Tuesday 5 September 2023

ಚಂದ್ರಯಾನ: ಪ್ರತಿ ಮುಸ್ಲಿಮ್ ಮನೆಯಲ್ಲೂ ಚರ್ಚಾ ವಿಷಯವಾಗಲಿ






ಚಂದ್ರಯಾನದ ಯಶಸ್ಸನ್ನು ಭಾರ ತೀಯ ಮುಸ್ಲಿಮರು ಸಂಭ್ರಮಿಸಿದ್ದಾರೆ. ಮುಸ್ಲಿಮ್ ವಿದ್ವಾಂಸರಿಂದ  ಹಿಡಿದು ಜನ ಸಾಮಾನ್ಯರ ವರೆಗೆ  ದೇಶದಾದ್ಯಂತ ಈ ಸಂಭ್ರಮ ವ್ಯಕ್ತವಾಗಿದೆ. ವಿಜ್ಞಾನಿಗಳನ್ನು ಅಭಿನಂದಿಸಿ ಜಮಾಅತೆ ಇಸ್ಲಾಮೀ ಹಿಂದ್ ಟ್ವೀಟ್ ಮಾಡಿದೆ. ‘ಇದೊಂದು  ಐತಿಹಾಸಿಕ ಸಂದರ್ಭ, ದೇಶ ಜಾಗತಿಕವಾಗಿ ಬಲಾಢ್ಯ ಶಕ್ತಿಯಾಗಿರುವು ದರ ಸಂಕೇತ’ ಎಂದು ರಾಷ್ಟ್ರೀಯ ಉಪಾಧ್ಯಕ್ಷ  ಎಂಜಿನಿಯರ್  ಮುಹಮ್ಮದ್ ಸಲೀಮ್ ಟ್ವೀಟ್ ಮಾಡಿದ್ದಾರೆ. ಜಮೀಯತೆ ಉಲೆಮಾಯೆ ಹಿಂದ್‌ನ ಮುಖಂಡ ಖಾಲಿದ್ ರಶೀದ್ ಫರಂಗಿ  ಮಹಾವಿಯವರು ವಿಜ್ಞಾನಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಚಂದ್ರಯಾನ ಯಶಸ್ವಿಯಾಗುವುದಕ್ಕಾಗಿ ತಮ್ಮ ಮದ್ರಸದ ಮಕ್ಕಳು  ವಿಶೇಷ ನಮಾಜ್  ಮಾಡಿರುವುದಾಗಿಯೂ ಹೇಳಿದ್ದಾರೆ. ಖ್ಯಾತ ಉರ್ದು ಕವಿ ಖಾಲಿದ್ ಅಝ್ಮಿ ಬರೆದ ಕವನ ವೈರಲ್ ಆಗಿದೆ.  ಭಾರತ್ ಹೈ ಮೇರಾ ದೇಶ್, ಔರ್ ಯಹ್ ಮೇರಿ ಜಾನ್ ಹೈ... ಎಂಬ ಸಾಲುಗಳೊಂದಿಗೆ ಅವರು ಬರೆದ ಕವನದಲ್ಲಿ ದೇಶಪ್ರೇಮ,  ದೇಶದ ಮೇಲಿನ ಋಣ ಮತ್ತು ಹೆಮ್ಮೆಯ ಭಾವಗಳಿವೆ. ದೇಶದ ಎರಡು ಪ್ರಮುಖ ಧಾರ್ಮಿಕ ಸಂಘಟನೆಗಳಾದ ಎಸ್‌ಕೆಎಸ್‌ಎಸ್‌ಎಫ್  ಮತ್ತು ಎಸ್‌ಎಸ್‌ಎಫ್‌ಗಳು ಚಂದ್ರಯಾನದ ಯಶಸ್ಸನ್ನು ಸಂಭ್ರಮದಿಂದ  ಹಂಚಿಕೊಂಡಿವೆ. ಚಂದ್ರನಲ್ಲಿ ಲ್ಯಾಂಡ್ ಆಗುವ ದಿನವಾದ  ಆಗಸ್ಟ್ 23ರಂದು ವಿಶೇಷ ನಮಾಜ್ ï‌ನ ವ್ಯವಸ್ಥೆ ಮಾಡಿವೆ. ಹಲವು ಧಾರ್ಮಿಕ ಮುಖಂಡರು ಚಂದ್ರಯಾನ ಯಶಸ್ವಿಯಾಗುವಂತೆ  ಪ್ರಾರ್ಥಿಸಿದ್ದು ಮತ್ತು ಆ ಬಳಿಕ ಸಂಭ್ರಮ ಹಂಚಿಕೊಂಡದ್ದೂ ನಡೆದಿದೆ. ಎಷ್ಟರವರೆಗೆಂದರೆ, ಮುಸ್ಲಿಮರಿಗೆ ಸಂಬಂಧಿಸಿ ನಕಾರಾತ್ಮಕ ಸು ದ್ದಿಗಳನ್ನು ಹಂಚಿಕೊಳ್ಳುವುದನ್ನೇ ಪೂರ್ಣಕಾಲಿಕ ಉದ್ಯೋಗವನ್ನಾಗಿ ಮಾಡಿಕೊಂಡವರೂ ‘ಮುಸ್ಲಿಮ್ ಸಂಭ್ರಮ’ದ ಕ್ಷಣಗಳನ್ನು  ಹಂಚಿಕೊಂಡಿದ್ದಾರೆ,

ಭಾರತೀಯ ಮುಸ್ಲಿಮರಿಗೆ ಸಂಬಂಧಿಸಿ ಒಂದಕ್ಕಿಂತ  ಹೆಚ್ಚು ಕಾರಣಕ್ಕಾಗಿ ಚಂದ್ರಯಾನದ ಯಶಸ್ಸು ಮುಖ್ಯವಾಗುತ್ತದೆ. ಮುಸ್ಲಿಮರ ಬಗ್ಗೆ  ನಖಶಿಖಾಂತ ನಕಾರಾತ್ಮಕ ಧೋರಣೆಯನ್ನು ಹೊಂದಿರುವ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರದಲ್ಲಿರುತ್ತಾ ಮತ್ತು ಈ ಚಂದ್ರಯಾನದ  ಯಶಸ್ಸಿನ ಸಂಪೂರ್ಣ ಕ್ರೆಡಿಟನ್ನು ಪಡಕೊಳ್ಳುತ್ತಿರುವ ಈ ಹೊತ್ತಿನಲ್ಲೂ ಮುಸ್ಲಿಮರು ಚಂದ್ರಯಾನ ಯಶಸ್ಸನ್ನು ಸಂಭ್ರಮಿಸಿರುವುದು  ಪ್ರಬುದ್ಧ ನಡೆಯಾಗಿದೆ. ಚಂದ್ರಯಾನದ ಯಶಸ್ಸು ಯಾವುದೇ ಓರ್ವ ವ್ಯಕ್ತಿ, ಪಕ್ಷ  ಅಥವಾ ಸರಕಾರಕ್ಕೆ ಸೀಮಿತವಾಗುವುದಿಲ್ಲ. ಇಸ್ರೋವ ನ್ನು ಸ್ಥಾಪಿಸಿದ್ದೇ  ನೆಹರೂ. ಆ ಬಳಿಕದಿಂದ ಈವರೆಗೆ ಸುಮಾರು 90ರಷ್ಟು ರಾಕೆಟ್‌ಗಳಲ್ಲಿ ಬಾಹ್ಯಾಕಾಶಕ್ಕೆ ಹಾರಿಸಲಾಗಿದೆ. ಇದರಿಂದ ಈ  ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅಪಾರ ಲಾಭವಾಗಿದೆ. ಚಂದ್ರಯಾನ ಪರಿಕಲ್ಪನೆಯನ್ನು ಆರಂಭಿಸಿದವರು ಪ್ರಧಾನಿ ಅಟಲ್  ಬಿಹಾರಿ ವಾಜಪೇಯಿ. 2008ರಲ್ಲಿ ಮೊದಲ ಚಂದ್ರಯಾನ ಪ್ರಯತ್ನ ಮಾಡಲಾಯಿತಾದರೂ ಅದರಲ್ಲಿ ಯಶಸ್ಸು ಸಿಗಲಿಲ್ಲ. 2019ರಲ್ಲಿ  ಮತ್ತೆ ಪ್ರಯತ್ನಿಸಲಾಯಿತು. ಆದರೆ ಅದೂ ವಿಫಲವಾಯಿತು. ಇದೀಗ ಮೂರನೇ ಬಾರಿ ನಡೆಸಲಾದ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ.  ಸುಮಾರು 800 ಕೋಟಿ ರೂಪಾಯಿ ವೆಚ್ಚದಲ್ಲಿ 3,900 ಭಾರ ತೂಗುವ ಈ ಚಂದ್ರಯಾನದ ನೇತೃತ್ವವನ್ನು ಇಸ್ರೋ ಅಧ್ಯಕ್ಷ ಸೋಮ ನಾಥ್ ವಹಿಸಿಕೊಂಡಿದ್ದರು. 2019ರಲ್ಲಿ ಚಂದ್ರಯಾನ ಪ್ರಯತ್ನ ವಿಫಲಗೊಂಡಾಗ ಕಣ್ಣೀರು ಹಾಕಿದ್ದ ಆಗಿನ ಇಸ್ರೋ ಅಧ್ಯಕ್ಷ ಶಿವನ್‌ರಲ್ಲಿ  ಸಂತೋಷ ತರಿಸಲು ಈ ಸೋಮನಾಥ್ ಇವತ್ತು ಯಶಸ್ವಿಯಾಗಿದ್ದಾರೆ. ನಿಜವಾಗಿ,

ಈ ಸೋಮನಾಥ್‌ರ ಹೊರತಾಗಿ ಈ ಚಂದ್ರಯಾನ ಅಭಿಯಾನದಲ್ಲಿ ದುಡಿದವರಲ್ಲಿ 54 ಮಂದಿ ಮಹಿಳಾ ವಿಜ್ಞಾನಿಗಳೂ ಇದ್ದಾರೆ.  ಇವರಲ್ಲಿ 8 ಮಂದಿ ಮುಸ್ಲಿಮ್ ವಿಜ್ಞಾನಿಗಳೂ ಇದ್ದಾರೆ. ಇವರಲ್ಲಿ 2013ರಿಂದ ಇಸ್ರೋದಲ್ಲಿ ದುಡಿಯುತ್ತಿರುವ ಉತ್ತರ ಪ್ರದೇಶದ  ಘೋರಕ್‌ಪುರ್‌ನ ಸನಾ ಫಿರೋಜ್  ಕೂಡಾ ಒಬ್ಬರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ಎಂಜಿನಿಯರಿಂಗ್ ನಲ್ಲಿ ಬಿಟೆಕ್ ಮಾಡಿರುವ  ಇವರು, ಚಂದ್ರಯಾನದ ತಾಂತ್ರಿಕ ವಿಭಾಗದಲ್ಲಿ ದುಡಿದವರಾಗಿದ್ದಾರೆ. ಇವರ ಪತಿ ಯಾಸಿರ್ ಅಹ್ಮದ್ ಕೂಡಾ ಈ ಚಂದ್ರಯಾನ ಯಶಸ್ಸಿನಲ್ಲಿ ಭಾಗಿಯಾಗಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ಎಂಜಿನಿಯರಿಂಗ್  ನಲ್ಲಿ ಬಿಟೆಕ್ ಪದವೀಧರರಾಗಿರುವ ಇವರೂ  ಘೋರಕ್‌ಪುರದವರೇ. ಹಲವು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಇವರು 2010ರಿಂದ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ.  ಹಾಗೆಯೇ ಏರೋಸ್ಪೇಸ್, ಏರೋನಾಟಿಕಲ್ ಮತ್ತು ಆಸ್ಟ್ರೋನಾಟಿಕಲ್ ಎಂಜಿನಿಯರಿಂಗ್ ನಲ್ಲಿ ಬಿಟೆಕ್ ಪಡೆದಿರುವ ಕೇರಳದ  ಮುಹಮ್ಮದ್ ಸಾದಿಕ್ ಆಲಂ ಕೂಡ ಈ ಚಂದ್ರಯಾನದ ಯಶಸ್ಸಿನ ಭಾಗವಾಗಿದ್ದು, 2018ರಿಂದ ಇಸ್ರೋದಲ್ಲಿ ತಾಂತ್ರಿಕ ವಿಭಾಗದಲ್ಲಿ  ದುಡಿಯುತ್ತಿದ್ದಾರೆ. ಉತ್ತರ ಪ್ರದೇಶದ ಮುಝಫ್ಫರ್ ನಗರ್‌ನ ಅರೀಬ್ ಅಹ್ಮದ್‌ರಿಗೂ ಈ ಚಂದ್ರಯಾನದ ಯಶಸ್ಸಿನಲ್ಲಿ ಪಾಲಿದೆ. ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಬಿಟೆಕ್ ಪಡೆದಿರುವ ಇವರು  ಚಂದ್ರಯಾನ ತಪಾಸಣಾ ತಂಡದ ಸದಸ್ಯರಾಗಿದ್ದರು. 2015ರಿಂದ ಇಸ್ರೋದಲ್ಲಿ ದುಡಿಯುತ್ತಿರುವ ಅಖ್ತರ್ ಅಬ್ಬಾಸ್, ಚಂದ್ರಯಾನಕ್ಕಾಗಿ  ದುಡಿದ ಇನ್ನೋರ್ವ ತಂತ್ರಜ್ಞ. ಅಲೀಘರ್ ಮುಸ್ಲಿಮ್ ಯುನಿವರ್ಸಿಟಿಯಲ್ಲಿ ಬಿಟೆಕ್ ಮತ್ತು ಎಂಟೆಕ್ ಪದವಿ ಪಡೆದಿರುವ ಇವರು  ಉತ್ತರ ಪ್ರದೇಶದವರು. ಇಶ್ರತ್ ಜಮಾಲ್ ಎಂಬವರು ಈ ಅಭಿಯಾನದಲ್ಲಿ ಭಾಗಿಯಾದ ಇನ್ನೋರ್ವ ವಿಜ್ಞಾನಿ. 2017ರಿಂದ ಇವರು  ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಇಸ್ರೋ ಘಟಕದಲ್ಲಿ ಸಂಶೋಧನಾ ವಿಭಾಗದಲ್ಲಿ ದುಡಿಯುತ್ತಿರುವ ಇವರು  ಎಲೆಕ್ಟ್ರಿ ಕಲ್ ಎಂಜಿನಿಯರಿಂಗ್  ನಲ್ಲಿ ಬಿಟೆಕ್ ಮತ್ತು ಪವರ್ ಆಂಡ್ ಕಂಟ್ರೋಲ್ ತಂತ್ರಜ್ಞಾನದಲ್ಲಿ ಎಂಟೆಕ್ ಪದವಿ ಪಡೆದಿದ್ದಾರೆ. ಅ ಲೀಘರ್ ಮುಸ್ಲಿಮ್ ಯುನಿವರ್ಸಿಟಿಯಿಂದ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್  ನಲ್ಲಿ ಬಿಟೆಕ್ ಪಡೆದಿರುವ ಖುಶ್ಬೂ ಮಿರ್ಝಾ ಅವರು  ಚಂದ್ರಯಾನಕ್ಕಾಗಿ ದುಡಿದ ಇನ್ನೋರ್ವ ತಂತ್ರಜ್ಞೆ. ದೆಹಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್  ಎಂಜಿನಿಯರಿಂಗ್  ನಲ್ಲಿ ಬಿಟೆಕ್ ಪದವಿ ಪಡೆದಿರುವ ಇವರು 2021ರಲ್ಲಿ ಇಸ್ರೋ ಸೇರಿದ್ದಾರೆ. ನಿಜವಾಗಿ,

ಚಂದ್ರಯಾನದ ಯಶಸ್ಸಿನಲ್ಲಿ ಮುಸ್ಲಿಮ್ ಸಮುದಾಯದ ವಿಜ್ಞಾನಿಗಳ ಪಾತ್ರವೂ ಇದೆ ಎಂಬುದು ಎಷ್ಟು ಮುಖ್ಯವೋ ಮುಸ್ಲಿಮ್  ಸಮುದಾಯದ ಸಂಭ್ರಮವು ಯುವಪೀಳಿಗೆಯಲ್ಲಿ ಉಂಟು ಮಾಡಬಹುದಾದ ರೋಮಾಂಚನವೂ ಅಷ್ಟೇ ಮುಖ್ಯ. ಚಂದ್ರಯಾನದ  ಯಶಸ್ಸನ್ನು ಪ್ರತಿ ಮನೆಯೂ ಸಂಭ್ರಮಿಸುವಾಗ, ಅದು ಮನೆಯ ಮಕ್ಕಳ ಮೇಲೂ ಪ್ರಭಾವ ಬೀರುತ್ತದೆ. ನಾವೂ ವಿಜ್ಞಾನಿಯಾಗಬೇಕು  ಎಂಬ ಭಾವ ಅವರೊಳಗೆ ಹುಟ್ಟುವಂತೆ ಮಾಡುತ್ತದೆ. ಸಾಮಾನ್ಯವಾಗಿ, ವೈದ್ಯರಾಗಬೇಕು, ಪೈಲಟ್, ಉದ್ಯಮಿ, ಚಾರ್ಟರ್ಡ್  ಅಕೌಂಟೆಂಟ್, ಲಾಯರ್ ಇತ್ಯಾದಿ ಆಗಬೇಕೆಂದು ಬಯಕೆ ವ್ಯಕ್ತಪಡಿಸುವ ವಿದ್ಯಾರ್ಥಿಗಳೇ ಇವತ್ತು ಹೆಚ್ಚಿದ್ದಾರೆ. ಎಸೆಸೆಲ್ಸಿ ಅಥವಾ  ಪಿಯುಸಿ ಫಲಿತಾಂಶದ ಬಳಿಕ ಟಾಪರ್ ಆದ ವಿದ್ಯಾರ್ಥಿಗಳನ್ನು ಮಾತನಾಡಿಸಿದರೆ ವಿಜ್ಞಾನಿ ಆಗಬೇಕು ಎಂದು ಹೇಳುವವರು ಕಡಿಮೆ.  ಅದಕ್ಕಿರುವ ಮೊದಲ ಕಾರಣ, ವಿಜ್ಞಾನಿಗಳು ಸಾರ್ವಜನಿಕವಾಗಿ ಚರ್ಚೆಯಲ್ಲಿ ಇಲ್ಲದೇ ಇರುವುದು. ಕ್ರಿಕೆಟ್ ಪಂದ್ಯದಲ್ಲಿ ಭಾರತ ಗೆದ್ದುದನ್ನು ಸಾಮಾನ್ಯ ಜನರು ಆಡಿಕೊಳ್ಳುವಷ್ಟು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಹಾರಿಸಲಾಗುವ ರಾಕೆಟ್‌ನ ಬಗ್ಗೆ ಆಡಿಕೊಳ್ಳುವುದಿಲ್ಲ.  ಪತ್ರಿಕೆಗಳೂ ಅಷ್ಟೇ. ಕ್ರಿಕೆಟ್ ಪಂದ್ಯದ ಗೆಲುವನ್ನು ಎರಡ್ಮೂರು ದಿನಗಳ ಕಾಲ ಬೇರೆ ಬೇರೆ ವಿಶ್ಲೇಷಣೆಗೆ ಒಡ್ಡುವ ಪತ್ರಿಕೆಗಳು ವೈಜ್ಞಾನಿಕ  ಸಾಧನೆಯನ್ನು ಒಂದು ದಿನದ ಮುಖಪುಟ ಸುದ್ದಿಯಾಗಿಸುವುದನ್ನು ಬಿಟ್ಟರೆ ಅದಕ್ಕಾಗಿ ದುಡಿದವರನ್ನಾಗಲಿ, ಅದರ ಹಿಂದಿರುವ ಶ್ರಮವನ್ನಾಗಲಿ, ಅದರ ಬಜೆಟ್ಟು ಮತ್ತು ತಾಂತ್ರಿಕ ಸೂಕ್ಷ್ಮತೆಗಳನ್ನಾಗಲಿ ಚರ್ಚೆಗೆ ಎತ್ತಿಕೊಳ್ಳುವುದೇ ಇಲ್ಲ. ಇಂಥ ಅಸೂಕ್ಷ್ಮತೆಗಳೇ ಹೊಸ  ತಲೆಮಾರಿನಲ್ಲಿ ವಿಜ್ಞಾನ ಕ್ಷೇತ್ರವು ಬೆರಗನ್ನು ಹುಟ್ಟಿಸದೇ ಇರುವುದಕ್ಕೆ ಕಾರಣವಾಗಿದೆ. ಬೆಳೆಯುತ್ತಿರುವ ಪೀಳಿಗೆಯ ಮುಂದೆ ಕೈ ತುಂಬಾ  ದುಡ್ಡು ಮಾಡುವ ವೈದ್ಯರು, ಲಾಯರುಗಳು, ಸಿಎಗಳು ಮತ್ತು ವಿದೇಶದಲ್ಲಿ ದುಡಿಯುವವರೇ ಸುಳಿದಾಡುತ್ತಿರುತ್ತಾರೆ. ತಾವೂ  ಅವರಂತಾಗಬೇಕು ಮತ್ತು ಬದುಕನ್ನು ಆರಾಮವಾಗಿ ಕಟ್ಟಿಕೊಳ್ಳಬೇಕು ಎಂಬ ಕನಸು ಕಟ್ಟುತ್ತಾರೆ. ಇದು ಅವರ ತಪ್ಪಲ್ಲ. ಅವರಿಗೆ  ಇವುಗಳೇ ಮಹಾನ್ ಎಂದು ಪ್ರತಿಕ್ಷಣ ಬಿಂಬಿಸುತ್ತಿರುವ ಎಲ್ಲ ಜವಾಬ್ದಾರಿಯುತ ನಾಗರಿಕರ ತಪ್ಪು. ಮಾಧ್ಯಮಗಳಿಗೆ ಇವುಗಳಲ್ಲಿ  ಅತಿದೊಡ್ಡ ಪಾಲಿದೆ. ಒಂದುರೀತಿಯಲ್ಲಿ,

ಚಂದ್ರಯಾನದ ಯಶಸ್ಸಿಗೆ ಮುಸ್ಲಿಮ್ ನೇತಾರರು ವ್ಯಕ್ತಪಡಿಸಿರುವ ಪ್ರತಿಕ್ರಿಯೆಯು ಖಂಡಿತ ಸಮುದಾಯದ ಬೆಳೆಯುತ್ತಿರುವ ಪೀಳಿಗೆಯ  ದೃಷ್ಟಿಯಿಂದ ಅತ್ಯಂತ ಪ್ರಯೋಜನಕಾರಿ. ತಾನೂ ವಿಜ್ಞಾನಿಯಾಗಬೇಕು ಮತ್ತು ದೇಶಕ್ಕೆ ದೊಡ್ಡ ಕೊಡುಗೆಗಳನ್ನು ನೀಡಬೇಕು ಎಂಬ  ಬಯಕೆಯೊಂದು ಅವರೊಳಗೆ ಹುಟ್ಟಿಕೊಳ್ಳಲು ಈ ಸಂಭ್ರಮ ಪ್ರೇರಣೆ ಒದಗಿಸಬಹುದು. ಹಾಗೆಯೇ  ಚಂದ್ರಯಾನದಲ್ಲಿ ಭಾಗಿಯಾದ  ಮುಸ್ಲಿಮ್ ವಿಜ್ಞಾನಿಗಳೂ ಪ್ರತಿಮನೆಯ ಚರ್ಚಾ ವಿಷಯವಾಗಬೇಕು. ಹೀಗಾದರೆ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡೀತು.  ಇದುವೇ ನಿಜವಾದ ಸಂಭ್ರಮ.

No comments:

Post a Comment