Friday 29 September 2023

ನಾಲ್ಕು ಗೋಡೆಯೊಳಗಿರುವ ಅಪ್ಪ-ಅಮ್ಮನ ದೂರುಗಳು..




ಸನ್ಮಾರ್ಗ ಸಂಪಾದಕೀಯ


84 ವರ್ಷದ ವೃದ್ಧೆಯ ಕುರಿತಾದ ಪ್ರಕರಣ ವಾರಗಳ ಹಿಂದೆ  ರಾಜ್ಯ ಹೈಕೋರ್ಟ್ ನಲ್ಲಿ  ವಿಚಾರಣೆಗೆ ಬಂದಿತ್ತು. ಇಬ್ಬರು ಗಂಡು ಮಕ್ಕಳು  ನಿರ್ಲಕ್ಷಿಸಿದ ಕಾರಣ ಆ ತಾಯಿ ಮಗಳ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ತನ್ನಿಬ್ಬರು ಗಂಡು ಮಕ್ಕಳ ನಿರ್ಲಕ್ಷ್ಯ  ಧೋರಣೆ ಆ ತಾಯಿಯನ್ನು ತೀವ್ರವಾಗಿ ಕಾಡಿತ್ತು. ಅವರು ಮೈಸೂರು ಜಿಲ್ಲಾಧಿಕಾರಿಯವರಲ್ಲಿ ಈ  ಬಗ್ಗೆ ತನ್ನ ಸಂಕಟವನ್ನೂ ತೋಡಿಕೊಂಡಿದ್ದರು. ಅವರ ನೋವಿಗೆ ಸ್ಪಂದಿಸಿದ್ದ ಜಿಲ್ಲಾಧಿಕಾರಿ, ಮಕ್ಕಳಾದ ಮಹೇಶ್ ಮತ್ತು ಗೋಪಾಲ್ ನನ್ನು ಕರೆದು ಬುದ್ಧಿವಾದ ಹೇಳಿದ್ದರು ಮತ್ತು ಕೊನೆಗೆ ಈ ತಾಯಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಪಾವತಿಸುವಂತೆ  ಆದೇಶಿಸಿದ್ದರು. ಆದರೆ ಇದು ಮಕ್ಕಳಿಗೆ ಒಪ್ಪಿಗೆಯಾಗಿರಲಿಲ್ಲ. ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಗೆ  ಅರ್ಜಿ ಸಲ್ಲಿಸಿದರು.  ಸಹೋದರಿಯರ ಕುಮ್ಮಕ್ಕಿನಿಂದಲೇ ತಾಯಿ ಜೀವನಾಂಶ ಕೋರುತ್ತಿದ್ದಾರೆ ಎಂದೂ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಈ ಆಕ್ಷೇಪವನ್ನು  ತಿರಸ್ಕರಿಸಿದ ಹೈಕೋರ್ಟು, ಆ ಇಬ್ಬರು ಗಂಡು ಮಕ್ಕಳಿಗೆ ಪಾಠವನ್ನೂ ಬೋಧಿಸಿದೆ. ‘ದುಡಿಯಲು ಸಮರ್ಥನಾಗಿರುವ ವ್ಯಕ್ತಿ ತನ್ನ  ಪತ್ನಿಯನ್ನು ನೋಡಿಕೊಳ್ಳಬಹುದಾದರೆ, ಅವಲಂಬಿತ ತಾಯಿಯನ್ನೇಕೆ ನೋಡಿಕೊಳ್ಳಬಾರದು’ ಎಂದೂ ಪ್ರಶ್ನಿಸಿದೆ. ‘ತಾಯಿಯ ಹೆಣ್ಣು  ಮಕ್ಕಳು ಆಸ್ತಿಯಲ್ಲಿ ಪಾಲನ್ನು ಕೋರಿಲ್ಲ, ಗಂಡು ಮಕ್ಕಳು ತ್ಯಜಿಸಿರುವ ತಾಯಿಯನ್ನು ಈ ಹೆಣ್ಣು ಮಕ್ಕಳು ನೋಡಿಕೊಳ್ಳುತ್ತಿದ್ದಾರೆ. ಇಲ್ಲದಿದ್ದರೆ ಈ ತಾಯಿ ರಸ್ತೆಯಲ್ಲಿರಬೇಕಿತ್ತು’ ಎಂದೂ ಆತಂಕ ವ್ಯಕ್ತಪಡಿಸಿದೆ. ಮಾತ್ರವಲ್ಲ, ಮೈಸೂರು ಜಿಲ್ಲಾಧಿಕಾರಿ ಆದೇಶವನ್ನು ಎತ್ತಿ ಹಿಡಿದಿದೆ.

ಬದುಕಿನ ಸಂಧ್ಯಾ ಕಾಲದಲ್ಲಿರುವ ಮತ್ತು ಇನ್ನೊಬ್ಬರನ್ನು ಅವಲಂಬಿಸಿಕೊಂಡಿರುವ ಸುಮಾರು ಒಂದೂವರೆ ಕೋಟಿ ವೃದ್ಧರು ಸದ್ಯ ಈ  ದೇಶದಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ 65% ಮಂದಿ ಕೂಡಾ ಬಡವರು. ತಮ್ಮದೇ ಆದ ಆದಾಯವಿಲ್ಲದೇ ಮಕ್ಕಳನ್ನೋ  ಇನ್ನಿತರರನ್ನೋ ಅವಲಂಬಿಸಿದವರು. ಇವರಲ್ಲಿ ಹೆಚ್ಚಿನವರೂ ಸುಖವಾಗಿಲ್ಲ ಎಂಬುದು ಈಗಾಗಲೇ ಬಿಡುಗಡೆಗೊಂಡಿರುವ ಅಧ್ಯಯನ  ವರದಿಗಳೇ ಹೇಳುತ್ತವೆ. 2019ರಲ್ಲಿ ಬಿಡುಗಡೆಯಾದ ಏಜ್‌ವೆಲ್ ಫೌಂಡೇಶನ್‌ನ ಸಮೀಕ್ಷಾ ವರದಿ ಮತ್ತು 2015ರಲ್ಲಿ ಬಿಡುಗಡೆಯಾದ  ಹೆಲ್ಪ್ ಏಜ್ ಇಂಡಿಯಾದ ಸರ್ವೆ ವರದಿಗಳನ್ನು ಅಧ್ಯಯನಕ್ಕೆ ಒಳಪಡಿಸಿದರೆ ಎದೆ ನಡುಗುವ ವಿವರಗಳನ್ನು ದರ್ಶಿಸಬಹುದು.

ಹೆಲ್ಪ್ ಏಜ್ ಇಂಡಿಯಾ 12 ನಗರಗಳಲ್ಲಿ ನಡೆಸಿದ ಸರ್ವೇ ಪ್ರಕಾರ, ಬೆಂಗಳೂರು ಮತ್ತು ನಾಗಪುರದಲ್ಲಿ ಹಿರಿಯರು ಅತೀ ಹೆಚ್ಚು  ನಿಂದನೆ, ಬೈಗುಳಕ್ಕೆ ಒಳಗಾಗುತ್ತಿದ್ದಾರೆ. ದೆಹಲಿ ಮತ್ತು ಕಾನ್ಪುರಗಳಲ್ಲಿ ಈ ನಿಂದನೆಯ ಪ್ರಮಾಣ ಅತೀ ಕಡಿಮೆಯಿದೆ. ಪ್ರತೀ 10ರಲ್ಲಿ 4  ಮಂದಿ ವೃದ್ಧರು ಮನೆಯಲ್ಲಿ ನಿಂದನೆಯನ್ನು ಎದುರಿಸುತ್ತಿದ್ದಾರೆ. ಸರಾಸರಿ ಪ್ರತಿ 10ರಲ್ಲಿ 3 ಮಂದಿ ಮನೆಯವರ ತೀವ್ರ ನಿರ್ಲಕ್ಷ್ಯಕ್ಕೆ  ಒಳಗಾಗುತ್ತಿದ್ದಾರೆ. ಹಾಗೆಯೇ ಪ್ರತಿ 10ರಲ್ಲಿ 3 ಮಂದಿ ಮನೆಯವರ ಅಗೌರವ, ಅನಾದರಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕಿಂತಲೂ  ಘೋರವಾದುದು ಏನೆಂದರೆ, ಸರಾಸರಿ ಪ್ರತಿ 5ರಲ್ಲಿ ಇಬ್ಬರು ಪ್ರತಿದಿನ ತೀವ್ರತರದ ನಿಂದನೆ, ಬೈಗುಳಕ್ಕೆ ಒಳಗಾಗುತ್ತಿದ್ದರೆ ಪ್ರತಿ 10ರಲ್ಲಿ  ಮೂವರು ಸರಾಸರಿ ವಾರಕ್ಕೊಮ್ಮೆ ತೀವ್ರ ನಿಂದನೆಗೆ ಗುರಿಯಾಗುತ್ತಿದ್ದಾರೆ. ಪ್ರತಿ 5ರಲ್ಲಿ ಒಬ್ಬರು ಸರಾಸರಿ ತಿಂಗಳಿಗೊಮ್ಮೆ ನಿಂದನೆಗೆ  ತುತ್ತಾಗುತ್ತಿದ್ದಾರೆ. ಹಾಗಂತ,

ವೃದ್ಧರಿಗೆ ಹೀಗೆ ತೊಂದರೆ ಕೊಡುತ್ತಿರುವವರು ಯಾರೋ ಅಪರಿಚಿತರಲ್ಲ. ಸ್ವತಃ ಮಗ, ಮಗಳು ಅಥವಾ ಸೊಸೆಯಂದಿರೇ. ಪ್ರತಿ  10ರಲ್ಲಿ 6 ಮಂದಿ ವೃದ್ಧರು ಸೊಸೆ ಮತ್ತು ಬಹುತೇಕ ಮಗನಿಂದಲೇ ನಿಂದನೆಗೆ ಒಳಗಾಗುತ್ತಿದ್ದಾರೆ. ಆದರೆ, ವೃದ್ಧರಾದ ಹೆತ್ತವರನ್ನು  ಹೆಣ್ಣು ಮಕ್ಕಳು ನಿಂದಿಸಿರುವ ಪ್ರಮಾಣ ಅತ್ಯಲ್ಪ. ಬರೇ 7% ಹೆಣ್ಣು ಮಕ್ಕಳು ಮಾತ್ರ ಈ ಆರೋಪ ಹೊತ್ತಿದ್ದಾರೆ. ಆದರೆ, ಸರ್ವೇಯಲ್ಲಿ  ಮಾತನಾಡಿರುವ ಯಾವ ವೃದ್ಧರೂ ಮೊಮ್ಮಕ್ಕಳ ಮೇಲೆ ಯಾವ ದೂರನ್ನೂ ಸಲ್ಲಿಸಿಲ್ಲ. ಔಷಧಿಗಳನ್ನು ತಂದು ಕೊಡದ ಮತ್ತು ಅತೀವ  ಅಗತ್ಯಗಳಿಗಾಗಿಯೂ ಹಣ ನೀಡದ ಮಕ್ಕಳ ಬಗ್ಗೆ ಹೆಚ್ಚಿನ ಹಿರಿಯರು ದೂರಿಕೊಂಡಿರುವುದೂ ಸರ್ವೇಯಲ್ಲಿದೆ. ವೃದ್ಧಾಪ್ಯ ವೇತನದ  ಹಣವನ್ನೂ ನುಂಗಿ ನೀರು ಕುಡಿಯುವ ಮಕ್ಕಳೂ ಧಾರಾಳ ಇದ್ದಾರೆ.

ಬಹುಶಃ ಅಧ್ಯಯನ ವರದಿಗಳ ಬೆನ್ನು ಬಿದ್ದು ಮಾಹಿತಿಗಳನ್ನು ಕಲೆ ಹಾಕಹೊರಟರೆ ರಾಶಿ ರಾಶಿ ವಿವರಗಳು ಸಿಗಬಹುದೇನೋ. ಇಂಥ  ಅಧ್ಯಯನ ವರದಿಗಳು ಅಂಕಿ-ಸಂಖ್ಯೆಗಳ ಜೊತೆಗೇ ಈ ವೃದ್ಧರೊಂದಿಗೆ ನಡೆಸಲಾದ ವೈಯಕ್ತಿಕ ಮಾತುಕತೆಗಳ ವಿವರವನ್ನೂ  ಕೊಡುತ್ತದೆ. ಅವನ್ನು ಓದುವಾಗ ಹೃದಯ ಮಿಡಿಯುತ್ತದೆ. ಮಕ್ಕಳ ಮೇಲೆ ಆರೋಪವನ್ನು ಹೊರಿಸಲಾಗದ ಸಂಕಟ ಒಂದೆಡೆಯಾದರೆ, ನರಕದಂಥ ಬದುಕು ಬಾಳಲಾಗದ ದುಃಖ ಇನ್ನೊಂದೆಡೆ- ಇವೆರಡರ ನಡುವೆ ವೃದ್ಧ ಹೆತ್ತವರು ಬೇಯುತ್ತಿರುವುದನ್ನು ಇಂಥ  ಸರ್ವೇಗಳು ಮನದಟ್ಟು ಮಾಡಿಸುತ್ತವೆ. ಸಾಮಾನ್ಯವಾಗಿ ಯಾವ ಹೆತ್ತವರೂ ಇತರರೆದುರು ಮಕ್ಕಳನ್ನು ದೂರುವುದಿಲ್ಲ. ಮಕ್ಕಳು ಎಷ್ಟೇ  ಕೆಟ್ಟದಾಗಿ ನಡೆಸಿಕೊಂಡರೂ ಅವನ್ನು ಇತರರಲ್ಲಿ ಹೇಳುವುದರಿಂದ ಮಕ್ಕಳು ಅವಮಾನಿತರಾಗುತ್ತಾರೆ ಎಂದೇ ಭಾವಿಸಿ ಸಹಿಸಿಕೊಳ್ಳುತ್ತಾರೆ.  ಆದರೆ, ಮಕ್ಕಳ ದೌರ್ಜನ್ಯ ವಿಪರೀತ ಮಟ್ಟಕ್ಕೆ ತಲುಪಿದಾಗ ಅನ್ಯ ದಾರಿಂಯಿಲ್ಲದೇ ಹೃದಯ ತೆರೆದು ಮಾತಾಡುತ್ತಾರೆ. ಯಾವುದೇ  ಸರ್ವೇಯಲ್ಲಿ ವೃದ್ಧ ಹೆತ್ತವರು ತಮ್ಮ ಮಕ್ಕಳ ಬಗ್ಗೆ ದೂರಿಕೊಂಡಿದ್ದಾರೆಂದರೆ, ಅವರು ಇಂಥದ್ದೊಂದು ನರಕಮಯ ಸನ್ನಿವೇಶದ  ತುತ್ತತುದಿಯಲ್ಲಿ ಬದುಕುತ್ತಿದ್ದಾರೆಂದೇ ಅರ್ಥ. ಅಂದಹಾಗೆ,

ವೃದ್ಧರ ಪಾಲಿಗೆ ಅನೇಕ ವಿಷಯಗಳು ನಕಾರಾತ್ಮಕವಾಗಿವೆ. ತಮ್ಮ ಮೇಲೆ ಅನ್ಯಾಯವಾಗುತ್ತಿದೆ ಎಂದು ಹೇಳಿ ಸಾರ್ವಜನಿಕ ಗಮನ  ಸೆಳೆಯಬಲ್ಲ ಸ್ಥಳದಲ್ಲಿ ಪ್ರತಿಭಟನೆ ಮಾಡುವ ಸಾಮರ್ಥ್ಯ ಅವರಿಗಿಲ್ಲ. ಇತರರ ಹಂಗಿಲ್ಲದೇ ಬದುಕುವೆ ಎಂದು ಹೇಳುವ ವಯಸ್ಸೂ  ಅದಲ್ಲ. ವೃದ್ಧರು ಪರಸ್ಪರ ಸಂಪರ್ಕದಲ್ಲಿರಿಸಬಹುದಾದ ವ್ಯವಸ್ಥೆಯಾಗಲಿ, ಅಂಥ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ವಯಸ್ಸಾಗಲಿ  ಅವರದಲ್ಲ. ಆದ್ದರಿಂದಲೇ, ಒಂದೇ ಫ್ಲ್ಯಾಟ್‌ನಲ್ಲಿದ್ದರೂ ಪರಸ್ಪರ ಅಪರಿಚಿತರಾಗಿಯೇ ಅವರು ಬದುಕುತ್ತಿರುತ್ತಾರೆ. ಹಕ್ಕುಗಳ ಬಗ್ಗೆ  ಗೊತ್ತಿದ್ದರೂ ಮತ್ತು ಕಾನೂನು ಸಂರಕ್ಷಣೆಯ ಕುರಿತು ಮಾಹಿತಿ ಇದ್ದರೂ ಅವನ್ನು ಹೋರಾಡಿ ಪಡಕೊಳ್ಳುವಷ್ಟು ದೇಹತ್ರಾಣ ಅವರಲ್ಲಿರುವುದಿಲ್ಲ. ಟಿ.ವಿ. ಚಾನೆಲ್‌ಗಳ ಮೈಕ್‌ಗಳಾಗಲಿ, ಪತ್ರಕರ್ತರ ಪೆನ್ನುಗಳಾಗಲಿ ಅವರಲ್ಲಿಗೆ ತಲುಪುವುದು ಶೂನ್ಯ ಅನ್ನುವಷ್ಟು ಕಡಿಮೆ.  ವೃದ್ಧರು ಹೆಚ್ಚೆಂದರೆ ಮನೆಯಿಂದ ಆಸ್ಪತ್ರೆಗೆ ಮತ್ತು ಆಸ್ಪತ್ರೆಯಿಂದ ಮನೆಗೆ ಮಾತ್ರ ಸೀಮಿತವಾಗಿರುವುದರಿಂದ  ಹಾಗೂ ಮದುವೆ,  ಮುಂಜಿ, ಮರಣ, ಸಭೆ-ಸಮಾರಂಭಗಳಲ್ಲಿ ಗೈರು ಹಾಜರಿರುವುದರಿಂದ ಅವರ ಬಗೆಗಿನ ಸಾರ್ವಜನಿಕ ಗಮನವೂ ಕಡಿಮೆ. ಪ್ರಸ್ತಾಪವೂ  ಕಡಿಮೆ. ಅಣು ಕುಟುಂಬದ ಈ ಕಾಲದಲ್ಲಂತೂ ವೃದ್ಧ ಅಪ್ಪನನ್ನೋ ಅಮ್ಮನನ್ನೋ ಅಥವಾ ಅವರಿಬ್ಬರನ್ನೂ ಮನೆಯಲ್ಲಿ ಕೂಡಿಟ್ಟು  ಮಗ-ಸೊಸೆ ದುಡಿಯಲು ಹೋಗುತ್ತಿರುವುದೇ ಹೆಚ್ಚು. ಇಂಥ ಸ್ಥಿತಿಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಅವರು ಏಕತಾನತೆಯಿಂದ  ಬದುಕಬೇಕಾಗುತ್ತದೆ. ಅಷ್ಟಕ್ಕೂ,

ತೈತೀರಿಯಾ ಉಪನಿಷತ್‌ನಲ್ಲಿ ಹೇಳಲಾಗಿರುವ, ಮಾತೃ ದೇವೋಭವ ಪಿತೃ ದೇವೋಭವ ಎಂಬ ಶ್ಲೋಕ ಬಹಳ ಪ್ರಸಿದ್ಧ. ಪವಿತ್ರ  ಕುರ್‌ಆನ್ ಅಂತೂ ವೃದ್ಧ ಹೆತ್ತವರ ಬಗ್ಗೆ ಎಷ್ಟು ಕಾಳಜಿ ವ್ಯಕ್ತಪಡಿಸಿದೆ ಎಂದರೆ, ಅವರ ಬಗ್ಗೆ ‘ಛೆ’ ಎಂಬ ಭಾವ ಕೂಡ ಮಕ್ಕಳಲ್ಲಿ  ವ್ಯಕ್ತವಾಗಬಾರದು ಎಂದು ಆಜ್ಞಾಪಿಸಿದೆ. ‘ಹೆತ್ತವರೇ ಮಕ್ಕಳ ಪಾಲಿನ ಸ್ವರ್ಗ ಮತ್ತು ನರಕ’ ಎಂದೂ ಇಸ್ಲಾಮ್ ಹೇಳಿದೆ. ‘ಬಾಲ್ಯದಲ್ಲಿ  ಅವರು ನಮ್ಮನ್ನು ಪ್ರೀತಿ ವಾತ್ಸಲ್ಯದಿಂದ ಸಾಕಿ ಸಲಹಿದಂತೆಯೇ ನೀನು ಅವರ ಮೇಲೆ ಕರುಣೆ ತೋರು’ ಎಂದು ಮಕ್ಕಳು ಹೆತ್ತವರಿಗಾಗಿ ಸದಾ  ದೇವನಲ್ಲಿ ಪ್ರಾರ್ಥಿಸಬೇಕೆಂಬ ನಿರ್ದಿಷ್ಟ ಪ್ರಾರ್ಥನಾ ಕ್ರಮವನ್ನೇ ಇಸ್ಲಾಮ್ ಕಲಿಸಿಕೊಟ್ಟಿದೆ. ‘ನಿಮ್ಮನ್ನು ನಿತ್ರಾಣದ ಮೇಲೆ ನಿತ್ರಾಣವನ್ನು  ಸಹಿಸಿ ಹೆತ್ತಿದ್ದಾಳೆ’ ಎಂಬ ಪದಪ್ರಯೋಗಿಸಿಯೇ ತಾಯಿಯ ಮಹತ್ವವನ್ನು ಎತ್ತಿ ಹೇಳಿರುವ ಕುರ್‌ಆನ್, ‘ನಿಮ್ಮ ಯಾವುದೇ ಸೇವೆಯು  ಪ್ರಸವದ ಸಮಯದಲ್ಲಿ ತಾಯಿ ಅನುಭವಿಸಿದ ನೋವಿಗೆ ಸಮನಾಗದು’ ಎಂಬ ರೀತಿಯ ಮಾರ್ಮಿಕ ಉಪದೇಶವನ್ನೂ ನೀಡಿದೆ.  ಅಂದಹಾಗೆ,

ಮಕ್ಕಳು, ಮೊಮ್ಮಕ್ಕಳು, ಕುಟುಂಬ ಎಂದು ಸಾಮರ್ಥ್ಯವಿರುವವರೆಗೆ ದುಡಿದು ಹಾಕಿದವರನ್ನು ವೃದ್ಧಾಪ್ಯದಲ್ಲಿ ನಿರ್ಲಕ್ಷಿಸುವುದು ಸಲ್ಲದು.  ಅದು ಮಹಾಪಾಪ.

ಹಿಂದೂ ಧರ್ಮದ ರಕ್ಷಣೆಗೆ ಮುಸ್ಲಿಮರನ್ನು ನಿಂದಿಸಲೇಬೇಕಾ?

 



ಸನ್ಮಾರ್ಗ ಸಂಪಾದಕೀಯ

ಕುಂದಾಪುರ ಕಾಳಿ, ದುರ್ಗೆ, ಹಿಂದುತ್ವ ಭಾಷಣಗಾರ್ತಿ, ಕಾದಂಬರಿಗಾರ್ತಿ, ಚಿಂತಕಿ ಎಂಬೆಲ್ಲಾ  ಬಿರುದನ್ನು ಅಂಟಿಸಿಕೊಂಡ  ಮತ್ತು  ಮುಸ್ಲಿಮರನ್ನು ತಿವಿಯುವುದನ್ನೇ ಹಿಂದೂ ಧರ್ಮದ ಉದ್ಧಾರವಾಗಿ ಕಂಡಿದ್ದ ಚೈತ್ರಾ ಕುಂದಾಪುರ ಎಂಬ ಯುವತಿ ದಿನ  ಬೆಳಗಾಗುವುದರೊಳಗೆ ವಂಚಕಿಯಾಗಿ ಮಾರ್ಪಟ್ಟಿದ್ದಾಳೆ. ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ  ಎದುರಿಸುತ್ತಿದ್ದಾಳೆ. ಆಕೆಯ ವಂಚನೆಯ ವಿವಿಧ ಕರಾಳ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಆಕೆ ಈ ಹಿಂದೆ ಮಾಡಿರುವ  ಬೆಂಕಿ ಭಾಷಣಗಳೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆಕೆಯನ್ನು ಎತ್ತಿ ಮೆರೆದಾಡಿದವರು ಮತ್ತು ಹಿಂದೂ ಧರ್ಮದ  ಪ್ರಚಾರಕಿ ಎಂದು ತಲೆ ಮೇಲೆ ಕೂರಿಸಿದವರೆಲ್ಲ ಗಾಢ ಮೌನಕ್ಕೆ ಜಾರಿದ್ದಾರೆ. ಆಕೆಯ ಭಾಷಣಗಳಿಂದ ಗರಿಷ್ಠ ಲಾಭ  ಪಡೆದುಕೊಂಡಿರುವ ಬಿಜೆಪಿ ಈಗಾಗಲೇ ಆಕೆಯಿಂದ ಅಂತರ ಕಾಯ್ದುಕೊಂಡಿದೆ. ಆಕೆ ಯಾರೆಂದೇ ಗೊತ್ತಿಲ್ಲ ಎಂದು ಹೇಳಿ  ಕೈತೊಳೆದುಕೊಂಡಿದೆ. ಆಕೆಯನ್ನು ಕರೆಸಿ ಭಾಷಣ ಮಾಡಿಸಿರುವ ಊರವರು ಇದೀಗ ಪ್ರಾಯಶ್ಚಿತ್ತ ಪೂಜೆ ಮಾಡಿಕೊಂಡದ್ದೂ ನಡೆದಿದೆ.  ಮೊನ್ನೆ ಮೊನ್ನೆವರೆಗೆ ಬೃಹತ್ ವೇದಿಕೆಯನ್ನೇರಿ ದ್ವೇಷ ಭಾಷಣ ಮಾಡುತ್ತಾ ಭಾರೀ ಜನಸ್ತೋಮದಿಂದ ಚಪ್ಪಾಳೆ, ಶಿಳ್ಳೆ, ಜೈಕಾರ  ಪಡೆಯುತ್ತಿದ್ದ ಯುವತಿಯೊಬ್ಬಳ ಸ್ಥಿತಿ ಇದು. 

ಅಷ್ಟಕ್ಕೂ,

ಈ ಬೆಳವಣಿಗೆಯಿಂದ ಯಾರು, ಏನನ್ನು ಕಳಕೊಂಡರು? ಯಾರ ವರ್ಚಸ್ಸಿಗೆ ಹಾನಿಯಾಗಿದೆ? ಮುಖಭಂಗವಾದ ಅನುಭವ  ಯಾರಿಗಾಗಿದೆ? ಚೈತ್ರ ಜಾಮೀನಿನ ಮೂಲಕ ನಾಳೆ ಬಿಡುಗಡೆಗೊಳ್ಳಬಹುದು. ಭಾಷಣದ ಬದಲು ಬೇರೆಯದೇ ಉದ್ಯೋಗವನ್ನು  ನೋಡಿಕೊಳ್ಳಲೂ ಬಹುದು ಅಥವಾ ತಾನು ಸಂತ್ರಸ್ತೆ ಎಂಬ ಅವತಾರವನ್ನು ತಾಳಲೂ ಬಹುದು. ಆದರೆ, ಆಕೆಯಿಂದಾಗಿ ಹಿಂದೂ  ಧರ್ಮದ ವರ್ಚಸ್ಸಿಗೆ ಆಗಿರುವ ಹಾನಿಯನ್ನು ಇಷ್ಟು ಸುಲಭದಲ್ಲಿ ನಿವಾರಿಸಿಬಿಡಲು ಸಾಧ್ಯವಿಲ್ಲ. ಆಕೆ ವೇದಿಕೆಯೇರಿ ತನ್ನನ್ನು ಹಿಂದೂ  ಧರ್ಮದ ವಕ್ತಾರೆಯಂತೆ ಬಿಂಬಿಸಿಕೊಳ್ಳುತ್ತಿದ್ದಳು. ಹಿಂದೂ ಧರ್ಮದ ರಕ್ಷಣೆಗಾಗಿ ಹೋರಾಡುತ್ತಿರುವ ಕಾರ್ಯಕರ್ತೆಯಂತೆ  ಆಡಿಕೊಳ್ಳುತ್ತಿದ್ದಳು. ಮುಸ್ಲಿಮರ ವಿರುದ್ಧ ಮಾಡುತ್ತಿದ್ದ ಭಾಷಣಕ್ಕೂ ಹಿಂದೂ ಧರ್ಮದ ರಕ್ಷಣೆಯ ಕವಚವನ್ನು ತೊಡಿಸುತ್ತಿದ್ದಳು.  ಅಲ್ಲದೇ, ಆಕೆಗೆ ವೇದಿಕೆ ಒದಗಿಸುತ್ತಿದ್ದುದೂ ಹಿಂದುತ್ವ ಸಂಘಟನೆಗಳೇ. ಸ್ವಾಮೀಜಿಗಳು, ಧರ್ಮಪ್ರೇಮಿಗಳೆಂದು ಕರೆಸಿಕೊಳ್ಳುತ್ತಿದ್ದವರು  ಹಂಚಿಕೊಳ್ಳುತ್ತಿದ್ದ ವೇದಿಕೆಗಳನ್ನೇ ಈಕೆಯೂ ಹಂಚಿಕೊಳ್ಳುತ್ತಿದ್ದಳು. ಮಾತ್ರವಲ್ಲ, ಈಕೆಯ ಭಾಷಣವನ್ನು ಖಂಡಿಸಿ ಹಿಂದೂ ಧರ್ಮದ  ಸ್ವಾಮೀಜಿಗಳಾಗಲಿ, ವಿದ್ವಾಂಸರಾಗಲಿ ಬಹಿರಂಗ ಹೇಳಿಕೆ ಕೊಟ್ಟದ್ದೂ ಇಲ್ಲ. ಆದ್ದರಿಂದ ಆಕೆಯ ಮಾತುಗಳನ್ನು ಹಿಂದೂ ಧರ್ಮದ  ರಕ್ಷಣೆಯ ಭಾಗವಾಗಿ ಮತ್ತು ಹಿಂದೂ ಧರ್ಮದ ಅಗತ್ಯವಾಗಿ ಜನರು ಭಾವಿಸಿಕೊಂಡಿದ್ದರೆ, ಅದು ತಪ್ಪಾಗುವುದಿಲ್ಲ. ನಿಜವಾಗಿ, ಚೈತ್ರಾಳ  ವರ್ಚಸ್ಸಿಗೆ ಆಗಿರುವ ಹಾನಿಗಿಂತ ಆಕೆ ಪ್ರಚಾರ ಮಾಡುತ್ತಿದ್ದ ವಿಚಾರಧಾರೆಗೆ ಆಗಿರುವ ಹಾನಿ ಎಷ್ಟೋ ಪಟ್ಟು ದೊಡ್ಡದು. ಚೈತ್ರಾಳಿಂದಾಗಿ  ಇವತ್ತು ಹಿಂದೂ ಸಮುದಾಯ ನಾಚಿಕೆಯಿಂದ ತಲೆತಗ್ಗಿಸಿದೆ. ಆಕೆಯಿಂದ ಅಂತರ ಕಾಯ್ದುಕೊಂಡು ಮಾತಾಡುತ್ತಿದೆ. 

ಅಂದಹಾಗೆ,

ವಂಚನೆ ಎಂಬುದು ಈ ಸಮಾಜಕ್ಕೆ ಹೊಸತಲ್ಲ. ವಂಚನೆ ಆರೋಪ ಹೊತ್ತುಕೊಂಡವರಲ್ಲಿ ಚೈತ್ರ ಮೊಟ್ಟಮೊದಲಿಗಳೂ ಅಲ್ಲ.  ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬ ಬೇಧ ಇಲ್ಲದೇ ವಂಚಕರು ಪ್ರತಿದಿನ ಬಂಧನಕ್ಕೀಡಾಗುತ್ತಲೂ ಇದ್ದಾರೆ. ಹಾಗಿದ್ದ ಮೇಲೂ  ಚೈತ್ರಳಿಂದಾಗಿ ಒಂದು ಸಮುದಾಯ ಅವಮಾನಕ್ಕೆ ಒಳಗಾದ ಭಾವದಲ್ಲಿ ಮಾತಾಡಲು ಕಾರಣವೇನು? ಒಂದೇ ಕಾರಣ, ಆಕೆ ಧರ್ಮದ  ವಕ್ತಾರೆಯಂತೆ, ರಕ್ಷಕಿಯಂತೆ ಮತ್ತು ಉದ್ಧಾರಕಿಯಂತೆ ಬಿಂಬಿಸಿಕೊಂಡದ್ದು ಮತ್ತು ಸಂಘಟನೆಗಳು ಅದಕ್ಕೆ ಪೂರಕ ವೇದಿಕೆಗಳನ್ನು  ನಿರ್ಮಿಸಿಕೊಟ್ಟು ಆಕೆಯ ಮಾತುಗಳಿಗೆ ಮೌನಸಮ್ಮತಿ ನೀಡಿದ್ದು. ಇಸ್ಲಾಮ್ ಧರ್ಮವನ್ನು ಬೈಯುವುದು ಹಿಂದೂ ಧರ್ಮದ  ರಕ್ಷಣೆಯಾಗಲು ಸಾಧ್ಯವಿಲ್ಲ ಎಂಬ ಬುದ್ಧಿವಾದವನ್ನು ಆಕೆಗೆ ಬಹಿರಂಗವಾಗಿ ಯಾರೂ ನೀಡಿಲ್ಲ. ಸಣ್ಣ ವಯಸ್ಸಿನ ಯುವತಿಗೆ ಹಿಂದೂ  ಧರ್ಮದ ಹೆಸರಲ್ಲಿ ಅಂಥ ವೇದಿಕೆಯನ್ನು ಕೊಡಬೇಡಿ ಎಂದು ಕಾರ್ಯಕ್ರಮ ಆಯೋಜಕರಿಗೆ ಬಹಿರಂಗವಾಗಿ ತಿಳಿ ಹೇಳಿದ ಯಾವ  ಸನ್ನಿವೇಶವೂ ನಡೆದಿಲ್ಲ. ಹಿಂದೂ ಧರ್ಮದ ಪಾಲನೆಯೇ ಧರ್ಮರಕ್ಷಣೆ ಎಂಬ ವಿವೇಕದ ಮಾತನ್ನೂ ಯಾರೂ ಬಹಿರಂಗವಾಗಿ  ಹೇಳಲಿಲ್ಲ. ಹಾಗಂತ, ಆಂತರಿಕವಾಗಿ ಇಂಥ ಪ್ರಕ್ರಿಯೆಗಳು ನಡೆದಿರಲೂ ಬಹುದು. ಹಿಂದೂ ಧರ್ಮದ ತಜ್ಞರು ಆಕೆಗೆ ಬುದ್ಧಿಮಾತು  ಹೇಳಿರಲೂಬಹುದು. ಆದರೆ, ಆಕೆಗೆ ಪದೇ ಪದೇ ವೇದಿಕೆ ಸಿಗುತ್ತಿದ್ದುದನ್ನು ನೋಡಿದರೆ ಮತ್ತು ಅಲ್ಲೆಲ್ಲಾ  ಮುಸ್ಲಿಮ್ ದ್ವೇಷವನ್ನೇ ತನ್ನ  ಭಾಷಣದ ವಿಷಯವನ್ನಾಗಿಸಿದ್ದನ್ನು ಪರಿಗಣಿಸಿದರೆ ಒಂದೋ ಆಕೆ ಬುದ್ಧಿಮಾತನ್ನು ತಿರಸ್ಕರಿಸಿದ್ದಾಳೆ ಅಥವಾ ಬುದ್ಧಿಮಾತನ್ನು ಯಾರೂ  ಹೇಳಿಯೇ ಇಲ್ಲ ಎಂದೇ ಅಂದುಕೊಳ್ಳಬೇಕಾಗುತ್ತದೆ.

ಯಾವುದೇ ಧರ್ಮದ ಅಳಿವು ಮತ್ತು ಉಳಿವು ಆಯಾ ಧರ್ಮವನ್ನು ಅನುಸರಿಸುವವರ ಕೈಯಲ್ಲಿದೆ. ಧರ್ಮವನ್ನು ಬದ್ಧತೆಯಿಂದ ಪಾಲಿಸುವುದೇ ಆಯಾ ಧರ್ಮಕ್ಕೆ ಅನುಯಾಯಿಗಳು ಮಾಡುವ ಅತಿದೊಡ್ಡ ಸೇವೆ. ಮುಸ್ಲಿಮರನ್ನು ಬೈಯುವುದರಿಂದ ಹಿಂದೂ ಧರ್ಮದ  ರಕ್ಷಣೆಯಾಗುತ್ತದೆ ಎಂಬುದು ಬರೇ ಭ್ರಮೆ. ಮುಸ್ಲಿಮರನ್ನು ಬೈಯುವ ಭಾಷಣಕಾರರಿಗೆ ಹಿಂದೂ ಧರ್ಮದೊಂದಿಗೆ ಗುರುತಿಸಿಕೊಂಡ  ಸಂಘಟನೆಗಳು ವೇದಿಕೆ ನಿರ್ಮಿಸಿ ಕೊಡುವುದರಿಂದ ಹಿಂದೂಗಳ ಬಗ್ಗೆ ಮುಸ್ಲಿಮರಲ್ಲಿ ನಕಾರಾತ್ಮಕ ಭಾವನೆ ಬರಲು  ಕಾರಣವಾಗಬಹುದೇ ಹೊರತು ಅದರಿಂದ ಹಿಂದೂ ಧರ್ಮಕ್ಕೆ ಸಾಮಾಜಿಕವಾಗಿ ಯಾವ ಲಾಭವೂ ಉಂಟಾಗದು. ಮುಸ್ಲಿಮರಿಗೆ  ಸಂಬಂಧಿಸಿಯೂ ಇವೇ ಮಾತು ಅನ್ವಯ. ಹಿಂದೂಗಳನ್ನು ಬೈಯುವ ಯಾವುದೇ ಭಾಷಣಕಾರ ಇಸ್ಲಾಮ್‌ಗೆ ಹಾನಿಯನ್ನಲ್ಲದೇ  ಯಾವ ಉಪಕಾರವನ್ನೂ ಮಾಡಲಾರ. ವ್ಯಕ್ತಿಯ ತಪ್ಪನ್ನು ಸಮುದಾಯದ ಮೇಲೆ ಹೊರಿಸಿ ಬೈಯುವುದರಿಂದ ಭಾಷಣವೇನೋ  ಆಕರ್ಷಕವಾಗಬಹುದು. ಆದರೆ, ಅದು ಭಾಷಣಕಾರ ಪ್ರತಿನಿಧಿಸುವ ಧರ್ಮದ ಬಗ್ಗೆ ನಾಗರಿಕರಲ್ಲಿ ನಕಾರಾತ್ಮಕ ಭಾವ ಸೃಷ್ಟಿಸುತ್ತದೆ. ತಪ್ಪು  ಚೈತ್ರಾಳದ್ದಾದರೂ ಹಾಲಶ್ರೀ ಸ್ವಾಮೀಜಿಗಳದ್ದಾದರೂ ವ್ಯಕ್ತಿಗತವಾಗಿ ನೋಡಬೇಕೇ ಹೊರತು ಒಂದು ಸಮುದಾಯದ್ದೋ  ಧರ್ಮದ್ದೋ   ಭಾಗವಾಗಿ ಅಲ್ಲ. ಆದರೆ, ಚೈತ್ರ ಇದಕ್ಕಿಂತ ಹೊರತಾಗಿದ್ದಾಳೆ. ಆಕೆ ತನ್ನ ಧರ್ಮದ ವಕ್ತಾರೆಯಂತೆ, ಧರ್ಮರಕ್ಷಕಿಯಂತೆ  ಬಿಂಬಿಸಿಕೊಂಡದ್ದಷ್ಟೇ ಅಲ್ಲ, ಆಕೆಗಾಗಿ ಪದೇ ಪದೇ ವೇದಿಕೆಗಳನ್ನು ಒದಗಿಸಿದ ಸಂಘಟನೆಗಳೂ ಕೂಡಾ ಧಾರ್ಮಿಕವಾಗಿ  ಗುರುತಿಸಿಕೊಂಡಿವೆ. ಪ್ರತಿ ಭಾಷಣದಲ್ಲೂ ಆಕೆ ಇಸ್ಲಾಮ್ ಮತ್ತು ಮುಸ್ಲಿಮರನ್ನು ಪ್ರಶ್ನೆಯ ಮೊನೆಯಲ್ಲಿ ನಿಲ್ಲಿಸುತ್ತಿದ್ದಾಗಲೂ ಚಪ್ಪಾಳೆ  ಬೀಳುತ್ತಿತ್ತೇ ಹೊರತು ಆಕೆಗೆ ವೇದಿಕೆಗಳೇನೂ ಕಡಿಮೆಯಾಗಲಿಲ್ಲ. ಆದ್ದರಿಂದಲೇ, ಆಕೆಯ ವ್ಯಕ್ತಿಗತ ತಪ್ಪು ಒಂದು ಸಮುದಾಯವನ್ನೇ  ಪ್ರಶ್ನೆಯಾಗಿ ಇರಿಯುತ್ತಿದೆ. 

ನಿಜವಾಗಿ,

ಮುಸ್ಲಿಮರನ್ನು ನಿಂದಿಸಿ ಭಾಷಣ ಮಾಡುವವರಲ್ಲಿ ಚೈತ್ರ ಮೊದಲಿಗಳಲ್ಲ. ಇಂಥವರು ಅನೇಕರಿದ್ದಾರೆ. ವ್ಯಕ್ತಿಗತ ತಪ್ಪುಗಳನ್ನು ಒಂದು  ಸಮುದಾಯದ ಮತ್ತು ಧರ್ಮದ ಮೇಲೆ ಹೊರಿಸಿ ಅವಮಾನಿಸುವುದನ್ನೇ ಇವರೆಲ್ಲ ಕಸುಬಾಗಿಸಿಕೊಂಡಿದ್ದಾರೆ. ಇದನ್ನೇ ಧರ್ಮರಕ್ಷಣೆ  ಎಂದೂ ನಂಬಿಸುತ್ತಿದ್ದಾರೆ. ಅಂದಹಾಗೆ, ಹಿಂದೂ ಆಗಲಿ, ಮುಸ್ಲಿಮ್ ಆಗಲಿ ಅಥವಾ ಇನ್ನಾವುದೇ ಸಮುದಾಯವಾಗಲಿ ತಪ್ಪಿತಸ್ತರನ್ನು  ದಂಡಿಸುವ ಅಧಿಕಾರವನ್ನು ಈ ದೇಶದಲ್ಲಿ ಪಡೆದಿಲ್ಲ. ಅದಿರುವುದು ಸರಕಾರದ ಕೈಯಲ್ಲಿ. ಆದ್ದರಿಂದ ಮುಸ್ಲಿಮ್ ವ್ಯಕ್ತಿಯ ತಪ್ಪನ್ನು ಆ  ಸಮುದಾಯ ಖಂಡಿಸಬಹುದೇ ಹೊರತು ದಂಡಿಸುವುದು ಅಪರಾಧವಾಗುತ್ತದೆ. ಆದ್ದರಿಂದ, ಅಪರಾಧ ಕೃತ್ಯವೆಸಗುವ ಮುಸ್ಲಿಮ್  ವ್ಯಕ್ತಿಯನ್ನು ಮುಸ್ಲಿಮ್ ಸಮುದಾಯ ಯಾಕೆ ದಂಡಿಸುವುದಿಲ್ಲ ಎಂಬ ಪ್ರಶ್ನೆಯೊಂದನ್ನು ಎಸೆದು ಆ ಬಳಿಕ ಮುಸ್ಲಿಮ್ ಸಮುದಾಯ  ಆತನ ಅಪರಾಧದ ಜೊತೆಗಿದೆ ಎಂಬ ತೀರ್ಪು ಕೊಡುತ್ತಾ ಸಮಾಜದಲ್ಲಿ ಮುಸ್ಲಿಮ್ ದ್ವೇಷವನ್ನು ಬಿತ್ತುವ ಪ್ರಯತ್ನ ಈ ಎಲ್ಲ  ಭಾಷಣಕಾರರಿಂದ ಸಾಮಾನ್ಯವಾಗಿ ನಡೆಯುತ್ತಿದೆ. ವ್ಯಕ್ತಿಗತ ತಪ್ಪನ್ನೇ ಮುಸ್ಲಿಮ್ ಸಮುದಾಯವನ್ನು ನಿಂದಿಸುವುದಕ್ಕೆ ಈ ಎಲ್ಲ ದ್ವೇಷ  ಭಾಷಣಕಾರರು ಬಳಸುತ್ತಿದ್ದಾರೆ. ಇದನ್ನು ಹಿಂದೂ-ಮುಸ್ಲಿಮರೆಲ್ಲರೂ ವಿರೋಧಿಸುವ ಪ್ರಕ್ರಿಯೆ ಪ್ರಾರಂಭವಾಗಬೇಕು. ದ್ವೇಷಭಾಷಣ  ಮಾಡುವ ಯಾರೇ ಇರಲಿ, ತಕ್ಷಣ ಅವರನ್ನು ವೇದಿಕೆಯಿಂದ ಕೆಳಗಿಳಿಸುವ ಮತ್ತು ಮುಂದೆ ಅವರಿಗೆ ವೇದಿಕೆ ಒದಗಿಸದಿರುವ  ನಿರ್ಧಾರವನ್ನು ಹಿಂದೂ-ಮುಸ್ಲಿಮರು ಕೈಗೊಳ್ಳಬೇಕು. ಹಿಂದೂ ಧರ್ಮದ ಬಗ್ಗೆ ಹಿಂದೂ ವಿದ್ವಾಂಸರು ಮಾತಾಡಲಿ. ಮುಸ್ಲಿಮರಲ್ಲೂ  ಇದೇ ಬೆಳವಣಿಗೆ ನಡೆಯಲಿ. ದ್ವೇಷ ಭಾಷಣಕಾರರು ಧರ್ಮಕ್ಕೆ ಅಪಾಯಕಾರಿಗಳೇ ಹೊರತು ಧರ್ಮರಕ್ಷಕರಲ್ಲ. ಚೈತ್ರ ಎಲ್ಲರಿಗೂ  ಪಾಠವಾಗಲಿ.

Monday 18 September 2023

ಬೀಫ್‌ನಲ್ಲಿ ಗೋಮಾಂಸ ಇಲ್ಲವೇ?

 



ಬೀಫ್ ರಫ್ತಿನಲ್ಲಿ ಭಾರತ ಜಗತ್ತಿನಲ್ಲೇ ನಾಲ್ಕನೇ ಸ್ಥಾನದಲ್ಲಿದೆ ಎಂಬ ಸುದ್ದಿ ಕಳೆದವಾರ ಬಿಡುಗಡೆಗೊಂಡ ಮರುದಿನ ನಟಿ ಐಂದ್ರಿತಾ ರೇ ಮಾಡಿದ ಟ್ವೀಟ್ಗಿ ಮಾಧ್ಯಮಗಳ ಗಮನ ಸೆಳೆದಿತ್ತು. ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಟ್ರಕ್ಸ ನಲ್ಲಿ ಗೋಮಾಂಸ ಸಾಗಿಸಲಾಗುತ್ತಿದೆ ಎಂದು ಹೇಳಿ ವೀಡಿಯೊಂದನ್ನು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ಯಾಗ್ ಮಾಡಿದ್ದರು. ಆದರೆ ಐಂದ್ರಿತಾ  ಅವರ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ ಎಂದು ಆ ಬಳಿಕ ಬೆಂಗಳೂರು ಡಿಸಿಪಿ ಸಿ.ಕೆ. ಬಾಬಾ ಸ್ಪಷ್ಟಪಡಿಸಿದರು. ವಾಹನದಲ್ಲಿ ಮೂಳೆಗಳು,  ಕೊಂಬುಗಳು, ಚರ್ಮ ಮತ್ತು ಪ್ರಾಣಿಗಳ ಉಪಉತ್ಪನ್ನಗಳು ಪತ್ತೆಯಾಗಿದ್ದು ಅದು ಗೋವಿನದ್ದಲ್ಲ ಅಥವಾ ಗೋಮಾಂಸವಲ್ಲ ಎಂದು  ವಿವರಿಸಿದ್ದರು. ಪತ್ತೆಯಾದ ಈ ತ್ಯಾಜ್ಯವು ಬಿಬಿಎಂಪಿ ಪೂರ್ವ ವಿಭಾಗದ ಕಸಾಯಿಖಾನೆಗೆ ಸಂಬಂಧಿಸಿದ್ದು ಎಂದೂ ಹೇಳಿದ್ದರು. ಈ  ಸ್ಪಷ್ಟೀಕರಣದ ಬೆನ್ನಿಗೇ ಐಂದ್ರಿತಾ ರೇ ತನ್ನ ಟ್ವೀಟ್ ಅನ್ನು ಅಳಿಸಿ ಹಾಕಿದ್ದರು. ಅಂದಹಾಗೆ,

ಗೋಮಾಂಸ  ಎಂಬ ಪದ ಕೇಳಿದ ಕೂಡಲೇ ಬೆಚ್ಚಿ ಬೀಳುವ ಒಂದು ಗುಂಪಿನ ಮುಗ್ಧ ಸದಸ್ಯೆಯೇ ಈ ಐಂದ್ರಿತಾ ರೇ ಹೊರತು  ಆಕೆಯೇನೂ ಒಂಟಿಯಲ್ಲ. ಐಂದ್ರಿತಾರಂತೆ  ಭಾವುಕವಾಗುವ, ಹಿಂದು-ಮುಂದು  ಆಲೋಚಿಸದೇ ಮಾತಾಡುವ ಮತ್ತು ಹತ್ಯೆಗೂ  ಸಿದ್ಧವಾಗುವ ದೊಡ್ಡದೊಂದು ಗುಂಪು ಈ ದೇಶದಲ್ಲಿದೆ. ಈ ಗುಂಪಿಗೆ ಗೋರಾಜಕೀಯದ ಮಾಹಿತಿಯೇ ಇರುವುದಿಲ್ಲ ಅಥವಾ  ಗೊತ್ತಿರುವ ಯಾವ ಮಾಹಿತಿಯನ್ನೂ ನಂಬದಷ್ಟು ಅವು ಬುದ್ಧಿಭ್ರಮಣೆಗೆ ಒಳಗಾಗಿರುತ್ತವೆ. ಈ ಗುಂಪಿಗೆ ನೇತೃತ್ವವನ್ನು ನೀಡುವವರು  ಅಷ್ಟರ ಮಟ್ಟಿಗೆ ಈ ಗುಂಪಿನ ಮೆದುಳು ತೊಳೆದಿರುತ್ತಾರೆ. ನಿಜವಾಗಿ,

ಐಂದ್ರಿತಾ ರೇ ಹಂಚಿಕೊಂಡ  ವೀಡಿಯೋ ಮತ್ತು ಆ ಬಳಿಕ ಡಿಸಿಪಿ ಕೊಟ್ಟ ಸ್ಪಷ್ಟನೆಯಲ್ಲಿ ಕೆಲವು ಸತ್ಯಗಳಿವೆ. ಬೆಂಗಳೂರಿನಲ್ಲಿ  ಕಸಾಯಿಖಾನೆಗಳಿವೆ ಎಂಬ ಸತ್ಯವೂ ಇದರಲ್ಲಿ ಒಂದು. ಈ ಕಸಾಯಿಖಾನೆಗಳು ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ  ಬಾಗಿಲು ತೆರೆದಿರುವುದಲ್ಲ ಮತ್ತು ಕಸಾಯಿಖಾನೆ ಎಂಬುದು ತರಕಾರಿ ಕತ್ತರಿಸುವ ಅಂಗಡಿಯೂ ಅಲ್ಲ. ಈ ಕಸಾಯಿಖಾನೆಗಳು  ಸರಕಾರದ ಅಧೀನದಲ್ಲಿವೆ ಮತ್ತು ವರ್ಷಂಪ್ರತಿ ಸರಕಾರ ಏಲಂ ಕರೆದು ಅವನ್ನು ಹಂಚುತ್ತಲೂ ಇದೆ. ರಾಜ್ಯಾದ್ಯಂತ ನೂರಕ್ಕಿಂತಲೂ  ಅಧಿಕ ಅಧಿಕೃತ ಕಸಾಯಿಖಾನೆಗಳಿವೆ. ಮಾಂಸ ಮಾಡುವುದೇ ಇವುಗಳ ಉದ್ದೇಶ. ನಿಜವಾಗಿ, ಬೊಮ್ಮಾಯಿ ಸರಕಾರ ಗೋಹತ್ಯಾ  ನಿಷೇಧ ಕಾಯ್ದೆಯನ್ನು ಜಾರಿಗೆ ತಂದಾಗ ಐಂದ್ರಿತಾ ಪ್ರತಿನಿಧಿಸುವ ‘ಗೋಪ್ರೇಮಿ ಗುಂಪನ್ನು’ ದಾರಿತಪ್ಪಿಸುವಲ್ಲಿ ಯಶಸ್ವಿಯಾಗಿತ್ತು.  ಗೋಹತ್ಯೆಯನ್ನು ನಿಷೇಧಿಸುತ್ತೇವೆ ಎಂದು ಹೇಳುತ್ತಲೇ ಗೋಮಾಂಸಕ್ಕೆ ನಿಷೇಧವಿಲ್ಲ ಎಂದೂ ಬೊಮ್ಮಾಯಿ ಸರಕಾರ ಹೇಳಿತ್ತು ಮತ್ತು  ರಾಜ್ಯದ ಯಾವುದೇ ಮಾಂಸದಂಗಡಿಯಲ್ಲಿ ಗೋಮಾಂಸ ಯಥೇಚ್ಚ ಲಭ್ಯವಾಗುತ್ತಿತ್ತು. ಗೋಹತ್ಯೆಗೆ ನಿಷೇಧವಿಲ್ಲದ ಕೇರಳ ಮುಂತಾದ  ರಾಜ್ಯಗಳಿಂದ ರಾಜ್ಯದೊಳಗೆ ಗೋಮಾಂಸ ಆಮದಾಗುತ್ತಿತ್ತು. ಅಷ್ಟಕ್ಕೂ, ಒಂದು ಸರಕಾರ ಗೋಹತ್ಯೆಯ ವಿರೋಧಿ ಎಂದಾದರೆ,  ಗೋಮಾಂಸಕ್ಕೆ ಅವಕಾಶ ಕೊಡುವುದರ ಉದ್ದೇಶವೇನು? ತನ್ನ ರಾಜ್ಯದಲ್ಲಿ ಗೋಹತ್ಯೆಗೆ ಅವಕಾಶ ಇಲ್ಲವೆಂದ ಮೇಲೆ ಹೊರರಾಜ್ಯದಲ್ಲಿ  ಹತ್ಯೆ ಮಾಡಿದ ಗೋವಿನ ಮಾಂಸವನ್ನು ತಿನ್ನುವುದಕ್ಕೆ ಅವಕಾಶ ಮಾಡಿಕೊಡುವುದೇಕೆ? ಗೋಹತ್ಯೆಯ ವಿರೋಧವು ಗೋಮಾಂಸದ  ಮೇಲೆ ಪ್ರೀತಿಯಾಗಿ ಬದಲಾದುದೇಕೆ? ಒಂದುರೀತಿಯಲ್ಲಿ, 

ಬೊಮ್ಮಾಯಿ ಸರಕಾರಕ್ಕೆ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಾಗುವುದು  ಬೇಕಾಗಿರಲಿಲ್ಲ. ಆದರೆ ತಾನು ಗೋಹತ್ಯಾ ವಿರೋಧಿ ಎಂಬುದಾಗಿ ತನ್ನ ಕಾರ್ಯಕರ್ತರನ್ನು ನಂಬಿಸಿತ್ತು. ಆ ನಂಬಿಕೆಯನ್ನು  ಉಳಿಸಬೇಕಾದರೆ ಕಾಯ್ದೆ ಜಾರಿಯ ನಾಟಕ ನಡೆಯಬೇಕಿತ್ತು. ಇದೇವೇಳೆ, ಹೈನುದ್ಯಮ ಮತ್ತು ಭತ್ತ ಇತ್ಯಾದಿ ಕೃಷಿಯಲ್ಲಿ  ತೊಡಗಿಸಿಕೊಂಡಿರುವ ರೈತರನ್ನು ಎದುರು ಹಾಕಿಕೊಳ್ಳುವಂತೆಯೂ ಇರಲಿಲ್ಲ. ಪೂರ್ಣ ಪ್ರಮಾಣದಲ್ಲಿ ಗೋವು ಮತ್ತು ಎತ್ತುಗಳ  ಹತ್ಯೆಯನ್ನು ನಿಷೇಧಿಸುವುದೆಂದರೆ, ರೈತರ ಕತ್ತು ಹಿಸುಕಿದಂತೆ. ಗೋವು ಸಹಿತ ಜಾನುವಾರುಗಳ ಸಾಕಾಣಿಕೆ ಮತ್ತು ಮಾರಾಟ ಎರಡೂ  ಧಾರ್ಮಿಕ ಶ್ರದ್ಧೆಯ ಆಚೆಗೆ ಲಾಭ-ನಷ್ಟಗಳ ಲೆಕ್ಕಾಚಾರವನ್ನೂ ಹೊಂದಿವೆ. ಪುರಾತನ ಕಾಲದಂತೆ ಹೈನುದ್ಯಮಿಯ ಯಾವುದೇ ಹಸು  ಗರ್ಭ ಧರಿಸುವುದಿಲ್ಲ. ವರ್ಷದ 365 ದಿನವೂ ಹಾಲು ಹಿಂಡುವ ಬಯಕೆಯಿಂದಲೇ ಹೈನುದ್ಯಮಿ ಹಸು ಸಾಕುತ್ತಾರೆ. ಅದಕ್ಕಾಗಿಯೇ  ಕೃತಕ ವಿಧಾನಗಳ ಮೂಲಕ ಗರ್ಭ ಧರಿಸುವಂತೆ ಮಾಡುತ್ತಾರೆ. ಹೆಚ್ಚೆಚ್ಚು ಹಾಲು ಕೊಡುವ ಹಸುಗಳ ತಳಿಗಳನ್ನು ತಂದು  ಸಾಕಲಾಗುತ್ತದೆ. ಅಲ್ಲದೇ, ಹುಟ್ಟುವ ಗಂಡು ಕರುಗಳನ್ನು ಹೆಚ್ಚು ಸಮಯ ಹಟ್ಟಿಯಲ್ಲಿ ಇರಿಸಿಕೊಳ್ಳುವುದೂ ಇಲ್ಲ. ಹಾಲಿಗಾಗಿ ಹಸು  ಸಾಕುವ ಮತ್ತು ಹೈನುದ್ಯಮವನ್ನೇ ಕಸುಬಾಗಿಸಿಕೊಂಡವರ ಹಟ್ಟಿಯಲ್ಲಿ ಹೆಣ್ಣು ಕರುಗಳೇ ಯಾಕಿವೆ ಎಂಬ ಪತ್ತೆ ಕಾರ್ಯಕ್ಕೆ ತೊಡಗಿರುವ  ಯಾರಿಗೂ ಹಸು ಸಾಕಾಣಿಕೆಯ ಗಣಿತ ಅರ್ಥವಾಗುತ್ತದೆ. ಇಲ್ಲಿರುವುದು ಬರೇ ಧಾರ್ಮಿಕ ಶ್ರದ್ಧೆಯಲ್ಲ, ಪಕ್ಕಾ ಲಾಭ-ನಷ್ಟ ಲೆಕ್ಕಾಚಾರ.  ಇದರಾಚೆಗೆ ಶ್ರದ್ಧಾವಂತರೂ ಇದ್ದಾರೆ. ಅವರು ವ್ಯಾಪಾರಿ ಉದ್ದೇಶದಿಂದ ಹಸು ಸಾಕುವುದೂ ಇಲ್ಲ. ಈ ಎಲ್ಲ ವಾಸ್ತವ ಬೊಮ್ಮಾಯಿ  ಸರಕಾರದ ಮುಂದಿರುವುದರಿಂದಲೇ ಅದು ಗೋಹತ್ಯೆಯನ್ನು ನಿಷೇಧಿಸಿದಂತೆ ಮಾಡಿ ಗೋಮಾಂಸ ಲಭ್ಯತೆಗೆ ಮತ್ತು ಸೇವನೆಗೆ  ಅವಕಾಶ ಮಾಡಿಕೊಟ್ಟಿತು. ಹಾಗಂತ,

ಹೀಗೆ ಮಾಡುವುದರಿಂದ ಅನಧಿಕೃತ ಹತ್ಯೆಗೆ ಅವಕಾಶವಾಗುತ್ತದೆ ಎಂಬುದು ಸರಕಾರಕ್ಕೆ ಗೊತ್ತಿರಲಿಲ್ಲ ಎಂದಲ್ಲ. ಅನಧಿಕೃತ ಹತ್ಯೆಗೆ  ಬಾಗಿಲೊಂದನ್ನು ತೆರೆದಿಡುವುದರಿಂದ ಹಸು-ಎತ್ತುಗಳಿಗೆ ಬೇಡಿಕೆ ಸೃಷ್ಟಿಯಾಗುತ್ತದೆ. ತಮಗೆ ಬೇಡದ ಹಸುವನ್ನೋ ಎತ್ತುವನ್ನೋ  ರೈತರು ಈ ಅನಧಿಕೃತ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಇದರಿಂದಾಗಿ ರೈತರು ಸರಕಾರದ ವಿರೋಧಿಗಳಾಗುವುದು ತಪ್ಪುತ್ತದೆ.  ಅಲ್ಲದೇ, ಹೀಗೆ ಅನಧಿಕೃತವಾಗಿ ನಡೆಯುವ ಮಾರಾಟ-ಸಾಗಾಟದ ಅಲ್ಲೊಂದು -ಇಲ್ಲೊಂದು  ಆಯ್ದ ಪ್ರಕರಣವನ್ನು ಪತ್ತೆ ಹಚ್ಚಿದಂತೆ  ಮಾಡಿ, ‘ಗೋಹತ್ಯಾ ನಿಷೇಧ ಕಾಯ್ದೆಗೆ ತಾನೆಷ್ಟು ಬದ್ಧ’ ಎಂಬುದನ್ನು ತೋರಿಸಿಕೊಂಡಂತೆಯೂ ಆಗುತ್ತದೆ. ಬೊಮ್ಮಾಯಿ ಸರಕಾರ  ಮಾಡಿದ್ದು ಇದನ್ನೇ. ನಿಜವಾಗಿ,

ಗೋಮಾಂಸ ಎಂಬ ಪದ ಕೇಳಿದ ಕೂಡಲೇ ಬೆಚ್ಚಿಬೀಳುವ ಗುಂಪನ್ನು ಸರಕಾರಗಳು ವಂಚಿಸುತ್ತಾ ಬಂದ ಅನೇಕ ಸಂಗತಿಗಳಿವೆ.  1971ರಲ್ಲಿ ಬರೇ 1,79,000 ಟನ್ ಬೀಫ್ ರಫ್ತು ಮಾಡಿದ್ದ ಭಾರತವು 2020ರಲ್ಲಿ 13,76,000 ಟನ್ ರಫ್ತು ಮಾಡಿತ್ತು. ಮೊನ್ನೆ ಮೊನ್ನೆ  ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಆಗ್ರಿಕಲ್ಚರ್ ಬಿಡುಗಡೆಗೊಳಿಸಿದ ವರದಿ ಪ್ರಕಾರ ಬೀಫ್ ರಫ್ತಿನಲ್ಲಿ ಭಾರತ ನಾಲ್ಕನೇ  ಸ್ಥಾನದಲ್ಲಿದೆ. ಮೊದಲ ಸ್ಥಾನ ಬ್ರೆಝಿಲ್‌ಗಾದರೆ ಆಸ್ಟ್ರೇಲಿಯಾಕ್ಕೆ ಎರಡನೇ ಸ್ಥಾನ. ಅಮೇರಿಕ ನಂಬರ್ ಮೂರು. 2013-14ರಲ್ಲಿ  13,14,161 ಮೆಟ್ರಿಕ್ ಟನ್ ಬೀಫ್ ರಫ್ತು ಮಾಡಿದ್ದ ಭಾರತವು 2014-15ರಲ್ಲಿ 14,75,540 ಮೆಟ್ರಿಕ್ ಟನ್ ಬೀಫ್ ರಫ್ತು ಮಾಡಿತ್ತು. ಬೀ ಫ್ ಮಾಂಸವಿದೆಯೆಂದು ಹೇಳಿ ಉತ್ತರ ಪ್ರದೇಶದಲ್ಲಿ ಅಖ್ಲಾಕ್ ಎಂಬವರನ್ನು ಮನೆಗೆ ನುಗ್ಗಿ ಹತ್ಯೆ ನಡೆಸಲಾದ 2015-16ರಲ್ಲಿ ಭಾರತದಿಂದ ಬೀಫ್ ರಫ್ತಿಗೇನೂ ತೊಂದರೆಯಾಗಿಲ್ಲ. ಆ ವರ್ಷ 13,14,161 ಮೆಟ್ರಿಕ್ ಟನ್‌ನಷ್ಟು ಮಾಂಸವನ್ನು ರಫ್ತು ಮಾಡಲಾಗಿತ್ತು.  ಅಲ್ಲದೇ, ಬೀಫ್ ರಫ್ತು ಮಾಡುವಲ್ಲಿ ವಿವಿಧ ರಾಜ್ಯಗಳ ಕೊಡುಗೆಯನ್ನೂ ಗಮನಿಸಬೇಕು. ಬೀಫ್ ರಫ್ತಿನಲ್ಲಿ ಅತಿದೊಡ್ಡ ಕೊಡುಗೆ  ಮುಂಬೈ ನಗರಿಯದ್ದು. ಭಾರತ ರಫ್ತು ಮಾಡುವ ಒಟ್ಟು ಬೀಫ್‌ನ ಪೈಕಿ 39.94% ಮಾಂಸವನ್ನು ಮುಂಬೈ ಒದಗಿಸುತ್ತದೆ. ಬಳಿಕದ ಸ್ಥಾನ  ದೆಹಲಿ, ಉತ್ತರ ಪ್ರದೇಶದ ಅಲೀಘರ್, ಗಾಝಿಯಾಬಾದ್, ಆಗ್ರಾ ಇತ್ಯಾದಿ ನಗರಗಳಿಗೆ ಸಲ್ಲುತ್ತದೆ. ಆದರೆ,

ಗೋಹತ್ಯೆ ನಿಷೇಧ ಎಂಬ ಘೋಷಣೆಯಿಂದ ರೋಮಾಂಚಿತವಾಗುವ ಮತ್ತು ಬೀಫ್ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂಬ  ಸುದ್ದಿಯನ್ನು ಸುಳ್ಳೆಂದೋ ಅಥವಾ ಅದರಲ್ಲಿ ಗೋಮಾಂಸವೇ ಇಲ್ಲ ಎಂದೋ ನಂಬುತ್ತಾ ಬದುಕುತ್ತಿರುವ ಗುಂಪಿಗೆ ತಾವು  ರಾಜಕೀಯದ ದಾಳ ಎಂಬುದು ಗೊತ್ತೇ ಇಲ್ಲ ಅಥವಾ ಅವರ ಮೆದುಳನ್ನು ಅಷ್ಟರ ಮಟ್ಟಿಗೆ ತೊಳೆದು ಬಿಡುವಲ್ಲಿ ಅವರ ನಾಯಕರು  ಯಶಸ್ವಿಯಾಗಿದ್ದಾರೆ. ಮಾತ್ರವಲ್ಲ, ಮೋದಿ ಸರಕಾರವು ಎಮ್ಮೆ, ಕೋಣ ಇತ್ಯಾದಿ ಪ್ರಾಣಿಗಳ ಮಾಂಸವನ್ನಷ್ಟೇ ರಫ್ತು ಮಾಡುತ್ತಿದ್ದು ಆ  ಬೀಫ್‌ನಲ್ಲಿ ಗೋಮಾಂಸ ಸೇರಿಲ್ಲ ಎಂದೂ ನಂಬಿಸುತ್ತಿದ್ದಾರೆ. ಒಂದುವೇಳೆ, ಭಾರತದಿಂದ ರಫ್ತು ಮಾಡುವ ಬೀಫ್‌ನಲ್ಲಿ ಗೋಮಾಂಸ  ಇಲ್ಲ ಎಂಬುದೇ ನಿಜವಾಗಿದ್ದರೆ ಈ ಹಿಂದಿನ ಕಾಂಗ್ರೆಸ್ ಸರಕಾರಕ್ಕೂ ಇದೇ ಮಾತು ಅನ್ವಯವಾಗಬೇಕಾಗುತ್ತದೆ. ಆಗಲೂ ಭಾರತದಿಂದ  ರಫ್ತಾಗುತ್ತಿದ್ದ ಮಾಂಸಕ್ಕೆ ಬೀಫ್ ಎಂದೇ ಹೆಸರಿತ್ತು. ಈಗಲೂ ಅದೇ ಹೆಸರಿದೆ. ಆದರೆ, ಈ ಹಿಂದಿನ ಸರಕಾರ ರಫ್ತು ಮಾಡುತ್ತಿದ್ದ ಬೀಫ್‌ಗೆ ಗೋಮಾಂಸ ಎಂಬ ವ್ಯಾಖ್ಯಾನ ಕೊಟ್ಟಿದ್ದ ಇದೇ ಮಂದಿ ಇದೀಗ ಈಗಿನ ಬೀಫ್‌ಗೆ ಎಮ್ಮೆ-ಕೋಣ, ಎತ್ತು ಎಂದೆಲ್ಲ  ಹೇಳುವುದಾದರೆ ಅದನ್ನು ಕಾಪಟ್ಯ, ದಗಲುಬಾಜಿತನ ಎಂದೇ ಹೇಳಬೇಕಾಗುತ್ತದೆ. ನಿಜವಾಗಿ,

ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ನಟಿ ಐಂದ್ರಿತಾ ರೇ ತಂದ ವೀಡಿಯೋ ಈ ದೇಶದ ಮುಗ್ಧ ಗುಂಪೊಂದರ  ಪ್ರತೀಕದಂತಿತ್ತು.

ಜಿಹಾದ್‌ಗೆ ಸಿದ್ಧವಾಗಬೇಕಾದ ಮುಸ್ಲಿಮ್ ಸಮುದಾಯ





2021 ಸೆಪ್ಟೆಂಬರ್‌ನಲ್ಲಿ ಅದಾನಿ ಮಾಲಕತ್ವದ ಗುಜರಾತ್‌ನ ಮುಂದ್ರಾ ನಿಲ್ದಾಣದಲ್ಲಿ ಮೂರು ಸಾವಿರ ಕಿಲೋ ಗ್ರಾಮ್ ಹೆರಾಯಿನನ್ನು  ವಶಪಡಿಸಿಕೊಳ್ಳಲಾಯಿತು. ಇದರ ಬೆಲೆ 20 ಸಾವಿರ ಕೋಟಿ ರೂಪಾಯಿ. 2022 ಮೇಯಲ್ಲಿ 125 ಕೋಟಿ ರೂಪಾಯಿ ಮೌಲ್ಯದ  ಮಾದಕ ವಸ್ತುವನ್ನು ಆಂಧ್ರಪ್ರದೇಶದ ಶಮ್‌ಶಾದ್‌ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಯಿತು. 2022 ಜುಲೈಯಲ್ಲಿ ಗುಜರಾತ್‌ನ ಮುಂದ್ರಾ ನಿಲ್ದಾಣ ಮತ್ತೆ ಸುದ್ದಿಯ ಕೇಂದ್ರವಾಯಿತು. 376 ಕೋಟಿ ರೂ ಪಾಯಿಯ ಹೆರಾಯಿನನ್ನು ವಶಪಡಿಸಿಕೊಳ್ಳಲಾಯಿತು. 2023 ಜೂನ್‌ನಲ್ಲಂತೂ ದೇಶವೇ ಬೆಚ್ಚಿ ಬೀಳುವ ಆಘಾತಕಾರಿ ಸುದ್ದಿ  ಹೊರಬಿತ್ತು. ಕೇರಳದಲ್ಲಿ 25 ಸಾವಿರ ಕೋಟಿ ರೂಪಾಯಿ ಮೊತ್ತದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಅನ್ನುವುದೇ ಈ  ಮಾಹಿತಿ. ಬೋಟ್‌ನಲ್ಲಿ ಈ ಮಾದಕ ವಸ್ತುವನ್ನು ಸಾಗಿಸಲಾಗುತ್ತಿತ್ತು. ಅಷ್ಟಕ್ಕೂ,

ಈ ಭಾರೀ ಪ್ರಮಾಣದ ಮಾದಕ ವಸ್ತುಗಳು ಸಾಗುವುದಾದರೂ ಎಲ್ಲಿಗೆ? ಇದರ ಗ್ರಾಹಕರು ಯಾರು? ಮಾರಾಟಗಾರರು ಯಾರು  ಎಂಬೆಲ್ಲಾ ಪ್ರಶ್ನೆಗಳೊಂದಿಗೆ ಪತ್ತೆ ಕಾರ್ಯಕ್ಕೆ ತೊಡಗಿದರೆ ಬೆಚ್ಚಿ ಬೀಳಿಸುವ ಮಾಹಿತಿಗಳು ಟನ್ನುಗಟ್ಟಲೆ ಸಿಗುತ್ತವೆ. ಕಳೆದವಾರ ಜಮ್ಮು- ಕಾಶ್ಮೀರದ ಡಿಜಿಪಿ ದಿಲ್‌ಬಾಗ್ ಸಿಂಗ್ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಕಾಶ್ಮೀರದ ನಿಜ ಸಮಸ್ಯೆ ಉಗ್ರವಾದವಲ್ಲ, ಮಾದಕ  ಪದಾರ್ಥಗಳು ಎಂದೂ ಅವರು ಹೇಳಿದರು. 2019ರಿಂದ 2022ರ ನಡುವೆ ಕಾಶ್ಮೀರದಲ್ಲಿ ಹೆರಾಯಿನ್ ಪತ್ತೆಯಲ್ಲಿ 100%  ಹೆಚ್ಚಳವಾಗಿದೆ, ಎಫ್‌ಐಆರ್‌ನಲ್ಲಿ 60% ಹೆಚ್ಚಳವಾಗಿದೆ ಎಂದೂ ಹೇಳಿದರು. ಕಾಕತಾಳೀಯವೆಂಬಂತೆ  ದ ಕ ಜಿಲ್ಲೆಯ ಮಂಗಳೂರು ನಗರ  ಪೊಲೀಸ್  ಕಮೀಶನರ್ ಕುಲದೀಪ್ ಕುಮಾರ್ ಜೈನ್ ಕೂಡಾ ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ಕರೆದು, ಜಿಲ್ಲೆಯು ಹೇಗೆ ಮಾದಕ  ಪದಾರ್ಥಗಳ ಅಡ್ಡೆಯಾಗುತ್ತಿದೆ ಎಂಬ ಮಾಹಿತಿಯನ್ನು ಬಿಚ್ಚಿಟ್ಟರು. 2023ರ ಜನವರಿಯಿಂದ ಡ್ರಗ್ಸ್ ಗೆ  ಸಂಬಂಧಿಸಿ 243 ಪ್ರಕರಣಗಳು  ದಾಖಲಾಗಿದ್ದು, 299 ಮಂದಿಯ ಮೇಲೆ ಕೇಸು ದಾಖಲಾಗಿದೆ. 1 ಕೋಟಿ ರೂಪಾಯಿ ಮೊತ್ತದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ, 106  ಡ್ರಗ್ಸ್ ಮಾರಾಟಗಾರರನ್ನು ಬಂಧಿಸಲಾಗಿದೆ ಎಂಬೆಲ್ಲಾ  ಮಾಹಿತಿಯನ್ನು ಹಂಚಿಕೊಂಡರು. ನಿಜವಾಗಿ,

ನಾಲ್ಕು ಬಂದೂಕು, ಹತ್ತು ಜಿಲೆಟಿನ್ ಕಡ್ಡಿಗಳು, 6 ಚೂರಿ, 3 ಮೊಬೈಲ್ ಮತ್ತು ಒಂದು ನಕಾಶೆಯನ್ನು ಪೊಲೀಸರು ವಶ ಪಡಿಸಿಕೊಂಡರೆ ಅದರ ಸುತ್ತ ದಿನವಿಡೀ ಚರ್ಚೆ ನಡೆಸುವ ನಮ್ಮ ಪತ್ರಿಕೆ ಮತ್ತು ಟಿ.ವಿ. ಮಾಧ್ಯಮಗಳು ಸಾವಿರಾರು ಕೋಟಿ ರೂ ಪಾಯಿ ಮೊತ್ತದ ಮಾದಕ ವಸ್ತುಗಳು ವಶವಾದುದನ್ನು ಚರ್ಚೆಗೆ ಅನರ್ಹ ವಿಷಯವೆಂಬಂತೆ  ನಿರ್ಲಕ್ಷಿಸಿ ಬಿಡುತ್ತವೆ. ಒಂದುರೀತಿಯಲ್ಲಿ,  ಬಾಂಬ್ಲೂ ಗಿಂತಲೂ   ಈ ಮಾದಕ ವಸ್ತು ಅಪಾಯಕಾರಿ. ಅದು ಯುವ ಸಮೂಹವನ್ನು ಸಂಪೂರ್ಣ ಅನುತ್ಪಾದಕವಾಗಿ ಮಾರ್ಪಡಿಸಿ  ಬಿಡುತ್ತದೆ. ಹೆತ್ತವರನ್ನೇ ಹತ್ಯೆ ಮಾಡುವುದಕ್ಕೂ ಹೇಸದಂಥ ಮಕ್ಕಳನ್ನು ತಯಾರಿಸುತ್ತದೆ. ಯಾವುದೇ ವಿಧ್ವಂಸಕ ಕೃತ್ಯ ನಡೆಸುವುದಕ್ಕೆ  ಮತ್ತು ಹತ್ಯೆ, ಅನ್ಯಾಯ ಎಸಗುವುದಕ್ಕೆ ಇಂಥವರು ಸುಲಭದಲ್ಲಿ ಬಳಕೆಯಾಗುತ್ತಾರೆ. ಒಂದು ಮನೆಯಲ್ಲಿ ಓರ್ವ ವ್ಯಕ್ತಿ ಮಾದಕ ವಸ್ತು  ಬಳಕೆದಾರನಿದ್ದಾನೆಂದರೆ ಆ ಮನೆಯ ನೆಮ್ಮದಿ ಮಾತ್ರವಲ್ಲ, ಆ ಮನೆಯ ಪರಿಸರದ ಮನೆಗಳ ನೆಮ್ಮದಿಯೂ ಕೆಟ್ಟು ಹೋಗುತ್ತದೆ. ಆತ  ತನ್ನ ಅಕ್ಕ-ಪಕ್ಕದ ಮನೆಯ ಯುವಕರನ್ನೂ ಇದರ ದಾಸರನ್ನಾಗಿ ಮಾಡುತ್ತಾನೆ. ಆತನ ಇಚ್ಛೆಗೆ ಸ್ಪಂದಿಸದಿದ್ದರೆ ಹತ್ಯೆ ನಡೆಸುವುದಕ್ಕೂ  ಮುಂದಾಗಬಹುದು.

ಯಾವ ಜವಾಬ್ದಾರಿಯನ್ನೂ ವಹಿಸಿಕೊಳ್ಳದ ಮತ್ತು ಸದಾ ಅಮಲಿನಲ್ಲೇ  ತೇಲಾಡುವ ಒಂದು ನಿರುಪಯುಕ್ತ ಯುವ ತಲೆಮಾರನ್ನು ಈ  ಮಾದಕ ವಸ್ತುಗಳು ನಿರ್ಮಿಸುತ್ತವೆ. ಕಾಶ್ಮೀರದಿಂದ ದಕ್ಷಿಣ ಭಾರತದ ಕರಾವಳಿ ಭಾಗದ ವರೆಗೆ ಸದ್ಯ ಈ ಅಪಾಯಕಾರಿ ಸ್ಥಿತಿ ಇದೆ.  ಇದನ್ನು ಮಟ್ಟ ಹಾಕದಿದ್ದರೆ ಅದರ ಪರಿಣಾಮವನ್ನು ಮುಂದೆ ಪ್ರತಿ ಮನೆಯೂ ಎದುರಿಸಬೇಕಾಗಬಹುದು. ಈಗಾಗಲೇ ಕಾಶ್ಮೀರ ಈ  ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದೆ. ಕಾಶ್ಮೀರದ ಮಸೀದಿಯಿಂದ ಶಾಲೆಯ ವರೆಗೆ ಜನಜಾಗೃತಿ ಅಭಿಯಾನ ಪ್ರಾರಂಭವಾಗಿದೆ. ಧಾರ್ಮಿಕ  ಮುಖಂಡರು, ಮೌಲಾನಾರು ಮತ್ತು ಶಿಕ್ಷಕರು ಈಗಾಗಲೇ ಡ್ರಗ್ಸ್ ವಿರುದ್ಧ ಜಿಹಾದ್ ಘೋಷಿಸಿದ್ದಾರೆ. 2023ರಲ್ಲಿ ಈವರೆಗೆ 10 ಲಕ್ಷ   ಮಂದಿ ಕಾಶ್ಮೀರಿಗಳು ಡ್ರಗ್ಸ್ ಮಾಯಾಜಾಲಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿಯು ಪ್ರತಿ ಮನೆ ಮತ್ತು ಮಸೀದಿಗಳ ನಿದ್ದೆಗೆಡಿಸಿದೆ. ಅಲ್ಲಿನ ಮುಗಮ್ ಇಮಾಂಬರ ಎಂಬ ಸಂಘಟನೆಯು ಮನೆ ಮನೆ ಅಭಿಯಾನಕ್ಕೆ ಇಳಿದಿದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಸ್ಕ್ರೀನ್ ಟೆಸ್ಟ್  ಪ್ರಾರಂಭಿಸಲಾಗಿದೆ. ಅಂದಹಾಗೆ,

90%ಕ್ಕಿಂತಲೂ ಅಧಿಕ ಮುಸ್ಲಿಮರೇ ಇರುವ ನಾಡೊಂದು ಉಮ್ಮುಲ್ ಖಬಾಯಿಸ್ ಅಥವಾ ಕೆಡುಕುಗಳ ಮಾತೆ ಎಂದು ಇಸ್ಲಾಮ್  ಗುರುತಿಸಿರುವ ಅಮಲು ಪದಾರ್ಥಗಳಿಗೆ ಬಲಿಯಾಗಿರುವುದು ನಿಜಕ್ಕೂ ಆಘಾತಕಾರಿ. ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿಯೂ ಇದಕ್ಕಿಂತ  ಭಾರೀ ಭಿನ್ನವೇನೂ ಇಲ್ಲ. ಇಲ್ಲಿನ ಮಾದಕ ವಸ್ತು ಮಾರಾಟಗಾರರು ಮತ್ತು ಸೇವಿಸುವವರಲ್ಲಿ ದೊಡ್ಡದೊಂದು ಸಂಖ್ಯೆ  ಮುಸ್ಲಿಮರದ್ದಾಗಿದೆ. ಇದು ಕಹಿ ಸುದ್ದಿಯಾದರೂ ಜೀರ್ಣಿಸಿಕೊಳ್ಳಬೇಕಾಗಿದೆ. ವಾಸ್ತವವನ್ನು ಒಪ್ಪಿಕೊಳ್ಳದ ಹೊರತು ಪರಿಹಾರ  ಸಾಧ್ಯವಿಲ್ಲ. ಮುಸ್ಲಿಮ್ ಸಮುದಾಯದ ಯುವ ಪೀಳಿಗೆಯು ಈ ಕೆಡುಕುಗಳ ಮಾತೆಯನ್ನು ಅಪ್ಪಿಕೊಳ್ಳುತ್ತಿರುವುದಕ್ಕೆ ಕಾರಣಗಳೇನು?  ಅವರನ್ನು ಈ ಅಮಲು ಜಗತ್ತಿನೊಳಗೆ ವ್ಯವಸ್ಥಿತವಾಗಿ ತಳ್ಳಲಾಗುತ್ತಿದೆಯೇ? ಬಾಹ್ಯ ಸಂಚಿನ ಪರಿಣಾಮದಿಂದಾಗಿ ಅವರು  ತಮಗರಿವಿಲ್ಲದಂತೆಯೇ ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದಾರೆಯೇ? ಅಥವಾ ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳು ಅವರನ್ನು  ಈ ಅಮಲು ಸೇವಕರನ್ನಾಗಿ ಮಾರ್ಪಡಿಸುತ್ತಿದೆಯೇ? ಅಥವಾ ಇದರಾಚೆಗೆ ಬೇರೇನಾದರೂ ಕಾರಣಗಳು ಇವೆಯೇ? ಇವು ಏನೇ  ಇದ್ದರೂ,

ಮುಸ್ಲಿಮ್ ಸಮುದಾಯ ತುರ್ತಾಗಿ ಗಮನ ಹರಿಸಬೇಕಾದ ಸಂದರ್ಭ ಇದು. ಸಮುದಾಯದ ಯಾವನೇ ವ್ಯಕ್ತಿ ಯಾವುದಾದರೊಂದು  ಮಸೀದಿಯ ಜೊತೆಗೇ ಗುರುತಿಸಿಕೊಂಡೇ ಇರುತ್ತಾನೆ. ಇಂಥದ್ದೊಂದು  ವ್ಯವಸ್ಥೆ ಇನ್ನಾವ ಸಮುದಾಯದಲ್ಲೂ ಇಲ್ಲ. ಪ್ರತಿ ಮಸೀದಿಯೂ  ಮನಸ್ಸು ಮಾಡಿದರೆ ಮತ್ತು ಒಂದು ಮಸೀದಿಯು ಇನ್ನೊಂದು ಮಸೀದಿಯೊಂದಿಗೆ ಸೇರಿಕೊಂಡು ಕಾರ್ಯಪ್ರವೃತ್ತವಾದರೆ ಯುವ  ಸಮೂಹವನ್ನು ಅಪಾಯದಿಂದ ರಕ್ಷಿಸುವುದಕ್ಕೆ ಸಾಧ್ಯವಿದೆ. ಮಾದಕ ವಸ್ತುಗಳ ವಿರುದ್ಧ ಮಸೀದಿ ಕಮಿಟಿ ಜಿಹಾದ್ ಘೋಷಿಸಬೇಕು. ತನ್ನ ಮಸೀದಿ ವ್ಯಾಪ್ತಿಯಲ್ಲಿ ಮಾದಕ ವಸ್ತು ವಿರೋಧಿ ಅಭಿಯಾನ ಕೈಗೊಳ್ಳಬೇಕು. ಶುಕ್ರವಾರದ ಜುಮಾದಲ್ಲಿ ಮತ್ತು ಇನ್ನಿತರ  ಸಂದರ್ಭಗಳಲ್ಲಿ ಮಾದಕ ವಸ್ತುವಿನ ವಿರುದ್ಧ ಜನಜಾಗೃತಿ ಮೂಡಿಸಬೇಕು. ಮದ್ಯ ಮತ್ತು ಮಾದಕ ಪದಾರ್ಥಗಳ ಅಪಾಯದ ಕುರಿತು  ಮದ್ರಸ ವಿದ್ಯಾರ್ಥಿಗಳಿಗೆ ನಿರಂತರ ತಿಳುವಳಿಕೆ ನೀಡಬೇಕು. ಮಸೀದಿ ಕಮಿಟಿಯು ಈ ವಿಷಯಗಳಿಗೆ ಟಾಸ್ಕ್ ಫೋರ್ಸ್ ತಂಡವನ್ನು  ರಚಿಸಿ ತನ್ನ ವ್ಯಾಪ್ತಿಯ ಪ್ರತಿ ಮನೆಗೂ ಆ ತಂಡ ಭೇಟಿ ಕೊಡುವ ಮತ್ತು ಮನೆಯ ಪರಿಸ್ಥಿತಿಯನ್ನು ತಿಳಿಯುವ ಪ್ರಯತ್ನಕ್ಕಿಳಿಯಬೇಕು.  ತಮ್ಮ ಮಸೀದಿ ವ್ಯಾಪ್ತಿಯೊಳಗೆ ಮಾದಕ ಪದಾರ್ಥಗಳ ಮಾರಾಟ ಜಾಲ ಸಕ್ರಿಯವಾಗಿದ್ದರೆ ಪೊಲೀಸರಿಗೆ ಮಾಹಿತಿ  ಕೊಡುವಂತಾಗಬೇಕು. ಅಂದಹಾಗೆ,

ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಈಗಾಗಲೇ ಮಾದಕ ವಸ್ತು ವಿರೋಧಿ ಅಭಿಯಾನ ಆರಂಭವಾಗಿದೆ. ಇದು ದೀರ್ಘಕಾಲೀನ  ಜಿಹಾದ್. ವರದಕ್ಷಿಣೆಯ ವಿರುದ್ಧ ಯಶಸ್ವಿ ಜಿಹಾದ್ ನಡೆಸಿದ ಅನುಭವವೂ ಕರಾವಳಿ ಪ್ರದೇಶದ ಮುಸ್ಲಿಮ್ ಸಮುದಾಯಕ್ಕಿದೆ. ಈ  ಯಶಸ್ಸು ಒಂದೆರಡು ತಿಂಗಳುಗಳಲ್ಲಿ ಸಾಧ್ಯವಾದುದಲ್ಲ. ಭಾಷಣ ವೇದಿಕೆಯಿಂದ ಹಿಡಿದು ಸಾಂಸ್ಕೃತಿಕ ವೇದಿಕೆಗಳ ವರೆಗೆ ಅಭೂತ  ಪೂರ್ವ ಹೋರಾಟವೊಂದನ್ನು ಈ ವರದಕ್ಷಿಣೆಯ ವಿರುದ್ಧ ಕರಾವಳಿ ಭಾಗದ ಮುಸ್ಲಿಮ್ ಸಮು ದಾಯ ಸಾರಿತ್ತು. ಲೇಖನ, ಕವನ,  ಹಾಡು, ನಾಟಕ, ಜಾಥಾ, ಕರಪತ್ರ, ಶುಕ್ರವಾರದ ಜುಮಾ ಖುತ್ಬಾ... ಹೀಗೆ ಸರ್ವ ಮಾಧ್ಯಮವನ್ನೂ ಬಳಸಿ ಸಮುದಾಯ ಸಾರಿದ  ಹೋರಾಟದಿಂದ ವರದಕ್ಷಿಣೆಯು ಸದ್ಯ ಹಿನ್ನೆಲೆಗೆ ಸರಿದಿದೆ. ನಾಚಿಕೆ ಮುನ್ನೆಲೆಗೆ ಬಂದಿದೆ. ವರದಕ್ಷಿಣೆ ವಿರೋಧಿ ಕಾನೂನಿನಿಂದ  ಮಾಡಲಾಗದ ಬೃಹತ್ ಬದಲಾವಣೆಯೊಂದನ್ನು ಸಾಮುದಾಯಿಕ ಜಾಗೃತಿ ಕಾರ್ಯಕ್ರಮದಿಂದ ಮಾಡಲು ಸಮುದಾಯಕ್ಕೆ  ಸಾಧ್ಯವಾಗಿದೆ. ಮದ್ಯ ಮತ್ತು ಮಾದಕ ವಸ್ತುಗಳ ವಿರುದ್ಧವೂ ಇಂಥದ್ದೇ  ಸಂಘಟಿತ ಸಮರವೊಂದು ನಡೆಯಲೇಬೇಕಾಗಿದೆ. ಮಸೀ ದಿಗಳು, ಸಂಘಟನೆಗಳು, ಲೇಖಕರು, ಸಂಸ್ಕೃತಿ ಚಿಂತಕರು ಸಹಿತ ಸರ್ವರೂ ಪ್ರಯತ್ನಿಸಿದರೆ ಮತ್ತು ವಿವಿಧ ಸಂಘಟನೆಗಳು  ಸಕ್ರಿಯವಾದರೆ ಕೆಡುಕುಗಳ ಮಾತೆಗೆ ಯುವ ತಲೆಮಾರು ಆಕರ್ಷಿತವಾಗುವುದನ್ನು ತಡೆಯುವುದಕ್ಕೆ ಖಂಡಿತ ಸಾಧ್ಯವಿದೆ.

Tuesday 5 September 2023

ಚಂದ್ರಯಾನ: ಪ್ರತಿ ಮುಸ್ಲಿಮ್ ಮನೆಯಲ್ಲೂ ಚರ್ಚಾ ವಿಷಯವಾಗಲಿ






ಚಂದ್ರಯಾನದ ಯಶಸ್ಸನ್ನು ಭಾರ ತೀಯ ಮುಸ್ಲಿಮರು ಸಂಭ್ರಮಿಸಿದ್ದಾರೆ. ಮುಸ್ಲಿಮ್ ವಿದ್ವಾಂಸರಿಂದ  ಹಿಡಿದು ಜನ ಸಾಮಾನ್ಯರ ವರೆಗೆ  ದೇಶದಾದ್ಯಂತ ಈ ಸಂಭ್ರಮ ವ್ಯಕ್ತವಾಗಿದೆ. ವಿಜ್ಞಾನಿಗಳನ್ನು ಅಭಿನಂದಿಸಿ ಜಮಾಅತೆ ಇಸ್ಲಾಮೀ ಹಿಂದ್ ಟ್ವೀಟ್ ಮಾಡಿದೆ. ‘ಇದೊಂದು  ಐತಿಹಾಸಿಕ ಸಂದರ್ಭ, ದೇಶ ಜಾಗತಿಕವಾಗಿ ಬಲಾಢ್ಯ ಶಕ್ತಿಯಾಗಿರುವು ದರ ಸಂಕೇತ’ ಎಂದು ರಾಷ್ಟ್ರೀಯ ಉಪಾಧ್ಯಕ್ಷ  ಎಂಜಿನಿಯರ್  ಮುಹಮ್ಮದ್ ಸಲೀಮ್ ಟ್ವೀಟ್ ಮಾಡಿದ್ದಾರೆ. ಜಮೀಯತೆ ಉಲೆಮಾಯೆ ಹಿಂದ್‌ನ ಮುಖಂಡ ಖಾಲಿದ್ ರಶೀದ್ ಫರಂಗಿ  ಮಹಾವಿಯವರು ವಿಜ್ಞಾನಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಚಂದ್ರಯಾನ ಯಶಸ್ವಿಯಾಗುವುದಕ್ಕಾಗಿ ತಮ್ಮ ಮದ್ರಸದ ಮಕ್ಕಳು  ವಿಶೇಷ ನಮಾಜ್  ಮಾಡಿರುವುದಾಗಿಯೂ ಹೇಳಿದ್ದಾರೆ. ಖ್ಯಾತ ಉರ್ದು ಕವಿ ಖಾಲಿದ್ ಅಝ್ಮಿ ಬರೆದ ಕವನ ವೈರಲ್ ಆಗಿದೆ.  ಭಾರತ್ ಹೈ ಮೇರಾ ದೇಶ್, ಔರ್ ಯಹ್ ಮೇರಿ ಜಾನ್ ಹೈ... ಎಂಬ ಸಾಲುಗಳೊಂದಿಗೆ ಅವರು ಬರೆದ ಕವನದಲ್ಲಿ ದೇಶಪ್ರೇಮ,  ದೇಶದ ಮೇಲಿನ ಋಣ ಮತ್ತು ಹೆಮ್ಮೆಯ ಭಾವಗಳಿವೆ. ದೇಶದ ಎರಡು ಪ್ರಮುಖ ಧಾರ್ಮಿಕ ಸಂಘಟನೆಗಳಾದ ಎಸ್‌ಕೆಎಸ್‌ಎಸ್‌ಎಫ್  ಮತ್ತು ಎಸ್‌ಎಸ್‌ಎಫ್‌ಗಳು ಚಂದ್ರಯಾನದ ಯಶಸ್ಸನ್ನು ಸಂಭ್ರಮದಿಂದ  ಹಂಚಿಕೊಂಡಿವೆ. ಚಂದ್ರನಲ್ಲಿ ಲ್ಯಾಂಡ್ ಆಗುವ ದಿನವಾದ  ಆಗಸ್ಟ್ 23ರಂದು ವಿಶೇಷ ನಮಾಜ್ ï‌ನ ವ್ಯವಸ್ಥೆ ಮಾಡಿವೆ. ಹಲವು ಧಾರ್ಮಿಕ ಮುಖಂಡರು ಚಂದ್ರಯಾನ ಯಶಸ್ವಿಯಾಗುವಂತೆ  ಪ್ರಾರ್ಥಿಸಿದ್ದು ಮತ್ತು ಆ ಬಳಿಕ ಸಂಭ್ರಮ ಹಂಚಿಕೊಂಡದ್ದೂ ನಡೆದಿದೆ. ಎಷ್ಟರವರೆಗೆಂದರೆ, ಮುಸ್ಲಿಮರಿಗೆ ಸಂಬಂಧಿಸಿ ನಕಾರಾತ್ಮಕ ಸು ದ್ದಿಗಳನ್ನು ಹಂಚಿಕೊಳ್ಳುವುದನ್ನೇ ಪೂರ್ಣಕಾಲಿಕ ಉದ್ಯೋಗವನ್ನಾಗಿ ಮಾಡಿಕೊಂಡವರೂ ‘ಮುಸ್ಲಿಮ್ ಸಂಭ್ರಮ’ದ ಕ್ಷಣಗಳನ್ನು  ಹಂಚಿಕೊಂಡಿದ್ದಾರೆ,

ಭಾರತೀಯ ಮುಸ್ಲಿಮರಿಗೆ ಸಂಬಂಧಿಸಿ ಒಂದಕ್ಕಿಂತ  ಹೆಚ್ಚು ಕಾರಣಕ್ಕಾಗಿ ಚಂದ್ರಯಾನದ ಯಶಸ್ಸು ಮುಖ್ಯವಾಗುತ್ತದೆ. ಮುಸ್ಲಿಮರ ಬಗ್ಗೆ  ನಖಶಿಖಾಂತ ನಕಾರಾತ್ಮಕ ಧೋರಣೆಯನ್ನು ಹೊಂದಿರುವ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರದಲ್ಲಿರುತ್ತಾ ಮತ್ತು ಈ ಚಂದ್ರಯಾನದ  ಯಶಸ್ಸಿನ ಸಂಪೂರ್ಣ ಕ್ರೆಡಿಟನ್ನು ಪಡಕೊಳ್ಳುತ್ತಿರುವ ಈ ಹೊತ್ತಿನಲ್ಲೂ ಮುಸ್ಲಿಮರು ಚಂದ್ರಯಾನ ಯಶಸ್ಸನ್ನು ಸಂಭ್ರಮಿಸಿರುವುದು  ಪ್ರಬುದ್ಧ ನಡೆಯಾಗಿದೆ. ಚಂದ್ರಯಾನದ ಯಶಸ್ಸು ಯಾವುದೇ ಓರ್ವ ವ್ಯಕ್ತಿ, ಪಕ್ಷ  ಅಥವಾ ಸರಕಾರಕ್ಕೆ ಸೀಮಿತವಾಗುವುದಿಲ್ಲ. ಇಸ್ರೋವ ನ್ನು ಸ್ಥಾಪಿಸಿದ್ದೇ  ನೆಹರೂ. ಆ ಬಳಿಕದಿಂದ ಈವರೆಗೆ ಸುಮಾರು 90ರಷ್ಟು ರಾಕೆಟ್‌ಗಳಲ್ಲಿ ಬಾಹ್ಯಾಕಾಶಕ್ಕೆ ಹಾರಿಸಲಾಗಿದೆ. ಇದರಿಂದ ಈ  ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅಪಾರ ಲಾಭವಾಗಿದೆ. ಚಂದ್ರಯಾನ ಪರಿಕಲ್ಪನೆಯನ್ನು ಆರಂಭಿಸಿದವರು ಪ್ರಧಾನಿ ಅಟಲ್  ಬಿಹಾರಿ ವಾಜಪೇಯಿ. 2008ರಲ್ಲಿ ಮೊದಲ ಚಂದ್ರಯಾನ ಪ್ರಯತ್ನ ಮಾಡಲಾಯಿತಾದರೂ ಅದರಲ್ಲಿ ಯಶಸ್ಸು ಸಿಗಲಿಲ್ಲ. 2019ರಲ್ಲಿ  ಮತ್ತೆ ಪ್ರಯತ್ನಿಸಲಾಯಿತು. ಆದರೆ ಅದೂ ವಿಫಲವಾಯಿತು. ಇದೀಗ ಮೂರನೇ ಬಾರಿ ನಡೆಸಲಾದ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ.  ಸುಮಾರು 800 ಕೋಟಿ ರೂಪಾಯಿ ವೆಚ್ಚದಲ್ಲಿ 3,900 ಭಾರ ತೂಗುವ ಈ ಚಂದ್ರಯಾನದ ನೇತೃತ್ವವನ್ನು ಇಸ್ರೋ ಅಧ್ಯಕ್ಷ ಸೋಮ ನಾಥ್ ವಹಿಸಿಕೊಂಡಿದ್ದರು. 2019ರಲ್ಲಿ ಚಂದ್ರಯಾನ ಪ್ರಯತ್ನ ವಿಫಲಗೊಂಡಾಗ ಕಣ್ಣೀರು ಹಾಕಿದ್ದ ಆಗಿನ ಇಸ್ರೋ ಅಧ್ಯಕ್ಷ ಶಿವನ್‌ರಲ್ಲಿ  ಸಂತೋಷ ತರಿಸಲು ಈ ಸೋಮನಾಥ್ ಇವತ್ತು ಯಶಸ್ವಿಯಾಗಿದ್ದಾರೆ. ನಿಜವಾಗಿ,

ಈ ಸೋಮನಾಥ್‌ರ ಹೊರತಾಗಿ ಈ ಚಂದ್ರಯಾನ ಅಭಿಯಾನದಲ್ಲಿ ದುಡಿದವರಲ್ಲಿ 54 ಮಂದಿ ಮಹಿಳಾ ವಿಜ್ಞಾನಿಗಳೂ ಇದ್ದಾರೆ.  ಇವರಲ್ಲಿ 8 ಮಂದಿ ಮುಸ್ಲಿಮ್ ವಿಜ್ಞಾನಿಗಳೂ ಇದ್ದಾರೆ. ಇವರಲ್ಲಿ 2013ರಿಂದ ಇಸ್ರೋದಲ್ಲಿ ದುಡಿಯುತ್ತಿರುವ ಉತ್ತರ ಪ್ರದೇಶದ  ಘೋರಕ್‌ಪುರ್‌ನ ಸನಾ ಫಿರೋಜ್  ಕೂಡಾ ಒಬ್ಬರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ಎಂಜಿನಿಯರಿಂಗ್ ನಲ್ಲಿ ಬಿಟೆಕ್ ಮಾಡಿರುವ  ಇವರು, ಚಂದ್ರಯಾನದ ತಾಂತ್ರಿಕ ವಿಭಾಗದಲ್ಲಿ ದುಡಿದವರಾಗಿದ್ದಾರೆ. ಇವರ ಪತಿ ಯಾಸಿರ್ ಅಹ್ಮದ್ ಕೂಡಾ ಈ ಚಂದ್ರಯಾನ ಯಶಸ್ಸಿನಲ್ಲಿ ಭಾಗಿಯಾಗಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ಎಂಜಿನಿಯರಿಂಗ್  ನಲ್ಲಿ ಬಿಟೆಕ್ ಪದವೀಧರರಾಗಿರುವ ಇವರೂ  ಘೋರಕ್‌ಪುರದವರೇ. ಹಲವು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಇವರು 2010ರಿಂದ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ.  ಹಾಗೆಯೇ ಏರೋಸ್ಪೇಸ್, ಏರೋನಾಟಿಕಲ್ ಮತ್ತು ಆಸ್ಟ್ರೋನಾಟಿಕಲ್ ಎಂಜಿನಿಯರಿಂಗ್ ನಲ್ಲಿ ಬಿಟೆಕ್ ಪಡೆದಿರುವ ಕೇರಳದ  ಮುಹಮ್ಮದ್ ಸಾದಿಕ್ ಆಲಂ ಕೂಡ ಈ ಚಂದ್ರಯಾನದ ಯಶಸ್ಸಿನ ಭಾಗವಾಗಿದ್ದು, 2018ರಿಂದ ಇಸ್ರೋದಲ್ಲಿ ತಾಂತ್ರಿಕ ವಿಭಾಗದಲ್ಲಿ  ದುಡಿಯುತ್ತಿದ್ದಾರೆ. ಉತ್ತರ ಪ್ರದೇಶದ ಮುಝಫ್ಫರ್ ನಗರ್‌ನ ಅರೀಬ್ ಅಹ್ಮದ್‌ರಿಗೂ ಈ ಚಂದ್ರಯಾನದ ಯಶಸ್ಸಿನಲ್ಲಿ ಪಾಲಿದೆ. ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಬಿಟೆಕ್ ಪಡೆದಿರುವ ಇವರು  ಚಂದ್ರಯಾನ ತಪಾಸಣಾ ತಂಡದ ಸದಸ್ಯರಾಗಿದ್ದರು. 2015ರಿಂದ ಇಸ್ರೋದಲ್ಲಿ ದುಡಿಯುತ್ತಿರುವ ಅಖ್ತರ್ ಅಬ್ಬಾಸ್, ಚಂದ್ರಯಾನಕ್ಕಾಗಿ  ದುಡಿದ ಇನ್ನೋರ್ವ ತಂತ್ರಜ್ಞ. ಅಲೀಘರ್ ಮುಸ್ಲಿಮ್ ಯುನಿವರ್ಸಿಟಿಯಲ್ಲಿ ಬಿಟೆಕ್ ಮತ್ತು ಎಂಟೆಕ್ ಪದವಿ ಪಡೆದಿರುವ ಇವರು  ಉತ್ತರ ಪ್ರದೇಶದವರು. ಇಶ್ರತ್ ಜಮಾಲ್ ಎಂಬವರು ಈ ಅಭಿಯಾನದಲ್ಲಿ ಭಾಗಿಯಾದ ಇನ್ನೋರ್ವ ವಿಜ್ಞಾನಿ. 2017ರಿಂದ ಇವರು  ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಇಸ್ರೋ ಘಟಕದಲ್ಲಿ ಸಂಶೋಧನಾ ವಿಭಾಗದಲ್ಲಿ ದುಡಿಯುತ್ತಿರುವ ಇವರು  ಎಲೆಕ್ಟ್ರಿ ಕಲ್ ಎಂಜಿನಿಯರಿಂಗ್  ನಲ್ಲಿ ಬಿಟೆಕ್ ಮತ್ತು ಪವರ್ ಆಂಡ್ ಕಂಟ್ರೋಲ್ ತಂತ್ರಜ್ಞಾನದಲ್ಲಿ ಎಂಟೆಕ್ ಪದವಿ ಪಡೆದಿದ್ದಾರೆ. ಅ ಲೀಘರ್ ಮುಸ್ಲಿಮ್ ಯುನಿವರ್ಸಿಟಿಯಿಂದ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್  ನಲ್ಲಿ ಬಿಟೆಕ್ ಪಡೆದಿರುವ ಖುಶ್ಬೂ ಮಿರ್ಝಾ ಅವರು  ಚಂದ್ರಯಾನಕ್ಕಾಗಿ ದುಡಿದ ಇನ್ನೋರ್ವ ತಂತ್ರಜ್ಞೆ. ದೆಹಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್  ಎಂಜಿನಿಯರಿಂಗ್  ನಲ್ಲಿ ಬಿಟೆಕ್ ಪದವಿ ಪಡೆದಿರುವ ಇವರು 2021ರಲ್ಲಿ ಇಸ್ರೋ ಸೇರಿದ್ದಾರೆ. ನಿಜವಾಗಿ,

ಚಂದ್ರಯಾನದ ಯಶಸ್ಸಿನಲ್ಲಿ ಮುಸ್ಲಿಮ್ ಸಮುದಾಯದ ವಿಜ್ಞಾನಿಗಳ ಪಾತ್ರವೂ ಇದೆ ಎಂಬುದು ಎಷ್ಟು ಮುಖ್ಯವೋ ಮುಸ್ಲಿಮ್  ಸಮುದಾಯದ ಸಂಭ್ರಮವು ಯುವಪೀಳಿಗೆಯಲ್ಲಿ ಉಂಟು ಮಾಡಬಹುದಾದ ರೋಮಾಂಚನವೂ ಅಷ್ಟೇ ಮುಖ್ಯ. ಚಂದ್ರಯಾನದ  ಯಶಸ್ಸನ್ನು ಪ್ರತಿ ಮನೆಯೂ ಸಂಭ್ರಮಿಸುವಾಗ, ಅದು ಮನೆಯ ಮಕ್ಕಳ ಮೇಲೂ ಪ್ರಭಾವ ಬೀರುತ್ತದೆ. ನಾವೂ ವಿಜ್ಞಾನಿಯಾಗಬೇಕು  ಎಂಬ ಭಾವ ಅವರೊಳಗೆ ಹುಟ್ಟುವಂತೆ ಮಾಡುತ್ತದೆ. ಸಾಮಾನ್ಯವಾಗಿ, ವೈದ್ಯರಾಗಬೇಕು, ಪೈಲಟ್, ಉದ್ಯಮಿ, ಚಾರ್ಟರ್ಡ್  ಅಕೌಂಟೆಂಟ್, ಲಾಯರ್ ಇತ್ಯಾದಿ ಆಗಬೇಕೆಂದು ಬಯಕೆ ವ್ಯಕ್ತಪಡಿಸುವ ವಿದ್ಯಾರ್ಥಿಗಳೇ ಇವತ್ತು ಹೆಚ್ಚಿದ್ದಾರೆ. ಎಸೆಸೆಲ್ಸಿ ಅಥವಾ  ಪಿಯುಸಿ ಫಲಿತಾಂಶದ ಬಳಿಕ ಟಾಪರ್ ಆದ ವಿದ್ಯಾರ್ಥಿಗಳನ್ನು ಮಾತನಾಡಿಸಿದರೆ ವಿಜ್ಞಾನಿ ಆಗಬೇಕು ಎಂದು ಹೇಳುವವರು ಕಡಿಮೆ.  ಅದಕ್ಕಿರುವ ಮೊದಲ ಕಾರಣ, ವಿಜ್ಞಾನಿಗಳು ಸಾರ್ವಜನಿಕವಾಗಿ ಚರ್ಚೆಯಲ್ಲಿ ಇಲ್ಲದೇ ಇರುವುದು. ಕ್ರಿಕೆಟ್ ಪಂದ್ಯದಲ್ಲಿ ಭಾರತ ಗೆದ್ದುದನ್ನು ಸಾಮಾನ್ಯ ಜನರು ಆಡಿಕೊಳ್ಳುವಷ್ಟು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಹಾರಿಸಲಾಗುವ ರಾಕೆಟ್‌ನ ಬಗ್ಗೆ ಆಡಿಕೊಳ್ಳುವುದಿಲ್ಲ.  ಪತ್ರಿಕೆಗಳೂ ಅಷ್ಟೇ. ಕ್ರಿಕೆಟ್ ಪಂದ್ಯದ ಗೆಲುವನ್ನು ಎರಡ್ಮೂರು ದಿನಗಳ ಕಾಲ ಬೇರೆ ಬೇರೆ ವಿಶ್ಲೇಷಣೆಗೆ ಒಡ್ಡುವ ಪತ್ರಿಕೆಗಳು ವೈಜ್ಞಾನಿಕ  ಸಾಧನೆಯನ್ನು ಒಂದು ದಿನದ ಮುಖಪುಟ ಸುದ್ದಿಯಾಗಿಸುವುದನ್ನು ಬಿಟ್ಟರೆ ಅದಕ್ಕಾಗಿ ದುಡಿದವರನ್ನಾಗಲಿ, ಅದರ ಹಿಂದಿರುವ ಶ್ರಮವನ್ನಾಗಲಿ, ಅದರ ಬಜೆಟ್ಟು ಮತ್ತು ತಾಂತ್ರಿಕ ಸೂಕ್ಷ್ಮತೆಗಳನ್ನಾಗಲಿ ಚರ್ಚೆಗೆ ಎತ್ತಿಕೊಳ್ಳುವುದೇ ಇಲ್ಲ. ಇಂಥ ಅಸೂಕ್ಷ್ಮತೆಗಳೇ ಹೊಸ  ತಲೆಮಾರಿನಲ್ಲಿ ವಿಜ್ಞಾನ ಕ್ಷೇತ್ರವು ಬೆರಗನ್ನು ಹುಟ್ಟಿಸದೇ ಇರುವುದಕ್ಕೆ ಕಾರಣವಾಗಿದೆ. ಬೆಳೆಯುತ್ತಿರುವ ಪೀಳಿಗೆಯ ಮುಂದೆ ಕೈ ತುಂಬಾ  ದುಡ್ಡು ಮಾಡುವ ವೈದ್ಯರು, ಲಾಯರುಗಳು, ಸಿಎಗಳು ಮತ್ತು ವಿದೇಶದಲ್ಲಿ ದುಡಿಯುವವರೇ ಸುಳಿದಾಡುತ್ತಿರುತ್ತಾರೆ. ತಾವೂ  ಅವರಂತಾಗಬೇಕು ಮತ್ತು ಬದುಕನ್ನು ಆರಾಮವಾಗಿ ಕಟ್ಟಿಕೊಳ್ಳಬೇಕು ಎಂಬ ಕನಸು ಕಟ್ಟುತ್ತಾರೆ. ಇದು ಅವರ ತಪ್ಪಲ್ಲ. ಅವರಿಗೆ  ಇವುಗಳೇ ಮಹಾನ್ ಎಂದು ಪ್ರತಿಕ್ಷಣ ಬಿಂಬಿಸುತ್ತಿರುವ ಎಲ್ಲ ಜವಾಬ್ದಾರಿಯುತ ನಾಗರಿಕರ ತಪ್ಪು. ಮಾಧ್ಯಮಗಳಿಗೆ ಇವುಗಳಲ್ಲಿ  ಅತಿದೊಡ್ಡ ಪಾಲಿದೆ. ಒಂದುರೀತಿಯಲ್ಲಿ,

ಚಂದ್ರಯಾನದ ಯಶಸ್ಸಿಗೆ ಮುಸ್ಲಿಮ್ ನೇತಾರರು ವ್ಯಕ್ತಪಡಿಸಿರುವ ಪ್ರತಿಕ್ರಿಯೆಯು ಖಂಡಿತ ಸಮುದಾಯದ ಬೆಳೆಯುತ್ತಿರುವ ಪೀಳಿಗೆಯ  ದೃಷ್ಟಿಯಿಂದ ಅತ್ಯಂತ ಪ್ರಯೋಜನಕಾರಿ. ತಾನೂ ವಿಜ್ಞಾನಿಯಾಗಬೇಕು ಮತ್ತು ದೇಶಕ್ಕೆ ದೊಡ್ಡ ಕೊಡುಗೆಗಳನ್ನು ನೀಡಬೇಕು ಎಂಬ  ಬಯಕೆಯೊಂದು ಅವರೊಳಗೆ ಹುಟ್ಟಿಕೊಳ್ಳಲು ಈ ಸಂಭ್ರಮ ಪ್ರೇರಣೆ ಒದಗಿಸಬಹುದು. ಹಾಗೆಯೇ  ಚಂದ್ರಯಾನದಲ್ಲಿ ಭಾಗಿಯಾದ  ಮುಸ್ಲಿಮ್ ವಿಜ್ಞಾನಿಗಳೂ ಪ್ರತಿಮನೆಯ ಚರ್ಚಾ ವಿಷಯವಾಗಬೇಕು. ಹೀಗಾದರೆ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡೀತು.  ಇದುವೇ ನಿಜವಾದ ಸಂಭ್ರಮ.