Tuesday 6 July 2021

ಉಡುಪಿ ಕಲ್ಮತ್ ಮಸೀದಿ: ಏನಾಗಬಾರದು?

 


ಸನ್ಮಾರ್ಗ ಸಂಪಾದಕೀಯ 


ಉಡುಪಿ ಜಿಲ್ಲೆಯಲ್ಲಿ ಮಸೀದಿಯೊಂದನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಲಾಗಿದೆ. ಹಾಗಂತ,

ಈ ಮಸೀದಿಯನ್ನು ಅಪರಾಧಿ ಎಂದು ಯಾರು ಹೇಳಬೇಕಿತ್ತೋ ಅವರು ಹೇಳಿಲ್ಲ. ಯಾವುದು ಹೇಳಬೇಕಿತ್ತೋ ಅದೂ ಹೇಳಿಲ್ಲ. ಆದರೆ ಸಂಕಲನ-ವ್ಯವಕಲನದಲ್ಲಿ ನಿಪುಣರಾದ ರಾಜಕಾರಣಿಗಳು ಈ ಮಸೀದಿಯ ಸುತ್ತ ಭಾವುಕ ಚಿತ್ರಕತೆಯೊಂದನ್ನು ಹೆಣೆದು ಸಾರ್ವಜನಿಕರಿಗೆ ಹಂಚುತ್ತಿದ್ದಾರೆ. ಸದ್ಯದ ಅಗತ್ಯ ಏನೆಂದರೆ, ಸಾರ್ವಜನಿಕರು ವಿವೇಚನೆಯಿಂದ ನಡೆದುಕೊಳ್ಳುವುದು. ರಾಜಕಾರಣ ಪ್ರಣೀತ ಕತೆ ಮತ್ತು ವಾಸ್ತವವನ್ನು ಯಾವ ಪೂರ್ವಾಗ್ರಹವೂ ಇಲ್ಲದೇ ಮುಖಾಮುಖಿಯಾಗಿಸಿ, ಸತ್ಯವನ್ನು ಒರೆಗೆ ಹಚ್ಚುವುದು. ಹಾಗಿದ್ದೂ, ಸತ್ಯ ಅಸ್ಪಷ್ಟ ಎಂದು ಅನಿಸಿದರೆ, ಸ್ಪಷ್ಟವಾಗುವ ವರೆಗೆ ತಾಳ್ಮೆ ವಹಿಸುವುದು ಮತ್ತು ಆ ವರೆಗೆ ಯಾವ ರಾಜಕಾರಣಿಯೂ ಈ ಮಸೀದಿ ವಿಷಯದಲ್ಲಿ ತಲೆ ಹಾಕದಂತೆ ಧರ್ಮ-ರಾಜಕೀಯ ಬೇಧ ಮರೆತು ಗಟ್ಟಿ ಧ್ವನಿಯಲ್ಲಿ ಹೇಳುವುದು. ಇನ್ನೊಬ್ಬರ ಹಕ್ಕನ್ನು ಕಬಳಿಸಬಾರದು ಎಂಬ ಸಾರ್ವಕಾಲಿಕ ಮೌಲ್ಯಕ್ಕೆ ಬದ್ಧವಾಗುವೆವು ಎಂದು ಪ್ರತಿಜ್ಞೆ ಮಾಡುವುದು.

ಉಡುಪಿ ತಾಲೂಕಿನ ಕೊಡವೂರು ಗ್ರಾಮದ 67 ಸೆಂಟ್ಸ್ ವಿಸ್ತೀರ್ಣದ ಜಮೀನಿನಲ್ಲಿ ಕಲ್ಮತ್ ಜುಮಾ ಮಸೀದಿಯಿದೆ. ಇದಕ್ಕೆ 150 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಇದರ ಕಾರ್ಯ ನಿರ್ವಹಣೆಗಾಗಿ ಸ್ವಾತಂತ್ರ‍್ಯ ಪೂರ್ವದಿಂದಲೂ ಸರ್ಕಾರದಿಂದ ತಸ್ದೀಕ್ ಬರುತ್ತಿದೆ ಎಂಬುದಕ್ಕೆ ದಾಖಲೆಗಳಿವೆ. ಅಲ್ಲದೇ, 1993ರಲ್ಲೇ  ಈ ಮಸೀದಿ ಮತ್ತು ಅದರ ಆಸ್ತಿಯು ವಕ್ಫ್ ಮಂಡಳಿಯಲ್ಲಿ ನೋಂದಾವಣೆಯಾಗಿದೆ. ಅಲ್ಲದೇ, 2020ರಲ್ಲಿ ಗಝಟೆಡ್ ನೋಟಿಫಿಕೇಶನ್ ಕೂಡ ಆಗಿದೆ. ಹಾಗಂತ,

ಈ ಕಲ್ಮತ್ ಜುಮಾ ಮಸೀದಿಯ ಬಗ್ಗೆ ಯಾವ ತಗಾದೆಯೂ ಇರಲಿಲ್ಲ ಎಂದಲ್ಲ. 2008ರಲ್ಲಿ ಈ ಮಸೀದಿಯ ಜಮೀನಿನಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕಬ್ಬಿಣದ ಶೆಡ್ ನಿರ್ಮಿಸಿದ್ದು ಮತ್ತು ಅಂದಿನ ಉಡುಪಿ ಜಿಲ್ಲಾಧಿಕಾರಿಯು ಆ ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸಿ, ನ್ಯಾಯಾಲಯದ ತೀರ್ಪು ಬರುವವರೆಗೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ನಿರ್ದೇಶಿಸಿದ್ದು ಕೂಡಾ ನಡೆದಿದೆ. ಈ ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ ಮತ್ತು ಅಂತಿಮ ತೀರ್ಪು ಇನ್ನೂ ಬಂದಿಲ್ಲ. ಈ ನಡುವೆಯೇ ಕೆಲವು ದಿಢೀರ್ ಬೆಳವಣಿಗೆಗಳು ನಡೆದಿದ್ದು, ಮಸೀದಿಯ ಸ್ಥಿರಾಸ್ತಿಯ ಪಹಣಿ ಪತ್ರದಿಂದ ಮಸೀದಿಯ ಹೆಸರನ್ನು ಕಿತ್ತು ಹಾಕಿ ಅದು ಸರಕಾರಿ ಜಮೀನು ಎಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ವಕ್ಫ್ ಮಂಡಳಿಯಲ್ಲಿ ನೋಂದಾವಣೆಯಾದ ಮಸೀದಿ ಮತ್ತು ಅದರ ಭೂಮಿಯ ಮೇಲೆ ಸರಕಾರ ಹೀಗೆ ಏಕಾಏಕಿ ಮಧ್ಯಪ್ರವೇಶಿಸಿರುವುದು ಮತ್ತು ನ್ಯಾಯಾಲಯದ ತೀರ್ಪು ಬರುವವರೆಗೆ ಕಾಯುವಷ್ಟು ಸಹನೆ ಇಲ್ಲದಿರುವುದು ನಾಗರಿಕರಲ್ಲಿ ಅಚ್ಚರಿ ಮೂಡಿಸಿದೆ. ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಾದ ವಿವಾದದಲ್ಲಿ ಕಂದಾಯ ಇಲಾಖೆ ದಿಢೀರ್ ಮಧ್ಯಪ್ರವೇಶಿಸಿರುವುದೇಕೆ ಎಂಬ ಅನುಮಾನ ನಾಗರಿಕರಲ್ಲಿದೆ. ಅಲ್ಲದೇ ಸ್ಥಳೀಯ ಬಿಜೆಪಿ ಶಾಸಕ ಮತ್ತು ಅವರ ಬೆಂಬಲಿಗರ ಭಾರೀ ಮುತುವರ್ಜಿಯೂ ಇದರ ಹಿಂದಿದೆ. ಬಾಹ್ಯನೋಟಕ್ಕೆ ಈಗಿನ ಜಿಲ್ಲಾಧಿಕಾರಿಗಳ ಟಿಪ್ಪಣಿಯನ್ನು ಈ ಎಲ್ಲ ಬೆಳವಣಿಗೆಗೆ ಆಧಾರವಾಗಿ ತೋರಿಸಲಾಗುತ್ತಿದ್ದರೂ ಈ ಎಲ್ಲವುಗಳ ಹಿಂದೆ ರಾಜಕೀಯದ ದಟ್ಟ ಪ್ರಭಾವ ಇರುವುದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ಆದ್ದರಿಂದಲೇ,

ಉಡುಪಿಯಲ್ಲಿ ಈ ಬಗ್ಗೆ ಒಂದಕ್ಕಿಂತ  ಹೆಚ್ಚು ಪ್ರತಿಭಟನೆಗಳು ನಡೆದಿವೆ. ಪತ್ರಿಕಾಗೋಷ್ಠಿ ನಡೆದಿದೆ. ಮಸೀದಿಯ ಜಮೀನನ್ನು ಸರಕಾರ ಪಹಣಿ ಪತ್ರದಲ್ಲಿ ತಿದ್ದಿ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂಬುದಕ್ಕೆ ಆಧಾರವಾಗಿ ದಾಖಲೆಗಳನ್ನು ಬಿಡುಗಡೆಗೊಳಿಸಲಾಗಿದೆ. ಮುಸ್ಲಿಮರು ಮಾತ್ರವಲ್ಲ, ಮುಸ್ಲಿಮೇತರರೂ ಸರಕಾರದ ಈ ನಡೆಯನ್ನು ವಿರೋಧಿಸಿದ್ದಾರೆ. ಅಂದಹಾಗೆ,

ಈ ದೇಶದ ಮುಸ್ಲಿಮರು, ಅವರ ಮಸೀದಿಗಳು, ಅವರ ಧಾರ್ಮಿಕ ರೀತಿ-ರಿವಾಜು, ಕಟ್ಟಳೆಗಳೆಲ್ಲ ಬಿಜೆಪಿಯ ಪಾಲಿಗೆ ಚಿನ್ನದ ಮೊಟ್ಟೆಗಳಾಗಿ ಪರಿವರ್ತಿತವಾಗಿ ಕೆಲವು ವರ್ಷಗಳೇ ಕಳೆದಿವೆ. ನಿಜವಾಗಿ, ಅಭಿವೃದ್ಧಿ ರಾಜಕಾರಣಕ್ಕಿಂತ ಧರ್ಮ ರಾಜಕಾರಣ ಬಹಳ ಸುಲಭ. ಈ ಧರ್ಮ ರಾಜಕಾರಣದಲ್ಲೂ ಬಹುಸಂಖ್ಯಾತ ಧರ್ಮ ರಾಜಕಾರಣ ಅತ್ಯಂತ ಲಾಭದಾಯಕ. ಧರ್ಮ ಅಮಲಲ್ಲ ಮತ್ತು ಅಪಾಯಕಾರಿಯೂ ಅಲ್ಲ. ಆದರೆ ಅದನ್ನು ಅಮಲಾಗಿ ಮತ್ತು ಅಪಾಯಕಾರಿಯಾಗಿ ಪರಿವರ್ತಿಸುವುದಕ್ಕೆ ಅವಕಾಶಗಳಿವೆ. ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವ ಹೆಸರಲ್ಲಿ ಅವರಲ್ಲಿರುವ ಸಾತ್ವಿಕ ಗುಣವನ್ನು ಪ್ರಚೋದಿಸಿ, ಇತರರ ವಿರುದ್ಧ ಆಕ್ರೋಶವಾಗಿ ಪರಿವರ್ತಿಸುವುದು ರಾಜಕೀಯ ತಂತ್ರಗಾರಿಕೆ. ನ್ಯಾಯವೋ ಅನ್ಯಾಯವೋ ಯಾವುದೇ ಸ್ಥಿತಿಯಲ್ಲೂ ಬಹುಸಂಖ್ಯಾತರ ಪರ ನಿಲ್ಲುವುದರಿಂದ ಯಶಸ್ಸು ಶತಸಿದ್ಧ ಎಂಬುದನ್ನು ತಿಳಿದುಕೊಂಡು ಈ ಸೂತ್ರವನ್ನು ಯಾವ ಪಾಪ ಪ್ರಜ್ಞೆಯೂ ಇಲ್ಲದೇ ಬಳಸಿಕೊಳ್ಳಲು ಮುಂದಾಗುವ ರಾಜಕಾರಣಿ- ರಕ್ತದ ರುಚಿ ಹತ್ತಿದ ಹುಲಿಯಂತೆ. ಇವರು ಸಮಾಜದ ಪಾಲಿಗೆ ಅತ್ಯಂತ ಅಪಾಯಕಾರಿ. ಅಷ್ಟಕ್ಕೂ,

ಬಾಹ್ಯನೋಟಕ್ಕೆ ಈ ರಾಜಕಾರಣಿಗಳು ಬಹುಸಂಖ್ಯಾತರ ಪರ ಎಂದು ಅನಿಸಿದರೂ ಇದು ಸಂಪೂರ್ಣ ನಿಜ ಅಲ್ಲ. ರಾಜಕೀಯ ಯಶಸ್ಸಿಗಾಗಿ ಅವರು ಆ ವೇಶವನ್ನು ಹಾಕಿಕೊಳ್ಳುತ್ತಾರೆ. ಅವರ ಅಂತಿಮ ಗುರಿ ರಾಜಕೀಯ ಯಶಸ್ಸೇ ಹೊರತು ಸಾರ್ವಜನಿಕ ಕಾಳಜಿಯಲ್ಲ. ಯಾವಾಗ ಇದೇ ಜನರು ಅವರನ್ನು ಪ್ರಶ್ನಿಸತೊಡಗುತ್ತಾರೋ ಮತ್ತು ಅವರ ಬದಲು ಇನ್ನೊಬ್ಬರನ್ನು ಆಯ್ಕೆ ಮಾಡುತ್ತಾರೋ ಆಗ ಅವರು ಅದೇ ಜನರ ಪರಮ ವಿರೋಧಿಗಳಾಗಿಯೂ ಮಾರ್ಪಡುತ್ತಾರೆ. ಧರ್ಮ ರಾಜಕಾರಣದ ದುರಂತ ಮುಖ ಇದು. ಆದ್ದರಿಂದಲೇ,

ನಾಗರಿಕ ವಿವೇಚನೆಗೆ ಅತ್ಯಂತ ಪ್ರಾಮುಖ್ಯತೆ ಲಭ್ಯವಾಗುವುದು. ರಾಜಕಾರಣಿಗಳು ನೆಲದಲ್ಲಿ ನಡೆಯುವುದು ಕಡಿಮೆ. ಕಾರು, ಹೆಲಿಕಾಪ್ಟರ್, ವಿಮಾನಗಳಲ್ಲಿ ಊರಿಂದೂರಿಗೆ ಸಾಗುತ್ತಾ, ರಾಜಕೀಯ ಲಾಭವಾಗುವ ಕಡೆ ದಿಢೀರನೆ ಪ್ರತ್ಯಕ್ಷರಾಗುತ್ತಾ, ನಾಲ್ಕು ಪ್ರಚೋದನಕಾರಿ ಹೇಳಿಕೆಗಳನ್ನು ಕೊಟ್ಟು ಮಾಯವಾಗುವವರು. ಆದರೆ ನಾಗರಿಕರು ಹಾಗಲ್ಲ. ರಾಜಕಾರಣಿ ಬಂದ ಮೇಲೂ ಹೋದ ಮೇಲೂ ಇರುವಲ್ಲೇ  ಇದ್ದು ಬದುಕಬೇಕಾದವರು ಅವರು. ಅವರ ಊರಿನ ಪರಿಸ್ಥಿತಿ ಕೆಟ್ಟರೆ ಅದು ರಾಜಕಾರಣಿಯ ಪಾಲಿಗೆ ಯಾವ ತೊಂದರೆಯನ್ನೂ ಕೊಡುವುದಿಲ್ಲ. ಅವರು ಎಲ್ಲೋ  ಇದ್ದು ಆರಾಮವಾಗಿರುತ್ತಾರೆ. ಆದರೆ, ಕೆಟ್ಟ ಪರಿಸ್ಥಿತಿಯ ಫಲಿತಾಂಶವನ್ನು ಅನುಭವಿಸಬೇಕಾದವರು ಸ್ಥಳೀಯರು. ಈ ಸತ್ಯ ನಾಗರಿಕ ಪ್ರಜ್ಞೆಯನ್ನು ಯಾವಾಗ ಎಚ್ಚರಿಸುತ್ತೋ ಆವಾಗ ನಾಡು ಸುರಕ್ಷಿತವಾಗಿರುತ್ತದೆ. ನಿಜವಾಗಿ,

ಕಲ್ಮತ್ ಜುಮಾ ಮಸೀದಿ ಎಂಬುದು ಕೊಡವೂರು ಗ್ರಾಮವೆಂಬ ಪುಟ್ಟ ಊರಿನಲ್ಲಿರುವ ಆರಾಧನಾ ಕೇಂದ್ರ. ಈ ಆರಾಧನಾ ಕೇಂದ್ರದ ಸುತ್ತ ಸುತ್ತಿಕೊಂಡಿರುವ ವಿವಾದ ಏನೇ ಇರಲಿ, ಅದು ಆ ಊರಿನ ನಾಗರಿಕರು ಮತ್ತು ನ್ಯಾಯಾಲಯಕ್ಕೆ ಸಂಬಂಧಿಸಿದ್ದು. ಮಾತುಕತೆಯಲ್ಲಿ ಬಗೆಹರಿಯದ ವಿವಾದವನ್ನು ಬಗೆಹರಿಸುವುದಕ್ಕೆಂದೇ ನ್ಯಾಯಾಲಯವಿದೆ. ರಾಜಕಾರಣಿ ನ್ಯಾಯಾಧೀಶನಲ್ಲ. ಯಾವಾಗ ಆತ ನ್ಯಾಯಾಧೀಶನ ಪಾತ್ರ ನಿಭಾಯಿಸಲು ಹೊರಡುತ್ತಾನೋ ಆಗ ನ್ಯಾಯ ಸಾವಿಗೀಡಾಗುತ್ತದೆ. ಅನ್ಯಾಯ ಮೆರೆದಾಡುತ್ತದೆ. ಸದ್ಯದ ಅಗತ್ಯ ಏನೆಂದರೆ, ಕಲ್ಮತ್ ಜುಮಾ ಮಸೀದಿಯ ವಿವಾದವನ್ನು ನ್ಯಾಯಾಲಯಕ್ಕೆ ಬಿಟ್ಟು ಕೊಡುವುದು ಮತ್ತು ಅದು ಕೇವಲ ಕೊಡವೂರು ಗ್ರಾಮದ ನಾಗರಿಕರ ನಡುವಿನ ಜಮೀನು ವಿವಾದವಾಗಿಯಷ್ಟೇ ಗುರುತಿಸಿಕೊಳ್ಳುವುದು. ಕೊಡವೂರಿನ ಬೇಲಿ ದಾಟಿ ಈ ವಿವಾದ ಹೊರ ಹೋಗುವುದರಿಂದ ಅಪಾಯ ಹೆಚ್ಚು. ಹಾಗೇನಾದರೂ ಆದರೆ, ಸಮಾಜ ಘಾತುಕ ಶಕ್ತಿಗಳು ಈ ವಿವಾದವನ್ನು ತಮ್ಮ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು. ರಾಜಕಾರಣಿಗಳು ಮಧ್ಯಪ್ರವೇಶಿಸಿ ಸತ್ಯ ನಾಶ ಮಾಡಬಹುದು. ಅದರಿಂದಾಗಿ ಕೊಡವೂರು ನಾಗರಿಕರು ನಿತ್ಯ ನೆಮ್ಮದಿಯನ್ನು ಕಳೆದುಕೊಂಡು ಬದುಕಬೇಕಾದ ಸ್ಥಿತಿ ಎದುರಾಗಬಹುದು. ಈಗಾಗಲೇ ಇಂಥ ಸ್ಥಿತಿ ದೇಶದ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿದೆ. ಕೇಸುಗಳನ್ನು ಜಡಿಸಿಕೊಳ್ಳುವವರು ಸ್ಥಳೀಯರು. ಕೋರ್ಟು-ಕಚೇರಿಯೆಂದು ಅಲೆಯ ಬೇಕಾದವರು ಸ್ಥಳೀಯರು. ವಿವಾದಕ್ಕೆ ಬೆಂಕಿ ಕೊಟ್ಟು ಆ ಬೆಂಕಿಯನ್ನು ಊರೆಲ್ಲಾ ಹರಡುವವರು ಆ ಬಳಿಕ ಎಲ್ಲೋ ದೂರದಲ್ಲಿ ಹಾಯಾಗಿರುತ್ತಾರೆ. ಆದ್ದರಿಂದ, 

ನಾಗರಿಕರು ಎಚ್ಚರಿಕೆಯಿಂದ ಇರಬೇಕು. ವಿವೇಚನೆಯಿಂದ ವರ್ತಿಸಬೇಕು. ಪ್ರಕರಣ ನ್ಯಾಯಾಲಯದಲ್ಲಿರುತ್ತಾ ಪಹಣಿ ಪತ್ರದಲ್ಲಿ ಮಾಡಲಾಗಿರುವ ಬದಲಾವಣೆಯನ್ನು ನ್ಯಾಯದ ತಕ್ಕಡಿಯಲ್ಲಿಟ್ಟು ತೂಗಬೇಕು. ಮಸೀದಿಯಾಗಲಿ, ಮಂದಿರವಾಗಲಿ ನ್ಯಾಯಕ್ಕಿಂತ ಮೇಲಲ್ಲ. ನ್ಯಾಯ ಯಾವುದರ ಪರ ಇದೆಯೋ ಅದನ್ನು ಒಪ್ಪುವ ಹಾಗೂ ಈ ಸತ್ಯವನ್ನು ಒಪ್ಪದೇ ತೋಳ್ಬಲವನ್ನೇ ನ್ಯಾಯ ಎಂದು ಪ್ರತಿಪಾದಿಸುವವರನ್ನು ಪ್ರಶ್ನಿಸುವ ಛಾತಿಯನ್ನು ನಾಗರಿಕರು ತೋರಬೇಕು. ಇದು ಸಾಧ್ಯವಾದ ದಿನ ಈ ದೇಶದ ಮಸೀದಿ ಮತ್ತು ಮಂದಿರಗಳ ವಿಷಯದಲ್ಲಿ ಯಾವ ರಾಜಕಾರಣಿಯೂ ತಲೆ ಹಾಕುವುದಿಲ್ಲ.

x

No comments:

Post a Comment