Thursday 12 May 2016

ಬೀಡಿಗೆ ಬೆಂಕಿ ಕೊಟ್ಟು ಚಳಿ ಕಾಯಿಸುವ ಬುದ್ಧಿವಂತರು..

        ಕಳೆದ ಒಂದೂವರೆ ತಿಂಗಳಿನಿಂದ ಈ ದೇಶದಲ್ಲಿ ಮುಷ್ಕರವೊಂದು ನಡೆಯುತ್ತಿದೆ. ಈ ಮುಷ್ಕರವನ್ನು ಘೋಷಿಸಿರುವುದು ತಂಬಾಕು ಉದ್ಯಮ ಮತ್ತು ಇದರ ನೇರ ಅಡ್ಡಪರಿಣಾಮಕ್ಕೆ ಒಳಗಾಗಿರುವುದು ಈ ದೇಶದ ಕೋಟ್ಯಂತರ ಬಡಪಾಯಿಗಳು. ಕಳೆದ ಒಂದೂವರೆ ತಿಂಗಳಿನಿಂದ ಬೀಡಿ ಉದ್ಯಮ ಮೌನವಾಗಿದೆ. ಬೀಡಿಯನ್ನು `ಅನ್ನ'ವಾಗಿ ನೆಚ್ಚಿಕೊಂಡವರು ಕೋಟ್ಯಂತರ ಮಂದಿಯಿದ್ದಾರೆ. ಇವರಲ್ಲಿ 99% ಮಂದಿಯೂ ತೀರಾ ತೀರಾ ಬಡವರು. ಮೂರು ಹೊತ್ತು ಹೊಟ್ಟೆ ತುಂಬಾ ಉಣ್ಣುವ ನಿರೀಕ್ಷೆ ಇಲ್ಲದವರು. ಬಡತನ ರೇಖೆಗಿಂತ ಕೆಳಗೆ ಜೀವಿಸುವವರು. ಆದ್ದರಿಂದಲೇ, ಬೀಡಿಯ ಮೇಲೆ `ನಿಧಾನ ಕೊಲೆಗಾರ' ಎಂಬ ಆರೋಪ ಪಟ್ಟಿಯನ್ನು ಹೊರಿಸಿ ಈ ಬಡಪಾಯಿಗಳನ್ನು ಕೊಲೆಗಾರರಂತೆಯೋ, ಅಪರಾಧಿಗಳಂತೆಯೋ ಪರಿಗಣಿಸುವುದು ಮತ್ತು ನಿರ್ಲಕ್ಷಿಸುವುದು ಕ್ರೂರವಾಗುತ್ತದೆ. ಬೀಡಿ ಉದ್ಯಮ ನಾಳೆ ಮುಷ್ಕರವನ್ನು ಹಿಂತೆಗೆದುಕೊಳ್ಳಬಹುದು. ಮಾತ್ರವಲ್ಲ ಮರುದಿನ ತನಗಾದ ನಷ್ಟವನ್ನು ಕೋಟಿಗಳಲ್ಲಿ ಮುಂದಿಡಬಹುದು. ಆದರೆ, ಈ ಬಡಪಾಯಿಗಳಿಗೆ ಕೋಟಿಗೆಷ್ಟು ಸೊನ್ನೆ ಎಂಬುದೇ ಬಹುತೇಕ ಗೊತ್ತಿರುವುದಿಲ್ಲ. ಅವರು ಪೈಸೆಗಳಲ್ಲಷ್ಟೇ ನಷ್ಟದ ವಿವರವನ್ನು ಕೊಡಬಹುದು. ಪೈಸೆಗಳು ಇವತ್ತಿನ ದಿನಗಳಲ್ಲಿ ತೀರಾ ಜುಜುಬಿಯಾಗಿರುವುದರಿಂದ ರಾಜಕಾರಣಿಗಳಾಗಲಿ ಮಾಧ್ಯಮಗಳಾಗಲಿ ಈ ವಿವರಗಳನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ತೀರಾ ಕಡಿಮೆ. ಹೀಗೆ ಕೋಟ್ಯಂತರ ಮಂದಿಯ ವಿಷಾದ ಗೀತೆ ಯಾರಿಗೂ ಕೇಳಿಸದೇ ಸತ್ತು ಹೋಗಬಹುದು.
  ಕೇಂದ್ರ ಸರಕಾರದ ಹೊಸ ಕಾನೂನನ್ನು ಖಂಡಿಸಿ ತುಂಬಾಕು ಉದ್ಯಮ ಮುಷ್ಕರಕ್ಕೆ ನಿಂತಿವೆ. ಬೀಡಿ ಮತ್ತು ಸಿಗರೇಟು ಪ್ಯಾಕುಗಳ ಶೇ. 85ರಷ್ಟು ಭಾಗದಲ್ಲಿ ಸರಕಾರಿ ಜಾಹೀರಾತನ್ನು ಮುದ್ರಿಸಬೇಕೆಂದು ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ‘ತಂಬಾಕು ಉತ್ಪನ್ನಗಳ ಸೇವನೆ ಆರೋಗ್ಯಕ್ಕೆ ಹಾನಿಕರ’ ಎಂಬುದೇ ಈ ಜಾಹೀರಾತಿನ ಮರ್ಮ. ಆದರೆ ಇಷ್ಟು ದೊಡ್ಡ ಜಾಹೀರಾತನ್ನು ಪ್ರಕಟಿಸುವುದು ಅಸಾಧ್ಯ ಎಂದು ಬೀಡಿ ಮತ್ತು ಸಿಗರೇಟು ಉದ್ಯಮ ವಾದಿಸುತ್ತಿದೆ. ಬೀಡಿ ಪ್ಯಾಕೇಟ್‍ಗಳ ಮೇಲೆ ಕಂಪೆನಿಯ ಹೆಸರು, ಬೆಲೆ ಮತ್ತಿತರ ವಿಷಯಗಳನ್ನು ಮುದ್ರಿಸಬೇಕಾಗುತ್ತದೆ. ಬಾಳಿಕೆಯ ದಿನಾಂಕವನ್ನು ಬರೆಯಬೇಕಾಗುತ್ತದೆ. ಇವಕ್ಕೆಲ್ಲ 15% ಜಾಗ ಸಾಕಾಗದು ಎಂಬುದು ಅವುಗಳ ವಾದ. ಈ ವಾದ ಮತ್ತು ಪ್ರತಿವಾದಗಳ ನೇರ ಆಘಾತಕ್ಕೆ ಇವತ್ತು ಬೀಡಿ ಎಲೆ ಕೃಷಿಕರು ಮತ್ತು ಬೀಡಿ ಕಾರ್ಮಿಕರು ತುತ್ತಾಗಿದ್ದಾರೆ. ಹಾಗಂತ, ನಾವು ಈ ಇಡೀ ಬೆಳವಣಿಗೆಯ ವೀಕ್ಷಕರಾಗಿಯೇ ಉಳಿಯಬೇಕಿಲ್ಲ. ಈಗಾಗಲೇ ಬೀಡಿ-ಸಿಗರೇಟು ಪ್ಯಾಕ್‍ಗಳಲ್ಲಿ ಚಿಕ್ಕದಾಗಿ ಈ ಜಾಹೀರಾತು ಪ್ರಕಟವಾಗುತ್ತಿದೆ. ಹೀಗಿರುವಾಗ ಈ ಜಾಹೀರಾತಿನ ಗಾತ್ರವನ್ನು ದೊಡ್ಡದಾಗಿಸಿ ಎಂದು ಸರಕಾರ ಕೇಳಿಕೊಳ್ಳುವುದು ಕಂಪೆನಿಗಳ ಪಾಲಿಗೆ ಅಚ್ಚರಿಯ ವಿಷಯವಾಗುತ್ತದೆ ಎಂದು ನಂಬುವುದಕ್ಕೆ ಕಷ್ಟವಾಗುತ್ತದೆ. ಆದ್ದರಿಂದಲೇ, ಈ ಮುಷ್ಕರವನ್ನು ಬರೇ ಜಾಹೀರಾತು ಪ್ರಕರಣವಾಗಿ ಮಾತ್ರ ಕಾಣುವುದು ಅವಸರದ ತೀರ್ಮಾನವಾಗಿ ಬಿಡುವ ಅಪಾಯವೂ ಇದೆ. ಈ ಮುಷ್ಕರದ ಹಿಂದೆ ಕಂಪೆನಿಗಳದ್ದೇ ಆದ ಇತರ ಒಳ ಉದ್ದೇಶಗಳೂ ಇರಬಹುದು. ಬೀಡಿ ಕಾರ್ಮಿಕರನ್ನು ಸತಾಯಿಸುವ ಮೂಲಕ ಅವರು ಮುಂದೆ ಬೆಲೆ ಏರಿಕೆ, ಭತ್ಯೆಗಳಿಗೆ ಒತ್ತಾಯಿಸದಂತೆ  ಬೆದರಿಸುವ  ತಂತ್ರಗಳೂ ಇರಬಹುದು. ಆದರೆ ಇಲ್ಲಿ ಇನ್ನೊಂದು ಬಹುಮುಖ್ಯ ಪ್ರಶ್ನೆಯಿದೆ. 85% ಭಾಗದಲ್ಲಿ ತಂಬಾಕು ವಿರೋಧಿ ಜಾಹೀರಾತನ್ನು ಮುದ್ರಿಸುವುದರಿಂದ ಪ್ರಯೋಜನವಾಗಬಹುದೇ? ಇದು ತಂಬಾಕು ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾದೀತೇ? ಅಷ್ಟಕ್ಕೂ, 'ಮದ್ಯಪಾನ ಆರೋಗ್ಯಕ್ಕೆ ಹಾನಿಕರ..'  ಎಂಬ ಸಾಧು ಜಾಹೀರಾತಿನಿಂದ ಹಿಡಿದು ‘ಮದ್ಯ ಕುಟುಂಬವನ್ನೇ ನಾಶಪಡಿಸುತ್ತದೆ..’ ಎಂಬ ಭಯಭರಿತ ಜಾಹೀರಾತಿನ ವರೆಗೆ ಎಷ್ಟೆಲ್ಲ ಮದ್ಯವಿರೋಧಿ ಜಾಹೀರಾತುಗಳು ಈ ದೇಶದಲ್ಲಿಲ್ಲ? ಮದ್ಯದ ಬಾಟಲಿಗಳಲ್ಲಿ ಕಡ್ಡಾಯವಾಗಿ ಮದ್ಯವಿರೋಧಿ ಜಾಹೀರಾತನ್ನು ಮುದ್ರಿಸಿಯೂ ಅವುಗಳ ಖರೀದಿಯಲ್ಲಿ ಇಳಿಕೆ ಆಗುತ್ತಿದೆಯೇ? ಬೀಡಿ ಸೇದುವ ಯಾವ ಗ್ರಾಹಕ ಅದರ ಪ್ಯಾಕೆಟನ್ನು ಗಮನಿಸುತ್ತಾನೆ? ಪ್ಯಾಕೆಟ್‍ನಲ್ಲಿ ಏನಿದೆ ಎಂದು ನೋಡಿ, ಅದರ ಆಧಾರದಲ್ಲಿ ಸೇದುವ ಅಥವಾ ಸೇದದೇ ಇರುವ ಬುದ್ಧಿವಂತ ಗ್ರಾಹಕರು ಮದ್ಯ ಮತ್ತು ತಂಬಾಕು ಉತ್ಪನ್ನಗಳಿಗದ್ದಾರೆಯೇ?
  ತಮಾಷೆ ಏನೆಂದರೆ, ಮದ್ಯ ಅಥವಾ ತಂಬಾಕು ಉತ್ಪನ್ನಗಳು ಮನುಷ್ಯ ಸೇವನೆಗೆ ಅಪಾಯಕಾರಿ ಎಂದು ಹೇಳುವುದು ಸರಕಾರವೇ. ಹಾಗಂತ, ಅದನ್ನು ಆರೋಗ್ಯವಂತ ಮನುಷ್ಯರಿಗೆ ಹಂಚುವುದೂ ಸರಕಾರವೇ. ಇದು ದ್ವಂದ್ವವೋ ಮುಠ್ಠಾಳತನವೋ? ‘ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ ಎಂಬ ಮಾತಿಗೆ ಅನ್ವರ್ಥವೆಂಬಂತೆ ನಡಕೊಳ್ಳುತ್ತಿರುವ ಈ ವ್ಯವಸ್ಥೆಯನ್ನು ಪ್ರಶ್ನಿಸದೆಯೇ, ಬರೇ ಬೀಡಿಯನ್ನೋ ಮದ್ಯವನ್ನೋ ದೂಷಿಸುವುದು ತರ್ಕರಹಿತವೆನಿಸುತ್ತದೆ. ಮದ್ಯದ ಬಾಟಲಿಗಳ ಮೇಲೋ ಬೀಡಿ-ಸಿಗರೇಟ್ ಪ್ಯಾಕೆಟ್‍ಗಳ ಮೇಲೋ ಸರಕಾರಿ ಜಾಹೀರಾತು ಪ್ರಕಟಿಸುವುದರಿಂದ ಗ್ರಾಹಕರ ಮೇಲೆ ಭಾರೀ ಪ್ರಮಾಣದ ಜಾಗೃತಿ ಉಂಟಾಗಬಹುದು ಎಂದು ತಂಬಾಕು ಕಂಪೆನಿಗಳು ಬಿಡಿ ಸ್ವತಃ ಸರಕಾರವೇ ಭಾವಿಸಿರುವುದಕ್ಕೆ ಸಾಧ್ಯವಿಲ್ಲ. ಮದ್ಯ ಮತ್ತು ತಂಬಾಕು ಪದಾರ್ಥಗಳೆಲ್ಲ ಊಟ, ಪರೋಟ, ಚಪಾತಿಗಳಂತೆ ಹೊಟ್ಟೆ ತುಂಬಿಸುವವುಗಳಲ್ಲ ಎಂಬುದು ಅದರ ತಯಾರಕರಿಗೆ ಚೆನ್ನಾಗಿ ಗೊತ್ತು. ಅದೊಂದು ಬಗೆಯ ಅಮಲು. ಅಮಲು ಎಂಬುದು ಜಾಹೀರಾತಿಗೆ ಬೆದರುವಷ್ಟು ಪುಕ್ಕಲು ಅಲ್ಲ. ಒಂದು ವೇಳೆ ಈ ಅಮಲು  ಚಟವಾಗಿ ಮಾರ್ಪಟ್ಟರೆ ಬಳಿಕ ಇಡೀ ಮದ್ಯದ ಬಾಟಲಿಯಲ್ಲಿ ಅಥವಾ ತಂಬಾಕು ಉತ್ಪನ್ನಗಳ ಪ್ಯಾಕೆಟ್‍ನಲ್ಲಿ ಮಾನವ ಅಸ್ಥಿಪಂಜರದ ಪೋಟೋ ಹಾಕಿದರೂ ಅದು ಗ್ರಾಹಕರ ಮೇಲೆ ಪರಿಣಾಮ ಬೀರುವುದಕ್ಕೆ ಸಾಧ್ಯವೂ ಇಲ್ಲ. ತಂಬಾಕು ಉತ್ಪನ್ನಗಳ ಗ್ರಾಹಕರು ಮಸಾಲೆದೋಸೆ ಗ್ರಾಹಕರಂತೆ ಅಲ್ಲವಲ್ಲ. ಬೆಲೆಗೆ ಬೆದರದಷ್ಟು ಅವರು ಅದರ ಅಪ್ಪಟ ಆರಾಧಕರಾಗಿರುತ್ತಾರೆ. ಪ್ಯಾಕೆಟ್‍ನಲ್ಲಿ ನೀವು ಏನೇ ಮುದ್ರಿಸಿ ಅದಕ್ಕೆ ಕುರುಡಾಗುವಷ್ಟು ಗುಂಡಿಗೆಯನ್ನು ಅವರು ಗಟ್ಟಿ ಮಾಡಿಕೊಂಡಿರುತ್ತಾರೆ. ಆದ್ದರಿಂದಲೇ, ಈ 85% ಜಾಹೀರಾತು ಎಂಬ ಕಾನೂನಿನ ಉದ್ದೇಶಶುದ್ಧಿಯೇ ಅನುಮಾನಕ್ಕೊಳಗಾಗುವುದು. ಸರಕಾರ ಈ ವಿಷಯದಲ್ಲಿ ಪ್ರಾಮಾಣಿಕವಾಗಿದೆಯೇ ಅಥವಾ ಅಂತಾರಾಷ್ಟ್ರೀಯ ಒತ್ತಡಗಳನ್ನು ನಿಭಾಯಿಸುವುದಕ್ಕಾಗಿ ಹೀಗೆ ಆದೇಶ ಹೊರಡಿಸಿದೆಯೇ ಅಥವಾ ಇದು ಸರಕಾರ ಮತ್ತು ತಂಬಾಕು ಕಂಪೆನಿಗಳು ಜೊತೆಯಾಗಿಯೇ ಹೆಣೆದ ತಂತ್ರವೇ? ಸರಕಾರಕ್ಕೆ ತಂಬಾಕು ಕಂಪೆನಿಗಳೇ ಇಂಥದ್ದೊಂದು ಜಾಹೀರಾತು ಐಡಿಯಾವನ್ನು ಕೊಟ್ಟಿರಬಹುದೇ? ತಂಬಾಕು ಸಂಬಂಧಿ ರೋಗಗಳನ್ನು ತಡೆಗಟ್ಟುವುದಕ್ಕೆ ಸರಕಾರ ಗರಿಷ್ಠ ಕ್ರಮ ಕೈಗೊಂಡಿದೆ ಎಂದು ಜನರೆದುರು ವಾದಿಸುವುದಕ್ಕೆ ಪುರಾವೆಯಾಗಿ ಇಂಥದ್ದೊಂದು ಕ್ರಮ ಕೈಗೊಳ್ಳಲಾಗಿದೆಯೇ? ಈ ಮೂಲಕ ತಂಬಾಕು ಪದಾರ್ಥಗಳನ್ನು  ನಿಷೇಧಿಸುವಂತೆ ಆಗ್ರಹಿಸಿ ಜನರು ಬೀದಿಗಿಳಿಯದಂತೆ ತಡೆಯುವ ಮತ್ತು ಈ ಜಾಹೀರಾತನ್ನು ತೋರಿಸಿ ಅವರನ್ನು ಮಣಿಸುವ ತಂತ್ರ ಇದರ ಹಿಂದಿರಬಹುದೇ?
  ನಿಜವಾಗಿ, ಒಂದು ವ್ಯವಸ್ಥೆಗೆ ಜನರ ಆರೋಗ್ಯದ ಮೇಲೆ ಪ್ರಾಮಾಣಿಕ ಕಾಳಜಿ ಇದೆಯೆಂದಾದರೆ, ಮೊತ್ತಮೊದಲು
ಅನಾರೋಗ್ಯಕ್ಕೆ ಕಾರಣವಾಗುವ ವಸ್ತುಗಳ ಮೇಲೆ ನಿರ್ಬಂಧ ಹೇರುವ ಅಗತ್ಯವಿರುತ್ತದೆ. ಮದ್ಯವಾಗಲಿ, ತಂಬಾಕು ಉತ್ಪನ್ನಗಳಾಗಲಿ ಎಲ್ಲವೂ ಈ ವ್ಯಾಪ್ತಿಗೆ ಒಳಪಡುವ ವಸ್ತುಗಳು. ಆದರೆ ಸರಕಾರ ಇವುಗಳನ್ನು ಎಷ್ಟು ಮುದ್ದಿನಿಂದ ಸಾಕುತ್ತಿದೆಯೆಂದರೆ, ಅದು ಹೊರಡಿಸುವ ಸಕಲ ಆದೇಶಗಳೂ ಈ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಯನ್ನು ಒದಗಿಸುವಂತಿರುತ್ತದೆ. ಈ ಸರಕಾರಿ ಜಾಹೀರಾತೂ ಅದರಿಂದ ಹೊರತಲ್ಲ. ಬಾಹ್ಯನೋಟಕ್ಕೆ ಇದು ಸಕಾರಾತ್ಮಕವಾಗಿ ಕಂಡರೂ ಆಂತರಿಕವಾಗಿ ಅದರಲ್ಲಿ ಸ್ವರಕ್ಷಣೆಯ ನಕಾರಾತ್ಮಕತೆಯೇ ತುಂಬಿದೆ. ಗ್ರಾಹಕರ ಮೇಲೆ ಇಂಥ ಜಾಹೀರಾತುಗಳು ಯಾವ ಪರಿಣಾಮವನ್ನೂ ಬೀರಲಾರದು ಎಂಬುದು ಸ್ವತಃ ಸರಕಾರಕ್ಕೂ ಗೊತ್ತಿದೆ. ಕಂಪೆನಿಗಳಿಗೂ ಗೊತ್ತಿದೆ. ಒಂದು ರೀತಿಯಲ್ಲಿ, ಇದು ಜನಮರುಳು ಜಾಹೀರಾತು. ಸರಕಾರ ಮತ್ತು ತಂಬಾಕು ಉದ್ಯಮ ಜೊತೆ ಸೇರಿ ಆಡುವ ಚದುರಂಗದಾಟ. ಈ ಆಟದಲ್ಲಿ ಸರಕಾರ ಮತ್ತು ಕಂಪೆನಿಗಳು ಸದಾ ಗೆಲ್ಲುತ್ತಿರುತ್ತವೆ. ಬಡಪಾಯಿ ಕಾರ್ಮಿಕರು ಮತ್ತು ಗ್ರಾಹಕರು ಆರೋಗ್ಯ ಕೆಡಿಸಿಕೊಂಡು ಸಾಯುತ್ತಿರುತ್ತಾರೆ.

No comments:

Post a Comment