Wednesday 24 June 2020

ಜನಪ್ರತಿನಿಧಿಗಳೇ, ಪ್ರಶ್ನಿಸಲೇಬೇಕಾದ ಸಂದರ್ಭದಲ್ಲಿ ಯಾಕೆ ಮೌನವಾದಿರಿ?



ಕೊರೋನಾ ಲಾಕ್‍ಡೌನ್‍ನಿಂದಾಗಿ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರ ಪೈಕಿ 175 ಮಂದಿಯನ್ನು ಬಾಡಿಗೆ ವಿಮಾನದಲ್ಲಿ ಊರಿಗೆ ಕಳುಹಿಸಿದ ಬಶೀರ್ ಸಾಗರ್ ಮತ್ತು ಅಲ್ತಾಫ್ ಉಳ್ಳಾಲ್ ಎಂಬ ಉದ್ಯಮಿಗಳು ರಾಜ್ಯಾದ್ಯಂತ ಶ್ಲಾಘನೆಗೆ ಒಳಗಾಗಿದ್ದಾರೆ. ಅವರು ನಡೆಸುತ್ತಿರುವ ಸಾಕೋ ಕಂಪೆನಿ ಕನ್ನಡಿಗರ ಮನೆಮಾತಾಗಿದೆ. ಅವರು ಬಾಡಿಗೆ ವಿಮಾನದ ವೆಚ್ಚವನ್ನು ಭರಿಸಿದ್ದಷ್ಟೇ ಅಲ್ಲ, ಪ್ರತಿಯೊಬ್ಬರ ಪ್ರಯಾಣ ವೆಚ್ಚವನ್ನೂ ಭರಿಸಿದ್ದಾರೆ. ಮಾತ್ರವಲ್ಲ, ಹೀಗೆ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ಬಳಿಕ ನಡೆದ ಕೊರೋನಾ ಪರೀಕ್ಷಾ ಶುಲ್ಕ, ಕ್ವಾರಂಟೈನ್‍ಗೆ ಬೇಕಾದ ಕೊಠಡಿ ವ್ಯವಸ್ಥೆ, ಆಹಾರ ಎಲ್ಲವುಗಳ ವೆಚ್ಚವನ್ನೂ ಅವರೇ ಭರಿಸಿದ್ದಾರೆ. ಇದು ಸಾಮಾನ್ಯ ಸಂಗತಿಯಲ್ಲ. ಲಾಕ್‍ಡೌನ್‍ನಿಂದಾಗಿ ಉದ್ಯಮಿಗಳು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ತಮಗೆ ಸಂಬಂಧಿಸಿಯೇ ಇಲ್ಲದ ಜನರಿಗಾಗಿ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡುವುದಕ್ಕೆ ವಿಶಾಲ ಹೃದಯ ಬೇಕು. ಒಂದುವೇಳೆ, ಈ ಸಾಹಸಕ್ಕೆ ಕೈ ಹಾಕದೇ ಇರುತ್ತಿದ್ದರೆ ಅವರು ಕಳಕೊಳ್ಳುವುದಕ್ಕೇನೂ ಇರಲಿಲ್ಲ. ಬದಲಾಗಿ ಈ ಕಷ್ಟಕಾಲದಲ್ಲಿ ಲಕ್ಷಾಂತರ ರೂಪಾಯಿಗಳು ಅವರ ಪಾಲಿಗೆ ಉಳಿಕೆಯಾಗುತ್ತಿತ್ತು. ಆದ್ದರಿಂದಲೇ, 
\ರಾಜ್ಯದ ಮಂದಿ ಈ ಉದ್ಯಮಿಗಳನ್ನು ಅಭಿಮಾನದಿಂದ ನೋಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ದ.ಕ. ಜಿಲ್ಲೆಯ ಬಿಜೆಪಿ ಶಾಸಕರುಗಳಾದ ವೇದವ್ಯಾಸ್ ಕಾಮತ್, ರಾಜೇಶ್ ನಾಯ್ಕ್ ಉಳೇಪಾಡಿಯವರೂ ಅಭಿನಂದಿಸಿದ್ದಾರೆ. ಅವರ ಸೇವಾ ಮನೋಭಾವವನ್ನು ಕೊಂಡಾಡಿದ್ದಾರೆ.
ಒಳ್ಳೆಯ ಕೆಲಸವನ್ನು ಯಾರು ಮಾಡಿದರೂ ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಒಟ್ಟು ಅಭಿವೃದ್ಧಿಯ ದೃಷ್ಟಿಯಿಂದ ಬಹಳ ಅಗತ್ಯ. ಇಂತಹ ಬೆಳವಣಿಗೆಯು ಇನ್ನಷ್ಟು ಸಮಾಜ ಸೇವಕರ ತಯಾರಿಗೆ ವೇದಿಕೆಯನ್ನು ಸೃಷ್ಟಿಸುತ್ತದೆ. ಇಂಥವರನ್ನು ನೋಡಿ ಬೆಳೆಯುವ ಯುವ ಪೀಳಿಗೆಯು ನಾವು ಹೀಗೆ ಇತರರಿಗೆ ನೆರವಾಗಬೇಕು ಎಂಬ ಬಯಕೆಯೊಂದನ್ನು ಒಳಗೊಳಗೇ ಬಚ್ಚಿಟ್ಟುಕೊಂಡು ಬೆಳೆಯುತ್ತವೆ. ಅವುಗಳು ಮುಂದೊಂದು ದಿನ ಫಲ ಕೊಡುವುದಕ್ಕೂ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಾಸಕರುಗಳ ಶ್ಲಾಘನೆ ಮತ್ತು ಗುರುತಿಸುವಿಕೆ ಅತ್ಯಂತ ಸಕಾಲಿಕ. ಆದರೆ,
 ಒಳಿತನ್ನು ಗುರುತಿಸಿ ಪ್ರೋತ್ಸಾಹಿಸುವಂತೆಯೇ ಕೆಡುಕನ್ನು ವಿರೋಧಿಸುವ ಮತ್ತು ಧರ್ಮಾತೀತವಾಗಿ ಖಂಡಿಸುವ ಪ್ರಕ್ರಿಯೆಗಳೂ ನಡೆಯಬೇಕು. ಒಳಿತನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಒಳಿತು ಹೇಗೆ ಪ್ರಚಾರಗೊಳ್ಳುತ್ತದೋ ಕೆಡುಕನ್ನು ವಿರೋಧಿಸಿ ಖಂಡಿಸುವುದರಿಂದ ಕೆಡುಕಿನ ಹರಡುವಿಕೆಗೂ ತಡೆ ಬೀಳುತ್ತದೆ. ಒಳಿತನ್ನು ಪ್ರೋತ್ಸಾಹಿಸುವ ಮತ್ತು ಕೆಡುಕನ್ನು ವಿರೋಧಿಸುವ ಈ ಎರಡೂ ಪ್ರಕ್ರಿಯೆಗಳು ಒಟ್ಟೊಟ್ಟಿಗೆ ನಡೆಯಬೇಕಾದವು. ವಿಷಾದ ಅನ್ನಿಸುವುದೂ ಇಲ್ಲೇ. 
ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಾಸಕರು ಒಳಿತನ್ನು ಶ್ಲಾಘಿಸಿದ ರೀತಿಯಲ್ಲಿಯೇ ಕೆಡುಕನ್ನೂ ವಿರೋಧಿಸಬೇಕು ಎಂದು ರಾಜ್ಯದ ಮಂದಿ ಬಯಸುವುದು ಸಹಜ. ಜನಪ್ರತಿನಿಧಿಗಳೆಂಬ ನೆಲೆಯಲ್ಲಿ ಅವರಿಂದ ಇಂತಹ ಬಯಕೆಯನ್ನು ನಿರೀಕ್ಷಿಸುವುದು ಅಪರಾಧವೂ ಅಲ್ಲ. ಆದರೆ ಈ ನಿರೀಕ್ಷೆ ಈಡೇರುತ್ತಿಲ್ಲ ಅನ್ನುವ ಸಂಕಟ ಜನರಲ್ಲಿದೆ. ಸೌದಿಯಿಂದ 175 ಪ್ರಯಾಣಿಕರು ಮಂಗಳೂರು ತಲುಪಿದ ಎರಡು ದಿನಗಳಾದ ಬಳಿಕ ಇದೇ ಮಂಗಳೂರಿನಲ್ಲಿ ಮುಹಮ್ಮದ್ ಹನೀಫ್ ಎಂಬವರ ಮೇಲೆ ದುಷ್ಕರ್ಮಿಗಳು ತೀವ್ರ ಹಲ್ಲೆ ನಡೆಸಿದ್ದಾರೆ. ಕೈಯಲ್ಲಿ ರಾಡ್, ತಲವಾರು, ದೊಣ್ಣೆಗಳನ್ನು ಹಿಡಿದಿದ್ದ 20ರಿಂದ 25ರಷ್ಟಿದ್ದ ದುಷ್ಕರ್ಮಿಗಳ ಗುಂಪು ಮುಹಮ್ಮದ್ ಹನೀಫ್‍ರನ್ನು ಅವರ ವಾಹನಕ್ಕೆ ಕಟ್ಟಿ ಹಾಕಿ ಥಳಿಸಿದೆ. ಪೊಲೀಸರು ಬಂದಾಗ ಈ ಗುಂಪು ಪರಾರಿಯಾಗಿದೆ. ವೈದ್ಯಾಧಿಕಾರಿಗಳಿಂದ ‘ಪ್ರಾಣಿ ಆರೋಗ್ಯ ಪ್ರಮಾಣ ಪತ್ರ’ವನ್ನು ಪಡೆದುಕೊಂಡು ಹಾವೇರಿಯ ಕೃಷಿ ಮಾರುಕಟ್ಟೆಯಿಂದ 4 ಎಮ್ಮೆಗಳನ್ನು ಕಾನೂನುಬದ್ಧವಾಗಿಯೇ ಸಾಗಿಸುತ್ತಿದ್ದೇನೆ ಎಂದವರು ಹೇಳಿದ್ದಾರೆ. ಇದೇವೇಳೆ, ಬಂಧನಕ್ಕೀಡಾದ ಆರು ಮಂದಿ ಆರೋಪಿಗಳು ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಹಾಗಂತ,
ಜಾನುವಾರು ಸಾಗಾಟದ ನೆಪದಲ್ಲಿ ಥಳಿತ, ಹಲ್ಲೆ, ಹತ್ಯೆ ಜಿಲ್ಲೆಗೆ ಹೊಸತಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧ ಎಂದು ಗೊತ್ತಿದ್ದೂ ಮತ್ತೆ ಮತ್ತೆ ಇಂಥ ಕ್ರೌರ್ಯಗಳು ನಡೆಯುವುದಕ್ಕೆ ಕಾರಣ ಏನು ಮತ್ತು ಈ ಕ್ರೌರ್ಯದಲ್ಲಿ ಭಾಗಿಯಾದವರು ತಕ್ಷಣ ಜಾಮೀನು ಪಡೆದು ಹೊರಬರುವುದರ ಹಿಂದಿನ ಗುಟ್ಟೇನು ಅನ್ನುವುದು ಅಲ್ತಾಫ್ ಮತ್ತು ಬಶೀರ್ ರನ್ನು ಕೊಂಡಾಡಿದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮತ್ತು ಜಿಲ್ಲೆಯ ಶಾಸಕರುಗಳಿಗೆ ತಿಳಿಯದ ವಿಷಯವೂ ಅಲ್ಲ. ಮುಹಮ್ಮದ್ ಹನೀಫ್ ಅವರು ಕಾನೂನು ಉಲ್ಲಂಘಿಸಿ ಜಾನುವಾರು ಸಾಗಾಟ ಮಾಡುತ್ತಿದ್ದಾರೆಂದರೆ, ಅದನ್ನು ನೋಡಿಕೊಳ್ಳುವುದಕ್ಕೆ ಪೊಲೀಸ್ ಇಲಾಖೆ ಇದೆ. ನ್ಯಾಯಾಲಯ ಇದೆ. ಅದರ ಹೊರತಾಗಿ ಯಾವ ಖಾಸಗಿ ಗುಂಪುಗಳಿಗೂ ಈ ಹೊಣೆಯನ್ನು ವಹಿಸಿಕೊಡಲಾಗಿಲ್ಲ. ಯಾರಾದರೂ ಕಾನೂನು ಉಲ್ಲಂಘನೆ ಮಾಡುತ್ತಿರುವ ಅನುಮಾನ ಮೂಡಿದರೆ, ಜವಾಬ್ದಾರಿಯುತ ನಾಗರಿಕರಾಗಿ ನಾವು ಮಾಡಬಹುದಾದ ಅತಿಶ್ರೇಷ್ಟ ದೇಶಸೇವೆಯೆಂದರೆ, ಆ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ಕೊಡುವುದು. ಇದರ ಹೊರತಾಗಿ ಸ್ವಯಂ ಪೊಲೀಸರಾಗುವುದು, ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧ. ಇದು ಅಲ್ತಾಫ್ ಮತ್ತು ಬಶೀರ್ ನ್ನು ಕೊಂಡಾಡಿದ ಜಿಲ್ಲೆಯ ಸಂಸದರು ಮತ್ತು ಶಾಸಕರಿಗೆ ಖಂಡಿತ ಗೊತ್ತಿದೆ. ಆದರೆ ಈವರೆಗೂ ಇವರಾರೂ ಈ ಅಮಾನವೀಯ ಕ್ರೌರ್ಯದ ವಿರುದ್ಧ ಮಾತಾಡಿಲ್ಲ. ಇದು ಸಾರುವ ಸಂದೇಶ ಏನು?
ಮೊನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ 175 ಪ್ರಯಾಣಿಕರ ಪೈಕಿ ಸಾಕೋ ಕಂಪೆನಿಯ ಒಬ್ಬನೇ ಒಬ್ಬ ಸಿಬ್ಬಂದಿ ಅಥವಾ ಅವರ ಸಂಬಂಧಿಕರು ಇರಲಿಲ್ಲ. ಒಂದೇ ಧರ್ಮದವರೂ ಇರಲಿಲ್ಲ. ಗರ್ಭಿಣಿಯರು, ವಿಸಿಟ್ ವೀಸಾದಲ್ಲಿ ಬಂದು ಲಾಕ್‍ಡೌನ್ ಕಾರಣದಿಂದ ಸಿಲುಕಿಕೊಂಡ ಹಿರಿಯ ನಾಗರಿಕರು, ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯ ಇರುವವರು, ಕೆಲಸ ಕಳೆದುಕೊಂಡು ಕಂಗಾಲಾಗಿರುವವರು ಮುಂತಾದ ಮನುಷ್ಯರಷ್ಟೇ ಅವರಾಗಿದ್ದರು. ಅವರನ್ನು 61 ಹಿರಿಯ ನಾಗರಿಕರು, 55 ಗರ್ಭಿಣಿಯರು, 20 ಮಂದಿ ತುರ್ತು ಚಿಕಿತ್ಸೆ ಅಗತ್ಯವಿರುವವರು, 35 ಮಕ್ಕಳು- ಹೀಗೆ ಗುರುತಿಸಲಾಗಿತ್ತೇ ಹೊರತು ಅವರ ಧರ್ಮ, ಭಾಷೆ, ರಾಜಕೀಯ ಒಲವುಗಳು ಗುರುತಿಸುವಿಕೆಯ ಮಾನದಂಡವಾಗಿರಲೇ ಇಲ್ಲ. ಸಂಸದರು ಮತ್ತು ಶಾಸಕರು ಈ ಬೆಳವಣಿಗೆಯನ್ನು ಮೆಚ್ಚಿಕೊಂಡೂ ಇದ್ದಾರೆ. ಆದ್ದರಿಂದಲೇ,
 ಈ ಸಂಸದರು ಮತ್ತು ಶಾಸಕರಿಂದ ರಾಜ್ಯದ ಜನರು ಇನ್ನಷ್ಟನ್ನು ನಿರೀಕ್ಷಿಸುವುದು. ಕೆಡುಕನ್ನು ಖಂಡಿಸುವ ವಿಚಾರದಲ್ಲೂ ಇವರು ಇದೇ ಮಾನದಂಡವನ್ನು ಅನುಸರಿಸಬೇಕು ಎಂದು ಬಯಸುವುದು. ಆದರೆ,
ಈ ಬಯಕೆ ಪದೇ ಪದೇ ವಿಫಲವಾಗುತ್ತಿದೆ. ಜಾನುವಾರು ಸಾಗಾಟದ ಹೆಸರಲ್ಲಿ, ಯುವಕ-ಯುವತಿಯರ ಮಾತುಕತೆಯ ಹೆಸರಲ್ಲಿ, ‘ಲವ್ ಜಿಹಾದ್’ ಆರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ  ಅನೇಕ ಥಳಿತದ ಘಟನೆಗಳು ನಡೆದಿವೆ, ಬೆತ್ತಲೆ ಮಾಡಲಾಗಿದೆ, ಮಾರಣಾಂತಿಕವಾಗಿ ಗಾಯಗೊಳಿಸಲಾಗಿದೆ. ಹತ್ಯೆಯೂ ನಡೆದಿದೆ. ಆದರೆ, ಬಶೀರ್ ಮತ್ತು ಅಲ್ತಾಫ್ ಅವರ ಒಳಿತಿನ ಕೆಲಸವನ್ನು ಶ್ಲಾಘಿಸಿರುವ ಈ ಸಂಸದರಾಗಲಿ, ಶಾಸಕರಾಗಲಿ, ಇವಾವುದನ್ನೂ ಖಂಡಿಸಬೇಕಾದ ರೀತಿಯಲ್ಲಿ ಖಂಡಿಸಲೇ ಇಲ್ಲ. ಯಾಕೆ ಹೀಗೆ? ಥಳಿತಕ್ಕೊಳಗಾಗುತ್ತಿರುವವರು ಒಂದು ಧರ್ಮದವರು ಮತ್ತು ಥಳಿಸುವವರು ಇನ್ನೊಂದು ಧರ್ಮದವರು ಎಂಬುದು ಇದಕ್ಕೆ ಕಾರಣವೇ? ತನ್ನದಲ್ಲದ ಧರ್ಮದವರ ಮೇಲೆ ಅನ್ಯಾಯ ನಡೆಯುವುದು ಸಹ್ಯವೇ? ಅನ್ಯಾಯಕ್ಕೂ ಧರ್ಮಕ್ಕೂ ಏನು ಸಂಬಂಧ? ಕೆಡುಕಿಗೂ ಧರ್ಮಕ್ಕೂ ಏನು ಸಂಬಂಧ? ಒಂದುವೇಳೆ, 
ಒಳಿತನ್ನು ಧರ್ಮಾಧಾರಿತವಾಗಿ ಮಾಡುವುದಾಗಿದ್ದರೆ ಅದನ್ನು ಅಲ್ತಾಫ್ ಮತ್ತು ಬಶೀರ್ ಗೆ ಮಾಡಬಹುದಿತ್ತು. ಒಂದೇ ಧರ್ಮದವರನ್ನು ಹುಡುಕಿ ಊರಿಗೆ ಕಳುಹಿಸಬಹುದಿತ್ತು. ಅಲ್ಲದೇ ಅವರು ಜನಪ್ರತಿನಿಧಿಗಳೂ ಅಲ್ಲ, ಉದ್ಯಮಿಗಳು. ಜನಪ್ರತಿನಿಧಿಗಳಂತೆ ಜನರಿಗೆ ಅವರು ಉತ್ತರದಾಯಿಗಳೂ ಅಲ್ಲ. ಆದರೆ ಅವರು ಒಳಿತಿನ ವಿಚಾರದಲ್ಲಿ ಧರ್ಮವನ್ನು ನೋಡಲಿಲ್ಲ. ಅಲ್ಲಿ ಆಯ್ಕೆಗೆ ಕಷ್ಟವೇ ಮಾನದಂಡವಾಗಿತ್ತು. ಧರ್ಮವಲ್ಲ. ನಿಜವಾಗಿ, 
ಕೆಡುಕನ್ನು ವಿರೋಧಿಸುವುದಕ್ಕೂ ಇದುವೇ ಮಾನದಂಡವಾಗಬೇಕು. ಕೆಡುಕಿಗೆ ಧರ್ಮವಿಲ್ಲ. ಅದುವೇ ಒಂದು ಧರ್ಮ. ಆದರೆ, ಜಿಲ್ಲೆಯ ಸಂಸದರು ಮತ್ತು ಶಾಸಕರುಗಳು ಕೆಡುಕನ್ನು ಧರ್ಮದ ಆಧಾರದಲ್ಲಿ ನೋಡುತ್ತಿರುವಂತಿದೆ. ಆದ್ದರಿಂದಲೇ ಮುಹಮ್ಮದ್ ಹನೀಫ್‍ರ ಮೇಲಾದ ಹಲ್ಲೆಯನ್ನು ಖಂಡಿಸುತ್ತಿಲ್ಲ. ಆರೋಪಿಗಳ ವಿರುದ್ಧ ಕಠಿಣ ಕಲಂಗಳಡಿ ಕೇಸು ದಾಖಲಿಸಿ ಎಂದು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುತ್ತಿಲ್ಲ. ಇದು ವಿಷಾದನೀಯ. ಒಂದೆಡೆ ಒಳಿತನ್ನು ಶ್ಲಾಘಿಸಿದ ಅದೇ ಜನಪ್ರತಿನಿಧಿಗಳು ಇನ್ನೊಂದು ಕಡೆ ಕೆಡುಕನ್ನು ಕಂಡೂ ಮೌನವಾಗುತ್ತಾರೆಂದರೆ, ಅವರ ಶ್ಲಾಘನೆಯನ್ನೇ ಅನುಮಾನಿಸಬೇಕಾಗುತ್ತದೆ.

Tuesday 16 June 2020

ನಮ್ಮೊಳಗಿನ ದುಷ್ಟತನಕ್ಕೆ ಕನ್ನಡಿ ಹಿಡಿದ ಎರಡು ಘಟನೆಗಳು



ಕಳೆದವಾರ ಎರಡು ಘಟನೆಗಳು ನಡೆದುವು. ಎರಡೂ ಘಟನೆಗಳು ಪ್ರಾಣಿಗೆ ಸಂಬಂಧಿಸಿದ್ದು. ಆದರೆ ಮನುಷ್ಯ ಎಂಬ ಪ್ರಾಣಿ ಈ ಎರಡೂ ಘಟನೆಗಳಿಗೆ ಸ್ಪಂದಿಸಿದ ರೀತಿ ಮತ್ತು ವ್ಯಕ್ತಪಡಿಸಿದ ಅಭಿ ಪ್ರಾಯಗಳಲ್ಲಿ ಎದ್ದು ಕಾಣುತ್ತಿದ್ದ ಪಕ್ಷಪಾತದ ಧ್ವನಿ, ಧಾರ್ಮಿಕ ದ್ವೇಷ, ಕ್ರೌರ್ಯ ಮನೋಭಾವ ಜಿಗುಪ್ತೆ ತರುವಂಥದ್ದು.
1. ಪಟಾಕಿ ತುಂಬಿಸಿಟ್ಟಿದ್ದ ಅನಾನಸು ಹಣ್ಣನ್ನು ತಿಂದು ಕೇರಳದ ಪಾಲಕ್ಕಾಡಿನಲ್ಲಿ ಆನೆಯೊಂದು ಸಾವಿಗೀಡಾದದ್ದು.
2. ಹಿಮಾಚಲ ಪ್ರದೇಶದ ಬಿಲಸ್ಪುರ ಜಿಲ್ಲೆಯಲ್ಲಿ ಪಟಾಕಿ ಸಿಡಿತದಿಂದ ಹುಲ್ಲು ಮೇಯುತ್ತಿದ್ದ ಹಸುವಿನ ದವಡೆ ಮುರಿದು ರಕ್ತ ಸೋರುತ್ತಿರುವುದು. ಹಸುವನ್ನು ಕೊಲ್ಲುವ ಉದ್ದೇಶದಿಂದ ನೆರೆಮನೆಯಾತ  ಇಂಥದ್ದೊಂದು  ಕೃತ್ಯ ನಡೆಸಿದ್ದಾನೆ ಅನ್ನುವ ದೂರು.
ಅನಾನಸಿನ ಒಳಗಡೆ ಪಟಾಕಿ ಇಟ್ಟಿರಬಹುದು ಎಂದು ಆಲೋಚಿಸುವ ಸಾಮರ್ಥ್ಯ  ಆನೆಗಿಲ್ಲ, ಹಸುವಿಗೂ ಇಲ್ಲ. ಆದರೆ ಮನುಷ್ಯನಿಗಿದೆ. ಮಾತ್ರವಲ್ಲ, ಆನೆ ಮತ್ತು ಹಸುವನ್ನು ಪೀಡಿಸಿದ ಊರು  ಯಾವುದು, ಅಲ್ಲಿ ಯಾವ ಧರ್ಮದವರ ಜನಸಂಖ್ಯೆ ಹೆಚ್ಚಿದೆ, ಯಾವ ರಾಜಕೀಯ ಪಕ್ಷದ ಆಡಳಿತವಿದೆ, ಆರೋಪಿಗಳು ಯಾರು... ಅನ್ನುವುದನ್ನೆಲ್ಲ ಅವಲೋಕಿಸಿ ಪ್ರತಿಕ್ರಿಯಿಸುವ ಸಾಮಥ್ರ್ಯವೂ ಮ ನುಷ್ಯನಿಗಿದೆ. ಮನುಷ್ಯ ಸ್ವಭಾವತಃ ದುಷ್ಟನಲ್ಲ, ಪರಿಸ್ಥಿತಿ, ಸನ್ನಿವೇಶ ಮತ್ತು ಸ್ವಾರ್ಥಗಳು ಆತನನ್ನು ದುಷ್ಟನನ್ನಾಗಿಯೋ ದುಷ್ಟತನದ ಪರೋಕ್ಷ ಬೆಂಬಲಿಗನನ್ನಾಗಿಯೋ ಮಾಡಿಬಿಡುತ್ತದೆ ಎಂದು  ಹೇಳಲಾಗುತ್ತದೆ. ಇಲ್ಲದಿದ್ದರೆ ಯಾವ್ಯಾವುದೋ ನೆಪದಲ್ಲಿ ಬೀದಿಯಲ್ಲಿ ಅಟ್ಟಾಡಿಸಿ ಥಳಿಸಿ ಕೊಲ್ಲುತ್ತಿರುವುದನ್ನು ಸಮರ್ಥಿಸಲು ಓರ್ವ ಮನುಷ್ಯನಿಗೆ ಹೇಗೆ ಸಾಧ್ಯ? ಆ ಕ್ರೌರ್ಯಕ್ಕೆ ಮೌನವಾಗಿರಲು ಹೇಗೆ  ಸಾಧ್ಯ ಅಥವಾ ಇನ್ನಾವುದೋ ಕಾರಣ ಕೊಟ್ಟು ಆ ಹತ್ಯೆಯ ಪರೋಕ್ಷ ಬೆಂಬಲಿಗನಾಗಲು ಹೇಗೆ ಸಾಧ್ಯ? ಅಖ್ಲಾಕ್‍ನಿಂದ ಹಿಡಿದು ತಬ್ರೇಜ್ ನ ವರೆಗೆ, ಊನಾದಿಂದ ಹಿಡಿದು ನಮ್ಮ ಅಕ್ಕ-ಪಕ್ಕದ ಬೀ ದಿಯ ವರೆಗೆ ಎಷ್ಟೊಂದು ಥಳಿತ, ಹತ್ಯೆಗಳಾಗಿವೆ? ಈ ಯಾವ ಘಟನೆಗಳಲ್ಲೂ ಪ್ರಾಣಿಗಳಿಗೆ ಯಾವ ಪಾತ್ರವೂ ಇಲ್ಲ. ಥಳಿಸುವವರೂ ಮನುಷ್ಯರೇ. ಥಳಿತಕ್ಕೊಳಗಾಗುವವರೂ ಮನುಷ್ಯರೇ. ಆದರೆ,  ಇಲ್ಲೆಲ್ಲಾ  ಸ್ಪಷ್ಟವಾಗಿ ಎದ್ದು ಕಾಣುವ ಒಂದು ಸತ್ಯ ಇದೆ. ಅದೇನೆಂದರೆ, ಥಳಿಸುವವರ ಧರ್ಮ ಅಥವಾ ಜಾತಿ ಮತ್ತು ಥಳಿತಕ್ಕೊಳಗಾಗುವವರ ಧರ್ಮ ಅಥವಾ ಜಾತಿ. ನಿರ್ದಿಷ್ಟ ರಾಜಕೀಯ ಸಿದ್ಧಾಂತದ  ಪರವಾಗಿರುವವರು ಥಳಿಸುವುದು ಮತ್ತು ನಿರ್ದಿಷ್ಟ ಧರ್ಮಾನುಯಾಯಿಗಳು ಥಳಿತಕ್ಕೊಳಗಾಗುವುದು- ಇವೆರಡೂ ಏನನ್ನು ಸೂಚಿಸುತ್ತವೆ? ಥಳಿಸುವವರು ಸದಾಕಾಲ ದುಷ್ಟರೇ? ಹಾಗೆ ಮಾಡುವುದಕ್ಕೆ  ಅವರ ತತ್ವಸಿದ್ಧಾಂತ ಕಾರಣವೇ ಮತ್ತು ಅವರು ತಮ್ಮ ಪ್ರತಿಪಾದನೆಯಲ್ಲಿ ನಿಜಕ್ಕೂ ಪ್ರಾಮಾಣಿಕರೇ ಎಂದು ಪ್ರಶ್ನಿಸುತ್ತಾ ಹೋದರೆ ಸಿಗುವ ಉತ್ತರ ಅತ್ಯಂತ ಆಘಾತಕಾರಿಯಾಗಿರುತ್ತದೆ. ಗುಜರಾತ್  ಹತ್ಯಾಕಾಂಡವನ್ನು ಉಲ್ಲೇಖಿಸಿದರೆ ಮತ್ತು ಹಸಿ ಭ್ರೂಣವನ್ನು ಕತ್ತಿಯ ಮೊನೆಗೆ ಸಿಲುಕಿಸಿ ವಿಕೃತ ಸಂತೋಷಪಟ್ಟ ದುಷ್ಟತನವನ್ನು ಪ್ರಸ್ತಾಪಿಸಿದರೆ, ಆ ಬಗ್ಗೆ ಯಾವ ಖಂಡನೆಯನ್ನಾಗಲಿ, ವಿಷಾದವನ್ನಾಗಲಿ  ವ್ಯಕ್ತಪಡಿಸದೆಯೇ ಅದಕ್ಕೂ ಮೊದಲಿನ ಗೋಧ್ರಾ ರೈಲು ದುರ್ಘಟನೆಯನ್ನು ಎತ್ತುತ್ತಾರೆ. ಅದೊಂದು ರೀತಿಯ ಪಲಾಯನವಾದ. ಖಂಡಿಸಲೇ ಬೇಕಾದ ಸಂದರ್ಭವೊಂದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ  ಅಡ್ಡ ದಾರಿಯನ್ನು ಹಿಡಿಯುವುದು. ಪ್ರಶ್ನೆ- ಕ್ರೌರ್ಯವೊಂದನ್ನು ಖಂಡಿಸದೇ ಇರುವುದಲ್ಲ. ಅಂಥದ್ದೊಂದು  ದುಷ್ಟತನ ವ್ಯಕ್ತಿಯೊಳಗಡೆ ಅಡರಿಕೊಳ್ಳುವುದು ಹೇಗೆ? ಗುಜರಾತ್ ಹತ್ಯಾಕಾಂಡವನ್ನು  ಉಲ್ಲೇಖಿಸಿದ ಕೂಡಲೇ ಅದನ್ನು ಖಂಡಿಸದೆಯೇ ಅದಕ್ಕೆ ಪ್ರತಿಯಾಗಿ ದೆಹಲಿ ಸಿಕ್ಖ್ ಹತ್ಯಾಕಾಂಡವನ್ನು ಎತ್ತುವುದು ಅಥವಾ ಗೋಧ್ರಾ ರೈಲು ದಹನದಂಥ ಕ್ರೌರ್ಯಗಳನ್ನು ಉಲ್ಲೇಖಿಸುವುದು ದುಷ್ಟತನದ  ಪ್ರತಿಬಿಂಬ. ದೆಹಲಿಯಲ್ಲಾಗಲಿ, ಗುಜರಾತ್‍ನಲ್ಲಾಗಲಿ, ಗೋಧ್ರಾದಲ್ಲಾಗಲಿ ನಡೆದಿರುವುದು ಮಾನವ ಹತ್ಯೆಗಳೇ ಹೊರತು ಇನ್ನೇನಲ್ಲ. ನಿಶ್ಚಲವಾದ ಆ ಜೀವಗಳನ್ನು ಹಿಂದೂ-ಮುಸ್ಲಿಮ್, ಸಿಕ್ಖ್ ಎಂದು  ವಿಭಜಿಸುವುದರಿಂದ ಸಂತ್ರಸ್ತಗೊಂಡ ಆ ಕುಟುಂಬಗಳ ನೋವಿನಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಆದರೆ ಸಾಯಿಸಿದವರು ನಿರ್ದಿಷ್ಟ ಉದ್ದೇಶದಿಂದಲೇ ಸಾಯಿಸಿದ್ದಾರೆ. ಹಿಂದೂ-ಮುಸ್ಲಿಮ್-ಸಿಖ್ ರ  ಸಾವಿನಲ್ಲಿ ತಂತಮ್ಮ ತತ್ವ ಸಿದ್ಧಾಂತದನುಸಾರ ಆನಂದವನ್ನೂ ಪಟ್ಟಿದ್ದಾರೆ. ಆದ್ದರಿಂದ,
ಈ ದುಷ್ಟತನವನ್ನು ಧರ್ಮಾತೀತವಾಗಿ ಮತ್ತು ಪಕ್ಷಾತೀತವಾಗಿ ಖಂಡಿಸುವುದಕ್ಕೆ ಸಾಧ್ಯವಾಗದೇ ಹೋಗಿರುವ ದೇಶದಲ್ಲಿ ಆನೆ ಮತ್ತು ಹಸು ಪ್ರಕರಣದಲ್ಲಿ ಪ್ರಾಮಾಣಿಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದೇ  ದೊಡ್ಡ ತಮಾಷೆ. ಆನೆಯ ಘಟನೆ ಕೇರಳದಲ್ಲಿ ನಡೆದಿದೆ ಅನ್ನುವುದೇ ಒಂದು ನಿರ್ದಿಷ್ಟ ವರ್ಗದ ಪಾಲಿಗೆ ದೊಡ್ಡ ಸಂಭ್ರಮ. ಅಲ್ಲಿ ಎಡಪಕ್ಷದ ಆಡಳಿತವಿದೆ. ಆದ್ದರಿಂದ ಬಲಪಕ್ಷಕ್ಕೆ ಅದೊಂದು ರಾಷ್ಟ್ರಮಟ್ಟದ  ಇಶ್ಶೂ. ಕೇರಳಿಗರು ಎಂಥ ಕ್ರೂರಿಗಳು ಅನ್ನುವುದನ್ನು ಎತ್ತಿ ಹೇಳುವುದಕ್ಕೂ ಆ ಘಟನೆಯನ್ನು ಎಗ್ಗಿಲ್ಲದೇ ಬಲಪಕ್ಷದವರು ಮತ್ತು ಅವರಿಂದ ಪ್ರೇರಿತರಾದ ಸಾಮಾನ್ಯರೂ ಬಳಸಿಕೊಂಡರು. ಹೀಗೆ ಆನೆ  ಮೇಲೆ ಕರುಣೆ ವ್ಯಕ್ತಪಡಿಸಿದವರಲ್ಲಿ ಹೆಚ್ಚಿನವರೂ ದೇಶದಾದ್ಯಂತ ಥಳಿತ ಘಟನೆಗಳಾಗುತ್ತಿದ್ದಾಗ, ಅದರಿಂದಾಗಿ ಸಾವುಗಳು ಸಂಭವಿಸುತ್ತಿದ್ದಾಗ, ಗುಜರಾತ್-ಮುಝಫ್ಫರ್‍ ನಗರ್ ಹತ್ಯಾಕಾಂಡಗಳಾಗುವಾಗ  ಮೌನಿಗಳಾಗಿದ್ದರು ಎಂಬುದು ಸ್ಪಷ್ಟ. ಆ ಕ್ರೌರ್ಯಗಳ ಕುರಿತಂತೆ ಅವರು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸುವುದಿಲ್ಲ. ಯಾರಾದರೂ ಪ್ರಶ್ನಿಸಿದರೆ ಪ್ರಶ್ನೆಗೆ ಪ್ರತಿಯಾಗಿ ಇನ್ನೊಂದು ಪ್ರಶ್ನೆಯನ್ನು  ಎತ್ತುತ್ತಾರೆಯೇ ಹೊರತು ಅದು ಖಂಡನಾರ್ಹ ಎಂಬ ಮಾತೂ ಹೊರಡುವುದಿಲ್ಲ. ಅದೇವೇಳೆ,
ಹಿಮಾಚಲ ಪ್ರದೇಶದಲ್ಲಿ ದವಡೆ ಹರಿದುಕೊಂಡು ರಕ್ತ ಸುರಿಸುತ್ತಾ ಸಂಕಟಪಡುತ್ತಿರುವ ಹಸು, ಕೇರಳದ ಆನೆಯಂತೆ ಯಾವ ಕಾಳಜಿಯನ್ನೂ ಗಿಟ್ಟಿಸಿಕೊಳ್ಳುವುದಿಲ್ಲ. ಕೇರಳದ ಆನೆಗೆ ಭಯಂಕರವಾಗಿ  ಮಿಡಿದವರಲ್ಲಿ ಸಣ್ಣ ಸಂಖ್ಯೆಯೊಂದನ್ನು ಬಿಟ್ಟರೆ ಉಳಿದವರ್ಯಾರೂ ಆ ಬಗ್ಗೆ ಮಾತನ್ನೇ ಆಡುವುದಿಲ್ಲ. ಯಾಕೆಂದರೆ, ಅರುಣಾಚಲ ಪ್ರದೇಶದಲ್ಲಿ ಆಡಳಿತದಲ್ಲಿರುವುದು ಬಲಪಕ್ಷ ಮತ್ತು ಹಸುವಿಗೆ ಪಟಾಕಿ ತಿನ್ನಿಸಿದವನು ಈ ಬಲಪಕ್ಷ ಪ್ರತಿನಿಧಿಸುವ ಧರ್ಮದ ಅನುಯಾಯಿ.
ಅನ್ಯಾಯವನ್ನು ಯಾವ ಧರ್ಮವೂ ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದಿಲ್ಲ. ಅನ್ಯಾಯವೆಂದರೆ, ಅನ್ಯಾಯ ಅಷ್ಟೇ. ದುಷ್ಟತನವೆಂದರೆ ದುಷ್ಟತನ ಅಷ್ಟೇ. ಕ್ರೌರ್ಯದಲ್ಲಿ ಹಿಂದೂ-ಮುಸ್ಲಿಮ್ ಕ್ರೌರ್ಯ  ಎಂಬ ಬೇಧವಿಲ್ಲ. ಆನೆ ಮತ್ತು ಹಸು ಇವೆರಡೂ ಮೂಕ ಪ್ರಾಣಿಗಳು. ಅವುಗಳ ಮೇಲೆ ದೌರ್ಜನ್ಯ ಎಸಗಿದವರು ದುಷ್ಟರೇ ಹೊರತು ಅವರಲ್ಲಿ ಹಿಂದೂ ದುಷ್ಟ-ಮುಸ್ಲಿಮ್ ದುಷ್ಟ, ಎಡ ದುಷ್ಟ, ಬಲ  ದುಷ್ಟ ಎಂಬ ವ್ಯತ್ಯಾಸ ಮಾಡುವುದು ಧರ್ಮ ವಿರೋಧಿ. ಇದು ಪ್ರಾಣಿಗಳಿಗೆ ಸಂಬಂಧಿಸಿ ಮಾತ್ರ ಹೇಳಬೇಕಾದುದಲ್ಲ. ಮನುಷ್ಯರ ಮೇಲಿನ ಹಲ್ಲೆ, ಹತ್ಯೆಗಳಿಗೆ ಸಂಬಂಧಿಸಿಯೂ ಇವೇ ಮಾನದಂಡವನ್ನು  ಅಳವಡಿಸಬೇಕು. ಅನ್ಯಾಯ- ಹಿಂದೂ ಎಸಗಿದರೂ ಮುಸ್ಲಿಮ್ ಎಸಗಿದರೂ ಅನ್ಯಾಯವೇ. ನೋವು- ಹಿಂದೂವಿನದ್ದಾದರೂ ಮುಸ್ಲಿಮನದ್ದಾದರೂ ನೋವೇ. ಪ್ರಾಮಾಣಿಕತೆ- ಹಿಂದೂವಿನದ್ದಾದರೂ  ಮುಸ್ಲಿಮನದ್ದಾದರೂ ಪ್ರಾಮಾಣಿಕತೆಯೇ. ಕೆಡುಕು ಮತ್ತು ಒಳಿತು ಯಾವ ಧರ್ಮದ ಖಾಸಗಿ ಸೊತ್ತೂ ಅಲ್ಲ. ಯಾರು ಅದನ್ನು ಕೈವಶ ಮಾಡಿಕೊಳ್ಳುತ್ತಾರೋ ಅವರದು. ಆನೆ ಮತ್ತು ಹಸು ಪ್ರಕರಣಗಳು  ನಮ್ಮೊಳಗಿನ ದುಷ್ಟತನವನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದೆ. ದುಷ್ಟತನವನ್ನು ಖಂಡಿಸುವ ಬದಲು ದುಷ್ಟತನ ಎಲ್ಲಿ ನಡೆದಿದೆ, ಯಾರು ಭಾಗಿಯಾಗಿದ್ದಾರೆ ಎಂಬುದನ್ನು ನೋಡಿಕೊಂಡು  ಪ್ರತಿಕ್ರಿಯಿಸುವ ಅತೀ ದುಷ್ಟತನವೊಂದು ನಮ್ಮೊಳಗೆ ಇದೆ. ಆನೆ ಮತ್ತು ಹಸು ನಮ್ಮಲ್ಲಿನ ಈ ದುಷ್ಟತನಕ್ಕೆ ಕನ್ನಡಿ ಹಿಡಿದಿದೆ, ಅಷ್ಟೇ.



Friday 12 June 2020

ಅವರು ಗಾಳ ಎಸೆದರು, ಇವರು ಗಾಳವನ್ನೇ ನುಂಗಿ ಪ್ರೀತಿಸಿದರು: ನನ್ನ ಭಾರತವೇ, ಒಮ್ಮೆ ಎದ್ದು ನಿಂತು ಚಪ್ಪಾಳೆ ತಟ್ಟು...


ಸನ್ಮಾರ್ಗ ಸಂಪಾದಕೀಯ

ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರು ಸಮೀಪದ ಗೂಡಿನಬಳಿ ಎಂಬಲ್ಲಿಯ ನಾಲ್ವರು ಮುಸ್ಲಿಮ್ ಯುವಕರು ಇವತ್ತು ದೇಶದಾದ್ಯಂತ ಸುದ್ದಿಯಲ್ಲಿದ್ದಾರೆ. ಅವರನ್ನು ಟಿ.ವಿ. ಚಾನೆಲ್‍ಗಳು ಮಾತಾಡಿಸುತ್ತಿವೆ. ಬೈಟ್ ಪಡಕೊಳ್ಳುತ್ತಿವೆ. ಪತ್ರಿಕೆಗಳು ಅವರನ್ನು ಗುರುತಿಸಿ ಕೊಂಡಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅವರು ತುಂಬಿಹೋಗಿದ್ದಾರೆ. ಕರಾವಳಿ ಭಾಗದ ಪ್ರತಿ ಮನೆಯೂ ಅವರ ಬಗ್ಗೆ ಮಾತಾಡುತ್ತಿದೆ. ಘಟನೆ ಇಷ್ಟೇ-

ಆತ್ಮಹತ್ಯೆ ಮಾಡಲೆಂದು ನಿಶಾಂತ್ ಎಂಬ ತರುಣ ಇಲ್ಲಿನ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದಾನೆ. ಈದ್‍ನ ಸಂಭ್ರಮದಲ್ಲಿದ್ದ ಈ ಯುವಕರಿಗೆ ಸುದ್ದಿ ತಲುಪಿದ ತಕ್ಷಣ ಹಿಂದು-ಮುಂದು ನೋಡದೇ ಜೀವದ ಹಂಗು ತೊರೆದು ನದಿಗೆ ಹಾರಿದ್ದಾರೆ. ನಿಶಾಂತ್‍ನನ್ನು ದಡಕ್ಕೆ ತಂದಿದ್ದಾರೆ. ಈ ನಾಲ್ವರ ಪೈಕಿ ಆರಿಫ್ ಎಂಬ ತರುಣನಂತೂ ಕೊರೋನಾ ಭೀತಿಯನ್ನೂ ಲೆಕ್ಕಿಸದೆಯೇ ನಿಶಾಂತ್‍ನ ಬಾಯಿಗೆ ಬಾಯಿ ಇಟ್ಟು ಕೃತಕ ಉಸಿರಾಟ ನೀಡಲು ಪ್ರಯತ್ನಿಸಿದ್ದಾರೆ. ನಿಶಾಂತ್ ನ ಹೊಟ್ಟೆ ಸೇರಿದ್ದ ನೀರನ್ನು ತನ್ನ ಬಾಯಲ್ಲಿ ಹೀರಿ ಹೊರಚೆಲ್ಲಿದ್ದಾರೆ. ಆದರೂ ನಿಶಾಂತ್ ಬದುಕುಳಿದಿಲ್ಲ. ನಿಜವಾಗಿ,

ನೇತ್ರಾವತಿ ಸೇತುವೆಗೆ ತಾಗಿಕೊಂಡಿರುವ ಈ ಗೂಡಿನಬಳಿ ಎಂಬ ಪುಟ್ಟ ಊರಿನಲ್ಲಿ ಇಂಥ ಸಾಹಸಿ ಮುಸ್ಲಿಂ ಯುವಕರ ಬಳಗವೇ ಇದೆ. ಸೇತುವೆಯಿಂದ ಯಾರಾದರೂ ಧುಮುಕಿದರೆ, ಇನ್ನೇನಾದರೂ ಅನಾಹುತವಾದರೆ ಈ ಯುವಕರು ತಮ್ಮನ್ನೇ ಮರೆತು ನದಿಗೆ ಹಾರುತ್ತಾರೆ. ಧುಮುಕಿದವರನ್ನು ಬದುಕಿಸಿ ದಡ ಸೇರಿಸುತ್ತಾರೆ. ಈ ಹಿಂದೆಯೂ ಇಂಥ ಘಟನೆಗಳು ನಡೆದಿವೆ. ಇದು ಅವರ ಉದ್ಯೋಗ ಅಲ್ಲ, ಸಹಜ ಬದುಕು. ಹೀಗಿದ್ದೂ, ಈ ಘಟನೆ ಭಾರೀ ಪ್ರಚಾರ ಪಡೆದುಕೊಳ್ಳಲು ಕಾರಣವೇನು ಎಂದು ಅನ್ವೇಷಿಸಿದರೆ ಮೂರು ಮುಖ್ಯ ಕಾರಣಗಳು ಕಾಣಿಸುತ್ತವೆ.

1. ‘ಕೊರೋನಾ ಭಾರತದಲ್ಲಿ’ ಮಾಧ್ಯಮಗಳು ಮತ್ತು ಪ್ರಭುತ್ವ ಪೋಷಿತ ವ್ಯಕ್ತಿಗಳು ಮುಸ್ಲಿಮರ ಮೇಲೆ ಮಾಡಿದ ನಿರಂತರ ದಾಳಿ, ಹೀನಾತಿಹೀನ ನಿಂದನೆ; ಅವಮಾನ, ಬೈಗುಳ. ಆದರೆ ಇದಕ್ಕೆ ಪ್ರತಿಯಾಗಿ ಮುಸ್ಲಿಮರಿಂದ ಸೇವೆಯ ಮೂಲಕ ಪ್ರತಿಕ್ರಿಯೆ.

2. ಕೆಡುಕಿಗೆ ಧರ್ಮವಿಲ್ಲ ಮತ್ತು ಜನಾಂಗೀಯ ದ್ವೇಷ ಅಪಾಯಕಾರಿ ಎಂಬುದನ್ನು ಅರಿತುಕೊಂಡಿರುವ ಈ ನಾಡಿನ ಸದ್ಗುಣಪ್ರೇಮಿ ಜನರು ಈ ಸತ್ಯವನ್ನು ಗಟ್ಟಿ ಧ್ವನಿಯಲ್ಲಿ ಸಾರಬೇಕೆಂದು ಬಯಸಿದ್ದು.

3. ಕಲ್ಲಡ್ಕ ಎಂಬ ಊರು ಈ ಘಟನಾ ಸ್ಥಳಕ್ಕಿಂತ ಕೂಗಳತೆಯ ದೂರದಲ್ಲಷ್ಟೇ ಇರುವುದು.

ಕೊರೋನಾ ಈ ದೇಶವನ್ನು ಪ್ರವೇಶಿಸಿದಾಗ ಅದನ್ನು ಎದುರಿಸುವುದಕ್ಕೆ ದೇಶದ ಆಡಳಿತ ಮಾಡಿಕೊಂಡಿರುವ ತಯಾರಿ ಅತ್ಯಂತ ದುರ್ಬಲವಾಗಿತ್ತು. ಭಾರತದಲ್ಲಿ ಲಾಕ್‍ಡೌನ್ ಘೋಷಣೆಯಾದದ್ದು ಮಾರ್ಚ್ 23ರಂದು. ಅದೂ ದಿಢೀರ್ ಆಗಿ. ಆದರೆ ಕೊರೋನಾದ ಇರುವಿಕೆಯನ್ನು 2019 ಡಿಸೆಂಬರ್ 19ರಂದೇ ಚೀನಾ ಜಗತ್ತಿನ ಮುಂದೆ ತೆರೆದಿಟ್ಟು ಎಚ್ಚರಿಕೆಯ ಸಂದೇಶ ರವಾನಿಸಿತ್ತು. ಕೊರೋನಾ ಚೀನಾದಿಂದ ದಕ್ಷಿಣ ಕೊರಿಯಾ, ಇರಾನ್, ಇಟಲಿ, ಸ್ಪೈನ್, ಅಮೇರಿಕ ಇತ್ಯಾದಿ ರಾಷ್ಟ್ರಗಳಲ್ಲಿ ಸುತ್ತಾಡಿ ಭಾರತಕ್ಕೆ ಲಗ್ಗೆ ಹಾಕುವಾಗ ಎರಡ್ಮೂರು ತಿಂಗಳುಗಳೇ ಕಳೆದಿತ್ತು. ಆದರೆ, ಕೊರೋನಾ ಪೀಡಿತ ರಾಷ್ಟ್ರಗಳನ್ನು ನೋಡಿ ಭಾರತೀಯ ಸ್ಥಿತಿಗತಿಗೆ ಪೂರಕವಾದ ಕೊರೋನಾ ವಿರೋಧಿ ಯೋಜನೆಗಳನ್ನು ರೂಪಿಸಬೇಕಾಗಿದ್ದ ಪ್ರಭುತ್ವ ಈ ದಿಸೆಯಲ್ಲಿ ಎಂಥ ವೈಫಲ್ಯಕ್ಕೆ ಒಳಗಾಯಿತೆಂದರೆ, ಕೋಟ್ಯಂತರ ಸಂಖ್ಯೆಯಲ್ಲಿರುವ ವಲಸೆ ಕಾರ್ಮಿಕರ ಬಗ್ಗೆ ಯಾವ ಪರಿಜ್ಞಾನವೂ ಇಲ್ಲದೇ ದಿಢೀರ್ ಲಾಕ್‍ಡೌನ್ ಘೋಷಿಸಿತು. ಇಟಲಿ, ಇರಾನ್, ದಕ್ಷಿಣ ಕೊರಿಯಾ ರಾಷ್ಟ್ರಗಳ ಸ್ಥಿತಿ-ಗತಿ ಏನೋ ಅದುವೇ ಭಾರತದ್ದು ಅನ್ನುವ ರೀತಿಯಲ್ಲಿ ಪ್ರಭುತ್ವ ವರ್ತಿಸಿತು. ನಿಜವಾಗಿ,

ಭಾರೀ ಜನಸಂಖ್ಯೆಯಿರುವ ಭಾರತದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ದುಡಿಯಲು ಹೋಗುವ ಕಾರ್ಮಿಕರ ಬೃಹತ್ ಸಂಖ್ಯೆಯು ಇನ್ನಾವ ರಾಷ್ಟ್ರದಲ್ಲೂ ಇರುವ ಸಾಧ್ಯತೆ ಇಲ್ಲ. ಆದ್ದರಿಂದಲೇ, ಕೊರೋನಾವನ್ನು ಎದುರಿಸುವುದಕ್ಕೆ ಭಾರತ ಕೈಗೊಳ್ಳಬೇಕಾದ ಕ್ರಮಗಳು ಅಮೇರಿಕದ್ದೋ  ಇಟಲಿಯದ್ದೋ  ತದ್ರೂಪಿ ಆಗಬಾರದಿತ್ತು. ದಿಢೀರ್ ಲಾಕ್‍ಡೌನ್ ಭಾರತಕ್ಕೆಷ್ಟು ಸೂಕ್ತ ಎಂಬುದಾಗಿ ವಲಸೆ ಕಾರ್ಮಿಕರನ್ನು ಎದುರಿಟ್ಟು ಆಲೋಚಿಸಬೇಕಿತ್ತು. ಆದರೆ ಈ ವಿಷಯದಲ್ಲಾದ ಭಾರೀ ವೈಫಲ್ಯವನ್ನು ಮುಚ್ಚಿ ಹಾಕುವುದಕ್ಕೆ ಪ್ರಭುತ್ವ ಮತ್ತು ಅದರ ಕೃಪಾಪೋಷಿತ ಮಾಧ್ಯಮ ಸಂಸ್ಥೆಗಳು ಆಯ್ಕೆ ಮಾಡಿಕೊಂಡದ್ದೇ ಮುಸ್ಲಿಮರನ್ನು. ಇಲ್ಲಸಲ್ಲದ ಆರೋಪ, ನಕಲಿ ವೀಡಿಯೋ, ನಿಂದನೆ, ಬೈಗುಳ, ಬಹಿಷ್ಕಾರ ಇತ್ಯಾದಿಗಳನ್ನು ಮುಸ್ಲಿಮರ ಮೇಲೆ ಹೇರಿ ಕೊರೋನಾದ ಬದಲು ಮುಸ್ಲಿಮರ ವಿರುದ್ಧ ಹೋರಾಟವನ್ನು ಕೈಗೊಳ್ಳಲಾಯಿತು. ವಿಶೇಷ ಏನೆಂದರೆ, ಈ ಎಲ್ಲ ದ್ವೇಷಪೂರಿತ ದಾಳಿಗಳಿಗೆ ಮುಸ್ಲಿಮ್ ಸಮುದಾಯ ವ್ಯಕ್ತಪಡಿಸಿದ ಪ್ರತಿಕ್ರಿಯೆ.

ಭಾರತೀಯ ಇತಿಹಾಸದಲ್ಲಿಯೇ ದಪ್ಪಕ್ಷರಗಳಲ್ಲಿ ದಾಖಲಿಸಿಡಬೇಕಾದಷ್ಟು ವಿವೇಕಯುತವಾದ ಮತ್ತು ಅತ್ಯಂತ ಮಾನವೀಯವಾದ ಉತ್ತರವನ್ನು ಮುಸ್ಲಿಮ್ ಸಮುದಾಯ ಇದಕ್ಕೆ ಪ್ರತಿಯಾಗಿ ನೀಡಿತು. ಕೊರೋನೋತ್ತರ ಭಾರತ ಎಂದೂ ನೆನಪಿಸಬಹುದಾದಂತಹ ಮಾನವೀಯ ಸೇವಾ ಕಾರ್ಯವನ್ನು ಮುಸ್ಲಿಮ್ ಸಮುದಾಯ ಮುಂಚೂಣಿಯಲ್ಲಿ ನಿಂತು ನೆರವೇರಿಸಿತು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ  ಮತ್ತು ರಾಜಕೀಯವಾಗಿಯೂ ಅತ್ಯಂತ ದುರ್ಬಲವಾಗಿರುವ ಮುಸ್ಲಿಮ್ ಸಮುದಾಯವು ಕೊರೋನಾ ಪೀಡಿತ ಭಾರತದಲ್ಲಿ ಗೈದಿರುವ ಸೇವೆಯು ಆರ್ಥಿಕವಾಗಿ ಅತ್ಯಂತ ಪ್ರಬಲವಾಗಿರುವ ಯಾವುದೇ ಸಮುದಾಯ ಮಾಡಿರುವ ಸೇವೆಗಿಂತಲೂ ಎಷ್ಟೋ ಪಟ್ಟು ಮಿಗಿಲಾದುದು. ಮುಸ್ಲಿಮ್ ಸಮುದಾಯದ ಅತಿ ಸಣ್ಣ ಸಂಘಟನೆಯಿಂದ ಹಿಡಿದು ರಾಷ್ಟ್ರಮಟ್ಟದ ಸಂಘಟನೆಗಳವರೆಗೆ ಎಲ್ಲವೂ ಜಿದ್ದಿಗೆ ಬಿದ್ದು ಜನರ ಸೇವೆಗೆ ಇಳಿದುವು. ಧರ್ಮ ನೋಡದೆಯೇ ಮನೆ ಮನೆಗೆ ಆಹಾರ ವಸ್ತುಗಳನ್ನು ವಿತರಿಸಿದುವು. ವಿದೇಶದಿಂದ ಆಗಮಿಸಿದವರಿಗೆ ತಮ್ಮ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳು, ಮದುವೆ ಸಭಾಂಗಣ, ಆಸ್ಪತ್ರೆ, ಮದರಸ ಮತ್ತು ಮಸೀದಿಯನ್ನೂ ಕ್ವಾರೆಂಟೈನ್‍ಗಾಗಿ ಬಿಟ್ಟುಕೊಟ್ಟಿತು. ಕೊರೋನಾ ಪೀಡಿತ ಮುಸ್ಲಿಮೇತರ ವ್ಯಕ್ತಿಗಳ ಶವಸಂಸ್ಕಾರ ನಡೆಸಿತು. ವಲಸೆ ಕಾರ್ಮಿಕರ ಪಾಲಿಗೆ ಆಪದ್ಭಾಂಧವರಾಗಿ ಕೆಲಸ ಮಾಡಿದ್ದು ಇದೇ ಮುಸ್ಲಿಮ್ ಸಮುದಾಯವೇ. ಪ್ರತಿ ಮಸೀದಿಗಳೂ ತಮ್ಮ ವ್ಯಾಪ್ತಿಯ ಮನೆಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಿದ ಅಭೂತಪೂರ್ವ ಬೆಳವಣಿಗೆಯೂ ನಡೆಯಿತು. ಅಂದಹಾಗೆ,

ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯವೊಂದು ಕೊರೋನಾ ಪೀಡಿತ ಭಾರತದಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಸೇವಾ ಕಾರ್ಯಗಳಿಗೆ ವಿನಿಯೋಗಿಸಿದ್ದು ದೇಶವೇ ಎದ್ದು ನಿಂತು ಚಪ್ಪಾಳೆ ತಟ್ಟಬೇಕಾದಷ್ಟು ಮಹತ್ವಪೂರ್ಣವಾದುದು. ವಿಶೇಷ ಏನೆಂದರೆ, ದೇಶದ ಮುಖ್ಯವಾಹಿನಿಯ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮತ್ತು ಪ್ರಭುತ್ವ ಬೆಂಬಲಿತ ನಾಯಕರು ಹೀನಾತಿಹೀನವಾಗಿ ನಿಂದಿಸುತ್ತಿರುವ ಮತ್ತು ಅವಮಾನಿಸುತ್ತಿರುವ ಸಂದರ್ಭದಲ್ಲೇ  ಮುಸ್ಲಿಮರಿಂದ ಇಂಥದ್ದೊಂದು ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿದೆ ಎಂಬುದು. ದ್ವೇಷದ ಯಾವ ಪ್ರಚಾರಕ್ಕೂ ಮುಸ್ಲಿಮರು ಹತಾಶರಾಗಲಿಲ್ಲ. ಬೈಗುಳಕ್ಕೆ ಜಗ್ಗಲಿಲ್ಲ. ಪ್ರಭುತ್ವವೇ ತೋಳೇರಿಸಿಕೊಂಡು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದಕ್ಕೆ ಹೊರಟಾಗಲೂ ಮುಸ್ಲಿಮರು ಹಿಂಜರಿಯಲಿಲ್ಲ. ಅವರು ನಿಂದನೆಗೆ ಪ್ರತಿಯಾಗಿ ಮುಗುಳ್ನಕ್ಕರು. ಬೈಗುಳಕ್ಕೆ ಪ್ರತಿಯಾಗಿ ಪ್ರೀತಿಸಿದರು. ಸುಳ್ಳಿಗೆ ಪ್ರತಿಯಾಗಿ ಪ್ರತಿ ಸುಳ್ಳನ್ನು ಉತ್ಪಾದಿಸದೆಯೇ ಸತ್ಯವನ್ನು ನಿರೀಕ್ಷಿಸಿದರು.
ಹಾಗಂತ,

ಹೀಗೆ ಪ್ರತಿಕ್ರಿಯಬೇಕಾದುದು ಅವರ ಅನಿವಾರ್ಯತೆಯೇನೂ ಆಗಿರಲಿಲ್ಲ. ಅವರಿಗೂ ಪ್ರತಿನಿಂದೆ, ಪ್ರತಿ ಸುಳ್ಳು, ಪ್ರತಿ ಬೈಗುಳ ಸುರಿಸಿಕೊಂಡು ಸುಮ್ಮನಿರಬಹುದಿತ್ತು. ನಯಾ ಪೈಸೆಯನ್ನೂ ಖರ್ಚು ಮಾಡದೇ ಪ್ರಭುತ್ವದೊಂದಿಗೆ ಅಸಹಕಾರ ತೋರಬಹುದಿತ್ತು. ಸಂಕಷ್ಟ ಭಾರತದ ಚಿತ್ರಗಳು ಮತ್ತು ವೀಡಿಯೋಗಳನ್ನು ಹಂಚಿಕೊಳ್ಳುತ್ತಾ ನಕಾರಾತ್ಮಕವಾಗಿ ಮಾತ್ರ ಆಲೋಚಿಸಬಹುದಿತ್ತು. ಆದರೆ ಇಲ್ಲಿನ ಮಾಧ್ಯಮಗಳು ಮತ್ತು ಪ್ರಭುತ್ವ ಬೀಸಿದ ಗಾಳಕ್ಕೆ ಮುಸ್ಲಿಮ್ ಸಮುದಾಯ ಸಿಲುಕಿಕೊಳ್ಳದೇ ಸ್ವತಃ ಆ ಗಾಳವನ್ನೇ ನುಂಗಿತಲ್ಲದೇ ಪ್ರತಿಯಾಗಿ ನಗು ಚೆಲ್ಲಿತು. ಗಾಳದ ಮೊನೆಯು ಅವರ ಹೊಟ್ಟೆಯಲ್ಲಿ ಇಂಚಿಂಚೂ ಗಾಯ ಮಾಡುತ್ತಿದ್ದರೂ ಮುಸ್ಲಿಮರು ಅದನ್ನು ತೋರಗೊಡಲೇ ಇಲ್ಲ. ಅವರು ಎಸೆದ ಗಾಳಗಳನ್ನೆಲ್ಲ ಮುಸ್ಲಿಮರು ನುಂಗುತ್ತಾ ಹೋದರು. ಗಾಳ ದೇಹದಲ್ಲಿ ಮಾಡುತ್ತಿರುವ ಗಾಯಗಳನ್ನೆಲ್ಲ ಸಹಿಸುತ್ತಾ ಹೋದರು. ಎಂಥ ಸಂದರ್ಭ ಬಂದರೂ ನೋವಿಗೆ ಪ್ರತಿಯಾಗಿ ನೋವನ್ನೇ ಮರಳಿಸಲಾರೆವು ಎಂದು ಪಣ ತೊಟ್ಟರು. ಅವುಡುಗಚ್ಚಿ ಪ್ರೀತಿಯನ್ನು ಹಂಚಿದರು. ಗೂಡಿನಬಳಿಯ ಘಟನೆಯೂ ಇದರಲ್ಲಿ ಒಂದು. "ಕಲ್ಲಡ್ಕದ" ಮುಸ್ಲಿಮ್ ದ್ವೇಷಿ ಭಾಷಣವು ನಿಶಾಂತ್‍ನಿಗಾಗಿ ಮರುಗದಂತೆ ಮತ್ತು ಆತನನ್ನು ಬದುಕಿಸಲಿಕ್ಕಾಗಿ ನೀರಿಗೆ ಹಾರದಂತೆ  ಆ ಯುವಕನನ್ನು ತಡೆಯಲಿಲ್ಲ. ಆದ್ದರಿಂದಲೇ, ದೇಶದಾದ್ಯಂತ ಮುಸ್ಲಿಮರು ಇವತ್ತು ಶ್ಲಾಘನೆಗೆ ಒಳಗಾಗುತ್ತಿದ್ದಾರೆ, ಅವರ ಸೇವಾಕಾರ್ಯಗಳನ್ನು ನಿಂದನೆಗೈದವರೇ ಒಳಗೊಳಗೇ ಮೆಚ್ಚಿಕೊಂಡು ಆಡುತ್ತಿದ್ದಾರೆ. ಇಷ್ಟೆಲ್ಲಾ ಆರೋಪಗಳನ್ನು ಎದುರಿಸಿಯೂ ಈ ಮಟ್ಟದಲ್ಲಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲು ಮುಸ್ಲಿಮರಿಗೆ ಹೇಗೆ ಸಾಧ್ಯವಾಯಿತು ಎಂದು ಅಚ್ಚರಿಪಡುತ್ತಿದ್ದಾರೆ.

ಕೊರೋನೋತ್ತರ ಭಾರತವು ಮುಸ್ಲಿಮರ ಈ ವಿವೇಕಪೂರ್ಣ ಮತ್ತು ಪ್ರಬುದ್ಧ ವರ್ತನೆಯನ್ನು ಖಂಡಿತ ಬಹುಕಾಲ ನೆನಪಿನಲ್ಲಿಡಲಿದೆ.