Thursday 22 September 2022

ಅಪರಾಧಿ `ಅಲ್ಲಾಹು’ ಆಗಿರುತ್ತಿದ್ದರೆ ಅವರಿಗೂ ಪರಿಹಾರ ಸಿಕ್ಕಿರುತ್ತಿತ್ತೋ ಏನೋ?




ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಪರಿಹಾರ ವಿತರಿಸಿರುವಂತೆ ಮೃತ ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೂ ರಾಜ್ಯ ಸರಕಾರ  ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ಮುಸ್ಲಿಮ್ ಐಕ್ಯತಾ ವೇದಿಕೆಯು ಕಳೆದವಾರ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ  ನಡೆಸುತ್ತಿದ್ದ ವೇಳೆಯಲ್ಲೇ , ರಾಜ್ಯ ಹೈಕೋರ್ಟ್ನಲ್ಲಿ ಅರ್ಜಿಯೊಂದರ ವಿಚಾರಣೆ ನಡೆಯುತ್ತಿತ್ತು. ಇದು ಕೂಡಾ ಪರಿಹಾರಕ್ಕೆ ಸಂಬಂಧಿಸಿದ ಪ್ರಕರಣ. ಕೊರೋನಾದಿಂದ ಸಾವಿಗೀಡಾದ ಸಾರಿಗೆ ನೌಕರರಿಗೆ ತಲಾ 30 ಲಕ್ಷ ರೂ. ಪರಿಹಾರ ನೀಡುವುದಾಗಿ 2021 ಫೆಬ್ರವರಿ  10ರಂದು ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಆದರೆ, ನುಡಿದಂತೆ ಸಾರಿಗೆ ಇಲಾಖೆ ನಡಕೊಂಡಿಲ್ಲ. 2020 ಮಾರ್ಚ್ನಿಂದ  2021 ಜೂನ್‌ವರೆಗೆ ರಾಜ್ಯದ 4 ಸಾರಿಗೆ ನಿಗಮಗಳಿಗೆ ಸೇರಿದ 351 ಮಂದಿ ನೌಕರರು ಕೊರೋನಾಕ್ಕೆ ಬಲಿಯಾಗಿದ್ದರೂ ಈವರೆಗೆ  ಬರೇ 11 ಮಂದಿ ನೌಕರರ ಕುಟುಂಬಗಳಿಗೆ ಮಾತ್ರವೇ ಪರಿಹಾರ ವಿತರಿಸಲಾಗಿದೆ ಎಂದು ಅರ್ಜಿದಾರರಾದ ತಾಹಿರ್ ಹುಸೈನ್ ಮತ್ತು  ಅಝೀಝï ಪಾಶಾ ಅವರು ಹೈಕೋರ್ಟ್ನಲ್ಲಿ ಅರಿಕೆ ಮಾಡಿಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್ ಪ್ರತಿವಾ ದಿಗಳಾದ ರಾಜ್ಯ ಸಾರಿಗೆ ಇಲಾಖೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ವಾಯುವ್ಯ ರಸ್ತೆ ಸಾರಿಗೆ ನಿಗಮಕ್ಕೆ ವಿವರ ಕೋರಿ  ನೋಟೀಸು ಜಾರಿ ಮಾಡಿದೆ. ಅಂದಹಾಗೆ,

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಒಂದು ವಾರದೊಳಗೆ 25 ಲಕ್ಷ ರೂಪಾಯಿ ಪರಿಹಾರ ವಿತರಿಸಿದ ರಾಜ್ಯ ಸರಕಾರ, ಮೃತ ಸಾರಿಗೆ  ನೌಕರರ ಕುಟುಂಬಕ್ಕೆ ಪರಿಹಾರ ವಿತರಣೆಯಾಗುವಂತೆ ನೋಡಿಕೊಳ್ಳುವುದಕ್ಕೆ ಯಾಕೆ ವಿಫಲವಾಗಿದೆ ಎಂಬ ಪ್ರಶ್ನೆಗೆ ಉತ್ತರ ಕಷ್ಟದ್ದೇನೂ  ಅಲ್ಲ. 2020 ಮಾರ್ಚ್ನಿಂದ 2021 ಜೂನ್ ವರೆಗಿನ ಅವಧಿಯಲ್ಲಿ 351 ಮಂದಿ ಸಾರಿಗೆ ನೌಕರರು ಕೊರೋನಾದಿಂದಾಗಿ ಮೃತ ಪಟ್ಟಿದ್ದಾರೆ ಎಂಬುದು, ಸರ್ಕಾರವೇ ಮಾಹಿತಿ ಹಕ್ಕು ಕಾಯ್ದೆಯಡಿ ಒದಗಿಸಿರುವ ವಿವರ. ಇಷ್ಟಿದ್ದೂ, ಈ ಒಂದು ವರ್ಷದ ಅವಧಿಯಲ್ಲಿ  ಬರೇ 11 ಮಂದಿಗೆ ಮಾತ್ರ ಪರಿಹಾರ ವಿತರಿಸಿ ಉಳಿದವರನ್ನು ನಿರ್ಲಕ್ಷಿಸಲು ಕಾರಣವೇನು? ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಒಂದೇ  ವಾರದಲ್ಲಿ ಪರಿಹಾರ ವಿತರಿಸಲು ಸಮರ್ಥವಾಗಿರುವ ಸರ್ಕಾರಕ್ಕೆ, ಮಸೂದ್ ಮತ್ತು ಫಾಝಿಲ್‌ಗೆ ಪರಿಹಾರ ವಿತರಿಸುವುದು ಬಿಡಿ, ಕ ನಿಷ್ಠ ಘೋಷಿಸಲೂ ಸಾಧ್ಯವಾಗಿಲ್ಲವೇಕೆ? ಪ್ರವೀಣ್ ನೆಟ್ಟಾರು ಮನೆಗೆ ಬಿಜೆಪಿಯ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು  ಮುಖ್ಯಮಂತ್ರಿ ವರೆಗೆ ಮತ್ತು ದ.ಕ. ಜಿಲ್ಲೆಗೆ ಸಂಬಂಧವೇ ಇಲ್ಲದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹರೂ ಸೇರಿ ಎಲ್ಲರೂ ಜಿದ್ದಿಗೆ  ಬಿದ್ದವರಂತೆ ಭೇಟಿ ಕೊಟ್ಟಿರುವಾಗ, ಅಲ್ಲೇ  ಪಕ್ಕದಲ್ಲಿರುವ ಮಸೂದ್ ಮನೆಗೆ ಮತ್ತು ಇದೇ ಪ್ರವೀಣ್ ನೆಟ್ಟಾರು ಮನೆಯಿಂದ 30  ಕಿಲೋಮೀಟರ್ ದೂರದಲ್ಲಿರುವ ಫಾಝಿಲ್ ಮನೆಗೆ ಇವರಲ್ಲಿ ಒಬ್ಬರೇ ಒಬ್ಬ ಜನಪ್ರತಿನಿಧಿ ಭೇಟಿ ಕೊಡದಿರುವುದಕ್ಕೆ ಕಾರಣಗಳೇನು?  ನಿಜವಾಗಿ,

ಸರಕಾರ, ಹೇಗೆ ಸಂತ್ರಸ್ತರಿಗೆ ವಿತರಿಸಬೇಕಾದ ಪರಿಹಾರದ ಮೊತ್ತದಲ್ಲೂ ರಾಜಕೀಯ ಲಾಭ-ನಷ್ಟವನ್ನು ಲೆಕ್ಕ ಹಾಕುತ್ತದೆ ಎಂಬುದಕ್ಕೆ  ಮೃತ ಸಾರಿಗೆ ನೌಕರರು ಮತ್ತು ಪ್ರವೀಣ್ ನೆಟ್ಟಾರು ಪ್ರಕರಣ ಉತ್ತರವನ್ನು ಹೇಳುತ್ತದೆ. ಸಾರಿಗೆ ನೌಕರರು ರಾಜಕೀಯ  ಕಾರ್ಯಕರ್ತರಲ್ಲ. ಅವರ ಸಾವು ಮತ್ತು ಉಳಿವು ಸರ್ಕಾರದ ವರ್ಚಸ್ಸಿನ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ.  ಅಲ್ಲದೇ, ಕೊರೋನಾದಿಂದಾಗುವ ಸಾವಿಗೆ ಸಾಮುದಾಯಿಕ ಭಾವನೆಗಳನ್ನು ಕೆರಳಿಸುವ ಸಾಮರ್ಥ್ಯ ಇಲ್ಲ. ಅಂಥ ಸಾವುಗಳನ್ನು  ವ್ಯಕ್ತಿಗತವಾಗಿ ನೋಡಲಾಗುತ್ತದೆಯಾದ್ದರಿಂದ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ವಿತರಿಸುವುದರಿಂದ ಸಾಮಾಜಿಕ ಭಾವನೆಯಲ್ಲಿ ಭಾರೀ  ಬದಲಾವಣೆ ತರಬಹುದಾದ ಸ್ಥಿತಿ ಇಲ್ಲ. ಹಾಗಂತ,

ಒಟ್ಟು 351 ಮಂದಿಯಲ್ಲಿ ಪರಿಹಾರ ಲಭಿಸಿದ 11 ಮಂದಿ ಮಾತ್ರ ಹಿಂದೂಗಳು, ಉಳಿದವರೆಲ್ಲ ಮಸೂದ್ ಮತ್ತು ಫಾಝಿಲ್  ಸಮುದಾಯಕ್ಕೆ ಸೇರಿದವರು ಎಂದು ಇದರರ್ಥವಲ್ಲ. ಮೃತಪಟ್ಟವರ ಪೈಕಿ ಶೇ. 99 ಮಂದಿ ಕೂಡ ಫಾಝಿಲ್ ಮತ್ತು ಮಸೂದ್ ಪ್ರತಿ ನಿಧಿಸುವ ಸಮುದಾಯಕ್ಕೆ ಸೇರಿದವರಲ್ಲ. ಒಂದುವೇಳೆ, ಹಿಂದೂಗಳ ಹಿತರಕ್ಷಣೆಯೇ ಬೊಮ್ಮಾಯಿ ಸರ್ಕಾರದ ಪರಮ ಗುರಿ  ಎಂದಾಗಿರುತ್ತಿದ್ದರೆ, ಇಷ್ಟರಲ್ಲಾಗಲೇ ಮೃತ ಸಾರಿಗೆ ನೌಕರರ ಕುಟುಂಬಗಳೂ ತಲಾ 30 ಲಕ್ಷ  ರೂಪಾಯಿ ಪರಿಹಾರವನ್ನು ಪಡೆ ದಿರಬೇಕಿತ್ತು. ಆದರೆ ಅದಾಗಿಲ್ಲ. ಮಾತ್ರವಲ್ಲ, ಅದೇ ಸಂತ್ರಸ್ತ ಕುಟುಂಬಗಳು ನ್ಯಾಯಕ್ಕಾಗಿ ಅಲೆಯುವಂತಾಗಿದೆ. ರಾಜ್ಯ ಸರಕಾರ ಹೇಗೆ  ತಾನು ಹಿಂದೂಗಳ ಸಂರಕ್ಷಕ ಎಂಬ ರೀತಿಯಲ್ಲಿ ಪೋಸು ಕೊಟ್ಟು ಓಟು ರಾಜಕೀಯದಲ್ಲಿ ಬ್ಯುಸಿಯಾಗಿದೆ ಎಂಬುದಕ್ಕೆ ಇದು ಸ್ಪಷ್ಟ  ಉದಾಹರಣೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಮತ್ತು ಪರಿಹಾರ ನೀಡುವ ಮೂಲಕ ಸಾಂತ್ವನ ಒದಗಿಸುವುದು ಈ ಸರ್ಕಾರದ  ಉದ್ದೇಶ ಅಲ್ಲ. ನಿಜವಾಗಿ,

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಪರಿಹಾರ ವಿತರಿಸಿದ್ದರೆ ಅದಕ್ಕೆ ಕಾರಣ ಅವರ ಬಗೆಗಿನ ಕಾಳಜಿ ಅಲ್ಲ, ರಾಜಕೀಯ ದುರುದ್ದೇಶ.  ಮಸೂದ್ ಮತ್ತು ಫಾಝಿಲ್ ಕುಟುಂಬಗಳನ್ನು ನಿರ್ಲಕ್ಷಿಸಿ ಪ್ರವೀಣ್ ಕುಟುಂಬವನ್ನು ಮಾತ್ರ ಆದರಿಸುವುದರಿಂದ ತನ್ನ ‘ಹಿಂದೂ  ಸಂರಕ್ಷಕ’ ಎಂಬ ವರ್ಚಸ್ಸಿಗೆ ಬಲ ಬಂದೀತು ಎಂಬ ನಂಬಿಕೆ ಅದಕ್ಕಿದೆ. ಮುಸ್ಲಿಮರನ್ನು ನಿರ್ಲಕ್ಷಿಸುವುದೇ ಹಿಂದೂಗಳ ಪರ  ನಿಂತಿರುವುದಕ್ಕೆ ಪುರಾವೆ ಎಂಬAತೆ ಬಿಂಬಿಸುವುದು ಅದರ ಉದ್ದೇಶ. ಹಿಂದೂ ಮುಸ್ಲಿಮರನ್ನು ಭಾವನಾತ್ಮಕವಾಗಿ ವಿಭಜಿಸುವುದು ಮತ್ತು  ಹಿಂದೂಗಳ ಪರ ನಿಲ್ಲುವುದು- ಇವೇ ಬಿಜೆಪಿಯ ರಾಜಕೀಯ ತಂತ್ರ. ಕೊರೋನಾದಿಂದ ಮೃತಪಟ್ಟ ಸಾರಿಗೆ ನೌಕರರ ವಿಷಯದಲ್ಲಿ ಈ  ಭಾವನಾತ್ಮಕ ವಿಭಜನೆ ಸಾಧ್ಯವಿಲ್ಲ. ಯಾಕೆಂದರೆ, ಕೊರೋನಾಕ್ಕೆ ‘ಅಲ್ಲಾಹುವೇ’ ಕಾರಣ ಎಂಬುದು ಈವರೆಗೂ ಸಾಬೀತಾಗಿಲ್ಲ.  ಒಂದುವೇಳೆ, ಇಂಥದ್ದೊಂದು  ಪ್ರಚಾರ ನಿಜಕ್ಕೂ ಯಶಸ್ವಿಯಾಗಿರುತ್ತಿದ್ದರೆ ಮೃತಪಟ್ಟ ಎಲ್ಲ ಹಿಂದೂ ಸಾರಿಗೆ ನೌಕರರಿಗೂ ಈಗಾಗಲೇ  ಪರಿಹಾರ ವಿತರಣೆಯಾಗಿರುತ್ತಿತ್ತೋ ಏನೋ?

ಮುಸ್ಲಿಮ್ ಐಕ್ಯತಾ ವೇದಿಕೆಯ ಅಡಿಯಲ್ಲಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯು ‘ಮುಸ್ಲಿಮ್ ಸಮುದಾಯದ ಪ್ರತಿಭಟನೆ’ ಎಂಬ  ಚೌಕಟ್ಟನ್ನು ಮೀರಿ ಚರ್ಚೆಗೊಳಗಾಗಬೇಕಾದಷ್ಟು ಮಹತ್ವಪೂರ್ಣವಾದುದು. ಹತ್ಯೆಗೀಡಾದ ಮಸೂದ್ ಮತ್ತು ಫಾಝಿಲ್ ಇಬ್ಬರ  ಮೇಲೂ ಯಾವ ಅಪರಾಧ ಪ್ರಕರಣಗಳೂ ದಾಖಲಾಗಿಲ್ಲ. ಯಾರೊಂದಿಗೂ ಜಗಳವಾಡಿದ, ಯಾವುದಾದರೂ ಪ್ರಕರಣದಲ್ಲಿ ಪೊ ಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿರುವ ಕಪ್ಪು ಚುಕ್ಕೆಯೂ ಅವರ ಮೇಲಿಲ್ಲ. ತಮ್ಮಷ್ಟಕ್ಕೇ ದುಡಿದು ಕುಟುಂಬವನ್ನು ಸಾಕುತ್ತಿದ್ದ ಈ  ಇಬ್ಬರು ಯುವಕರನ್ನು ಕೋಮುದ್ವೇಷದ ಹೊರತು ಹತ್ಯೆ ಮಾಡುವುದಕ್ಕೆ ಬೇರಾವ ಕಾರಣಗಳೂ ಇಲ್ಲ. ಮುಸ್ಲಿಮ್ ಎಂಬುದರ  ಹೊರತಾಗಿ ಅವರ ಹತ್ಯೆಗೆ ಇರಬಹುದಾದ ಇನ್ನಾವ ಕಾರಣಗಳನ್ನೂ ಪೊಲೀಸರು ಬಹಿರಂಗಪಡಿಸಿಲ್ಲ. ಮಸೂದ್ ಹತ್ಯೆಯ ನಂತರ  ಪ್ರವೀಣ್ ನೆಟ್ಟಾರು ಹತ್ಯೆ ನಡೆದಿದೆ. ಆ ಬಳಿಕ ಫಾಝಿಲ್ ಹತ್ಯೆ ನಡೆದಿದೆ. ಈ ಮೂರೂ ಹತ್ಯೆಗಳಿಗೆ ಧರ್ಮದ ಹೊರತಾದ ಇನ್ನಾವ  ಕಾರಣಗಳೂ ಇಲ್ಲದೇ ಇರುವುದರಿಂದ ಈ ಮೂರೂ ಹತ್ಯೆಗಳನ್ನು ಸಮಾನವಾಗಿ ಕಾಣಬೇಕಾದುದು ರಾಜಧರ್ಮವನ್ನು ಪಾಲಿಸುವ  ಯಾವುದೇ ಸರ್ಕಾರದ ಪರಮ ಕರ್ತವ್ಯ. ಆದರೆ,

ಬೊಮ್ಮಾಯಿ ಸರ್ಕಾರ ಹಾಗೆ ನಡಕೊಂಡಿಲ್ಲ. ಪ್ರವೀಣ್ ನೆಟ್ಟಾರು ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿಕೊಟ್ಟ ಸರ್ಕಾರ ಉಳಿದೆರಡು  ಪ್ರಕರಣ ತನಿಖೆಯನ್ನು ಮಾತ್ರ ತನ್ನ ಬಳಿಯೇ ಇಟ್ಟುಕೊಂಡಿತು. ಎನ್‌ಐಎಗೆ ವಹಿಸಲಾಗುವ ಪ್ರಕರಣಗಳಲ್ಲಿ ಆರೋಪಿಗಳು ಸುಲಭವಾಗಿ  ಜಾಮೀನು ಪಡೆದು ಹೊರಬರುವುದಕ್ಕೆ ಸಾಧ್ಯವಿಲ್ಲ. ಜಾಮೀನಿಗಾಗಿ ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಆದರೆ, ಎನ್‌ಐಎ ಹೊರತಾದ  ತನಿಖೆಗಳಲ್ಲಿ ಜಾಮೀನು ಪ್ರಕ್ರಿಯೆ ಇಷ್ಟು ಕಠಿಣವಾಗಿಲ್ಲ. ಆದ್ದರಿಂದಲೇ, ಫಾಝಿಲ್ ಹತ್ಯೆ ಪ್ರಕರಣದ ಆರೋಪಿ ಈಗಾಗಲೇ ಜಾಮೀನು  ಪಡೆದು ಹೊರಬಂದಿದ್ದಾನೆ. ಇದರಾಚೆಗೆ ಹೇಳುವುದಕ್ಕೇನಿದೆ? ಅಂದಹಾಗೆ,

ನರಗುಂದದ ಸಮೀರ್, ಶಿವಮೊಗ್ಗದ ಹರ್ಷ ಮತ್ತು ದಕ್ಷಿಣ ಕನ್ನಡದ ಈ ಮೂರು ಪ್ರಕರಣಗಳ ವಿಷಯದಲ್ಲಿ ಬೊಮ್ಮಾಯಿ ಸರ್ಕಾರ  ನಿಷ್ಪಕ್ಷಪಾತವಾಗಿ ವರ್ತಿಸಿಲ್ಲ ಎಂದು ಬಿಜೆಪಿ ಬೆಂಬಲಿಗರೇ ಪರಸ್ಪರ ಹೇಳಿಕೊಳ್ಳುವಷ್ಟು ಸರ್ಕಾರದ ವರ್ಚಸ್ಸು ಕುಸಿದಿದೆ. ಹೀಗೆ ಬಹಿರಂಗ  ಅನ್ಯಾಯ ಮಾಡುವುದರಿಂದ ಯಾವುದೇ ಸರ್ಕಾರದ ಓಟಿನ ಪ್ರಮಾಣದಲ್ಲಿ ವೃದ್ಧಿಯಾಗುತ್ತದೆ ಎಂದಾದರೆ, ಆ ಓಟು ಹಾಕುವವರ  ನ್ಯಾಯ ಪ್ರಜ್ಞೆಯ ಬಗ್ಗೆಯೂ ವಿಷಾದವಾಗುತ್ತದೆ. ಧರ್ಮ ಯಾವುದೇ ಇರಲಿ, ನ್ಯಾಯ ಸರ್ವರ ಪಾಲಿಗೂ ಸಮಾನ. ಅನ್ಯಾಯವೂ  ಹಾಗೆಯೇ. ಮುಸ್ಲಿಮರಿಗೆ ಅನ್ಯಾಯ ಮಾಡುವುದರಿಂದ ಹಿಂದೂಗಳಿಗೆ ತೃಪ್ತಿಯಾಗುವುದು ಮತ್ತು ಹಿಂದೂಗಳಿಗೆ ಅ ನ್ಯಾಯವಾಗುವುದರಿಂದ ಮುಸ್ಲಿಮರಿಗೆ ತೃಪ್ತಿಯಾಗುವುದು- ಇವೆರಡೂ ಧರ್ಮವಿರೋಧಿ ಭಾವನೆಗಳು. ಅನ್ಯಾಯ ಫಾಝಿಲ್‌ಗಾದರೂ  ನೆಟ್ಟಾರುಗಾದರೂ ಸಮೀರ್‌ಗಾದರೂ ಹರ್ಶನಿಗಾದರೂ ಅನ್ಯಾಯವೇ. ಇವುಗಳಲ್ಲಿ ಒಂದಕ್ಕೆ ದುಃಖಿಸಿ ಇನ್ನೊಂದಕ್ಕೆ ಸಂಭ್ರಮಪಡುವುದು  ಧರ್ಮ ಮತ್ತು ಅದು ಬೋಧಿಸುವ ನ್ಯಾಯ ನೀತಿಯನ್ನೇ ಹತ್ಯೆಗೈದಂತೆ.

No comments:

Post a Comment