Thursday 25 March 2021

ಆಸಿಫ್: ಏರುಗತಿಯಲ್ಲಿರುವ ದ್ವೇಷಭಾವದ ಜಿಡಿಪಿ




ನಿಜಕ್ಕೂ ಆ ಬಾಲಕ ಥಳಿತಕ್ಕೆ ಅರ್ಹನೇ? ನೀರು ಕುಡಿಯುವುದು ಥಳಿಸಬೇಕಾದಷ್ಟು ಕ್ರೂರ ಅಪರಾಧವೇ? ಬಾಲಕನ ತಂದೆಯ ಪ್ರ ಶ್ನೆಯೂ ಇಲ್ಲಿ ಊರ್ಜಿತ- ನೀರಿಗೆ ಧರ್ಮವನ್ನು ಬೆರೆಸಿದವರು ಯಾರು? ಮಂದಿರದಿಂದ ಓರ್ವ ಮುಸ್ಲಿಮ್ ಬಾಲಕ ನೀರು  ಕುಡಿಯುವುದು ಅಪರಾಧ ಏಕಾಗಬೇಕು? ಇಂಜಿನಿಯರ್ ಆಗಿರುವ ಶೃಂಗಿ ಯಾದವ್‌ಗೆ ಇಷ್ಟು ಪರಿಜ್ಞಾನವೂ ಇಲ್ಲವೇ? ಬೇಡ, ಆತ ನೊಳಗೆ ದ್ವೇಷ ತುಂಬಿಕೊಂಡಿದೆಯೆಂದೇ  ಹೇಳೋಣ ಮತ್ತು ತನ್ನ ಪರಿವಾರದಲ್ಲಿ ಹೀರೋಯಿಸಂ ತೋರ್ಪಡಿಸಲು ಅಥವಾ ಪ್ರಚಾರದ  ಗೀಳಿಗಾಗಿ ಆ ಬಾಲಕನನ್ನು ಥಳಿಸಿದನೆಂದೇ ಒಪ್ಪೋಣ. ಆದರೆ, ಆ ಮಂದಿರದ ಆಡಳಿತ ಸಮಿತಿಗೇನಾಗಿದೆ? ಇಡೀ ಬೆಳವಣಿಗೆಯನ್ನು  ಸಾವಧಾನದಿಂದ ಪರಿಶೀಲಿಸಿ ಹೇಳಿಕೆ ನೀಡುವುದಕ್ಕೆ ಅವಕಾಶವಿದ್ದೂ ಅದು ಮಾಡಿದ್ದೇನು? ಶೃಂಗಿ ಯಾದವ್‌ನ ಬೆಂಬಲಕ್ಕೆ ಅದು  ನಿಂತದ್ದೇಕೆ? ಆತನ ಕಾನೂನು ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ಅದು ಘೋಷಿಸಿದ್ದೇಕೆ? ಆ ಬಾಲಕ ನೀರು ಕುಡಿದದ್ದನ್ನು  ಸಂಚು ಎಂದು ಹೇಳುವಷ್ಟು, ಸ್ಥಳೀಯ ವಾತಾವರಣವನ್ನು ಕೆಡಿಸಲು ಮಾಡಲಾದ ಯತ್ನವೆಂದು ವಾದಿಸುವಷ್ಟು ಮತ್ತು ಆ ಬಾಲಕ  ಒಂಟಿಯಲ್ಲ, ಆತನ ಹಿಂದೆ ಸಂಚುಕೋರರಿದ್ದಾರೆ ಎಂದು ಸಮರ್ಥಿಸುವಷ್ಟು ಹೀನ ಹಂತಕ್ಕೆ ತಲುಪಿದ್ದೇಕೆ? ನಿಜವಾಗಿ,

ಆಸಿಫ್ ಎಂಬ ಆ ಬಾಲಕನಿಗೆ ಥಳಿಸಿರುವುದಕ್ಕಿಂತಲೂ ಮಂದಿರದ ಈ ಸಮರ್ಥನೆ ಹೆಚ್ಚು ಆಘಾತಕಾರಿ. ಉತ್ತರ ಪ್ರದೇಶದ  ಘಾಸಿಯಾಬಾದ್‌ನಲ್ಲಿರುವ ದಾಸ್ನಾದೇವಿ ಮಂದಿರದಲ್ಲಿ ಯತಿಯಾಗಿರುವ ನರಸಿಂಗಾನಂದ್  ಸರಸ್ವತಿ ಮತ್ತು ಅವರ ಶಿಷ್ಯನಾಗಿ  ಗುರುತಿಸಿಕೊಂಡಿರುವ ಆರೋಪಿ ಶೃಂಗಿ ಯಾದವ್ ಇಬ್ಬರೂ ಹಿಂದೂ ಧರ್ಮದೊಂದಿಗೆ ಗುರುತಿಸಿಕೊಂಡವರು. ಶೃಂಗಿ ಯಾದವ್ ಈ  ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊAಡಿರುವ ಫೋಟೋಗಳು ಈಗ ಮುನ್ನೆಲೆಗೆ ಬರುತ್ತಿವೆ. ಚೂರಿ, ಬಂದೂಕು ಮತ್ತು  ಇನ್ನಿತರ ಆಯುಧಗಳನ್ನು ಹಿಡಿದ ಫೋಟೋವನ್ನು ಆತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಪ್ರಚೋದನಾತ್ಮಕ ಮತ್ತು ತೀವ್ರ  ಬಲಪಂಥೀಯ ಮಾತುಗಳಿಂದ ನರಸಿಂಗಾನಂದ್  ಸರಸ್ವತಿ ಪರಿಚಿತರು ಎಂದು ಇಂಡಿಯನ್ ಎಕ್ಸ್ ಪ್ರೆಸ್  ವರದಿ ಮಾಡಿದೆ. ಒಂದು  ಕೋಣೆಯ ಪುಟ್ಟ ಗೂಡಿನಂಥ ಮನೆಯಲ್ಲಿ ವಾಸಿಸುವ ಆಸಿಫ್ ಮತ್ತು ಆತನ ಹೆತ್ತವರು ನೀರು ಕುಡಿದು ಮಾಡುವ ಸಂಚಾದರೂ ಏ ನು? ಮನೆಯ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಲು ಕೆಲಸ ಮಾಡುವ ಈ ಬಾಲಕನನ್ನು ಥಳಿಸಿರುವುದನ್ನು ಒಂದು ಮಂದಿರ ಸಮಿತಿ  ಬೆಂಬಲಿಸುವುದೆಂದರೆ, ನಿಜಕ್ಕೂ ಅದಕ್ಕೆ ಧಾರ್ಮಿಕ ದ್ವೇಷವಲ್ಲದೇ ಬೇರೇನಾದರೂ ಕಾರಣ ಇದ್ದೀತೆ? ದೇಶದಲ್ಲಿ ಉಳಿದೆಲ್ಲ ಕ್ಷೇತ್ರಗಳು  ಸಂಪೂರ್ಣ ಧರಾಶಾಹಿಯಾಗಿರುವಾಗಲೂ ಈ ಧರ್ಮದ್ವೇಷದ ಜಿಡಿಪಿಯಲ್ಲಿ ಈ ಮಟ್ಟದ ಏರಿಕೆಯಾಗಿರುವುದು ಏನನ್ನು ಸೂಚಿಸುತ್ತದೆ?

ಕಳೆದ ಒಂದು ವರ್ಷದಲ್ಲಿ 10,113 ಕಂಪೆನಿಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ ಎಂದು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ  ಅನುರಾಗ್ ಸಿಂಗ್ ಠಾಕೂರ್ ಲೋಕಸಭೆಗೆ ತಿಳಿಸಿದ್ದಾರೆ. ಅಭಿವೃದ್ಧಿಗೆ ಹಣ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿರುವುದನ್ನು ಪ್ರತಿದಿನದ  ಬೆಳವಣಿಗೆಗಳೇ ಹೇಳುತ್ತಿವೆ. ರಾಜ್ಯದ ಜಿಎಸ್‌ಟಿ ಪಾಲನ್ನು ನೀಡದೇ ಇರುವುದರಿಂದಾಗಿ ಏನನ್ನೂ ಮಾಡಲಾಗದ ಸ್ಥಿತಿ ಎದುರಾಗಿದೆ.  ಇನ್ನೊಂದೆಡೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯಲ್ಲಿ ದಿನನಿತ್ಯವೆಂಬಂತೆ ಏರಿಕೆಯಾಗುತ್ತಿದೆ. ನಿರುದ್ಯೋಗದ  ಪ್ರಮಾಣವಂತೂ ಸ್ಫೋಟಕ ಸ್ಥಿತಿಯಲ್ಲಿದೆ. 14 ವರ್ಷದ ಆಸಿಫ್‌ನನ್ನು ಥಳಿಸಿದ ಶೃಂಗಿ ಯಾದವ್‌ನೂ ನಿರುದ್ಯೋಗಿ. ಎಂಜಿನಿಯರ್  ಆಗಿದ್ದೂ ಕೆಲಸ ಸಿಗದೇ ಕೊನೆಗೆ ದಾಸ್ನಾದೇವಿ ಮಂದಿರ ಸೇರಿಕೊಂಡವ. ಕೊರೋನಾ ಲಾಕ್‌ಡೌನ್‌ಗಿಂತ ಮೊದಲು ಯಾರ‍್ಯಾರು  ಯಾವೆಲ್ಲ ಉದ್ಯೋಗದಲ್ಲಿದ್ದರೋ ಅವರಲ್ಲಿ ಅರ್ಧಾಂಶದಷ್ಟು ಮಂದಿ ಇವತ್ತು ನಿರುದ್ಯೋಗಿಗಳಾಗಿ ಕಷ್ಟಪಡುತ್ತಿದ್ದಾರೆ. ಮಾಧ್ಯಮ ಕ್ಷೇತ್ರ ದಿಂದ ತೊಡಗಿ ಶಿಕ್ಷಣ, ಕಾರ್ಪೊರೇಟ್ ಸಹಿತ ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗ ಕಡಿತ ಊಹಿಸದಷ್ಟು ಪ್ರಮಾಣದಲ್ಲಿ ನಡೆದಿದೆ. ತಮ್ಮ  ಉದ್ಯೋಗವನ್ನು ನಂಬಿಕೊಂಡು ಮನೆ, ವಾಹನ, ಜಾಗ ಇತ್ಯಾದಿಗಳಿಗಾಗಿ ಬ್ಯಾಂಕಿನಿಂದ ಸಾಲ ಪಡೆದವರು ಈ ಅನಿರೀಕ್ಷಿತ  ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ. ತಿಂಗಳು ತಿಂಗಳು ಕಟ್ಟಬೇಕಾದ ಇಎಂಐ ಭೂತ ಅವರನ್ನು ಪ್ರತಿದಿನವೂ ಕಾಡುತ್ತಿದೆ.  ಒಂದುರೀತಿಯಲ್ಲಿ ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಹರಡಲಾಗುತ್ತಿರುವ ಸುಳ್ಳುಗಳೇ ಜನರನ್ನು ಇನ್ನೂ ತಾಳ್ಮೆಯಿಂದಿರುವಂತೆ  ಮಾಡಿದೆ.  ಆರ್ಥಿಕ ಸ್ಥಿತಿಯ ಬಗ್ಗೆ ಮತ್ತು ದೇಶದ ಬಗ್ಗೆ ಪ್ರಭುತ್ವದ ಕಾಲಾಳುಗಳು ಹರಿಬಿಡುತ್ತಿರುವ ವೈಭವೀಕೃತ ಸುಳ್ಳುಗಳು ಜನರನ್ನು ಭ್ರಮಾಧೀ ನರನ್ನಾಗಿ ಮಾಡಿದೆ. ಒಂದುವೇಳೆ ಈ ಮಾಧ್ಯಮ ಇಲ್ಲದೇ ಹೋಗಿರುತ್ತಿದ್ದರೆ ಈಗಾಗಲೇ ಜನಾಕ್ರೋಶಕ್ಕೆ ದೇಶ ತತ್ತರಿಸಿ ಹೋಗಿರುತ್ತಿತ್ತು.  ದುರಂತ ಏನೆಂದರೆ,

ಈ ಎಲ್ಲ ಕುಸಿತಗಳ ನಡುವೆಯೂ ಮುಸ್ಲಿಮ್ ದ್ವೇಷವೆಂಬ ಕ್ರೌರ್ಯಭಾವದ ಅಭಿವೃದ್ಧಿಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವುದು.  ಅಂದಹಾಗೆ, ಒಂದು ವ್ಯವಸ್ಥಿತ ಸಂಚಿನ ಹೊರತು ಈ ದ್ವೇಷಭಾವವನ್ನು ಸಾರ್ವಜನಿಕವಾಗಿ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ನೀರು  ಕುಡಿದ ಬಾಲಕನನ್ನು ಸಂಚುಕೋರ ಎಂದು ಮಂದಿರ ಸಮಿತಿಯೇ ಹೇಳುತ್ತದೆಂದರೆ, ಏನೆಂದು ಹೇಳುವುದು? ನಿಜವಾಗಿ, ಸಂಚಿರುವುದು  ಆ ಬಾಲಕನಲ್ಲಲ್ಲ, ಆತನನ್ನು ಥಳಿಸಿದವನಲ್ಲಿ. ಹಾಗೆ ಥಳಿಸುವಂತೆ ಪ್ರಚೋದನೆ ನೀಡಿದವರಲ್ಲಿ ಮತ್ತು ಇಂಥ ಥಳಿತದಲ್ಲೇ  ತಮ್ಮ ಅಸ್ತಿತ್ವವಿದೆ  ಎಂದು ನಂಬಿಕೊಂಡವರಲ್ಲಿ.
ಹಿಂದೂಗಳನ್ನು ಮುಸ್ಲಿಮರು ಮತ್ತು ಮುಸ್ಲಿಮರನ್ನು ಹಿಂದೂಗಳು ಸದಾ ದ್ವೇಷಿಸುತ್ತಾ ಬದುಕಬೇಕೆಂದು ಯಾವುದೇ ಪ್ರಭುತ್ವ  ಬಯಸುವುದಾದರೆ, ಅದಕ್ಕೆ ಎರಡು ಕಾರಣಗಳಿವೆ.
 1. ದೀರ್ಘಕಾಲೀನ ರಾಜಕೀಯ ಅಧಿಕಾರದ ಬಯಕೆ.
 2. ಸರಕಾರಿ ವೈಫಲ್ಯವನ್ನು  ಮುಚ್ಚಿಡುವುದು. 
ಸದ್ಯದ ವಾತಾವರಣ ಈ ಎರಡನ್ನೂ ಸಮರ್ಥಿಸುವಂತಿದೆ. ದೇಶದ ಆರ್ಥಿಕ ಸ್ಥಿತಿ ಕುಸಿದು ಹೋಗಿದೆ. ಇನ್ನೊಂದೆಡೆ  ಅಧಿಕಾರವನ್ನು ಬಿಟ್ಟು ಕೊಡುವುದಕ್ಕೆ ಈಗಿನ ಪ್ರಭುತ್ವಕ್ಕೆ ಸುತಾರಾಂ ಇಷ್ಟವಿಲ್ಲ. ಹಾಗಂತ, ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕೆ ಇರುವ  ಪ್ರಾಮಾಣಿಕ ದಾರಿಯೆಂದರೆ ಅಭಿವೃದ್ಧಿ. ಜನರಿಗೆ ನೆಮ್ಮದಿಯ ಬದುಕನ್ನು ನೀಡುವುದರಿಂದ ಜನರು ಮತ್ತೆ ಅದೇ ಸರಕಾರವನ್ನು  ಆರಿಸುತ್ತಾರೆಂಬುದು ವಾಡಿಕೆ. ಆದರೆ, ಸೌಖ್ಯ ರಾಷ್ಟ್ರವನ್ನು ಕಟ್ಟುವಲ್ಲಿ ಯಾವುದೇ ಪ್ರಭುತ್ವ ವಿಫಲವಾದರೆ ಅದು ಏನು ಮಾಡಬಹುದು?  ಈ ಪ್ರಶ್ನೆಗೆ ಉತ್ತರವೇ ದ್ವೇಷ. ಜನರು ಈ ವೈಫಲ್ಯವನ್ನು ಚರ್ಚಿಸದಂತೆ ನೋಡಿಕೊಳ್ಳುವುದು. ಇದು ಸಾಧ್ಯವಾಗಬೇಕೆಂದರೆ, ಜನರನ್ನು  ಧಾರ್ಮಿಕವಾಗಿ ವಿಭಜಿಸುವುದು. ಅವರ ನಡುವೆ ಅನುಮಾನ, ಸಂದೇಹ, ದ್ವೇಷಭಾವವನ್ನು ಬಿತ್ತುವುದು ಮತ್ತು ತನ್ನನ್ನು ಧರ್ಮೋದ್ಧಾರಕ  ಎಂದು ಬಿಂಬಿಸಿಕೊಂಡು  ಹುಸಿ ವರ್ಚಸ್ಸನ್ನು ಸೃಷ್ಟಿಸಿಕೊಳ್ಳುವುದು. ಧರ್ಮ ಅಪಾಯದಲ್ಲಿದೆ ಎಂದು ನಂಬಿಸಿಬಿಟ್ಟು ಅದುವೇ ದಿನೇ ದಿನೇ  ಚರ್ಚೆಯಾಗುವಂತೆ ನೋಡಿಕೊಳ್ಳುವುದು. ಇದು ಯಶಸ್ವಿಯಾದರೆ ಆ ಬಳಿಕ ಅದು ಅಫೀಮಿನಂತೆ ಜನರನ್ನು ಭ್ರಮೆಯಲ್ಲಿ ತೇಲಿಸಿ  ಬಿಡುತ್ತದೆ. ಪ್ರತಿ ಘಟನೆಯೂ ಧರ್ಮದ ದೃಷ್ಟಿಯಲ್ಲಿ ಚರ್ಚೆಗೊಳಗಾಗುತ್ತದೆ. ಪ್ರಭುತ್ವವನ್ನು ವಿಮರ್ಶಿಸುವ ಯಾವ ಬರಹ, ಭಾಷಣ,  ಕತೆಗಳೂ ಧರ್ಮವಿರೋಧಿಯೆಂದೋ ಸಂಚೆಂದೊ  ಗುರುತಿಸಲ್ಪಟ್ಟು ಧರ್ಮ ಧ್ರುವೀಕರಣಕ್ಕೆ ಮತ್ತಷ್ಟು ಶಕ್ತಿ ತುಂಬುತ್ತದೆ. ಸದ್ಯ  ನಡೆಯುತ್ತಿರುವುದೂ ಇದುವೇ. ನಿಜವಾಗಿ,

ದಾಸ್ನಾದೇವಿ ಮಂದಿರವು ಆ ಬಾಲಕನ ಪರ ನಿಲ್ಲಬೇಕಿತ್ತು. ಮಂದಿರದ ಒಳಗಡೆ ಇರುವ ನೀರಿನ ಟ್ಯಾಪನ್ನು ಮಂದಿರದ ಹೊರಗಡೆಗೂ  ವಿಸ್ತರಿಸಿ ನೀರು ಎಲ್ಲರಿಗಾಗಿ ಎಂದು ಘೋಷಿಸಬೇಕಿತ್ತು. ಶೃಂಗಿ ಯಾದವ್‌ನನ್ನು ಮಂದಿರದಿಂದ  ಹೊರಹಾಕಿ ಪ್ರತೀಕಾರ ತೀರಿಸಬೇಕಿತ್ತು.  ಆಸಿಫ್ ಕುಟುಂಬವನ್ನು ಮಂದಿರಕ್ಕೆ ಕರೆದು ವಿಶ್ವಾಸ ತುಂಬಬೇಕಿತ್ತು. ಆದರೆ ಇವಾವುವೂ ಆಗಿಲ್ಲ ಎಂಬುದಕ್ಕೆ ವಿಷಾದವಿದೆ.

Monday 15 March 2021

ಆಯಿಷಾ: ಚರ್ಚೆಗೆ ಎತ್ತಿಕೊಳ್ಳಬೇಕಾದ್ದು ಯಾವುದನ್ನು?



ಅಹ್ಮದಾಬಾದ್‌ನ ಆಯಿಷಾ ಎಂಬ ಯುವತಿಯ ಆತ್ಮಹತ್ಯೆಯು ಮುಸ್ಲಿಮ್ ಸಮುದಾಯದ ಒಳಗೆ ಚರ್ಚಿತವಾಗುತ್ತಿದೆ. ಇಬ್ಬರು  ವ್ಯಕ್ತಿಗಳು ಪರಸ್ಪರ ಭೇಟಿಯಾದಾಗ, ಸಮುದಾಯದ ಮಂದಿ ಒಂದೆಡೆ ಕಲೆತಾಗ ಪ್ರಸ್ತಾಪವಾಗುವಷ್ಟು ಆ ಘಟನೆ ಸಮುದಾಯದ  ಮೇಲೆ ಪರಿಣಾಮ ಬೀರಿದೆ. ಉತ್ತರ ಪ್ರದೇಶದ ಅಗ್ರಾದ ವಿದ್ವಾಂಸರು ಮತ್ತು ಮುಸ್ಲಿಮರು ಈ ಕೆಡುಕಿನ ವಿರುದ್ಧ ಸಮರ ಸಾರುವ  ಪ್ರತಿಜ್ಞೆ ಮಾಡಿದ್ದಾರೆ. ಅಷ್ಟಕ್ಕೂ,
ವರದಕ್ಷಿಣೆ ಎಂಬುದು ಮುಸ್ಲಿಮ್ ಸಮುದಾಯಕ್ಕೆ ಅಪರಿಚಿತ ಪದ ಅಲ್ಲ. ಇಂಥ ಪದ ಭಾರತೀಯ ಮುಸ್ಲಿಮರಿಗೆ ಪರಿಚಿತವಾಗಿ  ಹಲವು ದಶಕಗಳೇ ಕಳೆದಿವೆ. ಆಯಿಷಾರಂಥ ಹಲವು ಜೀವಗಳು ಈ ಕೆಡುಕಿಗೆ ಬಲಿಯಾಗಿವೆ. ಆಯಿಷಾ ಸ್ವತಃ ತನ್ನ ಬದುಕನ್ನು  ಕೈಯಾರೆ ಮುಗಿಸಿಕೊಂಡರೆ, ಇನ್ನಷ್ಟು ಆಯಿಷಾರು ಪತಿ ಮನೆಯವರ ಸೀಮೆ ಎಣ್ಣೆಗೋ, ವಂಚನೆಯ ಹತ್ಯೆಗೋ ಬಲಿಯಾಗಿದ್ದಾರೆ.  ಈ ಕೆಡುಕಿಗೆ ಸಿಲುಕಿ ಕಣ್ಣೀರಾದ ಹೆತ್ತವರ ಸಂಖ್ಯೆ ಅಗಾಧವಿದೆ. ಇದೀಗ ಅಹ್ಮದಾಬಾದ್‌ನ ಆಯಿಷಾ ಈ ಪಿಡುಗಿನ ಕುರಿತಂತೆ ನಮ್ಮ  ಪ್ರಜ್ಞೆಯನ್ನು ಮತ್ತೊಮ್ಮೆ ಕೆದಕಿದ್ದಾರೆ. ಅಷ್ಟಕ್ಕೂ,
ಓರ್ವ ಹೆಣ್ಣು ಮಗಳ ಮತ್ತು ಆಕೆಯ ಹೆತ್ತವರ ಸಂಕಟವನ್ನು ಗಂಭೀರವಾಗಿ ಪರಿಗಣಿಸುವುದಕ್ಕೆ ಬಲಿಯೊಂದರ ಅಗತ್ಯವಿತ್ತೇ ಎಂಬ  ಪ್ರಶ್ನೆ ಗಮನಾರ್ಹ. ಇದೇ ಸಂದರ್ಭದಲ್ಲಿ ಪ್ರತಿ ಪ್ರಶ್ನೆಯೂ ಮೂಡುತ್ತದೆ. ಆಕೆ ಹಾಗೆ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳದೇ  ಹೋಗಿರುತ್ತಿದ್ದರೆ ವರದಕ್ಷಿಣೆಯ ಕುರಿತಂತೆ ಮುಸ್ಲಿಮ್ ಸಮುದಾಯದಲ್ಲಿ ಕಂಡು ಬಂದಿರುವ ಇವತ್ತಿನ ತಲ್ಲಣ ಮತ್ತು ಸಂಕಟ  ವ್ಯಕ್ತವಾಗುವುದಕ್ಕೆ ಸಾಧ್ಯವಿತ್ತೇ? ಹಾಗಂತ, ಆಕೆಗೆ ಆತ್ಮಹತ್ಯೆಗೆ ಹೊರತಾದ ಇನ್ನಷ್ಟು ದಾರಿಗಳಿದ್ದುವು ಎಂಬ ಸಮರ್ಥನೆಗೆ ಅರ್ಥವಿದೆ.  ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದಿತ್ತು. ಮಸೀದಿ ಕಮಿಟಿಯನ್ನು ಸಂಪರ್ಕಿಸಿ ಪರಿಹಾರ ಕೋರಬಹುದಿತ್ತು. ಮತ್ತೂ  ಪರಿಹಾರ ಕಾಣಲಿಲ್ಲವೆಂದರೆ ಹಣದಾಹದ ಪತಿಯಿಂದ ಖುಲಾ ಕೇಳಬಹುದಿತ್ತು ಮತ್ತು ಆತ ಅದಕ್ಕೂ ನಿರಾಕರಿಸಿದರೆ ಫಸ್ಕ್  ಮಾಡಿಕೊಳ್ಳಬಹುದಿತ್ತು. ಆತ್ಮಹತ್ಯೆಯನ್ನು ಪಾಪ ಎಂದು ಪರಿಗಣಿಸುವ ಧರ್ಮದ ಹೆಣ್ಣೊಬ್ಬಳ ಆತ್ಮಹತ್ಯೆಯು ತಪ್ಪಾದ ಆಯ್ಕೆಯತ್ತ  ಇತರರನ್ನು ಪ್ರಚೋದಿಸಬಹುದು ಎಂಬ ಆತಂಕದಲ್ಲಿ ಕಾಳಜಿಯೂ ಇದೆ.
ಇವೆಲ್ಲ ಒಪ್ಪಿತವೇ ಆದರೆ,
ಎರಡ್ಮೂರು ದಶಕಗಳ ಹಿಂದಿನ ಸಾಮಾಜಿಕ ವಾತಾವರಣಕ್ಕೂ ಇಂದಿಗೂ ಆನೆ-ಇಲಿಯಷ್ಟು ವ್ಯತ್ಯಾಸವಿದೆ. ಈ ಹಿಂದಿನ ಕಾಲದಲ್ಲೂ  ವರದಕ್ಷಿಣೆ ಇತ್ತು ಮತ್ತು ಸಾಮಾಜಿಕ ಸಂಯಮವೂ ಇತ್ತು. ಶೈಕ್ಷಣಿಕವಾಗಿ ಹೆಣ್ಮಕ್ಕಳು ಹಿಂದುಳಿದಿದ್ದರು. ಸಕಲ ಸಂಕಷ್ಟಗಳನ್ನೂ  ಹಿಂಸೆ, ಅವಮಾನಗಳನ್ನೂ ಅವುಡುಗಟ್ಟಿ ಸಹಿಸಿಕೊಳ್ಳುವ ಅಪಾರ ಸಂಯಮ ಅವರಲ್ಲಿತ್ತು. ಶಿಕ್ಷಣ ವಂಚಿತರಾಗಿದ್ದ ಹೆಣ್ಮಕ್ಕಳಲ್ಲಿ  ಪ್ರಶ್ನಿಸುವ ಧೈರ್ಯವೂ ಕಡಿಮೆ ಇತ್ತು. ಇಷ್ಟಿದ್ದೂ, ಆ ಕಾಲದಲ್ಲಿ ಪ್ರಶ್ನಿಸಿದ ಹೆಣ್ಮಕ್ಕಳಿದ್ದಾರೆ. ಅವರ ಸಂಖ್ಯೆ ಅಪರೂಪದ್ದಾಗಿದ್ದರೂ  ಅವರ ಪ್ರಶ್ನೆಯು ಆ ಬಳಿಕ ಸಮುದಾಯದಲ್ಲಿ ವರದಕ್ಷಿಣೆ ವಿರೋಧಿ ಅಭಿಯಾನದಂಥ ಸಾಮಾಜಿಕ ಕ್ರಾಂತಿಗೂ ಕಾರಣವಾಗಿದೆ.  ಇದೊಂದು ಹಂತ. ಈ ಹಂತವನ್ನು ಗಮನದಲ್ಲಿಟ್ಟುಕೊಂಡೇ ಈಗಿನ ಬೆಳವಣಿಗೆಯನ್ನು ನಾವು ಪರಾಮರ್ಶೆಗೆ ಒಡ್ಡಬೇಕು.
ಇದು ಮಾಧ್ಯಮ ಕ್ರಾಂತಿಯ ಕಾಲ. ಬೆರಳಿನ ತುದಿಯಲ್ಲೇ  ಇವತ್ತು ಎಲ್ಲವೂ ಇದೆ. ಮಾನವ ಸಹಜವಾಗಿ ಇರಬೇಕಾದ  ಸಂಯಮವನ್ನು ಬಹುತೇಕ ಧರಾಶಾಹಿಗೊಳಿಸಿದ್ದೇ  ಇಂದಿನ ಮಾಧ್ಯಮ ಕ್ರಾಂತಿ. ಮೊಬೈಲ್ ಎಂಬುದು ಚಟವಾಗಿ ಬಿಟ್ಟಿದೆ.  ಪ್ರತಿಯೊಬ್ಬರಿಗೂ ಐಡೆಂಟಿಟಿಯನ್ನು ಕೊಡಮಾಡಬಲ್ಲ ಶಕ್ತಿ ಇದಕ್ಕಿದೆ. ತನಗೇನು ಹೇಳಬೇಕು, ಯಾರೊಂದಿಗೆ ಹೇಳಬೇಕು, ಎಷ್ಟು  ಹೇಳಬೇಕು, ಹೇಗೆ ಹೇಳಬೇಕು ಇತ್ಯಾದಿಗಳನ್ನು ನಿರ್ಬಿಢೆಯಿಂದ ತೀರ್ಮಾನಿಸಿ ಅದನ್ನು ವ್ಯಕ್ತಗೊಳಿಸುವುದಕ್ಕೆ ಇವತ್ತು ಕಷ್ಟವಲ್ಲ.  ಆಯಿಷಾಳಂತೆ ಕಷ್ಟಪಟ್ಟವರು ಎರಡ್ಮೂರು ದಶಕಗಳ ಹಿಂದೆ ಖಂಡಿತ ಇದ್ದಿರಬಹುದು. ಆದರೆ, ಅವರಾರೂ ನಮ್ಮ ಗಮನದಲ್ಲಿರದೇ  ಇರಲು ಏಕೈಕ ಕಾರಣ- ಆಯಿಷಾಳಲ್ಲಿದ್ದಂತಹ ಸಂವಹನ ಮಾಧ್ಯಮ ಅವರಲ್ಲಿದ್ದಿರಲಿಲ್ಲ ಎಂಬುದು ಮಾತ್ರ. ಇದೇವೇಳೆ,
ಈ ಸಂವಹನ ಮಾಧ್ಯಮವು ಆಯಿಷಾರಂಥ ಕೋಟ್ಯಂತರ ಮಂದಿಯಿಂದ  ಸಹನೆಯೆಂಬ ಬಹುಮೂಲ್ಯ ಶಕ್ತಿಯನ್ನೂ  ಕಸಿದುಕೊಂಡಿದೆ. ಇವತ್ತಿನ ಪೀಳಿಗೆಗೆ ದೀರ್ಘ ಲೇಖನವೋ ಭಾಷಣವೋ ಪ್ರಬಂಧವೋ ಬೋರು ಬೋರು. ಅಂಥದ್ದನ್ನು ಮೆಚ್ಚದ  ಒಂದು ಪೀಳಿಗೆ ಇವತ್ತು ತಯಾರಾಗಿದ್ದರೆ ಅದರ ಹಿಂದೆ ಈ ಮೊಬೈಲು ಕೆಲಸ ಮಾಡಿದೆ. ಯುವ ಪೀಳಿಗೆಯಿಂದ ಸಂಯಮವನ್ನೇ  ಕಸಿದುಕೊಂಡು ಆ ಜಾಗದಲ್ಲಿ ಅಸಹನೆಯನ್ನು ಊರಿದೆ. ವಿವೇಚನೆಯಿಲ್ಲದೇ ನಿರ್ಧಾರ ಕೈಗೊಳ್ಳುವ, ಪ್ರತಿಕ್ರಿಯಿಸುವ, ಧುಮುಕುವ  ಪೀಳಿಗೆಯನ್ನು ತಯಾರು ಅದು ಮಾಡಿದೆ. ಆಯಿಷಾಳ ನಿರ್ಧಾರದಲ್ಲಿ ಇಂಥದ್ದೊಂದು ಸಾಧ್ಯತೆಯನ್ನು ಅಲ್ಲಗಳೆಯಲಾಗದು.  ಆತ್ಮಹತ್ಯೆಗಿಂತ ಹೊರತಾದ ಹಲವು ದಾರಿಗಳು ಮುಕ್ತವಾಗಿದ್ದರೂ ಆಕೆ ಅವನ್ನು ಆಯ್ಕೆ ಮಾಡಿಕೊಳ್ಳದೇ ಇರುವುದರಲ್ಲಿ ಈ  ಸಂಯಮರಾಹಿತ್ವಕ್ಕೆ ಪಾಲು ಇರಬಹುದು. ಹಾಗಂತ,
ಆತ್ಮಹತ್ಯೆಯನ್ನು ಉಲ್ಲೇಖಿಸಿಕೊಂಡು ಆಕೆ ಎತ್ತಿರುವ ಪ್ರಶ್ನೆ ಮತ್ತು ರವಾನಿಸಿರುವ ಸಂದೇಶವನ್ನು ನಗಣ್ಯವಾಗಿ ಕಾಣುವುದು  ಅತಿದೊಡ್ಡ ಪಾಪವಾಗಬಹುದು. ಆಕೆ ಪ್ರತಿಭಟನೆಯೊಂದನ್ನು ಸಲ್ಲಿಸಿ ಹೋಗಿದ್ದಾಳೆ. ಅದಕ್ಕಾಗಿ ಆಕೆ ಆಯ್ಕೆ ಮಾಡಿಕೊಂಡಿರುವ ದಾರಿ  ಸರಿಯೋ ತಪ್ಪೋ ಎಂಬುದರ ಆಚೆಗೆ ಆಕೆ ಎತ್ತಿರುವ ಪ್ರಶ್ನೆ ಸಮುದಾಯದಲ್ಲಿ ಚರ್ಚೆಗೊಳಗಾಗಬೇಕು. ಇಸ್ಲಾಮಿನಲ್ಲಿ ಅತಿ  ವಿಶಿಷ್ಟವಾದ ಮತ್ತು ಮಹಿಳಾ ಪರವಾದ ವಧುದನ ಎಂಬ ನಿಯಮವೊಂದಿದೆ ಎಂದು ವಾದಿಸುವುದರಿಂದ ‘ವಧು’ವಿನ ಸಂಕಟ  ಕೊನೆಯಾಗಲಾರದು. ನಿಯಮವೊಂದು ಜನಪರವೋ ಜನದ್ರೋಹಿಯೋ ಆಗುವುದು ಅದು ಕಟ್ಟುನಿಟ್ಟಾಗಿ ಜಾರಿಗೊಂಡಾಗ.  ವಧುಧನ ಅಥವಾ ಮಹ್ರ್ ವಧುವಿನ ಸೊತ್ತು. ವಧುವಿಗೆ ಈ ಮೊತ್ತವನ್ನು ಪಾವತಿಸುವ ಮೂಲಕ ವರನು ಆ ವಧುವನ್ನು ಜೋ ಪಾನವಾಗಿ ನೋಡಿಕೊಳ್ಳುವ, ಆಕೆಯ ಸಕಲ ಹಕ್ಕುಗಳನ್ನು ಗೌರವಿಸುವ ಮತ್ತು ತವರು ಮನೆಯಲ್ಲಿ ಏನೆಲ್ಲ ಸವಲತ್ತುಗಳಿದ್ದುವೋ  ಅವೆಲ್ಲವನ್ನೂ ತನ್ನ ಮನೆಯಲ್ಲೂ ಆಕೆಗೆ ಒದಗಿಸುವ ಪ್ರತಿಜ್ಞೆಯನ್ನು ಮಾಡುತ್ತಾನೆ. ಇದೊಂದು ಬಲವಾದ ಕರಾರು. ಓರ್ವನು ತನ್ನ  ನಿಕಾಹ್‌ಗಿಂತ ಮೊದಲೇ ಈ ಮಹ್ರನ್ನು ತನ್ನ ವಧುವಿಗೆ ತಿಳಿಸಬೇಕು. ಅದನ್ನು ಪುರಸ್ಕರಿಸುವ ಮತ್ತು ತಿರಸ್ಕರಿಸುವ ಸ್ವಾತಂತ್ರ‍್ಯ  ಅವಳದ್ದು. ಆದರೆ,
ಇವತ್ತು ಮಹ್ರ್ ಪರಿಕಲ್ಪನೆ ದುರ್ಬಲವಾಗಿ ವರದಕ್ಷಿಣೆ ಬಲ ಪಡೆದಿರುವುದಕ್ಕೆ ಧಾರ್ಮಿಕ ಅಜ್ಞಾನವೊಂದೇ ಕಾರಣ ಅಲ್ಲ, ಧಾರ್ಮಿಕ  ವಿದ್ವಾಂಸರ ಅಖಚಿತ ನಿಲುವುಗಳಿಗೂ ಈ ಪಾಪದಲ್ಲಿ ಪಾಲಿದೆ. ವರದಕ್ಷಿಣೆಯನ್ನು ಖಂಡಿಸುವ ಮತ್ತು ವರದಕ್ಷಿಣೆಯ ಮದುವೆಯಲ್ಲಿ  ಪಾಲ್ಗೊಳ್ಳದೇ ಇರುವ ನಿಷ್ಠುರ ನಿಲುವನ್ನು ವಿದ್ವಾಂಸ ವಲಯ ಒಕ್ಕೊರಳಿನಿಂದ ಕೈಗೊಳ್ಳುತ್ತಿದ್ದರೆ ಈ ಪಿಡುಗು ಈ ಮಟ್ಟದಲ್ಲಿ  ಬೆಳೆಯಲು ಸಾಧ್ಯವಿರುತ್ತಿರಲಿಲ್ಲ. ಮಸೀದಿ ಕಮಿಟಿಗಳ ನಿರ್ಲಕ್ಷ್ಯ  ಧೋರಣೆಗೂ ಈ ಪಾಪದಲ್ಲಿ ಪಾಲಿದೆ. ಸದ್ಯ ಸಮುದಾಯದ ಗುರಿ  ಏನೆಂದರೆ, ಆಗಿಹೋದ ಪಾಪಗಳಿಗೆ ದೇವನಲ್ಲಿ ಕ್ಷಮೆ ಯಾಚಿಸುತ್ತಾ ವರದಕ್ಷಿಣೆಯ ವಿರುದ್ಧ ಕಠಿಣ ನಿಲುವನ್ನು ಪ್ರತಿ ಮಸೀದಿಯ  ವಿದ್ವಾಂಸರೂ ಕೈಗೊಳ್ಳುವುದು.
ವರದಕ್ಷಿಣೆಯನ್ನು ಇವತ್ತು ನೇರವಾಗಿ ಕೇಳುವ ಪದ್ಧತಿಯಿಲ್ಲ. ನನ್ನ ಮಗಳಿಗೆ ಇಷ್ಟು ಚಿನ್ನ ಹಾಕಿರುವೆ ಅಥವಾ ನನ್ನ ಮಗನಿಗೆ  ಇಂತಿಂಥ  ಕಾರು ಇಷ್ಟ ಎಂಬಲ್ಲಿಂದ  ಹಿಡಿದು ಬೇರೆ ಬೇರೆ ಪರೋಕ್ಷ  ರೂಪದಲ್ಲಿ ಅದು ಜಾರಿಯಲ್ಲಿದೆ. ಇಂಥ ಸರ್ವ ಪಿಡುಗಿನ  ವಿರುದ್ಧವೂ ಪ್ರಬಲ ಹೋರಾಟ ಸಂಘಟಿಸಬೇಕಾದುದು ಬಹು ಅಗತ್ಯ. ಆಗಿ ಹೋದ ತಪ್ಪುಗಳನ್ನು ಮತ್ತೆ ಮತ್ತೆ ಕೆದಕುತ್ತಾ  ಗಾಯವನ್ನು ವ್ರಣವಾಗಿಸುವುದಕ್ಕಿಂತ ಮುಂದಿನ ದಿನಗಳ ಕಡೆಗೆ ಸಕಾರಾತ್ಮಕವಾಗಿ ಚಿಂತಿಸುವುದೇ ಇಂದಿನ ಅನಿವಾರ್ಯತೆ. ತಪ್ಪು  ಮಾನವ ಸಹಜ. ಅದರಲ್ಲಿ ಗಟ್ಟಿಯಾಗಿ ನಿಲ್ಲುವುದಷ್ಟೇ ಕ್ರೌರ್ಯ.
ಆಯಿಷಾಳ ಕೃತ್ಯವನ್ನು ವಿಮರ್ಶಿಸುವುದಕ್ಕಾಗಿ ನಮ್ಮ ಸಮಯ, ಧಾರ್ಮಿಕ ಜ್ಞಾನ, ಮೊಬೈಲ್ ಜಿಬಿಯನ್ನು ವ್ಯಯಿಸುವುದಕ್ಕಿಂತ ಆಕೆ  ಎತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ವ್ಯಯಿಸಿದರೆ ಸಮುದಾಯದ ಹೆಣ್ಮಕ್ಕಳ ಮತ್ತು ಹೆಣ್ಣು ಹೆತ್ತವರ ಪ್ರಾರ್ಥನೆ  ನಮ್ಮ ಮೇಲಿದ್ದೀತು.

Tuesday 9 March 2021

ಜನಾಕ್ರೋಶಕ್ಕೆ ಕೊಚ್ಚಿ ಹೋಗಿರುವ ಕತೆಗಳ ನಡುವೆ...



ಸನ್ಮಾರ್ಗ ವಾರ್ತೆ 

ಸನ್ಮಾರ್ಗ ಸಂಪಾದಕೀಯ 

ಮಾರಾಟಕ್ಕೆಂದು ಸಂತೆಗೆ ತಂದಿದ್ದ ಹೋರಿಗಳನ್ನು ಯಾರೂ ಖರೀದಿಸದಿರುವುದರಿಂದ ಹತಾಶರಾದ ರೈತರು ಅವುಗಳನ್ನು  ಸಂತೆಯಲ್ಲೇ  ಬಿಟ್ಟು ಹೋದ ಸುದ್ದಿಯನ್ನು ಜನವರಿ 23ರ ಪ್ರಜಾವಾಣಿ ವೆಬ್ ಆವೃತ್ತಿಯಲ್ಲಿ ಚಿತ್ರಸಹಿತ ಪ್ರಕಟಿಸಲಾಗಿತ್ತು. ಘಟನೆ  ನಡೆದುದು ಹಾಸನದ ಸಮೀಪ. ಜನವರಿ 24ರಂದು ವಾರ್ತಾಭಾರತಿ ಪತ್ರಿಕೆಯಲ್ಲಿ ಮಾಹಿತಿಪೂರ್ಣ ಬರಹವೊಂದು ಪ್ರಕಟವಾಗಿತ್ತು.  ಬೆಂಗಳೂರಿನಲ್ಲಿರುವ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯಲ್ಲಿ ದಾಖಲೀಕರಣ ಮಾಡುವ ಶ್ರೀನಿವಾಸ್  ಕೆ. ಎಂಬವರು ಈ ಬರಹವನ್ನು ಬರೆದಿದ್ದರು. ಅವರ ಪ್ರಕಾರ,
ಗೋಹತ್ಯೆ ನಿಷೇಧದಿಂದ ಮೃಗಾಲಯಗಳಿಗೆ ಆಹಾರದ ಅಭಾವ ತೀವ್ರ ರೂಪದಲ್ಲಿ ತಟ್ಟಲಿದೆ. ರಾಜ್ಯದಲ್ಲಿ 10ಕ್ಕೂ ಅಧಿಕ  ಮೃಗಾಲಯಗಳಿವೆ. ರಾಜ್ಯದಲ್ಲಿ 1,783 ಚಿರತೆಗಳಿವೆ. ಚಾಮರಾಜೇಂದ್ರ ಮೃಗಾಲಯ ಮತ್ತು ಬನ್ನೇರುಘಟ್ಟ ಮೃಗಾಲಯಗಳು ದೇಶದಲ್ಲೇ  ಪ್ರಸಿದ್ಧವಾಗಿದ್ದು, ರಾಜ್ಯದ ಬೊಕ್ಕಸಕ್ಕೆ ಪ್ರವಾಸೋದ್ಯಮದ ಮೂಲಕ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.  ಚಾಮರಾಜೇಂದ್ರ ಮೃಗಾಲಯಕ್ಕೆ ಪ್ರತಿದಿನ 350 ಕೆಜಿಯಷ್ಟು ಗೋಮಾಂಸ ಸರಬರಾಜಾಗುತ್ತಿದ್ದು ಬನ್ನೇರುಘಟ್ಟ ಉದ್ಯಾನವನಕ್ಕೆ  1300 ಕೆಜಿ ಗೋಮಾಂಸ ಸರಬರಾಜಾಗುತ್ತಿದೆ. ಬನ್ನೇರುಘಟ್ಟ ಉದ್ಯಾನವನದಲ್ಲಿ 100 ಸಿಂಹಗಳು, 41 ಹುಲಿಗಳು ಮತ್ತು 30  ಚಿರತೆಗಳಿವೆ. ಚಾಮರಾಜೇಂದ್ರ ಮೃಗಾಲಯದಲ್ಲಿ 25 ಸಿಂಹ, 50 ಹುಲಿ ಮತ್ತು 100 ಚಿರತೆಗಳಿವೆ. ಹಾಗೆಯೇ ಗೊಡ್ಡು ಮೇಕೆ,  ಕುರಿಗಳ ಮಾಂಸವನ್ನು ಅಥವಾ ಕೋಳಿ ಮಾಂಸವನ್ನು ಈ ಪ್ರಾಣಿಗಳಿಗೆ ನೀಡಿದರೆ ಕಾಲು-ಬಾಯಿ ರೋಗಕ್ಕೆ ಕಾರಣವಾಗಬಹುದು  ಎನ್ನಲಾಗಿದೆ. ಒಂದುವೇಳೆ,
ಈ ಗೋಹತ್ಯೆ ನಿಷೇಧ ಕ್ರಮವನ್ನು ಇಡೀ ದೇಶಕ್ಕೆ ಅನ್ವಯಿಸಿದರೆ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ದೇಶದಲ್ಲಿ 190ರಷ್ಟು  ಮೃಗಾಲಯಗಳಿವೆ. ಹಾಗೆಯೇ 2019ರ ಗಣತಿಯಂತೆ ಈ ದೇಶದಲ್ಲಿ 2,967 ಹುಲಿಗಳಿವೆ. ಚಿರತೆಗಳ ಸಂಖ್ಯೆ 12,852. ಸಿಂಹಗಳು  674ರಷ್ಟಿವೆ. ಇನ್ನು, ಗೋವನ್ನು ವಧಿಸುವುದು ಕೇವಲ ಆಹಾರಕ್ಕಾಗಿ ಮಾತ್ರ ಎಂದು ಭಾವಿಸಬೇಡಿ. ವಧಿಸುವ ಗೋವು ಸಹಿತ ಜಾ ನುವಾರುಗಳ ಪೈಕಿ 50%ದಷ್ಟು ಅಂಶವು ಆಹಾರಕ್ಕಾಗಿ ಬಳಕೆಯಾದರೆ, ಇನ್ನರ್ಧ ಅಂಶವು ಸಕ್ಕರೆ ತಯಾರಿಸಲು, ಐಷಾರಾಮಿ  ಕಾರುಗಳ ಸೀಟು ತಯಾರಿಸಲು, ಚಪ್ಪಲಿಗಳು, ಬ್ಯಾಗುಗಳು, ಬೆಲ್ಟ್ ಸಹಿತ ಅನೇಕಾರು ವಸ್ತುಗಳ ತಯಾರಿಕೆಗೆ ಬಳಕೆಯಾಗುತ್ತದೆ.  ರಾಜ್ಯದಲ್ಲಿ ಇದೀಗ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದಿರುವುದರಿAದ ಇದನ್ನೇ ವೃತ್ತಿಯಾಗಿಸಿಕೊಂಡ ಸುಮಾರು 40  ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಸಮಸ್ಯೆಯಾಗಲಿದೆ. ಅಂದಹಾಗೆ,
ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಗೆ ಬಂದಿರುವುದು ಇದು ಮೊದಲೇನಲ್ಲ. ಈಗಿನ ಕಾಯ್ದೆಯು ಈಗಾಗಲೇ ಇದ್ದ  1964ರ ಕಾಯ್ದೆಗೆ ಬೇರೆಯದೇ ಸ್ವರೂಪವನ್ನಷ್ಟೇ ನೀಡಿದೆ. ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ 1964ರಂತೆ ಎತ್ತು ಮತ್ತು  ಕೋಣಗಳನ್ನು ವಧಿಸುವುದಕ್ಕೆ ನಿರ್ಬಂಧ ಇರಲಿಲ್ಲ. ಅಲ್ಲದೇ 12 ವರ್ಷಕ್ಕಿಂತ ಮೇಲಿನ ಗೊಡ್ಡು ಹಸುಗಳನ್ನು ವಧಿಸುವುದಕ್ಕೆ ಅ ನುಮತಿ ಇತ್ತು. ಆದರೆ 2020ರ ಗೋಹತ್ಯೆ ನಿಷೇಧ ಕಾಯ್ದೆಯು ಈ ಎಲ್ಲ ಅವಕಾಶಕ್ಕೂ ತೆರೆ ಎಳೆದಿದೆ. ಯಾರಾದರೂ ಈ  ಕಾಯ್ದೆಯನ್ನು ಉಲ್ಲಂಘಿಸಿದರೆ 7 ವರ್ಷಗಳ ವರೆಗೆ ಜೈಲುವಾಸ ಮತ್ತು 5 ಲಕ್ಷ ರೂಪಾಯಿಯಷ್ಟು ದಂಡ ವಿಧಿಸುವುದಕ್ಕೆ ಅವಕಾಶ  ಇದೆ. ಗೋರಕ್ಷಕರಿಗೆ ರಕ್ಷಣೆಯನ್ನು ಕೊಡುವ ಸೂಚನೆ ಇದೆ. ಈ ಕಾಯ್ದೆಯನ್ನು ಜಾರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವ  ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ‍್ಯವನ್ನು ನೀಡಲಾಗಿದೆ. ನಿಜವಾಗಿ,
ಗೋಹತ್ಯೆ ನಿಷೇಧ ಕಾಯ್ದೆಯನ್ನು ಮೊದಲಾಗಿ ಜಾರಿಗೆ ತಂದಿರುವುದು ಯಡಿಯೂರಪ್ಪ ಸರ್ಕಾರ ಅಲ್ಲ. ಈ ಮೊದಲೇ  ಅಂಥದ್ದೊಂದು ಕಾಯ್ದೆಯೊಂದಿತ್ತು. ಆ ಕಾಯ್ದೆಯು ರೈತರಿಗೆ, ಹೈನುದ್ಯಮಿಗಳಿಗೆ ಮತ್ತು ಮೃಗಾಲಯದ ಪ್ರಾಣಿಗಳಿಗೆ  ಪೂರಕವಾಗಿತ್ತು. ಉಳುಮೆಗೆ ಬಾರದ ಎತ್ತುಗಳು ಮತ್ತು ಹಾಲು ನೀಡದ ಹಸುಗಳನ್ನು ಮಾರಿ, ಆ ಮೂಲಕ ಬರುವ ಆದಾಯ ದಿಂದ ಎಳೆಕರುಗಳನ್ನು ಮತ್ತು ಉಳುಮೆಗೆ ಸಾಮರ್ಥ್ಯವಿರುವ ಎತ್ತುಗಳನ್ನು ಖರೀದಿಸುವುದಕ್ಕೆ ಅವಕಾಶವಿತ್ತು. ನಿಜಕ್ಕೂ ಇದು  ರೈತಸ್ನೇಹಿ ಕಾಯ್ದೆ. ಆದ್ದರಿಂದಲೇ, ಈ ಕಾಯ್ದೆಯ ಹೊರತಾಗಿಯೂ ಗೋವು, ಎತ್ತುಗಳ ಕೊರತೆ ರಾಜ್ಯದಲ್ಲಿ ಕಂಡು ಬಂದಿಲ್ಲ.  ಹಾಲುತ್ಪಾದನೆಯಲ್ಲಿ ಇಳಿಕೆಯಾಗಿಲ್ಲ. ಒಂದುವೇಳೆ,
1964ರ ಜಾನುವಾರು ಕಾಯ್ದೆಯು ಗೋಸಂರಕ್ಷಣಾ ವಿರೋಧಿಯಾಗಿರುತ್ತಿದ್ದರೆ ಈ 5 ದಶಕಗಳಲ್ಲಿ ಗೋಸಂತತಿಯ ನಾಶಕ್ಕೆ ಈ  ರಾಜ್ಯ ಸಾಕ್ಷಿಯಾಗಬೇಕಿತ್ತು. ಹಾಲುತ್ಪಾದನೆಯಲ್ಲಿ ತೀವ್ರ ಇಳಿಕೆ ಕಂಡುಬರಬೇಕಿತ್ತು. ಆದರೆ ಹೀಗೇನೂ ಆಗಿಲ್ಲ. ಅಂದರೆ, ಗೋಹತ್ಯೆ  ನಿಷೇಧ 2020ರ ಕಾಯ್ದೆಗಿಂತ ಮೊದಲಿನ 1964ರ ಕಾಯ್ದೆಯು ರೈತಸ್ನೇಹಿ ಮತ್ತು ಜಾನುವಾರು ಸ್ನೇಹಿಯಾಗಿತ್ತು ಎಂದೇ ಅರ್ಥ.  ಅಷ್ಟಕ್ಕೂ,
1964ರ ಕಾಯ್ದೆಯನ್ನು ರದ್ದುಗೊಳಿಸಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತನ್ನಿ ಎಂದು ರಾಜ್ಯದಲ್ಲಿ ರೈತರಾಗಲಿ  ಹೈನುದ್ಯಮದಲ್ಲಿ ತೊಡಗಿಸಿಕೊಂಡವರಾಗಲಿ ಬೇಡಿಕೆಯನ್ನಿಟ್ಟಿರುವುದೋ ವಿಧಾನಸೌಧ ಚಲೋ ನಡೆಸಿರುವುದೋ ಈವರೆಗೂ ನಡೆ ದಿಲ್ಲ. ಅಲ್ಲದೇ, ಈ ಬಗ್ಗೆ ಜನಾಭಿಪ್ರಾಯವನ್ನೂ ಸಂಗ್ರಹಿಸಲಾಗಿಲ್ಲ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಈ ಅಂಶ ಇತ್ತು ನಿಜ.  ಆದರೆ, ಬಿಜೆಪಿಗೆ ರಾಜ್ಯದ ಜನತೆ ಓಟು ಹಾಕಿರುವುದಕ್ಕೆ ಆ ಒಂದೇ ಭರವಸೆ ಕಾರಣ ಆಗಿತ್ತೇ? ಒಂದುವೇಳೆ,
ಗೋಹತ್ಯೆ ನಿಷೇಧ ಕಾಯ್ದೆಯ ಏಕ ಭರವಸೆಯೊಂದನ್ನೇ ಪ್ರಣಾಳಿಕೆಯನ್ನಾಗಿಸಿ ಮತ್ತು ಇನ್ನಾವುದೂ ಪ್ರಣಾಳಿಕೆಯಲ್ಲಿ ಇಲ್ಲದೇ  ಇರುತ್ತಿದ್ದರೆ ಜನರು ಆ ಕಾರಣಕ್ಕಾಗಿ ಮಾತ್ರ ಮತ ನೀಡಿದ್ದಾರೆ ಎಂದು ಹೇಳಬಹುದಿತ್ತು. ಆದರೆ ಹಾಗೆ ನಡೆದಿಲ್ಲ ಮತ್ತು  ನಡೆಯುವದಕ್ಕೆ ಸಾಧ್ಯವೂ ಇಲ್ಲ. ಜನರು ಯಾವುದೇ ರಾಜಕೀಯ ಪಕ್ಷಕ್ಕೆ ಮತ ಹಾಕುವುದಕ್ಕೂ ಬೇರೆ ಬೇರೆ ಸಂಗತಿಗಳು  ಕಾರಣವಾಗಿರುತ್ತವೆ. ಹೆಚ್ಚಿನ ಬಾರಿ ಪ್ರಣಾಳಿಕೆಗೂ ಜನರ ಮತ ಚಲಾವಣೆಗೂ ಸಂಬಂಧವೇ ಇರುವುದಿಲ್ಲ. ಗೆದ್ದ ಬಳಿಕ ರಾಜಕೀಯ  ಪಕ್ಷಗಳೂ ಹೆಚ್ಚಿನ ಬಾರಿ ಪ್ರಣಾಳಿಕೆಯತ್ತ ಮುಖವೆತ್ತಿ ನೋಡುವುದೂ ಇಲ್ಲ. ಪಕ್ಷವೊಂದಕ್ಕೆ ಬೀಳುವ ಮತಗಳಿಗೂ ಪ್ರಣಾಳಿಕೆಯಲ್ಲಿ  ಹೇಳಲಾಗುವ ಭರವಸೆಗಳಿಗೂ ಹೆಚ್ಚಿನ ಬಾರಿ ಯಾವ ಹೋಲಿಕೆಯೂ ಇರುವುದಿಲ್ಲ. ಆದ್ದರಿಂದ ಪ್ರಣಾಳಿಕೆಯನ್ನು ತೋರಿಸಿ ಬಿಜೆಪಿ  ಗೋಹತ್ಯಾ ನಿಷೇಧ ಕಾಯ್ದೆಯನ್ನು ಸಮರ್ಥಿಸಿಕೊಳ್ಳುವುದು ಸಂದರ್ಭ ಸಾಧಕತನವೇ ಹೊರತು ಪ್ರಾಮಾಣಿಕತೆಯಲ್ಲ.
ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆಯಂತೆ ಈಗಾಗಲೇ ಪ್ರಥಮ ಕೇಸು ದಾಖಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾಯ್ದೆಯ  ನೇರ ಪರಿಣಾಮವನ್ನು ರೈತರು ಎದುರಿಸಬೇಕಿರುವುದರಿಂದ ರಾಜ್ಯ ಎರಡು ಸವಾಲುಗಳಿಗೆ ಸಾಕ್ಷಿಯಾಗಗಬಹುದು. 
1. ರೈತರು  ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರ ಪ್ರತಿಭಟನೆ.
 2. ಹೈನುಗಾರಿಕೆಯಿಂದ ರೈತರು ನಿಧಾನವಾಗಿ ದೂರ  ಸರಿಯುವುದು. ಹಾಗಂತ,
ಇವು ಏನೇ ಆದರೂ ಅದರಿಂದ ಆಯಾ ಕುಟುಂಬಗಳು ಮಾತ್ರ ಸಂಕಷ್ಟಕ್ಕೆ ಒಳಗಾಗುವುದಲ್ಲ. ಹಾಲುತ್ಪಾದನೆಯಲ್ಲಿ ಕೊರತೆಯಿಂದ  ಹಿಡಿದು ಮಾಂಸದ ಅಲಭ್ಯತೆ ಮತ್ತು ಮಾಂಸದಿಂದ  ಉತ್ಪತ್ತಿಯಾಗುವ ವಿವಿಧ ವಸ್ತುಗಳ ಬೆಲೆ ಏರಿಕೆಗೂ ಈ ಕಾಯ್ದೆಯು  ಕಾರಣವಾಗಲಿದೆ. ಮೃಗಾಲಯದ ಪ್ರಾಣಿಗಳ ಆಹಾರ ಬೇಡಿಕೆಗೂ ಪರ್ಯಾಯ ದಾರಿಗಳನ್ನು ಹುಡುಕಬೇಕಾಗುತ್ತದೆ. ಗೋಮಾಂಸ  ಹೊರತಾದ ಮಾಂಸಗಳು ದುಬಾರಿಯಾಗಿರುವುದರಿಂದ ಅದರ ಹೊರೆಯನ್ನು ಸರಕಾರ ಹೊತ್ತುಕೊಳ್ಳಬೇಕಾಗುತ್ತದೆ. ಬೀಡಾಡಿ ಜಾ ನುವಾರುಗಳ ಸಂಖ್ಯೆ ಹೆಚ್ಚಾಗಲಿದ್ದು, ಗೋಶಾಲೆಗಳ ನಿರ್ವಹಣೆಯೂ ಸವಾಲಾಗಲಿದೆ. ಈಗಿನ ಕಾಯ್ದೆಯನ್ನು ನೇರಾತಿನೇರ ಜಾರಿ  ಮಾಡಬೇಕಾದರೆ ಗ್ರಾಮಕ್ಕೆ ನಾಲ್ಕೈದು  ಗೋಶಾಲೆಗಳನ್ನಾದರೂ ತೆರೆಯಬೇಕಾಗಬಹುದು. ಮೇವು, ಹಿಂಡಿ ಸಹಿತ ಅದರ  ನಿರ್ವಹಣೆಗೆ ಬೇಕಾಗುವ ಹಣಕ್ಕೆ ಏನು ದಾರಿ? ಈ ಸವಾಲಿಗೆ ಒಂದು ನಯಾಪೈಸೆಯನ್ನೂ ತೆಗೆದಿಡದ ಸರಕಾರವೂ ಕೇವಲ  ಕಾಯ್ದೆ ತಂದು ಮಾಡುವುದೇನು? ಅಂದಹಾಗೆ,
ಜನಮರುಳು ಕಾಯ್ದೆಗಳು ಜನಾಕ್ರೋಶದ ಪ್ರವಾಹದಲ್ಲಿ ಕೋಚ್ಚಿಹೋದ ಕತೆಗಳು ಇತಿಹಾಸದಲ್ಲಿ ಧಾರಾಳ ಇವೆ.