Friday 27 May 2016

ತಲಾಕ್: ಚಲಾವಣೆಯಲ್ಲಿರುವ ಸುಳ್ಳು ಮತ್ತು ನಿದ್ದೆಯಲ್ಲಿರುವ ಸತ್ಯ

       ಮುಸ್ಲಿಮರಿಗೆ ಸಂಬಂಧಿಸಿ ಈ ದೇಶದಲ್ಲಿ ಕೆಲವು ಕುತೂಹಲಕಾರಿ ಅಭಿಪ್ರಾಯಗಳಿವೆ. ವರ್ಷಪೂರ್ತಿ ಚರ್ಚಿಸಿದರೂ ಆಸಕ್ತಿಗೆ ಭಂಗ ಉಂಟಾಗದಷ್ಟು ಅಪಾರ ವಿಷಯ ಸಂಪತ್ತನ್ನು ಈ ಸಮುದಾಯ ತನ್ನೊಳಗೆ ಬಚ್ಚಿಟ್ಟುಕೊಂಡಿದೆ ಎಂದು ಪ್ರಾಮಾಣಿಕವಾಗಿ ನಂಬಿದವರು ಈ ದೇಶದಲ್ಲಿದ್ದಾರೆ. ಜಿಹಾದ್, ನಿಕಾಹ್, ತಲಾಕ್, ಖುಲಾ, ಫಸ್ಕ್, ಶರೀಅತ್, ಅಲ್ಲಾಹು, ಮದ್ರಸ, ಮಸೀದಿ, ಕುರ್‍ಆನ್, ಪ್ರವಾದಿ ಮುಹಮ್ಮದ್(ಸ).. ಮುಂತಾದುವುಗಳೆಲ್ಲ ಅವರ ಪಾಲಿಗೆ ಇನ್ನೂ ಗೋಣಿಚೀಲದೊಳಗಡೆಯೇ ಇದೆ. ಅವರಿಗೆ ಯಾರೂ ಅದನ್ನು ಸರಿಯಾಗಿ ಕಟ್ಟು ಬಿಚ್ಚಿ ತೋರಿಸಿಲ್ಲ ಅಥವಾ ಅವರು ನೋಡಲು ಬಯಸುತ್ತಿಲ್ಲ. ಕೆಲವರು ಗೋಣಿಚೀಲದೊಳಗೆ ಏನೇನಿವೆ ಮತ್ತು ಅವು ಎಷ್ಟು ಅಪಾಯಕಾರಿ ಎಂಬುದಾಗಿ ಹೊರಗಡೆಯಿಂದಲೇ ವಿವರಿಸುತ್ತಾರೆ. ಇನ್ನೂ ಕೆಲವರು ಭಾಗಶಃ ಕಟ್ಟನ್ನು ಬಿಚ್ಚಲು ಪ್ರಯತ್ನಿಸಿದ್ದಾರೆ ಮತ್ತು ತಾವು ಕಂಡಿರುವುದಕ್ಕಿಂತ ಕಾಣದಿರುವುದರ ಮೇಲೆಯೇ ಕುತೂಹಲಕಾರಿ ಅಂಶಗಳನ್ನು ಪತ್ತೆ ಹಚ್ಚಿದ್ದಾರೆ. ಇನ್ನು, ಈ ಗೋಣಿಚೀಲದ ಕಟ್ಟನ್ನು ಅಧಿಕೃತವಾಗಿ ಬಿಚ್ಚ ಬೇಕಾದವರು ಮತ್ತು ಅದರೊಳಗಡೆ ಇರುವುದನ್ನೆಲ್ಲ ಸಮಾಜದ ಮುಂದೆ ಪ್ರದರ್ಶಿಸಬೇಕಾದವರಲ್ಲೂ ಹಿಂಜರಿಕೆಯೋ ಜಿಪುಣತೆಯೋ ಏನೋ ಒಂದು ಕಾಣಿಸುತ್ತದೆ. ಅವರ ಮಾತುಗಳಲ್ಲಿ ಅಸ್ಪಷ್ಟತೆ ಇಣುಕುತ್ತದೆ. ಕಾಲ, ಪರಿಸ್ಥಿತಿ, ಸನ್ನಿವೇಶಗಳಿಗೆ ಸಂಪೂರ್ಣ ಬೆನ್ನು ಹಾಕಿಕೊಂಡು ಅವರು ಕೊಡುವ ಕೆಲವೊಂದು ವಿವರಗಳು ಇಡೀ ಗೋಣಿಚೀಲವನ್ನೆ ಡೈನೋಸರ್‍ನಂತೆ ಬಿಂಬಿಸುತ್ತಿವೆ. ಅದರೊಳಗಡೆಯಿರುವ ವಸ್ತುಗಳನ್ನು ಟೈಂಬಾಂಬ್‍ನಂತೆ ಪರಿಚಯಿಸುತ್ತಿವೆ. ಈ ಗೊಂದಲಕಾರಿ ವಾತಾವರಣದ ಕಾರಣದಿಂದಾಗಿಯೇ ಜೈಪುರದ ಅಫ್ರೀನ್ ರಹ್ಮಾನ್ ಎಂಬ ಮಹಿಳೆ ಕಳೆದವಾರ ಸುದ್ದಿಗೀಡಾಗಿದ್ದಾಳೆ. ತನ್ನ ಗಂಡ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿದ ತಲಾಕ್ ತಲಾಕ್ ತಲಾಕ್ ಅನ್ನು ಪ್ರಶ್ನಿಸಿ ಆಕೆ ಸುಪ್ರೀಮ್ ಕೋರ್ಟ್‍ನಲ್ಲಿ ದಾವೆ ಹೂಡಿದ್ದಾಳೆ. ‘ಈ ತಲಾಕ್ (ವಿಚ್ಛೇದನ) ಅಸಿಂಧು, ಅಧರ್ಮ, ಅಸ್ವೀಕಾರಾರ್ಹ..’ ಎಂದಾಕೆ ವಾದಿಸಿದ್ದಾಳೆ. ನಿಜವಾಗಿ, ಆಕೆಯ ವಾದದಲ್ಲಿ ಕುತೂಹಲಕಾರಿಯಾದುದೇನೂ ಇಲ್ಲ. ನಿಕಾಹ್ (ಮದುವೆ) ಎಂಬ ಇಸ್ಲಾಮೀ ಕಾನೂನುಬದ್ಧ ಒಪ್ಪಂದವು ಒಂದು ಸ್ಪೀಡ್ ಪೋಸ್ಟ್ ನಲ್ಲಿ ಮುರಿಯುವಷ್ಟು ದುರ್ಬಲವಲ್ಲ. ನಿಕಾಹ್‍ಗೆ ಷರತ್ತುಗಳಿವೆ. ತಲಾಕ್‍ಗೂ ಷರತ್ತುಗಳಿವೆ. ಈ ಷರತ್ತುಗಳನ್ನು ಪುರುಷ ಹೇಗೆ ಬೇಕಾದರೂ ಉಲ್ಲಂಘಿಸಬಹುದು ಎಂಬ ಉದಾರ ನಿಲುವು ಇಸ್ಲಾಮೀ ವಿವಾಹ ಸಂಹಿತೆಯಲ್ಲಿ ಎಲ್ಲೂ ಇಲ್ಲ. ನಿಜವಾಗಿ, ವಿಚ್ಛೇದನದ ವಿಷಯದಲ್ಲಿ ಇಸ್ಲಾಮ್ ಅತ್ಯಂತ ಉದಾರ ನೀತಿಯನ್ನು ತಳೆದಿರುವುದು ಮಹಿಳೆಯರ ಬಗ್ಗೆಯೇ. ಮಾತ್ರವಲ್ಲ, ಇಸ್ಲಾಮೀ ವಿವಾಹ ಸಂಹಿತೆಯನ್ನು ಮಹಿಳಾ ಪರ ಎಂದೂ ಹೇಳಬಹುದು. ಅಂದಹಾಗೆ, ಪತಿಯು ವಿವಾಹ ವಿಚ್ಛೇದನ ನೀಡುವುದಕ್ಕೆ ‘ತಲಾಕ್’ ಎಂದು ಹೇಳುವಾಗ, ಪತ್ನಿಯು ಪತಿಯಿಂದ ವಿವಾಹ ವಿಚ್ಛೇದನವನ್ನು ಕೋರುವುದಕ್ಕೆ ಖುಲಾ ಎಂದು ಹೇಳಲಾಗುತ್ತದೆ. ಇಲ್ಲಿ, ಬಹುಮುಖ್ಯವಾದ ವಿಷಯವೊಂದಿದೆ. ಪುರುಷನು ಮೂರು ಬಾರಿ ಒಂದೇ ಉಸಿರಿನಲ್ಲಿ ತಲಾಕ್ ತಲಾಕ್ ತಲಾಕ್ ಎಂದು ಹೇಳಿಬಿಡುವ ಪದ್ಧತಿಯನ್ನು ಪವಿತ್ರ ಕುರ್‍ಆನ್ ಎಲ್ಲೂ ಪ್ರಸ್ತುತಪಡಿಸಿಯೇ ಇಲ್ಲ. ಅದು ವಿಚ್ಛೇದನಕ್ಕೆ ಅತ್ಯಂತ ಪ್ರಾಯೋಗಿಕ ಮತ್ತು ಪ್ರಾಕೃತಿಕವೆನ್ನಬಹುದಾದ ಮಾನದಂಡಗಳನ್ನು ನಿಶ್ಚಯಿಸಿದೆ. ಪುರುಷನು ಒಮ್ಮೆಗೆ ಒಂದು ತಲಾಕನ್ನು ಮಾತ್ರ ಹೇಳಬಹುದು. ಈ ತಲಾಕ್‍ಗಿಂತಲೂ ಮೊದಲು ಅವರಿಬ್ಬರ (ಪತಿ-ಪತ್ನಿ) ನಡುವೆ ಎರಡೂ ಕಡೆಯವರಿಂದ ರಾಜಿ ಪಂಚಾಯಿತಿಕೆಗಳು ನಡೆಯಬೇಕು. ಮಾತುಕತೆ, ಸಮಜಾಷಿಕೆಗಳು ಏರ್ಪಡಬೇಕು. ಇದರಿಂದಲೂ ಆತ ತೃಪ್ತನಾಗದಿದ್ದರೆ ಒಂದು ತಲಾಕ್ ಹೇಳಬೇಕು. ಹಾಗೆ ಹೇಳುವುದರಿಂದ ಪತಿ-ಪತ್ನಿಯರ ನಡುವೆ ವಿವಾಹ ವಿಚ್ಛೇದನವೇನೂ ಆಗುವುದಿಲ್ಲ. ಹಾಗೆ ತಲಾಕ್ ಹೇಳಿಕ ಬಳಿಕವೂ ಪತಿ-ಪತ್ನಿ ಒಂದೇ ಮನೆಯಲ್ಲಿ ಉಳಿಯಬೇಕು. ಪತಿ-ಪತ್ನಿಯರಾಗಿಯೇ ಬಾಳಬೇಕು. ಹೀಗೆ ಮುಟ್ಟಿನ ಅವಧಿಯ ವರೆಗೆ (ಒಂದು ತಿಂಗಳು) ಮುಂದುವರಿದರೆ ಮತ್ತು ಆತ ತನ್ನ ನಿಲುವಿನಲ್ಲಿ ಸ್ಥಿರವಾಗಿದ್ದರೆ ಎರಡನೇ ತಲಾಕ್ ಹೇಳಬೇಕು. ಒಂದು ವೇಳೆ ಈ ಅವಧಿಯ ಒಳಗೆ ಅವರಿಬ್ಬರ ನಡುವೆ ಅನುರಾಗ ಉಂಟಾಗಿ, ದೈಹಿಕ ಸಂಪರ್ಕ ಏರ್ಪಟ್ಟರೆ ತಲಾಕ್ ಅನೂರ್ಜಿತಗೊಳ್ಳುತ್ತದೆ. ಹೀಗೆ ಸಾಗುವ ಈ ವಿಚ್ಛೇದನ ಪ್ರಕ್ರಿಯೆಗೆ  ಕನಿಷ್ಠವೆಂದರೆ 3 ತಿಂಗಳಾದರೂ ಬೇಕು. ಗರಿಷ್ಠ ಎಷ್ಟೂ ಆಗಬಹುದು. (ಅಧ್ಯಾಯ ಅನ್ನಿಸಾ ಮತ್ತು ಅತ್ತಲಾಕ್)
  ಅದೇ ವೇಳೆ, ಪತಿಯಿಂದ ವಿಚ್ಛೇದನವನ್ನು (ಖುಲಾ) ಕೋರುವ ಪತ್ನಿಯ ಮುಂದೆ ಇಷ್ಟೊಂದು ಕಠಿಣ ನಿಯಮಾವಳಿಗಳು ಇಲ್ಲವೇ ಇಲ್ಲ. ಅದು ತೀರಾ ಸರಳ ಮತ್ತು ಸರಾಗ. ತನಗೆ ಪತಿ ಇಷ್ಟವಾಗದಿದ್ದರೆ ವಿಚ್ಛೇದನ (ಖುಲಾ) ಕೊಡುವಂತೆ ಆಕೆ ಆತನಲ್ಲಿ ಕೋರಬಹುದು. ಆತ ಒಪ್ಪದಿದ್ದರೆ ನೇರವಾಗಿ ಖಾಝಿಯ ಬಳಿಗೆ ತೆರಳಿ ವಿವಾಹವನ್ನು ರದ್ದು(ಫಸ್ಕ್)ಗೊಳಿಸಿಕೊಳ್ಳಬಹುದು. ಈ ಪ್ರಕ್ರಿಯೆಗೆ ಗಂಟೆ, ದಿನ, ತಿಂಗಳು ಏನನ್ನೂ ನಿರ್ಧರಿಸಲಾಗಿಲ್ಲ. ವಿಷಾದ ಏನೆಂದರೆ, ತಲಾಕನ್ನು ಮಹಿಳಾ ವಿರೋಧಿ ಎಂದು ಹೇಳುವ ಮತ್ತು ಈ ವಾದವನ್ನು  ಸಮರ್ಥಿಸುವುದಕ್ಕಾಗಿ ಪುಟಗಟ್ಟಲೆ ಬರೆಯುವ ಯಾರೂ ಕೂಡ ಈ ಸತ್ಯವನ್ನು ಎಲ್ಲೂ ಹೇಳುತ್ತಲೇ ಇಲ್ಲ. ನಿಜವಾಗಿ, ಬೀದಿಗಿಳಿಯಬೇಕಾದದ್ದು ಹೆಣ್ಣಲ್ಲ, ಗಂಡು. ಪುರುಷನ ಪಾಲಿಗೆ ಅತಿ ಕಠಿಣ ಷರತ್ತುಗಳನ್ನು ಒಳಗೊಂಡಿರುವ ತಲಾಕ್ ಕ್ರಮವನ್ನು ಇವತ್ತು ಹೇಗೆ ತಿರುಚಿ ಬಿಡಲಾಗಿದೆಯೆಂದರೆ, ಈ ಭೂಮಿಯ ಮೇಲೆ ಮತ್ತು ಆಕಾಶದ ಕೆಳಗೆ ಇರುವ ಅತಿ ನೀಚ ಮಹಿಳಾ ಶೋಷಕ ಕಾನೂನು ಇಸ್ಲಾಮ್‍ನಲ್ಲಿದೆ ಎಂಬುದಾಗಿ. ಹಾಗಂತ, ಈ ತಪ್ಪು ತಿಳುವಳಿಕೆಗೆ ಮುಸ್ಲಿಮರ ಕೊಡುಗೆ ಖಂಡಿತ ಇದೆ. ತಲಾಕ್‍ನ ಅತ್ಯಂತ ಸುಂದರ ರೂಪವನ್ನು ಗೋಣಿಚೀಲದಲ್ಲಿ ಅವರು ಬಚ್ಚಿಟ್ಟಿದ್ದಾರೆ ಮತ್ತು ಅದರ ನಾಮಧಾರಿ ಅನುಯಾಯಿಗಳು ತಲಾಕ್‍ನ ಅತ್ಯಂತ ಕರಾಳ ರೂಪವನ್ನು ಅಲ್ಲಲ್ಲಿ ಪ್ರದರ್ಶಿಸುತ್ತಿದ್ದಾರೆ. ಇದಕ್ಕಿಂತಲೂ ಅಪಾಯಕಾರಿ ಸಂಗತಿ ಏನೆಂದರೆ, ಈ ಕರಾಳ ರೂಪವನ್ನೇ ತಲಾಕ್‍ನ ಅಧಿಕೃತ ರೂಪ ಮತ್ತು ಅತ್ಯಂತ ಸರಿಯಾದ ರೂಪ ಎಂದು ಕೆಲವರು ಪತ್ರಿಕೆಗಳಲ್ಲೂ ಟಿ.ವಿ.ಗಳಲ್ಲೂ ವೇದಿಕೆಗಳಲ್ಲೂ ಅತ್ಯಂತ ತಾರಕ ಧ್ವನಿಯಲ್ಲಿ ಘೋಷಿಸುತ್ತಿರುವುದು. ಇದೇ ಮಂದಿ ಸಮಾಜದ ಇನ್ನಿತರ ಘಟನೆಗಳಿಗೆ ಸಂಬಂಧಿಸಿ ಇಷ್ಟೊಂದು ಉಡಾಫೆಯ ನಿಲುವನ್ನು ಎಂದೂ ತಾಳುವುದಿಲ್ಲ. ಅವರು ಆ ಘಟನೆ ಅಧಿಕೃತವೋ ಅಲ್ಲವೋ ಎಂಬ ಬಗ್ಗೆ ಸ್ಪಷ್ಟಪಡಿಸಿಕೊಳ್ಳುತ್ತಾರೆ. ಆ ಘಟನೆಗಿರುವ ಕಾರಣಗಳನ್ನು ಪತ್ತೆಹಚ್ಚಲು ಶ್ರಮಿಸುತ್ತಾರೆ. ಅಧ್ಯಯನ ನಡೆಸುತ್ತಾರೆ. ಆದರೆ ತಲಾಕ್‍ನ ವಿಷಯದಲ್ಲಿ ಮಾತ್ರ ಇವರೆಲ್ಲ ಅಪ್ಪಟ ಸೋಮಾರಿಗಳಂತೆ ವರ್ತಿಸುತ್ತಾರೆ. ಆದ್ದರಿಂದಲೇ, ಈ ಬಗ್ಗೆ ಅನುಮಾನ ಮೂಡುವುದು. ಇತರ ಸಂದರ್ಭಗಳಲ್ಲಿ ಪಾದರಸದ ಚುರುಕುತನವನ್ನು ಪ್ರದರ್ಶಿಸುವ ಈ ಗುಂಪು, ತಲಾಕ್‍ನಂತಹ ಇಸ್ಲಾಮೀ ಪಾರಿಭಾಷಿಕಗಳ ವಿಷಯದಲ್ಲಿ ಮಾತ್ರ ಈ ಸೋಮಾರಿತನ ಪ್ರದರ್ಶಿಸುತ್ತಿರುವುದೇಕೆ? ನಿಜಕ್ಕೂ, ಇದು ಸೋಮಾರಿತನವೋ ಅಥವಾ ಉದ್ದೇಶಪೂರ್ವಕ ಅಸಡ್ಡೆಯೋ? ಹಾಗಂತ,
  ದುರುಪಯೋಗಕ್ಕೆ ಒಳಗಾಗುತ್ತಿರುವುದು ಬರೇ ತಲಾಕ್ ಮಾತ್ರವೇ? ಈ ದೇಶದಲ್ಲಿ ದುರುಪಯೋಗಕ್ಕೊಳಗಾಗದ ಕಾನೂನುಗಳಾದರೂ ಎಷ್ಟಿವೆ? ವರದಕ್ಷಿಣೆಯನ್ನು ಕಾನೂನುಬಾಹಿರವೆಂದು ಸಾರುವ ಕಾನೂನು ಈ ದೇಶದಲ್ಲಿದೆ. ಭ್ರೂಣಲಿಂಗ ಪತ್ತೆ ಪರೀಕ್ಷೆಯನ್ನು ಈ ದೇಶದಲ್ಲಿ ನಿಷೇಧಿಸಲಾಗಿದೆ. ಬಾಲ್ಯವಿವಾಹವನ್ನು ಕಾನೂನು ವಿರೋಧಿಯೆಂದು ಸಾರಲಾಗಿದೆ. 14 ವರ್ಷಕ್ಕಿಂತ ಕೆಳಗಿನವರ ದುಡಿತವನ್ನು ಇಲ್ಲಿನ ಕಾನೂನು ಅಪರಾಧವೆಂದು ಸಾರಿದೆ. ಭ್ರಷ್ಟಾಚಾರ ಅಪರಾಧವಾಗಿದೆ. ಅತ್ಯಾಚಾರ, ಕಳ್ಳತನ, ಗೃಹಹಿಂಸೆ, ತೆರಿಗೆ ವಂಚನೆ, ನಕಲಿ ಮತದಾನ, ನಕಲಿ ಪದವಿ.. ಎಲ್ಲವನ್ನೂ ಇಲ್ಲಿನ ಕಾನೂನು ಶಿಕ್ಷಾರ್ಹವೆಂದು  ಸಾರಿದೆ. ಆದರೆ ಈ ಕಾನೂನುಗಳನ್ನೆಲ್ಲ ಉಲ್ಲಂಘಿಸಲಾಗುತ್ತಿಲ್ಲವೇ? ವರದಕ್ಷಿಣೆ ವಿರೋಧಿ ಕಾನೂನಿನ ಹೊರತಾಗಿಯೂ ಇಲ್ಲಿ ವರದಕ್ಷಿಣೆ ಸಂಪ್ರದಾಯ ಅಸ್ತಿತ್ವದಲ್ಲಿದೆ ಎಂಬ ಕಾರಣವನ್ನು ಮುಂದೊಡ್ಡಿ ಆ ಕಾನೂನನ್ನೇ ಅಪರಾಧಿಗೊಳಿಸಬಹುದೇ? ಅತ್ಯಾಚಾರ ಪ್ರಕರಣಗಳನ್ನು ಕಾರಣವಾಗಿ ತೋರಿಸಿ ಅತ್ಯಾಚಾರಕ್ಕೆ ಸಂಬಂಧಿಸಿದ ಸರ್ವ ಪರಿಚ್ಛೇದಗಳನ್ನೂ ನಾಲಾಯಕ್ಕು ಎಂದು ಘೋಷಿಸಿಬಿಡಬಹುದೇ? ಅತ್ಯಾಚಾರಕ್ಕೆ ಪ್ರಚಲಿತ ಕಾನೂನೇ ಕಾರಣ ಎಂದು ಷರಾ ಬರೆದು ಬಿಡಬಹುದೇ? ಏರುತ್ತಿರುವ ಭ್ರಷ್ಟಾಚಾರ, ಗೃಹಹಿಂಸೆ, ಭಯೋತ್ಪಾದನೆ, ಕೋಮುವಾದ.. ಮುಂತಾದುವುಗಳನ್ನೆಲ್ಲ ನಾವು ಏನೆಂದು ವ್ಯಾಖ್ಯಾನಿಸಬಹುದು? ಅವುಗಳ ಹೊಣೆಯನ್ನು ಆಯಾ ಕಾನೂನುಗಳ ಮೇಲೆ ಹೊರಿಸಬಹುದೇ? ಅವನ್ನೇ ರದ್ದುಪಡಿಸಬೇಕು ಎಂದು ಒತ್ತಾಯಿಸಬಹುದೇ? ಅಷ್ಟಕ್ಕೂ,
  ಕಾನೂನುಗಳ ದುರುಪಯೋಗಕ್ಕೆ ಹೊಣೆಯಾಗಿಸಬೇಕಾದುದು ಆಯಾ ಕಾನೂನುಗಳನ್ನೋ ಅಥವಾ ದುರುಪಯೋಗಿಸಿದವರನ್ನೋ? ತಲಾಕ್‍ಗೆ ಸಂಬಂಧಿಸಿ ಆಗುವ ಚರ್ಚೆಗಳೆಲ್ಲ ಯಾಕೆ ಯಾವಾಗಲೂ ದಿಕ್ಕು ತಪ್ಪುತ್ತಿವೆ? ದುರುಪಯೋಗಿಸಿದವರ ಬದಲು ಕಾನೂನನ್ನೇ ಯಾಕೆ ಅಪರಾಧಿಯಾಗಿ ಕಾಣಲಾಗುತ್ತಿದೆ?  ತಲಾಕ್ ಸಹಿತ ಇಸ್ಲಾಮೀ ಪಾರಿಭಾಷಿಕಗಳ ಕುರಿತಂತೆ ತೋಚಿದಂತೆ ಹೇಳುವ ಉಡಾಫೆತನ ಯಾಕೆ ಸೃಷ್ಟಿಯಾಗಿದೆ? ಇದಕ್ಕೆ ನಾಮಧಾರಿ ಮುಸ್ಲಿಮರು ಮತ್ತು ಮಾಧ್ಯಮದವರ ಕೊಡುಗೆಗಳು ಏನೆಲ್ಲ? ಈ ಬಗ್ಗೆ ಗಂಭೀರ ಅವಲೋಕನ ನಡೆಯಲಿ.

1 comment:

  1. Islaminalli kanoonu athava shariat na moola Quran Matrawalla Pravadivaryara sunnat, Ulama gala Ijma mattu Qiyas kooda aagide. Idannariyade yaru bekadru enaadru helidre adu avaravara abhipraya matra...adu Islamina kanoonu sahinteyagalikke sadhyavilla.

    ReplyDelete