Monday 18 September 2023

ಬೀಫ್‌ನಲ್ಲಿ ಗೋಮಾಂಸ ಇಲ್ಲವೇ?

 



ಬೀಫ್ ರಫ್ತಿನಲ್ಲಿ ಭಾರತ ಜಗತ್ತಿನಲ್ಲೇ ನಾಲ್ಕನೇ ಸ್ಥಾನದಲ್ಲಿದೆ ಎಂಬ ಸುದ್ದಿ ಕಳೆದವಾರ ಬಿಡುಗಡೆಗೊಂಡ ಮರುದಿನ ನಟಿ ಐಂದ್ರಿತಾ ರೇ ಮಾಡಿದ ಟ್ವೀಟ್ಗಿ ಮಾಧ್ಯಮಗಳ ಗಮನ ಸೆಳೆದಿತ್ತು. ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಟ್ರಕ್ಸ ನಲ್ಲಿ ಗೋಮಾಂಸ ಸಾಗಿಸಲಾಗುತ್ತಿದೆ ಎಂದು ಹೇಳಿ ವೀಡಿಯೊಂದನ್ನು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ಯಾಗ್ ಮಾಡಿದ್ದರು. ಆದರೆ ಐಂದ್ರಿತಾ  ಅವರ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ ಎಂದು ಆ ಬಳಿಕ ಬೆಂಗಳೂರು ಡಿಸಿಪಿ ಸಿ.ಕೆ. ಬಾಬಾ ಸ್ಪಷ್ಟಪಡಿಸಿದರು. ವಾಹನದಲ್ಲಿ ಮೂಳೆಗಳು,  ಕೊಂಬುಗಳು, ಚರ್ಮ ಮತ್ತು ಪ್ರಾಣಿಗಳ ಉಪಉತ್ಪನ್ನಗಳು ಪತ್ತೆಯಾಗಿದ್ದು ಅದು ಗೋವಿನದ್ದಲ್ಲ ಅಥವಾ ಗೋಮಾಂಸವಲ್ಲ ಎಂದು  ವಿವರಿಸಿದ್ದರು. ಪತ್ತೆಯಾದ ಈ ತ್ಯಾಜ್ಯವು ಬಿಬಿಎಂಪಿ ಪೂರ್ವ ವಿಭಾಗದ ಕಸಾಯಿಖಾನೆಗೆ ಸಂಬಂಧಿಸಿದ್ದು ಎಂದೂ ಹೇಳಿದ್ದರು. ಈ  ಸ್ಪಷ್ಟೀಕರಣದ ಬೆನ್ನಿಗೇ ಐಂದ್ರಿತಾ ರೇ ತನ್ನ ಟ್ವೀಟ್ ಅನ್ನು ಅಳಿಸಿ ಹಾಕಿದ್ದರು. ಅಂದಹಾಗೆ,

ಗೋಮಾಂಸ  ಎಂಬ ಪದ ಕೇಳಿದ ಕೂಡಲೇ ಬೆಚ್ಚಿ ಬೀಳುವ ಒಂದು ಗುಂಪಿನ ಮುಗ್ಧ ಸದಸ್ಯೆಯೇ ಈ ಐಂದ್ರಿತಾ ರೇ ಹೊರತು  ಆಕೆಯೇನೂ ಒಂಟಿಯಲ್ಲ. ಐಂದ್ರಿತಾರಂತೆ  ಭಾವುಕವಾಗುವ, ಹಿಂದು-ಮುಂದು  ಆಲೋಚಿಸದೇ ಮಾತಾಡುವ ಮತ್ತು ಹತ್ಯೆಗೂ  ಸಿದ್ಧವಾಗುವ ದೊಡ್ಡದೊಂದು ಗುಂಪು ಈ ದೇಶದಲ್ಲಿದೆ. ಈ ಗುಂಪಿಗೆ ಗೋರಾಜಕೀಯದ ಮಾಹಿತಿಯೇ ಇರುವುದಿಲ್ಲ ಅಥವಾ  ಗೊತ್ತಿರುವ ಯಾವ ಮಾಹಿತಿಯನ್ನೂ ನಂಬದಷ್ಟು ಅವು ಬುದ್ಧಿಭ್ರಮಣೆಗೆ ಒಳಗಾಗಿರುತ್ತವೆ. ಈ ಗುಂಪಿಗೆ ನೇತೃತ್ವವನ್ನು ನೀಡುವವರು  ಅಷ್ಟರ ಮಟ್ಟಿಗೆ ಈ ಗುಂಪಿನ ಮೆದುಳು ತೊಳೆದಿರುತ್ತಾರೆ. ನಿಜವಾಗಿ,

ಐಂದ್ರಿತಾ ರೇ ಹಂಚಿಕೊಂಡ  ವೀಡಿಯೋ ಮತ್ತು ಆ ಬಳಿಕ ಡಿಸಿಪಿ ಕೊಟ್ಟ ಸ್ಪಷ್ಟನೆಯಲ್ಲಿ ಕೆಲವು ಸತ್ಯಗಳಿವೆ. ಬೆಂಗಳೂರಿನಲ್ಲಿ  ಕಸಾಯಿಖಾನೆಗಳಿವೆ ಎಂಬ ಸತ್ಯವೂ ಇದರಲ್ಲಿ ಒಂದು. ಈ ಕಸಾಯಿಖಾನೆಗಳು ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ  ಬಾಗಿಲು ತೆರೆದಿರುವುದಲ್ಲ ಮತ್ತು ಕಸಾಯಿಖಾನೆ ಎಂಬುದು ತರಕಾರಿ ಕತ್ತರಿಸುವ ಅಂಗಡಿಯೂ ಅಲ್ಲ. ಈ ಕಸಾಯಿಖಾನೆಗಳು  ಸರಕಾರದ ಅಧೀನದಲ್ಲಿವೆ ಮತ್ತು ವರ್ಷಂಪ್ರತಿ ಸರಕಾರ ಏಲಂ ಕರೆದು ಅವನ್ನು ಹಂಚುತ್ತಲೂ ಇದೆ. ರಾಜ್ಯಾದ್ಯಂತ ನೂರಕ್ಕಿಂತಲೂ  ಅಧಿಕ ಅಧಿಕೃತ ಕಸಾಯಿಖಾನೆಗಳಿವೆ. ಮಾಂಸ ಮಾಡುವುದೇ ಇವುಗಳ ಉದ್ದೇಶ. ನಿಜವಾಗಿ, ಬೊಮ್ಮಾಯಿ ಸರಕಾರ ಗೋಹತ್ಯಾ  ನಿಷೇಧ ಕಾಯ್ದೆಯನ್ನು ಜಾರಿಗೆ ತಂದಾಗ ಐಂದ್ರಿತಾ ಪ್ರತಿನಿಧಿಸುವ ‘ಗೋಪ್ರೇಮಿ ಗುಂಪನ್ನು’ ದಾರಿತಪ್ಪಿಸುವಲ್ಲಿ ಯಶಸ್ವಿಯಾಗಿತ್ತು.  ಗೋಹತ್ಯೆಯನ್ನು ನಿಷೇಧಿಸುತ್ತೇವೆ ಎಂದು ಹೇಳುತ್ತಲೇ ಗೋಮಾಂಸಕ್ಕೆ ನಿಷೇಧವಿಲ್ಲ ಎಂದೂ ಬೊಮ್ಮಾಯಿ ಸರಕಾರ ಹೇಳಿತ್ತು ಮತ್ತು  ರಾಜ್ಯದ ಯಾವುದೇ ಮಾಂಸದಂಗಡಿಯಲ್ಲಿ ಗೋಮಾಂಸ ಯಥೇಚ್ಚ ಲಭ್ಯವಾಗುತ್ತಿತ್ತು. ಗೋಹತ್ಯೆಗೆ ನಿಷೇಧವಿಲ್ಲದ ಕೇರಳ ಮುಂತಾದ  ರಾಜ್ಯಗಳಿಂದ ರಾಜ್ಯದೊಳಗೆ ಗೋಮಾಂಸ ಆಮದಾಗುತ್ತಿತ್ತು. ಅಷ್ಟಕ್ಕೂ, ಒಂದು ಸರಕಾರ ಗೋಹತ್ಯೆಯ ವಿರೋಧಿ ಎಂದಾದರೆ,  ಗೋಮಾಂಸಕ್ಕೆ ಅವಕಾಶ ಕೊಡುವುದರ ಉದ್ದೇಶವೇನು? ತನ್ನ ರಾಜ್ಯದಲ್ಲಿ ಗೋಹತ್ಯೆಗೆ ಅವಕಾಶ ಇಲ್ಲವೆಂದ ಮೇಲೆ ಹೊರರಾಜ್ಯದಲ್ಲಿ  ಹತ್ಯೆ ಮಾಡಿದ ಗೋವಿನ ಮಾಂಸವನ್ನು ತಿನ್ನುವುದಕ್ಕೆ ಅವಕಾಶ ಮಾಡಿಕೊಡುವುದೇಕೆ? ಗೋಹತ್ಯೆಯ ವಿರೋಧವು ಗೋಮಾಂಸದ  ಮೇಲೆ ಪ್ರೀತಿಯಾಗಿ ಬದಲಾದುದೇಕೆ? ಒಂದುರೀತಿಯಲ್ಲಿ, 

ಬೊಮ್ಮಾಯಿ ಸರಕಾರಕ್ಕೆ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಾಗುವುದು  ಬೇಕಾಗಿರಲಿಲ್ಲ. ಆದರೆ ತಾನು ಗೋಹತ್ಯಾ ವಿರೋಧಿ ಎಂಬುದಾಗಿ ತನ್ನ ಕಾರ್ಯಕರ್ತರನ್ನು ನಂಬಿಸಿತ್ತು. ಆ ನಂಬಿಕೆಯನ್ನು  ಉಳಿಸಬೇಕಾದರೆ ಕಾಯ್ದೆ ಜಾರಿಯ ನಾಟಕ ನಡೆಯಬೇಕಿತ್ತು. ಇದೇವೇಳೆ, ಹೈನುದ್ಯಮ ಮತ್ತು ಭತ್ತ ಇತ್ಯಾದಿ ಕೃಷಿಯಲ್ಲಿ  ತೊಡಗಿಸಿಕೊಂಡಿರುವ ರೈತರನ್ನು ಎದುರು ಹಾಕಿಕೊಳ್ಳುವಂತೆಯೂ ಇರಲಿಲ್ಲ. ಪೂರ್ಣ ಪ್ರಮಾಣದಲ್ಲಿ ಗೋವು ಮತ್ತು ಎತ್ತುಗಳ  ಹತ್ಯೆಯನ್ನು ನಿಷೇಧಿಸುವುದೆಂದರೆ, ರೈತರ ಕತ್ತು ಹಿಸುಕಿದಂತೆ. ಗೋವು ಸಹಿತ ಜಾನುವಾರುಗಳ ಸಾಕಾಣಿಕೆ ಮತ್ತು ಮಾರಾಟ ಎರಡೂ  ಧಾರ್ಮಿಕ ಶ್ರದ್ಧೆಯ ಆಚೆಗೆ ಲಾಭ-ನಷ್ಟಗಳ ಲೆಕ್ಕಾಚಾರವನ್ನೂ ಹೊಂದಿವೆ. ಪುರಾತನ ಕಾಲದಂತೆ ಹೈನುದ್ಯಮಿಯ ಯಾವುದೇ ಹಸು  ಗರ್ಭ ಧರಿಸುವುದಿಲ್ಲ. ವರ್ಷದ 365 ದಿನವೂ ಹಾಲು ಹಿಂಡುವ ಬಯಕೆಯಿಂದಲೇ ಹೈನುದ್ಯಮಿ ಹಸು ಸಾಕುತ್ತಾರೆ. ಅದಕ್ಕಾಗಿಯೇ  ಕೃತಕ ವಿಧಾನಗಳ ಮೂಲಕ ಗರ್ಭ ಧರಿಸುವಂತೆ ಮಾಡುತ್ತಾರೆ. ಹೆಚ್ಚೆಚ್ಚು ಹಾಲು ಕೊಡುವ ಹಸುಗಳ ತಳಿಗಳನ್ನು ತಂದು  ಸಾಕಲಾಗುತ್ತದೆ. ಅಲ್ಲದೇ, ಹುಟ್ಟುವ ಗಂಡು ಕರುಗಳನ್ನು ಹೆಚ್ಚು ಸಮಯ ಹಟ್ಟಿಯಲ್ಲಿ ಇರಿಸಿಕೊಳ್ಳುವುದೂ ಇಲ್ಲ. ಹಾಲಿಗಾಗಿ ಹಸು  ಸಾಕುವ ಮತ್ತು ಹೈನುದ್ಯಮವನ್ನೇ ಕಸುಬಾಗಿಸಿಕೊಂಡವರ ಹಟ್ಟಿಯಲ್ಲಿ ಹೆಣ್ಣು ಕರುಗಳೇ ಯಾಕಿವೆ ಎಂಬ ಪತ್ತೆ ಕಾರ್ಯಕ್ಕೆ ತೊಡಗಿರುವ  ಯಾರಿಗೂ ಹಸು ಸಾಕಾಣಿಕೆಯ ಗಣಿತ ಅರ್ಥವಾಗುತ್ತದೆ. ಇಲ್ಲಿರುವುದು ಬರೇ ಧಾರ್ಮಿಕ ಶ್ರದ್ಧೆಯಲ್ಲ, ಪಕ್ಕಾ ಲಾಭ-ನಷ್ಟ ಲೆಕ್ಕಾಚಾರ.  ಇದರಾಚೆಗೆ ಶ್ರದ್ಧಾವಂತರೂ ಇದ್ದಾರೆ. ಅವರು ವ್ಯಾಪಾರಿ ಉದ್ದೇಶದಿಂದ ಹಸು ಸಾಕುವುದೂ ಇಲ್ಲ. ಈ ಎಲ್ಲ ವಾಸ್ತವ ಬೊಮ್ಮಾಯಿ  ಸರಕಾರದ ಮುಂದಿರುವುದರಿಂದಲೇ ಅದು ಗೋಹತ್ಯೆಯನ್ನು ನಿಷೇಧಿಸಿದಂತೆ ಮಾಡಿ ಗೋಮಾಂಸ ಲಭ್ಯತೆಗೆ ಮತ್ತು ಸೇವನೆಗೆ  ಅವಕಾಶ ಮಾಡಿಕೊಟ್ಟಿತು. ಹಾಗಂತ,

ಹೀಗೆ ಮಾಡುವುದರಿಂದ ಅನಧಿಕೃತ ಹತ್ಯೆಗೆ ಅವಕಾಶವಾಗುತ್ತದೆ ಎಂಬುದು ಸರಕಾರಕ್ಕೆ ಗೊತ್ತಿರಲಿಲ್ಲ ಎಂದಲ್ಲ. ಅನಧಿಕೃತ ಹತ್ಯೆಗೆ  ಬಾಗಿಲೊಂದನ್ನು ತೆರೆದಿಡುವುದರಿಂದ ಹಸು-ಎತ್ತುಗಳಿಗೆ ಬೇಡಿಕೆ ಸೃಷ್ಟಿಯಾಗುತ್ತದೆ. ತಮಗೆ ಬೇಡದ ಹಸುವನ್ನೋ ಎತ್ತುವನ್ನೋ  ರೈತರು ಈ ಅನಧಿಕೃತ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಇದರಿಂದಾಗಿ ರೈತರು ಸರಕಾರದ ವಿರೋಧಿಗಳಾಗುವುದು ತಪ್ಪುತ್ತದೆ.  ಅಲ್ಲದೇ, ಹೀಗೆ ಅನಧಿಕೃತವಾಗಿ ನಡೆಯುವ ಮಾರಾಟ-ಸಾಗಾಟದ ಅಲ್ಲೊಂದು -ಇಲ್ಲೊಂದು  ಆಯ್ದ ಪ್ರಕರಣವನ್ನು ಪತ್ತೆ ಹಚ್ಚಿದಂತೆ  ಮಾಡಿ, ‘ಗೋಹತ್ಯಾ ನಿಷೇಧ ಕಾಯ್ದೆಗೆ ತಾನೆಷ್ಟು ಬದ್ಧ’ ಎಂಬುದನ್ನು ತೋರಿಸಿಕೊಂಡಂತೆಯೂ ಆಗುತ್ತದೆ. ಬೊಮ್ಮಾಯಿ ಸರಕಾರ  ಮಾಡಿದ್ದು ಇದನ್ನೇ. ನಿಜವಾಗಿ,

ಗೋಮಾಂಸ ಎಂಬ ಪದ ಕೇಳಿದ ಕೂಡಲೇ ಬೆಚ್ಚಿಬೀಳುವ ಗುಂಪನ್ನು ಸರಕಾರಗಳು ವಂಚಿಸುತ್ತಾ ಬಂದ ಅನೇಕ ಸಂಗತಿಗಳಿವೆ.  1971ರಲ್ಲಿ ಬರೇ 1,79,000 ಟನ್ ಬೀಫ್ ರಫ್ತು ಮಾಡಿದ್ದ ಭಾರತವು 2020ರಲ್ಲಿ 13,76,000 ಟನ್ ರಫ್ತು ಮಾಡಿತ್ತು. ಮೊನ್ನೆ ಮೊನ್ನೆ  ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಆಗ್ರಿಕಲ್ಚರ್ ಬಿಡುಗಡೆಗೊಳಿಸಿದ ವರದಿ ಪ್ರಕಾರ ಬೀಫ್ ರಫ್ತಿನಲ್ಲಿ ಭಾರತ ನಾಲ್ಕನೇ  ಸ್ಥಾನದಲ್ಲಿದೆ. ಮೊದಲ ಸ್ಥಾನ ಬ್ರೆಝಿಲ್‌ಗಾದರೆ ಆಸ್ಟ್ರೇಲಿಯಾಕ್ಕೆ ಎರಡನೇ ಸ್ಥಾನ. ಅಮೇರಿಕ ನಂಬರ್ ಮೂರು. 2013-14ರಲ್ಲಿ  13,14,161 ಮೆಟ್ರಿಕ್ ಟನ್ ಬೀಫ್ ರಫ್ತು ಮಾಡಿದ್ದ ಭಾರತವು 2014-15ರಲ್ಲಿ 14,75,540 ಮೆಟ್ರಿಕ್ ಟನ್ ಬೀಫ್ ರಫ್ತು ಮಾಡಿತ್ತು. ಬೀ ಫ್ ಮಾಂಸವಿದೆಯೆಂದು ಹೇಳಿ ಉತ್ತರ ಪ್ರದೇಶದಲ್ಲಿ ಅಖ್ಲಾಕ್ ಎಂಬವರನ್ನು ಮನೆಗೆ ನುಗ್ಗಿ ಹತ್ಯೆ ನಡೆಸಲಾದ 2015-16ರಲ್ಲಿ ಭಾರತದಿಂದ ಬೀಫ್ ರಫ್ತಿಗೇನೂ ತೊಂದರೆಯಾಗಿಲ್ಲ. ಆ ವರ್ಷ 13,14,161 ಮೆಟ್ರಿಕ್ ಟನ್‌ನಷ್ಟು ಮಾಂಸವನ್ನು ರಫ್ತು ಮಾಡಲಾಗಿತ್ತು.  ಅಲ್ಲದೇ, ಬೀಫ್ ರಫ್ತು ಮಾಡುವಲ್ಲಿ ವಿವಿಧ ರಾಜ್ಯಗಳ ಕೊಡುಗೆಯನ್ನೂ ಗಮನಿಸಬೇಕು. ಬೀಫ್ ರಫ್ತಿನಲ್ಲಿ ಅತಿದೊಡ್ಡ ಕೊಡುಗೆ  ಮುಂಬೈ ನಗರಿಯದ್ದು. ಭಾರತ ರಫ್ತು ಮಾಡುವ ಒಟ್ಟು ಬೀಫ್‌ನ ಪೈಕಿ 39.94% ಮಾಂಸವನ್ನು ಮುಂಬೈ ಒದಗಿಸುತ್ತದೆ. ಬಳಿಕದ ಸ್ಥಾನ  ದೆಹಲಿ, ಉತ್ತರ ಪ್ರದೇಶದ ಅಲೀಘರ್, ಗಾಝಿಯಾಬಾದ್, ಆಗ್ರಾ ಇತ್ಯಾದಿ ನಗರಗಳಿಗೆ ಸಲ್ಲುತ್ತದೆ. ಆದರೆ,

ಗೋಹತ್ಯೆ ನಿಷೇಧ ಎಂಬ ಘೋಷಣೆಯಿಂದ ರೋಮಾಂಚಿತವಾಗುವ ಮತ್ತು ಬೀಫ್ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂಬ  ಸುದ್ದಿಯನ್ನು ಸುಳ್ಳೆಂದೋ ಅಥವಾ ಅದರಲ್ಲಿ ಗೋಮಾಂಸವೇ ಇಲ್ಲ ಎಂದೋ ನಂಬುತ್ತಾ ಬದುಕುತ್ತಿರುವ ಗುಂಪಿಗೆ ತಾವು  ರಾಜಕೀಯದ ದಾಳ ಎಂಬುದು ಗೊತ್ತೇ ಇಲ್ಲ ಅಥವಾ ಅವರ ಮೆದುಳನ್ನು ಅಷ್ಟರ ಮಟ್ಟಿಗೆ ತೊಳೆದು ಬಿಡುವಲ್ಲಿ ಅವರ ನಾಯಕರು  ಯಶಸ್ವಿಯಾಗಿದ್ದಾರೆ. ಮಾತ್ರವಲ್ಲ, ಮೋದಿ ಸರಕಾರವು ಎಮ್ಮೆ, ಕೋಣ ಇತ್ಯಾದಿ ಪ್ರಾಣಿಗಳ ಮಾಂಸವನ್ನಷ್ಟೇ ರಫ್ತು ಮಾಡುತ್ತಿದ್ದು ಆ  ಬೀಫ್‌ನಲ್ಲಿ ಗೋಮಾಂಸ ಸೇರಿಲ್ಲ ಎಂದೂ ನಂಬಿಸುತ್ತಿದ್ದಾರೆ. ಒಂದುವೇಳೆ, ಭಾರತದಿಂದ ರಫ್ತು ಮಾಡುವ ಬೀಫ್‌ನಲ್ಲಿ ಗೋಮಾಂಸ  ಇಲ್ಲ ಎಂಬುದೇ ನಿಜವಾಗಿದ್ದರೆ ಈ ಹಿಂದಿನ ಕಾಂಗ್ರೆಸ್ ಸರಕಾರಕ್ಕೂ ಇದೇ ಮಾತು ಅನ್ವಯವಾಗಬೇಕಾಗುತ್ತದೆ. ಆಗಲೂ ಭಾರತದಿಂದ  ರಫ್ತಾಗುತ್ತಿದ್ದ ಮಾಂಸಕ್ಕೆ ಬೀಫ್ ಎಂದೇ ಹೆಸರಿತ್ತು. ಈಗಲೂ ಅದೇ ಹೆಸರಿದೆ. ಆದರೆ, ಈ ಹಿಂದಿನ ಸರಕಾರ ರಫ್ತು ಮಾಡುತ್ತಿದ್ದ ಬೀಫ್‌ಗೆ ಗೋಮಾಂಸ ಎಂಬ ವ್ಯಾಖ್ಯಾನ ಕೊಟ್ಟಿದ್ದ ಇದೇ ಮಂದಿ ಇದೀಗ ಈಗಿನ ಬೀಫ್‌ಗೆ ಎಮ್ಮೆ-ಕೋಣ, ಎತ್ತು ಎಂದೆಲ್ಲ  ಹೇಳುವುದಾದರೆ ಅದನ್ನು ಕಾಪಟ್ಯ, ದಗಲುಬಾಜಿತನ ಎಂದೇ ಹೇಳಬೇಕಾಗುತ್ತದೆ. ನಿಜವಾಗಿ,

ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ನಟಿ ಐಂದ್ರಿತಾ ರೇ ತಂದ ವೀಡಿಯೋ ಈ ದೇಶದ ಮುಗ್ಧ ಗುಂಪೊಂದರ  ಪ್ರತೀಕದಂತಿತ್ತು.

No comments:

Post a Comment