Tuesday 27 September 2022

ಮುಟ್ಟಿಸಿಕೊಳ್ಳದ ಕಾಯಿಲೆಗೆ ಸಮಾನತೆಯ ಔಷಧ ನೀಡಿ ಯಶಸ್ವಿಯಾದ ಪ್ರವಾದಿ(ಸ)



ಕಾಳಾರಾಮ್ ದೇಗುಳ ಪ್ರವೇಶಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ನಡೆಸಿದ ಚಳುವಳಿ ಮತ್ತು ಚೌದಾಬಿ ಕೆರೆಯ ನೀರಿನ ಸ್ಪರ್ಶಕ್ಕಾಗಿ  ನಡೆಸಿದ ಆಂದೋಲನಕ್ಕೆ ದಶಕಗಳೇ ಕಳೆದಿದ್ದರೂ ಈ ದೇಶದ ಮಲಿನ ಮನಸ್ಸುಗಳು ಇನ್ನೂ ಶುದ್ಧವಾಗಿಲ್ಲ ಎಂಬುದಕ್ಕೆ ಪ್ರತಿದಿ ನವೆಂಬಂತೆ  ಸಾಕ್ಷ್ಯಗಳು ಲಭ್ಯವಾಗುತ್ತಲೇ ಇವೆ. 

ಕಳೆದವಾರ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರಹಳ್ಳಿಯ 10ನೇ  ತರಗತಿಯ ದಲಿತ ಬಾಲಕ ಚೇತನ್ ಇದಕ್ಕೆ ಹಸಿಹಸಿ ಸಾಕ್ಷ್ಯವನ್ನು ನೀಡಿದ. ಸೆಪ್ಟೆಂಬರ್ 8ರಂದು ರಾತ್ರಿ ಗ್ರಾಮ ದೇವತೆ ಬೂತ್ಯಾಮ್ಮ  ದೇವಿಯ ಉತ್ಸವದಲ್ಲಿ ದೇವರನ್ನು ಹೊತ್ತುಕೊಂಡು ಹೋಗುವಾಗ ಗುಜ್ಜುಕೋಲು ನೆಲಕ್ಕೆ ಬಿದ್ದಿದ್ದು, ಅದನ್ನು ಗಮನಿಸಿದ ಚೇತನ್,  ತಕ್ಷಣ ಆ ಕೋಲನ್ನು ಎತ್ತಿ ಕೊಟ್ಟಿದ್ದಾನೆ. ಆದರೆ ಮೇಲ್ಜಾತಿಯ ಮಂದಿ ಅದನ್ನು ಕಂಡು ಕೆಂಡವಾದರು. ನ್ಯಾಯ ಪಂಚಾಯಿತಿ ಸೇರಿದರು.  ಬೂತ್ಯಾಮ್ಮ ದೇವಿಗೆ ದಲಿತ ಬಾಲಕನಿಂದ ಮೈಲಿಗೆಯಾಗಿದೆ ಎಂಬ ತೀರ್ಮಾನಕ್ಕೆ ಬಂದರು. ಕೋಲು ಮುಟ್ಟಿ ದೇವಿಗೆ ಮೈಲಿಗೆ  ಮಾಡಿದ ಅಪರಾಧಕ್ಕಾಗಿ ಅಕ್ಟೋಬರ್ 1ರ ಒಳಗೆ 60 ಸಾವಿರ ರೂಪಾಯಿ ದಂಡ ಪಾವತಿಸಬೇಕು ಎಂದು ಫರ್ಮಾನು  ಹೊರಡಿಸಿದರು. ತಪ್ಪಿದರೆ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದರು. ವಿಷಾದ ಏನೆಂದರೆ,

ದಂಡದ ಮೊತ್ತವನ್ನು ಸಂಗ್ರಹಿಸಲು ಚೇತನ್‌ನ ತಾಯಿ ಇದ್ದ ಬದ್ದ ಪ್ರಯತ್ನವನ್ನೆಲ್ಲ ಮಾಡಿದ್ದಾರೆ. ಮನೆಗೆಲಸ ಮಾಡಿ ದಿನದನ್ನ ಉಣ್ಣುವ  ಈ ತಾಯಿ, ಸವರ್ಣೀಯರ ಈ ನ್ಯಾಯ ಪಂಚಾತಿಕೆಗೆ ಬೆದರಿದ್ದಾರೆ. ಬಹಿಷ್ಕಾರ ಹಾಕಿದರೆ ಏನು ಮಾಡುವುದು ಎಂಬ ಭೀತಿಗೆ  ಒಳಗಾಗಿದ್ದಾರೆ. ಪೊಲೀಸರಿಗೆ ದೂರು ಕೊಡುವ ಬದಲು ದಂಡದ ಮೊತ್ತವನ್ನು 5 ಸಾವಿರಕ್ಕೆ ಇಳಿಸಿ ಎಂದು ಸವರ್ಣೀಯರ ಮುಂದೆ  ಅಂಗಲಾಚಿದ್ದಾರೆ. ಆದರೆ, ಅವರ ಮನಸ್ಸು ಕರಗಿಲ್ಲ. ಸೆ. 8ರಂದು ನಡೆದ ಈ ಘಟನೆ 12 ದಿನಗಳ ಬಳಿಕ ಪೊಲೀಸು ಠಾಣೆಯ  ಮೆಟ್ಟಿಲೇರಿದೆ ಎಂಬುದೇ ಆ ತಾಯಿ ಎದುರಿಸಿರಬಹುದಾದ ಮಾನಸಿಕ ಮತ್ತು ಬಾಹ್ಯ ಒತ್ತಡಕ್ಕೆ ಕನ್ನಡಿ ಹಿಡಿಯುತ್ತದೆ. ಅದೂ  ಅಂಬೇಡ್ಕರ್ ಸೇವಾ ಸಮಿತಿಯ ಗಮನಕ್ಕೆ ಈ ಘಟನೆ ಬಾರದೇ ಇರುತ್ತಿದ್ದರೆ, ಇವತ್ತಿಗೂ ಆ ತಾಯಿ ಒಳಗೊಳಗೇ ಕರಗುತ್ತಾ  ಕಾಣೆಯಾಗುತ್ತಿದ್ದರೋ ಏನೋ? ಸೇವಾ ಸಮಿತಿ ತಕ್ಷಣ ಕಾರ್ಯಪ್ರವೃತ್ತವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತದೆ. ಆ  ಬಳಿಕ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಗೀಡಾಗುತ್ತದೆ. ಅಷ್ಟಕ್ಕೂ,

ಆರೋಪಿಗಳಾರೂ ಕಾನೂನು, ಕಾಯ್ದೆ, ಸಂವಿಧಾನದ ಗಂಧಗಾಳಿ ಇಲ್ಲದವರಲ್ಲ. ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ನಾರಾಯಣ  ಸ್ವಾಮಿ ಕೂಡಾ 8 ಮಂದಿ ಆರೋಪಿಗಳಲ್ಲಿ ಓರ್ವ. ಅರ್ಚಕ ಮೋಹನ್ ರಾವ್ ಕೂಡಾ ಆರೋಪಿಗಳಲ್ಲಿ ಓರ್ವ. ಅಂದಹಾಗೆ,

ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಕೆಲವು ಒಳ್ಳೆಯ ಬೆಳವಣಿಗೆಗಳಾಗಿವೆ. ವಿವಿಧ ಸಂಘಟನೆಗಳಿಂದ  ‘ಮುಳ್ಳೇರ ಹಳ್ಳಿ ಚಲೋ’ ಎಂಬ  ಹೆಸರಿನಲ್ಲಿ ಬೃಹತ್ ಜಾಥಾ ನಡೆದಿದೆ. ಸುಮಾರು 3 ಸಾವಿರಕ್ಕಿಂತಲೂ ಅಧಿಕ ಮಂದಿ ಈ ಜಾಥಾದಲ್ಲಿ ಭಾಗಿಯಾದರಲ್ಲದೇ, ದಲಿತ  ಸಂಘಟನೆಯ ಸದಸ್ಯರು ಭೂತ್ಯಾಮ್ಮ ದೇವಿಯ ಮಂದಿರದ ಎದುರು ಧರಣಿ ನಡೆಸಿದರು. ಬಳಿಕ ದೇಗುಲದಿಂದ ಗುಜ್ಜಕೋಲು  ಹೊರತಂದರು ಮತ್ತು ದೇಗುಲದ ಮೇಲೆ ಧ್ವಜ ಕಟ್ಟಿದರು. ಇದೇವೇಳೆ, ಸರ್ಕಾರ ಕೂಡಾ ಸಕಾರಾತ್ಮಕವಾಗಿಯೇ ಸ್ಪಂದಿಸಿತು. ಅರಣ್ಯ  ಇಲಾಖೆಗೆ ಸೇರಿದ ಜಾಗದಲ್ಲಿ ಮನೆ ಮಾಡಿಕೊಂಡಿರುವ ಈ ಸಂತ್ರಸ್ತ ಕುಟುಂಬಕ್ಕೆ ಜಿಲ್ಲಾಡಳಿತ ತಕ್ಷಣವೇ ಹಕ್ಕು ಪತ್ರ ನೀಡಿ ಧೈರ್ಯ  ತುಂಬಿತು. ಜಿಲ್ಲಾಧಿಕಾರಿ ವೆಂಕಟರಾಜು ಅವರು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 25 ಸಾವಿರ ರೂಪಾಯಿ ಪರಿಹಾರ  ವಿತರಿಸಿದರು. ಸಂಸದ ಮುನಿಸ್ವಾಮಿ 50 ಸಾವಿರ ರೂಪಾಯಿಯ ಚೆಕ್ ನೀಡಿದರು. ನಿಜವಾಗಿ,

ಈ ಬಾಲಕ ಚೇತನ್ ಅಥವಾ ಅವನ ತಾಯಿ ಶೋಭಾ- ಅಸ್ಪೃಶ್ಯ ಆಚರಣೆಗೆ ಒಳಗಾದವರಲ್ಲಿ ಮೊದಲಿಗರಲ್ಲ. 43 ವರ್ಷಗಳ ಹಿಂದೆ  ಇದೇ ಗ್ರಾಮದ ಪಕ್ಕದ ಹುಣಸಿಕೋಟೆಯಲ್ಲಿ ಇಂಥದ್ದೇ  ಪ್ರಕರಣ ನಡೆದಿತ್ತು. ಆಗ ವಿಧಾನಸೌಧ ಚಲೋ ರ‍್ಯಾಲಿ ನಡೆಸಿ ಸಾರ್ವಜನಿಕ  ಗಮನ ಸೆಳೆಯಲಾಗಿತ್ತು. ಆದರೆ, ಮಲಿನ ಮನಸ್ಸುಗಳು ಇನ್ನು ಉಳಿದುಕೊಂಡಿವೆ. ಈ ದೇಶದಲ್ಲಿ 9,315ರಷ್ಟು ಜಾತಿಗಳಿವೆ ಎಂಬ ವರ ದಿಯಿದೆ. ಅದರಲ್ಲೂ 1,600ರಷ್ಟು ಉಪಜಾತಿಗಳು ಪರಿಶಿಷ್ಟರಲ್ಲೇ  ಇವೆ. ಪರಿಶಿಷ್ಟರೊಳಗಿನ ಈ ಉಪಜಾತಿಗಳಲ್ಲೂ ಮೇಲು ಮತ್ತು ಕೀಳು  ಜಾತಿಗಳಿವೆ. ಇದೊಂದು ಸಾಮಾಜಿಕ ಪಿಡುಗು. ಇದು ಧರ್ಮದ ಪೋಷಾಕು ತೊಟ್ಟಿರುವುದರಿಂದ ಸಂತ್ರಸ್ತರಲ್ಲಿ ಪ್ರಶ್ನೆ ಮಾಡುವ  ಧೈರ್ಯವೂ ಕಡಿಮೆ. ಮೇಲು-ಕೀಳು ಎಂಬುದು ಧಾರ್ಮಿಕ ಕಟ್ಟಳೆಯಾಗಿದ್ದು, ಅದನ್ನು ಉಲ್ಲಂಘಿಸುವುದು ಅಪರಾಧ ಎಂಬ ಭಾವ  ಸಾರ್ವಜನಿಕರಲ್ಲಿದೆ. ದರೋಡೆ, ಹತ್ಯೆ, ಕಳ್ಳತನ, ಅತ್ಯಾಚಾರ, ವಂಚನೆ ಇತ್ಯಾದಿಗಳಂತೆ ಇಂಥ ಅಸ್ಪೃಶ್ಯ ಆಚರಣೆಗಳು ಅಪರಾಧವಾಗಿ  ಗುರುತಿಗೆ ಒಳಗಾಗಿಲ್ಲ. ಆದ್ದರಿಂದಲೇ,
ಈ ಉಳ್ಳೇರಹಳ್ಳಿ ಪ್ರಕರಣ ಕೂಡ ಬೆಳಕಿಗೆ ಬರಲು 12 ದಿನಗಳನ್ನೇ ತೆಗೆದುಕೊಂಡಿತು. ಸಾಮಾನ್ಯವಾಗಿ,

 ಇಂಥ ಹೆಚ್ಚಿನ ಪ್ರಕರಣಗಳು  ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದೂ ಇಲ್ಲ. ರಾಜಿ ಸಂಧಾನದಲ್ಲೇ  ಹೆಚ್ಚಿನವು ಕೊನೆಗೊಳ್ಳುತ್ತದೆ. ಸಂತ್ರಸ್ತರು ಬಹುತೇಕ ಬಡ ಜ ನರೇ ಆಗಿರುವುದರಿಂದ ಮತ್ತು ತಾರತಮ್ಯ ಮಾಡುವವರು ಪ್ರಬಲರು ಮತ್ತು ಪ್ರಭಾವಿಗಳಾಗಿರುವುದರಿಂದ ಅವರನ್ನು ಎದುರಿಸಿಕೊಂಡು  ಊರಲ್ಲಿ ಬದುಕುವುದಕ್ಕೆ ಇಂಥ ದುರ್ಬಲ ಕುಟುಂಬಗಳಿಗೆ ಸಾಧ್ಯವಿರುವುದಿಲ್ಲ. ಆದ್ದರಿಂದ, ಅವರು ಎಲ್ಲ ತಾರತಮ್ಯವನ್ನು ಅವುಡುಗಚ್ಚಿ  ಸಹಿಸಿಕೊಂಡು ಬದುಕಬೇಕಾಗುತ್ತದೆ. ಊರಿನ ವಾತಾವರಣ ಹದಗೆಡುವುದು ಬೇಡ ಎಂದು ಹೇಳಿ ಕಾನೂನು ಪಾಲಿಸಬೇಕಾದವರೇ  ಸಂತ್ರಸ್ತರನ್ನು ಸುಮ್ಮನಾಗಿಸುವುದೂ ಇದೆ. ಈ ಮೂಲಕ ತಾರತಮ್ಯಕ್ಕೆ ಒಳಗಾಗುವುದಷ್ಟೇ ಅಲ್ಲ, ಊರ ಗೌರವವನ್ನು ಕಾಪಾಡುವ  ಹೊಣೆಗಾರಿಕೆಯನ್ನೂ ಈ ಸಂತ್ರಸ್ತರ ಮೇಲೆಯೇ ಹೊರಿಸಲಾಗುತ್ತದೆ. ಅಂದಹಾಗೆ,

ದೇಶ ದಲಿತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ 2022 ಜುಲೈಯಲ್ಲಿ ಕೇಂದ್ರ ಗೃಹ ಇಲಾಖೆಯ ಸಹಾಯಕ ಸಚಿವ ಅಜಯ್  ಕುಮಾರ್ ಮಿಶ್ರಾ ಅವರು ಲೋಕಸಭೆಯ ಮುಂದಿಟ್ಟ ಅಂಕಿಅAಶಗಳೇ ಧಾರಾಳ ಸಾಕು. ಪರಿಶಿಷ್ಟ ಜಾತಿಗೆ ಸೇರಿದವರ ಮೇಲೆ  2018ರಲ್ಲಿ 42,793 ಹಲ್ಲೆ  ಪ್ರಕರಣಗಳು ದಾಖಲಾಗಿದ್ದರೆ, 2020ರಲ್ಲಿ ಆ ಸಂಖ್ಯೆ 50 ಸಾವಿರವನ್ನೂ ಮೀರಿದೆ. ಅದೇವೇಳೆ, ಪರಿಶಿಷ್ಟ  ಪಂಗಡಗಳ ಮೇಲೆ 2018ರಲ್ಲಿ 6,528ರಷ್ಟು ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದರೆ, 2020ರಲ್ಲಿ ಅದು 8,272ಕ್ಕೆ ಏರಿದೆ. ಈ  ವಿವರಗಳ ಪ್ರಕಾರ, ಪರಿಶಿಷ್ಟ ಜಾತಿಯ ಮಂದಿಯ ಮೇಲೆ ಈ ದೇಶದಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ದೌರ್ಜನ್ಯ ನಡೆಯುತ್ತಿದೆ. ಪರಿಶಿಷ್ಟ  ಪಂಗಡಗಳ ಮೇಲಿನ ಹಲ್ಲೆಯಲ್ಲೂ ಏರಿಕೆಯಾಗುತ್ತಲೇ ಇವೆ. ಹಾಗಂತ, ಇವೆಲ್ಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾದ ಅಧಿಕೃತ  ಪ್ರಕರಣಗಳು ಅಷ್ಟೇ. ಇನ್ನು, ರಾಜಿ ಸಂಧಾನದಲ್ಲಿ ಮುಗಿಯುವ, ದಂಡ ಪಾವತಿಸಿ ಕೊನೆಗೊಳ್ಳುವ ಮತ್ತು ದೌರ್ಜನ್ಯಕ್ಕೆ ಒಳಗಾದರೂ  ಪೊಲೀಸರಿಗೆ ದೂರು ಕೊಡದೇ ಸತ್ತು ಹೋಗುವ ಪ್ರಕರಣಗಳನ್ನು ಪರಿಗಣಿಸಿದರೆ ಪ್ರತಿ ಸೆಕೆಂಡಿಗೊಂದು  ದೌರ್ಜನ್ಯ ಮತ್ತು ತಾರತಮ್ಯದ  ಲೆಕ್ಕ ಸಿಗಬಹುದೇ ಏನೋ?

ದೇಶ ಸ್ವತಂತ್ರಗೊಂಡು  75 ವರ್ಷಗಳಾದ ಬಳಿಕದ ಸ್ಥಿತಿ ಇದು. ನಿಜವಾಗಿ, ಇದು ಜನರ ಮನಸ್ಸಿನ ಕಾಯಿಲೆ. ಕೇವಲ ಕಾನೂನೊಂದೇ  ಈ ಕಾಯಿಲೆಗೆ ಔಷಧವಾಗಲು ಸಾಧ್ಯವಿಲ್ಲ. ಈಗ ಆಗಬೇಕಾಗಿರುವುದು ಮನಸ್ಸಿಗೆ ಔಷಧ ಕೊಡುವ ಪ್ರಯತ್ನ. ಮಾನವರೆಲ್ಲರೂ ಸಮಾ ನರು ಎಂಬ ಭಾವವನ್ನು ಪ್ರಾಯೋಗಿಕವಾಗಿ ಜಾರಿಗೆ ತರುವುದಕ್ಕೆ ಎಲ್ಲ ಮಠ-ಮಂದಿರಗಳೂ ಸ್ವಾಮೀಜಿ-ಧರ್ಮಗುರುಗಳೂ ಸಂಕಲ್ಪ  ಮಾಡಬೇಕು. ಹಾಗಂತ, ಇಂಥ ಪರಿವರ್ತನೆ ರಾತ್ರಿ-ಬೆಳಗಾಗುವುದರೊಳಗೆ ಸಾಧ್ಯವಾಗುವಂಥದ್ದಲ್ಲ. ಆದರೆ ಅಸಾಧ್ಯವೂ ಅಲ್ಲ. ಪ್ರವಾದಿ  ಮುಹಮ್ಮದರು ಕೇವಲ 23 ವರ್ಷಗಳೊಳಗೆ ಇಂಥದ್ದೊಂದು ಕ್ರಾಂತಿಯನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದ್ದಾರೆ. ಸಮಾಜದ  ಎಲ್ಲರನ್ನೂ ಮನುಷ್ಯರು ಮತ್ತು ಒಂದೇ ತಂದೆ-ತಾಯಿಯ ಮಕ್ಕಳು ಎಂಬ ಪಟ್ಟಿಗೆ ಸೇರಿಸಿ ಎಲ್ಲರೊಂದಿಗೆ ಬೆರೆಯುವ, ಎಲ್ಲರೊಂದಿಗೆ  ವಿವಾಹ ಸಂಬಂಧ  ಏರ್ಪಡಿಸುವ, ಜೊತೆಗೇ ಊಟ ಮಾಡುವ, ಒಟ್ಟಿಗೆ ಮಸೀದಿಯಲ್ಲಿ ಅಂತರವಿಲ್ಲದೇ ಪ್ರಾರ್ಥನೆಗೆ ನಿಲ್ಲುವ ಮತ್ತು  ನಮಾಝï‌ಗೆ ನೇತೃತ್ವ ನೀಡುವಲ್ಲಿಂದ ಹಿಡಿದು ಮಸೀದಿ ಧರ್ಮ ಗುರುವಾಗುವ ವರೆಗೆ ಎಲ್ಲವನ್ನೂ ಎಲ್ಲರಿಗೂ ಮುಕ್ತವಾಗಿಸಿ ಸಮಾನತೆಯನ್ನು ಸಾಧ್ಯವಾಗಿಸಿದ್ದಾರೆ. ಅಂದಹಾಗೆ,

ಅಸಮಾನತೆಯೇ ಮೈವೆತ್ತ ಮಕ್ಕಾದ ಸಾಮಾಜಿಕ ಬದುಕಿನಲ್ಲಿ ಅವರು ತಂದ ಪರಿವರ್ತನೆ ಭಾರತದ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ  ಅಧ್ಯಯನಯೋಗ್ಯ.

Thursday 22 September 2022

ಆಸಕ್ತಿ ಕಳಕೊಂಡ ಪೆನ್ನು-ಕ್ಯಾಮರಾಗಳಿಗೆ ಪಾಠ ಮಾಡಿದ ಪಿಯುಸಿಎಲ್




ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಮ್ ಕೋರ್ಟ್ನಲ್ಲಿ ವಾದ-ಪ್ರತಿವಾದಗಳು ನಡೆಯು ತ್ತಿರುವುದರ ನಡುವೆಯೇ ಪ್ರಮುಖ  ಸರಕಾರೇತರ ಸಂಸ್ಥೆಯಾದ ಪಿಯುಸಿಎಲ್ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್) ಅಧ್ಯಯನ ವರದಿಯೊಂದನ್ನು  ಬಿಡುಗಡೆಗೊಳಿಸಿದೆ. 

2021 ಡಿಸೆಂಬರ್ ಕೊನೆಯಲ್ಲಿ ಉಡುಪಿಯ ಹೆಣ್ಣು ಮಕ್ಕಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾದ  ಈ ಹಿಜಾಬ್ ಪ್ರಕರಣವು 2022 ಫೆಬ್ರವರಿ 5ರಂದು ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಮೂಲಕ  ಬಿಗಡಾಯಿಸಿತು. ಉಡುಪಿಯ 6 ಮಂದಿ ವಿದ್ಯಾರ್ಥಿನಿ ಯರಿಗೆ ಸೀಮಿತವಾಗಿದ್ದ ಹಿಜಾಬ್ ಪ್ರಕರಣವು ರಾಜ್ಯವ್ಯಾಪಿಗೊಳ್ಳುವುದನ್ನು ರಾಜ್ಯ  ಸರ್ಕಾರ ಬಯಸಿತ್ತೇ ಎಂಬ ಅನುಮಾನವನ್ನು ಫೆಬ್ರವರಿ 5ರಂದು ಹೊರಡಿಸಿದ ಸುತ್ತೋಲೆ ಮತ್ತು ಅದಕ್ಕಿಂತ ಮೊದಲು ನಡೆದ ವಿವಿಧ  ಬೆಳವಣಿಗೆಗಳು ಹುಟ್ಟು ಹಾಕಿದ್ದುವು. ಅಂದಹಾಗೆ,

ಉಡುಪಿಯ ವಿದ್ಯಾರ್ಥಿನಿಯರು ಮತ್ತು ಆಡಳಿತ ಮಂಡಳಿಯ ನಡುವಿನ ತೀರಾ ಸ್ಥಳೀಯ ಎಂಬAಥ ಪ್ರಕರಣವೊಂದು ರಾಜ್ಯವ್ಯಾಪಿ  ಶಾಲೆ-ಕಾಲೇಜುಗಳ ಸಮಸ್ಯೆಯಾಗಿ ವಿಸ್ತರಣೆಯಾದುದರಲ್ಲಿ ಯಾವ ಸಂಚೂ ಇಲ್ಲವೇ? ಈ ಪ್ರಕರಣ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ್ದು.  ಹೀಗಿದ್ದೂ ರಾಜ್ಯದ ಉಳಿದ ಕಾಲೇಜುಗಳಲ್ಲಿ ಗಂಡು ಮಕ್ಕಳು ಕೇಸರಿ ಶಾಲು ಧರಿಸಿ ಬಂದುದೇಕೆ? ಅವರಿಗೂ ಈ ಹಿಜಾಬ್‌ಗೂ ಏನು  ಸಂಬಂಧ? ಅವರೆಲ್ಲ ಸ್ವಯಂಪ್ರೇರಿತರಾಗಿ ಹೀಗೆ ಕೇಸರಿ ಶಾಲನ್ನು ಕುತ್ತಿಗೆಗೆ ಹಾಕಿಕೊಂಡರೇ ಅಥವಾ ಅದರ ಹಿಂದೆ ಷಡ್ಯಂತ್ರವೇ ನಾದರೂ ಇತ್ತೇ? ಇದ್ದರೆ ಆ ಷಡ್ಯಂತ್ರ ಹೆಣೆದವರು ಯಾರು, ಅವರ ಉದ್ದೇಶವೇನು? ಆವರೆಗೆ ಹಿಜಾಬ್ ಧರಿಸಿ ಬರುತ್ತಿದ್ದ  ವಿದ್ಯಾರ್ಥಿನಿಯರನ್ನು ಏಕಾಏಕಿ ತಡೆದು, ಗೇಟು ಮುಚ್ಚಿ ಹೊರ ಹಾಕಿರುವುದಕ್ಕೆ ಬರೇ ಪ್ರಾಂಶುಪಾಲರು ಮಾತ್ರ ಹೊಣೆಯೇ ಅಥವಾ  ಅವರನ್ನು ನಿರ್ಬಂಧಿಸಲಾಯಿತೇ, ವಿದ್ಯಾರ್ಥಿನಿಯರ ಶಿಕ್ಷಣಕ್ಕಿಂತ ರಾಜಕೀಯ ಲಾಭ-ನಷ್ಟಗಳಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿತೇ  ಎಂಬಿತ್ಯಾದಿ ಪ್ರಶ್ನೆಗಳು ಈ ಪ್ರಕರಣದ ಜೊತೆಜೊತೆಗೇ ಹುಟ್ಟಿಕೊಂಡವು. 2022 ಮಾರ್ಚ್ 25ರಂದು ರಾಜ್ಯ ಹೈಕೋರ್ಟ್ ಹಿಜಾಬ್  ನಿರ್ಬಂಧಿಸಿ ತೀರ್ಪು ನೀಡುವುದರೊಂದಿಗೆ ಆವರೆಗೆ ಹಿಜಾಬ್ ಧರಿಸಿ ಶಾಲೆ-ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರನ್ನು  ಆಯ್ಕೆಯ ಕಗ್ಗಂಟಿಗೆ ನೂಕಿತು. ನಿಜವಾಗಿ,

ಹಿಜಾಬ್‌ಗೂ ಮುಸ್ಲಿಮ್ ಹೆಣ್ಣು ಮಕ್ಕಳಿಗೂ ಬಾಲ್ಯದಿಂದಲೇ ನಂಟಿದೆ. ಮನೆಯ ಒಳಗೂ ಹೊರಗೂ ಹಿಜಾಬ್ ಅವರ ಸಂಗಾತಿ.  ಅಲ್ಲದೇ, ಹಿಜಾಬ್ ನಿರ್ಬಂಧಿಸಿ ಫೆಬ್ರವರಿ 5ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸುವ ಮುಂಚಿನ ದಿನದ ವರೆಗೂ ಹೆಣ್ಣು ಮಕ್ಕಳು  ಹಿಜಾಬ್ ಧರಿಸಿಯೇ ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದರು. ಬಹುತೇಕ ಯಾವ ಶಾಲಾ-ಕಾಲೇಜುಗಳಲ್ಲೂ ಅದಕ್ಕೆ ನಿರ್ಬಂಧ ಇರಲಿಲ್ಲ.  ಆದರೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಮತ್ತು ಮಾರ್ಚ್ 25ರಂದು ಈ ಆದೇಶವನ್ನು ಎತ್ತಿ ಹಿಡಿದು ರಾಜ್ಯ ಹೈಕೋರ್ಟ್  ನೀಡಿದ ತೀರ್ಪು- ಇವೆರಡೂ ಅವರ ಸಹಜ ಕಲಿಕಾ ಬದುಕನ್ನೇ ಅಲ್ಲೋಲ ಕಲ್ಲೋಲಗೊಳಿಸಿತು. ಒಂದೋ ಹಿಜಾಬ್ ಕಳಚಿಟ್ಟು  ಶಾಲಾ-ಕಾಲೇಜುಗಳಿಗೆ ತೆರಳಬೇಕು ಇಲ್ಲವೇ ಶಿಕ್ಷಣವನ್ನೇ ಕೊನೆಗೊಳಿಸಬೇಕು ಅಥವಾ ಹಿಜಾಬ್‌ಗೆ ಅನುಮತಿ ಇರುವ ಖಾಸಗಿ  ಶಾಲೆಗಳಿಗೆ ಸೇರ್ಪಡೆಗೊಳ್ಳಬೇಕು ಎಂಬ ಸೀಮಿತ ಆಯ್ಕೆಯನ್ನು ಅವರ ಮುಂದಿಟ್ಟಿತು. ಇದೊಂದು ರೀತಿಯಲ್ಲಿ ಕತ್ತಿಯ ಅಲುಗಿನ  ಮೇಲಿನ ನಡಿಗೆಯಂಥ ಸ್ಥಿತಿ. ಶಿಕ್ಷಣ ಬೇಕೆಂದರೆ ಕತ್ತಿಯ ಅಲುಗಿನ ಮೇಲೆ ನಡೆಯಲೇಬೇಕು ಮತ್ತು ಗಾಯವನ್ನು ಸಹಿಸಿಕೊಳ್ಳಲೇಬೇಕು  ಎಂಬ ಒತ್ತಡ ಸ್ಥಿತಿ. ಹಿಜಾಬನ್ನು ಕಳಚಿಡುವುದೆಂದರೆ, ಭಾವನಾತ್ಮಕವಾಗಿ ಆಳ ಇರಿತಕ್ಕೆ ಒಳಗಾಗುವುದೆಂದೇ ಅರ್ಥ. ಈ ಇರಿತವನ್ನು  ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದರೆ ಕತ್ತಿಯ ಅಲುಗಿನ ಮೇಲೆ ನಡೆಯಲೇಬಾರದು ಅಥವಾ ಶಿಕ್ಷಣವನ್ನು ಅರ್ಧದಲ್ಲೇ   ಮೊಟಕುಗೊಳಿಸಬೇಕು. ಆದರೆ,

ಮಾರ್ಚ್ 25ರ ಬಳಿಕ ಇಂಥದ್ದೊಂದು  ಇಕ್ಕಟ್ಟಿಗೆ ಸಿಲುಕಿದ ಹಿಜಾಬ್‌ಧಾರಿ ವಿದ್ಯಾರ್ಥಿನಿಯರು ಸದ್ಯ ಹೇಗಿದ್ದಾರೆ ಮತ್ತು ಅವರ ಶೈಕ್ಷಣಿಕ  ಬದುಕು ಏನಾಗಿದೆ ಎಂಬ ಅಧ್ಯಯನಾತ್ಮಕ ವರದಿ ಬಹುತೇಕ ಬಿಡುಗಡೆಯಾದದ್ದೇ  ಇಲ್ಲ. ಹಿಜಾಬ್ ಪ್ರಕರಣ ಕಾವೇರಿದ್ದ ಸಮಯದಲ್ಲಿ  ಚುರುಕಾಗಿದ್ದ ಮಾಧ್ಯಮ ಕ್ಯಾಮರಾ ಮತ್ತು ಪೆನ್ನುಗಳು ಮಾರ್ಚ್ 25ರ ಬಳಿಕ ನಿಧಾನಕ್ಕೆ ತಮ್ಮ ದಿಕ್ಕನ್ನು ಬದಲಿಸಿದುವು. ಹಿಜಾಬ್  ನಿರ್ಬಂಧಿಸಿ ಹೊರಡಿಸಲಾದ ತೀರ್ಪು ವಿದ್ಯಾರ್ಥಿನಿಯರ ಮೇಲೆ, ಅವರ ಶೈಕ್ಷಣಿಕ ಬದುಕಿನ ಮೇಲೆ ಯಾವ ಪರಿಣಾಮವನ್ನು ಬೀರಿದೆ  ಎಂಬ ಬಗ್ಗೆ ಕುತೂಹಲವನ್ನು ಉಳಿಸಿಕೊಳ್ಳಬೇಕಿದ್ದ ಮತ್ತು ವರದಿಯನ್ನು ತಯಾರಿಸಬೇಕಿದ್ದ ಮಾಧ್ಯಮಗಳು ಯಾಕೋ ಏನೋ  ಆಸಕ್ತಿಯನ್ನು ಕಳಕೊಂಡವು. ಇಂಥ ಅಸಮಾಧಾನಗಳ ಸಂದರ್ಭದಲ್ಲೇ  ಪಿಯುಸಿಎಲ್ ಮಧ್ಯಂತರ ವರದಿಯನ್ನು ಬಿಡುಗಡೆಗೊಳಿಸಿದೆ.  ಹಾಸನ ನಗರ, ಮಂಗಳೂರು ನಗರ, ಉಳ್ಳಾಲ, ಉಡುಪಿಯ ಹೂಡೆ, ಉಡುಪಿ ಪಟ್ಟಣ ಹಾಗೂ ರಾಯಚೂರು ಪಟ್ಟಣಗಳಲ್ಲಿ ಮೂರು  ತಿಂಗಳ ಕಾಲ ಅಧ್ಯಯನ ನಡೆಸಿದ ಐಶ್ವರ್ಯ ರವಿಕುಮಾರ್, ಕಿಶೋರ್ ಗೋವಿಂದ, ರಾಮದಾಸ್ ರಾವ್, ನ್ಯಾಯವಾದಿ ಪ್ರಕಾಶ್  ರವಿಶಂಕರ್, ಪಿಯುಸಿಎಲ್ ರಾಜ್ಯ ಜಂಟಿ ಕಾರ್ಯದರ್ಶಿ ಶಶಾಂಕ್ ಮತ್ತು ಪತ್ರಕರ್ತೆ ಸ್ವಾತಿ ಶುಕ್ಲಾ ಅವರಿದ್ದ ಅಧ್ಯಯನ ತಂಡವು ಕೆಲವು  ಮಹತ್ವಪೂರ್ಣ ಮಾಹಿತಿಗಳನ್ನು ಕಲೆ ಹಾಕಿದೆ. ಮುಖ್ಯವಾಗಿ ,

ವಿದ್ಯಾರ್ಥಿನಿಯರ ಹೊರತಾಗಿ ಕಾಲೇಜು ಆಡಳಿತ ಮಂಡಳಿ ಸದಸ್ಯರು,  ಸಂಬAಧಿತ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಮುಸ್ಲಿಮ್ ಜನಸಾಮಾನ್ಯರನ್ನು ಭೇಟಿಯಾಗಿ, ಅವರ  ಮಾತುಗಳಿಗೆ ಕಿವಿಯಾಗಿದೆ. ಮುಸ್ಲಿಮ್ ವಿದ್ಯಾರ್ಥಿನಿಯರ ಜೊತೆಗೆ ವಿದ್ಯಾರ್ಥಿಗಳೂ ಸಾಮಾಜಿಕ ಪ್ರತ್ಯೇಕತೆಯನ್ನು ಅನುಭವಿಸುತ್ತಿದ್ದು,  ಇತರ ಸಮುದಾಯದ ವಿದ್ಯಾರ್ಥಿಗಳ ಜೊತೆಗಿನ ಸ್ನೇಹ ಮತ್ತು ಸಂಪರ್ಕವನ್ನು ಕಳಕೊಳ್ಳುತ್ತಿದ್ದಾರೆ, ಹಾಗೆಯೇ ಈ ಸ್ಥಿತಿಯು ಅವರಲ್ಲಿ  ಖಿನ್ನತೆಯ ಭಾವವನ್ನು ಮೂಡಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಿಜಾಬ್ ಮತ್ತು ಶಿಕ್ಷಣವನ್ನು ಎರಡಾಗಿ  ವಿಭಜಿಸಿರುವುದನ್ನು ಕೃತಕ ಸೃಷ್ಟಿ ಎಂದಿರುವ ವರದಿಯು ಇದು ವಿದ್ಯಾರ್ಥಿನಿಯರ ಕನಸನ್ನೇ ಚಿವುಟಿ ಹಾಕಿದೆ ಮತ್ತು ಮುಸ್ಲಿಮ್  ವಿದ್ಯಾರ್ಥಿನಿಯರ ಶೈಕ್ಷಣಿಕ ಬದುಕನ್ನು ಮೊಟಕುಗೊಳ್ಳುವಂತೆ ಮಾಡಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಆದ್ದರಿಂದ, 

ಹಿಜಾಬನ್ನು  ನಿರ್ಬಂಧಿಸಿ ರಾಜ್ಯ ಸರ್ಕಾರ ಫೆಬ್ರವರಿ 5ರಂದು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಮತ್ತು ವಿದ್ಯಾರ್ಥಿನಿಯರು ಹಾಗೂ  ಅವರ ಕುಟುಂಬ ಅನುಭವಿಸಿರುವ ನಷ್ಟಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಪರಿಹಾರ ನೀಡುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ  ನಿರ್ದೇಶಿಸಬೇಕು ಎಂದೂ ಅಧ್ಯಯನ ತಂಡ ಅಭಿಪ್ರಾಯಪಟ್ಟಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಅಲ್ಪಸಂಖ್ಯಾತ  ಆಯೋಗವು ವಿದ್ಯಾರ್ಥಿನಿಯರ ಮೂಲಭೂತ ಹಕ್ಕುಗಳ ಉಲ್ಲಂಘನೆಗಾಗಿ ಕಾಲೇಜು ಪ್ರಾಂಶುಪಾಲರು ಮತ್ತು ಕಾಲೇಜು ಅಭಿವೃದ್ಧಿ  ಸಮಿತಿಗಳ ವಿರುದ್ಧ ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಬೇಕು ಹಾಗೂ ಈಗಿನ ಕಾಲೇಜು ಅಭಿವೃದ್ಧಿ ಮಂಡಳಿಯನ್ನು ರದ್ದು  ಮಾಡಿ, ಎಲ್ಲ ಸಮುದಾಯಗಳ ಸದಸ್ಯರು, ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ನಾಗರಿಕ ಸಮಾಜದ ಸದಸ್ಯರು ಮತ್ತು  ಮಹಿಳೆಯರೂ ಸೇರಿದಂತೆ ಎಲ್ಲರ ಪ್ರಾತಿನಿಧ್ಯವನ್ನು ಹೊಂದಿರುವ ಹೊಸ ಸಮಿತಿಯನ್ನು ರಚಿಸಬೇಕು ಎಂದೂ ವರದಿಯಲ್ಲಿ ಸಲಹೆ  ನೀಡಲಾಗಿದೆ. ಅಂದಹಾಗೆ,
ಇದು ಮಧ್ಯಂತರ ವರದಿಯಾಗಿದ್ದು, ಪೂರ್ಣ ಪ್ರಮಾಣದ ವರದಿಯಲ್ಲಿ ಇನ್ನಷ್ಟು ಮಾಹಿತಿ ಮತ್ತು ಸಲಹೆಗಳಿರಬಹುದಾದ ಸಾಧ್ಯತೆ  ಇದೆಯಾದರೂ, ಒಂದು ಗಂಭೀರ ಪ್ರಕರಣದ ಮೇಲೆ ಅಧ್ಯಯನ ನಡೆಸಲು ಮುಂದಾದ ಪಿಯುಸಿಎಲ್‌ಗೆ ಕೃತಜ್ಞತೆಯನ್ನು ಸಲ್ಲಿಸಬೇಕು.  ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುವ ಉದ್ದೇಶದಿಂದ 1976ರಲ್ಲಿ ಹುಟ್ಟಿಕೊಂಡ ಸಂಸ್ಥೆಯೊAದು ಇಷ್ಟು ದೀರ್ಘಾವಧಿಯ  ಬಳಿಕವೂ ತನ್ನ ಉದ್ದೇಶಿತ ನಿಲುವಿನಲ್ಲಿ ಅಚಲವಾಗಿದೆ ಎಂಬುದನ್ನು ಈ ಅಧ್ಯಯನ ಸಾಬೀತುಪಡಿಸಿದೆ. ಅಷ್ಟಕ್ಕೂ,

ಹಿಜಾಬ್- ಸರ್ಕಾರಕ್ಕೆ ಒಂದು ತುಂಡು ಬಟ್ಟೆಯಾಗಿ ಕಾಣಿಸಿರಬಹುದು ಮತ್ತು ಅದನ್ನು ವಿದ್ಯಾರ್ಥಿನಿಯರ ತಲೆಯಿಂದ ಕಳಚುವುದರಿಂದ  ರಾಜಕೀಯವಾಗಿ ಸಿಗುವ ಲಾಭವನ್ನು ಲೆಕ್ಕ ಹಾಕಿರಬಹುದು. ಆದರೆ ಮುಸ್ಲಿಮ್ ಸಮಾಜ ಎಂದೂ ಕೂಡ ಹಿಜಾಬನ್ನು ಒಂದು  ಬಟ್ಟೆಯಾಗಿ ಪರಿಗಣಿಸಿಲ್ಲ ಮತ್ತು ಅದನ್ನು ಧರಿಸದಂತೆ ನಿರ್ಬಂಧಿಸುವ ಸರ್ಕಾರ ಸುತ್ತೋಲೆಯನ್ನು ಇತರೆಲ್ಲ ಸುತ್ತೋಲೆಗಳಂತೆ  ಪರಿಗಣಿಸುವ ಸ್ಥಿತಿಯಲ್ಲೂ ಇಲ್ಲ. ಅಂದಹಾಗೆ, ‘ಯುನಿಫಾರ್ಮ್ ನ  ಭಾಗವಾಗಿ ವಿದ್ಯಾರ್ಥಿನಿಯರ ಕುತ್ತಿಗೆಯಲ್ಲಿರುವ ಶಾಲನ್ನು ತಲೆಗೆ  ಹಾಕಿಕೊಳ್ಳುವುದಕ್ಕೆ ಅಭ್ಯಂತರವಿಲ್ಲ..’ ಎಂಬ ಒಂದು ಗೆರೆಯ ಸುತ್ತೋಲೆಯನ್ನು ಹೊರಡಿಸುವುದರಿಂದ ಈ ಸರ್ಕಾರ  ಕಳಕೊಳ್ಳುವಂಥz್ದÉÃನೂ ಇರಲಿಲ್ಲ. ಆದರೆ ಸರ್ಕಾರ ಹಠಕ್ಕೆ ಬಿತ್ತು. ವಿದ್ಯಾರ್ಥಿನಿಯರ ಭವಿಷ್ಯಕ್ಕಿಂತ ತನ್ನ ಅಧಿಕಾರದ ಭವಿಷ್ಯಕ್ಕೆ ಆದ್ಯತೆ  ನೀಡಿತು. ಮಾತ್ರವಲ್ಲ, ಹಿಜಾಬನ್ನು ಹಿಂದೂ-ಮುಸ್ಲಿಮ್ ನಡುವಿನ ಸಮಸ್ಯೆ ಎಂಬAತೆ ಬಿಂಬಿಸಿ ಸಾಮಾಜಿಕ ವಿಭಜನೆಗೂ ವೇದಿಕೆ ಕ ಲ್ಪಿಸಿತು.

ಸುಪ್ರೀಮ್ ಕೋರ್ಟಿನ ತೀರ್ಪು ಏನೇ ಬರಲಿ, ಪಿಯುಸಿಎಲ್ ಪ್ರಯತ್ನ ಶ್ಲಾಘನೀಯ.

ಅಪರಾಧಿ `ಅಲ್ಲಾಹು’ ಆಗಿರುತ್ತಿದ್ದರೆ ಅವರಿಗೂ ಪರಿಹಾರ ಸಿಕ್ಕಿರುತ್ತಿತ್ತೋ ಏನೋ?




ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಪರಿಹಾರ ವಿತರಿಸಿರುವಂತೆ ಮೃತ ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೂ ರಾಜ್ಯ ಸರಕಾರ  ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ಮುಸ್ಲಿಮ್ ಐಕ್ಯತಾ ವೇದಿಕೆಯು ಕಳೆದವಾರ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ  ನಡೆಸುತ್ತಿದ್ದ ವೇಳೆಯಲ್ಲೇ , ರಾಜ್ಯ ಹೈಕೋರ್ಟ್ನಲ್ಲಿ ಅರ್ಜಿಯೊಂದರ ವಿಚಾರಣೆ ನಡೆಯುತ್ತಿತ್ತು. ಇದು ಕೂಡಾ ಪರಿಹಾರಕ್ಕೆ ಸಂಬಂಧಿಸಿದ ಪ್ರಕರಣ. ಕೊರೋನಾದಿಂದ ಸಾವಿಗೀಡಾದ ಸಾರಿಗೆ ನೌಕರರಿಗೆ ತಲಾ 30 ಲಕ್ಷ ರೂ. ಪರಿಹಾರ ನೀಡುವುದಾಗಿ 2021 ಫೆಬ್ರವರಿ  10ರಂದು ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಆದರೆ, ನುಡಿದಂತೆ ಸಾರಿಗೆ ಇಲಾಖೆ ನಡಕೊಂಡಿಲ್ಲ. 2020 ಮಾರ್ಚ್ನಿಂದ  2021 ಜೂನ್‌ವರೆಗೆ ರಾಜ್ಯದ 4 ಸಾರಿಗೆ ನಿಗಮಗಳಿಗೆ ಸೇರಿದ 351 ಮಂದಿ ನೌಕರರು ಕೊರೋನಾಕ್ಕೆ ಬಲಿಯಾಗಿದ್ದರೂ ಈವರೆಗೆ  ಬರೇ 11 ಮಂದಿ ನೌಕರರ ಕುಟುಂಬಗಳಿಗೆ ಮಾತ್ರವೇ ಪರಿಹಾರ ವಿತರಿಸಲಾಗಿದೆ ಎಂದು ಅರ್ಜಿದಾರರಾದ ತಾಹಿರ್ ಹುಸೈನ್ ಮತ್ತು  ಅಝೀಝï ಪಾಶಾ ಅವರು ಹೈಕೋರ್ಟ್ನಲ್ಲಿ ಅರಿಕೆ ಮಾಡಿಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್ ಪ್ರತಿವಾ ದಿಗಳಾದ ರಾಜ್ಯ ಸಾರಿಗೆ ಇಲಾಖೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ವಾಯುವ್ಯ ರಸ್ತೆ ಸಾರಿಗೆ ನಿಗಮಕ್ಕೆ ವಿವರ ಕೋರಿ  ನೋಟೀಸು ಜಾರಿ ಮಾಡಿದೆ. ಅಂದಹಾಗೆ,

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಒಂದು ವಾರದೊಳಗೆ 25 ಲಕ್ಷ ರೂಪಾಯಿ ಪರಿಹಾರ ವಿತರಿಸಿದ ರಾಜ್ಯ ಸರಕಾರ, ಮೃತ ಸಾರಿಗೆ  ನೌಕರರ ಕುಟುಂಬಕ್ಕೆ ಪರಿಹಾರ ವಿತರಣೆಯಾಗುವಂತೆ ನೋಡಿಕೊಳ್ಳುವುದಕ್ಕೆ ಯಾಕೆ ವಿಫಲವಾಗಿದೆ ಎಂಬ ಪ್ರಶ್ನೆಗೆ ಉತ್ತರ ಕಷ್ಟದ್ದೇನೂ  ಅಲ್ಲ. 2020 ಮಾರ್ಚ್ನಿಂದ 2021 ಜೂನ್ ವರೆಗಿನ ಅವಧಿಯಲ್ಲಿ 351 ಮಂದಿ ಸಾರಿಗೆ ನೌಕರರು ಕೊರೋನಾದಿಂದಾಗಿ ಮೃತ ಪಟ್ಟಿದ್ದಾರೆ ಎಂಬುದು, ಸರ್ಕಾರವೇ ಮಾಹಿತಿ ಹಕ್ಕು ಕಾಯ್ದೆಯಡಿ ಒದಗಿಸಿರುವ ವಿವರ. ಇಷ್ಟಿದ್ದೂ, ಈ ಒಂದು ವರ್ಷದ ಅವಧಿಯಲ್ಲಿ  ಬರೇ 11 ಮಂದಿಗೆ ಮಾತ್ರ ಪರಿಹಾರ ವಿತರಿಸಿ ಉಳಿದವರನ್ನು ನಿರ್ಲಕ್ಷಿಸಲು ಕಾರಣವೇನು? ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಒಂದೇ  ವಾರದಲ್ಲಿ ಪರಿಹಾರ ವಿತರಿಸಲು ಸಮರ್ಥವಾಗಿರುವ ಸರ್ಕಾರಕ್ಕೆ, ಮಸೂದ್ ಮತ್ತು ಫಾಝಿಲ್‌ಗೆ ಪರಿಹಾರ ವಿತರಿಸುವುದು ಬಿಡಿ, ಕ ನಿಷ್ಠ ಘೋಷಿಸಲೂ ಸಾಧ್ಯವಾಗಿಲ್ಲವೇಕೆ? ಪ್ರವೀಣ್ ನೆಟ್ಟಾರು ಮನೆಗೆ ಬಿಜೆಪಿಯ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು  ಮುಖ್ಯಮಂತ್ರಿ ವರೆಗೆ ಮತ್ತು ದ.ಕ. ಜಿಲ್ಲೆಗೆ ಸಂಬಂಧವೇ ಇಲ್ಲದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹರೂ ಸೇರಿ ಎಲ್ಲರೂ ಜಿದ್ದಿಗೆ  ಬಿದ್ದವರಂತೆ ಭೇಟಿ ಕೊಟ್ಟಿರುವಾಗ, ಅಲ್ಲೇ  ಪಕ್ಕದಲ್ಲಿರುವ ಮಸೂದ್ ಮನೆಗೆ ಮತ್ತು ಇದೇ ಪ್ರವೀಣ್ ನೆಟ್ಟಾರು ಮನೆಯಿಂದ 30  ಕಿಲೋಮೀಟರ್ ದೂರದಲ್ಲಿರುವ ಫಾಝಿಲ್ ಮನೆಗೆ ಇವರಲ್ಲಿ ಒಬ್ಬರೇ ಒಬ್ಬ ಜನಪ್ರತಿನಿಧಿ ಭೇಟಿ ಕೊಡದಿರುವುದಕ್ಕೆ ಕಾರಣಗಳೇನು?  ನಿಜವಾಗಿ,

ಸರಕಾರ, ಹೇಗೆ ಸಂತ್ರಸ್ತರಿಗೆ ವಿತರಿಸಬೇಕಾದ ಪರಿಹಾರದ ಮೊತ್ತದಲ್ಲೂ ರಾಜಕೀಯ ಲಾಭ-ನಷ್ಟವನ್ನು ಲೆಕ್ಕ ಹಾಕುತ್ತದೆ ಎಂಬುದಕ್ಕೆ  ಮೃತ ಸಾರಿಗೆ ನೌಕರರು ಮತ್ತು ಪ್ರವೀಣ್ ನೆಟ್ಟಾರು ಪ್ರಕರಣ ಉತ್ತರವನ್ನು ಹೇಳುತ್ತದೆ. ಸಾರಿಗೆ ನೌಕರರು ರಾಜಕೀಯ  ಕಾರ್ಯಕರ್ತರಲ್ಲ. ಅವರ ಸಾವು ಮತ್ತು ಉಳಿವು ಸರ್ಕಾರದ ವರ್ಚಸ್ಸಿನ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ.  ಅಲ್ಲದೇ, ಕೊರೋನಾದಿಂದಾಗುವ ಸಾವಿಗೆ ಸಾಮುದಾಯಿಕ ಭಾವನೆಗಳನ್ನು ಕೆರಳಿಸುವ ಸಾಮರ್ಥ್ಯ ಇಲ್ಲ. ಅಂಥ ಸಾವುಗಳನ್ನು  ವ್ಯಕ್ತಿಗತವಾಗಿ ನೋಡಲಾಗುತ್ತದೆಯಾದ್ದರಿಂದ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ವಿತರಿಸುವುದರಿಂದ ಸಾಮಾಜಿಕ ಭಾವನೆಯಲ್ಲಿ ಭಾರೀ  ಬದಲಾವಣೆ ತರಬಹುದಾದ ಸ್ಥಿತಿ ಇಲ್ಲ. ಹಾಗಂತ,

ಒಟ್ಟು 351 ಮಂದಿಯಲ್ಲಿ ಪರಿಹಾರ ಲಭಿಸಿದ 11 ಮಂದಿ ಮಾತ್ರ ಹಿಂದೂಗಳು, ಉಳಿದವರೆಲ್ಲ ಮಸೂದ್ ಮತ್ತು ಫಾಝಿಲ್  ಸಮುದಾಯಕ್ಕೆ ಸೇರಿದವರು ಎಂದು ಇದರರ್ಥವಲ್ಲ. ಮೃತಪಟ್ಟವರ ಪೈಕಿ ಶೇ. 99 ಮಂದಿ ಕೂಡ ಫಾಝಿಲ್ ಮತ್ತು ಮಸೂದ್ ಪ್ರತಿ ನಿಧಿಸುವ ಸಮುದಾಯಕ್ಕೆ ಸೇರಿದವರಲ್ಲ. ಒಂದುವೇಳೆ, ಹಿಂದೂಗಳ ಹಿತರಕ್ಷಣೆಯೇ ಬೊಮ್ಮಾಯಿ ಸರ್ಕಾರದ ಪರಮ ಗುರಿ  ಎಂದಾಗಿರುತ್ತಿದ್ದರೆ, ಇಷ್ಟರಲ್ಲಾಗಲೇ ಮೃತ ಸಾರಿಗೆ ನೌಕರರ ಕುಟುಂಬಗಳೂ ತಲಾ 30 ಲಕ್ಷ  ರೂಪಾಯಿ ಪರಿಹಾರವನ್ನು ಪಡೆ ದಿರಬೇಕಿತ್ತು. ಆದರೆ ಅದಾಗಿಲ್ಲ. ಮಾತ್ರವಲ್ಲ, ಅದೇ ಸಂತ್ರಸ್ತ ಕುಟುಂಬಗಳು ನ್ಯಾಯಕ್ಕಾಗಿ ಅಲೆಯುವಂತಾಗಿದೆ. ರಾಜ್ಯ ಸರಕಾರ ಹೇಗೆ  ತಾನು ಹಿಂದೂಗಳ ಸಂರಕ್ಷಕ ಎಂಬ ರೀತಿಯಲ್ಲಿ ಪೋಸು ಕೊಟ್ಟು ಓಟು ರಾಜಕೀಯದಲ್ಲಿ ಬ್ಯುಸಿಯಾಗಿದೆ ಎಂಬುದಕ್ಕೆ ಇದು ಸ್ಪಷ್ಟ  ಉದಾಹರಣೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಮತ್ತು ಪರಿಹಾರ ನೀಡುವ ಮೂಲಕ ಸಾಂತ್ವನ ಒದಗಿಸುವುದು ಈ ಸರ್ಕಾರದ  ಉದ್ದೇಶ ಅಲ್ಲ. ನಿಜವಾಗಿ,

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಪರಿಹಾರ ವಿತರಿಸಿದ್ದರೆ ಅದಕ್ಕೆ ಕಾರಣ ಅವರ ಬಗೆಗಿನ ಕಾಳಜಿ ಅಲ್ಲ, ರಾಜಕೀಯ ದುರುದ್ದೇಶ.  ಮಸೂದ್ ಮತ್ತು ಫಾಝಿಲ್ ಕುಟುಂಬಗಳನ್ನು ನಿರ್ಲಕ್ಷಿಸಿ ಪ್ರವೀಣ್ ಕುಟುಂಬವನ್ನು ಮಾತ್ರ ಆದರಿಸುವುದರಿಂದ ತನ್ನ ‘ಹಿಂದೂ  ಸಂರಕ್ಷಕ’ ಎಂಬ ವರ್ಚಸ್ಸಿಗೆ ಬಲ ಬಂದೀತು ಎಂಬ ನಂಬಿಕೆ ಅದಕ್ಕಿದೆ. ಮುಸ್ಲಿಮರನ್ನು ನಿರ್ಲಕ್ಷಿಸುವುದೇ ಹಿಂದೂಗಳ ಪರ  ನಿಂತಿರುವುದಕ್ಕೆ ಪುರಾವೆ ಎಂಬAತೆ ಬಿಂಬಿಸುವುದು ಅದರ ಉದ್ದೇಶ. ಹಿಂದೂ ಮುಸ್ಲಿಮರನ್ನು ಭಾವನಾತ್ಮಕವಾಗಿ ವಿಭಜಿಸುವುದು ಮತ್ತು  ಹಿಂದೂಗಳ ಪರ ನಿಲ್ಲುವುದು- ಇವೇ ಬಿಜೆಪಿಯ ರಾಜಕೀಯ ತಂತ್ರ. ಕೊರೋನಾದಿಂದ ಮೃತಪಟ್ಟ ಸಾರಿಗೆ ನೌಕರರ ವಿಷಯದಲ್ಲಿ ಈ  ಭಾವನಾತ್ಮಕ ವಿಭಜನೆ ಸಾಧ್ಯವಿಲ್ಲ. ಯಾಕೆಂದರೆ, ಕೊರೋನಾಕ್ಕೆ ‘ಅಲ್ಲಾಹುವೇ’ ಕಾರಣ ಎಂಬುದು ಈವರೆಗೂ ಸಾಬೀತಾಗಿಲ್ಲ.  ಒಂದುವೇಳೆ, ಇಂಥದ್ದೊಂದು  ಪ್ರಚಾರ ನಿಜಕ್ಕೂ ಯಶಸ್ವಿಯಾಗಿರುತ್ತಿದ್ದರೆ ಮೃತಪಟ್ಟ ಎಲ್ಲ ಹಿಂದೂ ಸಾರಿಗೆ ನೌಕರರಿಗೂ ಈಗಾಗಲೇ  ಪರಿಹಾರ ವಿತರಣೆಯಾಗಿರುತ್ತಿತ್ತೋ ಏನೋ?

ಮುಸ್ಲಿಮ್ ಐಕ್ಯತಾ ವೇದಿಕೆಯ ಅಡಿಯಲ್ಲಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯು ‘ಮುಸ್ಲಿಮ್ ಸಮುದಾಯದ ಪ್ರತಿಭಟನೆ’ ಎಂಬ  ಚೌಕಟ್ಟನ್ನು ಮೀರಿ ಚರ್ಚೆಗೊಳಗಾಗಬೇಕಾದಷ್ಟು ಮಹತ್ವಪೂರ್ಣವಾದುದು. ಹತ್ಯೆಗೀಡಾದ ಮಸೂದ್ ಮತ್ತು ಫಾಝಿಲ್ ಇಬ್ಬರ  ಮೇಲೂ ಯಾವ ಅಪರಾಧ ಪ್ರಕರಣಗಳೂ ದಾಖಲಾಗಿಲ್ಲ. ಯಾರೊಂದಿಗೂ ಜಗಳವಾಡಿದ, ಯಾವುದಾದರೂ ಪ್ರಕರಣದಲ್ಲಿ ಪೊ ಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿರುವ ಕಪ್ಪು ಚುಕ್ಕೆಯೂ ಅವರ ಮೇಲಿಲ್ಲ. ತಮ್ಮಷ್ಟಕ್ಕೇ ದುಡಿದು ಕುಟುಂಬವನ್ನು ಸಾಕುತ್ತಿದ್ದ ಈ  ಇಬ್ಬರು ಯುವಕರನ್ನು ಕೋಮುದ್ವೇಷದ ಹೊರತು ಹತ್ಯೆ ಮಾಡುವುದಕ್ಕೆ ಬೇರಾವ ಕಾರಣಗಳೂ ಇಲ್ಲ. ಮುಸ್ಲಿಮ್ ಎಂಬುದರ  ಹೊರತಾಗಿ ಅವರ ಹತ್ಯೆಗೆ ಇರಬಹುದಾದ ಇನ್ನಾವ ಕಾರಣಗಳನ್ನೂ ಪೊಲೀಸರು ಬಹಿರಂಗಪಡಿಸಿಲ್ಲ. ಮಸೂದ್ ಹತ್ಯೆಯ ನಂತರ  ಪ್ರವೀಣ್ ನೆಟ್ಟಾರು ಹತ್ಯೆ ನಡೆದಿದೆ. ಆ ಬಳಿಕ ಫಾಝಿಲ್ ಹತ್ಯೆ ನಡೆದಿದೆ. ಈ ಮೂರೂ ಹತ್ಯೆಗಳಿಗೆ ಧರ್ಮದ ಹೊರತಾದ ಇನ್ನಾವ  ಕಾರಣಗಳೂ ಇಲ್ಲದೇ ಇರುವುದರಿಂದ ಈ ಮೂರೂ ಹತ್ಯೆಗಳನ್ನು ಸಮಾನವಾಗಿ ಕಾಣಬೇಕಾದುದು ರಾಜಧರ್ಮವನ್ನು ಪಾಲಿಸುವ  ಯಾವುದೇ ಸರ್ಕಾರದ ಪರಮ ಕರ್ತವ್ಯ. ಆದರೆ,

ಬೊಮ್ಮಾಯಿ ಸರ್ಕಾರ ಹಾಗೆ ನಡಕೊಂಡಿಲ್ಲ. ಪ್ರವೀಣ್ ನೆಟ್ಟಾರು ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿಕೊಟ್ಟ ಸರ್ಕಾರ ಉಳಿದೆರಡು  ಪ್ರಕರಣ ತನಿಖೆಯನ್ನು ಮಾತ್ರ ತನ್ನ ಬಳಿಯೇ ಇಟ್ಟುಕೊಂಡಿತು. ಎನ್‌ಐಎಗೆ ವಹಿಸಲಾಗುವ ಪ್ರಕರಣಗಳಲ್ಲಿ ಆರೋಪಿಗಳು ಸುಲಭವಾಗಿ  ಜಾಮೀನು ಪಡೆದು ಹೊರಬರುವುದಕ್ಕೆ ಸಾಧ್ಯವಿಲ್ಲ. ಜಾಮೀನಿಗಾಗಿ ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಆದರೆ, ಎನ್‌ಐಎ ಹೊರತಾದ  ತನಿಖೆಗಳಲ್ಲಿ ಜಾಮೀನು ಪ್ರಕ್ರಿಯೆ ಇಷ್ಟು ಕಠಿಣವಾಗಿಲ್ಲ. ಆದ್ದರಿಂದಲೇ, ಫಾಝಿಲ್ ಹತ್ಯೆ ಪ್ರಕರಣದ ಆರೋಪಿ ಈಗಾಗಲೇ ಜಾಮೀನು  ಪಡೆದು ಹೊರಬಂದಿದ್ದಾನೆ. ಇದರಾಚೆಗೆ ಹೇಳುವುದಕ್ಕೇನಿದೆ? ಅಂದಹಾಗೆ,

ನರಗುಂದದ ಸಮೀರ್, ಶಿವಮೊಗ್ಗದ ಹರ್ಷ ಮತ್ತು ದಕ್ಷಿಣ ಕನ್ನಡದ ಈ ಮೂರು ಪ್ರಕರಣಗಳ ವಿಷಯದಲ್ಲಿ ಬೊಮ್ಮಾಯಿ ಸರ್ಕಾರ  ನಿಷ್ಪಕ್ಷಪಾತವಾಗಿ ವರ್ತಿಸಿಲ್ಲ ಎಂದು ಬಿಜೆಪಿ ಬೆಂಬಲಿಗರೇ ಪರಸ್ಪರ ಹೇಳಿಕೊಳ್ಳುವಷ್ಟು ಸರ್ಕಾರದ ವರ್ಚಸ್ಸು ಕುಸಿದಿದೆ. ಹೀಗೆ ಬಹಿರಂಗ  ಅನ್ಯಾಯ ಮಾಡುವುದರಿಂದ ಯಾವುದೇ ಸರ್ಕಾರದ ಓಟಿನ ಪ್ರಮಾಣದಲ್ಲಿ ವೃದ್ಧಿಯಾಗುತ್ತದೆ ಎಂದಾದರೆ, ಆ ಓಟು ಹಾಕುವವರ  ನ್ಯಾಯ ಪ್ರಜ್ಞೆಯ ಬಗ್ಗೆಯೂ ವಿಷಾದವಾಗುತ್ತದೆ. ಧರ್ಮ ಯಾವುದೇ ಇರಲಿ, ನ್ಯಾಯ ಸರ್ವರ ಪಾಲಿಗೂ ಸಮಾನ. ಅನ್ಯಾಯವೂ  ಹಾಗೆಯೇ. ಮುಸ್ಲಿಮರಿಗೆ ಅನ್ಯಾಯ ಮಾಡುವುದರಿಂದ ಹಿಂದೂಗಳಿಗೆ ತೃಪ್ತಿಯಾಗುವುದು ಮತ್ತು ಹಿಂದೂಗಳಿಗೆ ಅ ನ್ಯಾಯವಾಗುವುದರಿಂದ ಮುಸ್ಲಿಮರಿಗೆ ತೃಪ್ತಿಯಾಗುವುದು- ಇವೆರಡೂ ಧರ್ಮವಿರೋಧಿ ಭಾವನೆಗಳು. ಅನ್ಯಾಯ ಫಾಝಿಲ್‌ಗಾದರೂ  ನೆಟ್ಟಾರುಗಾದರೂ ಸಮೀರ್‌ಗಾದರೂ ಹರ್ಶನಿಗಾದರೂ ಅನ್ಯಾಯವೇ. ಇವುಗಳಲ್ಲಿ ಒಂದಕ್ಕೆ ದುಃಖಿಸಿ ಇನ್ನೊಂದಕ್ಕೆ ಸಂಭ್ರಮಪಡುವುದು  ಧರ್ಮ ಮತ್ತು ಅದು ಬೋಧಿಸುವ ನ್ಯಾಯ ನೀತಿಯನ್ನೇ ಹತ್ಯೆಗೈದಂತೆ.

Thursday 8 September 2022

ಇಸ್ಲಾಮೀ ಚಿಂತನೆಗೆ ಬೌದ್ಧಿಕ ವಲಯದಲ್ಲಿ ಅಂಗೀಕಾರ ಒದಗಿಸಿಕೊಟ್ಟ ಮೌಲಾನಾ




ಖ್ಯಾತ-ಕುಖ್ಯಾತ ಈ ಎರಡೂ ಪದಗಳ ನಡುವೆ ಒಂದೇ ಒಂದೇ ಅಕ್ಷರದ ವ್ಯತ್ಯಾಸವಷ್ಟೇ ಇದೆ. ಆದರೆ, ಅರ್ಥದ ಮಟ್ಟಿಗೆ ಹೇಳುವುದಾದರೆ, ಇವುಗಳ ನಡುವಿನ ವ್ಯತ್ಯಾಸ ಅಗಾಧವಾದುದು. ಖ್ಯಾತ ವಿದ್ವಾಂಸ, ಖ್ಯಾತ ವೈದ್ಯ, ಖ್ಯಾತ ವಿಜ್ಞಾನಿ, ಖ್ಯಾತ ಸಾಹಿತಿ- ಹೀಗೆ ಗುರುತಿಗೀಡಾದ ಹಲವರು ನಮ್ಮ ನಡುವೆ ಇದ್ದಾರೆ. ಇವರೆಲ್ಲ ರಾತ್ರಿ ಬೆಳಗಾಗುವುದರೊಳಗೆ ಖ್ಯಾತರಾದುದಲ್ಲ. ಅದರ ಹಿಂದೆ ಪರಿಶ್ರಮ, ಸಾಮಾಜಿಕ ಕೊಡುಗೆ, ಸಕಾರಾತ್ಮಕ ಚಿಂತನೆ ಮತ್ತು ಸಾಧನೆಗಳ ಬೆವರು ಇರುತ್ತದೆ. ಇಂಥ ಖ್ಯಾತರಲ್ಲಿ ಒಬ್ಬರು- ಕಳೆದವಾರ ನಿಧನರಾದ ಮೌಲಾನಾ ಜಲಾಲುದ್ದೀನ್ ಉಮರಿ. ಹಾಗಂತ, 2007ರಿಂದ 2019ರ ವರೆಗೆ ಅವರು ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು ಎಂಬುದು ಅವರ ಹೆಸರಿನ ಮೊದಲು ಖ್ಯಾತ ಎಂಬ ಪದವನ್ನು ಸೇರಿಸುವುದಕ್ಕೆ ಕಾರಣ ಅಲ್ಲ. ಸಂಘಟನೆಗಳ ಅಧ್ಯಕ್ಷತೆಯನ್ನು ಹಲವು ದಶಕಗಳ ಕಾಲ ಅಲಂಕರಿಸಿರುವ ಮಂದಿ ನಮ್ಮ ನಡುವೆ ಇದ್ದಾರೆ. ಅವರೆಲ್ಲ ಖ್ಯಾತನಾಮರ ಪಟ್ಟಿಯಲ್ಲಿ ಸೇರಿಕೊಂಡಿಲ್ಲ. ಯಾಕೆಂದರೆ, ಅವರೆಲ್ಲ ಜಲಾಲುದ್ದೀನ್ ಉಮರಿ ಅಲ್ಲ.

87 ವರ್ಷಗಳ ತುಂಬು ಜೀವನವನ್ನು ಸವೆಸಿ ಅವರು ಆಗಸ್ಟ್ 26ರಂದು ರಾತ್ರಿ 9 ಗಂಟೆಗೆ ಇಹಲೋಕಕ್ಕೆ ವಿದಾಯ ಕೋರಿದಾಗ ಅವರಿಗಾಗಿ ಮಿಡಿದ ಹೃದಯಗಳು ಅಸಂಖ್ಯ. ದೇಶದ ಬಡವರು ಮತ್ತು ದುರ್ಬಲರ ಏಳಿಗೆಗಾಗಿ ‘ವಿಝನ್ 2016’ ಎಂಬ ಅಭೂತಪೂರ್ವ ಯೋಜನೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ರೂಪಿಸಿದಾಗ, ಅದರ ಭಾಗವಾಗಿದ್ದವರು ಇದೇ ಜಲಾಲುದ್ದೀನ್ ಉಮರಿ. ಒಂದು ಸರ್ಕಾರ ಮಾತ್ರ ಮಾಡಬಹುದಾದ ಬಹುಕೋಟಿ ರೂಪಾಯಿಗಳ ಬೃಹತ್ ಕಲ್ಯಾಣ ಯೋಜನೆ ಇದು. ಅತೀ ಹಿಂದುಳಿದ ಪ್ರದೇಶಗಳನ್ನು ಗುರುತಿಸಿ, ಅಲ್ಲಿನ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾರಿಗೊಳಿಸುವುದು ಈ ಯೋಜನೆಯ ಉದ್ದೇಶ. ಶಾಲೆ, ಆಸ್ಪತ್ರೆ, ಮನೆ ನಿರ್ಮಾಣ, ಮೂಲಭೂತ ಸೌಲಭ್ಯಗಳ ಒದಗಣೆ, ರೋಗಿಗಳಿಗೆ ನೆರವು, ಚಿಕಿತ್ಸೆ ಸಹಿತ ಒಂದು ಸರ್ಕಾರ ಮಾತ್ರ ಮಾಡಬಹುದಾದ ಯೋಜನೆಯನ್ನು ಒಂದು ಸಂಘಟನೆ ಕೂಡಾ ಮಾಡಬಹುದು ಎಂಬುದನ್ನು ರೂಪಿಸಿದವರಲ್ಲಿ ಇವರೂ ಒಬ್ಬರು. ಈ ಯೋಜನೆ ಕಾರ್ಯಗತಗೊಳ್ಳುವಾಗ ಇವರು ಜಮಾಅತ್‌ನ ಉಪಾಧ್ಯಕ್ಷರಾಗಿದ್ದರು. ಇವರು ಅಧ್ಯಕ್ಷರಾದ ಬಳಿಕ ಈ ಯೋಜನೆಯ ಅವಧಿಯನ್ನು ಇನ್ನಷ್ಟು ವಿಸ್ತರಿಸಲಾಯಿತು. ಮುಖ್ಯವಾಗಿ, ಉತ್ತರ ಭಾರತದ ಅತೀ ಹಿಂದುಳಿದ ಹಳ್ಳಿ ಮತ್ತು ಗ್ರಾಮಗಳು ಈ ಯೋಜನೆಯ ಪ್ರಯೋಜನವನ್ನು ಪಡಕೊಂಡವು. ಅಂದಹಾಗೆ,

ಯಾವುದೇ ವಿಷಯದ ಮೇಲೆ ಇಸ್ಲಾಮೀ ದೃಷ್ಟಿಕೋನಕ್ಕೆ ಸಂಬAಧಿಸಿ ವಿಶ್ಲೇಷಣೆ ನಡೆಸುವಲ್ಲಿ ಮೌಲಾನಾ ಉಮರಿ ನಿಪುಣರು. ಸಂದರ್ಭಾನುಸಾರ ಅವರು ಮಾಧ್ಯಮಗಳ ಮುಂದೆ ನಿಖರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಐಸಿಸ್‌ನ ಬಗ್ಗೆ ಕಾವೇರಿದ ಚರ್ಚೆ ನಡೆಯುತ್ತಿದ್ದ ವೇಳೆ ಮುಖ್ಯವಾಹಿನಿಯ ಆಂಗ್ಲ ಮಾಧ್ಯಮಗಳು ಅವರನ್ನು ಸಂಪರ್ಕಿಸಿದ್ದುವು. ಸಾಮಾನ್ಯವಾಗಿ, ಮೌಲಾನಾರ ಬಗ್ಗೆ ಮಾಧ್ಯಮಗಳಲ್ಲಿ ಒಂದು ಬಗೆಯ ಕೀಳರಿಮೆ ಇರುತ್ತದೆ. ಭೌತಿಕ ಶಿಕ್ಷಣವನ್ನು ಪಡೆಯದ ಮತ್ತು ಬರೇ ಧಾರ್ಮಿಕ ಶಿಕ್ಷಣವನ್ನಷ್ಟೇ ಕಲಿತಿರುವವರೆಂಬ ಉಡಾಫೆ ಭಾವವೂ ಅವರ ಪ್ರಶ್ನಾವಳಿಯಲ್ಲಿ ಗೋಚರಿಸುತ್ತಿರುತ್ತದೆ. ಆದರೆ ಮೌಲಾನಾರು ಜಾಮಿಯಾ ದಾರುಸ್ಸಲಾಮ್‌ನಿಂದ ಫಾಝಿಲ್ ಪದವಿ ಪಡೆದವರು ಮಾತ್ರವಲ್ಲ, ಅಲಿಘರ್ ವಿವಿಯಿಂದ ಬಿಎ ಪದವಿಯನ್ನೂ ಪಡೆದವರು ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಿಪುಣರಾಗಿದ್ದಾರೆ ಎಂಬುದು ಗೊತ್ತಾಗಿ ಪತ್ರಕರ್ತರ ಪ್ರಶ್ನೆಯ ವರಸೆಯೇ ಬದಲಾಗಿತ್ತು. ಮೌಲಾನಾ ಅವರು ಮದ್ರಾಸ್ ವಿವಿಯಿಂದ ಪರ್ಷಿಯನ್ ಭಾಷೆಯಲ್ಲಿ ಮುನ್ಶಿ ಫಾಝಿಲ್ ಪದವಿಯನ್ನು ಕೂಡಾ ಪಡೆದವರಾಗಿದ್ದರು. ಆದ್ದರಿಂದಲೇ,

ಇಸ್ಲಾಮೀ ರಾಷ್ಟ್ರವನ್ನು ಕಟ್ಟುವ ಮೂಲಕ ನಾವು ಸ್ವರ್ಗ ಪ್ರವೇಶಿಸಬಹುದು ಎಂದು ಐಸಿಸ್‌ನ ಮಂದಿ ಭಾವಿಸುತ್ತಾರೆ. ಆದರೆ, ಹತ್ಯೆಗೈದು, ದೌರ್ಜನ್ಯವೆಸಗಿ ಮತ್ತು ಹಿಂಸೆಗೀಡುಮಾಡಿ ಓರ್ವ ಹೇಗೆ ತಾನೇ ಸ್ವರ್ಗ ಪ್ರವೇಶಿಸಲು ಸಾಧ್ಯ? ಹಿಂಸೆಯ ವಿರುದ್ಧ ಮಕ್ಕಳನ್ನು ತರಬೇತುಗೊಳಿಸುವುದು ಎಲ್ಲ ಹೆತ್ತವರ ಕರ್ತವ್ಯವಾಗಿದೆ ಮತ್ತು ಆ ಮೂಲಕ ಇಸ್ಲಾಮ್ ತೋರಿಸಿದ ಸನ್ಮಾರ್ಗದ ಕಡೆಗೆ ಅವರಿಗೆ ಮಾರ್ಗದರ್ಶನ ನೀಡಬೇಕಾಗಿದೆ...’ ಎಂದವರು ಮಾಧ್ಯಮಗಳ ಮುಂದೆ ಅಭಿಪ್ರಾಯಪಟ್ಟಿದ್ದರು. ಐಸಿಸನ್ನು ಸಮರ್ಥಿಸುವ ಸಣ್ಣ ಎಳೆಯೇನಾದರೂ ಸಿಗುತ್ತದೆಯೇ ಎಂದು ಕಾದುಕೊಂಡವರನ್ನು ಗಾಢ ನಿರಾಶೆಗೆ ತಳ್ಳಿದ ಹೇಳಿಕೆ ಅದಾಗಿತ್ತು. ಇದೇವೇಳೆ, ಜಮಾಅತೆ ಇಸ್ಲಾಮೀ ಜಮ್ಮು-ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನಿಷೇಧ ವಿಧಿಸಿದ ಸಂದರ್ಭದಲ್ಲಿ ಅದರ ಕಮಾಂಡರ್ ಇನ್ ಚೀಫ್ ಎಂದು ಜಲಾಲುದ್ದೀನ್ ಉಮರಿಯವರನ್ನು ತನ್ನ ಸುದ್ದಿ ಪ್ರಸಾರದ ನಡುವೆ ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿ.ವಿ. ಬಿಂಬಿಸಿತ್ತು. ಬಳಿಕ ಅದು ನಿಶ್ಶರ್ಥವಾಗಿ ಮೌಲಾನಾರ ಕ್ಷಮೆಯನ್ನೂ ಯಾಚಿಸಿತ್ತು. ಯಾಕೆಂದರೆ ಮೌಲಾನಾ ಉಮರಿ ನಾಲ್ಕು ಗೋಡೆಯೊಳಗಿನ ಅಧ್ಯಕ್ಷ ಆಗಿರಲಿಲ್ಲ. ಬಹುತ್ವದ ಭಾರತದಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಒಂದಕ್ಕಿಂತ ಹೆಚ್ಚು ಸಂಶೋಧನಾತ್ಮಕ ಲೇಖನಗಳನ್ನು ಬರೆದು ಬೌದ್ಧಿಕ ವಲಯ ತಲೆದೂಗುವಂತೆ ಮಾಡಿದವರು ಅವರು. ವೈಚಾರಿಕವಾಗಿ ಅವರು ಅತ್ಯಂತ ಬಲಿಷ್ಠರಾಗಿದ್ದರು. ಇಸ್ಲಾಮನ್ನು ಅತ್ಯಂತ ಸಮಗ್ರವಾಗಿ ಯಾವುದೇ ಅಪವಾದಗಳಿಗೆ ಎಡೆಯಾಗದಂತೆ ಪ್ರಬಲ ಪುರಾವೆಯೊಂದಿಗೆ ಬೌದ್ಧಿಕ ವಲಯದಲ್ಲಿ ಮಂಡಿಸುವ ಸಾಮರ್ಥ್ಯ ಅವರಲ್ಲಿತ್ತು. ಸಾಹಿತ್ಯ ಕ್ಷೇತ್ರ ಅವರ ಇಷ್ಟದ ಮಗ್ಗುಲಾದುದರಿಂದ ಭಾಷಣಗಳಿಗೆ ಹೊರತಾಗಿ ತನ್ನ ಚಿಂತನೆಯನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಅವರು ಯಶಸ್ಸು ಕಂಡರು. ಅವರು ಬರೆದಿರುವ ಸುಮಾರು 40ಕ್ಕಿಂತಲೂ ಅಧಿಕ ಪುಸ್ತಕಗಳಲ್ಲಿ ಯಾವುದು ಕೂಡಾ ಇಸ್ಲಾಮ್ ಮುಸ್ಲಿಮ್ ಎಂಬ ಪರಿಧಿಯನ್ನು ಬಿಟ್ಟು ಹೊರ ಹೋಗಿಯೇ ಇರಲಿಲ್ಲ. ಏನನ್ನು ಬರೆಯುವುದಿದ್ದರೂ ಅದರ ಜೊತೆ ಇಸ್ಲಾಮೀ ದೃಷ್ಟಿಕೋನವನ್ನು ದಾಖಲಿಸುವುದು ಅವರ ರೂಢಿಯಾಗಿತ್ತು. ಪಂಡಿತ ವಲಯದಲ್ಲಿ ಹೆಚ್ಚು ವಿಶ್ಲೇಷಣೆಗೆ ಒಳಪಡುವ ಸಂಶೋಧನಾತ್ಮಕ ಬರಹಗಳನ್ನು ಅವರು ಆಸಕ್ತಿಯಿಂದ ಬರೆದುದಷ್ಟೇ ಅಲ್ಲ, ಆ ಎಲ್ಲ ಬರಹಗಳೂ ಇಸ್ಲಾಮನ್ನು ಕೇಂದ್ರೀಕರಿಸಿ ಇದ್ದುವು ಎಂಬುದು ಗಮನಾರ್ಹ. ಅಂದಹಾಗೆ,

ಮೌಲಾನಾ ಉಮರಿಯವರು ವಿದ್ಯಾರ್ಥಿ ಕಾಲದಿಂದಲೇ ಜಮಾಅತ್‌ನೊಂದಿಗೆ ಸಂಬಂಧ ಇಟ್ಟು ಕೊಂಡೇ ಬೆಳೆದವರು. ತನ್ನ ಪ್ರತಿಭೆ ಮತ್ತು ಆಸಕ್ತಿಯ ಕಾರಣದಿಂದಾಗಿ ಬಹಳ ಬೇಗ ಮುಂಚೂಣಿಗೂ ತಲುಪಿದರು. ಜಮಾಅತ್‌ನ ಅಲೀಘರ್ ನಗರಾಧ್ಯಕ್ಷರಾಗಿ ಅವರು ಬಹಳ ಬೇಗ ಆಯ್ಕೆಯಾದರು. ಆದರೆ, ಅವರ ಆಸಕ್ತಿ ಸಂಶೋಧನಾ ಕ್ಷೇತ್ರದ ಮೇಲಿತ್ತು. ಆದ್ದರಿಂದಲೇ, ಜಮಾಅತ್‌ನ ಸಂಶೋಧನಾ ವಿಭಾಗವಾದ ಇಸ್ಲಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಭಾಗವಾದರು. ‘ತಹ್ಕಿಕಾತೆ ಇಸ್ಲಾಮೀ’ ಎಂಬ ರಿಸರ್ಚ್ ತ್ರೈಮಾಸಿಕದ ಸಂಪಾದಕರೂ ಆದರು. ಆ ಬಳಿಕ ಜಮಾಅತ್‌ನ ಮುಖವಾಣಿ ಝಿಂದಗಿ-ಏ-ನೌ ಎಂಬ ಮಾಸಿಕದ ಸಂಪಾದಕರಾದರು. ಬಳಿಕ ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನಿರಂತರ 16 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬಳಿಕ 2007ರಿಂದ 2019ರ ವರೆಗೆ ಜಮಾಅತ್‌ನ ಅಧ್ಯಕ್ಷರಾಗಿಯೂ ಹೊಣೆಗಾರಿಕೆ ನಿಭಾಯಿಸಿದರು. ಈ ನಡುವೆ ಅವರು ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ನ ಸ್ಥಾಪಕ ಸದಸ್ಯರೂ ಉಪಾಧ್ಯಕ್ಷರೂ ಆಗಿದ್ದರು. ತ್ರಿವಳಿ ತಲಾಕ್‌ನ ಚರ್ಚೆಯ ವೇಳೆ ಅತ್ಯಂತ ತಾರ್ಕಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಇದೇ ಮೌಲಾನಾ. ಕೇಂದ್ರ ಸರ್ಕಾರದ ಉದ್ದೇಶ ಶುದ್ಧಿಯನ್ನು ಪ್ರಶ್ನಿಸಿ ಪ್ರಶ್ನೆಗಳನ್ನೆತ್ತಿದವರೂ ಇದೇ ಮೌಲಾನಾ. ಅವರ ಇನ್ನೊಂದು ಬಹುಮುಖ್ಯ ಸಾಧನೆ ಏನೆಂದರೆ, ಭಿನ್ನ ವಿಚಾರಧಾರೆಯ ಉಲೆಮಾಗಳೊಂದಿಗೆ ಸೌಹಾರ್ದ ಸಂಬಂಧವನ್ನು ಬೆಳೆಸಿಕೊಂಡದ್ದು. ಜಮಾಅತ್‌ಗಿಂತ ಹೊರತಾದ ವಿವಿಧ ಧಾರ್ಮಿಕ ಸಂಘಟನೆಗಳ ಉಲೆಮಾಗಳು ಮೌಲಾನಾರೊಂದಿಗೆ ಆಪ್ತ ಸಂಬಂಧವನ್ನು ಹೊಂದಿದ್ದರು. ಬಹುತ್ವದ ಸಮಾಜದಲ್ಲಿ ಮುಸ್ಲಿಮರು ಹೇಗಿರಬೇಕು ಮತ್ತು ಇಸ್ಲಾಮಿನ ಪ್ರಚಾರದ ಸ್ವರೂಪ ಏನಿರಬೇಕು ಎಂಬ ಬಗ್ಗೆ ಅತ್ಯಂತ ನಿಖರ ಮತ್ತು ಸಂತುಲಿತ ನಿಲುವನ್ನು ಸಂದರ್ಭಾನುಸಾರ ವ್ಯಕ್ತಪಡಿಸುತ್ತಲೇ ಬಂದವರು ಮೌಲಾನಾ ಉಮರಿ. ನಿಜವಾಗಿ,
ಏಕಕಾಲದಲ್ಲಿ ಉತ್ತಮ ನಾಯಕ, ಶಿಕ್ಷಣ ತಜ್ಞ, ಸಾಹಿತಿ, ಚಿಂತಕ, ಸಂಶೋಧಕ ಇತ್ಯಾದಿ ಗುಣಗಳನ್ನು ಓರ್ವರು ರೂಢಿಸಿಕೊಳ್ಳುವುದು ಸುಲಭ ಅಲ್ಲ. ಅಪಾರ ಪರಿಶ್ರಮ, ನಿರಂತರ ಅಧ್ಯಯನ, ಚಿಂತಕರೊಂದಿಗೆ ಸಂವಾದ, ಸಂಶೋಧನೆ, ಸಕಾರಾತ್ಮಕ ದೃಷ್ಟಿಕೋನ ಮತ್ತು ಅಲ್ಲಾಹನ ಅನುಗ್ರಹ- ಇವೆಲ್ಲವೂ ಜೊತೆಗೂಡಿದಾಗ ಸಿಗುವ ಫಲಿತಾಂಶವೇ ಮೌಲಾನಾ ಜಲಾಲುದ್ದೀನ್ ಉಮರಿ. ಮೃದು ಮಾತಿನ, ಗಂಭೀರ ನಡವಳಿಕೆಯ ಮೌಲಾನಾರು ಬಹುತ್ವದ ಭಾರತಕ್ಕೆ ತನ್ನ ವಿಚಾರಗಳಿಂದ ಮೆರುಗನ್ನು ನೀಡಿದ್ದಾರೆ. ‘ಮೌಲಾನಾರೆಂದರೆ, ಕರ್ಮಶಾಸ್ತ್ರ ಭಿನ್ನಾಭಿಪ್ರಾಯಗಳನ್ನು ಉಬ್ಬಿಸಿ ಜಿದ್ದಾಜಿದ್ದಿನಲ್ಲಿ ತೊಡಗಿರುವವರು...’ ಎಂಬ ಸಾಮಾನ್ಯ ನಿಲುವಿಗೆ ಅಪವಾದವಾಗಿದ್ದರು ಮೌಲಾನಾ ಉಮರಿ. ಅವರು ಇಸ್ಲಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಅಧ್ಯಕ್ಷರಾಗಿದ್ದಾಗ ಇಂಥ ಕರ್ಮಶಾಸ್ತ್ರ ಭಿನ್ನತೆಗಳನ್ನು ತಗ್ಗಿಸುವ ದೃಷ್ಟಿಯಿಂದಲೇ ರಿಸರ್ಚ್ ತಂಡವನ್ನು ರೂಪಿಸಿದ್ದರು. ಅವರು ತಮ್ಮ ಬರಹದಲ್ಲಿ ಕರ್ಮಶಾಸ್ತ್ರ  ಭಿನ್ನತೆಗೆ ಮಹತ್ವ ಕಲ್ಪಿಸುತ್ತಲೇ ಇರಲಿಲ್ಲ. ಎಲ್ಲ ವಿಚಾರಧಾರೆಯ ಉಲೆಮಾಗಳನ್ನು ಜೊತೆ ಸೇರಿಸಿಕೊಂಡು ಬಹುತ್ವದ ಭಾರತದಲ್ಲಿ ಮುಸ್ಲಿಮರು ನಿರ್ಭಯದಿಂದ ಬದುಕುವುದಕ್ಕೆ ಮತ್ತು ದೇಶದ ಜನರಿಗೆ ಇಸ್ಲಾಮನ್ನು ಪರಿಚಯಿಸುವುದಕ್ಕೆ ಅವರು ಶಕ್ತಿ ಮೀರಿ ಶ್ರಮಿಸಿದರು.

ಅವರನ್ನು ಸೃಷ್ಟಿಕರ್ತನು ಪ್ರೀತಿಸಲಿ.

ಪರಿಹಾರ ಘೋಷಿಸದಂತೆ ಮುಖ್ಯಮಂತ್ರಿಯನ್ನು ತಡೆದವರು ಯಾರು?




ಕಳೆದ ಜುಲೈ 20ರಿಂದ 28ರ ನಡುವೆ ದ.ಕ. ಜಿಲ್ಲೆಯಲ್ಲಿ ಮೂರು ಹತ್ಯೆಗಳು ನಡೆದಿವೆ. ಇವರಾರೂ ನುಸುಳುಕೋರರಲ್ಲ,  ಭಯೋತ್ಪಾದಕರಲ್ಲ, ಒಂದೇ ಒಂದು ಪ್ರಕರಣ ಕೂಡಾ ಇವರ ಮೇಲೆ ದೇಶದ ಯಾವುದೇ ಪೊಲೀಸ್ ಠಾಣೆಯಲ್ಲೂ ದಾಖಲಾಗಿಲ್ಲ.  ಮೂವರಲ್ಲೂ ಆಧಾರ್ ಕಾರ್ಡ್ ಇದೆ, ಮತದಾರರ ಗುರುತಿನ ಚೀಟಿ ಇದೆ, ರೇಶನ್ ಕಾರ್ಡ್ನಲ್ಲಿ ಹೆಸರಿದೆ, ಇಲ್ಲಿಯೇ ಹುಟ್ಟಿ ಇಲ್ಲಿಯೇ  ಬೆಳೆದು ಇಲ್ಲಿಯೇ ದುಡಿಯುತ್ತಿದ್ದ ತರುಣರು ಇವರು. ಇವರು ಶಿಕ್ಷಣ ಪಡೆದ ದಾಖಲೆಗಳೂ ಸ್ಥಳೀಯ ಶಾಲೆಗಳಲ್ಲಿ ಲಭ್ಯ ಇವೆ. ಇವರ  ಹೆತ್ತವರೂ ಸ್ಥಳೀಯರೇ ಆಗಿದ್ದಾರೆ. ಹೀಗಿದ್ದೂ ರಾಜ್ಯ ಸರ್ಕಾರ ಅತ್ಯಂತ ಪಕ್ಷಪಾತಿತನದಿಂದ ವರ್ತಿಸಿತು. ಜುಲೈ 20ರಂದು ಹತ್ಯೆಯಾದ  ಮಸೂದ್‌ನ ಮನೆಗೆ ಭೇಟಿ ಕೊಡದ ಮುಖ್ಯಮಂತ್ರಿಗಳು ಜುಲೈ 26ರಂದು ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ಕೊಟ್ಟರು.  25 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನೂ ವಿತರಿಸಿದರು. ಪ್ರವೀಣ್ ನೆಟ್ಟಾರು ಪತ್ನಿಗೆ ಸರ್ಕಾರಿ ಉದ್ಯೋಗದ ಭರವಸೆಯನ್ನೂ  ನೀಡಿದರು. ಅಲ್ಲದೇ, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಗೂ ವಹಿಸಿಕೊಟ್ಟರು. ಬೆಂಗಳೂರಿನಿಂದ  ಪ್ರವೀಣ್ ನೆಟ್ಟಾರು  ಮನೆಗೆ ಸುಮಾರು 400 ಕಿಲೋಮೀಟರ್ ದೂರವಿದ್ದರೆ, ಪ್ರವೀಣ್ ನೆಟ್ಟಾರು ಮನೆಯಿಂದ ಮಸೂದ್ ಮನೆಗೆ ಹತ್ತು-ಹದಿನೈದು  ಕಿಲೋಮೀಟರ್ ದೂರವಷ್ಟೇ ಇದೆ. ಆದ್ದರಿಂದ ಪ್ರವೀಣ್ ಮನೆಗೆ ಭೇಟಿಕೊಟ್ಟ ಮುಖ್ಯಮಂತ್ರಿಗಳು ಮಸೂದ್ ನೆಗೆ ಭೇಟಿ ಕೊಡದೇ  ಇರುವುದಕ್ಕೆ ಎರಡೂ ಮನೆಗಳ ನಡುವಿನ ದೂರ ಕಾರಣ ಅಲ್ಲವೇ ಅಲ್ಲ. ಹಾಗಾದರೆ ಇನ್ನೇನು? ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ  ಇದ್ದಾಗಲೇ ಫಾಝಿಲ್ ಎಂಬ ಯುವಕನ ಹತ್ಯೆಯೂ ನಡೆದಿದೆ. ಆದರೂ ಮುಖ್ಯಮಂತ್ರಿಗಳು ಈ ಇಬ್ಬರಿಗೆ ನಯಾ ಪೈಸೆ ಪರಿಹಾರವ ನ್ನೂ ಘೋಷಿಸಿಲ್ಲ. ಸಂತ್ರಸ್ತ ಕುಟುಂಬಕ್ಕೆ ಸಾಂತ್ವನವನ್ನೂ ಹೇಳಿಲ್ಲ. ಮಸೂದ್ ಮತ್ತು ಫಾಝಿಲ್ ಕುಟುಂಬದ ಸದಸ್ಯರಿಗೆ ಸರ್ಕಾರಿ  ಉದ್ಯೋಗದ ಭರವಸೆ ನೀಡಲಿಲ್ಲ. ಪ್ರವೀಣ್ ನೆಟ್ಟಾರು ಹತ್ಯೆಯನ್ನು NIA ಗೆ  ವಹಿಸಿಕೊಟ್ಟಂತೆ ಈ ಇಬ್ಬರ ಹತ್ಯಾ ಪ್ರಕರಣವನ್ನು NIA ಗೆ  ವಹಿಸಿ ಕೊಡಲಿಲ್ಲ. ಇದು ಅನ್ಯಾಯ. ಬಹಿರಂಗ ಪಕ್ಷಪಾತ. ಆದ್ದರಿಂದಲೇ ಮುಖ್ಯಮಂತ್ರಿಗಳು ಮೇಲಿಂದ ಮೇಲೆ ಪ್ರಶ್ನೆಗೆ ಒಳಗಾದರು.  ಪರಿಹಾರ ಘೋಷಿಸದೇ ಇರುವುದನ್ನು ಮತ್ತು ಸಂತ್ರಸ್ತರ ಮನೆಗೆ ಭೇಟಿ ಕೊಡದೇ ಇರುವುದನ್ನು ಮಾಧ್ಯಮಗಳು ಸಹಿತ ನಾಗರಿಕರು  ಪ್ರಶ್ನಿಸಿದರು. ಸೋಶಿಯಲ್ ಮೀಡಿಯಾದಲ್ಲಂತೂ ಮುಖ್ಯಮಂತ್ರಿಯನ್ನು ತೀವ್ರವಾಗಿಯೇ ತರಾಟೆಗೆ ಎತ್ತಿಕೊಳ್ಳಲಾಯಿತು. ಎಲ್ಲಿಯ  ವರೆಗೆಂದರೆ, ನಾನು ಸಂತ್ರಸ್ತರ ಮನೆಗೆ ಭೇಟಿ ಕೊಡುವೆ ಎಂದವರು ಮಾಧ್ಯಮಗಳ ಮುಂದೆಯೇ ಹೇಳಿಕೊಂಡರು. ಅಂದಹಾಗೆ,

ಈ ಹೇಳಿಕೆಗೆ ಇದೀಗ ಒಂದು ತಿಂಗಳು ತುಂಬಿದೆ. ಆದರೆ ಈವರೆಗೆ ಅವರು ಮಸೂದ್ ಮತ್ತು ಫಾಝಿಲ್ ಮನೆಗೆ ಭೇಟಿ ಕೊಟ್ಟಿಲ್ಲ.  ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಭೇಟಿ ಕೊಡುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಂದು ಮುಖ್ಯಮಂತ್ರಿಗಳು  ಮಂಗಳೂರಿಗೆ ಆಗಮಿಸಿದ್ದರು. ಫಾಝಿಲ್ ಮನೆ ಮಂಗಳೂರಿನಲ್ಲಿಯೇ ಇದೆ. ಮಸೂದ್ ಮನೆಗೆ ಮಂಗಳೂರಿನಿAದ 30  ಕಿಲೋಮೀಟರ್ ದೂರವಷ್ಟೇ ಇದೆ. ಮುಖ್ಯಮಂತ್ರಿಗಳು ನಿಜಕ್ಕೂ ರಾಜಧರ್ಮವನ್ನು ಪಾಲಿಸುತ್ತಿದ್ದಾರೆ ಎಂದಾದರೆ, ಈ ಸಂದರ್ಭವನ್ನು  ಅವರು ಬಳಸಿಕೊಳ್ಳಲೇ ಬೇಕಿತ್ತು. ಸಂತ್ರಸ್ತರ ಮನೆಗೆ ತೆರಳಿ ಪರಿಹಾರವನ್ನು ಘೋಷಿಸಬೇಕಿತ್ತು. ಒಂದುವೇಳೆ, ಪರಿಹಾರ ಮತ್ತು  ಭೇಟಿಯ ವಿಷಯದಲ್ಲಿ ಅವರಿಗೆ ತಕರಾರು ಇದೆ ಎಂದಾದರೆ, ಅದನ್ನಾದರೂ ಹೇಳಿಕೊಳ್ಳಬೇಕಿತ್ತು. ಇದು ಓರ್ವ ಮುಖ್ಯಮಂತ್ರಿಯ  ಜವಾಬ್ದಾರಿ. ಮಸೂದ್, ಪ್ರವೀಣ್ ಮತ್ತು ಫಾಝಿಲ್ ಸಹಿತ 6 ಕೋಟಿ ಕನ್ನಡಿಗರನ್ನು ಏಕರೀತಿಯಲ್ಲಿ ಪೊರೆಯಬೇಕಾದ  ಮುಖ್ಯಮಂತ್ರಿಯವರು, ಅದರಲ್ಲಿ ವಿಫಲರಾಗುತ್ತಾರೆಂದರೆ ಅದಕ್ಕೆ ಸ್ಪಷ್ಟೀಕರಣ ಕೊಡಬೇಕಾದ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕು.  ಆದರೆ ಮುಖ್ಯಮಂತ್ರಿ ಬೊಮ್ಮಾಯಿಯವರು ಈ ಯಾವುದನ್ನೂ ಮಾಡಿಲ್ಲ. ಮಾತ್ರವಲ್ಲ, ಅವರು ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ  ನಡಕೊಂಡಿದ್ದಾರೆ ಎಂಬುದಕ್ಕೆ ‘ನಾನು ಸಂತ್ರಸ್ತರ ಮನೆಗೆ ಭೇಟಿ ಕೊಡುತ್ತೇನೆ...’ ಎಂಬ ಅವರ ಹೇಳಿಕೆಯೇ ಸಾಕ್ಷಿ. ತಾನು  ನಡಕೊಂಡಿರುವುದು ರಾಜಧರ್ಮ ಅಲ್ಲ ಅನ್ನುವುದು ಅವರಿಗೆ ಗೊತ್ತಿದೆ. ಹಾಗಿದ್ದರೆ, ಆತ್ಮಸಾಕ್ಷಿಯನ್ನು ಕೊಂದುಕೊAಡು ಅವರು ಅ ಧಿಕಾರದಲ್ಲಿರುವುದಾದರೂ ಯಾತಕ್ಕೆ? ಅಧಿಕಾರದ ಆಯುಷ್ಯ ಬಹಳ ಕಡಿಮೆ. ಮುಖ್ಯಮಂತ್ರಿಯಾಗಿ ರಾತ್ರಿ ಮಲಗಿದವರು ಬೆಳಿಗ್ಗೆ  ಏಳುವಾಗ ಮಾಜಿಯಾದ ಇತಿಹಾಸವಿದೆ. ಆದರೆ ಮಾಜಿಯಾದ ಮುಖ್ಯಮಂತ್ರಿಯನ್ನು ಜನರು ಗೌರವಿಸಬೇಕಾದರೆ, ಹಾಲಿಯಾಗಿದ್ದಾಗ  ಆತ್ಮಸಾಕ್ಷಿಯಂತೆ ನಡಕೊಂಡ ಇತಿಹಾಸವೂ ಇರಬೇಕು. ಅಂದಹಾಗೆ,

ಪ್ರಧಾನಿ ಮೋದಿಯವರು ಮಂಗಳೂರಿಗೆ ಆಗಮಿಸುವುದಕ್ಕಿಂತ ಮೊದಲು ಫಾಝಿಲ್ ಕುಟುಂಬ ಪತ್ರಿಕಾಗೋಷ್ಠಿಯನ್ನು ನಡೆಸಿತ್ತು.  ಮುಖ್ಯಮಂತ್ರಿಗಳು ಅನ್ಯಾಯವಾಗಿ ನಡಕೊಂಡಿರುವುದರ ಬಗ್ಗೆ ಅಸಂತೋಷ ವ್ಯಕ್ತಪಡಿಸಿತ್ತು. ಮಾತ್ರವಲ್ಲ, ಈ ಬಗ್ಗೆ ಪ್ರಧಾನಿಯವರ  ಗಮನ ಸೆಳೆಯುವುದಕ್ಕಾಗಿ ಭೇಟಿಗೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಆದರೆ ಆ ಮನವಿಯನ್ನು  ಜಿಲ್ಲಾಡಳಿತ ಪರಿಗಣಿಸಲಿಲ್ಲ. ಪ್ರಧಾನಿಯವರ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಶಾಸಕರೂ ಹಾಜರಿದ್ದರು. ಮಸೂದ್ ಮನೆಯನ್ನು  ವಿಧಾನ ಸಭೆಯಲ್ಲಿ ಪ್ರತಿನಿಧಿಸುವ ಬಿಜೆಪಿ ಶಾಸಕರೂ ಸಚಿವರೂ ಆದ ಅಂಗಾರ ಹಾಗೂ ಫಾಝಿಲ್ ಕುಟುಂಬವನ್ನು ವಿಧಾನಸಭೆಯಲ್ಲಿ  ಪ್ರತಿನಿಧಿಸುವ ಬಿಜೆಪಿ ಶಾಸಕ ಭರತ್ ಶೆಟ್ಟಿಯವರೂ ಇದ್ದರು. ಜಿಲ್ಲೆಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಗೆದ್ದಿರುವುದೂ  ಬಿಜೆಪಿ ಅಭ್ಯರ್ಥಿಗಳೇ. ಸಂಸದರೂ ಬಿಜೆಪಿಯವರೇ. ಒಂದುರೀತಿಯಲ್ಲಿ,

ಬಿಜೆಪಿ ಇವತ್ತು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವುದಕ್ಕೆ ಈ ಜಿಲ್ಲೆಯ ಕೊಡುಗೆ ಬಹಳವೇ ಇದೆ. ಇಷ್ಟಿದ್ದೂ, ಈ ಜಿಲ್ಲೆಯ  ನಾಗರಿಕರ ಜೊತೆ ಬಿಜೆಪಿ ಇಷ್ಟು ನಿರ್ಲಜ್ಜ ಅನ್ಯಾಯ ತೋರಿದ್ದು ಯಾಕೆ? ಅದಕ್ಕೆ ಯಾರ ಭಯ? ಮಸೂದ್ ಮತ್ತು ಫಾಝಿಲ್  ಕುಟುಂಬಕ್ಕೆ ಪರಿಹಾರ ಘೋಷಿಸುವುದರಿಂದ ಬಿಜೆಪಿಗೆ ಹಾನಿ ಇದೆಯೇ? ಇದ್ದರೆ ಯಾವ ರೀತಿಯ ಹಾನಿ? ಮುಖ್ಯಮಂತ್ರಿಗಳು ಆ  ಎರಡು ಮನೆಗಳಿಗೆ ಭೇಟಿ ಕೊಡುವುದನ್ನು ಬಿಜೆಪಿ ಇಷ್ಟಪಡುವುದಿಲ್ಲವೇ? ಇಲ್ಲ ಎಂದಾದರೆ ಯಾಕೆ? ಮತದಾರರ ಭಯವೇ? ಪ್ರವೀಣ್  ನೆಟ್ಟಾರು ಮನೆಗೆ ಭೇಟಿ ಕೊಡುವುದನ್ನು ಮತ್ತು ಪರಿಹಾರ ಘೋಷಿಸುವುದನ್ನು ಬೆಂಬಲಿಸುವ ಮತದಾರರು, ಮಸೂದ್ ಮತ್ತು  ಫಾಝಿಲ್ ಮನೆಗೆ ಭೇಟಿ ಕೊಡುವುದನ್ನು ಬೆಂಬಲಿಸದೇ ಇರಲು ಕಾರಣ ಏನು? ಅವರು ಮುಸ್ಲಿಮರು ಎಂದೇ? ಅಲ್ಲ, ಎಂದಾದರೆ  ಬೇರೆ ಕಾರಣ ಯಾವುದು? ಮುಖ್ಯಮಂತ್ರಿಗಳಾದರೂ ಹೇಳಬಹುದಲ್ಲ? ಬಿಜೆಪಿ ರಾಜ್ಯಾಧ್ಯಕ್ಷರಾದರೂ ಹೇಳಬಹುದಲ್ಲ? ಅಷ್ಟಕ್ಕೂ,

ಬಿಜೆಪಿಗೆ ರಾಜ್ಯಮಟ್ಟದಲ್ಲಿ ಅಲ್ಪಸಂಖ್ಯಾತ ಮೋರ್ಚಾ ಇದೆ. ಸಯ್ಯದ್ ಸಲಾಂ ಅದರ ಅಧ್ಯಕ್ಷರು. ಶಾಂತಕುಮಾರ್ ಕೆನಡಿ ಉಪಾಧ್ಯಕ್ಷರು.  17 ಮಂದಿ ಪದಾಧಿಕಾರಿಗಳ ಪೈಕಿ 14 ಮಂದಿಯೂ ಮುಸ್ಲಿಮರು. 27 ಮಂದಿ ಕಾರ್ಯಕಾರಿಣಿ ಸದಸ್ಯರ ಪೈಕಿ 20 ಮಂದಿಯೂ  ಮುಸ್ಲಿಮರು. ಇದಲ್ಲದೇ ಜಿಲ್ಲಾ ಮಟ್ಟದಲ್ಲೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಇದೆ. ಅಲ್ಲದೆ  ಪದಾಧಿಕಾರಿಗಳು ಮತ್ತು ಕಾರ್ಯಕಾರಿ  ಸಮಿತಿ ಸದಸ್ಯರಾಗಿ ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಬಿಜೆಪಿಗೆ ರಾಷ್ಟ್ರೀಯ ಅಲ್ಪಸಂಖ್ಯಾತ ಮೋರ್ಚಾ ಎಂಬ ವಿಭಾಗ  ಇದ್ದು, ಜಲಾಲ್ ಸಿದ್ದೀಖಿ ಅದರ ಅಧ್ಯಕ್ಷರಾಗಿದ್ದಾರೆ. ಒಂದುವೇಳೆ, ಮುಸ್ಲಿಮ್ ಸಂತ್ರಸ್ತರಿಗೆ ಸಾಂತ್ವನ ಹೇಳುವುದು ಮತ್ತು ಅವರಿಗೆ  ಪರಿಹಾರ ಘೋಷಿಸುವುದು ಬಿಜೆಪಿಯ ಮತದಾರರನ್ನು ಅಸಂತೋಷಗೊಳಿಸುತ್ತದೆ ಎಂದಾದರೆ, ಬಿಜೆಪಿಯ ಈ ಅಲ್ಪಸಂಖ್ಯಾತ  ಮೋರ್ಚಾಗಳ ಬಗ್ಗೆ ಆ ಮತದಾರರ ನಿಲುವೇನು? ಇಂಥದ್ದೊಂದು ಮೋರ್ಚಾದ ಅಗತ್ಯ ಬಿಜೆಪಿಗೆ ಯಾಕಿದೆ ಎಂದವರು ಪ್ರಶ್ನಿಸುವು ದಿಲ್ಲವೇ? ಅಲ್ಪಸಂಖ್ಯಾತ ಮೋರ್ಚಾ ಎಂದು ಹೆಸರಿಟ್ಟು ಬರೇ ಮುಸ್ಲಿಮರನ್ನೇ ಅದರಲ್ಲಿ ತುಂಬಿಸುವುದು ಮತ್ತು ಅವರಿಗೆ ಅಧ್ಯಕ್ಷ ಸ್ಥಾ ನವನ್ನೂ ವಹಿಸಿ ಕೊಡುವುದು ಅವರಲ್ಲಿ ಅಸಂತೋಷ ತರಿಸುವುದಿಲ್ಲವೇ? ಈ ಮೋರ್ಚಾಗಳನ್ನು ಬರ್ಖಾಸ್ತು ಮಾಡದಿದ್ದರೆ ಮತ  ಚಲಾಯಿಸಲ್ಲ ಎಂದವರು ಬೆದರಿಕೆ ಹಾಕುವುದಿಲ್ಲವೇ? ನಿಜವಾಗಿ,

ಮಸೂದ್ ಮತ್ತು ಫಾಝಿಲ್‌ಗೆ ಪರಿಹಾರ ಘೋಷಿಸದೇ ಇರುವುದಕ್ಕೂ ಬಿಜೆಪಿ ಮತದಾರರಿಗೂ ಸಂಬಂಧ  ಇಲ್ಲ. ಬಿಜೆಪಿ ಮತದಾರರು  ಎಲ್ಲೇ  ಆಗಲಿ ಇಂಥದ್ದೊಂದು  ಒತ್ತಾಯ ಮಾಡಿಲ್ಲ. ಪರಿಹಾರ ಘೋಷಿಸದಂತೆ ಮತ್ತು ಮುಖ್ಯಮಂತ್ರಿಗಳು ಭೇಟಿ ಕೊಡದಂತೆ ರ‍್ಯಾಲಿ  ನಡೆಸಿಲ್ಲ. ಯಾಕೆಂದರೆ, ಬಿಜೆಪಿ ಮತದಾರರೆಂದರೆ, ಅನ್ಯಗೃಹದ ಜೀವಿಗಳಲ್ಲ. ಇದೇ ಮಣ್ಣಿನ ಮಕ್ಕಳು. ಅವರ ಅಕ್ಕಪಕ್ಕದಲ್ಲೇ   ಮುಸ್ಲಿಮರು ಬದುಕುತ್ತಾ ಇದ್ದಾರೆ. ಸುಖ, ದುಃಖ, ಸಡಗರ, ಸಂಭ್ರಮ, ಕಣ್ಣೀರು, ನಗು.. ಎಲ್ಲವೂ ಇವರಲ್ಲಿ ಸಮಾನವಾಗಿವೆ. ದುಡಿದರೆ  ಮಾತ್ರ ಇವರ ಮನೆಗಳಲ್ಲಿ ಅನ್ನ ಬೇಯುತ್ತೆ. ಶಾಲೆಗಳಲ್ಲಿ ಬಿಜೆಪಿ ಮತದಾರರಿಗೆ ಒಂದು, ಮುಸ್ಲಿಮರಿಗೆ ಒಂದು ಎಂಬ ಶುಲ್ಕ ನೀತಿ  ಇಲ್ಲ. ಆಸ್ಪತ್ರೆಗಳಲ್ಲೂ ಅಷ್ಟೇ. ಅಂಗಡಿ, ಮೆಡಿಕಲ್‌ಗಳಲ್ಲೂ ಅಷ್ಟೇ. ಸುಖ, ದುಃಖಗಳಲ್ಲಿ ಇವರಿಬ್ಬರೂ ಪಕ್ಷಾತೀತವಾಗಿ ಮತ್ತು  ಧರ್ಮಾತೀತವಾಗಿ ಸಮಾನರು. ಆದ್ದರಿಂದ ಮಸೂದ್‌ಗಾಗಲಿ ಫಾಝಿಲ್‌ಗಾಗಲಿ ಪರಿಹಾರ ಕೊಡಬೇಡಿ, ಆ ಮನೆಗೆ ಭೇಟಿ ಕೊಡಬೇಡಿ  ಎಂದು ಅವರು ಆಗ್ರಹಿಸುವುದಕ್ಕೆ ಸಾಧ್ಯವೇ ಇಲ್ಲ. ನಿಜ ಏನೆಂದರೆ, ಇದು ಬಿಜೆಪಿಯ ರಾಜಕೀಯ ನೀತಿ. ಮತದಾರರದ್ದಲ್ಲ. ಆದರೆ  ಬಿಜೆಪಿ ಈ ಅನ್ಯಾಯದ ನೀತಿಯನ್ನು ಬಹಳ ಜಾಣತನದಿಂದ ತನ್ನ ಮತದಾರರ ಬಯಕೆಯಾಗಿ ಬಿಂಬಿಸಲು ಮತ್ತು ಪರಿವರ್ತಿಸಲು  ಯತ್ನಿಸುತ್ತಿದೆ. ಸಾಲು ಸಾಲು ಅಲ್ಪಸಂಖ್ಯಾತ ಮೋರ್ಚಾವನ್ನು ರಚಿಸಿ ಮುಸ್ಲಿಮರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವಾಗ ಇಲ್ಲದ ಭಯ  ಸಂತ್ರಸ್ತರಿಗೆ ಪರಿಹಾರ ಘೋಷಿಸುವಾಗ ಎದುರಾಗಿರುವುದಕ್ಕೆ ಕಾರಣ ಇದುವೇ. ಅದು ತನ್ನ ರಾಜಕೀಯ ಉದ್ದೇಶವನ್ನು  ಈಡೇರಿಸಿಕೊಳ್ಳುವುದಕ್ಕೆ ತನ್ನದೇ ಮತದಾರರನ್ನು ಮುಸ್ಲಿಮ್ ವಿರೋಧಿಗಳಂತೆ ಬಿಂಬಿಸುತ್ತಿದೆ.

 ನಾವು ಪ್ರಶ್ನಿಸಬೇಕಾದದ್ದು ಬಿಜೆಪಿಯನ್ನು,  ಅದರ ಮತದಾರರನ್ನಲ್ಲ.