Thursday, 5 May 2016

.ಉಳ್ಳಾಲ: ಚೂರಿಗೆ ಅಂಟಿರುವ ಅಮಲು ಯಾವುದು?

        1. ಮೇಸ್ತ್ರಿ, ಕೂಲಿ ಕಾರ್ಮಿಕ, ಕೋಳಿ ಸಾಗಾಟದ ವಾಹನದಲ್ಲಿ ಚಾಲಕ, ಕೋಳಿ ಅಂಗಡಿಯಲ್ಲಿ ನೌಕರ, ಪೈಂಟರ್..
  2. ಪ್ಲಂಬರ್, ಪೈಂಟರ್, ಪಿಯು ವ್ಯಾಸಂಗ, ಡಿಪ್ಲೋಮಾ ವ್ಯಾಸಂಗ..
  ಇವೇನೂ ಉದ್ಯೋಗ ವಾರ್ತೆಯಲ್ಲ ಅಥವಾ ವಿದೇಶಗಳಲ್ಲಿ ಖಾಲಿಯಿರುವ ಹುದ್ದೆಗಳ ವಿವರ ಪಟ್ಟಿಯೂ ಅಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಉಳ್ಳಾಲದ ಆಸುಪಾಸಿನಲ್ಲಿ ಇಬ್ಬರು ಅಮಾಯಕರನ್ನು ಇರಿದು ಕೊಲೆಗೈದ ಆರೋಪಿಗಳ ಉದ್ಯೋಗಗಳಿವು. ಸಂಖ್ಯೆ 1ರಲ್ಲಿ ಮುಸ್ಲಿಮ್ ನಾಮಧಾರಿ ಆರೋಪಿಗಳ ವೃತ್ತಿ ವಿವರಣೆಯನ್ನು ನೀಡಲಾಗಿದ್ದರೆ ಸಂಖ್ಯೆ 2ರಲ್ಲಿ ಹಿಂದೂ ನಾಮಧಾರಿ ಆರೋಪಿಗಳ ವೃತ್ತಿ ವಿವರಗಳನ್ನು ನೀಡಲಾಗಿದೆ. ವಿಶೇಷ ಏನೆಂದರೆ, ಆರೋಪಿಗಳು ತಮ್ಮ ಹೆಸರುಗಳನ್ನು ಹಿಂದೂ ಮತ್ತು ಇಸ್ಲಾಮ್ ಧರ್ಮದಲ್ಲಿ ನೋಂದಾಯಿಸಿಕೊಂಡಿದ್ದರೂ ಅವರು ಮಾಡುತ್ತಿರುವ ವೃತ್ತಿಗಳಲ್ಲಿ ಬಹುತೇಕ ಯಾವ ವ್ಯತ್ಯಾಸವೂ ಇಲ್ಲ. ಎಲ್ಲರೂ ತೀರಾ ತಳಮಟ್ಟದ ಮತ್ತು ಶ್ರಮದಾಯಕ ವೃತ್ತಿಗಳಲ್ಲಿ ತೊಡಗಿಸಿಕೊಂಡವರು. ಇಬ್ಬರಂತೂ ವಿದ್ಯಾರ್ಥಿಗಳು. ಈ ಬಡಪಾಯಿಗಳು ಈ ಇರಿಯುವ ಕ್ರೌರ್ಯದಲ್ಲಿ ತೊಡಗಿಸಿಕೊಂಡದ್ದೇಕೆ? ಸ್ವಇಚ್ಛೆಯಿಂದ ಅವರು ಇರಿದರೇ ಅಥವಾ ಅವರಿಂದ ಈ ಕ್ರೌರ್ಯವನ್ನು ಮಾಡಿಸಲಾಯಿತೇ? ಒಂದು ವೇಳೆ ಸ್ವಇಚ್ಛೆಯೇ ಈ ಪ್ರಾಣಹರಣಕ್ಕೆ ಕಾರಣ ಎಂದಾದರೆ, ಅಂಥದ್ದೊಂದು ಅನಾಹುತಕಾರಿ ಇಚ್ಛೆ ಅವರಲ್ಲಿ ಹುಟ್ಟಿಕೊಂಡದ್ದು ಹೇಗೆ? ಯಾಕೆ? ಸಾವನ್ನು ತನ್ನ ಧರ್ಮದವ ಮತ್ತು ಬೇರೆ ಧರ್ಮದವ ಎಂದು ವಿಂಗಡಿಸಿ ಅನುಭವಿಸಲು ಈ ಬಡಪಾಯಿಗಳನ್ನು ತಯಾರುಗೊಳಿಸಿದ್ದು ಯಾವುದು? ಮನೆಯೇ, ಪರಿಸರವೇ, ಧರ್ಮವೇ, ಕಲಿಕೆಯೇ, ಸಂಘಟನೆಗಳೇ? ಹಾಗಂತ, ಸ್ವಇಚ್ಛೆ ಅಲ್ಲ ಎಂಬುದು ಇದಕ್ಕೆ ಉತ್ತರವಾದರೂ ಪ್ರಶ್ನೆಗಳ ಪಟ್ಟಿಯೇನೂ ಪುಟ್ಟದಾಗುವುದಿಲ್ಲ. ಹಾಗಾದರೆ, ಅವರನ್ನು ಈ ಕೃತ್ಯಕ್ಕೆ ಪ್ರಚೋದಿಸಿದ ಆ ಹೊರಗಿನ ವ್ಯಕ್ತಿಗಳು ಯಾರು, ಅವರ ಉದ್ದೇಶವೇನು, ಅವರು ಎಲ್ಲಿರುತ್ತಾರೆ, ಏನು ಮಾಡುತ್ತಾರೆ, ಇದರಿಂದ ಅವರಿಗಿರುವ ಲಾಭಗಳೇನು.. ಹೀಗೆ ಪ್ರಶ್ನೆಗಳ ಸರಮಾಲೆ ಎದುರುಗೊಳ್ಳುತ್ತದೆ. ಅಷ್ಟಕ್ಕೂ, ಹಿಂದೂವನ್ನು ಮುಸ್ಲಿಮ್ ಮತ್ತು ಮುಸ್ಲಿಮನನ್ನು ಹಿಂದೂ ಕೊಲ್ಲುವುದರಿಂದ ಆಯಾ ಧರ್ಮಗಳಿಗೆ ಯಾವ ಲಾಭವೂ ಇಲ್ಲ ಎಂಬುದು ಬುದ್ಧಿ ಸ್ವಸ್ಥ ಇರುವ ಪ್ರತಿಯೊಬ್ಬರಿಗೂ ಗೊತ್ತಿದೆ. ಒಂದು ವೇಳೆ ಹಿಂದೂವನ್ನು ಹಿಂದೂ ಎಂಬ ಕಾರಣಕ್ಕಾಗಿ ಇರಿದು ಕೊಲ್ಲುವುದು ಮುಸ್ಲಿಮನ ಪಾಲಿಗೆ ಅತ್ಯಂತ ಪುಣ್ಯದಾಯಕ ಮತ್ತು ಸ್ವರ್ಗಕ್ಕೆ ಕೊಂಡೊಯ್ಯುವ ಕೆಲಸವೇ ಆಗಿರುತ್ತಿದ್ದರೆ, ಈ ಇರಿಯುವ ವೃತ್ತಿಯಲ್ಲಿ ಮುಂಚೂಣಿಯಲ್ಲಿರಬೇಕಾದುದು ಪ್ಲಂಬರ್‍ಗಳೋ, ಪೈಂಟರ್ ಗಳೋ, ಮೇಸ್ತ್ರಿಗಳೋ, ಕೋಳಿ ಸಾಗಾಟಗಾರರೋ ಆಗಿರಲಿಲ್ಲ. ಮುಸ್ಲಿಮ್ ವಿದ್ವಾಂಸರು, ಪಂಡಿತರು, ಮಸೀದಿಯ ಧರ್ಮಗುರುಗಳು ಮುಂತಾದವರೇ ಆಗಿರುತ್ತಿದ್ದರು. ಆದರೆ ಪ್ರತಿಬಾರಿಯೂ ಈ ನಿರೀಕ್ಷೆ ಸುಳ್ಳಾಗುತ್ತಿದೆ. ಸಮಾಜದ ತೀರಾ ತಳಮಟ್ಟದಲ್ಲಿ ಬದುಕುವ ಮತ್ತು ವೈಟ್ ಕಾಲರ್ ಉದ್ಯೋಗಿಯಲ್ಲದವರೇ ಈ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಎಪ್ರಿಲ್ 2ನೇ ವಾರದಲ್ಲಿ ಉಳ್ಳಾಲದಲ್ಲಿ ರಾಜು ಕೋಟ್ಯಾನ್ ಎಂಬವರ ಹತ್ಯೆ ನಡೆಯಿತು. ಇದರ ಆರೋಪದಲ್ಲಿ ಸಂಖ್ಯೆ 1ರಲ್ಲಿ ಸೂಚಿತ ವೃತ್ತಿಯಲ್ಲಿರುವ ಮುಸ್ಲಿಮ್ ನಾಮಧಾರಿಗಳನ್ನು ಬಂಧಿಸಲಾಯಿತು. ಇದಾಗಿ ಎರಡು ವಾರಗಳಲ್ಲಿ ನಾಲ್ಕೈದು ಮುಸ್ಲಿಮ್ ಯುವಕರು ಇರಿತಕ್ಕೊಳಗಾದರು. ಸೈಫಾನ್ ಎಂಬ ಯುವಕ ಸಾವಿಗೀಡಾದ. ನಿಜವಾಗಿ, ಸಾವಿಗೀಡಾದ ಸೈಫಾನ್ ಮತ್ತು ರಾಜುಗಾಗಲಿ, ಸೈಫಾನ್ ಗೆ ಇರಿದವರಿಗಾಗಲಿ ಅಥವಾ ಇರಿತಕ್ಕೊಳಗಾದವರಿಗಾಗಲಿ ಪರಸ್ಪರ ಪರಿಚಯವೋ ಸಂಬಂಧವೋ ದ್ವೇಷವೋ ಏನೇನೂ ಇರಲಿಲ್ಲ. ಹೀಗೆ ಕಾರಣವಿಲ್ಲದೇ ದ್ವೇಷಿಸುವ ಮತ್ತು ದ್ವೇಷವಿಲ್ಲದೇ ಇರಿಯುವ ಈ ಮನಸ್ಥಿತಿಗೆ 'ದರ್ಮ ಕಾರಣ' ಎಂದು ಹೇಳಬಹುದೇ? ಹಾಗೆ ಹೇಳುವುದು ನಿಜಕ್ಕೂ ನ್ಯಾಯಬದ್ಧವೇ? ಹಾಗಂತ, ಈ ಇರಿತದಲ್ಲಿ ಭಾಗಿಯಾದ ಆರೋಪಿಗಳೆಲ್ಲ ನಿಷ್ಠಾವಂತ ಧರ್ಮಾನುಯಾಯಿಗಳಾಗಿರುವರೇ? ಇತರ ಧರ್ಮೀಯ ಗೆಳೆಯರನ್ನೇ ಹೊಂದಿಲ್ಲದ, ಅವರ ಬಳಿ ನೌಕರಿ ಮಾಡದ, ಅವರ ಅಂಗಡಿಗಳಿಗೆ ಭೇಟಿಯನ್ನೇ ಕೊಡದ ಮತ್ತು ಸಂಪರ್ಕವನ್ನೇ ಇರಿಸದಷ್ಟು ಅತಿ ಸ್ವಧರ್ಮ ನಿಷ್ಠರು ಇವರಾಗಿರುವರೇ? ಒಂದು ವೇಳೆ ಈ ಆರೋಪಿಗಳಲ್ಲಿ ಖಾಸಗಿಯಾಗಿ ಮಾತಾಡಿದರೆ, ಇವರ ಗೆಳೆಯರ ಪಟ್ಟಿಯಲ್ಲಿ ಅವರ ಧರ್ಮದವರಿಗಿಂತ ಇತರ ಧರ್ಮದ ಗೆಳೆಯರೇ ಹೆಚ್ಚಿರುವ ಸಾಧ್ಯತೆ ಇದೆ. ಅನೇಕ ಬಾರಿ ಇವು ಸಾಬೀತೂ ಗೊಂಡಿವೆ. ಆದ್ದರಿಂದಲೇ, ಆರೋಪಿಗಳನ್ನು ಇನ್ನೊಂದು ಧರ್ಮದ ಬದ್ಧ ವೈರಿಗಳೆಂದೋ ಅಥವಾ ಸ್ವ ಧರ್ಮದ ನಿಷ್ಠಾವಂತ ಕಾರ್ಯಕರ್ತರೆಂದೋ ತೀರ್ಮಾನಿಸಿ ಬಿಡುವುದು ಸೂಕ್ತವೆನಿಸುವುದಿಲ್ಲ. ಕೆಲವೊಮ್ಮೆ ಇಂಥ ತೀರ್ಮಾನಗಳೇ ಪ್ರಕರಣವನ್ನು ಇನ್ನಷ್ಟು ಜಟಿಲತೆಯೆಡೆಗೆ ಕೊಂಡೊಯ್ಯುವುದಕ್ಕೂ ಕಾರಣವಾಗುತ್ತದೆ. ಇದರರ್ಥ, ಇವರ ಬಗ್ಗೆ ಮೃದು ನೀತಿಯನ್ನು ತಳೆಯಬೇಕೆಂದಲ್ಲ. ‘ಯಾವುದೋ ಸಂಚಿನ ಬಲಿಪಶುಗಳು' ಎಂಬ ಪದಪುಂಜದ ಮೂಲಕ ಸೌಮ್ಯ ಭಾವನೆ ಹೊಂದಬೇಕೆಂದೂ ಅಲ್ಲ. ಇವರ ಬಗ್ಗೆ ಸಮಾಜ ಕಠಿಣ ಧೋರಣೆ ತಳೆಯಬೇಕೆಂಬ ಕಾರಣಕ್ಕಾಗಿಯೇ ಆರಂಭದಲ್ಲಿಯೇ ಇವರು ಯಾವ ಧರ್ಮದ ನಾಮಧಾರಿಗಳು ಎಂಬುದಾಗಿ ಸ್ಪಷ್ಟಪಡಿಸಲಾಗಿದೆ. ಸಾವಿಗೀಡಾದವರು ಮತ್ತು ಇರಿತಕ್ಕೊಳಗಾದವರು ಯಾವ ಧರ್ಮದೊಂದಿಗೆ ಗುರುತಿಸಿಕೊಂಡಿದ್ದಾರೆ ಎಂಬುದನ್ನೂ ಸೂಚಿಸಲಾಗಿದ್ದೂ ಈ ಕಾರಣಕ್ಕಾಗಿಯೇ. ಆರೋಪಿಗಳನ್ನು ಮತ್ತು ಸಂತ್ರಸ್ತರನ್ನು ಸಮಾಜ ಸ್ಪಷ್ಟವಾಗಿ ಗುರುತಿಸಿ ವಿಭಜಿಸಬೇಕು ಮತ್ತು  ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ಅಪರಾಧಿಗಳನ್ನು ಶಿಕ್ಷಿಸಬೇಕು ಎಂಬ ಏಕೈಕ ಉದ್ದೇಶವೇ ಈ ಸ್ಪಷ್ಟೀಕರಣದ  ಹಿಂದಿದೆ. ಇವರನ್ನು ಪ್ರಚೋದಿಸಿದವರು ಯಾರೇ ಆಗಿರಲಿ ಮತ್ತು ಅವರ ಉದ್ದೇಶ ಏನೇ ಇರಲಿ ಅದರ ನೆಪದಲ್ಲಿ ಆರೋಪಿಗಳನ್ನು ಬಲಿಪಶುಗಳಂತೆ ಕರುಣೆಯಿಂದ ನೋಡಬೇಕಾದ ಅಗತ್ಯವೇ ಇಲ್ಲ. ಮನುಷ್ಯ ವಿರೋಧಿಗಳ ಬಗ್ಗೆ ಸಮಾಜ ಕಠಿಣ ನಿಲುವನ್ನು ತಳೆಯದೇ ಹೋದರೆ ಅದು ಮರಳಿ ಅಂಥದ್ದೇ ಕೃತ್ಯದಲ್ಲಿ ತೊಡಗಿಸುವುದಕ್ಕೆ ಅವರಲ್ಲಿ ಧೈರ್ಯ ತುಂಬುತ್ತದೆ. ಸದ್ಯ ‘ಕೋಮುಗಲಭೆ' ಎಂಬ ಬಿರುದು ಹೊತ್ತು ನಡೆಯುವ ಮನುಷ್ಯ ವಿರೋಧಿ ಕೃತ್ಯಗಳ ಹೆಚ್ಚಳದಲ್ಲಿ ಸಮಾಜದ ಈ ಸೌಮ್ಯ ಧೋರಣೆಗೂ ಖಂಡಿತ ಪಾತ್ರವಿದೆ. ಜೈಲಿಗೆ ಹೋದಷ್ಟೇ ವೇಗವಾಗಿ ಅವರು ಬಿಡುಗಡೆಗೊಳ್ಳುವುದು ಮತ್ತು ಒಂದಷ್ಟು ಹೆಚ್ಚೇ ಗೌರವದೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಅವರು ಭಾಗಿಯಾಗುವುದೆಲ್ಲ ಈ ತಪ್ಪಿನ ಪರಿಣಾಮದಿಂದಲೇ ಆಗಿದೆ. ಧರ್ಮ ಬೇರೆ ಎಂಬ ಕಾರಣಕ್ಕಾಗಿ ಮನುಷ್ಯರನ್ನು ಇರಿದೋ ಕೊಲೆಗೈದೋ ಬಂಧನಕ್ಕೀಡಾದವರು ಅಥವಾ ತಲೆ ತಪ್ಪಿಸಿಕೊಂಡು ನಡೆಯುವವರನ್ನು ಸಮಾಜ ಯಾವ ಕಾರಣಕ್ಕೂ ಬೆಂಬಲಿಸಬಾರದು. ಈ ಕೃತ್ಯಕ್ಕೆ ಅವರನ್ನು ಯಾರೇ ಪ್ರಚೋದಿಸಿರಲಿ, ಇತರ ಯುವಕರಿಗೆ ಪಾಠವಾಗುವಂತೆ ಅವರನ್ನು ಸಮಾಜ ನಡೆಸಿಕೊಳ್ಳಬೇಕು. ಪ್ರಚೋದಕರಿದ್ದರೂ ಪ್ರಚೋದನೆಗೊಳಗಾಗದ ಯುವಕರ ತಯಾರಿಯ ದೃಷ್ಟಿಯಿಂದ ಸಮಾಜ ಇಷ್ಟು ಕಟುವಾಗಲೇ ಬೇಕಾದ ಅಗತ್ಯವಂತೂ ಖಂಡಿತ ಇದೆ.
  ನಿಜವಾಗಿ, ಹದಿಹರೆಯದ ಯುವಕರು ಇವತ್ತು ಚೂರಿಯನ್ನೋ ತಲವಾರನ್ನೋ ಎತ್ತಿಕೊಳ್ಳುವುದು ಧರ್ಮದ ಮೇಲಿನ ನಿಷ್ಠೆಯಿಂದಲ್ಲ, ಮಾದಕ ಪದಾರ್ಥ ಮತ್ತು ಮದ್ಯಪಾನದ ಅಮಲಿನಿಂದ. ಪರಿಚಯವೇ ಇಲ್ಲದ ಇನ್ನೊಬ್ಬನಿಗೆ ಚೂರಿಯಿಂದ ಇರಿಯುವ ಸಾಮರ್ಥ್ಯ ಮದ್ಯ ಮತ್ತು ಮಾದಕ ಪದಾರ್ಥಗಳ ಹೊರತು ಇನ್ನಾವುದಕ್ಕೂ ಇಲ್ಲ. ವ್ಯವಸ್ಥೆಗೂ ಇದು ಗೊತ್ತಿದೆ. ಈ ಚೂರಿಯಾಟವನ್ನು ಆಡಿಸುವವರಿಗೂ ಆಡುವವರಿಗೂ ಗೊತ್ತಿದೆ. ರಾಜಕೀಯದವರಿಗೂ ಧರ್ಮವನ್ನು ದುರ್ವ್ಯಾಖ್ಯಾನಿಸುವವರಿಗೂ ಗೊತ್ತಿದೆ. ಆದ್ದರಿಂದಲೇ, ಯಾವ ಸ್ವಾಮೀಜಿಗಳೂ ಯಾವ ಮೌಲಾನಾಗಳೂ ಈ ಚೂರಿ ಇರಿತದಲ್ಲಿ ಭಾಗಿಗಳಾಗುತ್ತಿರುವುದು ಕಾಣಿಸುತ್ತಿಲ್ಲ. ಮದ್ಯ ಮತ್ತು ಮಾದಕ ಪದಾರ್ಥಗಳನ್ನು ಸೇವಿಸುವ ತಳಮಟ್ಟದ ಯುವಕರೇ ಇಂಥ ಕ್ರೌರ್ಯದಲ್ಲಿ ಮತ್ತೆ ಮತ್ತೆ ಗುರುತಿಸಿಕೊಳ್ಳುತ್ತಿದ್ದಾರೆ. ಜೈಲಿಗೆ ಹೋಗಿ ಮರಳಿ ಬಂದು ಮತ್ತದೇ ಕೃತ್ಯದಲ್ಲಿ ಮುಂದುವರಿಯುತ್ತಾರೆ. ಇದಕ್ಕೆ ತಡೆ ಬೀಳಲೇಬೇಕಿದೆ. ಇಂಥವರ ಬಗ್ಗೆ ನ್ಯಾಯಾಲಯ ಕಠಿಣವಾಗಿ ನಡೆದುಕೊಳ್ಳಬೇಕು. ಒಂದು ವೇಳೆ ದುರ್ಬಲ ಸಾಕ್ಷ್ಯಾಧಾರಗಳ ಆಧಾರದಲ್ಲಿ ಅವರು ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುತ್ತಾರಾದರೆ ಸಮಾಜವೇ ಅವರನ್ನು ಸಂಸ್ಕರಿಸುವ ಮತ್ತು ಸಂಸ್ಕರಣೆಗೆ ತಯಾರಿಲ್ಲದಿದ್ದರೆ ಬಹಿಷ್ಕರಿಸುವ ತೀರ್ಮಾನ ಕೈಗೊಳ್ಳಬೇಕು. ಜೊತೆಗೇ ಕಾರಣವಿಲ್ಲದೆಯೇ ದ್ವೇಷಿಸುವುದಕ್ಕೆ ಪ್ರಚೋದಿಸುವ ಮದ್ಯ ಮತ್ತು ಅಮಲು ಪದಾರ್ಥಗಳಿಗೆ ನಿಷೇಧ ಹೇರುವ ಪ್ರಯತ್ನಗಳು ನಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ಲಂಬರ್, ಪೈಂಟರ್, ಮೇಸ್ತ್ರಿ, ಎಲೆಕ್ಟ್ರಿಕಲ್ಸ್.. ಮುಂತಾದ ವೃತ್ತಿ ಸೂಚಕ ನಾಮಗಳು 'ಚೂರಿಯ' ಪರ್ಯಾಯ ನಾಮಗಳಾಗಿ ಗುರುತಿಗೀಡಾಗುವ ಅಪಾಯವಿದೆ.
  ಸಾವಿಗೀಡಾದ ರಾಜು ಕೋಟ್ಯಾನ್ ಮತ್ತು ಸೈಫಾನ್ ರು ಕೋಮುಗಲಭೆ ಬಿರುದಾಂಕಿತ ಮನುಷ್ಯ ವಿರೋಧಿ ಇರಿತಗಳ ಕಟ್ಟಕಡೆಯ ಬಲಿಗಳಾಗಲಿ ಎಂದೇ ಹಾರೈಸೋಣ

No comments:

Post a Comment