Tuesday, 31 July 2012

ಒಲಿಂಪಿಕ್ಸ್ ಅನ್ನು ಆನಂದಿಸುವಾಗ ಈ ಮಕ್ಕಳನ್ನು ನೆನಪಿಸಿಕೊಳ್ಳಿ

ಜುಲೈ 27ರಂದು ಉದ್ಘಾಟನೆಗೊಂಡ ಲಂಡನ್ ಒಲಿಂಪಿಕ್ಸ್ ಗಿಂತ  ಒಂದು ದಿನ ಮೊದಲು ಮಧ್ಯಪ್ರದೇಶದ ಭೋಪಾಲ್ ನಲ್ಲಿ , `ಭೋಪಾಲ್ ಸ್ಪೆಶಲ್ ಒಲಿಂಪಿಕ್ಸ್’ ಉದ್ಘಾಟನೆಗೊಂಡಿತ್ತು. ಮುಚ್ಚಲ್ಪಟ್ಟಿರುವ ಯೂನಿಯನ್ ಕಾರ್ಬೈಡ್ ಕಂಪೆನಿಯ ಬಲಬದಿಯಲ್ಲಿರುವ ಅಫ್ರಿ ನಗರ್ ಮೈದಾನದಲ್ಲಿ ನಡೆದ ಈ ಒಂದು ದಿನದ ಒಲಿಂಪಿಕ್ಸ್ ನ  ಧ್ಯೇಯ ವಾಕ್ಯ, `ಈಸ್ಟ್ ಇಂಡಿಯಾ ಕಂಪೆನಿಯಿಂದ ಡೌ ಕೆಮಿಕಲ್ ಕಂಪೆನಿ ವರೆಗೆ’ ಎಂದಿತ್ತು. ಈ ಒಲಿಂಪಿಕ್ಸ್ ನಲ್ಲೂ  ಕ್ರ್ಯಾಬ್ ರೇಸ್, 25 ಮೀಟರ್ ಸ್ಟ್ರಿಂಟ್, ವಾಕಿಂಗ್.. ಮುಂತಾದ ಕ್ರೀಡೆಗಳಿದ್ದುವು. ಆದರೆ ಇದರಲ್ಲಿ ಭಾಗವಹಿಸಿದ್ದು ಉಸೇನ್ ಬೋಲ್ಟ್, ಜೊನಾಥನ್ ಮೆರ್ಲಿ, ಅಸಾಫಾ ಪಾವೆಲ್ ಮುಂತಾದ ಖ್ಯಾತ ಓಟಗಾರರಲ್ಲ. ಭೋಪಾಲ್ ಅನಿಲ ದುರಂತದಲ್ಲಿ ಸಂತ್ರಸ್ತರಾದ ಅಂಗವಿಕಲ ಮಕ್ಕಳೇ ಇಲ್ಲಿಯ ಸ್ಪರ್ಧಿಗಳು. ಲಂಡನ್ ಒಲಿಂಪಿಕ್ಸ್ ನಲ್ಲಿ  ಒಲಿಂಪಿಕ್ಸನ್ನು ಸ್ತುತಿಸುವ ಹಾಡಿದ್ದರೆ ಭೋಪಾಲ್ ನಲ್ಲಿ  ಈ ಮಕ್ಕಳು  ಲಂಡನ್ ಒಲಿಂಪಿಕ್ಸ್ ಗೆ  ಶೇಮ್ ಶೇಮ್ ಎಂದು ಹಾಡಿದರು.
         ಲಂಡನ್ ಒಲಿಂಪಿಕ್ಸ್ ನಲ್ಲಿ  ಯಾವ್ಯಾವ ರಾಷ್ಟ್ರಗಳು ಎಷ್ಟೆಷ್ಟು ಪದಕಗಳನ್ನು ದೋಚಿವೆ ಮತ್ತು ಯಾರು ಈ ಬಾರಿ ಅತ್ಯಧಿಕ ಚಿನ್ನದ ಪದಕ ಪಡೆಯುತ್ತಾರೆ ಎಂಬುದು ಚರ್ಚೆಯಲ್ಲಿರುವ ಈ ಸಂದರ್ಭದಲ್ಲೇ ನಡೆದ `ಭೋಪಾಲ್ ಒಲಿಂಪಿಕ್ಸ್’ ನಮ್ಮೆಲ್ಲರ ಚರ್ಚೆಗೆ ಅತ್ಯಂತ ಯೋಗ್ಯವಾದದ್ದು. ಕೈಯೋ ಕಾಲೋ ಕಣ್ಣೋ ಕಳಕೊಂಡ ವಿಕಲ ಮಕ್ಕಳು ಮೈದಾನದಲ್ಲಿ ಓಡುವುದೇ ತ್ರಾಸದಾಯಕ. ಆದ್ದರಿಂದಲೇ ಅಲ್ಲಿ ನೆರೆದವರಾರೂ ಚಪ್ಪಾಳೆ ತಟ್ಟಲಿಲ್ಲ. ಕೆಲವರ ಕಣ್ಣುಗಳು ಹನಿಗೂಡಿದುವು. 1984 ಡಿಸೆಂಬರ್ 2ರಂದು ರಾತ್ರಿ ಭೋಪಾಲ್ ನ  ಯೂನಿಯನ್ ಕಾರ್ಬೈಡ್ ಕಂಪೆನಿಯಿಂದ ವಿಷಾನಿಲ ಸೋರಿಕೆಯಾಯಿತು. ಅದೆಷ್ಟು ಭೀಕರವಾದ ವಾತಾವರಣವನ್ನು ಸೃಷ್ಟಿಸಿತೆಂದರೆ, ತಕ್ಷಣ 10 ಸಾವಿರಕ್ಕಿಂತಲೂ  ಹೆಚ್ಚು ಮಂದಿ ಸಾವಿಗೀಡಾದರು. ದುರ್ಘಟನೆ ನಡೆದು 28 ವರ್ಷಗಳಾದರೂ ವಿಷಾನಿಲದ ಪ್ರಭಾವದಿಂದ ಪ್ರದೇಶ ಈಗಲೂ  ಮುಕ್ತವಾಗಿಲ್ಲ. ಕಂಪೆನಿ ಮುಚ್ಚಿದ್ದರೂ ಅದರಿಂದ ವಿಷಾನಿಲ ಇವತ್ತೂ ಭೂಮಿಗೆ ಸೇರುತ್ತಿದ್ದು, ನೀರನ್ನು ಕಲುಷಿತಗೊಳಿಸುತ್ತಿದೆ. ಅಂಗವೈಕಲ್ಯಕ್ಕೆ ಒಳಗಾದ ಮಕ್ಕಳು ಈಗಲೂ ಹುಟ್ಟುತ್ತಿದ್ದಾರೆ. ಆದರೆ ದುರ್ಘಟನೆಯ ಬಳಿಕ ಯೂನಿಯನ್ ಕಾರ್ಬೈಡ್ ಕಂಪೆನಿಯನ್ನು ಖರೀದಿಸಿ ಡೌ ಕೆಮಿಕಲ್ ಕಂಪೆನಿಯು, ಸಂತ್ರಸ್ತರಿಂದ ಮಾರು ದೂರ ನಿಂತಿದೆ. ಸಂತ್ರಸ್ತರಿಗೆ ನೆರವಾಗುವ ಎಲ್ಲ ಜವಾಬ್ದಾರಿಗಳಿಂದಲೂ ನುಣುಚಿಕೊಳ್ಳುತ್ತಿದೆ. ವಿಶೇಷ ಏನೆಂದರೆ, ಇದೇ ಡೌ ಕಂಪೆನಿಯು ಲಂಡನ್ ಒಲಿಂಪಿಕ್ಸ್ ಅನ್ನು  ಪ್ರಾಯೋಜಿಸುತ್ತಿರುವುದು. ಆದ್ದರಿಂದಲೇ ಈ ಪ್ರಾಯೋಜಕತ್ವವನ್ನು ಖಂಡಿಸಿ ಭೋಪಾಲ್ ನ  ಅಂಗವಿಕಲ ಮಕ್ಕಳು ಅಫ್ರಿ ನಗರ್ ಮೈದಾನದಲ್ಲಿ ಓಡಿದ್ದಾರೆ. ಇದಕ್ಕಿಂತ ಮೊದಲು ಭೋಪಾಲ್ ನಲ್ಲಿ  ಸಾಕಷ್ಟು ರಾಲಿಗಳು  ನಡೆದಿದ್ದುವು. ಡೌ ಕಂಪೆನಿಯ ಪ್ರಾಯೋಜಕತ್ವದ ವಿರುದ್ಧ ಭಾರತವೂ ಪ್ರತಿಭಟಿಸಿತ್ತು. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮುಖ್ಯಸ್ಥೆಯೊಬ್ಬರು ಡೌವನ್ನು ಖಂಡಿಸಿ ಹುದ್ದೆಗೆ ರಾಜೀನಾಮೆಯನ್ನೂ ನೀಡಿದ್ದರು. ಆದರೂ ಪ್ರಭಾವಿ ಕಂಪೆನಿಯಾದ ಡೌವನ್ನು ಹೊರಗಿಡಲು ಲಂಡನ್ ಒಲಿಂಪಿಕ್ ಸಮಿತಿ ಮುಂದಾಗಲಿಲ್ಲ.
         ನಿಜವಾಗಿ, ಭೋಪಾಲ್ ಅನಿಲ ದುರಂತಕ್ಕೆ ಡೌ ಕಂಪೆನಿ ನೇರವಾಗಿ ಹೊಣೆಗಾರ ಅಲ್ಲದೇ ಇರಬಹುದು. ಆದರೆ ಅದು ಖರೀದಿಸಿದ್ದು ಕೊಲೆಪಾತಕ ಕಂಪೆಯನ್ನು. ಕಂಪೆನಿಯ ಅಪರಾಧ ಏನು, ಸಂತ್ರಸ್ತರ ಮೇಲೆ ಅದರ ಹೊಣೆಗಾರಿಕೆ ಏನು ಅನ್ನುವುದೆಲ್ಲಾ ಖರೀದಿಸುವಾಗ ಡೌ ಕಂಪೆನಿಗೆ ಚೆನ್ನಾಗಿಯೇ ಗೊತ್ತಿತ್ತು. ಹೀಗಿರುವಾಗ ಸಂತ್ರಸ್ತರಿಗೆ ನೆರವಾಗುವುದು ನಮ್ಮ ಕರ್ತವ್ಯವಲ್ಲ ಎಂದರೆ ಹೇಗೆ? ಯೂನಿಯನ್ ಕಾರ್ಬೈಡ್ ಯಾವೆಲ್ಲ ದೇಶಗಳಿಗೆ ತನ್ನ ಉತ್ಪನ್ನಗಳನ್ನು ರವಾನಿಸುತ್ತಿತ್ತೋ ಅವೆಲ್ಲ ದೇಶಗಳಿಗೆ ಇವತ್ತು ಉತ್ಪನ್ನ ಸರಬರಾಜು ಮಾಡುವುದು ಡೌ ಕಂಪೆನಿ. ಯೂನಿಯನ್ ಕಾರ್ಬೈಡ್ ಈ ಹಿಂದೆ ಹೊಂದಿದ್ದ ಮಾರುಕಟ್ಟೆ ಇವತ್ತು ಡೌನ ವಶವಾಗಿದೆ. ಹಾಗಿರುವಾಗ ಯೂನಿಯನ್ ಕಾರ್ಬೈಡ್ ನ  ಪ್ರಮಾದಗಳು ತನಗೆ ಬೇಡ, ಅದರ ಮಾರುಕಟ್ಟೆ ಮತ್ತು ಲಾಭಗಳು ಮಾತ್ರ ಸಾಕು ಅನ್ನುವುದಕ್ಕೆ ಏನೆನ್ನಬೇಕು?
        ಇವತ್ತು, ದೊಡ್ಡ ದೊಡ್ಡ ಉದ್ದಿಮೆಗಳು ಯಾವುದೇ ಒಂದು ಪ್ರದೇಶದಲ್ಲಿ ಬಂಡವಾಳ ಹೂಡುವುದು, ಆ ಪ್ರದೇಶದ ಉದ್ಧಾರಕ್ಕೆ ಖಂಡಿತ ಅಲ್ಲ. ಲಾಭವೇ ಅವುಗಳ ಮುಖ್ಯ ಗುರಿ. ಅವುಗಳ ಪಾಲಿಗೆ ಮನುಷ್ಯರು ಬರೇ ಗಿನಿಪಿಗ್ ಗಳು . ಆದ್ದರಿಂದಲೇ ಭೋಪಾಲ್ ದುರಂತದ ಸಂತ್ರಸ್ತ ಮಕ್ಕಳ ಸ್ಪೆಷಲ್ ಒಲಿಂಪಿಕ್ಸ್ ಮುಖ್ಯವಾಗುವುದು. ಡೌ ಕಂಪೆನಿಗೆ ಹೋಲಿಸಿದರೆ ಕಳೆದ 28 ವರ್ಷಗಳಿಂದ ನ್ಯಾಯಯುತ ಪರಿಹಾರಕ್ಕಾಗಿ ಹೋರಾಡುತ್ತಾ ಬಂದಿರುವ ಸಂತ್ರಸ್ತರು ಏನೇನೂ ಅಲ್ಲ. ಡೌ ಕಂಪೆನಿಯಂತೆ ಅವರು ಕೋಟ್ಯಂತರ ರೂಪಾಯಿಗಳ ಒಡೆಯರೂ ಅಲ್ಲ. ಕೈಯನ್ನೋ ಕಾಲನ್ನೋ ಕಳಕೊಂಡು ಶಾಶ್ವತ ಮೂಲೆ ಸೇರಿರುವ ಮಗನನ್ನೋ ಮಗಳನ್ನೋ ಅಪ್ಪ ಅಲ್ಲಿ ಸಾಕುತ್ತಿರುತ್ತಾನೆ. ಅಂಧ ಮಗಳನ್ನು ಮನೆಯೊಳಗಿಟ್ಟು ದಿನದ ತುತ್ತಿಗಾಗಿ ತಾಯಿ ದುಡಿಯಲು ಹೋಗುತ್ತಾಳೆ. ಒಂದು ಮನೆಯಲ್ಲಿ ವಿಕಲ ಗಂಡನನ್ನು ಸಾಕುವ ಪತ್ನಿಯಿದ್ದರೆ ಇನ್ನೊಂದು ಮನೆಯಲ್ಲಿ ವಿಕಲ ಮಕ್ಕಳನ್ನು ಸಾಕುವ ತಂದೆ. ಪ್ರತಿ ಮನೆಗಳೂ ಒಂದೊಂದು ಕತೆಯನ್ನು ಹೇಳುತ್ತಾ ಭೋಪಾಲ್ ನಲ್ಲಿ  ಬದುಕುತ್ತಿವೆ. ಅಲ್ಲದೇ, ಇವನ್ನು ಹೇಳಿ ಹೇಳಿ ಮಾಧ್ಯಮಗಳಿಗೂ ಬೋರಾಗಿ ಬಿಟ್ಟಿವೆ. ಆದ್ದರಿಂದಲೋ ಏನೋ ಭೋಪಾಲ್ ಸ್ಪೆಷಲ್ ಒಲಿಂಪಿಕ್ಸ್ ಗೆ  ಅವು ಸ್ಪೇಸನ್ನೇ ಕೊಟ್ಟಿಲ್ಲ. ಮೈಕೆಲ್ ಫೆಲ್ಪ್ಸ್, ಫೆಡರರ್, ನೆಹ್ವಾಲ್, ಪಾವೆಲ್ ರನ್ನು  ಕೊಂಡಾಡುವ ಧಾವಂತದಲ್ಲಿ ಈ ವಿಕಲ ಮಕ್ಕಳ ಕೂಗು ಅವಕ್ಕೆ ಕೇಳಿಸಿಯೂ ಇಲ್ಲ.
          ಏನೇ ಆಗಲಿ, ಲಂಡನ್ ಒಲಿಂಪಿಕ್ಸ್ ನ  ಸಂದರ್ಭದಲ್ಲಿ ನಡೆದ ಭೋಪಾಲ್ ಸ್ಪೆಷಲ್ ಒಲಿಂಪಿಕ್ಸ್ ಖಂಡಿತ ಸ್ಪೆಷಲ್. ಅದಕ್ಕೆ ಲಂಡನ್ ಒಲಿಂಪಿಕ್ಸ್ ನ  ಖದರು, ಚೆಲುವು ಇಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ ನಮ್ಮನ್ನೆಲ್ಲಾ ಆಕರ್ಷಿಸುವುದಕ್ಕೆ ಮತ್ತು ತುಸು ಹೊತ್ತು ಕೂತು ಚರ್ಚಿಸುವಂತೆ ಒತ್ತಾಯಿಸುವುದಕ್ಕೆ ನೂರು ಶೇಕಡಾ ಅರ್ಹತೆ ಉಳ್ಳದ್ದು. ಲಂಡನ್ ಒಲಿಂಪಿಕ್ಸ್ ನಲ್ಲಿ  ಯಾರೋ ಅಥ್ಲೀಟ್ ಒಬ್ಬ ಚಿಗರೆಯಂತೆ ಓಡಿದುದನ್ನು ಟಿ.ವಿ. ಮುಂದೆ ಕೂತು ಆನಂದಿಸುವಾಗ ಆ ಓಟದ ಹಿಂದೆ ಡೌ ಕಂಪೆನಿಯ ದುಡ್ಡಿದೆ ಎನ್ನುವುದನ್ನು ನಾವೆಲ್ಲ ತಿಳಿದಿರಬೇಕು. ಮಾತ್ರವಲ್ಲ, ಅದೇ ದುಡ್ಡಿನ ಒಂದಂಶವನ್ನು ಸಂತ್ರಸ್ತರಿಗೆ ನೀಡಲು ಅದು ಒಪ್ಪುತ್ತಿಲ್ಲ ಅನ್ನುವುದೂ ಗೊತ್ತಿರಬೇಕು. ಒಂದು ವೇಳೆ ಅದು ಭೋಪಾಲ್ ಸಂತ್ರಸ್ತರ ಕಣ್ಣೀರು ಒರೆಸಲು ಮುಂದಾಗುತ್ತಿದ್ದರೆ ಅಫ್ರಿ ಮೈದಾನದಲ್ಲಿ ವಿಕಲ ಮಕ್ಕಳು ಓಡುವ ಪರಿಸ್ಥಿತಿ ಬರುತ್ತಿರಲಿಲ್ಲ.

Monday, 23 July 2012

ಭಾರತೀಯರೆಂದರೆ ಯಾರು ಕಾಗೇರಿಯವರೆ?

ಭಾರತೀಯರು ಅಂದರೆ ಯಾರು, ಭಾರತೀಯರಾಗುವುದಕ್ಕೆ ಇರುವ ಅರ್ಹತೆಗಳು ಏನೆಲ್ಲ.. ಎಂಬೆಲ್ಲಾ ಪ್ರಶ್ನೆಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ (DSERT) ಹೊರಡಿಸಿದ ಸುತ್ತೋಲೆಯೊಂದು ಹುಟ್ಟು ಹಾಕಿದೆ. `ಭಾರತೀಯರ ಹಬ್ಬ-ಹರಿದಿನಗಳು’ ಎಂಬ 640 ಪುಟಗಳ ಪುಸ್ತಕವನ್ನು ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಕಡ್ಡಾಯವಾಗಿ ಖರೀದಿಸಿ ತಮ್ಮ ಲೈಬ್ರರಿಗಳಲ್ಲಿ ಇಟ್ಟುಕೊಳ್ಳಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. 500 ರೂ. ಬೆಲೆಯ ಈ ಪುಸ್ತಕವನ್ನು ಬರೆದಿರುವುದು ಬೆಂಗಳೂರಿಗೆ ಅಷ್ಟಂಗ ಯೋಗ ವಿಜ್ಞಾನ ಮಂದಿರಮ್ ನ  ನಿರ್ದೇಶಕ ಮತ್ತು ಸಂಸ್ಕøತ ತಜ್ಞ ಶ್ರೀ ಶ್ರೀ ರಂಗಪ್ರಿಯ. ವಿಶೇಷ ಏನೆಂದರೆ, ಯುಗಾದಿ, ರಾಮನವಮಿ, ಗಣೇಶ ಚತುರ್ಥಿ, ದೀಪಾವಳಿ, ಮಹಾ ಶಿವರಾತ್ರಿ, ಅಕ್ಷಯ ತೃತೀಯ.. ಎಂಬುದನ್ನೆಲ್ಲಾ ಬಿಡಿಬಿಡಿಯಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಕೇವಲ ಉಪಕರ್ಮಗಳನ್ನು ವಿವರಿಸುವುದಕ್ಕೇ 30 ಪುಟಗಳನ್ನು ಮೀಸಲಿಡಲಾಗಿದೆ. ಅಲ್ಲದೇ ಮೇಲ್ವರ್ಗದ ಆಚರಣೆಗಳಾದ ಚಾತುರ್ಮಾಸ, ಉಪಕರ್ಮ, ಅನಂತ ಪದ್ಮನಾಭ ವ್ರತ, ನರಸಿಂಹ ಜಯಂತಿಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ. ಹಾಗೆಯೇ, ದೇವಾಲಯದ ಗೋಪುರ, ಕಲಶ, ಋಷಿ, ದನಗಳ ಎದುರು ಭಕ್ತರಿಬ್ಬರು ಕೈ ಮುಗಿದು ಪ್ರಾರ್ಥಿಸುವ ಚಿತ್ರವನ್ನು ಮುಖಪುಟದಲ್ಲಿ ಬಳಸಲಾಗಿದೆ.. ಆದರೆ ಈ ಪುಸ್ತಕದಲ್ಲಿ ಮುಸ್ಲಿಮರ ಈದ್, ಕ್ರೈಸ್ತರ ಗುಡ್ ಫ್ರೈಡೇ, ಬೌದ್ಧರ ಬುದ್ಧ ಜಯಂತಿ, ಜೈನರ ಮಹಾವೀರ ಜಯಂತಿಯ ಬಗ್ಗೆ ಒಂದೇ ಒಂದು ಪದವೂ ಇಲ್ಲ. ಹೀಗಿರುವಾಗ ಇಂಥದ್ದೊಂದು ಪುಸ್ತಕವನ್ನು ಶಾಲೆಗಳು ಕಡ್ಡಾಯವಾಗಿ ಖರೀದಿಸಬೇಕೆಂದು ಸರಕಾರ ಸುತ್ತೋಲೆ ಹೊರಡಿಸಿದ್ದಾದರೂ ಏಕೆ? ಭಾರತೀಯರು ಅಂದರೆ ಹಿಂದೂಗಳು ಎಂದರ್ಥವೇ? ವಿದ್ಯಾರ್ಥಿಗಳನ್ನು ಭಾರತೀಯರು ಮತ್ತು ಅಭಾರತೀಯರು ಎಂದು ವಿಂಗಡಿಸಲು ಪ್ರಚೋದನೆ ಕೊಡುವ ಪುಸ್ತಕವೊಂದನ್ನು ಶಿಕ್ಷಣ ಇಲಾಖೆ ಶಾಲೆಗಳಿಗೆ ಕಡ್ಡಾಯಗೊಳಿಸಿದ್ದು ಎಷ್ಟು ಸರಿ?
ನಿಜವಾಗಿ, ಶಾಲೆಗಳ ಮುಖ್ಯ ಉದ್ದೇಶ ಒಳ್ಳೆಯ ಭಾರತೀಯರನ್ನು ತಯಾರುಗೊಳಿಸುವುದು. ಭಾರತದಲ್ಲಿ ಹುಟ್ಟಿದ ಎಲ್ಲರೂ ಭಾರತೀಯರು ಎಂಬುದಾಗಿ ಶಾಲೆಗಳಲ್ಲಿ ಕಲಿಸಿಕೊಡಲಾಗುತ್ತದೆ. ಶಿಕ್ಷಣ ಮಂತ್ರಿ ಕಾಗೇರಿಯವರು ಬಿಡುವು ಸಿಕ್ಕಾಗಲೆಲ್ಲಾ ಶಾಲೆಗಳಿಗೆ ಭೇಟಿ ಕೊಡುವುದು ಮತ್ತು ವಿದ್ಯಾರ್ಥಿಗಳಲ್ಲಿ ಭಾರತೀಯತೆಯನ್ನು ಪ್ರಚೋದಿಸುವುದೂ ನಡೆಯುತ್ತಿದೆ. ಇಷ್ಟಕ್ಕೂ, ಕ್ರೈಸ್ತ ಅಥವಾ ಮುಸ್ಲಿಮ್ ವಿದ್ಯಾರ್ಥಿಗಳು ಕಲಿಕೆಯಲ್ಲಿ ಶಾಲೆಗೇ ಪ್ರಥಮ ಸ್ಥಾನ ಪಡೆದರೆ ಅಥವಾ ಕ್ರೀಡೆಯಲ್ಲಿ ರಾಜ್ಯಕ್ಕೆ ಕೀರ್ತಿ ತಂದರೆ ಅವರನ್ನು ಅಭಾರತೀಯರು ಎಂದು ಯಾವ ಶಿಕ್ಷಕರೇ ಆಗಲಿ ಕರೆಯುತ್ತಾರಾ? ಝಹೀರ್ ಖಾನ್, ಇರ್ಫಾನ್ ಪಠಾಣ್ ರನ್ನು  ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಎಂದೇ ಕರೆಯಲಾಗುತ್ತದಲ್ಲವೇ? ಎ.ಪಿ.ಜೆ. ಅಬ್ದುಲ್ ಕಲಾಮ್ ರು  ಭಾರತೀಯ ರಾಷ್ಟ್ರಪತಿ ಎಂದು ಕರೆಸಿ ಕೊಂಡಿರುತ್ತಾರೆಯೇ ಹೊರತು ಅಭಾರತೀಯ ಎಂದಲ್ಲವಲ್ಲ. ಇಷ್ಟಿದ್ದೂ `ಭಾರತೀಯರ ಹಬ್ಬ-ಹರಿದಿನಗಳಲ್ಲಿ’ ಮುಸ್ಲಿಮರು ಕಾಣೆಯಾದದ್ದೇಕೆ? ಕ್ರೈಸ್ತರು, ಇನ್ನಿತರರನ್ನು ಹೊರಗಿಟ್ಟದ್ದೇಕೆ? ಒಂದು ವೇಳೆ, ಅದು ರಂಗಪ್ರಿಯ ಅವರ ಖಾಸಗಿ ಪುಸ್ತಕವಷ್ಟೇ ಆಗಿದ್ದರೆ ಆ ಬಗ್ಗೆ ಚರ್ಚಿಸುವ ಅಗತ್ಯವೇ ಇರಲಿಲ್ಲ. ಆದರೆ ಆ ಪುಸ್ತಕವನ್ನು ಲೈಬ್ರರಿಯಲ್ಲಿ ಇಡಲು ಸರಕಾರವೇ ಆದೇಶಿಸಿದೆ. ಇದರರ್ಥವೇನು? ಹಿಂದೂಗಳು ಮಾತ್ರ ಭಾರತೀಯರು ಎಂಬ ನಿಲುವು ಈ ಸರಕಾರದ್ದೂ ಎಂದೇ ಅಲ್ಲವೇ? ಭಾರತೀಯರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿ, ಹಿಂದೂಗಳ ಹಬ್ಬಗಳನ್ನು ಭಾರತೀಯರ ಹಬ್ಬಗಳು ಎಂಬುದಾಗಿ ವಿದ್ಯಾರ್ಥಿಗಳ ಮೆದುಳಿಗೆ ತುರುಕಿಸುವುದರ ಉದ್ದೇಶ ಏನು? ಇದು ಭಾರತೀಕರಣವೇ ಅಥವಾ ಹಿಂದೂಕರಣವೇ?
ಹಿಂದೂ ಧರ್ಮದ ಮೇಲೆ ಕಾಗೇರಿ ಅವರಿಗೆ ಅಥವಾ ರಾಜ್ಯ ಸರಕಾರದ ಇನ್ನಾವುದೇ ಸಚಿವರಿಗೆ ಒಲವು ಇರುವುದು ಅಪರಾಧ ಖಂಡಿತ ಅಲ್ಲ. ಅದು ಅಪರಾಧ ಆಗುವುದು, ಆ ಒಲವನ್ನು ಕಾನೂನಾಗಿಸಿ ಎಲ್ಲರ ಮೇಲೂ ಹೇರುವಾಗ. ನಿಜವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳ ಮೆದುಳು ಕಾಗೇರಿಯವರಷ್ಟು ಬೆಳೆದಿರುವುದಿಲ್ಲ. ಅವು ಶಾಲೆಯಲ್ಲಿ ಏನನ್ನು ಹೇಳಿಕೊಡಲಾಗುತ್ತದೋ ಅವನ್ನೇ ಬಲವಾಗಿ ನಂಬುತ್ತವೆ. ಲೈಬ್ರರಿಗಳಲ್ಲಿ ಯಾವೆಲ್ಲ ಪುಸ್ತಕಗಳಿವೆಯೋ ಮತ್ತು ಅವುಗಳೊಳಗೆ ಏನೇನೆಲ್ಲ ಬರೆದಿವೆಯೋ ಅವೆಲ್ಲವನ್ನೂ ಸತ್ಯವೆಂದೇ ನಂಬುತ್ತವೆ. ಇಂಥ ಮಕ್ಕಳ ಕೈಗೆ ರಂಗಪ್ರಿಯರ ಪುಸ್ತಕ ಸಿಕ್ಕರೆ ಏನಾದೀತು? ಹಿಂದೂ ವಿದ್ಯಾರ್ಥಿಯೋರ್ವ ತನ್ನ ಮುಸ್ಲಿಮ್ ಸಹಪಾಠಿಯನ್ನು ವಿದೇಶೀಯನಂತೆ ನೋಡಲು ಪ್ರಾರಂಭಿಸಿದರೆ ಏನು ಮಾಡುವುದು? ಹೀಗೆ ಬೆಳೆಯುವ ಮಕ್ಕಳು ಭಾರತ ಅಂದರೆ ಅದು ಹಿಂದೂಗಳದ್ದು ಎಂದು ಪ್ರತಿಪಾದಿಸುವ ಸಾಧ್ಯತೆ ಇಲ್ಲವೇ?
         ಈ ದೇಶದ ಮುಸ್ಲಿಮರಿಗೆ ಭಾರತೀಯತೆ, ದೇಶಪ್ರೇಮವನ್ನು ಕಾಗೇರಿಯವರ ಪಕ್ಷ ಆಗಾಗ ಬೋಧಿಸುತ್ತಿರುತ್ತದೆ. ಭಾರತ-ಪಾಕ್ ಗಳ  ಮಧ್ಯೆ ಕ್ರಿಕೆಟ್ ಪಂದ್ಯಾಟ ನಡೆದಾಗಲೆಲ್ಲ ಅದು ಭಾರತೀಯ ಮತ್ತು ವಿದೇಶೀಯರನ್ನು ಹುಡುಕುವುದೂ ಇದೆ. ಇಂಥ ಪಕ್ಷವೊಂದು ವಿದ್ಯಾರ್ಥಿಗಳನ್ನು ಬೆಳೆಸಬೇಕಾದದ್ದು ಯಾವ ಮಾನಸಿಕತೆಯೊಂದಿಗೆ? ಹಿಂದೂಯೇತರರನ್ನು ಭಾರತೀಯರೆಂದು ಒಪ್ಪಿಕೊಳ್ಳಲೇ ಸಿದ್ಧರಿಲ್ಲದವರು, ಭಾರತೀಯತೆಯ ಪಾಠ ಹೇಳುವುದಕ್ಕೆ ಎಷ್ಟು ಅರ್ಹರು? ಅಂದಹಾಗೆ, ಹಿಂದೂ ಧರ್ಮದ ಬಗ್ಗೆ ಕಾಗೇರಿಯವರ ವೈಯಕ್ತಿಕ ನಿಲುವು ಏನೇ ಇರಲಿ, ಸಚಿವರಾಗಿ ಅದನ್ನು ಶಾಲೆಗಳ ಮೇಲೆ ಹೇರುವುದು ಖಂಡಿತ ತಪ್ಪು. ನಾಳೆ ಮುಸ್ಲಿಮ್ ಸಚಿವರೊಬ್ಬರು ಇಸ್ಲಾಮಿನ ಹಬ್ಬಗಳನ್ನಷ್ಟೇ ಪಟ್ಟಿ ಮಾಡಿ, `ಭಾರತೀಯರ ಹಬ್ಬಗಳು’ ಎಂಬ ಶೀರ್ಷಿಕೆಯಲ್ಲಿರುವ ಪುಸ್ತಕವನ್ನು ಶಾಲಾ ಲೈಬ್ರರಿಗೆ ಸರಬರಾಜು ಮಾಡಿದರೆ ಕಾಗೇರಿಯವರ ನಿಲುವು ಏನಿದ್ದೀತು? ಶಿಕ್ಷಣದ ಇಸ್ಲಾಮೀಕರಣ, ತಾಲಿಬಾನೀಕರಣ ಎಂದೆಲ್ಲಾ ಅವರು ಹೇಳಲಾರರೇ? ಶಿಕ್ಷಣ ಇಲಾಖೆಯು ಕಾಗೇರಿಯವರ ಸ್ವಂತ ಆಸ್ತಿಯಲ್ಲ. ಮಕ್ಕಳನ್ನು ಭಾರತೀಯ-ವಿದೇಶೀಯ ಎಂದು ವಿಭಜಿಸುವುದಕ್ಕೆ ಅವರಿಗೆ ಈ ಸಂವಿಧಾನ ಅವಕಾಶವನ್ನೂ ಕೊಟ್ಟಿಲ್ಲ. ಒಂದು ವೇಳೆ ಕಾಗೇರಿಯವರಿಗೆ ರಂಗಪ್ರಿಯರ ಪುಸ್ತಕದಲ್ಲಿ ಅಷ್ಟೊಂದು ಪ್ರೀತಿಯಿದ್ದರೆ ತನ್ನ ಮನೆಯ ಕಪಾಟಿನಲ್ಲಿ ಅದನ್ನು ಧಾರಾಳ ಇಟ್ಟುಕೊಳ್ಳಲಿ. ಆದರೆ ಶಾಲೆಗಳ ಲೈಬ್ರರಿಗಳಲ್ಲಿ ಅದರ ಅಗತ್ಯವಿಲ್ಲ.

Monday, 16 July 2012

ಉಪವಾಸ - ಹಸಿವೆಯ ಹೆಸರಲ್ಲ

    ನೀರುಳ್ಳಿ, ಬೆಳ್ಳುಳ್ಳಿ, ಮೆಣಸು, ಟೊಮೆಟೊ, ಉಪ್ಪು, ಶುಂಠಿ, ನೀರು.. ಇವೆಲ್ಲವುಗಳ ಉಪಯೋಗ ಏನು ಅಂತ ಎಲ್ಲರಿಗೂ ಗೊತ್ತು. ಇವುಗಳಲ್ಲಿ ಒಂದು ವಸ್ತು ಕಾಣೆಯಾದರೂ ಪಲ್ಯದ ಸ್ಥಿತಿ ಹೇಗಿರುತ್ತದೆ ಅನ್ನುವುದೂ ಗೊತ್ತು. ಪಲ್ಯಕ್ಕೆ ಟೇಸ್ಟೇ ಇರುವುದಿಲ್ಲ. ಅಂದ ಹಾಗೆ, ಎಷ್ಟೋ ಮನೆಗಳ ಜಗಳಗಳಲ್ಲಿ ಉಪ್ಪು ಅನ್ನುವ ಬಿಡಿವಸ್ತು ಪ್ರಮುಖ ಪಾತ್ರ ವಹಿಸಿದ್ದಿಲ್ಲವೇ? ಪಲ್ಯ ಚೆನ್ನಾಗಿಲ್ಲವೆಂದು ಹೊಟೇಲಿನಿಂದ ಅರ್ಧದಲ್ಲೇ ಎದ್ದು ಹೋಗುವವರು ಎಷ್ಟು ಮಂದಿಯಿಲ್ಲ? ನಿಜವಾಗಿ ಪಲ್ಯವನ್ನು ಪಲ್ಯ ಆಗಿಸುವುದು, ಊಟವನ್ನೋ ಇನ್ನೇನನ್ನೋ ಆಸಕ್ತಿಯಿಂದ ಸೇವಿಸುವಂತೆ ಮಾಡುವುದು ಮೇಲಿನ ಕೆಲವು ಬಿಡಿವಸ್ತುಗಳು. ಅವಿಲ್ಲದಿದ್ದರೆ ಪಲ್ಯ  ಆಗುವುದೇ ಇಲ್ಲ.
      ನಿಜವಾಗಿ, ಉಪವಾಸಕ್ಕೂ ಪಲ್ಯಕ್ಕೂ ಒಂದು ಹಂತದ ವರೆಗೆ ಹೋಲಿಕೆಯಿದೆ. ಪಲ್ಯದಂತೆಯೇ ಉಪವಾಸವನ್ನು ರುಚಿಕರವಾಗಿಸುವುದಕ್ಕೂ ಹತ್ತಾರು ಬಿಡಿ ಸಂಗತಿಗಳನ್ನು ಬಳಸಬೇಕಾಗುತ್ತದೆ. ಉಪವಾಸ ನನಗಾಗಿದೆ ಮತ್ತು ಅದಕ್ಕೆ ಖುದ್ದಾಗಿ ನಾನೇ ಪ್ರತಿಫಲ ಕೊಡುತ್ತೇನೆ ಎಂದು ಅಲ್ಲಾಹನು ಹೇಳಿದ್ದಾನೆ. ಹೀಗಿರುವಾಗ ಪ್ರತಿಫಲ ಬಯಸುವಷ್ಟು ರುಚಿಕರ ಉಪವಾಸ ನಮ್ಮದಾಗಿರಬೇಕಲ್ಲವೇ? ರುಚಿಯೇ ಕೆಟ್ಟು ಹೋದ ಉಪವಾಸವನ್ನು ಅಲ್ಲಾಹನಿಗೆ ಅರ್ಪಿಸಿ, ಅವನಿಂದ ಪ್ರತಿಫಲ ಬಯಸುವುದಾದರೂ ಯಾವ ಮುಖದಲ್ಲಿ? ಹೊಟೇಲಿನವ ಕೆಟ್ಟ ಆಹಾರವನ್ನು ಒದಗಿಸಿದರೆ ನಾವು ದುಡ್ಡು ಕೊಡುತ್ತೇವಾ? ನಿಜವಾಗಿ, ಬೆಳಗ್ಗಿನಿಂದ ಸಂಜೆಯ ವರೆಗೆ ಹಸಿವೆಯಿಂದಿರುವುದು ಉಪವಾಸದ ಮಾನದಂಡ ಅಲ್ಲ. ಹಾಗಿರುತ್ತಿದ್ದರೆ, ಬಡತನದಿಂದಾಗಿ ಹಸಿವೆಯಿಂದಿರುವ ಜಗತ್ತಿನಾದ್ಯಂತದ ಕೋಟ್ಯಂತರ ಮಂದಿಯನ್ನು ಉಪವಾಸಿಗರು ಎಂದು ಪರಿಗಣಿಸಬೇಕಾಗುತ್ತಿತ್ತು. ಹೀಗಿರುವಾಗ ನಮ್ಮ ಹಸಿವೆಯನ್ನು 'ಉಪವಾಸ'ಗೊಳಿಸುವುದು ಹೇಗೆ? ಅದನ್ನು ರುಚಿಕರವಾಗಿ ಮಾರ್ಪಡಿಸುವುದು ಹೇಗೆ?
    ಸುಳ್ಳು, ಪರನಿಂದೆ, ವಂಚನೆ, ಅಪ್ರಾಮಾಣಿಕತೆ, ಸಿಟ್ಟು, ಅಸಹನೆ.. ಇವೆಲ್ಲ ಉಪವಾಸದ ರುಚಿಯನ್ನು ಕೆಡಿಸುತ್ತವೆ ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಆದ್ದರಿಂದ ಇವಾವುದನ್ನೂ ಬಳಸದೆಯೇ ರುಚಿಕಟ್ಟಾದ `ಉಪವಾಸ’ವನ್ನು ಆಚರಿಸುವುದಕ್ಕೆ ನಮಗೆ ಸಾಧ್ಯವಾಗಬೇಕು. ಇಷ್ಟಕ್ಕೂ,  ರುಚಿಕರ ಪಲ್ಯವನ್ನು ನಿರಂತರ ಒಂದು ತಿಂಗಳು ತಯಾರಿಸಿದರೆ, ಆ ಬಳಿಕ ಕೆಟ್ಟ ಪಲ್ಯವನ್ನು ತಯಾರಿಸಲು ಯಾರಿಗಾದರೂ ಮನಸ್ಸು ಬಂದೀತೇ? ದುರಂತ ಏನೆಂದರೆ ಹೆಚ್ಚಿನ ಮಂದಿ ಉಪವಾಸದ ಬಗ್ಗೆ ಈ ರೀತಿಯಾಗಿ ಆಲೋಚಿಸುವುದೇ ಇಲ್ಲ. ಪಲ್ಯಕ್ಕೆ ಮೆಣಸು ತುಸು ಜಾಸ್ತಿಯಾದರೂ ಅಪಾರ ಸಿಟ್ಟಾಗುವ ಮಂದಿ, ಉಪವಾಸ ಆಚರಿಸಿಯೂ ಸುಳ್ಳು ಹೇಳಿದರೆ ಉಪವಾಸದ ಸ್ಥಿತಿಯೂ ಆ ಪಲ್ಯದಂತೆಯೇ ಎಂದು ಆಲೋಚಿಸುವುದಿಲ್ಲ. ಪ್ರತಿದಿನವೂ ಪಲ್ಯ ಅತ್ಯಂತ ರುಚಿಕರವಾಗಿರಬೇಕು ಎಂದು ಆಲೋಚಿಸುವ ನಾವು, ಬದುಕಿನ ಪ್ರತಿಕ್ಷಣವೂ ಸುಳ್ಳು, ವಂಚನೆ, ಅಸೂಯೆ, ಅಪ್ರಾಮಾಣಿಕತೆಗಳಿಲ್ಲದೇ ರುಚಿಕರವಾಗಿರಬೇಕೆಂದು ಅಲ್ಲಾಹನು ಬಯಸುತ್ತಾನೆನ್ನುವುದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಒಂದು ರೀತಿಯಲ್ಲಿ ನಿತ್ಯದ ಬದುಕಿನಲ್ಲಿ ಸಿಗುವಂಥ ಎಲ್ಲವೂ ರುಚಿಕರವಾಗಿರಬೇಕೆಂದು ನಾವು ಬಯಸುತ್ತೇವೆ. ಆದರೆ ಅಲ್ಲಾಹನು ನಮ್ಮಿಂದ ಅದನ್ನೇ ಬಯಸುತ್ತಾನೆ ಅನ್ನುವುದನ್ನು ಅರ್ಥೈಸಲು ವಿಫಲರಾಗುತ್ತೇವೆ.
         ರಮಝಾನ್ ಮತ್ತೆ ಬಂದಿರುವುದು ಇದನ್ನೇ ನೆನಪಿಸಲು.
ಒಂದು ವೇಳೆ ನಿತ್ಯದ ಬದುಕನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದರೆ, ಉಪವಾಸವನ್ನು ಮತ್ತು ಆ ಮೂಲಕ ಇಡೀ ಬದುಕನ್ನೇ ರುಚಿಕರಗೊಳಿಸುವುದಕ್ಕೆ ಪೂರಕವಾದ ಧಾರಾಳ ಪಾಠಗಳು ಸಿಗಬಲ್ಲುದು..

Monday, 9 July 2012

ಅಂದು, ನಾವೆಲ್ಲಾ ಹಿಂದು - ಒಂದು, ಇಂದು..?

ತನ್ನದು `ಲಿಂಗಾಯಿತರ ಪಕ್ಷ’ ಅನ್ನುವುದನ್ನು ರಾಜ್ಯ ಬಿಜೆಪಿ ಅಧಿಕೃತವಾಗಿ ಘೋಷಿಸಿದೆ. ಜಗದೀಶ್ ಶೆಟ್ಟರ್ ರನ್ನು ಮುಖ್ಯಮಂತ್ರಿ ಎಂದು ಘೋಷಿಸಿದ ಸಂದರ್ಭದಲ್ಲಿ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ನಾಯಕರು ಕೊಟ್ಟ ಹೇಳಿಕೆಗಳೇ ಇದಕ್ಕೆ ಅತಿ ಪ್ರಬಲ ಪುರಾವೆ. ಆದ್ದರಿಂದ ಇನ್ನು ಮುಂದೆ ಕನಿಷ್ಠ ಬಿಜೆಪಿಯ ರಾಜ್ಯ ಘಟಕವಾದರೂ ತನ್ನನ್ನು `ಭಾರತೀಯ ಲಿಂಗಾಯಿತರ ಪಕ್ಷ’ (ಬಿ ಎಲ್ ಪಿ ) ಎಂದು ಬದಲಿಸಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸುವುದು ಉತ್ತಮ. ಇಲ್ಲದಿದ್ದರೆ ಮತದಾರರು ಈ ಬಿ.ಎಲ್.ಪಿ.ಯನ್ನೇ ಬಿಜೆಪಿಯೆಂದು ನಂಬಿ ಅನಾಹುತವಾಗುವ ಸಾಧ್ಯತೆ ಇದೆ.
          ನಿಜವಾಗಿ, ರಾಜ್ಯದಲ್ಲಿ ಬಿಜೆಪಿ ನಾಪತ್ತೆಯಾಗಿ ಬಿಟ್ಟಿದೆ. `ಭಾರತದ ಜನರ ಪಕ್ಷ’ (ಬಿಜೆಪಿ) ಅನ್ನುವ ಅದರ ಹೆಸರನ್ನು ಅದರ ರಾಜ್ಯ ನಾಯಕರು ಎಷ್ಟಂಶ ಕೆಡಿಸಿ ಬಿಟ್ಟಿದ್ದಾರೆಂದರೆ, ಅದರ ಪ್ರತಿಯೊಬ್ಬ ನಾಯಕರೂ ಜಾತಿಗಳ ಮೂಲಕವೇ ಗುರುತಿಸಿಕೊಳ್ಳುತ್ತಿದ್ದಾರೆ. 'ಜನರ' ಪಕ್ಷದಲ್ಲಿ ಜನರು ಕಾಣೆಯಾಗಿ ಎಲ್ಲೆಡೆಯೂ ಜಾತಿಗಳೇ ಕಾಣಿಸುತ್ತಿವೆ. ನಾಲ್ಕು ವರ್ಷಗಳ ಹಿಂದೆ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ, `ಹಿಂದು-ನಾವೆಲ್ಲ ಒಂದು’ ಅನ್ನುವ ಸ್ಲೋಗನ್ನನ್ನು ಬಿಜೆಪಿ ಧಾರಾಳ ಬಳಸಿತ್ತು. ಚುನಾವಣಾ ಭಾಷಣಗಳು ಮುಗಿಯುತ್ತಿದ್ದುದೇ ಹಿಂದೂ-ಒಂದು ಅನ್ನುವ ಘೋಷಣೆಯ ಮೂಲಕವೇ. ತಾನು ಲಿಂಗಾಯಿತ ಅನ್ನುವುದು ಯಡಿಯೂರಪ್ಪರಿಗೆ ಅಂದು ಯಾವ ವೇದಿಕೆಯಲ್ಲೂ ನೆನಪಿಗೇ ಬಂದಿರಲಿಲ್ಲ. ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸದಾನಂದ ಗೌಡರು, ತಾನು ಒಕ್ಕಲಿಗ ಎಂದು ಹೇಳಿಕೊಂಡೂ ಇರಲಿಲ್ಲ. ಬಿಜೆಪಿಗೆ ಹಿಂದೂಗಳ ಪಕ್ಷ ಎಂಬ ಇಮೇಜು ತರುವ ಯತ್ನವನ್ನು ಅವರಿಬ್ಬರೂ ಮಾಡಿದ್ದರು. ಆದರೆ ಆ ಹಿಂದೂಗಳನ್ನೆಲ್ಲಾ ಬಿಜೆಪಿ ಇವತ್ತು ಅಧಿಕೃತವಾಗಿ ವಿಭಜಿಸಿಬಿಟ್ಟಿದೆ. ಹಿಂದೂಗಳಲ್ಲಿ ಲಿಂಗಾಯಿತರು ಹೆಚ್ಚು ಆಪ್ತರು ಎಂಬ ಸೂಚನೆಯನ್ನು ಬಿಜೆಪಿಯ ಕೇಂದ್ರ ನಾಯಕರೇ ಕನ್ನಡಿಗರಿಗೆ ರವಾನಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಶೆಟ್ಟರ್ ರ  ಕೈಯಲ್ಲಿರುವ ಬಿಜೆಪಿ ನಾಲ್ಕು ವರ್ಷಗಳ ಹಿಂದಿನ ಬಿಜೆಪಿ ಖಂಡಿತ ಅಲ್ಲ. ಇದು ಲಿಂಗಾಯಿತರ ಬಿಜೆಪಿ. ಸದಾನಂದ ಗೌಡರ ಕೈಯಲ್ಲಿರುವುದು ಒಕ್ಕಲಿಗರ ಬಿಜೆಪಿ. ಹೀಗೆ ಜಾತಿಗಳಾಗಿ ವಿಭಜಿಸಿ ಹೋಗಿರುವ ಬಿಜೆಪಿಯು, `ಹಿಂದು-ಒಂದು’ ಅನ್ನುವ ಸ್ಲೋಗನ್ನನ್ನು ಉದುರಿಸುತ್ತದಲ್ಲ, ಅದಕ್ಕಿಂತ ದೊಡ್ಡ ಬೊಗಳೆಯಾದರೂ ಏನಿದೆ? ಹಿಂದೂ ಸಮುದಾಯದಲ್ಲಿರುವ ಅಸ್ಪøಶ್ಯತೆ, ಅಸಮಾನತೆ, ಮಡೆಸ್ನಾನಗಳಂಥ ಮನುಷ್ಯ ನಿರ್ಮಿತ ವಿಭಜನೆಯನ್ನು ಇಂಥ ಪಕ್ಷಕ್ಕೆ ನಿರ್ಮೂಲನಗೊಳಿಸಲು ಸಾಧ್ಯವೇ? ಅಂದಹಾಗೆ, ನಿಜವಾದ ಬಿಜೆಪಿಯಾದರೂ ಯಾವುದು? ಅದು ಎಲ್ಲಿದೆ? ಅದರ ಸಿದ್ಧಾಂತವೇನು? ಜಾತಿಯನ್ನು ಇಷ್ಟು ಪ್ರಬಲವಾಗಿ ನೆಚ್ಚಿಕೊಂಡ ಪಕ್ಷವೊಂದು ಎಲ್ಲ ಹಿಂದೂಗಳ ಪಕ್ಷವಾಗುವುದಾದರೂ ಹೇಗೆ? ನಾಳೆ ದಲಿತರು ಮತ್ತು ಲಿಂಗಾಯಿತರ ಮಧ್ಯೆ ಸಮಸ್ಯೆಯೊಂದು ಹುಟ್ಟಿಕೊಂಡರೆ ಬಿಜೆಪಿಯ ನಿಲುವು ಏನಿರಬಹುದು? ಲಿಂಗಾಯಿತರ ಸಂಖ್ಯೆಗೆ ಹೋಲಿಸಿದರೆ ಒಕ್ಕಲಿಗರ ಸಂಖ್ಯೆ ಕಡಿಮೆ ಎಂಬ ಲೆಕ್ಕಾಚಾರದ ಆಧಾರದಲ್ಲಿ ಸದಾನಂದ ಗೌಡರನ್ನು ಪದಚ್ಯುತಗೊಳಿಸಿದ ಪಕ್ಷವೊಂದು ದಲಿತರಿಗೆ, ಕುರುಬರಿಗೆ ಅಥವಾ ಇನ್ನಾವುದೇ ಅಲ್ಪಸಂಖ್ಯೆಯ ವರ್ಗಕ್ಕೆ ನ್ಯಾಯ ಕೊಡುತ್ತದೆಂದು ಹೇಗೆ ನಂಬುವುದು?
      ತುಷ್ಟೀಕರಣ, ಓಟ್ ಬ್ಯಾಂಕ್ ರಾಜಕಾರಣ .. ಎಂಬೆಲ್ಲಾ ಪದಗಳನ್ನು ಚಾಲ್ತಿಗೆ ತಂದದ್ದು ಬಿಜೆಪಿಯೇ. ಕಾಂಗ್ರೆಸ್ ಸಹಿತ ತನ್ನ ಎದುರಾಳಿ ಪಕ್ಷಗಳನ್ನು ಹಣಿಯುವುದಕ್ಕೆ ಬಿಜೆಪಿ ಅಸ್ತ್ರವಾಗಿ ಬಳಸಿಕೊಂಡದ್ದೂ ಈ ಪದಗಳನ್ನೇ. ಮುಸ್ಲಿಮ್ ತುಷ್ಟೀಕರಣ, ಓಟ್ ಬ್ಯಾಂಕ್  ರಾಜಕಾರಣ ಎಂಬುದನ್ನೆಲ್ಲಾ ಬಿಜೆಪಿ ಅತ್ಯಂತ ಸಮರ್ಥವಾಗಿಯೇ ಬಳಸಿಕೊಂಡಿದೆ. ಆದರೆ ಇವತ್ತು ಬಿಜೆಪಿ ಮಾಡಿದ್ದಾದರೂ ಏನು? ಲಿಂಗಾಯಿತ ತುಷ್ಟೀಕರಣವನ್ನೇ ಅಲ್ಲವೇ? ಅಲ್ಪಸಂಖ್ಯಾತರ ಮೀಸಲಾತಿಯ ಬಗ್ಗೆ ಕಾಂಗ್ರೆಸ್ ಮಾತಾಡಿದರೆ, ಹಜ್ಜ್ ಸಬ್ಸಿಡಿಯ ಪರ ವಾದಿಸಿದರೆ ಅದನ್ನು ಓಟ್ ಬ್ಯಾಂಕ್ ರಾಜಕಾರಣ ಅನ್ನುವ ಬಿಜೆಪಿ ಈಗ ಮಾಡಿದ್ದೇನು, ಲಿಂಗಾಯಿತ ಓಟ್ ಬ್ಯಾಂಕ್ ರಾಜಕಾರಣವನ್ನಲ್ಲವೇ? ಕಾಂಗ್ರೆಸ್ ಮಾಡಿದರೆ ಅಪರಾಧವಾಗುವುದು, ಅದನ್ನೇ ತಾನು ಮಾಡಿದರೆ ರಾಜಕೀಯ ಅನಿವಾರ್ಯತೆ ಅನ್ನಿಸಿಕೊಳ್ಳುವುದೆಲ್ಲಾ ಯಾಕೆ?
      ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಬಿಜೆಪಿಗೆ ತನ್ನದೇ ಆದ ನಿಲುವು, ಸಿದ್ಧಾಂತ ಇಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ರಾಜಕೀಯವಾಗಿ ಯಾವುದು ಹೆಚ್ಚು ಲಾಭ ತರುತ್ತದೋ ಅದನ್ನು ಅದು ತನ್ನ ನಿಲುವಾಗಿ ಆರಿಸಿಕೊಳ್ಳುತ್ತಿದೆ. ನಾಳೆ ಲಿಂಗಾಯಿತರು ಸಂಖ್ಯೆಯಲ್ಲಿ ಕಡಿಮೆಯಾಗಿ ಒಕ್ಕಲಿಗರು ಹೆಚ್ಚಾಗಿ ಬಿಟ್ಟರೆ ಅದು ಒಕ್ಕಲಿಗ ಪಕ್ಷವಾಗಿ ಬಿಡುವ ಸಾಧ್ಯತೆ ಇದೆ. ಮಡೆಸ್ನಾನ, ಅಸ್ಪøಶ್ಯತೆ, ಮಲ ಹೊರುವ ಪದ್ಧತಿ.. ಮುಂತಾದುವುಗಳನ್ನೆಲ್ಲಾ ನಂಬಿಕೆಯ ವಿಚಾರವೆಂದು ಹೇಳುವ ಮಂದಿ ಎಲ್ಲಾದರೂ ಸಂಖ್ಯೆಯಲ್ಲಿ ಬಹುಸಂಖ್ಯಾತರಾದರೆ ಅವೆಲ್ಲವನ್ನೂ ಕಾನೂನು ಪ್ರಕಾರ ಸಿಂಧಗೊಳಿಸಿ ಬಿಜೆಪಿ ಅವರ ಪರ ಬಹಿರಂಗವಾಗಿಯೇ ನಿಲ್ಲುವುದಕ್ಕೂ ಸಾಧ್ಯವಿದೆ. ಬಾಬರಿ ಮಸೀದಿಯನ್ನು ಉರುಳಿಸಿದ ಇದೇ ಬಿಜೆಪಿ, ಲಾಭ ಕಂಡು ಬಂದರೆ ಮತ್ತೆ ಬಾಬರಿಯನ್ನು ಕಟ್ಟಲೂಬಹುದು.. ಒಂದು ರೀತಿಯಲ್ಲಿ ಬಿಜೆಪಿಗೆ ತನ್ನದೇ ಆದ ನಿರ್ದಿಷ್ಟ ಮುಖವೆಂಬುದು ಇಲ್ಲವೇ ಇಲ್ಲ. ಅದು ಮುಖವಾಡದ ಜೊತೆಗೇ ಬದುಕುತ್ತಿದೆ. ಇಂಥ ಪಕ್ಷವೊಂದು ಹಿಂದೂಗಳನ್ನು ಒಂದು ಮಾಡಲು ಸಾಧ್ಯವೇ?              
       ಅಂದಹಾಗೆ, ಪಕ್ಷ ಯಾವುದೇ ಇರಲಿ, ಅದಕ್ಕೆ ನಿರ್ದಿಷ್ಟ ರೂಪ, ಚಲನೆ, ನಿಲುವು ಇರಲೇಬೇಕಾದುದು ಅತ್ಯಗತ್ಯ. ಒಂದು ರೀತಿಯಲ್ಲಿ ಅದು ಆ ಪಕ್ಷದ ಗುರುತು. ಆ ಗುರುತನ್ನು ಒಪ್ಪಬೇಕೋ ಬೇಡವೋ ಎಂಬುದನ್ನು ಆ ಬಳಿಕ ಮತದಾರ ತೀರ್ಮಾನಿಸುತ್ತಾನೆ. ಆದರೆ ಬಿಜೆಪಿಗೆ ತನ್ನ ಗುರುತಿನಲ್ಲೇ ಗೊಂದಲ ಇದೆ. ಇವತ್ತೊಂದು ರೂಪ ಅದರದ್ದಾದರೆ ನಾಳೆ ಇನ್ನೊಂದು. ನಾಳಿದ್ದು ಮತ್ತೊಂದು. ಇಂಥ ಪಕ್ಷಕ್ಕೆ ಮತ ಚಲಾಯಿಸಿ ಶುಭ ನಿರೀಕ್ಷೆ ಇಟ್ಟುಕೊಳ್ಳುವುದು ಎಷ್ಟು ಸರಿ? ನಿಜವಾಗಿ ಬಣ್ಣ ಬದಲಿಸುವುದೇ ಬಿಜೆಪಿಯ ಗುರುತು. ಅದು ಈ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಮಾಡಿದ್ದೂ ಅದನ್ನೇ. ಆದ್ದರಿಂದ ಇವತ್ತು ಮತದಾರರು ಅಸಂತುಷ್ಟರಾಗಿದ್ದರೆ ಅದಕ್ಕೆ ಬಿಜೆಪಿ ಕಾರಣ ಅಲ್ಲ, ಅವರೇ. ಆದ್ದರಿಂದ ಬಣ್ಣಕ್ಕೆ ಮರುಳಾಗದೇ ತತ್ವಕ್ಕೆ ಬದ್ಧವಾಗಲು ರಾಜ್ಯದ ಜನತೆ ಮುಂದಿನ ಬಾರಿ ಸಿದ್ಧರಾಗಬೇಕು.

Tuesday, 3 July 2012

ಅವರ ಕೈಯಲ್ಲಿ ವಿಷ ಕೊಟ್ಟವರು ಯಾರು?

ಪ್ರೀತಿ, ಪ್ರೇಮಗಳ ಕಾರಣದಿಂದಾಗಿ ಈ ದೇಶದಲ್ಲಿ ಆಗುತ್ತಿರುವ ಆತ್ಮಹತ್ಯೆ, ಹತ್ಯೆ, ಜಗಳಗಳ ಸಂಖ್ಯೆ ಕಡಿಮೆಯೇನೂ ಇಲ್ಲ. ಪ್ರತಿದಿನ ಪತ್ರಿಕೆಗಳು ಇಂಥದ್ದೊಂದು ಸುದ್ದಿಯನ್ನು ಹೊತ್ತುಕೊಂಡೇ ಬರುತ್ತವೆ. ಅವು ಇವತ್ತು ಎಷ್ಟು ಮಾಮೂಲಿ ಆಗಿಬಿಟ್ಟಿವೆ ಎಂದರೆ, ಹೆಚ್ಚಿನ ಬಾರಿ ಅವು ಓದುಗರ ಗಮನವನ್ನೇ ಸೆಳೆಯುತ್ತಿಲ್ಲ. ಓಡಿ ಹೋದ ಅಥವಾ ಆತ್ಮಹತ್ಯೆ ಮಾಡಿಕೊಂಡ ಯುವಜೋಡಿಯನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಿ, ಅವರ ನಿರ್ಧಾರಕ್ಕೆ ನಾಲ್ಕು ಬೈಗುಳವನ್ನು ಸುರಿಸಿ  ನಾವೆಲ್ಲ ಸುಮ್ಮನಾಗುತ್ತೇವೆ. ನಿಜವಾಗಿ ಪರಸ್ಪರ ಪ್ರೀತಿಸುವ ಯುವ ಜೋಡಿಯೊಂದು ಅನಾಹುತಕಾರಿ ನಿರ್ಧಾರವನ್ನು ಕೈಗೊಳ್ಳುವುದರಲ್ಲಿ ಆ ಜೋಡಿಯ ಪಾತ್ರ ಮಾತ್ರ ಇರುವುದಲ್ಲ. ಅವರಿಗಿಂತ ದೊಡ್ಡ ಪಾತ್ರವನ್ನು ಈ ಸಮಾಜ ನಿರ್ವಹಿಸಿರುತ್ತದೆ. ದುರಂತ ಏನೆಂದರೆ, ಮನರಂಜನೆ, ಸಮಾನತೆ, ಸ್ವಾತಂತ್ರ್ಯ, ಆಧುನಿಕತೆ, ಸೆಕ್ಯುಲರಿಸಮ್ ಮುಂತಾದ ಆಕರ್ಷಕ ಪರಿಕಲ್ಪನೆಗಳ ಮೂಲಕ ಸಮಾಜ ತನ್ನ ಆ ಖಳ ಪಾತ್ರವನ್ನು ಸಮರ್ಥಿಸಿಕೊಳ್ಳುತ್ತಿದೆ.
          ಬಿಹಾರದ ಪಟ್ನಾದಲ್ಲಿ ಯುವತಿಯೊಬ್ಬಳು ತನ್ನ ತಂದೆ ಮತ್ತು ತಮ್ಮನಿಗೆ ವಿಷವುಣಿಸಿ ಜೂನ್ 30ರಂದು ಕೊಲೆ ಮಾಡಿದ್ದಾಳೆ. ಆಕೆಯ ಪ್ರೇಮ ಪ್ರಕರಣಕ್ಕೆ ತಂದೆ ಮತ್ತು ತಮ್ಮ ಅಡ್ಡಿಯಾಗಿರುವುದೇ ಇದಕ್ಕೆ  ಕಾರಣ. ಸದ್ಯ ಪೊಲೀಸರು ಆ ಯುವತಿಯನ್ನು ಬಂಧಿಸಿ ಕೊಲೆ ಕೇಸು ದಾಖಲಿಸಿದ್ದಾರೆ. ಒಂದು ರೀತಿಯಲ್ಲಿ ತಂದೆಯನ್ನು ಕೊಂದ, ತಮ್ಮನನ್ನು ಹತ್ಯೆ ಮಾಡಿದ ಭೀಕರ ಅಪರಾಧದೊಂದಿಗೆ ಯುವತಿಯೋರ್ವಳ ಬದುಕು ಆರಂಭವಾಗಿದೆ. ಆದರೆ ಇಂಥದ್ದೊಂದು ಬದುಕನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಆ ಯುವತಿಗೆ ಪ್ರೇರಣೆಯಾದದ್ದಾದರೂ ಏನು? ಆ ವರೆಗೆ ಸಾಕಿ ಸಲಹಿದ ಅಪ್ಪನನ್ನೇ ಕೊಲ್ಲುವಷ್ಟು, ತಮ್ಮನಿಗೇ ವಿಷ ಕೊಡುವಷ್ಟು ಆಕೆಯ ಹೃದಯವನ್ನು ಕಟುವಾಗಿಸಿದ್ದಾದರೂ ಯಾವುದು? ಆಕೆ ಈ ಮೊದಲು ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯೂ ಆಗಿರಲಿಲ್ಲ. ಪ್ರಿಯಕರನ ಮಾತು ಕೇಳಿ ತಂದೆಯನ್ನೇ ಕೊಂದಳು ಅನ್ನುವ ಒಂದು ವಾಕ್ಯದಲ್ಲಿ ಮುಕ್ತಾಯಗೊಳಿಸುವುದಕ್ಕೆ ಇಂಥ ಪ್ರಕರಣಗಳು ಅರ್ಹವೇ?
        ಯುವಕ ಮತ್ತು ಯುವತಿಯ ಮಧ್ಯೆ ಪ್ರೇಮಾಂಕುರವಾಗುವುದಕ್ಕೆ ಕಾರಣ ಅವರಿಬ್ಬರು ಮಾತ್ರ ಖಂಡಿತ ಅಲ್ಲ. ಅಂಥದ್ದೊಂದು ವಾತಾವರಣವನ್ನು ಹಿರಿಯರಾದ ನಾವೆಲ್ಲ ನಿರ್ಮಿಸಿ ಕೊಟ್ಟಿದ್ದೇವೆ. ನಮ್ಮ ಸಿನಿಮಾಗಳು ತಯಾರಾಗುವುದೇ ಪ್ರೀತಿ, ಪ್ರೇಮಗಳ ಸುತ್ತ. ತನ್ನ ಪ್ರೇಮವನ್ನು ಗೆಲ್ಲುವುದಕ್ಕಾಗಿ ಹೀರೋ ಯಾರ ಹತ್ಯೆ ಮಾಡುವುದಕ್ಕೂ ಹೇಸುವುದಿಲ್ಲ. ಈ ಪ್ರೇಮ ವ್ಯವಹಾರಕ್ಕೆ ಹಿರೋಯಿನ್ ಳ  ತಂದೆ ವಿರುದ್ಧ ಎಂದಾದರೆ ಆತನನ್ನು ಖಳನಂತೆ ಬಿಂಬಿಸಲಾಗುತ್ತದೆಯೇ ಹೊರತು ಆ ಅಪ್ಪನ ಅಪ್ಪಣೆ ಇಲ್ಲದೇ ಪ್ರೀತಿಸಿದ ಈ ಹೀರೋ ಹಿರೋಯಿನ್ ಗಳನ್ನಲ್ಲ. ಆ ಅಪ್ಪನಿಗೆ ಹೀರೋನಿಂದ ಬೀಳುವ ಪ್ರತಿ ಹೊಡೆತಕ್ಕೂ ಸಿನಿಮಾ ಮಂದಿರಗಳಲ್ಲಿ ಶಿಳ್ಳೆ ಬೀಳುತ್ತದೆ. ಹೀರೋ ಎಲ್ಲರನ್ನೂ ಚೆಂಡಾಡುವುದು, ಅಂತಿಮವಾಗಿ ಅಪ್ಪ ಆ ಪ್ರೀತಿಗೆ ಹಸಿರು ನಿಶಾನೆ ತೋರುವುದು ಅಥವಾ ಹೀರೋ - ಹಿರೋಯಿನ್ ಊರು ಬಿಟ್ಟು ಹೋಗುವುದು, ಸಾಯುವುದು.. ಹೀಗೆ ಸಾಗುತ್ತವೆ ಹೆಚ್ಚಿನ ಸಿನಿಮಾಗಳು. ಇನ್ನು, ಟಿವಿಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಸ್ಥಿತಿಯೂ ಭಿನ್ನವಲ್ಲ. ರಿಯಾಲಿಟಿ ಶೋಗಳ ಪಾಡಂತೂ ಇದಕ್ಕಿಂತಲೂ ಕರಾಳ. ಪ್ರೇಮ ಕತೆಯಿಲ್ಲದ ಒಂದೇ ಒಂದು ಧಾರಾವಾಹಿ ಈ ದೇಶದಲ್ಲಿ ಪ್ರಸಾರವಾಗಿರುವ ಸಾಧ್ಯತೆ ಇಲ್ಲ. ಹಾಗಂತ ಇವುಗಳನ್ನು ನಿರ್ಮಿಸುವುದು ಹದಿಹರೆಯದ ಯುವಕ ಯುವತಿಯರು ಅಲ್ಲವಲ್ಲ. ಹೀಗಿರುವಾಗ ಅವರು ಕೈಗೊಳ್ಳುವ ತಪ್ಪು ನಿರ್ಧಾರಕ್ಕೆ ಅವರೊಬ್ಬರನ್ನೇ ದೂಷಿಸುವುದು ಎಷ್ಟು ಸರಿ? ತಮಾಷೆ ಏನೆಂದರೆ, ಇಂಥ ಸಿನಿಮಾಗಳನ್ನು ತಯಾರಿಸಿ ಸಮಾಜಕ್ಕೆ ಅರ್ಪಿಸುವವರಿಗೆ ರಾಷ್ಟ್ರ ಪ್ರಶಸ್ತಿ ಸಿಗುತ್ತದೆ. ಅತ್ಯುತ್ತಮ ಚಿತ್ರಕತೆ ಎಂದು ಕೊಂಡಾಡಲಾಗುತ್ತದೆ. ಸಮಾಜವನ್ನು ತಪ್ಪು ದಾರಿಗೆಳೆಯುವ ಪಾತ್ರವನ್ನು ನಿರ್ವಹಿಸಿದ್ದಕ್ಕಾಗಿ ಅತ್ಯುತ್ತಮ ನಟ, ನಟಿ, ನಿರ್ದೇಶಕ ಪ್ರಶಸ್ತಿಗಳೂ ಒಲಿಯುತ್ತವೆ. ಒಂದು ಕಡೆ, ಸಿನಿಮಾದ ಪಾತ್ರವನ್ನೇ ನಿಜ ಜೀವನದಲ್ಲಿ ನಿರ್ವಹಿಸಿದ್ದಕ್ಕಾಗಿ ಸರಕಾರ ಕೇಸು ದಾಖಲಿಸುವಾಗ, ಇನ್ನೊಂದು ಕಡೆ ಅದೇ ಸರಕಾರ ಅಂಥ ಸಿನಿಮಾವನ್ನು ನಿರ್ಮಿಸಿದ್ದಕ್ಕಾಗಿ ಬಹುಮಾನ ಕೊಟ್ಟು ಪುರಸ್ಕರಿಸುತ್ತದೆ. ಯಾಕಿಂಥ ದ್ವಂದ್ವಗಳು?
    ಕೇವಲ ಸಿನಿಮಾಗಳು, ಧಾರಾವಾಹಿಗಳು ಎಂದಲ್ಲ, ನಮ್ಮ ಒಟ್ಟು ಬದುಕುವ ವಿಧಾನವೇ ಆಧುನಿಕತೆಯ ಕೈಯಲ್ಲಿ ಹೈಜಾಕ್ ಆಗಿಬಿಟ್ಟಿದೆ. ಶಾಲೆ, ಕಾಲೇಜು, ಮಾರುಕಟ್ಟೆ, ಮದುವೆ, ಕ್ರೀಡೆ.. ಎಲ್ಲದರಲ್ಲೂ ಅತಿ ಅನ್ನುವಷ್ಟು ಮುಕ್ತತೆ ಇದೆ. ಹೆಣ್ಣು-ಗಂಡು ನಡುವಿನ ಸಹಜ ಅಂತರವು ಕಡಿಮೆಯಾಗುತ್ತಾ ಬರುತ್ತಿದೆ. ಹೀಗಿರುವಾಗ ಪರಸ್ಪರ ಆಕರ್ಷಣೆಗೆ ಒಳಗಾಗುವ ಹೆಣ್ಣು ಮತ್ತು ಗಂಡನ್ನಷ್ಟೇ ಅಪರಾಧಿಯಾಗಿ ಬಿಂಬಿಸುವುದಕ್ಕೆ ಯಾವ ಅರ್ಥವೂ ಇಲ್ಲ. ಅದು ಆ ಮಟ್ಟಕ್ಕೆ ಬೆಳೆಯುವುದರಲ್ಲಿ ನಮ್ಮೆಲ್ಲರ ಪಾತ್ರ ಇದೆ. ಈ ಸತ್ಯವನ್ನು ಒಪ್ಪಿಕೊಳ್ಳದ ಹೊರತು ಬರೇ ಕೇಸು ಜಡಿಯುವುದರಿಂದಲೋ ಶಾಪ ಹಾಕುವುದರಿಂದಲೋ ಸಮಸ್ಯೆಗೆ ಪರಿಹಾರ ಸಿಗಲಾರದು. ಹದಿಹರೆಯ ಎಂಬುದು ಕುತೂಹಲದ ವಯಸ್ಸು. ಈ ಕುತೂಹಲವನ್ನು ನೈತಿಕ ಪಾಠಗಳ ಮೂಲಕ ತಣಿಸುವ, ಅದಕ್ಕೆ ಪೂರಕವಾದ ವಾತಾವರಣವನ್ನು ಬೆಳೆಸುವ ಜವಾಬ್ದಾರಿ ಎಲ್ಲ ವಯಸ್ಕರ ಮೇಲಿದೆ. ಅವರ ಆಲೋಚನೆಗಳನ್ನು ಸಮಾಜಮುಖಿಗೊಳಿಸಬೇಕು. ಅದಕ್ಕೆ ಯೋಗ್ಯವಾದ ತಾಣಗಳಾಗಿ ಶಾಲೆ, ಕಾಲೇಜುಗಳನ್ನು ಮಾರ್ಪಡಿಸಬೇಕು. ಯುವ ಸಮೂಹದ ಮನಸ್ಸನ್ನು ಪ್ರಚೋದಿಸುವ ಯಾವುದೂ ಸಿನಿಮಾ, ಧಾರಾವಾಹಿಗಳ ಹೆಸರಲ್ಲಿ ಬಿಡುಗಡೆಗೊಳ್ಳದಂತೆ ನೋಡಿಕೊಳ್ಳಬೇಕು. ಮುಖ್ಯವಾಗಿ ಹದಿಹರೆಯದ ಮಕ್ಕಳ ಮನಸ್ಸನ್ನು ಅರಿಯುವ ಪ್ರಯತ್ನವನ್ನು  ಮನೆಯ ಹಿರಿಯರು ಮಾಡಬೇಕು. ಅವರು ತಮ್ಮ ಎಲ್ಲವನ್ನೂ ತಾಯಿಯಲ್ಲೋ ತಂದೆಯಲ್ಲೋ ಅಥವಾ ಹಿರಿಯರಲ್ಲೋ ಹಂಚಿಕೊಳ್ಳುವಂತಹ ವಾತಾವರಣವನ್ನು ಮನೆಯಲ್ಲಿ ಬೆಳೆಸಬೇಕು. ಆಗಾಗ ಹಿತ ವಚನಗಳನ್ನು ಹೇಳುತ್ತಾ, ಧಾರ್ಮಿಕ ಮೌಲ್ಯಗಳನ್ನು ನೆನಪಿಸುತ್ತಾ ತಿದ್ದುವ ಪ್ರಯತ್ನ ಮಾಡುತ್ತಲಿರಬೇಕು. ನಾವು ನಿಮ್ಮ ಹಿತಾಕಾಂಕ್ಷಿಗಳು ಅನ್ನುವ ಸೂಚನೆಯೊಂದು ಪ್ರತಿ ಸಂದರ್ಭದಲ್ಲೂ ಹೆತ್ತವರಿಂದ ದಾಟುತ್ತಲಿರಬೇಕು..
ಏನೇ ಆಗಲಿ, ಯುವ ಸಮೂಹಕ್ಕೆ ಮನರಂಜನೆಯ ಹೆಸರಲ್ಲಿ ಹಿರಿಯರಾದ ನಾವು ಕೊಡುತ್ತಿರುವುದು ವಿಷವನ್ನೇ. ಆ ವಿಷದ ಪ್ರಭಾವಕ್ಕೆ ಮಕ್ಕಳು ಒಳಗಾದರೆ ಅದಕ್ಕಾಗಿ ಕೇಸು ಜಡಿಯಬೇಕಾದುದು ಅವರ ಮೇಲಷ್ಟೇ ಅಲ್ಲ, ಅದನ್ನು ಕೊಟ್ಟವರ ಮೇಲೂ ಕೇಸು ಹಾಕಬೇಕು. ಆಗ ಮಾತ್ರ ವಿಷ ತಯಾರಿಸುವವರು ಎಚ್ಚೆತ್ತುಕೊಳ್ಳುತ್ತಾರೆ..