Friday 29 September 2023

ನಾಲ್ಕು ಗೋಡೆಯೊಳಗಿರುವ ಅಪ್ಪ-ಅಮ್ಮನ ದೂರುಗಳು..




ಸನ್ಮಾರ್ಗ ಸಂಪಾದಕೀಯ


84 ವರ್ಷದ ವೃದ್ಧೆಯ ಕುರಿತಾದ ಪ್ರಕರಣ ವಾರಗಳ ಹಿಂದೆ  ರಾಜ್ಯ ಹೈಕೋರ್ಟ್ ನಲ್ಲಿ  ವಿಚಾರಣೆಗೆ ಬಂದಿತ್ತು. ಇಬ್ಬರು ಗಂಡು ಮಕ್ಕಳು  ನಿರ್ಲಕ್ಷಿಸಿದ ಕಾರಣ ಆ ತಾಯಿ ಮಗಳ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ತನ್ನಿಬ್ಬರು ಗಂಡು ಮಕ್ಕಳ ನಿರ್ಲಕ್ಷ್ಯ  ಧೋರಣೆ ಆ ತಾಯಿಯನ್ನು ತೀವ್ರವಾಗಿ ಕಾಡಿತ್ತು. ಅವರು ಮೈಸೂರು ಜಿಲ್ಲಾಧಿಕಾರಿಯವರಲ್ಲಿ ಈ  ಬಗ್ಗೆ ತನ್ನ ಸಂಕಟವನ್ನೂ ತೋಡಿಕೊಂಡಿದ್ದರು. ಅವರ ನೋವಿಗೆ ಸ್ಪಂದಿಸಿದ್ದ ಜಿಲ್ಲಾಧಿಕಾರಿ, ಮಕ್ಕಳಾದ ಮಹೇಶ್ ಮತ್ತು ಗೋಪಾಲ್ ನನ್ನು ಕರೆದು ಬುದ್ಧಿವಾದ ಹೇಳಿದ್ದರು ಮತ್ತು ಕೊನೆಗೆ ಈ ತಾಯಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಪಾವತಿಸುವಂತೆ  ಆದೇಶಿಸಿದ್ದರು. ಆದರೆ ಇದು ಮಕ್ಕಳಿಗೆ ಒಪ್ಪಿಗೆಯಾಗಿರಲಿಲ್ಲ. ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಗೆ  ಅರ್ಜಿ ಸಲ್ಲಿಸಿದರು.  ಸಹೋದರಿಯರ ಕುಮ್ಮಕ್ಕಿನಿಂದಲೇ ತಾಯಿ ಜೀವನಾಂಶ ಕೋರುತ್ತಿದ್ದಾರೆ ಎಂದೂ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಈ ಆಕ್ಷೇಪವನ್ನು  ತಿರಸ್ಕರಿಸಿದ ಹೈಕೋರ್ಟು, ಆ ಇಬ್ಬರು ಗಂಡು ಮಕ್ಕಳಿಗೆ ಪಾಠವನ್ನೂ ಬೋಧಿಸಿದೆ. ‘ದುಡಿಯಲು ಸಮರ್ಥನಾಗಿರುವ ವ್ಯಕ್ತಿ ತನ್ನ  ಪತ್ನಿಯನ್ನು ನೋಡಿಕೊಳ್ಳಬಹುದಾದರೆ, ಅವಲಂಬಿತ ತಾಯಿಯನ್ನೇಕೆ ನೋಡಿಕೊಳ್ಳಬಾರದು’ ಎಂದೂ ಪ್ರಶ್ನಿಸಿದೆ. ‘ತಾಯಿಯ ಹೆಣ್ಣು  ಮಕ್ಕಳು ಆಸ್ತಿಯಲ್ಲಿ ಪಾಲನ್ನು ಕೋರಿಲ್ಲ, ಗಂಡು ಮಕ್ಕಳು ತ್ಯಜಿಸಿರುವ ತಾಯಿಯನ್ನು ಈ ಹೆಣ್ಣು ಮಕ್ಕಳು ನೋಡಿಕೊಳ್ಳುತ್ತಿದ್ದಾರೆ. ಇಲ್ಲದಿದ್ದರೆ ಈ ತಾಯಿ ರಸ್ತೆಯಲ್ಲಿರಬೇಕಿತ್ತು’ ಎಂದೂ ಆತಂಕ ವ್ಯಕ್ತಪಡಿಸಿದೆ. ಮಾತ್ರವಲ್ಲ, ಮೈಸೂರು ಜಿಲ್ಲಾಧಿಕಾರಿ ಆದೇಶವನ್ನು ಎತ್ತಿ ಹಿಡಿದಿದೆ.

ಬದುಕಿನ ಸಂಧ್ಯಾ ಕಾಲದಲ್ಲಿರುವ ಮತ್ತು ಇನ್ನೊಬ್ಬರನ್ನು ಅವಲಂಬಿಸಿಕೊಂಡಿರುವ ಸುಮಾರು ಒಂದೂವರೆ ಕೋಟಿ ವೃದ್ಧರು ಸದ್ಯ ಈ  ದೇಶದಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ 65% ಮಂದಿ ಕೂಡಾ ಬಡವರು. ತಮ್ಮದೇ ಆದ ಆದಾಯವಿಲ್ಲದೇ ಮಕ್ಕಳನ್ನೋ  ಇನ್ನಿತರರನ್ನೋ ಅವಲಂಬಿಸಿದವರು. ಇವರಲ್ಲಿ ಹೆಚ್ಚಿನವರೂ ಸುಖವಾಗಿಲ್ಲ ಎಂಬುದು ಈಗಾಗಲೇ ಬಿಡುಗಡೆಗೊಂಡಿರುವ ಅಧ್ಯಯನ  ವರದಿಗಳೇ ಹೇಳುತ್ತವೆ. 2019ರಲ್ಲಿ ಬಿಡುಗಡೆಯಾದ ಏಜ್‌ವೆಲ್ ಫೌಂಡೇಶನ್‌ನ ಸಮೀಕ್ಷಾ ವರದಿ ಮತ್ತು 2015ರಲ್ಲಿ ಬಿಡುಗಡೆಯಾದ  ಹೆಲ್ಪ್ ಏಜ್ ಇಂಡಿಯಾದ ಸರ್ವೆ ವರದಿಗಳನ್ನು ಅಧ್ಯಯನಕ್ಕೆ ಒಳಪಡಿಸಿದರೆ ಎದೆ ನಡುಗುವ ವಿವರಗಳನ್ನು ದರ್ಶಿಸಬಹುದು.

ಹೆಲ್ಪ್ ಏಜ್ ಇಂಡಿಯಾ 12 ನಗರಗಳಲ್ಲಿ ನಡೆಸಿದ ಸರ್ವೇ ಪ್ರಕಾರ, ಬೆಂಗಳೂರು ಮತ್ತು ನಾಗಪುರದಲ್ಲಿ ಹಿರಿಯರು ಅತೀ ಹೆಚ್ಚು  ನಿಂದನೆ, ಬೈಗುಳಕ್ಕೆ ಒಳಗಾಗುತ್ತಿದ್ದಾರೆ. ದೆಹಲಿ ಮತ್ತು ಕಾನ್ಪುರಗಳಲ್ಲಿ ಈ ನಿಂದನೆಯ ಪ್ರಮಾಣ ಅತೀ ಕಡಿಮೆಯಿದೆ. ಪ್ರತೀ 10ರಲ್ಲಿ 4  ಮಂದಿ ವೃದ್ಧರು ಮನೆಯಲ್ಲಿ ನಿಂದನೆಯನ್ನು ಎದುರಿಸುತ್ತಿದ್ದಾರೆ. ಸರಾಸರಿ ಪ್ರತಿ 10ರಲ್ಲಿ 3 ಮಂದಿ ಮನೆಯವರ ತೀವ್ರ ನಿರ್ಲಕ್ಷ್ಯಕ್ಕೆ  ಒಳಗಾಗುತ್ತಿದ್ದಾರೆ. ಹಾಗೆಯೇ ಪ್ರತಿ 10ರಲ್ಲಿ 3 ಮಂದಿ ಮನೆಯವರ ಅಗೌರವ, ಅನಾದರಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕಿಂತಲೂ  ಘೋರವಾದುದು ಏನೆಂದರೆ, ಸರಾಸರಿ ಪ್ರತಿ 5ರಲ್ಲಿ ಇಬ್ಬರು ಪ್ರತಿದಿನ ತೀವ್ರತರದ ನಿಂದನೆ, ಬೈಗುಳಕ್ಕೆ ಒಳಗಾಗುತ್ತಿದ್ದರೆ ಪ್ರತಿ 10ರಲ್ಲಿ  ಮೂವರು ಸರಾಸರಿ ವಾರಕ್ಕೊಮ್ಮೆ ತೀವ್ರ ನಿಂದನೆಗೆ ಗುರಿಯಾಗುತ್ತಿದ್ದಾರೆ. ಪ್ರತಿ 5ರಲ್ಲಿ ಒಬ್ಬರು ಸರಾಸರಿ ತಿಂಗಳಿಗೊಮ್ಮೆ ನಿಂದನೆಗೆ  ತುತ್ತಾಗುತ್ತಿದ್ದಾರೆ. ಹಾಗಂತ,

ವೃದ್ಧರಿಗೆ ಹೀಗೆ ತೊಂದರೆ ಕೊಡುತ್ತಿರುವವರು ಯಾರೋ ಅಪರಿಚಿತರಲ್ಲ. ಸ್ವತಃ ಮಗ, ಮಗಳು ಅಥವಾ ಸೊಸೆಯಂದಿರೇ. ಪ್ರತಿ  10ರಲ್ಲಿ 6 ಮಂದಿ ವೃದ್ಧರು ಸೊಸೆ ಮತ್ತು ಬಹುತೇಕ ಮಗನಿಂದಲೇ ನಿಂದನೆಗೆ ಒಳಗಾಗುತ್ತಿದ್ದಾರೆ. ಆದರೆ, ವೃದ್ಧರಾದ ಹೆತ್ತವರನ್ನು  ಹೆಣ್ಣು ಮಕ್ಕಳು ನಿಂದಿಸಿರುವ ಪ್ರಮಾಣ ಅತ್ಯಲ್ಪ. ಬರೇ 7% ಹೆಣ್ಣು ಮಕ್ಕಳು ಮಾತ್ರ ಈ ಆರೋಪ ಹೊತ್ತಿದ್ದಾರೆ. ಆದರೆ, ಸರ್ವೇಯಲ್ಲಿ  ಮಾತನಾಡಿರುವ ಯಾವ ವೃದ್ಧರೂ ಮೊಮ್ಮಕ್ಕಳ ಮೇಲೆ ಯಾವ ದೂರನ್ನೂ ಸಲ್ಲಿಸಿಲ್ಲ. ಔಷಧಿಗಳನ್ನು ತಂದು ಕೊಡದ ಮತ್ತು ಅತೀವ  ಅಗತ್ಯಗಳಿಗಾಗಿಯೂ ಹಣ ನೀಡದ ಮಕ್ಕಳ ಬಗ್ಗೆ ಹೆಚ್ಚಿನ ಹಿರಿಯರು ದೂರಿಕೊಂಡಿರುವುದೂ ಸರ್ವೇಯಲ್ಲಿದೆ. ವೃದ್ಧಾಪ್ಯ ವೇತನದ  ಹಣವನ್ನೂ ನುಂಗಿ ನೀರು ಕುಡಿಯುವ ಮಕ್ಕಳೂ ಧಾರಾಳ ಇದ್ದಾರೆ.

ಬಹುಶಃ ಅಧ್ಯಯನ ವರದಿಗಳ ಬೆನ್ನು ಬಿದ್ದು ಮಾಹಿತಿಗಳನ್ನು ಕಲೆ ಹಾಕಹೊರಟರೆ ರಾಶಿ ರಾಶಿ ವಿವರಗಳು ಸಿಗಬಹುದೇನೋ. ಇಂಥ  ಅಧ್ಯಯನ ವರದಿಗಳು ಅಂಕಿ-ಸಂಖ್ಯೆಗಳ ಜೊತೆಗೇ ಈ ವೃದ್ಧರೊಂದಿಗೆ ನಡೆಸಲಾದ ವೈಯಕ್ತಿಕ ಮಾತುಕತೆಗಳ ವಿವರವನ್ನೂ  ಕೊಡುತ್ತದೆ. ಅವನ್ನು ಓದುವಾಗ ಹೃದಯ ಮಿಡಿಯುತ್ತದೆ. ಮಕ್ಕಳ ಮೇಲೆ ಆರೋಪವನ್ನು ಹೊರಿಸಲಾಗದ ಸಂಕಟ ಒಂದೆಡೆಯಾದರೆ, ನರಕದಂಥ ಬದುಕು ಬಾಳಲಾಗದ ದುಃಖ ಇನ್ನೊಂದೆಡೆ- ಇವೆರಡರ ನಡುವೆ ವೃದ್ಧ ಹೆತ್ತವರು ಬೇಯುತ್ತಿರುವುದನ್ನು ಇಂಥ  ಸರ್ವೇಗಳು ಮನದಟ್ಟು ಮಾಡಿಸುತ್ತವೆ. ಸಾಮಾನ್ಯವಾಗಿ ಯಾವ ಹೆತ್ತವರೂ ಇತರರೆದುರು ಮಕ್ಕಳನ್ನು ದೂರುವುದಿಲ್ಲ. ಮಕ್ಕಳು ಎಷ್ಟೇ  ಕೆಟ್ಟದಾಗಿ ನಡೆಸಿಕೊಂಡರೂ ಅವನ್ನು ಇತರರಲ್ಲಿ ಹೇಳುವುದರಿಂದ ಮಕ್ಕಳು ಅವಮಾನಿತರಾಗುತ್ತಾರೆ ಎಂದೇ ಭಾವಿಸಿ ಸಹಿಸಿಕೊಳ್ಳುತ್ತಾರೆ.  ಆದರೆ, ಮಕ್ಕಳ ದೌರ್ಜನ್ಯ ವಿಪರೀತ ಮಟ್ಟಕ್ಕೆ ತಲುಪಿದಾಗ ಅನ್ಯ ದಾರಿಂಯಿಲ್ಲದೇ ಹೃದಯ ತೆರೆದು ಮಾತಾಡುತ್ತಾರೆ. ಯಾವುದೇ  ಸರ್ವೇಯಲ್ಲಿ ವೃದ್ಧ ಹೆತ್ತವರು ತಮ್ಮ ಮಕ್ಕಳ ಬಗ್ಗೆ ದೂರಿಕೊಂಡಿದ್ದಾರೆಂದರೆ, ಅವರು ಇಂಥದ್ದೊಂದು ನರಕಮಯ ಸನ್ನಿವೇಶದ  ತುತ್ತತುದಿಯಲ್ಲಿ ಬದುಕುತ್ತಿದ್ದಾರೆಂದೇ ಅರ್ಥ. ಅಂದಹಾಗೆ,

ವೃದ್ಧರ ಪಾಲಿಗೆ ಅನೇಕ ವಿಷಯಗಳು ನಕಾರಾತ್ಮಕವಾಗಿವೆ. ತಮ್ಮ ಮೇಲೆ ಅನ್ಯಾಯವಾಗುತ್ತಿದೆ ಎಂದು ಹೇಳಿ ಸಾರ್ವಜನಿಕ ಗಮನ  ಸೆಳೆಯಬಲ್ಲ ಸ್ಥಳದಲ್ಲಿ ಪ್ರತಿಭಟನೆ ಮಾಡುವ ಸಾಮರ್ಥ್ಯ ಅವರಿಗಿಲ್ಲ. ಇತರರ ಹಂಗಿಲ್ಲದೇ ಬದುಕುವೆ ಎಂದು ಹೇಳುವ ವಯಸ್ಸೂ  ಅದಲ್ಲ. ವೃದ್ಧರು ಪರಸ್ಪರ ಸಂಪರ್ಕದಲ್ಲಿರಿಸಬಹುದಾದ ವ್ಯವಸ್ಥೆಯಾಗಲಿ, ಅಂಥ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ವಯಸ್ಸಾಗಲಿ  ಅವರದಲ್ಲ. ಆದ್ದರಿಂದಲೇ, ಒಂದೇ ಫ್ಲ್ಯಾಟ್‌ನಲ್ಲಿದ್ದರೂ ಪರಸ್ಪರ ಅಪರಿಚಿತರಾಗಿಯೇ ಅವರು ಬದುಕುತ್ತಿರುತ್ತಾರೆ. ಹಕ್ಕುಗಳ ಬಗ್ಗೆ  ಗೊತ್ತಿದ್ದರೂ ಮತ್ತು ಕಾನೂನು ಸಂರಕ್ಷಣೆಯ ಕುರಿತು ಮಾಹಿತಿ ಇದ್ದರೂ ಅವನ್ನು ಹೋರಾಡಿ ಪಡಕೊಳ್ಳುವಷ್ಟು ದೇಹತ್ರಾಣ ಅವರಲ್ಲಿರುವುದಿಲ್ಲ. ಟಿ.ವಿ. ಚಾನೆಲ್‌ಗಳ ಮೈಕ್‌ಗಳಾಗಲಿ, ಪತ್ರಕರ್ತರ ಪೆನ್ನುಗಳಾಗಲಿ ಅವರಲ್ಲಿಗೆ ತಲುಪುವುದು ಶೂನ್ಯ ಅನ್ನುವಷ್ಟು ಕಡಿಮೆ.  ವೃದ್ಧರು ಹೆಚ್ಚೆಂದರೆ ಮನೆಯಿಂದ ಆಸ್ಪತ್ರೆಗೆ ಮತ್ತು ಆಸ್ಪತ್ರೆಯಿಂದ ಮನೆಗೆ ಮಾತ್ರ ಸೀಮಿತವಾಗಿರುವುದರಿಂದ  ಹಾಗೂ ಮದುವೆ,  ಮುಂಜಿ, ಮರಣ, ಸಭೆ-ಸಮಾರಂಭಗಳಲ್ಲಿ ಗೈರು ಹಾಜರಿರುವುದರಿಂದ ಅವರ ಬಗೆಗಿನ ಸಾರ್ವಜನಿಕ ಗಮನವೂ ಕಡಿಮೆ. ಪ್ರಸ್ತಾಪವೂ  ಕಡಿಮೆ. ಅಣು ಕುಟುಂಬದ ಈ ಕಾಲದಲ್ಲಂತೂ ವೃದ್ಧ ಅಪ್ಪನನ್ನೋ ಅಮ್ಮನನ್ನೋ ಅಥವಾ ಅವರಿಬ್ಬರನ್ನೂ ಮನೆಯಲ್ಲಿ ಕೂಡಿಟ್ಟು  ಮಗ-ಸೊಸೆ ದುಡಿಯಲು ಹೋಗುತ್ತಿರುವುದೇ ಹೆಚ್ಚು. ಇಂಥ ಸ್ಥಿತಿಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಅವರು ಏಕತಾನತೆಯಿಂದ  ಬದುಕಬೇಕಾಗುತ್ತದೆ. ಅಷ್ಟಕ್ಕೂ,

ತೈತೀರಿಯಾ ಉಪನಿಷತ್‌ನಲ್ಲಿ ಹೇಳಲಾಗಿರುವ, ಮಾತೃ ದೇವೋಭವ ಪಿತೃ ದೇವೋಭವ ಎಂಬ ಶ್ಲೋಕ ಬಹಳ ಪ್ರಸಿದ್ಧ. ಪವಿತ್ರ  ಕುರ್‌ಆನ್ ಅಂತೂ ವೃದ್ಧ ಹೆತ್ತವರ ಬಗ್ಗೆ ಎಷ್ಟು ಕಾಳಜಿ ವ್ಯಕ್ತಪಡಿಸಿದೆ ಎಂದರೆ, ಅವರ ಬಗ್ಗೆ ‘ಛೆ’ ಎಂಬ ಭಾವ ಕೂಡ ಮಕ್ಕಳಲ್ಲಿ  ವ್ಯಕ್ತವಾಗಬಾರದು ಎಂದು ಆಜ್ಞಾಪಿಸಿದೆ. ‘ಹೆತ್ತವರೇ ಮಕ್ಕಳ ಪಾಲಿನ ಸ್ವರ್ಗ ಮತ್ತು ನರಕ’ ಎಂದೂ ಇಸ್ಲಾಮ್ ಹೇಳಿದೆ. ‘ಬಾಲ್ಯದಲ್ಲಿ  ಅವರು ನಮ್ಮನ್ನು ಪ್ರೀತಿ ವಾತ್ಸಲ್ಯದಿಂದ ಸಾಕಿ ಸಲಹಿದಂತೆಯೇ ನೀನು ಅವರ ಮೇಲೆ ಕರುಣೆ ತೋರು’ ಎಂದು ಮಕ್ಕಳು ಹೆತ್ತವರಿಗಾಗಿ ಸದಾ  ದೇವನಲ್ಲಿ ಪ್ರಾರ್ಥಿಸಬೇಕೆಂಬ ನಿರ್ದಿಷ್ಟ ಪ್ರಾರ್ಥನಾ ಕ್ರಮವನ್ನೇ ಇಸ್ಲಾಮ್ ಕಲಿಸಿಕೊಟ್ಟಿದೆ. ‘ನಿಮ್ಮನ್ನು ನಿತ್ರಾಣದ ಮೇಲೆ ನಿತ್ರಾಣವನ್ನು  ಸಹಿಸಿ ಹೆತ್ತಿದ್ದಾಳೆ’ ಎಂಬ ಪದಪ್ರಯೋಗಿಸಿಯೇ ತಾಯಿಯ ಮಹತ್ವವನ್ನು ಎತ್ತಿ ಹೇಳಿರುವ ಕುರ್‌ಆನ್, ‘ನಿಮ್ಮ ಯಾವುದೇ ಸೇವೆಯು  ಪ್ರಸವದ ಸಮಯದಲ್ಲಿ ತಾಯಿ ಅನುಭವಿಸಿದ ನೋವಿಗೆ ಸಮನಾಗದು’ ಎಂಬ ರೀತಿಯ ಮಾರ್ಮಿಕ ಉಪದೇಶವನ್ನೂ ನೀಡಿದೆ.  ಅಂದಹಾಗೆ,

ಮಕ್ಕಳು, ಮೊಮ್ಮಕ್ಕಳು, ಕುಟುಂಬ ಎಂದು ಸಾಮರ್ಥ್ಯವಿರುವವರೆಗೆ ದುಡಿದು ಹಾಕಿದವರನ್ನು ವೃದ್ಧಾಪ್ಯದಲ್ಲಿ ನಿರ್ಲಕ್ಷಿಸುವುದು ಸಲ್ಲದು.  ಅದು ಮಹಾಪಾಪ.

No comments:

Post a Comment