Thursday 25 July 2019

ತಬ್ರೇಝ್ ಬಿಟ್ಟು ಹೋದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳೋಣ



ಜಾರ್ಖಂಡ್‍ನ ಧಟ್ಕಿಧಿ ಎಂಬ ಗ್ರಾಮದಲ್ಲಿ ಗುಂಪು ಥಳಿತಕ್ಕೆ ಒಳಗಾಗಿ ಜೂನ್ 22ರಂದು ಸಾವಿಗೀಡಾದ ತಬ್ರೇಝ್ ಅನ್ಸಾರಿಯ ಬಗ್ಗೆ ಅಲ್ಲಿನ ಉಪವಿಭಾಗೀಯ ಅಧಿಕಾರಿ ನಡೆಸಿದ ತನಿಖಾ ವರದಿಯ ವಿವರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಈ ವರದಿಯಲ್ಲಿರುವ ಅಂಶಗಳಿಗೆ ಸಂಬಂಧಿಸಿ ಮಾಧ್ಯಮಗಳಲ್ಲಾಗಲಿ ಸಾಮಾಜಿಕ ವ್ಯವಸ್ಥೆಯಿಂದಾಗಲಿ ಅಥವಾ ಮಾನವ ಹಕ್ಕುಗಳ ಹೋರಾಟಗಾರರಿಂದಾಗಲಿ ಅಚ್ಚರಿ ವ್ಯಕ್ತವಾಗಿಲ್ಲ. ಟಿ.ವಿ. ಚರ್ಚೆಗಳು, ಪತ್ರಿಕಾ ವಿಶ್ಲೇಷಣೆಗಳೂ ನಡೆದಿಲ್ಲ. ಒಂದು ಸಹಜ ವರದಿ ಎಂಬ ಮಿತಿಗಿಂತ ಆಚೆ ಆ ತನಿಖಾ ವರದಿ ಸುದ್ದಿಯಾಗದೇ ಇರುವುದಕ್ಕೆ ಕಾರಣ ಏನೆಂದರೆ,
1. ಅಂಥ ಥಳಿತದ ಸುದ್ದಿಗಳಿಗೆ ನಾವೀಗ ಒಗ್ಗಿಕೊಂಡಿದ್ದೇವೆ.
2. ಇಂಥ ವರದಿಗಳಲ್ಲಿ ನಮಗೆ ಗೊತ್ತಿಲ್ಲದ ಯಾವುದೂ ಇರುವುದಿಲ್ಲ.
ತಬ್ರೇಝ್ ಅನ್ಸಾರಿಯ ಸಾವಿನ ಕುರಿತಾದ ತನಿಖಾ ವರದಿಯಲ್ಲಿ ಅಚ್ಚರಿಯ ಅಂಶಗಳೇನೂ ಇಲ್ಲ. ಪೊಲೀಸರು ಮತ್ತು ವೈದ್ಯರ ನಿರ್ಲಕ್ಷ್ಯ ವನ್ನು ವರದಿಯಲ್ಲಿ ಎತ್ತಿ ಹೇಳಲಾಗಿದೆ. ತಬ್ರೇಝ್ ನ ಮೇಲೆ ಗುಂಪು ಹಲ್ಲೆ  ನಡೆಯುತ್ತಿರುವ ಕುರಿತು ತಡರಾತ್ರಿಯೇ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದರೂ ಅವರು ನಿರ್ಲಕ್ಷ್ಯ  ತೋರಿದರು ಮತ್ತು ಬೆಳಿಗ್ಗೆ ಘಟನಾ ಸ್ಥಳಕ್ಕೆ ತಲುಪಿದರು ಎಂದು ವರದಿಯಲ್ಲಿದೆ. ತಬ್ರೇಝ್ ನ ಮೇಲಾದ ಗಾಯಗಳ ಕುರಿತಂತೆ ವೈದ್ಯರು ಗಂಭೀರವಾಗಿ ತಪಾಸಣೆ ನಡೆಸದೇ ನಿರ್ಲಕ್ಷ್ಯ ತೋರಿದರು ಎಂದೂ ವರದಿ ಹೇಳಿದೆ. ನಿಜವಾಗಿ, ಗುಂಪುಹತ್ಯೆಯ ಹೆಚ್ಚಿನೆಲ್ಲ ಕ್ರೌರ್ಯಗಳ ಪಾಡು ಇದು. ಥಳಿಸುವವರಿಗೆ ಉದ್ದೇಶಪೂರ್ವಕವಾಗಿ ಒಂದು ಅವಕಾಶ ಕೊಟ್ಟ ಬಳಿಕವೇ ಪೊಲೀಸರು ಘಟನಾ ಸ್ಥಳಕ್ಕೆ ತಲುಪುತ್ತಾರೆ ಎಂಬ ಆರೋಪವನ್ನು ಈ ವರದಿಯೂ ಸಮರ್ಥಿಸುತ್ತಿದೆ. ಗುಂಪು ಥಳಿತ ಎಂಬುದು ನಾಗರಿಕ ಪುಂಡ ಗುಂಪಿನ ಕೃತ್ಯ ಎಂಬ ವಾದವನ್ನು ತಳ್ಳಿ ಹಾಕುವ ಅಂಶ ಇದು. ಗುಂಪು ಥಳಿತದ ಜೊತೆ ನಮ್ಮ ವ್ಯವಸ್ಥೆಗೆ ನೇರವಾಗಿಯೋ ಪರೋಕ್ಷವಾಗಿಯೋ ಸಂಬಂಧ ಇದೆ. ಗುಂಪು ಥಳಿತಕ್ಕೆ ಒಳಗಾಗುವ ವ್ಯಕ್ತಿಯನ್ನು ಅಪರಾಧಿಯಂತೆ ಮತ್ತು ಥಳಿಸಿದವರನ್ನು ನೈತಿಕ ಸಿಪಾಯಿಗಳಂತೆ ಕಾಣುವ ಅಲಿಖಿತ ವಾತಾವರಣವೊಂದು ಕೆಲವು ಪೆÇಲೀಸ್ ಠಾಣೆಗಳಲ್ಲಿದೆ. ಥಳಿಸಿದ ಗುಂಪಿನ ಮೇಲೆ ಹಾಕಬಹುದಾದ ಕೇಸುಗಳ ಸ್ವರೂಪವೇ ಇದನ್ನು ಹೇಳುತ್ತದೆ. ಸುಲಭದಲ್ಲಿ ಜಾಮೀನು ದೊರೆಯಬಲ್ಲ ಸೆಕ್ಷನ್‍ಗಳಡಿ ಕೇಸು ದಾಖಲಿಸುವ ಮೂಲಕ ಅವರಲ್ಲಿ ಧೈರ್ಯ ತುಂಬುವ ಯತ್ನಗಳೂ ನಡೆಯುತ್ತಿವೆ. ಪೆಹ್ಲೂ ಖಾನ್ ಪ್ರಕರಣ ಇದಕ್ಕೊಂದು ಉದಾಹರಣೆ. ಈ ದೇಶದಲ್ಲಿ 2014ರ ಬಳಿಕ ಗುಂಪು ಥಳಿತ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಮಟ್ಟದ ಏರಿಕೆ ಯಾಕಾಯಿತು ಎಂಬ ಪ್ರಶ್ನೆಗೆ ಉತ್ತರವೂ ಇಲ್ಲೆಲ್ಲೋ  ಇವೆ. ಈ ಪ್ರಶ್ನೆಯ ಜೊತೆಗೇ ಇನ್ನೊಂದು ಪ್ರಶ್ನೆಯನ್ನೂ ಎತ್ತಬಹುದು. ಗುಂಪು ಥಳಿತದ ಪ್ರಕರಣಗಳಲ್ಲಿ ಉತ್ತರ ಪ್ರದೇಶಕ್ಕೆ ಮೊದಲ ಸ್ಥಾನ, ಗುಜರಾತ್ ದ್ವಿತೀಯ, ಬಿಹಾರ ತೃತೀಯ, ರಾಜಸ್ಥಾನಕ್ಕೆ ಚತುರ್ಥ ಸ್ಥಾನಗಳು ಯಾಕಿವೆ? ಈ ಎರಡೂ ಪ್ರಶ್ನೆಗಳ ಉತ್ತರವು ಬಿಜೆಪಿಯನ್ನು ಹೊಂದಿಕೊಂಡಿದೆ ಎಂಬುದೂ ಅತ್ಯಂತ ವಿಷಾದನೀಯ. ರಾಷ್ಟ್ರೀಯ ದ್ವೇಷ ಹಿಂಸೆ ನಿಗಾ (Hate crime branch) ಸಂಸ್ಥೆಯ ಪ್ರಕಾರ, 2014ರ ವರೆಗೆ ದ್ವೇಷ ಹಿಂಸೆಯ ಪ್ರಕರಣಗಳು ಒಂಟಿ ಅಂಕಿಯಲ್ಲಿದ್ದುವು. ಉದಾಹರಣೆಗೆ, 2013ರಲ್ಲಿ ದ್ವೇಷ ಹಿಂಸೆಯ ಸಂಖ್ಯೆ 9. ಅದೇವೇಳೆ, 2018ರಲ್ಲಿ ಇಂಥ ಹಿಂಸೆಗಳ ಸಂಖ್ಯೆ 291. ಇದರಲ್ಲಿ 152 ಪ್ರಕರಣಗಳು ನಡೆದುದೂ ಬಿಜೆಪಿ ಆಡಳಿತದ ಮೇಲಿನ ನಾಲ್ಕು ರಾಜ್ಯಗಳಲ್ಲಿ. ಆಮ್ನೆಸ್ಟಿ ಇಂಟರ್ ನಾಶನಲ್ ಇಂಡಿಯಾ ಸಂಸ್ಥೆಯ ವರದಿಯಂತೂ ಹಿಂಸಾತ್ಮಕ ಭಾರತದ ಅತಿ ಅಪಾಯಕಾರಿ ಚಿತ್ರಣವನ್ನು ನೀಡುತ್ತದೆ. ಗುಂಪು ದಾಳಿಗಳಿಗೆ ಸಂಬಂಧಿಸಿ 2015ರಿಂದ 2018ರ ವರೆಗಿನ ಅಂಕಿ ಅಂಶಗಳನ್ನು ಅದು ಇತ್ತೀಚೆಗೆ ಬಿಡುಗಡೆ ಮಾಡಿದ್ದು ಈ ಅವಧಿಯಲ್ಲಿ ಒಟ್ಟು 721 ಗುಂಪು ದಾಳಿಗಳು ಭಾರತದಲ್ಲಿ ನಡೆದಿವೆ ಎಂದು ಅದು ಹೇಳಿದೆ. ಕೇವಲ 2018ರಲ್ಲೇ  ಒಟ್ಟು 218 ಗುಂಪು ದಾಳಿಗಳು ನಡೆದಿವೆ. ಇದರಲ್ಲಿ ಸಿಂಹಪಾಲು ದಲಿತರ ಮೇಲೆ. 142 ದಲಿತರ ಮೇಲೆ ಕೇವಲ ಕಳೆದ ಒಂದೇ ವರ್ಷದಲ್ಲಿ ಗುಂಪು ದಾಳಿ ನಡೆದಿದ್ದರೆ, 50 ದಾಳಿಗಳು ಮುಸ್ಲಿಮರ ಮೇಲೆ ಮತ್ತು 40 ದಾಳಿಗಳು ಮಹಿಳೆಯರ ಮೇಲೆ ನಡೆದಿವೆ. ಕ್ರೈಸ್ತರು, ಆದಿವಾಸಿಗಳ ಮೇಲೆ ತಲಾ 8 ದಾಳಿಗಳು ನಡೆದಿವೆ. ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದುದು 2014ರ ಬಳಿಕ ಎಂಬುದರಿಂದ ಮತ್ತು ಹೆಚ್ಚಿನ ಗುಂಪು ಥಳಿತ ಪ್ರಕರಣಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ  ನಡೆದಿವೆ ಎಂಬ ಕಾರಣಕ್ಕಾಗಿಯೂ ಈ ವಿವರಗಳು ಮುಖ್ಯವಾಗುತ್ತವೆ. ತಬ್ರೇಝ್ ಪ್ರಕರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ತನ್ನ ನೋವನ್ನು ವ್ಯಕ್ತಪಡಿಸಿದರು. ತಾನು ಆ ಗುಂಪು ಹತ್ಯೆಗಳ ಪರ ಇಲ್ಲ ಅನ್ನುವ ಅವರ ಆ ಸಂದೇಶ ಸ್ವಾಗತಾರ್ಹ. ಆದರೆ ಆ ಸಂದೇಶ ಎಲ್ಲಿಗೆ ಮತ್ತು ಹೇಗೆ ತಲುಪಬೇಕಾಗಿದೆಯೋ ಹಾಗೆ ತಲುಪಿಲ್ಲ ಅನ್ನುವುದನ್ನು ಆ ಬಳಿಕದ ಗುಂಪು ಥಳಿತ ಪ್ರಕರಣಗಳು ಸಾಬೀತುಪಡಿಸಿವೆ. ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಗೂಂಡಾಗಿರಿಯನ್ನು ಮಟ್ಟಹಾಕಲು ಹೊಸ ಕಾಯ್ದೆಯೊಂದನ್ನು ಜಾರಿಗೆ ತರಲು ಮಧ್ಯಪ್ರದೇಶ ಸರಕಾರ ಮುಂದಾಗಿರುವುದೂ ಇದೇವೇಳೆ ನಡೆದಿದೆ. ನಿಜವಾಗಿ,
ಇಲ್ಲಿನ ಸಮಸ್ಯೆ ಕಾನೂನಿನ ಕೊರತೆಯದ್ದಲ್ಲ. ಭಾರತೀಯ ದಂಡಸಂಹಿತೆಯಲ್ಲೇ  ಗುಂಪು ಥಳಿತವನ್ನು ಮಟ್ಟ ಹಾಕುವುದಕ್ಕೆ ಬೇಕಾದ ವಿವಿಧ ಸೆಕ್ಷನ್‍ಗಳಿವೆ. ಆದರೆ, ಒಂದನೆಯದಾಗಿ, ಕೇಸು ದಾಖಲಿಸುವ ಪೊಲೀಸರಿಗೆ ಈ ಸೆಕ್ಷನ್‍ಗಳ ಬಗ್ಗೆ ಸಮಗ್ರ ತಿಳುವಳಿಕೆ ಇಲ್ಲ. ಎರಡನೆಯದಾಗಿ, ಪೊಲೀಸ್ ಠಾಣೆಗಳು ಗುಂಪು ಥಳಿತದಲ್ಲಿ ಭಾಗಿಯಾದವರನ್ನು ಕ್ರಿಮಿನಲ್‍ಗಳಂತೆ ಪರಿಗಣಿಸುತ್ತಿಲ್ಲ. ಆದ್ದರಿಂದ, ಮೊದಲು ಪೊಲೀಸ್ ಠಾಣೆಗಳ ಮನಸ್ಥಿತಿಗೆ ಚಿಕಿತ್ಸೆಯಾಗಬೇಕು. ಗುಂಪು ಹತ್ಯೆಯನ್ನು ಗೌರವದ ದೃಷ್ಟಿಯಿಂದ ನೋಡುವ ಠಾಣೆಗಳಿಗೆ ಮೇಲಧಿಕಾರಿಗಳು ಕ್ಲಾಸ್ ತೆಗೆದುಕೊಳ್ಳಬೇಕು. ತಪ್ಪಿತಸ್ಥರೆಂದು ಕಂಡುಬರುವ ಪೆÇಲೀಸರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ,
ಗುಂಪು ಹತ್ಯೆಗೂ ದ್ವೇಷ ಭಾಷಣಕ್ಕೂ ನಡುವೆ ಇರುವ ಗಾಢ ಸಂಬಂಧವನ್ನು ನಿರ್ಲಕ್ಷಿಸಿಕೊಂಡು ಗುಂಪು ಥಳಿತವನ್ನು ವಿಶ್ಲೇಷಣೆಗೆ ಒಳಪಡಿಸುವುದಕ್ಕೂ ಸಾಧ್ಯವಿಲ್ಲ. ಗುಂಪು ಥಳಿತ ಮತ್ತು ದ್ವೇಷ ಭಾಷಣ ಇವೆರಡೂ ಅವಳಿ-ಜವಳಿ. ಒಂದಿಲ್ಲದೇ ಇನ್ನೊಂದಿರಲು ಸಾಧ್ಯವಿಲ್ಲದಷ್ಟು ಆಪ್ತ ಜೋಡಿಗಳು. ಓಆಖಿಗಿಯ ವರದಿ ಪ್ರಕಾರ, ಈ ಬಾರಿಯ ಸಂಸತ್ತಿನಲ್ಲಿ 45 ಮಂದಿ ಈ ಪಟ್ಟಿಯಲ್ಲಿ ಸೇರಿದವರಿದ್ದಾರೆ. ಇವರಲ್ಲಿ 35 ಮಂದಿ ಸಂಸದರೂ ಬಿಜೆಪಿಗೆ ಸೇರಿದವರು. ಕಳೆದೈದು ವರ್ಷಗಳಲ್ಲಿ ದ್ವೇಷ ಭಾಷಣ ಮಾಡಿದ ಕಪ್ಪು ಕಲೆ ಇವರೆಲ್ಲರ ಮೇಲಿದೆ.
ಗುಂಪು ಥಳಿತ ಅತ್ಯಂತ ಅನಾಗರಿಕವಾದುದು ಮತ್ತು ದೇಶವೊಂದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರಕ್ಕೆ ತಳ್ಳುವಂಥದ್ದು. ಒಂದು ದೇಶದ ಅಭಿವೃದ್ಧಿಗೂ ಜನರ ಜೀವನ ಸ್ಥಿತಿ-ಗತಿಗೂ ಸಂಬಂಧ ಇದೆ. ಅಭಿವೃದ್ಧಿ ಎಂಬುದು ಭೂಮಿಯಿಂದ ಮೇಲೆ ಮತ್ತು ಆಕಾಶದಿಂದ ಕೆಳಗೆ ನಡೆಯುವ ಪವಾಡ ಕೃತ್ಯ ಅಲ್ಲ. ಭಾರತದ ಅಭಿವೃದ್ಧಿ ಇಲ್ಲಿನ ಮಣ್ಣಿನಲ್ಲಿ ಮತ್ತು ಈ ಮಣ್ಣಿನೊಂದಿಗೆ ಸಂಬಂಧ ಇರುವ ಸಕಲ ವಿಷಯಗಳೊಂದಿಗೂ ಜೋಡಿಕೊಂಡಿದೆ. ಮುಸ್ಲಿಮರೂ ಕ್ರೈಸ್ತರೂ ಆದಿವಾಸಿಗಳೂ ದಲಿತರೂ ಸಹಿತ ಈ ಮಣ್ಣಿನಲ್ಲಿ ವಾಸಿಸುತ್ತಿರುವ ಎಲ್ಲರೂ ಇಲ್ಲಿನ ಮಣ್ಣಿನೊಂದಿಗೆ ಸಂಬಂಧ ಇರುವವರು. ಆದ್ದರಿಂದ ಇವರಲ್ಲಿ ಯಾರನ್ನು ತುಳಿದರೂ ಥಳಿಸಿದರೂ ಮತ್ತು ಹಿಂಸಾತ್ಮಕವಾಗಿ ನಡೆಸಿಕೊಂಡರೂ ಅಂತಿಮವಾಗಿ ಅದು ಈ ದೇಶದ ಅಭಿವೃದ್ಧಿಯ ಮೇಲೆ, ಇಲ್ಲಿನ ಜಿಡಿಪಿಯ ಮೇಲೆ ಮತ್ತು ಒಟ್ಟು ಜನಜೀವನದ ಮೇಲೆ ಖಂಡಿತ ಪ್ರಭಾವವನ್ನು ಬೀರಿಯೇ ಬೀರುತ್ತದೆ. ಆದ್ದರಿಂದ, ಅಭಿವೃದ್ಧ ಭಾರತದ ಬಗ್ಗೆ ಮಾತಾಡುವ ಸರಕಾರಗಳು ಈ ಅಭಿವೃದ್ಧಿಗೆ ತಡೆಯಾಗಿರುವ ಮೂಲ ಕಾರಣಗಳನ್ನು ಪತ್ತೆ ಹಚ್ಚಬೇಕಾಗಿದೆ. ಈ ಮಣ್ಣಿನಲ್ಲಿ ನಡೆಯುತ್ತಿರುವ ಬಹುವಿಧ ಹಿಂಸೆಯನ್ನು ತಡೆಯುವುದಕ್ಕೆ ಬೇಕಾದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಪೊಲೀಸು ಠಾಣೆಗಳ ಸಮಗ್ರ ಸುಧಾರಣೆಗೆ ಒತ್ತು ಕೊಡಬೇಕಾಗಿದೆ. ಆದ್ದರಿಂದಲೇ, ತಬ್ರೇಝï ಅನ್ಸಾರಿಯ ಸಾವು ಮುಖ್ಯವಾಗುತ್ತದೆ. ಆ ಸಾವು ಒಂದು ಎಚ್ಚರಿಕೆ ಕರೆಗಂಟೆ. ಗುಂಪು ಥಳಿತದ ವಿಷಯದಲ್ಲಿ ನಮ್ಮ ಪೆÇಲೀಸರ ಮನಸ್ಥಿತಿ ಏನು ಅನ್ನುವುದನ್ನು ತಬ್ರೇಝïನ ಸಾವು ಹೇಳುತ್ತದೆ. ಆ ಮನಸ್ಥಿತಿಗೆ ಚಿಕಿತ್ಸೆ ಆಗದ ಹೊರತು ಗುಂಪು ಥಳಿತ ನಿಲ್ಲಲಾರದು.

ದುರ್ಜನರ ಕೈಯಲ್ಲಿ ಸಜ್ಜನ ಶ್ರೀರಾಮ



1. ಮುಸ್ಲಿಮ್ ಸಂಸದರೋರ್ವರು ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸುವಾಗ ಬಿಜೆಪಿ ಸಂಸದರು ಜೈ ಶ್ರೀರಾಮ್ ಎಂದು ಕೂಗುವುದೇಕೆ?
2. ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿ ನಡೆಯುತ್ತಿರುವ ಥಳಿತ ಮತ್ತು ಹತ್ಯೆಗಳು ಉತ್ತರ ಭಾರತವನ್ನೇ ಕೇಂದ್ರೀಕರಿಸಿರುವುದೇಕೆ?
ಈ ಎರಡೂ ಪ್ರಶ್ನೆಗಳಿಗೆ ಸಿಗುವ ಉತ್ತರವೇ ಸದ್ಯದ ಭಾರತ. ಸಂಸತ್ತಿನಲ್ಲಿ ಬಿಜೆಪಿ ಸಂಸದರು ಕೂಗಿದ ಜೈ ಶ್ರೀರಾಮ್‍ಗೂ ಹಿಂದೂ ಸಮುದಾಯದ ಸಾಧು-ಸಂತರು, ಸನ್ಯಾಸಿಗಳು, ಸ್ವಾಮೀಜಿಗಳು ಮತ್ತು ಶ್ರೀರಾಮನ ನಿಜ ಭಕ್ತರು ಹೇಳುವ ಜೈ ಶ್ರೀರಾಮ್‍ಗೂ ನಡುವೆ ಸಾಮ್ಯತೆ ಇರುವುದಕ್ಕೆ ಸಾಧ್ಯವೇ ಇಲ್ಲ. ಮುಸ್ಲಿಮರು ಪರಸ್ಪರರನ್ನು ಎದುರುಗೊಳ್ಳುವಾಗ ಅಸ್ಸಲಾಮು ಅಲೈಕುಮ್ ಎಂದು ಹೇಳುವಂತೆಯೇ ಹಿಂದೂಗಳು ರಾಮ್ ರಾಮ್ ಎಂದು ಹೇಳುವುದಿದೆ. ಶ್ರೀರಾಮನು ಇನ್ನೊಬ್ಬರನ್ನು ಪ್ರೀತಿಸುವ ಮತ್ತು ಅವರನ್ನು ಮುದಗೊಳಿಸುವ ವ್ಯಕ್ತಿ ಎಂಬುದು ಇದರರ್ಥ. ಅದು ದಾಳಿಯ ಘೋಷಣೆ ಅಲ್ಲ. ಕಿಚಾಯಿಸುವ ಪದವೂ ಅಲ್ಲ. ಅಸ್ಸಲಾಮು ಅಲೈಕುಮ್ (ನಿಮಗೆ ದೇವನು ಶಾಂತಿ ಮತ್ತು ನೆಮ್ಮದಿಯನ್ನು ಅನುಗ್ರಹಿಸಲಿ) ಎಂಬ ಪದದಲ್ಲಿ ಹೇಗೆ ಮಾನವೀಯ ಕಾಳಜಿ ಮತ್ತು ಸಹೋದರತೆಯ ಭಾವ ಅಡಕವಾಗಿದೆಯೋ ಅದರಾಚೆಗಿನ ಅರ್ಥವನ್ನು ರಾಮ್ ರಾಮ್‍ನಲ್ಲಿ ಅಥವಾ ಜೈ ಶ್ರೀರಾಮ್‍ನಲ್ಲಿ ಗುರುತಿಸಲು ಸಾಧ್ಯವಿಲ್ಲ. ಆದ್ದರಿಂದಲೇ, ಅಸ್ಸಲಾಮು ಅಲೈಕುಮ್ ಎಂಬುದನ್ನು ಮುಸ್ಲಿಮರು ಮುಸ್ಲಿಮೇತರರಲ್ಲಿ ಬಿಡಿ ಮುಸ್ಲಿಮರಲ್ಲಿಯೇ ಬಲವಂತವಾಗಿ ಹೇಳಿಸುವುದಿಲ್ಲ. ಓರ್ವ ಮುಸ್ಲಿಮನು ಇನ್ನೋರ್ವ ಮುಸ್ಲಿಮನನ್ನು ಭೇಟಿಯಾಗುವಾಗ ಅಸ್ಸಲಾಮು ಅಲೈಕುಮ್ ಎಂದು ಹೇಳದಿದ್ದರೆ ಆತನನ್ನು ಥಳಿಸುವುದಿಲ್ಲ. ಜರೆಯುವುದಿಲ್ಲ. ಬೆದರಿಕೆ ಹಾಕುವುದಿಲ್ಲ. ಯಾಕೆಂದರೆ, ಅದು ಗುಣನಾಮ. ಇನ್ನೊಬ್ಬರಲ್ಲಿ ಹೊಡೆದು ಬಡಿದು ಥಳಿಸಿ ಹೇಳಿಸಬೇಕಾದ ಪದಗುಚ್ಛ ಅದಲ್ಲ. ಆದ್ದರಿಂದಲೇ, ಮೇಲಿನ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಬೇಕಾಗಿದೆ:
ಸಂಸತ್ತಿನಲ್ಲಿ ಕೂಗಲಾದ ಘೋಷಣೆಯಲ್ಲಿ ಈ ಭಾವ ಇತ್ತೇ? ಇದ್ದಿದ್ದರೆ, ಅದೇಕೆ ಮುಸ್ಲಿಮ್ ಸಂಸದ ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸುವಾಗಲೇ ಕಾಣಿಸಿಕೊಂಡಿತು? ಯಾಕೆ ಮುಸ್ಲಿಮೇತರ ಸಂಸದರ ಪ್ರಮಾಣ ವಚನ ಸಂದರ್ಭದಲ್ಲಿ ಈ ಕೂಗು ಕಾಣಿಸಿಕೊಳ್ಳಲಿಲ್ಲ? ಜೈ ಶ್ರೀರಾಮ್ ಎಂಬುದು ಮುಸ್ಲಿಮರಿಂದ ಹೇಳಿಸಬೇಕಾದ ಘೋಷಣೆಯೇ? ಇದೇ ಪ್ರಶ್ನೆಯನ್ನು ಜಾರ್ಖಂಡ್ ಮತ್ತು ಉತ್ತರ ಭಾರತದಲ್ಲಿ ನಡೆಯುತ್ತಿರುವ ಹಲ್ಲೆ - ಹತ್ಯೆಗಳಿಗೆ ಸಂಬಂಧಿಸಿಯೂ ಕೇಳಬೇಕಾಗಿದೆ:
ಹಿಂದೀ ಭಾಷಿಕ ರಾಜ್ಯಗಳಲ್ಲೇ  ಈ ಬಗೆಯ ಗುಂಪು ಹಲ್ಲೆ  ಯಾಕೆ ನಡೆಯುತ್ತಿದೆ? ಬಿಜೆಪಿಗೆ ಈ ರಾಜ್ಯಗಳಲ್ಲಿ ಪ್ರಾಬಲ್ಯ ಇರುವುದಕ್ಕೂ ಈ ಬೆಳವಣಿಗೆಗೂ ಸಂಬಂಧ ಇದೆಯೇ?
ಶ್ರೀರಾಮ ಸಜ್ಜನ. ಎಷ್ಟರ ಮಟ್ಟಿಗೆ ಸಜ್ಜನ ಎಂದರೆ, ಅಗಸನೋರ್ವ ತನ್ನ ಪತ್ನಿ ಸೀತೆಯ ಮೇಲೆ ಅಪಮಾನಕರ ಮಾತನ್ನು ಆಡಿದಾಗಲೂ ಆತನ ಮೇಲೆ ಏರಿ ಹೋಗದೇ ಅಗಸನ ಮಾತಿನಲ್ಲಿ ಪ್ರಾಮಾಣಿಕತೆಯನ್ನು ಹುಡುಕುವಷ್ಟು ಸಜ್ಜನ. ತಾನು ವನವಾಸಕ್ಕೆ ಹೋಗಬೇಕಾದ ಸನ್ನಿವೇಶ ಎದುರಾದಾಗ ಆ ಬೆಳವಣಿಗೆಯ ಹಿಂದಿರಬಹುದಾದ ಸಂಚು-ಒಳಸಂಚು, ಸತ್ಯ-ಅಸತ್ಯಗಳ ಕುರಿತಾದ ಪ್ರಶ್ನೆಯನ್ನು ಹುಟ್ಟುಹಾಕದೇ ತಲೆ ಬಾಗಿ ಒಪ್ಪಿಕೊಂಡವ. ಆ ಸನ್ನಿವೇಶಕ್ಕೆ ತಿರುಗಿ ಬೀಳುವ ಅವಕಾಶ ಮತ್ತು ಸಾಮರ್ಥ್ಯ ಇದ್ದೂ ಅದನ್ನು ಬಳಸಿಕೊಳ್ಳದವ. ರಾಮ್ ರಾಮ್ ಮತ್ತು ಜೈ ಶ್ರೀರಾಮ್‍ಗಳು ಈ ದೇಶದಲ್ಲಿ ಸಾಂಸ್ಕೃತಿಕ ಪರಂಪರೆಯ ಭಾಗವಾದುದು ಈ ಹಿನ್ನೆಲೆಯಲ್ಲಿ. ಶ್ರೀರಾಮನ ಸಜ್ಜನಿಕೆಯನ್ನು, ಪ್ರಾಮಾಣಿಕತೆಯನ್ನು ಮತ್ತು ಇನ್ನೊಬ್ಬರ ಮೇಲೆ ಏರಿಹೋಗದ ಈ ಪ್ರೇಮಭಾವವನ್ನೇ ಒಟ್ಟು ಸೇರಿಸಿ ರಾಮ್ ರಾಮ್ ಎನ್ನಲಾಗುತ್ತದೆ. ಸದ್ಯ ಈ ದೇಶದ ಸಂಸತ್ತಿನಲ್ಲಿ ಮತ್ತು ಉತ್ತರ ಭಾರತದ ಬೀದಿ ಬೀದಿಗಳಲ್ಲಿ ಮುಸ್ಲಿಮರ ಎದುರು ಮೊಳಗುತ್ತಿರುವ ಜೈಶ್ರೀರಾಮ್‍ನಲ್ಲಿ ಈ ಭಾವ ಸ್ಫುರಿಸುತ್ತಿದೆಯೇ? ಸಂಸತ್ತಿನಲ್ಲಿ ಬಿಜೆಪಿ ಸಂಸದರು ಅಸದುದ್ದೀನ್ ಉವೈಸಿಯ ಎದುರು ಕೂಗಿದ್ದು ಈ ಭಾವದ ಘೋಷಣೆಯನ್ನಲ್ಲ. ಅದರಲ್ಲಿ ಪ್ರೇಮ ಭಾವ ಇರಲಿಲ್ಲ. ದಾಳಿಭಾವ ಇತ್ತು. ಕಿಚಾಯಿಸುವ ಭಾವ ಇತ್ತು. ಅದು ಉದ್ರೇಕಭಾವದ ಕೂಗು ಆಗಿತ್ತೇ ವಿನಃ ಶ್ರೀರಾಮ ಪ್ರತಿನಿಧಿಸುವ ಪ್ರೇಮಭಾವಕ್ಕೂ ಅದಕ್ಕೂ ಸಂಬಂಧವೇ ಇರಲಿಲ್ಲ. ಇವತ್ತು ಉತ್ತರ ಭಾರತದ ಬೀದಿಗಳಲ್ಲಿ ಮುಸ್ಲಿಮರನ್ನು ಕಂಡಾಗ ಮಾತ್ರ ಮೊಳಗುತ್ತಿರುವ ಕೂಗಲ್ಲೂ ಬಿಜೆಪಿ ಸಂಸತ್ತಿನಲ್ಲಿ ಕೂಗಿದ ಘೋಷಣೆಯ ಆ ಆಕ್ರಮಣಕಾರಿ ಭಾವವಷ್ಟೇ ಇದೆ. ಒಂದುಕಡೆ, ಪ್ರಧಾನಿ ನರೇಂದ್ರ ಮೋದಿಯವರು ತನ್ನನ್ನು ಸರ್ವರ ಹಿತ ಕಾಯುವ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ, ಅವರ ಪಕ್ಷದ ಜನಪ್ರತಿನಿಧಿಗಳು ಅವರ ಸಮ್ಮುಖದಲ್ಲೇ  ಮುಸ್ಲಿಮ್ ಜನಪ್ರತಿನಿಧಿಯನ್ನು ಕಿಚಾಯಿಸುತ್ತಾರೆ. ಜೈ ಶ್ರೀರಾಮ್ ಅನ್ನುವ ಅಪ್ಪಟ ಧಾರ್ಮಿಕ ಮತ್ತು ಸಮಭಾವದ ಘೋಷಣೆಯನ್ನು ಆಕ್ರಮಣಕಾರಿ ಶೈಲಿಯಲ್ಲಿ ಅವರ ವಿರುದ್ಧ ಕೂಗುತ್ತಾರೆ. ನಿಜವಾಗಿ, ಉತ್ತರ ಭಾರತದ ಬೀದಿಗಳಲ್ಲಿ ನಡೆಯುತ್ತಿರುವ ಥಳಿತದ ಘಟನೆಗಳು ಪ್ರಧಾನಿಯವರಿಗೆ ಹೇಗೆ ನೋವು ತರುತ್ತದೋ ಅದಕ್ಕಿಂತ ಹೆಚ್ಚಿನ ನೋವು ಮತ್ತು ದುಃಖವನ್ನು ಸಂಸತ್ತಿನ ಈ ಬೆಳವಣಿಗೆಯು ಅವರಲ್ಲಿ ತರಬೇಕಿತ್ತು. ಅದನ್ನವರು ಖಂಡಿಸಬೇಕಿತ್ತು. ಮುಸ್ಲಿಮರನ್ನು ಕಿಚಾಯಿಸುವುದಕ್ಕೆ ಮತ್ತು ಅವರ ಮೇಲೆ ದಾಳಿ ನಡೆಸುವುದಕ್ಕೆ ಶ್ರೀರಾಮನನ್ನು ಬಳಸಿಕೊಳ್ಳುವುದು ಶ್ರೀರಾಮನ ನಿಜ ವ್ಯಕ್ತಿತ್ವಕ್ಕೆ ಮಾಡುವ ಅಪಚಾರವೆಂದು ಹೇಳಬೇಕಿತ್ತು. ಹೀಗೆ ನಿರೀಕ್ಷಿಸುವುದಕ್ಕೆ ಇರುವ ಎರಡು ಕಾರಣಗಳಲ್ಲಿ ಒಂದು ಏನೆಂದರೆ, ಅವರು ಈ ದೇಶದ 120 ಕೋಟಿ ಜನರ ಹಿತ ಕಾಯುವ ಹೊಣೆಗಾರಿಕೆ ಉಳ್ಳವರು ಎಂಬುದು ಮತ್ತು ಇನ್ನೊಂದು, ಅವರು ಪಕ್ಷ ಪ್ರೇಮದ ಸೆಳೆತದಿಂದ ಹೊರಗಿರಬೇಕಾದವರು ಎಂಬುದಾಗಿದೆ. ಓರ್ವ ಸಂಸದನ ಮುಂದೆ ಇರುವ ಗುರಿ ಮತ್ತು ಓರ್ವ ಪ್ರಧಾನಿಯ ಮುಂದೆ ಇರುವ ಗುರಿ ಇವೆರಡೂ ಸಮಾನ ಅಲ್ಲ. ಸಂಸದ ಅನೇಕ ಬಾರಿ ತನ್ನ ದೃಷ್ಟಿಕೋನವನ್ನು ತನ್ನ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಬಲ್ಲ. ಒಟ್ಟು ಜನರ ಹಿತಕ್ಕಿಂತ ತನಗೆ ಓಟು ದಕ್ಕಿಸಿಕೊಡುವ ವಿಷಯಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಬಲ್ಲ. ಇನ್ನೊಂದು ಅವಧಿಗೆ ಚುನಾಯಿತನಾಗಿ ಆಯ್ಕೆಯಾಗುವುದಕ್ಕೆ ಏನೆಲ್ಲ ಮಾಡಬೇಕೋ ಅವನ್ನೆಲ್ಲ ಮಾಡುವ ಗುರಿಯೊಂದಿಗೆ ಮಾತಾಡಬಲ್ಲ. ತನ್ನ ಕ್ಷೇತ್ರಕ್ಕೆ ಸಂಬಂಧ ಪಡದವರ ಹಿತವನ್ನು ಕಡೆಗಣಿಸಲೂ ಆತ ಮುಂದಾಗಬಲ್ಲ. ಆದರೆ ಪ್ರಧಾನಿಗೆ ಹಾಗಲ್ಲ. ಈ ದೇಶವೇ ಅವರ ಕ್ಷೇತ್ರ. ಈ ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಅವರ ಮತದಾರರೇ. ಆದ್ದರಿಂದ, ಅವರು ಆಡುವ ಮಾತು- ಅವರು ಸ್ಪರ್ಧಿಸಿದ ಕ್ಷೇತ್ರದ ಮತ್ತು ಅವರು ಪ್ರತಿನಿಧಿಸುವ ಪಕ್ಷದ ವ್ಯಾಪ್ತಿಯಿಂದ ಹೊರಗಿರಬೇಕಾಗುತ್ತದೆ ಮತ್ತು ಸಮಷ್ಟಿ ಭಾವದಿಂದ ಕೂಡಿರಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಈ ದೇಶ ಈ ಬಗೆಯ ನಿಲುವನ್ನು ನಿರೀಕ್ಷಿಸುತ್ತದೆ.
ಜೈ ಶ್ರೀರಾಮ್ ಮತ್ತು ಅಲ್ಲಾಹು ಅಕ್ಬರ್ ಗಳು ಹಿಂದೂ ಮತ್ತು ಇಸ್ಲಾಮ್ ಧರ್ಮಗಳ ಸಮಗ್ರತೆಯನ್ನು, ಅವುಗಳಲ್ಲಿರುವ ಮಾನವೀಯ ಮೌಲ್ಯಗಳನ್ನು, ಮೂಲಭೂತ ತತ್ವ ಸಿದ್ಧಾಂತಗಳನ್ನು ಮತ್ತು ಧಾರ್ಮಿಕ ಸ್ಫೂರ್ತಿಯನ್ನು ಪ್ರತಿನಿಧಿಸುತ್ತವೆಯೇ ಹೊರತು ಪರಮತ ದ್ವೇಷವನ್ನಾಗಲಿ ಅಸಹಿಷ್ಣುತೆಯನ್ನಾಗಲಿ ಅಲ್ಲವೇ ಅಲ್ಲ. ‘ಧರ್ಮದಲ್ಲಿ ಬಲಾತ್ಕಾರವಿಲ್ಲ’ (ಪವಿತ್ರ ಕುರ್‍ಆನ್ 2:56) ಎಂದು ಪ್ರತಿಪಾದಿಸುವ ಇಸ್ಲಾಮ್ ಧರ್ಮದ ಅನುಯಾಯಿಯೊಬ್ಬ ಮುಸ್ಲಿಮರೇ ಬಹುಸಂಖ್ಯಾತರಿರುವ ರಾಷ್ಟ್ರದಲ್ಲಿ ಅಲ್ಲಾಹು ಅಕ್ಬರ್ ಎಂದು ಹೇಳುವಂತೆ ಮುಸ್ಲಿಮೇತರ ವ್ಯಕ್ತಿಯನ್ನು ಬಲವಂತಪಡಿಸುವುದು ಹೇಗೆ ಧರ್ಮವಿರೋಧಿಯೋ ಜೈ ಶ್ರೀರಾಮ್ ಎಂದು ಘೋಷಿಸುವಂತೆ ಮುಸ್ಲಿಮರನ್ನು ಬಲವಂತಪಡಿಸುವುದೂ ಅಷ್ಟೇ ಧರ್ಮವಿರೋಧಿ. ಶ್ರೀರಾಮ ಮತ್ತು ಅಲ್ಲಾಹು ಪರಸ್ಪರ ವೈರಿಗಳೂ ಅಲ್ಲ, ಸ್ಪರ್ಧಿಗಳೂ ಅಲ್ಲ.

Thursday 18 July 2019

ತಾತ್ಕಾಲಿಕ ಸುಖದ ಅಮಲಿನಿಂದ ಹೊರಬರದ ಮೈತ್ರಿ ಸರಕಾರ


 
‘ಬಿಜೆಪಿಯನ್ನು ದೂರ ಇಡುವುದು’ ಅನ್ನುವ ಏಕೈಕ ಉದ್ದೇಶವೇ ಬಿಜೆಪಿಯೇತರ ಎರಡು ರಾಜಕೀಯ ಪಕ್ಷಗಳ ಮೈತ್ರಿಗೆ ಕಾರಣವಾದರೆ, ಅಂತಿಮವಾಗಿ ಆ ಮೈತ್ರಿಕೂಟದ ಪರಿಸ್ಥಿತಿ ಏನಾದೀತು ಅನ್ನುವುದಕ್ಕೆ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಒಳ್ಳೆಯ ಉದಾಹರಣೆ. ಸದ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳಿಗೂ ಈ ಮೈತ್ರಿಕೂಟ ಇಷ್ಟವಿಲ್ಲ. ಹಾಗಂತ, ಈ ಮೈತ್ರಿಯಿಂದ ಬಿಡುಗಡೆಗೊಳ್ಳುವುದಕ್ಕೂ ಧೈರ್ಯವಿಲ್ಲ. ವಾರಗಳ ಹಿಂದೆ ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿಯವರು ರಾಜೀನಾಮೆ ನೀಡುವುದರ ಮೂಲಕ ಆರಂಭವಾದ ಈ ಹೊಸ ಬಿಕ್ಕಟ್ಟು ಇದೀಗ ಡಜನ್‍ಗಟ್ಟಲೆ ಶಾಸಕರ ರಾಜೀನಾಮೆಯೊಂದಿಗೆ ಉಚ್ಛ್ರಾಯ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‍ಗಳು ಈ ಬಿಕ್ಕಟ್ಟಿಗೆ ಬಿಜೆಪಿಯನ್ನು ಹೊಣೆ ಮಾಡುವ ಮೂಲಕ ಕಳೆದೊಂದು ವರ್ಷದಿಂದ ಪಾಲಿಸಿಕೊಂಡು ಬಂದಿರುವ ಆರೋಪ ಸಂಪ್ರದಾಯವನ್ನು ಈಗಲೂ ಮುಂದುವರಿಸಿದೆ. ಅಂದಹಾಗೆ, ಇಷ್ಟೆಲ್ಲ ಪ್ರಾರಬ್ಧಗಳ ಬಳಿಕವೂ ಈ ಸರಕಾರ ಅಸ್ತಿತ್ವದಲ್ಲಿ ಇರಬೇಕೇ ಅನ್ನುವ ಪ್ರಶ್ನೆ ಇವತ್ತು ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲೇ  ಕೇಳಿಬರುತ್ತಿದೆ. ಇದಕ್ಕೆ ಉತ್ತರ ಕೊಡಬೇಕಾದ ಮೈತ್ರಿಕೂಟ ಸ್ವತಃ ಉತ್ತರವಿಲ್ಲದ ಪ್ರಶ್ನೆಗಳೊಂದಿಗೆ ಓಡಾಡುತ್ತಿದೆ.
ವರ್ಷದ ಹಿಂದೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದಾಗ ಕಾಂಗ್ರೆಸ್‍ಗೆ ಬಹುದೊಡ್ಡ ನಿರೀಕ್ಷೆ ಇತ್ತು. ಆ ನಿರೀಕ್ಷೆಗೆ ಇದ್ದ ಏಕೈಕ ಬಲ- ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರ ಐದು ವರ್ಷಗಳ ಆಡಳಿತದಲ್ಲಿ ಜಾರಿಗೊಂಡ ವಿವಿಧ ಜನಪರ ಯೋಜನೆಗಳು ಮುಂದಿನ ಐದು ವರ್ಷಗಳಿಗೆ ಅವರಿಗೆ ಅಧಿಕಾರವನ್ನು ಮರಳಿ ಪಡೆಯುವುದಕ್ಕೆ ಆಧಾರವಾಗಬಹುದು ಎಂದು ನಂಬಲಾಗಿತ್ತು. ಆದರೆ, ಚುನಾವಣಾ ಫಲಿತಾಂಶವು ಈ ನಿರೀಕ್ಷೆಯನ್ನು ಬುಡಮೇಲುಗೊಳಿಸಿದ್ದು ಕಾಂಗ್ರೆಸ್‍ಗಾದ ಮೊದಲ ಆಘಾತವಾಗಿತ್ತು. ಬಿಜೆಪಿ 105 ಸ್ಥಾನಗಳಲ್ಲಿ ವಿಜಯಿಯಾಗಿದ್ದರೆ ಕಾಂಗ್ರೆಸ್ 79 ಮತ್ತು ಜೆಡಿಎಸ್ 37 ಸ್ಥಾನಗಳನ್ನು ಪಡೆದುಕೊಂಡಿತ್ತು. ಆ ಬಳಿಕದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರು. ಇದಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗಳು ಮೈತ್ರಿ ಮಾಡಿಕೊಂಡವು. ನಿಜವಾಗಿ, ಬಿಜೆಪಿಯು ಸರಕಾರ ರಚಿಸುವುದನ್ನು ತಡೆಯುವುದಕ್ಕಾಗಿ ಮಾಡಿಕೊಳ್ಳಲಾದ ತುರ್ತು ಮೈತ್ರಿ ಎಂಬ ಸ್ಥಿತಿಯಿಂದ ಹೊರಬಂದು ರಚನಾತ್ಮಕ ಮೈತ್ರಿ ಎಂಬ ಸ್ಥಿತಿಗೆ ಆ ನಂತರ ಹೊರಳಬೇಕಾದ ಬಹುದೊಡ್ಡ ಜವಾಬ್ದಾರಿ ಈ ಎರಡೂ ಪಕ್ಷಗಳಿಗಿತ್ತು. ಆದರೆ ಹಾಗಾಗಲಿಲ್ಲ ಎಂದು ಮಾತ್ರವಲ್ಲ, ಹಾಗೆ ಆಗದಿರುವುದಕ್ಕೆ ಎದ್ದು ಕಾಣುತ್ತಿರುವ ಕಾರಣಗಳಂತೂ ಅತ್ಯಂತ ಆಘಾತಕಾರಿ ರೀತಿಯದ್ದು. ಶಾಸಕರ ಅಸಮಾಧಾನಕ್ಕೆ ಇರುವ ಕಾರಣಗಳಲ್ಲಿ ಬಹುಮುಖ್ಯವಾದುದು ಏನೆಂದರೆ, ಸಚಿವ ಸ್ಥಾನ ಸಿಗದಿರುವುದು. ಈ ಮೈತ್ರಿ ಕೂಟದ ಎಲ್ಲ ಶಾಸಕರೂ ಸಚಿವರಾಗುವ ಬಯಕೆಯೊಂದಿಗೆ ಸಾಲುಗಟ್ಟಿ ನಿಂತಿರುವ ಸ್ಥಿತಿಯಲ್ಲಿರುವಾಗ ಒಂದು ಸರಕಾರ ನಡೆಯುವುದಾದರೂ ಹೇಗೆ? ಅದೇವೇಳೆ, ಇಂಥದ್ದೊಂದು ಪರಿಸ್ಥಿತಿ ಯಾಕೆ ನಿರ್ಮಾಣವಾಯಿತು ಅನ್ನುವ ಪ್ರಶ್ನೆಯೂ ಇದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ವರಿಷ್ಠರು ಈ ಮೈತ್ರಿಕೂಟದ ಉಳಿವಿನ ಬಗ್ಗೆ ಪ್ರಾಮಾಣಿಕರಾಗಿರುತ್ತಿದ್ದರೆ ಈ ಬಗೆಯ ಒಡಕು ಮೂಡುತ್ತಿತ್ತೇ ಎಂಬ ಪ್ರಶ್ನೆಗೂ ಅವಕಾಶ ಇದೆ. ಒಂದುವೇಳೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿದ್ದರೆ ಮತ್ತು ಸರಕಾರ ರಚಿಸಿರುತ್ತಿದ್ದರೆ ಮಂತ್ರಿಸ್ಥಾನಕ್ಕಾಗಿ ಈ ಬಗೆಯ ಸಾಲು ಕಾಣಿಸಿಕೊಳ್ಳುತ್ತಿತ್ತೇ? ಅತೃಪ್ತರು ಸುದ್ದಿ ಮಾಡುತ್ತಿದ್ದರೆ? ಜೆಡಿಎಸ್‍ಗೂ ಇವೇ ಪ್ರಶ್ನೆಗಳು ಅನ್ವಯ. ಒಂದುವೇಳೆ, ಚುನಾವಣೆಯಲ್ಲಿ ಜೆಡಿಎಸ್‍ಗೆ ಬಹುಮತ ಲಭ್ಯವಾಗಿ ಸರಕಾರ ರಚಿಸಿರುತ್ತಿದ್ದರೆ ಭಿನ್ನಮತೀಯ ಸಮಸ್ಯೆ ಎದುರಾಗುತ್ತಿತ್ತೇ? ಶಾಸಕರು ರಾಜೀನಾಮೆ ಕೊಟ್ಟು ರೆಸಾರ್ಟ್‍ಗೆ ಹೋಗಿ ಕುಳಿತುಕೊಳ್ಳುತ್ತಿದ್ದರೇ? ಇಲ್ಲ ಅನ್ನುವುದೇ ಉತ್ತರ ಅನ್ನುವುದು ಎಲ್ಲರಿಗೂ ಗೊತ್ತು. ಅಂದರೆ, ಎರಡು ಪಕ್ಷಗಳು ಮೈತ್ರಿಕೂಟ ರಚಿಸಿಕೊಂಡು ಸರಕಾರ ನಡೆಸಲು ಮುಂದಾಗುವಾಗ ಅಲ್ಲೊಂದು ಅಸಹಜ ಸ್ಥಿತಿ ಏರ್ಪಟ್ಟಿರುತ್ತದೆ. ಬಾಹ್ಯನೋಟಕ್ಕೆ ಅಲ್ಲಿ ದೋಸ್ತಿ ವಾತಾವರಣ ಕಾಣಿಸಿಕೊಂಡಿದ್ದರೂ ಆಂತರಿಕವಾಗಿ ಎರಡೂ ಪಕ್ಷಗಳು ಆ ದೋಸ್ತಿಯನ್ನು ಜೀರ್ಣಿಸಿಕೊಂಡಿರುವುದಿಲ್ಲ. ಅವುಗಳಿಗೆ ಅವುಗಳದ್ದೇ  ಆದ ರಾಜಕೀಯ ಹಿತಾಸಕ್ತಿ, ಗುರಿಗಳಿರುತ್ತವೆ. ಆ ಗುರಿಗಳು ಸಾಧ್ಯವಾಗಬೇಕಾದರೆ ಜೊತೆಗಿದ್ದೂ ಇಲ್ಲದಂತಿರಬೇಕಾದ ಮನಸ್ಥಿತಿಯನ್ನು ಬೆಳೆಸಿಕೊಂಡಿರಬೇಕಾಗುತ್ತದೆ. ಜೆಡಿಎಸ್‍ನ ವರ್ಚಸ್ಸು ಹೆಚ್ಚಬಾರದೆಂಬ ಉದ್ದೇಶ ಕಾಂಗ್ರೆಸ್‍ಗಿದ್ದರೆ, ಕಾಂಗ್ರೆಸ್ ಬೆಳೆಯಬಾರದೆಂಬ ಬಯಕೆ ಜೆಡಿಎಸ್‍ಗೂ ಇರುತ್ತದೆ. ಅಲ್ಲದೇ, ಈ ಮೈತ್ರಿ ಚುನಾವಣೋತ್ತರ ಅತಂತ್ರವನ್ನು ಬಗೆಹರಿಸುವುದಕ್ಕಾಗಿ ಮಾಡಿಕೊಳ್ಳಲಾದ ತುರ್ತು ತೇಪೆಯೇ ಹೊರತು ದೀರ್ಘಕಾಲದ ಗುರಿಯಿಟ್ಟುಕೊಂಡಿರುವ ಮೈತ್ರಿಯೂ ಅಲ್ಲ. ಚುನಾವಣಾ ಪೂರ್ವ ಮೈತ್ರಿಗೂ ಚುನಾವಣೋತ್ತರ ಮೈತ್ರಿಗೂ ನಡುವೆ ಇರುವ ಅನುಕೂಲ-ಅನನುಕೂಲಗಳು ತುಂಬಾ ಇವೆ. ಚುನಾವಣಾ ಪೂರ್ವ ಮೈತ್ರಿಯಲ್ಲಿ ಇರುವ ಪ್ರಾಮಾಣಿಕತೆ ಚುನಾವಣೋತ್ತರ ಮೈತ್ರಿಯಲ್ಲಿ ಇರುವುದಿಲ್ಲ. ಚುನಾವಣೋತ್ತರ ಮೈತ್ರಿ ಅನ್ನುವುದೇ ಒಂದು ಬಗೆಯ ಜೂಜು. ಇಲ್ಲಿ ಎರಡೂ ಪಕ್ಷಗಳು ಬೇರೆ ಬೇರೆಯಾಗಿ ಗೆಲ್ಲುವುದಕ್ಕೆ ಶ್ರಮಿಸುತ್ತವೆಯೇ ಹೊರತು ಜೊತೆಯಾಗಿ ಗೆಲ್ಲುವುದಕ್ಕಲ್ಲ. ಸರಕಾರದ ಸಾಧನೆಯನ್ನು ತಮ್ಮ ತಮ್ಮ ಪಕ್ಷಗಳ ಅನುಕೂಲಕ್ಕಾಗಿ ಬಳಸಿಕೊಳ್ಳಲು ಮೈತ್ರಿ ಪಕ್ಷಗಳು ಬಿಡಿಬಿಡಿಯಾಗಿ ಪ್ರಯತ್ನಿಸುತ್ತವೆ. ಇದೇವೇಳೆ, ಸರಕಾರದ ವೈಫಲ್ಯವನ್ನು ಇನ್ನೊಂದು ಪಕ್ಷದ ಮೇಲೆ ಹೇರಲು ಮುಂದಾಗುತ್ತವೆ. ಈ ಪ್ರಕ್ರಿಯೆಯು ಅಂತಿಮವಾಗಿ ಮೈತ್ರಿಯಲ್ಲಿ ಬಿರುಕು ಮೂಡಿಸುತ್ತದೆ.
ರಾಜ್ಯದ ಸದ್ಯದ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕು ಎಂಬ ಉದ್ದೇಶದ ಹೊರತಾಗಿ, ಈ ಸರಕಾರ ಇನ್ನೂ ಮುಂದುವರಿಯಬೇಕು ಎಂಬ ಇರಾದೆಗೆ ಇನ್ನಾವ ಉದ್ದೇಶವೂ ಇದ್ದಂತಿಲ್ಲ. ಒಂದು ರಾಜಕೀಯ ಪಕ್ಷವನ್ನು ಅಧಿಕಾರದಿಂದ ಹೊರಗಿಡುವುದೇ ಎರಡು ಬದ್ಧ ವಿರೋಧಿ ರಾಜಕೀಯ ಪಕ್ಷಗಳು ಜೊತೆಗೂಡುವುದಕ್ಕೆ ಮತ್ತು ಮೈತ್ರಿಕೂಟ ರಚಿಸಿಕೊಂಡು ಸರಕಾರ ನಡೆಸುವುದಕ್ಕೆ ಕಾರಣವಾಗುವುದು ತಾತ್ಕಾಲಿಕ ಸುಖವನ್ನು ಕೊಡಬಲ್ಲುದೇ ಹೊರತು ದೀರ್ಘಕಾಲೀನ ಪರಿಹಾರವನ್ನಲ್ಲ. ಆ ಮೈತ್ರಿಕೂಟ ದೀರ್ಘಕಾಲ ಬಾಳಿಕೆ ಬರಬೇಕಾದರೆ ತಾತ್ಕಾಲಿಕ ಸುಖಕ್ಕಿದ್ದ ಬಿಜೆಪಿ ಎಂಬ ಕಾರಣದಿಂದ ಅದು ಹೊರಬರಬೇಕು. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕು ಅನ್ನುವುದನ್ನು ಆ ಕ್ಷಣದ ಪರಿಹಾರವಾಗಿ ಪರಿಗಣಿಸಿಕೊಂಡು ದೀರ್ಘ ಕಾಲ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದಕ್ಕೆ ಆ ಬಳಿಕ ನೀಲನಕ್ಷೆಯನ್ನು ರೂಪಿಸಬೇಕು. ಅಂಥದ್ದೊಂದು ನೀಲನಕ್ಷೆ ಸಾಧ್ಯವಾಗಬೇಕಿದ್ದರೆ ಎರಡೂ ಪಕ್ಷಗಳು ತ್ಯಾಗಕ್ಕೆ ತಯಾರಾಗಬೇಕು. ಅಧಿಕಾರದಾಹ, ಪಕ್ಷಮೋಹ, ಸ್ವಪ್ರತಿಷ್ಠೆ, ವಿಶ್ವಾಸದ್ರೋಹ ಇತ್ಯಾದಿ ಇತ್ಯಾದಿ ರಾಜಕೀಯ ಸಹಜ ಮಾರಕ ಕಾಯಿಲೆಗಳಿಗೆ ಸ್ವತಃ ಔಷಧಿ ಸೇವಿಸಬೇಕು. ಅಧಿಕಾರವೇ ಮುಖ್ಯವಾಗುವ ಬದಲು ಬಿಜೆಪಿ ಪ್ರತಿಪಾದಿಸುವ ವಿಭಜಿತ ಸಿದ್ಧಾಂತಕ್ಕೆ ರಾಜ್ಯದಲ್ಲಿ ನೆಲೆ ಸಿಗದಂತೆ ನೋಡಿಕೊಳ್ಳುವುದು ಮುಖ್ಯವಾಗಬೇಕು. ಹೀಗಾಗಬೇಕಾದರೆ, ಹೃದಯ ವೈಶಾಲ್ಯವನ್ನು ಬೆಳೆಸಿಕೊಳ್ಳಬೇಕು. ದುರಂತ ಏನೆಂದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಅಲಭ್ಯವಾಗಿರುವುದೇ ಇಂಥ ಗುಣಗಳು. ಅವೆರಡೂ ಕಾಗದದಲ್ಲಿ ಮಾತ್ರ ಮೈತ್ರಿ ಪಕ್ಷಗಳು. ಅದರಾಚೆಗೆ ಅವೆರಡೂ ಬಿಡಿಬಿಡಿ ಪಕ್ಷಗಳೇ. ಅವೆರಡೂ ಮೈತ್ರಿಯ ಮನಸ್ಥಿತಿಯೊಂದಿಗೆ ಆಲೋಚಿಸುವುದಿಲ್ಲ. ಮೈತ್ರಿಯ ಭಾಷೆಯಲ್ಲಿ ಮಾತಾಡುವುದಿಲ್ಲ. ಮೈತ್ರಿಯ ಕಣ್ಣಿನಲ್ಲಿ ಅವು ಪರಸ್ಪರ ನೋಡುವುದೂ ಇಲ್ಲ. ಹೀಗಿರುತ್ತಾ ಈ ಮೈತ್ರಿಕೂಟ ಸುಗಮ ಆಡಳಿತಕ್ಕಾಗಿ ಸುದ್ದಿಯಲ್ಲಿರಬೇಕು ಎಂದು ನಾವೇಕೆ ಬಯಸಬೇಕು? ಈ ಎರಡೂ ಪಕ್ಷಗಳು ವರ್ಷದ ಹಿಂದೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ಕಾರಣವಾಗಿರಬಹುದು. ಆದರೆ, ಈಗ ಆ ಉದ್ದೇಶ ಕಣ್ಮರೆಯಾಗಿದೆ. ಇದ್ದಷ್ಟು ದಿನ ಅಧಿಕಾರವನ್ನು ಅನುಭವಿಸುವ ವಾಂಛೆ ಮೈತ್ರಿ ಪಕ್ಷಗಳ ಶಾಸಕರಲ್ಲಿ ಢಾಳಾಗಿ ಕಾಣಿಸುತ್ತಿದೆ. ಆದ್ದರಿಂದ, ಈ ಸರಕಾರ ಯಾವಾಗ ಬಿದ್ದರೂ ಅದಕ್ಕಾಗಿ ಮರುಗುವವರು ಈ ರಾಜ್ಯದಲ್ಲಿ ಯಾರೂ ಇರಲಾರರು.

Thursday 4 July 2019

ಹಲಾಲ್ ಎಂಬ ಬುರ್ಖಾದೊಳಗೆ ಅಡಗಿರುವ ದಂಧೆಕೋರರು



   ಹಲಾಲ್ (ಶುದ್ಧ) ಅನ್ನುವ ಅರಬಿ ಪದ ಮತ್ತು ಅದು ಕಟ್ಟಿಕೊಡುವ ಪರಿಕಲ್ಪನೆಯ ಮೇಲೆ ಮುಸ್ಲಿಮರಿಗೆ ವಿಶೇಷ ಆಸಕ್ತಿಯಿದೆ. ಇದಕ್ಕೆ ಬಹುಮುಖ್ಯ ಕಾರಣ- ಇಸ್ಲಾಮ್ ಪ್ರತಿಪಾದಿಸುವ ಜೀವನ ಪದ್ಧತಿ. ನಿಮ್ಮ ಸಂಪಾದನೆ ಶುದ್ಧ (ಹಲಾಲ್) ಆಗಿರಬೇಕು ಎಂದು ಇಸ್ಲಾಮ್ ಮುಸ್ಲಿಮರಿಗೆ ಕರೆ ಕೊಡುತ್ತದೆ. ಬಡ್ಡಿಯನ್ನು ಅದು ಅಶುದ್ಧ (ಹರಾಮ್)ತೆಯ ಪಟ್ಟಿಯಲ್ಲಿ ಸೇರಿಸಿದೆ. ಯಾರು ಶುದ್ಧವಲ್ಲದ ವ್ಯವಹಾರದಲ್ಲಿ ತೊಡಗುತ್ತಾರೋ ಮತ್ತು ಆ ಮೂಲಕ ಹರಿದುಬಂದ ಆದಾಯದಿಂದ ಬದುಕುತ್ತಾರೋ ಅವರೆಲ್ಲರನ್ನೂ ದೇವನು ಕಟಕಟೆಯಲ್ಲಿ ನಿಲ್ಲಿಸುತ್ತಾನೆ ಅನ್ನುವ ಎಚ್ಚರಿಕೆಯನ್ನೂ ಇಸ್ಲಾಮ್ ನೀಡುತ್ತದೆ. ಯಾವುದೇ ಉದ್ಯಮ, ವ್ಯವಹಾರ, ಹೂಡಿಕೆ ಮತ್ತು ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವ ಮೊದಲು ಜಾಗತಿಕ ಮುಸ್ಲಿಮರು ಎದುರಿಸುತ್ತಿರುವ ಬಹುದೊಡ್ಡ ಸವಾಲು ಇದು. ಜಗತ್ತು ನಡೆಯುತ್ತಿರುವುದೇ ಬಡ್ಡಿಯನ್ನು ನೆಚ್ಚಿಕೊಂಡು. ಜಗತ್ತಿನ ರಾಷ್ಟ್ರಗಳಿಗೆ ಸಾಲ ಕೊಡುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ ತೊಡಗಿ ಧರ್ಮಸ್ಥಳದ ಸ್ವಸಹಾಯ ಸಂಘದ ವರೆಗೆ ಮತ್ತು ಹಳ್ಳಿಗಳಿಗೆ ತೆರಳಿ ಕೈ ಸಾಲ ನೀಡುವ ಖಾಸಗಿ ವ್ಯಕ್ತಿಗಳ ವರೆಗೆ ಎಲ್ಲರೂ ಬಡ್ಡಿಯನ್ನೇ ಆಶ್ರಯಿಸಿಕೊಂಡಿದ್ದಾರೆ. ಇಂಥ ಸ್ಥಿತಿಯಲ್ಲಿ, ಮುಸ್ಲಿಮರ ಮುಂದೆ ಎರಡು ಆಯ್ಕೆಗಳಿರುತ್ತವೆ.
1. ಅನಿವಾರ್ಯವೆಂಬ ಸಮರ್ಥನೆಯನ್ನು ಕೊಟ್ಟುಕೊಂಡು ಬಡ್ಡಿ ವ್ಯವಸ್ಥೆಯೊಂದಿಗೆ ಹೊಂದಿಕೊಂಡು ಹೋಗುವುದು.
 2. ಬಡ್ಡಿ ಆಧಾರಿತ ಸರ್ವ ವ್ಯವಹಾರಗಳಿಗೂ ಬೆನ್ನು ಹಾಕಿಕೊಂಡು ಬದುಕುವುದು.
ನಿಜವಾಗಿ, ಹಲಾಲ್ ಬೋರ್ಡಿನೊಂದಿಗೆ ಹುಟ್ಟಿಕೊಳ್ಳುವ ವಿವಿಧ ದಂಧೆಕೋರರ ಮೂಲ ಗುರಿ ಇವರೇ. ಆದರೆ, ಇವರೆಲ್ಲರಲ್ಲಿರುವ ದೌರ್ಬಲ್ಯ ಏನೆಂದರೆ, ಆರ್ಥಿಕ ವ್ಯವಹಾರದಲ್ಲಿ ನುಸುಳಿಕೊಂಡಿರುವ ಬಡ್ಡಿಯ ವಿವಿಧ ರೂಪಗಳನ್ನು ಅರಿತುಕೊಳ್ಳುವುದಕ್ಕೆ ವಿಫಲವಾಗುವುದು ಅಥವಾ ಆ ಬಗ್ಗೆ ಉದಾಸೀನ ತೋರುವುದು. ಆದ್ದರಿಂದ, ದೋಚಲು ಸಿದ್ಧವಾಗಿರುವ ತಿಮಿಂಗಿಲಗಳ ಬಾಯಿಗೆ ಮೊದಲು ಬಲಿಯಾಗುವುದು ಇಂಥವರೇ. ಬಡ್ಡಿಯ ಬಗ್ಗೆ ಒಲವು ಇಲ್ಲದ ಆದರೆ, ಬಡ್ಡಿಮುಕ್ತ ಆರ್ಥಿಕ ವ್ಯವಹಾರದಿಂದ ಯಶಸ್ಸು ಕಷ್ಟಸಾಧ್ಯ ಎಂದು ಆಂತರಿಕವಾಗಿ ನಂಬಿರುವ ‘ಅತಂತ್ರ ಸ್ಥಿತಿ’ಯ ಮುಸ್ಲಿಮರನ್ನು ಮರುಳು ಮಾಡುವುದಕ್ಕೆ ದೋಚುವವರು ಮೊದಲು ತಂತ್ರವನ್ನು ಹೆಣೆಯುತ್ತಾರೆ. ಹಾಗಂತ, ಅನೇಕ ಬಾರಿ ಈ ದೋಚುವವರಿಗೆ ಗೊತ್ತಿರುವ ಸತ್ಯ ಈ ದೋಚಿಸಿಕೊಳ್ಳುವವರಿಗೂ ಗೊತ್ತಿರುತ್ತದೆ. ನಾವು ಮಾಡುವ ಹೂಡಿಕೆ ಮತ್ತು ಅದಕ್ಕೆ ಪ್ರತಿಫಲವಾಗಿ ಪ್ರತಿ ತಿಂಗಳು ಬರುವ ಲಾಭವು ಬಡ್ಡಿಯ ಇನ್ನೊಂದು ರೂಪ ಎಂಬುದನ್ನು ಹೂಡಿಕೆದಾರರ ಒಳಮನಸ್ಸು ಒಪ್ಪಿರುತ್ತದೆ. ಆದರೆ ಬಹಿರಂಗವಾಗಿ ಈ ದೋಚುವವರು ಮತ್ತು ಈ ದೋಚಿಸಿಕೊಳ್ಳುವ ಹೂಡಿಕೆದಾರರು ಅದನ್ನು ಹೊರಗೆ ಆಡಿಕೊಳ್ಳುವುದಿಲ್ಲ. ಠೇವಣಿಗೆ ಬ್ಯಾಂಕುಗಳು ನೀಡುವ ಹಣವನ್ನು ಮಾತ್ರ ಬಡ್ಡಿಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಬ್ಯಾಂಕೇತರ ಉಳಿದ ವ್ಯವಹಾರಗಳನ್ನು ‘ಹಲಾಲ್’ ಎಂದು ಸಮರ್ಥಿಸಿಕೊಳ್ಳುವ ಕುರುಡುತನ ಎರಡೂ ಕಡೆಯಿಂದಲೂ ನಡೆಯುತ್ತದೆ. ನಿಜವಾಗಿ,
ಬೆಂಗಳೂರಿನ ಐಎಂಎಯಂಥ ಸಂಸ್ಥೆಗಳ ಯಶಸ್ಸಿನಲ್ಲಿ ಇಂಥ ಕುರುಡು ಸಮರ್ಥನೆಗಳ ಪಾಲು ದೊಡ್ಡದಿದೆ. ತನ್ನಲ್ಲಿ ಹೂಡಿಕೆ ಮಾಡುವವರಿಗೆ ಪ್ರತಿ ತಿಂಗಳೂ ನಿರ್ದಿಷ್ಟ ಪ್ರಮಾಣದಲ್ಲಿ ಲಾಭವನ್ನು ಕೊಡುತ್ತಿರುತ್ತೇನೆ ಎಂದು ಭರವಸೆ ಕೊಟ್ಟ ಐಎಂಎಗೂ ಬ್ಯಾಂಕ್‍ನ ಬಡ್ಡಿಗೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ವ್ಯತ್ಯಾಸ ಇರುವುದು ಹಲಾಲ್ ಎಂಬ ಬೋರ್ಡ್‍ನಲ್ಲಿ ಮಾತ್ರ. ಬ್ಯಾಂಕುಗಳು ಕೂಡ ಐಎಂಎ ಸಂಸ್ಥೆಯಂತೆಯೇ ಕಾರ್ಯನಿರ್ವಹಿಸುತ್ತವೆ. ಅವು ತನ್ನಲ್ಲಿ ಠೇವಣಿ ಇಡುವ ಗ್ರಾಹಕರಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಪ್ರತಿ ವರ್ಷ ಹಣವನ್ನು ನೀಡುತ್ತಿರುತ್ತದೆ ಮತ್ತು ಬ್ಯಾಂಕ್‍ ಗೆ ಉಂಟಾಗುವ ಯಾವುದೇ ನಷ್ಟಕ್ಕೆ ಅದು ಗ್ರಾಹಕನನ್ನು ಹೊಣೆ ಮಾಡುವುದಿಲ್ಲ. ಐಎಂಎಯ ವ್ಯವಹಾರವೂ ಹೀಗೆಯೇ. ಅಷ್ಟಕ್ಕೂ,
ಇಸ್ಲಾಮಿನ ಬಡ್ಡಿರಹಿತ ಆರ್ಥಿಕ ವ್ಯವಹಾರವು ಇದಕ್ಕಿಂತ ಭಿನ್ನವಾದುದು. ಅಲ್ಲಿ ಲಾಭ ಮತ್ತು ನಷ್ಟ ಎರಡನ್ನೂ ಸ್ವೀಕರಿಸಿಕೊಳ್ಳುವುದಕ್ಕೆ ಹೂಡಿಕೆದಾರ ಸಿದ್ಧನಿರಬೇಕಾಗುತ್ತದೆ. ಅಂದರೆ, ಐಎಂಎಯಲ್ಲಿ ಹಣವನ್ನು ಹೂಡುವ ಹೂಡಿಕೆದಾರ ಲಾಭವನ್ನು ಮಾತ್ರವಲ್ಲ, ನಷ್ಟವನ್ನು ಸ್ವೀಕರಿಸಿಕೊಳ್ಳುವುದಕ್ಕೂ ಸಿದ್ಧನಿರಬೇಕು. ಅದರರ್ಥ- ಪ್ರತಿ ತಿಂಗಳೂ ನಿರ್ದಿಷ್ಟ ಪ್ರಮಾಣದಲ್ಲಿ ಲಾಭವನ್ನು ನೀಡುತ್ತೇನೆನ್ನುವ ಐಎಂಎಯ ಭರವಸೆಯೇ ಅಸಂಬದ್ಧ ಅಥವಾ ಹಲಾಲ್ ರಹಿತ. ಯಾವುದೇ ವ್ಯವಹಾರದಲ್ಲಿ ಯಾವಾಗಲೂ ನಿರ್ದಿಷ್ಟ ಪ್ರಮಾಣದಲ್ಲಿ ಲಾಭ ಮಾತ್ರ ಆಗುತ್ತಿರುತ್ತದೆ ಮತ್ತು ನಷ್ಟವೇ ಆಗುವುದಿಲ್ಲ ಎಂದು ವಾದಿಸಿದಂತೆಯೇ ಇದು. ಬ್ಯಾಂಕ್‍ಗಳು ಹೀಗೆ ಹೇಳುವುದನ್ನು ಬಡ್ಡಿ ಎಂದು ಹೇಳುತ್ತಲೇ, ಐಎಂಎನಂಥ ಸಂಸ್ಥೆಗಳು ಹಲಾಲ್ ಎಂಬ ಬೋರ್ಡ್ ತೂಗು ಹಾಕಿಕೊಂಡು ಇದನ್ನೇ ಹೇಳಿದಾಗ ಧರ್ಮಬದ್ಧ ಆಗುವುದನ್ನು ಬೋದಾಳತನ ಎಂದಷ್ಟೇ ಹೇಳಬೇಕಾಗುತ್ತದೆ. ಅಂದಹಾಗೆ,
‘ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ ಎಂಬಂಥ ಮನಸ್ಸಿನವರನ್ನು ದೋಚುವುದಕ್ಕೆ ಭಯಂಕರ ಜಾಣತನವೇನೂ ಬೇಕಾಗಿಲ್ಲ. ಹಲಾಲ್ ಎಂಬ ಬೋರ್ಡೊಂದೇ ಅವರನ್ನು ಸೆಳೆಯುವುದಕ್ಕೆ ಧಾರಾಳ ಸಾಕು. ‘ದೇವನ ಹೆಸರಲ್ಲಿ ಚೂರಿ ಹಾಕಿದ ಪ್ರಾಣಿಯ ಮಾಂಸವನ್ನು ಮಾತ್ರ ಮುಸ್ಲಿಮರು ತಿನ್ನುತ್ತಾರೆ’ ಎಂಬ ಕಾರಣಕ್ಕಾಗಿ ‘ಹಲಾಲ್ ಚಿಕನ್ ಸ್ಟಾಲ್’ ಎಂಬುದಾಗಿ ಬೋರ್ಡ್ ಹಾಕಿಕೊಳ್ಳುವಂತೆಯೇ ಕೆಲವರು, ತಮ್ಮ ಖತರ್ನಾಕ್ ವ್ಯವಹಾರಗಳನ್ನು ‘ಹಲಾಲ್’ ಎಂಬ ಬುರ್ಖಾದೊಳಗೆ ಅಡಗಿಸಿಡಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ವಿವಿಧ ತಂತ್ರಗಳನ್ನು ಹೆಣೆಯುತ್ತಾರೆ. ವಿವಿಧ ವೇಷಗಳನ್ನು ಕಟ್ಟುತ್ತಾರೆ. ತಾವು ಹೇಗೆ ಪರಿಶುದ್ಧರು ಎಂಬುದನ್ನು ಮನವರಿಕೆ ಮಾಡಿಸುವುದಕ್ಕೆ ಧಾರ್ಮಿಕ ವ್ಯಕ್ತಿತ್ವಗಳನ್ನೂ ದುರುಪಯೋಗಿಸುತ್ತಾರೆ. ಅದೇವೇಳೆ, ಸೈದ್ಧಾಂತಿಕವಾಗಿ ಮತ್ತು ವೈಚಾರಿಕವಾಗಿ ದುರ್ಬಲರಾಗಿರುವ ಅಥವಾ ಹಾಗೆ ನಟಿಸುವ ಮುಸ್ಲಿಮರಿಗೆ ಹಣ ಮೊಟ್ಟೆ ಇಡುವುದು ಮುಖ್ಯವಾಗಿರುತ್ತದೆಯೇ ಹೊರತು ಹಲಾಲ್ ಮುಖ್ಯವಾಗಿರುವುದಿಲ್ಲ. ಜೊತೆಗೇ ತಮ್ಮನ್ನು ಸಮರ್ಥಿಸಿಕೊಳ್ಳುವುದಕ್ಕೆ ಈ ಸಂಸ್ಥೆಗಳು ತಮ್ಮ ಹೆಸರಿನ ಮೊದಲು ಹಲಾಲ್ ಎಂದು ಘೋಷಿಸಿಕೊಂಡಿರುವುದೇ ಇವರಿಗೆ ಸಾಕಾಗಿರುತ್ತದೆ. ಒಂದು ರೀತಿಯಲ್ಲಿ,
ಈಗಾಗಲೇ ಬಾಗಿಲು ಮುಚ್ಚಿ ಓಡಿ ಹೋಗಿರುವ ಮಹಾರಾಷ್ಟ್ರ ಅಪೆಕ್ಸ್ ಬ್ಯಾಂಕ್, ವಿನಿವಿಂಕ್ ಶಾಸ್ತ್ರಿ, ಅಗ್ರಿಗೋಲ್ಡ್, ವಿಕ್ರಂ ಇನ್ವೆಸ್ಟ್ ಮೆಂಟ್, ಡ್ರೀಮ್ಸ್ ಜಿಕೆ,  ಷಣ್ಮುಗಂ ಫೈನಾನ್ಸ್, ಹಿಂದೂಸ್ತಾನ್ ಇನ್ಫಾಕಾಂ, ಗೃಹಕಲ್ಯಾಣ್, ಹರ್ಷ ಎಂಟರ್ ಟೈನ್‍ಮೆಂಟ್, ಸೆವೆನ್ ಹಿಲ್ಸ್, ಗ್ರೀನ್ ಬರ್ಡ್ ಆಗ್ರೋ ಫಾರ್ಮ್, ಅಜಮೇರಾ ಗ್ರೂಪ್ ಇತ್ಯಾದಿ ಇತ್ಯಾದಿಗಳು ತಮ್ಮ ಹೆಸರಿನ ಮುಂದೆ ಹಲಾಲ್ ಎಂದು ಬರೆದುಕೊಂಡರೆ ಹೇಗೋ ಬಹುತೇಕ ಹಾಗೆಯೇ ಈ ಹಲಾಲ್ ಸಂಸ್ಥೆಗಳು. ಎಲ್ಲವೂ ದಂಧೆಗಳೇ. ತಮ್ಮ ತಮ್ಮ ಉದ್ದೇಶವನ್ನು ಜಾರಿಗೊಳಿಸುವುದಕ್ಕೆ ಯಾವೆಲ್ಲ ಮುಖವಾಡವನ್ನು ಹಾಕಿಕೊಳ್ಳಬೇಕೋ ಅವೆಲ್ಲವನ್ನೂ ಹಲಾಲ್ ಬೋರ್ಡು ಹಾಕಿದ ಮತ್ತು ಹಾಕದ ಸಂಸ್ಥೆಗಳೆರಡೂ ಮಾಡುತ್ತವೆ. ಮೌಲ್ವಿಯನ್ನೋ ಸ್ವಾಮೀಜಿಗಳನ್ನೋ ಇವು ಸಂದರ್ಭಾನುಸಾರ ಬಳಸಿಕೊಳ್ಳುತ್ತವೆ. ಜಾಹೀರಾತುಗಳನ್ನು ನೀಡುತ್ತಿರುತ್ತವೆ. ಸಂಸ್ಥೆಯ ವ್ಯವಹಾರ ಎಷ್ಟೆಷ್ಟು ಕೋಟಿಗೇರಿದೆ ಮತ್ತು ಎಂಥೆಂಥ ಅಗ್ರಗಣ್ಯ ಶ್ರೀಮಂತರು ಇದರಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಸುಳ್ಳನ್ನು ವ್ಯವಸ್ಥಿತವಾಗಿ ಬಾಯಿಂದ ಬಾಯಿಗೆ ಹರಡುತ್ತಿರುತ್ತದೆ. ಈ ವಿಷಯದಲ್ಲಿ ಮಾತ್ರವಲ್ಲ, ಕೊನೆಗೆ ಬಾಗಿಲು ಮುಚ್ಚುವ ರೀತಿಯಲ್ಲೂ ಈ ಎರಡೂ ರೀತಿಯ ಸಂಸ್ಥೆಗಳಲ್ಲಿ ಏಕರೂಪತೆ ಇರುತ್ತದೆ. ಬೋರ್ಡ್‍ನಲ್ಲಿ ಹಲಾಲ್ ಎಂದು ಬರೆದಿದ್ದರೂ ಇಲ್ಲದಿದ್ದರೂ. ಅಂದಹಾಗೆ,
ಬಡ್ಡಿ ಎಂಬುದು ಶೋಷಕ ವ್ಯವಸ್ಥೆಯ ಪ್ರತಿನಿಧಿ. ದುರ್ಬಲನ ಅಸಹಾಯಕತೆಯನ್ನು ದುರುಪಯೋಗಿಸುವ ಅತಿಕ್ರೂರ ರಕ್ತ ಹೀರುವ ವ್ಯವಸ್ಥೆ. ಇದು ಜಿಗಣೆಯಂತೆ. ಒಮ್ಮೆ ತಗುಲಿಕೊಂಡರೆ ಮತ್ತೆ ಕಳಚಲು ಅಸಾಧ್ಯ ಅನ್ನುವ ಸ್ಥಿತಿಗೆ ತಲುಪಿಸುತ್ತದೆ. ಇಸ್ಲಾಮ್ ಬಡ್ಡಿಯನ್ನು ವಿರೋಧಿಸುವುದಕ್ಕೆ ಅದರ ಈ ಶೋಷಕ ಗುಣವೇ ಮೂಲ ಕಾರಣ. ಅಂದಹಾಗೆ, ಇಂಡೋನೇಷ್ಯಾವೂ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಬಡ್ಡಿರಹಿತವಾದ ಆರ್ಥಿಕ ವ್ಯವಸ್ಥೆಯಿದೆ. ನಮ್ಮ ದೇಶದಲ್ಲೂ ಕೆಲವು ಸಂಘಸಂಸ್ಥೆಗಳು ಸಣ್ಣ ಮಟ್ಟದಲ್ಲಾದರೂ ಇದನ್ನು ಪ್ರಾಯೋಗಿಕವಾಗಿ ಜಾರಿಯಲ್ಲಿಟ್ಟಿವೆ ಮತ್ತು ಯಶಸ್ವಿಯಾಗಿವೆ.
ವಿಶೇಷ ಏನೆಂದರೆ, ಇವು ತಮ್ಮ ಹೆಸರಿನ ಮುಂದೆ ಹಲಾಲ್ ಬೋರ್ಡನ್ನು ತಗುಲಿಸಿಕೊಂಡಿಲ್ಲ ಮತ್ತು ಆ ಕಾರಣದಿಂದಲೋ ಏನೋ ಸಾರ್ವಜನಿಕ ಚರ್ಚೆಗೂ ಒಳಗಾಗುತ್ತಿಲ್ಲ. ಐಎಂಎಯ ನೆಪದಲ್ಲಾದರೂ ಮಾಧ್ಯಮಗಳು ಇಂಥ ಸಂಸ್ಥೆಗಳನ್ನು ಹುಡುಕಿ ಸುದ್ದಿ ಮಾಡುವ ಪ್ರಯತ್ನ ನಡೆಸಲಿ.