Tuesday, 13 February 2018

ನಿಜಕ್ಕೂ ಸಾದಿಯಾ ಯಾರು?

      ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. 4ರಂದು ಸದ್ದಿಲ್ಲದೇ ಬಿಡುಗಡೆಗೊಳಿಸಿದ್ದಾರೆ ಮತ್ತು ಪೋಷಕರಿಗೆ ಕೈಯಾರೆ ಒಪ್ಪಿಸಿದ್ದಾರೆ. ಜನವರಿ 24 ಮತ್ತು 25ರ ನಡುವೆ ಬಹುತೇಕ ಎಲ್ಲ ಸುದ್ದಿ ಮಾಧ್ಯಮಗಳು ಸಾದಿಯಾ ಅನ್ವರ್ ಶೇಖ್ ಎಂಬ ಈ 18ರ ಹರೆಯದ ಯುವತಿಯ ಬಗ್ಗೆ ಬ್ರೇಕಿಂಗ್ ನ್ಯೂಸ್ ಪ್ರಕಟಿಸಿದ್ದವು. ‘ಗಣರಾಜೋತ್ಸವ ಪೆರೇಡ್ ಮೇಲೆ ಸಿಡಿಯಲಿದ್ದ ಶಂಕಿತ ಆತ್ಮಹತ್ಯಾ ಬಾಂಬರ್ ಬಂಧನ’ ಎಂಬ ರೀತಿಯ ಶೀರ್ಷಿಕೆಯಲ್ಲಿ ಹೆಚ್ಚಿನ ಇಂಗ್ಲಿಷ್ ಪತ್ರಿಕೆಗಳು ಸುದ್ದಿಗೆ ಭಾರೀ ಮಹತ್ವ ಕೊಟ್ಟು ಮುದ್ರಿಸಿದ್ದುವು. ಡಿಎನ್‍ಎ ಪತ್ರಿಕೆಯಂತೂ ‘How a convent educated girl from Pune became a Suicide bomber idolizing Burhan Wani’  (ಬುರ್‍ಹಾನ್ ವಾನಿಯನ್ನು ಆರಾಧಿಸುತ್ತಿದ್ದ ಕಾನ್ವೆಂಟ್ ಶಿಕ್ಷಿತ ಯುವತಿ ಹೇಗೆ ಆತ್ಮಹತ್ಯಾ ಬಾಂಬರ್ ಆದಳು) ಎಂಬ ಆಕರ್ಷಕ ಶೀರ್ಷಿಕೆಯಲ್ಲಿ ಜನವರಿ 26ರಂದು ವಿಶೇಷ ವರದಿಯನ್ನೇ ಪ್ರಕಟಿಸಿತ್ತು. ಸಾದಿಯಾಳನ್ನು ಬಿಡುಗಡೆಗೊಳಿಸಲಾದ ಈ ಹೊತ್ತಿನಲ್ಲಿ ಮತ್ತೊಮ್ಮೆ ಆ ವರದಿಯನ್ನು ಓದುವಾಗ ನಗು ಬರುತ್ತದೆ. ಕಲ್ಪಿತ ಕತೆಗಳು, ವದಂತಿಗಳು ಮತ್ತು ಪುರಾವೆ ರಹಿತ ಮಾಹಿತಿಗಳ ಆಧಾರದಲ್ಲಿ ಮಾಡಲಾಗುವ ವರದಿಗಳು ಹೇಗೆ ಆತ್ಮಹತ್ಯಾ ಬಾಂಬರ್ ಗಿಂತಲೂ ಅಪಾಯಕಾರಿ ಅನ್ನುವುದನ್ನು ಮತ್ತೆ ಮತ್ತೆ ಅದು ಸ್ಪಷ್ಟಪಡಿಸುತ್ತದೆ. ಆಕೆ ಸಿರಿಯಕ್ಕೆ ಪ್ರಯಾಣಿಸಲು ತಯಾರಿ ನಡೆಸಿದ್ದಳು ಎಂದು ಒಂದು ಪತ್ರಿಕೆ ಬರೆದರೆ, ಇನ್ನೊಂದು, ಐಸಿಸ್‍ಗೆ ಸೇರ್ಪಡೆಗೊಳಿಸುವ ಜಾಲದೊಂದಿಗೆ ಆಕೆ ಸಂಪರ್ಕದಲ್ಲಿದ್ದಳು ಎಂದು ಬರೆಯಿತು. ಆಕೆಯನ್ನು ಮೂಲಭೂತವಾದಿ ಎನ್ನಲಾಯಿತು. ತನ್ನ ಪ್ರಿಯಕರನ ಜೊತೆ ಇದ್ದಾಗಲೇ ಪೊಲೀಸರು ಆಕೆಯನ್ನು ಬಂಧಿಸಿದರು ಎಂದೂ ಹೇಳಲಾಯಿತು.
     ಸಾದಿಯಾ ಮಹಾರಾಷ್ಟ್ರದ ಪುಣೆ ಮೂಲದವಳು. ಜನವರಿ 16ರಂದು ಆಕೆ ಶ್ರೀನಗರಕ್ಕೆ ಬಂದಿಳಿದಳು, ಫೇಸ್‍ಬುಕ್ ನಲ್ಲಿ ಪರಿಚಯವಾದ ಶ್ರೀನಗರದ ಲಾಲ್ ಬಝಾರ್ ನಲ್ಲಿರುವ ಯುವಕನನ್ನು ಭೇಟಿಯಾಗುವುದು ಆಕೆಯ ಉದ್ದೇಶವಾಗಿತ್ತು ಎಂದೆಲ್ಲಾ ಹೇಳಲಾಗುತ್ತದೆ. ಶ್ರೀನಗರದ ಬಿಜ್‍ಬೇರಾದಲ್ಲಿ ಆಕೆ ಉಳಿದುಕೊಂಡಿದ್ದಳು. ಆದರೆ  ಪೊಲೀಸರು ಹುಡುಕುತ್ತಿರುವ ಸುದ್ದಿಯನ್ನು ಸ್ಥಳೀಯ ಪತ್ರಿಕೆಗಳಲ್ಲಿ ಓದಿ ಸ್ವತಃ ಅವಂತಿಪುರ ಠಾಣೆಯನ್ನು ಆಕೆ ಸಂಪರ್ಕಿಸಿದಳು ಎಂದೂ ಹೇಳಲಾಗುತ್ತದೆ. ಆದರೆ, ಇದೀಗ ಗುಪ್ತಚರ ಮಾಹಿತಿಯನ್ನು ಅರ್ಥೈಸುವಲ್ಲಿ ಕಾಶ್ಮೀರ ಪೊಲೀಸರಿಂದ ಆದ ಎಡವಟ್ಟೇ ಇವೆಲ್ಲಕ್ಕೂ ಕಾರಣ ಎಂದು ಮುಖ್ಯ ವಾಹಿನಿಯ ಪತ್ರಿಕೆಗಳು ಬರೆದಿವೆ. ನಿಜವಾಗಿ ಅನುಮಾನ ಹುಟ್ಟಿಕೊಳ್ಳುವುದೂ ಇಲ್ಲೇ. 18ರ ಹರೆಯದ ಯುವತಿಯನ್ನು ಎರಡು ವಾರಗಳ ತನಕ ಶಂಕೆಯ ಮೊನೆಯಲ್ಲಿರಿಸಿ ವಿಚಾರಣೆಗೆ ಒಳಪಡಿಸಿದ್ದರ ಹಿಂದೆ ಯಾವ ದುರುದ್ದೇಶವೂ ಇದ್ದಿರಲಿಲ್ಲವೇ? ಇದು ಬರೇ ಎಡವಟ್ಟೇ? ಇಂಥ ಎಡವಟ್ಟು ಈ ಹಿಂದೆ ಎಷ್ಟು ಬಾರಿ ಆಗಿದೆ? ಎಷ್ಟು ಮಂದಿ ಇಂಥ ಎಡವಟ್ಟಿನಿಂದ ಎನ್‍ಕೌಂಟರ್‍ ಗೆ  ಒಳಗಾಗಿದ್ದಾರೆ? ಎಷ್ಟು ಮಂದಿಯ ಬಂಧನವಾಗಿದೆ? ಎಷ್ಟು ಮಂದಿಯ ಬಿಡುಗಡೆಯಾಗಿದೆ? ಎಡವಟ್ಟನ್ನು ಎಡವಟ್ಟು ಎಂದು ಒಪ್ಪಿಕೊಳ್ಳದೇ ಇರುವ ಪ್ರಕರಣಗಳು ಎಷ್ಟಿವೆ? ಅದರ ಪರಿಣಾಮವನ್ನು ಎದುರಿಸುತ್ತಾ ಜೈಲಲ್ಲಿ ಕೊಳೆಯುತ್ತಿರುವ ಮಂದಿ ಎಷ್ಟಿದ್ದಾರೆ? ಅಷ್ಟಕ್ಕೂ, ಗಣರಾಜ್ಯೋತ್ಸವದ ಸಮಯದಲ್ಲೇ ಈ ಎಡವಟ್ಟು ಸಂಭವಿಸಲು ಕಾರಣಗಳೇನು? ಸಾದಿಯಾ- ಗಣರಾಜೋತ್ಸವ ಪೆರೇಡನ್ನು ಸ್ಫೋಟಿಸುತ್ತಾಳೆ ಎಂಬ ಭಯವನ್ನು ತೇಲಿಸಿಬಿಟ್ಟ ಗುಪ್ತಚರ ಇಲಾಖೆಯ ಎಡವಟ್ಟುದಾರರು ಯಾರು? ಅವರು ಎಲ್ಲಿಂದ ಈ ಎಡವಟ್ಟು ಮಾಹಿತಿ ಪಡೆದುಕೊಂಡರು? ನಿಜಕ್ಕೂ ಕಾಶ್ಮೀರದಲ್ಲಿ ಆತ್ಮಹತ್ಯಾ ಬಾಂಬರ್ ಒಬ್ಬಳು ಇದ್ದಳೇ? ಗಣರಾಜ್ಯೋತ್ಸವ ಪೆರೇಡ್ ಮೇಲೆ ದಾಳಿಯೆಸಗುವ ಉದ್ದೇಶವನ್ನು ಆಕೆ ಹೊಂದಿದ್ದಳೇ? ಗುಪ್ತಚರ ಇಲಾಖೆಗೂ ಆಕೆ ಯಾರೆಂದು ಗೊತ್ತಿತ್ತೇ? ಅನಿವಾರ್ಯ ಕಾರಣದಿಂದಾಗಿ ಆ ಯೋಜನೆಯನ್ನು ಕೈ ಬಿಡಲಾಯಿತೇ ಮತ್ತು ಸಾದಿಯಾ ಎಂಬ ಡಮ್ಮಿ ಬಾಂಬರ್ ಅನ್ನು ಉದ್ದೇಶಪೂರ್ವಕ ತೇಲಿಸಿಬಿಡಲಾಯಿತೇ? ಇನ್ನಾವುದನ್ನೋ ಮುಚ್ಚಿಡುವ ಕಾರ್ಯತಂತ್ರದ ಭಾಗವೇ ಈ ಆತ್ಮಹತ್ಯಾ ಬಾಂಬರ್?
      ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮುಂತಾದ ಸಂದರ್ಭಗಳಲ್ಲಿ ಈ ದೇಶದಲ್ಲಿ ಕಟ್ಟೆಚ್ಚರವನ್ನು ಘೋಷಿಸುವುದು ಇತ್ತೀಚಿನ ವರ್ಷಗಳಲ್ಲಿ ಮಾಮೂಲಾಗಿದೆ. ಸಂಭಾವ್ಯ ಭಯೋತ್ಪಾದನಾ ದಾಳಿಗಳ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಗಳಾಗುತ್ತವೆ. ಈ ಹಿಂದೆ 2009 ಜನವರಿ 25ರಂದು ನೊಯಿಡಾದಲ್ಲಿ ಇಬ್ಬರನ್ನು ಎನ್‍ಕೌಂಟರ್ ಮಾಡಿ ಕೊಲ್ಲಲಾಗಿತ್ತು. ಮರುದಿನ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‍ನ ಮೇಲೆ ದಾಳಿ ಎಸಗಲು ಈ ಇಬ್ಬರು ಪಾಕಿಸ್ತಾನಿಗಳು ಸಂಚು ಹೂಡಿದ್ದರು ಎಂದು ಉತ್ತರ ಪ್ರದೇಶದ ಪೊಲೀಸರು ಹೇಳಿಕೊಂಡಿದ್ದರು. ಆದರೆ ಈ ಘಟನೆಯ ಬಳಿಕ ಟೈಮ್ಸ್ ಆಫ್ ಇಂಡಿಯಾ, ದಿ ಟೆಲಿಗ್ರಾಫ್‍ನಂತಹ ಮುಖ್ಯವಾಹಿನಿಯ ಪತ್ರಿಕೆಗಳೇ ಈ ಎನ್‍ಕೌಂಟರ್‍ ನ  ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದುವು. Noida encounter: Many loopholes in Police theory ಎಂಬಂಥ ಶೀರ್ಷಿಕೆಗಳಲ್ಲಿ ಆ ಕುರಿತಂತೆ ವರದಿಗಳನ್ನೂ ಪ್ರಕಟಿಸಿದ್ದುವು. ಇದೀಗ ಸಾದಿಯಾ ಈ ಕುರಿತಾದ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾಳೆ. ನಮ್ಮ ವ್ಯವಸ್ಥೆಗೆ ಆತ್ಮಹತ್ಯಾ ಬಾಂಬರ್ ಗಳ, ಭಯೋತ್ಪಾದಕರ ಅಗತ್ಯ ಆಗಾಗ ಬೀಳುತ್ತದೆಯೇ? ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕೆ ಇಂಥ ಭೀತಿಗಳನ್ನು ಹುಟ್ಟು ಹಾಕಿ ಸಂದರ್ಭಕ್ಕೆ ತಕ್ಕಂತೆ ಸಾರ್ವಜನಿಕರಿಗೆ ರಸವತ್ತಾಗಿ ಹಂಚಲಾಗುತ್ತದೆಯೇ? ಅಂದಹಾಗೆ, ಭಯೋತ್ಪಾದಕರನ್ನು ತಯಾರಿಸುವ ಜಾಲವೊಂದು ವ್ಯವಸ್ಥೆಯೊಳಗಡೆಯೇ ಇದೆಯೇ? ಅಗತ್ಯ ಕಂಡಾಗಲೆಲ್ಲ ಈ ಜಾಲವನ್ನು ಸಕ್ರಿಯಗೊಳಿಸಿ ಬ್ರೇಕಿಂಗ್ ನ್ಯೂಸ್‍ಗಳನ್ನು ತಯಾರಿಸಲಾಗುತ್ತದೆಯೇ?
ಸಾದಿಯಾ ಸದ್ಯ ಮನೆಗೆ ಹಿಂತಿರುಗಿದ್ದಾಳೆ. ಆಕೆಯನ್ನು ಬಂಧಿಸಿದ್ದೇವೆಂದು ಹೇಳಿಕೊಂಡವರೇ ಕೈಯಾರೆ ಆಕೆಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಆತ್ಮಹತ್ಯಾ ಬಾಂಬರ್ ಆಗುವ ಯಾವ ಯೋಗ್ಯತೆಯೂ ಆಕೆಗಿಲ್ಲ ಅನ್ನುವುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಎರಡು ಮುಖ್ಯ ಪ್ರಶ್ನೆಗಳಿಗೆ ಉತ್ತರವನ್ನು ಬಯಸುತ್ತದೆ. 1. ಹಾಗಿದ್ದರೆ ಆಕೆಯ ಸುತ್ತ ಹುಟ್ಟಿಕೊಂಡ ವದಂತಿಗಳ ಹಿಂದೆ ಯಾರಿದ್ದಾರೆ? ಅವರೇಕೆ ಅಂಥದ್ದೊಂದು ಅಪಾಯಕಾರಿ ವದಂತಿಯನ್ನು ಹುಟ್ಟು ಹಾಕಿದ್ದಾರೆ? ಆತ್ಮಹತ್ಯಾ ಬಾಂಬರ್ ಎಂಬ ಗಂಭೀರ ವದಂತಿ ಹುಟ್ಟು ಹಾಕಲು ಅವರನ್ನು ಪ್ರಚೋದಿಸಿದ್ದು ಯಾರು ಮತ್ತು ಯಾವುದು? 2. ನಿಜಕ್ಕೂ ಆಕೆ ಸ್ವಯಂ ಪ್ರೇರಿತವಾಗಿ ಕಾಶ್ಮೀರಕ್ಕೆ ಬಂದಿದ್ದಳೋ ಅಥವಾ ಆಕೆಯನ್ನು ಅಲ್ಲಿಗೆ ಕರೆ ತರಲಾಗಿತ್ತೋ? ಆತ್ಮಹತ್ಯಾ ಬಾಂಬರ್ ಎಂಬುದು ಸುಳ್ಳಾದಂತೆ ಆಕೆ ಯುವಕರನ್ನು ಭೇಟಿಯಾಗಲು ಕಾಶ್ಮೀರಕ್ಕೆ ಬಂದಿದ್ದಳು ಎಂಬುದೂ ಸುಳ್ಳೇ? ಇದರ ಹಿಂದೆಯೂ ಒಂದು ರೋಚಕ ಕತೆಯಿರಬಹುದೇ?    
        ಈ ದೇಶವು ಹಲವಾರು ಭಯೋತ್ಪಾದನಾ ಕೃತ್ಯಗಳಿಗೆ ಸಾಕ್ಷಿಯಾಗಿದೆ. ಅಸಂಖ್ಯ ಮಂದಿ ತಮ್ಮ ಬದುಕನ್ನು ಕಳಕೊಂಡಿದ್ದಾರೆ. ಬಸ್ಸು, ರೈಲು, ವಿಮಾನ, ಮಾರುಕಟ್ಟೆ ಎಲ್ಲಕ್ಕೂ ಭಯದಿಂದ ಪ್ರವೇಶಿಸುವ ಸಂದರ್ಭ ಅನೇಕ ಬಾರಿ ಎದುರಾಗಿದೆ. ಅಲ್ಲದೇ ಇದೇ ಹೆಸರಲ್ಲಿ ಅನೇಕರನ್ನು ಬಂಧಿಸಲಾಗಿದೆ. ಶಿಕ್ಷಿಸಲಾಗಿದೆ. ಬಿಡುಗಡೆಯನ್ನೂ ಮಾಡಲಾಗಿದೆ. ಸತ್ತವರಿಗಂತೂ ತಾವು ಯಾವ ಕಾರಣಕ್ಕಾಗಿ ಹತ್ಯೆಗೊಳಗಾದೆವು ಎಂಬುದು ಗೊತ್ತಿರುವುದಿಲ್ಲ. ಜೀವಂತ ಇರುವವರು ವ್ಯವಸ್ಥೆ ತೋರಿಸಿಕೊಟ್ಟವರನ್ನು ಶಪಿಸುತ್ತಾ ದಿನ ದೂಡುತ್ತಿದ್ದಾರೆ. ಆದರೆ ಇದರಾಚೆಗೆ ಏನೋ ಇದೆ ಅನ್ನುವುದನ್ನು ಸಾದಿಯಾ ಪ್ರಕರಣ ಎತ್ತಿ ತೋರಿಸುತ್ತಿದೆ. ಈ ಬಗೆಗಿನ ಗೊಂದಲ ಮುಂದುವರಿದಷ್ಟೂ ವ್ಯವಸ್ಥೆ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಾ ಹೋಗಬಹುದು.Monday, 5 February 2018

ಝೈಬುನ್ನಿಸಾ: ಯಾರು ಬರೆದ ಚಿತ್ರಕತೆ?

 
      ಝೈಬುನ್ನಿಸಾ ಎಂಬ ಪುಟ್ಟ ಬಾಲಕಿ ಈ ಸಮಾಜದ ಮುಂದೆ ಕೆಲವು ಪ್ರಶ್ನೆಗಳನ್ನೆಸೆದು ಹೊರಟು ಹೋಗಿದ್ದಾಳೆ. ಇದರ ಬೆನ್ನಿಗೇ ರಚನಾ ಎಂಬ ಯುವತಿಯೂ ಹೊರಟು ಹೋಗಿದ್ದಾಳೆ. ಎರಡು ದಿನಗಳ ನಡುವೆ ನಡೆದ ಇಬ್ಬರ ಹಠಾತ್ ನಿರ್ಗಮನಕ್ಕೆ `ಆತ್ಮಹತ್ಯೆ’ ಎಂಬ ಬಹೂಪಯೋಗಿ ಆರೋಪವನ್ನು ಹೊರಿಸಿ ಈ ಸಮಾಜ ಕೈ ತೊಳೆದುಕೊಳ್ಳುವ ಸ್ಥಿತಿಯಲ್ಲಿದೆ. ರಚನಾ- ಮೂಡಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಕಾಲೇಜು ವಿದ್ಯಾರ್ಥಿನಿ. ಝೈಬುನ್ನಿಸಾ- ಮಂಡ್ಯದ ಕೆ.ಆರ್. ಪೇಟೆಯಲ್ಲಿರುವ ಅಲ್ಪಸಂಖ್ಯಾತ ವಸತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ. ಈ ಇಬ್ಬರಲ್ಲಿ ಝೈಬುನ್ನಿಸಾ ನಮ್ಮನ್ನು ಮತ್ತೆ ಮತ್ತೆ ಕಾಡುತ್ತಾಳೆ. ಅದಕ್ಕಿರುವ ಕಾರಣ- ಒಂದು ಆಡಿಯೋ. ಸಾವಿಗಿಂತ ಕೆಲವು ಗಂಟೆಗಳ ಮೊದಲು ಈ ಮಗು ತನ್ನ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತಾಡಿದೆ. ಆ ಮಾತುಕತೆಯನ್ನು ಆ ತಾಯಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಎಳೆಯ ಪ್ರಾಯದ ಈ ಮಗು ತನ್ನ ಶಾಲೆಯ ಬಗ್ಗೆ ಮತ್ತು ರವಿ ಎಂಬ ಶಿಕ್ಷಕನ ಬಗ್ಗೆ ಅತ್ಯಂತ ಆತಂಕದಿಂದ ಮಾತಾಡಿದೆ. ತನ್ನ ಮೇಲಾಗುತ್ತಿರುವ ದೌರ್ಜನ್ಯವನ್ನು ಹೇಳಿಕೊಂಡಿದೆ. ಯಾರ ಹೃದಯವನ್ನೂ ಅಲುಗಾಡಿಸುವಷ್ಟು ನೋವು ಆ ಮಗುವಿನ ಧ್ವನಿಯಲ್ಲಿದೆ. ವಿಶೇಷ ಏನೆಂದರೆ, ಈ ಮಗುವಿನ ಓರ್ವ ತಂಗಿ ಮತ್ತು ತಮ್ಮ ಇದೇ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಒಂದು ರೀತಿಯಲ್ಲಿ, ಮೂವರ ಪುಟ್ಟ ತಂಡವೇ ಆ ವಸತಿ ಶಾಲೆಯಲ್ಲಿತ್ತು. ಮನೆಯಿಂದ ದೂರ ಇದ್ದು ಕಲಿಯುವ ಮಕ್ಕಳ ಪಾಲಿಗೆ ಇಂಥ ಸಂದರ್ಭಗಳು ಸೃಷ್ಟಿಯಾಗುವುದು ತೀರಾ ತೀರಾ ಕಡಿಮೆ. ಹೀಗೆ ಮಾನಸಿಕವಾಗಿ ಧೈರ್ಯವನ್ನು ತುಂಬಬಲ್ಲ ವಾತಾವರಣ ಇದ್ದಾಗ್ಯೂ ಝೈಬುನ್ನಿಸಾ ಆತ್ಮಹತ್ಯೆ ಮಾಡಿಕೊಂಡಳೇ ಅಥವಾ ಇನ್ನೇನಾದರೂ ನಡೆದಿದೆಯೇ? ನಾಲ್ವರು ಶಿಕ್ಷಕಿಯರು ಮತ್ತು ಓರ್ವ ಶಿಕ್ಷಕನಿರುವ ಈ ವಸತಿ ಶಾಲೆಯಿಂದ ತಿಂಗಳ ಹಿಂದೆ ಪ್ರವಾಸ ಕೈಗೊಳ್ಳಲಾಗಿತ್ತು. ಝೈಬುನ್ನಿಸಾ ಆ ಪ್ರವಾಸದಲ್ಲಿ ಭಾಗಿಯಾಗಿದ್ದಳು. ಮಾತ್ರವಲ್ಲ, ಪ್ರವಾಸದಿಂದ ಹಿಂತಿರುಗಿ ಬಂದ ಬಳಿಕ ಮಂಕಾಗಿದ್ದಳು ಎಂಬ ನೋವು ಹೆತ್ತವರದ್ದು. ಈ ಮಂಕುತನಕ್ಕೆ ಕಾರಣವೇನು? ಆಕೆಯೊಳಗೆ ರಹಸ್ಯವೇನಾದರೂ ಇತ್ತೇ? ಆ ರಹಸ್ಯ ಬಹಿರಂಗವಾಗುವ ಬಗ್ಗೆ ಯಾರಿಗಾದರೂ ಭಯವಿತ್ತೇ? ಆ ಭಯವೇ ಆಕೆಯನ್ನು ಹತ್ಯೆ ಮಾಡಿತೆ?
       ಕೆಲವು ತಿಂಗಳುಗಳ ಹಿಂದೆ ಕಾವ್ಯ ಎಂಬ ಬಾಲಕಿ ಸಾವಿಗೀಡಾಗಿದ್ದಳು. ಅದಕ್ಕೂ ಆತ್ಮಹತ್ಯೆ ಎಂಬ ನಾಲ್ಕಕ್ಪರವನ್ನೇ ಆರೋಪಿ ಸ್ಥಾನದಲ್ಲಿ ಕೂರಿಸಲಾಗಿತ್ತು. ರಚನಾ ಓದಿದ ಅದೇ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದ ಕಾವ್ಯ ಸಾವಿಗಿಂತ ಮೊದಲು ತನ್ನ ತಾಯಿಯೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಳು. ಆ ತಾಯಿಯೂ ಆ ಸಂಭಾಷಣೆಯನ್ನು ದಾಖಲಿಸಿಕೊಂಡಿದ್ದರು. ಆ ಸಂಭಾಷಣೆಯನ್ನು ಆಲಿಸುವ ಯಾರೂ ಈ ಮಗು ಆತ್ಮಹತ್ಯೆ ಮಾಡಿಕೊಳ್ಳುತ್ತದೆ ಎಂಬುದನ್ನು ಒಪ್ಪಲಾರರು. ಅಷ್ಟು ಲವಲವಿಕೆಯಿಂದ ಆ ಮಗು ತನ್ನ ತಾಯಿಯೊಂದಿಗೆ ಮಾತಾಡಿತ್ತು. ಆದರೆ ಮರುದಿನ ಆ ಮಗು ನಿರ್ಜೀವವಾಗಿ ಮಲಗಿಕೊಂಡಿತ್ತು. ನಿಜಕ್ಕೂ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಯೇ? ಅಷ್ಟೊಂದು ಒತ್ತಡ ಅವರ ಮೇಲಿರುತ್ತದೆಯೇ? ಹೌದು ಎಂದಾದರೆ, ಆ ಒತ್ತಡವನ್ನು ಯಾರು ಹೇರುತ್ತಿದ್ದಾರೆ? ಆ ಒತ್ತಡದ ಹುಟ್ಟು ಎಲ್ಲಿ? ಯಾವ ಕಾರಣಕ್ಕಾಗಿ ಒತ್ತಡವಿದೆ? ಈ ಒತ್ತಡದಲ್ಲಿ ಮನೆಯವರ ಪಾಲು ಎಷ್ಟು, ಶಿP್ಷÀಕರ ಪಾಲು ಎಷ್ಟು, ಕಲಿಕೆಯ ಪಾಲು ಎಷ್ಟು ಅಥವಾ ಬಾಹ್ಯ ಜಗತ್ತಿನ ಪಾಲು ಎಷ್ಟು? ಯಾವುದೇ ಪಠ್ಯಪುಸ್ತಕವು ಆತ್ಮಹತ್ಯೆಗೆ ಪ್ರಚೋದಿಸುವಷ್ಟು ಅಪಾಯಕಾರಿಯಾಗಿಲ್ಲ. ಅಲ್ಲದೇ ಒಂದು ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ಎಲ್ಲ ಮಕ್ಕಳೂ ರಾಂಕ್  ಪಡೆಯಬಲ್ಲಷ್ಟು ಪ್ರತಿಭಾವಂತರೂ ಆಗಿರುವುದಿಲ್ಲ. ಪ್ರಕೃತಿ ಸಹಜವಾದ ಈ ಸತ್ಯವನ್ನು ಶಿಕ್ಷಕರಂತೂ ಖಂಡಿತ ಅರಿತಿರುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳ ಸಾವಿಗೆ ‘ಕಲಿಕಾ ಒತ್ತಡ’ ಎಂಬ ಕಾರಣವನ್ನು ಒಪ್ಪಲು ಸಾಧ್ಯವೇ ಇಲ್ಲ. ಕಲಿಕಾ ಒತ್ತಡ ಎಂಬುದೇ ಕೃತಕ ಸೃಷ್ಟಿ. ಕಲಿಕೆ ಸಹಜವಾಗಿ ದಕ್ಕಬೇಕಾದುದು. ಕೆಲವರಿಗೆ ಬೇಗ ಮತ್ತು ಹೆಚ್ಚು ದಕ್ಕುತ್ತದೆ ಮತ್ತು ಇನ್ನೂ ಕೆಲವರಿಗೆ ಕಡಿಮೆ ದಕ್ಕುತ್ತದೆ ಎಂಬುದನ್ನು ಬಿಟ್ಟರೆ ಉಳಿದಂತೆ ಸಾವಿಗೂ ಶಿಕ್ಷಣಕ್ಕೂ ಸಂಬಂಧ ಕಲ್ಪಿಸಬೇಕಿಲ್ಲ. ನಿಜವಾಗಿ, ಒತ್ತಡ ರಹಿತವಾದ ಶಿಕ್ಷಣವನ್ನು ಒತ್ತಡಭರಿತವನ್ನಾಗಿ ಮಾಡುವುದೇ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು. ಶಿಕ್ಷಣ ಸಂಸ್ಥೆಗಳ ಪ್ರತಿಷ್ಠೆಗಾಗಿ ವಿದ್ಯಾರ್ಥಿಗಳ ಮೇಲೆ ತಾಳಲಾಗದ ಒತ್ತಡವನ್ನು ಹೇರಲಾಗುತ್ತದೆ. ರಾಂಕು, ಡಿಸ್ಟಿಂಕ್ಷನ್‍ಗಾಗಿ ವಿದ್ಯಾರ್ಥಿಗಳನ್ನು ಖೈದಿಗಳಂತೆ ನಡೆಸಿಕೊಳ್ಳಲಾಗುತ್ತದೆ. ಒಂದು ವೇಳೆ ಈ ಒತ್ತಡವನ್ನು ತಾಳಲಾರದೇ ಮಗುವೊಂದು ಮೃತಪಟ್ಟರೆ ತಕ್ಷಣ ಅದಕ್ಕೆ ಆತ್ಮಹತ್ಯೆ ಎಂಬ ಲೇಬಲ್ಲನ್ನು ಹಚ್ಚಿಬಿಟ್ಟು ಎಲ್ಲರೂ ಹೊಣೆಗಾರಿಕೆಯಿಂದ ಮುಕ್ತರಾಗುತ್ತಾರೆ. ಆದ್ದರಿಂದ ಮಕ್ಕಳ ಸಾವನ್ನು ‘ಆತ್ಮಹತ್ಯೆ’ ಎಂಬ ಭರಣಿಯಲ್ಲಿಟ್ಟು ಮುಚ್ಚಿಡುವುದನ್ನು ಈ ಸಮಾಜ ಮೊಟ್ಟಮೊದಲು ಪ್ರಶ್ನಿಸಬೇಕು. ಆತ್ಮಹತ್ಯೆ ಎಂಬುದು ಮಕ್ಕಳನ್ನು ಸಾಯಿಸುವುದಕ್ಕೆ ದೊಡ್ಡವರು ಕಂಡುಕೊಂಡ ಸುಲಭ ಪರಿಹಾರವಾಗಿರಬಹುದೇ ಎಂಬ ಅನುಮಾನವೊಂದನ್ನು ಸದಾ ತಮ್ಮ ಬಳಿ ಸಮಾಜ ಇಟ್ಟುಕೊಳ್ಳಬೇಕು. ಕಾವ್ಯ, ರಚನಾ ಮತ್ತು ಝೈಬುನ್ನಿಸಾ ನಮಗೆ ಮುಖ್ಯವಾಗಬೇಕಾದುದು ಈ ಕಾರಣಕ್ಕಾಗಿಯೇ. ಈ ಮೂವರಲ್ಲಿ ಕಾವ್ಯ ಮತ್ತು ಝೈಬುನ್ನಿಸಾ ತಮ್ಮ ಸಾವಿಗಿಂತ ಕೆಲವು ಗಂಟೆಗಳ ಮೊದಲು ಹೆತ್ತವರೊಂದಿಗೆ ದೂರವಾಣಿಯಲ್ಲಿ ಮಾತಾಡಿz್ದÁರೆ. ಕಾವ್ಯ ಅತ್ಯಂತ ಲವಲವಿಕೆಯಿಂದ ಮಾತಾಡಿದರೆ, ಝೈಬು ಅತ್ಯಂತ ಆತಂಕದಿಂದ ಮಾತಾಡಿz್ದÁಳೆ. ನಿಜವಾಗಿ, ಲವಲವಿಕೆ ಮತ್ತು ಆತಂಕ ಎರಡೂ ವಿರುದ್ಧಾರ್ಥ ಪದಗಳು. ಆದರೆ ಈ ಎರಡರ ಅಂತ್ಯವೂ ಒಂದೇ ರೀತಿಯಲ್ಲಿ ಆಗಿದೆ. ಬಹುಶಃ, ಕಲಿಕೆಗಿಂತ ಹೊರತಾದ ಇನ್ನಾವುದೋ ಒತ್ತಡವೊಂದು ಈ ಮಕ್ಕಳ ಮೇಲಾಗಿದೆ ಅಥವಾ ಅವರು ಸಾಯಲೇಬೇಕಾದ ಅಗತ್ಯವೊಂದು ಇನ್ನಾರಿಗೋ ಉಂಟಾಗಿದೆ. ಅವರೇ ಆತ್ಮಹತ್ಯೆ ಎಂಬ ಕತೆ, ಚಿತ್ರಕತೆಯನ್ನು ರಚಿಸಿ ಸಮಾಜಕ್ಕೆ ಅರ್ಪಿಸಿದ್ದಾರೆ.
     ಝೈಬುನ್ನಿಸಾ ತನ್ನ ಶಿಕ್ಷಕನ ಮೇಲೆ ಕೆಲವು ಗಂಭೀರ ಆರೋಪಗಳನ್ನು ಹೊರಿಸಿದ್ದಾಳೆ. ಬಹುಶಃ, ಇದು ಆಕೆಯೊಬ್ಬಳ ಆರೋಪವಾಗಿರುವ ಸಾಧ್ಯತೆ ಇಲ್ಲ. ಆ ವಸತಿ ಶಾಲೆಯಲ್ಲಿ ಇನ್ನೆಷ್ಟು ಝೈಬುಗಳಿದ್ದಾರೆ ಮತ್ತು ಅವರೊಳಗಿರುವ ಆತಂಕಗಳು ಏನೇನು ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನಗಳಾಗಬೇಕು. ಹೆತ್ತವರೊಂದಿಗೆ ಹಂಚಿಕೊಳ್ಳಲಾಗದ ಮತ್ತು ದೂರವಾಣಿಯಲ್ಲಿ ಹೇಳಿಕೊಳ್ಳಲಾಗದ ದೂರುಗಳು ಆಕೆಯೊಳಗಿದ್ದುವೇ, ಗೆಳತಿಯರೊಂದಿಗೆ ಆಕೆ ಅದನ್ನು ಹಂಚಿಕೊಂಡಿದ್ದಳೇ, ಸಂಭಾವ್ಯ ಅಪಾಯವನ್ನು ಆಕೆ ಗ್ರಹಿಸಿದ್ದಳೇ.. ಇತ್ಯಾದಿಗಳು ತನಿಖೆಗೆ ಒಳಪಡಬೇಕು. ಅಲ್ಪಸಂಖ್ಯಾತ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ.. ಮುಂತಾದ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವುದು ಬಡವರ ಮಕ್ಕಳು. ತಮ್ಮ ಮಕ್ಕಳನ್ನು ಇಂಥ ಶಾಲೆಯಲ್ಲಿ ಬಿಟ್ಟು ಬರುವ ಹೆತ್ತವರಲ್ಲಿ ನೋವು ಮತ್ತು ಖುಷಿ ಎರಡೂ ಇರುತ್ತದೆ. ಕರುಳಕುಡಿಯನ್ನು ಅಗಲುವ ನೋವು ಒಂದು ಕಡೆಯಾದರೆ, ಮಗುವಿಗೆ ಶಿಕ್ಷಣ ಸಿಗುತ್ತದೆ ಅನ್ನುವ ಖುಷಿ ಇನ್ನೊಂದೆಡೆ. ಈ ಹಿನ್ನೆಲೆಯಲ್ಲಿ, ಸರಕಾರವು ಝೈಬುನ್ನಿಸಾ ಸಾವನ್ನು ಗಂಭೀರವಾಗಿ ಪರಿಗಣಿಸಬೇಕು. ಬಡವರ ಪಾಲಿನ ಖುಷಿಯನ್ನು ಕಸಿದು ಬಿಡುವ ಇಂಥ ಘಟನೆಗಳು ಇನ್ನೆಂದೂ ನಡೆಯಬಾರದು. ಮಕ್ಕಳು ಈ ಭೂಮಿಯ ನಕ್ಷತ್ರಗಳು. ಅವಕ್ಕೆ ಈ ಜಗತ್ತಿನ ರಾಗ-ದ್ವೇಷಗಳು ಗೊತ್ತಿರುವುದಿಲ್ಲ. ದೊಡ್ಡವರ ಸಂಚುಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಅವು ಪ್ರಬುದ್ಧವೂ ಆಗಿರುವುದಿಲ್ಲ. ಝೈಬು ಅಂಥದ್ದೇ ಒಂದು ನಕ್ಷತ್ರ. ಇಂಥ ನಕ್ಷತ್ರಗಳು ಈ ದೇಶದಲ್ಲಿ ಕೋಟ್ಯಂತರ ಇವೆ. ಅವೆಲ್ಲವೂ ಮಿಂಚಬೇಕು. ದೊಡ್ಡವರು ಈ ನಕ್ಷತ್ರಗಳಿಗೆ ಕಾವಲು ನಿಲ್ಲಬೇಕು. ಯಾರು ಈ ನಕ್ಷತ್ರಗಳನ್ನು ಚಿವುಟಿ ಹಾಕಬಯಸುತ್ತಾರೋ ಅವರ ಹೆಸರು, ಧರ್ಮ, ಪ್ರಭಾವವನ್ನು ಪರಿಗಣಿಸದೆಯೇ ತೀವ್ರವಾಗಿ ದಂಡಿಸಬೇಕು. ಅಂದಹಾಗೆ, ಝೈಬುನ್ನಿಸಾಳನ್ನು ಮರಳಿ ಬದುಕಿಸಿಕೊಳ್ಳುವುದಕ್ಕೆ ಈ ಸಮಾಜದಿಂದ ಸಾಧ್ಯವಿಲ್ಲ. ಆದರೆ ಆಕೆ ಬಿಟ್ಟು ಹೋದ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಿದರೆ ಇನ್ನಷ್ಟು ಮಕ್ಕಳು ಝೈಬುಗಳಾಗುವುದನ್ನು ತಡೆಯಬಹುದು.

Tuesday, 30 January 2018

ವಿಷದ ಮೂಲವನ್ನು ಹುಡುಕುತ್ತಾ...

     `ಏಕ ವ್ಯಕ್ತಿ ಪ್ರತಿಭಟನೆ’ಯಾಗಿ ಗುರುತಿಸಿಕೊಂಡು ಕೇರಳದ ಹೊರಗೂ ಗಮನ ಸೆಳೆದಿದ್ದ ಶ್ರೀಜಿತ್ ಎಂಬ ಯುವಕನ ಸತ್ಯಾಗ್ರಹಕ್ಕೆ ಕೊನೆಗೂ ಜಯ ಲಭಿಸಿದೆ. ಆದರೆ ಈ ಜಯವನ್ನು ಆಚರಿಸಬೇಕಿರುವ ಶ್ರೀಜಿತ್ ಕಳೆದ 770 ದಿನಗಳ ಸತ್ಯಾಗ್ರಹದಿಂದ ಬಸವಳಿದಿದ್ದಾನೆ. ದೇಹ ಕೃಶವಾಗಿದೆ. ಕೆನ್ನೆ ಗುಳಿ ಬಿದ್ದಿದೆ. ಕಣ್ಣುಗಳೆರಡೂ ನಿಸ್ತೇಜಗೊಂಡಿವೆ. ತನ್ನ ಬೇಡಿಕೆಯನ್ನು ಈಡೇರಿಸಿ ಕೇಂದ್ರ ಸರಕಾರ ಕಳುಹಿಸಿದ ಪತ್ರವನ್ನು ಕೇರಳ ಮುಖ್ಯಮಂತ್ರಿಯವರ ಖಾಸಗಿ ಕಾರ್ಯದರ್ಶಿಯಿಂದ ಪಡಕೊಂಡು ನಕ್ಕಾಗಲೂ ಕಳೆಗುಂದಿದ ವಾತಾವರಣವೊಂದು ಅಲ್ಲಿತ್ತು. ಇದಕ್ಕಾಗಿ 770 ದಿನಗಳ ವರೆಗೆ ಯಾಕೆ ಸತಾಯಿಸಿದಿರಿ ಅನ್ನುವ ಪ್ರಶ್ನೆಯೊಂದನ್ನು ಶ್ರೀಜಿತ್ ಮೌನವಾಗಿ ಈ ವ್ಯವಸ್ಥೆಯ ಮುಂದಿಟ್ಟಿದ್ದ. ಪ್ರಜಾತಂತ್ರ ರಾಷ್ಟ್ರವೊಂದರಲ್ಲಿ ನಾಗರಿಕನೊಬ್ಬ ತನ್ನ ಬೇಡಿಕೆಯನ್ನು ಈಡೇರಿಸಿಕೊಳ್ಳುವುದಕ್ಕೆ ದೇಹವನ್ನು ದಂಡಿಸಬೇಕೆ? 770 ದಿನಗಳ ಬಳಿಕ ಸ್ಪಂದಿಸುವ ವ್ಯವಸ್ಥೆಗೆ ಆರಂಭದಲ್ಲೇ ಸ್ಪಂದಿಸುವುದಕ್ಕೆ ಅಡ್ಡಿ ಏನಿತ್ತು? ಯಾರು ತಡೆದಿದ್ದರು? ಯಾಕೆ ತಡೆದಿದ್ದರು? ಹಾಗಂತ, ಶ್ರೀಜಿತ್ ಈ ವ್ಯವಸ್ಥೆಯ ಮುಂದಿಟ್ಟಿದ್ದ ಬೇಡಿಕೆ ಸ್ವಹಿತಾಸಕ್ತಿಯದ್ದೋ ಆರ್ಥಿಕವಾಗಿ ಲಾಭಕರವಾದದ್ದೋ ಆಗಿರಲಿಲ್ಲ. ಕೇರಳ ಪೊಲೀಸ್ ಕಂಪ್ಲೆಂಟ್ ಅಥಾರಿಟಿಯು (KPCA) ಗಂಭೀರ ದೋಷಾರೋಪಣೆ ಹೊರಿಸಿದ ಪ್ರಕರಣವೊಂದರ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬುದು ಆತನ ಬೇಡಿಕೆಯಾಗಿತ್ತು. 2014 ಮೇ 21ರಂದು ಶ್ರೀಜಿತ್‍ನ ಅಣ್ಣ ಶ್ರೀವಿಜಿಯ ಸಾವು ಸಂಭವಿಸುತ್ತದೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ನಡೆದ ಈ ಸಾವಿಗೆ ವಿಷ ಸೇವನೆಯೇ ಕಾರಣ ಎಂದು ಇಲಾಖೆ ಸ್ಪಷ್ಟನೆಯನ್ನು ನೀಡುತ್ತದೆ. ಲುಂಗಿಯಲ್ಲಿ ಆತ ವಿಷ ಪದಾರ್ಥವನ್ನು ಅಡಗಿಸಿಟ್ಟಿದ್ದ ಎಂಬ ಸಮರ್ಥನೆಯನ್ನೂ ಕೊಡುತ್ತದೆ. ಮೊಬೈಲ್ ಕಳ್ಳತನದ ಸಾಮಾನ್ಯ ಆರೋಪವನ್ನು ಹೊತ್ತುಕೊಂಡ ವ್ಯಕ್ತಿಯೋರ್ವ ವಿಷ ಸೇವನೆಯಂಥ ಅಸಾಮಾನ್ಯ ಕ್ರಮಕ್ಕೆ ಧೈರ್ಯ ಮಾಡಬಲ್ಲನೇ, ಅದಕ್ಕಾಗಿ ವಿಷ ಸಂಗ್ರಹಿಸಿ ಇಟ್ಟುಕೊಳ್ಳಬಲ್ಲನೇ ಅನ್ನುವ ಪ್ರಶ್ನೆ ಶ್ರೀಜಿತ್‍ನಂತೆಯೇ ಹಲವರನ್ನು ಆ ಸಂದರ್ಭದಲ್ಲಿ ಕಾಡಿತ್ತು. ಆದರೆ ಪೊಲೀಸ್ ತನಿಖೆಯಲ್ಲಿ ಈ ಪ್ರಶ್ನೆಗೆ ಯಾವ ಮಹತ್ವವೂ ಲಭಿಸಿರಲಿಲ್ಲ. ‘ಸ್ವಯಂಪ್ರೇರಿತವಾಗಿ ವಿಷ ಸೇವಿಸಿರುವುದೇ ಸಾವಿಗೆ ಕಾರಣ’ ಎಂದು ಅದು ಷರಾ ಬರೆದಿತ್ತು. ಅಲ್ಲದೇ, ಆತನದ್ದೆಂದು ಹೇಳಲಾದ ಡೆತ್ ನೋಟನ್ನು ಪೊಲೀಸ್ ತನಿಖೆಯಲ್ಲಿ ಪುರಾವೆಯಾಗಿ ಎತ್ತಿ ಹೇಳಲಾಗಿತ್ತು. ಒಂದು ರೀತಿಯಲ್ಲಿ, ಆತ್ಮಹತ್ಯೆ ಪ್ರಕರಣವಾಗಿ ಬಹುತೇಕ ಮುಗಿದು ಹೋಗಿದ್ದ ಪ್ರಕರಣಕ್ಕೆ ಮತ್ತೆ ಜೀವ ತುಂಬಿದ್ದು 2016ರಲ್ಲಿ ನಡೆದ ಕೇರಳ ಪೊಲೀಸ್ ಕಂಪ್ಲೇಂಟ್ ಅಥಾರಿಟಿಯ (KPCA) ತನಿಖೆ. ಅದು ಶ್ರೀವಿಜಿಯ ಸಾವನ್ನು ಕಸ್ಟಡಿ ಸಾವು ಎಂದು ಘೋಷಿಸಿತು. ಪಾರಶ್ಶಾಲ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಗೋಪಕುಮಾರ್ ಮತ್ತು ಎಎಸ್‍ಐ ಪಿಲಿಪ್ಪೋಸ್ ಎಂಬಿಬ್ಬರು ಶ್ರೀವಿಜಿಗೆ ಚಿತ್ರಹಿಂಸೆಯನ್ನು ನೀಡಿ, ಬಲವಂತದಿಂದ ವಿಷ ತಿನ್ನಿಸಿರುವರೆಂದು ಅದು ಕಂಡುಕೊಂಡಿತ್ತು. ಅಲ್ಲದೇ ಡೆತ್ ನೋಟ್‍ನ ಬಗ್ಗೆ ಫಾರೆನ್ಸಿಕ್ ಇಲಾಖೆಯ ವರದಿಯ ಪ್ರಾಮಾಣಿಕತೆಯ ಮೇಲೂ ಅದು ಅನುಮಾನವನ್ನು ವ್ಯಕ್ತಪಡಿಸಿತು. ಹೈಕೋರ್ಟ್‍ನ ಮಾಜಿ ನ್ಯಾಯಾಧೀಶರಾಗಿದ್ದ ನಾರಾಯಣ ಕುರುಪ್ ಅವರ ನೇತೃತ್ವದಲ್ಲಿ ನಡೆದ ಈ ಕೆಪಿಸಿಎಯ ತನಿಖೆಯ ಫಲಿತಾಂಶವು ಶ್ರೀಜಿತ್ ಕುಟುಂಬವನ್ನು ಆಘಾತಕ್ಕೆ ಒಳಪಡಿಸಿತು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕುಟುಂಬ ಆಗ್ರಹಿಸಿತು. ತಿರುವನಂತಪುರದಲ್ಲಿರುವ ಸರಕಾರದ ಮುಖ್ಯ ಕಾರ್ಯದರ್ಶಿಯವರ ಕಚೇರಿಯ ಮುಂದೆ ಅಂದಿನಿಂದ ಶ್ರೀಜಿತ್ ಸತ್ಯಾಗ್ರಹಕ್ಕೆ ಕುಳಿತುಕೊಂಡ. ಆತ ಇವತ್ತು ಈ ವ್ಯವಸ್ಥೆಯ ಮೇಲೆ ಎಷ್ಟು ಭರವಸೆರಹಿತವಾಗಿ ಬದುಕುತ್ತಿರುವನೆಂದರೆ, ತನ್ನ ಬೇಡಿಕೆಯನ್ನು ಒಪ್ಪಿಕೊಂಡು ಕೇಂದ್ರ ಸರಕಾರ ಹೊರಡಿಸಿದ ದೃಢೀಕರಣ ಪತ್ರವನ್ನೂ ನಂಬುತ್ತಿಲ್ಲ. ಮುಖ್ಯಮಂತ್ರಿಯವರ ಕಾರ್ಯದರ್ಶಿಯ ಮೂಲಕ ಆತನಿಗೆ ಆ ಪತ್ರವನ್ನು ನೀಡಲಾದ ನಂತರವೂ ಆತ ಸತ್ಯಾಗ್ರಹವನ್ನು ಮುಕ್ತಾಯಗೊಳಿಸಿಲ್ಲ. ಸಿಬಿಐಯು ತನಿಖೆಯನ್ನು ಆರಂಭಿಸಿದ ಬಳಿಕವೇ ತಾನು ಸತ್ಯಾಗ್ರಹದಿಂದ ವಿರಮಿಸುವೆನೆಂದು ಆತ ಹೇಳಿಕೊಂಡಿದ್ದಾನೆ.
    ನಿಜವಾಗಿ, ಶ್ರೀಜಿತ್ ಈ ದೇಶದ ಎದುರು ಕೆಲವು ಪ್ರಶ್ನೆಗಳನ್ನು ಇಟ್ಟಿದ್ದಾನೆ. ಈ ಪ್ರಶ್ನೆಗಳಿಗೆ ಈ ದೇಶ ಮುಖಾಮುಖಿಯಾಗದೇ ಹೋದರೆ ಅದು ಈ ದೇಶದ ವ್ಯವಸ್ಥೆಯನ್ನು ಇನ್ನಷ್ಟು ನಿರಂಕುಷತೆಯೆಡೆಗೆ ಕೊಂಡೊಯ್ಯಬಹುದು. ಈ ದೇಶದಲ್ಲಿ ಪ್ರತಿನಿತ್ಯ ಬಂಧನ, ವಿಚಾರಣೆ, ಬಿಡುಗಡೆ, ಸಾವು.. ಇತ್ಯಾದಿಗಳು ನಡೆಯುತ್ತಲೇ ಇರುತ್ತವೆ. 120 ಕೋಟಿಯಷ್ಟು ಜನಸಂಖ್ಯೆಯಿರುವ ದೇಶವೊಂದರಲ್ಲಿ ಇವೆಲ್ಲ ಸಹಜ ಎಂದು ನಾವು ಸಮರ್ಥಿಸಿಕೊಳ್ಳಬಹುದಾದರೂ ಇವುಗಳಲ್ಲಿ ಅಸಹಜವಾದುದೂ ಇರುತ್ತದೆ ಅನ್ನುವುದನ್ನು ಶ್ರೀಜಿತ್ ದೇಶದ ಮುಂದಿಟ್ಟಿದ್ದಾನೆ. ಪೊಲೀಸರು ಬಂಧಿಸುವ ವ್ಯಕ್ತಿ ನಿಜಕ್ಕೂ ಬಂಧನಕ್ಕೆ ಅರ್ಹನಾಗಿಯೇ ಇರಬೇಕೆಂದಿಲ್ಲ. ಪೊಲೀಸ್ ಇಲಾಖೆಯಲ್ಲಿರುವ ಕೆಲವರ ಸ್ವಹಿತಾಸಕ್ತಿಯ ಕಾರಣಕ್ಕಾಗಿ ಆತನ ಬಂಧನವಾಗಿರಬಹುದು. ಇನ್ನಾರನ್ನೋ ತೃಪ್ತಿಪಡಿಸುವುದಕ್ಕಾಗಿ ಆತನನ್ನು ‘ಫಿಕ್ಸ್’ ಮಾಡಿರಬಹುದು. ರಾಜಕೀಯ ಅಥವಾ ಧಾರ್ಮಿಕ ಹಿತಾಸಕ್ತಿಗಳು ಆ ಬಂಧನದ ಹಿಂದೆ ಕೆಲಸ ಮಾಡಿರಬಹುದು. ಸಾರ್ವಜನಿಕ ಆಕ್ರೋಶವನ್ನು ತಣಿಸುವ ಉದ್ದೇದಿಂದ ಆತನ ಬಂಧನವಾಗಿರಲೂ ಬಹುದು. ಅಂದಹಾಗೆ, ಶ್ರೀವಿಜಿ ಮೊಬೈಲ್ ಕದ್ದಿರಲೇ ಇಲ್ಲ ಎಂದೂ ಹೇಳಲಾಗುತ್ತದೆ. ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಆತನ ಮೇಲೆ ಪ್ರಕರಣವನ್ನು ಫಿಕ್ಸ್ ಮಾಡಿ ಹತ್ಯೆ ಮಾಡಲಾಗಿದೆ ಎಂಬ ಆರೋಪವೂ ಇದೆ. ದುರಂತ ಏನೆಂದರೆ, ಹೀಗೆ ಅನ್ಯಾಯಕ್ಕೊಳಗಾದವರಲ್ಲಿ ಶ್ರೀವಿಜಿ ಮೊದಲಿಗನೇನಲ್ಲ. ಭಯೋತ್ಪಾದನೆಯ ಹೆಸರಲ್ಲಿ ಹತ್ತು-ಹದಿನೈದು ವರ್ಷಗಳ ಕಾಲ ಜೈಲಲ್ಲಿದ್ದು ಬಿಡುಗಡೆಗೊಂಡವರಿದ್ದಾರೆ. ವರ್ಷಗಟ್ಟಲೆ ಹಿಂಸೆ ಅನುಭವಿಸಿದವರಿದ್ದಾರೆ. ಪತ್ರಕರ್ತರು, ಪ್ರೊಫೆಸರ್‍ಗಳು, ವಿದ್ಯಾರ್ಥಿಗಳೂ ಸೇರಿದಂತೆ ದೊಡ್ಡದೊಂದು ಗುಂಪು ಈ ಬಗೆಯ ಹಿಂಸೆಗೆ ಬಲಿಯಾಗಿದೆ. ನಿರಪರಾಧಿಯಾಗಿ ಬಿಡುಗಡೆಗೊಳ್ಳುವಾಗ ಅವರು ಸಂತಸಪಡುವುದಕ್ಕಿಂತ ದುಃಖಿಸುವುದೇ ಹೆಚ್ಚು. ಶ್ರೀಜಿತ್‍ನಂತೆ ಅವರಲ್ಲೂ ಅನೇಕಾರು ಪ್ರಶ್ನೆಗಳಿರುತ್ತವೆ. ತಮ್ಮನ್ನು ಭಯೋತ್ಪಾದಕರಾಗಿ ಗುರುತಿಸಲು ಮತ್ತು ಎಫ್‍ಐಆರ್ ದಾಖಲಿಸಲು ಇದ್ದ ಕಾರಣಗಳೇನು? ಧರ್ಮವೇ, ವೇಷಭೂಷಣಗಳೇ, ಭಾಷೆಯೇ? ಯಾರ ಪಿತೂರಿಯು ಇದರ ಹಿಂದೆ ಕೆಲಸ ಮಾಡಿದೆ? ನಿರಪರಾಧಿಯೋರ್ವನನ್ನು ಹೀಗೆ ಜೈಲಲ್ಲಿಟ್ಟು ವರ್ಷಗಟ್ಟಲೆ ಕೊಳೆಯಿಸಿ ಕೊನೆಗೆ ಏನೂ ಆಗಿಲ್ಲವೆಂಬಂತೆ ಬಿಡುಗಡೆಗೊಳಿಸುವುದೆಂದರೆ ಏನರ್ಥ? ಪರಿಹಾರವೇನು? ಯಾಕೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮನುಷ್ಯ ಇಷ್ಟು ಅಗ್ಗವಾಗುತ್ತಾನೆ? ಆತನ ಮಾನ, ಪ್ರಾಣ, ಸ್ವಾಭಿಮಾನಗಳು ಯಾಕೆ ಜುಜುಬಿ ಅನ್ನಿಸಿಕೊಳ್ಳುತ್ತಿವೆ?
     ಶ್ರೀವಿಜಿಯ ಸಾವು ಶ್ರೀಜಿತ್‍ನಂಥ ಛಲಗಾರ ತಮ್ಮನನ್ನು ಈ ಸಮಾಜಕ್ಕೆ ಪರಿಚಯಿಸಿದ್ದಷ್ಟೇ ಅಲ್ಲ, ನಮ್ಮ ವ್ಯವಸ್ಥೆ ಹೊದ್ದುಕೊಂಡಿರುವ ಚರ್ಮ ಎಷ್ಟು ದಪ್ಪಗಿನದು ಎಂಬುದನ್ನೂ ಪರಿಚಯಿಸಿದೆ. ಹತ್ಯೆ ಎಂದು ಹೇಳಲಾದ ಒಂದು ಸಾವಿನ ಸುತ್ತ ತನಿಖೆ ನಡೆಸುವಂತೆ ಈ ವ್ಯವಸ್ಥೆಯನ್ನು ಒಪ್ಪಿಸಬೇಕಾದರೆ 770 ದಿನಗಳ ವರೆಗೆ ಸತ್ಯಾಗ್ರಹ ನಡೆಸಬೇಕು ಅನ್ನುವುದೇ ದೊಡ್ಡ ವ್ಯಂಗ್ಯ. 770 ದಿನಗಳ ಸತ್ಯಾಗ್ರಹದ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಬದಲು ಆರಂಭದಲ್ಲೇ  ಒಪ್ಪಿಸಲು ತೀರ್ಮಾನಿಸಿರುತ್ತಿದ್ದರೆ ಶ್ರೀಜಿತ್ ಕೃಶನಾಗುತ್ತಿದ್ದನೇ? ಪಡಬಾರದ ಹಿಂಸೆ ಅನುಭವಿಸುತ್ತಿದ್ದನೇ?
     ಏನೇ ಆಗಲಿ, ಪಟ್ಟು ಬಿಡದೇ ಹೋರಾಡಿದ ಶ್ರೀಜಿತ್‍ಗೆ ಅಭಿನಂದನೆಯನ್ನು ಸಲ್ಲಿಸಬೇಕು. ಆತ ನಿರಪರಾಧಿಗಳ ಸಂಕಟಕ್ಕೆ ಮತ್ತೊಮ್ಮೆ ದನಿಯಾಗಿದ್ದಾನೆ. ವ್ಯವಸ್ಥೆಯನ್ನು ಪೊರೆದಿರುವ ಅಪ್ರಾಮಾಣಿಕತೆಗೆ ಹೊಡೆತ ನೀಡಿದ್ದಾನೆ. ಆತನಿಗೆ ಅಭಿನಂದನೆಗಳು.

Friday, 26 January 2018

ಸುಖ ಮರಣಕ್ಕಾಗಿ ಪತ್ರ ಬರೆಯುವ ಹೆತ್ತವರು..

     ಕಳೆದವಾರ ಎರಡು ಗಮನಾರ್ಹ ಸುದ್ದಿಗಳು ಪ್ರಕಟವಾದುವು. ಒಂದು- ಮುಂಬೈಯ ದಂಪತಿಗಳದ್ದಾದರೆ, ಇನ್ನೊಂದು- ಮಾಜಿ ಚುನಾವಣಾ ಆಯುಕ್ತ ಟಿ.ಎನ್. ಶೇಷನ್‍ರಿಗೆ ಸಂಬಂಧಿಸಿದ್ದು. ಮುಂಬೈಯ 88 ವರ್ಷದ ನಾರಾಯಣ ರಾವತೆ ಮತ್ತು 78 ವರ್ಷದ ಇರವತಿ ದಂಪತಿಗಳು ಇತ್ತೀಚೆಗೆ ರಾಷ್ಟ್ರಪತಿ ರಮಾನಾಥ ಕೋವಿಂದ್‍ರಿಗೆ ಬರೆದ ಪತ್ರದ ಕುರಿತಾದ ಸುದ್ದಿ ಇದು. ತಮಗೆ ದಯಾ ಮರಣಕ್ಕೆ ಅನುಮತಿ ನೀಡಬೇಕು ಎಂದವರು ಪತ್ರದಲ್ಲಿ ಕೋರಿದ್ದರು. ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಧಿಕಾರಿಯಾಗಿ ನಿವೃತ್ತರಾಗಿರುವ ರಾವತೆ ಮತ್ತು ಶಾಲಾ ಪ್ರಾಂಶುಪಾಲರಾಗಿ ನಿವೃತ್ತರಾಗಿರುವ ಇರವತಿಯವರು ತಮ್ಮ ದಯಾ ಮರಣಕ್ಕೆ ಕಾರಣಗಳನ್ನು ಕೊಟ್ಟಿದ್ದರು. ಇನ್ನು ತಾವು ಬದುಕಿ ಉಳಿದು ಸಾಧಿಸುವುದಕ್ಕೇನೂ ಇಲ್ಲ ಎಂಬುದು ಅವರ ನಿಲುವು. ಮಕ್ಕಳಿಲ್ಲ, ಒಡಹುಟ್ಟಿದವರೂ ಜೀವಂತವಿಲ್ಲ. ಸಾವನ್ನು ಎದುರು ನೋಡುತ್ತಾ ಬದುಕುವುದಕ್ಕಿಂತ ಜೊತೆಯಾಗಿ ಸುಖಮರಣ ಹೊಂದುವುದು ಉತ್ತಮ ಎಂದು ಅವರು ಪತ್ರದಲ್ಲಿ ಬರೆದಿದ್ದರು. ತಾವು ವಾಸಿಸುವ ಮನೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದು ಮತ್ತು ಆ ಬಳಿಕ ನಿರ್ಧಾರದಿಂದ ಹಿಂದೆ ಸರಿದದ್ದನ್ನೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು. ಜಿಗಿದೂ ಸಾಯದಿದ್ದರೆ.. ಎಂಬ ಭಯವೇ ಜಿಗಿಯದಿರುವುದಕ್ಕೆ ಕಾರಣ ಎಂದೂ ಹೇಳಿದ್ದರು.
       ಇನ್ನೊಂದು- 85 ವರ್ಷದ ಟಿ.ಎನ್. ಶೇಷನ್ ಅವರದ್ದು. ಅವರು ಮತ್ತು ಅವರ ಪತ್ನಿ ಜಯಲಕ್ಷ್ಮಿಯವರು ಸದ್ಯ ಚೆನ್ನೈಯ ಗುರುಕುಲಂ ವೃದ್ಧಾಶ್ರಮದಲ್ಲಿದ್ದಾರೆ. ಹಲವು ಕಾಯಿಲೆಗಳು ಅವರನ್ನು ಮುತ್ತಿಕೊಂಡಿವೆ.
     ಅಷ್ಟಕ್ಕೂ, ರಾವತೆ ದಂಪತಿಗಳ ಪತ್ರವನ್ನು ಎತ್ತಿಕೊಂಡು ದಯಾಮರಣ ಬೇಕೋ ಬೇಡವೋ ಎಂದು ಚರ್ಚಿಸುವುದು ಸುಲಭ. ಸ್ವಿಝರ್‍ಲ್ಯಾಂಡ್‍ನಲ್ಲಿ ದಯಾಮರಣಕ್ಕೆ ಅನುಮತಿ ಇದೆ ಎಂದು ಹೇಳಿಕೊಂಡು ಚರ್ಚೆಯನ್ನು ಅತ್ಯಂತ ರೋಚಕ ಮಟ್ಟಕ್ಕೆ ಒಯ್ಯುವುದಕ್ಕೂ ಅವಕಾಶ ಇದೆ. ದಯಾ ಮರಣವೆಂಬುದು ವೈದ್ಯರ ಮೇಲ್ನೋಟದಲ್ಲಿ ಒದಗಿಸುವ ಸಾವು. ಸ್ವಿಸ್‍ನಲ್ಲಿ ಇದಕ್ಕಾಗಿ ಡಿಗ್ನಿಟಾಸ್ ಎಂಬ ಹೆಸರಿನ ಸಂಘಟನೆಯೇ ಇದೆ. ದಯಾ ಮರಣವನ್ನು ಬಯಸುವವರಿಗೆ ಅದು ನೆರವನ್ನು ನೀಡುತ್ತದೆ. ಇವು ಮತ್ತು ಇಂಥ ಹತ್ತು ಹಲವು ಉದಾಹರಣೆಗಳನ್ನು ಹರಡಿಕೊಂಡು ಈ ದೇಶದಲ್ಲೂ ದಯಾ ಮರಣಕ್ಕೆ ಸರಕಾರ ಸೂಕ್ತ ಕಾನೂನು ರೂಪಿಸಬೇಕು ಎಂದು ಚರ್ಚೆಯ ಮೂಲಕ ಒತ್ತಾಯಿಸಬಹುದು.
     ನಿಜವಾಗಿ, ರಾವತೆ ಅವರ ಪತ್ರ ಬಯಸುವುದು ಸುಖ ಮರಣದ ಚರ್ಚೆಯನ್ನಲ್ಲ. ಇಂಥದ್ದೊಂದು ಪತ್ರ ಬರೆಯಲು ಕಾರಣವಾಗಿಸಿದ ಅಂಶಗಳನ್ನು ಅದು ಚರ್ಚಿಸ ಬಯಸುತ್ತದೆ. ವೃದ್ಧಾಪ್ಯ ಎಂಬುದು ಈ ದೇಶದಲ್ಲಿ ರಾವತೆ ದಂಪತಿಗಳಿಗೆ ಮಾತ್ರ ಶಾಪ ಆಗಿರುವುದಲ್ಲ. ಕಳೆದ ವರ್ಷ ಪ್ರಕಟವಾದ ವರದಿಗಳ ಪ್ರಕಾರ, ಸುಮಾರು 70%ಕ್ಕಿಂತಲೂ ಅಧಿಕ ವೃದ್ಧರು ತಮ್ಮ ಮನೆಗಳಲ್ಲಿ ಮಾನಸಿಕ ಯಾತನೆಯನ್ನು ಅನುಭವಿಸುತ್ತಿದ್ದಾರೆ.  ಜಯಶ್ರೀ ಬೆನ್ ಎಂಬ ಕಾಯಿಲೆ ಪೀಡಿತ ತನ್ನ ತಾಯಿಯನ್ನು  ವೃತ್ತಿಯಲ್ಲಿ ಪ್ರೊಫೆಸರ್ ಆಗಿರುವ ಸಂದೀಪ್ ನಾಥ್ ವಾನಿ ಎಂಬ ಮಗ ಮನೆಯ ಟೆರೇಸ್‍ನಿಂದ ಕೆಳಕ್ಕೆ ತಳ್ಳಿ  ಹತ್ಯೆ ಮಾಡಿದ ಘಟನೆ ವಾರಗಳ ಹಿಂದೆ ಗುಜರಾತ್ ನಿಂದ  ವರದಿಯಾಗಿತ್ತು. ಭಿಕ್ಷೆ ಬೇಡಿ ಬದುಕುವ ಅಸಂಖ್ಯ ಮಂದಿ ವೃದ್ಧರು ಈ ದೇಶದಲ್ಲಿದ್ದಾರೆ. ಬಸ್ಸು, ರೈಲು ನಿಲ್ದಾಣಗಳು, ಜನ ನಿಬಿಡ ಪ್ರದೇಶಗಳಲ್ಲಿ ಇವರನ್ನು ನಾವು ನೋಡಿಯೂ ಇರುತ್ತೇವೆ. ಹೃದಯ ತುಂಬಾ ಯಾತನೆಗಳನ್ನು ಹೊತ್ತುಕೊಂಡು ನಡೆಯುವ ಮಂದಿ. ಅಲ್ಲದೇ, ಈ ದೇಶದಲ್ಲಿ ಅನೇಕಾರು ವೃದ್ಧಶ್ರಮಗಳಿವೆ. ಅಲ್ಲಿರುವವರೆಲ್ಲ ಸ್ವಇಚ್ಛೆಯಿಂದ ಬಂದು ಸೇರಿಕೊಂಡವರಲ್ಲ. ಅವರಲ್ಲೂ ನೂರಾರು ದೂರುಗಳಿವೆ. ಅಲ್ಲದೇ ಹೀಗೆ ವೃದ್ಧಾಶ್ರಮವನ್ನು ಸೇರಿಕೊಳ್ಳದೇ, ಭಿಕ್ಷಾಟನೆಯಲ್ಲೂ ಕಾಣಿಸಿಕೊಳ್ಳದೇ ತಂತಮ್ಮ ಮನೆಗಳಲ್ಲೇ ಕೈದಿಗಳಂತೆ ಬದುಕುವ ಅಸಂಖ್ಯ ಮಂದಿ ನಮ್ಮ ನಡುವೆ ಇದ್ದಾರೆ. ಒಂದು ಕಡೆ- ಪ್ರಾಯ ಸಹಜ ದಣಿವು, ಇನ್ನೊಂದು ಕಡೆ- ಕಾಯಿಲೆಗಳು, ಮತ್ತೊಂದು ಕಡೆ ತಮ್ಮವರಿಂದ ಸಿಗದ ಪ್ರೀತಿ ಮತ್ತು ವಾತ್ಸಲ್ಯಗಳು ಅವರನ್ನು ತೀವ್ರವಾಗಿ ನೋಯಿಸಿರುತ್ತವೆ. ಹಾಗಂತ, ಇವಕ್ಕೆಲ್ಲ ದಯಾಮರಣ ಉತ್ತರವಾಗಬಹುದೇ? ಸಾವನ್ನು ಪರಿಹಾರವಾಗಿ ಕಾಣುವುದೆಂದರೆ, ಸಮಸ್ಯೆಗಳಿಗೆ ಬೆನ್ನು ತಿರುಗಿಸುವುದು ಎಂದರ್ಥ. ಸಾಯುವುದು ಕಷ್ಟಕರವೇನೂ ಅಲ್ಲ. ಸಾಯುವುದಕ್ಕೆ ನೂರಾರು ದಾರಿಗಳು ನಮ್ಮ ಎದುರು ತೆರೆದೇ ಇವೆ. ಈ ಸುಲಭದ ದಾರಿಯ ಮೇಲೆ ಚರ್ಚಿಸುವುದೆಂದರೆ ನಿಜವಾಗಿ ಸಮಸ್ಯೆಗಳಿಗೆ ಪರಿಹಾರ ದೊರಕಲಾರದು. ಸದ್ಯ ನಾವು ನಡೆಸಬೇಕಾದ ಚರ್ಚೆ ಏನೆಂದರೆ, ರಾವತೆ ದಂಪತಿಗಳು ದಯಾ ಮರಣವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಕಾರಣಗಳೇನು ಎಂಬುದು. ತೀವ್ರ ಮಟ್ಟದ ಯಾವ ಕಾಯಿಲೆಯೂ ಇಲ್ಲದ ಇವರು ಸಾಯಲು ನಿರ್ಧರಿಸಿರುವುದಕ್ಕೆ ಒಂದೋ ಒಂಟಿತನ ಅಥವಾ ಮುಂದಿನ ದಿನಗಳು ಹೇಗೋ ಎಂಬ ಭಯವೇ ಕಾರಣ. ಹಾಗಂತ, ಇದು ಇವರಿಬ್ಬರ ಇಚ್ಛೆ ಮಾತ್ರ ಎಂದು ಹೇಳಬೇಕಿಲ್ಲ. ಈ ದೇಶದಲ್ಲಿ ಹೀಗೆ ಸಾವನ್ನು ಬಯಸುವ ವೃದ್ಧರು ಅನೇಕ ಇರಬಹುದು. ಅದಕ್ಕಿರುವ ಕಾರಣಗಳಲ್ಲಿ ಹೆಚ್ಚಿನವು ಮನುಷ್ಯ ನಿರ್ಮಿತವೇ ಹೊರತು ಪ್ರಕೃತಿ ನಿರ್ಮಿತವಲ್ಲ.
     ಇವತ್ತು ಯಾರೆಲ್ಲ ವೃದ್ಧಾಪ್ಯಕ್ಕೆ ತಲುಪಿದ್ದಾರೋ ಅವರೆಲ್ಲ ಆ ರೂಪದಲ್ಲಿಯೇ ಜನಿಸಿದವರಲ್ಲ. ಅವರು ಮಗುತನ, ಯೌವನ ಮತ್ತು ಮಧ್ಯ ವಯಸ್ಸನ್ನು ದಾಟಿಯೇ ವೃದ್ಧಾಪ್ಯಕ್ಕೆ ತಲುಪಿದ್ದಾರೆ. ವೃದ್ಧಾಪ್ಯಕ್ಕಿಂತ ಮೊದಲಿನ ದೀರ್ಘ ಅವಧಿಯಲ್ಲಿ ಅವರು ಈ ದೇಶಕ್ಕೆ ಮತ್ತು ತಮ್ಮ ಕುಟುಂಬಕ್ಕೆ ದೊಡ್ಡದೊಂದು ಕೊಡುಗೆಯನ್ನು ಸಲ್ಲಿಸಿರುತ್ತಾರೆ. ಆ ಕೊಡುಗೆಯ ಪ್ರಮಾಣವನ್ನು ಪರಿಗಣಿಸಿದರೆ ಅವರನ್ನು ಸುಖಕರವಾಗಿ ನೋಡಿಕೊಳ್ಳುವುದಕ್ಕೆ ಇನ್ನಾವುದರ ಅಗತ್ಯವೂ ಬರಲಾರದು. ಮುಖ್ಯವಾಗಿ, ವೃದ್ಧರ ಮೇಲೆ ಮಕ್ಕಳ ಹಕ್ಕುಗಳಿವೆ. ಒಡ ಹುಟ್ಟಿದವರ ಹಕ್ಕುಗಳಿವೆ. ಸಮಾಜದ ಹಕ್ಕುಗಳಿವೆ ಮತ್ತು ಸರಕಾರದ ಜವಾಬ್ದಾರಿಗಳೂ ಇವೆ. ವೃದ್ಧರು ಮಕ್ಕಳ ಪಾಲಿಗೋ ಸಮಾಜದ ಪಾಲಿಗೋ ಅಥವಾ ಸರಕಾರಕ್ಕೋ ಭಾರವಲ್ಲ, ಅವರು ಆಸ್ತಿ. ದುರಂತ ಏನೆಂದರೆ, ಸಾಮಾಜಿಕ ಸಂಬಂಧಗಳು ಇವತ್ತು ದಿನೇ ದಿನೇ ಸಂಕೀರ್ಣವಾಗುತ್ತಾ ಹೋಗುತ್ತಿದೆ. ಮಕ್ಕಳು ತಮ್ಮ ಹೆತ್ತವರ ಕೊಡುಗೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಮಾಜಕ್ಕೂ ಕೆಲವೊಮ್ಮೆ ಕುರುಡುತನ ಬಾಧಿಸುತ್ತದೆ. ಸರಕಾರವಂತೂ ಇವರನ್ನು ಭಾರ ಜೀವಿಗಳಾಗಿ ನಿರ್ಲಕ್ಷಿಸುವುದೂ ನಡೆಯುತ್ತದೆ. ಹಿರಿಯರ ಕಲ್ಯಾಣದ ದೃಷ್ಟಿಯಿಂದ ಈ ದೇಶದಲ್ಲಿ ಏನೇನು ಕಾಯಿದೆ-ಕಾನೂನುಗಳಿವೆ ಎಂಬುದು ಬಹುತೇಕ ಹಿರಿಯರಿಗೂ ಗೊತ್ತಿರುವುದಿಲ್ಲ. ಸಮಾಜಕ್ಕೂ ಅರಿವಿರುವುದಿಲ್ಲ. ಹಿರಿಯರಿಗೆ ಪ್ರತಿಭಟಿಸುವ ಸಾಮಥ್ರ್ಯ ಇಲ್ಲವಾದುದರಿಂದ ಅವರ ಸಂಕಟ ಸಮಾಜದ ಮುಂದೆ ವ್ಯಕ್ತವಾಗುವುದೂ ಇಲ್ಲ. ಮನೆಯೆಂಬ ನಾಲ್ಕು ಗೋಡೆಯೊಳಗೆ ನೋವು ಅನುಭವಿಸುತ್ತಲೋ ಅಥವಾ ಮನೆಯಿಂದ ಹೊರದಬ್ಬಿಸಿಕೊಂಡು ಭಿಕ್ಷಾಟನೆಯಲ್ಲೋ ಅವರು ಆಯುಷ್ಯವನ್ನು ಕಳೆಯುತ್ತಿರುತ್ತಾರೆ. ಇದು ಅತ್ಯಂತ ವಿಷಾದನೀಯ. ಮೊದಲನೆಯದಾಗಿ, ಪ್ರತಿ ಹಿರಿಯರಿಗೂ ಸುಖಮಯ ಬದುಕಿನ ಖಾತರಿಯನ್ನು ನಮ್ಮ ವ್ಯವಸ್ಥೆ ನೀಡಬೇಕು. ಅವರ ಕಲ್ಯಾಣಕ್ಕಾಗಿ ಸೂಕ್ತ ಯೋಜನೆಗಳನ್ನು ರೂಪಿಸಬೇಕು. ಪ್ರತಿ ಮನೆಯ ವೃದ್ಧರ ಗಣತಿ ಮಾಡುವುದರೊಂದಿಗೆ ಅವರ ಸ್ಥಿತಿಗತಿಯ ಬಗ್ಗೆ ಮಾಹಿತಿ ಸಂಗ್ರಹವಾಗಬೇಕು. ಅವರಿಗೆ ಸರಕಾರದ ಯೋಜನೆಗಳು ಲಭ್ಯವಾಗುತ್ತಿವೆಯೋ ಎಂಬುದನ್ನು ನೋಡಿಕೊಳ್ಳಬೇಕು.
      ಧರ್ಮಶ್ರದ್ಧೆಯುಳ್ಳ ದೇಶವೊಂದರಲ್ಲಿ ಹೆತ್ತವರು ನಿರಾಶೆಯಿಂದ ಬದುಕುವುದೆಂದರೆ ಅದು ಮಕ್ಕಳ ಪಾಲಿಗೆ ಅವಮಾನಕರ. ಧರ್ಮಗಳಂತೂ ಹೆತ್ತವರ ಸೇವೆಯ ಬಗ್ಗೆ ದಾರಾಳವಾಗಿ ಹೇಳಿವೆ. ಇಸ್ಲಾಮ್ ಧರ್ಮವಂತೂ, ಹೆತ್ತವರ ತೃಪ್ತಿಯೇ ಮಕ್ಕಳ ಸ್ವರ್ಗ ಮತ್ತು ಅವರ ಅತೃಪ್ತಿಯೇ ಮಕ್ಕಳ ನರಕ ಎಂದು ಎಚ್ಚರಿಸಿದೆ. ಒಂದು ರೀತಿಯಲ್ಲಿ, ಹಿರಿಯರೆಂದರೆ ಕಿರಿಯರಿಗೆ ಸ್ವರ್ಗದ ಬಾಗಿಲುಗಳು. ಆ ಬಾಗಿಲುಗಳನ್ನು ಜೋಪಾನವಾಗಿ ಕಾಯೋಣ. ಸುಖಿ ಮರಣಕ್ಕಾಗಿ ಪತ್ರ ಬರೆಯುವ ಸ್ಥಿತಿಗೆ ಅವರನ್ನು ತಳ್ಳದಿರೋಣ.

Tuesday, 16 January 2018

ಜನವರಿ 01ರ ಪ್ರತಿಭಟನಾ ಚಿತ್ರ..

1996 ಡಿ. 29ರ ರಾತ್ರಿ ಮೂವರು ದಲಿತ ಯುವಕರೂ ಸೇರಿದಂತೆ ಐವರ ಮೇಲೆ ಹಲ್ಲೆ ನಡೆಯುತ್ತದೆ. ಇಬ್ಬರು ದಲಿತ ಯುವಕರ ಕೇಶ ಮುಂಡನ ಮಾಡಲಾಗುತ್ತದೆ. ಮೇಲ್ವರ್ಗವು ನಡೆಸಿದ ಈ ಹಲ್ಲೆಯನ್ನು ಆ ಯುವಕರು ಸವಾಲಾಗಿ ಸ್ವೀಕರಿಸುತ್ತಾರೆ. ಒಂದೆಡೆ ಹಣ ಮತ್ತು ತೋಲ್ಬಳ. ಇನ್ನೊಂದೆಡೆ ಛಲ. ಹಿಂದುಳಿದ ಮತ್ತು ದಲಿತ ಕಾಯ್ದೆಯ ಅಡಿಯಲ್ಲೂ ಕೇಸು ದಾಖಲಾಗುತ್ತದೆ. ವ್ಯವಸ್ಥೆ ಮತ್ತು ಸಾರ್ವಜನಿಕರ ಗಮನವನ್ನು ಸೆಳೆಯುವುದಕ್ಕಾಗಿ ಈ ಯುವಕರು ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಾರೆ. 2017 ಡಿ. 31ರಂದು ಕೆಲವು ಸಮಾನ ಮನಸ್ಕರನ್ನು ಸೇರಿಸಿಕೊಂಡು ಈ ಸಂತ್ರಸ್ತರು ಮತ್ತೆ ಪ್ರತಿಭಟನೆ ನಡೆಸಿದ್ದಾರೆ. ದುರಂತ ಏನೆಂದರೆ ಘಟನೆ ನಡೆದು 21 ವರ್ಷಗಳು ಸಂದಿವೆ. ಹಾಗಿದ್ದೂ ಈ ಸಂತ್ರಸ್ತರಿಗೆ ಇನ್ನೂ ನ್ಯಾಯ ದಕ್ಕಿಲ್ಲ. ನ್ಯಾಯಾಲಯವು 2017 ಡಿ. 2ನೇ ವಾರದಲ್ಲಿ ತೀರ್ಪು ನೀಡುವುದಕ್ಕೆ ಬಹುತೇಕ ಸಿದ್ಧವಾಗಿತ್ತು. ಆದರೆ, ‘ಸಂತ್ರಸ್ತರು ತಮ್ಮ ಜಾತಿಯನ್ನು ಸಾಬೀತುಪಡಿಸುವ ಸರ್ಟಿಫಿಕೇಟನ್ನು ಒಪ್ಪಿಸುವಂತೆ’ ನ್ಯಾಯಾಲಯ ಕೊನೇ ಹಂತದಲ್ಲಿ ಆದೇಶಿಸಿತು. ವಿಚಾರಣೆಯನ್ನು ಮತ್ತೆ ಮುಂದೂಡಲಾಯಿತು.
ಆಂಧ್ರಪ್ರದೇಶದ ಕಾಕಿನಾಡದ ವೆಂಕಟಾಯಪಾಲಯಂ ಎಂಬ ಊರಿನ ಘಟನೆ ಇದು. ಆರೋಪಿ ಗಳಲ್ಲಿ ಓರ್ವ ಇವತ್ತು ಆಳುವ ತೆಲುಗು ದೇಶಂ ಪಕ್ಷದ ಶಾಸಕ. ಓರ್ವ ಆರೋಪಿ ಈಗಾಗಲೇ ಸಾವಿಗೀಡಾಗಿದ್ದಾನೆ. ಅಲ್ಲದೇ 24 ಸಾಕ್ಷಿಗಳಲ್ಲಿ 13 ಮಂದಿಯೂ ಮೃತಪಟ್ಟಿದ್ದಾರೆ. ಈ ಯುವಕರು ಪ್ರತಿಭಟಿಸುತ್ತಿರುವ ದೃಶ್ಯವನ್ನು 2018 ಜನವರಿ 01ರಂದು ಪ್ರಮುಖ ಇಂಗ್ಲಿಷ್ ಪತ್ರಿಕೆಗಳು ಪ್ರಕಟಿಸಿ ದುವು. ನಿಜವಾಗಿ, ಅದನ್ನು ಆರೋಪಿಗಳ ವಿರುದ್ಧದ ಪ್ರತಿಭಟನೆ ಅನ್ನುವುದಕ್ಕಿಂತ ನಮ್ಮ ನ್ಯಾಯ ವ್ಯವಸ್ಥೆಯ ವಿರುದ್ಧದ ಆಕ್ರೋಶ ಎಂದು ಹೇಳುವುದೇ ಹೆಚ್ಚು ಸರಿ. ಘಟನೆ ನಡೆದು 21 ವರ್ಷಗಳು ಕಳೆದಿವೆ. ಘಟನೆ ನಡೆಯುವಾಗ ಯುವಕರಾಗಿದ್ದ ಸಂತ್ರಸ್ತರು ಇವತ್ತು ನಡುವಯಸ್ಸನ್ನು ದಾಟಿ ಹಿರಿಯರೆ ನಿಸಿಕೊಂಡಿದ್ದಾರೆ. ಆರೋಪಿಗಳ ಸ್ಥಿತಿಯೂ ಇದುವೇ. ಹಲ್ಲೆ ನಡೆಸುವಾಗ ಆರೋಪಿಗಳ ವಿಚಾರಧಾರೆ ಮತ್ತು ನಿಲುವು ಏನಾಗಿತ್ತೋ ಅದುವೇ ಈ 21 ವರ್ಷಗಳ ಬಳಿಕವೂ ಅವರದಾಗಿರುವ ಸಾಧ್ಯತೆ ಬಹಳ ಬಹಳ ಕಡಿಮೆ. 1996ಕ್ಕೂ ಈ 2017ಕ್ಕೂ ನಡುವೆ ದಿನಗಳು ಉರುಳಿದ ವ್ಯತ್ಯಾಸ ಮಾತ್ರ ಇರುವುದಲ್ಲ. ಉರುಳಿದ ಪ್ರತಿದಿನವೂ ವ್ಯಕ್ತಿಯ ವಿಚಾರಧಾರೆಯೊಂದಿಗೆ ಸಂಘರ್ಷ ನಡೆಸಿ ಕೊಂಡೇ ಉರುಳಿ ರುತ್ತದೆ. 20 ವರ್ಷಗಳ ಹಿಂದೆ ಜಾತಿ ಶ್ರೇಷ್ಠತೆಯ ವ್ಯಸನದಿಂದ ಬಳಲುತ್ತಿದ್ದವ ಈಗಲೂ ಅದೇ ವ್ಯಸನವನ್ನು ಅಷ್ಟೇ ತೀವ್ರವಾಗಿ ಅಂಟಿಸಿಕೊಂಡಿರುತ್ತಾನೆ ಎಂದು ಹೇಳುವ ಹಾಗಿಲ್ಲ. ಮೇಲಿನ ಯುವಕರ ಮೇಲೆ 20 ವರ್ಷಗಳ ಹಿಂದೆ ಮೇಲು ವರ್ಗದಿಂದ ಹಲ್ಲೆ ನಡೆಯುವಾಗ ಈ ದೇಶದಲ್ಲಿ ಜಾತಿ ವ್ಯಸನ ದೊಡ್ಡಮಟ್ಟದಲ್ಲಿ ಪ್ರಾಬಲ್ಯ ಸ್ಥಾಪಿಸಿತ್ತು. ಮೇಲು ವರ್ಗದ ಮಂದಿ ಕೆಳ ವರ್ಗದವರನ್ನು ತಮಗೆ ಸಮಾನರಾಗಿ ಕಾಣುವುದಕ್ಕೆ ಇನ್ನೂ ಸಿದ್ಧಗೊಂಡಿಲ್ಲದ ಸಮಯ ಅದು. ಅಂಥ ಸಮಯದಲ್ಲಿ ದಲಿತ ಯುವಕರ ಮೇಲೆ ಮೇಲುವರ್ಗದಿಂದ ಹಲ್ಲೆ ನಡೆಯುವುದು ಅಶ್ಚರ್ಯ ಕರ ಬೆಳವಣಿಗೆಯೇನೂ ಅಲ್ಲ. ಆಶ್ಚರ್ಯಕರ ಏನೆಂದರೆ, ಆ ಯುವಕರು ಹಲ್ಲೆಯನ್ನು ಪ್ರತಿಭಟಿಸು ವುದು ಮತ್ತು ಮೇಲುವರ್ಗದ ವಿರುದ್ಧ ದಾವೆ ಹೂಡುವುದು. ಇದಕ್ಕೆ ಅಪಾರ ಧೈರ್ಯ ಮತ್ತು ಛಲದ ಅಗತ್ಯ ಇದೆ. ಆದ್ದರಿಂದಲೇ ಆ ಯುವಕರು ಪ್ರಶಂಸೆಗೆ ಅರ್ಹರಾಗಿದ್ದಾರೆ. ಒಂದು ವೇಳೆ, ನ್ಯಾಯಾಲಯವು ಅತಿ ಶೀಘ್ರವಾಗಿ ಈ ಪ್ರಕರಣವನ್ನು ಮುಗಿಸಿರುತ್ತಿದ್ದರೆ ಏನಾಗುತ್ತಿತ್ತು? ಅದು ಸಮಾಜದ ಮೇಲೆ ಬೀರಬಹುದಾಗಿದ್ದ ಪರಿಣಾಮಗಳು ಏನೇನಾಗಿರುತ್ತಿತ್ತು? ನಿಜವಾಗಿ, ಈ ಪ್ರಕರಣದ ಬಗ್ಗೆ ಈ 2018ರಲ್ಲಿ ಹೊರಬೀಳುವ ತೀರ್ಪಿಗೂ 1997ರಲ್ಲಿ ಹೊರಬೀಳುವ ತೀರ್ಪಿಗೂ ಪರಿಣಾಮದ ದೃಷ್ಟಿಯಿಂದ ಸಾಕಷ್ಟು ವ್ಯತ್ಯಾಸಗಳಿವೆ. ಒಂದು ವೇಳೆ 20 ವರ್ಷಗಳ ಹಿಂದೆ ಈ ಪ್ರಕರಣದ ಬಗ್ಗೆ ತೀರ್ಪು ಬರುತ್ತಿದ್ದರೆ ಅದು ಆ ಬಳಿಕದ ವರ್ಗ ತಾರತಮ್ಯ ವಿಚಾರಧಾರೆಯಲ್ಲಿ ಬದಲಾವಣೆಗಳನ್ನು ತರುವ ಸಾಧ್ಯತೆ ಇರುತ್ತಿತ್ತು. ಹಿಂದುಳಿದ ವರ್ಗದ ಮೇಲೆ ಏರಿ ಹೋಗುವ ಮೊದಲು ಮೇಲ್ವರ್ಗದ ಮಂದಿ ಎರಡು ಬಾರಿ ಆಲೋಚಿಸುವಂತೆ ಮಾಡುತ್ತಿತ್ತು. ದಲಿತರನ್ನು ಸಮಾನರೆಂದು ಪರಿಗಣಿಸದಿದ್ದರೂ ಕಾನೂನಿಗೆ ಹೆದರಿ ಸಂಯಮ ಪಾಲಿಸಬೇಕಾದ ಒತ್ತಡವೊಂದು ಅವರ ಮೇಲೆ ಬೀಳುತ್ತಿತ್ತು. ನಿಜವಾಗಿ, ನ್ಯಾಯ ವಿಳಂಬ ಅನ್ನುವುದನ್ನು ಕೇವಲ ಒಂದು ಪ್ರಕರಣದ ಆರೋಪಿಗಳು ಮತ್ತು ಸಂತ್ರಸ್ತರ ನಡುವಿನ ವ್ಯವಹಾರವಾಗಿ ಮಾತ್ರ ನಾವು ಕಾಣಬೇಕಿಲ್ಲ. ಬಾಹ್ಯನೋಟಕ್ಕೆ ವೆಂಕಟಾಯಪಾಲಯಂ ಎಂಬುದು 10-15 ಮಂದಿಯ ನಡುವಿನ ಪ್ರಕರಣ. ಆದರೆ, ಆಳವಾಗಿ ನೋಡಿದರೆ, ಈ ಪ್ರಕರಣದ ವ್ಯಾಪ್ತಿ ಈ ದೇಶದಷ್ಟೇ ವಿಸ್ತಾರವಿದೆ. ಆ ಐವರು ಯುವಕರು ಕೋಟ್ಯಂತರ ಮಂದಿಯನ್ನು ಪ್ರತಿನಿಧಿಸುತ್ತಾರೆ. ಆರೋಪಿಗಳೂ ಅಸಂಖ್ಯ ಮಂದಿಯ ವಿಚಾರಧಾರೆಯನ್ನು ಪ್ರತಿನಿಧಿಸುತ್ತಾರೆ. ಆದ್ದರಿಂದಲೇ ಆ ಒಂದು ಪ್ರಕರಣದ ತೀರ್ಪು ಆ 15 ಮಂದಿಗೆ ಸಂಬಂಧಿಸಿದ್ದು ಮಾತ್ರವಾಗಿರದೇ ಈ ಅಸಂಖ್ಯ ಮಂದಿಯೂ ಅದರಲ್ಲಿ ಪಾಲುದಾರರಾಗಿರುತ್ತಾರೆ.
ಒಂದು ರೀತಿಯಲ್ಲಿ, ಮೇಲ್ವರ್ಗದ ಮಂದಿ ತಮ್ಮ ಶ್ರೇಷ್ಠತೆಯ ವ್ಯಸನದಿಂದ ದಲಿತ ,ಮತ್ತು ದುರ್ಬಲ ವರ್ಗದ ಮಂದಿಯ ಮೇಲೆ ಹಲ್ಲೆ ನಡೆಸುವುದಕ್ಕೂ ಮೇಲ್ವರ್ಗದ ಮಂದಿಯ ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ನಡೆಸುವುದಕ್ಕೂ ಗುರುತರ ವ್ಯತ್ಯಾಸಗಳಿವೆ. ಇವೆರಡೂ ಸಮಾಜದ ಮೇಲೆ ಬೀರುವ ಪರಿಣಾಮಗಳಲ್ಲೂ ಭಿನ್ನತೆಗಳಿವೆ. ಎರಡು ದಶಕಗಳ ಹಿಂದೆ ಕಂಬಾಲ ಪಲ್ಲಿಯಲ್ಲಿ ದಲಿತರ ಮೇಲೆ ತೀವ್ರ ಹಿಂಸಾಚಾರ ನಡೆಯಿತು. ದಲಿತರು ವಲಸೆ ಹೋಗಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಯಿತು. ಅಂತಿಮವಾಗಿ ಆ ಪ್ರಕರಣದ ತೀರ್ಪು ಹೇಗೆ ಬಂತು ಎಂಬುದೂ ನಮಗೆ ಗೊತ್ತು. ಆರೋಪಿಗಳು ಖುಲಾಸೆಗೊಂಡರು. ಒಂದು ವೇಳೆ, ಮೇಲ್ವರ್ಗದ ಮೇಲೆ ದಲಿತ ವರ್ಗದ ಮಂದಿ ಇಂಥದೊಂದು ಹಿಂಸಾಚಾರ ನಡೆಸಿರುತ್ತಿದ್ದರೆ ಪ್ರಕರಣದ ಕೊನೆ ಹೀಗಾಗುತ್ತಿತ್ತೇ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ದಲಿತ ವರ್ಗದಲ್ಲಿಲ್ಲದ ಕೆಲವು ಅನುಕೂಲತೆಗಳು ಮೇಲ್ವರ್ಗದಲ್ಲಿವೆ. ಕಾನೂನಿನ ಜ್ಞಾನ ,ಶಿಕ್ಷಣ ರಾಜಕೀಯ ಪ್ರಭಾವ, ವ್ಯವಸ್ಥೆಯ
ಮೇಲೆ ಹಿಡಿತ.. ಎಲ್ಲವೂ ಆ ವರ್ಗದ ಕೈಯಲ್ಲಿದೆ. ಹೀಗಿರುವಾಗ ದಲಿತ ವ್ಯಕ್ತಿ ಮೇಲ್ವರ್ಗದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಸುಲಭವಾಗಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲಾರ. ಆದರೆ ದಲಿತರ ಮೇಲೆ ಹಲ್ಲೆ ನಡೆಸಿದ ಮೇಲ್ವರ್ಗದ ವ್ಯಕ್ತಿ ಸುಲಭವಾಗಿ ತಪ್ಪಿಸಿಕೊಳ್ಳಬಲ್ಲ. ಆದ್ದರಿಂದಲೇ ವೆಂಕಟಾಯಪಾಲಯಂನ ಪ್ರತಿಭಟನಾ ದೃಶ್ಯ ಮಹತ್ವಪೂರ್ಣವಾಗುವುದು. ಮುಂದೊಂದು ದಿನ ವಿಜಯಪುರದ ಬಾಲಕಿಯ ಪೋಷಕರೋ ಹಿತೈಷಿಗಳೋ ಹೀಗೆ ಪ್ರತಿಭಟಿಸುವ ದೃಶ್ಯವನ್ನು ನಾವು ನೋಡಬೇಕಾದೀತೇನೋ?

ವರ್ಷದ ಪೋಟೋ...

      ಅಕ್ಷರ ಸೋತಿದೆ. ಎರಡು ಭಾವಚಿತ್ರಗಳು ಮತ್ತೆ ಮತ್ತೆ ಕಾಡುತ್ತಿವೆ. ದೀಪಕ್ ಮತ್ತು ಬಶೀರ್. ಈ ಎರಡು ಭಾವಚಿತ್ರಗಳ ಮೇಲೆ ಲೇಖನ ಬರೆಯಬೇಕಾದ ಸಂಕಟ ಒಂದೆಡೆಯಾದರೆ, ಕೋಮು ವಿಷ ಬಿತ್ತುವ ಮತ್ತು ರಾಜಕೀಯ ಕೊಯ್ಲು ಕೊಯ್ಯುವ ಹುನ್ನಾರಗಳು ಇನ್ನೊಂದು ಕಡೆ. ದೀಪಕ್ ಹತ್ಯೆಯ ಬಳಿಕದಿಂದ ಬಶೀರ್ ಹತ್ಯೆಯ ವರೆಗೆ ಮತ್ತು ಆ ಬಳಿಕದ ಬೆಳವಣಿಗೆಗಳು ದ.ಕ. ಜಿಲ್ಲೆಯ ಪಾಲಿಗೆ ಅತ್ಯಂತ ಮಹತ್ವಪೂರ್ಣವಾದವು ಎಂದು ಹೇಳಬೇಕಾಗುತ್ತದೆ. ದೀಪಕ್‍ನ ಮಾಲಿಕ ಮಜೀದ್ ಮತ್ತು ಅವರ ಕುಟುಂಬ ದೀಪಕ್‍ರ ಮನೆಗೆ ಭೇಟಿಕೊಟ್ಟಿತು. ಅದರಲ್ಲೂ ಪುತ್ರ ಶೋಕದಿಂದ ಬಳಲಿದ್ದ ದೀಪಕ್‍ನ ತಾಯಿಯನ್ನು ಮಜೀದ್‍ರ ಪತ್ನಿ ಎದೆಗಪ್ಪಿಕೊಂಡು ಸಂತೈಸಿದ ಪೋಟೋ ಬಹುಶಃ 2018ನೇ ಇಸವಿಯ ವರ್ಷದ ಪೋಟೋ ಆಗುವಷ್ಟು ಅಮೂಲ್ಯವಾದುದು. ಸಾಮಾಜಿಕ ಜಾಲತಾಣಗಳಲ್ಲಿ ಆ ಪೋಟೋ ವೈರಲ್ ಆಯಿತು. ಬಶೀರ್‍ರ ಸಾವಿನ ಸಂದರ್ಭದಲ್ಲಿ ಅವರ ಕುಟುಂಬ ತೋರಿದ ಸಹನೆ, ಸಾಮಾಜಿಕ ಕಳಕಳಿಯು ಸಾವಿರಾರು ಮಂದಿಯ ಕಣ್ಣನ್ನು ತೇವಗೊಳಿಸಿತು. ವಿಶೇಷ ಏನೆಂದರೆ, ಈ ಎರಡು ಹತ್ಯೆಗಳಿಗೆ ನಾಗರಿಕ ಸಮಾಜ ತೋರಿದ ಪ್ರತಿಕ್ರಿಯೆ. ಯುವ ಸಮೂಹದ ದೊಡ್ಡದೊಂದು ಗುಂಪು ಈ ಹತ್ಯೆಗಳನ್ನು ಪ್ರಬಲವಾಗಿ ಖಂಡಿಸಿತು. ಈ ಹಿಂದಿನ ಪ್ರಕರಣಗಳಿಗೆ ಹೋಲಿಸಿದರೆ ಈ ಬಾರಿ ವ್ಯಕ್ತವಾದ ನಾಗರಿಕ ಆಕ್ರೋಶ ಅತ್ಯಂತ ತೀವ್ರವಾದುದು. ದೀಪಕ್‍ನ ಹತ್ಯೆಯನ್ನು ಮುಸ್ಲಿಮ್ ಸಮುದಾಯವು ದೊಡ್ಡ ಧ್ವನಿಯಲ್ಲಿ ಖಂಡಿಸಿತು. ಸಾಮಾಜಿಕ
ಜಾಲತಾಣಗಳಲ್ಲಿ ಮುಸ್ಲಿಮ್ ಯುವ ಸಮೂಹವು ದೀಪಕ್ ಹತ್ಯೆಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿತು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿತು. ದೀಪಕ್‍ನ ಕುಟುಂಬಕ್ಕೆ ಸಂತಾಪವನ್ನು ಸೂಚಿಸಿತು. ಈ ಪ್ರತಿಕ್ರಿಯೆಯು ಸಾವಿನಲ್ಲಿ ಓಟು ಬಾಚುವ ರಾಜಕೀಯ ನಾಯಕರ ಮೇಲೆ ಯಾವ ಮಟ್ಟದ ಪರಿಣಾಮ ಬೀರಿತೆಂದರೆ, ಸ್ವತಃ ಅವರೇ ತಮ್ಮ ದನಿಯನ್ನು ತಗ್ಗಿಸಿಕೊಂಡರು. ಬಶೀರ್ ಸಾವಿಗೀಡಾದ ಮೇಲಂತೂ ಪಶ್ಚಾತ್ತಾಪ ಭಾವದಲ್ಲಿ ಮಾತಾಡುವಷ್ಟು ಅದು ಅವರನ್ನು ಒತ್ತಡಕ್ಕೊಳಪಡಿಸಿತು. ಐದಾರು ತಿಂಗಳ ಹಿಂದೆ ಇದೇ ಜಿಲ್ಲೆಯಲ್ಲಿ ಅಶ್ರಫ್ ಕಲಾಯಿ ಎಂಬ ಯುವಕನ ಹತ್ಯೆ ನಡೆದಾಗ ಕ್ಷೇತ್ರದ ಜನಪ್ರತಿನಿಧಿಯಾಗಿದ್ದೂ ಆ ಮನೆಗೆ ಭೇಟಿ ಕೊಡದ ಮತ್ತು ಅತ್ಯಂತ ಉಡಾಫೆಯಿಂದ ಪ್ರತಿಕ್ರಿಯಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಶೀರ್ ಹತ್ಯೆಗೆ ತಕ್ಷಣ ಸ್ಪಂದಿಸಿದರು. 50 ಲಕ್ಷ ಪರಿಹಾರಕ್ಕೆ ಆಗ್ರಹಿಸಿದರು. ದೀಪಕ್ ಹತ್ಯೆಯನ್ನು ಮತಾಂಧತೆ ಮತ್ತು ಜಿಹಾದಿ ಕೃತ್ಯ ಎಂದು ಸಂಬೋಧಿಸಿದವರು ಹಾಗೂ ಆ ಹತ್ಯೆಯನ್ನು ಬಳಸಿಕೊಂಡು ಮುಸ್ಲಿಮ್ ಸಮುದಾಯದ ವಿರುದ್ಧ ಹಿಂದೂ ಸಮುದಾಯವನ್ನು ಎತ್ತಿಕಟ್ಟಲು ಶ್ರಮಿಸಿದವರೂ ಬಶೀರ್ ಸಾವಿನ ಬಳಿಕ ತಪ್ಪಿತಸ್ಥ ಭಾವದಲ್ಲಿ ಕಾಣಿಸಿಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಹಿಂದೂ ಮತ್ತು ಮುಸ್ಲಿಮ್ ಸಮೂಹದ ಯುವ ತಲೆಮಾರು ಎರಡೂ ಹತ್ಯೆಗಳನ್ನು ಏಕಪ್ರಕಾರವಾಗಿ ಖಂಡಿಸಿದುವು. ಈ ಹಿಂದೆಂದೂ ಕಾಣದ ಒಗ್ಗಟ್ಟು ಈ ಬಾರಿ ಕಾಣಿಸಿತು. ಇದೊಂದು ಆಶಾವಾದ. ಅಂದಹಾಗೆ, ದ.ಕ. ಜಿಲ್ಲೆಯಲ್ಲಿ ಈವರೆಗೆ ಹತ್ಯೆಗಳು ರಾಜಕೀಯವಾಗಿ ಮೊಟ್ಟೆಯಿಡುತ್ತಿದ್ದುವು. ಸತ್ತ ವ್ಯಕ್ತಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವುದನ್ನು ಬಿಜೆಪಿ ತನ್ನ ಕಾರ್ಯತಂತ್ರವಾಗಿಯೇ ಮಾಡಿಕೊಂಡಿತ್ತು. ಜಿಲ್ಲೆಯ ಮಟ್ಟಿಗೆ ಈ ಸಾವಿನ ರಾಜಕೀಯದಾಟ ಎಷ್ಟು ಚಿರಪರಿಚಿತವೆಂದರೆ, ಚುನಾವಣೆ ಹತ್ತಿರ ಬರುವಾಗಲೆಲ್ಲ ಜನರು ಕೋಮುಗಲಭೆಯ ಬಗ್ಗೆ ಮಾತಾಡಿಕೊಳ್ಳುವಷ್ಟು. ಜಾಗ್ರತೆ ವಹಿಸಿಕೊಳ್ಳಬೇಕು ಎಂದು ಪರಸ್ಪರ ಹೇಳಿಕೊಳ್ಳುವಷ್ಟು. ಆದ್ದರಿಂದಲೇ, ಜಿಲ್ಲೆಯ ನಾಗರಿಕರ ಪ್ರತಿಕ್ರಿಯೆ ಈ ಬಾರಿ ಮುಖ್ಯವಾಗುತ್ತದೆ. ರಾಜಕೀಯಕ್ಕಾಗಿ ತಮ್ಮ ಮನೆಯ ಮಕ್ಕಳು ಬಲಿಯಾಗುವುದರ ಬಗ್ಗೆ ಸಾಮಾಜಿಕ ಜಾಗೃತಿ ಮೂಡುತ್ತಿರುವ ಲಕ್ಷಣವೊಂದು ದೀಪಕ್ ಮತ್ತು ಬಶೀರ್ ಹತ್ಯೆಯಲ್ಲಿ ಗೋಚರಿಸಿದೆ. ನಿಜವಾಗಿ, ಹಿಂದೂ ಸಮುದಾಯದ ವ್ಯಕ್ತಿಯೋರ್ವ ಮುಸ್ಲಿಮ್ ವ್ಯಕ್ತಿಯಿಂದ ಹಲ್ಲೆಗೋ ಹತ್ಯೆಗೋ ಒಳಗಾದಾಗ ಮುಸ್ಲಿಮ್ ಸಮುದಾಯ ಮೌನವಾಗಿರಬೇಕು ಅಥವಾ ಸಮರ್ಥಿಸುವ ಧಾಟಿಯಲ್ಲಿ ವರ್ತಿಸಬೇಕು ಎಂದು ಕೋಮುವಾದಿಗಳು ಬಯಸುತ್ತಾರೆ. ಅದೇ ರೀತಿ, ಮುಸ್ಲಿಮ್ ಸಮುದಾಯದ ವ್ಯಕ್ತಿ ಹಿಂದೂ ವ್ಯಕ್ತಿಯಿಂದ ಹತ್ಯೆಗೋ ಹಲ್ಲೆಗೋ ಒಳಗಾದಾಗ ಹಿಂದೂ ಸಮುದಾಯ ಅದನ್ನು ಸಮರ್ಥಿಸಿಕೊಳ್ಳುವ ಧಾಟಿಯಲ್ಲಿ ಮಾತಾಡಬೇಕೆಂದೂ ಅವರು ಬಯಸುತ್ತಾರೆ. ಇಂಥದ್ದೊಂದು ತಪ್ಪು ನಡೆಯುವುದನ್ನು ಎರಡೂ ಕಡೆಯ ಕೋಮುವಾದಿಗಳೂ ಬಯಸುತ್ತಿರುತ್ತಾರೆ. ಒಂದು ಹಂತದ ವರೆಗೆ ಈ ತಪ್ಪುಗಳು ಜಿಲ್ಲೆಯಲ್ಲಿ ಸಣ್ಣ ಮಟ್ಟದಲ್ಲಾದರೂ ಈ ಹಿಂದೆ ನಡೆದಿದೆ. ಆದರೆ ದೀಪಕ್ ಮತ್ತು ಬಶೀರ್‍ರ ಸಾವು ಈ ಹಿಂದಿನ ಎಲ್ಲ ಪ್ರಮಾದಗಳಿಗೂ ಉತ್ತರವೆಂಬ ರೀತಿಯಲ್ಲಿ ಕೊಲ್ಲುವ ರಾಜಕೀಯಕ್ಕೆ ಸಡ್ಡು ಹೊಡೆದಿದೆ. ಸಾಮಾಜಿಕ ಜಾಲತಾಣಗಳ ಪಾತ್ರವೂ ಇದರಲ್ಲಿ ದೊಡ್ಡದಿದೆ ಎಂದೂ ಹೇಳಬಹುದು. ನಿಜವಾಗಿ, ಜಿಲ್ಲೆಯ ಪಾಲಿಗೆ ಇದು ದೊಡ್ಡ ಯಶಸ್ಸು. ಹತ್ಯೆಗಳ ವಿರುದ್ಧ ಸಮಾಜ ಏಕಧ್ವನಿಯಲ್ಲಿ ಮಾತಾಡುವುದೆಂದರೆ, ಕೋಮು ರಾಜಕೀಯಕ್ಕೆ ಸ್ಪೇಸ್ ಕಡಿಮೆಯಾಗತೊಡಗಿದೆ ಎಂದರ್ಥ. ಈ ಹಿಂದೆ ಹತ್ಯೆಯೊಂದು ನಡೆದರೆ ಪ್ರತೀಕಾರವಾಗಿ ಎಷ್ಟು ಹತ್ಯೆ, ಹಲ್ಲೆ ನಡೆಯಬಹುದು ಎಂಬ ಭೀತಿಯೊಂದು ಸಾರ್ವಜನಿಕವಾಗಿ ನೆಲೆಗೊಳ್ಳುತ್ತಿತ್ತು. ಉದ್ವಿಘ್ನ ವಾತಾವರಣ ನಿರ್ಮಾಣವಾಗುತ್ತಿತ್ತು. ಆದರೆ ಬಶೀರ್‍ರ ಸಾವಿನ ಬಳಿಕದ ವಾತಾವರಣ ಹಾಗಿಲ್ಲ. ಓರ್ವನ ಹತ್ಯೆಗೆ ಇನ್ನಾರನ್ನೋ ಆಕ್ರಮಿಸುವುದು ಉತ್ತರ ಅಲ್ಲ ಎಂದು ಸಮಾಜ ದೊಡ್ಡ ಧ್ವನಿಯಲ್ಲಿ ಹೇಳತೊಡಗಿದೆ. ದೀಪಕ್ ಮತ್ತು ಬಶೀರ್ ಈ ಬದಲಾವಣೆಗೆ ಮುಖ್ಯ ಕಾರಣರು. ಈ ಸಮಾಜ ಆತ್ಮವಿಮರ್ಶೆ ಮಾಡಕೊಳ್ಳುವಂತೆ ಒತ್ತಾಯಿಸುತ್ತಾ ಅವರು ಸ್ವತಃ ತಮ್ಮನ್ನೇ ಈ ಸಮಾಜಕ್ಕೆ ಅರ್ಪಿಸಿಕೊಂಡರು. ಇದೀಗ ಅವರ ಅನುಪಸ್ಥಿತಿಯಲ್ಲಿ ಕರಾವಳಿ ಜಿಲ್ಲೆಗಳೂ ಸೇರಿದಂತೆ ಇಡೀ ರಾಜ್ಯದ ನಾಗರಿಕರು ಸ್ವಅವಲೋಕನಕ್ಕೆ ಮುಂದಾಗಬೇಕು. ಧರ್ಮದ ಹೆಸರಲ್ಲಿ ತಮ್ಮಂತೆಯೇ ಇರುವ ಇನ್ನೋರ್ವರನ್ನು ಆಕ್ರಮಿಸುವುದರಿಂದ ಆಗುವ ಲಾಭವೇನು ಎಂಬುದಾಗಿ ಸ್ವಯಂ ಪ್ರಶ್ನಿಸಿಕೊಳ್ಳಬೇಕು. ಯಾವ ಧರ್ಮಕ್ಕೂ ಹತ್ಯೆ ಮತ್ತು ಹಿಂಸೆಗಳು ಲಾಭ ತಂದುಕೊಡಲು ಸಾಧ್ಯವಿಲ್ಲ. ಅಂಥದ್ದೊಂದು  ಧರ್ಮ ಸಾರ್ವಜನಿಕವಾಗಿ ದ್ವೇಷಕ್ಕೆ ಅರ್ಹವಾಗಬಹುದಷ್ಟೇ. ಆದ್ದರಿಂದ ಧರ್ಮಕ್ಕಾಗಿ ಹತ್ಯೆ ಅಥವಾ ಹಿಂಸೆ ಎಂಬುದು ಎಲ್ಲೂ ಇಲ್ಲ. ಅದು ಪ್ರಾಯೋಗಿಕವೂ ಅಲ್ಲ. ಎಲ್ಲ ಹತ್ಯೆಗಳೂ ಹಿಂಸೆಗಳೂ ಧರ್ಮೇತರ ಕಾರಣಗಳಿಗಾಗಿಯೇ ಆಗಿರುತ್ತವೆ. ಅದರಿಂದ ಯಾರೋ ಬೆಳೆಯುತ್ತಾರೆ. ನಾಯಕರಾಗುತ್ತಾರೆ. ಅದೇ ವೇಳೆ, ಯಾವುದೋ ಮನೆಯ ತಾಯಿ, ಪತ್ನಿ, ಮಕ್ಕಳು ಅನಾಥರಾಗುತ್ತಾರೆ. ದೀಪಕ್ ಮತ್ತು ಬಶೀರ್‍ರ ಕುಟುಂಬ ಇದಕ್ಕೆ ಅತ್ಯುತ್ತಮ ಉದಾಹರಣೆ. ಸಾಧ್ಯವಾದರೆ ದೀಪಕ್‍ನ ತಾಯಿಯನ್ನು ಅಪ್ಪಿಕೊಂಡು ಸಂತೈಸಿದ ಆ ತಾಯಿಯ ಪೋಟೋವನ್ನು ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ನೇತುಹಾಕಲಿ. 2019ರ ಕ್ಯಾಲೆಂಡರ್‍ಗಳಲ್ಲಿ ಆ ಪೋಟೋ ಕಾಣಿಸಿಕೊಳ್ಳಲಿ. ಎಲ್ಲ ಮನೆ-ಮನಸ್ಸುಗಳಿಗೆ ಆ ಪೋಟೋವನ್ನು ತಲುಪಿಸುವ ಶ್ರಮ ನಡೆಯಲಿ. ಸದ್ಯದ ಅಗತ್ಯ ಇದು.

Tuesday, 26 December 2017

ತಲಾಕ್: ಸುಧಾರಣೆಯೋ, ಸಮಸ್ಯೆಯೋ?

   ಮತ್ತೊಂದು ಸುತ್ತಿನ ಚರ್ಚೆಗೆ ತಲಾಕ್ ಸಿದ್ಧವಾಗಿದೆ. ತ್ರಿವಳಿ ತಲಾಕನ್ನು ಸಂವಿಧಾನ ಬಾಹಿರವೆಂದು ಕಳೆದ ಆಗಸ್ಟ್ ನಲ್ಲಿ ಸುಪ್ರೀಮ್ ಕೋರ್ಟ್ ಘೋಷಿಸಿದ ಬಳಿಕ ಒಂದೆರಡು ವಾರಗಳ ತನಕ ‘ಮಾಧ್ಯಮ ಡಾರ್ಲಿಂಗ್’ ಆಗಿ ಗುರುತಿಸಿಕೊಂಡು ಬಳಿಕ ತಣ್ಣಗಾದ ‘ತಲಾಕ್’, ಮತ್ತೆ ಬಹು ಚರ್ಚಿತಗೊಳ್ಳುವುದಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ‘ಮುಸ್ಲಿಮ್ ಮಹಿಳೆಯ ವಿವಾಹ ಮತ್ತು ಹಕ್ಕು ರಕ್ಷಣಾ ಮಸೂದೆ’ಯನ್ನು ಕೇಂದ್ರ ಸರಕಾರ ಸಿದ್ಧಪಡಿಸಿದೆ. ಈ ಮಸೂದೆಯ ಸಂಪೂರ್ಣ ವಿವರಗಳು ಇನ್ನೂ ಬಹಿರಂಗವಾಗಿಲ್ಲದಿದ್ದರೂ ಬಹಿರಂಗವಾಗಿರುವ ವಿಷಯಗಳಲ್ಲಿ ಒಂದಷ್ಟು ಅನುಮಾನ ಮತ್ತು ಆತಂಕಕ್ಕೆ ಎಡೆ ಮಾಡಿಕೊಡುವ ಅಂಶಗಳಿವೆ. ಇಡೀ ಮಸೂದೆಯನ್ನು ಕೇಂದ್ರ ಸಚಿವರ ಆಂತರಿಕ ಸಮಿತಿ ರಚಿಸಿದೆ. ತ್ರಿವಳಿ ತಲಾಕ್ ನೀಡುವ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶವು ಈ ಮಸೂದೆಯಲ್ಲಿದೆ. ತ್ರಿವಳಿ ತಲಾಕನ್ನು ಜಾಮೀನುರಹಿತ ಅಪರಾಧವಾಗಿ ಪರಿಗಣಿಸಲಾಗುತ್ತದೆ. ತ್ರಿವಳಿ ತಲಾಕ್ ಪಡೆದುಕೊಂಡ ಮಹಿಳೆ ಪರಿಹಾರವನ್ನು ಬಯಸಿ ಮತ್ತು ಅಪ್ರಾಪ್ತ ಮಕ್ಕಳನ್ನು ತನ್ನ ಬಳಿ ಇರಿಸಿಕೊಳ್ಳುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಬಹುದು. ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ಭಾರತದಾದ್ಯಂತದ ತ್ರಿವಳಿ ತಲಾಕ್‍ಗಳು ಈ ಮಸೂದೆಯ ವ್ಯಾಪ್ತಿಗೆ ಒಳಪಡಲಿದೆ.
    ವಿಚಿತ್ರ ಏನೆಂದರೆ, ಮುಸ್ಲಿಮ್ ಸಮುದಾಯದ ಯಾರೊಬ್ಬರಲ್ಲೂ ಈ ಮಸೂದೆಗೆ ಸಂಬಂಧಿಸಿ ಚರ್ಚಿಸಲಾಗಿಲ್ಲ. ಈ ದೇಶದಲ್ಲಿ ಸುಮಾರು 20 ಕೋಟಿಯಷ್ಟು ಮುಸ್ಲಿಮರಿದ್ದಾರೆ. ಇಷ್ಟೊಂದು ಬೃಹತ್ ಜನಸಮುದಾಯದಲ್ಲಿ ತಪ್ಪಾಗಿ ಚಾಲ್ತಿಯಲ್ಲಿರುವ ಒಂದು ಸಂಪ್ರದಾಯದ ಮೇಲೆ ಕಾನೂನು ರಚಿಸುವಾಗ ಆ ಸಮುದಾಯದ ಧ್ವನಿಯನ್ನೇ ನಿರ್ಲಕ್ಷಿಸಬೇಕಾದ ಅಗತ್ಯ ಏನಿತ್ತು? ತ್ರಿವಳಿ ತಲಾಕ್ ಎಂಬುದು ಮುಸ್ಲಿಮ್ ಸಮುದಾಯವು ಸರ್ವಾನುಮತದಿಂದ ಬೆಂಬಲಿಸುತ್ತಿರುವ ವಿಚ್ಛೇದನ ಕ್ರಮವಲ್ಲ. ಇಸ್ಲಾಮಿನ ಪ್ರಕಾರ ವಿವಾಹವೆಂಬುದು ಒಂದು ಒಪ್ಪಂದ. ಯಾವ ಒಪ್ಪಂದವೇ ಆಗಲಿ, ಅದರ ಸಿಂಧುತ್ವಕ್ಕೆ ಕೆಲವು ನಿಯಮಗಳಿವೆ. ಸಾಕ್ಷಿಗಳು ಮತ್ತು ಅನುಮೋದಕರ ಹೊರತಾಗಿ ಒಪ್ಪಂದ ವೊಂದು ಊರ್ಜಿತಗೊಳ್ಳಲು ಸಾಧ್ಯವಿಲ್ಲ. ಇಸ್ಲಾಮಿನ ವಿವಾಹವೆಂಬುದು ಸಾಕ್ಷಿಗಳ ರುಜು ಮತ್ತು ಆಯಾ ಮಸೀದಿಗಳ ಅನುಮೋದನೆಯೊಂದಿಗೆ ನಡೆಯುತ್ತದೆ. ಒಂದು ವೇಳೆ, ಈ ಒಪ್ಪಂದವನ್ನು ಅನೂರ್ಜಿತಗೊಳಿಸುವುದಾದರೂ ಅದಕ್ಕೂ ಕೆಲವು ನಿಯಮಗಳಿವೆ. ವಿವಾಹಕ್ಕೆ ಸಾಕ್ಷಿಗಳು ಬೇಕಿರುವಂತೆಯೇ ವಿವಾಹ ವಿಚ್ಛೇದನಕ್ಕೂ ಸಾಕ್ಷಿಗಳ ಅಗತ್ಯ ಇದೆ. ತಲಾಕ್ ಎಂಬುದು ಏಕಮುಖ ಅಲ್ಲ. ಅದು ಬಹುಮುಖಿಯಾದುದು. ತಲಾಕನ್ನು ಪತಿ ಮತ್ತು ಪತ್ನಿಯ ನಡುವಿನ ಖಾಸಗಿ ವಿಷಯ ವಾಗಿ ಇಸ್ಲಾಮ್ ಪರಿಗಣಿಸುವುದಿಲ್ಲ. ಯಾವಾಗ ಅದು ಖಾಸಗಿ ವಿಷಯವಾಗಿ ಮಾರ್ಪಡುತ್ತದೋ ಆಗ ತ್ರಿವಳಿ ತಲಾಕ್‍ನಂತಹ ತಪ್ಪಾದ ಕ್ರಮಗಳು ರೂಢಿಗೆ ಬರುತ್ತವೆ. ನಿಜವಾಗಿ, ತಲಾಕ್ ನೀಡಬಯಸುವ ವ್ಯಕ್ತಿ ಅದಕ್ಕಾಗಿ ಕೆಲವು ನೀತಿ-ಸಂಹಿತೆಗಳನ್ನು ಪಾಲಿಸಬೇಕಾಗುತ್ತದೆ. ಮೊದಲು ಆತ ಆ ಬಗ್ಗೆ ಪತ್ನಿಗೆ ತಿಳಿಸಬೇಕಾಗುತ್ತದೆ. ಬಳಿಕ, ಪತ್ನಿಯ ಮತ್ತು ತನ್ನ ಕುಟುಂಬದ ತಜ್ಞರಲ್ಲಿ ವಿಷಯ ಪ್ರಸ್ತಾಪಿಸಬೇಕಾಗುತ್ತದೆ. ಕನಿಷ್ಠ ಮೂರು ತಿಂಗಳ ಅವಧಿಯ ಹೊರತು ತಲಾಕ್ ನೀಡಲು ಅಸಾಧ್ಯವಾಗಬಹುದಾದ ನಿಯಮವು ಇಸ್ಲಾಮಿನದ್ದು. ಹಾಗಂತ, ಈ ನೀತಿಸಂಹಿತೆ ನೂರು ಶೇಕಡಾ ಪಾಲನೆಯಾಗುತ್ತಿದೆ ಎಂದಲ್ಲ. ಮುಸ್ಲಿಮ್ ಸಮುದಾಯದಲ್ಲಿ ನಗಣ್ಯ ಸಂಖ್ಯೆಯಲ್ಲಾದರೂ ತ್ರಿವಳಿ ತಲಾಕನ್ನು ಪಾಲಿಸುವವರಿದ್ದಾರೆ. ಇದನ್ನು ಯಾರೂ ನಿರಾಕರಿಸುತ್ತಲೂ ಇಲ್ಲ. ಹಾಗಂತ, ಇಡೀ ಮುಸ್ಲಿಮ್ ಸಮುದಾಯವನ್ನೇ ಅಪರಾಧಿಯಂತೆ ಕಾಣುವ ಅಗತ್ಯ ಏನಿದೆ? ಮುಸ್ಲಿಮ್ ಸಮುದಾಯದ ಸುಧಾರಣೆಯೇ ಕೇಂದ್ರ ಸರಕಾರದ ಉದ್ದೇಶವೆಂದಾದರೆ, ಆ ಸಮುದಾಯದ ಧ್ವನಿಯನ್ನು ಆಲಿಸುವುದೂ ಮುಖ್ಯವಾಗಬೇಡವೇ? ಮುಸ್ಲಿಮ್ ಸಮುದಾಯದ ಕಲ್ಯಾಣವನ್ನು ಬಯಸಿ ಚಟುವಟಿಕೆಯಿಂದಿರುವ ಮಹಿಳೆಯರ ಮತ್ತು ಪುರುಷರ ಹಲವು ಸಂಘಟನೆಗಳು ಈ ದೇಶದಲ್ಲಿವೆ. ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಸುಪ್ರೀಮ್ ಕೋರ್ಟ್‍ನಲ್ಲಿ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ತನ್ನ ವಾದವನ್ನು ಮಂಡಿಸಿದೆ. ಅದರ ನಿಲುವುಗಳು ಏನೇ ಇರಲಿ, ಸುಪ್ರೀಮ್ ಕೋರ್ಟ್‍ನ ತೀರ್ಪನ್ನು ಅದೂ ಒಪ್ಪಿಕೊಂಡಿದೆ. ಹೀಗಿರುವಾಗ, ಕರಡು ರಚನೆಯ ವೇಳೆ ಈ ಕಾನೂನು ಮಂಡಳಿಯೂ ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ಶರೀಅತ್ ತಜ್ಞರ ಅಭಿಪ್ರಾಯಗಳನ್ನು ಕೇಳಬಹುದಿತ್ತಲ್ಲವೇ? ಒಂದು ಸಮುದಾಯದ ಮೇಲೆ ಕಾನೂನನ್ನು ಹೇರುವುದಕ್ಕೂ ಅದರ ವಿಶ್ವಾಸವನ್ನು ಗಳಿಸಿ ಕಾನೂನು ರೂಪಿಸುವುದಕ್ಕೂ ವ್ಯತ್ಯಾಸ ಇದೆ. ಒಂದು ಸರ್ವಾಧಿಕಾರಿ ನಿಲುವಾದರೆ ಇನ್ನೊಂದು ಪ್ರಜಾತಂತ್ರ ನಿಲುವು. ಕೇಂದ್ರ ಸರಕಾರ ಯಾಕೆ ಸರ್ವಾಧಿಕಾರಿ ನಿಲುವನ್ನೇ ಆಯ್ಕೆ ಮಾಡಿಕೊಂಡಿದೆ? ಅದರ  ಗುರಿ ತ್ರಿವಳಿ ತಲಾಕನ್ನು ನಿಷ್ಕ್ರಿಯ ಗೊಳಿಸುವುದಕ್ಕಿಂತಲೂ ಮುಸ್ಲಿಮ್ ಸಮುದಾಯವನ್ನು ಚರ್ಚೆಯ ಮೊನೆಯಲ್ಲಿ ನಿಲ್ಲಿಸುವುದೇ ಆಗಿದೆಯೇ? ಮುಸ್ಲಿಮ್ ಸಮುದಾಯದ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಮಸೂದೆ ರೂಪಿಸುವುದೆಂದರೆ, ‘ವಿವಾದ ರಹಿತ’ ಮಸೂದೆಯನ್ನು ತಯಾರಿಸುವುದು ಎಂದೇ ಅರ್ಥ. ಹಾಗೊಂದು ವೇಳೆ ವಿವಾದ ರಹಿತ ಮಸೂದೆ ರಚನೆಯಾಗಿ ಬಿಟ್ಟರೆ ಅದರಿಂದ ಮುಸ್ಲಿಮರಿಗೆ ಸಂಬಂಧಿಸಿ ತನ್ನ ‘ಉಗ್ರ ವರ್ಚಸ್ಸಿಗೆ’ ಧಕ್ಕೆಯಾಗಬಹುದು ಎಂದು ಕೇಂದ್ರ ಸರಕಾರ ಭಾವಿಸಿತೆ? ತಲಾಕ್, ಬಹುಪತ್ನಿತ್ವ, ಜಿಹಾದ್, ವಂದೇ ಮಾತರಂ.. ಇತ್ಯಾದಿಗಳೆಲ್ಲ ವಿವಾದವಾದಷ್ಟು ಕೇಂದ್ರ ಸರಕಾರಕ್ಕೆ ಲಾಭ ಹೆಚ್ಚು ಎಂಬುದನ್ನು ಚುನಾವಣೆಗಳು ಸಾಬೀತುಪಡಿಸುತ್ತಿವೆ. ಮುಸ್ಲಿಮ್ ವಿರೋಧಿ ಹಣೆಪಟ್ಟಿಯೊಂದನ್ನು ಸದಾ ಧರಿಸಿರಬೇಕೆಂಬುದು ಬಿಜೆಪಿಯ ಅಲಿಖಿತ ಸಂವಿಧಾನ. ಆ ಸಂವಿಧಾನದಂತೆಯೇ ತ್ರಿವಳಿ ತಲಾಕ್ ಮಸೂದೆಯನ್ನು ತಯಾರಿಸಲಾಯಿತೇ?
    ಅಷ್ಟಕ್ಕೂ, ವರದಕ್ಷಿಣೆ, ಅತ್ಯಾಚಾರ, ಗೃಹಹಿಂಸೆಯಂಥ ಅಪರಾಧಗಳ ವಿರುದ್ಧ ರಚಿಸಲಾದ ಕಾನೂನುಗಳು ಇವತ್ತು ದುರುಪಯೋಗವಾಗುತ್ತಿರುವುದು ಎಲ್ಲರಿಗೂ ಗೊತ್ತು. ಇಲ್ಲಿನ ನ್ಯಾಯಾಲಯಗಳೇ ಇದನ್ನು ಒಪ್ಪಿಕೊಂಡಿವೆ. ಒಂದು ರೀತಿಯಲ್ಲಿ ಪ್ರತಿ ಕಾನೂನೂ ದುರುಪಯೋಗದ ಸಾಧ್ಯತೆಯನ್ನು ಹೊಂದಿರುತ್ತವೆ ಎಂಬುದೇ ಸತ್ಯ. ಆಯಾ ಕ್ಷೇತ್ರದಲ್ಲಿ ತಜ್ಞರೆನಿಸಿಕೊಂಡವರೊಂದಿಗೆ ಸಮಾಲೋಚಿಸಿ ರೂಪಿಸಲಾದ ಈ ಮೇಲಿನ ಕಾನೂನುಗಳೇ ದುರುಪಯೋಗಕ್ಕೆ ಒಳಗಾಗಬಹುದಾದರೆ ಇನ್ನು ಮುಸ್ಲಿಮ್ ಸಮುದಾಯವನ್ನು ವಿಶ್ವಾಸಕ್ಕೆ ಪಡೆಯದೆಯೇ ರೂಪಿಸಲಾದ ಕಾನೂನು ಎಷ್ಟು ಪರಿಣಾಮಕಾರಿಯಾಗಬಹುದು? ಇನ್ನು ಮುಂದೆ, ‘ಸರಿ’ ತಲಾಕೂ ತ್ರಿವಳಿ ತಲಾಕ್ ಆಗಿ ಗುರುತಿಸಿಕೊಳ್ಳಬಹುದೇ? ಈ ವರೆಗೆ ಶೋಷಕ ಪಾತ್ರ ಪುರುಷನದ್ದಾಗಿತ್ತು. ಇನ್ನು ಅದು ಮಹಿಳೆಯ ಪಾಲಾಗಲಿದೆಯೇ? ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಈಗಾಗಲೇ ‘ದೂರು ಭಾರ’ದಿಂದ ಕುಸಿದು ಕೂತಿದೆ. ಇನ್ನು ತ್ರಿವಳಿ ತಲಾಕ್‍ನ ಭಾರವು ಅದರ ಮೇಲೆ ಬಿದ್ದರೆ ಅದು ಅದರ ವೇಗವನ್ನು ಎಷ್ಟು ವರ್ಷಗಳ ಹಿಂದಕ್ಕೆ ಒಯ್ಯಬಹುದು? ದೂರು ಪ್ರತಿದೂರುಗಳ ಜಗ್ಗಾಟದಲ್ಲಿ ಯಾರು ಗೆಲ್ಲಬಹುದು? ಆ ಗೆಲುವಿನಲ್ಲಿ ನಿಜ ಗೆಲುವು ಯಾರಿಗೆಲ್ಲ ದಕ್ಕಬಹುದು? ಹಾಗೆ ನ್ಯಾಯ ಸಿಗುವಾಗ ದೂರುದಾರ ಪತಿ-ಪತ್ನಿ ಎಷ್ಟು ವರ್ಷಗಳನ್ನು ಖರ್ಚು ಮಾಡಬೇಕಾಗಬಹುದು?
ತಪ್ಪನ್ನು ತಿದ್ದಿಕೊಳ್ಳಬೇಕಾದುದು ಖಂಡಿತ ಅಗತ್ಯ. ಆದರೆ ಈ ತಿದ್ದುಪಡಿಗೆ ನೇತೃತ್ವವನ್ನು ನೀಡಿದವರ ವರ್ತನೆಯನ್ನು ನೋಡುವಾಗ ಈ ತಿದ್ದುಪಡಿಯೇ ಇನ್ನಷ್ಟು ತಪ್ಪುಗಳ ಉತ್ಪಾದಕವಾಗುವ ಸಾಧ್ಯತೆಯೇ ಕಾಣುತ್ತಿದೆ. ಇದು ಆತಂಕಕಾರಿ.