Thursday 20 June 2019

ಸನಾವುಲ್ಲಾರನ್ನು ಬಂಧಿಸಿದ ವ್ಯವಸ್ಥೆಗೆ ಕೃತಜ್ಞತೆಗಳು



ಅಸ್ಸಾಮ್‍ನಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪೌರತ್ವ ನೋಂದಣಿ ಯೋಜನೆಯ ಆಘಾತಕಾರಿ ಮತ್ತು ಅವಮಾನಕಾರಿ ಮುಖವೊಂದನ್ನು ಕಾರ್ಗಿಲ್ ಯೋಧ ಸನಾವುಲ್ಲಾ ಈ ದೇಶದ ಮುಂದಿಟ್ಟಿದ್ದಾರೆ. ಅಸ್ಸಾಮ್‍ನಲ್ಲಿ ನೆಲೆಸಿರುವವರಲ್ಲಿ ವಿದೇಶಿಯರೆಷ್ಟು ಮತ್ತು ಸ್ವದೇಶಿಯರೆಷ್ಟು ಎಂಬುದನ್ನು ಪತ್ತೆ ಹಚ್ಚುವುದಕ್ಕೆಂದು ಆರಂಭಿಸಲಾದ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯ ಮರೆಯಲ್ಲಿ ಎಂತೆಂಥ ಸಂಚುಗಳು ನಡೆಯಬಹುದು ಎಂಬ ಚರ್ಚೆಯೊಂದಕ್ಕೂ ಈ ಸನಾವುಲ್ಲಾ ವೇದಿಕೆಯನ್ನು ಒದಗಿಸಿದ್ದಾರೆ. ನಿಜವಾಗಿ, ಬಂಧನದಿಂದಾಗಿ ಸನಾವುಲ್ಲಾರಿಗೆ ವೈಯಕ್ತಿಕವಾಗಿ ತೊಂದರೆಯಾಗಿರಬಹುದಾದರೂ ಸಮುಷ್ಠಿ ಹಿತದ ದೃಷ್ಟಿಯಿಂದ ನೋಡುವುದಾದರೆ ಆ ಬಂಧನವನ್ನು ನಾವು ಸ್ವಾಗತಿಸಬೇಕು. ವಿದೇಶಿಯರೆಂದು ಮುದ್ರೆಯೊತ್ತಲ್ಪಟ್ಟವರನ್ನು ಬಂಧನದಲ್ಲಿರಿಸಿ, ಅವರನ್ನು ಗಡೀಪಾರುಗೊಳಿಸುವ ಪ್ರಕ್ರಿಯೆಯನ್ನು ಮುಂದುವರಿಸುವ ಈಗಿನ ಒಟ್ಟು ಸನ್ನಿವೇಶದ ಔಚಿತ್ಯವನ್ನೇ ಅವರ ಬಂಧನ ಮತ್ತು ಆ ಬಳಿಕದ ಬೆಳವಣಿಗೆಗಳು ಚರ್ಚೆಗೆ ಒಳಪಡಿಸಿವೆ. ಸನಾವುಲ್ಲಾರಂತೆ ಅದೆಷ್ಟು ಮಂದಿ ವಿದೇಶಿ ಎಂಬ ಸುಳ್ಳು ಹಣೆಪಟ್ಟಿಯೊಂದಿಗೆ ಬಂಧನ ಕೇಂದ್ರದಲ್ಲಿ ಕೊಳೆಯುತ್ತಿರಬಹುದು ಅನ್ನುವ ಪ್ರಶ್ನೆಯನ್ನು ಈ ಬಂಧನ ಹುಟ್ಟುಹಾಕಿದೆ. ಒಂದುವೇಳೆ, ಸನಾವುಲ್ಲಾರು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ಯೋಧ ಆಗಿಲ್ಲದೇ ಇರುತ್ತಿದ್ದರೆ ಕೇವಲ ಎರಡೇ ವಾರದೊಳಗೆ ಬಂಧನ ಮತ್ತು ಬಿಡುಗಡೆಯ ಸನ್ನಿವೇಶ ನಿರ್ಮಾಣವಾಗುತ್ತಿತ್ತೇ? ಓರ್ವ ಕಾರ್ಗಿಲ್ ಯೋಧನೇ ಅಸ್ಸಾಮ್‍ನಲ್ಲಿ ವಿದೇಶಿ ಎಂಬ ಗುರುತಿಗೆ ಒಳಪಡುವನೆಂದಾದರೆ, ಇನ್ನು ಸಾಮಾನ್ಯ ನಾಗರಿಕನೋರ್ವನ ಸ್ಥಿತಿ ಏನಿರಬಹುದು?
ಈ ದೇಶದಲ್ಲೇ  ಹುಟ್ಟಿದ್ದರೂ ಮತ್ತು ಇಲ್ಲೇ  ಜೀವನಕ್ಕೊಂದು ದಾರಿ ಕಂಡುಕೊಂಡಿದ್ದರೂ ಸರಿಯಾದ ದಾಖಲೆ ಪತ್ರಗಳನ್ನು ಕಾಪಿಟ್ಟುಕೊಳ್ಳದ ಅಸಂಖ್ಯ ಮಂದಿ ಈ ದೇಶದಲ್ಲಿದ್ದಾರೆ. ಇದಕ್ಕೆ ಕಾರಣ- ವಿದ್ಯಾಭ್ಯಾಸದ ಕೊರತೆ ಮತ್ತು ಸರಕಾರಿ ಕಚೇರಿಗಳೊಂದಿಗೆ ವ್ಯವಹರಿಸುವಲ್ಲಿ ಇರುವ ಭಯ. ಅಧಿಕಾರಿಗಳ ಮುಂದೆ ನಿಂತು ಮಾತನಾಡಲು ಗೊತ್ತಿಲ್ಲದ, ಅಧಿಕಾರಿಗಳೆಂದರೆ ಹೆದರುವ ಮತ್ತು ದಾಖಲೆ ಪತ್ರಗಳ ಮಹತ್ವವನ್ನು ತಿಳಿದಿಲ್ಲದ ಸಾಮಾನ್ಯ ನಾಗರಿಕರು ನಮ್ಮ ನಡುವೆ ಧಾರಾಳ ಇದ್ದಾರೆ. ಅವರಿಗೆ- ಪೌರತ್ವ, ಅದಕ್ಕಿರುವ ಮಹತ್ವ ಮತ್ತು ಅದನ್ನು ಹೊಂದುವುದರಿಂದ ಆಗುವ ಪ್ರಯೋಜನಗಳನ್ನು ವಿವರಿಸಿ ಹೇಳುವವರೂ ಕಡಿಮೆ. ಪಡಿತರ ಚೀಟಿಗಾಗಿಯೋ ಆಧಾರ್ ಕಾರ್ಡ್ ಮಾಡಲೋ ತಮ್ಮ ನಿತ್ಯದ ಕೂಲಿ ಕೆಲಸಕ್ಕೆ ಬಿಡುವು ಮಾಡಿಕೊಳ್ಳುವುದನ್ನು ಅವರು ಅನಗತ್ಯ ಎಂದೇ ಭಾವಿಸುತ್ತಾರೆ. ಅಲ್ಲದೇ, ಇಂಥ ಕೆಲಸರಹಿತ ದಿನಗಳು ಅವರ ತುತ್ತಿಗೆ ಬರುವ ಅಡ್ಡಿಗಳಾಗಿಯೇ ಪರಿಗಣಿತವಾಗಿರುತ್ತದೆ. ಅಸ್ಸಾಮ್‍ನಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪೌರತ್ವ ನೋಂದಣಿಯ ಬಲಿಪಶುಗಳಲ್ಲಿ ಇಂಥ ಅಮಾಯಕ ನಾಗರಿಕರ ಸಂಖ್ಯೆ ಎಷ್ಟಿರಬಹುದು ಎಂಬುದನ್ನು ಸನಾವುಲ್ಲಾ ಗಂಭೀರವಾಗಿ ಯೋಚಿಸುವಂತೆ ಮಾಡಿದ್ದಾರೆ. ಅವರ ಬಂಧನದ ಎರಡು ವಾರಗಳಲ್ಲಿ ಇಂಥದ್ದೇ  ಎಡವಟ್ಟುಗಳ ಹಲವು ಸುದ್ದಿಗಳು ಹೊರಬಿದ್ದಿವೆ. ಇದರಲ್ಲಿ 59 ವರ್ಷದ ವಿಧವೆ ಮಧುಬಾಲ ಮಂಡಲ್ ಎಂಬವರೂ ಒಬ್ಬರು. ಅವರು ವಿದೇಶಿ ಎಂಬ ಅನುಮಾನದೊಂದಿಗೆ ಮೂರು ವರ್ಷಗಳನ್ನು ಬಂಧನ ಕೇಂದ್ರದಲ್ಲಿ ಕಳೆದಿದ್ದಾರೆ. ಇದ್ದೊಬ ಮಗಳು ವಿಕಲಚೇತನೆ. 2016ರಲ್ಲಿ ಆಕೆಯನ್ನು ಅಸ್ಸಾಮ್‍ನ ಕೊಕ್ರಾಜಾರ್‍ನಲ್ಲಿರುವ ಬಂಧನ ಕೇಂದ್ರಕ್ಕೆ ತಳ್ಳಲಾಗಿತ್ತು. ನಿಜವಾಗಿ, ಆಕೆ ವಿದೇಶಿ ಅಲ್ಲ. ಮಧುಮಲ ಎಂಬ ಮಹಿಳೆಯ ಕುರಿತು ಅಸ್ಸಾಮ್‍ನ ಗಡಿಕಾವಲು ಪೊಲೀಸರಿಗೆ ಸಂದೇಹ ಉಂಟಾಗಿತ್ತು. ಅಸ್ಸಾಮ್‍ನಲ್ಲಿರುವ ವಿದೇಶಿಯರನ್ನು ಪತ್ತೆ ಹಚ್ಚುವ, ತನಿಖಿಸುವ ಮತ್ತು ಬಂಧನಕ್ಕೆ ಒಳಪಡಿಸುವ ಹೊಣೆಯನ್ನು ಅಸ್ಸಾಮ್ ಗಡಿ ಪೊಲೀಸರು ನಿರ್ವಹಿಸುತ್ತಿದ್ದಾರೆ. ಅವರು 2008ರಲ್ಲಿ ನೀಡಿದ ವರದಿಯನ್ನು ಆಧರಿಸಿ ‘ವಿದೇಶಿ ನ್ಯಾಯಾಧಿಕರಣ ಸಮಿತಿ’ಯು ಮಧುಮಲ ಎಂಬ ಮಹಿಳೆಗೆ 2016ರಲ್ಲಿ ನೋಟೀಸು ಜಾರಿಗೊಳಿಸುತ್ತದೆ. ಆದರೆ ಪೊಲೀಸರು ಮಧುಮಲ ಎಂಬ ಮಹಿಳೆಯರ ಬದಲು ಭಾರತೀಯ ಪೌರತ್ವ ಹೊಂದಿರುವ ಮಧುಬಾಲ ಮಂಡಲ್‍ಳನ್ನು ಬಂಧಿಸುತ್ತಾರೆ ಮತ್ತು ಬಂಧನ ಕೇಂದ್ರಕ್ಕೆ ತಳ್ಳುತ್ತಾರೆ. ದುರಂತ ಏನೆಂದರೆ, ವಿದೇಶಿ ಎಂಬ ಹಣೆಪಟ್ಟಿಯೊಂದಿಗೆ ಅಸ್ಸಾಮ್‍ನ ಬಂಧನ ಕೇಂದ್ರದಲ್ಲಿರುವ ಅಸಂಖ್ಯ ಮಂದಿಗೆ ತಮ್ಮನ್ನು ಭಾರತೀಯರೆಂದು ಸಾಬೀತುಪಡಿಸುವುದು ಹೇಗೆಂದೇ ಗೊತ್ತಿಲ್ಲ. ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲದ ಬಂಧನ ಕೇಂದ್ರದಲ್ಲಿ ಶಂಕಿತ ಭಯೋತ್ಪಾದಕರಂತೆ ಅವರು ಬದುಕುತ್ತಿದ್ದಾರೆ. ಕಾನೂನು ನೆರವನ್ನು ಪಡಕೊಳ್ಳುವ ಸಾಮರ್ಥ್ಯವಾಗಲಿ ತಿಳುವಳಿಕೆಯಾಗಲಿ ಅವರಿಗಿಲ್ಲ... ಈ ಭಯಾನಕ ಸತ್ಯವನ್ನು ಬಹಿರಂಗಪಡಿಸಿದ್ದು ಸನಾವುಲ್ಲಾರೇ. ಅವರ ಬಂಧನವಂತೂ ಇಡೀ ಪೌರತ್ವ ನೋಂದಣಿ ಪ್ರಕ್ರಿಯೆಯನ್ನೇ ಅವಮಾನಿಸುವ ರೀತಿಯಲ್ಲಿದೆ. ಅಸ್ಸಾಮ್‍ನಿಂದ ಮುಸ್ಲಿಮರನ್ನು ಹೊರತಳ್ಳಲು ಪೌರತ್ವ ನೋಂದಣಿ ಯೋಜನೆಯ ಮರೆಯಲ್ಲಿ ಸಂಚನ್ನು ಹೆಣೆಯಲಾಗಿದೆಯೇ ಎಂಬ ಸಂದೇಹಕ್ಕೆ ಅವರ ಬಂಧನ ಎಡೆಮಾಡಿಕೊಟ್ಟಿದೆ. ಸಬ್ ಇನ್ಸ್ ಪೆಕ್ಟರ್ ಚಂದ್ರಮಲ್ ದಾಸ್ ಅವರ ವರದಿಯನ್ನು ಆಧರಿಸಿ ಸನಾವುಲ್ಲಾರನ್ನು ಮೇ 23ರಂದು ಬಂಧಿಸಿ ಬಂಧನ ಕೇಂದ್ರದೊಳಕ್ಕೆ ತಳ್ಳಲಾಗಿತ್ತು. ಸನಾವುಲ್ಲಾ ಅವರು ವಿದೇಶಿ ಎಂಬುದಕ್ಕೆ ಪುರಾವೆಯಾಗಿ ಸೋಭಾನ್ ಅಲಿ, ಅಜ್ಮಲ್ ಅಲಿ ಮತ್ತು ಕುರ್ಬಾನ್ ಅಲಿ ಎಂಬವರ ಹೇಳಿಕೆಯನ್ನು ಈ ಚಂದ್ರಮಲ್ ದಾಸ್‍ರು ‘ವಿದೇಶಿ ನ್ಯಾಯಾಧೀಕರಣ ಸಮಿತಿ’ಯ ಮುಂದೆ ಮಂಡಿಸಿದ್ದರು. ಆದರೆ, ಆ ಇಡೀ ವರದಿಯೇ ಸುಳ್ಳು ಅನ್ನುವುದನ್ನು ಆ ಮೂವರೂ ಘೋಷಿಸಿದ್ದಾರೆ. ತಮ್ಮನ್ನು ಚಂದ್ರಮಲ್ ದಾಸ್ ಭೇಟಿಯಾಗಿಯೇ ಇಲ್ಲ ಎಂದೂ ಹೇಳಿದ್ದಾರೆ. ಮಾತ್ರವಲ್ಲ, ದಾಸ್‍ರ ವಿರುದ್ಧ ಪೊಲೀಸು ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ನಿಜವಾಗಿ, ಸನಾವುಲ್ಲಾ  ಒಂದು ತೋರುಗಲ್ಲು. ಅವರ ಬಂಧನದಿಂದಾಗಿ ಪೌರತ್ವ ನೋಂದಣಿ ಎಂಬ ಯೋಜನೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಎಡವಟ್ಟುಗಳು, ಸಂಚುಗಳು ಮತ್ತು ಉದ್ದೇಶಪೂರ್ವಕವೋ ಎಂದು ಅನುಮಾನಿಸಬೇಕಾದ ತಪ್ಪುಗಳು ಬೆಳಕಿಗೆ ಬಂದುವು. ಒಮ್ಮೆ ಓರ್ವರು ಬಂಧನ ಕೇಂದ್ರಕ್ಕೆ ತಳ್ಳಲ್ಪಟ್ಟರೆಂದರೆ ಬಳಿಕ ಅವರನ್ನು ಬಿಡಿಸಿಕೊಳ್ಳುವ ವಿಧಾನ ಸುಲಭದ್ದಲ್ಲ. ನ್ಯಾಯವಾದಿಗಳನ್ನು ನೇಮಿಸಬೇಕು. ತಾವು ಭಾರತೀಯರೆಂದು ಸಾಬೀತುಪಡಿಸುವುದಕ್ಕೆ ಮತ್ತೆ ಮತ್ತೆ ನ್ಯಾಯಾಧೀಕರಣ ಸಮಿತಿ ಮುಂದೆ ಪುರಾವೆಗಳನ್ನು ಮಂಡಿಸಬೇಕು. ನ್ಯಾಯವಾದಿಗಳಿಗೆ ಹಣ ಖರ್ಚು ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಬಂಧನದಿಂದಾಗಿ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಬಹುದು. ಅಪ್ಪನಿಲ್ಲದ ಮನೆ, ಅಮ್ಮನಿಲ್ಲದ ಮನೆ, ಅಪ್ಪ-ಅಮ್ಮ ಇಬ್ಬರೂ ಬಂಧನ ಕೇಂದ್ರದಲ್ಲಿ ಮತ್ತು ಮಕ್ಕಳು ಶಂಕೆಯ ಮೊನೆಯಲ್ಲಿ ಎಂಬ ಸ್ಥಿತಿ ನಿರ್ಮಾಣವಾಗಬಹುದು. ಭಾರತೀಯ ನಾಗರಿಕಳಾಗಿದ್ದೂ ಬಂಧನಕ್ಕೀಡಾಗಿ 3 ವರ್ಷ ಜೈಲಲ್ಲಿ ಕೊಳೆತ ಮಧುಬಾಲ ಕುಟುಂಬದ ಸ್ಥಿತಿ ಏನಾಗಿರಬಹುದು? ಓರ್ವ ಕಾರ್ಗಿಲ್ ಯೋಧನೆಂಬ ಹೆಮ್ಮೆಯಲ್ಲಿದ್ದ ಮತ್ತು ಆ ಕಾರಣಕ್ಕಾಗಿಯೇ ಸಾಮಾಜಿಕ ಮನ್ನಣೆಯನ್ನು ಪಡೆದುಕೊಂಡಿದ್ದ ಸನಾವುಲ್ಲಾರ ಎರಡು ವಾರಗಳ ಯಾತನೆ ಏನಾಗಿರಬಹುದು? ದೈಹಿಕ ನೋವಿಗಿಂತ ಮಾನಸಿಕ ನೋವು ಹೆಚ್ಚು ಭಾರವಾದುದು. ತಾವು ಆವರೆಗೆ ಸಂಪಾದಿಸಿದ ಸಕಲ ಗೌರವ-ಮಾನ್ಯತೆಗಳನ್ನೂ ವಿದೇಶಿ ನ್ಯಾಯಾಧಿಕರಣ ಸಮಿತಿಯ ಒಂದು ತಪ್ಪು ನಿರ್ಧಾರವು ಮಣ್ಣು ಮಾಡಬಹುದು. ಆದ್ದರಿಂದ, ಅಸ್ಸಾಮ್‍ನ ಬಂಧನ ಕೇಂದ್ರದಲ್ಲಿ ಕೊಳೆಯುತ್ತಿರುವ ಅಷ್ಟೂ ಮಂದಿಯ ಕುರಿತು ಮರು ಅವಲೋಕನವೊಂದು ನಡೆಯಬೇಕಾದ ಅಗತ್ಯ ಇದೆ. ಮಾಧ್ಯಮದ ಮಂದಿ ಈ ಬಗ್ಗೆ ಆಸಕ್ತಿ ವಹಿಸಬೇಕು. ಬಂಧಿತರ ಕುಟುಂಬವನ್ನು ಭೇಟಿಯಾಗಿ ಸತ್ಯಾಸತ್ಯಗಳನ್ನು ಬಹಿರಂಗಕ್ಕೆ ತರುವ ಶ್ರಮ ನಡೆಸಬೇಕು. ಈ ಬಗ್ಗೆ ಯೋಚಿಸುವಂತೆ ಮಾಡಿದ ಸನಾವುಲ್ಲಾರಿಗೆ ಮತ್ತು ಅವರನ್ನು ಬಂಧಿಸಿದ ವ್ಯವಸ್ಥೆಗೆ ಮತ್ತೊಮ್ಮೆ ಅಭಿನಂದನೆಗಳು.

Thursday 13 June 2019

ಪ್ರಧಾನಿಯವರ ಸಬ್‍ಕಾ ವಿಶ್ವಾಸ್ ಮತ್ತು ಸೇತುವೆಯಿಲ್ಲದ ಕಂದಕ


   
ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕಿಂತ ಒಂದು ದಿನ ಮೊದಲು ನರೇಂದ್ರ ಮೋದಿಯವರು ಎನ್‍ಡಿಎ ಸಂಸದರನ್ನುದ್ದೇಶಿಸಿ ಮಾತಾಡುತ್ತಾ, ಸಬ್‍ಕಾ ಸಾಥ್, ಸಬ್‍ಕಾ ವಿಕಾಸ್ ಮತ್ತು ಸಬ್‍ಕಾ ವಿಶ್ವಾಸ್ ಎಂಬ ಧ್ಯೇಯವಾಕ್ಯವನ್ನು ಘೋಷಿಸಿದರು. ಈ ಭಾಷಣಕ್ಕಿಂತ ಎರಡು ವಾರಗಳ ಮೊದಲು ‘ಫೂಟ್ ಸೋಲ್ಜರ್ಸ್ ಆಫ್ ದ ಕಾನ್ಸ್‍ಟಿಟ್ಯೂಶನ್’ (ಸಂವಿಧಾನದ ಕಾಲಾಳು) ಎಂಬ ಕೃತಿಯ ಕನ್ನಡಾನುವಾದ ಬಿಡುಗಡೆಗೊಂಡಿತ್ತು. ಗುಜರಾತ್ ಹತ್ಯಾಕಾಂಡದ ಹಿನ್ನೆಲೆ ಮತ್ತು ಮುನ್ನೆಲೆಗಳನ್ನು ಟೀಸ್ಟಾ ಸೆಟಲ್ವಾಡ್ ಅವರು ಅತ್ಯಂತ ವಸ್ತುನಿಷ್ಠವಾಗಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಗೋಧ್ರಾ ಹತ್ಯಾಕಾಂಡ ಮತ್ತು ಗೋಧ್ರೋತ್ತರ ನರಮೇಧಗಳನ್ನೇ ಕೇಂದ್ರವಾಗಿಟ್ಟುಕೊಂಡು ಬರೆದಿರುವ ಈ ಕೃತಿಯಲ್ಲಿ ಬೆಂದು ಹೋದ ಒಂದು ಸಮುದಾಯ ಮತ್ತು ಅದಕ್ಕೆ ಪಶ್ಚಾತ್ತಾಪ ಪಡದ ವ್ಯವಸ್ಥೆಯ ಕಥನವಿದೆ. ಆ ಇಡೀ ಘಟನೆಯ ದೃಕ್‍ಸಾಕ್ಷಿ ನರೇಂದ್ರ ಮೋದಿ. ಕಾನೂನಿನ ಕಣ್ಣಿನಲ್ಲಿ ಅವರು ಅಪರಾಧಿಯಲ್ಲ, ನಿಜ. ಆದರೆ ಆ ಇಡೀ ಘಟನೆಯಲ್ಲಿ ಅವರು ನಿರ್ವಹಿಸಿದ ಪಾತ್ರ ಕಳಂಕರಹಿತವಲ್ಲ ಅನ್ನುವ ಭಾವನೆ ಈ ದೇಶದ ಹೆಚ್ಚಿನ ಜನರಲ್ಲಿದೆ. ‘ರಾಜಧರ್ಮ ಪಾಲಿಸು’ ಎಂದು ಅಂದಿನ ಪ್ರಧಾನಿ ವಾಜಪೇಯಿಯವರು ಆದೇಶಿಸುವಷ್ಟು ಅಂದು ಪರಿಸ್ಥಿತಿ ಹದಗೆಟ್ಟಿತ್ತು ಎಂಬುದೂ ಐತಿಹಾಸಿಕ. ಅಂದಿನ ಮುಖ್ಯಮಂತ್ರಿ ಈಗ ಪ್ರಧಾನಿಯಾಗಿದ್ದಾರೆ. ಅಂದಿನ ಆ ಘಟನೆಗೆ ಇಂದು 16 ವರ್ಷಗಳೇ ಕಳೆದು ಹೋಗಿವೆ. 2002ರ ಬಳಿಕದ ಪೀಳಿಗೆಗೆ ಆ ನರಮೇಧದ ಬಗ್ಗೆ ಹೆಚ್ಚು ಗೊತ್ತಿರುವ ಸಾಧ್ಯತೆಯೂ ಇಲ್ಲ. ಸಬ್‍ಕಾ ಸಾಥ್, ಸಬ್‍ಕಾ ವಿಕಾಸ್ ಮತ್ತು ಸಬ್‍ಕಾ ವಿಶ್ವಾಸ್ ಎಂದು ಘೋಷಿಸುವ ಸಂದರ್ಭದಲ್ಲಿ ನರೇಂದ್ರ ಮೋದಿಯವರು 16 ವರ್ಷಗಳ ಹಿಂದಿನ ಘಟನೆಯನ್ನು ಸ್ಮರಿಸಿಕೊಂಡಿರುವರೋ ಇಲ್ಲವೋ, ಆದರೆ 16 ವರ್ಷಗಳ ಹಿಂದೆ ನಡೆದ ಗೋಧ್ರೋತ್ತರ ಹಿಂಸೆಯನ್ನು ನಿರ್ವಹಿಸಿದ ರೀತಿ ಮತ್ತು ಪ್ರಧಾನಿಯಾಗಿ ಕಳೆದ ಐದು ವರ್ಷಗಳಲ್ಲಿ ಅವರ ಬೆಂಬಲಿಗರು ನಡೆದುಕೊಂಡ ವಿಧಾನವು ಅವರ ಈ ಘೋಷಣೆಯ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿದೆ ಅನ್ನುವುದರಲ್ಲಿ ಅನುಮಾನವಿಲ್ಲ. ಈ ದೇಶದ ಅಲ್ಪಸಂಖ್ಯಾತರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪP್ಷÀವನ್ನು ಸಂದೇಹದ ಮೊನೆಯಲ್ಲಿಟ್ಟಿರುವುದಕ್ಕೆ ಇರುವ ಹಲವು ಕಾರಣಗಳಲ್ಲಿ ಗುಜರಾತ್ ನರಮೇಧವೂ ಒಂದು. ಅವರು ಪ್ರಧಾನಿಯಾಗಿದ್ದ ಕಳೆದ ಐದು ವರ್ಷಗಳಲ್ಲಿ ಈ ದೇಶದ ಸಹಿಷ್ಣುತೆಗೆ ಸವಾಲಾಗಬಲ್ಲಂಥ ಅನೇಕಾರು ಘಟನೆಗಳು ನಡೆದುವು. ಈ ದೇಶದ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆದ ದೌರ್ಜನ್ಯಗಳು ದೇಶದ ಗಡಿಯನ್ನೂ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೀಡಾದುವು. ಚುನಾವಣಾ ಪ್ರಚಾರದ ಸಮಯದಲ್ಲಿ ಅವರ ಪಕ್ಷದ ಹಲವು ನಾಯಕರು ಆಡಿದ ಮಾತುಗಳು ಸಬ್‍ಕಾ ಸಾಥ್ ಮತ್ತು ಸಬ್‍ಕಾ ವಿಶ್ವಾಸ್‍ಗೆ ಯಾವ ರೀತಿಯಲ್ಲೂ ಹೊಂದಿಕೆಯಾಗಿರಲಿಲ್ಲ. ಮೋದಿಯವರ ಚುನಾವಣಾ ಗೆಲುವಿನ ಬಳಿಕ ಮತ್ತು ಮೇ 30ರ ಪ್ರಮಾಣ ವಚನ ಸ್ವೀಕಾರಕ್ಕಿಂತ ಮೊದಲು ಮುಸ್ಲಿಮರನ್ನು ಹಿಂಸಿಸುವ ಒಂದಕ್ಕಿಂತ ಹೆಚ್ಚು ಘಟನೆಗಳು ನಡೆದುವು. ಹರ್ಯಾಣ, ಮಧ್ಯಪ್ರದೇಶ ಮತ್ತು ಬಿಹಾರಗಳು ಇದಕ್ಕೆ ಸಾಕ್ಷಿಯಾದುವು. ದಲಿತರ ಮದುವೆ ದಿಬ್ಬಣದ ಮೇಲೆ ಮೇಲ್ಜಾತಿಯ ಮಂದಿ ಹಲ್ಲೆ ನಡೆಸಿದ ಘಟನೆ ಸ್ವತಃ ಗುಜರಾತ್‍ನಲ್ಲಿಯೇ ನಡೆಯಿತು. ಗೋಡ್ಸೆಯನ್ನು ವೈಭವೀಕರಿಸುವ ಸನ್ನಿವೇಶಗಳು ಎರಡೆರಡು ಬಾರಿ ನಡೆದುವು. ಮಾಲೆಗಾಂವ್ ಸ್ಫೋಟದ ಶಂಕಿತ ಭಯೋತ್ಪಾದಕಿ ಪ್ರಜ್ಞಾಸಿಂಗ್ ಠಾಕೂರ್ ಅವರು ಗೋಡ್ಸೆಯನ್ನು ದೇಶಭಕ್ತ ಎಂದು ಚುನಾವಣಾ ಪ್ರಚಾರದ ವೇಳೆ ಗೌರವಿಸಿದರೆ ಚುನಾವಣೆ ಮುಗಿದ ಬಳಿಕ ಮಧ್ಯಪ್ರದೇಶದ ಬಿಜೆಪಿ ಶಾಸಕಿ ಅದೇ ಮಾತನ್ನು ಪುನರುಚ್ಚರಿಸಿದರು. ಹಾಗಂತ, ನರೇಂದ್ರ ಮೋದಿಯವರು ಇದನ್ನು ಸಮರ್ಥಿಸಿಲ್ಲ, ನಿಜ. ಮಾತ್ರವಲ್ಲ, ಪ್ರಜ್ಞಾ ಸಿಂಗ್ ಠಾಕೂರ್‍ಳನ್ನು ತಾನು ಎಂದೆಂದೂ ಕ್ಷಮಿಸಲ್ಲ ಎಂಬ ಕಟು ಮಾತನ್ನು ಆಡಿದ್ದೂ ನಿಜ. ಆದರೆ ಬಿಜೆಪಿ ಮತ್ತು ಅದರ ಬೆಂಬಲಿಗರಲ್ಲೇ  ಯಾಕೆ ಇಂಥ ಮನಸ್ಥಿತಿ ಇದೆ ಅನ್ನುವ ಪ್ರಶ್ನೆ ಸಹಜವಾಗಿಯೇ ಉದ್ಭವವಾಗುತ್ತದೆ. ಸಬ್‍ಕಾ ಸಾಥ್ ಮತ್ತು ಸಬ್‍ಕಾ ವಿಶ್ವಾಸ್ ಅನ್ನುವ ಮಾತನ್ನು ಪ್ರಧಾನಿ ನರೇಂದ್ರ ಮೋದಿಯವರು ಆಡುವಾಗ ಅದಕ್ಕೆ ತೀರಾ ವಿರುದ್ಧವಾದ ಕೃತ್ಯಗಳಲ್ಲಿ ಅವರ ಬೆಂಬಲಿಗರು ಗುರುತಿಸಿಕೊಳ್ಳುವುದಕ್ಕೆ ಕಾರಣಗಳೇನು? ಮೇ 30ರಂದು ನರೇಂದ್ರ ಮೋದಿಯವರು ಪ್ರಧಾನಿಯಾಗಿ ದ್ವಿತೀಯ ಅವಧಿಗೆ ಪ್ರಮಾಣ ವಚನ ಸ್ವೀಕರಿಸುವಾಗ ಉಡುಪಿ ಜಿಲ್ಲೆಯ ಮಂದಿ ಹುಸೇನಬ್ಬರನ್ನು ಸ್ಮರಿಸಿಕೊಂಡರು. 2018 ಮೇ 30ರಂದು ಜೋಕಟ್ಟೆಯ ಹುಸೇನಬ್ಬ ಎಂಬ 62 ವರ್ಷದ ವೃದ್ಧನನ್ನು ಗೋಸಾಗಾಟದ ಆರೋಪದಲ್ಲಿ ಥಳಿಸಿ ಕೊಲ್ಲಲಾದ ಭೀಭತ್ಸ ಘಟನೆ ನಡೆಯಿತು. ಪ್ರಧಾನಿಯವರ ಪ್ರಮಾಣ ವಚನಕ್ಕಿಂತ ಎರಡ್ಮೂರು ದಿನಗಳ ಹಿಂದೆ ಗೋಮಾಂಸ ಸಾಗಾಟದ ಹೆಸರಲ್ಲಿ ಓರ್ವ ಮಹಿಳೆ ಮತ್ತು ಯುವಕನನ್ನು ಥಳಿಸುತ್ತಿರುವ ವೀಡಿಯೋ ವೈರಲ್ ಆಯಿತು. ಇದು ನಡೆದುದು ಮಧ್ಯಪ್ರದೇಶದಲ್ಲಿ. ಒಂದು ಕಡೆ ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲರನ್ನೂ ಜೊತೆಗೊಯ್ಯುವೆ ಎಂದು ಹೇಳುತ್ತಿರುವ ಪ್ರಧಾನಿ ಮತ್ತು ಇನ್ನೊಂದು ಕಡೆ ಅದೇ ಪ್ರಧಾನಿಯ ಬೆಂಬಲಿಗರೆಂದು ಗುರುತಿಸಿಕೊಂಡ ಮಂದಿ ಬೀದಿ ನ್ಯಾಯದಲ್ಲಿ ನಂಬಿಕೆಯಿಟ್ಟಿರುವುದು- ಇವೆರಡೂ ಏನನ್ನು ಸೂಚಿಸುತ್ತದೆ?
‘ಫೂಟ್ ಸೋಲ್ಜರ್ಸ್ ಆಫ್ ದ ಕಾನ್ಸ್‍ಟಿಟ್ಯೂಶನ್’ ಎಂಬ ಕೃತಿಯಲ್ಲಿ ದಾಖಲಾಗಿರುವ ವಿವರಗಳು ನರೇಂದ್ರ ಮೋದಿಯವರ ಸಬ್‍ಕಾ ಸಾಥ್ ಮತ್ತು ಸಬ್‍ಕಾ ವಿಶ್ವಾಸ್ ಮಂತ್ರಕ್ಕೆ ಖಂಡಿತ ಹೊಂದುತ್ತಿಲ್ಲ. ಆದರೆ, ಆ ಕಳಂಕದಿಂದ ಕಳಚಿಕೊಳ್ಳಬೇಕು ಮತ್ತು ಸರ್ವರ ವಿಶ್ವಾಸಾರ್ಹ ವ್ಯಕ್ತಿಯಾಗಿ ಮಾರ್ಪಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶವೆಂದಾದರೆ, ಅವರು ತನ್ನ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಕಠಿಣ ಸೂಚನೆಗಳನ್ನು ನೀಡಬೇಕು. ಹರಕು ಬಾಯಿಯ ಸಂಸದರು ಮತ್ತು ಶಾಸಕರೊಂದಿಗೆ ನಿರ್ದಾಕ್ಷಿಣ್ಯವಾಗಿ ವರ್ತಿಸಬೇಕು. ಆಯ್ಕೆಯಾದ 303 ಬಿಜೆಪಿ ಸಂಸದರಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ವ್ಯಕ್ತಿ ಇಲ್ಲ ಅನ್ನುವುದು ಸಣ್ಣ ಸಂಗತಿಯಲ್ಲ. ದೇಶದ 14%ರಷ್ಟಿರುವ ಬೃಹತ್ ಸಮುದಾಯದ ವಿಶ್ವಾಸವನ್ನು ಗಳಿಸಿಕೊಳ್ಳಲು ಬಿಜೆಪಿಗೆ ಇನ್ನೂ ಸಾಧ್ಯವಾಗಿಲ್ಲ ಎಂಬುದೇ ಅದು ಕೊಡುವ ಸಂದೇಶ. ದೇಶವನ್ನಾಳುವ ಪಕ್ಷವಾಗಿ ಬಿಜೆಪಿಗೆ ಇದು ದೊಡ್ಡದೊಂದು ಹಿನ್ನಡೆ. ಮೋದಿಯವರ ಸಬ್‍ಕಾ ವಿಶ್ವಾಸ್ ಎಂಬ ಘೋಷಣೆಗೂ ವಾಸ್ತವಕ್ಕೂ ನಡುವೆ ಇರುವ ಕಂದಕವನ್ನು ಇದು ಹೇಳುತ್ತದೆ. ಈ ಕಂದಕ ಯಾಕೆ ಉಂಟಾಯಿತು ಮತ್ತು ಈ ಕಂದಕವನ್ನು ತೋಡಿದವರು ಯಾರು ಎಂಬುದು ಮೋದಿ ಮತ್ತು ಅವರ ಚಿಂತಕ ಛಾವಡಿಗೆ ಖಂಡಿತ ಗೊತ್ತಿದೆ. ಇಂಥದ್ದೊಂದು ಬಿರುಕು ದಿಢೀರ್ ಆಗಿ ಹುಟ್ಟಿಕೊಂಡದ್ದಲ್ಲ. ಈ ಬಿರುಕಿನ ಹಿಂದೆ ದೊಡ್ಡದೊಂದು ಕಥನವಿದೆ. ಬಿಜೆಪಿ ಸಾಗಿ ಬಂದ ಹಾದಿಯನ್ನು ಅವಲೋಕಿಸಿದರೆ ಈ ಬಿರುಕಿಗಿರುವ ಇಂಚಿಂಚೂ ಕಾರಣಗಳು ಮುಖಕ್ಕೆ ರಾಚುವಂತೆ ಎದ್ದು ಕಾಣುತ್ತದೆ. ಈ ಕಂದಕವನ್ನು ಉದ್ದೇಶಪೂರ್ವಕವಾಗಿ ತೋಡಲಾಗಿದೆ ಮತ್ತು ನಡುವೆ ಸೇತುವೆ ನಿರ್ಮಾಣವಾಗದಂತೆ ತಡೆಯಲಾಗಿದೆ. ಮಾತ್ರವಲ್ಲ, ಈ ಕಂದಕವನ್ನು ಹಾಗೆಯೇ ಉಳಿಸಿಕೊಳ್ಳುವುದಕ್ಕೆ ಮತ್ತು ಕಂದಕದ ಆಳ-ಅಗಲವನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಪೂರಕವಾದ ತಂತ್ರವನ್ನು ಮತ್ತೆ ಮತ್ತೆ ಹೆಣೆಯುತ್ತಲೇ ಬರಲಾಗಿದೆ. ಅದರ ಫಲಿತಾಂಶವೇ ಥಳಿತಗಳು, ಹತ್ಯೆಗಳು. ಆ ಕಂದಕವನ್ನು ಮುಚ್ಚಿ ಬಿಡಬೇಕು ಎಂಬುದು ಪ್ರಧಾನಿಯವರ ಘೋಷಣೆಯ ಇಂಗಿತವೆಂದಾದರೆ ಖಂಡಿತ ಅದು ಸ್ವಾಗತಾರ್ಹ. ಆದರೆ, ಅದು ಮಾತಿನಿಂದ ಸಾಧ್ಯವಿಲ್ಲ. ಮಾತು ಕೃತಿಯಾಗಿ ಪರಿವರ್ತನೆಯಾಗಬೇಕು. ಇದಕ್ಕೆ ಮುನ್ನುಡಿ ಬರೆಯಬೇಕಾದುದೂ ಅವರೇ. ಅಲ್ಪಸಂಖ್ಯಾತ ವಿರೋಧಿ ಭಾವನೆಯನ್ನು ತುಂಬಿಸಿಕೊಂಡಿರುವ ತನ್ನ ಪಕ್ಷ  ಮತ್ತು ಅದರ ಕಾರ್ಯಕರ್ತರನ್ನು ಬುಡದಿಂದಲೇ ತಿದ್ದುವ ಮಹಾನ್ ಸ್ವಚ್ಛತಾ ಅಭಿಯಾನವೊಂದನ್ನು ಅವರು ಆಯೋಜಿಸಬೇಕು. ಉಲ್ಲಂಘಿಸಿದವರನ್ನು ಕಠಿಣವಾಗಿ ಶಿಕ್ಷಿಸಬೇಕು. ಇದು ರಾತ್ರಿ ಬೆಳಗಾಗುವುದರೊಳಗೆ ಆಗುವ ಕೆಲಸ ಅಲ್ಲ. ಹಾಗಂತ, ಅಸಾಧ್ಯವೂ ಅಲ್ಲ.

Saturday 8 June 2019

ಈದ್: ಒಂದು ಮನೆಯ ಕತೆ


ನಾವು ಇಷ್ಟಪಟ್ಟು ಕಟ್ಟಿಕೊಳ್ಳುವ ಮನೆ ಹೇಗಿರುತ್ತೆ? ಅದರ ವಿನ್ಯಾಸ ಹೇಗಿರುತ್ತೆ? ಇಂಜಿನಿಯರ್ ಮಾಡಿಕೊಟ್ಟ ವಿನ್ಯಾಸದಂತೆಯೇ ಮನೆ ರಚನೆಯಾಗಬೇಕೆಂಬ ಉಮೇದಿನಲ್ಲಿ ನಾವು ಏನೆಲ್ಲ ಮಾಡುತ್ತೇವೆ? ಹೇಗೆಲ್ಲ ಕಾರ್ಯಪ್ರವೃತ್ತರಾಗುತ್ತೇವೆ? ಎಲ್ಲೂ  ಯಾವ ಮೂಲೆಯಲ್ಲೂ ಒಂದೇ ಒಂದೇ ನಕಾರಾತ್ಮಕ ಅಂಶ ಸೇರಿಕೊಳ್ಳದಂತೆ ಎಷ್ಟೆಲ್ಲ ಶ್ರಮ ವಹಿಸುತ್ತೇವೆ? ಭೌತಿಕ ಲೋಕದಲ್ಲಿ ಇವೆಲ್ಲ ಸಹಜ. ಕೇವಲ ಮನೆಯೊಂದೇ ಅಲ್ಲ, ಮಗುವನ್ನು ಬೆಳೆಸುವಾಗಲೂ ನಮ್ಮಲ್ಲಿ ಇಂಥದ್ದೊಂದು  ಕಟು ಎಚ್ಚರಿಕೆ  ಇರುತ್ತದೆ. ಮಗು ಯಾವ ಲೋಪದೋಷವೂ ಇಲ್ಲದೇ ಬೆಳೆಯಬೇಕು ಮತ್ತು ಯಾವ ಕೆಟ್ಟತನಗಳೂ ಸುಳಿಯದೇ ಪೂರ್ಣ ಶುದ್ಧಿಯೊಂದಿಗೆ ಬಾಳಬೇಕು ಎಂಬ ಮಹದಾಸೆ ಹೆತ್ತವರಲ್ಲಿರುತ್ತದೆ. ರಮಝಾನ್ ಅನ್ನುವುದು ನಾವು ಕಟ್ಟಬಯಸುವ  ಇಂಥದ್ದೇ  ಒಂದು ಮನೆ ಅಥವಾ ಇಂಥದ್ದೇ  ಒಂದು ಮಗು. ನಾವು ಸದ್ಯ ವಾಸಿಸುತ್ತಿರುವ ಮನೆಯನ್ನು ರಮಝಾನ್‍ನ 30 ದಿನಗಳಲ್ಲಿ ಹೇಗೆ ಇಟ್ಟುಕೊಂಡಿದ್ದೇವೆ ಎಂಬುದನ್ನೊಮ್ಮೆ ಅವಲೋಕಿಸಿಕೊಳ್ಳಿ. ರಮಝಾನ್‍ಗಿಂತ ಮೊದಲಿದ್ದ ಮನೆಯಲ್ಲ  ರಮಝಾನ್‍ನದ್ದು. ರಮಝಾನ್‍ಗಿಂತ ಮೊದಲು ನಮ್ಮ ಮನೆಯಲ್ಲಿ ಕುರ್‍ಆನ್ ಪಾರಾಯಣ ಕಡಿಮೆಯಿತ್ತು. ಟಿ.ವಿ. ವೀಕ್ಷಣೆಗೆ ಅತ್ಯಧಿಕ ಸಮಯ ವ್ಯಯವಾಗುತ್ತಿತ್ತು. ರಾತ್ರಿ ನಮಾಝï ನಿರಂತರವಾಗಿರಲಿಲ್ಲ. ಐಚ್ಛಿಕ ನಮಾಝïಗಳು ಸಂದರ್ಭಾನುಸಾರವಷ್ಟೇ ಇತ್ತು... ಆಹಾರ ಸೇವನೆಯಲ್ಲೂ ಕ್ರಮಪ್ರಕಾರವಿರಲಿಲ್ಲ. ಮನೆ ಮಂದಿಯೆಲ್ಲ ಜೊತೆಸೇರಿ ಊಟ ಮಾಡುವಷ್ಟು ಸಮಯಾವಕಾಶವೋ ಸಂದರ್ಭವೋ ಕಡಿಮೆ ಇತ್ತು. ಅನಗತ್ಯ ಮಾತುಕತೆಗಳೇ ಅಧಿಕವಿದ್ದುವು. ನೆರಮನೆಯವರ ಬಗ್ಗೆ,  ಕುಟುಂಬಿಕರ ಬಗ್ಗೆ, ಗೆಳೆಯ-ಗೆಳತಿಯರ ಬಗ್ಗೆ... ಕುಹಕದ ಮಾತುಗಳು, ತಮಾಷೆ, ವ್ಯಂಗ್ಯಗಳು ಆಗಾಗ ಬಂದು ಹೋಗಬಹುದಾದ ರೀತಿಯಲ್ಲಿ ಚರ್ಚೆಗಳಾಗುತ್ತಿದ್ದುವು. ಊಟ-ತಿಂಡಿಗೂ ಮಿತಿ ಇರಲಿಲ್ಲ. ನಮಾಝನ್ನು ಸಂಘಟಿತವಾಗಿ ನಡೆಸುವ  ಕಾಳಜಿ ಕಡಿಮೆ ಇತ್ತು. ಹೀಗೆ ಈ ಪಟ್ಟಿ ಉದ್ದವಿದೆ. ಆದರೆ, ರಮಝಾನ್‍ನ ಆಗಮನವು ಈ ಎಲ್ಲವುಗಳನ್ನು ಎಷ್ಟು ಬಲವಾಗಿ ಅದುಮಿ ಬಿಡುತ್ತದೆಂದರೆ, ಪ್ರತಿ ಮನೆಯ ವಾತಾವರಣವೇ ಸಂಪೂರ್ಣ ಬದಲಾಗಿ ಬಿಡುತ್ತದೆ. ಈ ಬದಲಾವಣೆಯು  ರಮಝಾನ್‍ಗಿಂತ ಒಂದುವಾರ ಮೊದಲೇ ಪ್ರಾರಂಭವಾಗುತ್ತದೆ. ‘ಮನೆ ಸ್ವಚ್ಛ’ ಎಂದು ಇದಕ್ಕೆ ಹೆಸರು. ಆ ಬಳಿಕ ಈ ಸ್ವಚ್ಛತೆಯ ಕಸಬರಿಕೆ ಮನೆಯ ಒಳಗೆ ಪ್ರವೇಶಿಸುತ್ತದೆ. ಮನೆಯೊಳಗಿನ ಭೌತಿಕ ಕಸಗಳನ್ನೆಲ್ಲ ಗುಡಿಸಿದ ಬಳಿಕ ಅದು ಆಧ್ಯಾತ್ಮಿಕ  ಕಸದ ವಿಲೇವಾರಿಯ ಕೆಲಸ ಪ್ರಾರಂಭಿಸುತ್ತದೆ. ಆವರೆಗೆ ಮನೆಯ ವಾತಾವರಣ ಹೇಗಿತ್ತೋ ಬಹುತೇಕ ಅದಕ್ಕೆ ವಿರುದ್ಧವಾದ ಮತ್ತು ಮನಸ್ಸು ಉಲ್ಲಸಿತಗೊಳ್ಳುವ ವಾತಾವರಣವೊಂದು ಆ ಬಳಿಕ ಮನೆಯೊಳಗೆ ನಿರ್ಮಾಣವಾಗತೊಡಗುತ್ತದೆ. ಮ ನೆವಾಸಿಗಳು ಪ್ರತಿಕ್ಷಣವೂ ಮೌಲ್ಯವಂತರಾಗುತ್ತಾ ಹೋಗುತ್ತಾರೆ. ಮನೆಯೊಳಗಿನ ವಾತಾವರಣವೂ ಮೌಲ್ಯಯುತವಾಗುತ್ತಾ ಹೋಗುತ್ತದೆ. ಒಳ್ಳೆಯ ಮಾತುಕತೆಗಳು, ಇನ್ನೊಬ್ಬರ ಬಗೆಗಿನ ಈಷ್ರ್ಯೆರಹಿತ ಮಾತುಗಳು, ಎಲ್ಲರ ಒಳಿತನ್ನೇ ಬಯಸುವ  ಹೃದಯ, ಅಧ್ಯಾತ್ಮದ ಸ್ಫೂರ್ತಿ ತುಂಬಿ ತುಳುಕುವ ಕಣ್ಣುಗಳು, ಮನೆಯ ಪ್ರತಿ ಇಂಚಿಂಚಿಗೂ ಕೇಳಿಸಬಹುದಾದ ಕುರ್‍ಆನ್ ಪಾರಾಯಣ ಮುಂತಾದುವುಗಳಿಂದ ಮನೆ ತುಂಬಿಕೊಂಡಿರುತ್ತದೆ.
ರಮಝಾನ್ ನಿರ್ಗಮನದ ಬಳಿಕವೂ ಈ ನಮ್ಮ ಮನೆಯನ್ನು ನಾವು ಹೀಗೆಯೇ ಉಳಿಸಿಕೊಳ್ಳುತ್ತೇವೆಯೋ ಅಥವಾ ರಮಝಾನ್‍ನ ನಿರ್ಗಮನದೊಂದಿಗೆ ಮನೆಯ ಈ ವಾತಾವರಣಕ್ಕೂ ನಿರ್ಗಮನದ ದಾರಿಯನ್ನು ತೋರಿಸುತ್ತೇವೆಯೋ ಎಂಬುದೇ  ಈದ್ ಎತ್ತುವ ಬಹು ಮುಖ್ಯ ಪ್ರಶ್ನೆ. ಇದಕ್ಕೆ ನಾವು ಕೊಡಬಹುದಾದ ಪ್ರಾಮಾಣಿಕ ಉತ್ತರವೇ ನಮ್ಮ ನಮ್ಮ ಈದ್. ರಮಝಾನ್‍ನಲ್ಲಿ ಕಟ್ಟಿದ ಸುಂದರ ಮನೆಯನ್ನು ಶವ್ವಾಲ್‍ನಲ್ಲಿ ಉರುಳಿಸದಿರಿ ಅನ್ನುವುದೇ ಈದ್‍ನ ಕಳಕಳಿ. ಆಯ್ಕೆಯಂತೂ  ಮುಕ್ತವಾಗಿದೆ.
 ಇನ್ನು ತೀರ್ಮಾನ ನಮ್ಮದು.

Saturday 1 June 2019

ರಾಜಕೀಯದ ಮೃತ ಮನಃಸ್ಥಿತಿಗೆ ಎರಡು ಉದಾಹರಣೆಗಳು


 

ಲೋಕಸಭೆಗೆ ಕೊನೆಯ ಹಂತದ ಮತದಾನ ನಡೆಯುವುದಕ್ಕಿಂತ ಮೂರು ದಿನಗಳ ಮೊದಲು ಮಾಧ್ಯಮಗಳು ಎರಡು ಸುದ್ದಿಗಳಿಗೆ ಬಹಳ ಪ್ರಾಮುಖ್ಯತೆ ಕೊಟ್ಟು ಪ್ರಕಟಿಸಿದುವು. 
1. ಪ್ರಾಣಿಗಳ ಕಳೇಬರವನ್ನು ವಿಲೇವಾರಿ ಮಾಡಲು ನಿರಾಕರಿಸಿದ್ದಕ್ಕಾಗಿ  ಗುಜರಾತ್‍ನ ಗ್ರಾಮವೊಂದರ ದಲಿತರ ಮೇಲೆ ಮೇಲ್ಜಾತಿಯ ಮಂದಿ ಸಾಮೂಹಿಕವಾಗಿ ಬಹಿಷ್ಕಾರ ಹಾಕಿದ್ದು ಮತ್ತು ಕುದುರೆ ಮೇಲೇರಿ ಬಂದ ದಲಿತ ವರನಿಗೆ ಮಧ್ಯಪ್ರದೇಶದ ಮಹೂ ನಗರದಲ್ಲಿ ಥಳಿಸಿದ್ದು. 
2. ಎಂ.ಎ. ರಾಜ್ಯಶಾಸ್ತ್ರದಲ್ಲಿ ಮೊದಲ  ರ್ಯಾಂಕ್ ಗಳಿಸಿದವರು ಮತ್ತು ನಾಲ್ಕನೇ ರಾಂಕ್ ಪಡೆದವರೂ ಸೇರಿ ಐವರು ಸ್ನಾತಕೋತ್ತರ ಪದವೀಧರರು ಮತ್ತು ಎಂಟು ಮಂದಿ ಪದವೀಧರರು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ನರೇಗಾ ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
 

ವಿಷಾದ ಏನೆಂದರೆ, ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಯಾವ ಹಂತದಲ್ಲೂ ದಲಿತರು ಮತ್ತು ನಿರುದ್ಯೋಗ ಚರ್ಚೆಗೇ ಒಳಗಾಗಿಲ್ಲ. ಅದರ ಬದಲು ಅಪರಾಧಿಯೆಂದು ಘೋಷಿಸಲ್ಪಟ್ಟು ಗಲ್ಲು ಶಿಕ್ಷೆಗೆ ಗುರಿಯಾದ ಗೋಡ್ಸೆ ಚರ್ಚೆಗೆ  ಒಳಗಾದ. ಮಹಾತ್ಮಾಗಾಂಧಿ ಯಾವ ರಾಷ್ಟ್ರದ ರಾಷ್ಟ್ರಪಿತ ಅನ್ನುವ ಪ್ರಶ್ನೆಯನ್ನೂ ಹುಟ್ಟು ಹಾಕಲಾಯಿತು. ಹುತಾತ್ಮ ಕರ್ಕರೆಯನ್ನು ಗೋರಿಯಿಂದ ಎಳೆದು ತಂದು ಅವಮಾನಿಸಲಾಯಿತು. ರಾಜೀವ್ ಗಾಂಧಿಯನ್ನೂ ಬಿಡಲಿಲ್ಲ. ಅವರನ್ನೂ ಅವಮಾನಿಸಲಾಯಿತು. ಪುಲ್ವಾಮದಲ್ಲಿ ಹುತಾತ್ಮರಾದ ಯೋಧರನ್ನು ಚುನಾವಣಾ ಸಭೆಗಳಲ್ಲಿ ಉಲ್ಲೇಖಿಸಿ ದೇಶವನ್ನಾಳುವ ಪಕ್ಷವು ಮತ ಯಾಚಿಸಿತು. ಬಾಲಾಕೋಟನ್ನು ಪ್ರಸ್ತಾಪಿಸಿತು... ಈ ಪಟ್ಟಿ ಇನ್ನೂ ಉದ್ದ ಇದೆ. ಆದರೆ, ನಮ್ಮ ನಡುವೆ ಇಲ್ಲದ ಗಾಂಧಿ,  ಗೋಡ್ಸೆ, ಕರ್ಕರೆ ಮುಂತಾದವರ ಬಗ್ಗೆ ಚುನಾವಣಾ ಸಭೆಗಳಲ್ಲಿ ಮಾತಾಡಿದ ರಾಜಕೀಯ ಪಕ್ಷಗಳು ಜೀವಂತ ಇರುವ ದಲಿತರ ಬಗ್ಗೆ ಏನನ್ನೂ ಮಾತಾಡದಿರುವುದಕ್ಕೆ ಕಾರಣವೇನು? ಸ್ನಾತಕೋತ್ತರ ಪದವೀಧರರು ನರೇಗಾ ಕೂಲಿ ಕಾರ್ಮಿಕರಾಗಿ  ದುಡಿಯುವಂತಹ ಸ್ಥಿತಿ ಯಾಕೆ ಬಂತು ಎಂಬ ಪ್ರಶ್ನೆಯೇಕೆ ಚುನಾವಣಾ ಸಭೆಗಳಲ್ಲಿ ಕಾಣಿಸಿಕೊಳ್ಳಲಿಲ್ಲ? ನಿಜವಾಗಿ, ದಲಿತ ದೌರ್ಜನ್ಯ ಮತ್ತು ನಿರುದ್ಯೋಗ-ಇವೆರಡೂ ಈ ದೇಶದ ಎರಡು ಬಹುಮುಖ್ಯ ಸವಾಲುಗಳು. ವರ್ಷಕ್ಕೆ ಎರಡು ಕೋಟಿ  ಉದ್ಯೋಗ ಸೃಷ್ಟಿಸುತ್ತೇನೆ ಎಂಬ ಭರವಸೆಯನ್ನು ಕೊಟ್ಟೇ ನರೇಂದ್ರ ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಆದ್ದರಿಂದ, ಸ್ನಾತ್ತಕೋತ್ತರ ಪದವೀಧರರ ನಿರುದ್ಯೋಗ ಸಮಸ್ಯೆಗೆ ಉತ್ತರ ಹೇಳಬೇಕಾದುದು ನರೇಂದ್ರ ಮೋದಿಯವರೇ.  ಹಾಗಂತ ಬಳ್ಳಾರಿಯ ಹೂವಿನಹಡಗಲಿ ಎಂಬುದು ಒಂದು ಬಿಡಿ ಉದಾಹರಣೆ ಅಷ್ಟೇ. ಇಂಥ ಸ್ಥಿತಿ ಈ ದೇಶಾದ್ಯಾಂತ ಇದೆ. ಒಂದು ಕಡೆ, ಪ್ರತಿವರ್ಷ ಲಕ್ಷಾಂತರ ಮಂದಿ ಪದವೀಧರರಾಗಿ ಶಿಕ್ಷಣ ಸಂಸ್ಥೆಗಳಿಂದ ಹೊರಬರುತ್ತಿದ್ದಾರೆ. ಇನ್ನೊಂದು ಕಡೆ, ಈ ಗುಂಪಿಗೆ ಚುನಾವಣಾ ಸಭೆಗಳಲ್ಲಾಗಲಿ, ಸರಕಾರದ ನೀತಿಗಳಲ್ಲಾಗಲಿ ಯಾವ ಮನ್ನಣೆಯೂ ಸಿಗುತ್ತಿಲ್ಲ. ವರ್ಷಕ್ಕೆ ಎರಡು  ಕೋಟಿ ಉದ್ಯೋಗ ಸೃಷ್ಟಿಸುವೆ ಎಂದ ನರೇಂದ್ರ ಮೋದಿಯವರು ಆ ಬಳಿಕ ಪಕೋಡ ಮಾರುವುದನ್ನೇ ಉದ್ಯೋಗ ಎಂದು ಹೇಳುತ್ತಾರೆಂದರೆ, ಅದು ಶಿಕ್ಷಿತರಿಗೆ ಮಾಡುವ ಅವಮಾನ ಅಷ್ಟೇ ಅಲ್ಲ, ಅರ್ಹತೆಗೆ ತಕ್ಕ ಉದ್ಯೋಗವನ್ನು ಸೃಷ್ಟಿಸಲು ತಾನು  ವಿಫಲವಾಗಿದ್ದೇನೆ ಎಂಬ ಶರಣಾಗತಿಯೂ ಹೌದು. ಅಂದಹಾಗೆ, ಹಾರೆ, ಗುದ್ದಲಿ, ಸಲಿಕೆಗಳನ್ನು ಹಿಡಿದು ಹೂವಿನಹಡಗಲಿಯ ಮಲ್ಲನ ಕೆರೆ ಗ್ರಾಮದ ಕೆರೆ ಅಂಗಳದಲ್ಲಿ ಕೂಲಿ ಕೆಲಸ ಮಾಡುವ ಈ ಪದವೀಧರರು ಈ ದೇಶದ ಸದ್ಯದ ಉದ್ಯೋಗ  ಸ್ಥಿತಿಯ ಸಂಕೇತವಾದರೆ, ಈಗಾಗಲೇ ಮಗಿದ ಚುನಾವಣೆಯು ಈ ದೇಶದ ರಾಜಕೀಯ ಪಕ್ಷಗಳ ಮನಃಸ್ಥಿತಿಯ ಸಂಕೇತ. ಆದರೆ, ನಿರುದ್ಯೋಗಕ್ಕೂ ತನಗೂ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ಆಡಳಿತ ಪಕ್ಷವೊಂದು ವರ್ತಿಸ ತೊಡಗಿದರೆ ಅದು ದೇಶದ ಮೇಲೆ ಬೀರುವ ಪರಿಣಾಮಗಳೇನು? ಯಾಕೆ ಇದು ಚುನಾವಣೆಯ ಸಂದರ್ಭದಲ್ಲಿ ಚರ್ಚೆಗೊಳಗಾಗುತ್ತಿಲ್ಲ? ಇಲ್ಲಿ ಇನ್ನೂ ಒಂದು ಪ್ರಶ್ನೆಯಿದೆ. ದಲಿತರು ಮತ್ತು ಹಿಂದುಳಿದವರು ಬಹುಸಂಖ್ಯಾತರಿದ್ದೂ ಯಾಕೆ ಪದೇ  ಪದೇ ಅವರನ್ನು ಅವಮಾನಿಸುವ ಘಟನೆಗಳು ನಡೆಯುತ್ತವೆ? ದಲಿತರಿಗೆ ಬಹಿಷ್ಕಾರ, ದಲಿತ ವರನಿಗೆ ಥಳಿತ, ದಲಿತ ಯುವತಿಯ ಅತ್ಯಾಚಾರ-ಹತ್ಯೆ, ದಲಿತರಿಗೆ ಕ್ಷೌರ ನಿರಾಕರಣೆ, ಅಡುಗೆಯವಳು ದಲಿತಳೆಂಬ ಕಾರಣಕ್ಕೆ ಬಿಸಿಯೂಟ ಸೇವಿಸಲು  ಮೇಲ್ಜಾತಿ ವಿದ್ಯಾರ್ಥಿಗಳ ಅಸಮ್ಮತಿ... ಇತ್ಯಾದಿ ಇತ್ಯಾದಿಗಳು ನಿತ್ಯದ ಸುದ್ದಿಯಾಗುತ್ತಿರುವುದು ಯಾಕಾಗಿ? ಕನಿಷ್ಠ ಈ ಇಶ್ಯೂವನ್ನು ಎತ್ತಿಕೊಂಡು ಚುನಾವಣೆಯಲ್ಲಿ ಮಾತಾಡಬಹುದಲ್ಲ? ದಲಿತರ ಮೇಲಿನ ದೌರ್ಜನ್ಯವನ್ನೇ ಮುಖ್ಯ ವಿಷಯವನ್ನಾಗಿಸಿಕೊಂಡು ಎಷ್ಟು ಚುನಾವಣಾ ಸಭೆಗಳು ಈ ಬಾರಿ ನಡೆದಿವೆ? ಏಳು ಹಂತದ ಚುನಾವಣೆಯಲ್ಲಿ ನೂರಾರು ಸಣ್ಣ ಮತ್ತು ಬೃಹತ್ ಸಭೆಗಳಾಗಿವೆ. ಪ್ರಧಾನಿಯಿಂದ ಹಿಡಿದು ಶಾಸಕರವರೆಗೆ ವಿವಿಧ ಜನಪ್ರತಿನಿಧಿಗಳು ಇಂಥ ಸಭೆಗಳಲ್ಲಿ ಮಾತುಗಳನ್ನಾಡಿದ್ದಾರೆ. ಆದರೆ, ದಲಿತರು ಚುನಾವಣಾ ಸಭೆಗಳ ವಿಷಯವಾದುದು ಮತ್ತು ಅದನ್ನೊಂದು ಗಂಭೀರ ವಿಷಯವಾಗಿ ಎತ್ತಿಕೊಂಡು ಮಾತಾಡಿದ್ದು ಶೂನ್ಯ ಅನ್ನುವಷ್ಟು ಕಡಿಮೆ. ಇನ್ನು, ದಲಿತ ದೌರ್ಜನ್ಯದ ಹೆಸರಲ್ಲಿ ವಿವಿಧ ಪೊಲೀಸು ಠಾಣೆಗಳಲ್ಲಿ  ದಾಖಲಿಸಿಕೊಳ್ಳಲಾಗುತ್ತಿರುವ ಕೇಸುಗಳ ಸ್ಥಿತಿಗತಿ ಏನು ಅನ್ನುವುದನ್ನು ಹುಡುಕಲು ಹೊರಟರೆ ಲಭ್ಯವಾಗುವುದು ಗಾಢ ನಿರಾಶೆ. ದಲಿತರ ದೂರುಗಳನ್ನು ಪೊಲೀಸರು ಮೊದಲ ಯತ್ನದಲ್ಲಿ ಸ್ವೀಕರಿಸುವುದು ಬಹಳ ಕಡಿಮೆ. ದೌರ್ಜನ್ಯಕ್ಕೀಡಾದ ದಲಿತ  ತುಸು ಧೈರ್ಯವಂತನಾದರೆ ಮತ್ತು ಸಂಘಟನೆಗಳ ಸಂಪರ್ಕ ಉಳ್ಳವನಾದರೆ ಮಾತ್ರ ಕೇಸು ನೋಂದಣಿಯಾಗುತ್ತದೆ. ಹೀಗೆ ನೋಂದಣಿಯಾಗುವ ಕೇಸುಗಳನ್ನೂ ಬಹಳ ಬುದ್ಧಿವಂತಿಕೆಯಿಂದ ಹೆಣೆಯಲಾಗುತ್ತದೆ. ಆರೋಪಿಗಳಿಗೆ ಸುಲಭವಾಗಿ  ಜಾಮೀನು ಸಿಗಬಲ್ಲ ರೀತಿಯಲ್ಲಿ ದುರ್ಬಲ ಸೆಕ್ಷನ್‍ಗಳಡಿ ಕೇಸು ದಾಖಲಿಸಿಕೊಳ್ಳಲಾಗುವುದೇ ಹೆಚ್ಚು. ಅಷ್ಟಕ್ಕೇ ಮುಗಿಯುವುದಿಲ್ಲ. ಆ ಬಳಿಕ ಆರೋಪಿಗಳ ಬೆದರಿಕೆ ಪ್ರಾರಂಭವಾಗುತ್ತದೆ. ಕೇಸನ್ನು ಹಿಂತೆಗೆಯುವಂತೆ, ಸಾಕ್ಷ್ಯ ಹೇಳದಂತೆ ಅಥವಾ  ಸಾಕ್ಷಿದಾರ ತಿರುಗಿ ಬೀಳುವಂತೆ ಒತ್ತಡ ಹೇರಲಾಗುತ್ತದೆ. ಕಂಬಾಲಪಲ್ಲಿಯ ಘಟನೆ ಇದಕ್ಕೊಂದು ಸಾರ್ವಕಾಲಿಕ ನಿದರ್ಶನ.
ಚುನಾವಣೆ ಮುಗಿದಿರುವ ಈ ಹೊತ್ತಿನಲ್ಲಿ ತಾವು ಹೇಗೆ ಚುನಾವಣಾ ಸಭೆಗಳನ್ನು ನಿರ್ವಹಿಸಿದ್ದೇವೆ ಎಂಬ ಬಗ್ಗೆ ರಾಜಕೀಯ ಪಕ್ಷಗಳು ಆತ್ಮಾವಲೋಕನವನ್ನು ನಡೆಸಬೇಕು. ತಾವು ಚುನಾವಣೆಯಲ್ಲಿ ಎತ್ತಿರುವ ವಿಷಯಗಳು ಮತ್ತು ಎತ್ತದಿರುವ  ವಿಷಯಗಳ ಮೇಲೆ ಅಧ್ಯಯನ ನಡೆಸಬೇಕು. ಗೋಡ್ಸೆ, ಗಾಂಧೀಜಿ, ಕರ್ಕರೆ, ನೆಹರೂ, ರಾಜೀವ್ ಗಾಂಧಿ... ಇವರೆಲ್ಲ ಚುನಾವಣಾ ಪ್ರಚಾರದ ಭಾಗವಾಗುವುದರಿಂದ ನಿರುದ್ಯೋಗ ಸಮಸ್ಯೆಗೆ ಮತ್ತು ದಲಿತ ದೌರ್ಜನ್ಯಕ್ಕೆ ಪರಿಹಾರ  ದೊರಕಿಸಿಕೊಡಬಹುದೇ ಎಂದು ಪ್ರಶ್ನಿಸಿಕೊಳ್ಳಬೇಕು. ಒಂದು ತಿಂಗಳಿಗಿಂತಲೂ ಹೆಚ್ಚಿನ ಅವಧಿಯವರೆಗೆ ನಡೆದ ಚುನಾವಣೆ ಮತ್ತು ಅದರ ಭಾಗವಾಗಿ ನಡೆದ ಸಭೆಗಳಲ್ಲಿ ಮೃತಪಟ್ಟವರೇ ಹೆಚ್ಚು ಚರ್ಚೆಗೊಳಗಾಗುತ್ತಾರೆಂದರೆ, ರಾಜಕೀಯ ಪಕ್ಷಗಳ  ಮನಃಸ್ಥಿತಿ ಸತ್ತ ಸ್ಥಿತಿಯಲ್ಲಿದೆ ಎಂದರ್ಥ. ರಾಜಕೀಯ ಪಕ್ಷಗಳ ಈ ಮೃತ ಸ್ಥಿತಿಗೆ ತಾಜಾ ಉದಾಹರಣೆ. ಹೂವಿನಹಡಗಲಿಯ ಪದವೀಧರ ಕೂಲಿ ಕಾರ್ಮಿಕರು ಮತ್ತು ಗುಜರಾತ್ ಹಾಗೂ ಮಧ್ಯ ಪ್ರದೇಶದ ದಲಿತರು.