Tuesday 20 July 2021

ಜನಸಂಖ್ಯಾ ನೀತಿ: ಕಟಕಟೆಯಲ್ಲಿ ನಿಲ್ಲಬೇಕಾದುದು ಯಾರು?




ಕರಮ್‌ಚಂದ್ ಗಾಂಧಿ ಮತ್ತು ಪುತಲೀಬಾಯಿಯ ನಾಲ್ಕು ಮಕ್ಕಳಲ್ಲಿ ಕೊನೆಯವರು ಮಹಾತ್ಮಾ ಗಾಂಧಿ. ರಾಮ್‌ಜಿ ಸಖ್‌ಪಾಲ್ ಮತ್ತು  ಭೀಮಾ ಸಖ್‌ಪಾಲ್‌ರ 6 ಮಕ್ಕಳ ಪೈಕಿ ಕೊನೆಯವರು ಬಿ.ಆರ್. ಅಂಬೇಡ್ಕರ್, ಆಯಿಶಾ ಮತ್ತು ಗುಲಾಂ ಸರ್ವಾರ್ ಖಾನ್ ಅವರ 12  ಮಕ್ಕಳಲ್ಲಿ 4ನೆಯವರು ಇತ್ತೀಚೆಗೆ ನಿಧನರಾದ ಖ್ಯಾತ ಚಿತ್ರನಟ ದಿಲೀಪ್ ಕುಮಾರ್ ಎಂಬ ಯೂಸುಫ್ ಖಾನ್. ಹಾಗಂತ,

100 ವರ್ಷಗಳ ಹಿಂದಿನ ಜನನ ಪ್ರಮಾಣದ ಅಂಕಿ ಅಂಶಗಳನ್ನು ಎತ್ತಿಕೊಂಡು ಈಗಿನ ಪರಿಸ್ಥಿತಿಗೆ ಹೋಲಿಕೆ ಮಾಡುವುದು ಸಾಧುವೇ  ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಈ ಪ್ರಶ್ನೆ ಅಸಾಧುವಲ್ಲ. ಆದರೆ, ಈ ಪ್ರಶ್ನೆ ಹುಟ್ಟು ಹಾಕಬಹುದಾದ ಮೇಲು ಮೇಲಿನ  ಸಮರ್ಥನೆಗಳ ಹಿನ್ನೆಲೆಯನ್ನು ನೋಡುವಾಗ ಈ ಪ್ರಶ್ನೆ ಅಸಾಧು ಮತ್ತು ಮೂಗು ಸೋರುವುದಕ್ಕೆ ಮೂಗನ್ನು ಕೊಯ್ಯುವುದೇ ಪರಿಹಾರ  ಎಂದು ಹೇಳುವಷ್ಟು ಅಸಾಧು.

ಭಯ ಮತ್ತು ಬಯಕೆ- ಇವೆರಡನ್ನೂ ಮನುಷ್ಯ ಸದಾ ಜೊತೆಗಿಟ್ಟುಕೊಂಡೇ ಬದುಕುತ್ತಿರುತ್ತಾನೆ. ಬಯಕೆಯು ಮನುಷ್ಯನಲ್ಲಿ  ಮಹತ್ವಾಕಾಂಕ್ಷೆಗೆ ಕಾರಣವಾಗುತ್ತದೆ. ಇನ್ನಷ್ಟು ಮತ್ತಷ್ಟು ಎಂದು ಮನಸ್ಸನ್ನು ಸದಾ ಸಕ್ರಿಯಗೊಳಿಸುತ್ತಿರುತ್ತದೆ. ದಿನಾ ಬಸ್ಸಲ್ಲಿ  ಪ್ರಯಾಣಿಸುವವನಲ್ಲಿ ಬೈಕ್ ಖರೀದಿಯ ಬಗ್ಗೆ ಒಲವು ಮೂಡುವುದು ಈ ಕಾರಣದಿಂದಲೇ. ಪುಟ್ಟ ಗುಡಿಸಲನ್ನು ಒಂದು ಮನೆಯಾಗಿ  ಮಾರ್ಪಡಿಸುವುದೋ, ಪುಟ್ಟ ಕಿರಾಣಿ ಅಂಗಡಿಯನ್ನು ಸೂಪರ್ ಬಝಾರ್ ಆಗಿ ಪರಿವರ್ತಿಸಲು ಶ್ರಮಿಸುವುದೋ ಇತ್ಯಾದಿಗಳೆಲ್ಲಕ್ಕೂ ಈ  ಬಯಕೆಯೇ ಅಡಿಪಾಯ ಆಗಿರುತ್ತದೆ. ಒಂದು ಪುಟ್ಟ ಮಳೆಗೂ ಇವತ್ತಿನ ನಗರಗಳು ಕೊಳವಾಗಿ ಪರಿವರ್ತನೆಯಾಗುವುದರ ಹಿಂದೆ  ಕೆಲಸ ಮಾಡಿರುವುದೂ ಈ ಬಯಕೆಯೇ. ಯಾವುದೇ ಅಭಿವೃದ್ಧಿ ಸುರಕ್ಷಿತವೆನಿಸಿಕೊಳ್ಳಬೇಕಾದರೆ ಪ್ರಕೃತಿಯನ್ನು ಗೌರವಿಸಬೇಕು.  ನಗರಗಳು ಆಧುನಿಕ ಅಭಿವೃದ್ಧಿ ಮಾದರಿಯ ಭಾಗವಾಗಿರುವುದರಿಂದ ಅದರ ನಿರ್ಮಾಣದ ವೇಳೆ ಸೂಕ್ತ ಚರಂಡಿ ವ್ಯವಸ್ಥೆ,  ನೀರಿಂಗಿಸುವ ವಿಧಾನಗಳಿಗೆ ಮಹತ್ವ ಕೊಡಬೇಕಾಗುತ್ತದೆ. ಆದರೆ,

ಮನುಷ್ಯನೊಳಗಿನ ಬಯಕೆಯು ಈ ಮೂಲಭೂತ ಅಂಶಗಳನ್ನು ಕಡೆಗಣಿಸಿ ನಗರವನ್ನು ನಿರ್ಮಿಸುವಷ್ಟು ದುರಾಸೆಯದ್ದಾದಾಗ,  ಅರ್ಧಗಂಟೆಯ ಮಳೆಗೂ ನಗರ ಕೊಳವಾಗುತ್ತದೆ. ಇದಕ್ಕೆ ಪರಿಹಾರ ಮಳೆಯನ್ನೇ ಸ್ಥಗಿತಗೊಳಿಸುವುದಲ್ಲ. ಮಳೆ ನೀರು ಹರಿದು  ಹೋಗುವುದಕ್ಕೆ ಪೂರಕವಾದ ನೀಲನಕ್ಷೆಯನ್ನು ತಯಾರಿಸಿ ಆ ಬಳಿಕ ನಗರ ನಿರ್ಮಾಣ ಮಾಡುವುದು. ಆದರೆ,

ನಮ್ಮನ್ನಾಳುವವರ ಅತಿದೊಡ್ಡ ಸಮಸ್ಯೆ ಏನೆಂದರೆ, ಈ ಮೂಲಭೂತ ಸತ್ಯಗಳತ್ತ ಗಮನ ಕೊಡದೇ ಅಥವಾ ಅವನ್ನು ಅಡಗಿಸಿ ಆ  ಕೊಳವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಜನರನ್ನು ಯಾಮಾರಿಸುವುದು. ನಿಜವಾಗಿ,

ಸರ್ವ ಎಚ್ಚರಿಕೆಗಳನ್ನೂ ಪಾಲಿಸಿಕೊಂಡು ಮತ್ತು ನಿಯಮಗಳನ್ನು ಚಾಚೂ ತಪ್ಪದೇ ಅನುಸರಿಸಿಕೊಂಡು ನಗರ ನಿರ್ಮಾಣಕ್ಕಿಳಿದರೆ  ತಳಮಟ್ಟದ ಕಾಂಟ್ರಾಕ್ಟುದಾರರಿಂದ ಹಿಡಿದು ಜನಪ್ರತಿನಿಧಿವರೆಗೆ ಹಣ ಕೊಳ್ಳೆ ಹೊಡೆಯಲು ಅವಕಾಶ ಕಡಿಮೆ. ಒಂದು ನಗರ ನಿರ್ಮಾಣ  ಯೋಜನೆ ರೂಪುಗೊಳ್ಳುವಾಗ ಕೋಟ್ಯಂತರ ರೂಪಾಯಿ ಕಮಿಷನ್ ಲೆಕ್ಕಾಚಾರಗಳೂ ನಡೆಯುತ್ತವೆ. ಕೆಳಗಿನಿಂದ ಮೇಲಿನ ವರೆಗೆ  ಕಮಿಷನ್ ವರ್ಗಾವಣೆಯಾಗಬೇಕಾದರೆ ನಗರ ನಿರ್ಮಾಣ ಕಾಮಗಾರಿ ವೇಳೆ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಬೇಕಾದುದು ತೀರಾ  ಅಗತ್ಯ. ಆಗ ನಗರ ಕೊಳವಾಗಲೇ ಬೇಕು. ಸಮಸ್ಯೆ ಇರುವುದೇ ಇಲ್ಲಿ. ಒಂದು ರೀತಿಯಲ್ಲಿ,

ನಮ್ಮನ್ನಾಳುವವರು ಜನಸಂಖ್ಯೆಯ ಕುರಿತೂ ಇಂಥದ್ದೇ  ಸುಳ್ಳು ಚಿತ್ರಕತೆಯೊಂದನ್ನು ಹೆಣೆದು ಎಲ್ಲೆಡೆಯೂ ಹಂಚುತ್ತಿದ್ದಾರೆ. ದೇಶದ  ಅಭಿವೃದ್ಧಿಗೆ ಏರುತ್ತಿರುವ ಜನಸಂಖ್ಯೆ ಮಾರಕ, ಅದನ್ನು ನಿಯಂತ್ರಿಸಬೇಕು ಎಂದು ಹೇಳುತ್ತಿದ್ದಾರೆ. ಉತ್ತರ ಪ್ರದೇಶ ಮತ್ತು ಅಸ್ಸಾಮ್  ಸರಕಾರಗಳು ಈಗಾಗಲೇ ಈ ಬಗ್ಗೆ ಕೆಲವು ಸೂಚನೆಗಳನ್ನು ಹೊರಡಿಸಿವೆ. ಇಬ್ಬರು ಮಕ್ಕಳಿಗಿಂತ ಹೆಚ್ಚಿರುವ ಕುಟುಂಬಕ್ಕೆ ಸರಕಾರಿ  ಸೌಲಭ್ಯಗಳ ನಿರಾಕರಣೆಯಂಥ ನಿಯಮಗಳನ್ನು ಅಳವಡಿಸುವುದಾಗಿ ಹೇಳಿಕೊಂಡಿವೆ. ನಿಜವಾಗಿ,

ಇದು ನಗರದ ಕೊಳವನ್ನು ತೋರಿಸಿ ಮಳೆಯನ್ನೇ ನಿಲ್ಲಿಸಬೇಕು ಎಂದು ಒತ್ತಾಯಿಸುವಂತಹ ವಾದ ಇದು. ಭಾರತಕ್ಕೆ ಸ್ವಾತಂತ್ರ‍್ಯ  ಲಭಿಸುವಾಗ ಈ ದೇಶದ ಪ್ರತಿ ಕುಟುಂಬದಲ್ಲಿ ಎಷ್ಟು ಮಕ್ಕಳಿದ್ದರೋ ಈಗ ಹಾಗಿಲ್ಲ, ಕಡಿಮೆಯಾಗಿದೆ. ಎಲ್ಲ ಧರ್ಮದವರ ಮನೆಯ  ಸ್ಥಿತಿಯೂ ಬಹುತೇಕ ಇದುವೇ. 8-10 ಮಕ್ಕಳಿರುವ ಕುಟುಂಬಗಳು 80-100 ವರ್ಷಗಳ ಹಿಂದೆ ಸಾಮಾನ್ಯವಾಗಿದ್ದುವು. ಈಗ ಈ ಸ್ಥಿತಿ  ಬಹುತೇಕ ಈ ದೇಶದ ಎಲ್ಲೂ ಇಲ್ಲ. ಅಂಬೇಡ್ಕರ್ ಅವರ ತಾಯಿ 13 ಮಕ್ಕಳಿಗೆ ಜನ್ಮ ನೀಡಿದ್ದರೂ ಅವರಲ್ಲಿ ಉಳಿದಿರುವುದು 6  ಮಕ್ಕಳು ಮಾತ್ರ. ಮಹಾತ್ಮಾ ಗಾಂಧಿಯವರ 5 ಮಕ್ಕಳಲ್ಲಿ ಒಂದು ಮಗು ಶಿಶು ಪ್ರಾಯದಲ್ಲೇ  ಅಸುನೀಗಿತ್ತು. ಅಂದಿನಿAದ ಇಂದಿನ ವರೆಗೆ  ಮಕ್ಕಳ ಜನನ ಪ್ರಮಾಣದಲ್ಲಿ ಕುಸಿತವಾಗುತ್ತಾ ಬಂದಿರುವುದನ್ನು ಜನಗಣತಿ ಅಂಕಿ-ಅAಶಗಳು ಸ್ಪಷ್ಟಪಡಿಸುತ್ತಾ ಬಂದಿವೆ. ಯಾವ ಜ ನಸಂಖ್ಯಾ ಕಾಯಿದೆಯನ್ನೂ ಜಾರಿಗೊಳಿಸದೆಯೇ ಆಗಿರುವ ಬದಲಾವಣೆ ಇದು. ಬಡತನ ವ್ಯಾಪಕವಾಗುವಾಗ ಮತ್ತು ಆರೋಗ್ಯ  ಸೌಲಭ್ಯವನ್ನು ಜನರಿಗೆ ಸರಕಾರ ಒದಗಿಸದೇ ಇರುವಾಗ ಪ್ರತಿ ಕುಟುಂಬದ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದೂ ಮತ್ತು  ಅವುಗಳ ಒದಗಣೆಯಲ್ಲಿ ಸುಧಾರಣೆಯಾದಾಗ ಮಕ್ಕಳ ಸಂಖ್ಯೆಯಲ್ಲಿ ಇಳಿಕೆಯಾಗಿರುವುದೂ ಪ್ರತಿ ಜನಗಣತಿಯ ವಿವರಗಳೇ ತಿಳಿಸುತ್ತವೆ.  ಆದ್ದರಿಂದ,

ಸದ್ಯ ಆಗಬೇಕಾದುದು ಮೂಗನ್ನು ಕೊಯ್ಯುವ ಕೆಲಸ ಅಲ್ಲ. ಮೂಗಿನ ಸೋರುವಿಕೆಯನ್ನು ತಡೆಯುವುದಕ್ಕೆ ಸೂಕ್ತ ಔಷಧಿಯನ್ನು  ವಿತರಿಸುವುದು. ಅಂದರೆ, ದೇಶದ ಜನರ ಬಡತನವನ್ನು ನಿವಾರಿಸುವುದಕ್ಕೆ ಸೂಕ್ತ ಯೋಜನೆಗಳನ್ನು ಪರಿಣಾಮಕಾರಿಯಾಗಿ  ಜಾರಿಗೊಳಿಸುವುದು. ಆರೋಗ್ಯ ಸುರಕ್ಷಿತತೆಯನ್ನು ಒದಗಿಸುವುದು. ಆದರೆ, ಪ್ರಭುತ್ವ ಜನರ ಹೊಟ್ಟೆ ತುಂಬಿಸುವ ಬದಲು ಹೊಟ್ಟೆಯ ಲ್ಲಿರುವ ಭ್ರೂಣವನ್ನು ಕಿತ್ತುಕೊಳ್ಳುವ ಮಾತನ್ನಾಡುತ್ತಿದೆ. ಖಾಲಿ ಹೊಟ್ಟೆಯ ಬಗ್ಗೆ ಯಾವ ಕಾಳಜಿ ಮತ್ತು ಕನಿಕರವೂ ಇಲ್ಲದ ಪ್ರಭುತ್ವವು  ಅವರ ಹೊಟ್ಟೆಯಲ್ಲಿರುವ ಭ್ರೂಣದ ಮೇಲೆ ಕಣ್ಣಿಡುವುದು ಅತ್ಯಂತ ಹೃದಯ ಹೀನ ಕ್ರೌರ್ಯ. ನಿಜವಾಗಿ,

ಈ ದೇಶದ ಸಮಸ್ಯೆ ಬೆಳೆಯುತ್ತಿರುವ ಭ್ರೂಣ ಅಲ್ಲ. ಬೆಳೆಯುತ್ತಿರುವ ಬಡತನ, ನಿರುದ್ಯೋಗ, ಆರೋಗ್ಯ ಸೌಲಭ್ಯದ ಕೊರತೆ,  ಮೂಲಭೂತ ಅಗತ್ಯಗಳ ಅಲಭ್ಯತೆ ಇತ್ಯಾದಿ ಇತ್ಯಾದಿ. ಆದರೆ ಸಾರ್ವಜನಿಕರ ಕಣ್ಣಿಗೆ ಇವೆಲ್ಲ ತಕ್ಷಣಕ್ಕೆ ಎದ್ದು ಕಾಣಿಸುವುದಿಲ್ಲ. ಕಾರು,  ಬಸ್ಸು, ರೈಲು, ವಿಮಾನಗಳಲ್ಲಿ ಪ್ರಯಾಣಿಸುವಾಗ ನಗರಗಳು, ದೊಡ್ಡ ದೊಡ್ಡ ಇಮಾರತ್‌ಗಳು, ಚಂದದ ರಸ್ತೆಗಳು, ಕೋಟು-ಬೂಟಿನ  ಜನರ ದರ್ಶನವಾಗುತ್ತದೆಯೇ ಹೊರತು ಕೊಳಚೆಗೇರಿಗಳು, ಗುಡಿಸಲುಗಳು, ಕಾರ್ಮಿಕರು ಕಾಣಿಸುವುದು ಕಡಿಮೆ ಅಥವಾ ಈ ರಸ್ತೆಗಳು  ಹಾದು ಹೋಗುವ ಅಕ್ಕ-ಪಕ್ಕವೆಲ್ಲ ವೈಭವವೇ ಅಧಿಕವಿವೆ. ಆದರೆ ಈ ರಸ್ತೆಯ ಹೊರಗಡೆ ಇನ್ನೊಂದು ಭಾರತ ಇದೆ. ಅಲ್ಲಿ ಬಡತನ,  ಹಸಿವು, ಅನಾರೋಗ್ಯ, ಕೊಳಚೆಗೇರಿ ಇತ್ಯಾದಿಗಳು ಧಾರಾಳ ಇವೆ. ಇವೆಲ್ಲ ನಮ್ಮನ್ನಾಳುವವರ ವೈಫಲ್ಯ. ಇವರು ಮನಸ್ಸು ಮಾಡಿದರೆ ಈ  ಬಡ ಭಾರತದ ಜೀವನ ಮಟ್ಟವನ್ನು ಸುಧಾರಿಸಬಹುದಿತ್ತು. ಆದರೆ,

ನಮ್ಮನ್ನಾಳುವವರು ತಮ್ಮ ವೈಫಲ್ಯವನ್ನು ಮುಚ್ಚಿ ಹಾಕುವುದಕ್ಕಾಗಿ ಬಡವರನ್ನೆಲ್ಲ ಅಪರಾಧಿಗಳಂತೆ ಬಿಂಬಿಸುತ್ತಿದ್ದಾರೆ. ಅವರ ಹೊಟ್ಟೆ ಈ  ದೇಶದ ಪಾಲಿಗೆ ಅಪಾಯಕಾರಿ ಎಂದು ಹೇಳತೊಡಗಿದ್ದಾರೆ. ಅಂದಹಾಗೆ,

ಬಯಕೆ ಹೇಗೆ ಮನುಷ್ಯನನ್ನು ಸಕ್ರಿಯಗೊಳಿಸುತ್ತದೋ ಹಾಗೆಯೇ ಭಯವು ಅಸತ್ಯವನ್ನೂ ಸತ್ಯವೆಂದು ಒಪ್ಪಿಕೊಳ್ಳುವಂತೆ ಮಾಡುತ್ತದೆ.  ಮುಸ್ಲಿಮರ ಜನಸಂಖ್ಯೆ ಏರುತ್ತಿದೆ ಮತ್ತು ಹೀಗಾದರೆ ಮುಂದೊಂದು  ದಿನ ಈ ದೇಶ ಮುಸ್ಲಿಮರದ್ದಾಗುತ್ತದೆ ಎಂಬ ಅಸತ್ಯವನ್ನು ನಮ್ಮ ನ್ನಾಳುವವರು ಹಂಚುತ್ತಿದ್ದಾರೆ. ಈ ಅಸತ್ಯವನ್ನೇ ಸತ್ಯವೆಂದು ನಂಬಿಕೊಂಡ  ಜನ ಭಯಭೀತರಾಗಿ ಜನಸಂಖ್ಯೆಯೇ ಈ ದೇಶದ ಪರಮ  ಶತ್ರು ಎಂದು ಅಂದುಕೊಳ್ಳತೊಡಗಿದ್ದಾರೆ. ಈ ದೇಶ ಮುಸ್ಲಿಮರ ಪಾಲಾಗದಿರಬೇಕಾದರೆ ಜನಸಂಖ್ಯಾ ನಿಯಂತ್ರಣ ಕಾಯ್ದೆ  ಜಾರಿಯಾಗಲೇಬೇಕು ಎಂದವರು ನಂಬಿಕೊAಡಿದ್ದಾರೆ. ನಿಜವಾಗಿ, ಇದು ಆಳುವವರ ಹುನ್ನಾರ. ತಮ್ಮ ವೈಫಲ್ಯವನ್ನು  ಮುಚ್ಚಿಕೊಳ್ಳುವುದಕ್ಕಾಗಿ ಅವರು ಕಂಡುಕೊAಡಿರುವ ಸುಲಭ ದಾರಿ. ಹೀಗೆ ಮಾಡುವುದರಿಂದ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿ ಲ್ಲಿಸಿದಂತೆಯೂ ಆಗುತ್ತದೆ ಮತ್ತು ಬಡತನ ನಿವಾರಣೆಯ ಹೊಣೆಯಿಂದ ನುಣುಚಿಕೊಂಡಂತೆಯೂ ಆಗುತ್ತದೆ. ಆದ್ದರಿಂದ, 

ಕಟಕಟೆಯಲ್ಲಿ  ನಿಲ್ಲಬೇಕಾದುದು ಭ್ರೂಣ ಅಲ್ಲ, ಪ್ರಭುತ್ವ.

Saturday 17 July 2021

ಜೈಲಿನ ಕೋಣೆಯಲ್ಲೆಲ್ಲೋ ರೋಧಿಸುತ್ತಿರುವ ಸ್ಟ್ರಾ




 ‘ಪ್ರಜಾಸತ್ತಾತ್ಮಕ ಹೋರಾಟ ಮತ್ತು ಭಯೋತ್ಪಾದನೆ ಒಂದೇ ಅಲ್ಲ’ ಎಂದು ದೇಶದ ಪರಮೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟ ಮೂರು ವಾರಗಳ ಬಳಿಕ ಆ ಅಭಿಪ್ರಾಯವನ್ನೇ ವ್ಯಂಗ್ಯಗೊಳಿಸು ವಂತೆ ಸ್ಟ್ಯಾನ್ ಸ್ವಾಮಿ ಹೊರಟು ಹೋಗಿದ್ದಾರೆ. ದೇವಾಂಗನಾ ಕಲಿಟಾ, ನತಾಶಾ ನರ್ವಾಲ್ ಮತ್ತು ಆಸಿಫ್ ಇಕ್ಬಾಲ್ ತನ್ಹಾರಿಗೆ ಜಾಮೀನು ನೀಡಿದುದನ್ನು ಸಮರ್ಥಿಸುತ್ತಾ ಕೋರ್ಟು ಈ ಅಭಿಪ್ರಾಯ ವನ್ನು ವ್ಯಕ್ತಪಡಿಸುವಾಗ, ಇವರೆಲ್ಲ ಈ ಮಾತನ್ನು ಆಲಿಸುವಷ್ಟು ಮತ್ತು ಅದನ್ನು ವಿಶ್ಲೇಷಿಸುವಷ್ಟು ಆರೋಗ್ಯವಂತರಾಗಿದ್ದರು. ಆದ್ದರಿಂದಲೇ, 

ಜಾಮೀನಿನಲ್ಲಿ ಬಿಡುಗಡೆಗೊಂಡು ಜೈಲಿನಿಂದ ಹೊರಬಂದ ತಕ್ಷಣ ಅವರು ಹೋರಾಟದ ಕೆಚ್ಚನ್ನು ಮರು ಪ್ರದರ್ಶಿಸಿದರು. ಯುಎಪಿಎ ಕಾಯ್ದೆಯ ವಿರುದ್ಧ ಮತ್ತು ಅದರ ಆಧಾರದಲ್ಲಿ ಬಂಧಿಸಲಾಗಿರುವ ತಮ್ಮ ಸಂಗಾತಿಗಳ ಬಿಡುಗಡೆಗಾಗಿ ಆಗ್ರಹಿಸಿ ಪ್ರತಿಭಟಿಸಿದರು. ಆದರೆ ಸ್ಟ್ಯಾನ್ ಸ್ವಾಮಿ ಅಜ್ಜ. ಅವರಿಗೆ ಆ ಸಾಮರ್ಥ್ಯ ಇರಲಿಲ್ಲ. ಅವರನ್ನು ಬಂಧಿಸಿದರೂ ಬಿಡುಗಡೆಗೊಳಿಸಿದರೂ ಏನೂ ವ್ಯತ್ಯಾಸವಾಗದಷ್ಟು ಅವರು ದಣಿದಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಬಂಧನಕ್ಕೀಡಾಗುವಾಗ ಅವರಿಗೆ 83 ವರ್ಷ ಕಳೆದಿತ್ತು. ಪಾರ್ಕಿನ್ಸನ್ ಕಾಯಿಲೆಯಿತ್ತು. ಬದುಕಿನ ಸಂಧ್ಯಾ ಕಾಲದಲ್ಲಿದ್ದ ಅವರನ್ನು ನಮ್ಮ ಪ್ರಭುತ್ವ ಎಷ್ಟು ಕ್ರೂರವಾಗಿ ನಡೆಸಿಕೊಂಡಿತು ಅಂದರೆ, ಪಾನೀಯ ಸೇವನೆಗಾಗಿ ಸ್ಟ್ರಾ ಮತ್ತು ಸಿಪ್ಪರ್ ಬಳಕೆಗೂ ಅನುಮತಿ ನೀಡಲಿಲ್ಲ. ನಡುಗುತ್ತಿದ್ದ ಕೈಯಿಂದ ಗ್ಲಾಸ್ ಹಿಡಿಯಲು ಸಾಧ್ಯವಾಗದ ಸ್ಟ್ಯಾನ್ ಸ್ವಾಮಿ, ಸ್ಟ್ರಾ ಕೊಡಿಸಿ ಎಂದು ಕೋರ್ಟಿನ ಮುಂದೆ ಬೇಡಿಕೊಂಡರು. ಅವರಿಗೆ ಸ್ಟ್ರಾ  ಅಗತ್ಯ ಇದೆಯೋ ಇಲ್ಲವೋ ಎಂಬ ಬಗ್ಗೆ ಕೋರ್ಟಿಗೆ ಅಭಿಪ್ರಾಯ ತಿಳಿಸುವುದಕ್ಕೆ ರಾಷ್ಟ್ರೀಯ ತನಿಖಾ ದಳವು ಸುಮಾರು ಒಂದು ತಿಂಗಳ ಅವಧಿಯನ್ನು ತೆಗೆದುಕೊಂಡಿತು. ಅಂದಹಾಗೆ, 

ಓರ್ವ ವಯೋವೃದ್ಧನಿಗೆ ಒದಗಿಸಬೇಕಾದ ಸ್ಟ್ರಾಗೂ ಇಷ್ಟೊಂದು ತಡೆ ಒಡ್ಡುವ ಮನಸ್ಸು ಈ ತನಿಖಾ ದಳದಲ್ಲಿ ಇದೆಯೆಂದ ಮೇಲೆ, ಅವರು ಜೈಲು ಕೋಣೆಯಿಂದ ಜೀವಂತ ಹೊರಬರುವ ನಿರೀಕ್ಷೆಯನ್ನೇ ಅಪರಾಧವೆನ್ನಬೇಕಾಗುತ್ತದೆ. ಅಷ್ಟಕ್ಕೂ,

ಸ್ಟ್ರಾ ಅಂದರೆ ಬಂದೂಕು ಅಲ್ಲವಲ್ಲ. ಎಲ್ಲೊ  ನಗರದ ಚರ್ಚ್ ಒಳಗಡೆ ಆರಾಮವಾಗಿ ಇದ್ದಿರಬೇಕಾದ ಫಾದರ್ ಓರ್ವ ಅವೆಲ್ಲವನ್ನೂ ತೊರೆದು ಜಾರ್ಖಂಡ್ ಎಂಬ ಬುಡಕಟ್ಟುಗಳೇ ಅಧಿಕವಿರುವ ರಾಜ್ಯದಲ್ಲಿ ತಂಗಿದುದೇ ಒಂದು ವಿಸ್ಮಯ. ಬುಡಕಟ್ಟು-ಆದಿವಾಸಿಗಳು ಸಾಮಾನ್ಯವಾಗಿ ಕಾಡನ್ನೇ ಮನೆ ಮಾಡಿಕೊಂಡವರು. ಆದರೆ, ಆಧುನಿಕ ಅಭಿವೃದ್ಧಿ ಮಾದರಿಯಂತೂ ಈ ಕಾಡಿಗೇ ಕನ್ನ ಹಾಕುವ ಮನಸ್ಸಿನದ್ದು. ಅಭಿವೃದ್ಧಿಯ ಬುಲ್ಡೋಜರ್‌ಗೆ ಜನರು ಕಾಣಿಸುವುದಿಲ್ಲ. ಅವರ ಸಾಂಸ್ಕೃತಿಕ ವೈಶಿಷ್ಟ್ಯಗಳು ಅಮೂಲ್ಯ ಅನ್ನಿಸುವುದಿಲ್ಲ. ಕಾಡನ್ನು ಲೆಕ್ಕಿಸುವುದಿಲ್ಲ. ಕಾಡನ್ನು ಬಗೆದು ಸಂಪತ್ತನ್ನು ದೋಚುವುದು ಮತ್ತು ಕಾಡಲ್ಲಿರುವವರನ್ನು ಎತ್ತಂಗಡಿ ಮಾಡಿ ನಿರಾಶ್ರಿತರನ್ನಾಗಿಸುವುದರಲ್ಲಿ ನೈತಿಕ-ಅನೈತಿಕ ಪ್ರಶ್ನೆಯೂ ಕಾಡುವುದಿಲ್ಲ. ಸ್ಟ್ಯಾನ್ ಸ್ವಾಮಿ ಕಾಡು ನಿವಾಸಿಗಳ ಪರ ನಿಂತರು. ಅವರ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಡಿದರು. ಆದಿವಾಸಿಗಳನ್ನು ಸಂಘಟಿಸಿ ಆಧುನಿಕ ಅಭಿವೃದ್ಧಿ ಮಾದರಿಗೆ ಆದಿವಾಸಿಗಳು ಬಲಿಯಾಗದಂತೆ ತಡೆಯಲು ಯತ್ನಿಸಿದರು. ಯಾವಾಗ ಆದಿವಾಸಿಗಳಿಗೆ ಭಾರತೀಯ ಕಾಯ್ದೆ-ಕಾನೂನುಗಳ ಅರಿವು ಮೂಡಿಸುವ ಪ್ರಯತ್ನ ನಡೆಯತೊಡಗಿತೋ ಮತ್ತು ಅವರನ್ನು ಸಂಘಟಿತಗೊಳಿಸಿ ಹಕ್ಕುಗಳ ಪರ ಹೋರಾಡುವ ಛಲವನ್ನು ತುಂಬಲಾಯಿತೋ ಪ್ರಭುತ್ವದ ಕಣ್ಣು ಸ್ಟ್ಯಾನ್ ಸ್ವಾಮಿ ಎಂಬ ಏಕವ್ಯಕ್ತಿಯ ಮೇಲೆ ಬಿದ್ದಿತು. ಇದರ ಆರಂಭವಾಗಿ ಅವರಿಗೂ ನಕ್ಸಲ್ ಉಗ್ರವಾದಿಗಳಿಗೂ ನಡುವೆ ನಂಟು ಕಲ್ಪಿಸಲಾಯಿತು. ನಕ್ಸಲರಿರುವುದೂ ಕಾಡಲ್ಲಿ. ಆದಿವಾಸಿಗಳದ್ದೂ ಕಾಡೇ ತವರು. ಸ್ಟ್ಯಾನ್ ಸ್ವಾಮಿ ಇರುವುದೂ ಅಲ್ಲೇ. ಆದ್ದರಿಂದ 

ಇಂಥದ್ದೊಂದು  ಆರೋಪ ಹೊರಿಸಿದರೆ ತಕ್ಷಣಕ್ಕೆ ‘ಆಗಿರಬಹುದು’ ಎಂಬ ಅನುಮಾನ ನಗರ ಪ್ರದೇಶದ ಮಂದಿಯಲ್ಲಿ ಉದ್ಭವವಾಗುವುದು ಸಹಜ. ಇದರ ಜೊತೆಗೇ ಅವರ ಮೇಲೆ ಇನ್ನೊಂದು ಗಂಭೀರ ಆರೋಪವನ್ನೂ ರಾಷ್ಟ್ರೀಯ ತನಿಖಾ ದಳವು ಹೊರಿಸಿತು. 2017 ಡಿಸೆಂಬರ್ 31ರಂದು ಪುಣೆ ಸಮೀಪದ ಭೀಮಾ-ಕೋರೆಗಾಂವ್ ಗ್ರಾಮದಲ್ಲಿ ನಡೆದ ಸಭೆಯು ಹಿಂಸಾಚಾರದೊAದಿಗೆ ಕೊನೆಗೊಂಡಿತ್ತಲ್ಲದೇ, ಈ ಸಭೆಯನ್ನು ಆಯೋಜಿಸಿದ್ದ ಎಲ್ಗಾರ್ ಪರಿಷತ್‌ಗೂ ನಿಷೇಧಿತ ಮಾವೋವಾದಿಗಳಿಗೂ ಸಂಬAಧ ಇತ್ತು ಮತ್ತು ಅದರಲ್ಲಿ ಸ್ಟ್ಯಾನ್ ಸ್ವಾಮಿ ಕೂಡ ಒಬ್ಬರು ಎಂಬುದು ಈ ಆರೋಪವಾಗಿತ್ತು. ಎಲ್ಗಾರ್ ಪರಿಷತ್‌ನ ರೂವಾರಿಗಳು ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲಬಯಸಿದ್ದರು ಎಂಬ ಆರೋಪವನ್ನು ಹೊರಿಸಿ, ಆ ಆರೋಪಿಗಳ ಪೈಕಿ ಓರ್ವರಾಗಿ ಸ್ಟ್ಯಾನ್ ಸ್ವಾಮಿಯನ್ನು ರಾಷ್ಟ್ರೀಯ ತನಿಖಾ ದಳವು ಬಿಂಬಿಸಿತು. ಮಾತ್ರವಲ್ಲ, ಯುಎಪಿಎ ಕಾಯ್ದೆಯಡಿ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿತು. ವಿಷಾದ ಏನೆಂದರೆ,

2020 ಅಕ್ಟೋಬರ್‌ನಲ್ಲಿ ಬಂಧಿತರಾದ ಬಳಿಕ ಸಾಯುವ ವರೆಗೂ ಅವರಿಗೆ ಜಾಮೀನು ಸಿಕ್ಕಿಲ್ಲ. ಅವರು ಕೊನೆಯುಸಿರೆಳೆದದ್ದು ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ. ಹಾಗಂತ,

ಅವರು ವಯೋವೃದ್ಧರೆಂಬುದು ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೂ ಗೊತ್ತು. ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೂ ಗೊತ್ತು ಮತ್ತು ನ್ಯಾಯದಾನ ನೀಡಬೇಕಾದ ನ್ಯಾಯಾಧೀಶರಿಗೂ ಗೊತ್ತು. ಆದರೂ ಅವರು ಜಾಮೀನಿಗೆ ಅರ್ಹರಾಗಿಲ್ಲವೆಂದರೆ, ಅದಕ್ಕೆ ಕಾರಣ ಯುಎಪಿಎ ಕಾಯ್ದೆ. ಆರೋಪಿ ಯನ್ನು ಸತಾಯಿಸುವ ಮತ್ತು ಆರೋಪ ಹೊರಿಸುವ ಅಧಿಕಾರಿಗಳಿಗೆ ಅಪರಿಮಿತ ಅಧಿಕಾರವನ್ನು ನೀಡುವ ಈ ಕಾಯ್ದೆಯ ಕರಾಳ ಮುಖಕ್ಕೆ ಸ್ಟಾö್ಯನ್ ಸ್ವಾಮಿಯೇ ಅತ್ಯುತ್ತಮ ಉದಾಹರಣೆ. ಅವರು ಹೋರಾಡಿದ್ದು ಆದಿವಾಸಿಗಳ ಬದುಕುವ ಹಕ್ಕಿಗಾಗಿ. ಸಂವಿಧಾನ ಅವರಿಗೆ ನೀಡಿರುವ ಹಕ್ಕನ್ನು ಮರಳಿಸುವುದಕ್ಕಾಗಿ. ದುರಂತ ಏನೆಂದರೆ, ಸ್ಟ್ಯಾನ್ ಸ್ವಾಮಿಯ ಸರ್ವ ಹಕ್ಕುಗಳನ್ನೂ ಅದೇ ಸಂವಿಧಾನದ ಅಡಿಯಲ್ಲಿ ರೂಪಿಸಲಾದ ಕಾಯ್ದೆಯು ಕಸಿದುಕೊಂಡಿತು. ಜುಜುಬಿ ಸ್ಟ್ರಾ ಪಡೆಯುವ ಮೂಲಭೂತ ಹಕ್ಕನ್ನೂ ತಿಂಗಳ ಕಾಲ ಈ ಕಾಯ್ದೆ ಅವರಿಗೆ ನಿಷೇಧಿಸಿ ನಕ್ಕಿತು. ಏನೇ ಆಗಲಿ.

ಸ್ಟ್ಯಾನ್ ಸ್ವಾಮಿ ಈಗ ಹೊರಟು ಹೋಗಿದ್ದಾರೆ. ಅವರು ಬಿಟ್ಟು ಹೋಗಿರುವ ಒಂದೇ ಒಂದು ಕುರುಹು ಏನೆಂದರೆ ದುರ್ಬಲ ಸ್ಟ್ರಾ. ಅದೊಂದು ಸಂಕೇತ. ಪ್ರಭುತ್ವದ ಕೈಯಲ್ಲಿ ಕಾನೂನುಗಳು ಹೇಗೆ ದುರುಪಯೋಗಕ್ಕೀಡಾಗಬಹುದು ಎಂಬುದನ್ನು ಸೂಚಿಸುವ ಸಂಕೇತ. ಅಷ್ಟಕ್ಕೂ,

ಉತ್ತರ ಕೊರಿಯ, ಸಿರಿಯಾ, ಮ್ಯಾನ್ಮಾರ್, ಚೀನಾ ಇತ್ಯಾದಿ ರಾಷ್ಟ್ರಗಳಲ್ಲಿ ಈ ಯುಎಪಿಎ ಕಾಯ್ದೆ ರಚನೆಯಾಗಿರುತ್ತಿದ್ದರೆ ಅದಕ್ಕೆ ಅಚ್ಚರಿ ಪಡಬೇಕಿರಲಿಲ್ಲ. ಆದರೆ, ಪ್ರಜಾತಂತ್ರ ರಾಷ್ಟ್ರವಾದ ಭಾರತದಲ್ಲಿ ಅದೂ ಮಾನವ ಹಕ್ಕುಗಳಿಗೆ ವಿಪರೀತ ಆದ್ಯತೆ ನೀಡುವ ರಾಷ್ಟçದಲ್ಲಿ ಯುಎಪಿಎಯಂಥ ಕಾಯ್ದೆ ರಚನೆಯಾಗಿರುವುದೇ ಚೋದ್ಯದ ಸಂಗತಿ. ಈ ದೇಶದ ಸಂವಿಧಾನ ರಚನೆಯಾಗುವಾಗ ಮಾನವ ಹಕ್ಕುಗಳಿಗೆ ಭಾರೀ ಮಹತ್ವ ನೀಡಲಾಗಿತ್ತು. ದಲಿತರೆಂಬ ಶೋಷಿತ ಸಮುದಾಯವು ಹಕ್ಕುಗಳನ್ನೆಲ್ಲಾ ಕಳಕೊಂಡು ಬಲಿತರ ಗುಲಾಮರಂತೆ ಬದುಕುತ್ತಿದ್ದುದನ್ನು ತಡೆಯುವುದಕ್ಕಾಗಿಯೇ ಮಾನವ ಹಕ್ಕುಗಳಿಗೆ ಮಹತ್ವವನ್ನು ಕಲ್ಪಿಸುವ ಮತ್ತು ವ್ಯಕ್ತಿ ಸ್ವಾತಂತ್ರ‍್ಯವನ್ನು ಮೂಲಭೂತ ಹಕ್ಕುಗಳಾಗಿ ಒಪ್ಪಿಕೊಳ್ಳುವ ತತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಲಾಯಿತು. ಆ ಸಂವಿಧಾನಕ್ಕೆ 7 ದಶಕಗಳು ಸಂದ ಈ ಹೊತ್ತಿನಲ್ಲಿ ಒಂದು ಸ್ಟ್ರಾ ಜೈಲಿನ ಕೋಣೆಯಲ್ಲೆಲ್ಲೋ  ಅನಾಥವಾಗಿ ರೋಧಿಸುತ್ತಿದೆ. ಇದೇ ಸಂವಿಧಾನದ ಮೂಗಿನಡಿಯಲ್ಲೇ  ರಚಿತವಾದ ಯುಎಪಿಎ ಎಂಬ ಕಾಯ್ದೆ ರೋಧಿಸುತ್ತಿರುವ ಆ ಸ್ಟ್ರಾವನ್ನೂ ಮತ್ತು 7 ದಶಕಗಳ ಹಿಂದಿನ ಆ ಸಂವಿಧಾನವನ್ನೂ ನೋಡುತ್ತಾ ವಿಕಟ ನಗು ಬೀರುತ್ತಿದೆ. ಆ ಸ್ಟ್ರಾದಲ್ಲಿ ಶಕ್ತಿಯಿಲ್ಲ. ಜನಸಾಮಾನ್ಯರಲ್ಲೂ ಶಕ್ತಿಯಿಲ್ಲ. ಆದರೆ ಅವರು ಆರಿಸಿ ಕಳುಹಿಸಿದ ಪ್ರತಿನಿಧಿಗಳು ಶಕ್ತಿವಂತರಾಗುತ್ತಿದ್ದಾರೆ. ಅವರ ಅಣತಿಯಂತೆ ಕಾಯ್ದೆಗಳು ರಚನೆಗೊಳ್ಳತೊಡಗಿವೆ. ಪ್ರಜೆಗಳೇ ಪ್ರಭುಗಳಾಗಬೇಕೆಂಬ ಸಂವಿಧಾನದ ಬಯಕೆ ತಿರುವು ಮುರುವಾಗುತ್ತಿದೆ. ಆರಿಸಿದವ ಅಡಿಯಾಳಾಗಿ ಮತ್ತು ಗೆದ್ದವ ದೊರೆಯಾಗಿ ಮಾರ್ಪಡುತ್ತಿದ್ದಾರೆ.

 ಸ್ಟ್ಯಾನ್ ಸ್ವಾಮಿ ಬಿಟ್ಟು ಹೋಗಿರುವ ಸ್ಟ್ರಾ ಬಹುಶಃ ಅನ್ಯಾಯವನ್ನು ಪ್ರಶ್ನಿಸುವ ಈ ದೇಶದ ಪ್ರತಿಯೊಬ್ಬ ನಾಗರಿಕನ ಗುರುತು. ಆತ ಈ ಯುಎಪಿಎ ಎದುರು ಆ ಸ್ಟ್ರಾದಷ್ಟೇ ದುರ್ಬಲ.

--

Tuesday 6 July 2021

ಉಡುಪಿ ಕಲ್ಮತ್ ಮಸೀದಿ: ಏನಾಗಬಾರದು?

 


ಸನ್ಮಾರ್ಗ ಸಂಪಾದಕೀಯ 


ಉಡುಪಿ ಜಿಲ್ಲೆಯಲ್ಲಿ ಮಸೀದಿಯೊಂದನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಲಾಗಿದೆ. ಹಾಗಂತ,

ಈ ಮಸೀದಿಯನ್ನು ಅಪರಾಧಿ ಎಂದು ಯಾರು ಹೇಳಬೇಕಿತ್ತೋ ಅವರು ಹೇಳಿಲ್ಲ. ಯಾವುದು ಹೇಳಬೇಕಿತ್ತೋ ಅದೂ ಹೇಳಿಲ್ಲ. ಆದರೆ ಸಂಕಲನ-ವ್ಯವಕಲನದಲ್ಲಿ ನಿಪುಣರಾದ ರಾಜಕಾರಣಿಗಳು ಈ ಮಸೀದಿಯ ಸುತ್ತ ಭಾವುಕ ಚಿತ್ರಕತೆಯೊಂದನ್ನು ಹೆಣೆದು ಸಾರ್ವಜನಿಕರಿಗೆ ಹಂಚುತ್ತಿದ್ದಾರೆ. ಸದ್ಯದ ಅಗತ್ಯ ಏನೆಂದರೆ, ಸಾರ್ವಜನಿಕರು ವಿವೇಚನೆಯಿಂದ ನಡೆದುಕೊಳ್ಳುವುದು. ರಾಜಕಾರಣ ಪ್ರಣೀತ ಕತೆ ಮತ್ತು ವಾಸ್ತವವನ್ನು ಯಾವ ಪೂರ್ವಾಗ್ರಹವೂ ಇಲ್ಲದೇ ಮುಖಾಮುಖಿಯಾಗಿಸಿ, ಸತ್ಯವನ್ನು ಒರೆಗೆ ಹಚ್ಚುವುದು. ಹಾಗಿದ್ದೂ, ಸತ್ಯ ಅಸ್ಪಷ್ಟ ಎಂದು ಅನಿಸಿದರೆ, ಸ್ಪಷ್ಟವಾಗುವ ವರೆಗೆ ತಾಳ್ಮೆ ವಹಿಸುವುದು ಮತ್ತು ಆ ವರೆಗೆ ಯಾವ ರಾಜಕಾರಣಿಯೂ ಈ ಮಸೀದಿ ವಿಷಯದಲ್ಲಿ ತಲೆ ಹಾಕದಂತೆ ಧರ್ಮ-ರಾಜಕೀಯ ಬೇಧ ಮರೆತು ಗಟ್ಟಿ ಧ್ವನಿಯಲ್ಲಿ ಹೇಳುವುದು. ಇನ್ನೊಬ್ಬರ ಹಕ್ಕನ್ನು ಕಬಳಿಸಬಾರದು ಎಂಬ ಸಾರ್ವಕಾಲಿಕ ಮೌಲ್ಯಕ್ಕೆ ಬದ್ಧವಾಗುವೆವು ಎಂದು ಪ್ರತಿಜ್ಞೆ ಮಾಡುವುದು.

ಉಡುಪಿ ತಾಲೂಕಿನ ಕೊಡವೂರು ಗ್ರಾಮದ 67 ಸೆಂಟ್ಸ್ ವಿಸ್ತೀರ್ಣದ ಜಮೀನಿನಲ್ಲಿ ಕಲ್ಮತ್ ಜುಮಾ ಮಸೀದಿಯಿದೆ. ಇದಕ್ಕೆ 150 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಇದರ ಕಾರ್ಯ ನಿರ್ವಹಣೆಗಾಗಿ ಸ್ವಾತಂತ್ರ‍್ಯ ಪೂರ್ವದಿಂದಲೂ ಸರ್ಕಾರದಿಂದ ತಸ್ದೀಕ್ ಬರುತ್ತಿದೆ ಎಂಬುದಕ್ಕೆ ದಾಖಲೆಗಳಿವೆ. ಅಲ್ಲದೇ, 1993ರಲ್ಲೇ  ಈ ಮಸೀದಿ ಮತ್ತು ಅದರ ಆಸ್ತಿಯು ವಕ್ಫ್ ಮಂಡಳಿಯಲ್ಲಿ ನೋಂದಾವಣೆಯಾಗಿದೆ. ಅಲ್ಲದೇ, 2020ರಲ್ಲಿ ಗಝಟೆಡ್ ನೋಟಿಫಿಕೇಶನ್ ಕೂಡ ಆಗಿದೆ. ಹಾಗಂತ,

ಈ ಕಲ್ಮತ್ ಜುಮಾ ಮಸೀದಿಯ ಬಗ್ಗೆ ಯಾವ ತಗಾದೆಯೂ ಇರಲಿಲ್ಲ ಎಂದಲ್ಲ. 2008ರಲ್ಲಿ ಈ ಮಸೀದಿಯ ಜಮೀನಿನಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕಬ್ಬಿಣದ ಶೆಡ್ ನಿರ್ಮಿಸಿದ್ದು ಮತ್ತು ಅಂದಿನ ಉಡುಪಿ ಜಿಲ್ಲಾಧಿಕಾರಿಯು ಆ ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸಿ, ನ್ಯಾಯಾಲಯದ ತೀರ್ಪು ಬರುವವರೆಗೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ನಿರ್ದೇಶಿಸಿದ್ದು ಕೂಡಾ ನಡೆದಿದೆ. ಈ ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ ಮತ್ತು ಅಂತಿಮ ತೀರ್ಪು ಇನ್ನೂ ಬಂದಿಲ್ಲ. ಈ ನಡುವೆಯೇ ಕೆಲವು ದಿಢೀರ್ ಬೆಳವಣಿಗೆಗಳು ನಡೆದಿದ್ದು, ಮಸೀದಿಯ ಸ್ಥಿರಾಸ್ತಿಯ ಪಹಣಿ ಪತ್ರದಿಂದ ಮಸೀದಿಯ ಹೆಸರನ್ನು ಕಿತ್ತು ಹಾಕಿ ಅದು ಸರಕಾರಿ ಜಮೀನು ಎಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ವಕ್ಫ್ ಮಂಡಳಿಯಲ್ಲಿ ನೋಂದಾವಣೆಯಾದ ಮಸೀದಿ ಮತ್ತು ಅದರ ಭೂಮಿಯ ಮೇಲೆ ಸರಕಾರ ಹೀಗೆ ಏಕಾಏಕಿ ಮಧ್ಯಪ್ರವೇಶಿಸಿರುವುದು ಮತ್ತು ನ್ಯಾಯಾಲಯದ ತೀರ್ಪು ಬರುವವರೆಗೆ ಕಾಯುವಷ್ಟು ಸಹನೆ ಇಲ್ಲದಿರುವುದು ನಾಗರಿಕರಲ್ಲಿ ಅಚ್ಚರಿ ಮೂಡಿಸಿದೆ. ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಾದ ವಿವಾದದಲ್ಲಿ ಕಂದಾಯ ಇಲಾಖೆ ದಿಢೀರ್ ಮಧ್ಯಪ್ರವೇಶಿಸಿರುವುದೇಕೆ ಎಂಬ ಅನುಮಾನ ನಾಗರಿಕರಲ್ಲಿದೆ. ಅಲ್ಲದೇ ಸ್ಥಳೀಯ ಬಿಜೆಪಿ ಶಾಸಕ ಮತ್ತು ಅವರ ಬೆಂಬಲಿಗರ ಭಾರೀ ಮುತುವರ್ಜಿಯೂ ಇದರ ಹಿಂದಿದೆ. ಬಾಹ್ಯನೋಟಕ್ಕೆ ಈಗಿನ ಜಿಲ್ಲಾಧಿಕಾರಿಗಳ ಟಿಪ್ಪಣಿಯನ್ನು ಈ ಎಲ್ಲ ಬೆಳವಣಿಗೆಗೆ ಆಧಾರವಾಗಿ ತೋರಿಸಲಾಗುತ್ತಿದ್ದರೂ ಈ ಎಲ್ಲವುಗಳ ಹಿಂದೆ ರಾಜಕೀಯದ ದಟ್ಟ ಪ್ರಭಾವ ಇರುವುದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ಆದ್ದರಿಂದಲೇ,

ಉಡುಪಿಯಲ್ಲಿ ಈ ಬಗ್ಗೆ ಒಂದಕ್ಕಿಂತ  ಹೆಚ್ಚು ಪ್ರತಿಭಟನೆಗಳು ನಡೆದಿವೆ. ಪತ್ರಿಕಾಗೋಷ್ಠಿ ನಡೆದಿದೆ. ಮಸೀದಿಯ ಜಮೀನನ್ನು ಸರಕಾರ ಪಹಣಿ ಪತ್ರದಲ್ಲಿ ತಿದ್ದಿ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂಬುದಕ್ಕೆ ಆಧಾರವಾಗಿ ದಾಖಲೆಗಳನ್ನು ಬಿಡುಗಡೆಗೊಳಿಸಲಾಗಿದೆ. ಮುಸ್ಲಿಮರು ಮಾತ್ರವಲ್ಲ, ಮುಸ್ಲಿಮೇತರರೂ ಸರಕಾರದ ಈ ನಡೆಯನ್ನು ವಿರೋಧಿಸಿದ್ದಾರೆ. ಅಂದಹಾಗೆ,

ಈ ದೇಶದ ಮುಸ್ಲಿಮರು, ಅವರ ಮಸೀದಿಗಳು, ಅವರ ಧಾರ್ಮಿಕ ರೀತಿ-ರಿವಾಜು, ಕಟ್ಟಳೆಗಳೆಲ್ಲ ಬಿಜೆಪಿಯ ಪಾಲಿಗೆ ಚಿನ್ನದ ಮೊಟ್ಟೆಗಳಾಗಿ ಪರಿವರ್ತಿತವಾಗಿ ಕೆಲವು ವರ್ಷಗಳೇ ಕಳೆದಿವೆ. ನಿಜವಾಗಿ, ಅಭಿವೃದ್ಧಿ ರಾಜಕಾರಣಕ್ಕಿಂತ ಧರ್ಮ ರಾಜಕಾರಣ ಬಹಳ ಸುಲಭ. ಈ ಧರ್ಮ ರಾಜಕಾರಣದಲ್ಲೂ ಬಹುಸಂಖ್ಯಾತ ಧರ್ಮ ರಾಜಕಾರಣ ಅತ್ಯಂತ ಲಾಭದಾಯಕ. ಧರ್ಮ ಅಮಲಲ್ಲ ಮತ್ತು ಅಪಾಯಕಾರಿಯೂ ಅಲ್ಲ. ಆದರೆ ಅದನ್ನು ಅಮಲಾಗಿ ಮತ್ತು ಅಪಾಯಕಾರಿಯಾಗಿ ಪರಿವರ್ತಿಸುವುದಕ್ಕೆ ಅವಕಾಶಗಳಿವೆ. ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವ ಹೆಸರಲ್ಲಿ ಅವರಲ್ಲಿರುವ ಸಾತ್ವಿಕ ಗುಣವನ್ನು ಪ್ರಚೋದಿಸಿ, ಇತರರ ವಿರುದ್ಧ ಆಕ್ರೋಶವಾಗಿ ಪರಿವರ್ತಿಸುವುದು ರಾಜಕೀಯ ತಂತ್ರಗಾರಿಕೆ. ನ್ಯಾಯವೋ ಅನ್ಯಾಯವೋ ಯಾವುದೇ ಸ್ಥಿತಿಯಲ್ಲೂ ಬಹುಸಂಖ್ಯಾತರ ಪರ ನಿಲ್ಲುವುದರಿಂದ ಯಶಸ್ಸು ಶತಸಿದ್ಧ ಎಂಬುದನ್ನು ತಿಳಿದುಕೊಂಡು ಈ ಸೂತ್ರವನ್ನು ಯಾವ ಪಾಪ ಪ್ರಜ್ಞೆಯೂ ಇಲ್ಲದೇ ಬಳಸಿಕೊಳ್ಳಲು ಮುಂದಾಗುವ ರಾಜಕಾರಣಿ- ರಕ್ತದ ರುಚಿ ಹತ್ತಿದ ಹುಲಿಯಂತೆ. ಇವರು ಸಮಾಜದ ಪಾಲಿಗೆ ಅತ್ಯಂತ ಅಪಾಯಕಾರಿ. ಅಷ್ಟಕ್ಕೂ,

ಬಾಹ್ಯನೋಟಕ್ಕೆ ಈ ರಾಜಕಾರಣಿಗಳು ಬಹುಸಂಖ್ಯಾತರ ಪರ ಎಂದು ಅನಿಸಿದರೂ ಇದು ಸಂಪೂರ್ಣ ನಿಜ ಅಲ್ಲ. ರಾಜಕೀಯ ಯಶಸ್ಸಿಗಾಗಿ ಅವರು ಆ ವೇಶವನ್ನು ಹಾಕಿಕೊಳ್ಳುತ್ತಾರೆ. ಅವರ ಅಂತಿಮ ಗುರಿ ರಾಜಕೀಯ ಯಶಸ್ಸೇ ಹೊರತು ಸಾರ್ವಜನಿಕ ಕಾಳಜಿಯಲ್ಲ. ಯಾವಾಗ ಇದೇ ಜನರು ಅವರನ್ನು ಪ್ರಶ್ನಿಸತೊಡಗುತ್ತಾರೋ ಮತ್ತು ಅವರ ಬದಲು ಇನ್ನೊಬ್ಬರನ್ನು ಆಯ್ಕೆ ಮಾಡುತ್ತಾರೋ ಆಗ ಅವರು ಅದೇ ಜನರ ಪರಮ ವಿರೋಧಿಗಳಾಗಿಯೂ ಮಾರ್ಪಡುತ್ತಾರೆ. ಧರ್ಮ ರಾಜಕಾರಣದ ದುರಂತ ಮುಖ ಇದು. ಆದ್ದರಿಂದಲೇ,

ನಾಗರಿಕ ವಿವೇಚನೆಗೆ ಅತ್ಯಂತ ಪ್ರಾಮುಖ್ಯತೆ ಲಭ್ಯವಾಗುವುದು. ರಾಜಕಾರಣಿಗಳು ನೆಲದಲ್ಲಿ ನಡೆಯುವುದು ಕಡಿಮೆ. ಕಾರು, ಹೆಲಿಕಾಪ್ಟರ್, ವಿಮಾನಗಳಲ್ಲಿ ಊರಿಂದೂರಿಗೆ ಸಾಗುತ್ತಾ, ರಾಜಕೀಯ ಲಾಭವಾಗುವ ಕಡೆ ದಿಢೀರನೆ ಪ್ರತ್ಯಕ್ಷರಾಗುತ್ತಾ, ನಾಲ್ಕು ಪ್ರಚೋದನಕಾರಿ ಹೇಳಿಕೆಗಳನ್ನು ಕೊಟ್ಟು ಮಾಯವಾಗುವವರು. ಆದರೆ ನಾಗರಿಕರು ಹಾಗಲ್ಲ. ರಾಜಕಾರಣಿ ಬಂದ ಮೇಲೂ ಹೋದ ಮೇಲೂ ಇರುವಲ್ಲೇ  ಇದ್ದು ಬದುಕಬೇಕಾದವರು ಅವರು. ಅವರ ಊರಿನ ಪರಿಸ್ಥಿತಿ ಕೆಟ್ಟರೆ ಅದು ರಾಜಕಾರಣಿಯ ಪಾಲಿಗೆ ಯಾವ ತೊಂದರೆಯನ್ನೂ ಕೊಡುವುದಿಲ್ಲ. ಅವರು ಎಲ್ಲೋ  ಇದ್ದು ಆರಾಮವಾಗಿರುತ್ತಾರೆ. ಆದರೆ, ಕೆಟ್ಟ ಪರಿಸ್ಥಿತಿಯ ಫಲಿತಾಂಶವನ್ನು ಅನುಭವಿಸಬೇಕಾದವರು ಸ್ಥಳೀಯರು. ಈ ಸತ್ಯ ನಾಗರಿಕ ಪ್ರಜ್ಞೆಯನ್ನು ಯಾವಾಗ ಎಚ್ಚರಿಸುತ್ತೋ ಆವಾಗ ನಾಡು ಸುರಕ್ಷಿತವಾಗಿರುತ್ತದೆ. ನಿಜವಾಗಿ,

ಕಲ್ಮತ್ ಜುಮಾ ಮಸೀದಿ ಎಂಬುದು ಕೊಡವೂರು ಗ್ರಾಮವೆಂಬ ಪುಟ್ಟ ಊರಿನಲ್ಲಿರುವ ಆರಾಧನಾ ಕೇಂದ್ರ. ಈ ಆರಾಧನಾ ಕೇಂದ್ರದ ಸುತ್ತ ಸುತ್ತಿಕೊಂಡಿರುವ ವಿವಾದ ಏನೇ ಇರಲಿ, ಅದು ಆ ಊರಿನ ನಾಗರಿಕರು ಮತ್ತು ನ್ಯಾಯಾಲಯಕ್ಕೆ ಸಂಬಂಧಿಸಿದ್ದು. ಮಾತುಕತೆಯಲ್ಲಿ ಬಗೆಹರಿಯದ ವಿವಾದವನ್ನು ಬಗೆಹರಿಸುವುದಕ್ಕೆಂದೇ ನ್ಯಾಯಾಲಯವಿದೆ. ರಾಜಕಾರಣಿ ನ್ಯಾಯಾಧೀಶನಲ್ಲ. ಯಾವಾಗ ಆತ ನ್ಯಾಯಾಧೀಶನ ಪಾತ್ರ ನಿಭಾಯಿಸಲು ಹೊರಡುತ್ತಾನೋ ಆಗ ನ್ಯಾಯ ಸಾವಿಗೀಡಾಗುತ್ತದೆ. ಅನ್ಯಾಯ ಮೆರೆದಾಡುತ್ತದೆ. ಸದ್ಯದ ಅಗತ್ಯ ಏನೆಂದರೆ, ಕಲ್ಮತ್ ಜುಮಾ ಮಸೀದಿಯ ವಿವಾದವನ್ನು ನ್ಯಾಯಾಲಯಕ್ಕೆ ಬಿಟ್ಟು ಕೊಡುವುದು ಮತ್ತು ಅದು ಕೇವಲ ಕೊಡವೂರು ಗ್ರಾಮದ ನಾಗರಿಕರ ನಡುವಿನ ಜಮೀನು ವಿವಾದವಾಗಿಯಷ್ಟೇ ಗುರುತಿಸಿಕೊಳ್ಳುವುದು. ಕೊಡವೂರಿನ ಬೇಲಿ ದಾಟಿ ಈ ವಿವಾದ ಹೊರ ಹೋಗುವುದರಿಂದ ಅಪಾಯ ಹೆಚ್ಚು. ಹಾಗೇನಾದರೂ ಆದರೆ, ಸಮಾಜ ಘಾತುಕ ಶಕ್ತಿಗಳು ಈ ವಿವಾದವನ್ನು ತಮ್ಮ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು. ರಾಜಕಾರಣಿಗಳು ಮಧ್ಯಪ್ರವೇಶಿಸಿ ಸತ್ಯ ನಾಶ ಮಾಡಬಹುದು. ಅದರಿಂದಾಗಿ ಕೊಡವೂರು ನಾಗರಿಕರು ನಿತ್ಯ ನೆಮ್ಮದಿಯನ್ನು ಕಳೆದುಕೊಂಡು ಬದುಕಬೇಕಾದ ಸ್ಥಿತಿ ಎದುರಾಗಬಹುದು. ಈಗಾಗಲೇ ಇಂಥ ಸ್ಥಿತಿ ದೇಶದ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿದೆ. ಕೇಸುಗಳನ್ನು ಜಡಿಸಿಕೊಳ್ಳುವವರು ಸ್ಥಳೀಯರು. ಕೋರ್ಟು-ಕಚೇರಿಯೆಂದು ಅಲೆಯ ಬೇಕಾದವರು ಸ್ಥಳೀಯರು. ವಿವಾದಕ್ಕೆ ಬೆಂಕಿ ಕೊಟ್ಟು ಆ ಬೆಂಕಿಯನ್ನು ಊರೆಲ್ಲಾ ಹರಡುವವರು ಆ ಬಳಿಕ ಎಲ್ಲೋ ದೂರದಲ್ಲಿ ಹಾಯಾಗಿರುತ್ತಾರೆ. ಆದ್ದರಿಂದ, 

ನಾಗರಿಕರು ಎಚ್ಚರಿಕೆಯಿಂದ ಇರಬೇಕು. ವಿವೇಚನೆಯಿಂದ ವರ್ತಿಸಬೇಕು. ಪ್ರಕರಣ ನ್ಯಾಯಾಲಯದಲ್ಲಿರುತ್ತಾ ಪಹಣಿ ಪತ್ರದಲ್ಲಿ ಮಾಡಲಾಗಿರುವ ಬದಲಾವಣೆಯನ್ನು ನ್ಯಾಯದ ತಕ್ಕಡಿಯಲ್ಲಿಟ್ಟು ತೂಗಬೇಕು. ಮಸೀದಿಯಾಗಲಿ, ಮಂದಿರವಾಗಲಿ ನ್ಯಾಯಕ್ಕಿಂತ ಮೇಲಲ್ಲ. ನ್ಯಾಯ ಯಾವುದರ ಪರ ಇದೆಯೋ ಅದನ್ನು ಒಪ್ಪುವ ಹಾಗೂ ಈ ಸತ್ಯವನ್ನು ಒಪ್ಪದೇ ತೋಳ್ಬಲವನ್ನೇ ನ್ಯಾಯ ಎಂದು ಪ್ರತಿಪಾದಿಸುವವರನ್ನು ಪ್ರಶ್ನಿಸುವ ಛಾತಿಯನ್ನು ನಾಗರಿಕರು ತೋರಬೇಕು. ಇದು ಸಾಧ್ಯವಾದ ದಿನ ಈ ದೇಶದ ಮಸೀದಿ ಮತ್ತು ಮಂದಿರಗಳ ವಿಷಯದಲ್ಲಿ ಯಾವ ರಾಜಕಾರಣಿಯೂ ತಲೆ ಹಾಕುವುದಿಲ್ಲ.

x