Thursday 31 August 2023

ಗುಜರಾತ್ ಹತ್ಯಾಕಾಂಡದಲ್ಲಿ ಪ್ರಭುತ್ವ ಭಾಗಿಯಾಗಿತ್ತೇ?





ಬಿಲ್ಕಿಸ್ ಬಾನು ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಮತ್ತು ಗುಜರಾತ್ ಸರಕಾರಕ್ಕೆ ಸುಪ್ರೀಮ್ ಕೋರ್ಟು ಕೆಲವು ಖಾರ ಪ್ರಶ್ನೆಗಳನ್ನು ಕೇಳಿದೆ.  ಈ 11 ಮಂದಿ ಅಪರಾಧಿಗಳನ್ನು ಮಾತ್ರ ಯಾಕೆ ಕ್ಷಮೆಗೆ ಆಯ್ಕೆ ಮಾಡಿಕೊಂಡಿದ್ದೀರಿ, ರಾಜ್ಯದಲ್ಲಿರುವ ಉಳಿದ ಅಪರಾಧಿಗಳಿಗೂ ಯಾಕೆ  ಇದೇ ಮಾನದಂಡವನ್ನು ಅನ್ವಯಿಸಿ ಬಿಡುಗಡೆಗೊಳಿಸಿಲ್ಲ... ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ವಲ್ ಭುಯಾನ್ ಅವರನ್ನು ಒಳಗೊಂಡ ನ್ಯಾಯಪೀಠ ಪ್ರಶ್ನಿಸಿದೆ. ಮರಣ ದಂಡನೆ ವಿಧಿಸಲಾಗಿದ್ದ ಈ ಅಪರಾಧಿಗಳ ಶಿಕ್ಷೆಯನ್ನು ಆ ಬಳಿಕ  ಜೀವಾವಧಿಗೆ ಇಳಿಸಲಾಗಿದೆ. ಇಂಥ ಅಪರಾಧಿಗಳನ್ನು 14 ವರ್ಷ ಶಿಕ್ಷೆಯ ಬಳಿಕ ಹೇಗೆ ಬಿಡುಗಡೆಗೊಳಿಸಿದಿರಿ? ಅಲ್ಲದೇ, ಈ ಪ್ರಕರಣದ  ವಿಚಾರಣೆ ಗೋಧ್ರಾ ನ್ಯಾಯಾಲಯದಲ್ಲಿ ನಡೆಯದಿದ್ದರೂ ಬಿಡುಗಡೆಯ ವಿಷಯದಲ್ಲಿ ಗೋಧ್ರಾ ನ್ಯಾಯಾಲಯದ ಅಭಿಪ್ರಾಯವನ್ನು  ಯಾಕೆ ಪಡೆದಿರಿ? ಈ ಬಿಡುಗಡೆಗೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿಲ್ಲವೇಕೆ? ಎಂದೂ ನ್ಯಾಯಪೀಠ ಪ್ರಶ್ನಿಸಿದೆ.

2022 ಆಗಸ್ಟ್ 15ರಂದು ಈ 11 ಮಂದಿ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಗುಜರಾತ್ ಸರಕಾರ ಬಿಡುಗಡೆಗೊಳಿಸಿತ್ತು.  2002ರ ಗುಜರಾತ್ ಹತ್ಯಾಕಾಂಡದ ವೇಳೆ ಈ ಅಪರಾಧಿಗಳು ಬಿಲ್ಕಿಸ್ ಬಾನು ಮತ್ತು ಅವರ ಕುಟುಂಬದ ಮೇಲೆ ಅತ್ಯಂತ ಪೈ ಶಾಚಿಕವಾಗಿ ನಡಕೊಂಡಿದ್ದರು. 21 ವರ್ಷದವಳಾಗಿದ್ದ ಮತ್ತು 5 ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನುರನ್ನು ಸಾಮೂಹಿಕ  ಅತ್ಯಾಚಾರಕ್ಕೆ ಒಳಪಡಿಸಲಾಗಿತ್ತು. ಆಕೆಯ ಪುಟ್ಟ ಮಗಳನ್ನು ಕಣ್ಣೆದುರೇ ನೆಲಕ್ಕೆ ಬಡಿದು ಈ ದುರುಳರು ಹತ್ಯೆ ಮಾಡಿದ್ದರು. ಅಲ್ಲದೇ,  ಆಕೆಯ ಕುಟುಂಬದ 7 ಮಂದಿಯ ಹತ್ಯೆಗೂ ಕಾರಣರಾಗಿದ್ದರು. ಗುಜರಾತ್ ಗಲಭೆಯ ವೇಳೆ ಜೀವ ಉಳಿಸಿಕೊಳ್ಳುವುದಕ್ಕಾಗಿ ಟ್ರಕ್  ಒಂದರಲ್ಲಿ ಸುರಕ್ಷಿತ ಸ್ಥಳಕ್ಕೆ ಸಾಗುತ್ತಿದ್ದ ಗುಂಪಿನಲ್ಲಿ ಈ ಬಿಲ್ಕಿಸ್ ಮತ್ತು ಹತ್ಯೆಗೀಡಾದ ಈ 7 ಮಂದಿಯೂ ಸೇರಿದ್ದರು. ಆ ಘಟನೆಯಲ್ಲಿ  ಒಟ್ಟು 14 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಪ್ರಜ್ಞೆ ಕಳಕೊಂಡು ಬಿದ್ದಿದ್ದ ಬಿಲ್ಕಿಸ್‌ರನ್ನು ಈ ದುರುಳರು ಸತ್ತಿದ್ದಾರೆಂದು ಭಾವಿಸಿ ಬಿಟ್ಟು  ಹೋಗಿದ್ದರು. ಪ್ರಜ್ಞೆ ಮರಳುವಾಗ ಬಿಲ್ಕಿಸ್ ನಗ್ನರಾಗಿದ್ದರು. ಬಳಿಕ ಹತ್ತಿರದ ಗುಡ್ಡ ಏರಿ ಅಲ್ಲಿಯ ಮನೆಯೊಂದರಲ್ಲಿ ಅವರು ಆಶ್ರಯ  ಪಡೆದರು. ಈ ಪ್ರಕರಣದ ವಿಚಾರಣೆಯನ್ನು ಗುಜರಾತ್‌ನ ಬದಲು ಮುಂಬೈಯಲ್ಲಿ ನಡೆಸುವಂತೆ ಸುಪ್ರೀಮ್ ಕೋರ್ಟು ಆದೇಶಿಸಿತ್ತು.  ವಿಚಾರಣೆ ನಡೆಸಿದ ಸಿಬಿಐ ಈ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿತ್ತು. ಆ ಬಳಿಕ ಮುಂಬೈ ಹೈಕೋರ್ಟು ಶಿಕ್ಷೆಯನ್ನು  ಜೀವಾವಧಿಗೆ ಇಳಿಸಿತ್ತು.

ಈ ನಡುವೆ ಬಿಲ್ಕಿಸ್ ಬಾನು ಹಲವು ಸವಾಲುಗಳನ್ನು ಎದುರಿಸಿದ್ದರು. ನಿರಂತರ ಜೀವ ಬೆದರಿಕೆ ಆಕೆಯನ್ನು ಬೆನ್ನಟ್ಟಿತ್ತು. ಮರ‍್ನಾಲ್ಕು  ಬಾರಿ ಮನೆ ಬದಲಾಯಿಸಿದ್ದರು. ಒಂದುಕಡೆ, ಪುಟ್ಟ ಮಗಳೂ ಸೇರಿದಂತೆ ಕುಟುಂಬದ 7 ಮಂದಿಯನ್ನು ಕಣ್ಣೆದುರೇ ಕಳಕೊಂಡ ದುಃಖ  ಮತ್ತು ಅತ್ಯಾಚಾರಕ್ಕೊಳಗಾದ ಆಘಾತ, ಇನ್ನೊಂದೆಡೆ ಜೀವ ಬೆದರಿಕೆ- ಇವೆರಡನ್ನೂ ಎದುರಿಸಿ ನಿಲ್ಲುವುದು ಆಕೆಗೆ ಸುಲಭವಾಗಿರಲಿಲ್ಲ.  ಆಕೆಗೆ ಈ 11 ಮಂದಿ ದುಷ್ಕರ್ಮಿಗಳಷ್ಟೇ ಸವಾಲಾಗಿರಲಿಲ್ಲ, ಇಡೀ ಪ್ರಭುತ್ವವನ್ನೇ ಆಕೆ ಎದುರಿಸಬೇಕಿತ್ತು. ಪೊಲೀಸ್ ಠಾಣೆಯ ಕಂಭ  ಕಂಭಗಳೂ ಬಿಲ್ಕಿಸ್‌ರನ್ನು ಬೆದರಿಸುತ್ತಿತ್ತು. ಅತ್ಯಾಚಾರದ ಸಂತ್ರಸ್ತೆ ಎಂಬೊಂದು  ಹಣೆಪಟ್ಟಿಯನ್ನು ಅಂಟಿಸಿಕೊಂಡೇ  ಆಕೆ ಬದುಕಬೇಕಿತ್ತು.  ನ್ಯಾಯಾಲಯದ ವಿಚಾರಣೆಗೂ ಹಾಜರಾಗಬೇಕಿತ್ತು. ಮಾಧ್ಯಮಗಳ ಪ್ರಶ್ನೆಗಳಿಗೂ ಉತ್ತರಿಸಬೇಕಿತ್ತು. ಆದರೆ, ಬಿಲ್ಕಿಸ್ ಈ ಎಲ್ಲ ಸವಾಲನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿದರು. ತನ್ನ ಮೇಲೆ ಅತ್ಯಾಚಾರಗೈದ ಮತ್ತು ಕುಟುಂಬ ಸದಸ್ಯರನ್ನು ಹತ್ಯೆಗೈದವರನ್ನು ಶಿಕ್ಷೆಯ  ಕುಣಿಕೆಗೆ ತಲುಪಿಸಿಯೇ ಸಿದ್ಧ ಎಂಬ ಹಠಕ್ಕೆ ಬಿದ್ದರು. ಈ ದಿಕ್ಕಿನಲ್ಲಿ ಎದುರಾದ ಸರ್ವ ಒತ್ತಡಗಳನ್ನೂ ಧಿಕ್ಕರಿಸಿದರು. ಈ ಹೋರಾಟ  ಮನೋಭಾವದ ಪರಿಣಾಮವಾಗಿಯೇ ಈ 11 ಮಂದಿ ಕ್ರೂರಿಗಳಿಗೆ ಶಿಕ್ಷೆಯಾಯಿತು. ಸಾಮಾನ್ಯವಾಗಿ,

ಕೋಮುಗಲಭೆಯ ವೇಳೆ ಎಸಗಲಾಗುವ ಅತ್ಯಾಚಾರ ಮತ್ತು ಹತ್ಯೆ  ಪ್ರಕರಣಗಳಲ್ಲಿ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವುದು ಬಹಳ ಕಡಿಮೆ.  ಹೆಚ್ಚಿನ ವೇಳೆ ಸಂತ್ರಸ್ತರು ದೂರು ಕೊಡುವುದಿಲ್ಲ. ಒಂದುವೇಳೆ ಕೊಟ್ಟರೂ ದುಷ್ಕರ್ಮಿಗಳ ಒತ್ತಡದಿಂದಾಗಿ ನ್ಯಾಯಾಲಯದಲ್ಲಿ ಅವರು  ಹೇಳಿಕೆ ಬದಲಿಸುವುದೇ ಹೆಚ್ಚು. ಗುಜರಾತ್‌ನ ಬೆಸ್ಟ್ ಬೇಕರಿ ಪ್ರಕರಣ ಇದಕ್ಕೆ ತಾಜಾ ಉದಾಹರಣೆ. ಅತ್ಯಾಚಾರಕ್ಕೊಳಗಾಗಿ ಜೀವಭಯದಿಂದ ಊರು ಬಿಟ್ಟವರು ಮರಳಿ ಊರಿಗೆ ಬರಬೇಕಾದರೆ ದುಷ್ಕರ್ಮಿಗಳೇ ಕೆಲವು ಷರತ್ತುಗಳನ್ನು ವಿಧಿಸುತ್ತಾರೆ. ಅದರಲ್ಲಿ, ದೂರು  ನೀಡಬಾರದು ಮತ್ತು ನೀಡಿದ್ದರೆ ಅದನ್ನು ಹಿಂತೆಗೆದುಕೊಳ್ಳಬೇಕು ಎಂಬುದೂ ಒಂದು. ಬಹುತೇಕ ಪ್ರಕರಣಗಳಲ್ಲಿ ಈ ರಾಜಿ  ಒಪ್ಪಂದವೇ ಮೇಲುಗೈ ಪಡೆಯುತ್ತದೆ. ಅಲ್ಲದೇ, ಪೊಲೀಸರೂ ಸೂಕ್ತ ಎಫ್‌ಐಆರ್ ದಾಖಲಿಸುವುದಿಲ್ಲ. ಪೂರಕ ಸಾಕ್ಷ್ಯಗಳನ್ನೂ  ಸಂಗ್ರಹಿಸುವುದಿಲ್ಲ. ಅವರು ದುಷ್ಕರ್ಮಿಗಳ ಜೊತೆ ಶಾಮೀಲಾಗಿ ಪ್ರಕರಣವನ್ನು ದುರ್ಬಲಗೊಳಿಸುವ ಸನ್ನಿವೇಶಗಳೇ ಹೆಚ್ಚು. ಇಂಥ  ಹಲವು ಸವಾಲುಗಳ ನಡುವೆಯೂ ಬಿಲ್ಕಿಸ್ ಬಾನು ದುಷ್ಕರ್ಮಿಗಳನ್ನು ಕಟಕಟೆಗೆ ತಂದಿದ್ದಾರೆಂದರೆ ಮತ್ತು ಶಿಕ್ಷೆಯಾಗುವಂತೆ  ನೋಡಿಕೊಂಡಿದ್ದಾರೆಂದರೆ, ಅದು ಸಣ್ಣ ಸಾಹಸವಲ್ಲ. ನಿಜವಾಗಿ, 

ಗುಜರಾತ್ ಸರಕಾರ ಬಿಲ್ಕಿಸ್ ಪರ ನಿಲ್ಲಬೇಕಿತ್ತು. ಆದರೆ, ಅದು  ದುಷ್ಕರ್ಮಿಗಳ ಪರ ನಿಂತಿತು. ಈ ದುರುಳರನ್ನು ಬಿಡುಗಡೆಗೊಳಿಸುವುದಕ್ಕೆ ಅನುಮತಿಸುವಂತೆ ಕೇಂದ್ರ ಗೃಹ ಇಲಾಖೆಗೆ ಪತ್ರ  ಬರೆಯಿತು. ದುರಂತ ಏನೆಂದರೆ, ಈ ಪತ್ರ ಬರೆದುದಕ್ಕಾಗಿ ಗುಜರಾತ್ ಸರಕಾರಕ್ಕೆ ಛೀಮಾರಿ ಹಾಕಬೇಕಿದ್ದ ಕೇಂದ್ರ ಗೃಹ ಇಲಾಖೆಯು  ಬಿಡುಗಡೆಗೆ ಅನುಮತಿಯನ್ನು ನೀಡಿ ಈ ಪಾಪ ಕಾರ್ಯದಲ್ಲಿ ತಾನೂ ಶಾಮೀಲಾಯಿತು. ಹಾಗಂತ, ಇಲ್ಲಿಗೇ ಮುಗಿದಿಲ್ಲ.

ಈ ಬಿಡುಗಡೆಯನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು, ಸಂಸದೆ ಮಹುವಾ ಮೊಯಿತ್ರ ಸೇರಿದಂತೆ ಇತರರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ  ನ್ಯಾಯಮೂರ್ತಿ ಕೆ.ಎ. ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠವನ್ನು ಸುಪ್ರೀಮ್ ಕೋರ್ಟು ರಚಿಸಿತು.  ಆದರೆ ಕೇಂದ್ರ ಮತ್ತು ಗುಜರಾತ್ ಸರಕಾರಗಳು ಇಲ್ಲೂ ಆಟವಾಡತೊಡಗಿತು. ಪ್ರಕರಣದ ವಿಚಾರಣೆಯನ್ನು ಪದೇ ಪದೇ  ಮೂಂದೂಡುವಂಥ ಸನ್ನಿವೇಶವನ್ನು ಸರಕಾರಗಳು ಸೃಷ್ಟಿಸತೊಡಗಿದುವು. ಕೆ.ಎ. ಜೋಸೆಫ್ ಈ ಪ್ರಕರಣದ ವಿಚಾರಣೆ ನಡೆಸುವುದು ಈ  ಎರಡೂ ಸರಕಾರಗಳಿಗೂ ಬೇಕಿರಲಿಲ್ಲ. 2023 ಜೂನ್ 16ರಂದು ಅವರು ನಿವೃತ್ತಿಯಾಗಲಿದ್ದು, ಅಲ್ಲಿಯವರೆಗೆ ವಿವಿಧ ಕಾರಣಗಳನ್ನು  ಮುಂದಿಟ್ಟು ವಿಚಾರಣೆ ನಡೆಸದಂತೆ ನೋಡಿಕೊಂಡವು. ಇದನ್ನು ಖುದ್ದು ಜೋಸೆಫ್ ಅವರೇ ಬಹಿರಂಗವಾಗಿ ಹೇಳಿಕೊಂಡರು. ಇದೀಗ  ಅವರ ಜಾಗಕ್ಕೆ ನ್ಯಾಯಮೂರ್ತಿ ಉಜ್ವಲ್ ಭುಯಾನ್ ನೇಮಕವಾಗಿದ್ದಾರೆ ಮತ್ತು ವಿಚಾರಣೆ ಪ್ರಾರಂಭವಾಗಿದೆ. ನಿಜವಾಗಿ,

ಈ 11 ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸುವ ಮೂಲಕ ಕೇಂದ್ರ ಮತ್ತು ಗುಜರಾತ್ ಸರಕಾರಗಳು ಈ ದೇಶದ ವರ್ಚಸ್ಸಿಗೆ  ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಕ್ಕೆಯನ್ನು ತಂದಿದೆ. ಅಲ್ಲದೇ, ಈ ಅಪರಾಧಿಗಳ ಬಗ್ಗೆ ಗುಜರಾತ್ ಸರಕಾರ ಎಷ್ಟು ಅನುಕಂಪವನ್ನು  ಹೊಂದಿತ್ತು ಅನ್ನುವುದಕ್ಕೆ ಜೈಲಿನಲ್ಲಿರುವಾಗ ಅವರಿಗೆ ಸಿಕ್ಕಿರುವ ಪೆರೋಲ್‌ಗಳೇ ಸಾಕ್ಷಿ. ಈ ಅಪರಾಧಿಗಳಲ್ಲಿ ನಾಲ್ಕರಿಂದ 5 ಮಂದಿ  ಶಿಕ್ಷಾವಧಿಯಲ್ಲೇ  ಸಾವಿರಕ್ಕಿಂತಲೂ ಅಧಿಕ ದಿನಗಳನ್ನು ಜೈಲಿನ ಹೊರಗಡೆ ಕಳೆದಿದ್ದರು. ಜೈಲಧಿಕಾರಿಗಳು ಈ ಅಪರಾಧಿಗಳಿಗೆ  ಇಂಥದ್ದೊಂದು ಬಿಡುಗಡೆ ಭಾಗ್ಯವನ್ನು ಕರುಣಿಸಿದ್ದರು. ಹಾಗಂತ, ಇಂಥ ಪೆರೋಲ್ ಭಾಗ್ಯಗಳು ಇತರ ಅಪರಾಧಿಗಳಿಗೆ ಲಭಿಸಿರುವ  ಯಾವ ಮಾಹಿತಿಯೂ ಇಲ್ಲ. ಅಷ್ಟಕ್ಕೂ,

 ಗುಜರಾತ್ ಸರಕಾರ ಈ ಅಪರಾಧಿಗಳನ್ನು ಇಷ್ಟೊಂದು ಕಾಳಜಿಯಿಂದ ನೋಡಿಕೊಳ್ಳಲು  ಕಾರಣ ಏನು? ಗುಜರಾತ್ ಹತ್ಯಾಕಾಂಡವನ್ನು ಈ ಸರಕಾರ ಸಂಭ್ರಮಿಸುತ್ತಿದೆಯೇ? ಅಂಥದ್ದೊಂದು ಹತ್ಯಾಕಾಂಡವನ್ನು ಅದು  ಬಯಸಿತ್ತೇ? ಅಲ್ಲದೇ, ಬಿಡುಗಡೆಗೊಂಡ ಈ ಅಪರಾಧಿಗಳನ್ನು ಜೈಲಿನ ಹೊರಗಡೆ ಆರತಿ ಎತ್ತಿ ಸ್ವಾಗತಿಸಲಾಗಿತ್ತು. ಸಿಹಿ ಹಂಚಿ  ಸಂಭ್ರಮಿಸಲಾಗಿತ್ತು. ಹೀಗೆ ಬಿಡುಗಡೆಗೊಂಡ ಅಪರಾಧಿಗಳಲ್ಲಿ ಓರ್ವ ಆ ಬಳಿಕ ಬಿಜೆಪಿ ಸಚಿವರಿದ್ದ ವೇದಿಕೆಯನ್ನೂ ಹಂಚಿಕೊಂಡಿದ್ದ.  ಇವೆಲ್ಲ ಏನು? ಈ ಅಪರಾಧಿಗಳ ಬಗ್ಗೆ ಗುಜರಾತ್ ಮತ್ತು ಕೇಂದ್ರ ಸರಕಾರಕ್ಕೆ ಇಷ್ಟು ಕಕ್ಕುಲಾತಿ ಏಕೆ? ದೇಶಕ್ಕೆ ಅಪಕೀರ್ತಿ ತಂದವರನ್ನು  ಇವರೆಲ್ಲ ಇಷ್ಟು ಗೌರವಯುತವಾಗಿ ನಡೆಸಿಕೊಳ್ಳುತ್ತಿರುವುದೇಕೆ? ಗುಜರಾತ್ ಹತ್ಯಾಕಾಂಡದಲ್ಲಿ ಪ್ರಭುತ್ವ ಭಾಗಿಯಾಗಿರುವುದರ ಸೂಚನೆಯೇ ಇದು? ತನ್ನ ನಿವೃತ್ತಿಯನ್ನು ಈ ಎರಡೂ ಸರಕಾರಗಳು ಕಾಯುತ್ತಿವೆ ಎಂದು ನ್ಯಾಯಮೂರ್ತಿ ಕೆ.ಎ. ಜೋಸೆಫ್  ಹೇಳಿರುವುದರ ಆಂತರ್ಯವೇನು? ನಿಜಕ್ಕೂ ನ್ಯಾಯಪ್ರಿಯರೆಲ್ಲ ತಲೆತಗ್ಗಿಸಬೇಕಾದ ಪ್ರಕರಣ ಇದು.

Wednesday 23 August 2023

47ರ ಭಾರತಕ್ಕೆ 76ರ ಭಾರತದ ಮುಖಾಮುಖಿ



ಸನ್ಮಾರ್ಗ ಸಂಪಾದಕೀಯ 

1947 ಆಗಸ್ಟ್ 15ರಂದು ಗಾಂಧೀಜಿ ಕೊಲ್ಕತ್ತಾ ಬಳಿಯ ನೌಕಾಲಿಯಲ್ಲಿದ್ದರು. ಆಗಸ್ಟ್ 6ರಂದೇ ಅವರು ಲಾಹೋರ್‌ನಿಂದ  ಕೊಲ್ಕತ್ತಾಕ್ಕೆಂದು ಹೊರಟಿದ್ದರು. ಅಲ್ಲಿಂದ ನೌಕಾಲಿಗೆ ಹೋಗುವುದು ಅವರ ಉದ್ದೇಶ. ಭಾರತ ಮತ್ತು ಪಾಕಿಸ್ತಾನ ಎಂಬ ಹೆಸರಲ್ಲಿ  ಭಾರತ ವಿಭಜನೆಗೊಂಡು ಸ್ವತಂತ್ರಗೊಳ್ಳುವುದು ಅದಾಗಲೇ ದೇಶಕ್ಕೆ ದೇಶವೇ ತಿಳಿದಿರುವ ಕಾರಣ ಉತ್ತರ ಭಾರತದಲ್ಲಿ ಹಿಂದೂ- ಮುಸ್ಲಿಮ್ ಘರ್ಷಣೆ ಸ್ಫೋಟಗೊಂಡಿತ್ತು. ಇವತ್ತು ಬಾಂಗ್ಲಾದೇಶದ ಭಾಗವಾಗಿರುವ ನೌಕಾಲಿಯಲ್ಲಿ ಹಿಂದೂಗಳು  ಅಲ್ಪಸಂಖ್ಯಾತರಾಗಿದ್ದರು. ಕೊಲ್ಕತ್ತಾದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರು. ಮುಸ್ಲಿಮ್ ಪಾಕಿಸ್ತಾನ ಮತ್ತು ಹಿಂದೂ ಭಾರತ ಎಂಬ  ಕರಿಛಾಯೆಗೆ ಬಡಜನರು ಸಿಲುಕಿಕೊಂಡರು. ನೌಕಾಲಿಯಲ್ಲಿ ಹಿಂದೂಗಳು ಸಂತ್ರಸ್ತರಾದರೆ ಕೊಲ್ಕತ್ತಾದಲ್ಲಿ ಮುಸ್ಲಿಮರು ಸಂತ್ರಸ್ತರಾದರು.  ನೌಕಾಲಿಗೆಂದು ಹೊರಟ ಗಾಂಧೀಜಿಯವರು ಆಗಸ್ಟ್ 9ರಂದು ಕೊಲ್ಕತ್ತಾ ತಲುಪಿದರು. ಆಗ ಅವರನ್ನು ಪ್ರಮುಖ ಮುಸ್ಲಿಮ್  ಮುಖಂಡ ಹುಸೈನ್ ಶಹೀದ್ ಸುಹ್ರವರ್ದಿ ಭೇಟಿಯಾಗಿ ಕೊಲ್ಕತ್ತಾದಲ್ಲೇ  ಉಳಕೊಳ್ಳುವಂತೆ ಮತ್ತು ಮುಸ್ಲಿಮರ ಮೇಲಿನ ದಾಳಿಯನ್ನು  ತಡೆಯುವುದಕ್ಕೆ ನೆರವಾಗುವಂತೆ ವಿನಂತಿಸಿದರು. ನೌಕಾಲಿಯಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ತಡೆಯಲು ನೀವು ನೆರವಾದರೆ,  ಕೊಲ್ಕತ್ತಾದಲ್ಲಿ ಮುಸ್ಲಿಮರ ಮೇಲಿನ ದಾಳಿಯನ್ನು ತಡೆಯಲು ನೆರವಾಗುವೆ..  ಎಂದು ಗಾಂಧೀಜಿ ಮಾತು ಕೊಟ್ಟರು. ಆ ಬಳಿಕ  ಅವರಿಬ್ಬರೂ ಭುಜಕ್ಕೆ ಭುಜ ಸೇರಿಸಿ ಕೋಮುಗಲಭೆಯನ್ನು ನಿಯಂತ್ರಿಸುವುದಕ್ಕೆ ಶ್ರಮಿಸಿದರು. ಗಾಂಧೀಜಿ ಅಮರಣಾಂತ ಉಪವಾಸ  ವ್ರತ ಘೋಷಿಸಿದರು. ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲೂ ಗಾಂಧೀಜಿ ಜನರ ನಡುವೆ ನಿಂತರು. ಹಿಂದೂಗಳಿಗೆ ಸುಹ್ರವರ್ದಿಯ  ಮೇಲೆ ಆಕ್ರೋಶವಿತ್ತು. ಹಿಂದೂಗಳ ಮೇಲಿನ ದಾಳಿಯ ವೇಳೆ ಅವರ ನಿಲುವಿನ ಬಗ್ಗೆ ಆಕ್ಷೇಪವಿತ್ತು. ಆದರೆ, ಗಾಂಧೀಜಿ ನಿಜ  ನಾಯಕನಂತೆ ಎಲ್ಲರನ್ನೂ ಸೇರಿಸಿಕೊಂಡು ಹಿಂದೂ-ಮುಸ್ಲಿಮರನ್ನು ದ್ವೇಷದ ಕುಲುಮೆಯಿಂದ ಹೊರತಂದರು. ಹಿಂದೂಗಳನ್ನು  ಮಂದಿರದಲ್ಲೂ ಮುಸ್ಲಿಮರನ್ನು ಮಸೀದಿಯಲ್ಲೂ ಸೇರಿಸಿದರು. ಎಲ್ಲಿಯವರೆಗೆಂದರೆ, ಆಗಸ್ಟ್ 26ರ ಈದುಲ್ ಫಿತರ್ ಹಬ್ಬವನ್ನು ಎಲ್ಲರ  ಜೊತೆ ಸೇರಿ ಆಚರಿಸಿದರು. ಜನರು ಸಂಕಷ್ಟದಲ್ಲಿರುವಾಗ ಓರ್ವ ಜವಾಬ್ದಾರಿಯುತ ವ್ಯಕ್ತಿ ಏನು ಮಾಡಬಹುದು ಎನ್ನುವುದಕ್ಕೆ ನಿದರ್ಶನ  ಇದು. ದುರಂತ ಏನೆಂದರೆ,

1947 ಆಗಸ್ಟ್ 15ರ ಆಸುಪಾಸಿನಲ್ಲಿ ಕೊಲ್ಕತ್ತಾ, ನೌಕಾಲಿ ಕೋಮುದ್ವೇಷದಿಂದ ಉರಿದಿದ್ದರೆ ಈ 2023ರ ಆಗಸ್ಟ್ ಆಸುಪಾಸಿನಲ್ಲಿ  ಮಣಿಪುರ, ಹರ್ಯಾಣಗಳು ಉರಿಯುತ್ತಿವೆ. ಸ್ವಾತಂತ್ರ‍್ಯ ಲಭ್ಯವಾಗಿ 75 ವರ್ಷಗಳಾದ ಬಳಿಕವೂ ಧರ್ಮದ ಹೆಸರಿನಲ್ಲಿ ನಡೆಯುವ  ಅತ್ಯಾಚಾರಕ್ಕೆ ತೆರೆಬಿದ್ದಿಲ್ಲ. ಮಣಿಪುರದಲ್ಲಿ ಮೇಥಿಗಳು ಕುಕಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿ ಅತ್ಯಾಚಾರ  ನಡೆಸಿದ್ದಾರೆ. 150ಕ್ಕಿಂತಲೂ ಅಧಿಕ ಮಂದಿಯ ಪ್ರಾಣಹಾನಿಯಾಗಿದೆ. ಮೇಥಿಗಳು ಮತ್ತು ಕುಕಿಗಳು ಶಸ್ತಾಸ್ತ್ರ  ಹಿಡಿದು  ಹೋರಾಡುತ್ತಿದ್ದಾರೆ. ಮೇ 3ರಿಂದ ಆರಂಭವಾಗಿರುವ ಧರ್ಮದ್ವೇಷದ ಈ ಚಟುವಟಿಕೆ ಇನ್ನೂ ನಿಂತಿಲ್ಲ. ನೌಖಾಲಿಯಲ್ಲಿ ಹಿಂದೂಗಳ  ವಿರುದ್ಧ ತಿರುಗಿ ಬಿದ್ದಿದ್ದ ಮುಸ್ಲಿಮರನ್ನು ಮತ್ತು ಕೊಲ್ಕತ್ತಾದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಹಿಂದೂಗಳನ್ನು ಮನುಷ್ಯರಾಗಿ  ಆಲೋಚಿಸುವಂತೆ ಮಾಡುವುದಕ್ಕೆ ಗಾಂಧೀಜಿಗೆ ಸಾಧ್ಯವಾಗಿತ್ತು. ಅವರು ಆ ಪ್ರದೇಶಗಳಿಗೆ ಭೇಟಿಕೊಟ್ಟು, ಜನರೊಂದಿಗೆ ಬೆರೆತು, ಉಪವಾಸ ಆಚರಿಸಿ ಜನರ ಭಾವನೆಯಲ್ಲಿ ಬದಲಾವಣೆಯನ್ನು ತರಲು ಯಶಸ್ವಿಯಾಗಿದ್ದರು. ಆದರೆ ಇವತ್ತು ಇಂಥ ನಾಯಕರೇ  ಕಾಣಿಸುತ್ತಿಲ್ಲ. ಸರ್ವರನ್ನೂ ಜೊತೆಗೆ ಕೊಂಡೊಯ್ಯಬೇಕಾದ ಮತ್ತು ಜನರ ಸಂಕಷ್ಟಕ್ಕೆ ಸದಾ ಸ್ಪಂದಿಸಬೇಕಿದ್ದ ಪ್ರಧಾನಿ ಆ  ಹೊಣೆಗಾರಿಕೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಮಣಿಪುರಕ್ಕೆ ಬೆಂಕಿ ಬಿದ್ದು ಮೂರು ತಿಂಗಳು ಕಳೆದ ಬಳಿಕ ಮಣಿಪುರದ ಬಗ್ಗೆ  ಕೇವಲ ಎರಡೇ ಎರಡು ನಿಮಿಷ ಪ್ರಧಾನಿ ಮಾತನಾಡಿದ್ದಾರೆ. ಅದೂ ಕೂಡಾ ಪ್ರತಿಪಕ್ಷಗಳು ಪಾರ್ಲಿಮೆಂಟ್‌ನಲ್ಲಿ ಅವಿಶ್ವಾಸ ನಿರ್ಣಯ  ಮಂಡಿಸಿ ಪ್ರಧಾನಿ ಮಾತಾಡಲೇಬೇಕಾದ ಅನಿವಾರ್ಯ ಸ್ಥಿತಿಯನ್ನು ನಿರ್ಮಿಸಿದ ಬಳಿಕ. ನೌಕಾಲಿ ಭಾರತದ ಭಾಗವಾಗುವುದಿಲ್ಲವೆಂದು  ಗೊತ್ತಿದ್ದೂ ಕೂಡಾ ಗಾಂಧೀಜಿ ಅಲ್ಲಿಗೆ ತೆರಳಿದ್ದರು. ಜನರೊಂದಿಗೆ ಬೆರೆತಿದ್ದರು. ಭೂಮಿ ಯಾರ ಪಾಲಾಗುತ್ತದೆ ಎಂಬುದರ ಆಚೆಗೆ ಅಲ್ಲಿ  ಬದುಕುತ್ತಿರುವವರ ಪ್ರಾಣ-ಮಾನಕ್ಕೆ ಅವರು ಪ್ರಾಮುಖ್ಯತೆ ನೀಡಿದ್ದರು. ಹಾಗಂತ,

ಗಾಂಧೀಜಿ ದೇಶದ ಪ್ರಧಾನಿಯೋ ರಾಷ್ಟ್ರಪತಿಯೋ ಏನೂ ಆಗಿರಲಿಲ್ಲ. ಆದರೆ ಮಣಿಪುರ ಈ ದೇಶದ್ದೇ  ಒಂದು ತುಂಡು ಭಾಗ.  ಅಲ್ಲದೇ, ಈಗಿನ ಗಾಂಧಿರಹಿತ ಭಾರತಕ್ಕೆ ಪ್ರಧಾನಿಯೇ ನಾಯಕ. ಆದರೆ ಈಗಿನ ಪ್ರಧಾನಿ ಮಣಿಪುರಕ್ಕೆ ಈವರೆಗೆ ಭೇಟಿ ಕೊಟ್ಟಿಲ್ಲ. ಅಲ್ಲಿನ ಜನರ  ಭಾವನೆಗಳನ್ನು ಆಲಿಸಿಲ್ಲ. ಅತ್ಯಂತ ಸಂಕಷ್ಟದಲ್ಲಿರುವ ಸಮಯದಲ್ಲಿ ಜನರು ಪ್ರಧಾನಿಯ ಉಪಸ್ಥಿತಿಯನ್ನು ಬಯಸುತ್ತಾರೆ. ಅವರಲ್ಲಿ ತಮ್ಮ  ಸಂಕಷ್ಟಗಳನ್ನು ಹೇಳಿಕೊಂಡು ಹಗುರವಾಗುತ್ತಾರೆ. ಆದರೆ ಕಳೆದ ಮೂರು ತಿಂಗಳ ಅವಧಿಯಲ್ಲಿ ದೇಶದ ಇತರ ರಾಜ್ಯಗಳಿಗೆ ಮತ್ತು  ವಿದೇಶಕ್ಕೆ ಪ್ರಯಾಣಿಸಿರುವ ಪ್ರಧಾನಿ ಮಣಿಪುರಕ್ಕೆ ಭೇಟಿ ಕೊಡುವುದು ಬಿಡಿ, ಮಣಿಪುರಿಗಳಲ್ಲಿ ಧೈರ್ಯ ತುಂಬುವುದಕ್ಕೆ ಒಂದೈದು  ನಿಮಿಷವನ್ನೂ ವ್ಯಯಿಸಿಲ್ಲ. ಇಲ್ಲಿ ಇನ್ನೂ ಒಂದು ಆಘಾತಕಾರಿ ಅಂಶವಿದೆ. ಅದೇನೆಂದರೆ,

ಕಳೆದ ಆಗಸ್ಟ್ ನಲ್ಲಿ  11 ಮಂದಿ ಅತ್ಯಾಚಾರಿ ಅಪರಾಧಿಗಳನ್ನು ಬಿಡುಗಡೆಗೊಳಿಸಲಾಗಿತ್ತು. 2002ರಲ್ಲಿ ಗುಜರಾತ್‌ನಲ್ಲಿ ನಡೆದ  ಧರ್ಮದ್ವೇಷದ ಹಿಂಸೆಯ ವೇಳೆ ಬಿಲ್ಕಿಸ್ ಬಾನು ಎಂಬ 22 ವರ್ಷದ ಗರ್ಭಿಣಿಯ ಮೇಲೆ ಅತ್ಯಾಚಾರಗೈದ, ಆಕೆಯ ಮಗಳನ್ನು ನೆಲಕ್ಕೆ  ಬಡಿದು ಹತ್ಯೆಗೈದುದೂ ಸೇರಿದಂತೆ 7 ಮಂದಿಯ ಹತ್ಯೆ ನಡೆಸಿದ ಅಪರಾಧಿಗಳು ಇವರು. ಇವರು ಜೀವನಪರ್ಯಂತ ಜೈಲಲ್ಲಿರಬೇಕು  ಎಂಬುದು ನ್ಯಾಯಾಲಯದ ನಿಲುವಾಗಿತ್ತು. ಆದರೆ ಇವರನ್ನು ಬಿಡುಗಡೆಗೊಳಿಸಲು ಗುಜರಾತ್ ಸರಕಾರ ನಿರ್ಧರಿಸಿತು. ಹಾಗಂತ, ಈ  ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ತೀರ್ಪು ನೀಡಿರುವುದರಿಂದ ಕೇಂದ್ರ ಸರಕಾರದ ಒಪ್ಪಿಗೆಯ ಹೊರತು ಬಿಡುಗಡೆ ಅಸಾಧ್ಯವಾಗಿತ್ತು.  ಆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಗೆ ಅನುಮತಿ ಕೋರಿ ಗುಜರಾತ್ ಸರಕಾರ ಪತ್ರ ಬರೆಯಿತು. ಕೇಂದ್ರ ಸರಕಾರ ಈ ಬಿಡುಗಡೆಗೆ  ಅನುಮತಿಯನ್ನೂ ನೀಡಿತು. ಸ್ವಾತಂತ್ರ‍್ಯದ ಅಮೃತ ಮಹೋತ್ಸವ ನಡೆಯುತ್ತಿರುವ ವೇಳೆಯಲ್ಲೇ  ಈ ಅಪರಾಧಿಗಳನ್ನು ಸನ್ನಡತೆಯ  ಆಧಾರದಲ್ಲಿ ಬಿಡುಗಡೆಗೊಳಿಸಲಾಯಿತು. ಪ್ರಧಾನಿ ಮನಸ್ಸು ಮಾಡಿದ್ದಿದ್ದರೆ ಈ ಬಿಡುಗಡೆ ಸಾಧ್ಯವೇ ಇರಲಿಲ್ಲ.  ಸ್ವತಂತ್ರಗೊಂಡು  75  ವರ್ಷಗಳಾಗುವಾಗ ದೇಶ ಎತ್ತ ಕಡೆ ಮುಖ ಮಾಡಿದೆ ಎಂಬುದನ್ನು ಇದು ಸೂಚಿಸುತ್ತದೆ.

ನಿಜವಾಗಿ, ಗಾಂಧೀಜಿಯ ಹೆಸರನ್ನು ಉಚ್ಚರಿಸಲೂ ಲಾಯಕ್ಕಲ್ಲದ ಹೆಚ್ಚಿನವರು ಇವತ್ತು ಜನಪ್ರತಿನಿಧಿಗಳಾಗಿದ್ದಾರೆ. ಹಲ್ಲೆ, ಹತ್ಯೆ,  ಅತ್ಯಾಚಾರ, ದ್ವೇಷಭಾಷಣ, ಭ್ರಷ್ಟಾಚಾರ ಇತ್ಯಾದಿ ಕೊಳಕುಗಳನ್ನು ಅಂಟಿಸಿಕೊಳ್ಳದೇ ಸ್ವಚ್ಛವಾಗಿರುವ ಜನಪ್ರತಿನಿಧಿಗಳ ಸಂಖ್ಯೆ ವರ್ಷಂಪ್ರತಿ  ಕಡಿಮೆಯಾಗುತ್ತಿದೆ. ಸ್ವಾತಂತ್ರ‍್ಯದ 75 ವರ್ಷಗಳಲ್ಲಿ ಪ್ರಾಮಾಣಿಕತೆ, ನೈತಿಕತೆ, ಧರ್ಮ, ಮೌಲ್ಯ ಇತ್ಯಾದಿಗಳ ಅರ್ಥವೇ ಬದಲಾಗಿದೆ.  ಪ್ರಧಾನಿ ಸಹಿತ ಜನಪ್ರತಿನಿಧಿಗಳು ಪ್ರತಿ ಮಾತನ್ನೂ ಓಟಿನ ಲೆಕ್ಕಾಚಾರದಿಂದಲೇ ಆಡುತ್ತಾರೆ. ಮುಸ್ಲಿಮರ ಮತಗಳೇ ಬೇಡ ಎಂದು  ಹೇಳುವಷ್ಟು ರಾಜಕೀಯ ಕೊಳೆತು ಹೋಗಿದೆ. ಕೋಮುಗಲಭೆಯನ್ನೂ ಓಟಿನ ದೃಷ್ಟಿಕೋನದಿಂದಲೇ ನೋಡಲಾಗುತ್ತದೆ. ಭ್ರಷ್ಟಾಚಾರಿ  ತಮ್ಮ ಪಕ್ಷದವರಾದರೆ ಸಮರ್ಥಿಸುವುದು ಮತ್ತು ಅನ್ಯ ಪಕ್ಷದವನಾದರೆ ಪ್ರತಿಭಟಿಸುವುದು ಎಂಬಲ್ಲಿಗೆ ನೈತಿಕತೆ ಕುಸಿದು ಹೋಗಿದೆ. ರೈಲು  ಅಪಘಾತದ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಲಾಲ್ ಬಹದ್ದೂರ್ ಶಾಸ್ತ್ರಿ  ಇವತ್ತಿನ ರಾಜಕಾರಣದಲ್ಲಿ ದಡ್ಡ  ಅನಿಸಿಕೊಂಡಿದ್ದಾರೆ. ಅಂದಹಾಗೆ,

1947ರ ಭಾರತ ಮತ್ತು 2023ರ ಭಾರತವನ್ನು ತಕ್ಕಡಿಯಲ್ಲಿಟ್ಟು ತೂಗುವಾಗ ಖುಷಿ ಮತ್ತು ದುಃಖ ಎರಡರ ಅನುಭವವೂ  ಉಂಟಾಗುತ್ತದೆ. 47ರ ಭಾರತ ಸ್ವತಃ ಸೂಜಿಯನ್ನು ತಯಾರಿಸಲಾರದಷ್ಟು ಬಡವಾಗಿತ್ತು. ಆದರೆ, ಹೃದಯದಲ್ಲಿ ಶ್ರೀಮಂತವಾಗಿತ್ತು.  2023ರ ಭಾರತ ಚಂದ್ರನಲ್ಲಿಗೆ ರಾಕೆಟ್ ಕಳುಹಿಸುವಷ್ಟು ಶ್ರೀಮಂತವಾಗಿದೆ. ಆದರೆ, ಹೃದಯದಲ್ಲಿ ಬಡವಾಗಿದೆ. ಬರಬರುತ್ತಾ ಹಿಂದೂ  ಮತ್ತು ಮುಸ್ಲಿಮರನ್ನು ಅಥವಾ ಹಿಂದೂ ಮತ್ತು ಕ್ರೈಸ್ತರನ್ನು ಕಿಡಿ ಹೊತ್ತಿಕೊಳ್ಳುವ ಎರಡು ವೈರಿ ವಸ್ತುಗಳಂತೆ ಪರಿವರ್ತಿಸಿ ಬಿಡಲಾಗಿದೆ.  ಅಭಿವೃದ್ಧಿ ರಾಜಕಾರಣ ಸರಿದು ಹೋಗಿ ದ್ವೇಷ ರಾಜಕಾರಣ ಮುನ್ನೆಲೆಗೆ ಬಂದಿದೆ. ನಿಜವಾಗಿ, 2023ರ ಭಾರತವನ್ನು ಕಂಡು 47ರ  ಭಾರತ ಸಂಭ್ರಮಿಸಬೇಕಿತ್ತು. ಆದರೆ, ಅಂಥದ್ದೊಂದು ಸಂತಸಕ್ಕೆ ಮಣಿಪುರಗಳು, ಹರ್ಯಾಣಗಳು ಅವಕಾಶ ಕೊಡುತ್ತಿಲ್ಲ. ಆ 11 ಮಂದಿ  ಅಪರಾಧಿಗಳಂತೂ 47ರ ಭಾರತ ನಾಚುವಂತೆ ಎದೆ ಸೆಟೆದು ನಡೆದಾಡುತ್ತಿದ್ದಾರೆ. ಇದು ನಿಜಕ್ಕೂ ವಿಷಾದನೀಯ.

Monday 14 August 2023

ಹರ್ಯಾಣ ಹಿಂಸೆ: ಮುಸ್ಲಿಮರನ್ನು ಬಲಿಪಶು ಮಾಡುವ ಮೊದಲು...



ಹರ್ಯಾಣದ ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳು ಅವಳಿ-ಜವಳಿಗಳಂತೆ ಅಕ್ಕ-ಪಕ್ಕ ಇವೆ. ಗುರುಗ್ರಾಮ್ ಎಂಬುದು ದೇಶದಲ್ಲಿಯೇ  ಅತ್ಯಂತ ಮುಂದುವರಿದ ಜಿಲ್ಲೆ. ಬೆಂಗಳೂರು ಮತ್ತು ಮುಂಬೈ ಯನ್ನು ಬಿಟ್ಟರೆ ದೇಶಕ್ಕೆ ಅತ್ಯಧಿಕ ಆದಾಯವನ್ನು ತಂಡುಕೊಡುವ  ಮೂರನೇ ಜಿಲ್ಲೆ ಈ ಗುರುಗ್ರಾಮ್. ಇಲ್ಲಿ ಮಾಲ್‌ಗಳಿವೆ, ಆಸ್ಪತ್ರೆಗಳಿವೆ, ಯುನಿವರ್ಸಿಟಿಗಳಿವೆ, ಸಣ್ಣ-ಪುಟ್ಟ 500 ಕಂಪೆನಿಗಳಿವೆ. ಮೂಲಭೂತ ಸೌಲಭ್ಯಗಳು ವಿಫುಲವಾಗಿರುವ ಜಿಲ್ಲೆ ಇದು. ಆದರೆ, ನೂಹ್ ಜಿಲ್ಲೆ ಇದಕ್ಕೆ ಸಂಪೂರ್ಣ ತದ್ವಿರುದ್ಧ. ಇಲ್ಲಿ ಒಂದೇ ಒಂದು ಯುನಿವರ್ಸಿಟಿಯಿಲ್ಲ. ರೈಲ್ವೆ ಸೌಲಭ್ಯವಿಲ್ಲ. ಕುಡಿಯುವ ನೀರಿಗೆ ತತ್ವಾರ. ನೀರಾವರಿ ಸೌಲಭ್ಯವಿಲ್ಲ. ಆರೋಗ್ಯ ಮತ್ತು ಶಿಕ್ಷಣಕ್ಕೆ ಬೇಕಾದ  ಸೌಲಭ್ಯವೂ ಇಲ್ಲ. 2018ರಲ್ಲಿ ನೀತಿ ಆಯೋಗವು ತಯಾರಿಸಿದ ದೇಶದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಈ ನೂಹ್  ಕೂಡಾ ಸ್ಥಾನ ಪಡಕೊಂಡಿದೆ. ಇದೇ ನೂಹ್‌ನಲ್ಲಿ ಜುಲೈ 31ರಂದು ಹಿಂಸೆ ಸ್ಫೋಟಿಸಿದೆ. 

ಸಂಘಪರಿವಾರ ಹಮ್ಮಿಕೊಂಡ ಬ್ರಿಜ್‌ಮಂಡಲ್  ಜಲಾಭಿಷೇಕ್ ಯಾತ್ರೆಯು ಹಿಂಸಾಕೃತ್ಯಗಳಿಗೆ ಸಾಕ್ಷಿಯಾಯಿತಲ್ಲದೇ ಇಬ್ಬರು ಹೋಮ್ ಗಾರ್ಡ್ ಗಳು, ಓರ್ವ ಮಸೀದಿ ಇಮಾಮ್  ಸೇರಿದಂತೆ 6 ಮಂದಿ ಸಾವಿಗೀಡಾದರು. ಅನೇಕ ವಾಹನಗಳು ಬೆಂಕಿಗಾಹುತಿಯಾದುವು. ಸುಮಾರು 100ರಷ್ಟು ಮಂದಿ  ಗಾಯಗೊಂಡರು. 150ರಷ್ಟು ಎಫ್‌ಐಆರ್‌ಗಳು ದಾಖಲಾದುವು. 200ಕ್ಕಿಂತಲೂ ಅಧಿಕ ಮಂದಿಯನ್ನು ಬಂಧಿಸಲಾಯಿತು.


ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿರುವ ಈ ಜಿಲ್ಲೆಯ ಮಂದಿ ಮಳೆ ಆಧಾರಿತ ಕೃಷಿಯನ್ನೇ ಅವಲಂಬಿಸಿಕೊAಡಿದ್ದಾರೆ. ಸರಕಾರದ  ಅವಕೃಪೆಗೆ ಒಳಗಾಗಿರುವ ಕಾರಣ ಸೂಕ್ತ ನೀರಾವರಿ ಸೌಲಭ್ಯವೂ ಇಲ್ಲ. ಹೈನುಗಾರಿಕೆ, ಆಡು-ಕುರಿ ಸಾಕಾಣೆ ಮತ್ತು ಗುಜರಿ  ಅಂಗಡಿಗಳ ನಿರ್ವಹಣೆಯ ಮೂಲಕ ಇಲ್ಲಿನ ಜನರು ಬದುಕು ಕಟ್ಟಿಕೊಂಡಿದ್ದಾರೆ. ಸರಕಾರದ ತೀವ್ರ ನಿರ್ಲಕ್ಷ್ಯದ ಹೊರತಾಗಿಯೂ ತಮ್ಮ  ಪಾಡಿಗೆ ಹೊಟ್ಟೆ ತುಂಬಿಕೊಳ್ಳುತ್ತಿರುವ ನೂಹ್‌ನ ಜನರನ್ನು ಧಾರ್ಮಿಕವಾಗಿ ಪ್ರಚೋದಿಸುವ ಪ್ರಯತ್ನಗಳು ವರ್ಷಗಳಿಂದ ನಡೆಯುತ್ತಲೇ  ಬಂದಿದ್ದುವು. ಕೇವಲ ನೂಹ್ ಮಾತ್ರ ಅಲ್ಲ, ಅತ್ಯಂತ ಮುಂದುವರಿದ ಗುರುಗ್ರಾಮ್‌ನಲ್ಲೂ ಇಂಥದ್ದೇ  ಪ್ರಚೋದನಕಾರಿ ಭಾಷಣಗಳು  ನಡೆಯುತ್ತಿದ್ದುವು. ಶುಕ್ರವಾರದ ಜುಮಾ ನಮಾಝನ್ನು ನಗರದ ತೆರೆದ ಬಯಲಲ್ಲಿ ನಡೆಸದಂತೆ 2018ರಿಂದಲೂ ಸಂಘಪರಿವಾರ  ಸರಕಾರಕ್ಕೆ ತಾಕೀತು ಮಾಡುತ್ತಲೇ ಬಂದಿದೆ. ಇದರಿಂದಾಗಿ 116 ಸ್ಥಳಗಳಲ್ಲಿ ನಡೆಯುತ್ತಿದ್ದ ಜುಮಾ ನಮಾಝï ಇದೀಗ 6ಕ್ಕೆ ಇಳಿದಿದೆ. 

 ಗುರುಗ್ರಾಮ್‌ನಲ್ಲಿರುವ ಮಾಂಸದಂಗಡಿಗಳ ವಿರುದ್ಧ ಪದೇ ಪದೇ ದಾಳಿಯನ್ನೋ ಭೀತಿಯನ್ನೋ  ಹಬ್ಬಿಸಲಾಗುತ್ತಲೇ ಇದೆ. ಇಂಥ ಮಾಂಸ ದಂಗಡಿಗಳ ಮಾಲಿಕರು ಬಹುತೇಕ ಮುಸ್ಲಿಮರು. ನವರಾತ್ರಿ ಹಬ್ಬದ ಪ್ರಯುಕ್ತ ಎಲ್ಲ  ಮಾಂಸದಂಗಡಿಗಳನ್ನೂ ಮುಚ್ಚಿಸಲಾಗುತ್ತದೆ. 2021ರಲ್ಲಿ ಕ್ರಿಸ್‌ಮಸ್ ಸಂಭ್ರಮ ಕೂಟಕ್ಕೆ ಇದೇ ಸಂಘಪರಿವಾರ ದಾಳಿ ಮಾಡಿ  ದಾಂಧಲೆಗೈದಿತ್ತು. 2 ವರ್ಷಗಳ ಹಿಂದೆ ಗುರುಗ್ರಾಮ್‌ನ ಪಟೌಡಿ ಎಂಬ ಪ್ರದೇಶದಲ್ಲಿ ಮಹಾ ಪಂಚಾಯತನ್ನು ಏರ್ಪಡಿಸಲಾಗಿತ್ತಲ್ಲದೇ,  ಅಲ್ಪಸಂಖ್ಯಾತರ ವಿರುದ್ಧ ಹಿಂಸೆಗೆ ಬಹಿರಂಗ ಕರೆ ಕೊಡಲಾಗಿತ್ತು. ಮೊನ್ನೆ ಜುಲೈ 31ರಂದು ಸಂಘಪರಿವಾರ ಹಮ್ಮಿಕೊಂಡಿದ್ದ  ಬ್ರಿಜ್‌ಮಂಡಲ್ ಜಲಾಭಿಷೇಕ್ ಯಾತ್ರೆ ಕೂಡಾ ಪ್ರಚೋದನಕಾರಿ ಭಾಷಣಗಳಿಂದ ಮುಕ್ತವಾಗಿರಲಿಲ್ಲ. ನೂಹ್ ಜಿಲ್ಲೆಯ ಮಂದಿರಗಳನ್ನು  ಮಹಾಭಾರತ ಕಾಲದ ವೈಭವಕ್ಕೆ ಮರಳಿ ತರಲಾಗುವುದು ಎಂದು ಯಾತ್ರೆಯಲ್ಲಿ ಘೋಷಿಸಲಾಗಿತ್ತು. ನೂಹ್ ಜಿಲ್ಲೆಯ ಪಕ್ಕದ ಅಲ್ವಾರ್ ನಲ್ಲಿ ಜುನೈದ್ ಮತ್ತು ನಾಸಿರ್ ಎಂಬಿಬ್ಬರನ್ನು ಸುಟ್ಟು ಕೊಂದ ಆರೋಪಿ ಮೋನು ಮನೆಸರ್ ಎಂಬವ ಈ ಯಾತ್ರೆಗೂ ಮುನ್ನ  ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡಿದ್ದ. ತಾನು ಈ ಯಾತ್ರೆಯಲ್ಲಿ ಭಾಗಿಯಾಗುವೆ, ನೀವೂ ಬನ್ನಿ ಎಂದು  ಸಾರ್ವಜನಿಕರಲ್ಲಿ ವಿನಂತಿಸಿದ್ದ. ಆತ ಈ ಇಬ್ಬರ ಹತ್ಯೆಗೆ ಸಂಬಂಧಿಸಿದಂತೆ  ರಾಜಸ್ತಾನ ಪೊಲೀಸರಿಗೆ ಬೇಕಾಗಿರುವ ವ್ಯಕ್ತಿ. ಇಂಥವ ಈ  ಯಾತ್ರೆಯಲ್ಲಿ ಭಾಗಿಯಾಗುತ್ತಾನೆನ್ನುವುದೇ ಸಾರ್ವಜನಿಕ ಆಕ್ರೋಶ ವನ್ನು ಹುಟ್ಟು ಹಾಕಿದೆ. ಈತ ವೀಡಿಯೋ ಹಂಚಿಕೊಂಡ  ಬಳಿಕ  ಪರ-ವಿರುದ್ಧ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ಧಾರಾಳ ಹಂಚಿಕೆಯಾಗಿವೆ. ಪ್ರಚೋದನಕಾರಿ ಬರಹ-ವೀಡಿಯೋಗಳೂ  ಹರಿದಾಡಿವೆ. ಆತನನ್ನು ತಡೆಯಬೇಕೆಂಬ ಆಕ್ರೋಶವೂ ಕೆಲವರಲ್ಲಿ ಕಾಣಿಸಿಕೊಂಡಿದೆ. ಇದೇವೇಳೆ,


ಅಭೂತಪೂರ್ವವೆಂಬಂತೆ  ಪಕ್ಕದ ರಾಜಸ್ತಾನ, ಉತ್ತರ ಪ್ರದೇಶಗಳಿಂದ ಭಾರೀ ಸಂಖ್ಯೆಯ ಜನರು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.  15 ಸಾವಿರಕ್ಕಿಂತಲೂ ಅಧಿಕ ಮಂದಿಯ ಈ ಭಾರೀ ಪ್ರವಾಹವನ್ನು ಪೊಲೀಸರೂ ನಿರೀಕ್ಷಿಸಿರಲಿಲ್ಲ. ಗೋರಕ್ಷಕ್ ಎಂದು ಬರೆಯಲಾದ  ಹಲವು ಕಪ್ಪು ಬಣ್ಣದ ಕಾರುಗಳ ಪೈಕಿ ಒಂದರಲ್ಲಿ ಈ ಮನೆಸರ್ ಇದ್ದಾನೆ ಎಂಬ ವದಂತಿಗಳೂ ಹಬ್ಬಿವೆ. ಅಂದಹಾಗೆ,


ಹರ್ಯಾಣದಲ್ಲಿ ಬ್ರಿಜ್‌ಮಂಡಲ್ ಜಲಾಭಿಷೇಕ್ ಯಾತ್ರೆ ಮತ್ತು ಕನ್ವಾಲ್ ಯಾತ್ರೆ ಪ್ರತಿ ವರ್ಷವೂ ನಡೆಯುತ್ತಿದೆ. ಹೀಗಿರುವಾಗ, ಇಷ್ಟು  ವರ್ಷಗಳಲ್ಲಿ ಕಾಣಿಸಿಕೊಳ್ಳದ ಹಿಂಸೆ ಈ ಬಾರಿ ಸ್ಫೋಟಗಳ್ಳಲು ಕಾರಣವೇನು? ನೂಹ್ ಎಂಬುದು ಸ್ವಾತಂತ್ರ‍್ಯಾ ನಂತರ ಹಿಂದೂ- ಮುಸ್ಲಿಮ್ ಹಿಂಸೆಗೆ ಸಾಕ್ಷಿಯಾಗದ ಜಿಲ್ಲೆ. ತಮ್ಮ ಪಕ್ಕದಲ್ಲೇ  ವೈಭವೋಪೇತವಾಗಿ ಗುರುಗ್ರಾಮ್ ಜಿಲ್ಲೆ ಬೆಳೆಯುತ್ತಿದ್ದರೂ ತಮಗಾದ ಅನ್ಯಾಯವನ್ನು ಪ್ರಶ್ನಿಸದೇ ತಮ್ಮ ಪಾಡಿಗಿದ್ದ ಜಿಲ್ಲೆ  ಈ ನೂಹ್. ಹೀಗಿದ್ದ ಮೇಲೆ ದಿಢೀರಿರ್ ಆಗಿ ಈ ಹಿಂಸೆ ಸ್ಫೋಟಗೊಂಡದ್ದೇಕೆ?  ಉದ್ದೇಶಪೂರ್ವಕವಾಗಿ ಇಂಥದ್ದೊಂದು ಹಿಂಸೆಯನ್ನು ಪ್ರಚೋದಿಸಲಾಯಿತೇ? ಲ್ಯಾಂಡ್ ಮಾಫಿಯಾದ ಕೈವಾಡ ಈ ಹಿಂಸಾಚಾರದ  ಹಿಂದಿರಬಹುದೇ? ಹಿಂಸಾಚಾರದ ಬಳಿಕದ ಬೆಳವಣಿಗೆಗಳನ್ನು ನೋಡಿದರೆ, ಹೌದು ಅನ್ನುವಂತಿದೆ. ಹಿಂಸಾಚಾರದ ಎರಡೇ ದಿನದೊಳಗೆ ಹರ್ಯಾಣ ಸರಕಾರವು ಈ ನೂಹ್ ಜಿಲ್ಲೆಯಲ್ಲಿ ಬುಲ್ಡೋಜರ್‌ನೊಂದಿಗೆ ಪ್ರತ್ಯಕ್ಷವಾಯಿತು. ಸುಮಾರು 300ಕ್ಕಿಂತಲೂ ಅಧಿಕ  ಬಡ ಗುಡಿಸಲುಗಳನ್ನು ಧ್ವಂಸ ಮಾಡಿತು. ಅಲ್ಲಿದ್ದವರನ್ನು ರೋಹಿಂಗ್ಯನ್ನರು, ಅಕ್ರಮ ವಲಸಿಗರು ಎಂದು ನಾಮಕರಣ ಮಾಡಿತು.  ಒಂದುವೇಳೆ, ಆ ಗುಡಿಸಲು ಅಕ್ರಮವೇ ಆಗಿದ್ದಿದ್ದರೆ,  ಇಷ್ಟು ವರ್ಷ ಸರಕಾರಕ್ಕೆ ಅದು ಗೊತ್ತಿರಲಿಲ್ಲವೇ? ಅವುಗಳನ್ನು ತೆರವುಗೊಳಿಸಲು  ಹಿಂಸಾಚಾರದ ವರೆಗೆ ಸರಕಾರ ವಿಳಂಬ ಮಾಡಿತೇಕೆ? ಅಷ್ಟಕ್ಕೂ, ಈ ಮನೆಗಳನ್ನು ಕೆಡಹುವ ಪೂರ್ವದಲ್ಲಿ ಸರಕಾರ ನೋಟೀಸು ಜಾರಿ  ಮಾಡಿದೆಯೇ? ಈ ಗುಡಿಸಲುಗಳಿಂದ ಉತ್ತರಗಳನ್ನು ಪಡಕೊಂಡಿದೆಯೇ?


ಬಹುಶಃ, ಹರ್ಯಾಣ ಹಿಂಸೆಯ ಹಿಂದೆ ಹಿಂದೂ-ಮುಸ್ಲಿಮ್ ಎಂಬ ಗೋಚರ ಕಾರಣಕ್ಕಿಂತ ಹೊರತಾದ ಪ್ರಬಲ ಅಗೋಚರ  ಕಾರಣಗಳು ಇದ್ದಿರುವಂತಿದೆ. ಬಡವರನ್ನು ಒಕ್ಕಲೆಬ್ಬಿಸಿ ಆ ಜಾಗವನ್ನು ಕಬಳಿಸುವ ಉದ್ದೇಶದಿಂದಲೇ ಈ ಹಿಂಸಾಚಾರಕ್ಕೆ ರೂಪು  ನೀಡಲಾಗಿದೆಯೇ ಎಂಬ ಅನುಮಾನವಿದೆ. ಭೂಮಾಫಿಯಾದ ಮಂದಿ ಈ ಧಾರ್ಮಿಕ ಯಾತ್ರೆಯನ್ನು ತಮ್ಮ ಉದ್ದೇಶ ಜಾರಿಗಾಗಿ  ಬಳಸಿಕೊಂಡಿರುವಂತಿದೆ ಅಥವಾ ಸಮಾಜ ಘಾತುಕರು ಮತ್ತು ಭೂಮಾಫಿಯಾದ ಮಂದಿ ಜೊತೆ ಸೇರಿಯೇ ಈ ಹಿಂಸಾಚಾರದ  ತಂತ್ರ ಹೆಣೆದಿರುವಂತಿದೆ. ಇದರ ಹೊಲಬರಿಯದ ಬಡಪಾಯಿಗಳು ಹಿಂಸೆಯ ಕುಲುಮೆಗೆ ಬಿದ್ದಿರುವಂತಿದೆ.

ಪ್ರಭುತ್ವವೊಂದು  ತನ್ನದೇ ನಾಗರಿಕರನ್ನು ತಾರತಮ್ಯದಿಂದ ನಡೆಸಿಕೊಂಡರೆ ಏನಾಗಬಹುದು ಎನ್ನುವುದಕ್ಕೆ ನೂಹ್ ಮತ್ತು ಗುರುಗ್ರಾಮ್  ಜಿಲ್ಲೆಗಳು ಪ್ರತ್ಯಕ್ಷ ಸಾಕ್ಷಿಯಾಗಿವೆ. ದೇಶದ 739 ಜಿಲ್ಲೆಗಳ ಪೈಕಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿ ನೂಹ್ ಗುರುತಿಸಿಕೊಳ್ಳಲು  ಕಾರಣವೇನು? ಅದರ ಪಕ್ಕವೇ ಇರುವ ಗುರುಗ್ರಾಮ್ ಅತ್ಯಂತ ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿ ಗೌರವ ಗಿಟ್ಟಿಸಿಕೊಂಡದ್ದು ಹೇಗೆ?  ನೂಹ್ ಅನ್ನು ನಿರ್ಲಕ್ಷಿಸಿ ಗುರುಗ್ರಾಮ್ ಅನ್ನು ಮುದ್ದಿಸುವುದಕ್ಕೆ ಪ್ರಭುತ್ವಕ್ಕೆ ಇರುವ ಕಾರಣಗಳೇನು? ಅಲ್ಪಸಂಖ್ಯಾತರು ಹೆಚ್ಚಿರುವ  ಪ್ರದೇಶಗಳ ಅಭಿವೃದ್ಧಿಗೆ ಯಾವ ಕ್ರಮವನ್ನೂ ಕೈಗೊಳ್ಳದೇ ಇರುವುದು ಸರಕಾರಿ ನೀತಿಯ ಭಾಗವೇ? ಒಂದುಕಡೆ ಅಲ್ಪಸಂಖ್ಯಾತರು  ಹೆಚ್ಚಿರುವ ಪ್ರದೇಶಗಳನ್ನು ಪಾಳು ಬಿಡುವುದು ಮತ್ತು ಇನ್ನೊಂದು ಕಡೆ ಅವರನ್ನು ಗುಜರಿ ಹೆಕ್ಕುವವರು, ಶಿಕ್ಷಣ ವಂಚಿತರು, ಒರಟರು,  ನಾಗರಿಕ ಬದುಕಿಗೆ ಅಸೂಕ್ತರು ಎಂದೆಲ್ಲಾ  ನಿಂದಿಸುವುದು ಎಷ್ಟು ಸರಿ? ಪ್ರಭುತ್ವದ ಅನ್ಯಾಯವನ್ನು ನಾಗರಿಕರ ಅಪರಾಧದಂತೆ  ಬಿಂಬಿಸುವುದು ಯಾಕೆ?

ಹರ್ಯಾಣದ ಹಿಂಸೆಯನ್ನು ಖಂಡಿಸುತ್ತಲೇ ಅದರ ಒಳ-ಹೊರಗನ್ನು ನಾಗರಿಕ ಸಮಾಜ ಗಂಭೀರ ವಿಶ್ಲೇಷಣೆಗೆ ಒಡ್ಡಬೇಕಾದ  ಅಗತ್ಯವೂ ಇದೆ. ಇದು ಧರ್ಮದ ಕಾರಣಕ್ಕಾಗಿ ನಡೆದ ಘರ್ಷಣೆಯಂತೆ ಕಾಣಿಸುತ್ತಿಲ್ಲ. ಪ್ರಭುತ್ವದ ಅನ್ಯಾಯ, ಭೂಮಾಫಿಯಾ,  ಪ್ರಚೋದನೆ..  ಇತ್ಯಾದಿಗಳ ಪಾತ್ರವೂ ಇದರ ಹಿಂದಿರುವಂತಿದೆ. ಮುಸ್ಲಿಮರನ್ನು ಬಲಿಪಶು ಮಾಡುವ ಮೊದಲು ಸಮಗ್ರ ಅಧ್ಯಯನ  ನಡೆಯಬೇಕಿದೆ.



Monday 7 August 2023

ದ್ರೌಪದಿಯನ್ನು ಅವಮಾನಿಸಿದ ದುಶ್ಶಾಸನನೇ ಈ ವರ್ತಮಾನದ ಹೀರೋ

ಸನ್ಮಾರ್ಗ ಸಂಪಾದಕೀಯ 

ವಿಷವನ್ನು ಯಾರು ಕುಡಿದರೂ ಫಲಿತಾಂಶ ಒಂದೇ. ಅದು ಲಿಂಗಭೇದ ಮಾಡುವುದಿಲ್ಲ. ಧರ್ಮದ್ವೇಷವೆಂಬ ವಿಷ ಸೇವಿಸಿರುವವರಲ್ಲೂ  ಇದೇ ಬಗೆಯ ಫಲಿತಾಂಶ ವ್ಯಕ್ತವಾಗುತ್ತಿದೆ. ಕೆಲವೊಮ್ಮೆ ಮಹಿಳೆಯರಲ್ಲಿ ಈ ವಿಷದ ತೀವ್ರತೆ ಹೆಚ್ಚಿರುತ್ತದೋ ಎಂಬ ಸಂದೇಹವೂ  ಉಂಟಾಗುತ್ತಿದೆ. ಉದಾಹರಣೆಗೆ, ಮಣಿಪುರ.

ಕುಕಿ ಸಮುದಾಯದ ವಿರುದ್ಧ ನಡೆಸಲಾಗುತ್ತಿರುವ ಸಂಘಟಿತ ಕ್ರೌರ್ಯಗಳ ಹಿಂದೆ ಮಹಿಳೆಯರ ಬಹುದೊಡ್ಡ ಪಾತ್ರ ಇದೆ ಎಂಬುದಾಗಿ  ವಿವಿಧ ವರದಿಗಳು ಹೇಳುತ್ತಿವೆ. ಮೈತಿ ಸಮುದಾಯದ ಪುರುಷರು ಕುಕಿ ಗ್ರಾಮಗಳಿಗೆ ನುಗ್ಗಿ ಹತ್ಯೆ-ಅತ್ಯಾಚಾರ-ದರೋಡೆಗಳನ್ನು  ನಡೆಸುತ್ತಿರುವಾಗ ಮಹಿಳೆಯರು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ರಕ್ಷಣಾ ಪಡೆ ಆ ಗ್ರಾಮಗಳಿಗೆ ಹೋಗಿ ದುಷ್ಕರ್ಮಿಗಳನ್ನು  ಬಂಧಿಸದಂತೆ  ತಡೆಯುವುದಕ್ಕಾಗಿ ಮಹಿಳೆಯರು ರಸ್ತೆ ತಡೆ ನಡೆಸುತ್ತಿದ್ದಾರೆ. ಕಂದಕಗಳನ್ನು ತೋಡುತ್ತಿ ದ್ದಾರೆ ಮತ್ತು ಟೈರ್‌ಗಳನ್ನು  ಸುಟ್ಟು ಅಡ್ಡಿಪಡಿಸುತ್ತಿದ್ದಾರೆ. ಕ್ರೌರ್ಯದಲ್ಲಿ ತೊಡಗಿರುವ ಪುರುಷರು ಆ ಗ್ರಾಮದಿಂದ ತಪ್ಪಿಸಿಕೊಳ್ಳುವಂತೆ ಮಾಡುವುದೇ ಇವರ ಉದ್ದೇಶ  ಎಂದು ರಕ್ಷಣಾ ಪಡೆಯೇ ಮಾಧ್ಯಮಗಳೊಂದಿಗೆ ಹೇಳಿಕೊಂಡಿದೆ. ಅವರನ್ನು ಬಲವಂತದಿಂದ  ಚದುರಿಸಲು ಹೊರಟರೆ ಬೆತ್ತಲಾಗುವ  ಬೆದರಿಕೆಯನ್ನೂ ಹಾಕುತ್ತಿದ್ದಾರೆ. ರಕ್ಷಣಾ ಪಡೆಯಲ್ಲಿ ಮಹಿಳಾ ಸಿಬಂದಿಯ ಕೊರತೆಯಿಂದಾಗಿ ಈ ಮಹಿಳೆಯರ ಸಂಚು ಸಫಲವೂ ಆಗುತ್ತಿದೆ. ಎಲ್ಲಿಯವರೆಗೆಂದರೆ, ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಲಾದ ಘಟನೆಯ ಆರೋಪಿಯನ್ನು ಬಂಧಿಸಲು  ಹೋದ ರಕ್ಷಣಾ ಪಡೆಯನ್ನೂ ಈ ಮಹಿಳೆಯರು ತಡೆದಿದ್ದಾರೆ. ಟೈರ್‌ಗೆ ಬೆಂಕಿ ಕೊಟ್ಟು ರಸ್ತೆ ತಡೆ ನಿರ್ಮಿಸಿದ್ದಾರೆ. ಕೊನೆಗೆ ಅಶ್ರುವಾಯು ಸಿಡಿಸಿ ಚದುರಿಸಿ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರೇ ಹೇಳಿದ್ದಾರೆ.

ಸಾಮಾನ್ಯವಾಗಿ ಹೆಣ್ಣನ್ನು ಗಂಡಿಗಿಂತ  ಭಿನ್ನವಾಗಿ ಬಿಂಬಿಸಲಾಗುತ್ತದೆ. ಕತೆ, ಕಾದಂಬರಿ, ನಾಟಕ, ಸಿನಿಮಾ ಎಲ್ಲದರಲ್ಲೂ ಪುರುಷರೇ  ವಿಲನ್. ದ್ವೇಷ ಸಾಧಿಸುವ, ಹತ್ಯೆ ನಡೆಸುವ, ಅತ್ಯಾಚಾರ ಮತ್ತು ಹಿಂಸಾ ಕೃತ್ಯಗಳಲ್ಲಿ ತೊಡಗುವ ಪಾತ್ರಗಳೆಲ್ಲ ಬಹುತೇಕ ಪುರುಷರಿಗೇ ಮೀಸಲು.  ಈ ಪುರುಷರ  ಮಹಿಳೆಯರು ಇದ್ದೂ ಇಲ್ಲದಂತೆ ಅಥವಾ ಇಂಥ ಕೃತ್ಯಗಳಿಂದ ಅಂತರ ಕಾಯ್ದುಕೊಂಡಂತೆ  ಬದುಕುತ್ತಿರುತ್ತಾರೆ. ಕತೆ- ಕಾದಂಬರಿಗಳಲ್ಲಂತೂ  ಹೆಣ್ಣು ಕರುಣಾಮಯಿಯಾಗಿರುವುದೇ ಹೆಚ್ಚು. ಇತರರಿಗೆ ಮಿಡಿಯುವ ಮತ್ತು ಪುರುಷರಲ್ಲಿ ಮನುಷ್ಯತ್ವವನ್ನು  ಪ್ರೇರೇಪಿಸುವ ಪಾತ್ರವಾಗಿಯೇ ಹೆಣ್ಣು ಗುರುತಿಸಿಕೊಳ್ಳುತ್ತಾಳೆ. ಮಹಾಭಾರತ, ರಾಮಾಯಣದ ಎರಡು ಕೇಂದ್ರ ಬಿಂದುಗಳಾದ ದ್ರೌಪದಿ  ಮತ್ತು ಸೀತೆಯಲ್ಲಿ ದರ್ಶಿಸಬಹುದಾದ ಗುಣಗಳೂ ಇವುಗಳೇ.

ತುಂಬಿದ ಸಭೆಯಲ್ಲಿ ದ್ರೌಪದಿಯನ್ನು ಬೆತ್ತಲೆ ಮಾಡಲು ಹೊರಟ ದುರ್ಯೋಧನ ಮತ್ತು ದುಶ್ಶಾಸನರಿಗೆ ಅವರ ಪತ್ನಿಯರು  ಬೆಂಬಲವಾಗಿ ನಿಂತ ಉಲ್ಲೇಖಗಳು ಎಲ್ಲೂ ಇಲ್ಲ. ದುರ್ಯೋಧ ನನ ಪತ್ನಿ ಭಾನುಮತಿ ಮತ್ತು ದುಶ್ಶಾಸನನ ಪತ್ನಿ ನಿರ್ಜರ ಇಬ್ಬರೂ  ಈ ಹೀನ ಕೃತ್ಯದಲ್ಲಿ ಯಾವ ಪಾಲನ್ನೂ ಪಡಕೊಳ್ಳಲಿಲ್ಲ. ಹಾಗೆಯೇ, ಸೀತೆಯನ್ನು ರಾವಣ ಅಪಹರಿಸಿದ್ದರೂ ಆತನ ಪತ್ನಿ  ಮಂಡೋದರಿ ಅದಕ್ಕೆ ಬೆಂಬಲವಾಗಿ ನಿಲ್ಲಲಿಲ್ಲ. ಅಲ್ಲದೇ ಸೀತೆಗೆ ಯಾವ ಅನ್ಯಾಯವೂ ಆಗದಂತೆ ಬೆಂಗಾವಲಾಗಿ ನಿಂತಳು ಎಂಬ  ವಿವರಗಳೂ ಇವೆ. ಪೌರಾಣಿಕ ಕತೆಗಳಾಗಲಿ, ಇತಿಹಾಸವಾಗಲಿ ಉದ್ದಕ್ಕೂ ಹೆಣ್ಣನ್ನು ಬಿಂಬಿಸಿಕೊಂಡು  ಬಂದದ್ದು ಹೀಗೆಯೇ. ಆದರೆ ಈ  ವರ್ತಮಾನ ಹೀಗೇಕೆ?

ಮಣಿಪುರದಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದವರ ಧರ್ಮ ಯಾವುದು? ಅವರಿಗೆ ಯಾರು ಮಾದರಿ?  ದುರ್ಯೋಧನ ಮತ್ತು ದುಶ್ಶಾಸನರ ದುರ್ಗುಣವು ಹಿಂದೂ ಧರ್ಮವನ್ನು ಪ್ರೀತಿಸುವ ವ್ಯಕ್ತಿಯಲ್ಲಿರಲು ಸಾಧ್ಯವೇ? ದ್ರೌಪದಿಯ ವಸ್ತ್ರಾ ಪಹರಣ ಮಾಡಿರುವುದಕ್ಕಾಗಿ ಒಂದು ಕಡೆ ದುರ್ಯೋಧನ ಮತ್ತು ದುಶ್ಶಾಸನರನ್ನು ವಿಲನ್‌ಗಳಾಗಿ ನೋಡುವುದು ಮತ್ತು ಇನ್ನೊಂದು  ಕಡೆ ಅವರಿಬ್ಬರೂ ನಾಚುವಂತೆ ನಡಕೊಳ್ಳುವುದು ಇವೆರಡೂ ಒಬ್ಬರಲ್ಲೇ  ವ್ಯಕ್ತವಾಗುವುದು ಹೇಗೆ? ದ್ರೌಪದಿಯನ್ನು ಮಾದರಿ ಎಂದು  ಆರಾಧಿಸುವ ಮಹಿಳೆಯರು ಬೆತ್ತಲೆ ಮಾಡಿದವರಿಗೆ ಬೆಂಬಲವಾಗಿ ನಿಲ್ಲುವುದು ಹೇಗೆ? ಹಿಂದೂ ಧರ್ಮ ಎಂದೂ ದುರ್ಯೋಧನನನ್ನೋ ದುಶ್ಶಾನನನ್ನೋ ಶಕುನಿಯನ್ನೋ ಮಾದರಿ ಎಂದು ಹೇಳಿಲ್ಲ. ಹಿಂದೂ ಧರ್ಮವನ್ನು  ಪ್ರೀತಿಸುವುದೆಂದರೆ, ಇವರ ಕೃತ್ಯಗಳನ್ನು ಪ್ರೀತಿಸದಿರುವುದು ಮತ್ತು ಇವರ ಆಲೋಚನೆಗಳನ್ನು ಧರ್ಮವಿರೋಧಿ ಎಂದು ಮನಸಾರೆ  ನಂಬುವುದು. ಇಂಥ ಧರ್ಮವಿರೋಧಿ ಕೃತ್ಯಗಳು ಮತ್ತು ಆಲೋಚನೆಗಳು ಎಲ್ಲೆಲ್ಲಾ  ವ್ಯಕ್ತಗೊಳ್ಳುತ್ತವೋ ಅಲ್ಲೆಲ್ಲಾ  ಧರ್ಮಕ್ಕೆ ನಿಷ್ಠೆಯನ್ನು  ತೋರುವುದು ಮತ್ತು ಅಧರ್ಮವನ್ನು ವಿರೋಧಿಸುವುದು. ಅಂದಹಾಗೆ,

ದ್ರೌಪದಿ, ಸೀತೆ, ಮಂಡೋದರಿ, ದುರ್ಯೋಧನ, ದುಶ್ಶಾಸನ, ಶಕುನಿ... ಮುಂತಾದವರೆಲ್ಲ ಬರೇ ಪುರಾಣಕ್ಕೆ ಸೀಮಿತವಾದ ಪಾತ್ರಗಳಲ್ಲ.  ಅಲ್ಲದೇ, ಈ ಪಾತ್ರಗಳು ರೋಮಾಂಚನಗೊಳ್ಳುವುದಕ್ಕೋ  ಸಂಕಟಪಡುವುದಕ್ಕೋ ಮೀಸಲಾದ ವ್ಯಕ್ತಿತ್ವಗಳೂ ಅಲ್ಲ. ಈ ವರ್ತಮಾನದಲ್ಲಿ  ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ಸ್ಪಷ್ಟಪಡಿಸಿಕೊಂಡು ಬದುಕುವುದಕ್ಕೆ ಈ ಪಾತ್ರಗಳು ಒರೆಗಲ್ಲು ಆಗಬೇಕು. ಹೆಣ್ಣು  ಬೆತ್ತಲೆಗೊಳ್ಳುವಾಗ, ದ್ರೌಪದಿಯ ಸಂಕಟ ಸಮಾಜದಲ್ಲಿ ಕಾಣಿಸಿಕೊಳ್ಳಬೇಕು. ಬೆತ್ತಲೆಗೊಳಿಸಿದವರು ನನ್ನ ಧರ್ಮದವರೋ, ನನ್ನ  ಪಕ್ಷದವರೋ ಎಂಬ ಆಲೋಚನೆಯ ಆಚೆಗೆ ಅವರು ದುರ್ಯೋಧನರು, ದುಶ್ಶಾಸನರು ಎಂಬ ಭಾವವೇ ಮೇಲುಗೈ ಪಡೆಯಬೇಕು.  ಹಾಗಂತ, ಕೇವಲ ಮಣಿಪುರಕ್ಕೆ ಸಂಬಂಧಿಸಿ ಮಾತ್ರ ಹೀಗೆ ಹೇಳಬೇಕಾದುದೂ ಅಲ್ಲ.

ಧರ್ಮದ್ವೇಷ ಸಾಂಕ್ರಾಮಿಕವೆಂಬಂತೆ  ದೇಶದ ಉದ್ದಗಲಕ್ಕೂ ವ್ಯಾಪಿಸುತ್ತಿದೆ. ತನ್ನ ಧರ್ಮದವ ಹೆಣ್ಣನ್ನು ಬೆತ್ತಲೆ ಮಾಡಿದರೂ ಅತ್ಯಾಚಾರಕ್ಕೆ  ಒಳಪಡಿಸಿದರೂ ಹತ್ಯೆ ಮಾಡಿದರೂ ವಂಚನೆ-ದರೋಡೆಯಲ್ಲಿ ಭಾಗಿಯಾದಾಗಲೂ  ಮೌನವಾಗುವುದು ಮತ್ತು ಬೇರೆ ಧರ್ಮದವರು  ಇಂಥದ್ದನ್ನೇ ಮಾಡಿದರೆ ಬೀದಿಗಿಳಿದು ದ್ವೇಷ ಸಾಧಿಸುವುದು ಎಲ್ಲೆಡೆ ಕಂಡುಬರುತ್ತಿದೆ. ಧರ್ಮ ಪ್ರೇಮ ಎಂದರೆ ಇನ್ನೊಂದು ಧರ್ಮವನ್ನು  ದ್ವೇಷಿಸುವುದು ಎಂಬಂತಾಗಿದೆ. ಈ ಪ್ರಜ್ಞೆ ಹುಟ್ಟಿಕೊಂಡದ್ದು ಹೇಗೆ? ಯಾವ ಧರ್ಮವೂ ಇಂಥದ್ದೊಂದು  ಮೌಲ್ಯವನ್ನು ಪ್ರತಿಪಾದಿಸಿಲ್ಲ.  ದ್ರೌಪದಿಯ ವಸ್ತ್ರಾಪಹರಣವನ್ನು ಶ್ರೀಕೃಷ್ಣ ತಡೆದನೇ ಹೊರತು ಭಾನುಮತಿಯದ್ದೋ  ನಿರ್ಜರಳದ್ದೋ  ವಸ್ತ್ರಾಪಹರಣಕ್ಕೆ ಆದೇಶಿಸಲಿಲ್ಲ.  ಅಷ್ಟಕ್ಕೂ, ದ್ರೌಪದಿಯ ವಸ್ತ್ರಾಪಹರಣವನ್ನು ತಡೆಯಬಲ್ಲ ಶಕ್ತಿವಂತ ಶ್ರೀಕೃಷ್ಣನಿಗೆ ಭಾನುಮತಿಯ ವಸ್ತ್ರಾಪಹರಣ ಮಾಡಬಲ್ಲ ಸಾಮರ್ಥ್ಯ  ಇರಲಿಲ್ಲ ಎಂದು ಇದರರ್ಥವಲ್ಲ. ಅದು ಧರ್ಮವಲ್ಲ ಎಂಬುದೇ ಅದಕ್ಕೆ ಕಾರಣ. ಧರ್ಮ ಅಂದರೆ ಇದುವೇ. ಆದರೆ, ಈ ಮೌಲ್ಯವೇ  ಇವತ್ತು ಸಮಾಜದಿಂದ ಕಣ್ಮರೆಯಾಗತೊಡಗಿದೆ. ಹೆಣ್ಣು ಬೆತ್ತಲೆಗೊಳ್ಳುತ್ತಿದ್ದಾಳೆ. ಆಕೆಯನ್ನು ರಕ್ಷಿಸುವ ಹೊಣೆ ಹೊರ ಬೇಕಾಗಿದ್ದ  ಸಮಾಜವೇ ಅದರ ಬೆಂಬಲಕ್ಕೆ ನಿಲ್ಲುತ್ತಿದೆ. ಅದರಲ್ಲೂ, ಬೆತ್ತಲೆಯ ಆಘಾತವನ್ನು ಚೆನ್ನಾಗಿ ಗ್ರಹಿಸಬಲ್ಲ ಮಹಿಳೆಯರೇ ಬೆತ್ತಲೆ  ಮಾಡಿದವರ ರಕ್ಷಣೆಗೆ ನಿಲ್ಲುತ್ತಿದ್ದಾರೆ. ನಿಜವಾಗಿ, 

ಇನ್ನೊಂದು, ಧರ್ಮವನ್ನು ದ್ವೇಷಿಸುವುದೇ ಸ್ವಧರ್ಮ ಪ್ರೇಮ ಎಂದು ನಂಬಿಕೊಂಡಿರುವುದರ ಫಲಿತಾಂಶ ಇದು. ಯಾವುದೇ ಧರ್ಮ  ಇನ್ನೊಂದು ಧರ್ಮವನ್ನು ದ್ವೇಷಿಸಿಕೊಂಡು ಬೆಳೆಯಲು ಸಾಧ್ಯವೇ ಇಲ್ಲ. ದ್ವೇಷ ಧರ್ಮದ ಅಗತ್ಯವೂ ಅಲ್ಲ. ಅಗತ್ಯ ಎಂದಾಗಿದ್ದರೆ  ಪುರಾಣ ಕತೆಗಳ ತುಂಬಾ ಇಂಥ ದ್ವೇಷಗಳೇ ತುಂಬಿಕೊಂಡಿರುತ್ತಿತ್ತು. ಅಲ್ಲೋರ್ವ  ಮಂಡೋದರಿ ಕಾಣಸಿಗುವುದಕ್ಕೆ ಸಾಧ್ಯವೂ ಇರಲಿಲ್ಲ.  ಧರ್ಮ ಯಾವಾಗಲೂ ಪರಿಶುದ್ಧ. ಆದರೆ, ಅಧಿಕಾರ ಹಾಗಲ್ಲ. ಶುದ್ಧ-ಅಶುದ್ಧ ಎಂಬ ಭೇದವನ್ನೇ ಅದು ಮಾಡುವುದಿಲ್ಲ. ಅಧಿಕಾರ  ಪಡೆಯುವುದಕ್ಕಾಗಿ ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೂ ಅದು ಹೇಸುವುದಿಲ್ಲ. ಜನರನ್ನು ಕಚ್ಚಾಡಿಸುವುದರಿಂದ ಅಧಿಕಾರ  ಲಭ್ಯವಾಗುತ್ತದೆ ಎಂದಾದರೆ, ಅದು ಆ ಆಯ್ಕೆಯನ್ನೂ ಬಳಸಿಕೊಳ್ಳುತ್ತದೆ. ಧರ್ಮವನ್ನು ವಿಕೃತವಾಗಿ ವ್ಯಾಖ್ಯಾನಿಸುವುದರಿಂದ ಲಾಭ ಇದೆ  ಎಂದಾದರೆ ಅದಕ್ಕೂ ಕೈ ಹಾಕುತ್ತದೆ. ಕರುಣಾಮಯಿ ಹೆಣ್ಣಿನೊಳಗೂ ತೀರದ ದ್ವೇಷವನ್ನು ಅದು ಹುಟ್ಟು ಹಾಕುತ್ತದೆ. ಗಂಡನ್ನು  ಕ್ರೌರ್ಯದ ವಕ್ತಾರರಾಗಿ ಮಾರ್ಪ ಡಿಸುತ್ತದೆ. ತನ್ನ ಧರ್ಮದವರಲ್ಲದ ಎಲ್ಲರನ್ನೂ ವೈರಿಗಳಂತೆ ಮತ್ತು ತನ್ನ ಧರ್ಮವನ್ನು ನಾಶ  ಮಾಡಲು ಸಂಚು ಹೂಡುತ್ತಿರುವವರಂತೆ ಬಿಂಬಿಸುತ್ತದೆ. ಅಂತಿಮವಾಗಿ ಸ್ವಧರ್ಮ ಪ್ರೇಮವೆಂದರೆ, ಇನ್ನೊಂದು ಧರ್ಮವನ್ನು  ದ್ವೇಷಿಸುವುದು ಎನ್ನುವಲ್ಲಿಗೆ ತಂದು ಮುಟ್ಟಿಸುತ್ತದೆ. 

ಮಣಿಪುರದಿಂದ ಹಿಡಿದು ದೇಶದಾದ್ಯಂತ ಇವತ್ತು ಕಾಣಿಸಿಕೊಂಡಿರುವುದು ಇದೇ ಸಿದ್ಧಾಂತ. ಇದು ಧರ್ಮ ಅಲ್ಲ, ಅಧರ್ಮ. ದುಶ್ಶಾಸನನ ಕೃತ್ಯಕ್ಕೆ ಹೆಣ್ಣು ಬೆಂಬಲವಾಗಿ ನಿಲ್ಲುವುದು ಧರ್ಮವಾಗಲು ಸಾಧ್ಯವೇ ಇಲ್ಲ.