Thursday 25 October 2018

ರಾವಣನನ್ನು ಸುಡುವ ಮೊದಲು...



     ಅಮೃತಸರದಲ್ಲಿ ದಹನಕ್ರಿಯೆಯೊಂದು ನಡೆದಿದೆ. ದಹನಕ್ಕೆ ಒಳಗಾದವ ರಾವಣ. ಆದರೆ ಈ ದಹನ ಕ್ರಿಯೆಗೆ 60ರಷ್ಟು ಮಂದಿ ಪ್ರಾಣ ತೆತ್ತಿದ್ದಾರೆ. ರಾವಣನು ದಹನಕ್ಕೆ ಅರ್ಹನೋ ಅನ್ನುವ ಪ್ರಶ್ನೆ ವರ್ಷದಿಂದ ವರ್ಷಕ್ಕೆ ಬಲ ಪಡೆಯುತ್ತಿರುವ ಹೊತ್ತಿನಲ್ಲೇ ನಡೆದ ಈ ದಹನ ಮತ್ತು ದುರಂತವು ನಮ್ಮೊಳಗನ್ನು ತೀವ್ರವಾಗಿ ತಟ್ಟಬೇಕು ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ಗಂಭೀರ ಅವಲೋಕನವೊಂದಕ್ಕೆ ಇದು ಪ್ರೇರೇಪಿಸಬೇಕು. ಸದ್ಯ, ದುರಂತದ ಸುತ್ತ ಆರೋಪ-ಪ್ರತ್ಯಾರೋಪಗಳು ಚಾಲ್ತಿಯಲ್ಲಿವೆ. ಆರೋಪಿಗಳ ಪಟ್ಟಿಯಲ್ಲಿ ರೈಲು ಚಾಲಕನಿಂದ ಹಿಡಿದು ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟ ಪೊಲೀಸರು, ರೈಲ್ವೆ ಇಲಾಖೆ, ರಾಜ್ಯ ಸರಕಾರ, ರಾಜಕಾರಣಿಗಳು, ಕಾರ್ಯಕ್ರಮ ಆಯೋಜಕರು ಮುಂತಾದ ಅನೇಕರಿದ್ದಾರೆ. ಆದರೆ, ಇಂಥ ಬೀಸು ಆರೋಪಗಳಿಂದ ಏನನ್ನೂ ಸಾಧಿಸಲಾಗದು ಅನ್ನುವುದು ಆರೋಪ ಹೊತ್ತವರಿಗೂ ಗೊತ್ತು. ಆರೋಪಿಸುವವರಿಗೂ ಗೊತ್ತು. ಇನ್ನು, ಒಂದೆರಡು ವಾರಗಳೊಳಗೆ ಈ ಇಡೀ ಘಟನೆ ತಣ್ಣಗಾಗಿರುತ್ತದೆ. ದೇಶ ಮರೆಯುತ್ತದೆ. ಮಾಧ್ಯಮಗಳು ಮೀಟೂವನ್ನೋ ರಾಜಕಾರಣಿಗಳ ರಾಜಕೀಯವನ್ನೋ ಮುಖಪುಟದಲ್ಲಿಟ್ಟು ಆಟ ಆಡತೊಡಗಿರುತ್ತವೆ. ಕೊನೆಗೆ ಈ ದುರಂತವು ಸಂತ್ರಸ್ತರಲ್ಲಿ ಮತ್ತು ಅವರ ಕುಟುಂಬದವರಲ್ಲಿ ಮಾತ್ರ ನೆನಪಾಗಿ ಉಳಿದಿರುತ್ತದೆ. ನಿಜವಾಗಿ, ರಾವಣ ದಹನದ ಸಂದರ್ಭದಲ್ಲಾದ ದುರಂತಕ್ಕಿಂತ ದೊಡ್ಡ ದುರಂತ ಇದು.

      ಈ ದೇಶದಲ್ಲಿ ಪ್ರತಿದಿನವೆಂಬಂತೆ ಹಬ್ಬಗಳು ಅಥವಾ ಧಾರ್ಮಿಕ ಆಚರಣೆಗಳು ಆಚರಿಸಲ್ಪಡುತ್ತಿರುತ್ತವೆ. ಪಟ್ಟಣ, ಕೇರಿ, ಹಳ್ಳಿ, ತಾಲೂಕು, ಗ್ರಾಮ ಇತ್ಯಾದಿ ಯಾವುದೂ ಈ ಆಚರಣೆಯ ಗೌಜು-ಗದ್ದಲದಿಂದ ಮುಕ್ತವಲ್ಲ. ಕೆಲವು ಕಡೆ ಪಟಾಕಿ, ಕೆಲವು ಕಡೆ ದಹನ, ಕೆಲವು ಕಡೆ ಮೆರವಣಿಗೆ, ದೇಹ ದಂಡನೆ, ಅಪಾಯಕಾರಿ ಸ್ಪರ್ಧಾ ಕೂಟಗಳು.. ಹೀಗೆ ನೂರಾರು ರೀತಿಯಲ್ಲಿ ಆಚರಿಸಲ್ಪಡುತ್ತವೆ. ನಾವು ರೈಲನ್ನು ದೂರುವ ಮೊದಲು ನಮ್ಮ ನಡುವೆ ಚಾಲ್ತಿಯಲ್ಲಿರುವ ಈ ಆಚರಣಾ ವಿಧಾನಗಳನ್ನೊಮ್ಮೆ ಅವಲೋಕಿಸಿಕೊಂಡರೇನು? ಅಂದಹಾಗೆ,

      ದಹನಕ್ರಿಯೆ ಏಕೆ ಬೇಕು? ದೀಪಾವಳಿಯ ಸಮಯದಲ್ಲಿ ನಾವು ಸುಡುವ ಪಟಾಕಿಗಳು ಎಷ್ಟು ಸುರಕ್ಷಿತ, ಎಷ್ಟು ನಿರುಪದ್ರವಿ? ಮುಹರ್ರಂನ ವೇಳೆ ದೇಹ ದಂಡಿಸುವ ಆಚರಣೆಯೂ ನಮ್ಮ ನಡುವೆ ಇದೆ. ಇಂಥದ್ದು ಇನ್ನಷ್ಟು ಇರಲೂಬಹುದು. ಇವುಗಳ ಬಗ್ಗೆ ಆಯಾ ಧರ್ಮಗಳ ಒಳಗೆ ಜಾಗೃತಿ ಅಭಿಯಾನಗಳು ನಡೆದರೆ ಹೇಗೆ? ನಿಜವಾಗಿ, ದಹನ ಕ್ರಿಯೆ ಎಂಬುದೇ ನಕಾರಾತ್ಮಕವಾದುದು. ಸುಡುವುದು ಸಹಜ ಕ್ರಿಯೆ ಅಲ್ಲ. ‘ಸುಟ್ಟ ವಾಸನೆ’ ಎಂಬ ಪದ ಬಳಕೆ ನಮ್ಮ ನಡುವೆ ಇದೆ. ಸುಟ್ಟ ಸುವಾಸನೆ ಎಂದು ನಾವು ಕರೆಯುವುದಿಲ್ಲ. ಸುಡುವಿಕೆಯಿಂದ ಹೊರಬರುವುದು ಕೆಟ್ಟ ವಾಸನೆ ಅನ್ನುವ ಭಾವನೆ ಸಾರ್ವಜನಿಕವಾಗಿ ಇದೆ. ಹಾಗಂತ, ರಾವಣನ ಪ್ರತಿಕೃತಿಯಷ್ಟೇ ಇಲ್ಲಿ ದಹನವಾಗುವುದಲ್ಲ. ತಮಗಾಗದವರ ಪ್ರತಿಕೃತಿ ರಚಿಸಿ ದಹಿಸುವ ಕ್ರಮವೊಂದು ಚಾಲ್ತಿಯಲ್ಲಿದೆ. ರಾಜಕೀಯ ಪಕ್ಷವು ಇನ್ನೊಂದು ಪಕ್ಷದವರ ಪ್ರತಿಕೃತಿಯನ್ನು ದಹಿಸುತ್ತದೆ. ವಿದ್ಯಾರ್ಥಿಗಳು ಕಾಲೇಜಿನದ್ದೋ  ಪ್ರಾಂಶುಪಾಲರದ್ದೋ ಅಥವಾ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಚಿವರು ಅಥವಾ ಅಧಿಕಾರಿಗಳದ್ದೋ ಪ್ರತಿಕೃತಿಯನ್ನು ದಹಿಸುತ್ತಾರೆ. ಪೊಲೀಸರ ಪ್ರತಿಕೃತಿಯನ್ನು ದಹಿಸುವ ಪ್ರತಿಭಟನಾಕಾರರಿದ್ದಾರೆ. ಜನಪ್ರತಿನಿಧಿಗಳ ಪ್ರತಿಕೃತಿ, ಬಂಡವಾಳಶಾಹಿ ನೀತಿಯ ಪ್ರತಿಕೃತಿ, ಅತ್ಯಾಚಾರಿಗಳ ಪ್ರತಿಕೃತಿ.. ಹೀಗೆ ದಹನಗಳು ನಡೆಯುತ್ತಲೇ ಇರುತ್ತವೆ. ಅಷ್ಟಕ್ಕೂ,

       ಪ್ರತಿಭಟನೆಯ ಮಾದರಿಯಾಗಿ ದಹನಗಳೇ ಏಕೆ ಬೇಕು? ಸುಡುಮದ್ದು ಮತ್ತು ಪಟಾಕಿಗಳನ್ನು ಹೊರತುಪಡಿಸಿ ಹಬ್ಬಗಳನ್ನು ಆಚರಿಸಲು ಸಾಧ್ಯವಿಲ್ಲವೇ? ಅಮೃತ್‍ಸರದ ದುರಂತಕ್ಕೆ ಬಹುದೊಡ್ಡ ಕಾರಣವಾದುದು ರಾವಣನ ಪ್ರತಿಕೃತಿಯ ಒಳಗೆ ಸುಡುಮದ್ದುಗಳನ್ನು ತುಂಬಿಸಿಟ್ಟಿದುದು. ಪ್ರತಿಕೃತಿಗೆ ಬೆಂಕಿ ಕೊಟ್ಟಾಗ ಒಳಗಿದ್ದ ಸುಡುಮದ್ದು ಸ್ಫೋಟಿಸಿತು. ಸದ್ದಿನ ಭೀಕರತೆಗೆ ಜನ ದಿಕ್ಕಾಪಾಲಾದರು. ಹಾಗೆ ರೈಲ್ವೆ ಹಳಿಯ ಮೇಲೂ ಓಡಿದರು.

    ವರ್ಷಂಪ್ರತಿ ಪಟಾಕಿಯೂ ಇಂಥದ್ದೇ  ದುರಂತ ಸುದ್ದಿಯನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಪುಟ್ಟ ಪುಟ್ಟ ಮಕ್ಕಳು ಕಣ್ಣು ಕಳೆದುಕೊಳ್ಳುವ ದಾರುಣ ಸುದ್ದಿಯನ್ನು ನಾವು ಓದುತ್ತಲೂ ಇರುತ್ತೇವೆ. ಇದು ಇನ್ನೂ ಯಾಕೆ ಮುಂದುವರಿಯಬೇಕು? ಹಬ್ಬಗಳನ್ನು ಬೆಂಕಿರಹಿತವಾಗಿ ಮಾಡುವ ಬಗ್ಗೆ ಗಂಭೀರ ಚರ್ಚೆಗಳೇಕೆ ನಡೆಯುತ್ತಿಲ್ಲ?

      ರಾವಣ ಕೆಟ್ಟವನೋ ಒಳ್ಳೆಯವನೋ, ಅಸುರನೋ ರಾಜನೋ ಇತ್ಯಾದಿ ಚರ್ಚೆಗಳಾಚೆಗೆ ಕೆಟ್ಟವರನ್ನು ಸುಡುವುದರ ನೈತಿಕ ಸರಿ-ತಪ್ಪುಗಳ ಬಗ್ಗೆ ಧಾರ್ಮಿಕ ವಲಯಗಳಲ್ಲಿ ಚರ್ಚೆ ಆರಂಭವಾಗಬೇಕು. ಸುಡದೆಯೇ ಪ್ರತಿಭಟನೆ ನಡೆಸುವ, ಸುಡದೆಯೇ ಹಬ್ಬ ಆಚರಿಸುವ, ಬೆಂಕಿ ರಹಿತವಾಗಿಯೇ ಸಂತೋಷ ಕೂಟಗಳನ್ನು ಏರ್ಪಡಿಸುವ ಸಂದರ್ಭಗಳು ಹೆಚ್ಚೆಚ್ಚು ಸೃಷ್ಟಿಯಾಗಬೇಕು. ರಾವಣನನ್ನು ದಹಿಸದೆಯೇ ರಾವಣನ ಸರಿ-ತಪ್ಪುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಸಲು ಸಾಧ್ಯವಿದೆ. ದೇಹವನ್ನು ದಂಡಿಸದೆಯೇ ಇಮಾಮ್ ಹುಸೇನ್‍ರ ತ್ಯಾಗಮಯ ಬದುಕನ್ನು ಜನರ ಮುಂದಿಡುವುದಕ್ಕೆ ಅವಕಾಶವಿದೆ. ದೀಪಾವಳಿಯೆಂದರೆ ಸಿಡಿಮದ್ದು ಸುಡುವುದು ಎಂಬ ಭಾವನೆಯಿಂದ ಹೊರಬಂದು ಆಚರಿಸುವುದಕ್ಕೂ ಸಾಧ್ಯವಿದೆ. ಆದರೆ ಇದು ಸಾಧ್ಯವಾಗಬೇಕಾದರೆ ಧಾರ್ಮಿಕ ನೇತಾರರು ಮನಸ್ಸು ಮಾಡಬೇಕು. ‘ಸುಡುವ ಸಂತೋಷ ಕೂಟದಿಂದ ದೂರ ನಿಲ್ಲೋಣ’ ಎಂದು ಅವರು ಸಾರಿಬಿಟ್ಟರೆ ಅದರಿಂದ ಅಸಂಖ್ಯ ಮಕ್ಕಳು, ಭಕ್ತರು ಸುರಕ್ಷಿತರಾದಾರು. ಮಾತ್ರವಲ್ಲ, ಅಂಥದ್ದೊಂದು  ಕರೆ ಹಬ್ಬಗಳಾಚೆಗೂ ಪ್ರಭಾವ ಬೀರುವ ಸಾಧ್ಯತೆಯಿದೆ.

     ನಮ್ಮ ಹಬ್ಬ-ಹರಿದಿನಗಳಲ್ಲಿ ಬೆಂಕಿಗಿಂತ ಬೆಳಕಿಗೆ ಪ್ರಾಮುಖ್ಯತೆ ಲಭ್ಯವಾಗಬೇಕು. ಆ ಬೆಳಕು ಬೆಂಕಿಯದ್ದೇ  ಆಗಬೇಕಿಲ್ಲ. ಧಾರ್ಮಿಕ ಉಪದೇಶವೂ ಬೆಳಕೇ. ಸದ್ಯದ ದಿನಗಳಲ್ಲಿ ಧಾರ್ಮಿಕ ಉಪದೇಶ ತೆರೆಮರೆಗೆ ಸರಿಯುತ್ತಿದೆ. ದ್ವೇಷ ಮುನ್ನೆಲೆಗೆ ಬರುತ್ತಿದೆ. ಬೆಂಕಿ ದ್ವೇಷದ ಸಂಕೇತ. ಸುಡುವುದೇ ಅದರ ಗುಣ. ಕೆಟ್ಟವರನ್ನೂ ಒಳ್ಳೆಯವರನ್ನೂ ಅದು ಸುಡುತ್ತದೆ. ಆದರೆ ಉಪದೇಶ ಹಾಗಲ್ಲ, ಅದು ಕೆಟ್ಟವರನ್ನೂ ಒಳ್ಳೆಯವರನ್ನಾಗಿಸುತ್ತದೆ. ಒಳ್ಳೆಯವರನ್ನು ಇನ್ನಷ್ಟು ಒಳಿತಿನೆಡೆಗೆ ಕೊಂಡೊಯ್ಯುತ್ತದೆ. ಸದ್ಯದ ಅಗತ್ಯ ಇದು. ಯಾವಾಗಲೋ ಆಗಿ ಹೋದ ರಾವಣನಿಗೆ ದಹನದಿಂದ ಏನೂ ಆಗಲಾರದು. ಆದರೆ ಆ ದಹನವನ್ನು ವೀಕ್ಷಿಸುವವರ ಮೇಲೆ ಆ ಸುಡುವ ಕ್ರಿಯೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಸ್ವಸ್ಥ ಸಮಾಜದ ದೃಷ್ಟಿಯಿಂದ ಇದು ಅಪಾಯಕಾರಿ.

Friday 19 October 2018

ದಿ ಕ್ವಿಂಟ್, ದಿ ನ್ಯೂಸ್ ಮಿನಿಟ್‍ಗಳು ಎತ್ತಿರುವ ಪ್ರಶ್ನೆ


     ಶವಪೆಟ್ಟಿಗೆ ಹಗರಣವನ್ನು ಬಯಲಿಗೆಳೆಯುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ತೆಹಲ್ಕಾ ಪತ್ರಿಕೆಯು ಆ ಬಳಿಕ ಎದುರಿಸಿದ ಸವಾಲುಗಳೇನು ಮತ್ತು ಆ ಸವಾಲುಗಳು ಯಾರಿಂದ ಎದುರಾದುವು ಅನ್ನುವುದು ಈ ದೇಶಕ್ಕೆ ಚೆನ್ನಾಗಿ ಗೊತ್ತು. ಕುಟುಕು ಕಾರ್ಯಾಚರಣೆಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಒದಗಿಸಿದ್ದು ಇದೇ ತೆಹಲ್ಕಾ. ಕೇಂದ್ರದಲ್ಲಿ ಆಗ ವಾಜಪೇಯಿ ನೇತೃತ್ವದ
ಸರಕಾರವಿತ್ತು. ಶವಪೆಟ್ಟಿಗೆ ಹಗರಣವು ಕೇಂದ್ರ ಸರಕಾರದ ವರ್ಚಸ್ಸಿಗೆ ಧಕ್ಕೆ ತರಲು ಪ್ರಾರಂಭಿಸಿದಾಗ ಅದು ತೆಹಲ್ಕಾದ ವಿರುದ್ಧ ನಿಂತಿತು. ವಿವಿಧ ಕೇಸುಗಳನ್ನು ಜಡಿಯುವ ಮೂಲಕ ಪತ್ರಿಕೆಯ ಸಂಪಾದಕರು ಮತ್ತು ಇತರರನ್ನು ಕೋರ್ಟು-ಕಚೇರಿ ಎಂದು ಅಲೆಯುವಂತೆ ಮಾಡಿತು. ಪತ್ರಿಕಾ ಕಚೇರಿಯ ಮೇಲೆ ದಾಳಿ ನಡೆಸಿತು. ವ್ಯವಸ್ಥೆಯ ಕಿರುಕುಳ ಮತ್ತು ಒತ್ತಡವನ್ನು ಎದುರಿಸಲು ಸಾಧ್ಯವಾಗದೇ ತೆಹಲ್ಕಾ ಒದ್ದಾಡಿದ್ದು ಈಗ ಇತಿಹಾಸ. ಇದೀಗ
  
    ಅಂಥದ್ದೇ  ಒತ್ತಡ ತಂತ್ರವನ್ನು ಮಾಧ್ಯಮಗಳ ಮೇಲೆ ಹೇರಲು ಮೋದಿ ನೇತೃತ್ವದ ಕೇಂದ್ರ ಸರಕಾರ ಹೊರಟಂತಿದೆ. ದಿ ಕ್ವಿಂಟ್ ಮತ್ತು ದಿ ನ್ಯೂಸ್ ಮಿನಿಟ್ ಎಂಬೆರಡು ಇಂಟರ್ ನೆಟ್ ಪತ್ರಿಕೆ (ನ್ಯೂಸ್ ಪೋರ್ಟಲ್)ಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದೆ. ದಿ ಕ್ವಿಂಟ್ ಮತ್ತು ನೆಟ್‍ವರ್ಕ್ 18 ಗ್ರೂಪ್‍ನ ಸ್ಥಾಪಕ ರಾಘವ್ ಬಹಲ್‍ರ ಮನೆಯ ಮೇಲೂ ದಾಳಿ ನಡೆದಿದೆ. ಈ ಮೊದಲು ಎನ್‍ಡಿಟಿವಿಯ ಮೇಲೂ ಇಂಥದ್ದೇ  ದಾಳಿ ನಡೆದಿತ್ತು. ಅಂದಹಾಗೆ, ಈ ದಾಳಿಗಳ ಉದ್ದೇಶ ತೆರಿಗೆ ತಪಾಸಣೆಯಲ್ಲ ಎಂದು ವಾದಿಸುವುದಕ್ಕೆ ಬೇಕಾದ ಸಾಕ್ಷ್ಯಗಳು ದಾಳಿಯ ಸ್ವರೂಪದಲ್ಲೇ ಇದೆ. ದಿ ಕ್ವಿಂಟ್, ದಿ ನ್ಯೂಸ್ ಮಿನಿಟ್ ಮತ್ತು ಎನ್‍ಡಿಟಿವಿ ಈ ಮೂರೂ ಸರಕಾರದ ಹೊಗಳುಭಟ ಪಟ್ಟಿಯಿಂದ ಹೊರಗಿರುವವು. ಕಾವಲು ನಾಯಿಯ ಸ್ವಭಾವವನ್ನು ಇನ್ನೂ ಉಳಿಸಿಕೊಂಡ ಕೀರ್ತಿ ಇವಕ್ಕಿದೆ. ಕೇಂದ್ರ ಸರಕಾರದ ಧೋರಣೆಗಳನ್ನು ಆಗಾಗ ಪ್ರಶ್ನಿಸುತ್ತಾ, ಟೀಕಿಸುತ್ತಾ ಮತ್ತು ವಿಮರ್ಶಿಸುತ್ತಾ ಇವು ನಿರಂತರ ಕಾರ್ಯಕ್ರಮಗಳನ್ನು ನೀಡುತ್ತಿವೆ ಮತ್ತು ಪ್ರಕಟಿಸುತ್ತಿವೆ. ಒಂದುವೇಳೆ, ಆದಾಯ ತೆರಿಗೆ ಇಲಾಖೆಯ ದಾಳಿಗೂ ಕೇಂದ್ರ ಸರಕಾರಕ್ಕೂ ಸಂಬಂಧ ಇಲ್ಲ ಎಂದಾಗಿದ್ದರೆ ಕೇಂದ್ರ ಸರಕಾರದ ಪ್ರಬಲ ಟೀಕಾಕಾರನಾಗಿ ಗುರುತಿಸಿಕೊಂಡಿರುವ ನಿರ್ದಿಷ್ಟ ಮಾಧ್ಯಮ ಸಂಸ್ಥೆಗಳೇ ಯಾಕೆ ದಾಳಿಗೆ ಈಡಾಗುತ್ತಿವೆ? ಬಿಜೆಪಿಯನ್ನು ವಿರೋಧಿಸುವ ಮಾಧ್ಯಮ ಸಂಸ್ಥೆಗಳನ್ನು ದುರ್ಬಲಗೊಳಿಸುವುದು ಮತ್ತು ಸಾರ್ವಜನಿಕವಾಗಿ ಅವುಗಳ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆ ತರುವುದು ಇಂಥ ದಾಳಿಗಳ ಉದ್ದೇಶ ಎಂದಲ್ಲದೇ ಇದನ್ನು ಬೇರೆ ಹೇಗೆ ವ್ಯಾಖ್ಯಾನಿಸಬಹುದು? ಇತ್ತೀಚೆಗೆ,

     ತ್ರಿಪುರದಲ್ಲಿ ಇಂಥದ್ದೇ  ಇನ್ನೊಂದು ಕ್ರೌರ್ಯ ನಡೆಯಿತು. ಸಿಪಿಎಂ ಮುಖವಾಣಿಯಾದ ದೇಶೆರ್ ಕಥಾ ಎಂಬ ದೈನಿಕದ ಪರವಾನಿಗೆಯನ್ನು ರದ್ದುಪಡಿಸಲಾಯಿತು. ತಾಂತ್ರಿಕ ಕಾರಣವನ್ನು ಮುಂದಿಟ್ಟು ಈ ಸಾಯಿಸುವ ಆಟ ನಡೆಯಿತು. ನಿಜವಾಗಿ, ಈ ಸಾವಿನಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ಕೈವಾಡವಿದೆ ಎಂದು ಹೇಳುವುದಕ್ಕೆ ಸಾಕ್ಷ್ಯಗಳ ಅಗತ್ಯವೇ ಇಲ್ಲ.
ಇತ್ತೀಚೆಗೆ ಈ ಪತ್ರಿಕೆಯ ಸಂಪಾದಕರನ್ನು ಬದಲಾಯಿಸಲಾಗಿತ್ತು. ಮಾತ್ರವಲ್ಲ, ಈ ಬದಲಾವಣೆಯನ್ನು ಭಾರತೀಯ ಸುದ್ದಿ ಮಾಧ್ಯಮಗಳ ನೋಂದಣಿ ವಿಭಾಗದ ಗಮನಕ್ಕೂ ತರಲಾಗಿತ್ತು. ಆದರೆ, ಅಲ್ಲಿನ ಸಿಬ್ಬಂದಿಗಳು ಜಿಲ್ಲಾಧಿಕಾರಿಗೆ ಈ ವಿವರಗಳನ್ನು ವರ್ಗಾಯಿಸುವಲ್ಲಿ ಉದಾಸೀನ ತೋರಿದರು. ಅದರಿಂದಾಗಿ ಪತ್ರಿಕೆಯ ಆಡಳಿತ ಮಂಡಳಿ ಮಾಡಿದ ಬದಲಾವಣೆಯು ಜಿಲ್ಲಾಧಿಕಾರಿ ಕಚೇರಿಗೆ ತಲುಪಬೇಕಾದ ಸಮಯದಲ್ಲಿ ತಲುಪಲಿಲ್ಲ. ಇದರಿಂದಾಗಿ ಪತ್ರಿಕೆಯಲ್ಲಿ ಒಂದು ವಿವರ ಮತ್ತು ನೋಂದಣಿ ಕಚೇರಿಯಲ್ಲಿ ಇನ್ನೊಂದು ವಿವರ ಎಂಬಂತಾಯಿತು. ಇದೇ ಕಾರಣವನ್ನು ಮುಂದಿಟ್ಟು ಪತ್ರಿಕೆಯ ಪರವಾನಿಗೆಯನ್ನೇ ರದ್ದುಪಡಿಸಲಾಯಿತು. ನಿಜವಾಗಿ, ಇಲ್ಲಿ ಎರಡು ಸಂಗತಿಗಳಿವೆ. ಪ್ರಮಾದ ಆಗಿರುವುದು ಸಿಬಂದಿಗಳಿಂದ. ಇದಕ್ಕಾಗಿ ಪತ್ರಿಕೆಗೆ ಶಿಕ್ಷೆ ನೀಡುವುದು ತಪ್ಪು. ಎರಡನೆಯ ಸಂಗತಿ ಏನೆಂದರೆ, ಸರಿಪಡಿಸಿಕೊಳ್ಳುವುದಕ್ಕೆ ಅವಕಾಶ ನೀಡದೇ ಇರುವುದು. ಪತ್ರಿಕೆಯೊಂದು ತನ್ನ ಸಂಪಾದಕನನ್ನು ಬದಲಿಸಿಕೊಳ್ಳುವುದು ಅಭೂತಪೂರ್ವ ಬೆಳವಣಿಗೆ ಏನಲ್ಲ. ಮಾಧ್ಯಮ ಜಗತ್ತಿನಲ್ಲಿ ಇದು ಸಾಮಾನ್ಯ. ಅದನ್ನು ಸಂದರ್ಭಕ್ಕೆ ತಕ್ಕಂತೆ ಸಂಬಂಧಿತ ಕಚೇರಿಗೆ ತಿಳಿಸಿ ಆ ಬದಲಾವಣೆಯನ್ನು ಪತ್ರಿಕೆಯಲ್ಲಿ ಮುದ್ರಿಸುವ ಮೂಲಕ ಜಾಹೀರುಗೊಳಿಸುವುದು ರೂಢಿ. ಒಂದು ವೇಳೆ, ದಶೇರ್ ಕಥಾ ಪತ್ರಿಕೆಯು ಈ ವಿಷಯದಲ್ಲಿ ವಿಫಲವಾಗಿದೆ ಎಂದೇ ವಾದಿಸಿದರೂ ತಿದ್ದಿಕೊಳ್ಳುವುದಕ್ಕೆ ಅವಕಾಶವನ್ನು ನೀಡಬಹುದಲ್ಲವೇ?

    ಲೋಕಸಭಾ ಚುನಾವಣೆಯು ಹತ್ತಿರವಾಗುತ್ತಿರುವಂತೆಯೇ ತನಗೆ ಶರಣಾಗದ ಮಾಧ್ಯಮ ಸಂಸ್ಥೆಗಳನ್ನು ಬಲವಂತದಿಂದ ಶರಣಾಗಿಸುವ ಕೃತ್ಯಕ್ಕೆ ಬಿಜೆಪಿ ಮುಂದಾಗಿದೆಯೇ ಅನ್ನುವ ಪ್ರಶ್ನೆಯನ್ನು ಈ ಬೆಳವಣಿಗೆಗಳು ಮತ್ತೊಮ್ಮೆ ಬಲವಾಗಿ ಎತ್ತಿವೆ. ಈ ದೇಶದ ಮುಖ್ಯವಾಹಿನಿಯ ಹಿಂದಿ ಮತ್ತು ಇಂಗ್ಲಿಷ್ ನ್ಯೂಸ್ ಚಾನೆಲ್‍ಗಳನ್ನು ಕೇಂದ್ರ ಸರಕಾರ ಈಗಾಗಲೇ ಕೊಂಡುಕೊಂಡಿದೆ ಎಂಬ ಮಾತು ಸಾರ್ವಜನಿಕವಾಗಿ ಕೇಳಿಬರುತ್ತಿದೆ. ಇತ್ತೀಚೆಗಷ್ಟೇ ಎ.ಬಿ.ಪಿ. ಎಂಬ ಪ್ರಮುಖ ಹಿಂದಿ ನ್ಯೂಸ್ ಚಾನೆಲ್‍ನ ಹಿರಿಯ ಪತ್ರಕರ್ತರು ಇಂಥದ್ದೇ ಆರೋಪವನ್ನು ಹೊರಿಸಿ ಚಾನೆಲ್‍ನಿಂದ ಹೊರಬಂದರು. ಪ್ರಜಾತಂತ್ರದ ಅಳಿವು-ಉಳಿವು ಮಾಧ್ಯಮವನ್ನು ಅವಲಂಬಿಸಿದೆ ಎಂಬುದನ್ನು ಆಧಾರವಾಗಿಟ್ಟುಕೊಂಡು ಇವತ್ತಿನ ಭಾರತದಲ್ಲಾಗುತ್ತಿರುವ ಬೆಳವಣಿಗೆಗಳನ್ನು ನೋಡುವಾಗ ದಿಗಿಲಾಗುತ್ತದೆ. ನಿಜವಾಗಿ,

ಬೋಫೋರ್ಸ್ ಹಗರಣವನ್ನು ಜನರ ಇಶ್ಯೂವಾಗಿ ಪರಿವರ್ತಿಸಿದ್ದೇ  ಮಾಧ್ಯಮಗಳು. ಬೋಫೋರ್ಸ್ ಹಗರಣದ ಇಂಚು ಇಂಚನ್ನೂ ಅವು ಜನರ ಎದುರಿಟ್ಟವು. ಪರಿಣಾಮ ಏನಾಯಿತೆಂದರೆ, ಆಡಳಿತ ಪಕ್ಷವನ್ನೇ ಜನರು ತಿರಸ್ಕರಿಸಿದರು. 3 ದಶಕಗಳ ಹಿಂದೆಯೇ ಭಾರತೀಯ ಮಾಧ್ಯಮಗಳು ಇಷ್ಟು ಜಾಗೃತ ಮನೋಭಾವವನ್ನು ತೋರಿಸಿವೆಯೆಂದರೆ, ಇವತ್ತು ಹೇಗಿರಬೇಕಿತ್ತು? ಅಂದಿಗಿಂತ ಎಲ್ಲ ರೀತಿಯಲ್ಲೂ ಇವತ್ತು ದೇಶ ಮುಂದುವರಿದಿದೆ. ಮಾಧ್ಯಮ ಕ್ಷೇತ್ರದಲ್ಲಿ ಅಭೂತಪೂರ್ವ ಬದಲಾವಣೆಗಳು ಉಂಟಾಗಿವೆ. ಮಾಧ್ಯಮ ಕ್ಷೇತ್ರದ ಹೊಣೆಗಾರಿಕೆಗಳು ಏನೇನು ಅನ್ನುವುದನ್ನು ಅಂದಿಗಿಂತ ಹೆಚ್ಚು ಇಂದು ಅರಿತುಕೊಳ್ಳುವುದಕ್ಕೆ ಸಾಧ್ಯವಾಗುತ್ತಿದೆ. ಆದರೂ ರಫೇಲ್‍ನ ಬಗ್ಗೆ ಯಾವ ಪ್ರಮುಖ ಮಾಧ್ಯಮಗಳೂ ಬೋಫೋರ್ಸ್‍ನ ರೀತಿಯಲ್ಲಿ ಆಳಕ್ಕಿಳಿದು ಚರ್ಚಿಸಿಲ್ಲ. ಟಿ.ವಿ. ಚಾನೆಲ್‍ಗಳು ಆ ಬಗ್ಗೆ ಕುತೂಹಲವನ್ನೇ ವ್ಯಕ್ತಪಡಿಸುತ್ತಿಲ್ಲ. ಒಂದು ರೀತಿಯಲ್ಲಿ, ಮೂರು ದಶಕಗಳ ಹಿಂದೆ ಮಾಧ್ಯಮ ಕ್ಷೇತ್ರದಲ್ಲಿ ಯಾವ ಜಾಗೃತಿ ಮನೋಭಾವವಿತ್ತೋ ಅದು ಇವತ್ತು ವ್ಯಕ್ತವಾಗುತ್ತಿಲ್ಲ. ಬರಬರುತ್ತಾ ಭಾರತೀಯ ಮಾಧ್ಯಮ ರಂಗವು ಪ್ರಭುತ್ವದ ಅಡಿಯಾಳಾಗುವುದಕ್ಕೆ ಒಗ್ಗಿಕೊಳ್ಳುತ್ತಾ ಹೋಗತೊಡಗಿತೇ? ಕಾವಲು ನಾಯಿಯ ಹೊಣೆಗಾರಿಕೆಯಿಂದ ಜಿ ಹುಜೂರ್ ಮನಸ್ಥಿತಿಗೆ ಹೊರಳಿಕೊಂಡಿತೇ? ಪ್ರಭುತ್ವ ಮತ್ತು ಮಾಧ್ಯಮ ಕ್ಷೇತ್ರದ ನಡುವೆ ರಾಜಿ ಮನೋಭಾವ ಸೃಷ್ಟಿಯಾಯಿತೇ?

     ದೇಶದ ಮಾಧ್ಯಮ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳು ಈ ಬಗೆಯ ಪ್ರಶ್ನೆಗಳಿಗೆ ಪ್ರತಿದಿನ ಇಂಬು ನೀಡುತ್ತಲೇ ಇವೆ. ಪ್ರಭುತ್ವವು ಮಾಧ್ಯಮ ರಂಗವನ್ನು ಕೊಂಡುಕೊಳ್ಳುವುದಕ್ಕೆ ಮತ್ತು ಒಪ್ಪದವುಗಳನ್ನು ದಮನಿಸುವುದಕ್ಕೆ ಮುಂದಾಗುತ್ತಿದೆ ಎಂಬುದು ದಿನೇ ದಿನೇ ನಿಚ್ಚಳವಾಗುತ್ತಿದೆ. ದಿ ಕ್ವಿಂಟ್, ದಿ ನ್ಯೂಸ್ ಮಿನಿಟ್‍ಗಳು ಇದಕ್ಕೆ ತಾಜಾ ಉದಾಹರಣೆ ಅಷ್ಟೇ.


Thursday 11 October 2018

ತ್ರಿವಳಿ ತಲಾಕ್ ಮತ್ತು ಶಬರಿಮಲೆ: ಬಿಜೆಪಿಯ ಎರಡು ಮುಖ


     ತ್ರಿವಳಿ ತಲಾಕನ್ನು ಅಸಾಂವಿಧಾನಿಕವೆಂದು ಕರೆದು ಅದರ ಮೇಲೆ ನಿಷೇಧ ಹೇರಿದ ಸುಪ್ರೀಮ್ ಕೋರ್ಟು, ಅದೇ ರೀತಿಯಲ್ಲಿ ಮತ್ತು ಅಷ್ಟೇ ಬಲಯುತವಾದ ಪದಗಳಲ್ಲಿ ಶಬರಿಮಲೆಯಲ್ಲಿರುವ ಆಚರಣೆಯನ್ನು ಪ್ರಶ್ನಿಸಿತು. 50 ವರ್ಷಕ್ಕಿಂತ ಕೆಳಗಿನ ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲವನ್ನು ಪ್ರವೇಶಿಸದಂತೆ ಹೇರಲಾಗಿದ್ದ ಶತಮಾನಗಳಷ್ಟು ಹಳೆಯದಾದ ನಿಷೇಧವನ್ನು ಅದು ರದ್ದುಪಡಿಸಿತಲ್ಲದೇ ಎಲ್ಲ ವಯೋಮಾನದ ಮಹಿಳೆಯರಿಗೂ ಅದು ದೇಗುಲವನ್ನು ಮುಕ್ತವಾಗಿರಿಸಿತು. ತಮಾಷೆ ಏನೆಂದರೆ, ಈ ಎರಡೂ ತೀರ್ಪುಗಳ ವಿಷಯದಲ್ಲಿ ಬಿಜೆಪಿ ತಳೆದಿರುವ ನಿಲುವು.

     ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪನ್ನು ಬಿಜೆಪಿ ಜಯ ಘೋಷದೊಂದಿಗೆ ಸ್ವಾಗತಿಸಿತ್ತು. ತೀರ್ಪು ಬಂದ ಮರುಕ್ಷಣವೇ ಅದು ತಲಾಕ್ ಕಾನೂನನ್ನು (ಮುಸ್ಲಿಮ್ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣಾ ಕಾಯ್ದೆ 2017) ರಚಿಸಿತು. ಈ ವಿಷಯದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಕೋರುವಷ್ಟು ವ್ಯವಧಾನವೂ ಅದಕ್ಕಿರಲಿಲ್ಲ. ಅವಸರವಸರವಾಗಿಯೇ ರಚಿಸಲಾದ ಕಾನೂನನ್ನು ಅವಸರವಸರವಾಗಿಯೇ ಲೋಕಸಭೆಯಲ್ಲಿ ಮಂಡಿಸಿತು. ಪಾಸೂ ಮಾಡಿಸಿಕೊಂಡಿತು. ‘ತ್ರಿವಳಿ ತಲಾಕ್ ಹೇಳಿದ ಪುರುಷನನ್ನು ಮೂರು ವರ್ಷಗಳ ಕಾಲ ಜಾಮೀನಿಲ್ಲದೆ ಜೈಲಲ್ಲಿಡಲು ಅವಕಾಶ ಇರುವುದೂ’ ಸೇರಿ ಪ್ರಸ್ತಾವಿತ ಕಾನೂನಿನಲ್ಲಿರುವ ದೋಷಗಳ ಬಗ್ಗೆ ಪ್ರತಿಪಕ್ಷಗಳೂ ಸೇರಿದಂತೆ ದೇಶದಾದ್ಯಂತ ಅನೇಕಾರು ಸಂಘಟನೆಗಳು, ತಜ್ಞರು ಮತ್ತು ಮುಸ್ಲಿಮ್ ಮಹಿಳೆಯರೂ ಇದೇ ಸಂದರ್ಭದಲ್ಲಿ ಪ್ರಶ್ನೆಗಳನ್ನೆತ್ತಿದ್ದರು. ದೇಶದ ಅನೇಕಾರು ಕಡೆ ಮುಸ್ಲಿಮ್ ಮಹಿಳೆಯರ ನೇತೃತ್ವದಲ್ಲಿ ಪ್ರಸ್ತಾವಿತ ಕಾನೂನಿನ ವಿರುದ್ಧ ಪ್ರತಿಭಟನೆಗಳೂ ನಡೆದುವು. ಆದರೆ

     ಬಿಜೆಪಿ ಈ ಎಲ್ಲ ಪ್ರತಿಕ್ರಿಯೆಗಳನ್ನು ಸಾರಾಸಗಟು ತಿರಸ್ಕರಿಸಿತು. ಮಾತ್ರವಲ್ಲ, ಅದೇ ದೋಷಪೂರ್ಣ ಮಸೂದೆಯನ್ನು ರಾಜ್ಯಸಭೆಯಲ್ಲೂ ಮಂಡಿಸಿತು. ರಾಜ್ಯಸಭೆ ಈ ಮಸೂದೆಯನ್ನು ಒಪ್ಪಿಕೊಳ್ಳದೇ ಹೋದಾಗ ಅಧ್ಯಾದೇಶದ ಮೂಲಕ ಬಲವಂತವಾಗಿ ಆ ಕಾನೂನನ್ನು ಜಾರಿಮಾಡಿತು. ಪ್ರಧಾನಿ ನರೇಂದ್ರ ಮೋದಿಯವರು ತನ್ನನ್ನು ‘ಮುಸ್ಲಿಮ್ ಮಹಿಳಾ ವಿಮೋಚಕ’ ಎಂದು ಘೋಷಿಸಿಕೊಂಡರು. ಕಾಂಗ್ರೆಸನ್ನು ‘ಮುಸ್ಲಿಮ್ ಪುರುಷರ ಪಕ್ಷ’ ಎಂದು ಲೇವಡಿ ಮಾಡಿದರು. ತ್ರಿವಳಿ ತಲಾಕ್ ಕಾಯ್ದೆಯನ್ನು ಬಿಜೆಪಿಯು ತನ್ನ ಸಾಧನೆಯ ಪಟ್ಟಿಯಲ್ಲಿ ಸೇರಿಸಿಕೊಂಡಿತು. ಇದೇ ಬಿಜೆಪಿ ಇವತ್ತು ಕೇರಳದಲ್ಲಿ ಬೀದಿಗಿಳಿದಿದೆ. ಬೀದಿಗಿಳಿಯುವಂತೆ ಜನರನ್ನು ಪ್ರಚೋದಿಸುತ್ತಿದೆ. ಸುಪ್ರೀಮ್ ಕೋರ್ಟ್‍ನ ಶಬರಿಮಲೆ ತೀರ್ಪಿನ ವಿರುದ್ಧ ಅಧ್ಯಾದೇಶವನ್ನು ತನ್ನಿ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೆ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. 50 ವರ್ಷಕ್ಕಿಂತ ಕೆಳಗಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಅವರು ಧಾರ್ಮಿಕ ನಂಬಿಕೆ ಮತ್ತು ವಿಶ್ವಾಸದ ಭಾಗ ಎಂದು ಕರೆದಿದ್ದಾರೆ. ಅಕ್ಟೋಬರ್ 7ರಂದು ಬಿಜೆಪಿಯ ಯುವ ಮೋರ್ಚಾವು ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಮುಷ್ಕರಕ್ಕೆ ಕರೆಕೊಟ್ಟಿತ್ತು. ಸುಪ್ರೀಮ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದೇ ಇರುವ ತಿರುವಾಂಕೂರು ದೇವಸ್ಯಂ ಬೋರ್ಡ್‍ನ ನಿಲುವನ್ನು ಖಂಡಿಸಿ ಬೋರ್ಡ್‍ನ ಅಧ್ಯಕ್ಷ ಪದ್ಮಕುಮಾರ್ ರ ಮನೆಗೆ ಯುವಮೋರ್ಚಾವು ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಯುವಮೋರ್ಚಾದ ಅಧ್ಯಕ್ಷ  ಪ್ರಕಾಶ್ ಬಾಬು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ಇದನ್ನೇ ನೆಪ ಮಾಡಿಕೊಂಡ ಯುವಮೋರ್ಚಾ ಮುಷ್ಕರಕ್ಕೆ ಕರೆಕೊಟ್ಟಿತ್ತು. ಬಿಜೆಪಿಯ ಮಹಿಳಾ ಘಟಕವಾದ ಮಹಿಳಾ ಮೋರ್ಚಾವು ರಾಜ್ಯದ ಬೇರೆ ಬೇರೆ ಕಡೆ ಪ್ರತಿಭಟನೆ ನಡೆಸುತ್ತಿದೆ. ಸುಪ್ರೀರ್ಮ್ ಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಬೇಕು ಮತ್ತು ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಮಹಿಳೆಯರಿಗಿರುವ ನಿರ್ಬಂಧವನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂಬುದು ಬಿಜೆಪಿಯ ಬೇಡಿಕೆ. ಇದು ಏನು?

ಈ ದ್ವಂದ್ವವನ್ನು ಯಾವ ಹೆಸರಿನಿಂದ ಕರೆಯಬೇಕು? ಬೂಟಾಟಿಕೆ, ಇಬ್ಬಂದಿತನ, ಹಿಪಾಕ್ರಸಿ, ಮಹಿಳಾ ವಿರೋಧಿ, ಧರ್ಮ ವಿರೋಧಿ? ನಿಜವಾಗಿ,

    ತ್ರಿವಳಿ ತಲಾಕ್ ಮತ್ತು ಶಬರಿಮಲೆ ತೀರ್ಪುಗಳು ಸರ್ವಾನುಮತದ್ದೇನೂ ಅಲ್ಲ. ತ್ರಿವಳಿ ತಲಾಕ್ ವಿವಾದವನ್ನು ಬಗೆಹರಿಸಲು ಸುಪ್ರೀಮ್ ಕೋರ್ಟು ಐವರು ನ್ಯಾಯಾಧೀಶರ ಪೀಠವನ್ನು ರಚಿಸಿತ್ತು. ಈ ಐವರಲ್ಲಿ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರು ಇತರ ಮೂವರಿಗಿಂತ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ತ್ರಿವಳಿ ತಲಾಕನ್ನು ಅಸಾಂವಿಧಾನಿಕವೆಂದು ಕರೆಯಲು ಇವರಿಬ್ಬರೂ ನಿರಾಕರಿಸಿದರೆ, ಉಳಿದ ಮೂವರು ಅಸಾಂವಿಧಾನಿಕವೆಂದು ಕರೆದರು. ಶಬರಿಮಲೆ ತೀರ್ಪೂ ಇದಕ್ಕಿಂತ ಭಿನ್ನವಲ್ಲ. ಈ ವಿವಾದವನ್ನು ಪರಿಶೀಲಿಸಲು ಐವರು ನ್ಯಾಯಾಧೀಶರ ಪೀಠವನ್ನು ರಚಿಸಲಾಗಿತ್ತು. ಮಹಿಳಾ ಪ್ರವೇಶಕ್ಕಿರುವ ನಿರ್ಬಂಧಕ್ಕೆ ನಾಲ್ಕು ಮಂದಿ ನ್ಯಾಯಾಧೀಶರು ಅಸಮ್ಮತಿ ಸೂಚಿಸಿದರೆ, ನ್ಯಾಯಮೂರ್ತಿ ಇಂದೂ ಮಲ್ಹೋತ್ರ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನಿರ್ಬಂಧವನ್ನು ಅಸಮಾನತೆ ಎಂಬುದಕ್ಕಿಂತ ಧಾರ್ಮಿಕ ಆಚರಣಾ ವಿಧಾನವಾಗಿ ಅವರು ವ್ಯಾಖ್ಯಾನಿಸಿದರು. ಆದ್ದರಿಂದ, ಈ ಎರಡೂ ತೀರ್ಪುಗಳ ಪರ ಮತ್ತು ವಿರುದ್ಧ ಅಭಿಪ್ರಾಯಗಳನ್ನು ಅಸಹಜವೆಂದೋ ಅಸೂಕ್ಷ್ಮವೆಂದೋ ಭಾವಿಸಬೇಕಿಲ್ಲ. ಆದರೆ, ಅದಕ್ಕೆ ವ್ಯಕ್ತವಾಗುವ ಅಭಿಪ್ರಾಯಗಳಲ್ಲಿ ಪ್ರಾಮಾಣಿಕತೆ ಇರಬೇಕು ಅಷ್ಟೇ.

    ತ್ರಿವಳಿ ತಲಾಕ್ ಮತ್ತು ಶಬರಿಮಲೆ ಎರಡೂ ಮಹಿಳೆಯರಿಗೆ ಸಂಬಂಧಿಸಿದ್ದು. ತ್ರಿವಳಿ ತಲಾಕ್‍ನಿಂದ ಮುಸ್ಲಿಮ್ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದು ವಾದಿಸುವಂತೆಯೇ ಶಬರಿಮಲೆಯ ನಿರ್ಬಂಧದಿಂದ ಹಿಂದೂ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದೂ ವಾದಿಸಬಹುದು ಅಥವಾ ಈ ಎರಡನ್ನೂ ಧರ್ಮಸೂಕ್ಷ್ಮ ವಿಷಯವಾಗಿ ಪರಿಗಣಿಸಬಹುದು. ಮಾತ್ರವಲ್ಲ, ಆಯಾ ಧರ್ಮಗಳು ಆಂತರಿಕವಾಗಿ ಇವನ್ನು ಬಗೆಹರಿಸಿಕೊಳ್ಳಲಿ ಎಂದೂ ಹೇಳಬಹುದು. ಆದರೆ, ಈ ವಿಷಯದಲ್ಲಿ ಬಿಜೆಪಿಯ ನಿಲುವು ಸೋಗಲಾಡಿತನದ್ದು, ಕೋಮು ಪಕ್ಷಪಾತಿತನದ್ದು. ಮುಸ್ಲಿಮ್ ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆಯ ವಿಷಯದಲ್ಲಿ ಬಿಡುಬೀಸಾಗಿ ಮಾತಾಡುವ ಹಾಗೂ ಅವರ ಪಾಲಿನ ಮಸೀಹನಂತೆ ಫೋಸು ಕೊಡುವ ಇದೇ ಬಿಜೆಪಿ ಹಿಂದೂ ಮಹಿಳೆಯರಿಗೆ ಸಂಬಂಧಿಸಿ ಅಂಥದ್ದೇ  ಪ್ರಶ್ನೆ ಎದುರಾದಾಗ ಹಿಂದೂ ಪುರುಷರ ಪಕ್ಷದಂತೆ ವರ್ತಿಸುತ್ತಿದೆ. ಧರ್ಮಸೂಕ್ಷ್ಮದ ಮಾತಾಡುತ್ತಿದೆ. ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಮುಸ್ಲಿಮ್ ಪುರುಷರನ್ನು 3 ವರ್ಷ ಜೈಲಿಗಟ್ಟುವುದಕ್ಕಾಗಿ ಅಧ್ಯಾದೇಶದ ಮೊರೆ ಹೋದ ಇದೇ ಪಕ್ಷವು ಶಬರಿಮಲೆಯಲ್ಲಿ ಮಹಿಳೆಗಿರುವ ನಿರ್ಬಂಧವನ್ನು ಹಾಗೆಯೇ ಉಳಿಸಿಕೊಳ್ಳುವುದಕ್ಕಾಗಿ ಅಧ್ಯಾದೇಶವನ್ನು ಹೊರಡಿಸುವಂತೆ ಒತ್ತಾಯಿಸುತ್ತಿದೆ. ಮುಸ್ಲಿಮ್ ಮಹಿಳೆಯರ ಬಗ್ಗೆ ಇಷ್ಟೊಂದು ಕಾಳಜಿ ಮತ್ತು ಮುತುವರ್ಜಿಯನ್ನು ತೋರುವ ಬಿಜೆಪಿಯು ಹಿಂದೂ ಮಹಿಳೆಯರ ಬಗ್ಗೆ ಯಾಕೆ ಹಿಮ್ಮುಖವಾಗಿ ಚಲಿಸುತ್ತಿದೆ? ಮುಸ್ಲಿಮ್ ಮಹಿಳೆಯರ ವಿಮೋಚನೆಯಂತೆಯೇ ಹಿಂದೂ ಮಹಿಳೆಯರ ವಿಮೋಚನೆಯೂ ಆಗಬೇಡವೇ? ಮಹಿಳೆಯರಿಗೆ ಸಂಬಂಧಿಸಿ ಬಿಜೆಪಿಯ ಈ ದ್ವಂದ್ವಕ್ಕೆ ಕಾರಣವೇನು?

ಮುಸ್ಲಿಮರನ್ನು ಹೇಗಾದರೂ ಮಾಡಿ ಸತಾಯಿಸುವುದು ಮತ್ತು ಅವರ ಆಚರಣಾ ಪದ್ಧತಿಯನ್ನು ನಾಲಾಯಕ್ಕು ಎಂದು ಬಿಂಬಿಸುವುದು ಅದರ ಏಕಮಾತ್ರ ಗುರಿಯೇ? ಆ ಕಾರಣದಿಂದಲೇ ಅದು ತ್ರಿವಳಿ ತಲಾಕನ್ನು ಎತ್ತಿಕೊಂಡಿತೇ? ಅಧ್ಯಾದೇಶ ಹೊರಡಿಸುವುದಕ್ಕೂ ಇದುವೇ ಕಾರಣವೇ? ಮುಸ್ಲಿಮರನ್ನು ತರಾಟೆಗೆತ್ತಿಕೊಂಡಷ್ಟೂ ಮತಗಳು ಹೆಚ್ಚಾಗುತ್ತವೆ ಎಂಬ ನೀತಿಯ ಭಾಗವೇ ಈ ಅಧ್ಯಾದೇಶ? ಒಂದುವೇಳೆ, ಇದಲ್ಲ ಎಂದಾದರೆ, ತ್ರಿವಳಿ ಮತ್ತು ಶಬರಿಮಲೆ ಎರಡನ್ನೂ ಆಯಾ ಧರ್ಮಗಳ ಆಂತರಿಕ ವಿಷಯವಾಗಿ ಅದಕ್ಕೆ ಪರಿಗಣಿಸಬಹುದಿತ್ತಲ್ಲವೇ? ಅದನ್ನು ಇತ್ಯರ್ಥಪಡಿಸುವುದಕ್ಕೆ ಆಯಾ ಧರ್ಮಗಳಿಗೆ ಅವಕಾಶ ಒದಗಿಸಬಹುದಿತ್ತಲ್ಲವೇ? ಧರ್ಮಸೂಕ್ಷ್ಮವೆಂಬುದು ತ್ರಿವಳಿಗೂ ಶಬರಿಮಲೆಗೂ ಏಕಪ್ರಕಾರವಾಗಿ ಅನ್ವಯಿಸಬಹುದಿತ್ತಲ್ಲವೇ? ಯಾಕೆ ಬೆಣ್ಣೆ ಮತ್ತು ಸುಣ್ಣ ನೀತಿ?

ಬಿಜೆಪಿಗೆ ಮುಸ್ಲಿಮ್ ಮಹಿಳೆಯರ ಹಿತ ಮುಖ್ಯವಲ್ಲ ಎಂಬುದಕ್ಕೆ ಶಬರಿಮಲೆ ಅತ್ಯುತ್ತಮ ಉದಾಹರಣೆ.

Thursday 4 October 2018

ಮಸೀದಿ ತೀರ್ಪು: ಫ್ರೀಜರ್ ನಲಿಟ್ಟ ಮಾಂಸದ ಜಾತಿ ಯಾವುದು ಎಂದು ಪ್ರಶ್ನಿಸಿದಂತೆ..


   
ಬಾಬರೀ ಮಸೀದಿ ಧ್ವಂಸ ಪ್ರಕರಣವನ್ನು ಲೋಕಸಭಾ ಚುನಾವಣೆಗಿಂತ ಮೊದಲೇ ಇತ್ಯರ್ಥಪಡಿಸಬೇಕೆಂಬ ಆತುರವು ಸುಪ್ರೀಮ್ ಕೋರ್ಟಿಗಿದೆಯೇ?

     ಸೆ. 27ರಂದು ಸುಪ್ರೀಮ್ ಕೋರ್ಟು ವ್ಯಕ್ತಪಡಿಸಿರುವ ಅಭಿಪ್ರಾಯವು ಇಂಥದ್ದೊಂದು ಸಂದೇಹಕ್ಕೆ ಇಂಬು ನೀಡಿದೆ. ಬಾಬರಿ ಮಸೀದಿಯ ಧ್ವಂಸದ ತರುವಾಯ ಬಾಬರೀ ಮಸೀದಿಯಿದ್ದ ಜಾಗವೂ ಸೇರಿದಂತೆ ಸುತ್ತ-ಮುತ್ತಲಿನ ಜಾಗವನ್ನು ಅಂದಿನ ಕೇಂದ್ರ ಸರಕಾರವು ಅಧ್ಯಾದೇಶದ ಮೂಲಕ ವಶಪಡಿಸಿಕೊಂಡಿತ್ತು. ಇದನ್ನು ಇಸ್ಮಾಈಲ್ ಫಾರೂಖಿ ಎಂಬವರು ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಈ ಕೇಸಿಗೆ ಸಂಬಂಧಿಸಿ 1994ರಲ್ಲಿ ನೀಡಲಾದ ತೀರ್ಪಿನಲ್ಲಿ, ‘ಮಸೀದಿಯು ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ, ನಮಾಝನ್ನು ಎಲ್ಲಿ ಬೇಕಾದರೂ ಬಯಲಲ್ಲೂ ನಿರ್ವಹಿಸಬಹುದು’ ಎಂದು ಹೇಳಲಾಗಿತ್ತು. ಖ್ಯಾತ ನ್ಯಾಯವಾದಿ ರಾಜೀವ್ ಧವನ್‍ರ ಮೂಲಕ ಸುನ್ನಿ ವಕ್ಫ್ ಬೋರ್ಡ್ ಪ್ರಶ್ನಿಸಿದ್ದು ಇದೇ ತೀರ್ಪನ್ನು. ‘1994ರಲ್ಲಿ ಸುಪ್ರೀಮ್ ಕೋರ್ಟು ವ್ಯಕ್ತಪಡಿಸಿದ ಈ ಅಭಿಪ್ರಾಯವು ಅಯೋಧ್ಯ ಪ್ರಕರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ತೀರ್ಪಿನ ಮೇಲೆ ವಿಸ್ತೃತ ಚರ್ಚೆ ನಡೆಸುವುದಕ್ಕಾಗಿ 7 ಮಂದಿ ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಈ ವಿಷಯವನ್ನು ವಹಿಸಿಕೊಡಬೇಕೆಂದು’ ಸುನ್ನಿ ವಕ್ಫ್ ಬೋರ್ಡ್ ಕೋರಿಕೊಂಡಿತ್ತು. ಆದರೆ ಸೆ. 27ರ ಬಹುಮತದ ತೀರ್ಪಿನಲ್ಲಿ ಈ ಕೋರಿಕೆಯನ್ನು ತಿರಸ್ಕರಿಸಲಾಗಿದೆ. ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಝೀರ್ ಅವರಿದ್ದ ಪೀಠದಲ್ಲಿ ಅಬ್ದುಲ್ ನಝೀರ್‍ರನ್ನು ಹೊರತು ಪಡಿಸಿ ಉಳಿದಿಬ್ಬರು ನ್ಯಾಯಾಧೀಶರು ವಕ್ಫ್ ಬೋರ್ಡ್‍ನ ಕೋರಿಕೆಯನ್ನು ತಿರಸ್ಕರಿಸುವುದರ ಪರ ನಿಂತರು. ಆದರೆ ಕೋರಿಕೆಯನ್ನು ಮನ್ನಿಸಬೇಕು ಎಂದು ಅಬ್ದುಲ್ ನಝೀರ್ ಅಭಿಪ್ರಾಯಪಟ್ಟರು. ‘ಧರ್ಮದ ವಿಷಯಗಳಿಗೆ ಸಂಬಂಧಿಸಿದ ಪ್ರಕರಣವನ್ನು ಇತ್ಯರ್ಥಪಡಿಸಲು ತ್ವರೆ ಮಾಡಬೇಕಿಲ್ಲ. ಈ ವಿಷಯದ ಮೇಲೆ ವಿಸ್ತೃತ  ಚರ್ಚೆ ನಡೆಸುವುದಕ್ಕಾಗಿ ಹೆಚ್ಚು ಸದಸ್ಯರಿರುವ ಸಂವಿಧಾನ ಪೀಠಕ್ಕೆ ಪ್ರಕರಣವನ್ನು ವಹಿಸಿಕೊಡಬಹುದೆಂದು’ ಅವರು ವಾದಿಸಿದರು. ಇದನ್ನು ಉಳಿದಿಬ್ಬರು ಒಪ್ಪಿಕೊಳ್ಳದೇ ಇದ್ದುದರಿಂದ ವಕ್ಫ್ ಬೋರ್ಡ್‍ನ ಮನವಿಯು ತಿರಸ್ಕ್ರತಗೊಂಡಿತು. ತಿರಸ್ಕಾರಕ್ಕೆ ಉಳಿದ ಇಬ್ಬರು ನ್ಯಾಯಾಧೀಶರು ಕೊಟ್ಟ ಕಾರಣ ಏನೆಂದರೆ, ‘ಫಾರೂಖಿ ಕೇಸಿಗೆ ಸಂಬಂಧಿಸಿ 1994ರಲ್ಲಿ ನೀಡಲಾದ ತೀರ್ಪು ಕೇಂದ್ರದ ಅಧ್ಯಾದೇಶಕ್ಕೆ ಮಾತ್ರ ಸೀಮಿತವಾಗಿದ್ದು, ಇತರ ಪ್ರಕರಣಗಳಿಗೆ ಆ ತೀರ್ಪು ಅನ್ವಯಿಸುವುದಿಲ್ಲ’ವೆಂಬುದಾಗಿದೆ.

     ಸುಪ್ರೀಮ್ ಕೋರ್ಟಿನ ಈ ನಿಲುವಿಗೆ ಬಿಜೆಪಿ ಮತ್ತು ಸಂಘಪರಿವಾರದ ಗುಂಪಿನಿಂದ ಸಂಭ್ರಮ ವ್ಯಕ್ತವಾಗಿದೆ. ಇದು ಮುಸ್ಲಿಮರಿಗಾದ ಹಿನ್ನಡೆ ಎಂಬ ರೀತಿಯಲ್ಲಿ ವ್ಯಾಖ್ಯಾನಗಳೂ ನಡೆದಿವೆ. ನಿಜವಾಗಿ, ಈ ಹಿನ್ನಡೆ-ಮುನ್ನಡೆಯ ಆಚೆಗೆ ಒಂದು ವಾಸ್ತವವಿದೆ. ಒಂದುವೇಳೆ, ಸುನ್ನಿ ವಕ್ಫ್ ಬೋರ್ಡ್‍ನ ಕೋರಿಕೆಗೆ ಮನ್ನಣೆ ಸಿಗುತ್ತಿದ್ದರೆ, ಬಾಬರಿ ವಿವಾದದ ಇತ್ಯರ್ಥಕ್ಕೆ ಇನ್ನಷ್ಟು ಸಮಯ ತಗಲುತ್ತಿತ್ತು. ‘ಬಾಬರಿ ಮಸೀದಿಯಿದ್ದ ಭೂಮಿ ಯಾರದು’ ಎಂಬ ಮೂಲ ಪ್ರಶ್ನೆಯನ್ನು ವಿಚಾರಣೆಗೆ ಎತ್ತಿಕೊಳ್ಳುವುದಕ್ಕಿಂತ ಮೊದಲು ‘ನಮಾಝïಗೆ ಮಸೀದಿ ಅನಿವಾರ್ಯವಲ್ಲ’ ಎಂಬ 1994ರ ತೀರ್ಪು ಮರುಪರಿಶೀಲನೆಗೊಂಡು ಇತ್ಯರ್ಥವಾಗಬೇಕಾದ ಅಗತ್ಯ ಇತ್ತು. ಹಾಗೆ ಅಗಿರುತ್ತಿದ್ದರೆ, ‘ಬಾಬರಿ ಮಸೀದಿಯಿದ್ದ ಜಾಗ ಯಾರದು’ ಎಂಬ ಮೂಲ ಮತ್ತು ನಿರ್ಣಾಯಕ ಪ್ರಶ್ನೆಯ ಮೇಲಿನ ವಿಚಾರಣೆಯು ಈಗ ನಿಗದಿಯಾಗಿರುವಂತೆ ಅಕ್ಟೋಬರ್ 29ರಂದು ಪ್ರಾರಂಭವಾಗುವುದಕ್ಕೆ ಸಾಧ್ಯವೇ ಇರಲಿಲ್ಲ. ಒಂದು ರೀತಿಯಲ್ಲಿ, ಲೋಕಸಭಾ ಚುನಾವಣೆಗಿಂತ ಮೊದಲು ಬಾಬರಿ ವಿವಾದ ಇತ್ಯರ್ಥವಾಗುವುದನ್ನು ತಡೆಯುವ ಸಾಮರ್ಥ್ಯ  ವಕ್ಫ್ ಬೋರ್ಡ್‍ನ ಕೋರಿಕೆಗಿತ್ತು. ಆದ್ದರಿಂದಲೇ,

   ಈ ಕೋರಿಕೆ ತಿರಸ್ಕ್ರತಗೊಳ್ಳುವುದನ್ನು ಬಿಜೆಪಿ ಬಯಸುತ್ತಿತ್ತು. ಮುಂದಿನ ಲೋಕಸಭಾ ಚುನಾವಣೆಯನ್ನು ನೋಟು ಬ್ಯಾನ್, ಜಿಎಸ್‍ಟಿ, ಕಪ್ಪು ಹಣದ ವೈಫಲ್ಯ, ರಫೇಲ್ ಹಗರಣ, ತೈಲ ಬೆಲೆ ಏರಿಕೆ, ನಿರುದ್ಯೋಗ ಇತ್ಯಾದಿಗಳ ಮೂಲಕ ಎದುರಿಸಲಾಗದೆಂಬುದು ಅದಕ್ಕೆ ಚೆನ್ನಾಗಿ ಗೊತ್ತು. ಆದ್ದರಿಂದ, ರಾಮಮಂದಿರ ಅದರ ಇಂದಿನ ತುರ್ತು ಅಗತ್ಯ. ಕೋರ್ಟಿನ ತೀರ್ಪು ಪರವಾಗಿ ಬಂದರೂ ವಿರುದ್ಧವಾಗಿ ಬಂದರೂ ಲಾಭ ಕೊಯ್ಯುವ ಕಾರ್ಯತಂತ್ರವನ್ನು ಅದು ಈಗಾಗಲೇ ಹೆಣೆದಿದೆ ಎಂದು ಹೇಳಲಾಗುತ್ತದೆ. ತೀರ್ಪು ಪರವಾಗಿ ಬಂದರೆ ಅದನ್ನೇ ಸಾಧನೆಯಾಗಿ ಬಿಂಬಿಸಿ ಮತ ಯಾಚಿಸುವುದಕ್ಕೆ ಅದು ಮುಂದಾಗಬಹುದು. ತೀರ್ಪು ವಿರುದ್ಧವಾಗಿ ಬಂದರೆ, ಉಗ್ರ ಭಾಷಣ ಮತ್ತಿತರವುಗಳ ಮೂಲಕ ದೇಶದಾದ್ಯಂತ ಉದ್ವಿಘ್ನ ವಾತಾವರಣವೊಂದನ್ನು ನಿರ್ಮಿಸುವುದು ಮತ್ತು ಚುನಾವಣೆಯನ್ನು ಹಿಂದೂ v/s ಮುಸ್ಲಿಮ್ ಆಗಿ ವಿಭಜಿಸುವುದಕ್ಕೂ ಅದು ಪ್ರಯತ್ನಿಸಬಹುದು. ‘ಅಧ್ಯಾದೇಶ ತಂದು ಕೋಟು ತೀರ್ಪನ್ನು ಅಮಾನ್ಯಗೊಳಿಸುತ್ತೇವೆ, ಮಂದಿರ ಕಟ್ಟುತ್ತೇವೆ, ಬಹುಮತ ಕೊಡಿ’ ಎಂದೂ ಜನರಲ್ಲಿ ಅದು ಮನವಿ ಮಾಡಿಕೊಳ್ಳಬಹುದು. ಇವು ಏನಿದ್ದರೂ ಲಾಭ ಬಿಜೆಪಿಗೇ. ಅಂದಹಾಗೆ, ಕಪಿಲ್ ಸಿಬಲ್ ಅವರು ಇದನ್ನು ಈ ಹಿಂದೆಯೇ ಅಂದಾಜಿಸಿದ್ದರು. ಬಾಬರಿ ವಿವಾದ ಲೋಕಸಭಾ ಚುನಾವಣೆಯ ಬಳಿಕ ಇತ್ಯರ್ಥವಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಸುಪ್ರೀಮ್ ಕೋರ್ಟ್‍ನಲ್ಲಿ ವಾದಿಸಿದ್ದರು. ಅವರ ಈ ಬೇಡಿಕೆಯನ್ನು ಬಿಜೆಪಿ ಪ್ರಬಲವಾಗಿ ವಿರೋಧಿಸಿತ್ತು. ವಿಷಾದ ಏನೆಂದರೆ,

     ಕಾನೂನನ್ನು ಗೌರವಿಸದ ಗುಂಪೊಂದು  1992ರಲ್ಲಿ ಮಸೀದಿಯನ್ನು ಉರುಳಿಸಿದ ಬಳಿಕ, ‘ಮಸೀದಿ ಅನಿವಾರ್ಯವೋ’ ಎಂಬ ಪ್ರಶ್ನೆಯನ್ನು ಮುನ್ನೆಲೆಗೆ ತಂದು ಚರ್ಚಿಸಲಾಗುತ್ತಿದೆ ಎಂಬುದು. ಉರುಳಿಸಿದವರು ಇನ್ನೂ ಶಿಕ್ಷೆಗೆ ಒಳಗಾಗಿಲ್ಲ. ಆ ಕುರಿತಾದ ವಿಚಾರಣೆಯು ಈಗ ಯಾವ ಹಂತದಲ್ಲಿ ಇದೆ ಎಂಬುದು ಈಗ ಉರುಳಿಸಿದವರಿಗೇ ಗೊತ್ತಿಲ್ಲ. ಇಂಥದ್ದೊಂದು  ಸ್ಥಿತಿಯಲ್ಲಿ, ಮಸೀದಿ ಅನಿವಾರ್ಯವೇ ಎಂದು ಕೋರ್ಟೇ ಪ್ರಶ್ನಿಸುತ್ತಿರುವುದನ್ನು ಏನೆಂದು ಪರಿಗಣಿಸಬೇಕು? ಈ ಹಿಂದೆ ಉತ್ತರ ಪ್ರದೇಶದಲ್ಲಿ ಅಖ್ಲಾಕ್ ಎಂಬ ವೃದ್ಧರನ್ನು ಗುಂಪೊಂದು  ಥಳಿಸಿ ಕೊಂದುಹಾಕಿತ್ತು. ಆಗ ಹುಟ್ಟಿಕೊಂಡ ಪ್ರಶ್ನೆ ಏನೆಂದರೆ, ಆ ವೃದ್ಧರ ಮನೆಯ ಫ್ರೀಜರ್ ನಲ್ಲಿರುವುದು ಗೋಮಾಂಸವೋ ಅಲ್ಲ ಮೇಕೆ ಮಾಂಸವೋ ಎಂಬುದಾಗಿತ್ತು. ಥಳಿಸಿ ಕೊಂದ ಗುಂಪೇ ಹುಟ್ಟು ಹಾಕಿದ ಈ ಪ್ರಶ್ನೆಗೆ ಎಷ್ಟು ಮಹತ್ವ ಲಭಿಸಿತೆಂದರೆ, ಸರಕಾರವೇ ಅದಕ್ಕೆ ಕಿವಿಗೊಟ್ಟಿತು. ಫ್ರೀಜರ್ ನಲ್ಲಿದ್ದ ಮಾಂಸವನ್ನು ಪ್ರಯೋಗಾಲಯಕ್ಕೆ ರವಾನಿಸಿತು. ಒಂದಲ್ಲ, ಎರಡೆರಡು ಬಾರಿ ಮಾಂಸ ಪರೀಕ್ಷೆ ನಡೆಯಿತು. ಥಳಿಸಿ ಕೊಂದ ಕೃತ್ಯಕ್ಕಿಂತ ಫ್ರೀಜರ್ ನಲ್ಲಿದ್ದ ಮಾಂಸದ ಜಾತಿಯೇ ಪ್ರಾಮುಖ್ಯತೆಯನ್ನು ಪಡೆದ ಕ್ರೂರ ವ್ಯಂಗ್ಯವೂ ನಡೆಯಿತು. ಇದೀಗ ಬಾಬರಿ ಮಸೀದಿ ಪ್ರಕರಣವೂ ಅಂಥದ್ದೇ  ಒಂದು ಚರ್ಚೆಗೆ ತಿರುಗಿಕೊಂಡಿರುವುದು ವ್ಯಂಗ್ಯವೋ ಕುಚೋದ್ಯವೋ ಗೊತ್ತಾಗುತ್ತಿಲ್ಲ. ಅಂದಹಾಗೆ,

ನಮಾಝಗೆ ಮಸೀದಿಯೇ ಬೇಕೆಂದಿಲ್ಲ ನಿಜ. ಆದರೆ, ಮಸೀದಿ ಮುಸ್ಲಿಮರ ಅವಿಭಾಜ್ಯ ಅಂಗ. ಅದು ಅವರ ಸಾಂಸ್ಕ್ರತಿಕ, ರಾಜಕೀಯ, ಭಾವನಾತ್ಮಕ ಕೇಂದ್ರ. ಐದು ಹೊತ್ತಿನ ನಮಾಝನ್ನು ಸಾಮೂಹಿಕವಾಗಿ ನಿರ್ವಹಿಸಬೇಕಾದುದು ಮಸೀದಿಯಲ್ಲೇ.  ಮಸೀದಿಯಲ್ಲಿ ಮಾಡುವ ನಮಾಝಗೆ ಇತರೆಡೆ ಮಾಡುವ ನಮಾಝïಗಿಂತ ಹಲವು ಪಟ್ಟು ಹೆಚ್ಚು ಪುಣ್ಯವಿದೆ ಎಂಬ ಪ್ರವಾದಿ ವಚನ ಇದೆ. ಪ್ರವಾದಿಯವರು ಮದೀನಕ್ಕೆ ಹೋದ ಕೂಡಲೇ ಮಸೀದಿ ನಿರ್ಮಿಸಿದರು. ಮುಸ್ಲಿಮ್ ಸಮುದಾಯದ ಸರ್ವ ಸಮಸ್ಯೆಗಳ ಪರಿಹಾರ ಕೇಂದ್ರವಾಗಿ ಅವರು ಮಸೀದಿಯನ್ನು ಪ್ರಸ್ತುತಪಡಿಸಿದರು. ಶುಕ್ರವಾರದ ನಮಾಝ ಮತ್ತು ಪ್ರವಚನವನ್ನು ಮಸೀದಿಯಲ್ಲೇ  ನಿರ್ವಹಿಸಬೇಕಾಗಿದೆ. ಹಾಗಂತ, ಇದು ಈ ದೇಶದ ಮುಸ್ಲಿಮರ ಹೊಸ ವಾದವೇನೂ ಅಲ್ಲ. ಪ್ರವಾದಿಯವರ ವಚನಗಳೇ ಇದಕ್ಕೆ ಆಧಾರ. ಜಾಗತಿಕವಾಗಿ ಇರುವ ಮಸೀದಿಗಳು ಇದಕ್ಕೆ ಇನ್ನೊಂದು ಆಧಾರ. ಬಹುಶಃ,

    1994ರಲ್ಲಿ ತೀರ್ಪು ನೀಡುವಾಗ ಈ ವಿಷಯದ ಮೇಲೆ ಗಂಭೀರ ಅವಲೋಕನ ಮತ್ತು ಆಳ ಅಧ್ಯಯನ ನಡೆದಿಲ್ಲವೇನೋ ಎಂದು ತೋರುತ್ತದೆ. ಆದ್ದರಿಂದಲೇ, ಸುನ್ನಿ ವಕ್ಫ್ ಬೋರ್ಡ್‍ನ ಕೋರಿಕೆಯನ್ನು ಕೋರ್ಟು ಮಾನ್ಯ ಮಾಡಬೇಕಿತ್ತು ಎಂಬ ವಾದಕ್ಕೆ ಬಲ ಬರುವುದು. ಆದರೆ,

     ಸುಪ್ರೀಮ್ ಕೋರ್ಟು ಇನ್ನಾವುದೋ ತುರ್ತಿನಲ್ಲಿ ಇದ್ದಂತಿದೆ.



Monday 1 October 2018

ಮದುವೆ ಮಾರುಕಟ್ಟೆಯಲ್ಲಿ ಹೆಣ್ಣು ಮತ್ತು ಗಂಡು



18 ಮತ್ತು 21- ಇದು ಹೆಣ್ಣು ಮತ್ತು ಗಂಡಿನ ಮದುವೆಗೆ ಬಾಲ್ಯವಿವಾಹ ತಡೆ ಕಾಯ್ದೆಯು (PCMA) ನಿಗದಿಪಡಿಸಿರುವ ಪ್ರಾಯ. 18 ವರ್ಷಕ್ಕಿಂತ ಒಳಗಿನ ಹೆಣ್ಣು ಅಥವಾ 21 ವರ್ಷಕ್ಕಿಂತ ಒಳಗಿನ ಗಂಡು ವಿವಾಹ ಬಂಧನದಲ್ಲಿ ಏರ್ಪಟ್ಟರೆ ಆ ವಿವಾಹ ಕಾನೂನು ಪ್ರಕಾರ ಅಸಿಂಧು ಮತ್ತು ಅಪರಾಧ. ಆದರೆ ಭಾರತೀಯ ದಂಡಸಂಹಿತೆ(ಐಪಿಸಿ)ಯು ಈ ವಿಷಯದಲ್ಲಿ ಬೇರೆಯದೇ ಆದ ನಿಲುವನ್ನು ಹೊಂದಿದೆ. ಇದರ 375ನೇ ವಿಧಿ ಹೇಳುವುದೇನೆಂದರೆ, ಪತ್ನಿಯು 15 ರಿಂದ 18 ವರ್ಷದ ಒಳಗಿನ ಪ್ರಾಯದವಳಾಗಿದ್ದರೆ ಆಕೆಯ ಸಮ್ಮತಿ ಪಡೆದು ಪತಿಯು ದೈಹಿಕ ಸಂಪರ್ಕವನ್ನು ಬೆಳೆಸಿದರೆ, ಅದು ಅತ್ಯಾಚಾರವಾಗುವುದಿಲ್ಲ. ಅಂದರೆ, ವಿವಾಹ ಸಿಂಧು ಎಂದರ್ಥ. ಇದು ಸ್ಪಷ್ಟ ವಿರೋಧಾಭಾಸ. ಒಂದು ಕಾನೂನು 18 ವರ್ಷದೊಳಗಿನ ವಿವಾಹವನ್ನು ಅಪರಾಧ ಎಂದು ಹೇಳುವಾಗ, ಇನ್ನೊಂದು ಕಾನೂನು, ಸಿಂಧು ಎಂದು ಪುರಸ್ಕರಿಸುತ್ತದೆ. ಇದೇವೇಳೆ, ತನ್ನ ಜನಪ್ರತಿನಿಧಿ ಯಾರಾಗಬೇಕು ಮತ್ತು ಈ ದೇಶವನ್ನು ಮುನ್ನಡೆಸುವುದಕ್ಕೆ ಯಾರು ಅರ್ಹರು ಎಂಬ ಅತಿ ಗಂಭೀರ ತೀರ್ಮಾನವನ್ನು ಕೈಗೊಳ್ಳುವುದಕ್ಕೆ 18 ವರ್ಷ ಸಾಕು ಎಂಬುದಾಗಿಯೂ ಇಲ್ಲಿನ ಕಾನೂನೇ ಒಪ್ಪಿಕೊಳ್ಳುತ್ತದೆ. 18 ವರ್ಷ ತುಂಬಿದ ಹೆಣ್ಣು-ಗಂಡು ಇಬ್ಬರಿಗೂ ಮತದಾನದ ಹಕ್ಕು ಲಭ್ಯವಾಗಿರುವುದು ಇದೇ ಕಾರಣದಿಂದ. ಹೀಗಿರುತ್ತಾ,

ಗಂಡಿನ ಮದುವೆಗೆ ಈ ಮಾನದಂಡ ಅನ್ವಯವಾಗುವುದಿಲ್ಲ ಅಂದರೆ ಏನರ್ಥ? 18 ವರ್ಷ ತುಂಬಿದ ಹೆಣ್ಣಿನಲ್ಲಿ ಮದುವೆಯ ಕುರಿತಾದ ತಿಳುವಳಿಕೆ, ಪ್ರಬುದ್ಧತೆ ಮತ್ತು ಪಕ್ವತೆ ಇರಬಹುದಾದರೆ, ಆ ಪ್ರಾಯದ ಗಂಡಿನಲ್ಲಿ ಇವು ಇರಲ್ಲ ಎಂದು ತೀರ್ಮಾನಿಸಿರುವುದಕ್ಕೆ ಆಧಾರ ಏನು? 18 ವರ್ಷದ ಹೆಣ್ಣಿನಲ್ಲಿರುವ ಪಕ್ವತೆಯನ್ನು ಗಳಿಸಲು ಗಂಡಿಗೆ 21 ವರ್ಷಗಳು ಬೇಕಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆಯೇ ಅಥವಾ ಇದು ಗಂಡಿನೊಂದಿಗೆ ಮಾಡಲಾಗುವ ತಾರತಮ್ಯವೇ? ಒಂದು ವೇಳೆ, ಗಂಡಿನ ಸ್ಥಾನದಲ್ಲಿ ಹೆಣ್ಣು ಇರುತ್ತಿದ್ದರೆ ಇದು ಅಸಮಾನತೆ ಎನಿಸಿಕೊಳ್ಳುತ್ತಿರಲಿಲ್ಲವೇ? ಸ್ತ್ರೀ ಶೋಷಣೆ, ಪುರುಷ ಪ್ರಧಾನ ನಿಲುವು ಎಂಬ ಟೀಕೆಗಳು ವ್ಯಕ್ತವಾಗುತ್ತಿರಲಿಲ್ಲವೇ? ಅಂದಹಾಗೆ,

ಈ ದೇಶದ ಕಾನೂನು ಆಯೋಗವು ಈ ವಿರೋಧಾಭಾಸದ ಕಾನೂನುಗಳು ಮತ್ತು ಈ ಪ್ರಾಯ ವ್ಯತ್ಯಾಸಗಳ ಕುರಿತಂತೆ ತಲೆ ಕೆಡಿಸಿಕೊಂಡಿದೆ. ಹೆಣ್ಣು ಮತ್ತು ಗಂಡಿನ ಮದುವೆ ಪ್ರಾಯವನ್ನು 18 ವರ್ಷಕ್ಕೆ ನಿಗದಿಗೊಳಿಸುವಂತೆ ಅದು ಕೇಂದ್ರ ಸರಕಾರಕ್ಕೆ ಕಳೆದವಾರ ಸಲಹೆ ನೀಡಿದೆ.

ಮದುವೆ ಎಂಬುದು ಹರೆಯದ ಹೆಣ್ಣು ಮತ್ತು ಗಂಡು ಜೋಡಿಗಳಾಗುವುದರ ಹೆಸರಾಗಿಯಷ್ಟೇ ಇವತ್ತು ಉಳಿದುಕೊಂಡಿಲ್ಲ. ಅದೊಂದು ಮಾರುಕಟ್ಟೆ. ಈ ಮಾರುಕಟ್ಟೆಯ ವ್ಯಾಪ್ತಿ ಎಷ್ಟು ದೊಡ್ಡದೆಂದರೆ, ಜಾಗತಿಕವಾಗಿ ಹಲವು ಲಕ್ಷ  ಕೋಟಿ ರೂಪಾಯಿಗಳು ಪ್ರತಿದಿನ ಈ ಮಾರುಕಟ್ಟೆಯಲ್ಲಿ ಚಲಾವಣೆಯಾಗುತ್ತದೆ. ಇವತ್ತಿನ ಮದುವೆಯ ಸ್ವರೂಪವನ್ನು ತೀರ್ಮಾನಿಸುವುದು ವಧು ಮತ್ತು ವರ ಅಲ್ಲ ಅಥವಾ ಆ ಎರಡೂ ಕುಟುಂಬಗಳ ಸದಸ್ಯರೂ ಅಲ್ಲ. ಕಂಪೆನಿಗಳು ಅದನ್ನು ಇವತ್ತು ನಿರ್ಧರಿಸುತ್ತವೆ. ಆಭರಣ ಕಂಪೆನಿಗಳು, ಉಡುಪು ವಿನ್ಯಾಸಕಾರರು, ಈವೆಂಟ್ ಮ್ಯಾನೇಜ್‍ಮೆಂಟ್ ಸಂಸ್ಥೆಗಳು ಮುಂತಾದುವು ಮದುವೆಯನ್ನು ಬಹುತೇಕ ಹೈಜಾಕ್ ಮಾಡಿವೆ. ಇಂಥ ಕಂಪೆನಿಗಳೇ ನೇರವಾಗಿಯೋ ಪರೋಕ್ಷವಾಗಿಯೇ ಧಾರಾವಾಹಿಗಳನ್ನು ನಿರ್ಮಿಸುತ್ತವೆ. ಸಿನಿಮಾಗಳನ್ನು ತಯಾರಿಸುತ್ತವೆ ಅಥವಾ ಪಾಲು ಬಂಡವಾಳ ಹೂಡುತ್ತವೆ. ತಮ್ಮ ಉತ್ಪನ್ನಗಳ ಮಾರಾಟಕ್ಕೆ ಪೂರಕವಾದ ಸನ್ನಿವೇಶ ಮತ್ತು ಕಥಾಹಂದರವನ್ನು ಧಾರಾವಾಹಿ-ಸಿನಿಮಾಗಳಲ್ಲಿ ಅವು ತುರುಕುತ್ತವೆ. ಮದುವೆಗಿಂತ ಮೊದಲು ಗಂಡು-ಹೆಣ್ಣು ಭೇಟಿಯಾಗುವುದು, ಪರಸ್ಪರ ಅನುರಾಗ ಉಂಟಾಗುವುದು ಮತ್ತು ವಿವಿಧ ತಿರುವುಗಳ ಮೂಲಕ ಈ ಗೆಳೆತನ ಮದುವೆಯ ಹಂತಕ್ಕೆ ಬಂದು ಮುಟ್ಟುವುದು ಇತ್ಯಾದಿಗಳು ನಡೆಯುತ್ತವೆ. ಈ ಎಲ್ಲ ಸಂದರ್ಭಗಳಲ್ಲಿ ಅವರು ಧರಿಸಿರುವ ಉಡುಪು, ತೊಟ್ಟಿರುವ ಆಭರಣ, ಮೊಬೈಲು, ವಾಹನ, ಪಾದರಕ್ಷೆ, ಕೈ ಗಡಿಯಾರ, ಕನ್ನಡಕ ಇತ್ಯಾದಿಗಳು ವೀಕ್ಷಕರ ಮೇಲೆ ಪ್ರಭಾವ ಬೀರುವಂತೆ ನೋಡಿಕೊಳ್ಳಲಾಗುತ್ತದೆ. ಗಂಡನ್ನು ಹೆಣ್ಣು ಆಕರ್ಷಿಸುವುದಕ್ಕೆ ಅಥವಾ ಹೆಣ್ಣಿನ ಮೇಲೆ ಗಂಡು ಪ್ರಭಾವ ಬೀರುವುದಕ್ಕೆ ಯಾವ ಬಣ್ಣದ, ಯಾವ ವಿನ್ಯಾಸದ ಡ್ರೆಸ್ ಧರಿಸಬೇಕು ಮತ್ತು ಯಾವೆಲ್ಲ ಸೌಂದರ್ಯ ಸಾಧನಗಳನ್ನು ಬಳಸಬೇಕು ಎಂಬುದನ್ನು ಬಾಯಿ ಮೂಲಕ ಹೇಳದೆಯೇ ಮನಸ್ಸಿಗೆ ನಾಟಿಸುವ ಪ್ರಯತ್ನ ಮಾಡಲಾಗುತ್ತದೆ. ಮದುವೆಗಿಂತ ಮೊದಲು ಪ್ರೇಮ, ಪ್ರಣಯ, ಅನುರಾಗಗಳು ಅಗತ್ಯವೆಂದೋ ಅನಿವಾರ್ಯವೆಂದೋ ಸಹಜವೆಂದೋ ಭಾವಿಸುವುದಕ್ಕೆ ಪೂರಕವಾದ ದೃಶ್ಯಗಳನ್ನು ಸೃಷ್ಟಿಸಲಾಗುತ್ತದೆ. ವಿವಾಹಪೂರ್ವದಲ್ಲಿ ನಡೆಯುವ ಈ ಪ್ರೇಮವನ್ನು ಉತ್ತೇಜಿಸುವುದರ ಜೊತೆಜೊತೆಗೇ ಅದಕ್ಕೆ ಬೇಕಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವುದೂ ನಡೆಯುತ್ತದೆ. ನಿಜವಾಗಿ,

ಪ್ರೇಮವೆಂಬುದೇ ಒಂದು ಅಮಲು. ಈ ಅಮಲು ಹೇಗಿರುತ್ತದೆಂದರೆ, ಏನನ್ನು ಬೇಕಾದರೂ ಖರೀದಿಸುವುದಕ್ಕೆ ಪ್ರೇಮಿಗಳು ಹಿಂಜರಿಯದಂತೆ ಮಾಡುವಷ್ಟು. ಆದ್ದರಿಂದ, ವಿವಾಹಪೂರ್ವ ಪ್ರೇಮ ಪ್ರಸಂಗಗಳಿಲ್ಲದ ಬರೇ, ಸಾಂಪ್ರದಾಯಿಕ ವಿವಾಹಗಳನ್ನು ಕಾರ್ಪೋರೇಟ್ ಕಂಪೆನಿಗಳು ಉತ್ತೇಜಿಸುವುದಕ್ಕೆ ಸಾಧ್ಯವೇ ಇಲ್ಲ. ಹಾಗೆ ಮಾಡುವುದರಿಂದ ಉತ್ಪನ್ನಗಳ ದೊಡ್ಡಮಟ್ಟದ ಖರೀದಿ ಸಾಧ್ಯತೆಯು ಕಮರಿ ಹೋಗುತ್ತದೆ. ಅಷ್ಟಕ್ಕೂ,

ವಿವಾಹವೇ ಮಾರುಕಟ್ಟೆಯ ಸರಕಾಗಿ ಪರಿವರ್ತಿತವಾಗಿರುವ ಈ ಹೊತ್ತಿನಲ್ಲಿ ವಿವಾಹಕ್ಕೆ ಸಂಬಂಧಿಸಿ ಹೆಣ್ಣು-ಗಂಡಿನ ಪ್ರಾಯದಲ್ಲಿ ಏಕರೂಪತೆ ಇರಬೇಕೋ ಬೇಡವೋ ಎಂಬುದು ಬಹುಗಂಭೀರ ಪ್ರಶ್ನೆಯಾಗಿ ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದರೂ, ಈ ಅಸಮಾನತೆ ಏಕೆ ಎಂಬ ಪ್ರಶ್ನೆಯಲ್ಲಿ ತೂಕವಿದೆ. ಇನ್ನು, ವಿವಾಹ ಪ್ರಾಯವಾಗಿ ಹೆಣ್ಣು-ಗಂಡು ಇಬ್ಬರಿಗೂ 18 ವರ್ಷವನ್ನೇ ನಿಗದಿಪಡಿಸಿದೆವು ಎಂದೇ ಇಟ್ಟುಕೊಳ್ಳೋಣ. ಇದರಿಂದ ಈ ದೇಶದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹವನ್ನು ಕೊನೆಗಾಣಿಸುವುದಕ್ಕೆ ಏನಾದರೂ ಪ್ರಯೋಜನವಾಗಬಹುದೇ? ಬಾಲ್ಯ ವಿವಾಹಕ್ಕೆ ಬಹುಮುಖ್ಯ ಕಾರಣ ಏನೆಂದರೆ, ಬಡತನ, ವರದಕ್ಷಿಣೆ, ಅಜ್ಞಾನ ಮತ್ತು ಮದುವೆಯ ಖರ್ಚು ವೆಚ್ಚಗಳ ಭಾರ ಮತ್ತಿತರ ಅಂಶಗಳು. ವಿವಾಹ ಪ್ರಾಯವನ್ನು 18ಕ್ಕೆ ನಿಗದಿಗೊಳಿಸುವುದರಿಂದ ಈ ಸಮಸ್ಯೆಗಳು ಪರಿಹಾರ ಆಗಲಾರವು. ಸದ್ಯ ಭಾರತದಲ್ಲಿ ನಡೆಯುವ ಮದುವೆಗಳಲ್ಲಿ 47% ಹುಡುಗಿಯರು 18 ವರ್ಷಕ್ಕಿಂತ ಕೆಳಗಿನವರಾದರೆ, 18% ಹುಡುಗಿಯರು 15 ವರ್ಷಕ್ಕಿಂತ ಕೆಳಗಿನವರು ಎಂದು ಯುನಿಸೆಫ್‍ನ ವರದಿಯೇ ಹೇಳುತ್ತದೆ. ಇದನ್ನು ಬದಲಿಸಬೇಕೆಂದರೆ ಬಡತನ-ಅನಕ್ಷರತೆಯನ್ನು ಹೋಗಲಾಡಿಸುವುದಕ್ಕೆ ಗಂಭೀರ ಪ್ರಯತ್ನಗಳಾಗಬೇಕು. ಪರಂಪರಾಗತ ತಪ್ಪು ರೂಢಿಯನ್ನು ತಿದ್ದುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಹಾಗಂತ, ಕಾನೂನು ರಚಿಸಿದಷ್ಟು ಇದು ಸುಲಭ ಅಲ್ಲ. ಒಂದುವೇಳೆ, ಈ ನಿಟ್ಟಿನಲ್ಲಿ ನಾವು ಯಶಸ್ವಿಯಾದರೂ ಆ ಯಶಸ್ಸಿಗೂ ಒಂದು ಮಿತಿಯಿದೆ ಎಂಬುದನ್ನೂ ನಾವು ಒಪ್ಪಿಕೊಳ್ಳಬೇಕು. ಅದೇನೆಂದರೆ, ಮದುವೆ ಪ್ರಾಯದ ಬಗ್ಗೆ ಅವರು ಜಾಗೃತರಾಗುವುದೆಂದರೆ, ಕಂಪೆನಿಗಳು ಬೀಸಿರುವ ಮದುವೆ ಮಾರುಕಟ್ಟೆಯೊಳಗೆ ಅವರನ್ನು ಪ್ರವೇಶಗೊಳಿಸುವುದು ಎಂದೂ ಆಗುತ್ತದೆ. ಹಳ್ಳಿಯ ಮೂಲೆಯಲ್ಲಿ ಕೆಲವೇ ಮಂದಿ ಸೇರಿಕೊಂಡು ಮಾಡಿ ಮುಗಿಸುವ (ಕಾನೂನು ಬದ್ಧವಲ್ಲದಿದ್ದರೂ) ಮದುವೆಯು ಈ ಮೂಲಕ ರದ್ದುಗೊಳ್ಳುತ್ತದೆ ಮತ್ತು ಕಂಪೆನಿಗಳು ಪ್ರಸ್ತುತಪಡಿಸುವ ಮದುವೆಯ ಚೌಕಟ್ಟಿನೊಳಗೆ ಈ ಮದುವೆಗಳು ಸೇರ್ಪಡೆಗೊಳ್ಳುತ್ತವೆ. ಆದ್ದರಿಂದ,

ಪ್ರಾಯ ನಿಗದಿಯೊಂದೇ ಉತ್ತರ ಅಲ್ಲ. ಮದುವೆಯು ಮಾರುಕಟ್ಟೆಯ ಸರಕಾಗದಂತೆ ನೋಡಿಕೊಳ್ಳುವುದೂ ಮುಖ್ಯ.

ಏಲಂ ಆದ ಗಾಂಧೀಜಿ


  
 ಅಮೇರಿಕದ ಬೋಸ್ಟನ್‍ನಲ್ಲಿ ಕಳೆದವಾರ ಅಪರೂಪದ ಏಲಂ ಒಂದು ನಡೆದಿದೆ. ಏಲಂಗೆ ಒಳಗಾದವರು ಗಾಂಧೀಜಿ. ಏಲಂ ಮಾಡಿದವರು ಆರ್.ಆರ್. ಏಲಂ ಸಂಸ್ಥೆ. 1976ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಗೆ ಏಲಂ ಹೊಸತಲ್ಲ. ಈಗಾಗಲೇ ಅದು 500ಕ್ಕಿಂತಲೂ ಅಧಿಕ ಅಪರೂಪದ ವಸ್ತುಗಳನ್ನು ಏಲಂ ಮಾಡಿದೆ. ಗಗನಯಾತ್ರಿ ಡೇವ್ ಸ್ಕಾಟ್‍ರಿಂದ ಹಿಡಿದು ಅಮೇರಿಕದ ಅಧ್ಯಕ್ಷ ಕೆನಡಿಯವರೆಗೆ, ಕಾದಂಬರಿಕಾರ ಮಾರಿಯೋ ಪುಝೋರಿಂದ ಹಿಡಿದು ಗಾಂಧೀಜಿಯವರ ವರೆಗೆ ಅದು ಯಾರನ್ನೂ ಏಲಂ ಮಾಡದೇ ಬಿಟ್ಟಿಲ್ಲ. ಜಗತ್ತಿನ ಪ್ರಭಾವಶಾಲಿ ವ್ಯಕ್ತಿಗಳಿಗೆ ಸಂಬಂಧಿಸಿ ಬಟ್ಟೆ, ಪೆನ್ನು, ಡೈರಿ, ಚಪ್ಪಲಿ.. ಇತ್ಯಾದಿ ಅಮೂಲ್ಯವಾದವುಗಳನ್ನು ಏಲಂ ಮಾಡುವುದು ಅದರ ಗುರಿ. ಮಾತ್ರವಲ್ಲ, ಅದು ಹುಟ್ಟಿಕೊಂಡದ್ದೇ  ಏಲಂ ಮಾಡುವುದಕ್ಕೆ. ಆದ್ದರಿಂದ ಕಳೆದವಾರ ಬೋಸ್ಟನ್‍ನಲ್ಲಿ ಗಾಂಧೀಜಿಯವರ ಪತ್ರವೊಂದನ್ನು 6,358 ಡಾಲರ್ ಗೆ  ಅದು ಏಲಂ ಮಾಡಿರುವುದರಲ್ಲಿ ಅಚ್ಚರಿ ಏನಿಲ್ಲ. ಈ ಪತ್ರದಲ್ಲಿ ಗಾಂಧೀಜಿಯವರು  ಚರಕದ ಮಹತ್ವದ ಬಗ್ಗೆ ಹೇಳಿದ್ದರು. ಯಶ್ವಂತ್ ಪ್ರಸಾದ್ ಎಂಬವರನ್ನು ಉದ್ದೇಶಿಸಿ ಬರೆಯಲಾದ ಮತ್ತು ದಿನಾಂಕ ನಮೂದಿಸದ ಆ ಪತ್ರ ಗುಜರಾತಿ ಭಾಷೆಯಲ್ಲಿತ್ತು. ಗಾಂಧೀಜಿಯವರು ಪುಣೆಯ ಯರವಾಡ ಜೈಲಿನಲ್ಲಿದ್ದಾಗ ಚರಕದಿಂದ ನೂಲು ತೆಗೆಯುವ ಶಿಕ್ಷೆಗೆ ಗುರಿಯಾಗಿದ್ದರು. ಜೈಲಿನಿಂದ ಹೊರಗೆ ಬಂದ ಮೇಲೆ ಅದೇ ಚರಕವನ್ನು ಬ್ರಿಟಿಷ್ ದಬ್ಬಾಳಿಕೆಯ ವಿರುದ್ಧದ ಪ್ರತಿ ಅಸ್ತ್ರವಾಗಿ ಅವರು ಬಳಸಿಕೊಂಡರು. ಚರಕದಿಂದ ನೂಲು ತೆಗೆಯುವ ಮೂಲಕ ಖಾದಿಯನ್ನು ಉತ್ತೇಜಿಸುವುದು ಅವರ ಉದ್ದೇಶವಾಗಿತ್ತು. ದಿನದಲ್ಲಿ ಸ್ವಲ್ಪ ಸಮಯವನ್ನು ಚರಕಕ್ಕೆ ನೀಡುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡಿ ಎಂದವರು ದೇಶದ ಜನರಿಗೆ ಕರೆಕೊಟ್ಟಿದ್ದರು. ಚರಕವನ್ನು ಅವರು ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿ ಪ್ರಸ್ತುತಪಡಿಸಿದ್ದರು. ಇದೇ ಗಾಂಧೀಜಿಯನ್ನು ಈ ದೇಶ ಕಳಕೊಂಡು 7 ದಶಕಗಳಾದ ಬಳಿಕದ ಈಗಿನ ಸ್ಥಿತಿ ಹೇಗಿದೆಯೆಂದರೆ, ಅವರನ್ನು ಕೊಂದವನೇ ಈ ದೇಶದಲ್ಲಿ ಗೌರವಕ್ಕೆ ಅರ್ಹವಾಗುತ್ತಿದ್ದಾನೆ. ಆತನ ಪುತ್ಥಳಿ ಸ್ಥಾಪಿಸಲಾಗುತ್ತಾ ಇದೆ. ಇನ್ನೊಂದೆಡೆ, ವಿದೇಶದಲ್ಲಿ ಆ ಗಾಂಧೀಜಿಯೇ ಮಾರಾಟವಾಗುತ್ತಿದ್ದಾರೆ. ಬಹುಶಃ, ಗಾಂಧೀಜಿಯ ಒಂದೊಂದೇ ಕುರುಹುಗಳು ಮತ್ತು ಅವರು ಈ ದೇಶಕ್ಕೆ ನೀಡಿದ ಕೊಡುಗೆಗಳು ಮಾರಾಟವಾಗುತ್ತಲೋ ಅವಹೇಳನಕ್ಕೆ ಗುರಿಯಾಗುತ್ತಲೋ ಅಂತಿಮವಾಗಿ ನಾಮಾವಶೇಷವಾಗಿ ಬಿಡುತ್ತೇನೋ ಅನ್ನುವ ಸಂದೇಹ ಕಾಡತೊಡಗಿದೆ.

ಸದ್ಯ ಈ ದೇಶವನ್ನು ಆಳುವ ಪ್ರಭುತ್ವದ ಮಾತು-ಕೃತಿಗಳು ಹೇಗಿವೆಯೆಂದರೆ, ನಾಲ್ಕು ವರ್ಷಗಳ ಹಿಂದೆ ಈ ದೇಶ ಬಹುತೇಕ ಶೂನ್ಯವಾಗಿತ್ತು ಎಂಬ ರೀತಿಯಲ್ಲಿದೆ. ಗಾಂಧೀಜಿ ದೇಶ ವಿಭಜಕ, ನೆಹರೂ ಮೋಸಗಾರ, ದೇಶವನ್ನಾಳಿದ ಕಾಂಗ್ರೆಸ್ ಭ್ರಷ್ಟ, ಪಟೇಲ್ ದೇಶಪ್ರೇಮಿ, ಬೋಸ್ ನಿಜ ನಾಯಕ.. ಹೀಗೆ ಕಳೆದುಹೋದ ವ್ಯಕ್ತಿತ್ವವನ್ನು ಪರಸ್ಪರ ಎತ್ತಿ ಕಟ್ಟುವ ಪ್ರಯತ್ನಗಳು ನಡೆಯುತ್ತಿವೆ. ಗಾಂಧೀಜಿಯ ವಿರುದ್ಧ ಗೋಡ್ಸೆಯನ್ನು ತಂದು ನಿಲ್ಲಿಸುವುದು. ಗಾಂಧೀಜಿಗೆ ಅಂಬೇಡ್ಕರ್ ರನ್ನು ಮುಖಾಮುಖಿಸುವುದು, ಪಟೇಲ್‍ರನ್ನು ವೈಭವೀಕರಿಸಿ ನೆಹರೂರನ್ನು ಹೀಗಳೆಯುವುದು, ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟದ ಮಾದರಿಗಿಂತ ಬೋಸ್‍ರ ಹಿಂಸಾತ್ಮಕ ಹೋರಾಟ ಮಾದರಿಯು ಉತ್ತಮ ಎಂಬ ರೀತಿಯಲ್ಲಿ ವರ್ಣಿಸುವುದು, ಇತಿಹಾಸದಲ್ಲಿ ಆಗಿ ಹೋದ ರಾಜರುಗಳನ್ನು ಹಿಂದೂ ಮತ್ತು ಮುಸ್ಲಿಮ್ ಎಂದು ವರ್ಗೀಕರಿಸಿ ಮುಸ್ಲಿಮ್ ದೊರೆಗಳೆಲ್ಲ ಹೇಗೆ ಕ್ರೂರಿಗಳು ಮತ್ತು ಹಿಂದೂ ದೊರೆಗಳು ಹೇಗೆ ಸಂತ್ರಸ್ತರು ಎಂಬುದನ್ನು ಭಾವುಕತೆಯಿಂದ ವಿವರಿಸುವುದು.. ಇತ್ಯಾದಿಗಳು ಬಹು ಜೋರಾಗಿ ನಡೆಯುತ್ತಿವೆ. ಇದೊಂದು ಬಗೆಯ ತಂತ್ರ. ಈ ದೇಶದ ಪಠ್ಯಪುಸ್ತಕಗಳು, ಸಾಹಿತ್ಯ ಗ್ರಂಥಗಳು, ಇತಿಹಾಸ ಪುಸ್ತಕಗಳು ಯಾರನ್ನು ಐಕಾನ್‍ಗಳಾಗಿ ಪ್ರಸ್ತುತಪಡಿಸಿದೆಯೋ ಅವರ ವರ್ಚಸ್ಸನ್ನು ತಗ್ಗಿಸಿ ಪ್ರತಿ ವ್ಯಕ್ತಿತ್ವಗಳನ್ನು ಜನರ ಮನಸ್ಸಿನಲ್ಲಿ ನಾಟುವುದು ಇದರ ಹಿಂದಿರುವ ಉದ್ದೇಶ. ಹಾಗಂತ, ದೀರ್ಘ ಸಮಯದಿಂದ ಜನರು ಗೌರವಿಸಿಕೊಂಡು ಬಂದಿರುವ ವ್ಯಕ್ತಿತ್ವಗಳನ್ನು ಮತ್ತು ಒಪ್ಪಿಕೊಂಡು ಬಂದಿರುವ ಇತಿಹಾಸವನ್ನು ಸುಲಭದಲ್ಲಿ ಬದಲಿಸಿ ಬಿಡಲು ಸಾಧ್ಯವಿಲ್ಲ ಎಂಬುದು ಈ ಜನರಿಗೆ ಗೊತ್ತು. ಆದ್ದರಿಂದಲೇ, ಆ ವ್ಯಕ್ತಿತ್ವಗಳ ಬಗ್ಗೆ ಗೊಂದಲಕಾರಿ ವಿವರಗಳನ್ನು ಹರಿಯಬಿಡಲಾಗುತ್ತಿದೆ. ವ್ಯಂಗ್ಯ, ತಮಾಷೆ, ಕುಚೋದ್ಯಗಳ ಹೇಳಿಕೆಗಳನ್ನು ಅವರ ಬಗ್ಗೆ ನೀಡಲಾಗುತ್ತಿದೆ. ತಮಾಷೆ ಏನೆಂದರೆ,

ಗಾಂಧೀಜಿಯವರು ಚರಕ ಮತ್ತು ಉಪ್ಪನ್ನು ಸ್ವಾಭಿಮಾನದ ಸಂಕೇತವಾಗಿ ಬಳಸಿಕೊಂಡಿದ್ದರು. ಬ್ರಿಟಿಷರ ದೊಡ್ಡಣ್ಣ ನೀತಿಯನ್ನು ಪ್ರತಿರೋಧಿಸಿ ಚಾಲ್ತಿಗೆ ತಂದ ಎರಡು ಪ್ರತಿ ಏಟುಗಳು ಇವಾಗಿದ್ದುವು. ‘ನಿಮ್ಮ ಉಡುಪು ನಮಗೆ ಬೇಡ’ ಎಂದರು. ‘ನಮ್ಮ ಉಡುಪಿನ ಆಯ್ಕೆ ನಮ್ಮದು’ ಅಂದರು. ‘ಭಾರತೀಯರು ಏನನ್ನು ಉಡಬೇಕು ಮತ್ತು ಏನನ್ನು ಉಣ್ಣಬೇಕು ಎಂಬುದು ಬ್ರಿಟಿಷರ ಮರ್ಜಿಯನ್ನು ಅವಲಂಬಿಸಿಕೊಂಡಿಲ್ಲ’ ಎಂದು ಸಾರಿದರು. ನಿಜವಾಗಿ, ಇದೊಂದು ಕೆಚ್ಚೆದೆಯ ನಡೆ. ಇನ್ನೂ ಸ್ವತಂತ್ರವಾಗಿಲ್ಲದ, ಭಾರತೀಯರ ಸರಕಾರವೂ ಇಲ್ಲದ ಮತ್ತು ಬ್ರಿಟಿಷರ ಅಣತಿಯಂತೆ ಬದುಕಬೇಕಾದಂತಹ ಸನ್ನಿವೇಶದಲ್ಲೂ ಓರ್ವ ಸಣಕಲು ವ್ಯಕ್ತಿ ತೋರಿದ ಧೈರ್ಯಶಾಲಿ ಪ್ರತಿರೋಧ ಇದು. ಇವತ್ತು ಭಾರತ ಸಾರ್ವಭೌಮ ರಾಷ್ಟ್ರ. ಮೌಂಟ್ ಬ್ಯಾಟನ್‍ನ ಕೈಯಲ್ಲಿ ಈ ದೇಶ ಇಲ್ಲ. ನಮಗೊಂದು ಗಡಿಯಿದೆ. ನಮ್ಮದೇ ಆದ ಸಂವಿಧಾನವಿದೆ. ಭಾರತೀಯರೇ ಆರಿಸಿದ ಸರಕಾರವೂ ಇದೆ. ಆದರೂ, ಈಗಿನ ಸರಕಾರದ ದೈನೇಸಿ ಸ್ಥಿತಿ ಹೇಗಿದೆಯೆಂದರೆ, ಸ್ವಾಭಿಮಾನವನ್ನೆಲ್ಲ ಅಡವಿಟ್ಟುಕೊಂಡು ತಲೆ ತಗ್ಗಿಸಿ ನಿಂತಿದೆ. ಭಾರತ ಇವತ್ತು ಯಾರಿಂದ ಪೆಟ್ರೋಲ್ ಖರೀದಿಸಬೇಕು ಎಂಬುದನ್ನು ತೀರ್ಮಾನಿಸುವುದು ಅಮೇರಿಕ. ರಶ್ಯದಿಂದ ರಕ್ಷಣಾ ಸಾಮಗ್ರಿಗಳನ್ನು ಖರೀದಿಸುವುದಕ್ಕೆ ಅನುಮತಿ ಕೊಡಬೇಕೆಂದು ಅಮೇರಿಕದೊಂದಿಗೆ ಇವತ್ತಿನ ಸರಕಾರ ಮನವಿ ಮಾಡಿಕೊಳ್ಳುತ್ತಿದೆ. ಇಲ್ಲಿಂದ ರಫ್ತಾಗುವ ಉತ್ಪನ್ನಗಳ ಮೇಲೆ ಅಮೇರಿಕ ಹೆಚ್ಚುವರಿ ಸುಂಕ ಹಾಕಿದಾಗ ನಮ್ಮ ಪ್ರಭುತ್ವ ತೋರಿದ ಪ್ರತಿಕ್ರಿಯೆ ತೀರಾ ಮೃದುವಾದುದು. ಅಮೇರಿಕದ ಉತ್ಪನ್ನಗಳಿಗೆ ಭಾರೀ ಮಟ್ಟದಲ್ಲಿ ಸುಂಕ ವಿಧಿಸುವ ಚೀನಾದ ಧೈರ್ಯವನ್ನು ಇಲ್ಲಿನ ಪ್ರಭುತ್ವ ಪ್ರದರ್ಶಿಸುತ್ತಿಲ್ಲ. ಒಂದುಕಡೆ, ಚರಕ ಮತ್ತು ಉಪ್ಪಿನ ಮೂಲಕ ಬಹುದೊಡ್ಡ ಸಾಮ್ರಾಜ್ಯವೊಂದನ್ನೇ ಎದುರು ಹಾಕಿಕೊಂಡು ಸ್ವಾಭಿಮಾನ ಪ್ರದರ್ಶಿಸಿದ್ದ ಗಾಂಧೀಜಿ ಇದ್ದರೆ ಇನ್ನೊಂದು ಕಡೆ, ಸ್ವಾಭಿಮಾನಿ ಭಾರತದ ಬಗ್ಗೆ ಮಾರುದ್ಧ ಭಾಷಣಗಳನ್ನು ಬಿಗಿಯುತ್ತಲೇ ಅಮೇರಿಕದ ಮುಂದೆ ಸ್ವಾಭಿಮಾನವನ್ನು ಕಳಚಿಟ್ಟು ದೈನೇಸಿಯಾಗಿ ನಿಂತಿರುವ ಈಗಿನ ಪ್ರಭುತ್ವ ಇದೆ. ‘ಅಮೇರಿಕ ಬಗ್ಗಲು ಹೇಳಿದರೆ ತೆವಳಲೂ ಸಿದ್ಧ’ ಎಂಬ ಸಂದೇಶ ಸಾರುವ ಆಡಳಿತ ನೀತಿ ಈಗಿನದು. ದುರಂತ ಏನೆಂದರೆ, ಇದೇ ಪ್ರಭುತ್ವವೇ ಗಾಂಧೀಜಿಯನ್ನು ಮತ್ತು ಅವರು ಪ್ರತಿಪಾದಿಸಿದ ಸಿದ್ಧಾಂತವನ್ನು ತಮಾಷೆ ಮಾಡುತ್ತಿದೆ. ಈ ಪ್ರಭುತ್ವದ ಜೊತೆ ಗುರುತಿಸಿಕೊಂಡವರು ಸ್ವಾಭಿಮಾನಿ ಭಾರತದ ನಿರ್ಮಾಣದ ಬಗ್ಗೆ ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಅಮೇರಿಕಕ್ಕೆ ಕನಿಷ್ಠಪಕ್ಷ ಟರ್ಕಿ ತೋರಿದ ಪ್ರತಿರೋಧವನ್ನು ತೋರಲೂ ಈ ಪ್ರಭುತ್ವಕ್ಕೆ ಸಾಧ್ಯವಾಗುತ್ತಿಲ್ಲ. ಅಮೇರಿಕ ಒಡ್ಡುವ ಷರತ್ತುಗಳನ್ನೆಲ್ಲ ಒಪ್ಪಿಕೊಂಡು ತಲೆ ತಗ್ಗಿಸಿ ನಡೆಯುವುದೇ ಸ್ವಾಭಿಮಾನ ಎಂದು ಈ ಸರಕಾರ ಭಾವಿಸಿರುವಂತಿದೆ. ನಿಜವಾಗಿ,

ಅಮೇರಿಕದಲ್ಲಿ ಮಾರಾಟವಾದದ್ದು ಗಾಂಧೀಜಿಯ ಪತ್ರವಲ್ಲ, ಈ ದೇಶದ ಸ್ವಾಭಿಮಾನ. ಆದರೆ ದೈನೇಸಿತನವನ್ನೇ ಸ್ವಾಭಿಮಾನ ಅಂದುಕೊಂಡಿರುವ ಈ ಸರಕಾರಕ್ಕೆ ಅದು ಅರ್ಥವಾಗಿಲ್ಲ, ಅಷ್ಟೇ.