Saturday 3 February 2024

ಲಕ್ಷ್ಮೀ ಹೆಗ್ಡೆ ಉಳಿಸಿ ಹೋಗಿರುವ ಪ್ರಶ್ನೆಗಳು...

 


ಸನ್ಮಾರ್ಗ ಸಂಪಾದಕೀಯ


ಮಾಧ್ಯಮಗಳ ಮುಖಪುಟದಲ್ಲಿ ಜಾಗ ಪಡೆಯಬೇಕಿದ್ದ ಲಕ್ಷ್ಮೀ ಹೆಗ್ಡೆ ಎಂಬ ತಾಯಿ ಯಾರ ಗಮನಕ್ಕೂ ಬಾರದೇ ತನ್ನ ಊರು  ಇಳಂತಿಲದ ಅಷ್ಟಿಷ್ಟು ಹಿರಿಯರ ಕರುಣೆಯ ಮಾತುಗಳಿಗೆ ಆಹಾರವಾಗಿ ಜನವರಿ ಏಳರಂದು ಇಹಲೋಕ ತ್ಯಜಿಸಿದರು. ಹಾಗಂತ,

ದಕ್ಷಿಣ ಕನ್ನಡ ಜಿಲ್ಲೆಯ  ಉಪ್ಪಿನಂಗಡಿ ಸಮೀಪದ ಇಳಂತಿಲದ ಈ ಲಕ್ಷ್ಮೀ ಹೆಗ್ಡೆ ಪ್ರಸಿದ್ಧರಲ್ಲ. ಇನ್ಫೋಸಿಸ್‌ನ ಸುಧಾ ಮೂರ್ತಿ, ಓಟಗಾತಿ  ಪಿ.ಟಿ. ಉಷಾ, ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ಅಥವಾ ಐಟಿ ಕ್ಷೇತ್ರದ ಕಿರಣ್ ಮಜುಂದಾರ್‌ರಂತೆ  ಸಾಧಕಿಯೂ ಅಲ್ಲ.  ಆದರೆ, ದ.ಕ. ಜಿಲ್ಲೆಯ ಕನ್ಯಾನದ ಭಾರತ್ ಸೇವಾಶ್ರಮದಲ್ಲಿ ನಡೆದ ಇವರ ಸಾವು ಸಮಾಜದ ಪಾಲಿಗೆ ಪಾಠದಾಯಕ. ನಿಜವಾಗಿ,

ಈ ತಾಯಿ ವೃದ್ಧಾಶ್ರಮದಲ್ಲಿ ಬದುಕಿನ ಸಂಧ್ಯಾಕಾಲವನ್ನು ಕಳೆಯಬೇಕಾದಂಥ ಅಸಹಾಯಕಿಯಲ್ಲ. ಇಳಂತಿಲದಲ್ಲಿ ಸ್ವಂತದ್ದೊಂದು  ಮನೆಯೂ ಅವರಿಗಿತ್ತು. ಏಳು ಮಕ್ಕಳನ್ನೂ ಹೆತ್ತಿದ್ದರು. ಆದರೆ, ಈ ತಾಯಿ ಮಕ್ಕಳ ನಡುವೆ ಅದೇನು ವೈಮನಸ್ಯ ಉಂಟಾಯಿತೋ  ಗೊತ್ತಿಲ್ಲ, ಈ ವೃದ್ಧ ತಾಯಿ ಮಕ್ಕಳ ನಿರ್ಲಕ್ಷ್ಯಕ್ಕೆ ಒಳಗಾದರು. ಕೊನೆಗೆ ಮಕ್ಕಳ ನಡವಳಿಕೆಗೆ ಬೇಸತ್ತು ಪೊಲೀಸ್ ಠಾಣೆಯ  ಮೆಟ್ಟಿಲೇರಿದರು. ಮಕ್ಕಳಿಗೆ ಕರೆಯೂ ಹೋಯಿತು. ಆದರೆ ತಾಯಿಯ ಆರೈಕೆ ಮಾಡಲೋ ಕಾಳಜಿ ತೋರಲೋ ಮಕ್ಕಳು  ನಿರಾಕರಿಸಿದರು. ಪೊಲೀಸ್ ಠಾಣೆಯಲ್ಲಿ ಒಂಟಿಯಾದ ತಾಯಿಯನ್ನು ಠಾಣಾಧಿಕಾರಿ ನಂದಕುಮಾರ್ ಭಾರತ್ ಸೇವಾಶ್ರಮಕ್ಕೆ  ಸೇರಿಸಿದರು. ಮಾತ್ರವಲ್ಲ, ಮಗನ ಸ್ಥಾನದಲ್ಲಿ ನಿಂತು ಆಗಾಗ ಅವರ ಯೋಗಕ್ಷೇಮ ವಿಚಾರಿಸುತ್ತಾ ಪ್ರೀತಿ ತೋರಿಸುತ್ತಿದ್ದರು. ಇಂಥ  ತಾಯಿ ಈ ಆಶ್ರಮದಲ್ಲಿ ನಿಧನರಾದಾಗಲೂ ಈ ಮಕ್ಕಳು ಕೊನೆಯ ಬಾರಿ ನೋಡುವುದಕ್ಕಾಗಲಿ ಅಂತ್ಯಸಂಸ್ಕಾರ ನೆರವೇರಿಸುವುದಕ್ಕಾಗಲಿ  ಬರಲೇ ಇಲ್ಲ. ಆಶ್ರಮದಿಂದ ಕರೆ ಮಾಡಿ ವಿನಂತಿಸಿದರೂ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿಲ್ಲ. ಕೊನೆಗೆ ಆಶ್ರಮದವರೇ ಸೇರಿ ಅಂತಿಮ  ವಿಧಿ ಪೂರೈಸಿದರು. ಒಂದುರೀತಿಯಲ್ಲಿ,ಈ ಲಕ್ಷ್ಮೀ ಹೆಗ್ಡೆ ಕೆಲವು ಪ್ರಶ್ನೆಗಳನ್ನು ಉಳಿಸಿ ಹೋಗಿದ್ದಾರೆ. ಏಳು ಮಕ್ಕಳಿಗೆ ಜನ್ಮ ನೀಡಿದ ತಾಯಿಗೆ ಏಳು ಮಕ್ಕಳಲ್ಲಿ ಒಬ್ಬರೂ ನೆರವಿಗೆ  ಬಾರದೇ ಇರುವುದಕ್ಕೆ ಕಾರಣಗಳೇನು? ಹಾಗಂತ, 

ಮಕ್ಕಳನ್ನು ಕಟಕಟೆಯಲ್ಲಿ ನಿಲ್ಲಿಸುವುದು ಸುಲಭ ಮತ್ತು ನಿಲ್ಲಿಸಲೇ ಬೇಕು.  ಹೆತ್ತಮ್ಮನನ್ನು ಬೀದಿಗಟ್ಟಿರುವುದಕ್ಕೆ ಮಕ್ಕಳು ಕೊಡುವ ಯಾವುದೇ ಸಮರ್ಥನೆಯೂ ತಿರಸ್ಕಾರಕ್ಕಷ್ಟೇ ಯೋಗ್ಯ. ಈ ಮಕ್ಕಳೇನೂ  ಪ್ರಯೋಗಾಲಯದಲ್ಲಿ ಹುಟ್ಟಿರುವುದಲ್ಲ. ಈ ಏಳು ಮಕ್ಕಳಲ್ಲಿ ಪ್ರತಿಯೊಂದನ್ನೂ ಈ ಲಕ್ಷ್ಮೀ ಹೆಗ್ಡೆ ಎಂಬ ತಾಯಿ 9 ತಿಂಗಳು ತನ್ನ  ಹೊಟ್ಟೆಯಲ್ಲಿಟ್ಟು ಬೆಳೆಸಿದ್ದರು. ಗರ್ಭದಲ್ಲಿರುವ ಮಗುವಿಗೆ ಏನೂ ಹಾನಿಯಾಗದಿರಲಿ ಎಂದು ಈ 9 ತಿಂಗಳೂ ವಿಶೇಷ ಕಾಳಜಿಯನ್ನು  ತೋರಿದ್ದರು. ಈ ಅವಧಿಯಲ್ಲಿ ಈ ಲಕ್ಷ್ಮೀ ಹೆಗ್ಡೆ ಎಷ್ಟು ಮದುವೆಗಳನ್ನು ತಪ್ಪಿಸಿಕೊಂಡಿದ್ದಾರೆ, ಎಷ್ಟು ಪ್ರಯಾಣಗಳನ್ನು ರದ್ದು ಪಡಿಸಿಕೊಂಡಿದ್ದಾರೆ, ಎಷ್ಟು ಧಾರ್ಮಿಕ, ಸಾಮಾಜಿಕ ಮತ್ತು ಕೌಟುಂಬಿಕ ಕಾರ್ಯಕ್ರಮಗಳಿಗೆ ಗೈರಾಗಿದ್ದಾರೆ ಅನ್ನುವುದು ಅವರಿಗಷ್ಟೇ  ಗೊತ್ತು. ತಿನ್ನುವಾಗ, ಕುಡಿಯುವಾಗ, ಮಲಗುವಾಗ, ನಡೆಯುವಾಗ... ಹೀಗೆ ಎಲ್ಲ ಸಂದರ್ಭಗಳಲ್ಲೂ ಹೊಟ್ಟಿಯಲ್ಲಿರುವ ಮಗುವಿನ  ಕ್ಷೇಮದ ದೃಷ್ಟಿಯಿಂದ ಈ ತಾಯಿ ವಿಶೇಷ ಕಾಳಜಿ ತೋರಿರಬಹುದು. ಈ ಏಳು ಮಕ್ಕಳ ಗರ್ಭ ಧರಿಸಿದಲ್ಲಿಂದ ತೊಡಗಿ ಪ್ರಸವದ  ವರೆಗೆ ಮತ್ತು ಆ ಬಳಿಕದಿಂದ ದೊಡ್ಡವರಾಗುವವರೆಗೆ ಈ ಲಕ್ಷ್ಮೀ ಹೆಗ್ಡೆ ತೋರಿರಬಹುದಾದ ಅಸಾಧಾರಣ ತಾಳ್ಮೆ, ಪ್ರೀತಿ ಮತ್ತು  ಕಾಳಜಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಈ ತಾಯ್ತನದ ಭಾರವನ್ನು ಓರ್ವ ಹೆಣ್ಣಿಗೆ ಮಾತ್ರ ನಿಭಾಯಿಸಲು ಸಾಧ್ಯ ಎಂದು  ಹೇಳುವಷ್ಟು ಇದು ಸವಾಲಿನದ್ದು. ಅಂದಹಾಗೆ,

ಇಷ್ಟೆಲ್ಲಾ ತ್ಯಾಗ-ಪ್ರೀತಿಯನ್ನು ತೋರಿ ಮಕ್ಕಳನ್ನು ಬೆಳೆಸುವ ತಾಯಿ ವೃದ್ಧಾಪ್ಯದಲ್ಲಿ ಈ ಮಕ್ಕಳಿಂದಲೇ ಯಾಕೆ ಪರಿತ್ಯಕ್ತರಾಗುತ್ತಾರೆ ಎಂಬ  ಪ್ರಶ್ನೆ ಸಹಜವಾಗಿಯೇ ಇಲ್ಲಿ ಮುನ್ನೆಲೆಗೆ ಬರುತ್ತದೆ. ಮಕ್ಕಳನ್ನು ಕೃತಘ್ನರು, ಹೆತ್ತವರ ಮಹತ್ವ ಗೊತ್ತಿಲ್ಲದವರು, ಧರ್ಮದ್ರೋಹಿಗಳು  ಎಂದೆಲ್ಲಾ ಷರಾ ಬರೆದು ಆ ಪ್ರಶ್ನೆಯಿಂದ ತಪ್ಪಿಸಿಕೊಳ್ಳಬಹುದು. ಆದರೂ ಮಕ್ಕಳೇಕೆ ಹೀಗಾಗುತ್ತಾರೆ ಅನ್ನುವ ಪ್ರಶ್ನೆಯ ಗಂಭೀರತೆ  ಹಾಗೆಯೇ ಉಳಿಯುತ್ತದೆ. ಇದು ಓರ್ವ ಲಕ್ಷ್ಮೀ ಹೆಗ್ಡೆಯ ಪ್ರಶ್ನೆಯಲ್ಲ. ವೃದ್ಧಾಶ್ರಮದಲ್ಲಿರುವ ವೃದ್ಧರನ್ನು ಮಾತ್ರ ಕೇಂದ್ರೀಕರಿಸಿ  ಕೇಳಬೇಕಾದ ಪ್ರಶ್ನೆಯೂ ಅಲ್ಲ. ಈ ದೇಶದಲ್ಲಿ ಕೋಟ್ಯಂತರ ವೃದ್ಧರಿದ್ದಾರೆ. ಅವರೆಲ್ಲ ವೃದ್ಧಾಶ್ರಮದಲ್ಲಿ ಇಲ್ಲದೇ ಇರಬಹುದು. ಆದರೆ  ಮನೆಯೆಂಬ ವೃದ್ಧಾಶ್ರಮದಲ್ಲಿ ನಿತ್ಯ ಕಣ್ಣೀರಿನೊಂದಿಗೆ ಬದುಕುತ್ತಿದ್ದಾರೆ ಎಂದು ವರ್ಷಂಪ್ರತಿ ಬಿಡುಗಡೆಗೊಳ್ಳುವ ಸಮೀಕ್ಷಾ ವರದಿಗಳು  ಹೇಳುತ್ತವೆ. ಮಗ ಮತ್ತು ಸೊಸೆ ಅಥವಾ ಮಗಳು ಮತ್ತು ಗಂಡ ಅಥವಾ ಇನ್ನಿತರ ಆಶ್ರಯದಾತರಿಂದ ನಿತ್ಯ ಮಾನಸಿಕ ಮತ್ತು ದೈಹಿಕ  ಶೋಷಣೆಗೆ ಅವರು ಗುರಿಯಾಗುತ್ತಾ ಜೀವನ ಪ್ರೀತಿಯನ್ನೇ ಮರೆತು ಬದುಕುತ್ತಿದ್ದಾರೆ ಎಂದು ಈ ಸಮೀಕ್ಷೆಗಳು ಹೇಳುತ್ತಲೇ ಇವೆ.  ವರ್ಷಂಪ್ರತಿ ಇಂಥವರ ಸಂಖ್ಯೆ ಅಧಿಕವಾಗುತ್ತಲೂ ಇದೆ. ಇದಕ್ಕೆ ಏನು ಕಾರಣ? ಹೆತ್ತು ಹೊತ್ತು ಸಾಕಿ ಬೆಳೆಸಿದವರೇ ಮಕ್ಕಳ ಪಾಲಿಗೆ  ಭಾರ ಅನ್ನಿಸಿಕೊಳ್ಳಲು ಕಾರಣ ಏನು? ಹೆತ್ತವರ ಪಾಲೂ ಇದರಲ್ಲಿ ಇದೆಯೇ? ಅವರು ಮಕ್ಕಳ ನಡುವೆ ಪಕ್ಷಪಾತಿ ವರ್ತನೆ  ತೋರುತ್ತಾರೆಯೇ? ಒಂದಿಬ್ಬರ ಪರ ವಹಿಸಿ ಉಳಿದ ಮಕ್ಕಳನ್ನು ನಿರ್ಲಕ್ಷಿಸುವಂಥ ವರ್ತನೆ ಅವರಲ್ಲಿದೆಯೇ? ಆಸ್ತಿಯಲ್ಲಿ ಅನ್ಯಾಯವಾಗಿ  ವಿಲೇವಾರಿ ಮಾಡುತ್ತಾರೆಯೇ? ಮಕ್ಕಳಿಗೆ ಕೊಡುವ ಪ್ರೀತಿಯಲ್ಲೂ ತಾರತಮ್ಯ ಎಸಗುತ್ತಾರೆಯೇ? ಅನುಕೂಲಸ್ಥ ಮಗನ ಅಥವಾ  ಮಗಳ ಪರ ವಹಿಸುವ ಮತ್ತು ಅದರಿಂದಾಗಿ ಕೌಟುಂಬಿಕ ಏರುಪೇರುಗಳಾಗುವ ಘಟನೆಗಳು ಹೆಚ್ಚತೊಡಗಿವೆಯೇ? ಅಥವಾ ಬಡತನ  ಮತ್ತು ಔಷಧಿಗಾಗಿ ಖರ್ಚು ಮಾಡಲಾಗದ ಅಸಹಾಯಕತೆಯು ಹೆತ್ತವರ ಮೇಲೆ ಮಕ್ಕಳು ಏರಿ ಹೋಗುವುದಕ್ಕೆ ಮತ್ತು ಚುಚ್ಚು  ಮಾತುಗಳಿಗೆ ಕಾರಣವಾಗುತ್ತಿದೆಯೇ? ಅಷ್ಟಕ್ಕೂ,

ಬಾಲ್ಯದಿಂದ ತೊಡಗಿ ಯೌವನ ಪ್ರಾಯದವರೆಗೆ ಪ್ರತಿಯೊಬ್ಬರಿಗೂ ಹೆತ್ತವರಿಂದಲೋ ಶಿಕ್ಷಕರಿಂದಲೋ ಸಮಾಜದಿಂದಲೋ ಜೀವನ  ಪಾಠ ಲಭಿಸುತ್ತಲೇ ಇರುತ್ತದೆ. ಹಾಗೆ ಮಾಡಬೇಕು, ಹೀಗೆ ಮಾಡಬಾರದು, ಹೇಗೆ ವರ್ತಿಸಬೇಕು ಮತ್ತು ಹೇಗೆ ಬಾರದು ಇತ್ಯಾದಿಗಳನ್ನು  ಈ ಪ್ರಾಯದಲ್ಲಿ ಹೇಳಿ ಕೊಡಲಾಗುತ್ತದೆ. ಹಾಗಂತ, ಇಂಥದ್ದೇ  ತರಬೇತಿಯು ವೃದ್ಧಾಪ್ಯಕ್ಕೆ ತಲುಪುವ ಹೆತ್ತವರಿಗೂ ನೀಡಬೇಕಾದ ಅಗತ್ಯ  ಇದೆಯೇ? ವೃದ್ಧಾಪ್ಯಕ್ಕೆ ತಲುಪುವ ಪ್ರಾಯದಲ್ಲಿ ಹೇಗೆ ಜೀವಿಸಬೇಕು, ಮಕ್ಕಳು ಮತ್ತು ಮರಿಮಕ್ಕಳೊಂದಿಗೆ ಹೇಗಿರಬೇಕು, ಮನೆಯ  ವಾತಾವರಣವನ್ನು ಹೇಗೆ ತನಗೆ ಪೂರಕವಾಗಿ ಬಳಸಿಕೊಳ್ಳಬೇಕು, ತನ್ನ ಆಸೆ-ಇಂಗಿತವನ್ನು ಪೂರೈಸಿಕೊಳ್ಳುವುದಕ್ಕೆ ಯಾವ ರೀತಿಯ  ವರ್ತನೆ ಅಗತ್ಯ.. ಎಂಬಿತ್ಯಾದಿ ತರಬೇತಿಯನ್ನು ಹಿರಿಯರಿಗೆ ನೀಡುವ ಕಾರ್ಯಾಗಾರಗಳ ಅಗತ್ಯ ಇದೆಯೇ? ಬಾಲ್ಯದಲ್ಲಿ ಮಕ್ಕಳು  ಹಠಮಾರಿಗಳಾಗುವಂತೆಯೇ ಹಿರಿಪ್ರಾಯಕ್ಕೆ ತಲುಪಿದವರೂ ಹಠಮಾರಿಗಳಾಗುತ್ತಾರೆ. ಇಂಥ ಹಿರಿಯರಿರುವ ಮನೆಗಳ ಸಮೀಕ್ಷೆ ಮತ್ತು  ಮಕ್ಕಳಿಗೆ ಆ ಹಿರಿಯರ ಮನಸ್ಥಿತಿಯನ್ನು ಅರ್ಥ ಮಾಡಿಸುವ ವ್ಯವಸ್ಥಿತ ಪ್ರಯತ್ನಗಳು ನಡೆಯಬೇಕಾಗಿದೆಯೇ? ನಿಜವಾಗಿ,

ಮಕ್ಕಳ ಪಾಲಿನ ಸ್ವರ್ಗ ಮತ್ತು ನರಕ ಅವರ ಹೆತ್ತವರಾಗಿದ್ದಾರೆ ಎಂಬ ಅತೀ ಪ್ರಬಲ ಮತ್ತು ಪರಿಣಾಮಕಾರಿ ಪರಿಕಲ್ಪನೆ ಇಸ್ಲಾಮಿನದ್ದು.  ಹೆತ್ತವರ ಮನ ನೋಯಿಸುವ ಮಕ್ಕಳು ದೇವಕೋಪಕ್ಕೆ ತುತ್ತಾಗುತ್ತಾರೆ ಎಂಬ ಅತಿ ಮಹತ್ವದ ಸಂದೇಶವನ್ನು ಇಸ್ಲಾಮ್ ಸಾರುತ್ತದೆ.  ವೃದ್ಧ ಹೆತ್ತವರ ಬಗ್ಗೆ ‘ಛೆ’ ಎಂಬ ಪದವನ್ನೂ ಬಳಸಬಾರದು ಎಂದು ಪವಿತ್ರ ಕುರ್‌ಆನ್ ತಾಕೀತು ಮಾಡಿದೆ. ಹಿಂದೂ ಧರ್ಮದಲ್ಲೂ  ಹೆತ್ತವರ ಬಗ್ಗೆ ಮೌಲ್ಯಯುತ ಆದೇಶಗಳಿವೆ. ಶ್ರವಣ ಕುಮಾರನ ಕತೆಯನ್ನು ಓದಿಯೇ ಎಲ್ಲ ಮಕ್ಕಳೂ ಬೆಳೆಯುತ್ತಿದ್ದಾರೆ. ಸಮಸ್ಯೆ ಏ ನೆಂದರೆ, ಬಾಲ್ಯದಲ್ಲಿ ಕಲಿತ ಪಾಠ ಅವರು ಬೆಳೆದು ದೊಡ್ಡವರಾದಾಗ ಪಾಲನೆಗೆ ಬರುತ್ತಿಲ್ಲ ಎಂಬುದು. ಆದ್ದರಿಂದಲೇ, ಲಕ್ಷ್ಮೀ ಹೆಗ್ಡೆ  ಮುಖ್ಯವಾಗುತ್ತಾರೆ. ಇಂಥವರ ಸಂಖ್ಯೆ ಅಸಂಖ್ಯ ಇದ್ದಿರಬಹುದಾದರೂ ಹೀಗೆ ಬಹಿರಂಗಕ್ಕೆ ಬರುವುದು ಬಹಳ ಕಡಿಮೆ. ಅಷ್ಟಕ್ಕೂ, 

 ಆಗೊಮ್ಮೆ ಈಗೊಮ್ಮೆ ಬೆಳಕಿಗೆ ಬರುವ ಇಂಥ ಸುದ್ದಿಗಳನ್ನು ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟಿಸಿದರೆ, ಅದು ಸಾರ್ವಜನಿಕ ಚರ್ಚೆಗೂ  ಒಳಗಾಗಬಹುದು ಮತ್ತು ಒಂದಷ್ಟು ಜಾಗೃತಿಗೂ ಕಾರಣವಾಗಬಹುದು.

No comments:

Post a Comment