Thursday 11 January 2024

ಮುಸ್ಲಿಮರೇ, ಶ್ರೀರಾಮನ ವಿರೋಧಿಯಾಗಿಸುವ ಸಂಚಿಗೆ ಬಲಿಯಾಗಬೇಡಿ

 


ಅಯೋಧ್ಯೆಯ ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿ 2019 ನವೆಂಬರ್ 9ರಂದು ಸುಪ್ರೀಮ್ ಕೋರ್ಟು ನೀಡಿದ ಆದೇಶದಲ್ಲಿ  ಮೂರು ಪ್ರಮುಖ ಅಂಶಗಳಿದ್ದುವು. 
1. ಧ್ವಂಸಗೊಂಡ ಮಸೀದಿ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ. 
2. ಬದಲಿ ಜಾಗದಲ್ಲಿ  ಮಸೀದಿ ನಿರ್ಮಾಣ. 
3. ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿರುವುದು ಕ್ರಿಮಿನಲ್ ಕೃತ್ಯ. 

ಆದರೆ,

ಸುಪ್ರೀಮ್ ಕೋರ್ಟ್ ನ  ಐವರು ನ್ಯಾಯಾಧೀಶರ ಈ ಒಮ್ಮತದ ತೀರ್ಪನ್ನು ಉನ್ನತ ನ್ಯಾಯಾಂಗ ತಜ್ಞರೇ ಪ್ರಶ್ನಿಸಿದ್ದರು. ಬ್ಲಂಡರ್ ಅಂದಿದ್ದರು. ಮುಸ್ಲಿಮ್ ಸಮುದಾಯವಂತೂ ಈ ತೀರ್ಪಿನ ಬಗ್ಗೆ ತಮ್ಮ ತೀವ್ರ ಅಸಮಾಧಾನ ಸೂಚಿಸಿತ್ತು. ಆದರೆ, ಸುಪ್ರೀಮ್  ಕೋರ್ಟಿಗಿಂತ ಉನ್ನತ ನ್ಯಾಯಾಂಗ ಪೀಠ ಇಲ್ಲದೇ ಇರುವುದರಿಂದ ಈ ತೀರ್ಪಿಗೆ ತಲೆಬಾಗಬೇಕಾದುದು ಎಲ್ಲರ ಪಾಲಿಗೂ  ಸಾಂವಿಧಾನಿಕ ಬೇಡಿಕೆಯಾಗಿತ್ತು. ತೀವ್ರ ಅಸಮಾಧಾನವಿದ್ದರೂ ಭಾರತೀಯ ಮುಸ್ಲಿಮರು ಈ ತೀರ್ಪಿಗೆ ಬದ್ಧವಾಗಿ ನಡಕೊಂಡರು. ಇದೀಗ ರಾಮಮಂದಿರವು ಉದ್ಘಾಟನೆಗೆ ಸಿದ್ಧವಾಗಿದೆ. ಈಗಾಗಲೇ ಪ್ರಮುಖ ಹಿಂದಿ ಮತ್ತು ಇಂಗ್ಲಿಷ್ ಚಾನೆಲ್‌ಗಳು ರಾಮಮಂದಿರವನ್ನು  ಕೇಂದ್ರೀಕರಿಸಿ ಚರ್ಚೆ ಪ್ರಾರಂಭಿಸಿವೆ. ಕನ್ನಡ ಚಾನೆಲ್‌ಗಳೂ ಹಿಂದೆ ಬಿದ್ದಿಲ್ಲ. ಹಾಗಂತ, 

ಈ ಚರ್ಚೆ ಹೆಚ್ಚು ಆಕರ್ಷಕವಾಗಬೇಕಾದರೆ ಮತ್ತು ಜನರನ್ನು ತಲುಪಬೇಕಾದರೆ ಮುಸ್ಲಿಮರನ್ನು ಒಂದಲ್ಲ ಒಂದು ರೀತಿಯಲ್ಲಿ  ಪಾಲುಗೊಳಿಸಲೇಬೇಕಾದ ಅನಿವಾರ್ಯತೆ ಇವುಗಳಿಗೆಲ್ಲ ಇದ್ದೇ  ಇದೆ. ಆದ್ದರಿಂದ, ಈ ಚಾನೆಲ್‌ಗಳು ಬಡ ಮುಸ್ಲಿಮರ ಬಾಯಿಗೆ ಮೈಕ್  ಇಟ್ಟು ಅಭಿಪ್ರಾಯ ಸಂಗ್ರಹಿಸುವ ಪ್ರಯತ್ನ ಮಾಡಬಹುದು. ಚರ್ಚೆಯ ಹೆಸರಲ್ಲಿ ಮುಸ್ಲಿಮರನ್ನು ಕೂರಿಸಿ, ಪ್ರಚೋದನೆಗೆ ಒಳಪಡಿಸಿ  ರಾಮನನ್ನೇ ಕಟಕಟೆಯಲ್ಲಿ ನಿಲ್ಲಿಸುವ ಮಾತುಗಳನ್ನು ಹೊರಡಿಸುವುದಕ್ಕೆ ಪ್ರಯತ್ನಿಸಲೂ ಬಹುದು. ಸುಪ್ರೀಮ್ ಕೋರ್ಟು ತೀರ್ಪಿಗೆ  ವ್ಯಕ್ತಪಡಿಸುವ ಅಸಾಮಾಧಾನವನ್ನೇ ಕೋರ್ಟು ನಿಂದನೆಯಾಗಿ ಮತ್ತು ಸಂವಿಧಾನ ವಿರೋಧಿಯಾಗಿ ಬಿಂಬಿಸಲೂ ಬಹುದು. ಗಡ್ಡ,  ಟೋಪಿ, ಪೈಜಾಮ ಧರಿಸಿದ ಮುಸ್ಲಿಮನಿಂದ ರಾಮಮಂದಿರಕ್ಕೋ ಅಥವಾ ರಾಮನಿಗೋ ಅಪಚಾರವಾಗುವ ರೀತಿಯ ಹೇಳಿಕೆಗಳನ್ನು  ಪ್ರಚೋದಿಸಿಯೋ ಪುಸಲಾಯಿಸಿಯೋ ಪಡೆದು ಮುಸ್ಲಿಮ್ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಪ್ರಯತ್ನಿಸಬಹುದು. ಈ  ಹಿನ್ನೆಲೆಯಲ್ಲಿ, ಮುಸ್ಲಿಮ್ ಸಮುದಾಯ ಈಗಿಂದೀಗಲೇ ಜಾಗರೂಕ ವಾಗಬೇಕು. ಮುಸ್ಲಿಮರನ್ನು ಖೆಡ್ಡಾಕ್ಕೆ ಬೀಳಿಸಿ ಮಜಾ ನೋಡುವ  ಮಾಧ್ಯಮ ತಂತ್ರಗಳಿಗೆ ಬಲಿ ಬೀಳದಂತೆ ಎಚ್ಚರ ವಹಿಸಿಕೊಳ್ಳಬೇಕು. ನಿಜವಾಗಿ,

ಮುಸ್ಲಿಮರು ಶ್ರೀರಾಮನ ವಿರೋಧಿಗಳಲ್ಲ. ಶ್ರೀರಾಮನನ್ನು ವಿರೋಧಿಸುವುದಕ್ಕೆ ಕಾರಣಗಳೇ ಇಲ್ಲ. ಶ್ರೀರಾಮ ಈ ಮಣ್ಣಿನ ಬಹುದೊಡ್ಡ  ಸಮುದಾಯದ ಪಾಲಿಗೆ ಆದರ್ಶ ಪುರುಷ. ಆತನಿಗಾಗಿ ಒಂದಲ್ಲ, ಸಾವಿರ ಮಂದಿರ ಕಟ್ಟುವುದಿದ್ದರೂ ಅದಕ್ಕೆ ಮುಸ್ಲಿಮರಿಂದ ಅಡ್ಡಿಯೂ  ಇಲ್ಲ. ಆದರೆ, ಮರ್ಯಾದಾ ಪುರುಷೋತ್ತಮ ಎಂದು ಗೌರವಿಸಲ್ಪಡುವ ಶ್ರೀರಾಮನನ್ನು ಮುಸ್ಲಿಮ್ ದ್ವೇಷಕ್ಕಾಗಿ ರಾಜಕೀಯ ಶಕ್ತಿಗಳು  ಬಳಸುತ್ತಿರುವುದಕ್ಕೆ ಮುಸ್ಲಿಮ್ ಸಮುದಾಯಕ್ಕೆ ನೋವಿದೆ. ಅಂದಹಾಗೆ,

ಬಾಬರಿ ಮಸೀದಿ ಇದ್ದ ಜಾಗ ಯಾರಿಗೆ ಸಂಬಂಧಿಸಿದ್ದು ಎಂಬ ಬಗ್ಗೆ ನ್ಯಾಯಾಲಯದಲ್ಲಿ ತಕರಾರಿತ್ತೇ ಹೊರತು ಶ್ರೀರಾಮನಿಗೆ  ಸಂಬಂಧಿಸಿ ಯಾವ ತಕರಾರೂ ಇರಲಿಲ್ಲ. ಆ ಜಾಗ ತಮಗೆ ಸಂಬಂಧಿಸಿದ್ದು ಎಂಬುದು ಮುಸ್ಲಿಮರ ವಾದವಾಗಿತ್ತು. ಆದರೆ,  ರಾಜಕೀಯ ಶಕ್ತಿಗಳು ಈ ಜಾಗದ ತಕರಾರರನ್ನು ದುರ್ವ್ಯಾಖ್ಯಾನಿಸಿದುವು ಮತ್ತು ಮಂದಿರ-ಮಸೀದಿ ವಿವಾದವಾಗಿ ಬಿಂಬಿಸಿದುವು.  ಮಾತ್ರವಲ್ಲ, ಮುಸ್ಲಿಮರು ಶ್ರೀರಾಮನ ವಿರೋಧಿಗಳು ಎಂಬಂತೆ  ಪ್ರಚಾರ ಪಡಿಸಿದುವು. ಮಾಧ್ಯಮಗಳು ಈ ಪ್ರಚಾರಕ್ಕೆ ಬೆಂಕಿ ಕೊಟ್ಟು  ಎಲ್ಲೆಡೆ ಹಬ್ಬಿಸಿದುವು. ಇದೀಗ ಈ ಪ್ರಕರಣ ಇತ್ಯರ್ಥಗೊಂಡಿದ್ದರೂ ಮಾಧ್ಯಮಗಳ ಹಸಿವು ತಣಿದಂತೆ ಕಾಣಿಸುತ್ತಿಲ್ಲ. ಅವು ಮತ್ತೆ ಮೈಕ್  ಎಂಬ ಪಂಜಿನೊಂದಿಗೆ ಹೊರಡುವ ಸಿದ್ಧತೆಯಲ್ಲಿರುವಂತೆ ಕಾಣಿಸುತ್ತಿದೆ. ಮತ್ತೊಮ್ಮೆ ಈ ದೇಶದಲ್ಲಿ ಧರ್ಮೋನ್ಮಾದ ಹುಟ್ಟು ಹಾಕಲು  ಪ್ರಯತ್ನ ಪಡುತ್ತಿರುವಂತಿದೆ. ಅಷ್ಟಕ್ಕೂ,

 ಟಿ.ವಿ. ಮಾಧ್ಯಮಗಳು ಪ್ರಾಮಾಣಿಕವೇ ಆಗಿರುವುದಾದರೆ, ಅಯೋಧ್ಯೆಯ ಶ್ರೀರಾಮ ಮಂದಿರಕ್ಕಿಂತ 22 ಕಿ.ಮೀಟರ್ ದೂರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಸೀದಿಯ ಕತೆ ಏನಾಯಿತು ಎಂಬ ಚರ್ಚೆ, ಅಭಿಪ್ರಾಯ  ಸಂಗ್ರಹ, ಪ್ರತ್ಯಕ್ಷ ವರದಿ, ತನಿಖಾ ವರದಿಗಳನ್ನು ಮಾಡಬಹುದು. ಮಸೀದಿ ನಿರ್ಮಾಣಕ್ಕೆ ಜಾಗ ಮಾಡಿಕೊಡಿ ಎಂಬ ಸುಪ್ರೀಮ್ ಆದೇಶ ವನ್ನು ಸರಕಾರ ಎಷ್ಟಂಶ ಪಾಲಿಸಿದೆ ಎಂಬ ಬಗ್ಗೆಯೂ ಪರಾಮರ್ಶೆ ನಡೆಸಬಹುದು. ಹಾಗೆಯೇ, ಕ್ರಿಮಿನಲ್ ಕೃತ್ಯ ಎಂದು ಸುಪ್ರೀಮ್  ಕೋರ್ಟು ಸಾರಿದ ಮಸೀದಿ ಧ್ವಂಸದ ವಿಚಾರಣೆ ಎಲ್ಲಿಗೆ ಬಂದು ಮುಟ್ಟಿದೆ ಎಂದೂ ವಿಶ್ಲೇಷಿಸಬಹುದು. ಆದರೆ ಇವಾವುವೂ ಆಗುತ್ತಿಲ್ಲ.  ಒಂದು ಕಡೆ,

ಶ್ರೀರಾಮ ಮಂದಿರ ಉದ್ಘಾಟನೆಗೆ ಸಿದ್ಧವಾಗಿರುವಾಗ ಇನ್ನೊಂದು ಕಡೆ ಮಸೀದಿ ನಿರ್ಮಾಣ ಕಾಮಗಾರಿಯೇ ಆರಂಭವಾಗಿಲ್ಲ.  ಅಯೋಧ್ಯೆಗಿಂತ 22 ಕಿ.ಮೀಟರ್ ದೂರದ ದನ್ನಿಪುರದಲ್ಲಿ ಮಸೀದಿ ನಿರ್ಮಾಣಕ್ಕೆಂದು ಸರಕಾರ 5 ಎಕರೆ ಭೂಮಿಯನ್ನೇನೋ ನೀಡಿದೆ.  ಆದರೆ, ಇದು ಕೃಷಿ ಭೂಮಿ ಎಂದು ಹೇಳಲಾಗುತ್ತಿದೆ. ಕೃಷಿ ಭೂಮಿಯಲ್ಲಿ ಮಸೀದಿ ನಿರ್ಮಿಸುವುದಕ್ಕೆ ಅದರದ್ದೇ  ಆದ ಕಾನೂನು  ತೊಡಕುಗಳಿವೆ. 2021ರಲ್ಲಿ ಮಸೀದಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದನ್ನು ಬಿಟ್ಟರೆ ಉಳಿದಂತೆ ಈವರೆಗೆ ಯಾವ ಚಟುವಟಿಕೆಯೂ ನಡೆದಿಲ್ಲ. ಆಯೋಧ್ಯಾ ಅಭಿವೃದ್ಧಿ ಪ್ರಾಧಿಕಾರವು (AAD) ವಿವಿಧ ಕಾರಣಗಳನ್ನೊಡ್ಡಿ ನಿರ್ಮಾಣ ಕಾರ್ಯಕ್ಕೆ ತಡೆ ಒಡ್ಡುತ್ತಲೇ ಇದೆ.  2022ರಲ್ಲಿ ಅಗ್ನಿಶಾಮಕ ಇಲಾಖೆಯು ರಸ್ತೆಗೆ ಸಂಬಂಧಿಸಿ ತಕರಾರನ್ನು ಎತ್ತಿ ನಿರಪೇಕ್ಷಣಾ ಸರ್ಟಿಫಿಕೇಟ್ ಕೊಡಲು ನಿರಾಕರಿಸಿತ್ತು. ಆ  ಬಳಿಕ ಮಸೀದಿ ನಿರ್ಮಾಣದ ನಕಾಶೆಗೆ ಆಕ್ಷೇಪ ವ್ಯಕ್ತಪಡಿಸಿತು. 4500 ಚದರ ಮೀಟರ್ ವ್ಯಾಪ್ತಿಯಲ್ಲಿ ಮಸೀದಿ, ಪ್ರತಿದಿನ 200 ಮಂದಿಗೆ ಊಟ ಹಾಕಿಸುವಷ್ಟು ದೊಡ್ಡದಾದ ಕಮ್ಯುನಿಟಿ ಕಿಚನ್, 200 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ, ಮ್ಯೂಸಿಯಂ, ಸಮುದಾಯ ಸಂಶೋಧನಾ ಕೇಂದ್ರ...  ಇತ್ಯಾದಿಗಳನ್ನು ನಿರ್ಮಿಸುವ ನಕಾಶೆಯನ್ನು ಆಯೋಧ್ಯಾ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲಾಗಿತ್ತು. ಆದರೆ, 

ಇದರ  ಅಂಗೀಕಾರಕ್ಕಾಗಿ 112 ಕೋಟಿ ರೂಪಾಯಿ  ಡಿಪಾಸಿಟ್ ಇಡುವಂತೆ ಅದು ಸೂಚಿಸಿತು. ಆದರೆ ಉ. ಪ್ರದೇಶ ಸುನ್ನಿ ವಕ್ಫ್ ಬೋರ್ಡ್ ನ  ಅಧೀನದಲ್ಲಿ  ಮಸೀದಿ ನಿರ್ಮಾಣಕ್ಕೆಂದೇ ರಚಿಸಲಾಗಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫಾರ್ಮ್(IICF)ನ ಬಳಿ ಇಷ್ಟು ಮೊತ್ತ ಇರಲಿಲ್ಲ. 50  ಲಕ್ಷ ರೂಪಾಂಯಿ ಡಿಪಾಸಿಟ್ ಇಡಲಷ್ಟೇ ನಾವು ಶಕ್ತರು ಎಂದು ಅದು ಹೇಳಿತು. ಆದರೆ, ಪ್ರಾಧಿಕಾರ ಈ ಕೋರಿಕೆಯನ್ನು ತಿರಸ್ಕರಿಸಿತು.  ಇದರಿಂದಾಗಿ ಉಭಯ ಸಂಕಟಕ್ಕೆ ಸಿಲುಕಿದ IICF, ಪ್ರಸ್ತಾವಿತ ನಕಾಶೆಯಿಂದ ಮಸೀದಿಯೊಂದನ್ನು ಬಿಟ್ಟು ಉಳಿದವುಗಳನ್ನೆಲ್ಲಾ  ಕೈಬಿಡುವ ನಿರ್ಧಾರಕ್ಕೆ ಬಂತು. ಮಸೀದಿ ನಿರ್ಮಾಣಕ್ಕೆ ಬೇಕಾದಷ್ಟು ಡಿಪಾಸಿಟ್ ಇಡುವುದು ಮತ್ತು ಮಸೀದಿ ನಿರ್ಮಾಣದ ಬಳಿಕ ಹಣ  ಸಂಗ್ರಹಿಸಿ ಉಳಿದವುಗಳ ನಿರ್ಮಾಣಕ್ಕೆ ಕೈ ಹಾಕುವ ಗುರಿಯನ್ನು ಇಟ್ಟುಕೊಂಡಿತು. ಆರಂಭದಲ್ಲಿ ಭಾರತೀಯ ಶೈಲಿಯಲ್ಲಿ ಮಸೀದಿ  ನಿರ್ಮಿಸುವ ಉದ್ದೇಶದೊಂದಿಗೆ ನಕಾಶೆ ತಯಾರಿಸಲಾಯಿತಾದರೂ ಅದು ಸಮಿತಿಯಲ್ಲಿ ತಿರಸ್ಕೃತಗೊಂಡಿತು. ಇದೀಗ ಹೊಸ ಶೈಲಿಯ ನಕಾಶೆ  ತಯಾರಾಗುತ್ತಿದ್ದು, 2024ರ ಮೇ ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಹೇಳಲಾಗಿದೆ. ಬಳಿಕ ಅದಕ್ಕೆ ಆಡಳಿತಾತ್ಮಕ ಅಂಗೀಕಾರ  ದೊರೆಯಬೇಕಾಗಿದೆ. ದೆಹಲಿಯ ಜಾಮಿಯಾ ಮಿಲ್ಲಿಯ ಇಸ್ಲಾಮಿಯಾ ವಿಶ್ವವಿದ್ಯಾಲಯದ ಆರ್ಕಿಟೆಕ್ಚರ್ ಅಖ್ತರ್ ಅವರ ನೇತೃತ್ವದಲ್ಲಿ  ರಚನೆಯಾಗುತ್ತಿರುವ ಮಸೀದಿ ನಕಾಶೆಯು ಎಷ್ಟೇ ಅದ್ಭುತವಾಗಿದ್ದರೂ ಹಣ ಮತ್ತು ಆಡಳಿತಾತ್ಮಕ ತೊಡಕುಗಳು ಈ ಮಸೀದಿ ನಿರ್ಮಾಣಕ್ಕೆ  ಎದುರಾಗಲಿದೆ ಎಂಬುದು ಸ್ಪಷ್ಟ. ಒಂದುವೇಳೆ,

ಮಂದಿರ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ತೋರಿರುವ ಮುತುವರ್ಜಿಯ ಒಂದು ಶೇಕಡಾ ಅಂಶವನ್ನಾದರೂ ಈ  ಮಸೀದಿ ನಿರ್ಮಾಣದತ್ತ ನೀಡುತ್ತಿದ್ದರೆ ಒಂದೇ ಸಮಯದಲ್ಲಿ ಮಸೀದಿ ಮತ್ತು ಮಂದಿರಗಳ ಉದ್ಘಾಟನೆ ನಡೆಸಬಹುದಿತ್ತು. ಒಂದುಕಡೆ,  ಸರಕಾರಿ  ಸಂಸ್ಥೆಗಳು ಮಸೀದಿ ನಿರ್ಮಾಣಕ್ಕೆ ವಿವಿಧ ಅಡೆ-ತಡೆಗಳನ್ನು ನೀಡುತ್ತಿರುವಾಗ ಇನ್ನೊಂದು ಕಡೆ ಸರಕಾರವೇ  ಮುಂದೆ ನಿಂತು ಮಂದಿರ ನಿರ್ಮಿಸುತ್ತಿದೆ. ಅಲ್ಲದೇ, ಸರಕಾರದ ಅಧೀನದಲ್ಲಿರುವ ಸುನ್ನಿ ವಕ್ಫ್ ಬೋರ್ಡ್ ಉದ್ದೇಶಪೂರ್ವಕವಾಗಿಯೇ  ಮಸೀದಿ ನಿರ್ಮಾಣಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿದೆಯೇ ಎಂಬ ಅನುಮಾನವೂ ಇದೆ. 

ಇವೇನೇ ಇದ್ದರೂ, ಮುಂದಿನ ಕೆಲವು  ದಿನಗಳ ಕಾಲ ಮುಸ್ಲಿಮರು ಜಾಗರೂಕರಾಗಿರಬೇಕು. ರಾಮಮಂದಿರಕ್ಕೆ ಸಂಬಂಧಿಸಿ ಮಾಧ್ಯಮದವರು ಕೇಳುವ ಪ್ರಶ್ನೆಗಳನ್ನು ಅಳೆದೂ  ತೂಗಿ ಉತ್ತರಿಸಬೇಕು. ಮುಸ್ಲಿಮರನ್ನು ಶ್ರೀ ರಾಮನ ವಿರೋಧಿಗಳು ಎಂದು ಬಿಂಬಿಸುವುದಕ್ಕೆ ಪೂರಕವಾಗಿ ಏನನ್ನೂ ಆಡಬಾರದು.

Tuesday 2 January 2024

ಹಿಂದೂ ಧರ್ಮಕ್ಕೆ ಸವಾಲಾಗಿರುವ ಕಲ್ಲಡ್ಕ ಪ್ರಭಾಕರ ಭಟ್




ಈ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚೆಂದರೆ 20 ಕೋಟಿಯಷ್ಟಿದೆ. ಆದರೆ ಹಿಂದೂಗಳ ಜನಸಂಖ್ಯೆ 100 ಕೋಟಿಗಿಂತಲೂ ಅಧಿಕವಿದೆ. ಕೇವಲ ಜನಸಂಖ್ಯೆಯೊಂದೇ  ಅಲ್ಲ, ಈ ದೇಶದ ಸಂಪನ್ಮೂಲವನ್ನು ಅತ್ಯಂತ ಕಡಿಮೆ ಪಡೆಯುತ್ತಿರುವ ಸಮುದಾಯವೂ  ಮುಸ್ಲಿಮರದ್ದೇ. ಸರಕಾರಿ ಉದ್ಯೋಗಗಳಲ್ಲಿ ಮುಸ್ಲಿಮರ ಪಾಲು ಅತ್ಯಂತ ಕಡಿಮೆ. ಬ್ಯಾಂಕ್‌ಗಳಿಂದ  ಭಾರೀ ಪ್ರಮಾಣದ ಸಾಲ ಪಡೆದು  ವಿದೇಶಕ್ಕೆ ಹಾರಿ ಹೋಗುವ ಉದ್ಯಮಿಗಳ ಪೈಕಿ ಮುಸ್ಲಿಮರಾರೂ ಇಲ್ಲ. ದೇಶದ ವಿವಿಧ ರಾಜ್ಯಗಳ ಶಾಸನಸಭೆಗಳಲ್ಲಿ ಮುಸ್ಲಿಮ್ ಪ್ರತಿನಿಧಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ. ಸಂಸತ್‌ನಲ್ಲೂ ಇದೇ ಪರಿಸ್ಥಿತಿ. ಕೇಂದ್ರ ಸರಕಾರದ ಸಚಿವ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಜನಪ್ರತಿನಿಧಿ ಇಲ್ಲ. ಮುಸ್ಲಿಮ್ ಸಮುದಾಯದ ಹಿಂದುಳಿವಿಕೆಯನ್ನು ಪರಿಗಣಿಸಿ ನೀಡಲಾಗುತ್ತಿದ್ದ  ಒಂದೊಂದೇ  ಸೌಲಭ್ಯವನ್ನೂ ಸರಕಾರಗಳು ಕಿತ್ತುಕೊಳ್ಳುತ್ತಾ ಬರುತ್ತಿವೆ. ಕರ್ನಾಟಕದಲ್ಲಿ 2ಬಿ ಮೀಸಲಾತಿ ಕೆಟಗರಿಯಿಂದ ಮುಸ್ಲಿಮ್  ಸಮುದಾಯವನ್ನು ಹೊರಹಾಕಲಾಯಿತು. ಇದೇವೇಳೆ,

 ಉನ್ನತ ವ್ಯಾಸಂಗ ಮಾಡುತ್ತಿರುವ ಮುಸ್ಲಿಮ್ ವಿದ್ಯಾರ್ಥಿಗಳೂ ಸೇರಿದಂತೆ  ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೌಲಾನಾ ಆಝಾದ್ ಫೆಲೋಶಿಪನ್ನು ಕೇಂದ್ರ ಸರಕಾರ ಸ್ಥಗಿತಗೊಳಿಸಿದೆ. ಬಾಬರಿ  ಮಸೀದಿ ಪ್ರಕರಣದಲ್ಲಿ ಮಂದಿರ ನಿರ್ಮಾಣ ಮತ್ತು ಮಸೀದಿ ನಿರ್ಮಾಣಕ್ಕೆ ಸುಪ್ರೀಮ್ ಕೋರ್ಟು ಏಕಧ್ವನಿಯಲ್ಲಿ ಆದೇಶಿಸಿತ್ತು. ಆದರೆ,  ಮಂದಿರ ನಿರ್ಮಾಣ ಬಹುತೇಕ ಪೂರ್ತಿಯಾಗಿದೆ. ಆದರೆ ಮಸೀದಿ ನಿರ್ಮಾಣಕ್ಕೆ ಇನ್ನೂ ಶಂಕುಸ್ಥಾಪನೆಯೇ ಆಗಿಲ್ಲ. ಇದರ  ನಡುವೆಯೇ ಕಾಶಿಯ ಗ್ಯಾನ್‌ವಾಪಿ ಮಸೀದಿ ಮತ್ತು ಮಥುರಾದ ಈದ್‌ಗಾಹ್ ಮಸೀದಿಗಳ ವಿರುದ್ಧ ನ್ಯಾಯಾಲಯಗಳಲ್ಲಿ ದೂರು ಸ ಲ್ಲಿಕೆಯಾಗಿದೆ ಮತ್ತು ಮಸೀದಿಗಳ ಸರ್ವೇಗೆ ನ್ಯಾಯಾಲಯ ಅನುಮತಿಯನ್ನೂ ನೀಡಿದೆ. ಇದೇವೇಳೆ, ದೇಶದೆಲ್ಲೆಡೆ ಅನೈತಿಕ ಪೊಲೀಸ್‌ಗಿರಿಯ ಹೆಸರಲ್ಲಿ, ದನಸಾಗಾಟದ ಹೆಸರಲ್ಲಿ ಮುಸ್ಲಿಮ್ ಸಮುದಾಯ ವಿವಿಧ ರೀತಿಯ ದಾಳಿಗಳಿಗೆ ತುತ್ತಾಗುತ್ತಿದೆ. ವ್ಯಾಪಾರ  ಬಹಿಷ್ಕಾರವನ್ನೂ ಎದುರಿಸುತ್ತಿದೆ. ಇದರ ಜೊತೆಗೆ ಕಾನೂನು ನಿರ್ಮಾಣದಲ್ಲೂ ಮುಸ್ಲಿಮ್ ಸಮುದಾಯವನ್ನೇ ಗುರಿ ಮಾಡಲಾಗುತ್ತಿದೆ.  ತ್ರಿವಳಿ ತಲಾಕನ್ನು ಸುಪ್ರೀಮ್ ಕೋರ್ಟು ಅಮಾನ್ಯ ಮಾಡಿದ್ದನ್ನೇ ನೆಪವಾಗಿಸಿಕೊಂಡ ಕೇಂದ್ರ ಸರಕಾರ ಕಾನೂನೊಂದನ್ನು ರೂಪಿಸಿತು.  ಅದರ ಪ್ರಕಾರ, ತ್ರಿವಳಿ ತಲಾಕ್ ಹೇಳುವುದನ್ನು ಕ್ರಿಮಿನಲ್ ಅಪರಾಧವೆಂದು ಸಾರಲಾಯಿತು ಮತ್ತು ಅಂಥ ವ್ಯಕ್ತಿಗೆ 3 ವರ್ಷಗಳ ಕಾಲ  ಜೈಲು ಶಿಕ್ಷೆಯನ್ನು ಘೋಷಿಸಲಾಯಿತು. ಒಂದುಕಡೆ, 

ಸುಪ್ರೀಮ್ ಕೋರ್ಟು ತ್ರಿವಳಿ ತಲಾಕನ್ನು ಅಮಾನ್ಯ ಮತ್ತು ಅಸಿಂಧು ಎಂದು  ಹೇಳಿರುವಾಗ ವ್ಯಕ್ತಿಯನ್ನು ಜೈಲಿಗೆ ಹಾಕುವುದರಿಂದ ಉಂಟಾಗುವ ಕೌಟುಂಬಿಕ ಸಮಸ್ಯೆಗಳು ಏನೇನು ಅನ್ನುವ ಪ್ರಶ್ನೆಗೆ ಈ ಕಾನೂನಿನಲ್ಲಿ ಉತ್ತರವೇ ಇಲ್ಲ. ತ್ರಿವಳಿ ತಲಾಕ್ ಹೇಳಿದ ವ್ಯಕ್ತಿಯನ್ನು ಜೈಲಿಗೆ ಹಾಕುವುದೆಂದರೆ, ಆ ತಲಾಕ್ ಸಿಂಧು ಎಂದು ಪರೋಕ್ಷವಾಗಿ  ಸಾರಿದಂತೆ. ತಲಾಕೇ ಅಲ್ಲದ ತಲಾಕ್ ಗಾಗಿ ವ್ಯಕ್ತಿಯನ್ನು ಜೈಲಿಗೆ ಹಾಕಿದರೆ, ಆ ಬಳಿಕವೂ ಆ ವಿವಾಹ ಊರ್ಜಿತದಲ್ಲಿರುವುದೇ, ಜೈಲಿನಿಂದ ಹೊರಬಂದ ವ್ಯಕ್ತಿ ಆ ದಾಂಪತ್ಯ ಸಂಬಂಧವನ್ನು ಉಳಿಸಿಕೊಳ್ಳಬಹುದೇ, ಆತ ಜೈಲಲ್ಲಿರುವ ವರೆಗೆ ಆತನ ಪತ್ನಿ ಮತ್ತು ಮಕ್ಕಳನ್ನು  ನೋಡಿಕೊಳ್ಳುವವರು ಯಾರು, ವರಮಾನ ಏನು... ಇತ್ಯಾದಿ ಪ್ರಶ್ನೆಗಳಿಗೂ ಕಾನೂನು ರೂಪಿಸಿದವರು ಉತ್ತರವನ್ನು ಹೇಳಲಿಲ್ಲ. ಆತ  ಜೈಲಲ್ಲಿರುವಾಗ ಆಕೆ ಇನ್ನೊಂದು ಮದುವೆ ಆಗುವಂತೆಯೂ ಇಲ್ಲ. ಯಾಕೆಂದರೆ, ಸುಪ್ರೀಮ್ ಕೋರ್ಟು ಪ್ರಕಾರ ತ್ರಿವಳಿ ತಲಾಕ್,  ವಿಚ್ಛೇದನ ಆಗುವುದಿಲ್ಲ. ಗಂಡನಿಂದ  ವಿಚ್ಛೇದನ ಪಡೆಯದೆ ಇನ್ನೊಂದು ಮದುವೆಯಾಗುವುದಕ್ಕೆ ಅವಕಾಶವೂ ಇಲ್ಲ. ಅತ್ತ ವಿಚ್ಛೇದನಕ್ಕೂ  ಒಳಗಾಗದ ಮತ್ತು ಇತ್ತ ಗಂಡನೂ ಇಲ್ಲದ ಅತಂತ್ರ ಸ್ಥಿತಿಯೊಂದರಲ್ಲಿ ಮುಸ್ಲಿಮ್ ಮಹಿಳೆಯರನ್ನು ನಿಲ್ಲಿಸುವ ಕಾನೂನೊಂದನ್ನು ಕೇಂದ್ರ  ಸರಕಾರ ರೂಪಿಸಿ ಕೈತೊಳೆದುಕೊಂಡಿದೆ. ಮಾತ್ರವಲ್ಲ, ಇದನ್ನೇ ಮುಸ್ಲಿಮ್ ಸಮುದಾಯದ ಮಹಿಳೆಯರಿಗೆ ಮಾಡಲಾದ ಮಹದುಪಕಾರ  ಎಂದೇ ಬಿಂಬಿಸಿಕೊಳ್ಳುತ್ತಿದೆ. ಅದೇವೇಳೆ,

ಹಿಂದೂ ವ್ಯಕ್ತಿಯೋರ್ವ ಹೀಗೆಯೇ ತನ್ನ ಪತ್ನಿಯನ್ನು ತ್ಯಜಿಸಿ ಹೋಗುವುದನ್ನು ಕೇಂದ್ರ ಸರಕಾರ ಸಿವಿಲ್ ಪ್ರಕರಣವಾಗಿ ಸದ್ದಿಲ್ಲದೇ ಉಳಿಸಿಕೊಂಡಿದೆ.  ಎಲ್ಲರಿಗೂ ಸಮಾನ ಕಾನೂನು ಇರಬೇಕು ಎಂದು ಒತ್ತಿ ಹೇಳುತ್ತಾ ಸಮಾನ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡುವ ಇದೇ  ಸರಕಾರ ಒಂದೇ ಬಗೆಯ ಅಪರಾಧವನ್ನು ಎರಡು ರೀತಿಯಾಗಿ ವಿಂಗಡಿದ್ದೇಕೆ ಎಂಬ ಪ್ರಶ್ನೆಗೂ ಉತ್ತರವಿಲ್ಲ. ಪತ್ನಿಯನ್ನು ತ್ಯಜಿಸಿದ  ಮುಸ್ಲಿಮ್ ವ್ಯಕ್ತಿ ಕ್ರಿಮಿನಲ್ ಆಗಿ ಜೈಲಲ್ಲಿರುವಾಗ ಅದೇ ತಪ್ಪೆಸಗಿದ ಹಿಂದೂ ವ್ಯಕ್ತಿ ಈ ಯಾವ ಭಯವೂ ಇಲ್ಲದೇ ಮತ್ತು ಕ್ರಿಮಿನಲ್ಲೂ  ಆಗದೇ ಆರಾಮವಾಗಿರುತ್ತಾನೆ. ಈ ನಡುವೆ ಬಹುಪತ್ನಿತ್ವವನ್ನು ಗುರಿಯಾಗಿಸಿಕೊಂಡು ಕಾನೂನು ರೂಪಿಸಲು ಅಸ್ಸಾಂ ಸರಕಾರ  ಹೊರಟಿರುವಾಗ ಉತ್ತರ ಪ್ರದೇಶದಲ್ಲಿ ಮದ್ರಸಾಗಳು ಸರಕಾರದ ಕೆಂಗಣ್ಣಿಗೆ ಗುರಿಯಾಗಿವೆ. ಲವ್ ಜಿಹಾದ್‌ನ ಹೆಸರಲ್ಲಿ ಕಾನೂನುಗಳನ್ನು  ಜಾರಿ ಮಾಡಲಾಗಿದೆ. ಇಂಥ ಸಂದರ್ಭದಲ್ಲೇ  ಕಲ್ಲಡ್ಕ ಪ್ರಭಾಕರ ಭಟ್  ಮುಸ್ಲಿಮ್ ಸಮುದಾಯದ ಮಹಿಳೆಯರ ಬಗ್ಗೆ ಅತ್ಯಂತ  ತುಚ್ಛವಾದ ಮತ್ತು ಅವಮಾನಕರವಾದ ಹೇಳಿಕೆಯನ್ನು ಸಾರ್ವಜನಿಕರ ಮುಂದೆ ನೀಡಿದ್ದಾರೆ. ಅವರೋರ್ವ ವ್ಯಕ್ತಿ ಮಾತ್ರವಾಗಿದ್ದರೆ ಈ  ಮಾತನ್ನು ಗಂಭೀರವಾಗಿ ಪರಿಗಣಿಸಬೇಕಿರಲಿಲ್ಲ. ಆದರೆ, 

ಅವರು ರಾಜಕೀಯವಾಗಿ, ಧಾರ್ಮಿಕವಾಗಿ ಮತ್ತು ಸಾರ್ವಜನಿಕವಾಗಿ  ಪ್ರಭಾವಶಾಲಿ. ಗಣೇಶೋತ್ಸವ, ಶಾರದೋತ್ಸವ, ಹಿಂದೂ ಸಮಾಜೋತ್ಸವ, ಜೀರ್ಣೋದ್ಧಾರ, ಅಷ್ಟಮಂಗಲ... ಇತ್ಯಾದಿ ಎಲ್ಲ  ಕಾರ್ಯಕ್ರಮಗಳಲ್ಲೂ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸುತ್ತಾರೆ. ಇಂಥ ವ್ಯಕ್ತಿ ಸಾರ್ವಜನಿಕರ ಮುಂದೆ ಮುಸ್ಲಿಮ್ ಮಹಿಳೆಯರ  ವಿರುದ್ಧ ಅವಮಾನ ಕಾರಿಯಾಗಿ ಮಾತನಾಡಿದ್ದಾರೆ. ಇವರ ವಿರುದ್ಧ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಪ್ರಬಲ  ಆಗ್ರಹವಾದರೆ, ಇನ್ನೊಂದು- ಜನಸಂಖ್ಯೆ, ಶ್ರೀಮಂತಿಕೆ, ಸರಕಾರದಲ್ಲಿ ಪಾಲುದಾರಿಕೆಯೂ ಸೇರಿದಂತೆ ಯಾವ ವಿಷಯದಲ್ಲೂ ಹಿಂದೂ  ಸಮುದಾಯಕ್ಕೆ ಬದಲಿಯಾಗದ, ಪ್ರತಿಯಾಗದ ಮತ್ತು ಸಾಟಿಯಾಗದ ಮುಸ್ಲಿಮ್ ಸಮುದಾಯವನ್ನು ಇವರೆಲ್ಲ ಪದೇ ಪದೇ  ಕಟಕಟೆಯಲ್ಲಿ ಯಾಕೆ ನಿಲ್ಲಿಸುತ್ತಿದ್ದಾರೆ ಅನ್ನುವ ಪ್ರಶ್ನೆಯೂ ಇದೆ.  ಹೀಗೆ ಬೈಯೋದರ ಹಿಂದೆ ಓಟಿನ ಉದ್ದೇಶ ಇದೆಯೇ? ಮುಸ್ಲಿಮರನ್ನು  ತೆಗಳುವುದರಿಂದ ಹಿಂದೂಗಳೇಕೆ ತೆಗಳಿದವರಿಗೆ ಓಟು ಕೊಡುತ್ತಾರೆ? ಮುಸ್ಲಿಮರನ್ನು ತೆಗಳುವುದರಿಂದ ಮತ್ತು ಸತಾಯಿಸುವುದರಿಂದ  ಹಿಂದೂ ಧರ್ಮಕ್ಕೆ ಆಗುವ ಲಾಭವೇನು? ಹಿಂದೂ ಧರ್ಮದ ಅಭಿವೃದ್ಧಿಯು ಮುಸ್ಲಿಮರನ್ನು ಆಧರಿಸಿಕೊಂಡಿದೆಯೇ? 20  ಕೋಟಿಯಷ್ಟಿರುವ ಮುಸ್ಲಿಮರು 100 ಕೋಟಿಗಿಂತಲೂ ಅಧಿಕ ಇರುವ ಹಿಂದೂಗಳಿಗೆ ತೊಡಕೇ? ಅಪಾಯಕಾರಿಯೇ?  ರಾಜಕೀಯವಾಗಿ, ಆರ್ಥಿಕವಾಗಿ, ಕಾನೂನಾತ್ಮಕವಾಗಿ ಮತ್ತು ಸಾಮಾಜಿಕವಾಗಿ- ಹೀಗೆ ಯಾವ ಕ್ಷೇತ್ರದಲ್ಲೂ ಬಲಿಷ್ಠವಾಗಿಲ್ಲದ  ಸಮುದಾಯವೊಂದನ್ನು ಈ ಎಲ್ಲ ಕ್ಷೇತ್ರಗಳಲ್ಲೂ ಬಲಶಾಲಿಯಷ್ಟೇ ಅಲ್ಲ, ಸಂಪೂರ್ಣ ಪ್ರಾಬಲ್ಯವನ್ನು ಸ್ಥಾಪಿಸುವ ಸಮುದಾಯಕ್ಕೆ ಪ್ರತಿಸ್ಪರ್ಧಿ ಎಂದು ಬಿಂಬಿಸುವುದನ್ನು ಹಿಂದೂಗಳು ಯಾಕೆ ನಂಬುತ್ತಿದ್ದಾರೆ? 

ಈ ದೇಶದಲ್ಲಿ 99.99% ರಾಜಕೀಯ ಪಕ್ಷಗಳು ಕೂಡಾ  ಹಿಂದೂಗಳದ್ದೇ  ಮತ್ತು ಮುಂಚೂಣಿ ನಾಯಕರೂ ಹಿಂದೂಗಳೇ. ಈ ದೇಶದ ಪ್ರಮುಖ ಉದ್ಯಮಿಗಳೂ ಹಿಂದೂಗಳೇ.  ವಿಶ್ವವಿದ್ಯಾಲಯಗಳ ಕುಲಪತಿಗಳು, ಪ್ರೊಫೆಸರ್‌ಗಳು, ಉಪನ್ಯಾಸಕರ ಪಟ್ಟಿಯನ್ನು ಪರಿಶೀಲಿಸಿದರೂ ಅಲ್ಲೆಲ್ಲಾ  ಮುಸ್ಲಿಮ್ ಹೆಸರು ಅಪರೂಪದಲ್ಲಿ ಅಪರೂಪ. ರಾಷ್ಟ್ರಪತಿಗಳು, ರಾಜ್ಯಪಾಲರುಗಳು, ಪ್ರಧಾನಿ, ನ್ಯಾಯಾಧೀಶರುಗಳು, ವೈದ್ಯರುಗಳು, ಸಾಹಿತಿಗಳು... ಹೀಗೆ  ಎಲ್ಲೆಲ್ಲೂ ಮುಸ್ಲಿಮ್ ಪ್ರಾತಿನಿಧ್ಯ ಅತ್ಯಂತ ಕಡಿಮೆ. ಇಷ್ಟೆಲ್ಲಾ ಇದ್ದೂ ಮತ್ತೂ ಮುಸ್ಲಿಮರನ್ನೇ ಕಟಕಟೆಯಲ್ಲಿ ನಿಲ್ಲಿಸುವುದು ಮತ್ತು ಅದನ್ನೇ  ಹಿಂದೂಗಳು ನಂಬುವುದೆಲ್ಲ ಏಕೆ? ಮುಸ್ಲಿಮರನ್ನು ಅಪಾಯಕಾರಿಗಳಂತೆ ಬಿಂಬಿಸುವವರ ಸುಳ್ಳನ್ನು ಪ್ರಶ್ನಿಸದೇ ಸುಳ್ಳಿಗೇ ಶರಣಾಗುವ  ಪರಿಸ್ಥಿತಿ ಈ ದೇಶದಲ್ಲಿ ಯಾಕಿದೆ?

ಯಾವುದೇ ದೇಶ ಅಭಿವೃದ್ಧಿಯಾಗಬೇಕಾದರೆ ಆ ದೇಶದಲ್ಲಿರುವ ಎಲ್ಲರ ಕೊಡುಗೆಯೂ ಅತೀ ಅಗತ್ಯ. ಮುಸ್ಲಿಮ್ ಸಮುದಾಯವನ್ನು  ಸದಾ ಬೇಲಿಯ ಮೇಲಿಡುತ್ತಾ ಮತ್ತು ಅವರ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಾ ದೇಶದ ಅಭಿವೃದ್ಧಿಯ ಕನಸು ಕಾಣುವುದು ಅತಾರ್ಕಿಕ  ಮತ್ತು ಅಸಂಬದ್ಧ. ಮುಸ್ಲಿಮರನ್ನು ಭೂತದಂತೆ ಚಿತ್ರಿಸುವವರನ್ನು ಹಿಂದೂಗಳು ತಿದ್ದದ ಹೊರತು ಅವರು ವರ್ತನೆ ಬದಲಿಸಲಾರರು.  ಪ್ರಭಾಕರ ಭಟ್ ಆಗಲಿ, ಇನ್ನಾರದ್ದೇ  ಆಗಲಿ ಮುಸ್ಲಿಮ್ ದ್ವೇಷ ಕೊನೆಗೊಳ್ಳಬೇಕಾದರೆ ಹಿಂದೂ ಸಮುದಾಯ ಚುರುಕಾಗಬೇಕು.  ಹಿಂದೂ ಧರ್ಮದ ಅಳಿವು-ಉಳಿವು ಮುಸ್ಲಿಮರನ್ನು ಅವಲಂಬಿಸಿಕೊಂಡಿಲ್ಲ ಎಂಬುದನ್ನು ಗಟ್ಟಿ ಧ್ವನಿಯಲ್ಲಿ ಸಾರಬೇಕು. ಇಂಥವರಿಗೆ  ಧಾರ್ಮಿಕ ಕಾರ್ಯಕ್ರಮಗಳಿಂದ ಬಹಿಷ್ಕಾರ ಹೇರುವ ಮೂಲಕ ಪಾಠ ಕಲಿಸಬೇಕು.