Friday 24 September 2021

ಸನ್ಮಾರ್ಗಕ್ಕೆ 43: ಸಾಗಿ ಬಂದ ಹಾದಿ ಮತ್ತು ಸಾಗಬೇಕಾದ ಕಠಿಣ ಹಾದಿ

 



ವಿಶೇಷ ಸಂಪಾದಕೀಯ


ಕುರ್‌ಆನನ್ನು ಧಾರಾವಾಹಿಯಾಗಿ ಕನ್ನಡದಲ್ಲಿ ಪ್ರಕಟಿಸಿದ ಮೊತ್ತಮೊದಲ ಪತ್ರಿಕೆ, ಬುಖಾರಿ ಹದೀಸ್ ಗ್ರಂಥವನ್ನು ಕನ್ನಡ ದಲ್ಲಿ  ಧಾರಾವಾಹಿಯಾಗಿ ಪ್ರಕಟಿಸಿದ ಮೊತ್ತಮೊದಲ ಪತ್ರಿಕೆ, ಪ್ರವಾದಿ ಚರಿತ್ರೆಯನ್ನು, ಇಸ್ಲಾಮೀ ಇತಿಹಾಸವನ್ನು, ಖಲೀಫರುಗಳ ಇತಿಹಾಸವನ್ನು.. ಹೀಗೆ ಹತ್ತು ಹಲವು ಪ್ರಥಮಗಳ ಮೈಲಿಗಲ್ಲನ್ನು ನೆಟ್ಟ ಹೆಮ್ಮೆ ಸನ್ಮಾರ್ಗಕ್ಕಿದೆ ಮತ್ತು ಕನ್ನಡದ ಮಣ್ಣಿನಲ್ಲಿ ಈ ಗರಿ ಸನ್ಮಾರ್ಗಕ್ಕೆ  ಮಾತ್ರವೇ ಇದೆ.

1978 ಎಪ್ರಿಲ್ 23ರಂದು ಹುಟ್ಟಿಕೊಂಡ ಸನ್ಮಾರ್ಗ ಕಳೆದ ನಾಲ್ಕು ದಶಕಗಳಲ್ಲಿ ಮಾಧ್ಯಮ ರಂಗಕ್ಕೆ ಕೊಟ್ಟಿರುವ ಕೊಡುಗೆಗಳ ಪಟ್ಟಿ  ಬಹುದೊಡ್ಡದಿದೆ. ಅದರಲ್ಲಿ ಅತ್ಯಂತ ಎತ್ತರದಲ್ಲಿರುವುದು- ಸತ್ಯ, ಮೌಲ್ಯಾಧಾರಿತ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆ  ಆಧಾರಿತ ಪತ್ರಿಕೋದ್ಯಮ. ಇಬ್ರಾಹೀಮ್ ಸಈದ್, ನೂರ್ ಮುಹಮ್ಮದ್, ಸಾದುಲ್ಲಾರಿಂದ ಹಿಡಿದು ಅನೇಕ ಪತ್ರಕರ್ತರನ್ನು ಅದು  ತಯಾರಿಸಿದೆ. ತಜ್ಞ ಪತ್ರಕರ್ತರನ್ನು ಮಾಧ್ಯಮ ರಂಗಕ್ಕೆ ಧಾರೆಯೆರೆದಿದೆ. ಅನೇಕಾರು ಬರಹಗಾರರನ್ನು ಅದು ಸೃಷ್ಟಿಸಿದೆ.

ಮುಸ್ಲಿಮ್ ಮಹಿಳೆಯರು ಮಾಧ್ಯಮ ರಂಗದಲ್ಲಿ ಬೆರಳೆಣಿಕೆಯಷ್ಟಿದ್ದ ಕಾಲದಲ್ಲೇ  ಮಹಿಳಾ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ ಬಂದ  ಸನ್ಮಾರ್ಗವು ಅಂತಿಮವಾಗಿ ಎರಡು ದಶಕಗಳ ಹಿಂದೆ ಅನುಪಮ ಎಂಬ ಮಹಿಳೆಯರಿಂದಲೇ ನಡೆಸಲ್ಪಡುವ ಪತ್ರಿಕೆಗೂ ಜನ್ಮ ನೀಡಿದೆ.  ಬರಹಗಳಿಗೆ ವಿಫುಲ ಅವಕಾಶಗಳನ್ನು ಒದಗಿಸಿರುವ ಸಾಮಾಜಿಕ ಜಾಲತಾಣಗಳ ಇಂದಿನ ದಿನಗಳಲ್ಲಿ ಇವ್ಯಾವುವೂ ಇಲ್ಲದ ಕಾಲಕ್ಕೆ  ಹೊರಳಿ ನೋಡುವಾಗ ಸನ್ಮಾರ್ಗ ಯುವ ಪ್ರತಿಭೆಗಳಿಗೆ ನೀಡಿದ ಬೆಂಬಲ ಮತ್ತು ಅವಕಾಶ ಖಂಡಿತ ಸ್ಮರಣೀಯ.

ಅಂದು ಮುಖ್ಯ ವಾಹಿನಿಯ ಕನ್ನಡ ಪತ್ರಿಕೆಗಳಂತೂ ಹೊಸಬರ ಬರಹಗಳಿಗೆ ಜಾಗ ನೀಡುತ್ತಿದ್ದುದು ಅಪರೂಪದಲ್ಲಿ ಅಪರೂಪ. ಏನೇ ಬರೆದರೂ ಪತ್ರ ವಿಭಾಗಕ್ಕಿಂತ ಮೇಲೇರಲು ಬಿಡದ ಅಲಿಖಿತ ಸಂಪಾದಕೀಯ ನಿಯಮವೊಂದು ಆ ಪತ್ರಿಕೆಗಳಲ್ಲಿತ್ತು. ಅದರಲ್ಲೂ  ಮುಸ್ಲಿಮ್ ಬರಹಗಾರರಂತೂ ಇಂಥ ಅಲಿಖಿತ ನಿಯಮದಿಂದ ಅತ್ಯಂತ ಹೆಚ್ಚು ತೊಂದರೆಗೊಳಗಾದರು. ಬರೆಯುವ ಹುರುಪಿದ್ದರೂ  ಮತ್ತು ಪ್ರತಿಭೆ ಇದ್ದರೂ ಅದನ್ನು ಪ್ರಕಟಿಸಿ ಬೆನ್ನುತಟ್ಟಿ ಪ್ರೋತ್ಸಾಹಿಸುವಂತಹ ಪತ್ರಿಕೆಗಳ ಅಭಾವ ಸಾಕಷ್ಟಿತ್ತು. ಮುಸ್ಲಿಮರ ಆಚಾರ,  ವಿಚಾರ, ಧಾರ್ಮಿಕ ನಿಯಮಗಳು, ಸಂಸ್ಕೃತಿ, ಸಾಂಪ್ರದಾಯಿಕತೆ, ಧರ್ಮಗ್ರಂಥ.. ಇತ್ಯಾದಿಗಳ ಬಗ್ಗೆ ತಿಳಿದಿಲ್ಲದ ಮತ್ತು ತಿಳಿಯಲೂ  ಪ್ರಯತ್ನಿಸದ ಪತ್ರಕರ್ತರು ಸನ್ಮಾರ್ಗ ಹುಟ್ಟಿಕೊಂಡ ಕಾಲದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು. ಅವರಿಂದಾಗಿ ಮುಸ್ಲಿಮರ ವರ್ಚಸ್ಸಿಗೆ ಆಗಾಗ  ಹಾನಿಯಾಗುತ್ತಲೂ ಇತ್ತು. ಅವರು ಮಾಡುತ್ತಿದ್ದ ವರದಿ, ಸುದ್ದಿ, ವಿಶ್ಲೇಷಣೆ ಎಲ್ಲವುಗಳೂ ಇಸ್ಲಾಮಿಗೆ ಸಂಬಂಧಿಸಿ ಶತದಡ್ಡತನವಾಗಿದ್ದರೂ  ಅದಕ್ಕೆ ಬರಹದಲ್ಲೇ  ಉತ್ತರ ಕೊಡಬಲ್ಲ ಸಮರ್ಥರು ಮುಸ್ಲಿಮರಲ್ಲಿ ಕಡಿಮೆಯಿದ್ದರು. ಇದಕ್ಕೆ ಪತ್ರಿಕೋದ್ಯಮದಲ್ಲಿ ಕಲಿಯುತ್ತಿರುವ  ಮುಸ್ಲಿಮ್ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದುದು ಒಂದು ಕಾರಣವಾದರೆ, ಕುರ್‌ಆನನ್ನು ಮತ್ತು ಇಸ್ಲಾಮೀ ತತ್ವಸಂಹಿತೆಯನ್ನು ಕನ್ನಡದಲ್ಲಿ ಅಧ್ಯಯನ ನಡೆಸುವುದಕ್ಕೆ ಬೇಕಾದ ವ್ಯವಸ್ಥೆ ಇಲ್ಲದಿರುವುದು ಇನ್ನೊಂದು ಕಾರಣವಾಗಿತ್ತು. ಹಾಗೆಯೇ,

ಒಂದುವೇಳೆ, ಯಾರಾದರೂ ಬರೆದರೂ ಅದನ್ನು ಪ್ರಕಟಿಸುವ ಸೌಜನ್ಯವನ್ನು ಆ ಪತ್ರಿಕೆಗಳು ತೋರುತ್ತಲೂ ಇರಲಿಲ್ಲ. ಪತ್ರಿಕಾ ರಂಗದಲ್ಲಿ  ಸನ್ಮಾರ್ಗದ ಕೊಡುಗೆ ಏನು ಎಂಬುದು ಸ್ಪಷ್ಟವಾಗುವುದೇ ಇಲ್ಲಿ.

ಸನ್ಮಾರ್ಗ ಹುಟ್ಟಿಕೊಂಡಾಗ ಇದ್ದ ಎಣಿಕೆಯ ನಾಲ್ಕೈದು  ಬರಹಗಾರರ ಸಂಖ್ಯೆ ಪತ್ರಿಕೆ ಹುಟ್ಟಿ ವರ್ಷವಾಗುತ್ತಲೇ ದ್ವಿಗುಣವಾಯಿತು.  ಅದ್ಭುತ ಎನ್ನಬಹುದಾದ ಪ್ರತಿಭೆಗಳು ಸನ್ಮಾರ್ಗದ ಮೂಲಕ ಬೆಳಕಿಗೆ ಬಂದುವು. ಲೇಖನ, ವಿಶ್ಲೇಷಣೆ, ಪ್ರಬಂಧ, ಕತೆ, ಕವನ, ವಿಮರ್ಶೆ  ಇತ್ಯಾದಿಗಳನ್ನು ಮುಖ್ಯವಾಹಿನಿ ಪತ್ರಿಕೆಗಳಿಗೆ ಸಡ್ಡು ಹೊಡೆಯುವಷ್ಟು ಪ್ರಬುದ್ಧವಾಗಿ ಬರೆಯುವ ಬರಹಗಾರರು  ನಿರ್ಮಾಣವಾಗತೊಡಗಿದರು. ಅಲ್ಲಲ್ಲಿ ಬರಹಗಾರರನ್ನು ತಯಾರಿಸುವ ಕಮ್ಮಟಗಳೂ ನಡೆಯತೊಡಗಿದುವು. ಇದರ ಜೊತೆಗೇ ಕನ್ನಡ  ಭಾಷೆಯಲ್ಲಿ ಪವಿತ್ರ ಕುರ್‌ಆನ್‌ನ ಅನುವಾದವೂ ಸನ್ಮಾರ್ಗದಲ್ಲಿ ಧಾರಾವಾಹಿಯಾಗಿ ಬರತೊಡಗಿತು.

ಆವರೆಗೆ ಕನ್ನಡ ಮಣ್ಣಿಗೆ ಅರಬಿ ಭಾಷೆಯ ಕುರ್‌ಆನ್ ತಲುಪಿತ್ತೇ ಹೊರತು ಅದರ ಅನುವಾದ ತಲುಪಿರಲಿಲ್ಲ. ಅರಬಿಯಲ್ಲಿರುವ  ಕುರ್‌ಆನ್ ಹೇಳುವುದೇನು ಎಂಬುದನ್ನು ಕನ್ನಡಿಗರು ಅರ್ಥಮಾಡಿಕೊಳ್ಳುವುದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳಿರಲಿಲ್ಲ. ಸನ್ಮಾರ್ಗ ಆ  ಬರವನ್ನು ನೀಗಿಸುವ ಮೂಲಕ ಮುಖ್ಯವಾಹಿನಿ ಪತ್ರಿಕೆಗಳಲ್ಲಿದ್ದ ಹಲವು ಪತ್ರಕರ್ತರ ಅಜ್ಞಾನವನ್ನು ನೀಗಿಸಲೂ ಯಶಸ್ವಿಯಾಯಿತು.  ಅದಕ್ಕಿಂತಲೂ ಮುಖ್ಯವಾಗಿ ಮುಸ್ಲಿಮರಲ್ಲಿದ್ದ ಅಜ್ಞಾನವನ್ನೂ ನೀಗಿಸಿತು. ಅವರಲ್ಲಿ ಅಕ್ಷರ ಪ್ರೀತಿಯನ್ನು ಕಲಿಸಿತು. ಮಾಧ್ಯಮ ಕ್ಷೇತ್ರಕ್ಕೆ ಮುಸ್ಲಿಮರನ್ನು ಸನ್ಮಾರ್ಗ  ಕೈಬೀಸಿ ಕರೆಯಿತು. ಅವರ ಬರಹಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿತು. ಜೊತೆಗೇ ಮುಸ್ಲಿಮೇತರ ಬರಹಗಾರರಿಗೂ ಸರಿಸಮಾನ ಅವಕಾಶಗಳನ್ನು ಕೊಟ್ಟು ನಿಜ ಪತ್ರಿಕಾ ಗುಣವನ್ನು ಮೆರೆಯಿತು. ಮುಸ್ಲಿಮೇತರರನ್ನು ಅಂಕಣ ಬರಹಗಾರರಾಗಿಯೂ ಅದು ಗೌರವಿಸಿತು.

ಹೀಗೆ ಸಾಗಿ ಬಂದ ಸನ್ಮಾರ್ಗಕ್ಕೆ ಇದೀಗ 43 ವರ್ಷಗಳು ತುಂಬಿವೆ. ಇದು 44ನೇ ವರ್ಷದ ಪ್ರಥಮ ಸಂಚಿಕೆ. ಮುಖ್ಯವಾಹಿನಿಯ  ಪತ್ರಿಕೆಗಳಿಗೆ ಹೋಲಿಸಿದರೆ, ಅನೇಕ ‘ಇಲ್ಲ’ಗಳನ್ನು ತನ್ನ ಮೌಲ್ಯವಾಗಿ ಆರಂಭದಿಂದಲೂ ನೆಚ್ಚಿಕೊಂಡು ಬಂದಿರುವುದರಿಂದಲೋ ಏನೋ  ಇವತ್ತೂ ಕೆಲವು ಪ್ರಶ್ನೆ ಮತ್ತು ಸವಾಲುಗಳ ಜೊತೆಗೆಯೇ ಸನ್ಮಾರ್ಗ ಬದುಕುತ್ತಿದೆ. ಈ ಪತ್ರಿಕೆ ನಂಬಿಕೊಂಡ ಮೌಲ್ಯದ ಕಾರಣಕ್ಕಾಗಿ  ಹೆಚ್ಚಿನ ಜಾಹೀರಾತುಗಳು ತಿರಸ್ಕೃತವಾಗುತ್ತಾ ಬಂದಿವೆ. ಬ್ಯಾಂಕ್, ಮದ್ಯದ ಜಾಹೀರಾತು, ತಂಬಾಕು, ಜೂಜು, ಸಿನಿಮಾ ಜಾಹೀರಾತು,  ಅಶ್ಲೀಲತೆ, ಜ್ಯೋತಿಷ್ಯ ಮತ್ತು ವಿಶ್ವಾಸಾರ್ಹವೆಂದು ಮೇಲ್ನೋಟಕ್ಕೆ ಸ್ಪಷ್ಟವಾಗದ ಯಾವುದನ್ನೂ ಸನ್ಮಾರ್ಗ ಜಾಹೀರಾತಾಗಿ  ಸ್ವೀಕರಿಸಿಕೊಂಡೇ ಇಲ್ಲ. ಬಡ್ಡಿ, ಮದ್ಯ, ಜೂಜು, ಅಶ್ಲೀಲತೆಯ ವಿರುದ್ಧ ಸನ್ಮಾರ್ಗ ತನ್ನ ಆರಂಭ ಕಾಲದಿಂದ ಇಂದಿನವರೆಗೂ ಸಮರ  ಸಾರುತ್ತಲೇ ಬಂದಿದೆ. ಹಾಗಂತ,

ಮೌಲ್ಯಕ್ಕೆ ಇಷ್ಟೂ ನಿಷ್ಠವಾಗಿ ಅಂಟಿ ಕುಳಿತರೆ ಅದರ ಪರಿಣಾಮ ಏನು ಅನ್ನುವುದು ಎಲ್ಲರಿಗೂ ಗೊತ್ತು. ಆದಾಯದ ಮೇಲೆ ಅದು ತೀವ್ರ  ಅಡ್ಡ ಪರಿಣಾಮವನ್ನು ಬೀರುತ್ತದೆ. ಹೆಚ್ಚಿನ ಜಾಹೀರಾತುಗಳು ಮೌಲ್ಯನಿಷ್ಠೆಯೊಂದಿಗೆ ರಾಜಿ ಮಾಡಿಕೊಳ್ಳಲು ಒತ್ತಾಯಿಸುವ ರೂಪದ್ದಾಗಿರುವುದರಿಂದ ಅವನ್ನು ತಿರಸ್ಕರಿಸದೆ ಅನ್ಯ ದಾರಿಯೇ ಇಲ್ಲ. ಆದರೆ ಇಂಥ ಮೌಲ್ಯನಿಷ್ಠೆಯು ಅಂತಿಮವಾಗಿ ಪತ್ರಿಕೆಯ ಆಯುಷ್ಯದ  ಮೇಲೆ ಏಟು ಕೊಡತೊಡಗುತ್ತದೆ. ಮತ್ತೆ ಮತ್ತೆ ಬೀಳುವ ಇಂಥ ಏಟುಗಳು ಪತ್ರಿಕೆಯನ್ನು ದಣಿಯುವಂತೆ ಮಾಡಬಲ್ಲಷ್ಟು ಪ್ರಬಲವಾಗುತ್ತಾ  ಹೋಗುತ್ತದೆ. ಇಂಥ ಸ್ಥಿತಿಯಲ್ಲಿ ಸನ್ಮಾರ್ಗಕ್ಕೆ ಆಸರೆಯಾಗುವುದು- ಸಹೃದಯಿ ಬೆಂಬಲಿಗರು ಮತ್ತು ಓದುಗರು ಮಾತ್ರ.

ಇವತ್ತಿನ ದಿನಗಳಲ್ಲಂತೂ ಜನರಲ್ಲಿ ಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಕೊರೋನಾ ಈ ಅಸಾಮರ್ಥ್ಯದ ಮೇಲೆ ಇನ್ನಷ್ಟು  ಬರೆಯನ್ನು ಎಳೆದಿದೆ. ಈ ಬರೆ ಸನ್ಮಾರ್ಗದ ಮೇಲೂ ಪರಿಣಾಮ ವನ್ನು ಬೀರಿದೆ. ಇದರಿಂದ ಪಾರಾಗುವುದಕ್ಕೆ ಓದುಗರ ಬೆಂಬಲದ  ಅಗತ್ಯ ಇದೆ. ಮೌಲ್ಯದೊಂದಿಗೆ ರಾಜಿ ಮಾಡಿಕೊಳ್ಳದೇ ಪತ್ರಿಕೆಯೊಂದನ್ನು ನಡೆಸಲು ಸಾಧ್ಯ ಎಂಬುದನ್ನು ಕಳೆದ 4 ದಶಕಗಳಿಂದ ಸಾಧಿಸಿ  ತೋರಿಸುತ್ತಾ ಬಂದ ಸನ್ಮಾರ್ಗವು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಸವಾಲುಗಳನ್ನು ಎದುರಿಸಬೇಕಾದಂಥ ವಾತಾವರಣ ಇದೆ.  ಇದನ್ನು ಮೆಟ್ಟಿ ನಿಲ್ಲುವುದಕ್ಕಾಗಿ ಸನ್ಮಾರ್ಗ ಹಿತೈಷಿಗಳು ಜಾಹೀರಾತು ಮತ್ತು ಬೆಂಬಲ ಧನವನ್ನು ನೀಡುವ ಮೂಲಕ ಊರುಗೋಲಾಗಿ  ನಿಲ್ಲಬೇಕಾದ ಅಗತ್ಯ ಇದೆ.

ಕಳೆದುಹೋದ ನಾಲ್ಕು ದಶಕಗಳು ಸನ್ಮಾರ್ಗ ಮತ್ತು ಅದರ ಓದುಗರ ಪಾಲಿಗೆ ವೈಭವಯುತವಾದದ್ದು. ಈ ಅವಧಿಯಲ್ಲಿ ಅದು  ಪ್ರಭುತ್ವವನ್ನು ಎದುರು ಹಾಕಿಕೊಂಡಿದೆ. ಹಲವು ಕೇಸುಗಳನ್ನು ಜಡಿಸಿಕೊಂಡಿದೆ. ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶಕರು ವರ್ಷಗಟ್ಟಲೆ  ನ್ಯಾಯಾಲಯಕ್ಕೆ ಅಲೆದಿದ್ದಾರೆ. ಸ್ಥಾಪಿತ ಹಿತಾಸಕ್ತಿಗಳ ಕೆಂಗಣ್ಣಿಗೆ ಪತ್ರಿಕೆ ಗುರಿಯಾಗಿದೆ. ಅಂಧಶ್ರದ್ಧೆ ಮತ್ತು ಅಸತ್ಯವನ್ನು ಪ್ರಶ್ನಿಸಿದ್ದಕ್ಕಾಗಿ  ಸಂಪಾದಕರ ಮೇಲೆ ಹಲ್ಲೆಯೂ ನಡೆದಿದೆ. ಸಂಪಾದಕೀಯ ಬಳಗ ಜೀವ ಬೆದರಿಕೆಯನ್ನೂ ಎದುರಿಸಿದೆ. ಹಾಗೆಯೇ, ಸನ್ಮಾರ್ಗ  ಪತ್ರಿಕೆಯನ್ನು ಕಟ್ಟಿ ಬೆಳೆಸಿದ ಮತ್ತು ಈ ಪತ್ರಿಕೆಗಾಗಿ ಎಲ್ಲವನ್ನೂ ಧಾರೆಯೆರೆದ ಸಂಪಾದಕರುಗಳಾದ ಇಬ್ರಾಹೀಮ್ ಸಈದ್ ಮತ್ತು  ನೂರ್ ಮುಹಮ್ಮದ್‌ರನ್ನೂ ಈ ಪಯಣದಲ್ಲಿ ಅದು ಕಳಕೊಂಡಿದೆ. ಇವರ ಜೊತೆಗೇ ಈ ಪತ್ರಿಕೆಯ ಏಳಿಗೆಗಾಗಿ ಹಗಲೂ ರಾತ್ರಿ ದುಡಿದ  ಮತ್ತು ತನು-ಮನ-ಧನದಿಂದ ಬೆಂಬಲಿಸಿದ ಹಲವರನ್ನೂ ಪತ್ರಿಕೆ ಕಳಕೊಂಡಿದೆ. ಅವರೆಲ್ಲರನ್ನೂ ಈ ಸಂದರ್ಭದಲ್ಲಿ ಸನ್ಮಾರ್ಗ  ಸ್ಮರಿಸುತ್ತದೆ. ಅವರೆಲ್ಲರಿಗೆ ಅಲ್ಲಾಹನು ಸೂಕ್ತ ಪ್ರತಿಫಲ ನೀಡಲಿ ಎಂದು ಪ್ರಾರ್ಥಿಸುತ್ತದೆ. ಜೊತೆಗೇ,

ಈ ನಾಲ್ಕು ದಶಕಗಳ ಅವಧಿಯಲ್ಲಿ ಸನ್ಮಾರ್ಗ ಇನ್ನೆರಡು ಮಹತ್ವಪೂರ್ಣ ಹೆಜ್ಜೆಗಳನ್ನೂ ಇರಿಸಿದೆ. ಒಂದು- ಸನ್ಮಾರ್ಗ ವೆಬ್‌ ಪೋರ್ಟಲ್, ಇನ್ನೊಂದು- ಸನ್ಮಾರ್ಗ ನ್ಯೂಸ್ ಚಾನೆಲ್. ತೀರಾ ಸಣ್ಣ ಅವಧಿಯಲ್ಲಿ ಅತ್ಯಂತ ದೊಡ್ಡ ಪರಿಣಾಮವನ್ನು ಬೀರಿದ ಮತ್ತು ಬೀರುತ್ತಿರುವ  ಇವೆರಡೂ ಸನ್ಮಾರ್ಗದ ಬಹುನಿರೀಕ್ಷೆಯ ಹೆಜ್ಜೆಗಳು. ಇವನ್ನೂ ಓದುಗರಾದ ಮತ್ತು ಸಹೃದಯಿ ದಾನಿಗಳಾದ ನೀವೇ ಬೆಳೆಸಬೇಕಾಗಿದೆ.  ಸನ್ಮಾರ್ಗ ನ್ಯೂಸ್ ಚಾನೆಲ್‌ನಲ್ಲಿ ಪ್ರಸಾರವಾಗುವ ಕಾರ್ಯಕ್ರಮವನ್ನು ಪ್ರತಿದಿನ ವೀಕ್ಷಿಸುತ್ತಾ ಮತ್ತು ಗೆಳೆಯರಲ್ಲಿ ಹಂಚುತ್ತಾ ಸಬ್‌ ಸ್ಕ್ರೈಬ್   ಆಗುವಂತೆ ಒತ್ತಾಯಿಸಬೇಕಾಗಿದೆ. ಸನ್ಮಾರ್ಗ ಪತ್ರಿಕೆಯನ್ನೂ ಅವರಿಗೆ ಪರಿಚಯಿಸಬೇಕಾಗಿದೆ.

ಕಳೆದ 4 ದಶಕಗಳು ಸನ್ಮಾರ್ಗದ ಪಾಲಿಗೆ ಸಿಹಿಯನ್ನಷ್ಟೇ ನೀಡಿರುವುದಲ್ಲ, ಕಹಿಯನ್ನೂ ನೀಡಿದೆ. ಈ ಸಂದರ್ಭದಲ್ಲಿ ಓದುಗರು ನೀಡಿದ  ಬೆಂಬಲದಿಂದಲೇ ಕಹಿಯನ್ನು ಸಿಹಿಯಾಗಿ ಪರಿವರ್ತಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಈ ಬೆಂಬಲ ನಿರಂತರವಾಗಿರಲಿ ಎಂಬ  ಹಾರೈಕೆಯೊಂದಿಗೆ ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು.

No comments:

Post a Comment