Saturday 18 December 2021

ಎಪಿಸಿಆರ್ ವರದಿ ಮತ್ತು ಕಟಕಟೆಯಲ್ಲಿರುವ ಕ್ರೈಸ್ತ, ಮುಸ್ಲಿಮರು




ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಅಥವಾ ಎಪಿಸಿಆರ್ ನೇತೃತ್ವದ ಸರಕಾರೇತರ ಸಂಸ್ಥೆಯು ಇನ್ನೆರಡು  ಸಂಸ್ಥೆಗಳ ಸಹಕಾರದೊಂದಿಗೆ ಸತ್ಯಶೋಧನಾ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ‘ಭಾರತದಲ್ಲಿ ದಾಳಿಗೊಳಗಾದ ಕ್ರೈಸ್ತರು ’  ಎಂಬುದು ವರದಿಯ ಶೀರ್ಷಿಕೆ. ಇದರಲ್ಲಿ ರಾಜ್ಯಕ್ಕೆ ಸಂಬಂಧಿಸಿ ಆರು ಚರ್ಚ್ ಗಳ  ಉಲ್ಲೇಖ ಇದೆ. ಕಳೆದ ಎರಡು ತಿಂಗಳಲ್ಲಿ 5  ಚರ್ಚ್ ಗಳ  ಮೇಲೆ ದಾಳಿ ನಡೆದಿರುವುದನ್ನು ಈ ವರದಿಯಲ್ಲಿ ಎತ್ತಿ ಹೇಳಲಾಗಿದೆ. ಜನವರಿ 3ರಂದು ಕೊಪ್ಪಳದಲ್ಲಿ, ಅಕ್ಟೋಬರ್  10ರಂದು ಉಡುಪಿ ಮತ್ತು ಉತ್ತರ ಕರ್ನಾಟಕದ ಹಳಿಯಾಳದಲ್ಲಿ, ನವೆಂಬರ್ 10ರಂದು ಬೆಳಗಾವಿಯಲ್ಲಿ, ನವೆಂಬರ್ 14ರಂದು  ಬೆಂಗಳೂರಿನ ರಾಜನಕುಂಟೆಯಲ್ಲಿ ಮತ್ತು ಇದೇ ದಿನ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಹಾಗೂ ನವೆಂಬರ್ 29ರಂದು ಹಾಸ ನದ ಬೇಲೂರಿನಲ್ಲಿ ಕ್ರೈಸ್ತ ವಿರೋಧಿ ಘಟನೆಗಳು ನಡೆದಿವೆ. ಕ್ರೈಸ್ತರ ಪ್ರಾರ್ಥನಾ ಚಟುವಟಿಕೆಗಳಿಗೆ ಅಡ್ಡಿಪಡಿಸುವ, ಪಾದ್ರಿಗಳ ಮೇಲೆ ಹಲ್ಲೆ  ನಡೆಸುವ ಹಾಗೂ ಚರ್ಚ್ ಗಳಿಗೆ  ಹಾನಿಯೆಸಗುವ ಪ್ರಕರಣಗಳು ನಡೆದಿರುವುದನ್ನು ವರದಿಯಲ್ಲಿ ಆಧಾರ ಸಮೇತ ಉಲ್ಲೇಖಿಸಲಾಗಿದೆ.  ಯುನೈಟೆಡ್ ಕ್ರಿಶ್ಚಿಯನ್ ಫೋರಂ ಮತ್ತು 
ಯುನೈಟೆಡ್ ಅಗೈನ್ಸ್ಟ್ ಹೇಟ್ ಎಂಬೆರಡು ಸಂಸ್ಥೆಗಳೂ ಈ ವರದಿಯನ್ನು ತಯಾರಿಸುವಲ್ಲಿ  ನೆರವಾಗಿವೆ. ಹಾಗಂತ,

ಎಪಿಸಿಆರ್ ನೇತೃತ್ವದಲ್ಲಿ ತಯಾರಿಸಲಾದ ಈ ವರದಿಯನ್ನು ಓದಿ ರಾಜ್ಯ ಸರಕಾರ ಇಲ್ಲವೇ ರಾಜ್ಯದ ನಾಗರಿಕರು ಬೆಚ್ಚಿ ಬೀಳುತ್ತಾರೆ  ಎಂದು ನಿರೀಕ್ಷಿಸುವ ಸನ್ನಿವೇಶವೇನೂ ಈಗಿಲ್ಲ. ಈಗಾಗಲೇ ಈ ದೇಶದ ಮುಸ್ಲಿಮರು ಇದಕ್ಕಿಂತಲೂ ಕ್ರೂರವಾದ ದೌರ್ಜನ್ಯ ಮತ್ತು  ಹಿಂಸೆಗಳಿಗೆ ನಿತ್ಯ ತುತ್ತಾಗುತ್ತಿರುವುದನ್ನು ಮಾಧ್ಯಮಗಳು ವರದಿ ಮಾಡುತ್ತಲೇ ಇವೆ. ಪ್ರತಿ ಶುಕ್ರವಾರ ಮುಸ್ಲಿಮರ ಜುಮಾ ನಮಾಜ್ ಗೆ  ಅಡ್ಡಿಪಡಿಸುವ ವರದಿ ಹರ್ಯಾಣದಿಂದ ವರದಿಯಾಗುತ್ತಿದೆ. ತೆರೆದ ಬಯಲಲ್ಲಿ ನಮಾಜ್  ಮಾಡುವುದಕ್ಕೆ ಸರಕಾರ ಅನುಮತಿಸಿರುವ  ಹೊರತಾಗಿಯೂ ಸಂಘಪರಿವಾರ ಅಡ್ಡಿಪಡಿಸುತ್ತಿದೆ. ಮುಸ್ಲಿಮರನ್ನು ಥಳಿಸುವ, ಅವರ ಗಡ್ಡ ಬೋಳಿಸುವ ಮತ್ತು ವಿವಿಧ ದೌರ್ಜನ್ಯ,  ಅವಮಾನಗಳಿಗೆ ತುತ್ತಾಗಿಸುವ ಕೃತ್ಯಗಳು ಅಲ್ಲಲ್ಲಿ ಪ್ರತಿನಿತ್ಯವೆಂಬಂತೆ  ನಡೆಯುತ್ತಿವೆ. ಮುಸ್ಲಿಮರನ್ನು ಗುರಿಯಾಗಿಸಿ ದ್ವೇಷಭಾಷಣ  ಮಾಡಲಾಗುತ್ತಿದೆ. ಮುಸ್ಲಿಮರ ವಿರುದ್ಧ ಹಿಂಸೆಗೆ ಅಕಾರಣವಾಗಿ ಪ್ರಚೋದಿಸಲಾಗುತ್ತಿದೆ. ಅಂದಹಾಗೆ,

ಮುಸ್ಲಿಮರ ಮೇಲೆ ನಡೆದಿರುವ ದೌರ್ಜನ್ಯಗಳ ಮೊತ್ತಕ್ಕೆ ಹೋಲಿಸಿದರೆ ಕ್ರೈಸ್ತರ ಮೇಲೆ ನಡೆದಿರುವ ದೌರ್ಜನ್ಯಗಳು ಕಡಿಮೆ. ಹಾಗಂತ,  ಇದಕ್ಕೆ ಕ್ರೈಸ್ತರ ಮೇಲೆ ಈ ದುಷ್ಕರ್ಮಿಗಳಿಗಿರುವ ಪ್ರೇಮಭಾವ ಕಾರಣ ಅಲ್ಲ. ಕ್ರೈಸ್ತರು ಮತ್ತು ಮುಸ್ಲಿಮರು ಈ ದುಷ್ಕರ್ಮಿಗಳ ಪಾಲಿಗೆ  ಸಮಾನ ಗುರಿ. ಈ ದುಷ್ಕರ್ಮಿಗಳು ಬೆಂಬಲಿಸುವ ಅಥವಾ ಈ ದುಷ್ಕರ್ಮಿಗಳನ್ನು ಸಾಕುವ ರಾಜಕೀಯ ಪಕ್ಷದ ಪಾಲಿಗೆ ಇವರೇ  ಆಮ್ಲಜನಕ. ಯಾವಾಗ ಈ ದುಷ್ಕರ್ಮಿಗಳೆಂಬ ಆಮ್ಲಜನಕದ ನಳಿಗೆಯ ಸಂಪರ್ಕವನ್ನು ಆ ರಾಜಕೀಯ ಪಕ್ಷದಿಂದ  ತಪ್ಪಿಸಿಬಿಡಲಾಗುತ್ತೋ ಆಗಲೇ ಆ ಪಕ್ಷದ ಆಯುಷ್ಯ ಕೊನೆಗೊಳ್ಳುತ್ತದೆ. ಇದು ಈ ದುಷ್ಕರ್ಮಿಗಳಿಗೂ ಗೊತ್ತು. ಆ ರಾಜಕೀಯ ಪಕ್ಷಕ್ಕೂ  ಗೊತ್ತು. ಆದ್ದರಿಂದ,

ಈ ದೌರ್ಜನ್ಯಕೋರರನ್ನು ಸದಾ ಬ್ಯುಝಿಯಾಗಿಡಬೇಕಾದ ಒತ್ತಡವೊಂದು ನಿರ್ದಿಷ್ಟ ರಾಜಕೀಯ ಪಕ್ಷದ ಮೇಲಿದೆ. ಪ್ರತಿದಿನ ಏ ನಾದರೊಂದು ಗುರಿಯನ್ನು ಈ ದೌರ್ಜನ್ಯಕೋರರಿಗೆ ನೀಡದಿದ್ದರೆ ತಮ್ಮ ಅಸ್ತಿತ್ವ ಕಷ್ಟಸಾಧ್ಯ ಎಂಬ ಅರಿವೂ ಅದಕ್ಕಿದೆ. ಆದ್ದರಿಂದಲೇ,  ಮುಸ್ಲಿಮ್ ದ್ವೇಷದ ಕಟ್ಟುಕತೆಗಳನ್ನು ತಯಾರಿಸಿ ಈ ಗುಂಪಿಗೆ ಹಂಚುತ್ತಾರೆ. ಎಂದೋ ಕಳೆದು ಹೋದ ರಾಜರ ಹೆಸರಿನಿಂದ ತೊಡಗಿ  ಈಗಿನ ಮುಸ್ಲಿಮರ ವರೆಗೆ ಸುಳ್ಳುಗಳನ್ನು ಪೋಣಿಸಿ ಸಮಾಜಕ್ಕೆ ಹಂಚುತ್ತಿರುತ್ತಾರೆ. ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು  ಇಂಥ ಅಸಂಖ್ಯ ಸುಳ್ಳುಗಳಲ್ಲಿ ಒಂದಾದರೆ ಇನ್ನೊಂದು, ಕ್ರೈಸ್ತರು ಮತಾಂತರ ಮಾಡುತ್ತಾರೆ ಎನ್ನುವುದು. ಮುಸ್ಲಿಮರನ್ನು ಗುರಿಯಾಗಿಸಿ  ಆಗಾಗ ಸಮಾನ ನಾಗರಿಕ ಸಂಹಿತೆಯ ಜಪ ಮಾಡುವ ಈ ರಾಜಕೀಯ ಪಕ್ಷವು ಕ್ರೈಸ್ತರನ್ನು ನೋಡಿಕೊಂಡು ‘ಮತಾಂತರ ನಿಷೇಧ  ಕಾಯ್ದೆ’ಯ ಬಗ್ಗೆ ಮಾತಾಡುತ್ತಿರುತ್ತದೆ. ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಬಿಜೆಪಿ ಸಂಸದರೊಬ್ಬರು ಸಮಾನ ನಾಗರಿಕ ಸಂಹಿತೆ  ಮಸೂದೆಯನ್ನು ಖಾಸಗಿಯಾಗಿ ಮಂಡಿಸಿದ್ದಾರೆ. ತನ್ನ ಬೆಂಬಲಿಗ ಪರಿವಾರವನ್ನು ಸಂತಸಪಡಿಸುವುದು ಮತ್ತು ಸಾರ್ವಜನಿಕವಾಗಿ ಹಿಂದೂ-ಮುಸ್ಲಿಮ್ ಚರ್ಚೆಯೊಂದಿಗೆ ಧಾರ್ಮಿಕ ವಿಭಜನೆಯನ್ನು ಊರ್ಜಿತದಲ್ಲಿಡುವುದೇ ಇದರ ಉದ್ದೇಶ. ಇದು ಸರಕಾರ  ಮಂಡಿಸಿದ ಮಸೂದೆ ಅಲ್ಲ ಮತ್ತು ಇಂಥ ಮಸೂದೆಯನ್ನು ಯಾರಿಗೆ ಬೇಕಾದರೂ ಮಂಡಿಸಬಹುದು ಎಂಬುದು ಮಂಡಿಸಿದವರಿಗೂ  ಗೊತ್ತು. ಸರ್ಕಾರಕ್ಕೂ ಗೊತ್ತು. ಆದರೆ, ಸರಕಾರ ಶೀಘ್ರವೇ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಿದೆ ಎಂದು  ತನ್ನ ಬೆಂಬಲಿಗ ಪರಿವಾರದ ಮೂಲಕ ಸಾರ್ವಜನಿಕವಾಗಿ ಆಡಿಕೊಳ್ಳುವುದಕ್ಕೆ ಆಧಾರವನ್ನು ಕೊಡುವುದು ಇದರ ಉದ್ದೇಶ.

ಸಿಎಎ ಕಾಯ್ದೆಯ ವ್ಯಾಪ್ತಿಯಿಂದ ಮುಸ್ಲಿಮರನ್ನು ಹೊರಗಿರಿಸಿ ಕ್ರೈಸ್ತರನ್ನು ಸೇರಿಸಿಕೊಳ್ಳಲಾಯಿತು. ಡಿಸೆಂಬರ್ 31, 2014ಕ್ಕಿಂತ  ಮೊದಲು ಪಾಕ್, ಬಾಂಗ್ಲಾ ಮತ್ತು ಅಫಘಾನ್‌ನಿಂದ ಭಾರತಕ್ಕೆ ಬಂದ ಮುಸ್ಲಿಮರಲ್ಲದ ಉಳಿದೆಲ್ಲ ಧರ್ಮೀಯರಿಗೂ ಪೌರತ್ವ ಕೊಡುವ  ಈ ಕಾಯ್ದೆಯನ್ನು ಸಂವಿಧಾನ ಪ್ರೇಮಿಗಳು ವಿರೋಧಿಸಬಹುದು ಎಂಬುದು ಆಡಳಿತಗಾರರಿಗೆ ತಿಳಿದಿಲ್ಲ ಎಂದು ಹೇಳುವ ಹಾಗಿಲ್ಲ. ಈ  ಕಾನೂನಿನ ವಿರುದ್ಧ ದೇಶದಲ್ಲಿ ಪ್ರತಿಭಟನೆ ಏಳಬೇಕು ಮತ್ತು ಆ ಇಡೀ ಪ್ರತಿಭಟನೆಯನ್ನು ಮುಸ್ಲಿಮ್ ಓಲೈಕೆಯಾಗಿ ಪ್ರತಿಬಿಂಬಿಸಬೇಕು  ಎಂಬುದು ಆಡಳಿತಗಾರರ ಹುನ್ನಾರವಾಗಿರಬಹುದು. ಇದೀಗ ರಾಜ್ಯ ಸರ್ಕಾರ ತರಲು ಹೊರಟಿರುವ ಮತಾಂತರ ನಿಷೇಧ  ಕಾಯ್ದೆಯೂ ಇಂಥದ್ದೇ  ಒಂದು ಹುನ್ನಾರ. ಈ ಕಾಯ್ದೆಯನ್ನು ತರುತ್ತೇವೆ ಎಂದು ಹೇಳುವ ಮೊದಲು ರಾಜ್ಯದ ಹಲವು ಕಡೆ ಕ್ರೈಸ್ತ  ಪ್ರಾರ್ಥನಾ ಮಂದಿರಗಳ ಮೇಲೆ ಮತ್ತು ಪಾದ್ರಿಗಳ ಮೇಲೆ ದಾಳಿ ನಡೆಸಲಾಯಿತು. ಶಾಸಕ ಗೂಳಿಹಟ್ಟಿ ಶೇಖರ್ ಅವರು ವಿಧಾ ನಸಭೆಯಲ್ಲಿ ತನ್ನ ತಾಯಿಯ ಮತಾಂತರವನ್ನು ಹೇಳಿಕೊಂಡರು. ಅದರ ಬೆನ್ನಿಗೇ ಕ್ರೈಸ್ತರು ಮತಾಂತರ ಮಾಡುತ್ತಿದ್ದಾರೆ ಎಂಬ  ಹೇಳಿಕೆಗಳನ್ನು ಹಲವು ನಾಯಕರು ಬೆನ್ನುಬೆನ್ನಿಗೇ ನೀಡತೊಡಗಿದರು. ಆ ಮೂಲಕ ರಾಜ್ಯದ ಗಮನವನ್ನು ಮುಸ್ಲಿಮರಿಂದ ಕ್ರೈಸ್ತರ  ಕಡೆಗೆ ತಿರುಗಿಸುವ ಪ್ರಯತ್ನ ನಡೆಸಲಾಯಿತು. ಹಾಗಂತ,

ಇದು ಮೊದಲ ಘಟನೆ ಅಲ್ಲ. ಒಂದೋ ಮುಸ್ಲಿಮರು ಅಥವಾ ಕ್ರೈಸ್ತರು ರಾಜ್ಯದಲ್ಲಿ ಸದಾ ದೂಷಣೆಗೆ ಒಳಗಾಗುತ್ತಿರಬೇಕು ಮತ್ತು  ಅವರನ್ನು ಕಟಕಟೆಯಲ್ಲಿ ನಿಲ್ಲಿಸಿ ದಂಡಿಸುತ್ತಿರಬೇಕು ಎಂದು ಆಡಳಿತದಲ್ಲಿರುವವರು ತೀರ್ಮಾನಿಸಿದ್ದಾರೆ. ಹಾಗೆ ಮಾಡದಿದ್ದರೆ ತಮ್ಮ  ಬೆಂಬಲಿಗ ಪರಿವಾರದಲ್ಲಿ ಉತ್ಸಾಹ ಕುಗ್ಗುತ್ತದೆ. ಹಾಗೇನಾದರೂ ಆದರೆ ಸರ್ಕಾರದ ಆಡಳಿತ ವೈಫಲ್ಯವನ್ನು ಜನರು ಚರ್ಚಿಸುವುದಕ್ಕೆ  ಪ್ರಾರಂಭಿಸುತ್ತಾರೆ. ಅಂಥ ಬೆಳವಣಿಗೆಯೇನಾದರೂ ಯಶಸ್ವಿಯಾಗಿಬಿಟ್ಟರೆ ಹಿಂದೂ-ಮುಸ್ಲಿಮ್-ಕ್ರೈಸ್ತರೆಲ್ಲ ಒಟ್ಟಾಗುವ ಸನ್ನಿವೇಶ  ನಿರ್ಮಾಣವಾಗಬಹುದು ಮತ್ತು ಅದು ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಬಹುದು ಎಂಬ ಭೀತಿ ಸರ್ಕಾರಕ್ಕಿದೆ. ನಿಜವಾಗಿ,

ಎಪಿಸಿಆರ್ ಬಿಡುಗಡೆಗೊಳಿಸಿರುವ ವರದಿಯು ಈ ದೇಶದ ನಾಗರಿಕ ಸಮೂಹವೊಂದಕ್ಕೆ ಸಂಬಂಧಿಸಿದ್ದು. ಆದ್ದರಿಂದ ಅದನ್ನು ಕ್ರೆÊಸ್ತ  ಸಮುದಾಯಕ್ಕೆ ಸಂಬಂಧಿಸಿದ ವರದಿ ಎಂದು ಪ್ರತ್ಯೇಕಿಸುವುದು ಮತ್ತು ಅದನ್ನು ಕ್ರೈಸ್ತರು ನೋಡಿಕೊಳ್ಳಲಿ ಎಂದು ಉಳಿದವರು ಸುಮ್ಮ ನಿದ್ದು ಬಿಡುವುದು ಅತ್ಯಂತ ಅಪಾಯಕಾರಿ. ಈ ದೇಶದ ನಾಗರಿಕರ ಸಮಸ್ಯೆಗಳು ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬ ಹಣೆಪಟ್ಟಿಯನ್ನು  ಅಂಟಿಸಿಕೊಂಡು ಗುರುತಿಗೀಡಾಗಬೇಕು ಎಂಬುದು ಈ ಸಮಸ್ಯೆಗೆ ಕಾರಣರಾದವರ ಬಯಕೆ. ಅವರ ಯಶಸ್ಸು ಇರುವುದೇ ಇದರಲ್ಲಿ.  ಯಾವಾಗ ಕ್ರೈಸ್ತರ ಮೇಲಿನ ದಾಳಿಗಳನ್ನು ಕ್ರೈಸ್ತರಿಗೆ ಮತ್ತು ಮುಸ್ಲಿಮರ ಮೇಲಿನ ದಾಳಿಗಳನ್ನು ಮುಸ್ಲಿಮರಿಗೆ ನಾವು  ಸೀಮಿತಗೊಳಿಸಿಬಿಡುತ್ತೇವೋ ಅಲ್ಲಿವರೆಗೆ ಆ ದೌರ್ಜನ್ಯಕೋರರು ಯಶಸ್ವಿಯಾಗುತ್ತಲೇ ಹೋಗುತ್ತಾರೆ. ಆದ್ದರಿಂದ ಎಪಿಸಿಆರ್‌ನ ವರ ದಿಯು 6 ಕೋಟಿ ಕನ್ನಡಿಗರ ಧ್ವನಿಯಾಗಬೇಕು. ತಮ್ಮ ಮೇಲೆ ನಡೆದ ದೌರ್ಜನ್ಯ ಎಂಬಂತೆ  ಅವರೆಲ್ಲ ಅಂದುಕೊಳ್ಳಬೇಕು ಮತ್ತು  ಸರ್ಕಾರದ ವಿಭಜಿಸಿ ಆಳುವ ತಂತ್ರವನ್ನು ಸೋಲಿಸಬೇಕು.

ನಾಗಬನ: ದುರ್ಜನರಲ್ಲಿರುವ ಸೌಹಾರ್ದ ಸಜ್ಜನರಲ್ಲೇಕಿಲ್ಲ?




ಅಕ್ಷರ ಸಂತ ಹಾಜಬ್ಬ ಮಂಗಳೂರಿನಿಂದ  ದೆಹಲಿಗೆ ತೆರಳಿ ಪದ್ಮಶ್ರೀ ಪ್ರಶಸ್ತಿಯನ್ನು ಪಡಕೊಂಡುದುದಕ್ಕೆ ರೋಮಾಂಚನಗೊಂಡು   ಸಂಭ್ರಮಿಸಿದ ದಕ್ಷಿಣ ಕನ್ನಡಕ್ಕೆ, ಈ ಖುಷಿಯ ಬಳಿಕದ ದಿನಗಳೇನೂ ನೆಮ್ಮದಿದಾಯಕವಾಗಿರಲಿಲ್ಲ. ಹಾಗಂತ,

ಹಾಜಬ್ಬ ದೆಹಲಿಗೆ ಹೋಗುವುದಕ್ಕಿಂತ ಮೊದಲೂ ಈ ಜಿಲ್ಲೆಯ ಸ್ಥಿತಿಯೇನೂ ಉತ್ತಮವಾಗಿರಲಿಲ್ಲ. ಒಂದು ತಿಂಗಳ ಒಳಗೆ ಒಂದು  ಡಝನ್‌ನಷ್ಟು ಅನೈತಿಕ ಪೊಲೀಸ್‌ಗಿರಿಗೆ ಸಾಕ್ಷ್ಯ  ವಹಿಸಿದ ಈ ಜಿಲ್ಲೆ, ಹಾಜಬ್ಬ ಪದ್ಮಶ್ರೀ ಪಡೆದ ಬಳಿಕ ನಡೆದ ನಾಗಬನ ಧ್ವಂಸ ಘಟನೆಯು ಹಾಜಬ್ಬರನ್ನು ಮರೆತು ಈ ಜಿಲ್ಲೆ ಆತಂಕವನ್ನು ಹೊದ್ದುಕೊಳ್ಳುವಂತೆ ಮಾಡಿತು. ಜಿಲ್ಲೆಯ ಕೂಳೂರಿನಲ್ಲಿ ನಾಗಬನ  ಧ್ವಂಸಗೊಳಿಸಲಾದರೆ, ಕೋಡಿಕಲ್ ಎಂಬಲ್ಲಿ ನಾಗಬನದ ಕಲ್ಲು ಕಿತ್ತೆಸೆದ ಪ್ರಕರಣ ನಡೆಯಿತು. ಈ ಎರಡೂ ಘಟನೆಗಳು ಹಿಂದೂ  ಸಮುದಾಯಕ್ಕೆ ಸಂಬಂಧಿಸಿದವುಗಳಾಗಿರುವುದರಿಂದ  ಮುಸ್ಲಿಮ್ ಸಮುದಾಯವನ್ನು ಸಂದೇಹಿಸುವ ಮತ್ತು ಪರೋಕ್ಷ  ವಾಗ್ದಾಳಿಗಳನ್ನು  ನಡೆಸುವ ರೂಪದಲ್ಲೇ  ಹೇಳಿಕೆಗಳು ಬರತೊಡಗಿದುವು. ಘಟನೆಯನ್ನು ಖಂಡಿಸಿ ಸ್ಥಳೀಯವಾಗಿ ಬಂದ್ ಕೂಡಾ ನಡೆಯಿತು. ಪ್ರತಿಭಟನೆಗಳೂ ನಡೆದುವು. ಇದೀಗ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ವಿಶೇಷ ಏನೆಂದರೆ,

ಬಂಧಿತರಲ್ಲಿ ನಾಲ್ಕು ಮಂದಿ ಹಿಂದೂಗಳಾದರೆ ಮೂವರು ಮುಸ್ಲಿಮರು ಮತ್ತು ಓರ್ವ ಕ್ರೈಸ್ತ ಸಮುದಾಯವನ್ನು ಪ್ರತಿನಿಧಿಸಿದ್ದಾನೆ.  ಅಂದಹಾಗೆ, ಅಪರಾಧ ಕ್ಷೇತ್ರದಲ್ಲಿ ಸಕ್ರಿಯವಾಗಿರುವವರ ಈ ಧಾರ್ಮಿಕ ಸೌಹಾರ್ದವನ್ನು ಅನೇಕರು ವ್ಯಂಗ್ಯದಿಂದ ಇರಿದರು. ಇದಾಗಿ  ಮರ‍್ನಾಲ್ಕು ದಿನಗಳ ಬಳಿಕ 9 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದರು. ಇವರೆಲ್ಲರ ಮೇಲೆ ರ‍್ಯಾಗಿಂಗ್ ಆರೋಪವಿತ್ತು.  ಇಬ್ಬರು ಕಿರಿಯ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಲವಂತವಾಗಿ ತಮ್ಮ ಕೊಠಡಿಗೆ ಕರೆದೊಯ್ದು ಅವರಲ್ಲಿ ಹಾಡು ಹಾಡಿಸಿ, ಗಡ್ಡ  ಬೋಳಿಸಿ, ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿದ ಆರೋಪ ಇವರ ಮೇಲಿದೆ. ಇಲ್ಲೂ ನಾಗಬನ ಧ್ವಂಸ ಘಟನೆಯಲ್ಲಿ ಮೆರೆದ  ಅದೇ ಸೌಹಾರ್ದವಿದೆ. ಬಂಧಿತರಲ್ಲಿ ಮುಸ್ಲಿಮರೂ ಇದ್ದಾರೆ, ಕ್ರೈಸ್ತ ಮತ್ತು ಹಿಂದೂಗಳೂ ಇದ್ದಾರೆ. ನಿಜವಾಗಿ,

ಕೆಡುಕನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿ, ಆರೋಪ-ಪ್ರತ್ಯಾರೋಪ ಹೊರಿಸುವ ಸರ್ವರೂ ಆತ್ಮಾವಲೋಕನ ನಡೆಸಬೇಕಾದ  ಘಟನೆಗಳಿವು. ನಾಗಬನ ಹಿಂದೂಗಳ ಪಾಲಿಗೆ ಕಾರಣಿಕದ ಸ್ಥಳಗಳು. ಆದರೆ ಇವನ್ನು ಧ್ವಂಸಗೊಳಿಸುವಲ್ಲಿ ಹಿಂದೂ-ಮುಸ್ಲಿಮ್-ಕ್ರೈಸ್ತ  ನಾಮಧೇಯವುಳ್ಳ ಎಲ್ಲರೂ ಸೇರಿದ್ದಾರೆ. ರ‍್ಯಾಗಿಂಗ್‌ಗೆ ಒಳಗಾಗಿರುವುದು ಇಬ್ಬರು ಹಿಂದೂ ವಿದ್ಯಾರ್ಥಿಗಳು. ಆದರೆ ಇವರ ಮೇಲೆ  ರ‍್ಯಾಗಿಂಗ್ ನಡೆಸಿರುವ ಆರೋಪಿಗಳಲ್ಲಿ ಹಿಂದೂ-ಮುಸ್ಲಿಮ್-ಕ್ರೈಸ್ತ ಎಲ್ಲರೂ ಇದ್ದಾರೆ. ಒಂದು ರೀತಿಯಲ್ಲಿ,

ರೊಚ್ಚಿಗೇಳುವ ಸಮಾಜಕ್ಕೆ ಇದೊಂದು ಪಾಠ. ನಾಗಬನ ಧ್ವಂಸಗೊಳಿಸಿದ ಮತ್ತು ರ‍್ಯಾಗಿಂಗ್ ನಡೆಸಿದ ಅಷ್ಟೂ ಆರೋಪಿಗಳಲ್ಲಿ ಒಂದು  ಸಮಾನ ಅಂಶವಿದೆ. ಅದುವೇ ಮಾದಕ ವಸ್ತು ಸೇವನೆ ಮತ್ತು ಮದ್ಯಪಾನ. ಆದರೆ ಮಸೀದಿ ಮೇಲೆ ದಾಳಿಯಾದಾಗ ಹಿಂದೂಗಳ ಬಗ್ಗೆ  ಅನುಮಾನ ಪಡುವ ಮತ್ತು ಮಂದಿರದ ಮೇಲೆ ದಾಳಿಯಾದಾಗ ಮುಸ್ಲಿಮರ ಬಗ್ಗೆ ಸಂದೇಹ ಪಡುವ ಸಮಾಜ, ಇಷ್ಟೇ ತೀವ್ರತೆಯಿಂದ  ಗಾಂಜಾ ಮತ್ತು ಮದ್ಯದ ವಿರುದ್ಧ ಚಳವಳಿ ನಡೆಸುವುದಕ್ಕೆ ಮುಂದಾಗುವುದೇ ಇಲ್ಲ. ಅಂದಹಾಗೆ, ಈ ಎರಡು ಪ್ರಕರಣಗಳಿಗೆ ಸಂಬAಧಿಸಿ  ಮಾತ್ರವೇ ಗಾಂಜಾ ಮತ್ತು ಮದ್ಯವು ಅಪರಾಧಿ ಸ್ಥಾನದಲ್ಲಿ ನಿಂತಿರುವುದಲ್ಲ. ಈ ದೇಶದಲ್ಲಿ ನಡೆಯುವ ಹೆಚ್ಚಿನೆಲ್ಲ ಅತ್ಯಾಚಾರ, ಹತ್ಯೆ,  ಧರ್ಮದ್ವೇಷದ ಕೃತ್ಯಗಳ ಹಿಂದಿನ ಬಲುದೊಡ್ಡ ಚಾಲಕ ಶಕ್ತಿ ಈ ಮದ್ಯ ಮತ್ತು ಮಾದಕ ವಸ್ತುಗಳೇ. ಅತ್ಯಾಚಾರ ಪ್ರಕರಣಗಳಲ್ಲಂತೂ  ಸಾಲು ಸಾಲಾಗಿ ಈ ಸತ್ಯ ಮತ್ತೆ ಮತ್ತೆ ಸಾಬೀತುಗೊಳ್ಳುತ್ತಲೇ ಇದೆ. ದೇಶದಲ್ಲಿ ನಿರ್ಭಯ ಪ್ರಕರಣದಿಂದ ಹಿಡಿದು ಹೈದರಾಬಾದ್‌ನ ದಿಶಾಳ ವರೆಗೆ ಮತ್ತು ಮೈಸೂರಿನ ಚಾಮುಂಡೇಶ್ವರಿ ಅತ್ಯಾಚಾರ ಪ್ರಕರಣದಿಂದ ಹಿಡಿದು ಮಂಗಳೂರಿನ ಉಳಾಯಿಬೆಟ್ಟುವಿನಲ್ಲಿ 8  ವರ್ಷದ ಬಾಲೆಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿರುವಲ್ಲಿ ವರೆಗೆ ಮದ್ಯವೇ ಪ್ರಧಾನ ಆರೋಪಿ. ಅಷ್ಟಕ್ಕೂ,

ತನಗೆ ಸಂಬಂಧವೇ ಇಲ್ಲದ, ಪರಿಚಿತರೇ ಅಲ್ಲದ ಮತ್ತು ಯಾವ ದ್ವೇಷವನ್ನೂ ಹೊಂದಿಲ್ಲದ ವ್ಯಕ್ತಿಯನ್ನು ಇನ್ನೋರ್ವ ವ್ಯಕ್ತಿ ವಿನಾ  ಕಾರಣ ಹತ್ಯೆ ಮಾಡುವುದಕ್ಕೆ ಏನು ಪ್ರಚೋದನೆ? ಅಂಥದ್ದೊಂದು ಧೈರ್ಯ ಅವರಲ್ಲಿ ಮೂಡುವುದಾದರೂ ಹೇಗೆ? ಎಂಟೋ ಐದೋ  ಮೂರೋ ವರ್ಷದ ಬಾಲೆಯನ್ನು ಅತ್ಯಾಚಾರ ಮಾಡಿ ಕೊಲೆಗೈಯಲು ಸಹಜ ಸ್ಥಿತಿಯಲ್ಲಿರುವ ಓರ್ವ ವ್ಯಕ್ತಿಗೆ ಸಾಧ್ಯವೇ? ದೈಹಿಕ  ಕಾಮನೆ ಅರಳುವುದಕ್ಕೂ ಒಂದು ಕಾರಣ ಇದೆ. ಯಾವ ದೃಷ್ಟಿಕೋನದಿಂದ ವಿಶ್ಲೇಷಿಸಿದರೂ ಮಕ್ಕಳು ಈ ಕಾರಣದ ಚೌಕಟ್ಟಿನೊಳಗೆ  ಬರುವುದಕ್ಕೆ ಸಾಧ್ಯವೇ ಇಲ್ಲ. ಹಾಗಿದ್ದರೂ ಹಸುಳೆಗಳ ಮೇಲೆ ಅತ್ಯಾಚಾರ ಏಕಾಗುತ್ತದೆ? ಎಲ್ಲೋ  ನಡೆದುಕೊಂಡು ಹೋಗುತ್ತಿರುವ  ವ್ಯಕ್ತಿಯನ್ನು ಅವರಿಗೆ ಪರಿಚಯವೇ ಇಲ್ಲದ ವ್ಯಕ್ತಿಗಳೇಕೆ ಥಳಿಸುತ್ತಾರೆ? ಅವರಿಬ್ಬರ ಧರ್ಮ ಬೇರೆ ಬೇರೆಯಾಗಿರುವುದು ಇದಕ್ಕೆ  ಕಾರಣವೇ? ಹಸುಳೆಗಳ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿಯೂ ಇಂಥದ್ದೇ  ಪ್ರಶ್ನೆಗಳಿವೆ. ಲೈಂಗಿಕ ಆಕರ್ಷಣೆಗೆ ಈಡು ಮಾಡುವ  ಯಾವ ದೈಹಿಕ ಬೆಳವಣಿಗೆಗಳು ಮಕ್ಕಳಲ್ಲಿದ್ದುವು? ಆಟವಾಡುವ ಹಸುಳೆಗಳ ಮೇಲಿನ ಅತ್ಯಾಚಾರಕ್ಕೆ ಏನು ಕಾರಣ? ನಿಜವಾಗಿ,

ಅಪರಾಧಗಳನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದಕ್ಕಿಂತ ಮೊದಲು ನಾವೆಲ್ಲರೂ ಗಂಭೀರವಾಗಿ ಆಲೋಚಿಸಬೇಕಾದ  ಸಂಗತಿಗಳಿವು. ನಿಜವಾದ ಧರ್ಮಾನುಯಾಯಿ ಕೆಡುಕಿನಲ್ಲಿ ಭಾಗಿಯಾಗಲಾರ. ನಾಗಬನವಾಗಲಿ, ಮಂದಿರವಾಗಲಿ ಅಥವಾ ಹಿಂದೂ  ಆಚಾರ-ಸಂಪ್ರದಾಯಗಳಾಗಲಿ, ಓರ್ವ ಮುಸ್ಲಿಮನ ಪಾಲಿಗೆ ಗೌರವಾರ್ಹವೇ ಹೊರತು ಇನ್ನಾವುದೂ ಆಗಿರಲು ಸಾಧ್ಯವೇ ಇಲ್ಲ.  ಮಸೀದಿ, ಚರ್ಚ್ಗಳ ಕುರಿತು ಹಿಂದೂಗಳ ನಿಲುವೂ ಇದಕ್ಕಿಂತ ಭಿನ್ನವಲ್ಲ. ಹತ್ಯೆ, ಅತ್ಯಾಚಾರ, ಸುಳ್ಳು ಪ್ರಚಾರ, ದ್ವೇಷದ ಹಂಚುವಿಕೆ

ಇತ್ಯಾದಿಗಳೆಲ್ಲ ಸರ್ವರ ಪಾಲಿಗೂ ಕೆಡುಕುಗಳೇ ಹೊರತು ಒಳಿತುಗಳಲ್ಲ. ಇಷ್ಟಿದ್ದೂ ಮಂದಿರ, ಮಸೀದಿ, ಇಗರ್ಜಿಗಳು ಅಪವಿತ್ರಕ್ಕೋ  ಹಾನಿಗೋ ಒಳಗಾಗುತ್ತಲೇ ಇರುತ್ತದೆ. ಅತ್ಯಾಚಾರಗಳೂ ನಡೆಯುತ್ತಲಿರುತ್ತದೆ. ಧರ್ಮದ ಹೆಸರಿನಲ್ಲಿ ಹಗೆ, ಹಲ್ಲೆ, ಹತ್ಯೆಗಳನ್ನೂ  ನಡೆಸಲಾಗುತ್ತದೆ. ಹೀಗೆ ದುಷ್ಕೃತ್ಯಗಳಲ್ಲಿ ಭಾಗಿಯಾಗುವವರು ಮನುಷ್ಯರೇ ಆಗಿರುವುದರಿಂದ ಮತ್ತು ಅವರಿಗೊಂದು ಹೆಸರಿರುವುದರಿಂದ  ತಕ್ಷಣಕ್ಕೆ ಆ ಹೆಸರು ಯಾವ ಧರ್ಮದ ಜೊತೆ ಗುರುತಿಸಿಕೊಂಡಿರುತ್ತೋ ಆ ಧರ್ಮವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ.  ಅಸಲಿಗೆ ಆ ಧರ್ಮಕ್ಕೂ ಆತನ ಹೆಸರಿಗೂ ಹೆಸರಿನ ಹೊರತಾಗಿ ಯಾವ ಸಂಬಂಧವೂ ಇರುವುದಿಲ್ಲ. ಹೆಚ್ಚಿನ ಬಾರಿ ಮಾದಕ ವಸ್ತು  ಮತ್ತು ಮದ್ಯದ ಜೊತೆಗೆ ಅವರಿಗಿರುವಷ್ಟು ನಂಟು ಅವರು ಗುರುತಿಸಿಕೊಂಡಿರುವ ಧರ್ಮದ ಜೊತೆಗಿರುವುದಿಲ್ಲ. ಒಂದುವೇಳೆ,

ಮದ್ಯವನ್ನು ಅವರಿಗೆ ಅಲಭ್ಯಗೊಳಿಸಿದರೆ, ಅವರು ಅಂಥ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಯೇ ಇಲ್ಲ. ಆದರೆ, ಮಂದಿರ,  ಮಸೀದಿ, ಚರ್ಚ್ಗಳ ಕುರಿತಂತೆ ಅಪಾರ ಕಾಳಜಿ ತೋರುವ ಸಮಾಜವು ಅಪರಾಧ ಕೃತ್ಯಗಳಿಗೆ ಮೂಲ ಪ್ರೇರಣೆಯಾಗಿರುವ ಈ ಮದ್ಯ  ಮತ್ತು ಮಾದಕ ವಸ್ತುಗಳ ಕುರಿತಂತೆ ಆತಂಕ ಪಡುವುದಿಲ್ಲ. ಒಂದುವೇಳೆ ಆರೋಪಿಯ ಹೆಸರನ್ನು ನೋಡಿಕೊಂಡು ಅಪರಾಧಗಳನ್ನು  ಹಿಂದೂ-ಮುಸ್ಲಿಮ್ ಖಾತೆಗೆ ವರ್ಗಾಯಿಸುವುದಕ್ಕಿಂತ ಮದ್ಯ ಮತ್ತು ಮಾದಕ ವಸ್ತು ಎಂಬ ಏಕಖಾತೆಗೆ ವರ್ಗಾಯಿಸತೊಡಗಿದರೆ ಫ ಲಿತಾಂಶ ಇದಕ್ಕಿಂತ ಖಂಡಿತ ಉತ್ತಮವಾಗಬಹುದು. ಎಲ್ಲರೂ ತಮ್ಮ ಪಾಲಿನ ಸಮಾನ ಶತ್ರುವಾಗಿ ಮದ್ಯ ಮತ್ತು ಮಾದಕ ವಸ್ತುಗಳನ್ನು  ಯಾವಾಗ ಪರಿಗಣಿಸುತ್ತಾರೋ ಆಗ ಅಪರಾಧ ಕೃತ್ಯಗಳಲ್ಲಿ ಖಂಡಿತ ಇಳಿಮುಖವಾಗಲು ಪ್ರಾರಂಭವಾಗುತ್ತದೆ. ಅಮಲು ಪದಾರ್ಥಗಳು  ಅಲಭ್ಯವಾಗುವಂತಹ ಗ್ರಾಮ, ಪಟ್ಟಣ, ಜಿಲ್ಲೆಗಳನ್ನು ಕಟ್ಟುವ ಪ್ರಯತ್ನ ಸಾಗಿದರೆ ನಿಧಾನಕ್ಕೆ ಆರೋಗ್ಯಪೂರ್ಣ ಸಮಾಜ ತನ್ನಿಂತಾನೇ  ನಿರ್ಮಾಣವಾಗಬಲ್ಲುದು.
ಈಗ ಅಪರಾಧಿಗಳ ನಡುವೆ ಧಾರ್ಮಿಕ ಸೌಹಾರ್ದವಿದೆ. ಎಲ್ಲಿವರೆಗೆ ಅಮಲು ಪದಾರ್ಥಗಳು ಲಭ್ಯವಿರುತ್ತದೋ ಅಲ್ಲಿವರೆಗೆ ಈ  ಸೌಹಾರ್ದಕ್ಕೆ ಯಾವ ಅಡ್ಡಿಯೂ ಎದುರಾಗಲಾರದು. ಯಾವಾಗ ಇವು ಅಲಭ್ಯಗೊಳ್ಳುತ್ತೋ ಆಗ ಅವರ ನಡುವಿನ ಸೌಹಾರ್ದಕ್ಕೆ ಭಂಗ  ಬರಬಹುದಲ್ಲದೇ, ಸಾಮಾಜಿಕವಾಗಿ ಧಾರ್ಮಿಕ ಸೌಹಾರ್ದ ನೆಲೆಗೊಳ್ಳಬಹುದು.

 ನಾಗಬನ ಮತ್ತು ರ‍್ಯಾಗಿಂಗ್ ಪ್ರಕರಣಗಳು ಸ್ಪಷ್ಟಪಡಿಸುವುದು ಇದನ್ನೇ.

Tuesday 30 November 2021

ಬೇಲಿಯೇ ಎದ್ದು ಹೊಲ ಮೇಯ್ದರೆ ನಂಬುವುದಾದರೂ ಯಾರನ್ನು?




ಪತ್ರಕರ್ತರ ಮೇಲೆ ಆಗಾಗ ಕೇಳಿ ಬರುತ್ತಿರುವ ಕೋಮು ಪಕ್ಷಪಾತದ ಆರೋಪಗಳಲ್ಲಿ ಹುರುಳಿದೆ ಮತ್ತು ಪತ್ರಕರ್ತ ಅಪ್ಪಟ  ಸಮಾಜದ್ರೋಹಿಯೂ ಆಗಬಲ್ಲ ಎಂಬುದನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್  ಸಾಬೀತುಪಡಿಸಿದ್ದಾರೆ. ಇಲ್ಲಿನ ಶನಿವಾರಸಂತೆ ಗ್ರಾಮದಲ್ಲಿ ಮುಸ್ಲಿಮ್ ಮಹಿಳೆಯರು ಪ್ರತಿಭಟನೆಯ ವೇಳೆ ಪೊಲೀಸ್ ಠಾಣೆಯ  ಮುಂದೆ ಕೂಗಿದ ‘ಅಂಬೇಡ್ಕರ್ ಝಿಂದಾಬಾದ್’ ಘೋಷಣೆಯನ್ನು ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚಿ ವೀಡಿಯೋ  ಹಂಚಿಕೊಂಡು  ಕೊಡಗು ಜಿಲ್ಲೆಯನ್ನು ಉದ್ವಿಘ್ನತೆಗೆ ತಳ್ಳಿದ ಮೂವರು ಆರೋಪಿಗಳಲ್ಲಿ ಈತನೂ ಓರ್ವನಾಗಿದ್ದಾನೆ. ತೀರಾ  ಖಾಸಗಿಯಾದ ಘರ್ಷಣೆ ಪ್ರಕರಣವೊಂದಕ್ಕೆ ಸಂಘಪರಿವಾರವು ಹಿಂದೂ-ಮುಸ್ಲಿಮ್ ಬಣ್ಣವನ್ನು ಕೊಟ್ಟಿದೆ. ಸುಖಾಂತ್ಯಗೊಂಡಿದ್ದ  ಪ್ರಕರಣವನ್ನು ರಾಜಕೀಯ ಒತ್ತಡದ ಮೇರೆಗೆ ಪೊಲೀಸರು ಮರು ಜೀವಂತಗೊಳಿಸಿದ್ದಾರೆ. ಟಿಂಬರ್ ಉದ್ಯಮಿ ವಝೀರ್ ಪಾಶಾ  ಕುಟುಂಬದ ಸದಸ್ಯರನ್ನು ಬಂಧಿಸಿದ್ದಾರೆ. ಕೇಸು ಜಡಿದಿದ್ದಾರೆ. ಅದೇವೇಳೆ,


ವಝೀರ್ ಪಾಶಾ ಕಡೆಯಿಂದ ನೀಡಲಾದ ದೂರನ್ನು ತಕ್ಷಣಕ್ಕೆ ಸ್ವೀಕರಿಸಲು ಪೊಲೀಸ್ ಇಲಾಖೆ ಸಿದ್ಧವಾಗಿಲ್ಲ. ಈ ಬಗ್ಗೆ 
ಎಸ್ಪಿ ಕಚೇರಿಗೆ  ದೂರು ನೀಡಿ, ಬಳಿಕ ಮುಸ್ಲಿಮ್ ಮಹಿಳೆಯರು ಅನ್ಯಾಯದ ವಿರುದ್ಧ ಠಾಣೆಯ ಎದುರು ಪ್ರತಿಭಟಿಸಿದ್ದಾರೆ. ಆ ಸಂದರ್ಭದಲ್ಲಿ  ಅಂಬೇಡ್ಕರ್ ಝಿಂದಾಬಾದ್ ಎಂದೂ ಕೂಗಿದ್ದಾರೆ. ಇಡೀ ಪ್ರತಿಭಟನೆ ಪೊಲೀಸರ ಕ್ಯಾಮರಾದಲ್ಲೂ ಸೆರೆಯಾಗಿದೆ. ಇದಾದ ಬಳಿಕ  ಇವರ ದೂರನ್ನೂ ಸ್ವೀಕರಿಸಲಾಗಿದೆ. ಈ ನಡುವೆ ಪತ್ರಕರ್ತ ಹರೀಶ್, ಶನಿವಾರ ಸಂತೆ ಗ್ರಾಮ ಪಂಚಾಯತ್ ಸದಸ್ಯ ಮತ್ತು ಸಂಘ ಪರಿವಾರ ಕಾರ್ಯಕರ್ತ ರಘು ಮತ್ತು ಗಿರೀಶ್ ಎಂಬವರು ಸೇರಿ ಗಂಭೀರ ಸಂಚೊoದನ್ನು ಹೆಣೆದಿದ್ದಾರೆ. ಅಂಬೇಡ್ಕರ್  ಝಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ್ದಾರೆ.  ಇದರಿಂದಾಗಿ ಸೋಮವಾರಪೇಟೆ ಉದ್ವಿಘ್ನಗೊಂಡಿದೆ. ನವೆಂಬರ್ 15ರಂದು ಶನಿವಾರಸಂತೆ ಬಂದ್‌ಗೂ ಸಂಘಪರಿವಾರ ಕರೆ ನೀಡಿದೆ.  ಪ್ರತಿಭಟನಾ ನಿರತ ಮುಸ್ಲಿಮ್ ಮಹಿಳೆಯರನ್ನು ದೇಶದ್ರೋಹಿಗಳಂತೆ ಬಿಂಬಿಸುವ ಶ್ರಮಗಳು ಈ ಅವಧಿಯಲ್ಲಿ ಸಾಕಷ್ಟು ನಡೆದಿದೆ. ಇ ದೀಗ ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಿರುವುದು ಪ್ರತಿಭಟನಾ ನಿರತ ಮುಸ್ಲಿಮ್ ಮಹಿಳೆಯರಲ್ಲ, ಈ ಮೇಲಿನ ಮೂವರು  ಎಂದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪ್ರತಿಭಟನಾಕಾರರು ಪಾಕಿಸ್ತಾನ್ ಝಿಂದಾಬಾದ್ ಕೂಗಿಲ್ಲ ಎಂದು ಖುದ್ದು ಶನಿವಾರಸಂತೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪರಶಿವ ಮೂರ್ತಿಯವರೇ ಹೇಳಿದ್ದಾರೆ.

ದೃಶ್ಯ ಮತ್ತು ಮುದ್ರಣ ಮಾಧ್ಯಮ ರಂಗವು ಬಹುತೇಕ ವಿಶ್ವಾಸಾರ್ಹತೆಯನ್ನು ಕಳಕೊಂಡಿರುವ ಈ ಹೊತ್ತಿನಲ್ಲಿ ಪತ್ರಕರ್ತ ಹರೀಶ್ ನಮ್ಮ  ಮುಂದಿದ್ದಾರೆ. ಅಷ್ಟಕ್ಕೂ, 

ತಪ್ಪಾದ ಸುದ್ದಿ ಮೂಲವನ್ನು ಆಧರಿಸಿ ಓರ್ವ ಪತ್ರಕರ್ತ ವರದಿ ತಯಾರಿಸುವುದು ಮತ್ತು ತಾನು ತಪ್ಪೆಸಗಿದ್ದೇನೆ  ಎಂದು ಗೊತ್ತಾದಾಗ ಅದೇ ಸ್ಫೂರ್ತಿಯಿಂದ ತಿದ್ದಿಕೊಳ್ಳುವುದು.. ಇವೆಲ್ಲ ಅಸಹಜ ಅಲ್ಲ. ಪತ್ರಕರ್ತರೂ ಮನುಷ್ಯರಾಗಿರುವುದರಿಂದ  ಪ್ರಮಾದಗಳೇ ಸಂಭವಿಸಲ್ಲ ಎಂದು ಹೇಳಲಾಗದು. ಆದರೆ ಸಂಚು ಹಾಗಲ್ಲ. ಅದು ಪ್ರಮಾದವಲ್ಲ. ಅದು ಉದ್ದೇಶಪೂರ್ವಕ. ಹರೀಶ್  ಭಾಗಿಯಾಗಿರುವುದು ಈ ಅಪಾಯಕಾರಿ ಸಂಚಿನ ಪ್ರಕರಣದಲ್ಲಿ. ಅಂಬೇಡ್ಕರ್ ಝಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ್  ಝಿಂದಾಬಾದ್ ಎಂದು ತಿರುಚುವುದಾದರೆ ಅದರ ಹಿಂದೆ ಉದ್ದೇಶಪೂರ್ವಕ ಸಂಚಿದೆ. ಪ್ರತಿಭಟನಾಕಾರರನ್ನು ದೇಶದ್ರೋಹಿಗಳಂತೆ  ಮತ್ತು ಸಾರ್ವಜನಿಕರನ್ನು ಪ್ರತಿಭಟನಾಕಾರರ ವಿರುದ್ಧ ತಿರುಗಿ ಬೀಳುವಂತೆ ಮಾಡುವ ಹುನ್ನಾರ ಇದೆ. ಒಂದುವೇಳೆ, ಅಂಬೇಡ್ಕರ್  ಝಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳದೇ  ಇರುತ್ತಿದ್ದರೆ ಸಂಘಪರಿವಾರ ಶನಿವಾರಸಂತೆ ಬಂದ್‌ಗೆ ಕರೆ ಕೊಡುವುದಕ್ಕೆ ಕಾರಣಗಳೂ ಇರಲಿಲ್ಲ ಮತ್ತು ಸಮಾಜ ಉದ್ವಿಘ್ನ ಸ್ಥಿತಿಗೆ  ತಲುಪುವುದಕ್ಕೂ ಸಾಧ್ಯವಿರಲಿಲ್ಲ. ಅಂದಹಾಗೆ,

ಪತ್ರಕರ್ತ ಹರೀಶ್ ಸಾರ್ವಜನಿಕವಾಗಿ ಬೆತ್ತಲಾಗಿದ್ದಾರೆ, ಪತ್ರಿಕಾ ಧರ್ಮಕ್ಕೆ ದ್ರೋಹವೆಸಗಿದ್ದಾರೆ. ಈ ಘಟನೆ ಪತ್ರಕರ್ತರ ಪಾಲಿಗೆ ಕ ಪ್ಪುಚುಕ್ಕೆ... ಇತ್ಯಾದಿ ಪದಗಳನ್ನೆಲ್ಲಾ ನಾವು ಬಳಸಬಹುದಾದರೂ ವಾಸ್ತವದಲ್ಲಿ ಈ ಪದಗಳೆಲ್ಲ ಈಗಾಗಲೇ ಹಳಸಲಾಗಿವೆ. ಮಾಧ್ಯಮ  ಕ್ಷೇತ್ರವನ್ನು ಇವತ್ತು ಯಾರೂ ಪವಿತ್ರವಾಗಿ ನೋಡುತ್ತಿಲ್ಲ. ಒಂದು ಪಕ್ಷದ, ಒಂದು ಸಿದ್ಧಾಂತದ ಮತ್ತು ನಿರ್ದಿಷ್ಟ ಧರ್ಮದ ವಕ್ತಾರರಾಗಿ  ಬಹಳಷ್ಟು ಪತ್ರಕರ್ತರು ಬದಲಾಗಿರುವುದನ್ನು ಸಂದರ್ಭ ಮತ್ತು ಸನ್ನಿವೇಶಗಳು ಆಗಾಗ ಸಾಬೀತುಪಡಿಸುತ್ತಲೇ ಇವೆ. ಕೊರೋನಾ  ಕಾಲವು ಅನೇಕ ಪತ್ರಕರ್ತರ ಮುಖವಾಡವನ್ನು ಬಹಿರಂಗಪಡಿಸಿತ್ತು. ತಬ್ಲೀಗ್ ವೈರಸ್, ಕೊರೋನಾ ಜಿಹಾದ್ ಮತ್ತಿತರ ಪದಗಳನ್ನು  ಠಂಕಿಸಿ ನಾಗರಿಕರ ಬಾಯಿಗೆ ತುರುಕಿದ್ದು ಇವೇ ಮಾಧ್ಯಮ. ತಬ್ಲೀಗಿ ಜಮಾಅತ್ ಸದಸ್ಯರನ್ನು ನೆಪಮಾಡಿಕೊಂಡು ಇಡೀ ಮುಸ್ಲಿಮ್  ಸಮುದಾಯವನ್ನು ಸಂದೇಹವನ್ನು ಮೊನೆಯಲ್ಲಿ ನಿಲ್ಲಿಸಿದ್ದೂ ಇವೇ ಮಾಧ್ಯಮ. ಮುಸ್ಲಿಮ್ ಸಂಘಟನೆಗಳ ಹಸಿರು ಧ್ವಜವನ್ನು  ಪಾಕಿಸ್ತಾನದ ಧ್ವಜವೆಂದು ಸುಳ್ಳು ಪ್ರಚಾರ ಮಾಡಿರುವುದೂ ಇವೇ ಮಾಧ್ಯಮ. ಗುಜರಾತ್ ಹತ್ಯಾಕಾಂಡವೂ ಸೇರಿದಂತೆ ಬಹುತೇಕ  ಮುಸ್ಲಿಮ್ ವಿರೋಧಿ ದಂಗೆಗಳಲ್ಲಿ ಮಾಧ್ಯಮಗಳ ಕರಾಳ ಪಾತ್ರವನ್ನು ಆಯಾ ಸಂದರ್ಭದ ಸತ್ಯಶೋಧನಾ ವರದಿಗಳು ಬಹಿರಂಗ ಪಡಿಸುತ್ತಲೇ ಬಂದಿವೆ. ಈ ಮಾಧ್ಯಮ ಪಕ್ಷಪಾತಿ ಧೋರಣೆಗೆ ಇತ್ತೀಚಿನ ಉದಾಹರಣೆ ಬೇಕೆಂದರೆ, 

ಅದು ರೈತ ಪ್ರತಿಭಟನೆ ಮತ್ತು ಎ ನ್‌ಆರ್‌ಸಿ ವಿರೋಧಿ ಹೋರಾಟ. ಈ ಎರಡನ್ನೂ ಜಾರಿಗೆ ಮಾಡಲು ಹೊರಟಿರುವುದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ್ತು ಈ  ಎರಡರಲ್ಲೂ ಮುಖ್ಯವಾಹಿನಿ ಮಾಧ್ಯಮಗಳ ಪಾತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅವು ಮಾಧ್ಯಮ ಧರ್ಮಕ್ಕೆ ಮಾಡಿರುವ ಅಪಚಾರಗಳ ಪ್ರಮಾಣ ಎಷ್ಟು ಅಗಾಧವಾದುದು ಎಂಬುದು ಸ್ಪಷ್ಟವಾಗುತ್ತದೆ. ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಯ ವೇಳೆ, ಮಾಧ್ಯ ಮದ  ಒಂದು ವಿಭಾಗವು ಸಂಪೂರ್ಣವಾಗಿ ಪ್ರತಿಭಟನಾಕಾರರ ವಿರುದ್ಧ ನಿಂತುವು. ಎಷ್ಟರ ಮಟ್ಟಿಗೆ ಎಂದರೆ, ಪ್ರತಿಭಟನೆಯನ್ನು ಮಟ್ಟ ಹಾಕಲು  ಪ್ರಭುತ್ವ ಏನೆಲ್ಲ ಕಾನೂನು ವಿರೋಧಿ ಬಲಪ್ರಯೋಗಗಳನ್ನು ಮಾಡಿತೋ ಅವೆಲ್ಲವನ್ನೂ ಬಲವಾಗಿ ಸಮರ್ಥಿಸಿದುವು ಮತ್ತು ಆ  ಸಮರ್ಥನೆಗೆ ಪೂರಕವಾಗಿ ಸನ್ನಿವೇಶಗಳನ್ನೇ ತಿರುಚುವ ದುಸ್ಸಾಹಸಕ್ಕೂ ಇಳಿದುವು. ಮಂಗಳೂರು ಗೋಲಿಬಾರ್ ಪ್ರಕರಣ ಇದಕ್ಕೆ  ಅತ್ಯುತ್ತಮ ಪುರಾವೆ. ಎನ್‌ಆರ್‌ಸಿ ಪ್ರತಿಭಟನಾಕಾರರನ್ನು ದೇಶದ್ರೋಹಿಗಳಂತೆ, ಮುಸ್ಲಿಮರಂತೆ ಅಥವಾ ಮುಸ್ಲಿಮ್ ಬೆಂಬಲಿಗರಂತೆ   ಹಾಗೂ ಹಿಂದೂ ವಿರೋಧಿಗಳಂತೆ ಬಿಂಬಿಸುವಲ್ಲಿ ಅವು ಶಕ್ತಿ ಮೀರಿ ಯತ್ನಿಸಿದುವು. ಶಾಹೀನ್‌ಬಾಗ್‌ನಲ್ಲಿ ದರಣಿ ಕುಳಿತ ಮಹಿಳೆಯರನ್ನು ಹೀನಾಯವಾಗಿ ಬಿಂಬಿಸಲಾಯಿತು. ಅವರ ವಿರುದ್ಧ ಸಮಾಜವನ್ನು ಎತ್ತಿ ಕಟ್ಟಲಾಯಿತು. ಬಳಿಕ ಇದೇ ಶಾಹೀನ್‌ಬಾಗ್‌ನ  ಮಾದರಿಯಲ್ಲಿ ರೈತರೂ ದೆಹಲಿಯಲ್ಲಿ ಪ್ರತಿಭಟನಾ ಧರಣಿ ಕುಳಿತರು. ಶಾಹೀನ್‌ಬಾಗ್‌ನಷ್ಟು ತೀವ್ರವಾಗಿ ಅಲ್ಲದಿದ್ದರೂ ಇವರನ್ನೂ ಖಾಲಿಸ್ತಾನಿಗಳಂತೆ, ದಲ್ಲಾಳಿಗಳಂತೆ ಮತ್ತು ರೈತ ವಿರೋಧಿಗಳಂತೆ ಬಿಂಬಿಸುವಲ್ಲಿ ಪ್ರಭುತ್ವದ ಜೊತೆ ಮುಖ್ಯವಾಹಿನಿ ಮಾಧ್ಯಮಗಳ ಒಂದು  ಗುಂಪು ಶಕ್ತಿ ಮೀರಿ ಪ್ರಯತ್ನಿಸಿದುವು. ಅವರ ವಿರುದ್ಧ ವಿವಿಧ ಸುಳ್ಳುಗಳನ್ನು ಹಬ್ಬಿಸಿದುವು. ಆದರೆ,

 ಶಾಹೀನ್‌ಬಾಗ್ ಪ್ರತಿಭಟನಾಕಾರರಿಗೂ  ಪ್ರತಿಭಟನಾ ನಿರತ ರೈತರಿಗೂ ನಡುವೆ ಇರುವ ವ್ಯತ್ಯಾಸ ಏನೆಂದರೆ, ರೈತರು ಮಾಧ್ಯಮಗಳ ಈ ಪ್ರಭುತ್ವ ಪರ ಧೋರಣೆಯನ್ನು  ಆರಂಭದಲ್ಲೇ  ಮನಗಂಡು ಪರ್ಯಾಯ ಮಾಧ್ಯಮವನ್ನೇ ಸೃಷ್ಟಿಸಿಕೊಂಡರು. ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ  ಬಳಸಿಕೊಂಡರಲ್ಲದೇ, ಪ್ರತಿಭಟನೆಯ ಬಗ್ಗೆ ನಾಗರಿಕರಿಗೆ ಮನವರಿಕೆ ಮಾಡಿಸಲು ಪತ್ರಿಕೆಗಳನ್ನೂ ಪ್ರಕಟಿಸಿದರು. ತಮ್ಮದೇ ಯೂಟ್ಯೂಬ್  ಚಾನೆಲನ್ನು ಹುಟ್ಟು ಹಾಕಿ ತಮ್ಮೆಲ್ಲ ಚಟುವಟಿಕೆಗಳನ್ನು ಜನರ ಬಳಿ ತಲುಪಿಸಿದರು. ಶಾಹೀನ್‌ಬಾಗ್ ಪ್ರತಿಭಟನೆ ವಿಫಲಗೊಂಡಿರುವುದು  ಇಲ್ಲೇ. ನಿಜವಾಗಿ,

ಮಾಧ್ಯಮ ಕ್ಷೇತ್ರಕ್ಕೆ ಈಗಾಗಲೇ ಮೆತ್ತಿಕೊಂಡಿರುವ ಕಳಂಕಕ್ಕೆ ಪತ್ರಕರ್ತ ಹರೀಶ್ ಇನ್ನೊಂದು ಸೇರ್ಪಡೆ ಅಷ್ಟೇ. ಆತನ ಕೃತ್ಯದಿಂದ ಇಡೀ  ಮಾಧ್ಯಮ ರಂಗವೇ ಹುಬ್ಬೇರುತ್ತದೆ ಮತ್ತು ಅವಮಾನದಿಂದ ತಲೆ ತಗ್ಗಿಸುತ್ತದೆ ಎಂದೆಲ್ಲಾ ಯಾರೂ ಭಾವಿಸಬೇಕಿಲ್ಲ. ಅದೆಲ್ಲ ಒಂದಾನೊಂದು ಕಾಲದ ಸ್ಥಿತಿ. ಈಗ ಮಾಧ್ಯಮ ರಂಗದ ವಾತಾವರಣವೇ ಬದಲಾಗಿದೆ. ಎಷ್ಟು ಬದಲಾಗಿದೆಯೆಂದರೆ, ಅಂಬೇಡ್ಕರ್  ಝಿಂದಾಬಾದನ್ನೇ ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚುವಷ್ಟು ಮತ್ತು ಅದನ್ನು ಜನರ ನಡುವೆ ಹಂಚಿ ಗಲಭೆಗೆ ಪ್ರಚೋದಿಸುವಷ್ಟು. ಸತ್ಯ ಚಿರಾಯುವಾಗಲಿ ಎಂದಷ್ಟೇ ಪ್ರಾರ್ಥಿಸೋಣ.

Saturday 27 November 2021

ತಬ್ಲೀಗ್: ಮನಸ್ಸು ಮಾಡಿರುತ್ತಿದ್ದರೆ ನೂರಾರು ಮಾನನಷ್ಟ ಮೊಕದ್ದಮೆ ದಾಖಲಾಗಿರುತ್ತಿತ್ತು..




ತಬ್ಲೀಗಿ ಜಮಾಅತ್ ಕಾರ್ಯಕರ್ತರನ್ನು ಹೀನಾಯವಾಗಿ ನಿಂದಿಸಿದ ಮತ್ತು ಕೊರೋನಾ ವೈರಸ್ ವಾಹಕರೆಂದು ಕರೆದು ಅವಮಾ ನಿಸಿದವರನ್ನು ಆತ್ಮಾವಲೋಕನಕ್ಕೆ ತಳ್ಳುವ ಬೆಳವಣಿಗೆಯೊಂದು ಕಳೆದವಾರ ನಡೆದಿದೆ. ಇದಕ್ಕೆ ಕಾರಣವಾಗಿರುವುದು ದೆಹಲಿ  ಹೈಕೋರ್ಟಿನ ನ್ಯಾಯಾಧೀಶರಾದ ಮುಕ್ತಾ ಗುಪ್ತಾ.


ದೆಹಲಿಯ ನಿಝಾಮುದ್ದೀನ್ ಮರ್ಕಜ್ ನಲ್ಲಿ ಕಳೆದ 2020 ಮಾರ್ಚ್ 9 ಮತ್ತು 10ರಂದು ಸಮಾವೇಶಕ್ಕೆ  ವಿದೇಶಿಯರು ಆಗಮಿಸಿದ್ದರು. ಮಾರ್ಚ್ 25ರಂದು ಕೊರೋನಾ ತಡೆಯಲು ದೇಶದಾದ್ಯಂತ  ಲಾಕ್‌ಡೌನ್ ಘೋಷಿಸಲಾಯಿತು ಮತ್ತು  ಕೊರೋನಾ ಹರಡುವುದಕ್ಕೆ ಈ ವಿದೇಶೀಯರು ಕಾರಣ ಎಂದು ಬಳಿಕ ವ್ಯಾಪಕವಾಗಿ ಅಪಪ್ರಚಾರ ಮಾಡಲಾಯಿತು. ಇದರನ್ವಯ  ಪೊಲೀಸರು ವಿದೇಶಿಯರ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ಅವರಿಗೆ ಯಾರು ಆಶ್ರಯ ನೀಡಿದ್ದರೋ ಅವರ ಮೇಲೂ ಎ ಫ್‌ಐಆರ್ ದಾಖಲಿಸಿದ್ದರು. ಇದೀಗ ಹೈಕೋರ್ಟು ಪೊಲೀಸರ ಈ ಕ್ರಮವನ್ನೇ ತರಾಟೆಗೆ ತೆಗೆದುಕೊಂಡಿದೆ. ದೇಶದಾದ್ಯಂತ ಲಾಕ್‌ಡೌನ್  ಘೋಷಿಸಿರುವಾಗ ಇವರು ಹೋಗುವುದಾದರೆ ಹೇಗೆ? ಅವರಿಗೆ ಆಶ್ರಯ ಕೊಡದಿದ್ದರೆ ಅವರು ಇರುವುದಾದರೂ ಎಲ್ಲಿ? ಎಫ್‌ಐಆರ್  ದಾಖಲಿಸುವಂತಹ ಯಾವ ತಪ್ಪನ್ನು ಅವರು ಮಾಡಿದ್ದಾರೆ ಎಂದು ನ್ಯಾಯಾಧೀಶೆ ಪ್ರಶ್ನಿಸಿದ್ದಾರೆ. ಹಾಗಂತ, ಇದು ಮೊದಲ ಪ್ರಕರಣ  ಅಲ್ಲ.

2020 ಡಿಸೆಂಬರ್ 15ರಂದು ದೆಹಲಿ ಹೈಕೋರ್ಟು 36 ವಿದೇಶಿ ತಬ್ಲೀಗಿ ಸದಸ್ಯರನ್ನು ದೋಷಮುಕ್ತಗೊಳಿಸಿತ್ತು. ನಿಝಾಮುದ್ದೀನ್  ಮರ್ಕಝï ಸಭೆಯಲ್ಲಿ ಭಾಗವಹಿಸುವುದಕ್ಕಾಗಿ 14 ದೇಶಗಳಿಂದ ಭಾರತಕ್ಕೆ ಬಂದಿದ್ದ ಇವರ ಮೇಲೆ ಭಾರತೀಯ ದಂಡಸಂಹಿತೆಯ  188, 219, ವಿಪತ್ತು ನಿರ್ವಹಣಾ ಕಾಯ್ದೆ 2005ರ 51ನೇ ಸೆಕ್ಷನ್ ಅನ್ವಯ ಕೇಸು ದಾಖಲಿಸಲಾಗಿತ್ತು. ಜೊತೆಗೇ ಇನ್ನೂ 6 ರಾಷ್ಟ್ರಗಳ 8  ಮಂದಿ ತಬ್ಲೀಗಿಗಳ ವಿರುದ್ಧವೂ ಕೇಸು ದಾಖಲಿಸಲಾಗಿತ್ತು. ಈ ಎಲ್ಲ ಪ್ರಕರಣಗಳಿಂದಲೂ ಅರೆದು ನ್ಯಾಯಾಧೀಶ ಅರುಣ್ ಕುಮಾರ್  ಗಾರ್ಗ್ ಇವರನ್ನು ದೋಷಮುಕ್ತಗೊಳಿಸಿದ್ದರು. ಇದಕ್ಕಿಂತ ಮೊದಲು ಇನ್ನೊಂದು ತೀರ್ಪೂ ಬಂದಿತ್ತು. ಈ ತೀರ್ಪನ್ನು 2020 ಆಗಸ್ಟ್  22ರಂದು ನೀಡಲಾಗಿತ್ತು. ಬಾಂಬೆ ಹೈಕೋರ್ಟ್ ನ  ಔರಂಗಾಬಾದ್ ಪೀಠದ ಜಸ್ಟಿಸ್ ವಿ.ವಿ. ನಲಪಾಡ್ ಮತ್ತು ಎಂ.ಜಿ. ಸೇವಿಲಿಕಾರ್‌ರನ್ನೊಳಗೊಂಡ ಪೀಠವು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ‘ಸಾಂಕ್ರಾಮಿಕ ರೋಗಗಳು ಬಂದಾಗ ಮತ್ತು ಅದನ್ನು  ಸಮರ್ಪಕವಾಗಿ ನಿರ್ವಹಿಸಲು ವಿಫಲವಾದಾಗ ತಮ್ಮ ವೈಫಲ್ಯವನ್ನು ಮರೆಮಾಚುವುದಕ್ಕಾಗಿ ಸರ್ಕಾರ ಕುತ್ತಿಗೆಯನ್ನು ಹುಡುಕುತ್ತದೆ.  ವಿದೇಶಿ ತಬ್ಲೀಗಿಗಳು ಅಂಥ ಬಲಿಪಶುಗಳು...’ ಎಂದು ಖಾರವಾಗಿ ಹೇಳಿತ್ತು ಮತ್ತು 29 ವಿದೇಶಿ ತಬ್ಲೀಗಿಗಳ ಮೇಲಿನ ಎಫ್‌ಐಆರನ್ನು  ರದ್ದುಗೊಳಿಸಿತ್ತು. 58 ಪುಟಗಳಲ್ಲಿ ನೀಡಿದ ಆ ತೀರ್ಪು ಸರ್ವರ ಅಧ್ಯಯನಕ್ಕೆ ಯೋಗ್ಯವಾಗಿರುವಂಥದ್ದು. ಅಂದಹಾಗೆ,

ತಬ್ಲೀಗಿಗಳಿಗೆ ಸಂಬಂಧಿಸಿ ಕಳೆದವಾರ ದೆಹಲಿ ಹೈಕೋರ್ಟು ನೀಡಿದ ತೀರ್ಪು ಮತ್ತು ಈ ಹಿಂದಿನ ತೀರ್ಪುಗಳನ್ನು ನಾವು ಪೊಲೀಸರಿಗೆ  ಕೋರ್ಟಿನಿಂದ ಸಿಕ್ಕ ಚಾಟಿಯೇಟು ಎಂಬ ರೀತಿಯಲ್ಲಿ ಮಾತ್ರ ಚರ್ಚಿಸುವುದು ಸತ್ಯಕ್ಕೆ ಎಸಗುವ ಬಹುದೊಡ್ಡ ಅಪಚಾರವಾದೀತು.  ಸ್ವದೇಶಿ ಮತ್ತು ವಿದೇಶಿ ತಬ್ಲೀಗಿಗಳನ್ನು ಅಪರಾಧಿಗಳೆಂದು ಮೊಟ್ಟಮೊದಲು ಬಿಂಬಿಸಿದ್ದು ಟಿ.ವಿ. ಮಾಧ್ಯಮಗಳು ಮತ್ತು ಮುದ್ರಣ  ಮಾಧ್ಯಮಗಳು. ಜೊತೆಗೇ ರಾಜಕಾರಣಿಗಳು. ಈ ದೇಶದಲ್ಲಿ ಕೊರೋನಾ ಲಾಕ್‌ಡೌನ್ ಘೋಷಿಸುವುದಕ್ಕಿಂತ ಮೂರು ವಾರಗಳ  ಮೊದಲೇ ದೆಹಲಿಯ ನಿಝಾಮುದ್ದೀನ್ ಮರ್ಕಜ್ ನಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಏರ್ಪಡಿಸಲಾಗಿತ್ತು. ವಿದೇಶಿಯರೂ ಸೇರಿದಂತೆ  ದೊಡ್ಡ ಸಂಖ್ಯೆಯಲ್ಲಿ ತಬ್ಲೀಗಿ ಕಾರ್ಯಕರ್ತರು ಅದರಲ್ಲಿ ಭಾಗವಹಿಸಿದ್ದರು. ಇದರಲ್ಲಿ ಭಾಗವಹಿಸಿದ ವಿದೇಶೀಯರಾಗಲಿ  ಸ್ವದೇಶೀಯರಾಗಲಿ ಯಾರೂ ಕೂಡಾ ಕಾನೂನು ಉಲ್ಲಂಘಿಸಿ ಅಲ್ಲಿಗೆ ತಲುಪಿರಲಿಲ್ಲ. ವಿಮಾನ ನಿಲ್ದಾಣಗಳ ಎಲ್ಲ ಕಾನೂನು  ಪ್ರಕ್ರಿಯೆಗಳನ್ನು ಮುಗಿಸಿಯೇ ಎಲ್ಲ ವಿದೇಶೀಯರೂ ನಿಝಾಮುದ್ದೀನ್ ಮರ್ಕಜ್ ಗೆ ತಲುಪಿದ್ದರು. ಅಲ್ಲದೇ, ಆಗ ಲಾಕ್‌ಡೌನ್  ಘೋಷಿಸುವ ಯಾವ ಸೂಚನೆಯನ್ನೂ ಕೇಂದ್ರ ಸರ್ಕಾರ ನೀಡಿಯೂ ಇರಲಿಲ್ಲ. ಕೊರೋನಾ ನಿಯಮಗಳೂ ಆ ಸಂದರ್ಭದಲ್ಲಿ  ಜಾರಿಯಲ್ಲಿರಲಿಲ್ಲ. ಹೀಗಿರುತ್ತಾ ಮಾರ್ಚ್ 25ರಂದು ಕೇಂದ್ರ ಸರ್ಕಾರ ದಿಢೀರ್ ಲಾಕ್‌ಡೌನ್ ಘೋಷಿಸಿತು. ಈ ದಿಢೀರ್ ಕ್ರಮವು  ನಿಝಾಮುದ್ದೀನ್‌ನಲ್ಲಿ ಸೇರಿದ್ದ ಸಾವಿರಕ್ಕಿಂತಲೂ ಅಧಿಕ ತಬ್ಲೀಗಿಗಳಿಗಾಗಲಿ ಜಮ್ಮುವಿನ ವೈಷ್ಣೋವಿ ಮಂದಿರದಲ್ಲಿ ಸೇರಿಕೊಂಡಿದ್ದ  600ಕ್ಕಿಂತಲೂ ಅಧಿಕ ಭಕ್ತಾದಿಗಳಿಗಾಗಲಿ ಅಥವಾ ಮಹಾರಾಷ್ಟ್ರದ ಗುರುದ್ವಾರದಲ್ಲಿ ಸೇರಿಕೊಂಡಿದ್ದ 3000ರಷ್ಟು ಯಾತ್ರಾರ್ಥಿಗಳಿಗಾಗಲಿ  ಆಘಾತಕಾರಿಯದ್ದಾಗಿತ್ತು. ನೆಲ, ಜಲ ಮತ್ತು ವಾಯು ಮಾರ್ಗಗಳನ್ನು ದಿಢೀರ್ ಸ್ಥಗಿತಗೊಳಿಸಿದುದರಿಂದ ಇವರಾರೂ ಇರುವಲ್ಲಿಂದ  ಬೇರೆಡೆಗೆ ಹೋಗುವಂತಿರಲಿಲ್ಲ. ಹಾಗೆಯೇ ಈ ಲಾಕ್‌ಡೌನ್‌ನ ಅಂತ್ಯ ಯಾವಾಗ ಎಂಬ ಖಚಿತತೆ ಯಾರಲ್ಲೂ ಇರಲಿಲ್ಲ. ಆದರೆ,

ಕೊರೋನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗತೊಡಗಿದಂತೆಯೇ ಮತ್ತು ದಿಢೀರ್ ಲಾಕ್‌ಡೌನ್‌ನಿಂದಾಗಿ ಎಲ್ಲೆಡೆ ಸಮಸ್ಯೆಗಳ  ಮಹಾಪೂರವೇ ಎದುರಾಗತೊಡಗಿದಂತೆಯೇ ಕೇಂದ್ರ ಸರ್ಕಾರದ ಬೆಂಬಲಿಗ ಟಿ.ವಿ. ಮಾಧ್ಯಮಗಳು ತಬ್ಲೀಗಿಗಳತ್ತ ದೃಷ್ಟಿ ನೆಟ್ಟವು.  ವೈಷ್ಣೋವಿ ಮಂದಿರ ಮತ್ತು ಗುರುದ್ವಾರಗಳಲ್ಲಿ ಸಿಲುಕಿಕೊಂಡ ಯಾತ್ರಾರ್ಥಿಗಳ ಬಗ್ಗೆ ಒಂದೇ ಒಂದು ಗೆರೆಯ ಫ್ಲ್ಯಾಶ್ ನ್ಯೂಸನ್ನೂ  ಪ್ರಸಾರ ಮಾಡದ ಇವು, ತಬ್ಲೀಗಿಗಳನ್ನು ಅವುಗಳಿಂದ ಪ್ರತ್ಯೇಕಿಸಿ ಬಡಿಯತೊಡಗಿದುವು. ಚಿತ್ರ-ವಿಚಿತ್ರ ಕತೆ ಕಟ್ಟತೊಡಗಿದುವು. ದಿನದ  ಹೆಚ್ಚಿನ ಸಮಯ ಟೊಪ್ಪಿ, ಗಡ್ಡ, ಪೈಜಾಮ-ಕುರ್ತಾವನ್ನು ತೋರಿಸುವುದಕ್ಕೆ ಮೀಸಲಿಟ್ಟವು. ದೇಶಕ್ಕೆ ಕೊರೋನಾ ಬಂದಿರುವುದೇ  ಇವರಿಂದ ಎಂಬಂತೆ  ಬಿಂಬಿಸಿ, ಅಸಹ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದುವು. ಯಾವ್ಯಾವುದೋ ರಾಷ್ಟ್ರದ ಮತ್ತು ಯಾವ್ಯಾವುದೋ  ಕಾರ್ಯಕ್ರಮದ ಏನೇನೋ ವೀಡಿಯೋ ತುಣುಕುಗಳನ್ನು ತಬ್ಲೀಗಿಗಳಿಗೆ ಜೋಡಿಸಿ ಅವು ಪ್ರಸಾರ ಮಾಡಿದುವು ಮತ್ತು ಸೋಷಿಯಲ್  ಮೀಡಿಯಾಗಳು ಇವನ್ನು ಎತ್ತಿಕೊಂಡು ಸಂಭ್ರಮಿಸಿದುವು. ವಿಷಾದ ಏನೆಂದರೆ,

ನ್ಯಾಯಾಲಯಗಳು ಒಂದರ ಮೇಲೆ ಒಂದರಂತೆ  ತೀರ್ಪು ನೀಡುತ್ತಿರುವಾಗಲೂ ಈ ಟಿ.ವಿ. ಚಾನೆಲ್‌ಗಳಾಗಲಿ, ಪತ್ರಿಕೆಗಳಾಗಲಿ ಅಥವಾ  ರಾಜಕಾರಣಿಗಳಾಗಲಿ ಎಲ್ಲೂ ಪಶ್ಚಾತ್ತಾಪದ ಭಾವನೆಯನ್ನು ವ್ಯಕ್ತಪಡಿಸಿಲ್ಲ. ತಬ್ಲೀಗಿಗಳನ್ನು ಖಳನಾಯಕರಾಗಿಸುವಲ್ಲಿ ರಾಜಕಾರಣಿಗಳ  ಪಾತ್ರವೇನೂ ಕಡಿಮೆಯಿರಲಿಲ್ಲ. ಪೈಪೋಟಿಗೆ ಬಿದ್ದು ಈ ರಾಜಕಾರಣಿಗಳು ತಬ್ಲೀಗಿಗಳ ವಿರುದ್ಧ ಹೇಳಿಕೆಯನ್ನು ಕೊಟ್ಟಿದ್ದರು. ಆದ್ದರಿಂದ,

ಜನಪ್ರತಿನಿಧಿಗಳೆಂಬ  ನೆಲೆಯಲ್ಲಿ ತಮ್ಮ ಈ ಹಿಂದಿನ ವರ್ತನೆಗೆ ಕ್ಷಮೆ ಯಾಚಿಸಬೇಕಾದುದು ಅವರ ಹೊಣೆಗಾರಿಕೆ. ಮಾಧ್ಯಮಗಳದ್ದೂ  ಅಷ್ಟೇ. ಜಿದ್ದಿಗೆ ಬಿದ್ದು ತಬ್ಲೀಗಿಗಳ ವಿರುದ್ಧ ಕಾರ್ಯಕ್ರಮ ಪ್ರಸಾರ ಮಾಡಿದ ಯಾವ ಚಾನೆಲ್ಲೂ ಈ ವರೆಗೆ ತಮ್ಮ ಈ ವರ್ತನೆಗಾಗಿ  ವಿಷಾದ ಸೂಚಿಸಿಲ್ಲ. ಜನಪ್ರಿಯ ಸುದ್ದಿಗಳನ್ನು ಕೊಡುವ ತುರ್ತಿನಲ್ಲಿ ಸುದ್ದಿಯ ಸ್ಪಷ್ಟತೆಗೆ ಮಹತ್ವ ಕೊಡುವಲ್ಲಿ ನಾವು ಎಡವಿದ್ದೇವೆ ಎಂಬ  ಪುಟ್ಟ ಹೇಳಿಕೆಯನ್ನು ಅವು ಇನ್ನೂ ಕೊಟ್ಟಿಲ್ಲ. ಪತ್ರಿಕೆಗಳೂ ಇದರಲ್ಲಿ ಸಮಾನ ದೋಷಿ. ವಿಶೇಷ ಏನೆಂದರೆ,

ಅಂದಿನಿಂದ  ಇಂದಿನವರೆಗೆ ತಬ್ಲೀಗಿಗಳು ಕಾಯ್ದುಕೊಂಡು ಬಂದ ಸಂಯಮ. ಅವರು ಮನಸ್ಸು ಮಾಡಿರುತ್ತಿದ್ದರೆ ದೇಶದಾದ್ಯಂತ  ನೂರಾರು ಮಾನ ನಷ್ಟ ಮೊಕದ್ದಮೆಗಳನ್ನು ಮಾಧ್ಯಮಗಳು ಮತ್ತು ರಾಜಕಾರಣಿಗಳ ವಿರುದ್ಧ ದಾಖಲಿಸಬಹುದಿತ್ತು. ಪತ್ರಿಕಾಗೋಷ್ಠಿ  ಕರೆದು ತಮ್ಮ ಮೇಲಾದ ಅನ್ಯಾಯವನ್ನು ದಾಖಲೆ ಸಹಿತ ಸಮಾಜದ ಮುಂದಿಡಬಹುದಿತ್ತು. ಯಾವ ಟಿ.ವಿ., ಯಾವ ಪತ್ರಿಕೆ ಮತ್ತು  ಯಾವ ರಾಜಕಾರಣಿ ಯಾವ್ಯಾವ ಸಮಯದಲ್ಲಿ ಏನೇನು ಹೇಳಿಕೆ ಕೊಟ್ಟಿದ್ದಾರೆ, ಯಾವ್ಯಾವ ಕಾರ್ಯಕ್ರಮಗಳನ್ನು ಟಿ.ವಿ. ಚಾನೆಲ್‌ಗಳು  ಪ್ರಸಾರ ಮಾಡಿವೆ ಮತ್ತು ಪತ್ರಿಕೆಗಳಲ್ಲಿ ಏನೇನು ವರದಿಗಳು ಬಂದಿವೆ ಎಂಬುದನ್ನು ಇಂಚಿಂಚಾಗಿ ಹೇಳಿಕೊಳ್ಳಬಹುದಿತ್ತು. ಆದರೆ, ತಬ್ಲೀಗಿ  ಕಾರ್ಯಕರ್ತರು ಈ ಒಂದೂ ಮುಕ್ಕಾಲು ವರ್ಷಗಳಲ್ಲಿ ಸಂಯಮದಿಂದ  ವರ್ತಿಸಿದ್ದಾರೆ. ಸದ್ದಿಲ್ಲದೇ ಪ್ಲಾಸ್ಮಾ ದಾನ ಮಾಡಿದ್ದಾರೆ.  ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರೂ ಸೇರಿದಂತೆ ಎಲ್ಲರಿಗೂ ಆಹಾರ ಕಿಟ್‌ಗಳನ್ನು ಹಂಚಿದ್ದಾರೆ. ರಕ್ತದಾನ ಮಾಡಿದ್ದಾರೆ.  ನಿಜವಾಗಿ,

ಈ ದೇಶದ ಇತಿಹಾಸದಲ್ಲಿ ದಪ್ಪಕ್ಷರಗಳಿಂದ ಬರೆದಿಡಬೇಕಾದ ಬೆಳವಣಿಗೆ ಇದು. ಅವರು ಲಾಕ್‌ಡೌನ್ ಮೊದಲೂ ತಣ್ಣಗಿದ್ದರು. ಇಷ್ಟೆಲ್ಲಾ  ಅನ್ಯಾಯ, ನಿಂದನೆ, ಅವಮಾನಗಳ ಬಳಿಕವೂ ತಣ್ಣಗೇ ಇದ್ದಾರೆ.

Thursday 18 November 2021

ಕಳಚಬೇಕಾದುದು ದೇಹದ ಹೊರಗಿನ ಬುರ್ಖಾವನ್ನಲ್ಲ...



ಸನ್ಮಾರ್ಗ ಸಂಪಾದಕೀಯ 
ಮುಂಬೈಯ ಎಸ್.ಬಿ.ಐ. ಶಾಖೆಯು ಬ್ಯಾಂಕ್ ಆವರಣದಲ್ಲಿ ಅಂಟಿಸಿರುವ ನೋಟೀಸೊಂದು ವಿವಾದಕ್ಕೆ ಕಾರಣವಾಗಿದೆ. ಬುರ್ಖಾ  ಮತ್ತು ಸ್ಕಾರ್ಫ್ ಧರಿಸಿ ಬ್ಯಾಂಕ್ ಪ್ರವೇಶಿಸುವುದಕ್ಕೆ ಆ ನೋಟೀಸಿನಲ್ಲಿ ನಿಷೇಧ ಹೇರಲಾಗಿತ್ತು. ಮುಸ್ಲಿಮ್ ಬಾಹುಳ್ಯ ಪ್ರದೇಶವಾದ  ನೆಹರೂ ನಗರದ ಬ್ಯಾಂಕ್ ಗ್ರಾಹಕರು ಈ ನೋಟೀಸಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ  ಪ್ರತಿಭಟನೆಯನ್ನೂ ವ್ಯಕ್ತಪಡಿಸಿದರು. ಬಳಿಕ ನವೆಂಬರ್ 3ರಂದು ಬ್ಯಾಂಕ್ ತನ್ನ ಈ ನೋಟೀಸನ್ನು ಹಿಂಪಡೆಯಿತು. ಹಾಗಂತ, ಇದು  ಮೊದಲ ಪ್ರಕರಣ ಅಲ್ಲ.


2019 ಮೇನಲ್ಲಿ ಬ್ಯಾಂಕ್ ಆಫ್ ಬರೋಡಾದ ಸೂರತ್ ಶಾಖೆಯೂ ಇಂಥದ್ದೇ ಒಂದು ನೋಟೀಸನ್ನು ತನ್ನ ಮುಖ್ಯ ಪ್ರವೇಶ  ದ್ವಾರದಲ್ಲಿ ಅಂಟಿಸಿತ್ತು. ಹೆಲ್ಮೆಟ್ ಮತ್ತು ಬುರ್ಖಾವನ್ನು ಕಳಚಿ ಬ್ಯಾಂಕ್ ಪ್ರವೇಶಿಸಿ ಎಂದು ಆ ನೋಟೀಸಿನಲ್ಲಿ ಹೇಳಲಾಗಿತ್ತು. ಕಾ ಪಾಬಿಡಾ ಚೆಕ್ಲಾ ಎಂಬ ಮುಸ್ಲಿಮ್ ಬಾಹುಳ್ಯ ಪ್ರದೇಶದಲ್ಲಿ ಈ ನೋಟೀಸನ್ನು ಪ್ರದರ್ಶಿಸಲಾಗಿತ್ತು. ಗ್ರಾಹಕರು ಪ್ರತಿಭಟಿಸಿದರು. ಬಳಿಕ  ಬುರ್ಖಾವನ್ನು ಕೈಬಿಟ್ಟು ಆ ಜಾಗದಲ್ಲಿ ನಕಾಬನ್ನು (ಮಾಸ್ಕ್) ಸೇರಿಸಲಾಗಿತ್ತು. ಇದರ ಜೊತೆಗೇ ಇತ್ತೀಚೆಗೆ ನಿಧನರಾದ ನಟ ಪುನೀತ್  ರಾಜ್‌ಕುಮಾರ್ ಅವರ ಅಂತ್ಯಸಂಸ್ಕಾರದ ಕುರಿತಂತೆ ಟಿ.ವಿ. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದ ಲೈವ್ ವಿವರಗಳನ್ನೂ ಎತ್ತಿಕೊಳ್ಳಬಹುದು.  ವೈದಿಕ ಆಚರಣೆಯಿಲ್ಲದೆ ಮತ್ತು ಪುರೋಹಿತರಿಲ್ಲದೇ ಅಂತ್ಯಸಂಸ್ಕಾರ ನಡೆಯುತ್ತಿರುವುದಕ್ಕೆ ಟಿ.ವಿ. ನಿರೂಪಕ ಅಚ್ಚರಿ ವ್ಯಕ್ತ ಪಡಿಸಿದ್ದೂ ಆ  ಬಳಿಕ ಚರ್ಚೆಗೆ ಒಳಗಾಗಿತ್ತು. ಅಂದರೆ, 
ಪುರೋಹಿತರು, ಹೋಮ, ಹವನ, ದರ್ಬೆ ಕಟ್ಟುವುದು, ಕಳಶ ಪ್ರದರ್ಶನ ಇತ್ಯಾದಿಗಳಿಲ್ಲದ  ಅಂತ್ಯಸಂಸ್ಕಾರ ಅಸಾಧ್ಯ ಮತ್ತು ಅವುಗಳು ಪ್ರತಿ ಅಂತ್ಯಸಂಸ್ಕಾರದಲ್ಲೂ ಕಡ್ಡಾಯ ಎಂಬಂಥ  ಭಾವ ಅದು. ನಿಜವಾಗಿ

 ಈಡಿಗ, ದ್ರಾವಿಡ  ಸಂಸ್ಕೃತಿಯಲ್ಲಿ ಅಂತ್ಯಸಂಸ್ಕಾರ ನಡೆಸುವುದು ಪುರೋಹಿತರಲ್ಲ. ಪುನೀತ್ ರಾಜ್‌ಕುಮಾರ್ ಕುಟುಂಬ ನಡಕೊಂಡದ್ದೂ ಹೀಗೆಯೇ.  ಆದರೆ,

ಇವತ್ತಿನ ಭಾರತದ ಆಲೋಚನಾ ಕ್ರಮ ನಿಧಾನಕ್ಕೆ ಹೇಗೆ ಬೆಳೆಯುತ್ತಾ ಇದೆಯೆಂದರೆ, ಎಲ್ಲವೂ ಮತ್ತು ಎಲ್ಲರೂ ಒಂದೇ ರೀತಿಯಲ್ಲಿ  ಇರಬೇಕು ಎಂಬಂತೆ. ಆಹಾರ, ಬಟ್ಟೆ, ಆಚರಣೆ, ಭಾಷೆ ಇತ್ಯಾದಿ ಎಲ್ಲವೂ ಏಕಪ್ರಕಾರವಾಗಿರುವುದೇ ಭಾರತೀಯತೆ ಎಂದು ನಂಬಿಸುವ  ಶ್ರಮ ನಡೆಯುತ್ತಿದೆ. ಅದರಲ್ಲೂ ಮುಸ್ಲಿಮರ ಪ್ರತಿಯೊಂದು ನಡೆ-ನುಡಿಗಳನ್ನೂ ಪ್ರಶ್ನಿಸುವ ಮತ್ತು ಅನ್ಯರಂತೆ ನಡೆಸಿಕೊಳ್ಳುವ ಕ್ರಮ  ಚಾಲ್ತಿಯಲ್ಲಿದೆ. ನಿಜವಾಗಿ, 

ಸಮಸ್ಯೆ ಇರುವುದು ಬುರ್ಖಾದಲ್ಲಲ್ಲ- ಬುರ್ಖಾದೊಳಗಿನ ಮನುಷ್ಯರನ್ನು ಓದುವುದರಲ್ಲಿ ಮತ್ತು  ಅರ್ಥೈಸುವುದರಲ್ಲಿ. ನಕಾಬ್ ಧರಿಸಿ ಬ್ಯಾಂಕ್ ಪ್ರವೇಶಿಸಬೇಡಿ ಎಂದು ಹೇಳುವ ಅವೇ ಬ್ಯಾಂಕುಗಳು ಕೊರೋನಾ ಮಾಸ್ಕ್ ಧರಿಸದೇ ಒಳ ಪ್ರವೇಶಿಸುವುದನ್ನು ಅಪರಾಧವಾಗಿ ಕಾಣುತ್ತವೆ. ಮಾಸ್ಕ್ ಧರಿಸದವರಿಗೆ ಸೇವೆ ಒದಗಿಸುವುದಕ್ಕೂ ಅವು ನಿರಾಕರಿಸುತ್ತವೆ. ಸಾಮಾನ್ಯವಾಗಿ  ನಕಾಬ್ ಮತ್ತು ಮಾಸ್ಕ್ನ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಮೂಗು ಮತ್ತು ಬಾಯಿಯನ್ನು ಮುಚ್ಚುವ ನಕಾಬ್‌ನಿಂದ ಯಾರಿಗೆ  ತೊಂದರೆಯಾಗುತ್ತೋ ಅವರಿಗೆ ಕೊರೋನಾ ಮಾಸ್ಕ್ ನಿಂದಲೂ  ತೊಂದರೆಯಾಗಬೇಕು. ಗುರುತು ಪತ್ತೆಹಚ್ಚುವಿಕೆಗೆ ತೊಂದರೆ ಎನ್ನುತ್ತಾ  ಕೊಡುವ ಎಲ್ಲ ಕಾರಣಗಳೂ ನಕಾಬ್‌ನಂತೆಯೇ ಮಾಸ್ಕ್ ಗೂ  ಅನ್ವಯಿಸುತ್ತದೆ. ಕೊರೋನಾದ ಈ ಎರಡು ವರ್ಷಗಳಲ್ಲಿ ಮಾಸ್ಕ್  ಧರಿಸಿದ್ದಕ್ಕಾಗಿ ಯಾವ ಬ್ಯಾಂಕ್‌ಗಳೂ ಯಾವುದೇ ವ್ಯಕ್ತಿಯನ್ನೂ ಆಕ್ಷೇಪಿಸಿಲ್ಲ. ಗುರುತು ಪತ್ತೆ ಹಚ್ಚುವಿಕೆಗೆ ಅಡ್ಡಿ ಎಂದು ಹೇಳಿ ಮಾಸ್ಕ್  ಧರಿಸದಂತೆ ನೋಟೀಸು ಅಂಟಿಸಿಲ್ಲ. ಹೀಗಿರುವಾಗ, ಕಳೆದ ಎರಡು ವರ್ಷಗಳಿಂದ ಮಾಸ್ಕ್ ನಿಂದಾಗದ  ತೊಂದರೆಯು ಆಗಾಗ  ನಕಾಬ್‌ನಿಂದ ಮತ್ತು ಬುರ್ಖಾದಿಂದ ಮಾತ್ರ ಯಾಕಾಗುತ್ತಿದೆ? ನಿಜಕ್ಕೂ ಸಮಸ್ಯೆಯಿರುವುದು ನಕಾಬ್ ಮತ್ತು ಬುರ್ಖಾದಲ್ಲೋ  ಅಥವಾ  ಅದನ್ನು ನೋಡುವ ಕಣ್ಣು ಮತ್ತು ಮನಸ್ಸುಗಳಲ್ಲೋ?

ಈ ದೇಶದ ಹೆಚ್ಚುಗಾರಿಕೆಯೇ ಸಾಂಸ್ಕೃತಿಕ ವೈವಿಧ್ಯತೆ. ಬಹುಸಂಸ್ಕೃತಿಯ ನಾಡು ಎಂಬ ಮಾತಿನಲ್ಲಿಯೇ ಇದು ಸ್ಪಷ್ಟವಿದೆ. ರೊಟ್ಟಿ, ಚಟ್ನಿ,  ಸಾಂಬಾರು, ಉಪ್ಪಿಟ್ಟು, ಶಾವಿಗೆ, ಜೋಳದ ರೊಟ್ಟಿ, ಪೊಂಗಲ್, ಸಾರು, ಹುಳಿ, ಗೊಜ್ಜು, ಅನ್ನ, ಮುದ್ದೆ, ಹಪ್ಪಳ, ಚಿತ್ರಾನ್ನ, ಮೊಸರನ್ನ,  ತುಪ್ಪದನ್ನ ದಂತೆಯೇ ಮೀನು, ಮಾಂಸ ಪದಾರ್ಥಗಳೂ, ಬಿರಿಯಾನಿ ಊಟಗಳೂ ಇಲ್ಲಿವೆ. ಉಡುಗೆಯಲ್ಲೂ ಈ ವೈವಿಧ್ಯತೆಗಳಿವೆ.  ಕೇರಳದಲ್ಲಿ ಒಂದು ಬಗೆಯಾದರೆ ಬಿಹಾರದಲ್ಲಿ ಇನ್ನೊಂದು ಬಗೆ. ಬುಡಕಟ್ಟುಗಳದ್ದು ಬೇರೆಯದೇ ರೀತಿ. ಆದಿವಾಸಿಗಳು ಮತ್ತು ವಿವಿಧ  ಜಾತಿ ಗೋತ್ರಗಳದ್ದು ಇನ್ನೊಂದು ರೀತಿ. ಸಾವಿಗೆ ವ್ಯಕ್ತಪಡಿಸುವ ದುಃಖದಲ್ಲೂ ತರಹೇವಾರಿ. ಸಾವಿನ ಮನೆಯಲ್ಲಿ ಮೌನವಾಗಿ ಅಳುವವರೂ ಅಟ್ಟಹಾಸದಿಂದ ಕೂಗುವವರೂ ಇರುವಂತೆಯೇ ನೃತ್ಯ ಮಾಡುತ್ತಾ ದುಃಖ ವ್ಯಕ್ತಪಡಿಸುವ ಇರುಳರ್ ಎಂಬ ಬುಡಕಟ್ಟುಗಳೂ  ಇವೆ. ಹಾಗೆಯೇ ಮೃತದೇಹವನ್ನು ಹೂಳುವ ಮತ್ತು ಅಗ್ನಿಗರ್ಪಿಸುವ ಸಂಪ್ರದಾಯಗಳೂ ಇವೆ. ಹಾಗಂತ,

ಇವೆಲ್ಲ ಇತ್ತೀಚೆಗೆ ನುಸುಳಿಕೊಂಡ ಹೊಸ ಕ್ರಮಗಳೇನೂ ಅಲ್ಲ. ತಲೆತಲಾಂತರದಿಂದ  ಇಂಥ ವೈವಿಧ್ಯಮಯ ಆಚರಣೆಗಳು ಈ ದೇಶದ  ಮಣ್ಣಿನಲ್ಲಿ ಬೆರೆತುಕೊಂಡಿವೆ. ಆದರೆ, ಮುಸ್ಲಿಮರ ಬುರ್ಖಾ, ಕುರ್‌ಆನ್, ನಮಾಝï, ಅದಾನ್‌ಗಳನ್ನೆಲ್ಲ ಸಮಸ್ಯೆ ಎಂಬಂತೆ   ಬಿಂಬಿಸುತ್ತಿರುವುದಕ್ಕೆ ಇಷ್ಟು ದೀರ್ಘ ಇತಿಹಾಸವಿಲ್ಲ. ಮಾತ್ರವಲ್ಲ, ‘ಬುರ್ಖಾ ಧರಿಸಿ ಬ್ಯಾಂಕ್ ಪ್ರವೇಶಿಸಬೇಡಿ’ ಎಂದು ಬೋರ್ಡ್ ತಗುಲಿಸಿದವರೊಂದಿಗೆ ಬುರ್ಖಾದ ಬಗ್ಗೆಯೋ ಅಥವಾ ನಕಾಬ್‌ಗೂ ಬುರ್ಖಾಕ್ಕೂ ನಡುವೆ ಇರುವ ವ್ಯತ್ಯಾಸದ ಕುರಿತೋ ಪ್ರಶ್ನಿಸಿದರೆ,  ಸಮರ್ಪಕ ಉತ್ತರ ಲಭಿಸೀತೆಂದು ನಿರೀಕ್ಷಿಸುವ ಹಾಗೂ ಇಲ್ಲ. ಬುರ್ಖಾ ಯಾಕೆ ಬೇಡ ಎಂದರೆ ಅದನ್ನು ಮುಸ್ಲಿಮ್ ಮಹಿಳೆಯರು  ಧರಿಸುತ್ತಾರೆ ಎಂಬುದೊಂದೇ  ಈ ವಿರೋಧಕ್ಕೆ ಬಹುಮುಖ್ಯ ಕಾರಣ. ಉಳಿದೆಲ್ಲವೂ ತಮ್ಮ ಅಸಹನೆಯನ್ನು ಅಡಗಿಸುವುದಕ್ಕಾಗಿ ಮುಂದಿಡುತ್ತಿರುವ ಕೃತಕ ನೆವನಗಳು ಮಾತ್ರ. ಇದೊಂದು ರಾಜಕೀಯ ಷಡ್ಯಂತ್ರ. ಮುಸ್ಲಿಮರ ಪ್ರತಿಯೊಂದನ್ನೂ ಗುರಿ ಮಾಡುವುದು ಮತ್ತು  ಅವರನ್ನು ಹಿಂದೂಗಳ ಶತ್ರುಗಳಂತೆ ಬಿಂಬಿಸುವುದು. ಮುಸ್ಲಿಮರ ಆಹಾರ, ಆಚಾರ, ವಿಚಾರ, ಉಡುಗೆ, ಆರಾಧನೆ, ಸಂಪ್ರದಾಯ...  ಹೀಗೆ ಎಲ್ಲವನ್ನೂ ಹಿಂದೂ ವಿರೋಧಿಯಾಗಿ ಬಿಂಬಿಸುತ್ತಾ ಅವಕ್ಕೆಲ್ಲಾ ಸುಳ್ಳು ವ್ಯಾಖ್ಯಾನಗಳನ್ನು ತೇಲಿ ಬಿಡುವುದು. ಇದು ಇವತ್ತಿನ ದಿನಗಳಲ್ಲಿ ಬಹಳ ವ್ಯವಸ್ಥಿತವಾಗಿ ಮತ್ತು ಯೋಜಿತವಾಗಿ ನಡೆಯುತ್ತಿದೆ. ಜೊತೆಗೇ, ಅತ್ಯಂತ ವಿದ್ಯಾವಂತರೂ ಇಂಥ ಪ್ರಚಾರಗಳಿಗೆ ಬಲಿಯಾಗುತ್ತಿದ್ದಾರೆ. ಮಾತ್ರವಲ್ಲ, ಹೊಸ ತಲೆಮಾರುಗಳಿಗೆ ನಿರ್ದಿಷ್ಟವಾದ ಸ್ಟೀರಿಯೋಟೈಪ್ಡ್ ವಿಚಾರಗಳನ್ನೇ ತುಂಬಿಸಲಾಗುತ್ತಿದೆ. ಪುನೀತ್  ರಾಜ್‌ಕುಮಾರ್ ಅವರ ಅಂತ್ಯಸಂಸ್ಕಾರದ ವಿಷಯವಾಗಿ ಟಿ.ವಿ. ಚಾನೆಲ್‌ನ ನಿರೂಪಕನಲ್ಲಿ ಕಂಡುಬಂದ  ಅಚ್ಚರಿಗೆ ಕಾರಣ ಇದುವೇ.  ವೈದಿಕರಿಲ್ಲದೇ ಅಂತ್ಯಸಂಸ್ಕಾರ ನಡೆಯಲ್ಲ, ಹೋಮ-ಹವನಗಳಿಲ್ಲದೇ ಕುಟುಂಬಸ್ಥರೇ ಅಂತ್ಯಸಂಸ್ಕಾರ ನಡೆಸುವುದು ಅಸಾಧ್ಯ ಎಂಬ  ಭಾವ ಅವರಲ್ಲಿರುವುದು ಈ ಸ್ಟೀರಿಯೋಟೈಪ್ಡ್ ಮನಸ್ಥಿತಿಯನ್ನು ಸಾಬೀತುಪಡಿಸುತ್ತದೆ. ನಿಜವಾಗಿ,

ಈ ದೇಶದ ಸಮಸ್ಯೆ ಬುರ್ಖಾನೂ ಅಲ್ಲ, ನಮಾಝೂ ಅಲ್ಲ. ಅಥವಾ ಕುರ್‌ಆನ್, ಅದಾನ್, ಆಹಾರ ಕ್ರಮಗಳೂ ಅಲ್ಲ. ಸಮಸ್ಯೆ  ಇರುವುದು ಇವೆಲ್ಲವನ್ನೂ ನೋಡುವ ಹೃದಯಗಳಲ್ಲಿ. ಮುಸ್ಲಿಮರನ್ನು ಅನ್ಯರೆಂದು ಬಿಂಬಿಸಿ ನಡೆಸಲಾಗುತ್ತಿರುವ ಪ್ರಚಾರ ಅಭಿಯಾನದ  ಫಲಿತಾಂಶವೇ ಬ್ಯಾಂಕ್‌ನ ಎದುರು ಅಂಟಿಸಲಾದ ನೋಟೀಸು. ಹಾಗಂತ, ನೀವು ಬುರ್ಖಾ ಕಳಚಿ ಹೋದರೂ ಸಮಸ್ಯೆ  ಬಗೆಹರಿಯುತ್ತದೆ ಎಂದು ಹೇಳುವಂತಿಲ್ಲ. ‘ನಿಮ್ಮ ಹೆಸರೇ ಅರ್ಥವಾಗುತ್ತಿಲ್ಲ, ಅರಬಿ  ಮೂಲದ ಹೆಸರಿನ ಬದಲು ಭಾರತೀಯ  ಮೂಲದ ಹೆಸರನ್ನು ಇಟ್ಟುಕೊಳ್ಳಿ..’ ಎಂದು ಆ ಬಳಿಕ ಆ ಬ್ಯಾಂಕು ತಕರಾರು ತೆಗೆಯಬಹುದು. ಕಾರಣಗಳನ್ನು ಹುಡುಕುವವರಿಗೆ  ಕಾರಣ ಸಿಕ್ಕೇ ಸಿಗುತ್ತದೆ. ಅಂದಹಾಗೆ,

ಮಾಸ್ಕ್ ನಿಂದಾಗದ ತೊಂದರೆ, ಬುರ್ಖಾ ಮತ್ತು ನಕಾಬ್‌ನಿಂದಾಗುತ್ತದೆ ಎಂದು ವಾದಿಸುವುದರಲ್ಲೇ  ಅದಕ್ಕಿರುವ ನಿಜವಾದ ಕಾರಣಗಳು  ಅರ್ಥವಾಗುತ್ತವೆ. ಆದ್ದರಿಂದ ಕಳಚಬೇಕಾಗಿರುವುದು ಮನಸ್ಸಿನ ಪರದೆಯನ್ನೇ ಹೊರತು ದೇಹದ ಪರದೆಯನ್ನಲ್ಲ.

Tuesday 9 November 2021

ಮಂಗಳೂರು ಗೋಲೀಬಾರ್: ಸರ್ಕಾರದಿಂದ ಸತ್ಯದ ಅಣಕ




2019, ಡಿಸೆಂಬರ್ 19ರಂದು ದ.ಕ. ಜಿಲ್ಲೆಯ ಮಂಗಳೂರಿನಲ್ಲಿ ನಡೆದ ಗೋಲಿಬಾರ್; ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ  ರಾಷ್ಟ್ರ ಮಟ್ಟದಲ್ಲಿ ಸುದ್ದಿಗೊಳಗಾಗಿತ್ತು. ಅಂದಹಾಗೆ, ಗೋಲಿಬಾರ್ ಅದಕ್ಕಿಂತ ಮೊದಲೂ ನಡೆದಿದೆ ಮತ್ತು ಆ ಬಳಿಕವೂ ನಡೆದಿದೆ. ಆದರೆ,  ಈ ಗೋಲಿಬಾರ್ ಇವೆಲ್ಲವುಗಳಿಗಿಂತ ಭಿನ್ನವಾಗಿತ್ತು. ಈ ಗೋಲಿಬಾರ್‌ನ ಹಿಂದೆ-ಮುಂದೆ  ಹಲವು ಬೆಳವಣಿಗೆಗಳೂ ನಡೆದುವು.


ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದರೂ ದ.ಕ. ಜಿಲ್ಲೆಯಲ್ಲಿ ಡಿಸೆಂಬರ್ 19ರ ವರೆಗೆ  ಪ್ರತಿಭಟನೆಗಳು ನಡೆದಿರಲಿಲ್ಲ. ಆದ್ದರಿಂದ, ಈ ಕಾಯ್ದೆಯ ವಿರುದ್ಧ ಪ್ರತಿಭಟನೆಯನ್ನು ವ್ಯಕ್ತಪಡಿಸಬೇಕು ಎಂಬ ಮನಸ್ಸುಳ್ಳವರು  ಜಿಲ್ಲೆಯಾದ್ಯಂತ ಧಾರಾಳ ಇದ್ದರು. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತಕ್ಕೆ ಸಂಘಟನೆಯೊಂದು  ಮನವಿಯನ್ನೂ ಮಾಡಿಕೊಂಡಿತ್ತು ಮತ್ತು  ಡಿಸೆಂಬರ್ 19ರಂದು ಪ್ರತಿಭಟನೆಗೆ ಅನುಮತಿಯನ್ನೂ ಪಡೆದುಕೊಂಡಿತ್ತು. ಆದರೆ,

ಡಿಸೆಂಬರ್ 18ರ ಸಂಜೆ ದಿಢೀರ್ ಬೆಳವಣಿಗೆಗಳು ಉಂಟಾದುವು. ಪ್ರತಿಭಟನೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಲಾದ  ಮಾಹಿತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತರವಾಯಿತು. ಇದನ್ನು ನಂಬಿದವರು ಮತ್ತು ನಂಬದವರು ಇದ್ದಂತೆಯೇ  ತಿಳಿದವರು ಮತ್ತು ತಿಳಿಯದವರೂ ಇದ್ದರು. ತಿಳಿದವರಿಗೂ ಈ ರದ್ದುಪಡಿಸುವಿಕೆಗೆ ನಿರ್ದಿಷ್ಟ ಕಾರಣ ಏನು ಎಂಬ ಬಗ್ಗೆಯೂ  ಸ್ಪಷ್ಟತೆಯಿರಲಿಲ್ಲ. ನಿಜವಾಗಿ, ಅಸ್ಪಷ್ಟತೆ ಯಾವಾಗಲೂ ಅಪಾಯಕಾರಿ. ಅವು ಅನೇಕ ಅಪಾಯಗಳ ತಾಯಿ. ಕಲ್ಪಿತ ಸುದ್ದಿಗಳು ಮತ್ತು  ವದಂತಿಗಳನ್ನು ಇಂಥ ಸಂದರ್ಭಗಳು ಹುಟ್ಟುಹಾಕುತ್ತವೆ. ಆ ಬಳಿಕ ವದಂತಿಗಳೇ ಮೇಲುಗೈ ಸಾಧಿಸಿ ವಾಸ್ತವ ಮರೆಗೆ ಸರಿಯುವುದೂ  ಇದೆ. ಡಿಸೆಂಬರ್ 18ರಂದು ಸಂಜೆಯ ವೇಳೆ ಉಂಟಾದ ಈ ದಿಢೀರ್ ಬೆಳವಣಿಗೆಯನ್ನು ನಿಭಾಯಿಸುವುದಕ್ಕೆ ಜಿಲ್ಲಾಡಳಿತ ಪ್ರಾಮಾಣಿಕ  ಪ್ರಯತ್ನ ಮಾಡಿರುತ್ತಿದ್ದರೆ ಡಿಸೆಂಬರ್ 19ರ ಘಟನೆಯನ್ನು ತಪ್ಪಿಸಬಹುದಿತ್ತೇನೋ. ಒಂದುಕಡೆ,

ಪೌರತ್ವ ಕಾಯ್ದೆಯನ್ನು ವಿರೋಧಿಸಬೇಕೆಂಬ ಸಾರ್ವಜನಿಕ ತುಡಿತ ಮತ್ತು ಇನ್ನೊಂದು ಕಡೆ ಪ್ರತಿಭಟನೆಗೆ ನೀಡಲಾದ ಅನುಮತಿಯನ್ನು  ಕೊನೆಕ್ಷಣದಲ್ಲಿ ದಿಢೀರ್ ರದ್ದುಪಡಿಸಲಾದುದು- ಇವೆರಡಕ್ಕೂ ಡಿಸೆಂಬರ್ 19ರ ವಿಷಾದಕರ ಘಟನೆಯಲ್ಲಿ ಪಾತ್ರವಿದೆ. ಸುಲಭವಾಗಿ  ನಿಭಾಯಿಸಬಹುದಾಗಿದ್ದ ಸ್ಥಿತಿಯನ್ನು ಪೊಲೀಸರು ಅತ್ಯಂತ ಕೆಟ್ಟದಾಗಿ ನಿರ್ವಹಿಸಿದರು. ಡಿಸೆಂಬರ್ 19ರಂದು ಮಧ್ಯಾಹ್ನ ಸಣ್ಣ  ಸಂಖ್ಯೆಯಲ್ಲಿ ಗುಂಪುಗೂಡಿದ್ದವರನ್ನು ಲಾಠಿಯಿಲ್ಲದೇ ಚದುರಿಸುವುದಕ್ಕೆ ಖಂಡಿತ ಸಾಧ್ಯವಿತ್ತು. ಅದಕ್ಕೆ ಬೇಕಿದ್ದುದು ಸಹನೆ ಮತ್ತು  ಚಾಕಚಕ್ಯತೆ. ಹೇಳಬೇಕಾದುದನ್ನು ಹೇಳುವುದಕ್ಕೆ ಆ ಸಣ್ಣ ಗುಂಪಿಗೆ ಅನುಮತಿ ನೀಡಿರುತ್ತಿದ್ದರೆ ಅದು ಅಲ್ಲಿಗೇ ಮುಗಿದು ಹೋಗುತ್ತಿತ್ತು.  ಆದರೆ,

ಪೊಲೀಸರು ಪೂರ್ವಾಗ್ರಹ ಪೀಡಿತರಂತೆ ವರ್ತಿಸಿದುದಕ್ಕೆ ಆ ಬಳಿಕ ಬಿಡುಗಡೆಗೊಂಡ ವೀಡಿಯೋಗಳು ಮತ್ತು ಮಾಧ್ಯಮ ವರದಿಗಳು  ಕೂಡ ಸಾಕ್ಷಿಯಾಗಿವೆ. ಪೊಲೀಸರು ಮನಬಂದಂತೆ ಲಾಠಿಚಾರ್ಜ್ ಮಾಡಿದರು. ಬಳಿಕ ಗುಂಪು ಚದುರಿತಲ್ಲದೇ ವಿವಿಧ ಜಾಗಗಳಲ್ಲಿ  ಜಮೆಯಾಗತೊಡಗಿತು. ಈ ಗುಂಪು ಮತ್ತು ಪೊಲೀಸರ ನಡುವೆ ಪರಸ್ಪರ ಕಲ್ಲೆಸೆತಗಳ ವಿನಿಮಯವೂ ನಡೆಯಿತು. ಕೊನೆಗೆ ಗೋಲಿಬಾರ್ ನಡೆಸಲಾಯಿತು. ಈ ಗೋಲಿಬಾರ್‌ಗಿಂತ ಮೊದಲು, ‘ಪ್ರತಿಭಟನಾಕಾರರಲ್ಲಿ ಇಬ್ಬರನ್ನು ಗುಂಡಿಟ್ಟು ಸಾಯಿಸು...’ ಎಂದು ಪೊಲೀಸ್ ಅಧಿಕಾರಿಯೋರ್ವರು ಇನ್ನೋರ್ವರಿಗೆ ಸೂಚಿಸುವ ವೀಡಿಯೋ ಕೂಡ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೀಡಾಯಿತು. ಗೋಲಿಬಾರ್‌ಗೆ ಇಬ್ಬರು ಬಲಿಯೂ ಆದರು. ಆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಇಬ್ಬರಿಗೂ ತಲಾ 10 ಲಕ್ಷ ರೂಪಾಯಿ  ಪರಿಹಾರವನ್ನು ಘೋಷಿಸಿದರು. ದಿನಗಳ ಬಳಿಕ ಆ ಘೋಷಣೆಯಿಂದ ಹಿಂದೆ ಸರಿದರು. ಇದೀಗ,

ಈ ಕುರಿತಾಗಿ ನಡೆಸಲಾದ ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ರಾಜ್ಯ ಸರಕಾರವು ಹೈಕೋರ್ಟ್ ಗೆ  ಸಲ್ಲಿಸಿದೆ.  ಮಾತ್ರವಲ್ಲ, ಗೋಲಿಬಾರ್ ಪ್ರಕರಣದಲ್ಲಿ ಪೊಲೀಸರು ತಪ್ಪು ಮಾಡಿಲ್ಲ ಎಂದೂ ಸಮರ್ಥಿಸಿಕೊಂಡಿದೆ. ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ರಾಜ್ಯ ಸರಕಾರ ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಳ್ಳುತ್ತದೆ ಎಂದೂ ಹೈಕೋರ್ಟ್ ಗೆ  ತಿಳಿಸಿದೆ. ಅಂದಹಾಗೆ,

ಆ ಇಡೀ ಘಟನೆಗೆ ಎರಡು ವರ್ಷಗಳು ತುಂಬುತ್ತಾ ಬಂದಿವೆ. ಘಟನೆ ನಡೆದಾಗಿನ ಸಾರ್ವಜನಿಕ ಆಕ್ರೋಶ, ಚರ್ಚೆ, ಹೇಳಿಕೆಗಳ ಭರಾಟೆ  ಇವತ್ತು ಕಡಿಮೆಯಾಗಿವೆ. ಪೊಲೀಸರ ವರ್ಗಾವಣೆಯಾಗಿದೆ. ಮೃತ ಜಲೀಲ್ ಮತ್ತು ನೌಶೀನ್ ಕುಟುಂಬವನ್ನು ಹೊರತುಪಡಿಸಿ  ಉಳಿದವರು ಈ ಘಟನೆಯನ್ನು ಇವತ್ತು ದಿನಾ ಸ್ಮರಿಸಿಕೊಳ್ಳುವ ಸ್ಥಿತಿಯಲ್ಲೂ ಇಲ್ಲ. ಆದ್ದರಿಂದ ಆ ಇಡೀ ಘಟನೆಯ ಸುತ್ತ ಮರು  ಅವಲೋಕನವೊಂದಕ್ಕೆ ಇದು ಸೂಕ್ತ ಸಮಯ. ಪ್ರತಿಭಟನಾ ಸಮಯದಲ್ಲಿ ಇರಬೇಕಾದ ಎಚ್ಚರಿಕೆಗಳೇನು ಎಂಬಲ್ಲಿಂದ  ತೊಡಗಿ  ಅತಿಸೂಕ್ಷ್ಮ  ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂಬಲ್ಲಿವರೆಗೆ ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆ ಯಾವ  ಪೂರ್ವಾಗ್ರಹವೂ ಇಲ್ಲದೇ ಆಲೋಚಿಸುವ ಅಗತ್ಯ ಇದೆ. ಅದರಲ್ಲೂ ಪೊಲೀಸ್ ಇಲಾಖೆಯ ಪಾತ್ರ ಈ ವಿಷಯದಲ್ಲಿ ಬಹಳ ಮಹತ್ವ ಪೂರ್ಣವಾದುದು. ಸಾರ್ವಜನಿಕರೆಂದ ಮೇಲೆ ಅಲ್ಲಿ ಏಕಪ್ರಕಾರದ ಜನರಿರುವುದಿಲ್ಲ. ಪ್ರತಿಭಟನೆಯೆಂದರೇನೆಂದೇ  ಗೊತ್ತಿಲ್ಲದವರು,  ಗೊತ್ತಿರುವವರು, ಶಿಕ್ಷಿತರು, ಅಶಿಕ್ಷಿತರು ಎಲ್ಲರೂ ಇರುವ ಒಂದು ಗುಂಪಾಗಿ ಸಾರ್ವಜನಿಕರನ್ನು ಪರಿಗಣಿಸಬೇಕು. ಪ್ರತಿಭಟನೆಗೆ  ಕುತೂಹಲದಿಂದ ಬರುವವರಿರುತ್ತಾರೆ. ದಾರಿಹೋಕರೂ ಒಂದುಕ್ಷಣ ಇಣುಕಿ ಹೋಗುವುದಿದೆ. ಪ್ರತಿಭಟನೆಯ ಇತಿ-ಮಿತಿಗಳ ಬಗ್ಗೆ  ಸ್ಪಷ್ಟತೆ ಇಲ್ಲದವರೂ ಸಾರ್ವಜನಿಕರಲ್ಲಿ ಇರುವವರಿರುತ್ತಾರೆ. ಆದರೆ,

ಪೊಲೀಸ್ ಇಲಾಖೆ ಹಾಗಲ್ಲ. ಅದು ಶಿಸ್ತುಬದ್ಧ ತಂಡ. ಅದಕ್ಕೆ ಪ್ರತಿಭಟನೆ ಏನೆಂದೂ ಗೊತ್ತಿರುತ್ತದೆ ಮತ್ತು ಕರ್ಫ್ಯೂ ಅಂದರೇನೆಂದೂ  ತಿಳಿದಿರುತ್ತದೆ. ಮಾತ್ರವಲ್ಲ, ಯಾವುದೇ ಸಂದರ್ಭದಲ್ಲೂ ಅತ್ಯಂತ ನ್ಯಾಯಯುತ ನಿಲುವನ್ನು ಮಾತ್ರ ಹೊಂದುವ ಮತ್ತು ಯಾವ  ಸಂದರ್ಭದಲ್ಲೂ ಪೂರ್ವಾಗ್ರಹ ಪೀಡಿತವಾಗಿ ವರ್ತಿಸದಿರುವ ತರಬೇತಿಯನ್ನೂ ಪಡೆದಿರುತ್ತದೆ. ಆದ್ದರಿಂದಲೇ, ಪೊಲೀಸರು ಸಾರ್ವಜನಿಕರಿಗಿಂತ ಹೆಚ್ಚು ಉತ್ತರದಾಯಿಗಳಾಗಿರುತ್ತಾರೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸುವ ಮತ್ತು ಸಾರ್ವಜನಿಕರಿಗೆ  ತೊಂದರೆಯಾಗದಂತೆ  ಜಾಣತನದಿಂದ ನಿಭಾಯಿಸುವ ಬುದ್ಧಿವಂತಿಕೆಯನ್ನು ಅವರು ಪ್ರದರ್ಶಿಸಬೇಕಾಗುತ್ತದೆ. ಸಾರ್ವಜನಿಕರು  ಕಲ್ಲೆಸೆದುದಕ್ಕೆ ನಾವೂ ಕಲ್ಲೆಸೆದೆವು, ಅವರು ಬೈದುದಕ್ಕೆ ನಾವೂ ಬೈದೆವು, ಅವರು ರಸ್ತೆ ತಡೆ ನಡೆಸಿದುದಕ್ಕೆ ನಾವೂ ನಡೆಸಿದೆವು ಎನ್ನುವುದಾದರೆ ಇವರಿಬ್ಬರ ನಡುವೆ ಯಾವ ವ್ಯತ್ಯಾಸವೂ ಇಲ್ಲ ಎಂದಾಗುತ್ತದೆ. ದುರಂತ ಏನೆಂದರೆ,

ಮಂಗಳೂರು ಗೋಲೀಬಾರ್ ಘಟನೆಯಲ್ಲಿ ಪೊಲೀಸರಿಂದ ಈ ತಪ್ಪು ಸಂಭವಿಸಿದೆ. ಅವರ ವರ್ತನೆ ಸಾರ್ವಜನಿಕರ ಮಟ್ಟಕ್ಕಿಂತಲೂ  ಕೆಳಗಿತ್ತು. ಪೊಲೀಸರು ಕಲ್ಲೆಸೆದರು. ಅನ್ಯಾಯವಾಗಿ ಲಾಠಿ ಬೀಸಿದರು. ಅಟ್ಟಾಡಿಸಿ ಹೊಡೆದರು. ಅಂತಿಮವಾಗಿ ಗುಂಡು ಹಾರಿಸಿ ಇಬ್ಬರನ್ನು ಸಾಯಿಸುವಂತೆ ಮಾತುಗಳನ್ನೂ ಆಡಿಕೊಂಡರು. ಇವೆಲ್ಲವೂ ವೀಡಿಯೋಗಳಲ್ಲಿ ಸೆರೆಯಾಗಿರುವ ಮಾಹಿತಿಗಳು. ಇನ್ನು, ಹೀಗೆ  ಸೆರೆಯಾಗದಿರುವ ವರ್ತನೆಗಳು ಏನೇನಿವೆಯೋ ಗೊತ್ತಿಲ್ಲ. ಅಂದಹಾಗೆ,

ಈಗಾಗಲೇ ಸಾರ್ವಜನಿಕವಾಗಿ ಯಾವೆಲ್ಲ ಮಾಹಿತಿಗಳು ಮತ್ತು ವರದಿಗಳು ಲಭ್ಯವಿವೆಯೋ ಅವುಗಳ ಆಧಾರದಲ್ಲಿ ಹೇಳುವುದಾದರೆ,  ಮಂಗಳೂರು ಗೋಲೀಬಾರ್ ಪ್ರಕರಣದಲ್ಲಿ ಪೊಲೀಸರ ಕಡೆಯಿಂದ ಗಂಭೀರ ತಪ್ಪುಗಳಾಗಿವೆ. ಆ ತಪ್ಪುಗಳ ಎದುರು ಸಾರ್ವಜನಿಕರ  ತಪ್ಪುಗಳು ಅತ್ಯಂತ ಕ್ಷುಲ್ಲಕ. ಗುಂಡು ಹಾರಿಸಿ ಕೊಲ್ಲುವಂತೆ ಕರ್ತವ್ಯನಿರತ ಅಧಿಕಾರಿಯೇ ಹೇಳುತ್ತಾರೆಂದರೆ, ಅದರಾಚೆಗೆ  ಹೇಳುವುದಕ್ಕಾದರೂ ಏನಿದೆ? ಡಿಸೆಂಬರ್ 18ರಿಂದ ಡಿಸೆಂಬರ್ 19ರ ವರೆಗಿನ ಈ 24 ಗಂಟೆಗಳ ಅವಧಿಯಲ್ಲಿ ಮಂಗಳೂರು ಪೊಲೀಸರು ನಡಕೊಂಡ ರೀತಿಯನ್ನು ಯಾವ ರೀತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲ. ಗಾಯಾಳುಗಳನ್ನು ದಾಖಲಿಸಲಾದ ಆಸ್ಪತ್ರೆಯ  ಐಸಿಯು ಕೊಠಡಿಯೊಳಕ್ಕೂ ನುಗ್ಗಿ ದಾಂಧಲೆ ನಡೆಸಿದ ಸಿಸಿಟಿವಿ ದೃಶ್ಯಗಳೇ ಪೊಲೀಸರನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಧಾರಾಳ  ಸಾಕು. ಇಷ್ಟಿದ್ದೂ ಪೊಲೀಸರು ತಪ್ಪಿತಸ್ಥರ಼ಲ್ಲ ಎಂದು ಮ್ಯಾಜಿಸ್ಟ್ರೇಟ್ ವರದಿ ಹೇಳುತ್ತದೆಂದಾದರೆ ಮತ್ತು ಸರ್ಕಾರ ಅದನ್ನು  ಒಪ್ಪಿಕೊಳ್ಳುತ್ತದೆಂದಾದರೆ ಅದು ಸತ್ಯದ ಅಣಕ. ಅಂದಿನ ದಿನಗಳಿಗೆ ಸಾಕ್ಷಿಯಾದ ಯಾರೂ ಪೊಲೀಸರನ್ನು ಮುಗ್ಧರು ಎಂದು  ಹೇಳಲಾರರು.

Thursday 28 October 2021

ಕ್ರಿಯೆಗೆ ಪ್ರತಿಕ್ರಿಯೆ: ಮುಸ್ಲಿಮ್ ಸಮುದಾಯಕ್ಕೆ ಅಭಿನಂದನೆ


ಸನ್ಮಾರ್ಗ ಸಂಪಾದಕೀಯ 

ಕ್ರಿಯೆ ಎಂಬ ಎರಡಕ್ಷರಕ್ಕೆ ಹೋಲಿಸಿದರೆ, ಪ್ರತಿಕ್ರಿಯೆ ಎಂಬ ಪದದಲ್ಲಿ ಎರಡಕ್ಷರ ಮಾತ್ರ ಅಧಿಕವಿದೆ. ಆದರೆ ‘ಪ್ರತಿಕ್ರಿಯೆ’ಯನ್ನು ಈ  ಹೆಚ್ಚುವರಿ ಎರಡಕ್ಷರವುಳ್ಳ ಕೇವಲ ಪದವಾಗಿಯಷ್ಟೇ ನಾವು ನೋಡಬೇಕಾದುದಲ್ಲ. ಸಾವಿರಾರು ಪದಗಳನ್ನು ಒಳಗೊಂಡ ಅಪಾರ  ಸಾಧ್ಯತೆಯ ಪುಟ್ಟ ಪದವಿದು. ಯಾವುದೇ ಕ್ರಿಯೆಗೆ ವ್ಯಕ್ತವಾಗುವ ಪ್ರತಿಕ್ರಿಯೆಯು ಆ ಕ್ರಿಯೆಯ ಸೋಲು-ಗೆಲುವನ್ನು ನಿರ್ಧರಿಸುತ್ತದೆ.  ಕ್ರಿಯೆ ಕೆಲವೊಮ್ಮೆ ಉದ್ದೇಶಪೂರ್ವಕವಾಗಿಯೇ ನಡೆಯುವುದಿದೆ. ಅನೇಕ ಬಾರಿ ಅಚಾನಕ್ ಆಗಿಯೂ ನಡೆದು ಬಿಡುತ್ತದೆ. ಆದ್ದರಿಂದ  ಪ್ರತಿಕ್ರಿಯೆಗೆ ಕ್ರಿಯೆಗಿಂತ ಹೆಚ್ಚು ಜವಾಬ್ದಾರಿ ಇರುತ್ತದೆ. ಯಾವುದು ಉದ್ದೇಶಪೂರ್ವಕ ಕ್ರಿಯೆ ಮತ್ತು ಯಾವುದು ಅಲ್ಲ ಎಂಬುದಾಗಿ  ವಿಶ್ಲೇಷಿಸುವ ಬುದ್ಧಿವಂತಿಕೆ ಪ್ರತಿಕ್ರಿಯಿಸುವವರಲ್ಲಿ ಇರಬೇಕಾಗುತ್ತದೆ. ಈ ದಿಸೆಯಲ್ಲಿ ತುಸು ಎಡವಿದರೂ ಲಾಭವಾಗುವುದು ಕ್ರಿಯೆಗೇ.  ಆದ್ದರಿಂದಲೇ ಪ್ರತಿಕ್ರಿಯೆ ಎಂಬುದು ಕ್ರಿಯೆಗಿಂತ ಸಾವಿರ ಪಾಲು ಮಹತ್ವದ್ದು. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಮುಸ್ಲಿಮ್  ಸಮುದಾಯವನ್ನು ಅಭಿನಂದಿಸಬೇಕು.


ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕ್ರಿಯೆಗಳಿಗೆ ಮುಸ್ಲಿಮ್ ಸಮುದಾಯ ವ್ಯಕ್ತಪಡಿಸುತ್ತಿರುವ ಪ್ರತಿಕ್ರಿಯೆ ಅತ್ಯಂತ ಜಾಣತನದ್ದು. ಬೆಂಗಳೂರಿನಲ್ಲಿ ನಡೆದ ಅನೈತಿಕ ಪೊಲೀಸ್‌ಗಿರಿಯಿಂದ ತೊಡಗಿ ಉಡುಪಿಯ ದುರ್ಗಾ  ದೌಡ್‌ನ ವರೆಗೆ ಕಳೆದ ಒಂದು ತಿಂಗಳ ನಡುವೆ ಈ ಭಾಗದಲ್ಲಿ ಹಲವು ಬೆಳವಣಿಗೆಳು ನಡೆದಿವೆ. ಬೆಂಗಳೂರು ಘಟನೆಯ ಬಳಿಕ  ಮಂಗಳೂರಿನ ಸುರತ್ಕಲ್‌ನಲ್ಲಿ ಅನೈತಿಕ ಪೊಲೀಸ್‌ಗಿರಿ ನಡೆಯಿತು. ಆ ಬಳಿಕ ಅಲ್ಲೇ ಬೃಹತ್ ಸಭೆಯೂ ನಡೆಯಿತು. ಈ ಸಭೆಯಲ್ಲಿ  ಮುಸ್ಲಿಮರನ್ನು ಅತ್ಯಂತ ಹೀನಾಯವಾಗಿ ನಿಂದಿಸಲಾಯಿತು. ಅವರ ಉದ್ಯೋಗ ಮತ್ತು ಬದುಕನ್ನು ಹೀಯಾಳಿಸಲಾಯಿತು. ಆ ಬಳಿಕ  ಗಂಗೊಳ್ಳಿಯಲ್ಲಿ ಇಂಥದ್ದೇ ಸಭೆ ನಡೆಯಿತು. ಅಲ್ಲಿ ಮುಸ್ಲಿಮರನ್ನಷ್ಟೇ ಅಲ್ಲ, ಪ್ರವಾದಿ ಮುಹಮ್ಮದ್(ಸ)ರನ್ನೂ ಮತ್ತು ಅಲ್ಲಾಹನನ್ನೂ  ನಿಂದಿಸಲಾಯಿತು. ಆ ಭಾಷಣಕ್ಕೆ ಚಪ್ಪಾಳೆ, ಶಿಳ್ಳೆಗಳೂ ಬಿದ್ದುವು. ನಂತರದ ದಿನಗಳಲ್ಲಿ ಸುಮಾರು ಹತ್ತರಷ್ಟು ಅನೈತಿಕ ಪೊಲೀಸ್‌ಗಿರಿ  ಪ್ರಕರಣಗಳು ನಡೆದುವು. ಆ ಬಳಿಕ ಮಂಗಳೂರಿನ ಕದ್ರಿಯಲ್ಲಿರುವ ವಿಶ್ವ ಹಿಂದೂ ಪರಿಷತ್‌ನ ಕಚೇರಿಯಲ್ಲಿ ತ್ರಿಶೂಲ ವಿತರಣೆ  ನಡೆಯಿತು. ಆಯುಧ ಪೂಜೆಯ ನೆಪದಲ್ಲಿ ವಿಹಿಂಪ ಮುಖಂಡರೇ ತಮ್ಮ ಕಾರ್ಯಕರ್ತರಿಗೆ ಈ ಆಯುಧ ವಿತರಣೆ ನಡೆಸಿದರು. ಇದರ  ಬೆನ್ನಿಗೆ ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ದುರ್ಗಾ ದೌಡ್ ಪಾದಯಾತ್ರೆ ನಡೆಯಿತು. ಈ ಯಾತ್ರೆಯಲ್ಲಿ  ತಲವಾರುಗಳನ್ನು ಪ್ರದರ್ಶಿಸುತ್ತಾ ಸಾಗಲಾಯಿತು. ಮಾತ್ರವಲ್ಲ ಈ ಯಾತ್ರೆಯಲ್ಲಿ ಸಚಿವ ಸುನಿಲ್ ಕುಮಾರ್ ಮತ್ತು ಸ್ಥಳೀಯ ಶಾಸಕ  ರಘುಪತಿ ಭಟ್ ಕೂಡಾ ಇದ್ದರು. ಅಲ್ಲದೇ ಮುಸ್ಲಿಮರನ್ನು ನಿಂದಿಸುವ ಭಾಷಣವೂ ನಡೆಯಿತು. ಅಂದಹಾಗೆ,

ಸುರತ್ಕಲ್‌ನ ಅನೈತಿಕ ಪೊಲೀಸ್‌ಗಿರಿಯಿಂದ ಹಿಡಿದು ಉಡುಪಿಯ ದುರ್ಗಾ ದೌಡ್‌ನ ತಲವಾರು ಮತ್ತು ಭಾಷಣಗಳವರೆಗೆ ಎಲ್ಲವೂ  ಮುಸ್ಲಿಮರನ್ನು ಪ್ರತ್ಯಕ್ಷವೋ ಪರೋಕ್ಷವೋ ಗುರಿಯಾಗಿಟ್ಟುಕೊಂಡ ಮತ್ತು ಪ್ರಚೋದಿಸುವ ಉದ್ದೇಶದ ಕ್ರಿಯೆಗಳು ಎಂಬುದು ಸ್ಪಷ್ಟ.  ನಿಜವಾಗಿ, ಬಹುತ್ವದ ಭಾರತದಲ್ಲಿ ಹಿಂದೂ ಯುವಕ-ಮುಸ್ಲಿಮ್ ಯುವತಿ ಮತ್ತು ಮುಸ್ಲಿಮ್ ಯುವಕ-ಹಿಂದೂ ಯುವತಿ ಪರಸ್ಪರ  ಮಾತಾಡುವುದೋ ಗೆಳೆತನದಲ್ಲಿರುವುದೋ ಅಸಹಜವೂ ಅಲ್ಲ, ಅಪರಾಧವೂ ಅಲ್ಲ. ಶಾಲೆಯಿಂದ ತೊಡಗಿ ಉದ್ಯೋಗ ಸ್ಥಳದವರೆಗೆ  ಹೆಣ್ಣು-ಗಂಡು ಧರ್ಮ ಭೇದವಿಲ್ಲದೆ ಜೊತೆಯಾಗಿರುವ ದೇಶ ವೊಂದರಲ್ಲಿ ಅವರು ಪರಸ್ಪರ ಮಾತಾಡುವುದನ್ನೇ ಅಪರಾಧವೆನ್ನುವುದು  ಅತ್ಯಂತ ಬಾಲಿಷ. ಹಾಗಂತ,

ಇದು ಅನೈತಿಕ ಪೊಲೀಸ್‌ಗಿರಿಯಲ್ಲಿ ಭಾಗಿಯಾದವರಿಗೂ ಗೊತ್ತು. ಅವರನ್ನು ಅದಕ್ಕಾಗಿ ಪ್ರಚೋ ದಿಸುವವರಿಗೂ ಗೊತ್ತು. ಮತ್ತೂ  ಯಾಕೆ ಇಂಥದ್ದು ನಡೆಯುತ್ತದೆ ಎಂದರೆ, ಅದರ ಹಿಂದೆ ಒಳ ಉದ್ದೇಶವೊಂದು ಇರುತ್ತದೆ. ಮುಸ್ಲಿಮರು ಇಂಥದ್ದೇ ಪ್ರತಿಕ್ರಿಯೆಗೆ  ಇಳಿಯಬೇಕು ಮತ್ತು ಆ ಮುಖಾಂತರ ಸಂಘರ್ಷದ ಸ್ಥಿತಿ ನಿರ್ಮಾಣವಾಗಬೇಕು ಎಂಬುದೇ ಆ ಉದ್ದೇಶ. ತಲವಾರು ಹಿಡಿದು  ಮೆರವಣಿಗೆಯಲ್ಲಿ ಸಾಗುವುದಾಗಲಿ; ಮುಸ್ಲಿಮರನ್ನು, ಪ್ರವಾದಿಯನ್ನು ಮತ್ತು ಅಲ್ಲಾಹನನ್ನು ಹೀನಾತಿ ಹೀನವಾಗಿ ನಿಂದಿಸುವುದಾಗಲಿ  ಯಾವುದೂ ಸಹಜ ಕ್ರಿಯೆಗಳಲ್ಲ. ಯಾಕೆಂದರೆ,

ಅAಥದ್ದೊಂದು  ತೀವ್ರ ವಾಗ್ದಾಳಿಗೋ ನಿಂದನೆಗೋ ಗುರಿಯಾಗಬೇಕಾದ ಮತ್ತು ಆಯುಧ ಝಳಪಿಸಿ ಬೆದರಿಸಬೇಕಾದ ಯಾವ ಅ ಪರಾಧವನ್ನು ಮುಸ್ಲಿಮರು ಮಾಡಿದ್ದಾರೆ? ಉಡುಪಿಯಲ್ಲಿರುವುದು ಐದೋ ಏಳೋ ಶೇಕಡಾ ಮುಸ್ಲಿಮರು. ಇಡೀ ಕರಾವಳಿ ಭಾಗವನ್ನು  ಎತ್ತಿಕೊಂಡರೂ ಈ ಶೇಕಡಾ ವಾರು ಸಂಖ್ಯೆಯಲ್ಲಿ ಭಾರೀ ಏರಿಕೆಯೇನೂ ಆಗುವುದಿಲ್ಲ. ಇಷ್ಟೊಂದು ಸಣ್ಣ ಸಮುದಾಯವನ್ನು ಈ ಪರಿ  ಬೆದರಿಸುವುದೇಕೆ? ನಿಂದಿಸುವ ಮತ್ತು ಅವಮಾನಿಸುವ ಅಗತ್ಯವಾದರೂ ಏನು? ಈ ಸಣ್ಣ ಸಂಖ್ಯೆ ಯಾರಿಗೆ ಬೆದರಿಕೆ? ಅಪ್ಪಟ  ಧಾರ್ಮಿಕ ಸಭೆಯಲ್ಲೂ ಮುಸ್ಲಿಮರನ್ನೇ ಗುರಿಯಾಗಿಸಿ ಭಾಷಣ ಮಾಡುವುದೇಕೆ? ಇಲ್ಲಿನ ಕಾನೂನಿಗಾಗಲಿ, ಸಂವಿಧಾನಕ್ಕಾಗಲಿ ಎಲ್ಲೂ  ಎದುರಾಡದ ಮತ್ತು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ರಂಗ ಇತ್ಯಾದಿ ಎಲ್ಲದರಲ್ಲೂ ಅತ್ಯಂತ ನಗಣ್ಯ ಪಾಲ ನ್ನಷ್ಟೇ ಹೊಂದಿರುವ ಮುಸ್ಲಿಮರು ಇಲ್ಲಿನ ಬಹುಸಂಖ್ಯಾತರಿಗೆ ಬೆದರಿಕೆಯಾಗಿರುವುದಾದರೂ ಹೇಗೆ? ಸಂವಿಧಾನವೇ ಇರದಿದ್ದ  ಕಾಲದಲ್ಲಿ 800 ವರ್ಷಗಳಷ್ಟು ದೀರ್ಘಕಾಲ ಮುಸ್ಲಿಮ್ ದೊರೆಗಳೇ ಇಲ್ಲಿ ಅಧಿಕಾರ ನಡೆಸಿದ ಹೊರತೂ ಮುಸ್ಲಿಮ್ ಜನಸಂಖ್ಯೆ ಶೇ.  15ನ್ನೂ ದಾಟದಿರುವಾಗ ಸಂವಿಧಾನ ಇರುವ ಮತ್ತು ಯಾವ ಅಧಿಕಾರವೂ ಇಲ್ಲದ ಈ ಹೊತ್ತಿನಲ್ಲಿ ಮುಸ್ಲಿಮರು  ಬಹುಸಂಖ್ಯಾತರಾಗುವುದೋ ಬೆದರಿಕೆಯಾಗುವುದೋ ಹೇಗೆ? ಹಾಗಂತ,

ಇಂಥ  ಪ್ರಶ್ನೆಗಳು ಮತ್ತು ವಾಸ್ತವ ಆಧಾರಿತ ವಿಶ್ಲೇಷಣೆಗಳು ಈ ಮಣ್ಣಿನಲ್ಲಿ ನೂರಾರು ಬಾರಿ ನಡೆದಿವೆ. ಮಾತ್ರವಲ್ಲ, ಕೈಯಲ್ಲಿ ತಲವಾರು  ಹಿಡಿದವರಿಗೂ ವೇದಿಕೆಯೇರಿ ಭಾಷಣ ಮಾಡುವವರಿಗೂ ಈ ವಾಸ್ತವದ ಅರಿವು ಖಂಡಿತ ಇದೆ. ಅವರ ಒಳಮನಸ್ಸು ಈ ಸತ್ಯವನ್ನು  ಒಪ್ಪಿಕೊಳ್ಳದಷ್ಟು ಕಠೋರ ಎಂದು ಹೇಳುವಂತೆಯೂ ಇಲ್ಲ. ಆದರೆ ಅವರ ಮುಂದಿರುವ ಸವಾಲುಗಳು ಬೇರೆ. ಈ ಸವಾಲು ಈ ಸತ್ಯದ  ಆಚೆಗಿನದು. ರಾಜಕೀಯ ಅಧಿಕಾರ ಕೈವಶವಾಗಬೇಕಾದರೆ ಇಂಥ ಅವಾಸ್ತವಿಕ ಕ್ರಿಯೆಗಳ ಅನಿವಾರ್ಯತೆ ಅವರಿಗಿದೆ. ಮಾತ್ರವಲ್ಲ,  ಕ್ರಿಯೆಗಳಿಗೆ ಇದೇ ರೀತಿಯ ಮತ್ತು ಇಷ್ಟೇ ತೀವ್ರವಾದ ಪ್ರತಿಕ್ರಿಯೆಯನ್ನೂ ಅವರು ಬಯಸುತ್ತಿರುತ್ತಾರೆ. ಮುಸ್ಲಿಮ್ ಸಮುದಾಯ ಕೂಡ  ತಲವಾರನ್ನು ಝಳಪಿಸಿ ಮೆರವಣಿಗೆ ನಡೆಸುವುದು, ಹಿಂದೂಗಳನ್ನು ನಿಂದಿಸುವ ಭಾಷಣ, ಅನೈತಿಕ ಪೊಲೀಸ್‌ಗಿರಿಯಲ್ಲಿ  ತೊಡಗಿಸಿಕೊಳ್ಳುವುದು... ಇತ್ಯಾದಿಗಳನ್ನೇ ಪ್ರತಿಕ್ರಿಯೆಯ ರೂಪದಲ್ಲಿ ಆರಿಸಿಕೊಂಡಾಗ ಅವರ ಉದ್ದೇಶ ಈಡೇರುತ್ತದೆ. ಜೊತೆಗೇ ಇಡೀ  ದೇಶವನ್ನೇ ಕಾಡುವ, ಹಸಿವು, ನಿರುದ್ಯೋಗ, ಬೆಲೆಏರಿಕೆಗಳಂಥ ಮುಖ್ಯ ವಿಷಯಗಳು ಚರ್ಚೆಯ ವ್ಯಾಪ್ತಿಯಿಂದ ಹೊರಬೀಳುತ್ತವೆ. ಇವು  ಈ ಎಲ್ಲ ಬೆಳವಣಿಗೆಗಳ ಹಿಂದಿರುವ ಮುಖ್ಯ ಗುರಿ. ಆದ್ದರಿಂದಲೇ,

ಮುಸ್ಲಿಮ್ ಸಮುದಾಯ ಅಭಿನಂದನೆಗೆ ಅರ್ಹ. ಬೆಂಗಳೂರಿನ ಅನೈತಿಕ ಪೊಲೀಸ್‌ಗಿರಿ ಘಟನೆಯ ಆರೋಪಿಗಳಾದ ಮುಸ್ಲಿಮರನ್ನು  ಬೆಂಬಸುವುದಾಗಲಿ, ಅವರ ಬಂಧನವನ್ನು ಪ್ರಶ್ನಿಸಿ ಸಭೆ ನಡೆಸುವುದನ್ನಾಗಲಿ ಮಾಡದೇ ಪ್ರಜ್ಞಾವಂತಿಕೆಯನ್ನು ಮೆರೆದ ಮುಸ್ಲಿಮ್  ಸಮುದಾಯ, ಆ ಬಳಿಕದ ಇಷ್ಟೂ ಬೆಳವಣಿಗೆಗಳ ಬಗ್ಗೆ ಅತ್ಯಂತ ಪ್ರಬುದ್ಧ ಪ್ರತಿಕ್ರಿಯೆಯನ್ನೇ ವ್ಯಕ್ತಪಡಿಸಿದೆ. ಎಲ್ಲೂ ಅದು ಕಾನೂನನ್ನು  ಕೈಗೆತ್ತಿಕೊಂಡಿಲ್ಲ. ಹಿಂದೂ ಸಮುದಾಯಕ್ಕೆ ಘಾಸಿಯಾಗುವ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿಲ್ಲ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬ  ನೆಲೆಯಲ್ಲಿ ವ್ಯಕ್ತಪಡಿಸಬಹುದಾದ ಯಾವ ಪ್ರಚೋದನಕಾರಿ ಚಟುವಟಿಕೆಯಲ್ಲೂ ಭಾಗಿಯಾಗಿಲ್ಲ. ಕ್ರಿಯೆಯ ಮರ್ಮವನ್ನು  ಅರಿತುಕೊಳ್ಳುತ್ತಾ ಪ್ರತಿಕ್ರಿಯೆ ವ್ಯಕ್ತಪಡಿಸುವ ಈ ಬುದ್ಧಿವಂತಿಕೆಯೇ ಬಹುದೊಡ್ಡ ಯಶಸ್ಸು. ಮುಂದಿನ ದಿನಗಳಲ್ಲಿ ಮುಸ್ಲಿಮರ ಬು ದ್ಧಿವಂತಿಕೆಗೆ ಸವಾಲೆಸೆಯುವ ಕ್ರಿಯೆಗಳು ಖಂಡಿತ ನಡೆಯಬಹುದು. ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭಾ ಚುನಾವಣೆ  ಹತ್ತಿರವಿರುವುದರಿಂದ ಪ್ರಚೋದನಾತ್ಮಕ ಕ್ರಿಯೆಗಳು ಅನಿರೀಕ್ಷಿತವಲ್ಲ. ಆದ್ದರಿಂದ,


 ಮುಸ್ಲಿಮ್ ಸಮುದಾಯ ಎಲ್ಲೂ ತಾಳ್ಮೆಗೆಡಬಾರದು.  ಜಾಣತನದ ಪ್ರತಿಕ್ರಿಯೆಯು ಎಂಥ ಪ್ರಚೋದನಾತ್ಮಕ ಕ್ರಿಯೆಯನ್ನೂ ಸೋಲಿಸಬಲ್ಲುದು.

Tuesday 19 October 2021

ಮುಈನುಲ್ ಹಕ್‌ನ ಆತಂಕವನ್ನು ಸಮರ್ಥಿಸಿದ ಲಾಠಿ ಮತ್ತು ಫೋಟೋಗ್ರಾಫರ್




ಶಸ್ತ್ರ  ಸಜ್ಜಿತ 20ರಿಂದ 30ರಷ್ಟು ಪೊಲೀಸರನ್ನು ವಿರೋಧಿಸುತ್ತಾ, ಆಕ್ರೋಶದಿಂದ ಬಿದಿರು ಕೋಲನ್ನು ಹಿಡಿದು ಅವರೆದುರು ಓಡಿ ಬರುವ  ಒಂಟಿ ಸಣಕಲು ಕಾರ್ಮಿಕನನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ? ಆತ ಆ ಬಿದಿರು ಕೋಲಿನಿಂದ ಮೂರು ಡಜನ್ ಬಂದೂಕುಧಾರಿ  ಪೊಲೀಸರನ್ನು ಸಾಯಿಸಲು ಸಮರ್ಥನೇ? ಪೊಲೀಸರ ಕೈಯಲ್ಲಿ ಬಂದೂಕಿದೆ ಎಂಬುದನ್ನು ತಿಳಿದೂ ಆತ ಹಾಗೆ ಓಡಿ ಬರುತ್ತಾನೆಂದರೆ,  ಆತನೊಳಗೆ ಮಡುಗಟ್ಟಿರುವ ಸಂಕಟವೇನು? ಬಿದಿರುಕೋಲು ಮತ್ತು ಬಂದೂಕುಗಳ ನಡುವೆ ಸಮರವಾದರೆ ಬಂದೂಕೇ ಗೆಲ್ಲುತ್ತದೆ  ಎಂಬುದು ಆತನಿಗೆ ಬಿಡಿ, ಪುಟ್ಟ ಮಕ್ಕಳಿಗೆ ಗೊತ್ತು. ಮತ್ತೂ ಯಾಕೆ ಆತ ಆ ದುರ್ಬಲ ಕೋಲನ್ನು ಹಿಡಿದು ಪೊಲೀಸರತ್ತ ನುಗ್ಗಿದ  ಅಂದರೆ,

ಅದು ಆತನ ಅಸ್ತಿತ್ವದ ಪ್ರಶ್ನೆ. ಪುಟ್ಟ ಗುಡಿಸಲು ಕಟ್ಟಿ ಬದುಕುತ್ತಿದ್ದವನ ಕನಸನ್ನು ಪ್ರಭುತ್ವದ ಬುಲ್ಡೋಜರು ನಾಶ ಮಾಡಿದೆ. ಮುಂದೇನು  ಅನ್ನುವುದು ಗೊತ್ತಿಲ್ಲ. ಪತ್ನಿ ಇದ್ದಾಳೆ, ಮಕ್ಕಳಿದ್ದಾರೆ. ಮತ್ತು ಹೀಗೆ ಬುಲ್ಡೋಜರ್‌ಗೆ ಉರುಳಿದ ಮನೆಗಳು 800ರಷ್ಟು ಇವೆ. ನಿರ್ವಸಿತರ  ದಂಡೇ ಸೃಷ್ಟಿಯಾಗಿದೆ. ಮುಂದೇನು ಎಂಬುದನ್ನು ಬುಲ್ಡೋಜರೂ ಹೇಳುತ್ತಿಲ್ಲ. ಬುಲ್ಡೋಜರನ್ನು ಕಳುಹಿಸಿದವರೂ ಹೇಳುತ್ತಿಲ್ಲ.  ಸೋಶಿಯಲ್ ಮೀಡಿಯಾಗಳು ಕೂಡಾ ಇವರನ್ನು ಅಕ್ರಮ ವಾಸಿಗಳು, ಬಾಂಗ್ಲಾದೇಶೀಯರು ಎಂದು ಕರೆಯುತ್ತಿವೆಯೇ ಹೊರತು  ಅವರಿಗೂ ಆ ಮಣ್ಣಿಗೂ ನಡುವಿನ ಸಂಬಂಧ ಮತ್ತು ಅವರ ಸದ್ಯದ ಸಂಕಟಕ್ಕೂ ಧ್ವನಿ ನೀಡುತ್ತಿಲ್ಲ. ಒಂದುಕಡೆ,

ಬಿದಿರುಕೋಲು ಹಿಡಿದು ಓಡಿ ಬಂದ ಮುಈನುಲ್ ಹಕ್ ಮತ್ತು ಆತ ಗುರುತಿಸಿಕೊಂಡಿರುವ ಸಮುದಾಯವನ್ನು ಗುರಿಯಾಗಿಸಿಕೊಂಡೇ  ಎನ್‌ಆರ್‌ಸಿಯನ್ನು ಜಾರಿ ಮಾಡುತ್ತಿರುವ ಪ್ರಭುತ್ವ ಹಾಗೂ ಇನ್ನೊಂದೆಡೆ, ಯಾವ ಪರ್ಯಾಯವನ್ನೂ ಕಲ್ಪಿಸದೆಯೇ ಗುಡಿಸಲುಗಳನ್ನು  ನೆಲಸಮಗೊಳಿಸಿದ ಸ್ಥಳೀಯಾಡಳಿತ- ಇಂಥ ಸನ್ನಿವೇಶದಲ್ಲಿ ಬಿದಿರನ್ನು ಎತ್ತಿಕೊಂಡ ಸಂತ್ರಸ್ತನನ್ನು ಪೊಲೀಸರು ಹೇಗೆ ಸಂಭಾಳಿಸಬೇಕು?  ಆ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಬೇಕಾದ ಫೋಟೋಗ್ರಾಫರ್ ಯಾವುದಕ್ಕೆ ಮಹತ್ವ ನೀಡಬೇಕು? ಅಂದಹಾಗೆ,

ನಿರೀಕ್ಷೆ ಮತ್ತು ಭರವಸೆಗಳನ್ನು ಕಳಕೊಂಡ ಹಾಗೂ ಹತಾಶೆಯ ಪರಮಾವಧಿಗೆ ತಲುಪಿದ ವ್ಯಕ್ತಿ ಮಾತ್ರ ತನ್ನೆದುರು ಯಾರಿದ್ದಾರೆ ಮತ್ತು  ಅವರ ಕೈಗಳಲ್ಲಿ ಏನೇನಿವೆ ಎಂಬುದನ್ನು ಲೆಕ್ಕಿಸದೇ ಮುನ್ನುಗ್ಗಬಲ್ಲ. ಯಾಕೆಂದರೆ, ಬದುಕುವುದಕ್ಕಾಗಿ ಅದವನ ಕೊನೆಯ ಪ್ರಯತ್ನ.  ಆದ್ದರಿಂದ ಯಾಕೆ ಇಂಥದ್ದೊಂದು  ಹತಾಶೆ ಮುಈನುಲ್ ಹಕ್‌ನಲ್ಲಿ ನಿರ್ಮಾಣವಾಗಿರಬಹುದು ಎಂಬ ಬಗ್ಗೆ ಆತನ ಎದೆಗೆ ಗುಂಡು  ಹೊಡೆದವರನ್ನು ಮತ್ತು ಆತನ ಜಡ ಶರೀರದ ಮೇಲೆ ನರ್ತನ ಮಾಡಿದ ಫೋಟೋಗ್ರಾಫರನ್ನು ಸಮರ್ಥಿಸುತ್ತಿರುವವರು ಸ್ವಯಂ  ಪ್ರಶ್ನಿಸಿಕೊಳ್ಳಬೇಕು.

ಅಸ್ಸಾಮ್‌ನಲ್ಲಿರುವ ಮುಸ್ಲಿಮರನ್ನು ಅವಹೇಳನ, ವ್ಯಂಗ್ಯಕ್ಕೆ ಗುರಿಪಡಿಸುವ ಮತ್ತು ಅನ್ಯರೆಂದು ಬಿಂಬಿಸುವ ತಂತ್ರವು ಅಲ್ಲಿ ಮತ್ತು  ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವ್ಯವಸ್ಥಿತವಾಗಿ ನಡೆಯತೊಡಗಿದೆ. ಅಸ್ಸಾಮ್‌ನಲ್ಲಿ 40 ಲಕ್ಷದಷ್ಟು ಅಕ್ರಮ  ಬಾಂಗ್ಲಾದೇಶಿ ವಲಸಿಗರಿದ್ದಾರೆ ಎಂದು ಎನ್‌ಆರ್‌ಸಿಯ ಮೊದಲ ಪಟ್ಟಿಯಲ್ಲಿ ಹೇಳಲಾಗಿತ್ತು. ಹಾಗೆ ಹೇಳುವಾಗ ಅವರೆಲ್ಲ ಮುಸ್ಲಿಮರು  ಎಂಬ ಹುಸಿ ಅರ್ಥವನ್ನು ಅದಕ್ಕೆ ಕೊಡುವ ಪ್ರಯತ್ನ ನಡೆಯಿತು. ಅಸ್ಸಾಮ್‌ನಲ್ಲಿ ಲಕ್ಷಾಂತರ ಮುಸ್ಲಿಮರು ಅಕ್ರಮವಾಗಿ ವಾಸಿಸುತ್ತಿದ್ದು,  ಇದರಿಂದಾಗಿ ಸ್ಥಳೀಯರ ಉದ್ಯೋಗ, ಆಹಾರ, ಅಧಿಕಾರಕ್ಕೆ ಕುತ್ತು ಬರುತ್ತಿದೆ ಎಂಬ ಹುಸಿ ಸುಳ್ಳನ್ನು ಸೋಶಿಯಲ್ ಮೀಡಿಯಾಗಳಲ್ಲಿ  ಮತ್ತು ಮುಖ್ಯವಾಹಿನಿಯ ಟಿ.ವಿ. ಚಾನೆಲ್‌ಗಳಲ್ಲೂ ಸಂದರ್ಭಕ್ಕೆ ತಕ್ಕಂತೆ ಪ್ರಚಾರ ಮಾಡುವ ಪ್ರಕ್ರಿಯೆ  ನಿರಂತರ ನಡೆಯತೊಡಗಿತು.  ಬಿಜೆಪಿ ಅಸ್ಸಾಮ್‌ನಲ್ಲಿ ಚುನಾವಣೆಯನ್ನು ಎದುರಿಸಿರುವುದೇ ಅಕ್ರಮ ಮುಸ್ಲಿಮರು ಎಂಬ ಧ್ಯೇಯದ ಅಡಿಯಲ್ಲಾಗಿರುವುದರಿಂದ ಮತ್ತು  ಅದನ್ನು ಮುಂದಿಟ್ಟು ಸರ್ವ ಮುಸ್ಲಿಮರನ್ನು ಅಪರಾಧಿ ಭಾವದಲ್ಲಿ ಬದುಕುವಂತೆ ಮಾಡುವ ಹುನ್ನಾರದ ಭಾಷಣಗಳು  ಪ್ರತ್ಯಕ್ಷವೋ  ಪರೋಕ್ಷವೋ ನಡೆಯುತ್ತಿದ್ದುದರಿಂದ ಸಾಮಾಜಿಕವಾಗಿ ಮುಸ್ಲಿಮರೆಂದರೆ ಅನ್ಯರು ಎಂಬ ಭಾವ ಸೃಷ್ಟಿಯಾಗುವುದಕ್ಕೆ  ಸಾಧ್ಯವಾಗತೊಡಗಿತು. ಮುಸ್ಲಿಮರ ಮೇಲೆ ನಡೆಯುವ ಯಾವುದೇ ಅನ್ಯಾಯವೂ ‘ಅಕ್ರಮ ವಲಸಿಗ’ ಎಂಬ ಹಣೆಪಟ್ಟಿಯೊಂದಿಗೆ  ನ್ಯಾಯೀಕರಿಸಲ್ಪಡುವ ಸನ್ನಿವೇಶ ನಿರ್ಮಾಣವಾಗತೊಡಗಿತು. ಮುಸ್ಲಿಮರಿಗೆ ಹೊಡೆದಷ್ಟೂ ಓಟುಗಳು ಹೆಚ್ಚಾಗುತ್ತವೆ ಎಂಬ ಅಂಶ ಅಧಿಕಾರಸ್ಥರಿಗೆ ಸ್ಪಷ್ಟವಾಗುವುದರೊಂದಿಗೆ, ಹೊಡೆತವನ್ನು ಸಹಿಸಿಕೊಳ್ಳುವ ಸಂದರ್ಭಗಳೂ ಸೃಷ್ಟಿಯಾಗತೊಡಗಿದುವು. ಎಲ್ಲಿಯವರೆಗೆಂದರೆ,

ಅಂತಿಮ ಹಂತದ ಎನ್‌ಆರ್‌ಸಿ ಪಟ್ಟಿ ಬಿಡುಗಡೆಗೊಂಡು, ಅದರಲ್ಲಿ ಅಕ್ರಮ ವಲಸಿಗರಾಗಿ ಮುಸ್ಲಿಮರಿಗಿಂತ ಹಿಂದೂಗಳ ಸಂಖ್ಯೆಯೇ  ಅಧಿಕವಿರುವುದು ಬಹಿರಂಗವಾದಾಗ ಆ ಇಡೀ ಎನ್‌ಆರ್‌ಸಿ ಪಟ್ಟಿಯನ್ನೇ ತಿರಸ್ಕರಿಸಲು ಅಧಿಕಾರದಲ್ಲಿರುವವರು ಮುಂದಾದರು. ಇಡೀ  ದೇಶದಲ್ಲೇ  ಎನ್‌ಆರ್‌ಸಿ ಮಾಡುವಾಗ ಅಸ್ಸಾಮ್‌ನಲ್ಲೂ ಹೊಸದಾಗಿ ಎನ್‌ಆರ್‌ಸಿ ಮಾಡುವೆವು ಎಂಬ ಅರ್ಥದಲ್ಲಿ ಕೇಂದ್ರ ಗೃಹಸಚಿವರೇ  ಹೇಳಿಕೆಯನ್ನೂ ಕೊಟ್ಟರು. ಹಾಗಂತ,

ಕಳೆದ ಆರೇಳು ವರ್ಷಗಳಲ್ಲಿ ನಡೆದಿರುವ ಬೆಳವಣಿಗೆಗಳು ಇವು. ದಕ್ಷಿಣ ಭಾರತದ ಪಾಲಿಗೆ ಈ ಬೆಳವಣಿಗೆಗಳು ಅಷ್ಟೇನೂ ಪರಿಚಿತ  ಮತ್ತು ಬಹುಚರ್ಚಿತ ಅಲ್ಲವಾಗಿದ್ದರೂ ಉತ್ತರ ಭಾರತದ ಪಾಲಿಗೆ ಹಾಗಿಲ್ಲ. ಅಸ್ಸಾಮ್‌ನ ಮಟ್ಟಿಗಂತೂ ಇದೊಂದು ಸಿಡಿಯಲಿರುವ  ಲಾವಾರಸ. ಅಲ್ಲಿಯ ಮುಸ್ಲಿಮರ ಒಳಗಿನ ಬೇಗುದಿ. ಅವರು ಅನ್ಯ, ಅಕ್ರಮ ವಲಸಿಗ, ಬಾಂಗ್ಲಾದೇಶಿ ಎಂಬೆಲ್ಲಾ ಹೀನೈಕೆಯನ್ನು ಪ್ರತಿನಿತ್ಯ ಅನುಭವಿಸುತ್ತಾ ಬದುಕುವುದು ಸುಲಭ ಸಾಧ್ಯವಲ್ಲ. ತಾವು ಅಕ್ರಮ ವಲಸಿಗರಲ್ಲದಿದ್ದರೂ ಮತ್ತು ತಲೆತಲಾಂತರಗಳಿಂದ ಅದೇ  ಮಣ್ಣಿನಲ್ಲಿ ದುಡಿಯುತ್ತಾ ಬದುಕುತ್ತಿದ್ದರೂ ಹಾಗೂ ಎಲ್ಲರಂತೆ ತೆರಿಗೆ ಪಾವತಿಸುತ್ತಾ ನೆಲದ ಕಾನೂನಿಗೆ ಬದ್ಧವಾಗುತ್ತಾ ಜೀವಿಸುತ್ತಿದ್ದರೂ  ಪ್ರತಿನಿತ್ಯ ಕೇಳಬೇಕಾದ ಕೊಂಕುನುಡಿಗಳನ್ನು ಅವರು ಸಹಿಸಬೇಕು. ಹಾಗಂತ,

ಇಂಥ  ಅಪಪ್ರಚಾರಗಳು ಮುಸ್ಲಿಮರ ಪಾಲಿಗೆ ಹಿಂಸಕವಾದರೆ, ಮುಸ್ಲಿಮೇತರರ ಪಾಲಿಗೆ ಅದು ಅಪಪ್ರಚಾರವಾಗಿ  ಗುರುತಿಸಿಕೊಂಡಿರಬೇಕಾದ ಅಗತ್ಯವೂ ಇಲ್ಲ. ಅವರದನ್ನು ನಿಜ ಎಂದೇ ನಂಬಿರಬಹುದು. ಅಥವಾ ನಂಬಿಸುವಂಥ  ಪ್ರಯತ್ನಗಳು  ವ್ಯವಸ್ಥಿತವಾಗಿ ನಡೆಯುತ್ತಿರಬಹುದು. ಆದ್ದರಿಂದ ಮುಸ್ಲಿಮರನ್ನು ಅವರು ಅಕ್ರಮ ವಲಸಿಗರೆಂದೇ ನಿಜವಾಗಿಯೂ ನಂಬುವ  ವಾತಾವರಣವೂ ಸೃಷ್ಟಿಯಾಗಿರಬಹುದು. ಆ ಕಾರಣಕ್ಕಾಗಿಯೇ ಮುಸ್ಲಿಮರ ಮೇಲೆ ಅಸಂತೋಷವನ್ನು ಹೃದಯದಲ್ಲಿ  ಬಚ್ಚಿಟ್ಟುಕೊಂಡಿರಬಹುದು. ತಮ್ಮ ಉದ್ಯೋಗ, ಭೂಮಿ, ಹಕ್ಕನ್ನು ಕಸಿಯುತ್ತಿರುವವರು ಎಂಬ ಬೇಗುದಿಯೊಂದಿಗೆ ಅವರು  ಬದುಕುತ್ತಿರಬಹುದು. ಅದಕ್ಕೆ ಪೂರಕವಾಗುವ ಸುಳ್ಳು ಚಿತ್ರ ಮತ್ತು ವೀಡಿಯೋಗಳನ್ನು ಶಂಕರ್ ವಿಜಯ್ ಪೂನಿಯಾನಂಥ  ಫೋಟೋಗ್ರಾಫರ್‌ಗಳು ಒದಗಿಸುತ್ತಲೂ ಇರಬಹುದು. ಅಂದಹಾಗೆ, 

ಈಗ ಆ ಬಿದಿರಿನಂಥ ದೇಹದ ಮುಈನುಲ್ ಹಕ್ಕನ್ನು ಮತ್ತೆ  ಕಣ್ಣೆದುರು ತಂದುಕೊಳ್ಳಿ. ಏನನಿಸುತ್ತದೆ? ಆ ಬಿದಿರು ಕೋಲು ಮುಳುಗುತ್ತಿರುವವನ ಪಾಲಿನ ಹುಲ್ಲುಕಡ್ಡಿಯಂತೆ ಕಾಣಿಸದೇ? ಭರವಸೆ  ಇಟ್ಟುಕೊಳ್ಳುವುದಕ್ಕೆ ಏನೇನೂ ಇಲ್ಲದಿರುವಾಗ ಓರ್ವ ನಿರ್ವಸಿತ ಮತ್ತು ಸಂತ್ರಸ್ತ ಬೇರೆ ಏನು ಮಾಡಿಯಾನು? ತನ್ನ ಸುತ್ತಲಿರುವವರು  ತಾನು ಹುಟ್ಟಿ ಬೆಳೆದ ಮಣ್ಣಿನಿಂದ ಹೊರಕ್ಕಟ್ಟುವುದಕ್ಕಾಗಿ ಸಂಚು ನಡೆಸುತ್ತಿದ್ದಾರೆ ಎಂಬುದು ಸ್ಪಷ್ಟವಾದಾಗ ತನ್ನೆದುರು ಇರುವವರಲ್ಲಿ  ಬಂದೂಕಿದೆಯೋ ಬಾಂಬಿದೆಯೋ ಎಂಬುದನ್ನು ಪರಿಗಣಿಸಲಾರರು ಎಂಬುದಕ್ಕೆ ಉದಾಹರಣೆಯಲ್ಲವೇ ಆ ಮುಈನುಲ್ ಹಕ್?  ಗುಂಡೇಟಿನಿಂದ ನೆಲಕ್ಕುರುಳಿದ ಆತನ ಮೇಲೆ 20ರಷ್ಟು ಪೊಲೀಸರು ಲಾಠಿಯಿಂದ ಹೊಡೆದರಲ್ಲ ಮತ್ತು ಆ ಫೋಟೋಗ್ರಾಫರ್ ಆತನ  ಮೇಲೆ ಜಿಗಿದನಲ್ಲ, ಅದು ಈ ಮುಈನುಲ್ ಹಕ್‌ನ ಆತಂಕದ ಸಮರ್ಥನೆಯಲ್ಲವೇ?
ಈ ಮಣ್ಣಿನಲ್ಲಿ ತನ್ನವರೆಂಬುವವರು ಯಾರೂ ಇಲ್ಲ ಎಂಬ ಭಾವ ಆತನಲ್ಲಿ ಸೃಷ್ಟಿಯಾಗಿದ್ದರೆ ಅದು ನಿರಾಧಾರ ಅಲ್ಲ. ಆತನಿಗೆ ಗುಂಡಿಟ್ಟ  ಪೊಲೀಸರು ಮತ್ತು ಆತನ ಮೇಲೆ ನರ್ತನ ಮಾಡಿದವನೇ ಅದಕ್ಕೆ ಪ್ರತ್ಯಕ್ಷ ಆಧಾರ. ಪೊಲೀಸರು ಪ್ರಭುತ್ವವನ್ನು ಪ್ರತಿನಿಧಿಸಿದರೆ,  ಫೋಟೋಗ್ರಾಫರ್ ಮಾಧ್ಯಮವನ್ನು ಪ್ರತಿನಿಧಿಸುತ್ತಾನೆ. ಪ್ರಭುತ್ವ ಮತ್ತು ಮಾಧ್ಯಮ ಕೈಕೈ ಜೋಡಿಸಿದರೆ, ಬೆಕ್ಕೂ ಹುಲಿಯಾದೀತು.  ಪ್ರಾಮಾಣಿಕರೂ ಪರಮ ಪಾಪಿಗಳಾದಾರು.

Tuesday 28 September 2021

2017-2021: ಹಿಂದೂ ಮುಸ್ಲಿಮ್ ಉನ್ಮಾದ ಯಾರ ಅಗತ್ಯ?


ಸನ್ಮಾರ್ಗ ಸಂಪಾದಕೀಯ 

ದೇಶದಲ್ಲಿ ನಿಜಕ್ಕೂ ಗಂಭೀರ ಚರ್ಚೆಗೆ ಒಳಗಾಗಬೇಕಾದ ವಿಷಯಗಳು ಯಾವುವು? ಗೋಡ್ಸೆಯೋ, ಮಂದಿರ-ಮಸೀದಿಯೋ, ಹಿಂದೂ-ಮುಸ್ಲಿಮರೋ? ನಿಜವಾಗಿ,

 ಸಾಮಾನ್ಯ ಜನರ ಬದುಕು ಮತ್ತು ಭಾವಗಳು ಇವುಗಳ ಸುತ್ತ ಇಲ್ಲವೇ ಇಲ್ಲ. ಮಧ್ಯಮ ಮತ್ತು ಅದಕ್ಕಿಂತ ಕೆಳಗಿನ ವರ್ಗದ ಜನರೇ 90% ಇರುವ ದೇಶದಲ್ಲಿ ಇವರ ಸಂಕಟಗಳೇ ಬೇರೆ. ಮಾಧ್ಯಮದ ಮಂದಿ ನಿರ್ದಿಷ್ಟ ಪ್ರಶ್ನೆಯನ್ನು ಕೇಳದೇ ನೇರವಾಗಿ ಅವರ ಮುಂದೆ ಮೈಕನ್ನಿಟ್ಟರೆ ನಿರುದ್ಯೋಗ, ತೈಲ ಬೆಲೆ ಏರಿಕೆ, ದುಬಾರಿಯಾಗಿರುವ ಅಗತ್ಯ ವಸ್ತುಗಳು, ಕೆಟ್ಟು ಹೋಗಿರುವ ರಸ್ತೆಗಳು, ಶಾಲಾ ಫೀಸು, ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಒದಗಿಸಲಾದ ಚಡಪಡಿಕೆ... ಇತ್ಯಾದಿಗಳ ಸುತ್ತವೇ ಮಾತು ಪ್ರಾರಂಭಿಸುತ್ತಾರೆ. ಆದರೆ, ಮಾಧ್ಯಮ ಮಂದಿಯ ಬಾಯಲ್ಲಿ ಗೋಡ್ಸೆ, ದೇವಸ್ಥಾನ, ಬಿಜೆಪಿ, ಕಾಂಗ್ರೆಸ್ಸು, ತಾಲಿಬಾನು, ಹಿಂದೂ-ಮುಸ್ಲಿಮ್ ಇತ್ಯಾದಿಗಳೇ ಇರುವುದರಿಂದ ಮತ್ತು ಜನರನ್ನು ಉನ್ಮಾದಗೊಳಿಸಲು ಈ ಬೆಲೆ ಏರಿಕೆ, ನಿರುದ್ಯೋಗ, ರಸ್ತೆ ಅವ್ಯವಸ್ಥೆ ಇತ್ಯಾದಿಗಳಿಂದ ಸಾಧ್ಯವಿಲ್ಲದೇ ಇರುವುದರಿಂದ ಅವರು ಜನರ ಈ ಎದೆಯ ಧ್ವನಿಗಿಂತ ಗೋಡ್ಸೆ, ದೇವಸ್ಥಾನ, ಮುಸ್ಲಿಮ್, ಹಿಂದೂ ಇತ್ಯಾದಿ ನಾಲಗೆಯ ಧ್ವನಿಗಾಗಿ ಪೀಡಿಸುತ್ತಾರೆ. ಇದರಿಂದಾಗಿ ನಿಜಕ್ಕೂ ದೇಶದಲ್ಲಿ ನಡೆಯಬೇಕಿರುವ ಮುಖ್ಯ ಚರ್ಚಾ ವಿಷಯಗಳು ಬದಿಗೆ ಸರಿದು, ಅಮುಖ್ಯ ಮತ್ತು ಉನ್ಮಾದಿತ ವಿಷಯಗಳೇ ಮುನ್ನೆಲೆಗೆ ಬರುತ್ತವೆ. ಅಂದಹಾಗೆ,

ಕಳೆದವಾರ ಹಿಂದೂ ಮಹಾಸಭಾದ ಮುಖಂಡ ಧರ್ಮೇಂದ್ರರ ಹೇಳಿಕೆ, ಮೈಸೂರಿನ ದೇವಸ್ಥಾನ ಧ್ವಂಸ, ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಮತ್ತು ಸಂಸದರೊಬ್ಬರ ಅಶ್ಲೀಲ ವೀಡಿಯೋದ ಸುತ್ತ ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳಲ್ಲಿ ಆದಷ್ಟು ಚರ್ಚೆಯು ದೇಶದಿಂದ ಕಾಲು ಕಿತ್ತ ಡೆಪ್ರಾಯಿಟ್ ಮೂಲದ ವಾಹನ ಉತ್ಪಾದಕ ಕಂಪೆನಿ ಫೋರ್ಡ್ ಮೋಟಾರ್ಸ್ ನ   ಬಗ್ಗೆ ಆಗಿಲ್ಲ. ಹಾಗಂತ, ಕೇವಲ ಈ ಫೋರ್ಡ್ ಮೋಟಾರ್ಸ್ ಕಂಪೆನಿ ಮಾತ್ರ ಬಾಗಿಲು ಮುಚ್ಚಿ ಈ ದೇಶದಿಂದ ಹೊರಟು ಹೋಗಿ ದ್ದಿದ್ದರೆ ಅದನ್ನು ಆ ಕಂಪೆನಿಯ ಒರಟುತನವಾಗಿಯೋ ಭಾರತೀಯ ಕಾನೂನುಗಳಿಗೆ ಬೆಲೆ ಕೊಡದ ಹುಂಬತನವಾಗಿಯೋ ಪರಿಗಣಿಸಬಹುದಿತ್ತು. ಆದರೆ 2017ರಿಂದ ಈ 2021ರ ನಡುವೆ 8ರಷ್ಟು ಬಹುಪ್ರಸಿದ್ಧ ಬಹುರಾಷ್ಟ್ರೀಯ ಕಂಪೆನಿಗಳು ಭಾರತವನ್ನು ಬಿಟ್ಟು ಹೋಗಿವೆ. ಈ ಸರತಿಯಲ್ಲಿ ಫೋರ್ಡ್ ಮೋಟಾರ್ಸ್ ಇತ್ತೀಚಿನದ್ದು. 

1995ರಲ್ಲಿ ದೇಶಕ್ಕೆ ಕಾಲಿಟ್ಟ ಫೋರ್ಡ್ ಕಂಪೆನಿಯು ಆರಂಭದಲ್ಲಿ 250 ಕೋಟಿ ಡಾಲರ್‌ನಷ್ಟು ಭಾರೀ ಮೊತ್ತವನ್ನು ಹೂಡಿಕೆ ಮಾಡಿತ್ತು. ವರ್ಷಕ್ಕೆ 4 ಲಕ್ಷ ಕಾರುಗಳನ್ನು ಉತ್ಪಾದಿಸುವ ಗುರಿ ಹೊಂದಿದ್ದ ಫೋರ್ಡ್, ಅದೇ ಉದ್ದೇಶಕ್ಕಾಗಿ ದೇಶದಲ್ಲಿ ಎರಡು ಬೃಹತ್ ಕಾರು ತಯಾರಿಕಾ ಘಟಕಗಳನ್ನು ಸ್ಥಾಪಿಸಿತ್ತು. ಈ ಎರಡೂ ಘಟಕಗಳಲ್ಲಿ 4 ಸಾವಿರದಷ್ಟು ನೇರ ಉದ್ಯೋಗಿಗಳಿದ್ದರು ಮತ್ತು 170 ಡೀಲರ್‌ಗಳಿದ್ದರು. ಪರೋಕ್ಷ ಉದ್ಯೋಗಿಗಳನ್ನು ಲೆಕ್ಕ ಹಾಕಿದರೆ ಒಟ್ಟು 40 ಸಾವಿರ ಉದ್ಯೋಗಿಗಳೆನ್ನಬಹುದು. ಆದರೆ, ಫೋರ್ಡ್ ಮೋಟಾರ್ಸ್ ಇದೀಗ ಬಾಗಿಲು ಮುಚ್ಚಿರುವುದರಿಂದ ಈ ಉದ್ಯೋಗಿಗಳೆಲ್ಲ ಅತಂತ್ರರಾಗಿದ್ದಾರೆ. ದೇಶಕ್ಕೆ ಐಕಾನ್, ಮೊಡೆಓ, ಫ್ಯೂಶನ್, ಫಿಗೋ, ಫಿಯೆಸ್ತಾ, ಎಂಡೀವರ್, ಇಕೋಸ್ಪೋರ್ಟ್ಸ್ ನಂಥ  ಸಾಮಾನ್ಯ ಮತ್ತು ಐಶಾರಾಮಿ ಕಾರುಗಳನ್ನು ತಯಾರಿಸಿ ಕೊಟ್ಟ ಕಂಪೆನಿಯೊಂದು ಹೀಗೆ ಬಾiಗಿಲು ಮುಚ್ಚುವುದೆಂದರೆ, 40 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಮತ್ತು ಅವರನ್ನು ಅವಲಂಬಿಸಿರುವ ಲಕ್ಷಕ್ಕಿಂತಲೂ ಅಧಿಕ ಮಂದಿಯನ್ನು ನಡುನೀರಲ್ಲಿ ಬಿಟ್ಟಂತೆ. ಅಷ್ಟಕ್ಕೂ, ಫೋರ್ಡ್ ನಂತೆ  ಈ ದೇಶವನ್ನು ಬಿಟ್ಟ ಕಾರು ಕಂಪೆನಿಗಳು ಇನ್ನೂ ಹಲವಿವೆ-

2017ರಲ್ಲಿ ಅಮೇರಿಕದ ಪ್ರಸಿದ್ಧ ಕಾರು ತಯಾರಿಕಾ ಕಂಪೆನಿ ಜನರಲ್ ಮೋಟಾರ್ಸ್ ಭಾರತವನ್ನು ಬಿಟ್ಟು ತೆರಳಿತು. 2018ರಲ್ಲಿ ವೋಕ್ಸ್ ವ್ಯಾಗನ್  ಗುಂಪಿನ ಎಂಎಎನ್ ಡ್ರಿಕ್ಸ್ ಕಂಪೆನಿಯು ಬಾಗಿಲು ಮುಚ್ಚಿತು. ಇದರ ಜೊತೆಗೇ ಇದೇ ವರ್ಷದಲ್ಲಿ ಈಷರ್ ಪೊಲಾರಿಸ್ ಎಂಬ ಬಹುರಾಷ್ಟ್ರೀಯ ಕಂಪೆನಿಯೂ ದೇಶ ತೊರೆಯಿತು. 2019ರಲ್ಲಿ ಯುಎಂ ಮೋಟಾರ್ ಸೈಕಲ್ಸ್ ಮತ್ತು ಫಿಯೆಟ್ ಕಂಪೆನಿ ಕೂಡ ಬಾಗಿಲು ಎಳೆದು ದೇಶದಿಂದ ಹೊರಟು ಹೋಯಿತು. ಬೈಕ್ ತಯಾರಿಕೆಯಲ್ಲಿ ಬಹುಪ್ರಸಿದ್ಧಿಯನ್ನು ಪಡೆದಿರುವ ಹಾರ್ಲೆ ಡೇವಿಡ್‌ಸನ್ 2020ರಲ್ಲಿ ಬೈಕ್ ತಯಾರಿಕೆಯನ್ನು ಸ್ಥಗಿತಗೊಳಿಸಿ ಹೊರಟು ಹೋಯಿತು. ಅಂದಹಾಗೆ,

ಯಾವುದೇ ಒಂದು ಬೃಹತ್ ಕಂಪೆನಿ ಬಾಗಿಲು ಮುಚ್ಚುವುದರಿಂದ ಅದರ ಮಾಲಕರಿಗಷ್ಟೇ ತೊಂದರೆಯಾಗಿರುತ್ತಿದ್ದರೆ, ಅದಕ್ಕಾಗಿ ಅತೀವ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರಲಿಲ್ಲ. ಅವರು ಒಂದರಲ್ಲಾದ ನಷ್ಟವನ್ನು ಇನ್ನೊಂದರಲ್ಲಿ ಸರಿ ತೂಗಿಸಬಲ್ಲರು. ಇನ್ನೊಂದು ದೇಶಕ್ಕೆ ಹೋಗಿ ಅಲ್ಲಿಯ ಬ್ಯಾಂಕುಗಳಿಂದ  ಸಾಲ ಪಡೆದು, ಬಳಿಕ ಪ್ರಭುತ್ವದ ಮೇಲೆ ಪ್ರಭಾವ ಬೀರಿ ಒಂದೋ ಬಡ್ಡಿ ಮನ್ನಾ ಅಥವಾ ಸಾಲ ಮನ್ನಾವನ್ನೇ ಮಾಡಿಕೊಳ್ಳಬಲ್ಲರು. ಆದರೆ, ಅದರಲ್ಲಿದ್ದ ಸಾಮಾನ್ಯ ಉದ್ಯೋಗಿಗಳು ಮತ್ತು ಅವರನ್ನು ಅವಲಂಬಿಸಿರುವವರಲ್ಲಿ ಈ ಸಾಮರ್ಥ್ಯ ಇರುವುದಿಲ್ಲ. ಅವರು ಕಂಗಾಲಾಗುತ್ತಾರೆ. ಇನ್ನೊಂದು ಉದ್ಯೋಗವೂ ಕಷ್ಟವಾದಾಗ ಆತ್ಮಹತ್ಯೆಯಂಥ ಅತಿ ದಾರುಣ ಆಯ್ಕೆಗೂ ಮುಂದಾಗುತ್ತಾರೆ. ನೋಟ್ ಬ್ಯಾನ್ ಬಳಿಕದ ಆತ್ಮಹತ್ಯೆ ಪ್ರಕರಣಗಳನ್ನು ವಿಶ್ಲೇಷಿಸಿದರೆ ಹೀಗೆ ಉದ್ಯೋಗ ನಷ್ಟವಾಗಿರುವವರೂ ಆ ಪಟ್ಟಿಯಲ್ಲಿರುವುದು ಕಾಣ ಸಿಗುತ್ತದೆ. ನಿಜವಾಗಿ,

ದೇಶದ ಅರ್ಥವ್ಯವಸ್ಥೆಗೆ ಮಂಕು ಕವಿಯಲು ಪ್ರಾರಂಭವಾದದ್ದು ಕೊರೋನಾ ಕಾಲದ ಬಳಿಕದಿಂದಲ್ಲ. ನೋಟ್ ಬ್ಯಾನ್ ಇದರ ಆರಂಭವಾಗಿತ್ತು. ಆಗಲೇ ರಘುರಾಮ್ ರಾಜನ್‌ರಂಥ ಪ್ರಮುಖ ಆರ್ಥಿಕ ತಜ್ಞರು ಈ ನಿರ್ಧಾರದ ಅಪಾಯವನ್ನು ಗುರುತಿಸಿದ್ದರು. ಭವಿಷ್ಯದಲ್ಲಿ ಭಾರೀ ಆರ್ಥಿಕ ಹೊಡೆತ ನೀಡುವ ಅವೈಜ್ಞಾನಿಕ ನಿರ್ಧಾರ ಇದು ಎಂದೂ ಹೇಳಿದ್ದರು. ಇದು ನಿಧಾನಕ್ಕೆ ಸಾಬೀತಾ ಗುತ್ತಲೂ ಬಂತು. ಬೃಹತ್ ಉದ್ಯಮಗಳು ಮಾತ್ರವಲ್ಲ, ಸಣ್ಣ ಸಣ್ಣ ಕೈಗಾರಿಕೆಗಳು, ಗುಡಿ ಕಸುಬುಗಳು ಬಾಗಿಲು ಮುಚ್ಚಿದುವು. ಬೃಹತ್ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೈಬಿಡುವ ಪ್ರಕ್ರಿಯೆಯನ್ನು ಕಂಪೆನಿಗಳೇ ಮಾಡತೊಡಗಿದುವು. ಆರ್ಥಿಕ ಹಿಮ್ಮುಖ ಆರಂಭವಾಯಿತು. ಅಂದಿನಿಂದ ಆರಂಭವಾದ ಈ ಬಿಕ್ಕಟ್ಟು ಕೊರೋನಾದ ಈ ಕಾಲದಲ್ಲಂತೂ ಬಿಗಡಾಯಿಸಿದೆ. ಇಂಥ ಸಮಯದಲ್ಲಿ ಜನರ ಜೊತೆ ನಿಲ್ಲಬೇಕಾದ ಸರ್ಕಾರವಂತೂ ಖಜಾನೆ ತುಂಬಿಸುವ ತರಾತುರಿಯಲ್ಲಿದೆ. ಪೆಟ್ರೋಲ್, ಡೀಸೆಲ್‌ಗಳ ಬೆಲೆಗಳಂತೂ ಆಕಾಶ ಮುಟ್ಟಿವೆ. ಸ್ವತಂತ್ರ ಭಾರತದ ಈ 7 ದಶಕಗಳಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿದ್ದು ಇದೇ ಮೊದಲು. ಡೀಸೆಲ್ ಬೆಲೆಯೂ ಎಗ್ಗಿಲ್ಲದೇ ಏರಿರುವುದರಿಂದ ಅಗತ್ಯ ವಸ್ತುಗಳು ಬೆಂಕಿ ಕೆಂಡವಾಗಿವೆ. ಮನ್‌ಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‌ಗಳ ನಡುವೆ ಕನಿಷ್ಠ 20 ರೂಪಾಯಿಗಳಷ್ಟಾದರೂ ಅಂತರವನ್ನು ಕಾಯ್ದಿಟ್ಟುಕೊಳ್ಳುತ್ತಿತ್ತು. ಪೆಟ್ರೋಲ್ ಬೆಲೆ 70 ರೂಪಾಯಿಯಾದರೆ ಡೀಸೆಲ್ 50 ಅಥವಾ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿತ್ತು. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ ಆಗುತ್ತಿರಲಿಲ್ಲ. ಯಾಕೆಂದರೆ, 

ಅಗತ್ಯ ವಸ್ತುಗಳನ್ನು ಸಾಗಾಟ ಮಾಡುವುದು ಲಾರಿಗಳಾದ್ದರಿಂದ ಮತ್ತು ಅವು ಡೀಸೆಲ್ ಉಪಯೋಗಿಸುತ್ತಿದ್ದುದರಿಂದ ಜನಸಾಮಾನ್ಯರ ಬದುಕು ಅಷ್ಟರ ಮಟ್ಟಿಗೆ ನೆಮ್ಮದಿಯದ್ದಾಗಿತ್ತು. ಈಗ ಡೀಸೆಲ್ ಬೆಲೆಯೇ ನೂರರಲ್ಲಿದೆ. ಸಹಜವಾಗಿ ಇದರ ಪರಿಣಾಮ ಅಗತ್ಯ ವಸ್ತುಗಳ ಮೇಲಾಗುತ್ತಿದೆ. ಇನ್ನು, ಹೊಟೇಲುಗಳಿಗೆ ಪ್ರವೇಶಿಸದಿರುವುದೇ ಉತ್ತಮ ಎಂಬ ವಾತಾವರಣ ಇದೆ. ಗೃಹಬಳಕೆ ಮತ್ತು ಕಮರ್ಷಿಯಲ್ ಬಳಕೆ- ಎರಡೂ ರೀತಿಯ ಗ್ಯಾಸ್‌ಗಳಿಗೂ ಸರ್ಕಾರ ವಿಪರೀತ ಬೆಲೆ ಏರಿಸಿರುವುದರಿಂದ ಹೊಟೇಲಿನ ಚಾ-ತಿಂಡಿ ತಿನಿಸುಗಳು ಮತ್ತು ಊಟಗಳು ಭಯ ತರಿಸುತ್ತಿವೆ. ಅಂದಹಾಗೆ,

ಮಂದಿರ-ಮಸೀದಿ, ಹಿಂದೂ-ಮುಸ್ಲಿಮ್‌ಗಳು ಯಾರ ಹೊಟ್ಟೆಯನ್ನೂ ತುಂಬಿಸಲ್ಲ. ಇವೆಲ್ಲವನ್ನೂ ಆಡಳಿತ ಮತ್ತು ಅದರ ಬೆಂಬಲಿಗರು ಮತ್ತೆ ಮತ್ತೆ ಮುನ್ನೆಲೆಗೆ ತರುತ್ತಿರುವುದರ ಉದ್ದೇಶವೇ ಮುನ್ನೆಲೆಯಲ್ಲಿರುವ ಹಸಿವು, ಬಡತನ, ಬೆಲೆಏರಿಕೆ, ನಿರುದ್ಯೋಗದಂಥ ಬಹುಮುಖ್ಯ ಮತ್ತು ನಿಜ ಸಮಸ್ಯೆಗಳನ್ನು ಹಿನ್ನೆಲೆಗೆ ತಳ್ಳುವುದಕ್ಕೆ. ಇದರಲ್ಲಿ ಪ್ರಭುತ್ವ ಯಶಸ್ವಿಯಾದಷ್ಟೂ ಜನರು ಹೈರಾಣಾಗುತ್ತಲೇ ಹೋಗುತ್ತಾರೆ. ಬೃಹತ್ ಕಂಪೆನಿಗಳು ದೇಶದಿಂದ ಕಾಲ್ಕೀಳುತ್ತಿದ್ದರೂ ಮಾಧ್ಯಮಗಳು ಮಾತ್ರ ಹಿಂದೂ-ಮುಸ್ಲಿಮ್‌ಗಳ ಸುತ್ತವೇ ಗಿರಕಿ ಹೊಡೆಯುತ್ತಿರುವುದು ಪ್ರಭುತ್ವ ಹೆಣೆದ ಸಂಚಿನ ಭಾಗ. ಜನರು ಬೀದಿಗಿಳಿದು ಪ್ರಶ್ನಿಸುವುದೇ ಪರಿವರ್ತನೆಗಿರುವ ದಾರಿ.

Friday 24 September 2021

2014ರ ಮೊದಲಿನ ಚಿತ್ರಗಳು ಹೇಳುತ್ತಿರುವ ಕತೆ

 


ಸನ್ಮಾರ್ಗ ಸಂಪಾದಕೀಯ 

2020 ಮೇ ತಿಂಗಳಿನಲ್ಲಿ ಈ ದೇಶದಲ್ಲಿ ಅಡುಗೆ ಅನಿಲದ ಬೆಲೆ 581 ರೂಪಾಯಿಯಿತ್ತು. ಈಗ 925 ರೂಪಾಯಿ. 2014ರಲ್ಲಿ ಅಡುಗೆ  ಅನಿಲದ ಬೆಲೆ 414 ರೂಪಾಯಿಯಷ್ಟೇ ಇತ್ತು. ಆಗ ಮನ್‌ಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಇದೇ ಅವಧಿಯಲ್ಲಿ ಪೆಟ್ರೋಲ್ ಬೆಲೆ  71 ರೂಪಾಯಿ ಇತ್ತು. ಇವತ್ತು 106 ರೂಪಾಯಿಯನ್ನೂ ದಾಟಿ ಹೋಗಿದೆ. 2014ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ  ಬೆಲೆ ಬ್ಯಾರಲೊಂದಕ್ಕೆ 109 ಡಾಲರ್‌ಗಳಿದ್ದಾಗಲೂ ಪ್ರಧಾನಿ ಮನ್‌ಮೋಹನ್ ಸಿಂಗ್‌ರು ಅದರ ಹೊರೆಯನ್ನು ಭಾರತೀಯರ ಮೇಲೆ  ಹೊರಿಸದೆಯೇ 71 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ದಕ್ಕುವಂತೆ ಮಾಡಿದ್ದರು. ಇವತ್ತು ಅಂತಾರಾಷ್ಟ್ರೀ ಯ ತೈಲ  ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬರೇ 78 ಡಾಲರ್. ಆದರೆ, ಅದರ ಲಾಭವನ್ನು ಭಾರತೀಯರಿಗೆ ವರ್ಗಾಯಿಸುವ ಬದಲು  ಪೆಟ್ರೋಲ್ ಬೆಲೆಯನ್ನು ಕೇಂದ್ರ ಸರಕಾರ 100 ರೂಪಾಯಿಯ ಗಡಿ ದಾಟಿಸಿ ಖಜಾನೆ ತುಂಬಿಸುತ್ತಿದೆ. ಪ್ರಶ್ನಿಸಿದರೆ ಎಲ್ಲ ಆರೋಪವನ್ನೂ  ಮನ್‌ಮೋಹನ್ ಸಿಂಗ್ ಸರಕಾರದ ಮೇಲೆ ಹೊರಿಸಿ ತಾನು ಶುದ್ಧ ಹಸ್ತ ಎಂದು ಬಿಂಬಿಸಿಕೊಳ್ಳುತ್ತಿದೆ. ಮನ್‌ಮೋಹನ್ ಸಿಂಗ್ ಸರ್ಕಾರ  ಆಯಿಲ್ ಬಾಂಡ್‌ನ ಹೆಸರಲ್ಲಿ ಮಾಡಿರುವ ಸಾಲವನ್ನು ಸಂದಾಯಿಸಲು ಈ ಬೆಲೆ ಹೆಚ್ಚಳ ಮಾಡುತ್ತಿದ್ದೇವೆ ಎಂಬ ಸಬೂಬು ಕೇಂದ್ರ  ಸರಕಾರದ್ದು. ಆದರೆ, 

ಅದೂ ನಿಜವಲ್ಲ. ಆಯಿಲ್ ಬಾಂಡ್‌ನ ಹೆಸರಲ್ಲಿ ಇದ್ದ ಸಾಲ ಹೆಚ್ಚೆಂದರೆ 1.34 ಲಕ್ಷ  ಕೋಟಿ ರೂಪಾಯಿ. ಅಲ್ಲದೇ,  ಈ ಆಯಿಲ್ ಬಾಂಡ್ ಪದ್ಧತಿಯನ್ನು ಆರಂಭಿಸಿದ್ದೂ ಮನ್‌ಮೋಹನ್ ಸಿಂಗ್ ಸರಕಾರವಲ್ಲ, ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ  ಎಂಬ ವಾದವೂ ಇದೆ. ಅದೇನಿದ್ದರೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದಿಂದ ಕಳೆದ 7 ವರ್ಷಗಳಲ್ಲಿ ಸುಂಕದ ರೂಪದಲ್ಲಿ 25 ಲಕ್ಷ   ಕೋಟಿ ರೂಪಾಯಿಯನ್ನು ಕೇಂದ್ರ ಸರಕಾರ ಈಗಾಗಲೇ ಸಂಗ್ರಹಿಸಿದೆ. ಆದರೆ ಇಷ್ಟು ಅಗಾಧ ಮೊತ್ತ ಸಂಗ್ರಹಿಸಿದ್ದರೂ ಬರೇ 35  ಸಾವಿರ ಕೋಟಿ ರೂಪಾಯಿಯನ್ನು ಮಾತ್ರ ಆಯಿಲ್ ಬಾಂಡ್ ಸಾಲದ ಮರುಪಾವತಿ ಮಾಡಿದೆ. ಹಾಗಿದ್ದರೆ ಇಷ್ಟು ಬೃಹತ್  ಪ್ರಮಾಣದಲ್ಲಿ ಸಂಗ್ರಹಿಸಲಾಗುತ್ತಿರುವ ತೆರಿಗೆ ಹಣ ಏನಾದುವು? ಆಯಿಲ್ ಬಾಂಡ್‌ನ ಸಾಲದ 25 ಪಟ್ಟು ಅಧಿಕ ಹಣವನ್ನು ತೆರಿಗೆ  ರೂಪದಲ್ಲಿ ಸಂಗ್ರಹಿಸಿದ ಹೊರತಾಗಿಯೂ ತೈಲ ಬೆಲೆಯನ್ನು ಇಳಿಸದಿರುವುದು ಏಕೆ?

2020 ಮೇ ತಿಂಗಳಿನಿಂದ  ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರಕಾರ ಯಾವ ಸೂಚನೆಯನ್ನೂ ನೀಡದೆಯೇ  ದಿಢೀರಿರ್ ಸ್ಥಗಿತಗೊಳಿಸಿದೆ. ದೇಶದಲ್ಲಿ ಸುಮಾರು 29 ಕೋಟಿ ಅಡುಗೆ ಅನಿಲದ ಗ್ರಾಹಕರಿದ್ದಾರೆ. 2016ರಲ್ಲಿ ಕೇಂದ್ರ ಸರಕಾರವು  ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿತು. ಅದರ ಮುಖ್ಯ ಗುರಿ ಇದ್ದುದು ತೆರೆದ ಒಲೆಯ ಮೂಲಕ ಅಡುಗೆ  ಮಾಡುವ ಸಾಂಪ್ರದಾಯಿಕ ವಿಧಾನಕ್ಕೆ ಇತಿಶ್ರೀ ಹಾಡುವುದು. ಗ್ರಾಮೀಣ ಪ್ರದೇಶದ ಮಂದಿ ಅಡುಗೆ ಅನಿಲಕ್ಕಿಂತ ಉರುವಲು ಮತ್ತು  ಕಟ್ಟಿಗೆಗಳನ್ನು ಉರಿಸಿಯೇ ಅಡುಗೆ ಮಾಡುವುದರಿಂದ ಅದರ ಹೊಗೆಯು ಅವರ ಹೃದಯ, ಶ್ವಾಸಕೋಶಗಳ ಮೇಲೆ ಅಡ್ಡಪರಿಣಾಮವನ್ನು ಬೀರುತ್ತಿದೆ, ಇದರಿಂದಾಗಿಯೇ ಭಾರತದಲ್ಲಿ ಪ್ರತಿವರ್ಷ 5 ಲಕ್ಷ  ಮಂದಿ ಸಾವನ್ನಪ್ಪುತ್ತಿದ್ದಾರೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ  ವರದಿಯನ್ನೂ ಆ ಸಂದರ್ಭದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿತ್ತು. ಆದ್ದರಿಂದ,

 ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಕಾರ 8  ಕೋಟಿ ಗ್ರಾಮೀಣ ಭಾರತದ ಬಡ ಜನರಿಗೆ ಅಡುಗೆ ಅನಿಲ ತಲುಪಿಸುವುದನ್ನು ಕೇಂದ್ರ ಸರಕಾರ ಗುರಿಯಾಗಿ ಇಟ್ಟುಕೊಂಡಿತ್ತು. ಆದರೆ  ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಕಂಡ ಈ ಯೋಜನೆಯು ಬರಬರುತ್ತಾ ಜನರ ಆಕರ್ಷಣೆಯನ್ನು ಕಳಕೊಂಡಿದೆ. ಈ ಯೋಜನೆಯನ್ವಯ ಸಿಲಿಂಡರ್ ಪಡೆದವರು ಮರು ಭರ್ತಿ ಮಾಡುವ ಪ್ರಕ್ರಿಯೆಯನ್ನೇ ನಿಲ್ಲಿಸುತ್ತಾ ಬಂದಿದ್ದಾರೆ ಮತ್ತು ಉರುವಲು ಆಧಾರಿತ  ಅಡುಗೆಗೆ ಮರಳಿದ್ದಾರೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅನ್ವಯ ಸಿಲಿಂಡರ್ ಪಡೆದ ಒಟ್ಟು 3.18 ಕೋಟಿ ಗ್ರಾಹಕರ ಪೈಕಿ ಶೇ.  17.4ರಷ್ಟು ಮಂದಿ ಒಮ್ಮೆಯೂ ಮರು ಬುಕಿಂಗ್ ಮಾಡಿಲ್ಲ. ಅಲ್ಲದೇ, ಇಡೀ ಒಂದು ವರ್ಷದಲ್ಲಿ ಶೇ. 34ರಷ್ಟು ಮಂದಿ ಬರೇ 1ರಿಂದ 3  ಸಿಲಿಂಡರ್‌ನಷ್ಟು ಮಾತ್ರ ಮರು ಬುಕಿಂಗ್ ಮಾಡಿದ್ದಾರೆ. ಅಂದರೆ ವರ್ಷವೊಂದರಲ್ಲಿ ಅತೀ ಹೆಚ್ಚೆಂದರೆ 3 ಸಿಲಿಂಡರ್‌ಗೆ ಬುಕಿಂಗ್  ಮಾಡಿದ್ದಾರೆ. ಇದರರ್ಥ ಅವರು ಉರುವಲು ಆಧಾರಿತ ಅಡುಗೆಯನ್ನೇ ನೆಚ್ಚಿಕೊಂಡಿದ್ದಾರೆ ಎಂದೇ ಆಗಿದೆ. ಇದಷ್ಟೇ ಅಲ್ಲ,

2014ರ ಚುನಾವಣಾ ಭಾಷಣಗಳ ವೇಳೆ ನರೇಂದ್ರ ಮೋದಿ ದೊಡ್ಡದೊಂದು ನಿರೀಕ್ಷೆ ಹುಟ್ಟಿಸಿ ದ್ದರು. ಅದರಲ್ಲಿ ವರ್ಷಂಪ್ರತಿ 2 ಕೋಟಿ  ಉದ್ಯೋಗ ಸೃಷ್ಟಿ ಒಂದಾದರೆ, ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ಮರಳಿ ತಂದು ಪ್ರತಿ ಭಾರತೀಯನ ಖಾತೆಗೆ 15 ಲಕ್ಷ  ತುಂಬುವುದೂ ಸೇರಿತ್ತು. ಇದಾಗಿ 7 ವರ್ಷಗಳು ಸಂದಿವೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಬಿಡಿ, ಇರುವ ಉದ್ಯೋಗಗಳೇ  ಇವತ್ತು ನಷ್ಟ ಹೊಂದುತ್ತಿವೆ. ಇತ್ತೀಚಿನ ಬೆಳವಣಿಗೆ ಏನೆಂದರೆ, ಜನಪ್ರಿಯ ಕಾರು ತಯಾರಿಕಾ ಕಂಪೆನಿಯಾದ ಫೋರ್ಡ್, ಭಾರತದ ತನ್ನ  ಉತ್ಪಾದನಾ ಘಟಕವನ್ನು ಮುಚ್ಚುವುದಾಗಿ ಘೋಷಿಸಿದೆ. ಇದರಿಂದಾಗಿ ಸುಮಾರು 4 ಸಾವಿರ ಮಂದಿ ನೇರ ಉದ್ಯೋಗ ಕಳಕೊಳ್ಳಲಿದ್ದಾರೆ.  ಕೊರೋನಾ ಪೂರ್ವದಲ್ಲಿ ಮಾಡಲಾದ ನೋಟ್‌ಬ್ಯಾನ್, ಜಿಎಸ್‌ಟಿಗಳು ಮತ್ತು ಹಾಗೆಯೇ, ಕೊರೋನಾ ಕಾಲದ ಸಂಕಷ್ಟಗಳೂ  ಸೇರಿಕೊಂಡು ಲಕ್ಷಾಂತರ ಉದ್ದಿಮೆಗಳು ಬಾಗಿಲು ಮುಚ್ಚಿವೆ. ಈ ಮೂಲಕ ಅಸಂಖ್ಯ ಮಂದಿ ನಿರುದ್ಯೋಗಿಗಳಾಗಿದ್ದಾರೆ. 2014ರಲ್ಲಿ  ರೈಲ್ವೆಯಲ್ಲಿ ಮಾತ್ರ ಸುಮಾರು 14 ಲಕ್ಷ ಉದ್ಯೋಗಿಗಳಿದ್ದರು. ಆದರೆ, ಈಗ ಈ ಉದ್ಯೋಗಿಗಳ ಸಂಖ್ಯೆಯು ಸುಮಾರು 12.53 ಲಕ್ಷಕ್ಕೆ  ಇಳಿಕೆಯಾಗಿದೆ. ಟೆಲಿಕಾಂ ಕ್ಷೇತ್ರದಲ್ಲಿ 7 ವರ್ಷಗಳ ಹಿಂದೆ 4 ಲಕ್ಷ  ಇದ್ದ ಉದ್ಯೋಗಿಗಳ ಪೈಕಿ ಈಗ 3.66 ಲಕ್ಷ  ಮಂದಿಯಷ್ಟೇ ಇದ್ದಾರೆ.  ವರ್ಷದಲ್ಲಿ ಎರಡು ಕೋಟಿ ಉದ್ಯೋಗ ಎಂಬ ಭರವಸೆಯಂತೆ ಕೇಂದ್ರ ಸರಕಾರವು ಈ ಕಳೆದ 7 ವರ್ಷಗಳಲ್ಲಿ 14 ಕೋಟಿ  ಉದ್ಯೋಗವನ್ನು ಸೃಷ್ಟಿ ಮಾಡಬೇಕಿತ್ತು. ಆದರೆ, ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ 36 ಲಕ್ಷ  ಹುದ್ದೆಗಳು ಖಾಲಿ  ಇವೆ ಎಂಬುದು ಈಗಿನ ಅಂಕಿಅಂಶ. ಇನ್ನು ಸ್ವಿಸ್ ಬ್ಯಾಂಕ್‌ನಿಂದ  ಭಾರತಕ್ಕೆ ಕಪ್ಪು ಹಣವನ್ನು ತರುವುದು ಬಿಡಿ, ಭಾರತದ ಬ್ಯಾಂಕುಗಳಿಗೆ  ಸಾವಿರಾರು ಕೋಟಿ ರೂಪಾಯಿ ವಂಚಿಸಿ ಈ ಸರಕಾರದ ಕಣ್ಣ ಮುಂದೆಯೇ ವಿದೇಶಕ್ಕೆ ತೆರಳಿದವರನ್ನೂ ಮರಳಿ ಇಲ್ಲಿಗೆ ಕರೆತರಲು  ಸಾಧ್ಯವಾಗಿಲ್ಲ. ದಿನಬಳಕೆಯ ವಸ್ತುಗಳ ಬೆಲೆ ಬಡಜನರ ಕೈಗೆ ಎಟುಕದಷ್ಟು ಎತ್ತರಕ್ಕೆ ಹೋಗಿದೆ. 7 ವರ್ಷಗಳ ಹಿಂದೆ ಇದೇ ಬಿಜೆಪಿಯ  ನಾಯಕರು ಮತ್ತು ಕಾರ್ಯಕರ್ತರು ಬೆಲೆ ಏರಿಕೆಯನ್ನು ಪ್ರಶ್ನಿಸಿ ಮಾಡಿರುವ ಪ್ರತಿಭಟನೆಗಳಿಗೆ ಲೆಕ್ಕ ಮಿತಿಯಿಲ್ಲ. ಖಾಲಿ ಸಿಲಿಂಡರನ್ನು  ರಸ್ತೆಯಲ್ಲಿಟ್ಟು, ನಿತ್ಯ ಬಳಕೆಯ ವಸ್ತುಗಳ ಹಾರವನ್ನು ತಯಾರಿಸಿ, ಕೊರಳಿಗೆ ತೂಗು ಹಾಕಿ ಪ್ರತಿಭಟಿಸಿದ ಚಿತ್ರಗಳೆಲ್ಲ ಗೂಗಲ್‌ನಲ್ಲಿ  ಹುಡುಕಾಡಿದರೆ ರಾಶಿಗಟ್ಟಲೆ ಸಿಗುತ್ತಿವೆ. ಇವತ್ತು ಅದೇ ನಾಯಕರು ಬೆಲೆ ಏರಿಕೆಯನ್ನು ಸಮರ್ಥಿಸುತ್ತಾ ತಿರುಗಾಡುತ್ತಿದ್ದಾರೆ. ದುರಂತ ಏ ನೆಂದರೆ,

2014ರಲ್ಲಿ ಯಾವುದನ್ನು ಜನದ್ರೋಹಿಯೆಂದು ಇದೇ ನಾಯಕರು ಹೇಳಿದ್ದರೋ ಅದನ್ನೇ ಈ 2021 ರಲ್ಲಿ ಅನಿವಾರ್ಯವೆಂದು  ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವತ್ತು ಈ ದೇಶ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ತೆರಿಗೆ ವಿಧಿಸುತ್ತಿರುವ ದೇಶವಾಗಿ ಮಾರ್ಪಟ್ಟಿದೆ. 2014ರಲ್ಲಿ  ಅತೀವ ನಿರೀಕ್ಷೆಯನ್ನು ಹುಟ್ಟಿಸಿ ಅಧಿಕಾರಕ್ಕೆ ಬಂದ ಮೋದಿ ಸರಕಾರವು ಕಳೆದ 7 ವರ್ಷಗಳಲ್ಲಿ ಆ ನಿರೀಕ್ಷೆಗೆ ನ್ಯಾಯ ನೀಡುವಲ್ಲಿ ಸಂ ಪೂರ್ಣ ವಿಫಲವಾಗಿದೆ. ಸರಕಾರವನ್ನು ಈವರೆಗೆ ಉಳಿಸಿರುವುದು ಹಿಂದೂ-ಮುಸ್ಲಿಮ್, ಮಂದಿರ-ಮಸೀದಿ ಸುತ್ತ ಹೆಣೆದಿರುವ  ಧ್ರುವೀಕರಣ ರಾಜಕಾರಣವೇ ಹೊರತು ಅಭಿವೃದ್ಧಿ ರಾಜಕಾರಣವಲ್ಲ. ಧ್ರುವೀಕರಣ ರಾಜ ಕೀಯವು ಉನ್ಮಾದ ಆಧಾರಿತವಾದುದು. ಅದು  ಹೊಟ್ಟೆ ತುಂಬಿಸಲ್ಲ. ಅದು ಹೊಟ್ಟೆ ತುಂಬಿದವರಂತೆ  ನಟಿಸುವವರನ್ನಷ್ಟೇ ತಯಾರಿಸಬಲ್ಲುದು. ಈ ನಟನೆಗೂ ದೀರ್ಘಾಯುಷ್ಯವಿಲ್ಲ.

ಸನ್ಮಾರ್ಗಕ್ಕೆ 43: ಸಾಗಿ ಬಂದ ಹಾದಿ ಮತ್ತು ಸಾಗಬೇಕಾದ ಕಠಿಣ ಹಾದಿ

 



ವಿಶೇಷ ಸಂಪಾದಕೀಯ


ಕುರ್‌ಆನನ್ನು ಧಾರಾವಾಹಿಯಾಗಿ ಕನ್ನಡದಲ್ಲಿ ಪ್ರಕಟಿಸಿದ ಮೊತ್ತಮೊದಲ ಪತ್ರಿಕೆ, ಬುಖಾರಿ ಹದೀಸ್ ಗ್ರಂಥವನ್ನು ಕನ್ನಡ ದಲ್ಲಿ  ಧಾರಾವಾಹಿಯಾಗಿ ಪ್ರಕಟಿಸಿದ ಮೊತ್ತಮೊದಲ ಪತ್ರಿಕೆ, ಪ್ರವಾದಿ ಚರಿತ್ರೆಯನ್ನು, ಇಸ್ಲಾಮೀ ಇತಿಹಾಸವನ್ನು, ಖಲೀಫರುಗಳ ಇತಿಹಾಸವನ್ನು.. ಹೀಗೆ ಹತ್ತು ಹಲವು ಪ್ರಥಮಗಳ ಮೈಲಿಗಲ್ಲನ್ನು ನೆಟ್ಟ ಹೆಮ್ಮೆ ಸನ್ಮಾರ್ಗಕ್ಕಿದೆ ಮತ್ತು ಕನ್ನಡದ ಮಣ್ಣಿನಲ್ಲಿ ಈ ಗರಿ ಸನ್ಮಾರ್ಗಕ್ಕೆ  ಮಾತ್ರವೇ ಇದೆ.

1978 ಎಪ್ರಿಲ್ 23ರಂದು ಹುಟ್ಟಿಕೊಂಡ ಸನ್ಮಾರ್ಗ ಕಳೆದ ನಾಲ್ಕು ದಶಕಗಳಲ್ಲಿ ಮಾಧ್ಯಮ ರಂಗಕ್ಕೆ ಕೊಟ್ಟಿರುವ ಕೊಡುಗೆಗಳ ಪಟ್ಟಿ  ಬಹುದೊಡ್ಡದಿದೆ. ಅದರಲ್ಲಿ ಅತ್ಯಂತ ಎತ್ತರದಲ್ಲಿರುವುದು- ಸತ್ಯ, ಮೌಲ್ಯಾಧಾರಿತ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆ  ಆಧಾರಿತ ಪತ್ರಿಕೋದ್ಯಮ. ಇಬ್ರಾಹೀಮ್ ಸಈದ್, ನೂರ್ ಮುಹಮ್ಮದ್, ಸಾದುಲ್ಲಾರಿಂದ ಹಿಡಿದು ಅನೇಕ ಪತ್ರಕರ್ತರನ್ನು ಅದು  ತಯಾರಿಸಿದೆ. ತಜ್ಞ ಪತ್ರಕರ್ತರನ್ನು ಮಾಧ್ಯಮ ರಂಗಕ್ಕೆ ಧಾರೆಯೆರೆದಿದೆ. ಅನೇಕಾರು ಬರಹಗಾರರನ್ನು ಅದು ಸೃಷ್ಟಿಸಿದೆ.

ಮುಸ್ಲಿಮ್ ಮಹಿಳೆಯರು ಮಾಧ್ಯಮ ರಂಗದಲ್ಲಿ ಬೆರಳೆಣಿಕೆಯಷ್ಟಿದ್ದ ಕಾಲದಲ್ಲೇ  ಮಹಿಳಾ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ ಬಂದ  ಸನ್ಮಾರ್ಗವು ಅಂತಿಮವಾಗಿ ಎರಡು ದಶಕಗಳ ಹಿಂದೆ ಅನುಪಮ ಎಂಬ ಮಹಿಳೆಯರಿಂದಲೇ ನಡೆಸಲ್ಪಡುವ ಪತ್ರಿಕೆಗೂ ಜನ್ಮ ನೀಡಿದೆ.  ಬರಹಗಳಿಗೆ ವಿಫುಲ ಅವಕಾಶಗಳನ್ನು ಒದಗಿಸಿರುವ ಸಾಮಾಜಿಕ ಜಾಲತಾಣಗಳ ಇಂದಿನ ದಿನಗಳಲ್ಲಿ ಇವ್ಯಾವುವೂ ಇಲ್ಲದ ಕಾಲಕ್ಕೆ  ಹೊರಳಿ ನೋಡುವಾಗ ಸನ್ಮಾರ್ಗ ಯುವ ಪ್ರತಿಭೆಗಳಿಗೆ ನೀಡಿದ ಬೆಂಬಲ ಮತ್ತು ಅವಕಾಶ ಖಂಡಿತ ಸ್ಮರಣೀಯ.

ಅಂದು ಮುಖ್ಯ ವಾಹಿನಿಯ ಕನ್ನಡ ಪತ್ರಿಕೆಗಳಂತೂ ಹೊಸಬರ ಬರಹಗಳಿಗೆ ಜಾಗ ನೀಡುತ್ತಿದ್ದುದು ಅಪರೂಪದಲ್ಲಿ ಅಪರೂಪ. ಏನೇ ಬರೆದರೂ ಪತ್ರ ವಿಭಾಗಕ್ಕಿಂತ ಮೇಲೇರಲು ಬಿಡದ ಅಲಿಖಿತ ಸಂಪಾದಕೀಯ ನಿಯಮವೊಂದು ಆ ಪತ್ರಿಕೆಗಳಲ್ಲಿತ್ತು. ಅದರಲ್ಲೂ  ಮುಸ್ಲಿಮ್ ಬರಹಗಾರರಂತೂ ಇಂಥ ಅಲಿಖಿತ ನಿಯಮದಿಂದ ಅತ್ಯಂತ ಹೆಚ್ಚು ತೊಂದರೆಗೊಳಗಾದರು. ಬರೆಯುವ ಹುರುಪಿದ್ದರೂ  ಮತ್ತು ಪ್ರತಿಭೆ ಇದ್ದರೂ ಅದನ್ನು ಪ್ರಕಟಿಸಿ ಬೆನ್ನುತಟ್ಟಿ ಪ್ರೋತ್ಸಾಹಿಸುವಂತಹ ಪತ್ರಿಕೆಗಳ ಅಭಾವ ಸಾಕಷ್ಟಿತ್ತು. ಮುಸ್ಲಿಮರ ಆಚಾರ,  ವಿಚಾರ, ಧಾರ್ಮಿಕ ನಿಯಮಗಳು, ಸಂಸ್ಕೃತಿ, ಸಾಂಪ್ರದಾಯಿಕತೆ, ಧರ್ಮಗ್ರಂಥ.. ಇತ್ಯಾದಿಗಳ ಬಗ್ಗೆ ತಿಳಿದಿಲ್ಲದ ಮತ್ತು ತಿಳಿಯಲೂ  ಪ್ರಯತ್ನಿಸದ ಪತ್ರಕರ್ತರು ಸನ್ಮಾರ್ಗ ಹುಟ್ಟಿಕೊಂಡ ಕಾಲದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು. ಅವರಿಂದಾಗಿ ಮುಸ್ಲಿಮರ ವರ್ಚಸ್ಸಿಗೆ ಆಗಾಗ  ಹಾನಿಯಾಗುತ್ತಲೂ ಇತ್ತು. ಅವರು ಮಾಡುತ್ತಿದ್ದ ವರದಿ, ಸುದ್ದಿ, ವಿಶ್ಲೇಷಣೆ ಎಲ್ಲವುಗಳೂ ಇಸ್ಲಾಮಿಗೆ ಸಂಬಂಧಿಸಿ ಶತದಡ್ಡತನವಾಗಿದ್ದರೂ  ಅದಕ್ಕೆ ಬರಹದಲ್ಲೇ  ಉತ್ತರ ಕೊಡಬಲ್ಲ ಸಮರ್ಥರು ಮುಸ್ಲಿಮರಲ್ಲಿ ಕಡಿಮೆಯಿದ್ದರು. ಇದಕ್ಕೆ ಪತ್ರಿಕೋದ್ಯಮದಲ್ಲಿ ಕಲಿಯುತ್ತಿರುವ  ಮುಸ್ಲಿಮ್ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದುದು ಒಂದು ಕಾರಣವಾದರೆ, ಕುರ್‌ಆನನ್ನು ಮತ್ತು ಇಸ್ಲಾಮೀ ತತ್ವಸಂಹಿತೆಯನ್ನು ಕನ್ನಡದಲ್ಲಿ ಅಧ್ಯಯನ ನಡೆಸುವುದಕ್ಕೆ ಬೇಕಾದ ವ್ಯವಸ್ಥೆ ಇಲ್ಲದಿರುವುದು ಇನ್ನೊಂದು ಕಾರಣವಾಗಿತ್ತು. ಹಾಗೆಯೇ,

ಒಂದುವೇಳೆ, ಯಾರಾದರೂ ಬರೆದರೂ ಅದನ್ನು ಪ್ರಕಟಿಸುವ ಸೌಜನ್ಯವನ್ನು ಆ ಪತ್ರಿಕೆಗಳು ತೋರುತ್ತಲೂ ಇರಲಿಲ್ಲ. ಪತ್ರಿಕಾ ರಂಗದಲ್ಲಿ  ಸನ್ಮಾರ್ಗದ ಕೊಡುಗೆ ಏನು ಎಂಬುದು ಸ್ಪಷ್ಟವಾಗುವುದೇ ಇಲ್ಲಿ.

ಸನ್ಮಾರ್ಗ ಹುಟ್ಟಿಕೊಂಡಾಗ ಇದ್ದ ಎಣಿಕೆಯ ನಾಲ್ಕೈದು  ಬರಹಗಾರರ ಸಂಖ್ಯೆ ಪತ್ರಿಕೆ ಹುಟ್ಟಿ ವರ್ಷವಾಗುತ್ತಲೇ ದ್ವಿಗುಣವಾಯಿತು.  ಅದ್ಭುತ ಎನ್ನಬಹುದಾದ ಪ್ರತಿಭೆಗಳು ಸನ್ಮಾರ್ಗದ ಮೂಲಕ ಬೆಳಕಿಗೆ ಬಂದುವು. ಲೇಖನ, ವಿಶ್ಲೇಷಣೆ, ಪ್ರಬಂಧ, ಕತೆ, ಕವನ, ವಿಮರ್ಶೆ  ಇತ್ಯಾದಿಗಳನ್ನು ಮುಖ್ಯವಾಹಿನಿ ಪತ್ರಿಕೆಗಳಿಗೆ ಸಡ್ಡು ಹೊಡೆಯುವಷ್ಟು ಪ್ರಬುದ್ಧವಾಗಿ ಬರೆಯುವ ಬರಹಗಾರರು  ನಿರ್ಮಾಣವಾಗತೊಡಗಿದರು. ಅಲ್ಲಲ್ಲಿ ಬರಹಗಾರರನ್ನು ತಯಾರಿಸುವ ಕಮ್ಮಟಗಳೂ ನಡೆಯತೊಡಗಿದುವು. ಇದರ ಜೊತೆಗೇ ಕನ್ನಡ  ಭಾಷೆಯಲ್ಲಿ ಪವಿತ್ರ ಕುರ್‌ಆನ್‌ನ ಅನುವಾದವೂ ಸನ್ಮಾರ್ಗದಲ್ಲಿ ಧಾರಾವಾಹಿಯಾಗಿ ಬರತೊಡಗಿತು.

ಆವರೆಗೆ ಕನ್ನಡ ಮಣ್ಣಿಗೆ ಅರಬಿ ಭಾಷೆಯ ಕುರ್‌ಆನ್ ತಲುಪಿತ್ತೇ ಹೊರತು ಅದರ ಅನುವಾದ ತಲುಪಿರಲಿಲ್ಲ. ಅರಬಿಯಲ್ಲಿರುವ  ಕುರ್‌ಆನ್ ಹೇಳುವುದೇನು ಎಂಬುದನ್ನು ಕನ್ನಡಿಗರು ಅರ್ಥಮಾಡಿಕೊಳ್ಳುವುದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳಿರಲಿಲ್ಲ. ಸನ್ಮಾರ್ಗ ಆ  ಬರವನ್ನು ನೀಗಿಸುವ ಮೂಲಕ ಮುಖ್ಯವಾಹಿನಿ ಪತ್ರಿಕೆಗಳಲ್ಲಿದ್ದ ಹಲವು ಪತ್ರಕರ್ತರ ಅಜ್ಞಾನವನ್ನು ನೀಗಿಸಲೂ ಯಶಸ್ವಿಯಾಯಿತು.  ಅದಕ್ಕಿಂತಲೂ ಮುಖ್ಯವಾಗಿ ಮುಸ್ಲಿಮರಲ್ಲಿದ್ದ ಅಜ್ಞಾನವನ್ನೂ ನೀಗಿಸಿತು. ಅವರಲ್ಲಿ ಅಕ್ಷರ ಪ್ರೀತಿಯನ್ನು ಕಲಿಸಿತು. ಮಾಧ್ಯಮ ಕ್ಷೇತ್ರಕ್ಕೆ ಮುಸ್ಲಿಮರನ್ನು ಸನ್ಮಾರ್ಗ  ಕೈಬೀಸಿ ಕರೆಯಿತು. ಅವರ ಬರಹಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿತು. ಜೊತೆಗೇ ಮುಸ್ಲಿಮೇತರ ಬರಹಗಾರರಿಗೂ ಸರಿಸಮಾನ ಅವಕಾಶಗಳನ್ನು ಕೊಟ್ಟು ನಿಜ ಪತ್ರಿಕಾ ಗುಣವನ್ನು ಮೆರೆಯಿತು. ಮುಸ್ಲಿಮೇತರರನ್ನು ಅಂಕಣ ಬರಹಗಾರರಾಗಿಯೂ ಅದು ಗೌರವಿಸಿತು.

ಹೀಗೆ ಸಾಗಿ ಬಂದ ಸನ್ಮಾರ್ಗಕ್ಕೆ ಇದೀಗ 43 ವರ್ಷಗಳು ತುಂಬಿವೆ. ಇದು 44ನೇ ವರ್ಷದ ಪ್ರಥಮ ಸಂಚಿಕೆ. ಮುಖ್ಯವಾಹಿನಿಯ  ಪತ್ರಿಕೆಗಳಿಗೆ ಹೋಲಿಸಿದರೆ, ಅನೇಕ ‘ಇಲ್ಲ’ಗಳನ್ನು ತನ್ನ ಮೌಲ್ಯವಾಗಿ ಆರಂಭದಿಂದಲೂ ನೆಚ್ಚಿಕೊಂಡು ಬಂದಿರುವುದರಿಂದಲೋ ಏನೋ  ಇವತ್ತೂ ಕೆಲವು ಪ್ರಶ್ನೆ ಮತ್ತು ಸವಾಲುಗಳ ಜೊತೆಗೆಯೇ ಸನ್ಮಾರ್ಗ ಬದುಕುತ್ತಿದೆ. ಈ ಪತ್ರಿಕೆ ನಂಬಿಕೊಂಡ ಮೌಲ್ಯದ ಕಾರಣಕ್ಕಾಗಿ  ಹೆಚ್ಚಿನ ಜಾಹೀರಾತುಗಳು ತಿರಸ್ಕೃತವಾಗುತ್ತಾ ಬಂದಿವೆ. ಬ್ಯಾಂಕ್, ಮದ್ಯದ ಜಾಹೀರಾತು, ತಂಬಾಕು, ಜೂಜು, ಸಿನಿಮಾ ಜಾಹೀರಾತು,  ಅಶ್ಲೀಲತೆ, ಜ್ಯೋತಿಷ್ಯ ಮತ್ತು ವಿಶ್ವಾಸಾರ್ಹವೆಂದು ಮೇಲ್ನೋಟಕ್ಕೆ ಸ್ಪಷ್ಟವಾಗದ ಯಾವುದನ್ನೂ ಸನ್ಮಾರ್ಗ ಜಾಹೀರಾತಾಗಿ  ಸ್ವೀಕರಿಸಿಕೊಂಡೇ ಇಲ್ಲ. ಬಡ್ಡಿ, ಮದ್ಯ, ಜೂಜು, ಅಶ್ಲೀಲತೆಯ ವಿರುದ್ಧ ಸನ್ಮಾರ್ಗ ತನ್ನ ಆರಂಭ ಕಾಲದಿಂದ ಇಂದಿನವರೆಗೂ ಸಮರ  ಸಾರುತ್ತಲೇ ಬಂದಿದೆ. ಹಾಗಂತ,

ಮೌಲ್ಯಕ್ಕೆ ಇಷ್ಟೂ ನಿಷ್ಠವಾಗಿ ಅಂಟಿ ಕುಳಿತರೆ ಅದರ ಪರಿಣಾಮ ಏನು ಅನ್ನುವುದು ಎಲ್ಲರಿಗೂ ಗೊತ್ತು. ಆದಾಯದ ಮೇಲೆ ಅದು ತೀವ್ರ  ಅಡ್ಡ ಪರಿಣಾಮವನ್ನು ಬೀರುತ್ತದೆ. ಹೆಚ್ಚಿನ ಜಾಹೀರಾತುಗಳು ಮೌಲ್ಯನಿಷ್ಠೆಯೊಂದಿಗೆ ರಾಜಿ ಮಾಡಿಕೊಳ್ಳಲು ಒತ್ತಾಯಿಸುವ ರೂಪದ್ದಾಗಿರುವುದರಿಂದ ಅವನ್ನು ತಿರಸ್ಕರಿಸದೆ ಅನ್ಯ ದಾರಿಯೇ ಇಲ್ಲ. ಆದರೆ ಇಂಥ ಮೌಲ್ಯನಿಷ್ಠೆಯು ಅಂತಿಮವಾಗಿ ಪತ್ರಿಕೆಯ ಆಯುಷ್ಯದ  ಮೇಲೆ ಏಟು ಕೊಡತೊಡಗುತ್ತದೆ. ಮತ್ತೆ ಮತ್ತೆ ಬೀಳುವ ಇಂಥ ಏಟುಗಳು ಪತ್ರಿಕೆಯನ್ನು ದಣಿಯುವಂತೆ ಮಾಡಬಲ್ಲಷ್ಟು ಪ್ರಬಲವಾಗುತ್ತಾ  ಹೋಗುತ್ತದೆ. ಇಂಥ ಸ್ಥಿತಿಯಲ್ಲಿ ಸನ್ಮಾರ್ಗಕ್ಕೆ ಆಸರೆಯಾಗುವುದು- ಸಹೃದಯಿ ಬೆಂಬಲಿಗರು ಮತ್ತು ಓದುಗರು ಮಾತ್ರ.

ಇವತ್ತಿನ ದಿನಗಳಲ್ಲಂತೂ ಜನರಲ್ಲಿ ಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಕೊರೋನಾ ಈ ಅಸಾಮರ್ಥ್ಯದ ಮೇಲೆ ಇನ್ನಷ್ಟು  ಬರೆಯನ್ನು ಎಳೆದಿದೆ. ಈ ಬರೆ ಸನ್ಮಾರ್ಗದ ಮೇಲೂ ಪರಿಣಾಮ ವನ್ನು ಬೀರಿದೆ. ಇದರಿಂದ ಪಾರಾಗುವುದಕ್ಕೆ ಓದುಗರ ಬೆಂಬಲದ  ಅಗತ್ಯ ಇದೆ. ಮೌಲ್ಯದೊಂದಿಗೆ ರಾಜಿ ಮಾಡಿಕೊಳ್ಳದೇ ಪತ್ರಿಕೆಯೊಂದನ್ನು ನಡೆಸಲು ಸಾಧ್ಯ ಎಂಬುದನ್ನು ಕಳೆದ 4 ದಶಕಗಳಿಂದ ಸಾಧಿಸಿ  ತೋರಿಸುತ್ತಾ ಬಂದ ಸನ್ಮಾರ್ಗವು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಸವಾಲುಗಳನ್ನು ಎದುರಿಸಬೇಕಾದಂಥ ವಾತಾವರಣ ಇದೆ.  ಇದನ್ನು ಮೆಟ್ಟಿ ನಿಲ್ಲುವುದಕ್ಕಾಗಿ ಸನ್ಮಾರ್ಗ ಹಿತೈಷಿಗಳು ಜಾಹೀರಾತು ಮತ್ತು ಬೆಂಬಲ ಧನವನ್ನು ನೀಡುವ ಮೂಲಕ ಊರುಗೋಲಾಗಿ  ನಿಲ್ಲಬೇಕಾದ ಅಗತ್ಯ ಇದೆ.

ಕಳೆದುಹೋದ ನಾಲ್ಕು ದಶಕಗಳು ಸನ್ಮಾರ್ಗ ಮತ್ತು ಅದರ ಓದುಗರ ಪಾಲಿಗೆ ವೈಭವಯುತವಾದದ್ದು. ಈ ಅವಧಿಯಲ್ಲಿ ಅದು  ಪ್ರಭುತ್ವವನ್ನು ಎದುರು ಹಾಕಿಕೊಂಡಿದೆ. ಹಲವು ಕೇಸುಗಳನ್ನು ಜಡಿಸಿಕೊಂಡಿದೆ. ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶಕರು ವರ್ಷಗಟ್ಟಲೆ  ನ್ಯಾಯಾಲಯಕ್ಕೆ ಅಲೆದಿದ್ದಾರೆ. ಸ್ಥಾಪಿತ ಹಿತಾಸಕ್ತಿಗಳ ಕೆಂಗಣ್ಣಿಗೆ ಪತ್ರಿಕೆ ಗುರಿಯಾಗಿದೆ. ಅಂಧಶ್ರದ್ಧೆ ಮತ್ತು ಅಸತ್ಯವನ್ನು ಪ್ರಶ್ನಿಸಿದ್ದಕ್ಕಾಗಿ  ಸಂಪಾದಕರ ಮೇಲೆ ಹಲ್ಲೆಯೂ ನಡೆದಿದೆ. ಸಂಪಾದಕೀಯ ಬಳಗ ಜೀವ ಬೆದರಿಕೆಯನ್ನೂ ಎದುರಿಸಿದೆ. ಹಾಗೆಯೇ, ಸನ್ಮಾರ್ಗ  ಪತ್ರಿಕೆಯನ್ನು ಕಟ್ಟಿ ಬೆಳೆಸಿದ ಮತ್ತು ಈ ಪತ್ರಿಕೆಗಾಗಿ ಎಲ್ಲವನ್ನೂ ಧಾರೆಯೆರೆದ ಸಂಪಾದಕರುಗಳಾದ ಇಬ್ರಾಹೀಮ್ ಸಈದ್ ಮತ್ತು  ನೂರ್ ಮುಹಮ್ಮದ್‌ರನ್ನೂ ಈ ಪಯಣದಲ್ಲಿ ಅದು ಕಳಕೊಂಡಿದೆ. ಇವರ ಜೊತೆಗೇ ಈ ಪತ್ರಿಕೆಯ ಏಳಿಗೆಗಾಗಿ ಹಗಲೂ ರಾತ್ರಿ ದುಡಿದ  ಮತ್ತು ತನು-ಮನ-ಧನದಿಂದ ಬೆಂಬಲಿಸಿದ ಹಲವರನ್ನೂ ಪತ್ರಿಕೆ ಕಳಕೊಂಡಿದೆ. ಅವರೆಲ್ಲರನ್ನೂ ಈ ಸಂದರ್ಭದಲ್ಲಿ ಸನ್ಮಾರ್ಗ  ಸ್ಮರಿಸುತ್ತದೆ. ಅವರೆಲ್ಲರಿಗೆ ಅಲ್ಲಾಹನು ಸೂಕ್ತ ಪ್ರತಿಫಲ ನೀಡಲಿ ಎಂದು ಪ್ರಾರ್ಥಿಸುತ್ತದೆ. ಜೊತೆಗೇ,

ಈ ನಾಲ್ಕು ದಶಕಗಳ ಅವಧಿಯಲ್ಲಿ ಸನ್ಮಾರ್ಗ ಇನ್ನೆರಡು ಮಹತ್ವಪೂರ್ಣ ಹೆಜ್ಜೆಗಳನ್ನೂ ಇರಿಸಿದೆ. ಒಂದು- ಸನ್ಮಾರ್ಗ ವೆಬ್‌ ಪೋರ್ಟಲ್, ಇನ್ನೊಂದು- ಸನ್ಮಾರ್ಗ ನ್ಯೂಸ್ ಚಾನೆಲ್. ತೀರಾ ಸಣ್ಣ ಅವಧಿಯಲ್ಲಿ ಅತ್ಯಂತ ದೊಡ್ಡ ಪರಿಣಾಮವನ್ನು ಬೀರಿದ ಮತ್ತು ಬೀರುತ್ತಿರುವ  ಇವೆರಡೂ ಸನ್ಮಾರ್ಗದ ಬಹುನಿರೀಕ್ಷೆಯ ಹೆಜ್ಜೆಗಳು. ಇವನ್ನೂ ಓದುಗರಾದ ಮತ್ತು ಸಹೃದಯಿ ದಾನಿಗಳಾದ ನೀವೇ ಬೆಳೆಸಬೇಕಾಗಿದೆ.  ಸನ್ಮಾರ್ಗ ನ್ಯೂಸ್ ಚಾನೆಲ್‌ನಲ್ಲಿ ಪ್ರಸಾರವಾಗುವ ಕಾರ್ಯಕ್ರಮವನ್ನು ಪ್ರತಿದಿನ ವೀಕ್ಷಿಸುತ್ತಾ ಮತ್ತು ಗೆಳೆಯರಲ್ಲಿ ಹಂಚುತ್ತಾ ಸಬ್‌ ಸ್ಕ್ರೈಬ್   ಆಗುವಂತೆ ಒತ್ತಾಯಿಸಬೇಕಾಗಿದೆ. ಸನ್ಮಾರ್ಗ ಪತ್ರಿಕೆಯನ್ನೂ ಅವರಿಗೆ ಪರಿಚಯಿಸಬೇಕಾಗಿದೆ.

ಕಳೆದ 4 ದಶಕಗಳು ಸನ್ಮಾರ್ಗದ ಪಾಲಿಗೆ ಸಿಹಿಯನ್ನಷ್ಟೇ ನೀಡಿರುವುದಲ್ಲ, ಕಹಿಯನ್ನೂ ನೀಡಿದೆ. ಈ ಸಂದರ್ಭದಲ್ಲಿ ಓದುಗರು ನೀಡಿದ  ಬೆಂಬಲದಿಂದಲೇ ಕಹಿಯನ್ನು ಸಿಹಿಯಾಗಿ ಪರಿವರ್ತಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಈ ಬೆಂಬಲ ನಿರಂತರವಾಗಿರಲಿ ಎಂಬ  ಹಾರೈಕೆಯೊಂದಿಗೆ ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು.