಸಂಭವಿಸಿದೆ. ಬಾಳಿ, ಬದುಕಿ ಸಾಧನೆ ಮಾಡಬೇಕಾದ ಹರೆಯದ ನಾಲ್ಕೂ ಮಕ್ಕಳು ಈ ಆತ್ಮಹತ್ಯೆಯ ಭಾಗವಾಗಿದ್ದಾರೆ. ಈ ಮಕ್ಕಳು ಸ್ವಇಚ್ಛೆಯಿಂದ ಆತ್ಮಹತ್ಯೆಯಲ್ಲಿ ಭಾಗಿಯಾದರೋ ಅಥವಾ ಹೆತ್ತವರು ಇವರನ್ನು ವಂಚಿಸಿದರೋ ಗೊತ್ತಿಲ್ಲ. ಇವು ಏನೇ ಇದ್ದರೂ ಸತ್ತವರನ್ನು ಮರಳಿ ಕರೆತರಲು ನಮ್ಮಿಂದ ಸಾಧ್ಯವಿಲ್ಲ. ಆದರೆ ಇನ್ನಷ್ಟು ಆತ್ಮಹತ್ಯೆಗಳಾಗದಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೆ ಖಂಡಿತ ಸಾಧ್ಯವಿದೆ.
     ಆತ್ಮಹತ್ಯೆಗೂ ಸಹಜ ಸಾವಿಗೂ ನಡುವೆ ಒಂದು ಕಳವಳಕಾರಿ ವ್ಯತ್ಯಾಸ ಇದೆ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಏನನ್ನೋ ಹೇಳ ಬಯಸಿ ಹೋಗಿರುತ್ತಾನೆ. ಒಂದು ಆತ್ಮಹತ್ಯೆಯಲ್ಲಿ ‘ಆತ್ಮಹತ್ಯೆ’ ಎಂಬ ನಾಲ್ಕಕ್ಷರದಲ್ಲಿ ಕೊನೆಗೊಳಿಸಿ ಬಿಡುವುದಕ್ಕಿಂತ ಹೆಚ್ಚಿನ ಅಂಶಗಳಿರುತ್ತವೆ. ಆತನ/ಕೆ/ಯ ಸಾವಿಗೆ ಸಮಾಜ ಕಾರಣವಾಗಿರಬಹುದು ಅಥವಾ ವ್ಯವಸ್ಥೆ ಕಾರಣವಾಗಿರಬಹುದು. ಆದ್ದರಿಂದ ಆತ್ಮಹತ್ಯೆಗಳು ಉಡಾಫೆತನದ ಪ್ರತಿಕ್ರಿಯೆಗಿಂತ ಹೊರಗೆ ನಮ್ಮನ್ನು ಕೊಂಡೊಯ್ಯಬೇಕು. ಉಡುಪಿಯ ಆತ್ಮಹತ್ಯೆ ಪ್ರಕರಣದಲ್ಲಿ ಬ್ಯಾಂಕ್‍ನ ಸಾಲ ಮತ್ತು ಸಾಲ ಪಡೆಯಲು ಅನುಸರಿಸಲಾದ ಕ್ರಮಗಳು ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಇದು ಅಲ್ಲದೆಯೂ ಇರಬಹುದು. ಒಂದು ವೇಳೆ ಇದುವೇ ನಿಜವಾದ ಕಾರಣ ಎಂದಾದರೆ, ಆ ಇಡೀ ಪ್ರಕರಣದಲ್ಲಿ ಆ ಕುಟುಂಬದ ಎಲ್ಲರ ಪಾತ್ರ ಇರುವ ಸಾಧ್ಯತೆ ಖಂಡಿತ ಇಲ್ಲ. ಇನ್ನು ಆ ಕುಟುಂಬದ ಹೊರಗಿನ ವ್ಯಕ್ತಿಗಳ ನೆರವಿಲ್ಲದೇ ಅಂಥ ಸಾಲ ಮಂಜೂರಾತಿ ನಡೆಯುವುದಕ್ಕೂ ಸಾಧ್ಯವಿಲ್ಲ. ಬ್ಯಾಂಕ್‍ನ ಸಾಲ, ಅದರ ಬಡ್ಡಿ ಮತ್ತು ಮತ್ತದರ ಪಾವತಿಯಲ್ಲಿ ಒಂದು ಪುಟ್ಟ ಕುಟುಂಬ ಮಾತ್ರ ಅಪರಾಧಿ ಭಾವದಲ್ಲೋ ಮರ್ಯಾದೆಗೆ ಅಂಜಿಯೋ ಬದುಕು ಕೊನೆಗೊಳಿಸುವುದು ಯಾವ ಕೋನದಲ್ಲಿ ವ್ಯಾಖ್ಯಾನಕ್ಕೆ ಒಳಗಾಗಬೇಕು? ಬ್ಯಾಂಕ್‍ಗಳು ಸಾಲ ಕೊಡುವಾಗ ಮುಖ್ಯವಾಗಿ ಚರ್ಚೆಗೆ ಬರುವುದೇ ಬಡ್ಡಿ. ಪಡಕೊಳ್ಳುವ ಸಾಲಕ್ಕೆ ಎಷ್ಟು ಶೇಕಡಾ ಬಡ್ಡಿ ವಿಧಿಸಲಾಗುತ್ತದೆ ಎಂಬುದರ ಆಧಾರದಲ್ಲಿ ಯಾವ ಬ್ಯಾಂಕ್‍ನಿಂದ ಸಾಲ ಪಡೆಯಬೇಕು ಎಂಬುದು ನಿರ್ಧಾರವಾಗುತ್ತದೆ. ಇದಲ್ಲದೇ ಖಾಸಗಿ ಹಣಕಾಸು ಸಂಸ್ಥೆಗಳೂ ಸಾಲ ಕೊಡುತ್ತವೆ. ಕೈಗಡ ನೀಡುವವರೂ ಇದ್ದಾರೆ. ಇವಕ್ಕೆಲ್ಲಾ ಬಡ್ಡಿಯೇ ಷರತ್ತಾಗಿರುತ್ತದೆ. ಒಂದು ವೇಳೆ, ಸಾಲ ಪಡಕೊಂಡ ವ್ಯಕ್ತಿಯ ನಿರೀಕ್ಷೆಗೆ ತಕ್ಕಂತೆ ಆ ಬಳಿಕದ ಬೆಳವಣಿಗೆಗಳು ನಡೆಯದೇ ಹೋದರೆ, ಅದರ ಹೊಣೆಯನ್ನು ಯಾವ ಸಾಲ ಸಂಸ್ಥೆಗಳೂ ವಹಿಸಿಕೊಳ್ಳುವುದಿಲ್ಲ. ಸಾಲವಾಗಿ ಪಡೆದುಕೊಂಡ ದುಡ್ಡನ್ನು ಓರ್ವ ಗದ್ದೆಗೆ ಸುರಿಯಬಹುದು. ಇನ್ನೋರ್ವ ವ್ಯಾಪಾರಕ್ಕೆ ಹೂಡಿಕೆ ಮಾಡಬಹುದು. ಮತ್ತೋರ್ವ ಕೈಗಾರಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಒಂದು ವೇಳೆ, ಗದ್ದೆ ನಿರೀಕ್ಷಿತ ಫಸಲು ಕೊಡದೇ ಹೋದರೆ, ಆ ಬಳಿಕದ ಸರ್ವ ಸವಾಲುಗಳನ್ನೂ ರೈತನೇ ಹೊತ್ತುಕೊಳ್ಳಬೇಕು. ಒಂದು ಕಡೆ ತಿಂಗಳು ತಿಂಗಳು ಸಾಲದ ಮೊತ್ತವನ್ನು ಬ್ಯಾಂಕ್‍ಗೆ ಸಂದಾಯ ಮಾಡಬೇಕಾಗುತ್ತದೆ. ಇನ್ನೊಂದು ಕಡೆ, ಸಂಸಾರದ ಮೇಲೆ ಭಾರ ಬೀಳದಂತೆ ನೋಡಿಕೊಳ್ಳಬೇಕಾಗುತ್ತದೆ. ಹಾಗಂತ ಸುಮ್ಮನೆ ಕೂರುವಂತಿಲ್ಲ. ಮತ್ತೆ ಗz್ದÉಯಲ್ಲಿ ಉಳುಮೆ ಮಾಡಿ ಬೀಜ ಬಿತ್ತಬೇಕಾಗುತ್ತದೆ. ಪುನಃ ಹಣ ಹೊಂದಿಸಬೇಕಾಗುತ್ತದೆ. ಸಾಲ ಮಾಡಬೇಕಾಗುತ್ತದೆ. ದುರಂತ ಏನೆಂದರೆ, ಸಾಲ ನೀಡಿ ಬೇಸಾಯಕ್ಕೆ ಉತ್ತೇಜನ ನೀಡಿದ ಬ್ಯಾಂಕ್ ಅ ಬಳಿಕದ ಈ ಎಲ್ಲ ಸವಾಲುಗಳ ಸಂದರ್ಭದಲ್ಲೂ ಅತ್ಯಂತ ನಿರ್ದಯವಾಗಿ ವರ್ತಿಸುತ್ತದೆ. ಸಾಲ ಪಡಕೊಂಡವನಿಗೂ ತನಗೂ ಮಾನವೀಯವಾದ ಯಾವ ಸಂಬಂಧವೂ ಇಲ್ಲ ಎಂಬಂತೆ ನಡಕೊಳ್ಳುತ್ತದೆ. ಫಸಲು ಬರಲಿ, ಬರದೇ ಇರಲಿ ಬಡ್ಡಿ ಸಹಿತ ಸಾಲ ಮರುಪಾವತಿ ಮಾಡದೇ ಇರುವುದನ್ನು ಅದು ದಂಡನಾತ್ಮಕ ಅಪರಾಧವಾಗಿ ಪರಿಗಣಿಸುತ್ತದೆ. ಇದೊಂದು ಉದಾಹರಣೆಯಷ್ಟೇ. ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳು ಯಾವುದೋ ಧೈರ್ಯ, ಸಾಂತ್ವನ, ಮಾನವೀಯ ಸ್ಪರ್ಶಗಳನ್ನು ಬಯಸಿ, ಅದು ಸಿಗದೆ ನಿರಾಶವಾಗಿ ಮಾಡಿಕೊಂಡವು ಅನ್ನುವುದು ಸ್ಪಷ್ಟ. ರೈತ ಆತ್ಮಹತ್ಯೆಗಳಲ್ಲಂತೂ ಇದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಸಾಲ ವಸೂಲಾತಿಯಲ್ಲಿ ಬ್ಯಾಂಕ್‍ಗಳು ನಿಷ್ಠುರವಾದಂತೆಲ್ಲಾ  ಸಾಲ ಪಡಕೊಂಡ ರೈತ ದುರ್ಬಲವಾಗುತ್ತಾ ಹೋಗುತ್ತಾನೆ. ಆತನ ಎದುರು ನಿರೀಕ್ಷೆಯ ದಾರಿಗಳೆಲ್ಲ ಮುಚ್ಚಿಕೊಳ್ಳುತ್ತಾ ಹೋಗತೊಡಗುತ್ತವೆ. ಪಡೆದ ಸಾಲಕ್ಕಿಂತ ಬಡ್ಡಿಯ ಮೊತ್ತವೇ ಹೆಚ್ಚಾಗುವುದನ್ನು ಪ್ರಶ್ನಿಸಲಾಗದೇ ಮತ್ತು ಬಡ್ಡಿರಹಿತ ಮಾನವೀಯ ಸಾಲ ಯೋಜನೆಗಳೆಂಬ ಪರ್ಯಾಯವು ಇಲ್ಲದೇ ಆತ ಕುಸಿಯತೊಡಗುತ್ತಾನೆ. ಅದೇ ವೇಳೆ, ಕೋಟ್ಯಾಂತರ ಲೆಕ್ಕದಲ್ಲಿ ಸಾಲ ಪಡೆಯುವ ಬೃಹತ್ ಶ್ರೀಮಂತ ವರ್ಗವು ಆಡಳಿತಗಾರರೊಂದಿಗೆ ಸಲುಗೆಯನ್ನು ಬೆಳೆಸಿಕೊಂಡು ತಮಗೆ ಪೂರಕವಾದ ನೀತಿಗಳನ್ನು ಜಾರಿಗೆ ಬರುವಂತೆ ನೋಡಿಕೊಳ್ಳುತ್ತಾ, ಸಾಲ ಮನ್ನಾ ಮಾಡಿಸಿಕೊಳ್ಳುತ್ತಾ ಬದುಕುತ್ತವೆ.
     ಆತ್ಮಹತ್ಯೆ ಯಾವ ಕಾರಣಕ್ಕೂ ಯಾವ ಸಮಸ್ಯೆಗೂ ಪರಿಹಾರ ಅಲ್ಲ. ಹಾಗಂತ, ಆತ್ಮಹತ್ಯೆಯ ಬಗ್ಗೆ ಉಡಾಫೆತನ ತೋರುವುದೂ ತಪ್ಪು. ಇವತ್ತು ಜಾಗತೀಕರಣ ಮತ್ತು ಕೊಳ್ಳುಬಾಕ ಸಂಸ್ಕೃತಿಯು ಆತ್ಮಹತ್ಯೆಯನ್ನು ಒಂದು ಆಯ್ಕೆಯಾಗಿಯೂ ಜನರ ಮುಂದೆ ಇಟ್ಟಿದೆ. ಮರ್ಯಾದೆ, ಸ್ವಾಭಿಮಾನ, ಘನತೆಯಿಂದ ಬದುಕುವ ಮಂದಿಯನ್ನು ಅದು ಆಮಿಷಕ್ಕೆ ಕೆಡವಿ ಕೊನೆಗೆ ತತ್ತರಿಸುವಂತೆ ಮಾಡುತ್ತಿದೆ. ಆದ್ದರಿಂದ ನೇಣು ಬಿಗಿದುಕೊಂಡ ರೀತಿಯ ಸಾವು ಬಾಹ್ಯನೋಟಕ್ಕೆ ನಮಗೆ ಆತ್ಮಹತ್ಯೆಯಂತೆ ಕಂಡರೂ ವಾಸ್ತವ ಹಾಗಿರಬೇಕಿಲ್ಲ. ಅಲ್ಲೊಬ್ಬ ಕೊಲೆಗಾರ ಇರುತ್ತಾನೆ. ಆತ ಬರಿಗಣ್ಣಿಗೆ ಕಾಣಿಸುವುದಿಲ್ಲ. ಸದ್ಯ ಆತನನ್ನು ಜನರ ಮುಂದಿಟ್ಟು ಚರ್ಚಿಸುವ ಗಂಭೀರ ಪ್ರಯತ್ನಗಳಾಗಬೇಕಾಗಿದೆ. ಉಡುಪಿ ಮತ್ತು ಕಲಬುರ್ಗಿ ಪ್ರಕರಣಗಳು ಅಂಥ ಚರ್ಚೆಗೆ ಇನ್ನೊಂದು ಅವಕಾಶವನ್ನು ಒದಗಿಸಿದೆ.


Friday 21 July 2017

ಗೋ ಹಿಂಸೆಗೆ ರೂಪಕವಾಗಬಹುದಾದ ಹಿಟ್ಲರ್ ನ ಕುಂಚ

      ನಾಲ್ಕು ದಿನಗಳ ನಡುವೆ ಲಂಡನ್‍ನಲ್ಲಿ ಎರಡು ಬೆಳವಣಿಗೆಗಳು ನಡೆದುವು. ಜಗತ್ತಿನ ಅತಿ ದೊಡ್ಡ ಭಯೋತ್ಪಾದಕನಾಗಿ ಮತ್ತು ಹಿಂಸಾಪ್ರೇಮಿಯಾಗಿ ಗುರುತಿಸಿಕೊಂಡಿರುವ ಜರ್ಮನಿಯ ಅಡಾಲ್ಫ್ ಹಿಟ್ಲರ್‍ನ 5 ವರ್ಣ ಚಿತ್ರಗಳನ್ನು ಹರಾಜು ಹಾಕುವ ಬಗ್ಗೆ ಲಂಡನಿನ ಮುಲ್ಲೋಕ್ ಏಲಂ ಹೌಸ್ ನೀಡಿದ ಪ್ರಕಟಣೆ ಇದರಲ್ಲಿ ಒಂದಾದರೆ, ಈ ಪ್ರಕಟನೆಯ ನಾಲ್ಕು ದಿನಗಳ ಮೊದಲು ಇದೇ ಲಂಡನ್ ನಗರವು ಪ್ರತಿಭಟನೆಯೊಂದಕ್ಕೆ ಸಾಕ್ಷ್ಯ ವಹಿಸಿದ್ದು ಇನ್ನೊಂದು.  ಹಾಗಂತ, ಆ ಪ್ರತಿಭಟನೆಗೂ ಲಂಡನ್‍ಗೂ ಯಾವ ಸಂಬಂಧವೂ ಇರಲಿಲ್ಲ. ಜುನೈದ್ ಖಾನ್, ಪೆಹ್ಲೂ ಖಾನ್ ಎಂಬೆರಡು ಹೆಸರಿನ ಪರಿಚಯ ಈ ನಗರಕ್ಕೆ ಗೊತ್ತಿರುವ ಸಾಧ್ಯತೆ ಶೂನ್ಯವೆಂದೇ ಹೇಳಬಹುದು. ಯಾಕೆಂದರೆ ಇವರಿಬ್ಬರು ಭಾರತದ ಹರ್ಯಾಣಕ್ಕೆ ಸೇರಿದವರು. ಪೆಹ್ಲೂ ಖಾನ್‍ರನ್ನು ಗೋರಕ್ಷಕರೆಂದು ಕರೆಸಿಕೊಂಡಿರುವ ದುಷ್ಕರ್ಮಿಗಳ ಗುಂಪು ರಾಜಸ್ಥಾನದಲ್ಲಿ ಥಳಿಸಿ ಕೊಂದಿದ್ದರೆ, 16 ವರ್ಷದ ಜುನೈದ್ ಖಾನ್‍ನನ್ನು `ಮಾಂಸ ಸೇವಕ' ಎಂಬ ಕಾರಣಕೊಟ್ಟು ದೆಹಲಿಯಲ್ಲಿ ರೈಲಿನಲ್ಲಿ ಹತ್ಯೆ ಮಾಡಲಾಗಿತ್ತು. ಗೋವಿನ ಹೆಸರಲ್ಲಿ ದೇಶದಲ್ಲಿ ನಡೆಯುತ್ತಿರುವ ಕ್ರೌರ್ಯಗಳನ್ನು ಮತ್ತು ಈ ಎರಡು ಹತ್ಯೆಗಳನ್ನು ಖಂಡಿಸಿ ಕಳೆದವಾರ ಒಂದೇ ದಿನ ಒಟ್ಟು 16 ನಗರಗಳಲ್ಲಿ ಪ್ರತಿಭಟನೆಗಳು ನಡೆದುವು. ದೆಹಲಿ, ಮುಂಬೈ, ಲಕ್ನೋ, ಬೆಂಗಳೂರು, ಲಂಡನ್, ಟೊರೆಂಟೊ ಮತ್ತು ಕರಾಚಿಗಳು ಇವುಗಳಲ್ಲಿ ಕೆಲವು. ದೆಹಲಿಯ ಜಂತರ್ ಮಂತರ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಜುನೈದ್ ಮತ್ತು ಪೆಹ್ಲೂ ಖಾನ್‍ರ ಕುಟುಂಬಗಳು ಭಾಗವಹಿಸಿದುವು. `ಸ್ವರ್ಗದಿಂದ- ಜುನೈದ್ ತನ್ನ ತಾಯಿಗೆ'- ಎಂಬ ಶೀರ್ಷಿಕೆಯ ಕವನವನ್ನು ಜುನೈದ್‍ನ ಚಿಕ್ಕಪ್ಪನ ಮಗ ವಾಚಿಸಿದ. `ಅಮ್ಮಾ, ನೀನು ಈದ್‍ನ ಖರೀದಿಗೆ ನನ್ನನ್ನು ದೆಹಲಿಗೆ ಕಳುಹಿಸಿದೆ. ಆದರೆ ನಾನು ಸ್ವರ್ಗ ಸೇರಿಕೊಂಡೆ. ಹಿಂದೂ ಮತ್ತು ಮುಸ್ಲಿಮರು ಪರಸ್ಪರ ಸಹೋದರರೆಂದು ನೀನು ನನಗೆ ಕಲಿಸಿರುವುದು ಸುಳ್ಳಮ್ಮಾ. ನನ್ನನ್ನು ಸಾಯುವಂತೆ ಹೊಡೆಯುಲಾಗುತ್ತಿದ್ದರೂ ಎಲ್ಲರೂ ಬರೇ ವೀಕ್ಷಿಸಿದರು. ವೀಡಿಯೋ ಮಾಡಿದರು. ತಮ್ಮ ಕಣ್ಣೆದುರೇ ತಮ್ಮ ಸಹೋದರನನ್ನು ಸಾಯಲು ಯಾರು ಬಿಡುತ್ತಾರಮ್ಮಾ...' ಈ ಹಾಡಿಗೆ ಪ್ರತಿಭಟನಾಕಾರರ ಕಣ್ಣುಗಳು ಹನಿಯಾದುವು. ಇದರ ನಾಲ್ಕು ದಿನಗಳ ಬಳಿಕ ಹಿಟ್ಲರ್‍ನ ಐದು ವರ್ಣ ಚಿತ್ರಗಳನ್ನು ತಲಾ 5 ಲಕ್ಷ ರೂಪಾಯಿ ಮೊತ್ತಕ್ಕೆ ಹರಾಜು ಕೋರುವ ಪ್ರಕಟಣೆ ಹೊರಬಿತ್ತು. ಹಿಟ್ಲರ್‍ನು ವರ್ಣಚಿತ್ರ ಕಲಾವಿದ ಆಗಿದ್ದ. ಈ ವರ್ಣ ಚಿತ್ರಗಳ ಪೈಕಿ ನಾಲ್ಕರಲ್ಲೂ ಆತನ ಸಹಿ ಇದೆ. ಗಡಿಯಾರದ ಚಿತ್ರ, ತಾನು ಹುಟ್ಟಿದೂರಾದ ಆಸ್ಟ್ರೀಯಾದ ನಗರದ ಗೇಟ್‍ನ ವರ್ಣಚಿತ್ರವೂ ಇದರಲ್ಲಿ ಸೇರಿದೆ. ನಿಜವಾಗಿ, ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಯು ಪ್ರಕಟಿಸಿರುವ ಈ ಸುದ್ದಿ ಮುಖ್ಯವಾಗುವುದು ಎರಡು ಕಾರಣಗಳಿಗಾಗಿ. ಒಂದು- ಕ್ರೌರ್ಯವನ್ನು ಪ್ರತಿಭಟಸಿ ಸಭೆ ನಡೆಸಲಾದ ಲಂಡನ್‍ನಿಂದಲೇ ಈ ವರ್ಣಚಿತ್ರಗಳ ಏಲಂನ ಸುದ್ದಿಯೂ ಪ್ರಕಟವಾಗಿದೆ ಎಂಬುದಾದರೆ, ಭಾರತದ ಈ ದುಷ್ಕರ್ಮಿಗಳೂ ಹಿಟ್ಲರ್‍ನ `ಹಿಂಸಾ ಪ್ರೇಮಿ' ಮನಃಸ್ಥಿತಿಯನ್ನು ಬಹಳವಾಗಿ ಪ್ರತಿನಿಧಿಸುತ್ತಿದ್ದಾರೆಂಬುದು ಇನ್ನೊಂದು ಹಿಟ್ಲರ್ ಒಂದು ಕಡೆ ಕ್ರೌರ್ಯ ಎಸಗುವುದಕ್ಕೇ ಜನಿಸಿರುವವನಂತೆ ವರ್ತಿಸುತ್ತಿದ್ದರೂ ಇನ್ನೊಂದು ಕಡೆ ಕಲಾವಿದನ ಮನಸ್ಸನ್ನೂ ಹೊಂದಿದ್ದ. ಆದರೆ ಆತನೊಳಗಿರುವ ಕಲಾವಿದನ ಮನಸ್ಸನ್ನು ಆತ ಪೋಷಿಸುವ ಕೆಲಸವನ್ನು ಮಾಡಲಿಲ್ಲ. ಅದರ ಬದಲು ಹಿಂಸಕ ಮನಸ್ಸನ್ನು ಪೋಷಿಸಿದ. ಇವತ್ತು ಲಂಡನ್‍ನಲ್ಲಿ ಏಲಂಗೆ ಇಡಲಾಗಿರುವ ವರ್ಣಚಿತ್ರಗಳ ಬಗ್ಗೆ ಯಾರಾದರೂ ಆಸಕ್ತಿ ವಹಿಸುವುದಾದರೆ, ಮತ್ತು ಆ ಏಲಂಗೆ ವ್ಯಾಪಕ ಪ್ರಚಾರ ಲಭ್ಯವಾಗುವುದಾದರೆ, ಅದು ಕಲಾವಿದ ಹಿಟ್ಲರ್‍ನಿಂದಾಗಿ ಅಲ್ಲ. ಹಿಂಸಾಪ್ರೇಮಿ ಹಿಟ್ಲರ್‍ನಿಂದಾಗಿ. ಆ ವರ್ಣಚಿತ್ರಗಳು ಆತನ ಕ್ರೌರ್ಯವನ್ನು ಮತ್ತೊಮ್ಮೆ ನೆನಪಿಸುತ್ತದೆ. ಕಲಾವಿದನಾಗಿರಬೇಕಾಗಿದ್ದ ಈತ ಯಾಕಾಗಿ ನರಮೇಧಿಯಾದ ಎಂದು ಆ ವರ್ಣಚಿತ್ರಗಳನ್ನು ವೀಕ್ಷಿಸಿದ ಪ್ರತಿಯೊಬ್ಬರೂ ಪ್ರಶ್ನಿಸಬಹುದು. ಆ ವರ್ಣಚಿತ್ರಗಳಲ್ಲಿ ಕ್ರೌರ್ಯದ ಅಂಶವಿದೆಯೇ ಎಂದು ಪರೀಕ್ಷಿಸಬಹುದು. ಸದ್ಯ, ನಮ್ಮ ದೇಶದಲ್ಲಿ ಬಹುತೇಕ ಹಿಟ್ಲರ್‍ನ ಮನಃಸ್ಥಿತಯನ್ನೇ ಹೋಲುವ ಒಂದು ಗುಂಪು ಇದೆ. ಹಿಟ್ಲರ್ ಪ್ರಶ್ನಾತೀತನಾಗಿದ್ದ. ಆದರೆ ಈ ಮಂದಿ ಆ ಮಟ್ಟಕ್ಕೆ ತಲುಪಿಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ ಇವರ ಮಾತು, ವರ್ತನೆ, ದೇಹ ಭಾಷೆಗಳು ಹಿಟ್ಲರ್‍ನನ್ನೇ ಹೋಲುತ್ತಿವೆ. ಹಿಟ್ಲರ್‍ನ ಕೈಯಲ್ಲಿ ಕುಂಚ ಇತ್ತು. ಆದರೆ ಆ ಕುಂಚ ಎಷ್ಟು ದುರ್ಬಲ ಆಗಿತ್ತು ಅಂದರೆ, ತನ್ನೊಳಗಿನ ಕ್ರೌರ್ಯವನ್ನು ಬಿಡಿಸುವ ಧೈರ್ಯ ತೋರದಷ್ಟು. ಸಾಮೂಹಿಕ ನರಮೇಧಗಳು ಆತನ ಕುಂಚದಲ್ಲಿ ಚಿತ್ರಗಳಾಗಿ ಪಡಿಮಾಡಿಲ್ಲ. ದ್ವೇಷದ ಭಾಷಣಗಳು ವರ್ಣಚಿತ್ರಗಳಾಗಿಲ್ಲ. ಆರ್ಯಶ್ರೇಷ್ಠತೆಯ ಅಮಲಿಗೆ ಸಿಲುಕಿ ನಜ್ಜು ಗುಜ್ಜಾದ ಮಹಿಳೆ, ಮಕ್ಕಳು, ವೃದ್ಧರನ್ನು ಆ ಕುಂಚ ಸ್ಪರ್ಶಿಸಿಲ್ಲ. ಇದು ಹಿಟ್ಲರ್‍ನೊಳಗಿನ ಕಲಾವಿದನ ಅಸಹಾಯಕತೆಯನ್ನಷ್ಟೇ ದಾಖಲಿಸುವುದಿಲ್ಲ, ಆ ಕಲಾವಿದ ಆತನೊಳಗೆ ನಿಜಕ್ಕೂ ಇದ್ದನೋ ಅಥವಾ ತನ್ನ ಕ್ರೌರ್ಯದ ಮುಖವನ್ನು ಅಡಗಿಸುವ ಉದ್ದೇಶದಿಂದ ಕುಂಚವನ್ನು ದುರುಪಯೋಗಿಸಿದನೋ ಅನ್ನುವ ಅನುಮಾನವನ್ನು ಹುಟ್ಟು ಹಾಕುತ್ತದೆ. ಹಿಟ್ಲರ್ ಕ್ರೂರಿಯಲ್ಲ, ಆತನೊಳಗೆ ಓರ್ವ ಕಲಾವಿದನಿದ್ದ ಎಂದು ಜಗತ್ತು ನಂಬಲಿ ಎಂಬ ಕಾರಣಕ್ಕಾಗಿ ಆತ ಕುಂಚ ಪ್ರೇಮಿಯಂತೆ ನಟಿಸಿದನೋ ಎಂದು ಸಂದೇಹಪಡುವುದಕ್ಕೆ ಆತನ ವ್ಯಕ್ತಿತ್ವ ಅವಕಾಶವನ್ನು ಕೊಡುತ್ತದೆ. ನಿಜವಾಗಿ ಹಿಟ್ಲರ್‍ನ ಕೈಯಲ್ಲಿ ಕುಂಚ ಇರುವಂತೆಯೇ ನಮ್ಮ ದೇಶದ ದುಷ್ಕರ್ಮಿಗಳ ಬಾಯಲ್ಲಿ ಗೋವು ಇದೆ. ಆದರೆ ಈ ಗೋವು ಎಷ್ಟು ದುರ್ಬಲ ಅಂದರೆ, ಪ್ರತಿದಿನ ಬೃಹತ್ ಕಂಪೆನಿಗಳಲ್ಲಿ ಹತ್ಯೆಯಾಗುವ ಮತ್ತು ವಿದೇಶಗಳಿಗೆ ಮಾಂಸವಾಗಿ ರವಾನೆಯಾಗುವ ಗೋವುಗಳ ಬಗ್ಗೆ ಒಂದೇ ಒಂದು ಮಾತನ್ನೂ ಆಡದಷ್ಟು. ಪ್ರತಿದಿನ ಈ ದೇಶದ ಹಾದಿ-ಬೀದಿಗಳಲ್ಲಿ, ಗೋಶಾಲೆಗಳಲ್ಲಿ ಹಸಿವಿನಿಂದ ಸಾಯುವ ಗೋವುಗಳ ಬಗ್ಗೆ ಒಂದು ತುಂಡು ಹೇಳಿಕೆಯನ್ನೂ ಕೊಡದಷ್ಟು. ಕನಿಷ್ಠ ತಂತಮ್ಮ ಮನೆಯಲ್ಲಿ ಒಂದು ಗೋವನ್ನೂ ಸಾಕದಷ್ಟು. ಆದ್ದರಿಂದ ಇವರ ಬಾಯಲ್ಲಿರುವ ಗೋವು ಹಿಟ್ಲರ್‍ನ ಕೈಯಲ್ಲಿದ್ದ ಕುಂಚದಂತೆ ಕಾಣಿಸುತ್ತದೆ. ಹಿಟ್ಲರ್ ತನ್ನ ಹಿಂಸಕ ಮನಸ್ಸು ಚರ್ಚೆಗೊಳಗಾಗದಂತೆ ನೋಡಿಕೊಳ್ಳುವುದಕ್ಕಾಗಿ ಕುಂಚ ಬಳಸಿದ್ದರೆ ಈ ದುಷ್ಕರ್ಮಿಗಳು ತಮ್ಮ ಕೊಲೆಗಾರ ಮನಸ್ಸನ್ನು ಅಡಗಿಸುವುದಕ್ಕಾಗಿ ಗೋವನ್ನು ಬಳಸುತ್ತಿದ್ದಾರೆ. ಗೋವು ಅವರ ಮನಸ್ಸಲಿಲ್ಲ. ಗೋವನ್ನು ಪುಕ್ಕಟೆಯಾಗಿ ಕೊಟ್ಟರೂ ಸಾಕುವ ಉಮೇದು ಅವರಲ್ಲಿರುವುದಕ್ಕೆ ಸಾಧ್ಯವೂ ಇಲ್ಲ. ಅವರ ದುಷ್ಕೃತ್ಯಗಳು ಗೋವಿನ ಸಂರಕ್ಷಣೆಗಾಗಿಯೂ ಅಲ್ಲ. ಅವರೊಳಗೊಂದು ವಿಕೃತ ಭಾವವಿದೆ. ದ್ವೇಷವಿದೆ. ಈ ದ್ವೇಷ ಗೋವಿನ ಮೇಲಿನ ಪ್ರೇಮದಿಂದಾಗಿ ಹುಟ್ಟಿಕೊಂಡದ್ದಲ್ಲ. ಒಂದುವೇಳೆ ಗೋವಿನ ಮೇಲಿನ ಪ್ರೇಮವೇ ಅವರ ದುಷ್ಕೃತ್ಯಗಳಿಗೆ ಕಾರಣವೆಂದಾದರೆ, ಅವರ ಪ್ರತಿ ಗುರಿಯೂ ಮುಸ್ಲಿಮರೇ ಆಗಿರುವುದಕ್ಕೆ ಸಾಧ್ಯವೇ ಇಲ್ಲ. ಅವರು ನಿರ್ದಿಷ್ಟ ಧರ್ಮದ ಅನುಯಾಯಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಗೋಮಾಂಸ ಸೇವಕರು ಈ ದೇಶದಲ್ಲಿ ಮುಸ್ಲಿಮರಿಗಿಂತ ಮುಸ್ಲಿಮೇತರರೇ ಹೆಚ್ಚಿದ್ದರೂ ಅವರು ಕೈಗೆ ಪ್ರತಿಬಾರಿಯೂ ಜುನೈದ್‍ಗಳೂ, ಪೆಹ್ಲೂ ಖಾನ್‍ರೇ ಸಿಗುತ್ತಾರೆ.
     ನಿಜವಾಗಿ, ಹಿಟ್ಲರ್‍ನ ಕೈಯಲ್ಲಿದ್ದ ಕುಂಚದಂತೆ ಈ ದೇಶದಲ್ಲಿ ಥಳಿಸಿ ಕೊಲ್ಲುವವರ ಬಾಯಲ್ಲಿ ಗೋವು ಇದೆ. ಉಳಿದಂತೆ ಕುಂಚ ಹಿಡಿದ ಕೈ ಮತ್ತು ಗೋವಿನ ಸ್ಮರಣೆ ಮಾಡುವ ಬಾಯಿ ಎರಡರ ಮನಸ್ಸೂ ಒಂದೇ. ಅದೇನೆಂದರೆ, ನಿರ್ದಿಷ್ಟ ಧರ್ಮದ ಜನರನ್ನು ಬೇಟೆಯಾಡುವುದು. ಲಂಡನ್‍ನಲ್ಲಿ ಹರಾಜಿಗಿಟ್ಟಿರುವ ವರ್ಣ ಚಿತ್ರಗಳು ಈ ಹಿನ್ನೆಲೆಯಲ್ಲಿ ಬಹಳ ಮುಖ್ಯವಾಗುತ್ತದೆ. ಅದೊಂದು ರೂಪಕ. ಈ ರೂಪಕವು ನಮ್ಮ ನಡುವಿನ ಗೋರಕ್ಷಕರಿಗೆ ಚೆನ್ನಾಗಿಯೇ ಒಪ್ಪುತ್ತದೆ.

ದ.ಕ. ಜಿಲ್ಲೆಯ ಅಶಾಂತಿಗೆ ಪರಿಹಾರ ಹೇಗೆ?

      ದ.ಕ. ಜಿಲ್ಲೆಯ ಕುರಿತಂತೆ ಜಿಲ್ಲೆಯ ಹೊರಗೆ ಕೆಲವು ಮೆಚ್ಚುಗೆಯ ಮಾತುಗಳು ಚಾಲ್ತಿಯಲ್ಲಿವೆ. ಇಲ್ಲಿ ಗುಣಮಟ್ಟದ ಶಿಕ್ಷಣ ಕೇಂದ್ರಗಳಿವೆ, ಉನ್ನತ ದರ್ಜೆಯ ಹಲವು ಆಸ್ಪತ್ರೆಗಳಿವೆ, ಜನರ ಜೀವನ ಮಟ್ಟವೂ ಸಾಕಷ್ಟು ಉತ್ತಮವಾಗಿದೆ, ಜಿಲ್ಲೆಯ ಜನರು ಬುದ್ಧಿವಂತರಿದ್ದಾರೆ.. ಇತ್ಯಾದಿ ಇತ್ಯಾದಿ. ಹಾಗಂತ, ಇವನ್ನೆಲ್ಲ ತಿರಸ್ಕರಿಸಬೇಕಿಲ್ಲ. ಇದರ ಜೊತೆಗೇ ಇಲ್ಲಿ ಸುಡುವ ಬಿಸಿಲಿದೆ, ಧಾರಾಕಾರ ಮಳೆಯಿದೆ, ಬೆಂಗಳೂರಿಗೆ ಸರಿಗಟ್ಟುವಷ್ಟು ಎರಡು ಬೃಹತ್ ಮಾಲ್‍ಗಳಿವೆ, ಬಹುತೇಕ ಎಲ್ಲ ದೈನಿಕಗಳ ಬ್ಯೂರೋಗಳಿವೆ, ಟಿವಿ ಚಾನೆಲ್‍ಗಳ ಕಚೇರಿಗಳಿವೆ, ಇತರೆಲ್ಲ ಜಿಲ್ಲೆಗಳಿಗಿಂತ ಹೆಚ್ಚು ಸಂಘ ಸಂಸ್ಥೆಗಳಿವೆ, ಜಿಲ್ಲೆಯ ಮಂದಿ ಕನಿಷ್ಠ 5 ಭಾಷೆಯಲ್ಲಿ ಸಂವಹನ ನಡೆಸುವಷ್ಟು ಸಮರ್ಥರಿದ್ದಾರೆ.. ಇತ್ಯಾದಿಗಳೂ ನಿಜವೇ. ಈ ಮೆಚ್ಚುಗೆ ಮತ್ತು ವಿಶೇಷತೆಗಳ ಆಚೆಗೆ ಜಿಲ್ಲೆಯನ್ನು ಕಾಡುವ ಕೆಲವು ಪ್ರಶ್ನೆಗಳಿವೆ. ಇಲ್ಲಿ ಯಾಕಿಷ್ಟು ರಕ್ತದಾಹ? ಇಲ್ಲಿನ ಹಿಂದುಗಳು ಮುಸ್ಲಿಮರನ್ನು ಸಹಿಸುವುದಿಲ್ಲವೇ ಅಥವಾ ಮುಸ್ಲಿಮರು ಹಿಂದೂಗಳನ್ನು ದ್ವೇಷಿಸುತ್ತಾರಾ? ಇಲ್ಲಿನ ವ್ಯಾಪಾರ-ವಹಿವಾಟುಗಳು ಹೇಗಿವೆ? ವಿಶೇಷ ಏನೆಂದರೆ, ಸದ್ಯ ಜಿಲ್ಲೆಯಲ್ಲಿ ಆಗಿರುವ ಎರಡು ಹತ್ಯೆ ಮತ್ತು ಹಲವು ಇರಿತ ಪ್ರಕರಣಗಳಿಗೆ ಮೂಲ ಕಾರಣವೆಂದು ನಂಬಲಾಗಿರುವ ಘಟನೆ ಚುಡಾವಣೆಯದ್ದಲ್ಲ. ‘ಗೋ ಸಾಗಾಟ ಮತ್ತು ಥಳಿತ’ ಎಂಬ ಪಟ್ಟಿಗೆ ಸೇರಿದ್ದೂ ಅಲ್ಲ. `ಲವ್ ಜಿಹಾದ್’ ಎಂಬ ಅತಿ ವಿಶೇಷ ಕೆಟಗರಿಯಲ್ಲೂ ಇದಕ್ಕೆ ಸ್ಥಾನವಿಲ್ಲ. ಕಲ್ಲಡ್ಕ ಎಂಬ ಅತಿ ಸಣ್ಣ ಪಟ್ಟಣದಲ್ಲಿ ಹಿಂದೂ ಮತ್ತು ಮುಸ್ಲಿಮರಿಬ್ಬರ ನಡುವೆ ನಡೆದ ಘಟನೆಯನ್ನೇ ಇದಕ್ಕೆ ಕಾರಣವಾಗಿ ಕೊಡಲಾಗುತ್ತಿದೆ. ಅವರಿಬ್ಬರೂ ಅಷ್ಟು ಪ್ರಭಾವಿಗಳೇ? ಜಿಲ್ಲೆ ಅಷ್ಟೂ ಸೆನ್ಸಿಟಿವ್ ಆಗಿದೆಯೇ? ಆ ಒಂದು ಘಟನೆಯನ್ನು ವಾರಗಳ ತನಕ ತಲೆಯಲ್ಲಿ ಹೊತ್ತು ತಿರುಗುವಷ್ಟು ಮತ್ತು ಹಿಂದೂ-ಮುಸ್ಲಿಮ್ ಆಗಿ ವಿಭಜನೆಗೊಂಡು ಹತ್ಯೆ, ಹಲ್ಲೆಗಳಲ್ಲಿ ಏರ್ಪಡುವಷ್ಟು ಜಿಲ್ಲೆ ಬೌದ್ಧಿಕ ದಾರಿದ್ರ್ಯಕ್ಕೆ ಒಳಪಟ್ಟಿದೆಯೇ? ಒಂದು ವೇಳೆ, ಯಾರಾದರೂ ಈ ಕಾರಣಕ್ಕಾಗಿ ಜಿಲ್ಲೆಯಲ್ಲಿ ಅಧ್ಯಯನ ನಡೆಸಲು ಮುಂದಾಗುವುದಾದರೆ, ಅವರಿಗೆ ಅಚ್ಚರಿಯಾಗುವ ಸಾಧ್ಯತೆಯೇ ಹೆಚ್ಚು. ಜಿಲ್ಲೆ ಹಿಂದೂ-ಮುಸ್ಲಿಮ್ ಆಗಿ ವಿಭಜನೆಗೊಂಡಿಲ್ಲ. ವ್ಯಾಪಾರ-ವಹಿವಾಟುಗಳು ನಾವು-ಅವರಾಗಿ ಮಾರ್ಪಾಟಾಗಿಲ್ಲ. ಅದೇ ಮೀನು ಮಾರುಕಟ್ಟೆ, ಅದೇ ಧಕ್ಕೆ. ತರಕಾರಿ ಮಾರುವವರಲ್ಲಿ ಅವರೂ-ಇವರೂ ಇದ್ದಾರೆ. ದಿನಸಿ ಅಂಗಡಿಗಳ ಗಿರಾಕಿಗಳಲ್ಲಿ ಅವರೂ ಇದ್ದಾರೆ, ಇವರೂ ಇದ್ದಾರೆ. ಮೀನು ಹಿಡಿಯುವವರಲ್ಲೂ ಅವರು ಇದ್ದಾರೆ. ಮಾರುವವರಲ್ಲೂ ಅವರು ಇದ್ದಾರೆ. ಇವರೂ ಇದ್ದಾರೆ. ತರಕಾರಿಯನ್ನು ಬೆಳೆದು ಮಾರುಕಟ್ಟೆಗೆ ತರುವವರು, ಮಾರುವವರು ಮತ್ತು ಅದನ್ನು ಖರೀದಿಸುವವರು ಹಿಂದೂ-ಮುಸ್ಲಿಮ್ ಆಗಿ ಬೇರ್ಪಟ್ಟಿಲ್ಲ. ಮಂಗಳೂರಿನ ಕೇಂದ್ರ ಮಾರುಕಟ್ಟೆ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿರುವ ಸಣ್ಣ ಪುಟ್ಟ ಮಾರುಕಟ್ಟೆಗಳು ಈಗಲೂ ಮನುಷ್ಯರಲ್ಲಿಯೇ ಇವೆ. ಅವರ್ಯಾರೂ ಧರ್ಮದ ಕಾರಣಕ್ಕಾಗಿ ಭಾರೀ ಸಂಖ್ಯೆಯಲ್ಲಿ ಅಂಗಡಿಗಳನ್ನು ಬದಲಿಸಿಕೊಂಡಿಲ್ಲ. ಇಲ್ಲಿ ಸಾಲಗಳ ವಹಿವಾಟೂ ಈ ಹಿಂದಿನಂತೆಯೇ ನಡೆಯುತ್ತಿದೆ. ಹೊಟೇಲುಗಳಲ್ಲಿ ಅವೇ ತಮಾಷೆಯ ಮಾತುಗಳು ವಿನಿಮಯವಾಗುತ್ತಿವೆ. ಕೆಲವು ಕಡೆ ಒಂದಷ್ಟು ವ್ಯತಿರಿಕ್ತ ಬೆಳವಣಿಗೆಗಳಾಗಿವೆಯಾದರೂ ಉದ್ದೇಶಪೂರ್ವಕವಾಗಿ ಹಿಂದೂ ಕಾಲನಿ ಮತ್ತು ಮುಸ್ಲಿಮ್ ಕಾಲನಿಗಳು ತಲೆಯೆತ್ತಿಲ್ಲ. ಆದರೂ ಜಿಲ್ಲೆಯ ಜನರು ತಮ್ಮ ಮಾತುಕತೆಗೆ ಒಂದು ಅಘೋಷಿತ ಮಿತಿಯನ್ನು ಅಳವಡಿಸಿಕೊಂಡಿರುವುದು ಅನೇಕ ಸಂದರ್ಭಗಳಲ್ಲಿ ವ್ಯಕ್ತವಾಗುತ್ತಲೇ ಇವೆ. ಅದು ರಾಜಕೀಯ. ಮಾತುಕತೆಗಳ ನಡುವೆ ರಾಜಕೀಯ ನುಸುಳದಂತೆ ಬಲವಂತದ ಎಚ್ಚರಿಕೆ ವಹಿಸಲಾಗುತ್ತಿದೆ. ಈ ಹಿಂದೆ ಈ ಮಡಿವಂತಿಕೆ ಇರಲಿಲ್ಲ. ಬಹುಶಃ ಜಿಲ್ಲೆಯ ರಕ್ತದಾಹಕ್ಕೆ ಕಾರಣಗಳು ಇಲ್ಲೇ ಇರುವ ಸಾಧ್ಯತೆಯೇ ಹೆಚ್ಚು. ಜನರು ಯಾವುದರ ಬಗ್ಗೆ ಮಾತಾಡಲು ಹೆಚ್ಚು ಭಯಪಡುತ್ತಾರೋ ಅದಕ್ಕೆ ಮುಖ್ಯವಾಗಿ ಎರಡು ಕಾರಣಗಳಿರುತ್ತವೆ. ಒಂದೋ ಅವರಿಗೆ ಆ ಬಗ್ಗೆ ಜ್ಞಾನವಿಲ್ಲ ಅಥವಾ ಹಾಗೇ ಮಾತಾಡುವುದರಿಂದ ಅಪಾಯ ಇದೆ. ಸದ್ಯ ಈ ಎರಡನೇ ಕಾರಣವೇ ಒಟ್ಟು ಬೆಳವಣಿಗೆಯ ಮೂಲವೆನ್ನಬಹುದು. ಈ ಸಂಭಾವ್ಯ ಅಪಾಯವನ್ನು ಪರಿಗಣಿಸಿಯೇ ಜನಸಾಮಾನ್ಯರು ತಮ್ಮ ಮಾತುಕತೆಗಳ ವೇಳೆ ರಾಜಕೀಯವನ್ನು ದೂರ ಇಡುತ್ತಿದ್ದಾರೆ. ಜಿಲ್ಲೆಯ ಆರೋಗ್ಯದ ಬಗ್ಗೆ ಕಾಳಜಿ ಇರುವವರು ಹೆಚ್ಚು ಒತ್ತು ಕೊಡಬೇಕಾದ ಜಾಗ ಇದು. ಮೂಲ ಕಾರಣ ಏನೆಂದು ಸ್ಪಷ್ಟವಾದರೆ ಆ ಬಳಿಕ ಪರಿಹಾರದ ದಾರಿಗಳನ್ನು ಕಂಡುಕೊಳ್ಳುವುದು ಸುಲಭವಾಗುತ್ತದೆ. ಆದ್ದರಿಂದ, ಸದ್ಯ ರಾಜಕೀಯ ಉದ್ದೇಶ ಇಲ್ಲದ ಜಿಲ್ಲೆಯ ಎಲ್ಲ ಸಂಘಸಂಸ್ಥೆಗಳು ಒಟ್ಟು ಸೇರಬಹುದಾದ ಸಂದರ್ಭವೊಂದನ್ನು ತುರ್ತಾಗಿ ಸೃಷ್ಟಿಸಿಕೊಳ್ಳಬೇಕು. ಹಿಂದೂ ಮತ್ತು ಮುಸ್ಲಿಮ್ ಸಂಘಸಂಸ್ಥೆಗಳು ಈ ವಿಷಯದಲ್ಲಿ ಮಡಿವಂತಿಕೆ ತೋರದೇ ಒಂದೇ ಕಡೆ ಸೇರಬೇಕು. ಸಮಿತಿ ರಚಿಸಬೇಕು. ಪ್ರಥಮವಾಗಿ- ಸೂಕ್ಷ್ಮವೆಂದು ನಂಬಲಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಸಂಘಸಂಸ್ಥೆಗಳನ್ನು ಜೊತೆ ಸೇರಿಸಿಕೊಂಡು ಪ್ರತಿ ಮನೆ ಮನೆಯ ಬಾಗಿಲಿಗೂ ಹೋಗಬೇಕು. ಅವರೊಂದಿಗೆ ಮಾತಾಡಬೇಕು. ರಾಜಕೀಯದ ಒಳ ಉದ್ದೇಶಗಳನ್ನು ಯಾವ ಮುಲಾಜೂ ಇಲ್ಲದೇ ಮಾತಾಡುವಷ್ಟು ರಾಜಕೀಯೇತರ ಧ್ವನಿಯಾಗಿ ಈ ಸಮಿತಿಗಳು ಹೊರ ಹೊಮ್ಮಬೇಕು. ಪ್ರತಿ ಮನೆಯ ಸಮಸ್ಯೆಗಳಿಗೆ ಕಿವಿಯಾಗಬೇಕು. ಈ ಸಮಸ್ಯೆಗಳು ಪರಿಹಾರವಾಗಬೇಕಾದರೆ ಜಿಲ್ಲೆಯಲ್ಲಿ ಶಾಂತಿ ಇರಬೇಕಾದುದು ಎಷ್ಟು ಅಗತ್ಯ ಎಂಬುದನ್ನು ಮನವರಿಕೆ ಮಾಡಿಸಬೇಕು. ಎರಡನೆಯದಾಗಿ, ಇರಿತದಲ್ಲಿ ಭಾಗಿಯಾದ ಆರೋಪಿಗಳ ಮನೆಗಳಿಗೆ ಭೇಟಿ ಕೊಡಬೇಕು. ಆ ಮನೆಯವರಿಗೆ ವಾಸ್ತವವನ್ನು ತಿಳಿ ಹೇಳಬೇಕು. ಸಾಧ್ಯವಾದರೆ, ಆರೋಪಿಗಳನ್ನು ಭೇಟಿಯಾಗುವುದು ಬಹಳ ಬಹಳ ಪ್ರಯೋಜನಕಾರಿ. ಅವರನ್ನು ಭೇಟಿಯಾಗುವುದರಿಂದ ಆಗುವ ಇನ್ನೊಂದು ಲಾಭ ಏನೆಂದರೆ, ಅವರ ವಿಚಾರಧಾರೆಗಳೇನು ಎಂಬುದು ಗೊತ್ತಾಗುತ್ತದೆ. ಇನ್ನಷ್ಟು ಯುವಕರು ಅಂಥ ವಿಚಾರಧಾರೆಯೊಂದಿಗೆ ಬೆಳೆಯದಂತೆ ನೋಡಿಕೊಳ್ಳುವುದಕ್ಕೆ ರೂಪು-ರೇಷೆಯನ್ನು ಸಿದ್ಧಪಡಿಸುವುದಕ್ಕೆ ಅವಕಾಶವಾಗುತ್ತದೆ. ಇದೇ ವೇಳೆ, ಆರೋಪಿಗಳ ಮನೆಗೆ ನೀಡುವ ಭೇಟಿಯನ್ನು ಚಿತ್ರೀಕರಿಸಿಕೊಳ್ಳುವುದು ಬಹಳ ಅಗತ್ಯ. ಅವರ ಹೆತ್ತವರು, ಒಡಹುಟ್ಟಿದವರು ಮತ್ತಿತರರ ಮಾತುಗಳನ್ನು ಸಮಾಜದ ಮುಂದೆ ಇಡುವುದರಿಂದ ಸಾಕಷ್ಟು ಪ್ರಯೋಜನ ಇದೆ. ಸಾಧ್ಯವಾದರೆ ದೃಶ್ಯ ಮಾಧ್ಯಮಗಳೂ ಸೇರಿದಂತೆ ಎಲ್ಲ ಮಾಧ್ಯಮಗಳಲ್ಲಿ ಬಿತ್ತರಿಸುವುದಕ್ಕೆ ಅದರಿಂದ ಅನುಕೂಲವಾಗುತ್ತದೆ. ಜಿಲ್ಲೆಯ ಜನರನ್ನು ಅಂಥ ವೀಡಿಯೋಗಳು ಖಂಡಿತ ಪ್ರಭಾವಿತಗೊಳಿಸಬಹುದು. ವಾಟ್ಸ್ಯಾಪ್ ಮಾಧ್ಯಮವನ್ನೂ ಇದರ ಪ್ರಸಾರಕ್ಕಾಗಿ ಬಳಸಿಕೊಳ್ಳಬಹುದು. ಸಂತ್ರಸ್ತರು ಮತ್ತು ಆರೋಪಿ ಕುಟುಂಬಗಳ ಪ್ರತಿ ಮಾತು-ತುಡಿಗಳು ಸಮಾಜಕ್ಕೆ ಬಹಳ ದೊಡ್ಡ ಸಂದೇಶವನ್ನು ನೀಡಬಲ್ಲುದು.
     ಆರೋಗ್ಯ ಮತ್ತು ಅನಾರೋಗ್ಯಗಳ ನಡುವೆ ಆಯ್ಕೆಯ ಪ್ರಶ್ನೆ ಬಂದರೆ ಯಾರೇ ಆಗಲಿ ಆರೋಗ್ಯವನ್ನೇ ಇಷ್ಟಪಡುತ್ತಾರೆ. ದ.ಕ. ಜಿಲ್ಲೆಯ ಮಂದಿ ಕೂಡ ಇದಕ್ಕೆ ಹೊರತಾಗಿಲ್ಲ. ಅನಾರೋಗ್ಯ ಪೀಡಿತ ಜಿಲ್ಲೆಯಿಂದ ಯಾರಿಗೂ ಸುಖ ಇಲ್ಲ. ಮಕ್ಕಳೂ ಸುಖವಾಗಿರಲ್ಲ. ಇದನ್ನು ಜನರಿಗೆ ಮನಮುಟ್ಟುವಂತೆ ಹೇಳುವ ಪ್ರಯತ್ನ ನಡೆಯಬೇಕಾಗಿದೆ. ಜಿಲ್ಲೆಯ ಸಂಘ ಸಂಸ್ಥೆಗಳು ತುರ್ತಾಗಿ ಈ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕಿದೆ.

Thursday 6 July 2017

.ತುಮಕೂರಿನ 37 ಹಸುಗಳು ಮತ್ತು ಗೋರಕ್ಷಣೆ

      ಕಳೆದವಾರ ತುಮಕೂರಿನಲ್ಲಿ ನಡೆದ ರೈತ ಪ್ರತಿಭಟನೆಯು ಸ್ವಘೋಷಿತ ಗೋರಕ್ಷಕರ ಕುರಿತಂತೆ ಮತ್ತೊಂದು ಸುತ್ತಿನ ಚರ್ಚೆಗೆ ವೇದಿಕೆಯನ್ನು ಒದಗಿಸಿದೆ. ತಮಿಳುನಾಡಿನ ಈರೋಡ್‍ನಿಂದ ಹೈನುಗಾರಿಕೆಗೆಂದು 37 ಜರ್ಸಿ ಹಸುಗಳು ಮತ್ತು ಎರಡು  ಎಮ್ಮೆಗಳನ್ನು ಖರೀದಿಸಿ ಬೆಳಗಾವಿಗೆ ತರುತ್ತಿದ್ದ ವೇಳೆ ಮೇ 24ರಂದು ತುಮಕೂರಿನಲ್ಲಿ ಸ್ವಘೋಷಿತ ಗೋರಕ್ಷಕರು ದಾಳಿ ನಡೆಸಿದರು. ಸುಮಾರು 200ರಷ್ಟಿದ್ದ ಗೋರಕ್ಷಕರು ರೈತರನ್ನು ಮತ್ತು ಲಾರಿ ಚಾಲಕರನ್ನು ಥಳಿಸಿದರು. ಪೊಲೀಸರು ರೈತರ ಮೇಲೆ ಮೊಕದ್ದಮೆ ದಾಖಲಿಸಿದರು. ಎಮ್ಮೆ ಮತ್ತು ಹಸುಗಳನ್ನು ಗುಬ್ಬಿ ತಾಲೂಕಿನಲ್ಲಿರುವ ಧ್ಯಾನ್ ಫೌಂಡೇಶನ್ ಗೋರಕ್ಷಕ್ ಟ್ರಸ್ಟ್‍ಗೆ ಹಸ್ತಾಂತರಿಸಿದರು. ರೈತರು ಕಂಗಾಲಾದರು. ತಲಾ 50 ಸಾವಿರ ರೂಪಾಯಿಯನ್ನು ತೆತ್ತು 37 ಹಸು ಮತ್ತು ಎರಡು ಎಮ್ಮೆಗಳನ್ನು ಖರೀದಿಸಿದ್ದ ರೈತರು, ಅದಕ್ಕಾಗಿ ಸಂಸ್ಥೆಗಳಿಂದ ಸಾಲಗಳನ್ನೂ ಪಡೆದಿದ್ದರು. ಅಲ್ಲದೇ 37 ಹಸುಗಳೂ ಗರ್ಭ ಧರಿಸಿದ್ದುವು. ಕಳೆದ ಜೂನ್ 5ರಂದು ತುಮಕೂರಿನ ಜೆಎಂಎಫ್‍ಸಿ ನ್ಯಾಯಾಲಯವು, ಮುಟ್ಟುಗೋಲು ಹಾಕಲಾದ ಜಾನುವಾರುಗಳನ್ನು ರೈತರಿಗೆ ಹಿಂದಿರುಗಿಸಬೇಕೆಂದು ಆದೇಶಿಸಿತು. ಮಾತ್ರವಲ್ಲ, ತಲಾ 50 ರೂಪಾಯಿಯಂತೆ 39 ಜಾನುವಾರುಗಳಿಗೂ ಪ್ರತಿದಿನದ ನಿರ್ವಹಣಾ ವೆಚ್ಚವಾಗಿ ಪಾವತಿಸಬೇಕೆಂದೂ ರೈತರಿಗೆ ನಿರ್ದೇಶಿಸಿತು. ಆದರೆ ಧ್ಯಾನ್ ಟ್ರಸ್ಟ್ ಜಾನುವಾರುಗಳನ್ನು ಹಿಂದಿರುಗಿಸಲು ಒಪ್ಪುತ್ತಿಲ್ಲ. ತಲಾ 1.7 ಲಕ್ಷ ರೂಪಾಯಿಯಂತೆ 39 ಜಾನುವಾರಿಗಳಿಗೆ ಪಾವತಿಸಿದರೆ ಮಾತ್ರ ಬಿಟ್ಟು ಕೊಡುವುದಾಗಿ ಅದು ಹೇಳಿಕೊಂಡಿದೆ.
      ಇಲ್ಲಿ ಕೆಲವು ಪ್ರಶ್ನೆಗಳಿವೆ. ನಿಜಕ್ಕೂ ಗೋರಕ್ಷಕರೆಂದರೆ ಯಾರು? ಅವರ ನಿಯಂತ್ರಣ ಯಾರ ಕೈಯಲ್ಲಿದೆ?  ಇತ್ತೀಚೆಗಷ್ಟೇ ತಮಿಳುನಾಡು ಸರಕಾರದ ಆದೇಶದಂತೆ ರಾಜಸ್ಥಾನದಿಂದ ಖರೀದಿಸಿ ತರಲಾಗುತ್ತಿದ್ದ ಜಾನುವಾರುಗಳನ್ನು ತಡೆಹಿಡಿದ ಘಟನೆ ರಾಜಸ್ಥಾನದಲ್ಲೇ ನಡೆಯಿತು. ಅದರಲ್ಲಿದ್ದವರ ಮೇಲೆ ಹಲ್ಲೆ ನಡೆಸಲಾಯಿತು. ಮಾಂಸ ಸಾಗಿಸುತ್ತಿರುವರೆಂಬ ಆರೋಪದಲ್ಲಿ ಯುವಕನನ್ನು ಇರಿದು ಕೊಂದ ಘಟನೆ ಕಳೆದವಾರ ದೆಹಲಿಯಲ್ಲಿ ನಡೆದಿದೆ. ಪೆಹ್ಲೂಖಾನ್, ಅಖ್ಲಾಕ್ ಹತ್ಯಾ ಘಟನೆಗಳು ಜನರ ನೆನಪಿನಿಂದ ಮಾಸುವ ಮೊದಲೇ ಅಂಥದ್ದೇ ಸರಣಿ ಕ್ರೌರ್ಯಗಳು ನಡೆಯುತ್ತಿರುವುದು ಏನನ್ನು ಸೂಚಿಸುತ್ತದೆ? ಹಾಗಂತ, ಗೋರಕ್ಷಣೆಯ ಹೆಸರಲ್ಲಿ ಥಳಿಸುವ ಗುಂಪಿನ ಮನಸ್ಥಿತಿ ಎಷ್ಟು ಭೀಭತ್ಸಕರ ಎನ್ನುವುದಕ್ಕೆ ಪುರಾವೆಯಾಗಿ ನಿರ್ದಿಷ್ಟ ಘಟನೆಗಳನ್ನು ಉಲ್ಲೇಕಿಸಿ ಸಮರ್ಥಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ. ಪ್ರತಿ ಘಟನೆಯೂ ಅದಕ್ಕೆ ಸಾಕ್ಷಿಯೇ. ಪ್ರತಿ ಹಿಂಸಾತ್ಮಕ ಘಟನೆಯನ್ನೂ ಚಿತ್ರೀಕರಿಸುವುದು ಮತ್ತು ಸಾಮಾಜಿಕ ಜಾಲತಾಣಗಳಿಗೆ ರವಾನಿಸಿ ತೃಪ್ತಿಪಡುವುದರಲ್ಲಿಯೇ ಆ ಮನಸ್ಥಿತಿ ಎಷ್ಟು ಭೀಕರ ಎಂಬುದನ್ನು ಸಾರಿ ಹೇಳುತ್ತದೆ. ಸಾಮಾನ್ಯವಾಗಿ, ಅತ್ಯಾಚಾರ ಪ್ರಕರಣಗಳಲ್ಲಿ ಇಂಥ ಚಿತ್ರೀಕರಣಗಳು ನಡೆಯುವುದಿದೆ. ಸಂತ್ರಸ್ತೆಯನ್ನು ಬೆದರಿಸುವುದಕ್ಕೆ ಅಂಥ ಚಿತ್ರೀಕರಣಗಳನ್ನು ಬಳಸಲಾಗುತ್ತದೆ. ಆದರೆ ಸಾಮಾಜಿಕ ಜಾಲತಾಣಗಳಿಗೆ ಅಂಥ ಚಿತ್ರೀಕರಣವನ್ನು ರವಾನಿಸಲು ಅಂಥವರು ಧೈರ್ಯ ತೋರುವುದು ತೀರಾ ತೀರಾ ಕಡಿಮೆ. ಒಂದು ಕಡೆ ಶಿಕ್ಷೆಯ ಭೀತಿಯಿದ್ದರೆ ಇನ್ನೊಂದು ಕಡೆ ಸಹಜ ಅಳುಕು ಇರುತ್ತದೆ. ತಾವು ಅಪರಾಧ ಎಸಗಿದ್ದೇವೆ ಎಂಬ ತಪ್ಪಿತಸ್ಥ ಭಾವ. ನಿಜವಾಗಿ ಗೋರಕ್ಷಕರ ಕ್ರೌರ್ಯ ಅತ್ಯಾಚಾರಕ್ಕಿಂತ ತೀರಾ ಭಿನ್ನವೇನೂ ಅಲ್ಲ. ಅತ್ಯಾಚಾರವು ಓರ್ವ ಹೆಣ್ಣು ಮಗಳನ್ನು ದೈಹಿಕವಾಗಿ ಹಿಂಸಿಸುವುದಕ್ಕಿಂತ ಹೆಚ್ಚು ಮಾನಸಿಕವಾಗಿ ಇರಿಯುತ್ತದೆ. ಸದಾ ಬದುಕಿನುದ್ದಕ್ಕೂ ಅದು ಕಾಡುತ್ತಲೂ ಇರುತ್ತದೆ. ಸಾಮಾಜಿಕವಾಗಿಯೂ ಅದು ಅಡ್ಡ ಪರಿಣಾಮವನ್ನು ಬೀರುತ್ತದೆ. ‘ಅತ್ಯಾಚಾರದ ಸಂತ್ರಸ್ತೆ’ ಎಂಬುದು ಈ ದೇಶದಲ್ಲಿ ಗೌರವದ ಪದವಾಗಿಯೇನೂ ಉಳಿದಿಲ್ಲ. ಮದುವೆ ಸಂದರ್ಭದಲ್ಲಿ ಅದು ತೊಂದರೆ ಕೊಡಬಹುದು. ಸಮಾರಂಭಗಳಲ್ಲಿ ಅದು ಮುಜುಗರಕ್ಕೆ ಒಳಪಡಿಸಬಹುದು. ಅನುಕಂಪ, ತ್ಚು ತ್ಚು ತ್ಚು ಮಾತುಗಳ ಮೂಲಕ ಮತ್ತೆ ಮತ್ತೆ ಕಂಡ ಕಂಡವರಿಂದ ಸಂತ್ರಸ್ತೆಯಾಗುತ್ತಲೇ ಇರುವ ಸನ್ನಿವೇಶಕ್ಕೂ ದೂಡಬಹುದು. ಗೋರಕರಿಂದ ಥಳಿತಕ್ಕೆ ಒಳಗಾಗುವವರ ಪರಿಸ್ಥಿತಿಯೂ ಬಹುತೇಕ ಹೀಗೆಯೇ. ಆವರೆಗೆ ಅತ್ಯಂತ ಪ್ರಾಮಾಣಿಕ ರೈತ, ಹೈನುದ್ಯಮಿ, ವ್ಯಾಪಾರಿಯಾಗಿ ಗುರುತಿಸಿಕೊಂಡಿದ್ದವ ಒಂದು ಬೆಳಗಾತ ದಿಢೀರನೇ ಕಳ್ಳನಾಗಿ ಬಿಡುತ್ತಾನೆ. ಥಳಿಕ್ಕೆ ಒಳಗಾಗುತ್ತಾನೆ. ಅಟ್ಟಾಡಿಸಿ ಹೊಡೆಯುವ, ಬಡಿಯುವ ವೀಡಿಯೋಗಳು ಆತನ ಪತ್ನಿ, ಮಕ್ಕಳಿಂದ ಹಿಡಿದು ಎಲ್ಲರಿಗೂ ಲಭ್ಯವಾಗುತ್ತದೆ. ಮೊಬೈಲ್‍ನಿಂದ ಮೊಬೈಲ್‍ಗೆ ಮತ್ತೆ ಮತ್ತೆ ರವಾನೆಯಾಗುತ್ತಲೂ ಇರುತ್ತದೆ. ಓರ್ವ ವ್ಯಕ್ತಿ ಥಳಿತದ ನೋವಿಗಿಂತಲೂ ಹೆಚ್ಚು ನೋವು ಅನುಭವಿಸುವ ಸಂದರ್ಭ ಇದು. ಒಂದು ಕಡೆ ಸಾರ್ವಜನಿಕವಾಗಿ ತನ್ನ ಪ್ರಾಮಾಣಿಕತೆಗೆ ಬಿದ್ದಿರುವ ಏಟು ಮತ್ತು ಇನ್ನೊಂದು ಕಡೆ ಮನೆಯಲ್ಲಿ ಇದ್ದಿರಬಹುದಾದ ಅಪ್ಪ ಅಥವಾ ಅಣ್ಣ ಎಂಬ ವರ್ಚಸ್ವೀ ವ್ಯಕ್ತಿತ್ವಕ್ಕೆ ನಡುಬೀದಿಯಲ್ಲಿ ಆಗುತ್ತಿರುವ ಅವಮಾನ.. ಇವೆರಡೂ ಸದಾಕಾಲ ಆತನನ್ನು ಖಂಡಿತ ಕಾಡುತ್ತಿರುತ್ತದೆ. ಅಂದಹಾಗೆ, ಅತ್ಯಾಚಾರದ ಸಂತ್ರಸ್ತೆಯ ಹೆಸರನ್ನು ಗೌಪ್ಯವಾಗಿ ಇಡುವ ವ್ಯವಸ್ಥೆಯಾದರೂ ಇದೆ. ಆದರೆ ಗೋರಕ್ಷಕರ ಥಳಿತಕ್ಕೆ ಒಳಗಾಗುವ ವ್ಯಕ್ತಿಯ ಮಟ್ಟಿಗೆ ಹೆಸರು ಮಾತ್ರವಲ್ಲ, ವೀಡಿಯೋಗಳು ಜೊತೆಜೊತೆಗೇ ಬಹಿರಂಗವಾಗುವ ಸ್ಥಿತಿ ಇದೆ. ವ್ಯಕ್ತಿ ಎಷ್ಟೇ ಪ್ರಾಮಾಣಿಕನಾಗಿರಲಿ, ತನಗಾಗಿರುವ ಅವಮಾನ ಮತ್ತು ತನ್ನ ಅಸಹಾಯಕ ವರ್ತನೆಯನ್ನು ತನ್ನ ಪತ್ನಿ, ಮಕ್ಕಳು, ಕುಟುಂಬ ಅಥವಾ ಸಮಾಜ ವೀಕ್ಷಿಸುವುದನ್ನು
ಇಷ್ಟಪಡುವುದಿಲ್ಲ. ಆದ್ದರಿಂದಲೇ ಅತ್ಯಾಚಾರದ ಸಂತ್ರಸ್ತೆಯಂತೆ ‘ಗೋರಕ್ಷಕ ಸಂತ್ರಸ್ತ’ರನ್ನೂ ಯಾಕೆ ಪರಿಗಣಿಸಬಾರದು ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು? ಗೋರಕ್ಷಕರ ಕ್ರೌರ್ಯ ಯಾವ ನೆಲೆಯಲ್ಲೂ ಅತ್ಯಾಚಾರಿಗಳ ಕ್ರೌರ್ಯಕ್ಕಿಂತ ಕಡಿಮೆಯದಲ್ಲ. ಈ ಗೋರಕ್ಷಕರಿಗೆ ಯಾವ ನೀತಿ ನಿಯಮಗಳೂ ಇಲ್ಲ. ಅಕ್ರಮ ಮತ್ತು ಸಕ್ರಮ ಸಾಗಾಟಗಳ ಬಗ್ಗೆ ಕನಿಷ್ಠ ಮಾಹಿತಿಯೂ ಇರುವುದಿಲ್ಲ. ಅವರದು ವಿಕೃತ ಮನಸ್ಥಿತಿ. ಆ ಮನಸ್ಥಿತಿಯ ಸ್ವಭಾವ ಏನೆಂದರೆ, ಇತರರನ್ನು ಹಿಂಸಿಸಿ ಆನಂದ ಪಡುವುದು. ಆಕಳನ್ನು ಸ್ವತಃ ಅದರ ಮಾಲಿಕನೇ ಗದ್ದೆಗೆ ಅಟ್ಟಿಕೊಂಡು ಹೋದರೂ ಥಳಿಸುವಷ್ಟು ಈ ಮನಸ್ಥಿತಿ ವಿಕೃತವಾದುದು. ದುರಂತ ಏನೆಂದರೆ, ಈ ಮನಸ್ಥಿತಿಯ ಅಟ್ಟಹಾಸ ದಿನೇ ದಿನೇ ಪ್ರಬಲಗೊಳ್ಳುತ್ತಿದ್ದರೂ ಸಮಾಜ ಎಚ್ಚೆತ್ತುಕೊಳ್ಳುತ್ತಿಲ್ಲ. ನಿರ್ಭಯ ಪ್ರಕರಣದಲ್ಲಿ ಈ ದೇಶ ತೋರಿದ ಒಗ್ಗಟ್ಟನ್ನು ಈ ಕ್ರೌರ್ಯ ಮತ್ತೆ ಮತ್ತೆ ಬಯಸುತ್ತಿದ್ದರೂ ದೊಡ್ಡ ಮಟ್ಟದಲ್ಲಿ ಅಂಥದ್ದೊಂದು ಜಾಗೃತಿ ಇನ್ನೂ ರೂಪುಪಡೆದಿಲ್ಲ. ಉನಾ ಪ್ರಕರಣದಲ್ಲಿ ಈ ಜಾಗೃತಿ ಪ್ರಜ್ಞೆ ಅಲ್ಪ ಮಟ್ಟದಲ್ಲಿ ಕಾಣಿಸಿಕೊಂಡದ್ದನ್ನು ಬಿಟ್ಟರೆ ಉಳಿದಂತೆ ಸಮಾಜ ವೀಕ್ಷಕನ ಪಾತ್ರ ನಿರ್ವಹಿಸಿದ್ದೇ ಹೆಚ್ಚು. ಕಾನೂನನ್ನು ಕೈಗೆತ್ತಿಕೊಳ್ಳುವ ಅವಕಾಶವಿಲ್ಲದ ದೇಶವೊಂದರಲ್ಲಿ ಪ್ರಾಮಾಣಿಕರನ್ನೂ ರೈತರನ್ನೂ ಕಳ್ಳರ ಪಟ್ಟಿಗೆ ಸೇರಿಸುವ ಕ್ರೌರ್ಯವೊಂದು ಸಮಾಜದ ಮೌನ ಸಮ್ಮತಿಯೊಂದಿಗೆ ನಡೆಯುತ್ತಿರುವುದು ಅತ್ಯಂತ ಅಪಾಯಕಾರಿಯಾದುದು. ಇದರ ವಿರುದ್ಧ ಸಮಾಜ ಪ್ರತಿ ಚಳವಳಿ ನಡೆಸಬೇಕು. ಗೋರಕ್ಷಕರ ವೇಷದಲ್ಲಿರುವ ಕ್ರಿಮಿನಲ್‍ಗಳನ್ನು ‘ಅತ್ಯಾಚಾರಿ’ಗಳಂತೆ ನಡೆಸಿಕೊಳ್ಳಬೇಕು. ಅವರಿಗೆ ಸಾರ್ವಜನಿಕವಾಗಿ ಮಾನ್ಯತೆ ಲಭ್ಯವಾಗದಂತೆ ನೋಡಿಕೊಳ್ಳಬೇಕು. ಕಾನೂನುಬಾಹಿರವಾಗಿ ಗೋಹತ್ಯೆ ನಡೆಸುವವರಿಗೆ ಶಿಕ್ಷೆ ವಿಧಿಸುವ ನಿಯಮಗಳನ್ನು ರೂಪಿಸಿರುವ ಮಾದರಿಯಲ್ಲೇ ಗೋರಕ್ಷಣೆಯ ಹೆಸರಲ್ಲಿ ಬೀದಿ ನ್ಯಾಯ ನೀಡುವವರ ವಿರುದ್ಧವೂ ಕಠಿಣ ನಿಯಮಗಳನ್ನು ರಚಿಸಬೇಕು. ಅಕ್ರಮ ಮತ್ತು ಸಕ್ರಮವನ್ನು ಪತ್ತೆ ಹಚ್ಚುವುದು ಸರಕಾರದ ಕರ್ತವ್ಯ. ಆ ಕೆಲಸವನ್ನು ಸರಕಾರ ನಿರ್ವಹಿಸಲಿ. ಸ್ವಘೋಷಿತ ರಕ್ಷಕರಿಗೆ ಅತ್ಯಾಚಾರಿಗಳ ಸ್ಥಾನ-ಮಾನ ಸಿಗಲಿ. ತುಮಕೂರು ಪ್ರಕರಣವು ಇಂಥದ್ದೊಂದು ಒತ್ತಾಯಕ್ಕೆ ಮತ್ತೊಮ್ಮೆ ಅವಕಾಶವನ್ನು ಒದಗಿಸಿದೆ.