Friday, 12 August 2016

ಅಂತಃಕರಣ ಸತ್ತವರ ನಡುವೆ ಆಗಸ್ಟ್ 15..

       ಸ್ವಾತಂತ್ರ್ಯದ ಇತಿ-ಮಿತಿಗಳು ಗಂಭೀರ ಚರ್ಚೆಗೆ ಒಳಗಾಗಿರುವ ಈ ಹೊತ್ತಿನಲ್ಲಿ ಆಗಸ್ಟ್ 15 ಆಗಮಿಸುತ್ತಿದೆ. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೊಡ್ಡದೊಂದು ಪಾತ್ರ ವಹಿಸಿದ್ದು ಗಾಂಧೀಜಿಯವರ ಉಪವಾಸ ಸತ್ಯಾಗ್ರಹ. ಅದರ ಯಶಸ್ಸಿಗೆ 68 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ, ಇರೋಮ್ ಶರ್ಮಿಳ ಎಂಬ ಹೆಣ್ಣು ಮಗಳು ಅದೇ ಸತ್ಯಾಗ್ರಹದ ಜರ್ಝರಿತ ಮುಖವಾಗಿ ನಮ್ಮೆಲ್ಲರ ಎದುರಿದ್ದಾರೆ. ಸ್ವಾತಂತ್ರ್ಯ ಪೂರ್ವದ ಗಾಂಧೀಜಿಯವರ ಉಪವಾಸ ಮತ್ತು ಸ್ವಾತಂತ್ರ್ಯಾ  ನಂತರದ ಇರೋಮ್ ಶರ್ಮಿಳಾರ ಉಪವಾಸ ಇವೆರಡನ್ನು ಪರಸ್ಪರ ಮುಖಾಮುಖಿಗೊಳಿಸಿದರೆ ನಮಗೆ ಸಿಗಬಹುದಾದ ಫಲಿತಾಂಶ ಏನು? ಈ ಫಲಿತಾಂಶದಲ್ಲಿ ಹೆಚ್ಚಿನ ಅಂಕ ಯಾರಿಗೆ ಲಭಿಸೀತು? 16 ವರ್ಷಗಳ ಕಾಲ ಸತತವಾಗಿ ಉಪವಾಸ ಸತ್ಯಾಗ್ರಹ ನಡೆಸಿ ಕೊನೆಗೆ ಭ್ರಮನಿರಸನಗೊಂಡು ಈ ಹೋರಾಟವನ್ನೇ ಕೈಬಿಡಲು ಇರೋಮ್ ನಿರ್ಧರಿಸುತ್ತಾರಲ್ಲ, ಇದು ಕೊಡುವ ಸಂದೇಶವೇನು? ಇರೋಮ್‍ಗೆ ಹೋಲಿಸಿದರೆ ಗಾಂಧೀಜಿಯವರ ಉಪವಾಸ ತೀರಾ ಹೃಸ್ವವಾಗಿತ್ತು. ವರ್ಷ ಬಿಡಿ, ತಿಂಗಳುಗಟ್ಟಲೆ ಅವರು ಉಪವಾಸ ಕೂತ ಉದಾಹರಣೆಗಳೇ ಕಡಿಮೆ. ಬ್ರಿಟಿಷ್ ಸರಕಾರ ಅಷ್ಟು ಶೀಘ್ರವಾಗಿ ಅವರ ಆಗ್ರಹವನ್ನು ಆಲಿಸುತ್ತಿತ್ತು. ಅದಕ್ಕೆ ವಿಶೇಷ ಮಹತ್ವವನ್ನು ಕಲ್ಪಿಸಿತ್ತು. ಸತ್ಯಾಗ್ರಹವನ್ನು ಅದು ಇತರೆಲ್ಲ ಹೋರಾಟ ಮಾದರಿಗಿಳಿಗಿಂತ ಅತ್ಯಂತ ಗಂಭೀರ ಮತ್ತು ಮಹತ್ವಪೂರ್ಣ ಹೋರಾಟವಾಗಿ ಪರಿಗಣಿಸಿರುವುದಕ್ಕೆ ಈ ತುರ್ತು ಸ್ಪಂದನೆಗಳೇ ಸಾಕ್ಷಿ. ನಿಜವಾಗಿ, ಭಾರತದ ಇಂದಿನ ಆಡಳಿತಗಾರರಿಗೆ ಹೋಲಿಸಿದರೆ, ಭಾರತ ಮತ್ತು ಭಾರತೀಯರೊಂದಿಗೆ ಬ್ರಿಟಿಷರ ಹೊಣೆಗಾರಿಕೆ ತೀರಾ ತೀರಾ ಕಡಿಮೆಯೆಂದೇ ಹೇಳಬಹುದು. ಒಂದನೆಯದಾಗಿ ಅವರು ಈ ದೇಶದವರೇ ಅಲ್ಲ. ಈ ದೇಶವನ್ನು ಅಭಿವೃದ್ಧಿ ಪಡಿಸುವುದರಿಂದ ಮತ್ತು ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದರಿಂದ ಅವರಿಗೆ ಆಗಬೇಕಾದ್ದೇನೂ ಇಲ್ಲ. ಇಲ್ಲಿ ಇರುವಷ್ಟು ದಿನ ತಮ್ಮ ಹುಟ್ಟಿದೂರನ್ನು ಮತ್ತು ಅಲ್ಲಿನ ಖಜಾನೆಯನ್ನು ಬೆಚ್ಚಗಿಡುವುದಷ್ಟೇ ಅವರ ಮುಖ್ಯ ಗುರಿ. ಇಂಥವರು ಓರ್ವ ತುಂಡುಡುಗೆ ಫಕೀರನ ಸತ್ಯಾಗ್ರಹಕ್ಕೆ ತುರ್ತು ಸ್ಪಂದನೆ ನೀಡುತ್ತಿದ್ದುದು ಯಾಕಾಗಿ? ಬಹುಶಃ ಅವರು ಆ ಹೋರಾಟದ ಭಾವತೀವ್ರತೆಗೆ ಮಾರು ಹೋಗಿದ್ದರು. ಅದನ್ನು ಅವರು ಓರ್ವ ವ್ಯಕ್ತಿಯ ಬರೇ ದೇಹ ದಂಡನೆಯಾಗಿ ನೋಡದೇ ಉದ್ದೇಶ ಸಾಧನೆಗಾಗಿ ಸ್ವತಃ ಶಿಕ್ಷೆಯನ್ನು ಕೊಟ್ಟುಕೊಳ್ಳುವ ಸಂತತನವನ್ನು ಅದರಲ್ಲಿ ಅವರು ಕಂಡುಕೊಂಡಿದ್ದರು. ಜಗತ್ತಿನಲ್ಲಿ ಹೋರಾಟದ ನೂರಾರು ಮಾದರಿಗಳಿವೆ. ಆದರೆ ಆ ಎಲ್ಲ ಮಾದರಿಗಳಿಗಿಂತ ಸತ್ಯಾಗ್ರಹ ತೀರಾ ಭಿನ್ನ. ಅದರಲ್ಲಿ ಮಗುವಿನ ಮುಗ್ಧತೆಯಿದೆ. ತನಗೆ ಟಾಯ್ಸ್ ಕೊಡದಿದ್ದರೆ, ಚಾಕಲೇಟು, ಆಟಿಕೆ ಕಾರು, ರಿಕ್ಷಾಗಳನ್ನು ನೀಡದಿದ್ದರೆ ನಾನು ಊಟ ಮಾಡಲಾರೆ ಎಂದು ರಚ್ಚೆ ಹಿಡಿಯುವ ಮಗುತನವಿದೆ. ಹಾಗಂತ, ಊಟ ಮಾಡದಿದ್ದರೆ ಹಸಿವಾಗುವುದು ತಾಯಿಗಲ್ಲ ಎಂಬುದು ತಾಯಿಗೂ ಗೊತ್ತು, ಮಗುವಿಗೂ ಗೊತ್ತು. ಆದರೆ ಆ ಬೆದರಿಕೆ ಅತ್ಯಂತ ಹೆಚ್ಚು ಪ್ರಭಾವ ಬೀಳುವುದು ತಾಯಿಯ ಮೇಲೆಯೇ. ತಾಯಿಯೊಳಗೊಂದು ತಳಮಳ, ಮಾನವೀಯ ಅಂತಃಕರಣ ಸ್ಪುರಿಸುತ್ತದೆ. ಗಾಂಧೀಜಿಯವರು ಹಸಿವಿನಿಂದಿರುವ ಬೆದರಿಕೆಯನ್ನು ಹಾಕಿದಾಗ, ಅದು ಮಗುತನವನ್ನು ದಾಟಿದ ಅತ್ಯಂತ ಪ್ರಬುದ್ಧ ವ್ಯಕ್ತಿಯ ಜಾಣ ಬೆದರಿಕೆ ಎಂಬುದು ಬ್ರಿಟಿಷ್ ಸರಕಾರಕ್ಕೆ ಗೊತ್ತಿತ್ತು ನಿಜ. ಅದರ ಜೊತೆಗೇ, ಆ ಬೆದರಿಕೆಯು ಗೌರವಕ್ಕೆ ಅರ್ಹತೆ ಪಡೆಯಲೇ ಬೇಕಾದ ವಿಶಿಷ್ಟ ಮಾದರಿ ಎಂದೂ ಅವರು ಭಾವಿಸಿದ್ದರು. ನ್ಯಾಯವನ್ನು ಆಗ್ರಹಿಸುತ್ತಾ ಓರ್ವನು/ಳು ಸ್ವತಃ ತನ್ನನ್ನೇ ದಂಡಿಸಿಕೊಳ್ಳುವುದು ತೀರಾ ಸುಲಭ ಅಲ್ಲ. ಅದಕ್ಕೆ ಪ್ರಬಲ ಇಚ್ಛಾಶಕ್ತಿಯ ಅಗತ್ಯವಿದೆ. ಸತ್ಯಾಗ್ರಹ ಎಂಬ ಹೋರಾಟ ಮಾದರಿಯಲ್ಲಿ ಬ್ರಿಟಿಷರು ಕಂಡುಕೊಂಡಿದ್ದು ಈ ಇಚ್ಛಾಶಕ್ತಿಯನ್ನು. ಇತರರನ್ನು ಹಿಂಸಿಸದ ಮತ್ತು ತೊಂದರೆ ಕೊಡದ ಹೋರಾಟವನ್ನು ವ್ಯಕ್ತಿಗತಗೊಳಿಸದೇ ಅವರು ಅದನ್ನು ಹೃದಯದಿಂದ ವೀಕ್ಷಿಸಿದರು. ದುರಂತ ಏನೆಂದರೆ, ಭಾರತೀಯರಿಗೆ ಭಾರತೀಯರದೇ ಸರಕಾರ ಲಭ್ಯವಾದಾಗ ಮೊತ್ತಮೊದಲು ಕಳೆದುಹೋದದ್ದೇ ಈ ಹೃದಯ. ಇರೋಮ್ ಶರ್ಮಿಳ ಅದರ ಒಂದು ಉದಾಹರಣೆ ಅಷ್ಟೇ. ಅಂತಃಕರಣ ಇಲ್ಲದ ಆಡಳಿತಗಾರರು ಮತ್ತು ನಾಗರಿಕರ ದೊಡ್ಡ ದಂಡನ್ನೇ ಸ್ವಾತಂತ್ರ್ಯಾ  ನಂತರದ ಭಾರತವು ಈ ಜಗತ್ತಿಗೆ ಅರ್ಪಿಸಿದೆ. ಅದರ ಅತ್ಯಂತ ಆಧುನಿಕ ಮುಖವೇ ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಹೃದಯಹೀನ ದೌರ್ಜನ್ಯ. ಆಗಸ್ಟ್ 15ನ್ನು ಸ್ವಾಗತಿಸುವುದಕ್ಕೆ ದೇಶ ಸಜ್ಜಾಗುತ್ತಿರುವ ಈ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಈ ಹೃದಯಹೀನರ ಅಪಾಯವನ್ನು ಮೊನ್ನೆ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.
       ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಭಾರತೀಯರನ್ನು ನಡೆಸಿಕೊಂಡ ರೀತಿ-ನೀತಿಗಳಿಗೆ ಹೋಲಿಸಿದರೆ, ಸ್ವಾತಂತ್ರ್ಯಾ ನಂತರದ ಭಾರತವು ಅವರಿಗಿಂತ ಎಷ್ಟೋ ಪಟ್ಟು ಅಧಿಕ ಬೇಜವಾಬ್ದಾರಿ ನಾಗರಿಕರನ್ನು ಸೃಷ್ಟಿಸಿದೆ ಎಂಬುದಕ್ಕೆ ಉದಾಹರಣೆಗಳ ಅಗತ್ಯವೂ ಇಲ್ಲದಷ್ಟು ಸ್ಪಷ್ಟವಾಗುತ್ತದೆ. ಹೃದ್ಯಭಾವನೆ, ಅಂತಃಕರಣಗಳ ಪ್ರಶ್ನೆ ಬಂದಾಗಲೆಲ್ಲ ಇವತ್ತು ಈ ದೇಶದಲ್ಲಿ ಶಂಕಿತ ಸ್ಥಾನದಲ್ಲಿ ಕಾಣಿಸಿಕೊಳ್ಳುವುದೇ ಪ್ರಧಾನಿ ನರೇಂದ್ರ ಮೋದಿ. ಗೋರಕ್ಷಕರ ಬಗ್ಗೆ ಅವರು ಆಡಿತ ಕಠಿಣ ಮಾತುಗಳಿಗೆ ಚಪ್ಪಾಳೆ ಬೀಳದಷ್ಟು ಅವರ ಅಂತಃಕರಣ ಸಾರ್ವಜನಿಕ ಜಿಜ್ಞಾಸೆಗೆ ಒಳಪಟ್ಟಿದೆ. ಈ ದೇಶದಲ್ಲಿ ಅಂತಃಕರಣ ಸತ್ತ ಕೆಲವು ದುಷ್ಕರ್ಮಿಗಳು ಬೆತ್ತಲೆಗೊಳಿಸಿ ಥಳಿಸುವುದು, ಬೆಂಕಿ ಕೊಟ್ಟು ಸುಡುವುದು ಇಲ್ಲವೇ ಸೆಗಣಿ ತಿನ್ನಿಸುವುದನ್ನೆಲ್ಲ ನಡೆಸುತ್ತಿರುವಾಗ ಪ್ರಧಾನಿ ಎಂಬ ನೆಲೆಯಲ್ಲಿ ಅವರಿಂದ ಈ ದೇಶ ನಿರೀಕ್ಷಿಸಿದ್ದು ಅಪಾರವಾದುದನ್ನು. ಅವರು ಖಂಡಿಸುತ್ತಾರೆ, ಆಕ್ರೋಶ ವ್ಯಕ್ತಪಡಿಸುತ್ತಾರೆ.. ಎಂದೆಲ್ಲಾ ಗಾಂಧೀಜಿಯ ಭಾರತ ನಿರೀಕ್ಷಿಸಿತ್ತು. ಇಂಥ ನಿರೀಕ್ಷೆಗೆ ಇನ್ನೊಂದು ಕಾರಣ ಏನೆಂದರೆ, ಮೋದಿಯವರು ಸಣ್ಣ-ಪುಟ್ಟ ಬೆಳವಣಿಗೆಗಳಿಗೂ ಶೀಘ್ರ ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ ಎಂಬುದು. ಶಾಲಾ ಬಾಲಕ ಪತ್ರ ಬರೆದರೆ, ಓರ್ವ ಸಾಮಾನ್ಯ ನಾಗರಿಕ ಅಹವಾಲು ಸಲ್ಲಿಸಿದರೆ ಅಥವಾ ಭಾರತೀಯರು ಕ್ರೀಡಾರಂಗದಲ್ಲಿ ಸಾಧನೆಗೈದರೆ ಇಲ್ಲವೇ ವಿಲ್ಸನ್‍ರು ಮ್ಯಾಗ್ಸೇಸೆ ಪುರಸ್ಕಾರಕ್ಕೆ ಭಾಜನರಾದರೆ.. ಇಲ್ಲೆಲ್ಲಾ ಮೋದಿಯವರು ಎಷ್ಟು ಚುರುಕಾಗಿರುತ್ತಾರೆಂದರೆ, ತಕ್ಷಣ ಟ್ವೀಟ್ ಮಾಡಿ ಸ್ಪಂದಿಸುತ್ತಾರೆ. ಬಾಯ್ಮಾತಿನ ಹೇಳಿಕೆಗಳಿಗಿಂತಲೂ ಮೊದಲು ಅಂತರ್ಜಾಲದಲ್ಲಿ ಅವರ ಪ್ರತಿಕ್ರಿಯೆ ವ್ಯಕ್ತವಾಗಿರುತ್ತದೆ. ಇಂಥ ಪ್ರಧಾನಿ ಅಂತಃಕರಣ ಸತ್ತವರ ಬಗ್ಗೆ ಸಣ್ಣ ಪ್ರತಿಕ್ರಿಯೆ ಕೊಡುವುದಕ್ಕೂ ತಿಂಗಳುಗಟ್ಟಲೆ ಕಾಯುತ್ತಾರೆಂದರೆ, ಈ ಹೃದಯಕ್ಕೆ ಏನೆನ್ನಬೇಕು? ಈ ಅಂತಃಕರಣ ಸತ್ತ ಮನುಷ್ಯರ ಕ್ರೌರ್ಯಗಳಿಗೆ ಪಾರ್ಲಿಮೆಂಟ್ ಮೂಲಕ ಅವರು ಕಠಿಣ ಪ್ರತಿಕ್ರಿಯೆ ನೀಡುತ್ತಾರೆಂದು ಹೃದಯವಂತ ಭಾರತೀಯರು ಕಾದು ಕುಳಿತಿದ್ದರು. ಆದರೆ ಅಲ್ಲೂ ನಿರಾಶೆಯಾಯಿತು. ಇದೀಗ ಪಾರ್ಲಿಮೆಂಟ್‍ನಿಂದ ಎಲ್ಲೋ ದೂರದಲ್ಲಿ ಮತ್ತು ಪ್ರಶ್ನೋತ್ತರಗಳಿಗೆ ಅವಕಾಶವಿಲ್ಲದ ಸಭೆಯೊಂದರಲ್ಲಿ ಅಂತಃಕರಣ ಸತ್ತವರ ಬಗ್ಗೆ ಅವರು ಆಡಿತ ಮಾತುಗಳು ಅವರ ಪ್ರಾಮಾಣಿಕತೆಯನ್ನು ಶಂಕೆಯ ಮೊನೆಯಲ್ಲೇ ನಿಲ್ಲಿಸಿದೆ. ಅವರೇಕೆ ಈ ಮಾತುಗಳನ್ನು ಆಡಲು ಇಷ್ಟು ತಡ ಮಾಡಿದರು? ಭಯೋತ್ಪಾದನೆಯ ನೆಪದಲ್ಲಿ ಆಸ್ಟ್ರೇಲಿಯಾ ಸರಕಾರವು ಡಾ| ಹನೀಫ್‍ರನ್ನು ಬಂಧಿಸಿದ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಒಂದು ಹೇಳಿಕೆಯನ್ನು ಕೊಟ್ಟಿದ್ದರು. ಹನೀಫ್‍ರ ಪತ್ನಿ, ಕುಟುಂಬದವರ ಕಣ್ಣೀರು ತನ್ನೊಳಗನ್ನು ಎಷ್ಟರ ಮಟ್ಟಿಗೆ ಕಾಡಿದೆಯೆಂದರೆ, ನನಗೆ ಆ ರಾತ್ರಿ ನಿದ್ದೆಯೇ ಬರಲಿಲ್ಲ ಅಂದಿದ್ದರು. ಹೃದಯ ಸತ್ತವರ ಹೊರತಾಗಿ ಉಳಿದ ಎಲ್ಲರಿಗೂ ಅದು ಓರ್ವ ಹೃದಯವಂತನ ಹೃದ್ಯ ಮತ್ತು ಭಾವುಕ ಪದಗಳಾಗಿ ಕೇಳಿಸಿತ್ತು. ಸ್ವಾತಂತ್ರ್ಯ ಪೂರ್ವದ ಬ್ರಿಟಿಷರಲ್ಲಿ ಒಂದು ಹಂತದವರೆಗೆ ಆ ಹೃದಯವಿತ್ತು. ಆದ್ದರಿಂದ, ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಆ ಹೃದಯ ನೂರುಪಟ್ಟು ವಿಕಸನ ಹೊಂದಿ ಸರ್ವರ ಮಾನ್ಯತೆಗೆ ಪಾತ್ರವಾಗಬೇಕಿತ್ತು. ಆದರೆ, ದಿನೇ ದಿನೇ ಹೃದಯಶೂನ್ಯರು ಮತ್ತು ಅಂತಃಕರಣ ಸತ್ತವರು ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಪ್ರಧಾನಿ ಸ್ಥಾನದಲ್ಲಿರುವವರ ಅಂತಃಕರಣವೇ ಶಂಕಿತಗೊಳ್ಳುವ ಹಂತಕ್ಕೆ ಆ ಪ್ರಕ್ರಿಯೆ ತಲುಪಿಬಿಟ್ಟಿದೆ. ಇರೋಮ್‍ರ ಉಪವಾಸ ಸಾರುತ್ತಿರುವುದೂ ಇದನ್ನೇ. ಆದ್ದರಿಂದ,
        ಆಗಸ್ಟ್ 15ನ್ನು ಸ್ವಾಗತಿಸಲು ಸಿದ್ಧತೆ ನಡೆಸುತ್ತಿರುವ ಪ್ರತಿಯೋರ್ವ ಭಾರತೀಯನೂ/ಳೂ ಸತ್ತ ಹೃದಯಗಳೊಂದಿಗೆ ಓಡಾಡುವವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುವ ಮೂಲಕ ಅಂತಃಕರಣವುಳ್ಳ  ಹೊಸ ಮುಂಜಾವನ್ನು ಹಾರೈಸಬೇಕಿದೆ.

1 comment:

  1. ಅಂತಹವರಿಂದ ಜೀವಂತಿಕೆಯ ಅಂತಕರಣವನ್ನು ನಿರೀಕ್ಷಿಸುವುದೇ ತಪ್ಪು.!

    ReplyDelete